ಆದಿಮಾನವ ಭೂಮಿಯ ಮೇಲೆ ಕಾಣಿಸಿಕೊಂಡಾಗ ಅವನ ಸುತ್ತಮುತ್ತ ಅನೇಕ ಪ್ರಾಣಿಗಳು ಬದುಕಿದ್ದವು. ಆ ಕಾಲದಲ್ಲಿ ಪ್ರಾಣಿ ಮತ್ತು ಮನುಷ್ಯ ವಸತಿಯಲ್ಲಿ ಸೃಷ್ಟಿಯ ಕೈವಾಡವೇ ಎದ್ದು ಕಾಣುವ ಅಂಶವಾಗಿತ್ತು. ಅಂದರೆ ನಿಸರ್ಗ ನಿರ್ಮಿತ ವಸತಿಯಲ್ಲಿಯೇ ಇವರೆಲ್ಲರ ಜೀವನಸಾಗಿತ್ತು.

ಗುಡ್ಡಗಳು ಒಳಗೊಳಗೆ ಕುಸಿದು ಉಂಟಾದ ಗುಹೆಗಳು ಹಳೆಯ ದೊಡ್ಡ ಮರಗಳ ಪೊದರುಗಳು ಮಳೆಗಾಲದಲ್ಲಿ ಮನುಷ್ಯನ ಹಾಗೂ ಪ್ರಾಣಿಗಳ ವಸತಿಗಳಾಗಿದ್ದವು ಬೇಸಿಗೆ ಕಾಲದಲ್ಲಿ ನದಿಯ ಬಯಲು ಮರಗಳ ನೆರಳಿನಲ್ಲಿ ಅವರೆಲ್ಲ ಬದುಕಿರಬಹುದು. ಅಲೆಮಾರಿ ಜೀವನ ಮನುಷ್ಯ ಸಹಿತವಾದ ಪ್ರಾಣಿಪಕ್ಷಿಗಳೆರಡರಲ್ಲೂ ಕಂಡು ಬರುವ ಸಾಮಾನ್ಯ ಅಂಶವಾಗಿತ್ತು. ಈ ಹಂತದಲ್ಲಿ ಮನುಷ್ಯ ಹಾಗೂ ಪ್ರಾಣಿಪಕ್ಷಿಗಳದ್ದು ವಿರಸದ ಜೀವನ ಪರಸ್ಪರ ಕೊಲ್ಲುವ, ತಿನ್ನುವ, ಹಿಂಸಿಸುವ ಪ್ರಸಂಗಗಳೇ ಹೆಚ್ಚಾಗಿದ್ದುವು.

ಕೃಷಿಯ ಕಲ್ಪನೆ, ಪ್ರಾಣಿಗಳ ಉಪಯೋಗ ಅವುಗಳನ್ನು ಸಾಕುವುದರಿಂದ ದೊರೆಯುವ ಲಾಭ ಇತ್ಯಾದಿಗಳ ಜ್ಞಾನದಿಂದ ಮನುಷ್ಯ ತನ್ನ ಸಮೀಪದ ಕಾಡಿನಲ್ಲಿ ಲಭ್ಯವಿರುವ ಕೆಲವೊಂದು ಉಪಯುಕ್ತ ಪ್ರಾಣಿಪಕ್ಷಿಗಳ ಶಕ್ತಿಯನ್ನೂ, ನಿಯಂತ್ರಿಸಿ, ಪಳಗಿಸಿ, ತನ್ನ ನಿಕಟ ಸಂಪರ್ಕಕ್ಕೆ ಅಣಿಗೊಳಿಸಿದನು. ಆ ಕಾರಣವಾಗಿ ಮನುಷ್ಯ ಹಾಗೂ ಕೆಲವು ಪ್ರಾಣಿ ಪಕ್ಷಿಗಳ ನಡುವೆ ವಿರಸದ ಸಂಬಂಧ ದೂರವಾಗಿ ಸಾಮರಸ್ಯ-ಸಹಜೀವನದ ಬದುಕು ಪ್ರಾರಂಭವಾಯಿತು. ಕ್ರಮೇಣ ಆ ಪ್ರಾಣಿ ಪಕ್ಷಿಗಳ ಸಂತತಿ ಮನುಷ್ಯ ಸಂತತಿಯೊಂದಿಗೆ ವರ್ಧಿಸಿತು. ಈ ಪ್ರಾಣಿ ಪಕಷಿಗಳ ಕುಲಗಳು ಜನಪದರ ಬದುಕಿನ ಅವರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಮನುಷ್ಯನ ಬದುಕಿನೊಂದಿಗೆ ಸಾಗಿ ಬಂದವು.

ಪ್ರಕಾರಗಳು: ಪ್ರಾಣಿ ವಸತಿಗಳಲ್ಲಿ ೩ ಪ್ರಕಾರಗಳನ್ನು ಗುರುತಿಸಬಹುದು.

೧) ನಿಸರ್ಗ ನಿರ್ಮಿತ: ನೂರಾರು ಕೋಟಿ ವರ್ಷಗಳಿಂದ ನಿಸರ್ಗ ನಿರ್ಮಿತ ವಸತಿಯಲ್ಲಿ ಪ್ರಾಣಿ ಪಕ್ಷಿಗಳು ಬದುಕುತ್ತಾ ಬಂದಿವೆ. ನರಿ, ಹಾವು, ಕಣ್ಣಪ್ಪಡಿ ಇತ್ಯಾದಿ.

೨) ಸ್ವಯಂ ನಿರ್ಮಿತ: ಅನೇಕ ಹಕ್ಕಿ ಪಕ್ಕಿ ಕ್ರಿಮಿ ಕೀಟಗಳು ತಮಗಾಗಿ ತಮ್ಮ ಮೊಟ್ಟೆ ಮರಿಗಳಿಗಾಗಿ ತಾತ್ಪೂರ್ತಿಕ ಗೂಡು ಕಟ್ಟುತ್ತವೆ. ಗುಬ್ಬಿ ಕಾಗೆ ಹದ್ದು, ಜಿರಲೆ, ಜೇನು, ಕಡಜಲು ಹೆಗ್ಗಣ ಇತ್ಯಾದಿ., ಮನುಷ್ಯನೂ ಈಗ ಈ ಗುಂಪಿನಲ್ಲಿ ಸೇರಿದ್ದಾನೆ.

೩) ಮನಷ್ಯ ನಿರ್ಮಿತ: ಕಾಡಿನಲ್ಲಿ ನಿಸರ್ಗದಡಿ ಎಲ್ಲೆಲ್ಲಿಯೋ ಆಶ್ರಯ ಪಡೆದು ಬದುಕುತ್ತಿರುವ ಕೆಲವು ಪ್ರಾಣಿಪಕ್ಷಿಗಳು ಮನುಷ್ಯ ನಿರ್ಮಿತ ರಕ್ಷಣೆಯ ಅಡಿಯಲ್ಲಿ ಬಾಳಲು ಕಲತಿವೆ. ಇವುಗಳಲ್ಲಿ ದನಕರುಗಳು ಕರಿಗಳು ಇತ್ಯಾದಿ ಬರುತ್ತವೆ.

