ಕರ್ನಾಟಕದ ತುಮಕೂರು, ಚಿತ್ರದುರ್ಗ, ಬೆಂಗಳೂರು, ಬಳ್ಳಾರಿ, ಹಾಸನ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶದ ಮಡಕಸಿರಾ, ಕಲ್ಯಾಣದುರ್ಗ ಹಾಗೂ ರಾಯದುರ್ಗ ತಾಲೂಕುಗಳಲ್ಲಿ ವಾಸವಾಗಿರುವ, ಎರಡು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ, ಕಾಡುಗೊಲ್ಲರು ಎಂಬ ಹಿಂದುಳಿದ ಬುಡಕಟ್ಟಿನ ಸಾಂಸ್ಕೃತಿಕ ವೀರ (Cultural Hero) ಹಾಗೂ ಆರಾಧ್ಯದೈವವೇ ಜುಂಜಪ್ಪ. ಕಾಡುಗೊಲ್ಲರ ಜನ ಜೀವನದಲ್ಲಿ ಗಾಢವಾದ ಪ್ರಭಾವ ಬೀರಿರುವ ಈ ದೇವತೆಯ ಬಗ್ಗೆ ತಿಳಿಯುವ ಮೊದಲು ಅದಕ್ಕೆ ಹಿನ್ನೆಲೆಯಾಗಿ ಕಾಡುಗೊಲ್ಲರ ಬಗ್ಗೆಯೂ ಕೆಲವು ವಿಷಯಗಳನ್ನು ಇಲ್ಲಿ ನಿರೂಪಿಸುವುದು ಅಗತ್ಯ. ಮೂಲತಃ ಗೋಪಾಲಕರಾಗಿದ್ದ ಗೊಲ್ಲರಲ್ಲಿ ಕಾಡು ಗೊಲ್ಲರು ಮತ್ತು ಊರು ಗೊಲ್ಲರು ಎಂಬ ಎರಡು ಪ್ರಭೇದಗಳಿವೆ. ಕಾಡುಗೊಲ್ಲರ ಮಾತೃಭಾಷೆ ಕನ್ನಡ; ಊರುಗೊಲ್ಲರ ಮಾತೃಭಾಷೆ ತೆಲುಗು. ಕಾಡುಗೊಲ್ಲರು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಯೂ ಊರುಗೊಲ್ಲರು ಆಂಧ್ರದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕಾಡುಗೊಲ್ಲರು ಊರುಗಳಿಂದ ದೂರದಲ್ಲಿ ಕಾಡಿನಲ್ಲಿ ಪ್ರತ್ಯೇಕವಾಗಿ ಹಟ್ಟಿಗಳನ್ನು ಕಟ್ಟಿಕೊಂಡು ವಾಸಮಾಡುತ್ತಾ ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಊರುಗೊಲ್ಲರು ಊರುಗಳಲ್ಲಿ ವಾಸಮಾಡುವುದರಿಂದ ಇತರ ಜಾತಿಯ ಜನಗಳೊಡನೆ ಸೇರಿಹೋಗಿದ್ದಾರೆ. ಊರುಗೊಲ್ಲರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದವರಾದರೆ ಕಾಡುಗೊಲ್ಲರು ಹಿಂದುಳಿದವರಾಗಿದ್ದು, ಹಿಂದುಳಿದ ಬುಡಕಟ್ಟುಗಳ ಪಟ್ಟಿಯಲ್ಲಿ ಸೇರುತ್ತಾರೆ.

ಕಾಡುಗೊಲ್ಲರಲ್ಲಿರುವ ಉಪವರ್ಗಗಳನ್ನು “ಬೆಡಗು”ಗಳೆಂದು ಕರೆಯುತ್ತಾರೆ. ಅವರಲ್ಲಿ ಚಿತ್ತಮುತ್ತಿ ಕುಲದವರು, ಚಂದಮುತ್ತಿ ಕುಲದವರು, ರಾಮೇಗೌಡನ ಕುಲದವರು ಎಂಬ ಪ್ರಮುಖವಾದ ಮೂರು ವಿಭಾಗಗಳಿದ್ದು, ಈ ಒಂದೊಂದು ವಿಭಾಗದಲ್ಲಿಯೂ ಕೆಲವಾರು ಬೆಡಗುಗಳಿವೆ. ಚಿತ್ತಮುತ್ತಿ ಕುಲದವರಲ್ಲಿ ಕರಡಿಗೊಲ್ಲರು ಮತ್ತು ಮಾರನವರ ಗೊಲ್ಲರು ಎಂಬ ಎರಡು ಬೆಡಗುಗಳೂ ಚಂದಮುತ್ತಿ ಕುಲದವರಲ್ಲಿ ಅಜ್ಜಿಯವರು, ನಿನ್ನರು, ಸೋಮನವರು, ಬೊಮ್ಮನವರು ಮೊದಲಾದ ಬೆಡಗುಗಳೂ, ರಾಮೇಗೌಡನ ಕುಲದವರಲ್ಲಿ ಅರೇನವರು, ಮೆರೇನವರು, ಕಂಬಿಯವರು ಕಹಳೆಯವರು, ಮೊದಲಾದ ಬೆಡಗುಗಳೂ ಇವೆ. ಇವುಗಳಲ್ಲಿ ಕರಡಿಗೊಲ್ಲರು, ಮಾರನವರ ಗೊಲ್ಲರು ಜುಂಜಪ್ಪ, ಎತ್ತಪ್ಪ, ಚಿತ್ರದೇವರು ಎಂಬ ದೇವತೆಗಳನ್ನೂ ಇತರ ಬೆಡಗುಗಳ ಗೊಲ್ಲರು ಕೇತೇದೇವರು. ಪಾತೇದೇವರು, ಕಾಟಮದೇವರು, ಭೂತಪ್ಪ, ಗೌರಸಂದ್ರದ ಮಾರಕ್ಕ ಮೊದಲಾದ ದೇವತೆಗಳನ್ನೂ ಪೂಜೆ ಮಾಡುತ್ತಾರೆ. ಜುಂಜಪ್ಪ ದೇವರ ಕೇಂದ್ರಗಳು ಸಿರಾ ತಾಲ್ಲೂಕಿನ ಬೇವಿನ ಹಳ್ಳಿಯಲ್ಲಿಯೂ ಗುಬ್ಬಿ ತಾಲೂಕಿನ ಹಾಗಲವಾಡಿಯಲ್ಲಿಯೂ ಇವೆ.

ಕಾಡುಗೊಲ್ಲರ ಕಸುಬು ಮೊದಲಿಗೆ ಪಶುಪಾಲನೆಯಾಗಿತ್ತು. ಹುಲ್ಲುಗಾವಲುಗಳು ಹೆಚ್ಚಾಗಿದ್ದ ಕಾಲದಲ್ಲಿ ಇವರು ನೂರಾರು ದಿನಗಳಲ್ಲಿ ಸಾಕಿ ಅವುಗಳ ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಮಾರಿ ಜೀವನ ಮಾಡುತ್ತಿದ್ದರು; ಇವರ ಪುರಾಣಗಳಲ್ಲಿ ಪಶುಪಾಲನೆಗೆ ಸಂಬಂಧಿಸಿದ ವಿವರಗಳೇ ಹೆಚ್ಚಾಗಿವೆ. ಇವರ ಸಾಂಸ್ಕೃತಿಕ ವೀರನಾದ ಜುಂಜಪ್ಪ ಹಾಗೂ ಅವನ ತಂದೆ, ತಾತ ಗೋಪಾಲಕರು. ಅನೇಕ ಹಸುಗಳನ್ನೂ ಎತ್ತುಗಳನ್ನೂ ಕಷ್ಟಪಟ್ಟೂ ಪ್ರೀತಿಯಿಂದ ಸಾಕಿದವರು; ವಿರೋಧಿಗಳು ಕೊಟ್ಟ ತೊಂದರೆಗಳನ್ನು ಧೈರ್ಯವಾಗಿ ಎದುರಿಸಿ ಶೌರ್ಯದಿಂದ ದನಗಳನ್ನು ರಕ್ಷಣೆ ಮಾಡಿದವರು. ಹುಲ್ಲುಗಾವಲುಗಳು ಕಡಿಮೆಯಾದ ಮೇಲೆ ಕಾಡುಗೊಲ್ಲರು ಕುರಿಗಳನ್ನು ಸಾಕಿ ಅವುಗಳ ಉತ್ಪನ್ನಗಳಿಂದ ಜೀವನ ಮಾಡುತ್ತಿದ್ದಾರೆ. ಸರಳವಾದ ವೇಷಭೂಷಣಗಳನ್ನು ಧರಿಸುವ ಕಾಡುಗೊಲ್ಲರ ಜೀವನ ಕ್ರಮವೂ ಸರಳವಾದುದು. ಬಹುಕಾಲದವರೆಗೆ ನಾಗರಿಕತೆಯ ಸಂಪರ್ಕದಿಂದ ದೂರವಿದ್ದ ಕಾಡುಗೊಲ್ಲರು ಈಚೀಚೆಗೆ ನಾಗರಿಕತೆಯ ಪ್ರಭಾವಕ್ಕೆ ಒಳಗಾಗಿದ್ದಾರೆ; ಕೆಲವರು ವಿದ್ಯಾವಂತರಾಗಿದ್ದಾರೆ. ಸರ್ಕಾರಿ ಉದ್ಯೋಗಗಳಲ್ಲಿಯೂ ಇದ್ದಾರೆ. ಕಾಡುಗೊಲ್ಲರಲ್ಲಿ ಸಮೃದ್ಧರಾದ ಸಾಹಿತ್ಯವೂ ಲಭ್ಯವಾಗುತ್ತದೆ. ನ್ಯಾಯ ತೀರ್ಮಾನದ ವಿಶಿಷ್ಟವಾದ ವಿಧಾನವೂ ಕಾಡುಗೊಲ್ಲರಲ್ಲಿ ಬಳಕೆಯಲ್ಲಿದೆ. ಸಾಮಾಜಿಕ ಪರಿವರ್ತನೆಯ ಹಂತದಲ್ಲಿರುವ ಈ ಬುಡಕಟ್ಟಿನಲ್ಲಿ ಸಂಪ್ರದಾಯಿಕ ವಿಧಾನಗಳ ಜೊತೆಯಲ್ಲಿಯೇ ನಾಗರಿಕತೆಯ ಪ್ರಭಾವಗಳನ್ನೂ ಕಾಣಬಹುದಾಗಿದೆ.

