ಜನಪದಸಂಸ್ಕೃತಿ :

ಪ್ರಪಂಚದ ಜೈವಿಕಕ್ರಿಯೆ ಪ್ರಕ್ರಿಯೆಗಳ ಪ್ರಕ್ರಿಯೆ ಒಂದು ವಿಸ್ಮಯಕಾರೀ ಸಂಗತಿ. ಇವುಗಳಲ್ಲಿ ಮಾನವ ಒಂದು ಅದ್ಭುತ ಸೃಷ್ಟಿ. ವಿಶ್ವದ ಬದುಕಿನಲ್ಲಿ  ಮಾನವನ ಸ್ಥಾನ ನಿರ್ದೇಶನ ಮಾಡುವಾಗ ಸಾಂಸ್ಕೃತಿಕ ಮಾನವ ಶಾಸ್ತ್ರಜ್ಞರು, “ಆತನ ಸ್ಥಾನ ಅಪೂರ್ವ. ಏಕೆಂದರೆ ಅವನೊಬ್ಬನೇ ಸಂಸ್ಕೃತಿಯನ್ನು ನಿರ್ಮಿಸುವ ಪ್ರಾಣಿ”

[1]  ಎನ್ನುತ್ತಾರೆ.

ಆದಿಮಾನವನಿಂದ ಮೊದಲುಗೊಂಡು ಇಂದಿನ ಮಾನವನವರೆಗೆ ಬೆಳೆದು ಬಂದ ಅವನ ಬೇಟೆ ಕೃಷಿಗಳ ಕ್ರಮ, ಕಲಿಕೆಯ ವಿಧಾನ, ಭಾವಾಭಿವ್ಯಕ್ತಿಯ ವಿವಿಧ ಮಾಧ್ಯಮಗಳು ಅರ್ಚನೆ ಆರಾಧನೆ, ಆಚರಣೆ, ಸಂಪ್ರದಾಯ ನಂಬಿಕೆಗಳು ……. ಮಾನವನ ಒಟ್ಟು ಸಂಸ್ಕೃತಿ ಸ್ವರೂಪ ರಚನೆಗೆ ವಸ್ತುಗಳಾಗುತ್ತವೆ. ಆದುದರಿಂದ ಮಾನವ ಜೀವನ ವಿಕಾಸದಲ್ಲಿ ಸಂಸ್ಕೃತಿ ವಿಕಾಸದ ಚರಿತ್ರೆಯನ್ನು ಕಾಣುತ್ತೇವೆ. ಮನುಷ್ಯನ ಅಸ್ತಿತ್ವದ ವಿವಿಧ ಹಂತಗಳು ಅವನ ಸಾಂಸ್ಕೃತಿಕ ವಿಕಾಸದ ಜೊತೆಗೆ ಹೇಗೆ ಒಪ್ಪಂದ ಮಾಡಿಕೊಂಡಿವೆ ಎನ್ನುವುದರ ಕಥೆಯೇ ಅವನ ಇತಿಹಾಸಪೂರ್ವ ಕಾಲದ ವಿಕಾಸದ ಕಥೆಯಾಗಿದೆ.[2]

ವಿವಿಧ ಆದಿಮಾನವ ಬುಡಕಟ್ಟು, ಕುಲಗುಂಪು, ಅಲೆಮಾರಿ ಅರೆ ಅಲೆಮಾರಿ ವೃಂದಗಳು ಬಾಳಿದ ವಿಭಿನ್ನ ನೈಸರ್ಗಿಕ ಭೌಗೋಳಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವರವರ ನಡವಳಿಕೆ ಕ್ರಿಯೆ ಗುಣಸ್ವಭಾವಗಳು ರೂಪುಗೊಡಂವು. ಈ ಭೌಗೋಳಿಕ ಮತ್ತು ಪ್ರಾದೇಶಿಕ ಹಿನ್ನೆಲೆ ವ್ಯಾಪಕವಾಗಿ ಚದುರಿದ ಜನಪದ ಗುಂಪುಗಳ ಪ್ರಥಮ ಸಾಂಸ್ಕೃತಿಕ  ರಂಗವನ್ನು ಸ್ಥಾಪಿಸುವುದರ ಜೊತೆಗೆ ಈ ರಂಗದಲ್ಲಿ ರೂಪುಗೊಳ್ಳುವ  ಜೀವನ ಸ್ವರೂಪವನ್ನು ಆವಿಷ್ಕರಿಸುತ್ತದೆ.ವೃತ್ತಿಗಳಿಗೆ ಅನುಗುಣವಾಗಿ ಭೌಗೋಳಿಕ  ಪಾತಳಿಯ ವಿವಿಧ ಪ್ರದೇಶಗಳಲ್ಲಿ ಚೆದುರಿ ಮನಸೇಚ್ಛೆ ಬದುಕುತ್ತಿದ್ದ ಜನಪದ ವೃಂದಗಳು, ಅವರ ನೆಂಟಸ್ತಿಕೆ, ಆರ್ಥಿಕ ಕ್ರಮ ಮೆಟ್ಟಲುಗಳು, ವಿವಿಧ ವೃಂದಗಳು ತಮ್ಮ ತಮ್ಮ ಸೀಮಿತ ಕಕ್ಷೆಯಲ್ಲಿ ಮಾಡಿಕೊಳ್ಳುವ ಹೊಂದಾಣಿಕೆ, ಅವರನ್ನು ಆಳುವ ಮತ್ತು ಸಾರ್ವತ್ರಿಕವಾಗಿ ನಿಯಂತ್ರಿಸುವ ಕಟ್ಟುಪಾಡು, ವೃತಾಚರಣೆ, ನಂಬಿಕೆ, ರೂಢಿಗಳ ವಿಂಗಡಣೆ, ಸಾಮೂಹಿಕ ಮುನ್ನಡೆ ಪಡೆಯುವ  ಸಾಮಾಜಿಕ ನಡವಳಿಕೆ ಮತ್ತು ಧಾರ್ಮಿಕ ಸ್ವರೂಪ ಇವೇ ಮುಂತಾದವು ಜನಪದ ಸಂಸ್ಕೃತಿ ಮತ್ತು ಜನಪದ  ಧರ್ಮ ವಿವೇಚನೆಗೆ ವಸ್ತು ಸಾಮಗ್ರಿಗಳಾಗಿವೆ.; ಆಕರಗಳಾಗಿವೆ.

ಜೀವನ ವಿಕಾಸ ಹೊಂದಿದಂತೆ ಅದರಲ್ಲಿ ಅನೇಕ ಸಾಂಸ್ಕೃತಿಕ ಸ್ತರಗಳು ಅಥವಾ ಮಟ್ಟಗಳೂ ಮೂಡಿಕೊಳ್ಳುತ್ತವೆ. ಆದಿಮಾನವ ಸಂಸ್ಕೃತಿ ಪ್ರಾಕೃತಿಕವಾಗಿ ವಿಕಾಸಗೊಂಡದ್ದು ಅದು ಇತರ ಪ್ರಭಾವಗಳಿಗೆ ಒಳಗಾಗದೆ ತಂತಾನೆ ಸಹಜವಾಗಿ ಬೆಳವಣಿಗೆ ಹೊಂದುತ್ತದೆ ಎನ್ನುವುದು ಇ. ಬಿ. ಟೇಯಲರ್ ಅಭಿಪ್ರಾಯ. ಆದಿಮಾನವರ ಅಗಣಿತ ಜನಪದ ಗುಂಪುಗಳು ತಮ್ಮ ತಮ್ಮ ನಿಟ್ಟಿನಲ್ಲಿಯೇ ಮುನ್ನಡೆಯುತ್ತ ಬಂದುದರಿಂದ ಸಮೂಹ ಸಂಸ್ಕೃತಿ ರೂಪಗೊಳ್ಳುವುದು ಅನಿವಾರ್ಯ. ಭೌತಿಕ ಸಂಸ್ಕೃತಿಕ  ಒಂದು ದಿಕ್ಕಿನಲ್ಲಿ ಜನಪದ ಬದುಕಿನ ವಾಸ್ತವ ಜೀವನವನ್ನು ಸಂಸ್ಕರಿಸುತ್ತ ಹೋದರೆ ಆಧ್ಯಾತ್ಮಿಕ ಸಂಸ್ಕೃತಿ ಅವರ ಆಂತರಿಕ ಜೀವನವನ್ನು ತಿದ್ದುತ್ತ, ನಿಯಂತ್ರಿಸುತ್ತ, ನಯಗೊಳಿಸುತ್ತ ಹೋಗುತ್ತದೆ.

ಸಂಸ್ಕೃತಿಧರ್ಮ

ಸಂಸ್ಕೃತಿ ಮತ್ತು  ಧರ್ಮ ಏಕಕಾಲಕ್ಕೆ ಒಡವೆರೆದು ಬೆಳೆದು ಬಂದ ಸಂಗತಿಗಳಲ್ಲ. ಧಾರ್ಮಿಕ ಪ್ರಜ್ಞೆ ಇಲ್ಲದಿದ್ದ ಒಂದು ಜನಪದ ಸಮೂಹಕ್ಕೆ ತನ್ನದೇ ಆದ ಸಂಸ್ಕೃತಿಯಿರಲು ಸಾಧ್ಯ. ಆದರೆ ಧಾರ್ಮಿಕ ಸತ್ಯಗಳನ್ನು ಆಧರಿಸದೆ, ಅಳವಡಿಸಿಕೊಳ್ಳದೆ ಯಾವ ಜನಪದ ವೃಂದ ವಿಕಾಸವೂ ಹೊಂದುವುದು ಮಾತ್ರ ಸಂದೇಹದ ಮಾತು. ಏಕೆಂದರೆ ಸಂಸ್ಕೃತಿ ಮತ್ತು ಧರ್ಮ ಒಂದು ಸಮೂಹದ ವಿಕಾಸ ಪಥದ, ಪ್ರಮುಖ ಕುರುಹು ಮತ್ತು ಪ್ರೇರಕಗಳು . ಅವು, ಜನಪದ ವೃಂದಗಳು ಅನಾದಿಕಾಲದಿಂದ ಆರ್ಜಿಸಿಕೊಂಡು ಬಂದ ಸ್ಥಿತ ಜಡವಸ್ತುಗಳಲ್ಲ.

ಸಂಸ್ಕೃತಿ ಮತ್ತು ಧರ್ಮಗಳ ಪರಸ್ಪರ ಸಂಬಂಧವನ್ನು ಚರ್ಚಿಸಿದ ವಿದ್ವಾಂಸರು, ಇವುಗಳನ್ನು ನಿರ್ದಿಷ್ಠವಾಗಿ ಪ್ರತ್ಯೇಕಗೊಳಿಸುವುದು ಸಾಧ್ಯವಿಲ್ಲ. ಸಂಸ್ಕೃತಿ ವಿಕಾಸಕ್ಕೆ ಧಾರ್ಮಿಕ ವಿಕಾಸ ಕಾರಣವೋ, ಅಥವಾ ಧಾರ್ಮಿಕ ವಿಕಾಸ ಸಂಸ್ಕೃತಿ ವಿಕಾಸಕ್ಕೆ ಕಾರಣವೋ ಎನ್ನುವುದು ಆಯಾ ಜನಾಂಗದ ಸ್ಥಿತಿಗತಿಗೆ ಸಂಬಂಧಿಸಿದೆ. ರೋಮನ್ ಸಂಸ್ಕೃತಿ ಮತ್ತು ಕ್ರಿಶ್ಚಿಯನ್ ಶ್ರದ್ಧೆಗಳನ್ನು ಚಚಿ೯ಸಿದ ಈಲಿಯಟ್ ಒಂದೇ ಧರ್ಮ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸಬಹುದು ಎನ್ನುವುದನ್ನು ನಂಬಿದಾಗಲೂ ನಮ್ಮ ಮುಂದೆ ನಿಲ್ಲುವ ಪ್ರಶ್ನೆಯೆಂದರೆ ಧಾರ್ಮಿಕ ನೆಲೆಗಟ್ಟಲ್ಲದೆ ಯಾವುದೇ ಒಂದು ಸಂಸ್ಕೃತಿ ಸಂಭೂತಗೊಳ್ಳಬಹುದೇ? ಅಥವಾ ಸ್ವಾವಲಂಬಿಯಾಗಿರಬಹುದೇ ? (‘………While we believe that the same religion mqy inform a variety of cultures. we may ask whether any culture could come in to being, or maintain  itself with a religious basis’ T. S. Eliot  ‘ Defination of culture’ P. 28) ಹೀಗೆ ಧರ್ಮ ಮತ್ತು ಸಂಸ್ಕೃತಿಯ ಸಂಬಂಧಗಳು ಅತ್ಯಂತ ಸಂಕೀರ್ಣವಾಗಿವೆ. ಜನಪದರ ದೃಷ್ಟಿಯಿಂದ ಹೇಳುವುದಾರೆ ಒಂದು ಜನಪದ ವೃಂದದ  ಸಾಮೂಹಿಕ ನಂಬುಗೆ ಮತ್ತು ಆ ಜನರ ನಡವಳಿಕೆಗಳು ಅನೇಕ ಸಲ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗಬಹುದು. ಆದಿಮಾನವ ಬೇಟೆಯಾಡಿ ತಂದ ಒಂದು ಪ್ರಾನಿಯನ್ನು ತನ್ನ ವೃಂದದ ಇತರರು ಹಸಿವಿನಿಂದ ಕಂಗಾಲಾಗಿರುವಾಗ  ಇತರರಿಗೂ ಅದನ್ನು ಹಂಚಿ ತಿನ್ನಬೇಕು ಎನ್ನುವ ಸಾಮಾನ್ಯ ನಡವಳಿಕೆ – ನೀತಿಸೂತ್ರ ಗೊತ್ತಿರುವಾಗ, ಆಗಲೂ ಅದನ್ನು ಅವನೊಬ್ಬನೇ ತಿನ್ನುವ ಯತ್ನ ಮಾಡಿರಬಹುದು ಇತ್ಯಾದಿ ಜನಪದ ಸಮೂಹದ ಒಬ್ಬ ವ್ಯಕ್ತಿಯ  ನಡವಳಿಕೆ ಮತ್ತು ಅಮೂಹ ಸಂಸ್ಕೃತಿಗಳ ಇಂಥ ವಾಸ್ತವ ಸಂಗತಿಗಳನ್ನು ಧಾರ್ಮಿಕ ಸ್ಥಿತಿಗೆ ಆರೋಪಿಸಲು ಬರುವುದಿಲ್ಲ; ಆದರೆ ಇವುಗಳಲ್ಲಿ ಹುದುಗಿರುವ ಒಂದು ನೈತಿಕ ಮೌಲ್ಯವನ್ನು ನಿರಾಕರಿಸಲೂ ಆಗುವುದಿಲ್ಲ. “ಆದ್ದರಿಂದ “ಧರ್ಮ ಮತ್ತು “ಸಂಸ್ಕೃತಿ” ಪರಸ್ಪರ ಭಿನ್ನ ಅರ್ಥಗಳನ್ನು ಒಳಗೊಂಡಿದ್ದರೂ ವ್ಯಕ್ತಿ ಮತ್ತು ಸಂಪ್ರದಾಯದ ಒಟ್ಟು ಜೀವನಕ್ಕೆ ಸಾಧನೆಯ ಅರ್ಥಪೂರ್ಣತೆಯನ್ನು ಕಲ್ಪಿಸಿಕೊಡಬೇಕಾಗುತ್ತದೆ”.[3]

ಸಂಸ್ಕೃತಿ ಮತ್ತು ಧರ್ಮಗಳ ಈ ಸಂಕೀರ್ಣ ಸಂಬಂಧದ ಹಿನ್ನೆಲೆಯಲ್ಲಿಯೂ ಧರ್ಮವನ್ನು ಕೆಲಮಟ್ಟಿಗೆ ನಿಖರವಾಗಿ ಗುರುತಿಸಬಹುದಾಗಿದೆ.

ಒಂದು ಜನಾಂಗದ, ಒಂದು ಸಮೂಹದ ಸಮಗ್ರ ಜೀವನ ಕ್ರಮ ಮತ್ತು ಸಮಷ್ಟಿ ಜೀವನವಿಧಾನಗಳಲ್ಲಿ – ಧರ್ಮವನ್ನು – ಧಾರ್ಮಿಕ ಸ್ವರೂಪವನ್ನು ಕಾಣುತ್ತೇವೆ. ಹುಟ್ಟನಿಂದ ಮಸಣದವರೆಗೆ, ಬೆಳಗಿನಿಂದ ರಾತ್ರಿ ಮತ್ತು ನಿದ್ದೆಗಳವರೆಗೆ ಇರುವ ಜೀವನ ವಿಧಾನಗಳು ಆಯಾ ಜನಾಂಗದ ಧರ್ಮವೂ ಹೌದು, ಸಂಸ್ಕೃತಿಯು”.[4]

ಆದರೆ ಯಾವುದೇ ಸಂಸ್ಕೃತಿ ಉನ್ನತ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಉಳಿಸಿಕೊಂಡು ಉಸಿರಾಡಿಸಬಾಕಾಗುತ್ತದೆ. ಧರ್ಮದ ಅರ್ಥಪೂರ್ಣ ಸಂಬಂಧವನ್ನು ಹೊಂದಿದಾಗ ಸಂಸ್ಕೃತಿಯ ತರ ತಮಗಳು – ವಿಭಿನ್ನ ಸಮುದಾಯ, ಜನಾಂಗಗಳಲ್ಲಿ ಚಲನೆ ಹೊಂದಿದ ಸಂಘರ್ಷಗಳು – ನಿವಾರಣೆಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಆದುದರಿಂದ ಸಂಸ್ಕೃತಿ ಸಂವಹನ ಕ್ರಿಯೆ ಮತ್ತು ಧಾರ್ಮಿಕ ಪ್ರಜ್ಞೆಗಳ ಪರಸ್ಪರ ಸಂಬಂಧ, ಸಂಘರ್ಷ, ಒಪ್ಪಂದ ಮತ್ತು ವಿಕಾಸ ಆದಿಮಾನವ ಕಾಲದಿಂದ ನಡೆದು ಬಂದ ಕಥೆ. ಸಂಸ್ಕೃತಿ ಮತ್ತು ಸಂಸ್ಕೃತಿ ವಿಕಾಸವನ್ನು ಕುರಿತು ಮಾನವನ ಸ್ಥಾನ ನಿರ್ದೇಶನ ಮಾಡಿದ ಸಾಂಸ್ಕೃತಿಕ ಮಾನವಶಾಸ್ತ್ರಜ್ಞರ ಅಭಿಪ್ರಾಯದ ಹಿನ್ನಲೆಯಲ್ಲಿ ಈ ಚರ್ಚೆ ಅನಿವಾರ್ಯವಾಯಿತು.

