ಮೈಲಾರಲಿಂಗ ಎಂದು ಪ್ರಸಿದ್ಧವಾಗಿರುವ ಕ್ಷೇತ್ರಗಳು ಹಲವಾರು. ಧಾರವಾಡ ಜಿಲ್ಲೆಯ ರಾಣೀಬೇನ್ನೂರಿನ ಹತ್ತಿರ ಇರುವ ದೇವರಗುಡ್ಡ; ಅಲ್ಲಿಂದ ಸಮೀಪದ-ತುಂಗಭದ್ರಾ ನದಿಯ ದಡದಲ್ಲಿರುವ ಮೈಲಾರ ಕ್ಷೇತ್ರ: ಬೀದರದಲ್ಲೊಂದು. ಹೀಗೆ ಕರ್ನಟಕದ ಅನೇಕ ಕಡೆ ಮೈಲಾರಲಿಂಗ ಕ್ಷೇತ್ರ ದೊರಕುತ್ತದೆ. ಈ ಎಲ್ಲ ಕ್ಷೇತ್ರಗಳಲ್ಲೂ ’ಮೈಲಾರ ಲಿಂಗ’ನ ಪೂಜೆ, ಉತ್ಸವಗಳು ಸ್ವಲ್ಪ ಹೆಚ್ಚು ಕಡಮೆ ಒಂದೇ ಸ್ವರೂಪದವಾಗಿದ್ದು-ಆರಾಧ್ಯದೈವ, ಪೂಜಾ ವಿಧಾನ-ಭಕ್ತರ ಆಚರಣೆ ಸಂಪ್ರದಾಯಗಳು-ಈ ಎಲ್ಲ ಕ್ಷೇತ್ರಗಳ ಪ್ರತೀಕವಾಗಿ ಧಾರವಾಡ ಜಿಲ್ಲೆಯ ರಾಣೀಬೆನ್ನೂರಿಗೆ ಸಮೀಪದ ದೇವರಗುಡ್ಡ- ’ಮೈಲಾರಲಿಂಗ’-ವನ್ನು ಇಲ್ಲಿ ಜಾನಪದೀಯ ವಿಶ್ಲೇಷಣೆಗೆ ಆಯ್ದುಕೊಳ್ಳಲಾಗಿದೆ. ಈ ಗ್ರಾಮದೇವತೆಯನ್ನು ಬೆಟ್ಟದೇವತೆಯೆಂದೂ ಕರೆಯಬಹುದು.

ಪುರಾಣ, ದಂತಕಥೆ ಇತ್ಯಾದಿ:

ಇಂದು ನಮ್ಮಲ್ಲಿ ಆರಾಧನೆಗೊಳ್ಳುತ್ತಿರುವ ಪುರುಷ ದೇವತೆ ಮೈಲಾರಲಿಂಗನ ಸುತ್ತ ಅನೇಕ ಪೌರಾಣಿಕ, ದಂತಕಥೆ, ಊಹೆಗಳು ಹುಟ್ಟಿಕೊಂಡಿವೆ.

ಒಂದು ಪರಂಪರಾಗತ ಪೌರಾಣಿಕ ಕಥೆಯ ಪ್ರಕಾರ: ಆದಿಕಾಲದ ಮಣಿಚೂಲ ಪರ್ವತ ಮುನಿಗಳ ತಪೋಭೂಮಿ. ಮಲ್ಲಾಸುರ ಮಣಿಕಾಸುರ ರಾಕ್ಷಸರು ಬ್ರಹ್ಮ ದೇವನ ವರದಿಂದ ಉನ್ಮತ್ತರಾಗಿ ಲೋಕಕಂಟಕರಾದರು. ಮಣಚೂಲ ಬೆಟ್ಟದ ಪ್ರದೇಶ ಸಂತಾಕ್ಕೊಳಗಾಯಿತು. ಮುನಿಗಳು, ಇಂದ್ರ, ವಿಷ್ಣು ಇತ್ಯಾದಿ ಪ್ರಮುಖರು ಕೂಡಿ ಶಿವನ ಹತ್ತಿರ ಹೋಗಿ ರಕ್ಕಸನ ಉಪದ್ರವ ದೌರ್ಜನ್ಯಗಳ ಪರಿಹಾರಕ್ಕೆ ಪ್ರಾರ್ಥಿಸುತ್ತಾರೆ.

ಶಿವನು ಉಗ್ರನಾಗಿ ಜಡೆಯನ್ನು ಭೂಮಿಗೆ ಅಪ್ಪಳಿಸಿದನು; ಜಡೆಯಿಂದ ಅದ್ಭುತಾಕಾರದ ಮಹಾಮಾಯೆ ಮೂಡಿನಿಂತಳು. ಮುನಿಗಳು ಶಿವನ ಅಪ್ಪಣೆ ಪಡೆದು ತುಪ್ಪದಿಂದ ಅವಳಿಗೆ ಅಭಿಷೇಕ ಮಾಡಿದರು. ಅವಳನ್ನು ’ಘೃತಮಾರಿ’ ಎಂದು ಕರೆದು ಅವಳಿಂದ ಸಂಹಾರದ ಅಭಯ ಪಡೆದರು.

ಶಿವನು ಮಾರ್ತಾಂಡ ಭೈರವನಾದ. ಅವನ ವೇಷ ವಿಲಕ್ಷಣ. ಹಳದಿ ಬಣ್ಣದ ಪೀತಾಂಬರ, ಹುಲಿ ಚರ್ಮ; ಕಂಬಳಿಯ ನಿಲುವಂಗಿ, ಕಂಬಳಿ ಟೊಪ್ಪಿಗೆ-ಕಿರೀಟ-ಕೈಯಲ್ಲಿ ಖಡ್ಗ, ತ್ರಿಶೂಲ, ಡಮರು, ಪಾನಪಾತ್ರೆ (ಡೋಣಿ), ಹಣೆಗೆ ಭಂಡಾರ; ಹುಬ್‌ಉಬಳ ನಡುವೆ ಕುಂಕುಮ. ಬಿಳಿ ಕುದುರೆಯೇರಿ ರಭಸದಿಂದ ಮುನ್ನುಗಿದ ಮಾರ್ತಾಂಡ ಭೈರವನ ಜೊತೆ ’ಹಗ್ಗಯ್ಯ’ನಾಗಿ ಹರಿ, ಭೈರವನ ಕೋಪದಿಂದ ಹುಟ್ಟಿದ ನಾಯಿಗಳು, ವೀರಭದ್ರ, ಜಯನಂದಿ ಇತ್ಯಾದಿ. ಪಾರ್ವತಿಯು ಗಂಗೆ ಮಾಳವ್ವನಾಗಿ ರಕ್ಕಸರ ವಿರುದ್ಧ ಹೋರಾಡಲು ಅಣಿಯಾದಾಗ ಚಂಡಿ ರಣಚಂಡಿ, ಕಾಲದುರ್ಗಿ ಹೀಗೆ ಉಗ್ರರೂಪ ಧರಿಸಿ ಸೈನ್ಯವನ್ನು ಕೂಡಿದಳು. ಮಾರ್ತಾಂಡ ಭೈರವ ಉಗ್ರ ಕೋಪದಿಂದ ಡಮರು ಬಾರಿಸಿದರೆಮೂರುಲೋಕ ನಡುಗಿದುವು. ಮಲ್ಲಾಸುರ ಮಣಿಕಾಸುರರು ಮತ್ತು ಶಿವಸೈನ್ಯದ ನಡುವೆ ಭೀಕರ ಕದನ. ಮಣಿಕಾಸುರ ಗಾಯಗೊಂಡು ಶಿವನ ಪಾದಗಳಲ್ಲಿ ಬಿದ್ದು ಶಿವನ ಕೃಪಾ ಭಿಕ್ಷೆ ಕೇಳುತ್ತಾನೆ. ಪಶ್ಚಾತ್ತಪಗ್ಧನಾದ ಅವನು ಶಿವಪಾದ ಸೇರುತ್ತಾನೆ. ಅದರಂತೆ ಮಾರ್ತಾಂಡ ಭೈರವನ ಪಾಶುಪತಾಸ್ತ್ರ ಮಲ್ಲಾಸುರನನ್ನು ಸೀಳುತ್ತದೆ. ಮಲ್ಲ ತಡಮಾಡದೆ ಭೈರವನ ಪಾದಗಳನ್ನು ಗಟ್ಟಿ ಯಾಗಿ ಹಿಡಿದಾಗ ಅವನಿಗೆ ಜ್ಞಾನೋದಯ. ’ಶಿವನೇ ಸದಾ ನಿನ್ನ ಪದತಲದಲ್ಲಿರುವಂತೆ ಕರುಣಿಸು’ ಎಂದು ಪ್ರಾರ್ಥನೆ. ’ಮಲ್ಲ’ ರಕ್ಕಸನನ್ನು ತನ್ನ ಶರಣದಲ್ಲಿ ಆಶ್ರಯವಿತ್ತು ಹರಸಲು ನೆರೆದ ಏಳುಕೋಟಿ ಸೈನ್ಯವೂ ’ಮಲ್ಲಾರಿ ಮಾರ್ತಾಂಡ ಉಘೇ ಉಘೇ’ ’ಮಲ್ಲಾರಿ ಭೈರವ ಉಘೇ ಉಘೇ’ ’ಏಳುಕೋಟಿ ಏಳುಕೋಟಿ ಉಘೇ ಉಘೇ’ಎಂದು ಉಗ್ವಡಿಸಿದರು. ಮಲ್ಲಾರಿ ಮಣಿಚೂಲಬೆಟ್ಟದ ತುದಿಯಲ್ಲಿ ನಿಂತು ಕೈಲಿದ್ದ ಶಿವಧನಸ್ಸನ್ನು ಠೇಂಕರಿಸಿ ’ಸದ್ದು ಸದ್ದವೇ ಪರಾಕ’ ಅಂದನಂತೆ. ಏಳುಕೋಟಿ ಜನವೂ ಸ್ತಬ್ಧ. ’ಮಲ್ಲಾಸುರನ ಬಯಕೆ ಸದಾ ನಮ್ಮ ಚರಣದಲ್ಲಿರುವುದು. ನಾನು ಮಲ್ಲನಿಗೆ ಅರಿಯಾದರೂ ನನ್ನನ್ನು ಕರೆಯಿರಿ’….. ’ಮಲ್ಲಾರಿಲಿಂಗ’ ’ಮಲ್ಲಾರಿಲಿಂಗ’, ಏಳುಕೋಟಿ ಕಂಠಗಳೂ ’ಚಾಂಗು ಉಘೇ ಮಲ್ಲಾರಿಲಿಂಗ, ಮೈಲಾರಲಿಂಗ’ ’ಏಳುಕೋಟಿ ಏಳುಕೋಟಿ ಏಳುಕೋಟಿಗೂ ಮೈಲಾರಲಿಂಗ’. ಏಳುಕೋಟಿ ಉದ್ಘೋಷ ನಭೋಮಂಡಲವನ್ನು ತುಂಬಿ ನಿನದಿಸಿತು. ’ಸದ್ದು ಸದ್ದಲೇ ಪರಾಕ’ ಎಂದನಂತೆ ಮಲ್ಲಾರಿಲಿಂಗ. ಮತ್ತೆ ನಿಶ್ಯಬ್ಧ. ಮಲ್ಲಾರಿ ಮುಂದುವರೆದು ನುಡಿದ:

’ಪಾರ್ವತಿ ಮಾಲತಿ ಶ್ರೀಹರಿ ಹೆಗ್ಗಯ್ಯ ಷಣ್ಮುಖ ಚಿಕ್ಕಯ್ಯ:
ಗಣಪತಿ ದೊಡ್ಡಯ್ಯ ದೇವರಗುಡ್ಡದಲ್ಲಿಯೇ ವಾಸ
ಆಶ್ವೀಜ ಬಹುಳ ನವಮಿ ಮಣಿಕಾಸುರನ ಸ್ಮರಣಿಗೆ ತುರಗ ಪೂಜೆ
ತುರಗದೊಡನೆ ಮಲ್ಲಾರಿಲಿಂಗನ ಪೂಜೆ
ನಕ್ಷತ್ರರೂಪದಿಂದ ನನ್ನ ದರ್ಶನ ಗಿರಿಶಿಖದಲ್ಲಿ, ಅದೇ ನನ್ನ ಕುರುಹು
ಆಲದಮರದ ನೆರಳು-ಅದೇ ನನ್ನ ಆಶ್ರಯ-ಭಕ್ತರಿಗೆ ನೆರವು.
ಮಲ್ಲಾಸುರ ಹತನಾದ ಡೆಂಕನಮರಡಿ! ಅಲ್ಲಿ ಮಾಲತಿ ಜೊತೆ
ವಾಸ ಹತ್ತುದಿನ, ಹನ್ನೊಂದನೆ ದಿನ ತುಂಗಾನದಿ ದಾಟಿ ಪಯಣ;
ಆಚೆ ದಡ ವಾಸ, ಮಾಘ ಪೂರ್ಣಿಮೆ ಉತ್ಸವ; ಮಾಘ ಬಹುಳ ಬಿದಿಗಿ
ಭಕ್ತರ ಉದ್ಧಾರಕ್ಕಾಗಿ ಕಾರಣಿಕ, ಏಳುಕೋಟಿಗೂ ಪರಾಕ!

