() ವಿಶೇಷ ಆಚರಣೆಗಳಲ್ಲಿಯ ಊಟ : ಜನಪದರ ಬದುಕಿನಲ್ಲಿ ಆಚರಣೆಗಳು ಹಾಸುಹೊಕ್ಕಾಗಿವೆ. ಅವು ಜನನದಿಂದ ಹಿಡಿದು ಮರಣದವರೆಗೆ ವ್ಯಾಪಿಸಿವೆ. ಒಂದೊಂದು ಆಚರಣೆಗಳ ಸಂದರ್ಭದಲ್ಲಿ ಮಾಡುವ ಅಡಿಗೆಗಳು ಭಿನ್ನವಾಗಿವೆ.

ಹೆಣ್ಣು ಗರ್ಭಿಣಿಯಾಗುತ್ತಲೆ ಅವಳಿಗೆ ಬಯಕೆ (ಬಂಕಿ) ಗಳು ಪ್ರಾರಂಭವಾಗುತ್ತವೆ. ಅದಕ್ಕಾಗಿ ತವರಿನವರು ವಿವಿಧ ಅಡಿಗೆಗಳನ್ನು ಮಾಡಿಕೊಂಡು ಬಂದು, ಅವಳ ಬಯಕೆಯನ್ನು ಈಡೇರಿಸುತ್ತಾರೆ. ಇದಕ್ಕೆ ‘ಬಯಕೆ (ಬಂಕಿ) ಬುತ್ತಿ’ ಎಂದು ಕರೆಯುತ್ತಾರೆ. ಅ ಬುತ್ತಿಯಲ್ಲಿ ಇರುವ ಪದಾರ್ಥಗಳ ಹೆಸರುಗಳನ್ನು ಜನಪದ ಗರತಿ ಈ ರೀತಿ ಸುಂದರವಾಗಿ ಹೇಳಿದ್ದಾಳೆ.

ಸಜ್ಜೀಯ ರುಚಿ ರೊಟ್ಟಿ ಸಜ್ಜಕದ ಹೋಳಿಗೆ;
ಗಜ್ಜರಿ ಚೆಟ್ನಿ ಎಣ್ಣೆಣಿ; ತಂಗೆವ್ವ
ಗುಜ್ಜ ನಿನ ಬಂಕಿ ತಿಳಿದಾವ;

ಎಳ್ಳ ಹಚ್ಚಿದ ರೊಟ್ಟಿ ಎಣ್ಣೆ ಬದನೆಕಾಯಿ;
ಮಸರ ಕಲಿಸಿದ ಬುತ್ತಿ ಬಿಸಿಯಬಾನ;
ಅಲ್ಲ ಮಾಗುಣ ಬೇರ, ಬೆಲ್ಲ ಬೆಳವಲದಣ್ಣ
ಮನ ಬೇಡಿ ನನ ಜೀವ ಬಗಿಸ್ಯಾವ ತಾಯಿ ಬಂಕಿ ಕಾಡತಾವ;

ಹೆ‌ಣ್ಣು ಮಗಳು ದೊಡ್ಡವಳಾದಾಗ ಮನೆಯವರು ಹಲವು ದಿವಸ ಅವಳಿಗೆ ಕೊಬ್ಬರಿ, ಬೆಲ್ಲ, ಸಕ್ಕರಿ, ತುಪ್ಪ ಮುಂತಾದ ಶಕ್ತಿಯುತವಾದ ಪದಾರ್ಥಗಳನ್ನು ಕೊಡುತ್ತಾರೆ. ಅಲ್ಲದೆ ಊರಿನವರು ಹೋಳಿಗೆ, ಅನ್ನ, ಸಾರು, ವಿವಿಧ ಪಲ್ಲೆ ಮುಂತಾದ ಅಡಿಗೆ ಮಾಡಿ ಕೊಡುತ್ತಾರೆ. ಅದಕ್ಕೆ ‘ಎಡಿ ಕೊಡುವದು’ ಎನ್ನುತ್ತಾರೆ.

ಮದುವೆಯ ನಿಶ್ಚಯ ಕಾರಣ ಹೆಚ್ಚಾಗಿ ಹೆಣ್ಣು ಮಕ್ಕಳ ಮನೆಯಲ್ಲಿ ನಡೆಯುತ್ತದೆ. ಆಗ ಬಂದ ಬೀಗರಿಗೆ ‘ಶ್ಯಾಂವಿಗೆ’ಯ ಊಟ ಮಾಡಿಸುತ್ತಾರೆ. ಕೆಲವು ಪ್ರದೇಶದಲ್ಲಿ ಗೋದಿ ರವೆಯ ಕುದಿಸಿದ ಕಡಬು ಅಂದರೆ ‘ಉದರಗಡಬು’ ಮಾಡಿ ಉಣಿಸುತ್ತಾರೆ. ಇದಕ್ಕೆ ‘ಗಟ್ಟಿಗಡಬಿನ ಊಟ’ ಎಂದು ಕರೆಯುತ್ತಾರೆ. ಅಂದರೆ ಸಂಬಂಧ ಗಟ್ಟಿ ಆಯಿತೆಂದು ಅವರ ನಂಬಿಕೆ. ಬ್ರಾಹ್ಮಣರು ಈ ಸಂದರ್ಭದಲ್ಲಿ ಮತ್ತು  ಮದುವೆಯಲ್ಲಿ ‘ಮಂಡಿಗೆ’ಯ ಅಡಿಗೆ ಮಾಡುತ್ತಾರೆ. ‘ಮನಸಿನ್ಯಾಗ ಮಂಡಗಿ ತಿಂದರ ಅದರ ಲೆಕ್ಕಾ ಕೊಡವರ್ಯಾರು’ ಎಂಬ ಗಾದೆ ಮಂಡಿಗೆಯ ಅವಶ್ಯಕತೆಯನ್ನು ತಿಳಿಸುತ್ತದೆ.

ಮದುವೆಯಲ್ಲಿ ‘ಅಕ್ಕಿಕಾಳು’ ಬಿದ್ದ ಮೇಲೆ ಮದುಮಕ್ಕಳಿಗೆ ಮತ್ತು ಅವರ ಮೊದಲ ರಾತ್ರಿಯ ಮರುದಿನದ ಮುಂಜಾನೆ ಒಂದೇ ತಾಟಿನಲ್ಲಿ ಶ್ಯಾಂವಿಗೆ, ಹಾಲು, ತುಪ್ಪ, ಸಕ್ಕರೆ ಪದಾರ್ಥಗಳನ್ನು ಮಾತ್ರ ನೀಡಿ ಊಟ  ಮಾಡಿಸುತ್ತಾರೆ. ಈ ಆಚರಣೆ ಇತರರಂತೆ ಬ್ರಾಹ್ಮಣರಲ್ಲಿಯೂ ಇದೆ. ಸತಿಪತಿಗಳು ಶ್ಯಾಂವಿಗೆಯಂತೆ ಅನ್ಯೋನ್ಯವಾಗಿರಲಿ ಎಂಬುದು ಈ ಅಡಿಗೆ ಉಣಿಸುವುದರ ಸಂಕೇತವಾಗಿದೆ.

ಹೆಣ್ಣುಮಗಳು ಮೊದಲ ಸಲ ಗಂಡನ ಮನೆಗೆ ಹೋಗುವಾಗ ಸಜ್ಜೆಯ ರೊಟ್ಟಿ, ಸಜ್ಜಕದ ಹೋಳಿಗೆ, ಕರಚಿಕಾಯಿ, ಅನ್ನ ವಿವಿಧ ಪಲ್ಲೆ ಚಟ್ನಿಗಳನ್ನು ಮಾಡಿಕೊಂಡು ಹೋಗಿ ಇಡೀ ಊರಿಗೆ ಹಂಚುತ್ತಾರೆ. ಇದಕ್ಕೆ ‘ರೊಟ್ಟಿ ಬುತ್ತಿ’ ಕೊಡುವದು ಎನ್ನುತ್ತಾರೆ. ಕೆಲವು ಪ್ರದೇಶದಲ್ಲಿ ‘ಬುತರೊಟ್ಟಿ’ ಎನ್ನುವರು.

ಹಡೆದಾಗ ಬಾಣತಿಗೆ ಕೊಬ್ಬರಿ, ಬೆಲ್ಲ ಇಲ್ಲವೆ ಸಕ್ಕರಿ ಕೂಡಿಸಿ ಕುಟ್ಟಿದ ಪದಾರ್ಥವನ್ನು ಕೊಡುತ್ತಾರೆ. ಇದಕ್ಕೆ ‘ಕೊಬ್ಬರಿಕಾರ’ ಎನ್ನುವರು. ಹಾಗೆಯೇ ಪರಡಿ, ಶ್ಯಾಂವಿಗೆ, ತುಪ್ಪ ಮುಂತಾದ ಪದಾರ್ಥಗಳ ಅಡಿಗೆ ಮಾಡಿ ಹಲವು ದಿವಸ ಅವಳಿಗೆ ಊಟ ಮಾಡಿಸುತ್ತಾರೆ. ಕಾರಣ ಇವುಗಳಿಂದ ಅವಳಲ್ಲಿ ಶಕ್ತಿ ಬರಲೆಂಬ ಉದ್ದೇಶವಿದೆ.

ಮದುವೆ-ಮುಂಜಿ, ಜಾತ್ರೆ-ಉತ್ಸವ, ಕುಬಸದ ಕಾರಣ ಮುಂತಾದ ಸಂದರ್ಭಗಳಲ್ಲಿ ಬೇರೆ ಊರಿಗೆ ಹೋಗುವಾಗ ದಾರಿಯ ಊಟಕ್ಕೆ ಸಜ್ಜೆ-ಜೋಳದ ರೊಟ್ಟಿ, ಅಗಸಿ-ಗುರೆಳ್ಳು-ಸೇಂಗಾ ಮುಂತಾದವುಗಳ ಹಿಂಡಿಗಳನ್ನು; ಹುಳಿಬಾನ, ಹಿಂಡಿಪಲ್ಲೆ, ಉಳ್ಳಾಗಡ್ಡಿ, ಮೊಸರು ಮುಂತಾದವುಗಳನ್ನು ಹೆಚ್ಚಾಗಿ ಕಟ್ಟಿಕೊಂಡು ಹೋಗುತ್ತಾರೆ. ಇದಕ್ಕೆ ‘ಹಾದಿ ಬುತ್ತಿ’ ಎನ್ನುತ್ತಾರೆ.