ಆದಿಮಾನವನಿಂದ ಆಧುನಿಕ ಮಾನವನ ವರೆಗಿನ ಬೆಳವಣಿಗೆಯ ವಿವಿಧ ಹಂತಗಳು ಸಂಸ್ಕೃತಿ ಮತ್ತು ಧಾರ್ಮಿಕ ವಿಕಾಸದ ವಿವಿಧ ಮಟ್ಟಿಲುಗಳಾಗಿವೆ. ಆಧುನಿಕ ಮಾನವನ ಮೂಲ ಪುರುಷನನ್ನು ಹಿಂದು ಹಿಂದಕ್ಕೆ ಹುಡುಕಿಕೊಂಡು ಹೋದದ್ದಾದರೆ ಕೊನೆಗೆ ದೃಷ್ಟಿಗೋಚರವಾಗುವವನು ಆದಿಮಾನವ.[5]

ಈ ದೃಷ್ಟಿಯಿಂದ ಜನಪದ ಧರ್ಮವನ್ನು ಕುರಿತು ನಿಖರವಾಗಿ ಹೇಳುವುದು ಧಾರ್ಷ್ಟ್ಯದ ಮಾತು. ಏಕೆಂದರೆ ಧರ್ಮ ಎನ್ನುವುದು ವ್ಯವಸ್ಥಿತ ಸಮಾಜದ ಪರಿಕಲ್ಪನೆ. ಆದಿಮಾನವ ಕಾಲದಿಂದ ಬಂದ ಜನಪದ ವೃಂದವನ್ನು ವ್ಯವಸ್ಥೆಗೆ ಒಳ ಪಡದ ಅನಿಯಂತ್ರಿತವಾಗಿ ಹರಡಿದ, ವಿಭಿನ್ನ ಸಂಸ್ಕೃತಿಗಳ ಒಂದು ಬಹುಮುಖ ಸಮಾಜವಾಗಿರುವುದರಿಂದ ವ್ಯವಸ್ಥಿತ ಸಮಾಜದ ಧರ್ಮಪರಿಕಲ್ಪನೆಯನ್ನು  ನೇರವಾಗಿ ಜನಪದ ಸಮಾಜಕ್ಕೆ ಅನ್ವಯಿಸಲು ಬಾರದು. ಆದರೆ ವ್ಯವಸ್ಥಿತ ಸಮಾಜದ ಈ ಪರಿಕಲ್ಪನೆಗೆ ಪ್ರೇರಕವಾದ, ಮುಲಭೂತ ನಡವಳಿಕೆಗಳಲ್ಲಿ ತೊಡಗಿ ಪ್ರವಹಿಸುತ್ತ ಬಂದ ನಂಬಿಕೆ, ಆಚರಣೆಗಳ ರೂಪದಲ್ಲಿ ಧರ್ಮದ ಸ್ಥೂಲ ಸ್ವರೂಪಗಳನ್ನು ಗುರುತಿಸಬಹುದಾಗಿದೆ.

ಪುರಾಣಗಳ ಸೃಷ್ಟಿ : ಗ್ರಿಮ್ ಸೋದರರ ಜನಪದ ಕಥೆಗಳ “ಪುರಾಣ ಮೂಲ ಸಿದ್ಧಾತ” ಗಳಲ್ಲಿ ಅಥವಾ ಟೆಯಲರ್ ವಿಶ್ಲೇಷಿಸಿದ “ನಿಸರ್ಗ ಪುರಾಣ ಕಥೆ” ಗಳಲ್ಲಿ ಜನಪದ ಗುಂಪುಗಳ ಆದಿಮ ಚೇತನ, ನಂಬುಗೆ ಕಲ್ಪನೆಗಳ ಮೇಲೆ ಒತ್ತುಕೊಡಲಾಗಿದೆ.

ಮಾನವ ಸಮುದಾಯದ ಪಾಲಿಸಬೇಕಾದ ನೀತಿ ಸೂತ್ರಗಳನ್ನು ಗಾಳಿಗೆ ತೂರುವ ಅನೇಕ ಪೌರಾಣಿಕ ಕಥೆಗಳ ದೇವಾನುದೇವತೆಗಳು ಮಾನವ ಜೀವನದಲ್ಲಿ ತೊಡಗಿ ಅಥವಾ  ತೊಡಗಿಸಿಕೊಂಡು ನಡೆಸುವ ಹಾವಳಿ ದೊಡ್ಡದೇ. ಈ ದೇವಾನುದೇವತೆಗಳು ಸಾಮಾನ್ಯ ಮಾನವರಿಗಿಲ್ಲದ ವಿಶೇಷ ಅತಿಮಾನುಷ ಶಕ್ತಿ ಪಡೆದವರೆನ್ನುವ ದೃಷ್ಟಿಯಿಂದ ಅವರು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ “ದಿಢೀರ್” ಪ್ರವೇಶ ಪಡೆಯುತ್ತಾರೆ. ಇವರ ನಡವಳಿಕೆ ಜಾನಪದ ತಜ್ಞ ಆಂಡ್ರೂಲಾಂಗ್‌ನನ್ನು ಕಾಡಿದೆ. ಇದು ಮಾನವ ಮಾನವ ಕಾಲದಿಂದಲೇ ಬೆಳೆದು ಬಂದಿರುವ “ಹೈಯಕಾರ್ತಿ” ಗುಣವನ್ನು ತೋರಿಸುತ್ತದೆ ಎನ್ನವುದು ಆತನ ಅಭಿಪ್ರಾಯ.ಲ್ಯೆಮ್ಷಿಯನ್ ಇಂಡಿಯನ್ ಪುರಾನ, ಐತಿಹ್ಯ ಕಥೆಗಳನ್ನು ಅಧ್ಯಯನ ಮಾಡಿದ ಬೊಆಸ್ ಅವುಗಳಲ್ಲಿ ………… ಸಾಮಾಜಿಕ ಸ್ವರೂಪ, ಧಾರ್ಮಿಕ ನಂಬುಗೆಗಳು ವ್ಯಕ್ತಿಯ ಜೀವನ ಚಕ್ರ ವಿವರಣೆ, ನೀತಿ ಮತ್ತು ಭಾವನಾತ್ಮಕ ಸ್ಪಂದನೆಗಳ ವಿವರ ಮುಂತಾದುವನ್ನು ಗಮನಿಸಿ “ಪುರಾಣ ಕಥೆಗಳು ಬುಡಕಟ್ಟಿನ ಆತ್ಮ ಚರಿತ್ರೆ”[6] ಎಂದು  ಕರೆಯುತ್ತಾನೆ.

ಒಂದು ಬುಡಕಟ್ಟು ಅಥವಾ ಆದಿಮ ಗುಂಪು, ತನ್ನ ಸುತ್ತಣ ಆಗಾಧವಾದ ವಿಸ್ಮಯಕಾರಿ ರುದ್ರ ರಮ್ಯ ನಿಸರ್ಗ ಶಕ್ತಿಗಳಿಗೆ ಒಂದು ಮೂರ್ತ ರೂಪ ಕೊಡುವ ಹಂತದಲ್ಲಿಯೇ ಪುರಾಣಗಳ ಹುಟ್ಟು, ನಂಬುಗೆಗಳ ನೆಲೆ ಅಡಕಗೊಂಡಿದೆ.

ಧಿಮ್ಮೆಂದು ಸಿಡಿಯುವ ಜ್ವಾಲಾಮುಖಿ, ದಕ್ಕಿದ್ದನ್ನು ಕೊಚ್ಚಿ ಸೆಳೆದೊಯ್ಯು ಭೀಕರ ಪ್ರವಾಹಗಳು, ಯಾವುದೇ ಆದಿಮ ಗುಂಪಿನ ವ್ಯಕ್ತಿಗತ ಭಯ ವಿಸ್ಮಯಗಳಿಗೆ ಸೀಮಿತವಾಗದೆ ಇಡೀ ವೃಂದದ ಭಯಭೀತಿ ಪ್ರತಿಕ್ರಿಯೆಯ ಸಾಮೂಹಿಕ ಅನುಭವಕ್ಕೆ ಕಾರಣವಾಗುತ್ತವೆ. ಇಂಥ ಅನುಭವಗಳು ಕೇವಲ ಅವರ ಭಾವನಾ ಪ್ರಪಂಚಕ್ಕೆ ನಿರ್ದಿಷ್ಟಗೊಳ್ಳದೆ ತಮಗಿಂತ ಭಿನ್ನವಾದ ತಮ್ಮ ಹೊರಗಿನ ವಲಯದಿಮದ ಉತ್ಪನ್ನಗೊಳ್ಳುವ ಅನಿಯಂತ್ರಿತ ಶಕ್ತಿಗಳ, ಅದ್ಭುತ, ಭಯೋತ್ಪಾದಕ ಅಮಾಯಕ ಕಲ್ಪನೆಗಳಿಗೆ ಪ್ರೇರಕವಾಗುತ್ತವೆ. ಒಂದು ರೀತಿಯ ಭ್ರಮೆ, ಅಸ್ಪಷ್ಟತೆ, ಸಂದಿಗ್ಧತೆಗಳು ಆದಿಮ ಗುಂಪುಗಳ ಸಾಮೂಹಿಕ ಅನುಭವಕ್ಕೆ ಒತ್ತುಕೊಟ್ಟು ಅವರಲ್ಲಿ ಅಪ್ರಜ್ಞಾ ಪೂರ್ವಕವಾಗಿ ಅಗೋಚರ ಶಕ್ತಿಗಳ ಮೂರ್ತೀಕರಣ ಕ್ರಿಯೆ ನಡೆದು ಹೋಗುತ್ತದೆ. ಪೌರಾಣಿಕ ಹಿನ್ನೆಲೆಯ ನಂಬುಗೆಗಳಲ್ಲಿ – ವಸ್ತು ಸಂಗತಿಗಳಲ್ಲಿ ಇಂಥ ಒಂದು ಅಮಾಯಕ, ಭ್ರಾಮಕ ವಸ್ತು ಪ್ರತಿರೂಪಗಳು ಎರಕಗೊಂಡು ಜನಪದ ವೃಂದಗಳಲ್ಲಿ ಮಂಪರುಕವಿಸಿ, ಬೇರುಕೊಟ್ಟು ತಾವು ಪ್ರತ್ಯಕ್ಷವಾಗಿ ಕಂಡ ರುದ್ರಭೀಕರ ವಸ್ತುಗಳನ್ನು ವಾಸ್ತವವಲ್ಲದ ಒಂದು ವಿಶಿಷ್ಟ ಮಾನಸಿಕ ಪಾತಳಿಯಲ್ಲಿ ರೂಪಿಸಿ ಅವುಗಳಿಗೆ ಮೂರ್ತ ರೂಪ ಕೊಡುವ  ಯತ್ನ ನಡೆಯುತ್ತದೆ. ಇದನ್ನು ಒಂದು ವಿಧದ ದೈವೀಕರಣ ಕ್ರಿಯೆ ಎಂದು ಹೇಳಬಹುದು. ಒಂದು ತಲೆ ಹತ್ತು ತಲೆಯಾಗುತ್ತದೆ. ಬೆಂಕಿಯ ಮೂರ್ತೀಕರಣದಲ್ಲಿ ಸೂರ್ಯದೇವ, ಕೃಷಿ ಕಾರ್ಯಗಳ ಹಿನ್ನೆಲೆಯಲ್ಲಿ ಭೂಮಿತಾಯಿ, ಗೋಮಾತೆ, ಚಂಡಮಾರುತ ಅವಿರತ ಪರ್ಜನ್ಯಗಳಲ್ಲಿ ಇಂದ್ರ ವರುಣ ಇತ್ಯಾದಿ ದೇವಾನು ದೇವತೆಗಳು.

ಹೀಗೆ ಆದಿಮಾನವ ವೃಂಗಳ ಕಲ್ಪನಾಶಕ್ತಿ ಮತ್ತು ಅನುಭವಗಳಿಗೆ ಸವಾಲಾಗಿನಿಂತ ಸೃಷ್ಟಿಯ ಸಮೂರ್ತ ಶಕ್ತಿ ಮತ್ತು ರಹಸ್ಯಗಳಿಗೆ ಒಂದಲ್ಲ ಒಂದು ಬಗೆಯ ನಂಬುಗೆ ಪ್ರಾಪ್ತವಾದ ಕಾಲದಿಂದಲೇ ಪುರಾಣ ಕಥೆಗಳ ಪೌರಾಣಿಕ ಶ್ರದ್ಧೆಗಳ ಸೃಷ್ಟಿ.

ಕ್ರಿ . ಪೂ. ೫೦೦ ರಿಂದ ಕ್ರಿ. ಶ. ೫೦೦ ರ ಕಾಲಾವಧಿಯಲ್ಲಿ ಹುಟ್ಟಿಕೊಂಡ ಹದಿನೆಂಟು ಭಾರತೀಯ ಪುರಾಣಗಳಲ್ಲಿ ವಿಷ್ಣು ಪುರಾಣ, ಶಿವಪುರಾಣ, ವಾಯು ಪುರಾಣಗಳು ಇಂಥದೇ ಒಂದು ಅಜ್ಞಾತಕಾಲದ ಅಥವಾ ಅಲಿಖಿತ ಕಾಲದ ವಾಸ್ತು ದಾಖಲೆಗಳಾಗಿವೆ. ಪ್ರಪಂಚದ ಉಗಮ ವಿಕಾಸಗಳನ್ನು ಹೇಳುವ ಈ ಪುರಾಣ ಕಥೆಗಳ ಪ್ರಕಾರ ಭಾರತದ  ಪ್ರಥಮ ಮಾನವನು. ಇವನು ಮೊದಲನೆಯ ದೊರೆಯು ಹೌದು. ಇವನು ಸ್ವಯಂಭು. ಆ ಬಳಿಕ ಬಂದ ಅನೇಕ ಮನುಗಳಲ್ಲಿ ಒಬ್ಬನ ಹೆಸರು ಪೃಥು. ಅವನಿಂದಾಗಿಯೇ ಭೂಮಿಗೆ ಪೃಥಿವಿ ಎಂದು ಹೆಸರು ಬಂದಿತಂತೆ. ಈ ಮನುಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದವನು ಹತ್ತನೆಯ ಮನು. ಆತನ ಕಾಲದಲ್ಲಿ ಒಂದು :ಮಹಾಪ್ರಳಯ” ಉಂಟಾಯಿತು. ಆ ಪ್ರಳಯ ಬರುವುದಕ್ಕೂ ಮೊದಲೇ ದೇವರು ಅವನಿಗೆ ಅದರ ಸೂಚನೆ ಕೊಟ್ಟಿದ್ದನಂತೆ. ಆಗ ಮನು ಒಂದು ಅದ್ಭುತವಾದ ದೋಣಿಯನ್ನು ನಿರ್ಮಿಸಿ ಅದರ ಮೂಲಕ ತನ್ನನ್ನೂ ತನ್ನವರನ್ನು ರಕ್ಷಿಸಿಕೊಂಡನಂತೆ. ಹೀಗೆ ಉಳಿದು ಬಂದ ಮನುವಿನ ಮಕ್ಕಳು ಸೂರ್ಯವಂಶ, ಚಂದ್ರವಂಶಗಳ ಹೆಸರಿನಿಂದ ಜನಾಂಗವನ್ನು ಮುಂದುವರೆಸಿದರು. “ದಸ್ಯು” ಗಳೆಂದು ಕರೆಯಲ್ಪಟ್ಟ ಆರ್ಯ ಪೂರ್ವದ ಭಾರತದ ಮೂಲ ನಿವಾಸಿಗಳು, ಆರ್ಯರ ಜೊತೆಗೆ ಸಂಘರ್ಷಕ್ಕೆ ಇಳಿದು, ಕಾಲಾನುಕ್ರಮದಲ್ಲಿ ಅವರ ಜೊತೆ ಒಪ್ಪಂದ ಮಾಡಿಕೊಂಡು ಅಂದಿನ ಕಾಲದ ಸೃಷ್ಟಿಕರ್ತ ಬ್ರಹ್ಮ, ಸ್ಥಿತಿಕರ್ತ ವಿಷ್ಣು, ಲಯಕರ್ತ ಶಿವ – ಕಲ್ಪನೆಗಳನ್ನು – ತ್ರಿಮೂರ್ತಿಗಳೆಂದು ಸ್ವೀಕರಿಸಿ ಜೀವನ ಸಾಗಿಸಿದರು.