ಮೈಲಾರದೇವತೆ ಕನ್ನಡ ನಾಡು ಮಹಾರಾಷ್ಟ್ರಗಳಲ್ಲಿ ಪೂಜೆಗೊಂಡ ದೇವತೆ. ಕರ್ನಾಟಕದ ಮೈಲಾರ ಮಹಾರಾಷ್ಟ್ರದಲ್ಲಿ ’ಖಂಡೋಬ’ನಾಗಿ ಜನಪ್ರಿಯ ದೇವತೆ ಎನಿಸಿಕೊಂಡಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.

[1] ಕನ್ನಡ ಕಾವ್ಯಗಳು-ನಯಸೇನನ ಧರ್ಮಾಮೃತದ (ಕ್ರಿ.ಶ.೧೧೧೨) ’ಮೈಲಾರದ ಗೊರವನಂತೆ ತಂತಮ್ಮನೆ ಬಡಿದುಕೊಳ್ವಚ್ಚಳಾಯಿಲರುಮಂ’[2] ಬ್ರಹ್ಮಶಿವನ ಸಮಯ ಪರೀಕ್ಷೆ ಹಲವಾರು ಉಕ್ತಿಗಳು: ’ವರಮೀಗುಮೆ ಮೈಲಾರಂ ಕೇತಂ ಕಾಟಂ ಮಾರಿಗೆ ಮಸಣಿಗೆಯೆನಿಪ್ಪ ಕೊಳೆದೆಯ್ಯಂಗಳ (೭.೧೨೮), ’ಎಕ್ಕಲದೇವಿಗೆ ಮಾಮಾಲಕ್ಕನಿಗಂ ಬನದ ಬಳರಿಗಂ ಮೈಲಾರಂಗಕ್ಕೆಯ್ದೆ ಜಾತ್ರೆ ಮಾಳ್ಪಂ ವೊಕ್ಕಲಿಗಂ ಜೈನನಲ್ಲನಾತಂ ಕಾಳಂ (೪.೧೨೫). ’ಮೈಲಾರ ಒಬ್ಬ ಕ್ಷುದ್ರ ದೇವತೆ. ಇಂಥ ಕ್ಷುದ್ರದೇವತೆಗಳು ವರವನ್ನು ಕೊಡಬಲ್ಲುವೇ?’ ’ಮೈಲಾರ ಮುಂತಾದ ಕ್ಷುದ್ರದೇವತೆಗಳ ಪೂಜೆ ಮಾಡುವವನು ಜೈನನೆಂದು ಕರೆಸಿಕೊಳ್ಳಲಾರ’ ಇತ್ಯಾದಿ ಈ ಕಾವ್ಯದ ಉಲ್ಲೇಖಗಳ ಅಭಿಪ್ರಾಯ.

ಈ ಹೇಳಿಕೆಗಳಿಗಿಂತ ಪ್ರಾಚೀನವೆಂದು ಭಾವಿಸಲಾದ ಒಂದು ಉಲ್ಲೇಖವನ್ನು ’…..ಛಲದಿಂದ ಶೌರ‍್ಯವನ್ನು ತೋರಿ ಕಾದಾಡಿ ಸತ್ತ ಒಬ್ಬ ಜೈನನೇ ಲೋಕದಲ್ಲಿ ಮೈಲಾರನೆಂದು ರೂಢಿವಡೆದನು’[3] ಹಾಗಾದರೆ ಮೈಲಾರನು ಜೈನನೇ? ಪ್ರಬಲ ಶಕ್ತಿವಂತನಾಗಿದ್ದ ಮೈಲಾರನೆಂಬ ವ್ಯಕ್ತಿ ಜೈನ ಧರ್ಮದಲ್ಲಿ ತೊಡಗಿಕೊಂಡು ಅಥವಾ ಜೈನಧರ್ಮಕ್ಕೆ ಮತಾಂತರಗೊಂಡ ಒಂದು ಕಥೆ ರೂಢಿಯಲ್ಲಿದ್ದಿರಬಹುದು ಎಂದು ಭಾವಿಸಲಾಗಿದೆ.

ಹಾಗಾದರೆ ಐತಿಹಾಸಿಕ ಕಾಲಾವಧಿಯ ದೃಷ್ಟಿಯಿಂದ ಮೈಲಾರದೇವತೆ ಎಷ್ಟು ಪ್ರಾಚೀನ? ಬ್ರಹ್ಮಶಿವನ (೧೧೫೦-೬೦) “….. ಮನೆವೆಗ್ಗಡೆಚಟ್ಟಪ್ಪ| ನಿಂದೆ ನಿನ್ನೆ ತಾನಾದ ಮೈಲನುಂ ಮಾಳಚಿಯುಂ| ಜನಕಾಪ್ತರಾದರೆನೆ ಮು| ನ್ನಿನ ಹರಿಹರ ರಾಪ್ತರಾಗದೇಕೆಯೊ ಮಾಣ್ಬರ”[4] ಈ ಹೇಳಿಕೆಯನ್ನು ವಿವೇಚಿಸಿದ ಚಿದಾನಂದ ಮೂರ್ತಿ ಇದನ್ನುನಂಬುವುದಾದರೆ ಮೈಲಾರ ಮಾಳಚಿಯರು ಹರಿಹರರಂತೆ ಪ್ರಾಚೀನದೇವತೆಗಳಲ್ಲ. ಬಹು ಈಚೆಗೆ ಬ್ರಹ್ಮಶಿವನ ಕಾಲಕ್ಕಿಂತ ಮುಂಚೆ ಕಾಣಿಸಿಕೊಂಡವರು. ಕಾಣಿಸಿಕೊಂಡ ಸ್ವಲ್ಪ ಕಾಲದಲ್ಲೇ ಜನರಿಗೆ ಆಪ್ತರಾದವರು. ಮನೆ ವೆಗ್ಗಡೆ ಚಟ್ಟಪ್ಪನಿಂದ ಅವರು ಪ್ರಸಿದ್ಧರಾದರು. ಮಾಳಚಿ ಮೈಲಾರನ ಹೆಂಡತಿ ಮನೆವೆಗ್ಗಡೆ ಚಟ್ಟಪ್ಪ ಚಾರಿತ್ರಿಕ ವ್ಯ್ತಿ. ಈತನಿಂದ ಪ್ರಸಿದ್ಧಿಗೆ ಬಂದರು ಎಂದರೇನು? ಬಹುಶಃ ತನಗಿಂತ ಮುಮಚೆಯೇ ರೂಢಿಯಲ್ಲಿ ಬೇರೂರಿದ್ದ ಮೈಲಾರ ಮಾಳಚಿ ಗ್ರಾಮದೇವತೆಯನ್ನು-ಕುಲದೈವವಾಗಿಯೋ ಅಥವಾ ರೂಢಿದೈವವಾಗಿಯೋ ಪೂಜೆಗೊಳ್ಳುತ್ತಿದ್ದ ದೇವತೆಯನ್ನು-ಚಟ್ಟಪ ಪ್ರತಿಷ್ಠಾಪಿಸಿ ತನ್ನ ಭಕ್ತಿ ಗೌರವ ಸಲ್ಲಿಸಿರಬಹುದು ಇತ್ಯಾದಿ. ಆದರೆ ಈ ಚಟ್ಟಪನ ಐತಿಹಾಸಿಕತೆ ಇನ್ನೂ ನಿರ್ಧಾರಗೊಳ್ಳದ ಅಂಶ. ಇದು ನಿರ್ಧಾರಗೊಳ್ಳದಿದ್ದರೂ ’ಮೈಲಾರ ಮಾಳಚಿ’ ಗ್ರಾಮದೇವತೆಗಳಾಗಿ ಪೂಜೆಗೊಳ್ಳುತ್ತಿದ್ದ ಅಂಶ ನಿಶ್ಚಿತ.

ಡಾ. ಚಿದಾನಂದಮೂರ್ತಿ ಸುಮಾರು ಹದಿನೈದು ಶಾಸನಗಳಲ್ಲಿ ’ಮೈಲರಸ ಮೈಳಲದೇವಿ, ಮೈಲಬ್ಬೆ, ಮೈಲರ, ಮಾಳಲದೇವಿ, ಮಾಳಚಿಯಬ್ಬೆ’[5] ಇತ್ಯಾದಿ ಹೆಸರಿನ ವ್ಯಕ್ತಿಗಳನ್ನು ಗುರುತಿಸಿ ’ಮೈಲಾರ ಮಾಳಚಿಯರು ಜನಪ್ರಿಯ ದೇವತೆಗಳಾದ ಮೇಲೆ ಆ ಹೆಸರುಗಳೂ ಜನರಲ್ಲಿ ಹೆಚ್ಚು ಪ್ರಚಾರಕ್ಕೆ ಬಂದಿರಬೇಕು’ ಎಂದು ಊಹಿಸುತ್ತಾರೆ. ಶಾಸನದಲ್ಲಿ ಉಲ್ಲೇಖಿತವಾಗದ ಅಗಣಿತ ಜನಪದವೃದಗಳಲ್ಲಿ ಶಾಸನ ಕಾಲಗಳಿಗಿಂತ ಪೂರ್ವದಿಂದಲೇ ಇಂಥ ಹೆಸರಿನ ವ್ಯಕ್ತಿಗಳಿರಲಿಲ್ಲ ಎನ್ನುವುದನ್ನು ಅಲ್ಲಗಳೆಯುವುದು ಹೇಗೆ? ಜಾನಪದಪರಂಪರೆ ಶತಶತಮಾನಗಳ ಆಲಿಖಿತ ಶಾಸನವಲ್ಲವೇ?

ಜೈನಧರ್ಮದ ಪ್ರಾಬಲ್ಯ ಪ್ರಚಾರ ಕಾಲದಲ್ಲಿ ’ಅರ್ಚಿಸು ಜಿನನಂ’ ಎಂದು ಹೇಳಿದ ಬ್ರಹ್ಮಶಿವನ (೯.೧೨೭) “ಬೇಡಿದ ವರಮಂ ಕುಡುವಡೆ| ರೂಢಿಯ ಚಾವುಂಡಿ ಕಾಳಿ ಮಾಳಚಿಯೆಂಬಾ| ಜೋಡೆಯರವರಂಪೂಜಿಸ| ಬೇಡಿಹ ಪರ ಸುಖಮನೊಲ್ವ ಡರ್ಚಿಸು ಜಿನನಂ” ಹೇಳಿಕೆಯಲ್ಲಿ ಮಾಳಚಿ ಚಾವುಂಡಿಕಾಳಿ ಮುಂತಾದ ದೇವತೆಗಳ ಜೊತೆ ಸೇರಿಸಲ್ಪಟ್ಟಿದ್ದಾಳೆ.

