ಒಂದು ಜೀವಕ್ಕೆ ಮೂರುಕೂಳು:

ವ್ಯಕ್ತಿ ಸಾಕಷ್ಟು ಸಾರಿ, ದಿನ, ವರ್ಷ ಊಟ ಮಾಡಬಹುದು. ಅದು ದಾಖಲಾಗುವ ವಿಷಯವಲ್ಲ. ಮಾನವನ ಊಟಗಳಲ್ಲಿ ದಾಖಲಾಗುವವು ಮೂರು ಊಟಗಳು ಮಾತ್ರ. ಒಂದು ಹುಟ್ಟಿದಾಗ, ಎರಡು ಮದುವೆಯಲ್ಲಿ, ಮೂರನೆಯದು ಸತ್ತಾಗ ಮಾಡುವ ತಿಥಿಯದು ಇವುಗಳನ್ನು ಮಾನವನ ಶಾಸ್ತ್ರದ ಊಟಗಳು ಎಂದು ಕರೆಯಲಾಗಿದೆ. ಈ ಸಂದರ್ಭಗಳಲ್ಲಿ ಹುಗ್ಗಿ ಅನ್ನ, ಬೆಲ್ಲದ ಅನ್ನ – ಈ ಥರದ ವಿಶೇಷ ಊಟವನ್ನು ಮಾಡುತ್ತಾರೆ. ಇದನ್ನು ಮೊದಲು ಸಂಬಂಧ ಪಟ್ಟ ವ್ಯಕ್ತಿಗೆ ಅರ್ಪಿಸಿ ನಂತರ ಉಳಿದವರಿಗೆ ಪ್ರಸಾದವಾಗಿ ಹಂಚುತ್ತಾರೆ.

ನಾಮಕರಣದ ಊಟ ಮಗು ಈ ಭೂಮಿಯ ಅನ್ನಕ್ಕೆ ಪಾಲುದಾರನಾದುದನ್ನು; ಅವನ ಬರುವು ಮತ್ತು  ಭಾಗವಹಿಸುವಿಕೆಯನ್ನು ಅವನ ಕುಟುಂಬ ಮತ್ತು ಸಮಾಜ ಒಪ್ಪಿದುದನ್ನು ಸೂಚಿಸುತ್ತದೆ. ಮದುವೆಗಳು ಗಂಡು ಹೆಣ್ಣು ಒಂದಾಗಿ ಊಟ ಮತ್ತು ಜೀವನವನ್ನು ಹಂಚಿಕೊಂಡದ್ದರ ದ್ಯೋತಕ. ನಮ್ಮ ಕಡೆಯ ಮದುವೆಯಲ್ಲಿ ಹೆಣ್ಣು ಗಂಡನ್ನು ಕೂರಿಸಿ. ‘ಭುವೆ’ ಇಡುವುದು ಎಂಬ ಶಾಸ್ತ್ರ ಮಾಡುತ್ತಾರೆ; ತೆಲುಗಿನಲ್ಲಿ ಭುವ ಎಂದರೆ ಅನ್ನ. ಅಲ್ಲಿ ಕೂಟ ವಧು-ವರನಿಗೆ, ವರ-ವಧುವಿಗೆ ಅನ್ನ ತಿನ್ನಿಸುವುದರ ಮೂಲಕ ತಮ್ಮ ತಮ್ಮ ದುಡಿಮೆಯನ್ನು ಹಂಚಿಕೊಂಡು ಒಂದಾಗುತ್ತಾರೆ. ಕೊನೆಯಕೂಳು ವ್ಯಕ್ತಿಯನ್ನು ಕಳಿಸಿಕೊಡುವ ಊಟ. ಆತ ಈ ಜಗತ್ತಿನಿಂದ ಹೊರಜಗತ್ತಿಗೆ ಹೋಗುತ್ತಿರುವುದರಿಂದ ಸಿಹಿ ಮತ್ತು ಇತರ ವಿಶೇಷ ತಿಂಡಿಗಳ ಜೊತೆಗೆ ಅವನನ್ನು ಕಳಿಸಿಕೊಡಲಾಗುತ್ತದೆ. ಪುನರ್ಜನ್ಮದಲ್ಲಿ ನಂಬಿಕೆ ಇರುವ ಯಾವುದೆ ಸಮಜದಲ್ಲಿ ಸಾವು ಕೊನೆಯದಾಗಿರುವುದಿಲ್ಲ. ಅದು ಒಂದು ಲೋಕದಿಂದ, ಅಥವಾ ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಬೀಳ್ಕೊಡುಗೆ. ಈ ಸಂದರ್ಭದಲ್ಲಿ ನಮ್ಮ ಕಡೆಗೆ ಬದನೆ ಮತ್ತು ಬಾಳೆಕಾಯಿ ಸೇರಿಸಿ ಮಾಡಿದ ಪಲ್ಯ ವಿಶೇಷ. ಬೇರೆ ದಿನಗಳಲ್ಲಿ ಈ ಎರಡು ತರಕಾರಿಗಳನ್ನು ಒಟ್ಟಿಗೆ ಸೇರಿಸಿ ಅಡಿಗೆ ಮಾಡುವುದಿಲ್ಲ.

ಆಹಾರ ಮತ್ತು ಸ್ವಂತಿಕೆ:

ಒಂದೊಂದು ಪ್ರದೇಶದವರು,ವರ್ಗದವರು ಮತ್ತು ಜಾತಿಗಳವರು ತಮ್ಮ ಆಹಾರ ಪದ್ಧತಿ ಅಥವಾ ಆಹಾರಗಳಲ್ಲಿ ಒಂದನ್ನು ವಿಶೇಷವಾಗಿ ಕೊಂಡಾಡುತ್ತಾರೆ. ಇದನ್ನು ’ಆಹಾರಸ್ವಂತಿಕೆ’ ಎಂದು ನಾನು ಕರೆದಿದ್ದೇನೆ. ಮುದ್ದೆ ಕಡೆಯ ಜನ ’ಹಿಟ್ಟುಂಡು ಗಟ್ಟಿಯಾದ’, ‘ಹಿಟ್ಟೇಗಟ್ಟಿ ಅನ್ನ ಅಲುಗಾಟ’, ‘ಹಿಟ್ಟಂ ಉಂಡಂ ಬೆಟ್ಟವಂ ಕುಟ್ಟಿಟ್ಟಂ’, ‘ಹಿಟ್‌ಬುಟ್ಟು ಮತ್ತೇನ್ ಹೆಟ್ಟಿಯೊ’- ಮುಂತಾಗಿ ಹೇಳಿ ಬೀಗುತ್ತಾರೆ. ಇದನ್ನೇ ಸಮರ್ಥಿಸುವ ಹಾಗೆ “ಜ್ವಾಳ ತಿಂದಾಂವ ತ್ವಾಳ ಆಗ್ತಾನ, ಅಕ್ಕಿ ತಿಂದವ ಹಕ್ಕಿ ಆಗ್ತಾನ…… ಎಂದು ಹೇಳುವುದಿದೆ. ಇದು ‘ಜನಪದ ಅಭಿಮಾನ’ದಿಂದ ಬಂದ ಮನೋಧರ್ಮ, ತಮ್ಮ ಸಹ್ಯತೆಯ ಬಗೆಗಿನ ಸಮರ್ಥನೆ.

ಈ ಸ್ವಂತಿಕೆಯ ತರಾಟೆ ಮಾಂಸಾಹಾರಿ ಮತ್ತು ಸಸ್ಯಹಾರಿಗಳ ಮಧ್ಯೆ ಹೆಚ್ಚು. ಒಬ್ಬ ಅದೇನೊ “ಪುಳಿ ಚಾರು” ಸತ್ವವಿಲ್ಲದ್ದು, ಶಕ್ತಿ ಇಲ್ಲದ್ದು, ಗಡುಸು ಇಲ್ಲದ್ದು, ಸರಿಯಾದ ಉಪ್ಪು-ಕಾರ ಇಲ್ಲದ್ದು ಎನ್ನುತ್ತಾರೆ. ಚಿತ್ರಾನ್ನವನ್ನು ಈ ವರ್ಗದ ಮುಖ್ಯ ಆಹಾರ ಎಂದು ತಿಳಿದು ಅದೇನು ಮಹಾ “ಅಕ್ಕಿತಿಕ್ಕೆ ಅರಿಶಿಣ ಬಿಟ್ರೆ ಅದೆ ಚಿತ್ರಾನ್ನ” ಎಂದು ಗೇಲಿ ಮಾಡುತ್ತಾರೆ. ಸಸ್ಯಾಹಾರಿಗಳೇನೂ ಸುಮ್ಮನಿರುವುದಿಲ್ಲ ಆನೆಯನ್ನು ತಮ್ಮ ಆಹಾರ ಸಮರ್ಥನೆಗೆ ತೆಗೆದುಕೊಳ್ಳತ್ತಾರೆ.  ಮಾಂಸಾಹಾರವನ್ನು “ಅಂಟಿಟ್ಟು ಸಂಟ್ಮೂಳೆ” ನಟ್ಟು ಬೋಲ್ಟು” ಮುಂತಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಮಾಂಸಾಹಾರಿಗಳ ವಾದ ಯಾಕೆ ಪ್ರಬಲವಾಗುತ್ತದೆ ಎಂದರೆ ಕಂಡಂತೆ ಮಾಂಸ ತಿನ್ನದ ಜನರೂ ಕಾಣದ ಹಾಗೆ ಮಾಂಸದ ರುಚಿಗೆ ಬಿದ್ದಿರುವುದು. ಸಸ್ಯಾಹಾರ ಎಲ್ಲರ ಮೂಲ ಮತ್ತು ಮುಖ್ಯ ಊಟವಾಗಿದ್ದು ಮಾಂಸಾಹಾರ ವಿಶೇಷರುಚಿ ಆಗಿರುವುದರಿಂದ ಅವರು ಗೆಲುವು ಸಾಧಿಸುತ್ತಾರೆ. ಇವರನ್ನು ನಿಗ್ರಹಿಸಲು ಇತ್ತೀಚಿನ ಮತೀಯವಾದಿಗಳು ನಗರದ ಗೋಡೆಗಳ ಮೇಲೆ ಸಸ್ಯಾಹಾರವೇ ಶ್ರೇಷ್ಠ ಎಂದು ಬರೆಯುತ್ತಾ ನಡೆದಿದ್ದಾರೆ. ಸಸ್ಯಾಹಾರವೇ ಜೀವನ ಮೂಲ ಆಹಾರ ಎಂದು ನಮಗೆಲ್ಲ ತಿಳಿದಿರುವಾಗ ಈ ಬಗೆಯ ಕುಬ್ಜತೆಯ ವಾದ ನಮಗೆ ಬೇಡ.

