ಮನುಷ್ಯನು ಪ್ರಾಣಿ ವರ್ಗದಲ್ಲಿ ಶ್ರೇಷ್ಠನೆನಿಸಿಕೊಂಡದ್ದು ಅವನ ಬುದ್ಧಿ ಬಲದಿಂದ. ಅವನ ಭಾವನೆಗಳು ಬುದ್ದಿಬಲದಿಂದ ಆಚರಣೆಗಳಾದವು. ಧಾರ್ಮಿಕ ಆಚರಣೆಗಳೂ ಮಾನಸಿಕ ಕಲ್ಪನೆಯಿಂದಲೇ ಜನ್ಮತಾಳಿವೆ. ಅವನ ಇತರ ಆಚರಣೆಗಳ ಕುರುಹುಗಳಂತೆ ಆದಿಮಾನವನ ಧಾರ್ಮಿಕ ಆಚರಣೆಯ ಕುರುಹುಗಳು ಭೌತಿಕ ರೂಪದಲ್ಲಿಯೂ ಕಂಡುಬರುತ್ತವೆ.

ಸಂಕೇತಗಳನ್ನು ಕಂಡುಕೊಳ್ಳುವ, ಅವುಗಳನ್ನು ನಂಬುವ, ಸಿದ್ಧಪಡಿಸುವ ಹಾಗೂ ಅವುಗಳನ್ನು ನೆನಪಿನಲ್ಲಿಡುವ ಮಾನವಶಕ್ತಿ ಸಂಸ್ಕೃತಿ ನಿರ‍್ಮಾಣಕ್ಕೆ ಕಾರಣವಾಗಿದೆ. ಅವನ ಬುದ್ಧಿಭಾವನೆಗಳ ಸಂಗಮದಿಂದ ಮಾರ್ಪಟ್ಟ ಪ್ರಕೃತಿಯೇ ಸಂಸ್ಕೃತಿ, ವೃಕ್ಷಾರಾಧನೆ ಇದಕ್ಕೊಂದು ಉದಾಹರಣೆ.

ಆದಿಮಾನವನು ವನ್ಯಮೃಗದೋಪಾದಿಯಲ್ಲಿ ಕಾಡಿನ ನಡುವೆ ಜೀವಿಸುತ್ತಿದ್ದಾಗ ಬಿತ್ತದೆ ಬೆಳೆಯದೆಯಿದ್ದರೂ ತಿನ್ನಲು ಹಣ್ಣುಹಂಪಲು ಉಡಲು ತೊಗಟೆಯನ್ನಿತ್ತು ಕಾಪಾಡಿದ ಮೊದಲ ದೇವಮಾತೆಯೇ ವೃಕ್ಷ-ಮರದಮ್ಮ. ಟೊಂಗೆ ಪೊದರುಗಳಲ್ಲಿ ಆಶ್ರಯ ನೀಡಿ, ಕ್ರೂರಪ್ರಾಣಿಗಳ ಭಯದಿಂದ. ಮಳೆ ಚಳಿ ಬಿಸಿಲುಗಳ ಕಾಟದಿಂದ ರಕ್ಷಿಸಿ, ಜಟೆ ಬಿಟ್ಟು, ಬಳ್ಳಿಗಳ ಬಲೆ ಸುತ್ತಿಕೊಂಡು ಆಕಾಶದೆತ್ತರಕ್ಕೆ ಬೆಳೆದು ನಿಂತು, ನಾಲ್ಕು ನಿಟ್ಟಿಗೂ ಕೈಚಾಚಿ, ಆಶ್ರಯದಾತರಿಗೆ ನಂಬಿದವರಿಗೆ ಅಭಯವಿತ್ತ ಮೊದಲ ದೇವಪಿತನೇ ಜಡೆಗೆ-ವೃಕ್ಷ-ಮರದಪ್ಪ. ರಕ್ಷಕರಾದ ಅವರಿಲ್ಲದೆ ತಾನು ಬಾಳುವದು ಕಷ್ಟವೆನಿಸಿದಾಗ ಆದಿಮಾನವನು ಅವನ ಜಗತ್ತಿನ ದೇವ ಮಾತಾಪಿತೃರಾದ ವೃಕ್ಷದ ಮೊರೆಹೊಕ್ಕನು. ಆ ಮರದ ನೆರಳಿನಲ್ಲಿ ಹುಟ್ಟಿದ ಧರ್ಮವೇ ರಕ್ಷಣಾಮೂಲ ಧರ್ಮ. ಆದಿದೇವ ಮಾತಾಪಿತರನ್ನು ಒಂದೆಡೆ ಹೊಂದಿದ ವೃಕ್ಷವೇ ಅರ್ಧ ನಾರೀಶ್ವರ, ಆದಿಮಾನವನಿಗೆ ವೃಕ್ಷವನ್ನು ಪೂಜಿಸಬೇಕೆಂಬ ಭಾವನೆ ಬೆಳೆದದ್ದು ಆಜ್ಞಾನದಿಂದಲ್ಲ, ಕೃತಜ್ಞತಾ ಭಾವದಿಂದ, ಅದು ಅವರ ಸಂಸ್ಕೃತಿಯೇ ಪ್ರತೀಕ.

ಆದಿಮಾನವನ ಮಾನಸಿಕ ಸ್ತರ ವಿಸ್ತಾರಗೊಂಡಾಗ ಕಲ್ಪನಾಶಕ್ತಿ ಕುದುರಿದಾಗ, ಧಾರ್ಮಿಕ ಆಚರಣೆಗಳ ಕ್ಷಿತಿಜವೂ ವಿಸ್ತಾರವಾಯಿತು. ಅವನ ರಕ್ಷಣೆಗೆ, ಪ್ರಗತಿಗೆ, ಸಂತೋಷಕ್ಕೆ ಕಾರಣವಾದ ಸ್ಥಾನ, ಉತ್ಕಟಭಾವನೆಗಳಿಗೆ ಇಂಬುಕೊಟ್ಟಿತು ಆಗ ಆತನು ಹಾಡಿಕುಣಿದನು. ಆ ಸ್ಥಾನಮಹಿಮೆಯನ್ನು ಸ್ತುತಿಸಿದನು. ತಾನೇ ಆ ಮಹಿಮಾಶಕ್ತಿಯೆಂಬಂತೆ ಮಾತಾಡಿದನು, ತನಗೆ ದೊರೆತಂತಹ ರಕ್ಷಣೆಯ ಹಾಗೂ ಬದುಕಿನ ಪ್ರಗತಿಯ ಆಶ್ವಾಸನೆಯನ್ನು ತನ್ನವರಿಗೂ ಇತ್ತನು. ಆ ಹಂತದಲ್ಲಿ ಆತನು ನಂಬಿದ ಶಕ್ತಿಯ ಕಾಲ್ಪನಿಕ ಪ್ರತಿಮೆಯೊಂದು ಅವನಿಗೆ ಗೋಚರಿಸಿತು. ಮನದಾಳದಲ್ಲಡಗಿದ ಆ ಪ್ರತಿಮೆಯ ಶಕ್ತಿಸಾಮರ್ಥ್ಯವನ್ನು ಅವನು ಘೋಷಿಸಿದನು. ಕಲ್ಲು, ಮರದತುಂಡು, ಅಥವಾ ಅವನು ನಂಬಿದ ಸ್ಥಳದಲ್ಲಿ ತಂತಾನೆ ಮೂಡಿದ ಹುತ್ತ ಮುಂತಾದ ಪ್ರಕೃತಿ ಸಿದ್ಧವಾದ ವಸ್ತುವೇ ಪ್ರತಿಮೆಯಾಯಿತು. ಪ್ರತಿಮೆಯ ಸ್ಥಳ ಹೆಚ್ಚಾಗಿ ಮರದ ಬುಡವಾಗಿದೆ; ಅದು ಅವನು ನಂಬಿದ ವಾಸಿಸಿದ ಪ್ರತಿಮೆಯ ನೆಲೆ. ಅದೇ ದೇವಸ್ಥಾನ. ಕಾರ‍್ಯಕ್ಕೆ ಕಾರಣವನ್ನು ಹುಡುಕಿದ ಅವನ ಮನಸ್ಸಿಗೆ ಹೊಳೆದ ಹಿರಿದಾದ ಒಂದು ಶಕ್ತಿಯ ಕುರುಹು ಆ ಪ್ರತಿಮೆ. ಅದು ಭೌತಿಕ ರೂಪದಲ್ಲಿ ಸಮಾನ್ಯವಾದುದೊಂದು ವಸ್ತು. ಆದರೆ ಅದು ಬರಿಯ ವಸ್ತುವೊಂದೇ ಅಲ್ಲ. ಕಣ್ಣಿಗೆ ದಿಟವಾಗಿ ಎಲ್ಲಿಯೂ ಕಾಣದ್ದರ, ಆದರೆ ಮನಸ್ಸು ಪೂರ್ಣವಾಗಿ ನಂಬಿದ ಒಂದು ಅದ್ಭುತ ಶಕ್ತಿಯ ಕುರುಹು ಅದು. ಅದರಲ್ಲಿ ತನ್ನಲ್ಲಿಲ್ಲದ ಅದ್ಭುತವೂ ಅಪಾರವೂ ಆದ ಶಕ್ತಿಯಿದ್ದು ಅದು ತನ್ನನ್ನೂ ತನ್ನವರನ್ನೂ ಕಾಪಾಡಬಲ್ಲದು ಎಂದು ಆತನು ನಂಬಿದನು. ಆ ಕಾಲ್ಪನಿಕ ಶಕ್ತಿ ನೀಡಿದ ಕಾಲ್ಪನಿಕ ಆಶ್ವಾಸನೆಯೇ ಅವನಿಗೆ ರಕ್ಷೆಯಾಯಿತು. ಅದಕ್ಕಗಿ ಅವನು ತೋರಿದ ಕೃತಜ್ಞತಾಭಾವದ ವ್ಯಕ್ತರೂಪವೇ ಧಾರ್ಮಿಕ ಆಚರಣೆ. ಇದೇ ವೃಕ್ಷಧರ್ಮ, ಗೋಳಿ, ಆಲ, ನೆನೆಂಟೆ, ಹೊನ್ನೆ, ಎರಜಲು ಮುಂತಾದ ಹಾಲು ಮರಗಳೇ ವೃಕ್ಷ ದೇವರ ಪ್ರತಿನಿಧಿಗಳು. ಆ ಮರಗಳನ್ನು ತಬ್ಬಿ ಸುತ್ತಿದ ಬಳ್ಳಿಯ ಬಲೆಯೇ ಮೊದಲ ದೇವಾಲಯ. ಹೊಳೆ, ನದಿ, ಸಮುದ್ರ ತೀರಗಳು, ಕಣಿವೆ, ಬೆಟ್ಟ, ಗಿರಿ ಪರ‍್ವತ, ಕಾನು ಮುಂತಾದ ಸ್ಥಳಗಳಲ್ಲಿ ಪ್ರಕೃತಿ ಸಿದ್ಧ ಬಲೆ ಇರುತ್ತದೆ. ಮರಕ್ಕೆ ಆಲಯವಾದ ಈ ಬಲೆಯೇ ಮರದ ಪ್ರತಿಮೆಗೂ ಆಲಯವಾಯಿತು.

ಜಟಿಗೆಮರವಕೂದಲಿನವ:

ಕನ್ನಡ ಸಾಹಿತ್ಯ ಪರಿಷತ್ತಿನವರು ಪ್ರಕಟಿಸಿರುವ ಕನ್ನಡ-ಕನ್ನಡ ನಿಘಂಟಿನಲ್ಲಿ ಅನೇಕ ಮೂಲಗಳಿಂದ ಕಲೆಹಾಕಿದ ಜಟಿಗ ಮನೆ, ಜಟ್ಟಿಂಗ, ಜಟ್ಟಿಗ, ಜಟಗ, ಜಟುಗ, ಚೆಟಿಗ, ಜೆಟ್ಟಿಂಗ, ಜೋಂಟಿಗ, ಝಟ್ಟಿಂಗ, ಝೊಟ್ಟಿಂಗ, ಝೋಂಟಿಗ ಎಂಬ ಹೆಸರುಗಳು ದೊರೆಯುತ್ತವೆ. ಇದು ಊರಿನ ರಕ್ಷಣಾಧಿ ದೇವತೆ, ಒಂದು ಕ್ಷುದ್ರ ದೇವತೆಯ ಹೆಸರು, ಕುಂಬಾರರು ಪೂಜಿಸುವ ಒಂದು ದೇವತೆ, ಇತ್ಯಾದಿ ಸಂಗತಿಗಳು ತಿಳಿದು ಬರುತ್ತವೆ. ಕೇಶಿರಾಜನು ಶಬ್ದಮಣಿದಪರ್ಣದ ಅಪಭೃಂಶ ಪ್ರಕರಣದಲ್ಲಿ ಝೋಂಟಿಗಂ ಜೋಂಟಿಗ ಎಂಬ ಶಬ್ದಗಳನ್ನು ಹೆಸರಿಸುತ್ತಾನೆ.

ಝೋಂಟಿಗಂ ಶಬ್ದ ಸಂಸ್ಕೃತಿ ಕೋಶಗಳಲ್ಲಿ ದೊರೆತಿಲ್ಲ. ಆದರೆ ಅಲ್ಲಿ झुंट ಎಂಬ ಶಬ್ದ ನಿಕುಂಜ. ಪೊದರು ಎಂಬ ಅರ್ಥಗಳೊಂದಿಗೆ ದೊರೆಯುತ್ತದೆ. ಝಟೀ ಇದಕ್ಕೆ ಗಿಡ ಎಂಬ ಅರ್ಥವಿರುವುದಾಗಿ ಶಂಬಾ ಹೇಳುತ್ತಾರೆ.

