) ಫಲ ದೇವತೆ : ಪುರುಷ ಜನನೇಂದ್ರಿಯವೇ ಎದ್ದು ಕಾಣುವಂತಿರುವ ಜೋಕುಮಾರನು ಮಕ್ಕಳ ಕೊಡುವ ದೇವರೆಂದು ಪ್ರಸಿದ್ಧನಾಗಿದ್ದಾನೆ. ಮಕ್ಕಳಾಗದವರು ಇವನನ್ನು ಆರಾಧಿಸುವುದೂ ಉಂಟು, ಇದಕ್ಕೆ:

ಪುಂಡಿಯ ಸೊಪ್ಪಿಗೆ ಹೋದಾಳೆ ಹನುಮವ್ವ
ಕುಂಡಿಲ್ಲವಮತ ಅಳತಾಳ | ನಮಕೊಮರ
ಕುಂಡಿ ಮಾಡಿ ಮನಿಗೆ ಕಳುವ್ಯಾನ ||

ಬಸಲಿಕ್ಕ ಸೊಪ್ಪಿಗೆ ಹೋದಾಳ ಹನುಮವ್ವ
ಬಸುರಿಲ್ಲವಂತ ಅಳತಾಳ | ನಮಕೊಮರ
ಬಸರ್ಮಾಡಿ ಮನಿಗೆ ಕಳುವ್ಯಾನ ||

ಈ ಎರಡು ಪದ್ಯಗಳು ನಿದರ್ಶನವಾಗಿವೆ. ಇವು ಅಶ್ಲೀಲವೆನಿಸುತ್ತಿದ್ದರೂ ಜೋಕುಮಾರ ಫಲದೇವತೆಯೆನ್ನುವುದಕ್ಕೆ ಸಾಕ್ಷಿಭೂತವಾಗಿವೆ. (ಬಹುತರವಾಗಿ ಈ ನಂಬುಗೆಯೇ ಡಾ. ಚಂದ್ರಶೆಖರ ಕಂಬಾರರು ’ಜೋಕುಮಾರಸ್ವಾಮಿ’ ನಾಕಟವನ್ನು ಬರೆಯುವುದಕ್ಕೆ ಪ್ರೇರಕವಾಗಿರಬೇಕು).

ಇಂತಹ ದೇವತೆಯು ಬೇರೆಡೆಗಳಲ್ಲಿರುವುದಾಗಿ ತಿಳಿದು ಬರುತ್ತದೆ. ಬ್ಯಾಚಸ್ ಎಂಬುದು ಗ್ರೀಕಿನಲ್ಲಿ ಫಲದೇವತೆ.

) ಬೇಡಿಕೆ : ಜೋಕುಮಾರನನ್ನು ಹೊತ್ತು ತರುವ ಹೆಣ್ಣು ಮಕ್ಕಳು ಮನೆ-ಮನೆಯಲ್ಲಿ ಮಾಡಿಕೊಳ್ಳುವ ವಿಜ್ಞಾಪನೆ ಸುಂದರವಾಗಿದೆ.

ಜಂಗಮ ನಾವಲ್ಲ ಜೋಗಯ್ಯ ನಾವಲ್ಲ
ತಿಂಗಳ್ಗೆ ಬರುವ ತಿರುಕಲ್ಲ | ತಾಯವ್ವ
ತುಂಬಿ ಮೊರಜೋಳ ನೀಡವ್ವ ||

ಗಂಜಿ ನೀಡು ನನ್ನ ಬಂದಿಯ ಕೈಯವ್ವ
ಗಂಜೀ ಹಚ್ಚಡದ ಗೌಡಗೆ | ಕೊಮರಾಗ
ಗಂಜಿ ನೀಡಿ ಕಳುಹವ್ವ ||

ಬೆಣ್ಣಿಯ ತಾಮುದ್ದಿ, ಕನ್ಯುಳ್ಳ ಕೊಮರಾಗ
ಹೊನ್ನ ಮಾಳಿಗೆಯ ಮನೆಯವ್ವ| ಕೆನೆಮೊಸರ
ಬಿನ್ನಾಯ ಹೇಳ ಕೊಮರಾಗ ||

ವೀಳ್ಯೇವ ಕೊಡುವ ನನ್ನ ಬಾಲಾಕೊಮರಾಗ
ಕೆಲ ಮಾಳಿಗೆಯ ಮನೆಯವ್ವ | ತಾಯವ್ವ
ವೀಳ್ಯೇವ ಕೊಟ್ಟು ಕಳುಹವ್ವಾ||

ಹಳಲ ಅಂಬಲಿ ಬಾರೇ ಬಳಲ ಕೋಟೇ ಬಾರೇ
ಸುಳಿಬಾಳಿದೆಲೆಯ ಕೊಯ್ತಾರೆ | ತಾಯವ್ವ
ಬಾಲಯ್ಯಗ್ಹೊಸ್ತ ಎಡಿಮಾಡ ||

ಹೀಗೆ ತಾವು ಸಾಮಾನ್ಯರಲ್ಲವಾದ್ದರಿಂದ ಮೊರತುಂಬಿ ಜೋಳ ನೀಡುವಂತೆ ಕೇಳಿಕೊಳ್ಳುತ್ತಾರೆ. ಅವರ ದೃಷ್ಟಿಯಲ್ಲಿ ಜೋಕುಮಾರ ಗೌಡ; ಕನ್ಯುಳ್ಳವ, ಅವರ ಬೇಡಿಕೆ ಫಲಕಾರಿಯಾಗುತ್ತದೆ. ಆ ಮುತ್ತೈದೆ,

ಕಲ್ಲಳಿಗಿ ಕಬ್ಬಿಣದ, ಮೆಟ್ಹತ್ತಿ ಏರ್ಯಾಳ
ಬಳಕುತ ಬಳತ ತೆಗೆದಾಳ | ತಾಯವ್ವ
ಬಿಳಿಯೆಳ್ಳು ತುಂಬಿ ನೀಡ್ಯಾಳ ||

ಹೀಗೆ ಮೊರತುಂಬಿ ನೀಡುತ್ತಾಳೆ. ಪಡೆದುಕೊಂಡವರು ಕೃತಜ್ಞರಾಗುತ್ತಾರೆ. ಆ ಕೃತಜ್ಞತೆಯನ್ನು,

ಹಾಲ ತಾ ಮಗಿತುಂಬಿ ಬಾಲನಮ್ಮ ಕೊಮರಾಗ
ಮೇಲಮಾಳಿಗೆ ಮನೆಯವ್ವ | ನೀ ಕೊಟ್ರ
ಮೇಲಾಗಿ ಬೆಳಿಲಿ ನಿಂಭೂಮಿ ||

ಎಂದು ವ್ಯಕ್ತಪಡಿಸಿದ್ದಾರೆ. ಅವರ ಭೂಮಿ ಬೆಳೆಯಲೆಂದು ಹಾರೈಸುತ್ತಾರೆ.

೧೦) ಅಂತ್ಯ : ಇವನ ಪುಂಡಾಟಿಕೆಗೆ ಜನ ಬೇಸತ್ತಿರಬೇಕು. ಆದ್ದರಿಂದಲೆ ಅವನನ್ನು ಕಲ್ಲಿನಿಂದ ಹೊಡೆದು ಅಗಸರ ಪಡೆಯಲ್ಲಿ ಒಗೆಯುತ್ತಾರೆ.

ಪುಂಡನ ಪುಂಡಾಟ್ಕ ಹಿಂಡಮಂದಿ ಕೂಡ್ಯಾರ
ಕಂಡಲ್ಲಿ ಕಲ್ಲ ಬಡಿದಾರ | ರಾತ್ರ್ಯಾಗ
ಅಗಸರ ಕಲ್ಲಾಗ ಒಗದಾರ ||

ನರಳಿ ನರಳಿ ಅಲ್ಲಿಯೇ ಸಾಯುತ್ತಾನೆ. ಈ ನರಳುವಿಕೆಯನ್ನು ಕೇಳಿಯೇ ಅಗಸರು ಒಗೆಯುವುದನ್ನು ನಿಲ್ಲಿಸುತ್ತಾರೆ.

೧೧) ಹಾರೈಕೆ : ಜೋಕುಮಾರನ ಬಗ್ಗೆ ಈ ರೀತಿಯ ಕೆಟ್ಟ ಹೇಳಿಕೆಗಳು ನಂಬುಗೆಗಳು ಇದ್ದರೂ ಅವನನ್ನು,

ಜಯ ಜಯ ಕೊಮರಾಗ ಜಯ ಜಯ ಹಾಡಿರೆ
ಜಯ ಜಯ ಭೂಮಿ ಬೆಳಸಿಗೆ | ಹಡದವ್ವ
ಜಯ ಜಯ ಇರಲಿ ಜಗದಾಗ ||

ಹಾರೈಸುತ್ತಾರೆ. ಅವನು ಭೂಮಿಯ ಬೆಳಸಲ್ಲವೆ? ಮತ್ತೂ

ಜೋಕುಮಾರ ಹುಟ್ಟಲಿ ಲೋಕವು ಬೆಳೆಯಲಿ
ಆಕಳ  ಹಾಲ ಕರೆಯಲಿ | ಹರಿಯಾಗ
ತಾತೆದ್ದು ಮಸರ ಕಡೆಯಲಿ ||

ಎಂದು ಬಯಸುತ್ತಾನೆ.

ಪ್ರಾಚೀನತೆ:

ಜಾನಪದ ಸಾಹಿತ್ಯದಿಂದಾಗಲಿ, ರೂಢಿಯ ಹೇಳಿಕೆಗಳಿಂದಾಗಲಿ ಪ್ರಾಚೀನತೆಯನ್ನು ತಿಳಿಯಲು ಸಾಧ್ಯವಿಲ್ಲ. ಇಲ್ಲಿ ಹಿಂದಿನ ಕುರುಹುಗಳು ದೊರೆಯಲಾರವು. ಆದ್ದರಿಂದ ಇದಕ್ಕಾಗಿ ಲಿಖಿತ ಸಾಹಿತ್ಯವನ್ನೇ ಅವಲಂಬಿಸಬೇಕಗುತ್ತದೆ.