ವೀರಶೈವ ಧರ್ಮದ ಪ್ರಾಬಲ್ಯದ ಕಾಲದಲ್ಲಿ, ಕ್ಷುದ್ರದೇವತೆಗಳ ಅಥವಾ ಅನೇಕ ದೇವತಾ ಪೂಜೆಗೆ ತೊಡಗಿ ಮೂಢನಂಬುಗೆ, ಅರ್ಥಶೂನ್ಯ ಆಚರಣೆಗಳಿಗೆ ಬಲಿಯಾದ ಸಾಮಾಜಿಕ ಪರಿಸರವನ್ನೂ ಸಾಮಾಜಿಕರನ್ನೂ ಖಂಡಿಸುವಲ್ಲಿ-ಅವರಿಗೆ ನಿಜಧರ್ಮದ ಬೋಧೆ ಮಾಡುವ ಹಿನ್ನೆಲೆಯಲ್ಲಿ ಮೈಲಾರನ ಉಲ್ಲೇಖಗಳು ದೊರೆಯುತ್ತವೆ. ಬಸವಣ್ಣನ….. ಮೈಲಾರನ ಬಳಗೆಲ್ಲ ಸಣಬು, ಹೊರಗಣ ಬಣ್ಣ ಕರ ಲೇಸಾಯಿತ್ತಯ್ಯಾ’, ಬಳ್ಳಿಹ ಮೈಲಾರನ ಸಿಂಗಾರದಂತೆ’, ’ಅಸಮಾಕ್ಷ ಲಿಂಗಕ್ಕೆ ಆನ್ಯದೈವವ ಸರಿಯೆಂಬನ ಬಾಯಲ್ಲಿ ಮಸೆದ ಕೂಲಗನ್ನಿಕದೆ ಮಾಣ್ಬನೆ? ಹುಸಿಯಾಗಿ ನುಡಿದವನ ನಾಯಾಗಿ ಬಗುಳಿಸನೆ?’, “ಕೂಡಲಸಂಗಮದೇವಾ ನಿಮ್ಮ ಹೇಳಿದ ಹೇಳಿಕೆಯಿಂದ ಪಿಂಬೇರ ಮೈಲಿಗೆ ಮೇಳವಾಡುತ್ತಿದ್ದ ಕಾಣಾ ಜಗದೊಳಗೆ”;[6] ಚೆನ್ನ ಬಸವಣ್ಣನ ’…ಭೈವನನಾರಾಧಿಸಿ ಬಾಹಿರರಾದರಯ್ಯಾ, ಮೈಲಾರನನಾರಾಧಿಸಿ ಕರುಳ ಬೆರಳ ಕಡಿಸಿಕೊಂಡು ನಾಯಾಗಿ ಬಗುಳುತ್ತಿಪ್ಪರಯ್ಯಾ’[7] ಹರಿಹರಕವಿ ತನ್ನ ಸಮಕಾಲೀನ ಜನಪದ ಜೀವನದ ನಂಬುಗೆ, ಆರಾಧನೆಗಳನ್ನು ಶಿವಭಕ್ತಿಗೆ ತಿರುಗಿಸಿದ ಉಗ್ರ ನಿಷ್ಠಾವಂತ. ಆತನ ಶಂಕರದಾಸಿಮಯ್ಯನ ರಗಳೆಯ ಕಥೆ ಹೀಗಿದೆ:

ಪೆಂಬೇರು ಗ್ರಾಮಕ್ಕೆ ಬಂದ ಶಂಕರದಾಸಿಮಯ್ಯ (ಕಾಲ ಸು. ೧೦೫೦) ಮೈಲಾರ ದೇವಾಲಯದ ನೆಲದ ಹಾಸಿನ ಮೇಲೆ ಕುಳಿತಿರುತ್ತಾನೆ. ಅವನು ಹಾಗೆ ಹೋಗುತ್ತಿರುವಾಗ ಮೈಲಾರನಿಗೆ-ಮೂರ್ತಿಗೆ-ದಾಸಿಮಯ್ಯನ ಕಾಲು ತಾಕಿತು. ಮೈಲಾರನಿಗೆ ತಾನು ಧನ್ಯ ಎನ್ನುವ ಭಾವನೆ. ಊರಿನ ಮೈಳಾದೇವಿ ದೇವಾಲಯಕ್ಕೆ ಬಂದು ಒಕ್ಕೆ ಹೋಗಲು ಹಿಂಜರಿದು ತಾನು ತಂದ ಫಲಪುಷ್ಪ ತಾಂಬೂಲಗಳನ್ನು ಶಂಕರದಾಸಿಮಯ್ಯನ ಕೈಗಿತ್ತು ’ವರವೀವ ಮೇಳಯಗೆ’ ಕೊಡಿ ಎನ್ನುತ್ತಾಳೆ. ಶಂಕರ ದಾಸಿಮಯ್ಯ ತಾನೇ ಅದನ್ನು ಮೆಲ್ಲುತ್ತಾನೆ. ಮೈಳಾದೇವಿ ಮೈಲಾರನಿಗೆ ಹೆದರಿ ದಾಸಿಮಯ್ಯನನ್ನು ಗದರಿಸುತ್ತಾಳೆ. ದಾಸಿಮಯ್ಯ ’ಎಲವೊ ಮೈಲಾರ ಪಿಡಿತುಂಬುಲವನ’ ಎಂದಾಗ ಮೈಲಾರ ಒಳಗಿಂದ ಎದ್ದು ಬಂದು ದಾಸಿಮಯ್ಯನ ಬಾಯ್ದಾಂಬೂಲ ಸ್ವೀಕರಿಸಿ ರಸವನ್ನು ಮೈಗೆ ಸವರಿಕೊಳ್ಳುತ್ತಾನೆ. ಎಂಜಲ ತಿನ್ನುವ ಮೈಲಾರನನ್ನು ನಾವೇಕೆ ಪೂಜಿಸಬೇಕು? “ಮೈಲಾರನೊಳಗಣದು ಸಣಂಬೆಂಬುಂದಾಯ್ತು’ ಎಂದುಕೊಂಡರು. ಶಂಕರದಾಸಿಮಯ್ಯ ಅಲ್ಲಿಂದ ಮೇಲೆದ್ದು ತನ್ನ ಒಬ್ಬ ಶಿಷ್ಯನಿಗೆ ಕೊಡೆಹಿಡಿದು ಬಾ’ ಎಂದ. ತನಗೇ ಈ ಮಾತನಾಡಿದ ಎಂದು ಬಾವಿಸಿದ ಮೈಲಾರ, ಉಬ್ಬಿ ಕೊಡೆ ಹಿಡಿದು ಹೊರಟ. ಮೈಲಾರನ ಭಕ್ತರಿಗೆ ಚೆರಗು. ಜನ ಪರಿಪರಿಯಿಂದ ಮೈಲಾರನನ್ನು ಬಿಟ್ಟುಕೊಡಲು ದಾಸಿಮಯ್ಯನನ್ನು ಕೇಳಿಕೊಂಡರು, ಮೈಲಾರ ದಾಸಿಮಯ್ಯನನ್ನು ಬಿಟ್ಟು ಮರಳುವಾಗ ’ಕೊಡೆಯನಿಗೆ ತೊಡವು’ ಅದನ್ನು ಕೊಡು ಎಂದು ಕೇಳಿದನಂತೆ, ’ಆಯಿತು, ನೀನು ಕೊಡೆಯ ಮಾಲಾರನೆಂದೇ ಹೆಸರು ಪಡೆ’ ಎಂದು ಹರಸಿದನಂತೆ

ಅನೇಕ ಪುರಾಣ ಕಾವ್ಯಗಳಲ್ಲಿ ಬಸವ ಪುರಾಣ, ’ಸಾನಂದಚರಿತೆ’, ಗುರುರಾಜ ಚಾರಿತ್ರ, ತೋಂಟದ ಸಿದ್ಧೇಶ್ವರ ಪುರಾಣ, ಶಂಕರದಾಸಿಮಯ್ಯ ಪುರಾಣಗಳಲ್ಲಿ[8] ಮೈಲಾರ ಮಾಳಚಿಯರ ಉಲ್ಲೇಖ-ಕಥೆ ನಿರೂಪಿತವಾಗಿದೆ. ಶಂಕರದಾಸಿಮಯ್ಯನ ಪುರಾಣದ ಕಥೆ ಪುರಾಣೀಕರಣದ ಅನೇಕ ರೋಚಕ ಸಂಗತಿಗಳನ್ನು ಒಳಗೊಂಡಿದೆ. ಪೆಂಬೇರಿನ ಮೈಲಾರ ದೇವಾಲಯಕ್ಕೆ ಬಂದ ಮಾಳಾದೇವಿ ’ಮಲ್ಲಾಸುರಾರಿ’ಯ ಪೂಜೆ ಮಾಡಿ, ಆ ದೇವಾಲಯದಲ್ಲಿ ಶಿವಾನುಭವಗೋಷ್ಠಿಯಲ್ಲಿದ್ದ ಶಂಕರದಾಸಿಮಯ್ಯನಿಗೆ  ’ಮೈಲಾರನ’ ಪ್ರಸಾದ ಕೊಡುತ್ತಾಳೆ. ಶಿವಭಕ್ತರು ಅನ್ಯದೈವದ ಶೇಷ ತೆಗೆದುಕೊಂಡರೆ ನರಕಪ್ರಾಪ್ತಿ ಎಂದು ಆತ ನಿರಾಕರಿಸಿದಾಗ, ಮಾಳಾದೇವಿ ’ಹಾಗಾದರೆ ಮೈಲಾರನು ಶಿವನಲ್ಲವೇ?’ ಎಂದು ಪ್ರಶ್ನಿಸುತ್ತಾಳೆ. ’ಅಲ್ಲ : ಅವನೊಬ್ಬ ಗ್ರಹ’ ಎಂದಾಗ ಆಕೆ ಗೊರವರನ್ನೂ ಕರೆಸುತ್ತಾಳೆ. ಬಂದ ಗೊರವರು ಮೈಲಾರನಿಗೆ ಭೂತ ಎಂದು ಕರೆದುದನ್ನು ಪ್ರತಿಭಟಿಸಿದಾಗ ಗೊರವರ ಗುರು ದಾಸಿಮಯ್ಯನಿಗೆ ಮಲ್ಲಾಸುರನನ್ನು ಕೊಂದ ಶಿವನೇ ಮಲ್ಲಾರಿ. ನಾಲ್ಕು ವೇದಗಳೇ ನಾಯಿ. ಮಲ್ಲಾಸುರನನ್ನು ಕೊಂದ ಶಿವ ಕುರುಬರ ಬೀಡಿಗೆ ಬಂದು ಅಲ್ಲಿಯ ಹೆಗ್ಗಡೆಯನ್ನು ಕಾಡುತ್ತಿದ್ದ ತೋಳನನ್ನು ಕೊಂದು ಅವನ ಮಗಳನ್ನು ಮದುವೆಯಾದ. ಅವನೇ ಶಿವ’ ಎಂಬುದಕ್ಕೆ ದಾಸಿಮಯ್ಯ: ’ಮಲ್ಲಾಸುರನನ್ನು ಶಿವ ಕೊಂದದ್ದು ನಿಜ. ಆದರೆ ಆ ಮಲ್ಲಹರನೇ ಮೈಲಾರನಲ್ಲ. ಅವನೊಬ್ಬ ಉಗ್ರಗ್ರಹ. ಮೂಲ ಅವನೊಬ್ಬ ಕ್ಷತ್ರಿಯ, ಸಂಸಾರ ತ್ಯಜಿಸಿ ಜೈನ ಮುನಿಗಳಿಂದ ಅನುಗ್ರಹೀತನಾಗಿ ಮಾಂತ್ರಿಕ ಮಲ್ಲಿಗೆ ಹೂವು ಪಡೆದು ಮಲ್ಲಿದೇವನಾದ. ಜೈನ ಮಲ್ಲಿದೇವ ಕುರುಬರ ಮಾಳಿಯನ್ನು ಕಂಡು ಮನಸೋತು ಮಲ್ಲಿಗೆ ಹೂವನ್ನು ಅಭಿಮಂತ್ರಿಸಿ ಅವಳಿಗಾಗಿ ನಿರೀಕ್ಷಿಸಿದ. ಅವಳು ಬಾರದಿದ್ದಾಗ ನಿರಾಶನಾಗಿ ಬಸದಿಗೆ ಮರಳಿದ. ಇವನ ಪತನವನ್ನರಿತ ಮುನಿಗಳು ಇವನನ್ನು ಬಸದಿಯಲ್ಲಿ ಸೇರಿಸಿಕೊಳ್ಳಲಿಲ್ಲ. ಹೂವಿನ ನೆರವು ಪಡೆದು ಕುರುಬರ ಮಾಳಿಯನ್ನು ವಶಪಡಿಸಿಕೊಂಡು ಅವಳೊಡನೆ ಓಡಿ ಹೋಗುವಾಗ ಮಾಳಿಯ ಗಂಡ ಅಸಹಾಯಕನಾಗಿ ಹುಯ್ಯಲಿಟ್ಟ. ಅದನ್ನು ಕೇಳಿದ ಬೇಡರು ಬಂದು ಇಬ್ಬರನ್ನೂ ಕೊಂದರು. ಅವರೇ ಮಾಳಿ ಮಲ್ಲರೆಂಬ ಭೂತಗಳು”. ಅದಕ್ಕೆ ಗೊರವರು ಕುಪಿತರಾಗಿ ’ಹಾಗಾದರೆ ಅವರಿಂದ ಕೆಲಸಮಾಡಿಸಿ’ ಎಂದರು. ’ಅವರು ನನ್ನ ಸೇವೆ ಮಾಡಿದರೆ?’ ’ಆತನೇ ಸೇವೆ ಮಾಡಿದರೆ ನಮ್ಮದೇನು?’, ಶಂಕರದಾಸಿಮಯ್ಯನ ಕರೆಗೆ ಮೈಲಾರ ಎದ್ದು ಬಂದು ’ಏನು ಊಳಿಗ’ ಎಂದು ಕೇಳಿದ. ’ಕೊಡೆ ಹಿಡಿದು ನನ್ನೊಡನೆ ನವಿಲೂರಿಗೆ ಬಾ’ ಎಂದು ದಾಸಿಮಯ್ಯ. ಮೈಲಾರ ಕೊಡೆ ಹಿಡಿದು ಹೊರಟ. ಶರಣಾಗತರಾದ ಗೊರವರು ’ನಾವು ಬೊಗಳಿದೆವು; ಬೊಗಳಾಟದವರು. ನಮ್ಮ ಮೈಲಾರನನ್ನು ಬಿಟ್ಟುಕೊಡಬೇಕೆಂದು ಪರಿಪರಿಯಾಗಿ ಬೇಡಿದರು. ಸರಿ, ಮೈಲಾರ ಕೊಡೆಯ ಜೊತೆ ಪೆಂಬೇರಿಗೆ ಮರಳಿದ. ಅಂದಿನಿಂದ ’ಕೊಡೆಯ ಮೈಲಾರ’ ಎಂದು ಜನ ಕರೆದರು.

