ಕನ್ನಡ ನಾಡಿನ ಆಬಾಲವೃದ್ಧರಿಗೆಲ್ಲ ಪರಿಚಿತವೂ ಪ್ರಿಯವೂ ಆಗಿರುವ ಕಥನಕವನ. ಇದರಲ್ಲಿ ಒಟ್ಟು ೧೩೭ ಪದ್ಯಗಳಿದ್ದು, ಅವುಗಳಲ್ಲಿ ೧೧೪ ಮಾತ್ರ ಮೂಲವೆಂದೂ ಉಳಿದವು ಪ್ರಕ್ಷಿಪ್ತವೆಂದೂ ವಿದ್ವಾಂಸರ ಮತ. ಈ ಹಾಡನ್ನು ರಚಿಸಿದ ಕವಿಯಾಗಲಿ ಅವನ ಕಾಲವಾಗಲಿ ತಿಳಿದಿಲ್ಲ. ಹಾಡಿನ ಅಂತ್ಯದಲ್ಲಿ ಮದ್ದೂರಿನ ನರಸಿಂಹ ದೇವರ ಹೆಸರಿರುವುದರಿಂದ, ಇದನ್ನು ಕಟ್ಟಿದ ಕವಿ ಆ ಊರಿನವನೋ ಅಥವಾ ಆ ದೇವರ ಒಕ್ಕಲಿನವನೋ ಆಗಿರಬೇಕೆಂದೂ ಸು. ೧೮೦೦ಕ್ಕಿಂತ ಹಿಂದೆ ಇದು ಹುಟ್ಟಿರಲಾರದೆಂದೂ ಊಹಿಸಲಾಗಿದೆ. ಈ ಹಾಡಿನ ಛಂದಸ್ಸು ಗೋವಿಂದ ಹಡಿನ ಮಟ್ಟು ಎಂದೇ ಪ್ರಚುರವಾಗಿದೆ. ಇದು ನಾಲ್ಕು ಸಾಲಿನ ಪದ್ಯಗಳಿಂದ ಕೂಡಿದ್ದು ಪ್ರತಿ ಪದ್ಯವನ್ನೂ ಹಾಡಿನ ಲಯಕ್ಕೆ ಹೊಂದಿದಂತೆ ಬ್ರಹ್ಮ. ವಿಷ್ಣು ಮೊದಲಾಗಿ ಅಂಶಗಣಗಳಾಗಿ ವಿಭಾಗಿಸಬಹುದು. ಗೋವಿನ ಹಾಡಿನ ಭಾಷೆ ಒಟ್ಟಿನಲ್ಲಿ ಸರಳವಾಗಿದ್ದರೂ ಅದನ್ನು ಜಾನಪದವೆಂದು ಕರೆಯಲಾಗುವುದಿಲ್ಲ; ಇಡೀ ಗೀತೆ ಏಕ ಕವಿ ಕೃತವೇ ಹೊರತು ಶುದ್ಧ ಜನಪದ ರಚನೆಯಲ್ಲ. ಆದರೂ ಜನಪದ ಅದನ್ನು ಎತ್ತಿಕೊಂಡಿದೆ, ಎದೆಗೊತ್ತಿಕೊಂಡಿದೆ. ಇದಕ್ಕೆ ಕಾರಣ ಹಾಡಿನ ಸ್ವಾರಸ್ಯ.

