ಆದಿಕಾಲದಿಂದ ಮಾನವನನ್ನು ಮೂಕವಿಸ್ಮಿತನನ್ನಾಗಿ ಮಾಡುತ್ತ ಬಂದ ವಿಚಿತ್ರಮಯ ಜಗತ್‌ಸೃಷ್ಟಿ ಅವನ ಪಾಲಿಗೆ ಬಿಡಿಸಲಾರದ ಒಗಟು. ಆದಿಮಾನವನಿಗಿಂತಲೂ ಭೂಮ್ಯಾಕಾಶಗಳಲ್ಲಿ ತೋರಿಬಂದ ವೈಚಿತ್ರ್ಯಗಳು ಸುಖಸಾಂತಿಯನ್ನೋ ದುಗುಡದುಮ್ಮಾನಗಳನ್ನೋ ತಂದೊಡ್ಡುವದು ಸಹಜವಾಗಿತ್ತು. ಆದರೆ ಅವನು ಅವೆಲ್ಲಕ್ಕೂ ಕಾರಣಗಳನ್ನು ಹೇಳುವ ಸ್ಥಿತಿಯಲ್ಲಿರಲಿಲ್ಲ. ಅವನ ಪ್ರಜ್ಞಾಪಾತಳಿ ತೀರ ಕೆಳಮಟ್ಟದಲ್ಲಿದ್ದುದೇ ಮೂಲಕಾರಣ. ಆಕಾಶದಲ್ಲಿ ಸೂರ್ಯ – ಚಂದ್ರರು ಬೆಳಗಿದಾಗ, ನಕ್ಷತ್ರಗಳು ಮೂಡಿ ಮಿನುಗಿದಾಗ ಅವನ ಆನಂದಕ್ಕೆ ಪಾರವೇ ಇರಲಿಲ್ಲ. ಬೆಟ್ಟಗುಡ್ಡಗಳನ್ನು ಆಚ್ಛಾದಿಸಿದ ಗಿಡಮರ – ಬಳ್ಳಿಗಳು ಚಿಗಿತು, ಪೂತು, ಕಾತು, ಫಲಭಾರದಿಂದ ಬಳಕುವದನ್ನು ಕಂಡಾಗ ಅವನ ಮನ ಉಕ್ಕೇರುತ್ತಿತ್ತು ; ಶಾಂತಿ ಸಮಾಧಾನ ಅವನ ಮನದುಂಬಿ ಹೊರಸೂಸುತ್ತಿತ್ತು.ಅದೇ ಮನಸ್ಸು ಪ್ರಕೃತಿಯ ಪ್ರಕೋಪ ವಿಲೋಪ ವಿಕೋಪಗಳನ್ನು ಎದುರಿಸಿದಾಗ ಅಂಜಿ ನಡುಗುತ್ತಿತ್ತು. ಆಕಾಶದಲ್ಲಿ ಮೋಡ ಕವಿದು ಗುಡುಗು. ಸಿಡಿಲು, ಮಿಂಚು, ಅರ್ಭಟಿಸಿದಾಗ ಅವನ ಮನದಲ್ಲಿ ಭಯಭೀತಿ ಮೂಡಿ, ಅಂಜಿಕೆ ಎಲ್ಲೆಡೆ ಆವರಿಸುತ್ತಿತ್ತು. ಚಂದ್ರಗ್ರಹಣ, ಸೂರ್ಯಗ್ರಹಣ, ಭುಕಂಪ ಮೊದಲಾದ ಅನಿಷ್ಟಗಳು ಸಂಭವಿಸಿದಾಗ ಅವನ ಮನಸ್ಸು ಡೋಲಾಯಮಾನವಾಗದೇ ಇರಲಿಲ್ಲ. ಆದರೂ ಅವುಗಳಲ್ಲಿ ಒಂದು ಕ್ರಮಬದ್ಧತೆ ಇರುವುದನ್ನು ಅರಿತಾಗ ಅವನು ವಿಚಾರಶೀಲನಾಗದೇ ಇರಲಿಲ್ಲ. ಅವನ ತಲೆಯಲ್ಲಿ ಹಲವಾರು ವಿಚಾರಗಳು ಮೂಡತೊಡಗಿದವು. ಇಷ್ಟೊಂದು ಕ್ರಮಬದ್ಧವಾಗಿ ಈ ಎಲ್ಲ ವ್ಯವಹಾರಗಳು ಹೇಗೆ ನಡೆಯುತ್ತವೆ ? ಈ ಕ್ರಮಬದ್ಧತೆಗೆ ಕಾರಣರು ಯಾರು ? ಹಾಗೆ ರೂಪಿಸಿದಾತ ಹೇಗಿದ್ದಾನೆ? ಎಲ್ಲಿದ್ದಾನೆ ?  ಅವನು ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಬಂದುದಕ್ಕೆ ಜಾಗತಿಕ ಪುರಾಣ ಸಾಹಿತ್ಯದಲ್ಲಿ ಆದಾರ ಸಿಗುತ್ತದೆ. ಜಗತ್ತನ್ನು ಕ್ರಮಬದ್ಧವಾಗಿ ನಡೆಸುವ ಯಾವದೋ ಒಂದು ಶಕ್ತಿಯಿದೆಯೆಂಬುದು ಅವನಿಗೆ ಹೊಳೆದದ್ದೇ ಒಂದು ಚೋದ್ಯ.

