[ಸೂಚನೆ: ನಾನು ಇಲ್ಲಿ ಆಹಾರದ ವಿಧಗಳನ್ನು ಪ್ರಸ್ತಾಪಿಸುತ್ತಿಲ್ಲ. ಯಾಕೆಂದರೆ ನಾನು ಒಬ್ಬ ವಕ್ತೃವಿನ ಕೆಲಸಕ್ಕಷ್ಟೇ ಸೀಮಿತವಾಗಬಯಸುವುದಿಲ್ಲ. ವಿದ್ವಾಂಸ ವಕ್ತೃವೂ ಆಗಿರುವುದು ಸಹ್ಯ. ವಿದ್ವಾಂಸ ವಕ್ತೃವೇ ಆಗುವುದರಿಂದ ಹೆಚ್ಚಿನದೇನೂ ಆಗುವುದಿಲ್ಲ. ಯಾವ ಗಳಿಗೆಯಲ್ಲಾದರೂ ಸುಲಭವಾಗಿ ಒಬ್ಬ ವಿದ್ವಾಂಸನನ್ನು ಒಬ್ಬ ವಕ್ತೃವಿಗೆ ಬದಲಾಯಿಸಿಕೊಳ್ಳಬಹುದಾದರೆ ಅಂಥ ವಿದ್ವಾಂಸತನ ಹೆಚ್ಚಿನ ಫಲಿತವನ್ನು ಕೊಡಲಾಗದು.

ನನ್ನ ಈ ಪ್ರಬಂಧ ಆಹಾರ ಸಾಮಗ್ರಿಗಳನ್ನು ವಿವರಿಸಿದೆ, ಈ ಆಹಾರ ವೈಶಿಷ್ಟ್ಯತೆಗೆ ಮೂಲಕಾರಣವಾದ ತಾತ್ವಿಕತೆಯನ್ನು ಕುರಿತು ಚರ್ಚಿಸುತ್ತದೆ. ಈ ತಾತ್ವಿಕತೆ ಹೊರಗಿನಿಂದ ಹೇರಿದ್ದಲ್ಲ, ಒಂದು ಪ್ರಮೇಯವೂ ಅಲ್ಲ. ದಕ್ಷಿಣ ಕರ್ನಾಟಕದ ಆಹಾರ ವ್ಯೆವಿಧ್ಯತೆಯನ್ನು ಅಭ್ಯಸಿಸಿ ಕಂಡುಕೊಂಡದ್ದು.]

 

ಜಾನಪದದಲ್ಲಿ ವೈಶಿಷ್ಟ್ಯತೆಯ ಪ್ರಶ್ನೆ:

ಜಾನಪದದಲ್ಲಿಯ ಬಹುತ್ವವನ್ನೆ ನಾವು ಸಾಮಾನ್ಯ ಅರ್ಥದಲ್ಲಿ ಜಾನಪದದ ವಿಶಿಷ್ಟತೆ ಎಂದು ಕರೆಯುತ್ತೇವೆ. ಈ ಬಹುತ್ವ ಎರಡು ವಿಧಗಳಲ್ಲಿ ಕಾಣಸಿಗುತ್ತದೆ. ೧) ಬಹು ಸಂಸ್ಕೃತಿಗಳಿಂದ ಉಂಟಾಗುವ ಬಹು ಜನಪದಗಳು ೨) ಒಂದು ಜಾನಪದ ಅಂಶಕ್ಕೆ (genre) ಬರುವ ಬಹುರೂಪಗಳು (Variants).

ನಿರ್ದಿಷ್ಟಾರ್ಥದಲ್ಲಿ ಜಾನಪದದ ವೈಶಿಷ್ಟ್ಯತೆ ಎಂದರೆ ಒಂದು ಸಂಸ್ಕೃತಿಯೊಳಗೆ ದಾಖಲಾಗಿರುವ ಪ್ರತ್ಯೇಕತೆ. ಈ ಪ್ರತ್ಯೇಕತೆ ಎಂದರೆ ಆಯಾ ಜನಪದದ ಅನನ್ಯತೆ(identity)ಯ ಪರಿಣಾಮ. ಈ ಪರಿಣಾಮ ಆ ಜನಪದವನ್ನು ತಿಳಿಸಿಕೊಡುವ, ಎತ್ತಿ ಹೇಳುವ ಅಥವಾ ನಿರ್ದೇಶಿಸುವ ಅಂಶವಾಗಿರುತ್ತದೆ.

ಜಾನಪದ ವಿಶಿಷ್ಟತೆಗೆ ಕಾರಣಗಳು:

ನೆಲ, ಜಲ ಮತ್ತು ಜನಪದರ ಬದುಕಿನ ಚರಿತ್ರೆಯ ಜಾನಪದದ ವಿಶಿಷ್ಟತೆಗೆ ಕಾರಣ. ಆರ್ಥಿಕತೆಯನ್ನು ವ್ಯವಸ್ಥೆಗೊಳಿಸಲು ಜನಪದಗಳು ಜನ್ಮ ತಾಳುತ್ತವೆ, ಸಾಮಾಜಿಕತೆಯನ್ನು ರೂಪಿಸಿಕೊಳ್ಳುತ್ತವೆ, ಸಾಂಸ್ಕೃತಿಕವಾಗಿ ಬದುಕುತ್ತವೆ. ಇವುಗಳ ಆರ್ಥಿಕ ಚಟುವಟಿಕೆ ಆಹಾರ ಸಂಗ್ರಹದಿಂದ ಆರಂಭಗೊಳ್ಳುತ್ತದೆ. ಈ ಆಹಾರಗಳಲ್ಲಿ ಕೆಲವು ಸಾಮಾನ್ಯವೆನಿಸಿಕೊಂಡರೆ ಮತ್ತೆ ಕೆಲವೇ ಕೆಲವು ವಿಶಿಷ್ಟ ಎನಿಸಿಕೊಳ್ಳುತ್ತವೆ. ದೊರೆಯುವಿಕೆ ಮತ್ತು ಸಾಮಾಜಿಕ ಮಾನ್ಯತೆಯ ಮೇಲೆ ಈ ಥರದ ಬೆಲೆಕಟ್ಟುವಿಕೆ ನಡೆಯುತ್ತದೆ. ಸ್ಥಳೀಯತೆ, ಧಾರ್ಮಿಕತೆ, ಜನಾಂಗಿಕತೆ ಮತ್ತು ವಸ್ತು ಕೊಡುವ ಭೋಗದ ಪ್ರಮಾಣವನ್ನು ಅನುಸರಿಸಿಕೊಂಡು ಅವುಗಳಿಗೆ ವಿಶಿಷ್ಟತೆ ಬರುತ್ತದೆ.

ಆಹಾರದ ರೂಪ ವೈಶಿಷ್ಟ್ಯ:

ನಮ್ಮ ಆಹಾರ ರೂಪಗಳಲ್ಲಿ ಬಹಳ ವೈವಿಧ್ಯಗಳಿಲ್ಲ. ದುಂಡಾಕಾರ ಮತ್ತು ಚಕ್ರಾಕಾರಗಳೆ ಹೆಚ್ಚು. ಈ ರೂಪಗಳೇ ಪ್ರಧಾನವಾಗಲು ಸರಿಯಾದ ಕಾರಣಗಳು ತಿಳಿಯವು. ಸೂರ್ಯ ಮತ್ತು ಚಂದ್ರರು ಅನೇಕ ಮೂಲ ಜನಾಂಗಗಳ ವಾಂಶಿಕ ಮೂಲಪುರುಷರಾಗಿ ಆರೋಪಿತರಾಗಿದ್ದಾರೆ. ಈ ಸೂರ್ಯ, ಚಂದ್ರರೆ ಜನರ ರೂಪಗ್ರಹಿಕೆಗೆ ಮೊದಲ ಮಾದರಿಗಳಾಗಿರಬೇಕು. ಕರ್ನಾಟಕದ ಆಹಾರಗಳಲ್ಲಿ ಬಹಳ ವಿಧದ ಉಂಡೆಗಳಿವೆ. ಈ ಉಂಡೆಗಳ ರೂಪಾತ್ಮಕ ತಂದೆ ಮುದ್ದೆಯೇ ಆಗಿದ್ದಾನೆ. ಹಲವು ವಿಧದ ರೊಟ್ಟಿ ಮತ್ತು ದೋಸೆಗಳಿವೆ. ದೋಸೆಗೆ ರೊಟ್ಟಿಯೆ ಮೂಲಪುರುಷ. ರೊಟ್ಟಿಗೆ ಚಂದ್ರನೆ ಆಕಾರ ಕೊಟ್ಟಿರಬೇಕು. ನಮ್ಮ ತಿಂಗಳ ಮಾವನ ಪೂಜೆಯಲ್ಲಿ ಚಂದ್ರನಿಗಾಗಿ ರೊಟ್ಟಿ ಹಾಕುತ್ತಾರೆ. ಅವುಗಳನ್ನು ಕದಿಯುವುದುಂಟು. ಹಾಗೆ ಕದ್ದರೆ ಚಂದ್ರನನ್ನೇ ಕದ್ದಂತೆ. ಉಳಿದವರು ಆ ರೊಟ್ಟಿಗಳನ್ನು ಕದ್ದವರನ್ನು ಓಡಿಸಿಕೊಂಡು ಹೋಗಿ ತಾವೂ ಪಾಲು ಪಡೆಯಬಹುದು, ಪಡೆಯದೆಯೂ ಹೋಗಬಹುದು. ಚಪ್ಪಟೆ ಆಕಾರಗಳು ಭೂಮಿ ಚಪ್ಪಟೆ ಆಗಿದೆ ಎಂಬ ಕಲ್ಪನೆಯನ್ನು ಆಧರಿಸಿ ಹುಟ್ಟಿರಬಹುದು. ಪ್ರಮುಖವಾದ ನಮ್ಮ ಆಹಾರದ ಆಕಾರಗಳೆಂದರೆ-

೧. ಗುಂಡಾಕಾರ

೨. ಚಕ್ರಾಕಾರ

೩. ಚೌಕಾಕಾರ

೪. ಉದ್ದಾಕಾರ

೫. ಮಿಶ್ರಾಕಾರ

ಆಹಾರ ಬಗೆಯ ವೈಶಿಷ್ಟ್ಯ:

ಆರಂಭದಲ್ಲಿ ಸರಳ ಆಹಾರ ಮತ್ತು ಅದಕ್ಕಿಂತ ಸ್ವಲ್ಪ ವ್ಯವಸ್ಥಿತವಾದ ಆಹಾರದ ಬಗೆಗಳು ಇದ್ದಿರಬಹುದು. ಇದನ್ನು ಮಿಶ್ರ ಆಹಾರ ಎಂದು ಕರೆಯಬಹುದು. ಬೇಟೆವೃತ್ತಿ ಮತ್ತು ಕೃಷಿವೃತ್ತಿಯಂಥ ಸ್ಥಿತ್ಯಂತರ ಹಂತಗಳಲ್ಲಿ ಈ ಬಗೆಯ ಆಹಾರಗಳು ಕಾಣಿಸಿಕೊಳ್ಳುತ್ತವೆ. ಬೇಟೆಯಾಡಿ ತಂದುದರ ಜೊತೆಗೆ ಆಯ್ದೊ, ಕಿತ್ತೊ ತಂದದ್ದು ಅಥವಾ ಬೆಳೆದು ತಂದದ್ದರ ಆಹಾರ ಸೇರಿಕೊಳ್ಳಬಹುದು. ಬೇಟೆ ಮತ್ತು ಕೃಷಿವೃತ್ತಿಯ ಜೊತೆಗೆ ಪೂಜಾವೃತ್ತಿ ಆರಂಭವಾದ ಮೇಲೆ ಆಹಾರದ ಬಗೆಗಳು ಹೆಚ್ಚಿದವು. ಅವುಗಳಲ್ಲಿ ದೇವರಿಗೆ, ಪೂಜಾರಿಗೆ ಮತ್ತು ಸಾಮಾನ್ಯನಿಗೆ ಎಂದು ಬೇರೆ ಬೇರೆ ಸ್ವರೂಪವನ್ನು ಪಡೆದು ಕೊಂಡವು. ಇದರ ಜೊತೆಗೆ ಆಹಾರ ಶ್ರೇಷ್ಠತೆ ಮತ್ತು ಆಹಾರ ಕನಿಷ್ಠತೆ ಎಂಬ ಪರಿಕಲ್ಪನೆಗಳೂ ಹುಟ್ಟಿಕೊಂಡವು.