ಹೆಣ್ಣು ಮತ್ತು ಅಡುಗೆ :

ಪಾಕಶಾಸ್ತ್ರದಲ್ಲೂ ಭೀಮ ಮತ್ತು ನಳ ಸೂಪರ್ ಮಾಡಲ್‌ಗಳು ಎಂದು ಹೇಳಲಾಗಿದೆ. ಇದು ಗಂಡು ಪ್ರಾಧಾನ್ಯತೆ ಮತ್ತು ಶ್ರೇಷ್ಠತೆಯನ್ನು ಪ್ರತಿಪಾದಿಸುವ ಯಜಮಾನಿಕೆ ತತ್ವಶಾಸ್ತ್ರದ ಕೊಡುಗೆ. ಜಗತ್ತಿನ ಯಾವುದೇ ಸಮಾಜವನ್ನು ಈ ಕಲ್ಪನೆಯ ಹೊರಗೆ ಅಧ್ಯಯನ ಮಾಡಿ ನೋಡಿದರೆ ಅಡಿಗೆ ಹೆಣ್ಣೆಗೇ ಸಂಬಂಧ ಪಟ್ಟದ್ದಾಗಿದೆ. ನಮ್ಮ ವ್ಯಕ್ತಿಗಳ ವಿಕಾಸ ಕ್ರಮದಲ್ಲಿಯೆ ಹೆಣ್ಣು ಮನೆಯಲ್ಲಿ ಉಳಿಯಬೇಕಾದ ಸಂದರ್ಭ ಬಂದಿದೆ. ಹೆಣ್ಣಿನ ಪ್ರಕೃತಿ ಕೂಡ ಅದಕ್ಕೆ ಬೆಂಬಲ ನೀಡಿದೆ. ಹೆಣ್ಣನ್ನು ಅಡಿಗೆಗೆ ನಿರ್ಬಂಧಿಸಿದ ಎರಡು ಹಂತಗಳಲ್ಲಿ ಕೃಷಿ ಮತ್ತು ಪ್ರಭು ಸಂಸ್ಕೃತಿಗಳ ಪಾತ್ರ ಬಹಳ ಮುಖ್ಯವಾದುದು. ಕೃಷಿ ಸಂಸ್ಕೃತಿಯಲ್ಲಿ ಹೆಣ್ಣಿಗೆ ಕೃಷಿ ಕೆಲಸ ಮಾಡುವಷ್ಟೇ ಕೃಷಿ ಉತ್ಪತ್ತಿಗೆ ಬೇಕಾದ ದುಡಿಯುವ ಸಾಧನಗಳಾದ ಮಕ್ಕಳನ್ನು ಹೆತ್ತು ಕೊಡುವುದು ಮುಖ್ಯ. ಈಗಿನ ಯಂತ್ರ ಹಲವು ಜನರು ಮಾಡುವ ಕೆಲಸವನ್ನು ಒಂದೆ ಮಾಡುವುದರಿಂದ ಜಗಳ ಅವಶ್ಯಕತೆ ಕಡಿಮೆ ಇದೆ. ಕೃಷಿ ಪ್ರಧಾನಸಮಾಜದಲ್ಲಿ ಪ್ರತಿ ಮಗುವೂ ಒಂದು ದುಡಿಯುವ ಸಾಧನ. ಈ ಕೆಲಸವನ್ನು ಹೆಣ್ಣು ಅಗತ್ಯ ಮಾಡಿಕೊಡಬೇಕಾದುದರಿಂದ ಅವಳು ಹೆಚ್ಚು ಮನೆಯಲ್ಲಿ ಉಳಿಯಬೇಕಾಗುತ್ತಿತ್ತು. ಹೆರುವ ಪಾವಿತ್ರಯ ಮಾತ್ರವಲ್ಲ; ಆ ಮಕ್ಕಳನ್ನು ತನ್ನ ಜನಪದ ಮತ್ತು ಸಂಸ್ಕೃತಿಯ ಸಂರಕ್ಷಕರನ್ನಾಗಿಯೂ ಮಾಡಬೇಕಿತ್ತು. ಅದಕ್ಕಾಗಿ ಅವಳು ಮಕ್ಕಳಿಗೆ ಶಿಕ್ಷಣ ಕೊಡಬೇಕಿತ್ತು. ಮಕ್ಕಳ ಶಿಕ್ಷಣ ಮಕ್ಕಳ ಪೋಷಣೆಯೆ ಆಗಿರುವಂತೆ ಅವುಗಳ ಸರಿಯಾದ ಪೋಷಣೆಗಾಗಿ ಅಡುಗೆ ಕೆಲಸವನ್ನು ನಿರ್ವಹಿಸಬೇಕಾಗಿ ಬಂತು. ಇದನ್ನು ಆಕೆ ವೈಯಕ್ತಿಕ ಪ್ರೀತಿ ಮತ್ತು ಸಾಮಾಜಿಕ ಜವಾಬ್ದಾರಿ ಎರಡು ದೃಷ್ಟಿಯಿಂದಲೂ ಒಪ್ಪಿಕೊಂಡಳು.

ಕೃಷಿ ಸಂಸ್ಕೃತಿಯಲ್ಲಿ ಹೆರುವುದು ಮತ್ತು ಅಡಿಗೆ ಮಾಡುವುದು ಪವಿತ್ರ ಕೆಲಸಗಳಾಗಿದ್ದವು. ಪ್ರಭು ಸಂಸ್ಕೃತಿ ಬಂದಾಗ ಪ್ರಭುವಿಗೆ ನಾನಾ ರೀತಿಯ ಸೇವೆಯನ್ನು ಸಲ್ಲಿಸಬೇಕಾಗಿತ್ತು. ಹೆಣ್ಣು ಪ್ರಭುವಿನ ಸಂರಕ್ಷಣೆ ಅಗತ್ಯ ಬೇಕಿದ್ದ ಸೈನಿಕರನ್ನು ಹೆತ್ತು ಕೊಡಬೇಕಿತ್ತು. ಗಂಡು ಪ್ರಭುವಾಗುವ ತತ್ವ ಬಂದೊಡನೆ ಗಂಡನೂ ಅವಳಿಗೆ ಜೊತೆಗಾರನಾಗದೆ ಪ್ರಭುವಾಗಿದ್ದ. ಅವನ ನಿರ್ಬಂಧವೂ ಬಂತು. ಇಷ್ಟರಲ್ಲಿ ಅವಳೇ ಗಂಡಸು ಭೋಗಿಸುವ ಒಂದು ರುಚಿ ಆಗಿ ಬಿಟ್ಟಿದ್ದಳು, ಅದೂ ಮಹತ್ವದ ಅಷ್ಟ ಭೋಗಗಳಲ್ಲಿ ಒಂದಾಗಿ.