೧)       ಶ್ರೀಧರಾಚಾರ್ಯನ (ಕ್ರಿ.ಶ. ೧೦೪೯) ’ಜಾತಕತಿಲಕ’ ದಲ್ಲಿ-
ಭವನಾಂತದೊಳ್ ಸುಧಾಸಂ
ಭವನಿರೆ ಕಾಣದಿರೆ ಸೌಮ್ಯದಿಕೆ ಪಾಪಗಣಂ
ನವಪಂಚಮದೊಳ್ ಪುಟ್ಟಿದ
ಕುವರಂ ಜೋಕೊವರನಂತೆ ಪಲದಿವಸಮಿರಂ ||೬||೭||

೨)       ಬಂಧುವರ್ಮನ (ಸು.೧೧೫೦) ’ಜೀವಸಂಬೋಧನೆ’ಯಲ್ಲಿ-
ಅವರಿವರನ್ನರಿನ್ನರಿನಿಸೋವುವೆನ್ನೆನ್ನದೆ ರೌದ್ರ ಕೋಪದಿಂದ
ಜವನಿರದುಣ್ಮಿ ತಾಂ ಮಸಗಿ ಗರ್ಭದೊಳಂ ಕೊಲೆ ಮುನ್ನೆ ಪುಟ್ಟಿನೊಂ
ದವಧಿಯನೆಯ್ಪೆ ನಿಟ್ಟಿಸಿರಲಾಗದ ಮಾನಿಸವಾಱ್ಗೆ ನಾಡೆ ಜೋ-
ಕುವರನ ಬಾಱ್ಕು ಲೇಸುಗಡಮೇಕದು ನಿಟ್ಟಿಸಲಪ್ಪ ದೊಸಱೆಂ|| ಪುಟ-೮

೩)       ನೇಮಿಚಂದ್ರನ (ಸು. ೧೧೭೦) ’ನೇಮಿನಾಥಪುರಾಣ’ದಲ್ಲಿ-
ಬಲಿ ಜೋಕೋರನಂತಿರೇಱು ದಿವಸದರಸುತನಮಂ ಬೇಡಿ ಪಡೆದನ್ ||೬||೯|| ವಚನ

೪)      ಬ್ರಹ್ಮಶಿವನ (ಸು. ೧೧೮೦) ’ಸಮಯ ಪರೀಕ್ಷೆ’ಯಲ್ಲಿ-
ದೇವತೆ ಪೆಱರನದೆಂತುಂ
ಕಾವಳು ಗಡ ತನ್ನ ಪೆಮ್ಮಗಂ ಜೋಕೊವರಂ
ಸಾವಾಗ ಕಾಯಲಾಱದ
ಕೀವಿಲು ಪೇಳ್ಪೆಱರ್ಗೆ ಮಾಡಲಾರ್ಪಳೆ ಸುಖಮಂ ||೯||೧೧೦||

೫)      ಪಾರ್ಶ್ವ ಕವಿಯ (ಕ್ರಿ.ಶ. ೧೨೨೨) ’ಪಾರ್ಶ್ವನಾಥ ಪುರಾಣ’ದಲ್ಲಿ-
ಜೋಕೊವರಂ ನೆಗಱ್ದಂ ಸುರ
ಲೋಕವಿರುದ್ಧಮನೆ ಕಮಠನಿಂದದಿಕಂ
ಲೋಕವಿರುದ್ಧಮುಮಂ ಸುರ
ಲೋಕ ವಿರುದ್ಧ ಮುಮನಿರದೆ ನೆಗಱ್ದುದಱೆಂದಂ ||೩||೬೫||

ಈ ಆಧಾರಗಳು ದೊರೆಯುತ್ತವೆ. ಮೊದಲಿನ ಇಬ್ಬರಲ್ಲಿ ಜೋಕುಮಾರನು ’ಅಲ್ಪಾಯುಷಿ’ ಎಂಬ ವಿಷಯ ಬರುತ್ತಿದ್ದರೆ, ಇದೇ ವಿಷಯವೇ ಪರ್ಯಾಯವಾಗಿ ಮುಂದಿನ ಇಬ್ಬರಲ್ಲಿ ಮೂಡಿಬಂದಿದೆ. ನೇಮಿಚಂದ್ರನು ಜೋಕೋರನಂತೆ ಬಲಿ ಏಳು ದಿನಗಳ ಅರಸುತನವನ್ನು ಬೇಡಿ ಪೆದನೆಂದು ಹೇಳಿದ್ದಾನೆ. ಜಾನಪದದಲ್ಲಿಯೂ ಇವನು ರಾಜ್ಯವಾಳಿದ ವಿಷಯ ಬರುತ್ತದೆ. ಬ್ರಹ್ಮಶಿವನು ’ತನ್ನ ಮಗನನ್ನೇ ಬದುಕಿಸಲು ಸಮರ್ಥಳಾಗದ ದೇವತೆ ಇತರರಿಗೆ ಹೇಗೆ ಸುಖವನ್ನು ಕೊಟ್ಟಾಳು?’ ಎಂದು ದೇವತೆಯನ್ನು ಅವಹೇಳನ ಮಾಡುವ ಪ್ರಸಂಗದಲ್ಲಿ ಜೋಕುಮಾರನ ಪ್ರಸ್ತಾಪ ಬರುತ್ತದೆ. ಇಲ್ಲಿ ’ದೇವತೆ’ ಎಂದಿದೆಯೇ ಹೊರತು ನಿಶ್ಚಿತ ಹೆಸರಿಲ್ಲ. ಬಹುತರವಾಗಿ ಇಲ್ಲಿಯ ’ದೇವತೆ’ ಎಂಬುದು ’ದುರ್ಗಾ ದೇವತೆ’ಯೆ ಆಗಿರಬೇಕು. ಭಾದ್ರಪದ ಶುದ್ಧ ಅಷ್ಟಮಿಯು ದುರ್ಗಾಷ್ಟಮಿಯಂದೇ ಪ್ರಸಿದ್ಧವಾಗಿದೆ. ಇದಕ್ಕೆ ನಿದರ್ಶನವಾಗಿ ಈ ಒಂದು ಪದ್ಯ ದೊರೆಯುತ್ತದೆ.

ಆದಿಮೂರುತಿ ಗುರುವೆ ಅವಜನ-
ನಾದ ದಿನವನು ಪೇಳಯಂದೊಡೆ
ಭಾದ್ರಪದ ಶುದ್ಧದಲಿ ದೇವಿಯ ಅಷ್ಟಮಿಯ ಧಾರಾ
ಭೇದವಿಲ್ಲದೆ ಸರ್ವಲೋಕವು
ಆದರಿಸಿ ಕಟ್ಟೀದ ಬಳಿಕಲಿ
ಆ ದಿವಸವೇ ಹುಟ್ಟಿ ನಡೆದನು ಭೂಪಕೇಳೆಂದಾ ||

(ಮೈಸೂರು ಪ್ರಾಚ್ಯಕೋಶಾಗಾರದ ಕೆ. ೩೨೦ ಸಂಖ್ಯೆಯ ಹಸ್ತಪ್ರತಿ ಪತ್ರ ೫೨) ದುರ್ಗೆ ಶಿವನ ಹೆಂಡತಿ. ಜಾನಪದರಲ್ಲಿ ಬರುವ ಗೌರಿ ಎಂಬುದಕ್ಕೆ ಇದು ಹೊಂದಿಕೆಯಾಗುತ್ತದೆ.

ಇನ್ನು ಈ ನಾಲ್ವರಿಗೆ ವ್ಯತಿರಿಕ್ತವಾಗಿ ಪಾರ್ಶ್ವ ಕವಿಯು ಅವನೊಬ್ಬ ’ಪಾಪಿ’ ಎಂಬರ್ಥದಲ್ಲಿ ಈ ಜೋಕುಮಾರನ ಪ್ರಸ್ತಾಪವೆತ್ತಿದ್ದಾನೆ.

ಶ್ರೀ ವಿಜಯದಾಸರು (ಕ್ರಿ. ೧೭೦೦) ಅನೇಕ ದೇವತೆಗಳ ಹೆಸರನ್ನು ಹೇಳುವಲ್ಲಿ ‘ಹಲ್ಲಿನ ಜೋಕುಮಾರ’ನ ಉಲ್ಲೇಖ ಮಾಡಿದ್ದಾರೆ. ಇಲ್ಲಿಯ  ‘ಹಲ್ಲಿನ’ ಎಂಬ ವಿಶೇಷಣ ಅಪೂರ್ವ. ಜಾನಪದದಲ್ಲಿಯೂ ಇದರ ವಿಷಯ ಬರುವುದಿಲ್ಲ.

ನಾರಸಿಂಹ ಕವಿಯು (ಕ್ರಿ.೧೭೬೮) ತನ್ನ ‘ಅನುಭವ ಶಿಖಾಮಣಿ’ಯಲ್ಲಿ ಜೋಕುಮಾರನ ಕಥೆಯನ್ನೇ ವಿವರಿಸಿದ್ದಾನೆ. ಈ ಕಥೆ ಜೋಕುಮಾರನೆಂಬ ಹೆಸರು, ಏಳು ದಿನಗಳ ಆಯುಷ್ಯ ಇವುಗಳನ್ನು ಇರಿಸಿಕೊಂಡು ಇವುಗಳ ಸುತ್ತಲು ಕಾಲ್ಪನಿಕವಾಗಿ ಹೆಣೆದಂತಿದೆ. ಏಕೆಂದರೆ ಸಪ್ತರ್ಷಿಗಳಿಗೆ ’ಜೋಕ’ನೆಂಬ ಸೇವಕನಿರುವುದಾಗಲಿ, ಅವನು ಭೂಲೋಕಕ್ಕೆ ಬಂದು ಮಾರಿಯೊಡನೆ ಕೂಡುವುದಾಗಲಿ ಶಾಸ್ತ್ರೋಕ್ತವೂ ಅಲ್ಲ; ರೂಢಿಯೂ ಇಲ್ಲ.

