ಪ್ರಾಣಿಗಳ ಬದುಕಿನ ಹಿನ್ನೆಲೆಯಲ್ಲಿ ಮನುಷ್ಯನನ್ನೂ ಅಳೆಯುತ್ತಾ ಹೋದರೆ ಮನುಷ್ಯ ಸ್ವಾರ್ಥ ಜೀವಿ ಎಂಬ ನಿಲುವನ್ನು ತಾಳುವುದು ಸಹಜ. ಸಾಕುಪ್ರಾಣಿಗಳ ನೆಲೆಯಿಂದ ಗಮನಿಸಿದಾಗಲಂತೂ ಆ ಮಾತು ಅಪ್ಪಟ ಸತ್ಯತೆಯಿಂದ ಕೂಡಿದ್ದಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಆತನ ಬುದ್ಧಿ ಎನ್ನುವುದಕ್ಕಿಂತ ಆತನ ಹೊಟ್ಟೆ ಎನ್ನುವುದು ಹೆಚ್ಚು ಉಚಿತವೆನಿಸುತ್ತದೆ.

ಜನಪದರಲ್ಲಿ ಪ್ರಾಣಿಯೊಂದಿಗಿನ ಬದುಕು ಸಾವಯವ ಸಂಬಂಧವನ್ನು ಪಡೆದುಕೊಂಡಿದೆ. ಈ ಸಂಬಂಧಗಳು ಮಾನವ ಮಾನವರಿಗಿಂತ ಬಿಗುತರವಾಗಿರುವುದು ಕಂಡು ಬರುತ್ತದೆ. ಇದಕ್ಕೆ ಪ್ರಮುಖವಾದ ಕಾರಣ ಸಾಕುಪ್ರಾಣಿಗಳನ್ನು ಮಾನವನ ಬದುಕಿಗೆ ಸಹಾಯಕಾರಿಯಾಗಿ ದುಡಿಸಿಕೊಳ್ಳುವುದೇ ಆಗಿದೆ ಎಂದು ಹೇಳಿದರೆ ಅದು ತುಂಬ ಸರಳೀಕರಿಸಿದಂತಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ಆ ಸಾಕುಪ್ರಾಣಿಗಳ ಸ್ವಭಾವ ವರ್ತನೆಗಳು ಹೆಚ್ಚು ಪರಿಣಾಮಕಾರಿಯಾದವು. ಇವುಗಳಿಗೆ ಮಾರುಹೋದ ಜನಪದರು ಅವು ತಮ್ಮಿಂದ ದೂರವಾದಾಗ ತಮ್ಮ ಸಂಬಂಧಿಕರನ್ನು ಕಳೆದುಕೊಂಡಷ್ಟೇ ದುಃಖಿಸುತ್ತಾರೆ. ಸಾಕುಪ್ರಾಣಿಗಳಲ್ಲಿ ಪ್ರತಿಯೊಂದು ಪ್ರಾಣಿಯನ್ನೂ ಅಷ್ಟೇ ಪ್ರೀತಿಯಿಂದ ನೋಡುತ್ತಾರೆ ಎಂದೇನಿಲ್ಲ. ಹಾಗೆಯೇ ಅವುಗಳ ಸ್ವಭಾವ ವ್ಯತಿರಿಕ್ತವಾದಾಗ ಅಷ್ಟೇ ನಿರ್ದಯಿಗಳಾಗಿ ಶಿಕ್ಷಿಸುತ್ತಾರೆ. ಮತ್ತು ಅವುಗಳಿಗೆ ಕೊಡುವ ಸ್ಥಾನವೂ ಕೆಳಮಟ್ಟದ್ದಾಗಿರುತ್ತದೆ. ಎಷ್ಟೋ ಬಾರಿ ಅಂಥ ಪ್ರಾಣಿಗಳೊಂದಿಗೆ ಜನಪದರು ಬದಕಲು ಬಯಸುವುದಿಲ್ಲ.

ವಸತಿ ಸೌಕರ್ಯದೊಂದಿಗೆ ಮನುಷ್ಯ ಬದುಕಲು ಆರಂಭಿಸಿದಾಗ ತನಗೆ ಸಹಾಯಕಾರಿಯಾಗುವ ಪ್ರಾಣಿಗಳನ್ನು ಜೊತೆಗಿರಿಸಿಕೊಳ್ಳುವುದು ಅನಿವಾರ್ಯವಾಗಿ ತನ್ನಂತೆ ಅವುಗಳಿಗೂ ವಸತಿ ಸೌಕರ್ಯಕ್ಕೆ ಸ್ಥಳಾವಕಾಶಗಳನ್ನು ಒದಗಿಸಿರುವುದು ಕಂಡು ಬರುತ್ತದೆ. ಜನಪದರ ಬದುಕಿನ ವ್ಯವಸ್ಥೆ ಶಿಷ್ಟರ ಬದುಕಿಗಿಂತ ಭಿನ್ನವಾಗಿರುವುದರೊಂದಿಗೆ ಅವರು ರೂಪಿಸಿಕೊಂಡ ಬದುಕಿಗೆ ಅನುಗುಣವಾಗಿ ಪ್ರಾಣಿಗಳಿಗೂ ವಸತಿ ಸೌಕರ್ಯವನ್ನು ಒದಗಿಸಿಕೊಟ್ಟಿದ್ದಾರೆ. ಈ ವಸತಿ ಸೌಕರ್ಯವನ್ನು ಶಿಷ್ಟ ವ್ಯವಸ್ಥೆಯ ದೃಷ್ಟಿಕೋನದಿಂದ ಗಮನಿಸಿದಾಗ “ಜನಪದರು ತಮ್ಮ ಅನುಕೂಲಕ್ಕೆ ಬೇಕಾದಂತೆ ವಸತಿ ಸೌಕರ್ಯವನ್ನು ಒದಗಿಸಿದ್ದಾರೆಯೇ ವಿನಃ ಪ್ರಾಣಿಗಳ ಅನುಕೂಲಕ್ಕೆ ತಕ್ಕಂತೆ ವಸತಿ ಸೌಕರ್ಯವನ್ನು ಒದಗಿಸಿಲ್ಲ” ಎಂದು ತೀರ್ಮಾನಿಸುವುದು ಸಹಜ. ಆದರೆ ಶಿಷ್ಟ ಪ್ರಪಂಚದಲ್ಲಿಯ ಪ್ರಾಣಿಗಳ ಬದುಕಿಗೂ ಹೋಲಿಸಿ ನೋಡಿದರೆ ಜನಪದರು ಪ್ರಾಣಿಗಳಿಗೆ ಸ್ವಚ್ಛಂದತೆಯ ಬದುಕನ್ನು ಒದಗಿಸಲು ಪ್ರಯತ್ನಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಜನಪದರಲ್ಲಿಯ ಸಾಕು ಪ್ರಾಣಿಗಳು ಹಲವಾರು. ದನಗಳು (ಆಕಳು, ಎತ್ತು, ಎಮ್ಮೆ, ಕೋಣ, ಗೂಳಿ, ಮುಂ.) ಕುರಿ, ಆಡು, ನಾಯಿ, ಬೆಕ್ಕು, ಕೋಳಿ, ಹಂದಿ ಇಂಥವು ಪ್ರಮುಖವಾಗಿದೆ.

[1] ದಕ್ಷಿಣ ಕನ್ನಡದಲ್ಲಿ ಸಾಕುವ ಸಸ್ಯಾಹಾರಿ ಹಂದಿಗಳು (ಮಲ ತಿನ್ನುವ ಹಂದಿಗಳೂ ಇವೆ.) ಉತ್ತರ ಕರ್ನಾಟಕದಲ್ಲಿ ಇಲ್ಲ. ಹಾಗೆಯೇ ಉತ್ತರ ಕರ್ನಾಟಕದಲ್ಲಿ ಕೋಣಗಳ ಪಾಲನೆಯೂ ಅಪರೂಪದ್ದಾಗಿದೆ. ಮೇಲೆ ತಿಳಿಸಲಾದ ಎಲ್ಲಾ ಸಾಕು ಪ್ರಾಣಿಗಳಿಗೂ ಜನಪದರು ಪ್ರತ್ಯೇಕ ವಸತಿ ಸೌಕರ್ಯ ಒದಗಿಸಿದ್ದಾರೆ ಎಂದಿಲ್ಲ. ನಾಯಿ ಬೆಕ್ಕು ಜನಪದರು ವಾಸಿಸುವ ಮನೆಯಲ್ಲಿ ಹೆಚ್ಚಿನ ಸ್ವಾತಂತ್ಯ್ರವನ್ನು ಪಡೆದುಕೊಂಡಿವೆ. ಆದರೆ ಬೆಕ್ಕಿಗೆ ಸಿಕ್ಕಿದ ಸ್ವಾತಂತ್ಯ್ರ ನಾಯಿಗೆ ಸಿಕ್ಕಿಲ್ಲ. ಇದಕ್ಕೆ ಪ್ರಮುಖವಾದ ಕಾರಣ ಜನಪದರ ಬದುಕಿಗೆ ಈ ಪ್ರಾಣಿಗಳಿಂದ ಪಡೆದುಕೊಳ್ಳುವ ಸಹಕಾರದ ರೀತಿಯೇ ಆಗಿದೆ.