ವ್ಯಕ್ತಿ ಧರ್ಮಗಳ ಪ್ರಾಬಲ್ಯ ಮತ್ತು ಜನಪದ ಅಡುಗೆಗಳ ಅವನತಿ :

ಆಹಾರ ಪದ್ಧತಿಗಳು ಮೂಲತಃ ಭೌಗೋಳಿಕ ಅಭಿವ್ಯಕ್ತಿಗಳು. ನಂತರ ಅವು ಸಾಂಸ್ಕೃತಿಕ ಆವರಣವನ್ನು ಸೇರಿ ಬೇರೆ ರೂಪ ಮತ್ತು ರುಚಿಗಳಲ್ಲಿ ಕಾಣಿಸಿಕೊಂಡವು. ಜನಪದರ ಮೂಲಕ್ಕೆ ಹೋದರೆ ಆಹಾರ ಪದ್ಧತಿಗಳಲ್ಲಿ ಶ್ರೇಷ್ಠ-ಕನಿಷ್ಠವೆಂಬ ತಾರತಮ್ಯ ಕಾಣುವುದಿಲ್ಲ. ವರ್ಗ ಸಮಾಜದಲ್ಲಿ ಕಡಿಮೆ ಬೆಲೆಯ ಆಹಾರ ಕಳಪೆ, ಹೆಚ್ಚು ಬೆಲೆಯ ಆಹಾರ ಉತ್ತಮ ಎಂಬ ಅಭಿಪ್ರಾಯವಿರುತ್ತದೆ. ಇದು ಸಂಪಾದನೆ ಮತ್ತು ಅನಭೋಗದಲ್ಲಿಯ ತಾರತಮ್ಯ. ವ್ಯಕ್ತಿ ಆಧಾರಿತ ಧರ್ಮಗಳು ಕಾಲಿಟ್ಟಂತೆ ಆಹಾರಗಳಲ್ಲಿ ಶ್ರೇಷ್ಠ-ಕನಿಷ್ಠ, ಸಾಮಾನ್ಯ ಮತ್ತು ಪ್ರಸಾದ ಮುಂತಾದ ಆಹಾರ ವಿಧಗಳು ಹುಟ್ಟಿಕೊಂಡವು. ತಮ್ಮ ದೇವರಿಗೆ ಹಾಗೂ ಧರ್ಮಕ್ಕೆ ಹಿಡಿಸಿದವು ಶ್ರೇಷ್ಟ ಆಹಾರಗಳು. ಉದಾಹರಣೆಗೆ ಆಯಾ ಜಾತಿಯ ಶ್ರೇಷ್ಠ ಆಹಾರಗಳು.

ನಮ್ಮ ಮಾಂಸಾಹಾರವನ್ನೆ ತೆಗೆದುಕೊಳ್ಳಿ, ಇದನ್ನು ಹೊಲಸು ಎಂದು ಮೇಲು ಜಾತಿಯವರು ಕರೆದರು. ಕೆಳಜಾತಿಯವರು ಕೂಡ ನಮ್ಮ ಮನೆಯಲ್ಲಿ ಇವತ್ತು ಹೊಲಸು ಸಾರು ಎನ್ನುತ್ತಾರೆ. ನಾಚಿಕೆ ಇಲ್ಲದೆ ಆಹಾರ ಧಾರ್ಮಿಕ ತತ್ವದ ಒಂದು ಮೂಲ ಪರಿಕರ ಆದುದರ ದುರಂತ ಇದು. ಆಹಾರದಲ್ಲಿಯ ಶ್ರೇಷ್ಠ-ಕನಿಷ್ಠ ಪರಿಕಲ್ಪನೆಗಳು ಆಯಾ ಆಹಾರವನ್ನು ತಿನ್ನುವ ಜನರನ್ನು ನಿರ್ಧರಿಸಿ ಬಿಡುತ್ತವೆ. ಬೈಗುಳಗಳಲ್ಲಿ ದನತಿನ್ನುವವನು, ಹಂದಿತಿನ್ನುವವನು ಎಂದು ಬಳಸುವುದರ ಅರ್ಥ ಆಯಾ ಜನರನ್ನು ಕೆಳಗಿಳಿಸುವುದೇ ಆಗಿದೆ. ಮೇಲ್ಜಾತಿಯ ಗೋವುಗಳನ್ನು ತಿಂದ ಕಾರಣಕ್ಕಾಗಿಯೆ ಕೆಳಗಿನ ಜನ ದೂರವಿರುವವರಾದರೆಂದು ತೋರುತ್ತದೆ.

ಆಹಾರತತ್ವ ಮತ್ತು ಧರ್ಮ ಇಡೀ ಆರ್ಥಿಕ ಜೀವನವನ್ನು ಹೇಗೆ ನಿರ್ಬಂಧಿಸಿವೆ ಎಂಬುದಕ್ಕೆ ದಕ್ಷಿಣ ಕರ್ನಾಟಕದ ಕಡೆ ಖಾನಾವಳಿಗಳು ಜನಪ್ರಿಯವಾಗಿಲ್ಲದಿರುವುದು; ಹೊಟೇಲುಗಳು ಅತ್ಯಂತ ಮೇಲು ಜಾತಿಯವರ  ಆಹಾರ ಪದ್ಧತಿಯನ್ನು ಒಳಗೊಂಡು ಭಾರತದಾದ್ಯಂತ ವ್ಯಾಪಾರ ಮಾಡುತ್ತಿರುವುದು. ಕೆಳಗಿನ ಜಾತಿಗಳವರ ಆಹಾರವನ್ನು ಮೇಲು ಜಾತಿಗಳವರು ತಿನ್ನುವುದಿಲ್ಲ. ಇದರಿಂದಾಗಿ ಕೆಳ ಜಾತಿಗಳವರ ಆಹಾರ-ಅಡುಗೆ ಅನ್ವೇಷಣಾ ಮನೋಧರ್ಮವೆ ನಿಂತು ಹೋಗುತ್ತದೆ. ಅವರೇನಿದ್ದರೂ ಮೇಲುಧರ್ಮದವರ ಆಹಾರದ ರುಚಿಯ ಕಡೆಗೆ ನಾಲಿಗೆ ಚಾಚಿ ತಮ್ಮದೆ ಆದ ರುಚಿಯನ್ನು ಮಾಡಿಕೊಳ್ಳಲಾರದೆ ಹೋಗುತ್ತಾರೆ. ಮೇಲುಜಾತಿಯ ಹೊಟೇಲುಗಳಿಗೆ ಗಿರಾಕಿಗಳು ಹೆಚ್ಚಾಗುವುದು. ಅತ್ಯಂತ ಕೆಳವರ್ಗದ ಜನ ಹೊಟೇಲು ನಡೆಸುವುದು ಸಾಧ್ಯವಾಗದೆ ಹೋಗುವುದು ಈ ಹಿನ್ನೆಲೆಯಿಂದ.

ಇದೆ ಹಿನ್ನಲೆಯಿಂದ ನೋಡಿದಾಗ ನಮ್ಮ “ಭೋಜನ” ಮತ್ತು “ಊಟದ” ಪರಿಕಲ್ಪನೆಗಳು ಬೇರೆ ಬೇರೆ ಎಂದು ಸ್ಪಷ್ಟವಾಗುತ್ತದೆ. ಶ್ರೀಮಂತರು ಮತ್ತು ನೌಕರ ವರ್ಗದ ಜನ ತಮ್ಮ ಗೃಹಪ್ರವೇಶ, ಮದುವೆ ಮತ್ತಿತರ ಕಾರ್ಯಗಳಲ್ಲಿ ಕೊಡುವ ಆಹಾರಕ್ಕೆ ‘ಭೋಜನ’ ಎಂದು ಕರೆಯುತ್ತಾರೆ. ಮಾಂಸದ ವಿಶೇಷ ಅಡುಗೆಗೂ ‘ಬಾಡಿನ ಊಟ’ ಎಂದು ಕರೆಯಲಾಗುತ್ತದೆ. ಈ ಮಾಂಸದ ಊಟವನ್ನು ಎಂದೂ, ಎಲ್ಲಿಯೂ ಭೋಜನ ಎಂದು ಕರೆದುದನ್ನು ನಾನು ಕೇಳಿಲ್ಲ. ಆಧುನಿಕ ಸಂದರ್ಭ ಮಾತ್ರ ಊಟದಲ್ಲಿರುವ ಶ್ರೇಷ್ಠತೆಯನ್ನು ಕೊಲ್ಲುತ್ತಿದೆ. ಜನ ಜಾತಿ, ಧರ್ಮವನ್ನು ಮನೆಯಲ್ಲಿ ಅಥವಾ ತಮ್ಮ ಧರ್ಮ ಸಂಕೇತಗಳಿಗೆ ಸೀಮಿತಗೊಳಿಸಿ ರುಚಿಯಾದುದನ್ನು ಹುಡುಕುವ ಮತ್ತು ತಿನ್ನುವ ಕಡೆಗೆ ಹೊರಟಿದ್ದಾರೆ.

ಬಿಮ್ಮನ್ಸೆಗೆ ಎರಡು ಸಾಲು :

ಬಸುರಿ ಊಟಕ್ಕೆ ಕೂತರೆ ಯಾವದೇ ಸಮಾರಂಭದಲ್ಲಿ ಇಬ್ಬರಿಗೆ ಕೊಡುವಷ್ಟು ಎರಡು ಪಾಲು ಕೊಡಬೇಕಿತ್ತು. ಆಕೆಗೊಂದು ಆಕೆಯ ಗರ್ಭದಲ್ಲಿರುವ ಮಗುವಿಗೊಂದು. ಹಾಗೆ ಕೊಡದಿದ್ದರೆ ಕಾರ್ಯವನ್ನು ಇಟ್ಟುಕೊಂಡವರಿಗೆ ಅವಮಾನ. ಜನಪದ ಸಮಾಜ ಮಕ್ಕಳ ಬಗ್ಗೆ ಇಟ್ಟುಕೊಂಡಿದ್ದ ಅಭಿಪ್ರಾಯ ಇದು. 