ಪ್ರಾಣಿ ವಸತಿಯ ಪ್ರಾಚೀನತೆ:

ಮನುಷ್ಯ ಗವಿ ಸಂಸ್ಕೃತಿಯ ಹಂತದಿಂದ ಗೃಹ ಸಂಸ್ಕೃತಿಯತ್ತ ಸಾಗುತ್ತಿದ್ದಾಗ ಸಾಕು ಪ್ರಾಣಿಗಳ ವಸತಿಯಲ್ಲಿ ಬದಲಾವಣೆಯ ಸ್ತರಗಳು, ಕಂಡುಬರಲು ಪ್ರಾರಂಭವಾಗಿರಬಹುದು.

ಮನುಷ್ಯ ಕೃಷಿಯನ್ನು ಪ್ರಾರಂಭಿಸಿದ ಪ್ರಾರಂಭದಲ್ಲಿ ಪ್ರಾಣಿಗಳನ್ನು ತನ್ನೊಂದಿಗೆ ಪಾಲನೆ ಮಾಡಿದನಷ್ಟೇ ಅಲ್ಲ ಅವುಗಳನ್ನು ಚಳಿಮಳೆ ಹಾಗೂ ಕಾಡಿನ ವೈರಿ ಪ್ರಾಣಿಗಳಿಂದ ರಕ್ಷಿಸಲು ಅವುಗಳಿಗೆ ತನ್ನ ವಸತಿಯ ಬಳಿಯಲ್ಲಿಯೇ ವಸತಿ ನಿರ್ಮಾಣ ಮಾಡಿದನು. ಆದ್ದರಿಂದ ಪ್ರಾಣಿ ವಸತಿಯ ಪ್ರಾಚೀನತೆ ಮನುಷ್ಯನ ಕೃಷಿ ಜೀವನದ ಪ್ರಾಚೀನತೆಯಷ್ಟು ಹಿಂದಿನದು ಎನ್ನಬಹುದು.

ಕರಾವಳಿಯ ಪ್ರಾಣಿ ವಸತಿ:

ಸಾಕು ಪ್ರಾಣಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭನ್ನವಾಗಿರುವುದಿದೆ. ಆದ್ದರಿಂದಲೇ ಕುರಿಕೊಪ್ಪಗಳು ಕರಾವಳಿಯಲ್ಲಿ ಅಪರೂಪ.

ಕರಾವಳಿಯಲ್ಲಿ ಮುಖ್ಯ ಉದ್ಯೋಗ ಬತ್ತದ ಕೃಷಿ, ತೆಂಗು, ಅಡಿಕೆಯ ತೋಟ, ಕೃಷಿಯ ಅಗ್ರಗಣ್ಯ ಸಹಾಯಕರು ಎತ್ತುಕೋಣಗಳು. ತೋಟ ಗದ್ದೆಗಳಿಗೆ ಸಗಣಿ ಗೊಬ್ಬರಬೇಕು ಅಲ್ಲದೆ ಹವ್ಯಕರ ಮುಖ್ಯ ಆಹಾರ ಹಾಲು ಹೈನ. ಮಜ್ಜಿಗೆ ಮೊಸರು ಇಲ್ಲದೆ ಒಂದು ಹೊತ್ತಿನ ಅಡಿಗೆಯೂ ನಡೆಯದು, ಕೊಟ್ಟಿಗೆಯ ಗರತಿ ಕರೆದರೆ ಮನೆಯ ಗರತಿ ಅಟ್ಟಾಳು ಎಂಬ ಗಾದೆಯಿದೆ. ಕೊಟ್ಟಿಗೆಗೆ ಸುಖವಾದರೆ ಮನೆಗೆ ಸುಖ ಎಂದು ನಂಬುತ್ತಾರೆ. ಆದ್ದರಿಂದಲೇ ಕೊಟ್ಟಿಗೆ ಅವರಿಗೆ ದೇವಾಲಯ ಕೊಟ್ಟಿಗೆಯ ದನಗಳೇ ದೇವರು. ಮುಂಜಾನೆ ಎದ್ಬೊಂದು ಗಳಗೆ ಕೊಟ್ಟಿಗೆ ಹೊಕ್ಕುಬರುವದು ಇವರ ಸಂಪ್ರದಾಯ. ದೇವಾಲಯ ಎಲ್ಲೋ ದೂರ ಇರುತ್ತದೆ. ಎದ್ದ ಕೂಡಲೇ ದೊರೆಯುವ ದೇವಾಲಯ ಕೊಟ್ಟಿಗೆ. ಅದೇ ಎಲ್ಲ ದೇವಾಲಯಕ್ಕಿಂತ ಶ್ರೇಷ್ಠ ಎಂದು ತಿಳಿಯುತ್ತಾರೆ. ಬ್ರಾಹ್ಮಣರು, ಆದರೆ ಇತರ ವರ್ಗದ ಜನ ಅದೊಂದು ದೇವಾಲಯ ಎಂದು ತಿಳಿಯದಿದ್ದರೂ ಎದ್ದಕೂಡಲೇ ಮೊದಲಕಾಯಕ ದನಗಳದ್ದು.

ಕರಾವಳಿಯಲ್ಲಿ ಕಾಣುವ ಇನ್ನೊಂದು ಮುಖ್ಯ ಪ್ರಾಣಿ ವಸತಿಯೆಂದರೆ ಕೋಳಿಗೂಡು. ಬ್ರಾಹ್ಮಣೇತರರ ಆರ್ಥಿಕ ಮೂಲವಾಗಿ ಆಹಾರ ಮೂಲವಾಗಿ ಕೋಳಿಸಾಕಾಣಿಕೆ ಇದೆ.

ಕೋಳಿಗೂಡು:

ಕರಾವಳಿಯಲ್ಲಿ ಮನೆಯ ಅಂಗಳದಿಂದ ಮೆಟ್ಟಲೇರುತ್ತಲೇ ಸಿಗುವ ವಿಶಾಲವಾದ ಸ್ಥಳವನ್ನು ಹೊಳ್ಳಿ / ತೆಣೆ ಎನ್ನುತ್ತಾರೆ. ಈ ಹೊಳ್ಳಿಯ ಎಡಕ್ಕಾಗಲಿ, ಬಲಕ್ಕಾಗಲಿ ಚಿಡಿ/ ಚಡಿ ಎಂಬ ಎತ್ತರದ ಸ್ಥಳವಿರುತ್ತದೆ. ಹೊರನೋಟಕ್ಕೆ ಇದು ಸುಮಾರು ಮೂರು ಅಡಿ ಅಗಲ ನಾಲ್ಕು ಅಡಿ ಉದ್ದದ ಸುಮಾರು ಎರಡು ಅಡಿ ಎತ್ತರದ ಒಂದು ಘನಾಕೃತಿ. ಆದರೆ ಅದು ಪೊಳ್ಳಾಗಿರುತ್ತದೆ. ಎರಡು ಗೋಡೆಗಳಿಗೆ ಅಡ್ಡಲಾಗಿ ಕೆಳದರ್ಜೆಯ ಹಲಗೆಗಳನ್ನು ಇಟ್ಟು ಅದರ ಮೇಲೆ ಮಣ್ಣು ಮೆತ್ತುತ್ತಾರೆ. ಒಂದು ಬದಿಗೆ ಅರ್ಧ ಅಡಿ ಅಗಲದ ದ್ವಾರ ಬಿಟ್ಟು ಉಳಿದೆಲ್ಲ ಬದಿಯನ್ನು ಮಣ್ಣಿನ ಗೋಡೆ ಹಾಕಿ ಬಂದು ಬಂಡುತ್ತಾರೆ. ದ್ವಾರದ ಬದಿಗೆ ತಳ ಹಾಗೂ ತಲೆಯ ಭಾಗದಲ್ಲಿ ಅರ್ಧ ಅಡಿ ಉದ್ದದ ನಾಲ್ಕು ಅಂಗುಲ ಅಗಲದ ಆಯತಾಕಾರದ ಕಟ್ಟನ್ನು ಕೂಡ್ರಿಸಿರುತ್ತಾರೆ. ಗೂಡಿನ ದ್ವಾರದಷ್ಟು ಅಗಲವಾದ ಹಲಗೆಯ ಕೋಳಿ ಗೂಡಿನ ಕದ, ಕತ್ತಿಯ ನೆರವಿನಿಂದ ಒಂದು ಬದಿಯನ್ನು ಕಡಿದು ಅಂಗೈ ಅಗಲಕದ ಹಿಡಕೆ ಮಾಡುತ್ತಾರೆ. ಅದನ್ನು ಕಟ್ಟಿನ ಮೂಲಕ ಇಳಿಸುತ್ತಾರೆ, ನಾಯಿ-ನರಿಗಳು ಈ ಕದವನ್ನು ತೆರೆಯಲಾರವು. ಇದು ಅತಿಥಿಗಳು ಕುಳಿತುಕೊಳ್ಳುವ ಮಂಚದಂತೆಯೂ ಬಳಕೆಯಾಗುತ್ತದೆ.