ಪ್ರಾಣಿಗಳ ವಾಸಸ್ಥಾನದ ಬಗ್ಗೆ ಚರ್ಚಿಸುವಾಗ ಜನಪದರ ಆರ್ಥಿಕ ಸ್ಥಿತಿಗಳೂ ಅಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ನಪದ ಜೀವನ ಮಟ್ಟ ಒಂದೇ ಬಗೆಯದ್ದಲ್ಲ. ಅಲ್ಲಿಯೂ ಶ್ರೇಣೀಕೃತ ಸಮಾಜವಿದೆ ಎನ್ನುವುದನ್ನು ಲಕ್ಷ್ಯದಲ್ಲಿಟ್ಟುಕೊಳ್ಳುವುದು ಅಗತ್ಯ. ಜಾತಿ ಮತಗಳಿಂದ ಕೂಡಿದ ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ಪ್ರಾಣಿಗಳ ಜೀವನಮಟ್ಟವೂ ನಿಶ್ಚಿತ ಸ್ವರೂಪವನ್ನು ತಳೆದುಕೊಂಡಿದೆ. ಸ್ಥಿತಿವಂತರಾದ ಜನಪದರಲ್ಲಿ ಸಾಕು ಪ್ರಾಣಿಗಳ ಬದುಕೇ ಇನ್ನೊಂದು ಮಟ್ಟದಾಗಿರುತ್ತದೆ. ಈ ವಿಚಾರ ಎಲ್ಲ ಸಾಕು ಪ್ರಾಣಿಗಳಿಗೆ ಅನ್ವಯವಾಗದಿದ್ದರೂ ದನಗಳಿಗೆ ಹೆಚ್ಚು ಅನ್ವಯವಾಗುತ್ತದೆ. ಮನುಷ್ಯ ಸಮಾಜದ ಇರುವಿಕೆ ಪ್ರಾಣಿ ಸಮಾಜದ ಇರುವಿಕೆಯನ್ನು ರೂಪಿಸುತ್ತದೆ. ಆದರೆ ಪ್ರಾಣಿಗಳಿಗೆ ತಮ್ಮದೇ ಆದ ಸಮಾಜವನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಇದ್ದಾಗಲೂ ಹಾಗೆ ರೂಪಿಸಿಕೊಳ್ಳಲ ಮನುಷ್ಯ ಅಥವಾ ಜನಪದರು ಬಿಟ್ಟಿಲ್ಲ ಎನ್ನುವುದೂ ಸ್ಪಷ್ಟವಾಗುತ್ತದೆ. ಮನುಷ್ಯರ ಜಾತಿಗಳು ಪ್ರಾಣಿಗಳಿಗೂ ಅಂಟಿಕೊಂಡು ಬಂದಿವೆ.[2] ಹಾಗೆಯೇ ವಸತಿಯಲ್ಲಿಯೂ ಜನಪದರ ಆರ್ಥಿಕ ಮಟ್ಟವನ್ನು ಅವಲಂಬಿಸಿ ವಸತಿ ಸೌಕರ್ಯವಿರುವುದು ಕಂಡು ಬರುತ್ತದೆ.

ದನಗಳ ವಸತಿ ಸೌಕರ್ಯದ ಬಗೆಗಳಲ್ಲ ಮೂರು ವಿಧಗಳಿವೆ. ದನದ ಚಪ್ಪರ, ದನದ ಕೊಟ್ಟಿಗೆ, ದನದ ಮನೆ ಈ ಮೂರು ವಿಧಗಳು ಜನಪದರ ಆರ್ಥಿಕ ಸ್ಥಾಯಿಯನ್ನು ಅವಲಂಬಿಸಿ ರೂಪುಗೊಳ್ಳುವುದರ ಜೊತೆಗೆ ಋತುಮಾನಗಳು ಕೂಡಾ ಈ ವಿಧಗಳಿಗೆ ನೀರೆರೆದಿವೆ. ದನದ ಚಪ್ಪರ ಸಾಮಾನ್ಯವಾಗಿ ದೊಡ್ಡಿ (ದಡ್ಡಿ)ಯಲ್ಲಿರುತ್ತದೆ. ಅಥವಾ ಮನೆಯ ಅಕ್ಕಪಕ್ಕದಲ್ಲೂ ಇರಬಹುದು. ದನದ ಕೊಟ್ಟಿಗೆ ಮನೆಯ ಬಲಗಡೆಯೇ ಇದ್ದು ಜನರು ವಾಸಿಸುವ ಮನೆಗಿಂತ ಸಾಧಾರಣ ಮೌಲ್ಯದ ಸ್ವರೂಪದಿಂದ ಕೂಡಿರುವಂಹುದು. ಶ್ರೀಮಂತರಲ್ಲಿ ಅಂದರೆ ಗೌಡರು, ದೇಸಾಯರು, ಪಾಟೀಲರು ಇಂಥವರು ಕಟ್ಟುವ ದನಗಳ ವಾಸಸ್ಥಾನಕ್ಕೆ ‘ದನದ ಮನೆ’ ಎಂದು ಕರೆಯುವ ವಾಡಿಕೆ. ‘ದನದ ಮನೆ’ ಮತ್ತು ಕೊಟ್ಟಿಗೆಗಳು ವಿನ್ಯಾಸದಲ್ಲಿ ಒಂದೇ ಬಗೆಯವು. ಆದರೆ ದನದ ಮನೆಗಳು ಕಲಾತ್ಮಕವಾದ ಗುಣವನ್ನು ಪಡೆದುಕೊಂಡಿರುತ್ತವೆ. ನಕ್ಷೆ ಕೆತ್ತಿದ ಕಂಬಗಳು ದಾವಣೆಯ ಕಟ್ಟಿಗೆಯು ದನಗಳಿಗೂ ಯಾವುದೇ ರೀತಿಯ ಸಂಬಂಧವಿರುವುದೂ ಕಂಡುಬರುವುದಿಲ್ಲ. ಕೊಟ್ಟಿಗೆ ಸಾಧಾರಣವಾದ ನಕ್ಷೆ ಹೊಂದಿರಬಹುದು ಇಲ್ಲವೇ ನೇರವಾಗಿ ಕಟ್ಟಿಗೆಯ ತೊಲೆಗಳಿಂದಲೇ ಕೂಡಿರಬಹುದು ಈ ಕೊಟ್ಟಿಗೆಗಳಲ್ಲಿ ದನಗಳಿಗೆ ಮತ್ತು ಕೊಟ್ಟಿಗೆ ಮನೆಗಳಿಗೆ ದೃಷ್ಟಿದೋಷವಾಗದಿರಲಿ ಎಂದು ಮಂತ್ರಿಸಿದ ತೆಂಗಿನಕಾಯಿಯನ್ನು ಬಟ್ಟೆಯಲ್ಲಿ ಹಾಕಿ ಕಟ್ಟಲಾಗಿರುತ್ತದೆ. ಚಪ್ಪರ ಕಂಬಗಳಿಂದ ಕೂಡಿದ್ದು ಆಪಿನ ಇಲ್ಲವೆ ತಗಡಿನ ಹೊಂದಿಕೆಯುಳ್ಳದಾಗಿರುತ್ತದೆ. ಕೊಟ್ಟಿಗೆ ಮತ್ತು ದನದ ಮನೆಗಳಲ್ಲಿ ಒಂದೇ ಆವಣಿ ಇದ್ದು ದನಗಳನ್ನು ಪರಸ್ಪರ ಮುಖಾಮುಖಿಯಾಗಿ ಕಟ್ಟುವ ಪದ್ಧತಿ ಇದೆ. ಮನೆಯಲ್ಲಿ ಹೆಚ್ಚು ದನಗಳಿದ್ದಾಗ ಈ ಪದ್ಧತಿಯನ್ನು ಅನುಸರಿಸುತ್ತಾರೆ. ಕಡಿಮೆ ದನಗಳಿದ್ದಾಗ ಒಂದೇ ಸಾಲಿನಲ್ಲಿ ದನಗಳನ್ನು ಕಟ್ಟುವುದಿದೆ. ದನಗಳನ್ನು ಕಟ್ಟಲು ಗೋದಲಿಗೆ ಅಥವಾ ದಾವಣೆಯ ಕಟ್ಟೆಯಲ್ಲಿಯೇ ರಂಧ್ರವಿರುವ ಒಂದು ಕಲ್ಲನ್ನೂ ಹೊಂದಿಸಿರುತ್ತಾರೆ. ಇದಕ್ಕೆ ಮುಗತಗಲ್ಲು ಅಥವಾ ಮುಕ್ತಿಕಲ್ಲು ಎಂದು ಕರೆಯುವ ವಾಡಿದೆ. ಕೆಲವರು ದನಗಳನ್ನು ಸರಪಳಿಯಿಂದ ಕಟ್ಟಿದರೆ ಇನ್ನು ಕೆಲಸವರು ಹಗ್ಗದಿಂದ ಕಟ್ಟುತ್ತಾರೆ. ಹಾಗೆಯೇ ಕೊಟ್ಟಿಗೆ ಅಥವಾ ದನದ ಮನೆಯಲ್ಲಿ ಅನುಕೂಲವಾದ ಒಂದೆಡೆಗೆ ‘ಕಲಗಚ್ಚು’ ಇಡುವುದು ವಾಡಿಕೆ. ಇದರಲ್ಲಿ ಮುಸುರೆಯ ನೀರು ಹಾಕಿದ್ದು ದನಗಳಿಗೆ ಕುಡಿಸಲು ಬಳಸಲಾಗುತ್ತದೆ.

ದನ ಕಟ್ಟುವ ಈ ಕೊಟ್ಟಿಗೆಗಳಲ್ಲಿ ಅಥವಾ ಮನೆಗಳು ಹೆಚ್ಚು ಎತ್ತರವುಳ್ಳವುಗಳಲ್ಲ.ಈ ಕೊಟ್ಟಿಗೆಯ ಮೇಲೆ ಅಟ್ಟಗಳಿದ್ದು ಆ ಅಟ್ಟ ದನಗಳಿಗೆ ಸಂಬಂಧಿಸಿದ ಆಹಾರವನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಹೊಟ್ಟು, ಹಿಂಡಿ, ಕಣಿಕೆ ಇಂಥವುಗಳನ್ನಿಡುವುದು ಸಾಮಾನ್ಯ ದೃಶ್ಯ. ಪ್ರಾಣಿಗಳ ವಸತಿ ಸೌಕರ್ಯ ಮತ್ತು ವಸತಿ ಗೃಹ ವಿನ್ಯಾಸಗಳನ್ನು ಗಮನಿಸಿದರೆ ಭೌಗೋಳಿಕ ಪರಿಸರಕ್ಕೆ ಅನುಗುಣವಾಗಿ ಮತ್ತು ಋತುಮಾನಗಳಿಗೆ ಅನುಗುಣವಾಗಿ ಇವು ರೂಪುಗೊಂಡಿರುವುದು ಕಂಡು ಬರುತ್ತದೆ. ಹೀಗೆ ಪ್ರಕೃತಿ ಸಹಜವಾಗಿ ರೂಪುಗೊಂಡಾಗಲೂ ಇದರಲ್ಲಿ ಮನುಷ್ಯನ ಹಿತಾಸಕ್ತಿಯೂ ಪ್ರಧಾನ ಪಾತ್ರ ವಹಿಸುತ್ತದೆ. ಅಂದರೆ ಭೌಗೋಳಿಕ ಹಾಗೂ ಋತುಮಾನಗಳಿಗೆ ಅನುಗುಣವಾಗಿ ಪ್ರಾಣಿಗಳ ವಸತಿ ಸೌಕರ್ಯ ಮನುಷ್ಯ ರೂಪಿಸಿಕೊಂಡರೂ ಈ ರೂಪುರೇಷೆ ಪ್ರಾಣಿಗಳ ಬದುಕಿಗೆ ಅನುಗುಣವಾಗಿರುವುದಕ್ಕಿಂತ ಪಾಲಕನ ಬದುಕಿಗೆ ಅನುಗುಣವಾಗಿ ರೂಪುಗೊಳ್ಳುತ್ತದೆ ಎನ್ನುವುದು ವಿದತವಾಗುತ್ತದೆ. ಇದಲ್ಲದೆ ಸಾಮಾಜಿಕ ಪರಿಸರವೂ ಪ್ರಾಣಿಗಳ ವಸತಿ ಸೌಕರ್ಯದ ಬಗ್ಗೆ ದಿಗ್ಬಂಧನಗಳನ್ನು ಹೇರುವಂತೆ ಮಾಡುತ್ತದೆ.