ಪ್ರತ್ಯೇಕತೆಗಳೆಂಬ ವಿಶಿಷ್ಟ ಆಹಾರಗಳು

ಪಾಯಸ ಪೈಪೋಟಿ ಮತ್ತು ಬಾಡಿನ ಜಗಳ:

ಮದುವೆಯಲ್ಲಿ ಎರಡೂ ಕಡೆಯವರು ಮಾಡುವ ಮೊದಲ ಊಟ ಧಾರೆ ಊಟ. ಇದು ಹೆಣ್ಣಿನ ಕಡೆಯವರು ಕೊಡುವ ಊಟ. ಪಾಯಸ ಇಲ್ಲಿಯ ಮುಖ್ಯ ಸಿಹಿ. ಶ್ರೀಮಂತಿಕೆಯನ್ನು ಅನುಸರಿಸಿ ಇತ್ತೀಚೆಗೆ ಬೇರೆ ಬೇರೆ ಸಿಹಿಗಳು ಬರುತ್ತಿವೆ. ಸಾಮಾನ್ಯ ಜನರಲ್ಲಿ ಈಗಲೂ ಪಾಯಸ ಆಕರ್ಷಣೆಯೆ. ಮದುವೆಗೆ ಬಂದ ಗಂಡಿನ ಕಡೆಯವರು ಊಟಕ್ಕೆ ಕುಳಿತು ಹೆಣ್ಣಿನ ಕಡೆಯವರು ಮಾಡಿರುವ ಪಾಯಸವನ್ನೆಲ್ಲ ಮೊದಲ ಹಂತದಲ್ಲೆ ಮುಗಿಸಲು ಯತ್ನಿಸುತ್ತಾರೆ. ಒಬ್ಬೊಬ್ಬರು ಒಂದೊಂದು ಬಕೇಟ ಪಾಯಸ ಕುಡಿಯುತ್ತಾರೆ. ನೆಂಜಿಕೆಗೆ ಎರಡು ಉಪ್ಪಿನಕಾಯಿ ಇದ್ದರೆ ಸಾಕು. ಕೆಲವರು ಮೊದಲ ಹಂತಿಯಲ್ಲಿ ಕುಡಿದ ಪಾಯಸವನ್ನು ಕೂಡಲೆ ತಿಪ್ಪೆಗೆ ಹೋಗಿ ಖಾಲಿ ಮಾಡಿ ಬರುತ್ತಾರೆ. ಎರಡನೆ ಹಂತಿಗೆ ಮತ್ತೆ ಸಿದ್ದ. ಇನ್ನು ಕೆಲವರು ಹಳೆ ಅಗೇವಿನ ಬಿಳಿ ಗರಿಕೆಯನ್ನು ಒಕ್ಕುಳಕ್ಕೆ ಇಟ್ಟುಕೊಂಡರೆ ಎಷ್ಟು ಪಾಯಸವನ್ನಾದರೂ ಕುಡಿಯಬಹುದು ಎಂದು ಹೇಳುತ್ತಾರೆ. ಗಂಡಿನ ಕಡೆಯವರ ಈ ಪಾಯಸ ಕುಡಿತಕ್ಕೆ ಹೆದರಿ ಹೆಣ್ಣಿನ ಕಡೆಯವರು ಮಾಡಿದ ಪಾಯಸಕ್ಕೆ ನೀರು ಸುರಿಯುವುದುಂಟು.

ಬಾಡಿನ ಊಟ ಎಂದರೆ ಬಾಯಿ ಬಿಡುವ ಜನ ಇದ್ದಾರೆ. ಗಂಡು ಮೂಳೆ ಎಂದರೆ ಒಕ್ಕಲಿಗ ಎಂಟು ಹರದಾರಿಯಾದರೂ ನಡೆದ ಎಂಬ ಗಾದೆಯೆ ಇದೆ. ಬಾಡಿನ ಊಟ ಏರ್ಪಡಿಸಿದರೆ ಹಲವರನ್ನು ಆಹ್ವಾನಿಸುವುದುಂಟು. ಬಂದವರಿಗೆಲ್ಲ ಸಮವಾಗಿ ಮಾಂಸವನ್ನು ಹಂಚುವುದು ಸಾರು ಮಾಡಿದವನ ಜವಾಬ್ದಾರಿ. ಸಾರು ಹಂಚುವುದರಲ್ಲಿ  ಸ್ವಲ್ಪ ಹೆಚ್ಚು ಕಡಿಮೆಯಾದರೆ ಅದರ ಬಗ್ಗೆ ಅಷ್ಟು ಗಮನ ಹರಿಸುವುದಿಲ್ಲ. ತುಂಡುಗಳನ್ನು ಹಾಕುವಾಗ ಯಾರಿಗಾದರೂ ಒಂದು ಹೆಚ್ಚು ಬಿದ್ದರೆ ಕಡಿಮೆ ಬಿದ್ದವನು ಜಗಳ ಶುರುಮಾಡುತ್ತಾನೆ. ಆ ಸಿಟ್ಟಿನ ಪರಿಣಾಮ ಹಂಚುವವನಿಗೆ ಮೊದಲ ಹೊಡೆತ. ಅಡಿಗೆಯವನನ್ನು ಸಮರ್ಥಿಸಿ ಕೊಂಡವನಿಗೆ ನಂತರದ ಹೊಡತೆಗಳು. ಉಳಿದ ಏಟುಗಳು ಬಡಿಸಲು ಬಂದವರಿಗೆ. ಈ ರೀತಿಯ ಭಾರಿ ಭಾರಿ ಜಗಳಗಳೇ ನಡೆದಿವೆ.

ಬೋಟಿ ಗೊಜ್ಜಿನ ಪ್ರಮೇಯ :

ಹೆಚ್ಚಿನ ಮಾಂಸಾಹಾರಿಗಳಿಗೆ, ಅದರಲ್ಲೂ ಕುಡುಕರಿಗೆ, ಬೋಟಿ ಗೊಜ್ಜು ಒಂದು ಪ್ರಮೇಯವೆ. ರೊಟ್ಟಿ ಗೊಜ್ಜು, ಇಡ್ಲಿ ಗೊಜ್ಜು -ಹೀಗೆ ಅನೇಕ ತಿಂಡಿ ಮತ್ತು ಊಟಗಳೊಂದಿಗೆ ಇದು ಸಾಮರಸ್ಯವನ್ನು ಹೊಂದಿದೆ. ಕಳ್ಳು-ಬೋಟಿ ಎಂದರೆ ಕರುಳಿಗಾರ ಪ್ರೀತಿ ಎಂಬ ಮಾತಿನಂತೆ ಇದರ ಜೊತೆಗೆ ಹೆಂಡ ಸೇರಿದರೆ ತಿನ್ನುವವರನ್ನು ಹುಚ್ಚು ಹಿಡಿಸುತ್ತದೆ. ಇದೇ ಕರುಳು ಬೋಟಿ ಹುರಿತ ಬಾಡಿನ ಜೊತೆಗೂ ಸೇರುತ್ತದೆ. ಚೆನ್ನಾಗಿ ತೊಳೆದು ಮಾಡಿದರೆ ಬೋಟಿಗೊಜ್ಜು ಇಲ್ಲದಿದ್ದರೆ ಬರಿ ಗಲೀಜು ಎಂಬ ಅಭಿಪ್ರಾಯವೂ ಇದೆ.

ಮಂಡ್ಯದಲ್ಲಿ ಮುದ್ದೆಯ ಅಗೆತ:

ಈಗ ಮಂಡ್ಯ ಎಂದರೆ ಇಂಡಿಯಾ ಎಂದು ಛೇಡಿಸುವುದುಂಟು ಇಂಡಿಯಾದಲ್ಲಿ ನಡೆಯುವ ಚಟುವಟಿಕೆಗಳೆಲ್ಲ ಮಂಡ್ಯದಲ್ಲೂ ನಡೆಯುತ್ತವೆ ಅಥವಾ ದೆಹಲಿಯ ಚಟುವಟಿಕೆಗಳಂತೆ ಮಂಡ್ಯದ ಚಟುವಟಿಕೆಗಳು ಇವೆ ಎಂದೊ ಹೀಗೆ ಕರೆದಿರಬಹುದು. ಮಂಡ್ಯ ನೀರಾವರಿಯಿಂದ ಶ್ರೀಮಂತವಾಗಿದೆ ಎಂದು ತಿಳಿದ ಕೆಲವರು ಹೀಗೆ ಹೇಳಿರಲಿಕ್ಕೂ ಸಾಕು. ವಾಸ್ತವದಲ್ಲಿ ಮಂಡ್ಯದ ಮೂರು ತಾಲ್ಲೂಕುಗಳು ಮಾತ್ರ ಕಾವೇರಿಯಿಂದ ನೀರಾವರಿಗೊಳಪಟ್ಟಿವೆ. ಉಳಿದ ತಾಲ್ಲೂಕುಗಳು  ಬರಡು ಪ್ರದೇಶಗಳು. ಹಿಂದೆ ಇಲ್ಲಿ ರಾಗಿ ಮತ್ತು ಹುರುಳಿಯೆ ಪ್ರಧಾನ ಬೆಳೆಗಳು. ಯಾವುದೇ ಕಾರ್ಯದಲ್ಲಿ ಮುದ್ದೆ ಹುರಳಿಕಾಳು ಸಾರು ವಿಶೇಷವಂತೆ. ಮುದ್ದೆಯನ್ನು ಒಂದು ದೊಡ್ಡ ಕೊಪ್ಪರಿಗೆಯಲ್ಲಿ ಮಾಡಿ ಗುದ್ದಲಿಯಿಂದ ಅಗೆದು ಅಗೆದು ಹೊಂದಿಸುತ್ತಿದ್ದರಂತೆ. ಮುದ್ದೆ ಕಟ್ಟಲು ಕೊಡುವವರಿಗೆ ಬೆಂದ ಹಿಟ್ಟನ್ನು ಗುದ್ದಲಿಯಿಂದಲೆ ಕೊಡುತ್ತಿದ್ದರಂತೆ. ಆ ಕಡೆಯ ಹಿರೀಕರ ಮಾತು ಇದು.

ಈಗ ಮಂಡ್ಯದಲ್ಲಿ ಉಪ್ಪೆಸರುಕಾರ ಮತ್ತು ಕರ್‌ನೆರೆ ಬಹಳ ಪ್ರಸಿದ್ಧ. ಉಪ್ನೆಸರು ದಕ್ಷಿಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇದೆ. ಇದು ನಮ್ಮ ಎಸರಿನ ಪೂರ್ವಜ ಎಂದು ಹೇಳಬಹುದು. ಕಾರ ಮತ್ತು ನೀರು ಬೇರೆ ಬೇರೆಯಾಗಿ ಬಳಕೆಯಾಗುತ್ತಿದ್ದು ಅವೆರಡೂ ಒಂದಿಗೆ ಸೇರಿದ ದಾಖಲೆಯ ಉಪ್ನೆಸರು, ಮೊದಲಿಗೆ ಹಿಟ್ಟಿನ ಜೊತೆಗೆ  ಸಾರು ಇದ್ದಂತೆ ತೋರುವುದಿಲ್ಲ. ಹಿಟ್ಟನ್ನು ಉಪ್ಪು, ಈರುಳ್ಳಿ, ಉಪ್ಪು ಮತ್ತು ಮೆಣಸಿನ ಸೇರಿಕೆ. ನಂತರ ಉಪ್ಪು ಮೆಣಸಿನಕಾಯಿ ಕಾರದ ಜೊತೆಗೆ ಮಿದ್ದುಕೊಂಡು ತಿನ್ನುತ್ತಿದ್ದಂತೆ ಕಾಣುತ್ತಿದೆ. ಈ ರೀತಿಯ ಮುದ್ದೆ ಮತ್ತು ಕಾರದ ಬೆರಕೆಗೆ “ಉಪ್ಪಿಟ್ಟು” ಎಂದು ಕರೆಯುತ್ತಾರೆ. ಕಾಳನ್ನು ಬೇಯಿಸಿ ಅದರ ನೀರನ್ನು ಬಳಸಿಕೊಳ್ಳಬಹುದು ಎಂಬ ತಿಳುವಳಿಕೆ ಬಂದಾಗ ಈ ನಮ್ಮ ಪ್ರಿಯ ಉಪ್ನೆಸ್ರು ಬಂತು. ಕಾರವನ್ನೇ ಬೇರೆ ಅರೆದು ಇಟ್ಟುಕೊಂಡು, ಕಾಳು ಬೇಯಿಸಿದ ನೀರಿಗೆ ರುಚಿಗೆ ತಕ್ಕಷ್ಟು ಬೆರಸಿಕೊಂಡು ಹಿಟ್ಟಿನ ತುತ್ತಿಗೆ ಅದ್ದಿ ಉಣ್ಣುವುದೇ ಇದರ ವಿಶೇಷ. ಈ ಸಾರಿನಲ್ಲಿ ಹಸಿಕಾಳಿನ ಉಪ್ನೆಸರು ಬಹಳ ಪರಮೇಶಾಗಿರುತ್ತದೆ. ಎಂದು ಹೇಳುವರು.

ಹಸಿಕಾಳಿನ ಉಪ್ನಸರಿಗೆ ಬೆಣ್ಣೆ ಅಥವಾ ತುಪ್ಪ ಸೇರಿತೆಂದರೆ ಉಣ್ಣವವನು ಕೈಲಾಸ ಸೇರಿದಂತೆ ಸುಖ ಪಡುತ್ತಾನೆ. ನೆಗಡಿ, ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಗೆ ಇದು ಸಿದ್ಧ ಔಷಧ ಎಂದೂ ಕೂಡ ಹೇಳುತ್ತಾರೆ. ಸೀಗಡಿ ಮತ್ತು ಚಿಲಕವರೆ ಬೇಳೆಯ ಉಪ್ನೆಸರು ಎಂದರೆ ಎದ್ದೆದ್ದು ಕುಣಿಯುವವರೂ ಉಂಟು. ಈ ಜನ ಹೇಳುತ್ತಾರೆ:

ಅಪ್ಪ ಅವ್ವನಂತ ನೆಂಟ್ರಿಲ್ಲ
ಹಿಟ್ಟು ಉಪ್ನೆಸ್ರಂತೆ ಊಟ ಇಲ್ಲ

ಈ ಪೂರ್ವಿಕ ಸಾರು ಬೆಳೆಯುತ್ತಾ ಹೋಗಿ ಅನೇಕ ರೂಪಗಳನ್ನು ತಳೆಯುತ್ತದೆ. ಬಸ್ಸಾರು >ಬಂದ್ಸಾರು ಮೊಳಕೆ ಸಾರು – ಹೀಗೆ ಹಲವು. ಈ ಸಾರು ದಕ್ಷಿಣ ಕರ್ನಾಟಕದ ಸಾರುಗಳ ಪೂರ್ವಿಕ ಮಾತ್ರವಲ್ಲ ಜಗತ್ತೀನ ಸಾರುಗಳ ಪೂರ್ವಿಕ ಎಂದು ಅದರ ಅಂಶಗಳನ್ನು(contents)  ನೋಡಿದರೆ ತಿಳಿಯುತ್ತದೆ.

ಕರ್ನೆಕೆ ಮಂಡ್ಯದಲ್ಲಿ ಒಂದು ದೊಡ್ಡ ಬಾಡಿನ ಊಟ. ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ ತಮ್ಮ ಮಹತ್ವ ತೋರಿಸಲು ಈ ಊಟವನ್ನು ಮಾಡುತ್ತಾರೆ. ಬಾಡಿನಿಂದ ಮಾಡಬಹುದಾದ ಎಲ್ಲ ವಿಧದ ಅಡುಗೆ ಮತ್ತು ತಿಂಡಿಗಳೂ ಇದರಲ್ಲಿ ಸೇರುತ್ತವೆ. ಮಾತ್ರವಲ್ಲ ರುಚಿ ಮತ್ತು ಪ್ರಮಾಣದಲ್ಲಿ ಕೂಡ ಎಲ್ಲರನ್ನೂ ತಣಿಸುತ್ತದೆ. ಇತರ ಪ್ರದೇಶದಲ್ಲಿ ಇದನ್ನು ಬೀಗರೂಟ ಎಂದು ಕರೆಯುತ್ತಾರೆ. ಇದರಲ್ಲಿ ಸಸ್ಯಾಹಾರಿ ಮತ್ತು ಮಂಸಾಹಾರಿ ಎರಡು ವಿಧಗಳು ಉಂಟು. ಮಾಂಸದ ಬೀಗರೂಟಕ್ಕೆ ಹೋದವರನ್ನು ಏನಪ್ಪ ಅಡ್ಡ ಮಳೆಯೊ ಅಥವಾ ಸೋನೆ ಮಳೆಯೊ ಎಂದು ಕೇಳುತ್ತಾರೆ. ಎಂದರೆ ಮಾಂಸ ಹೆಚ್ಚು ಬಿತ್ತೊ ಅಥವಾ ಕಡಿಮೆಯೊ ಎಂದು ಇದರ ಅರ್ಥ. ಸಸ್ಯಾಹಾರದ ಬೀಗರೂಟದಲ್ಲಿ ಹೊಟ್ಟೆ ಸವರಿಕೊಳ್ಳುವ ಮೂಲಕ ಅದರ ವೈಭವವನ್ನು ಸೂಚಿಸಲಾಗುತ್ತದೆ.