ಆ ಅವ್ಯಕ್ತ ಶಕ್ತಿಯ ಸ್ವರೂಪವನ್ನು ಅರಿಯಲು ಮಾನವರು ಬಹುಕಾಲದಿಂದ ಪ್ರಯತ್ನಿಸುತ್ತಲೇ ಬಂದಿದ್ದಾರೆ. “ಭಯಭೀತಿಯನ್ನು ಹುಟ್ಟಿಸುವದೇ ಭೂತ ಶಾಂತಿ ಸಮಾಧಾನ ತಂದುಕೊಡುವದೇ ದೇವತೆ” ಎಂಬ ಕಲ್ಪನೆ ಅವರಲ್ಲಿ ಮೂಡತೊಡಗಿತು. ಈ ದೆವ್ವ ಮತ್ತು ದೇವ ಬೇರೆ ಬೇರೆ ಅಲ್ಲವೆಂದೂ ಅವೆರಡೂ ಮೂಲಶಕ್ತಿಯ ಎರಡು ಮುಖಗಳೆಂದೂ ಸಾವಕಾಶವಾಗಿ ಅವರಲ್ಲಿ ಬರತೊಡಗಿತು. ಪ್ರಕೃತಿ ಮತ್ತು ಪುರುಷ ಇವರಿಬ್ಬರೂ ಅವಿನಾಭಾವ ಸಂಬಂಧದಿಂದ ಯಾವಾಗಲೂ ಕೂಡಿಯೇ ಇರುವರೆಂಬ ತೀರ್ಮಾನಕ್ಕೆ ಜನಪದರು ಬರತೊಡಗಿದರು. ಪುರುಷನಿಗಿಂತ ಪ್ರಕೃತಿ (ಆದಿಶಕ್ತಿ) ಯೇ ಉಗ್ರವಾದುದೆಂದು ಅವರು ಬಗೆದರು. ಪ್ರಕೃತಿ ಪೂಜೆಗೆ ತೊಡಗಿದರು. ತಮಗೆ ಬರುವ ಅನಿಷ್ಟಗಳಿಂದ ದೂರವಾಗಿರಲು ಆದಿಶಕ್ತಿಯನ್ನೇ ಮೊದಲು ಪೂಜಿಸತೊಡಗಿದರು. ಹೀಗಾಗಿ ಶಕ್ತಿಪೂಜೆ ಜನತೆಯಲ್ಲಿ ಸಾಮಾನ್ಯವಾಯಿತು. ಆ ಆದಿಶಕ್ತಿ ಕಾಲಾನು ಕಾಲಕ್ಕೆ ಪ್ರಸಂಗಾನುಸಾರವಾಗಿ ವಿವಿಧ ರೂಪಗಳನ್ನೂ ಧರಿಸಿ ವ್ಯಕ್ತಳಾಗುವಳೆಂಬ ನಂಬಿಗೆ ಅವರಲ್ಲಿ ಬೇರೂರಿತು. ಒಂದು ಜನಪದ ಕಥೆ ಹೀಗಿದೆ: ಈಶ್ವರ ಮನತ್ತು ಆದಿಶಕ್ತಿ – ಇಬ್ಬರೂ ಒಮ್ಮೆ ಮಾತಾಡುತ್ತ ಕುಳಿತಾಗ, ಇಶ್ವರ ತನ್ನ ಆದಿಶಕ್ತಿಯನ್ನು ಕುರಿತು “ನೀನು ಹೇಗೆ ಸೃಷ್ಟಿಯಾದೆ ?” ಎಂದು ಕೇಳಿದ. ಆಗ ಅವಳು ತನ್ನ ಬೆರಳಿನಲ್ಲಿರುವ ಮುದ್ರೆಯುಂಗುರ ತೋರಿಸಿ. “ಇದನ್ನು ಧರಿಸಿಕೊಂಡವರಿಗೆ ಈ ಜಗತ್ತಿನ ಮೂಲ ತಿಳಿಯುತ್ತದೆ” ಎಂದು ಉತ್ತರ ಕೊಟ್ಟಳು. ಆ ಉಂಗುರ ಇರುವುದು ಅವಳ ಕೈಯಲ್ಲಿ. ಅದನ್ನು ಪಡೆದ ಆದಶಕ್ತಿಯೇ ಮೇಲೆಂದು ಈ ಹೇಳಿಕೆಯ ಮಥಿತಾರ್ಥ.