ಈಗ ಮೇಲೆ ಹೇಳಿದ ಕವಿಗಳನ್ನು ನೋಡಿದರೆ ಜೋಕುಮಾರನ ಕಾಲವನ್ನು ೧೧ನೆಯ ಶತಮಾನದಷ್ಟು ಹಿಂದೆ ಒಯ್ಯಲು ಬರುತ್ತದೆ. ಇಷ್ಟು ಹಳೆಯದಾದ ಸಂಪ್ರದಾಯವಿದ್ದರೂ ಇಲ್ಲಿಯವರೆಗೆ ಇದು ಉತ್ತರ ಕರ್ನಾಟಕವನ್ನು ಬಿಟ್ಟು ಬೇರೆಡೆಗೆ ವ್ಯಾಪಿಸದಿರುವುದು ಆಶ್ಚರ್ಯದ ವಿಷಯವೇ ಸರಿ. ಇಲ್ಲಿ ಬರುವ ಈ ಕವಿಗಳೂ ಹೆಚ್ಚು ಕಡಿಮೆ ಇಂದು ಪ್ರಚಾರದಲ್ಲಿರುವ ಪ್ರದೇಶದವರೇ ಆಗಿದ್ದಾರೆ. ಶ್ರೀಧರಾ ಚಾರ್ಯ=ಪ್ರಥಮ ಪ್ರಸ್ತಾಪಕ-ಬೆಳುವಲ ನಾಡಿನ ನರಗುಂದದವ, ನೇಮಿಚಂದ್ರ ಪಾರ್ಶ್ವನಾಥರು ಸೌಂದತ್ತಿಯ ರಟ್ಟರಾಜ್ಯದಲ್ಲಿದ್ದವರು. ಬ್ರಹ್ಮಶಿವ ಚಾಲುಕ್ಯ ರಾಜರಲ್ಲಿ ಪೊಟ್ಟಣಗೆರೆಯಲ್ಲಿದ್ದವ, ವಿಜಯದಾಸ ರಾಯಚೂರು ಜಿಲ್ಲೆಯ ಚಿಕಲ ಪರವಿಯಲ್ಲಿದ್ದವ. ಇದರಿಂದ ಬೇರೆಡೆಯಲ್ಲಗಲಿ, ಬೇರೆ ಭಾಷೆಯಲ್ಲಾಗಲಿ ಈ ದೇವತೆ ಇಲ್ಲವೆನ್ನುವುದು ಸ್ಪಷ್ಟವಾಗದೆ ಇರದು.

ವಿವೇಚನೆ:

ಈವರೆಗೆ ಜೋಕುಮಾರನ ಬಗೆಗೆ ಇರುವ ಆಚರಣೆ, ಜಾನಪದ ಸಾಹಿತ್ಯದಲ್ಲಿ ಬರುವ  ವಿಷಯ, ಲಿಖಿತ ಸಾಹಿತ್ಯದಲ್ಲಿ ದೊರೆಯುವ ಆಧಾರದ ಇವುಗಳನ್ನು ನೋಡಿದ್ದಾಯಿತು. ಇಲ್ಲಿ ಬಂದ ಕೆಲವಿಷಯಗಳು ಪಂಡಿತರಲ್ಲಿ ಚರ್ಚೆಗೆ ಒಳಗಾಗಿವೆ. ಅವುಗಳನ್ನು ಒಂದೊಂದಾಗಿ ಈಗ ವಿವೇಚಿಸೋಣ.

) ಜೋಕುಮಾರನ ಜನ್ಮವೃತ್ತಾಂತ:

ಲಿಖಿತ ಸಾಹಿತ್ಯದಲ್ಲಿ ಜೋಕುಮಾರನ ತಂದೆಯ ಹೆಸರು ’ಜೋಕ’ ಎಂದಿದ್ದರೆ ಜಾನಪದಲ್ಲಿ ’ಹರ’ ಎಂದಿದೆ. ತಾಯಿಯ ಹೆಸರು ನಿಶ್ಚಿತವಾಗಿಲ್ಲದಿದ್ದರೂ ಮಾರಿ, ದೇವತೆ ಎಂದು ಪ್ರೌಢ ಸಾಹಿತ್ಯದಲ್ಲಿದ್ದರೆ ಜಾನಪದ ಸಾಹಿತ್ಯದಲ್ಲಿ ದಿಟ್ಣಾದೇವಿ, ದಿರ್ನೆದೇವಿ, ದೃಷ್ಟಿದೇವಿ, ಜೇಷ್ಠಾದೇವಿ, ಗೌರವ್ವ ಮತ್ತು ನಿಸ್ತ್ರೋರು ಎಂದು ಬಂದಿದೆ. ಹಾಡುವವರು ದಿಟ್ಣಾದೇವಿ ಎಂದು ಅನ್ನುವುದುಂಟು. ಗ್ರಾಮೀಣ ಹೆಣ್ಣುಮಕ್ಕಳ ಬಾಯಲ್ಲಿ ವಿವಿಧ ರೀತಿಯಲ್ಲಿ ಉಚ್ಚಾರಗೊಂಡ ಈ ಶಬ್ದದ ಮೂಲವೇನೆಂಬುದು ಸ್ಪಷ್ಟವಾಗಿ ಅರ್ಥವಗುವುದಿಲ್ಲ. ಸಾಮಾನ್ಯವಾಗಿ ಪ್ರತೀತಿಯಿರುವಂತೆ ಶಿವ-ಪಾರ್ವತಿಯರ ಮಗನೆಂಬುದಕ್ಕೆ ’ಹರ’-’ಗೌರಿ’ ಇವರ ಹೆಸರುಗಳು ಜಾನಪದ ಸಾಹಿತ್ಯದಲ್ಲಿ ಬಂದಿರುವುದು ಪೂರಕವಾಗುತ್ತವೆ. ಇಲ್ಲಿ ಇರುವ ದಿಟ್ಣಾದೇವಿ, ದಿರ್ನೇದೇವಿ,  ದೃಷ್ಟಿದೇವಿ, ಜೇಷ್ಟಾದೇವಿ ಇವು ಒಂದೇ ಮೂಲದವೆಂದು ತಿಳಿಯುತ್ತದೆ.

೧) ಚನ್ನವೀರ ಕವಿಯ ’ಕಾಶಕೃತ್ಸ್ನ ಶಬ್ದ ಕಲಾಪಧಾತು ಪಾಠ’ದಲ್ಲಿ ’ಜೋಕುಮಾರನು ಜೇಷ್ಠಾದೇವಿಯೆಂಬ ಹೆಸರಿನ ಅಲಕ್ಷ್ಮಿ ಅಥವಾ ದರಿದ್ರಲಕ್ಷ್ಮಿಯ ಮಗ’ ಎಂದು ಬಂದಿದೆ (ಸಾಧನೆ ೮-೩). ಈ ಜೇಷ್ಠಾದೇವಿಯೇ ತದ್ಭವಗೊಂಡು ವಿವಿಧರೂಪಗಳಾದುವೋ ಅಥವಾ ದಿಟ್ಣಾದೇವಿಯೇ ಸಂಸ್ಕೃತೀಕರಣಗೊಂಡು ಜೇಷ್ಠಾ ದೇವಿಯಾಯಿತೋ ಹೇಳುವುದು ಕಷ್ಟ.

ಚನ್ನವೀರ ಕವಿಯನ್ನೇ ಆಧಾರವಾಗಿರಿಸಿಕೊಂಡು ಜೇಷ್ಠಾದೇವಿಯು ಉಳುವುದಕ್ಕೆ ಮುಂಚಿತವಾಗಿರುವ ಬಂಜರು ಭೂಮಿಯೆಂದು ಕೆ. ಶಿವರಾಮ ಐತಾಳರು ಪ್ರತಿಪಾದಿಸಿದ್ದಾರೆ (ಪ್ರಜಾವಾಣಿ ೨೦-೧೨-೮೧). ಆದರೆ ಬಂಜೆಯಿಂದ ಜೋಕುಮಾರನಂತಹ ಮಗಳು ಹುಟ್ಟುವುದಾದರೂ ಹೇಗೆ? ಮೊದಲು ಬಂಜೆಯಾಗಿದ್ದವಳು ಮುಂದೆ ಹಡೆದಳೆನ್ನುವುದಾದರೆ ಬಂಜೆಯನ್ನುವುದಕ್ಕೆ ಅರ್ಥವಾದರೂ ಏನು? ಇದೂ ಅಲ್ಲದೆ ಅವರು ’ಜೋಕುಮಾರನ ವಿಗ್ರಹ ಪುರುಷೇಂದ್ರಿಯ ಪ್ರಧಾನ. ನೇಗಿಲು ಪುರುಷೇಂದ್ರಿಯಕ್ಕೂ ಉಳುವುದು ಲೈಂಗಿಕ ಕ್ರಿಯೆಗೂ, ಫಲ, ಬೆಳೆ ಸಂತಾನಕ್ಕೂ ಪ್ರತೀಕವಾಗಬಹುದು! ಎಂದು ಹೇಳಿರುವುದು ಜೋಕುಮಾರನು ಜೇಷ್ಠಾ ದೇವಿಯ ಗಂಡನಾಗುತ್ತನಾಲ್ಲದೆ ಮಗನಾಗಲಾರ. ಆದರೆ ಜಾನಪದ ಪದ್ಯಗಳಲ್ಲಿಯಾಗಲಿ, ಚನ್ನಕವಿಯ ಧಾತು ಪಾಠದಲ್ಲಿಯಾಗಲಿ ಜೋಕುಮಾರನು ಜೇಷ್ಠಾ ದೇವಿಯ ಮಗನೆಂದು ಬಂದಿದೆ. ಆದ್ದರಿಂದ ಶ್ರೀ ಐತಾಳರ ಅಭಿಪ್ರಾಯವನ್ನು ಸತ್ಯದೂರವೆಂದು ಬೇರೆ ಹೇಳಬೇಕಾಗಿಲ್ಲ.

ಜಾನಪದ ಸಾಹಿತ್ಯದಲ್ಲಿಯಾಗಲಿ, ರೂಢಿಯಲ್ಲಾಗಲಿ ಜೋಕುಮಾರನಿಗೂ ಸಪ್ತರ್ಷಿಗಳಿಗೂ ಯಾವ ಸಂಬಂಧವೂ ಇಲ್ಲ. ಅಲ್ಲದೆ ೧೮ನೆಯ ಶತಮಾನದ ಕೊನೆಯ ಕಾಲದಲ್ಲಿದ್ದ (ಕ್ರಿ. ೧೭೯೮) ನಾರಸಿಂಹನ ಹೊರತು ಹಿಂದಿನ ಲಿಖಿತ ಸಾಹಿತ್ಯದಲ್ಲಿಯೂ ಸಪ್ತರ್ಷಿಗಳ ವಿಷಯ ಬರುವುದಿಲ್ಲ. ಚನ್ನವೀರ ಕವಿಯ ಧಾತು ಪಾಠದಲ್ಲಿಯೂ ಈ ವಿಷಯವಿಲ್ಲ. ಆದ್ದರಿಂದ ಸಪ್ತರ್ಷಿಗಳು ಸಂಬಂಧವು ನಾರಸಿಂಹನ ಕಲ್ಪನೆಯೆ ಹೊರತು ಅದಕ್ಕೆ ಯಾವ ಆಧಾರವೂ ಇಲ್ಲ. ಆದ್ದರಿಂದ ಡಾ. ಶಿವರಾಮ ಕಾರಂತರು ಸಪ್ತರ್ಷಿಗಳ ಸಂಬಂಧದಿಂದ ಸಪ್ತಮಳೆಯ ನಕ್ಷತ್ರಗಳ ಸಂಬಂಧವನ್ನು ಕಲ್ಪಿಸುವದು ದೂರಾನ್ವಯವೇ ಹೊರತು ಸತ್ಯಸಮೀಪವೆನಿಸುವುದಿಲ್ಲ. (ಕುಂದಾಪುರ ಜಾನಪದ ಉಪನ್ಯಾಸ ಗೋಷ್ಠಿ).

