ಮೇಲುನೋಟಕ್ಕೆ ‘ಜನಪದ’ ಮತ್ತು ‘ಪರಿಸರ’ ವಿರೋಧಿ ನೆಲೆಗಳು, ನಿಜ ನೆಲೆಯಲ್ಲಿ ಅವು ಸಂಬಂಧಿಗಳು. ಪರಿಸರವೆಂಬುದು ಮನುಷ್ಯ, ಪ್ರಾಣಿ ಹಾಗೂ ಸಸ್ಯ ಜೀವಿಗಳನ್ನು ಒಳಗೊಂಡ ಪ್ರಾಕೃತಿಕ ಅಸ್ತಿತ್ವ. ಪ್ರಾಣಿಗಳಲ್ಲಿಯೆ ಒಂಡು ಜೀವಿಯಾದ ಮನುಷ್ಯ ಚಾರಿತ್ರಿಕವಾಗಿ ವಿಕಾಸ ಹೊಂದಿದೆ. ಮನುಷನ ಜೊತೆಗೆ ಹಸು, ಕುರಿ, ನಾಯಿ, ಕುದುರೆ ಈ ಕೆಲವು ತಕ್ಕಮಟ್ಟಿಗೆ ವಿಕಾಸ ಹೊಂದಿದವು. ಸಸ್ಯಗಳು ಈ ಪ್ರಾಣಿಗಳು ಆಹಾರ್ಯವಾಗಿ ಪೂರೈಕೆಯಾಗುತ್ತಾ ಬಂದವು. ಮನುಷ್ಯ ತನ್ನ ಅಸ್ತಿತ್ವಕ್ಕಾಗಿ ಒಂದು ವ್ಯವಸ್ಥೆ ಮಾಡಿಕೊಂಡ. ಅದು ಜನಪದ. ಈ ಅಸ್ತಿತ್ವ ಮಾನವನ ಎಚ್ಚರ, ರಕ್ಷಣೆ ಹಾಗೂ ಭವಿಷ್ಯಕ್ಕಾಗಿ ಬಂದುದು. ಇದರಿಂದ ಸಹಜವಾಗಿಯೆ ಸಸ್ಯ, ಪ್ರಾಣಿ ಅಥವಾ ಇನ್ನಾವುದೇ ಪಕ್ಷಿಯ ಅಸ್ತಿತ್ವವನ್ನು ತನ್ನ ಪ್ರಜ್ಞೆಯಲ್ಲಿ ಉಳಿಸಿಕೊಳ್ಳುವುದು ಅನಿವಾರ್ಯವಾಯಿತು. ಪರಿಸರದ ಅಸ್ತಿತ್ವಗಳನ್ನು ಸ್ನೇಹಿತ ಇಲ್ಲವೆ ಶತ್ರುವಾಗಿಯಾದರೂ ತನ್ನ ಪ್ರಜ್ಞೆಯಲ್ಲಿ ಉಳಿಸಿಕೊಳ್ಳುವುದು ಸಹಜವೇ ಆಯಿತು. ಹಾಗೆ ಉಳಿಸಿಕೊಳ್ಳವುದೆಂದರೇನು ? ಅವುಗಳ ಜೊತೆಗೆ ಸಂಬಂಧ ಕುದುರಿಸಿ ಕೊಳ್ಳುವುದು ತಾನೆ !

ಪರಿಸರದಲ್ಲಿ ಸಾವಿರಾರು ಸಸ್ಯಗಳು ಮತ್ತು ಜೀವಿಗಳು ವಾಸಿಸುತ್ತಿವೆ. ಇವುಗಳಲ್ಲಿ ಯಾಉವು ಜನಪದಗಳೊಂದಿಗೆ ಸಂಬಂಧ ಹೊಂದಿವೆಯೋ ಅವು ಜನಪದಗಳ ಪ್ರಥಮ ಗ್ರಹಿಕೆಯಲ್ಲಿವೆ. ದೂರ ಉಳಿದಿರುವವು ದೂರದ ಸಂಬಂಧವನ್ನು ಹೊಂದಿವೆ. ಈ ದೂರದ ಸಂಬಂಧ ಬಹುತೇಕ ಕಲ್ಪನೆ, ಕಥೆ, ಪುರಾಣಗಳ ಸ್ವರೂಪದ್ದು. ಪರಿಸರ ಸಂಗತಿಗಳಾದ ಪ್ರಾಣಿ, ಸಸ್ಯಗಳು ಜನಪದ ಗ್ರಹಿಕೆಗೆ ಬರುವುದಾದರೆ ಅವು ಮನುಷ್ಯನ ಪ್ರಜ್ಞಾನಲಯವನ್ನು ಪ್ರವೇಶಿಸುವುದು ಎಂದು ಅರ್ಥ. ಹಾಗೆಂದರೆ ಸಸ್ಯ ಪ್ರಾಣಿಗಳ ತಮ್ಮದೇ ಸಮೂಹದಲ್ಲಿ ಸಾಧ್ಯವಿಲ್ಲದ, ಮಾನವ ಸಂಸ್ಕೃತಿಯಲ್ಲಿ ಸಾಧ್ಯವಿರುವ ‘ವ್ಯಕ್ತಿತ್ವ’ ವನ್ನು ಪಡೆಯುವುದು. ಅರ್ಥಾತ್ ಸಂಸ್ಕೃತಿಯಾಗುವುದು. ಹೊರಗೆ ಸಾಮಗ್ರಿ ಸ್ವರೂಪ ಮಾತ್ರವಾಗಿದ್ದ, ಸಸ್ಯ, ಪ್ರಾಣಿ ಮತ್ತು ಘಟನೆಗಳು ಮಾನವ ಪ್ರಜ್ಞೆಯಲ್ಲಿ ದಾಖಲಾಗುತ್ತವೆ. ಅದು ಯಾವಾಗ ಎಂದರೆ, ಮಾನವನ ಸಾಂಸ್ಕೃತಿಕ ದಾಖಲೆಗಳಾದ ಹುಟ್ಟು, ನಾಮಕರಣ, ಸಂಬಂಧ, ಸ್ಥಾಪನೆ ನೆಲೆ-ನಿಲುವು ಸಾವು ಮತ್ತು ಪುನರ್ ಸೃಷ್ಟಿ ಎಂಬ ಆಚರಣೆಗಳಲ್ಲಿ ಆಶಯವಾಗಿ ಬರುವುದು. ಇವು ಆಶಯವಾಗುವುದನ್ನೇ ಅಭಿವ್ಯಕ್ತಿ ಎಂದು ಕರೆಯುವುದು. ಜನಪದ ನಂಬಿಕೆ, ನಡವಳಿಕೆ, ಆಚಾರ-ವಿಚಾರ, ಪದ್ಧತಿ ಪ್ರದರ್ಶನ, ಸಾಹಿತ್ಯ, ಭಾಷೆ ಇವೆಲ್ಲ ಜನಪದ ಆಶಯಗಳ ಅಭಿವ್ಯಕ್ತಿಗಳು ತಾನೆ ?

“ಜನಪದ ಜಗತ್ತು ತನ್ನ ವೈಶಿಷ್ಟ್ಯಗಳನ್ನು ತೋರುವುದು ಅದು ತನ್ನ ಸುತ್ತಲಿನ ಸಸ್ಯ ವರ್ಗ ಮತ್ತು ಪ್ರಾಣಿ ವರ್ಗಕ್ಕೆ ಹೇಗೆ ಪ್ರತಿಕ್ರಿಯಿಸಿದೆ ಎಂಬ ಮೂಲಕ”.

ಡಾ. ಪುರುಷೋತ್ತಮ ಬಿಳಿಮಲೆ ಕರಾವಳಿ ಜಾನಪದ ೨.೧೯೯೦

. ಸಸ್ಯ

ಬುಡಕಟ್ಟು ಸಸ್ಯದೊಡನೆ ಸಂಬಂಧ ಪಡೆದ ಕತೆ ಹೇಳುತ್ತದೆ. ಮನುಷ್ಯ ಪೂರ್ವದಲ್ಲಿ ಪಾತಾಳದಲ್ಲಿನ ಅಲ್ಲಿ ಜೀವನ ಉಸಿರು ಕಟ್ಟಿಸುವಂತಿತ್ತು. ಹೊಸಗಾಳಿ, ಬೆಳಕು, ನೀರು ಮತ್ತು ಆಹಾರ ಸಿಗುವ ಹೊಸ ನೆಲೆಯೊಂದಕ್ಕಾಗಿ ಹುಡುಕುತ್ತಿದ್ದ ಅಂಥ ನೆಲೆ ಭೂಮಿಯೊಂದೆ ಎಂದು ತಿಳಿಯಿತು. ಆದರೆ ಮೇಲಕ್ಕೆ ಹತ್ತುವ ಮಾದರಿ ತಿಳಿಯಲಿಲ್ಲ.

ಒಮ್ಮೆ, ಅವರಿಗೆ ಮರ ತಮಗಿಂತ ಎತ್ತರಕ್ಕೆ ಬೆಳೆಯುತ್ತದೆ ಎಂಬುದು ಅರಿವಿಗೆ ಬಂತು. ಈ ಮರಗಳನ್ನು ಇನ್ನೂ, ಇನ್ನೂ ಎತ್ತರಕ್ಕೆ ಬೆಳೆಸಿದರೆ ಎಂದು ಯೋಜಿಸಿದರು. ಕೆಲವು ಮರಗಳಿಗೆ ಹೆಚ್ಚು ನೀರಿ, ಗೊಬ್ಬರ ಹಾಕಿ ನೋಡಿದರು. ಅವು ತಾವು ನಿರೀಕ್ಷಿಸಿದ ಎತ್ತರಕ್ಕೆ ಬೆಳೆಯಲಾರವು ಎಂದು ಗೊತ್ತಾಯಿತು. ಒಮ್ಮೆ ಹೇಗೋ ಗೊತ್ತಾಯೊತು ಸಂಗೀತ ಕೇಳಿ ಮರಗಳು ಬೆಳೆಯುತ್ತವೆ ಎಂದು. ಬುಡಕಟ್ಟಿನವರ ಸಂಗೀತ, ಶೃತಿಯೂ ಹೌದು, ಭಾಷೆಯೂ ಹೌದು, ವಾಧ್ಯ, ಹಾಡು ಬಲ್ಲವರೆಲ್ಲ ಹಾಡುತ್ತಾ ಹೋದರು. ಮರಗಳು ಬೆಳೆಯುತ್ತಾ ಹೋದವು. ಎಷ್ಟು ಎತ್ತರಕ್ಕೆ ಎಂದರೆ ಭೂಮಿಯ ಸಮೀಪಕ್ಕೆ.

