ಶೈವಮೂಲದ ಮಲೆಯ ಮಾದೇಶ್ವರ ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ, ಕಾವೇರಿ ನದಿಯಿಂದ ಆಚೆಗೆ ಕರ್ನಾಟಕ ಮತ್ತು ತಮಿಳುನಾಡು ಗಡಿ ಪ್ರದೇಶದ ವಿಸ್ತಾರ ಮಲೆಸಾಲುಗಳ ನಡುವೆ ನೆಲೆಗೊಂಡಿದ್ದಾನೆ. ಈತನನ್ನು ಅವನ ಅಸಂಖ್ಯಾತ ಭಕ್ತರು ಏಳುಮಲೆಯ ಮಾದಯ್ಯ ಎಂದು ಕರೆದು ಗೌರವಿಸುತ್ತಾರೆ. ಚಾರಿತ್ರಿಕವಾಗಿ ಹದಿನಾರನೆಯ ಶತಮಾನಕ್ಕೆ ಸೇರಬಹುದಾದ ಈತನ ಬಗ್ಗೆ-ಸಾಕ್ಷಾತ್‌ಈಶ್ವರನೆಂದೂ, ಶ್ರವಣನನ್ನು ಕೊಲ್ಲು ಕೈಲಾಸದಿಂದ ಭೂಮಿಗೆ ಇಳಿದು ಬಂದ ದೇವತೆಯೆಂದೂ-ಅನೇಕ ನಂಬಿಕೆಗಳು ಮತ್ತು ಕಲ್ಪನೆಯ ಹಲವಾರು ಕಥಾನಕಗಳು ಹೆಣೆದುಕೊಂಡಿವೆ. “ನಿರಂಜನ ವಂಶರತ್ನಾಕರ” ಕೃತಿಯ ಪ್ರಕಾರ (ಕೃತಿಕಾರನ ಹೆಸರು ಗೊತ್ತಿಲ್ಲ) ಮಾದೇಶ್ವರನು ವಚನಕಾರರ ಶೂನ್ಯಸಿಂಹಾಸನದ ಆರನೇ ಪಟ್ಟಾಧಿಕಾರ ಪಡೆದವನು:

೧. ಅಲ್ಲಮಪ್ರಭು

೨. ಚೆನ್ನಬಸವಣ್ಣ

೩. ಸಿದ್ಧರಾಮ

೪. ಅನಾದಿ ಗಣನಾಥ

೫. ಆದಿ ಗಣೇಶ್ವರ

೬. ನಿರ್ಮಾಯ ಗಣೇಶ್ವರ (ಮಾದೇಶ್ವರ)

ಕೊನೆಗೆ ಮಾದೇಶ್ವರನು ಈ ಪಟ್ಟವನ್ನು ಬಿಟ್ಟುಕೊಟ್ಟು ಬಂದನೆಂದು ನಂಬಲಾಗಿದೆ. ತೋಂಟದ ಸಿದ್ಧಲಿಂಗೇಶ್ವರರು “ಆದಿಗಣೇಶ್ವರನ ಶಿಷ್ಯ ನಿರ್ಮಾಯ ಗಣೇಶ್ವರ” ಎಂದು ಹೇಳಿದ್ದಾರೆ. ಬಿ. ಶಿವಮೂರ್ತಿಶಾಸ್ತ್ರಿಗಳು ತಮ್ಮ “ಶ್ರೀ ಮಾದೇಶ್ವರ ಚರಿತ್ರೆ” ಗ್ರಂಥದಲ್ಲಿ ಮಾದೇಶ್ವರನು ಆರುನೂರು ವರ್ಷಗಳ ಹಿಂದೆ ಜೀವಿಸಿದ್ದನೆಂದು ಅಭಿಪ್ರಾಯಪಟ್ಟಿದ್ದಾರೆ.