-೨-

ಕಾಡುಗೊಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿರುವ ಜುಂಜಪ್ಪ ದೇವತೆಯ ಪುರಾಣವೂ ತುಂಬ ಕುತೂಹಲಕರವಾದುದು. ಮೂರು ತಲೆಮಾರುಗಳ ಕಥೆಯನ್ನು ಒಳಗೊಂಡಿರುವ ಈ ಸುದೀರ್ಘವಾದ ಪುರಾಣ ಕನ್ನಡದ ಅತ್ಯುತ್ತಮ ಜನಪದ ಮಹಾಕಾವ್ಯಗಳಲ್ಲೊಂದು. ಇದರ ಪುರಾಣವನ್ನು ಈ ರೀತಿ ಸಂಗ್ರಹಿಸಬಹುದು: ಕೊಂಕಿ ಜರಮಲೆ ಸೀಮೆಯ ಚಿಕ್ಯದ್ಯಾವರ ಹಟ್ಟಿಯಲ್ಲಿ ಬಕ್ಕದಲೆ ಚಿತ್ತಯ್ಯ, ಬರಿದಲೆ ಚಿತ್ತಯ್ಯ, ಮಾಪಲ್ಲಿ ಚಿತ್ತಯ್ಯ, ಮೋಪಲ್ಲಿ ಚಿತ್ತಯ್ಯ, ಪೂಜಾರಿ ಬತ್ತಯ್ಯ, ಘನಗುಡಿ ಚಿತ್ತಯ್ಯ, ದೇವರ ದಯಮಾರ ಏಳು ಜನ ಅಣ್ಣತಮ್ಮಂದಿರಿಗೆ ಬಡಚಿತ್ತಮ್ಮ ಎಂಬುವಳು ಒಬ್ಬಳು ತಂಗಿ. ಇವರಲ್ಲಿ ಕೊನೆಯವನಾದ ದೇವರ ದಯಮಾರನನ್ನು ಬಿಟ್ಟು ಉಳಿದವರಿಗೆಲ್ಲಾ ಮದುವೆಯಾಗಿದ್ದರೂ ಯಾರಿಗೂ ಮಕ್ಕಳಾಗಿರಲಿಲ್ಲ. ಚಿಕ್ಕ ಹುಡುಗನಾಗಿದ್ದಾಗಲೇ ಏಳು ಕರುಗಳನ್ನು ಹೊಡೆದುಕೊಂಡು ಕರಿತೊರೆ ಹಳ್ಳಕ್ಕೆ ಮೇಯಿಸಲು ಹೋಗಿದ್ದ ದೇವರ ದಯಮಾರನನ್ನು ಅಣ್ಣಂದಿರು ಕರೆದುಕೊಂಡು ಒಂದು ಅವನಿಗೆ ಕಂಬಕ್ಕ ಎಂಬ ಹೆಣ್ಣುಮಗಳನ್ನು ತಂದು ಮದುವೆ ಮಾಡಿದರು. ದೇವರ ದಯಮಾರನಿಗೆ ಹೆಂಡತಿಗಿಂತ ದನಗಳ ಮೇಲಿನ ಗೀಳು ಹೆಚ್ಚಾಗಿ ಅವನು ಕಾಡಿನಲ್ಲಿ ದನಗಳ ಜೊತೆಗೇ ಉಳಿದುಬಿಟ್ಟನು. ಈ ನಡುವೆ ತನ್ನ ಓರಗಿತ್ತಿಯರ ಕಿರುಕುಳವನ್ನು ತಾಳಲಾರದೆ ಕಂಬಕ್ಕ ಬಹಳ ಕಷ್ಟದಿಂದ ದೇವರ ದಯಮಾರನನ್ನು ಸೇರಿಕೊಂಡಳು. ಹುಟ್ಟಿದ ಮಗುವನ್ನು ಬಿಟ್ಟು ತಂದೆತಾಯಿಗಳು ತೀರಿ ಹೋದಾಗ ಆ ಮಗುವನ್ನು ಶಿವರ್ಪಾತಿಯರು ಕಾಪಾಡಿದರು. ಅನಂತರ ಆ ಮಗು ಬಡ ಚಿತ್ತಮ್ಮನ ರಕ್ಷೆಯಲ್ಲಿ ಬೆಳೆಯಿತು. ಮಗುವಿಗೆ ಕೆಂಗುರಿ ಮಲ್ಲಪ್ಪ ಎಂಬ ಹೆಸರನ್ನಿಟ್ಟರು. ಕಾಲಕ್ರಮೇಣ ಕೆಂಗುರಿ ಮಲ್ಲಪ್ಪನ ದೊಡ್ಡಮ್ಮಂದಿರಿಗೂ ಮಕ್ಕಳಾದವು. ಅವರು ಅಸೂಯೆಯಿಂದ ಕೆಂಗುರಿ ಮಲ್ಲಪ್ಪನಿಗೆ ತೊಂದರೆ ಕೊಡಲು ಆರಂಭಿಸಿದರು. ಅವನು ದೊಡ್ಡಮ್ಮಂದಿರ ಕಾಟವನ್ನು ತಾಳಲಾರದೆ ಅಳುವಿನವರ ಒಕ್ಕಲಿಗರವನಾದ ಹೊನ್ನಹಟ್ಟಿ ಆಲೇಗೌಡನ ಬಳಿಗೆ ಬಂದು ಆತನ ನೆರವಿನಿಂದ ಜೀವನದಲ್ಲಿ ಅಭಿವೃದ್ಧಿ ಹೊಂದಿದ; ಅನೇಕ ದನಕರುಗಳ ಒಡೆಯನಾದ. ಹೊನ್ನಹಟ್ಟಿ ಆಲೇಗೌಡನ ಹೆಂಡತಿ ಜಾನಕಲ್ಲು ದೊಡ್ಡಪ್ಪ ಕೆಂಗುರಿ ಮಲ್ಲೇಗೌಡನಿಗೆ ತೊಂದರೆ ಕೊಡಲು ಪ್ರಯತ್ನಿಸಿ, ಅವನ ಪವಾಡ ಶಕ್ತಿಗೆ ಹೆದರಿ ಶರಣಾಗತಳಾದಳು. ಕೆಂಗುರಿ ಮಲ್ಲೇಗೌಡನಿಗೆ ಕಂಬಿಯರ ಗೊಲ್ಲರ ಬೆಡಗಿಗೆ ಸೇರಿದ ಚಿನ್ನಮ್ಮ ಎಂಬಾಕೆಯೊಡನೆ ಮದುವೆಯಾಯಿತು. ಹೊನ್ನಹಟ್ಟಿ ಆಲೇಗೌಡ ಚಿನ್ನಮ್ಮನ ಅಣ್ಣಂದಿರಾದ ಎರಿಜಿನ್ನ, ಮರಿಜಿನ್ನ, ಕೀವಟ್ಟೆ, ಮರಿಪಿಡ್ಡ, ಕಡೆಹುಟ್ಟಿನ ಕಟ್ಟಾಣಿ, ಬೇವಿನ ಎಲೆ ಚಿನ್ನ, ದೊಡ್ಡ ಚಿನ್ನೇಗೌಡ, ಚಿಕ್ಕ ಚಿನ್ನೇಗೌಡ ಅವರೊಡನೆ ಮಾತುಕತೆ ನಡೆಸಿ ಕೆಂಗುರಿ ಮಲ್ಲಪ್ಪನ ಮದುವೆಯನ್ನು ಸ್ವತಃ ನಿಂತು ಮಾಡಿಸಿದ, ಮದುವೆ ಮಾಡಿಕೊಂಡ ಕೆಂಗುರಿ ಮಲ್ಲಪ್ಪ ತನ್ನ ತಂದೆ ದೇವರ ದಯಮಾರನಂತೆಯೇ ಹೆಂಡತಿಯನ್ನು ಮರೆತು, ದನಗಳನ್ನು ಕಾಯುತ್ತಾ ಕಾಡಿನಲ್ಲಿಯೇ ಹನ್ನೆರಡು ವರ್ಷಗಳನ್ನು ಕಳೆದ. ಈ ನಡುವೆ ಕಂಬಿಯರ ಚಿನ್ನಮ್ಮ ಅಪ್ಪನ ಗುಡ್ಡೆ ರೊಪ್ಪದ ಏಣಿನ, ಹಾಲಹರತಿ ಬಯಲಿನ ಹಂಚಿ ಹುಲ್ಲಿನ ಅರಮನೆಯಲ್ಲಿದ್ದಳು. ಅವಳನ್ನು ಸುತ್ತಮುತ್ತಲ ಹೆಂಗಸರು ಬಂಜೆಯೆಂದು ಹೀಯಾಳಿಸಿದರು. ಅವಲು ತನ್ನ ವಂಶದ ಮನೆದೇವರಾದ ಗೌರಸಂದ್ರದ ಮಾರಮ್ಮನನ್ನು ಪ್ರಾರ್ಥಿಸಿದಳು; ಗೌರಸಂದ್ರದ ಮಾರಮ್ಮ ಈಶ್ವರನನ್ನು ಪ್ರಾರ್ಥಿಸಿಸದಳು. ಈಶ್ವರ ತನ್ನ ಮಗ ವೀರಭದ್ರ ಕೈಲಾಸದಲ್ಲಿ ವಿಪರೀತ ಪುಂಡನಾಗಿ ತೊಂದರೆ ಕೊಡುತ್ತಿದ್ದುದನ್ನು ಗಮನಿಸಿ, ಅವನಿಗೆ ಚಿನ್ನಮ್ಮನ ನಡುಬೆನ್ನಿನಲ್ಲಿ ಹುಟ್ಟಿ ಜುಂಜಪ್ಪನೆಂಬ ಹೆಸರು ಪಡೆದು ಹದಿನಾರು ವರ್ಷ ಕಾಲ ಭೂಲೋಕದಲ್ಲಿ ಮಹಾಮಹಿಮನಾಗಿ ಬಾಳಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ ಕಾಡುಗೊಲ್ಲರ ಆರಾಧ್ಯದೈವವಾಗುವಂತೆ ಹೇಳಿಕಳುಹಿಸಿದ. ಹೀಗಾಗಿ ಕಂಬಿಯರ ಚಿನ್ನಮ್ಮ ಈಶ್ವರನ ವರದಂತೆ ಕೆಂಗುರಿ ಮಲ್ಲಪ್ಪನ ಜೊತೆ ಕೂಡಿ ಗರ್ಭಿಣಿಯಾದಳು; ನವಮಾಸ ತುಂಬಿದಾಗ ಜುಂಜಪ್ಪ ಅವಳ ಬೆನ್ನಿನಿಂದ ಹುಟ್ಟಿದ. ಅವನ ಹುಟ್ಟು ಹೇಗೆ ವಿಶೇಷ ರೀತಿಯದಾಗಿತ್ತೋ, ಅನಂತರ ಅವನ ನಡವಳಿಕೆಯೂ ವಿಶೇಷ ರೀತಿಯದೇ ಆಗಿತ್ತು, ಕೆಂಗುರಿ ಮಲ್ಲಪ್ಪ ಮತ್ತು ಚೆನ್ನಮ್ಮನವರಿಂದ ಸಾಮಾನ್ಯ ರೀತಿಯಂತೆ ಮಾರಣ್ಣ, ಮೈಲಣ್ಣ ಮತ್ತು ಮಾರಕ್ಕ ಎಂಬ ಮಕ್ಕಳಾದರು. ಮೂರು ಜನ ಗಂಡು ಮಕ್ಕಳಾದನಂತರ ಒಂದು ಹೆಣ್ಣು ಮಗುವಾದ ನಂತರ ಒಂದು ಹೆಣ್ಣು ಮಗುವಾದರೆ ಆ ಮಗು ಮನೆಗೆ ಮಾರಿ ಎಂಬುದು ಅಂದಿನ ನಂಬಿಕೆಯಾಗಿತ್ತು. ಮಾರಿಹಬ್ಬದ ಸಂದರ್ಭದಲ್ಲಿ ಇದ್ದ ಒಂದು ವಿಶಿಷ್ಟ ಸಂಪ್ರದಾಯದಂತೆ ಕೆಂಗುರಿ ಮಲ್ಲಪ್ಪ ತಾನೇ ಬಲಿಯಾಗಬೇಕಾದ ಪರಿಸ್ಥಿತಿಯುಂಟಾಯಿತು.