ಕೋಳಿಗೂಡಿನಲ್ಲಿ ಮೊಟ್ಟೆಗಳಿಗೆ ಕಾವು ಕೊಡುವಂಥ ಕ್ರಿಯೆಗೆ ತಕ್ಕ ಏರ್ಪಾಟು ಇರುವುದಿಲ್ಲ. ಆದ್ದರಿಂದ ಇಪ್ಪತ್ತೊಂದು ದಿನ ಗೂಡಿನ ಹೊರಗೆ ಮನೆಯೊಳಗೆ ಒಂದು ಬುಟ್ಟಿಯಲ್ಲಿ ಕಾವು ಕೊಡಿಸಿ ಮರಿಹೊರಬಂದ ಮೇಲೆ ಮನೆಯ ಒಂದು ಬದಿಗೆ ಅವುಗಳನ್ನು ಜೋಪಾನ ಮಾಡುತ್ತಾರೆ. ಅವು ದೊಡ್ಡದಾದ ಮೇಲೆ ಗೂಡಿಗೆ ಬಿಡುತ್ತಾರೆ.

ಗೂಡಿನಿಂದ ಮೊಟ್ಟೆ ತೆಗೆಯಲು ಉದ್ದ ಕೈಲ (ಹಿಡಿಕೆವುಳ್ಳ ಗರಟೆಯ ಸವಟನ್ನು) ಬಳಸುತ್ತಾರೆ ಪಿಟ್ಟಿ ತೆಗೆಯುವುದಕ್ಕೆ ಕೂಡ ಈ ಸವಟು ಉಪಯೋಗಕ್ಕೆ ಬರುತ್ತದೆ.

ಕೊಟ್ಟಿಗೆ:

ಇದು ದನಗಳ ಮನೆ ಇದನ್ನು ಕರಾವಳಿಯ ಕೊಂಕಣಿಗರು ಗೊಟ್ಟ ಎಂದೂ ಕನ್ನಡಿಗರು ಕೊಟ್ಗೆ ಎಂದೂ ಕರೆಯುತ್ತಾರೆ. ಈ ಶಬ್ದಗಳು ಗೊಷ್ಟಿ ಈ ಸಂಸ್ಕೃತ  ಶಬ್ದದಿಂದ ಹುಟ್ಟಿದವುಗಳಾಗಿವೆ. ಕರಾವಳಿಯ ಹಾಲಕ್ಕಿ ಗೌಡರು ದನಗಳ ಮನೆಯನ್ನು ಹಟ್ಟಿ ಎಂದೂ ಅದರ ಅರ್ಥವನ್ನು ಇನ್ನಷ್ಟು ಸ್ಪಷ್ಟ ಪಡಿಸಲು-ಬೇರೆ ಜಾತಿಯ ಜನರೊಂದಿಗೆ ಮಾತಾಡುವಾಗ- ಹಟ್ಟಿ ಕೊಟ್ಗೆ ಎಂದು ಹೇಳುತ್ತಾರೆ. ದೊಡ್ಡಿ ಎಂಬ ಶಬ್ದವು ಇಲ್ಲಿ ರೂಢಿಯಲ್ಲಿಲ್ಲ. ನಾಲ್ಕು ಗೋಡೆಯ ಚಪ್ಪರ ಎಲ್ಲದ ಮನೆಗಳಲ್ಲಿ ತುಡುಗು ದನಗಳನ್ನು ತುಂಬಿಟ್ಟು ದಂಡವಸೂಲು ಮಾಡುವ ಪದ್ಧತಿ ಕರಾವಳಿಯಲ್ಲಿದ್ದು, ದನಗಳ ಈ ಜೈಲುಗಳನ್ನು ಹಟ್ಟಿಕೊಟ್ಟಿಗೆ ಎಂದು ಕರೆಯುತ್ತಾರೆ. ನಿನ್ನ ದನಗಳು ಹಟ್ಟಿಕೊಟ್ಟಿಗೆಗೆ ಬೀಳಲಿ ಎಂಬ ಶಾಪದ ಮಾತಿದೆ- ಹಟ್ಟಿಕೊಟ್ಟಿಗೆ ದನ ಸೇರುವುದೆಂದರೆ ಯಜಮಾನನಿಗೆ ಅಪಮಾನಕರ ಸಂಗತಿಯಾಗಿದೆ. ಆತ ತನ್ನ ದನಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗುತ್ತದೆ. ದನ ಸಾಕುವ ತನ್ನ ಕರ್ತವ್ಯದಲ್ಲಿ ದೋಷ ಉಂಟಾದದ್ದು ಪರರಿಗೆ ಗೊತ್ತಾಗುವುದನ್ನು ಆತ ಸಹಿಸುವುದಿಲ್ಲ.

ಕೊಟ್ಟಿಗೆಯ ಸ್ಥಾನ:

ಕೊಟ್ಟಿಗೆಯನ್ನು ಮನೆಯ ಮುಂದುಗಡೆಯಲ್ಲಿ ಕಟ್ಟುವದು ಸಾಮಾನ್ಯ ಪದ್ಧತಿ. ಇದಕ್ಕೆ ಧಾರ್ಮಿಕ ಕಾರಣಗಳೇನಾದರೂ ಇವೆಯೇ? ಎಂದು ವಿಚಾರ ಮಾಡಿದಾಗ ಇದಕ್ಕೆ ಅನುಕೂಲತಾ ದೃಷ್ಟಿಯೇ ಕಾರಣವೆಂಬುದು ಕಂಡು ಬಂದಿತು.

ಕರಾವಳಿಯ ಮನೆಯ ರಚನೆಯೂ ಇದಕ್ಕೆ ಮುಖ್ಯ ಕಾರಣವಾಗಿದೆ. ಕರಾವಳಿಯ ಮನೆಗಳ ರಚನೆಯ ಪ್ರಕಾರ ಮನೆಯ ಮುಂದೆ ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಅಲ್ಲಿ ಹುಲ್ಲಿನ ಗೊನೆ, ತರಕಿನ ಗೊನೆ, ಬಾವಿ, ನಾಣಗಿ ಇವೆಲ್ಲ ಮನೆಯ ಮುಂದುಗಡೆ ಇರುತ್ತವೆ.