ಮಹಾರಾಷ್ಟ್ರದ ಸಾತಾರ ಪ್ರದೇಶದ ತರಲಾ ನದಿಯ ಎರಡೂ ಮಗ್ಗಲು ’ಪಾಲ’ ಎಂಬ ಮಲ್ಲಾರಿಯ ಪ್ರಸಿದ್ಧ ಕ್ಷೇತ್ರವಿದೆ. ಈ ಗ್ರಾಮದ ನದಿಯ ಒಂದು ಮಗ್ಗಲಿನ ಭಾಗಕ್ಕೆ ’ಪೆಂಬರ’ ಎಂಬ ಹೆಸರಿದ್ದು ಇಲ್ಲಿ ದೇವಸ್ಥಾನವಿದೆ. ಈ ಗುಡಿಯಲ್ಲಿ ಸ್ವಯಂಭು ಲಿಂಗವಿದ್ದು ಅದರ ಮೇಲೆ ಖಂಡೋಬಾ (ಮೈಲಾರ) ಮತ್ತು ಮ್ಹಾಳಸಾ ಇವರ ಹಿತ್ತಾಳೆಯ ಮೂರ್ತಿಗಳು ಪೂಜೆ ಹೊಂದುತ್ತವೆ. ಇವುಗಳ ಹಿಂದೆ ಪ್ರಭಾವಳಿಯಿದೆ. ಅದರ ಮೇಲೆ ಕೊಡೆಯಿದೆ. ಪ್ರಭಾವಳಿಯೂ ಕೊಡೆಯೂ ಹಿತ್ತಾಳೆಯವು.[9]

ಮೈಲಾರ ’ಕೊಡೆಯ ಮೈಲಾರ’ ರೂಪದಲ್ಲಿ ಪೂಜೆಗೊಳ್ಳುವ ಈ ವಿವರಣೆ ಕೊಡೆಗೂ ಮೈಲಾರ ದೇವತೆಗೂ ಉಂಟಾಗಿರುವ ಸಂಬಂಧಕ್ಕೆ ನಿದರ್ಶನ. ಹದಿನೆಂಟನೆಯ ಶತಮಾನದ (ಕ್ರಿ.ಶ. ೧೭೯೮) ನಾರಸಿಂಹ ಕವಿಯ ಅನುಭವ ಶಿಖಾಮಣಿಯಲ್ಲಿ ಬರುವ ಮೈಲಾರಲಿಂಗನ ಕಥೆ ವಿಷ್ಣುದೇವತಾ ಪರಂಪರೆಗೆ ಸಂಬಂಧಿಸಿದ್ದು. ವೈಷ್ಣವ ಭಕ್ತರು ವೈಷ್ಣವ ಪುರಾಣ ಕಥೆಯಲ್ಲಿ ಮೈಲಾರನನ್ನು ಸೇರಿಸಿದರುವುದು ಕಂಡುಬರುತ್ತದೆ. ಹರಿಯ ಸೇವಕ ಪೆರೆಯಾಳ್ವ. ಶ್ರಿಕೃಷ್ಣ, ತನ್ನ ಪ್ರತಿದಿನದ ಪೂಜೆಗೆ ಒಂದು ಸಾವಿರ ಕಮಲ ತರಲು ಇವನನ್ನು ನಿಯಮಿಸಿದ್ದ. ಒಂದು ದಿನ ಎರಡು ಸಾವಿರ ಕಮಲ ತಂದ. ಸೇವಕ ಮಾರನೆಯ ದಿನ ಮೊದಲೇ ಉಳಿದ್ದ ಮತ್ತೊಂದು ಸಾವಿರ ಹೂ ಒಯ್ದುಕೊಟ್ಟ. ಕೃಷ್ಣನಿಗೆ ಕೋಪ. ’ಮೈಲಿಗೆ ಹೂವಿನಿಂದ ಶಿವಪೂಜೆ ಆಗದು. ನೀನು ಗೋಪಿಕೆಯರ ಮೈಲಿಗೆ ಬಟ್ಟೆಯಲ್ಲಿ ಹುಟ್ಟು ಎಂದು ಶಪಿಸಿದ. ಅವನು ಗೋಪಿಕಾ ಸ್ತ್ರೀಯರ ಮೈಲಿಗೆ ಬಟ್ಟೆಯಲ್ಲಿ ಹುಟ್ಟಿದ, ಮೈಲಾರ ಎಂಬ ಅನ್ವರ್ಥನಾಮದಿಂದ ಕರೆದ ಗೋಪಿಕೆಯರು ಹಾಲೂಡಿಸಿ ಬೆಳೆಸಿದರು. ದಷ್ಟಪುಷ್ಟನಾದ ಈ ಹುಡುಗನನ್ನು ಕೃಷ್ಣ ಶಿವನ ಸೇವೆಯಲ್ಲಿರಿಸಿದ. ಶಿನ ಬಿಳಿ ಸತ್ತಿಗೆಯ ಸೇವೆ ಕೈಗೊಂಡ ಮೈಲಾರನಿಗೆ ಶಿವ ಸುಪ್ರೀತನಾಗಿ ತನ್ನ ಬಿಲ್ಲು ಕೊಟ್ಟ.

ಮುಂದೆ ಮಣಿಮಲ್ಲಾಸುರನ ಉಪಟಳ ಮಿತಿಮೀರಿತು. ಅವನನ್ನು ಕೊಂದರೂ ಅವನಿಗೆ ಸಾವಿಲ್ಲ. ಅವನು ಸಾಕಿದ ಏಳುಕೋಟಿ ನಾಯಿಗಳಲ್ಲಿ ಒಂದನ್ನುಕಾಳಗಕ್ಕೆ ಮೊದಲೇ ಕೊಂದಿಟ್ಟು ಕಡ್ಡಿಯ ನೆರವಿನಿಂದ ತಾನು ಸತ್ತಕೂಡಲೇ ನಾಯಿಡಿಂಭ ಹೊಕ್ಕು ಮತ್ತೆ ಎಲ್ಲರನ್ನೂ ಬದುಕಿಸುತ್ತಿದ್ದ ಇತ್ಯಾದಿ. ಆಗ ಶಿವ ಮಲ್ಲಾಸುರನ ವಧೆಗೆ ಮೈಲಾರನನ್ನು ಕಳುಹಿದ. ಮೈಲಾರ ಯುಕ್ತಿಯಿಂದ ಮಲ್ಲಾಸುರನನ್ನು ನಿರ್ಮೂಲ ಮಾಡಿದ. ಎಲ್ಲರೂ ’ಮಲಾಹರಿ’ ಉಘೇ ಎಂದು ಉಗ್ಗಡಿಸಿದರು. ನಾಯಿಯ ಡಿಂಬ ಪ್ರವೇಶಿಸಿದ ರಾಕ್ಷಸ ಸತ್ತವರ ಎಲುಬು ಕೂಡಿಸುವ ಮೊದಲೇ ಕೃಷ್ಣ ಆ ಎಲುಬನ್ನು ಸುಟ್ಟ. ಮೈಲಾರನು ಮಂತ್ರಮಹಿಮೆಯಿಂದ ನಾಯಾಗಿ ರಕ್ಕಸ ನಾಯಿಯ ಸಂಜೀವಿನಿ ಕಡ್ಡಿಯನ್ನು ಗುಟ್ಟಿನಿಂದ ಕಸಿದು ಹರಿಯ ಕೈಗಿತ್ತು, ತಾನೇ ಆ ರಕ್ಕಸ ನಾಯಿಯನ್ನು ಕೊಂದುಹಾಕಿದ. ಸುಪ್ರಿತನಾದ ಶಿವ ’ಈರೇಳು ಕೋಟಿ’ ಅರಸಾಗಿ ಆಳು. ನನ್ನನ್ನು ಅರಿಯದ ದುಷ್ಟರನ್ನು ಬೆನ್ನಸಿಡಿ, ಬಾಯಿಬೀಗ, ಉರಿಗೊಂಡಗಳಲ್ಲಿ ಬೀಳಿಸು. ಕಳ್ಳರನ್ನು ಬಾರುಕೋಲಿನಿಂದ ಹೊಡೆಸು: ನಾಯಿಯಂತೆ ಬೊಗಳಿಸು’ ಎಂದು ಭೂಮಿಗೆ ಕಳುಹಿದ. ನೀಲಗಿರಿಯಲ್ಲಿ ನೆಲಸಿದ ಮೈಲಾರ ಕುರುಬರ ಮಾಳಿಯನ್ನು ಮದುವೆಯಾದ. ಅಂಬಿಗನ ಮಗಳು ಕೋಮಳನ್ನೂ ಮೋಹಿಸಿ ಕೈಹಿಡಿದ. ಮೈಲಾರನ ಭಕ್ತಿಗೆ ಮೆಚ್ಚಿದ ಶಿವ ಮೊದಲಿನಂತೆ ಅವನಿಗೆ ಸತ್ತಿಗೆ ಸೇವೆ ಕರುಣಿಸಿದ. ಮೈಲಾರನು ಪ್ರತಿಷ್ಠಾಪಿಸಿ ಪೂಜಿಸಿದ ಲಿಂಗವೇ ಮೈಲಾರಲಿಂಗ.

ಕರ್ನಾಟಕದ ಮೂರು ಪ್ರಮುಖ ಧರ್ಮ-ಜೈನ, ವೀರಶೈವ, ವೈಷ್ಣವಗಳು ಒಂದಲ್ಲ ಒಂದು ರೀತಿಯಿಂದ ಮೈಲಾರದೇವತೆಯನ್ನು ಪುರಾಣೀಕರಣಗೊಳಿಸಿ: ತಮ್ಮ ತಮ್ಮ ಧರ್ಮಪ್ರಚಾರ, ಪ್ರಾಬಲ್ಯದ ಹಿನ್ನೆಲೆಯಲ್ಲಿ ಮೈಲಾರ ದೇವತೆಯ ಪೂಜೆಯನ್ನು, ಮೈಲಾರನನ್ನು ಇಲ್ಲಿ ಖಂಡಿಸಿ; ಇಲ್ಲ ಕ್ಷುದ್ರದೇವತೆಯೆಂದು ಹೀಗಳೆದಿವೆ. ಆದರೆ ಈಎಲ್ಲ ಪುರಾಣೀಕರಣಗೊಂಡ ಕಥೆಗಳಲ್ಲೂ ಬರುವ ಜನಪದ ವೃಂದಗಳು ಬೇಡರು, ಕುರುಬರು, ಗೊಲ್ಲರು ಇತ್ಯಾದಿ.

