ಗ್ರಾಮ ದೇವತೆಗಳನ್ನು ವರ್ಗೀಕರಣ ಮಾಡುವುದು ಜಟಿಲವಾದ ಸಂಗತಿಯಾಗಿದೆ. ಅಸಂಖ್ಯಾತ ದೇವತೆಗಳನ್ನು ಒಂದು ವಿಭಜನೆಗೆ ಒಳಪಡಿಸುವುದು ಅತ್ಯಂತ ಮುಖ್ಯವಾದ ಕೆಲಸವಾದರೂ ಈ ವಿಚಾರದಲ್ಲಿ ಇದೇ ಕೊನೆ ಎಂದು ಹೇಳಿದರೆ ತಪ್ಪಾಗುತ್ತದೆ. ಆದ್ದರಿಂದ ಇದೊಂದು ಪ್ರಯತ್ನವಷ್ಟೇ. ಕರ್ನಾಟಕದ ಎಲ್ಲಾ ದೇವತೆಗಳ ಹೆಸರು ಅವುಗಳಿಗೆ ಸಂಬಂಧಿಸಿದ ಪುರಾಣ ಆಚರಣೆ, ಕಥೆ ಸಿಗುವತನಕ ಗ್ರಾಮದೇವತೆಗಳ ವರ್ಗೀಕರಣ ಅಪೂರ್ಣವೆಂದೇ ನನ್ನ ಭಾವನೆ. ಏಕೆಂದರೆ ವರ್ಗೀಕರಣದಲ್ಲಿ ಯಾವುದೇ ದೇವರು ಬಿಟ್ಟು ಹೋಗುವ ಸಂಭವ ಇರುವುದರಿಂದ ಹೀಗೆ ಹೇಳಬೇಕಾಗಿದೆ. ಎಲ್ಲಾ ದೇವತೆಗಳನ್ನೂ ಒಳಗೊಳ್ಳುವ ವರ್ಗೀಕರಣವೇ ಮಾದರಿ ವರ್ಗೀಕರಣವಾಗುತ್ತದೆ.

ಮನುಷ್ಯನ ಆರ್ಥಿಕ ಚಟುವಟಿಕೆ ಆತನ ಸಂಸ್ಕೃತಿ ನಿರ್ಮಾಣದಲ್ಲಿ ಅಪೂರ್ವವಾದ ಪಾತ್ರವಹಿಸುತ್ತದೆ. ಹುಟ್ಟಿನಿಂದ ಇಲ್ಲಿಯವರೆಗೆ ಈ ಮಾನವ ಜೀವಿ ಹಲವು ಬಗೆಯ ಆರ್ಥಿಕ ಚಟುವಟಿಕೆಯ ಹಂತಗಳನ್ನು ದಾಟಿ ಬಂದಿದ್ದಾನೆ. ಈ ಎಲ್ಲ ಹಂತಗಳಲ್ಲಿ ಅವನು ಉಳಿವಿಗಾಗಿ ಹೋರಾಡಿದ. ಆಹಾರದ ಗಳಿಕೆಯೇ ಅವನ ಮುಖ್ಯ ಕಾಳಜಿಯಾಗಿತ್ತು. ಇದಕ್ಕಾಗಿ ಮನುಷ್ಯ ಅನುಸರಿಸಿದ ತಂತ್ರ, ಬಳಸಿದ ಉಪಕರಣಗಳ ಚರಿತ್ರೆ ಕುತೂಹಲಕಾರಿ ಆದದ್ದು. ಈ ಚಟುವಟಿಕೆಯೇ ಅವನ ಆಲೋಚನೆಗಳನ್ನು ರೂಪಿಸಿತು. ಮನುಷ್ಯನ ಮನಸ್ಸಿನ ವರ್ತನಾವಿನ್ಯಾಸದ ಮೂಲವೇ ಇದು ಎಂದರೆ ತಪ್ಪಾಗಲಾರದು. ಐದು ಬಗೆಯ ಆರ್ಥಿಕ ಚಟುವಟಿಕೆಗಳಲ್ಲಿ ಮಾನವ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಅವು – “ಆಹಾರ ಸಂಗ್ರಹಣೇ, (Food Gathering) ಬೇಟೆ (Hunting)  ಪಶುಪಾಲನೆ (Pastoral) ಕೃಷಿ (Agriculture) ಮತ್ತು ಕೈಗಾರಿಕೆ (Industry). ಕೊನೆಯ ಹಂತದಲ್ಲಿ ಇರುವ ಮನುಷ್ಯ ಮೊದಲ ನಾಲ್ಕು ಘಟ್ಟಗಳನ್ನು ದಾಟಿ ಬಂದಿರಲೇಬೇಕು. ಇಂದು ಪ್ರಪಂಚದ ನಾನಾಕಡೆ ಆಹಾರ ಸಂಗ್ರಹಣೆಯ ಹಂತದಲ್ಲೇ ನಿಂತುಹೋಗಿರುವ ಜನರನ್ನು ಕಾಣಲು ಸಾಧ್ಯವಿದೆ. ಕೆಲವರು ಬೇಟೆಯನ್ನು ಇನ್ನೂ ದಾಟದಿರುವುದು ಕಂಡು ಬಂದರೆ ನೀಲಗಿರಿಯ ಕೋಡರು ಪಶುಪಾಲನೆಯನ್ನೇ ಮಾಡುತ್ತಾ ಕೃಷಿಗೆ ಕಾಲಿಡದಿರುವ ಜನಾಂಗವಾಗಿದ್ದಾರೆ.

ದೇವದೇವತೆಗಳು, ಆಚರಣೆಗಳು ಹುಟ್ಟಿದ್ದು ಈ ಚಟುವಟಿಕೆಗಳ ಹಿನ್ನೆಲೆಯಲ್ಲೇ ಆಹಾರ ಸಂಗ್ರಹಣೆಯ ಹಂತದ ಅನೇಕ ಆಚರಣೆಗಳು ಇನ್ನೂ ವಿಚಿತ್ರ ರೂಪದಲ್ಲಿ ನಮ್ಮ ನಡುವೆ ಸಿಗುತ್ತವೆ. ಇಂದಿಗೂ ಇರುವ ಬಿಲ್ಲುಬಾಣ ಹಿಡಿದ, ಕಾಡು ಪ್ರಾಣಿಗಳ ಮೇಲೆ ಸವಾರಿ ಮಾಡುವ ದೇವರುಗಳು ಹುಟ್ಟಿದ್ದು ಬೇಟೆಯ ಕಾಲದಲ್ಲಿ ಪಶುಪಾಲನೆಯ ಹಂತದ ದೇವತೆಗಳು ದನಕಾಯುವ ವೃತ್ತಿಯನ್ನು ಪ್ರಧಾನವಾಗಿ ಆರಿಸಿಕೊಂಡಿವೆ. ಮನುಷ್ಯ ಈ ಘಟ್ಟದಲ್ಲಿ ಇದ್ದಗಲೇ ಆಕಾಶದೇವತೆಗಳು, ವಾಯುಮಂಡಲ ದೇವತೆಗಳು ಹುಟ್ಟಿದ್ದು. ಈ ಮೂರು ಆರ್ಥಿಕ ಚಟುವಟಿಕೆಗಳಲ್ಲಿ ಗಂಡಸಿನ ಪ್ರಾಮುಖ್ಯತೆ ಹೆಚ್ಚಾಗಿ ಪುರುಷದೇವತೆಗಳೇ ವ್ಯಾಪಿಸಿವೆ. ಸ್ತ್ರೀ ದೇವತೆಗಳು, ಗ್ರಾಮದೇವತೆಗಳು ಅಲ್ಲಲ್ಲಿ ಕಂಡು ಬಂದರೂ ಅವುಗಳ ಪಾತ್ರ ಗೌಣ. ಸ್ತ್ರೀ ದೇವತೆ ನಿಜವಾದ ಅರ್ಥದಲ್ಲಿ ಹುಟ್ಟಿದ್ದು ಮತ್ತು ಬೆಳವಣಿಗೆ ಕಂಡದ್ದು ಕೃಷಿಯ ಆರಂಭ ಕಾಲದಲ್ಲಿ.

