ಸಾಮಾನ್ಯವಾಗಿ ಪ್ರತಿಹಳ್ಳಿಯಲ್ಲಿಯೂ ಹನುಮಂತದೇವರ ಗುಡಿ ಇರುತ್ತದೆ. ಹೆಚ್ಚುಕಡಿಮೆ ಎಲ್ಲರೂ ಈ ದೇವರನ್ನು ಆರಾಧಿಸುವುದುಂಟು. ಇನ್ನು ಇದಕ್ಕೆ ವ್ಯತಿರಿಕ್ತವಾಗಿಯೂ ಕೆಲವು ದೇವರ ಉಪಾಸನೆ ನಡೆಯುತ್ತದೆ. ಬಹುತರವಾಗಿ ಆ ಗ್ರಾಮದಲ್ಲಿ ಆಗಿ ಹೋದ ಮಹಾವ್ಯಕ್ತಿಯು ಈ ದೈವವಾಗಿರುತ್ತದೆ. ಅದುಪುರುಷದೈವವಾಗಿರಬಹುದು – ತೇರದಾಳದಲ್ಲಿ ಪ್ರಭುದೇವರು, ಬನಹಟ್ಟಿಯಲ್ಲಿ ಕಾಡಸಿದ್ಧ, ಮಹಾಲಿಂಗಪುರದಲ್ಲಿ ಮಹಾಲಿಂಗೇಶ, ಜಮಖಂಡಿಯಲ್ಲಿ ಜಂಬುಕೇಶ್ವರ; ಇಲ್ಲವೆ ಸ್ತ್ರೀ ದೈವವಾಗಿರಬಹುದು – ಕರಮರಿಯಲ್ಲಿ ಅಮ್ಮಜೆವ್ವ, ಗುಡ್ಡಾಪುರದಲ್ಲಿ ದಾನಮ್ಮ, ಸೌದತ್ತಿಯಲ್ಲಿ ಎಲ್ಲಮ್ಮ. ಈ ದೇವರು ಒಮ್ಮೊಮ್ಮೆ ಆ ಊರಿಗೆ ಸೀಮಿತವಾಗದೆ ಬೇರೆ ಊರುಗಳಲ್ಲಿಯೂ ಪ್ರತಿಷ್ಠಾಪಿತವಾಗಿರಬಹುದು. ಇಲ್ಲವೆ ಹಲವಾರು ಊರುಗಳಿಂದ ಅಲ್ಲಿಗೆ ಹೋಗಲು ಬಹುದು. ಇಂತಹ ದೇವರಿಗೆ ಕುಲದೈವವೆನ್ನುತ್ತಾರೆ. ಕೆಲವೊಮ್ಮೆ ಶಿವ, ವಿಷ್ಣುವಿನಂತಹ ಪೌರಾಣಿಕ ದೇವತೆಗಳೂ ಗ್ರಾಮದೇವತೆಯಾಗಿರುವುದುಂಟು.

‘ಗುಳ್ಳವ್ವ ದೇವರಲ್ಲ; ಉಡಕಿ ಗಂಡಲ್ಲ’ ಎಂದು ನುಡಿಯುತ್ತಿದ್ದರೂ ಗುಳ್ಳವ್ವನ ಪೂಜೆ ನಿಂತಿಲ್ಲ. ಅದರಂತೆ ’ಅಂತೂ ಇಂತೂ ಕುಂತಿಮಕ್ಕಳಿಗೆ ರಾಜ್ಯವಿಲ್ಲ’, ’ಹ್ಯಾಂಡಿ ಪಾಂಡ್ರವ್ವ ಆಗಿದಿಯಲೊ’ ಎನ್ನುವ ಮಾತುಗಳು ಪಾಂಡವರನ್ನು ಕುರಿತು ಕೇಳಬರುತ್ತವೆ.

‘ಏನಸತ್ತೆ ಚನಮೀರಿ, ನಿನಗಂಡ ಮಲ್ಲೇಶಿ
ಬಳ್ಳೊಳ್ಳಿ ವನದಾಗ, ಉಳ್ಯಾಡಿ ಅಳತಾನ’

ಎಂದು ಗುಳ್ಳವ್ವನನ್ನು ಆಡುವಾಗ ಹಾಡುವುದುಂಟು. ಈ ಹಬ್ಬ ಬರುವುದು ಆಷಾಢಮಾಸದಲ್ಲಿ, ಇದನ್ನು ನೋಡಿದಾಘ ಮಹಾಕವಿ ಕಾಳಿದಾಸನು ’ಆಷಾಢಸ್ಯ ಪ್ರಥಮ ದಿವಸೇ….’ ಎಂದು ಪ್ರಾರಂಭಿಸುವ ’ಮೇಘದೂತ’ದ ನೆನಪಾಗದೆ ಇರದು. ಆದ್ದರಿಂದ ಇದೊಂದು ವಿಪ್ರಲಂಬ ಶೃಂಗಾರದ ದ್ಯೋತಕವೆನ್ನುವಂತೆ ಕಾಣುತ್ತದೆ.

ಇನ್ನು ದೀಪಾವಳಿಗೆ ಪಾಂಡ್ರವ್ವಗಳನ್ನು ಮಾಡುವುದುಂಟು. ಆಶ್ವೀನವದ ಚತುರ್ದಶಿಯಿಂದ ಪ್ರಾರಂಭಿಸಿ, ಅಮಾವಾಸ್ಯೆ, ಕಾರ್ತಿಕ ಶುದ್ಧ ಪ್ರತಿಪದೆಯವರೆಗೆ ಅಂದರೆ ಮೂರು ದಿವಸ ಈ ಪಾಂಡ್ರವ್ವಗಳನ್ನು ಹೆಂಡಿಯಿಂದ ಮಾಡಿ ಪೂಜಿಸುತ್ತಾರೆ. ಕೊನೆಯದಿನ ಕುರಿ ಬೆದರಿಸಿದ ಮೇಲೆ ಇವುಗಳನ್ನು ಮನೆಯ ಕಂಬಿಯ ಮೇಲೆ ಇಡುತ್ತಾರೆ. ಇದು ಪಾಂಡವರ ಸಿಂಹಾಸನಾರೋಹಣದ ಸಂಕೇತ. ಆದರೂ ಉತ್ತರ ಕರ್ನಾಟಕದ ಜನರು ಈ ವಿಷಯವಾಗಿ ’ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ; ಹ್ಯಾಂಡಿ ಪಾಂಡ್ರವ್ವ ಆಗಿದಿಯಲ್ಲೋ’ ಎಂದು ಪಾಂಡವರನ್ನು ಕುರಿತು ಅಪಹಾಸ್ಯದ ಮಾತುಗಳನ್ನಾಡುತ್ತಾರೆ. ಇವರ ದೃಷ್ಟಿಯಲ್ಲಿ ಪಾಂಡವರು ಪಾಂಡ್ರವ್ವಗಳು. ಎಂತಹ ಧ್ವನಿಪೂರ್ಣವಾದ ಹೇಳಿಕೆಯಿದು!