ಚಾಮರಾಜನಗರ ತಾಲ್ಲೂಕು ಹರದನಹಳ್ಳಿ ಶಾಸನದಲ್ಲಿ-ಮಾದೇಶ್ವರನು ಶ್ರವಣನನ್ನು ಕೊಂದು, ವಜ್ರಮಲೆಯಲ್ಲಿ ನೆಲೆಸಿದ ಬಗ್ಗೆ ಹಾಗೂ ಹಾಲಂಬಾಡಿ ಜುಂಜೇಗೌಡನು ಮಾದೇಶ್ವರನಿಗೆ ಗುಡಿಕಟ್ಟಿಸಿ, ಬೇಡರ ಕನ್ನಯ್ಯನ ಕುಲಜರಿಂದ ಪೂಜೆಯು ನಡೆಯುತ್ತಿದ್ದ ಬಗ್ಗೆ ಮಾಹಿತಿಗಳು ಸಿಗುತ್ತವೆ. ಕ್ರಿ.ಶ. ೧೭೬೧ರ ಹೈದರಾಲಿ ತಾಮ್ರ ಶಾಸನವು ಮಾದೇಶ್ವರನ ಸೇವೆಯ ಅರ್ಹತೆಯ ಹಕ್ಕಿನ ಬಗ್ಗೆ ಕೆಲವು ಗುಂಪುಗಳ ನಡುವೆ ಹೋರಾಟ ನಡೆದಾಗ ವಿಚಾರಣೆ ನಡೆಸಲ್ಪಟ್ಟು ಬರೆಸಿರುವುದಾಗಿದೆ. ಈ ಶಾಸನದಲ್ಲಿ ಮೇಲಿನ ಹರದನಹಳ್ಳಿ ಶಾಸನದಲ್ಲಿ ಕಾಣಸಿಗುವ ಎಲ್ಲ ವಿವರಗಳೂ ಸೇರಿವೆ. ಕ್ರಿ.ಶ. ೧೮೪೧ರಲ್ಲಿದ್ದ ದೇವಚಂದ್ರನೆಂಬ ಜೈನಕವಿಯ “ರಾಜಾವಳಿ ಕಥೆ” ಯು ಅನೇಕ ಸ್ವಾರಸ್ಯಕರ ಅಂಶಗಳು ಹಾಗೂ ನೈಜ ಘಟನೆಗಳನ್ನು ಉತ್ಪ್ರೇಕ್ಷೆ ಯೊಡನೆ ವಿವರಿಸಲಾಗಿರುವ ಬಗೆಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ದಾಖಲಾಗಿರುವ ಮಾದೇಶ್ವರನ ಕತೆಯಲ್ಲಿ ಕಲ್ಪನಾ ವಿಲಾಸಕ್ಕೆ ಹೆಚ್ಚಿನ ಒತ್ತು ದೊರಕಿರುವುದನ್ನು ಕಾಣುತ್ತೇವೆ. ಆದರೂ ಮಾದೇಶ್ವರನ ಬದುಕಿನ ಕೆಲವು ಮುಖ್ಯ ಘಟನೆಗಳು ಇಲ್ಲಿ ಸ್ಪಷ್ಟವಾಗಿ ದೊರಕುತ್ತವೆ. ಈ ಗ್ರಂಥದ ಪ್ರಕಾರ “ಕುಂತೂರು ಮಠದೊಳು ನಂಜಯ್ಯನೆಂಬ ಜೋಳಿಗೆ ಒಡೆಯರಿರಲಲ್ಲಿಗೆ ಬಡಗುಸೀಮೆಯಿಂದೊರ್ವ ಮಾದಿಗರ ಹುಡುಗ ಪೂರ್ವಜನ್ಮದ ಸಂಸ್ಕಾರದೊಳ್ ವ್ಯಂತರ ದೇವತಾ ಒಲುಮೆಯಿಂದೇಶಾಂತರಂ ಬಂದು, ಆ ಮಠಮಂ ಸೇರಿ ದನಮಂ ಕಾಯ್ದುಕೊಂಡಿರ್ದು” ಎಂದು ಮಾದಯ್ಯನ ಕಥೆಯು ಆರಂಭವಾಗುತ್ತದೆ. ಕೊನೆಗೆ ಆತನು ಶ್ರವಣ ಮುನಿಯನ್ನು “ಪಾಪಕ್ಕಳುಕದೆ ಕೊಂದಾ ನಂಜರಾಜನ ರಾಜ್ಯಕ್ಕೆ ತಾನೆ ಅರಸನಾಗಿ ಮಾದರಸನೆಂದು ಪ್ರಸಿದ್ಧಿಯಾಗಿ….” ಬೆಳೆದನೆಂದು, ವಿವರಿಸುತ್ತ ಕಥೆಯು ಮುಂದುವರಿಯುತ್ತದೆ. ಇಂಥ ಮಾದಯ್ಯನು ಮಂತ್ರಮಾಟಗಳಲ್ಲಿ ಪ್ರಸಿದ್ಧನಾಗಿದ್ದು ಅವರೆಲ್ಲರ ದುಃಖ ದುಮ್ಮಾನವನ್ನು ಕಂಡು ಕೇಳಿ ತನ್ನ ಕೈಲಾದ ಬಗೆಯಲ್ಲಿ ಬಗೆಹರಿಸಲು ಯತ್ನಿಸುತ್ತಿದ್ದ ಬಗ್ಗೆ ಶಿಷ್ಟ ಹಾಗೂ ಜನಪದ ಮೂಲಗಳೆರಡರಿಂದಲೂ ಹೇರಳ ವಿವರಗಳು ದೊರೆಯುತ್ತವೆ. ದೇವಚಂದ್ರನ “ರಾಜಾವಳಿ ಕಥೆ”ಯ ಪ್ರಕಾರ ಮಾದಯ್ಯನ ಅಂತ್ಯವು ಮಂತ್ರವಿದ್ಯೆಯ ಹಿನ್ನಲೆಯಲ್ಲಿಯೇ ಆಕಸ್ಮಿಕವಾಗಿ ಜರುಗಿಹೋಯಿತೆಂದು ತಿಳಿದು ಬರುತ್ತದೆ. ಒಂದುಸಲ ಮಾದಯ್ಯನು ತನ್ನ ಅದಮ್ಯ ಮಾಂತ್ರಿಕ ಶಕ್ತಿಯ ನೆರಿನಿಂದ ದೇವಾನುದೇವತೆಗಳನ್ನೆಲ್ಲ ತನ್ನಡಿಯಾಳುಗಳನ್ನಾಗಿಸಿಕೊಂಡು ದೊಡ್ಡ ದೊಡ್ಡ ಬಂಡೆಗಳನ್ನು ಅವರ ತಲೆಗಳ ಮೇಲೆ ಹೊರಿಸುತ್ತಿದ್ದಾಗ “ಅಲ್ಲಿಡಿಲ್ಲಿಡೆಂದು ಪೇಳುತ್ತಿರಲೊಮ್ಮೆ ಇಲ್ಲಿಡೆಂಬುದು, ತಲೆಯ ಮೇಲಿಡೆ. ಕೊಲೆಸತ್ತು ವ್ಯಂತರನಾಗೆ-ಆ ನಾಡೊಳಗೆಲ್ಲರೊಳು ಅತ್ಯಂತ ರುಜೆ ಮೊದಲಾದವರಿಂ ಬಹಳ ಜನಂ ಸಾಯುತ್ತಿರ್ಪುಡು, ಸರಗೂರ ಉಪ್ಪಲಿಗರು ಗುಡ್ಡರಾಗಿ ಆವೇಶ ಬಂದು ಏಳುಮಲೆ ಮಧ್ಯದಲ್ಲಿ ಪಶ್ಚಿಮಾಭಿಮುಖದಿ ಗುಡಿಕಟ್ಟಿಸಿ ಮಾದನೆಂಬುದರಿಂದ ಮಾದೇಶ್ವರನೆಂದು ಹೆಸರಿಟ್ಟು ಅನೇಕ ತೆರದಿಂ ಪೂಜಿಸುತ್ತ ಜಗತ್ಪ್ರಸಿದ್ಧಿಯಾಗೆ…ಜಾತ್ರೆ ತೇರು ತಿರುವಾಳೆಂದು ಪ್ರತಿವರ್ಷ ನಡೆಸುತ್ತಂ ಬರೆ, ಬಹುದೇಶದ ಜನರೆಲ್ಲ ಮರುಳಾಗಿ ಕಾಣಿಕೆ ಕಪ್ಪಮಂ ಕೊಂಡು ತರಲು….” ಈ ಬಗೆಯ ಜನಪ್ರಿಯತೆಯು ದೊರೆ ಕೊಂಡಿತೆಂದು ಹೇಳಲಾಗಿದೆ.