ದನಗಳು ಕೃಷಿಕನ ಸಂಪತ್ತು ಅದು ಅವನ ಕಣ್ಣರಿಕೆಯಲ್ಲಿದ್ದರೆ ಒಳ್ಳೆಯದು ಎಂಬ ಅಭಿಪ್ರಾಯ ಅವನದು.

ಇನ್ನೊಂದು ಕಾರಣ ಇದು ಇಲ್ಲಿಯ ಮನೆಗಳಿಗೆ ಮುಂದುಗಡೆ ಒಂದೇ ಬಾಗಿಲು ಇರುತ್ತದೆ. ಅಲ್ಲಿಂದ ಕೊಟ್ಟಿಗೆಗೆ ಹೋಗಿ ಬರುವುದಕ್ಕೆ ಅನುಕೂಲ ಹೆಚ್ಚು. ಮುಖ್ಯವಾದ ಇನ್ನೊಂದು ಕಾರಣ ವಠಾರದ ದ್ವಾರ. ವಠಾರದ ದ್ವಾರವು ಮುಂದುಗಡೆ ಮಾರ್ಗಕ್ಕೆ ಹೊಂದಿರುತ್ತದೆ. ಆದ್ದರಿಂದ ಮುಂದುಗಡೆ ಇರುವ ಮಾರ್ಗಕ್ಕೆ ಹೊಂದಿ ಕೊಟ್ಟಿಗೆ ಇದ್ದರೆ ದನಗಳು ಹೊರಗೆ ಹೋಗಿ ಬರಲು ಅನುಕೂಲ ಹೆಚ್ಚು. ಹೀಗೆ ಅನುಕೂಲತಾ ದೃಷ್ಟಿಯೇ ಮನೆಯ ಮುಂದೆ ಕೊಟ್ಟಿಗೆ ಇರಲು ಕಾರಣವಾಗಿದೆ.

ಕೊಟ್ಟಿಗೆಯ ಜಾಗದ ಆಯ್ಕೆ:

ಮನೆ ಕಟ್ಟುವಾಗ ಹಳ್ಳಿಗರು ಜಾನಪದ ರೀತಿಯ ನಿಯಮಗಳನ್ನು ಅನುಸರಿಸುತ್ತಾರೆ. ಅದೇ ರೀತಿ ಈ ಜನರು ಕೊಟ್ಟಿಗೆ ಕಟ್ಟುವಾಗ, ಕೀಳು ದೆವ್ವಗಳ ನಡೆ ಇಲ್ಲದ ಸ್ಥಳವನ್ನು ಆಯ್ದುಕೊಳ್ಳುತ್ತಾರೆ. ಚವಡಿ ಬಲೆ, ನಾಗರ ಮತ್ತು ಯಕ್ಷಿ, ಭೂತ, ಇತ್ಯಾದಿ ದೇವಸ್ಥಾನಗಳ ಬಳಿಯಲ್ಲಿ ಕೊಟ್ಟಿಗೆ ಕಟ್ಟುವದಿಲ್ಲ. ಈ ದೈವಗಳ ನಡೆ ಸಿಕ್ಕರೆ ಅಂದರೆ ಅವು ನಡೆದಡುವ ಸ್ಥಳಕ್ಕೆ ಆತಂಕ ಉಂಟಾದರೆ ದನಕರುಗಳಿಗೆ ತಾಪತ್ರಯ ಬರುತ್ತದೆಯೆಂದು ತಿಳಿಯುತ್ತಾರೆ. ಗಾಡಗನನ್ನು ಕೇಳುವದು ನೋಟಗಾರನಲ್ಲಿ ವಿಚಾರಿಸುವುದು ದೇವರಲ್ಲಿ ಪುಡವಿ ಕೇಳುವುದು ಇತ್ಯಾದಿ ವಿಧಾನಗಳಿಂದ ಕೊಟ್ಟಿಗೆ ಕಟ್ಟಬಹುದಾದ ಸ್ಥಳವನ್ನು ನಿರ್ಧರಿಸುತ್ತಾರೆ.

ಇಷ್ಟೆಲ್ಲ ಕೇಳಿ ಮಾಡಿ ಕೊಟ್ಟಿಗೆ ಕಟ್ಟಿದರೂ ದನಕರುಗಳಿಗೆ ರೋಗ, ರುಜಿನ ಬಂದರೆ ಅವು ನರಳಿದರೆ, ಸತ್ತರೆ ಹಾಲು ಕೊಡುವ ಪ್ರಾಮಾಣ ಕಡಿಮೆಯಾದರೆ, ದನಗಳಿಗೆ ಉಣುಗು ಹೆಚ್ಚಾದರೆ ಕೊಟ್ಟಿಗೆಯ ಸ್ಥಳದಲ್ಲಿ ದೆವ್ವದ ನಡೆ ಇದೆ ದೇವರ ತಕರಾರು ಇದೆ ಎಂದು ತಿಳಿಯುತ್ತಾರೆ. ಅದರ ಉಪಶಮನಕ್ಕಾಗಿ ಸಮೀಪದ ದೈವಗಳಿಗೆ ಹಣ್ಣು ಕಾಯಿ ಕೊಡುವದು ಕೋಳಿ ಬಲಿಕೊಡುವದು ಇತ್ಯಾದಿ ದೈವ ತೃಪ್ತಿಯ ಕಾರ್ಯಗಳನ್ನು ಮಾಡುತ್ತಾರೆ.

ಬ್ರಾಹ್ಮಣ ಸಂಪರ್ಕಕ್ಕೆ ಬಂದ ಹಳ್ಳಿಗರು ಬ್ರಾಹ್ಮಣರಿಂದ ಪಂಚಾಂಗ ಓದಿಸಿ, ಆಯಾ ನೋಡಿ, ನಕ್ಷತ್ರ ಉತ್ತಮ ದಿನ ನೋಡಿ ಕೊಟ್ಟಿಗೆ ಕಟ್ಟಿಸುತ್ತಾರೆ.