ಸತ್ತ ಮೇಲೆ ಬೇರೆ ಬೇರೆ ಮತದವರಲ್ಲಿ ಬೇರೆ ಬೇರೆ ದಿನಗಳಲ್ಲಿ ‘ದಿನ ಮಾಡುವ’ ಆಚರಣೆಯುಂಟು. ಲಿಂಗಾಯತರಲ್ಲಿ ಅದಕ್ಕೆ         ‘ಕೈ ಬಾಯಿ ತೊಳಿಸುವದು’, ‘ದೈವದಲ್ಲಿ ಹಾಕಿಕೊಳ್ಳುವುದು’ ಎಂದು ಎನ್ನುತ್ತಾರೆ. ಅಂದು ಬಳಗದವರು ಕಡಲೆಬೇಳೆ, ಗೋದಿ, ಅಕ್ಕಿ, ಬೆಲ್ಲ, ಎಣ್ಣೆ ಮುಂತಾದ ಪದಾರ್ಥಗಳನ್ನು ತಂದು ಸಿಹಿ ಅಡಿಗೆ ಮತ್ತು ಅನ್ನ-ಸಾರು ಮಾಡಿ ಸತ್ತವರ ಸಂಬಂಧಿಕರಿಗೆ ಊಟ ಮಾಡಿಸುತ್ತಾರೆ. ಬ್ರಾಹ್ಮಣರಲ್ಲಿ ಇಂಥ ಸಂದರ್ಭದಲ್ಲಿ ರವೆಯ ಉಂಡಿ, ಶ್ಯಾಂವಿಯ ಪಲ್ಲೆ, ಸಜ್ಜಕದ ಹೋಳಿಗೆಗಳನ್ನು ಕಡ್ಡಾಯವಾಗಿ ಮಾಡುತ್ತಾರೆ. ಮುಸ್ಲೀಮರು ಹೆಚ್ಚಾಗಿ ಮಾಂಸದ ಅಡಿಗೆಯನ್ನು ಮಾಡುತ್ತಾರೆ. ಹೀಗೆ ಬೇರೆ ಬೇರೆ ಆಚರಣೆಗಳಲ್ಲಿ ಬೇರೆ ಬೇರೆ ಮತದವರು ನಿರ್ದಿಷ್ಟ ಅಡಿಗೆಯನ್ನು ಮಾಡುತ್ತಾರೆ. ಇವು ಆಯಾ ಸಂದರ್ಭಕ್ಕೆ ಅನುಗುಣವಾಗಿ ವಿಶೇಷ ಅರ್ಥ, ಸಂಕೇತಗಳನ್ನು ಸೂಚಿಸುತ್ತದೆ.

ಈ ಪ್ರದೇಶದ ಜನಪದರಲ್ಲಿ ಊಟವೇ ಪ್ರಮುಖ ಆಗಿರುವದರಿಂದ ತಿಂಡಿಗಳಿಗೆ ಮಹತ್ವ ತೀರ ಕಡಿಮೆ. ಇದ್ದ ಹಲವನ್ನು (೧) ದಿನನಿತ್ಯದ ತಿಂಡಿಗಳು, (೨) ಹಬ್ಬ-ಹರಿದಿನ, ಜಾತ್ರೆ-ಉತ್ಸವಗಳಲ್ಲಿಯ ತಿಂಡಿಗಳು ಮತ್ತು ವಿಶೇಷ ಆಚರಣೆಗಳಲ್ಲಿಯ ತಿಂಡಿಗಳೆಂದು ವರ್ಗೀಕರಿಸಿ ವಿವೇಚಿಸಬಹುದು.

() ದಿನನಿತ್ಯದ ತಿಂಡಿಗಳು : ಒಕ್ಕಲುತನವೇ ಈ ಪ್ರದೇಶದ ಪ್ರಧಾನ ಉದ್ಯೋಗವಾಗಿರುವದರಿಂದ ಒಕ್ಕಲಿಗರು ನಸುಕಿನಲ್ಲಿಯೇ ಎದ್ದು ಹೊಲ-ತೋಟಗಳ ಕೆಲಸಕ್ಕೆ ಹೋಗುತ್ತಾರೆ. ಶ್ರಮದ ಕೆಲಸ ಮಾಡಬೇಕಾಗಿರುವ ಅವರಿಗೆ ತಿಂಡಿಗಳು ಸಹಾಯಕಾರಿಯಾಗುವುದಿಲ್ಲ. ಅದಕ್ಕಾಗಿ ಅವರು ‘ನ್ಯಾರಿ’ ಮಾಡುವ ಪದ್ಧತಿ ಈ ಪ್ರದೇಶದಲ್ಲಿ ಎಲ್ಲ ಕಡೆಗೂ ಕಂಡು ಬರುತ್ತದೆ. ನ್ಯಾರಿ ಅಂದರೆ ಸಂಜೆ ಉಳಿದಂತಹ ರೊಟ್ಟಿ, ಪಲ್ಲೆ ಇಲ್ಲವೆ ನಸುಕಿನಲ್ಲಿ ಮಾಡಿದ ರೊಟ್ಟಿಯೊಂದಿಗೆ ಮೊಸರು, ಹಿಂಡಿ (ಚಟ್ನಿ), ಉಳ್ಳಾಗಡ್ಡಿ ಪದಾರ್ಥಗಳನ್ನು ಮುಂಜಾನೆ ಕೆಲಸಕ್ಕೆ ಹೋಗುವ ಪೂರ್ವದಲ್ಲಿ ಊಟ ಮಾಡುವದು.

ಇನ್ನು ಬಾಯಿ ಚಪಲತೆಗೆ ಇಲ್ಲವೆ ಯಾರಾದರೂ ಅತಿಥಿಗಳು ಮನೆಗೆ ಬಂದರೆ ಮಾತ್ರ ಹೆಚ್ಚಾಗಿ ಚುನಮುರಿ ಚೂಡಾ, ಸೂಸಲ, ಉಳ್ಳಾಗಡ್ಡಿ ಭಜಿ, ಮಿರ್ಚಿಭಜಿ, ಗೋದಿಯ ಉಪ್ಪಿಟ್ಟು, ಶ್ಯಾಂವಿಗೆ ಉಪ್ಪಿಟ್ಟು ಮಾಡುತ್ತಾರೆ. ಜೋಳ, ಗೋದಿ, ರಾಗಿ, ಅಕ್ಕಿಯ ದೋಸೆ ಮಾಡುವುದು ಕಡಿಮೆ. ಯಾಕೆಂದರೆ ‘ದಾಸರಾಟಲ್ಲ ದ್ವಾಸಿ ಊಟಲ್ಲ, ಎನ್ನುವ ಮಾತಿನಲ್ಲಿ ದೋಸೆ ಗಟ್ಟಿ ಆಹಾರವಲ್ಲ ಎಂಬ ಧ್ವನಿ ಇರುವದನ್ನು ಕಾಣಬಹುದು. ‘ಎಲ್ಲರ ಮನೆಯ ದೋಸೆಗೆ ತೂತು’ಎ‌ನ್ನುವ ಗಾದೆ ಅದರ ಸ್ವರೂಪವನ್ನು ‘ಕುನ್ನಿ ಕೂಳ ಕಾಣಲಾರದಾಗ ಮುದಿನಾಯಿ ದ್ವಾಸಿ ಬೇಡ್ತಿತಂತೆ’ ಎನ್ನುವ ಗಾದೆ ಉಳಿದ ತಿಂಡಿಗಳಲ್ಲಿ ಅದರ ವಿಶೇಷತೆಯನ್ನು ತಿಳಿಸುತ್ತದೆ. ತಾಲಿಪಟ್ಟಿ ಎಂಬುದು ಈ  ಭಾಗದ ಮತ್ತೊಂದು ತಿಂಡಿಯಾಗಿದೆ. ಇದಕ್ಕೆ ‘ದಪಾಟಿ’ ಎಂದೂ ಕೆಲವು ಪ್ರದೇಶಗಳಲ್ಲಿ ಕರೆಯುವದುಂಟು. ಇದನ್ನು ಜೋಳದ ಹಿಟ್ಟಿನಲ್ಲಿ ಉಳ್ಳಾಗಡ್ಡಿ ಉಪ್ಪು, ಖಾರ ಹಾಕಿ ದಪ್ಪರೊಟ್ಟಿಯಂತೆ ಮಾಡಿ ಎಣ್ಣೆ ಹಚ್ಚಿ ಬೇಯಿಸುತ್ತಾರೆ. ಇನ್ನು ಕೆಲವು ಪ್ರದೇಶಗಳಲ್ಲಿ ಗೋದಿ, ಜೋಳ, ಅಕ್ಕಿ ಕಡಲೆಬೇಳೆ ಮುಂತಾದ ಧಾನ್ಯಗಳನ್ನು ಕೂಡಿಸಿ ಬೀಸಿದ ಹಿಟ್ಟಿನಲ್ಲಿ ಉಪ್ಪು, ಖಾರ ಉಳ್ಳಾಗಡ್ಡಿ ಇಲ್ಲವೆ ಅದರ ತೊಪ್ಪಲ ಹಾಕಿ ಮಾಡುತ್ತಾರೆ. ಕೆಲವರು ಉಳಿದ ಅನ್ನ ಪಲ್ಯೆಗಳನ್ನು ಕೂಡಿಸಿ ಮಾಡುವದುಂಟು.