ಮಾದಯ್ಯನು ದೇವಚುದ್ರನು ವಿವರಿಸುವ ರೀತಿಯಲ್ಲಿ ಜೈನಮುನಿ ಅಥವಾ ದೊರೆ ಆಗಿದ್ದಿರಬಹುದು ಅಥವಾ ಇದಾವುದೂ ಆಗಿಲ್ಲದೆ ಜನಸಾಮಾನ್ಯರ ನಡುವಣ ಒಬ್ಬ ಧೀಮಂತ ನೇತಾರನಿರಬಹುದು. ಈತನನ್ನು ಶ್ರವಣನು ಕುಲದ ಹಿನ್ನೆಲೆಯಲ್ಲಿ ’ಮಾದಾರಿ’ ಎಂದು ಹಂಗಿಸಿ ಪಾದರಕ್ಷೆಗಳನ್ನು ಮಾಡಿಕೊಡುವಂತೆ ಕೇಳಿದಾಗ, ಮಾದಯ್ಯ ತಯಾರಿಸಿದ ಉರಿಚಮ್ಮಾಳಿಗೆಗಳನ್ನು ತೊಟ್ಟು ಶ್ರವಣನು ನಿರ್ನಾಮವಾದುದನ್ನು ಜನಪದ ಮೂಲಗಳು ಚಿತ್ರಿಸುತ್ತವೆ. ಈ ಧೀರ ಸಾಂಸ್ಕೃತಿಕ ವೀರನ ಧ್ಯೇಯೋದ್ಧೇಶಗಳನ್ನು ಆತನ ಮುಗ್ಧಭಕ್ತರು ಜನಪದ ಗೀತೆಗಳಲ್ಲಿ ಕೆಳಕಂಡಂತೆ ಬಣ್ಣಿಸಿದ್ದಾರೆ:

ಮದ್ದಿಕ್ಕುವವರ ಮನೆಯಲ್ಲಿ-ಅವ್ರ
ಮದ್ದಾನ್ಕೆ ಮುರದು ಬರಬೇಕು
ಇಸವಿಕ್ಕಿದವರ ಮನೆಯಲ್ಲಿ-ಅವ್ರ
ಸಿಸುಗಳ ಕೊಂದು ಬರಬೇಕು
ಅನ್ಯಾಯ ಮಾಡೊ ಮುಂಡೆಮಕ್ಕಳ
ಇನ್ನಿಲ್ಲದಂಗೆ ಮಾಡಬೇಕು…..

