ಮಾನವ ಸಂಸ್ಕೃತಿಯನ್ನು ಬರ್ಬರ, ಅನಾಗರಿಕ ಮತ್ತು ನಾಗರಿಕತೆ ಉಳ್ಳ ಎಂದು ಮೂರು ಅಂಕ ಮಾಡಿ ಅಭ್ಯಾಸ ಮಾಡಲಾಗಿದೆ. ಇವು ಮಾನವನು ತನ್ನ ಆಹಾರವನ್ನು ಗಳಿಸುತ್ತಿದ್ದ ಮಾರ್ಗಗಳ ಆಧಾರದಿಂದ ಅಂದರೆ ಎಕ್ಕಿ ಕಲೆಹಾಕಿ ಹಾಗೂ ಉತ್ಪಾದಿಸಿ, ತಿನ್ನುವ ಎಂದು ಮೂರು ಹಂತ ಮಾಡಲಾಗಿದೆ. ಮಾನವ ತನ್ನ ಆಧಾರವನ್ನು ಎಕ್ಕಿ ತಿನ್ನುತ್ತಿದ್ದ ಅಂತದಲ್ಲಿದ್ದಾಗ ನಿಸರ್ಗದಲ್ಲಿ ಎಥೇಚ್ಚವಾದ ಸಸ್ಯ ಸಂಪತ್ತು ಇತ್ತು. ಹಣ್ಣಾಗಿ ಅಥವಾ ಒಣಗಿ ಬಿದ್ದು ಹಣ್ಣು ಕಾಯಿ, ಬೀಜಗಳನ್ನು ಸತ್ತ ಪ್ರಾಣಿಗಳನ್ನು ಇತರೆ ಯಾವುದೇ ಪ್ರಾಣಿಯಂತೆ ಅವನು ಎಕ್ಕಿ ತಿನ್ನುತ್ತಿದ್ದ ಈ ಅಂತದಲ್ಲಿ ಅವನು ನಾಗರೀಕತೆ ಮತ್ತು ಇತರೆ ಪ್ರಾಣಿಗಳಿಂದ ಯಾವ ವಿಧದಿಂದಲೂ ಭಿನ್ನವಾಗಿರಲಿಲ್ಲ. ಆಗ ಅವನಿಗೆ ಇದ್ದ ಎರಡು ಸಮಸ್ಯೆಗಳೆಂದರೆ ಹಸಿವು ಮತ್ತು ಇತರೆ ಪ್ರಾಣಿಗಳಿಂದ ರಕ್ಷಣೆ ಇವುಗಳಿಂದ ಪಾರಾಗಲು ಅವನು ಸದಾ ಹೋರಾಡುತ್ತಿದ್ದನು ಮತ್ತು ಅಲೆಯುತ್ತಿದ್ದನು. ಆಗ ಅವನಿಗೆ ವಸತಿ ಎಂಬುದು ಇರಲಿಲ್ಲ. ಸಲಕರಣೆಗಳು ಇರಲಿಲ್ಲ. ಸಹಾಯಕ್ಕೆ ಆಹಾರಕ್ಕೆ ಸಾಕು ಪ್ರಾಣಿಗಳಿರಲಿಲ್ಲ.

ಕಾಲಾನಂತರ ಭೂಕಂಪ ಅಗ್ನಿಪರ್ವತಗಳ ಸಿಡಿತ ಅನಾವೃಷ್ಟಿ ಮತ್ತು ಅತೀವೃಷ್ಟಿ ಹೀಗೆ ಯಾವುದೇ ಒಂದು ಕಾರಣಕ್ಕೆ ಇತರೆ ಪ್ರಾಣಿಗಳಿಗೆ ಅನುಕೂಲಕರ ವಾತಾವರಣ ಸೃಷ್ಠಿಯಾಗಿ ಅವುಗಳ ವಂಶ ಬೆಳೆದು, ಹೆಚ್ಚು ನಿಸರ್ಗದಲ್ಲಿನ ಸಂಪತ್ತು ನಶಿಸಿ, ಮಾನವನ ಆಹಾರಕ್ಕೆ ತೊಂದರೆಯಾಯಿತು. ಶಕ್ತಿಯಲ್ಲಿ ಇತರೆ ಪ್ರಾಣಿಗಳೊಡನೆ ಹೋರಾಟಲಾರದ ಮಾನವ ತನ್ನ ಬುದ್ಧಿ ಶಕ್ತಿಯನ್ನು ಬೆಳೆಸಿಕೊಂಡು ತನ್ನ ಆಹಾರವನ್ನು ಗಳಿಸಲು ಪ್ರಾರಂಭಿಸಿದ. ಅದನ್ನು ಇತರೆ ಪ್ರಾಣಿಗಳು ತಿನ್ನುವುದಕ್ಕೆ ಮುಂಚೆಯೇ ಕಲೆ ಹಾಕಿ, ತಂದು ತನ್ನ ಗುಹೆಯಲ್ಲಿ ಸಂಗ್ರಹಿಸತೊಡಗಿದ ಅಥವಾ ಇದು ಇರುವಲ್ಲೇ ಸಿಗುವಲ್ಲೇ ಕಾದು ಕುಳಿತ. ಈ ಆಹಾರ ಕಲೆ ಹಾಕುವ ಕೆಲಸಕ್ಕೆ ಅವನಿಗೆ ಸಾಧನ- ಸಲಕರಣೆಗಳು ಬೇಕಾದವು. ಅವುಗಳನ್ನು ತಯಾರಿಸುವ ಹಾಗೂ ರಿಪೇರಿ ಮಾಡವ ಜ್ಞಾನವನ್ನು ಕಲಾ ಕುಶಲತೆಯನ್ನು ಪಡೆದ ಮಾನವ ಅಂದಿನಿಂದ ಅರೆ ಸಂಚಾರಿಯಾದ. ಮುಂದೆ ಕಾಡು ನೆನಿಸಿ ಆಹಾರಕ್ಕೆ ತೊಂದರೆಯಾದಾಗ ತನ್ನ ಆಹಾರವನ್ನು ತಾನೇ ಬೆಳೆಯಲು ಪ್ರಾರಂಭಿಸಿದ. ಹೀಗೆ ತನ್ನ ಆಹಾರವನ್ನು ಉತ್ಪಾಧಿಸಲು ಅವನಿಗೆ ಒಂದೆಡೆ ನೆಲೆನಿಲ್ಲ ಬೇಕಾಯಿತು. ಆ ಕಾಲಕ್ಕೆ ಅವನು ತನ್ನ ಆಹಾರವನ್ನು ವ್ಯವಸಾಯ, ತೋಟಗಾರಿಕೆ ಮತ್ತು ಪಶುಪಾಲನ-ಈ ಮೂರು ಮಾರ್ಗಗಳಿಂದ ಪಡೆಯುತ್ತಿದ್ದು. ಪಶುಪಾಲನೆಗೆ ಕಾಡಿನಲ್ಲಿ ಸಿಕ್ಕ ಪ್ರಾಣಿಗಳನ್ನು ಹಿಡಿದು ಪಳಗಿಸಿ ಅವುಗಳ ಹಾಲು, ಮಾಂಸ ತತ್ತಿಗಳನ್ನು ಆಹಾರವಾಗಿ, ಚರ್ಮ ಮತ್ತು ತುಪ್ಪಟವನ್ನು ಹೊದಿಕೆಯಾಗಿ ಬಳಸಿದ. ಪಶುಪಾಲಕನಾದ ಮಾನವನ ಅನುಕೂಲಕ್ಕೆ ಅವನ ಆಹಾದ, ಸಾಕಿದ ಪ್ರಾಣಿಗಳ ರೂಪದಲ್ಲಿ ಕಾಲ (ಗೊರಚಲ) ಮೇಲೆ ಸದಾ ಅವನೆದುರಿಗೆ ನಿಂತಿರುತ್ತಿತ್ತು. ಇತರೆ ಆಹಾರ ಸಿಗದಾದಾಗ ಈ ಪ್ರಾಣಿಗಳ ಹಾಲು, “ರಕ್ತ”ಗಳನ್ನು, ಕೊಂದು ಮಾಂಸವನ್ನು ಯಾವಾಗ ಬೇಕಾದರೂ ಪಡೆಯ ಬಹುದಿದ್ದಿತು. ಇದರಿಂದ ಮಾನವನು ಆಹಾರ (ಮಾಂಸ) ಬೇಕಾದಾಗ ಬೇಟೆಯಾಡಲು ಹೋಗುವುದು ಅಪಾಯದಲ್ಲಿ ಸಿಲುಕುವುದು ತಪ್ಪಿತು.