ಜೋಡುಗೋದಲಿಯ ವಿಚಾರವಾಗಲಿ ಅಥವಾ ಒಂದೇ ಗೋದಲಿಗೆ ದನಗಳನ್ನು ಮುಖಾಮುಖಿಯಾಗಿ ಕಟ್ಟುವ ಬಗೆಯಾಗಲಿ ಪ್ರಾಣಿಗಳ ಬದುಕಿಗೆ ಹೇಳಿ ಮಾಡಿಸಿದ ಪರಿಸರವಲ್ಲ. ಆಹಾರ ಸೇವನೆಯ ಸಂದರ್ಭವನ್ನು ಗಮನಿಸಿದರೆ ನಮಗಿದು ಸ್ಪಷ್ಟವಾಗುತ್ತದೆ. ಮಳೆಗಾಲ ಬಂದಾಗ ಕೊಟ್ಟೊಗೆ ಮನೆಗಳೇ ಆಶ್ರಯವಾದರೆ ಬೇಸಿಕೆಯಲ್ಲಿ ಹೊರಗಿರುವ ಕಟ್ಟೆಗೆ ಅಥವಾ ಚಕ್ಕಡಿಯ ಗಾಲಿಗೆ ಕಟ್ಟುವ ವಿಧಾನವನ್ನು ಗಮನಿಸುತ್ತೇವೆ. ಹಾಗೆಯೇ ಆಡು, ಕುರಿಗಳನ್ನು ‘ಸರಗುಣಕಿ’ ಹಗ್ಗಕ್ಕೆ ಕಟ್ಟುವುದನ್ನು ನೋಡುತ್ತೇವೆ. ಅದು ‘ಗಾಂವರಾನಿ’ ಸ್ಥಳವಾಗಿರಬಹುದು, ‘ಸೀಮೆಕಣ’ ವಾಗಿರಬಹುದು ಇಲ್ಲವೆ ಖಾಸಗಿ ಜಾಗವಾಗಿದ್ದರೂ ಬಳಸುವುದನ್ನು ಕಾಣುತ್ತೇವೆ.

ದನಗಳು ತುಂಬ ಭಾರವಾದ ಪ್ರಾಣಿಗಳು ಹೀಗಾಗಿ ಈ ದನದ ಕೊಟ್ಟಿಗೆಯಲ್ಲಿ ಅಥವಾ ದನದ ಮನೆಯಲ್ಲಿ ನೆಲಕ್ಕೆ ಸೀಮೆಯ ಕಲ್ಲು ಹಾಸಿಗೆ ಅಥವಾ ಬೆಣಚುಕಲ್ಲು ಹಾಸಿಗೆಯನ್ನು ಮಾಡುವುದು ಸಾಮಾನ್ಯ ದೃಶ್ಯ. ಏಕೆಂದರೆ ನುಣುಪಾದ ಫರಸಿಯ ಕಲ್ಲುಗಳಾದರೆ ಆ ದನಗಳ ಭಾರಕ್ಕೆ ಒಡೆದು ಹೋಗುತ್ತದೆ. ಆರಿಂಚು ಗಾತ್ರದ ಸೀಮೆಕಲ್ಲುಗಳೇ ದನಗಳ ಭಾರ ತಾಳದೆ ಓರೆಯಾಗಿ ಬಿಡುತ್ತವೆ. ನೆಲಕ್ಕೆ ಕಲ್ಲು ಹಾಸಿಗೆ ಇಲ್ಲದೆ ಹೋದರೆ ಮಲ-ಮೂತ್ರದ ತಂಪಿಗೆ ತೇವವಾಗಿ ತಗ್ಗುಗಳೇ ಬಿದ್ದು ಬಿಡುತ್ತವೆ. ಮಳೆಗಾಲ ಬಂದರಂತೂ ಮನೆಗಳೇ ಸೋರಿ ಬಚ್ಚಲಾಗುವಾದ ದನದ ಕೊಟ್ಟಿಗೆ ಬಗ್ಗೆ ಬೇರೆ ವಿವರ ಕೊಡುವುದು ಅನಗತ್ಯವೆನಿಸುತ್ತದೆ.

ದಕ್ಷಿಣ ಕ್ನನಡದ ಪರಿಸರದಲ್ಲಿ ತುಂಬ ವಿಶಿಷ್ಟವಾದ ರೀತಿಯಲ್ಲಿ ‘ಕದೆ’ ಯ ಸಿದ್ಧತೆಯನ್ನು ಮಾಡುವುದು ಕಂಡು ಬರುತ್ತದೆ. ಉತ್ತರ ಕರ್ನಾಟಕದಲ್ಲಿ ದನಗಳ ಸಗಣಿ, ಅವು ತಿಂದು ಬಿಟ್ಟ ಚಿಪ್ಪಾಟಿ ಇಂಥವೆಲ್ಲ ಪ್ರತ್ಯೇಕವಾದ ತಿಪ್ಪೆಗೆ ಬಿದ್ದರೆ, ದಕ್ಷಿಣ  ಕನ್ನಡದ ಭಾಗದಲ್ಲಿ ದನಕಟ್ಟುವ ಮನೆಯಲ್ಲಿ ಅದರಲ್ಲೂ ದನಗಳ ಕಾಲಡಿಯಲ್ಲೇ ಬಿದ್ದು ಬಿಡುತ್ತದೆ ಎಂದರೆ ದನದ ಮೇಲೆಯೇ ತಿಪ್ಪೆ, ಆ ತಿಪ್ಪೆಯ ಮೇಲೆಯೇ ದನಗಳು ವಾಸಿಸುತ್ತವೆ. ಇದರಿಂದಾಗಿ ದನಗಳಿಗೂ ಲಾಭವಿದೆ. ಮುಖ್ಯವಾಗಿ ಉತ್ತಮವಾದ ಗೊಬ್ಬರ ತಯಾರಾಗುವುದರೊಂದಿಗೆ ದನಗಳಿಗೆ ತಿಪ್ಪೆಯಲ್ಲಿಯ ಬಿಸಿಯೂ ಹಿತ ಕೊಡುತ್ತದೆ. ಉತ್ತರ ಕರ್ನಾಟಕದಲ್ಲಿ ವ್ಯಕ್ತವಾಗುವ ನೆಲಕ್ಕಿಗೆ ಸಂಬಂದಿಸಿದ ಸಮಸ್ತೆಗಳು ಇಲ್ಲಿ ಬರುವುದಿಲ್ಲ. ಅದಲ್ಲದೆ ಈ ಪದ್ಧತಿ ದಕ್ಷಿಣ ಕನ್ನಡದಲ್ಲಿ ತೀರ ಅವಶ್ಯವೂ ಎನಿಸುತ್ತದೆ. ಸದಾ ಕಾಲ ಸುರಿಯುವ ಮಳೆ ಮತ್ತು ಎಮ್ಮೆ ಕೋಣಗಳೇ ಪ್ರಧಾನವಾಗಿ ಇಲ್ಲಿ ಬಳಕೆಯಾಗುವುದರಿಂದ ಈ ಪದ್ಧತಿ ಇಲ್ಲಿ ರೂಪುಗೊಂಡಿದೆ. ಇಂಥವುಗಳನ್ನು ಗಮನಿಸಿದಾಗ ಪ್ರಾನಿಗಳ ನೆಲೆಯಲ್ಲಿ ಭೌಗೋಳಿಕ ವಾತಾವರಣ ಹಾಗೂ ಮಾನವನ ಹಿತಾಕಾಂಕ್ಷೆಗೆ ತಕ್ಕಂತೆ ದನಗಳಿಗೆ ವಸತಿ ಸೌಕರ್ಯ ಒದಗಿದೆ ಎನ್ನುವುದನ್ನು ಗುರುತಿಸಿಕೊಳ್ಳಬಹುದಾಗಿದೆ.

ಕೋಳಿಗಳಿಗೆ ಸಂಬಂಧಿಸಿದ ವಸತಿ ಸೌಕರ್ಯದ ಬಗೆಗಳನ್ನು ಗಮನಿಸಿದರೆ ದನಗಳಿಗೆ ಸಿಕ್ಕಂಥ ಮಾನವೀಯ ಸಂಬಂಧ ಮತ್ತು ವಸತಿ ಸೌಕರ್ಯವನ್ನು ಈ ಪ್ರಾಣಿಗಳಿಗೆ ಒದಗಿಸಿದ ಬಗ್ಗೆ ಜನಪದರು ಗಮನವೇ ಕೊಟ್ಟಿಲ್ಲವೆನಿಸುತ್ತದೆ. ಇಲ್ಲಿ ಮನುಷ್ಯನ ಹಿತಾಸಕ್ತಿಯೇ ಕೇಂದ್ರ ಸ್ಥಾನವನ್ನು ಪಡೆದುಕೊಂಡಿದೆ.

ಕೋಳಿಗೂಡುಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಚಿರಗೂಡಿನ ಪದ್ಧತಿ, ಚರಗೂಡಿನ ಪದ್ಧತಿ. ಚಿರಗೂಡುಗಳು ಒಂದೆಡೆಯಲ್ಲಿಯೇ ಸ್ಥಾಯಿಯಾಗಿ ಇರುವಂಥವು ಚರಗೂಡುಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಲು ಸಾಧ್ಯವಾಗುವಂಥವು.

ಕಲ್ಲಿನಿಂದ ಕೇವಲ ಕೋಳಿಗಳಿಗಾಗಿಯೇ ಕಟ್ಟಲ್ಪಟ್ಟ ಗೂಡುಗಳಿಗೆ ‘ಕಲ್ಲಿನ ಗೂಡು’ ಎಂದು ಕರೆದರೆ ಮನೆಯಂಗಳದಲ್ಲಿ ಕುಳಿತುಕೊಳ್ಳಲು ಕಟ್ಟೆಗಳನ್ನು ಕಟ್ಟುವ ಪದ್ಧತಿ ಇದ್ದು ಆ ಕಟ್ಟೆಗಳಲ್ಲಿಯೇ ಕೋಳಿಗಳನ್ನು ಮುಚ್ಚಲು ಗೂಡು ಮಾಡಲಾಗುತ್ತದೆ. (two in one)[3] ಇವುಗಳಿಗೆ ಕಟ್ಟೆ ಗೂಡುಗಳೆಂದು ಕರೆಯಲಾಗುತ್ತದೆ. ‘ಗಡಿಗೆಯ ಗೂಡುಗಳು’ ಮಣ್ಣಿನಿಂದ ತಯಾರಿಸಿದ ಹರಿವೆಯಿಂದ ತಯಾರಿಸುವಂಥದ್ದು. ಹೊಸದಾದ ಹರಿವೆಯನ್ನು ಬಳಸುವುದು ಅಪರೂಪ. ಸೀಳಿದ ಅಥವಾ ಮುಕ್ಕಾದ ಹರಿವೆಯ ಬಾಯಿ ನೆಲಕ್ಕೆ ತಾಗುವಂತೆ ಮಲಗಿಸುತ್ತಾರೆ. ಅನಂತರ ನೆಲಸಮಕ್ಕೆ ಸರಿಯಾಗಿ ಹರಿವೆಯಲ್ಲಿ ಮಣ್ಣು ಅಥವಾ ಉಸುಕು ಹಾಕಲಾಗುತ್ತದೆ. ಈ ಗೂಡುಗಳು ಬೇಗನೇ ತೇವವನ್ನು ತುಂಬಿಕೊಳ್ಳುತ್ತವೆ. ಹೀಗಾಗಿ ಇವುಗಳಲ್ಲಿ ಬೂದಿ ತುಂಬುವ ಅಥವಾ ಬೂದಿ ಹಾಸುವ ಪದ್ಧತಿ ಇದೆ. ಕೋಳಿಯ ಬಳಕೆ ಇಲ್ಲದೆ ಹೋದಲ್ಲಿ ಅದು ಕಪ್ಪೆಯ ಗೂಡಾಗಿ ಪರಿಣಮಿಸುತ್ತದೆ. ಇಂಥ ಗೂಡುಗಳನ್ನು ಹಿತ್ತಲದಲ್ಲಿಯೂ ಕಟ್ಟಲಾಗುತ್ತದೆ. ಆದರೆ ಮನೆಯಲ್ಲಿಯೇ ಒಂದು ಭಾಗವಾಗಿ ದನದ ಕೊಟ್ಟಿಗೆಯಂತೆ ಕಟ್ಟುವುದು ಕಡಿಮೆ. ಆದರೆ ಇಲ್ಲವೆಂದು ಹೇಳಲುಬಾರದು.

ಚರಗೂಡುಗಳು ಕಟ್ಟಿಗೆಯ ಫಳಿ ಅಥವಾ ಹಲಿಗೆಯಿಂದ ಮಾಡಿದವುಗಳು ಇಲ್ಲವೆ ಈಚಲ ಪೊರಕೆಯಿಂದ ಹೆಣೆದವುಗಳಾಗಿರುತ್ತವೆ. ಚೌಕಾಕಾರದ ಹಲಿಗೆಯಿಂದ ಕೂಡಿದ ಅದರ ಭಾಗಗಳು ಮುಚ್ಚಲ್ಪಟ್ಟಿದ್ದು ಒಂದೆಡೆ ಮಾತ್ರ ಸಣ್ಣದೊಂದು ಬಾಗಿಲು ಮಾಡಲಾಗಿರುತ್ತದೆ. ಈ ಮುಚ್ಚಳಿಕೆ ಸಲೀಸಾಗಿ ತೆಗೆಯಬಹುದು, ಹಾಕಬಹುದು. ಇಲ್ಲವೇ ಸಂಪೂರ್ಣವಾಗಿ ಹೊರಗೆಯೇ ತೆಗೆದಿಡಬಹುದಾದ ರೀತಿಯಲ್ಲಿರುತ್ತವೆ. ‘ಹಲಿಗೆ ಗೂಡು’ ಗಳಿಗೆ ಸಿಕ್ಕ ಪ್ರಚಾರಕ್ಕಿಂತ ಹೆಚ್ಚಿನ ಪ್ರಚಾರವನ್ನು ‘ಬುಟ್ಟಿಗೂಡು’ ಗಳು ಪಡೆದುಕೊಂಡವು. ವರ್ತುಲಾಕಾರದಲ್ಲಿ ಹೆಣೆದ ದೊಡ್ಡದಾದ ಬುಟ್ಟಿಯ ಬಾಯಿಯನ್ನು ಹೆಣೆದು ಮುಚ್ಚಲಾಗಿರುತ್ತದೆ. ಹಲಿಗೆ ಗೂಡಿನಂತೆಇ ದಕ್ಕೂ ಸಣ್ಣದೊಂದು ಬಾಗಿಲಿರುತ್ತದೆ. ಈ ಗೂಡುಗಳನ್ನು ಸ್ವಚ್ಛಗೊಳಿಸುವುದು ತೊಂದರೆಯ ಕೆಲಸ. ಇವೆಲ್ಲವುಗಳಿಂದ ಅತಿ ಹೆಚ್ಚು ಬಳಕೆಯ ರೂಪದಲ್ಲಿರುವಂತಹದೆಂದರೆ ‘ಕೋಳಿ ಮುಚ್ಚುವ ಡೊಳ್ಳಡಿಗೆ[4] ಈ ಡೊಳ್ಳಡಿಗೆ ಯಾವುದಕ್ಕೂ ಬಳಸಬಹುದು. ದನಗಳ ಹೊಟ್ಟು ತುಂಬಲು, ಆಡಿನ ಅಥವಾ ಕುರಿ ಮರಿಯನ್ನು ಮುಚ್ಚಲು, ಕುರಳು ಅಥವಾ ಬೆರಣಿ ತುಂಬಲು ಹೀಗೆ ಹತ್ತು ಹಲವು ಬಗೆಯ ಬಳಕೆ ಇದರದ್ದಾಗಿರುತ್ತದೆ. ಮುಚ್ಚಲು ಮತ್ತು ಮನೆಯ ಸ್ವಚ್ಛತೆಗೆ ತೀರ ಅನುಕೂಲ. ಹೀಗಾಗಿ ಇದರ ಬಳಕೆ ಹೆಚ್ಚು.

ಕೋಳಿ ದನದಂತೆ ಭಾರವಾದ ಪ್ರಾಣಿಯಲ್ಲ. ಹೀಗಾಗಿ ಹೆಚ್ಚಿನ ಗೂಡುಗಳೆಲ್ಲ ಚರಗೂಡುಗಳು ಒಂದು ಊರಿನಿಂದ ಇನ್ನೊಂದು ಊರಿಗೆ ಕೋಳಿಗಳನ್ನು ಸಾಗಿಸಲು ಬಳಕೆಯಾಗುವ ಸಾರಿಗೆ ಗೂಡುಗಳೇ ಬೇರೆ ಇವೆ. ಸಾಮಾನ್ಯವಾಗಿ ಚರಗೂಡುಗಳು ತುಂಬ ಹಗುರವಾದುವು. ಇವುಗಳಲ್ಲಿ ಕೋಳಿಯ ಹೇನು ಬೇಗನೇ ಸೇರಿಕೊಳ್ಳುವುದರಿಂದ ಮೇಲಿಂದ ಮೇಲೆ ಮನೆಯಂಗಳದ ಬಿಸಿಲಿಗೆ ತಂದು ಹಾಕಲು ಅನುಕೂಲಕರವಾಗುತ್ತವೆ. ಕೋಳಿಗಳ ಕಳ್ಳತನಗಳಿಂದ ರಕ್ಷಣೆ ಪಡೆಯಲು, ಮಾತ್ರ ಕಲ್ಲಿಗೂಡುಗಳಿದ್ದಲ್ಲಿ ಕೋಳಿಯನ್ನು ನಾಯಿ ಹಿಡಿಯಬಹುದಾದ ಸಾಧ್ಯತೆಗಳನ್ನು ತಡೆಯಲು, ಕಲ್ಲಿನ ಅಥವಾ ಕಟ್ಟೆಯ ಗೂಡುಗಳಲ್ಲಿ ಕಪ್ಪೆ, ಹಾವು ಬಂದು ಸೇರುವ ಅಪಾಯ ತಪ್ಪಿಸಲು ಕೋಳಿ ಮುಚ್ಚುವ ಡೊಳ್ಳಡಿಗೆ ಅಥವಾ ಬುಟ್ಟಿಯಗೂಡುಗಳನ್ನು ಬಳಸುವುದು ಅಧಿಕ. ಇದರಲ್ಲಿ ಋತುಮಾನ ಮತ್ತು ಪ್ರಾದೇಶಿಕತೆಯ ಗುಣವೂ ಅಡಗಿದೆ. ಮಳೆಗಾಲದಲ್ಲಿ ಕಲ್ಲಿನ ಗೂಡುಗಳಿಗಿಂತ ದೊಳ್ಳಡಿಗಿ ಗೂಡುಗಳೇ ಹೆಚ್ಚು ಬಳಕೆಯಾಗುತ್ತವೆ.