ಮೊದಲ ಕೃಷಿ ಕೈಗುದ್ದಲಿಯಲ್ಲಿ ನಡೆಯಿತು. ಅದು ತೋಟ ಕೃಷಿ. ಈ ವ್ಯವಸಾಯವನ್ನು ಕಂಡುಹಿಡಿದ ಕೀರ್ತಿ ಹೆಣ್ಣಿಗೇ ಸಲ್ಲಬೇಕು. ಕೃಷಿಯ ತಂತ್ರಗಳು ಹೆಣ್ಣಿಗೆ ಗಂಡಿಗಿಂತ ಚೆನ್ನಾಗಿ ಗೊತ್ತಿತ್ತು. ಇವಳು ವ್ಯವಸಾಯ ಮಾಡುತ್ತಿದ್ದ ಕಾಲದಲ್ಲಿ ಗಂಡು ಬೇಟೆಯಾಡುತ್ತಿದ್ದ, ಪಶುಪಾಲನೆಯಲ್ಲಿ ತೊಡಗಿದ್ದ. ಈ ಹಂತದಲ್ಲಿ ಸ್ತ್ರೀ ದೇವತೆಗಳು ಎಲ್ಲೆಲ್ಲೂ ಕಮಡು ಬಂದು ಬೆಳೆದಿದ್ದು ಸ್ಪಷ್ಟವಾಗಿದೆ. ಹೆಣ್ಣಿನ ಘನತೆ ಆಶ್ಚರ್ಯಕರ ರೀತಿಯಲ್ಲಿ ಬೆಳೆಯಲು ಇನ್ನೊಂದು ಕಾರಣ, ಸ್ತ್ರೀಯ ಗರ್ಭಧಾರಣ ಶಕ್ತಿಗೂ ಭೂಮಿಯ ಸಸ್ಯಧಾರಣ ಶಕ್ತಿಗೂ ಸಂಬಂಧ ಕಲ್ಪಿತವಾದದ್ದು. ಕೃಷಿಯ ಎಲ್ಲ ಚಟುವಟಿಕೆಗಳನ್ನು ಸ್ತ್ರೀ ಆರಂಭಿಸಬೇಕು. ಅಥವಾ ಕೃಷಿಗೆ ಮೊದಲು ಗಂಡು ಹೆಣ್ಣು ಭೂಮಿಯ ಮೇಲೆ ಸಂಭೋಗ ಮಾಡಬೇಕು. ಇಂಥ ನಂಬಿಕೆಗಳು ಸೃಷ್ಟಿ ಆದವು, ಕೃಷಿಯ ಮಾಟದ ಎಲ್ಲಾ ಕ್ರಿಯೆಗಳನ್ನು ನೆರವೇರಿಸುವ ಪೂಜಾರಿಣಿ ಹೆಣ್ಣಾದಳು. ಬಂಜೆ ಹೆಣ್ಣು ಮಕ್ಕಳನ್ನು ಹೆರದಿರುವುದು ಮಾತ್ರವಲ್ಲ ನೆಲದ ಸಮೃದ್ಧಿಯನ್ನೇ ಬರಡಾಗಿಸಬಹುದೆಂಬ ಭಯ ಜನರನ್ನು ಕಾಡಿತು. ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ, ಸ್ತ್ರೀ ದೇವತೆಗಳು, ಸ್ತ್ರೀ ಪೂಜಾರಿಣಿಯನ್ನು ಈ ಹಿನ್ನೆಲೆಯಲ್ಲೇ ಗಮನಿಸಬಹುದು. ಬಹುತೇಕ ಆಚರಣೆಗಳಲ್ಲಿ ಪುರುಷನ ಸ್ಥಾನ ಇಳಿಮುಖವಾಗಿ ಹೆಣ್ಣಿನ ಪಾತ್ರ ಪ್ರಾಮುಖ್ಯತೆಯನ್ನು ಪಡೆಯಿತು.

ಗಂಡಸಿನ ಪಾತ್ರವಿಲ್ಲದೆ ಜನನಸಾಧ್ಯ ಎಂಬ ಕಲ್ಪನೆ ಬೆಳೆದದ್ದು ಈ ಸಂದರ್ಭದಲ್ಲಿಯೇ ಅನ್ನಿಸುತ್ತದೆ. ಪ್ರಪಂಚದ ನಾನಾಕಡೆ ಅಂದರೆ ಕೃಷಿ ಸಂಸ್ಕೃತಿಗಳಲ್ಲಿ ಗಂಡಸಿನ ಅಗತ್ಯವಿಲ್ಲದೆ ಜನನ ಸಾಧ್ಯವಾಗಿದೆ. ಇನ್ನೂ ಕೆಲವು ಕಡೆ ದೇವತೆಯು  ಪುರುಷ ದೇವತೆಗಳನ್ನು ಸೃಷ್ಟಿಸಿ ಅವರಲ್ಲಿ ಒಬ್ಬನನ್ನೂ ಮದುವೆ ಆಗುತ್ತಾಳೆ. ಹೀಗೆ ಅವಳು ಕೇವಲ ಪತ್ನಿ ಅಲ್ಲ ತಾಯಿಯೂ ಹೌದು. ನಮ್ಮ ಪುರಾಣದ ಆದಿಶಕ್ತಿ ತ್ರಿಮೂರ್ತಿಗಳನ್ನು ಸೃಷ್ಟಿಸಿ ಅವರಲ್ಲಿ ಒಬ್ಬನಾದ ಶಿವನನ್ನು ಮದುವೆ ಆದಳು. ಕೃಷಿ ಸಂಸ್ಕೃತಿಯ ಇನ್ನೊಂದು ಲಕ್ಷಣ ದೇವತೆಯ ಜೊತೆ ದೇವರು ನಿಂತಿರುವುದಿಲ್ಲ. ಪುರುಷ ದೇವರ ಪಾತ್ರ ಆಕೆಯ ಪುತ್ರ ಅಥವಾ ಸೋದರನಾಗಿ ಪರಿಗಣಿಸಲ್ಪಟ್ಟರುವುದು ಕಂಡು ಬರುತ್ತದೆ. ಶಿವನ ಸಹಾಯವಿಲ್ಲದೆ ಕೇವಲ ಕೊಳೆಯಲ್ಲಿ ಹುಟ್ಟುವ ಗಣಪತಿಯ ಪುರಾಣದ ಆಶಯವು ಒಂದು ರೀತಿಯಲ್ಲಿ ಸ್ತ್ರೀಯ ಮಹತ್ವವನ್ನು ಎತ್ತಿ ಹಿಡಿದು ಸೃಷ್ಟಿ ಕ್ರಿಯೆಯಲ್ಲಿ ಪುರುಷನ ಪಾತ್ರವನ್ನೇ ಕಡೆಗಣಿಸುತ್ತದೆ. ಗ್ರಾಮ ದೇವತೆಗಳ ಇನ್ನೊಂದು ಲಕ್ಷಣ ಇಲ್ಲಿನ ಶೇಕಡ ತೊಂಭತ್ತು ಭಾಗ ದೇವತೆಯರಿಗೆ ಗಂಡಂದಿರು ಇಲ್ಲ. ಇವರನ್ನು ಪೂಜಿಸುವ ಭಕ್ತರನ್ನು ಕೇಳಿದರೆ ದೇವತೆಗಳ ಗಂಡ ಇರಲು ಸಾಧ್ಯವಿಲ್ಲ ಇದ್ದರೂ ಇರಬಹುದು ನಮಗೆ ಗೊತ್ತಿಲ್ಲ ಎನ್ನುತ್ತಾರೆ.