ಹಿಂದಿ ಕೋಶವೊಂದರಲ್ಲಿ जुंटुग ಶಬ್ದವಿದ್ದು ಅದರ ಸಂಸ್ಕೃತ ಮೂಲವು झुंट ವೆಂಬ ಬಗ್ಗೆ ಅಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ. ಅಲ್ಲಿ ಝುಂಟುಗದ ವಿವರಣೆಯನ್ನು जिसके खडे खडे और बिखरे हुये वाल  हो-झोंटेवाले, ಎಂದು ಮಾಡಲಾಗಿದೆ. ಅದು

[1] ಹಾಗೂ ಇನ್ನೊಂದು[2] ಹಿಂದಿ ಕೋಶದಲ್ಲಿ ಝೋಟಿಂಗ ಶಬ್ದವಿದ್ದು जिसके सिरपर बडे बडे और खडे बाल हो भूत प्रेत पिशाच आदि ಎಂದು ವಿವರಣೆಯಿದೆ. ಈ ಉದಾಹರಣೆಗಳಿಂದ ಝೋಂಟಿಗ, ಝೋಟಿಂಗ ಹಾಗೂ ಝುಂಟುಗವೆಂಬುದು ಪಿಶಾಚವೆಂಬ ಭಾವನೆಯೊಂದಿಗೆ ಕರ್ನಾಟಕದ ಹೊರಗೂ ಪ್ರಚಾರದಲ್ಲಿದೆಯೆಂದು ತಿಳಿಯಬಹುದಾಗಿದೆ. ಆದರೆ ’ಜಟಿಗ’ಕ್ಕೆ ಹೆಚ್ಚು ಸಮೀಪದ ಶಬ್ದಗಳನ್ನು ಸಂಸ್ಕೃತ ಹಾಗೂ ಕನ್ನಡದಲ್ಲಿ ಕಾಣಬಹುದು. ಜಟಾಧರ, ಜಟಾಟಂಕ, ಧೂರ್ಜಟಿ, ಜಟಾಜೂಟಧರ ಇವು ಶಿವನ ಹೆಸರುಗಳು, ಜಟೀ, ಇದು ಬಿಳಲುಗಳುಳ್ಳ, ಮರ, ಆಲದಮರ, ಜಡೆಯುಳ್ಳವ ಹಾಗೂ ಶಿವ ಎಂಬ ಅರ್ಥವನ್ನು ಹೊಂದಿದೆ. जोटिगस्तु महव्रत्ती-शिव ಎಂದು ಸಂಸ್ಕೃತ ಕೋಶದಲ್ಲಿ[3] ದೊರೆಯುತ್ತದೆ. ಆದ್ದರಿಂದ ಕೇಶಿರಾಜ ಹೇಳುವಂತೆ ಜೋಟಿಂಗ ಅಪಭೃಂಸವಾಗಿರಲಾರದು.

‘ಜಟಾ’ ವೇದಕಾಲದಲ್ಲಿಲ್ಲವೆಂದು ಶಂಬಾ ಹೇಳುತ್ತಾರೆ.[4] ಈ ಮಾತಿಗೆ ಪೂರಕವಾಗಿ ’ಜಟಾ’ಕ್ಕೆ ಸಂವಾದಿಯಾದ ಶಬ್ದಗಳು ದ್ರಾವಿಡ ಭಾಷೆಗಳಲ್ಲಿ ದೊರೆಯುತ್ತವೆ. ತಮಿಳು ಚಟ್ಟೆ, ಮಲೆಯಾಳಂ ಚಟ-ಚಟ, ತುಳು ಜೆಡೆ, ಜಡೆ. ತೆಲುಗು ಜಡ. ಕನ್ನಡದ ಜಡೆ, ಜುಟ್ಟ, ಇವಲ್ಲದೆ ಸಿಕ್ಕು ಸಿಕ್ಕಾದ ಕೂದಲು ಎಂಬುದಕ್ಕೆ ಜಿಡಕ, ಕೋಳಿಯ ಜುಟ್ಟಕ್ಕೆ ’ಕುಟ್ಟ’ ಎಂಬ ಹೆಸರುಗಳಿವೆ. ಜಟಿಗನ ಪರಿವಾರದವಳಾದ ಗಿಡಬಳ್ಳಿಯ ಸಿವುಡಿಯಲ್ಲಿರುವ ಚಿವುಡಿ ಕೂದಲಿನ ದೇವತೆ, ಹಬಸಿಯ ಹಬರಿದ ಕೂದಲಿನವಳು. ಚಂಡಿಕೆ ಎಂದರೆ ಜುಟ್ಟವೆಂಬ ಅರ್ಥವಿದೆ. (ಅಮರಕೋಶದಲ್ಲಿ ಚಂಡಿಕಾ-ದೇವಿಯ ಹೆಸರು, ಇವಳೂ ಕೂದಲು ಸಂಪ್ರದಾಯದವರ ದೇವತೆಯಾಗಿರಬಹುದು). ಕೂದಲು ಬೋಳಿಸಿಕೊಂಡರೂ ಚಂಡಿಕೆ ಬೋಳಿಸುವುದು ರೂಢಿಯಲ್ಲಿ ನಿಷಿದ್ಧ. ಚಂಡಿಕೆಯಲ್ಲದವರು ಪೂಜೆ ಮಾಡಲು ಯೋಗ್ಯರಲ್ಲ. ದೇವರಿಗೆ ಕೂದಲು ಕೊಡುವುದು ರೂಢಿಯಲ್ಲಿದೆ, ಕೂದಲೇ ಪ್ರಮುಖವಾಗಿರುವ ಹೆಸರುಳ್ಳ ಜಟಾಧರನು ಆರ್ಯೇತರರ ದೇವತೆಯೆಂಬುದಕ್ಕೆ ಮೇಲಿನ ಸಂಗತಿಗಳು ಪುಷ್ಟಿ ನೀಡುತ್ತವೆ. ರುದ್ರನು ಮರದ ದೇವತೆಯೆಂದೂ ತಿಳಿಯಲಾಗಿದೆ. ಆದ್ದರಿಂದ ಜಡೆ-ಜಟೆಯುಳ್ಳದ್ದು ಜಟಿಗ-ಮರ, ಜಟೆಯುಳ್ಳವ-ಜಟಿಗೆ-ಶಿವ-ರುದ್ರ, ಜಟಿ (ಮರ) ಯಲ್ಲಿರುವವ ಮರದವ-ಜಟಿಗೆ ಎಂದು ವಿವರಿಸಬಹುದಾಗಿದೆ. ಜಟಿಗನು ಕೂದಲನ್ನು ಮರವನ್ನು ಗೌರವದಿಂದ ಕಾಣುವ ಆರ್ಯೇತರರಿಗೆ ಸಂಬಂಧಿಸಿದವನಿರಬೇಕು. ಅವನು ದೇವರೂ ಆಗಿರಬೇಕು. ಏಕೆಂದರೆ ಅವನ ಹೆಸರುಗಳಾಗಿರಬಹುದಾದ ಜಿಟ್ಟು, ಜಿಟ್ಟಿ ಜಟ್ಟು, ಜಟ್ಟಪ್ಪ ಎಂಬ ಹೆಸರುಗಳನ್ನು ಜನಪದರು ತಮ್ಮ ಮಕ್ಕಳಿಗಿಡುತ್ತಾರೆ. ಭೂತ ಪಿಶಾಚಿಗಳ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟಿರಲಾರರು. ಜಟಿಗನನ್ನು ಜಟಿಗರಾಯ, ಜಟಿಗೇಶ್ವರ ಗೌರವದಿಂದ ಕರೆಯುವುದನ್ನು ಇಲ್ಲಿ ಗಮನಿಸಬಹುದು. ಆದ್ದರಿಂದ ಜಟಿಗನನ್ನು ಪಿಶಾಚವೆನ್ನವುದಕ್ಕಿಂತ ಬಹುಶಃ ರುದ್ರನ ಮೂಲ ಅವಸ್ಥೆಯಲ್ಲಿರುವ ದೇವರೆಂದು ತಿಳಿಯುವದು ಯೋಗ್ಯವಾಗಿದೆ.

ಜಟಿಗಅರ್ಧನಾರೀಶ್ವರ:

ಶೈವಧರ್ಮದ ಅರ್ಧನಾರೀಶ್ವರ ಕಲ್ಪನೆಯ ಬೀಜ ಜಟಿಗನ ಎಲ್ಲ ಅವಸ್ಥಾಂತರಗಳಲ್ಲಿಯೂ ಕಂಡುಬರುತ್ತದೆ. ವೇದಕಾಲಕ್ಕೂ ಹಿಂದೆ ಹುಟ್ಟಿಕೊಂಡ ಮಾತೃ ದೇವತೆಯ ಕಲ್ಪನೆಗೆ ಮರವೇ ಮೂಲವೆಂದು ವಿದ್ವಾಂಸರ ಮತ[5]. ಆದಿಮಾನವ ನಂಬಿದ ಈ ಮರವೇ ಪುರುಷದೇವತೆಯ ಕಲ್ಪನೆಗೂ ದಾರಿಮಾಡಿಕೊಟ್ಟಿದೆಯೆಂಬುದು ಜಟಿಗನ ಮೂಲವನ್ನು ಹುಡುಕಿದಾಗ ತಿಳಿದುಬರುತ್ತದೆ.

ಆದಿಯಲ್ಲಿ ಜಡೆಗ-ವೃಕ್ಷವೇ ಜಟಿಗ, ವೃಕ್ಷದ ಬುಡದ ಒಂದು ನೆಲೆ ಮುಂದೆ ಜಟಿಗನ ಪ್ರತಿಮೆಯಾಯಿತು. ಆ ನೆಲೆಗೆ ಸುಮಾರು ಒಂದು ಗೇಣೆತ್ತರದ ’ಸೆಮಿ’ಯ ಚಪ್ಪರ ನಿರ್ಮಿಸಿ ಆಸ್ಥಾನಕ್ಕೆ ಬಲಿನೀಡಿ ಪೂಜಿಸಿದರು. ಈ ಪದ್ಧತಿ ಇಂದಿಗೂ ಅಂಕೋಲೆಯ ಹಳ್ಳಿಗಳಲ್ಲಿ ರೂಢಿಯಲ್ಲಿದೆ. ಮುಂದೆ ಪ್ರಕೃತಿಸಿದ್ಧ ಇತರ ಕೆಲವು ಕೆಲವು ವಸ್ತುಗಳು ವೃಕ್ಷಪ್ರತಿಮೆಗಳಾದವೆನ್ನಬಹುದು; ಅವೇ ಕಲ್ಲು, ಗುಂಡು, ಹುತ್ತ. ಜಟಿಗನ ಈ ಅವಸ್ಥೆಯಲ್ಲಿ ಸ್ತ್ರೀ ಪುರುಷ ಭೇದ ಕಾಣುತ್ತಿದೆಯಾದರೂ ರೂಪಭೇದ ಕಾಣಿಸುವದಿಲ್ಲ. ಕಲ್ಲು, ಗುಂಡು, ಹುತ್ತ ಇವುಗಳನ್ನು ಜಟಿಗನೆಂದು ಆರಾಧಿಸುವ  ಸ್ಥಳದಲ್ಲಿಯ ಆಚರಣೆ ಪ್ರಾಚೀನತಮವೆನಿಸುತ್ತದೆ. ಕೆಲವೆಡೆ ವೃಕ್ಷ ಪ್ರತಿಮೆಗಳಾದ ಕಲ್ಲು, ಗುಂಡು, ಹುತ್ತ ಇವು ಅಮ್ಮನೂ ಜಟಿಗನೂ ಆಗಿವೆ. ಅಮ್ಮನನ್ನು ಮಾಸ್ತಿಯೆಂದೂ ಮಾಸ್ತಿಯಮ್ಮನೆಂದೂ ಕರೆಯುವುದುಂಟು. ಹಾಲಕ್ಕಿ ಗೌಡರು ಮುಕ್ರಿಗಳು ಗಂಡಸರಿಗೂ ಹೆಂಗಸರಿಗೂ ’ಮಾಸ್ತಿ’ಯೆಂದು ಹೆಸರಿಡುತ್ತಾರೆ. ಹುತ್ತ ಕೆಲವರ ಭಾವನೆಯಂತೆ ಜಟಿಗನಾದರೆ ಕೆಲವರು ಅದನ್ನು ನಾಗಸ್ಥಾನವೆನ್ನುತ್ತಾರೆ. ಮತ್ತೆ ಕೆಲವರು ಅದನ್ನು ಮಾಸ್ತಿಯೆನ್ನುತ್ತಾರೆ. ಹುತ್ತವೇ ಗೊಂಬೆಯಾಕಾರ ತಳೆದಿದೆಯೆಂಬಂತೆ ಸ್ತ್ರೀ ಗೊಂಬೆಗಳನ್ನು ಹುತ್ತಕ್ಕೆ ಸೇರಿಸಿ ಮಾಸ್ತಿಯನ್ನಾಗಿ ಮಾಡಿದ್ದಾರೆ. ಮಣ್ಣಿನ ಬೃಹತ್ ಹುತ್ತಗಳು ಕರ್ಕಿಯಲ್ಲಿ ಮುಗ್ವೆಯಲ್ಲಿ ದೇವಿಯರು, ಜಟಿಗನ ಗೌರವಾರ್ಥ ಇಟ್ಟಿರಬಹುದಾದ ಜಿಟ್ಟಿ, ಜಿಟ್ಟು, ಜಟ್ಟು ಎಂಬ ಹೆಸರುಗಳು ಸ್ತ್ರೀ ಪುರುಷರಿಬ್ಬರಿಗೂ ಅನ್ವಯಿಸುತ್ತವೆ. ಜಟಿಗನ ಬಲೆಯಲ್ಲಿ ಅಮ್ಮನಿಲ್ಲದಾಗ ಜಟಿಗನಿಗೇ ಅಮ್ಮನ ಬಲವಿದೆಯೆನ್ನುತ್ತಾರೆ. ಕರ್ಕಿಯ ಕೊರ್ಲಕಾನ ಜಟಿಗನ ಬಗ್ಗೆ ಇಂತಹ ನಂಬಿಕೆಯಿದೆ. ದೇವಿಯರು ಲಿಂಗರೂಪದಲ್ಲಿಯೂ ಪೂಜೆಗೊಳ್ಳುವುದಿದೆಯ್ಟೆ, ಕೊಲ್ಲೂರಿನ ಮೂಕಾಂಬಿಕೆಯು ಮೂಲತಃ ಅರ್ಧನಾರೀಶ್ವರ ಲಿಂಗವೆಂಬ ನಂಬಿಕೆಯನ್ನು ಇಲ್ಲಿ ಗಮನಿಸಬಹುದು.[6]