ಸಂಜೆಯ ಹೊತ್ತು ತಿಂಡಿ ಬೇಕೆನಿಸಿದಾಗ ಒಣಗಿದ ಸೀತನಿ ಇಲ್ಲವೆ ಜೋಳ ಇಲ್ಲವೆ ಗೋದಿಯಲ್ಲಿ ಸೇಂಗಾ ಹಾಕಿ ಕುದಿಸಿ ‘ಗುಗ್ಗರಿ’ ಮಾಡುತ್ತಾರೆ. ಇದಕ್ಕೆ ಉಪ್ಪು, ಖಾರ, ಉಳ್ಳಾಗಡ್ಡೆ, ಎಣ್ಣೆ ಹಾಕಿ ಇಲ್ಲವೆ ಬೆಲ್ಲದೊಂದಿಗೆ ತಿನ್ನುತ್ತಾರೆ. ಗುಗ್ಗರಿ ಪಚನಕ್ಕೆ ಯೋಗ್ಯವಲ್ಲ ಎಂಬುದರಿಂದಲೂ ‘ಗುಗ್ಗರಿ ಊಟಲ್ಲ ಗುಳ್ಳವ್ವ ದೇವರಲ್ಲ’ ಎಂಬ ಗಾದೆ ಹುಟ್ಟಿದಂತಿದೆ. ಪಂಚಮಿಯಲ್ಲಿ ಹುರಿದ ಅಳ್ಳಿನಿಂದ ಚೂಡಾ, ಸೂಸಲ, ಬೆಲ್ಲದ ಉಂಡಿಮಾಡಿ ಹಬ್ಬ ಮುಗಿದ ಮೇಲೆ ಅನೇಕ ದಿನಗಳವರೆಗೆ ತಿನ್ನುತ್ತಾರೆ.

ಜನಪದರು ಸುಗ್ಗಿಯಲ್ಲಿ ಮಾಡುವ ಕೆಲವು ವಿಶೇಷ ತಿಂಡಿಗಳಿವೆ. ಮುಂಗಾರಿ ಸುಗ್ಗಿಯಲ್ಲಿ ಜೋಳದ ‘ಸೀತನಿ’, ಗೋದಿಯ ‘ಉಮ್ಮಗಿ’, ಕಡಲೆಯ ‘ಹುರಬುಡ್ಡಿ’ ತಿನ್ನುವದುಂಟು  ಮತ್ತು ಹಿಂಗಾರಿ ಸುಗ್ಗಿಯಲ್ಲಿ ಕುಸುಬಿ ಬಡಿದವರಿಗೆ ‘ಪಳಾರ’ವೆಂದು ಕರದಂಟು, ಉಂಡಿ, ಖಾರದ ತಿಂಡಿಗಳನ್ನು ಹೊಲದ ಒಡೆಯ ಕೊಡಿಸುವದುಂಟು.

() ಹಬ್ಬಹರಿದಿನ, ಜಾತ್ರೆಉತ್ಸವಗಳಲ್ಲಿಯ ತಿಂಡಿಗಳು :ದಿನನಿತ್ಯದ ತಿಂಡಿಗಳಿಗಿಂತ ಹಬ್ಬ ಹರಿದಿನಗಳಲ್ಲಿ ಮಾಡುವ ತಿಂಡಿಗಳು ವೈವಿಧ್ಯಮಯವಾಗಿವೆ. ಜನಪದರ ಹೊಸವರುಷ ಯುಗಾದಿಯೊಂದಿಗೆ ಪ್ರಾರಂಭವಾಗುತ್ತವೆ. ಅಂದು ಮೊದಲಿಗೆ ಸೇವಿಸುವ ಬೇವು, ಬೆಲ್ಲ, ಕಸಕಸಿ, ಸುಂಟಿ, ಯಾಲಕ್ಕಿ ಮೊದಲಾದವುಗಳಿಂದ ಮಾಡಿದ ‘ಬೇವು’ ಸಾಂಕೇತಿಕವಾಗಿದೆ. ಜೀವನದಲ್ಲಿ ಮುಂಬರುವ ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸಬೇಕೆಂಬ ಸಾಂಸ್ಕೃತಿಕ ಹಿ‌ನ್ನಲೆ ಉಳ್ಳುದಾಗಿದೆ. ಹಾಗೆಯೇ ಆರೋಗ್ಯವರ್ಧನೆಯ ಉದ್ದೇಶವನ್ನೂ ಹೊಂದಿದೆ. ಕ್ರಿಮಿನಾಶಕ ಔಷಧಿ ಗುಣವನ್ನು ಹೊಂದಿರುವ ಬೇವಿನ ಎಲೆ, ಹೂಗಳು ಹೊಟ್ಟೆಯಲ್ಲಿಯ ಕ್ರಿಮಿಗಳನ್ನು ನಾಶಮಾಡುವುದಲ್ಲದೇ ಅದು ದೇಹಕ್ಕೆ ತಂಪನ್ನೂ ನೀಡುತ್ತದೆ. ಹೀಗೆ ಜಾನಪದ ವೈದ್ಯಕೀಯ ಪ್ರಯೋಜನವೂ ಗಮನಾರ್ಹ.

ಮಳೆಗಾಲದ ಆರಂಭದಲ್ಲಿ ಬರುವ ನಾಗರಪಂಚಮಿ ಹಬ್ಬದಲ್ಲಿ ಮಳೆಗಾಲದ ತಂಪಿನ ಬಾಧೆಯಿಂದ ದೇಹವನ್ನು ರಕ್ಷಿಸಲು, ಅಂದರೆ ದೇಹಕ್ಕೆ ಅಗತ್ಯವಾದ ಉಷ್ಣತೆಯನ್ನು ಒದಗಿಸಲು ಅಳ್ಳಿಟ್ಟು-ತಂಬಿಟ್ಟು ಹಾಗೂ ವಿವಿಧ ರೀತಿಯ ಉಂಡಿಗಳನ್ನು, ಚಕ್ಕಲಿ, ಉಸುಳಿಗಳನ್ನು ಮಾಡುತ್ತಾರೆ. ದೀಪಾವಳಿಯಲ್ಲಿ ಮಾಡುವ ಸಿಹಿ, ಖಾರದ ತಿಂಡಿಗಳೂ ದೇಹಕ್ಕೆ ಉಷ್ಣತೆಯನ್ನು ಒದಗಿಸುವಂತೆ, ಶಕ್ತಿದಾಯಕವೂ ಆಗಿವೆ.

ಚಳಿಗಾಲದಲ್ಲಿ ಬರುವ ಸಂಕ್ರಮಣದಂದು ತಿನ್ನುವ ಎಳ್ಳು-ಬೆಲ್ಲ, ಎಳ್ಳಿನ ಉಂಡಿ; ಸ್ನಾನ ಮಾಡುವಾಗ ಹಚ್ಚಿಕೊಳ್ಳುವ ಎಳ್ಳು-ಅರಿಷಿಣ ಮುಂತಾದವುಗಳು ಆಗ ದೇಹಕ್ಕೆ ಅಗತ್ಯವಾದ ಎಣ್ಣೆಯ ಅಂಶವನ್ನು ತ್ವಚೆಯ ರಕ್ಷಣೆಗೆ ಒದಗಿಸುವ ಸಾಧನಗಳಾಗಿವೆ.

ಹೋಳಿ ಹುಣ್ಣಿಮೆಯಲ್ಲಿ ಕಾಮಣ್ಣನ ಬೆಂಕಿಯಲ್ಲಿ ಕಡಲೆ ಸುಟ್ಟು ತಿನ್ನುವದರಿಂದ ಹಲ್ಲುಗಟ್ಟಿಯಾಗುತ್ತವೆ ಎಂಬ ನಂಬಿಕೆ ಇದೆ. ಕಾರಹುಣ್ಣಮೆಯ ಕರಿಯ ದಿವಸ ಕರಿದ ಪದಾರ್ಥ ತಿನ್ನಬೇಕೆಂಬ ನೇಮವಿರುವದರಿಂದ ‘ಗಾರಿಗೆ’ ಮಾಡಿ ತಿನ್ನುತ್ತಾರೆ. ಹೀಗೆ ಹಬ್ಬ-ಹರಿದಿನಗಳಲ್ಲಿ ಮಾಡುವ ತಿಂಡಿಗಳು ಆರೋಗ್ಯದ ರಕ್ಷಣೆಯ ಉದ್ದೇಶವನ್ನು ಹೊಂದಿ ನಿರ್ದಿಷ್ಟವಾಗಿವೆ.

() ವಿಶೇಷ ಆಚರಣೆಗಳಲ್ಲಿಯ ತಿಂಡಿಗಳು : ಇನ್ನು ಆಚರಣೆಗಳ ಹಿನ್ನಲೆಯಲ್ಲಿಯೂ ಕೆಲವು ತಿಂಡಿಗಳನ್ನು ಮಾಡುವದು ಕಂಡುಬರುತ್ತದೆ. ಚೊಚ್ಚಲ ಬಸುರಿಗೆ ಬಯಕೆ ಕಾಡುವಾಗ ಅವಳು ಬಯಸಿದ ತಿಂಡಿಗಳನ್ನು ಮಾಡಿ ತಿನಿಸುವುದುಂಟು. ಹಾಗೆ ಮಾಡದಿದ್ದರೆ ಹುಟ್ಟಿದ ಮಗುವಿನ ಕಿವಿಗಳು ಒಡೆಯುತ್ತವೆ ಎಂಬ ನಂಬಿಕೆ ಇದೆ.