ಭಾರತದ ಮೂಲನಿವಾಸಿಗಳು ಈ ಆದಶಕ್ತಿಯನ್ನೇ ಹಲವಾರು ರೂಪಗಳಲ್ಲಿ ಪೂಜಿಸುತ್ತ ಅವಳ ತೃಪ್ತಿಗೆಂದು ಬಲಿಕೊಡುತ್ತ ಬಂದರು. ಅಲ್ಲಲ್ಲಿ ಈ ಆದಿಶಕ್ತಿಯ ವಿವಿಧ ರೂಪಗಳನ್ನು ಮೂರ್ತಿಕರಿಸಿ ಪೂಜೆ ಮಾಡುವದು ರೂಢಿಯಾಯಿತು. ಕೋಳಿ- ಕುರಿ – ಕೋಣ ಯಾವುದಾದರೊಂದು ಪ್ರಾಣಿಯನ್ನು ಬಲಿಕೊಡುವದು ಬಳಕೆಯಲ್ಲಿ ಬಂದಿತು. ಒಮ್ಮೊಮ್ಮೆ ನರಬಲಿಗೂ ಅವರು ಸಿದ್ಧರಾಗುತ್ತಿದ್ದರು. ಶಕ್ತಿ ದೇವತೆಗಳು ಬಹಳ ಉಗ್ರವಾದವುಗಳು ಅವುಗಳ ಪ್ರಕೋಪವನ್ನು ಶಮನ ಮಾಡುವುದಕ್ಕಾಗಿ ಪ್ರಾಣಾರ್ಪಣ ಮಾಡಲೂ ಅವರು ಸಿದ್ಧರಾಗಿದ್ದರು.

ದ್ರಾವಿಡರು ಭರತಖಂಡ ಪ್ರವೇಶಿಸುತ್ತಲೇ ಈ ದಸ್ಯುಗಳ ಸಂಪ್ರದಾಯ ನಂಬಿಕೆಗಳಲ್ಲಿ ಬಲವಾದ ಬದಲಾವಣೆ ಕಾಣಿಸಿಕೊಂಡಿತು.ದ್ರಾವಿಡರು ರುದ್ರಪೂಜಕರೇನೋ ಹೌದು ; ಆದರೆ ರುದ್ರನಿಗಿಂತಲೂ ಆದಿಶಕ್ತಿಯನ್ನೇ ಹೆಚ್ಚಾಗಿ ಪೂಜಿಸುವವರಾಗಿದ್ದರು.  ದೇವರಲ್ಲಿ ಗಂಡು, ಹೆಣ್ಣು ಎಂದು ವಿಭಾಗಿಸಿ, ಗಂಡು ದೇವರನ್ನೂ ಹೆಣ್ಣು ದೇವರನ್ನೂ ಪ್ರತ್ಯೇಕವಾಗಿ ಅವರು ಪೂಜೆ ಮಾಡುತ್ತಿದ್ದುದು ಒಂದು ವಿಶೇಷ. ಗಂಡು ದೇವನನ್ನು ತಂದೆಯೆಂದೂ ಹೆಣ್ಣು ದೇವತೆಯನ್ನು ತಾಯಿಯೆಂದು ಪೂಜೆ ಮಾಡುವ ಕ್ರಮವನ್ನು ಅವರು ಶಾಸ್ತ್ರೋಕ್ತವಾಗಿ ಪ್ರತಿಪಾದಿಸುತ್ತಿದ್ದರು. ರುದ್ರ ತಂದೆ; ಅವನು ಸಾಮಾನ್ಯಭಕ್ತಿಗೆ ಒಲಿಯುವವನಲ್ಲ. ಅವನನ್ನು ಒಲಿಸಿಕೊಳ್ಳಲು ಉಗ್ರ ತಪಶ್ಚರ್ಯ ಬೇಕು. ಆದರೆ ತಾಯಿಯಾದ ಆದಿಶಕ್ತಿ ಹೆಂಗರುಳು ಉಳ್ಳವಳು. ಮಕ್ಕಳ ಆರ್ತನಾದಕ್ಕೆ ಅವಳು ಕೂಡಲೇ ಓಗೊಡುವಳೇಂದು ಅವರ ದೃಢವಾದ ನಂಬಿಕೆ. ಆದ್ದರಿಂದ ಅವರು ಪುರುಷ ದೇವತೆಗಿಂತಲೂ ಸ್ತ್ರೀದೇವತೆಗಳನ್ನೇ ಹೆಚ್ಚಾಗಿ ಪೂಜಿಸುತ್ತಿದ್ದರು. ಹೀಗಾಗಿ ಕಂಡ ಕಂಡಲ್ಲಿ ಆ ಆದಿಶಕ್ತಿಯ ವಿವಿಧ ರೂಪಗಳಾದ ದುರ್ಗವ್ವ, ದ್ಯಾಮವ್ವ, ಕರಿಯವ್ವ, ಲೆಕ್ಕಿಯವ್ವ, ಗುಡದವ್ವ ಮುಂತಾಗಿ ಹೆಸರಿಸಿ ಪೂಜೆ ಮಾಡುವದು ರೂಢಿಯಾಯಿತು. ಆದರಿಂದ ಕಂಡ ಕಂಡಲ್ಲಿ ಈ ಉಗ್ರದೇವತೆಗಳು ಕಾಣಿಸಿಕೊಂಡವು. ಪ್ರಾಣಿಗಳ ಬಲಿಯನ್ನು ಪಡೆದು ಪೂಜೆಗೊಳ್ಳತೊಡಗಿದವು. ಹಳ್ಳಿ ಹಳ್ಳಿಗಳಲ್ಲಿ ಇಂದಿಗೂ ಈ ಸ್ತ್ರೀದೇವತೆಗಳು ಹೃದ್ಗೋಚರವಾಗುತ್ತಿವೆ.