“ವೈಜ್ಞಾನಿಕ ಸಂಶೋಧನೆಗೆ ಪೂರ್ವದಲ್ಲಿದ್ದ ವಿವಿಧ ಊಹಾತ್ಮಕ ಕಲ್ಪನೆಗಳೇ ಪುರಾಣಗಳು”[7]

“ಪುರಾಣ ಎನ್ನುವುದು ಚರಿತ್ರೆಯಲ್ಲ; ಚರಿತ್ರೆಯ ಮಾತೃಕೆ”[8] ಎನ್ನುವ ಏಲಿಯಡ್ ಅವರ ಮಾತು ಗಮನಾರ್ಹ. ೧೮೮೪ ರಲ್ಲಿ ಆಂಡ್ರೂಲಾಂಗ್ ತನ್ನ “custom and Myth” ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದಂದಿನಿಂದ ಮೆಕಂಜಿ ಇಕಾಸಿರೆರ್, ಹೆನ್ರಿಫ್ರಾಂಕ್ಪರ್ಟ, ಎಡ್ವರ್ಡ ಬುವೆಸ್, ಲೀನ್ಹಾಟ್, ಹರ್ನ್‌ನ ಗ್ಯುಂಕಲ್, ಹೆಸ್‌ಓವಿಟ್ಸ ಅನೇಕ ವಿದ್ವಾಂಸರು ಪುರಾಣ ಅಥವಾ “ಮಿಥ್” ಎನ್ನುವುದನ್ನು ದೀರ್ಘವಾಗಿ ಚರ್ಚಿಸಿದ್ದಾರೆ.

ಪುರಾಣಗಳನ್ನು “Charter of belief”  ವಿಶ್ವಾಸ ಪತ್ರ” ಎಂದು ಹೆರ್ಸ್ಕೋವಿಟ್ಸ ಕರೆಯುತ್ತಾನೆ. ಆದಿಮಕಾಲದಿಂದಲೂ ಜನಪದ ವೃಂದಗಳು ತಮಗೆ ಅತೀತವಾದ ಶಕ್ತಿಗಳಲ್ಲಿ. ಅದ್ಭುತಗಳಲ್ಲಿ ನಂಬುಗೆಯಿಟ್ಟು ಅಂದಂದಿನ ತಮ್ಮ ಸುತ್ತಣ, ಅಂಥ ಪರವಲಯದ ಶಕ್ತಿಗಳನ್ನು ತಮ್ಮ ನಂಬುಗೆ ವಿಧಿನಿಷೇಧಗಳಲ್ಲಿ ತೊಡಗಿಸಿಕೊಂಡು ಧಾರ್ಮಿಕ  ಕ್ರಿಯಾಚರಣೆಗಳ ಹಿನ್ನೆಲೆಯಲ್ಲಿ ಜೀವನ ಸಾಗಿಸುತ್ತ ಬಂದು ಸೃಷ್ಟಿಸಿದ ಜನಪದ ಪುರಾಣ ಕಥೆಗಳು ಮತ್ತು ಆ ಕಾಲದ ಪ್ರಾಚೀನ ನಡವಳಿಕೆಗಳು ಮಾನವ ಕುಲದ ಚರಿತ್ರೆಗೆ ಮಾತೃಕೆಯಾಗಿರುವಂತೆ ಧಾರ್ಮಿಕ ಚರಿತ್ರೆಯ ವಿಶ್ವಾಪತ್ರಗಳೂ ಆಗಿವೆ.

ಜನಪದ ಧರ್ಮದ ಆಕರಗಳು :

ಪುರಾಣ ಕಾಲಕ್ಕೂ ಇನ್ನೂ ಹಿಂದೆ ಹೋಗಿ ನೋಡಿದಾಗ ನಮಗೆ ಕಂಡುಬರಬಹುದಾದ ಆದಿಮಾನವರ, ಜನಪದ ವೃಂದಗಳ ಧಾರ್ಮಿಕ ಸ್ವರೂಪದ ಪ್ರೇರಕ ಅಂಶಗಳ ಮೂಲಭೂತ ಶ್ರದ್ಧೆ, ಆಚರಣೆಗಳು ಹೆಚ್ಚು ರೋಮಾಂಚನಕಾರಿ, ಕುತೂಹಲಕಾರಿಯಾಗಿದ್ದು, ವ್ಯವಸ್ಥಿತ ಸಮಾಜದ ಧರ್ಮಶಾಸ್ತ್ರ, ನೀತಿಶಾಸ್ತ್ರದ ಆಕರಗಳನ್ನು ಕುರುಹಿಟ್ಟು ಅನ್ವೇಷಿಸುವ ಕಾರ್ಯವನ್ನು ಇಂದಿನ ಜಾನಪದ ಆಸಕ್ತರು, ತಜ್ಞರು ಕೈಕೊಳ್ಳಬೇಕಾಗಿದೆ.

ಅನಕ್ಷರಸ್ಥರಾಗಿದ್ದ ಆದಿಮಾನವರಲ್ಲಿ ಕಂಡುಬರುವ ಧರ್ಮಸ್ವರೂಪ ಎಂಥದು? ಅವರ ಶ್ರದ್ಧೆಗಳ ಮೂಲ ನೆಲೆ ಯಾವುದು? ಅವರ ಆಚರಣೆಗಳ ಹಿನ್ನೆಲೆ ಏನು? ಈ ಮುಂತಾದ ಪ್ರಶ್ನೆಗಳನ್ನು ಕುರಿತು ಚರ್ಚಿಸಿದ ಮಾನವಶಾಸ್ತ್ರಜ್ಞರು ಅನೇಕ. ಅವರಲ್ಲಿ ಜೆ. ಎಚ್. ಕಿಂಗ್, ಡಿ. ಬ್ರಾಸೆಸ್, ಎ.ಕೊಮ್ಟೆ, ಮೆಕ್‌ಲೆನ್ನಾನ್, ಜೆ.ಜಿ.ಫ್ರೇಜರ್, ಸ್ವೆನ್ಸರ್, ಮಾರೆಟ್, ಟೇಯಲರ್ ಮತ್ತು ಡರ‍್ಖಿಮ್ ಮುಖ್ಯರು. ಮಂತ್ರಮಾಟ, (ಫೆಟಿಷಿಜಮ್) ಜಡವಸ್ತು ಪೂಜೆ, ಕುಲದೇವತಾರಾಧನೆ, ಮಾನವಾರಾಧನೆ ಅಥವಾ ಯಜಮಾನಪೂಜೆ, ಆತ್ಮಾರಾಧನೆ ಇತ್ಯಾದಿ ಧಾರ್ಮಿಕ ರೂಪಗಳನ್ನು ಗುರುತಿಸಿದ ಈ ವಿದ್ವಾಂಸರು ಇತಿಹಾಸ ಪೂರ್ವದ ಈ ಅನಕ್ಷರಸ್ಥ ಸರಳ ಆದಿಮಾನವರಲ್ಲಿ ಧರ್ಮದ ನಿಶ್ಚಿತ ಸ್ವರೂಪಗಳನ್ನು ಕಾಣುವುದು ದುರ್ಲಭ ಎಂದು ಹೇಳಿದರು. ಇವರ ಈ ಸಿದ್ಧಾಂತಗಳನ್ನು ಎ. ಲಾಂ ಎಫ್. ಗ್ರೀಬ್ನರ್ ಮತ್ತು ವಿಲ್ಹೆಲ್ಮ್ Schmidt  ಷ್ಮಿಟ್ ಮುಂತಾದವರು ಅಲ್ಲಗಳೆದು ಮೋನೋಥೀಯಿಜಮ್ ಸಿದ್ಧಾಂತ ಆದಿಮಾನವರಲ್ಲಿಯೇ ದೊರಕುವ ಪರಿಕಲ್ಪನೆ ಎಂದು ಸಾರಿದರು.

ಆದಿಮಾನವ ಧರ್ಮಸ್ವರೂಪ :

ಮಾನವಶಾಸ್ತ್ರಜ್ಞರ ಈ ಎಲ್ಲ ಪ್ರಯತ್ನಗಳನ್ನೂ, ವರ್ಣಿಸಿದ ಪಿ. ಜಿಸ್ಬರ್ಟ್‌ವಿಲ್ – ಡೆಲ್ಮ್ ಅವರಿಗೆ ತಮ್ಮ ಕೃತಜ್ಞತೆ ಸಲ್ಲಿಸುತ್ತ ತಮ್ಮ ಕೃತಿ “ಟ್ರೈಬಲ್ ಇಂಡಿಯಾ”ದಲ್ಲಿ “ಏಕದೇವತಾವಾದ” ಆದಿಮಾನವನ ಮೂಲ ಧರ್ಮಸಿದ್ಧಾಂತವಾಗಿದೆ”[9]  ಎಂದು ಅವರ ತೀರ್ಮಾನಗಳನ್ನು ಸಮರ್ಥಿಸುತ್ತಾರೆ. ಸೃಷ್ಟಿಸಮಸ್ತವನ್ನೂ ಅತೀತಶಕ್ತಿಯ ಪ್ರತೀಕವೆಂದೂ ಪ್ರತಿಯೊಂದು ವಸ್ತುವೂ ಆ ಅತೀತ ಚೈತನ್ಯದ ಅಭಿವ್ಯಕ್ತಿ ರೂಪವೆಂದೂ ಭಾವಿಸಿದ ಜನಪದರ ಮೂಲಭೂತ ಶ್ರದ್ಧೆ, ಅರ್ಚನಾವಿಧಾನ, ಆಚರಣೆಯ ಕ್ರಮಗಳು ಈ ಆದಿಮಾನವ ಧರ್ಮ ಸ್ವರೂಪದ ಅವಸ್ಥಾಂತರಗಳು ಎನ್ನುವುದನ್ನು ಈ ಹಂತದಲ್ಲಿ ಮರೆಯಕೂಡದು. ಧರ್ಮದಂತಹ ವಿಸ್ತ್ರತ ಪರಿಕಲ್ಪನೆಯ ಎಲ್ಲ ಮುಖದ ಚರ್ಚೆ ಇಲ್ಲಿ ಪ್ರಸ್ತುತವಲ್ಲ. ಆದರೆ ಧರ್ಮದ ಅವಸ್ಥಾಂತರಗಳ ಸಹಕಾರಿಗಳಾದ ಅನೇಕ ಸ್ಥೂಲ ರೂಪಗಳನ್ನು ಮಾತ್ರ ಹೇಳು ಪ್ರಯತ್ನವನ್ನು ಇಲ್ಲಿ ಕೈಕೊಳ್ಳಲಾಗಿದೆ.

ಧರ್ಮದ ಸ್ಥೂಲರೂಪಗಳು :

ಸಾಮಾನ್ಯವಾಗಿ ಧರ್ಮ ಎನ್ನುವುದು ಮಾನವ ಜೀವನದ ಆಧಾರ; ಬದುಕಲು ಅಗತ್ಯವಾದ ಒಂದು ಶ್ರದ್ಧೆ. ಅತೀತ ಅಥವಾ ಅತಿಮಾನುಷ ಶಕ್ತಿಯ ಆಶ್ರಯ ಮತ್ತು ಅದರ ಜೊತೆಗೆ ಮಾನವನ ಒಂದು ಸ್ವೀಕೃತ; ಸ್ಥಿರ ಸಂಬಂಧವೇ ಧಮ್ ಎಂದು ಹೇಳಲಾಗುತ್ತದೆ.[10] ಈ ಅಭಿಪ್ರಾಯಗಳನ್ನು ಇನ್ನಷ್ಟು ಸ್ಪುಟವಾಗಿ ಹೇಳುವುದಾದರೆ ಮನುಷ್ಯ ಆಧರಿಸುವ ಅಥವಾ ಅವಲಂಬಿಸುವ ಈ ಅತೀತ ಶಕ್ತಿ ಅಥವಾ ಶಕ್ತಿದೇವತೆಗಳಲ್ಲಿ ಆತ ಹೊಂದುವ ಗಾಢ ನಂಬುಗೆ ಮತ್ತು ಆತನ ಶರಣಾಗತಿ. ಧರ್ಮಸ್ವರೂಪ ಮತ್ತು ಧಾರ್ಮಿಕ ಶ್ರದ್ಧೆಯ ಯಾವದೇ ಅವಸ್ಥೆಗೂ ಈ ಮಾತು ಹೊಂದಿ ನಿಲ್ಲುವ ವ್ಯಾಪಕ ಸಾಮರ್ಥ್ಯ ಪಡೆದಿದೆಯೆನ್ನುವದು ಇಲ್ಲಿ ಗಮನಿಸಬೇಕಾದ ಅಂಶ.

ಸುತ್ತಮುತ್ತಣ ಪ್ರಪಂಚ, ನಿಸರ್ಗದ ಅದ್ಭುತ ಕಾಯ್ಗಳ ಆಚೆ ಇರುವ ಅತೀತ ಅಥವಾ ಅತಿಮಾನುಷ ಶಕ್ತಿ ಧರ್ಮದ ಒಮದು ಅತಿ ಮುಖ್ಯ ಅಂಶ. ಪ್ರಪಂಚದ ಅಸ್ತಿತ್ವದ ಮೂಲ ಕಾರಣವೊಂದರ ಪರಮಶಕ್ತಿ ಈ ಅತಿಮಾನುಷ ಚೈತನ್ಯದ ಪರಿಕಲ್ಪನೆಗೆ ಚಾಲನೆಯಾಗಿದೆ. ಇತಿಹಾಸ ಪೂರ್ವದ ಆದಿಮಾನವರಿಂದ ಮೊದಲುಗೊಂಡು ಮಾನವ ಚರಿತ್ರೆಯ ಎಲ್ಲ ಕಾಲದ ಸಮಾಜಗಳು ಈ ಅತಿಮಾನುಷ ಅಗೋಚರ ಶಕ್ತಿಯನ್ನು ದೇವರು ಎಂದು ನಂಬಿ ಬಂದಿವೆ. ಆದಿಮಾನವರ ಜನಪದ ಬುಕಟ್ಟುಗಳ ಮಟ್ಟಿಗೆ ಹೇಳುವುದಾದರೆ ಈ ನಂಬಿಕೆಯ ಆಧಾರ ಭಯ ವಿಸ್ಮಯ ಇನ್ನುಳಿದದದ್ದೆಲ್ಲ ಆ ಬಳಿಕ.

ಆದಿಮಾನವರ ಮತ್ತು ಅತೀವ ಶಕ್ತಿಗಳ ಈ ಪ್ರಾಕೃತಿಕ ಗಾಢ ಸಂಭಂಧವನ್ನು ಗೆರೆಕೊರೆದು ತೋರಿಸುವುದು ಜಟಿಲ. ಅತೀತ ಚೈತನ್ಯ ಮಾನವನ ಕಣ್ಣೆದುರು ಆವಿಷ್ಕಾರಗೊಳ್ಳುವ ರೀತಿ ಅನಿರೀಕ್ಷಿತ ಮತ್ತು ಅಸಾಮಾನ್ಯ. ಜೊತೆಗೆ ಹೀಗೆ ವಿಸ್ಮಯಕಾರೀ ಅದ್ಭುತ ರೂಪಗಳಲ್ಲಿ ಪ್ರಕಟಗೊಳ್ಳುವ ಈ ಶಕ್ತಿಯನ್ನು ಖಚಿತವಾಗಿ ಅರ್ಥೈಸಲು ಅವನಿಗಿರುವ ಅಸಾಮರ್ಥ್ಯ. ಆದುದರಿಂದ ಸೂರ್ಯೋದಯದ ಭವ್ಯವೈಭವವನ್ನು ಕಂಡು ಮೂಕವಿಸ್ಮಯ, ಪ್ರಚಂಡ ಮಾರುತದ ಒಡನೊಡನೆ ನುಗ್ಗಿ ಬರುವ ಗುಡುಗು ಮಿಂಚುಗಳಲ್ಲಿ ಈ ಅತೀತ ಶಕ್ತಿಯನ್ನು ಗುರುತಿಸುತ್ತಾನೆ. ಈ ಅತೀತಶಕ್ತಿ ಅಥವಾ ದೇವರನ್ನು ಹುರಿತ ಮಾನವನ ಪ್ರತಿಕ್ರಿಯೆ ಮತ್ತು ಅವನ ಧಾರ್ಮಿಕ ಧೋರಣೆ ಸದಾ ಸಂಕೀರ್ಣವಾಗಿವೆ. “ಇಂಥ ಒಂದು ಶಕ್ತಿಗೆ ಮಾನವ ಮುಖಾಮುಖಿಯಾದಾಗ ಪ್ರೇಮ, ಕೃಜ್ಞತೆ, ಕುಬ್ಜತೆ ಅಥವಾ ತನ್ನ ಸಣ್ಣತನದ ಅರಿವು, ಕೃಪಾಯಾಚನೆ, ಪರಿವರ್ತನೆ, ಉತ್ಸಾಹ, ಆಶೆ ಇತ್ಯಾದಿ ಭಾವನೆಗಳ ಅನುಭವ ಆತನಲ್ಲಿ ಉಂಟಾಗುತ್ತದೆ.”[11]

ಧರ್ಮನೀತಿ :

