ಮನುಷ್ಯನ ಸಾಂಸ್ಕೃತಿಕ ಇತಿಹಾಸವನ್ನು ತಿಳಿಯಲು ಅನೇಕ ಸಾದನಗಳಿವೆ. ಭೌತಿಕ ಸಂಸ್ಕೃತಿಯ (Material Culture) ವ್ಯಾಪ್ತಿಯಲ್ಲಿ ಬರುವ ಜನಪದ ವಾಸ್ತುಶಿಲ್ಪದ (Folk Architecture) ಅಧ್ಯಯನ ಅವುಗಳಲ್ಲಿ ಒಂದು. ಈ ಜನಪದ ವಾಸ್ತುಶಿಲ್ಪವು ಪರಂಪರಾಗತ ರೀತಿಯ ಕಟ್ಟಡಗಳು, ಕಟ್ಟಡ ವಿನ್ಯಾಸಗಳು, ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಧನ ಸಲಕರಣೆಗಳು, ತಂತ್ರ ಕೌಶಲಗಳು, ಆಯ್ಕೆ ಮಾಡಿಕೊಳ್ಳುವ ನಿವೇಶನ, ಈ ನಿವೇಶನದ ಮೇಲೆ ನಿರ್ಮಿಸಲಾಗುವ ಅನೇಕಾನೇಕ ಮಾದರಿಯ ವಸತಿಗಳು, ಆ ವಸತಿಗಳ ಬಳಕೆ ಮತ್ತು ವಿವಿಧೋದ್ಧೇಶಗಳನ್ನು ಒಳಗೊಳ್ಳುತ್ತದೆ. ಜನಪದ ಸಂಸ್ಕೃತಿಯ ಜೀವಂತ ಸೆಲೆಗಳಲ್ಲಿ ಒಂದಾದ ಈ ಜನಪದ ಶಿಲ್ಪವನ್ನು ಹೊರತು ಪಡಿಸಿದ ಯಾವುದೇ ಅಧ್ಯಯನ ಸಮಗ್ರ ಎನಿಸುವುದಿಲ್ಲ.

ಪ್ರಾಣಿ ವಸತಿ ಕುರಿತು ಅಧ್ಯಯನ ನೇರವಾಗಿ ಜನಪದ ವಾಸ್ತು ಶಿಲ್ಪದ ಅಧ್ಯಯನವೇ ಆಗಿದೆ. ಒಂದು ವಿಧದಲ್ಲಿ ಅದು ಮಾನವನ ಸಾಂಸ್ಕೃತಿಕ ಬದುಕಿನ ಇತಿಹಾಸದ ಅಧ್ಯಯನವೂ ಹೌದು. ಮುಖ್ಯವಾಗಿ ಭೌಗೋಳಿಕ ಕಾರಣಕ್ಕಾಗಿ ವಿಶಿಷ್ಟ ವಿನ್ಯಾಸ ಮತ್ತು ಮಾದರಿಗಳ ವಸತಿಗಳು ಕರ್ನಾಟಕದ ಉದ್ದಗಲಕ್ಕೂ ಕಂಡು ಬರುವುದರಿಂದ ಪ್ರಾಣಿ ವಸತಿ ಕುರಿತ ಅಧ್ಯಯನ ತುಂಬ ಮಹತ್ವದ್ದೇ ಆಗಿದೆ.

ದಕ್ಷಿಣ ಕರ್ನಾಟಕದ ಪ್ರಾಣಿ ವಸತಿ-ತುಂಬ ವ್ಯಾಪಕವಾದ ವಿಷಯ. ಇದಕ್ಕೆ ಸಂಬಂದಿಸಿದಂತೆ ಪ್ರಚಲಿತವಿರುವ ಪರಂಪರಾಗತ ಅರಿವನ್ನು (lore) ಅನೇಕ ದೃಷ್ಟಿಗಳಿಂದ ಅಭ್ಯಸಿಸಬಹುದಾಗಿದೆ. ಈಬರಹ ಪ್ರಾಣಿ ವಸತಿಯ ಬಗೆಗಿನ ಪ್ರಾಥಮಿಕ ವಿಷಯಗಳನ್ನಷ್ಟೇ ಪ್ರಸ್ತಾಪಿಸುತ್ತದೆ.