ಗೋವಿನ ಹಾಡಿನ ಕಥಾಂಶ ಇಷ್ಟು: ಅರುಣಾದ್ರಿಯನ್ನು ಬಳಸಿದ ಏಳು ಗರಿಗಳ ನಡುವೆ ಒಂದು ಮಹಾರಣ್ಯ. ಆದರೆ ಮಧ್ಯೆ ಕಾಳಿಂಗನೆಂಬ ಗಿಲ್ಲನ ದೊಡ್ಡಿ. ಅಲ್ಲಿ ಪುಣ್ಯಕೋಟಿಯೆಂಬ ಒಂದು ಹಸು. ಒಮ್ಮೆ ಹಸುಗಳೆಲ್ಲ ಬೆಟ್ಟದ ಕಿಬ್ಬಿಯಲ್ಲಿ ಮೇದು ದೊಡ್ಡಿಗೆ ಮರಳುವಾಗ ಏಳು ದಿವಸ ಆಹಾರವಿಲ್ಲದೆ ಬಳಲಿದ್ದ ಅರ್ಬುತನೆಂಬ ಹುಲಿ ಗವಿಯಿಂದ ಹೊರಬಿದ್ದು ಗೋವುಗಳ ಮಂದೆಯ ಮೇಲೆರಗುತ್ತದೆ. ಹಸುಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತದೆ. ನಿರಾಶೆಗೊಂಡ ಹುಲಿಗೆ, ತನ್ನ ಕಂದನನ್ನು ನೆನೆಯುತ್ತ ಬರುತ್ತಿದ್ದ ಪುಣ್ಯಕೋಟಿ ಕಾಣಿಸುತ್ತದೆ. ಅದನ್ನು ಹುಲಿ ಅಡ್ಡಗಟ್ಟಿ ತಿನ್ನಬಯಸುತ್ತದೆ. ಪುಣ್ಯಕೋಟಿ ತನ್ನ ಕಂದನಿಗೆ ಹಾಲು ಕುಡಿಸಿ ಮತ್ತೆ ಹುಲಿಯ ಬಳಿಗೆ ಬಂದು, ತನ್ನನ್ನು ತಿಂದು ಹಸಿವನ್ನು ತೀರಿಸಿಕೊಳ್ಳುವಂತೆ ಹೇಳುತ್ತದೆ. ಹುಲಿ ಪುಣ್ಯಕೋಟಿಯ ಪ್ರಾಮಾಣಿಕತೆಗೆ ಮೆಚ್ಚಿ. ತನ್ನನ್ನು ಹಳಿದುಕೊಳ್ಳುತ್ತ ಆಕಾಶಕ್ಕೆ ನೆಗೆದು ಪ್ರಾಣ ಬಿಡುತ್ತದೆ. ಶಿವ ಅದಕ್ಕೆ ಮೋಕ್ಷ ಕರುಣಿಸುತ್ತಾನೆ. ಪುಣ್ಯಕೋಟಿ ಹರ್ಷದಿಂದ ದೊಡ್ಡಿಗೆ ಮರಳುತ್ತದೆ; ಅದರ ಕೋರಿಕೆಯಂತೆ ಗೊಲ್ಲಗೌಡ ಹಬ್ಬವನ್ನಾಚರಿಸಿ, ಪ್ರತಿವರ್ಷವೂ ಸಂಕ್ರಾಂತಿಯಂದು ಹಬ್ಬ ಮಾಡುವುದಾಗಿ ಮಾತು ಕೊಡುತ್ತಾನೆ.

ಹಾಡಿನಲ್ಲಿ ಬರುವ ಅರಣ್ಯದ ವರ್ಣನೆ, ಗೊಲ್ಲನ ವರ್ಣನೆ, ಅವನು ಹಸುಗಳನ್ನು ಹೆಸರಿಸಿ ಕರೆಯುವ ರೀತಿ, ಹುಲಿಯ ಆರ್ಭಟದ ಚಿತ್ರ, ಹಸುವಿಗೂ ಅದಕ್ಕೂ ನಡೆದ ಸಂಭಾಷಣೆ-ಇವೆಲ್ಲ ಚೆನ್ನಾಗಿವೆ. ಪುಣ್ಯಕೋಟಿಗೂ ಅದರ ಕರುವಿಗೂ ನಡೆಯುವ ಮಾತುಕಥೆಗಳಲ್ಲಿ ಕರುಣ ಮಡುಗಟ್ಟಿದೆ. ಪುಣ್ಯಕೋಟಿಯ ಸತ್ಯಸಂಧತೆಯ ಚಿತ್ರಣದಷ್ಟೇ ಹುಲಿಯ ಪರಿವರ್ತನೆಯ ಚಿತ್ರಣವೂ ಹೃದಯಸ್ಪರ್ಶಿಯಾಗಿದೆ. ಸತ್ಯವೇ ನಮ್ಮ ತಾಯಿತಂದೆ, ಸತ್ಯವೇ ನಮ್ಮ ಸರ್ವ ಬಳಗವು, ಸತ್ಯವಾಕ್ಯಕೆ ತಪ್ಪಿದಾರೆ ಅಚ್ಚುತಾ ಹರಿ ಮೆಚ್ಚನು-ಎಂಬುದೇ ಈ ಗೋವಿನ ಹಾಡಿನ ಸಂದೇಶ. ಇಲ್ಲಿ ಹಸು ಸತ್ಯ ಅಹಿಂಸೆಗಳಿಗೂ ಹುಲಿ ಹಿಂಸೆ ಕ್ರೌರ್ಯಗಳಲಿಗೂ ಸಂಕೇತವಾಗಿದೆ: ಹುಲಿಯ ಸಾವು ಹಿಂಸೆಯ ಸಾವು. ಸತ್ಯ ಅಹಿಂಸೆಗಳ ಪ್ರಚಂಡ ಶಕ್ತಿ ಹೇಗೆ ಹೃದಯ ಪರಿವರ್ತನೆಯನ್ನೆಸಗಬಲ್ಲುದೆಂಬುದನ್ನು ಈ ಗೀತೆ ತೋರಿಸುತ್ತದೆ. ಆದ್ದರಿಂದ, ಕಥೆಯ ಸವಿ ಮಾತ್ರವಲ್ಲ. ದರ್ಶನದ ಆಳವೂ ಇದರಲ್ಲಿದೆ.