ಈ ಎರಡು ದೇವತೆಗಳು ಉತ್ತರ ಕರ್ನಾಟಕದವೇ ಆಗಿದ್ದು ಪೂಜೆಗೊಳ್ಳುವದೇನೋ ನಿಜ. ಆದರೆ ಇವಕ್ಕೆ ಇಂತಹ ಊರೆಂಬುದಿಲ್ಲ, ಇವಕ್ಕಾಗಿ ಪ್ರತ್ಯೇಕ ಗುಡಿಗಳಿಲ್ಲ. ಆದ್ದರಿಂದ ಇವು ಗ್ರಾಮದೇವತೆಗಳಲ್ಲ. ಇವುಗಳಂತೆ ಎಲ್ಲಿಯೂ ಗುಡಿ ಗುಂಡಾರುಗಳಿಲ್ಲದ ಆದರೂ ಉತ್ತರ ಕರ್ನಾಟಕದ ಪ್ರತಿ ಹಳ್ಳಿ, ಪಟ್ಟಣಗಳಲ್ಲಿಯೂ ಪ್ರತೀತವಾಗಿರುವ ವಿಶಿಷ್ಟ ದೇವತೆಯೇ ಜೋಕುಮಾರ. ಇವನ್ನು ಗ್ರಾಮದೇವತೆಯೆನ್ನಲಾಗದ್ದರಿಂದ ಗ್ರಾಮೀಣ ದೇವತೆಯೆಂದು ಕರೆಯಬಹುದು.

ಜೋಕುಮಾರನ ಸ್ವರೂಪ

ಜೋಕುಮಾರ ಮಣ್ಣಿನಿಂದ ಮಾಡಿದ ಪುರುಷ ಮೂರ್ತಿ. ಕೋರೆ ಮೀಸಿ, ಗಡುತರವಾದ ಹುಬ್ಬು, ದಪ್ಪ ತುಟಿಗಳು, ಉದ್ದ ಮೂಗು, ಸಾಮಾನ್ಯವಾದ ದೇಹಾ ಕೃತಿಯಲ್ಲಿ ಎದ್ದು ಕಾಣುವ ಜನನೇಂದ್ರಿಯ. ಕೆಲವು ಪ್ರದೇಶಗಳಲ್ಲಿ ಯಾವ ಬಣ್ಣವನ್ನೂ ಬಳಿಯದೆ ಹಣೆಯ ಮೇಲೆ ನಾಮವನ್ನು ಮಾತ್ರ ಹಚ್ಚಿ ಪಟಕಾ ಸುತ್ತಿರುತ್ತಾರೆ. ಇನ್ನು ಕೆಲವೆಡೆ ಹಳದಿ ಬಣ್ಣವನ್ನು ಹಚ್ಚುವುದುಂಟು.

ಹೆಂಡಿಯಿಂದ ಸಾರಿಸಿದ ಹೆಡಿಗೆಯಲ್ಲಿ ಕೂಡ್ರಿಸಿರುತ್ತಾರೆ. ಬೇವಿನ ತೊಪ್ಪಲನ್ನು ಹೆಡಿಗೆಯಲ್ಲಿರಿಸಿರುತ್ತಾರೆ. ಬಾಯಿಗೆ- ಕೆಲವೊಮ್ಮೆ ಜನನೇಂದ್ರಿಯಕ್ಕೆ – ಬೆಣ್ಣೆಯನ್ನು ಹಚ್ಚಿರುತ್ತಾರೆ. ಸಂಪ್ರದಾಯಕ್ಕನುಸರಿಸಿ ಮನೆಯಿಂದ ಮನೆಗೆ ಹೊತ್ತು ಕೊಂಡು ಒಯ್ಯುತ್ತಾರೆ.

ಜೋಕುಮಾರನನ್ನು ಆಡುವ ವಿಧಾನ:

ಜೋಕುಮಾರ ಕುಂಬಾರ ಮನೆಯಲ್ಲಿ ಹುಟ್ಟುತ್ತಾನೆ. ಹುಟ್ಟಿದ ದಿನವೇ ಅಂಬಿಗರು – ಕಬ್ಬಲಿಗರು, ತಳವಾರರು ಎಂದೂ ಪರ್ಯಾಯ ಹೆಸರುಗಳು – ಅವನನ್ನು ತೆಗೆದುಕೊಂಡು ಬರುತ್ತಾರೆ. ಮದೊಲನೆಯ ದಿನ ಗ್ರಾಮದ ಗೌಡರ ಮನೆಗೆ, ಹಿರಿಯ ರೈತರ ಮನೆಗೆ, ದೇಸಾಯಿ-ದೇಶಪಾಂಡೆಯವರ ಮನೆಗೆ ಹೋಗುವುದುಂಟು. ಕೆಲವು ಕಡೆಗೆ ಮೊಟ್ಟ ಮೊದಲಿಗೆ ಊರಿನ ಹಿರಿಯ ಮಠಕ್ಕೆ ಹೋಗುವ ಪದ್ಧತಿಯೂ ಇದೆ. ಆ ಮೇಲೆ ಊರಲ್ಲಿ ಉಳಿದವರ ಮನೆಗೆ ಹೋಗುತ್ತಾರೆ. ಮತ್ತೆ ಏಳನೆಯ ದಿನ ಮೊದಲನೆಯ ದಿನ ಹೋಗಿ ಬಂದ ಗೌಡರು, ಹಿರಿಯ ರೈತರು, ದೇಸಾಯಿ – ದೇಶಪಾಂಡೆಯವರ ಮನೆ, ಮಠ ಇವುಗಳಿಗೆ ಹೋಗಿ ಬರುತ್ತಾರೆ. ಹೀಗೆ ನಡೆಯುವುದು ಸಂಪ್ರದಾಯ. ಮೊದಲಿನಿಂದ ಯಾವ ಕ್ರಮದಲ್ಲಿ ಬಂದಿದೆಯೋ ಅದೇ ಕ್ರಮದಲ್ಲಿ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ, ಕ್ರಮ ವಿಪರ್ಯಾಸವಿಲ್ಲ.

ಬುಟ್ಟಿಯಲ್ಲಿ ಜೋಕುಮಾರನನ್ನು ಕೂಡ್ರಿಸಿಕೊಂಡು ಮನೆಯಿಂದ ಮನೆಗೆ ಹೋಗುವ ಹೆಣ್ಣುಮಕ್ಕಳು ಪ್ರತಿಮನೆಯಲ್ಲಿಯೂ ಜೋಕುಮಾರನನ್ನು ಕುರಿತು ಹಾಡುವರು. ಮನೆಯವರು ಜೋಳ, ರಾಗಿ, ಹುಣಸೆಹಣ್ಣು, ಮೆಣಸಿನಕಾಯಿ, ಕೊಬ್ಬರಿ ಮುಂತಾದವುಗಳನ್ನು ಕೊಡುವುದಲ್ಲದೆ ಕುಲಾಯಿ, ಕೊಂಚಿಗೆ ಮುಂತಾದ ಅರಿವೆಗಳನ್ನು ಕೊಡುವುದುಂಟು. ಹುಳಿಯಂಬಲಿ, ಹುಳಿನುಚ್ಚನ್ನು ನೈವೇದ್ಯವಾಗಿ ಅರ್ಪಿಸುವರು. ಮನೆಯಲ್ಲಿಯ ತಗಣಿ, ಚಿಕ್ಕಾಡುಗಳನ್ನು ಜೋಕುಮಾರನ ಬುಟ್ಟಿಯಲ್ಲಿ ಬಿಡುವರು. ಹೈನವುಳ್ಳ ಮನೆಯವರು ಬೆಣ್ಣೆಯನ್ನು ಕೊಡುವರು. ಇಲ್ಲದವರು ಎಣ್ಣೆಯನ್ನು ಕೊಡುವರು. ಇದಕ್ಕೆ ಪ್ರತಿಯಾಗಿ ಜೋಕುಮಾರನನ್ನಾಡಿಸುವ ಹೆಣ್ಣು ಮಕ್ಕಳು ಬೇವಿನ ತೊಪ್ಪಲನ್ನು, ಹುಳಿನುಚ್ಚನ್ನು ತಿರುಗು ಪ್ರಸಾದವನ್ನಾಗಿ ಕೊಡುವರು.

