ಮಾನವ, ಪ್ರಾಣಿ ಹೌದು; ಆದರೆ ಕೇವಲ ಪ್ರಾಣಿಯಲ್ಲ. ಆತ ಮನಸ್ಸುಳ್ಳ ಜೀವಿ ಅರ್ಥಾತ್ ಮನುಜ. ಮನುಜನಾದವನು ಸ್ವಭಾವತಃ ಅನ್ವೇಷಕ. ದೈಹಿಕ ಆಹಾರದ ಅನ್ವೇಷಣೆಯೊಂದಿಗೆ ಮನಸ್ಸಿನ ಆಹಾರವಾದ ಸತ್ಯದ ಅನ್ವೇಷಣೆ ಆತನಿಗೆ ಅನಿವಾರ್ಯ ಹಾಗೂ ಅದರಿಂದಲೇ ಆತನ ವಿಕಾಸ. ಮನುಜನಾದವನು ಪ್ರಜ್ಞಾವಂತನೂ ಸರಿ. ಪ್ರಜ್ಞೆಯಲ್ಲಿ ತಾನಿದಿರುಗಳ ಅರಿವಷ್ಟೇಯಲ್ಲದೆ  ತಾನಿದಿರುಗಳ ಅರಿವಷ್ಟೇಯಲ್ಲದೆ  ತಾನಿದಿರುಗಳು ಅಪೂರ್ಣವೆಂಬ ಅಸಂತುಷ್ಟಾನುಭವವೂ ಹೊಯ್‌ಕೈಯಾಗಿ ಆತನಿಗುಂಟಾಗುತ್ತದೆ. ಈ ಸೀಮಾನುಭವ (Limit experience; of. Greely, 18) ದಿಂದ ಪ್ರಜ್ಞಾವಂತ ಮಾನವ ನಿರಾಶನಾಗದೆ ಆಶಾದಾಯಕವಾಗಿ ತನ್ನ ಎಲ್ಲೆಲ್ಲೆಗಳನ್ನು ಮೀರಿ ಅತೀತ ಹಾಗೂ ಅನಂತ ಪೂರ್ಣ (plenum) ದತ್ತ ವಾಲುತ್ತಾನೆ. ಆಗ ಆತ ಅದರ ಪ್ರಕಾಶದ ಸೆಳೆತ ಎಳೆತಗಳಿಗೆ ಸಿಕ್ಕಿ ತಾನೂ ಪರಿಪೂರ್ಣನಾಗಬೇಕೆಂಬ ಹಂಬಲದಿಂದ ಕಾತರಗೊಂಡು ಯಾತ್ರಿಕನಂತೆ ಪ್ರಯತ್ನಶೀಲನಾಗಿ ಅಡಿ ಮುಂದಿಟ್ಟು ಸಾಗುತ್ತಾನೆ.

ಮಾನವನ ಸೀಮಾನುಭವವೇ ಆತನನ್ನು ಸೀಮಾತೀತದೆಡೆಗೆ (To the Beyond) ಒಯ್ಯುತ್ತಿರುವ ಸಮಷ್ಟ್ಯಾನುಭವವನ್ನು ಶ್ರೇಷ್ಠ ಕವಿಗಳು ವ್ಯಕ್ತಪಡಿಸಿರುವುದನ್ನು ನಾವು ಇಂದಿಗೂ ಸಾಹಿತ್ಯದಲ್ಲಿ ಓದಬಹುದು. (ಉದಾಹರಣಾರ್ಥವಾಗಿ ರಷ್ಯಾದ ಕವಿ ಪುಷ್ಕಿನನ “ಅರೆ ಮನುಷ್ಯ” ನೆಂಬ ಕವಿತೆಯನ್ನು ಗಮನಿಸಿ:

ಅರೆ-ರಾಜ, ಅರೆ-ವ್ಯಾಪಾರಿ, ಅರೆ-ಮುನಿ,
ಅರೆ-ಅಜ್ಞಾನಿ, ಅರೆ-ಖೂಳ ಇತ್ಯಾದಿ;
ಒಂದಿಲ್ಲ ಒಂದುದಿನ, ಎಂದಾದರೂ
ಪೂರ್ಣವಾದಾನು ಈ ಅರೆ-ಮನುಷ್ಯ      (ಹಿಂಗಮಿರೆ, ೪೬)

ಸೀಮಾನುಭವ ವಿಚಾರಶೀಲನಾಗಿರುವ ಮನುಜನನ್ನು ಪೂರ್ಣ (The Whole) ದ ಕಡೆಗೆ ಒಯ್ಯುವುದರಿಂದ ಸೀಮಾನುಭವವನ್ನುಂಟು ಮಾಡುವ ವ್ಯಕ್ತ ವಸ್ತುಗಳು (Visibilia) ಅ – ವ್ಯಕ್ತ (Invisibile) / ಪರ-ವಸ್ತು (Tat) ವಿನ ಸಂಕೇತಗಳಾಗುತ್ತವೆ. ಇವುಗಳನ್ನು ಧಾರ್ಮಿಕ ಸಂಕೇತಗಳು (Religious Symbols) ಎಂದು ಕರೆಯುವುದು ರೂಢಿ.

ಮಾನವ ಸಂಸ್ಕೃತಿಯಲ್ಲಿ ಧಾರ್ಮಿಕ ಸಂಕೇತಗಳು ಮಾನವನಷ್ಟೇ ಹಳೆಯದೆಂದರೆ ತಪ್ಪಾಗಲಾರದು. ಸ್ವಭಾವತಃ ಸಾಮಾಜಿಕನಾಗಿರುವ ಮಾನವನಿಗೆ ತನ್ನ ತೀವ್ರ ಅನುಭವಾನುಭಾವಗಳನ್ನು ಪರರಿಗೋಸ್ಕರ ಅಭಿವ್ಯಕ್ತಗೊಳಿಸುವುದು ಎಷ್ಟೋ ಸಲ ಅನಿವಾರ್ಯವಾಗುತ್ತದೆ. ವಸ್ತು ಸ್ಥಿತಿ ಹೀಗಿರುವಾಗ ಕೇವಲ ಕೇವಲ ಪ್ರಜ್ಞಾಗಮ್ಯವಾದ ಅತೀತ (The Beyond) ದ ಅನುಭಾವವನ್ನು ದೈನಂದಿನ ಭಾಷಿಕ ಸಂಜ್ಞೆ (Linguistic sign) ಗಳ ಮೂಲಕ ಹೇಳುವುದು  ಅಸಾಧ್ಯವಾದಾಗ ಆತ ಸೂಕ್ತ ಹಾಗೂ ಆಪ್ತ ಸಂಕೇತ (Symbol) ಗಳ ಮೂಲಕ ಅಭಿವ್ತಕ್ತಿಗೊಳಿಸಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ವಸ್ತುಗಳ ಸಂಜ್ಞಾರ್ಥಗಳು ಗೌಣವಾಗಿ, ಸಾಂಕೇತಿಕಾರ್ಥಗಳು ಪ್ರಾಧಾನ್ಯತೆಯನ್ನು ಪಡೆಯುತ್ತವೆ. ಮಾನವ ಸಂಸ್ಕೃತಿಯಲ್ಲಿ ಕಂಡುಬರುವಂತಹ ಧಾರ್ಮಿಕ ಸಂಕೇತಗಳಲ್ಲಿ ಮಾತೃದೇವತೆ ಅತ್ಯಂತ ಪ್ರಮುಖ.

ಮನೋವೈಜ್ಞಾನಿಕ ಮತದಂತೆ ಪ್ರತಿಯೋರ್ವನು ಸ್ವಭಾವತಃ  ದ್ವಿ-ಲಿಂಗಿ (Androgynous)  ಯಾಗಿರುವುದರಿಂದ ಆತ ಕಾಣಬಯಸುವ / ಆಗಬಯಸುವ ಪೂರ್ಣದಲ್ಲಿಯೂ ದ್ವಿ-ಲಿಂಗತ್ವ (Androgyny) ವನ್ನು ಆಶಿಸುವುದು ಸ್ವಾಭಾವಿಕ. ಪಾಶ್ಚಾತ್ಯ ಸಂಸ್ಕೃತಿಗಳ ಅಧ್ಯಯನ ಮಾಡುವಾಗ ಅಲ್ಲಿಯ ಜನಪದರ ಪರತತ್ವ (The Other)  ದಲ್ಲಿ ಉಭಯ ಲಿಂಗಗಳನ್ನು ಅಭೇದವಾಗಿ ಕಂಡಿರುವುದನ್ನು ತಿಳಿದುಕೋಳ್ಳುತ್ತೇವೆ. ಆದ್ದರಿಂದಲೇ ಅವರಲ್ಲಿಯೂ ಭಾರತದ ಅರ್ಧನಾರೀಶ್ವರಕ್ಕೆ ಸಂವಾದಿಯಾಗಿ ನಿಲ್ಲುವಂತಹ ಕಲ್ಪನೆ  ಆಡಿಸ್, ಆಡೊನಿಸ್, ಡಯೋನಿಸಿಯಸ್ ಮೊದಲಾದ ಗ್ರೀಕ್ ಸಸ್ಯ-ದೇವತೆ (Vegitation deities) ಗಳಲ್ಲಿ ನಾವು ಕಾಣಬಹುದು.

ರೋಮಿನ ಸ್ಯೆಟರ್ನ್-ಯುನೊ (Saturn-Juno) ದಂಪತಿಗಳ ಮೂಲವನ್ನು ಕೂಡ ದ್ವಿಲಿಂಗಿ ದೇವತೆಯ ಕಲ್ಪನೆಯಲ್ಲಿ ಸಮಾವೇಶಗೊಳಿಸಬಹುದೆಂದು ಮಿರ್ಚೆಯ ಎಲಿಯಾದೆ (The Patterns of Comparative Religions, 420-1) ಅಭಿಪ್ರಾಯಪಟ್ಟಿದ್ದಾರೆ. ಪ್ಲೇಟೋವಿನ ಆದಿಮಪ್ರರೂಪಕ ಮಾನವ (Archetypal man), ದ್ವಿ-ಲಿಂಗಿ. ಲಗ್ನ ದೇವತೆಯಾದ ಹೇರಾ (Hera)  ಮೂಲತಹ ದ್ವಿಲಿಂಗಿ. ಸೆಯುಸ್ (Zeus) ಗಡ್ಡಧಾರಿಯಾಗಿ ರೂಪಿಲಾಗಿದ್ದರೂ ಕೆಲವು ಕಡೆಗಳಲ್ಲಿ ಆತನಿಗೆ ಹೆಣ್ಣಿನ ಆರು ಪುಷ್ಟ ಮೊಲೆಗಳನ್ನು ಕಲ್ಪಿಸಿದುದನ್ನು ಗಮನಿಸಿದಾಗ ದ್ವಿಲಿಂಗಿ ದೇವತೆಯ ಕಲ್ಪನೆ ಗ್ರೀಕರಲ್ಲಿ ಎಷ್ಟು ಬೇರೂರಿತ್ತು ಎಂಬುದನ್ನು ನಾವು ಊಹಿಸಬಹುದು. ಸ್ತ್ರೀ ವೇಷಧಾರಿಯಾದ ಹರ್ಕ್ಯೂಲಸನೂ ನಮಗೆ ಅಲ್ಲಲ್ಲಿ ಕಾಣಸಿಗುತ್ತಾನೆ. ಸೈಪ್ರಸಿನಲ್ಲಿ ಆಫ್ರೊಡಾಯ್ಟ್ ಎಂಬ ಹೆಣ್ಣು ದೇವತೆಗೆ ಗಡ್ಡವಿದೆ. ಡಯೋನಿಸನನ್ನು ಕುರಿತ ಪ್ರಾರ್ಥನೆಗಳಲ್ಲಿ ಆತನನ್ನು ಗಂಡೆಂದು ಕಲ್ಪಿಸಿ ಪ್ರಾರ್ಥಿಸಿದಂತೆ ಹೆಣ್ಣೆಂದು ಕಲ್ಪಿಸಿ ತಯಾರಿಸಿದ ಪ್ರಾರ್ಥನೆಯ ರೂಪಗಳೂ ಸಿಗುತ್ತವೆ. ಮೆಕ್ಸಿಕೊ ಜಾನಪದದಲ್ಲಿ ಒಮೆತೆಕ್ಹುತ್ಲಿ (Ometecuehtli)  ಎಂಬ ಅರ್ಧನಾರೀಶ್ವರನ ಕಲ್ಪನೆ ದೊರಕುತ್ತದೆ.ಆತ ವಿಶ್ವಾಂತರ್ಯಾಮಿ. ಸಂಭೋಗದಲ್ಲಿ ತಲ್ಲೀನರಾದ ಗಂಡುಹೆಣ್ಣುಗಳ ಸಂಕೇತವೇ ಆತನ ಪ್ರತೀಕ.