ತಾವು ಈಗಾಗಲೇ ಪೂಜಿಸುತ್ತಿದ್ದ ಕಲ್ಲುಗುಂಡು ಹುತ್ತಗಳು ಬೃಹದಾಕಾರದಲ್ಲಿ ಕಂಡುಬಂದಾಗ ಅವುಗಳನ್ನು ಪೂಜಿಸಬೇಕೆಂಬ ಭಾವನೆ ಬೆಳೆದದ್ದು ಭಯಭಕ್ತಿಯಿಂದ, ಇಲ್ಲಿಯೂ ಸ್ತ್ರೀ ಪುರುಷರು ಗೋಚರಿಸಿದರು. ಯಾಣದಲ್ಲಿ ಬೃಹತ್ ಹುತ್ತದಾಕಾರದಲ್ಲಿ ನಿಂತಿರುವ ಪ್ರಕೃತಿಸಿದ್ಧವಾದ ಕಲ್ಲಿನ ಶಿಖರಗಳಲ್ಲೊಂದು, ಭೈರವೇಶ್ವರ; ಇನ್ನೊಂದು ಚಂಡಿ ಅಮ್ಮ, ಬೃಹತ್‌ಬಂಡೆ ಕರಿಕಾನಮ್ಮ ಸ್ತ್ರೀ ದೇವತೆ. ಬಂಡೆಯ ಕೋಡುಗಳಿಗೆ ಕಂಕಣತೊಡಿಸಿ ಉಳಿತಾಗಿಸಿದರೆ ರಕ್ತ ಬರುತ್ತದೆ ಎಂಬ ನಂಬಿಕೆಯಿಂದ ಬಂಡೆಯ ಒಂದು ಭಾಗಕ್ಕೆ ಅರಿಶಿನ ಮುದ್ದೆಯನ್ನೇ ಮೆತ್ತಿ ಮುಖ ಮಾಡಿದ್ದಾರೆ. ವೃಕ್ಷ ಹಾಗೂ ವೃಕ್ಷದ ಪ್ರತಿಮೆಗಳಿಗಿರುವ ಹೆಸರುಗಳು ಮೂಲತಃ ಪುಂಸ್ತೀಲಿಂಗವಿದ್ದು ಮುಂದೆ ಪುಲ್ಲಿಂಗ ಸ್ತ್ರೀಲಿಂಗವಾಗಿ ಒಡೆದಿರಬೇಕು. ಜಿಟ್ಟಪ್ಪ ಜಿಟ್ಟವ್ವ, ಕಲ್ಲಮ್ಮ ಕಲ್ಲಪ್ಪ ಕಲ್ಲಬ್ಬೆ ಮರದಮ್ಮ ಮರಕೆಯಮ್ಮ, ಗುಂಡಮ್ಮ ಗುಂಡಪ್ಪ ಗುಂಡೂರಾಯ, ಹುತ್ತದಮ್ಮ ಮುಂತಾದ ಹೆಸರುಗಳನ್ನು ಉದಾಹರಿಸಬಹುದಾಗಿದೆ. ಹೀಗೆ ವೃಕ್ಷ, ವೃಕ್ಷದ ಪ್ರತಿಮೆಗಳು, ಅವುಗಳ ಹೆಸರುಗಳು ಲಿಂಗ ಹಾಗೂ ಬೃಹತ್ ಕಲ್ಲುಗಳು ಮೂಲತಃ ಅರ್ಧನಾರೀಶ್ವರವಾಗಿದ್ದುದು ಕಂಡುಬರುತ್ತದೆ. ಹೀಗೆ ಕಾಲಕಾಲಕ್ಕೆ ಪ್ರಾದೇಶಿಕ ವೈಶಿಷ್ಟ್ಯವನ್ನುಳಿಸಿಕೊಂಡು ಜಟಿಗ ಹಾಗೂ ಅವನ ಪ್ರತಿಮೆಗಳ ಅಭೇದತ್ವ ತೊಲಗಿ ಒಂದು ಎರಡಾಗಿ ರೂಢಿಗೆ ಬಂದಿರಬೇಕು.

ವಿರೂಪಸುರೂಪ:

ಆದಿಸ್ಥಿತಿಯಲ್ಲಿ ಜಟಿಗ ಪ್ರತಿಮೆಗೆ ರೂಪವೇ ಇಲ್ಲ. ಮುಂದೆ ನಿರ್ದಿಷ್ಟ ರೂಪವಿಲ್ಲದ ಕಲ್ಲು ಮಣ್ಣುಗಳು ತುಂಡುಗಳು ಜಟಿಗ ಪ್ರತಿಮೆಗಳಾಗಿರಬೇಕು. ಈ ರೂಪವಿಲ್ಲದ ಪ್ರತಿಮೆಗಳು ಆರಾಧನೆಯ ಕಾಲದಿಂದ ಮುಂದೆ ಮಾನವ ಕಲಾಪ್ರವೃತ್ತಿ ಈ ವಿರೂಪ ಪ್ರತಿಮೆಗಳಿಗೆ ಕಲಾತ್ಮಕ ರೂಪು ಕೊಡುವಂತೆ ಪ್ರೇರೇಪಿಸಿರಬಹುದು. ಆಗ ವಿವಿಧ ರೂಪದ ಜಟಿಗ ಪ್ರತಿಮೆಗಳು ಕಂಡುಬಂದವು.

ವೃಕ್ಷದ ಬೊಡ್ಡೆ ಗೋಲಮೈಯುಳ್ಳ ದಂಡಾಕಾರದ ಜಟಿಗಗಳ ಕಲ್ಪನೆಗೆ ಕಾರಣವಾಗಿರಬೇಕು. ಬಾಳೆಯ ಬುಡದಲ್ಲಿ ಮೊಳಕೆಯೊಡೆಯುವಂತೆ, ವೃಕ್ಷದ ಬುಡದಲ್ಲಿ ಸಸಿಗಳು ಹುಟ್ಟುವಂತೆ ಒಂದೊಂದು ಬಲೆಯಲ್ಲಿ ಒಂದರಿಂದ ಎರಡುನೂರಕ್ಕೂ ಮಿಕ್ಕಿ ಜಟಿಗಗಳಿರುತ್ತವೆ. ಮರದ ಬುಡದ ಹುತ್ತವನ್ನು ಹೋಲುವ ಶಂಖದಾಕಾರದ ಜಟಿಗಗಳಿವೆ. ಅವು ವಿರಳ. ಕಾರವಾರ ಜಿಲ್ಲೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡಗಲ್ಲು ಬಹುಪ್ರಮಾಣದಲ್ಲಿ ಸಿಗುತ್ತದೆ. ಇದರಿಂದ ತಯಾರಿಸಿದ ಜಟಿಗಗಳೇ ಬಹಳ. ಉಳಿದವು ಕರಿಕಲ್ಲಿನವು, ತೀರ ಹಳೆಯದೆನಿಸುವ ಜಟಿಗಗಳು ಲಿಂಗದಂತೆ ಬೋಳಾಗಿರುತ್ತವೆ. ಇತರ ಜಟಿಗಗಳಿಗೆ ಅವುಗಳ ಕುತ್ತಿಯಷ್ಟು ಎತ್ತರದಲ್ಲಿ ಒಂದರಿಂದ ಮೂರು ತಗ್ಗುಪಟ್ಟಿ ಕೆತ್ತಿರುತ್ತಾರೆ. ದೇವಿಕಾನಿನಲ್ಲಿ ಚಿರಿಕಲ್ಲಿನ ಜಟಿಗಗಳಿವೆ. ಅವುಗಳಲ್ಲಿ ಒಂದು ಜಟಿಗದ ಕೊರಳಪಟ್ಟಿಯನ್ನು ಬಳಸಿಕೊಂಡು ಶಿರೋಭಾಗದಲ್ಲಿ ಕಳಸವನ್ನು ಕೆತ್ತಲಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ತಂಬಿಗೆ ತಂಬಿಗೆಯ ಮೇಲೆ ಜುಟ್ಟವುಳ್ಳ ಸುಲಿದ ತೆಂಗಿನಕಾಯಿ ಕಾಣಿಸುತ್ತದೆ. ಇವು ಇತ್ತೀಚಿನ ಕೆತ್ತನೆಗಳಿರಬೇಕು. ಇತ್ತೀಚೆಗೆ ಕೆತ್ತಿರಬಹುದಾದ ಜಟಿಗಗಳಿಗೆ ಶಿರೋಭಾಗದಲ್ಲಿ ಮುಚ್ಚಳದಂತಹ ಶಿರೋಭೂಷಣವಿದೆ. ಬಾಗಿಲು ಜಟಿಗಗಳು ಅಷ್ಟಪಟ್ಟಿ (ಎಂಟು ಮುಖ)ಯ ಕಂಬಗಳಾಗಿರುವುದೇ ಹೆಚ್ಚು.

ಜಟಿಗ ಪ್ರತಿಮೆಗಳು ಸಂಕೇತ ಮಾತ್ರವೆಂಬುದನ್ನು ಜನಪದರೂ ಬಲ್ಲರು. ಅವರ ಕನಸಿನ ಜಟಿಗನ ರೂಪವೇ ಬೇರೆ.[7] ಕನಸಿನ ರೂಪಕ್ಕೆ ಅವರ ವಿಸ್ತೃತ ಭಾವನೆಗಳ ಅನಿಸಿಕೆಗಳಿಗೆ ರೂಪಕೊಡುವ ಪ್ರಯತ್ನವೇ ಮನುಷ್ಯಾಕಾರಾದ ಜಟಿಗಗಳು. ಆದರೆ ಇಂತಹವು ವಿರಳ. ಹೊಸಾಡದ ಮಾಸ್ತಿ ಹಿತ್ತಲಲ್ಲಿ ಮಾಸ್ತಿಗಿಂತ ಜಟಿಗಗಳೇ ಹೆಚ್ಚು. ಇತ್ತೀಚಿನ ಸ್ಥಾಪನೆಯಾಗಿರಬಹುದಾದ ಮಾಸ್ತಿಯ ಚಿರಿಕಲ್ಲಿನ ಗೊಂಬೆಯೊಂದುಮುಂದಿನ ಸಾಲಿನಲ್ಲಿದೆ. ಹಳೆಯ ಮಾಸ್ತಿಕಲ್ಲು ವಿರೂಪವಾಗಿದ್ದು ಜಟಿಗಗಳ ಸಾಲಿನಲ್ಲಿದೆ. ಲಿಂಗಾಕಾರದ ಜಟಿಗಗಳೂ ಇದ್ದು ಅವು ಕಡಗಲ್ಲಿನವು. ಮರಕೆಯಮ್ಮನ ಗೊಂಬೆಗಳ ಶೈಲಿನ್ನು ಹೊಂದಿರುವ ಗೊಂಬೆಯಾಕಾರದ ಜಟಿಗಗಲು ಮರದಿಂದ ಮಾಡಲ್ಪಟ್ಟಿವೆ. ಸುಮಾರು ಅರ್ಧಗೇಣು ಎತ್ತರದ ಎರಡು ಕುದುರೆಯ ಮೂರ್ತಿಗಳು ಜಟಿಗಗಳ ಬಲಬದಿಗೆ ಇವೆ. ಕರ್ಕಿಯ ಕಿರ್ಬಲೆಯಲ್ಲಿ ಜಟಿಗಗಳ ಜೊತೆಗೆ ಕುದುರ ಏರಿದ ಜಟಿಗ ಮೂರ್ತಿಯಿದ್ದು ಅದು ಸುಮಾರು ಎರಡುವರೆ ದಶಕಗಳಷ್ಟೇ ಹಿಂದಿನದೆಂದು ತಿಳಿದು ಬಂದಿದೆ. ಕಿರ್ಬಲೆಯಲ್ಲಿ ಹೊಸ ಜಟಿಗ ಸ್ಥಾಪನೆಗೆ ಅಡ್ಡಿಯಾಗಿರುವ ಆ ಜನರ ನಂಬಿಕೆಯು ಈ ರೀತಿ ಬೇರೆ ರೂಪದ ಜಟಿಗನ ನಿರ್ಮಾಣಕ್ಕೆ ಕಾರಣವಾಗಿದ್ದು ಮೂರ್ತಿ ಶಿಲ್ಪ ಬಲ್ಲ ಬಹುಶಃ ಜೈನರ ಸಲಹೆಯಂತೆ ಈ ಮೂರ್ತಿ ಅಲ್ಲಿಗೆ ಬಂದಿದೆ. ಕುದುರೆ ಜಟಿಗನ ವಾಹನವೆಂಬುದನ್ನು ಜನಪದರು ಒಪ್ಪಿಕೊಂಡಂತೆ ಇದುವರೆಗೆ ತಿಳಿದಿಲ್ಲ, ಆದರೆ ಕುದುರೆ ಅವನ ಗುತ್ತಿನಲ್ಲಿರುವ ಇತರ ಬಂಟರ (ವೀರರ) ವಾಹನವೆಂಬುದನ್ನು ಒಪ್ಪುತ್ತಾರೆ. ಕರ್ಕಿಯ ಹಂದಿಗೋಣದಲ್ಲಿ ಒಂದು ಕಂಬದ ಮೇಲೆ ಮೂರು ಲಿಂಗಗಳು ಒಂದೇ ಪೀಠದಲ್ಲಿರುವಂತೆ ಕೆತ್ತಿದ ಜಟಗಗಳಿವೆ. ಮನುಷ್ಯ ಮುಖವಿದ್ದು ಉಳಿದ ಭಗವೆಲ್ಲ ಅಷ್ಟ ಪಟ್ಟಿಯ ಕಂಬವಾಗಿರುವ ಜಟಿಗಗಳು ಅಲ್ಲಿವೆ.