ಅವಸಾನ:

ಹೀಗೆ ಏಳು ದಿನಗಳವರೆಗೆ ಊರು ತುಂಬ ಮೆರೆದ ಅವನ ಅಂತ್ಯವು ಹುಣ್ಣಿವೆಯ ದಿವಸ ನಡೆಯುವುದು. ಊರೆಲ್ಲ ತಿರುಗಾಡಿದ ಮೇಲೆ ಹುಣ್ಣಿವೆಯ ರಾತ್ರಿಯಂದು ಹೊಲಗೇರಿಗೆ ಜೋಕುಮಾರನನ್ನು ಕೊಂಡೊಯ್ಯುವರು. ಅಗ ಜೋಕುಮಾರನನ್ನು ಗಂಡಸರೇ ಹೊತ್ತುಕೊಂಡಿರುವರು. ಹೊಲಗೇರಿಯ ಒಂದು ಪ್ರತಿಷ್ಠಿತ ಸ್ಥಾನದಲ್ಲಿ ಅವನನ್ನು ಕೂಡ್ರಿಸುವರು. ಸುತ್ತಲು ಬಾರಿಯ ಜಿಡ್ಡನ್ನು ಇಡುವರು. ಆಮೇಲೆ ಹೆಂಗಸರು ಅವನನ್ನು ಹಾಡುತ್ತ ಸುತ್ತುವರು. ಹೀಗೆ ಸುತ್ತುವಾಗ ಬಾರಿಯ ಜಿಡ್ಡು ಅವರ ಸೆರಗಿಗೆ ತಾಗಲು ಜೋಕುಮಾರನೇ ತಮ್ಮ ಹೆಣ್ಣು ಮಕ್ಕಳನ್ನು ಹಿಡಿದೆಳೆದನೆಂದು ಗಂಡಸರು ಒನಕೆಯಿಂದ ಅವನನ್ನು ಥಳಿಸುವರು. ಸತ್ತನೆಂದು ತಿಳಿದು ಅಗಸರು ಒಗೆಯುವ ಪಡಿಯ ಮೇಲೆ ಜೋಕುಮಾರನನ್ನು ಒಗೆದು ಬರುವರು. ಇನ್ನೂ ಪ್ರಾಣಯೋಗದಿರುವ ಅವನು ನೆರಳಿ-ನೆರಳಿ ಸಾಯುವನು. ಇದನ್ನು ನೋಡಿದ ಅಗಸರು ಮೂರು ದಿನಗಳವರೆಗೆ ಒಗೆಯುವುದನ್ನು ನಿಲ್ಲಿಸಿ ನಾಲ್ಕನೆಯ ದಿನದಿಂದ ಪ್ರಾರಂಭಿಸುವರು – ದಿನಕಾರ್ಯ ಮಾಡಿ.

ಇದು ಸಾಮಾನ್ಯವಾಗಿ ಇಂದು ನಡೆಯುತ್ತಿರುವ ರೀತಿ, ವಿಜಾಪುರ ಜಿಲ್ಲೆ ಮತ್ತು ಸುತ್ತು ಮುತ್ತಲು ರೂಢಿಯಲ್ಲಿರುವಂತಹುದು. ಇಲ್ಲಿಯೂ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಕೆಲವು ವಿಧಾನಗಳು ಬೇರೆ ಬೇರೆಯಾಗಿವೆ. ಆದರೂ ವಿಶಿಷ್ಟವಾಗಿ ಎದ್ದುಕಾಣುವ ರೂಢಿಯಲ್ಲಿಯ ಆಚರಣೆಗಳು, ಹೇಳಿಕೆಗಳು, ಜಾನಪದ ಪದ್ಯಗಳಲ್ಲಿ ಕಂಡುಬರುವ ವಿಷಯಗಳನ್ನು ಆಧರಿಸಿ ಜೋಕುಮಾರನ ಜೀವನವನ್ನು ಹೀಗೆ ಚಿತ್ರಿಸಬಹುದು.

ಜೋಕುಮಾರನ ಚರಿತ್ರೆ:

) ಆಯುಷ್ಯಜೋಕುಮಾರನಿಗೆ ಏಳು ದಿನಗಳ ಆಯುಷ್ಯವೆಂಬುದು ಜಾನಪದ ಹಾಡುಗಳಲ್ಲಿ ಬರುತ್ತದೆ.

ಹುಟ್ಟಿದಾ ಏಳ್ದಿನಕ ಪಟ್ಟಾವ ತಿರಗ್ಯಾನ
ದಿಟ್ಣಾದೇವಿ ನಿನಮಗ| ಕೊಮರಾಗ
ಬರೆದಾಳ ಸೆಟವಿ ಏಳ್ದಿನ||
ಆರೇಳು ದಿನಕೆ ಆಳಿದನೆ ರಾಜ್ಯವ
ದಿಟ್ಣಾದೇವಿ ನಿನ್ನ ಮಗ| ಕೊಮರಾಗ
ಕೊಟ್ಟಾರ ಏಳು ದಿನಗಳು ||
ಅಳುವುತ ಸಿರಿತಾನು ಬಳಲುತಲಿ ಬಂದಾಳು
ಅಳಕದಂಬಲಿ ತಡೆದಾವು| ನಮಕೊಮರ
ಕಳೆದೇಳು ದಿನಕ ಮರಣವ್ವ||

ಈ ಏಳು ದಿನಗಳಲ್ಲಿಯೇ ಅವನು ಪಟ್ಟಣವನ್ನು ತಿರುಗುತ್ತಾನೆ; ರಾಜ್ಯವಾಳುತ್ತಾನೆ. ಇವನ ಮರಣದಿಂದ ಸಿರಿಯು ದುಃಖಿಸುವಳೆಂಬುದು ಇವನು ಸಿರಿಗೆ ಅಧಿ ದೈವನೆಂಬುದನ್ನು ವ್ಯಕ್ತಪಡಿಸುತ್ತದ.ಎ