ಸಂಸ್ಕೃತಿಯ ಈ ಸ್ಥಿತಿಯಲ್ಲಿ ಗಂಡು ಹೆಣ್ಣಿನ ನಡುವೆ ಘರ್ಷಣೆ ಸಂಭವನೀಯ, ಇದನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಆಗ ಬೇಟೆ, ಪಶುಪಾಲನೆಯ ಅಸ್ತಿತ್ವ ಇನ್ನೂ ಇತ್ತು. ಈ ಹಿನ್ನೆಲೆಯಲ್ಲಿ ಅಯ್ಯಪ್ಪ ಎಂಬ ದೇವರ ಜನನದ ಕಥೆ ಸ್ವಾರಸ್ಯಕರವಾಗಿದೆ. ಅಯ್ಯಪ್ಪನನ್ನು ಹರಿಹರ ಪುತ್ರ ಎನ್ನುತ್ತಾರೆ. ಇದರ ಅರ್ಥವೇನು? ಹೆಣ್ಣಿನ ಸಹಕಾರವಿಲ್ಲದೆ ಅಯ್ಯಪ್ಪ ಹುಟ್ಟಿದ್ದಾನೆ ಎಂಬುದೇ ಇದರ ಅರ್ಥ. ಶಿವ ಗಂಡಾಗಿ ಹರಿಯೇ ಹೆಣ್ಣಾಗಿ ಈ ದೇವರು ಹುಟ್ಟಿತು. ಗಂಡಿನ ನೆರವಿಲ್ಲದೆ ಜನನವನ್ನು ಸಾಧ್ಯವಾಗಿಸಿದ ಗಣಪತಿಯ ಪುರಾಣಕ್ಕೆ ಅಯ್ಯಪ್ಪನ ಪುರಾಣ ತೀರಾ ತದ್ವಿರುದ್ದವಾದದ್ದು, ಗಂಡಸರೇ ಸೃಷ್ಟಿಸಲು ಸಾಧ್ಯ ಎಂಬ ಆಶಯವನ್ನು ಈ ಪುರಾಣ ಹೇಳುತ್ತದೆ. ಎಂದು ಭಾವಿಸಲು ಸಾಧ್ಯವಿದೆ. ಅಯ್ಯಪ್ಪ ಬೇಟೆಯ ದೇವತೆ ಆಗಿರುವದೂ, ಅಯ್ಯಪ್ಪ ಸ್ತ್ರೀಯರನ್ನು ದೂರ ಇಡುವ ದೇವತೆಯಾಗಿರುವುದೂ ಗಮನೀಯ ಅಂಶಗಳಾಗಿವೆ.

ಕೃಷಿಕ ಬೆಳವಣಿಗೆಯಲ್ಲಿ ನೇಗಿಲಿನ ಪ್ರವೇಶವಾದಾಗ ಗಂಡಿನ ಪ್ರಾಧಾನ್ಯತೆ ಮತ್ತೆ ಚಿಗುರೊಡೆಯಿತು. ಪೂಜಾರಿಣಿಯ ಸ್ಥಾನಕ್ಕೆ ಪೂಜಾರಿಗಳು ಬರತೊಡಗಿದರು. ಆದರೆ ಅವರು ಬಂದದ್ದು ಸ್ತ್ರೀ ವೇಷದಲ್ಲಿ, ಗ್ರಾಮದೇವತೆಯ ಹುಟ್ಟು ಮತ್ತು ಬೆಳವಣಿಗೆಯನ್ನು ಗ್ರಹಿಸುವುದು ಅದರ ವರ್ಗೀಕರಣಕ್ಕೆ ಹೆಚ್ಚು ಸಹಾಯಕವಾಗುತ್ತದೆ.

ಹೀಗೆ ಹಾಲಿ ಮತ್ತು ಇಲ್ಲವಾಗಿರುವ ದೇವತೆಗಳನ್ನು ಆರ್ಥಿಕ ಆರ್ಥಿಕ ಚಟುವಟಿಕೆಯ ನಾಲ್ಕು ಹಂತಗಳಲ್ಲಿ ಖಚಿತವಾಗಿ ಗುರುತಿಸಬಹುದು. ಆದರೆ ಗ್ರಾಮದೇವತೆಗಳ ವಿಭಜನೆಯನ್ನು ಈ ಮಾನದಂಡದಿಂದ ಮಾಡಲು ಸಾಧ್ಯವಾಗುವುದಿಲ್ಲ. ವರ್ಗೀಕರಣದಲ್ಲಿ ಒದಗುವ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ನಾಲ್ಕು ಹಂತಗಳಲ್ಲಿ ದೇವರ ಹುಟ್ಟುವಿಕೆ ಮತ್ತು ಸಾಯುವಿಕೆಯು ಅತ್ಯಂತ ಗಮನೀಯವಾದುದು.

ಆಫ್ರಿಕಾದ ಚಿರಿಕಾಹುವಾಸ್ಯ (Chiricahuas)  ಜನಾಂಗದ ದೇವತೆಗಳನ್ನು ಮಾನವಶಾಸ್ತ್ರಜ್ಞರು ಮೂರು ಬಗೆಯದಾಗಿ ವಿಂಗಡಿಸಿದ್ದಾರೆ. ಅವು – “೧) ದೇವರುಗಳು ೨) ಶಕ್ತಿಗಳು ೩) ಪ್ರೇತಗಳು, ಶ್ವೇತ ವರ್ಣದ ಹೆಂಗಸು ಮತ್ತು ನೀರಿನ ಮಗು ಎಂಬ ಎರಡು ದೇವತೆಗಳು ಅಲ್ಲಿನ ಬದುಕಿನಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತವೆ. ಅವರ ಅಗೋಚರ ಶಕ್ತಿಗಳು ನೀರಿನಲ್ಲೂ, ಬೆಟ್ಟದಲ್ಲೂ ನೆಲೆಯೂರಿವೆ. ಸತ್ತರೂ ನಿವೃತ್ತಿಯನ್ನು ಬಯಸದ ಪ್ರೇತಗಳು ಗೆಳೆಯರು, ಸಂಬಂಧಿಗಳು, ಹೆಂಡತಿ, ಮಕ್ಕಳನ್ನು ಮತ್ತೆ ಮತ್ತೆ ಕಾಡುತ್ತವೆ.