ಪಾತಾಳದ ಜನರಿಗೆ ಸಂತೋಷವೊ ಸಂತೋಷ ಎಲ್ಲರೂ ಮರಗಳನ್ನು ಏರುತ್ತಾ ಭೂಮಿಯಲ್ಲಿ ತಲುಪಿದರು. ಅವರು ಮರಗಳನ್ನು ಕೊಂಡಾಡಿದರು, ಪ್ರೀತಿಸಿದರು, ಪೂಜಿಸಿದರು. ಮರಗಳು ಅವರ ಮಿತ್ರ, ಬಂಧು, ರಕ್ಷಕ ಆದವು. ಜನಪದರ ದೇವರ ಕಲ್ಪನೆ ಎಂದರೆ ಮಿತ್ರ, ಬಂಧು ಅಥವಾ ರಕ್ಷಕ ತಾನೆ ? ಒಡೆಯ ಅಲ್ಲ, ದೇವರು ಒಡೆಯನಾದದ್ದು ಜನರ ಮಧ್ಯೆ ದೊಣ್ನೆ, ಕತ್ತಿ ಮತ್ತು ಬಿಲ್ಲು ಬಾಣ ಹಿಡಿದಿಕೊಂಡ ಭೂ ಒಡೆಯ ಅಸ್ತಿತ್ವಕ್ಕೆ ಬಂದ ಮೇಲೆ.

ಈ ಕತೆಯ ಆಶಯಗಳನ್ನು ಪರಿಶೀಲಿಸಿ

ಮನುಷ್ಯ

೧. ಉಸಿರು ಕಟ್ಟಿ ಬದುಕುತ್ತಿದ್ದ

೨. ಹೊಸಗಾಳಿ, ಬೆಳಕು, ನೀರು ಮತ್ತು ಆಹಾರಕ್ಕಾಗಿ ಅನ್ವೇಷಣೆ

೩. ಭೂಮಿಯ ಅರಿವು

೪. ಮರ ಮತ್ತು ತಾನು ಜೊತೆಗಿದ್ದರೂ ಮರದ ಬೆಳವಣಿಗೆಯ ಅರಿವು ಇರದಿದ್ದ ಸ್ಥಿತಿ ಅರಿವು ಬಂದ ಸ್ಥಿತಿ.

೫. ನೀರು-ಗೊಬ್ಬರ ಹಾಕಿ ತನಗಾಗಿ ಮರವನ್ನು ಬೆಳೆಸುವ ತಿಳುವಳಿಕೆ.

೬. ಸಂಗೀತ ಕೇಳಿ ಮರಗಳು ವಿಶೇಷವಾಗಿ ಬೆಳೆಯುತ್ತವೆ ಎಂಬ ಅರಿವು.

೭. ಶೃತಿ-ಭಾಷೆಯಲ್ಲಿ ಸಂಗೀತವನ್ನು ಹಾಡುತ್ತಾ ಹೋದುದು, ಸಂಗೀತ ಭಾಷೆಯ ಅರಿವು ಮತ್ತು ಉಪಯೋಗದ ಬಗ್ಗೆ ತಿಳುವಳಿಕೆ.

೮. ಮನುಷ್ಯನಿಗಾಗಿ ಬೆಳೆದ ಮರಗಳು

೯. ಭೂಮಿಯನ್ನು ತಲುಪಿದ ಮನುಷ್ಯ

೧೦. ಮರಗಳನ್ನು ಮಿತ್ರ ಬಂಧು ಮತ್ತು ರಕ್ಷಕ ದೈವವಾಗಿ ಪಡೆದುದು, ಜೊತೆಗಾರ ಮಿತ್ರ, ಆಪತ್ತಿಗೆ ಆದವನು ನೆಂಟ ಬಂಧು ಕಷ್ಟದಲ್ಲಿ ನೆರವಾದವನು ರಕ್ಷಕ.

ಈ ಹಿನ್ನೆಲೆಯಲ್ಲಿ ಸಸ್ಯ ಜನಪದರ ಪ್ರಜ್ಞೆಯಲ್ಲಿ ಯಾವೆಲ್ಲ ಬಗೆಯಲ್ಲಿ ರೂಪ ಪಡೆಯಿತು ಎಂಬುದನ್ನು ನೋಡೋಣ.

ಪ್ರಾಣವಾಗಿ

ವ್ಯಕ್ತಿಯ ಉಳಿವಿಗಾಗಿ ಅವನ ಬದಲಿಗೆ ಸಸ್ಯ ಪ್ರಾಣವನ್ನು (ಸಮಾನವೆಂದು ತಿಳಿದು) ಬಲಿಕೊಡಲಾಗುತ್ತದೆ.

. ಬಾಳೆ ಕಡಿಯುವುದು : ಬಾಳೆಕಂಬ ಕಡಿಯದೆ ಯಾವ ಜಾತ್ರೆಯೂ ಆರಂಭವಾಗುವುದಿಲ್ಲ. ಬಾಳೆ ಬಲಿ ಮಾನವ ಬಲಿಗೆ ಪರ್ಯಾಯವಾಗಿ ಬಂದುದು. ಬಹುತೇಕ ಶುಭ ಅಶುಭ ಕಾರ್ಯಕ್ರಮಗಳು ಬಾಳೆಕಂಬದ ಪೂಜೆಯಿಂದಲೇ ಆಗುತ್ತವೆ.

ಮಂತ್ರವಾದಿ ತನ್ನ ಶತ್ರುವನ್ನು ನಿಗ್ರಹಿಸಲು ಅವನ ಹೊಟ್ಟೆ ಬುರುಬುರು ಊದುವಂತೆ ಮಾಡುತ್ತಾನೆ. ಶತ್ರು ಸಾಯುವ ಸ್ಥಿತಿ ತಲುಪುತ್ತಾನೆ. ಆಗ ಅವನೋ ಅವನ ಕಡೆಯವನೋ ಎಚ್ಚರವಹಿಸಿದರೆ ಅವನ ಅಕ್ಕಪಕ್ಕದಲ್ಲಿ ಇರುವ ಒಂದು ಬಾಳೆಯ ಮರವನ್ನು ಕಡಿಯಬೇಕು. ಅದರಿಂದ ನೀರು ಬುಳು ಬುಳು ಹೊರ ಬರುತ್ತದೆ. ಆ ನೀರು ಹೊರಬಂದಂತೆ ಶತ್ರುವಿನ ಹೊಟ್ಟೆ ಇಳಿಯುತ್ತಾ ಹೋಗುತ್ತದೆ. ಬಾಳೆಯನ್ನೇ ಬಲಿ ಕೊಡಬೇಕೆಂದಿಲ್ಲ. ಬಾಳೆಯ ಹಣ್ಣಿನ ತೊಟ್ಟು ಮುರಿದು ದೇವರ ಮುಂದೆ ಇಟ್ಟರೆ ಸಾಕು. ಅದೂ ಬಲಿಯೆ, ಮನುಷ್ಯನಿಗೆ ಬಾಳೆ ಹತ್ತಿರ. ಅದಕ್ಕೂ ಮನುಷ್ಯರಂಟೆ ಪ್ರಾಣ ಇದೆ. ಜನಪದ ಕಥೆಯಲ್ಲಿ ಪ್ರಾಣ ಉಳಿಸಿಕೊಳ್ಳಬೇಕಾದ ಹೆಣ್ಣು ಬಾಳೆ ಮರದ ಒಳಕ್ಕೆ ಹೋಗಿ ಸೇರಿಕೊಳ್ಳುತ್ತಾಳೆ.

ಮೊದಲು ಮನುಷ್ಯನಿಗೆ ಮಾತ್ರ ಪ್ರಾಣವಿದೆ ಎಂದು ಜನ ನಂಬಿದ್ದರು. ಆಗ ಮನುಷ್ಯರನ್ನೇ ಬಲಿಕೊಡುತ್ತಿದ್ದರು. ಕಾಳಿಕಾದೇವಿಯ ಎದೆಯ ಮೇಲೆ ಇರುವ ರುಂಡಮಾಲೆ ಇದಕ್ಕೆ ಸಾಕ್ಷಿ. ಈಗ ತಲೆ ಬಲಿಕೊಡುವ ಬದಲು ತೆಂಗಿನಕಾಯಿ ಒಡೆಯುತ್ತಾರೆ. ಈ ಬಗೆಯ ಸಮರ್ಪಣೆಯನ್ನು ಈಗ ಮೊಸರನ್ನ ಹುಗ್ಗಿ ಅನ್ನ ಮುಂತಾದ ಸಸ್ಯ ಪದಾರ್ಥಗಳ ಮೂಲಕ ಮಾಡಲಾಗುತ್ತಿದೆ. ಹೀಗೆ ಪೂಜೆ ಬಲಿ ಮನುಷ್ಯ ಪ್ರಾಣದಿಂದ ಕೋಣ, ಕುರಿ, ಕೋಳಿ ಪ್ರಾಣಕ್ಕೆ ಅಲ್ಲಿಂದ ಮೊಟ್ಟೆಯೊಳಗೆ ಇರುವ ಪ್ರಾಣಕ್ಕೆ ನಂತರ ಸಸ್ಯಗಳಿಗೆ ಸಸ್ಯದ ಉತ್ತತ್ತಿಗಳಾದ ಅಕ್ಕಿ, ಅನ್ನಕ್ಕೆ ಬಂತು ಅನ್ನ ತೋ ಪ್ರಾಣಃ ಪ್ರಾಣ ತೋ ಪರಾಕ್ರಮಃ ಆಯಿತು.

ರಾತ್ರಿಯ ಒಂದು ನಿರ್ದಿಷ್ಟ ಸಮಾಯದಲ್ಲಿ ಸಸ್ಯಗಳೆಲ್ಲ, ಅದರಲ್ಲೂ ಮರಗಳು ಮನುಷ್ಯರಾಗುತ್ತವಂತೆ ನಮ್ಮ ಜನಪದ ಕಥೆಯಲ್ಲಿ ಸತ್ತ ಮಲತಾಯಿ ಹೆಣ್ಣಿನ ಮರವಾಗಿ ಹುಟ್ಟಿ ತನ್ನ ತಬ್ಬಲಿ ಮಗುವನ್ನು ಸಾಕುತ್ತಾಳೆ. ರಾಜಕುಮಾರ್  ನೆಟ್ಟ ಈ ಮಲ್ಲಿಗೆ ಬಳ್ಳಿ ಚಿಗುರುತ್ತಾ ಇದ್ದರೆ ನಾನು ಬದುಕಿದ್ದೇನೆ ಅದು ಬತ್ತಿದರೆ ನಾನು ಸತ್ತಿದ್ದೇಣೆ ಎಂದು ತಿಳಿ ಎಂದು ಹೇಳಿ ಮನೆ ಬಿಟು ಸಾಹಸಕ್ಕೆ ಹೊರಡುತ್ತಾನೆ. ಮಕ್ಕಳ ಫಲ ಇಲ್ಲದ ರಾಜ ಕಾಡಿಗೆ ಹೋಗಿ ಮಾವಿನ ಹಣ್ಣಿನ ರೂಪದ ಫಲ ತರುತ್ತಾನೆ. ಮಕ್ಕಳ ಫಲ ಕೊಡುವ ಶಿವ ಹಣ್ಣಿನ ರೂಪದಲ್ಲಿ ಕೊಡುತ್ತಾನೆ.