ಬ್ರಾಹ್ಮಣರು ಮಾತ್ರ ಪೂರ್ಣವಾಗಿ ಪಂಚಾಂಗವನ್ನು ಅನುಸರಿಸುತ್ತಾರೆ. ಪಂಚಾಂಗದಲ್ಲಿ ಗೃಹ ಗೋಷ್ಠ ದೇವಾಲಯಗಳಿಗೆ ಒಂದೇ ಬಗೆಯ ಆಯವನ್ನೂ ಹೇಳಿದೆ. ಆದರೂ ಗೋಷ್ಠ ಕಟ್ಟಿಸುವಾಗ ವೇಷಭಾಯವನ್ನ ಅವರು ಅನುಸರಿಸುತ್ತಾರೆ. ಜಾತಿಯ ಸ್ವಾಮಿಗಳ ಅಪ್ಪಣೆ ಪಡೆಯುವುದು ಜ್ಯೋತಿಷ್ಯ ಶಾಸ್ತ್ರವನ್ನು ಅನುಸರಿಸುವುದು ಕೊಟ್ಟಿಗೆ ಕಟ್ಟಿದ ಮೇಲೆ ದನಗಳನ್ನು ಒಳಗೆ ಸೇರಿಸುವ ಮುನ್ನ ಗಣ ಹೋಮ ಸಪ್ತ ಶತಿ, ಇತ್ಯಾದಿ ಸಂಸ್ಕಾರಗಳನ್ನು ಮಾಡುವರು ಬ್ರಾಹ್ಮಣ ಸಂಪ್ರದಾಯದಲ್ಲಿ ಕಂಡುರುತ್ತದೆ. ಧಾರ್ಮಿಕ ವಿಧಿಗಳನ್ನು ಯಜಮಾನ ತನ್ನ ಮನೆಯಲ್ಲಾಗಲೀ ತಾನು ಕಟ್ಟಿಸಿದ ಕೊಟ್ಟಿಗೆಯಲ್ಲಾಗಲೀ ನೆರವೇರಿಸಬಹುದಾಗಿದೆ. ಇದಾದ ನಂತರ ಆಕಳನ್ನು ಹೆಚ್ಚಾಗಿ ಚಳಿ ಆಕಳನ್ನು ಮೊದಲು ಕೊಟ್ಟಿಗೆಗೆ ಹೊಕ್ಕಿಸಿ ಬಳಿಕ ಉಳಿದ ದನಗಳನ್ನು ಹೊಕ್ಕಿಸಿ ಕಟ್ಟುತ್ತಾರೆ. ಹೊಸ ಮನೆ ಪ್ರವೇಶದಲ್ಲಿ ನಡೆಸುವಂತಹ ವಾಸ್ತು ಶಾಂತಿ, ಚಂಡಿಹೋಮ ಇತ್ಯಾದಿ ಕಾರ್ಯಕ್ರಮಗಳು ಕೊಟ್ಟಿಗೆಯ ಪ್ರವೇಶದ ಸಂದರ್ಭದಲ್ಲಿ ನಡೆಯುವುದಿಲ್ಲ. ತೋರಣಾದಿಗಳ ವೈಭವವು ಇಲ್ಲ. ನಾಲ್ಕು ಮೂಲೆಗೆ ನಾಲ್ಕು ಮಾವಿನ ತುಮಕೆಗಳನ್ನು ಸಿಗಸುತ್ತಾರೆ ಅಷ್ಟೆ . ಗೆಂಟ ಹುಣ್ಣಿಮೆ ದಿನ ದೀಪಾವಳಿಯ ದಿನ ದನಗಳ ಪೂಜೆಗೆ ಸಂಬಂಧಿಸಿ ನೂರಾರು ಹಾಡುಗಳು ದೊರೆಯುತ್ತವೆ. ಗೃಹ ಪ್ರವೇಶಕ್ಕೆ ಸಂಬಂಧಿಸಿಯು ಜನಪದ ಹಾಡುಗಳಿವೆ. ಆದರೆ ಕೊಟ್ಟಿಗೆಗೆ ಸಂಬಂಧಿಸಿ ಹಾಡುಗಳು ಇಲ್ಲ.

ಕಟ್ಟಡ ಶೈಲಿಯಲ್ಲಿ ಭಿನ್ನತೆ: ಭದ್ರತೆಯ ದೃಷ್ಟಿಯಿಂದ ವೀಕ್ಷಿಸಿದಾಗ ಎರಡು ಬಗೆಯ ಶೈಲಿ ಕಂಡು ಬರುತ್ತದೆ.

೧) ಹೆಚ್ಚು ಸುರಕ್ಷಿತವಾದ ಗಟ್ಟಿಮುಟ್ಟಾದ ಹೆಚ್ಚು ಕಾಲ ಬಾಳುವ ಕೊಟ್ಟಿಗೆಗಳು.

೨) ಮಳೆ ಬಿಸಿಲಿನಿಂದ ಮಾತ್ರ ರಕ್ಷಣೆ ಸಿಗುವ ಸಾಮಾನ್ಯ ರೀತಿಯ ತಾತ್ಪೂರ್ತಿಕ ಕೊಟ್ಟಿಗೆಗಳು.

ಬೆಟ್ಟದ ಬಳಿಯಲ್ಲಿ ಗದ್ದೆ ಮಾಡಿಕೊಂಡು ಇರುವವರು ತಮ್ಮ ದನಗಳ ಕೊಟ್ಟಿಗೆಯನ್ನು ಹೆಚ್ಚು ಭದ್ರವಾದ ರೀತಿಯಲ್ಲಿ ಕಟ್ಟುತ್ತಾರೆ. ಇದಕ್ಕೆ ಕಾರಣ ನಿತ್ಯ ಹೊಂಚು ಹಾಕುವ ಹುಲಿ ತೋಳ ಮುಂತಾದ ಹಿಂಸ್ರ ಪಶುಗಳಿಂದ ಹಾಗೂ ಕಳ್ಳಕಾಕರಿಂದ ರಕ್ಷಣೆ ಪಡೆಯುವುದು.

ತಟ್ಟಿಯ ಗೋಡೆ, ಕದ, ಗಳದ ಅಡಂಚಿ ಇತ್ಯಾದಿಗಳಿಂದ ಕಟ್ಟಿದ ಕೊಟ್ಟಿಗೆಯನ್ನು ಹುಲಿಗಳು ಮುರಿದು ಒಳಹೊಕ್ಕಬಹುದು ಅಡಂಬೆಯ ಸಂದಿಯಿಂದ ಇವುಗಳ ದರ್ಶನವಾದರೆ ಸಾಕು ದನಗಳು ಬೆಚ್ಚಿ ಹಗ್ಗ ಹರಿದುಕೊಂಡು ಓಡಬಹುದು. ಆದ್ದರಿಂದ ಇಂಥ ಕಡೆಯಲ್ಲಿ ಕೆಡ್ಮಣ್ಣಿ ಗೋಡೆ ಕಟ್ಟುತ್ತಾರೆ. ಗಟ್ಟಿ ಮುಟ್ಟಾದ ಕಿಡಕಿ ಬಾಗಿಲುಗಳನ್ನು ಹಚ್ಚುತ್ತಾರೆ. ಗಳದ ಮಾಡನ್ನು ನಿರ್ಮಿಸಿ ಕರಡದಿಂದ ಹೊದಿಸುತ್ತಾರೆ. ಆರ್ಥಿಕ ಬಲವುಳ್ಳವರು ಕಲ್ಲಿನ ಗೋಡೆ ಮಾಡಿ ಹಂಚಿನ ಹೊದಿಕೆ ಮಾಡುತ್ತಾರೆ. ಬಾಗಿಲಿಗೆ ಬೀಗ ಹಾಕುತ್ತಾರೆ.

ನಾಡಿನಲ್ಲಿರುವ (ಅಂದರೆ ಜನವಸತಿಯ ನಡುವೆ ಇರುವ) ಕೊಟ್ಟಿಗೆಗಳು ನಾನಾ ಬಗೆಯವು. ಬೇಸಿಗೆಯಲ್ಲಿ ನಾಲ್ಕು ಕಂಬದ ಮೇಲೆ ಸಣ್ಣ ಚಪ್ಪರ ಹಾಕಿ ನಾಲ್ಕು ಲಲಕನ್ನಾಗಲೀ ಮಡಲನ್ನಾಗಲಿ ಚೆಲ್ಲಿದರೆ ಸಾಕು. ಮಳೆಗಾಲದ ಪ್ರಾರಂಭದಲ್ಲಿ ಎರಡು ಕೋಳ್ಗಂಬ ಎರಡು ಕೀಳ್ಗಂಬ ಹುಗಿದು ಪಶ್ಚಿಮಕ್ಕೆ ಇಳಿಜಾರಾಗಿ ಮಾಡು ಮಾಡಿ ಹುಲ್ಲಿನ ಅಥವಾ ಹಂಚಿನ ಹೊದಿಕೆ ಹಾಕುತ್ತಾರೆ. ಇನ್ನೊಂದು ಬದಿಗೆ ದೊಣಕಲು ಇರುತ್ತದೆ.