ತನ್ನ ಆಹಾರ ಹಾಗೂ ಸಂರಕ್ಷಣೆ ಸ್ಥಳ ಹುಡುಕಲು ಸದಾ ಅಲೆಯುತ್ತಿದ್ದ ಮಾನವ ಪಶುಪಾಲ ತೋಟಗಾರ ಮುಂದೆ ವ್ಯವಸಾಯಗಾರನಾದಾಗ ಸುರಕ್ಷಿತವಾದ ಒಂದು ಜಾಗದಲ್ಲಿ ಮನೆಕಟ್ಟಿಕೊಂಡು ಒಂದೆಡೆ ನೆಲೆನಿಂತಿದ್ದರಿಂದ ಹೆಚ್ಚು ಸ್ನೇಹಪರನಾದನು. ವರ್ಷಗಟ್ಟಲೆ ಒಂದೆಡೆ ಅವನು ತನ್ನ ಅಕ್ಕಪಕ್ಕದವರೊಡನೆ ಸ್ನೇಹ ಪೂರ್ಣ, ಸಹಕಾರ ಪೂರ್ಣ ಸಂಬಂಧ ಹೊಂದಿದನು. ‘ನೆಲೆ ಹುತ್ತು ಬೀಜನಾಟಿ ಮಾಡಿ, ಪೈರು ಬೆಳೆದು ಹಣ್ಣಾಗುವವರೆಗೆ ಅದನ್ನು ಕಾಯುತ್ತಾ ಅಥವಾ ತೋಟದಲ್ಲಿಯ ಗಿಡ-ಮರಗಳು ಬಿಟ್ಟ ಫಲವಾಗುವವರೆಗೆ ಅದನ್ನು ಇತರೆ ಪ್ರಾಣಿಗಳಿಂದ ರಕ್ಷಿಸುತ್ತಾ ಒಂದೆಡೆ ಕುಳಿತ ಮಾನವ ಇತರೊಡನೆ ತನ್ನ ಸುತ್ತ ನಿಸರ್ಗದಲ್ಲಿ ಆಗುವ ಬದಲಾವಣೆ, ಚಲಿಸುವ ಮೋಡಗಳು, ಗಾಳಿಗಳು ವಲಸೆ ಹೋಗುವ ಹಕ್ಕಿಗಳು ಹಾಗೂ ಪ್ರಾಣಿಗಳು, ಋತುಗಳು ಮುಂತಾದವುಗಳ ಬಗ್ಗೆ ಎಣೆ ಇಲ್ಲದೆ ಚರ್ಚಿಸಿದ. ಈ ವಿಚಾರಗಳ ಬಗೆಗೆ ತನ್ನದೇ ಆದ ವಿವರಣೆ ನೀಡಿದ. ಇತರರ ವಿಚಾರಗಳನ್ನು ಒಪ್ಪಿಕೊಂಡ ಅಥವಾ ಅಲ್ಲಗೆಳೆದ. ಹೀಗೆ ಮಾನವನು ನೆಲೆ ನಿಂತಾಗ ಮಾನವನ ಹಾಗೂ ಪ್ರಾಣಿಗಳ ವಸತಿಗಳು ಹುಟ್ಟಿಕೊಂಡವು.

ಮಾನವನ ನಾಗರಿಕತೆಯ ಹಂತಗಳಿಗೂ ಮತ್ತು ಅವನು ಈ ಕಾಲದಲ್ಲಿ ನಿಸರ್ಗದೊಡನೆ ಹೊಂದಿದ್ದ ಸಂಬಂಧ ಮತ್ತು ಜೀವನ ಮಾಡಿದ ರೀತಿಗಳಿಗೂ ನೇರ ಸಂರ್ಪವಿದೆ ಎಂದು ಈಗಾಗಲೇ ಹೇಳಿದ್ದೇವೆ. ಅವನು ತನ್ನ ಅನ್ನವನ್ನು ಎಕ್ಕಿ ತಿನ್ನುತ್ತಿದ್ದಾಗ ಆಹಾರ ಸಿಗುವಲ್ಲಿಗೆ ವಲಸೆ ಹೋಗುತ್ತಿದ್ದುದರಿಂದ ಸದಾ ಅಲೆಯಲೆತ್ನಿಸಿದ್ದ. ನಿಸರ್ಗದಲ್ಲಿಯ ಆಹಾರದ ಅಭಾವ ಪರಿಸ್ಥಿತಿಯಿಂದಾಗ ಸದಾ ಒಂಟಿಯಾಗಿರುತ್ತಿದ್ದ. ಅಂದರೆ ಇತರೆ ಯಾವುದೇ ಪ್ರಾಣಿಯಂತೆ ಉಳಿದ ಮಾನವರೂ ಅವನ ಅನ್ನಕ್ಕೆ ಪ್ರತಿ ಸ್ಪರ್ಧಿಗಳಿದ್ದರು. ಆದ್ದರೊಂದ ಅದರೊಟ್ಟಿಗೆ ಸ್ನೇಹಪೂರ್ಣ, ಸಹಕಾರ ಪೂರ್ಣ ಸಂಬಂಧ ಹೊಂದಿರಲಿಲ್ಲ. ಆದರೆ ಮುಂದೆ ಮಾನವ ತನ್ನ ಆಹಾರವನ್ನು ಕಲೆ ಹಾಕುವ ಹಂತಕ್ಕೆ ಬಂದಾಗ ಅಂದರೆ ಮರಗಿಡಗಳಿಂದ ಹಣ್ಣು ಕಾಯಿ ತೆಗೆದು, ಬೇಟೆಯಾಡಿ, ಮೀನು ಹಿಡಿದು ಆಹಾರವನ್ನು ಗಳಿಸುತ್ತಿದ್ದಾಗ ಅವನ ಸಾಮಾಜಿಕ ನಡುವಳಿಕೆಯಲ್ಲಿ ಪರಸ್ಪರ ಸಂಬಂಧಗಳಲ್ಲಿ ಬದಲಾವಣೆಗಳು ಬಂದವು. ಆಗ ಮಾನವ ಅಲೆಮಾರಿಯಾಗಿದ್ದರೂ ಆಹಾರ ಕಲೆ ಹಾಕಲು ಸಹಾಯಕ್ಕೆ ಇತರರನ್ನು ಕೂಡಿಕೊಂಡು ಗುಂಪುಕಟ್ಟಿಕೊಂಡು ಜೀವಿಸುತ್ತಿದ್ದ. ಮುಂದೆ ಪಶುಪಾಲಕನಾದಾಗ ಅರೆ ಸಂಚಾರಿಯಾಗಿದ್ದ. ನಂತರ ವ್ಯವಸಾಯಗಾರನಾದಾಗ ಒಂದೆಡೆ ನೆಲೆನಿಂತ. ಇದೇ ರೀತಿ ಮಾನವನ ವಾಸ್ತವ್ಯ ಹಾಗೂ ನಿಸರ್ಗಕ್ಕೆ ಹೆಚ್ಚಿನ ಹಾಗೂ ನೇರ ಸಂಬಂಧವಿರುವುದನ್ನು ಕಾಣಬಹುದು.

ಮಾನವ ತನ್ನ ಆಹಾರವನ್ನು ಎಕ್ಕೆ ತಿನ್ನುತ್ತಿದ್ದಾಗ ಸಿಕ್ಕ ಆಹಾರವನ್ನು ಅಲ್ಲೇ ತಿಂದು, ಬೇಡವಾದುದನ್ನು, ಉಳಿದುದನ್ನು ಅಲ್ಲೇ ಎಸೆದು ಅಥವಾ ಬಿಟ್ಟು ಮುಂದೆ ಹೋಗುತ್ತಿದ್ದ. ಆಹಾರ ಸಿಗದಿದ್ದಾಗ ಅದು ಸಿಗುವ ಕಡೆಗೆ ವಲಸೆ ಹೋಗುತ್ತಿದ್ದ. ಹೆಚ್ಚು ಆಹಾರ ಸಿಕ್ಕಾಗ ಅದನ್ನು ಸಂಗ್ರಹಿಸಿ ಇಡುವ ಕಲೆ, ಬುದ್ಧಿವಂತಿಕೆ ಅವನಲ್ಲಿರಲಿಲ್ಲ. ಆಗ ನಿಸರ್ಗದೊಡನೆ ಅವನ ಸಂಬಂಧ ಅದನ್ನು ಆಳುಗೆಡವುದ್ದಿತು. ಮುಂದೆ ಅವನು ಆಹಾರವನ್ನು ಕಲೆ ಹಾಕುವ ಹಂತಕ್ಕೆ ಬಂದಾಗ ಅದನ್ನು ಸಂಗ್ರಹಿಸುವುದನ್ನು ಕಲಿತನು. ಈ ವೇಳೆಗೆ ಗುಹೆಗಳಲ್ಲಿ, ಮರದ ಮೇಲೆ ಗೂಡು ಕಟ್ಟಿ ಜೀವಿಸುವುದನ್ನು ಕಲಿತಿದ್ದರೂ ಈ ಹಂತದಲ್ಲಿ ಅವನು ನಿಸರ್ಗದ ಸಂಪತ್ತನ್ನು ಸೂಕ್ತ ರೀತಿಯಲ್ಲಿ ಬಳಸುವ ಕಲೆಯಲ್ಲಿ ಪಡೆದಿದ್ದನು.