ಮದುವೆಯಲ್ಲಿ ‘ಭೂಮ’ ಕೊಡುವ ಪದ್ಧತಿ ಇದೆ. ಅದಕ್ಕೆ ಅನೇಕ ಕಡೆ ‘ಮಸೂಟ’, ‘ಮಸಿಯೂಟ’ ಎಂದು ಕರೆಯುತ್ತಾರೆ. ಕನ್ನೆಯ ಮನೆಯವರು ವರನ ಮನೆಯವರಿಗೆ ಕೊಡುವ ಸುರಗಿಯ ಸಾಮಾನುಗಳೊಂದಿಗೆ ಕರಚಿಕಾಯಿ, ಸುರಳಿ ಹೋಳಿಗೆ, ಉಂಡಿ, ಹಪ್ಪಳ, ಕುರುಡಿಗೆ ಮುಂತಾದ ಪದಾರ್ಥಗಳು ಸೇರಿರುತ್ತವೆ.

ಮಗು ಹುಟ್ಟಿದ ಕೆಲವು ದಿನಗಳ ಮೇಲೆ ಹೆಸರಿಡುವುದು ಸಂಪ್ರದಾಯ. ಇದಕ್ಕೆ ‘ತೊಟ್ಲಾಗ ಹಾಕೂದು’ ಎನ್ನುತ್ತಾರೆ. ಆಗ ಊಟಕ್ಕೆ ಸಿಹಿ ಅಡಿಗೆ ಮಾಡಿದ್ದರೂ ‘ಹೇಲಗುಗ್ಗರಿ’ ಎಂಬ ವಿಶೇಷ ಪದಾರ್ಥವನ್ನು ಮಾಡುತ್ತಾರೆ. ಜೋಳ, ಗೋದಿ, ಹೆಸರು, ಸೇಂಗಾ ಮುಂತಾದ ಐದು ಧಾನ್ಯಗಳನ್ನು ಕೂಡಿಸಿ ಕುದಿಸಿ, ಮಗುವಿನ ತೊಳೆದ ಹೇಲರಿವೆಯಲ್ಲಿ ಕಟ್ಟಿಟ್ಟು, ಸಂಜೆ ಹೆಸರಿಡಲು ಬಂದ ಹೆಣ್ಣು ಮಕ್ಕಳಿಗೆ ಅವನ್ನು ಹಂಚುತ್ತಾರೆ. ಅಂತೆಯೇ ಚಿಕ್ಕವರು ದೊಡ್ಡವರ ಹೆಸರಿಡಿದು ಕರೆದಾಗ ‘ಹೆಸರಿಡದು ಕರಿಲಾಕ ಹೇಲಗುಗ್ಗರಿ ತಿಂದು ಹೆಸರಿಟ್ಟಿ ಏನೋ’ ಎಂದು ಹಾಸ್ಯ ಮಾಡುವುದುಂಟು.

ಮೃಗಶಿರ ಪ್ರಾರಂಭದ ದಿನ ಇಂಗು-ಬೆಲ್ಲ ತಿನ್ನುವ ಪದ್ಧತಿ ಆರೋಗ್ಯ ರಕ್ಷಣೆಯನ್ನು ಹೊಂದಿದೆ. ಏಕಾದಶಿ, ದ್ವಾದಶಿ ಮತ್ತು ಉಪವಾಸಗಳಲ್ಲಿ ಬ್ರಾಹ್ಮಣರು ‘ದಶಮಿ’ ಸೇವಿಸುತ್ತಾರೆ. ದಶಮಿ ಅಂದರೆ ಗೋದಿಯ ಹಿಟ್ಟು, ಹಾಲು ಕಲಿಸಿ ಮಾಡಿದ ಚಪಾತಿ, ಇದಿಲ್ಲದಿದ್ದರೆ ಅವಲಕ್ಕಿ, ಸಾಬುದಾನಿ ಬಳಸುತ್ತಾರೆ.   ವೈಷ್ಣವ ಬ್ರಾಹ್ಮಣರಿಗೆ ಶಿವರಾತ್ರಿ ಹೂರಣದ ಹೋಳಿಗೆ ಊಟದ ದಿವಸವಾದರೆ, ಲಿಂಗಾಯತರಿಗೆ ಮತ್ತು ಇತರರ ಪಾಲಿಗೆ ಉಪವಾಸದ ದಿನ, ಉಳಿದ ದಿನಗಳಲ್ಲಿ ಉಪವಾಸ ಮಾಡುವಾಗ ಇವರು ಉಪ್ಪಿಟ್ಟು, ದೋಸೆ, ಪುಠಾಣಿ, ಸೇಂಗಾ ಕುದಿಸಿದ ಗೆಣಸು, ಕುಂಬಳಕಾಯಿಗಳನ್ನು ಬೆಲ್ಲ, ಹಾಲಿನೊಂದಿಗೆ ಹೊಟ್ಟೆ ತುಂಬ ತಿಂದರೂ ಉಪವಾಸವೆ. ಅಲ್ಲದೆ ಬಾಳೆ, ಪೇರಲ, ಮಾವು ಮುಂತಾದ ಹಣ್ಣುಗಳನ್ನು ಉಪವಾಸಕ್ಕೆ ಬಳಸುತ್ತಾರೆ.

ಒಟ್ಟಿನಲ್ಲಿ ಈ ಪ್ರದೇಶದಲ್ಲಿ ತಿಂಡಿಗಳು ವೈವಿಧ್ಯಮಯವಾಗಿದ್ದರೂ ಬಳಿಕೆ ಕಡಿಮೆ ಮಾಡುವ ತಿಂಡಿಗಳು ಶಕ್ತಿದಾಯಕವೂ ಕೆಲವು ನಿರ್ದಿಷ್ಟವಾದ ಉದ್ದೇಶ ಹೊಂದಿದವೂ ಆಗಿವೆ ಮತ್ತು ಕೆಲವೊಂದು ಊರುಗಳು ಕೆಲವೊಂದು ತಿಂಡಿಗಳಿಗೆ ಪ್ರಸಿದ್ಧಿಯನ್ನು ಪಡೆದಿವೆ. ಕರದಂಟಿಗೆ ಗೋಕಾಕ ಮತ್ತು  ಅಮೀನಗಡ, ಮಿರ್ಚಿ-ಭಜಿಗೆ ಬಳ್ಳಾರಿ.

ಪಾನೀಯಗಳು : ಈ ಪ್ರದೇಶದ ಜನಪದರಿಗೆ ಹೈನುಗಾರಿಕೆ ಉಪವೃತ್ತಿಯಾಗಿರುವದರಿಂದ ಹಾಲು, ಮಜ್ಜಿಗೆ ಇವರ ಪ್ರಮುಖ ಪಾನೀಯಗಳೆನಿಸಿವೆ. ಪ್ರತಿದಿನ ಮುಂಜಾನೆ ಕೆಲವರು ಹಾಲನ್ನು ಕುಡಿದರೆ, ಬೇಸಿಗೆಯ ದಿನಗಳಲ್ಲಿ, ಮಜ್ಜಿಗೆ, ನಿಂಬೆಪಾನಕ ಉಪಯೋಗಿಸುತ್ತಾರೆ. ಹಾಲು, ಮೊಸರನ್ನ ಹಣ ಇಲ್ಲವೆ ದವಸಧಾನ್ಯಗಳಿಗೆ ಮಾರಿದರೆ, ಮಜ್ಜಿಗೆಯನ್ನು ಮಾತ್ರ ಪುಕ್ಕಟೆಯಾಗಿ ಕೊಡುವುದು ಜನಪದರ ರೂಢಿ. ‘ಮಜ್ಜಿಗೆ ಪುರತೇಕ ರಾಮಾಯಣ’ ಎನ್ನುವ ಗಾದೆ ಇದನ್ನು ತಿಳಿಸುತ್ತದೆ.

ಚಹ, ಕಾಫಿ, ಕುಡಿಯುವ ಹವ್ಯಾಸ ಜನಪದರಲ್ಲಿ ಮೊದಲು ಇರಲೇ ಇಲ್ಲ. ಮೊದ-ಮೊದಲು ಅಂಥ ಅಂಗಡಿಗಳಿಗೆ ಹಳ್ಳಿಗಳಲ್ಲಿ ಅವಕಾಶ ನೀಡುತ್ತಿರಲಿಲ್ಲ, ಚಹ ಕುಡಿಯುವುದು ಒಂದು ಕೆಟ್ಟ ಚಟ ಅನ್ನುವ ಭಾವನೆ ಅವರಿಗಿತ್ತು. ನಾಗರೀಕತೆ ಬೆಳೆದಂತೆ ಅದು ಅತಿಥಿ ಸತ್ಕಾರಕ್ಕೆ, ರೋಗಿಗಳ ಉಪಚಾರಕ್ಕೆ ಬಳಕೆಯಾಗುತ್ತ ಬಂದು, ಇಂದು ಒಂದು ಅನಿವಾರ್ಯವಾದ ಪಾನೀಯವಾಗಿ ಪರಿಣಮಿಸಿದೆ.

ನೆಗಡಿ, ಕೆಮ್ಮು, ಕಫ ತೊಂದರೆಯಾದಾಗ ‘ಶುಂಠಿಕಾಡೆ’, ‘ಅರಿಸಿನ ಗುಟಿ’ಗಳನ್ನು ಔಷಧದಂತೆ ಉಪಯೋಗಿಸುವದುಂಟು. ವಿಶೇಷ ಸಂದರ್ಭಗಳಲ್ಲಿ  ಕೆಲವರು ಹೆಂಡ, ಭಟ್ಟಸೆರೆ ಕುಡಿದು ಆನಂದ ಪಡುತ್ತಾರೆ. ಕೆಳಜಾತಿಯ ಜನರಲ್ಲಿ ಈ ಪಾನೀಯಗಳನ್ನು ಹೆಣ್ಣು-ಗಂಡು ಸೇರಿಯೇ ಕುಡಿಯುವದು ಕಂಡು ಬರುತ್ತದೆ. ಕೆಲವು ದೇವರಿಗೆ ಸೆರೆಯೇ ಎಡೆಯಾಗಿದೆ.  ಬಿಜಾಪುರ ಜಿಲ್ಲೆಯ ಬಬಲಾದಿ ಸದಾಶಿವಪ್ಪಗೆ ಸೆರೆಯನ್ನೇ ನೈವೇದ್ಯವಾಗಿ ಭಕ್ತರು ಕೊಡುತ್ತಾರೆ. ಅಷ್ಟೇ ಅಲ್ಲ ಅದನ್ನು ತೀರ್ಥವೆಂದು ಪಡೆದು ಕುಡಿಯುತ್ತಾರೆ. ಅಂದರೆ ಜನಪದರ ದೃಷ್ಟಿಯಲ್ಲಿ ಹೆಂಡ, ಸೆರೆ ಕುಡಿಯುವುದು ಒಂದು ಅಪರಾಧವೆನಿಸಿದೆ.

ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಬೆಲ್ಲದಗಾಣ ಮಾಡುವಾಗ ‘ಕಬ್ಬಿನಹಾಲ’ನ್ನು ಪಾನೀಯವಾಗಿ ಕುಡಿಯುತ್ತಾರೆ. ಆ ಸಮಯದಲ್ಲಿ ಅಲ್ಲಿಗೆ ಬಂದವರಿಗೆಲ್ಲಾ ಅದನ್ನು ಕೊಟ್ಟು ಸತ್ಕರಿಸುತ್ತಾರೆ. ಯಾಕೆಂದರೆ ಕೊಡದಿದ್ದರೆ ಬೆಲ್ಲ ಕೆಡುವದೆಂಬ ನಂಬಿಕೆ ಇದೆ.

ಯುಗಾದಿ ಹಬ್ಬದಲ್ಲಿ ಬಿಜಾಪುರ, ಗುಲಬರ್ಗಾ, ಬೀದರ ಮತ್ತು ರಾಯಚೂರ ಜಿಲ್ಲೆಯ ಕೆಲವು ಭಾಗಗಳಲ್ಲಿ ಎಲ್ಲ ಜಾತಿಯ ಜನರ ‘ರಸಬೇವು’ಎಂಬ ತಂಪಾದ ಪಾನೀಯವನ್ನು ಮತ್ತು ಮುಸ್ಲೀಮರು ‘ಸುರಕುಂಬ ಎಂಬ ಪಾನೀಯವನ್ನು ಕೆಲವು ವಿಶೇಷ ಹಬ್ಬಗಳಲ್ಲಿ ಮಡಿ ತಮಗೆ ಬೇಕಾದವರನ್ನು ಕರೆದು ಕುಡಿಸುತ್ತಾರೆ. ಧಾರವಾಡ, ಬಳ್ಳಾರಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ತೆಂಗಿನ ನೀರನ್ನು ಪಾನೀಯವಾಗಿ ಬಳಸುತ್ತಾರೆ. ಹೀಗಿದ್ದೂ ಉತ್ತರ ಕರ್ನಾಟಕದಲ್ಲಿ ಜನಪದರು ಬಳಸುವ ಪಾನೀಯಗಳು ಕಡಿಮೆ ಎಂದೇ ಹೇಳಬೇಕು.

ಜನಪದರು ತಮ್ಮ ಅನುಭವದಿಂದಲೇ ಯಾವ ಪದಾರ್ಥ ಯಾವ ರೋಗಕ್ಕೆ ‘ಮದ್ದು’ ಎಂಬುದನ್ನು ತಿಳಿದುಕೊಂಡು ಅದರಂತೆ ಬಳಸುತ್ತ ಬಂದಿದ್ದಾರೆ. ಆ ಹಿನ್ನೆಲೆಯಲ್ಲಿ ಕೆಲವು ನಂಬಿಕೆಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಕೆಲವಕ್ಕೆ ನಿಜವಾದ ಅರ್ಥಗಳು ಇವೆ. ಮತ್ತೆ ಕೆಲವು ನಂಬಿಕೆಗಳು ಆರೋಗ್ಯದ ಕುರಿತಾಗಿ ಎಚ್ಚರಿಕೆ, ಸಲಹೆಗಳನ್ನು ನೀಡುತ್ತವೆ. ‘ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ’ ಎನ್ನುವಂತೆ ಜನಪದರು ಯಾವುದೇ ಆಹಾರವನ್ನು ಹಿತಮಿತವಾಗಿ ಬಳಸುತ್ತ ಬಂದಿದ್ದಾರೆ.

ಒಮ್ಮೆಯುಂಡವ ತ್ಯಾಗಿ ಇಮ್ಮೆ ಯುಂಡವ ಭೋಗಿ;
ಬಿಮ್ಮ ಗುಂಡವನೇ ರೋಗಿ; ಯೋಗಿ ತಾ
ಸುಮ್ಮನಿರುತಿಹನು ಸರ್ವಜ್ಞ;

ಎಂದು ಜನಪದ ಕವಿ ಎನಿಸಿದ ಸರ್ವಜ್ಞ, ಈ ತ್ರಪದಿಯ ಮೂಲಕ ನಿರೋಗತ್ವದ ಗುಟ್ಟನ್ನು ಬಿಚ್ಚಿಟ್ಟಿದ್ದಾನೆ. ‘ರುಚಿ ಹತ್ತಿದ ಹಾರುವ ಒಳ್ಳ ನೆಕ್ಕಿದ್ನಂತ’ ಎನ್ನುವ ಗಾದೆ ಬಾಯಿಚಪಲದ ವ್ಯಕ್ತಿಯನ್ನು ಸೂಚಿಸುವದರ ಜೊತೆಗೆ, ಊಟ ಅತಿಯಾದರೆ ಆರೋಗ್ಯಕ್ಕೆ ಹಾನಿ ಎಂಬುದನನ್ನು ಪರ್ಯಾಯವಾಗಿ ತಿಳಿಸುತ್ತದೆ.

ಹಿಂದೆ ಈಗಿನಂತೆ ವೈದ್ಯಕೀಯ ಉಪಚಾರಗಳು ಇರಲಿಲ್ಲ. ಅದಕ್ಕಾಗಿ ಜನಪದರು ತಾವು ಮಾಡುವ ಊಟ ಮತ್ತು ಅದಕ್ಕೆ ಬಳಸುವ ಪದಾರ್ಥಗಳ, ಪಾನೀಯಗಳ ಗುಣಧರ್ಮವನ್ನು ಅರಿತುಕೊಂಡು ಬಳಸುವದರ ಮೂಲಕ, ಬಂದ ರೋಗಗಳನ್ನು ನಿವಾರಿಸಿಕೊಳ್ಳುತ್ತಿದ್ದರು. ಅಂಥ ಕೆಲವು ಔಷಧೀಯ ಗುಣಗಳುಳ್ಳ ಅಡಿಗೆ, ಪಾನೀಯಗಳನ್ನು ಇಲ್ಲಿ ನೋಡಬಹುದು.

ಬಳ್ಳೊಳ್ಳಿಯನ್ನು ಕೆಮ್ಮಿಗೆ, ಕುರುವಿಗೆ ಬಳಸುತ್ತಾರೆ. ಅಂತೆಯೇ ಊರಿಗೆ ಹೋದ್ರ ಕಿಸೆಯಲ್ಲಿ ಬಳ್ಳೊಳ್ಳಿ ಇರಬೇಕೆಂದು ಹೇಳುತ್ತಾರೆ. ಸುಂಠಿ ಕಾಡೆ, ಮೆಣಸಿನ ಕಡಬುಗಳು, ನೆಗಡಿ, ಕಫಕ್ಕೆ ದಿವೌಷಧಿಗಳಾಗಿವೆ. ಮೈಕೈನೋವಿಗೆ ಹುರಳಿ ಅಂಬಲಿ. ಇತರ ಸಾಮಾನ್ಯ ರೋಗಿಗಳಿಗೆ ಅಕ್ಕಿ, ಸಾಬುದಾನಿ, ಗಂಜಿ; ರಾಗಿಯ ಅಂಬಲಿಗಳೇ ಊಟ. ಇವು ರೋಗಿಯ ಪಚನ ಕ್ರಿಯೆಗೆ ಸಹಕಾರಿಯಾಗುತ್ತವೆ. ‘ರಾಗಿಯನ್ನು ಉಂಡವನು ನಿರೋಗಿ’ ಎಂಬ ಸರ್ವಜ್ಞನ ಮಾತು ಇದನ್ನೇ ಎತ್ತಿ ಹೇಳುತ್ತದೆ. ಹಾಗೆಯೇ ಗಂಜಿ ರೋಗಿಯ ಪಥ್ಯದ ಪದಾರ್ಥವಾಗಿದ್ದಂತೆ  ‘ಗಂಜಿಯ ಕುಡಿದರೂ ಗಂಡನ ಮನೆ ಲೇಸು’, ‘ಉಣ್ಣೋದು ಗಂಜಿ ಮುಕ್ಕಳಿಸೋದು ಪನ್ನೀರು’ ಎಂಬ ಗಾದೆಗಳು ಅದು ಬಡವರ ಊಟದ ಪದಾರ್ಥವೂ ಆಗಿತ್ತು ಎಂಬುದನ್ನು ತಿಳಿಸುತ್ತದೆ.