ಮಾನವನ ಈ ಆಂತರಿಕ ಅನಿಸಿಕೆಗಳು ಅವನ ಸಾಮಾಜಿಕ ಜೀವನ ಮತ್ತು ಧರ್ಮಕ್ಕಿರುವ ಸಂಬಂಧಗಳ ಮತ್ತೊಂದು ಆಯಾಮವನ್ನು ಸೂಚಿಸುತ್ತದೆ ಬರಗುಗೊಲಿಸುವ ಭೌತಿಕ ಜಗತ್ತಿನ ಸಮಕೀರ್ಣತೆ ಅದರ ವಿಶ್ವಾನುಭವಗಳಷ್ಟೇ ಧಾರ್ಮಿಕ ಸ್ಪಂದನೆಗಳಿಗೆ ತಳಹದಿಯಾಗುವುದಿಲ್ಲ. ಮಾನವ ತನ್ನ ಗುಂಪಿನ ಜೊತೆ, ಹೊಂದಿರುವ ಸಂಬಂಧ, ವೃಂದದ ಇತರ ವ್ಯಕ್ತಿಗಳ ಬಗೆಗೆ ಪ್ರೀತಿ, ಸಹಾನುಭೂತಿ, ದ್ವೇಷ, ಘರ್ಷಣೆ ಇತ್ಯಾದಿ ಆಂತರಿಕ ಅನಿಸಿಕೆಗಳು ಸಾಮಾಜಿಕ ಸ್ತರದ ಧಾರ್ಮಿಕ ಧೋರಣೆಗೆ ಪೋಷಕ ಅಂಶಗಳಾಗುತ್ತವೆ. ಇವುಗಳನ್ನು ನೈತಿಕ ಅಗತ್ಯಗಳೆಂದು ಕರೆಯಬಹುದು. ಆದ್ದರಿಂದ ಯಾವುದೇ ಕಾಲದ ಧಾರ್ಮಿಕ ಶ್ರದ್ದೆಗಳಿಗೆ ನೈತಿಕ ತಳಹದಿ ಸಹಜವಾದಷ್ಟು ಅನಿವಾರ್ಯವೂ ಆಗಿದೆ. ಏಕೆಂದರೆ ಧಾರ್ಮಿಕ ನಂಬುಗೆಗಳಲ್ಲಿ ಆವಿಷ್ಕಾರಗೊಂಡ ಪರವಲಯದ ಅತೀತಶಕ್ತಿ ಅದು ಸರ್ವಶಕ್ತ. ಕೆಟ್ಟವರನ್ನು ಶಿಕ್ಷಿಸುತ್ತದೆ, ಒಳ್ಳೆಯವರನ್ನು ರಕ್ಷಿಸುತ್ತದೆ. ನೈತಿಕ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ನೀತಿ ನ್ಯಾಯಗಳನ್ನು ಎತ್ತಿ ಹಿಡಿಯುತ್ತವೆ. ನೀತಿ, ಮಾನವ ಪಾಲಿಸುವ ಧರ್ಮಾಚರಣೆಗಳಲ್ಲಿ ತೊಡಗಿ ಅವನನ್ನು ಕಲ್ಯಾಣ ಪಥದತ್ತ ಸಾಗಿಸಲು ಶಕ್ತವಾಗುತ್ತದೆ ಆದ್ದರಿಂದ  ಸಮಷ್ಟಿಹಿತ ನೀತಿಶಾಸ್ತ್ರದ ವಿವೇಚನೆಗೆ ವಸ್ತು. ನೈತಿಕ ಜೀವನ, ಧರ್ಮದ ಒಂದು ಪ್ರಮುಖ  ಅಂಶವಾಗಿರುವುದರಿಂದ ನೀತಿ ತತ್ವಗಳು ಜನಪದರು ಪಾಲಿಸಿಕೊಂಡು ಬಂದು ರುಢಿ, ವಿಧಿ ನಿಷೇಧಗಳ ಹಿನ್ನೆಲೆಯಲ್ಲಿ ಮಹತ್ವದ ಪಾತ್ರವಾಗಿರುವುದನ್ನು ಗಮನಿಸುತ್ತವೆ. ಹೀಗೆ ಧರ್ಮ ಎನ್ನುವುದು ಆದಿಮಾನವ ಕಾಲದಿಂದ ಮೂಡಿ ಬಂದ ಬದುಕಿನ ಒಂದು ಕೇಂದ್ರ ದೃಷ್ಟಿ; ನೈತಿಕ ಜೀವನಕ್ಕೆ ಅರ್ಥಪೂರ್ಣತೆ ಸತ್ವಗಳನ್ನು ಸಂವಹನಿಸುವ, ಆಂತರಿಕ ಅನಿಸಿಕೆಗಳನ್ನು ನಂಬುಗೆಗಳನ್ನು ಸಂಯೋಜಿಸುವ, ಸಾಮಾಜಿಕ ಬದುಕಿಗೆ ಒಂದು ವಿಶಿಷ್ಟತೆಯನ್ನು ಒದಗಿಸುವ ಒಂದು ಅಪೂರ್ವ ಶಕ್ತಿಯಾಗಿದೆ.

ಅತೀತ ಶಕ್ತಿ ಮತ್ತು ಅನಾದಿಕಾಲದಿಂದ ಜನಪದ ವೃಂದಗಳ ನಡುವೆ ಏರ್ಪಟ್ಟ ಈ ಕನಿಷ್ಟ ಸಂಬಂಧವೇ ಎಲ್ಲ ಬಗೆಯ ಧಾರ್ಮಿಕ ಶ್ರದ್ಧೆಗಳ ಹುಟ್ಟಿಗೆ ಕಾರಣವಾಗಿದೆ. ಏಕೆಂದರೆ ಈ ಅತೀತ ಶಕ್ತಿ ಒಂದು ಬಿಡಿಸಲಾಗದ ಒಗಟು ಒಡೆಯಲಾಗದ ಒಡಕು.

ಕುಲದೇವತಾರಾಧನೆಕುಲಸಂಕೇತಾರಾಧನೆ :[12]

ಆದಿಮಾನವ ಗುಂಪುಗಳು ತಮ್ಮ ಜೀವನ ನಿರ್ವಹಣೆಗೆ ಕೈಕೊಂಡ ವೃತ್ತಿಗಳಲ್ಲಿ ಬೇಟೆಯಾಡುವದು ಗೆಡ್ಡೆ ಗೆಣಸು ಸಂಗ್ರಹಿಸುವುದು. ಮುಂತಾದವು ಪ್ರಥಮ ಮತ್ತು ಪ್ರಮುಖ ವೃತ್ತಿಗಳು. ಯಾವುದೇ ಒಂದು ಜನಪದ ವೃಂದದ ಆರ್ಥಿಕ ಸ್ಥರ ಆಯಾ ವೃಂ‌ದದ ಧಾರ್ಮಿಕ ಮಾದರಿಗಳನ್ನು ರೂಪಿಸುವಲ್ಲಿ ಕೆಲಮಟ್ಟಿಗಿನ ಪಾತ್ರ ವಹಿಸುತ್ತದೆ. ಒಂದೇ ಮಟ್ಟದ ಆರ್ಥಿಕ ಶ್ರೇಣಿಯಲ್ಲಿದ್ದರೂ ಆ ಶ್ರೇಣಿಯಲ್ಲಿ ಜೀವನ ಸಾಗಿಸುವ ವಿವಿಧ ಜನಪದ ವೃಂದಗಳು ಬೇರೆ ಬೇರೆ ಧಾರ್ಮಿಕ ಧೋರಣೆಗಳನ್ನು ಅನುಸರಿಸುತ್ತಿರಬಹುದು. ಆಯಾ ವೃಂದದ ಆರ್ಥಿಕ ಶ್ರೇಣಿಯ ಜೊತೆಗೆ ಅದರ ದೈಹಿಕ ಶಕ್ತಿ, ಸಾಮಾಜಿಕ ಪರಿಸರಗಳೂ ಅದರ ಧಾರ್ಮಿಕ ಚಟುವಟಿಕೆಗಳ  ಮೇಲೆ ಪ್ರಭಾವ ಬೀರುತ್ತವೆ. ಈ ವಿಷಯವನ್ನು ಚರ್ಚಿಸಿದ ಪಿ. ಜಿಸ್ಬರ್ಟ ಇದಕ್ಕೆ ಕಾರಣವೇನೆಂದರೆ ಮನುಷ್ಯ ಅತಿಮಾನುಷ ಶಕ್ತಿಯನ್ನು ಪರಿಭಾವಿಸುವಲ್ಲಿ ಮುಖ್ಯ ಕಾರಣಗಳಾದ ಪ್ರವೃತ್ತಿ, ಪರಿಕಲ್ಪನೆ, ಸಂಕೇತಗಳು ಎಂದು ತೀರ್ಮಾನಿಸುತ್ತಾರೆ.

ಗೆಡ್ಡೆ ಗೆಣಸು ಸಂಗ್ರಹಿಸುವ, ಬೇಟೆಯಾಡುವ ಆದಿಮಾನವ ವೃಂದಗಳು ಸಾಧಾರಣವಾಗಿ ಅನುಸರಿಸುವ ಧರ್ಮ ಕುಲದೇವತಾರಾಧನೆ ಅಥವಾ ಕುಲಸಂಕೇತಾರಾಧನೆ.

ನಿಸರ್ಗದಲ್ಲಿ ಅಪರಿಮಿತವಾಗಿ ಹರಡಿರುವ ವಸ್ತುಗಳಲ್ಲಿ ಯಾವುದೋ ಒಂದು – ಕಲ್ಲುಬಂಡೆ, ಬಹುದೊಡ್ಡ ಮರ ಅಥವಾ ಒಂದು ಪ್ರಾಣಿ – ಆದಿಮಾನವ ಗುಂಪಿಗೆ ಆಸರೆ ರಕ್ಷೆಗಳನ್ನು ಒದಗಿಸಿರಬಹುದಾದ ಕಾಲದಿಂದ ಇಂಥ ಒಂದೊಂದು ವಸ್ತು ಆಯಾ ಜನಪದ ವೃಂದದ ದೇಷ್ಟಿಗೆ ಅತೀತ ಶಕ್ತಿಯ ಪ್ರತೀಕವಾಗಿ ಕಂಡಿರಬಹುದು. ಈ ಹಂತದಲ್ಲಿ ಒಂದು ಪ್ರಾಣಿ, ಒಂದು ಮರ ಅಥವಾ ಒಂದು ಗುಡ್ಡ ಆಯಾ ಗುಂಪಿನ ಕುಲಸಂಕೇತವಾಗಿ ಸ್ವೀಕೃತಿ ಪಡೆದು ಅರ್ಚನೆಯ ರೂಪಧಾರಣೆ ಮಾಡಿತು. ಭೌಗೋಳಿಕ ಪಾತಳಿಯ ವಿಭಿನ್ನ ಪ್ರದೇಶಗಳಲ್ಲಿ ವಾಸಿಸುವ ಜನಪದ ಗುಂಪುಗಳಿಗೆ ಒಂದೊಂದು ಪಂಗಡಕ್ಕೂ ಒಂದೊಂದು ಕುಲಸಂಕೇತ ರೂಪುಗೊಂಡಿರಬೇಕು. ಆಲದ ಮರವನ್ನು ದೈವವೆಂದು ಪೂಜಿಸುವುದು, ಆಕಳನ್ನು ಗೋಮಾತೆಯೆಂದು ಅರ್ಚಿಸುವ, ಪರಂಪರೆಯನ್ನು ಸ್ಮರಿಸಿಕೊಳ್ಳಬಹುದು. ಈ ಕುಲಸಂಕೇತಗಳ ಜೊತೆಗೆ ಆದಿವಾಸಿಗಳು ಏರ್ಪಡಿಸಿಕೊಳ್ಳುವ ಸಂಬಂಧ ಕೇವಲ ಸಾಂಕೇತಿಕವಾಗಿರದೆ, ಅವರ ಬದುಕಿನ ಅವಿಭಾಜ್ಯ ಅಂಗ ಪರಿಕಲ್ಪನೆಯಾಗಿ ರೂಪುಗೊಳ್ಳುತ್ತದೆ. ಆಸ್ಟ್ರೇಲಿಯಾದ ಆದಿವಾಸಿಗಳಲ್ಲಿ ಇದರ ವಿಪರೀತಾವಸ್ಥೆಯನ್ನು ಗುರುತಿಸಿದ ವಿದ್ವಾಂಸರು, “ವೊಲ್ಲೆಬಿ” ಜನಾಂಗ, ಕಾಂಗರೂ ಜಾತಿಯ ಒಂದು ಪ್ರಾಣಿ “ವೊಲ್ಲೆಬಿ”  ಮೃಗದೊಂದಿಗೆ ಹೊಂದಿರುವ ರಕ್ತ ಬಾಂಧವ್ಯವನ್ನು ಸೂಚಿಸುತ್ತಾರೆ.[13]

ಈ ಕುಲಸಂಕೇತಗಳನ್ನು ಯಾವುದೇ ರೀತಿಯಿಂದ ನಾಶಪಡಿಸುವುದು ಆ ಕುಲಗುಂಪಿಗೆ ಅಪಾಯಕಾರಿ, ಆಪತ್ಕಾರಿ ಎಂದು ಜನಪದರು ನಂಬುತ್ತ ಬಂದಿದ್ದಾರೆ ಸಂಪಿಗೆ ಮರ ಅಥವಾ ಆಲದ ಮರ, ಬನ್ನಿಮರಗಳನ್ನು ಕಡಿಯಬಾರದು ಎನ್ನುವ ನಿಷೇಧವನ್ನು ಗಮನಿಸಬಹುದು.

ಕುಲದೇವತಾರಾಧನೆಯ ಇನ್ನೊಂದು ಮಹತ್ವದ ಅಂಶವೆಂದರೆ ಬುಡಕಟ್ಟುಗಳು ವಿವಿಧ ಕುಲಗುಂಪುಗಳಾದುದು. ಈ ಕುಲಗುಂಪು ಆಯಾ “ಬಳಿ” ಗೆ ಆಧಾರವಾಯಿತು. ಅದೇ ಮುಂದೆ ಶಿಷ್ಟಪದ ಸಮಾಜದಲ್ಲಿ “ಗೋತ್ರ”ವಾಯಿತು. ಒಂದೇ “ಬಳಿ” ಗೆ ಸೇರಿದ ಗಂಡು ಮತ್ತು ಹೆಣ್ಣು ಮದುವೆಯಾಗಲು ಬಾರದು ಎನ್ನುವ ಆದಿಮಾನವ ಸಮಾಜದ ನಂಬಿಕೆ ಇಂದಿನವರೆಗೂ ಮುಂದುವರೆದಿರುವದನ್ನು ನಾವು ಕಾಣುತ್ತೇವೆ. ಒಮದು ಕುಲಸಂಕೇತವುಳ್ಳ ವೃಂದ, ರಕ್ತಸಂಬಂಧದ ದೃಷ್ಟಿಯಿಂದ ಸೋದರರಾಗುತ್ತಾರೆ. ಒಂದೇ ಕುಲಗುಂಪಿನ ಕಳ್ಳುಬಳ್ಳಿಯಲ್ಲಿ ವಿವಾಹವಾದರೆ ಕುಲಗುಂಪಿನ ನಾಶ ಎನ್ನುವುದರಿಮದ ಸಗೋತ್ರ ವಿನಾಹ ನಿಷಿದ್ಧ. ಈ ಮುಂತಾದ ಕೆಲವು ನಿಷೇಧಗಳು ಆಯಾ ಕುಲಗುಂಪಿನ ವೃದ್ಧಿಗೆ ಶುದ್ಧಿಗೆ ರಕ್ಷಾಕವಚ ಎನ್ನುವುದು ಜನಪದ ವೃಂದಗಳ ನಂಬಿಕೆ.

ಕುಲಸಂಕೇತವೇ ಆರಾಧನೆಯ ವಸ್ತುವಾಗುವುದರಿಂದ ಆ ಸಂಕೇತವೇ ಆಯಾ ಕಾಲ ಗುಂಪಿಗೆ ದೇವತೆಯಾಗುತ್ತದೆ. ಆದುದರಿಂದ ಧರ್ಮದ ಈ ರೂಪವನ್ನು ಕುಲಸಂಕೇತಾರಾಧನೆ ಎಂದು ಕರೆಯುವುದಕ್ಕಿಂತ ಕುಲದೇವತಾರಾಧನೆಯೆಂದು ಕರೆಯುವುದೇ ಮೇಲು.ಷ್ಮಿಟ್ ಹೇಳುವ “ಕುಲ ಸಂಕೇತಾರಾಧನೆ ಒಂದು ನಿಗೂಢ ಆಚರಣೆ ಕುಟುಂಬ ಹಾಗೂ ಕುಲಗಳು ಕೆಲ ಪ್ರಾಣಿ ವರ್ಗಗಳ ಜೊತೆ ಖಚಿತವಾದ ರಕ್ತ ಬಾಂಧವ್ಯ ಹೊಂದಿದೆ ಎಂದು ಕೆಲವು ಜನರ ನಂಬುಗೆ[14] ಎನ್ನುವ ಮಾತಿನೊಂದಿಗೆ ಹೆರ್ಸ್ಕೋವಿಟ್ಸ್ ಅವರ ಅಭಿಪ್ರಾಯಗಳನ್ನು ಸೇರಿಸಿದರೆ ಈ ಮಾತಿನ ಅರ್ಥ ಸ್ಪುಟಗೊಳ್ಳುತ್ತದೆ. ಪ್ರಾಣಿ ಅಥವಾ ವೃಕ್ಷಗಳ ಜೊತೆಗೆ ಮನುಷ್ಯರು ಬೆಳೆಸಿಕೊಂಡ ಈ ಸಂಬಂಧ ಅಸಾಮಾನ್ಯ ಸ್ವರೂಪದ್ದು ನಿಗೂಢವಾದದ್ದು ಎಂದು ಹೇಳುವ ಅವರು ಇದೊಂದು ಅತೀಂದ್ರಿಯ ಅವರೂಪದ ದಿವ್ಯ ಅನುಭಾವ ಸಂಬಂಧ ಎಂದು ಸ್ಪಷ್ಟೀಕರಿಸುತ್ತಾರೆ.[15]

ಕುಲಸಂಕೇತ ಅಥವಾ ಕುಲದೇವತಾರಾಧನೆ ಧಾರ್ಮಿಕ ಶ್ರದ್ಧೆಯ ಒಂದು ಅಂಗವೇ ಹೊರತು ಅದೊಂದು ಸ್ವತಂತ್ರ ಧರ್ಮವಲ್ಲ.