ಕೆಲವು ಕೊಟ್ಟಿಗೆಗಳು ತುಂಬು ಆವರಣವುಳ್ಳವು ಅಂದರೆ ಸುತ್ತ ನಾಲ್ಕು ಗೋಡೆ ಇರುತ್ತದೆ. ಮೇಲ್ಗಡೆ ಕೋಳನಿಂದ ಮಾಡಿನವರೆಗೆ ಇಳಿಜಾರಾದ ಹೊದಿಕೆ ಇರುತ್ತದೆ. ಈ ಹೊದಿಕೆ ಹಂಚಿನದ್ದಾಗಿರಬಹುದು ಕರಡದ ಹುಲ್ಲಿನದ್ದಾಗಿರಬಹುದು.

ಕೊಟ್ಟಿಗೆಗೆ ಬಳಸುವ ಮರಗಳು.

ಸ್ಥಳೀಯವಾಗಿ ದೊರಕುವ ತೆಂಗಿನ ಪಣಸು, ಅಡಿಕೆಯ ದಬ್ಬೆಯನ್ನು ಕೊಟ್ಟಿಗೆಯ ಮಾಡು ಕಟ್ಟಲು ಬಳಸುತ್ತಾರೆ. ಆದರೆ ಓಟೆ, ಮಸೆ ಮುಂತಾದ ಗಟ್ಟಿ ಮರಗಳನ್ನು ದೇವಾಲಯಕ್ಕೂ ಕೊಟ್ಟಿಗೆಗೂ ಬಳಸಬಹುದು ಎಂದು ಶಾಸ್ತ್ರ ಬಲ್ಲವರು ಹೇಳುತ್ತಾರೆ. ಆದರೆ ಈ ಮರಗಳನ್ನೂ ಮನೆಕಟ್ಟುವಾಗ ಬಳಸಬಾರದು ಎನ್ನುತ್ತಾರೆ.

ಜಾನಪದರು ಜಂಟಿ ಹುನಗಲು, ಹಾರೈಗಿ ಕರಿಕೋಮರ ಮುಂತಾದ ಮರಗಳ ಎಳೆಗಳನ್ನೂ ಗಳವನ್ನೂ ಬಳಸುತ್ತಾರೆ.

ಕೊಟ್ಟಿಗೆಯ ರಚನೆ:

ಕೊಟ್ಟಿಗೆಯ ರಚನೆಯಲ್ಲಿ ಮುಖ್ಯವಾಗಿ ಈ ಕೆಳಗಿನ ಭಾಗಗಳನ್ನು ಗುರುತಿಸಬಹುದು.

೧) ನೆಲಗಟ್ಟು/ ಪಂಚಾಂಗ

೨) ಸುತ್ತಲಿನ ಆವರಣ

೩) ಮಾಡು/ ಮೇಲ್ಮನೆ

೪) ಹೊದಿಕೆ

೫) ಅಟ್ಟ

೬) ದೊಣಕಲು

೭) ಹಕ್ಕೆ

ನೆಲಗಟ್ಟು: ನೆಲಗಟ್ಟು ಆಯಾತಾಗಿರವಾಗಿರಬಹುದು, ಚೌಕವಾಗಿರಬಹದು. ಇದನ್ನು ಪಂಚಾಂಗ ಎಂದೂ ಕರೆಯುತ್ತಾರೆ. ನೆಲಗಟ್ಟು ನಿರ್ಮಿಸುವ ಮುಂಚೆ ಕೆಸರಗಲ್ಲು ಮುಹೂರ್ತ ಎಂಬ ಧಾರ್ಮಿಕ ವಿಧಿ ಇರುತ್ತದೆ. ಈ ವಿಧಿಯನ್ನು ಬ್ರಾಹ್ಮಣರು ಮನೆಯ ಕೆಸರಗಲ್ಲು ಮೂರ್ತದಂತೆ ವಿಧಿವತ್ತಾಗಿ ನಡೆಸುತ್ತಾರೆ. ಇತರರು ದೇವರಿಗೆ ತಪ್ಪಗಾಯಿಟ್ಟು ಕೈಮುಗಿದು ಕಾರ್ಯ ಪ್ರಾರಂಭಿಸುತ್ತಾರೆ. ಕೊಟ್ಟಿಗೆಯ ನೆಲಗಟ್ಟು ಮನೆಗಳ ನೆಲಗಟ್ಟಿನಂತೆ ಎತ್ತರದಲ್ಲಿ ದನಗಳಿಗೆ ಒಳ ಪ್ರವೇಶಿಸಲು ಅನುಕೂಲವಾಗುವಂತೆ ಸುಮಾರು ೪ ಅಂಗುಲ ಎತ್ತರವಾಗಿರುತ್ತದೆ.

ಮಾಡು: ಕಂಬಗಳ ಆಧಾರದ ಮೇಲೆ ಕಟ್ಟುವ ಕೊಟ್ಟಿಗೆಯಲ್ಲಿ ಒಟ್ಟು ಆರು ಕಂಭಗಳಿರುತ್ತವೆ. ನಾಲ್ಕು ಕೀಳ್ಗಂಬಗಳು. ಈ ಕೀಳ್ಗಂಬಗಳ ನಡುವೆ ಇರುವ ಎರಡು ಎತ್ತರ ಕಂಬಗಳೇ ಕೋಳ್ಗಂಬಗಳು. ಕೋಳ್ಗಂಬಗಳ ಮೇಲೆ ಉದ್ದವಾದ ಎಳೆಯನ್ನು ಹೇರುತ್ತಾರೆ. ಇದನ್ನು ಕೋಳ್ಪಕಾಸಿ ಎಂದೂ ತೊಟಿ ಎಂದೂ ಕರೆಯುತ್ತಾರೆ ಇದರ ಎಡಕ್ಕೂ ಬಲಕ್ಕೂ ಇರುವ ಕೀಳ್ಗಂಬಗಳ ಮೇಲೆ ಮತ್ತೆ ಎರಡು ತೊಲೆಗಳನ್ನು ಹೇರುತ್ತಾರೆ. ಆ ಬಳಿಕ ಕೋಳ್ಗಂಬದಿಂದ ಕೀಳ್ಗಂಬದ ವರೆಗೆ ಮೂಟೆ ಪಕಾಸಿ ಇಳಿಬಿಟ್ಟು ಅದಕ್ಕೆ ಸಮಾಂತರವಾಗಿ ಎರಡೂ ಬದಿಗೂ ಇನ್ನೆರಡು ಕೀಳ್ಗಂಬದವರೆಗೆ ಜಂಟಿ, ಹುನಗಲು ಹಾವುಗ ಕರಿಕೊಮರಾ ಮುಂತಾದ ಮರಗಳ ಎಳೆಗಳನ್ನು ಗಳವನ್ನಾಗಲಿ ಬೆತ್ತದ ನಿಗಳಸುರ ಬಂಧಿಸುತ್ತಾರೆ. ಬೆತ್ತದ ಬದಲಿಗೆ ಕುರ್ಲಬಳ್ಳಿ ಚೀಕನಬಳ್ಳಿಗಳನ್ನು ಬಳಸುವುದುಂಟು.

