ಹಟ್ಟಿ ಸಂಬಂಧ ಪ್ರಚಲಿತವಿರುವ ನಂಬಿಕೆಗಳು:

೧. ಹಟ್ಟಿಯಲ್ಲಿ ಗಿಣಿ ಸಾಕಬಾರದು. ಅದು ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡಿದರೆ ಹಟ್ಟಿಗೆ ಶ್ರೇಯಸ್ಸಿರುವುದಿಲ್ಲ.

೨. ಮಂಗಳವಾರ ಮತ್ತು ಶುಕ್ರವಾರ ಹಟ್ಟಿಯಲ್ಲಿ ಧೂಳು ಹೊಡೆಯಬಾರದು.

೩. ಹಟ್ಟಿಯಲ್ಲಿ ಕೋಲಬಲೆ ತುಂಬಿದರೆ ದಾರಿದ್ರ್ಯ.

೪. ಹಟ್ಟಿ ಗೋಡೆಯ ಮೇಲೆ ಇದ್ದಿಲು ಮಸಿಯಿಂದ ಬರೆಯಬಾರದು.

೫. ಮುಸ್ಸಂಜೆ ಹೊತ್ತಿನಲ್ಲಿ ಹಟ್ಟಿ ಬಾಗಿಲಿನ ಚಿಲಕ ಅಲ್ಲಾಡಿಸಬಾರದು, ದನಕರುಗಳಿಗೆ ರೋಗ ಬರುತ್ತದೆ.

೬. ಮುಟ್ಟಾದ ಹೆಂಗಸರು ಮೂರು ದಿನಗಳ ಕಾಲ ಹಟ್ಟಿಯೊಳಗೆ ಬರಬಾರದು. ಹಜಾರದಲ್ಲೇ ಕಾಲ ಕಳೆಯಬೇಕು.

೭. ಹಟ್ಟಿಯೊಳಗೆ ಮಾಂಸವನ್ನು ಬೇಯಿಸಿ ತಿನ್ನಬಾರದು.

೮. ಹಟ್ಟಿಯೊಳಗೆ ಹಂದಿಗಳನ್ನಾಗಲಿ, ಕೋಳಿಗಳನ್ನಾಗಲಿ ಸೇರಿಸಬಾರದು.

೯. ಹಟ್ಟಿಯೊಳಗೆ ಚಪ್ಪಲಿ ಹಾಕಿಕೊಂಡು ಪ್ರವೇಶ ಮಾಡಬಾರದು.

೧೦. ಜಾತಿ ಗೆಟ್ಟವರನ್ನು ಹಟ್ಟಿಯೊಳಗೆ ಸೇರಿಸಬಾರದು.

೧೧. ಆಕಳ ಲಾಳದ ಮೊಳೆಯನ್ನು ಹಟ್ಟಿಯ ತಲೆಬಾಗಿಲಿನ ಹೊಸ್ತಿಲಿಗೆ ಹೊಡೆದರೆ ಲಕ್ಷ್ಮಿ ಬರುತ್ತಾಳೆ.

೧೨. ಹಂಟಿಕಂಬವನ್ನು ಕಾಲಿನಿಂದ ಒದೆಯಬಾರದು.

೧೩. ಆಕಳು/ ಎಮ್ಮೆ ಕರು ಹಾಕಿದಾಗ ಹಟ್ಟಿಯ ಕಂಬವೊಂದಕ್ಕೆ ಸುಣ್ಣ ಮತ್ತು ಇಟ್ಟಿಗೆ ಮಣ್ಣನ್ನು ಬಳಿದ ಹಂಚೊಂದನ್ನು ಕಟ್ಟಬೇಕು.

೧೪. ವ್ಯವಸಾಯದ ಮುಟ್ಟುಗಳಾದ ನೊಗ, ಹಾರೆ, ಗುದ್ದಲಿ ಮುಂತಾದುವುಗಳನ್ನು ಹಟ್ಟಿಯ ಬಾಗಿಲಿಗೆ ತಾಗಿಸಬಾರದು.

೧೫. ಹಟ್ಟಿಯ ಕಂಬ ಸುತ್ತಿದರೆ ಹಟ್ಟಿಗೇ ಕೇಡು.

ಹೀಗೆ ತೊಟ್ಟಿಹಟ್ಟಿ ಇರುವೆಡೆಗಳಲ್ಲಿ ದನದ ಕೊಟ್ಟಿಗೆ, ಕುರಿರೊಪ್ಪಗಳು ಹಟ್ಟಿಯ ಅವಿಭಾಜ್ಯ ಅಂಗಗಳೇ ಆಗಿದ್ದರೆ ತೊಟ್ಟಿ ಹಟ್ಟಿ ಇಲ್ಲದೆಡೆಗಳಲ್ಲಿ, ವಿಶೇಷವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ದುರ್ಬಲವಾಗಿರುವ ಜನಸಮುದಾಯಗಳಲ್ಲಿ, ವಾಸದ ಗುಡಿಸಲುಗಳು ಮತ್ತು ಕೊಟ್ಟಿಗೆಗಳು ಪ್ರತ್ಯೇಕ ಇರುವುದು ಸಾಮಾನ್ಯ.

‘ಕೊಟ್ಟಿಗೆ’ ಶಬ್ದದ ಹುಟ್ಟು ಖಚಿತವಾಗಿಲ್ಲ. ‘ಎತ್ತು ಈಯ್ತು ಎಂದರೆ ಕೊಟ್ಟಿಗೆಗೆ ಕಟ್ಟು’ ಎಂಬ ಗಾದೆಯೇ ಇದೆ. ಕೊಟ್ಟಿಗೆ ಎಂಬುದು ದನ ಎತ್ತುಗಳನ್ನು ಕೂಡಿ ಹಾಕುವುದಕ್ಕಾಗಿ ಮತ್ತು ಕಟ್ಟಿಹಾಕುವುದಕ್ಕಾಗಿ ನಿರ್ಮಿಸುವಂಥದು ಎಂದು ಇದರಿಂದ ಅರ್ಥವಾಗುತ್ತದೆ. ಮನೆಯ ಹೊರಗಡೆ ಕಾಳು ತುಂಬಿಡಲು ನಿರ್ಮಿಸುವ ಸ್ಥಳಕ್ಕೂ ‘ಕೊಟ್ಟಿಗೆ’ ಎನ್ನುವುದುಂಟು.

[1] ಅಂತೆಯೇ ಸ್ನಾನ ಮಾಡಲು ನಿರ್ಮಿಸಿದ ‘ಮಾಡು’, ಸೌದೆ ಕೂಡಿದಲು ನಿರ್ಮಿಸಿದ ಕಟ್ಟಡ, ತರಗೆಲೆ ತುಂಬಿಡಲು ನಿರ್ಮಿಸುವ ಕಟ್ಟಡ, ಎತ್ತಿನಗಾಡಿ ನಿಲ್ಲಿಸಲು ನಿರ್ಮಿಸುವ ಛಾವಣಿ ಮುಂತಾದುವುಗಳನ್ನೂ ‘ಕೊಟ್ಟಿಗೆ’ ಎಂದೇ ಕರೆಯುವುದು ರೂಢಿ (ಅಂಬಳಿಕೆ ಹಿರಿಯಣ್ಣ: ೧೯೮೨:೨೦೪)

ದನಿನ ಕೊಟ್ಟಿಗೆಯನ್ನು ‘ಕೊಟ್ಗೆಮನಿ’ ಎಂದು ಕರೆಯುವುದು ವಾಡಿಕೆ. ಕೆಳಗಿನ ತ್ರಿಪದಿ ಅದನ್ನು ಪುಷ್ಟೀಕರಿಸುತ್ತದೆ.