ಪೂರ್ಣದಲ್ಲಿ ತಾತ್ವಿಕವಾಗಿ ಲಿಂಗಭೇಧವಿರುವುದು ಅಸಾಧ್ಯ (Madtha 1980: 176)ವಾದರೂ

[1]. ಕೆಲವೊಂದು ಸಾಂಸ್ಕೃತಿಕ ಮಜಲುಗಳಲ್ಲಿ ಮತ್ತು / ಅಥವಾ ಜನಪದಗಳಲ್ಲಿ ಯಾವುದಾದರೊಂದು ಲಿಂಗಕ್ಕೆ ಪ್ರಾಧಾನ್ಯತೆ ದೊರಕಿ ಇನ್ನೊಂದಕ್ಕೆ ಗೌಣ (Sub – ordinate) ಸ್ಥಾನ ದೊರಕಿದೆನ್ನಬಹುದು.

ಪಿತೃ ದೇವತೆ (Deus)ಗಿಂತ ಮಾತೃದೇವತೆ (Dea)ಯ ಕಲ್ಪನೆ ಪ್ರಾಚೀನವೆಂಬ ಸತ್ಯ (Farnell 49, 51) ಪ್ರಾಗೈತಿಹಾಸಿಕ ಜನವಾಸ್ತವ್ಯದ ನೆಲೆಗಳ ಉತ್ಖನನಗಳನ್ನು ಗಮನಿಸಿದಾಗ ನಮಗೆ ಖಚಿತವಾಗುತ್ತದೆ. (Stone 1976) ಯುರೋಪಿನ ಶಿಲಾಯುಗದ ಉತ್ಖನನಗಳನ್ನು ಗಮನಿಸಿದಾಗಲೂ ಬಹು ಪ್ರಾಚೀನ ಮಣ್ಣಿನ ಹಾಗೂ ಕಲ್ಲಿನ ಪ್ರತಿಮೆಗಳೆಂದರೆ ಮಾತೃದೇವತೆಯ ಪ್ರತಿಮೆಗಳೇ (Figurines)[2] ಇವು ಸುಮಾರು ೩೦ ವರ್ಷಗಳ ಹಿಂದೆಯೇ ಮಧ್ಯಾಏಷ್ಯಾದಿಂದ ಬಂದವುಗಳಂದು ಪುರಾತತ್ವ ವಿಜ್ಞಾನಿಗಳು (Archeologists) ಅಭಿಪ್ರಾಯಪಟ್ಟಿದ್ದಾರೆ. (Readers Digest Library, 622 ff). ರಷ್ಯಾದಲ್ಲಿ ಸು. ೫೦ ಸಾವಿರ ವರ್ಷಗಳ ಹಿಂದಿನ ಮಾತೃದೇವತೆಯ  ರೂಪ ಲಭಿಸಿದೆ.ಪಾಶ್ಚಾತ್ಯ ದೇಶಗಳಲ್ಲಿ ಅತ್ಯಂತ ಪ್ರಾಚೀನ ಕಾಲಕ್ಕೆ ಸೇರಿದ ಸು. ೬೦ ಮೂರ್ತಿಗಳಲ್ಲಿ ೫೫ ಮಾತೃದೇವತೆಯ ಮೂರ್ತಿಗಳಾಗಿವೆ (Greely). ಈ ಮೂರ್ತಿಗಳನ್ನು ಗಮನಿಸಿದಾಗ ಅವುಗಳ ತಲೆಗಳು ಚಪ್ಪಟೆಯಾಗಿದ್ದು ಸ್ತನನಿತಂಬಗಳು ಬೃಹದಾಕಾರದವುಗಳಾಗಿದ್ದುದು ಕಂಡುಬರುತ್ತದೆ ಯಾದುದರಿಂದ ಅವು ಯಾವುದೇ ನಿರ್ದಿಷ್ಟ ಹೆಂಗಸರ ಪ್ರತಿರೂಪಗಳಾಗಿರದೆ “ವಿಶ್ವಜನನಿ” (Mother of the Universe) ಯ ಸಂಕೇತವೆಂದು ಊಹಿಸಲು ಸಾಧ್ಯವಾಗುತ್ತದೆ.

ವಾಯುವ್ಯ ಯುರೋಪಿನ ಗುಹೆಗಳಲ್ಲಿ ದೊರೆತ ವರ್ಣಚಿತ್ರ (Painting) ಗಳಲ್ಲಿಯ ಸಂಕೇತಗಳಲ್ಲಿ ಅರ್ಧನಾರೀಶ್ವರ ಮಾದರಿಯ ಪ್ರತೀಕಗಳನ್ನು ನಾವು ಕಾಣಬಹುದಾದರೂ ಮಾತೃದೇವತೆಯೇ ಅಲ್ಲಿ ಪ್ರಧಾನವಾಗಿ ಇರುವುದನ್ನು ನಾವು ಗಮನಿಸಬಹುದು. (Brockway, 1979). ಹೀಗೆ ಪಾಶ್ಚಾತ್ಯ ಸಂಸ್ಕೃತಿಯ ಜನಪದ ಧರ್ಮ (Folk religion)[3]ಗಳಲ್ಲಿ ಮಾತೃದೇವತೆಯ ಸ್ಥಾನ ಅತಿ ಭದ್ರವಾಗಿರುವುದನ್ನು ನಾವು ಕಾಣುತ್ತೇವೆ.

ಮಾನವನ ಯಾವ ಇಚ್ಚೆ, ಆಶೆ-ಆಕಾಂಕ್ಷೆಗಳು ಮಾತೃದೇವತೆಯ ಸಂಕೇತಕ್ಕೆ ಎಡೆಮಾಡಿಕೊಟ್ಟಿಬೇಕೆಂಬುದು ಇಲ್ಲಿ ಗಮನಾರ್ಹವಾದ ಪ್ರಶ್ನೆ.

ನೀರಿನ ಪ್ರವಾಹ, ಗಾಳಿಯ ರಭಸ,ಗುಡುಗಿನ ಆರ್ಭಟ, ಮಿಂಚಿನ ಸೆಳಕು, ಮಳೆ ಹಾಗೂ ನೆರೆ, ಸೂರ್ಯ- ಚಂದ್ರಾದಿಗಳ ಬೆಳಕು, ಕಲ್ಲು-ಬಂಡೆಗಳಿಂದ ಹೊರ ಬರುವ ಬೆಂಕಿ, ಭೂಗರ್ಭದಿಂದ ಹೊರಚಿಮ್ಮುವ ಜ್ವಾಲಾಮುಖಿ ಇತ್ಯಾದಿ ಒಂದೆಡೆ; ಎದುರಿಸಬೇಕಾದ ಹುಲಿಸಿಂಹಾದಿ ಉಪಾದಿಯ ಕ್ರೂರ ಮೃಗಗಳು, ನೀರಲ್ಲಿ ಸದಾ ಈಜಾಡುತ್ತಿರುವ ವಿವಿಧ ಮೀನರಾಶಿಗಳು, ಗಗನದಲ್ಲಿ ಹಾಡುತ್ತ ಹಾರಾಡುತ್ತಿರುವ ಹಕ್ಕಿ ಸಮೂಹಗಳು, ಅಷ್ಟೇ ಅಲ್ಲದೆ, ತನ್ನ ಬೇಟೆಗೆ ಗುರಿಯಾಗಿ ಒಂದೇ ಸವನೆ ರಕ್ತಕಾರಿ ಕೈಕಾಲು ಬಡಿದು ಗೋಳಾಡಿ ಪ್ರಾಣಬಿಡುತ್ತಿರುವ ಮೂಕ ಪ್ರಾಣಿಗಳು ಇನ್ನೊಂದೆಡೆಗೆ- ಇವೆಲ್ಲವುಗಳಲ್ಲಿ ಅಡಕಗೊಂಡಿರುವ ಶಕ್ತಿ ಬೇಟೆಯಾಡುವ ಮಾನವ ಪ್ರಾಣಿಗೆ ಅದ್ಭುತವಾಗಿ ಕಂಡಿರಬೇಕು. ಆ ಬಳಿಕ ತಾನಿ ಉತ್ತು ಬಿತ್ತಿದ ಕ್ಷೇತ್ರದ – ಭೂದೇವಿಯ – ಫಲಶಕ್ತಿ (Fertility)ಯಿಂದ ಕೃಷಿಕಮಾನವ ಬೆರಗುಗೊಂಡಿರಬೇಕು. ಇವುಗಳಿಗಿಂತಲೂ ಹೆಚ್ಚಾಗಿ ತನ್ನ ಬಳಿಯಲ್ಲಿಯೇ ಇದ್ದು ಸಂಗಾತಿಯಾಗಿ ಬಾಳಿದ ಚೆಲುವೆಯ ಫಲಶಕ್ತಿಯಿಂದ ಆತ ಇನ್ನಷ್ಟು ವಿಸ್ಮಯಗೊಂಡಿರಬೇಕು. ಇದರ ಪರಿಣಾಮವಾಗಿ, ಕಾಲಸಂದಂತೆ, ಪ್ರತಿಯೊಂದು ಜೀವಿಯ ಹುಟ್ಟು ಬೆಳವಣಿಗೆಗಳಿಗೆ ಹೆಣ್ಣೇ ಕಾರಣವೆಂಬ, ಜನಪದ ನಂಬಿಕೆ (Folk belief) ಮಾನವನಲ್ಲಿ ಬೇರೂರಿತು.

ಹುಟ್ಟಿನಂತೆ ಸಾವು ಕೂಡ ಅತ್ಯಂತ ಮಾರ್ಮಿಕವಾದುದು. ಜನ್ಮವನ್ನು ಈಯಬಲ್ಲ ಹೆಣ್ಣು ಸಾವನ್ನು ಕೊಡಬಲ್ಲಳು. ಒಲಿದ ನಾರಿಯ ಕೈಯಲ್ಲಿಯೇ ಅಪ್ರತಿಮ ಶೂರರು ಕಂಡ ಬಲಿಯಾದ ಘಟನೆಗಳನ್ನು ಜಾನಪದದಲ್ಲಿ (ನೋಡಿ: ಸ್ಯಾಮ್ಸನನ ಕಥೆ) ಸಾಕಷ್ಟು ಸಿಗುತ್ತವೆ. ಅಷ್ಟೇಯಲ್ಲದೆ ಹುಟ್ಟಿದಾತ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು. ಈ ಅರ್ಥದಲ್ಲಿ ವಿಶ್ವಗರ್ಭ, ವಿಶ್ವಗೋರಿಯು ಹೌದು. (The Womb is the Tomb) ಎಂಬ ಸಮಷ್ಟೀ ಪ್ರಜ್ಞೆ (Madtha 1980 : 188) ಮಾನವ ಸಂಸ್ಕೃತಿಯಲ್ಲಿ ಇದ್ದೇ ಇದೆ. ಇಂತಹ ಆಕರ್ಷಕ (Amiable) ಅಂತೆಯೇ ಭೀಕರವೂ (Terrible) ಆಗಿರುವ ಅಗಮ್ಯ ವಿಶ್ವಶಕ್ತಿಯನ್ನು, ಭೂತಾಯಿ ಅಂತೆಯೇ ಸ್ತ್ರೀಯ ಫಲಶಕ್ತಿಯನ್ನು ನೋಡಿದ ಮಾನವ, ಮಾತೃದೇವತೆಯ ಪ್ರತೀಕದ ಮೂಲಕ ಸಂಕೇತಿಸಿರುವುದು ಮಾನವ ಪ್ರಜ್ಞೆಯ ಪ್ರತೀಕವೇ ಸರಿ. ಹೀಗೆ ಅನುಭವಾತೀತ ಶ್ರೀ ಶಕ್ತಿಗೆ ಅನುಭವಗಮ್ಯ ಸ್ತ್ರೀ, ಸಂಕೇತವಾದಳೆನ್ನಬಹುದು.