ವ್ಯಕ್ತಿಗೆ ಹಿಂಸೆ ಕೊಡುವ ದೆವ್ವದ ಪ್ರಾಣವನ್ನು ನಿಂಬೆ ಹಣ್ಣಿನ ಮಾತ್ರಂಇಅಕ್ ವರ್ಗಾಯಿಸುತ್ತಾನೆ. ದಕ್ಷಿಣ ಭಾರತದ ಹಲವು ಗ್ರಾಮಗಳಲ್ಲಿ ಜಾತ್ರೆ, ಹಬ, ಉತ್ಸವ ನಡೆಸುವ ಮೊದಲ ದಿನ ಭೂಮಿಗೆ ಪ್ರಾಣ ಬರಿಸಲು ಹಸಿರು ಕಂಬ ನೆಡುವುದಿದೆ. ದ್ರಾವಿಡ ಸಂಸ್ಕೃತಿಯಲ್ಲಿ ಸತ್ತವರನ್ನು ಹೂತು ಅವರ ಸಮಾಧಿ ಮೇಲೆ ಹಣ್ಣು ಕೊಡುವ ಮರ ನೆಡುತ್ತಾರೆ. ಮನುಷ್ಯನ ಪ್ರಾಣವನ್ನು ಸಸ್ಯದ ಫಲಗಳ ಮೂಲಕ ಪಡೆಯುವ ಕ್ರಮ ಇದೆ.

“ಕಾಸರಕನ ಮರ ಇಡೀ ದಕ್ಷಿಣ ಕನ್ನಡ ಸಮುದಾಯವೊಂದರ ಪ್ರಾಣ ಸಂಚಾರಿಯಂತಿದೆ” ಡಾ.ಕೆ.ಚನ್ನಪ್ಪಗೌಡ ಜನಪದ ಸಾಹಿತ್ಯ ದರ್ಶನ ೧೯೯೩.

ದೇವತೆಯಾಗಿ

ಮನುಷ್ಯನ ಸಮಾಜದ ರಕ್ಷಣೆ, ಆಶ್ರಯ ಅವಲಂಬನೆ ಹಾಗೂ ಅಸ್ತಿತ್ವಕ್ಕಾಗಿ ಸಸ್ಯವನ್ನು ದೇವತೆಯಾಗಿ ಪಡೆದು ಅಭಿವ್ಯಕ್ತಿಸಲಾಗಿದೆ.

ಆಲದ ಮರದಮ್ಮ, ಬೇವಿನಮರದಮ್ಮದಂತೆ ಪ್ರತಿಯೊಂದು ಜನಾಂಗವೂ ಮರವೊಂದನ್ನು ಅಥವಾ ತಮ್ಮ ದೇವರ ಜೊತೆಗೆ ಪೂಜ್ಯ ಮರವೊಂದನ್ನು ಸ್ವೀಕರಿಸಿದ್ದಾರೆ. ಆಲ, ಅರಳಿ, ಬಿಲ್ಪತ್ರೆ ಈ ಮುಂತಾದುವನ್ನು ನೋಡಬಹುದು.

ಆಸ್ಟ್ರೇಲಿಯಾದ ಬುಡಕಟ್ಟೊಂದು ತಮ್ಮ ಪಿತೃ ದೈವವನ್ನು ಮರವೊಂದರ ಮೇಲೆ ಮುಖದ ರೂಪದಲ್ಲಿ ಚಿತ್ರಿಸಿಕೊಂಡು ಪೂಜಿಸುತ್ತದೆ.

“ಮಾರಮ್ಮ ಮರದಮ್ಮನೂ ಆಗಿರಬಹುದು” ಡಾ. ಅರವಿಂದ ಮಾಲಗತ್ತಿ ಜಾನಪದ ಸಾಹಿತ್ಯ ದರ್ಶನ ೧೯೯೩.

ರೂಪಾಂತರ ಸಾಧ್ಯತೆ

ಮನುಷ್ಯ ತನ್ನ ಹೊಸತನಕ್ಕೆ ರೂಪಾಂತರಕ್ಕೆ ಸಸ್ಯ ನೆಲೆಗಳಿಗೆ ಹೋಗುತ್ತಾನೆ. ರಾಜ ಸನ್ಯಾಸ ಸ್ವೀಕರಿಸು ಕಾಡಿಗೆ ಹೋಗುತ್ತಾನೆ. ಜೀವನದ ಬಗ್ಗೆ ಜಿಗುಪ್ಸೆ ಹೊಂದಿನ ಮನುಷ್ಯ ತಪಸ್ಸಿಗಾಗಿ ಕಾಡಿಗೆ ಹೋಗುತ್ತಾನೆ. ಬಡಹುಡುಗ ಶ್ರೀಮಂತನಾಗಲೂ ದೇವರನ್ನು ಹುಡುಕಿ ಕಾಡಿಗೆ ಹೋಗುತ್ತಾನೆ. ಮನುಷ್ಯರ ಕೆಟ್ಟ ವ್ಯವಹಾರಕ್ಕೆ ಹೇಸಿ ಹಸು ತನ್ನ ಕರುವಿನೊಡನೆ ಕಾಡಿಗೆ ಓಡಿ ಹೋಗುತ್ತದೆ.

ಋತುಮತಿಯಾದ ಹೆಣ್ಣಿಗೆ ತಕ್ಷನ ಏಳು ಫಲಕೊಡುವ ಸಸ್ಯಗಳ ಎಲೆಗಳನ್ನು ತಂದು ಗುಡಿಸಲು ಕಟ್ಟಲಾಗುತ್ತದೆ. ಹಬ್ಬ, ಜಾತ್ರೆಗಳಲ್ಲಿ ಮನೆಗೆ ಹಸಿರು ತೋರಣ ಕಟ್ಟಿ ಭಿನ್ನತೆ ತೋರಿಸಲಾಗುತ್ತದೆ. ರಾಸುಗಳ ಮೆರವಣಿಗೆ ಮಾಡಲು ಹಸಿರಿನಿಂದ ಶೃಂಗರಿಸಲಾಗುತ್ತದೆ. ಮದುವೆ ನಿಶ್ಚಯ ವಿಳ್ಳೇದೆಲೆ ಶಾಸ್ತ್ರದಿಂದ ವರನ ಪೇಟಕ್ಕೆ ಸೀಗೆ ಎಲೆ ಅಲಂಕಾರದಿಂದ ಕೈಗೆ ಅರಿಶಿಣ ಎಲೆಕಂಕಣದಿಂದ ಬೇರೆ ಮಾಡ ತೋರಿಸಲಾಗುತ್ತದೆ.

ಮದುವೆ ಚಪ್ಪರದಿಂದ ಮದುವೆ ಮೆರವಣಿಗೆ ಹೊಂಬಾಳೆ ಕಳಸದ ವಿಶಿಷ್ಟತೆಯಿಂದ ಹಣ್ಣು,  ತೆಂಗಿನಕಾಯಿ, ಎಲೆ ಅಡಿಕೆ ಸ್ವೀಕಾರದಿಂದ ಭಿನ್ನವಾಗುತ್ತದೆ. ಸತ್ತಾಗ ಸಮಾಧಿ ಒಳಗೆ ಬಾಳೆ ಎಲೆ ಹಾಸುವ ಮೂಲಕ, ಮೇಲೆ ಎಳನೀರು ಹೊಂಬಾಳೆ ಇಡುವ ಮೂಲಕ ಭಿನ್ನ ಮಾಡಿ ತೋರಿಸಲಾಗುತ್ತದೆ.

ದೆವ್ವ ಹಿಡಿದವರಿಗೆ ಬೇವಿನ ಸೊಪ್ಪಿನ ಏಟು ಕೊಟ್ಟು ಸ್ವಾಸ್ಥಕ್ಕೆ ತರಲಾಗುತ್ತದೆ. ಕಾಡಿನಲ್ಲಿ ಮನುಷ್ಯನನ್ನು ಕೋತಿ ಮಾಡುವ ಕೋತಿಯನ್ನು ಮನುಷ್ಯನನ್ನಾಗಿ ಮಾಡುವ ನೀರು ಇದೆ.

ಪರಿಹಾರವಾಗಿ

ಮನುಷ್ಯ ಸಮಾಜದಲ್ಲಿ ಪರಿಹಾರವಾಗದೆ ಇರುವ ಸಮಸ್ಯೆಗಳು ಸಸ್ಯ ಸಮಾಜದಲ್ಲಿ ಪರಿಹಾರವಾಗುತ್ತದೆ.

ಬಡತನ ನಿವಾರಣೆಗಾಗಿ ಹುಡುಗ ಕಾಡಿಗೆ ಹೋಗುತ್ತಾನೆ. ಅಪ್ಪನ ರೋಗಕ್ಕೆ ಔಷಧಿ ಹುಡುಕಿ ಮಕ್ಕಳು ಕಾಡಿಗೆ ಹೋಗುತ್ತಾರೆ. ಅತಿಶಯವಾದುದು, ಅತಿ ವಿಶಿಷ್ಟವಾದುದು ಅದ್ಭುತವಾದುದನ್ನು ತರಲು ಕಾಡಿಗೆ ಹೋಗಲಾಗುತ್ತದೆ. ಮಾನವನ ಬಹುತೇಖ ರೋಗ ನಿರ್ಮೂಲನ ಔಷಧಿಗಳು ಸಸ್ಯ ಜಗತ್ತಿನಿಂದಲೇ ಬಂದಿವೆ.

ಜೀವನ ಸಾಕ್ಷಿ ಪ್ರಮಾಣ

ತಮಗೊಂದು ಹಾಗೂ ವ್ಯಕ್ತಿತ್ವ ಇರುವಂತೆ ಸಸ್ಯಗಳಿಗೂ ಜೀವನ ಹಾಗೂ ವ್ಯಕ್ತಿತ್ವ ಇದೆ ಎಂದು ಜನಪದರು ನಂಬಿದ್ದಾರೆ. ವ್ಯಕ್ತಿತ್ವ ಇರುವವನು ಏನನ್ನಾದರೂ ನಿರೂಪಿಸಬಲ್ಲ, ನಿರ್ದೇಶಿಸಬಲ್ಲ, ಸಹ್ಯನಾಗಬಲ್ಲ, ನಂಬಿಕಸ್ಥ, ಸಾಕ್ಷಿ ಪ್ರಮಾಣ ಆಗಬಲ್ಲ ಇತ್ಯಾದಿ.

ಮರದಕೆಳಗೆ ಮರಮುಟ್ಟ ಪ್ರಮಾಣ ಮಾಡ ಸಾಲ, ವಸ್ತು, ಮಗು, ವಚನ ಪಡೆಯುತ್ತಿದ್ದ ಸೂರ್ಯ ಚಂದ್ರರಂತೆ ಕಲ್ಲು, ಹೊಳೆ, ಕೆರೆಗಳು ಸಾಕ್ಷಿಗಳಾಗುತ್ತಿದ್ದವು. ದೈವಗಳಿಗಿಂತ ಇವುಗಳ ಸಾಕ್ಷಿಯೆ ಪ್ರಬಲವಾಗಿರುತ್ತಿತ್ತು. ಯಾಕೆಂದರೆ ಸಮಯ ಬಂದರೆ ಅವು ಮಾತಾಡುತ್ತವೆ ಎಂಬ ನಂಬಿಕೆ ಇತ್ತು.