ಡರ್ಖಿಮ್ ಮುಂತಾದವರ ಟೋಟೆಮಿಸಮ್ ಕುಲದೇವತಾರಾಧನೆಗೆ ಸಂಬಂಧಿಸಿದ ಅಭಿಪ್ರಾಯಗಳನ್ನು ಚರ್ಚಿಸಿ ಜಿಸ್ಬರ್ಟ್ ಅವರು, ದಕ್ಷಿಣ ಮತ್ತು ಪೂವ್ ಆಸ್ಟ್ರೇಲಿಯಾ ಬುಡಕಟ್ಟುಗಳಾದ ಕುರ್ನಾಯ್ ಕುಲಿನ್, ಯುಯಿನ್, ಬುಷ್ಮೆನ್ ವೃಂದಗಳ ಧಾರ್ಮಿಕ ನಂಬುಗೆಗಳಲ್ಲಿ ಏಕದೇವತಾ ಧರ್ಮ ಸ್ವರೂಪವನ್ನು ಗುರುತಿಸುತ್ತಾರೆ. ಈ ಬುಡಕಟ್ಟುಗಳು ನಂಬುವ ದೇವತಾರೂಪಿ ವಸ್ತುಗಳನ್ನು ಶಿಷ್ಟಪದ ಸಮಾಜದ ದೇವರೆಂದು ಹೇಳಲು ಸಾಧ್ಯವಿಲ್ಲ; ಆದರೆ ಏಕದೇವತಾ ಧರ್ಮ ಕಲ್ಪನೆಯ ಸ್ಥೂಲ ಬೇರುಗಳನ್ನು ಇಲ್ಲಿ ಕಾಣಬಹುದಾಗಿದೆ.

ಪರಮ ಶಕ್ತಿಪಿತ :

ಆದಿಮಾನವರಿಗೂ ಅತೀತ ಶಕ್ತಿಗೂ ಇರುವ ಒಂದು ಸಂಬಂಧ ಏರ್ಪಡುವಲ್ಲಿ ಆಕಾಶ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆಕಾಶದ ಆಚೆ ಎಲ್ಲೋ ಒಂದು ಅಗೋಚರ ನೆಲೆ ಈ ದಿವ್ಯಶಕ್ತಿಗಿದೆ ಎಂದು ಆದಿಮಾನವರು ನಂಬುತ್ತಾರೆ. ಮಿಂಚು, ಸಿಡಿಲು ಚಂಡಮಾರುತ ಕಾಲದ ಗುಡುಗು ಇವೆಲ್ಲ ಆ ಅತೀತ ಚೈತನ್ಯದ ಕೋಪ, ರೋಷಗಳ ಸಂಕೇತಗಳೆಂದು ಅವರು ಭಾವಿಸುತ್ತಾರೆ. ಇಂಥ ಒಂದು ದಿವ್ಯಾತ್ಮವನ್ನು ಮೂರ್ತೀಕರಣಗೊಳಿಸಿ ಅರ್ಚಿಸುವ ನಂಬಿಕೆ ಮತ್ತೆ ಕೆಲವು ಬುಡಕಟ್ಟುಗಳಲ್ಲಿ ಕಂಡು ಬರುತ್ತದೆ. ಕೆಲವು ಸಲ ತಮ್ಮ ಬುಡಕಟ್ಟಿನ ಬಲಶಾಲಿ ಮುಖ್ಯಸ್ಥರನ್ನೇ ಆ ಅತೀತ ಶಕ್ತಿಯ ಪ್ರತಿನಿಧಿಯೆಂದು ಭಾವಿಸಿ ಅರ್ಚಿಸುವುದು ಉಂಟು. ಆದರೆ ಆ ಅತೀತಶಕ್ತಿ ಪ್ರತಿನಿಧಿಯೆಂದು ಭಾವಿಸಿ ಅರ್ಚಿಸುವುದು ಉಂಟು. ಆದರೆ ಆ ಅತೀತಶಕ್ತಿ ಅವರ ದೃಷ್ಟಿಯಲ್ಲಿ ಪಿತ, “ಸರ್ವಶಕ್ತ”.

ವಿವಿಧ ಬುಡಕಟ್ಟುಗಳಲ್ಲಿರುವ ಇ “ಸರ್ವಶಕ್ತಪಿತ” ಕಲ್ಪನೆಯನ್ನು ಗುರುತಿಸಿದ ಜಿಸ್ಬರ್ಟ್ ಆಯಾ ಬುಡಕಟ್ಟುಗಳ ಭಾಷೆಯಲ್ಲಿರುವ ಈ ಪರಿಕಲ್ಪನೆಯ ಒಂದು ಪಟ್ಟಿಯನ್ನೇ ಕೊಡುತ್ತಾರೆ.

ಸೇಮಂಗ್‌ದವರು “ಕರೇಯಿ” ಫಿಲಿಫಾಯಿನ್ಸ್‌ದ ಬಟಾನ್ ನಿಗ್ರೋಗಳು “ತೊಲಾಂಡಿಯಾ”, ಯುಯಿನ್ ಬುಕಟ್ಟು “ದರಮುಲಿಮ್” ಅಂದಮಾನದವರು “ಪಿಲುಗಾ” ಕುಲಿನ್‌ದವರು “ಬುಂದಜಿಲ್”, ಆಸ್ಟ್ರೇಲಿಯಾ ಬುಡಕಟ್ಟುಗಳು “ಮೊಟೊಗೊನ್” ಅಲ್ಗೊಂಕ್ವಯನ್ಸ್ರು “ಕಿತ್‌ಷಿಮನಿಟು” ಹೀಗೆ “ಈ ಎಲ್ಲ ಹೆಸರುಗಳು ಆ ಅತೀತ ಶಕ್ತಿಯ ಗುಣವೈಶಿಷ್ಟ್ಯಗಳಿಗೆ ಸಂಬಂಧಿಸಿದವಾಗಿವೆ.[16]  ಕರ್ತ, ಸೃಷ್ಟಾರ, ರಕ್ಷಕ, ನನ್ನ ತಂದೆ, ಮುಂತಾದ ಅರ್ಥ ಹೊಂದಿದ ಈ ಶಬ್ದಗಳು ದೈವೀ ಪರಿಕಲ್ಪನೆಯ ಅನಂತ ಶಕ್ತಿ, ಸೃಷ್ಟಿ ಮಂಗಲ ಶಕ್ತಿಗಳಿಗೆ ಸಮಸ್ಪಂದಿಯಾಗಿವೆ.

ಸರ್ವಚೈತನ್ಯವಾದ  (Animism) :

ಜನಪದ ನಂಬುಗೆಗಳ ಮೂಲಭೂತ ರೂಪ ಆತ್ಮತತ್ವದ ಸ್ವೀಕರಣವಾಗಿದೆ. ಕುಲಸಂಕೇತಗಳನ್ನು ಆಯ್ದು ಅವುಗಳಲ್ಲಿ ಅತೀತಶಕ್ತಿಯ ಆರೋಪ ಮಾಡಿ ಅರ್ಚಿಸ ತೊಡಗಿದ ಜನಪದ ಗುಂಪುಗಳ ಪ್ರಥಮಾವಸ್ಥೆಯ ನಂಬುಗೆ ಕಾಲಾನಂತರದಲ್ಲಿ ಹಾಗೇ ಉಳಿದುಕೊಂಡು ಬಂದುದು ಜನಪದ ಶ್ರದ್ಧೆಯ ಅಚಲತೆಗೆ ಸಾಕ್ಷಿ. ಅವರ ನಂಬಿಗೆ ಮಾನವ ಧರ್ಮದ ಮೂಲಭೂತ ತತ್ವವೂ ನಿಜ. ಯಾವುದೇ ಪಗರಾಣಿ ಅಥವಾ ವಸ್ತುವಿಗೆ ತನ್ನದೇ ಆದ ಆತ್ಮವಿದೆ. ಮಾನವ ಸತ್ತ ಮೇಲೂ ಅವನ ಆತ್ಮ ನಾಶವಾಗುವುದಿಲ್ಲ. ಹಾಗೆ ಸತ್ತವರು ಅಗೋಚರವಾಗಿರುತ್ತಾರೆ. ಈ ಆತ್ಮಗಳು ಅವಿನಾಶಿ, ಶಿಕ್ಷಿಸುವ ರಕ್ಷಿಸುವ ಸಾಮರ್ಥ್ಯ ಹೊಂದಿರುತ್ತವೆ. ಇದೊಂದು ವಿಶಿಷ್ಟಶಕ್ತಿ. ಟೇಯಲರ್ ಈ ನಂಬಿಕೆಯನ್ನು ಆತ್ಮತತ್ತ್ವ ಎಂದು ಕರೆದಿದ್ದಾನೆ. ಈ ಆತ್ಮಶಕ್ತಿ ಅಲೌಕಿಕ; ಅನಿಯಂತ್ರಿತ. ಈ ನಂಬಿಕೆಯ ಹಿನ್ನೆಲೆಯಲ್ಲಿ ಮೂಡಿ ಬಂದ ಆಚರಣೆಗಳಲ್ಲಿ ಹಿರೇರ ಹಬ್ಬ ಅಥವಾ ಯಜಮಾನ ಪೂಜೆ ಗಮನಾರ್ಹವಾದುದು. ವ್ಯಕ್ತಿ ಸತ್ತ ಸ್ಥಳದಲ್ಲಿ ದೀಪ ಉರಿಸುವದು ಈ ಆತ್ಮ ತತ್ವಕ್ಕೆ ಸಂಬಂಧಿಸಿ ಆಚರಣೆ. ವ್ಯಕ್ತಿ ಸತ್ತ ಮೂರು, ಒಂಭತ್ತು ಅಥವಾ ಹನ್ನೊಂದನೆಯ “ಒಳಗೆ ಕರೆದುಕೊಳ್ಳುವುದು” ಮತ್ತು ಅಂದಿನ ಅಡುಗೆಯಲ್ಲಿ ಸತ್ತ ವ್ಯಕ್ತಿಯ ಪ್ರೀತಿಯ ಭಕ್ಷಭೋಜ್ಯ ಅಥವಾ ತಲಬಿನ ಅವಸ್ತುಗಳನ್ನು ಸಿದ್ದಪಡಿಸಿ ಎಡೆಮಾಡುವುದು ಇತ್ಯಾದಿ ಈ ನಂಬುಗೆಯ ಅಲಿದುಳಿದ ರೂಪಗಳು.

ಕುರಿಗಾಹಿಒಕ್ಕಲು ಧಾರ್ಮಿಕ ನಂಬುಗೆಗಳು :

ಆದಿಮಾನವರಲ್ಲಿ ಕೆಲವರು ಪ್ರಾಥಮಿಕ ಹಂತದ ಬೇಟೆಗಾರಿಕೆಯನ್ನು ತೊರೆದು ತಮ್ಮ ಜೀವನ ನಿರ್ವಹಣೆಗೆ ಅವಲಂಬಿಸಿದ ವೃತ್ತಿಗಳೆಂದರೆ ಕುರಿ ಕಾಯುವುದು, ಮತ್ತು ಒಕ್ಕಲುತನ. ಕುರಿಗಾಹಿ ಸಮುದಾಯ ಅಥವಾ ಪ್ಯಾಸ್ಟರಲ್ ಸೊಸಾಯಿಟಿ – ಒಂದು ಸಶಕ್ತ ಸಮಾಜ. ಈ ಸಮುದಾಯದ ಜನ ಪರವಲಯದ “ಸ್ವರ್ಗ”ವನ್ನೇ ನಂಬಿದವರು.[17] ನಿಸರ್ಗದ ಕ್ರೂರ ಭೀಕರ ಶಕ್ತಿಗಳ ನಟ್ಟನಡುವೇ ಬದುಕುವ ಇವರು ಮುಗಿಲು, ಸೂರ್ಯ, ಗುಡುಗು – ಸಿಡಿಲು, ಬಿರುಗಾಳಿ ಬೆಟ್ಟಕಾಡು ಕೊಳ್ಳಗಳ ತೆಕ್ಕೆಗಳಲ್ಲಿಯೇ  ತಮ್ಮ ಕುರಿಗಾಹಿ ಕಾರ್ಯ ನಿಭಾಯಿಸಿಕೊಳ್ಳುತ್ತ ಮಜಭೂತಾಗಿ ಬೆಳೆದ ಜನಾಂಗಗಳಲ್ಲಿ “ಆಕಾಶ ದೇವರ” ಕಲ್ಪನೆ ಮೂಡಿಬಂದುದು ಅಚ್ಚರಿಯಲ್ಲ. ಬೇಟೆಗಾರ ವೃಂದಗಳ “ಅತೀತಶಕ್ತಿ”  ದನಗಾಹಿ ಬುಡಕಟ್ಟುಗಳ ಕಲ್ಪನೆಯಲ್ಲಿ ಮುಂದುವರೆದು ಅದೇ ಸೃಷ್ಟಿಕರ್ತ ಸರ್ವಶಕ್ತ, ಆತನಿಂದಲೇ ಜಗತ್ತು ನಿಯಂತ್ರಿಸಲ್ಪಡುತ್ತದೆ ಮುಂತಾದ ನಂಬಿಕೆಗಳ ಜೊತೆಗೆ ಈ ಸಮುದಾಯಗಳ ಪಿತೃ ಪ್ರಧಾನ ಕುಟುಂಬ ಪದ್ಧತಿಗೆ ಅನುಗುಣವಾಗಿ ಇತರ ಕೆಲವು ಸಣ್ಣ ಪುಟ್ಟ ದೇವತೆಗಳ ಬಗೆಗಿನ ನಿಷ್ಠೆಯೂ ಬೆಳೆದು ಬಂದಿತು. ದ್ಯಾಮವ್ವ, ದುರ್ಗವ್ವ ಇತ್ಯಾದಿ ಮಾತೃ ದೇವತೆಗಳು ಬಂದು ಸೇರಿಕೊಂಡವು ಈವು ನಾಗರಿಕತೆಯ ಪೂರ್ವದ ಧಾರ್ಮಿಕ ನಂಬಿಕೆಗಳು.

ಇತಿಹಾಸ ಪೂರ್ವದ ಅಥವಾ ಶಿಲಾಯುಗದ, ಕಾಲದಲ್ಲಿದ್ದ ವಿವಿಧ ಬಗೆಯ ದೇವತಾ ಪರಿಕಲ್ಪನೆ ಮತ್ತು ನಂಬುಗೆಗಳನ್ನು ಬುಟಕಟ್ಟುಗಳ ಅಧ್ಯಯನ ಮಾಡಿದ ವಿದ್ವಾಂಸರು ಗುರುತಿಸಿದ್ದಾರೆ. ಆಫ್ರಿಕಾದ ನಿಗ್ರೋ ಸಮುದಾಯಗಳಲ್ಲಿ, ಪ್ರಾಚೀನ ಆರ್ಯರ ತುರ್ಕ್‌ಮಂಗೋಲ ಮತ್ತು ಹ್ಯಾಮಿಟ್ ವೃಂದಗಳಲ್ಲಿ ಈ ಬಗೆಯ ಧಾರ್ಮಿಕ ರೂಪ ನೆಲೆಗೊಂಡಿದ್ದು, ಧಾರ್ಮಿಕ ಶ್ರದ್ಧೆಯ ಈ ಪ್ರಾಥಮಿಕ ಅಂಶಗಳು ಸುಮೇರಿಯನ್ ಮತ್ತು ಚೈನಾ ಜನಾಂಗದ ಉನ್ನತ ಸಾಧಿತ – ಸಂಸ್ಕೃತಿಗೆ ಪ್ರೇರಕವಾದುವೆಂದು ಹೇಳಲಾಗುತ್ತದೆ.[18] ಸೆಮೆಟಿಕ್ ಜನರ “ಅದಾದ್” ಮತ್ತು “ಆಮರ್” ದೇವತೆಗಳು, ಏಶಿಯಾ ಮೈನರ್‌ದ “ಧೆಸಬ್”  ಆರ್ಯರ “ಇಂದ್ರ” ರೋಮನ್ನರ “ಜೋವ್” ಗ್ರೀಕರ “ಝೀಅಸ್” ಸ್ಕ್ಯಾಂಡಿನೇವಿಯನ್‌ರ “ಥೋರ” ಮುಂತಾದ ದೇವತೆಗಳು, ಅನಾಚಾರ, ಅಸತ್ಯಗಳನ್ನು ದ್ವೇಷಿಸುವ ಮತ್ತು ಉದಾತ್ತ ನೀತಿಯನ್ನು ಪಾಲಿಸುವ ಶಕ್ತಿಗಳಾಗಿದ್ದಾರೆ. ಹಿಂದೂ ಸಂಪ್ರದಾಯದ ವರುಣ ಸತ್ಯ ಪರಿಪಾಲಕ. ಪರ್ಶಿಯಾದ ಆಹುರಾ ಮಜ್ದಾ ನ್ಯಾಯದೇವತೆ, ಯಹೂದಿಗಳ ಯೇಹೋವ ಸೃಷ್ಟಿಕರ್ತ, ನೀತಿನ್ಯಾಯಗಳ ಪ್ರದಾತ.