ಜೇಷ್ಠಾದೇವಿಯು ಜೋಕುಮಾರನ ತಾಯಿಯಾಗುವದು ಸಾಧ್ಯವಿಲ್ಲ. ಏಕೆಂದರೆ, ಅವನು ಹುಟ್ಟುವುದು ಭಾದ್ರಪದ ಶುದ್ಧ ಅಷ್ಟಮಿಯಂದು. ಜೇಷ್ಠಾಕ್ಕೂ ಭಾದ್ರಪದಕ್ಕೂ ನಾಲ್ಕು ತಿಂಗಳುಗಳ ಅಂತರ. ಆ ತಿಂಗಳಲ್ಲಿ ಜೋಕುಮಾರನ ಜನನಕ್ಕೆ ಅಂಕುರವೆನ್ನುವದೂ ಸಾಧ್ಯವಿಲ್ಲ. ಆದ್ದರಿಂದ ಈ ಮೂಲವನ್ನು ಅವಲಂಬಿಸುವುದು ಸೂಕ್ತವೆನಿಸುವದಿಲ್ಲ.

’ಜ್ಯೇಷ್ಠೆ’ ಉತ್ತರ ಕರ್ನಾಟಕದ ’ಶಟವಿ’ ಎನ್ನುವ ಒಂದು ಹೇಳಿಕೆಯೂ ಕೇಳಿಬರುತ್ತದೆ. (ಸಾಧನೆ ೮-೩, ಪುಟ ೨೩) ಶಟವಿಗೆ ’ಶಟ್ಟಿಕವ್ವ’ ಎಂದೂ ಕರೆಯಲಾಗುತ್ತದೆ. ಈಕೆಯ ಪೂಜೆಯನ್ನು ಮಗು ಹುಟ್ಟಿದ ಐದನೆಯ ದಿನ ಮಾಡುತ್ತಾರೆ. ಆ ದಿನ ಆಕೆ ಮಗುವಿನ ಹಣೆಬರೆಹವನ್ನು ಬರೆಯುತ್ತಾಳೆಂದು ಇಲ್ಲಿಯ ಜನರ ನಂಬುಗೆ. ಅಂದು ಪೂಜೆ ಮಾಡಿ ಇಟ್ಟ ದಕ್ಷಿಣೆಯ ಹಣವನ್ನು ಸೂಲಗಿತ್ತಿಯರು ಒಯ್ಯುತ್ತಾರೆ. ಇಲ್ಲದೆ ತುಳಜಾಪುರದ ಅಂಬಾಭವಾನಿಯ, ಕಾಗವಾಡದ (ಅಥಣಿ ತಾಲೂಕ) ಸಂತೂಬಾಯಿಯ ಪೂಜಾರಿಗಳು ಬೇಡಿಕೊಳ್ಳುತ್ತ ಬಂದಾಗ ಅವರಿಗೆ ಕೊಡುವುದೂ ಉಂಟು. ಆದ್ದರಿಂದ ಈ ಶಟವಿ ಎಂದರೆ ಅಂಬಾಭವಾನಿ, ಸಂತೂ ಬಾಯಿಯಂತಹ ಸ್ತ್ರೀ ದೇವತೆಯೆಂದೇ ಇವರ ನಂಬುಗೆ. ಹೀಗಿರುವುದರಿಂದ ಇವರು ಜೋಕುಮಾರನ ತಾಯಿಯಾಗಲಾರರು. ಜೋಕುಮಾರನ ಪೂಜೆ ಕರ್ನಾಟಕದಲ್ಲಿರುವಂತೆ ಮಹಾರಾಷ್ಟ್ರದಲ್ಲಿಲ್ಲ ಆದರೆ ಅಂಬಾಭವಾನಿ, ಸಂತೂಬಾಯಿಯವರ ಭಕ್ತರು ಮಹಾರಾಷ್ಟ್ರದಲ್ಲಿ ಹೆಚ್ಚಿಗಿದ್ದಾರೆ.

೨) ಒಂದು ಜಾನಪದ ಕಥೆಯ ಪ್ರಕಾರ ಎಳೇಗೌರಮ್ಮ ಜೋಕುಮಾರನ ತಾಯಿಯೆಂದು ಕೆಲವರ ಹೇಳಿಕೆ. (ಸಾಧನೆ ೮-೩ ಪುಟ ೨೩) ಭಾದ್ರಪದ ಶುದ್ಧ ಅಷ್ಟಮಿಯಂದು ಲಕ್ಷ್ಮಿಗೆ ಬಯಕೆಯ ಊಟವನ್ನು ಮಾಡಿಸುವುದಾಗಿಯೂ ಮರು ದಿನ ಜೋಕುಮಾರ ಹುಟ್ಟುವದಾಗಿಯೂ ಇವರ ಹೇಳಿಕೆ. ಹೀಗಾದದ್ದಾದರೆ ಜೋಕುಮಾರನು ಹುಟ್ಟುವುದು ನವಮಿಯಾಗುತ್ತದೆ. ಇದು ಎಲ್ಲಿಯೂ ಉಕ್ತವಾಗಿಲ್ಲ; ರೂಢಿಯೂ ಹೀಗಿಲ್ಲ. ಲಕ್ಷ್ಮಿಗೂ ಜೋಕುಮಾರನಿಗೂ ಯಾವ ಸಂಬಂಧವೂ ಇಲ್ಲ. ಲಕ್ಷ್ಮಿಯ ಪೂಜೆ ನಡೆಯುವದಾಗಲಿ, ಹತ್ತಿಯಿಂದ ಎಳೆಯನ್ನು ತೆಗೆಯುವದಾಗ ನಲಿಡಯುತ್ತಿರಬಹುದು. ಒಂದೇ ಕಾಲದಲ್ಲಿ ಈ ಎರಡು ಘಟನೆಗಳು ಸಂಭವಿಸುವುದರಿಂದ ’ಬುದ್ಧಿವಂತರು’ ಈ ಸಂಬಂಧವನ್ನು ಜೋಡಿಸಿದಂತಿದೆ. ಇದಕ್ಕೆ ಜಾನಪದ ಸಾಹಿತ್ಯದ ಆಧಾರ, ಇನ್ನುಳಿದ ಪ್ರದೇಶಗಳ ರೂಢಿಯ ಹೇಳಿಕೆಗಳ ಆಧಾರ ದೊರೆಯುವದಿಲ್ಲ.

೩) ಜೋಕುಮಾರ ಸತ್ತ ಮೂರನೆಯ ದಿನ ಕಬ್ಬಲಿಗರ ಹೆಣ್ಣು ಮಕ್ಕಳಲ್ಲದೆ ಉಳಿದವರೂ ಮಿಂದು ಶುಚಿರ್ಭೂತರಾಗಿ ಕೆಲವೆಡೆ ’ಬಳುಲಕವ್ವ’ನ ಪೂಜೆ ಮಾಡುತ್ತಾರೆ. ಗುಗ್ಗರಿ, ಎಲಿ, ಅಡಕೆ, ಅರಿಷಿಣ, ಖೊಬ್ಬರಿ ಅಂತಾದವುಗಳನ್ನು ಉಡಿ ತುಂಬಿ ಆರತಿ ಮಾಡುತ್ತಾರೆ. ಮೊಲೆಗಳು ಬಿಗಿದುದರಿಂದ ಹಗುರಾಗಲೆಂದು ಅರಿಷಿಣದಲ್ಲಿ ತೋಯಿಸಿದ ಅರಿವೆಯನ್ನು ಎದೆಯಮೇಲೆ-ಬಿಗಿದ ಮೊಲೆಗಳ ಮೇಲೆ- ಇಡುತ್ತಾರೆ. ತಾಯಿಯ ಹೊಟ್ಟೆ ತಣ್ಣಗಿರಲೆಂದು ಕುದಿಸಿದ ಹೂರಣಗಡಬನ್ನು ನೈವೇದ್ಯವನ್ನಾಗಿ ಅರ್ಪಿಸುತ್ತಾರೆ. ಕೆಲವೆಡೆ ಈ ಬಳುಲಕವ್ವನ ವಿಗ್ರಹವಿಲ್ಲದಿದ್ದರೂ ಒಂದು ಕಲ್ಲನ್ನಿರಿಸ – ಪ್ರತ್ಯೇಕವಾಗಿಯೇ ಪೂಜಿಸುವದುಂಟು. (ಅಥಣಿ ತಾಲೂಕು ತೆಲಸಂಗದಲ್ಲಿ ಶ್ರೀ ಸೋಮಶಂಕರಗೌಡ ಚ. ಪಾಟೀಲರ ಮನೆಯ ಹತ್ತಿರ ಈ ದೇವತೆಯಿದೆ). ಇನ್ನು ಕೆಲವು ಕಡೆ ಹನುಮಂತದೇವರ ಗುಡಿಯಲ್ಲಿಯೇ ಈ ಪೂಜೆಯನ್ನು ಆಕೆಯ ಹೆಸರಿನಿಂದ ಮಾಡುವುದಂಟು. (ಜಮಖಂಡಿಯಲ್ಲಿ ಹೀಗೆ ಮಾಡುತ್ತಾರೆ).