ಹಾಗಲಕಾಯಿ ಪಲ್ಲೆ ಅಸ್ತಮಾ, ಸಕ್ಕರೆ ರೋಗಿಗಳಿಗೆ ದಿವ್ಯವೌಷಧಿ. ಹಾಗಲಕಾಯಿ ಪಲ್ಲೆ ಮತ್ತು ಕರಚಿಕಾಯಿ ಪಲ್ಲೆಗಳನ್ನು ಗರ್ಭಿಣಿಯರು ತಿಂದರೆ ಹುಟ್ಟುವ ಮಗುವಿನ ಕಿವಿ ಸೋರುವದಿಲ್ಲವಂತೆ. ಜ್ವರಕ್ಕೆ, ಅಮಸೋಲಿನ ಸಾರು, ಕುರುವಿಗೆ ಸುಟ್ಟ ಉಳ್ಳಾಗಡ್ಡೆ ರಾಮಬಾಣವಂತೆ. ಉಳ್ಳಗಡ್ಡಿ ಕಾಮವರ್ಧಕವಾದುದರಿಂದ ಹೆಣ್ಣುಮಕ್ಕಳು ಹೆಚ್ಚು ತಿನ್ನಬಾರದೆಂಬ ನಿರ್ಬಂಧವೂ ಇದೆ. ಮೂಲವ್ಯಾಧಿಗೆ ಬಿಳಿಮೂಲಂಗಿ, ಬಾಯಿ ಬಂದರೆ ಬಸಳಿ ಪಲ್ಲೆ ಇಲ್ಲವೆ ಒಣಕೊಬ್ಬರಿ ತಿನ್ನಬೇಕು. ಕಾಮಣಿ ರೋಗ ಬಂದವರಿಗೆ ಬೆಲ್ಲ-ರೊಟ್ಟಿ ಮತ್ತು ಕಬ್ಬಿನ ಹಾಲನ್ನು ಹೆಚ್ಚಾಗಿ ಕುಡಿಯಲು ಕೊಡಬೇಕು. ಗೊಬ್ಬರ ಏಳುವಾಗ ಅಂಥವರಿಗೆ ಕರಿದ ಪದಾರ್ಥಗಳನ್ನು ತಿನ್ನಿಸಬೇಕು. ಕರಿಬೇವಿನ ಸೊಪ್ಪು, ಬೆಂಡಿಕಾಯಿಪಲ್ಲೆ ವೀರ್ಯವನ್ನು ವೃದ್ಧಿಸುತ್ತದೆ. ಮೊಲೆಗೆ ಹಾಲು ಹೆಚ್ಚಾಗಬೇಕಾದರೆ ತಾಯಂದಿರು ಮೆಂತೆದ ಹಿಂಡಿ, ಹತ್ತರಕಿ ಪಲ್ಲೆ (ಹಕ್ಕರಕಿ ಪಲ್ಲೆ) ಹೆಚ್ಚು ತಿನ್ನಬೇಕು. ರಾಜಗಿರಿ ಪಲ್ಲೆ ತಿನ್ನುವದರಿಂದ ಅನ್ನಕೋಶ, ಕರುಳುಗಳಲ್ಲಿ ಹರಳುಗಳು ಉಂಟಾಗುವದಿಲ್ಲ. ಹೀಗೆ ಬೇರೆ ಬೇರೆ ರೋಗಗಳಿಗೆ ಬೇರೆ ಬೇರೆ ಪದಾರ್ಥಗಳನ್ನು ಬಳಸುವ ಜ್ಞಾನವನ್ನು ಜನಪದರು ಬಲ್ಲವರಾಗಿದ್ದರು.

ಹಾಗೇ ಯಾವ ರೋಗಕ್ಕೆ ಯಾವ ಪದಾರ್ಥ ನಿಷೇಧ ಎಂಬುದನ್ನು ಅವರು ಅನುಭವದಿಂದ ಅರಿತುಕೊಂಡಿದ್ದಾರೆ. ಅಸ್ತಮಾ ಇದ್ದವರು ಹುಳಿ ಮತ್ತು ಕರಿದ ಪದಾರ್ಥಗಳನ್ನು, ಗೋದಿಯ ಅಡಿಗೆಯನ್ನು ಹೆಚ್ಚಾಗಿ ಸೇವಿಸಬಾರದು.ರೋಗಿಗಳು ಕುಂಬಳಕಾಯಿ, ಬದನೆಕಾಯಿ, ಗಿಣ್ಣ ಕಡಲೆಬೇಳೆ ಮುಂತಾದ ಬಿರುಸು ದಿನಸುಗಳನ್ನು (ನಂಜಿನ ಪದಾರ್ಥಗಳನ್ನು) ತಿನ್ನಬಾರದು.

ಕೆಲವು ಪಾನೀಯಗಳು ರೋಗ ನಿರೋಧಕ ಗುಣವುಳ್ಳವುಗಳಾಗಿವೆ. ಸಿಂದಿ ಗಿಡದ ‘ನೀರಾ’ ಬಹಳ ದಿನ ಕುಡಿದರೆ ಕ್ಷಯರೋಗ ನಿವಾರಣೆಯಾಗುತ್ತದೆ. ಸ್ವಮೂತ್ರ ಕುಡಿದರೆ ಬೇಕಾದಂಥ ರೋಗಗಳು  ಕಡಿಮೆಯಾಗುತ್ತವೆ. ಸೆರೆ ಕುಡಿದರೆ ದಮ್ಮಿನ ತೊಂದರೆ ಕಡಿಮೆ ಎನಿಸುತ್ತದೆ. ಹೀಗೆ ಜನಪದರ ಅನೇಕ ಆಹಾರ-ಪಾನೀಯಗಳು ಔಷಧಿಗಳಾಗಿ ಬಳಿಕೆಯಾಗುತ್ತ ಅವರ ಆರೋಗ್ಯವನ್ನು ಕಾಪಾಡಿಕೊಂಡು ಬಂದಿವೆ. ರೋಗಕ್ಕೆ ಸರಿಯಾದ ಪದಾರ್ಥಗಳು ಸಿಗದೇ ಇದ್ದಾಗ ಅವರು ದೇವರು, ಮಾಟ-ಮಂತ್ರಗಳ ಮೊರೆ ಹೋಗುತ್ತಾರೆ. ಅವು ಮೂಡನಂಬಿಕೆಗಳಾದರೂ ಆ ಸಮಯದಲ್ಲಿ ಮನಸ್ಸನ್ನು ಶಾಂತಗೊಳಿಸಿ ರೋಗ ದೂರ ಮಾಡಲು, ಕೆಲವು ಕಾಲ ಹೆಚ್ಚಿಗೆ ಬಾಳಲು ಸಹಾಯಕವಾಗಿವೆ ಎಂದು ಹೇಳಬಹುದು.

ಈ ಅಡಿಗೆಯ ರುಚಿಯೊಡನೆ ಅವರು ಶುಚಿಯನ್ನು ಕಾಯ್ದುಕೊಳ್ಳುತ್ತಿದ್ದರು. ಅಡಿಗೆ ಮಾಡುವ ಪೂರ್ವದಲ್ಲಿ ಒಲೆಯಲ್ಲಿಯ ಬೂದಿಯನ್ನು ತೆಗೆದು, ಪೂಜಿಸಿಯೇ ಅಡಿಗೆ ಮಾಡಲು ಪ್ರಾರಂಭಿಸುತ್ತಾರೆ. ಮತ್ತೆ ಅಡಿಗೆ ಮಾಡುವದು ಮುಗಿದ ಮೇಲೆ, ಅಡಿಗೆ ತುಂಬಿದ ಪಾತ್ರೆಗಳ ಹೊರಮೈಯನ್ನು ಒರಸಿ, ಮತ್ತೊಮ್ಮೆ ಬೂದಿ ಇಲ್ಲವೆ ವಿಭೂತಿ ಹಚ್ಚಿ ಪೂಜಿಸುವದು. ಅವರ ಆಹಾರದ ಕುರಿತಾಗಿ ಇರುವ ಸ್ವಚ್ಛತೆ ಮತ್ತು ದೈವೀಶ್ರದ್ಧೆಯನ್ನು ತಿಳಿಸುತ್ತದೆ. ಅನ್ನ ಅಂದರೆ ಅವರಿಗೆ ದೇವರು ಅದರ ಅಗುಳನ್ನು ಸಹ ತುಳಿಯುವದಿಲ್ಲ. ಬ್ರಾಹ್ಮಣರಂತೂ ಊಟದ ಸ್ಥಳವನ್ನು ಸಾರಿಸಿಯೇ ಬಿಡುತ್ತಾರೆ.

ಅನ್ನದೇವರ ಮುಂದೆ ಇನ್ನು ದೇವರು ಇಲ್ಲ;
ಅನ್ನಕ್ಕೆ ಮೇಲು ಇನ್ನಿಲ್ಲ | ಲೋಕಕ್ಕೆ
ಅನ್ನವೇ ಪ್ರಾಣ ಸರ್ವಜ್ಞ ||

ಎಂದು ಸರ್ವಜ್ಞ ಜನಪದರ ಅಚಲವಾದ ನಂಬಿಕೆಯನ್ನು ಸಾರಿದ್ದಾನೆ. ಅಂತೆಯೇ ಬೆಳೆದ ಕಾಳನ್ನು, ಮಾಡಿದ ಅಡಿಗೆಯನ್ನು, ಉಣ್ಣುವ ಮೊದಲ ತುತ್ತನ್ನು ಮೊದಲು ದೇವರಿಗೆ ಅರ್ಪಿಸುತ್ತಾರೆ. ‘ಬುತ್ತಿ ಸಿಕ್ಕರೆ ಒಳ್ಳೆಯದು, ಕಳೆದುಕೊಂಡರೆ ಬಡತನ ಬರುತ್ತದೆ’, ‘ಅಡಿಗೆ ಕೆಟ್ಟರೆ ಅದಕ್ಕೆ ಹಳಸಿದೆ ಅನ್ನಬಾರದು, ಇಳಿದಿದೆ ಅನ್ನಬೇಕು’ ಎಂಬ ಮುಂತಾದ ನಂಬಿಕೆಗಳು ಅ‌ನ್ನಕ್ಕೆ ಕೊಟ್ಟ ಗೌರವವನ್ನು ಸೂಚಿಸುತ್ತವೆ.
ಎಲ್ಲ ದಾನಗಳಲ್ಲಿ ಅನ್ನದಾನವೇ ಶ್ರೇಷ್ಠವೆಂದು ತಿಳಿದ ಜನಪದರು ಮನೆಗೆ ಬಂದ ಯಾವ ಭಿಕ್ಷುಕರನ್ನು ಬರಗೈಲಿ ತಿರುಗಿ ಕಳಿಸುವದಿಲ್ಲ. ಹಸಿದು ಬಂದ ಪ್ರಾಣಿ, ಪಕ್ಷಿಗಳಿಗೆ ಉಣ್ಣುವ ಒಂದೊಂದು ತುತ್ತನ್ನು ಹಾಕಿ ಹರಿದು ಹಂಚಿ ತಿನ್ನುತ್ತಾರೆ. ಅಂತೆಯೇ ಅರವಟ್ಟಿಗೆ, ಛತ್ರಗಳನ್ನು ಇಟ್ಟು ಪುಣ್ಯಕಟ್ಟಿಕೊಳ್ಳುತ್ತಾರೆ. ಅನ್ನ ದೇವರು, ಪ್ರಸಾದ, ಊಟ ಎಂದು ತಿಳಿದುಕೊಂಡ ಅವರು ಅನ್ನದ ಮೇಲೆ ಎಂದೂ ಸೊಕ್ಕು ಮಾಡುವದಿಲ್ಲ. ಯಾವ ಹೆಸರೂ ಇಡುವದಿಲ್ಲ. ಯಾಕೆಂದರೆ ಅವರು ಉಣ್ಣುವದಕ್ಕಾಗಿ ಬದುಕಿಲ್ಲ. ಬದುಕುವದಕ್ಕಾಗಿ ಉಣ್ಣುತ್ತಾರೆ.