ಪೂಜೆಯ ಜೊತೆಗೆ ಆಳುವ ಪ್ರಭುವರ್ಗ ಸೇರಿಕೊಂಡ ಮೇಲೆ ಭಕ್ಷ್ಯ ಮತ್ತು ಭೋಜ್ಯಗಳು ಹುಟ್ಟಿಕೊಂಡವು. ಈ ಎರಡರ ಮಧ್ಯೆ ಜನಪದರಲ್ಲಿ ಅಂಥ ವ್ಯತ್ಯಾಸ ಇರಲಿಲ್ಲ. ಯಾವುದು ಧಾರಾಳವಾಗಿ ಸಿಗುತ್ತದೊ ಅದೇ ಊಟ. ಅಪರೂಪಕ್ಕೆ ಸಿಗುತ್ತಿದ್ದುದು ವಿಶಿಷ್ಟ.

ಆಹಾರ ವಿಚಾರ ವೈಶಿಷ್ಟ್ಯತೆ:

ಬದುಕುವುದಕ್ಕಾಗಿ ಆಹಾರವನ್ನು ಪಡೆಯುವುದೇ ಆಹಾರದ ವಿಚಾರ. ಬದುಕಿನಿಂದ ಭೋಗಕ್ಕೆ ಸಮಾಜ ಸರಿದಂತೆ, ವೃತ್ತಿಯಿಂದ ವರ್ಗ, ಜಾತಿ ಮತ್ತು ಧರ್ಮವನ್ನು ಅದು ಸ್ವೀಕರಿಸಿದಂತೆ ಆಹಾರ ವೈಶಿಷ್ಟಗಳು ಹೆಚ್ಚಾಗುತ್ತಾ ಹೋಗುತ್ತವೆ. ಜಾತಿ ಆಹಾರ, ವರ್ಗ ಆಹಾರ ಮತ್ತು ಧಾರ್ಮಿಕ ಆಹಾರಗಳು ಹುಟ್ಟಿಕೊಳುತ್ತವೆ. ’ಪುಳಿಚಾರ್’ ಜಾತಿ, ’ಖಂಡತುಂಡು’ ಜಾತಿಗಳು ಆಹಾರದ ಭಿನ್ನತೆಯ ಮೇಲೆ ತಮ್ಮ ಜಾತಿಯನ್ನು ಸಮರ್ಥಿಸಿಕೊಳ್ಳುತ್ತವೆ. ರಾಗಿ ಪದಾರ್ಥಗಳನ್ನು ತಿಂದರೆ ನಮ್ಮ ಮಕ್ಕಳು ಕಪ್ಪಾಗುತ್ತಾರೆ, ಒರಟರಾಗುತ್ತಾರೆ ಎಂದು ಮೇಲುವರ್ಗ ಕೆಳವರ್ಗದ ಆಹಾರದಿಂದ ದೂರವಿರಲು ಯತ್ನಿಸುತ್ತದೆ. ಬಾಡು ತಿಂದರೆ ಬುದ್ಧಿ ಕಡಿಮೆಯಾಗುತ್ತದೆ ಎಂದು ಮತ್ತೊಂದು ವರ್ಗ ಹೇಳಿಕೊಂಡು ತನ್ನ ಬುದ್ಧಿಯ ಸೀಮಿತತೆಯನ್ನು ಪ್ರದರ್ಶಿಸುತ್ತದೆ.

ಹೊರದೇಶಗಳಲ್ಲಿ ಭಾರತ ಎಂದರೆ ತರಕಾರಿ ತಿನ್ನುವವರ ದೇಶ ಎಂಬ ಅಭಿಪ್ರಾಯವೂ ಉಂಟು. ಹೊಸದಾಗಿ ಅನ್ಯದೇಶೀಯ ವಿಮಾನವನ್ನು ಏರಿದ ಭಾರತದ ಮಾಂಸಾಹಾರಿಗಳಿಗೆ ಈ ಅನುಭವ ಉಂಟಾಗುತ್ತದೆ. ದೇಶ ಮತ್ತು ರಾಜ್ಯಗಳು ಕೂಡ ತಮ್ಮ ವಿಶಿಷ್ಟತೆಯನ್ನು ಒಂದು ವಿಶೇಷ ಆಹಾರದಿಂದ ಗುರುತಿಸಿಕೊಳ್ಳುವುದುಂಟು. ಮೈಸೂರಿನವರಿಗೆ ಮೈಸೂರುಪಾಕ್, ಧಾರವಾಡದವರಿಗೆ ಪೇಡ, ಒಬ್ಬರಿಗೆ ಕರಿದಂಟು. ಹೀಗೆ ’ರಸಂ’ ಎಂದರೆ ತಮಿಳುನಾಡು. ಉತ್ತರ ಭಾರತದವರಿಗೆ ರಸಂ, ದೋಸೆ, ಇಡ್ಡಲಿಗಳೆಂದರೆ ದಕ್ಷಿಣ ಭಾರತದ ಆಹಾರಗಳು ಎಂದೇ ಅರ್ಥ.  ಗೋದಿ ಪದಾರ್ಥಗಳೆಂದರೆ ಅವು ಉತ್ತರ ಭಾರತದವರ ವಿಶೇಷ ಎಂಬುದು ನಮ್ಮ ನಂಬಿಕೆ.

ಹಗಲು ದುಡಿಮೆ ರಾತ್ರಿ ಊಟ ಎಂಬುದು ಕೂಲಿ ಜನರ ವಿಚಾರ, ’ಊಟಕ್ಕೆ ಮುಂದಿರು ಕೂಟಕ್ಕೆ ಹಿಂದಿರು’ ಎಂಬುದು ಹೊಟ್ಟೆ ತುಂಬಿಸಿಕೊಳ್ಳುವವರ ವಿಚಾರ. ದುಡಿಯದೆ ತಿನ್ನುವುದು ಅವಿಚಾರ.

ಆಹಾರದ ಕಾರ್ಯ ವೈಶಿಷ್ಟತೆ:

ಆಹಾರ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಮನುಷ್ಯ ಬದುಕುತ್ತಾನೆ ಹಾಗೂ ಕೆಲಸ ಮಾಡುತ್ತಾನೆ ಎನ್ನುವುದು  ಆಹಾರದ ಸಾಮಾನ್ಯ ಕಾರ್ಯ. ಸಾಂಸ್ಕೃತಿಕ ಬೇರೆ ಬೇರೆ ಸಂದರ್ಭಗಳು ಆಹಾರದ ಕಾರ್ಯವನ್ನು ವಿಸ್ತರಿಸುತ್ತವೆ. ಸತ್ಯನಾರಾಯಣ ಪೂಜೆ ಭೋಜನೆ, ರಾಷ್ಟ್ರಪತಿಯವರು ಹೊರದೇಶದ ಅತಿಥಿಗಳಿಗೆ ಕೊಡುವ ಔತಣ, ತಿರುಪತಿ ತಿಮ್ಮಪ್ಪನ ಲಾಡು, ಹಳ್ಳಿ ಸಂತೆಯ ಬೋಂಡ, ಪೂಜಾರಿ ಕೊಡುವ ಪ್ರಸಾದ ಇವು ಬೇರೆ ಬೇರೆ ಕಾರ್ಯವನ್ನು ಹೇಳುತ್ತವೆ. ನಮ್ಮ ಸಾಂಸ್ಕೃತಿಕ ವಿಶಿಷ್ಟ ಸಂದರ್ಭಗಳಾದ ಹುಟ್ಟು, ಅವಸ್ಥಾಂತರ, ಮದುವೆ, ಬಾಣಂತನ, ಸಾವು, ಹಬ್ಬ ಮತ್ತು ಜಾತಿಗಳಲ್ಲಿ ಕೂಡ ನೋಡಿ.

೧. ರಾಜನ ಮನೆಯಲ್ಲಿ ಭೋಜನವೆಂದರೆ ಯೋಜನವಾದರು ಹೋಗುವೆವು.

೨. ಹುಳಿಮಜ್ಗೆ ಅಂದ್ರೆ ಹೊಳೆ ದಾಟ್ದ

೩. ಗಂಟುಮೂಳೆ ಅಂದ್ರೆ ಎಂಟು ಹರಿದಾರಿ ನಡೆದ

೪. ಹೆಂಡ ಅಂದರೆ ಬಂಡ ಬಿದ್ದ

ಒಬ್ಬ ವ್ಯಕ್ತಿಯ ಸ್ಮರದಲ್ಲಿ ಆಹಾರದ ಕಾರ್ಯಮಹತ್ವ ಬದಲಾಗಬಹುದು.

ಉದಾ:

ಖಂಡ ಇದ್ರೆ ನನ್ನ ಗಂಡ ಇದ್ದಂಗ
ಬಾಡಿದ್ರೆ ನನ್ನ ಬಳಗ ಇದ್ದಂಗ
ಮೀನಿದ್ರೆ ನನ್ನ ಮಿಂಡ ಇದ್ದಂಗ

ಜಾತಿ ಆಹಾರ ವಿಶಿಷ್ಟತೆಯ ಬಗ್ಗೆ ಒಂದು ಗಾದೆ ಹೀಗೆ ಹೇಳುತ್ತದೆ:

ಹಾರ್ವ ದುಡಿಯೋದು ಪಿಂಡ್ಕೆ
ಒಕ್ಕಲಿಗ ದುಡಿಯೋದು ದಂಡ್ಕ (ಖಂಡ್ಕೆ?)
ಹೊಲ್ಯ ದುಡಿಯೋದು ಹೆಂಡ್ಕೆ

ಜಾತಿ ಮತ್ತು ಆಹಾರದ ಸಮೀಕರಣ ಸಿದ್ಧಾಂತ ಇದು. ಇದರಲ್ಲಿ ಅವರವರ ದುಡಿಮೆಯ ಸ್ಥಿತಿಗಳೂ ಗೊತ್ತಾಗುತ್ತವೆ.