ಬೈಬಲ್ಲಿನಲ್ಲಿ ದೇವರು ಆರು ದಿನಗಳಲ್ಲಿ ಸೃಷ್ಟಿಯನ್ನು ಮಾಡಿದ ಮೇಲೆ ಒಂದು ದಿನ ವಿಶ್ರಾಂತಿಯನ್ನು ಪಡೆದನಂತೆ. ಅಂತೆಯೇ ರವಿವಾರವನ್ನು ಆ ವಿಶ್ರಾಂತಿಯ ದಿನವನ್ನಾಗಿ ಇರಿಸಿಕೊಂಡನಂತೆ. ಹಾಗೆಯೇ ಜೋಕುಮಾರನಿಗೆ ಏಳು ದಿನಗಳ ಆಯುಷ್ಯವನ್ನು ಹೇಳಿರುವಲ್ಲಿಯೂ ಇದೇ ಅರ್ಥವಿರಬಹುದೇ? ಆರು ದಿನಗಳಲ್ಲಿ ತಾನು ಮಾಡಬೇಕಾದ ಕಾರ್ಯಗಳನ್ನು ಮಾಡಿ ಮುಗಿಸುತ್ತಾನೆ. ಏಳನೆಯ ದಿನ ಮುಕ್ತನಾಗುತ್ತಾನೆ. ಒಂದು ವಾರದಲ್ಲಿ ಸೃಷ್ಟಿ, ಸ್ಥಿತಿ, ಲಯಗಳು ನಡೆಯುತ್ತವೆನ್ನುವದು ಇಲ್ಲಿ ಸಾಂಕೇತಿಕವಾಗಿ ಮೂಡಿ ಬಂದಿದೆ.

) ಹುಟ್ಟುಬಾಲ್ಯ: ಜೋಕುಮಾರನನ್ನು ಹಡೆಯುವಾಗ ತಾಯಿಗೆ ಬಯಕೆ ಯಾಗುವುದು ಸಹಜ. ಈ ಬಯಕೆಯು ಮುಂದೆ ಹುಟ್ಟಲಿರುವ ಮಗನ ಸ್ವಭಾವವನ್ನು ತಿಳಿಸುವುದೆನ್ನುವುದು ಒಂದು ನಂಬಿಕೆ. ಜೋಕುಮಾರನ ತಾಯಿ.

ಪುಂಡಿಪಲ್ಲೆ ನಂಜು ಕೊಂಡ ತಾನುಣಲಿಲ್ಲ
ದಂಡನಾಳವನ ಬಂಕ್ಯಾಗ| ನಮದೇವಿ
ಹೊಂಬಳಿಸರವ ಬಗಿಸ್ಯಾಳ ||
ಚಕ್ಕೋಚಿ ರಸಪಲ್ಲೆ, ಇಕ್ಕೊಂಡು ಉಣಲಿಲ್ಲ
ದಿಕ್ಕನಾಲವನ ಬಂಕ್ಯಾಗ| ನಮದೇವಿ
ಚೊಕ್ಕ ಮುತ್ತಿನ ಸರಬಗಿಸೆ||

ಪುಂಡಿಯ ಪಲ್ಲೆ, ಚಕ್ಕೋಚಿ ಇವುಗಳನ್ನು ಉಣಲಿಲ್ಲ; ಬಯಸಲಿಲ್ಲ; ಆದರೆ ಹೊಂಬಳಿಸರ ಮತ್ತು ಮುತ್ತಿನಸರಗಳನ್ನು ಬಯಸುತ್ತಾಳೆ. ಹೊಂಬಳಿಸರ (ಜರ ತಾರಿ ಬಟ್ಟೆ)ವನ್ನಾಗಿ, ಮುತ್ತಿನ ಸರವನ್ನಾಗಲಿ ಬಯಸಿರುವುದು ಮುಂದೆ ಹುಟ್ಟಲಿರುವ ಮಗುವಿನ ಸ್ವಭಾವವನ್ನೇ ತಿಳಿಸುವಂತಿದೆ, ಆತ ಹುಟ್ಟಿದಾಗ,

ಆರ‍್ಹರವಿ ನೀರ‍್ಹಾಕಿದರೆ ಆರು ಹರದಾರಿ ಹರದಾವು
ರಾಣಿಯ ಸೀರೆ ಉಡಕೊಟ್ಟು| ದೇವಿಯು
ರಾಜಕೊಮರಾನ ಹಡೆದಾಳ||

ಹೆತ್ತ ತಾಯಿಗೆ ಆರು ಹರವಿ ನೀರು ಹಾಕಿ, ರಾಣಿಯ ಸೀರೆಯನ್ನು ಉಡಿಸುತ್ತಾನೆ. ರಾಜಕುಮಾರನ ತಾಯಿಗೆ ಮಾಡಬೇಕಾದ ಕಾರ್ಯವೇ ಇದಲ್ಲವೆ? ಆ ಮಗುವಿಗಾಗಿ,

ಬಾಲ ಹುಟ್ಟಿದನಂತ ಬನಕ ತೊಟ್ಟಿಲ ಕಟ್ಟಿ
ಬಾಲಗನ್ನೇರು ನೆರದಾರ| ಹಾಡುತಲಿ
ಕೋಲೆನ್ನು ಜನಕ ಜಯಜಯವೊ||

ಎಂದು ಬನಕೆ ತೊಟ್ಟಿಲು ಕಟ್ಟಿ, ಕನ್ಯೆಯರು ಹಾಡಿ ಜಯ ಜಯಕಾರ ಮಾಡುತ್ತಾರೆ. ಇಂತಹ ಮಗು,

ಹಾಲ್ಬೇಡಿ ಹಲುಬ್ಯಾನ ಕೆನೆಬೇಡಿ ಕುಣಿದಾನ
ಮೊಸರಬೇಡಿ ಕೆಸರ ತುಳದಾನ| ಕೊಮರಾನ
ಮೊಸರಬೇಡಿ ಕೆಸರ ತುಳದಾನ| ಕೊಮರಾನ
ಕುಸುರಾದ ಗೆಜ್ಜಿ ಕೆಸರಾಗ್ಯೊ||

ಹೀಗೆ ಆಡುತ್ತಾನೆ. ಕನ್ಯೆಯರು ಬನಕೆ ತೊಟ್ಟಿಲನ್ನು ಕಟ್ಟಿ ಹಾಡಿದರೆ, ತಾಯಿ,

ಕಾಜಿನ ಕಂಬಕ ಕಟ್ಟಿದಳವ್ವಾ ತೊಟ್ಟಿಲ
ಕಾಳಿಗರಾಯನ ಮಿಣಿಮಾಡಿ| ನಮದೇವಿ
ರಾಜಕೊಮರಾನ ತೂಗ್ಯಾಳ||

ಕಾಜಿನ ಕಂಬಕ್ಕೆ ತೊಟ್ಟಿಲ ಕಟ್ಟಿ, ಕಾಳಿಂಗರಾಯನ ಮಣಿಮಾಡಿ ತೂಗಿದಳೆನುವುದು ಅವನ ಪೌರುಷವನ್ನು ವ್ಯಕ್ತಪಡಿಸುತ್ತದೆ.