ನಿಸರ್ಗದ ಅದ್ಭುತ ಮತ್ತು ಅನಿಯಂತ್ರಿತ ಶಕ್ತಿಗಳೇ ಮೂರ್ತೀಕರಣಗೊಂಡು ದೇವತೆಗಳ ಸ್ವರೂಪಧಾರಣ ಮಾಡಿದುದೆಂದು ಪ್ರತ್ಯೇಕ ಹೇಳುವ ಕಾರಣವಿಲ್ಲ. ಈ ಬಗೆಯ ಬೇಟೆಗಾರ ಬುಡಕಟ್ಟಿನ ಏಕದೇವತಾ ಪರಿಕಲ್ಪನೆಯ ಪ್ರಧಾನ ಲಕ್ಷಣಗಳ  ಜೊತೆಗೆ ತಮ್ಮ ಪಂಥದ “ವೀರರು” ಮತ್ತು ತಮ್ಮ ಮೇಲೆ ಗಾಢ ಪ್ರಭಾವ ಬೀರಿದ ನಿಸರ್ಗ ಶಕ್ತಿಗಳಿಗೆ ದೇವತಾ ಸ್ವರೂಪವನ್ನು ಅನ್ವಯಿಸಿ, ಅರ್ಚಿಸುತ್ತ ಬಂದ ಪ್ರಪಂಚದ ಕುರಿಗಾಹಿ ಅಥವಾ ದನಗಾಹಿ ಕುಲಗುಂಪುಗಳ ಧಾರ್ಮಿಕ ನಂಬುಗೆಗಳನ್ನು ವಿಶ್ಲೇಷಿಸಿದ ವಿದ್ವಾಂಸ ಕ್ರಿಸ್ಟೊಫರ್ ಡಾವ್‌ಸನ್, ಭೌತಿಕನಾಗರಿಕತೆಯ ಹಿನ್ನೆಲೆಯಲ್ಲಿ ನೋಡಿದರೆ, ಕುರಿಗಾಹಿ ವೃಂದಗಳ ಬೌದ್ಧಿಕ ಮತ್ತು ನೈತಿಕ ವಿಕಾಸ ನಿರೀಕ್ಷೆಗಿಂತ ಉನ್ನತ ಮಟ್ಟದ್ದಾಗಿದೆ; ವಿಶಿಷ್ಟ ಲಕ್ಷಣಗಳಿಂದ ಕೂಡಿದೆ”.[19]

ಅಮೇರಿಕೆಯ ಮೊಂಟಾನಾ ಪ್ರದೇಶದ “ಕ್ರೌ” ಮತ್ತು ಭಾರತದ ಒರಿಸ್ಸಾ ಪ್ರದೇಶದ “ಸಾವೋರ” ಬುಡಕಟ್ಟುಗಳಲ್ಲಿದ್ದ ಧಾರ್ಮಿಕ ನಂಬುಗೆ ಅನೇಕ ಉತ್ಪನ್ನ ದೇವತೆಗಳ ನಿಮ್ನ ಪರಿಕಲ್ಪನೆಗಳಿಂದ ಕೂಡಿದ್ದು. ತುಂಬ ಅಸ್ತವ್ಯಸ್ತ ಮತ್ತು ವ್ಯಕ್ತಿಗತ ಪ್ರತಿಷ್ಠೆ ಮತ್ತು ಮೋಜುಗಳ ರೂಪಧಾರಣ ಮಾಡಿರುವುದನ್ನು ಕಂಡ ಜಿಸ್ಬರ್ಟ್ ಅಗ್ನಿ ಮತ್ತು ಪ್ರಕಾಶಗಳ ಹಿನ್ನೆಲೆಯಲ್ಲಿ ರೂಪಗೊಂಡ ಸೂರ್ಯದೇವನ ಜೊತೆ ಜೊತೆ ಬೆಳಗಿನ ನಕ್ಷತ್ರ, ಗುಡುಗುಗಳು ಅವರ ಶ್ರದ್ಧೆಯ ಅಂಶಗಳಾಗಿವೆಯೆಂದು ಹೇಳುತ್ತಾರೆ. ಅನೇಕ ಕ್ಷುದ್ರದೇವತೆಗಳ ಮಧ್ಯದಲ್ಲೂ ಸಾವೋರ್ ಬುಡಕಟ್ಟು ಆರಾಧಿಸುವ “ಉಯುಂಗ್‌ಸುಮ್” ಸೂರ್ಯದೇವ ಪರಿಕಲ್ಪನೆ ಮುಂದುವರೆದ ನಾಗರಿಕತೆ ಮತ್ತು ಧಾರ್ಮಿಕ ಶ್ರದ್ಧೆಗಳಲ್ಲಿ ಉಳಿಸು ಬಂದಿರುವುದು ಗಮನಾರ್ಹ. ನಿಸರ್ಗದ ಶಕ್ತಿಗಳನ್ನು ತಮ್ಮ ನಂಬುಗೆಯ ಚೌಕಟ್ಟಿನಲ್ಲಿ ಹಿಡಿದಿಟ್ಟ ಈ ಬುಡಕಟ್ಟುಗಳ ಜನಪದ ಧರ್ಮಸ್ವರೂಪ ಆದಿಮಾನವ ಚೈತನ್ಯದ ಅದ್ಭುತ ಸೃಷ್ಟಿಯಾಗಿದೆ.

ವಿಧಿ ನಿಷೇಧ – “ಮಾನಾಮತ್ತುಟಾಬು” :

ಬುಡಕಟ್ಟು ಕುರಿಗಾಹಿ ವೃಂದಗಳ – ಪ್ರಾಥಮಿಕ ಜೀವನ ಸ್ಥಿತಿಯಿಂದ ಒಕ್ಕಲು ಗುಂಪಿಗೆ ಬಂದರೆ : ಅವರ ಜೀವನದಲ್ಲಿ ಆಗಲೇ ಅನೇಕ ಆರ್ಥಿಕ ಶ್ರೇಣಿಗಳು, ಬಳಿಗಳು, ನೆಂಟಸ್ತಿಕೆ, ಬಂಧುತ್ವ, ಕೌಟುಂಬಿಕ ಸಾಮಾಜಿಕ ಒಪ್ಪಂದ, ನಡವಳಿಕೆಗಳು ರೂಪುಗೊಳ್ಳುತ್ತ ಬಂದವು, ಸ್ವಚ್ಛಂದವಾದ ಜೀವನದ ರೀತಿ ತಮ್ಮ ಸರ್ವನಾಶಕ್ಕೆ ಹಾನಿಕಾರಕ ಎಂದು ಅನುಭವಿಸಿ ತಿಳಿದ ಆದಿಮಾನವ ವೃಂದಗಳು ರೂಪಿಸಿದ ತಮ್ಮತಮ್ಮಲ್ಲಿ ಪರಿಪಾಲಿಸಬೇಕಾದ ಕೆಲವು ನೀತಿ – ನಿಯತ್ತುಗಳೇ ವಿಧಿಗಳು ” ಸತ್ಯಂವದ, ಧರ್ಮಂ ಚರ” ಮುಂತಾದ ಮಾತುಗಳು  – ಶಿಷ್ಟಪದ ಸಮಾಜದ ವಿಧಿಗಳಾಗಿ ರೂಪುಗೊಳ್ಳುವ ಎಷ್ಟೋ ಕಾಲ ಮೊದಲೇ ಬುಡಕಟ್ಟುಗಳಲ್ಲಿ ಈ ರೀತಿಯ ಕಟ್ಟಾಜ್ಞೆಗಳು ರೂಢಿಯಲ್ಲಿದ್ದವು. ವಿಧಿಗಳನ್ನು ಪಾಲಿಸುವುದು ಪ್ರಥಮ ಹಂತದಲ್ಲಿ ಸಾಮಾಜಿಕ ಅಗತ್ಯ; ದ್ವಿತೀಯ ಹಂತದಲ್ಲಿ ಧಾರ್ಮಿಕ ಆಚರಣೆಯ ಅನಿವಾರ್ಯತೆ; ನೈತಿಕ ಸ್ವರೂಪ ಧರ್ಮಕ್ಕೆ ಪ್ರಾಪ್ತವಾದದ್ದು ಈ ಹಂತದಲ್ಲಿಯೇ. ತಮ್ಮ ಜೀವನವನ್ನು ನಿಯಂತ್ರಿಸುವ ಅತೀತ ಶಕ್ತಿಯೊಂದಿದೆ. ತಾವು ಅನೀತಿಯಿಂದ ಬಾಳಕೂಡದು ಇತ್ಯಾದಿ ಕಲ್ಪನೆಗಳ ಜೊತೆಗೆ ಈ ಅತೀತಶಕ್ತಿ ಮುನಿಸಿದರೆ ತಮ್ಮನ್ನು ನಾಶ ಮಾಡುತ್ತದೆ. ಅದು ಸಂತೋಷಗೊಂಡು ಕರುಣಿಸಬೇಕಾದರೆ ನೀತಿನಡವಳಿಕೆಗಳ ಶುದ್ಧಿ ಬುಡಕಟ್ಟುಗಳಲ್ಲಿ ಅಗತ್ಯ. ಅದರಿಂದ ವಂಶದ ಅಭಿವೃದ್ಧಿಯೂ ಸಾಧ್ಯ ಇತ್ಯಾದಿ.

ಆದ್ದರಿಂದ “ಇದನ್ನು ಮಾಡು” ಎನ್ನುವುದು “ವಿಧಿ” ಯಾದರೆ ಇದನ್ನು “ಮಾಡ ಕೂಡದು” ಎನ್ನುವುದು “ನಿಷೇಧ” ವಾಯಿತು.

ಪೊಲಿನೇಶಿಯನ್ ಜನಾಂಗದ ಧಾರ್ಮಿಕ ಪರಿಕಲ್ಪನೆಯಲ್ಲಿ ಬರುವ “ಮಾನಾ” ಮತ್ತು :ಟಾಬೂ” ಗಳನ್ನು ಈ ಹಿನ್ನೆಲೆಯಲ್ಲಿ ವಿವೇಚಿಸಬಹುದು. “ಮಾನಾ” ಪದ ಮೂಲತಃ ಇಂಡೋನಿಶಿಯನ್ ಶಬ್ದ “ಮಾನಂಗ್” ಅಥವಾ “ಮೆನಂಗ” ದಿಮದ ಬಂದುದಾಗಿರಬೇಕು. ಇದರ ಅರ್ಥ ಒಂದು ಅತ್ಯಂತ ವಿಜಯಶಾಲಿ ಪ್ರಬಲಶಕ್ತಿ; ಅದು ಅಸಾಧಾರಣ, ಅಸಾಮಾನ್ಯ. ಸೂರ್ಯ ಹೊಳೆಯುತ್ತಿದ್ದಾಗಲೂ ಧಾರಾಕಾರವಾಗಿ ಸುರಿಯುವ ಮಳೆಯಂತೆ ಇದರ ಪರಿಕಲ್ಪನೆ. ಅಂದರೆ ಅದು ಮಾನವ ಜೀವನದ ಜೊತೆ ಸದಾ ತೊಡಗಿಕೊಂಡಿರುತ್ತದೆ. “ಮಾನಾ” ಎನ್ನುವುದು ಒಮದು ವಿಶ್ವಮಾಂತ್ರಿಕ ಶಕ್ತಿ, ಧರ್ಮಸೃಷ್ಟಗೊಂಡ ಮೂಲ ರಹಸ್ಯ ಎನ್ನುವ ಮಾನವಶಾಸ್ತ್ರಜ್ಞರ ಅಭಿಪ್ರಾಯಕ್ಕೆ ಸಾಕಷ್ಟು ಆಧಾರಗಳಿಲ್ಲವೆಂದು ಜಿಸ್ಬರ್ಟ್ ಅಭಿಪ್ರಾಯ. ಪೋಲಿನೇಸಿಯಾ ಮತ್ತು ಮೈಕ್ರೊನೇಶಿಯಾದ ಜನಗಳಲ್ಲಿ “ಮಾನಾ” ಕ್ಕಿರುವ ಅರ್ಥ ಅನೇಕ ಬಗೆಯದು ದೈವ, ಸುದೈವ, ಮಾನ, ಅಧಿಕಾರ, ಸಾತ್ವಿಕತೆ ಪಾವಿತ್ರೈ  ಇತ್ಯಾದಿ.

ಅತೀಶಕ್ತಿಯೊಂದರ ಭಯ – ಅದನ್ನು ತಮ್ಮ ನಿತ್ಯ ಜೀವನದಲ್ಲಿ ತೊಡಗಿಸಿಕೊಂಡು ಅದರ ಆಜ್ಞೆಯಂತೆ ಪವಿತ್ರನಾಗಿ ಬಾಳಿದಾಗ ಸುದೈವ, ಪ್ರತಿಷ್ಠೆಗಳು ಸಮೃದ್ಧಿ ಕೂಡಿ ಬರುತ್ತವೆ ಎನ್ನುವ ದೃಷ್ಟಿಯಿಂದ “ಮಾನಾ” ಮತ್ತು ವಿಧಿಗಳಿರುವ ಸ್ಥೂಲ ಸಾಮ್ಯತೆಯನ್ನು ಗುರುತಿಸಬಹುದು.

ಇರೋಕ್ವಿಯಸ್‌ದ “ಒರೆಂಡಾ” ಸಿಯೋಕ್ಸ್‌ದ “ವಕಂಡಾ” ಅಲ್ಗಾಂಕ್ವಿಯನ್‌ರ “ಮನಿಂಟು” ಮುಂತಾದ ಪರಿಕಲ್ಪನೆಗಳು “ಪವಿತ್ರ” ಅಥವಾ “ಆತ್ಮ”ದ ಅರ್ಥವನ್ನು ಒಳಗೊಂಡಿವೆ”[20] ಇದು ಅಸಾಮಾನ್ಯ “ಆತ್ಮ” ವಾಗಿರುವುದರಿಮದ ಎಲ್ಲರೂ ಇದಕ್ಕೆ ಬಾಗಿ – ಭಯಕ್ಕೆ ಒಳಗಾಗಿ ಬಾಳಬೇಕು ಎನ್ನುವುದು ಇದರ ಅಂತರಾರ್ಥವಾಗಿರಬೇಕು. ಟೊಂಗಾ ಭಾಷೆಯ “ಮಿರ್ಯಾಕಲ್” ಪದದ ಅರ್ಥ ಬೈಬಲ್‌ದಲ್ಲಿ “ಮಾನಾ” ಎಂದು ಕೊಡಲಾಗಿದೆ.[21]  ಆದ್ದರಿಂದ “ಮಾನಾ” ಎನ್ನುವುದು ಒಂದು ಅಘಟಿತ ಘಟನಾ ಸಾಮರ್ಥ್ಯವುಳ್ಳ ಶಕ್ತಿ ; ಬುಡಕಟ್ಟುಗಳ ಬದುಕಿನಲ್ಲಿ ಅದೊಂದು ವಿಸ್ಮಯಕಾರೀ ವರ್ತನೆಯುಳ್ಳ ಪವಾಡಶಕ್ತಿ. ತಪ್ಪಿ ನಡೆದರೆ ಅದು ಏನು ಬೇಕಾದರೂ ಮಾಡಬಲ್ಲುದು ಎನ್ನುವ ಸೂಚನೆ.

“ಟಾಬೂ” ಎನ್ನುವುದು ಪೊಲಿನೇಶಿಯನ್ ಭಾಷೆಯ “ಟಾಪೂ” ಪದದಿಂದ ಬಂದುದು. ಇದು “ಮಾನಾ” ದ ಇನ್ನೊಂದು ಮುಖ.[22] ಅನಾದಿ ಕಾಲದಿಂದ ಜನಪದ ನಂಬಿಕೆಗಳಲ್ಲಿ ಬೇರೂರಿದ “ಟಾಬೂ” ಗಳಿಗೆ ಧಾರ್ಮಿಕ ರೂಪದ ಸಾಮಾಜಿಕ ಬದ್ಧತೆ ಪ್ರಾಪ್ತವಾಗಿದೆ. ಧರ್ಮದ ದೃಷ್ಟಿಯಿಂದ ವಿಧಿಸಲಾದ ಕೆಲವು ವಿಷೇಧಗಳೇ “ಟಾಬೂ” ಬೈಬಲ್‌ದಲ್ಲಿ ಬರುವ ಈಡನ್‌ ತೋಟದ ಆದಂ ಮತ್ತು ಈವ್ ಅವರಿಗೆ ಅಲ್ಲಿಯ ಹಣ್ಣು ತಿನ್ನುವುದು ನಿಷಿದ್ಧವಾದುದಕ್ಕೆ ಖಚಿತ ಕಾರಣಗಳು ದೊರಕುವುದಿಲ್ಲ. ಆದರೆ ಈ “ನಿಷೇಧ” ವನ್ನು ಮೀರಿದ್ದು – ಬಳಿಕ ನಡೆದ ಮಾನವ ಜೀವನದ ಘಟನೆಗಳು ಆದಿಮಾನವರ ಕಾಲದ “ನಿಷೇಧ” ಗಳ ಮಹತ್ವವನ್ನು ಎತ್ತಿ ತೋರಿಸುವ ನಿದರ್ಶನವೆಂದು ಹೇಳಬಹುದು. ನಿಷೇಧಗಳು ಜನಪದ ಬದುಕಿನ ಸಾಮಾಜಿಕ ಸ್ತರದ ವಿಚ್ಛಿದ್ರಕಾರೀ ಸಂಬಂಧಗಳ, ಕ್ರೂರ ಪ್ರಸಂಗಗಳ ಅನುಭವದಿಂದ ಹುಟ್ಟಿಕೊಂಡು ಅವರ ಆಚರಣೆಯಲ್ಲಿ ಸಹಜವಾಗಿ ಬೆರೆತು ಬಂದ ಸಂಗತಿಗಳು.