ಆಹಾರದ ಬೆಳವಣಿಗೆ: ವಿಶಿಷ್ಟತೆ:

ಮಾನವಸಂಸ್ಕೃತಿ ಹೇಗೆ ಅಡ್ಡ ಉದ್ದವಾಗಿ ವಿಕಾಸ ಹೊಂದುತ್ತಾ ಬಂದಿದೆಯೋ ಅದೇ ರೀತಿ ಆಹಾರ ಪದ್ಧತಿಗಳು ಕೂಡ ಬೆಳೆದು ಬಂದಿವೆ. ಅದನ್ನು ಕೆಳಗಿನಂತೆ ಗುರುತಿಸಬಹುದು:

೧. ಹಸಿಯಿಂದ ಬಿಸಿಗೆ – (ಪ್ರಕೃತಿಯಿಂದ ಸಂಸ್ಕೃತಿಗೆ)

೨. ಒಂದರಿಂದ ಮತ್ತೊಂದಕ್ಕೆ – ( ವಿಸ್ತರಣೆ)

೩. ಒಂದರ ಜೊತೆಗೆ ಇನ್ನೊಂದು – ( ಸೇರಿಕೆ)

೪. ಏಕತೆಯಿಂದ ಬಹುತ್ವಕ್ಕೆ – (ವಿಕಾಸ)

೫. ಮುಖ್ಯದ ಜೊತೆಗಿನ ಉಪದಳ ಕಡೆಗೆ – (ಭೋಗಕ್ಕೆ)

೬. ಅನ್ವೇಷಣಾ ಆಹಾರಗಳು (ಹೊಸರುಚಿ)

ವಿವರಣೆ:

. ಹಸಿಯಿಂದ ಬಿಸಿಗೆ

ನಮ್ಮ ಆಹಾರ ಹಸಿಯಿಂದ ಬಿಸಿಗೆ ನಡೆದು ಬಂದಿದೆ. ಎಂದರೆ ಪ್ರಕೃತಿಯಿಂದ ಸಂಸ್ಕೃತಿಗೆ ಬಂದಿದೆ. ಈ ಬೆಳವಣಿಗೆಯ ಎಲ್ಲ ಹಂತದ ಆಹಾರಗಳು ಒಂದೇ ಕಡೆ. ಏಕ ಕಾಲದಲ್ಲಿ ಕಾಣಿಸಿಕೊಂಡಿರಬಹುದು, ಬೇರೆ ಬೇರೆ ಕಡೆ ಅಥವಾ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಸಮಾಜಗಳಲ್ಲಿ ಕಾಣಿಸಿಕೊಂಡಿರಬಹುದು.

ಉದಾ:

(i) ರಾಗಿ:

ತೆನೆ > ಹಸಿಅಕ್ಕಿ > ಕಾಯಿಸಿದ ತೆನೆ ಅಕ್ಕಿ > ಅಂಬಲಿ > ಕೆಂಡದ ರೊಟ್ಟಿ / ಸುಡುರೊಟ್ಟಿ > ಬೇಯಿಸಿದ ರೊಟ್ಟಿ > ರೊಟ್ಟಿ+ಚಟ್ನಿ > ಪರುಪುರೊಟ್ಟಿ.

(ii) ಬಾಡು:

ಹಸಿಬಾಡು > ಒನಬಾಡು > ಸುಡು ಬಾಡು / ಹುರಿಬಾಡು > ಬೇಯಿಸಿದ ಬಾಡು> ಸಂಕೀರ್ಣ ಬಾಡಿನ ಆಹಾರಗಳು.

(iii) ಮೊಟ್ಟೆ:

ಹಸಿಮೊಟ್ಟೆ > ಸುಡುಮೊಟ್ಟೆ > ಹುರಿಮೊಟ್ಟೆ > ಬೇಯಿಸಿದ ಮೊಟ್ಟೆ > ಸಂಕೀರ್ಣ ಮೊಟ್ಟೆ ಆಹಾರಗಳು.

. ಒಂದರಿಂದ ಮತ್ತೊಂದಕ್ಕೆ:

ಒಂದು ಆಹಾರ ಕಾಲಬದಲಾವಣೆ, ಸ್ಥಳ ಬದಲಾವಣೆ ಅಥವಾ ಜನ ಬದಲಾವಣೆಯಿಂದ ಇನ್ನೊಂದಾಗುತ್ತದೆ. ಇದನ್ನು ವಿಸ್ತಾರಣಾ ಸಂಸ್ಕೃತಿಯ ಪರಿಣಾಮ ಎಂದು ಕರೆಯಬಹುದು.

ಉದಾ:
(i) ಅಂಬಲಿ – ಮುದ್ದೆ
ಮುದ್ದೆ – ರೊಟ್ಟಿ
ಮುದ್ದೆ – ಶ್ಯಾವಿಗೆ

(ii) ಹಸಿಸಾರು – ಉಪ್ಪುಸಾರು
ಉಪ್ಪುಸಾರು – ಬಸ್ಸಾರು
ಹಸಿಸಾರು – ಜಿರಕೆ ಸಾರು
-ಒಂದೆಸರು
– ಪರ್ಪು
– ಸೋಡಿಗೆ
ಹಸಿಸಾರು – ಬೇಳೆ ಸಾರು
– ಮೊಳೆಸಾರು

ಇಲ್ಲಿ ಒಂದು ಆಹಾರ ವಿಸ್ತರಣೆಗೊಂಡು ಹಲವಾಗುತ್ತದೆ. ಈ ಆಹಾರಕ್ಕೆ ಬಳಸುವ ಮೂಲವಸ್ತು ಒಂದೇ ಆಗಿದ್ದು ಹಾಗೂ ಅದು ಪ್ರಧಾನ ಆಹಾರವಾಗಿದ್ದ ಪಕ್ಷದಲ್ಲಿ ಅದರಲ್ಲಿ ವಿವಿಧತೆ ತರಲು ಪ್ರಯತ್ನಿಸಲಾಗುತ್ತದೆ. ಇದು ಆಹಾರ ವಿಜ್ಞಾನದಲ್ಲಿ ಆದ ಬೆಳವಣಿಗೆಯನ್ನು ಸೂಚಿಸುತ್ತದೆ. ಒಂದು ಜನಪದ ಕಥೆಯ ಒಬ್ಬ ಅಳಿಯನ ಪ್ರಸಂಗ ನೋಡಿ-

“ಒಬ್ಬ ಹುಡುಗ ಇದ್ದ. ತನ್ನ ಮನೆಯಲ್ಲಿ ಪ್ರತಿ ದಿನ ಮುದ್ದೆ ಉಂಡು ಬೇಸರವಾಗಿತ್ತು. ಅಕ್ಕನ ಮನೆಗಾದರೂ ಹೋಗೋಣಾ ಅಂತ ಬಂದ. ತಮ್ಮ ಬಂದ ಎಂದು ಅಕ್ಕ ಬಿಸಿರೊಟ್ಟಿಗೆ ಬೆಣ್ಣೆ ಹಾಕಿಕೊಟ್ಟಳು. ಇಲ್ಲುಪಾಯ ಆಗಲಿಲ್ಲ ಎಂದು ಅತ್ತೆ ಮನೆಗೆ ಹೊದ. ಅಳಿಯ ಬಂದ ಎಂದು ಅವರು ಶ್ಯಾವಿಗೆ ಮಾಡಿ ಬಡಿಸಿದರು. ತಟ್ಟೆ ಮುಂದೆ ಕುಳಿತು ಅಳಿಯಹಾಡಿದ.

ಮನೆಯಲ್ಲಿ ಗುಂಡಾಕಾರ
ಅಕ್ಕ ಮನೆಯಲ್ಲಿ ಚಕ್ರಾಕಾರ
ಅತ್ತೆ ಮನೆಗೂ ಬಂದೆಯ ಜಡೆಯಶಂಕರಾ|

. ಒಂದರ ಜೊತೆಗೆ ಇನ್ನೊಂದು:

ಒಂದು ಆಹಾರ ಪದ್ಧತಿಯನ್ನು ಉಳಿಸಲು, ಮುಂದುವರಿಸಲು, ಅಥವಾ ಸಹ್ಯಗೊಳಿಸಲು ಅದರ ಜೊತೆಗೆ ಹೊಂದಿಕೆಯಾಗುವ ಮತ್ತೊಂದನ್ನು ಸೇರಿಸಲಾಗುತ್ತದೆ. ಇಲ್ಲಿ ಸೇರುವ ಮತ್ತು ಸೇರಿಸಿಕೊಳ್ಳುವ ಆಹಾರದ ಮಧ್ಯೆ ಮುಖ್ಯ – ಅಮುಖ್ಯ ಎಂಬ ಅಂತಸ್ತು ಬರಬಹುದು, ಬರದೆಯೂ ಇರಬಹುದು. ಕಾಲಾನುಕ್ರಮದಲ್ಲಿ ಈ ಎರಡರಲ್ಲಿ ಸ್ಥಾನ ವ್ಯತ್ಯಾಸ ಕಾಣದೆ ಅವೆರಡೂ ಒಟ್ಟಿಗೆ ಎನ್ನುವಂತಾಗುತ್ತದೆ.

ಉದಾ:
ಮುದ್ದೆಗೆ ಸಾರು, ಸಾರಿಗೆ ಒಗ್ಗರಣೆ
ರೊಟ್ಟಿಗೆ ಚಟ್ನಿ ಅಥವಾ ಪಲ್ಯ
ಊಟಕ್ಕೆ ಉಪ್ಪಿನಕಾಯಿ
ಊಟಕ್ಕೆ ಮಜ್ಜಿಗೆ

. ಏಕತೆಯಿಂದ ಬಹುತ್ವಕ್ಕೆ

ಒಂದು ಆಹಾರ ಪದ್ಧತಿ ಮೂಲದಲ್ಲಿ ಒಂದೇ ಆಗಿದ್ದು ಸಂದರ್ಭಾನುಸಾರ ಬೇರೆ ಬೇರೆ ರೂಪಗಳನ್ನು ಪಡೆಯುತ್ತಾ ಬಹುತ್ವ ಹೊಂದುತ್ತದೆ.

ಉದಾ:
ಅನ್ನ – ಹುಗ್ಗಿ ಅನ್ನ
ಬೆಲ್ಲದನ್ನ
ಮೊಸರನ್ನ
ಚಿತ್ರಾನ್ನ
ಪರಮಾನ್ನ
ಇತ್ಯಾದಿ

. ಮುಖ್ಯದ ಜೊತೆಗೆ ಉಪಗಳು:

ಈ ಆಹಾರ ಪದ್ಧತಿ ಭೋಗ ಸಂಸ್ಕೃತಿಯ ಪ್ರಾಧಾನ್ಯತೆಯನ್ನು ತಿಳಿಸುತ್ತದೆ. ಮುಖ್ಯ ಆಹಾರ ಸಾಕಾಗದೇ ಈ ಉಪ ಆಹಾರಗಳು ಬಂದುದಲ್ಲ. ಮುಖ್ಯ ಆಹಾರವನ್ನು ಖರ್ಚು ಮಾಡಲು ಅಥವಾ ಹೊಟ್ಟೆಗೆ ಇಳಿಸಲು ಅನುಕೂಲವಾದ ನಾಲಿಗೆ ರುಚಿಗಳೆ ಈ ಉಪ ಆಹಾರಗಳು.