ಸಂಕೇತಗಳು ಹೆಚ್ಚಾಗಿ ಸಂಕೀರ್ಣ (Complex)  ಸ್ವರೂಪದವುಗಳಾಗಿರುತ್ತವೆ. ಅವಿ ಅನೇಕಾರ್ಥದ್ದಾಗಿರುವುದೇ ಅದಕ್ಕೆ ಕಾರಣ. ಇಂತಹ ವಸ್ತುಸ್ಥಿತಿಗೆ ಸಂಕೇತವಾಗಿ ಮಾತೃದೇವತೆಯ ಕಲ್ಪನೆ ಒಂದು ಉತ್ತಮ ನಿದರ್ಶನ. ದೈನಂದಿನ ಜೀವನದಲ್ಲಿ ಸ್ತ್ರೀ, ವಾತ್ಸಲ್ಯಮೂರ್ತಿಯಾಗಿಯೂ ಮೋಹಕ ಷೋಡಶಕುಮಾರಿಯಾಗಿಯೂ, ಒಪ್ಪುವ ಅರ್ಧಾಂಗಿನಿಯಾಗಿಯೂ ಮಾನವನ ಅನುಭವಕ್ಕೆ ಎಟಕಿದ್ದಾಳೆಯಾದರೂ ಕೆಲವೊಮ್ಮೆ ಉಗ್ರಸ್ವರೂಪಿ (The terrible female)ಯಾಗಿಯೂ ತೋರಿದ್ದಾಳೆ. “ಒಲಿದರೆ ನಾರಿ, ಮುನಿದರೆ ಮಾರಿ” ಎಂಬ ಗಾದೆಯೇ ಇದಕ್ಕೆ ಸಾಕ್ಷಿ.

ಹೆಣ್ಣಿನ ಈ ನೈಜಗುಣವನ್ನು ಮಾತೃದೇವತೆಯಲ್ಲಿಯೂ ಆರೋಪಿಸಿದುದು ಜಾನಪದದಲ್ಲಿ ಕಂಡು ಬರುತ್ತದೆ. ಆದ್ದರಿಂದಲೇ ಆಕೆ ಮಹಾಮಾತೆಯಾಗಿ, ಸಾರ್ವಕಾಲಿಕ ಕನ್ಯೆಯಾಗಿ, ಮಹಾಸತಿಯಾಗಿ ಹಾಗೂ ವಿಶ್ವಸಂಹಾರಿಯಾಗಿ ವಂದಿತಳಾಗಿದ್ದಾಳೆ. ಹೀಗೆ ಪರಸ್ಪರ ವಿರೋಧ ಗುಣಗಳು ಆಕೆಯಲ್ಲಿ ಅಬೇಧವಾಗಿ ಕಲ್ಪಿತಗೊಂಡು ಆಕೆ ಮಾನವ ಜೀವನದಲ್ಲಿ ಕಂಡುಬರುವಂತಹ ವಿರೋಧಾಭಾಸದ ಪ್ರತೀಕ (Coincidentia oppositorum) ವೂ ಆಗಿದ್ದಾಳೆ.

ಪ್ರಸ್ತುತದಲ್ಲಿ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕಂಡುಬರುವ ಮಾತೃದೇವತೆಯ ಅಧ್ಯಯನವನ್ನು ಮೇಲೆ ಸೂಚಿಸಿದ ಆಕೆಯ ಚತುರ್ಮುಖಗಳ ಚೌಕಟ್ಟಿನಲ್ಲಿ (Four- celled Paradigm) ವಿವರಣಾತ್ಮಕ ಪದ್ಧತಿಯ ಮೂಲಕ ಮಾಡಲಾಗಿದೆ.

ಮಹಾಮಾತೆ (Magna Mater)

ಸ್ತ್ರೀ ಸಂಕೇತವನ್ನು ತೆಗೆದುಕೊಂಡಾಗ ಯಾರಿಗಾದರೂ ಮೊದಲು ನೆನಪಾಗುವುದು ತಾಯಿಯದು; ಯಾಕೆಂದರೆ ತಾಯಿಯಾನುಭವವೇ ಮಾನವನ ಮೊದಲನುಭವ. ಗರ್ಭದಾರಣೆಯಾಗಲು ತಾಯ್ತಂದೆಯರೀರ್ವರೂ ಬೇಕೆಬೇಕಾದರೂ ಕೂಸಿಗೆ ತಾನು ಹುಟ್ಟುವ ಪೂರ್ವಕಾಲ (Pre-natal period) ದಿಂದಲೂ ಹತ್ತಿರದವಳೆಂದರೆ ತಾಯಿಯೊಬ್ಬಳೇ. ಆಕೆಯ ಮೂಲಕವೇ ಅದರ ಆಹಾರ ಹಾಗೂ ಬೆಳವಣಿಗೆ. ಹುಟ್ಟಿದ ಮೇಲಾದರೂ (Post-natal period) ತಾಯಿಯೇ ಅದಕ್ಕೆ ಆಶ್ರಯ; ಆಕೆಯ ಮೊಲೆಯೇ ಅದಕ್ಕೆ ಆಹಾರ, ಆಕೆಯ ತೊಡೆಯೇ ಅದಕ್ಕೆ ಆಧಾರ.

ನಮ್ಮ ಅನುಭವಗಮ್ಯ ತಾಯಿ ನಮ್ಮ ಹುಟ್ಟಿಗೆ, ಪೋಷಣೆಗೆ, ರಕ್ಷಣೆಗೆ ಕಾರಣಳಾಗಿರುವಂತೆ ವಿಶ್ವದ ಸೃಷ್ಟಿಗೆ, ಬೆಳವಣಿಗೆ, ಸಂರಕ್ಷಣೆಗೆ ಕಾರಣೀಭೂತೆಯಾದವಳೇ ಮಹಾಮಾತೆ (The Great-Mother).

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮಹಾಮಾತೆಯ ಕಲ್ಪನೆ ಮೆಡಿಟರೇನಿಯನ್ ಸಂಸ್ಕೃತಿಯಿಂದ ವಲಸೆ ಹೋಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲ ಜೀವಿಗಳಿಗೂ ಮೂಲ ಮಹಾದೇವಿಯೆಂಬ ಕಲ್ಪನೆ ಮೆಡಿಟರೇನಿಯನ್ ಜನಪದದಲ್ಲಿ ಬೇರೂರಿತ್ತು (Farnell 1925 : 49). ಇಲ್ಲಿಂದ ಮಹಾಮಾತೆಯ ಕಲ್ಪನೆ ಇತರೆಡೆ ಹಬ್ಬಿರಬೇಕೆಂಬ ಪ್ರಮೇಯವೊಂದಿದೆ. ಗ್ರೀಕರ ಅರ್ತೆಮಿಸ್ / ಡಯಾನ, ಆಯಫ್ರೊಡಾಯ್ಟ / ವೀನಸ್ ಮತ್ತು ಅತೆನ ಎಂಬ ದೇವತೆಗಳಿಗೆ ಸುಮೇರಿಯದ ನಾನ ಎಂಬ ದೇವತೆಯೇ ಮೂಲವೆಂದು ಗಿಲ್ಮೊರ್ ಎಂಬಾತ ಅಭಿಪ್ರಾಯಪಟ್ಟಿದ್ದಾನೆ. ಈ ಅನ್ಯ ಪ್ರಭಾವದಿಂದಾಗಿ ಭೂದೇವಿಯಾದ ದೆಮೆತೆರ್ ಶ್ರೀಮಾತೆ (Madonna) ಯಾಗಿಯೂ ಮಹಾದೇವಮಾತೆ (Mate Dewn Magna)  ಯಾಗಿಯೂ ಕಾಲ ಕ್ರಮೇಣವಾಗಿ ಪೂಜಿತಳಾದಳು. ಕೊರಿಂತಿನೊಳಗೆ ಆಯಫ್ರೊಡಾಯ್ಟನ್ನು ವಿಶ್ವಜನನಿಯನ್ನಾಗಿ ಅರ್ಚಿಸಲಾರಂಭಿಸಿದರಲ್ಲದೆ ಆಕೆಯ ಹೆಸರಿನಲ್ಲಿ ದೇವದಾಸಿ ಪದ್ಧತಿ ಆರಂಭಗೊಂಡು ಸೂಳೆಗಾರಿಕೆ ಬೆಳೆಯಿತು (Bhattacharya, 6).

ಮಹಾಮಾತೆಯ ಮೂರ್ತಿಯ ಸುತ್ತ ಸಸ್ಯಪ್ರಾಣಿ ವರ್ಗಗಳನ್ನು ಚಿತ್ರಿಸಿದ್ದಾರೆ. ಕೆಲವೊಮ್ಮೆ ಆಕೆ ಕೂಸೊಂದನ್ನು ಎತ್ತಿ ಕೊಂಡಿರುವುದನ್ನು ಗಮನಿಸಬಹುದು. ಇವೆಲ್ಲ ಫಲಶಕ್ತಿಯ ಪ್ರತೀಕಗಳು. ಈ ಮೂರ್ತಿಯನ್ನು ನೋಡುವಾಗ ಈಜಿಪ್ತನ ಈಸಿಸ್ (Isis) ಮತ್ತು ಹೊರುಸ್ (Horus), ಫಿನೀಷಿಯನದ ಆಷ್ಟಾರೊತ್ (Astaroth) ಮತ್ತು ತಾಮ್ಮುಸ್ (Tammuz), ಏಷ್ಯಾಮ್ಯಾನರಿನ ಸಾಯ್ಬಿಲಿ (Cybele) ಮತ್ತು ಆತ್ತಿಸ್ (Attis) ಇವರ ನೆನಪಾಗುತ್ತದೆಯಲ್ಲದೆ ಬಾಲಕ ಯೇಸುವನ್ನೆತ್ತಿಕೊಂಡ ಮರಿಯಮ್ಮನ ನೆನಪಾಗುವುದೂ ಸಹಜವೇ. ಒಟ್ಟಿನಲ್ಲಿ ಮಹಾಮಾತೆಯ ಮೂಲ ಮೆಡಿಟರೇನಿಯನ್, ಸುಮೇರಿಯನ್ ಸಂಸ್ಕೃತಿಯಲ್ಲೆಂದರೆ ತಪ್ಪಾಗಲಾರದು.