ಬೆಳೆವ ಗಿಡದ ದ್ಯೋತಕ ಮೊಳಕೆಯಲ್ಲಿ ಎಂಬಂತೆ ಅವನ ಹುಟ್ಟುವಿಕೆಯನ್ನೆ ಸೂಚನೆಯಾಗುತ್ತದೆ. ಜನಪದರು ಅದನ್ನೆ

ಹಡೆದಾಳೆ ನಮದೇವಿ ಕುಡಿದಾಳೆ ಕಾರಾವ
ಕುಡುಗೋಲು ದೇವ ಹಡೆದಾಳೆ | ನಮದವಿ
ಸೂರ್ಯನ ಕಡಿಗೆ ಕೈಮುಗದ ||

ಎದ್ದಾಳೆ ನಮದೇವಿ ಕುಡಿದಾಳೆ ತುಪ್ಪಗಳ
ಹಿಡಿದಾಳೆ ಸೊಪ್ಪು ಬೇವುಗಳ | ನಮದೇವಿ
ಶುಕ್ರನಿಗೆಂದು ಕೈಮುಗಿದು ||

ಕಬ್ಬುಳ್ಳ ತ್ವಾಟದಾಗ ಇಬ್ಬನ್ನಿ ವರದ್ಹಾಂಗ
ಇಬ್ಬರು ತೂಗಲು ಮಲಗ್ಯಾನ | ನಮದೇವಿ
ಹೆಬ್ಬುಲಿ ಮಗನ ಹಡೆದಾಳು ||

ಹೀಗೆ ಹಾಡಿದ್ದಾರೆ. ಇಲ್ಲಿ ಬರುವ ಕುಡುಗೋಲು ಒಕ್ಕಲುತನವನ್ನು, ಬೇವು ಔಷಧವನ್ನು ಸೂಚಿಸುತ್ತವೆ. ಇಂದಿಗೂ ಹಡೆದಾಗ ಬೇವನ್ನು ಉಪಯೋಗಿಸುವುದು ರೂಢಿಯಾಗಿದೆ. ಇನ್ನು ಅವನು ಹೆಬ್ಬುಲಿ ಎನ್ನುವುದು ಅವನ ಶೌರ್ಯವನ್ನು ತೋರಿಸುತ್ತದೆ.

ನೆರಹೊರೆಯವರು ಇಂತಹ ಮುದ್ದಾದ ಮಗನನ್ನು ನೋಡಿ, ಕೊಂಡಾಡಿ, ಅವನ ಸ್ವರೂಪವನ್ನು ವರ್ಣಿಸಿ ತಾಯಿಗೆ ಅವನ ಹೆಸರನ್ನು ಹೇಳಲು ಕೇಳುತ್ತಾರೆ.

ಕುಂತಾಡು ಮಗನಿಗೆ ಕುಂಚಿಗೆ ಕುಲಾಯ
ಜೋಡಿ ಮುತ್ತವನ ಕಿವಿಯಾಗೆ | ಗೌರವ್ವ ನಿನ್ನ
ಓಡ್ಯಾಡು ಮಗನ ಹೆಸರ‍್ಹೇಳ||

ಓಡ್ಯಾಡು ಮಗನಿಗೆ ಮಾಗಾಯಿ ಸೀಲಾಯಿ
ಒಂಟಿ ಮುತ್ತವ್ನ ಕಿವಯಾಗ | ಗೌರವ್ವ ನಿನ್ನ
ಓಡ್ಯಾಡು ಮಗನ ಹೆಸರ‍್ಹೇಳ ||

ಅವರ ಈ ಕೇಳಿಕೆಗೆ ತಕ್ಕಂತೆ ತಾಯಿ ಉತ್ತರಿಸುತ್ತಾಳೆ.

ಜೋ ಎಂದ ಮುದ್ದಿಗೆ ಜೋ ಎಂದ ಕಂದಗ
ಜೋ ಎಂದು ಹೇಳಿ ಕರದೇನ| ಕೋಮರಗ
ಜೋಕುಮಾರನೆಂಬ ಹೆಸರನ್ನ||

) ಒಂದು ವಿನೋಧ: ಜೋಕುಮಾರನನ್ನು ಗೌರವ್ವ ಹಡೆದಿದ್ದಾಳೆ. ಅವಳ ತಮ್ಮ ನೋಡಲು ಬಂದಿದ್ದಾನೆ. ಆಗ ಅವಳು

ಅಕ್ಕ ಹಡೆದರೆ ಏನು ತಂದಿದಿ ಪದುಮಣ್ಣ
ಮುತ್ತಿನ ಚಂಡು ಮುಗಿಲಬಾಣ| ಕತ್ತಿಗೆ
ತಂದೀನಿ ಅರಳೆಲೆ ಜೋಕುಮಾರ||

ಏನು ತಂದಿರುವುದಾಗಿ ಕೇಳಿರುವುದಕ್ಕೆ ಮುತ್ತಿನ ಚಂಡು, ಮುಗಲ ಬಾಣ, ಅರಳೆಲೆ ಎಂದು ಹೇಳುತ್ತಾನೆ. ಇವು ತನಗಾಗಿ ಅಲ್ಲವೆನ್ನುವುದು ಅವಳಿಗೆ ಗೊತ್ತು, ಅಂತೆಯೇ,

ಮುತ್ತಿನ ಚಂಡು ಅಳಿಯನಿಗಾಯಿತು
ನನಗೇನು ತಂದೆ ನನತಮ್ಮ |

ಎಂದು ಕೇಳುತ್ತಾಳೆ ಅದಕ್ಕೆ ಅವನು,

ಆಕೆ ಹೂವಿನ ಸೀರಿ ಮೂರ ಹೂವಿನ ಕುಬಸ
ನಿನಗೆ ತಂದಿನಿ ಹಿರಿಯಕ್ಕ!

ಎಂದು ತಾನು ಅಕ್ಕನಿಗಾಗಿ ತಂದ ಸೀರೆ-ಕುಪ್ಪಸಗಳನ್ನು ವರ್ಣಿಸುತ್ತಾನೆ. ಅವಳಿಗೆ ಕೊಡುತ್ತಾನೆ-

ಗಂಜಿಯ ಸೀರೆ ಉಟ್ಟು ಗಂಧದ ಬೊಟ್ಟು ಇಟ್ಟು
ಅಂಗಳದಾಗ ಸುಳಿದಾಡೆ|

ಅವಳು ಅವನ್ನು ಧರಿಸಿ ಅಂಗಳದಲ್ಲಿ ಸುಳಿದಾಡುತ್ತಾಳೆ. ತವರು ಮನೆಯ ಅಭಿಮಾನವೇ ಅಂತಹುದಲ್ಲವೆ? ಇದನ್ನು ನೋಡಿದ ಸರಿಕರು ಹಾಸ್ಯ ಮಾಡಿರಬೇಕು. ಅಂತೆಯೇ ಅವರು,

ಅಂಗಳದಾಗ ಸುಳಿದಾಡು ತಾಯಿ ನೀನು
ಅಂಗಿಯ ತಾ ನಮ್ಮ ಕೊಮರಗ ||

ಪಟವಾಳ ಸೀರೆಯುಟ್ಟು ಮುತ್ತಿನ ಬೊಟ್ಟಿಟ್ಟು
ಪಡಸಾಲೆಗೆ ಓಡಾಡು ತಾಯಿ ನೀನು | ಗೌರವ್ವ
ಟೊಪ್ಪಿಗೆ ತಾ ನಮ್ಮ ಕೊಮರಗ ||

ಕುಮಾರನಿಗಾಗಿ ಅಂಗಿ, ಟೊಪ್ಪಿಗೆಯನ್ನು ಕೇಳುತ್ತಾರೆ.