ಕೆಂಗುರಿ ಮಲ್ಲಪ್ಪ ಸತ್ತನಂತರ ಚಿನ್ನಮ್ಮನ ಐಶ್ವರ್ಯವೆಲ್ಲಾ ಹೋಯಿತು. ಏಳುಗೂಡಿನ ಎತ್ತುಗಳೂ, ಹಸುಗಳೂ ನಾಶವಾದವು, ಆಗ ಜುಂಜಪ್ಪ ದೊಡ್ಡವನಾಗಿದ್ದ. ತನ್ನ ತಾಯಿ ಎಲ್ಲಿಯೂ ಕೂಲಿ ಮಾಡಲು ಹೋಗಬಾರದೆಂದೂ ಅಣ್ಣಂದಿರ ಮನೆಗೆ ಹೋಗಬಾರದೆಂದೂ ಆಕೆಗೆ ಆಜ್ಞೆ ಮಾಡಿದ. ಆದರೆ ಜುಂಜಪ್ಪನ ಮಾತನ್ನು ಕೇಳದೆ ಇದ್ದುದರಿಂದ ಚಿನ್ನಮ್ಮ ಅನೇಕ ಕಷ್ಟನಷ್ಟಗಳನ್ನು ಎದುರಿಸಬೇಕಾಯಿತು. ಜುಂಜಪ್ಪ ಆಕೆಗೆ ಅನೇಕ ಪರೀಕ್ಷೆಗಳನ್ನು ಒಡ್ಡಿ ಆಕೆಯನ್ನು ಪರೀಕ್ಷಿಸಿದ. ಕೊನೆಗೆ ಅವಳು ಪರಿಶುದ್ಧಳೆಂದು ಖಚಿತವಾದ ಮೇಲೆ ಅವಳನ್ನು ತನ್ನ ಮನೆಯಲ್ಲಿ ಇರಲು ಜುಂಜಪ್ಪ ಅವಕಾಶ ಕೊಟ್ಟನು. ತನ್ನ ಸೋದರ ಮಾವಂದಿರು ಕೊಟ್ಟಿದ್ದ ಏಳು ಕರುಗಳನ್ನು ಚೆನ್ನಾಗಿ ಬೆಳಸಿದ ಜುಂಜಪ್ಪ ಅವುಗಳ ಅನೇಕ ತಳಿಗಳಿಂದಾಗಿ ಏಳುಗೂಡು ಎತ್ತುಗಳ ಹಾಗೂ ಏಳು ಗೂಡು ಹಸುಗಳ ಒಡೆಯನಾದ. ತನ್ನ ಸೋದರ ಮಾವಂದಿರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ. ತನ್ನ ತಂಗಿ ಮಾರಕ್ಕನನ್ನು ತನ್ನ ಸೋದರ ಮಾವ ಕಡೆಹುಟ್ಟಿನ ಕಟ್ಟಾಣಿಗೆ ಕೊಟ್ಟು ಮದುವೆ ಮಾಡಿದ ಮೇಲೆ, ಮನೆಯಲ್ಲಿದ್ದ ಮಾರಿ ತೊಲಗಿದಂತಾಗಿ, ಜುಂಜಪ್ಪನ ಐಶ್ವರ್ಯ ಹೆಚ್ಚಾಯಿತು; ರಾಮಲಕ್ಷ್ಮಣ ಎಂಬ ಅವನ ಮನೆಯ ಕಣಜಗಳು ತುಂಬಿದವು, ಚಿನ್ನಮ್ಮ ಸುಖವಾಗಿ ಜೀವನ ಮಾಡ ತೊಡಗಿದಳು.

ಆದರೆ ಅತ್ಯಂತ ಹೀನಾಯವಾದ ಸ್ಥಿತಿಯಲ್ಲಿದ್ದ ಜುಂಜಪ್ಪ ತಾವು ಕೊಟ್ಟ ಏಳು ಕರುಗಳಿಂದಲೇ ತನ್ನ ದನ ಎತ್ತುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಶ್ರೀಮಂತನಾಗಿ ಅಹಂಕಾರದಿಂದ ತಮಗೆ ಪ್ರಬಲ ಸ್ಪರ್ಧಿಯಾಗಿ ಪರಿಣಮಿಸಿದ್ದನ್ನು ಕಂಡು ಅವನ ಸೋದರ ಮಾವಂದಿರಿಗೆ ಹೊಟ್ಟೆ ಉರಿ ಆರಂಭವಾಯಿತು. ಹೀಗೆಯೇ ಬಿಟ್ಟರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುವುದೆಂದು ಹೆದರಿದ ಸೋದರ ಮಾವಂದಿರು ಜುಂಜಪ್ಪನ ಪ್ರಾಬಲ್ಯವನ್ನು ಕಡಿಮೆ ಮಾಡಲು ವ್ಯವಸ್ಥಿತವಾದ ಪ್ರಯತ್ನಗಳನ್ನು ಆರಂಭ ಮಾಡಿದರು. ದೊಡ್ಡ ಹುಲಿಕುಂಟೆ ಕೆರೆಯಲ್ಲಿನ ನೀರಿಗೆ ಮಾಟ ಮಾಡಿಸಿದರು. ಜುಂಜಪ್ಪ ದನಗಳನ್ನು ಕಾಯಲು ತನ್ನ ತಮ್ಮಂದಿರಾದ ಮಾರಣ್ಣ, ಮೈಲಣ್ಣರನ್ನೂ ಕಳಿಸಿಕೊಟ್ಟ. ಅವರು ದನಗಳಿಗೆ ದೊಡ್ಡ ಹುಲಿಕುಂಟೆ ಕೆರೆಯಲ್ಲಿ ನೀರು ಕುಡಿಸುವಷ್ಟರಲ್ಲಿಯೇ ಜುಂಜಪ್ಪ ಗೌರಸಂದ್ರದ ಮಾರಕ್ಕನ ನೆರವಿನಿಂದ ಮುತ್ತಿನ ಕಡೆಗೋಲಿನಿಂದ ಕೆರೆ ನೀರನ್ನು ಕಡೆಸಿದ, ಕೆರೆಯ ನೀರು ಮಾಟದ ಪ್ರಭಾವವನ್ನು ಕಳೆದುಕೊಂಡು ತಿಳಿಯಾಯಿತು. ಅದೇ ಕೆರೆಯಲ್ಲಿ ಜೀವಂತವಾಗಿ ಹೂಳಿದ್ದ ಬಡಕಲು ಕರುವನ್ನು ಮಾರಣ್ಣ ಮೈಲಣ್ಣರೊಡನೆ ತನ್ನ ಸೋದರ ಮಾವಂದಿರಿಗೆ ಹಿಂತಿರುಗಿಸಿದ. ಆದರೆ ಅವರು ಆ ಕರುವನ್ನು ತಮ್ಮದೆಂದು ಒಪ್ಪದೇ ಮಾರಣ್ಣ ಮೈಲಣ್ಣರನ್ನು ಹೊಡೆದು ಕಳಿಸಿದರು. ಜುಂಜಪ್ಪ ತಾನೇ ಆ ಕರುವನ್ನು ಅವರ ಬಳಿಗೆ ತೆಗೆದುಕೊಂಡು ಹೋದಾಗಲೂ ಅವರು ಕರು ತಮ್ಮದೆಂದು ಒಪ್ಪಲಿಲ್ಲ. ಆಗ ಜುಂಜಪ್ಪ ಆ ಕರುವನ್ನು ಚೆನ್ನಾಗಿ ಮೇಯಿಸಿದ; ಅದು ದೊಡ್ಡ ಹೋರಿಯಾಗಿ ಬೆಳೆಯಿತು. ಅದಕ್ಕೆ ಬಡಮೈಲ ಎಂಬ ಹೆಸರನ್ನಿಟ್ಟ, ಬಡಮೈಲ ಜುಂಜಪ್ಪನ ದನಗಳನ್ನೆಲ್ಲಾ ತಾನೇ ನೋಡಿಕೊಳ್ಳುವಷ್ಟು ಶಕ್ತವಾಗಿತ್ತು. ಸೋದರ ಮಾವಂದಿರ ಕೋಪ ಹೆಚ್ಚಾಯಿತು. ಅವರ ಮೊದಲ ಪ್ರಯತ್ನ ವಿಫಲವಾದ ಮೇಲೆ ಎರಡನೆಯದಕ್ಕೆ ಕೈಹಾಕಿದರು. ಮರಡಿ ರಂಗಣ್ಣನಿಂದ ಮಾಟಮಾಡಿಸಿ ಕೆಂಧೂಳಿ ಬರ, ಡೊಕ್ಕೆಯ ಬರ ಬರುವಂತೆ ಮಾಡಿದರು. ವಿಷಯವನ್ನು ತಿಳಿದ ಜುಂಜಪ್ಪ ಮರಡಿ ರಂಗಣ್ಣನಿಗೆ ತತ್ತರಿಸಿ ಹೋಗುವಂತೆ ಹೆದರಿಸಿ, ಅವನಿಂದಲೇ ಮಾಟದ ಪ್ರಭಾವವನ್ನು ತೆಗೆಸಿದ. ಆದರೂ ಜುಂಜಪ್ಪನ ಪ್ರಭಾವ ಕಡಿಮೆಯಾಗದಿರಲು ಸೋದರ ಮಾವಂದಿರು ಚೇಳೂರು ರಂಗಣ್ಣನ ನೆರವನ್ನು ಪಡೆದರು. ಜುಂಜಪ್ಪ ಸೊಂಪಾಗಿ ಬೆಳೆದು ನಿಂತಿದ್ದ ಚೇಳೂರು ರಂಗಣ್ಣನ ಕಾವಲಿನಲ್ಲಿ ತನ್ನ ದನಗಳನ್ನು ಮೇಯಿಸಿದ. ಚೇಳೂರು ರಂಗಣ್ಣ ಜುಂಜಪ್ಪನ ದನಗಳನ್ನು ಸದೆಬಡಿದು, ಬಡಮೈಲನನ್ನು ಚೇಳೂರು ಕೋಟೆಯ ಕಲ್ಲಿಗೆ ಕಟ್ಟಿಸಿದ, ಆದರೆ ಬಡಮೈಲ ಚೇಳೂರು ಕೋಟೆಯನ್ನು ಭೇದಿಸಿಕೊಂಡು ಬಂದು ದನಗಳನ್ನು ಕಾಪಾಡಿತು. ಚೇಳೂರು ರಂಗಣ್ಣ ಮಾರನ್ಣ, ಮೈಲಣ್ಣರಿಗೆ ತೊಂದರೆ ಕೊಟ್ಟ, ಮೂರು ತಿಂಗಳ ಕೇಡಿನ ನಿದ್ದೆಯಿಂದ ಎಚ್ಚೆತ್ತ ಜುಂಜಪ್ಪ ಚೇಳೂರು ರಂಗಣ್ಣನೊಡನೆ ಪಗಡೆಯಾಟವಾಡಿ ಗೆದ್ದು ಅವನ, ಎಲ್ಲ ಸ್ವತ್ತನ್ನೂ ತಾನೇ ಸ್ವಾಧೀನ ಪಡಿಸಿಕೊಂಡ; ಹೀಗೆ ಜುಂಜಪ್ಪ ಚೇಳೂರು ರಂಗಣ್ಣನನ್ನು ಸೋಲಿಸಿದ; ಹೀಗೆಯೇ ಮುಂದೆ ಹುಲಿಕುಂಟೆ ತಮ್ಮಣ್ಣನ ಕಾವಲು, ತಾಳೆದುರ್ಗಿ ಕಾವಲುಗಳಲ್ಲಿ ದನಗಳನ್ನು ಮೇಯಿಸಿ ತನಗೆ ಎದುರಾದವರಿಗೆ ಬುದ್ಧಿ ಕಲಿಸಿದ; ಹೊನ್ನ ಹಟ್ಟಿ ಆಲೇಗೌಡನ ಹೆಂಡತಿ ಜಾನಕಲ್ಲು ದೊಡ್ಡಕ್ಕನಿಗೆ ಬುದ್ದಿ ಕಲಿಸಿದ; ಇನ್ನೂ ಅನೇಕ ಹುಲ್ಲುಗಾವಲುಗಳಲ್ಲಿ ದನಗಳನ್ನು ಮೇಯಿಸಿ ಜುಂಜಪ್ಪ ತನ್ನ ಪರಕ್ರಮವನ್ನು ತೋರಿಸಿದ. ಹದಿನಾರು ವರ್ಷಗಳ ಕಾಲ ಹೀಗೆ ಏಕಮೇವ ಅದ್ವಿತೀಯನಾಗಿ ಮೆರೆದ ಜುಂಜಪ್ಪ ಅನೇಕ ಪವಾಡಗಳನ್ನು ಮಾಡಿದ. ಕೊನೆಗೆ ಅವನ ಸೋದರ ಮಾವಂದಿರು ಮಾರಕ್ಕನ ಮೂಲಕ ಜುಂಜಪ್ಪನಿಗೆ ವಿಷಹಾಕಿಸಿ ಮೋಸದಿಂದ ಸೋಲಿಸಿದರು. ಜುಂಜಪ್ಪ ಸಾಯುವ ಮೊದಲು ತನ್ನ ಸೋದರ ಮಾವಂದಿರು ವಾಸವಾಗಿದ್ದ ಕಂಬಿಯರ ಹಟ್ಟಿಯನ್ನು ತನ್ನ ಉರಿಗಣ್ಣಿನಿಂದ ಸುಟ್ಟು ಬೂದಿಮಾಡಿ, ತಾನೂ ಸಾಯುತ್ತಾನೆ. ಸತ್ತನಂತರವೂ ಅವನು ಅನೇಕ ಪವಾಡಗಳನ್ನು ಮಾಡಿದ. ಹೀಗಾಗಿ ಕಾಡುಗೊಲ್ಲರು ಜುಂಜಪ್ಪನನ್ನು ತಮ್ಮ ಆರಾಧ್ಯ ದೈವವೆಂದು ಪೂಜೆ ಮಾಡಲು ಪ್ರಾರಂಭಿಸಿದರು.