ಆರ್ಯರು ಭರತಖಂಡ ಪ್ರವೇಶಿಸುತ್ತಲೇ ದ್ರಾವಿಡರ ಮೇಲೆ ಹಾಗೂ ಇತರರ ಮೇಲೆ ತಮ್ಮ ಪ್ರಭಾವ ಬೀರತೊಡಗಿದರು. ಅವರ ಪ್ರಭಾವದಿಂದ ಉಗ್ರವಾಗಿದ್ದ ಸ್ತ್ರೀ ದೇವತೆಗಳು ಸೌಮ್ಯವಾಗತೊಡಗಿದವು. ಗಂಡು ದೇವತೆಗಳು ಸ್ತ್ರೀದೇವತೆಗಳಷ್ಟೇ ಪ್ರಭಾವಶಾಲಿಗಳೆಂದು ಅವರು ಬೋಧಿಸುತ್ತಾ ಬಂದರು. ಹೀಗಾಗಿ ನಾಗರಿಕ ಜೀವನದಲ್ಲಿ ಗಂಡು ದೇವತೆಗಳಿಗೆ ಪ್ರಾಧಾನ್ಯತೆ ಬಂತಾದರೂ ಗ್ರಾಮೀಣ ಜನತೆಯಲ್ಲಿ ಶಕ್ತಿ ದೇವತೆಗಳ ಪೂಜೆಗೆ ಅಗ್ರಸ್ಥಾನ ಉಳಿದಿಕೊಂಡೇ ಬಂದಿತು. ವಸ್ತು ಸ್ಥಿತಿ ಹೀಗಿರುವಾಗ  ಸ್ತ್ರೀದೇವತೆಗಳನ್ನು ಕುರಿತು ವಿವೇಚಿಸುವವರು ಈ  ದೇವತೆಗಳು ದ್ರಾವಿಡರಿಂದ ಪ್ರತಿಷ್ಠಾಪನೆಗೊಂಡವೋ ಆರ್ಯರಿಂದ  ಪ್ರತಿಷ್ಠಾಪನೆ ಪಡೆದವೋ ಎನ್ನುದನ್ನೂ ಮೊಲು ಗುರುತಿಸಿಕೊಳ್ಳುವುದು ಅತ್ಯಾವಶ್ಯಕ. ದ್ರಾವಿಡ ಮತ್ತು ಆರ್ಯರ ಪ್ರಭಾವಗಳು ಪರಸ್ಪರವಾಗಿ ಗಾಢವಾಗಿ ನಿಂತಿರುವ ಈ ಆಧುನಿಕ ಕಾಲದಲ್ಲಿ ಹೀಗೆ ಗುರುತಿಸುವದೇ ಕಷ್ಟದ ಕಾರ್ಯ.

ಈ ದೇವತೆಗಳು ಅಹಿಂಸಾಧಾರ್ಮಿಕ ಪ್ರಭಾವಕ್ಕೆ ಒಳಗಾಗಿ ಮಾಂಸಾಹಾರ ತ್ಯಜಿಸಿ, ಶಾಕಾಹಾರಕ್ಕೆ ತಿರುಗಿದುದು ಕೆಲವು ಕಡೆಗಳಲ್ಲಿ ಕಂಡು ಬರುತ್ತದೆ. ಆದ್ದರಿಂದ ಸ್ತ್ರೀದೇವತೆಗಳನ್ನು ಕುರಿತು ವಿವೇಚಿಸುವಾಗ ಆಳವಾದ ಸಂಶೋಧನೆಗೆ ಇಳಿಯುವುದು ಅವಶ್ಯಕ.

* * *