ಕೊಟ್ಗೆ ಮನಿಯಾಗೆ ಕಟ್ಟಿರುವ ಬಸುವಣ್ಣಾನ
ನಿಸ್ತ್ರೇರೆ ಹೋಗಿ ಮಕ ತೊಳದು –ದೂಪಾನಾಕಿ
ಸಾಮಿಯ ಕಂಟ್ಲೀಗೆ ನಡಿ ಬಸವಾ
(ಕಾಡು ಗೊಲ್ಲರ ಜನಪದ ಗೀತೆಗಳು ಪು. ೨೪೧)

ಹಟ್ಟಿ ನಿರ್ಮಾಣದ ಕೆಲಸದಲ್ಲೇ ಕೊಟ್ಟಿಗೆ ನಿರ್ಮಾಣವೂ ಸೇರಿಕೊಂಡಿರುವುದರಿಂದ ಹಟ್ಟಿ ನಿರ್ಮಾಣದಲ್ಲಿ ಅನುಸರಿಸುವ ಕ್ರಮಗಳನ್ನೇ ಇಲ್ಲಿಯೂ ಪಾಲಿಸುವುದುಂಟು. ವಾಸದ ಹಟ್ಟಿ ಅಥವಾ ಮನೆ ಪೂರ್ವದಿಕ್ಕಿನಲ್ಲಿದ್ದರೆ ಉತ್ತರಕ್ಕೆ ಕೊಟ್ಟಿಗೆ ಕಟ್ಟುವುದು ಪದ್ಧತಿ. ಕೊಟ್ಟಿಗೆ ಕಟ್ಟುವ ಮೊದಲು ‘ಆಯಬಲ’[2] ನೋಡಿಸುವ ನಿಯಮವಿದೆ. ಮಂಗಳವಾರ, ಶನಿವಾರ ಹೊರತಾಗಿ ಉಳಿದ ಯಾವ ದಿನದಲ್ಲಾದರೂ ಶಾಸ್ತ್ರ ಕೇಳಬಹುದು. ಯಾರ ಹೆಸರಿಗೆ ಎಂಬುದನ್ನು ಪುರೋಹಿತರು ತಿಳಿಸುತ್ತಾರೆ. ಅದಕ್ಕನುಸಾರವಾಗಿ ಶುಭದಿನದಂದು ಜಾಗ ಗೊತ್ತು ಮಾಡಿ ಈಶಾನ್ಯ ಮೂಲೆಯಲ್ಲಿ ಗುದ್ದಲಿಪೂಜೆ ಮಾಡುವುದು ಸಂಪ್ರದಾಯ. ಕೊಟ್ಟಿಗೆಯ ನಿರ್ಮಾಣಕ್ಕೆ ಬಳಸುವ ಎಲ್ಲ ಸಲಕರಣೆಗಳನ್ನಿಟ್ಟು ಪೂಜಿಸುವುದು ವಿಶೇಷ. ಸುಮಂಗಲಿಯರು ಗಂಗಾಪೂಜೆ ನಿರ್ವಹಿಸಿ ಹಾಲುತುಪ್ಪ ಬಿಟ್ಟನಂತರ ಪುರೋಹಿತರು ಒಂದು ಮೂಲೆಯಲ್ಲಿ ನೆಲ ಅಗೆದು ಪೂಜೆ ಮಾಡುತ್ತಾರೆ. ಮೂರು ಧಾನ್ಯ ಬೇಳೆ ಅಕ್ಕಿ, ರಾಗಿ ಮುಂತಾದುವನ್ನು ಅರಿಷಿಣದ ಬಟ್ಟೆಯಲ್ಲಿ ಗಜ್ಜುಗ ಗಾತ್ರದಲ್ಲಿ ಕಟ್ಟಿ ಹಾಕಿ ಹಾಲು ಬರುವ ಕಡ್ಡಿಗೆ ಕಟ್ಟುತ್ತಾರೆ.

ಪಾಯ ತೆಗೆದಾದ ಮೇಲೆ ಒಂದು ‘ಶುಭದಿನ’ ‘ಶುಭಮುಹೂರ್ತ’ದಲ್ಲಿ ಕೊಟ್ಟಿಗೆ ‘ನಿಲುವು’ ನಿಲ್ಲಿಸುವುದು ಪದ್ಧತಿ. ಆ ನಿಲುವಿಗೆ ಕೋಳಿ ಬಲಿಕೊಡುವುದು ಸಂಪ್ರದಾಯ. ಬಲಿಕೊಟ್ಟ ಕೋಳಿಯ ರಕ್ತವನ್ನು ನಿಲುವಿಗೆ ಸವರುವುದು ರೂಢಿ. ಕೋಳಿಯ ತಲೆಯನ್ನು ನಿಲುವಿನ ಪಕ್ಕದಲ್ಲೆ ಹೂಳುವುದು ವಾಡಿಕೆ.

ಮೂರು ಅಡಿ ಆಳಕ್ಕೆ, ಪಾಯ ತೆಗೆದಾದ ಮೇಲೆ ಕಾಡುಗಲ್ಲು ತುಂಬಿ ಕೆಮ್ಮಣ್ಣು ಮರಳನ್ನು ತೆಳುವಾಗಿ ಕಲಸಿ ನೆಲದ ಮಟ್ಟಕ್ಕೆ ಪಾಯ ತುಂಬುವರು. ಎರಡು ದಿನ ಕಳೆದ ನಂತರ ಚಪ್ಪಟೆ/ ದಿಂಡು ಕಲ್ಲುಗಳಿಂದ ಮೂರು ವರಸೆ ಪಾಯ ಕಟ್ಟಿಸಿರುತ್ತಾರೆ. ಅದರ ಮೇಲೆ ಕೆಮ್ಮಣ್ಣು ಗೋಡೆಯನ್ನು ನಿರ್ಮಿಸುತ್ತಾರೆ. ಗೋಡೆ ಬಿಗಿಯಾಗಿರಲಿ ಎಂದು ಕೆಮ್ಮಣ್ಣು ಮರಳನ್ನು ಹದವಾಗಿ ಕಲಸಿ ದನಗಳಿಂದ ತುಳಿಸುತ್ತಾರೆ. ಮಣ್ಣು ಅಂಟಾಗಿ ಬರುತ್ತದೆ.

ಎರಡು ದಿನ ಕಳೆದ ಮೇಲೆ ಆ ಮಣ್ಣನ್ನು ಗೋರಿ ಗುಡ್ಡೆ ಹಾಕುತ್ತಾರೆ. ಮಾಗಿದ ಮಣ್ಣನ್ನು, ಒಣಗಿದ ನಂತರ, ಮತ್ತೊಂದು ವರಸೆ ಕಟ್ಟುವುದು ಕ್ರಮ. ಪ್ರತಿಯೊಂದು ವರಸೆಗೂ ಅಡ್ಡಲಾಗಿ ಬೂದಿ ಬಿಡುವುದು ಸಂಪ್ರದಾಯ.