ಈ ಕೋಳಿಯ ಗೂಡು ಅಥವಾ ಬುಟ್ಟಿಗಳಲ್ಲಿ ಸ್ಥಳಾವಕಾಶ ತುಂಬಾ ಕಡಿಮೆ. ಒಂದೊಂದು ಬುಟ್ಟಿಯಲ್ಲಿ ಕೋಳಿಗಳು ಮಲಗಲು ಸಾಧ್ಯವಾಗದಂತೆ ತುಂಬುವುದು. ಸಾಮಾನ್ಯ ದೃಶ್ಯ. ಹೀಗಾಗಿ ಅವು ನಿಂತಲ್ಲಿಯೇ ನಿದ್ದೆ ಮಾಡುವುದು ಅಧಿಕ. ಈ ಗೂಡುಗಳ ವೈವಿಧ್ಯತೆಯನ್ನು ಗಮನಿಸಿದರೆ ಬಳಕೆಯ ಕ್ರಮದಲ್ಲಿ ಪ್ರಯೋಗಗಳು ನಡೆದು ಹೇಗೆ ಬೆಳವಣಿಗೆ ಹೊಂದಿವೆ ಎಂಬುದನ್ನು ಗುರುತಿಸಬಹುದಾಗಿದೆ.

ಚರಗೂಡುಗಳಲ್ಲಿ ಹವಣಿ ಅಥವಾ ಹೆಡಿಗೆ ಆರಂಭದ ಬಳಕೆಗೆ ಅನುವು ಮಾಡಿಕೊಟ್ಟಿರಬೇಕು. ಅನಂತರದಲ್ಲಿ ಕೋಳಿಯ ಸಂಗ್ರಹದ ಸಂಖ್ಯೆ ಹೆಚ್ಚಾದಂತೆ ಡೊಳ್ಳಡಿಗೆಯೇ ಬಳಕೆಗೆ ಬಂದಿರುವುದು ಸಹಜ. ಮನುಷ್ಯರು ವಾಸಿಸುವ ಮನೆಗಳಂತೆ ಕಲ್ಲಿನ ಗೂಡುಗಳನ್ನು ಬದ್ರ ಪಡಿಸುವ ಪ್ರಯೋಗ ಬರುವ ಮುನ್ನವೇ ಹರಿವೆಯ ಗೂಡುಗಳು ಮನೆಯಂಗಳಕ್ಕೆ ಬಂದಿರುವ ಸಾಧ್ಯತೆಗಳಿವೆ. ಅನಂತರದ ಕಾಲಘಟ್ಟದಲ್ಲಿ ಕಟ್ಟೆಯಲ್ಲಿಯೇ ಅಥವಾ ಪ್ರತ್ಯೇಕವಾದ ಕಲ್ಲಿನ ಗೂಡುಗಳು ಆರಂಭವಾಗಿರಬೇಕು. ಈ ಪ್ರತ್ಯೇಕ ಕಲ್ಲಿನ ಗೂಡುಗಳೇ ನಂತರ ಹಲಿಗೆ ಗೂಡು ಮತ್ತು ಬುಟ್ಟಿಗೂಡುಗಳು ಬರುವಂತೆ ಪ್ರೇರೇಪಿಸಿವೆ. ಚಿರ ಮತ್ತು ಚರ ಗೂಡುಗಳ ಬೆಳವಣಿಗೆಯನ್ನು ಪ್ರತ್ಯೇಕವಾಗಿಯೇ ಗುರುತಿಸಲು ಸಾಧ್ಯವಾಗದು. ಏಕೆಂದರೆ ಯಾವುದಕ್ಕೂ ತನ್ನದೇ ಆದ ಪ್ರತ್ಯೇಕ ಅಸ್ತಿತ್ವ ಇರುವುದಿಲ್ಲ. ಮೂಲದ ಸ್ವರೂಪದಿಂದಲೇ ಬೆಳವಣಿಗೆ ಹೊಂದುತ್ತ ಬರುವುದು ಜನಪದ ವಿಜ್ಞಾನದಲ್ಲಿಯೂ ಸಾಮಾನ್ಯ ಗುಣವಾಗಿದೆ. ಆಡು ಕುರಿಗಳ ವಸತಿಗಾಗಿ ಜನಪದರಲ್ಲಿ ಪ್ರತ್ಯೇಕ ಮನೆ ಅಥವಾ ಶ್ರೇಣಿಗಳು ಇರುವುದಿಲ್ಲ. ಇವುಗಳನ್ನು ದನದ ಕೊಟ್ಟಿಗೆಯಲ್ಲಿಯೇ ಒಂದು ಕಂಬಕ್ಕೊಂದು ಅಥವಾ ಮೂರು-ನಾಲ್ಕು ಕಟ್ಟುವ ವಾಡಿಕೆ ಇದೆ. ಹಗಲು ಮತ್ತೆ ಅಂಗಳದಲ್ಲಿ ಕಟ್ಟಿಬಿಡುತ್ತಾರೆ. ಆದರೆ ಕುರಿ-ಆಡುಗಳನ್ನು ಸಾಕುವುದನ್ನೇ ಒಂದು ವೃತ್ತಿಯಾಗಿ ಅಥವಾ ಕುಲಕಸುಬಾಗಿ ಮಾಡಿಕೊಂಡು ಬರುವವರು ಈ ಆಡಿನ ಅಥವಾ ಕುರಿಗಳ ಹಿಂಡನ್ನು ಪ್ರತ್ಯೇಕವಾಗಿ ಕಟ್ಟಿಸಿದ ಕೋಣೆಯಲ್ಲಿರಿಸಿ ಇವುಗಳಿಗೆ ವಸತಿಯನ್ನೊದಗಿಸುವ ಪರಂಪರೆ ಕಂಡು ಬರುವುದಿಲ್ಲ. ಆದರೆ ಬಯಲಲ್ಲಿ ನಮಗೆ ಬೇಕಾದಷ್ಟು ಸ್ಥಳಕ್ಕೆ ಮುಳ್ಳುಬೇಲಿಯನ್ನು ಹಾಕ ಕುರಿದಡ್ಡಿಯನ್ನು ಸಿದ್ಧಪಡಿಸುತ್ತಾರೆ. ಇದಕ್ಕೆ ಕೆಲವೆಡೆ ‘ಕುರಿ ಹಟ್ಟಿ’ ಎಂದು ಕರೆಯುವ ಪದ್ಧತಿಯೂ ಇದೆ. ಅಂದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವಂಥವು.

ಬೇಸಿಗೆಯಲ್ಲಿ ಬೀಳುಬಿದ್ದ ಹೊಲಗಳಲ್ಲಿ ‘ಕುರಿಮಲಗಿಸುವ ಸಂಪ್ರದಾಯ’ ಇದೆ ಎಂದರೆ ಹೊಲಗಳಿಗೆ ಕುರಿ-ಆಡುಗಳ ಹಿಕ್ಕೆ ಮತ್ತು ಮೂತ್ರ ಉತ್ತಮ ಗೊಬ್ಬರವೆಂದು ನಂಬಲಾಗುತ್ತದೆ. ಆದುದರಿಂದ ಒಂದೊಂದು ದಿನ ಹೊಲದ ಒಂದೊಂದು ಸ್ಥಳದಲ್ಲಿ ರಾತ್ರಿ ಮಲಗಿಸುವ ವ್ಯವಸ್ಥೆಯನ್ನು ಮಾಡುತ್ತಾರೆ. ಹೀಗೆ ಮಲಗಿಸಲು ಹೊಲದಲ್ಲಿಯೂ ಕುರಿಯ ಹಟ್ಟಿಗಳನ್ನು ಕಟ್ಟುತ್ತಾರೆ. ದಿನ ನಿತ್ಯ ಸ್ಥಳ ಬದಲಾಗುವ ಈ ಹಟ್ಟಿಗಳಿಗೆ ಮುಳ್ಳ ಬೇಲಿ ಇರುವುದಿಲ್ಲ. ಮೂಲದಲ್ಲಿ ಇದಕ್ಕೂ ಮುಳ್ಳಬೇಲಿಯೇ ಬಳಸುತ್ತಿರಬೇಕು. ಆದರೆ ಈಗ ತೊಟ್ಟಿಗಳಿಂದ ಬೇಲಿಯನ್ನು ಹಾಕುತ್ತಾರೆ. ಈ ತೊಟ್ಟಿಗಳನ್ನು ಬಿದಿರಿ ಪಟ್ಟಿಗಳಿಂದ ತಯಾರಿಸುತ್ತಾರೆ. ಇವುಗಳಿಗೆ ಪಾಟಗಳೆಂದೂ ಕರೆಯುವ ವಾಡಿಕೆ ಇದೆ. ಈಗ ಚಿರದಡ್ಡಿಗಳಿಗೂ ಈ ‘ಪಾಟ’ಗಳನ್ನೇ ಬಳಸಿರುವುದು ಆಡುಗಳನ್ನು ಹಿಡಿದಿಡಲು ಕಳ್ಳರು ಕಾರಣ ಎನ್‌ಉವುದಕ್ಕಿಂತ ತೋಳಗಳೇ ತಪ್ಪಿಸಿಕೊಂಡು ಹೋಗಬಹುದು ಎನ್ನುವ ಭಯವೇ ಪ್ರಧಾನವಾಗಿದೆ. ಕಲ್ಲಿನಿಂದ ಗೋಡೆ ಕಟ್ಟಿದ ಕುರಿಹಟ್ಟಿಗಳು ಇದ್ದರೂ ಅವು ತುಂಬ ಅಪರೂಪ. ಆದರೆ ಈ ಪದ್ಧತಿ ಮೂಲದ್ದಲ್ಲ. ಏಕೆಂದರೆ ಕಲ್ಲಿನಗೋಡೆಗಿಂತ ಹೆಚ್ಚಿನ ರಕ್ಷಣೆ ಮುಳ್ಳುಬೇಲಿಯಲ್ಲಿದೆ. ಅಲ್ಲದೆ ಅದು ಸರಳವಾಗಿ ಕಾಸಿಲ್ಲದೆ ತಯಾರಿಸಬಹುದಾದುದು. ಈ ಮುಳ್ಳಬೇಲಿಯ ಅಥವಾ ‘ಪಾಟ’ದ ಹಟ್ಟಿಯನ್ನು ಚೌಕಾಕಾರದಲ್ಲಿಯೂ ಕಟ್ಟಬಹುದಾಗಿದೆ. ದಡ್ಡಿಗಳು ವರ್ತುಲಾಕಾರದಲ್ಲಿ ಇರುವುದರಿಂದ ಕುರಿಗಳು ಸಲೀಸಾಗಿ ದುಂಡಗೆ ಸುತ್ತಬಹುದು. ಸ್ಥಳ ಕಡಿಮೆ ಇದ್ದರೂ ಗೊತ್ತಾಗುವುದಿಲ್ಲ. ಚೌಕಾಕಾರವಾದಾಗ ಅದು ತಡೆಯನ್ನು ತರುತ್ತದೆ. ಹೀಗಾಗಿ ಈ ವೃತ್ತಾಕಾರದ ಕುರಿದಡ್ಡಿಗಳು ಅಧಿಕವಾಗಿವೆ. ಕಲ್ಲಿನಿಂದ ಕಟ್ಟಿದ ದಡ್ಡಿಗಳು ಚೌಕಾಕಾರದಿಂದ ಕೂಡಿರುತ್ತವೆ. ಮನೆ ಕಟ್ಟಲು ಸ್ಥಳ ಖರೀದಿಸುವುದು ಚೌಕಾಕಾರದಲ್ಲಿಯೇ ವಿನಃ ವರ್ತುಲಾಕಾರದಲ್ಲಿ ಅಲ್ಲ, ಹೀಗೆ ಖರೀದಿಸಿದ ಭೂಮಿಗೆ ಸುತ್ತಲೂ ಗೋಡೆ ಕಟ್ಟಿ ಅದನ್ನೇ ಕುರಿದಡ್ಡಿಗೆ ಬಳಸುವುದಿದೆ. ಈ ದಡ್ಡಿಗಳಿಗೂ ಬಾಗಿಲುಗಳಿರುತ್ತವೆ.