-೩-

ಜುಂಜಪ್ಪನ ಪುರಾಣ ಕಾಡುಗೊಲ್ಲರ ಸಂಸ್ಕೃತಿಯನ್ನು ರೂಪಿಸಿರುವ ಪ್ರಮುಖವಾದ ಪುರಾಣವಾಗಿದೆ. ಈ ಪುರಾಣದ ಎರಡು ಪ್ರಮುಖ ಪಾಠಗಳನ್ನು ಗುರುತಿಸಲಾಗಿದೆ; ಮೊದಲನೆಯದು ಡಾ|| ಜೀ. ಶಂ. ಪರಮಶಿವಯ್ಯನವರು ಗುರುತಿಸಿ ಸಂಗ್ರಹಿಸಿರುವ ದಕ್ಷಿಣದ ಕಡೆಯ ಪಾಠ, ಇದರಲ್ಲಿ ಸಾಂಸ್ಕೃತಿಕ ಅಂಶಗಳಿಗಿಂತ ಹೆಚ್ಚಾಗಿ ಕಾವ್ಯಾಂಶವೇ ಹೆಚ್ಚಾಗಿದೆ. ಇದು ಗುಬ್ಬಿ, ತಿಪಟೂರು, ತುರುವೆಕೆರೆ, ಚನ್ನರಾಯ ಪಟ್ಟಣ ತಾಲೂಕುಗಳಲ್ಲಿ ಪ್ರಚಲಿತವಾಗಿದೆ. ಈ ದಕ್ಷಿಣ ಸಂಪ್ರದಾಯದವರು ಗುಬ್ಬಿ ತಾಲೂಕಿನ ಹಾಗಲವಾಡಿಯ ಜುಂಜಪ್ಪನ ಕ್ಷೇತ್ರಕ್ಕೆ ಸೇರಿದವರಾಗಿದ್ದು ಈ ಕ್ಷೇತ್ರಕ್ಕೇ ಹೋಗಿ ಸೇವೆ ಸಲ್ಲಿಸುತ್ತಾರೆ. ಎರಡನೆಯದು ಸಿರಾ, ಹಿರಿಯೂರು, ಚಳ್ಳಕೆರೆ ಮುಂತಾದ ಭಾಗಗಳಲ್ಲಿ ಪ್ರಚಲಿತವಾಗಿರುವ ಉತ್ತರ ಸಂಪ್ರದಾಯ. ಈ ಸಂಪ್ರದಾಯದಲ್ಲಿ ಕಾವ್ಯಾಂಶಕ್ಕಿಂತ ಹೆಚ್ಚಾಗಿ ದಟ್ಟವಾದ ಸಾಂಸ್ಕೃತಿಕ ವಿವರಗಳು ಲಭ್ಯವಾಗುತ್ತವೆ. ಕಾಡುಗೊಲ್ಲರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಈ ಉತ್ತರ ಪಾಠ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಸಂಪ್ರದಾಯದ ಕಥೆಯನ್ನು ನಾನು ಸಂಗ್ರಹಿಸಿದ್ದೇನೆ;

[1] ಡಾ|| ಜೀ. ಶಂ.ಪ. ಅವರು ಈ ಎರಡು ಸಂಪ್ರದಾಯಗಳಿಗೂ ಇರುವ ಕಥಾವ್ಯತ್ಯಾಸಗಳನ್ನು ಪಟ್ಟಿಮಾಡಿದ್ದಾರೆ.[2] ಇದಕ್ಕೆ ಕಾರಣಗಳನ್ನೂ ವಿವರಿಸಿದ್ದಾರೆ; “ಇವುಗಳ ಸಾಮ್ಯವನ್ನು ಪರಿಶೀಲಿಸಿದರೆ ಮೂಲದಲ್ಲಿ ಅದು ಒಂದೇ ಕಾವ್ಯವಾಗಿದ್ದು ಎರಡು ದಿಕ್ಕಿನಲ್ಲಿ ಪ್ರಸರಣಗೊಂಡ ರಚನೆ ಪ್ರತ್ಯೇಕವಾಗಿಯೇ ಉಳಿದು ಸಾಕಷ್ಟು ಬದಲಾವನೆಗಳನ್ನು ಸಾಧಿಸಿಕೊಂಡಿದೆ. ಧಾರ್ಮಿಕ ವಿವರಗಳು, ದೈವಿಕ ಅಂಶಗಳು, ಉತ್ತರದ ಪಾಠದಲ್ಲಿ ದಟ್ಟವಾಗಿ ಉಳಿದು ಕೊಂಡು ಬಂದರೆ, ದಕ್ಷಿಣಕ್ಕೆ ಬಂದಂತೆಲ್ಲಾ ಧಾರ್ಮಿಕ ಅಂಶಗಳು ಜಾಳು ಜಾಳಾಗಿ ಕಾವ್ಯದ ಸ್ವಾರಸ್ಯ ಭಾಗಗಳು ಮಾತ್ರ, ಕಲಾತ್ಮಕ ಸನ್ನಿವೇಶಗಳು ಮಾತ್ರ ಉಳಿದು ಬಂದಿರುವುದು ಗೋಚರಿಸುತ್ತದೆ. ಉತ್ತರದ ಹಿರಿಯೂರು, ಸಿರಾ, ಚಳ್ಳಕೆರೆ ಭಾಗದಲ್ಲಿ ಕಾಡುಗೊಲ್ಲರು ದಟ್ಟವಾಗಿರುವುದರಿಂದಲೂ ಕಳುವಾರಹಳ್ಳಿ, ಬೇವಿನಹಳ್ಳಿ ಮುಂತಾದ ಕೇಂದ್ರಗಳು ಅಲ್ಲಿಯೇ ಇರುವುದರಿಂದಲೂ ಪುರಾಣದ ಚೌಕಟ್ಟು ಉತ್ತರದ ಪಾಠದಲ್ಲಿ ಅಧಿಕ್ಯವನ್ನು ಪಡೆದುಕೊಂಡಿದೆ. ತುರುವೇಕೆರೆ, ಗುಬ್ಬಿ, ಚೆನ್ನರಾಯಪಟ್ಟಣ ಈ ಭಾಗಗಳಲ್ಲಿ ಕಾಡುಗೊಲ್ಲರು ಸಾಕಷ್ಟು ವಿರಳವಾಗಿರುವುದರಿಂದ ಜುಂಜಪ್ಪನ ಕಥೆ ಕಾವ್ಯವಾಗಿ ಮಾತ್ರ ಈ ಪ್ರದೇಶದಲ್ಲಿ ಉಳಿಯಲು ಸಾಧ್ಯವಾಗಿದೆ.[3]

ಜುಂಜಪ್ಪನ ಪುರಾಣ ಸಾಹಿತ್ಯ, ಮಾನವವಿಜ್ಞಾನ ಹಾಗೂ ಜಾನಪದದ ದೃಷ್ಟಿಯಿಂದ ಬೆಲೆಯುಳ್ಳ ಅನೇಕ ಅಂಶಗಳನ್ನು ಒಳಗೊಂಡಿದೆ. ಕಾಡುಗೊಲ್ಲರ ಆಹಾರ, ಉಡುಪು, ಕಸುಬು, ಆಭರಣಗಳು, ಹುಟ್ಟು, ಸಾವು, ಮದುವೆ ಮೊದಲಾದ ಸಾಂಸ್ಕೃತಿಕ ಅಂಶಗಳಿಗೆ ಸಂಬಂಧಿಸಿದ ಅನೇಕ ವಿಷಯಗಳಿವೆ. ಇವುಗಳನ್ನು ಕಾಡುಗೊಲ್ಲರ ಸಂಸ್ಕೃತಿಯ ಆದರ್ಶ ವಿನ್ಯಾಸಗಳು (Ideal Patterns) ಮತ್ತು ಕಡ್ಡಾಯ ವಿನ್ಯಾಸಗಳು (Compulsory patterns) ಎಂದು ಹೇಳಬಹುದು.[4] ಜುಂಜಪ್ಪನ ಪುರಾಣದ ಅಧ್ಯಯನದಿಂದ ಈ ಕೆಲವು ವಿಷಯಗಳು ನಮಗೆ ತಿಳಿದು ಬರುತ್ತವೆ:

೧. ಕಾಡುಗೊಲ್ಲರ ಬಹುಮಟ್ಟಿನ ಸಾಂಸ್ಕೃತಿಕ ಮೂಲಾಂಶಗಳನ್ನು (Cultural Tribes) ಈ ಪುರಾಣದಲ್ಲಿ ಕಾಣಬಹುದಾಗಿದೆ. ಎಫ್. ಬುಕ್ಯಾನನ್ ಎಂಬವರು ಕಳೆದ ಶತಮಾನದ ಕೊನೆಯಲ್ಲಿ ಕಾಡುಗೊಲ್ಲರ ಜೀವನದ ವಿವರಗಳನ್ನು ಕೊಟ್ಟಿದ್ದಾರೆ.[5] ಅವರು ಕೊಡುವ ವಿವರಗಳಿಗೂ ಜುಂಜಪ್ಪನ ಕಾವ್ಯದಲ್ಲಿರುವ ಜನ ಜೀವನದ ವಿವರಗಳಿಗೂ ಅನೇಕ ಸಾಮ್ಯಗಳಿವೆ. ಒಂದೆರಡು ಶತಮಾನಗಳ ಹಿಂದೆ ತುಮಕೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಕಾಡುಗಳು, ಹುಲ್ಲುಗಾವಲುಗಳೂ ಇದ್ದಾಗ ಕಾಡುಗೊಲ್ಲರ ಜೀವನ ಜುಂಜಪ್ಪನ ಕಾವ್ಯದಲ್ಲಿ ವರ್ಣಿತವಾಗಿರುವಂತೆಯೇ ಇದ್ದರಿಬಹುದೆಂದು ಊಹಿಸಬಹುದಾಗಿದೆ, ಕಾಡುಗೊಲ್ಲರಲ್ಲಿ ಸಾಹಸಿಯಾಗಿದ್ದ ಯಾರೋ ಒಬ್ಬ ವ್ಯಕ್ತಿ ಕಾಲಕ್ರಮೇಣ ಪುರಾಣ ಪುರುಷನ ಸ್ಥಾನಮಾನಗಳನ್ನು ಪಡೆದು ಸಾಂಸ್ಕೃತಿಕ ವೀರನಾಗಿ ಪರಿಣಮಿಸಿರಬೇಕು.

೨. ಕಾಡುಗೊಲ್ಲರಲ್ಲಿ ಎತ್ತಪ್ಪ ಎಂಬ ಇನ್ನೊಬ್ಬ ಸಾಂಸ್ಕೃತಿಕ ವೀರನ ಪುರಾಣವೂ ಇದೆ. ಇವೆರಡರಲ್ಲಿಯೂ ಕೆಲವು ಸಾಮ್ಯಗಳಿವೆ. ಮೂಲತಃ  ಒಂದೇ ಆಗಿದ್ದ ಪುರಾಣ ಕ್ರಮೇಣ ಎರಡು ವಿಭಿನ್ನ ಪುರಾಣಗಳಾಗಿ ರೂಪುಗೊಂಡಿರುವ ಸಾಧ್ಯತೆಗಳಿವೆ. ಎತ್ತಪ್ಪನ ಪುರಾಣಕ್ಕಿಂತ ಜುಂಜಪ್ಪನ ಪುರಾಣ ದೀರ್ಘವಾಗಿದ್ದು, ಸಾಹಿತ್ಯ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಹೆಚ್ಚು ಮಹತ್ವಪೂರ್ಣವಾದದ್ದಾಗಿದೆ.