ಜಟಿಗಪರಿವಾರ:

ಜಟಿಗನ ಬಲೆಯಲ್ಲಿ ಅಮ್ಮ, ನಾಗರು, ರಾಹು ಚಿವುಡಿಗಳಲ್ಲದೆ ಸೂಲಿಬೀರ, ಬಲ್ಮಿಬೀರ, ಗೋಳಿಬೀರ ಕಾಫ್ರಿ, ಮುಂತಾದ ಬೀರರ ಗುತ್ತುಗಳಿರುತ್ತವೆ. ಅನೇಕ ಜಟಿಗಗಳ ಮುಂದೆ ಕಿಳ್ಗುತ್ತವಿರುತ್ತದೆ. ಅದು ಕಾಡುಕಲ್ಲಿನ ಸ್ಥಿತಿಯಲ್ಲಿಯೇ ಇದೆ. ಬೀರರ ಗುತ್ತಗಳೂ ನಿರ್ದಿಷ್ಟ ಆಕಾರವಿಲ್ಲದ ಕಲ್ಲಿನ ಸ್ಥಿತಿಯಲ್ಲಿಯೇ ಇರುವದುಂಟು. ಜಟಿಗನ ಹಾಗೂ ಅಮ್ಮನ ಪರಿವಾರದ ಬೀರರು, ಹಾಗೂ ಗಾಳಿಗಳಿಗೆ ಜಟಿಗನ ಹಾಗೂ ಅಮ್ಮನ ಅಂಶವಿರುತ್ತದೆ ಎಂಬ ನಂಬಿಕೆಯಿದೆ. ಜಟಿಗನ ಬಲೆಯ್ಲಿರುವ ವೀರರನ್ನು ಜಟಿಗನ ಬಂಟರೆಂದು ಕರೆಯುವುದುಂಟು. ’ಮರುತಾಃ ವೀರಾಃ’[8] ಎಂಬುದನ್ನು ಇಲ್ಲಿ ಗಮನಿಸಬಹುದು, ಪುರಾಣಗಳಲ್ಲಿ ಶಿವನ ಪರಿವಾರ ಗಣಗಳನ್ನು ಹರಪುತ್ರರು ಎಂದು ಕರೆದದ್ದು ಅರ್ಥವತ್ತಾಗಿದೆ. ಜಟಿಗನ ಪರಿವಾರದಲ್ಲಿ ಒಬ್ಬಳು ಬಳ್ಳಿಗಳ ಸಿವುಡಿಯಲ್ಲಿರುವ ಚಿವುಡಿಯು ಬಲೆಯಂತೆ ಹರಡಿಕೊಂಡಿರುವ ಕೂದಲಿನವಳು. ಮತ್ತೆ ಇಲ್ಲಿ ಸಸ್ಯಸಂಕೇತವನ್ನು ಗಮನಿಸಬಹದು. ಚಿವುಡಿ ಜಲದಲ್ಲಿಯೂ ಇರುತ್ತಾಳೆ. ನಿಂತ ನೀರಿನಲ್ಲಿ ತಲೆಬಿಚ್ಚಿ ಮೀಯುತ್ತಾಳೆ. ಮರದ ಮೇಲೆ, ಮನೆಯೊಳಗೆ ಇದ್ದು ಕೆಲವರಿಗೆ ಕುಚೇಷ್ಟೆಗಳನ್ನೆಸಗುತ್ತಾಳೆ. ಕೆಲವರಿಗೆ ಮನೆದೇವತೆಯಂತೆಯಿದ್ದು ಅವರಿಗೆ ಬೆಳಗಾಗುವುದರೊಳಗೆ ಗೊಬ್ಬರ ಹೊತ್ತಿಕ್ಕುವ, ಕುತ್ರಿಬಡಿದಿಡುವ ಉಪಕಾರಿ ಕೆಲಸಗಳನ್ನು ಮಾಡುತ್ತಾಳೆ. ಇನ್ನೂ ಅನೇಕ ಸ್ವಾರಸ್ಯಕರ ಸಂಗತಿಗಳು ಚಿವುಡಿಯ ಬಗ್ಗೆ ತಿಳಿದು ಬರುತ್ತವೆ. ಆದರೆ ಚಿವುಡಿ ಅಮ್ಮನಷ್ಟು ಮೇಲಿನ ಸ್ಥಾನದವಳಲ್ಲ. ಅಮ್ಮನು ಎಲ್ಲಮ್ಮ ದೇವಮ್ಮ ಅಂಬಾಭವಾನಿ ಅತಿದಿಯಾದಂತೆ ಚಿವುಡಿಯು ಚವುಡೇಶ್ವರಿ, ಚಾಮುಂಡಿ, ದುರ್ಗೆಯಾಗಿರಬೇಕು. ಅಂತೆಯೇ ಲಿಂಗ, ಕಲ್ಲಿಂಗ, ಲಿಂಗೇಶ್ವರ, ಕಲ್ಲೇಶ್ವರ, ಜಟಿಗೇಶ್ವರ, ಭೈರವೇಶ್ವರ, ರುದ್ರ-ಶಿವ ಇವರೆಲ್ಲ. ಒಂದೇ ಬಲೆಯಿಂದ ಹೊರಟವರಾಗಿರಬಹುದು. ಜಟಿಗ (ಹುತ್ತ)ನ ನಾಗ ಶಿವನ ಆಭರಣವಾದದ್ದು ಆಶ್ಚರ್ಯವಾಗಿರಲಾರರು.

ಜಟಿಗಲಿಂಗಶಿವ:

ಜಟಿಗನ ಒಂದು ರೂಪವು ಲಿಂಗರೂಪದಲ್ಲಿದೆ. ಈ ಲಿಂಗರೂಪಿ ಜಟಿಗಗಳು ಗೇಣೆತ್ತರದಿಂದ ಮಾರೆತ್ತರದವರೆಗೂ ಇವೆ. ಲಿಂಗಗಳು ಚಿಕ್ಕವು, ದೊಡ್ಡವು ಕಂಬದಂತೆ, ಶಂಖದಂತೆ, ಮಣ್ಣಿನವು, ಮರದವು ಕಲ್ಲಿನವು…… ಹೀಗೆ ಹಲವು ಬಗೆಯಲ್ಲಿರುತ್ತವೆಯೆಂದು ಪುರಾಣಗಳಿಂದ ತಿಳಿದು ಬರುತ್ತದೆ.[9] ಜಟಿಗಗಳು ಮೇಲೆ ಹೇಳಿದ ರೀತಿಯಲ್ಲಿಯೇ ಇದ್ದು ಅವುಗಳ ಸಂಖ್ಯೆ ಉತ್ತರ ಕನ್ನಡ, ದಕ್ಷಿಣ ಕನ್ನಡದ ಉತ್ತರ ಭಾಗ, ಶಿವಮೊಗ್ಗೆಯ ಕೆಲವು ಭಾಗಗಳಲ್ಲಿ ಕೂಡಿ ಅನೇಕ ಸಾವಿರವಾಗಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಸ್ರ ಲಿಂಗಗಳನ್ನು ಒಂದೆಡೆ ನೋಡಬಹುದಾಗಿದೆ. ಹುತ್ತದ ಮಣ್ಣಿನಿಂದ ಸಹಸ್ರಲಿಂಗ ತಯಾರಿಸಿ ಪುರಣೋಕ್ತ ರೀತಿಯಲ್ಲಿ ಪೂಜಿಸಿ ನೀರಿನಲ್ಲಿ ಬಿಡುವ ಪದ್ಧತಿ ಪ್ರಚಾರದಲ್ಲಿದೆ.

ಮೂಲ ನಿವಾಸಿಗಳಿಂದ ವಿಶೇಷವಾಗಿ ದ್ರಾವಿಡ ವರ್ಗದ ಬುಡಕಟ್ಟು ಜನ ವರ್ಗದಿಂದ ಲಿಂಗಕಲ್ಪನೆಯನ್ನು ತೆಗೆದುಕೊಳ್ಳಲಾಯಿತೆಂಬ ವಾದಕ್ಕೆ ಜಟಿಗಗಳ ರೂಪ ಪುಷ್ಟಿಯನ್ನೀಯುತ್ತದೆ. ಕಲ್ಲಿಂಗ, ಜಟಿಗೇಶ್ವರ, ಕಲ್ಲೇಶ್ವರ ಈ ಹೆಸರುಗಳು ಜಟಿಗ-ಲಿಂಗ-ಈಶ್ವರಗಳ ನಡುವಿನ ಸಂಬಂಧದ ಸುಳಿವು ಕೊಡುತ್ತವೆ.

ದಕ್ಷಿಣದಲ್ಲಿ ಲಿಂಗಪೂಜೆ ಹೆಚ್ಚು. ಒಂದು ಕಾಲಕ್ಕೆ ಇಲ್ಲಿಯ ಮೂಲನಿವಾಸಿಗಳ ಜಟಿಗ ಪೂಜೆಯನ್ನು ಸ್ವೀಕರಿಸಿ, ಲಿಂಗ ಪೂಜೆಯನ್ನಾಗಿ ಪರಿವರ್ತಿಸಿದಾಗ ಕೆಳವರ್ಗದವರೆನಿಸಿಕೊಂಡ ಮೂಲನಿವಾಸಿಗಳ ಜಟಿಗಪೂಜೆ ಅದೇ ಸ್ಥಿತಿಯಲ್ಲಿಯೇ ಉಳಿದು ಕೈಗೆ ಬಂದದ್ದು ಲಿಂಗಪೂಜೆಯೆನಿಸಿಕೊಂಡಿರಬೇಕು. ಜಟಿಗಗಳು ಲಿಂಗ ಉಳಿದು ಕೈಗೆ ಬಂದದ್ದು ಲಿಂಗಪೂಜೆಯೆನಿಸಿಕೊಂಡಿರಬೇಕು. ಜಟಿಗಗಳು ಲಿಂಗ ಕಲ್ಪನೆಗೆ ಮೂಲವಾಗಿರಬಹುದೆಂದು ಅವುಗಳ ಹೊರನೋಟವೇ ಸ್ಪಷ್ಟಪಡಿಸುತ್ತಿರುವಾಗ ಶಿವಕಲ್ಪನೆಗೆ ಮೂಲವಾದ ಸಾಂಕೇತಿಕ ಲಿಂಗಗಳಿ ಶಿಶ್ನ ಸಂಕೇತಗಳೆಂದು ಒಪ್ಪಿಕೊಳ್ಳುವುದಕ್ಕಿಂತ ಭಕ್ತನಿಗೆ ಅಭಿವೃದ್ಧಿಯನ್ನು ನೀಡಿ, ಅವನಿಗೆ ಸಂತಾನ ಭಾಗ್ಯವನ್ನು ಅನುಗ್ರಹಿಸುವ, ರೋಗ ರುಜಿನಗಳನ್ನು ದೂರ ಮಾಡುವ, ಕಳ್ಳರನ್ನೂ ಕಳೆದು ಹೋದುದನ್ನೂ ತೋರಿಸಿಕೊಡುವ, ಕ್ಷೇತ್ರ, ಬೆಳೆ ಕಾಯುವ, ಮನುಷ್ಯ ಶಕ್ತಿಗೆ ಬಗ್ಗದ ಶಕ್ತಿಗಳನ್ನು ಬಡಿದು ಓಡಿಸುವ, ವೃಕ್ಷ ಸಂಕೇತವಾದ ಜಟಿಗಲಿಂಗವೇ ಲಿಂಗಕಲ್ಪನೆಗೂ ಮೂಲವೆಂದು ಓಕೆ ಒಪ್ಪಿಕೊಳ್ಳಬಾರದು?

ಋಗ್ವೇದದ ರುದ್ರನ ಕಾರ್ಯವೂ ಜಟಿಗನ ಕಾರ್ಯವನ್ನು ಹೋಲುತ್ತದೆ. ತನ್ನ ಭಕ್ತರಿಗೆ ಅಭಿವೃದ್ಧಿಯನ್ನು ನೀಡುವುದು, ಅವರ ಕಷ್ಟಗಳನ್ನು ಪರಿಹಾರ ಮಾಡುವುದು, ಸಂಪತ್ತನ್ನೂ ಕ್ಷೇಮವನ್ನೂ ಅನುಗ್ರಹಿಸುವದು ರುದ್ರನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಅವನೊಬ್ಬ ಉಪಕಾರಿದೇವತೆ, ಅಧರ್ಮಿಗಳನ್ನು ಶಿಕ್ಷಿಸುವ ಸಂದರ್ಭದಲ್ಲಿ ಅವನು ಕೋಪಿಪಷ್ಠ ದೇವತೆಯೆಂದು ಹೇಳಲಾಗಿದೆ.

ಜಟಿಗ ಮರದ ದೇವತೆ ಕೂದಲಿನವ ಎಂಬುದನ್ನು ತಿಳಿದಿದ್ದೇವಷ್ಟೇ. ಶಿವನಿಗೂ ಜಡೆಗೆ ಸಂಬಂಧಿಸಿದ ಅನೇಕ ಹೆಸರುಗಳಿವೆ. ಈ ಅವೈದಿಕ ದೇವತೆಯಾದ ಶಿವನೇ ರುದ್ರನೆಂದು ತಿಳಿಯಲಾಗಿದೆ. ರಸೇಶ್ವರ ರುದ್ರನು ವೃಕ್ಷ ರೂಪದಲ್ಲಿ ಪೂಜೆಗೊಳ್ಳುತ್ತಿದ್ದುದೂ ಉಂಟು[10] ಎಂದು ಶಂಭಾ ಹೇಳುತ್ತಾರೆ. ’ನಮೋ ವ್ರಕ್ಷೇ ಭ್ಯೋ, ಹರಿಕೇಶೇಭ್ಯಃ ಪಶೂನಾಂ ಪತಯೇ ನಮಃ ವನಾನಾಂ ಪತಯೇ ನಮಃ ವೃಕ್ಷಾಣಾಂ ಪತಯೇ ನಮಃ’ ಎಂದು ರುದ್ರದ್ಯಾಯದಲ್ಲಿ ಮಂತ್ರವಿದೆ. ಈ ಮಂತ್ರಗಳು ಜಟಿಗ-ರುದ್ರರ ಸಂಬಂಧವನ್ನು ಬಲಪಡಿಸುತ್ತವೆ. ಜಟಿಗ-ರುದ್ರ-ಶಿವ ಇವರು ಮರದ ದೇವರಾಗಿದ್ದಾರೆಂದು ಹೇಳಬಹುದು.