ಮನೆ ಕಟ್ಟಲು ತೊಡಗುವಾಗ ಅಡಿಗೆ ಮನೆ, ದೇವರ ಮನೆಗಳಿಗೆ ಸ್ಥಳ ನಿಗದಿಯಾದಂತೆ ಸಾಕು ಪ್ರಾಣಿಗಳನ್ನು ಕಟ್ಟಲು ಕೊಟ್ಟಿಗೆ ಎಲ್ಲಿರಬೇಕು ಎಂದು ಮುಂಚಿತವಾಗಿಯೇ ನಿಧಾರಮಾಡುವುದು ಕಂಡುಬರುತ್ತದೆ. ಆ ಕೊಟ್ಟಿಗೆ ಮನೆಯ ಯಾವ ಭಾಗದಲ್ಲಿರಬೇಕು, ಯಾವ ದಿಕ್ಕಿಗೆ ದನಗಳನ್ನು ಮುಖ ಮಾಡಿ ಕಟ್ಟಬೇಕು ಇಂಥವೆಲ್ಲದರ ಬಗ್ಗೆ ಮುಂಚಿತವಾಗಿ ಲಕ್ಷ್ಯವಹಿಸುತ್ತಾರೆ. ಎಂದರೆ ಮನೆಯ ಇನ್ನುಳಿದ ಕೋಣೆಗಳಿಗೆ ಸಿಗುವಷ್ಟೇ ಮಹತ್ವ ಈ ಕೊಟ್ಟಿಗೆಗೂ ಲಭ್ಯವಾಗುತ್ತದೆ. ನಪದರಲ್ಲಿ ಒಂದು ಮನೆತನದ ಸ್ಥಾನಮಾನ ಅಳೆಯ ಬೇಕಾದರೆ ಅವರ ಕೊಟ್ಟಿಗೆಯನ್ನೇ ಗಮನದಲ್ಲಿಟ್ಟುಕೊಂಡು ಹೇಳುವುದಿದೆ. ಎಂದರೆ “ಎಂಟೆತ್ತಿನ ಒಕ್ಕಲುತನದ ಮನೆ” “ಹನ್ನೆರೆತ್ತಿನ ಒಕ್ಕಲುತನದ ಮನೆ” ಎಂದೇ ಗುರುತಿಸುತ್ತಾರೆ. ಹೀಗಾಗಿ ಊರಲ್ಲಿಯ ಸ್ಥಿತಿವಂತರು ಮನೆಗಿಂತ ಹೆಚ್ಚು ಕೊಟ್ಟಿಗೆಗೆ ಗಮನಕೊಡುವುದು ಕಂಡು ಬರುತ್ತದೆ. ಹೀಗೆಯೇ ಕೋಳಿಯ ಲೆಕ್ಕ ಹೇಳಿ ಮನೆತನ ಗುರುತಿಸುವುದು ಜನಪದರಲ್ಲಿ ಇಲ್ಲ. ಆದರೆ ಆಗ ಕೋಳಿ ಫಾರ್ಮುಗಳು ಬಂದಿರುವುದರಿಂದ ಈ ಲೆಕ್ಕವು ಆರಂಭವಾಗಿದೆ. ಕುರಿ ಮತ್ತು ಆಡುಗಳಿಗೆ ಸಂಬಂಧಿಸಿದಂತೆ ಈ ವಿಚಾರ ಇದ್ದರೂ ಅದು ಮೊದಲು ಹೊಲದಲ್ಲಿ ಅಕ್ಕಡಿಯ ಲೆಕ್ಕದಲ್ಲಿ ಅನಂತರ ಪಾಟಿನ ಲೆಕ್ಕದಲ್ಲಿ ಹೇಳಿ ಗುರುತಿಸುವಂತಹುದು. ಈಗ ನೇರವಾಗಿ ಕುರಿಗಳ ಸಂಖ್ಯೆಯ ಮೇಲಿಂದಲೇ ಅವರ ಅಂತಸ್ತು ಗುರುತಿಸುವುದು ಕಂಡು ಬರುತ್ತದೆ. ತೋಟ ಪಟ್ಟಿಯಲ್ಲಿಯೇ ಸಾಕು ಪ್ರಾಣಿಗಳಿಗೆ ವಸತಿ ಸೌಕರ್ಯದ ಸೌಲಭ್ಯವಿದೆ. ಇದು ಹೆಚ್ಚಾಗಿ ಶ್ರೀಮಂತರ ಸೊತ್ತಾಗಿದೆ.

ಮೂಲದಲ್ಲಿ ಸಾಕುಪ್ರಾಣಿಗಳನ್ನು ಬಂಧಿಸಿಡುವುದಕ್ಕಿಂತ ಸ್ವಚ್ಛಂದವಿಹಾರಕ್ಕೆ ಅವಕಾಶವಿತ್ತೆಂದು ತೋರುತ್ತದೆ. ಈಗ ಈ ಪದ್ಧತಿ ಉತ್ತರ ಕರ್ನಾಟಕದಲ್ಲಿ ಕಂಡು ಬರುವುದಿಲ್ಲ. ಆದರೆ ಕರಾವಳಿಯ ಭಾಗದಲ್ಲಿ ಇಂಥ ಪದ್ಧತಿ ಈಗಲೂ ಇರುವುದು ಕಂಡು ಬರುತ್ತದೆ. ಗದ್ದೆಗಳ ಪ್ರತ್ಯೇಕತೆ, ಬೆಳೆಗಳ ರಕ್ಷಣೆ, ನಗರದ ಬೆಳವಣಿಗೆ, ಪ್ರಾಣಿಗಳ ಹೆಚ್ಚಳ, ಪ್ರತ್ಯೇಕ ಹುಲ್ಲುಗಾವಲು ಪ್ರದೇಶ ಇಲ್ಲದಿರುವುದು. ಇಂಥವೆಲ್ಲ ದನಗಳನ್ನು ಬಂಧಿಸಿಡಲು ಪ್ರಚೋದಿಸಿವೆ ಎಂದು ಇವತ್ತಿನ ದಿನಗಳಲ್ಲಿ ಸಂದೇಹವಿಲ್ಲದೆ ಹೇಳಬಹುದು. ಆದರೆ ಈ ಸಾಕು ಪ್ರಾಣಿಗಳು ಒಮ್ಮೆಲೆ ಮನುಜನ ಮನೆಯಲ್ಲಿಯೇ ಭಾಗವನ್ನು (ಸ್ಥಾನವನ್ನು) ಪಡೆದುಕೊಂಡಿರಲಿಕ್ಕಿಲ್ಲವೆನಿಸುತ್ತದೆ. ಇದಕ್ಕೆ ಪ್ರಮುಖವಾದ ಕಾರಣ ಅವುಗಳ ಮಲ-ಮೂತ್ರ ವಿಸರ್ಜನೆ, ಹಾಗೂ ಅದರಿಂದ ಹುಟ್ಟುವ ಹುಳ- ಹುಪ್ಪಡಿಗಳು, ಇಂಥವೆಲ್ಲ ನಿಷೇಧಿಸಿರಬೇಕೆಂದು ತೋರುತ್ತದೆ. ಆದರೆ ಇವು ಮನೆಯ ಒಳಗೆ ಒಂದು ಭಾಗವಾಗಿ ಅಥವಾ ಅಂಗವಾಗಿ ಸ್ಥಾನ ಪಡೆದುಕೊಳ್ಳಲು ಕಾರಣ ‘ತುರುಗೋಳ್’ ದಂತಹ ಪ್ರಸಂಗಗಳೇ ಎನಿಸುತ್ತದೆ. ವಿನಿಮಯ ಪದ್ಧತಿ (barter system) ಯ ಬದುಕೇ ಜನಪದರಲ್ಲಿ ಪ್ರಧಾನವಾಗಿದ್ದಾಗ ಈ ಸಾಕುಪ್ರಾಣಿಗಳೇ ಸಂಪತ್ತಾಗಿ ಬಳಕೆಯಾಗುತ್ತಿದ್ದುದು ಒಂದು ಚಾರಿತ್ರಿಕ ದಾಖಲೆ. ಈ ಸಾಕು ಪ್ರಾಣಿಗಳನ್ನು ಕಳ್ಳರಿಂದ ರಕ್ಷಿಸಲು ಅನಿವಾರ್ಯವಾಗಿ ತನ್ನ ಮನೆಯೊಳಗೆ ಕರೆದುಕೊಂಡನೆಂದು ತೋರುತ್ತದೆ. ಇಂದಿನ ಕಂಪ್ಯೂಟರ್ ಯುಗದಲ್ಲೂ ಜನಪದರು ಸಾಕುಪ್ರಾಣಿಯ ಕಳ್ಳರಿಂದ ಹೆದರಿ ಅವುಗಳನ್ನು ಮನೆಯೊಳಕ್ಕೆ ತರುವುದನ್ನು ಗಮನಿಸಬಹುದು.