ಶಿಲಾಯುಗದ ಪೂರ್ವದಿಂದ ಶಿಲಾಯುಗ, ನವಶಿಲಾಯುಗ, ತಾಮ್ರಯುಗ ಇತ್ಯಾದಿ ಮೊದಲುಗೊಂಡು ತಲೆತಲೆಮಾರಿನಿಂದ ತಲೆಮಾರಿಗೆ ಸಾಗಿಬಂದ ಅನೇಕ ಆದಿಮ ಗುಂಪುಗಳಲ್ಲಿ-ಜನಪದ ವೃಂದಗಳಲ್ಲಿ ಅಲೆಮಾರಿಗಳಾಗಿದ್ದ ಬೇಡರು, ಅರೆ ಅಲೆಮಾರಿಗಳಾಗಿದ್ದ ಕುರುಬ ಕುಲಗುಂಪು, ಗೊಲ್ಲ ವೃಂದಗಳ ಉಲ್ಲೇಖ ಬರುವ ಮೈಲಾರನ ಕಥೆ ಪುರಾಣಗಳ ಜಾನಪದೀಯ ವಿಶ್ಲೇಷಣೆಗೆ ಒತ್ತುಕೊಡುವ ಸಂಕೀರ್ಣ ವಸ್ತುವಾಗಿದೆ.

ಪುರಾಣ ಕಥೆಗಳಿಗೂ ಧರ್ಮಕ್ಕೂ ಇರುವ ಬಿಡಿಸಲಾಗದ ನಂಟು,  ಚರಿತ್ರೆಗೂ ಸಮಾಜಕ್ಕೂ ಇರುವ ಅವಿನಾಭಾವ ಸಂಬಂಧ, ಧರ್ಮ ಮತ್ತು ಸಮಾಜಗಳು ಅನುಸರಿಸುವ ಧಾರ್ಮಿಕ ಆಚರಣೆ, ದೇವತಾರಾಧನೆಗಳ ಪ್ರಬಲ ಪರಂಪರೆಗಳಲ್ಲಿ ಅನಾದಿ ಕಾಲದಿಂದ ಅತ್ಯಂತ ಪ್ರಭಾವಶಾಲಿ ಜನಪದ ವೃಂದವೊಂದರ ಮುಖ್ಯಸ್ಥನಾಗಿ, ತನ್ನ ವೃಂದವನ್ನು ಎರಗಿ ಬಂದ ಕ್ರೌರ‍್ಯಗಳಿಂದ ಕಾಪಾಡಿ ಅವರೆಲ್ಲರಿಗೆ ಶಕ್ತಿಶಾಲಿ, ಪೂಜ್ಯ ವ್ಯಕ್ತಿಯಾಗಿದ್ದಿರಬಹುದಾದ ಮೈಲಾರ, ಕಾಲಾನುಕ್ರಮದಲ್ಲಿ ನಾಗರಿಕತೆ ಬೆಳೆದಂತೆ, ಶಿಷ್ಟಪದ ಸಾಮಾಜಿಕ ಘಟಕಗಳ ವ್ಯವಸ್ಥೆಗೆ ಸಿಕ್ಕು ಅವರವರ ಕಲ್ಪನೆಯಲ್ಲಿ ಹಿಗ್ಗಾಮುಗ್ಗಾ ಎಳೆಯಲ್ಪಟ್ಟರೂ ಅದನ್ನು ಮೀರಿ ಭಿನ್ನ ಭಿನ್ನ ಜನಪದ ವೃಂದಗಳ ಆರಾಧನೆಯ ವಸ್ತುವಾಗಿ ಪುರಾಣೀಕರಣದ ವೈಭವಕ್ಕೆ ಕೆಲವೊಮ್ಮೆ , ಚಾರಿತ್ರಿಕ ಅಂದೋಲನನೆಯ ವಸ್ತುವಾಗಿ ಪುರಾಣೀಕರಣದ ವೈಭವಕ್ಕೆ ಕೆಲವೊಮ್ಮೆ, ಚಾರಿತ್ರಿಕ ಆಂದೋಲನಗಳ ಖಂಡನೆಗೆ ಮತ್ತೊಮ್ಮೆ ಪಕ್ಕಾಗಿ, ದೇವತೆಯಾಗಿ ಪೂಜೆಗೊಳ್ಳುತ್ತ ಬಂದಿದ್ದಾನೆ.

ಪುರಾಣ, ಧರ್ಮ, ಚರಿತ್ರೆ, ಜನಪದ ವೃಂದಗಳ ಸಂಘರ್ಷಗಳ ಭಿನ್ನ  ಭಿನ್ನ ಸ್ತರಗಳಲ್ಲಿ ಹುದುಗಿರುವ ವಾಸ್ತವ ಸಂಗತಿ ಯಾವುದು? ಈ ಎಲ್ಲ ಮೇಲಿನ ಪುರಾಣೀಕೃತ ಕಥೆಗಳಲ್ಲಿ ಅಡಕಗೊಂಡಿರುವ ವಾಸ್ತವಾಂಶಗಳನ್ನು ಹೆಕ್ಕಿ ತೆಗೆಯುವುದ ಒಂದು ವಿಷಯದ ಪರಿಜ್ಞಾನದ ವ್ಯಾಪ್ತಿಗೆ ನಿಲುಕದ ಮಾತು. ಇದು ಆದಿಮಾನವ ಸಂಸ್ಕೃತಿ, ಧರ್ಮ-ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನೋವಿಜ್ಞಾನ ಸಾಂಸ್ಕೃತಿಕ ಮಾನವ ಶಾಸ್ತ್ರ ಇತ್ಯಾದಿ ಶಾಖೆಗಳ ಸಂಕೀರ್ಣ (ಡಿಸಿಫ್ಲಿನ್) ಸಿಸ್ತು ಆಗಿರುವ ಜಾನಪದ ಅಧ್ಯಯನದ ನಿಲುವಿನಲ್ಲಿ ನಡೆಯಬೇಕಾಗಿರುವ ಮಹತ್ವದ ಕಾರ್ಯ.

ಜಾನಪದ ಒಂದು ಪ್ರತ್ಯೇಕ ಅಧಯ್ಯನದ ವಸ್ತುವಾಗಿ ರೂಪುಗೊಳ್ಳುವುದಕ್ಕೂ ಬಹು ಪೂರ್ವದಲ್ಲಿ, ಅಂದರೆ ಕ್ರಿ. ಪೂ. ಆರನೆಯ ಶತಮಾನದಲ್ಲಿ ಗೆಝನೋಪೇನ್ಸ್‌ತನ್ನ ಒಂದು ಕವಿತೆಯಲ್ಲಿ ದೇವತೆಗಳು ಹನ ಅಪರಾಧಗಳನ್ನು ಮಾಡುತ್ತಿದ್ದುದರ ವಿವರಣೆಯನ್ನು ಚರ್ಚಿಸಿದ ಆಂಡ್ಯ್ರೂಲಾಂಗ್, ತರುವಾಯದ ಗ್ರೀಕ್ ಕವಿ ಪಿನ್ಡರ್, ದೇವತೆಗಳು ಮನುಷ್ಯ ಮಾಂಸ ತಿನ್ನುವ ಒಂದು ಕಥಾನಕವನ್ನು ಪುನರಾವರ್ತನಗೊಳಿಸಲು ನಿರಾಕರಿಸಿದುದನ್ನು ಗುರುತಿಸಿದ್ದಾನೆ.[10] ಕ್ರಿ.ಪೂ. ೩೧೬ರ ಸುಮಾರು ಇಯುಥೆಮೆರಸ್ ಎನ್ನುವ ವಿದ್ವಾಂಸ ತನ್ನಪುರಾಣಮೂಲದ ಸಿದ್ಧಾಂತವನ್ನು ಪ್ರತಿಪಾದಿಸುತ್ತ, ಪುರಾಣಗಳಿಗೆ ವಾಸ್ತವ ಚಾರಿತ್ರಿಕ ಪಾತ್ರ ಮತ್ತು ಘಟನೆಗಳೇ ಮೂಲ; ಮತ್ತು ಅಲ್ಲಿ ಕಂಡು ಬರುವ ದೇವಾನುದೇವತೆಗಳು ತಮ್ಮ ಜೀವಿತ ಕಾಲದಲ್ಲಿ ನಿರಾಕರಿಸಲ್ಪಟ್ಟ ಮತ್ತು ಮರಣಾನಂತರ ಆರಾಧಿಸಲ್ಪಟ್ಟ ನಿಜವ್ಯಕ್ತಿಗಳೇ ಆಗಿದ್ದಾರೆ. ಹೀಗೆ ದೇವತೆಗಳಿಗಿದ್ದದ್ದು ಮಣ್ಣಿನ ಕಾಲು; ಮತ್ತು ದೇವತೆಗಳ ಅಪರಾಧಗಳು ವಾಸ್ತವವಾಗಿ ಮನುಷ್ಯರ ಅಪರಾಧಗಳೇ ಆಗಿದ್ದವು’,[11] ಎಂದಿದ್ದಾನೆ. ಮೈಲಾರ ಅಜ್ಞಾತ ಕಾಲದಲ್ಲಿ ಜೀವಿಸಿದ ಒಂದು ಬುಡಕಟ್ಟಿನ ಉಗ್ರ, ಶೂರ ಪ್ರಭಾವಶಾಲಿ ವ್ಯಕ್ತಿಯಾಗಿದ್ದು ಕಾಲ ಗತಿಸಿದಂತೆ ಪುರಾಣ, ದಂತಕಥೆ, ಐತಿಹ್ಯಗಳ ಆವರಣಗಳು ಅವನ ಸುತ್ತೂಮುತ್ತಿ, ನಿರಾಕರಣೆ ಸ್ವೀಕರಣೆಗಳಿಗೆ ಒಳಗಾದ ಚಾರಿತ್ರಿಕ ವ್ಯಕ್ತಿಯೇ ಆಗಿರುವ ಸಾಧ್ಯತೆಯಿದೆ.

ಸಾಂಸ್ಕೃತಿಕ ಮಾನವಶಾಸ್ತ್ರಜ್ಞ ಜೆಹೆರ್ಸ್ಕೋವಿಟ್ಸ್‌ಅವರ ’ಪುರಾಣ, ಬುಡಕಟ್ಟುಗಳ ಆತ್ಮಚರಿತ್ರೆ’, ಇತಿಹಾಸದ ಮೂಲ ಆಕರ. ಆದಿಮ ಜನಸಮುದಾಯದ ವಿಶ್ವಾಸಪತ್ರ ಇತ್ಯಾದಿ ಮಾತುಗಳ ಬೆಳಕಿನಲ್ಲಿ ಹೇಳುವುದಾದರೆ ಮೈಲಾರ ವ್ಯಕ್ತಿ ಒಂದು ಹಂತದಲ್ಲಿ ಪುರಾಣೀಕರಣಗೊಂಡಿರುವುದು ಖಚಿತ. ಜೈನರಿಗೆ ಮಲ್ಲಿನಾಥ ನಾಗಿ, ಅವರಿಂದಲೇ ಪೂಜಿತನಾಗಿ, ನಿರಾಕೃತನಾಗಿ, ಶೈವರಿಗೆ ಮೈಲಾರಲಿಂಗನಾಗಿ ಅರ್ಚನೆಗೊಂಡು, ನಿರಾಕೃತನಾಗಿ ವೈಷ್ಣವರಿಂದಲೂ ಪೂಜಿತ-ನಿರಾಕೃತನಾಗಿ ಶಿಷ್ಟಪದ ಸಮಾಜದಿಂದ ದೂರ ಉಳಿದ ಅತಿ ನಾಗರಿಕತೆಗೆ ಪಕ್ಕಾಗದ ಗ್ರಾಮೀಣ ಜನಪದ ಗುಂಪುಗಳಿಗೆ ಆರಾಧ್ಯ ದೈವವಾಗಿ ಗ್ರಾಮದೇವತೆಯಾಗಿ ಉಳಿದುಬಂದಿದ್ದಾನೆ.

ಅಂಧ ಶ್ರದ್ಧೆ, ಮೂಢ ಆಚರಣೆಗಳನ್ನು ಖಂಡಿಸಿದ ಶಿವಶರಣದ ಕಾಲದ ಶಂಕರದಾಸಿಮಯ್ಯ-ಚರಿತ್ರೆಯನ್ನು-ಪುರಾಣ ರಚಿಸಿದ ಕವಿಗಳು-ಹರಿಹರನಿಂದ ಕವಿ ಮಲ್ಲಿಕಾರ್ಜುನನವರೆಗೆ-ಮೈಲಾರ ಕ್ಷುದ್ರದೇವತೆ ಎನ್ನುವುದನ್ನು ತೋರಿಸಲು ಮೈಲಾರಮೂರ್ತಿ ಜೀವಂತವಾಗಿ ಎದ್ದುಬರುವ ಮತ್ತೊಂದು ಪವಾಡವನ್ನು ಸೃಷ್ಟಿ ಸಿರುವುದು ಮೈಲಾರನ ಆರಾಧಕರು ಒಂದು ಮೂಢನಂಬುಗೆಯಿಂದ ಮತ್ತೊಂದು ಮೂಢನಂಬಿಕೆಗೆ ಜಾರುವ ತಮಾಷೆಯಾಗಿ ಕಾಣುತ್ತದೆ.