ಉದಾ:
ಭಕ್ಷ್ಯ; ಮುಖ್ಯ ಆಹಾರ
ಭೋಜ್ಯಗಳು: ಉಪ ಆಹಾರಗಳು
ಮುದ್ದೆ + ಅನ್ನ + ಸಾರು: ಭಕ್ಷ್ಯ
ಹಪ್ಪಳ, ಉಪ್ಪಿನಕಾಯಿ, ಬಾಳಕ, ಪುಡಿ, ಕೋಸಂಬರಿ, ಈರುಳ್ಳಿಚೂರು, ಟೊಮೆಟೊ ಚೂರು, ಭೋಜ್ಯಗಳು.

. ಅನ್ವೇಷಣಾ ಆಹಾರಗಳು:

ಈ ಬಗೆಯ ಆಹಾರಗಳ ಹಿಂದನ್ನು ಗುರುತಿಸುವುದು ಕಷ್ಟ. ಹಿಂದಿನ ರೂಢಿಗತ ಆಹಾರದ ಕೆಲವು ಆಶಯಗಳನ್ನು ಆಯ್ದುಕೊಂದು, ಅದರ ಜೊತೆಗೆ ಹೊಸ ಅಂಶಗಳನ್ನು ಸೇರಿಸಿ ಕೊಂಡು ಬೆಳೆದ ಆಹಾರ ಪದ್ಧತಿಗಳೇ ಅನ್ವೇಷಣಾ ಆಹಾರಗಳು. ಹೊಸ ತಂತ್ರಜ್ಞಾನ ಮತ್ತು ಅಭಿರುಚಿಯ ಕಾರಣವಾಗಿ ಈ ಪರಿಸ್ಥಿತಿ ಉಂಟಾಗುತ್ತದೆ.

ಉದಾ: ಸಸ್ಯಾಹಾರಿ ಹೊಟೇಲ್‌ಗಳಲ್ಲಿ ಪಲಾವ್. ಇದು ಮೂಲತಃ ಮಾಂಸಾಹಾರಿ ಆಹಾರ. ಇದೇ ರುಚಿಯ ಆಹಾರವನ್ನು ಸಸ್ಯಾಹಾರಿಗಳಿಗೆ ಕೊಡಲು ವೆಜಿಟೆಬಲ್ ಪಲಾವ್ ಮಾಡುತ್ತಾರೆ. ಅನ್ನದ ಜೊತೆಗೆ ಮಾಂಸ ಬೆರೆಸಿದ್ದು ಮೂಲ ಪಲಾವ್. ಆದರೆ ಇಲ್ಲಿ ಬ್ರೆಡ್ಡಿನ ಚೂರುಗಳನ್ನು ಮಾಂಸದ ಸ್ಥಾನದಲ್ಲಿ ಹಾಕುತ್ತಾರೆ. ಬೇಕರಿ ಆಹಾರಗಳಲ್ಲಿ ಈ ಬಗೆಯ ಅನ್ವೇಷಣಾ ಆಹಾರಗಳನ್ನು ಕಾಣುತ್ತೇವೆ.

ಆಹಾರದ ತಾತ್ವಿಕ ವಿಶಿಷ್ಟ್ಯತೆ:

ಸಾರ್ವತ್ರಿಕವಾದ ಆಹಾರದ ತಾತ್ವಿಕತೆಯೊಂದಿದೆ. ಅದು ಪ್ರಕೃತಿಯಿಂದ ಸೇರಿಕೆಯಾದ ಪದಾರ್ಥಗಳನ್ನು ಪಡೆಯುವುದಕ್ಕೂ, ಬೇಡವಾದ ಪದಾರ್ಥಗಳನ್ನು ದೂರವಿಡುವುದಕ್ಕೂ ಸಂಬಂಧಿಸಿದ್ದು. ಪ್ರಕೃತಿಗೆ ಹೊಂದಿಕೊಂಡು ಒಂದು ಸಂಸ್ಕೃತಿಯೊಳಗೆ ಬದುಕುವ ಜೀವನ ಸಹ್ಯತೆಯನ್ನು ಈ ಸಾರ್ವತ್ರಿಕ ತತ್ವ ಒಳಗೊಂಡಿದೆ.

ಪ್ರತಿದೇಶಕ್ಕೆ ತನ್ನದೇ ಆದ ಒಂದು ಆಹಾರದ ತಾತ್ವಿಕತೆ ಇರುತ್ತದೆ. ಅದು ಆ ದೇಶದ ಸಂಸ್ಕೃತಿಯ ’ಸ್ವೀಕಾರ-ನಿರಾಕರಣೆ’ ತತ್ವಕ್ಕೆ ಬದ್ಧವಾಗಿರುತ್ತದೆ. ಉದಾ: ಶೂದ್ರ ಕುಂಬಳಕಾಯಿ ತಿನ್ನಬಾರದು, ಬ್ರಾಹ್ಮಣ ಬಾಡು ತಿನ್ನಬಾರದು. ಹೀಗೆ ಆಹಾರದ ವರ್ಗ ನಿಷೇಧ ಮತ್ತು ಆಹಾರದ ವರ್ಗ ಸ್ವೀಕಾರದ ದೆಸೆಯಿಂದಾಗಿ ಆ ದೇಶದ ಆಹಾರ ಉತ್ಪತ್ತಿ, ನಿಯಂತ್ರಣ ಮತ್ತು ಹಂಚಿಕೆಗಳು ನಿರ್ಣಾಯಕ ಪರಿಣಾಮವನ್ನು ಉಂಟು ಮಾಡುತ್ತವೆ. ಆಹಾರದ ಪ್ರಾಕೃತಿಕ ನಿಯಮಕ್ಕೆ ಬೇರೆಯಾದ ಈ ಸಾಂಸ್ಕೃತಿಕ ನಿಯಮಗಳು ಆಹಾರದ ಮಾದರಿ, ರೀತಿ ಮತ್ತು ಅದನ್ನು ಬಳಸುವ ಮಾರ್ಗವನ್ನು ನಿರ್ಧರಿಸುತ್ತವೆ. ಉದಾ: ಭಾರತದಾದ್ಯಂತ ಮುಸ್ಲಿಮರು ಹಂದಿ ಸಾಕುವುದಿಲ್ಲ. ಕರ್ನಾಟಕದ ವೀರಶೈವರು ಹಂದಿ, ಕೋಳಿ ಮುಂತಾದ ಕೆಲವು ಪ್ರಾಣಿಗಳನ್ನು ವಿಶೇಷವಾಗಿ ಸಾಕುವುದಿಲ್ಲ.

ನಮ್ಮ ವರ್ಗಕಲ್ಪನೆ ಆಹಾರ ಬಳಕೆಯ ಮೇಲೆ ಎಂಥ ಪರಿಣಾಮ ಬೀರಿದೆ ಎನ್ನುವುದಕ್ಕೆ “ಶೂದ್ರ ಹಿಟ್ಟುಂಡು ಗಟ್ಟಿಯಾದ, ಬ್ರಾಹ್ಮಣ ಅನ್ನ ಉಂಡು ತೊಸಕಲನಾದ” ಎಂಬ ಮಾತುಗಳು. ಬ್ರಾಹ್ಮಣರಾಗಿ ತಿನ್ನುವುದಿಲ್ಲ ಎಂದು ಕೂಡ ಹೇಳುತ್ತಾರೆ. ಆತ ದೈಹಿಕಶ್ರಮ ಮಾಡುವುದಿಲ್ಲವಾದ್ದರಿಂದ ಮುದ್ದೆ ಅರಗುವುದಿಲ್ಲ ಅದಕ್ಕೇ ಆತ ಮುದ್ದೆ ತಿನ್ನುವುದಿಲ್ಲ ಎನ್ನುವುದೂ ಉಂಟು.

ಜಾತಿ, ಶ್ರೇಷ್ಠತೆ ಮತ್ತು ಕನಿಷ್ಠತೆಯ ತಾರತಮ್ಯದ ಮೇಲೆ ನಿಂತಿರುವ ಹಾದೆ ಆಯಾ ಜಾತಿಯ ಆಹಾರವನ್ನು ಅದೆ ರೀತಿಯಲ್ಲಿ ನಿಯಮಿಸಲಾಗಿದೆ. ಮಾಂಸದ ಅಡುಗೆಗಳನ್ನು ’ಹೊಲಸು’ ಎಂದು ಕರೆದಿರುವುದೆ ಇದಕ್ಕೆ ಸಾಕ್ಷಿ. ಈಗಲೂ ಮಾಂಸ ತಿನ್ನುವವರನ್ನು  ನಿಮ್ಮ ಮನೆಯಲ್ಲಿ ವಿಶೇಷವೇನು ಎಂದು ಕೇಳಿದರೆ ’ಹೊಲಸು’ ಎಂದೇ ಹೇಳುತ್ತಾರೆ. ಮೇಲ್ಜಾತಿಯ ತುಚ್ಛೀಕರಣ ಕೆಳಜಾತಿಯ ಅನುಸರಣೆಯಾಗುತ್ತದೆ ಎಂಬುದಕ್ಕೆ ಈ “ಹೊಲಸು” ಆಹಾರದ ಉದಾಹರಣೆಯೆ ಸಾಕ್ಷಿ. ಜನ ಆಧುನಿಕರಾದಂತೆ ಮಾಂಸವೂ ಒಂದು ಅಡುಗೆ ಅದು ಹೊಲಸು ಅಲ್ಲ ಎನ್ನುವ ಮನೊಧರ್ಮ ಬರಬೇಕಾಗಿತ್ತು. ಬದಲಾಗಿ ಅದು ’ಅಶುಭ’ ಎನ್ನುವ ಮನೋಧರ್ಮ ಬಂದು ಬಿರಿಟ್ಟಿದೆ. ಮೊದಲು ಮದುವೆ, ತಿಥಿ, ಕಾರ್ಯಗಳಲ್ಲಿ ಮಾಂಸದ ಅಡುಗೆ ಮಾಡುತ್ತಿದ್ದ ಒಕ್ಕಲಿಗರು ನಿಲ್ಲಿಸಿ ಬಿಟ್ಟಿದ್ದಾರೆ. ಅವುಗಳನ್ನು ಹಬ್ಬದ ಎರಡನೆಯ ದಿನಕ್ಕೆ (ವರ್ಷ ತೊಡಕು) ಮದುವೆಯ ಮೂರನೆಯ ದಿನಕ್ಕೆ(ಬೀಗರೂಟ) ವರ್ಗಾಯಿಸಿದ್ದಾರೆ. ಹೀಗೆ ಆಹಾರ ಪದ್ಧತಿ ವ್ಯಕ್ತಿ ಅಥವಾ ಜಾತಿಯ ಜನರನ್ನು ಮೇಲೇರಿಸುವ ಅಥವಾ ಕೆಳಗೆ ಇಳಿಸುವ ಕಾರ್ಯವನ್ನು ಮಾಡುತ್ತಿದೆ. ಮಾಂಸ ತಿನ್ನುವವರು ಎರಡನೆಯ ಸ್ಥಾನಕ್ಕೆ ಬಂದರೆ ದನ ತಿನ್ನುವವರು ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಪವಿತ್ರ ವರ್ಗದ ಜನರು ಪೂಜಾ ಪ್ರಾಣಿಯನ್ನು ತಿನ್ನುವವರನ್ನು ಕೊನೆಯಲ್ಲಿಟ್ಟರೆಂದು ಕಾಣುತ್ತದೆ. ಮಾಂಸವಿರಲಿ ಮಾಂಸದ ಬಣ್ಣದ ಈರುಳ್ಳಿ ಮತ್ತು ಟೊಮೆಟೊಗಳನ್ನು ವರ್ಜಿಸಿ ಉತ್ತಮರಾಗುವ ಹುಚ್ಚುಜನ ಆಹಾರ ಪದ್ಧತಿಯ ಮೇಲೆ ಎಂಥ ನಿರ್ಣಾಯಕ ಪರಿಣಾಮವನ್ನು ಉಂಟು ಮಾಡಿದರು ಎಂಬುದನ್ನು ನೆನೆಯಬೇಕು.