ಮಲೆನಾಡು ಪ್ರದೇಶದಲ್ಲಿ ಕೊಟ್ಟಿಗೆಯ ನೆಲಗಟ್ಟನ್ನು ಮನೆಯದಕ್ಕಿಂತ ಒಂದು ಅಡಿಯಾದರೂ ತಗ್ಗಿರಬೇಕೆಂದು ಹೇಳುತ್ತಾರೆ. ಅಲ್ಲಿ ಮೂರು, ಐದು, ಒಂಬತ್ತು ಅಂಕಣದ ಬಿದಿರುಗಳುವಿನಿಂದ ನಿರ್ಮಿಸಲಾಗುವ ಕೊಟ್ಟಿಗೆಗಳು ಕಂಡು ಬರುತ್ತವೆ. ಕಲ್ಲು ಕಂಬಗಳನ್ನು ನೆಟ್ಟು ತೊಲೆಗಳನ್ನು ಎಳೆದು ಅವಕ್ಕೆ ಅಡ್ಡಲಾಗಿ ಎರಡೂ ಕಡೆಗೆ ಬಲಗುಗಳನ್ನು ಬೆಂಗಟೆ ಕಂಬಗಳ ಮೇಲಿನ ಬಲಗಿಗೆ ಬಂಧಿಸುತ್ತಾರೆ. ಆಮೇಲೆ ಬಿದಿರು ಅಥವಾ ಅಡಿಕೆ ಡಬ್ಬಗಳನ್ನು ಅಡಿಗೊಂದರಂತೆ ಇಟ್ಟು ಕಾಡುನಾಡಿನಿಂದ ಬಿಗಿದು ಕಟ್ಟುತ್ತಾರೆ. ಛಾವಣಿಗೆ ಬತ್ತದ ಹುಲ್ಲು ಅಥವಾ ಅಡಿಕೆಯ ಸೋಗೆಯನ್ನು ಹೊದಿಕೆಯಾಗಿ ಹೊದಿಸುತ್ತಾರೆ. ತಿಲ್ಲಲು ಬೇಕಾದ ಹುಲ್ಲು ಮೇವನ್ನು ಶೇಖರಿಸಿಡಲು ಅದೆ ಬಳಕೆಯಾಗುತ್ತದೆ. ಕಟ್ಟಡದ ಸುತ್ತಲೂ ಸೊಂಟದೆತ್ತರಕ್ಕೆ ಕೆಮ್ಮಣ್ಣಿನ ಗೋಡೆ ಹಾಕಿರುತ್ತಾರೆ. ಕೆಲವೆಡೆಗಳಲ್ಲಿ ಬಿದಿರಿನ ತಡಿಕೆಗಳನ್ನು ಕಟ್ಟಿರುವುದುಂಟು. ದನಿನ ಕೊಟ್ಟಿಗೆಗೆ ಎರಡು ಬಾಗಿಲುಗಳಿರುವುದು ಮಲೆನಾಡು ಪ್ರದೇಶದ ವಿಶೇಷ. ಒಂದು ವಾಸ ಮನೆಯ ಕಡೆಗೆ ಮುಖವಾಗಿದ್ದರೆ ಇನ್ನೊಂದು ತಿಪ್ಪೆಗುಂಡಿಯ ಕಡೆಗೆ ಮುಖವಾಗಿರುತ್ತದೆ. ಕೊಟ್ಟಿಗೆ ಗೋಡೆಗಳಿಗೆ ಸುಣ್ಣದ ಬದಲಾಗಿ ಸಗಣಿ ಬಗ್ಗಢ ಬಳಿಯುವುದು ರೂಢಿ. ದನಕರುಗಳ ಕೊಟ್ಟಿಗೆಯ ನೆಲ ಮಣ್ಣಿನದಾಗಿರುತ್ತದೆ. ‘ಜಂಬಿಟ್ಟಿಗೆ’ ಮಣ್ಣನ್ನು ಹಾಕಿ ನೆಲ ಮಾಡಿರುತ್ತಾರೆ. ಅನುಕೂಲ ಇರುವವರು ದನಕರುಗಳು ಗಂಜ ಹುಯ್ದರೆ ರೊಚ್ಚಾಗದಿರಲಿ ಎಂದು ಇಳಿಜಾರಾಗಿ ಕಲ್ಲು ಚಪ್ಪಡಿಗಳನ್ನು ಜೋಡಿಸಿರುತ್ತಾರೆ.[3] ದನಕರುಗಳ ಮೈಗೆ ರೊಚ್ಚೆ ಅಂಟಿಕೊಳ್ಳದಿರಲಿ ಎಂದು ಕಾಡಿನಲ್ಲಿ ದೊರಕುವ ಸೊಪ್ಪು ಸದೆ ತಂದು ಹರಡಿರುತ್ತಾರೆ.[4] ದನಕರುಗಳು ಮೆತ್ತಗೆ, ಬೆಚ್ಚಗೆ ಮಲಗಲಿ ಎಂಬ ಸದಿಚ್ಛೆಯಿಂದ ಹಾಗೆ ಮಾಡುತ್ತಾರೆ.  ದನಗಳಿಗೆ ಮೇಯಲೆಂದು ಹಾಕಿದ ಹುಲ್ಲು ಅವುಗಳ ಕಾಲ ಕಸವಾಗಬಾರದೆಂಬ ಉದ್ದೇಶದಿಂದ ಅಡ್ಡ ಹಲಗೆಯನ್ನೋ, ಒಂದು ಅಡಿ ಎತ್ತರದ ಗೋಡೆಯನ್ನೋ ನಿರ್ಮಿಸಿರುತ್ತಾರೆ.

ಹೀಗೆ ಮೇವು ಸಂಗ್ರಹಿಸಿಡುವ ಭಾಗಕ್ಕೆ ಮಲೆನಾಡಿನಲ್ಲಿ ‘ಗೊಂತಿ’ ಎನ್ನುತ್ತಾರೆ. (ಅರು ದೋಣಿಯಾಕಾರದಲ್ಲಿರುತ್ತದೆ) ಬಯಲು ಪ್ರದೇಶದಲ್ಲಿ ಗೊಂತು, ದ್ವಾದಲಿ ಗೊಂದೋಲಿ[5] ಮುಂತಾಗಿ ಕರೆಯುತ್ತಾರೆ. ಹೀಗೆ ದನದ ಕೊಟ್ಟಿಗೆಯಲ್ಲಿ ದನಗಳು ನಿಲ್ಲುವ ಭಾಗವೊಂದಿದ್ದರೆ ಅವಕ್ಕೆ ಮೇವು ಹಾಕುವ ಭಾಗ ಮತ್ತೊಂದು ಇರುತ್ತದೆ. ಕಗ್ಗಲಿ ಮರದ ಗೂಡಗಳಿಗೆ ಆಕಳು ಎತ್ತುಗಳನ್ನು ಕಟ್ಟುವುದು ಕ್ರಮ. ಈ ಕೊಟ್ಟಿಗೆಯಲ್ಲಿ ಗಂಜಲ ಹದಿರು ಹೋಗಲು ಅನುಕೂಲವಾಗುವಂತೆ ನೆಲವನ್ನೂ ಇಳಿಜಾರಾಗಿ ಮಾಡಿಟ್ಟು ಕೊಟ್ಟಿಗೆಯ ಒಂದು ಮೂಲೆಯಲ್ಲಿ ಗಂಜಲು ಶೇಖರವಾಗುವಂತೆ ಒಂದು ಮಡಕೆಯನ್ನು ಹೂತಿಟ್ಟಿರುತ್ತಾರೆ.