ಧರ್ಮ ಎನ್ನುವುದು ಪ್ರಥಮತಃ ಆಚರಣೆಯ ವಸ್ತು; ಧಾರ್ಮಿಕ ದೇವತೆಗಳು ಧಾರ್ಮಿಕ ಆದರ್ಶಗಳ ಪ್ರತೀಕ. ಧಾರ್ಮಿಕ ನೀತಿ ನಡವಳಿಕೆಗಳು ಧ್ಯಾನ ಚಿಂತನೆಗೆ ಶಿಸ್ತು; ಸೃಷ್ಟಿರಹಸ್ಯಕ್ಕೆ ಕಿಟಕಿ; ಬದುಕಿನ ಮೂಲಭೂತ ಮೌಲ್ಯಗಳಿಗೆ ನೈತಿಕ ನೆಲೆಗಟ್ಟು ಒದಗಿಸಿ ಜನಾಂಗವನ್ನು ಕ್ರಿಯಾಶೀಲ ಸೃಷ್ಟಿಶೀಲ ಗುರಿಯತ್ತ ಕೊಂಡೊಯ್ಯುವ ವಾಹಕ, ರ್ಧಮೂಲ ನೆಲೆಯಲ್ಲಿಯೇ ತನ್ನ ಸತ್ವ ಕಳೆದುಕೊಂಡಾಗ ಸಾಮಾಜಿಕರು ಪಥಭ್ರಷ್ಟರಾಗುತ್ತಾರೆ; ಧರ್ಮ ಅಥವಾ ಧಾರ್ಮಿಕ ವ್ಯಕ್ತಿಗಳು ಪ್ರಜ್ಞೆ ಆಸಕ್ತಿಯ ವಸ್ತುವಾಗುತ್ತಾರೆ; ನಮ್ಮ ಆರಾಧನೆಯ ರಿಚುಯಲ್ಲುಗಳಲ್ಲಿ ಉಳಿದು ಆರಾಧ್ಯ ವಸ್ತು ಪವಾಡರೂಪ ಹೊಂದಿ ನಮ್ಮ ಅಂಧಶ್ರದ್ಧೆಯ ಕಿರೀಟವಾಗಿ ಕೊನೆಗೆ ಶೋಷಣೆಗೆ ಕೇಂದ್ರವಾಗುತ್ತದೆ. ಇದು ಧರ್ಮದ ಅವನತಿಯಿಂದ ಉಂಟಾಗುವ ಸಾಮಾಜಿಕ ದುರಂತವಾದರೆ ದೈವೀ ಪರಿಕಲ್ಪನೆಯ ದುರಂತವೂ ಹೌದು.

ಬಿ. ಮಾಲಿನೋವ್ಹಸ್ಕಿ ತನ್ನ ’ಮಿಥ್‌ಇನ್ ಪ್ರಿಮಿಟಿವ್ ಸೈಕಾಲಜಿ’ ಕೃತಿಯಲ್ಲಿ ಹೇಳುವ ಮಾತನ್ನು ಗಮನಿಸಿ: “ಪುರಾಣ, ಮಾನವ ನಾಗರಿಕತೆಯ ಒಂದು ಸತ್ವ ಪೂರ್ಣ ತಿರುಳು-ಅಂಶ: ವಿರಾಮ ಕಾಲದ ಕಥೆ ಅಲ್ಲ, ತೀವ್ರ ಪರಿಶ್ರಮದ ಜೀವಂತ ಶಕ್ತಿ; ಅದೊಂದು ಬೌದ್ಧಿಕ ಅರ್ಥವಿವರಣೆ ಅಥವಾ ಕಲಾತ್ಮಕ ಪ್ರತಿಮೆಯಾಗಿರದೆ ಆದಿಮ ಶ್ರದ್ಧೆ ಮತ್ತು ನೈತಿಕ ವಿವೇಕದ -ವಸ್ತುತಃ ಸಂಭವನೀಯ – ಕರಾರುಪತ್ರ ’ಚಾರ್ಟರ್‌’ ಆಗಿದೆ”.೧ ಸಾಮಾನ್ಯವಾಗಿ ’ಮೈಲಾರಲಿಂಗ’ನ ದೇವಾಲಯಗಳು ಗುಡ್ಡದ ಮೇಲೆಯೇ ಇದ್ದು. ಇಂದಿಗೂ ಆತ ಸಂಕೀರ್ಣ ವರ್ಗದ ಜನರ ಆರಾಧ್ಯ ದೈವವಾಗಿದ್ದಾನೆ. ಡಾ. ರಮೇಶ (ಪ್ರ.ಕ. ೪೬-೮) ಸೂಚಿಸಿದ ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಜಾವೂರಿನ ಶಾಸನದ ’ಮನೆವೆಗ್ಗಡೆಚಟ್ಟಪ’ ಮೈಲಾರಲಿಂಗ ಪ್ರತಿಷ್ಠಾಪನೆ ಮಾಡಿಸಿದುದನ್ನು ಒಪ್ಪಿದರೆ ಐತಿಹಾಸಿಕವಾಗಿ ಮೈಲಾರ ಲಿಂಗ ಶಿಷ್ಟಪದ ದೇವತೆಯಾಗಿ ಸ್ಥಿರೀಕರಿಸಲ್ಪಟ್ಟಿದೆ ಎಂದು ಹೇಳಬಹುದು.

ಪೋರ್ತುಗೀಜ್ ಭಾಷೆಯಲ್ಲಿ ’ಮೈಲಾರ್’ ಎನ್ನುವ ಶಬ್ದವಿದ್ದು ಅದಕ್ಕೆ ’ದೇವರಮನೆ’ ಎನ್ನುವ ಅರ್ಥವಿದೆಯಂತೆ.[12] ಈ ಶಬ್ದ ಆ ಭಾಷೆಯಲ್ಲಿರುವುದು ಒಂದುಭಾಷಿಕ ಆಕಸ್ಮಿಕವಿರಬಹುದು. ’ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ’ ಎನ್ನುವ ಗಾದೆಗೂ ಕೊಂಕಣ ಪ್ರದೇಶಕ್ಕೆ ಬಂದು ನೆಲೆಸಿದ ಗೋವೆಯ ಪೋರ್ಚು ಗೀಜರಿಗೂ – ಕನಿಷ್ಠ ಪಕ್ಷ ಕನ್ನಡದ ಈ ಶಬ್ದ ಅವರ ಭಾಷೆಯಲ್ಲಿ ಸೇರಿರುವ ಸಾಧ್ಯತೆಗೂ- ಏನಾದರು ಸಂಬಂಧವಿದ್ದೀತೆ?

. ದಿ.ಡಾ. ಆರೋಜಾ ಒಮ್ಮೆ ಮಾತು ಹೇಳಿದ್ದರು.

ಮೈಲಾರ ಶಬ್ದದ ಭಾಷಾ ಶಾಸ್ತ್ರೀಯ ವಿವೇಚನೆ ಮಾಡಿದ ಡಾ. ಚಿದಾನಂದ ಮೂರ್ತಿ ’ಮೈಲಾರ ಎಂಬುದನ್ನು ಮೈಲ+… ಎಂದೇ ಬಿಡಿಸಬೇಕೆಂದೂ ’ಅರ’ ಅರಸವಾಗುವುದೆಂದೂ, ಮೈಲ+ಅರಸ-ಮೈಲರಸ-ಮೈಲಾರ-ಮೈಲಾರ ಶಾಸನ ಕಾವ್ಯ ಶಾಸನ ಕಾವ್ಯ ಪ್ರಯೋಗಾಧಾರಗಳ ಬೆಳಕಿನಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ.[13] ಅವರ ನಿಷ್ಠೆ ಪ್ರಾಮಾಣಿಕತೆಗಳು ಮೆಚ್ಚಬೇಕಾದುವು. ಆದರೆ ೧೮ನೆಯ ಶತಮಾನದ ವೈಷ್ಣವ ಪರಂಪರೆಯ ಕಥೆಯಲ್ಲಿ ಬರುವ ಮೈಲಿಗೆಯಲ್ಲಿ ಹುಟ್ಟಿದ ’ಮೈಲಾರ’ಹೆಸರಿಗಿಂತ ಪ್ರಾಚನವಾಗಿರುವ ಶಿವಕಥಾನಕದ ಮಲ್ಲಾಸುರನ ಅರಿ ’ಮೈಲಾರಿ’ ’ಮೈಲಾರಿ’ಯಾಗಿರುವ ಪೌರಾಣಿಕ ಅಜ್ಞಾತಕಾಲದಿಂದ ಬಂದಿರಬಹುದಾದ ಪರಂಪರಾಗತ ಸಾಧ್ಯತೆಯನ್ನು ಅಲ್ಲಗಳೆಯಲು ಬಂದೀತೆ? ಮಲ್ಲಾಸುರನನ್ನು ಕೊಲ್ಲುವುದು ಈತನಿಗೆ ಸಂಬಂಧಿಸಿದ ಎಲ್ಲ ಕಥೆಗಳಲ್ಲೂ ಸಮಾನಾಂಶವಾಗಿರುವುದರಿಂದ ’ಮೈಲಾರ’ ಸಿದ್ಧಶಬ್ಧವೇ ಏಕಾಗಿರಬಾರದು? ರೂಢಿ, ಶಾಸ್ತ್ರವನ್ನು ಹಿಂದಿಕ್ಕುವುದಾದರೆ ’ಮೈಲಾರ’ ಜನಪದರ ರೂಢಿಯ ಸಿದ್ಧಶಬ್ದವೆಂದು ಹೇಳಿದರೆ ಅದನ್ನು ಕುರಿತು ತುಂಬ ಸುಲಭದ ಮಾತು ಹೇಳಿದಂತಾದೀತೆ? ಪುರಾಣಕಾಲದ ಅಜ್ಞಾತ ಅನಿರ್ದಿಷ್ಟ ಸತ್ಯ ಮತ್ತು ಚಾರಿತ್ರಿಕ ಸಂದಿಗ್ಧತೆಗಳಿಂದ ’ಮೈಲಾರ’ ಶಬ್ದವಾಗಲಿ ’ಮಾಳಚಿ’ ಶಬ್ದವಾಗಲಿ ಸಂಶೋಧಕರ ಆಸಕ್ತಿಯ ವಸ್ತುಗಳಾಗಿಯೇ ಉಳಿಯುತ್ತವೆ. ಜನಪದ ತನ್ನಪಾಡಿಗೆ ತಾನು ರೂಢಿಯಲ್ಲಿ ಪರಿಚಲನೆಗೊಳ್ಳುತ್ತ ಮುಂದುವರೆಯುತ್ತದೆ.

ಮೈಲಾರನ ಭಕ್ತರುವೇಷಭೂಷಣ:

ಮೈಲಾರನ ಭಕ್ತರಲ್ಲಿ ಗೊರವರಿಗೆ ವಿಶೇಷ ಸ್ಥಾನವಿದೆ. ಗೊರವರನ್ನು ಗೊಗ್ಗಯ್ಯ, ಗೊಗ್ಗಪ್ಪ, ಒಗ್ಗಯ್ಯ, ಗೊರವಪ್ಪ ಗೊರಪ್ಪ ಎಂದು ಮುಂತಾಗಿ ಕರೆಯುತ್ತಾರೆ.