ಕರ್ನಾಟಕದಲ್ಲಿ ಪ್ರಾಣಿವಸತಿ ಕುರಿತಂತೆ ಪ್ರತ್ಯೇಕ ದಾಖಲಾತಿ ಮತ್ತು ಅಧ್ಯಯನ ಏನೂ ನಡೆದಿಲ್ಲ. ಸಾಹಿತಿಗಳು ತಮ್ಮ ಕತೆ, ಕಾದಂಬರಿಗಳಲ್ಲಿ ಪ್ರಾಸಂಗಿಕವಾಗಿ ಅಲ್ಲಲ್ಲಿ ಬೇರೆ ಬೇರೆ ಪ್ರಾಣಿಗಳ ವಸತಿಗಳ ಬಗೆಗೆ ಮಾಹಿತಿ ನೀಡುತ್ತಾ ತಮ್ಮ ಸುತ್ತಿನಲ್ಲಿ ಪ್ರಚಲಿತವಿರುವ ವಸತಿ ಮಾದರಿಗಳ ಬಗೆಗೆ ಸೂಚನೆಗಳನ್ನಷ್ಟೇ ನೀಡಿರುವುದುಂಟು.

ಮನುಷ್ಯನಿಗೆಂತೋ ಅಂತೆಯೇ ಪ್ರಾಣಿಗಳಿಗೂ ಗಾಳಿ ನೀರು ಆಹಾರಗಳಂತೆ ವಸತಿಯೂ ಅವಶ್ಯಕ ವಾಸಿಸಲು ಒಂದು ಭದ್ರವಾದ ನೆಲೆಯನ್ನು ಕಂಡು ಕೊಂಡಂದಿನಿಂದ ಮಾನವನಿಗೆ ತನ್ನ ಸಾಕು ಪ್ರಾಣಿಗಳ ಸುರಕ್ಷಿತೆಗೂ ವಸತಿ ಅತ್ಯಂತ ಅವಶ್ಯಕ ಎನಿಸಿತು. ತನಗೆ ಮತ್ತು ತನ್ನ ಸಾಕು ಪ್ರಾಣಿಗಳಿಗೆ ವಸತಿ ಅಗತ್ಯವನ್ನು ಮನಗಂಡ ಆರಂಭಿಕ ಮಾನವ ಮೊದಮೊದಲು ಗವಿ, ಗುಹೆ, ಪೊಟರೆಗಳಲ್ಲಿ ನೆಲೆಸಿ ನಂತರ ಸೊಪ್ಪು ಗರಿಗಳ ವಸತಿಯನ್ನು ನಿರ್ಮಿಸಲಾರಂಭಿಸಿದ. ಅನಂತರ ಅದನ್ನು ಜೋಪಡಿ, ಗುಡಿಸಲುಗಳನ್ನಾಗಿ ಸುಧಾರಿಸಿದ. ಅವನ ಬುದ್ಧಿ ವಿಕಾಸವಾಗುತ್ತಾ ಬಂದರೆ ಮಳೆ ಚಳಿ, ಗಾಳಿ ಬೆಂಕಿಂಗಳಿಂದ ತನ್ನನ್ನು ಮತ್ತು ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ತುಸು ಹೆಚ್ಚು ಕಾಲ ಶಾಶ್ವತವಾಗಿ ಬಾಳುವಂತಹ ವಸತಿಯನ್ನು ನಿರ್ಮಿಸತೊಡಗಿದ. ಹೀಗೆ ಖಾಯಂ ಆದ ಒಂದು ನೆಲೆಯ ಅಗತ್ಯವನ್ನು ಮನಗಂಡವರೆಲ್ಲ ಪರಸ್ಪರರಿಗೆ ಆಸರೆಯಾಗುವ ದೃಷ್ಟಿಯಿಂದ ಒಂದೆಡೆ ವಾಸಿಸಲು ನಿರ್ಧರಿಸಿದರು. ಇದರ ಫಲವೇ ವಸತಿ ಸಮುಚ್ಛಯಗಳು.