ರೋಮಿಯರು ಮಹಾತಾಯಿ (Mighty Mother) ಯ (ಯುನೋವಿನ) ಆರಾಧನೆಯಲ್ಲಿ ಹೆಣ್ಣುಗಳಂತೆ ಉದ್ದಕೂದಲನ್ನು ಬೆಳೆಯಿಸಿ ಸುಗಂಧ ದ್ರವ್ಯಗಳಿಂದ ಅದನ್ನು ಪೂಜಿಸಿ, ಬಾಚಿ, ಸ್ತ್ರೀವೇಷವನ್ನುಟ್ಟು, ಸಂಗೀತವಾದ್ಯ ಹಿಮ್ಮೇಳಗಳನ್ನು ಇಟ್ಟುಕೊಂಡು, ಸ್ತ್ರೀ ಪುರುಷರೆಂಬ ಭೇದವಿಲ್ಲದೆ  ನರ್ತನಾದಿಗಳ ಮೂಲಕ ಪಾಲುಗೊಳ್ಳುತ್ತಿದ್ದರು. ಈ ಸಮಯದಲ್ಲಿ ಕೆಲವರು ಆವೇಶಗೊಂಡು ಚಾಟಿಗಳಿಂದ ಬಡಿದುಕೊಳ್ಳುತ್ತಿದ್ದರು; ಕತ್ತಿಚೂರಿಗಳಿಂದ ತಿವಿದುಕೊಳ್ಳುತ್ತಿದ್ದರು; ಕೆಲವೊಮ್ಮೆ ತಮ್ಮ ಜನನೇಂದ್ರಿಯಗಳನ್ನೇ ಕಡಿದು ಚೆಲ್ಲುತ್ತಿದ್ದರು (Durant X: 777 ff). ಕೆಲವೆಡೆ ಸಾಯ್ಬಿಲಿಯನ್ನು ಶ್ರೀಮಾತೆಯನ್ನಾಗಿ ಕೊಂಡಾಡುತ್ತಿದ್ದರು. ಆಕೆಯ ಪೂಜಾ ವಿಧಿಯಲ್ಲಿ ಗಂಡು – ಹೆಣ್ಣುಗಳು ಮುಕ್ತವಾಗಿ ಸಂಭೋಗಗಳನ್ನು ಮಾಡುತ್ತಿದ್ದರಲ್ಲದೆ ಕೆಲವೊಮ್ಮೆ ಆವೇಶಕ್ಕೊಳಗಾಗಿ ತಮ್ಮ ಮರ್ಮಾಂಗಗಳನ್ನು ತುಂಡರಿಸಿ ತಮ್ಮ ಉಗ್ರಭಕ್ತಿಯನ್ನು ತೋರಿಸುತ್ತಿದ್ದರು.

ಅಮೇರಿಕೆಯ ಕಾಗಬ ಇಂಡಿಯನಲ್ಲಿಯೂ ಮಹಾತಾಯಿಯ ಭಕ್ತಿ ಕಂಡು ಬರುತ್ತದೆ. ಅವರ ಜಾನಪದದಲ್ಲಿ ಮಾತಾತಾಯಿಯ ವರ್ಣನೆ ಬಂದಿದೆ.

……… ……. ನಮ್ಮ ಹಾಡುಗಳ ತಾಯಿ, ನಮ್ಮ ಸಂತತಿಯ ತಾಯಿ ನಮ್ಮನ್ನು ಆದಿಕಾಲದಲ್ಲಿ ಹಡೆದಳು. ಆಕೆ ಎಲ್ಲ ಜನಾಂಗಗಳ ಮತ್ತು ಎಲ್ಲ ಬುಡಕಟ್ಟುಗಳ ತಾಯಿ. ಆಕೆ ಸಿಡಿಲಿನ ತಾಯಿ, ಮರಗಳ ತಾಯಿ, ಅಂತೆಯೇ ವಿವಿಧ ವಸ್ತುಗಳ ತಾಯಿ. ಆಕೆ ಹಾಡು ಕುಣಿತಗಳ ತಾಯಿ, ಆಕೆ ಅಣ್ಣಂದಿರಾದ ಕಲ್ಲುಗಳ ತಾಯಿ. ಆಕೆ ದವಸ ಧಾನ್ಯಗಳ ತಾಯಿ ಹಾಗೂ ಎಲ್ಲದರ ತಾಯಿ. ಆಕೆ  ನಮ್ಮ ತಮ್ಮಂದಿರಾದ ಫ್ರೆಂಚರಾದಿ ಅನ್ಯರ ತಾಯಿ. ಆಕೆ ನೃತ್ಯ ಸಲಕರಣೆಗಳ ಮತ್ತು ಗುಡಿಗಳ ತಾಯಿ. ಆಕೆಯೇ ನಮ್ಮ ಏಕೈಕ ತಾಯಿ. ಆಕೆ ಪ್ರಾಣಿಗಳ ತಾಯಿ. ಆಕೆ ಆಕಾಶಗಂಗೆಯ ತಾಯಿಯೂ ಹೌದು

………. Erich Neumann, The Great Mother, P. 84.

ಮೆಕ್ಸಿಕರ ಜಾನಪದದಲ್ಲಿ ಕ್ಸೊಕಿಕ್ವೆತ್ಸಾಲ್ (Xochiquetzal) ಎಂಬ ಮಹಾಮಾತೆಗೆ ಅಗ್ರಸ್ಥಾನ ದೊರಕಿದೆ. ಕೆಲ್ಟ್ ಜನಾಂಗದಲ್ಲಿ ದಾನು/ಅನು ಎಂಬ ಮಹಾಮಾತೆ ಎಲ್ಲ ದೇವತೆಗಳಿಗೂ ಮಿಗಿಲಾದ ದೇವತೆ. ಆಕೆಗೆ ನರಬಲಿಗಳನ್ನು ಕೂಡಾ ಅರ್ಪಿಸುತ್ತಿದ್ದರು. ಉತ್ತರ ಯುರೋಪಿನ ಜಾನಪದದಲ್ಲಿ ಫ್ರೇಯ (Freya) ಈ ರೀತಿಯಲ್ಲಿ ಸುಪ್ರಸಿದ್ಧಳು.

ಪೌರಸ್ತ್ಯ ಸಂಸ್ಕೃತಿಗೆ ಸೇರಿದ ಯೆಹೂದಿ ಜನಪದದಲ್ಲಿ ಹುಟ್ಟಿಕೊಂಡು ಮೆಡಿಟರೇನಿಯನ್ ದೇಶಗಳನ್ನು ತನ್ನ ಕಡೆಗೆ ತಿರುಗಿಸಿದ ಕ್ರೈಸ್ತ ಧರ್ಮ, ಪಾಶ್ಚಾತ್ಯ ದೇಶಗಳಲ್ಲಿ ಕಾಲಿಟ್ಟಂತೆ ಅಲ್ಲಿಯೆ ಸನಾತನ ದೇವತೆಗಳು ಅಪಮೌಲ್ಯಗೊಂಡು ಕ್ಷುದ್ರದೇವತೆ (Demon) ಗಳಾಗಿ ಮಾರ್ಪಾಡು ಹೊಂದಿದರು. ಆದರೆ ಮಹಾಮಾತೆಯ ಭಕ್ತಿಯನ್ನು ಮಾತ್ರ ಜನಪದ ಹೃದಯದಿಂದ ಕದಲಿಸುವುದು ಕ್ರೈಸ್ತಭಕ್ತಿಗೂ ಸಾಧ್ಯವಾಗಲಿಲ್ಲ! ಕಾರಣ, ಕ್ರೈಸ್ತಧರ್ಮ ಸನಾತನ ಮಾತೆಯ ಭಕ್ತಿಯನ್ನು ಕ್ರಿಸ್ತ ಮಾತೆ ಮರಿಯಮ್ಮ (ಮಿರಿಯಮ್) ನಲ್ಲಿ ಪರಿವರ್ತಿಸಿ ಭವ್ಯೀಕರಿಸಿತು.

ಸನಾತನ ಸಂಸ್ಕೃತಿಯ ಕ್ರಿಸ್ತೀಕರಣ (Christianization) ವನ್ನು ಕುರಿತಾಗಿ ಪ್ರಸ್ತಾಪಿಸುವಲ್ಲಿ ವಿಲ್ ಡುರಾಂಟನ ಮಾತು ನೆನಪಿಗೆ ಬರುತ್ತದೆ. (The Age of faith, 1950)

ಈಸಿಸ್ ಮತ್ತು ಹೇರುಸಿನ ಮೂರ್ತಿಗಳನ್ನು ಮರಿಯಾ ಮತ್ತು ಯೇಸುವೆಂದು ಪುನರ್ನಾಮಕರಣಗೊಳಿಸಲಾಯಿತು …..; ಶನೀಶ್ವರನ ಉತ್ಸವ (Saturnalia) ಬದಲು ಕ್ರಿಸ್ತ ಜಯಂತ್ಯೋತ್ಸವ ನಡೆಯಿತು …….. ಆತ್ತಿಸನ ಪುನರುಸ್ಥಾನದ (Resurrection) ಬದಲು ಕ್ರಿಸ್ತನ ಪುನರುತ್ಥಾನವನ್ನು ಆಚರಿಸಲಾಯಿತು. ಗ್ರಾಮದೇವತೆಗಳ ಗುಡಿಗಳನ್ನು ಕ್ರೈಸ್ತ ಸಂತರ ಗುಡಿಗಳನ್ನಾಗಿ  ಮಾರ್ಪಾಡಿಸಲಾಯಿತು. ಆರಾಧನೆಯಲ್ಲಿ ಬಳಸಲಾಗುತ್ತಿದ್ದ ಧೂಪ, ದೀಪ, ಹೂ, ಮೆರವಣಿಗೆ, ಪೋಷಾಕು, ಗಾನ ಇತ್ಯಾದಿಗಳನ್ನು, ಜನಪ್ರಿಯವಾದಲ್ಲಿ, ಶುದ್ಧೀಕರಿಸಿ, ಅನುಕೂಲಕರವಾಗಿ ಬದಲಾಯಿಸಿ, ಕ್ರೈಸ್ತ ಧಾರ್ಮಿಕ ವಿಧಿ ಆಚರಣೆಗಳಲ್ಲಿ ಬಳಸಿದರು. ಹಿಂಸಾತ್ಮಕ ಬಲಿ ಪೂಜೆಗಳನ್ನು ತೊಡೆದು ಹಾಕಿ ಅಹಿಂಸಾತ್ಮಕವೂ ಸಾಂಕೇತಿಕವೂ ಆದ ಪೂಜೆ (Holy Mass) ಯನ್ನು ಸ್ಥಾಪಿಸಿದರು. (ಪುಟ ೭೫).

ಮೆಡಿಟರೇನಿಯನ್ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳಲ್ಲಿಯ ಮಾತೃದೇವತೆಗಳ ಸುಗುಣಗಳನ್ನು ಮರಿಯಮ್ಮನಲ್ಲಿ ಆರೋಪಿಸಿ (ಅದೇ ಪು. ೭೪೫ – ೬) ಆಕೆಯನ್ನು ದೇವಮಾತೆ (THEOTOKOS / Mater Dei) ಯನ್ನಾಗಿ ಭವ್ಯೀಕರಿಸಿದುದರಿಂದ ಪಾಶ್ಚಾತ್ಯರ ಸನಾತನ ಜಗನ್ಮಾತೆಗಳೆಲ್ಲರೂ ಆಕೆಯಲ್ಲಿ ಐಕ್ಯತೆಯನ್ನೂ ಸಾರ್ಥಕತೆಯನ್ನು ಪಡೆದುಕೊಂಡರು.