ಗೊರವರ ವೇಷ ವಿಲಕ್ಷಣವಾದುದು. ಕುಂಕುಮ ಭಂಡಾರ ಲೇಪನ ಕೊರಳಲ್ಲಿ ಕವಡೆಸರ, ಕಂಬಳಿಯ ನಿಲುವಂಗಿ-ಅಲ್ಲಲ್ಲಿ ಕೆಂಪು ಪಟ್ಟಿ, ಕಂಬಳಿಯ ಟೊಪ್ಪಿಗೆ ನವಿಲುಗರಿಯ ಚವರಿ ಅಥವಾ ಚಾಮರ ಮತ್ತು ಕೊಡೆ. ಭಂಡಾರದ ತೊಗಲಿನ ಚೀಲ; ತ್ರಿಶೂಲ, ನಾಗರ ಬೆತ್ತ; ಗಂಟೆ, ಜೋಳಿಗೆ, ದೋಣಿ ಇವೆಲ್ಲವನ್ನು ಒಂದು ಉದ್ದ ಹಿತ್ತಾಳೆಯ ಸರಪಣಿಗೆ ತೊಡರಿಸಿ ಕೊರಳು ಹೆಗಲಿಗೆ ಇಳಿಬಿಡುತ್ತಾರೆ: ಹಿಡಿದುಕೊಳ್ಳುತ್ತಾರೆ. ಗಂಟೆ ಡಮರು ಬಾರಿಸುತ್ತ ಒಮ್ಮೊಮ್ಮೆ ಬೆತ್ತ ತಿರುವುತ್ತ ಮೈಲಾರಲಿಂಗನ ಸೇವೆಗೆ ’ಏಳುಕೋಟಿಗೋ ಏಳುಕೋಟಿಗೋ ಚಾಂಗುಮವೇ’ ಎಂದು ಉದ್ಘೋಷಿಸುತ್ತ ಹೊರಡುತ್ತಾರೆ.

ಡೋಣಿ: ಇದು ಕಂಚು ಅಥವಾ ಕಟ್ಟಿಗೆಯದು. ಶಿವನು ದೈತ್ಯರ ಸಂಹಾರ ಕಾಲದಲ್ಲಿ ಡೋಣಿಗೆ ಬಾಯಿಹಚ್ಚಿಯೇ ಹಸಿವು ಹಿಂಗಿಸಿಕೊಂಡುದರ ಸಂಕೇತವಾಗಿ ಭಕ್ತರಿಗೆ ಇದು ಅಕ್ಷಯ ಪಾತ್ರೆ, ಭಕ್ತರು ದೋಣಿ ತುಂಬಿಸುವುದು ಒಂದು ಆಚರಣೆ, ಬಾಳೆಹಣ್ಣು, ಸಕ್ಕರಿ, ಬೆಲ್ಲ ಹೀಗೆ ತುಂಬಿಸುತ್ತಿರುತ್ತಾರೆ. ಗೊರವರಿಗೆ ದೋಣಿಯಲ್ಲಿಯೇ ಊಟ.

ಗೊರವ ವೃತ್ತಿ: ಕುರುಬ ಜನಾಂಗ ಅಥವಾ ಗೊಲ್ಲರು, ಬೇಡರು ತಲೆ ತಲಾಂತರ ದಿಂದ ಗೊರವರಾಗುತ್ತಾರೆ. ಶಿವಸೇನೆ ಮಾಡುವುದೇ ತಮ್ಮ ಗುರಿ ಎಂದು ಭಾವಿಸಿದ ಕೆಲವು ಮನೆತನಗಳು ವಂಶಪಾರಂಪರ‍್ಯವಾಗಿ ಗೊರವರಾಗುತ್ತಾ ಬರುತ್ತಾರೆ. ’ಗೊರವರ’ ಮನೆತನದಲ್ಲಿ ಹಿರಿಯ ಮಗನಿಗೆ ಗೊರವ ದೀಕ್ಷೆ ಕೊಡಲಾಗುತ್ತದೆ. ನಿರ್ದಿಷ್ಟ ದಿನ, ವಿಶೇಷವಾಗಿ ರವಿವಾರ ಸ್ನಾನಾದಿ ಕ್ರಿಯೆ ಮುಗಿದ ಬಳಿಕ ಗೊರವನ ವೇಷ ತೊಡಿಸಿ ಮೈಲಾರನ ಸಮ್ಮುಖ ಆರತಿ ಮಾಡಿಸಿ ಡೋಣಿ ಕೊಟ್ಟು ಸೇವೆಗೆ ನಿಲ್ಲಿಸುತ್ತಾರೆ. ಮೈಲಾರಲಿಂಗನನ್ನು ಕುರಿತು ಭಕ್ತಿಯಿಂದ-

’ಇಂದು ನಿಮ್ಮನೀಗೆ ಸ್ವಾಮಿ ಬಂದಾ
ಮೈಲಾರಲಿಂಗಾ
ಇಂದು ನಿಮ್ಮನೀಗೆ ಏಳಕೋಟಿ ಬಂದಾ’

ಇತ್ಯಾದಿ ದೇವರ ಮಹಿಮೆಗಳನ್ನು ಹಾಡುತ್ತ ಹೋಗುತ್ತಾರೆ. (ಗೊರವರಲ್ಲಿ ’ಹೆಣ್ಣುಗೊರವ’ರೂ ಇದ್ದಾರೆ). ಸಾಮಾನ್ಯವಾಗಿ ಗೊರವರು ಬರಿಗಾಲಿನಿಂದಲೇ ಭಕ್ತರ ಮನೆಮನೆಗೆ ಹೋಗಿ ಹಾಡುತ್ತ ಅಲೆಯುತ್ತಾರೆ. ಭಕ್ತರು ಕೊಟ್ಟ ಭಿಕ್ಷೆಯ ಮೇಲೆಯೇ ಉಪಜೀವಿಸುತ್ತಾರೆ.

ಗೊರವರಲ್ಲಿ ಮಹತ್ವದ ವ್ಯಕ್ತಿ ಕಾರಣಿಕ ಗೊರವಅಥವಾ ಕಾರ್ಣಿಕ ಗೊರವ. ಇವನು ಸಂಸಾರಿಯಾಗಿದ್ದು ಅತ್ಯಂತ ಕಠಿಣ ವ್ರತ ನಿಯಮಗಳನ್ನು ಪಾಲಿಸಬೇಕಾದುದು ಅಗತ್ಯ. ದಸರೆಯ ಹಬ್ಬದ ಖಂಡೇಪೂಜೆ ಅಥವಾ ’ಆಯುಧ ಪೂಜೆ’ ಯ ದಿನ ಕಾರ್ಣಿಕ ಹೇಳುವ ಅತ್ಯಂತ ಕಟ್ಟುನಿಟ್ಟಿನ ಕಾಯಕ ಈತನ ಹೊಣೆ. ಆಯುಧ ಪೂಜೆಗೆ ೯ ದಿನಗಳ ವರೆಗೆ ನಿರಾಹಾರ. ಪ್ರತಿನಿತ್ಯ ಸ್ನಾನ. ಆಯುಧಪೂಜೆಯ ದಿನ ಕಾರ್ಣಿಕ ಗೊರವನು ೨೦ ಘೂಟು ಉದ್ದ, ೬ ಇಂಚು ವ್ಯಾಸದ ಒಂದು ದೊಡ್ಡ ಬಿಲ್ಲನ್ನು ಪೂಜಿಸಿ,-ಇದು ಮಲ್ಲಾಸುರನ ಸಂಹಾರಕ್ಕೆ ಶಿವನು ಬಳಸಿದ ಬಿಲ್ಲು ಅಥವಾ ಅದರ ಸಂಕೇತ ಎಂದು ಶ್ರದ್ಧೆ-ಬೇರೊಂದು ದೊಡ್ಡ ಗಾತ್ರದ ಬಿಲ್ಲು ಹಿಡಿದು ಸಂಜೆ ಕಾರ್ಣಿಕಕ್ಕೆ ನಿಗದಿಪಡಿಸಿದ ಬಯಲಿಗೆ ಬರುತ್ತಾನೆ. ಸುತ್ತಲೂ ಸಾವಿರಾರು ಸಂಖ್ಯೆಯಲ್ಲಿ ಜನಸಮೂಹ. ಒಂದು ನಿಮಿಷ, ಎರಡು ನಿಮಿಷ, ಅಂತಃ ಪ್ರೇರಣೆಗೆ ಒಳಗಾದ ಕಾರ್ಣಿಕ ಗೊರವ ಮಿಂಚಿನಂತೆ ಸರಸರನೆ ಆ ಬಿಲ್ಲನ್ನು ಏರುತ್ತಾನೆ. ತೊಡರು ಗಾಲು ಹಾಕಿ ಬಿಲ್ಲ ತುದಿಗೆ ನಿಂತು ಸುತ್ತ ಒಮ್ಮೆ ನೋಡಿ ’ಸದ್ದಲೇ ಪರಾಕ’ ಎಂದು ಕೂಗು ಹಾಕುತ್ತಾನೆ. ಎಲ್ಲವೂ ಸ್ತಬ್ಧ. ಉಸಿರುಗಟ್ಟಿಸುವ ಮೌನ. ’ಕಲಕಮಲಕಲೇ ಪರಾಕ್’ ಇತ್ಯಾದಿ ಕಾರಣಿಕ ವಾಣಿ.[14] ಗೊರವನ ಬಾಯಿಂದ ಕಾರಣಿಕದ ಶಬ್ದಗಳ ಚಿಮ್ಮಿದುವೋ ಇಲ್ಲವೋ ಎನ್ನುತ್ತಿರುವಂತೆ ಅಷ್ಟು ಎತ್ತರ-ಸುಮಾರು ೧೨-೧೫ ಅಡಿ ದಿಂದಲೇ ಆ ಗೊರವ ಕೈಬಿಟ್ಟು ಕೆಳಕ್ಕೆ ಧುಮುಕುತ್ತಾನೆ.ಕೆಳಗೆ ನಿಂತ ಭಕ್ತರು ಅನಾಮತ್ತಾಗಿ ಎತ್ತಿಕೊಳ್ಳುತ್ತಾರೆ.

ಚೌರೀ ಬೀಸುವವರು, ಎಲೆಚಂಚಿಯವರು, ದೀವಟಿಗೆ ಸೇವೆಯವರು, ಕತ್ತಿ ಬಳ್ಳಪ್ಪ ಎನ್ನುವ ಹೆಸರಿನಿಂದ ಕುದುರೆ ಹಬ್ಬ-ಕ್ಷತ್ರಿಯರು ಮಲ್ಲಾಸುರನ ಸಂಹಾರ ಕಾಲಕ್ಕೆ ತೋರಿದ ಶೌರ‍್ಯಕ್ಕೆ ಸಂಕೇತವಂತೆ- ದ ದಿನ ಕೆಲವರು ಕೈಯಲ್ಲಿ ಬಿಚ್ಚುಗತ್ತಿ ಹಿಡಿದು ಝಳಪಿಸುತ್ತ, ತಿರುಗಿಸುತ್ತ ವೀರಾವೇಶದಿಂದ ಕುಣಿಯವವರು, ಮೈಲಾರನಿಗೆ ಗಾಂಜಾ ಸೇವೆ ಸಲ್ಲಿಸುವವರು. ಶಿವನು ಏರಿದನೆಂದು ನಂಬಲಾದ ಬಿಳಿಗುದರೆಯ ಸಂಕೇತವಾಗಿ ಕುದುರೆಯಂತೆ ಕುಣಿಯುತ್ತ ಕಾಲಿಗೆ ಕುದುರೆ ಚಡಿಯಿಂದ, ಚಾವಟಿಯಿಂದ ಹೊಡೆದುಕೊಳ್ಳುವ ಕುದುರೇಕಾರರು. ಹೀಗೆ ಮೈಲಾರಲಿಂಗನ ಪೂಜೆ,, ಉತ್ಸವ ಗಳ ಹಿನ್ನಲೆಯಲ್ಲಿ ಜರುಗುವ ರೂಢಿ ಆಚರಣೆ. ಪರಂಪರೆಗಳು ಮಾನವಶಾಸ್ತ್ರಜ್ಞರ, ಸಾಂಸ್ಕೃತಿಕ ಮಾನವಶಾಸ್ತ್ರಜ್ಞರ ಮನೋವಿಜ್ಞಾನಿ, ಸಮಾಜವಿಜ್ಞಾನಿಗಳ ಸಂಶೋಧನೆ, ಅನ್ವೇಷಣೆ ವೈಜ್ಞಾನಿಕ ವಿಶ್ಲೇಷಣೆಗೆ ಕಾದಿದೆ.