ಬಗಾಂಡ ಸಂಸ್ಕೃತಿಯಲ್ಲಿ ಕಂಡುಬರುವ ದೇವರ ವಿಭಜನೆಯನ್ನು ಗಮನಿಸುವುದು ಉಪಯುಕ್ತವಾಗಿದೆ. ಇಲ್ಲಿ ಮೂರು ಬಗೆಯಲ್ಲಿ ದೇವರುಗಳು ವಿಂಗಡನೆಗೊಂಡಿವೆ. ೧) ಕುಲದೇವತೆಗಳು ೨) ರಾಜರ ಪ್ರೇತಗಳು ೩) ರಾಷ್ಟ್ರೀಯ ದೇವತೆಗಳು. ಮೇಲಿನ ಎರಡು ಬಗೆಯ ದೇವತೆಗಳು ಪ್ರೇತ ಸಂಪ್ರದಾಯದಿಂದ ಬಂದಿವೆ. ಆದರೆ ರಾಷ್ಟ್ರೀಯ ದೇವತೆ ಬಗಾಂಡಾ ಜನರ ಬದುಕಿನಲ್ಲಿ ಅತ್ಯಂತ ಮುಖ್ಯವಾಗಿವೆ. ಈ ದೇವರುಗಳಲ್ಲಿ ಶ್ರೇಣೀಕರಣ ಇದ್ದು ಜವಾಬ್ದಾರಿಯ ವಿಭಜನೆ ಆಗಿದೆ. ಸೃಷ್ಟಿದೇವರಾದ ಕಟೋಂಡಾನ ಜನಪ್ರಿಯತೆ ಆಧುನಿಕರಲ್ಲಿ ಇಳಿಮುಖವಾಗುತ್ತಿದೆ. ವಿಕ್ಟೋರಿಯಾ ಸರೋವರದ ದೇವರು “ಮುಕಾಸ” ಇದು ಜನರಿಗೆ ಮೀನು ಕೊಡುತ್ತದೆ. ಬೇಡಿದವರಿಗೆ ಅವಳಿ ಮಕ್ಕಳನ್ನು ಕೊಡುತ್ತದೆ. ಈ ಎರಡು ಪ್ರಧಾನ ದೇವತೆಗಳ ಜೊತೆಗೆ ಅನೇಕ ದೇವತೆಗಳು ಇಲ್ಲಿ ಕಂಡು ಬರುತ್ತವೆ. “ವಾಲುಂಬೆ” ಮೃತ್ಯುದೇವತೆ, “ಕಾಂಪುಲಿ” ಪ್ಲೇಗ್ ದೇವತೆ, “ಕಿಬುಕ” ಮತ್ತು “ನೆಂಡೆ” ಯುದ್ಧ ದೇವತೆಗಳು, “ದಂಗು” ಬೇಟೆಯ ದೇವತೆ, “ಗೂಲು” ಸ್ವರ್ಗ ದೇವತೆ, “ಕಿಟಕ” ಭೂದೇವತೆ, “ಮಸಿಸಿ” ಭೂಕಂಪನ ನಿಯಂತ್ರಣ ದೇವತೆ “ನಬುಜಾನ” ಗರ್ಭಿನಿ ಸ್ತ್ರೀಯರ ದೇವತೆ, ಈಕೆಯ ಪೂಜಾರಿಣಿಯರು ಬಗಾಂಡಾದ ಸೂಲಗಿತ್ತಿಯರು. ಬಗಾಂಡ ಜನರಲ್ಲಿ ಕಂಡುಬರುವಂತೆ ಜವಾಬ್ದಾರಿಯ ವಿಭಜನೆ ಇಲ್ಲಿಯ ಗ್ರಾಮದೇವತೆಗಳಲ್ಲೂ ಆಗಿದೆ. ಇಲ್ಲಿನ ವರ್ಗೀಕರಣ ಸಂಬಂಧದಲ್ಲಿ ಇದನ್ನು ಗಮನಿಸುವುದು ಪ್ರಯೋಜನಕಾರಿ.

ಪ್ರಪಂಚದ ಒಟ್ಟು ದೇವತೆಗಳನ್ನು ಗಮನದಲ್ಲಿ ಇಟ್ಟುಕೊಂಡು “ಚಾರ್ಲ್ಸ ವಿನಿಕ” ಅವರು ಮಾಡಿರುವ ವಿಭಜನೆ ಅಷ್ಟೇ ಗಮನೀಯವಾಗಿದೆ. ಆರು ಪ್ರಧಾನ ವಿಭಾಗಗಳಲ್ಲಿ ಅವರು ದೇವತೆಗಳನ್ನು ವಿಭಜನೆ ಮಾಡಿದ್ದಾರೆ. ೧) ಪ್ರಕೃತಿ ದೇವತೆಗಳು ೨) ಸಮೃದ್ಧಿಯ ದೇವತೆಗಳು ೩) ಚಟುವಟಿಕೆಯ ದೇವತೆಗಳು (ಸಮರದೇವತೆ, ರೋಗ ನಾಶಿನೀ ದೇವತೆ) ೪) ಮಧ್ಯಸ್ಥಿಕೆ ದೇವತೆಗಳು (ವಿಷ್ಣು ಅವತಾರ) ೫) ಉನ್ನತ ದೇವತೆಗಳು (ಜೈನಾದ ಟಮಾನ್ , ಹಿಂದೂಗಳ ಬ್ರಹ್ಮ) ೬) ಜಗಾದಾಧಿಕಾರ ದೇವತೆಗಳು (ಅಲ್ಲಾ, ಓರ್ ಮುಜ್,) ಈ ಪ್ರಧಾನ ವರ್ಗೀಕರಣದ ಜೊತೆಗೆ ಅನೇಕ ಉಪವಿಭಾಗಗಳನ್ನು ಅವರು ಸೂಚಿಸುತ್ತಾರೆ. ವಾಯು ದೇವತೆ ಹಾಗೂ ಪರಿಮಿತ ದೇವತೆಗಳು. ಪರಿಮಿತ ದೇವತೆಗಳು ಜಗತ್ತಿನ ನಿಯಮಕ್ಕೆ ತಲೆಬಾಗುತ್ತವೆ. ಅವುಗಳನ್ನೂ ವಿಧಿಕಾಡುತ್ತದೆ. ಒಲಂಪಿಯನ್ ದೇವತೆಗಳು ಈ ಗುಂಪಿನವು. ಪರಿಮಿತ ಕಾಲದಲ್ಲಿ ಅಸ್ತಿತ್ವ ಪಡೆದು ಇಲ್ಲವಾಗುವಗಳಿಗೆ ದೇವರೂ ಇಲ್ಲಿ ಬರುತ್ತದೆ.ಬೆಟ್ಟದ ದೇವರುಗಳ ಪ್ರಪಂಚದ ಎಲ್ಲಾ ಸಣ್ಣ ಪುಟ್ಟ ಬೆಟ್ಟಗಳಲ್ಲಿ ಯಥೇಚ್ಛವಾಗಿ ಕಂಡು ಬರುತ್ತವೆ. ಆದಿವಾಸಿ ದೇವರು ಒಂದು ನಿರ್ದಿಷ್ಟ ಗುಂಪಿನ ಹಿತಾಸಕ್ತಿಯನ್ನು ಕಾಪಾಡಲು ಇರುವ ದೇವರು. ಇತರ ಜನಾಂಗದ ವ್ಯಕ್ತಿಯ ಜವಾಬ್ದಾರಿಯನ್ನು ಈ ದೇವರು ಅಂಗೀಕರಿಸುವುದಿಲ್ಲ. ಹಾಗೆಯೇ ಮಾತೃದೇವತೆಯ ಪಂಥ ವಿಶ್ವವ್ಯಾಪಿ ಆಗಿರುವುದನ್ನು ಅವರು ಗುರುತಿಸುತ್ತಾರೆ.

ಡಾ|| ಗದ್ದಗೀಮಠ ಅವರು ಕರ್ನಾಟಕದ ಜನಪದ ದೇವತೆಗಳನ್ನು ಆರು ರೀತಿಯಲ್ಲಿ ವಿಭಜಿಸಿದ್ದಾರೆ. ೧) ದೇವರು ೨) ದೇವತೆಗಳು ೩) ಸಂಪ್ರದಾಯದ ದೇವತೆಗಳು ೪) ಶಿವಶರಣರು ೫) ಸಾಧು ಸತ್ಪುರುಷರು ೬) ಭೂತಾದಿಗಳು ಎಂದು ಅವರು ಹೇಳುತ್ತಾರೆ. ಇವುಗಳಲ್ಲಿ ಎರಡು ವರ್ಗ ದೇವರು ಅಥವಾ ದೇವತೆ ಗಳಲ್ಲದಿದ್ದರೂ ಜನಪದದಿಂದ ದೇವರ ಸಮಾನವಾಗಿ ಪೂಜೆ  ಸಂದಾಯವಾಗುತ್ತದೆ.