ಮೂಲ ಸಂಪತ್ತಾಗಿ

ಮನುಷ್ಯ ಮೂಲತಃ ಮಲ-ಮೂತ್ರವನ್ನು ಬಿಟ್ಟರೆ ಏನನ್ನು ಉತ್ಪತ್ತಿ ಮಾಡುವುದಿಲ್ಲ. ಮನುಷ್ಯ ಅರ್ಜಿಸಿಕೊಂಡ ಊರ್ಜಿತ ಮಾಡಿಕೊಂಡ ಸಂಪತ್ತು ಜ್ಝಾನ ಬಹುತೇಕ ಪ್ರಾಣಿ ಸಸ್ಯ ಪರಿಸರದಿಂದ ಬಂದುದು.

ಶಿವ-ಶಕ್ತಿ ಪರಿಸರದಲ್ಲಿರುವ ಮೂಲಸಂಪತ್ತು ಪರಿಸರದಲ್ಲಿದೆ. ವಿಶೇಷ ಸಂಪತ್ತು (ಖನಿಜ ಇತ್ಯಾದಿ) ಪರಿಸರದಲ್ಲಿದೆ. ಸಮಸ್ಯೆಗಳಿಗೆ ಉತ್ತರ ಪರಿಸರದಲ್ಲಿದೆ.

ಬಳಕೆಯ ವಸ್ತುವಾಗಿ

ಸಸ್ಯ ಮತ್ತು ಪ್ರಾಣಿಗಳು ಆರ್ಥಿಕ ಪರಿಕಲ್ಪನೆಗೆ ಬಂದುದು ಅವುಗಳ ಬಳಕೆ ಸಾಂಸ್ಕೃತಿಕಗೊಂಡಾಗ, ಅಂದರೆ ಮನುಷ್ಯ ಸಂಸ್ಕೃತಿಗೆ ಪೋಷಕವಾಗಿ ವಸ್ತುಗಳು ಎನಿಸಿದಾಗ, ಮೊದಲು ಪರಿಸರದಲ್ಲಿ ಪ್ರಾಣಿ, ಸಸ್ಯ ಹಾಗೂ ಮನುಶ್ಃಯ ಸಮಾನ ಸ್ಥಾನಮಾನದಲ್ಲಿದ್ದವು. ಮಾನವ ಸಂಸ್ಕೃತಿ ವಿಶೇಷವಾಗಿ ಬೆಳೆದು ತನ್ನದೇ ಆದ ಕೇಂದ್ರೀಯ ಚಿಂತನೆಯನ್ನು ಬೆಳೆಸಿಕೊಂಡಿತು. ಈ ಕೇಂದ್ರ ಚಿಂತನೆ ಪ್ರಾಣಿ ಸಸ್ಯ ಪರಿಸರವನ್ನು ಬಳಸಿಕೊಳ್ಳತೊಡಗಿತು. ಅವುಗಳ ಅಸ್ತಿತ್ವವನ್ನು ಕಡೆಗಣಿಸಿ.

ಈಗ ಪ್ರಾಣಿ ಸಸ್ಯ ಎಂದರೆ ಆಹಾರಕ್ಕೆ, ಅನುಕೂಲಕ್ಕೆ, ಸಹಾಯಕ್ಕೆ, ಸಂಪತ್ತು ಅಭಿವೃದ್ಧಿಗೆ ಮತ್ತು ವೈಭವಕ್ಕೆ ಎಂದು ಮನುಷ್ಯ ಬಳಸುತ್ತಿದ್ದಾನೆ. ಬಳಸಿ ಕಸ ಮಾಡಿ ಎಸೆಯುತಿದ್ದಾನೆ. ಆ ಮೂಲಕ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾನೆ.

ಫಲವಂತಿಕೆಯಾಗಿ

ಫಲವಂತಿಕೆ ಸಸ್ಯದ ಮೂಲ ಗುಣವಾಗಿದೆ. ಸಸ್ಯದಿಂದಲೇ ಪ್ರಾಣಿಗಳು ಹುಟ್ಟಿದವು ಎಂಬ ತಿಳುವಳಿಕೆ ಪುರಾತನ ಕಾಲದಿಂದಲೂ ಇದೆ. ಪ್ರಾಣಿಗಳು ಪ್ರಾಣಿಗಳಿಂದ ಹುಟ್ಟುತ್ತವೆ ಎಂಬ ನಿರ್ದಿಷ್ಟ ಗ್ರಹಿಕೆ ಬಂದುದು ಇತ್ತೀಚೆಗೆ ಮನುಷ್ಯ ಸಮಾಜ ತಾನು ಫಲವಂತನಾಗಬೇಕಾದರೆ ಸಸ್ಯದ ಸಹವಾಸ ಅಗತ್ಯ ಎಂದು ಕೊಂಡಿದ್ದಾನೆ. ಅದು ಆಹಾಯ ಉತ್ಪತ್ತಿಯಿಂದ ಮಾತ್ರವಲ್ಲ ಅವನ ಜೀವನಾವರ್ಸದ ಆಚರಣೆಗಳಿಂದ ಕೂಡ ಸ್ಪಷ್ಟವಾಗಿದೆ.

ಮಗು ಹುಟ್ಟಿದಾಗ ಎಲೆಯ ಮೇಲೆ ಹಾಕುವುದರಿಂದ ಅಥವಾ ಊರಿಗೆ ಎಲೆ ತಿದ್ದುವುದ (ಹಂಚುವುದು) ರಿಂದ ಫಲವಂತಿಯಾದಾಗ ಸಸ್ಯ ಫಲವಂತಿಕೆಯ ಜೊತೆಗೆ ಗುರುತಿಸಿಕೊಳ್ಳುವ (ಹೆಣ್ಣು-ಹಣ್ಣು) ಕೊಳ್ಳುವ ಮೂಲಕ ಮದುವೆಯಲ್ಲಿ ಹೊಳೆ ನೀರು ತರುವ, ಹೂಮಾಲೆ ಹಾಕಿಕೊಳ್ಳುವ, ಚಪ್ಪರಕ್ಕೆ ಹಸಿಎಲೆ ಎಳನೀರು, ಹೂವು, ಹೊಂಬಾಳೆ, ಅಕ್ಕಿ, ಅರಿಶಿಣ, ವೀಳ್ಯ, ತೆಂಗಿನಕಾಯಿ ಬಳಸುವ ಮೂಲಕ ಹೆಣ್ಣು ಗಂಡು ಕೈಗೆ ಸಸ್ಯ ಚಿತ್ರದ ಹಚ್ಚೆ ಬಿಡಿಸಿ ಕೊಳ್ಳುವ, ಮನೆಗೆ ಆನೆ, ಕುದುರೆ, ನವಿಲು ಚಿತ್ರಗಳನ್ನು ಬರೆಸುವ ಮೂಲಕ ಹೀಗೆ ಮನುಷ್ಯನ ಜನಪದಗಳು ಪ್ರಾಣಿ-ಸಸ್ಯ ಪರಿಸರದ ಮೂಲಕವೇ ಪುನರುಜ್ಜೀವನ ಪುನರ್ ಸೃಷ್ಟಿ ಪಡೆಯುತ್ತಾ ಹೋಗುತ್ತಿವೆ.

ಇದು ನಗರದಲ್ಲಿ ತುಂಬಾ ಚೆನ್ನಾಗಿ ಎದ್ದು ಕಾಣುತ್ತದೆ. ಒಂದು ಹಬ್ಬ ಎಂದರೆ ಅಲ್ಲಿರುವ ಮಾವು ಬೇವಿನ ಮರಗಳೆಲ್ಲವೂ ಬೋಳಾಗುವ ಮೂಲಕ ಅವು ಮನುಷ್ಯನನ್ನು ತುಂಬುವ ಮೂಲಕ.

. ಪ್ರಾಣಿ

ಭೂಮಿ, ನಿಸರ್ಗದಲ್ಲಿ ಒಂದಾಗಿದ್ದ ನಾವು ಈಗ ಬೇರೆಯಾಗಿದ್ದೇವೆ. ನಮ್ಮ ಬದುಕಿನ ಅವಶ್ಯಕತೆಯ ಕೇಂದ್ರ ಚಿಂತನೆಯಿಂದ ಜಗತ್ತಿನ ಸೃಷ್ಟಿಯನ್ನು ನೋಡುತ್ತಿದ್ದೇವೆ. ಯಾವುದು ಹೇಗೆ ಏತಕ್ಕೆ ನಮಗೆ ಬಳಕೆಗೆ ಬರುತ್ತದೆ ಎಂಬುದೆ ನಮ್ಮ ಇಂದಿನ ಚಿಂತನೆಯಾಗಿದೆ. ಇದು ಮುಂಡೆ ನಮ್ಮ ಸಾವಿನ ಚಿಂತೆಯೂ ಆಗಬಹುದು.

“ಇತರ ನಿರಾಕರಣೆ” ತತ್ವ ಜನಪದ ಬದುಕಿನಲ್ಲಿ ಎಂದೂ ಇರಲಿಲ್ಲ. ಮೊದಲು ಮಾನವ ಆಹಾರ ಗೆಡ್ಡೆ ಗೆಣಸು ಆಗಿತ್ತು. ವಾಸಕಲ್ಲು ಗುಹೆಗಳಾಗಿದ್ದವು. ಸಸ್ಯ ಸಮಾಜ ಅವನ ಒಡನಾಟ ಸಮಾಜವಾಗಿತ್ತು. ಬಹುಶಃ ಆಗಿನ್ನೂ ಪ್ರಾಣಿಗಳು ಅವನ ಹತ್ತಿರ ಬಂದಿರಲಿಕ್ಕಿಲ್ಲ.

ಮನುಷ್ಯ ಸಂಸ್ಕೃತಿಯ ನಿರ್ಮಿತಿಗೆ ಪೂರಕವಾಗಿ ಬಂದ ಮೊದಲ ಘಟಕ ಸಸ್ಯ ಜಗತ್ತು ಈ ಘಟ್ಟದಲ್ಲಿ ಪ್ರಾಣಿ ಸಂಸ್ಕೃತಿ ಮನುಷ್ಯ ಸಂಸ್ಕೃತಿಗೆ ಪ್ರತಿ ಸಂಸ್ಕೃತಿಯಾಗಿತ್ತು ಎಂಬುದೆ ನನ್ನ ತಿಳಿವಳಿಕೆ. ಪ್ರಾಣಿಗಳ ಜೊತೆಗೆ ಹೊಡೆದಾಡಿ ಮನುಷ್ಯ ತನ್ನ ನೆಲೆ ಹಾಗೂ ಆಹಾರವನ್ನು ಕಂಡುಕೊಳ್ಳಬೇಕಿತ್ತು. ಆಗ ಮನುಷ್ಯ ಕೂಡ ಒಂದು ಪ್ರಾಣಿಯೆ ಅಲ್ಲವೇ?