ಗೃಹ್ಯ ಸೂತ್ರದಿಂದ ತಿಳಿಯುವಂತೆ, ಮನೆಯಿಂದ ಹೊರಗಿನ ಪ್ರದೇಶಗಳ ಮೇಲೆ, ಬಯಲುಗಳು, ಕಾಡುಗಳು, ಏನೂ ಬೆಳೆಯದ ಕ್ಷುದ್ರ ಸ್ಮಶಾನಗಳು, ಪರ‍್ವತಗಳು, ಹಳೆಯ ಮರಗಳು, ಹೊಳೆಗಳು, ಈ ಪ್ರದೇಶಗಳ ಮೇಲೆಲ್ಲಾ ಅಧಿಕಾರ ನಡೆಸುತ್ತಿರುವ ದೇವತೆ ರುದ್ರ. ಮಹಾ ಭಯವನ್ನುಂಟು ಮಾಡುವಂಥದ್ದು ಎದುರಾದಾಗಲೆಲ್ಲ ರಕ್ಷಣೆಗಾಗಿ ಪ್ರಾರ್ಥಿಸಬೇಕಾದದ್ದು ರುದ್ರದೇವನನ್ನೇ[11]. ಇದೇ ಮಾತು ಜಟಿಗನ ವಿಷಯಕ್ಕೂ ಸತ್ಯವಾಗಿದೆ. ಸಾಮಾನ್ಯ ಜನರ ನಂಬುಗೆಗಳನ್ನ, ಆಚರಣೆಗಳನ್ನು ನೂತನ ಸಂಸ್ಕಾರದೊಂದಿಗೆ ಒಂದು ಮಟ್ಟಕ್ಕೆ ತಂದು ಹೇಳುವದು ವೇದಗಳಲ್ಲಿ ಕಂಡು ಬರುತ್ತದೆಯೆಂದು ವಿದ್ವಾಂಸರ ಮತ.

ಆದಿಮಾನವನು ಕಲ್ಪಿಸಿ ಜಟಿಗನ ಮತ್ತು ಅಮ್ಮನ ಆಗೋಚರ ಶಕ್ತಿ; ಅವರ ಕಾರ್ಯಗಳು; ಅವರಿಬ್ಬರಿಂದಲೂ ಭಕ್ತರಿಗೆ ಸಿದ್ದಿಸುವ ಕಾಮ್ಯಗಳು ಅವರಿಗಾಗಿ ಭಕ್ತರು ಎಸಗುವ ಧಾರ್ಮಿಕ ಆಚರಣೆಗಳು, ಅವರಿರುವ ಸ್ಥಾನ, ಅವರ ರೂಪ ಅವರ ಗಣಗಳ ಸ್ವಭಾವ. ಇವನ್ನೂ ಶಿವ ಶಿವೆಯರ ಇಂತಹ ಸಂಗತಿಗಳೊಂದಿಗೆ ಹೋಲಿಸಿದಾಗ ಸಾಮ್ಯವೇ ಹಚ್ಚು ಕಂಡುಬರುತ್ತದೆ.

ಜಟಿಗರುದ್ರ ಪಶುಪರು:

ಶಿವೋಪಾಸನೆ ಆರ್ಯೇತರದ್ದೆಂದೂ ವೈದಿಕರ ಪೂರ್ವದ್ದೆಂದೂ. ಹಲವು ವಿದ್ವಾಂಸರ ಮತ. ಮೆಹೆಂಜೊದಾರೊದಲ್ಲಿಯೂ ಶೈವಧರ್ಮವಿತ್ತೆಂಬ ಊಹೆಗೆ ಆಧಾರಗಳು ದೊರೆಯುತ್ತವೆ. ಸಿಂಧೂತೀರದ ಪ್ರಾಚೀನ ಸಂಸ್ಕೃತಿಯ ಒಡೆಯರು ದನಗಾರರಾದ ಯದು-ತುರ್ವಶರೆಂಬ ಊಹೆಯಿದೆ.[12] ಅಲ್ಲಿಯ ಪ್ರಾಚಿನ ಅವಶೇಷಗಳಲ್ಲಿ ವೃಕ್ಷ ಹಾಗೂ ಲಿಂಗ ಪೂಜೆಯ ಕುರುಹುಗಳು ದೊರೆಯುತ್ತವೆ. ಲಿಂಗ ಹಾಗೂ ಪಶುಪನೆಂದು ಊಹಿಸಲಾದ ಮೂರ್ತಿ ಇವು ವೃಕ್ಷ ಪ್ರತಿಮೆಗಳಿರಬಹುದೇ ಎಂಬ ಸಂಶಯಕ್ಕೆಡೆಗೊಡುತ್ತವೆ.

ರುದ್ರನು ದ್ವಿಪಾದಿ ಚತುಷ್ಪಾದಿ ಪ್ರಾಣಿಗಳನ್ನು ಕಾಪಾಡುತ್ತಾನೆ. ಅವನು ಪಶುಪಃ ದನಕರುಗಳನ್ನು ಕಾಪಾಡುತ್ತಾನೆ; ಎಂದು ವೈದಿಕರು ಹೇಳುತ್ತಾರೆ. ಆಯಾ ವೃತ್ತಿಯ ಜನ ತಮ್ಮ ವೃತ್ತಿಯ ಪ್ರಗತಿಗೆ ತಾವು ನಂಬಿದ ದೇವರೇ ಕಾರಣವೆಂದು ನಂಬುವದು ಜಾನಪದ ಮನೋಧರ್ಮ. ರುದ್ರನ ಭಕ್ತರಾದ ಅವೈದಿಕರು ಹಾಗೂ ಮೆಹೆಂಜೋದಾರೋದ ಪಶುಪನ ಭಕ್ತರು ಪಶುಕರಾಗಿರಬೇಕು. ಜಟಿಗನು ತನ್ನ ಭಕ್ತರಂತೆ ಮಾಂಸಾಹಾರಿಯಾದರೂ ಅವರಂತೆ ಅವನೂ ಪಶುಪಾಲಕನಾಗಿದ್ದಾನೆ. ಜಟಿಗನಿಗೆ ಪಶುಬಲಿ ಕೊಟ್ಟು ಭಕ್ತರು ಪಶುರಕ್ಷಣೆ ಬೇಡುತ್ತಾರೆ. ಮನುಷ್ಯ ಮನುಷ್ಯರ ರಕ್ಷಣೆಗಾಗಿ ಭೈರವನಿಗೆ ನರಬಲಿಯನ್ನು ಕೊಡುತ್ತಿದ್ದ ಕಾಲವೂ ಇತ್ತು. “ಬೆಟ್ಟ, ಚವುಡಿಗೆ ಗಡಿಯ ಭೈರನಿಗೆ ಕೊಟ್ಟೆವು ನರಬಲಿಯೆನುತ”[13] ಎಂಬ ಉಕ್ತಿಯನ್ನು ಗಮನಿಸಬಹುದು. ಚಾಮುಂಡಿ ನರಬಲಿಕೊಳ್ಳುತ್ತಿದ್ದವಳು ಸಾತ್ವಿಕ ಪೂಜೆಗೊಂಡು ದುರ್ಗೆಯಾಗಿದ್ದಾಳೆ. ಜಟಿಗನಿಗೆ ರಕ್ತಬಲಿ ನೀಡುವವರು ಪಶುಕರಷ್ಟೇ ಅಲ್ಲ, ಕೃಷಿಕರು, ಬೇಟೆಗಾರರು, ಮುಂತಾದವರು ರಕ್ತ ಬಲಿ ನೀಡಿ ತಮ್ಮ ಬೇಸಾಯ ಉದ್ಯೋಗದಲ್ಲಿ ಯಶಸ್ಸನ್ನೂ ಪ್ರಗತಿಯನ್ನೂ ಬೇಡಿಕೊಳ್ಳುತ್ತಾರೆ. ಮೀನುಗಾರರು ತಮ್ಮ ವೃತ್ತಿಯ ಯಶಸ್ಸನ್ನು ಹಾರೈಸಿ ಸಮುದ್ರ ತೀರದ ನೇತ್ರಾಣಿ[14] ಹಾಗೂ ಬಸವ ರಾಜ ದುರ್ಗದಲ್ಲಿಯ ಜಟಿಗನಿಗೆ ಹರಕೆ ಒಪ್ಪಿಸಿ ಬರುತ್ತಾರೆ. ಹೊಲೆಯರು, ಚಮಗಾರರು, ಗೌಡರು, ಆಗೇರರು  ಮುಕ್ರಿಗಲು ನಾಮಧಾರಿಗಳು ನಾಡವರು ಅವನ ಉಪಾಸಕರು, ತಸ್ಕರ ಮುಂತಾದ ಜನರು ರುದ್ರಶಿವನನ್ನು ಆರಾಧಿಸುತ್ತಿದ್ದರೆಂದು ರುದ್ರಾಧ್ಯಾಯದಲ್ಲಿದೆ. ರುದ್ರಾಧ್ಯಾಯದ ಮಂತ್ರದಲ್ಲಿ ’ಪತ್ತೀನಾಂ ಪತಿಯೇ ನಮಃ’ ಎಂದಿದೆ. ಮೋನಿಯರ್ ವಿಲಿಯಂಸ್ ಪತ್ತಿಃ ಪಟ್ಟಿ: name of a people ಎಂದು ತಿಳಿಸುತ್ತಾನೆ.[15] ಶಂಬಾ ಅವರು ಪತ್ತಿಗಳ ಹಟ್ಟಿಕಾರರ ಒಂದು ಒಳಪಂಗಡವೆನ್ನುತ್ತಾರೆ. (ಪೈಕ ಮತ್ತು ಪಟಗಾರ ಜನರು ಕಾರವಾರ ಜಿಲ್ಲೆಯಲ್ಲಿದ್ದಾರೆ.) ಈ ಸಂಗತಿಗಳಿಂದ ರುದ್ರ ಮತ್ತು ಜಟಿಗ ಇಬ್ಬರೂ ಜನಸಾಮಾನ್ಯರ ದೇವರೆಂದು ಹೇಳಬಹುದು.

ಜಟಿಗವೀರದೇವತೆಯಾದದ್ದು:

ಉತ್ತರ ಕನ್ನಡ ಜಲ್ಲೆಯಲ್ಲಿ ಬೌದ್ಧ. ಜೈನ ಧರ್ಮದ ಪ್ರಾಬಲ್ಯದ ಕಾಲದಲ್ಲಿ ಜಟಿಗ ಹಾಗೂ ಲಿಂಗಪೂಜೆ ಕುಂದಿರಬೇಕು. ಆದರೆ ಜೈನರು ದೇವಿಪೂಜೆಗೆ ಮಹತ್ವಕೊಟ್ಟರು. ಹುತ್ತದ ಅಮ್ಮನ ಪೂಜೆಯಿದ್ದಲ್ಲಿ ಮೂರ್ತಿಪ್ರತಿಷ್ಠಾಪನೆಗೆ ನೆರವಾಗಿ ಪೂಜೆಯಲ್ಲಿ ತಾವೂ ಪಾಲುಗೊಂಡರೆಂಬುದಕ್ಕೆ ಜನಪದ ಹೇಳಿಕೆಗಳು ಹಾಗೂ ಇಂದಿಗೂ ದೇವಿಪೂಜೆಯಲ್ಲಿ ಅವರಿಗಿರುವ ಸ್ಥಾನ ಆಧಾರವಾಗಿದೆ. ಆ ಕಾಲದಲ್ಲಿ ಜಟಿಗ ಹಾಗೂ ಲಿಂಗಗಳು ರಕ್ಷಕ ದೇವತೆಗಳಾಗಿ ಗೌಣಸ್ಥಾನಕ್ಕೆ ಬಂದಿರಬೇಕು. ಇವೇ ಬಾಗಿಲು ಜಟಿಗ, ಲಿಂಗವೂ ರಕ್ಷಕನಾದದ್ದನ್ನು ಅಂಕೋಲೆಯ ಭೂಮಿ ತಾಯಿಯ ದೇವಸ್ಥಾನದಲ್ಲಿ ಕಾಣಬಹುದು. ಜೈನರ ಪ್ರಾಬಲ್ಯ ಹೆಚ್ಚಿರುವ ಸ್ಥಳಗಳಲ್ಲಿ ದೇವಿಗೂ ಲಿಂಗಕ್ಕೂ ಸಹೋದರ ಸಂಬಂಧವನ್ನು ಹೇಳಲಾಗುತ್ತದೆ. ಆದರೆ ಈ ನಂಬಿಕೆಯನ್ನು ಎಲ್ಲರೂ ದೃಢಪಡಿಸುವದಿಲ್ಲ.

ಆದಿಮಾನವನ ರಕ್ಷಕ ಶಕ್ತಿಯ ಪ್ರತಿಮೆಯಾಗಿದ್ದ ಜಟಿಗ, ಮಾನವನ ಸಾಮಾಜಿಕ ವ್ಯವಸ್ಥೆ ಒಂದು ಚೌಕಟ್ಟಿನಲ್ಲಿ ನೆಲೆನಿಂತಾಗ, ನಾಗರಿಕತೆ ತಲೆದೋರಿದಾಗ, ಧಾರ್ಮಿಕ ಸ್ಥಿತ್ಯಂತರಗಳೊಂದಿಗೆ ಧಾರ್ಮಿಕ ಕಲ್ಪನೆ ವಿಸ್ತರಿಸಿದಾಗ ದೇವರಿಗೂ ರಕ್ಷಕನೊಬ್ಬನ ಅವಶ್ಯಕತೆಯುಂಟಾಯಿತು. ಜಟಿಗ ದೇವರ ರಕ್ಷಣೆಗೆ ನಿಂತು ಬಾಗಿಲು ಜಟಿಗನಾದನು. ವೀರಯುಗದಲ್ಲಿ ರಾಜಮಹಾರಾಜರಿಗೆ ರಾಜ್ಯಕಾರ್ಯದಲ್ಲಿ ನೆರವಾಗಲು ಜ್ಟಿಗಳು, ಬಂಟರು ಸೈನಿಕರು ಬೇಕಷ್ಟೆ. ಆದರೆ ಮಾನವ ಶಕ್ತಿಗೆ ಮೀರಿದ ತೊಂದರೆಗಳ ನಿವಾರಣೆಗೆ ಬೇಡಿದ್ದನ್ನು ನೀಡುವುದಕ್ಕೆ ಮಾನವ ಶಕ್ತಿಯಿಂದ ಸಾಧ್ಯವೇ? ಆದಿ ಮಾನವನ ಕುಟುಂಬ ಹಾಗೂ ಸಮಾಜ ರಕ್ಷಕನಾದ ಜಟಿಗ ಅವನ ಜನ ಕೋಟೆಕಟ್ಟಿ, ರಾಜ್ಯವಾಳತೊಡಗಿದಾಗ ಅವನು ಕೋಟೆ ಜಟಿಗನೂ ಆದನು. ಜೈನರ ಬಸದಿಯಲ್ಲಿ ವಾಸ್ತು ಕ್ಷೇತ್ರಪಾಲನಾದನು. ಜಟ್ಟಿಗಳಿಗೆ ಜಗಜಟ್ಟಿಯಾದನು – A god of wressellers ಎಂದು ಕಿಟಲ್ ತಿಳಿಸುತ್ತಾನೆ.

