ಮಾನವ ಜಗತ್ತಿನಲ್ಲಿ ಹುಟ್ಟಿ ಕಣ್ತೆರವ ಮುನ್ನವೇ ಅವನು ಆಹಾರದೊಡನೆ ಸಂಬಂಧ ಬೆಳೆಸಿಕೊಂಡನು. ಹಸಿವಿನ ಬಾಯಿಗೆ ಸಿಕ್ಕಿದ ಅವನು ಅದನ್ನು ತೃಪ್ತಿಪಡಿಸುವ ಸಲುವಾಗಿ ಯಾವುದನ್ನು ಸ್ವೀಕರಿಸಿದನೋ ಅದು ಆಹಾರವೆಂಬ ಹೆಸರು ಪಡೆಯಿತು.  ಪ್ರಾರಂಭದಲ್ಲಿ ಹಸಿವಾರಿಸುವ  ಉದ್ದೇಶದಿಂದ ಆಹಾರ ಸ್ವೀಕರಿಸುತ್ತಿದ್ದ ಮಾನವ ತನ್ನಲ್ಲಿ ಜ್ಞಾನ ಮಡುಗಟ್ಟಿದಂತೆಲ್ಲಾ ಹೊಟ್ಟೆಯ ಹಸಿವಿನೊಡನೆ ನಾಲಿಗೆಯ ರುಚಿ ಕೊಂಡಿತಾಗಿಸಿಕೊಂಡಿತು. ಆದ್ದರಿಂದ ಆತ ಆಹಾರವನ್ನು ಬೇಯಿಸಿ ಸ್ವೀಕರಿಸುವ ಹಂತದೆಡೆ ಹೆಜ್ಜೆ ಇಟ್ಟ. ಹೊಟ್ಟೆ ಮತ್ತು ನಾಲಿಗೆಗಳೆರಡನ್ನು ತೃಪ್ತಿಪಡಿಸುವ - ಸಲುವಾಗಿ ಅವನು ವಿವಿಧ  ಪ್ರಯತ್ನಗಳಲ್ಲಿ ಕೈ ಹಾಕಿದ. ಕೆಲವು ಸಂದರ್ಭಗಳಲ್ಲಿ ಮಾಡಬಾರದ್ದನ್ನು ಮಾಡಿದ. ಆಗ ಅವನಿಗೆ "ಹೊಟ್ಟೆ ನಿನ್ನ ನಂಬಿ ನಾ ಕೆಟ್ಟೆ" "ನಾಲಿಗೆ ರುಚಿಗ್ಹೋಗಿ ಹೊಟ್ಟೆಕೆಡಿಸಿಕೊಂಡ" ಎಂದೆನಿಸಿತು. ಆದರೂ ಆಹಾರದ ಬಗ್ಗೆ ಅವನ ಬುದ್ಧಿ ಕಸರತ್ತು ಮಾಡುತ್ತಲೇ ಇತ್ತು. ಆಗ ಹೊಟ್ಟೆಯ ಹಸಿವು, ನಾಲಿಗೆಯ ರುಚಿಯೊಡನೆ ದೇಹದ ಆರೋಗ್ಯ ಪ್ರಜ್ಞೆ ಸೇರಿಕೊಂಡಿತು. ಈ ಅರಿವಿನಿಂದ ಮೂಡಿದ ತುಣುಕುಗಳೇ "ಊಟ ಬಲ್ಲವನಿಗೆ ರೋಗವಿಲ್ಲ" "ತುತ್ತು ತಪ್ಪಿದರೆ ತೂಕ ತಪ್ಪಿತು" ಎಂಬ ನಾಣ್ಣುಡಿಗಳು. ಅನುಭವದ ಅರಿವಿನಿಂದ ಆಹಾರದ ಬಗ್ಗೆ ಸಂಶೋಧನೆ ಮಾಡಿದ ನಮ್ಮ ಜನಪದರು ಇಂದಿನ ಆಹಾರ ತಜ್ಞರಿಗಿಂತ, ವೈದ್ಯರಿಗಿಂತ ಒಂದು ಕೈ ಮೇಲಾಗಿ ಯಾವ ಆಹಾರ ದೇಹದ ಆರೋಗ್ಯವನ್ನು ಕಾಪಾಡಬಲ್ಲದು, ಯಾವುದು ಆರೋಗ್ಯಕ್ಕೆ ಅಪಾಯಕಾರಿ ಎಂಬುದನ್ನು ಹೇಳಬಲ್ಲರು. ಎಷ್ಟೋ ರೋಗಗಳನ್ನು ಅವರು ಆಹಾರ ಸ್ವೀಕರಿಸುವ ವಿಧಾನದ ಮೂಲಕವೇ ಹೊಡೆದೋಡಿಸುತ್ತಾರೆ.
ಸಾಮಾನ್ಯವಾಗಿ ಆಹಾರವು ಪರಿಸರದಿಂದ ಪರಿಸರಕ್ಕೆ, ಮನುಷ್ಯನಿಂದ ಮನುಷ್ಯನಿಗೆ ಬೇರೆ ಬೇರೆಯಾಗಿರುತ್ತದೆ. ಕೆಲವು ಸ್ಥಳದಲ್ಲಿರುವ ಜನರಿಗೆ ಸಹ್ಯವೆನಿಸುವ ಆಹಾರವು ಕೆಲವು ಸ್ಥಳದಲ್ಲಿನ ಜನರಿಗೆ ಅಸಹ್ಯವೆನಿಸಬಹುದು. ಈ ದೃಷ್ಟಿಯಿಂದಲೇ"One man`s food is another man`s poison" ಎಂಬ ಮಾತು ಹೊಮ್ಮಿರುವುದು. ಹುಟ್ಟಿನಿಂದ ಇಲ್ಲವೆ ಪರಿಸರದ ಪ್ರಭಾವದಿಂದ ಯಾವುದನ್ನು ಮಾನವ ತನ್ನ ಮೆಚ್ಚುಗೆಯ ಆಹಾರವೆಂದು ಒಪ್ಪಿಕೊಂಡಿರುತ್ತಾನೊ ಅದು ಮಾತ್ರ ಅವನ ದೇಹಕ್ಕೆ ಒಗ್ಗುವ ಆಹಾರವಾಯಿತು. ಆತನ ದೇವರಿಗೂ ಅದೇ ಪ್ರಿಯವಾಯಿತು. ಕೆಲವು ಸಂದರ್ಭಗಳಲ್ಲಿ ಅದೇ ಪುಣ್ಯ ತರುವುದಕ್ಕೆ ಮಾಧ್ಯಮವೂ, ಕೆಲವು ಸಂದರ್ಭಗಳಲ್ಲಿ ಅದೇ ದೇವರ ಸ್ವರೂಪಿಯೂ ಆಯಿತು.  ಹೊಟ್ಟೆಗಂಟಿಕೊಂಡು ಬಂದ ಆಹಾರದ ಉದ್ದೇಶ ಎಲ್ಲಾ ಜನರಿಗೂ ಒಂದೇ ಆಗಿದ್ದರೂ ಅದರ ಮಹತ್ವದ ರಹಸ್ಯವನ್ನರಿತ ಮಾನವ ಅದಕ್ಕೆ ವಿಶಿಷ್ಟ ಸ್ಥಾನ ಕೊಟ್ಟು ಅದರಸುತ್ತಾ ಸಂಪ್ರದಾಯದ ಸರಪಳಿಗಳನ್ನು ಹೆಣೆದು ಪವಿತ್ರ-ಅಪವಿತ್ರ ಆಹಾರವೆಂದು ವಿಂಗಡಿಸಿದ. ತನ್ನ ಧರ್ಮದ ಚೌಕಟ್ಟಿನಲ್ಲಿ ಸೇರಲು ಅರ್ಹವಾದ ಆಹಾರ ಮಾತ್ರ ಪವಿತ್ರವೆನಿಸಿತು. ಈ ಪವಿತ್ರ ಅಪವಿತ್ರ ಆಹಾರದ ಕಲ್ಪನೆ ಪ್ರಾದೇಶಿಕವಾಗಿ ಸಿಗುವ ಆಹಾರ ಸಾಮಗ್ರಿಗಳ ಆಧಾರದ ಮೇಲೆ ವಿಂಗಡಿಸಲ್ಪಡುತ್ತದೆ. ಕರಾವಳಿಯ ಜನರಿಗೆ ಜಲಚರ ಪ್ರಾಣಿಗಳು ಪವಿತ್ರ ಆಹಾರವಾದರೆ ಬಯಲು ಸೀಮೆಯ ಜನರಿಗೆ ಅವು ಅಪವಿತ್ರವಾಗುತ್ತವೆ. ಈ ಪವಿತ್ರ-ಅಪವಿತ್ರ ಕಲ್ಪನೆಯ ಜೊತೆಯಲ್ಲಿ ಆಹಾರವು ಪ್ರಾದೇಶಿಕ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡಿತು. ಈ ದೃಷ್ಟಿಯಿಂದ ಕರ್ನಾಟಕದ ಕರಾವಳಿಯಲ್ಲಿನ ಆಹಾರವು ತನ್ನದೇ ಆದ ಗುಣಮಟ್ಟವನ್ನು ರಕ್ಷಿಸಿಕೊಂಡು ಬಯಲು ಸೀಮೆಯ ಆಹಾರಕ್ಕಿಂತ ಪರಿಪೂರ್ಣವಾಗಿ ಭಿನ್ನವಾಗಿದೆ.
ಪೂರ್ವಕ್ಕೆ ಹಸಿರು ಹೊದ್ದ ಸಹ್ಯಾದ್ರಿ ಪರ್ವತಗಳ ಶ್ರೇಣಿ ಪಶ್ಚಿಮಕ್ಕೆ ನಗೆಯ ನೊರೆಯುಕ್ಕಿಸುತ್ತಾ ಬರುವ ಸಮುದ್ರ. ಈ  ನಡುವಿನ ಸುಂದರ  ಪ್ರಕೃತಿಯ ಮಡಿಲ ಮಕ್ಕಳಾಗಿ ಬದುಕುವ ಕರ್ನಾಟಕದ ಕರಾವಳಿಯ ಜನರು ಸಸ್ಯಾಹಾರಿ ಮತ್ತು ಮಾಂಸಾಹಾರಿಗಳೆರಡೂ ಆದರೂ ಬಹುಪಾಲ ಜನರಿಗೆ ಪ್ರಿಯವಾದದ್ದು ಮಾಂಸಾಹಾರ. ಆದ್ದರಿಂದ ಅವರ ಮಾಂಸಾಹಾರದ ವಿವಿಧ ಪ್ರಕಾರಗಳ ಕಡೆಗೆ ಮೊದಲು ಗಮನಹರಿಸಬಹುದು.
ಮಾಂಸಾಹಾರ: ಪರಿಸರದ ಪ್ರಭಾವಕ್ಕೆ ಒಳಗಾದ ಮಾನವ ಅದು ಏನನ್ನು ಕೊಡುತ್ತದೆಯೋ ಅದನ್ನು ಕೆಲವು ಸಂದರ್ಭಗಳಲ್ಲಿ ಜಾತಿ ಮತದ ಚೌಕಟ್ಟನ್ನು ಬದಿಗಿಟ್ಟು ಸ್ವೀಕರಿಬೇಕಾಗುತ್ತದೆ. ಅದು ಆಹಾರದ ದೃಷ್ಟಿಯಿಂದ ಇದ್ದರೂ ಇರಬಹುದು, ಇಲ್ಲವೆ ಔಷಧಿಯ ರೂಪದಲ್ಲಿ ಇದ್ದರೂ ಇರಬಹುದು. ಈ ಹಿನ್ನೆಲೆಯಲ್ಲಿ ನೋಡಿದರೆ ಕರಾವಳಿಯ ಜನರಿಗೆ ಮೀನು ಮುಖ್ಯ ಆಹಾರ. ಗೌಡಸಾರಸ್ವತ ಬ್ರಾಹ್ಮಣರಿಂದ ಹಿಡಿದು ಬುಡಕಟ್ಟಿಗೆ ಸೇರಿದ ಗೊಂಡರವರೆಗೆ ಮೀನಿಲ್ಲದೆ ಊಟಮಾಡುವವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಇಲ್ಲಿನ ಪರಿಸರಕ್ಕೆ ಕುಚ್ಚಗಿ ಅಕ್ಕಿ ಅನ್ನ ಮೀನಿನ ಸಾರು ಸರಿಯಾದ ಆಹಾರವೆಂಬುದು ಹಲವರ ಹೇಳಿಕೆ. ಬೇರೆ ಬೇರೆಯವರ ಅಭಿಪ್ರಾಯಗಳೇನೇ ಇದ್ದರೂ ಪ್ರಾದೇಶಿಕವಾಗಿ ಲಭ್ಯವಾಗುವ ಆಹಾರ ಅದು ಮಾಂಸಾಹಾರವಾಗಿರಲಿ ಇಲ್ಲವೆ ಸಸ್ಯಹಾರವಾಗಿರಲಿ ಅದಕ್ಕೆ ಅಲ್ಲಿ ಜನ ಮೆಚ್ಚುಗೆಯ ಮುದ್ರೆ ಒತ್ತಲೇ ಬೇಕಾಗುತ್ತದೆ.
ಕರಾವಳಿ ಜನರಿಗೆ ಮಾಂಸಾಹಾರದಲ್ಲಿ ಹೆಚ್ಚು ಹಿತನೀಡುವಂತಹದು ಮೀನು. ಆದ್ದರಿಂದಲೇ ಅವರು "ತುಂಡು ಮೀನಿಲ್ಲದ ಊಟ ಅದೆಂಥ ಊಟ" ಎಂಬ ನಾಣ್ಣುಡಿಯನ್ನೇ ರಚಿಸಿದ್ದಾರೆ. ಜಲಚರ ಪ್ರಾಣಿಗಳಿಂದ ರುಚಿಕರವಾದ ವಿವಿಧ ಬಗೆಯ ಆಹಾರವನ್ನು ಸಿದ್ಧಪಡಿಸುವುದರಲ್ಲಿ ಅವರು ಪ್ರವೀಣರು. ಮೀನೊಂದರಲ್ಲೆ ಅವರು ತಯಾರಿಸುವ ವೈವಿಧ್ಯಮಯ ಆಹಾರ ನೋಡಿದರೆ ಆಶ್ಚರ್ಯವಾಗುತ್ತದೆ.