ಲೆಯೊನಾರ್ದೊದ ವಿಂಚಿಯ “ಶಿಲಾಮಾತೆ” (Madonna on the Rocks) ಮೈಕಲಾಂಜೆಲಿನ “ದಿವ್ಯ ಕುಟುಂಬ” (Holy family) ಎಂಬೀ ಕಲಾಕೃತಿಗಳನ್ನು ಗಮನಿಸಿದಾಗ ಮರಿಯಮ್ಮನ ಕಣ್ಣು, ತುಟಿ, ತೋಳು, ಹೀಗೆ ಅಂಗಾಂಗಳೆಲ್ಲವೂ ತಾಯಿತನವನ್ನು (Maternality). ಕಣ್ಣು ಕುಕ್ಕುವಂತೆ ಪ್ರತಿಬಿಂಬಿಸುತ್ತವೆ. ಸಾವನ್ನಪ್ಪಿದರೂ ಅದಕ್ಕೆ ಸೋಲದೆ ಮೃತ್ಯುಂಜಯರಾಗಿ ಬಾಳುವ ಆಶಯ (Motif) ಬಾಲಕ ಕ್ರಿಸ್ತನನ್ನು ಎತ್ತಿಕೊಂಡ ಜಗದಾಂಬೆ (World Mother) ಮರಿಯಮ್ಮ ಭೂಮಿ, ನೀರು, ಯೋನಿ ಮೊದಲಾದ ಫಲಶಕ್ತಿಯ ಪ್ರಾಕೃತಿಕ ಸಂಕೇತಗಳನ್ನು (Natural symbols) ಮಿಕ್ಕಿ ಈಸಿಸ್, ದೆಮೆತೆರ್, ಯುನೊ ಮೊದಲಾದ ದೇವತೆಗಳನ್ನು ತನ್ನಲ್ಲಿ ಅಡಗಿಸಿ, ಭವ್ಯೀಕರಿಸಿ ಏಕೈಕ ದೇವ ಮಾತೆಯಾಗಿ ಇಂದು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಅದ್ವಿತೀಯಳಾಗಿದ್ದಾಳೆನ್ನಬಹುದು.

ಸಾರ್ವಕಾಲಿಕ ಕನ್ಯೆ (Semper Virgo)

ಮಾತೃದೇವತೆ ಎಷ್ಟೋಸಲ ಕನ್ಯೆಯಾಗಿ, ಕನ್ಯಾಕುಮಾರಿ (Ever virgion)  ಯಾಗಿ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕಾಣುತ್ತಾಳೆ. ಕುಮಾರಿ, ಜೀವನದಲ್ಲಿಯ ಚೈತನ್ಯ, ರೂಪಾಂತರ, ಬೆಳವಣಿಗೆ ಹಾಗೂ ಹೊಸತನಗಳ ಪ್ರತೀಕ. ಆಕೆಯ ಪ್ರಧಾನ ಗುಣ, ಆಕರ್ಷಣೆ. ಪರರನ್ನು ಆಕರ್ಷಿಸುವ ಶಕ್ತಿ ಆಕೆಯ ದೇಹದ ಅಂಗಾಂಗಗಳಲ್ಲಿ ಅಡಿಯಿಂದ ಮುಡಿಯವರೆಗೆ ತುಂಬಿತುಳುಕಾಡುತ್ತಿದೆ. ಈ ಆಕರ್ಷಣೆ ಪ್ರಾಪ್ತ ವಯಸ್ಕರಲ್ಲಿ ಪ್ರಣಯಕ್ಕೆ ದಾರಿ ಮಾಡಿ ಕೊಡುತ್ತದೆ. ಪ್ರಣಯದಿಂದಾಗಿ ಗಂಡು – ಹೆಣ್ಣುಗಳಲ್ಲಿ ನವಚೇತನ ತುಂಬಿ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಗೊಳ್ಳುತ್ತದೆಂಬುದು ಕೇವಲ ಪುಸ್ತಕದ ಮಾಹಿತಿಯಲ್ಲ. ಆದರೆ ಪ್ರಣಯ, ಸದಾ ಗಂಡು-ಹೆಣ್ಣುಗಳ ಲೈಂಗಿಕ ಸಮ್ಮೇಳನವನ್ನು ಮುಟ್ಟಬೇಕೇಂದಿಲ್ಲ. ಅಷ್ಟೇ ಅಲ್ಲ, ಹಾಗೆ ಮುಟ್ಟದಿರುವಾಗಲೇ ಅವರೊಳಗಿನ ಗೆಳೆತನದ ಕಾವು ಹಾಗೂ ಅದರ ಪರಿಣಾಮ ಜಾಸ್ತಿಯಾಗುತ್ತದೆ.

ಹೆಂಗಳೆಯರ ಒಡನಾಡಿಯಲ್ಲಿ ಗಂಡಸರ ಧ್ವನಿ, ಭಾಷೆ, ಶೈಲಿ ಹಾಗೂ ವರ್ತನೆಗಳೆಲ್ಲವೂ ಬದಲಾಗುತ್ತವೆ. ಹೆಂಗಸರ ಮೇಲೆ ತಮ್ಮ ಪ್ರಭಾವವನ್ನು ಬೀರಿ ಅವರ ಮೆಚ್ಚುಕೆಗೆ ಪಾತ್ರರಾಗಬೇಕೆಂಬ ಲವಲವಿಕೆ ಯಾವುದೇ ಗಂಡಸರಲ್ಲಿ ಸ್ವಾಭಾವಿಕವಾಗಿ ಇದ್ದೇ ಇರುತ್ತದೆ.

ಭಿನ್ನಲಿಂಗಿಗಳ ಸಾಮಿಪ್ಯದಿಂದ ನಾವು ಹೆಚ್ಚು ಜಾಗೃತರಾಗುತ್ತೇವೆ; ನಮ್ಮಲ್ಲಿ ಸ್ವಾಭಿಮಾನ ಬೆಳೆಯುತ್ತದೆ; ನಮ್ಮ ವರ್ತನೆ ಕೂಡಾ ಬದಲಾಗುತ್ತದೆ.

ಇಹಜೀವನದಲ್ಲಿ ಕಷ್ಟ ತೊಂದರೆಗಳಿಲ್ಲದ, ಬೇಸರ ಹಾಗೂ boredom ಇಲ್ಲದ, ವ್ಯಕ್ತಿಯೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಈ ಜೀವನವೇ “ಸಾಕು ಸಾಕಾಯಿತಪ್ಪಾ!” ಎನ್ನುವಾಗ ಆತ ತನ್ನ್ನೇ ತಾನು ಮರೆಯಲು ಪ್ರಯತ್ನಿಸುತ್ತಾನೆ. ಇಂತಹ ಪ್ರಸಂಗಗಳಲ್ಲಿ ನಮ್ಮ ಸಮೀಪದಲ್ಲಿಯೆ ನಿಂತು ನಮ್ಮನ್ನೇ ನಗು ಮೊಗದಿಂದ ದಿಟ್ಟಿಸುತ್ತಿರುವ ಕನ್ಯೆಯ ಕಣ್ಣು ಕಮಲಗಳಲ್ಲಿ, ಆಕೆಯ ಚಂದ್ರಮುಖದಲ್ಲಿ ನಮ್ಮನ್ನೇ ನಾವು ಆ ಕ್ಷಣದಲ್ಲಿಯೇ ಮರೆಯುವಂತಹ ಚುಂಬಕ ಶಕ್ತಿಯನ್ನು ನಾವು ಕಾಣಬಹುದು.

ತಿಳಿನೀರಿನ ಕಮಲದಂತೆ, ನೀಲಗಗನದಲ್ಲಿ ರಾರಾಜಿಸುವ ಹುಣ್ಣಿಮೆಯ ಚಂದ್ರನಂತೆ ಕುಮಾರಿಯೂ ನಮ್ಮಲ್ಲಿ ಚೈತನ್ಯವನ್ನು ತುಂಬಿಸಲು ಶಕ್ತಳಾಗಿರುತ್ತಾಳೆ. ಈ  ಕಾರಣದಿಂದಾಗಿ ಕವಿಗಳು ಈ ಪುನಶ್ಚೇತನಾ ಶಕ್ತಿಯನ್ನು ಸಂಕೇತಿಸಲು ಚಂದ್ರ ತಾವರೆಗಳನ್ನು ಪ್ರತೀಕಗಳನ್ನಾಗಿ ಬಳಸದಂತೆ ಗ್ರೀಕ್ ಜನರು ನವಕನ್ಯಾಪ್ರೇರಣಾ ದೇವತೆ (Muse) ಗಳನ್ನು ಕಲ್ಪಿಸಿದ್ದಾರೆ. ಅಂತೆಯೇ ಮಿನೆರ್ವಾ (Minerva) ಕೂಡಾ ಒಬ್ಬ ಕನ್ಯಾದೇವತೆ (Virgin goddess) ಯೇ ಸರಿ. ವೆಸ್ತಾ (Vesta) ಎಂಬ ಕನ್ಯಾದೇವತೆ ಮನೆಯಲ್ಲಿಯೂ, ಅಗ್ಗಿಷ್ಟಿಕೆಯ ಹತ್ತಿರವೂ ಸಂತ್ತೆಸಲಿರುವ ದೇವತೆ. ಈ ದೇವತೆಯ ಪೀಠದ ಉಪಚಾರಿಣಿಗಳಾಗಿ ಕುಮಾರಿಗಳೇ ಇರುವರು. ಅರ್ತೆಮಿಸ್, ಗ್ರೀಕ್ ಯುವತಿಯರಿಗೆ ಆದರ್ಶಪ್ರಾಯಗಳಾದರೆ ಡಯಾನಾ, ರೋಮೀಯ ಚೆಲುವೆಯರಿಗೆ ಆದರ್ಶಪ್ರಾಯಳು. ಈ ಕನ್ಯಾದೇವತೆಗಳು ಸೌಂದರ್ಯ ಮೂರ್ತಿಗಳು. ಈ ದೇವತೆಗಳಿಗೆ ಪ್ರಾಣಿಬಲಿಯನ್ನೂ ಕೊಡುತ್ತಿದ್ದರು, ಕೆಲವೊಮ್ಮೆ ಒಂದೆರಡು ಹನಿ ಮಾನವರಕ್ತವನ್ನೂ ಕುಡಿಸುತ್ತಿದ್ದರು. ಈ ದೇವತೆಗಳಿಗೆ ಫಿನೀಷಿಯಾದ ಆಸ್ತಾರ್ತೆ (Astarte) ಯೇ ಮೂಲವೆಂದು ಮಾನವ ಕುಲಜ್ಞಾನಿಗಳ ಅಭಿಪ್ರಾಯ. ಮೆಕ್ಸಿಕೊ ಜನಾಂಗದಲ್ಲಿ ಕೂಡಾ ಛಲ್ ಚ್ಹಿಹುಯ್‌ತ್ಲಿಕ್ (Chalchihuitlicue) ಎಂಬ ದೇವತೆ ಅಲ್ಲಿಯ ಕನ್ಯೆಯರಿಗೆ ಆದರ್ಶಪ್ರಾಯವಾಗಿರುವುದನ್ನು ಗಮನಿಸಬಹುದು.

ಪಾಶ್ಚಾತ್ಯ ಸಂಸ್ಕೃತಿಯ ಮೇಲೆ ಕ್ರೈಸ್ತ ಧರ್ಮ ಪ್ರಭಾವ ಬೀರಿದಾಗ ಈ ಕನ್ಯಾದೇವತೆಗಳನ್ನೆಲ್ಲ ತನ್ನಲ್ಲಿ ಜೀರ್ಣಿಸಿಕೊಂಡು ಕನ್ಯಾ ಮರಿಯಮ್ಮ (Virgin Mother Mary)  ಮೂರ್ತಿವೆತ್ತಳು. ರಕ್ಷಣೆಯನ್ನು ಪೋಷಣೆಯನ್ನು ನೀಡಬಲ್ಲ ಈ ಮಹಾತಾಯಿ ಮರಿಯಮ್ಮ ಮಾನವನ ಜೀವನಕ್ಕೆ ಹೊಸದಿಕ್ಕನ್ನು ತೋರಿಸಬಲ್ಲಳು; ಹೊಸ ತಿರವನ್ನು ಕೊಡಬಲ್ಲಳು; ನಿರಾಶರಾದವರನ್ನು ಆಶಾದಾಯಕರನ್ನಾಗಿ ಪರಿವತಿಸಬಲ್ಲಳೆಂಬ ಸಮಷ್ಟಿ ಪ್ರಜ್ಞೆ ಜನತೆಯಲ್ಲಿ ಮೂಡಿದಾಗ ಆಕೆ ಸಾರ್ವಕಾಲಿಕ ಕನ್ಯೆಯಾಗಿ ಕಂಗೊಳಿಸಿದಳು.