೩. ಜುಂಜಪ್ಪನ ಪುರಾಣ ಶೈವ ಮತ್ತು ವೈಷ್ಣವ ಸಂಪ್ರದಾಯಗಳಿಂದ ಹುಟ್ಟಿದ ಮಿಶ್ರ ಉರಾಣವಾಗಿದೆ (Hybrid Myth). ಜುಂಜಪ್ಪ ವೀರಭದ್ರನ ಅವತಾರ; ಅವನ ಮನೆದೇವರುಗಳಾದ ಚಿತ್ರದೇವರು ಶೈವಸಂಪ್ರದಾಯಕ್ಕೆ ಸೇರಿದ ದೇವತೆ; ಆದರೆ ಅವನ ಸೋದರ ಮಾವಂದಿರೊಡನೆ ಅವನು ಹೋರಾಡಿದ ಕಥೆ ವೈಷ್ಣವ ಸಂಪ್ರದಾಯದ ಕೃಷ್ಣ ಮತ್ತು ಕಂಸನ ಕಥೆಯನ್ನು ಹೋಲುತ್ತದೆ. ಹೀಗೆ ಶೈವ ಮತ್ತು ವೈಷ್ಣವ ಸಂಪ್ರದಾಯಗಳ ಸಂಮಿಶ್ರಣ ಯಾವಾಗ, ಹೇಗೆ, ಏಕೆ ಆಯಿತು ಎಂಬುದು ಸ್ಪಷ್ಟವಾಗುವುದಿಲ್ಲ. ಕಾಡುಗೊಲ್ಲರು ಮೂಲತಃ ಶೈವರಾಗಿದ್ದು, ಅವನ ವೈಷ್ಣವ ಪ್ರಭಾವ ಒಳಗಾಗಿರಬಹುದೆಂಬುದನ್ನು ಜುಂಜಪ್ಪನ ಪುರಾಣದಿಂದ ಮಾತ್ರವಲ್ಲದೆ ಎತ್ತಪ್ಪ, ಚಿತ್ರದೇವರು, ಕಾಟಮದೇವರು, ಕೇತೇದೇವರು ಮತ್ತು ಪಾತೇದೇವರ ಪುರಾಣಗಳಿಂದಲೂ ತಿಳಿಯಬಹುದಾಗಿದೆ.

೪. ಕಾಡುಗೊಲ್ಲರಿಗೆ ಮತ್ತು ಬೇಡರಿಗೆ ಸಂಬಂಧಗಳು ಚೆನ್ನಾಗಿರಲಿಲ್ಲವೆಂಬುದೂ ಜುಂಜಪ್ಪನ ಪುರಾಣದಿಂದ ತಿಳಿದುಬರುತ್ತದೆ. ಅಳುವಿನವರ ಒಕ್ಕಲಿಗರು, ಹಾಲುಕುರುಬರು ಕಾಡುಗೊಲ್ಲರಿಗೆ ನೆರವಾಗಿದ್ದರೆಂದೂ ಈ ಪುರಾಣದಿಂದ ತಿಳಿದುಬರುತ್ತದೆ.

-೪-

ಜುಂಜಪ್ಪನ ಜಾತ್ರೆ ಗುಬ್ಬಿ ತಾಲೂಕಿನ ಹಾಗಲವಾಡಿಯಲ್ಲಿ ಮತ್ತು ಸಿರಾ ತಾಲ್ಲೂಕಿನ ಬೇವಿನಹಳ್ಳಿಯಲ್ಲಿ (ಅಂದರೆ ಬೇವಿನಹಳ್ಳಿಯಿಂದ ಮೂರು ಮೈಲಿ ದೂರದಲ್ಲಿರುವ ಕಳುವಾರಹಳ್ಳಿಯ ಬಳಿಯ ಜುಂಜಪ್ಪನ ಸಮಾಧಿ ಇರುವ ಜಾಗದಲ್ಲಿ) ನಡೆಯುತ್ತದೆ. ಈ ಜಾತ್ರೆಗಳಲ್ಲಿ ದೇವರಿಗೆ ಗಂಗಾಸ್ನಾನ ಮಾಡಿಸುವುದು, ಹಾಲು ಮೀಸಲು ಕರೆಯುವುದು, ದೀಪ ಏರಿಸುವುದು ಹರಕೆಗಳನ್ನು ತೀರಿಸುವುದು ಮುಖ್ಯವಾದ ಕಾರ್ಯಕ್ರಮಗಳು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಈ ಜಾತ್ರೆಗಳಲ್ಲಿ ಭಕ್ತರು ಮೀಸಲಿನಲ್ಲಿ ಎಮ್ಮೆ, ಹಸು, ಕುರಿ, ಮೇಕೆ ಇವುಗಳ ಹಾಲು ಕರೆದು, ಅದನ್ನು ಕಾಯಿಸಿ, ಹೆಪ್ಪು ಹಾಕಿ, ಮೊಸರು ಮಾಡಿ, ಬೆಣ್ಣೆ ತೆಗೆದು, ಬೆಣ್ಣೆಯಿಂದ ತುಪ್ಪಮಾಡಿ, ಆ ತುಪ್ಪವನ್ನು ಗಡಿಗೆಗಳಲ್ಲಿ ಸಂಗ್ರಹಿಸಿಡುತ್ತಾರೆ. ಜಾತ್ರೆಯಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಆರೇಳು ಅಡಿಗಳಷ್ಟು ಎತ್ತರವಾಗಿರುವ, ಮೂರು ಅಡಿಗಳಷ್ಟು ಸುತ್ತಳತೆ ಇರುವ, ಕಲಾತ್ಮಕವಾಗಿ ಮಾಡಿರುವ ದೊಡ್ಡ, ದೀಪದ ಕಂಬವನ್ನು ನಿಲ್ಲಿಸಿ ಅದಕ್ಕೆ ಎಣ್ಣೆಬತ್ತಿ ಹಾಕಿರುತ್ತಾರೆ. ಪ್ರತಿಯೊಬ್ಬ ಭಕ್ತನೂ ತಾವು ತಂದ ಮೀಸಲು ತುಪ್ಪವನ್ನು ಈ ದೀಪದ ಕಂಬಕ್ಕೆ ಹಾಕುತ್ತಾರೆ. ಹೀಗೆ ದೀಪ ಹಚ್ಚುವ ಈ ಹಬ್ವನ್ನು ’ಹಿರಿದೀವಣಿಗೆ’ ಎಂದು ಕರೆಯುತ್ತಾರೆ. ಒಂದು ತಿಂಗಳವರೆಗೂ ಈ ದೀಪವನ್ನು ನಿರಂತರವಾಗಿ ಉರಿಸಿ ಕೊನೆಯದಿನ ಪುನಃ ಚಿಕ್ಕಪ್ರಮಾಣದಲ್ಲಿ ಜಾತ್ರೆಯನ್ನು ನಡೆಸುತ್ತಾರೆ. ಇದನ್ನು ’ಕಿರುದೀವಣಿಗೆ’ ಎಂದು ಕರೆಯುತ್ತಾರೆ. ಭಕ್ತರು ಈ ಒಂದು ತಿಂಗಳಲ್ಲಿ ಯಾವತ್ತು ಬೇಕಾದರೂ ಮೀಸಲು ತುಪ್ಪವನ್ನು ದೀಪದ ಕಂಬಕ್ಕೆ ಅರ್ಪಿಸಿ, ಹಣ್ಣಕಾಯಿ ಮಾಡಿಸಿಕೊಂಡು ಹೋಗಬಹುದು.

ಈ ಜಾತ್ರೆಯ ಇನ್ನೊಂದು ವಿಶೇಷವೆಂದರೆ ಭಕ್ತರು ಜುಂಜಪ್ಪನಿಗೆ ಅರ್ಪಿಸುವ ಕಾಣಿಕೆಗಳು, ಭಕ್ತರು ತಮ್ಮಲ್ಲಿ ಯಾರಿಗಾದರೂ ಹಾವು ಕಡಿದು, ಚೇಳು ಕಡಿದು, ಮಂಡರಗಪ್ಪೆ ಕಡಿದು ವಾಸಿಯಾದರೆ ಅಥವಾ  ದನಗಳಿಗೆ ಉಣ್ಣೆ ಹತ್ತಿದರೆ ಚಿನ್ನದ ಬೆಳ್ಳಿಯ ಹಾವು, ಚೇಳು ಮಂಡರಗಪ್ಪೆಗಳನ್ನು ಜುಂಜಪ್ಪ ದೇವರಿಗೆ ಕಾಣಿಕೆಯಾಗಿ ಅರ್ಪಿಸುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ಈ ಕಾಣಿಕೆಗಳನ್ನು ಮಾರುವ ಅಂಗಡಿಗಳೂ ಇರುತ್ತವೆ. ಚಿನ್ನದ ತಗಡಿನಿಂದ ಅಥವಾ ಬೆಳ್ಳಿಯ ತಗಡಿನಿಂದ ಮಾಡಿದ ಕಾಣಿಕೆಗಳಲ್ಲಿ ಯಾವುದನ್ನು ಜುಂಜಪ್ಪ ದೇವರಿಗೆ ಅರ್ಪಿಸಬೇಕೆನ್ನುವುದು ಆಯಾಭಕ್ತರ ಹರಕೆಯ ಸ್ವರೂಪ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುವ ವಿಷಯವಾಗಿದೆ.

ಜುಂಜಪ್ಪ ದೇವರಿಗೆ ಕಾಡುಗೊಲ್ಲರು ಮಾತ್ರವಲ್ಲದೆ ಇತರ ಜಾತಿಯ ಜನಗಳೂ ನಡೆದುಕೊಳ್ಳುತ್ತಾರೆ. ಅವರು ಜಾತ್ರೆಗಳಿಗೆ ಬರಲು ಸಾಧ್ಯವಾಗದೇ ಹೋಗಬಹುದು. ಸಾಮಾನ್ಯವಾಗಿ ಕಳುವಾರಹಳ್ಳಿ ಅಥವಾ ಹಾಗಲವಾಡಿಯ ಕ್ಷೇತ್ರಕ್ಕೆ ಕೆಲವರು ಭಕ್ತರು ವಿಶಿಷ್ಟ ವಾದ್ಯನಾದ ಗಣೆಯನ್ನು[6] ಹೆಗಲ ಮೇಲೇರಿಸಿ, ಅದನ್ನು ನವಿಲುಗರಿಯಿಂದ ಸಿಂಗರಿಸಿ, ತುದಿಯಲ್ಲಿ ಹಾವಿನಾಕಾರದ ತಗಡನ್ನು ಜೋಡಿಸಿ, ಅದನ್ನು ಜುಂಜಪ್ಪನೆಂದು ಭಾವಿಸಿ, ಹೊತ್ತುಕೊಂಡು ಊರಿಂದ ಊರಿಗೆ ತಿರುಗುತ್ತಾರೆ. ಕೈಯಲ್ಲಿ ಒಂದು ಗರುಡಗಂಬವನ್ನು ಹಿಡಿದು, ಅದಕ್ಕೆ ಎಣ್ಣೆ ಬತ್ತಿ ಹಾಕಿರುತ್ತಾರೆ. ಭಕ್ತರು ಮುಡಿಪು ಕಟ್ಟಿಟ್ಟು ಕಾಣಿಕೆಗಳನ್ನು ಈ ಗರುಡಗಂಬದ ಎಣ್ಣೆಗೆ ಹಾಕುತ್ತಾರೆ. ಜುಂಜಪ್ಪನ ಭಕ್ತರಾದ ಈ ದಾಸಯ್ಯಗಳು ಭಕ್ತರಿಂದ ಕಾಣಿಕೆಗಳನ್ನು ಸಂಗ್ರಹ ಮಾಡಿಕೊಂಡು ಜಾತ್ರೆಯ ಸಂದರ್ಭದಲ್ಲಿ ಅವನ್ನು ಜುಂಜಪ್ಪ ದೇವರಿಗೆ ಅರ್ಪಿಸುತ್ತಾರಾದ್ದರಿಂದ ಅವರನ್ನು ’ಕಾಣಿಕೆಯವರು’ ಎಂದು ಕರೆಯುವ ವಾಡಿಕೆಯಿದೆ.