ಇದರಿಂದಾಗಿ ಭಾರತದ ಆಹಾರ ಸ್ವೀಕಾರ ಮತ್ತು ತಿರಸ್ಕಾರದ ಮೇಲೆ ಎಂಥ ಪರಿಣಾಮ ಉಂಟಾಗಿದೆ ಎಂಬುದನ್ನು ಗಮನಿಸಿ. ಬ್ರಾಹ್ಮಣರು ಶೂದ್ರರ ಊಟೋಪಚಾರದಿಂದ ಏನನ್ನು ಕಲಿಯದೆ ಹೋದರು, ಶೂದ್ರರು ಮಾತ್ರ ಬ್ರಾಹ್ಮಣರು ಎಲ್ಲವನ್ನು ಕಲಿತರು. ಇದು ನಮ್ಮ ಜ್ಞಾನಾರ್ಜನೆ ಮತ್ತು ಜ್ಞಾನ ನಿರಾಕರಣೆಯ ಮೇಲೂ ನಿಖರವಾದ ಪರಿಣಾಮವನ್ನುಂಟು ಮಾದಿದೆ. ಬ್ರಾಹ್ಮಣನ ವಿದ್ಯೆ ಸರಿ ಮತ್ತು ಸಹ್ಯ-ಶೂದ್ರನ ವಿದ್ಯೆ ಕಲಿಯುವಂಥದೇನಲ್ಲಿ ಎಂಬುದು ಇದರಿಂದ ಸ್ಪಷ್ಟವಾಗಿದೆ. ಈ ಕಾರಣಕ್ಕಾಗಿಯೇ ಬ್ರಾಹ್ಮಣನ ಹೊಟೇಲಿಗೆ ಎಲ್ಲರೂ ಕುರಿಗಳಂತೆ ನುಗ್ಗುತ್ತಾರೆ; ದಲಿತ ಹೊಟೇಲು ಇಟ್ಟರೆ ನೊಣಗಳೂ ಹೋಗುವುದಿಲ್ಲ. ದಕ್ಷಿಣ ಕರ್ನಾಟಕದಲ್ಲಿ ವೀರಶೈವರು ಖಾನಾವಳಿಗಳನ್ನು ತೆರೆದರೆ ಹೊಟೇಲುಗಳ ಜೊತೆಗೆ ಪೈಪೋಟಿ ಮಾಡಲಾಗುವುದಿಲ್ಲ.

ಶೂದ್ರರು ಮಾಡಿದ ಯಾವುದೇ ಅಡುಗೆಯನ್ನು ಬ್ರಾಹ್ಮಣರು ತಿನ್ನುತ್ತಿರಲಿಲ್ಲ. ಬ್ರಾಹ್ಮಣ ಮಾಡಿದ ಆಹಾರವನ್ನು ಎಲ್ಲ ಶೂದ್ರರೂ ಎರಡೂ ಕೈಯೊಡ್ಡಿ ಪಡೆಯುತ್ತಿದ್ದರು. ಪ್ರಸಾದ ಬಂದುದು ಇದೇ ಮಾರ್ಗವಾಗಿ ಎಂಬುದನ್ನು ಮರೆಯದಿರಿ. “ಅಕ್ಕಿ ಕೊಟ್ಟು ಮಡದಿಗಳ ನುಣ್ಬ ಮರುಳಂ ಪೋಲ್ಗು” ಎಂದು ಪಂಪ, ಬ್ರಹ್ಮಶಿವ, ಅಕ್ಕಿಕೊಟ್ಟು ಪ್ರಸಾದ ಪಡೆಯುವ ಮೂರ್ಖರು ಎಂದು ಇತ್ತೀಚಿನ ವಿಚಾರವಂತರು ಹೇಳುವ ಮಾತುಗಳಲ್ಲಿ ವ್ಯತ್ಯಾಸವೇನೂ ಇಲ್ಲ, ಎಂದ ಮಾತ್ರಕ್ಕೆ ದೇವರ ಅಡುಗೆಯನ್ನು ನಿರಾಕರಿಸಿದಂತಾಗುವುದಿಲ್ಲ. ಅನ್ನನಿಂದ ಪ್ರಸಾದ ಪಡೆಯುವ, ತನ್ನಿಂದ ಪ್ರಸಾದ ತಯಾರಿಸಲು ಮತ್ತು ಕೊಡಲು ಸಾಧ್ಯವಿಲ್ಲ ಎನ್ನುವವನನ್ನು ಕುರಿತು ಈ ಮಾತುಗಳನ್ನು ಹೇಳಲಾಗಿದೆ. ದಕ್ಷಿಣ ಕರ್ನಾಟಕವೂ ಸೇರಿದಂತೆ ತಮ್ಮ ಜೀವಮಾನದಲ್ಲಿ ಪ್ರಸಾದ ತಯಾರಿಸದ ಮತ್ತು ತನ್ನವರಲ್ಲದ ಬೇರೆ ಜನಕ್ಕೆ ಕೊಡಲು ಸಾಧ್ಯವಿಲ್ಲದ ಸಾಕಷ್ಟು ಜನ ಈ ದೇಶದಲ್ಲಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

ಮೇಲಿನವು ನಂತರ ಬೆಳೆದ ಜಾತಿ ಧರ್ಮದ ಮೇಲೆ ಬಂದ ಆಹಾರದ ತಾತ್ವಿಕತೆಗಳು. ಇವನ್ನು ಹೊರತು ಪಡಿಸಿದ, ಮಾನವಸಂಬಂಧಿಯಾದ ಹಲವು ಆಹಾರ ತಾತ್ವಿಕತೆಗಳು ನಮ್ಮಲ್ಲಿವೆ. ಅವುಗಳಲ್ಲಿ ಯಾರ್ಯಾರು ಎಷ್ಟು, ಹೇಗೆ, ಎಲ್ಲಿ ಮತ್ತು ಎಷ್ಟು ಹೊತ್ತಿನಲ್ಲಿ ಊಟ ಮಾಡಬೇಕು ಎಂಬುದು ಬಹಳ ಮುಖ್ಯವಾದುವು. ದಕ್ಷಿಣ ಕರ್ನಾಟಕವೂ ಸೇರಿ ಕೊಂಡಂತೆ ದೊಡ್ಡವರಿಗೆ ಮೂರು ಊಟ ಮತ್ತು ಮಕ್ಕಳಿಗೆ ಲೆಕ್ಕವಿಲ್ಲದ ಊಟ ಎಂಬ ರೂಢಿ ಇದೆ. ಇದನ್ನು ಕುರಿತು ಒಂದು ಜನಪದ ಪುರಾಣವೆ ಇದೆ.

ನಮ್ಮ ಜನಪದರ ಸಕಲ ಜೀವರಾಶಿಗಳಿಗೂ ’ಅನ್ನಪತಿ’ ಅಳೆಯುವವನು ಶಿವನೆ. ಅವನು ಒಮ್ಮೆ ಬಸವನನ್ನು ಕರೆದು ಭೂಲೋಕದಲ್ಲಿ ಜನ ಮನಸ್ಸಿಗೆ ಬಂದ ಹಾಗೆ ತಿನ್ನುತ್ತಿದ್ದಾರೆ. ನೀನು ಅಲ್ಲಿಗೆ ಹೋಗಿ ದೊಡ್ಡವರಿಗೆ ಎರಡು  ಊಟ ಮಕ್ಕಳಿಗೆ ಮೂರು  ಊಟ ಎಂದು ಸಾರಿ ಬಾ ಎಂದು ಕಳಿಸಿದ. ಏನು ಕಾರಣಕ್ಕೆ ಬಸವ ಭೂಲೋಕದ ಕಡೆಗೆ ಬರುವಾಗ ಶಿವನ ಮಾತುಗಳನ್ನು ಮರೆತುಬಿಟ್ಟ. ತನಗೆ ಜ್ಞಾಪಕಕ್ಕೆ ಬಂದಂತೆ ದೊಡ್ಡವರಿಗೆ ಮೂರು ಊಟ, ಮಕ್ಕಳಿಗೆ ಲೆಕ್ಕವಿಲ್ಲದ ಊಟ ಎಂದು ಹೇಳಿ ಬಿಟ್ಟ. ಶಿವನಲ್ಲಿಗೆ ಬಂದಾಗಲೆ ಬಸವನಿಗೆ ಗೊತ್ತಾದದ್ದು. ತಾನು ತಪ್ಪು  ಮಾಡಿದೆ  ಎಂದು. ಸಿಟ್ಟುಗೊಂಡ ಶಿವ ಹೋಗು ನಿನ್ನ  ತಪ್ಪಿಗೆ ಸರಿಯಾದ ಶಿಕ್ಷೆಯಾಗಲಿ , ಭೂಲೋಕದಲ್ಲಿದ್ದುಕೊಂಡು ಆ ಜನರಿಗೆ ಗೇದು ಹಾಕು ಎಂದು ಕಳಿಸಿದ. ಆದ್ದರಿಂದಲೇ ಈ ಎತ್ತುಗಳು ಈಗ ಮನುಷ್ಯನ ಕೈಗೆ ಸಿಕ್ಕಿ ಭೂಮಿಯನ್ನು ಊಳಬೇಕಾಗಿದೆ.