ಮೇಲೆ ಪ್ರಸ್ತಾಪಿಸಿದ ವರ್ಗೀಕರಣಗಳು ಅಸಮಗ್ರವಾಗಿವೆ. ಕಾರಣ ಈ ವರ್ಗೀಕರಣದಲ್ಲಿ ಅನೇಕ ದೇವತೆಗಳನ್ನು ಕೈ ಬಿಡಬೇಕಾಗುತ್ತದೆ. ಎಲ್ಲ ದೇವತೆಗಳನ್ನೂ ಒಳಗೊಳ್ಳುವ ಸಕಲ ಆಚರಣೆ ಮತ್ತು ಪುರಾಣಗಳನ್ನು ಗಮನಿಸಲು ಸಾಧ್ಯವಾಗುವಂಥ ವರ್ಗೀಕರಣ ಅಗತ್ಯವಾಗಿದೆ. ಪುರುಷ ದೇವತೆಗಳು, ಸ್ತ್ರೀ ದೇವತೆಗಳು ಎಂದು ವರ್ಗೀಕರಿಸುವದು ಅತಿ ವಿಶಾಲವಾದ ಚೌಕಟ್ಟಿನಲ್ಲಿ ಮಾತ್ರ. ಗುಣಸ್ವಭಾವದ ಮೇಲೆ ಇನ್ನಿತರ ಅನೇಕ ಸಾಮಾನ್ಯ ಮಾನದಂಡಗಳನ್ನು ಆಧಾರವಾಗಿ ಇಟ್ಟುಕೊಂಡು ಗ್ರಾಮದೇವತೆಗಳನ್ನು ನೂರಾರು ವರ್ಗಗಳಾಗಿ ವಿಭಜನೆ ಮಾಡಲು ಸಾಧ್ಯವಿದೆ. ದೇವತೆಗಳ ಗುಣಸ್ವಭಾವ (ಸೌಮ್ಯ ದೇವತೆಗಳು, ಉಗ್ರ ದೇವತೆಗಳು) ಆಹಾರ (ಮಾಂಸಾಹಾರಿ ಮತ್ತು ಸಸ್ಯಾಹಾರಿ ದೇವತೆಗಳು) ಜನಾಂಗ (ಕೆಳವರ್ಗ, ಮೇಲು ವರ್ಗದ ದೇವತೆಗಳು) ಕಾಲ (ಪ್ರಾಚೀನ ಮತ್ತು ಆಧುನಿಕ ದೇವತೆಗಳು) ಬಣ್ಣ (ಕಪ್ಪು ಮತ್ತು ಕೆಂಪುದೇವತೆಗಳು) ಲಿಂಗ (ಗಂಡು ಮತ್ತು ಹೆಣ್ಣು ದೇವತೆಗಳು) ವನ್ನು ಅನುಸರಿಸಿ ವಿಭಜಿಸಲೂ ಸಾಧ್ಯವಿದೆ.

ಇಷ್ಟೇ ಅಲ್ಲದೆ ಸಮೃದ್ಧಿ ದೇವತೆ, ಯುದ್ಧದೇವತೆ, ಆರೋಗ್ಯದೇವತೆ, ಪ್ರಾಣಿ ದೇವತೆ ಹೀಗೆ ಅಸಂಖ್ಯಾತ ವರ್ಗಗಳನ್ನು ಸೃಷ್ಟಿಸಲು ಸಾಧ್ಯವಿದೆ. ಅಧ್ಯಯನದ ದೃಷ್ಟಿಯಿಂದ ಈ ರೀತಿಯ ವರ್ಗೀಕರಣ ಸರಳವಾಗುತ್ತದೆ.

ದೇವರುಗಳು ವರ್ತನೆ, ನಡವಳಿಕೆ, ರೂಪವಿನ್ಯಾಸಗಳಿಗೆ ಆಯಾ ಪ್ರಾದೇಶಿಕ ಸಂಗತಿಗಳು ಮಹತ್ವದ ಕಾರಣಗಳಾಗಿವೆ. ದೇವತೆಗಳ ಉಡುಪು, ಆಹಾರ, ಭಾಷೆ ಎಲ್ಲಾ ಆ ಪ್ರದೇಶದ್ದೇ ಆಗಿರುತ್ತದೆ. ದೇವತೆಯ ದೈಹಿಕ ಸ್ವರೂಪ ಕೂಡ ಆಯಾ ಜನರನ್ನೇ ಹೋಲುತ್ತದೆ. ಆದ್ದರಿಂದ ಪ್ರಾದೇಶಿಕತೆಯನ್ನು ಕಡೆಗಣಿಸಿದರೆ ದೇವತೆಗಳ ಅಧ್ಯಯನಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಪ್ರಪಂಚವನ್ನೇ ಸೃಷ್ಟಿ ಮಾಡಿದ್ದೇವೆ. ಎಂದು ಹೇಳುವ ದೇವತೆಗಳ ಹೆಸರು ಪಕ್ಕದ ಊರಿಗೆ ಹೋದರೆ ಅಪರಿಮಿತ ಹೆಸರಾಗಿರುವ ಸಾಧ್ಯತೆ ಇದೆ. ಆದ್ದರಿಂದ ಪ್ರಾದೇಶಿಕತೆಯನ್ನು ವರ್ಗೀಕರಣ ಸಂದರ್ಭದಲ್ಲಿ ಅಗತ್ಯವಾಗಿ ಗಮನಿಸಬೇಕಾಗಿದೆ.

ಕರ್ನಾಟಕದ ಬಹುಪಾಲು ಗ್ರಾಮದೇವತೆಗಳು ಒಂದೇ ಬಗೆಯ ಆಚರಣೆ, ಒಂದೇ ಬಗೆಯ ಪುರಾಣಗಳನ್ನು ಹೊಂದಿವೆ. ಕೆಲವು ಸಣ್ಣ ವಿವರಗಳಲ್ಲಿ ವ್ಯತ್ಯಾಸವಾದರೂ ಅವುಗಳ ಮೂಲ ಆಶಯ ಒಂದೇ ಆಗಿರುತ್ತದೆ. ಇನ್ನು ಕೆಲವು ದೇವತೆಗಳು ಸಂಪೂರ್ಣವಾಗಿ ಸ್ಥಳೀಯವಾಗಿ ಅವುಗಳನ್ನು ಅಧ್ಯಯನ ಮಾಡಲು ಆಯಾ ಪ್ರಾದೇಶಿಕ ವೈಲಕ್ಷಣಗಳನ್ನೇ ನಾವು ಅವಲಂಬಿಸಬೇಕಾಗಿದೆ. ಇನ್ನು ಕೆಲವು ದೇವತೆಗಳು ಹಲವು ಜಿಲ್ಲೆಗಳಲ್ಲಿ ಪ್ರಚಾರದಲ್ಲಿದ್ದು ಕರ್ನಾಟಕದ ಹೊರಗೆ ಅವು ಅಪರಿಚಿತವಾಗಿರುತ್ತವೆ. ಆದ್ದರಿಂದ ಪ್ರಾದೇಶಿಕತೆಗೆ ಅನುಗುಣವಾಗಿ ದೇವತೆಗಳನ್ನು ವಿಭಜನೆ ಮಾಡುವುದು ಅತ್ಯಂತ ಸಮಂಜಸವಾಗುತ್ತದೆ. ಏಕೆಂದರೆ ಯಾವ ದೇವತೆಯೂ ಪ್ರಾದೇಶಿಕತೆಯನ್ನು ಬಿಟ್ಟು ಸೃಷ್ಟಿಯಾಗಿಲ್ಲ. ಕರ್ನಾಟಕದ ಗ್ರಾಮದೇವತೆಗಳನ್ನು ಮುಖ್ಯವಾಗಿ ಮೂರು ವಿಭಾಗಗಳಲ್ಲಿ ವರ್ಗೀಕರಿಸಬಹುದು. ಅವು –