ಒಂದು ಬಗೆಯ ಅಘೋಷಿತ ಯುದ್ಧ ಮನುಷ್ಯ ಮತ್ತು ಪ್ರಾಣಿಗಳ ಮಧ್ಯೆ ಆರಂಭದಿಂದಲೂ ನಡೆಯುತ್ತಾ ಬಂದಿದೆ. ಈ ಯುದ್ಧದಲ್ಲಿ ಮನುಷ್ಯ ಗೆದ್ದಿದ್ದಾನೆ. ಅಂದಿಗೆ ಅವನ ಸಾಂಸ್ಕೃತಿಕ ಬೆಳವಣಿಗೆ ಎರಡನೆಯ ಘಟಕ್ಕೆ ಬಂದಿದೆ. ಆದರೆ ಇದು ಕೊನೆಯ ಯುದ್ಧವಲ್ಲ, ಮೊದಲ ಯುದ್ಧ. ಇದು ಯಾರ ಅಸ್ತಿತ್ವದ ನಾಶದ ಯುದ್ಧವೂ ಅಲ್ಲ, ಪರಸ್ಪರರ ಅಸ್ತಿತ್ವದ ಉಳಿವಿನ ಪ್ರಶ್ನೆ. ಈ ಕಾಣದ ಮೇಲೆ ಮನುಷ್ಯ ಸಂಸ್ಕೃತಿ ಸುಪ್ರಿಂ ಅನ್ನಿಸಿ ಪ್ರಾಣಿ ಸಂಸ್ಕೃತಿ ಹಲವು ಹಂತ ಕೆಳಗಿಳಿಯಿತು. ತೀರ ಕೆಳಗಿನ ಹಂತದವುಗಳಾದ ಕ್ರೂರ ಪ್ರಾಣಿಗಳು ಮನುಷ್ಯನ ಜೊಎಗೆ ಬರಲೇ ಇಲ್ಲ, ದೂರದ ಭಯಗಳಾಗಿ, ಮಾನವನ ಬದುಕಿಗೆ ಬೇಕಾದ ಬದುಕಿನ ರೀತಿಗಳಿಗೆ ಸಂಕೇತಗಳಾಗಿ ಉಳಿದುಕೊಂಡವು. ಆದರೆ ಪ್ರಾಣಿಶಕ್ತಿ ಮೂಲತಹ ತಾನೂ ಪ್ರಾಣಿಯೇ ಆದ ಮಾನವನಿಗೆ ಪ್ರಚಂಡ ಶಕ್ತಿಯಾಗಿ ಉಳಿಯಿತು. ಈ ಪ್ರಾಣಿಶಕ್ತಿಯಲ್ಲಿ ಮಾನವ ಜಗತ್ ಸೃಷ್ಟಿ ವ್ಯವಸ್ಥೆ ಲಯಗಳ ಅಪಾರ ಸಾಮರ್ಥ್ಯವನ್ನು ಕಂಡುಕೊಂಡ.

ತನಗೆ ಆಹಾರವಾಗುವ ಮಟ್ಟಕ್ಕೆ ಪ್ರಾಣಿಗಳು ಸೋಲು ಕಾಣುವವರೆಗಿನ ಮಾನವ ಪ್ರಾಣಿ ಸಂಬಂಧ ತುಂಬ ವೈಶಿಷ್ಟ್ಯ ಪೂರ್ಣವಾಗಿದೆ. ಪ್ರಾಣಿಶಕ್ತಿಯ ಚಟುವಟಿಕೆ ಮತ್ತು ನಿರ್ಮಿತಿ ಮನುಷ್ಯ ಶಕ್ತಿಯ ಕ್ರಿಯೆ ಹಾಗೂ ನಿರ್ಮಿತಿಯ ರೂಪಾಂತರ ಪ್ರಕ್ರಿಯೆ ಆಗಿದೆ. ಇದಕ್ಕೆ ಒಳ್ಳೆಯ ಉದಾಹರಣೆ ಪ್ರಾಣಿ ಮನುಷ್ಯನಿಗೆ ಕುಲ ಬಂಧು, ಸ್ನೇಹಿತ, ಸಹಾಯಕ, ಸಲಹೆಗಾರ, ಆದದ್ದು. ಹುಲಿ, ಮೊಸಳೆ, ಆನೆಗಳಂತ ಪ್ರಾಣಿಗಳು ಮಾನವ ಕುಲಗಳ ಕುಲಚಿಹ್ನೆತಳಾಗಿವೆ ಎಂಬುದು ಎಂಥ ವಿಚಿತ್ರ ಹಾಗೂ ವೈಶಿಷ್ಟ್ಯ. ಈ ಬಗೆಯ ಮಾನವನ ಪ್ರಾಣಿ ಸಂಸ್ಕೃತಿಗಳ ಸಂಯೋಗದಲ್ಲಿ ಜಿವೀನದ ಅವಿಷ್ಕಾರದ ಹೊಸ ಮಜಲುಗಳು ಇವೆ. ಆ ಮಜಲುಗಳನ್ನೀಗ ಪರಿಶೀಲಿಸೋಣ.

. ಜೀವ ಸಹವಾಸಿ ಸಂಬಂಧಿ

ಮನುಷ್ಯ-ಪ್ರಾಣಿಗಳ ಜೀವಗಳ ಅಭಿನ್ನವಾದ ಸಂಧರ್ಭಗಳು ಜನಪದಗಳಲ್ಲಿವೆ. ಮಂತ್ರವಾದಿಯು ಪ್ರಾಣ ಕಾಡಿನ ಗಿಳಿಯೊಂದರಲ್ಲಿರುತ್ತದೆ. ಕಾಡಿನಿಂದ ಊರಿಗೆ ಬಂದ ರಾಕ್ಷಸಿಯ ಪ್ರಾಣಿ ಕಾಡಿನ ಕೊಳದೊಳಗಣ ಪ್ರಾಣಿಯಲ್ಲಿರುತ್ತದೆ. ಪ್ರಾಣ ಪ್ರಜ್ಞೆ ಹೀಗೆ ಮಾನವ-ಪ್ರಾಣಿಗಳಲ್ಲಿ ಅಭಿನ್ನವಾಗಿದೆ. ಮನುಷ್ಯ ಇನ್ನೂ ಪ್ರಾಣಿಯೊಳಗೆ ತನ್ನ ಅಂಶವನ್ನು ಉಳಿಸಿಕೊಂಡಿರುವುದರ ಸೂಚನೆ ಇದು.

ಮನುಷ್ಯ ಮತ್ತು ಪ್ರಾಣಿಗಳು ಒಂದು ಸಮಾಜದ ಪ್ರಜೆಗಳೆಂಬ ಗ್ರಹಿಕೆ ಜನಪದ ಪ್ರಾಣಿಕಥಾ ಸಮಾಜದಲ್ಲಿ ಕಾಣುತ್ತಿದೆ. ಪ್ರಾಣಿಗೆ ಹೆಣ್ಣಿನ ಜೊತೆಗೆ ಲೈಂಗಿಕ ಸಂಬಂಧವೂ ಉಂಟು. ವಾಸದಲ್ಲಿ ಮಾತ್ರ ಇವು ಬೇರೆ ಬೇರೆಯಾಗುತ್ತವೆ. ಹಗಲಿನ ಚಟುವಟಿಕೆಗಳಲ್ಲಿ ವ್ಯತ್ಯಾಸವೇ ಕಾಣುವುದಿಲ್ಲ. ಒಂದೇ ಹಳ್ಳಿಯಲ್ಲಿ ಬದುಕುವ ಎರಡು ಓಣಿಯ ಜನರಂತೆ ಈ ಚಟುವಟಿಕೆ ನಮ್ಮ ಗಮನ ಸೆಳೆಯುತ್ತದೆ. ಆಶ್ಚರ್ಯವೆಂದರೆ ಒಬ್ಬ ನಾಯಕನಿಗೆ ಬೇಕಾದ ಎರಡು ಸಹಾಯಕ ಪ್ರಾಣಿಗಳು ಹಾಗೂ ಆಯುಧಗಳು ಅವನ ಹುಟ್ಟಿನ ಜೊತೆಗೆ ಕಾಣಿಸಿಕೊಳ್ಳುವೆ.

ಪ್ರಾಣಿ ಮನುಷ್ಯನ ಜೊತೆಗಿದ್ದ ಬೇರೆಯಾಗುವುದು ಕಾಡು ನಾಡು ವಾಸ್ತವ್ಯಗಳು ಬೇರೆ ಬೇರೆಯಾದಾಗ. ಕಾಡು ಪ್ರಾಣಿಗಳ ವಾಸದ ನೆಲೆ ಆದಾಗ ಆಲ್ಲಿ ಮನುಷ್ಯರ ಕಾಡು ಮನುಷ್ಯರಾದರ ಪ್ರಾಣಿಗಳು ಮನುಷ್ಯ ಜೊತೆಗೆ ಬಂದು ಸಾಕು ಸಾಧು ಪ್ರಾಣಿಗಳಾದವು.

ಪೂರ್ವಜ, ಕುಲಬಂಧು

ಪ್ರಾಣಿ ಎಂಬುದು ಒಂದೆ ಕುಲವಾಗಿದ್ದಾಗ ಸಹಾಯಕ ಪ್ರಾಣಿ ಅಥವಾ ರಕ್ಷಕ ಪ್ರಾಣಿ ಯಜಮಾನನಾಗುತ್ತಾನೆ. ಅದುಸತ್ತಾಗ ದೇವರಾಗುತ್ತದೆ. ಇದೆ ಕುಲದೇವತೆ, ಈ ಕುಲಪೂರ್ವಜ ಮನುಷ್ಯ ಇತರ ಪ್ರಾಣಿಗಳ ಮಾರ್ಗದರ್ಶಿಯಾಗಿರಬಹುದು. ಪ್ರಾಣಿ ಸಮೂಹದಿಂದ ಮನುಷ್ಯ ವಿಶೇಷವಾಗಿ ಹೊರಗೆ ಬಂದು ಪೂರ್ವಜನವನ್ನು ಕುಲದೇವತೆಯಾಗಿ ಹೊಂದಿರಬಹುದು. ಕಷ್ಟದ ಕಾಲದಲ್ಲಿ ಸಹಾಯಕವಾದ ಪ್ರಾಣಿ ಕೂಡ ಕುಲದೈವ ಆಗಿರಬಹುದು. ಇವತ್ತಿಗೂ, ಆಧುನಿಕ ಮನುಷ್ಯ ಜೊತೆಗೆ ಇರುವ ಕುಲ ಮತ್ತು ಬಳಿ ಸಂಬಂಧವನ್ನು ಗಮನಿಸಿದರೆ ಈ ಪರಿಕಲ್ಪನೆಯ ಮೂಲ ತುಂಬ ಅರ್ಥಪೂರ್ಣ ಅನಿಸುತ್ತದೆ.