ಈ ಪುರಾಣಕ್ಕೂ ನಮ್ಮ ಊಟದ ರೀತಿಗೂ ಸಂಬಂಧವಿದೆ. ಮೊದಲು ಇದ್ದುವು ನಿಜವಾಗಿ ಎರಡೇ ಊಟಗಳು. ರಾತ್ರಿ ಅಥವಾ ಬೆಳಗಿನ ಊಟಗಳು ಮಾತ್ರ ಮೂಲ ಊಟಗಳು. ಬೆಳಗಿನ ಊಟ ಮುಗಿಸಿ ರೈತರು ಹೊಲಗದ್ದೆಗಳಿಗೆ ಹೋದಾಗ  ಉಳಿದ ಊಟವನ್ನು ಅಲ್ಲದೆ ತೆಗೆದುಕೊಂಡು ಹೋಗಿ ಉಣ್ಣುತ್ತಿದ್ದರು. ಅದನ್ನು ಅವರು ‘ತಂಗಳ’ ಎಂದು ಕರೆಯುತ್ತಿದ್ದರು. ರಾತ್ರಿ ಉಳಿದ ಹಿಟ್ಟಿಗೆ ಬೆಳಿಗ್ಗೆ ಕಡೆದ ಮಜ್ಜಿಗೆ ಹಾಕಿಕೊಂಡು ಕಲಸಿ ಜೊತೆಗೆ ಈರುಳ್ಳಿ ನೆಂಜಿಕೊಂಡು ಸುರಿದರೆ ಅದು ಅವರ ಹೊಟ್ಟೆಯನ್ನು ತಂಪು ಮಾಡುತ್ತಿತ್ತು. ಇಲ್ಲವೆ ಉಳಿದ  ಹಿಟ್ಟಿಗೆ ಗೊಡ್ಡು ಕಾರ ಬೆರಸಿ ‘ಉಪ್ಪಿಟ್ಟು’ ಎಂದು ಮಾಡಿಕೊಂಡು ಬಲಗೈಲಿ ಈ ಕಾರದ ಮುದ್ದೆ (ಉಪ್ಪಿಟ್ಟು) ಎಡಗೈಲಿ ಈರುಳ್ಳಿ ನೆಂಜಿಕೊಂಡು ಉಣ್ಣುತ್ತಿದ್ದರು. ಬೆಳಿಗ್ಗೆ ರಾಗಿ ಅಂಬಲಿ ತಿಳಿಮಜ್ಜಿಗೆ ಬೆರಸಿ ಕುಡಿದರೆ ಬೆಳಗಿನ ಊಟದ ಕತೆ ಮುಗಿಯುತ್ತಿತ್ತು. ಶಿಷ್ಟ ಧರ್ಮಗಳು ಬಂದು ಹೆಣ್ಣನ್ನು ಕೋಣೆಗೆ ಅಟ್ಟಿದ ಮೇಲಿಂದ ಮೂರು ಹೊತ್ತೂ ಅಡಿಗೆ  ಮಾಡುವವರು ಸಿಕ್ಕಂತಾಗಿ ಗಂಡಿಗೆ ಊಟದಲ್ಲಿ ಪ್ರಮೋಷನ್ ಸಿಕ್ಕಂತಾಯಿತು.

ಪೂರ ಕೃಷಿ ಜನಪದಗಳೆ ಇದ್ದಾಗ ಹೆಣ್ಣು-ಗಂಡು, ಒಳಗೆ-ಹೊರಗೆ ಸಮಾನವಾಗಿ ದುಡಿಯುತ್ತಿದ್ದರು. ಆಗ ಅವರ ಬೆಳಗಿನ ಊಟ ಅಂಬಲಿ ಅಥವಾ ಗಂಜಿ. ಇದರ ಜೊತೆಗೆ ಹುರಿಗಾಳು ಅಥವಾ ಬೆಂದಕಾಳು ನೆಂಜಿಕೆಯಾಗುತ್ತಿದ್ದವು. ಕರಿಮೀನು ಒಣಬಾಡು ಅಥವಾ ಸೀಗಡಿ ಸುಟ್ಟು ನೆಂಜಿಕೆಗೆ ಬಳಸುತ್ತಿದ್ದುದೂ ಉಂಟು. ಮುಂದೆ ಅಂಬಲಿ ಗಟ್ಟಿಗೊಂಡು ಮುದ್ದೆಯಾಯಿತು. ಅದು ಅಗಲಗೊಂಡು ರೊಟ್ಟಿಯಾಯಿತು ಮತ್ತು ಉದ್ದವಾಗಿ ಶ್ಯಾವಿಗೆಯಾಯಿತು. ಅಂಬಲಿ ಸಾಮಾನ್ಯ ಆಹಾರವಾಗಿದ್ದಾಗ ಮುದ್ದೆ ವಿಶೇಷ ಆಹಾರವಾಗಿತ್ತು ಮುದ್ದೆ ಸಾಮಾನ್ಯ ಆಹಾರವಾದಾಗ ರೊಟ್ಟಿ ವಿಶೇಷ ಆಹಾರವಾಯಿತು. ಈ ಎರಡೂ ಸಾಮಾನ್ಯ ಆಹಾರಗಳಾದಾಗ ಶ್ಯಾವಿಗೆ ವಿಶೇಷ ಆಹಾರವಾಯಿತು. ಇಲ್ಲಿಂದ ಮುಂದೆ ಈ ಆಹಾರ ಪದ್ಧತಿಗಳು ವಿಸ್ತೃತಗೊಂಡಂತೆ ಕಾಣುವುದಿಲ್ಲ.

ತಂಗಳ ತಿನ್ನುವುದು ‘ಆರೋಗ್ಯಕ್ಕೆ ಒಳ್ಳೆಯದಲ್ಲ, ಎಂಬ ತಿಳುವಳಿಕೆ ಬ್ರಿಟಿಷರ ಆಗಮನದಿಂದ ಬಂದಿರಬೇಕು. ಆ ಕಾರಣಕ್ಕಾಗಿಯೆ  ತಂಗಳಕ್ಕೆ ಬದಲಾಗಿ ರೊಟ್ಟಿ ಬಂದಿರಬೇಕು. ಅಂದ ಹಾಗೆ ರೊಟ್ಟಿಯ ಬಳಕೆ ಕೂಡ ಬ್ರಟಿಷರ ಆಗಮನದ ಕೊಡುಗೆಯಾಗಿರುವಂತಿದೆ. ರೊಟ್ಟಿ ಬೇಗ ತಂಗಳಾಗುವುದಿಲ್ಲ. ಯಾಕೆಂದರೆ ಬೇಗ ಹಳಸಲು ಕಾರಣವಾದ ನೀರಿನ ಅಂಶ ಅದರಲ್ಲಿ ಕಡಿಮೆ ಇರುತ್ತದೆ. ಇನ್ನು ಮುಂದುವರಿದು ‘ಪಯಣದರೊಟ್ಟಿ’ ತಯಾರಿಸುತ್ತಾರೆ. ಇದರ ಜೊತೆಗೆ ಹುರಿದ ಕಾಳಿನ ಬೇಳೆಗಳನ್ನು ಸೇರಿಸುತ್ತಾರೆ. ಇದರಲ್ಲಿ ನೀರಿನ ಪ್ರಮಾಣ ಸ್ವಲ್ಪವೂ ಇಲ್ಲದಂತೆ ಮಾಡಲಾಗುತ್ತದೆ. ಆದ್ದರಿಂದಲೆ ಪಯಣದ ರೊಟ್ಟಿ ಬಹಳಕಾಲ ಕೆಡುವುದಿಲ್ಲ.

ಹೀಗೆ
ಅಂಬಲಿ > ಮುದ್ದೆ
ಮುದ್ದೆ > ರೊಟ್ಟಿ
ಮುದ್ದೆ > ಶ್ಯಾವಿಗೆ
ರೊಟ್ಟಿ > ಪಯಣದರೊಟ್ಟಿ
ರೊಟ್ಟಿ > ಪರ್ಪುರೊಟ್ಟಿ

ಆಗುವ ಹೊತ್ತಿಗೆ ನಮ್ಮ ಆಹಾರ ಪದ್ಧತಿ ಸರಳತೆಯಿಂದ ಸಂಕೀರ್ಣತೆಯ ಕಡೆಗೆ ಹರಿದಿದೆ. ಸರಳ ಆಹಾರ ಪದ್ಧತಿ ಸರಳ ಆರ್ಥಿಕ ವ್ಯವಸ್ಥೆಯನ್ನು ಕುರಿತು ಹೇಳುತ್ತದೆ. ಇದು ವಿಸ್ತೃತಿ ಕುಟುಂಬದ ಸಮಾಜವನ್ನು ನಮ್ಮ ಮುಂದಿಡುತ್ತದೆ.

ಆಹಾರದ ರೂಪಗಳ ವಿಕಾಸ ಕ್ರಮವೂ ಇದೇ ತತ್ವವನ್ನು ಅವಲಂಬಿಸಿ ಬೆಳೆದಿದೆ.

ಉದಾ:
ದುಂಡಾಕಾರ >
ಚಕ್ರಾಕಾರ >
ಉದ್ದಾಕಾರ >
ಚೌಕಾಕಾರ >
ಮಿಶ್ರಾಕಾರ

ಇದು ನಮ್ಮ ಆರ್ಥಿಕ ಬೆಳವಣಿಗೆಯನ್ನಲ್ಲದೆ ಸಾಮಾಜಿಕ-ಧಾರ್ಮಿಕ ಬೆಳವಣಿಗೆಯನ್ನು ಸೂಚಿಸುತ್ತದೆ. ಬೇಟೆಯಾಡಿ ತಿನ್ನುವ ಪ್ರಾಣಿಗಳಲ್ಲಿ ಕೆಲವನ್ನು ಸಾಕು ಪ್ರಾಣಿಗಳಾಗಿ ಮಾಡಿಕೊಂಡ. ಈ ಸಾಕು ಪ್ರಾಣಿಗಳನ್ನು ತನ್ನ ಪ್ರಾಣಕ್ಕೆ ಬದಲಾಗಿ “ಆಹಾರ ಕೊಡುವ” ವರೆಗೆ ತನ್ನ ಆಹಾರ ಸಂಸ್ಕೃತಿಯನ್ನು ಬೆಳೆಸಿಕೊಂಡ.

ಬಲಿಆಹಾರವಾಗಿ ಪರಿವರ್ತಿತವಾಗುವ ಬಗೆ:

’ಬಲಿ’ ಮೂಲದಲ್ಲಿ ತಿನ್ನುವ ಪ್ರಾಣಿ ಆಗಿರಬೇಕಿರಲಿಲ್ಲ. ಬಲಿ ಕೊಡುವ ಪ್ರಾಣಿ ತಿನ್ನಬಹುದಾದ ಪ್ರಾಣಿಯೂ ಆದಾಗ ಅದು ಆಹಾರವಾಗಿ ಪರಿವರ್ತಿತವಾಯಿತು. ಬಲಿಯಲ್ಲಿ ಮೊದಲ ಬಲಿಪ್ರಾಣಿ ಮನುಷ್ಯನೆ ಆಗಿದ್ದ. ಒಂದು ಗುಂಪಿನ ಜನ ಮತ್ತೊಂದು ಗುಂಪಿನ ಜನರನ್ನು ಹಿಡಿದು ತಂದು ತಮ್ಮ ಕುಲದೇವತೆಗೆ ಬಲಿಕೊಡುತ್ತಿದ್ದರು. ಇದು ಎರಡು ಗುಂಪುಗಳ ಮಧ್ಯದ ಘೋಷಿತ, ನಿರಂತರ ಅಂತರ್ ಯುದ್ಧವೂ ಆಗಿತ್ತು. ಈ ಬಲಿ ನಂತರ ಆಹಾರವಾಗಿಯೂ ಪರಿವರ್ತಿತವಾಯಿತು.