ಮೊದಲೇ ಹೇಳಿರುವಂತೆ, ಮಲೆನಾಡು ಪ್ರದೇಶದಲ್ಲಿ ಆಕಳು, ಎತ್ತು, ಎಮ್ಮೆ ಕೋಣಗಳ ಬಳಕೆ ಉಪಯೋಗಿಸುವಿಕೆಗೆ ಅನುಗುಣವಾಗಿ ಅವುಗಳ ವಸತಿಯನ್ನು ನಿರ್ಮಿಸುವುದುಂಟು. ಹಾಲು ಕರೆಸುವ ಆಕಳುಗಳಿಗೆ; ಗೆಯ್ಮೆ ಮಾಡುವ ಎತ್ತುಗಳಿಗೆ, ಕೋಣಗಳಿಗೆ; ಸಣ್ಣ ಕರುಗಳಿಗೆ, ಉಳಿದ ದನ ಎಮ್ಮೆಗಳಿಗೆ ಬೇರೆ ಬೇರೆ ಕೊಟ್ಟಿಗೆಗಳನ್ನು ನಿರ್ಮಿಸುವುದು ರೂಢಿಯಲ್ಲುಂಟು. ಕರೆಸುವ ದನ, ಎಮ್ಮೆ; ಗೆಯ್ಮೆ ಮಾಡುವ ಎತ್ತುಗಳ ಕೊಟ್ಟಿಗೆಗಳು ಸಾಮಾನ್ಯವಾಗಿ ‘ಬಾಚು ಕೊಟ್ಟಿಗೆ’ ಗಳಾಗಿರುತ್ತವೆ. ಆಯಾ ದಿನದ ಸಗಣಿ ಮತ್ತು ಗೋಮೂತ್ರವನ್ನು ಆಯಾ ದಿನವೇ ಬಾಚಿ ತೆಗೆದು ಶುದ್ಧೀಕರಿಸುವ ಕೊಟ್ಟಿಗೆಗಳಿಗೆ ಬಾಚುಕೊಟ್ಟಿಗೆ ಎಂದೇ ಕರೆಯುತ್ತಾರೆ. ಈ ಬಾಚುಕೊಟ್ಟಿಗೆಗಳಿಗೆ ಮಾತ್ರ ನೆಲಕ್ಕೆ ಚಪ್ಪಡಿ ಹಾಸಿರುತ್ತಾರೆ. ಮೇವು ಶೇಖರಿಸಿಡಲು ‘ಗೋದೂಳ್ಗೆ’ ನಿರ್ಮಿಸಿರುತ್ತಾರೆ. ಹೆಚ್ಚಿನ ಮೇವು ಶೇಖರಿಸಿಡಲು ಅಡ್ಡ ರಚಿಸಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆಳೆತ್ತರದ ಗೋಡೆ ಹಾಕಿರುತ್ತಾರೆ. ಚಳಿ ಮಳೆಯಿಂದ ರಕ್ಷಿಸಲು ಆ ಕ್ರಮ. ಗೆಯ್ಮೆ ಮಾಡದ ದನ ಎಮ್ಮೆಗಳನ್ನು ‘ತುಳುಕಲು ಕೊಟ್ಟಿಗೆ’ ಯಲ್ಲೇ ಕಟ್ಟಿಹಾಕುವುದು ಸಾಮಾನ್ಯ. ಒಣಗಿದ ತರಗೆಲೆ, ಕಾಡುಗಿಡಗಳ ಸೊಪ್ಪು, ಹುಲ್ಲುಗಾವಲಿನ ಹುಲ್ಲು ಕಸ, ಚೆಲ್ಲಲು ಮುಂತಾದುವನ್ನು ಅವುಗಳ ಕಾಲ ತಳಗೆ ಹರಡಿರುತ್ತಾರೆ. ಕೊಟ್ಟಿಗೆಯ ನೆಲ ಸಮತಟ್ಟಾಗಿರುವುದರಿಂದ ಗೋಮೂತ್ರ ಆ ತುಳುಕಲಲ್ಲಿ ಶೇಖರಗೊಂಡಿರುತ್ತದಯೇ ಹೊರತು ಹೊರಗೆ ಹರಿದು ಹೋಗುವುದಿಲ್ಲ. (ಚಿತ್ರ : ಮಾದರಿ-೩)

ಗುಡಿಸಲು ಜೋಪಡಿಗಳಲ್ಲಿ ವಾಸಿಸುವ ದುರ್ಬಲ ವರ್ಗದ ಜನ ನಿರ್ಮಿಸಿಕೊಳ್ಳುವ ವಸತಿಗಳು ಸರಳ ರೀತಿಯವಾಗಿರುತ್ತವೆ. ಅವರು ಅದಕ್ಕಾಗಿ ಬಳಸಿಕೊಳ್ಳುವ ಸಾಮಗ್ರಿಗಳೇ ಅವುಗಳ ಸರಳ ನಿರ್ಮಾಣ ಮಾದರಿಯನ್ನು ಸ್ಪಷ್ಟಪಡಿಸುತ್ತವೆ. ಎರಡು ಚಿಕ್ಕ ಕವೆಗೋಲುಗಳು, ಎರಡು ದೊಡ್ಡ ಮರಗಳು, ಮೂವತ್ತರಿಮದ ಐವತ್ತು ಬಿದಿರುಗಳು, ದಬ್ಬೆಗಳು, ನಾರು, ತೆಂಗಿನಗರಿ ಅಥವಾ ಅಂಚಿಹುಲ್ಲು- ಬಳಕೆಯಾಗುವ ಸಾಧನ ಸಲಕರಣೆಗಳು. ಕವೆಯಿರುವ ಉದ್ದನೆಯ ಮರ ದೊರಕದಿದ್ದರೆ. ಉದ್ದನೆಯ ಮರದ ನೇರಕ್ಕೆ ಹಳೆಯ ನೇಗಿಲು ಮೋಟನ್ನು ಬಳಸುವುದು ಕ್ರಮ. (ಚಿತ್ರ: ಮಾದರಿ-೧) ಹೀಗೆ ಸರಳವಾಗಿ ಕಟ್ಟಿಕೊಂಡಿದ್ದರೂ ಕೊಟ್ಟಿಗೆಯಲ್ಲಿ ‘ಗೊಂತಿ’ಲ್ಲದೆ ದನಕರುಗಳನ್ನು ಸಾಕುವುದಿಲ್ಲ. ‘ಗೊಂತು ಕಿತ್ಕಂಡು ಸಂತೆಗೆ ಹೋಯ್ತು’ ಎಂಬ ಮೂಲಂಗಿ ಕುರಿತ ಒಗಟಿನಲ್ಲಿ ಗೊಂತು ಎಂಬುದು ಗೂಟ ಎಂಬ ಅರ್ಥದಲ್ಲಿ ಬಳಕೆಯಾಗಿರುವುದನ್ನು ಗಮನಿಸಬಹುದು. ಇದು ಕೊಟ್ಟಿಗೆಯಲ್ಲಿ ಗೊಂತು ಮುಖ್ಯ ಎಂಬುದನ್ನು ಹೇಳುತ್ತದೆ.

ಮೈಸೂರು ಜಿಲ್ಲೆಯಲ್ಲಿ ಪ್ರಚಲಿತವಿರುವ ಕೊಟ್ಟಿಗೆ ನಿರ್ಮಾಣ ಮಾದರಿ ಮೇಲಿನದಕ್ಕಿಂತ ಸರಳವಾಗಿ ಕಾಣುತ್ತದೆ. ಗುಡಿಸಲಿನ ಹೊರಗೆ ನಿರ್ಮಿಸುವುದಾದರೆ ಗುಡಿಸಲಿನ ಯಾವುದಾದರೂ ಒಂದು ಮಗ್ಗುಲಲ್ಲಿ ‘ಒಂಟಿ ವಸಾರು’ (ಕಡಿಮಾಡು) ನಿರ್ಮಿಸುವುದು ರೂಢಿ. ನಾಲ್ಕು ಮರದ ಕಂಬಗಳನ್ನು ನೆಟ್ಟು ತೊಲೆಗಳನ್ನು ಬಂಧಿಸಿ ಮರಗಳನ್ನು ಅಡಿಗೊಂದರಂತೆ ಬಿಟ್ಟು ಅಂಜರ ಕಟ್ಟುವರು. ಛಾವಣಿಗೆ ಹೊದಿಕೆಯಾಗಿ ತೆಂಗಿನಗರಿ/ ಅಂಚಿಹುಲ್ಲು/ ಬಳಸುವುದು ಸಾಮಾನ್ಯ. ಅವು ಲಭ್ಯವಿರದಿದ್ದರೆ ‘ಒಡಕೆ’ ಬಿಟ್ಟು ಅದರ ಮೇಲೆ ನೊದೆ ಹಾಸುವರು. ಛಾವಣಿಯ ನೆತ್ತಿಗೆ ‘ಚೇಣಿಕಡ್ಡಿ’ ಮುರಿಯುವುದು ಕ್ರಮ (ಚೇಣಿಕಡ್ಡಿ, ಒಡಕೆ, ನೊದೆ- ಈ ಮೂರು ಹೊಳೆ ಮಗ್ಗುಲಲ್ಲಿ ಬೆಳೆಯುತ್ತವೆ). ಛಾವಣಿ ಗಾಳಿಗೆ ಹಾರಿ ಹೋಗದಂತೆ ಬಿದಿರು ದಬ್ಬೆಗಳನ್ನು ಕಟ್ಟುತ್ತಾರೆ. ದಬ್ಬೆಗಳನ್ನು ಕಟ್ಟಲು ಭೂತಾಳೆ ನಾರನ್ನು ಬಳಸುತ್ತಾರೆ. ಕೊಟ್ಟಿಗೆಯ ಬಾಗಿಲು ಉತ್ತರ ಅಥವಾ ಪೂರ್ವಕ್ಕಿರುವಂತೆ ಸುತ್ತಲೂ ತಡಿಕೆಯ ಮರೆ ಮಾಡಿರುತ್ತಾರೆ. (ಚಿತ್ರ: ಮಾದರಿ-೨)