ಈಕೆಗೆ ’ಅಳಲ ಬಳುಲಕವ್ವ’ ಎಂದೇ ಕರೆಯುತ್ತಾರೆ – ಇಲ್ಲಿರುವ ’ಅಳಲು’ ಚಳಿ ಎನ್ನುವ ಅರ್ಥದ್ದಾಗಿ ಕಾಣಿಸುವದಿಲ್ಲ. ಆ ತಾಯಿಯ ಸಮಾಧಾನದ ವಿಷಯ ಇಲ್ಲಿ ಬರುವುದರಿಂದ ’ದುಃಖಿಸುತ್ತಿರುವ ಬಳುಲಕವ್ವ’ ಎಂಬರ್ಥದಲ್ಲಿಯೇ ಬಳಕೆಯಾಗಿರಬೇಕೆನಿಸುತ್ತದೆ. ಸತ್ತ ಮೂರು ದಿನಕ್ಕೆ ’ದಿನಕಾರ್ಯ’ ಮಾಡುವುದು ಸಂಪ್ರದಾಯ. (ಕೆಲವೆಡೆ ಮರುದಿನವೂ ಮಾಡುವದುಂಟು). ಆಗ ಈ ಸಮಾಧಾನ ಹೇಳುವುದು ಸಹಜ. ಇಲ್ಲಿರುವುದು ಇದೇ ಸನ್ನಿವೇಶವೇ ಆಗಿದೆ.

ಈ ಸಂಪ್ರದಾಯದಿಂದ ಜೋಕುಮಾರನ ತಾಯಿಯ ಹೆಸರಿನ ಪಟ್ಟಿಯಲ್ಲಿ ’ಬಳುಲಕವ್ವ’ ಎಂಬ ಹೆಸರು ಸೇರ್ಪಡೆಯಾಗುತ್ತದೆ. ಇವುಗಳಲ್ಲಿ ಯಾವುದು ಮೂಲ, ಯಾವುದು ಸರಿ ಎನ್ನುವುದು ಅನಿರ್ಧಾರಣ ವಿಷಯ. ಪ್ರಾದೇಶಿಕ ಭಿನ್ನತೆಯಿಂದ ಈ ಹೆಸರುಗಳು ಬಂದಿರಬಹುದು.

೪)       ಇನ್ನೂ ಒಂದು ತ್ರಿಪದಿಯಲ್ಲಿ,-
ಹರಗಿನ ಹೊಲದಾಗ ಹರಿದು ಚಂಡಾಡುವ
ಹರದೇವರ ಮಗ ಕೊಮರಯ್ಯ | ಚಂಡಾಡಿದ
ಬತ್ತ ಸಾವಿರವೆ ಬೆಳೆದಾವು ||

ಎಂದಿರುವುದರಿಂದ ರೂಢಿಯ ಮಾತಿನಲ್ಲಿರುವ ಶಿವನ ಮಗನೆಂಬುದಕ್ಕೆ ಇದು ಪೂರಕವಾಗುತ್ತದೆ. ಅಲ್ಲದೆ ತಾಯಿಯ ಹೆಸರಿನ ಪಟ್ಟಿಯಲ್ಲಿ ಗೌರವ್ವ ಎನ್ನುವುದು ಇರುವುದರಿಂದ ಮೇಲಿನ ಮಾತಿಗೆ ಪುಷ್ಟಿ ದೊರೆಯುತ್ತದೆ. ಅಲ್ಲದೆ ಭೂಲೋಕದಲ್ಲಿಯ ಸ್ಥಿತಿಗತಿಯನ್ನು ನೋಡಿಕೊಂಡು ಬರಲು ಶಿವನು ಗಣಪತಿಯನ್ನು ಕಳುಹಿಸಿದಾಗ ಚನ್ನಾಗಿ ಮೋದಕಗಳನ್ನು ಭುಂಜಿಸಿದ ಗಣಪತಿ ಸುಖವಾಗಿದೆಯೆಂದೇ ಹೇಳುತ್ತಾನೆ. ಆದರೂ ಹಾಹಾಕಾರ ಕೇಳಿಬಂದಾಗ ಶಿವನು ಜೋಕುಮಾರನನ್ನು ಕಳುಹಿಸುತ್ತಾನೆಂದೂ ಇವನಿಗೆ ಅಂಬಲಿ, ನುಚ್ಚು ಮುಂತಾದವುಗಳನ್ನೇ ಕೊಡುವುದರಿಂದ ಜನರ ಸ್ಥಿತಿ ಸರಿಯಾಗಿಲ್ಲವೆಂದು ಹೇಳುವುದರಿಂದ ಶಿವನು ಮಳೆಗರೆವನೆಂದೂ ರೂಢಿಯಲ್ಲಿರುವುದರಿಂದ ಇವನು ಶಿವನ ಮಗನೆಂಬುದು ವಿಬಿತವಾಗುವದು.

ಬಹುತರವಾಗಿ ಇದು ಸಾಂಕೇತಿಕವಾದುದೇ ಆಗಿರಬೇಕು. ಶಿವ-ಪಾರ್ವತಿಯರು ಪುರುಷ-ಪ್ರಕೃತಿಯರ ದ್ಯೋತಕ. ಆ ಅರ್ಥದಲ್ಲಿಯೇ ಇವರ ಸಮಾಗಮದಿಂದ ಹುಟ್ಟಿದವನೇ ಈ ಜೋಕುಮಾರನಾಗಿರಬೇಕು.

) ಕೃಷ್ಣದ್ವಂದ್ವಿ ದ್ರಾವಿಡ ದೇವತೆ:

ವಿಜಾಪುರ ಜಿಲ್ಲೆಯ ಉತ್ತರ ಭಾಗದಲ್ಲಿ-
ಕನ್ಯೆ ಹಾರುವರ ಎಣ್ಣಿಗೆ ಹೋದರ
ಕಣ್ಣಿಟ್ಟ ಕಾಲ ಅಡ್ಡಿಟ್ಟ | ಕೇಳ್ಯಾನ
ಕನ್ಯೆ ನೀ ದಾರ ಮಗಳವ್ವ ||

ನನ್ನನ್ನ ಕೇಳಲಾಕ ನೀ ದಾರ ಮಗನಯ್ಯ
ಕಣ್ಣಗುಡ್ಡಿಗೊಳ ತಗಸೀನ| ಅಗಸರ
ಬಂಡಿಗಿ ತೆಲಿಯ ಬಡಸೀನ||

ಎಂಬ ಎರಡು ತ್ರಿಪದಿಗಳು ದೊರೆಯುತ್ತವೆ. ಇಲ್ಲಿ ಜೋಕುಮಾರ ಬ್ರಾಹ್ಮಣ ಕನ್ಯೆಯನ್ನು ಮೋಹಿಸುವದರಿಂದ ಅವನು ಅಗಸರ ಬಂಡಿಗೆ ಬಡಿಸಿಕೊಂಡು ಸಾಯುವ ಪ್ರಸಂಗ ಬರುತ್ತದೆ.

ಕೃಷ್ಣ ಬಾಲ್ಯದಿಂದಲೇ ಸ್ತ್ರೀಲೋಲುಪ. ಹೀಗಿದ್ದರೂ ಇದನ್ನು ರಾಸಕ್ರೀಡೆಯೆಂದು ಕರೆದು ಕ್ಷಮ್ಯವೆನ್ನಲಾಗಿದೆ. ಆದರೆ ಇದೇ ಜೋಕುಮಾರನು ಸ್ತ್ರೀ ಲೋಲುಪನಾದಾಗ ಅದನ್ನು ವ್ಯಭಿಚಾರವೆನ್ನಲಾಯಿತು. ಕೃಷ್ಣ ವಿಷ್ಣುವಿನ ೮ನೆಯ ಅವತಾರ. ವಿಷ್ಣು ಆರ್ಯ ಸಂಸ್ಕೃತಿಯ ಪ್ರತೀಕ. ಶಿವ ದ್ರಾವಿಡ ಸಂಸ್ಕೃತಿಯ ಸಂಕೇತ. ಅಂತೆಯೇ ಜೋಕುಮಾರ ಬ್ರಾಹ್ಮಣ ಕನ್ಯೆಯನ್ನು ಮೋಹಿಸುವುದು ದೋಷವಾಗಿ ಕಂಡು ಬಂದಿತು. ಮಳೆತರುವ, ಬೆಳೆ ಹೆಚ್ಚಿಸುವ ದೇವತೆಯೆಂದು ಪ್ರಸಿದ್ಧನಾದರೂ ಮೇಲು ವರ್ಣದ ಜನ ಜೋಕುಮಾರನನ್ನು ವ್ಯಭಿಚಾರಿಯನ್ನಾಗಿ ಮಾಡಿದರು. ನಾರಸಿಂಹ ಕವಿಯ ಕಾಲ್ಪನಿಕ ಕಥೆಯು ಹೀಗೆಯೇ ಹುಟ್ಟಿಕೊಂಡಿರಬೇಕು. ಜೋಕ ಸೇವಕ, ಮಾರಿ ದೇವತೆ. ಹೀಗೆ ಭಿನ್ನ ಪರಿಸರದಿಂದ ಹುಟ್ಟಿದವನು, ನಿಕೃಷ್ಟನು, ಎನ್ನುವ ಭಾವವೇ ಇಲ್ಲಿದೆ. ಬಸವಣ್ಣನವರು ’ಉಣಲುಡಲು ಮಾರಿಯಲ್ಲದೆ ಕೊಲಲು ಕಾಯಲು ಮಾರಿಯೆ?….’ ಈ ವಚನದಲ್ಲಿ ಹೇಳಿರುವ ಮಾರಿಯು ಜೋಕುಮಾರನ ತಾಯಿಯಾಗಳು, ಮಾರೆಮ್ಮನೆಂಬ ದೇವತೆಯೆ ಸೈ. ಬ್ರಹ್ಮಶಿವ (ಸು. ೧೧೮೦), ನಾರಸಿಂಹ ಕವಿಗಳು (ಕ್ರಿ. ೧೭೬೮) ಬಸವಣ್ಣನ ತರುವಾಯದವರಾದುದರಿಂದ ಅವರನ್ನು ಅನುಸರಿಸಿ ಇವನು ಬರೆದಿರುವುದು ಸಾಧ್ಯವಿಲ್ಲ.

ಆರ್ಯಜನಾಂಗದವರಾದ ಪಾಂಡವರು ಜೋಕುಮಾರನ ಆರಾಧಕರಾದ ಜನರ ದೃಷ್ಟಿಯಲ್ಲಿ ಪಾಂಡ್ರವ್ವಗಳಾಗಿರುವ ವಿಷಯವನ್ನು ಈ ಹಿಂದೆಯೇ ನೋಡಿದ್ದೇವೆ. ಇದರಿಂದ ಪರಸ್ಪರರನ್ನು ಅವಹಳನ ಮಾಡುವ ವಾಡಿಕೆಯಿದ್ದಿತೆನ್ನುವುದು ವಿದಿತವಾಗುತ್ತದೆ. ಆದ್ದರಿಂದ ಜೋಕುಮಾರನು ಕೃಷ್ಣನಿಗೆ ದ್ವಂದ್ವಿಯಾಗಿ ಬೆಳೆದುಬಂದ ದೇವತೆಯಾಗಿರಬೇಕು.