ಮಾಂಸದ ವಿಶೇಷ ಆಹಾರಗಳಲ್ಲಿ ಹುರಿಬಾಡು ಮತ್ತು ಕೊಡಬಾಡುಗಳು ಮುಖ್ಯವಾದುವು. ಮಾಂಸದ ಮೃದು ಭಾಗಗಳನ್ನು ಕಾಳು ಮತ್ತ ಕಾಯಿನ ಜೊತೆಗೆ ಹುರಿಯುವುದೆ ಹುರಿ ಬಾಡು. ಇದನ್ನು ನೆಲ್ಲಿ ಕರಿ ಎಂದು ಕೂಡ ಕರೆಯುವುದುಂಟು. ಕೊರಬಾಡು ಒಣಗಿಸಿ ಉಪ್ಪು ಸೇರಿಸಿ ಇಟ್ಟುಕೊಂಡದ್ದು.  ಚಳಿಗಾಲಕ್ಕೆ ಇದರಂಥ ಸಂಗಾತಿ ಇಲ. ಕೆಳವರ್ಗದ ಜನ ಈ ಕೊರಬಾಡಿನಿಂದ ಸಾವು ತರುವ ಚಳಿಗಾಲಕ್ಕೆ ಇದರಂಥ ಸಂಗಾತಿ ಇಲ್ಲ. ಕೆಳವರ್ಗದ ಜನ ಈ ಕೊರಬಾಡಿನಿಂದ ಸಾವು ತರುವ ಚಳಿಯನ್ನು ನಿಭಾಯಿಸುತ್ತಾರೆ. ಬೇಟೆಗಾರರ ಕುಟುಂಬಗಳಲ್ಲಿ ಈ ಬಾಡನ್ನು ಶೇಖರಿಸಿ ಇಟ್ಟು ಕೊಳ್ಳುವುದುಂಟು. ಹುರಿಬಾಡು ಮಾಂಸದ ಅಡುಗೆ ಇದ್ದಾಗಲೆಲ್ಲ ಇರುತ್ತದೆ. ಇತ್ತೀಚೆಗೆ ಚಾಪ್ಸ್, ಕೈಮ ಮುಂತಾದವುಗಳು ಬಂದು ಹುರಿಬಾಡುಗಳ ಮಹತ್ವವನ್ನು ಇಳಿಸಿ ಬಿಟ್ಟಿವೆ.

ಮಾಂಸಾಹಾರದಲ್ಲಿ ಪ್ರಮುಖವಾಗಿ ಹೇಳಬೇಕಾದ ಸಾರು ಕಲ್ಮೀನ್ಹುಳಿ, “ಮೀನ್ಹುಳಿ ಕುಡಿದು ಮಡಿ ಮಿಡಿದೆದ್ದ” ಎಂಬ ಗಾದೆ ಮಾತಿನಂತೆ ಮೀನ್ಹುಳಿ ಮೀನು ತಿನ್ನುವವರಿಗೆ ಪ್ರಿಯವಾದುದು. “ಮೀನ್ಹುಳಿ ಉಣ್ಣೋರ‍್ಗೆ ಮೂಗಂಡುಗರಾಗಿಯಾದ್ರೂ ಸಾಲ್ದು” ಎಂಬ ಮಾತೆ ಅದರ ಮಹತ್ವ -ರುಚಿಯನ್ನು ಹೇಳುತ್ತದೆ. ಮೀನನ್ನು ಒಣಗಿಸಿದರೆ ಅದು ಕಯೀನಾಗುತ್ತದೆ. ಈ ಮೀನುಗಳನ್ನು ಅವರೆಕಾಳು, ಬದನೆಕಾಯಿ ಮತ್ತು ಆಲೂಗಡ್ಡೆಗಳ ಜೊತೆಗೆ ಒಂದು ಸಾರು ಮಾಡುತ್ತಾರೆ. ಇದು ಹೃದಯ ಕಾಯಿಲೆಗೆ ಒಳ್ಳೆಯದು ಎಂದು ಬೇರೆ  ಹೇಳುವುದುಂಟು. ಮಾಂಸಾಹಾರಿ ಹೆಂಗಸರಿಗೆ ಕರ್ಮೀನೆಸ್ರು ಅಂದ್ರೆ ಆಸೆಯೊ ಆಸೆ. ಅದು ಕೊರತೆಯಾದ ಹೆಣ್ಣು ಮಗಳೊಬ್ಬಳು ಹೀಗೆ ಹೇಳುತ್ತಾಳೆ:

ಅಕ್ಕರುಳ್ಳಿ ಚಿಕ್ಕವ್ವ
ಅಟ್ಟಳಲ್ಲೆ ಕರ್ಮೀನ
ಬುಟ್ಟಲಿಲ್ಲೆ ಮ್ಯಾದಳ ತಿಳಿನೀರ (ಬೀ. ಚಿ.)

ಕಾಳುಗಳ ರಾಜ : ಹುರಳಿ

ಹುರ್ದುಳ್ಳಿ ಉದ್ಕ
ನೆರೆ ಬಂದ ಮುದ್ಕ
ಉಣ್ಣೇಳೊ ಅಂದ್ರಂತೆ
ಆಂ ಅಂತ ಅಂದು ಮುದ್ಕ ಸುಮ್ನಾದ್ನಂತೆ.

ಮತ್ತೆ:

ಹುರ್ದುಳ್ಳಿ ಉದ್ಕ
ನೆರೆ ಬಂದ ಮುದ್ಕ
ನರಸಿಪುರದಿಂದ ನೆರದುಡ್ಗಿ ಬಂದವ್ಳೆ
ಉಣ್ಣೇಳೊ ಅಂದ್ರಂತೆ.

ಮುದ್ಕ ದಡ್ನೆದ್ದು ಕೂತು ತತ್ತ ಕೈಗೆ ನೀರ ಅಂದ್ನಂತೆ.

ಹುರ್ದುಳ್ಳಿ ಉದ್ಕ ಮತ್ತು ಹೆಣ್ಣಿನ ಸುಖ ಅತ್ಯಂತ ಅಪೇಕ್ಷಣೀಯ ಎಂದು ತಿಳಿಯಲಾಗಿದೆ. ಹುರುಳಿ ತಿಂದವನಿಗೆ ಕುದುರೆ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. ಹುರುಳಿ ತಿಂದವನಿಗೆ ಕುದುರೆ ಶಕ್ತಿ ಬರುತ್ತದೆ. ಎಂದು ನಂಬಲಾಗಿದೆ. ಹುರುಳಿಯನ್ನು ಆಂಗ್ಲಭಾಷೆಯಲ್ಲಿ ಕುದುರೆಕಾಳು  (horse gram)ಎಂದು ಕರೆಯಲಾಗಿರುವುದನ್ನು ಗಮನಿಸಿ. ಕುದುರೆ ಆರೋಗ್ಯಕರ ಕಾಮದ ಸಂಕೇತ ಎಂಬುದೂ ಉಂಟು. ಈ ಹುರುಳಿ ಕಾಳನ್ನು, ಹುರಿದು, ಬೆಂಗಳು ಮಾಡಿ, ಬೇಯಿಸಿ, ಮೊಳಕೆಕಟ್ಟಿ, ನುಚ್ಚು ಮಾಡಿ – ಅನೇಕ ವಿಧಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಇದನ್ನು ಬಡವರ ಧಾನ್ಯ ಎಂದು ಕೂಡ ಕರೆಯುತ್ತಾರೆ. ಹೆಚ್ಚಿಗೆ ಮಳೆ ಇಲ್ಲದೆ ಇದು ಬರುತ್ತದೆ. ಈ ಕಾಳಿನ ಬಸ್ಸಾರನ್ನು ನಾಲ್ಕೈದು ದಿನ ಇಟ್ಟುಕೊಂಡು ಊಟ ಮಾಡುತ್ತಾರೆ. ಹುರಳಿಕಾಳಿನ ತಂಬಿಟ್ಟು ಅಕ್ಕಿ ತಂಬಿಟ್ಟಿನ ಪಿತೃ ಎನ್ನುವುದನ್ನು ಮರೆಯಬಾರದು. ಕಣ್ಣು ಬೇನೆಗೆ ಉತ್ತಮ ಎಂದು ತಿಳಿದಿರುವ ಹೊನಗಾನೆ ಸೊಪ್ಪಿನ ಜೊತೆಗೆ ಸರ್ವೇ ಸಾಮಾನ್ಯವಾಗಿ ಹುರಳಿಕಾಳನ್ನೇ ಬಳಸುತ್ತಾರೆ. ಗುಳ್ಳೆ ಲಕ್ಕ (ನರಿ)ನ ಮದುವೆಗೂ ಹುರಳಿಕಾಳು ಬೇಕಂತೆ !.