ಜಟಿಗ ಸತ್ತ ವೀರರ ಅಥವಾ ಸತ್ತ ಜಟ್ಟಿಗಳ ಸ್ಮಾರಕನೆಂದು ನಂಬಲು ಆಧಾರಗಳಿಲ್ಲ, ಜಟಿಗ ದೇವರು. ಆದರೆ ಜಟ್ಟಿಗಳ ಪ್ರತಿಯೊಂದು ಸ್ಮಾರಕಕ್ಕೂ ಅದರದೇ ಆದ ವೈಶಿಷ್ಟ್ಯವಿರುತ್ತದೆ. ಕತೆ, ಇತಿಹಾಸವಿರುತ್ತದೆ. ಸತ್ತವರು ಪಿಶಾಚಿಯೋ ದೆವ್ವವೋ ಆಗಿ ಆಗಾಗ ತಮ್ಮ ಅತೃಪ್ತ ಬಯಕೆಗಳನ್ನು ತೀರಿಸಿಕೊಳ್ಳಲು ಭಯಂಕರ ಕೆಟ್ಟ ಗುಣಗಳನ್ನು ಪ್ರದರ್ಶಿಸುತ್ತವೆ. ಒಮ್ಮೊಮ್ಮೆ ಮನುಷ್ಯರೊಂದಿಗೆ ಗುದ್ದಾಟಕ್ಕೆ ನಿಂತು ಸೋತು ಹೋಗುತ್ತವೆ. ಆದರೆ ಜಟಿಗ ಭೂತೇಶನಂತೆ ಹಾನಿಕಾರಕ ಭೂತ ಪಿಶಾಚಿಗಳನ್ನು ಗಾಳಿಗಳನ್ನು ಅಂಕೆಯಲ್ಲಿಡುವವ.

ಜಟಿಗ ಅವೈದಿಕರ ಕಾಲಕ್ಕೆ ಸೇರಿದ ಅಕ್ಷರಸ್ಥರ ಕಾಲಕ್ಕೂ ಮುಂಚಿನ ಜನತೆಯ ಧಾರ್ಮಿಕ ಭಾವನೆಯ ದ್ಯೋತಕ. ವೀರಗಲ್ಲು ಅಕ್ಷರಸ್ಥ ಹಾಗೂ ಐತಿಹಾಸಿಕ ಪ್ರಜ್ಞೆಯ ಜನರ ಭಾವನೆಗಳ ಮೂಲಕ ರೂಪುಗೊಂಡ ಇತಿಹಾಸಿಕ ಶಾಸನಗಳು, ವೀರಗಲ್ಲು ವ್ಯಕ್ತಿ ಸ್ಮಾರಕ, ಜಟಿಗ ಆಗೋಚರ ಶಕ್ತಿ ಸ್ಮಾರಕ. ಅಥವಾ ವೃಕ್ಷ ಪ್ರತಿಮೆ. ಜಟಿಗವನ್ನು ಇಂದಿಗೂ ಪ್ರತಿಷ್ಠಾಪನೆ ಮಾಡುತ್ತಾರೆ. ಆದರೆ ಇಂದು ವೀರಗಲ್ಲು ಸಂಪ್ರದಾಯವಿಲ್ಲ. ಸ್ಮಾರಕ ಮೂರ್ತಿ, ಸ್ಮಾರಕ ಕಂಬ, ಕಟ್ಟೆ ರೂಢಿಗೆ ಬಂದಿವೆ. ಒಂದು ಊರಿನ ಅಥವಾ ಕೇರಿಯ ಜಟಿಗ ಹೆಚ್ಚು ಪ್ರಭಾವಶಾಲಿಯೆಂದು ಜನರಲ್ಲಿ ನಂಬಿಕೆ ಬೆಳೆದರೆ ಹರಕೆಯ ಕಂಬಗಳು ಹೆಚ್ಚಾಗುತ್ತವೆ. (ಉಳ್ಳವರು ಶಿವಾಲಯ ಕಟ್ಟಿಸುವಂತೆ) ಜಟಿಗನನ್ನು ನಿಲ್ಲಿಸಲು ಮತ್ತೆ ಯಾರಾದರೂ ಸಾಯಬೇಕೆಂದಿಲ್ಲ. ಭಕ್ತನ ಭಾವುಕ ಮನಸ್ಸಿಗೆ ’ಅನಿಸಿದರೆ’ ’ಮೈಮೇಲೆ ಬಂದರೆ’ ’ನೋಟ’ದಲ್ಲಿ ’ಹುಟಾವಳಿ’ ಯಾದರೆ; ಒಂದು ಸ್ಥಳದಲ್ಲಿ ಜಟಿಗನ ನೆಲೆಯಿದೆಯೆಂದು ಕನಸಾದರೆ ಇಂದಿಗೂ ಆ ಸ್ಥಳದಲ್ಲಿ ಜಟಿಗನ ಪ್ರತಿಷ್ಠಾಪನೆ ಮಾಡಬಹುದು. ಹೋರಾಡಿ ಸತ್ತವೀರರ ಕತೆಗಳು ಪರಂಪರಾಗತವಾಗಿ ಕೇಳಿಬರುವುದುಂಟು, ಆದರೆ ಜಟಿಗ ಸಾವಿಲ್ಲದ, ಕೇಡಿಲ್ಲದ ದೇವತೆ, ಎಲ್ಲಿಯೂ ಇವನೊಬ್ಬ ಸತ್ತವೀರನೆಂದು ಯಾರೂ ಹೇಳುವದಿಲ್ಲ.

ಭೂತಾರಾಧನೆದೇವಾರಾಧನೆ:

ದಕ್ಷಿಣ ಕನ್ನಡದ ಭೂತಾರಾಧನೆ ಕ್ಷುಲ್ಲಕ ಅರ್ಥದ ಭೂತ ಪಿಶಾಚಿ ದೆವ್ವಗಳ ಆರಾಧನೆಯೆಂದು ಹೇಳುವದು ಸಮಂಜಸವೆನಿಸುವುದಿಲ್ಲ. ಅಲ್ಲಿ ಭೂತಗಳನ್ನು ದೈವವೆಂದೇ ಕರೆಯುವದು ರೂಢಿ[16] ದೈವ; ದೇವರು ಎಂಬರ್ಥದಲ್ಲಿದೆ, ಉತ್ತರ ಕನ್ನಡದಲ್ಲಿ ಗ್ರಾಮದೇವರು, ಮನೆದೇವರು ಮೈಮೇಲೆ ಬರುವುದುಂಟು. ಅತೃಪ್ತ ಸತ್ತ ಹಿರಿಯರೂ ಮೈಮೇಲೆ ಬರುತ್ತಾರೆ. ಆದ್ದರಿಂದ ಭೂತಾರಾಧನೆಯಲ್ಲಿರುವ ದೈವಗಳೆಲ್ಲವೂ ಸತ್ತವರ ದೈವಗಳಲ್ಲ. ಸತ್ತವರ ಆತ್ಮಗಳು ಮುಖ್ಯ ದೇವರ ಅಂಕಿತದಲ್ಲಿರುತ್ತವೆ ಎಂದು ಜನಪದರು ನಂಬುತ್ತಾರೆ.

ಪ್ರಾಚೀನ ಅವೈದಿಕರು ವೈದಿಕ ಹಾಗೂ ಪುರಾಣ ಕಾಲದಲ್ಲಿ ಕಾಣಿಸಿಕೊಳ್ಳುವ ದೇವಕಲ್ಪನೆಗೆ ತಮ್ಮ ಕಾಣಿಕೆಗಳನ್ನಿತ್ತಿದ್ದಾರೆಂದು ನಂಬುವದು ಅನಿವಾರ್ಯವಷ್ಟೆ. ದಕ್ಷಿಣ ಕನ್ನಡವೂ ಇದಕ್ಕೆ ಹೊರತಾಗಿರಲಾರದು. ಅಲ್ಲಿ ಮಹಾಲಿಂಗೇಶ್ವರನ ಭೂತದ ಹೆಸರು ಜಟಾಧಾರಿ ಭೂತವಂತೆ[17] ಇದು ದೇವಾರಾಧನೆಯೇ ಅಲ್ಲವೆ? ಜಟಾಧಾರಿ ಹಾಗೂ ಜಟಿಗ ಇವು ಭೂತಗಳೆ?

ಜಾನಪದ ಸಾಹಿತ್ಯದಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳನ್ನೂ ಪಾಠಾಂತರಗಳನ್ನೂ ಗುರುತಿಸಿ ಮೂಲಪಾಠವೇನೆಂಬುದನ್ನು ಗುರುತಿಸಲು ಪ್ರಯತ್ನಿಸುವಂತೆ ಜಾನಪದ ವಿಜ್ಞಾನಿ ಜನಪದರ ಧರ್ಮದೇವರುಗಳಲ್ಲಿಯ ಪ್ರಾದೇಶಿಕ ವೈಶಿಷ್ಟ್ಯ ಪ್ರತಿಮೆಗಳ ರೂಪಾಂತರ ಧಾರ್ಮಿಕ ಸ್ಥಿತ್ಯಂತರಗಳನ್ನು ಗುರುತಿಸಿ, ಅವುಗಳ ಮೂಲ ಅವಸ್ಥೆಯನ್ನು ಕಂಡುಹಿಡಿಯುವದು ಅವಶ್ಯವಾಗಿದೆ. ಅವೈದಿಕ ದೇವರೆಂದು ನಂಬಲಾದ ಶಿವನ ಪ್ರಾಚೀನ ರೂಪ ವೈವಿಧ್ಯಗಳು ನಮ್ಮ ನಾಡಿನ ತುಂಬೆಲ್ಲ ಇದ್ದು ಆರ್ಯ ಪೂರ್ವ ಅವೈದಿಕರು ಬಾಳಿಹೋದ ನಾಡಿನಲ್ಲಿ ಆ ಧರ್ಮ ದೇವರುಗಳ ಅವಸ್ಥಾಂತರಗಳು ಇರುವದು ಸಾಧ್ಯವಿದೆ. ಉತ್ತರ ಕನ್ನಡದ ಜಟಿಗನಂತೆ, ಉತ್ತರ ಕರ್ನಾಟಕದ ಮಲ್ಲಯ್ಯ, ದಕ್ಷಿಣ ಕರ್ನಾಟಕದ ಮಲೆಯ ಮಾದೇಶ್ವರ, ದಕ್ಷಿಣ ಕನ್ನಡದ ಜಟಾಧಾರಿ ಭೂತ, ಕರ್ನಾಟಕದ ಹೊರಗೂ ಪ್ರಖ್ಯಾತನಾದ ಮೈಲಾರ ಹಾಗೂ ಇಂತಹ ಇನ್ನಿತರ ದೇವರು ಹಾಗೂ ಅವರ ಪರಿವಾರಗಳನ್ನು ಒಂದೆಡೆ ತಂದು ತುಲನಾತ್ಮಕ ಅಭ್ಯಾಸ ಮಾಡಿ ಇವೆಲ್ಲವೂ ಒಂದೇ ಮೂಲದವೆ? ಅಥವಾ ಬೇರೆಯೆ? ಎಂಬುದನ್ನು ತಿಳಿಯಬೇಕಾದದ್ದು ಅವಶ್ಯವಾಗಿದೆ. ಆಗ ಶೈವಧರ್ಮದ ಮೂಲದ ಮೇಲೆ ಹೆಚ್ಚಿನ ಬೆಳಕು ಬೀಳುವುದು ಸಾಧ್ಯ.