ಈ ಎಲ್ಲ ಕಾರಣಗಳಿಗಾಗಿಯೇ ಸಾಮಾಜಿಕವಾಗಿ ಕಳವರ್ಗದಿಂದ ಬಂದ ಮಾದಯ್ಯನ ಸುತ್ತಲೂ ಆ ವಿಸ್ತಾರ ಮಲೆಸಾಲುಗಳಲ್ಲಿನ ಬೇಡರು, ಕುರುಬರು, ಸೋಲಿಗರು, ಉಪ್ಪಲಿಗರು ಮುಂತಾದವರೆಲ್ಲರೂ ನೆರೆದಿರುತ್ತಾರೆ. ಮಾದೇಶ್ವರನನ್ನು ಕುರಿತ ಸುದೀರ್ಘ ಜನಪದ ಕಾವ್ಯದಲ್ಲಿ ಬೇವಿನ ಹಟ್ಟಿ ಕಾಳಮ್ಮ ಎಂಬ ಅತ್ಯುಗ್ರ ಮನಸ್ಸಿನ ಅಪರೂಪದ ಬೇಡರ ಮಹಿಳೆಯೊಬ್ಬಳನ್ನು ಮಾದಯ್ಯನು ನಾನಾ ಬಗೆಗಳಲ್ಲಿ ಪರೀಕ್ಷೆಗೆ ಒಳಪಡಿಸುವ ಪ್ರಸಂಗಗಳು ಮತ್ತು ಆತನು ಶ್ರವಣನೊಡನೆ ನಡೆಸುವ ಹೋರಾಟ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ಬೇಡರ ಸಂಸ್ಕೃತಿಯು ವಿಪುಲವಾಗಿ ಹರಡಿರುವ ಪ್ರದೇಶದಲ್ಲಿ ನೆಲೆಗೊಂಡಿರುವ ಮಾದಯ್ಯನ ಪೂಜೆಯು ಇವತ್ತಿಗೂ ಬೇಡರ, ಮೂಲದವರಿಂದಲೇ ನಡೆಯುತ್ತಿದೆ. ಮಾದಯ್ಯನ ಗುಡಿಯ ಬಲಭಾಗದ ಗೋಡೆಯಲ್ಲಿ ಬೇಡರ ಕಣ್ಣಪ್ಪನು ತನ್ನ ಕಣ್ಣುಗಳನ್ನು ಕಿತ್ತು ಲಿಂಗಕ್ಕೆ ಅರ್ಪಿಸುತ್ತಿರುವ ಚಿತ್ರ ಇದೆ. ಈ ಕಣ್ಣಪ್ಪನು ಮಾದೇಶ್ವರನ ಕಾಲದವನೆಂದು ಬೆಟ್ಟದಲ್ಲಿ ವಾಸ ಮಾಡುವವರು ಮತ್ತು ಇತರ ಕೆಲವು ಭಕ್ತರು ನಂಬಿ ಭಕ್ತಿಯಿಂದ ವಿವರಿಸುತ್ತಾರಾದರೂ ಸಹ ಆತ ಮೂಲತಃ ತಮಿಳುನಾಡಿನ ಕಾಳಹಸ್ತಿಯವನು; ಅರವತ್ತಮೂವರು ಪುರಾತನರಲ್ಲಿ ಒಬ್ಬನಾಗಿದ್ದಾನೆ. ಈ ಉಲ್ಲೇಖವನ್ನು ಹರಿಹರನಲ್ಲಿ ಕೂಡ ನಾವು ಬಲ್ಲೆವು. ಈ ಎಲ್ಲ ಕಾರಣಗಳಿಂದಾಗಿ ಮಾದೇಶ್ವರನನ್ನು ಕುರಿತ ಜನಪದ ಕಾವ್ಯದ ಉದ್ದಕ್ಕೂ ಗಿರಿಜನ ಸಂಸ್ಕೃತಿಯ ಹೇರಳ ವಿವರಗಳು ಇಡಿಕಿರಿದಿವೆ. “ಹರಹರ ನಮ್ಮಪ್ಪಾಜಿ ಮರುದೇವ್ರು| ಗಂಡುಲಿಗೆ ಗಂಡ ಹಿಂಡುಲಿಗೆ ಮೊನೆಗಾರ| ಪುಂಡುಗಾರ ಈರತಮುನಿ ಏಳ್ಮಲೆ ಹೆತ್ತಯ್ಯ…..” ಮುಂತಾಗಿ ತಮ್ಮನಾಯಕನನ್ನು ಕೊಂಡಾಡುತ್ತಾರೆ.

ಸುತ್ತೇಳು ಮಲೆಗಳ ನಡುವೆ ಇರುವ ಮಾದೇಶ್ವರನ ಬೆಟ್ಟದಲ್ಲಿ ದೀಪಾವಳಿ, ಶಿವರಾತ್ರಿ ಮತ್ತು ಯುಗಾದಿಯಲ್ಲಿ ವೈಭವದ ಪರೀಕ್ಷೆ ನೆರೆಯುತ್ತದೆ. ಲಕ್ಷ ಲಕ್ಷ ಜನರುಭಕ್ತಿ ಪೂರ್ವಕವಾಗಿ ಮಾದೇಶ್ವರನನ್ನು ಪೂಜಿಸುತ್ತಾರೆ. ಕರ್ನಾಟಕ, ಮೈಸೂರು, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳು ಹಾಗೂ ತಮಿಳುನಾಡಿನ ಸೇಲಂ ಮತ್ತು ಕೊಯಮತ್ತೂರು ಜಿಲ್ಲೆಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ (“ಹೆಣ್ಣೇಳು ಕೋಟಿ ಗಂಡೇಳುಕೋಟಿ”) ಜನರು ತಾವು ಹೊತ್ತ ಹರಕೆಗಳನ್ನು ತೀರಿಸಲು ನೆರೆಯುತ್ತಾರೆ. ಮಾದೇಶ್ವರನ ಅರ್ಚಕರು ಸಮೀಪದ ದೇವರಹಳ್ಳಿಯ ತಮ್ಮಡಗೇರಿಯವರು; ಮೂಲತಃ ಬೇಡರಾಗಿದ್ದ ಇವರು ಈಚೆಗೆ ವೀರಶೈವ ದೀಕ್ಷೆಯನ್ನು ಹೊಂದಿದ್ದಾರೆ. ಇವರುಗಳನ್ನು ’ಬ್ಯಾಡಗಂಪಣದ ಲಿಂಗಾಯಿತ’ರೆಂದು ಕರೆಯಲಾಗುತ್ತದೆ.