ಸೃಷ್ಟಿಕರ್ತ, ಸರ್ವಶಕ್ತ

ಪ್ರಾಣಿಶಕ್ತಿಯೆ ಸರ್ವಶಕ್ತಿ ಎಂಬ ಅಭಿಪ್ರಾಯವಿದೆ. ಸಂಸ್ಕೃತಿ ನಿರ್ಮಿತಿ ಹಾಗೂ ನಿಸರ್ಗವನ್ನು ಮನುಷ್ಯ ಪಳಗಿಸಲು ಬಳಸಿಕೊಂಡ ರೀತಿಯನ್ನು ನೋಡಿದರೆ ಇದು ಸಹಜವೆನಿಸುತ್ತದೆ. ಪ್ರಾಣಿಶಕ್ತಿಯ ಬಗ್ಗೆ “It is all and it is all powerful ಎಂಬ ಧೋರಣೆ ಎಲ್ಲ ಕಡೆ ಇದೆ. ಒಂದು ಪ್ರಾಣಿಯ ದೇಹದಲ್ಲಿ ಅನೇಕ ಬಗೆಯ ಶಕ್ತಿ ಮೂಲಗಳಿವೆ ಎಂದು ಕಂಡು ಬಂದರೆ, ಎರಡನೆಯ ಬಗೆ ಪ್ರಾಣಿ ಸೃಜನಶೀಲತೆಯ ಪ್ರತಿನಿಧಿ ಎನ್ನುವುದು ಈಗ ಸ್ಪಷ್ಟವಿದೆ.

ಜನಪದಲ್ಲಿ ಪ್ರಾಣಿಶಕ್ತಿ ಮತ್ತು ಅದರ ವಿವಿಧ ಅಭಿವ್ಯಕ್ತಿ ಬಗ್ಗೆ ಇರುವ ನಂಬಿಕೆಗಳನ್ನು ಕಂಡರೆ ಆಶ್ಚರ್ಯವಾಗುತ್ತದೆ. ಪ್ರಾಣಿಗಳಲ್ಲಿ ವಿಷವೂ ಇದೆ, ಅಮೃತವೂ ಇದೆ ಎಂಬ ಅಂಶವವನ್ನು ಗಮನಿಸಿದರೆ ಸಾಕು.

. ಸ್ನೇಹಿತ ಸಲಹೆಗಾರ

ಮನುಷ್ಯ ಮತ್ತು ಪ್ರಾಣಿಗಳು ಸ್ನೇಹಿತರಾಗಿವೆ. ಪ್ರಣಾಣ ಹೊರಟ ಹುಡುಗನ ಜೊತೆಗೆ ಏಡಿ ಕೂಡಿಕೊಳ್ಳಲು ಕೇಳಿಕೊಳ್ಳುತ್ತದೆ. ತಕ್ಷಣದ ಹಸಿವನ್ನು ತಿರಿಸಿದ ದನಕಾಯುವ ಹುಡುಗನ ಜೊತೆ ನರಿ ಸ್ನೇಹಿತನಾಗುತ್ತದೆ. ಹೆಣ್ಣು ಹುಡುಕಿ ಆ ಹುಡುಗನ ಮದುವೆ ಮಾಡುತ್ತದೆ. ಊರಿನಲ್ಲಿ ಯಜಮಾನನಿಂದ ಹಿಂಸೆಗೆ ಒಳಗಾದ ಹಸು ಕಾಡು ಸೇರುತ್ತದೆ. ಅಲ್ಲಿ ಹುಳಿಯ ಜೊತೆಗೆ ಸ್ನೇಹಿತನಾಗುತ್ತದೆ. ಆ ಎರಡೂ ಪ್ರಾಣಿಗಳ ಕರುಗಳು ಅವರ ಸ್ನೇಹವನ್ನು ಸಾಧಿಸುತ್ತವೆ. ಶಿವನ ಮೆಚ್ಚುಗೆಗೆ ಪಾತ್ರವಾಗಿ ಮಾನವ ಸ್ನೇಹಿತರಾಗಿ ರೂಪಾಂತರಗೊಳ್ಳುತ್ತದೆ. ಮನುಷ್ಯರಿಂದ ತೀರ್ಮಾನವಾಗದ ಬಡವನ ನ್ಯಾಯಕ್ಕೆ ನರಿ ಸ್ನೇಹಿತನಾಗಿ ಬಂದು ಸಹಾಯ ಮಾಡುತ್ತದೆ.

. ಶಕ್ತಿ

ಪ್ರಾಣಿ ಸಮಾಜದ ಜೊತೆಗಿನ ಸಂಬಂಧ ದೂರವಾದಂತೆಲ್ಲ ಮನುಷ್ಯ ಪ್ರಾಣಿ ಶಕ್ತಿಯನ್ನು ಸರಿಯಾಗಿ ಗ್ರಹಿಸಿದಂತೆ ಕಾಣುತ್ತದೆ. ಪ್ರಾಣಿ ಶಕ್ತಿ ಸೃಷ್ಟಿ ಶಕ್ತಿ ಎಂಬ ತೀರ್ಮಾನಕ್ಕೆ ಆತ ಬಂದಂತಿದೆ. ಅನೇಕ ಬುಡಕಟ್ಟುಗಳ ಕತೆಗಳು ಪ್ರಾಣಿಗಳ ಭೂಮಿಯನ್ನು ಸಮುದ್ರದಿಂದ ಎತ್ತಿ ತಂದವು ಎಂದು ಹೇಳುತ್ತವೆ. ಅಮೇರಿಕನ್ ಇಂಡಿಯನ್ನರ ಪ್ರಿಯ ಪ್ರಾಣಿ ಕೊಯಟ್ ಇದಕ್ಕೆ ಉದಾಹರಣೆ.

ಪ್ರಾಣಿಗಳಲ್ಲಿ ಎಂಥ ಶಕ್ತಿ ಇದೆ ಎಂಬುದಕ್ಕೆ ಪ್ರಾಣಿ ಪಕ್ಷಿಯೊಂದರ ತಲೆ ತಿಂದವನು ಮುತ್ತು ರತ್ನ ಉಗುಳುತ್ತಾನೆ. ದೇಹ ತಿಂದವನು ರಾಜನಾಗುತ್ತಾನೆ ಎಂಬ ಅಂತರಾಷ್ಟ್ರೀಯ ಜಾನಪದ ಆಶಯವೆ ಸಾಕ್ಷಿ. ಮೂರು ಲೋಕವನ್ನು ಹಾಯಬಲ್ಲ ಭವಿಷ್ಯ ಹೇಳಬಲ್ಲ ಔಷಧಿಯಾಗಬಲ್ಲ ಭೇರುಂಡ ಪಕ್ಷಿಗಳ ಜನಪದ ಸಮಾಜದಲ್ಲಿವೆ. ಪಕ್ಷಿಗಳ ಭಾಷೆ ಒಂದು ಹೊಸ ಜ್ಞಾನವಾಗಿದೆ.

ಬಹುಶಃ ಜನಪದರ ಪ್ರಾಣಿ ಗ್ರಹಿಕೆಯ ಮುಂದೆ ಶಿಷ್ಟ ಪುರಾಣ ಸೃಷ್ಟಿಕರ್ತರಿಗೆ ದಶಾವತಾರದಲ್ಲಿ ಪ್ರಾಣಿ ಸಾಮರ್ಥ್ಯವನ್ನು ಏಕ್ಸ್ ಪ್ಲೋರ್ ಮಾಡಿಕೊಳ್ಳಲು ನೆರವಾಗಬೇಕು.

ಸಹಾಯಕ

ಮಾನವ ಶಕ್ತಿಗೆ ಒಂದು ಸಮಾನ ಮತ್ತು ಪರ್ಯಾಯ ಶಕ್ತಿ ಪ್ರಾಣಿಗಳಲ್ಲಿದೆ. ಅಥವಾ ಮಾನವನ ಕೊರತೆಗಳನ್ನೆಲ್ಲ ತುಂಬಿ ಕೊಡಬಹುದಾದ ಶಕ್ತಿ ಪಾಣಿ ಸಮಾಜದಲ್ಲಿದೆ ಎಂಬ ಅಂಶ ಸಹಾಯಕ ಪ್ರಾಣಿಗಳ ನೆರವಿನಿಂದ ತಿಳಿಯುತ್ತದೆ. ಮಾನವ ಸಮಾಜದ ನಾಯಕ ಮಹತ್ವದ ಸಾಧನೆ ಮಾಡಿ ಆ ಸಮಾಜದ ಪ್ರಾತಿನಿಧಿಕ ವ್ಯಕ್ತಿತ್ವ ಸಂಪಾದಿಸಿಕೊಳ್ಳಲು ಪ್ರಾಣಿಗಳ ಕಾರಣವಾಗಿವೆ. ಈ ಸಹಾಯದ ವಿಧಾನಗಳು ಬಹು ವಿಧದಲ್ಲಿವೆ. ದುರ್ಬಲ ನಾಯಕನ ನೆರವಿಗೆ ಬರುವುದೇ ಇವುಗಳ ದೊಡ್ಡ ಮೌಲ್ಯವಾಗಿದೆ. ಮಾನವ ಸಮಾಜದಲ್ಲಿನ ಮಾನವೀಯತೆ ಎಂಬ ಮಹತ್ವದ ಮೌಲ್ಯ ಹಿಂದೆ ಬೀಳುವಷ್ಟು ಪ್ರಾಣಿಯತೆ ಎತ್ತರಕ್ಕೆ ನಿಲ್ಲುತ್ತದೆ.

ಇಲ್ಲಿ ಸಾಧು ಸ್ವಭಾವದ ಪ್ರಾಣೀಗಳಲ್ಲದೆ ಹುಲಿ, ಕರಡಿ, ಸಿಂಹ, ಹಾವು, ಹಂದಿಗಳೆಲ್ಲ ಮಾನವನ ಅಸ್ತಿತ್ವಕ್ಕೆ ನೆರವಾಗುತ್ತದೆ.

ಆಶ್ವರ್ಯವೊಂದು ಕಾದಿದೆ. ಇದೇ ಬಗೆಯಲ್ಲಿ ಪ್ರಾಣಿ ಜಗತ್ತಿನ ಅಸ್ತಿತ್ವಕ್ಕೆ ಮನುಷ್ಯ ನೆರವಾಗುತ್ತಿಲ್ಲ. ಅವನ ಅನ್ವೇಷಣೆ ಲತೆಗೆ ಪ್ರಾಣಿಗಳು, ನೆರವಾಗುವ ವಿಷಯಗಳ ಮಾತ್ರವಾಗಿವೆ. ಇದು ಮಾನವ ಕೇಂದ್ರಿತ ನೋಟವೇ ಹೊರತು ಪ್ರಾಣಿ ಅಥವಾ ಅನ್ವೇಷಣೆ ಲತೆಗೆ ಪ್ರಾಣಿಗಳು, ನೆರವಾಗುವ ವಿಷಯಗಳ ಮಾತ್ರವಾಗಿವೆ. ಇದು ಮಾನವ ಕೇಂದ್ರಿತ ನೋಟವೇ ಹೊರತು ಪ್ರಾಣಿ ಕೇಂದ್ರಿತ ಅಥವಾ ಒಟ್ಟು ಭೂ ಅಸ್ತಿತ್ವ ಚಿಂತನೆಯ ನೋಟ ಅಲ್ಲ.