ಮಾನವ ತನ್ನ ಆಹಾರವನ್ನು ಉತ್ಪನ್ನಮಾಡುವ ಹಂತ ತಲುಪಿದಾಗ ಉತ್ತಮವಾದ, ಸಮತಟ್ಟಾದ ನೆಲ ಹುಡುಕಿ ಅಲ್ಲೇ ನೆಲಸಿದ ಎಂದು ಈಗಾಗಲೇ ಹೇಳಿದ್ದೇವೆ. ಹೀಗೆ ಒಂದೆಡೆ ನೆಲೆಸಿದಾಗ ಅವನಿದ್ದಲ್ಲಿಯೇ ಇಡೀ ವರ್ಷಕ್ಕೆ ಬೇಕಾದ ಆಹಾರದ ವ್ಯವಸ್ಥೆ ಮಾಡಿಕೊಂಡೇ ಮಾವನ ಒಂದೆಡೆ ನೆಲೆನಿಂತ. ಒಂದಡೆ ನೆಲೆನಿಂತ ಮಾನವ ಸಾಕು ಪ್ರಾಣಿಗಳಲ್ಲಿ ಎತ್ತು, ಎಮ್ಮೆ, ಹಸು, ಕುರಿ, ಮೇಕೆ, ಕೋಳಿ, ನಾಯಿ, ಹಂದಿ ಮುಂತಾದವು ಮುಖ್ಯವಾದವು. ಇವುಗಳಲ್ಲಿ ಬೇಟೆಯಲ್ಲಿ ಸಹಾಯಮಾಡಲು, ಹೊಲ, ಮನೆ ಕಾಯಲು, ಭಾರ ಹೊರಲು ನಂತರ ನೆಲ ಹೊಳಲು ಬಳಸಿಕೊಂಡ.

ಪಶುಪಾಲಕನಾದ ಮಾನವ ಅವುಗಳ ಪಲನೆಗೆ ಉತ್ತಮ ಹುಲ್ಲು ಹಾಗೂ ನೀರು ಹುಡುಕಿ ಅಲೆಯುತ್ತಿದ್ದರೂ ರಾತ್ರಿ ವೇಳೆಗೆ ತನ್ನ ನೆಲೆಗೆ ಹಿಂತಿರುಗುತ್ತಿದ್ದ. ಆದುದರಿಂದ ಅವನ ಚಲನೆ ಒಂದು ನಿರ್ದಿಷ್ಟ ಪ್ರದೇಶದಲ್ಲಿದ್ದಿತು. ಹೀಗೆ ತನ್ನ ಊರಲ್ಲಿದ್ದಾಗ ಪ್ರವಾಸ ಹೋದಾಗ ತನ್ನ ಪಶುಗಳನ್ನು ಕಾಯ್ದಿಡಲು ಪಶುವಸತಿಗಳನ್ನು ಕಟ್ಟಿಕೊಂಡ. ಈ ವಸತಿಗಳು ಪ್ರಾಣಿಗಳಿಗೆ ತಕ್ಕಂತೆ ಅವುಗಳಲ್ಲಿ ವಾಸಮಾಡುವ ಕಾಲಮಾನ ಮತ್ತು ಉದ್ದಕ್ಕೆ ತಕ್ಕಂತೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ. ಕುರಿಗಳ ರೊಪ್ಪು, ದನಗಳ ದೊಡ್ಡಿ, ಅಥವಾ ಹಕ್ಕೆಗಳ, ಕೋಳಿಗಳ ಗುಡ್ಲು, ಮೇಕೆಗಳ ದವಣೆ, ಹಂದಿಯ ಗುಂಡಿ, ಕುದುರೆಯ ಲಾಯ ಹೀಗೆ ಸುತ್ತಲೂ ಮುಳ್ಳಿನ ಬೇಲಿ ಹಾಕಿ, ಮೇಲೆ ಯಾವ ಚಾವಣಿಯೂ ಇಲ್ಲದ ಕುರಿಗಳ ವಸತಿಯನ್ನು ರೊಪ್ಪು ಎಂದು ಕರೆದರು. ಈ ರೀತಿಯ ವಸತಿಯಲ್ಲಿ ಇರುವ ಪ್ರಾಣಿಗಳನ್ನು ಹಗ್ಗದಿಂದ ಕಟ್ಟುತ್ತಿರಲಿಲ್ಲ. ಕೂಡಿ ಹಾಕಿ ಬಿಡುತ್ತಿದ್ದರು. ಇದರ ಉದ್ದೇಶ ಈ ಸಾಕು ಪ್ರಾಣಿಗಳು ಹೊರಗೆ ಹೋಗದಂತೆ ಮತ್ತು ಹೊರಗಿನಿಂದ ಇವುಗಳಿಗೆ ಅಪಾಯ ಬರದಂತೆ ರಕ್ಷಿಸುವುದು. ಅಲ್ಲದೆ ಮೈತುಂಬಾ ತುಪ್ಪಟವಿರುವ ಕುರಿಗೆ ಚಾವಣಿಯ ನೆರವು ಬೇಕಿರಲಿಲ್ಲ. ಅಲ್ಲದೆ ಇದು ತಾತ್ಕಾಲಿಕ ವಸತಿ ಇದ್ದಂತೆ. ಈ ಪ್ರಾಣಿಗಳ ಸಂಖ್ಯೆ ಕಡಿಮೆ ಇದ್ದಾಗ ಅವುಗಳನ್ನು ಕಟ್ಟಿಹಾಕಿ ರಕ್ಷಿಸುವ ವ್ಯವಸ್ಥೆ ಮಾಡಿಕೊಂಡರು.

ಮಾನವ ಸಾಕುವ ಮತ್ತು ಹಿಂದೆ ಸಾಹಿಕ್ಕ ಪ್ರಾಣಿಗಳ ಸಂಖ್ಯೆಗಳು ಅವನು ಅನುಸರಿಸಿದ  ವೃತ್ತಿಗೂ ವಿಶೇಷವಾಗಿ ವ್ಯವಸಾಯಕ್ಕೂ ನೇರ ಸಂಬಂಧವಿದೆ. ಮಾನವ ವ್ಯವಸಾಯಗಾರನಾದಂತೆ ಹೆಚ್ಚು ಹೆಚ್ಚು ಭೂಮಿ ವ್ಯವಸಾಯಕ್ಕೆ ಬಳಕೆಯಾದಂತೆ ಹುಲ್ಲುಗಾವಲು ಕಡಿಮೆಯಾಯಿತು. ಇದರಿಂದ ಪಶುಪಾಲನೆಗೆ ಕಷ್ಟವಾಗುತ್ತಾ ಬಂತು. ಆಗ ವ್ಯವಸಾಯ ಮಾರ್ಗದಿಂದ ತಕ್ಕಷ್ಟು ಆಹಾರ ಸಿಗುತ್ತಿದ್ದುದರಿಂದ ತನ್ನ ಪಶುಗಳ ಸಂಖ್ಯೆಯನ್ನು ಕಡಿಮೆಮಾಡಿಕೊಂಡ. ಈ ಪ್ರಾಣಿಗಳು ಹಾಲು ನೀಡುವ ಎಮ್ಮೆ, ಹಸುಗಳು, ಏಕೆಗಳಾಗಿ ವ್ಯವಸಾಯಕ್ಕೆ ಬೇಕಾದ ಎತ್ತುಗಳಿದ್ದವು. ಸಗಣಿ ಗೊಬ್ಬರಕ್ಕೆದ ನಗಳಿದ್ದವು. ಜೊತೆಗೆ, ಈ ವೇಳೆಗೆ ಸಸ್ಯಾಹಾರ ಮತ್ತು ಮಡಿಮೈಲಿಗೆ ನಿಯಮಗಳನ್ನು ಪಾಲಿಸುವ ಧರ್ಮಗಳು ಬಂದಿದ್ದು ಪಶುಗಳನ್ನು ಕೇವಲ ಹಾಲು ಮೊಸರಿಗೆ, ವ್ಯವಸಾಯಕ್ಕೆ, ಬಳಸಿದ್ದರಿಂದ ಅವುಗಳ ಸಂಖ್ಯೆ ಇನ್ನೂ ಕಡಿಮೆಯಾಯಿತು. ಒಂದು ವಸತಿ ಕಟ್ಟಿ ಇದನ್ನು ಎತ್ತಿನ ಅಥವಾ ಧನದ ಹಕ್ಕೆ ಎಂದರು. ಹೀಗೆ ಆಯಾ ಪ್ರಾಣಿಗಳ ಉಪಯುಕ್ತತೆಗೆ ತಕ್ಕಂತೆ ಕಾಲ ಕಾಲಕ್ಕೆ ಅವುಗಳ ಪ್ರಾಮುಖ್ಯತೆ ಹೆಚ್ಚು ಕಮ್ಮಿಯಾಯಿತು ಎಂದು ಹೇಳಬಹುದು.

ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಅಲ್ಲಿ ವಾಸಮಾಡುವ ಪ್ರಾಣಿಗಳನ್ನು ಅವುಗಳ ಸಂಖ್ಯೆ ಬದಲಾಗಿರುವುದನ್ನು ಕಾಣಬಹುದು. ಉದಾಹರಣೆಗೆ ಬಯಲುನಾಡಿನಲ್ಲಿ ಹುಲ್ಲುಗಾವಲುಗಳು, ನೀರು ಇಲ್ಲವಾದುದರಿಂದ ಅಲ್ಲಿ ಹಿಂಡು ಹಿಂಡಾಗಿ ಪಶುಗಳನ್ನು ಸಾಕುವುದಿಲ್ಲ. ಮನೆಯಲ್ಲೇ ೧-೨ ಹಸು, ಎಮ್ಮೆಗಳನ್ನು ಕಟ್ಟಿ ಸಾಕುವರು. ಆದರೆ ಮಳೆ ಹೆಚ್ಚಾಗಿ ಬೀಳುವ ಮಲೆನಾಡಿನಲ್ಲಿ ಗುಡ್ಡಗಳಲ್ಲಿ ಸಿಗುವ ಹುಲ್ಲಿನಿಂದಾಗಿ ಅಲ್ಲಿ ಹಸು-ಎಮ್ಮೆ ಮುಂತಾದ ದೊಡ್ಡ ಪ್ರದೇಶದಲ್ಲಿ ಕುರಿ, ಮೇಕೆಗಳನ್ನು ಸಾಕುವುದು ಸಾಮಾನ್ಯ. ಗುಡ್ಡದ ಇಳಿಜಾರಿನಲ್ಲಿ ದುರ್ಗಮ ಪ್ರದೇಶದಲ್ಲ ಚಲಿಸುವಾಗ ಅಥವಾ ಕಾಲು ಸೊಂಟಮುರಿದುಕೊಳ್ಳುತ್ತೇವೆ. ಆದ್ದರಿಂದ ಈ ಪ್ರದೇಶದಲ್ಲಿ ಇವನ್ನು ಜೀವನಾಧಾರಕ್ಕೆ ಸಾಕುವುದಿಲ್ಲ.

ವೃತ್ತಿ ಅಥವಾ ಮಾನವನ ಆಹಾರದ ಮಾರ್ಗಕ್ಕೆ ತಕ್ಕಂತೆ ಅವನು ಸಾಕಿದ ಪ್ರಾಣಿಗಳು ಬದಲಾದಂತೆ ಈ ಪ್ರಾಣಿಗಳ ವಸತಿಗಳ ಪ್ರಾಮುಖ್ಯತೆಯೂ ಬದಲಾಗುತ್ತಾ ಹೋಗಿರುವುದನ್ನು ಕಾಣಬಹುದು. ಜೊತೆಗೆ ಸಾಮಾಜದಲ್ಲಿ ಈ ಪ್ರಾಣಿಗಳನ್ನು ಸಾಕಿದ ಜನರ ಜಾತಿಗಳು ಸ್ಥಾನಮಾನ ಶ್ರೇಣಿ-ಅಂತಸ್ತುಗಳಲ್ಲಿ ಮೇಲು ಕೀಳು ಎಂಬ ಭಾವನೆ ಬಂದವು. ಜಾತಿಗೆ ತಕ್ಕಂತೆ ಅವರ ಸಾಕುಪ್ರಾಣಿಯ ಅವಶ್ಯಕತೆ ಇದ್ದುದರಿಂದ ಅವು ಅವರಿಗೆ ಅತ್ಯವಶ್ಯಕ ಹಾಗೂ ಪೂಜ್ಯನೀಯವಾದವು. ಇದಕ್ಕೆ ಉದಾಹರಣೆಯಾಗಿ ಇಲ್ಲಿ ನಾವು ಪಶುಪಕ್ಷಿಗಳ ವಸತಿಗೆ ಸಂಬಂಧಪಟ್ಟ ಕೆಲವೊಂದು ಹಬ್ಬ ಪೂಜೆ ಹಾಗೂ ನಿಯಮಗಳನ್ನು ಪಾಲಿಸುವುದನ್ನು ಕಾಣಬಹುದು.

ಸಾಕು ಪ್ರಾಣಿಗಳ ವಸತಿಯಂತೆ ಕಾಡು ಮೃಗಗಳ ಹಾಗೂ ಹಕ್ಕಿ ಪಕ್ಷಿಗಳ ವಸತಿಗಳಿಗೂ ಸೂಕ್ತ ಹೆಸರುಗಳಿವೆ. ಇವೆಂದರೆ ಹುಲಿ ಮುಂತಾದ ಕ್ರೂರ ಪ್ರಾಣಿಗಳ ಗುಹೆ, ಹಾವು ಮುಂತಾದವುಗಳ ಬೋನು, ಪಕ್ಷಿಗಳ ಗೂಡು ಹೀಗೆ ಈ ಪ್ರಾಣಿಗಳ ವಸತಿಗಳ ಹೆಸರುಗಳು ಇಂದು ಆಯಾ ಪ್ರಾಣಿಗಳ ಸ್ವಭಾವಕ್ಕೆ ತಕ್ಕಂತೆ ಇವೆ. ಉದಾಹರಣೆಗೆ ಬೋನು ಕ್ಷುಲಕ ಇಲಿಯ ವಸತಿ. ಇದೇ ರೀತಿಯಲ್ಲಿ ಗುಹೆ ಬಲಿಷ್ಟ ಹಾಗೂ ಕ್ರೂರಪ್ರಾಣಿಗಳಾದ  ಹುಲಿ, ಸಿಂಹ ಮುಂತಾದವುಗಳ ವಾಸಸ್ಥಳ. ಕ್ಲಿಷ್ಟಕರವಾದ ಬಲೆ ಎಣೆದು ತನ್ನ ಆಹಾರ ಪಡೆವ ಹಾಗೂ ಈ ಬಲೆಯಲ್ಲಿ ಸರಾಗವಾಗಿ, ಲೀಲಾಜಾಲವಾಗಿ ಓಡಾಡುವ ಜೇಡನದು. ಕೆಲವೊಂದು ಬಾರಿ ದೈನ್ಯಭಾವದಿಂದ ನಮ್ಮದೂ ಒಂದು ಗುಡುಸಲು ಇದೆ. ಗೂಡು ಇದೆ. ಬಂದು ಹೋಗಿ- ಎಂದು ಹೊಸದಾಗಿ ಮನಕಟ್ಟಿಕೊಂಡವುರು ಹೇಳುವುದು ಸಾಮಾನ್ಯ. ‘ಇನ್ನು ಗೂಡ ಸೇರಿಕೊ’ ಎಂದು ಯಾರಿಗಾದರೂ ಕ್ಷುಲ್ಲಕ ಭಾವದಿಂದ, ಅಂಜುಬುರುಕ ಮನುಷ್ಯನನ್ನು ಉದ್ದೇಶಿಸಿ, ಗೇಲಿ ಮಾಡುವುದೂ ಸಾಮಾನ್ಯ. ವೈರಿಯನ್ನು ಮಣಿಸಬೇಕಾದರೆ, ಈ ವೈರಿ ಅಥವಾ ಎದುರಾಳಿಯೂ ಬಲಿಶಾಲಿಯಾಗಿದ್ದರೆ  “ಅವನಗುಹೆಯಲ್ಲೇ ಅವನನ್ನು ಹೊಡೆಯಬೇಕು. ಮುಂತಾಗಿ ಮನುಷ್ಯರಿಗೆ ಸಂಬಂಧಪಟ್ಟ ವಿಚಾರಗಳನ್ನು ಪ್ರಾಣಿ ವಸತಿಗಳನ್ನು ಹೆಸರಿಸಿ ಹೇಳುವುದು ಸಾಮಾನ್ಯ. ಇದರಿಂದ ಆ ವ್ಯಕ್ತಿಯು ಸ್ವಭಾವ, ಸ್ಥಾನಮಾನ ವೇದ್ಯವಾಗುತ್ತದೆ.