ಪೂಜೆ:

ತನಗೊದಗಿದ ಆತಂಕಗಳ ನಿವಾರಣೆಗೆ, ತನ್ನ ಒಳಿತಿಗೆ, ಪ್ರಗತಿಗೆ ತಾನು ನಂಬಿದ ದೇವರನ್ನು ಮೆಚ್ಚಿಸುವುದೇ ತಾರಕವೆಂದು ಬಗೆದು ಮನುಷ್ಯ ತನ್ನ ಕಲ್ಪನೆಗೆ ತೋಚಿದ ಕೆಲವು ಪೂಜಾವಿಧಾನಗಳನ್ನು ಆರಿಸಿಕೊಂಡನು. ಅವನಿಗೆ ಮೊದಲು ಹೊಳೆದ ವಿಚಾರ ದೇವರಿಗೂ ತನ್ನಂತೆಯೆ ಬೇಕು ಬೇಡಿಕೆಗಳಿರುತ್ತವೆಯೆಂಬುದು. ಆಹಾರಾದಿ ಅನೇಕ ವಿಷಯಗಳಲ್ಲಿ ದೇವರು ತನಗಿಂತ ಬೇರೆಯಲ್ಲವೆಂದು ಅವನು ಬಗೆದನು. ಆದ್ದರಿಂದ ತಾನು ಮಿಂದುಂಡು ಸಂತೋಷಪಡುವಂತೆ ದೇವರನ್ನೂ ಮಜ್ಜನಾದಿಗಳಿಂದ ಸಂತುಷ್ಟಗೊಳಿಸಲು ಪ್ರಯತ್ನಿಸಿದನು. ಬೇಟೆ ಸಿಕ್ಕಾಗ ಅವನಿಗೆ ಸಂತೋಷವಾಯಿತು. ಅದೇ ಸಂತೋಷ ಜಟಿಗನಿಗೂ ಸಿಗಬೇಡವೇ? ಬಲೆಗೆ ಬಿದ್ದ ಪ್ರಾಣಿಯನ್ನು ಜಟಿಗನ ಬರ್ಚಿಯಿಂದ ಚುಚ್ಚಿ ಬರ್ಚಿಗೆ ರಕ್ತವುಣ್ಣಿಸಿದನು. ಕಾಕತಾಳೀಯವಾಗಿ ಒಂದು ಬರ್ಚಿ ಅವನಿಗೆ ಪದೇ ಪದೇ ಬೇಟೆ ಒದಗಿಸಲು ಕಾರಣವಾದರೆ ಆ ಬರ್ಚಿಯಲ್ಲಿ ದೈವೀಶಕ್ತಿಯಿದೆಯೆಂದು ಭಾವಿಸಿದನು. ಅದೂ ಅವನಿಗೆ ಪೂಜ್ಯವಾಯಿತು. ಅದನ್ನು ತನ್ನ ದೇವರ ಬುಡದಲ್ಲಿಟ್ಟು ಅದರ ಪಾವಿತ್ರ‍್ಯವನ್ನು ಕಾಪಾಡಿದನು, ಅಥವಾ ಜಟಿಗನ ಬುಡದಲ್ಲಿ ಒಂದು ಗುಡಿಸಲು ಕಟ್ಟಿ ಬಲೆಬರ್ಚಿ ಹಾಗೂ ಬೇಟೆಯ ಸಾಮಾನುಗಳನ್ನು ಅಲ್ಲಿಟ್ಟು ಹೇಳಿಕೆ ಮಾಡಿದ ಸೊಪ್ಪುಗಾಯಿಯಿಟ್ಟು ರಕ್ಷಿಸಿದನು, ಬರ್ಚಿಯನ್ನು ಅಡವಿಯ ಗುಪ್ತ ಸ್ಥಳದಲ್ಲಿ ಅಡಗಿಸಿ ಬರುವದೂ ಉಂಟು. ಹಾಲಕ್ಕಿಗೌಡರ ಪೂಜಾವಿಧಾನದಲ್ಲಿ ಇಂತಹ ಕೆಲವು ಅಪೂರ್ವತೆಯನ್ನು ಕಾಣಬಹುದಾಗಿದೆ, ಅವರ ಕೆಂಡದಾರತಿಗೂ ಜಟಿಗ ಒಲಿಯುತ್ತಾನೆ.

ಪೂಜೆ:

ತನಗೊದಗಿದ ಆತಂಕಗಳ ನಿವಾರಣೆಗೆ, ತನ್ನ ಒಳಿತಿಗೆ, ಪ್ರಗತಿಗೆ ತಾನು ನಂಬಿದ ದೇವರನ್ನು ಮೆಚ್ಚಿಸುವುದೇ ತಾರಕವೆಂದು ಬಗೆದು ಮನುಷ್ಯ ತನ್ನ ಕಲ್ಪನೆಗೆ ತೋಚಿದ ಕೆಲವು ಪೂಜಾವಿಧಾನಗಳನ್ನು ಆರಿಸಿಕೊಂಡನು. ಅವನಿಗೆ ಮೊದಲು ಹೊಳೆದ ವಿಚಾರ ದೇವರಿಗೂ ತನ್ನಂತೆಯೆ ಬೇಕು ಬೇಡಿಕೆಗಳಿರುತ್ತವೆಯೆಂಬುದು. ಆಹಾರಾದಿ ಅನೇಕ ವಿಷಯಗಳಲ್ಲಿ ದೇವರು ತನಗಿಂತ ಬೇರೆಯಲ್ಲವೆಂದು ಅವನು ಬಗೆದನು. ಆದ್ದರಿಂದ ತಾನು ಮಿಂದುಂಡು ಸಂತೋಷಪಡುವಂತೆ ದೇವರನ್ನೂ ಮಜ್ಜನಾದಿಗಳಿಂದ ಸಂತುಷ್ಟಗೊಳಿಸಲು ಪ್ರಯತ್ನಿಸಿದನು. ಬೇಟೆ ಸಿಕ್ಕಾಗ ಅವನಿಗೆ ಸಂತೋಷವಾಯಿತು. ಅದೇ ಸಂತೋಷ ಜಟಿಗನಿಗೂ ಸಿಗಬೇಡವೇ? ಬಲೆಗೆ ಬಿದ್ದ ಪ್ರಾಣಿಯನ್ನು ಜಟಿಗನ ಬರ್ಚಿಯಿಂದ ಚುಚ್ಚಿ ಬರ್ಚಿಗೆ ರಕ್ತವುಣ್ಣಿಸಿದನು. ಕಾಕತಾಳೀಯವಾಗಿ ಒಂದು ಬರ್ಚಿ ಅವನಿಗೆ ಪದೇ ಪದೇ ಬೇಟೆ ಒದಗಿಸಲು ಕಾರಣವಾದರೆ ಆ ಬರ್ಚಿಯಲ್ಲಿ ದೈವೀಶಕ್ತಿಯಿದೆಯೆಂದು ಭಾವಿಸಿದನು. ಅದೂ ಅವನಿಗೆ ಪೂಜ್ಯವಾಯಿತು. ಅದನ್ನು ತನ್ನ ದೇವರ ಬುಡದಲ್ಲಿಟ್ಟು ಅದರ ಪಾವಿತ್ರ‍್ಯವನ್ನು ಕಾಪಾಡಿದನು, ಅಥವಾ ಜಟಿಗನ ಬುಡದಲ್ಲಿ ಒಂದು ಗುಡಿಸಲು ಕಟ್ಟಿ ಬಲೆಬರ್ಚಿ ಹಾಗೂ ಬೇಟೆಯ ಸಾಮಾನುಗಳನ್ನು ಅಲ್ಲಿಟ್ಟು ಹೇಳಿಕೆ ಮಾಡಿದ ಸೊಪ್ಪುಗಾಯಿಯಿಟ್ಟು ರಕ್ಷಿಸಿದನು, ಬರ್ಚಿಯನ್ನು ಅಡವಿಯ ಗುಪ್ತ ಸ್ಥಳದಲ್ಲಿ ಅಡಗಿಸಿ ಬರುವದೂ ಉಂಟು. ಹಾಲಕ್ಕಿಗೌಡರ ಪೂಜಾವಿಧಾನದಲ್ಲಿ ಇಂತಹ ಕೆಲವು ಅಪೂರ್ವತೆಯನ್ನು ಕಾಣಬಹುದಾಗಿದೆ. ಅವರ ಕೆಂಡದಾರತಿಗೂ ಜಟಿಗ ಒಲಿಯುತ್ತಾನೆ.

ಊರಿನ ವಿಶಾಲವಾದ ಗದ್ದೆಯ ಬಯಲಿನ ರಕ್ಷಣೆ ಮಾಡಿದ ಜಟಿಗನಿಗೆ ಊರವರೆಲ್ಲ ಸೇರಿ ಮೊದಲ ಹೊಸ ಅಕ್ಕಿಯ ಚರುವನ್ನು ಜಟಿಗನಿಗೆ ನೀಡುತ್ತಾರೆ. ತೋಟಗಾರ ಮೊದಲ ಹಣ್ಣು ಹಂಪಲು, ಬಾಳೆಗೊನೆ, ಅಡಿಕೆಗೊನೆ, ತೆಂಗು, ಪರಿಮಳದ ಹೂ ಮುಂತಾದವುಗಳನ್ನು ಸಲ್ಲಿಸುತ್ತಾನೆ. ಮಾಂಸಾಹಾರಿ ತಾನು ತಿನ್ನುವ ಮೊದಲು ಮೊಲದ ರಕ್ತವನ್ನು ಜಟಿಗನಿಗೆ ಅರ್ಪಿಸುತ್ತಾನೆ. ಯಾಜಕರು ಯಜ್ಞದಲ್ಲಿ ಬಲಿಯನ್ನು ನಾಶಪಡಿಸುತ್ತಾರೆ. ಆದರೆ ಆಯಾಜಾಕರಾದ ಜಟಿಗನ ಭಕ್ತರು ಜಟಿಗನಿಗೆ ಅರ್ಪಿಸಿ ತಾವೂ ಉಣ್ಣುತ್ತಾರೆ.

ಜಾನಪದ ದೇವರಾದ ಜಟಿಗನಿಗೆ ನಿತ್ಯಪೂಜೆಯಿಲ್ಲ. ಭಕ್ತರು ಪೂಜೆಯನ್ನು ಬಯಸಿದ ದಿನ ಪೂಜಾರಿಗೆ ಸುದ್ದಿ ಮುಟ್ಟಿಸುತ್ತಾರೆ. ಹೆಚ್ಚಾಗಿ ಜಟಿಗವಿದ್ದ ಕೇರಿಯ ಒಬ್ಬನಿಗೆ ಪೂಜೆಯ ಹಕ್ಕು ತಲೆ ತಲೆಯಾಂತರವಾಗಿ ನಡೆದು ಬಂದದ್ದಿರುತ್ತದೆ. ಪೂಜಾರಿ ಮಿಂಚು ಗುತ್ತಿನ ಬಳಿ ಸ್ವಚ್ಛ ಮಾಡಿ, ಜಟಿಗಗಳನ್ನು ತೊಳೆದು ಚರುಬೇಯಿಸಲಿಟ್ಟು ಕಡಗಲ್ಲಿನ ಜಟಿಗಗಳಿಗೆ ಬಳಿ ಶೇಡಿ[18] ಹಾಗೂ ಚಿರಿಕಲ್ಲನವಕ್ಕೆ ಎಣ್ಣೆ ಹಚ್ಚಿ ಹೂ ಗಂಧ ಕುಂಕುಮ ವಿಡುತ್ತಾನೆ. ಭಕ್ತರು ಕಳಿಸಿದ ಅಥವಾ ಅವರೇ ತಂದ ಕಾಯಿ ಹಣ್ಣು ಅರ್ಪಿಸಿ, ಚರು ತೋರಿಸಿ ಭಕ್ತನ ಹೆಸರು ಜಟಿಗರ ಹೆಸರು ಹೇಳಿ ಭಕ್ತನಿಗೂ ಅವನ ಮಕ್ಕಳಿಗೂ ದನಕರು ಬೆಳೆ ಬೇಸಾಯ ವಿದ್ಯೆ ಸಂಪತ್ತು ಆರೋಗ್ಯ ಮುಂತಾದ ವಿಷಯಗಳಲ್ಲಿ ಒಳ್ಳೆಯದಾಗುವಂತೆ ನಡೆಸಿಕೊಂಡು ಎಂದು ’ಹೇಳಿಕೆ’ ಮಾಡಿಕೊಂಡು ದೇವರ ಪ್ರಸಾದವಿಟ್ಟು ಒಡೆದ ಕಾಯಿ ಹಣ್ಣುಗಳನ್ನು ಭಕ್ತರಿಗೆ ಒಪ್ಪಿಸುತ್ತಾನೆ. ಚರುವನ್ನು ಪೂಜಾರಿ ಪಡೆಯುತ್ತಾನೆ. ಕೆಲವು ಕಡೆ ಪೂಜಾರಿಗಳೇ ಬೇಕೆಂದಿಲ್ಲ ಭಕ್ತನೇ ಗುತ್ತಿಗೆ ಹೋಗಿ ಕಾಯಿ ಒಡೆದುಕೊಂಡು ಬರಬಹುದು. ಆದರೆ ದೇವರ ಮಜ್ಜನಾದಿಗಳನ್ನು ಮಾಡಿಸಲು ಆತ ತೊಡಗುವದಿಲ್ಲ.

ಕೆಲವು ವಿಶೇಷ ಪೂಜೆಗಳಲ್ಲೊಂದು ಹಸಿರುಮೊಕ್ಕೆ ಪೂಜೆ. ಗದ್ದೆಯಲ್ಲ ಸೂಜಿಯಂತೆ ಬತ್ತದ ಮೊಳಕೆಗಳು ಒಡೆದಾಗ ಅವುಗಳ ರಕ್ಷಣೆಯ ಭಾರವನ್ನು ಜಟಿಗನಿಗೆ ಹೊರಿಸಿ ಕೋಳಿ ಹಣ್ಣುಕಾಯಿ ಅರ್ಪಿಸುವರು. ಕುತ್ರಿ ಬಡಿಯುವ ಮೊದಲು ಜಟಿಗನಿಗೆ ಕೋಳಿಬಲಿ ಆಗಲೇಬೇಕು.

ಹೊಸ ಅಕ್ಕಿ ಪೂಜೆಯ ಹೊತ್ತಿಗೆ ಚರು ಬೇಯಿಸಿ ನೈವೇದ್ಯ ಮಾಡುವರು. ಭಜನೆ, ಸಪ್ತಾಹ, ಜಾಗರಣೆ, ಯಕ್ಷಗಾನಗಳು ನಡೆಯುತ್ತವೆ.