೧) ರಾಷ್ಟ್ರೀಯ ದೇವತೆಗಳು

೨) ಪ್ರಾಂತೀಯ ದೇವತೆಗಳು

೩) ಸ್ಥಳೀಯ ದೇವತೆಗಳು

ಈ ಮೂರು ವರ್ಗಗಳಲ್ಲಿ ಕರ್ನಾಟಕದ ಎಲ್ಲಾ ದೇವತೆಗಳನ್ನು ಒಳಪಡಿಸಲು ಸಾಧ್ಯವಾಗುತ್ತದೆ.

ಏಕಪುರಾಣ, ಆಚರಣೆ ಇದ್ದು ಕರ್ನಾಟಕದ ಮತ್ತು ಭಾರತದ ಇತರ ರಾಜ್ಯಗಳಲ್ಲೂ ಅಸ್ತಿತ್ವದಲ್ಲಿರುವ ದೇವತೆಗಳನ್ನು ರಾಷ್ಟ್ರೀಯ ದೇವತೆಗಳೆಂದೂ, ಭಿನ್ನ ಆಚರಣೆ, ಪುರಾಣಗಳನ್ನು ಹೊಂದಿದ್ದು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಪ್ರಚಾರದಲ್ಲಿರುವ ದೇವತೆಗಳನ್ನು ಪ್ರಾಂತೀಯ ದೇವತೆಗಳೆಂದೂ, ಕರ್ನಾಟಕದ ಕೆಲವು ತಾಲೂಕುಗಳಲ್ಲಿ ಮಾತ್ರ ಅಥವಾ ಒಂದೇ ಒಂದು ಹಳ್ಲಿಯಲ್ಲಿ ಅಸ್ತಿತ್ವದಲ್ಲಿರುವ ವಿವಿಧ ದೇವತೆಗಳನ್ನು ಸ್ಥಳೀಯ ದೇವತೆಗಳೆಂದು ವರ್ಗೀಕರಿಸಬಹುದು. ಈ ಮೂರು ವರ್ಗಗಳಲ್ಲಿ ಆರೋಗ್ಯ, ಸಮೃದ್ಧಿ, ಯುದ್ಧ ಇತ್ಯಾದಿ ದೇವತೆಗಳು ಬರುತ್ತವೆ. ಒಂದು ನಿರ್ದಿಷ್ಟ ಪುರಾಣ ಮತ್ತು ಆಚರಣೆ ಪಡೆದುಕೊಂಡಿರುವ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಭಜನೆಯನ್ನು ಮಾಡಲಾಗಿದೆ.