ಕನ್ಯಾಮರಿಯಮ್ಮ ತನ್ನ ಕರುಣಾಮಯ ಹಾಗೂ ಕೃಪಾಪೂರಿತ ದೃಷ್ಟಿಯಿಂದ ಆಕೆಯ ಭಕ್ತರಿಗೆ ದಿನನಿತ್ಯ, ಪ್ರತ್ಯೇಕವಾಗಿ ಅವರ ಸಾವಿನ ಸಮಯದಲ್ಲಿ ಆನಂದವನ್ನು ದಯಪಾಲಿಸುತ್ತಾಳೆಂಬ ಭರವಸೆ ಪಾಶ್ಚಾತ್ಯ, ಸಂಸ್ಕೃತಿಯಲ್ಲಿ, ಕ್ರೈಸ್ತ ಜನಪದದಲ್ಲಿ, ಬೇರೂರಿ ನಿಂತಿದೆ. ಆಕೆ ದುಃಖಸಾಗರದಿಂದ ವಿಮೋಚನೆಯನ್ನು ಕೊಡುವ ಕನ್ಯಾತಾರಿಣಿ (Saviouress) ಯಾಗಿ ಪಾಶ್ಚಾತ್ಯ ಕಲೆಗಳಲ್ಲಿ ಚಿತ್ರಿತಗೊಂಡಿದ್ದಾಳೆ. ಎಲ್ ಗ್ರೆಕೊ (EI Greco) ಚಿತ್ರಿಸಿದ ಕನ್ಯಾಮರಿಯಮ್ಮನ ಸ್ವರ್ಗಾರೋಹಣ (Assumption) ವೆಂಬ ಕಲಾಕೃತಿ ಇದಕ್ಕೆ ಉತ್ತಮ ನಿದರ್ಶನ.

ದಿವ್ಯಸತಿ (Sponsa Divina)

ಶ್ರೀಮಾತೆ ಮತ್ತು ಕನ್ಯಾಕುಮಾರಿ ಎಂಬ ಕಲ್ಪನೆಗಳು ಪರತತ್ತ್ವದ ಸೃಷ್ಟಿ ಶಕ್ತಿಗೆ ಅಂತೆಯೇ ಚೇತನಾ ಶಕ್ತಿಗೆ ಸಂಕೇತಗಳಾಗಿರುವಂತೆ ಸತಿ-ಪ್ರತೀಕ, ಅದರ “ಸಂಹಾರ” ಶಕ್ತಿಯ ಸಂಕೇತಗಳಲ್ಲೊಂದು.

ದಾಂಪತ್ಯ ಸುಖದಪ್ಪುಗೆಯಲ್ಲಿ ಪತಿಪತ್ನಿಯರು ಸಮರಸಿಕವಾಗಿ ತಲ್ಲೀನಗೊಂಡಾಗ ತಾನಿದಿರೆಂಬ ಭಾವನೆಯನ್ನು ಮರೆತು ಒಂದಾಗುತ್ತಾರೆಯಾದುದರಿಂದ ಅಲ್ಲಿ “ಅಹಂ” / “ನಾನು” ಎಂಬುದರ ಒಂದು ರೀತಿಯ ಸಾವನ್ನೇ ಕಾಣುತ್ತೇವೆ. ಕಾರಣ, ಜೀವಾತ್ಮ ಪರಮಾತ್ಮರುಗಳ ಸಾಮರಸ್ಯದ ಅನುಭಾವಕ್ಕೆ ಅರ್ಥಾತ್ ಮುಕ್ತಿಗೆ ಈ ದಾಂಪತ್ಯಕ್ಕೆ ಅತ್ಯಂತ ಸೊಗಸಾದ ಹಾಗೂ ಯುಕ್ತವಾದ ಸಂಕೇತ.

ಪ್ರಾಪ್ತ ವಯಸ್ಕರು ಭಿನ್ನಲಿಂಗಿ ಸಂಭೋಗದಿಂದ ಪಡೆಯುವ ಸುಖಕ್ಕೆ ಸರಿಸಾಟಿಯಾದ ಸುಖ ಬೇರೊಂದಿಲ್ಲವೆಂಬ ಸಮಷ್ಟ್ಯಾನುಭವಕ್ಕೆ ಜಾನಪದದಲ್ಲಿಯ ಸತಿ ಸಂಕೇತಕ್ಕೆ ಕಾರಣವೆನ್ನಬಹುದು.

ಗ್ರೀಕ್ ದೇವತೆಗಳಾದ ಆಫ್ರೊಡಾಯ್ಟ್ ಮತ್ತು ರೋಮೀಯ ದೇವತೆಯಾದ ಯುನೊ, ವೀನಸ್, ಆರಂಭದಲ್ಲಿ ಶ್ರೀಮಾತೆಗಳಾಗಿದ್ದರೂ ಕಾಲಕ್ರಮೇಣ ಅವು ಸೌಂದರ್ಯ ಮತ್ತು ರತಿದೇವತೆಗಳಾಗಿ ಮಾರ್ಪಾಡು ಹೊಂದಿದವು. ಇವರ ಹಬ್ಬಗಳನ್ನು ಕೊಂಡಾಡುವ ಸಂದರ್ಭದಲ್ಲಿ ವಿಧಿಪೂರ್ವಕವಾಗಿ ಸ್ವಚ್ಛಂದವಾಗಿ ಲೈಂಗಿಕ ಸಂಭೋಗ – free love- ನಡೆಯುತ್ತಿತ್ತು. ಬಹುಶಃ  ದಿವ್ಯದೊಡನೆ ಪಡೆಯಬೇಕಾದ ಐಕ್ಯಸ್ಥಿತಿಯ ಸಂಕೇತ ಅದಾಗಿದ್ದಿರಬೇಕು.

ಮಾನವನ ಜೈವಿಕಾನುಭವಗಳಲ್ಲಿ ಪ್ರಣಯ (Eros) ಅತ್ಯಂತ ಪ್ರಮುಖ, ಪ್ರಭಾವಶಾಲಿ ಹಾಗೂ ಅನುಭವಕ್ಕೆ ತೀರ ಹತ್ತಿರ. ಪ್ರಚೋದನೆಗೊಳಗೊಂಡ ಕಾಮ ರಸಾನುಭವಸ್ಥಿತಿಗೆ ಏರುತ್ತಿರುವಾಗ ಪ್ರಣಯಿಗಳು ಹೊರಳಾಡುವ, ಬೆವರುವ, ಚಿವುಟುವ, ಚೀರುವ ಮೊದಲಾದ ಕಾಮಕೇಳಿಯನ್ನು  ಗಮನಿಸಿದಾಗ ಪ್ರಣಯ ಶಕ್ತಿಯ ಪ್ರಬಲತೆಯ ಅರಿವು ನಮಗಾಗುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಅತ್ಯಂತ ಪ್ರಬಲವಾದ ಶ್ರೀ ಶಕ್ತಿಯನ್ನು ಸತಿಶಕ್ತಿಯ ಮೂಲಕ ಜನಪದರು ಸಂಕೇತಿಸಿದುದು ಬಹು ಅರ್ಥಪೂರ್ಣ ಹಾಗೂ ಮಾರ್ಮಿಕವೆಂದೇ ಹೇಳಬೇಕು.

ಸತಿಪತಿಯರು ಪರಸ್ಪರ ಬಿಸಿ ಅಪ್ಪುಗೆಯಲ್ಲಿ ಸಂಭೋಗದ ಸುಖವನ್ನು ಅಪೇಕ್ಷಿಸುವುದು ಮಾನವ ಸಹಜ ಧರ್ಮ. ಆದರೆ ಈ ಸುಖ ಕ್ಷಣಿಕ! ನಿರಂತರವಾಗಿ ಇಂತಹ ಅಪೇಕ್ಷಣೀಯ ಸುಖವನ್ನು ಕೊಡುವ ಶಕ್ತಿ ಯಾವ ಐಹಿಕ ಸತಿಯಿಂದಲೂ ಅಸಾಧ್ಯವೆಂಬ ಅನುಭವ ಸಮಷ್ಟಿ ಪ್ರಜ್ಞೆಯಾದಾಗ ಜನಪದರು ದಿವ್ಯ (The Holy) ವನ್ನೇ ಸತಿಯನ್ನಾಗಿ ತಿಳಿದುಕೊಂಡು ಆಕೆಯ ಆಲಿಂಗನದಲ್ಲಿ ಆಕೆಯೊಡನೆ ಸಾಮರಸ್ಯಗೊಳ್ಳಲು ಬಯಸಿದುದು ಜನಪದರ ಕಲಾಭಿವ್ಯಕ್ತಿಯಲ್ಲಿ ಸುಂದರವಾಗಿ ಚಿತ್ರಿತಗೊಂಡಿದೆ.

ಆಫ್ರೊಡಾಯ್ಟ್, ವೀನಸ್ ಮೆಕ್ಸಿಕೊವಿನ ತ್ಲಾಸೊಲ್ತೆಯೊತ್ಲ್ (Tlazol – teotl) ಮೊದಲಾದ ಪ್ರಣಯ ದೇವತೆಗಳು ಕ್ರೈಸ್ತ ಪ್ರಭಾವದಿಂದಾಗಿ ಕಾಲಗರ್ಭದಲ್ಲಿ ಅಡಗಿ ಹೋದಾಗ ಕನ್ಯಾ ಮರಿಯಮ್ಮ ದಿವ್ಯಸತಿ (devine Spouse) ಯಾಗಿ ಜನಪದರಲ್ಲಿ ಮೊಗದೋರಿದಳು. ಪತಿಯನ್ನು ಸಂಮೋಹಗೊಳಿಸುವ ಶಕ್ತಿ ಸತಿಯಲ್ಲಿರುವಂತೆ ಭಕ್ತರನ್ನು ತನ್ನೆಡೆಗೆ ಸೆಳೆದೊಯ್ದು ಮಂತ್ರಮುಗ್ಧರನ್ನಾಗಿ ಮಾಡುವ ಶಕ್ತಿ ಕನ್ಯಾಮರಿಯಮ್ಮನಲ್ಲಿದೆ. ಈ ಕಾರಣದಿಂದ ದೇವನಿಗಿಂತ ಈ ದೇವಿಯ ಕಡೆ ಭಕ್ತರು ನೇರವಾಗಿ ತಂಡೋಪತಂಡವಾಗಿ ಧಾವುಸುತ್ತಾರೆ; ಆಕೆಯ ಸೆರಗಿನಾಶ್ರಯದಲ್ಲಿ ನಿರ್ಭೀತರಾಗಿ ಆನಂದಪರವಶರಾಗುತ್ತಾರೆ.

ಪರಮಾತ್ಮನ ಸತಿರೂಪವನ್ನು ಮರಿಯಮ್ಮನಲ್ಲಿ ಕ್ರೈಸ್ತ ಭಕ್ತರು ಕಾಣುವುದರಿಂದ ಆಕೆಯನ್ನು ಅವರು ದಿವ್ಯಸತಿಯೆಂದು ಕರೆಯುತ್ತಾರೆ. ಪೋಲೆಂಡಿನಲ್ಲಿ ನವ ದಂಪತಿಗಳು ತಮ್ಮ ಮೊದಲ ರಾತ್ರಿಯ ಸುಖವನ್ನು ಸವಿದುಕೊಂಡ ಕೂಡಲೇ ದಿವ್ಯಸತಿ ಮರಿಯಮ್ಮನ ಮಾಞೀಫಿಕಾತ್ (Magnificat)  ಎಂಬ ಸ್ತೋತ್ರ ಗೀತವನ್ನು ಹಾಡುವ ಜನಪದ ರೂಢಿಯಿದೆ.