ಅಮಾವಾಸ್ಯೆ ಮತ್ತು ಅದರ ಹಿಂದು ಮುಂದಿನ ದಿನಗಳು ಮಾದೇಶ್ವರನ ಪೂಜೆಗೆ ಹೆಚ್ಚು ಪ್ರಶಸ್ತವಾಗಿರುವುದನ್ನು ಕಾಣುತ್ತೇವೆ. ಕೆಳಜಾತಿಗಳ ಶೂದ್ರಾತಿಶೂದ್ರ ಭಕ್ತಾದಿಗಳೇ ಹೆಚ್ಚಾಗಿದ್ದು ಅವರಲ್ಲಿ ಬಹುಪಾಲು ಜನರು ಮಾಂಸಾಹಾರಿಗಳೇ ಆಗಿರುತ್ತಾರೆ. ತಮಿಳು ಜನಪದ ಗೀತೆಗಳಲ್ಲಿ “ಮಾಂಸದಡಿಗೆ ಮಾಡಿರುವೆ ಮಾದಪ್ಪ| ಊಟ ಮಾಡಬನ್ನಿ ಮಾದಪ್ಪ” ಎಂಬ ವಿವರಗಳು ದೊರೆಯುತ್ತವೆ. ಆರಂಭದಲ್ಲಿ ಕೆಲವು ವೀರಶೈವ ಮಠಗಳು ಮಾದಯ್ಯನನ್ನು ಒಪ್ಪಿಕೊಳ್ಳದೆ ನಿರಾಕರಿಸಿದ ಬಗ್ಗೆ ಜಾನಪದ ಮೂಲದಲ್ಲಿ ಕೆಲವು ಸೂಚನೆಗಳು ಸಿಗುತ್ತವೆ. ಜೀಶಂಪ ಅವರು ಮಾದೇಶ್ವರ ಕಾವ್ಯವನ್ನು ಅಧ್ಯಯನ ಮಾಡಿ ವಿಮರ್ಶಿಸುತ್ತಾ “ಮಾದೇಶ್ವರನು ಕಾವ್ಯದ ಉದ್ದಕ್ಕೂ ಶರಣನಾಗಿ ತೋರಿಬಂದರೂ ಅವನನ್ನು ವೀರಶೈವಕ್ಕೆ ಹೊರತಾದ ದೈವವಾಗಿಯೇ. ಸ್ಥಾವರ ಲಿಂಗವಾಗಿಯೇ ಜನ ಗುರುತಿಸುತ್ತಾರೆ, ಆರಾಧಿಸುತ್ತಾರೆ. ಅವನ ಒಕ್ಕಲೆಲ್ಲ ನೈಸರ್ಗಿಕ ಧರ್ಮವನ್ನು ಒಪ್ಪಿಕೊಂಡ ವೀರಶೈವೇತರರೇ ಹೆಚ್ಚಾಗಿದ್ದಾರೆ. ಮಾದೇಶ್ವರ ಅನ್ಯದೈವಗಳ ವ್ಯಾಪ್ತಿಯಿಂದ ಕೆಲವರನ್ನು ಬಲಾತ್ಕಾರವಾಗಿಯೂ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದುಂಟು. ಆದರೆ ಯಾರಿಗೂ ಲಿಂಗದೀಕ್ಷೆಯನ್ನು ನೀಡಿದ ಸಂದರ್ಭ ಕಾವ್ಯದಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಈ ಕಾವ್ಯದ ಹಿನ್ನೆಲೆಯಲ್ಲಿ, ಕಾವ್ಯನಾಯಕನ ಹಿನ್ನೆಲೆಯಲ್ಲಿ ಶೈವದ ಪ್ರಾಚುರ್ಯವನ್ನು ನಾವು ಕಾಣುತ್ತೇವೆ”. ಎಂದು (ಜನಪದ ಸಾಹಿತ್ಯ ದರ್ಶನ, ಸಂಪುಟ ೪; ಕನ್ನಡ ಅಧ್ಯಯನ ಪೀಠ, ಕ.ವಿ.ವಿ.) ಹೇಳಿರುವುದು ಸೂಕ್ತವಾಗಿಯೇ ಇದೆ. ಆದರೆ ಈತನು ದ್ರಾವಿಡ ಮೂಲದ ಯಾವ ಬಗೆಯ ಶೈವ ಪಂಥದವನೆಂಬುದು ಖಚಿತವಾಗಿ ತಿಳಿಯುವುದಿಲ್ಲ.