೧. ಮೀನಿನಿಂದ ತಯಾರಿಸುವ ಆಹಾರ:
ಸಾಮಾನ್ಯವಾಗಿ ಕರಾವಳಿಯಲ್ಲಿ ಮಧ್ಯಾಹ್ನದ ಊಟ ಮೀನಿನೂಟವೇ ಆಗಿರುತ್ತದೆ. ಅಕ್ಕಪಕ್ಕದ ಹೆಂಗಸರು "ನಿಮ್ಮನೇಲಿ ಏನು ಸಾರು?" ಎಂದು ಕೇಳುವುದಕ್ಕಿಂತ "ನಿಮ್ಮಲ್ಲಿ ಎಂಥ ಮೀನು ತಂದಿದ್ರು?" ಎಂದು ಕೇಳುವುದೇ ಹೆಚ್ಚು. ಪ್ರತಿದಿನ ಮೀನಿಲ್ಲದೆ ಅವರ ಊಟ ಆಗದೆಂದು ಅವರಿಗೆ ಗೊತ್ತು. ಹೀಗೆ ದಿನನಿತ್ಯದ ಆಹಾರದಲ್ಲಿ ಮೀನು ಪ್ರಮುಖವಾದ ಸ್ಥಾನಪಡೆದಿದೆ. ಅದರಲ್ಲೂ ಸಮುದ್ರದ ಮೀನು ಅವರಿಗೆ ಹೆಚ್ಚು ಪ್ರಿಯ.
(ಅ) ಮೀನಿನ ಹುಳಿ :
ಕುಚ್ಚಗಿ  ಅಕ್ಕಿ ಅನ್ನಕ್ಕೆ ಸರಿಯಾದ ಹೊಂದಾಣಿಕೆ ಎಂದರೆ ಮೀನಿನ ಹುಳಿ ಬಾಂಗ್ಡೆ, ಬೈಗೆ, ದೋಡಿ,ಅಡು ಮೊದಲಾದ ಮೀನಿನಿಂದ ಹುಳಿ ತಯಾರಿಸುತ್ತಾರೆ. ಒಣಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ(ಧನಿಯ) ಶುಂಠಿ,ಅರಿಶಿನ ಮೊದಲಾದ ಪದಾರ್ಥಗಳನ್ನೆಲ್ಲಾ ಅರೆದು, ಮೀನಿನೊಡನೆ ಹಾಕಿ ಬೇಯಿಸುತ್ತಾರೆ. ಖಾರ ಹೆಚ್ಚಾಗಿದ್ದು ಹುಳಿ ಹುಳಿಯಾಗಿರುವ ಈ ಸಾರು ಹೆಚ್ಚು ರುಚಿಕರವೆಂದು ಚಪ್ಪರಿಸುತ್ತಾರೆ. ಮೀನಿನ ಹುಳಿಗೆ ಕಡಿಮೆ ಖರ್ಚು ತಾಗುವದರಿಂದ ಇದು ಬಡವರ ಮನೆಯ ದಿನನಿತ್ಯದ ಸಾರಾಗಿದೆ. ಮಧ್ಯಾಹ್ನ ಮಾಡಿದ ಹುಳಿಯನ್ನು ಎರಡು ಮೂರು ದಿನಗಳವರೆಗೆ ಇಟ್ಟುಕೊಂಡು ತಿನ್ನುತ್ತಾರೆ. ದಿನಗಳುರುಳಿದಂತೆ ಹುಳಿಯ ರುಚಿ ಹೆಚ್ಚುತ್ತಲೇ ಇರುತ್ತದೆಂದು ಹೇಳುತ್ತಾರೆ.
(ಆ) ಮೀನಿನ ಪದಾರ್ಥ:
ಕರಾವಳಿಯ ಜನ ಸಾರಿಗೆ ಪದಾರ್ಥ ಎಂದು ಕರೆಯುತ್ತಾರೆ. ಪಾಂಪ್ಲೇಟು, ಅಡು ಮೀನು, ನೋಗ್ಲಿ ಮೊದಲಾದ ಮೀನಿನಿಂದ ಮೀನಿನ ಪದಾರ್ಥ ಮಾಡುವುದು ಹೆಚ್ಚು. ಮೀನಿನ ಹುಳಿಗೂ ಮೀನಿನ ಪದಾರ್ಥಕ್ಕೂ  ವ್ಯತ್ಯಾಸವೆಂದರೆ ಇದರಲ್ಲಿ ಒಣಮೆಣಸಿಗೆ ಬದಲಾಗಿ ಹಸಿಮೆಣಸನ್ನು ಬಳಸುತ್ತಾರೆ. ತೆಂಗಿನ ಕಾಯಿಯನ್ನು ಹೆಚ್ಚಾಗಿ ಸೇರಿಸುತ್ತಾರೆ. ಇದು ತರಕಾರಿ ಸಾರಿನಂತಿರುತ್ತದೆ. ಇದನ್ನು ಅಷ್ಟಾಗಿ ಇಲ್ಲಿನ ಜನರು ಇಷ್ಟಪಡುವುದಿಲ್ಲ. ಆದರೂ ರುಚಿಬದಲಾವಣೆಗೆ ಅಪರೂಪಕ್ಕೊಮ್ಮೆ ಮೀನಿನ ಪದಾರ್ಥ ಮಾಡುತ್ತಾರೆ.
(ಇ) ಮೀನಿನ ಭಾಜಿ :
ಸಾಮಾನ್ಯವಾಗಿ ಸೊಪ್ಪು,ತರಕಾರಿಗಳಿಂದ ಮಾಡಿದ ಪಲ್ಯೆವನ್ನು ‘ಭಾಜಿ’ ಎಂದು ಕರೆಯುವುದು ರೂಢಿಯಲ್ಲಿದೆ. ಆದರೆ ಕರಾವಳಿಯಲ್ಲಿ ಮೀನಿನ ಪಲ್ಯವನ್ನು ‘ಭಾಜಿ’ ಎಂದು ಕರೆದು ಅದನ್ನು ಸಸ್ಯಾಹಾರದಲ್ಲಿ ಸೇರಿಸಿದಂತೆ ಕಂಡುಬರುತ್ತದೆ. ಮೀನಿನ ಭಾಜಿ ಮಾಡುವಾಗ ಮೊದಲು ಮೀನನ್ನು ನೀರಿನಲ್ಲಿ ಬೇಯಿಸಿಕೊಳ್ಳುತ್ತಾರೆ. ಆಗ ಅದರೊಡನೆ ಸ್ವಲ್ಪ ಹಸಿಶುಂಠಿ ಮತ್ತು ಅರಿಶಿನವನ್ನು ಮಿಶ್ರಣ ಮಾಡುತ್ತಾರೆ. ಚೆನ್ನಾಗಿ ಬೇಯಿಸಿದ ಮೀನನ್ನು ಹೊರತೆಗೆದು ಅದರ ಮಾಂಸವನ್ನು ಮುಳ್ಳಿನಿಂದ ಬೇರ್ಪಡಿಸಿ ಇಟ್ಟುಕೊಂಡಿರುತ್ತಾರೆ. ಒಂದು ಪಾತ್ರೆಯಲ್ಲಿ ಒಣಮೆಣಸನ್ನು ಕೊಬ್ಬರಿಎಣ್ಣೆಯಲ್ಲಿ ಹುರಿದುಕೊಂಡು ಅದಕ್ಕೂ ತೆಂಗಿನಕಾಯಿಯನ್ನು ತುರುವಿ ಹಾಕುತ್ತಾರೆ. ಅನಂತರ ಎಣ್ಣೆಯಲ್ಲಿ ಹುರಿದ ಕೊತ್ತಂಬರಿ, ದಾಲ್ಚಿನಿ, ಲವಂಗ, ಬಡೇಸೋಪು, ಗಸಗಸೆ ಇವನ್ನೆಲ್ಲಾ ಒಣಮೆಣಸಿನೊಡನೆ ನೀರು ಹಾಕದೆ ಅರೆದುಕೊಳ್ಳುತ್ತಾರೆ. ಈ ಮಸಾಲೆಯೊಡನೆ ಮೀನಿನ ಮಾಂಸವನ್ನು ಬೆರೆಸಿಟ್ಟುಕೊಂಡು, ಬಾಣಲೆಯಲ್ಲಿ ಬೆಳ್ಳುಳ್ಳಿ, ಹಸಿಶುಂಠಿ, ಹಸಿಮೆಣಸು, ಈರುಳ್ಳಿಯ ಮಿಶ್ರಣದ ಒಗ್ಗರಣೆಯನ್ನು ಸಿದ್ಧಮಾಡಿಕೊಂಡು ಅದರಲ್ಲಿ ಮಸಾಲೆಯ ಮೀನನ್ನು ಹಾಕಿ ಚಮಚದಿಂದ ತಿರುಗಿಸುತ್ತಾ, ರುಬ್ಬುಗಲ್ಲನ್ನು ತೊಳೆದ ಒಂದು ಕಪ್ಪು ನೀರನ್ನು ಹಾಕಿ ಹತ್ತು ನಿಮಿಷದವರೆಗೆ ಬೇಯಿಸುತ್ತಾರೆ. ಬೇಯಿಸುವಾಗ ರುಚಿಗೆ ತಕ್ಕ ಉಪ್ಪುಹಾಕುತ್ತಾರೆ. ಈ ಭಾಜಿಯನ್ನು ತಿಂದವರು ಯಾರು ಸಹ ಇದನ್ನೇ ಮೀನಿನ ಭಾಜಿ ಎಂದು ಹೇಳುವುದೇ ಇಲ್ಲ. ಏಕೆಂದರೆ ಸಮುದ್ರದ ಮೀನಿನಲ್ಲಿ ವಾಸನೆ ಇರದೇ ಇರುವುದರಿಂದ ಭಾಜಿಯಲ್ಲೂ ಸಹ ಮೀನಿನ ಕಿಂಚಿತ್ತು ವಾಸನೆಯೂ ಇರುವುದಿಲ್ಲ.
(ಈ) ಮೀನಿನ ದೋಸೆ:
ಮೀನನ್ನು ಹಸಿಶುಂಠಿ, ಅರಿಶಿನ, ಹಾಕಿದ ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಂಡು ಅದರ ಮಾಂಸವನ್ನು ಮುಳ್ಳಿನಿಂದ ಪ್ರತ್ಯೇಕಿಸಿಕೊಳ್ಳುತ್ತಾರೆ. ಅನಂತರ ತೆಂಗಿನಕಾಯಿ, ಕರಿಮೆಣಸು, ಧನಿಯ, ಈರುಳ್ಳಿ ಇವುಗಳನ್ನೆಲ್ಲಾ ದೋಸೆ ಹಿಟ್ಟಿನೊಡನೆ ಸೇರಿಸಿ ರುಬ್ಬಿಕೊಂಡು ಅದರೊಡನೆ ಮೀನಿನ ಮಾಂಸವನ್ನು ಮಿಶ್ರಣ ಮಾಡಿ ಕಾವಲಿಯ ಮೇಲೆ ದೋಸೆ ಹಾಕುತ್ತಾರೆ. ಇದು ಮೀನಿನ ಮಸಾಲೆಯಿಂದ ಮಿಶ್ರಣಗೊಂಡಿರುವುದರಿಂದ ತಿನ್ನಲು ಹೆಚ್ಚು ರುಚಿಕರವಾಗಿರುತ್ತದೆ. ಮೀನಿನ ದೋಸೆಗೆ ತೊರ್ಕೆನ ಇಸ್ವಾನ್‌ನಂತಹ ದೊಡ್ಡ ಮೀನನ್ನು ಬಳಸುತ್ತಾರೆ. ಏಕೆಂದರೆ ಅದರಲ್ಲಿ ಮುಳ್ಳಿನ ಪ್ರಮಾಣ ಕಡಿಮೆ ಇರುತ್ತದೆ.