ಆಕಳು ಮತ್ತು ಕೋಣ ಎಮ್ಮೆಗಳ ಸಂಖ್ಯೆ ವೃದ್ಧಿಸಿದಾಗ ಕೊಟ್ಟಿಗೆ ದೊಡ್ಡದಾಗಿದ್ದರೆ ಅದರಲ್ಲೇ ಒಂದು ಭಾಗವನ್ನು  ‘ಕೂಡು ಕೊಟ್ಟಿಗೆ’ ಎಂದು ಮುಖ್ಯ ಕೊಟ್ಟಿಗೆಯಿಂದ ಬೇರ್ಪಡಿಸುತ್ತಾರೆ. ಹಾಗೆ ಬೇರ್ಪಡಿಸಲು ಮಧ್ಯೆ ಬಲವಾದ ಬಿದಿರಿನ ತಡಿಕೆಯನ್ನು ಹಾಕುತ್ತಾರೆ. ಹಗ್ಗ ಮೂಗುದಾರವಿಲ್ಲದ ಉಳುಮೆಗೆಲಸಕ್ಕೆ ಬಾರದ ಎತ್ತುಗಳು, ಕರುಗಳಿಲ್ಲದ ಕಡಸುಗಳು, ಗೂಳಿಗಳನ್ನು ಕೂಡಿ ಹಾಕಲು ಬಳಸುವ ಕೊಟ್ಟಿಗೆಯನ್ನು ‘ಕೂಡು ಕೊಟ್ಟಿಗೆ’ ಎನ್ನುತ್ತಾರೆ.  ಈ ಕೊಟ್ಟಿಗೆಗೆ ಬಿಗಿಯಾದ ಕದವಿರುವ ಬಾಗಿಲು ಇರುತ್ತದೆ. ಅಲ್ಲದೆ ಈ ಕೊಟ್ಟಿಗೆಯ ಸುತ್ತಲೂ ಈಚಲುಮುಳ್ಳಿನ ತಡಿಕೆ ಕಟ್ಟುವುದುಂಟು. ಸುಮಾರು ನಾಲ್ಕು ಅಡಿ ಎತ್ತರಕ್ಕೆ ದಪ್ಪನೆಯ ಮಣ್ಣು ಗೋಡೆಯನ್ನು ಹಾಕಿರುತ್ತಾರೆ. ಎಷ್ಟೋ ಸಲ ಎತ್ತು ಮತ್ತು ಹೋರಿಗಳನ್ನು ಕಟ್ಟುವ ಸ್ಥಳ ಕೂಡು ಕೊಟ್ಟಿಗೆಯ ಒಂದು ಭಾಗವೇ ಆಗಿರುತ್ತದೆ.

ಕೊಟ್ಟಿಗೆ ಕಟ್ಟಿ ಅದನ್ನು ಸಂರಕ್ಷಿಸಿಕೊಳ್ಳಲಾಗದಾದ ತಮ್ಮ ಜಾನುವಾರಗಳನ್ನು ಬಯಲುಕೊಟ್ಟಿಗೆಯಲ್ಲಿ ಕೂಡಿ ಸಾಕುವವರೂ ಇದ್ದರೆ. ಅದಕ್ಕೆ ನಾಲ್ಕಾರು ಮನೆಯವರು ಒಂದಾಗುತ್ತಾರೆ. ದೊಡ್ಡ ಬಯಲಿನಲ್ಲಿ ಕನಿಷ್ಠ ನೆರಳು ಮಾಡಿ ಕೋಟೆಯಾಕಾರದ ತಡಿಕೆ ಬೇಲಿ ಕಟ್ಟುತ್ತಾರೆ. ಬಿದಿರು/ ಮೆಟ್ಟಲಿ ಬರಲು ಮುಂತಾದ ಸಾಮಗ್ರಿಗಳನ್ನು ಬಳಸಿ ಅದನ್ನು ನಿರ್ಮಿಸಲಾಗುವುದು. ಈ ಬಯಲು ಕೊಟ್ಟಿಗೆಯನ್ನು ಕೆಲವೆಡೆ ‘ಬಯಲುಕೊಠಾರ’ ಎಂದು ಕರೆಯುವುದುಂಟು. ತಡಿಕೆ ಬೇಲಿ ಸಾಮಾನ್ಯವಾಗಿ ಮುಳ್ಳಿನದಾಗಿರುತ್ತದೆ. ಕೊಠಾರದ ಬಾಗಿಲು ಕೂಡ ಬಿದಿರ ಮುಳ್ಳಿನದಾಗಿರುವುದು ವಿಶೇಷ.

ಕೃಷಿಕರಿಗೆ ಆಕಳು ಎತ್ತುಗಳೇ ಸರ್ವಸ್ವ. ಅವುಗಳ ಸುರಕ್ಷಿತತೆಯೇ ಅವರ ಕಾಳಜಿ, ಕಾತರ. ಅವಕ್ಕೆ ರೋಗ ಭಾದಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದುಂಟು. ಅಸೂಯಾ ಪ್ರವೃತ್ತಿಯ ಕೇಡಿಗರು ದನಕರುಗಳಿಗೆ ಅಂಟು ರೋಗಗಳುಂಟಾಗುವಂತೆ, ಹಾಲು ಹಿಂಡದಂತೆ ಮಾಡಲು, ಮಾಟ ಮಾಡುತ್ತಾರೆ ಎಂಬ ಆತಂಕ ಅವರನ್ನು ಸದಾ ಕಾಡುತ್ತಿರುತದೆ. ಅದಕ್ಕೆ ಗೊಲ್ಲರು ಅಥವಾ ಸೋಲಿಗರನ್ನು ಬರಮಾಡಿಕೊಂಡು ಕೊಟ್ಟಿಗೆಗೆ ಬಂದೋಬಸ್ತ್‌ಮಾಡಿಸುವ ಪರಿಪಾಠವುಂಟು. ಅದನ್ನು ‘ದೆಸೆಕಟ್ಟು’ ಎನ್ನುತ್ತಾರೆ.[6]

ಕೊಟ್ಟಿಗೆ ಸಂಬಂಧ ಪ್ರಚಲಿತವಿರುವ ನಿಷೇಧಗಳು:

೧. ಕೊಟ್ಟಿಗೆಯಲ್ಲಿ ಉಗುಳಬಾರದು, ಹೇಸಿಗೆ ಮಾಡಬಾರದು, ಬಸವಣ್ಣ ಬಿದ್ದುಕೊಳ್ಳುವ ಜಾಗ.

೨. ಕೊಟ್ಟಿಗೆಗೆ ಚಪ್ಪಲಿ ಕಾಲಲ್ಲಿ ಹೋಗಬಾರದು.

೩. ಹೊಸ ಆಕಳನ್ನು ಕೊಂಡು ತರುವಾಗ ಹಗ್ಗದ ಕಾಸು ಕೊಡದೆ ಬರಬಾರದು.