ಮಾದೇಶ್ವರನ ಬೆಟ್ಟದಲ್ಲಿ ಗಂಡ-ಹೆಂಡಿರ ನಡುವೆ ಕೂಡ ಸಂಭೋಗವು ನಿಷಿದ್ಧ ಅನ್ನುವ  ನಂಬಿಕೆಯು ಹೆಚ್ಚಾಗಿ ಪ್ರಚಲಿತವಾಗಿದೆ. ಆದರೂ ಸಹ ತಮ್ಮ ನೆಚ್ಚಿನ ದೈವವಾದ ಖುಷಿಗಾರ ಮಾದಪ್ಪನ ಪ್ರೀತ್ಯರ್ಥವಾಗಿ ಅವನ ಗುಡ್ಡರಿಂದ ರಸಿಕತೆಯನ್ನು ಹೊರಸೂಸುವ ಅನೇಕ ಹಾಡುಗಳನ್ನು ಕೇಳುತ್ತಿರುತ್ತೇವೆ. “ಬಟ್ಟಮೊಲೆ ಮ್ಯಾಲೆ ಬೆಟ್ಟನಿಟ್ಟವನ್ಯಾರೇ? ಪುಟ್ಟು ಪಾದದ ನಂಜುಂಡ ಮಾಲಿಂಗು-ಚಾಮುಂಡ್ಯ| ಬಟ್ಟಮೊಲೆಯನ್ನು ಬಿಡಲೊಲ್ಲ” ಮುಂತಾದ ಗೀತೆಗಳು ಮಾದಯ್ಯನ ಗಿರಿಯನ್ನು ಕಾಲುನಡಿಗೆಯಲ್ಲೇ ಏರುವ ಭಕ್ತರು ಹಾಡುತ್ತಿರುತ್ತಾರೆ.

ಅನೇಕ ಬಗೆಯ ಹರಕೆಗಳನ್ನು ಹೊತ್ತು, ಅವುಗಳನ್ನು ತೀರಸಲೆಂದು ವಿವಿಧ ಸಂದರ್ಭಗಳಲ್ಲಿ ಬೆಟ್ಟಕ್ಕೆ ಬರುವ ಭಕ್ತರು-ಧೂಪದ ಸೇವೆ, ಎಳ್ಳಿನ ಸೇವೆ, ಹೆಜ್ಜೆ ನಮಸ್ಕಾರ, ಪಂಜಿನ ಸೇವೆ, ಒಚ್ಚಮಗ್ಗುಲಸೇವೆ. ಉರುಳುಸೇವೆ, ಬಾಯಿಬೀಗ ಮುಂತಾದ ಸೇವೆಗಳಲ್ಲಿ ತೊಡಗುತ್ತಾರೆ. ರಥೋತ್ಸವದ ಸಂದರ್ಭಗಳಲ್ಲಿ ಸಂತೋಷಾರ್ಥವಾಗಿ ಹಣ, ವೀಳೆಯದೆಲೆ, ದವಸಧಾನ್ಯ, ಸಣ್ಣಗಾತ್ರದ ಹಿಟ್ಟಿನ ಮಿದಿಕೆ ಹಾಗೂ ಕೋಳಿಯ ಮರಿಗಳನ್ನು ತೇರಿನ ಮೇಲೆ ಎಸೆಯಲಾಗುತ್ತದೆ. ಆಡು, ಕುರಿ ಮತ್ತು ದನಕರುಗಳನ್ನು ಕೂಡ ದೇವರ ಹೆಸರಿನಲ್ಲಿ ಭಕ್ತರುಗಳು ಒಪ್ಪಿಸುತ್ತಾರೆ.