ಈ ಪ್ರದೇಶದ ಜನಪದರ ಊಟ ಮಾಡುವ ವಿಧಾನಗಳು ವಿಶಿಷ್ಟವಾಗಿವೆ. ಊಟದ ತಟ್ಟೆಯನ್ನು ಇಡಲು ‘ಅಡ್ಡುಣಗಿ’ ಇಲ್ಲವೆ ಮಣಿಗಳನ್ನು ಬಳಸುತ್ತಾರೆ. ಆದರೆ ದಿನನಿತ್ಯ ರೊಟ್ಟಿಗಳನ್ನು ಹೆಚ್ಚಾಗಿ ಕೈಯಲ್ಲಿ ಹಿಡಿದುಕೊಂಡೇ ತಿನ್ನುವುದುಂಟು. ಆಹಾರವನ್ನು ಎರಡೂ ದವಡೆಗಳಿಂದ ನುರಿಸಬಾರದು, ಊಟ ಮಾಡುವಾಗ ಹೆಚ್ಚು ಮಾತಾಡಬಾರದು, ನಗಬಾರದು, ತುತ್ತು ನೆತ್ತಿಗೇರಿದರೆ-ಸೀತರೆ ನೀರು ಕುಡಿಯಬೇಕು. ಅಡ್ಡಾಡುತ್ತ, ಎದ್ದು ನಿಂತು, ಮಂಡಿಗಾಲ ಊರಿ ಕುಳಿತು, ಮಲಗಿ ಊಟ ಮಾಡಬಾರದು ಎಂಬಂಥ ನಂಬಿಕೆಗಳು ಅವರ ಊಟದ ವ್ಯವಸ್ಥೆಯನ್ನು ಸೂಚಿಸುತ್ತವೆ.

ಈ ಪ್ರದೇಶದಲ್ಲಿ ಹೆಚ್ಚಾಗಿ ಅಡಿಗೆ ಮಾಡುವ ಕೆಲಸ ಹೆಣ್ಣುಮಕ್ಕಳದು. ತಾಯಿ ತನ್ನ ಹೆಣ್ಣುಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಅಡಿಗೆ ಮಾಡುವದನ್ನು ಕಲಿಸುತ್ತ ಬರುತ್ತಾಳೆ. ಹೀಗೆ ಈ ಕಲೆ ವಂಶಪಾರಂಪರ್ಯವಾಗಿ ಬೆಳೆದು ಬಂದಿದೆ. ಇದರಿಂದ ಹೆಣ್ಣುಮಕ್ಕಳು ಗಂಡನ ಮನೆಗೆ ಹೋದಾಗ ತೊಂದರೆಗೆ ಈಡಾಗದೆ ತನ್ನ ಪಾಕಕಲೆಯಿಂದ ಮನೆಯವರ ಮನಸ್ಸನ್ನು ಗೆದೆಯುತ್ತಾಳೆ.

ಇನ್ನು ದೊಡ್ಡ ದೊಡ್ಡ ಮದುವೆ-ಮುಂಜಿಯಂಥ ಸಮಾರಂಭಗಳಲ್ಲಿ ಗಂಡಸರೇ ಅಡಿಗೆ ಮಾಡುತ್ತಾರೆ. ಕೆಲವು ಗಂಡಸರೂ ಹೆಂಗಸರಿಗಿಂತಲೂ ಹೆಚ್ಚಿನ ಪ್ರವೀಣಗಾರರಿರುವುದೂ ಉಂಟು. ‘ದುಡಿಯೋನ ಆಳಾಗಬಾರ್ದು, ಅಟ್ಟುಂಡವನ ಹೆಂಡ್ತಿಯಾಗಬಾರ್ದು’ಎಂಬ ಗಾದೆ ಪುರುಷನ ಪಾಕವಿದ್ಯೆಯ ಪ್ರವೀಣತೆಯನ್ನು ಎತ್ತಿ ತೋರಿಸುತ್ತದೆ. ‘ಅಡಿಗೆ ಕೈಹಿಡಿದ ಹುಡಿಗೆ, ಬಾಳ ನಡಿಗೆಯಲ್ಲಿ ಸಿಕ್ಕರೆ, ಸುಖವನ್ನು ದೇವರಲ್ಲಿ ಬೇಡಲು ಗುಡಿಗೆ ಹೋಗಬೇಕಾದುದೇನಿಲ್ಲ’ ಎಂಬ ಚೀನಿಯ ಗಾದೆಯ ಅರ್ಥವನ್ನು ನಮ್ಮ ಜನಪದರ ಜೀವನದಲ್ಲಿ ಕಾಣುತ್ತೇವೆ.

ಒಟ್ಟಿನಲ್ಲಿ ಉತ್ತರ ಕರ್ನಾಟಕದ ಆಹಾರ ವೈಶಿಷ್ಟ್ಯ ಹೇಳಬೆಕೆಂದರೆ ಒಂದೇ ಧಾನ್ಯದಿಂದ ವಿವಿಧ ಅಡಿಗೆಗಳನ್ನು ಮಾಡುವಂತೆ, ಒಂದೇ ಧಾನ್ಯದಿಂದ ವಿವಿಧ ರುಚಿಯ ಅಡಿಗೆಗಳನ್ನು ಮಾಡುವ ಕಲೆಯನ್ನು ನಮ್ಮ ಜನಪದರು ಬಲ್ಲವರಾಗಿದ್ದಾರೆ. ಉದಾಹರಣೆಗೆ ಗೋದಿಯಿಂದ, ಹುಗ್ಗಿ, ಚಕ್ಕೋಲಿ, ಸಜ್ಜಕ ಕಡಬು, ಹೋಳಿಗೆ ಮುಂತಾದ ಸಿಹಿಪದಾರ್ಥಗಳು, ಹಪ್ಪಳ, ಕುರುಡಗಿ ಮುಂತಾದ ಹುಳಿ ಪದಾರ್ಥಗಳು ಕಾರದ ಹೋಳಿಗೆ, ಉಪ್ಪಿಟ್ಟು ಮುಂತಾದ ಖಾರ ಪದಾರ್ಥಗಳು, ಉದರಗಡಬು, ಲಟ್ಟಿಸಿದ ಕಡಬು, ಚಪಾತಿ ಮುಂತಾದವು ಯಾವ ರುಚಿಯನ್ನು ಹೊಂದದ ಪದಾರ್ಥಗಳಾಗಿವೆ. ಹಾಗೆಯೇ ಅನೇಕ ಧಾನ್ಯಗಳನ್ನು ಕೂಡಿಸಿ ಒಂದು ಅಡಿಗೆ ಮಾಡುವರು ಮತ್ತು ಧಾನ್ಯದ ನಿರುಪಯುಕ್ತ ಭಾಗಗಳನ್ನು ಹಾಳು ಮಾಡದೆ, ಕಸದಲ್ಲಿ ರಸ ತೆಗೆಯುವ ಕಲೆಯನ್ನು ಅವರು ಅರಿತಿದ್ದಾರೆ. ಉದಾಹರಣೆಗೆ: ಶ್ಯಾಂವಿಗೆ ಮಾಡಲು ಬೇಕಾಗುವ ಗೋದಿಗೆ ನೀರು ಹಚ್ಚಿ ಬೀಸಿದಾಗ ಅದರ ಮೇಲಿನ ತೌಡು ಉಳಿಯುವುದು. ಅದನ್ನು ಚೆಲ್ಲದೆ ಅದರಿಂದ ತೌಡಿನ ಚಪಾತಿ ಮಾಡುತ್ತಾರೆ. ಅಲ್ಲದೆ ತೌಡನ್ನು ನೆನೆಹಾಕಿ ಅದರ ಹಾಲನ್ನು ತೆಗೆದು, ಅದರಿಂದ ಕುರುಡಿಗೆ, ಉಗ್ಗದ ಹಪ್ಪಳ ಮತ್ತು ಆನಿಕಲ್ಲ ಹುಗ್ಗಿ ಎಂಬ ಸಿಹಿ ಪದಾರ್ಥಗಳನ್ನು ಮಾಡುತ್ತಾರೆ. ಇದೇ ರೀತಿಯಾಗಿ ಹಾಳಾಗಿ ಹೋಗುವ ತಂಗುಳ ರೊಟ್ಟಿಯಿಂದ ‘ಕುದಿಸಿದ ರೊಟ್ಟಿ’, ತಂಗುಳ ಚಪಾತಿಯಿಂದ ‘ಚಕ್ಕೋಲಿ’ ಮಾಡುತ್ತಾರೆ. ಹೀಗೆ ಯಾವುದೇ ತಂಗುಳ ಅಡಿಗೆಗಳನ್ನು ಅವರು ಹಾಳು ಮಾಡುವುದಿಲ್ಲ.