(ಉ) ಮೀನ್ ಬಿರ್ಯಾನಿ :
ಕುರಿ, ಕೋಳಿಯ ಮಾಂಸದಿಂದ ತಯಾರಿಸುತ್ತ ಬಿರ್ಯಾನಿಯು ಕರಾವಳಿಯಲ್ಲಿ ಮೀನಿನಿಂದ ತಯಾರಿಸಲ್ಪಡುತ್ತದೆ. ಇದು ಹೆಚ್ಚಾಗಿ ಮುಸ್ಲಿಮರು ತಯಾರಿಸುವ ಆಹಾರವಾಗಿದೆ. ಇಸ್ವಾನ್ ಎಂಬ ಶ್ರೇಷ್ಠ ಜಾತಿಯ ಮೀನನ್ನು ತುಂಡುಗಳಾಗಿಸಿಕೊಂಡು ಅದನ್ನು ಗರಂಮಸಾಲೆ, ತೆಂಗಿನಕಾಯಿ, ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿ, ದಾಲ್ಚಿನ್ನಿ, ಲವಂಗ, ಹಸಿಶುಂಠಿ, ಕೊತ್ತಿಮಿರಿಸೊಪ್ಪು ಮೊದಲಾದ ಪದಾರ್ಥಗಳನ್ನು ಅರೆದು ತಯಾರಿಸಿದ ಮಸಾಲೆಯಲ್ಲಿ ಮಿಶ್ರಣಮಾಡಿ ಬೇಯಿಸಿಕೊಳ್ಳುತ್ತಾರೆ. ಆಗ ರುಚಿಗೆ ತಕ್ಕಷ್ಟು ಉಪ್ಪು ಹಾಕುತ್ತಾರೆ. ಇದು ಗಟ್ಟಿಸಾರಾಗಿರುತ್ತದೆ. ಇನ್ನೊಂದು ಪಾತ್ರೆಯಲ್ಲಿ ಸುವಾಸಿತವಾದ ಗಿರಿಸಲಕ್ಕಿಯ ಅನ್ನವನ್ನು ತುಪ್ಪದ ಒಗ್ಗರಣೆ ಹಾಕಿ ಸಿದ್ಧಮಾಡಿಕೊಂಡು ಅದನ್ನು ಮೀನಿನ ಮಸಾಲೆಯ ಮೇಲೆ ಹಾಕುತ್ತಾರೆ. ತಟ್ಟೆಯಲ್ಲಿ ತೆಗೆದುಕೊಡುವಾಗ ಅನ್ನ ಮತ್ತು ಮೀನಿನ  ಮಸಾಲೆಯನ್ನು ಸಮಪ್ರಮಾಣದಲ್ಲಿ ಕೊಡುತ್ತಾರೆ. ತಿನ್ನುವವರು ಅವೆರಡನ್ನೂ ಮಿಶ್ರಣಮಾಡಿ ತಿನ್ನುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಇಸ್ವಾನ್ ಮೀನಿನ ಬೇಟೆಯ ಕಾಲದಲ್ಲಿ ಮೀನ್ ಬಿರ್ಯಾನಿ ಮಾಡುವುದು ಹೆಚ್ಚು. ಇದು ಹೆಚ್ಚು ಪುರಾತನವಾದ ಅಡುಗೆಯಾಗದೆ ಇತ್ತೀಚಿನ ಶ್ರೀಮಂತರ ಅಡುಗೆಯಾಗಿರುವುದರಿಂದ ಬಡವರಿಗೆ ಮತ್ತು ಹಳ್ಳಿಗರಿಗೆ ಕೇವಲ ಮೀನ್ ಬಿರ್ಯಾನಿ ಎಂಬ ಆಹಾರವಿದೆ ಎಂಬುದು ಮಾತ್ರ ಗೊತ್ತೆ ವಿನಾ ಅದರ ಸವಿಯುಂಡು ಗೊತ್ತೇ ಇಲ್ಲವೆನ್ನಬಹುದು.
(ಊ) ಕೆಂಡದಲ್ಲಿ ಬೇಯಿಸುವ ಬಾಂಗಡೆ ಪಲ್ಯ:
ಚೆನ್ನಾಗಿ ತೊಳೆದು ಶುದ್ಧಗೊಳಿಸಿದ ಬಾಂಗಡೆ ಮೀನಿಗೆ, ಮೆಣಸು, ಉಪ್ಪು, ಹುಳಿ, ಅರಿಶಿನದ ಮಸಾಲೆಯನ್ನು ಹಚ್ಚುತ್ತಾರೆ. ಹಾಗೆ ಲೇಪಿಸುವಾಗ ಮೀನಿನ ಮೈ ಮೇಲೆ ಅಲ್ಲಲ್ಲಿ ಕೊಯ್ದು ಅದರಲ್ಲಿ ಮಸಾಲೆ ತುಂಬುತ್ತಾರೆ. ಹಾಗೆಯೇ ಅದರ ಹೊಟ್ಟೆಯಲ್ಲೂ ಸಹ ಮಸಾಲೆ ತುಂಬಿ ಕಾವಲಿನಲ್ಲಿ ಬಾಳೆಎಲೆ ಹಾಕಿ ಅದರ ಮೇಲೆ ಕೊಬ್ಬರಿಎಣ್ಣೆ ಸವರಿ ಮಸಾಲೆಯ ಮೀನನ್ನು ಅದರ ಮೇಲಿಡುತ್ತಾರೆ. ಅನಂತರ ಅದರ ಮೇಲೆ ಮುಚ್ಚಿ, ಮುಚ್ಚಳದ ಮೇಲೆ ಬೆಂಕಿಯ ಕೆಂಡ ಹಾಕುತ್ತಾರೆ. ಕೆಳಗಿನಿಂದಲೂ ಕೆಂಡದ ಉರಿಕೊಡುತ್ತಾರೆ. ಹೀಗೆ ಬೇಯಿಸಿದ ಮೀನನ್ನು ಊಟದೊಡನೆ ನೆಂಜಿಕೊಂಡು ತಿನ್ನುತ್ತಾರೆ. ಬಾಂಗ್ಡೆ ಮೀನು ಹೆಚ್ಚಾಗಿ ಸಿಗುವ ಸಂದರ್ಭದಲ್ಲಿ ಈ ಬಗೆಯ ಆಹಾರವನ್ನು ಸಿದ್ಧಮಾಡುತ್ತಾರೆ. ಇದು ಸಾಮಾನ್ಯರೂ ಸಹ ಸಿದ್ಧಪಡಿಸಬಹುದಾದ ಆಹಾರವಾಗಿದೆ.
(ಋ) ಮೀನಿನ ಫ್ರೈ :
ಮೀನಿನೂಟದೊಡನೆ ಮೀನಿನ ಫ್ರೈ ಇದ್ದೇ ಇರಬೇಕೆಂಬ ನಿಯಮ ಮಾಡಿಕೊಂಡಿದ್ದಾರೆ. ಬಯಲು ಸೀಮೆಯ ಕಡೆಗೆ ಮೀನಿನ ಫ್ರೈ ಮಾಡಲು ಹಾಕುವ ಮಸಾಲೆಗಿಂತ ಕರಾವಳಿಯವರು ಬಳಸುವ ಮಸಾಲೆ ಬೇರೆಯಾದುದು. ಇಲ್ಲಿ ಒಣಮೆಣಸಿನ ಪುಡಿಯೊಂದಿಗೆ  ಹುಳಿ, ಉಪ್ಪು ಮಿಶ್ರಣಮಾಡಿ ಅದನ್ನು ಮೀನಿನ ಹೊಟ್ಟೆಯಲ್ಲಿ ತುಂಬಿ ಮೈಮೇಲೆಲ್ಲಾ ಲೇಪಿಸಿ ಅದರ ಮೇಲೆ ರವೆಯನ್ನು ಅಂಟಿಸುತ್ತಾರೆ. ಅದನ್ನು ಹೀಗೆ ಸಿದ್ಧಮಾಡಿದ ಮೀನನ್ನು ಕಾವಲಿಯ ಮೇಲೆ ಕೊಬ್ಬರಿ ಎಣ್ಣೆಹಾಕಿ ಹುರಿಯುತ್ತಾರೆ. ರಾಗಿ ಗಂಜಿ ಸ್ವೀಕರಿಸುವಾಗ, ಕುಚ್ಚಗಿ ಅಕ್ಕಿಯ ಅನ್ನದ ಊಟ ಮಾಡುವಾಗ ಫ್ರೈ ಮಾಡಿದ ಮೀನನ್ನು ನೆಂಜಿಕೊಳ್ಳುತ್ತಾರೆ.
ಸೆಪ್ಟೆಂಬರನಿಂದ ಮೇ ವರೆಗೆ ಮೀನು ಹಿಡಿಯುವ ಕಾಲವಾದ್ದರಿಂದ ಆ ಸಂದರ್ಭದಲ್ಲಿ ಮೀನಾಹಾರ ತಯಾರಿಸುವವರಿಗೆ ಸುಗ್ಗಿಯ ಕಾಲ. ಜೂನ್‌ನಿಂದ ಆಗಸ್ಟ್‌ವರೆಗೆ ಅವರಿಗೆ ಬರಗಾಲ. ಏಕೆಂದರೆ ಆಗ ಕರಾವಳಿಯಲ್ಲಿ ಮಳೆಗಾಲವಾದ್ದರಿಂದ ಸಮುದ್ರದಲ್ಲಿ ದೋಣಿಗಳನ್ನಿಳಿಸಲು ಬಿಡುವುದಿಲ್ಲ. ಆ ಸಂದರ್ಭದಲ್ಲಿ ಶ್ರೀಮಂತರು ಶೀತಲೀಕರಣಗೊಳಿಸಿದ ಮೀನನ್ನು ಕೆ.ಜಿ.ಗೆ ರೂ. ೫೦ ರಿಂದ ರೂ. ೮೦ ರವರೆಗೆ ಕೊಂಡುಕೊಂಡು ತಮ್ಮ ಆಸೆಯನ್ನು ಈಡೇರಿಸಿಕೊಂಡರೆ ಬಡವರು ಹಸಿಮೀನಿನ ಸವಿಯನ್ನು ಒಣಮೀನಲ್ಲಿ ಪಡೆಯಲು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ಸಮುದ್ರತೀರದಲ್ಲಿ ಉಪ್ಪಿನ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ಆ ತೊಟ್ಟಿಗಳಲ್ಲಿ ನಾಲ್ಕಾರು ದಿನಗಳಿಟ್ಟು ನಂತರ ಆ ಮೀನನ್ನು ಹೊರತೆಗೆದು ತೊಳೆದು ಒಣಗಿಸುತ್ತಾರೆ. ಅದನ್ನು ಮಳೆಗಾಲದಲ್ಲಿ ಹೆಚ್ಚಾಗಿ ಮಾರಾಟ ಮಾಡುವುದುಂಟು. ಅಂತಹ ಒಣಮೀನಿನಿಂದ ವಿವಿಧ ಬಗೆಯ ಆಹಾರವನ್ನು ತಯಾರಿಸುವುದು ಗಮನಾರ್ಹವಾದುದು. ಸಾಮಾನ್ಯವಾಗಿ ಮಧ್ಯಮ ವರ್ಗದ ಮತ್ತು ಕಡಿಮೆ ಬೆಲೆಯ ಮೀನನ್ನು ಒಣಗಿಸಿಡುವುದೇ ಹೆಚ್ಚು.
(ೠ) ಒಣಮೀನಿನ ಹುಳಿ :
ಹಸಿಮೀನಿನ ಹುಳಿಗೆ ತಯಾರಿಸಿದ ಮಸಾಲೆಯನ್ನೇ ಒಣ ಮೀನಿಗೂ ತಯಾರಿಸಿಕೊಂಡು ಅದನ್ನು ನೀರಿನೊಡನೆ ಬೆರೆಸಿ ಕುದಿಸುತ್ತಾರೆ. ಅದು ಚೆನ್ನಾಗಿ ಕುದಿಯುತ್ತಿರುವಾಗ  ಒಣಮೀನನ್ನು ಚೆನ್ನಾಗಿ ತೊಳೆದು ಅದರಲ್ಲಿ ಹಾಕುತ್ತಾರೆ. ಕುಚ್ಚಗಿ ಅಕ್ಕಿ ಅನ್ನದೊಡನೆ ಅದನ್ನು ಮಿಶ್ರಣ ಮಾಡಿಕೊಂಡು ಊಟ ಮಾಡುತ್ತಾರೆ. ಸಾಮಾನ್ಯವಾಗಿ ಜೀಂಗುಡುವ ಮಳೆಯಲ್ಲಿ ಒಣಮೀನಿನ ಹುಳಿ ಹೆಚ್ಚು ರುಚಿಕೊಡುತ್ತದೆ.
(ಎ) ಒಣಮೀನಿನ ಚಟ್ನಿ :
ಒಣಮೀನನ್ನು ಹುರಿದು ಅದರೊಡನೆ ಒಣಮೆಣಸು, ಉಪ್ಪು, ಹುಳಿ, ಬೆಳ್ಳುಳ್ಳಿಯನ್ನೆಲ್ಲಾ ಮಿಶ್ರಣಮಾಡಿಚಟ್ನಿ ಮಾಡುತ್ತಾರೆ. ಇದನ್ನು ರೊಟ್ಟಿಯೊಂದಿಗೆ ಅನ್ನದೊಂದಿಗೆ ಬೆರೆಸಿ ತಿನ್ನುತ್ತಾರೆ. ಹೀಗೆಯೇ ಒಣ ಚಟ್ನಿ (ಸೀಗಡಿ)ಯ ಚಟ್ನಿ ಮಾಡುತ್ತಾರೆ.
ಇದಲ್ಲದೆ ಒಣಮೀನನ್ನು  ಎಣ್ಣೆಯಲ್ಲಿ ಹುರಿದು,ಇಲ್ಲವೆ ಕೆಂಡದ ಮೇಲೆ ಸುಟ್ಟು ಹಾಗೆಯೇ ಊಟದೊಡನೆ ನಂಜಿಕೊಳ್ಳುತ್ತಾರೆ.

೨. ಮಳ್ವೆ (ಚಿಪ್ಪು ಮೀನು) ಯಿಂದ ಮಾಡುವ ಆಹಾರ:
ಜಲಚರಗಳಲ್ಲಿ ಮಳ್ವೆ, ಮೀನಿನಷ್ಟೇ ಪ್ರಿಯವಾದ ಆಹಾರ. ಸಮುದ್ರದಲ್ಲಿನ ಬಂಡೆಗಳಿಗೆ, ಹೊಳೆಯ ದಂಡೆಗೆ ಕಚ್ಚಿಕೊಂಡು ಇರುವ  ಮಳ್ವೆ ಹೊರಗೆ ಕಪ್ಪೆ ಚಿಪ್ಪನ್ನು ಹೊಂದಿರುತ್ತದೆ. ಒಳಗೆ ಬಿಳಿ ಬಣ್ಣದ ತುಂಡು ಮಾಂಸ ಒಂದು ಉಸಿರಾಡುತ್ತಿರುತ್ತದೆ. ಮಳ್ವೆಯಲ್ಲಿ ಕಪ್ಪುಚಿಪ್ಪಿನ  ಮಳ್ವೆ ಬಿಳಿಚಿಪ್ಪಿನ ಮಳ್ವೆ ಎಂದು ಎರಡು ವಿಧ. ಇದನ್ನು ಮೀನು ತಿನ್ನುವವರೆಲ್ಲಾ ಸ್ವೀಕರಿಸುತ್ತಾರೆ. ಇದರಿಂದ ಮಳ್ವೆ ಪಲ್ಯೆ, ಮಳ್ವೆ ಹುಳಿ, ಮಳ್ವೆ ಪದಾರ್ಥ ಮೊದಲಾದ ಆಹಾರವನ್ನು ಸಿದ್ಧಪಡಿಸುತ್ತಾರೆ.