ಈ ಸಂವಾದ ಸಹಜವಾಗಿದೆ. ಸಾಮಾನ್ಯ ವ್ಯವಹಾರದಲ್ಲಿ ನಡೆಯುವುದೇ ಇಲ್ಲಿ ಮೂಡಿ ಬಂದಿದೆ. ಅಕ್ಕ-ತಮ್ಮಂದಿರಲ್ಲಿರುವ ಪ್ರೀತಿ, ಆ ಮಗುವಿನ ಮೇಲಿರುವ ನೆರೆಹೊರೆಯವರ ಅಕ್ಕರೆ, ಎದ್ದು ಕಾಣುತ್ತದೆ. ವಿನೋದ ಪೂರ್ಣವಾಗಿರುವುದರಿಂದ ಮೋಜೆನಿಸುತ್ತದೆ.

) ಜನರ ಅನುಕಂಪ: ಜೋಕುಮಾರ ಎಲ್ಲರಿಗೂ ಪ್ರಿಯನಾದವ. ಅವನ ಸಲುವಾಗಿ ಎಲ್ಲರಿಗೂ ಅನುಕಂಪ. ಅಂತೆಯೇ,

ಹಾದ್ಯಾಗ ಅಳುವೋನೆ ಬೀದ್ಯಾಗ ಅಳುವೋನೆ
ಹೋಗೋರ ಕಂಡು ಅಳುವೋನೆ | ನಿಮ್ಮವ್ವ
ಬಾಳೆಯ ಹಣ್ಣು ಕಳುವ್ಯಾಳ ||

ಹಟ್ಯಾಗ ಅಳುವೋನೆ ಬಟ್ಯಾಗ ಅಳುವೋನೆ
ಹೋಗೋರ ಕಂಡು ಅಳುವೋನೆ | ನಿಮ್ಮವ್ವ
ಕಿತ್ತಳಿ ಹಣ್ಣ ಕಳುವ್ಯಾಳ ||

ಎಂದು ಹಣ್ಣುಕೊಟ್ಟು ಅಳುವ ಅವನನ್ನು ರಮಿಸುತ್ತಾರೆ. ಇದರಿಂದ ಅವನೂ ತೃಪ್ತನಾಗುತ್ತಾನೆ. ಅದರಂತೆ ಗೌಡರು ಕೊಟ್ಟ ಅಂಬಲಿಯೂ ಅವನಿಗೆ ಒಪ್ಪಿತವೆ.

ಅಂಬಲಿ ಉಂಡಾನ ಗೊಂಗಡಿ ಹೊದ್ದಾನ
ಅಂಬೆಗಾಲ್ಹಚ್ಚಿ ನಡದಾನ | ಗೌಡರ
ನಾಣ್ಯೇರು ನೀಡಿ ಕಳಿವ್ಯಾರ ||

) ಯೌವನಜೋಕುಮಾರನ ರೂಪು ಸುಂದರವಾದುದು. ಬಾಲ್ಯ ಕಳೆದು ತಾರುಣ್ಯ ಆವರಿಸುತ್ತಿದ್ದಂತೆ (ಕೆಲ ದಿನಗಳಲ್ಲಿಯೆ) ಇನ್ನು ಕಳೆಯೇತ್ತರುದೆ. ಅದು,

ಹಳ್ಳಕ್ಕ ತಾ  ಹೋಗಿ ಸಣ್ಣವ್ನ ಇಟ್ಟಾನ
ಕನ್ನುಡಿ ತೆಗೆದು ಮೊಕನೋಡೊ | ಕೊಮರಾಮ
ಕಣ್ಣು ಮೂಗಿಲೆ ಕರಚಲುವ ||

ಹೀಗೆ ವ್ಯಕ್ತವಾಗಿದೆ

ತರುಣನಾದ ಅವನನ್ನು ಜನಪದರು ಎರಡು ರೀತಿಯಾಗಿ ಚಿತ್ರಿಸಿದ್ದಾರೆ

) ಶೌರ್ಯ:

ಕಾದನೆ ಮಳಲಾಗೆ ಕತ್ತಿಯ ನೆಲನಾಕಿ
ಹೊಕ್ಕನಲ್ಲವ್ವ ರಣದಾಗೆ | ಗೌರವ್ವ
ಒಪ್ಪುವ ಮಗನ ಕರತಾರೆ ||

ಜೋಕಮಾರನೆಂಬವನು ಚಂದಗೇಡಿ ಸಿರಿಗೇಡಿ
ದಂಡಿನ್ಯಾಗ ನಮ್ಮ ಬಿಟ್ಟಬಂದ | ಮದಿಗರ
ಹರಳಯ್ಯ ಹೋಗಿ ಕರತಂದ ||

ಹೀಗೆ ಅವನು ರಣದಲ್ಲಿ ಪ್ರವೇಶಿಸುವುದು, ದಂಡಿನಲ್ಲಿ ಬಿಟ್ಟು ಬರುವುದು ಇವು ಅವನ ಶೌರ್ಯವನ್ನು ವ್ಯಕ್ತಪಡಿಸುತ್ತವೆ. ಇಷ್ಟೇ ಅಲ್ಲ ಅವನು,

ಆರೇಳು ದಿನಕೇನೆ ಆಳಿದನೆ ರಾಜ್ಯವ
ದಿರ್ನೆದೇವಿ ನಿನಮಗ| ಕೊಮರಾಗೆ
ತೋರ್ಯಾರೆ ಏಳ ದಿನಗಳ||

ಏಳು ದಿನಗಳಲ್ಲಿಯೇ ರಾಜ್ಯವನ್ನಾಳಿದನೆಂದು ಈ ಪದ್ಯದಲ್ಲಿ ವ್ಯಕ್ತವಾಗಿದೆ. ಇದರಿಂದ ಜೋಕುಮಾರನು ವೀರನಾಗಿದ್ದನೆಂಬುದು ತಿಳಿದು ಬರುತ್ತದೆ.

ii) ಕಾಮುಕ:

ನಿಂಬೆಯ ಹಣ್ಣನ್ನ ಅಂಬರಕೆ ಈಡಾಡುತ
ತುಂಬಿದ ತೋಳ ತಿರುಗುತ | ಜೋಕುಮಾರ
ರಂಬೆಯರ ಮನೆಗೆ ನಡೆತಂದ ||
ಬಾಳೆಯ ಹಣ್ಣನ್ನ ಬಾಜಾರಕ ಈಡಾಡುತ
ಬಾಗೀದ ತೋಳ ತಿರುಗುತ | ಜೋಕುಮಾರ
ಬಾಲೆಯರ ಮನೆಗೆ ನಡೆತಂದ ||

ಹೀಗೆ ರಂಬೆಯರ ಮನೆಗೂ ಬಾಲೆಯರ ಮನೆಗೂ ಹೋಗುತ್ತಾನೆ. ಇಷ್ಟೇ ಅಲ್ಲ ಅವನ ಉಪಟಳ ಹೆಚ್ಚಾಗುತ್ತದೆ. ಅಂತೆಯೇ ಅವನ ತಾಯಿಗೆ,

ಹಾಗಲಾ ಬಳ್ಳಿಯು ಬಾಗಲಿಗೆ ಎದ್ದಾವು
ನಾರಿ ಗೌರವ್ವ ಇವನೋಡೆ | ನಿನಮಗೆ
ಹಾಗಲ್ಕಾಯಿಗೆ ಗುರಿಯಿಟ್ಟ ||

ಕುಂಬಳ ಬಳ್ಳಿ ಅಂಗಳಕೆ ಎದ್ದಾವು
ರಂಬೆ ಗೌರವ್ವ ಇವನೊಡೆ | ನಿನಮಗ
ಕುಂಬಳ ಕಾಯಿಗೆ ಗುರಿಯಿಟ್ಟ ||

ಎಂದು ದೂರು ಕೊಡುತ್ತಾರೆ. ಜಾನಪದ ಸಾಹಿತ್ಯದಲ್ಲಿ ಮೂಡಿಬಂದ ಧ್ವನಿಗೆ ಇವು ಉತ್ತಮ ನಿದರ್ಶನಗಳಾಗಿವೆ.