) ಜೋಕುಮಾರ ಶಬ್ದದ ವ್ಯುತ್ಪತ್ತಿ:

ಬರಹದಲ್ಲಿ ಜೋಕೊವರನೆಂದೂ ಜೋಕುಮಾರನೆಂದೂ ಬಳಕೆಯಾಗುತ್ತಿರುವಂತೆ ಬಳಕೆಯಲ್ಲಿ ಜೋಕುಮಾರ ಎಂಬುದು ಮಾತ್ರ ಇಂದು ಉಳಿದಿದೆ. ಅಲ್ಲದೆ ಜೋಕಪ್ಪ, ಕೊಮರ ಎಂಬಂತೆ ಎರಡನ್ನು ಪ್ರತ್ಯೇಕವಾಗಿಯೂ ಬಳಸುತ್ತಿರುವದು ಕಂಡು ಬರುತ್ತದೆ. ಈ ಹೆಸರಿನ ವ್ಯುತ್ಪತ್ತಿಯ ಬಗೆಗೆ ಸಾಮಾನ್ಯರಲ್ಲಿ ಯಾವ ತಿಳುವಳಿಕೆಯೂ ಇದ್ದಂತಿಲ್ಲ. ಆದರೆ ಕ್ರಿ.ಶ. ೧೭೬೮ ರಲ್ಲಿದ್ದ ನಾರಸಿಂಹಕವಿಯು ತನ್ನ ’ಅನುಭವ ಶಿಖಾಮಣಿ’ಯಲ್ಲಿ ಸಪ್ತರ್ಷಿಗಳ ಸೇವನಾದ ’ಜೋಕ’ ಎಂಬವನು ಭೂಲೋಕದಲ್ಲಿ ’ಮಾರಿ’ಯೊಡನೆ ಕೂಡಲು ಹುಟ್ಟಿದ ಮಗನೆ ಜೋಕನಕುಮಾರ- ಜೋಕಕುಮಾರ- ಜೋಕುಮಾರನೆಂದು ಅವನ ಕಥೆಯನ್ನು ಹೇಳುತ್ತಾನೆ. ೧೧ನೆಯ ಶತಮಾನದಲ್ಲಿದ್ದ ಶ್ರೀಧರಾಚಾರ್ಯನಿಂದ ಈ ಜೋಕೊವರ ಶಬ್ದ ಬಳಕೆಯಾಗುತ್ತಿದ್ದರೂ ಯಾರೂ ಈ ಕಥೆಯನ್ನು ಪ್ರಸ್ತಾಪಿಸಿಲ್ಲ. ರೂಢಿಯಲ್ಲಿಯೂ ಇಲ್ಲ. ಆದ್ದರಿಂದ ’ಜೋಕ’ನ ’ಕುಮಾರ’. ಜೋಕುಮಾರವಾಯಿತೆಂದು ಹೇಳುವುದು ಕವಿ ಕಲ್ಪಿತವೆನಿಸದಿರದು. ಜೋಕುಮಾರನಿಗೆ ಏಳುದಿನಗಳ ಆಯುಷ್ಯವೆನ್ನುವುದರಿಂದಲೇ ನಾರಸಿಂಹ ಕವಿಯು ಸಪ್ತರ್ಷಿಗಳನ್ನು ಕಲ್ಪಿಸಿಕೊಂಡಿರಬೇಕು. ಡಾ. ಶಿವರಾಮ ಕಾರಂತರು ಏಳು ಮಳೆಯ ನಕ್ಷತ್ರಗಳನ್ನು ಊಹಿಸಿರಬೇಕು.

ಕೋಶಕಾರನಾದ ಚನ್ನವೀರ ಕವಿಯು ತನ್ನ ’ಕಾಶಕೃತ್ಸ್ನ ಶಬ್ದ ಕಲಾಪ ಧಾತು  ಪಾಠ’ವೆಂಬ ಕೋಶದಲ್ಲಿ ಜೋಕುಮಾರನು ಶ್ರೀಲಕ್ಷ್ಮಿ ಅಥವಾ ದರಿದ್ರ ಲಕ್ಷ್ಮಿಯ ಮಗನೆಂದಿದ್ದಾನೆ. ಇಲ್ಲಿ ತಂದೆಯ ಪ್ರಸ್ತಾಪವಿಲ್ಲ. ಆದ್ದರಿಂದ ನಾರಸಿಂಹ ಕವಿಯ ಹೆಸರಿನ ಹೊಂದಿಕೆಗಾಗಿ ’ಜೋಕ’ನನ್ನು ನಿರ್ಮಿಸಿಕೊಂಡಂತೆ ಕಾಣುತ್ತದೆ.

ಡಾ. ಶಿವರಾಮ ಕಾರಂತರು ಜವೆ-ಜೋ ಆಗಿ ಜವೆಕುಮಾರ, ಜೋಕುಮಾರ ಆಗಿರಬೇಕೆಂದು ಹೇಳುತ್ತಾರೆ. (ಜವೆ=ಗೋದಿ) ಡಾ. ಕಾರಂತರ ಈ ಅಭಿಪ್ರಾಯವನ್ನು ಒಪ್ಪುವುದು ಕಷ್ಟ. ಜೋಕುಮಾರನ ಪ್ರತೀತಿಯಿರುವ ಪ್ರದೇಶವು ಉತ್ತರ (ಮಧ್ಯ) ಕರ್ನಾಟಕ, ಇದು ಗೋದಿಯ ಬೆಳೆಗಾಗಿಯೇ ಪ್ರಸಿದ್ಧವಾಗಿಲ್ಲ. ಅಲ್ಲದೆ ಈ ದೇವತೆಗೆ ಗೋದಿಯ ನೈವೇದ್ಯವನ್ನೂ ಕೊಡುವದಿಲ್ಲ. ಕೇವಲ ಜೋಳ, ರಾಗಿಯಿಂದ ಮಾಡಿದ ಹುಳಿನುಚ್ಚು, ಹುಳಿಯಂಬಲಿ ಇವುಗಳನ್ನೇ ಕೊಡುವದುಂಟು. ಹೀಗಿರುವಾಗ ಜವೆಗೂ ಜೋಕುಮಾರನಿಗೂ ಎಲ್ಲಿಯ ನಂಟು? ಹಾಗೆ ವಾದಿಸುವದಾದರೆ ’ಜೋಳಕುಮಾರ’ ’ಜೋಕುಮಾರ’ ಆಗಿದೆಯೆಂದು ಹೇಳುವುದು ಇನ್ನೂ ಸೂಕ್ತವಲ್ಲವೆ? ಹೀಗೆ ಬಂದಿರಲಾರದೆನ್ನುವುದೇ ನಮ್ಮ ಅಭಿಪ್ರಾಯ.

ಡಾ. ಕಾರಂತರ ವಿಚಾರವನ್ನೇ ಆಧಾರವಾಗಿರಿಸಿಕೊಂಡು ಐತಾಳರು ವೇದ ಕಾಲಕ್ಕೆ ಒಯ್ದು, ಆರ್ಯಮೂಲವನ್ನು ಕಲ್ಪಿಸಿ, ಮಾರಿಯ ಸಂಬಂಧದಿಂದ ದ್ರಾವಿಡ ಆವರಣವೆಂದು ಹೇಳಿ, ’ಕೊನೆಗೂ ಇದು ಆರ್ಯಮತಾಚಾರವಾಗಿಯೇ ವಿಂಗಡಗೊಳ್ಳುತ್ತದೆ’ ಎಂದು ಸಲಹೆ ಮಾಡಲು ಹೊರಟಿದ್ದಾರೆ. ಈ ಜೋಕುಮಾರನ ಸಂಪ್ರದಾಯ ಕೇವಲ ಕರ್ನಾಟಕದಲ್ಲಿ, ಅದೂ ಉತ್ತರ ಕರ್ನಾಟಕದಲ್ಲಿದೆಯೆನ್ನುವುದು ಸೂರ್ಯಪ್ರಕಾಶದಷ್ಟು ಸತ್ಯವಿರುವಾಗ ಹರಪ್ಪಾ ಸಂಸ್ಕೃತಿಗಿಂತಲೂ (ಅದು ದ್ರಾವಿಡ ಸಂಸ್ಕೃತಿಯಾದ್ದರಿಂದ) ಹಿಂದೆ ಹೋಗಿ ಆರ್ಯ ಸಂಬಂಧವನ್ನು ಏಕೆ ಕಲ್ಪಿಸುತ್ತಾರೆನ್ನುವದು ಪ್ರಾಜ್ಞರಿಗೆ ಹೊಳೆಯುವಂತಿಲ್ಲ. ಇಲ್ಲಿ ಯಾವುದೆಲ್ಲಕ್ಕೂ ಆರ್ಯ ಮೂಲವೇ ಆಧಾರ ಎನ್ನುವ ಮಡಿವಂತ ಬುದ್ಧಿಯ ಕಸರತ್ತನ್ನು ಕಾಣಬಹುದಲ್ಲದೆ ಬೇರೇನೂ ಅಲ್ಲ.

ಇಲ್ಲಿಯವರೆಗಿನ ವಿವರಣೆಯಿಂದ ಜೋಕುಮಾರನು ಶಿವನ ಮಗನೆಂಬುದು ವಿದಿತವಾಗುತ್ತದೆ. ಶಿವನ ಕುಮಾರ-ಶಿವಕುಮಾರ ಆಗಿ ಕುಮಾರ  ಇದು ಕೊವರನಾದಾಗ ಶಿವ-ಶೋ-ಜೋ ಆಗಿ ಪರಿಣಮಿಸಿರಬೇಕು. ಇದರಿಂದ ’ಜೋಕೊವರ’ ಎಂಬ ರೂಪು ಸಿದ್ಧವಾಗುತ್ತದೆ. ಇದು ರೂಢಿಯ ಹೇಳಿಕೆಗೂ ಜಾನಪದ ಹಾಡುಗಳಲ್ಲಿ ಬರುವ ವಿಷಯಕ್ಕೂ ಹೊಂದಿಕೆಯಾಗುತ್ತದೆ.