ಮಾದೇಶ್ವರನ ಗುಡ್ಡರು ಕಂಚಿನ ವಾದ್ಯವನ್ನು ಬಳಸುತ್ತಾರೆ. ತಾವು ಊಟಕ್ಕೆ ಕಂಚಿನ ತಣಗೆಯನ್ನು ಬಳಸುವುದಿಲ್ಲ. ಪಾದರಕ್ಷೆ ತೊಡುವುದಿಲ್ಲ. ಮಾದೇಶ್ವರನ ಲೀಲೆಗಳನ್ನು ಭಕ್ತಿಯಿಂದ ಹಾಡುತ್ತಾ ಸಾಗುತ್ತಿರುತ್ತಾರೆ.ಹೀಗೆ ಮಾದಯ್ಯನ ವಿಸ್ತಾರವಾದ ಕಥೆಯನ್ನು ತಮ್ಮ ಜೀವಮಾನ ಪೂರ್ತಿ ಹಾಡುತ್ತಾ ತಮಗೆ ಪರಿಚಿತವಾದ ಪ್ರದೇಶಗಳಲ್ಲಿ ಸಂಚರಿಸುವ ಈ ಗುಡ್ಡರಿಗೆ ವಿಶಿಷ್ಟವಾದ ಸಂದರ್ಭದಲ್ಲಿ ದೀಕ್ಷೆಯನ್ನು ನೀಡಲಾಗುವುದು. ಗುಡ್ಡರ ಮುಖ್ಯಸ್ಥನನ್ನು ಪುರುಸಕಾರಿ ಎಂದು ಕರೆಯುತ್ತಾರೆ. ಈತನು ಇಲ್ಲಿನ ಪೂಜಾ ವಿಧಿಗಳಲ್ಲಿ ಅರ್ಚಕನ ಪಾತ್ರವನ್ನು ವಹಿಸುತ್ತಾನೆ. ಬ್ರಾಹ್ಮಣ ಮತ್ತು ವೀರಶೈವೇತರ ಕೆಳಜಾತಿಗಳ ಶೂದ್ರಾತಿಶೂದ್ರರೆಲ್ಲರೂ-ಹೊಲೆಯರು, ಮಾದಿಗರು, ಕುರುಬರು, ಬೆಸ್ತರು, ಅಗಸರು, ಉಪ್ಪಲಿಗರು, ಪರಿವಾರದವರು, ಒಕ್ಕಲಿಗರು ಮುಂತಾಗಿ ಗುಡ್ಡರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಹನ್ನೆರಡನೆಯ ಶತಮಾನದಲ್ಲಿ ಉತ್ತರ ಕರ್ನಾಟಕ ಪ್ರದೇಶದಲ್ಲಿನ ವಚನಕಾರರ ಚಳವಳಿಯ ಇಡೀ ಕರ್ನಾಟಕ ಸಾಹಿತ್ಯ ಹಾಗು ಸಾಂಸ್ಕೃತಿಕ ಕ್ಷೇತ್ರದಲ್ಲಿ ಜಡತೆಯ ವಿರುದ್ಧ ಉಜ್ವಲ ಸಮರವನ್ನು ಸಾರಿತು; ಜಡವಾದಿಗಳು ಇನ್ನಿಲ್ಲದಂತೆ ತತ್ತರಿಸಿದರು, ಈ ಚಳವಳಿಯು ದಕ್ಷಿಣ ಕರ್ನಾಟಕಕ್ಕೆ ಹರಡದಂತೆ, ಶೂದ್ರಾತಿ ಶೂದ್ರರಿಗೆ ಸಹ ಹೊಸ ಬಗೆಯ ಮನ್ನಣೆಯನ್ನು ನೀಡುವ ಯೋಜನೆಗಳ ಮೂಲಕ ರಾಮಾನುಜಾಚಾರ್ಯರ ನೇರ್ತೃತ್ವದಲ್ಲಿ ವೈಷ್ಣವ ಧರ್ಮವು ಕೆಲಸ ಮಾಡುತ್ತಿತ್ತು. ಇದಕ್ಕೆ ಪೂರಕವಾಗಿ ರಾಜಾಶ್ರಯವಿತ್ತು. ಆದರೆ ವಚನಕಾರರಿಗೆ ಮಾತ್ರ ’ಅರಸುಗಿರಸುಗಳ ಹಂಗಿಲ್ಲ’ಕಾಲಾಂತರದಲ್ಲಿ ದಕ್ಷಿಣ ಕರ್ನಾಟಕದ ಹಲವಾರು ಕಡೆಗಳಲ್ಲಿ ಜನಸಮುದಾಯದ ನಡುವೆ ಶೈವ ಮತ್ತು ವೈಷ್ಣವ ಧರ್ಮಗಳ ಸಹಯೋಗವು ಕಾಣಿಸಿಕೊಂಡಿತು. ಜೊತೆಗೆ ಮೂಲತಃ ದ್ರಾವಿಡ ಮೂಲದ ಶೈವರಾದ ಈ ಜನಕ್ಕೆ, ತಾವು ವೀರಶೈವರಲ್ಲದಿದ್ದರೂ ಸಹ ಕಲ್ಯಾಣದ ಶರಣರ ಬಗ್ಗೆ ಆಳವಾದ ಗೌರವ, ಶ್ರದ್ಧೆಯನ್ನು ಉಳಿಸಿ ಕೊಳ್ಳಲು ಸಾಧ್ಯವಾಯಿತು. ಹದಿನಾರನೇ ಶತಮಾನದ ಮಾದಯ್ಯ ಮತ್ತುಮಂಟೇಸ್ವಾಮಿ ಪಂಥಗಳು ವಚನಕಾರ ಬಸವಣ್ಣನ ವ್ಯಕ್ತಿತ್ವವನ್ನು ಆದರ್ಶವೂ, ಮಾರ್ಗದರ್ಶಿಯೂ ಆದುದೆಂದು ನಂಬುತ್ತವೆ; ಅದೇ ಹೊತ್ತಲ್ಲಿ ಅವನ ಅಸಂಖ್ಯ ಅನುಯಾಯಿಗಳ ನಡತೆಯಲ್ಲಿನ ಜಡತ್ವದ ಬಗ್ಗೆ ಅಸಡ್ಡೆಯನ್ನು ವ್ಯಕ್ತಪಡಿಸುತ್ತವೆ, ಈ ಪಂಥಗಳು ಜನಸಾಮಾನ್ಯರ ನಡುವೆ ಅವರೆಲ್ಲರ ಸರ್ವತೋಮುಖ ಏಳಿಗೆಯನ್ನು ಬಯಸಿ, ಮೇಲುಕೀಳುಗಳೆಂಬ ವಂಚನೆಯ ನೀತಿಯನ್ನು ಕಿತ್ತೊಗೆಯಲು ಪ್ರಯತ್ನಿಸಿ ಯಶಸ್ವಿಯಾದುವುಗಳು. ಮಾದಯ್ಯ ಮತ್ತು ಮಂಟೇಸ್ವಾಮಿ ಅಸ್ಪೃಶ್ಯ ಜನವರ್ಗ ಗಳಿಂದ ಹೊರಬಂದು ಅಸಾಧಾರಣ ಜನಮನ್ನಣೆಯನ್ನು ಗಳಿಸಿದ ಸಾಂಸ್ಕೃತಿಕ ವೀರರು; ಕೊನೆಗೆ ದೈವಗಳೆಂದು ಪೂಜಿಸಲ್ಪಟ್ಟವರು.