ಸಹಾಯಕ ಪ್ರಾಣಿಗಳಲ್ಲಿ ಕ್ರೂರ ಪ್ರಾಣಿಗಳೂ ಇವೆ. ಸೌಮ್ಯ ಪ್ರಾಣಿಗಳೂ ಇವೆ. ಸಾಕು ಪ್ರಾಣಿಗಳೂ ಈ ನಿಟ್ಟಿನಲ್ಲಿ ನೆರವಾಗಿವೆ. ಸಹಾಯಕ ಪ್ರಾಣಿಗಳಲ್ಲಿ ಅಮೂಲ್ಯವೆನ್ನಬಹುದಾದುವು ಗಂಡಭೇಋಂಡ ಹೆಣ್ಣು ಭೇರುಂಡ, ಇರುವೆ, ಹದ್ದು, ಹಸು, ಹೋರಿಗಳು, ನಾಯಿ, ಕುದುರೆ, ನರಿ, ಗಿಳಿ ಮುಂತಾದುವು.

ವಾಹನ, ಸೇವಕ, ಬಲಿ, ಸ್ವಾಮಿ ಭಕ್ತಿ

ಈ ಮೂರು ಬಗೆಯ ಗ್ರಹಿಕೆಗಳು ಮನುಷ್ಯ ಯಜಮಾನರಾದ ಸಂದರ್ಭದಲ್ಲಿ ಬಂದಂಥವು. ಪ್ರಾಣಿಗಳು ತನ್ನ ಯಜಮಾನಿಕೆಗೆ ಒಳಪಟ್ಟು ಮೇಲೆ ಅವುಗಳನ್ನು ಅಧೀನದಲ್ಲಿ ಮಾನವ ಬಳಸಿಕೊಳ್ಳುವುದನ್ನು ಅಧಿಕೃತಗೊಳಿಸಿಕೊಂಡ ಜನಪದ ಸಂಸ್ಕೃತಿಯಲ್ಲಿ ಈ ಚಟೂವಟಿಕೆ ಕ್ವಚಿತ್ತಾಗಿ ಮತ್ತು ಅವಶ್ಯಕತೆಗಾಗಿ ಕಂಡುಬರುತ್ತದೆ. ಉದಾ : ವಸ್ತು ಸಾಗಿಸಲು, ವ್ಯಾಪಾರಕ್ಕೆ, ಮನುಷ್ಯ ಅಸಹಾಯಕತೆ ಮತ್ತು ಶಿಷ್ಟದಲ್ಲಿ ಯಜಮಾನಿಕೆ, ಅಧಿಕಾರ ಮುಂತಾದ ಸಾಮಾಜಿಕ ಅಂತಸ್ತುಗಳಿಗೆ ಅನ್ವಯವಾಯಿತು. ಇಲ್ಲಿ ಪ್ರಾಣಿ ಸಮಾಜ ಮನುಷ್ಯನ ಸೇವೆಗಾಗಿ ಇರುವ ಸಮಾಜವಾಗಿ ಅಭಿವ್ಯಕ್ತಗೊಂಡಿದೆ.

ಪರಿಹಾರ ವೈದ್ಯ

ಪರಿಸರ ಮಾನವನಿಗೆ ಎರಡು ತೆರದಲ್ಲಿ ಪರಿಹಾರವಾಗಿದೆ. ಒಂದು ರೋಧ ಮತ್ತೊಂದು ಪ್ರತಿರೋಧ. ಪ್ರತಿಯೊಂದು ಜೀವಿಯೂ ತನ್ನಲ್ಲಿ ರೋಧನ ಶಕ್ತಿ ಅಥವಾ ಸಹಿಸುವ ಶಕ್ತಿಯನ್ನು ಪಡೆದುಕೊಂಡಿದೆ. ತನ್ನ ರೋಧನ ಶಕ್ತಿ ದುರ್ಬಲವಾದಂತೆ ಪ್ರತಿರೋಧ ಶಕ್ತಿಯ ಬಳಕೆ ಅನಿವಾರ್ಯವಾಗುತ್ತದೆ. ಇದು ಆಹಾರ ಮತ್ತು ಔಷಧಿಯಿಂದ ಸಿಗುತ್ತದೆ.

ಪ್ರಾಣಿ ಆಹಾರವು ಆಗಿದೆ. ಔಷಧಿಯೂ ಆಗಿದೆ. ಸಸ್ಯ ಮಾನವನಿಗೆ ಬಹುತೇಕ ಮೂಲ ಆಹಾರವನ್ನು ಒದಗಿಸುವುದರ ಜೊತೆಗೆ ಪ್ರತಿರೋಧ ಗುಣದ ಮೇಲು ಆಹಾರವಾದ ಔಷಧಿಯನ್ನು ಒದಗಿಸಿವೆ. ಪ್ರಾಣಿಯಿಂದ ಮೂಲ ಆಹಾರಕ್ಕಿಂತ ಮೇಲು ಆಹಾರ ಅಥವಾ ಔಷಧಿಯ ಆಹಾರ ಸಿಗುತ್ತಿರುವುದೇ ಹೆಚ್ಚು.

ರಕ್ಷಕ, ಪೋಷಕ, ಮಾರ್ಗದರ್ಶಿ

ಈ ಮೂರು ಬಗೆಯ ಕಾರ್ಯ ನಿರ್ವಹಣೆ ಪ್ರಾಣಿಗಳಿಂದ ದೊರೆತಿದೆ. ಪೂರ್ವಕಾಲದಿಂದ ಈ ನೆರವು ಮುಂದುವರಿಯುತ್ತಾ ಬಂದಿದೆ. ಈಗ ಈ ನೆರವು ಮಾನವನಿಗೆ ಎದ್ದು ಕಾಣುತ್ತಿಲ್ಲ. ಏಕೆಂದರೆ ಅವನಿಗೆ ಕೃತಕವಾದ ತಂತ್ರಜ್ಞಾನದ ಮೊರೆ ಹೊಕ್ಕಿದ್ದಾನೆ.

ನಾಯಿಯಂಥ ಒಬ್ಬ ರಕ್ಷಕ ಮಾನವನಿಗೆ ಬೇರಾವ ಮೂಲದಿಂದಲೂ ಸಿಗಲು ಸಾಧ್ಯವಿಲ್ಲ. ದನಕರುಗಳಂಥ ಪೋಷಕರು ನನಗೆ ಬೇರೆ ಉಂಟೆ ? ಮಳೆ, ಬೆಳೆ ಬಗ್ಗೆ ಸೂಚನೆ ಕೊಡುತ್ತಾ ಬಂದಿರುವ ಪ್ರಾಣಿಗಳು ನಮಗೆ ಈಗ ಬೇಡವಾಗಿದೆ. ಆದರೆ ಆ ಮೂಲ ವಿಜ್ಞಾನ ಕತ್ತೆಯೂ ಸೇರಿದಂತೆ ಅನೇಕ ಪ್ರಾಣಿಗಳಲ್ಲಿ ಈಗಲೂ ಲಭ್ಯವಿದೆ.

ವಂಚಕ, ಕ್ರೂರಿ

ನಮ್ಮ ಜನಪದ ಕತೆ, ಪುರಾಣಗಳಲ್ಲಿ ಕೆಲವು ಪ್ರಾಣಿಗಳು ವಂಚಕನ ಪಾತ್ರ ವಹಿಸಿವೆ. ಅನೇಕ ವೇಳೆ ಅವು ಮನುಷ್ಯ ವಂಚಕನೊಬ್ಬನ ಸಂಕೇತಗಳಾಗಿ ನಿಲ್ಲುತ್ತವೆ. ಭಾರತ ಸಂಸ್ಕೃತಿಯಲ್ಲಿ ನರಿಗೆ ಈ ಪಾತ್ರ ಕೊಡಲಾಗಿದೆ. ಕರಳಿ, ಮೊಸಳೆ ಮೊದಲಾದವು ಕೆಲ ಮಟ್ಟಿಗೆ ವಂಚನೆಯಲ್ಲಿ ಭಾಗವಹಿಸುತ್ತವೆ.

ಕಾಡು ಪ್ರಾಣಿಗಳಲ್ಲಿ ಕ್ರೂರ ಪ್ರಾಣಿಗಳು ಇದ್ದವು. ಅವು ಮನುಷ್ಯನ ಅಸ್ತಿತ್ವಕ್ಕೆ ಸವಾಲಾಗಿದ್ದವು. ಈಗ ಮನುಷ್ಯ ಅವೆಲ್ಲವುಗಳಿಗಿಂತ ಅತಿ ಕ್ರೂರಿಯಾಗಿರುವುದರಿಂದ ಆ ಕ್ರೂರ ಪ್ರಾಣಿಗಳು ಮನುಷ್ಯನೆಂಬ ಈ ಕ್ರೂರ ಪ್ರಾಣಿಗೆ ಜಾಗ ಖಾಲಿ ಮಾಡಿಕೊಟ್ಟಿವೆ.

ಜಾಣತಂತ್ರಿ

ಒಂದೊಂದು ಪ್ರಾಣಿಯನ್ನು ಜಾಣ ಅತಹ್ವಾ ತಂತ್ರಿ ಎಂದು ಜನಪದ ನಿರ್ವಹಿಸುತ್ತದೆ ಹಾಗೂ ತನ್ನ ಅಭಿವ್ಯಕ್ತಿಯಲ್ಲಿ ಅದನ್ನು ನಿರ್ವಹಿಸುತ್ತದೆ. ಭಾರತದಲ್ಲಿ ನರಿಗೆ ಈ ಸ್ಥಾನವಿದೆ. ಅಮೇರಿಕನ್ ಇಂಡಿಯನ್ನರಲ್ಲಿ ಕೊಯಟ್ ಈ ಸ್ಥಾನ ತುಂಬಿದೆ. ಈ ತಂತ್ರ ಹಾನಿಕರವಲ್ಲ, ಸೃಜನಾತ್ಮಕ ಈ ಕಾರಣದಿಂದಲೇ ಈ ಜಾಣ ಪ್ರಾಣಿಯನ್ನು ಕುರಿತ ಪ್ರಾಣಿಕತೆಗಳು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಕಂಡುಬರುತ್ತವೆ.