ಇನ್ನು ಅವನ ಸ್ವರೂಪವನ್ನೇ ಅವಲಂಬಿಸಿಯೂ ಈ ಶಬ್ದಕ್ಕೆ ನಿಷ್ಪತ್ತಿಯನ್ನು ಹೇಳುವುದನ್ನು ಅವಕಾಶವಿದೆ. ’ಜೋಕು’ ಎಂದರೆ ಬೆಡಗು, ಠೀವಿ, ಡೌಲು ಎಂದರ್ಥ. (ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು, ಪುಟ ೩೧೦೭, ಸಾಲು ೭, ೮) ಜೋಕುಮಾರ ಡೌಲಿನವನೆನ್ನುವದರಲ್ಲಿ ಯಾವ ಸಂದೇಹವೂ ಇಲ್ಲ. ಇಂತಹ ಠೀವಿಯ ಬೆಡಗಿನ ಕುಮಾರನೇ ಇವನಾದುದರಿಂದ ’ಜೋಕುಕುಮಾರ’ ಜೋಕುಮಾರ’ನಾಗಿರಬೇಕೆಂದು ಊಹಿಸಿದರೆ ತಪ್ಪೆನಿಸಲಿಕ್ಕಿಲ್ಲ, ಇದು ಅನ್ವರ್ಥಕವಾಗಿ ಸಾರ್ಥಕತೆಯನ್ನು ಪಡೆಯುತ್ತದೆ.

) ನಂಬುಗೆಗಳು:

ಉಚ್ಚಕುಲ – ನೀಚಕುಲವೆಂಬ ಕಲ್ಪನೆ ಈಗ ಸಾಮಾನ್ಯವಾಗಿ ಒಂದು ಸೆಣಸಾಟಕ್ಕಿಟ್ಟುಕೊಂಡಿರುವಂತೆ, ತಾವು ಪೂಜಿಸುತ್ತಿರುವ ದೇವತೆಗಳೂ ಕೀಳುಮಟ್ಟದವೆಂಬ ಕಲ್ಪನೆ ಕೆಳವರ್ಗದ ಜನರಲ್ಲಿ ಬರತೊಡಗಿದೆ. ಹೀಗಾಗಿ ಅವರು ತಮ್ಮ ದೇವತೆಗಳ ಆರಾಧನೆಯನ್ನು ಹಿಂದಿನಂತೆ ವೈಭವಯುತವಾಗಿ ಮಾಡದೆ ಇರುವದು ಕಂಡು ಬರುತ್ತದೆ. ಇಂತಹ ದೇವತೆಗಳಲ್ಲಿ ಜೋಕುಮಾರನೂ ಒಬ್ಬ.

ಇವನು ಕಾಮುಕ ಎಂಬ ಪ್ರತೀತಿ ಇದ್ದುದರಿಂದ ಇಂತಹ ದೇವರನ್ನು ಆರಾಧಿಸುವ ತಾವೂ ಅಂಥವರೆಂದು ಜನ ತಿಳಿದಾರು ಎನ್ನುವ ದೃಷ್ಟಿ ಇವರಲ್ಲಿಯೂ ಮೂಡ ತೊಡಗಿದ್ದರಿಂದ ಹಿಂದಿನ ವೈಭವ ಇಂದು ಕಾಣುತ್ತಿಲ್ಲ. ಅದರಂತೆ ಮೇಲ್ವರ್ಗದ ಜನ ಇಂತಹ ದೇವತೆಗಳನ್ನು ಆರಾಧಿಸುವದಕ್ಕಾಗಲಿ, ಪಡಿಪದಾರ್ಥಗಳನ್ನು ಕೊಟ್ಟು ಗೌರವಿಸುವುದಕ್ಕಾಗಲಿ ಮುಖ್ಯವಾಗಿ ಎರಡು ಕಾರಣಗಳು. ೧) ಆ ದೇವತೆಗಳು ಕ್ಷುದ್ರವೆಂಬ ಕಲ್ಪನೆಯಿದ್ದುದರಿಂದ ತಮಗೆ ಏನಾದರೂ ತೊಂದರೆ ಕೊಡಬಹುದೆಂದು ’ದುರ್ಜನಂ ಪ್ರಥಮಂ ವಂದೇ’ ಎನ್ನುವಂತೆ ಅವುಗಳನ್ನು ಪೂಜಿಸಿ, ಆರಾಧಿಸುವದು. ೨) ಕೆಳವರ್ಗದ ಜನರನ್ನು ತಮ್ಮ ಅಂಕಿತದಲ್ಲಿಟ್ಟುಕೊಳ್ಳಬೇಕಾದರೆ ಅವರ ದೇವತೆಗಳನ್ನು ಆರಾಧಿಸಿ, ಪಡಿಪದಾರ್ಥಗಳನ್ನು ಕೊಟ್ಟು ತಮ್ಮಲ್ಲಿ ಅವರಿಗೆ ವಿಶ್ವಾಸ ಹುಟ್ಟಿಸುವಂತೆ ಮಾಡುವದು.

ಈಗ ಇಬ್ಬರಲ್ಲಿಯೂ ತಿಳಿವಳಿಕೆ ಮೂಡುತ್ತಿರುವದರಿಂದ ಸಮಾಜದಲ್ಲಿ ಹಿಂದಿನ ನಂಬುಗೆಗಳಲ್ಲಿ ಪರಿವರ್ತನೆಯಾಗುತ್ತಿರುವದರಿಂದ ಈ ಜೋಕುಮಾರನ ಬಗೆಗಿರುವ ನಂಬುಗೆಗಳೂ ಬಹುಮಟ್ಟಿಗೆ ಕಡಿಮೆಯಾಗಿವೆ.

ಜೋಕುಮಾರನನ್ನು ಕಾಮುಕ, ಫಲದೇವತೆಯೆಂಬ ಎರಡು ತಿಳಿವಳಿಕೆಗನುಸರಿಸಿಯೇ ನಂಬುಗೆಗಳಲ್ಲಿಯೂ ಈ ಎರಡು ಪ್ರಕಾರಗಳು ಕಂಡು ಬರುತ್ತದೆ. ಕಾಮುಕತೆಯನ್ನನುಸರಿಸಿರುವವು ಬಹುಮಟ್ಟಿಗೆ ಅಶ್ಲೀಲವಾಗಿಯೇ ಇವೆ. ಉದಾಹರಣೆಗಾಗಿ ಕೆಲವನ್ನು ಇಲ್ಲಿ ಕೊಡಬಹುದು. ೧) ಬಗ್ಗಿ ನಮಾಜ ಮಾಡುತ್ತಿದ್ದ ಗಂಡನಿಗೆ ಇವನು ಮಾಡುತ್ತಿದ್ದ ಕ್ರಿಯೆಯನ್ನು ನೋಡಲಾರದೆ ಮುಸಲ್ಮಾನ ಹೆಂಗಸು ಬುರುಕಿ ಹಾಕಿಕೊಂಡಳಂತೆ. ೨) ಇವನ ಕಾಮುಕತೆಗೆ ಹೆದರಿದ ಜೈನ ಹೆಂಗಸು ಕಚ್ಚೆ ಹಾಕಿಕೊಂಡಳಂತೆ,೩) ಸದಾವಿಕಾರಾವಶನಾಗಿರುವ ಅವನು ಬೆಂಡಿಯ ಬೆಳೆಯಲ್ಲಿ ತಿರುಗಿದ್ದರಿಂದ ಅವನ ವೀರ್ಯವು ಅಲ್ಲಿ ಬಿದ್ದುದರಿಂದ ಇಂದೂ ಅದು ಲೋಳೆಯಾಗಿದೆಯಂತೆ.