ಮರಿಯಮ್ಮನೆಂಬ ದಿವ್ಯ ಸಂಕೇತಕ್ಕೆ ಮಾರು ಹೋಗಿ ಪ್ರತಿವರ್ಷ ಸಾವಿರ ಗಟ್ಟಲೆ ಕ್ರೈಸ್ತ ಯುವಕ ಯುವತಿಯರು ದಿವ್ಯವೇ ತಮ್ಮ ಸತಿ / ಪತಿಯೆಂದು ತಿಳಿದುಕೊಂಡು ಬ್ರಹ್ಮಚಾರಿ ವ್ರತವನ್ನು ಆಜೀವಪರ್ಯಂತ, ಈ ಕಾಮಯುಗ (Sex-age) ದಲ್ಲಿಯೂ, ಆಚರಿಸುವುದನ್ನು ನಾವು ನಮ್ಮ ಸುತ್ತಮುತ್ತಲೂ ಗಮನಿಸಹಬುದು. ಅನೇಕ ಕುಷ್ಟರೇ ಮೊಲಾದ ರೋಗಿಗಳನ್ನೂ, ನಿರ್ಗತಿಕರನ್ನೂ ದಿಕ್ಕಿಲ್ಲದ, ಕಸದ ಬುಟ್ಟಿ ಗಟಾರಗಳಲ್ಲಿ ತಾಯಂದಿರಿಂದ ಬೀಸಲಾದ ಕೂಸುಗಳನ್ನೂ, ಅಂಗವಿಕಲರನ್ನೂ ಮಾತೆ ತೆರೇಸಾರಂತಹ ಕ್ರೈಸ್ತ ಸನ್ಯಾಸಿನಿಯರು ಪ್ರೇಮ ಚುಂಬಕದಂತೆ ಆಕರ್ಷಿಸಿ ಆಶ್ರಯವನ್ನೂ ಒಲವು ಪ್ರೇಮಗಳನ್ನೂ ನೀಡುವುದನ್ನು ಗಮನಿಸಿದಾಗ ಇವರೂ ಕ್ರೈಸ್ತ ಜನಪದದಲ್ಲಿ ಆ ಪರಮತತ್ತ್ವದ ಸತಿ – ಸಂಕೇತಗಳೆಂದರೆ ಅತಿಶಯೋಕ್ತಿಯಾಗಲಾರದು.

ಅದೇನೇಯಿದ್ದರೂ ಪಾಶ್ಚಾತ್ಯ ಸನಾತನ ಸಂಸ್ಕೃತಿ, ಕ್ರಿಸ್ತೀಕರಣಗೊಂಡಾಗ ಎಲ್ಲ ಪ್ರಣಯ ರತಿದೇವತೆಗಳನ್ನು ಮೆಟ್ಟಿನಿಂತ ದೇವರ ಏಕೈಕ ಸತಿ ಪ್ರತೀಕವಾಗಿರುವ ಕನ್ಯಾ ಮರಿಯಮ್ಮ ಪಾಶ್ಚಾತ್ಯ ಕಲೆಗಳಲ್ಲಿ ಅತ್ಯಂತ ಆಕರ್ಷಕಳಾಗಿ ಅಭಿವ್ಯಕ್ತಗೊಂಡಿದ್ದಾಳೆ. ಬೊತ್ತಿಚೆಲ್ಲಿ (Botticelli) ಸೃಷ್ಟಿಸಿದ ಕ್ರಿಸ್ತಾವತಾರ ಪ್ರಕಟನೆ (Annuciation) ಯ ಕಲಾಚಿತ್ರ ಮರಿಯಮ್ಮನ ದಿವ್ಯ ಪ್ರಣಯದ ಭವ್ಯ ಸಂಕೇತವಾಗಿ ಸಹೃದರನ್ನು ಎಂದೆಂದಿಗೂ ಸೆರೆಹಿಡಿಯಬಲ್ಲದು.

ಮಹಾ ಸಂಹಾರಿಣಿ (Pieta)

ಭೂದೇವಿಯ ಫಲಶಕ್ತಿಯನ್ನು ಕಂಡು ಬೆರಗಾದ ಕೃಷಿಕ ಮಾನವ, ಹುಟ್ಟದವುಗಳು ಭೂಮಿಗೆ ಮರಳಿಹೋಗುವುದನ್ನು ಕಂಡು ಮತ್ತಷ್ಟು ವಿಸ್ಮಯಗೊಂಡಿರಬೇಕು. ಆಗ ಭೂ ಆತನಿಗೆ ಭಯಂಕರ ಸ್ವರೂಪಿ (Terrible Female) ಯಾಗಿ ಕಂಡಿರಬೇಕು.

ವೈದ್ಯಕೀಯ ವಿಜ್ಞಾನ ಬೆಳೆಯುವ ಮುನ್ನ ಎಷ್ಟೋ ಪುಟ್ಟ ಕೂಸುಗಳು ಹೆತ್ತ ತಾಯಿಯ ತೊಡೆಯ ಮೇಲೆಯೇ ಸಾವನ್ನು ಅಪ್ಪಿಕೊಂಡಾಗ ಅಥವಾ ಕಾಡು ಪ್ರಾಣಿಯ ಕ್ರೌರತೆಗೊ ಸಿಕ್ಕು ಗಾಯಗೊಂಡ ವ್ಯಕ್ತಿ ತನ್ನ ತಾಯಿಯ / ಹೆಂಡತಿಯ ತೊಡೆಯ ಮೇಲೆ ತಲೆಯನ್ನಿಟ್ಟು ಒಮ್ಮಿಂದೊಮ್ಮೆಲೇ ಶಾಶ್ವತವಾಗಿ ಕಣ್ಣು ಮುಚ್ಚುವ ಪ್ರಸಂಗಗಳು ಆದಿ ಮಾನವರು ಅನುಭವಿಸಿರಬೇಕು. ಇಂತಹ ಭಯಂಕರ ಸನ್ನಿವೇಶಗಳಿಂದ ಜನಪದರಲ್ಲಿ ಸಂಹಾರಿಣಿ/ಮೃತ್ಯುದೇವತೆಯ ಕಲ್ಪನೆ ಹುಟ್ಟಿರಬೇಕೆಂಬ ಬಲವಾದ ಪ್ರಮೇಯ ತಜ್ಞರಲ್ಲಿದೆ.

ಮರಣದೇವತೆ ಜಾನಪದದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾಳೆ. ಮೆಕ್ಸಿಕೊವಿನ ಜಾನಪದದಲ್ಲಿ ಇಲಯತೆಚ್ಹುತ್ಲಿ (Iamatecuhtli)  ಎಂಬ ಸಂಹಾರಿಣಿ ಭಾರತೀಯ ಕಾಳಿಗಿಂತ ಅತ್ಯಂತ ಭಯಾನಕವಾಗಿ ಕಂಡುಬರುತ್ತಾಳೆ. ಆಕೆ ಶೂರ ದೇವತೆಯಾದ ತನ್ನ ಮಗನನ್ನು ಕೊಂದು ಆತನ ಹೃದಯವನ್ನು ಕಿತ್ತೊಗೆದು, ವೃಷಣವನ್ನು ಚೆನ್ನಾಗಿ ಹಿಚುಕಿ, ಹರಿದು ಬಿಸಾಡುತ್ತಾಳೆ. ಕೆಲ್ಟ್ ಜಾನಪದದಲ್ಲಿ ಮೊರಿಗನ್ (Morrigan) ನೆಮಾನ್ (Neman) ಮತ್ತು ಮಾಶಾ (Macha) ವೆಂಬ ಕ್ರೂರ ಮೃತ್ಯುದೇವತೆಗಳ ಉಲ್ಲೇಖವಿದೆ. ಜರ್ಮನ್ ಜಾನಪದದಲ್ಲಿಯ ಹೆಲ್ಲೆ (Helle) ಎಂಬ ಮರಣದೇವತೆಯಿಂದಲೇ ಇಂಗ್ಲೀಷಿಗೆ ಹೆಲ್ (Hell “ನರಕ”) ಬಂದಿದೆಯಂತೆ. ದೆಮೆತೆರಾದಿ ಕೆಲವು ಗ್ರೀಕ್ ದೇವತೆಗಳು ನರಕದ ಬಾಗಿಲನ್ನು ಕಾಯುವುದರಿಂದ ಅವು ಮೃತ್ಯುದೇವತೆಗಳೂ ಹೌದು.

ಹುಟ್ಟೂ ಸಾವೂ ಜೀವನದ ಎರಡು ಹಂತಗಳು ಮಾತ್ರ. ಹುಟ್ಟಿದೆಲ್ಲವೂ ಸಾಯಲೇ ಬೇಕು. ಕಾರಣ, ಹುಟ್ಟು ಸಾವುಗಳೆರಡನ್ನೂ ಅನಂತ ಪರತತ್ವದ ಸ್ತ್ರೀ ಪ್ರತೀಕವಾದ ಮಾತೃ ದೇವತೆಯಲ್ಲಿ ಜನಪದರು ಸಂಕೇತಿಸಿದ್ದು ಅರ್ಥಪೂರ್ಣ.

ಸಾವು ಪ್ರಥಮ ದೃಷ್ಟಿಗೆ (Prima facie) ಭಯಂಕರವಾಗಿ ಕಂಡರೂ ಅದು ಪರಮ ಐಕ್ಯದ ಸಾಧನ. ಯಾವ ಶಕ್ತಿಯಿಂದಾಗಿ ಹುಟ್ಟು ಉಂಟಾಗುತ್ತದೆಯೋ ಅದೇ ಶಕ್ತಿಯಲ್ಲಿ ಅದರ ಐಕ್ಯವೆಂಬ ಪ್ರಜ್ಞೆ ಜನಪದರಲ್ಲಿ ಸರ್ವಸಾಮಾನ್ಯವಾಗಿರುವುದರಿಂದ ಆ ಸಾವನ್ನೇ ಆ ಐಕ್ಯದ ಸಂಕೇತವನ್ನಾಗಿಟ್ಟುಕೊಂಡು ಮೃತ್ಯು ದೇವತೆಯ ಕಲ್ಪನೆಯನ್ನು ಹುಟ್ಟಿಸಿಕೊಂಡಿರಬೇಕೆಂದು ಊಹಿಸಬಹುದು.

ಇಂದು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಸಂಹಾರ ಶಕ್ತಿ ದೇವತೆಗಳು ಶೋಕಮಾತೆ (Mater Dolorosa) ಯಲ್ಲಿ ಐಕ್ಯ ಹೊಂದಿದ್ದಾರೆ. ಶೋಕಮಾತೆ ಮರಿಯಮ್ಮ ತನ್ನ ಮಗನ ಮೃತದೇಹವನ್ನು ತನ್ನ ತೊಡೆಯ ಮೇಲಿಟ್ಟು ಅತ್ಯಂತ ಶಾಂತಳಾಗಿ ಕ್ರೂಜೆ (Cross) ಯ ಬುಡದಲ್ಲಿ ಕೂತಿರುವುದನ್ನು ಗಮನಿಸಿದಾಗ ಸಾವನ್ನು ಎದುರಿಸುವ ರೀತಿಗೆ ನಿದರ್ಶನಳಾಗಿ ಆಕೆ ಕಾಣುತ್ತಾಳೆ.

ಈ ಶೋಕಮಾತೆ (Mother of Sorrows) ಮೃತ್ಯುದೇವತೆ; ಯಾಕೆಂದರೆ, ಈಕೆ ಪ್ರತಿಯೋರ್ವನ ಅಹಂಭಾವದ ಸಾವನ್ನು ಬಯಸುತ್ತಾಳೆ. ಆ ಬಯಕೆಯನ್ನು ಪೂರೈಸಿದ ಸಾಧಕನಿಗೆ ಐಕ್ಯದ ಸಾಧನವಾಗುತ್ತಾಳೆ. ಅಹಂಭಾವ ಅಳಿದರೆ ತಾನೆ ಪರದಲ್ಲಿ ಪಾದಾತ್ಮ್ಯಗೊಳ್ಳುವುದು?