ವಂಶಪಾವಿತ್ಯ್ರದ  ಅಗಮ್ಯಗಮನ ನಿಷೇಧಗಳು :

ಈಜಿಪ್ಟ್ ಮತ್ತು ಹವಾಯಿ ಕುಲಗುಂಪುಗಳಲ್ಲಿ ಅಲ್ಲಿಯ ರಾಜಮನೆತನದವರು ರಕ್ತ ಸಂಬಂಧ ಬೆಳೆಸಬೇಕಾದರೆ ತಮ್ಮ ಸೋದರಿಕೆಯಲ್ಲಿಯೇ ನೆರವೇರಿಸಬೇಕಾಗುತ್ತಿತ್ತು. ಅವರು ಇತರ ಗುಂಪುಗಳೊಡನೆ ಸಂಬಂಧ ಬೆಳೆಸುವುದು, ಮಕ್ಕಳನ್ನು ಹೊಂದುವುದು ನಿಷಿದ್ದವಾಗಿತ್ತು. ಇದರಲ್ಲಿ ಒಂದು ಬಳಿ ತನ್ನ ವೃಂದದ ಶುದ್ದಿಸಂರಕ್ಷಣೆಗಾಗಿ ಇಂಥ ನಿಷೇಧಗಳನ್ನು ರೂಪಿಸಿಕೊಂಡಿದ್ದು ಇವು ಸಾಮಾಜಿಕ ಸ್ತರದ ನಿಷೇಧಗಳಾಗಿ ಮಾತ್ರ ಮಹತ್ವ ಪಡೆಯುತ್ತವೆ. ಇದರಲ್ಲಿ ಆರ್ಥಿಕವಾಗಿ ಉನ್ನತ ಸ್ಥಿತಿ ಪಡೆದ ಒಂದು ವೃಂದ ತನ್ನ ಮೇಲ್ಮೈಯನ್ನು ಸ್ಥಿರಗೊಳಿಸುವ ಯತ್ನವೂ ಅಡಕಗೊಂಡಿದೆ. ನಿಷೇಧಗಳು ಅನೇಕ ಬಗೆಯವು ಗಂಡು – ಹೆಣ್ಣಿನ ಸಂಬಂಧದ ಲೈಂಗಿಕ ನಿಷೇಧಗಳು. ತಾಯಿ ಮಗ, ಅಕ್ಕತಮ್ಮ, ಅಣ್ಣ – ತಂಗಿ ಮುಂತಾದ ವ್ಯಕ್ತಿಗಳ ನಡುವೆ ಲೈಂಗಿಕ ಸಂಬಂಧ ನಿಷಿದ್ದ. ಈ ನಿಷೇಧಗಳು ಕೌಟುಂಬಿಕ ಸ್ವಾಸ್ಥ್ಯ ಸಾಮಾಜಿಕ ನೆಮ್ಮದಿಗೆ ನೆರವಾಗಿ ಜನಪದರ ಧರ್ಮದ ನೈತಿಕ ನಿಷ್ಠೆಗೆ ನೆರವಾಗುವಂಥವು ಆಗಮ್ಯಗಮನ “ಇನ್ ಸೆಸ್ಟ್” ಮಾಡಿದ ವ್ಯಕ್ತಿ ಅಲೌಕಿಕ ಶಕ್ತಿ “ಮಾನಾ” ದ ಉಗ್ರಕೋಪಕ್ಕೆ ತುತ್ತಾಗುತ್ತಾನೆ, ನಾಶವಾಗುತ್ತಾನೆ ಇತ್ಯಾದಿ ನಂಬಿಕೆಗಳು ಇಂಥ ನಿಷಿದ್ಧಗಳ ಫಲಶ್ರುತಿಗಳು ಇಂಥ ನಿಷಿದ್ಧಗಳಿಂದಾಗಿ ಸಾಮಾಜಿಕ ನೀತಿ ಪಾಲನೆಗೆ, ಧಾರ್ಮಿಕ ನಂಬುಗೆಯ “ಅತೀತ” ಶಕ್ತಿ ಸಹಾಯವಾಗುತ್ತದೆ. ಜನಾಂಗಿಕ ಜೀವನವನ್ನು ನಿಯಂತ್ರಿತ ರೀತಿಯಲ್ಲಿ ಮುನ್ನಡೆಯಲು ನೆರವಾಗುತ್ತದೆ.

ಧಾರ್ಮಿಕ ವಿಧಿ ನಿಷೇಧಗಳು ಮಾನವ ಜನಾಂಗವನ್ನು ಆದಿಮಾನವಕಾಲದಿಂದ ಒಂದು ನಿಟ್ಟಿನಲ್ಲಿ, ಶ್ರದ್ಧೆಯ ಬೆಳಕಿನಲ್ಲಿ ಮುನ್ನಡೆಸಿಕೊಂಡು ಬಂದ ಪ್ರಬಲಶಕ್ತಿಗಳು ಧಾರ್ಮಿಕ ವಿಧಿಗಳಲ್ಲಿ ಪ್ರಸಿದ್ದವಾದ ಒಂದು ವಿಧಿಯ ನಿದರ್ಶನವೆಂದರೆ ಅತೀತ ಅಥವಾ ಅಲೌಕಿಕ ಶಕ್ತಿ ಮಾನವ ಲೋಕದ ಒಂದಲ್ಲ ಒಂದು ರೂಪ ವಸ್ತುಗಳ ಮುಖಾಂತರ ಜನರಿಗೆ ದರ್ಶನ ಕೊಡುವುದು ಮತ್ತು ಆಜ್ಞೆಗಳನ್ನು ನೀಡುವುದು, ಒಗಟಿನ ಬೆಡಗಿನ “ಕಾರಣಿಕ” ಗಳನ್ನು ಸಾರುವುದು ದೇವರ ಮೂರ್ತಿಯ ಮೇಲಿನ ಒಂದು ಹೂಬಿದ್ದಾಗ ಅಪ್ಪಣೆಯಾಯಿತು. ಅರ್ಚಕ ಬುಡಕಟ್ಟಿನ ಯಜಮಾನ ಅಥವಾ ಯಾವುದೇ ಒಬ್ಬ ವ್ಯಕ್ತಿಯ ಮೈಯಲ್ಲಿ ದೇವರು ಪ್ರವೇಶ ಮಾಡುವುದು “ಮೈದುಂಬುವುದು”. ಇಂಥ ಪ್ರಸಂಗಗಳಲ್ಲಿ ಮೈದುಂಬಿದ ವ್ಯಕ್ತಿ ಅವನಿಗೆ ಇಷ್ಟವಿರಲಿ ಇಲ್ಲದಿರಲಿ ಅತ್ಯಂತ ಕಟ್ಟುನಿಟ್ಟಿನ ವೃತಾಚಾರಣೆ ಮಾಡುತ್ತಾನೆ. ಇತರರಿಗಿಂತ ವಿಶಿಷ್ಟವಾಗಿ ವರ್ತಿಸುತ್ತಾನೆ. ದರುವುದುಂಬಿ ಮೈನಡುಗಿಸುವುದು, ತಲೆತೂಗಿಸಿ, ಜಟೆಗಳನ್ನು ಬೀಸುವುದು ಇತ್ಯಾದಿ ಲಕ್ಷಣಗಳಿಂದ ಆತ ಅಲೌಕಿಕ ಶಕ್ತಿಯ ಪ್ರತಿನಿಧಿಯೇ ಎಂದು ಜನರಲ್ಲಿ ಕಡ್ಡಾಯದ ನಂಬುಗೆ. ವೀರಭದ್ರದೇವರ ಪುರವಂತರು, ಮೈಲಾರಲಿಂಗನ ಗೊರವರು, ಅವರ ಕಾರಣಿಕ, ಭೂತಾರಾಧನೆ ಇತ್ಯಾದಿಗಳನ್ನು ನೆನೆಸಿಕೊಳ್ಳಬಹುದು. ಜನಪದ ವೃಂದಗಳಲ್ಲಿ ಆಳವಾಗಿ ಬೇರೂರಿರುವ ಈ ಬಗೆಯ ನಂಬಿಕೆಗಳು ಅದರ ಕ್ರಿಯಾರೂಪದ ಆಚರಣೆಗಳು ವಿಶಿಷ್ಟ ಪ್ರಭಾವ ಬೀರುತ್ತ ನಂದಿವೆ. ಇಂಥ ದೇವತಾ ಪ್ರತಿನಿಧಿಗಳು ಸಾರುವ ಕಾರಣಿಕ ಬಹು ಪರಿಣಾಮಕಾರಿ.

ವಿಧಿ ನಿಷೇಧಗಳು ಜನಪದರ ನಂಬಿಕೆಗಳ ಬಹು ಮುಖ್ಯ ಅಂಗವಾಗಿ ಈ ವೃಂದಗಳನ್ನು ನಿಯಂತ್ರಿತ ರೀತಿಯಲ್ಲಿ ಬಂಧಿಸಲ್ಪಟ್ಟವು. ವಿಧಿಗಳನ್ನು ಮೀರಿದರೆ, ನಿಷಿದ್ಧಗಳನ್ನು ಮುರಿದರೆ ದೇವತೆಗಳು ಕೋಪಗೊಳ್ಳುತ್ತಾರೆ. ರೋಷದಿಂದ ಕಿಡಿಕಾರುತ್ತಾರೆ. ಇಡೀ ಸಮುದಾಯದ ಬದುಕಿಗೆ ಅದರಿಂದ ಕೇಡು, ನಾಶ, ಆದ್ದರಿಂದ ಯಾವು ಯಾವುದೋ ನೈಸಗಿಕ ಕಾರಣದಿಂದ ಬೆಳೆಗಳು ನಾಶವಾದರೆ, ಮಳೆ ಬಾರದಿದ್ದರೆ, ಸಾಂಕ್ರಾಮಿಕ ರೋಗರುಜಿನಗಳು ಹರಡಿದರೆ ಇತ್ಯಾದಿ ಪ್ರಸಂಗಗಳು ದೇವತೆಯ ಅಸಂತೃಪ್ತಿಯ ಅಭಿವ್ಯಕ್ತಿಯೇ ಎಂದು ನಂಬಿದ ಜನಪದರ ವಿವಿಧ ಬುಡಕಟ್ಟು, ವೃಂದಗಳಲ್ಲಿ ಪಶುಬಲಿ, ನರಬಲಿ,, ಕೃಷಿ ಉತ್ಪತ್ತಿಗಳ ಕಾಣಿಕೆಗಳ ಆಚರಣೆಗಳು ರೂಢಿಯಲ್ಲಿ ಬಂದವು. ತಮ್ಮಲ್ಲಿ ಯಾರೋ ಅಂಥ ಅಪರಾಧ ಮಾಡಿದ್ದಾರೆಂದು ಸಹಜವಾಗಿ ನಂಬಿ, ದೇವತಾ ಪ್ರತಿನಿಧಿಗಳಾದ – ಪೂಜಾರಿ, ಪುರೋಹಿತ, ಗುರು, ಕೆಲವು ಸಲ ಪಂಗಡದ ಮುಖ್ಯಸ್ಥನೂ ಆಗಬಹುದು ಇವರೆಲ್ಲ ಧಾರ್ಮಿಕ ಪರಿಣಿತರೆಂದು ಜನಪದರ ಶ್ರದ್ಧೆ ಇವರ ಆಜ್ಞೆಯಂತೆ ಅನೇಕ ಆಚರಣೇಗಳನ್ನು ಕಡ್ಡಾಯವಾಗಿ ಪಾಲಿಸುತ್ತ ಬಂದರು.

ಯಾವುದೇ ದೇವತೆಗೆ ಕುರಿ, ಕೋಣ ಮುಂತಾದ ಪ್ರಾಣಿಗಳ ಬಲಿ ಕೊಡುವಾಗ ಜನಪದರ ದೃಷ್ಟಿಯಲ್ಲಿ ಇದು ಕೇವಲ ಅರ್ಪಣೆ ಎನ್ನುವ ಭಾವನೆ ಮಾತ್ರ ಇರುವುದಿಲ್ಲ. “ಬಲಿ” ಪದ್ಧತಿಯ ಮೂಲಕ ಒಂದು ವೃಂದ ತನ್ನ ಅಸಂತೃಪ್ತ ದೇವತೆಯನ್ನು ಸಂತೃಪ್ತಗೊಳಿಸಿ ಆ ದೇವರೊಂದಿಗೆ ತಾನು ಒಂದಾದೆ ಎಂದು ಭಾವಿಸುತ್ತ ಬಂದಿತು. ಜನಪದರ ಈ ಹಂತದ ನಂಬಿಕೆ ಅತ್ಯಂತ ಕ್ರೂರವಾದರೂ ಗಾಢವಾದುದು. ಏಕೆಂದರೆ ಬಲಿಪದ್ಧತಿಯಿಂದ ರಕ್ತವನ್ನು ಚೆಲ್ಲಿದಾಗ ಆ ದೇವತೆಗೂ ತಮಗೂ ಒಂದು ಅವಿನಾಭಾವ ರಕ್ತಸಂಬಂಧ ಏರ್ಪಡುತ್ತದೆ ಎನ್ನುವುದು ಇವರ ಆಳವಾದ ತಿಳುವಳಿಕೆ.

ಹೆನ್ರೀವೈಟ್‌ಹೆಡ್‌ ತನ್ನ “ದಕ್ಷಿಣ ಭಾರತದ ಗ್ರಾಮದೇವತೆಗಳು”[23] ಕೃತಿಯಲ್ಲಿ ಆಫ್ರಿಕಾದ “ಮಾಂಬೆಟ್ಟು” ಬುಡಕಟ್ಟಿನಲ್ಲಿರುವ ಒಂದು ಆಚರಣೆಯನ್ನು ಉಲ್ಲೇಖಿಸುತ್ತಾನೆ. ಈ ಕಪ್ಪು ಜನ ಶಸ್ತ್ರಾಸ್ತ್ರಗಳಿಂದ ರಕ್ತ ಚಿಮ್ಮುವವರೆಗೆ ಹೊಡೆದಾಡುತ್ತಾರೆ. ದ್ವೇಷವಿಲ್ಲದ ಅವರ ಹೊಡೆದಾಟದಲ್ಲಿ ಒಬ್ಬನಿಗೆ ಗಾಯವಾಗಿ ರಕ್ತಚಿಮ್ಮಿದಾಗ ಜೊತೆ ಹೊಡೆದಾಡಿದ ಇನ್ನೊಬ್ಬ ವ್ಯಕ್ತಿ ಅವನ ರಕ್ತ ನೆಕ್ಕುತ್ತಾನೆ ಅಥವಾ ಕುಡಿಯುತ್ತಾನೆ. ಇದರಿಂದ ತಮ್ಮ ಸೋದರ ಸಂಬಂಧ, ರಕ್ತ ಸಂಬಂಧ ಗಟ್ಟಿಗೊಂಡಿತು ಎಂದು ಅವರು ನಂಬುತ್ತಾರೆ. ಈ ಜನಾಂಗ ತಮ್ಮ ಗುಂಪಿನ ಒಬ್ಬ ಸದಸ್ಯನನ್ನು ಕೊಡ್ಲಿ, ಕುಡಗೋಲಿನಿಂದ ಕಡಿದು ಚೆಲ್ಲಿ ದೇವರಿಗೆ ಬಲಿಕೊಟ್ಟು ಇದರಿಂದ ತಮ್ಮ ಗುಂಪು ಮತ್ತು ದೇವರ ಮಧ್ಯೆ ನಿಕಟ ಸಂಬಂಧ ಉಂಟಾಯಿತು ಎಂದು ನಂಬುತ್ತದೆ.

ಸಿಡಿಯಾಡುವುದು. ಮಾರಮ್ಮನ ಹಬ್ಬ, ಮೈಲಾರಭಕ್ತರ ಪವಾಡ ಇತ್ಯಾದಿಗಳು, ಕುತೂಹಲಕಾರಿಯಾದ ಆಚರಣೆಗಳು.

ವಿಧಿನಿಷೇಧಗಳು ಎಷ್ಟೇ ಪ್ರಬಲವಾದ ಆಚರಣೆಗಳ ಹುಟ್ಟಿಗೆ ಕಾರಣವಾಗಿದ್ದರೂ ಮೇಲುವರ್ಗದವರು ವಿಧಿಗಳನ್ನು ವಿಧಿಸುವುದು, ಕೆಲವರ್ಗದವರಿಗೆ ನಿಷೇಧಗಳನ್ನು ಪಾಲಿಸುವುದು ಜನಪದರ ಆರ್ಥಿಕ ಶ್ರೇಣಿಗಳ ದೃಷ್ಟಿಯಿಂದ, ಸಮಾಜ ವ್ಯವಸ್ಥೆಯ ವೈಷಮ್ಯಗಳ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಮಹತ್ವದ ಆಕರಗಳಾಗಿವೆ ಎಂದು ಮಾತ್ರ ಹೇಳಬಹುದು.