ಮನುಷ್ಯ ಸಂಸ್ಕೃತಿಯಲ್ಲಿ ಮುಂದುವರಿದಂತೆ ತನಗೆ ತಾನೇ ಆಹಾರವಾಗಿ ನಾಶವಾಗುವುದನ್ನು ತಪ್ಪಿಸಲು ಸಾಕು ಪ್ರಾಣಿಗಳಿಗೆ ’ಬಲಿ’ಯ ಪರಿಕಲ್ಪನೆಯನ್ನು ವರ್ಗಾಯಿಸಿದ. ಬಲಿಯಾಗುವ ಪ್ರತಿ ಪ್ರಾಣಿ ಒಬ್ಬ ಮನುಷ್ಯನ ಸಾವನ್ನು ತಪ್ಪಿಸುತ್ತದೆ ಮಾತ್ರವಲ್ಲ ಅವನು ಆಹಾರವಾಗಬೇಕಾದ ಸ್ಥಾನದಲ್ಲಿ ತಾನು ಆಹಾರವಾಗುತ್ತದೆ. ಮನುಷ್ಯನಿಗೆ ಬದಲಾಗಿ ಬಲಿಗೆ ಸಿಕ್ಕಿದ ಮೊದಲ ಪ್ರಾಣಿ ಕೋಣ ಎಂದು ನಮ್ಮ ಬಲಿ ಪರಂಪರೆಯ ಪ್ರಾಣಿಗಳನ್ನು ಅಧ್ಯಯನ ಮಾಡಿದರೆ ಗೊತ್ತಾಗುತ್ತದೆ. ಆ ಕಾಲದ ಮನುಷ್ಯನ ಗಾತ್ರ ಕೋಣವನ್ನು ತನ್ನ ಸಮಕ್ಕೆ ಸರಿದೂಗಿಸಿರಬಹುದು. ಕಾಲುಗಳ ದೃಷ್ಟಿಯಿಂದ ಒಂದು ಪ್ರಾಣಿಗೆ ಬದಲಾಗಿ ಕೋಣವನ್ನು ಬಲಿಕೊಡುವ ಮೂಲಕ ಎರಡು ಪ್ರಾಣಿಯನ್ನು ಬಲಿಕೊಟ್ಟಂತಾಗುತ್ತದೆ. ಇದು ಮನುಷ್ಯ ದೇವರಿಗೆ ತನ್ನದೆಂದು ಕೊಡುವ ಆಹಾರ.

ನಂತರ ಕೋಣನಿಗೆ ಬದಲಾಗಿ ಕುರಿ ಅಥವಾ ಮೇಕೆ ಬಲಿಗಳಾದವು. ಇವುಗಳ ನಂತರ ಕೋಳಿಗಳು. ಮುಂದೆ ಇವುಗಳ ಮೊಟ್ಟೆಗಳೆ ಬಲಗಳಾದುವು. ಕೋಳಿ ಕೊಡಲಾರದ ಬಡವರು ಮಾರಮ್ಮನಿಗೆ ಕೋಳಿ ಮೊಟ್ಟೆ ಆಹಾರ ( ತಳಿಗೆ)ವನ್ನು ಕೊಡುತ್ತಾರೆ. ಜನರಲ್ಲಿ ಶಿಷ್ಟರು ಮತ್ತು ಜನಪದರು ಎಂದು ಶಿಷ್ಟ ಧರ್ಮದ ಪ್ರಕಾರ ಎರಡು ಗುಂಪುಗಳಾದ ಮೇಲೆ ಶಿಷ್ಟರು ತಮ್ಮ ಕಡೆಯ ಬಲಿಯಾಗಿ ಮೊಸರನ್ನ ಕೊಡಲು ತೊಡಗಿದರು. ಇದರ ಜೊತೆಗೆ ಕಾಯಿ ಒಡೆಯುವುದು ತತ್ತಿ ಒಡೆಯುವುದರ ಸಂಕೇತವೂ, ಹಣ್ಣು ಮುರಿಯುವುದು ಕತ್ತು ಮುರಿಯುವುದರ ಸಂಕೇತವೂ ಆಗಿ ಬೆಳಕಿಗೆ ಬಂದವು. ಇದರಿಂದ ನಮಗೆ ಸ್ಪಷ್ಟವಾಗುವುದೆಂದರೆ ಪ್ರಾಕೃತ ಮನುಷ್ಯನಿಂದ ಹಿಡಿದು ಇಲ್ಲಿಯವರೆಗಿನ ಬಲಿಯ ಕಲ್ಪನೆ ಆಹಾರ ಪೂರೈಕೆಯ ಒಂದು ಮೂಲ ಎಂಬುದು. ಇದನ್ನು ಕೆಳಗಿನಂತೆ ಚಿತ್ರಿಸಬಹುದು-

“ಬಲಿ” = ಮನುಷ್ಯ = ಆಹಾರ

ಕೋಣ

ಕುರಿ-ಮೇಕೆ

ಕೋಳಿ

ಮೊಟ್ಟೆ

ಸಸ್ಯಹಾರ

ಮಾಂಸಾಹಾರ

ಮೊಸರನ್ನ, ಕಾಯಿ ಮತ್ತು ಹಣ್ಣು

ಕುರಿ, ಕೋಳಿ, ಮೊಟ್ಟೆ

 

ಶಿಷ್ಟವೆಂಬ ಸಸ್ಯಾಹಾರಿ ಧರ್ಮದಿಂದ ಮಾಂಸಾಹಾರ ಅದರ ಎದುರಾಳಿಯಾಯಿತು. ಈ ಎದುರಾಳಿಯನ್ನು ಮುಗಿಸಲು ಸಸ್ಯಾಹಾರ ಅದನ್ನು ಹೊಲಸು ಮತ್ತು ಅಶುದ್ಧ ಎಂದು ಕರೆಯಿತು. ಇದನ್ನು ಮಾಂಸಾಹಾರವೂ ಒಪ್ಪಿಕೊಂಡಿತು. ಈಗಲೂ ಮಾಂಸಾಹಾರಿಗಳು ತಮ್ಮ ಈ ಅಡುಗೆಯನ್ನು ಒಳಕೋಣೆಯಲ್ಲಿ ಅಡುವುದಿಲ್ಲ. ಹೊರಗೆ ಅಟ್ಟು, ಹೊರಗೆ ಉಂಡು ಕೈಕಾಲು ಮುಖ ಮತ್ತು ಬಾಯಿ ತೊಳೆದುಕೊಂಡು ಇಲ್ಲವೆ ಸ್ನಾನ ಮಾಡಿ ಒಳಗೆ ಬರುತ್ತಾರೆ. ಭಾರತದಲ್ಲಿ ಮಾಂಸಾಹಾರವನ್ನು ’Veg’ ಅಲ್ಲದ್ದು ’non-veg’ ಎಂದು ಸಸ್ಯಾಹಾರದ ಮೂಲಕವೆ ಗುರುತಿಸುತ್ತಾರೆ (identity). ಈಗ ಶಾಸ್ತ್ರಕ್ಕೆ ಮಾತ್ರ ಹೆಚ್ಚು ಸಸ್ಯಾಹಾರಿಗಳಿದ್ದಾರೆ. ಪ್ರಾಯೋಗಿಕವಾಗಿ ಮಾಂಸಾಹಾರಿಗಳೇ ಹೆಚ್ಚು. ಈಗಿನ ಹುಚ್ಚು ಪಕ್ಷವೊಂದು ಮತ್ತೆ ಪ್ರಾಕೃತ ಗುಹೆಯೊಳಗಿಂದ ಸಸ್ಯಾಹಾರವೆ ಶ್ರೇಷ್ಠ ಎಂದು ಕೂಗುತ್ತಿದೆ. 

ಆಹಾರದ ತಾತ್ವಿಕ ವಿಶಿಷ್ಟತೆ

ಉಟಕ್ಕೆ ಮೊದಲು ಮತ್ತು ನಂತರ:

ಊಟಕ್ಕೆ ಮೊದಲು ಎಂದ ತಕ್ಷಣ ಉಪ್ಪಿನಕಾಯಿ ಎಂಬ ಗಾದೆಯನ್ನು ನೆನೆಸಿಕೊಂಡು ಬಾಯಿ ಚಪ್ಪರಿಸಬೇಡಿ. ನಿಜವಾದ ಅರ್ಥದಲ್ಲಿ ಊಟಕ್ಕೆ ಮೊದಲು ಉಪ್ಪಿನಕಾಯಿ ಅಲ್ಲ. ಅದು ಮುಖ್ಯ ಊಟದ ಜೊತೆಗೆ ನೆಂಜಿಕೆಯಾಗಿ ಬಂದದ್ದು. ಊಟಕ್ಕೆ ಮೊದಲು ಹಸಿವು. ಆದರೆ ಸಂಸ್ಕೃತಿಯನ್ನು ಉಳ್ಳವರಾದ್ದರಿಂದ ಮನುಷ್ಯರು ಹಸಿವನ್ನು ಪ್ರಾಣಿಗಳ ರೀತಿಯಲ್ಲಿ ಪೂರೈಸಿಕೊಳ್ಳುವುದಿಲ್ಲ. ಊಟಕ್ಕೆ ಕೂರುವವನು ಕೈಕಾಲು ಮುಖ, ಕನಿಷ್ಠ ಬಾಯಿ ಮುಕ್ಕಳಿಸಿ ಕೈತೊಳೆದು ಊಟಕ್ಕೆ ಬರಬೇಕು. ಕೂರುವ ಜಾಗಕ್ಕೆ ಚಾಪೆ ಅಥವಾ ತನ್ನದೆ ಬಟ್ಟೆ ಇದ್ದರೆ ಅದನ್ನು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ತಿಂದದ್ದು ನೆಲಕ್ಕೆ ಹೋಗುತ್ತದೆ. ಇಲ್ಲವೆ ನೆಲದಲ್ಲಿ ಇರುವ ಶಕ್ತಿಗಳು ಊಟದ ಸತ್ವವನ್ನು ಎಳೆದುಕೊಳ್ಳುತ್ತವೆ. ಆದ್ದರಿಂದ ಭೂಮಿ ಮತ್ತು ಮನುಷ್ಯನ ಅಂಡಿನ ಮಧ್ಯೆ ಒಂದು ತಡೆ ಇರಬೇಕೆಂದು ಮಾಂತ್ರಿಕ ಧರ್ಮ ಹೇಳುತ್ತದೆ. ಇದು ’ಆಹಾರ ನಿಯಂತ್ರಣಾವಲಯ’ ತತ್ವಕ್ಕೆ ಸೇರಿದ ವಿಷಯ. ಅದಕ್ಕಾಗಿಯೇ ಭೂತ ಪ್ರೇತ ಮತ್ತು ಪ್ರಾಣಿಗಳಿಗಾಗಿ ಪ್ರತ್ಯೇಕ ಅನ್ನ ಸಮರ್ಪಣೆ ಆಚರಣೆಗಳಿರುತ್ತವೆ.