ಮಣ್ಣಿನ ಗೋಡೆ ಅಥವಾ ಕಲ್ಲಿನ ಗೋಡೆ ಹಾಕಿ ಕೊಟ್ಟಿಗೆ ಕಟ್ಟುವ ಸಂದರ್ಭದಲ್ಲಿ ಕೀಳ್ಗಂಬ, ಕೋಳ್ಗಂಬಗಳ ಅವಶ್ಯಕತೆಇರುವುದಿಲ್ಲ. ಗೋಡೆಗಳ ಮೇಲೆ, ಗೋಡೆ ಪಕಾಸಿ/ ಎಳೆ ಹಾಕಿ ಅಡ್ಡ ಬಳಿಕ ಅಡ್ಡವಾಗಿ ದಪ್ಪಗೆ ಅಥವಾ ಗಳಗಳನ್ನು ಕಟ್ಟುತ್ತಾರೆ.

ಹೊದಿಕೆ: ಹುಲ್ಲು ಹೊದಿಕೆ ಮಾಡುವುದು ಸಾಮಾನ್ಯವಾಗಿ ಪ್ರತಿವರ್ಷ ಮಳೆಗಾಲದ ಪ್ರಾರಂಭದಲ್ಲಿ ಇರುತ್ತದೆ. ಹುಲ್ಲು ಹೊದಿಸಿ ಮೇಲೆ ಮಳೆಗಾಳಿಗೆ ಅದು ಹಾರಿಹೋಗದಂತೆ ದಪ್ಪ ಕಟ್ಟಿಗೆಯ ತುಂಡುಗಳನ್ನಾಗಲೀ ತೆಂಗಿನ ಹೆಡೆಯನ್ನಾಗಲೀ ಇಳಿಬಿಡುತ್ತಾರೆ.

ಇತ್ತಿತ್ತಲಾಗಿ ಹಂಚಿನ ಹೊದಿಕೆಯ ಕೊಟ್ಟಿಗೆಗಳು ಹೆಚ್ಚು ಹೆಚ್ಚಾಗಿ ಕಂಡು ಬರುತ್ತವೆ.

ಅಟ್ಟ : ಇದು ಕೊಟ್ಟಿಗೆಯಲ್ಲಿ ದನಗಳ ಆಹಾರವಾದ ಬತ್ತದ ಹುಲ್ಲನ್ನು ಸಂಗ್ರಹಿಸುವ ಸ್ಥಳ. ಕೊಟ್ಟಿಗೆಯ ನೆಲದಿಂದ ಸುಮಾರು ೬ ಅಡಿ ಎತ್ತರದ ಮೇಲೆ ಅಟ್ಟ ವಿರುತ್ತದೆ. ಗೋಡೆಗಳಿಗೆ ಅಡ್ಡ ಜಂತೆಯಿಟ್ಟು ಜಂತಿಯ ಮೇಲೆ ಅಡಕೆಯ ದಬ್ಬೆಯನ್ನು ನೆಡುತ್ತಾರೆ. ಅಥವಾ ದಪ್ಪಗೆ ಗಳನ್ನು ಜಂತಿಯ ಅಡ್ಡ ಇಟ್ಟು ಬಳ್ಳಿ ಕಟ್ಟಿ ಹುಲ್ಲು ತುಂಬುತ್ತಾರೆ. (ಜಂತಿಯ ಮೇಲೆ ತೆಳ್ಳಗಿನ ಹಲಗೆಯನ್ನು ಹಾಕುವುದೂ ಉಂಟು).

ದಣಕಲು: ಇದು ಕೊಟ್ಟಿಗೆಯ ನಡುವಿನ ಭಾಗ ಗವಣ ದಾವಣಗೆ ಎಂಬ ಹೆಸರುಗಳು ಈ ಭಾಗಕ್ಕೆ ಇವೆ. ದಣಕಲಿನ ಬದಿಗೆ ಮುಖ ಬರುವಂತೆ ಎರಡು ಸಾಲಿನಲ್ಲಿ ಎದುರುಬದುರಾಗಿ ದನಗಳನ್ನು ಕಟ್ಟುತ್ತಾರೆ. ದಣಕಲ್ಲಿನಲ್ಲಿ ಈ ದನಗಳ ಮೇವು ಇಡುತ್ತಾರೆ. ದಣಕಲು ಇರುವುದರಿಂದ ಹುಲ್ಲು ಹೊರಚೆಲ್ಲುವುದು ತಪ್ಪುತ್ತದೆ. ಸಂಜೆ ಮನೆಗೆ ಬಂದು ಆಯಾ ಸ್ಥಳದಲ್ಲಿ ಅವು ನಿಲ್ಲುತ್ತವೆ.

ಹಕ್ಕೆ : ದನಗಳು ಮಲಗುವ ಸ್ಥಳದಲ್ಲಿ ದನಗಳಿಗಾಗಿ ತಯಾರಿಸುವ ಹಾಸಿಗೆಯೇ ಹಕ್ಕೆ. ಆಧುನಿಕ ಕೊಟ್ಟಿಗೆಗಳಲ್ಲಿ ಸಿಮೆಂಟಿನ ನೆಲವಿದ್ದು ಮಲಮೂತ್ರಗಳನ್ನು ಸುಲಭವಾಗಿ ಸ್ವಚ್ಛ ಮಾಡಲು ಅನುಕೂಲತೆಯಿದೆ.

ಆದರೆ ಹಳ್ಳಿಗರ ಜಪದ ರೀತಿ ಕೊಟ್ಟಿಗೆಯು ಮಲಗುವ ಪ್ರದೇಶ ಮಣ್ಣಿನದು ದನಗಳ ಉಚ್ಚಿ, ಸೆಗಣಿಯಿಂದ ಕೊಟ್ಟಿಗೆ ಕೆಸರಾಗುತ್ತದೆ. ಮನೆ ವಾರ್ತೆಯ ಕೆಲಸದಲ್ಲಿ ಕೊಟ್ಟಿಗೆಯ ಕೆಲಸಕ್ಕೆ ಜಾನಪದರು ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಮನೆಯ ಮಗಳು ಸೊಸೆಯಾಗಿ ಹೋಗುವಾಗ ಕೊಟ್ಟಿಗೆ ಸ್ವಚ್ಛ ಮಾಡುವಕೆಲಸವನ್ನು ತಪ್ಪದೆ ಮಾಡಬೇಕು ಎಂದು ತಿಳುವಳಿಕೆ ನೀಡಿದ್ದಾರೆ.