೪. ಕಲಗಚ್ಚಿಗೆ ಮಾಂಸಾಹಾರ ಪದಾರ್ಥವನ್ನು ಬೆರೆಸಬಾರದು.

ಕೊಟ್ಟಿಗೆ ಸಂಬಂಧ ಪ್ರಚಲಿತವಿರುವ ನಂಬಿಕೆಗಳು:

೧. ಸಗಣಿ ಮತ್ತು ಗೋಮೂತ್ರ ತುಳಿದುಕೊಂಡು ಒಳಗೆ ಬಂದರೆ ಒಳ್ಳೆಯದು.

೨. ಹಟ್ಟಿಯಲ್ಲಿ ಕೊಟ್ಟಿಗೆ ಇದ್ದರೆ ಸಂಪತ್ತು ಹೆಚ್ಚುತ್ತದೆ.

೩. ಕೊಟ್ಟಿಗೆಯಲ್ಲಿ ಆಕಳು ಎತ್ತುಗಳ ಸಂಖ್ಯೆ ಹೆಚ್ಚಿದರೆ ಮನೆಗೆ ಹೆಚ್ಚೊಕಲು ಇದ್ದಂತೆ.

೪. ಮುಟ್ಟಾದವರು ಕೊಟ್ಟಿಗೆಯಲ್ಲಿ ಕುಳಿತುಕೊಂಡರೆ ಶುದ್ಧರಾದಂತೆಯೇ.

೫. ಹೆರಿಗೆ ಕಷ್ಟಾದರೆ ಕೊಟ್ಟಿಗೆಯಲ್ಲಿ ಮಲಗಿಸಬೇಕು, ಹೆರಿಗೆ ಸುಗಮವಾಗುತ್ತದೆ.

೬. ಗೊಡ್ಡು ದನ ಕಟ್ಟೋದಕ್ಕಿಂತ ಖಾಲಿ ಕೊಟ್ಟಿಗೆ ಇರೋದು ಒಳ್ಳೆಯದು.

೭. ಹೊಸ ಆಕಳನ್ನು ಕೊಟ್ಟಿಗೆ ಪ್ರವೇಶ ಮಾಡಿಸುವಾಗ ಕೊಟ್ಟಿಗೆಯನ್ನು ಶುದ್ಧೀಕರಿಸಿ ದೀಪ ಹೊತ್ತಿಸಿ ಆ ರಾಸುವಿಗೆ  ಪೂಜೆ ಮಾಡಿ ಬಲಗಾಲು ಮುಂದಿರಿಸಿ ಹೋಗಿಸಬೇಕು.

೮. ಕೊಟ್ಟಿಗೆಯ ಆಯಬಲ ನೋಡಿಸುವ ಕಾಲ ಭೋಜನ ವೇಳೆಯಾಗಿದ್ದರೆ ಒಳ್ಳೆಯದು.

೯. ಸೂತಕ ಕಳೆದುಕೊಳ್ಳುವಾಗ ಗೋವಿನಗಂಜಲ, ಸಗಣಿಯನ್ನು ಬಳಿಯುವುದು, ಬಳಿಸುವುದು ಶ್ರೇಷ್ಠ.

೧೦. ಎತ್ತು ನೊಗಸಮೇತ ಹಟ್ಟಿಯೊಳಗೆ ಬರಬಾರದು, ಕೆಡುಕಾಗುತ್ತದೆ.

೧೧. ಹೊಸ ಆಕಳನ್ನು ಕೊಂಡು ತರುವಾಗ ಕೊಟ್ಟಿಗೆ ಬಾಗಿಲ ಬಲಭಾಗದಿಂದ ಹೊಡೆದುಕೊಂಡು ಹೋಗಬೇಕು.

ಕೊಟ್ಟಿಗೆ ಸಂಬಂಧ ಪ್ರಚಲಿತವಿರುವ ಗಾದೆಗಳು:

೧. ನೆರೆಮನೆ ಹಾಳಾಗಲಿ; ಕರಕಟ್ಟಾಕೆ ತಾವಾಗಲಿ.

೨. ಇಕ್ಕೋರು ಸರಿಯಾಗಿದ್ರೆ ಕೊಟ್ಟಿಗೆಯಾದ್ರು ಸೈ.

೩. ಕೊಟ್ಟಿಗೇಲಿ ಹೋರಿ; ಮನೇಲಿ ಮಾರಿ.

೪. ಕಣ್ಮುಂದಿದ್ರೆ ದನ ಬೆನ್ ಹಿಂದಿದ್ರೆ ಮಕ್ಳು

ದೊಡ್ಡಿ: ಪ್ರಾಣಿ ವಸತಿಗಳಲ್ಲಿ ಗಮನಿಸಬೇಕಾದ ವಿಶಿಷ್ಟವೂ ತಾತ್ಪೂರ್ತಿಕವೂ ಆದ ವಸತಿ ವ್ಯವಸ್ಥೆಯೆಂದರೆ ದೊಡ್ಡಿ. ಹೊಲಗದ್ದೆಗಳ ಬೇಲಿ ಮುರಿದು ಬೆಳೆಯನ್ನು ಮೇಯುವ ಪೊಲಿದನಗಳನ್ನು ಹುಲ್ಲು ನೀರು ಒದಗಿಸದೆ ಕೂಡಿ ಹಾಕಲು ಬಳಸುವ ಸಾರ್ವಜನಿಕ ಕೊಟ್ಟಿಗೆ ‘ದೊಡ್ಡಿ’ ಎಂದು ಹೆಸರು.

ಕಲ್ಲುಕಂಬ-ಬಿದಿರುಗಳುವಿನ ‘ಮಾಡು’. ಅದಕ್ಕೆ ನೆಲ್ಲುಲ್ಲು ಅಥವಾ ಅಡಿಕೆ ಸೋಗೆ ಹೊದಿಕೆ. ಕೊಟ್ಟಿಗೆಯ ಮೂರು ದಿಕ್ಕಿಗೆ ಗೋಡೆಯಿದ್ದು ಒಂದು ಕಡೆ ಮಾತ್ರ ತೆರೆದಿರುತ್ತದೆ. ತೆರೆದ ಪಕ್ಕದ ಎರಡೂ ತುದಿಯನ್ನು ಕೋಟೆಯಾಕಾರದ ಮುಳ್ಳಿನ ಬೇಲಿ[7] ಅಪ್ಪಿಕೊಂಡಿರುತ್ತದೆ. ಮುಳ್ಳಿನ ತಡಿಕೆಯ ಒಂದು ಬಾಗಿಲು ಕೂಡ ಇರುತ್ತದೆ. ಕಾಡಿನ ನಡುವೆ ಇದ್ದರೆ ಇಡೀ ರಾತ್ರಿ ಬೆಂಕಿ ಉರಿಸಲು ಕೊಂಡದ ಏರ್ಪಾಡಿರುತ್ತದೆ. (ಚಿತ್ರ-೫)

ಕೊಟ್ಟಿಗೆಯಿಂದ ತಪ್ಪಿಸಿಕೊಂಡು ಹೋಗಿ ಹೊಲಗದ್ದೆಗಳಲ್ಲಿ ಬೆಳೆ ತಿಂದು ಹಾಳು ಮಾಡುತ್ತಿದ್ದರೆ, ಅಂಥ ದನಗಳ ವಾರಸುದಾರರು ಮುತುವರ್ಜಿ ವಹಿಸದಿದ್ದರೆ ಅಂಥವನ್ನು ದೊಡ್ಡಿಗೆ ಅಟ್ಟುವುದು ಕ್ರಮ. ಆ ದನಗಳಿಗಾಗಿ ಹುಡುಕಿ ಸೋತ ವಾರಸುದಾರರು ಕೊನೆಗೂ ಅವನ್ನು ದೊಡ್ಡಿಯಲ್ಲಿ ಪತ್ತೆ ಮಾಡಿ ನಿಗದಿ ಪಡಿಸಿದ ದಂಡತೆತ್ತು ಬಿಡಿಸಿಕೊಂಡು ಹೋಗುವುದು ನಿಯಮ.