ಇನ್ನು ಫಲದೇವತೆಯೆನ್ನುವಲ್ಲಿರುವ ನಂಬಿಕೆಗಳು ಸ್ವಲ್ಪ ಮಟ್ಟಿಗೆ ಅರ್ಥಪೂರ್ಣವಾಗಿವೆ, ತರ್ಕಬದ್ಧವಾಗಿವೆ, ವೈಜ್ಞಾನಿಕವಾಗಿವೆ. ೧) ಜನನೇಂದ್ರಿಯವೇ ಎದ್ದು ಕಾಣುವದರಿಂದ ಕಾಮುಕನೆಂಬುದು ವ್ಯಕ್ತವಾಗುತ್ತದೆ. ಇದರಿಂದಲೂ ಶಾಂತವಿರಬೇಕೆಂಬಂತೆ ಬೆಣ್ಣೆಯನ್ನು ಬಾಯಿಗೆ ಹಚ್ಚುತ್ತಾರೆ. ಅದನ್ನೇ ಕಣ್ಣಿಗೆ ಹಚ್ಚಿಕೊಂಡರೆ ಕಣ್ಣುಬೇನೆ ಬರುವದಿಲ್ಲವೆಂಬುದು ಪ್ರತೀತಿ. ಬೆಣ್ಣೆ ತಂಪಾಗಿರುವುದರಿಂದಲೂ ಔಷಧವಾಗಿರುವುದರಿಂದಲೂ ಕಣ್ಣುಬೇನೆ ಬರದಿರುವುದು ಸಾಧ್ಯ. ೨) ಹುಳಿಯಂಬಲಿ, ಹುಳಿನುಚ್ಚನ್ನು ನೈವೇದ್ಯವಾಗಿ ಅರ್ಪಿಸುವದರಿಂದ ಅವನು ಸಾಮಾನ್ಯರ ದೇವತೆ ಅದರಲ್ಲಿಯೂ ಒಕ್ಕಲಿಗರ ದೇವತೆ ಎಂಬುದು ವಿದಿತವಾಗುತ್ತದೆ. ಈ ಅಂಬಲಿಯನ್ನೇ ಒಕ್ಕಲಿಗರು ಶೇಷಪ್ರಸಾದವಾಗಿ ಸ್ವೀಕರಿಸಿ ಹೊಲದಲ್ಲಿ ಒಯ್ದು ಚರಗ ಚಲ್ಲುತ್ತಾರೆ. ಇದು ಬೆಳೆಗಳಿಗೆ ಮೇಲು ಗೊಬ್ಬರ ಕೊಟ್ಟರೆ ಹಿತಕಾರಿಯೆಂಬುದರ ಸಾಂಕೇತಿಕವಾದ ವಿಷಯ. ೩) ಜೋಳ ಮೊದಲಾದವುಗಳನ್ನು ಕಾಣಿಕೆಯಾಗಿ ಕೊಟ್ಟಾಗ ಜೋಕುಮಾರನನ್ನಾಡಿಸುವ ಹೆಣ್ಣ-ಮಕ್ಕಳು ಬೇವಿನ ತೊಪ್ಪಲನ್ನು ಸೇರಿಸಿಕೊಡುತ್ತಾರೆ. ಬೇವಿನ ತೊಪ್ಪಲು ಕಹಿಯಾಗಿದ್ದು ಕ್ರಿಮಿ ನಾಶಕ, ಇದರಿಂದ ಬಿತ್ತುವ ಬೀಜದಲ್ಲಿರುವ ಕ್ರಿಮಿಗಳು ನಾಶವಾಗಿ ಬೀಜ ಶುದ್ಧವಾಗುತ್ತವೆ. ಇದರಿಂದ ಸರಿಯಾಗಿ ನಾಟಲು ಸಹಾಯವಾಗುತ್ತದೆ. ೪) ಇಂದಿಗೂ ಮಹಾತ್ಮರಲ್ಲಿಗೆ ಹೋದಾಗ, ದೇವಸ್ಥಾನಕ್ಕೆ ಹೋದಾಗ ಕೆಟ್ಟ ಚಟಗಳನ್ನೊ, ದುರ್ಗುಣಗಳನ್ನೊ ಬಿಟ್ಟು ಬರುವದು  ವಾಡಿಕೆಯಾಗಿದೆ. (ತಿರುಪತಿಗೆ ಹೋದಾಗ ಕೂದಲನ್ನು ಬಿಟ್ಟು ಬರುವದನ್ನು ಇಲ್ಲಿ ಸ್ಮರಿಸಬಹುದು). ಮನೆಯಲ್ಲಿರುವ ತಗಣಿ, ಚಿಕ್ಕಾಡು, ಗುಂಗಾಡುಗಳನ್ನು ಜೋಕುಮಾರನಿಗೆ ಕೊಡುವದುಂಟು. ಇದೂ ಮನೆಯಲ್ಲಿರುವ ಪೀಡೆ ತೊಂದರೆಗಳನ್ನು ನಿವಾರಿಸುವಂತೆ ಅವನನ್ನು ಕೇಳುವಂತಿದೆ. ೫) ಜೋಕುಮಾರ ಸತ್ತಾಗ ಅಗಸರು ಮೂರು ದಿವಸ ಬಟ್ಟೆ ಒಗೆಯುವದನ್ನು ನಿಲ್ಲಿಸುತ್ತಾರೆ. ಬಹುತರವಾಗಿ ಸೂಳೆಯರು ಅವನನ್ನು ಅಲ್ಲಿಗೆ ಒಯ್ದು ಒಗೆದಾಗ ಅವನಿನ್ನು ಸತ್ತಿರಲಿಲ್ಲವಾದ್ದರಿಂದ ಅವನ ಭಯದಿಂದ ಮೂರು ದಿನ ಆ ಕಡೆ ಸುಳಿಯದೆ, ಸತ್ತದ್ದು ನಿಶ್ಚಿತವಾದ ಮೇಲೆ ತಮ್ಮ ಕಾರ್ಯಕ್ಕೆ ತೊಡಗಿರಬೇಕು. ಇಲ್ಲವೆ ಅವನ ಮೇಲಿರುವ ಸಹಜವಾದ ಅನುಕಂಪೆಯಿಂದ ಸತ್ತ ಮೇಲಿನ ಮೂರು ದಿನದ ಕಾಯ್ ಮಾಡಿ ಮುಗಿಸುವವರೆಗೆ ಹಾಗೆ ಮಾಡಿರಬಹುದು. ೬) ಜೋಕ್ಯಾನ ಹುಣ್ಣಿವೆಯ ದಿನ ಸರಿರಾತ್ರಿಯಲ್ಲಿ ಇವನನ್ನು ತಳವಾರರು ತಮ್ಮ ಮನೆಯಿಂದ ಹೊಲಗೇರಿಗೆ ಒಯ್ಯುವರು. ಈಗ ಯಾರೂ ಅವನನ್ನು ನೋಡಬಾರದೆಂದೂ ನೋಡಿದವರಿಗೆ ಏನಾದರೂ ತೊಂದರೆಯಾಗುವದೆಂದೂ ಪ್ರತೀತಿ. ಬಹುತರವಾಗಿ ಈಗಿನ ಇವನ ಸ್ವರೂಪ ತೀರ ಭಯಾನಕವಾಗಿರುತ್ತದೆ. ಮೈತುಂಬ ಗುಲಾಲ, ಜೊತೆಗೆ ಹಿಲಾಲ, ಇದರಿಂದ ಮೂರ್ತಿ ರಾವೇರಿದಂತಾಗಿರುತ್ತದೆ. ಇದರಿಂದ ಭಯಭೀತರಾಗುವ ಸಂಭವವಿರುವುದು, ಇದನ್ನು ತಪ್ಪಿಸುವ ಸಲುವಾಗಿ ಈ ಅಂಜಿಕೆಯನ್ನು ಹಾಕಿರಬೇಕು. ೭) ಭಾದ್ರಪದ ಅಷ್ಟಮಿಯಂದು ಜೋಕುಮಾರನ ಜನ್ಮವಾದುದರಿಂದ ಗಣಪತಿಗೂ ಇವನಿಗೂ ಕೂಡುವುದು ಸಹಜ. ಆದರೆ ಪರಸ್ಪರರನ್ನು ದಶ್ನ ಮಾಡಿಸುವದಿಲ್ಲ. ಇದರಿಂದ ಗಣಪತಿ ಭಿನ್ನನಾಗುವನೆಂದು ನಂಬುಗೆ. ಇದಕ್ಕೆ ಸರಿಯಾದ ಕಾರಣವನ್ನು ಹೇಳುವದು ಸಾಧ್ಯವಿಲ್ಲವಾದರೂ ಊಹಾತ್ಮಕವಾಗಿ ಹೀಗೆ ಹೇಳಬಹುದು. ಗಣಪತಿ, ಜೋಕುಮಾರ ಇಬ್ಬರೂ ಸಹೋದರರು. ಇಬ್ಬರ ಸ್ವಭಾವ ತೀರ ಭಿನ್ನವಾದುದು. ಗಣಪತಿ ರಾಜೈಶ್ವರ್ಯವನ್ನು ಬಯಸುವವನಾದರೆ ಜೋಕುಮಾರ ಸಾಮಾನ್ಯ ಜೀವನವನ್ನೇ ಮೆಚ್ಚುವವ. ಒಬ್ಬ ಪ್ರತಿಷ್ಠಿತರ, ಶ್ರೀಮಂತರ ದೇವರಾದರೆ ಇನ್ನೊಬ್ಬ ಶ್ರೀಸಾಮಾನ್ಯರ, ಒಕ್ಕಲಿಗರ ದೇವ, ಆದ್ದರಿಂದ ಇಬ್ಬರಲ್ಲಿ ಹೊಂದಿಕೆಯಾಗಲು ಸಾಧ್ಯವಿಲ್ಲ. ಲೋಕದಲ್ಲಿ ವರ್ಗಕಲಹದ ಉದಾಹರಣೆಗಳು ಸಾಕಷ್ಟು, ಅದರ ದ್ಯೋತಕವೇ ಇದಾಗಿರಬಹುದು.

ಒಟ್ಟಿನಲ್ಲಿ ಜೋಕುಮಾರನೊಬ್ಬ ಬೇಡಿದವರಿಗೆ ಕೊಡುವ, ಅಲ್ಪಾಯುಷಿಯಾದ, ವಿಷಯಲಂಪಟನಾದ ಉತ್ತರ ಕರ್ನಾಟಕದ ಗ್ರಾಮೀಣ ದೇವತೆ, ಮೂಲತಃ ಈತನು ಫಲದೇವತೆ, ಅದೇ ಅತಿರೇಕಕ್ಕೆ ಹೋದಾಗ ಕೃಷ್ಣದ್ವಂದ್ವಿಯಾದಾಗ ಅತಿಕಾಮುಕನಾಗಿ ಮೂಡಿ ಬಂದಂತಿದೆ. ಜನಸಾಮಾನ್ಯರ ಉದ್ದಿಷ್ಟಗಳನ್ನು ತೀರಿಸುವಲ್ಲಿ ಗಣಪತಿಗೆ ಮಿಗಿಲಾಗಿ ಅವರ ಪ್ರೀತಿಗೆ ಪಾತ್ರನಾದವನು.  ಹೀಗೆ ಜೋಕುಮಾರನು ಎರಡು ಗುಣಗಳಿಂದ ಕುಡಿದ ದೇವತೆಯೆಂದು ಸ್ಪಷ್ಟವಾಗುತ್ತದೆ.

ಗ್ರಂಥ ಋಣ:

೧. ಕನ್ನಡ ಜಾನಪದ ಗೀತಗಳು, ೧೯೬೯- ಡಾ. ಬಿ.ಎಸ್.ಗದ್ದಗಿಮಠ

೨. ಜೋಕುಮಾರ- ಡಾ. ಎಂ. ಚಿದಾನಂದಮೂರ್ತಿ (ಪ್ರಬುದ್ಧ ರ್ನಾಟಕ ೪೬-೪)

೩. ಜೋಕುಮಾರ ಕಥೆಯ ಇನ್ನೊಂದು ಪ್ರಭೇದ-(ಸಾಧನೆ-೮-೩) – ಡಾ. ಎಂ. ಚಿದಾನಂದಮೂರ್ತಿ

೪. ಜೋಕುಮಾರ ಯಾರು? – ಕೆ.ಶಿವರಾಮ ಐತಾಳ (ಪ್ರಜಾಮಣಿ ೨೦-೧೨-೧೯೮೧)

ಹಾಡು ಮತ್ತು ಕೆಲವು ವಿವರಗಳು:

೧. ಶ್ರೀಮತಿ ಗುತ್ತವ್ವ ಎಸ್. ಆಲಗೂರ (೫೨) – ಕುಲಬುರ್ಗಿ

೨. ಶ್ರೀಮತಿಯ ಯಮನವ್ವ ರಾಮಪ್ಪಾ ಹಲಕಿ (೬೦) – ಜಮಖಂಡಿ

೩. ಶ್ರೀ ಹಣಮಂತ ರಾಮಪ್ಪ ಸುಣಗಾರ (೪೦) – ಇಂಗಳಗಿ ತಾ. ಮುಧೋಳ

೪. ಶ್ರೀಮತಿ ಗಂಗವ್ವ ಧರೆಪ್ಪ ತಳವಾರ (೫೦) – ಜಮಖಂಡಿ

* * *