ಜಗತ್ತಿನ ಪುರಾಣ ಕಲ್ಪನೆಯಲ್ಲಿ ಶಿವನಸ್ಥಾನ ಅತ್ಯಂತ ವಿಶಿಷ್ಟವೂ, ಅಪ್ರತಿಮವೂ ಆಗಿದ್ದು, ಜನಕೋಟಿಯ ಕಲ್ಪನೆಯ ಉದ್ದಗಲಗಳನ್ನು ದಾಟಿ  ಬೆಳೆಯುವಂತದ್ದಾಗಿದೆ. ಯಾವ ಬಗೆಯ ಕಪಟ-ಸಣ್ಣತನಗಳನ್ನೂ ಕಂಡರಿಯದ, ಎಲ್ಲರನ್ನೂ ಮಾತೃಸಹಜ ಹೆಂಗರುಳಿನಿಂದ ಕಾಣಬಲ್ಲ, ನಿತ್ಯವಾತ್ಸಲ್ಯದ ತುಂಬುಜೀವನ ಪ್ರೀತಿಯ ವ್ಯಕ್ತಿತ್ವವಾಗಿ, ಔದಾರ್ಯದ ಕಲ್ಪತರುವಾಗಿ ಈ ಶಿವ ಎಲ್ಲೆಲ್ಲೂ ಇನ್ನಿಲ್ಲದಂತೆ ಕಂಗೊಳಿಸುತ್ತಿರುತ್ತಾನೆ. ಅದರಲ್ಲೂ ದಕ್ಷಿಣ ಭಾರತದ ನೆಲದಲ್ಲಿ ಶಿವಪಾರ್ವತಿಯರನ್ನು ಕುರಿತ ಈ ಬಗೆಯ ಆತ್ಮೀಯ ವಿವರಗಳನ್ನುಳ್ಳ ಅಸಂಖ್ಯ ಪ್ರಮಾಣದ ಜನಪದ ಕತೆ, ಕಾವ್ಯ, ಐತಿಹ್ಯ ಹಾಗೂಪುರಾಣ ವಲಯಗಳಲ್ಲಿನ ವಿಪುಲ ದಾಖಲೆಗಳಿವೆ. ದಕ್ಷಿಣ ಕರ್ನಾಟಕದ ಜನಸಾಮಾನ್ಯರು ಹದಿನಾರನೆಯ ಶತಮಾನದಲ್ಲಿ ತಮ್ಮ ಅಭಿಮಾನದ ಸಾಂಸ್ಕೃತಿಕ ವೀರನೊಬ್ಬನನ್ನು ಇಂಥ ಶಿವನ ಒಂದು ಪ್ರಮುಖ ಅವತಾರವಾಗಿ ಪರಿಗಣಿಸಿ, ಹತ್ತಿರದಿಂದ ಕಂಡು, ತಾವು ಬಲ್ಲಂತೆ ಕಲ್ಪಿಸಿಕೊಂಡು ಆರಾಧಿಸಿರುವ ಬಗೆಯನ್ನು ಮಲೆಯ ಮಾದೇಶ್ವರನಲ್ಲಿ ಸ್ಪಷ್ಟವಾಗಿಕಾಣುತ್ತೇವೆ. ಈ ಪಂಥದಲ್ಲಿ ಚೌಕಟ್ಟಿನಲ್ಲಿ ಮುಗ್ಧಜನತೆಯ ಪ್ರೀತಿಯ ಹೊನಲು ತಂತಾನೆ ಉಕ್ಕಿ ಹರಿದಿದೆ. ಕಣ್ನೆದುರಿನ ತೀವ್ರಾಸಕ್ತಿಯ ನೈಸರ್ಗಿಕ ಕ್ರಿಯೆಗಳ ಹಿನ್ನೆಲೆಯಲ್ಲಿಯೇ ಎಲ್ಲ ಧಾರ್ಮಿಕ ಆಚರಣೆಗಳನ್ನೂ ಸೃಷ್ಟಿಸಲಾಗಿದೆ. ಮಾನವ ಜೀವಿಗಳ ಆತ್ಮಾಭಿಮಾನದ ಕಟ್ಟೆರಕದಲ್ಲಿ ಅದ್ದಿ ತೆಗೆದ ನವಕಾಂತಿಯ ಬೆಳಕಿನಲ್ಲಿ ಇಲ್ಲಿನ ನಡವಳಿಕೆಗಳೆಲ್ಲವೂ ಹೊಳೆಯುತ್ತಿರುತ್ತವೆ. ಶಿಷ್ಟ ಮೂಲದ ನಾಯಕನ ಸೋಂಕಿಲ್ಲದ, ಜನಪದದ ಸೊಗಡು ಸತ್ವಗಳನ್ನೇ ನೇರ ಹೀರಿ ಬೆಳೆದ ಈ ಆಂದೋಲನ ನಿಜಕ್ಕೂ ಕುತೂಹಲಕರವಾದುದ್ದಾಗಿದೆ.

* * *