ಈ ಗೋವಿನ ಕಥೆ ಪ್ರಾಚೀನವಾದುದೆಂದೂ ಸಂಸ್ಕೃತದ ಇತಿಹಾಸ ಸಮುಚ್ಚಯವೆಂಬ ಪುರಾಣಕಥಾ ಕೋಶದಲ್ಲಿ ಇದು ಬಹುಲೋಪಾಖ್ಯಾನವೆಂಬುದಾಗಿ ಕಂಡು ಬರುತ್ತದೆಂದೂ ಹೇಳಲಾಗಿದೆ. ಅಲ್ಲಿ ಹಸುವಿನ ಹೆಸರು ಬಹುಲಾ; ಹುಲಿಯ ಹೆಸರು ಕಾಮರೂಪಿ (ಅಸತ್ ಶಕ್ತಿಗೆ ಉಚಿತವಾದ ಹೆಸರು). ಈ ಕಥೆಯನ್ನು ಮೊದಲು ಭೀಷ್ಮ ಯುಧಿಷ್ಟಿರನಿಗೆ ಹೇಳಿದನಂತೆ. ಕಥೆ ಹಳೆಯದಾದರೂ ಕನ್ನಡದಲ್ಲಿ ಅದರ ಕಲೆ ಹೊಸತಾಗಿದೆ. ಈ ಕಥೆಯ ರೂಪಾಂತರಗಳು ಕನ್ನಡ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಪ್ರಚಲಿತವಾಗಿರುವಂತೆ ತೋರುತ್ತದೆ. ಉತ್ತರ ಕರ್ನಾಟಕದಲ್ಲಿ ಆಕಳ ಹಾಡು ಎಂಬ ಶುದ್ಧ ಜನಪದ ಕಥನಗೀತೆಯೊಂದು ಸಿಕ್ಕಿದೆ. ಅಲ್ಲಿ ಹಸುವಿನ ಹೆಸರು ಬವಲಿ (ಬಹುಲಾ ಎಂಬುದರ ಅಪಭ್ರಂಶ). ಆದರೆ ಆಕಳ ಹಾಡಸು ಸತ್ಯನಿಷ್ಠೆಗಿಂತ ಹೆಚ್ಚಾಗಿ ಮಾತೃವಾತ್ಸಲ್ಯವನ್ನು ಎತ್ತಿ ತೋರುವಂತೆ ಇದೆ. ಅದರ ಮುಕ್ತಾಯವೂ ಗೋವಿನ ಹಾಡಿನಲ್ಲಿರುವಷ್ಟು ಪರಿಣಾಮಕಾರಿಯಾಗಿಲ್ಲ. ಭಾರತೀಯ ಸಂಸ್ಕೃತಿಯ ಒಂದು ಉಜ್ವಲವಾದ ಮುಖ ಕನ್ನಡ ಕವಿಯೊಬ್ಬನ ಕೈಯಲ್ಲಿ ರಸಸ್ಯಂದಿ ಕವಿತೆಯಾಗಿರುವುದಕ್ಕೆ ನಿದರ್ಶನ ಈ ಗೋವಿನ ಹಾಡು.