ಮಾರಮ್ಮ, ದುರ್ಗಮ್ಮ, ಇವರಿಬ್ಬರಿಗೆ ಸಂಬಂಧಿಸಿದ ಪುರಾಣ, ಆಚರಣೆ ಒಂದೇ ಬಗೆಯದು. ಹೊಲೆಯರ ತರುಣ, ತಾನು ಬ್ರಾಹ್ಮಣರವನೆಂದು ಸುಳ್ಳು ಹೇಳಿ ಬ್ರಾಹ್ಮಣ ಕನ್ಯೆಯೊಬ್ಬಳನ್ನು ಮದುವೆ ಆಗುತ್ತಾನೆ. ಕಾಲಾನುಕ್ರಮದಲ್ಲಿ ಬ್ರಾಹ್ಮಣ ಹೆಂಗಸಿಗೆ ಸತ್ಯಸಂಗತಿ ತಿಳಿದು ಆಕೆ ಶಾಪಹಾಕಿ ಸಾಯುತ್ತಾಳೆ. ಈಗ ಅವಳು ಮಾರಮ್ಮ ಅಥವಾ ದುರ್ಗಮ್ಮನಾಗಿ ಬಂದಿದ್ದಾಳೆ. ಆ ದೇವತೆಗೆ ಕಡಿಯುವ ಕೋಣ ಹಿಂದಿನ ಜನ್ಮದಲ್ಲಿ ಸುಳ್ಳುಹೇಳಿ ಮದುವೆ ಆಗಿದ್ದ ಹೊಲೆಯ. ಕೋಣನನ್ನು ಕಡಿಯುವ ಆಚರಣೆಗೆ ಸಾಮಾಜಿಕ ಮಹತ್ವವನ್ನು ಪಡೆದ ಈ ಪುರಾಣವನ್ನು ಜೋಡಿಸಲಾಗಿದೆ. ಕರ್ನಾಟಕ ಮಾತ್ರವಲ್ಲ, ಭಾರತದ ಹಲವು ರಾಜ್ಯಗಳ ಹಳ್ಳಿಗಳಲ್ಲಿ ಈ ಪುರಾಣ ಮತ್ತು ಆಚರಣೆ ಆಶ್ಚರ್ಯಕರ ರೀತಿಯಲ್ಲಿ ಅಸ್ತಿತ್ವದಲ್ಲಿದೆ. ಎಲ್ಲಮ್ಮನ ಪುರಾಣದ ಮತ್ತು ಆಚರಣೆಯ ಭಾಗವೂ ಇದೇ ರೀತಿ ಪ್ರಚಾರದಲ್ಲಿದೆ. ಆ ಪುರಾಣದ ರಂಡೆಯಾಗುವ ಮತ್ತು ಮುತ್ತೈದೆಯಾಗುವ ಘಟನೆಯನ್ನು ತೋರಿಸುವ ಆಚರಣೆಗಳು ಕರ್ನಾಟಕದ ಒಳಗೆ ಮತ್ತು ಹೊರಗೆ ಪ್ರಚಾರದಲ್ಲಿವೆ. ಕೆಲವು ಕಡೆ ಒಳ ವಿವರಗಳಲ್ಲಿ ಅಲ್ಪಸಲ್ಪ ವ್ಯತ್ಯಾಸವಿದ್ದರೂ ಅದು ರಾಷ್ಟ್ರೀಯ ದೇವತೆಯೆಂದೇ ಪರಿಗಣಿಸಲು ಯೋಗ್ಯವಾದ ದೇವತೆಯಾಗಿದೆ. ಜಮದಗ್ನಿಯ ಕಥೆಯ ಪ್ರಕಾರ ರೇಣುಕೆ ತನ್ನ ಪಾತಿವ್ರತ್ಯಕ್ಕೆ ಭಂಗತಂದುಕೊಳ್ಳುವಂತೆ ಒಂದು ದೃಶ್ಯವನ್ನು ಆಸಕ್ತಿಯಿಂದ ವೀಕ್ಷಣೆ ಮಾಡಿದಳು. ಇದಕ್ಕೆ ಅವಳು ತನ್ನ ಸಾವಿನ ಬೆಲೆಯನ್ನು ಕೊಡಬೇಕಾಯಿತು. ಮಾರಮ್ಮನ ಪುರಾಣ ಅಂತರ ಜಾತೀಯ ವಿವಾಹದ ಮೇಲೆ ಹೇರಿಬ ನಿಷೇಧವಾಗಿದೆ. ಆದ್ದರಿಂದಲೇ ಭಾರತದಾದ್ಯಂತ ಈ ಆಚರಣೇ ಮತ್ತು ಪುರಾಣವನ್ನು ವ್ಯವಸ್ಥಿತ ರೀತಿಯಲ್ಲಿ ಚಲಾವಣೆಗೆ ತರಲಾಗಿದೆ. ಯಲ್ಲಮ್ಮನ ಪುರಾಣದಲ್ಲಿ ಬಹುಪತಿತ್ವದ ಸೂಚನೆ ಇದ್ದು ಅದನ್ನು ಆರಂಭದಿಂದಲೇ ಚಿವುಟಿಹಾಕುವಂತೆ ಘೋರವಾದ ಹಲ್ಲೆಯನ್ನು ನಡೆಸಲಾಗಿದೆ. ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯ ಈ ಸಮಾಜ ಯಲ್ಲಮ್ಮನ ಪುರಾಣದ ಸಾಮಾಜಿಕ ಪ್ರಯೋಜನೆಯನ್ನು ಚೆನ್ನಾಗಿ ಮನಗಂಡು ಈ ಪುರಾಣವನ್ನು ಅಷ್ಟೇ ವ್ಯವಸ್ಥಿತವಾಗಿ ಕಾಪಾಡಿಕೊಂಡಿದೆ. ಭಿನ್ನವಾದ ಪುರಾಣ ಮತ್ತು ಆಚರಣೆಯನ್ನು ಉಳ್ಳ ದೇವತೆ ರಾಷ್ರೀಯ ದೇವತೆ ಆಗಲು ಸಾಧ್ಯವಿಲ್ಲ. ಏಕೆಂದರೆ ಆಕೆಯ ಪುರಾಣ ರಾಷ್ಟ್ರವ್ಯಾಪಿ ಆಗದೆ ಸೀಮಿತವಾಗಿರುತ್ತದೆ. ಈ ದೇವತೆಗಳ ಹೆಸರು ಬದಲಾವಣೆ ಆದರೂ ಕೂಡ ಅದಕ್ಕೆ ಸಂಬಂಧಿಸಿದ ಪುರಾಣ ಮತ್ತು ಆಚರಣೆಯನ್ನು ಗಮನಿಸಿ ಅದನ್ನು ರಾಷ್ಟ್ರೀಯ ದೇವತೆಯೆಂದೇ ಪರಿಗಣಿಸಬೇಕಾಗುತ್ತದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿದ್ದು ಹೊರ ರಾಜ್ಯಗಳಲ್ಲಿ ಈ ದೇವತೆ ಕಂಡುಬರದಿದ್ದರೆ ಅದು ಪ್ರಾಂತೀಯ ದೇವತೆ ಎನಿಸಿಕೊಳ್ಳುತ್ತದೆ. ಹುಚ್ಚಮ್ಮ, ಲಕ್ಕಮ್ಮ, ಕಬ್ಬಾಳಮ್ಮ ಈ ದೇವತೆಗಳು ಪ್ರಾಂತೀಯ ದೇವತೆಗಳು. ಇವರ ಹಬ್ಬದಲ್ಲಿ ಮದುವೆಯ ಅನುಕರಣೆ ಆಗುತ್ತದೆ. ಎರಡು ಮೂರು ಜಿಲ್ಲೆಗಳಲ್ಲಿ ಇವುಗಳು ಹಬ್ಬಿರುವುದನ್ನು ಕಾಣಬಹುದು. ಕರ್ನಾಟಕದ ಯಾವುದೇ ಪ್ರದೇಶದ ಹೆಸರು ಈ ದೇವತೆಗೆ ಇರಬಹುದು. ಉದಾಹರಣೆಗೆ “ಮದ್ದೂರಮ್ಮ” ಈಕೆಗೆ ಮದ್ದೂರಿನ ಹೆಸರಿದ್ದರೂ ಈಕೆಯನ್ನು ಇತರ ಜಿಲ್ಲೆಗಳ ಜನರೂ ಪೂಜಿಸುತ್ತಾರೆ. ಹಗೆಯೇ “ಮುಳಕಟ್ಟಮ್ಮ” ದಕ್ಷಿಣ ಕರ್ನಾಟಕದ ನನಾ ಹಳ್ಳಿಗಳಲ್ಲಿ ಈಕೆಗೆ ಹಬ್ಬ, ಜಾತ್ರೆಗಳಾಗುತ್ತವೆ. ಸ್ಥಳೀಯ ದೇವತೆ ಮತ್ತು ರಾಷ್ಟ್ರೀಯ ದೇವತೆಯ ನಡುವಿನ ಹಂತದಲ್ಲಿ ಈ ದೇವತೆ ನಿಂತಿದೆ. ಹೊಸಪೇಟೆಯ ಸಮೀಪದ “ಹುಲಿಗಿ” ಯಲ್ಲಿರುವ “ಹುಲಿಗಮ್ಮ” ಈ ರೀತಿಯ ದೇವತೆ. ಈಕೆಗೆ ರಾಯಚೂರು ಜಿಲ್ಲೆಯಲ್ಲೂ ಹಬ್ಬ ಆಗುತ್ತದೆ. ಹಿಲಿಗೆಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ. ಈಕೆ ತೊಟದಿಂದ ಈರುಳ್ಳಿ, ಬದನೆಕಾಯಿ, ಮೆಣಸಿನಕಾಯಿಯನ್ನು ಕದಿಯುತ್ತಾಳೆ. ಕದ್ದಮಾಲನ್ನು ತನ್ನ ಶಿಷ್ಯೆ ಮಾತಂಗಿಯ ಮನೆಯಲ್ಲಿ ಬಚ್ಚಿಡುತ್ತಾಳೆ. ಗೌಡ ಶಾನುಭೋಗರು ತನಿಖೆ ಮಾಡಿದಾಗ ಮಾತಂಗಿ ಸಿಕ್ಕಿಬಿದ್ದಳು. ಅವಳಿಗೆ ಶಿಕ್ಷೆಯಾಗಿ ಮೂಗು ಕೊಯ್ಯುತ್ತಾರೆ. ಇಂದಿಗೂ ಹುಲಿಗಿಯ ಮಾತಂಗಿಯ ವಿಗ್ರಹಕ್ಕೆ ಮೂಗಿಲ್ಲ. ಆದ್ದರಿಂದ ಹುಲಿಗೆಮ್ಮನಿಗಿಂತ ಮೊದಲು ಆರತಿ ಮಾತಂಗಿಯ ವಿಗ್ರಹಕ್ಕೆ ಮೂಗಿಲ್ಲ. ಆದ್ದರಿಂದ ಹುಲಿಗೆಮ್ಮನಿಗಿಂತ ಮೊದಲು ಆರತಿ ಮಾತಂಗಿಗೆ ಹೋಗುತ್ತವೆ. ದೇವತೆಯ ಮರ್ಯಾದೆಯನ್ನು ಕಾಪಾಡಿದ್ದಕ್ಕಾಗಿ ಇಂದು ಮಾತಂಗಿಗೆ ಮೊದಲು ಪುಜೆ ಸಲ್ಲುತ್ತದೆ. ಹುಲಿಗಮ್ಮನ ಜೊತೆಯಲ್ಲಿಯೇ ಗುರುತಿಸಲ್ಪಡುತ್ತಿರುವ ಮಾತಂಗಿಯೂ ಪ್ರಾಂತೀಯ ದೇವತೆ ಎನಿಸಿಕೊಳ್ಳುತ್ತಾಳೆ.