ಮಾನವ ಹಾಗೂ ಪ್ರಾಣಿಗಳ ಸಂಬಂಧವನ್ನು ಮೂರು ರೀತಿಯದ್ದಾಗಿ ಅಭ್ಯಾಸ ಮಾಡಲಾಗಿದೆ. ಆಹಾರಕ್ಕೆ ಸಾಕಿದ ಸಾಕು ಪ್ರಾಣಿಗಳಾದ ಹಸು, ಎಮ್ಮೆ, ಮೇಕೆ, ಕುರಿ, ಕೋಳಿ ಮುಂತಾದ ಪ್ರಾಣಿಗಳು ಮತ್ತು ಕೊನೆಯದಾಗಿ ನರಿ, ಹುಲಿ, ಕರಡಿ ಮುಂತಾದ ಕಾಡಿನ ಪ್ರಾಣಿಗಳು. ಕ್ರೂರ ಪ್ರಾಣಿಗಳ ವಸತಿಗಳು ಕಾಡಿನಲ್ಲಿ. ಇಲ್ಲಿಗೆ ಮಾನವನ ಪ್ರದೇಶ ಅಪಾಯಕಾರಿ, ನಿಷಿದ್ಧ. ಇದೇ ರೀತಿ ನಾಯಿಯಂತಹ ಪ್ರಾಣಿ ಮಾನವನ ನಿವಾಸದಲ್ಲಿದ್ದರೂ ಮನೆಯಿಂದ ಹೊರೆಗೆ ಇವುಗಳ ವಾಸ. ಎಮ್ಮೆ, ಹಸು ಮುಂತಾದ ಪ್ರಾಣಿಗಳು ಮಾನವನೊಂದಿಗೆ ಒಂದೇ ಮನೆಯಲ್ಲಿ ವಾಸ. ಅಲ್ಲದೆ ಕಾಡು ಪ್ರಾಣಿಗಳು ಊರಿಂದ ಮಾನವ ವಸತಿಯಿಂದ, ದೂರ ಇರಬೇಕೆಂಬ ನಂಬಿಕೆಯೂ ಇದೆ. ಆದ್ದರಿಂದ ಹುಲಿ ಚಿರತೆಯಂತಹ ಕಾಡು ಪ್ರಾಣಿ ಊರಲ್ಲಿ ಬಂದರೆ ಇದು ಅಪಾಯದ ಸಂಕೇತ ಮಾತ್ರವಲ್ಲಿ ಮುಂಬರುವ ಕೆಡುಕಿನ ಸಂಕೇತ ಕೂಡ.

ಮಾನವನ ವಸತಿಯಲ್ಲಿ ಕೆಲವೊಂದು ಪ್ರಾಣಿಗಳಿರುವುದು ಹೇಗೆ ಅಪಾಯಕರ ಹಾಗೂ ಅವನ ಸ್ಥಾನಮಾನಕ್ಕೆ ಕುಂದು ಹೇಗೋ ಹಾಗೆ ಕೆಲವೊಂದು ಪ್ರಾಣಿಗಳು ಅವನೊಟ್ಟಗಿರುವುದು ಆ ಮನೆತನದ ಆರ್ಥಿಕ, ಧಾರ್ಮಿಕ ಹಾಗೂ ಸಾಮಾಜಿಕ ಸ್ಥಾನಮಾನವನ್ನು ಎತ್ತಿ ತೋರಿಸುತ್ತದೆ. ರೈತನೊಬ್ಬ ಮನೆಯಲ್ಲಿ ತನ್ನ ಎತ್ತು ಎಮ್ಮೆ ಹಸು ಇಟ್ಟುಕೊಳ್ಳುವುದು ಸಹಜಸಾಮಾನ್ಯ ಹಾಗೂ ಗೌರವದ ಆರ್ಥಿಕ ಭದ್ರತೆಯ ಲಕ್ಷಣ. ರೈತನಿಗೆ ಈ ಪಶುಗಳೇ ಮುಖ್ಯ. ಬಲಗೈ, ಮಗನಿದ್ದಂತೆ. ಎತ್ತಿಲ್ಲದ ರೈತನಿಗೆ ಎದೆ ಇಲ್ಲ ಎಂಬ ಗಾದೆ ಮಾತು ಇದೆ. ಜನಪದರಲ್ಲಿ ಪಶುಗಳಿಲ್ಲದ ರೈತನ ಮನೆ, ಅವನಿಗೆ ಪಶುಗಳು ಅಸಹ್ಯ ಎಂದೆನಿಸಿದರೆ ಅವುಗಳನ್ನು ಮನೆಯಿಂದ ದೂರವಿಟ್ಟ ದಿನ, ಮನೆಯಲ್ಲಿ ಇಲ್ಲಿ, ಹೆಗ್ಗಣ, ಹಾವು, ಬಾವಲಿ ವಾಸವಾಗಿದ್ದರೆ ಈ ಮನೆತನದ ಅವನತಿ ಪ್ರಾರಂಭವಾಗಿದೆ ಎಂದು ಹೇಳುತ್ತಾರೆ.

ಜನಪದ ಸಾಹಿತ್ಯದಲ್ಲಿ  ಮಾನವನಿಗೆ ಸಂಬಂಧಪಟ್ಟಂತೆ ಪ್ರಾಣಿವಸತಿಗಳ ಬಗೆಗೆ ಅನೇಕ ಕತೆ ನಂಬಿಕೆಗಳು, ಪ್ರಚಾರದಲ್ಲಿವೆ. ಸದಾ ಪರೋಪಕಾರಿಯಾದ ಜನಪದಿಗಳು ಮನೆಕಟ್ಟುವಾಗ ಹೊರ ಗೋಡೆಯಲ್ಲಿ ಸಂದು, ಜಾಗಬಿಟ್ಟು ಅಲ್ಲಿ ಗಿಳಿ, ಪಾರಿವಾಳ ಹಾಗೂ ಗುಬ್ಬಿಗಳು ಗೂಡು ಕಟ್ಟಿವಾಸಮಾಡಲು ಅನುಕೂಲಮಾಡಿರುತ್ತಾರೆ. ಮನೆಯಲ್ಲಿ ಗುಬ್ಬಿಗಳಂತೂ ಚಿಲಿಪಿಲಿ ಗುಟ್ಟುತ್ತಾ ಮನೆ ತುಂಬಾ ಕಸ ಕಡ್ಡಿ ಕೊಳೆ ಚೆಲ್ಲುತ್ತಾ ತೊಂದರೆ ಕೊಟ್ಟರೂ ಅವುಗಳ ಗೂಡನ್ನು ಕೆಡೊಸುವುದಿಲ್ಲ ಇದಕ್ಕೆ ಜನಪದಿಗಳು ಕೊಡುವ ವಿವರಣೆ ಹೀಗಿದೆ. ಅದು ಪ್ರಾಣಿಯದೇ ಇರಲಿ, ಮನುಷ್ಯನದೇ ಇರಲಿ, ಕಟ್ಟಿದ ಮನೆಯನ್ನು ಕೆಡಿಸಬಾರದು. ಜಾನಪದದಲ್ಲಿ ಈ ಗುಬ್ಬಿ ಹಾಗೂ ಮಾನವನಿಗೆ ಸಂಬಂಧದ ಒಂದು ಕತೆ ಇದೆ. ಇದರಂತೆ ಒಂದು ದಿನ ಶಿವನು ತನ್ನ ಭಕ್ತರಾದ ರೈತರು ಹೇಗೆ “ಬದುಕಿದ್ದಾರೆ” ಎಂದು ನೋಡಲು ಬಿಕ್ಷುಕನ ರೂಪದಲ್ಲಿ ಮನೆಯ ಮುಂದೆ ಬಂದು ನಿಲ್ಲುತ್ತಾನೆ. ತನ್ನ ಕೆಲಸದಲ್ಲಿ ಮಗ್ನರಾಗಿದ್ದ ರೈತನು ಬಹಳ ಹೊತ್ತಿನವರೆಗೂ ಶಿವನನ್ನು ಗಮನಿಸುವುದಿಲ್ಲ. ಇದರಿಂದ ಕೋಪಗೊಂಡ ಶಿವನು ನಿನ್ನ ಪೈರಿನ ಒಂದು ಗುಂಪೆಗೆ ಒಂದೇ ಗೂಡೆ ಧಾನ್ಯವಾಗಲಿ ಎಂದು ಶಪಿಸುತ್ತಾನೆ. ಇದನ್ನು ಆ ಮನೆಯಲ್ಲಿ ಗೂಡು ಕಟ್ಟಿವಾಸವಾಗಿದ್ದ ಗುಬ್ಬಿಯೊಂದು ಕೇಳಿಸಿಕೊಂಡು ನೀನು ಕೇವಲ ಮೂರು ಮೂರು ಚಿವುಡುಗಳ ಗುಂಪೆಗಳನ್ನಿಡು ಎಂದು ರೈತನಿಗೆ ಹೇಳಿಕೊಡುತ್ತದೆ. ಹೀಗೆ ಮಾಡಿದ್ದರಿಂದ ಶಿವನ ಶಾಪವು ರೈತನಿಗೆ ವರವಾಗಿ ಪರಿಣಮಿಸಿ ಅವನಿಗೆ ಲಾಭವೇ ಆಗುತ್ತದೆ. (ಗುಬ್ಬಿಯ ಈ ಧೂರ್ಥತನಕ್ಕೆ ಶಿವನು ಕೋಪಗೊಂಡು “ಕಾಲಿದ್ದರೂ ನೀನು ನಡೆಯದೆ, ನೆಗೆಯುತ್ತಾ ಚಲಿಸು ಎಂದು ಶಾಪಕೊಟ್ಟನೆಂದು ಹೇಳಲಾಗಿದೆ ಇನ್ನೊಂದು ಕತೆಯಂತೆ “ರೈತನ ಸಹಾಯ ಮಾಡಿದ ನೀನು ಅವನ ಮನೆಯಲ್ಲಿಯೇ, ಅವನ ಆಶ್ರಯದಲ್ಲೇ ಇರು” ಎಂದು ಶಾಪ ಕೊಟ್ಟನೆಂದು ಹೇಳಲಾಗಿದೆ) ಅಂದಿನಿಂದ ರೈತ ಮತ್ತು  ಮನೆ ಗುಬ್ಬಿಗಳು ಸ್ನೇಹಿತರಾದರು. ಆದ್ದರಿಂದ ಗುಬ್ಬಿಗಳು ರೈತರಿಗೆ ಅಸಹ್ಯ ಎನಿಸುವುದಿಲ್ಲ.