(ಅ) ಮಳ್ವೆ ಪಲ್ಯ :
ಮಳ್ವೆಯನ್ನು ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ ಬೇಯಿಸುತ್ತಾರೆ. ಅರ್ಧ ಬೆಯ್ದನಂತರ ಅದರಲ್ಲಿನ ಚಿಪ್ಪುಗಳೆರಡೂ ಸಡಿಲಗೊಂಡು ಬಾಯಿಬಿಡುತ್ತವೆ. ಆಗ ಅದನ್ನು ಹೊರತೆಗೆದು ಒಂದು ತಟ್ಟೆಯಲ್ಲಿ ಆರಲು ಬಿಡುತ್ತಾರೆ. ಅಷ್ಟರೊಳಗೆ ಸ್ವಲ್ಪ ಕುಚ್ಚಗಿ ಅಕ್ಕಿಯ ಹಿಟ್ಟು, ಮೆಣಸಿನ ಹುಡಿ, ಅರಿಶಿನ, ಹುಳಿ, ಉಪ್ಪುಗಳನ್ನೆಲ್ಲಾ ಮಿಶ್ರಣಮಾಡಿ ಗಟ್ಟಿಮಸಾಲೆಯನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಆ ಮಸಾಲೆಯನ್ನು ಬಾಯಿಬಿಟ್ಟಿರುವ ಮಳ್ವೆಯಲ್ಲಿ ತುಂಬಿ ನೀರಿನ ಆವಿಯಲ್ಲಿ ಬೇಯಿಸುತ್ತಾರೆ. ಇದನ್ನು ಊಟದೊಡನೆ ತಿನ್ನುತ್ತಾರೆ.
(ಆ) ಮಳ್ವೆ ಪದಾರ್ಥ 
ಕರಾವಳಿಯಲ್ಲಿ ಜಲಚರಗಳೊಡನೆ ತರಕಾರಿ ಮಿಶ್ರಣ  ಮಾಡಿ ಆಹಾರ ಸಿದ್ಧಪಡಿಸುವ  ವಿಧಾನವಿದೆ. ಹಸಿಮೀನಿನೊಡನೆ, ಬಸಲೆ, ನುಗ್ಗೇಕಾಯಿ, ಬದನೆಕಾಯಿ ಮೊದಲಾದ ತರಕಾರಿಗಳನ್ನು ಹಾಕಿ ಬೇಯಿಸಿದಂತೆಯೇ ಮಳ್ವೆಯೊಡನೆಯೂ ತರಕಾರಿ ಹಾಕಿ ಪದಾರ್ಥ ಸಿದ್ಧಗೊಳಿಸುತ್ತಾರೆ. ಹಾಗೆ ಸಿದ್ಧಮಾಡುವಾಗ ಮೊದಲು ಮಳ್ವೆಯನ್ನು ನೀರಿನಲ್ಲಿ ಅರ್ಧ ಬೇಯಿಸುತ್ತಾರೆ. ಅನಂತರ ಅದನ್ನು ಹೊರತೆಗೆದು ಚಿಪ್ಪಿನಲ್ಲಿರುವ ಮಾಂಸವನ್ನು ಹೊರತೆಗೆದುಕೊಳ್ಳುತ್ತಾರೆ. ಅದಕ್ಕೆ ತೆಂಗಿನಕಾಯಿ, ಒಣಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ, ಹುಳಿ, ಉಪ್ಪು ಮೊದಲಾದವುಗಳನ್ನು ರುಚಿಗೆ ಸರಿಹೊಂದುವಂತೆ ಹಾಕಿ ಸಾಧ್ಯವಾದರೆ ಬಸಳೆ ಸೊಪ್ಪು, ಇಲ್ಲವೆ ಬೇರಾವುದಾದರೂ ತರಕಾರಿಯನ್ನು ಹಾಕಿ ಚೆನ್ನಾಗಿ ಬೇಯಿಸುತ್ತಾರೆ. ಕುಚ್ಚಗಿ ಅಕ್ಕಿಯ ಅನ್ನಕ್ಕೆ ಮಳ್ವೆ ಪದಾರ್ಥ ಮಿಶ್ರಣ ಮಾಡಿ ಊಟಮಾಡುತ್ತಾರೆ. ಮಳ್ವೆ  ಹೆಚ್ಚು ಉಷ್ಣವಾದ್ದರಿಂದ ಬಸಳೆ ಸೊಪ್ಪು ಹಾಕಿದರೆ ಅದರ ಪ್ರಮಾಣ ಕಡಿಮೆಯಾಗುವುದೆಂಬ ಕಾರಣದಿಂದ ಮಳ್ವೆ ಪದಾರ್ಥದಲ್ಲಿ ಬಸಳೆ ಹಾಕಿದರೆ ಒಳ್ಳೆಯದೆಂದು ಅನುಭವಿಗಳ ಅನಿಸಿಕೆ. ಇದು ಆರೋಗ್ಯವನ್ನು ಸಮಮಟ್ಟದಲ್ಲಿಡುವ ಒಂದು ಪದಾರ್ಥ.
(ಇ) ಮಳ್ವೆಯ ಅಕ್ಕಿ ಹಿಟ್ಟಿನ ಉಂಡೆ :
ಕುಚ್ಚಗಿ ಅಕ್ಕಿಯನ್ನು ಅರೆದು ಹಿಟ್ಟುಮಾಡಿಕೊಂಡು, ಮಳ್ವೆಯ ಒಳ ಭಾಗದಲ್ಲಿನ ಮಾಂಸವನ್ನು ಹಿಟ್ಟಿನೊಳಗಿಟ್ಟು ಚಿಕ್ಕ ಚಿಕ್ಕ ಉಂಡೆ ಮಾಡುತ್ತಾರೆ. ಒಂದು ಪಾತ್ರೆಯಲ್ಲಿ ಗರಂಮಸಾಲೆ, ಹುಳಿ, ಉಪ್ಪು, ಒಣಮೆಣಸು, ಶುಂಠಿ, ಕೊತ್ತಂಬರಿ ಮೊದಲಾದವುಗಳನ್ನು ಹಾಕಿ ಸಾರು ಸಿದ್ಧಮಾಡಿಕೊಳ್ಳುತ್ತಾರೆ. ಅದು ಚೆನ್ನಾಗಿ ಕುದಿಯುತ್ತಿರುವಾಗ ಮಳ್ವೆಯ ಅಕ್ಕಿ ಹಿಟ್ಟಿನ ಉಂಡೆಯನ್ನು ಅದರಲ್ಲಿ ಹಾಕುತ್ತಾರೆ. ಅದು ಚೆನ್ನಾಗಿ ಬೇಯ್ದನಂತರ ಹೊರತೆಗೆದು ಯಾವುದರ ಜೊತೆಯಲ್ಲಿ ತಿನ್ನದ ಪ್ರತ್ಯೇಕವಾಗಿ ತಿನ್ನುತ್ತಾರೆ. ಮಳ್ವೆ, ಮೀನು ಮಾಂಸಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಕ್ಕುವುದರಿಂದ ಸಾಮಾನ್ಯರಿಗೂ ಪ್ರಿಯವಾಗುವ ಆಹಾರವಾಗಿದೆ. ಆದರೆ ಇದನ್ನು ಮೀನಿನಂತೆ ನಿತ್ಯವೂ ಉಪಯೋಗಿಸುವುದಿಲ್ಲ. ಏಕೆಂದರೆ ಅತಿಉಷ್ಣದ ಆಹಾರ ಇದೆಂದು ನಂಬಿರುವುದರಿಂದ ಬಾಣಂತಿಯರಿಗೆ, ಶೀತದಿಂದ ನರಳುವವರಿಗೆ ಔಷಧಿಯ ರೂಪದಲ್ಲಿ ಮಳ್ವೆ ಪದಾರ್ಥವನ್ನು ಕೊಡುವುದು ರೂಢಿಯಲ್ಲಿದೆ.

೩. ಚಟ್ಲಿಯಿಂದ ಸಿದ್ಧಪಡಿಸುವ ಆಹಾರ :
ಸೀಗಡಿಯನ್ನು ಕರಾವಳಿಯ ಜನ ‘ಚಟ್ಲಿ’ ಎಂದು ಕರೆಯುತ್ತಾರೆ. ಎಲ್ಲಕ್ಕಿಂತಲೂ ದುಬಾರಿಯಾದ ಜಲಚರ ಪ್ರಾಣಿಯೆಂದರೆ ‘ಚಟ್ಲಿ’. ಕೆಲವು ಸಂದರ್ಭಗಳಲ್ಲಿ ಚಟ್ಲಿ ಒಂದು ನೂರು ರೂಪಾಯಿಗೆ ಒಂದು ಕೆ.ಜಿ. ಆಗುತ್ತದೆ. ಇಷ್ಟು ತುಟ್ಟಿಯಾಗಲು ಮುಖ್ಯ ಕಾರಣವೆಂದರೆ ಅದು ಶ್ರೀಮಂತರಿಗೆ ಹೆಚ್ಚು ಪ್ರಿಯವಾದದ್ದು ಮತ್ತು ವಿದೇಶಕ್ಕೆ ರಫ್ತಾಗುತ್ತಿರುವುದು. ಚಟ್ಲಿಯಿಂದ ಪಲ್ಯ, ಪದಾರ್ಥ, ಮುಟ್ಕುಳೆ ಎಂಬ ಆಹಾರವನ್ನು ಸಿದ್ಧಪಡಿಸುತ್ತಾರೆ.
(ಅ) ಚಟ್ಲಿ ಪಲ್ಯ :
ಚಟ್ಲಿಯನ್ನು ಮೊದಲು ಶುದ್ಧಗೊಳಿಸಿಕೊಳ್ಳುತ್ತಾರೆ. ಅದಕ್ಕೆ ಸರಿಯಾದ ಅನುಭವಸ್ತರೇ ಬೇಕಾಗುತ್ತದೆ. ಇಲ್ಲದಿದ್ದರೆ ಚಟ್ಲಿಯ  ಕವಚದಲ್ಲಿ ಸ್ವಲ್ಪ ಭಾಗ ಇಲ್ಲವೆ ಕರುಳಲ್ಲಿ ಸ್ವಲ್ಪಭಾಗ ಪಲ್ಯದೊಡನೆ ಸೇರಿಕೊಳ್ಳಬಹುದು. ಮೊದಲು ಹಸಿಚಟ್ಲಿಯ ಕುತ್ತಿಗೆಯ ಹತ್ತಿರ ಕಮಾನಿನಂತೆ ಬಾಗಿಸುತ್ತಾರೆ. ಆಗ ಅದರ ಕವಚ ಕುತ್ತಿಗೆಯ ಬಳಿ ಇಬ್ಭಾಗವಾಗಿ ಒಡೆಯುತ್ತದೆ. ಅದರ ನಂತರ ಅದರ ಮುಖದ ತುದಿಯಲ್ಲಿ ಭದ್ರವಾಗಿ ಹಿಡಿದುಕೊಂಡು ಎಳೆದರೆ ಮುಂದಿನ ಕವಚ  ಹೊರಬರುತ್ತದೆ. ಹಾಗೆಯೇ ಹಿಂತುದಿಯನ್ನೇ ಎಳೆದರೆ ಹಿಂದಿನ ಕವಚ ಬರುತ್ತದೆ. ಅನಂತರ ಅದರ ಬೆನ್ನಿನ ಮೇಲೆ ಉಗುರಿನಿಂದ ಚಿವುಟಿ ಒಳಗಿರುವ ಹಸಿರು ಬಣ್ಣದ ಕರುಳನ್ನು ಹೊರಗೆಳೆದುಕೊಳ್ಳುತ್ತಾರೆ. ಹೀಗೆ ಶುದ್ಧಗೊಳಿಸಿದ ಚಟ್ಲಿಗೆ ಉಪ್ಪು, ಮೆಣಸು, ತೆಂಗಿನಕಾಯಿ, ಅರಿಶಿನ, ಕೊತ್ತಂಬರಿ, ಶುಂಠಿ, ಬೆಳ್ಳುಳ್ಳಿ, ನೀರುಳ್ಳಿ ಮೊದಲಾದ ಪದಾರ್ಥಗಳಿಂದ ತಯಾರಿಸಿದ ಮಸಾಲೆಯೊಂದಿಗೆ ಹಾಕಿ ಮಿಶ್ರಣ ಮಾಡುತ್ತಾರೆ. ಅನಂತರ ಸ್ವಲ್ಪ ನೀರು ಹಾಕಿ ಅದನ್ನು ಬೇಯಿಸುತ್ತಾರೆ. ಇದನ್ನು ರೊಟ್ಟಿಯೊಡನೆ, ಊಟದೊಡನೆ ತಿನ್ನುತ್ತಾರೆ. ಚಟ್ಲಿ ಹೆಚ್ಚು ಉಷ್ಣದ ಆಹಾರವಾಗಿರುವುದರಿಂದ ಬಾಣಂತಿಯರಿಗೆ ಕೊಡುವುದು ಹೆಚ್ಚು. ಇದನ್ನು ರಾಗಿ ಗಂಜಿಯೊಡನೆ ನೆಂಜಿಕೊಂಡು ತಿನ್ನುವ ಪದ್ಧತಿ ರೂಢಿಯಲ್ಲಿದೆ.