ಮಾಟಮಂತ್ರ :

ಆದಿಮಾನವ ಕಾಲದಿಂದಲೂ ಅವರ ಸಾಮೂಹಿಕ ಜೀವನದಲ್ಲಿ ಮಾಂತ್ರ – ಮಾಟಗಳು ಮಹತ್ವದ ಸ್ಥಾನ ಹೊಂದಿರುವಂತೆ, ಇವುಗಳ ಹಾವಳಿ ಅಥವಾ ಪ್ರಭಾವ ಅಧಿಕವಾದುದು. ಧರ್ಮ ಒಂದು ಪ್ರಾಕೃತಿಕ ಶ್ರದ್ಧೆಯಾಗಿ ರೂಪುಗೊಳ್ಳುವ ಆಂತರಿಕ ವಸ್ತು; ಮಂತ್ರ ಮಾಟಗಳು ಸುತ್ತಮುತ್ತಣ ವಸ್ತು ಸಂಗತಿಗಳನ್ನು  ಕುರಿತು ಆಲೋಚಿಸುವ ಮತ್ತು ಅವುಗಳನ್ನು ಕುರಿತಾದ ಕೆಲವು ಕ್ರಿಯಾರೂಪ[24] ಎನ್ನುವುದು ವಿದ್ವಾಂಸರ ಮತ. ಹಾಗೆ ನೋಡಿದರೆ ಜನಪದರ ಧರ್ಮಕ್ಕೂ ಮಾಟಮಂತ್ರಗಳಿಗೂ ನೇರವಾದ ಸಂಬಂಧವನ್ನು ಕಲ್ಪಿಸಲಾಗದೆಂದು ತೋರುತ್ತದೆ. ಆದರೆ ಇವು ಸ್ವರೂಪದ ಕೆಲವು ಅಗೋಚರ ಶಕ್ತಿಗಳ ಆಹ್ವಾನ, ಆವಿರ್ಭಾವಗಳ ಹಂತದಲ್ಲಿ, ಈ ಶಕ್ತಿಗಳನ್ನು ಒಲಿಸಿಕೊಂಡು ಅದರಿಂದ ಸಾಮಾಜಿಕರ ಮೇಲೇ ಇಷ್ಟ ಅನಿಷ್ಟರೂಪದ ಪರಿಣಾಮ ಬೀರುವ ಮಟ್ಟದಲ್ಲಿ, ಮಂತ್ರ ಮಾಟಗಳಿಗೂ ಧರ್ಮಕ್ಕೂ ಒಂದು ರೀತಿಯ ಉಪ ಸಂಪರ್ಕ “ಸಬ್‌ಕಾಂಟ್ಯಾಕ್ಟ್” ಏರ್ಪಟ್ಟಿದೆಯೆಂದು ಹೇಳಬಹುದು ಧರ್ಮದಲ್ಲಿ ತೊಡಗಿಕೊಳ್ಳುವ ಇವುಗಳನ್ನು – ಮ್ಯಾಜಿಕೊರಿಲೀಜಿಯಸ್ – “ಮಾಟ – ಧರ್ಮ” ಎಂದು ಕರೆಯಲಾಗಿದೆ.[25] ಮಾಲಿನೋವ್ಹಸ್ಕಿ ಮಾಟಗಳನ್ನು ಒಂದು ವ್ಯಾವಹಾರಿಕ ಕಲೆ ಎಂದು ಕರೆಯುತ್ತಾನೆ. ಮಾಟಗಳು ವೈಯಕ್ತಿಕ ಆಸೆ – ಆಕಾಂಕ್ಷೆಗಳ ಹಿನ್ನೆಲೆಯಲ್ಲಿಯೇ ಹೆಚ್ಚಾಗಿ ನಡೆಯುವುದರಿಂದ, ವಿಚಿತ್ರ ಆಚರಣೆಗಳು – ಭಾನಾಮತಿ, ಕಪ್ಪುಮಾಟ – ಭೂತ ಪಿಶಾಚಿಗಳನ್ನು ಬಿಡಿಸುವುದು ರೋಗರುಜಿನಗಳನ್ನು ಕಳೆಯುವುದು. – ಬಿಳಿಮಾಟ – ಈ ಸಂದರ್ಭಗಳಲ್ಲಿ ತಲೆಯೆತ್ತುವುದರಿಂದ ಇವು ಒಂದು ವಿಧದ “ಮಿಥ್ಯಂ” ಪರಿಸರ ಸೃಷ್ಟಿ, ಭಯೋತ್ಪಾದಕ ಸ್ಥಿತಿಗಳಿಗೆ ಹುಟ್ಟು ಹಾಕುವುದರಿಂದ ಧರ್ಮಕ್ಕಿಂತ ಭಿನ್ನವಾದುವು ಎನ್ನುವುದು ಹೆಚ್ಚು ಸಾಧು. ಆದ್ದರಿಂದಲೇ ಮಾಟಗಳಿಗೆ “Pseudo Science” ತೋರಿಕೆ ವಿಜ್ಞಾನ ಎಂದು ಫ್ರೇಜರ್ ಹೇಳುತ್ತಾನೆ.

ಧರ್ಮ ಮಾನವ ಜೀವನದ ಆಧಾರ ಅವನ ನಂಬಿಕೆಯ ಮೂಲಭೂತ ಘಟಕವಾಗಿರುವುದರಿಂದ, ವಿಪರೀತ ಕ್ರಿಯಾಚರಣೆಗಳಿರುವ ಮಂತ್ರಮಾಟಗಳ ವಿಸ್ತೃತ ಚರ್ಚೆ ಇಲ್ಲಿ ಅನಗತ್ಯ.

ಪಾರ್ಥನೆಸ್ತುತಿ

ಆದಿಮಾನವ ಕಾಲದಿಂದ ವಿವಿಧ ಜನಪದ ಬುಡಕಟ್ಟುಗಳಲ್ಲಿ ಮೂಡಿದ ಧಾರ್ಮಿಕ -ನಂಬುಗೆಗಳ ಇನ್ನೊಂದು ರೂಪ, ಅವರು ನಂಬಿದ ದೇವತೆಗಳನ್ನು ಕುರಿತು ಮಾಡುವ ಸ್ತುತಿ ಮತ್ತು ಪ್ರಾರ್ಥನೆಗಳು :

“ಏಳೂತ ನಾನೆದ್ದ ಯಾರ್ಯಾರ ನೆನಿಯಲಿ
ಎಳ್ಳುಜೀರಿಗಿ ಬೆಳೆಯೋಳು – ಭೂಮಿತಾಯಿ
ಎದ್ದೊಂದು ಗಳಿಗೀ ನೆನದೇನ”

ಎನ್ನುವ ಒಂದು ಜನಪ್ರಿಯ ಜನಪದ ಪ್ರಾರ್ಥನೆಗಳಿಂದ ಮೊದಲುಗೊಂಡು, ಜನಪದರಿಗೆ ಒದಗುವ ಜೀವನದ ಅನೇಕ ಅಸಹಾಯಕ ಸಂದರ್ಭಗಳಲ್ಲಿ ಅವರು ಪಾರ್ಥನೆಯ ಮೂಲಕ ತಮ್ಮ ದೇವತೆಯನ್ನು ಆರಾಧಿಸುತ್ತಾರೆ. ಆದ್ದರಿಂದ ಪ್ರಾರ್ಥನೆ ಎನ್ನುವುದು ದೇವತಾರಾಧನೆಯ ಒಂದು ಕ್ರಮ. ಇದರಿಂದ ತಮಗೂ ಆಕಾಶದ ಆಚೆಯ ಪರವಲಯದಲ್ಲಿರುವ ಅತೀತ ಶಕ್ತಿಗೂ ಒಂದು ನೇರ ಸಂಪರ್ಕ ಸಾಧ್ಯವಾಗುತ್ತದೆ ಎನ್ನುವುದು ಜನಪದರ ವಿಶ್ವಾಸ.

ನಿಗ್ರೋ, ಬುಷ್ಮೆನ್, ಯಾಹಗಾನ್, ಫ್ಯುಯೇಜಿಯನ್ ಮುಂತಾದ ಬುಡಕಟ್ಟುಗಳು ಬೆಳಗು, ರಾತ್ರಿ ವ್ಯಕ್ತಿಗತವಾಗಿ, ಸಾಮೂಹಿಕವಾಗಿ ದೇವತಾಸ್ತುತಿ ಮತ್ತು ಪ್ರಾರ್ಥನೆ ಸಲ್ಲಿಸುವುದನ್ನು ಗುರುತಿಸಲಾಗಿದೆ. ಆ ದೇವನು ಸರ್ವಶಕ್ತ ; ಕರುಣಾಮಯಿ. ಆತನ ಪ್ರಾರ್ಥನೆ ಮಾಡುವುದರಿಂದ ದೈವೀ ಕರುಣೆ ತಮ್ಮ ಮೇಲೆ ಸುರಿಯುತ್ತದೆ, ತಮ್ಮನ್ನು ರಕ್ಷಿಸುತ್ತದೆ. ಎನ್ನುವ ನಂಬಿಕೆ ಈ ಬಗೆಯ ಆಚರಣೆಗಳ ಬೆನ್ನೆಲುಬು.[26]

ಆದಿಮಾನವ ಮತ್ತು ಜನಪದ ಸಮಾಜಗಳಷ್ಟು ನಿಸರ್ಗವನ್ನು  ಅವಲಂಬಿಸಿ ಬದುಕಿದವರು ಬೇರಾರೂ ಇಲ್ಲ. ಭೌತಿಕ ಪ್ರಪಂಚ, ಅಗೋಚರ ಚೈತನ್ಯ ಪ್ರಪಂಚ, ತನ್ನ ಜೊತೆಗಿರುವ ಬುಡಕಟ್ಟು ಜನಾಂಗಗಳು ಮತ್ತು  ತನ್ನ ಒಳಗಿನ ಜಗತ್ತು ಇವೆಲ್ಲ ಸಂಕೀರ್ಣತೆಗಳ ನಡುವೆ ಹೋರಾಟ ಮಾಡುತ್ತ, ನಿಸರ್ಗವನ್ನೇ ಅವಲಂಬಿಸಿ, ನಿಸರ್ಗದ  ಅದ್ಭುತ ಅತೀತ ಶಕ್ತಿಯನ್ನು ನಂಬಿ ಬಂದ ಮಾನವನ ಜೀವನಕ್ಕೆ, ಧರ್ಮಶ್ರದ್ಧೆ ಒಂದು ಅರ್ಥಪೂರ್ಣತೆಯನ್ನು ತಂದುಕೊಟ್ಟರುವಲ್ಲಿ ಸಂದೇಹವಿಲ್ಲ. ದಿನದಿನದ  ಬೆಳಗು ಬೈಗಿನ ಸೂರ್ಯ, ಋತುಮಾನಗಳು, ಗಾಳಿ, ಮಳೆ, ತೆರೆದ ಮುಗಿಲು, ಫಲವತ್ತಾದ ಭೂಮಿಗಳ ಮೂಲಕ ಆ ಅತೀತಶಕ್ತಿ ಮಾನವನ ಮೇಲೆ ಅಪಾರ ಕರುಣೆ ಪ್ರೇಮಗಳನ್ನು ಸುರಿಸುತ್ತಲೇ ಬಂದಿದೆ. ಇಂಥ ಒಂದು ಅತೀತಶಕ್ತಿಯ ಜೊತೆಗೆ – ಮಾನವ – ನಿಗೂಢ ಸಂಬಂಧವನ್ನು ಏರ್ಪಡಿಸುವಲ್ಲಿ, ಧರ್ಮ ಆಡಿದ ಪಾತ್ರ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ವಸ್ತುವಾಗಿದೆ. ಜಾಣಪದ ತಜ್ಞರು ಎಷ್ಟು ಬೇಗ ಈ ಕಾರ್ಯ ಕೈಕೊಳ್ಳುತ್ತಾರೆ, ಅಷ್ಟು ಒಳ್ಳೆಯದು.

* * *


[1]     ‘He is the only culture – building animal’ M. J. Herskovits ‘ Cultural Anthropology’ P 75 – 1958

[2]     The story of his development in prehistoric times was seen to be the story og how these phases of man’s exlistance were reconciled in the deveopment of his cuiture.” – M.M. Herskovirts “Cultural Anthropology’  P 15.

[3]     ‘And both ‘religion’ and ‘culture’, besides meaning different  things from eacho ther,should mean for the individual and for the group something towards which they strive’

[4]     ‘……….. We cAn see a religion as the whole way of life of a people, from birth to the grave, from morning to night even in sleep and that way of life is also its culture”  — Ibid  P. 31

[5]     ಜಾನಪದ ಅಧ್ಯಯನ ಪೀಠಿಕೆ ಪು. ೧  ಡಾ. ದೇ. ಜವರೇಗೌಡ

[6]     ‘Cultural Athropology’, M . J. Herskovits, P. 269

[7]     Enyclo Peedia American Vol  19  P 675

[8]     Pattern of Comparative Religion : P 426  M Eliade

[9]     ‘…………. and above all P. Wilhelm Schmidt, to whom we owe most of the work done in this respect, believed that monotheism was the original religion of early man’  Tribal India P. 183 P.girbert.

[10]    Religion in general may be defined as man’s acknowledged relationship with, and dependence on supernatlural beings

[11]    ‘Love, greatfulness, sorrow and the feeling of unworthiness, Supplication. conversion, encouragement, hope these are affections experienced by man when he is brought face to face with the supernatural’

[12]    ಟೋಟೆಮ್ ಶಬ್ದ ಮೂಲತಃ ಅಮೇರಿಕ ಕೆನಡಾಗಳ ನಡುವನ ಗ್ರೇಟ್‌ಲೇಕ್‌ ಪ್ರಾಂತ ವಾಸಿಗಳಾದ ಚಿಪ್ಪೆವ ಇಂಡಿಯನ್ನರ ಭಾಷೆಯಿಂದ ತೆಗೆದುಕೊಂಡು ರೂಪಾಂತರಿಸಲ್ಪಟ್ಟಿದ್ದು ಇದರ ಮೂಲಾರ್ಥ, “ಒಂದು ಜನಾಂಗ ತನ್ನನ್ನು ಒಮದು ಪ್ರಾಕೃತಿಕ ಚೈತನ್ಯ ಪೂರ್ಣ ವಸ್ತುವಿನೊಂದಿಗೆ ಸಮೀಕರಿಸಿಕೊಂಡು ಆರಾಧಿಸುವದು ಎಂದು” ಸಂಸ್ಕೃತಿಯ ಅಧ್ಯಯನ : ಪು ೧೧೦ ಡಾ. ನಂ. ತಪಸ್ವೀಕುಮಾರ

[13]    ಸಂಸ್ಕೃತಿಯ ಅಧ್ಯಯನ : ಪು. ೧೧೧  ಡಾ. ನಂ.ತಪಸ್ವೀಕುಮಾರ

[14]    ‘Totemism is an eniamatic phenomenon, the belief of certain peoples that their families and clans stand in a definite blood relationship to particular species of animals’ ‘ The Origin and Growth of Religion’   P.103 Schmidt.

[15]    Totemism in the belief that a Religion’ P. 103 Schmidt. between a group of human beings who make up a kinship unit…………………….. ‘Cuitural Anthropology’  M. J. Herskovits  P. 175

[16]    ‘These names usually correspond to some devine attribute ……….’     ‘Tribal India’  P. 188  P. Gishert

[17]    ಕರ್ನಾಟಕದ ಕುರುಬರ ಕೈಲಾಸದ ಶಿವನೇ ಬೀರ ದೇವರಾಗಿ ಬಂದು ತಮ್ಮನ್ನು ಸೃಷ್ಟಿಸಿದ ಇತ್ಯಾದಿ ನಂಬುಗೆಗಳನ್ನು ಗಮನಿಸಬಹುದು.

[18]    ‘This cult appears as one of the earliest religious elements of the higher cultures as the sumerians and chinese’          Trabal India,  P. 195  P. Gisbert

[19]    ‘This cult appears also as one of the earliest religious elements o the higher cultures as the sumerians and chinese’  Trabal India,  P. 195   P. Gisbert

[20]    Tribal India P. 179 P. Gisbert.

[21]    Ibid India P. 179 P. Gisbert

[22]    Ibid India P. 179  P. Gisbert

[23]     Henry white Head ‘Village Gods of South India’  P. 146

[24]     ‘Magic is not only a way of thinking about things : it is also a way of doing about things’. John Beattie ‘other cultures’  P. 207

[25]     Encyclopedia Britanice

[26]     ಧಾರ್ಮಿಕ ಶ್ರದ್ಧೆಗೆ ಸಂಬಂಧಿಸಿದ ಅನೇಕ ಬಗೆಯ ಆಚರಣೆಗಳ ಅಧ್ಯಯನ ಕ್ಷೇತ್ರ ಕಾರ್ಯದ ಮೂಲಕ ಮಾತ್ರ ಸಾಧ್ಯವಾಗುವಂಥದು. ಕರ್ನಾಟಕದ ಜನಪದ ತಜ್ಞರಿಗೆ ಇದು ಕನ್ನೆ ನೆಲ.