ಜುಂಜುಪ್ಪನಿಗೆ ಸಂಬಂಧಿಸಿದಂತೆ ಇನ್ನು ಎರಡು ವಿಷಯಗಳನ್ನು ಅಗತ್ಯವಾಗಿ ಪ್ರಸ್ತಾಪ ಮಾಡಬೇಕು: ೧. ಜುಂಜಪ್ಪನ ಬಸವ. ೨. ಜೆನ್ನಿಗೆ ಕುರಿ.

ಜುಂಜಪ್ಪನ ಭಕ್ತರಲ್ಲಿ ಯಾರು ಬೇಕಾದರೂ ಜುಂಜಪ್ಪನ ಹೆಸರಿನಲ್ಲಿ ಬಸವನನ್ನು ಬಿಡುವಂತಿಲ್ಲ. ಇದು ಹರಕೆಯಪಟ್ಟಿಗೂ ಸೇರುವುದಿಲ್ಲ. ಜುಂಜಪ್ಪ ಕಾಡುಗೊಲ್ಲರಲ್ಲಿ ಯಾರ ಕನಸಿನಲ್ಲಿ ಕಾಣಿಸಿಕೊಂಡು ತನಗೆ ಬಸವನನ್ನು ಬಿಡಬೇಕೆಂದು ಅಪೇಕ್ಷಿಸುತ್ತಾನೋ ಅವರು ಮಾತ್ರ ಬಸವನನ್ನು ಬಿಡಬೇಕು. ಇದು ಅವರ ನಂಬಿಕೆ. ಜುಂಜಪ್ಪ ಕನಸಿನಲ್ಲಿ ಕಾಣಿಸಿದ ನಂತರವೂ ಬಸವನನ್ನು ಬಿಡದಿದ್ದರೆ ಆ ವ್ಯಕ್ತಿಗೆ ಸರ್ಪ ಕಾಣಿಸಿಕೊಳ್ಳುವುದಂತೆ. ಹೀಗಾಗಿ ಜುಂಜಪ್ಪ ಕನಸಿನಲ್ಲಿ ಕಂಡ ತಕ್ಷಣ ಆ ವ್ಯಕ್ತಿ ತನ್ನಲ್ಲಿ ಅದರ ಮೈತೊಳೆದು. ಅದಕ್ಕೆ ಹಾಲು ಮೊಸರಿನ ಅಭಿಷೇಕ ಮಾಡಿ. ಮೂರು ಬಗೆಯ ಎಣ್ಣೆಯನ್ನು ಅದರ ಕೊಂಬಿಗೆ ಮತ್ತು ಕಾಲಿಗೆ ಸವರುತ್ತಾರೆ. ಅನಂತರ ದೇವರ ಬಾವಿಯ ನೀರಿನಿಂದ ತೊಳೆದು ಅದಕ್ಕೆ ದೇವರ ಮೇಲಿನ ಹಾರವನ್ನು ಹಾಕುತ್ತಾರೆ. ಅಂದಿನಿಂದ ಆ ಹೋರಿ ಕರು ಜುಂಜಪ್ಪನ ಬಸವನಾಗುತ್ತದೆ. ಅದು ಎಲ್ಲಿ ಬೇಕಾದರೂ ಮೇಯಬಹುದು. ಅದನ್ನು ಯಾರೂ ಅಡ್ಡಿಪಡಿಸುವಂತಿಲ್ಲ. ಹೀಗೆಯೇ ಆ ಹೋರಿ ಕರು ಮೇಯ್ದು ದೊಡ್ಡ ಬಸವನಾಗುತ್ತದೆ. ಈ ಬಸವ ಜುಂಜಪ್ಪನ ‌ಪ್ರತಿನಿಧಿ. ಅದನ್ನು ಮುಂದೆ ಬಿಟ್ಟುಕೊಂಡು ಕೆಲವರು ಪೂಜಾರರು ಊರಿಂದ ಊರಿಗೆ ಅದರ ಹಿಂದೆಯೇ ಹೋಗುತ್ತಾರೆ. ವಾದ್ಯಮಾಡುವವರೂ ಅವರೊಡನೆ ಹೋಗುತ್ತಾರೆ. ಅವರು ಬಸವ ಹೋದ ಕಡೆ  ತಾವೂ ಹಿಂದೆ ಹೋಗಬೇಕೇ ಹೊರತು ಅದರ ದಿಕ್ಕನ್ನು ನಿರ್ದೇಶಿಸುವಂತಿಲ್ಲ. ಅದಕ್ಕೆ ತಾನು ಎಲ್ಲಿಗೆ ಹೋಗಬೇಕೆಂಬುದು ಗೊತ್ತಿದೆ. ಅದಕ್ಕೆ ತಾನೇನೂ ತಿಳಿಸಿಕೊಡಬೇಕಾದ ಅಗತ್ಯವಿಲ್ಲ ಹಾಗೆ ಮಾಡಿದರೆ ಅದು ಉದ್ಧಟತನ ವಾಗುತ್ತದೆ ಎಂಬುದು ಅದರ ಹಿಂಬಾಲಕರ ನಂಬಿಕೆ. ಈ ಬಸವ ಗೊಲ್ಲರ ಹಟ್ಟಿಗಳಿಗೆ ಮಾತ್ರವಲ್ಲದೆ ಊರುಗಳಿಗೂ ಹೋಗುತ್ತದೆ. ಅದು ಯಾರ ಮನೆಯ ಒಳಕ್ಕೆ ಹೋಗುವುದೋ ಅಂದು ಅಲ್ಲಿಯೇ ಅದರ ಬಿಡಾರ. ಭಕ್ತರು ಅದನ್ನು ಪೂಜಿಸಿ ಅದಕ್ಕೆ ತಿನ್ನಲು ಆಹಾರ ಕೊಡುತ್ತಾರೆ. ಅದಕ್ಕೆ ಕರಿಯ ಕಂಬಳಿಯ ಗದ್ದುಗೆ ಯನ್ನು ಮಾಡಿ, ಅದನ್ನು ಅದರ ಮೇಲೆ ಮಲಗಿಸುತ್ತಾರೆ. ಪೂಜಾರಿಯ ಕೈಗೆ ಜುಂಜಪ್ಪನಿಗೆ ಕೊಡಬೇಕಾದ ಕಾಣಿಕೆಯನ್ನು ಕೊಡುತ್ತಾರೆ. ಬಸವ ಊರೂರು ತಿರುಗಿದಾಗ ಭಕ್ತರಿಂದ ದೊರಕುವ ಅಕ್ಕಿ, ಕಾಣಿಕೆ ಮೊದಲಾದವನ್ನು ಮೂರು ಭಾಗ ಮಾಡುತ್ತಾರೆ: ಒಂದು ಭಾಗ ದೇವರಿಗೆ, ಒಂದು ಭಾಗ ಪೂಜಾರಿಗೆ, ಒಂದು ಭಾಗ ವಾದ್ಯದವರಿಗೆ, ಬಸವನಿಗೆ ಪ್ರತ್ಯೇಕವಾಗಿಯೇ ಆಹಾರ ದೊರಕುತ್ತದೆ. ಕಾಡು ಗೊಲ್ಲರು ಜುಂಜಪ್ಪನ ಬಸವನನ್ನು ’ಶಾಸ್ತ್ರ ಕೇಳುತ್ತಾರೆ’ ಮಕ್ಕಳಾಗದ ಹೆಂಗಸರನ್ನು ನೆಲದ ಮೇಲೆ ಮಲಗಿಸಿ, ಆ ದಾರಿಯಲ್ಲಿ ಬಸವನನ್ನು ಬಿಡುತ್ತಾರೆ. ಅದು ಆ ಹೆಂಗಸನ್ನು ದಾಟಿಕೊಂಡು ಹೋದರೆ ಆಕೆಗೆ ಮಕ್ಕಳಾಗುವುದೆಂದೂ ಇಲ್ಲದಿದ್ದಲ್ಲಿ ಮಕ್ಕಳಾಗುವುದಿಲ್ಲವೆಂದೂ ಭಾವಿಸುತ್ತಾರೆ. ಬಾವಿ ತೆಗೆಯವಾಗಲೂ ಜುಂಜಪ್ಪನ ಬಸವನ ನೆರವನ್ನು ಪಡೆಯುತ್ತಾರೆ. ಬಸವ ಆ ಜಾಗದಲ್ಲಿ ಓಡಾಡಿ ಯಾವುದೋ ಒಂದು ಕಡೆ ನೆಲವನ್ನು ಕಾಲಿನಿಂದ ಕೆರೆದು ಅಲ್ಲಿ ಗಂಜಲವನ್ನು ಹುಯ್ಯುತ್ತದೆ. ಆ ಜಾಗದಲ್ಲಿ ನೀರಿದೆಯೆಂದು ನಂಬಿ ಅಲ್ಲಿ ಬಾವಿ ತೆಗೆಯುತ್ತಾರೆ, ಅಲ್ಲಿ ನೀರು ಬರುವುದೇ ಇಲಲವೆ ಎಂಬುದು ಅವರವರ ಅದೃಷ್ಟದ ಪ್ರಶ್ನೆ! ಜುಂಜಪ್ಪನ ಬಸವನಿಗೆ ಬೀಜ ಹೊಡೆಯುವುದಿಲ್ಲ; ಆದರೆ ಅನುಭವಸ್ಥರಿಂದ ಬೀಜವನ್ನು ಒಳಕ್ಕೆ ತಳ್ಳಿಸುತ್ತಾರೆ. ಬಸವನ ಅಂಗಾಂಗಳು ಸ್ವಲ್ಪವೂ ಊನವಾಗಬಾರದು. ಹಾಗೇನಾದರೂ ಆದರೆ ಅದು ಬಸವನ ಸ್ಥಾನಮಾನಗಳನ್ನು ಕಳೆದುಕೊಳ್ಳುತ್ತದೆ. ಅದನ್ನು ಅನಂತರ ಯಾರೂ ಪೂಜಿಸುವುದಿಲ್ಲ. ಜುಂಜಪ್ಪನ ಬಸವ ಸತ್ತಾಗ ಅದನ್ನು ಗೌರವದಿಂದ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಅದನ್ನು ಹೂಳಿ ಸಮಾಧಿಮಾಡಿದ ಜಾಗ ಪವಿತ್ರವೆಂದು ಭಾವಿಸಿ ಪೂಜೆ ಮಾಡುತ್ತಾರೆ.

ಜುಂಜಪ್ಪನ ಬಸವನ ಕಲ್ಪನೆಯ ಮೂಲ ಜುಂಜಪ್ಪನ ಪುರಾಣದಲ್ಲಿಯೇ ದೊರೆಯುತ್ತದೆ. ಚೇಳೂರು ಕೋಟೆಯನ್ನು ಭೇದಿಸಿಕೊಂಡು ಉತ್ತರೆ ಗುಡ್ಡಕ್ಕೆ ನೆಗೆದು ಜುಂಜಪ್ಪನ ದನಗಳನ್ನು ರಕ್ಷಿಸಿದ ಸಾಹಸ ಕಾರ್ಯ ಮಾಡಿದ ಬಡಮೈಲ ಎಂಬ ಹೋರಿಯ ಪ್ರತೀಕವಾಗಿ ಜುಂಜಪ್ಪನ ಬಸವನನ್ನು ಭಕ್ತರು ಪೂಜೆ ಮಾಡುತ್ತಾರೆ. ಈಶ್ವರನಿಗೆ ನಂದಿಯಿದ್ದಂತೆ, ಜುಂಜಪ್ಪನಿಗೆ ಬಡಮೈಲ. ಆದರೆ ಈಶ್ವರ ನಂದಿಯ ಮೇಲೆ ಸವಾರಿ ಮಾಡಿದರೆ, ಜುಂಜಪ್ಪ ಬಡಮೈಲನ ಮೇಲೆ ಸವಾರಿ ಮಾಡುವುದಿಲ್ಲ. ಹೀಗಾಗಿ ಬಡಮೈಲನ ಪ್ರತಿನಿಧಿಯೆಂದು ಪರಿಗಣಿಸಲಾಗಿರುವ ಜುಂಜಪ್ಪನ ಬಸವನ ಮೇಲೆ ಯಾರೂ ಸವಾರಿ ಮಾಡುವುದಿಲ್ಲ; ಅಷ್ಟು ಮಾತ್ರವಲ್ಲ, ಇತರ ದೇವರೆ ಬಸವಗಳ ಮೇಲೆ ನಗಾರಿಯನ್ನು ಹೇರುವಂತೆ ಇದರ ಮೇಲೆ ನಗಾರಿ ಯನ್ನೂ ಹೇರುವುದಿಲ್ಲ. ಪುರಾಣ ಮತ್ತು ಆಚರಣೆಗಳಿರುವ ಗಾಢವಾದ ಸಂಬಂಧವನ್ನು ಬಡಮೈಲ ಮತ್ತು ಜುಂಜಪ್ಪನ ಬಸವ ಇವುಗಳ ಸಂಬಂಧಲ್ಲಿಯೂ ಗುರುತಿಸಬಹುದಾಗಿದೆ.