ವಿನಿಮಯ ಪದ್ಧತಿಯ ನಂತರ ಬಂದ ನಾಣ್ಯಗಳ ವ್ಯವಹಾರದ ಬದುಕು ಮತ್ತೆ ದನಗಳ ಬದುಕನ್ನು ಬದಲಾಯಿಸಿದೆ ಎಂದರೆ ಅವುಗಳ ಮೌಲ್ಯ ಕಡಿಮೆಯಾಗಾದ ಮತ್ತು ನಾಗರಿಕತೆಯ ಗುಣ ಬೆಳೆದಂತೆ ಇವು ಮತ್ತೆ ಮನೆಯ ಒಂದು ಭಾಗವಾಗಿ ಬರದೆ ಮನೆಯಿಂದ ಪ್ರತ್ಯೇಕವಾದ ಸ್ಥಳವನ್ನು ಪಡೆದುಕೊಂಡಿದೆ. ಹೀಗೆ ಇದರೊಂದಿಗೆ ಮೇಲೆ ಹೇಳಿದ ಕಾರಣಗಳು ಪೂರಕವಾಗಿದೆ.

ಈ ವರೆಗೆ ಮೇಲೆ ಚರ್ಚಿಸಿದ ವಿಚಾರಗಳೆಲ್ಲ ಸಾಮಾನ್ಯವಾದ ಸಾಕುಪ್ರಾಣಿಗಳ ವಸತಿಗೆ ಸಂಬಂಧಿಸಿದಂತೆ ಮಾತ್ರ. ಈ ಸಾಕುಪ್ರಾಣಿಗಳಲ್ಲಿಯೇ ಇನ್ನೊಂದು ವರ್ಗವಿದೆ. ‘ವಿಶೇಷ ಸಾಕು ಪ್ರಾಣಿಗಳ ವರ್ಗ’ವೆಂದು ಗಮನಿಸಬಹುದು. ಅಂದರೆ  ಕಾಡಾಟಕ್ಕಾಗಿ ಇರುವ ಟಗರು, ಹೋತಗಳು ಬೀಜಕ್ಕೆಂದೇ ಇಟ್ಟಿರುವ ಕೋಣಗಳು, ಕಾಡಾಟಕ್ಕಾಗಿಯೇ ಸಾಕುವ ಹುಂಜಗಳು ಮುಂತಾಗಿ, ಇವುಗಳಿಗೆ ವಸತಿ ಸೌಕರ್ಯದಲ್ಲಿ ವಿಶೇಷವಾಗಿ ಗಮನವನ್ನು ಕೊಡಲಾಗುತ್ತದೆ. ಇಂಥವುಗಳನ್ನು ಸಾಮಾನ್ಯವಾಗಿ ಜನಗಳು ತಿರುಗಾಡದಿರುವ ಅಥವಾ ನಿರ್ಜನವಾದ ಕೊಟ್ಟಿಗೆಯಲ್ಲಿ ಇಡುವುದು ಕಂಡುಬರುತ್ತದೆ. ಈ ಕೊಟ್ಟಿಗೆಗಳು ಕತ್ತಲೆ ಕೋಣೆಯಾಗಿರುತ್ತವೆ. ಇಂಥ ಕೊಟ್ಟಿಗೆಯಲ್ಲಿ ಇವುಗಳನ್ನಿಡಲು ಮುಖ್ಯ ಕಾರಣ ಅವುಗಳ ಸೂಕ್ಷ್ಮ ಪ್ರಜ್ಞೆಯನ್ನು ಹೆಚ್ಚಿಸುವುದು. ಹೀಗಾಗಿ ಕಿಟಕಿ ಹಿಂದಾದ ಬಾಗಿಲುಗಳಿಲ್ಲದ ಎತ್ತಿನ ಕೊಟ್ಟಿಗೆಯಲ್ಲಿರುವ ಎತ್ತುಗಳು ವಾಹನ ಕಂಡರೆ ಮಾತ್ರ ಬೆದರುವುದಿಲ್ಲ. ಮನುಷ್ಯರನ್ನು ಕಂಡರೆ ಸಾಕು ಬೆದರುತ್ತವೆ. ಇಂಥ ದನಗಳನ್ನು ಓಡಿಸಲು ಹೊಡೆಯಬೇಕಾಗಿಲ್ಲ ಬಾಯಿ ಮಾಡಿದರೆ ಸಾಕು ಓಡಿ ಹೋಗುತ್ತವೆ. ಇಂಥ ಕೊಟ್ಟಿಗೆಯಲ್ಲಿದ್ದು ಬಂದ ದನಗಳು ಮೈಯನ್ನು ಮಲೆಟಿಸಿಕೊಳ್ಳುವುದು ಕಡಿಮೆ. ನಾಯಿಗಳನ್ನೂ ಕಟ್ಟಿಹಾಕುವುದರಿಂದ ಅವುಗಳ ಸಿಟ್ಟು ಹೆಚ್ಚಾಗುತ್ತದೆ ಎನ್ನವುದು ಮನಃಶಾಸ್ತ್ರೀಯವಾಗಿ ನಿಜವೂ ಆಗಿದೆ. ಬಂಧಿಸಿ ಬಿಡುವುದರಿಂದ ಕಲ್ಮಶದವಿವೇಚನೆಗೆ ಬಿಡುವುದು ಸಹಜ.

ಈ ವಿಶೇಷವಾದ ಸಾಕು ಪ್ರಾಣಿಗಳು ಉತ್ತರ ಕರ್ನಾಟಕದಲ್ಲಿ ಈಗ ತಮ್ಮ ಅಸ್ತಿತ್ವವನ್ನು ಕಳೆದುಕೊಂಡರೂ ದಕ್ಷಿಣ ಕನ್ನಡದಲ್ಲಿ ಹಾಗೆಯೇ ಉಳಿದುಕೊಂಡು ಬಂದಿವೆ. ಇಲ್ಲಿಯ ಭೌಗೋಳಿಕ ಪರಿಸರಕ್ಕೆ ಎತ್ತು ಕುರಿ ಆಡುಗಳು ಒಗ್ಗುವುದಿಲ್ಲ. ಹೀಗಾಗಿ ಇವುಗಳ ಸಂಖ್ಯೆ ಇಲ್ಲಿ ವಿರಳ. ಆದರೆ ಕಂಬಳದ ಕೋಣಗಳು ಮತ್ತು ಕೋಳಿಗಳನ್ನು ತುಂಬ ವಿಶೇಷವಾದ ರೀತಿಯ ವಸತಿ ಗೃಹದಲ್ಲಿದ್ದು ಆರೈಕೆಯನ್ನು ಮಾಡುತ್ತಾರೆ. ಋತುಮಾನಗಳಿಗೆ ತಕ್ಕಂತೆ ವಸತಿ ಸೌಕರ್ಯದ ವಿಧಾನದಲ್ಲೂ ಬದಲಾವಣೆ ಮಾಡುವುದು ಕಂಡು ಬರುತ್ತದೆ.

ಸಾಮಾನ್ಯವಾಗಿ ಈ ಪ್ರಾಣಿಗಳನ್ನು ಜನ ಸಂಪರ್ಕವಿಲ್ಲದ ಸ್ಥಳದಲ್ಲಿ ಕಟ್ಟುವುದು ವಾಡಿಕೆ. ಈ ಕೋಣಗಳು ಕತ್ತಲಿನಿಂದ ಕೂಡಿರುತ್ತವೆ. ಬೇಸಿಗೆಯ ಉಷ್ಣತೆ ಮತ್ತು ಬೆವರಿನಿಂದ ತಪ್ಪಿಸಲು ವಸತಿ ಕೋಣೆಯಲ್ಲಿಯೇ ಗಾಳಿ ಹಾಕುವ ವಿಭಿನ್ನವಾದ ವಿಧಾನಗಳಿವೆ. ನೀರಲ್ಲಿಯೇ ಇಡುವ ವಿಧಾನಗಳೂ ಬೇರೆ ಇವೆ. ಆದರೆ ಈ ಮಟ್ಟದ ಆರೈಕೆ ಉತ್ತರ ಕರ್ನಾಟಕದಲ್ಲಿ ಇರುವುದು ಕಂಡು ಬರುವುದಿಲ್ಲ. ಊರಗೌಡರು ದೇಸಾಯರು, ಪಾಟೀಲರು, ಮಾಲಿಪಾಟೀಲರು, ಇಂಥ ಪ್ರತಿಷ್ಠಿತ ಜನಗಳೇ ಕೋಣವನ್ನು ಸಾಕುವುದಿದೆ. ಮನರಂಜನೆಗಾಗಿಯೇ ಇಂಥ ಪ್ರಾಣಿಗಳನ್ನು ಸಾಕುತ್ತಿದ್ದ ಕಾಲದಲ್ಲಿ ಟಗರು, ಹೋತ, ಹುಂಜ ಇಂಥವು ಹೆಚ್ಚಿನ ಸ್ಥಾನವನ್ನು ಅವುಗಳು ಈ ಆಧುನೀಕರಣದ ಬದುಕಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದವು ಎನ್ನುವುದು ತಿಳಿಯುತ್ತಿತ್ತು. ಹೊಗಳಬಹುದಿತ್ತು, ಪ್ರತಿಭಟಿಸಬಹುದು. ಇಲ್ಲವೆ ತಟಸ್ಥವಾಗಿರಬಹುದಿತ್ತು. ಆದರೆ ಇದಾವುದನ್ನು ಇವುಗಳಿಂದ ವ್ಯಕ್ತಪಡಿಸಲಾಗದೆ ತಮ್ಮಲ್ಲಿಯೇ ಕರಗತ ಮಾಡಿಕೊಳ್ಳುತ್ತವೆ.