ಅವರೆಕಾಳು ಸಾರು ರಾಗಿ ಮುದ್ದೆ :

‘ನಿನ್ನ ಹಿಟ್ಟಿನ ಮೇಲೆ ನನ್ನ ಅವರೆಕಾಳು’ ಎಂಬ ನುಡಿಗಂಟೊಂದಿದೆ. ಹೆಣ್ಣು-ಗಂಡಿನ ಸೇರಿಕೆಯ ಥರ ಅವರೆಕಾಳು ಮತ್ತು ಹಿಟ್ಟಿನ ಊಟ ಎಂದು ತಿಳಿದಿದ್ದಾರೆ. ಶಿವಲಿಂಗದ ಬಟ್ಟಲು ಮತ್ತು ಲಿಂಗಕ್ಕೆ ಈ ಎರಡನ್ನು ಹೋಲಿಸುವುದುಂಟು. ಮುದ್ದೆಯ ಜೊತೆಗೆ ಹಿತವಾದ ಸಾರು ಸಿಗಲೆಂದು ಪಾಂಡವರು ಅವರೆಯನ್ನು ಬಿತ್ತಿ ಹೋದರಂತೆ. ಇದರ ಅರ್ಥ ಪಾಂಡವರು ಅವರೆ (ಇದ್ದಾರೆ), ಸತ್ತಿಲ್ಲ ಎಂದೆ ಜನ ಭಾವಿಸಿದ್ದಾರೆ. ಪಾಂಡವರು ಕೊಟ್ಟಂತೆ ಅವರೆಕಾಳಿನ ಸ್ವಾಡಿಗೆ, ಒಂದೆಸರು, ಉಪ್ಪೆಸರು, ಹುರಿದ ಅವರೆಕಾಳಿನ ಹೆಸರು, ಚಿಲಕವರೆ ಹೆಸರು, ಪರ್ಪು, ಅವರೆಕಾಳು ಮಜ್ಜಿಗಮ್ರ ಎಂದು ಹಲವು ಸಾರಿನ ಬಗೆಗಳು ಜನರಿಗೆ ಗಮ್ಮತ್ತು ಕೊಡುತ್ತವೆ.

ಅವರೆ ಈ ಪ್ರದೇಶದ ಪೂರ್ವದ ಕಾಳುಗಳಲ್ಲಿ ಒಂದಿರಬೇಕು. ಸಾಮಾನ್ಯವಾಗಿ ಹಿಂದೆ ಮದುವೆ ಮತ್ತು ತಿಥಿ ಸಾರುಮಾಡುವಾಗ ಅವರೆಕಾಳು ಮತ್ತು ಬದನೆಕಾಯಿಯನ್ನು ಸೇರಿಸಿ ಮಾಡುತ್ತಿದ್ದರು. ತಿಥಿಗೆ ಬದನೆಕಾಯಿ ಮತ್ತು ಬಾಳೆಕಾಯನ್ನು ಸೇರಿಸಿ ಪಲ್ಯ ಮಾಡಿ, ಸಾರಿಗೆ ಅದೆ ಅವರೆಕಾಳು ಬದನೆಕಾಯಿ ಹಾಕುತ್ತಿದ್ದರು. ಸುಮಾರು ೧೭-೧೮ನೆಯ ಶತಮಾನದಲ್ಲಿ ಮಂಡ್ಯ,ಮೈಸೂರು ಹಾಸನದ ಕಡೆಯಿಂದ ಊಟಿಗೆ ವಲಸೆ ಹೋಗಿ ‘ಬಡಗರು’ ಎನಿಸಿಕೊಂಡ ಜನ ಅಲ್ಲಿದ್ದಾರೆ. ಅವರ ಮದುವೆಗೆ ಕಡ್ಡಾಯವಾಗಿ ಅವರೆಕಾಳು ಮತ್ತು ಬದನೆಕಾಯಿ ಸಾರು ಮಾಡಬೇಕಂತೆ. ಎಷ್ಟೇ ಶ್ರೀಮಂತರಿದ್ದರೂ ಈ ವಿಧದ ಒಂದು ಸಾರು ಮಾಡಲೇಬೇಕೆಂದು ಇದೆ ಎಂದು ಅಲ್ಲಿಯ ಜನ ನನಗೆ ಹೇಳಿದರು. ಕನಿಷ್ಠ ಪಕ್ಷ ಅವರೆಕಾಳಿನ ಗೊಜ್ಜಾದರೂ ಇರಲೇಬೇಕಂತೆ.

ಕರೀಮೀನು ಸಾರಿಗೆ, ಅವರೆಕಾಳೇ ಪತ್ಯವಾದ ಕಾಳು, ಜೊತೆಗೆ ಬದನೆಕಾಯಿ. ‘ಪರ್ಪುರೊಟ್ಟಿ’ ಎಂಬ ಒಂದು ಊಟವಿದೆ. ಹಸಿಅವರೆಕಾಳನ್ನು ಬೇಳೆಮಾಡಿ ಅದರಿಂದ ಪರ್ಪುಮಾಡಿ, ವಿಶೇಷವಾಗಿ ಮಾಡಿದ ರೊಟ್ಟಿ ಜೊತೆಗೆ ಬೆಣ್ಣೆ, ಹುಚ್ಚಳು ಹಿಂಡಿ, ಹಣ್ಣುಗಾಯಿ ತುರಿ ಹಾಕಿಕೊಂಡು ತಿನ್ನುತ್ತಾರೆ. ಅದರ ಗಮ್ಮತ್ತೆ ಬೇರೆ.

ಸಾವಿಗೆಕಾಯಲುಕೋಳಿಸಾರು:

ಸಾವಿಗೆ ಕರ್ನಾಟಕದ ಎಲ್ಲ ಕಡೆಯಲ್ಲೂ ಬಳಕೆಯಲ್ಲಿರುವ ಊಟ, ಸಸ್ಯಾಹಾರಿ ಮತ್ತು ಮಾಂಸಾಹಾರಿಗಳು ಒಟ್ಟಾಗಿಯೆ ಅದನ್ನು ಇಷ್ಟಪಡುತ್ತಾರೆ. ಅಕ್ಕಿ ಅಥವಾ ರಾಗಿಯ ಮುದ್ದೆ ಉದ್ದವಾದರೆ ಅದೇ ಶ್ಯಾವಿಗೆ. ಇದಕ್ಕೆ ಹೊಂದಿಕೆಗಳೆಂದರೆ ಕಾಯಾಲು, ಚಿಲಕವರೆ ಸಾರು, ಪರ್ಪು ಮತ್ತು ಕೋಳಿಸಾರು. ಈ ಜೋಡಿಗಳನ್ನು ತಿನ್ನುತ್ತಿದ್ದರೆ ಹೊಟ್ಟೆ ಇದೆ ಎಂಬುದೇ ಮರೆತು ಹೋಗುತ್ತದೆ. ಅಷ್ಟು ಸಲೀಸಾಗಿ ಸ್ಯಾವಿಗೆ ಒರಳಿನಿಂದ ಹೊರಬಂದು ಗಂಟಲು ಸೇರುತ್ತದೆ. ಎಂದು ತಿನ್ನುವ ಪುಣ್ಯಾತ್ಮರು ಹೇಳುತ್ತಾರೆ.

ಬೇರೆಯವರು ಬಂದು ತಮ್ಮ ಪಾಲಿನ ಶ್ಯಾವಿಗೆಯನ್ನು ಹಂಚಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಅದರ ಪ್ರತಿಕ್ರಿಯೆ ಈ ಗಾದೆ:

ಒತ್ತಿದ ಸಾವ್ಗೆಗೆ
ಒದಗಿದ ನಂಟು (ಬೀಚಿ)

ಹೆಂಗಸರಿಗೆ ಕಾಯಾಲು ಶ್ಯಾವಿಗೆ ಎಂದರೆ ತುಂಬ ಇಷ್ಟವಂತೆ. ಇದನ್ನು ಅರಿತ ಆ ಸೊಸೆ ಅತ್ತೆಯನ್ನು ಕೆಳಗಿನಂತೆ ಸರಿಮಾಡಿಕೊಳ್ಳುತ್ತಾಳೆ.

ಆಯ್ಗಾರ ಅತ್ತೆ
ಪಾಯ್‌ಗಾರ ಸೊಸೆ
ಕಾಯಾಲು ಬುಟ್ಟೇನು ಕಣ್‌ಬಿಡುತ್ತೆ ಅಂದ್ಲು (ಬೀಚಿ)

ಅಳಿಯನಿಗೂ ಶ್ಯಾವಿಗೆ ಇಷ್ಟ. ಅದಕ್ಕೆಂದೆ ಜನ

‘ಅತ್ತೆ ಮನೆಗೆ ಅಳಿಯ ಬಂದ
ಒತ್ತು ಅತ್ತೆ ಸ್ಯಾವಿಗೆಯ’

ಎನ್ನುತ್ತಾರೆ.

ಆಹಾರ ಜೀರ್ಣಕ್ರಮ ಸುಗಮವಾಗಲೂ ಸ್ಯಾವಿಗೆ ಉಣ್ಣಬೇಕೆಂದು ನಮ್ಮ ಹಿರೀಕರು ಶಿಫಾರಸ್ಸು ಮಾಡುತ್ತಾರೆ. ಏನಂತಿರೀ!