ಸ್ಥಳೀಯ ದೇವತೆಗಳು ಮೂರನೆಯ ಮತ್ತು ಮುಖ್ಯವಾದ ವರ್ಗ. ಸಂಪೂರ್ಣವಾಗಿ ಒಂದು ಸ್ಥಳದ ಹಿನ್ನೆಲೆಯಲ್ಲಿ ಈ ದೇವತೆಗಳು ಹುಟ್ಟಿ ಬೆಳೆಯುತ್ತವೆ. ಈ ದೇವತೆಯ ಹೆಸರು ಒಂದು ತಾಲೂಕಿನ ಅಥವಾ ಕೇವಲ ಒಂದು ಜಿಲ್ಲೆಯ ಪರಿಧಿಯೊಳಗೆ ಕೇಳಿಬರಬಹುದು. ಉದಾ :- ಮಣ್ಣಮ್ಮ, ಸಂಪಿಗಮ್ಮ ಮತ್ತು ಮನೆಯಮ್ಮ ಎಂಬ ದೇವತೆಗಳು ಇವು ಅಪರೂಪದ ದೇವತೆಗಳು. ಅಂದರೆ ಒಂದು ಸ್ಥಳಕ್ಕೆ ಮೀಸಲಾದ ದೇವತೆಗಳು. ಒಂದೆರಡು ಕಡೆ ಇವುಗಳ ಹೆಸರು ಕೇಳಿಬಂದರೂ ಇವುಗಳ ಕಾರ್ಯ ವ್ಯಾಪ್ತಿ ಸೀಮಿತವಾದದ್ದು. “ಕಾಡು ಗುಜ್ಜಮ್ಮ” ಎಂಬ ದೇವತೆ ಇದೆ. ಮೈಸೂರು ಜಿಲ್ಲೆಯಲ್ಲಿರುವ ಈ ದೇವತೆಯನ್ನು ಈಗ ಎಲ್ಲರೂ ಪೂಜಿಸುತ್ತಾರೆ. ಕಾಡಿನ ಕುಳ್ಳಹೆಂಗಸು ಈಕೆ, ಇವಳನ್ನು ಆರಂಭದಲ್ಲಿ ಕುಳ್ಳರೇ ಪೂಜಿಸುತ್ತಿದ್ದರೋ ಏನೋ ತಿಳಿಯಬೇಕಾಗಿದೆ. “ಮಂದಲಕಮ್ಮ” ಎಂಬ ಈ ದೇವತೆ ಮಂದಲಿಕೆ ಅಂದರೆ ಚಾಪೆಗೆ ಸಂಬಂಧಿಸಿದ ದೇವತೆ. “ವಿಧಿಯಮ್ಮ” ಮತ್ತು :ಅರಸಮ್ಮ” ಎಂಬ ದೇವತೆಗಳನ್ನು ನೋಡಿದರೆ ಗ್ರಾಮೀಣರ ದೃಷ್ಟಿಯಲ್ಲಿ ವಿಧಿ ಮತ್ತು ಅರಸ ಇಬ್ಬರೂ ಸ್ತ್ರೀಲಿಂಗವಾಗುತ್ತಾರೆ. ಸೂರ್ಯ ಬಿಸಿಲು ಕೊಟ್ಟರೂ ಇವರ ದೃಷ್ಟಿಗೆ ಅವನು ಬಿಸಿಲಮ್ಮ, ಮದ್ದೂರಿನಲ್ಲಿ  ಜೇನಮ್ಮ ಎಂಬ ದೇವತೆ  ಇದ್ದು ಅಲ್ಲಿ ಜೈನರೂ ಇರುವುದನ್ನು ನೋಡಿದರೆ ಜೈನಮ್ಮ ನಂತರ ಜೇನಮ್ಮ ಆಗಿರಬಹುದು ಎನ್ನಿಸುತ್ತದೆ. ಮಂಡ್ಯ ಜಿಲ್ಲೆಯ ಒಂದು ಹಳ್ಳಿಯಲ್ಲಿ ಗ್ರಾಮದೇವತೆ ಹಬ್ಬದಲ್ಲಿ ಆ ಊರಿಗೆ ಬರುವ ಅತಿಥಿಗಳೇ ಊಟಕ್ಕೆ ಅಕ್ಕಿ ತರಬೇಕು. ಇದೇ ಜಿಲ್ಲೆಯ ಪುರುಷ ದೇ ದೇಮಾಕರಿಯಪ್ಪನ ಹಬ್ಬದಲ್ಲಿ ಅತಿಥಿ ಅಥವಾ ಸಂಬಂಧಿಕರನ್ನು ತಿರಸ್ಕರಿಸುವ ಪದ್ಧತಿ ಇದೆ. ಇವೆರಡು ಪದ್ಧತಿಗೂ ಸಂಬಂಧ ಇರುವಂತಿದೆ. ಲೈಂಗಿಕ ರೋಗಗಳ ನಿವಾರಣೆಗ ಮಾಡುವ ಉಡುಚವ್ವ ಸ್ಥಳೀಯ ದೇವತೆಯೇ ಆಗಿದೆ. ತಿಪ್ಪೆಗುಂಡಿಯಲ್ಲಿ ವಾಸ ಮಾಡುವ “ಸ್ವಾರೆವ್ವ” ಎಂಬ ದೇವತೆ ಕೂಡಾ ಈ ವರ್ಗದ್ದು.

ಮೇಲಿನ ವರ್ಗೀಕರಣಕ್ಕೆ ನಿರ್ದಿಷ್ಟ ಗ್ರಾಮದೇವತೆಯೊಂದರ ಪುರಾಣ ಮತ್ತು ಆಚರಣೆಯೇ ಮಾನದಂಡವಾಗಿದೆ. ಆಯಾ ದೇವತೆಯ ಪುರಾಣ ಕರ್ನಾಟಕದ ಮತ್ತು ಹೊರಗಡೆ ಯಥೇಚ್ಛವಾಗಿ ಪ್ರಚಲಿತವಾಗಿದ್ದು ಒಂದೇ ಬಗೆಯ ಆಚರಣೆ ಎಲ್ಲೆಲ್ಲೂ ಕಂಡುಬಂದರೆ ಅದು ರಾಷ್ಟ್ರೀಯ ದೇವತೆ ಅನ್ನಿಸಿಕೊಳ್ಳುತ್ತದೆ. ಒಂದು ದೇವತೆಯ ಪುರಾಣ ಮತ್ತು ಆಚರಣೆ ಕರ್ನಾಟಕದ ಒಂದೆರಡು ಜಿಲ್ಲೆಗಳಲ್ಲಿ ಅಥವಾ ಹಲವು ಜಿಲ್ಲೆಗಳಲ್ಲಿ ಕಂಡುಬಂದರೆ ಅದು ಪ್ರಾಂತೀಯ ದೇವತೆ. ದೇವತೆಯೊಬ್ಬರ ಹೆಸರು ಒಂದು ಕಡೆ ಅಥವಾ ಒಂದೆರಡು ಕಡೆ ಕಂಡುಬಂದು ಆಕೆಯ ಪುರಾಣ ಅಪರೂಪದ್ದಾಗಿದ್ದು ಆಚರಣೆಯೂ ಅಷ್ಟೇ ಸ್ಥಳೀಯವಾಗಿದ್ದರೆ ಅದು ಸ್ಥಳೀಯ ದೇವತೆ. ಯಾವುದೇ ಪುರಾಣ, ಆಚರಣೆ ಇಲ್ಲದ ಕೆಲವು ದೇವತೆಗಳಿವೆ. ಅವುಗಳನ್ನು ಸ್ಥಳೀಯ ದೇವತೆಗಳ ವರ್ಗಕ್ಕೆ ಸೇರಿಸುವುದು ಔಚಿತ್ಯ ಪೂರ್ಣವಾಗಿದೆ.