ಊಟಕ್ಕೆ ಕುಳಿತಾಗ ತಟ್ಟೆ ಮುಂದಿರುತ್ತದೆ. ಇದನ್ನು ಮರದ ಹಲಗೆಯ ಮೇಲೆ ಕೂಡ ಇಡುವುದುಂಟು. ಇತರ ಜೀವಿಗಳು ವ್ಯಕ್ತಿಯ ಊಟವನ್ನು ಭಾಗ ಮಾಡಿಕೊಳ್ಳದಿರಲಿ ಎಂಬ ತತ್ವವೂ ಇಲ್ಲಿದೆ. ಮೇಲಿನಿಂದ ತಟ್ಟೆಯ ಆಹಾರವನ್ನು ಬೇರೆ ಜೀವಿಗಳು ಕದಿಯಬಹುದು. ಹಗಲು ಹೊತ್ತು ಇದು ಸಾಧ್ಯವಿಲ್ಲ ಎಂದು ಜನ ನಂಬಿದ್ದಾರೆ. ಊಟ ಮಾಡುತ್ತಿರುವಾಗ ದೀಪ ಹೋದರೆ ಊಟ ಮಾಡುವವನನ್ನು ’ಕೈ ನಿಲ್ಲಿಸ ಬೇಡ’ ಎನ್ನುತ್ತಾರೆ. ಯಾಕೆಂದರೆ ಅವನ ಕೆಲಸವನ್ನು ಬೇರೆ ಶಕ್ತಿಗಳು ಮಾಡಿಬಿಡಬಹುದು ಎಂದು. ಈತ ತಟ್ಟೆಗೆ ಮತ್ತು ಬಾಯಿಗೆ ಕೈಯಾಡಿಸುತ್ತಿದ್ದರೆ. ಇತರೆ ಶಕ್ತಿಗಳು ಕೈ ಹಾಕುವುದು ಕಷ್ಟವಾಗುತ್ತದೆ. ಈ ಕಾರಣಕ್ಕಾಗಿಯೆ ಊಟ ಆರಂಭವಾಗುವ ಮೊದಲು ನೆಲದಲ್ಲಿ ಹರಿಯುವ, ನಮಗೆ ಕಾಣದಂತೆ ಚಲಿಸುತ್ತಿವೆ ಎಂದು ತಿಳಿದು ಕೊಂಡು ಪ್ರಾಣಿಗಳಿಗಾಗಿ ತಟ್ಟೆ ಕೆಳಕ್ಕೆ ತಾವು ಊಟಮಾದುವ ಆಹಾರದಲ್ಲಿ ಸ್ವಲ್ಪವನ್ನು ಅಥವಾ ಒಂದು ಸಣ್ಣ ತುತ್ತನ್ನು ಹಾಕುತ್ತಾರೆ. ಇದು ಭಯದ ತತ್ವವೂ ಹೌದು, ಸಂಪಾದಿಸಿದ್ದನ್ನು ಭಾಗಮಾಡಿಕೊಂಡು ಬದುಕು ಎಂಬ ನೈಸರ್ಗಿಯ ಜೀವನ ನಿಯಮವೂ ಹೌದೂ. ನಂತರ ಈ ನಡವಳಿಕೆ ದೇವರಿಗಾಗಿ ಮೊದಲ ತುತ್ತಿನ ಅರ್ಪಣೆ ಎಂಬ ಅಭಿಪ್ರಾಯ ಬಂದಿದೆ. ಈ ಅರ್ಪಣೆಯಲ್ಲಿ ರಕ್ಷಣಾ ತಂತ್ರವೂ ಉಂಟು. ತಮ್ಮ ಊಟದ ಮೊದಲ ತುತ್ತನ್ನು ತನ್ನ ವಿಧೇಯ ಪ್ರಾಣಿಯಾದ ನಾಯಿ, ಬೆಕ್ಕು ಅಥವಾ ಇತರ ಪ್ರಾಣಿಗೆ ಹಾಕುವುದುಂಟು. ಆ ಪ್ರಾಣಿ ತಿಂದು ಅದಕ್ಕೆ ಏನು ಹೆಚ್ಚು ಕಡಿಮೆಯಾಗಲಿಲ್ಲ ಎಂದು ಸ್ಪಷ್ಟವಾದ ಮೇಲೆ ಉಣ್ಣುವುದುಂಟು. ಇದು ಒಡೆಯ-ಸೇವಕ ಸಂಬಂಧ, ಒಡೆಯನನ್ನು ರಕ್ಷಿಸಲು(ಶತ್ರುಗಳಿಂದ) ಸೇವಕ ತನ್ನ ಪ್ರಾಣವನ್ನು ಮುಡಿಪಾಗಿ ಇಟ್ಟು ಕಾಯುತ್ತಿರಬೇಕು. ನಿಜವಾಗಿ ನಾಯಿಗೆ ಊಟಹಾಕುವುದು ಒಡೆಯನ ಊಟದ ನಂತರ. ಅದು ಇರುವ ತತ್ವ; ನಮ್ಮ ಮಡದಿಯರು ಗಂಡನ ಊಟದ ನಂತರವೇ ಊಟ ಮಾಡುತ್ತಾರಲ್ಲ ಹಾಗೆ. ತಟ್ಟೆಯ ಸುತ್ತ ನೀರು ಬಿಡುವುದು ಕೂಡ ರಕ್ಷಣಾ ತಂತ್ರದ ಒಂದು ನಿಯಮವೆ. ನೆಲದಲ್ಲಿ ಹರಿದಾಡುವ ಪ್ರಾಣಿಗಳು ತಟ್ಟೆಗೆ ಬರದಿರಲಿ ಎಂದು. ಊಟಕ್ಕೆ ಮೊದಲು ತಟ್ಟೆಯ ಸುತ್ತ ನೀರು ಬಿಡುವ, ಮೊದಲ ತುತ್ತನ್ನು ನುಂಗುವ ಮೊದಲು ಒಂದು ಗುಟುಕು ನೀರು ಕುಡಿಯುವ ತತ್ವ ಶಿಷ್ಟರಿಂದ ಪ್ರಭಾವಿತವಾಗಿರಲೂ ಬಹುದು.

ಪ್ರಾಣಿಗಳ ಜೊತೆಗೆ ಸಮವಾಗಿ ಅಥವಾ ಅಸಮವಾಗಿಯಾದರೂ ಆಹಾರ ಹಂಚಿಕೊಂಡು ತಿನ್ನುವ ತತ್ವ ಬೇಟೆ ಮತ್ತು ಕೃಷಿ ಜನಪದಗಳಿಂದ ಬಂದುದು. ಪ್ರಾಣಿಗಳೂ ಮನುಷ್ಯನಂತೆ ಈ ಸಮಾಜಗಳಲ್ಲಿ ಸರಿಸಮನಾಗಿ ದುಡಿಯುವುದರಿಂದ ಇದರ ಅನಿವಾರ್ಯತೆ ಇದೆ. ಭೋಗಿ ಸಮಾಜಕ್ಕೆ ಇದು ಸಲ್ಲದ ತತ್ವ. ಲಾಭ ಸಿಗುವವನಾದರೆ “ಒಳಕ್ಕೆ ಬಾ” ಎಂದೂ ಬೇರೊಬ್ಬನಾದರೆ “ಮುಂದಕ್ಕೆ ಹೋಗು” ಎಂಬುದು ಇವರ ಜೀವನ ವಿಧಾನ. ಕೃಷಿ ಸಮಾಜ ಯಾವ ಪ್ರಾಣಿಯನ್ನು ತನ್ನ ಹೊರಗಿಟ್ಟು ನೋಡುವುದಿಲ್ಲ. ತನ್ನ ಬೆಳೆಯನ್ನು ತಿನ್ನುವ ಪ್ರಾಣಿಯನ್ನು ಕ್ರಿಮಿನಾಶಕ ಹಾಕಿ ಕೊಲ್ಲುವುದಕ್ಕೆ ಬದಲಾಗಿ ಅದರ ಜೊತೆಗೆ ಒಡಂಬಡಿಕೆಯನ್ನೇ ಈ ಸಮಾಜ ಮಾಡಿಕೊಳ್ಳುತ್ತದೆ. ನಮ್ಮ ಹಾಸನ ಜಿಲ್ಲೆಯಲ್ಲಿ ಹೊಲದ ಪೈರಿಗೆ ಕೆಲ ಬಗೆಯ ಕ್ರಿಮಿಕೀಟಗಳು ಹತ್ತಿದರೆ ನಮ್ಮ ಜನ ಶ್ಯಾವಿಗೆ ಬೇಳೆ ಸಾರಿನ ಊಟವನ್ನು ಆ ಹೊಲಕ್ಕೆಲ್ಲ ಚೆಲ್ಲುತ್ತಾರೆ. ಬೆಳೆ ತಿನ್ನುವ ಪ್ರಾಣಿಗಳು ಈ ಆಹಾರದಕಡೆಗೆ ಹೋಗಿ ಬೆಳೆಯನ್ನು ಸಲೀಸು ಬೆಳೆಯಲು ಬಿಡಲಿ ಎಂಬುದು ಇದರ ಅಭಿಪ್ರಾಯ. ಈ ಆಚರಣೆಯನ್ನು “ನುಶಿ ಹಾಕುವುದು” ಎನ್ನುತ್ತಾರೆ.

ಊಟಕ್ಕೆ ಮೊದಲು ತಟ್ಟೆ ಕೆಳಗೆ ಹಾಕುವ ಆಹಾರಕ್ಕೆ ‘ಪಿತೃಗಳ ಆಹಾರ’ ಎನ್ನುವುದೂ ಉಂಟು. ಈಗ ಪಿತೃ ಪೂಜೆ ಎಂದರೆ ಶಿಷ್ಟ ಸಂಸ್ಕೃತಿಯ ಆಚರಣೆ ಎಂದೇ ತಿಳಿದವರುಂಟು. ಪಿತೃ ಪೂಜೆ ಅತಿ ಪೂರ್ವದ್ದು. ಈ ಪಿತೃ ಮನುಷ್ಯನೇ ಆಗಿರಬೇಕಿಲ್ಲ. ಬುಡಕಟ್ಟುಗಳ ಮೂಲ ದೇವತೆಯಾಗಿದ್ದ ಕುಲದೇವತಾ ಪ್ರಾಣಿ (totem animal)ಯು ಆಗಿದ್ದಿರಬಹುದು ಊಟಕ್ಕೆ ಮೊದಲು ಗಂಟಲು ತುಂಬ ಒಂದು ಗುಟುಕು ನೀರು ಕುಡಿಯುವುದು ಭೋಜನ ಸಂಸ್ಕೃತಿಯ ಜನ ಅನ್ನನುಂಗಲು ಮಾಡಿಕೊಳ್ಳುವ ಸಜ್ಜು ಎನ್ನುವವರೂ ಉಂಟು. ಇದು ಆರೋಗ್ಯಕರ ವಿಧಾನ ಎಂಬುದರಲ್ಲಿ ಅನುಮಾನವಿಲ್ಲ. ಎಲ್ಲ ಜನರಲ್ಲಿ ಈ ವಿಧಾನ ಕಂಡು ಬರುತ್ತದೆ.

ಇತ್ತೀಚಿನ ಊಟದ ತತ್ವವೊಂದಿದೆ. ಊಟಕ್ಕೆ ಮುಂದೆ ಇರು, ಕೂಟಕ್ಕೆ ಹಿಂದೆ ಇರು ಅಂತ. ಇದು ಭೋಜನ ಪ್ರಿಯರ ಊಟಕ್ಕೆ ಮೊದಲು ಕೆಲಸಕ್ಕೆ ಅನಂತರ ಎಂಬ ತತ್ವವೇ ಆಗಿದೆ. ಒಂದು ಕಡೆ ಊಟ ಮಾನವನ ಮೊದಲ ಅವಶ್ಯಕತೆ ಎಂಬುದನ್ನು ಮೇಲಿನ ಆಲೋಚನೆ ಹೇಳುತ್ತದೆಯಾದರೂ ಅದು ದುಡಿಮೆಯನ್ನು ಪ್ರಧಾನವಾಗಿ ಇಟ್ಟುಕೊಂಡ ಸಂಸ್ಕೃತಿ ಅಲ್ಲ ಎಂಬುದು ಖಂಡಿತ. ‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ  ಮಾತು ಕೂಡ ಎಲ್ಲ ಸಮಸ್ಯೆಯಿಂದ ಬಚಾವ್ ಆಗಿ ಬದುಕುವ ಜನರ ಸಂಸ್ಕೃತಿಯನ್ನೇ ಹೇಳುತ್ತಿದೆ.