ಸಂಕ್ರಾಂತಿಯ ದಿನ ದೊಡ್ಡ ಪೂಜೆ ನಡೆಯುತ್ತದೆ. ಇದೇ ಜಟಿಗನಿಗೆ ವಾರ್ಷಿಕ ಪೂಜೆ. ಹೊಸ ಜಟಿಗನ ಪ್ರತಿಷ್ಠಾಪನೆ ಮಾಡುವವರು; ಹಾಗೂ ಈ ಹಿಂದೆ ಪ್ರತಿಷ್ಠಾಪನೆ ಮಾಡಿದವರು ವಾದ್ಯ, ಕುರಿ, ಕೋಳಿ, ಅಡಿಕೆ ಕೊನೆ, ಬಾಳೆಕೊನೆ, ಐದು ಕಾಯಿ, ಪರಿಮಳದ ಹು, ಹಾಗೂ ತಾವು ಪ್ರತಿವರ್ಷವೂ ಸಲ್ಲಿಸುವಷ್ಟು ಅಕ್ಕಿಯೊಂದಿಗೆ ಜಟಿಗನ ಬಲೆಗೆ ಬರುತ್ತಾರೆ. ನೂರಾರು ಕೋಳಿಗಳ ರಕ್ತ ಬಲಿ ನಡೆಯುತ್ತದೆ. ಕೋಳಿಯನ್ನು ಗುತ್ತಿಗೆ ತರಲಾಗದಿದ್ದವರು ದೇವರ ಸ್ಥಳದ ಹುಡಿಹಚ್ಚಿ ದೇವರ ಹೆಸರಿನಲ್ಲಿ ಕೋಳಿ ಕೊಯ್ಯುತ್ತಾರೆ. ಜಟಿಗ ನಿರ್ದಿಷ್ಟ ವ್ಯಕ್ತಿಯ ಮೈಮೇಲೆ ಬಂದಾಗ ಭಕ್ತರ ’ಹೇಳಿಕೆ’ ’ಕೇಳಿಕೆ’ಗಳು ನಡೆಯುತ್ತವೆ. ದೇವರಿಗೆ ಚರು ನೈವೇದ್ಯ ಮಾಡಿ ಕೋಳಿ ಚರು, ಒಡೆಸಿದ ಕಾಯಿ, ಅರ್ಪಿಸಿದ ಹಣ್ಣು ಹೂಗಳನ್ನು ತಂತಮ್ಮ ಮನೆಗಳಿಗೆ ಒಯ್ದು ಪ್ರಸಾದ ಸ್ವೀಕರಿಸುತ್ತಾರೆ.

ಸ್ವೀಕರಣ:

ಲಿಂಗಪೂಜೆ ಇಂದು ಬ್ರಾಹ್ಮಣರ ಪೂಜೆಯ ಒಂದು ಅಂಗವಾಗಿದ್ದರೂ ಮೂಲತಃ ಅದು ಅವೈದಿಕರದಾಗಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರು ಅವರಿಂದ ಇದನ್ನು ಪಡೆದಿರಬೇಕು. ಗೋಕರ್ಣದ ಲಿಂಗಪೂಜೆಯನ್ನು ಬ್ರಾಹ್ಮಣರು ಅಲ್ಲಿಯ ಬ್ರಾಹ್ಮಣೇತರರಿಂದ ಪಡೆದರೆಂದು ತಿಳಿದುಬರುತ್ತದೆ. ಜಟಿಗನ ಆರಾಧನೆಯು ಬ್ರಾಹ್ಮಣೇತರದಾದರೂ ಆಯಾಕಾಲಕ್ಕೆ ಜೈನರಲ್ಲದೆ ಬ್ರಾಹ್ಮಣರು ಪೂಜೆಯ ಹಾಗೂ ಜಟಿಗ ಪ್ರತಿಷ್ಠಾಪನೆಯ ಪೌರೋಹಿತ್ಯ ವಹಿಸುತ್ತಿದ್ದುದಾಗಿ ಭಾವಿಸಬಹುದು. ಇತ್ತೀಚನವರೆಗೂ ಅನೇಕ ಜಟಿಗಗಳ ವಿಶೆಷಪೂಜೆಗೆ ಜೈನರೇ ಬರುತ್ತಿದ್ದರು. ಆದರೆ ಇತ್ತೀಚೆಗೆ ಜೈನರು ಇಲ್ಲಿ ಸುಲಭವಾಗಿ ಸಿಗದ ಕಾರಣ ಕೊಂಕಣಿ ಹಾಗೂ ಹವ್ಯಕ ಬ್ರಾಹ್ಮಣರು ಈ ಕೆಲಸ ಮಾಡುತ್ತಾರೆ. ಕೆಲವು ಜೈನರ ಜಟಿಗ ಗುತ್ತುಗಳಿವೆ. ಬಹುಶಃ ಇವು ಜೈನರ ಅಧಿಕಾರದಲ್ಲಿದ್ದ ಗುತ್ತುಗಳಾಗಿರಬೇಕು. ಈ ಜಟಿಗಳಿಗೆ ರಕ್ತಬಲಿಯಿಲ್ಲ.

ಇತ್ತಿತ್ತಲಾಗಿ ಕೆಲವು ಕಡೆಗಳಲ್ಲಿ ಜಟಿಗನ ಪೂಜೆಗೆ ಪ್ರತಿಷ್ಠಾಪನೆಗೆ ಪುರಾಣೋಕ್ತ ವಿಧಿಗಳನ್ನು ಆಚರಿಸುವದು ಹೆಚ್ಚಾಗುತ್ತಿದೆ. ಜಟಿಗನು ಪುರಾಣೋಕ್ತ ಶಿವನ ಭೂತಗಣಗಳಲ್ಲಿ ಒಂದೊಂದು ನಂಬಿ ಅವನ ಭೂತಗಣಗಳಿಗೆ ಸಲ್ಲುವ ಪ್ರತಿಷ್ಠಾಪನಾ ಹಾಗೂ ಪೂಜಾ ವಿಧಾನಗಳನ್ನು ಆಚರಿಸುತ್ತಿದ್ದಾರೆ. ಕೆಲವರು ಅದನ್ನು ಶಾಸ್ತಾರ ದೇವತೆಯೆನ್ನುತ್ತಾರೆ. ಅವೈದಿಕ ದೇವರಾದ ಅಮ್ಮನನ್ನು ನಾಗನನ್ನು ಜೈನರು, ಬ್ರಾಹ್ಮಣರೂ ಸ್ವೀಕರಿಸಿದಂತೆ ಜಟಿಗನನ್ನು ಲಿಂಗ ಹಾಗೂ ಮಾನವ ರೂಪದಲ್ಲಿ ಬ್ರಾಹ್ಮಣರು ಸ್ವೀಕರಿಸಿರಬೇಕು. ಹೀಗೆ ಒಮ್ಮೆ ವೈದಿಕರಿಂದ ಸ್ವೀಕರಿಸಲ್ಪಟ್ಟ ಜಟಿಗನು ಜಟಿಗೇಶ್ವರನಾಗುತ್ತಿರುವುದು ಇನ್ನೊಂದು ಸುತ್ತಿನ ಅವಸ್ಥಾಂತರವೆನ್ನಬಹುದು. ಸ್ಥಿತಿವಂತರಾಗುತ್ತಿರುವ ಜಟಿಗನ ಆರಾಧಕರು ಹೊಸ ವಿಧಾನಗಳನ್ನು ಜಟಿಗನ ಆರಾಧನೆಗೆ ಅಳವಡಿಸುತ್ತಿದ್ದಾರೆ…. ಅವನಿಗೆ ಆಲಯ ನಿರ್ಮಿಸುವ ಸ್ಥಿತಿಗೂ ಬರುತ್ತಿರುವ ಲಕ್ಷಣಗಳು ಕಾಣುತ್ತಿವೆ. ಬ್ರಾಹ್ಮಣರು ನಿತ್ಯ ಪೂಜೆಗೂ ತೊಡಗಿದ್ದಾರೆ.

ಮರದ ದೇವರಾಗಿ ಹುಟ್ಟಿ ನಾಗ, ಅಮ್ಮಗಳಂತೆ ಜನರಿಗೆ ಒಳ್ಳೆಯದನ್ನು ಮಾಡುತ್ತ ಬೇಟೆಗಾರರಿಗೆ ಬೇಟೆ ಜಟಿಗನಾಗಿ, ಕೋಟೆ ಕಟ್ಟಿದವರಿಗೆ ಕೋಟೆ ಜಟಿಗನಾಗಿ ಕೃಷಿ ಕ್ಷೇತ್ರಕ್ಕೆ ಧಾರ್ಮಿಕ ಕ್ಷೇತ್ರಕ್ಕೆ ಕ್ಷೇತ್ರಪಾಲನಾಗಿ ದೇವಿಯ ಉಪಾಸಕರಿಗೆ ಎಣ್ಮಯ್ಯ ಬಾಗಿಲು ಜಟಿಗನಾಗಿ ವೀರರಿಗೆ ಜಟ್ಟಿದೇವರಾಗಿ ಮಾಂಸಹಾರಿಗಳ ನಡುವೆ ಮಾಂಸಾಹಾರಿಯಾಗಿ ಶಾಖಾಹಾರಿಗಳ ನಡುವೆ ಸಾತ್ವಿಕ ಪೂಜೆಗೊಂಡು ಕಲ್ಲಪ್ಪ, ಕಲ್ಲಿಂಗ, ಕಲ್ಲೇಶ್ವರ, ಜಟಾಧಾರಿ, ಜಟಗೇಶ್ವರನಾಗಿ ಚಾಮುಂಡಿ ಬೆಟ್ಟದ ಮಹಾಬಲನಂತೆ ಗ್ರಾಮದೇವರ ಸ್ಥಾನವನ್ನು ದೇವಿಗೆ ಬಿಟ್ಟು ಕೊಟ್ಟು, ಸಾಮಾನ್ಯ ಪಿಶಾಚವೆಂಬ ನಂಬಿಕೆಗೆ ತುತ್ತಾಗಿ ಊರ ಹೊರಗೆ ಗುಡಿಗಳ ಹೊರಗೆ ಮರೆಯಾಗಿ ನಿಂತಿದ್ದಾನೆ ಜಟಿಗೇಶ್ವರ. 

ಶಬ್ದಗಳು

ನೆನೆಂಟೆ- ಕಾಡು ಅತ್ತಿ

ಕಡಗಲ್ಲು – ಮಣ್ಣಿನ ಕಲ್ಲು, ಜಂಬಿಟ್ಟಂಗಿ?

ಚಿರಿಕಲ್ಲು – ಕರಿಕಲ್ಲು

ನೊಟ-ಜಾನಪದ ರೀತಿಯ ಮಂತ್ರತಂತ್ರ

ಹುಟಾವಳಿ – ಕಂಡುಬರು 

ಗ್ರಂಥಋಣ

೧. ಕಾರವಾರ ಜಿಲ್ಲಾ ದರ್ಶನ – ದಿ. ಸಿಲ್ವಾ, ಕರ್ನಾಟಕದ ಪರಂಪರೆ ಸಂಪುಟ -೧

೨. ಭಾರತೀಯ ದೇವಾಲಯಗಳು – ಪ್ರೊ. ಎಸ್.ಕೆ.ರಾಮಚಂದ್ರರಾವ್

೩. ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ – ಶಂಬಾ

* * * 

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1]     ಡಾ. ರಮಶಂಕರ ಶುಕ್ಲ (ರಸಲ) – ಇಲಾಹಾಬಾದ ಇವರ ಭಾಷಾ ಶಬ್ದಕೋಶ.

[2]     ನಾಗರೀ ಪ್ರಚಾರಿಣಿ ಸಭಾ ಕಾಶಿ, ಹಿಂದಿಯ ಕೋಶ.

[3]      ಗು.ಭೀ. ಜೋಶಿ ಸಂಪಾದಿತ ಸಂಸ್ಕೃತ ಕೋಶ.

[4]      ಕ.ಸಂ. ಪೂ. ಪೀಠಿಕೆ ಪುಟ ೨೫

[5]      ಕ.ಸಂ. ಪೂ. ಪೀಠಿಕೆ ಪುಟ ೨೫

[6]      ಕ.ಸಂ. ಪರಂಪರೆ ಭಾಗ-೧ ರಲ್ಲಿಯ ಲೇಖನ – ಮತ, ಸಮಾಜ ಮತ್ತು ಸಂಸ್ಕೃತಿ.

[7]      ಮೀಸೆಯುಳ್ಳವ, ಎತ್ತರದ ಆಳು ಗೆಜ್ಜೆ ಕಟ್ಟಿದ ಕೋಲನ್ನು ಹಿಡಿದಿರುತ್ತಾನೆ. ಕೀಳು ಗಾಳಿಗಳೊಮದಿಗೆ ಹೊಡೆದಡುವಾಗ ಜುಮ್ಮನ ಗುದಿಗೆ ತೆಗೆದುಕೊಳ್ಳುತ್ತಾನೆ.

[8]      ಕನಾಟಕ ಸಂಸ್ಕೃತಿ ಪೂರ್ವ ಪೀಠಿಕೆ-ಅನುಕ್ರಮ ಪುಟಗಳು ೫೧. ೫೨, ೨೭

[9]      ಕ.ಸಂ. ಪರಂಪರೆ ಭಾಗ-೧ ರಲ್ಲಿಯ ಲೇಖನ – ಮತ, ಸಮಾಜ ಮತ್ತು ಸಂಸ್ಕೃತಿ.

[10]     ಕನಾಟಕ ಸಂಸ್ಕೃತಿ ಪೂರ್ವ ಪೀಠಿಕೆ-ಅನುಕ್ರಮ ಪುಟಗಳು ೫೧. ೫೨, ೨೭

[11]     ಕ.ಸಂ. ಪರಂಪರೆ ಭಾಗ-೧ ರಲ್ಲಿಯ ಲೇಖನ – ಮತ, ಸಮಾಜ ಮತ್ತು ಸಂಸ್ಕೃತಿ.

[12]     ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ- ಪ್ರಸ್ತಾವನೆ ೭೭.

[13]     ಕ. ನೋಡಿ ಕ.ಸಾ.ಪ. ಕನ್ನಡ ನಿಘಂಟು “ಚವುಡಿ”

[14]     ಬುಕಾನನ್ ಪ್ರವಾಸದ ದಿನಚರಿ

[15]     ಕನಾಟಕ ಸಂಸ್ಕೃತಿ ಪೂರ್ವ ಪೀಠಿಕೆ-ಅನುಕ್ರಮ ಪುಟಗಳು ೫೧. ೫೨, ೨೭

[16]     ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ೧೦-೧೨-೮೧

[17]     ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ೧೦-೧೨-೮೧

[18]     ಬಿಳಿ ಜೇಡಿ ಮಣ್ಣಿನ ಲೇಫವನ್ನು ಜಟಿಗನಿಗೆ ಬಳಿಯುತ್ತಾರೆ, ಇದು ಭಸ್ಮ ಲೇಪನಕ್ಕೆ ಮೂಲವಿರಬಹುದೆ?