(ಆ) ಚಟ್ಲಿ ಪದಾರ್ಥ :
ಮೀನಿನ ಪದಾರ್ಥಕ್ಕೆ ಸಿದ್ಧಮಾಡಿಕೊಳ್ಳುವ ಮಸಾಲೆಯೊಡನೆ ಚಟ್ಲಿಯನ್ನು  ಸೇರಿಸಿ ಬೇಯಿಸಿ ಚಟ್ಲಿ ಪದಾರ್ಥ ತಯಾರು ಮಾಡುತ್ತಾರೆ. ಇದನ್ನು ಕುಚ್ಚಗಿ ಅಕ್ಕಿಯ ಅನ್ನದೊಡನೆ ಕಲಸಿ ತಿನ್ನುತ್ತಾರೆ.
(ಇ) ಮುಟ್ಕೊಳೆ :
ಮುಸ್ಲಿಮರು ಚಟ್ಲಿಯಲ್ಲಿ ‘ಮುಟ್ಕೊಳೆ’ ಎಂಬ ಆಹಾರವನ್ನು ಸಿದ್ಧಪಡಿಸುತ್ತಾರೆ. ಕುಚ್ಚಗಿ ಅಕ್ಕಿಯನ್ನು ಮತ್ತು ತೆಂಗಿನಕಾಯಿಯನ್ನು ಸೇರಿಸಿ ಅರೆದು ಹಿಟ್ಟುಮಾಡಿಕೊಂಡು ಮಸಾಲೆಯ ಒಂದೊಂದು ಚಟ್ಲಿಯನ್ನು ಹಿಟ್ಟಿನ ನಡುವೆ  ಇಟ್ಟು ಉಂಡೆ ಮಾಡುತ್ತಾರೆ. ಅದನ್ನು ಗರಂಮಸಾಲೆ, ಹಸಿಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ತೆಂಗಿನಕಾಯಿ, ಕೊತ್ತಂಬರಿ, ಟೊಮ್ಯಾಟೊ, ಉಪ್ಪು-ಹುಳಿ ಮೊದಲಾದ ಪದಾರ್ಥಗಳ ಮಿಶ್ರಣದಿಂದ ಮಾಡಿದ ಸಾರಿನಲ್ಲಿ, ಆ ಉಂಡೆಗಳನ್ನು  ಬಿಟ್ಟು ಚೆನ್ನಾಗಿ ಬೇಯಿಸುತ್ತಾರೆ. ಅದನ್ನು ರಾತ್ರಿ ಮಾಡಿ ಬೆಳಿಗ್ಗೆ ತಣಿಸಿ ತಿನ್ನುವುದರಿಂದ ಹೆಚ್ಚು ರುಚಿಕೊಡುತ್ತದೆಂದು ಹೇಳುತ್ತಾರೆ. ಇದನ್ನು ವಿಶೇಷ ಸಂದರ್ಭಗಳಲ್ಲಿ, ಬಯಕೆ ಊಟದಲ್ಲಿ ಸಿದ್ಧಮಾಡುವ ಪದ್ಧತಿ ಇದೆ. ಮುಟೊಳೆ ನವಾಯಿತರಿಗೆ ಹೆಚ್ಚು ಪ್ರಿಯವಾದ ಆಹಾರ. ಆದ್ದರಿಂದ ನೆಂಟರು ಮನೆಗೆ ಬಂದಾಗ ಅವರನ್ನು ಸತ್ಕರಿಸಲು ಮುಟೊಳೆ ಮಾಡುವುದುಂಟು.

೪. ಜಳ್ಳಿಯಿಂದ ತಯಾರಿಸುವ ಆಹಾರ :
‘ಏಡಿ’ಯನ್ನು ‘ಜಳ್ಳಿ’ ಎಂದು ಕರೆಯುತ್ತಾರೆ. ಸಮುದ್ರದಲ್ಲಿ ಸಿಗುವ ಜಳ್ಳಿಯ ಸ್ವರೂಪ ಕೆರೆ ಹೊಳ್ಳಗಳಲ್ಲಿ ಸಿಗುವ ಏಡಿಗಿಂತ ಭಿನ್ನವಾಗಿರುತ್ತದೆ. ಸಮುದ್ರದ ಜಳ್ಳಿಯು ಬಣ್ಣ ಬಣ್ಣದಿಂದ ಕೂಡಿದ್ದು ಉದ್ದವಾದ ಕಾಲುಗಳನ್ನು ಹೊಂದಿರುತ್ತದೆ. ಕಲ್ಲಿನ ಪೊಟರೆಗಳಲ್ಲಿ ವಾಸವಾಗಿರುವ ಜಳ್ಳಿಯ ಮೇಲ್ಮೈ ಕಲ್ಲಿನಂತೆಯೇ ಗಟ್ಟಿ ಇರುತ್ತದೆ. ಇಂತಹ ಜಳ್ಳಿಯಿಂದ ಪಲ್ಯ, ಪದಾರ್ಥಗಳನ್ನು ತಯಾರಿಸುತ್ತಾರೆ. ಮೀನಿನ ಪಲ್ಯದ ರೀತಿಯಲ್ಲಿ ಜಳ್ಳಿಯ ಪಲ್ಯವನ್ನು ಮಾಡುತ್ತಾರೆ. ಜಳ್ಳಿಯ ಕವಚವನ್ನು ತೆಗೆದು ಒಳಗಿನ ಭಾಗವನ್ನು ಮಾತ್ರ ಪಲ್ಯ ಮತ್ತು ಪದಾರ್ಥಮಾಡಲು ಬಳಸುತ್ತಾರೆ. ಮೀನಿನ ಪದಾರ್ಥಕ್ಕೆ ಬಳಸುವ ಮಸಾಲೆಯನ್ನೇ ಜಳ್ಳಿ ಪದಾರ್ಥಕ್ಕೂ ಬಳಸುತ್ತಾರೆ.
ಮೇಲಿನ ಆಹಾರ ಸಿದ್ಧಪಡಿಸುವ ಪದ್ಧತಿಗಳನ್ನು ಗಮನಿಸದೆ ಹೆಚ್ಚಿನ ಪದ್ಧತಿಗಳು ಇನ್ನೂ ಪುರಾತನ ರೀತಿಯಲ್ಲೆ ಇರುವುದು ತಿಳಿಯುತ್ತದೆ. ಒಣಮೀನು ಒಣಚಟ್ಲಿ ಸುಡುವ ಪದ್ಧತಿಯು ಅತಿ ಪುರಾತನವಾದದ್ದು. ಅದಕ್ಕಿಂತ ಸ್ವಲ್ಪ ಆಧುನಿಕ ರೀತಿಯದ್ದು ಉಪ್ಪುಹುಳಿಯಿಂದ ಮಾತ್ರ ಪದಾರ್ಥ ಮಾಡುವ ವಿಧಾನ. ಹೀಗೆ ಆಹಾರ ತಯಾರಿಸುವ ವಿವಿಧ ಬಗೆಗಳು ಮಾನವ, ತನ್ನ ನಾಲಿಗೆ ರುಚಿಗಾಗಿ ಮಾಡಿಕೊಂಡ ಅವಷ್ಕಾರಗಳು.
ಕರಾವಳಿಯ ಮಂದಿ ಜಲಚರ ಪ್ರಾಣಿಗಳಿಂದ ತಯಾರಿಸಿದ ಆಹಾರವನ್ನು ಇಷ್ಟಪಡುವಷ್ಟು ಕುರಿ-ಕೋಳಿ. ಮಾಂಸದ ಆಹಾರವನ್ನು ಇಷ್ಟಪಡುವುದಿಲ್ಲ. ಹೆಚ್ಚಾಗಿ ರುಚಿಬದಲಾವಣೆಯ ಉದ್ದೇಶದಿಂದ ಅವರು ಕುರಿ-ಕೋಳಿ ಮಾಂಸವನ್ನು ಇಚ್ಛಿಸುತ್ತಾರೆ. ಮುಸ್ಲಿಮೇತರಲ್ಲಿ ಕುರಿ-ಕೋಳಿಯ ಮಾಂಸದಿಂದ ವಿಶೇಷ ಆಹಾರ ಸಿದ್ಧಪಡಿಸುವುದು ಕಡಿಮೆ ಎಂದೇ ಹೇಳಬಹುದು. ಕರಾವಳಿಯ ಮುಸ್ಲಿಮರು ತಯಾರಿಸುವ ಮಾಂಸಾಹಾರವು ತನ್ನದೇ ಆದ ವಿಶಿಷ್ಟತೆಯನ್ನು ಉಳಿಸಿಕೊಂಡಿದೆ.

೫. ಕೋಳಿ ಮಾಂಸದಿಂದ ತಯಾರಿಸುವ ಆಹಾರ :
(ಅ) ಶ್ಯಾವಿಗೆಯ ಚಿಕನ್ ಬಿರ್ಯಾನಿ :
ಚೆನ್ನಾಗಿ ಶುದ್ಧಗೊಳಿಸಿದ ಕೋಳಿ ಮಾಂಸವನ್ನು ಗರಂಮಸಾಲೆ, ಹಸಿಶುಂಠಿ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಒಣಮೆಣಸಿನ ಪುಡಿ, ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ತೆಂಗಿನಕಾಯಿ, ಉಪ್ಪು ಮೊದಲಾದ ಮಸಾಲೆಯೊಂದಿಗೆ ತುಪ್ಪದ ಒಗ್ಗರಣೆ ಕೊಟ್ಟು ಬೇಯಿಸಿಕೊಳ್ಳುತ್ತಾರೆ. ಅನಂತರ ಒಂದು ಪಾತ್ರೆಯಲ್ಲಿ ಶ್ಯಾವಿಗೆಯನ್ನು ಕಾಜು, ಒಣದ್ರಾಕ್ಷಿ, ಲವಂಗದೊಡನೆ ತುಪ್ಪದಲ್ಲಿ ಹುರಿದುಕೊಳ್ಳುತ್ತಾರೆ. ಕೋಳಿಮಾಂಸದ ಮಸಾಲೆಯಿರುವ ಪಾತ್ರೆಯಲ್ಲಿ ಉಪ್ಪು ಮೆಣಸು ಹಾಕಿ ನೀರಿನಲ್ಲಿ ಬೇಯಿಸಿದ ಶ್ಯಾವಿಗೆಯನ್ನು ಹಾಕುತ್ತಾರೆ. ಕೋಳಿಮಾಂಸದ ಮಸಾಲೆಯನ್ನು ಮೊದಲು ತಟ್ಟೆಯಲ್ಲಿ ಹಾಕಿ ಅದರ ಮೇಲೆ ಶ್ಯಾವಿಗೆ ಹಾಕುತ್ತಾರೆ. ತಿನ್ನುವವರು ಅವೆರಡನ್ನು ವಿಶೇಷವಾಗಿ ಶ್ಯಾವಿಗೆಯ ಚಿಕನ್ ಬಿರ್ಯಾನಿ ತಯಾರಿಸುವುದು ವಾಡಿಕೆ.
(ಆ) ಕೋಳಿ ಮಾಂಸದ ಮಸಾಲೆ ರೊಟ್ಟಿ :
ಮೊದಲು ಬೆಳ್ಳುಳ್ಳಿ, ಹಸಿಮೆಣಸು, ಕೊತ್ತಂಬರಿ, ಈರುಳ್ಳಿ, ಅರಿಶಿನ, ಹಸಿಶುಂಠಿ, ಗರಂಮಸಾಲೆ ಮೊದಲಾದ ಪದಾರ್ಥಗಳನ್ನು ಅರೆದು ಮಸಾಲೆ ಸಿದ್ಧಮಾಡಿಕೊಳ್ಳುತ್ತಾರೆ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಮಿಶ್ರಣ ಮಾಡುತ್ತಾರೆ. ಕೋಳಿಮಾಂಸವನ್ನು ಚಿಕ್ಕ ಚಿಕ್ಕ ಚೂರನ್ನಾಗಿ ಮಾಡಿ ಹಸಿಬಟಾಣಿ, ಕ್ಯಾರಟ್‌ನ್ನು ಮಸಾಲೆಯೊಂದಿಗೆ ಚೆನ್ನಾಗಿ ಬೇಯಿಸುತ್ತಾರೆ. ಮೈದಾಹಿಟ್ಟಿನ ರೊಟ್ಟಿಯಲ್ಲಿ ಆ ಮಸಾಲೆಯನ್ನು ತುಂಬಿ ತುಪ್ಪದಲ್ಲಿ ಅದನ್ನು ಹುರಿಯುತ್ತಾರೆ. ಇದು ವಿಶಿಷ್ಟ ರುಚಿಕೊಡುವ ಶ್ರೀಮಂತರ ರೊಟ್ಟಿಯಾಗಿರುತ್ತದೆ. ಸಾಮಾನ್ಯನಿಗೆ ಇದು ಕನಸಿನ ರೊಟ್ಟಿ ಮಾತ್ರವಾಗಬಹುದು.
(ಇ) ಕೋಳಿ ಮಾಂಸದ ಕರ್ಚಿಕಾಯಿ :
ಕೋಳಿ ಮಾಂಸವನ್ನು ಮೇಲೆ ತಿಳಿಸಿರುವ ಮಸಾಲೆಯೊಂದಿಗೆ ಬೇಯಿಸಿ "ಸುಕ್ಕ" ತಯರಿಸಿಕೊಂಡು ಅದನ್ನು ಮೈದಾಹಿಟ್ಟಿನ ಚಪಾತಿಯ ನಡುವೆ ಇಟ್ಟು ಕರ್ಚಿಕಾಯಿಯಂತೆ ಮಡಚುತ್ತಾರೆ. ಅನಂತರ ಅದನ್ನು ಎಣ್ಣೆಯಲ್ಲಿ ಕರಿಯುತ್ತಾರೆ. ವಿಶೇಷ ಸಂದರ್ಭದಲ್ಲಿ ಮಾತ್ರ ತಯಾರಿಸುವ ಆಹಾರ ಇದಾಗಿದೆ.