ಬಹುಕಾಲ ಬಾಳುವ ಪದಾರ್ಥಗಳನ್ನು ಹೇಗೆ ತಯಾರಿಸಬೇಕು? ಅಲ್ಪ ಕಾಲ ಉಳಿಯುವ ಅಡಿಗೆಗಳು ಯಾವವು? ಯಾವ ಸಂದರ್ಭದಲ್ಲಿ ಯಾವ ಅಡಿಗೆ ಉಚಿತ ಎಂಬುದರ ಬಗೆಗಿನ ಜನಪದರ ಕಲ್ಪನೆ, ನಂಬಿಕೆಗಳು ವಿಶಿಷ್ಟವೆನಿಸಿವೆ. ಒಂದೇ ಅಡಿಗೆ ಒಂದೊಂದು ಸಂದರ್ಭದಲ್ಲಿ ಬೇರೆಯಾಗಿ ಮಾಡಲ್ಪಡುತ್ತದೆ. ಉದಾಹರಣೆಗೆ: ದಿನದ ಊಟದಲ್ಲಿ ಮಾಡುವ ‘ಬರತ್ತ’ ಸಂಕ್ರಮಣದಲ್ಲಿ ಮಾಡುವ ‘ಬರತ್ತ’ ಇವೆರಡರ ರುಚಿಯಲ್ಲಿ ಭಿನ್ನತೆ ಇದೆ, ಅದಕ್ಕೆ ಕಾರಣ ಇವುಗಳಿಗೆ ಬಳಸುವ ವಸ್ತುಗಳು. ಯಾವ ಯಾವ ಆಹಾರವನ್ನು ಯಾವ ಯಾವ ಋತುಮಾನದಲ್ಲಿ ಹೇಗೆ ಮಾಡಬೇಕು, ಸೇವಿಸಬೇಕು ಎಂಬ ಈ ಪ್ರದೇಶದ ಜನರ ಅನುಭವಕ್ಕೆ ನಾವು ತಲೆದೂಗಬೇಕು.

ಹಾಗೆಯೇ ಒಂದು ಧಾನ್ಯದ ಇಡಿಗಾಳಿನಿಂದ ಒಂದು ಅಡಿಗೆ ಮಾಡಿದರೆ, ಅದೇ ಕಾಳಿನ ಪುಡಿ(ನುಚ್ಚು)ಯಿಂದ ಮತ್ತೊಂದು ಅಡಿಗೆ ಮಾಡುತ್ತಾರೆ ಮತ್ತು ಅದೇ ಕಾಳಿನ ಹಿಟ್ಟಿನಿಂದ ಮಗದೊಂದು ಅಡಿಗೆ ಮಾಡುತ್ತಾರೆ. ಇದೇ ರೀತಿಯಾಗಿ ಒಂದೇ ಧಾನ್ಯದಿಂದ  ಸುಟ್ಟು, ಕುದಿಸಿ, ಬೇಯಿಸಿ, ಕರಿದು, ಒಗ್ಗರಣೆಕೊಟ್ಟು ಮಾಡುವಂಥ ಪದಾರ್ಥಗಳನ್ನು ಮಾಡುವದೂ ಉಂಟು. ಒಂದೇ ಪದಾರ್ಥದಿಂದ ಬಹಳ ದಿನ ಬಾಳಿಕೆ ಬರುವ ಅಡಿಗೆ ಮಾಡುವಂತೆ, ಅದೇ ಪದಾರ್ಥದಿಂದಲ ಬಹುಬೇಗ ಊಟಕ್ಕೆ ಬರುವ ಅಡಿಗೆ ಮಾಡುವ ಅವರ ಕಲೆ ವಿಜ್ಞಾನವನ್ನು ಒಳಗೊಂಡಿದೆ. ಇಂಥ ವಿಶಿಷ್ಟವಾದ, ವೈವಿಧ್ಯಮಯವಾದ ಈ ಪ್ರದೇಶದ ಆಹಾರದ ಮಹತ್ವ, ಜನಪ್ರಿಯತೆ, ವೈಶಿಷ್ಟ್ಯಗಳನ್ನು ಕುರಿತು ಅನೇಕ ಗಾದೆ, ನಂಬಿಕೆ ಒಗಟು, ಒಡಪು, ಕಥೆ, ಹಾಡುಗಳು ಹುಟ್ಟಿಕೊಂಡಿವೆ. ಆಹಾರ ಧಾನ್ಯಗಳು, ಪದಾರ್ಥಗಳು ಅನೇಕರ ಮನೆತನದ ಅಡ್ಡ ಹೆಸರುಗಳಾಗಿ ವಿಜೃಂಭಿಸುತ್ತಿವೆ. ಉದಾಹರಣೆಗೆ: ಕಿಚಡಿ, ಗುಗ್ಗರಿ, ಹುಗ್ಗಿ, ರೊಟ್ಟಿ, ಪಲ್ಲೇದ, ಪಚಡಿ, ಸಂಗಟಿ, ಅಂಬಲಿ, ಅಕ್ಕಿ, ಬೆಣ್ಣೆ, ತುಪ್ಪ, ಮಜ್ಜಿಗೆ, ಮೆಣಸಿನಕಾಯಿ, ಉಳ್ಳಾಗಡ್ಡಿ, ಬಳ್ಳೊಳ್ಳಿ, ತೆಂಗಿನಕಾಯಿ, ಬಾಳಿಕಾಯಿ ಇತ್ಯಾದಿ.

ಇಂದು ಜನಪದ ಅಡಿಗೆಗಳ ಮೇಲೆ ಆಧುನಿಕತೆ ಹಲವಾರು ವಿಧದಲ್ಲಿ ಪ್ರಭಾವ ಬೀರುತ್ತದೆ. ಹೈಬ್ರಡ್ ತಳಿಯ ಆಹಾರ ಧಾನ್ಯ, ಕಾಯಿಪಲ್ಲೆ, ತೊಪ್ಪಲಪಲ್ಲೆಗಳು, ಎಣ್ಣೆ, ಮಸಾಲೆ, ಸಾಮಾನುಗಳು ಸಾಂಕ್ರಾಮಿಕ ರೋಗದಂತೆ ಬಂದು ಆಹಾರದ ರುಚಿಯಲ್ಲಿ ನೀರಸತೆಯನ್ನುಂಟು ಮಾಡಿವೆ, ಆಹಾರ ಸತ್ವವನ್ನು ಕುಂದಿಸಿವೆ. ಮಣ್ಣಿನ ಪಾತ್ರೆಗಳು ಮಾಯವಾಗಿ ಆಲ್ಯುಮಿನಿಯಂ, ಹಿತ್ತಾಳೆ, ಸ್ಟೀಲ್ ಪಾತ್ರೆಗಳು, ಬಣ್ಣದ ಶಿರಾ, ಜಿಲೇಬಿ, ಬುಂದೆದುಂಡಿ ಮುಂತಾದವುಗಳು ಬಂದು ಆಹಾರದಲ್ಲಿ ವಿಷದ ಅಂಶವನ್ನು ಬೆರೆಸುತ್ತ ನಡೆದಿವೆ. ಚಹ-ಕಾಫಿ ಹಳ್ಳಿಗಳಲ್ಲಿ ಬಿಡಾರ ಬಿಟ್ಟಿರುವುದರಿಂದ ಕಿಸೆ ಖಾಲಿಮಾಡಿಸುವ ಹೊಸ ಹೊಸ ತಿಂಡಿಗಳು ಅತ್ತ ದಾಪುಗಾಲು ಹಾಕುತ್ತಿವೆ. ಸರಕಾರಿ ಸೆರೆ ಇನ್ನೇನು ಪಾಕೀಟಿನಲ್ಲಿ ಮನೆಗಳ ಬಾಗಿಲಿಗೆ ಬರುವ ಕಾಲ ದೂರಿಲ್ಲ. ಈ ಬದಲಾವಣೆಯನ್ನು ತಪ್ಪಿಸುವದು ಕಷ್ಟದ ಕಾರ್ಯ. ಆಧುನಿಕ ಬಿರುಗಾಳಿಗೆ ತೂರಿ ಹೋಗುವ ಮೊದಲೇ ಜನಪದರ ಊಟ, ತಿಂಡಿ, ಪಾನೀಯಗಳ ಮಾಡುವ ವಿಧಾನಗಳನ್ನು ಸಂಗ್ರಹಿಸಬೇಕು. ಇಂದು ಶಾಲೆ-ಕಾಲೇಜುಗಳಲ್ಲಿ ಬಿಸ್ಕೀಟು, ಚಾಕಲೇಟು, ಬ್ರೆಡ್ಡು, ಮೈಸೂರಪಾಕ, ಗುಲಾಮ ಜಾಮೂನ್ ಮುಂತಾದವುಗಳನ್ನು ಕಲಿಸುವದನ್ನು ಬಿಟ್ಟು, ನಮ್ಮಲ್ಲಿಯೇ ವಿಪುಲವಾಗಿ ಬೆಳೆಯುವ ಆಹಾರ ಧಾನ್ಯಗಳಿಂದ ಶಕ್ತಿಯುತವಾದ, ಕಡಿಮೆ ಖರ್ಚಿನಲ್ಲಿ ತಯಾರಿಸುವ, ಸರಳ ವಿಧಾನಗಳನ್ನು ಹೊಂದಿದ ಊಟ-ತಿಂಡಿಯ ಪದಾರ್ಥಗಳನ್ನು ಕಲಿಸಬೇಕು. ಅಂದರೆ ನಮ್ಮ ಜನ ಇನ್ನೂ ನಾಲ್ಕು ದಿನ ಹೆಚ್ಚಿಗೆ ಬದುಕಬಹುದು.

* * *