ಸಾಕು ಪ್ರಾಣಿಗಳಾದ ಹಸು, ಕುರಿ, ಆಡು, ಕೋಳಿ ಇವುಗಳ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿದ್ದೇವೆ ಎಂದು ಬಾಯಿ ಬಾಯಿ ಎಲ್ಲ ಮನುಷ್ಯ ಜಂಭಕೊಚ್ಚಿಕೊಳ್ಳುತ್ತಿದ್ದಾನೆ. ಹಸುವಿಗೆ ‘ಮನೆಯ ಭಾಗ್ಯಲಕ್ಷ್ಮಿ’ ಎಂದು ಕರೆದರೆ ಕುರಿ ‘ಚಲಿಸುವ ನಿಧಿ’ ಎಂದು ‘ಕುರಿ ಸಾಕಿದವ ಕುಬೇರನಾದ’ ಎಂದು ಎಣಿಸಲಾಗುತ್ತದೆ. ಕೋಳಿ ದಿನನಿತ್ಯದ ಖರ್ಚಿಗೆ ಕಾಸು ಕೊಡುವ ಚೀಲ ಎಂದು ಕೇಳಲಾಗುತ್ತದೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ಈ ಪ್ರಾಣಿಗಳಿಂದ ಹೇಗೆ ಹೆಚ್ಚಿನ ಹಣ ಸಂಪಾದಿಸಬಹುದು ಎಂಬ ಯಾಂತ್ರಿಕ ಚಿಂತನದಲ್ಲಿ ಮಾತ್ರ ಮನುಷ್ಯ ತೊಡಗಿದ್ದು.

ಘನೀಕೃತ ವೀರ್ಯ ಕೇಂದ್ರಗಳು ಎಲ್ಲೆಂದರಲ್ಲಿ ತಲೆ ಎತ್ತಿವೆ. ಕೃತಕಗರ್ಭದಾರಣೆಯೇ ಪ್ರಧಾನವಾಗುತ್ತಿದೆ. ಗೂಳಿ, ಟಗರು, ಹೋತ, ಬಾಯ್ಲರ್ ಕೋಳಿಗಳು ಇವೆಲ್ಲ ಕೇವಲ ಮಾನವನ ಮಾಂಸಾಹಾರಿ ಸೇವನೆಗಾಗಿ ಮಾತ್ರ ಬೆಳೆಯುತ್ತಿವೆ. ಯತ್ರದಿಂದಲೇ ಕೋಳಿಯ ಮರಿಗಳನ್ನು ವಂಚಿತವಾಗುತ್ತದೆ. ಆಕಳು, ಕುರಿ, ಆಡು, ಕೋಳಿ ಇವೆಲ್ಲಾ ಸಹಜ ಅನುಭವದಿಂದ ವಂಚಿತವಾಗುತ್ತಿವೆ. ಸ್ವಾತಂತ್ಯ್ರ ಎನ್ನುವುದನ್ನು ಮರೆತು, ಗೋಮಾಳಗಳನ್ನು ಮರೆತು, ಗದ್ದೆಯಲ್ಲಿಯೇ ಆಹಾರಕ್ಕಾಗಿ ಬೆಳೆದ ಹುಲ್ಲನ್ನು ಗೋದಲಿಗೆ ನಿಂತು ತಿನ್ನುತ್ತವೆ. ಮನುಷ್ಯ ರಾತ್ರಿಯನ್ನೇ ಹಗಲಾಗಿಸಿ ಹೆಚ್ಚು ಹೆಚ್ಚು ಮೊಟ್ಟೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಒಂದೊಂದು ಸಾಕುಪ್ರಾಣಿಯ ಹೆಸರಿನಲ್ಲೂ ಸಾಗಾಣಿಕೆಯ ಕೇಂದ್ರಗಳು ಹುಟ್ಟಿ ಕೃಷಿಯಿಂದ ದೂರ ಮಾಡಿವೆ. ಗೋಬರ್ ಗ್ಯಾಸ್, ಹಾಲು ಉತ್ಪಾದನ ಕೇಂದ್ರಗಳು ಇಂತವೆಲ್ಲ ಕ್ರಾಂತಿಕಾರ ಬದಲಾವಣೆಗಳು ಸ್ವಾತಂತ್ಯ್ರದ ಅನಂತರಲ್ಲಿ ಒಂದು ಬದುಕನ್ನೇ ಬದಲಾಯಿಸಿ ಬಿಟ್ಟಿವೆ.

ಮನುಷ್ಯನ ಬದುಕಿಗೆ ಪ್ರಾಣಿಗಳು ಪೂರಕವಾಗಿ ನಿಂತರೂ ನಾಗರೀಕರಣ, ನಾಗರಿಕತೆ, ಆಧುನಿಕತೆಯ ನಡುವೆ ಮನುಷ್ಯ ಪ್ರಾಣಿ ಸಂಬಂಧಗಳನ್ನು ಕತ್ತಿರಿಸಿಕೊಳ್ಳುತ್ತಿದ್ದಾನೆ. ಅವುಗಳ ಸಹಜ ಬದುಕನ್ನು ವಿಕೃತ ವಿನೂತನ ಮಾದರಿಗೆ ತಂದು ನಿಲ್ಲಿಸಿದ್ದಾನೆ. ತಾನು ಯಂತ್ರ ಜಗತ್ತಿನ ಶಿಶುವಾದಂತೆ ಪ್ರಾಣಿಗಳನ್ನು ತನ್ನ ಅಡಿಯೊಳಗಿರುತ್ತಿದ್ದಾನೆ. ಇದೆಲ್ಲದರ ಕುರಿತು ಚಿಂತಿಸಿದಾಗ ಅಯ್ಯೋ ಎನಿಸಿದರೂ ಅನಿವಾರ್ಯ ಎನ್ನುವಂತಾಗಿದೆ.

೧. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ
ಡಾ. ಎಂ. ಚಿದಾನಂದ ಮೂರ್ತಿ
ಪ್ರಸಾರಾಂಗ,

ಮೈಸೂರು ವಿ.ವಿ. ಮೈಸೂರು

ಮೈಸೂರು-೧೯೭೯

೨. ಉತ್ತರ ಕರ್ನಾಟಕದ ಜನಪದ ಆಟಗಳು

ಡಾ|| ಅರವಿಂದ ಮಾಲಗತ್ತಿ

ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಸಾದರ ಪಡಿಸಿದ ಮಹಾ ಪ್ರಬಂಧ-೧೯೮೫
೩. ಪ್ರಾಣಿ: ಜನಪದ ಧರ್ಮ

ಡಾ| ಅರವಿಂದ ಮಾಲಗತ್ತಿ

ಅಖಿಲ ಕರ್ನಾಟಕ ೧೯ನೇ ಸಮ್ಮೇಳನ ಆದಿ ಚುಂಚನಗಿರಿಯಲ್ಲಿ ಮಂಡಿಸಲಾದ ಪ್ರಬಂಧ ೨೮-೦೧-೯೦
೪. ಜನಪದ (ಪತ್ರಿಕೆ)

ಸಂ. ಎಂ. ಆರ್. ಶ್ರೀನಿವಾಸಮೂರ್ತಿ

ವಾರ್ತಾ ಮತ್ತು ಪ್ರಚಾರ ಇಲಾಖೆ ಬೆಂಗಳೂರು.

೧. ಜುಲೈ-೧೯೮೪ (೧೮-೦೪)

೨. ಸೆಪ್ಟೆಂಬರ್- ೧೯೮೪ (೧೮-೦೬)

೩. ಡಿಸೆಂಬರ್- ೧೯೮೪ (೧೮-೦೯)

* * *[1]      ಹಾವು ಕರಡಿ ಮಂಗಗಳಂತಹ ಪ್ರಾಣಿಗಳನ್ನು ಸಾಕುವ ವೃತ್ತಿಗಾರರೂ ಇದ್ದಾರೆ. ಇವರನ್ನು ಹೊರತು ಪಡಿಸಿದ ಮಿತಿಯೊಂದಿಗೆ ಪ್ರಬಂಧ ಸಿದ್ಧಪಡಿಸಲಾಗಿದೆ.

[2]       ವಿವರಗಳಿಗಾಗಿ ನೋಡಿ, ಇದೇ ಲೇಖಕರ ಅಸ್ಪಶ್ಯರ ಅನುಭವಗಳು.

[3]      ದಕ್ಷಿಣ ಕನ್ನಡದಲ್ಲಿ ಕಟ್ಟೆ ಮನೆಯ ಒಳಗಡೆಯೇ ಇದ್ದು ಅದರ ಬಾಗಿಲು ಮಾತ್ರ ಮನೆಯ ಗೋಡೆಯಲ್ಲಿದ್ದು ಹೊರಾವರಣದಿಂದಲೇ ಹೋಗುವ ಬರುವ ವ್ಯವಸ್ಥೆ ಇರುತ್ತದೆ.

[4]       ಈ ಬುಟ್ಟಿಯಲ್ಲಿಯೇ ಹಿಡಿದು ಗಾತ್ರದವುಗಳಿವೆ. ಕ್ರಮವಾಗಿ ಆ ಬುಟ್ಟಿಗಳ ಹೆಸರನ್ನು ಈ ರೀತಿ ಗುರುತಿಸಬಹುದು. ಪುಂಟಿ (ಬುಟ್ಟಿ) ಹವಣಿ, ಹೆಡಿಗೆ, ಡೊಳ್ಳಡಿಗೆ ಹೀಗೆ ಬೆಳವಣಿಗೆ ಹೊಂದಿವೆ ಎಂಬುದನ್ನು ಗುರುತಿಸಬಹುದಾಗಿದೆ.