ಕೊಟ್ಟೂಗೀ ಹುಕ್ಕೇ ಸಿಗ್ಣೀಯ ತೆಗದಾರೆ
ಮುತ್ತೇ ನಿನ್ಯಾರ ಮಗಳಂಬ್ರ

ಗಂಡನಮನೆಯ ಜನರ ಪ್ರೀತಿಯನ್ನು ಗಳಿಸಿಕೊಳ್ಳಬೇಕಾದರೆ ಸಗಣಿ ತೆಗೆಯುವ ಹಕ್ಕೆ ಗುಡಿಸಿ ಸ್ವಚ್ಛ ಮಾಡುವ ಕೆಲಸವನ್ನು ತಪ್ಪದೆ ಮಾಡಬೇಕು ಎಂದು ಎಚ್ಚರಿಸಿದ್ದಾರೆ. ಜನಪದ ಕತೆಗಳಲ್ಲಿಯೂ ಕೊಟ್ಟಿಗೆ ಸ್ವಚ್ಛ ಮಾಡುವುದರಿಂದ ಪುಣ್ಯ ಸಂಪತ್ತು ಇತ್ಯಾದಿ ದೊರೆಯುತ್ತದೆಯೆಂದು ಬಿಂಬಿಸಲಾಗಿದೆ. ಗಮಯನ ಕತೆಯ ಸಣ್ಣಯ್ಯ ಗಮಯಗಳ ಸೆಗಣಿ ತೆಗೆದ ಕಾರಣ ರಾಜನಾದನು ಬಂಗಾರದ ಕೂದಲಿನ ಹೆಣ್ಣನ್ನು ಪಡೆದನು. ಇಂಥ ಕತೆಗಳ ಮೂಲಕ ಕೊಟ್ಟಿಗೆಯ ಸ್ವಚ್ಛತೆಯ ಕಡೆಗೆ ಜನರ ಲಕ್ಷ್ಯವನ್ನು ಸೆಳೆದಿದ್ದಾರೆ.

ಕೊಟ್ಟುಗೆ ಕೆಸರಾದರೆ ದನಗಳು ಒಳಬರಲು ಹೇಸುತ್ತದೆ
ಕೊಟ್ಟುಗೆ ಕಿಸರಂದೇ ಬೆಟ್ಟದಲ್ಲಿರಬೇಡ
ಚಕ್ರಕ್ಕೊಂದ್ಹೊರಿಯೂ ತರಿಸುವ / ಗೋವಳ್ಗೆ
ಮೇದು ಕೊಟ್ಟಗ್ಗೆ ಬರಬೇಕು
ಕೊಟ್ಟುಗೆ ಕೆಸರಂದೇ ಹೊಕ್ವಾವೇ ಸುಕ್ರಪ್ಪ
ದಿಟ್ಟಿಸೇ ನೋಡೇ ಬಡಿಯನ ಕೋಡೆಗೇ
ಹಾಸಂತ ಉಜ್ರರ ಹಲಗೀಯ
ಮುಂಜಾನೆ ದನಗಳನ್ನು ಬೆಟ್ಟಕ್ಕೆ ಬಟ್ಟ

ಮೇಲೆ ಸೆಗಣಿ ಬರಗಿ ಹಿಡಿಯಿಂದ ಕಸಗುಡಿಸಿ ಹಿಂದಿನ ದಿನ ಕಾಡಿನಿಂದ ತಂದ ತರಕನ್ನಾಗಲೀ ಸೊತ್ರವನ್ನಾಗಲೀ ದಪ್ಪವಾಗಿ ಹರಗುತ್ತಾರೆ.

ಮಳೆಗಾಲದಲ್ಲಿ ಮಳೆಯಿಂದ ತೊಯ್ದು ನಡುಗುತ್ತ ಬಂದ ದನಗಳಿಗೆ ತರಕಿನ ಹಕ್ಕೆ ಬೆಚ್ಚನ್ನ ಸಾಸಿಗೆಯ ನೆನಪನ್ನು ತರುತ್ತದೆ.

ಹಕ್ಕೆಯ ಪ್ರಯೋಜನ

೧) ದನಗಳು ಮಲಗುವುದಕ್ಕೆ ಮೆತ್ತನ್ನ ಹಾಸು ದೊರೆಯುತ್ತದೆ. ಪ್ರತಿದಿನ ಸ್ವಚ್ಛ ಮಾಡಿ ಹೊಸ ಸೊತ್ತು ಅಥವಾ ತರಕನ್ನು ಹಾಸುವುದರಿಂದ ದನಗಳ ಆರೋಗ್ಯಕ್ಕೆ ಅನುಕೂಲವಾಗುತ್ತದೆ.

೨) ದನಗಳ ಮಲ-ಮೂತ್ರದೊಂದಿಗೆ ಮಿಳಿತವಾದ ಸೊಪ್ಪು ದನಗಳ ತುಳಿತಕ್ಕೆ ಸಿಕ್ಕ ಉತ್ತಮ ಗೊಬ್ಬರವಾಗಲು ಸಿದ್ಧತೆ ಪಡೆಯುತ್ತದೆ.

ಹಕ್ಕೆಗೆ ಬಳಸುವ ಸೊಪ್ಪು

ಕಹಿ, ಚೊಗರು ರುಚಿಯ ಹಾಗೂ ದಪ್ಪ ಸೊಪ್ಪುಗಳನ್ನು ಬೆಟ್ಟದಲ್ಲಿರುವ ಗಿಡ ಮರಗಳಿಂದ ಕೊಯ್ದು ತರುತ್ತಾರೆ. ತಿರಕುಲ, ಕುಕ್ಕರಸ, ಕೊಡಸು ಮತ್ತಿ ಹುನಗಲು, ಸಗಡೆ, ಜನ್ನಿ ನೇರಲ ಕುಲಗಲಿ ಹಳಚೇರಿ, ಕವಲ ಆಲ, ಅತ್ತಿ ಮಾವು ಹಲಸು ಇತ್ಯಾದಿ ಸೊಪ್ಪುಗಳು ಇಲ್ಲಿ ದೊರೆಯುತ್ತವೆ. ಬೊನಗಿರಿ, ಕಾಸನ ಮುಂತಾದ ಸೊಪ್ಪುಗಳನ್ನು ಹಕ್ಕೆಗೆ ಬಳಸುವುದಿಲ್ಲ. ಸಾಗವಾನಿ, ತುಂಬ ಉಷ್ಣ ಎಂಬ ನಂಬಿಕೆ ಇದೆ. ಆದ್ದರಿಂದ ಅದರ ಸೊಪ್ಪನ್ನು ಹಕ್ಕೆಗೆ ಬಳಸುವುದಿಲ್ಲ.

ಸೊಪ್ಪು ತರುವ ಕೆಲಸವನ್ನು ಹೆಂಗಸರು ಪ್ರತಿದಿನ ಮಾಡುತ್ತಾರೆ. ಆಗಾಗ ಗಂಡಸರು ಮರಹತ್ತಿ ಸೊಪ್ಪು ಸವರಿ ತರುತ್ತಾರೆ.

ಇತ್ತಿತ್ತಲಾಗಿ ಸಿಮೆಂಟ್‌ನ ನೆಲವುಳ್ಳ ಕೊಟ್ಟಿಗೆಗಳು ಸಿದ್ಧವಾಗಿವೆ. ಉಚ್ಛೆ ಸುಲಭವಾಗಿ ಹೊರಗೆ ಹರಿಯ ಹೋಗುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೊಸ ಮಾದರಿಯ ದೇಣಕಲು ಗೋಡೆಗುಂಟ ಇರುತ್ತದೆ. ಆದ್ದರಿಂದ ದನಗಳನ್ನು ಗೋಡೆಗೆ ಮುಖಮಾಡಿ ಈ ಸುತ್ತ ಕಟ್ಟುತ್ತಾರೆ. ಹಳೆಯ ಮಾದರಿಯ ಕೊಟ್ಟಿಗೆ ಕೋಳೆಗೂಡುಗಳ ಕಟ್ಟಡದಲ್ಲಿ ಪ್ರಗತಿ ಕಾಣ ತೊಡಗಿರೆ.

* * *