ಭವಿಷ್ಯ ಸೂಚಿ

ಕತ್ತೆ, ಕೊಡತಿಹುಳ, ಇರುವೆ, ಗೊದ್ದ ಹಾಗೂ ಕೆಲವು ಹಕ್ಕಿಗಳು ಭವಿಷ್ಯ ಸೂಚಿ ಪ್ರಾಣಿಗಳೆಂದು ಗುರಿತಿಸಲ್ಪಟ್ಟಿವೆ. ಕಾಗೆ, ಗೂಬೆಗಳು ಅಪಶಕುನ ಸೂಚಕಗಳೆಂದು ಸರ್ವರಿಗೂ ತಿಳಿದಿದೆ. ಹಲ್ಲಿ ಶಕುನದಲ್ಲಿ ಹಲವು ವಿಧಗಳಿವೆ. ಬೆಕ್ಕು, ನರಿಗಳ ಎಡ-ಬಲ ಚಲನೆಗೆ ಕೆಟ್ಟ ಹಾಗೂ ಒಳ್ಳೆಯ ಭವಿಷ್ಯದ ಅರ್ಥಗಳನ್ನು ಹೇಳುತ್ತಾರೆ. ಗಿಳಿಯಶಾಸ್ತ್ರ ಮುಂದಿನ ಭವಿಷ್ಯದ ದಾರಿಗೆ ಮಾರ್ಗದರ್ಶಕ ಎಂದೆ ತಿಳಿಯಲಾಗಿದೆ.

ಕತ್ತೆ, ಕೊಡತಿಹುಳ, ಇರುವೆ ಹಾಗೂ ಗೊದ್ದಗಳು ಭೂಕಂಪ, ಮಳೆ, ವಾಯುಗುಣದ ಮುಂದಿನ ರೀತಿಯನ್ನು ಸೂಚಿಸುತ್ತವೆ ಎಂದು ಅನುಭವದಿಂದ ಹೇಳುತ್ತಾರೆ.

ದೈವ, ದೇವದೂತ

ಬ್ರಾಹ್ಮಣರಿಗೆ ಗೋವು
ರೈತರಿಗೆ ಹಸು
ಕ್ಷತ್ರಿಯರಿಗೆ ಕುದುರೆ
ಕುರುಬರಿಗೆ ಕುರಿ

ಹೀಗೆ ಪ್ರತಿಯೊಂದು ಜಾತಿ ಮತ್ತು ವರ್ಗಗಳಿಗೆ ಪ್ರಾಣಿ ದೈವಗಳಿವೆ. ಪ್ರಾಣಿ ದೈವಗಳೆ ಜನಪದರ ಮೂಲ ದೈವಗಳೆಂದು ತಿಳಿಯಬಹುದು. ಬುಡಕಟ್ಟಿನ ಜನರಲ್ಲಿ ಅವರಿಗಾಗಿ ಚಿಕ್ಕ ದೊಡ್ಡ ಎನ್ನದೆ ಅನೇಕ ಪ್ರಾಣಿಗಳು ದೈವಗಳಾಗಿ ಪೂಜೆಗೆ ಒಳ್:ಅಪಟ್ಟಿವೆ.

ಪ್ರಾಣಿಗಳು ದೇವದೂತನಾಗಿರುವ ಪರಿಕಲ್ಪನೆ ಸ್ವರ್ಗಭೂಮಿಯಿಂದ ಬೇರ್ಪಟ್ಟು ಒಂದು ಪ್ರತ್ಯೇಕ ಜಗತ್ತು ಆದ ಮೇಲೆ. ನಮ್ಮಲ್ಲಿ ಗರುಡನನ್ನು ದೇವದೂತ ಪ್ರಾಣಿ ಎಂದು ನಂಬುತ್ತಾರೆ.

ಕೇವಲ ಆಹಾರ

ಈಗ ಮನುಷ್ಯನೇ ಮುಖ್ಯನಾಗಿದ್ದಾನೆ. ಆರ್ಥಿಕತೆ ಎಂದರೆ ಅವನದು, ಸಾಮಾಜಿಕ ಎಂದರೆ ಅವನದು ಅವನ ಕೇಂದ್ರದಿಂದ ಎಲ್ಲವೂ ನಿರೂಪಣೆಗೊಳ್ಳಬೇಕು ಹಾಗೂ ನಿರ್ದೇಶನಗೊಳ್ಳಬೇಕು. ಈಗ ಮನುಷ್ಯ ಎಲ್ಲ ಜೀವ, ನಿರ್ಜೀವ ವಸ್ತುಗಳನ್ನು ತನ್ನ ಒಳಗೆ ಹಾಗೂ ಭೋಗಕ್ಕೆ ಒಳಪಡಿಸಿಕೊಂಡಿದ್ದಾನೆ. ಜೀವ ಜೀವನ ಸಂಬಂಧ ಬದುಕು ಸ್ತಬ್ದಗೊಳ್ಳುತ್ತಾ ಮನುಷ್ಯ ಕೇಂದ್ರಿತ ಆಲೋಚನೆ ಅತಿಯಾಗುತ್ತಾ ಎಲ್ಲವೂ ಸರಕುಗಳಾಗಿವೆ.

ಈ ಸಂದರ್ಭದಲ್ಲಿ ಸಸ್ಯ ಪ್ರಾಣಿ ಹಾಗೂ ಪರಿಸರದ ಪ್ರಮುಖ ಆಕರಗಳಾದ ಭೂಮಿ ಮತ್ತು ಆಕಾಶ ಮನುಷ್ಯನ ಉಪಭೋಗಗಳಾಗಿವೆ. ಈತ ಸಸ್ಯಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಅವು ಇವನ ನೇರ ಆಹಾರಕ್ಕೆ ಬೇಕಾದವು. ಪ್ರಾಣಿ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾನೆ. ಇವು ಅವನ ತಕ್ಷಣದ ಆಹಾರ ಸಮಸ್ಯೆಯನ್ನು ಪೂರೈಸಲು ನೆರವಾಗಿವೆ. ಗಾಳಿ, ನೀರು, ಬೆಂಕಿ, ಮಣ್ನು ಇವುಗಳನ್ನು ಉತ್ತಮ ಪಡಿಸುವ ಪ್ರಣಾಳಿಕೆ ಹೊರಡಿಸಿದ್ದಾನೆ. ಇವು ಹೆಚ್ಚು ಹೆಚ್ಚು ಕಲುಷಿತಗೊಳ್ಳುತ್ತಿವೆ. ಇದೆಲ್ಲವೂ ಮನುಷ್ಯನ ಕಲ್ಯಾಣಕ್ಕೆ ಎಂದು ಘೋಷಿಸಲಾಗಿದೆ. ಆದರೆ ಇದು ಗಾಳಿಯಲ್ಲಿ ಗೋಪುರ ಕಟ್ಟುವ ಅಭಿವೃದ್ಧಿಯಾಗಿದೆ.

ಹಳಸುತ್ತಿರುವ ರುಚಿಗಳನ್ನು ಹಿಂದೆ ಹಾಕಲು ಹಾಗೂ ಹೊಸ ರುಚಿಗಳನ್ನು ಅಭಿವೃದ್ಧಿ ಪಡಿಸಲು ಸಸ್ಯ ಪ್ರಾಣಿ ತಳಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ ಕೆಲವೇ ವರ್ಷಗಳಲ್ಲಿ ಈ ಅಭಿವೃದ್ಧಿ ಪಡಿಸಿದ ತಳಿಗಳು ನಾಶವಾಗಲಿವೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಇವು ಪರಿಸರ ಸಮರ್ಥಿತ ತಳಿಗಳಲ್ಲ, ಪ್ರಯೋಗ ಶಾಲೆಯ ತಳಿಗಳು, ಇವುಗಳಿಗೆ ಯೋಜಿಸಿದ್ದು ವಾತಾವರಣ ವ್ಯತ್ಯಾಸವಾದ ತಕ್ಷಣ ಅವು ನಶಿಸಿಹೋಗುತ್ತವೆ. ಪ್ರಾಣಿ ತಳಿಗಳ ಅಭಿವೃದ್ದಿ ಕೂಡ ಬಗೆಯದೆ ಬಾಯ್ಲರ್ ಕೋಳಿಯನ್ನು ಮಾಂಸಕ್ಕೆಂದೆ ನಲವತ್ತೈದು ದಿನಗಳಲ್ಲಿ ಎರಡು ಮೂರು ಕೆ.ಜಿ ಬೆಳೆಸಲಾಗುತ್ತದೆ. ರಾಸಾಯನಿಕಗಳ ಮುದ್ದೆ. ಇದರಿಂದ ಮೂಲ ರುಚಿಗಳು ಮಾಯವಾಗುತ್ತಿವೆ. ಮತ್ತೊಂದು ಕಡೆ ನಿಧಾನವಾಗಿ ಈ ಮೂಲ ರುಚಿಗಳ ಕಡೆಗೆ ಆಸಕ್ತಿ ಬೆಳೆಯುತ್ತಿದೆ.

ಸಹಾಯಕ ಗ್ರಂಥಗಳು

೧. ವಿಶಿಷ್ಟ ಜಾನಪದ – ಸಂ.ಎಚ್.ಜೆ.ಲಕ್ಕಪ್ಪಗೌಡ, ಸ್ನಾತಕೋತ್ತರ ಕೇಂದ್ರ, ಬಿ.ಆರ್.ಪ್ರಾಜೆಕ್ಟ್, ೧೯೮೪

೨. ಜಾನಪದ ತಡಕಾಟ – ಡಾ.ಹಿ.ಶಿ.ರಾಮಚಂದ್ರೇಗೌಡ, ಮಾನವಿ ಪ್ರಕಾಶನ, ಮೈಸೂರು, ೧೯೮೮

೩. ಜಾಲಾಟ – ಡಾ. ಕೆ.ಚನ್ನಪ್ಪಗೌಡ, ಚಿಂತನ ಪ್ರಕಾಶನ, ಮಂಗಳೂರು, ೧೯೮೫

೪. ಕರಾವಳಿ ಜಾನಪದ – ಡಾ. ಪುರುಷೋತ್ತಮ ಬಿಳಿಮಲೆ ಮಂಗಳ ಗಂಗೋತ್ರಿ, ದ.ಕ, ೧೯೯೦

೫. ಜಾನಪದ ಸಾಹಿತ್ಯ ದರ್ಶನ ೧೪ – ಸಂ. ಡಾ.ಎಂ.ಎಸ್.ವೃಷಭೇಂದ್ರಸ್ವಾಮಿ, ಪ್ರಸಾರಾಂಗ, ಧಾರವಾಡ ೧೯೯೨

೬. ಜಾನಪದ ಸಾಹಿತ್ಯ ದರ್ಶನ ೧೮ – ಸಂ. ಡಾ.ಎಸ್.ಜಿ.ಇಮ್ರಾಪೂರ, ಪ್ರಸಾರಾಂಗ, ಧಾರವಾಡ ೧೯೯೨

೭. ಜಾನಪದ ಸಾಹಿತ್ಯ ದರ್ಶನ ೧೨ – ಸಂ. ಡಾ.ಎಂ.ಎಂ.ಕಲಬುರ್ಗಿ, ಪ್ರಸಾರಾಂಗ, ಧಾರವಾಡ ೧೯೯೪

೮. ಪರಿಸರ ಚಿಂತನೆ ಕುರಿತು ಆಧುನಿಕ ಆಲೋಚನೆಗಳನ್ನು ಒಳಗೊಂಡ ಬೇರೆ ಬೇರೆ ಬರಹಗಳು.