ಜುಂಜಪ್ಪನ ಸಂಬಂಧವಾಗಿ ವಿಚಾರಮಾಡಬೇಕಾದ ಇನ್ನೊಂದು ವಿಷಯ ’ಜೆನ್ನಿಗೆ ಕುರಿ’ಗೆ ಸಂಬಂಧಪಟ್ಟದ್ದು. ಜುಂಜಪ್ಪನ ಪುರಾಣದಲ್ಲಿಯೂ ಇದರ ಉಲ್ಲೇಖವಿದೆ, ಇದು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಬೆಳೆಸುವ ಹೆಣ್ಣುಕುರಿ. ಇದರ ಹಾಲು ಬಹಳ ಪವಿತ್ರವಾದುದೆಂದೂ ಮಗು ಹುಟ್ಟಿದ ಸಂದರ್ಭದಲ್ಲಿ ತಾಯಿ ಮತ್ತು ಮಗುವನ್ನು ಪರಿಶುದ್ಧಿಗೊಳಿಸುವ ಸಲುವಾಗಿ ಅವರಿಗೆ ಈ ಹಾಲನ್ನು ಪೂಜಾರಿ ಕುಡಿಸುತ್ತಾನೆ. ಹಟ್ಟಿಯಲ್ಲಿರುವ ಕುರಿಗಳಲ್ಲಿ ಯಾವುದನ್ನು ಜೆನ್ನಿಗೆ ಕುರಿ ಮಾಡಬೇಕೆಂದು ದೇವರನ್ನು ಶಾಸ್ತ್ರ ಕೇಳುತ್ತಾರೆ. ದೇವರು ಹೂವಿನ ಪ್ರಸಾದದ ಮೂಲಕವಾಗಲಿ, ಗಣೆಯ ಮೂಲಕವಾಗಲಿ ಇಂಥ ಕುರಿಮರಿ ಜೆನ್ನಿಗೆ ಕುರಿಯಾಬೇಕೆಂದು ಸೂಚಿಸಿದರೆ ಆ ಹೆಣ್ಣು ಕುರಿಮರಿಯ ಬಲಗಿವಿಯನ್ನು ಉದ್ದುದ್ದಕ್ಕೆ ಮೂರು ನಾಮದ ಆಕಾರದಲ್ಲಿ ಸೀಳುತ್ತಾರೆ. ಅದನ್ನು ಜೆನ್ನಿಗೆ ಕುರಿ ಎಂದು ಗುರುತಿಸುವುದು ಆವಿಯ ಈ ಗುರುತಿನಿಂದಲೇ. ಈ ಕುರಿಯನ್ನು ಪ್ರತ್ಯೇಕವಾಗಿ ಸಾಕದೆ ಎಲ್ಲ ಕುರಿಗಳ ಜೊತೆಯಲ್ಲಿಯೇ ಸಾಕುತ್ತಾರೆ; ಅದು ಯಾವ ಗಂಡು ಕುರಿಯೊಡನೆ ಬೇಕಾದರೂ ಸಂಬಂಧ ಬೆಳೆಸಬಹುದು: ಯಾವ ಕುರಿಮಂದೆಯಲ್ಲಿ ಬೇಕಾದರೂ ಇರಬಹುದು. ಈ ಕುರಿಯನ್ನು ಯಾರೂ ದಂಡಿಸುವಂತಿಲ್ಲ. ಕುರುಬರು ಇತರ ಕುರಿಗಳ ತುಪ್ಪಟವನ್ನು ಕತ್ತರಿಸಿಕೊಂಡು ಹೋಗುವಾಗ ಈ ಕುರಿಯ ತುಪ್ಪಟವನ್ನು ಕತ್ತರಿಸಿಕೊಂಡು ಹೋಗುತ್ತಾರೆ. ಈ ಜೆನ್ನಿಗೆ ಕುರಿಗೆ ಹೆಣ್ಣು ಮರಿ ಹುಟ್ಟಿದರೆ ಅದರ ಬಲಗಿವಿಯಲ್ಲಿ ಉದ್ದವಾಗಿ ನಾಮದ ಆಕಾರದಲ್ಲಿ ಮೂರು ಕಡೆ ಸೀಳಿ ಅದನ್ನೂ ಜೆನ್ನಿಗೆ ಕುರಿಯನ್ನಾಗಿ ಮಾಡುತ್ತಾರೆ. ಗಂಡು ಮರಿ ಹುಟ್ಟಿದರೆ ಅದನ್ನು ಮಾರಿ ಬಂದ ಹಣವನ್ನು ದೇವರ ಹೆಸರಿನಲ್ಲಿ ಇಡುತ್ತಾರೆ. ಜೆನ್ನಿಗೆ ಕುರಿ ಸತ್ತಾಗ ಅದರ ಮಾಂಸವನ್ನು ಆ ಹಟ್ಟಿಯ ಕಾಡುಗೊಲ್ಲರು ತಿನ್ನಬಹುದು. ಆದರೆ ಅದರ ಯಾವ ಭಾಗವೂ ನಾಯಿ. ನರಿಯ ಪಾಲಾಗಬಾರದು. ಅಕಸ್ಮಾತ್ ಈ ಕುರಿಯನ್ನು ತಿನ್ನದೆಯೇ ಹಾಗೆಯೇ ಬಿಡುವುದಾದರೆ ಅದಕ್ಕೆ ಒಂದು ದೊಡ್ಡ ಕಲ್ಲುಕಟ್ಟಿ ಕೆರೆಯೊಳಕ್ಕೋ ಬಾವಿಯೊಳಕ್ಕೋ ಮುಳುಗಿಸುತ್ತಾರೆ. ಇಲ್ಲದಿದ್ದರೆ ತಿಂದು ಉಳಿದ ಭಾಗಗಳನ್ನು ಒಂದು ಗುಂಡಿ ತೋಡಿ ಅದರೊಳಗೆ ಹಾಕಿ ಮಣ್ಣು ಮುಚ್ಚುತ್ತಾರೆ. ಅದರ ಮೇಲೆ ಕುರಿಗೊಬ್ಬರವನ್ನು ಹಾಕುತ್ತಾರೆ. ಜೆನ್ನಿಗೆ ಕುರಿ ಎಲ್ಲ ಹಟ್ಟಿಗಳಲ್ಲೂ ಇರುವುದಿಲ್ಲ, ಎಲ್ಲೋ ಕೆಲವು ಹಟ್ಟಿಗಳಲ್ಲಿ ಮಾತ್ರ ಇರುತ್ತದೆ. ಉಳಿದ ಹಟ್ಟಿಯವರು ತಮಗೆ ಅಗತ್ಯ ಬಿದ್ದಾಗ ಅದನ್ನು ತಮ್ಮಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ. ಮಗು ಹುಟ್ಟಿದ ಸಂದರ್ಭದಲ್ಲಿ ಬಾಣಂತಿ ಮೂರು ತಿಂಗಳ ಕಾಲ ಹಟ್ಟಿಯ ಕಳ್ಳೆಬೇಲಿಯಿಂದ ಹೊರಗಡೆ ದೂರದಲ್ಲಿ ಮೂರು ತಿಂಗಳ ಕಾಲ ಇರಬೇಕಾಗುತ್ತದೆ. ಮೂರು ತಿಂಗಳು ತುಂಬಿದ ಸಂದರ್ಭದಲ್ಲಿ ಕಳ್ಳಿಬೇಲಿಯ ಮೂಡಲು ಹುದಿಯಲ್ಲಿ ಆ ಹಟ್ಟಿಯ ಪೂಜಾರಿ ಆಕೆಗೆ ಮತ್ತು ಮಗುವಿಗೆ ಜೆನ್ನಿಗೆಯ ಹಾಲನ್ನು ತೀರ್ಥದಂತೆ ಕುಡಿಸುತ್ತಾನೆ. ಇದನ್ನು ’ಹೊರಜೆನ್ನಿಗೆ’ ಎಂದು ಕರೆಯುತ್ತಾರೆ. ಅಲ್ಲಿಂದ ಹಟ್ಟಿಯ ದೇವಸ್ಥಾನದ ಸುತ್ತ ಇರುವ ಕಳ್ಳಿಯ ಬೇಲಿಯನ್ನು ದಾಟಿ ಅಲ್ಲಿನ ಬಾಗಿಲಿಗೆ ಬಂದಾಗ ಅಲ್ಲಿ ಪೂಜಾರಿ ಇನ್ನೊಂದು ಸಲ ಮಗು ಮತ್ತು ಬಾಣಂತಿಗೆ ಜೆನ್ನಿಗೆ ಹಾಲನ್ನು ಕುಡಿಸುತ್ತಾನೆ. ಇದನ್ನು ’ಒಳಜೆನ್ನಿಗೆ’ ಎನ್ನುತ್ತಾರೆ. ಅಲ್ಲಿಗೆ ಬಾಣಂತಿಗೆ ಮತ್ತು ಮಗುವಿಗೆ ಇದ್ದ ಸೂತಕ ಕಳೆದು ಅವರು ಪರಿಶುದ್ಧರಾಗುತ್ತಾರೆ ಎಂದು ನಂಬುತ್ತಾರೆ. ಈ ಒಂದು ಸಂದರ್ಭದಲ್ಲಿ ಬಿಟ್ಟರೆ ಬೇರೆ ಯಾವ ಸಂದರ್ಭದಲ್ಲಿಯೂ, ಯಾವ ಕಾರಣಕ್ಕೂ ಜೆನ್ನಿಗೆ ಹಾಲನ್ನು ಬಳಸಕೂಡದು, ಜೆನ್ನಿಗೆ ಕುರಿಗೆ ಸಂಬಂಧಿಸಿದ ಈ ವಿವರಗಳನ್ನು ಕೊಡಲು ಕಾರಣವೆಂದರೆ ಜುಂಜಪ್ಪ ಹುಟ್ಟಿದಾಗಲೂ ಕೂಡ ಅವನು ಮತ್ತು ಅವನ ತಾಯಿ ಜೆನ್ನಿಗೆ ಹಾಲನ್ನು ಕುಡಿದು ಸೂತಕವನ್ನು ಕಳೆದುಕೊಂಡರೆಂದು ಪುರಾಣದಲ್ಲಿ ವಿವರವಾಗಿ ಉಲ್ಲೇಖಿಸಿರುವುದೇ ಆಗಿದೆ. ಜುಂಜಪ್ಪ ಕಾಡುಗೊಲ್ಲರ ಸಾಂಸ್ಕೃತಿಕ ವೀರನಾದರೂ ಅವನಿಗೂ ಈ ಎಲ್ಲ ನಿಯಮಗಳು ಅನ್ವಯವಾಗಿದ್ದವು. ಜುಂಜಪ್ಪನ ಪುರಾಣದಲ್ಲಿ ವಿವರಿಸಿರುವ ರೀತಿಯಲ್ಲಿಯೇ ಇಂದಿಗೂ ಜೆನ್ನಿಗೆ ಕುರಿಯ ಬಗ್ಗೆ ಕಾಡು ಗೊಲ್ಲರು ನಡೆದುಕೊಳ್ಳುತ್ತಾರೆ.