(ಈ) ಕೋಳಿ ಮಾಂಸದ ಅರಿಶಿನದ ಎಲೆಯ ಸಾರಿ :
ಮೇಲೆ ತಿಳಿಸಿದ ರೀತಿಯಲ್ಲಿ ಕೋಳಿಮಾಂಸದ ಸುಕ್ಕ ತಯಾರಿಸಿಕೊಂಡು ಅದನ್ನು ಅರಿಶಿನದ ಎಲೆಯ ಮೇಲೆ ತಟ್ಟಿದ ಅಕ್ಕಿ ರೊಟ್ಟಿಯ ನಡುವೆ ಇಟ್ಟು ಕರ್ಚಿಕಾಯಿಯಂತೆ ಮಸಾಲೆಯನ್ನು ಮುಚ್ಚುತ್ತಾರೆ. ಅರಿಶಿನದ ಎಲೆಯ ಸಮೇತವಾಗಿ ಅದನ್ನು ಇಡ್ಲಿ ಬೇಯಿಸುವ ಪಾತ್ರೆಯಲ್ಲಿಟ್ಟು ನೀರಿನ ಆವಿಯಲ್ಲಿ ಬೇಯಿಸುತ್ತಾರೆ. ಅನಂತರ ಅದನ್ನು ಹೊರತೆಗೆದು ಅರಿಶಿನದ ಎಲೆಯನ್ನು ಸಿಪ್ಪೆಯಂತೆ ಸುಲಿದು ಒಳಗಿನ ಸಾರಿಯನ್ನು ತಿನ್ನುತ್ತಾರೆ. ಅರಿಶಿನದ ಎಲೆ ವಿಷಕ್ರಿಮಿಗಳನ್ನು ಸಾಯಿಸುವಂತಹ ಶಕ್ತಿಪಡೆದಿರುವುದರಿಂದ ಅಕ್ಕಿಹಿಟ್ಟಿನಲ್ಲಿ ಏನಾದರೂ ವಿಷಕ್ರಿಮಿಗಳಿದ್ದರೆ ಸಾಯುವುದಲ್ಲದೆ ಅದು ಹೊಟ್ಟೆಯಲ್ಲಿನ ವಿಷಕ್ರಿಮಿಗಳನ್ನು ಸಹ ನಾಶಪಡಿಸುತ್ತವೆ ಎಂದು ಹೇಳುತ್ತಾರೆ.
(ಉ) ಮಸ್ಲಾ ಗುಡಿ : (ಮಸಾಲೆ ತುಂಬಿದ ಸುರುಳಿ ದೋಸೆ)
ಅಕ್ಕಿಹಿಟ್ಟನ್ನು ದೋಸೆಗಾಗಿ ಸಿದ್ಧಮಾಡಿಕೊಂಡು ಅದರಲ್ಲಿ ಕೋಳಿ ಮೊಟ್ಟೆಯನ್ನು ಮಿಶ್ರಣ ಮಾಡಿಕೊಳ್ಳುತ್ತಾರೆ. ಪ್ರತ್ಯೇಕವಾಗಿ ಕೋಳಿ ಮಾಂಸವನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅದನ್ನು ಕೋಳಿ ಮಾಂಸದ ಕರ್ಚಿಕಾಯಿಗೆ ಹಾಕುವ ಮಸಾಲೆಯೊಂದಿಗೆ ಬೇಯಿಸಿಕೊಳ್ಳುತ್ತಾರೆ.  ಸಿದ್ಧಪಡಿಸಿಟ್ಟುಕೊಂಡ ಹಿಟ್ಟಿನಿಂದ ದೋಸೆ ಮಾಡಿ ಅದರ ಮೇಲೆ ಅರಿಶಿನ, ಉಪ್ಪು, ಒಣಮೆಣಸು ಹಾಕಿ ಒಗ್ಗರಣೆ ಹಾಕಿದ ತುರುಬಿದ ತೆಂಗಿನಕಾಯಿಯನ್ನು ಹಾಕಿ ಅದರ ಮೇಲೆ ಕೋಳಿ ಮಸಾಲೆಯನ್ನು ಹಾಕಿ ದೋಸೆಯನ್ನು ಸುರುಳಿ ಸುರುಳಿಯಾಗಿ ಸುತ್ತುತ್ತಾರೆ. ಈ ಸುರುಳಿ ದೋಸೆಯನ್ನು ಕರ್ಚಿಕಾಯಿ ಕಡಿದು ತಿನ್ನುವಂತೆ ತಿನ್ನುತ್ತಾರೆ. ಇದೂ ಸಹ ವಿಶೇಷ ಸಂದರ್ಭಗಳಲ್ಲಿ ತಯಾರಿಸುವ ಆಹಾರವಾಗಿದೆ.
(ಊ) ಮುಟಕುಳೆ (ಕೋಳಿ ಮಾಂಸದ ಅಕ್ಕಿ ಹಿಟ್ಟಿನುಂಡೆ)
ಚಟ್ಲಿಯ ಮುಟ್ನುಳೆಯಂತೆಯೇ ಕೋಳಿ ಮಾಂಸದ ಮುಟ್ಕುಳೆಯನ್ನು ತಯಾರಿಸುತ್ತಾರೆ. ಆದರೆ ಚಟ್ಲಿಯ ಬದಲಾಗಿ ಹಿಟ್ಟಿನಲ್ಲಿ ಕೋಳಿಮಾಂಸವನ್ನು ಇಡದೆ ಕೋಳಿ ಮಾಂಸದ ಕುರ್ಮಾದಲ್ಲಿ ತೆಂಗಿನಕಾಯಿ ಮತ್ತು ಕುಚ್ಚಗಿ ಅಕ್ಕಿ ರುಬ್ಬಿ ಮಾಡಿದ ಹಿಟ್ಟಿನ ಉಂಡೆಯನ್ನು ಹಾಕಿ ಬೇಯಿಸುತ್ತಾರೆ. ಅದು ಕುರ್ಮಾದಲ್ಲಿ ಚೆನ್ನಾಗಿ ಬೆಂದು ರುಚಿಕರವಾಗಿರುತ್ತದೆ. ಬೆಂದ ಹಿಟ್ಟಿನ ಉಂಡೆಯೊಡನೆ ಕೋಳಿಮಾಂಸದ ಚೂರುಗಳನ್ನು ಮಿಶ್ರಣಮಾಡಿಕೊಂಡು ತಿನ್ನುತ್ತಾರೆ. ವಿಶೇಷ ಸಂದರ್ಭದಲ್ಲಿ ಮಾತ್ರ ಈ ಆಹಾರವನ್ನು ತಯಾರಿಸುತ್ತಾರೆ.
(ಋ)ಮಸ್ಲಾ ವಡೆ :
ಮೊದಲು ಕುಚ್ಚಿಗಿ ಅಕ್ಕಿಯನ್ನು ರುಬ್ಬಿ ಹಿಟ್ಟು ತಯಾರಿಸುತ್ತಾರೆ. ಅದಕ್ಕೆ ಕೋಳಿಮೊಟ್ಟೆಹಾಕಿ ಕಲಸುತ್ತಾರೆ. ಆ ಹಿಟ್ಟನ್ನು ಲಾಡುವಿನ ಉಂಡೆಯಂತೆ ಉಂಡೆಗಟ್ಟುತ್ತಾರೆ. ಅನಂತರ ಕೋಳಿ ಮಾಂಸದ ಸುಕ್ಕವನ್ನು ಉಂಡೆಗೆ ರಂಧ್ರಮಾಡಿ ಅದರಲ್ಲಿ ತುಂಬಿ ಹಿಟ್ಟಿನಿಂದ ಅದರ ಬಾಯಿಯನ್ನು ಮುಚ್ಚಿ ಅದನ್ನು ಇಡ್ಲಿಯಂತೆ ನೀರಿನ ಆವಿಯಲ್ಲಿ ಬೇಯಿಸುತ್ತಾರೆ. ಅನಂತರ ಆ ಮಸ್ಲಾವಡೆಯನ್ನು ಆಲೂಗಡ್ಡೆಯ ವಡೆಯಂತೆ ಕಚ್ಚಿ ತಿನ್ನುತ್ತಾರೆ. ಹೀಗೆಯೇ ಕುರಿಮಾಂಸದಿಂದಲೂ ಮೇಲಿನ ಎಲ್ಲಾ ಬಗೆಯ ಆಹಾರವನ್ನು ಸಿದ್ಧಪಡಿಸುವುದುಂಟು.

೬. ಕೋಳಿ ಮೊಟ್ಟೆಯಿಂದ ಸಿದ್ಧಪಡಿಸುವ ಆಹಾರ :
ಹಿಂದೆ ಕೋಳಿ ಮೊಟ್ಟೆಯನ್ನು ಪುಷ್ಟಿದಾಯಕ ಆಹಾರವನ್ನಾಗಿ ಮತ್ತು ಔಷಧಿಯ ಸ್ವರೂಪದಲ್ಲಿ ಉಪಯೋಗಿಸುತ್ತಾರೆ. ಆದರೆ ಇಂದು ಅದನ್ನು ರುಚಿ ಹೆಚ್ಚಿಸಲು ಮಾಧ್ಯಮವನ್ನಾಗಿ ಬಳಸಲಾಗುತ್ತಿದೆ.
(ಅ) ಕೋಳಿ ಮೊಟ್ಟೆಯ ಬ್ರೆಡ್ :
ಕರಾವಳಿಯಲ್ಲಿ ಬ್ರೆಡ್‌ಗೆ ಹೊಸ ರುಚಿತುಂಬುವಂಥ ಆಹಾರವನ್ನು ಸಿದ್ಧಪಡಿಸುವುದು ಹೆಚ್ಚಾಗಿ ಕಂಡುಬರುತ್ತದೆ. ಬೇಕರಿಯಿಂದ ತಂದ ಬ್ರೆಡ್ಡನ್ನು ತುಂಡು ತುಂಡಾಗಿ ಕೊಯ್ದುಕೊಳ್ಳುತ್ತಾರೆ. ಪ್ರತ್ಯೇಕವಾಗಿ ಒಂದು ಬಟ್ಟಲಿನಲ್ಲಿ ಹಾಲಿಗೆ ಸಕ್ಕರೆ ಹಾಕಿ ಅದಕ್ಕೆ ಹಸಿಮೊಟ್ಟೆಯನ್ನು ಒಡೆದು ಹಾಕಿ ಚೆನ್ನಾಗಿ ಮಿಶ್ರಣಮಾಡಿಕೊಳ್ಳುತ್ತಾರೆ. ಬ್ರೆಡ್ಡಿನ ತುಂಡನ್ನು ಆ ಮಿಶ್ರಣದಲ್ಲಿ ಚೆನ್ನಾಗಿ ಮುಳುಗಿಸಿ ಕಾವಲಿ ಮೇಲೆ ಎಣ್ಣೆ ಹಾಕಿ ಹುರಿಯುತ್ತಾರೆ. ಇದು ಬಹಳ ಬೇಗ ಸಿದ್ಧವಾಗುವ ಆಹಾರ. ಮನೆಯಲ್ಲಿ ಹೆಂಗಸರಿಲ್ಲದಾಗ ಅಥವಾ ಹೆಂಗಸರಿಗೆ ಅಡಿಗೆ ಮಾಡಲು ಬೇಸರವಾದಾಗ, ಇಲ್ಲವೆ ಯಾರಾದರೂ ಅನಿರೀಕ್ಷೀತವಾಗಿ ಆಗಂತುಕರು ಆಕ್ರಮಣಮಾಡಿದಾಗ ಕೋಳಿ ಮೊಟ್ಟೆಯ ಬ್ರೆಡ್ಡನ್ನು ಸಿದ್ಧಪಡಿಸುವುದು ಹೆಚ್ಚು. ಏಷ್ಟೋ ಸಂದರ್ಭಗಳಲ್ಲಿ ಈ ಆಹಾರ ಆಪದ್ಬಾಂಧವನಾಗಿ ಕೆಲಸಮಾಡುವುದುಂಟು. ಪ್ರಯಾಣದಲ್ಲಿದ್ದಾಗ, ಕಚೇರಿಗೆ ಬೇಗ ಹೋಗಬೇಕಾಗಿ ಬಂದಾಗ ಪ್ರವಾಸಕ್ಕೆ ಹೋದಾಗ ಇದು ಹಸಿವಾರಿಸುವ ಆಹಾರವಾಗಿ ಕೆಲಸಮಾಡುತ್ತದೆ.
ಹೀಗೆಯೇ ಕೋಳಿ ಮೊಟ್ಟೆಯನ್ನು ಚಪಾತಿ ಹಿಟ್ಟಿನೊಡನೆ ಮಿಶ್ರಣವಾಗಿ ಚಪಾತಿ ತಯಾರಿಸುವ ಪದ್ಧತಿ ಇದೆ. ಆದರೆ  ಕರಾವಳಿಯಲ್ಲಿ ಚಪಾತಿಯ ಚಲಾವಣೆಗಿಂತ ಅಕ್ಕಿರೊಟ್ಟಿಯ ಚಲಾವಣೆ ಹೆಚ್ಚಾಗಿದೆ. ಇಲ್ಲಿನ ಜನ ಪ್ರತಿಯೊಂದಕ್ಕೂ ಅಕ್ಕಿ ಬಳಸುವದೇ ಹೆಚ್ಚು. ಅದರಲ್ಲೂ ಕುಚ್ಚಿಗಿ ಅಕ್ಕಿಯ ಬಳಕೆ ಅತಿಯಾಗಿದೆ.