ದೊಡ್ಡಿ ಒಂದು ರೀತಿಯಲ್ಲಿ ಬಯಲು ಬಂಧೀಖಾನೆ ಇದ್ದ ಹಾಗೆ.

ದೊಡ್ಡಿ ಸಂಬಂಧ ಪ್ರಚಲಿತವಿರುವ ಗಾದೆಗಳು:

೧. ದೊಡ್ಡಿ ಕಸ ತೆಗೆದು ದೊಡ್ಡೊನಾಗಿರೋನ್ಯಾರು.

೨. ನಾನು ನಿನ್ನ ಮನೇಲಿ ಇಟ್ಟುಕೊಂಡಿರೋದು ದೊಡ್ಡಿ ದನೀನಂಗೆ.

ಪ್ರಾಣಿ ವಸತಿಗಳಲ್ಲಿ ಗಮನಿಸಬೇಕಾದ ಮತ್ತೊಂದು ಸರಳ ನಿರ್ಮಾಣ ತಂತ್ರದ ವಸತಿ ಎಂದರೆ ಕುರಿರೊಪ್ಪ. ಕುರಿಗಳನ್ನು ಕೂಡಿ ಹಾಕುವ ಜಾಗಕ್ಕೆ ‘ರೊಪ್ಪ’ ಎಂದು ಹೆಸರು. ಇದನ್ನು ಕುರಿಹಟ್ಟಿ, ಕುರಿದೊಡ್ಡಿ, ಕುರಿಕೊಪ್ಪು, ಕುರಿಹುಂಡಿ ಎಂದು ಕರೆಯುವ ವಾಡಿಕೆಯುಂಟು. ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ‘ಕುರಿ ಹಟ್ಟಿ’ ಎಂಬ ಮಾತೇ ಹೆಚ್ಚು ಜನಪ್ರಿಯ. ಇದನ್ನು ಈ ಕೆಳಗಿನ ತ್ರಿಪದಿ ಸಮರ್ಥಿಸುತ್ತದೆ.:

ಹತ್ತುಸಾವಿರನಸರಿ ಹೊಕ್ಕಾವು ಕುರಿಹಟ್ಟಿಗೆ
ಕತ್ತಲ ಮಾಡಾಗವುದಾವೆ –ಕೂಡಾಲ
ಅಪ್ಪಾಗೆ ಕರಿಯೋ ನೊರಿಹಾಲು
(ಕಾಡುಗೊಲ್ಲರ ಜನಪದ ಗೀತೆಗಳು. ಪು.೧೯೪)

ಬೇರೆಲ್ಲಾ ಪ್ರಾಣಿ ವಸತಿಗಳನ್ನು ನಿರ್ಮಿಸಿಕೊಳ್ಳುವಂತೆ ಕುರಿರೊಪ್ಪಗಳನ್ನು ಕೂಡ ಲಭ್ಯವಿರುವ ಬಿದಿರು ಸಾಮಗ್ರಿಗಳಿಂದಲೇ ನಿರ್ಮಿಸಿಕೊಳ್ಳುವುದು ಪ್ರಚಲಿತವುಂಟು. ಆದರೆ ಈ ರೊಪ್ಪಗಳು ತಾತ್ಕಾಲಿಕ ನಿರ್ಮಾಣಗಳಾಗಿರುವುದು ವಿಶೇಷ. ನಾಲ್ಕು ಕಂಬಗಳ ‘ಒಂಟಿ ವಸಾರು’ (ಕಡಿಮಾಡು) ರಚಿಸಿ ಅದರ ಸುತ್ತಲೂ ಜಾಲಿಮುಳ್ಳಿನ ತಡಿಕೆ ಬೇಲಿ ಹಾಕಿ ಒಂದೆಡೆ ಮಾತ್ರ ಮುಳ್ಳಿನ ಬಾಗಿಲಿಟ್ಟಿರುತ್ತಾರೆ. ಜಾಲಿ ಮುಳ್ಳಿಲ್ಲದೆಡೆಗಳಲ್ಲಿ ಬಿದಿರಿನ ತಳಿಯನ್ನು ನೆಟ್ಟಿರುತ್ತಾರೆ. ಈ ತಳಿಯನ್ನು ಬಿದಿರು ಮುಳ್ಳಿನ ಸಣ್ಣ ಸಣ್ಣ ಕಡ್ಡಿಗಳಿಂದ ರಚಿಸಿರುತ್ತಾರೆ. (ಚಿತ್ರ-೬) ಬಿದಿರು, ಜಾಲಿ, ಬೇಲಿ, ಊಡಿಗೆ- ಬಳಕೆಯಾಗುವ ಮುಳ್ಳುಗಳು. ಮುಳ್ಳಿನ ತಡಿಕೆ ಸಾಮಾನ್ಯವಾಗಿ ಆಳೆತ್ತರವಿರುತ್ತದೆ. ಹೀಗೆ ನಿರ್ಮಿಸಿದ ರೊಪ್ಪದಲ್ಲಿ ಎರಡು ಭಾಗಗಳಿರುತ್ತವೆ; ೧. ಒಳರೊಪ್ಪ ಮತ್ತು ೨. ಹೊರರೊಪ್ಪ. ಎರಡಕ್ಕೂ ಒಂದೊಂದು ಮುಳ್ಳಿನ ತಡಿಕೆ ಬಾಗಿಲುಗಳಿರುತ್ತವೆ. ಒಳರೊಪ್ಪದಲ್ಲಿ ರಾತ್ರಿ ಹೊತ್ತು ಮಲಗಲು ಕುರಿಕಾವಲುಗಾರನಿಗೆ ಮಂಚವಿರುತ್ತವೆ. ಅದಕ್ಕೆ ‘ಕುರಿಮಂಚಿಕೆ’ ಎಂದು ಕರೆಯುತ್ತಾರೆ.

ಕುರಿ ಸಾಗಾಣಿಕೆಯನ್ನೇ ಪ್ರಧಾನ ಕಸುಬಾಗಿಸಿಕೊಂಡಿರುವ ಕಾಡುಗೊಲ್ಲರಲ್ಲಿ ಕುರಿ ಮತ್ತು ಮೇಕೆಗಳಿಗೆ ಪ್ರತ್ಯೇಕ ರೊಪ್ಪ ನಿರ್ಮಿಸುವುದು ಪದ್ಧತಿ. ಈ ರೊಪ್ಪಗಳಲ್ಲಿ ಸಾಮಾನ್ಯವಾಗಿ ಒಂದೊಂದು ಜಾಲಿಯ ಮರವನ್ನಾದರೂ ಬೆಳೆಸಿರುತ್ತಾರೆ. ಜಾಲಿಯ ಸೊಪ್ಪು ಕುರಿಗಳಿಗೆ ಉತ್ತಮ ಆಹಾರ. ಕಾಡುಗೊಲ್ಲರು ಈ ರೊಪ್ಪಗಳನ್ನು ವರ್ಷಕ್ಕೆ ಎರಡು ಬಾರಿಯಾದರೂ ಬದಲಾಯಿಸುತ್ತಾರೆ. ಕುರಿಗಳು ಗಂಜಲ ಹುಯ್ಯುವುದರಿಂದ ಉಂಟಾಗುವ ವಾಸನೆಗೆ ಉಣ್ಣೆಗಳು ಹತ್ತುತ್ತವೆ ಎಂಬುದೇ ಅದಕ್ಕೆ ಕಾರಣ. ಕುರಿಯ ಗಂಜಲ ಉಷ್ಣವಾಗಿದ್ದರೆ ಮೇಕೆಯ ಗಂಜಲ ಅಷ್ಟೇ ಚುಂಗು ಎಂದೂ ಆ ಗಂಜಲದ ವಾಸನೆ ಅವುಗಳ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದೂ ಈ ರೊಪ್ಪಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಬದಲಾಯಿಸುವುದು ರೂಢಿ.