ತಾನೆಂಬುದರ ಸಾವಿನಿಂದಲೇ ಮೃತ್ಯುಂಜಯ ಸಾಧ್ಯವೆಂಬುದನ್ನು ಪ್ರತ್ಯಕ್ಷವಾಗಿ ತೋರಿಸಿದ ತನ್ನ ಮಗನಾದ ಯೇಸು (Yeshua) ವಿನ ಮೃತದೇಹವನ್ನು ತಾತ್ಕಾಲಿಕವಾಗಿ ಹೊತ್ತುಕೊಂಡ ಈ ಮಹಾತಾಯಿ ಮೃತ್ಯುದೇವತೆ (Pieta) ಯಾಗಿ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಚಿತ್ರಿತಳಾಗಿದ್ದಾಳೆ.

ಎಷ್ಟೋ ಉಗ್ರ ಸನ್ನಿವೇಶಗಳಲ್ಲಿ, ರಕ್ತಪಾತವಾಗುವ ಸಂದರ್ಭಗಳಲ್ಲಿ, ಧರ್ಮ ಯುದ್ಧಗಳಲ್ಲಿ ಮರಿಯಮ್ಮನ ಉತ್ಸವ ಮೂರ್ತಿಯನ್ನು ಪಾಶ್ಚಾತ್ಯರು ಕೊಂಡೊಯ್ದುದನ್ನು ಪ್ರಸ್ತುತದಲ್ಲಿ ನೆನಪಿಸಬೇಕು. (Durant IV 81, 727) ಮೆಕ್ಸಿಕೊ, ರಷ್ಯಾ, ಪೋಲೆಂಡ್, ಸ್ಪೈನ್, ಇಂಗ್ಲೆಂಡ್ ಮೊದಲಾದೆಡೆಗಳಲ್ಲಿ ಕ್ರೈಸ್ತ ಭಕ್ತರು ತಮ್ಮ ಭಕ್ತಿಗಾಗಿ, ಧರ್ಮಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಯಾಗಿ ಕೊಡುವ ಸಂದರ್ಭಗಳಲ್ಲಿ ಭಕ್ತಿಯನ್ನಿತ್ತ ಈ ಮಹಾತಾಯಿ ಆ ಭಕ್ತರ ಆತ್ಮಗಳನ್ನೇ ಆಹುತಿಯನ್ನಾಗಿ ಪಡೆದುಕೊಂಡು ಭೀಕರ ಮೃತ್ಯುದೇವತೆಯೂ ಆದಳು. ಹಿಲೆರ್ ಬೆಲೊಕ್, ಜಿ. ಕೆ. ಚೆಸ್ಟರ‍್ಟನ್ ಮೊದಲಾದ ಕವಿಗಳು ಈ ಮೃತ್ಯುದೇವತೆಯನ್ನು ಕುರಿತು ವೀರಗೀತೆಗಳನ್ನು ರಚಿಸಿದ್ದಾರೆ (Greely 192 – 3), ಮೈಕಲಾಂಜಲೊ ಚಿತ್ರಿಸಿದ ಮೃತ್ಯುದೇವತೆ ಮರಿಯಮ್ಮ (Pieta) ನ ಕಲಾಕೃತಿ, ಮಹಾಕೂಟದ ಸಂಕೇತವಾಗಿ ಜಗತ್ಪ್ರಸಿದ್ಧವಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಮಾನವ ತನ್ನ ದೈನಂದಿನ ಅನುಭವಗಳಲ್ಲಿ ಇತಿ ಮಿತಿಯಾನುಭವ (Limit – experience) ವನ್ನು ಪಡೆಯುತ್ತಾನೆ. ಆಗ ಪರೋಕ್ಷವಾಗಿ “ಪೂರ್ಣ” ದ ಅನುಭಾವ “ಕಿರಿದರೊಳ್ ಪಿರಿದು” ಇದ್ದಂತೆ ಆತನಿಗಾಗುತ್ತದೆ. ಆಗ ಈ ಸೀಮಾನುಭವಕ್ಕೆ ಕಾರಣವಾದ ಅನುಭವಗಮ್ಯ ವಸ್ತುಗಳು ಅನುಭಾವ ಗಮ್ಯ “ಪೂರ್ಣ” ದ ಸಂಕೇತಗಳಾಗುತ್ತವೆ. ಪೌರಸ್ತ್ಯ ಸಂಸ್ಕೃತಿಯಲ್ಲಿದ್ದಂತೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿಯೂ ಮಾತೃ ದೇವತೆಯ ಕಲ್ಪನೆ ಇಂತಹ ಧಾರ್ಮಿಕ ಸಂಕೇತಗಳಲ್ಲೊಂದು. ಈ ಸಂಕೇತದ ಮೂಲಕ ಅಮೂರ್ತ ಪರತತ್ತ್ವದ ಸ್ತ್ರೀ – ಮುಖ (The Feminine aspect of God) ಮೂರ್ತಸ್ವರೂಪವನ್ನು ತಳೆದಿದೆ. ಸ್ವಭಾವತಹ ದ್ವಿಲಿಂಗಿಯಾದ ಮಾನವ ಪರತತ್ವದಲ್ಲಿ “ಅಮ್ಮಯ್ಯ” – ಅರ್ಧನಾರೀಶ್ವರ (S/He) ನನ್ನು ಕಂಡಿದ್ದಾನೆಯಾದರೂ ಈ ಅಮ್ಮಯ್ಯ ಕಾಲಸಂಸ್ಕೃತಿಗಳಿಗೆ ಹಾಗೂ ಭಕ್ತನ ಮನೋವೃತ್ತಿಗನುಗುಣವಾಗಿ ಕೆಲವೊಮ್ಮೆ ಅಮ್ಮನಾಗಿಯೇ (mother) ಅಯ್ಯನಾಗಿಯೇ (Father) ಪ್ರಾಧಾನ್ಯತೆಯನ್ನು ಪಡೆದಿದ್ದಾನೆ.

ಪ್ರಸ್ತುತದಲ್ಲಿ ಈ ಅಮ್ಮಯ್ಯ, ಮಾತೃದೇವತೆಯ ಪ್ರತೀಕದ ಮೂಲಕ ತಾಯಿಯಾಗಿ, ಕನ್ಯೆಯಾಗಿ, ಸತಿಯಾಗಿ, ಮೃತ್ಯುದೇವತೆಯಾಗಿ ಯಾವ ರೀತಿಯಲ್ಲಿ ಪಾಶ್ಚಾತ್ಯರನ್ನು ಆಕರ್ಷಿಸಿದ್ದಾನೆ ಮತ್ತು ಆ ಜನಪದರು ಈ ಸಂಬಂಧಗಳನ್ನು ಜಾನಪದದಲ್ಲಿ ಹೇಗೆ ನಿರೂಪಿಸಿದ್ದಾರೆಂಬುದನ್ನು ರೂಪರೇಖಾತ್ಮವಾಗಿ ವಿವರಿಸಲಾಯಿತು.

 

ಆಧಾರ ಸಾಹಿತ್ಯ

(ಅಕಾರಾದಿ ಸೂಚಿ)

Ashe, Godffery
1976 The Virgin, London : Routledge and Kegan Paul

Barker, Mary and Cook, Chrirtopher (Eds).
1976 Pears Enchyclopaedia of Myths and Legends, London : Pelhalm Books.

Bhattacharya, N. N
1971 Indian Mother Goddess, Calcutta.

Brandon, S. G. F (Gen. Ed)
1971 (2nd imp) A Dictionary of Comparative Religion, London : Weiderfiel & Nicolson.

Brockway, R. W.
1979 “Searching for the Roots of Archaic – Religion”, Journal of Dharma, Vol IV, No. 4 (Oct. – Dec), Bangalore : Dharma Research Association.

Brunvand, Jan
1968 The Study of American Folklore, New York.

Dundes, Alan
1965 The Study of Folklore, N. J. Englewood Cliffs.

Durant, will.
1950 The Story of Civilisation Vol. IV, The Age of Faith, Newyork : simon and Schuster.

Farnell, Lewis Richrad
1925 The Attributes of God, Oxford : At the Clarendon Press.

Greely, Andrew M.
1977 The Mary Myth, Newyork : The Seabury Press.

Hastings, James (Ed.)
1937 (2nd imp) Encylopaedie of Religion and Ethics, Vol V. New york: Charles Scribener & Sons

James, E .O.
1960 (imp) History of Religions (1956 ist print) (Teach Yourself), London : The English University Press Ltd.

Madtha, William
1976 “Viirashaivism and Christainity (An Eeumenical Dailogue on Doctrine)” Journal of the Karnataka University, Humanities (Silver Jubilee Year Special Number), Vol  XX, Dharwar.

1980 “Shakti : The Feminine Aspect of God in Indian Tradition” Journal of Dharma, VOl V, No.2 (April – June), Bangalore. Dharma Research Association. Quinn, Edward

1981 “A Radical Break” the tablet, Vol. 235,  No. 7333, London : The Tablet Publishing Company Ltd.

Reader’s Digest Association.
1978 Reader’s Digest Library of Modern Knowledge, London.

Woodroffe, John (Sir)
1965 (6th ed.) “Shakti and Shakta, Madras : Ganesh & Co.

ಚಿದಾನಂದಮೂರ್ತಿ, ಎಂ (ಸಂ)
೧೯೮೦ ಅಧ್ಯಯನ, ಬೆಂಗಳೂರು : ಡಾ. ಶಂ. ಬಾ. ಜೋಶಿ ಸನ್ಮಾನ ಸಮಿತಿ.

ಹಿಂಗಮಿರೆ, ಬಿ. ಬಿ (ಅನು)
೧೯೮೦ ಪುಷ್ಕಿನ್ ಕವಿತೆಗಳು, ಧಾರವಾಡ : ಯುಗಧ್ವನಿ ಪ್ರಕಾಶನ.

* * *

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1]     Since the Irreducible Real is the Whole (puurna) it cannot be conceived or described. It is neither Father nor Mother, for it in beyond Fatherhood and Motherhood and all other attitudes (Woodroffe, 412-3

[2]     I suspect that in the beginning the Goddess everywhere antedated, or atleast was predomanant over, the God It has been afframed……. that in all countries from Euphrates to the Adriatic, the Chief Divinity was at First in woman form, (Woodroffe, 409

[3]     ಕಾರ್ಲ್ ಯೆಸ್ಪರ್ಸ್, ಮಿರ್ಕೆಯ ಎಲಿಯಾವೆ ಮೊದಲಾದ ಧರ್ಮಶಾಸ್ತ್ರ (Religions – wisissensschaft) ಪ್ರವೀಣರು ಧರ್ಮದ ಇತಿಹಾಸದಲ್ಲಿ ಪೂರ್ವೈತಿಹಾಸಿಕ (Pre – historic), ಪ್ರಾಚೀನ (Archaic) ಮತ್ತು ಶಿಲಾ (paleolithic) ಯುಗಗಳೆಂಬ ಮೂರು ಘಟ್ಟಗಳನ್ನು ಗುರುತಿಸಿದ್ದಾರೆ. ಶಿಲಾಯುಗವನ್ನು ಪೂರ್ವ ಶಿಲಾಯುಗ (Upper paleolithic), ಮಧ್ಯ ಶಿಲಾಯುಗ (Mesolithic) ಮತ್ತು ನವಶಿಲಾಯುಗದ (Neolithic) ಎಂದು ವರ್ಗೀಕರಿಸಿದ್ದಾರೆ. ಯೆಸ್ಪರ್ಸನ್ ಅಭಿಪ್ರಾಯದ ಪ್ರಕಾರ ಶಿಲಾಯುಗದ ಬಳಿಕ ಪ್ರವಾದಿ (Prophetic)  ಮತ್ತು ಸಂಘಟಿತ (Organized) ಧರ್ಮಗಳು ಹುಟ್ಟಿದವು. ಇವುಗಳ ಪೂರ್ವದ ಧರ್ಮಗಳೆಲ್ಲ ಸನಾತನ ಜನಪದ ಧರ್ಮಗಳು.