ದೇವರಗುಡ್ಡ ಕ್ಷೇತ್ರದ ಮೈಲಾರಲಿಂಗನ ಉತ್ಸವದ ಆಚರಣೆಗಳಲ್ಲಿ ಭಯಭೀತ ಪರಿಸರವನ್ನು ಹುಟ್ಟಿಸುವ ತರ್ಕ ವೈಚಾರಿಕತೆಗೆ ನಿಲುಕದ ಅದ್ಭುತ ವಿಸ್ಮಯಕಾರಿ ಆಚರಣೆಯೆಂದರೆ ವೀರಗಾರರು ಮಾಡುವ ಆಚರಿಸುವ ಪ್ರತ್ಯಕ್ಷ ತೋರಿಸುವ ಪವಾಡಗಳು.[15]

ವಿಜಯದಶಮಿಯ ದಿನ ಆಚರಿಸಲ್ಪಡುವ ಈ ಪವಾಡಗಳು ರುದ್ರಭೀಕರವಾಗಿರುತ್ತವೆ.

ವಿಜಯದಶಮಿಯಂದು, ಮೈಲಾರಲಿಂಗ ಗುಡಿಯಲ್ಲಿರುವ ನಗಾರಿ ಸಂಜೆ ಐದು ಗಂಟೆಗೆ ರುದ್ರ ನಾದದ ಅಲೆಗಳನ್ನು ಚಿಮ್ಮುತ್ತದೆ. ಅದನ್ನು ಕೇಳುತ್ತಿದ್ದಂತೆ ತಲೆಗೆ ಜಡೆ, ಕೊರಳಲ್ಲಿ ರುಂಡಮಾಲೆ-ವಿಗ್ರಹಗಳು-ನಿಲುವಂಗಿ, ದಡಿಧೋತರ, ನಡುವಿಗೆ ಬಿಗಿದ ಸೆಲ್ಲೆ, ಮತ್ತೊಂದು ದಡಿ ದೋತರ ಹೆಗಲ ಮೇಲೆ. ಮುಖದ ತುಂಬ ವಿಭೂತಿ ಭಂಡಾರಧಾರಣೆ, ಕೈಯಲ್ಲಿ ಖಡ್ಗ, ಈ ರೀತಿ ಪುರವಂತರ ವೇಷಹಾಕಿ ನಗಾರಿಯ ಸದ್ದು ಕೇಳಿ ವೀರಾವೇಶದಿಂದ ಮೈಲಾರ ಸ್ವಾಮಿಯ ಗುಡಿಯ ಅಂಗಳಕ್ಕೆ ಬಂದು ಸ್ವಾಮಿಯ ಮಹಿಮೆಗಳನ್ನು ಒಡಬುಗಳ ಮೂಲಕ ಆರ್ಭಟಿಸಿ ಹೇಲುತ್ತ ಮೈದುಂಬಿ ಕುಣಿಯುತ್ತಾರೆ. ಒಬ್ಬ ವೀರಗಾರ ಬಗನಿಗೂಟವನ್ನು ಎಡಗಾಲ ಮೊಳಕಾಲು ಹಾಗು ಹಿಮ್ಮಡದ ಮೇಲಿನ ಅಂತರದಲ್ಲಿಟ್ಟು ಬಲವಾದ ತುಂಡಿನಿಂದ ತಾನೇ ಬಡಿದುಕೊಳ್ಳುತ್ತಾನೆ. ಆ ಗೂಟ ಹಿಮ್ಮಡವನ್ನು ಛೇದಿಸಿ ಮತ್ತೊಂದು ಬದಿಯನ್ನು ಸೀಳಿಕೊಂಡು ಹಾಯ್ದುಬರುತ್ತದೆ. ಅದೇ ತೂತಿನಲ್ಲಿ ಕಾರಿಮುಳ್ಳಿನ ಕಂಟಿಯನ್ನು ಹಾಯಿಸಿ ಎದುರುಬದುರು ಎಳೆದುಕೊಳ್ಳುವನು.

ಒಂದು ತೊಗಲಿನ ಮಿಣಿಯನ್ನು ಮೈಲಾರನ ತೀರ್ಥ, ಹಣ್ಣು, ತುಪ್ಪಗಳಿಂದ ತಿಕ್ಕಿ ನುಣುಪುಗೊಳಿಸಿ ವೀರಗಾರನ ಕೈಯಲ್ಲಿ ಕೊಡುತ್ತಾರೆ. ಅವನು ಆ ಮಿಣಿಯನ್ನು ಕಾಲಲ್ಲಾದ ಗಾಯದ ಕಿಂಡಿಯಲ್ಲಿ ಪೋಣಿಸಿ ಬೀಸಿ ಎಳೆದು ಅರ್ಭಟಿಸುತ್ತಾನೆ.

ಇಷ್ಟೆಲ್ಲ ಪವಾಡಗಳು ಮುಗಿಯುತ್ತಿದ್ದಂತೆ ಆ ’ಕುರುಹಿ’ಗೆ ಭಂಡಾರ ತುಂಬಿ ಬಿಳಿ ಅರಿವೆಯ ಪಟ್ಟಿ ಕಟ್ಟಲಾಗುತ್ತದೆ. ವೀರಗಾರ ಮತ್ತೆ ಯಥಾಪ್ರಕಾರ ದೇವರಿಗೆ ನಮಸ್ಕರಿಸಿ ಸರಳ ನಡೆದುಹೋಗುತ್ತಾನೆ. ಇದಲ್ಲದೆ ಪಂಚಾರತಿ ಕೈಪವಾಡ, ಸರಪಳಿ ಹರಿಯುವುದು ಹೀಗೆ ಅನೇಕ ವಿಲಕ್ಷಣ, ಮೈನಡುಗಿಸುವ ಮೈನವಿರೇಳಿಸುವ ಆಚರಣೆಗಳನ್ನು ನೋಡುತ್ತಿದ್ದಂತೆ ಈ ಆಚರಣೆಗಳ ಕ್ರೂರ ವಿಧಾನ-ಆ ಕ್ರೌರ್ಯವನ್ನೂ ಮೆಟ್ಟಿ ನಿಲ್ಲುವ ನಿಷ್ಠೆ ಏಕಕಾಲಕ್ಕೆ ದಂಗುಬಡಿಸುತ್ತವೆ.

ಚೈತ್ರ ಶುದ್ಧ ದವನದ ಹುಣ್ಣಿಮೆಯಿಂದ ಮರಳಿ ಫಾಲ್ಗುಣ ಶುದ್ಧ ಪೂರ್ಣಿಮೆಯವರೆಗೂ ಪ್ರತಿಹುಣ್ಣಿಮೆಯಲ್ಲೂ ದೇವರಗುಡ್ಡದಲ್ಲಿ ಆರಾಧನೆ ಉತ್ಸವ. ಆ ಗುಡ್ಡವನ್ನು ಪ್ರವೇಶಿಸುತ್ತಿರುವಂತೆ ’ಏಳುಕೋಟಿಗೋ’ ಉದ್ಘೋಷ; ಡಮರುಗದ ಧ್ವನಿ ತರಂಗ.

* * *


[1]     ಪಿ.ಬಿ.ದೇಸಾಯಿ: ’ಮೈಲಾರಲಿಂಗ’ ಕರ್ನಾಟಕ ಕರ್ನಾಟಕ ಯುನಿವ್ಹರ್ಸಿಟಿ ಜರ್ನಲ್ ಸಂ.III ಭಾಗ ೨.

ಬಿ.ಎಸ್.ಕುಲಕರ್ಣಿ: ’ಮೈಲಾರ’ ಕರ್ನಾಟಕಕ ಯುನಿವ್ಹರ್ಸಿಟಿ ಜರ್ನಲ್‌ಸಂ. VIII  ಬಿ.ಎಸ್. ಕುಲಕರ್ಣಿ: ’ಮೈಲಾರಿ ಮಾರ್ತಾಂಡ ಭೈರವ’ ಕರ್ನಾಟಕ ಯುನಿವ್ಹರ್ಸಿಟಿ ಜರ್ನಲ್ ಸಂ. IX

ಚಿದಾನಂದಮೂರ್ತಿ: ’ಕನ್ನಡ ಕಾವ್ಯ ಶಾಸನಗಳಲ್ಲಿ ಮೈಲಾರ ಮತ್ತು ಮಾಳಚಿ’. ಸಂಶೋಧನ ತರಂಗ-೨. ಪು. ೨೦೭-೨೩೧.

[2]      ಧರ್ಮಾಮೃತ. ೩ ೨೦೬.

[3]     ’ವೀರದೊಳುಕ್ಕಿ ಮಚ್ಟರಿಸಿ ಕೋಪದೆ ಜೈನನೆ ಕಾದಿ ಸತ್ತು ಮೈಲಾರ ಸಲಕ ನೆನಲ್ಕೆ ರೂಢಿವಡೆದಂ’ ಚಿದಾನಂದಮೂರ್ತಿ: ಸಂಶೋಧನ ತರಂಗ-೨, ಪು. ೨೦೮.)

[4]     ಸಮಯ ಪರೀಕ್ಷೆ (೮.೨೩೧)

[5]     ಚಿದಾನಂದಮೂರ್ತಿ: ಸಂಶೋಧನ ತರಂಗ-೨ ಪು. ೨೧೧.

[6]      ಬಸವಣ್ಣನವರ ಷ.ವ.ಸಂ.: ಶಿ.ಶಿ. ಸವನಾಳ. ವ.ಸಂ. ೨೮೦, ೫೬೭, ೬೩೩

[7]     ಬಸವಣ್ಣನವರ ಷ.ವ.ಸಂ.: ಶಿ.ಶಿ. ಸವನಾಳ. ವ.ಸಂ. ೨೮೦, ೫೬೭, ೬೩೩

[8]     ಭೀಮಕವಿ. ಕುಮಾರ ಪದ್ಮರಸ, ಸಿದ್ಧನಂಜೇಶ, ವಿರಕ್ತ ತೋಂಟದಾರ್ಯ, ಮಲ್ಲಿಕಾರ್ಜುನ, (೧೯೬೯-೧೨೦೦, ೧೫೫, ೧೬೫೦….೧೬೫೦)

[9]     ಶಂಕರದಾಸಿಮಯ್ಯ ಪುರಾಣ. ಪ್ರಸ್ತಾವನೆ, ಪು.೪೬.ಸಂ. ವಿ.ಬಿ. ಹಾಲಭಾವಿ

[10]    Andrew Long: Myth, ritual and religion. London, 1887. p.3

[11]    ‘Euthemeres offered his theory that myths had their origin in actual historical charcaters and events, and that the gods were once men who were defied and worshipped after their death. Thus the gods had feet of clay and crimes of the gods were really crimes of men.” William R. Bascom: ‘Contributions of Folkoristics’. p.49.

[12]    ‘Myth is a vital ingredient of human civilization; it is not an idle tale, but a hard-worked active force; it is not an intellectual explanation or an artistic imagery but a pragmatic charter of primitive faith and moral wisdom.” B. Malinowski:

[13]    ಸಂಶೋಧನ ತರಂಗ-೨, ಪು.೨೨೪-೨೨೬.

[14]    ಕಾರಣಿಕ ಒಂದು ಪ್ರತ್ಯೇಕ ವಿಷಯ ವಿವರಣೆಗೆ, ವಿಶ್ಲೇಷಣೆಗೆ ವಸ್ತುವಾಗಿರುವುದರಿಂದ ಇಲ್ಲಿ ಸೂಚನೆ ಮಾತ್ರ ಕೊಡಲಾಗಿದೆ. ಅದರಂತೆ ಮೈಲಾರಲಿಂಗನನ್ನು ಕುರಿತ ಒಡಬು ಹಾಡು ಇತ್ಯಾದಿ ಜನಪದ ಸಾಹಿತ್ಯದ ಅಧ್ಯಯನ ಬೇರೆ ಪ್ರಬಂಧಕ್ಕೆ ವಸ್ತುವಾಗಿದೆ. ಕಾಲಮಿತಿಯಿಂದ ಅದನ್ನು ಬಿಡಲಾಗಿದೆ.

[15]    ಇಂದಿಗೂ ದೇವರಗುಡ್ಡದಲ್ಲಿ ನಿರಕ್ಷರಿಯಯಗಿರುವ ೫೫ ವಯಸ್ಸಿನ ಬಿದ್ದಾಡೆಪ್ಪ ಸೆದೆಯಪ್ಪ ನಾಗೂರ ಎನ್ನುವ ವ್ಯಕ್ತಿ ಈ ಪವಾಡಗಳನ್ನು ಸ್ವಾಮಿಯ ಉತ್ವವದಲ್ಲಿ ಆಚರಿಸುತ್ತಾನೆ. ಆತ ತನ್ನ ೩೫ನೆಯ ವಯಸ್ಸಿನಿಂದಲೇ ಪವಾಡಗಳನ್ನು ಆಚರಿಸುತ್ತ ಬಂದಿದ್ದಾನೆ.