ಈ ಕಾಮುಕತೆಯ ವಿಪರೀತತೆಯೂ ಕೆಲವು ಪದ್ಯಗಳಲ್ಲಿ ಬರುತ್ತದೆ.

ಜೋಕುಮಾರನೆಂಬವನು ಗೌರವ್ನ ಮಗನವ್ವ
ಹುಟ್ಟು ತಲೆ ತಾಯ ಭ್ರಮಿಸ್ಯಾನೆ | ಗೌರವ್ವ
ಎತ್ಹಾಕಿ ಕೊರಳ ಮುರಿದಾಳ ||

ಎತ್ಹಾಕಿ ಕೊರಳ ಮುರಿದಾಳ ಗೌರವ್ವ
ಬಿಟ್ಟಾಲ ಹರಿವ ನೀರಿಗೆ | ಜೋಕಮಾರ
ಸಿಕ್ಕಾನಂಬಿಗರ ಬಲಿಯಾಗ ||

ಜೋಕಮಾರನೆಂಬವನು ಕುಕುಬಡ್ಡೆ ಮಗ ಕಾಣೆ
ಉಕ್ಕರಿಸಿ ತಾಯ ಹಿಡಕೊಂಡ | ಗೌರವ್ವ
ಲೋಕ್ದಂತ ಮಗನ ಹಡಿಲಿಲ್ಲ ||

ಹೀಗೆ ತಾಯಿಯನ್ನೇ ಮೋಹಿಸುವಷ್ಟರ ಮಟ್ಟಿಗೆ ಅವನ ಕಾಮುಕತೆ ಮುಂದುವರಿಯುತ್ತದೆ. ತನ್ನನ್ನೇ ಮೋಹಿಸಿದ ಮಗನನ್ನು ತಾಯಿ ಕುತ್ತಿಗೆ ಹಿಸುಕಿ ಹೊಳೆಯಲ್ಲಿ ಹಾಕಲಾಗಿ ಆ ಮಗು ಅಂಬಿಗರಿಗೆ ದೊರೆಯುವುದಂತೆ. ಈ ಕಥೆ ಕೆಲವು ಪದ್ಯಗಳಲ್ಲಿ ದೊರೆಯುವುದಾದರೂ ರೂಢಿಯಲ್ಲಿ ಇಲ್ಲ.

) ದಾಂಪತ್ಯ : ಜೋಕುಮಾರನಿಗೂ ಗುಳ್ಳವ್ವನಿಗೂ ಸಂಬಂಧವನ್ನು ಕಲ್ಪಿಸಿ ಕೆಲವು ಪದ್ಯಗಳು ದೊರೆಯುತ್ತವೆ.

ಅಳಕುತ ಬಳಕುತ ಬಂದಾಳ ಗುಳಕವ್ವ
ಬಂದ ನಿಂತಾಳ ಅಗಸ್ಯಾಗ | ಗೌಡರು
ತಂದ ಇಳಿಸ್ಯಾರ ಸೆಳಿಮಂಚ ||

ಕೊಮರ ತಾ ಬರ್ತಾನಂತ ಕೋಣೀಯ ಸಾರಿಸಿ
ಜಣಚಕ್ಕಲಗಿತ್ತಿ ಚದರೀಯ | ಮನಿಯಾಗ
ಒಂದಾರ ಜಾವ ಇರಲಿಲ್ಲ ||

ಈ ಪದ್ಯಗಳಿಂದ ಗುಳ್ಳವ್ವ- ಜೋಕುಮಾರರ ಸಂಬಂಧ ವ್ಯಕ್ತವಾಗುತ್ತಿದ್ದರೂ ಅವನು ಅವಳೊಡನೆ ಇರಲಿಲ್ಲವೆನ್ನುವುದು ತಿಳಿದು ಬರುತ್ತದೆ. ಈ ವಿಷಯವಾಗಿ ರೂಢಿಯೂ ಒಪ್ಪಿಗೆಯನ್ನು ಸೂಚಿಸುತ್ತದೆ. ಅಲ್ಲದೆ ’ಗುಳ್ಳವಂದ ಹರದರೇನು ಜೋಕಮಾರಂದ ಮುರದರೇನು’ ಎಂಬಂತೆ ತೀರ ಹಗುರವಾಗಿ ಇವರ ಸಂಬಂಧವನ್ನು ಕಾಣುವ ಅಶ್ಲೀಲ ನುಡಿಗಳೂ ಜನರ ಬಾಯಲ್ಲಿವೆ.

) ಮಳೆಯ ದೇವತೆ: ಒಂದೆಡೆಗೆ ಜೋಕುಮಾರನ ಕಾಮುಕನಾಗಿ ಕಾಣುತ್ತಿದ್ದರೆ ಇನ್ನೊಂದೆಡೆಗೆ ಅವನೊಬ್ಬ ಮಳೆಯ ದೇವತೆ, ಸಂಪತ್ತಿನ ದೇವತೆಯಾಗಿಯೂ ಕಾಣುತ್ತಾನೆ. ಈ ವಿಷಯವಾಗಿರುವಷ್ಟು ಪದ್ಯಗಳು ಮತ್ತೆ ಯಾವ ವಿಷಯವನ್ನು ಕುರಿತಾಗಿಯೂ ಇಲ್ಲ. ಮಳೆ ಹೋಗಿ ಜನ ಕಂಗಾಲಾಗಿದ್ದಾರೆ.