ಇದೇ ರೀತಿ ಜನಪದ ನೀತಿಪಾಠದಲ್ಲಿ ತಾನು ಮಾಡುವುದು ಉತ್ತಮ, ಮಗಮಾಡುವುದು ಮದ್ಯಮ ಮತ್ತು ಆಳುಮಾಡುವುದು ಹಾಳು ಎಂದು ಹೇಳುವ ಪಕ್ಷಿಗಳ ಗೂಡಿಗೆ, ವಸತಿಗೆ ಸಂಬಂಧಿಸಿದ ಒಂದು ಕತೆ ಬರುತ್ತದೆ. ಒಂದು ಬೆಳೆದ ಜೋಳದ ಹೊಲದಲ್ಲಿ ಬಂದು ಜೊತೆ ಪಕ್ಷಿಗಳು ಗೂಡುಕಟ್ಟಿಕೊಂಡು ಮರಿಮಾಡುತ್ತವೆ. ತಾವಿಲ್ಲದಾಗ ಹೊಲದಲ್ಲಿ ಸಂಭವಿಸಿದ ವಿಷಯಗಳ ಬಗ್ಗೆ ಈ ಪಕ್ಷಿಗಳು ತಮ್ಮ ಮರಿಗಳಿಂದ ತಿಳಿಯುತ್ತಿರುತ್ತವೆ. ಹೀಗಿರುವಾಗ ಒಂದು ದಿನ ಹೊಲದ ಯಜಮಾನ ಮಗನೊಡನೆ ಹೊಕ್ಕೆ ಬಂದು ‘ಪೈರು ಬಲಿತಿದೆ, ಕೊಯ್ಯಲು ಆಳುಗಳನ್ನು ಕಳುಹಿಸುವ’ ಎಂದುದನ್ನು ಕೇಳಿದ. ಇನ್ನು ರೆಕ್ಕೆ ಬಲಿಯದ ಮರಿಗಳು ಹೆದರಿ ತಮ್ಮ ಗತಿ ಏನು ಎಂದು ತಮ್ಮ ತಂದೆ ತಾಯಿಗಳಿಗೆ ಹೇಳುತ್ತವೆ ಅದ್ಕಕೆ ದೊಡ್ಡ ಪಕ್ಷಿಗಳು ಇನ್ನು ಅಂತಹ ಅಪಾಯವೇನೂ ಬಂದಿಲ್ಲ ಎಂದು, ಅಲ್ಲಿಂದ ಹೊರಡುವ ಪ್ರಯತ್ನ ಮಾಡುವುದಿಲ್ಲ. ಕೆಲವು ದಿನಗಳ ನಂತರ ಮತ್ತೆ ಮುನ್ನ ಹೊಲಕ್ಕೆ ಬಂದ ರೈತ ನೋಡುತ್ತಾನೆ ಆಳುಗಳು ಬಂದಿರುವುದೇ ಇಲ್ಲ. “ನಾಳೆ ನೀನೇ ಬಂದು ಕೆಲಸ ಪ್ರಾರಂಭಿಸು” ಎಂದು ಮಗನಿಗೆ ಹೇಳುತ್ತಾನೆ. ಇದನ್ನು ತಮ್ಮ ಮರಿಗಳಿಂದ ತಿಳಿದ ಪಕ್ಷಿಗಳು ನಮಗೆ ಇನ್ನು ಅಪಯ ಕಾಲ ಬಂದಿಲ್ಲ ಎಂದು ಹೇಳುತ್ತವೆ. ಕೆಲವು ದಿನಗಳ ನಂತರ ಮತ್ತೆ ಹೊಲಕ್ಕೆ ಬಂದ ರೈತ ನೋಡುತ್ತಾನೆ ಹಣ್ಣಾದ ಪೈರು ಉದುರಲು ಪ್ರಾರಂಭಿಸಿದ್ದರೂ ಮಗ ಕೆಲಸ ಪ್ರಾರಂಭಿಸಿರುವುದಿಲ್ಲ. ಆಗ ರೈತನು ಹೀಗೆ ಬಿಟ್ಟರೆ ಪೈರು ನಷ್ಟವಾಗುತ್ತದೆ. ನಾಳೆ ನಾನೇ ಬಂದು ಕೊಯ್ಲು ಮಾಡುತ್ತೇನೆ ಎಂದು ಹೇಳಿ ಹೋಗುತ್ತಾನೆ. ರೈತನ ಈ ನಿರ್ಣಯಕರ ಮಾತು ಕೇಳಿ ತಿಳಿದ ಪಕ್ಷಿಗಳು ಇನ್ನು ನಮಗೆ ಅಪಾಯವಿದೆ. ನಾಳೆ ಆದಷ್ಟು ಬೇಗ ಇಲ್ಲಿಂದ ಹಾರಿ ಹೋಗುವ ಎಂದು ನಿರ್ಣಯಿಸುತ್ತವೆ. ಹೀಗೆ ಋತುಗಳ ರೈತನ ಬೆಳೆಯುವ ಪೈರು, ರೈತರ ಮನೋಭಾವ, ಪಶು-ಪಕ್ಷಿಗಳ  ಜೀವನಕ್ರಮ ಮುಂತಾದವುಕ್ಕೆ ನೇರ ಸಂಬಂದವಿದೆ ಎಂಬುದನ್ನು ಹೇಳಲು ಜಾನಪದದಲ್ಲಿ ಅನೇಕ ಕತೆಗಳಿವೆ.