ಪೋಲಿ ಕುರಿಗಳನ್ನು ಕಟ್ಟಿ ಹಾಕಲು ಮರದ ಕೊಂಟು ಅಥವಾ ಕಗ್ಗಲಿ ಗೂಟಗಳನ್ನು ಬಳಸುವುದು ರೂಢಿಯಲ್ಲಿದೆ. ದೊಡ್ಡ ಕುರಿ/ ಮೇಕೆಗಳು ಚಿಕ್ಕ ಮರಿಗಳನ್ನು ತುಳಿದು ಹಾಕದಿರಲಿ ಎಂದೂ ಬೇರೆ ಕುರಿ / ಮೇಕೆಗಳೊಡನೆ ಕಾದಾಡದಿರಲಿ ಎಂದೂ ಈ ಕ್ರಮ.

ಈ ರೊಪ್ಪಗಳನ್ನು ಎಲ್ಲ ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ಪೂಜಿಸುವ ಸಂಪ್ರದಾಯವಿದೆ. ಕುರಿಗಳ ಸಂತತಿ ಬೆಳೆಯಬೇಕೆಂಬ ಪ್ರಬಲ ಹಂಬಲವೇ ಅದಕ್ಕೆ ಪ್ರೇರಣೆ.

ಕುರಿಗಳ ಸಂಖ್ಯೆ ಕಡಿಮೆಯಿದ್ದಲ್ಲಿ ಅವನ್ನು ಕೋಳಿಗಳನ್ನು ಕೂಡಿಹಾಕುವಂತೆ ಬಿದಿರಿನ ಪಂಜರದೊಳಗೆ ಕೂಡಿ ಹಾಕುವುದುಂಟು. ಈ ಪಂಜರಕ್ಕೆ ‘ಗುಬ್ಬ’ ಎಂದು ಹೆಸರು.

ನಾಲ್ಕೈದು ಕುರಿ ಸಾಕುವವರು ಅವನ್ನು ಹಟ್ಟಿಯ ಕಂಬಗಳಿಗೆ ಕಟ್ಟಿ ಹಾಕಿ ಸಾಕುವುದು ಪದ್ಧತಿ. ಮೇವನ್ನು ಒಂದು ಹಗ್ಗದಿಂದ ನೇತು ಬಿಟ್ಟಿರುತ್ತಾರೆ.

ಕುರಿಗಳನ್ನು ಒಂದೆಡೆ ಕೂಡಿಹಾಕುವುದರಿಂದ ‘ಕುರಿದೊಡ್ಡಿ’ ಎನ್ನು


[1] ಕನ್ನಡ ಜನಪದ ವಿಶ್ವಕೋಶ. ಸಂ.೧ ಸಂ. ಚಂದ್ರಶೇಖರ ಕಂಬಾರ. ಪು.೫೧೩

[2]       ‘ಆಯಬಲ’ ಸಾಮಾನ್ಯವಾಗಿ ಒಂದು ತಲೆಗೆ ಮಾತ್ರ ನಿಗದಿಯಾಗಿರುತ್ತದೆ. ಅವಧಿ ಮುಗಿದ ಮೇಲೆ ಕೊಟ್ಟಿಗೆಗೆ ಕೇಡಾಗದಿರಲಿ ಎಂದು ಮತ್ತೆ ಆಯಬಲ ನೋಡಿಸುವುದು ಪದ್ಧತಿ.

[3] ತೊಟ್ಟಿಹಟ್ಟಿಗಳಲ್ಲಿ ಗೆಯ್ಮೆ ಮಾಡುವ ಎತ್ತುಗಳನ್ನು ಕಟ್ಟಲು ಬಳಸುವ ಹಜಾರದಲ್ಲಿ ನೆಲಕ್ಕೆ ಚಪ್ಪಟೆಯಾದ ಚಿಕ್ಕ ಚಿಕ್ಕ ಕಲ್ಲುಗಳನ್ನು ಹಾಸುವುದುಂಟು. ತೊಪ್ಪೆ ಗಂಜಲ ಬೀಳದಂತೆ ಎಚ್ಚರ ವಹಿಸುತ್ತಾರೆ.

[4]       ಮಲೆನಾಡಿನಲ್ಲಿ ಇದನ್ನು ‘ತುಳುಕಲು ಕೊಟ್ಟಿಗೆ’ ಎನ್ನುತ್ತಾರೆ.

[5] “     ಗೊಂದಿಗೇಲಿ ಮಲಗಿದ ನಾಯಿ ತಾನೂ ಹುಲ್ಲು ತಿನ್ನದು ತಿನ್ನೋದಕ್ಕೂ ಬಿಡದು” ಎಂಬ ಗಾದೆ ಜನರ ವರ್ತನೆಯನ್ನು ಕುರಿತದ್ದಾದರೂ ಗೊಂದ್ಗೇಲಿ ಮೇವು-ಹಾಕಲು ನಿರ್ಮಿಸುವ ಸಾಧನ ಎಂದು ಸ್ಪಷ್ಟಪಡಿಸುತ್ತದೆ.

[6]      ಒಂದು ಕುಡಿಕೆಗೆ ಜಾಲಿಮರದ ತುಂಡನ್ನು ಕಟ್ಟಿ ಅದರೊಳಗೆ ಕೆಲವು ನಾರು ಬೇರುಗಳನ್ನು ಹಾಕಿ ಅದರ ಬಾಯಿಗೆ ಬಿಳಿವಸ್ತ್ರ ಹೊದಿಸಿ ದಾರದಿಂದ ಅದನ್ನು ಸುತ್ತಿರುತ್ತಾರೆ. ಅರಿಶಿನ ಚಂದ್ರ ಲೇಪಿಸಿ ಪೂಜೆಗೈದು ಕೊಟ್ಟಿಗೆಯ ಈಶಾನ್ಯಮೂಲೆಯಲ್ಲಿ ಹೂಳುತ್ತಾರೆ.
ಉಣ್ಣೆಯಾಗದಂತೆ ಪ್ರತಿಮಾಟ ಮಾಡಿಸುವಾಗ ಸತ್ತ ಕತ್ತೆಯ ಕಾಲಿನ ಮೂಳೆಯೊಂದನ್ನು ಭಾನುವಾರದಂದು ಹುಡುಕಿತಂದು ಅದೇ ದಿನ ಕೊಟ್ಟಿಗೆಯನ್ನು ಶುದ್ಧಗೊಳಿಸಬೇಕು. ಕತ್ತೆಯ ಕಾಲನ್ನು ಸೀಗೆ ಹುಡಿಯಿಂದ ತೊಳೆದು ಅರಿಶಿನ ಲೇಪಿಸಿ ತೊಳೆಯಬೇಕು. ಸಾರಿಸಿರುವ ಜಾಗದಲ್ಲಿ ರಂಗೋಲಿ ಬಿಟ್ಟು ಗೊಂಬೆದೇವರನ್ನಿಟ್ಟು ಪೂಜಿಸಿ ಕೊಟ್ಟಿಗೆಯ ಈಶಾನ್ಯ ದಿಕ್ಕಿನಲ್ಲಿ ಕತ್ತೆ ಕಾಲನ್ನು ಹೂಳಬೇಕು.

[7] ಕಗ್ಗಲಿ ಗೂಟಗಳನ್ನು ಬಳಸಿ ನೆಡುಬೇಲಿ ಮಾಡಿರುತ್ತಾರೆ. ಕ್ರಮೇಣ ಅದೇ ಹುಟ್ಟು ಬೇಲಿಯಾಗುತ್ತದೆ.