ಮಾಡಿದ ಪೈರು ಹಾಡಿ ಹೋಗುತಾವೆ
ತಾಯವ್ವ ಹಿಟ್ಟು ಕೊಡವಳ್ಳ | ಶಿವರಾಯ
ಉತ್ತರಿ ಮಳೆಯ ಕರುಣಿಸೊ ||

ಬಿತ್ತಿದ ಪೈರು ಬತ್ತಿ ಹೋಗುತಾವೆ
ಹೆತ್ತವ ಹಿಟ್ಟು ಕೊಡವಳ್ಳ | ಶಿವರಾಯ
ಆರಿದ್ರಾ ಮಳೆಯ ಕರುಣಿಸೊ ||

ಎಂದು ದೇವರಲ್ಲಿ ಮೊರೆಯಿಡುತ್ತಾರೆ. ಈ ಮೊರೆತವನ್ನು ಕೇಳಿದ ಜೋಕುಮಾರ

ಕಟ್ಟೆಯ ಹತ್ಯಾನೆ ಹೊತ್ತುಗಳ ನೋಡ್ಯಾನೆ
ಹತ್ಯಾನೆ ನೀಲ ಕುದುರೆಯ | ನಮಕೊಮರ
ಕೈಬೀಸಿ ಮಳೆಯ ಕರೆದಾನೆ ||

ಏರಿಯ ಹತ್ಯಾನೆ ಯಾಳ್ಯೇವ ನೋಡ್ಯಾನೆ
ಏರ‍್ಯಾನೆ ನೀಲ ಕುದುರೆಯ | ನಮಕೊಮರ
ಶಲ್ಯೇವ ಬೀಸಿ ಕರೆದಾನೆ ||

ಹೀಗೆ ಮಳೆಯನ್ನು ಸುರಿಸುತ್ತಾನೆ. ಇದರಿಂದ ಹೊಳೆ-ಹಳ್ಳಗಳು ಹರಿಯ ತೊಡಗುತ್ತವೆ. ಕೆರೆ-ಬಾವಿಗಳು ತುಂಬು ತುಳುಕುತ್ತವೆ. ಇದನ್ನು ನೋಡಲು ಜೋಕುಮಾರ ಹೋಗುತ್ತಾನೆ. ಆಗ

ಕರುಣುಳ್ಳ ಕೊಮರಾವ ಕೆರೆನೋಡ ಹೋದರ
ಕರದು ಕಾರ್ಗಲ ಮಳೆಬಂದ| ಗೌಡರು
ಕರೆದು ಹಚ್ಚಡ ಹೊಚ್ಯಾರ||

ಕೆಂಚ ನಮ ಕೊಮರಾಮ ಬೆಂಚೀಯ ನೋಡಹ್ವೋದ
ಮಿಂಚ್ಯಾವ ಕಾರಮಳೆ ಬಂದ| ಗೌಡರು
ಕೆಂಪು ಹಚ್ಚಡ ಹೊಚ್ಯಾರ||

ಇನ್ನೂ ಹೀಗೆ ಜೋರಾಗಿ ಮಳೆ ಬರಲು ಗೌಡರು ಅದರಿಂದ ರಕ್ಷಿಸಿಕೊಳ್ಳಲು ಹಚ್ಚಡವನ್ನು ಹೊದಿಸುತ್ತಾರೆ. ಆ ಮಳೆ,

ಇದ್ದಲಿ ಮಸಿಯಂಗೆ ಎದ್ದರ ಮಳೆಮಾಡ
ಗದ್ದರಿಸಿ ಮೂರೇ ಹರಿಮಿಂಚು | ರಾಯರ
ಗದ್ದೆಯ ಹೊಲಕೆ ಹದಮಳೆ |

ಕಟ್ಟಯ ಹೊಲನವ್ವ ಬುಟ್ಟನ ತೆನೆಯವ್ವ

ಯಾವ ಶೆಟ್ಟರ ಹೊಲನವ್ವ | ಗೌಡರ
ಗೋದಿಯ ಹೊಲಕ ಹದಮಳೆ ||

ಹೀಗೆ ಗದ್ದೆಯ ಹೊಲ, ಕಟ್ಟೆಯ ಹೊಲ, ಗೋದಿಯ ಹೊಲಗಳಲ್ಲಿ ಆಗಿ ಸಮೃದ್ಧಿಯನ್ನು ತರುತ್ತದೆ. ಇದರಿಂದ,

ಅಡ್ಡಡ್ಡ ಮಳಿಬಂದ ದೊಡ್ಡೊಡ್ಡ ಕೆರಿತುಂಬಿ
ಗೊಡ್ಡಗೊಳೆಲ್ಲ ಹೈನಾಗಿ | ಗೌಡರ
ಸೆಡ್ಡೆದ ಮ್ಯಾಲ ಸಿರಿಬಂದ ||

ಹಾಸ್ಹಾಸಿ  ಮಳಿಬಡದ ಬೀಸ್ಬೀಸಿ ಕೆರಿತುಂಬಿ
ಬಾಸಿಂಗದಂತ ತೆನಿಬಾಗಿ || ಗೌಡರ
ರಾಸಿಯ ಮ್ಯಾಲ ಸಿರಿಬಂದ ||

ಹೀಗೆ ಎಲ್ಲೆಡೆಗೂ ಸಿರಿ ತುಂಬಿ ತುಳುಕುತ್ತದೆ. ಅವನು ಎಲ್ಲಿ ಅಡಿಯಿಡುತ್ತಾನೆಯೊ ಅಲ್ಲಿ ಸಂಪದಭಿವೃದ್ಧಿ, ಅಂಥವನು ಸಂತೋಷದಿಂದ ಚಂಡಾಡಿದರೆ ಕೇಳಬೇಕೆ?

ಬಿತ್ತಿದ ಹೊಲದಾಗ ಹೊಕ್ಕ ಚಂಡಾಡ್ಯಾನ
ನಿಸ್ತ್ರೇರ ಮಗನ ಕೊಮರಯ್ಯ| ಚೆಂಡಾಡಿ
ಬತ್ತ ಸಾವಿರವೆ ಬೆಳೆದಾವೆ||

ಹಾರೂರ ಕೇರ್ಯಾಗ ಹಾರಿ ಚೆಂಡಾಡ್ಯಾನ
ನಾರಿ ನಿನಮಗ ಕೊಮರಯ್ಯ | ಚೆಂಡಾಡಿ
ಊರ ಭೂಮೆಲ್ಲ ಬೆಳಿಬಂದ ||

ಒಕ್ಕಲಗೇರಿ ತಾ ಹೊಕ್ಕು ಚೆಂಡಾಡ್ಯಾನ
ಅಕ್ಕನ ಮಗನು ಕೊಮರಯ್ಯ | ಆಡಿದರ
ಅಕ್ಕಿ ನಾಡೆಲ್ಲ ಬೆಳದಾವ ||

ಹೀಗೆ ಸಾವಿರ ಮಡಿಯಾಗಿ ಬೆಳೆಯುತ್ತದೆ.

ಈ ಹಿನ್ನೆಲೆಯಲ್ಲಿಯೇ ಜೋಕುಮಾರನು ಕುಂಬಾರ ಮನೆಯಲ್ಲಿ ಕುಂಭದಲ್ಲಿ ಹುಟ್ಟುವುದು, ಅಂಬಿಗರಿಂದ ಊರು-ಕೇರಿಗಳಲ್ಲಿ ತಿರುಗುವುದು, ಕೊನೆಗೆ ಅಗಸರ ಪಡಿಯಲ್ಲಿ ಸಾಯುವುದು, ಇವುಗಳನ್ನು ನೋಡಿದರೆ ಸೃಷ್ಟಿಕಾರ್ಯಕ್ಕೆ ಬೇಕಾಗುವ ನೀರನ್ನು ಅನುಸರಿಸಿಕೊಂಡು ಹೋಗಿರುವುದನ್ನು ಕಾಣುತ್ತೇವೆ.