ಪುಳಿಯೊಗರೆ ಮತ್ತು ಪಯಣದರೊಟ್ಟಿ:

ಯಾರಿಗೇನು ಕಡಿಮೆ ಎಂಬಂತೆ ಅಯ್ಯಂಗಾರರು ಮತ್ತು ಶೂದ್ರರು ಪೈಪೋಟಿಯಲ್ಲಿ ಮೇಲಿನ ಎರಡು ವಿಶೇಷ ಆಹಾರಗಳನ್ನು ಅವಿಷ್ಕಾರಗೊಳಿಸಿದ್ದಾರೆ. ಊಟದ ಅನ್ವೇಷಣೆಯಲ್ಲಿ ಭಾರತದ ಬ್ರಾಹ್ಮಣರನ್ನು ಮೀರಿಸಲು ಬೇರೆ ಯಾರಿಗೂ ಸಾಧ್ಯವಿಲ್ಲವಾದರೂ ಈ ಶೂದ್ರ ಮುಂಡೇ ಗಂಡ ಒಂದು ಕಿರು ಪ್ರಯತ್ನವನ್ನು ಮಾಡಿದ್ದಾನೆ. ಈ ಎರಡೂ ತಿಂಡಿಗಳು ಹಳಸದಂತೆ ಇಟ್ಟುಕೊಳ್ಳಬಹುದಾದ ವೈಜ್ಞಾನಿಕ ಶೋಧನೆಗಳು. ನೀರಿಲ್ಲದ ಹುಳಿ ಆಹಾರವನ್ನು ಕೆಡದಂತೆ ಸಂರಕ್ಷಿಸುತ್ತದೆ. ನೀರಿಲ್ಲದ ಪಯಣದ ರೊಟ್ಟಿ ಅನೇಕ ದಿನಗಳವರೆಗೆ  ಪ್ರಯಾಣ ಮಾಡುವ ರೈತನಿಗೆ ಆಹಾರವಾಗುತ್ತದೆ.

ಕುರುಕು ತಿಂಡಿ:

ಕುರುಕು ಪದ ಮತ್ತು ‘ಕುರುಕು ತಂಡಿ ಕುಂಡಿಗೆ ಮೂಲ’ ಎಂಬ ಗಾದೆಯೊಂದಿದೆ. ಕುರುಕು ತಿಂಡಿ ಚಟದ ತಿಂಡಿ. ಗಾತ್ರದಲ್ಲಿ ಇದು ಸಣ್ಣ ರುಚಿಯಲ್ಲಿ ವಿಶೇಷ. ಈ ತಿಂಡಿಗಳು ಮನೆಯಲ್ಲೆ ತಯಾರಾಗಬಹುದು, ಬಹುತೇಕ ಅಂಗಡಿಗಳು ತಿಂಡಿಗಳನ್ನೇ ಹಳ್ಳಿ ಜನ ಕುರುಕು ತಿಂಡಿಗಳು ಎನ್ನುತ್ತಾರೆ. ಬ್ರಾಹ್ಮಣರು ಮಾಡಿ ಮಾರುವ ಸಣ್ಣ ಪುಟ್ಟ ತಿಂಡಿಗಳು ಶೂದ್ರರಿಗೆ ಕುರುಕು ತಿಂಡಿಗಳು. ಈಗಿನ ಕಾಂಡಿಮೆಂಟ್ಸ್‌ಗಳು ಇದಕ್ಕೆ ಉದಾಹರಣೆ.

ಕುರುಕು ತಿಂಡಿ ಕಲಿತವನು/ವಳು ಉದ್ದಾರವಾಗುವುದಿಲ್ಲ ವೆಂಬ ನಂಬಿಕೆ ಇದೆ. ಕುರುಕು ತಿಂಡಿ ತಿನ್ನುವವರಿಗೆ ಕಾಮದ ಕಯಾಲು ಇರುತ್ತದೆ ಎಂಬ ಮಾತು ಕೂಡ ಉಂಟು. ದೆವ್ವಗಳಿಗೂ ಕುರುಕು ತಿಂಡಿ ಇಷ್ಟವಂತೆ. ದನ-ಕುರಿಕಾಯುವ ಹುಡುಗರು ಕುರುಕು ತಿಂಡಿ ತಿನ್ನುತ್ತಾರೆ ಮತ್ತು  ಅವರೇ ತಯಾರು ಮಾಡಿಕೊಳ್ಳುತ್ತಾರೆ. ಈ ಹುಡುಗರ ತಿಂಡಿ, ತಿನಿಸುಗಳ ತಯಾರಿಕೆಯೆ ಒಂದು ಮಜ. 

ಸಹಾಯಕ ಗ್ರಂಥಗಳು :

೧. ಟಿ. ಗೋವಿಂದರರಾಜು : ದನಗಾಹಿ ಮಕ್ಕಳ ಊಟ-ತಿಂಡಿಗಳು, ಸಂಯುಕ್ತ ಸಂಚಿಕೆ ಜಾನಪದ ಜಗತ್ತು ನವೆಂಬರ, ೧೯೮೧-ಜನೆವರಿ, ೧೯೮೨

೨. ಹ. ಕ. ರಾಜೇಗೌಡ : ಜಾನಪದ ಅಡುಗೆಯ ಸಂಪ್ರದಾಯಗಳು, ಕರ್ನಾಟಕ ಜಾನಪದ ಸಮೀಕ್ಷೆ. ಕರ್ನಾಟಕ ಸರ್ಕಾರ, ೧೯೮೨, ಪು. ೨೪೩

೩. ಪದ್ಮಾಶೇಖರ್ : ಜನಪದ ಅಡುಗೆ ಸಂಪ್ರದಾಯಗಳು, ಕರ್ನಾಟಕ ಜಾನಪದ ಸಂ. ಜೀಶಂಪ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ೧೯೮೯, ಪು. ೨೫೯-೨೮೮

೪. ಗೊ.ರು.ಚನ್ನಬಸಪ್ಪ : ಹಾಸನ ಜಿಲ್ಲೆಯ ಅಡುಗೆ ಮತ್ತು ಊಟೋಪಚಾರಗಳು, ಗ್ರಾಮ ಜ್ಯೋತಿ, ೧೯೭೯, ಪು.೬೭

೫. ಅಂಬಳಿಕೆ ಹಿರಿಯಣ್ಣ: ಮಲನಾಡ ಸಂಪ್ರದಾಯಗಳು, ೧೯೭೮, ಪುಸ್ತಕ ಚಿಲುಮೆ, ತಿಲಕ್ ನಗರ, ಮೈಸೂರು-೧

೬. ಶಾಂತಿ ನಾಯಕ: ಜನಪದ ವೈದ್ಯಕೀಯ ಅಡುಗೆಗಳು, ಜಾನಪದ ಪ್ರಕಾಶನ, ಪ್ರಭಾತ ನಗರ, ಹೊನ್ನಾವರ, ೧೯೮೬

೭. ಬಿ. ಎಸ್. ನಾಗರತ್ನ: ಜಾನಪದ ಪರಿಶೀಲನ, ಮಾನವಿ ಪ್ರಕಾಶನ ಎಲ್-೬೫, ಮಾನಸ ಗಂಗೋತ್ರಿ, ಮೈಸೂರು-೬, ೧೯೮೦, ಪು. ೮೪-೯೬

೮. ಎಲ್.ಎಂ. ಚಂದ್ರು: ಪಾಂಡವಪುರ ತಾಲ್ಲೂಕಿನ ಜನಪದ ಆಡುಗೆಗಳು ೧೯೮೭, (ಕ್ಷೇತ್ರಕಾರ್ಯ ಪ್ರಬಂಧ), ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು-೬

೯. ಶಿವನಂಜಮ್ಮ: ನಂಜನಗೂಡು ತಾಲ್ಲೂಕಿನ ಜನಪದ ಅಡುಗೆಗಳು, ೧೯೯೨ (ಕ್ಷೇತ್ರಕಾರ್ಯ ಪ್ರಬಂಧ) ಕ. ಅ. ಸಂ. ಮೈಸೂರು-೬

೧೦. ಕಾಳೇಗೌಡ ನಾಗವಾರ: ಬೀದಿಮಕ್ಕಳು ಬೆಳೆದೊ ಸಂ. ೧೯೭೭ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-೫೬

೧೧. ರಾಗೌ: ನಮ್ಮ ಗಾದೆಗಳು, ೧೯೩೫, ಗೀತಾ ಬುಕ್ ಹೌಸ್, ಮೈಸೂರು-೧

೧೨. ೧೯೯೨-೬೭ ರ ಜಾನಪದ ಪ್ರಥಮ ಎಂ.ಎ. ವಿದ್ಯಾರ್ಥಿಗಳಿಂದ ಪಡೆದ ವಿವರಗಳು.

೧೩. ಜಾನಪದ ಜಗತ್ತು ಜ. ೧೯೮೦ ಪು. ೨೬-೩೧, ಸೆ, ಪು. ೩೧, ನವೆಂ. ಪು. ೧೭, ಮೇ ೧೯೮೧, ಪು. ೨೮, ೩೭, ೩೫, ೩೯, ೧೯೮೧-೮೨, ಸಂಯು. ಸಂ. ಪು.೯೩, ಮೇ. ಪು. ೪೬, ೮೪, ೧೯೮೪ ಜೂ-ಡಿ. ಪು. ೧೫, ೧೯೮೬ ಪು.೯.