ಮಾನವ ಮೊದಲಿಗೆ ಮಾಂಸವನ್ನು ಹಸಿವಾರಿಸುವ ಉದ್ದೇಶದಿಂದ ಆಹಾರವನ್ನಾಗಿಸಿಕೊಂಡ. ಆದರೆ ಇಂದು ಮಾಂಸಾಹಾರ ಎಷ್ಟರಮಟ್ಟಿಗೆ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿದೆ ಎಂದರೆ ಅದರ ಬೆಲೆ ಗಗನಕ್ಕೇರುತ್ತಿದೆ. ಆದರೂ ಮಾಂಸಾಹಾರಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವೈದ್ಯರ ದೃಷ್ಟಿಯಲ್ಲಿ ಮಾಂಸಾಹಾರ ಆರೋಗ್ಯಕ್ಕೆ ಹಾನಿಕಾರಕ. ಆದರೂ ಇಂದು ಅದೇ ಸ್ಥಾನಮಾನ ಕಾಪಾಡುವ ಆಹಾರವಾಗಿದೆ.

ಸಸ್ಯಾಹಾರ 
ಮಾಂಸವನ್ನು ಆಹಾರವನ್ನಾಗಿ ಸ್ವೀಕರಿಸುವ ಮುನ್ನ ಮಾನವ ತನ್ನ ಹಸಿವಿಗೆ ಸಸ್ಯಗಳ ಕಡೆಗೆ ದೃಷ್ಟಿಹಾಯಿಸಿದ. ಎಲೆ ಹಣ್ಣು-ಕಾಯಿ, ಗೆಡ್ಡೆ, ಗೆಣಸು ಮೊದಲಾದವು ಮೊಟ್ಟಮೊದಲು ಅವನ ಆಹಾರಕ್ಕೆ ಸಾಮಗ್ರಿಗಳಾದವು. ಇದರಿಂದ ಅವನು ತನ್ನ ಹಸಿವನ್ನಾರಿಸಿಕೊಂಡದ್ದು ಮಾತ್ರವಲ್ಲದೆ ತನ್ನ ಆರೋಗ್ಯವನ್ನು ಕಾಪಾಡಿಕೊಂಡು ಇಂತಹ ಅತಿಪುರಾತನ ಆಹಾರವಾದ ಸಸ್ಯಾದಿ ಗೆಡ್ಡೆಗೆಣಸುಗಳು ಇಂದಿಗೂ ಮಾನವನ ಮನದಲ್ಲಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿವೆ.
೧. ತಂಬುಳಿಗಳು :
ಕರಾವಳಿಯ ಜನರು ತಂಬುಳಿಯನ್ನು ಊಟಕ್ಕೆ ಬಳಸುವುದು ಹೆಚ್ಚು. ತಂಬುಳಿಯಲ್ಲಿ ವಿವಿಧ ಬಗೆಗಳಿವೆ. ಉಷ್ಣವಲಯದಲ್ಲಿ ತಂಬುಳಿ ತಿಂದರೆ ತಂಪಾಗಿರುತ್ತದೆ ಎಂದು ಇಲ್ಲಿನ ಜನಪದರ ನಂಬಿಕೆ. ತಂಪಾದ ಹುಳಿಯೇ ತಂಬುಳಿ ಆಯಿತೆಂದು ಹೇಳುತ್ತಾರೆ. ಆದರೆ ಹುಳಿ ತಂಪಾಗಿರದೆ ಕಹಿಯಾಗಿ, ಸಿಹಿಯಾಗಿ, ಒಗರಾಗಿ ಸಹ ಇರುತ್ತದೆ. ತಂಬುಳಿಗೆ ಬಳಸುವ ಪದಾರ್ಥಗಳೆಲ್ಲಾ ಸಸ್ಯಮೂಲದವು. ಊಟದ ಮೊದಲಲ್ಲಿ ಇಲ್ಲವೆ ಮುಕ್ತಾಯದಲ್ಲಿ ಒಂದೆರಡು ತುತ್ತಾದರೂ ತಂಬುಳಿಯೊಂದಿಗೆ ಉಂಡರೆ ಒಳಿತೆಂದು ಅನುಭವಿಗಳ ಅನಿಸಿಕೆ. ಆದ್ದರಿಂದಲೇ ಅವರು ತಂಬುಳಿಯಲ್ಲಿ ಪ್ರಮುಖವಾಗಿ ಮೊದಲುಂಬ ತಂಬುಳಿ ಕಡೆಗುಂಬ ತಂಬುಳಿಯೆಂದು ಎರಡು ವಿಧ ಮಾಡಿರುವುದು. ತಂಬುಳಿ ತಯಾರಿಸಲು ಬೇಕಾಗಿರುವ ಪದಾರ್ಥಗಳೆಂದರೆ :
ಊಟದ ಪ್ರಾರಂಭದಲ್ಲಿ, ಉಣ್ಣುವ ತಂಬುಳಿಗೆ ಒಂದು ಚಮಚ ಜೀರಿಗೆ, ಒಂದು ಹಿಡಿಯಷ್ಟು ತೆಂಗಿನಕಾಯಿಯ ಸುಳಿ, ಹನ್ನೆರಡುಕಾಳು ಮೆಣಸು, ಬೆಣ್ಣೆ ತೆಗೆದ ಹುಳಿಮಜ್ಜಿಗೆ ಅರ್ಧ ಕಪ್ಪಿನಷ್ಟು, ಇದನ್ನೆಲ್ಲಾ ಮಿಶ್ರಣಮಾಡಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಬೇಕು. ಸಾಧ್ಯವಾದರೆ ಒಂದು ಚಮಚ ತುಪ್ಪ ಇಲ್ಲವೆ ಕೊಬ್ಬರಿಎಣ್ಣೆ ಸೇರಿಸಬೇಕಾಗುತ್ತದೆ. ಹೀಗೆ ಮಿಶ್ರಣ ಮಾಡಿ ತಯಾರಿಸಿದ ತಂಬುಳಿಯಲ್ಲಿ ಕಲಿಸಿಕೊಂಡು ಮೊದಲು ಅನ್ನ ಊಟಮಾಡಿದರೆ ಅನ್ನ ಬೇಗ ಜೀರ್ಣವಾಗುವುದೆಂಬ ನಂಬಿಕೆ ಇದೆ.
ಊಟ ಮುಕ್ತಾಯವಾಗುವ ಸಂದರ್ಭದಲ್ಲಿ ಉಣ್ಣುವ ತಂಬುಳಿಗೆ ಅರ್ಧಚಮಚ ಉದ್ದಿನಬೇಳೆ, ಒಂದು ಒಣಮೆಣಸಿನಕಾಯಿ, ಸ್ವಲ್ಪ ಸಾಸಿವೆ. ಸಾಸಿವೆಯನ್ನು ಎಣ್ಣೆಯಲ್ಲಿ ಕಾಯಿಸಿ ಅದನ್ನು ತಂಬುಳಿಯಲ್ಲಿ ಅದ್ದಲಾಗುವುದು.
ಹೀಗೆ ವಿವಿಧ ಮಿಶ್ರಣದಿಂದ ತಯಾರಿಸಿದ ತಂಬುಳಿಯಲ್ಲಿ ಹಲವು ವಿಧಗಳಿವೆ.
೧. ಚೊಗರು ಕುಡಿಗಳ ತಂಬುಳಿ
೨. ಗಜ್ಜುಗದೆಲೆಯ ತಂಬುಳಿ
೩. ನೆಲನೆಲ್ಲಿ ತಂಬುಳಿ
೪. ತಗಟೆ ಕುಡಿಯ ತಂಬುಳಿ
೫. ಹಾಡೆ ಕರೆಯ ತಂಬುಳಿ
೬. ನಾಚಿಕೆ ಕುಡಿಯ ತಂಬುಳಿ
೭. ಬಿಲ್ವಪತ್ರೆಯ ತಂಬುಳಿ
೮. ತೊಂಡೆ ಸೊಪ್ಪಿನ ತಂಬುಳಿ
೯. ಒಂದೆಗಲದ ತಂಬುಳಿ
೧೦. ಹೂವುಗಳ ತಂಬುಳಿ
೧೧. ಗಡ್ಡೆಗಳ ತಂಬುಳಿ
೧೩. ಕೂಗ್ಲದ ತಂಬುಳಿ (ಮಾವಿನಗೊರಟೆಯ ತಂಬುಳಿ೦
೧೪. ಕಾಳುಗಳ ತಂಬುಳಿ
೧೫. ಜೀರಿಗೆ ಕೊತ್ತಂಬರಿ ತಂಬುಳಿ
೧೬. ಮೆಂತೆಕಾಳಿನ ತಂಬುಳಿ
೧೭. ಕಸಕಸೆ ತಂಬುಳಿ
೧೮. ಸಾಸಿವೆ ತಂಬುಳಿ
೧೯. ಬಿಳಿಎಳ್ಳಿನ ತಂಬುಳಿ
೨೦. ಉಳ್ಳಾಗಡ್ಡೆಯ ತಂಬುಳಿ
೨೧. ಹಣ್ಣುಗಳ ತಂಬುಳಿ
೨೨. ಮಾವಿನ ಮಿಡಿ ತಂಬುಳಿ
೨೩. ಮುರುಗಲ ಹುಳಿ ತಂಬುಳಿ
೨೪. ಕಾಯಿ ತಂಬುಳಿ
೨೫. ಕೊರಸಗಾಯಿ ತಂಬುಳಿ
೨೬. ಕೊತ್ತಂಬರಿ ತಂಬುಳಿ
೨೭. ಕೆಂಪು ತಂಬುಳಿ (ಒಣಮೆಣಸಿನ) ಇತ್ಯಾದಿ
ಇವುಗಳಲ್ಲಿ ಮುರುಗಲ ಹುಳಿ ತಂಬುಳಿಯ ವರೆಗಿನ ತಂಬುಳಿಗಳನ್ನು ಊಟದ ಪ್ರಾರಂಭದಲ್ಲಿ ಉಣ್ಣುತ್ತಾರೆ. ಅನಂತರದ ತಂಬುಳಿಗಳನ್ನು ಊಟದ ಮುಕ್ತಾಯದ ಸಂದರ್ಭದಲ್ಲಿ ಸೇವಿಸುತ್ತಾರೆ.
(೧) ಚೊಗರು ಕುಡಿಗಳ ತಂಬುಳಿ : ಇದಕ್ಕೆ ಪೇರಲೆಯ ಚಿಗುರು, ದಾಳಿಂಬದ, ತಗಟೆಯ, ನಕ್ಕರಕ ಮತ್ತು ಎಲಬದಿಗೆ ಬೋಳ್ತಟ್ಲೆ ಎಂಬ ಗಿಡಗಳ ಕುಡಿಗಳನ್ನೇ ಸೇರಿಸಿ ಅದರೊಡನೆ ಜೀರಿಗೆ ಮೆಣಸನ್ನು ಎಣ್ಣೆಯಲ್ಲಿ ಹುರಿದುಕೊಂಡು ಮಿಶ್ರಣ ಮಾಡಬೇಕು. ಅವುಗಳನ್ನೆಲ್ಲಾ ಚೆನ್ನಾಗಿ ಅರೆದು ಪುಡಿಮಾಡಿ ಆ ಪುಡಿಯನ್ನು ಉಪ್ಪುಬೆಲ್ಲ ಸೇರಿಸಿದ ಮಜ್ಜಿಗೆಯಲ್ಲಿ ಕದಡಿದರೆ ಅದು ಚೊಗರು ಕುಡಿಗಳ ತಂಬುಳಿಯಾಯಿತು. ಇದರಲ್ಲಿ ಸೇರಿಸಿದ ಎಲ್ಲಾ ಮಿಶ್ರಣಗಳು ಒಂದಲ್ಲಾ ಒಂದು ಬಗೆ ಔಷಧಿಯ ಗುಣವನ್ನು ಹೊಂದಿರುವಂತಹವಾದ್ದರಿಂದ ಅವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿವೆ.
(೨) ಗಜ್ಜುಗದೆಲೆಯ ತಂಬುಳಿ : ಗಜ್ಜುಗದ ಎಲೆ, ಹಸಿಜೀರಿಗೆ, ಹಸಿಮೆಣಸಿನಕಾಳು, ಕಾಯಿಸುಳಿ -ಇವುಗಳನ್ನೆಲ್ಲಾ ಅರೆದು ಉಪ್ಹಾಕಿದ ಮಜ್ಜಿಗೆಯಲ್ಲಿ ಬೆರೆಸಬೇಕು. ಇದನ್ನು ಸಾಮಾನ್ಯವಾಗಿ ಬಾಣಂತಿಯರಿಗೆ ಬಡಿಸುತ್ತಾರೆ. ಗಜ್ಜುಗದ ಎಲೆ ಹೊಟ್ಟೆ ಹುಳುವಿನ ನಾಶಕ್ಕೆ ದಿವೌಷಧವೆನ್ನತ್ತಾರೆ.
(೩) ನೆಲನೆಲ್ಲಿ ತಂಬುಳಿ : ಸ್ವಲ್ಪ ನೆಲನೆಲ್ಲಿ ಕುಡಿಯನ್ನು ಎಣ್ಣೆಯಲ್ಲಿ ಹುರಿದ ಜೀರಿಗೆ ಮತ್ತು ಗಸಗಸೆಯೊಂದಿಗೆ ಕೂಡಿಸಿ ಅದರೊಡನೆ ಕಾಯಿಸುಳಿ ಸೇರಿಸಿ ಅರೆದು ಅದನ್ನು ಉಪ್ಪುಸೇರಿಸಿದ ಮಜ್ಜಿಗೆಯಲ್ಲಿ ಮಿಶ್ರಣಮಾಡುತ್ತಾರೆ.