-೫-

ಕಾಡುಗೊಲ್ಲರಲ್ಲಿ ಇಷ್ಟೆಲ್ಲಾ ಪ್ರಸಿದ್ಧವಾಗಿರುವ ಜುಂಜಪ್ಪನ ಸ್ವರೂಪ ಹೇಗಿರಬಹುದು ಎಂಬುದು ಕುತೂಹಲ ಕೆರಳಿಸಿರುವ ವಿಷಯ. ಜುಂಜಪ್ಪನ ಮೂಲ ಮೂರ್ತಿ ಕೇವಲ ಒಂದು ಬಿದಿರುಕಡ್ಡಿಯೇ ಆಗಿರುತ್ತದೆ. ಆದರೆ ಉತ್ಸವ ಮೂರ್ತಿಯಲ್ಲಿ ಅವನು ಕುದುರೆಯ ಮೇಲೆ ಕೂತಿರುವಂತೆ, ಹಾವು ಚೇಳು, ಮಂಡರಗಪ್ಪೆಗಳಿಂದ ಅಲಂಕರಿಸಲ್ಪಟ್ಟಿದ್ದಾನೆ. ಉತ್ಸವ ಮೂರ್ತಿಯನ್ನು ಅಡ್ಡಣಿಗೆಯ ಮೇಲೆ ತೆಗೆದುಕೊಂಡು ನಾಲ್ಕು ಜನ ಹೊತ್ತುಕೊಂಡು, ನವಿಲು ಗರಿಯನ್ನು ಜೋಡಿಸಿರುವುದೂ ಜುಂಜುಪ್ಪ ದೇವರಾಗಬಹುದು. ಪುರಾಣದಲ್ಲಿ ಬರುವ ಜುಂಜಪ್ಪನ ಆಕಾರ, ಸ್ವಭಾವಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ: ಅವನು ತಾಯಿ ಚಿನ್ನಮ್ಮನ ನಡು ಬೆನ್ನಿನಿಂದ ಹುಟ್ಟಿದವನು; ಹುಟ್ಟುತ್ತಲೇ ಹುತ್ತದ ಕೋಮೆಯ ಮೇಲೆ ಕೂತವನು. ಅವನಿಗೆ ನಾಗರ ಹಾವಿನ ಹಾಸಿಗೆ, ನಾಗರಹೆಡೆಯ ತಲೆದಿಂಬು, ಚೇಳಿನ ಗದ್ದುಗೆ, ಅವನ ಬಿರುದು ಈ ರೀತಿ ಬರುತ್ತದೆ: “ನಾಗರ ಹಾವಿನ ಗಂಡ, ನಾಕು ಲೋಕಕ್ಕೆ ಮಿಂಡ, ಬೂದಿ ಮುಚ್ಚಿದ ಕೆಂಡ, ಉಗ್ಗದ ಗಡಿಗ್ಯೋನು, ಜುಂಗಳನೆ ಕುದುರ‍್ಯೋನು, ಜೊಂಪಾಲೆ ಮಂಡ್ಯೋನು, ಕೈಯಲ್ಲಿ ಕತ್ತರ ಬಾಣ, ನೆತ್ತೇಲಿ ನೆತ್ತರ ಬಾಣ, ಅಂಗೈಲಿ ಹಾವಿನ ಬಾಣ, ಮುಂಗೈಲಿ ಚೇಳಿನ ಬಾಣ, ಪಕ್ಕೆಗೆ ಐನೂರು ಬಾಣ, ದೊಕ್ಕೆಗೆ ಆರು, ಮುಡಿವಿಗೆ ಮುನ್ನೂರು ಬಾಣ, ನಡುವಿಗೆ ನಾನೂರು ಬಾಣ, ನೂರು ಬಾಣ, ಸುಕ್ಕೆ ಸುರನಾರಿ ಮರಬಿಲ್ಲು ಧರಿಸಿದವನು, ವೀರಾಧಿವೀರ, ಈಶ್ವರನ ಮಗ ವೀರಭದ್ರಸ್ವಾಮಿ, ಕೆಂಗುರಿ ಮಲ್ಲಪ್ಪನಿಗೆ ವರದಿಂದ ಹುಟ್ಟಿದೋನು, ತಾಯಿ ಚಿನ್ನಮ್ಮನ ನಡುಬೆನ್ನಿನಲ್ಲಿ ಮೂಡಿದವನು; ಕಂಬೇರ ಚಿನ್ನಿಯ ಮಗ, ಕನ್ನೆಕುಮಾರ; ಪುಂಡಕೋರ, ಜಗತ್ತಿಗೆ ದೊಡ್ಡೋನು, ಜಗಳ ಇಲ್ಲದಲ್ಲಿ ಜಗಳ ಮಾಡೋನು, ಕದನ ಇಲ್ಲದಾಗ ಕದನ ಕಟ್ಟೋನು, ಕಾಡುಗೊಲ್ಲರ ಜುಂಜಪ್ಪ: ಗೋಪಾಲಕೃಷ್ಣಮೂರ್ತಿ”. ಅವನು ಸಾಹಸ ಮಾಡಲು ತೊಡಗಿದಾಗ ಅವನ ಉಡುಪು, ಬಿರುದುಗಳು ಇದ್ದನ್ನು ಈ ರೀತಿ: “ಕಂಚಿನ ದಟ್ಟಿಯನ್ನು ಸೊಂಟಕ್ಕೆ ಸುತ್ತಿದ, ಇಪ್ಪತ್ತು ಮಾರಿನ ಪಾಗನ್ದು ತಲೆಗೆ ಸುತ್ತಿದ, ಕರಿಯ ಕಂಬಳಿಯನ್ನು ಹೆಗಲಿಗೆ ಹಾಕಿಕೊಂಡ, ರನ್ನದ ಗಣೆ ಹಿಡಿದ, ಚಿನ್ನದ ಪಿಳ್ಳಂಗೋವಿ ಹಿಡಿದ, ಗುಲಗಂಜಿ ದುಪ್ಪಟಿಯನ್ನು ಹೆಗಲಿಗೆ ಹಾಕಿಕೊಂಡು, ಅದರ ಮೇಲೆ ಹೆಗಲಿನಲ್ಲಿ ಕರಿಕಂಬಳಿ ಏರಿಸಿದ; ಚಿತ್ತಯ್ಯ ಕೊಟ್ಟ ಚಪ್ಪಕೊಡಲಿಯನ್ನು ಹೆಗಲಿಗೆ ಹಾಕಿಕೊಂಡ; ನಾರಾಯಣ ಕೊಟ್ಟ ನಾರಗಲ್ಲಿಯನ್ನು ಹೆಗಲಿಗೆ ಹಾಕಿಕೊಂಡ, ಚಿನ್ನದ ಬೆತ್ತವನ್ನು ಕೈಯಲ್ಲಿ ಹಿಡಿದ, ಕವೆಗೋಲನ್ನು ಹೆಗಲ ಮೇಲೆ ಹಾಕಿಕೊಂಡ. ಈ ರೂಪಿನಲ್ಲಿ ಅವನು ಸಾಕ್ಷಾತ್ ವೀರಭದ್ರನೇ ಆಗಿದ್ದ. ಅವನು ಹೋಗುತ್ತಿದ್ದ ರಭಸಕ್ಕೆ ಹಕ್ಕಿಪಕ್ಷಿಗಳು ಉರಿದು ಬೀಳುವುದು ತಪ್ಪಿತು. ಅವನ ಕಾಲಿಗೆ ಕಲ್ಲುತಾಗಿದರೆ ಕಲ್ಲೆಲ್ಲಾ ಕಿಡಿಕಿಡಿಯಾಗುತ್ತಿತ್ತು; ದಾರಿಯಲ್ಲಿ ಸಿಕ್ಕಿದ ಗಿಡಗಳೆಲ್ಲಾ ಎರದಡು ತುಂಡಾಗುತ್ತಿದ್ದವು. ವೀರಾಧಿವೀರ ಜುಂಜಪ್ಪನನ್ನು ಕಂಡು ಹರಿಯುವ ಹಾವು ನಿಲ್ಲುತ್ತಿತ್ತು; ಕಡಿಯುವ ಚೇಳು ನಿಲ್ಲುತ್ತಿತ್ತು. ಅವನು ಹುಲ್ಲಿನೊಳಗಣ ಹಾವಿನಂತಿದ್ದ. ಮೋಡದೊಳಗಣ ಗುಡುಗಿನಂತಿದ್ದ ಮಾಯಾಕಾರ ಜುಂಜಪ್ಪ ಕರಕರನೆ ಹಲ್ಲು ಕಡಿದು, ಬಿರಬಿರನೆ ಕಣ್ಣುಬಿಟ್ಟರೆ, ತಲೆ ಕೆದರಿಕೊಂಡರೆ ಭಯಂಕರವಾಗಿ ಕಾಣುತ್ತಿದ್ದ; ಕೆಂಡ ಕಣ್ಣೋನು, ಕೆದರಿದ ಮಂಡ್ಯೋನು ಅವನು. ಮುಂದಕ್ಕೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡೋನಲ್ಲ ಅವನು! ಕಾಡು ಗೊಲ್ಲರ ಸಾಹಿತ್ಯಕ ಪ್ರತಿಭೆ ಜುಂಜಪ್ಪನನ್ನು ವೀರಭದ್ರನ ಅವತಾರವಾಗಿ ಕಲ್ಪಿಸಿ ಕೊಂಡ ಈ ರೀತಿ ಭವ್ಯವಾದುದು. ಜುಂಜಪ್ಪ ಇಂದಿಗೂ ಕಾಡುಗೊಲ್ಲರ ಆರಾಧ್ಯ ದೈವವಾಗಿಯೇ ಉಳಿದಿದ್ದಾನೆ.

* * *


[1]     ಡಾ|| ತೀ.ನಂ. ಶಂಕರನಾರಾಯಣ, ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ, ೧೯೮೨, ಪು. ೫೪-೯೩.

[2]     ಡಾ|| ಜೀ. ಶಂ. ಪರಮಶಿವಯ್ಯ, ದಕ್ಷಿಣ ಕರ್ನಾಟಕದ ಜನಪದ ಕಾವ್ಯಸಂಪ್ರದಾಯಗಳು, ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ, ೧೯೭೯, ಪು. ೨೦೧-೨೪೪.

[3]     ವಿವರಗಳಿಗೆ ನೋಡಿ : ಅದೇ, ಪು. ೨೦೧-೨೪೪.

[4]     ವಿವರಗಳಿಗೆ ನೋಡಿ : ತೀ.ನಂ.ಶಂಕರನಾರಾಯಣ, ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಪು. ೫೪-೯೩.

[5]     ವಿವರಗಳಿಗೆ ನೋಡಿ : ಅದೇ, ಪು. ೪೪-೪೫.

[6]     ಗಣಿ ಎಂದರೆ ಮೂರು ಅಡಿ ಉದ್ದವಾದ ಬಿದಿರು ಕೋಲಿನಲ್ಲಿ ಅಲ್ಲಲ್ಲಿ ತೂತು ಕೊರೆದು ಮಾಡಿದಾಗ ಉದ್ದವಾದ ಕೊಳಲು, ಕಾಡುಗೊಲ್ಲರು ದನ, ಕುರಿಗಳನ್ನು ಕಾಯುವಾಗ ಇದನ್ನು ಇಂಪಾಗಿ ಕೇಳುವಂತೆ ಊದುತ್ತಾರೆ; ಇದನ್ನು ಶ್ರುತಿಯಾಗಿ ಇಟ್ಟುಕೊಂಡು ಜುಂಜಪ್ಪ ಮೊದಲಾದ ದೇವತೆಗಳ ಪುರಾಣಗಳನ್ನು ಹಾಡುತ್ತಾರೆ; ಹಾಗೆಯೇ ಇದನ್ನು ಊದಿ ಕಣಿ ಹೇಳುತ್ತಾರೆ.