ಜನಪದ ಸಂಸ್ಕೃತಿಯಲ್ಲಿ ಪ್ರಾಣಿ ವಸತಿಗೆ ಒಂದು ಧಾರ್ಮಿಕ ಸ್ಥಾನವಿದ್ದು ಇಲ್ಲಿ ಅಥವಾ ಇದಕ್ಕೆ ಸಂಬಂಧಪಟ್ಟಂತೆ ಹಬ್ಬಗಳನ್ನು ಆಚರಿಸುವುದನ್ನು ಕಾಣುತ್ತೇವೆ. ಕರ್ನಾಟಕದ ರೈತರು ಹಟ್ಟಿಹಬ್ಬ ಅಥವಾ ಹಳ್ಳಿ ಅಕ್ಕವ್ವನ ಹಬ್ಬವನ್ನು ಆಚರಿಸುವುದನ್ನು ಕಾಣುತ್ತೇವೆ. ಪಶುಸಂಪತ್ತಿನ ಹೆಚ್ಚಳಕ್ಕೆ ಪಶುಗಳು ಅಧಿದೇವತೆಯನ್ನು ಓಲೈಸಲು ಆಚರಿಸುವ ಈ ಹಬ್ಬ ಈ ಜನರು ಪಶುಪಾಲನೆ ಬಿಟ್ಟು ವ್ಯವಸಾಯಕ್ಕೆ ಹೋದಾಗ ಅವರ ಧಾರ್ಮಿಕ, ಆರ್ಥಿಕ ಜೀವನದಲ್ಲಾದ ಪಲ್ಲಟನೆಯನ್ನು, ಬದಲಾವಣೆಯನ್ನು ತಿಳಿಸುತ್ತದೆ. ನಂತರ ಈ ಗುಂಪು ಸಂಸ್ಕೃತಕರಣ ಹೊಂದಿದಂತೆ ಅವರ ಅಧಿದೇವತೆಯನ್ನು ಲಕ್ಕವ್ವ (ಲಕ್ಷ್ಮಿ) ನನ್ನಾಗಿ ಮಾಡಿ ಲಕ್ಷ್ಮಿಯ ಪತಿ ವಿಷ್ಣುವಿನ ಶೌರ್ಯದ ಪ್ರತೀಕವಾಗಿ, ನರಕಾಸುರನ ವಧೆ ಮಾಡಿದ ಕತೆಯಾಗಿ ದೀಪಾವಳಿಯಾಗಿ ಆಚರಿಸುತ್ತಿದ್ದರೂ ಇದು ಮೂಲತಃ ಪಶುಗಳ ಅವುಗಳ ಹೆಚ್ಚಳಕ್ಕೆ ಸಂಬಂದಿಸಿದ, ಆಚರಿಸಲಾದ ಹಬ್ಬ. ಇಂದಿಗೂ ರೈತರು ಈ ಹಬ್ಬದ ದಿನದಂದು ದನದ ಹಕ್ಕೆಯನ್ನು ವಿಶೇಷವಾಗಿ ಸ್ವಚ್ಛಮಾಡಿ, ಅದನ್ನು ನಾನಾ ತರಹದಹ ಗಳಿಂದ, ಪೈರುಗಳ ತೆನೆಗಳಿಂದ, ಅಲಂಕರಿಸಿ ಪೂಜೆ ಮಾಡುತ್ತಾರೆ. ಸಾಯಂಕಾಲಕ್ಕೆ ಪಶುಗಳು ಮನೆಗೆ ಹಿಂತಿರುಗುತ್ತಿದ್ದಂತೆ ಅವುಗಳನ್ನು ಪೂಜಿಸಿ, ಆರತಿ ಮಾಡಿ ಹಕ್ಕೆಗೆ ಆಹ್ವಾನಿಸುವರು. ಹೀಗೆ ಪಶುವಸತಿಗೆ ಸಂಬಂದಿಸಿದಂತೆ ಅನೇಕ ವಿಚಾರಗಳನ್ನು ಹಬ್ಬ, ಕತೆ, ನಂಬಿಕೆ ಹಾಗೂ ಚಿತ್ರಕಲೆಯ ಅಭ್ಯಾಸ ಮಾಡಬಹುದು.

ಆದರೆ ಇಂದು ಪಶು ವಸತಿಗೆ ಸಂಬಂಧಿಸಿದ ಸಂಶೋಧನಾ ಅಭ್ಯಾಸಗಳು ಉತ್ತಮ ರೀತಿಯಲ್ಲಿ ನಡೆದಿಲ್ಲ. ಇದಕ್ಕೆ ಕಾರಣ ಧೀರ್ಘ ಕಾಲದ ಕ್ಷೇತ್ರಕಾರ್ಯದ ಅನುಭವ, ಇತರೆ ವಿದ್ವಾಂಸರೊಡನೆ ಚರ್ಚೆ ಮುಂತಾದವುಗಳ ಅಭಾವವೇ ಆಗಿದೆ. ಜನಪದ ತಜ್ಞರಂತೆ ಇತರೇ ಶಾಸ್ತ್ರಜ್ಞರು ಮುಖ್ಯವಾಗಿ ಮಾನವಶಾಸ್ತ್ರಜ್ಞರು, ಮಾವನ-ಪಶುಗಳ ನಡುವೂ ಸಂಬಂಧದ ಬಗ್ಗೆ ಉತ್ತಮ ಅಭ್ಯಾಸಗಳನ್ನು ಮಾಡಿದ್ದಾರೆ. ಈ ಎರಡೂ ಶಾಸ್ತ್ರಜ್ಞರು ಕೂಡಿ, ಪರಸ್ಪರರಲ್ಲಿ ವಿಚಾರ ವಿನಿಮಯ ಮಾಡಿಕೊಂಡರೆ, ಉತ್ತಮ ಅಭ್ಯಾಸಗಳನ್ನು ಹೊರತರಬಹುದು. ಮತ್ತು ಜನಪದ ಸಂಸ್ಕೃತಿಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ತಪ್ಪುತ್ತದೆ. ಉದಾಹರಣೆಗೆ ಇಂದು ತಮ್ಮ ಪ್ರಬಂಧ ಮಂಡಿಸಿದ ವಿದ್ವಾಂಸರೊಬ್ಬರು ಪಶುವಸತಿಗೆ ಸಂಬಂಧಿಸಿದಂತೆ ಅಲ್ಲಿ ಇರುವ ಚಿತ್ರಕಲೆ ಹಾಗೂ ಕೆತ್ತನೆ ಕೆಲಸದ ಬಗ್ಗೆ ಬರೆದಿದ್ದಾರೆ. ಪ್ರಜ್ಞಾವಂತ ರೈತರು ಮನೆ ಕಟ್ಟುವಾಗ ಆಯಾ ಆಕಾರ ಅಂದ-ಚೆಂದ ಮತ್ತು ಬಾಳಿಕೆ ಹಾಗೂ ತಾಳಿಕೆ ನೋಡುವುದರ ಜೊತೆಗೆ ಗಂಡು ಮಕ್ಕಳೆಲ್ಲರಿಗೂ ಒಂದೊಂದರಂತೆ ಕಟ್ಟುವರು. ಪ್ರತಿಯೊಬ್ಬ ಮಗನಿಗೆ ಒಂದರಂತೆ ಮನೆ ಕಟ್ಟಡವಾದರೆ, ಇರುವ ಒಂದೇ ಮನೆಯನ್ನು ತಮ್ಮ ಮಕ್ಕಳು ಸೂಕ್ತವಾಗಿ ಯಾವ ತರಹದ ತೊಂದರೆಗಳೂ ಇಲ್ಲದಂತೆ ಪಾಲು ಮಾಡಿಕೊಳ್ಳಲು ಅನುಕೂಲವಾಗುವಂತೆ ಸೂಕ್ತವಾಗಿ ಹಂಚಿಕೊಳ್ಳುವಂತೆ ಅವಳಿ ಮನೆ ಕಟ್ಟಲು ಕಟ್ಟಿರುತ್ತಾರೆ. ಮಕ್ಕಳು ಬೆಳೆದು ದೊಡ್ಡವರಾಗಿ, ಮದುವೆಯಾಗಿ ತಂದೆ ಸತ್ತ ನಂತರವೇ ಅವರು ಸಾಮಾನ್ಯವಾಗಿ ಬೇರೆಯಾಗುವುದು. ಆ ವೇಳೆಯವರೆಗೆ ಮನುಷ್ಯರ ವಸತಿಗೆ ಎಂದು ಕಟ್ಟಿದ ಮನೆಯ ಭಾಗವನ್ನು ಸಾಕು ಪ್ರಾಣಿಗಳ ಉಪಯೋಗಕ್ಕೆ ಬಳಸುವರು. ಇದಕ್ಕೊಂದು ನೆಲ, ಗೋಡೆಗಳನ್ನು ಪೂರ್ಣಗೊಳಿಸಿರುವುದಿಲ್ಲ. ಆದರೆ ಕಂಬ ತೊಲೆ, ಬಾಗಿಲು ತೋಳು ಹಾಗೂ ಮನುಷ್ಯರ ವಸತಿಯಲ್ಲಿ ನೋಡಿದಂತೆ ಚಿತ್ರಗಾರ ಕೆತ್ತನೆ ಮಾಡಿರುತ್ತಾನೆ. ಇದನ್ನೇ ಅವರು ಪಶುವಸತಿಯಲ್ಲಿಯೂ ಚಿತ್ರಕಲೆ ಹಾಕಿತಂದರೆ ತಪ್ಪಾಗುತ್ತದೆ. ಇನ್ನೊಬ್ಬ ವಿದ್ವಾಂದರು ರೈತರು ಹೊಲದಲ್ಲಿ ಕುರಿಗಳನ್ನು ನಿಲ್ಲಿಸುವ ಬಗ್ಗೆ ಹೇಳುತ್ತಾ ಕುರಿಗಳನ್ನು ಬೀಳು ಬಿದ್ದ ಹೊಲದಲ್ಲಿ ನಿಲ್ಲಿಸುವರು ಎಂದಿದ್ದಾರೆ. ಹೊಲ ಬೀಳು ಬಿದ್ದ ಮೇಲೆ ಅಲ್ಲಿ ನಿಲ್ಲಿಸುವ ಪ್ರಮೇಯವೇ ಇರುವುದಿಲ್ಲ.  ಏಕೆಂದರೆ ಕುರಿ ನಿಲ್ಲಿಸುವುದು ಹೊಲ  ಫಲವತ್ತಾಗಲೆಂದು. ಆದರೆ ಇಂದು ಒಂದು ವಿಧದಲ್ಲಿ ನಿಜ. ಅಂದರೆ ಹಳ್ಳದ, ಗೇಯ್ಮೆ ಮಾಡದ, ಹೆಂಡೆಗಳಿಲ್ಲದ ಹೊಲದಲ್ಲಿ ಕುರಿ ನಿಲ್ಲಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅದಕ್ಕೆ ಕಾರಣ ಗೊಲ್ಲರು ತಮ್ಮ ಕುರಿಗಳು ಹಂಡೆ ಬಿಟ್ಟ ಹೊಲದಲ್ಲಿ ಮಲಗಲು ತೊಂದರೆ ಪಡುತ್ತವೆ ಎಂದು ನಮ್ಮ ಹೊಲದಲ್ಲಿ ನಿಲ್ಲಿಸು ಎಂದು ರೈತರಲ್ಲಿ ಪೈಪೋಟಿ ಇದ್ದಾಗ ಕುರಿಗಳ ಮಾಲಕರು ತಮ್ಮ ಪ್ರಾಣಿಗಳ ಅನುಕೂಲವನ್ನು ಗಮನಿಗೆ ಗೇಯ್ಮೆ ಮಾಡದ ಹೊಲವನ್ನು ಆರಿಸಿಕೊಳ್ಳುತ್ತಾರೆ. ಹೀಗೆ ಅವರು ಹೆಂಡೆ ಇಲ್ಲದ, ಗೇಯ್ಮೆ ಇಲ್ಲದ ಹೊಲದಲ್ಲಿ ಕುರಿ ನಿಲ್ಲಿಸುವುದನ್ನು ಸಂಶೋಧಕರು ತಪ್ಪಾಗಿ  ಕಂಡು ಇವುಗಳನ್ನು ಬೀಳು ಬಿದ್ದ ಹೊಲದಲ್ಲಿ ನಿಲ್ಲಿಸುತ್ತಾರೆ ಎಂದಿದ್ದಾರೆ. ಮತ್ತೊಬ್ಬ ಪ್ರಬಂಧಕಾರರು ರೈತರು ಪ್ರೀತಿಯಿಂದ ತಮ್ಮ ಪಶುಗಳನ್ನು ತಮ್ಮೊಡನೆ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಹೇಳಿದ್ದಾರೆ ನಿಜ. ಆದರೆ ಅನೇಕ ಸಂದರ್ಭಗಳಲ್ಲಿ ಇದು ಕೇವಲ ಪ್ರೀತಿಯಿಂದಾಗಿರದೇ ಅವು ಕಳ್ಳತನವಾಗದಿರಲಿ ಅಥವಾ ಮನೆಯೊಳಗೆ ಇದ್ದರೆ ರಾತ್ರಿ ಅವುಗಳಿಗೆ ಮೇವು ಹಾಕಲು ಸುಲಭ, ಮನೆಯಲ್ಲಿ ಗಂಡು ಮಕ್ಕಳು ಇಲ್ಲದಿದ್ದರೂ ಹೆಂಗಸರೇ ಪಶುಗಳ ಆರೈಕೆ ಮಾಡಬಹುದು. ಅದಲ್ಲದೆ ಎತ್ತು ದನಗಳನ್ನು ಹೊರಗೆ ಕಟ್ಟಿದರೆ ರಾತ್ರಿ ಅವುಗಳಿಗೆ ಮೇವು ಹಾಕಲು ಮನೆಯ ಬಾಗಿಲು ತೆಗೆದು ಹೊರಗೆ ಬಂದು ಅಪಾಯಕ್ಕೆ ಸಿಲುಕಬೇಕಾಗುತ್ತದೆ.