(೪) ತಗಟೆ ಕುಡಿಯ ತಂಬುಳಿ : ತಗಟೆ ಕುಡಿಯನ್ನು ಒಂದು ಚಮಚ ಜೀರಿಗೆಯೊಂದಿಗೆ ತುಪ್ಪದಲ್ಲಿ ಹುರಿದು ಅದಕ್ಕೆ ನಾಲ್ಕಾರು ಮೆಣಸಿನ ಕಾಳು, ಸ್ವಲ್ಪ ಕಾಯಿಸುಳಿ, ರುಚಿಗೆ, ತಕ್ಕಷ್ಟು ಉಪ್ಪು ಇವುಗಳನ್ನೆಲ್ಲಾ ಅರೆದು ಆ ಮಿಶ್ರಣವನ್ನು ಹುಣಸೆ ಹಣ್ಣಿನ ಹುಳಿಯಲ್ಲಿ ಸೇರಿಸಬೇಕು. ರಕ್ತಬೇಧಿಗೆ ಇದು ಔಷಧವೆಂದು ಜನಪದ ವೈದ್ಯರ ನಂಬಿಕೆ.
ಇದೇ ರೀತಿ ಮೇಲೆ ತಿಳಿಸಿರುವ ತಂಬುಳಿಗಳ ಎಲೆಗಳೊಡನೆ ಕಾಳುಮೆಣಸು, ಜೀರಿಗೆ, ಉಪ್ಪುಗಳ ಮಿಶ್ರಣವನ್ನು ತಯಾರಿಸಿ ಮಜ್ಜಿಗೆಯಲ್ಲಿ ಸೇರಿಸಿ ಊಟದೊಡನೆ ಸೇವಿಸುತ್ತಾರೆ.
ಹೂವುಗಳ ತಂಬುಳಿ ತಯಾರಿಸುವಾಗ ದಾಸವಾಳದ ಹೂ, ಕುಸುಮಮಾಲೆ ಮೊಕ್ಕೆ ಹೂಗಳನ್ನೆಲ್ಲಾ ಸೇರಿಸಿ ಅರೆದು ಅದನ್ನು ಉಪ್ಪು ಬೆರೆಸಿದ ಮಜ್ಜಿಗೆಯಲ್ಲಿ ಸೇರಿಸುತ್ತಾರೆ.
ಗಡ್ಡೆಗಳ ತಂಬುಳಿಯಲ್ಲಿ ಅರ್ತಿಗಚಂಡೆಗಡ್ಡೆ, ಮಧ್ಯಾಹ್ನ ಮಲ್ಲಿಗೆ ಗಡ್ಡೆ, ಇವೆರಡೂ ಸೇರಿಸಿ ಕಾಳುಮೆಣಸು, ಜೀರಿಗೆ, ತೆಂಗಿನಕಾಯಿ ಸುಳಿಯೊಂದಿಗೆ ಅರೆದು ಆ ಮಿಶ್ರಣವನ್ನು ಉಪ್ಪು ಸೇರಿಸಿದ ಮಜ್ಜಿಗೆಯಲ್ಲಿ ಸೇರಿಸುತ್ತಾರೆ.
ಕೂಗ್ಗದ ತಂಬುಳಿಯಲ್ಲಿ ಮಾವಿನ ಗೊರಟೆಯ ತಿರುಳನ್ನು ಜೀರಿಗೆ, ಕಾಳು ಮೆಣಸಿನೊಡನೆ ಸೇರಿಸಿ ಅರೆದು ಅದಕ್ಕೆ ಕಾಯಿಸುಳಿಯ ಪುಡಿ ಸೇರಿಸಿ ಉಪ್ಪು ಸೇರಿಸಿ ಬೆಲ್ಲ ಸೇರಿದ ಮಜ್ಜಿಗೆಯಲ್ಲಿ ವಿಶ್ರಣಮಾಡುತ್ತಾರೆ.
ಸಿಪ್ಪೆಗಳ ತಂಬುಳಿಯನ್ನು ತಯಾರಿಸುವಾಗ ಲಿಂಬೆಯ ಸಿಪ್ಪೆಯನ್ನು ಜೀರಿಗೆ, ಕಾಳು ಮೆಣಸಿನೊಡನೆ ಸೇರಿಸಿ ಎಣ್ಣೆಯಲ್ಲಿ ಗುರಿದು ಅದನ್ನು ಅರೆದು ಮಿಶ್ರಣ ಸಿದ್ಧಮಾದಿಕೊಂಡು ಅದಕ್ಕೆ ಪುಡಿಮಾದಿದ ಕಾಯಿಸುಳಿ ಸೇರಿಸಿ ಆ ಮಿಶ್ರಣವನ್ನೆಲ್ಲಾ ಉಪ್ಪು ಬೆಲ್ಲ ಸೇರಿಸಿರುವ ಮಜ್ಜಿಗೆಯಲ್ಲಿ ಹಾಕಿ ಚೆನ್ನಾಗಿ ಕಲಕಬೇಕು.
ಹೀಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಕರಾವಳಿಯ ಜನರು ತಂಬುಳಿಗಳನ್ನು ತಯಾರಿಸುವುದರಲ್ಲಿ ಪರಿಣತರಾದದ್ದನ್ನು ಗಮನಿಸಿದರೆ ರೋಗ ಬರುವ ಮುನ್ನ ಎಚ್ಚರಿಕೆಯ ಪ್ರಜ್ಞೆ ಅವರಲ್ಲಿ ಕೆಲಸಮಾದಿರುವುದು ತಿಳಿಯುತ್ತದೆ.
ಸೊಪ್ಪಿನ ಆಹಾರ:
ಸೊಪ್ಪಿನ ಬಳಕೆ ಕರಾವಳಿಯಲ್ಲಿ ಕದಿಮೆ ಎಂದೇ ಹೇಳಬೇಕು. ಆದರೂ ದೇಹಕ್ಕೆ ತಂಪುನೀಡುವ ಸೊಪ್ಪು ಅಲ್ಲಿನ ಜನರ ಅಪರೂಪದ ಆಹಾರವಾಗಿರುವುದೆಂದು ಕಾಣುತ್ತದೆ. ಪ್ರಾದೇಶಿಕವಾಗಿ ದೊರೆಯುವ ಕೆಸುವಿ ಸೊಪ್ಪು, ನುಗ್ಗೆ ಸೊಪ್ಪು, ಸುವರ್ಣಗಡ್ಡೆಯ ಸೊಪ್ಪು, ಬಸಳೆ, ಹರಿವೆ ಸೊಪ್ಪು, ಸಬ್ಬಸ್ಗಿ ಮೊದಲಾದವುಗಳಿಂದ ಅವರು ಹುಳಿ ತಯಾರಿಸುತ್ತಾರೆ. ತೊಗರಿಬೇಳೆಯೊಡನೆ ಸೊಪ್ಪನ್ನು ಹಾಕಿ ಅದಕ್ಕೆ ತೆಂಗಿನಕಾಯಿ, ಹಸಿಮೆಣಸು, ಹುಳಿ, ಅರಿಶಿನ, ಬೆಲ್ಲ, ಬೆಳ್ಳುಳ್ಳಿ, ಉಪ್ಪ್ಪು ಮೊದಲಾದ ಮಸಾಲೆ ಪದಾರ್ಥಗಳನ್ನು ಮಿಶ್ರಣಮಾದಿ ಬೇಯಿಸುತ್ತಾರೆ. ಇದಕ್ಕೆ ಸೊಪ್ಪಿನ ಹುಳಿ ಎಂದು ಕರೆಯುತ್ತಾರೆ. ಇಲ್ಲಿ ಗಮನಿಸುವ ಅಂಶವೆಂದರೆ ’ಹುಳಿ’ ಎನ್ನುವ ಹೆಸರು ಮೀನು-ಮಾಂಸ-ತರಕಾರೆಯ ಸಾರಿಗೆಲ್ಲಾ ಅಂಟಿಕೊಂದಿರುವುದು. ಬಯಲು ಸೀಮೆಯಲ್ಲಿ ಸಾರು ಮತ್ತು ಹುಳಿಗೆ ವ್ಯತ್ಯಾಸವಿದೆ. ಆದರೆ ಇಲ್ಲಿ ಅವೆರಡರಲ್ಲೂ ಅವರು ವ್ಯತ್ಯಾಸವಿದೆಯೆಂದು ತಿಳಿಯುವುದಿಲ್ಲ.
ರಾಗಿ ಗಂಜಿ:
ಬಯಲು ಸೀಮೆಯ ಕಡೆಗೆ ರಾಗಿಯನ್ನು ಮುದ್ದೆಗೆ ಬಳಸಿದರೆ ಕರಾವಳಿಯವರು ರಾಗಿಯನ್ನು ಗಂಜಿಗೆ ಉಪಯೋಗಿಸುತ್ತಾರೆ. ಅನ್ನ ಬೇಯಿಸುವಾಗ ಹೊರತೆಗೆದ ಗಂಜಿಗೆ ರಾಗಿ ಹಿಟ್ಟು, ಉಪ್ಪು ಹಾಕಿ ರಾಗಿ ಗಂಜಿ ತಯಾರಿಸುವ ಒಂದು ವಿಧಾನ ವಿದೆ. ಅದೇರೀತಿ ನೀರಿನಿಂದ ರಾಗಿ ಗಂಜಿ ತಯಾರಿಸುವ ಮತ್ತೊಂದು ವಿಧಾನವಿದೆ. ರಾಗಿ ಗಂಜಿಯನ್ನು ತಂಪೆಂಬ ಕಾರಣದಿಂದ ಶ್ರೀಮಂತರು ಉಪಯೋಗಿಸಿದರೆ, ಬಡವರು ಹಸಿವಾರಿಸುವ ಆಹಾರವೆಂದು ತಿಳಿದು ಬಳಸುತ್ತಾರೆ. ರಾಗಿ ಗಂಜಿ ಕುಡಿಯುತ್ತಾ ಹುರಿದ ಮೀನು ನೆಂಜಿಕೊಳ್ಳುವುದು ಇಲ್ಲಿ ಸಾಮಾನ್ಯ ದೃಶ್ಯ.
ಸಿಹಿ ಆಹಾರ:
ಖಾರ ತಿಂದು ಬೇಸತ್ತ ನಾಲಿಗೆಗೆ ಸಿಹಿಯುಣಿಸುವ ಸಲುವಾಗಿ ಮಾತ್ರ ನಮ್ಮ ಜನಪದರು ಸಿಹಿ ಆಹಾರ ತಯಾರಿಸಲು ತೊಡಗಿದರು. ಅಲ್ಲಿ ಸಿಹಿ ಆಹಾರದ ಕಲ್ಪನೆಯ ಹಿಂದೆ ಅದರ ಪರಿಣಾಮ ಕೆಲಸಮಾಡಿರುವುದನ್ನು ಅರಿತ ಜನ ಅದು ಸಂತೋಷದ ಭಾವನೆಗಳನ್ನು ಅಭಿವ್ಯಕ್ತಿಪಡಿಸುವ ಆಹಾರವೆಂದು ಪರಿಗಣಿಸಿದರು. ಆದ್ದರಿಂದ ಅದು ಹಬ್ಬಹರಿದಿನಗಳ, ನೆಂಟರಿಷ್ಟರನ್ನು ಸತ್ಕರಿಸುವ ಆಹಾರವಾಯಿತು. ಕರಾವಳಿಯಲ್ಲಿ ಶ್ರೀಮಂತನಿಂದ ಜನಸಾಮಾನ್ಯ ನವರೆಗೆ ತನುಮನದಲ್ಲೆಲ್ಲಾ ಸಿಹಿತುಂಬುವ ಆಹಾರವೆಂದರೆ ಪಾಯಸ. ಇದರಲ್ಲಿ ಗೆಣಸಿನ ಪಾಯಸ, ಕಡ್ಲೆಬೇಳೆ ಪಾಯಸ, ಸಾಬುಅಕ್ಕಿ ಪಾಯಸ, ಪೊಪ್ಪಾಯಿ ಪಾಯಸ, ಬಾಳೆಹಣ್ಣಿನ ಪಾಯಸ, ಮಾವಿನಹಣ್ಣಿನ ಪಾಯಸ, ಸವತೇಕಾಯಿ ಪಾಯಸ, ಹಾಲುಕುಂಬಳಕಾಯಿ ಪಾಯಸ, ಇಬ್ಬುಂಡ್ಲೆಹಣ್ಣು ಪಾಯಸ ಎಂದು ನಾನಾ ಬಗೆಗಳಿವೆ. ಇದರಲ್ಲಿ ಸಕ್ಕರೆ, ತೆಂಗಿನ ಕಾಯಿ, ಏಲಕ್ಕಿ, ಉಪ್ಪ್ಪು ಸಾಮಾನ್ಯವಾಗಿ ಬಳಸುವ ಪದಾರ್ಥಗಳು.

ಗ್ರಂಥಋಣ
೧. ಎಲ್.ಆರ್.ಹೆಗಡೆ: ಪಾಕರಸಾಯನ, ಸಮಾಜ ಪುಸ್ತಕಾಲಯ, ಧಾರವಾಡ
೨. ಶಾಂತಿ ನಾಯಕ: ಜನಪದ ವೈದ್ಯಕೀಯ ಅಡಿಗೆಗಳು
೩. ಎ.ಕೆ.ರಾಮಾನುಜನ್: ಹಾದೆಗಳು, ಜಾನಪದ ಪ್ರಕಾಶನ, ಹೊನ್ನಾವರ
೪. ಸೈಯದ್ ಜಮೀರುಲ್ಲಾ ಷರೀಫ್: ಗೊಂಡರು: ಒಂದು ಸಾಂಸ್ಕೃತಿಕ ಅಧ್ಯಯನ
೫. ಸೈಯದ್ ಜಮೀರುಲ್ಲಾ ಷರೀಫ್: ನವಾಯಿತರು: ಒಂದು ಸಾಂಸ್ಕೃತಿಕ ಅಧ್ಯಯನ
* * *