ಮತ್ತೊಂದು ಕಡೆ ಎಮ್ಮೆ, ಎತ್ತು, ಹಸು ಮುಂತಾದವನ್ನು ಒತ್ತಟ್ಟಿಗೆ ಕಟ್ಟುತ್ತಾರೆ ಎಂದು ಹೇಳಿದ್ದಾರೆ. ಇದು ಅಸಹಜವಾದದ್ದು. ಏಕೆಂದರೆ ಒಂದು ಪ್ರಾಣಿಯ ವಾಸನೆ, ಎಂಜಲು ಇನ್ನೊಂದಕ್ಕೆ ಆಗುವುದಿಲ್ಲ. ಉದಾಹರಣೆಗೆ ಎತ್ತು ತಿಂದು ಬಿಟ್ಟಿದ್ದನ್ನು ಹಸು ಹಾಗೂ ಎಮ್ಮೆಗಳು ತಿನ್ನುತ್ತವೆ. ಆದರೆ ಎಮ್ಮೆಯ ಎಂಜಲಿನ ವಾಸನೆ ಇದ್ದರೆ ಹಸು ಹಾಗೂ ಎತ್ತುಗಳು ಮೇವು ತಿನ್ನುವುದೇ ಇಲ್ಲ. ಇದೇ ಪ್ರಕಾರ ಕುರಿ ಮೇಯ್ದ ಕಡೆ ಈ ಯಾವ ಪ್ರಾಣಿಗಳೂ ತಿನ್ನುವುದಿಲ್ಲ. ಆದ್ದರಿಂದ ರೈತರು ಈ ಪಶುಗಳನ್ನು ಒಂದೆಡೆ ಜೊತೆಗೆ ಕಟ್ಟುವುದಿಲ್ಲ. ಇಂತಹ ವಿಚಾರಗಳನ್ನು ಕೇಳಿ, ನೋಡಿ, ಪರಾಂಬರಿಸಿ ತಿಳಿಯ ಬೇಕಾಗುತ್ತದೆ. ಕೆಲವೊಂದು ಶಾಸ್ತ್ರಗಳ ಕ್ಷೇತ್ರ ಕಾರ್ಯ ವಿಧಾನಗಳು ಇಂತಹ ಅನುಭವಿಕ ಅಭ್ಯಾಸಕ್ಕೆ ಸೂಕ್ತವಾಗಿಲ್ಲ. ಆಗ ಇತರೆ ಶಾಸ್ತ್ರಗಳ ಕ್ಷೇತ್ರಾಭ್ಯಾಸ ಸಾಧನೆಗಳನ್ನು ಬಳಸಬಹುದು. ಇದೇ ಪ್ರಕಾರ ಸಂದರ್ಶನ ಮಾಹಿತಿ ನೀಡುವವರು ಆ ಗುಂಪಿಗೆ ಸೇರಿದ ಯಾರೆಂದರವರಾಗುವುದಿಲ್ಲ. ಈ ಮಾಹಿತಿ ನೀಡಲು ಬಂದವರ ಉದ್ಧೇಶ, ವಯಸ್ಸು, ಆರೋಗ್ಯ, ಆ ಸಂಸ್ಕೃತಿಗೆ ಯಾವ ಮಟ್ಟದಲ್ಲಿ ಸದೃಶ್ಯ ಅವನು ಈ ಮಾಹಿತಿದಾರರನ್ನು ಸಂದರ್ಶಿಸದೆ ಸಿಕ್ಕ ಸಿಕ್ಕವರಿಂದ ಮಾಹಿತಿ ಪಡೆದರೆ ಸಂಶೋಧನೆ ದಾರಿ ತಪ್ಪುತ್ತದೆ.

ಹೀಗೆ ಪಶು ವಸತಿಯ ಬಗ್ಗೆ ಅನೇಕ ರೀತಿಯಲ್ಲಿ ಅಭ್ಯಾಸ ಮಾಡಬಹುದು. ಆದರೆ ಈ ಅಭ್ಯಾಸ ಕಾರ್ಯ ಜಂಟಿಯಾಗಿ ಸೂಕ್ತವಾಗಿ ನಡೆಯಬೇಕು. ಆಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ.

* * *