ಒಂದೆಡೆ ನೆಲೆನಿಂತು ಪಶುಪಾಲನೆ ಮತ್ತು ಒಕ್ಕಲುತನವನ್ನು ಕಸುಬಾಗಿಸಿಕೊಂಡ ಮೇಲೆ ಮನುಷ್ಯ ಇನ್ನೂ ಹೆಚ್ಚು ಶಾಶ್ವತವಾಗಿ ಉಳಿಯು ಕಟ್ಟಡಗಳನ್ನು ನಿರ್ಮಿಸತೊಡಗಿದ. ಮೊದಮೊದಲು ಮುಳ್ಳು ಬಿದಿರಿನ ತಡಿಕೆಗೋಡೆಯ ‘ಸೂರು’ಗಳು ಸಾಕೆನಿಸಿದವು. ಅವುಗಳ ನಿರ್ಮಾಣ ರೀತಿ ಸರಳ ಹಾಗೂ ಸುಲಭವಿದ್ದುದು ಅದಕ್ಕೆ ಕಾರಣ. ಹೆಚ್ಚು ಹೆಚ್ಚು ನಾಗರಿಕನಾದಂತೆಲ್ಲಾ ಮನುಷ್ಯ ತನ್ನ ವಸತಿಯನ್ನು ನಿರ್ಮಿಸಿಕೊಂಡ ರೀತಿಯಲ್ಲೇ ದನದ ಕೊಟ್ಟಿಗೆಗಳಿಗೂ ಮಣ್ಣಿನ ಗೋಡೆ ನಿರ್ಮಿಸಲಾರಂಭಿಸಿದ. ಅದರಿಂದ ದನಕರುಗಳು ಚಳಿ-ಮಳೆಯಲ್ಲಿ ಬೆಚ್ಚಗೆ ಮಲಗುವಂತಾಗಿ ಅವುಗಳ ಸುರಕ್ಷತೆಯೂ ಸುಗಮ ಎನಿಸಿತು. ಆರಂಭಿಕ ದಿನಗಳಲ್ಲಿ ಕೃಷಿಗೆ ಯೋಗ್ಯವಾದ ಭೂಮಿಯನ್ನಾಗಿ ಪರಿವರ್ತಿಸುವುದಕ್ಕಾಗಿ ಸಮೃದ್ಧವಾಗಿದ್ದ ಕಾಡನ್ನು ಕಡಿಯುವುದು ಅವನಿಗೆ ಅನಿವಾರ್ಯವಾಯಿತು. ಹಾಗೆ ಕಡಿದ ಕಾಡಿನ ಸಾಮಗ್ರಿಗಳನ್ನು ನಾಶಗೊಳಿಸದೆ ವಸತಿ ನಿರ್ಮಾಣಕ್ಕೆ ಬಳಸುವ ಸದ್ಭುದ್ಧಿ ಅವನಲ್ಲಿ ಮೂಡಿತು. ಅದರಿಂದಾಗಿಯೇ ಮೊದಮೊದಲು ವಸತಿಯ ಎಲ್ಲ ಪರಿಕರಗಳೂ ಕಾಡಿನ ಉತ್ಪನ್ನವೇ ಆಗಿರುತ್ತಿತ್ತು ಎಂದು ತೋರುತ್ತದೆ. ಆ ಮಾದರಿಯ ವಸತಿ ನಿರ್ಮಾಣಕ್ಕೆ ಮರಗೆಲಸದವರ ವಿಶೇಷ ನೆರವೂ ಬೀಳುತ್ತಿರಲಿಲ್ಲ. ಸಾಗಣೆಯ ಅಡಚಣೆ, ಮರಗೆಲಸದ ಕೌಶಲದ ಅಭಾವ, ಲೋಹದ ಸಾಧನಗಳ ಬಳಕೆಯ ಅರಿವಿಲ್ಲದುದು ಇವೇ ಮುಂತಾದ ಕಾರಣಗಳಿಂದಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವಾಗ ಅವನ್ನೆಲ್ಲಾ ತನ್ನೊಡನೆ ಸಾಗಿಸುವುದು ಕಷ್ಟ ಎನಿಸಿತು. ವಾಸ್ತವವಾಗಿ ಬಿದಿರಿನ ಬೊಂಬು ತಡಿಕೆ ಬಳಸಿ ನಿರ್ಮಿಸಲಾಗುವ ವಸತಿ ಮಾದರಿಗಳಿಗೆ ಕರಕುಶಲಕರ್ಮಿಗಳ ಆವಶ್ಯಕತೆಯಿರಲಿಲ್ಲ. ಆದರೆ ಈ ಬಗೆಯ ವಸತಿ ಮಾದರಿಗಳ ನಿರ್ಮಾಣ ಕೇವಲ ಅಂಧಾನುಕರಣೆಯಗಿರಲಿಲ್ಲ. ನಿಜವಾದ ಅರ್ಥದಲ್ಲಿ ಪರಂಪರಾಗತ ಮಾದರಿಗಳಾಗಿದ್ದವು. ಬಿದಿರು ಸಮೃದ್ಧ ಇರುವೆಡೆಯಲ್ಲೆಲ್ಲಾ ಇಂಥ ವಸತಿಗಳ ನಿರ್ಮಾಣ ಸಾಮಾನ್ಯವಾಯಿತು. ಕಲ್ಲು ಸಮೃದ್ಧವಿದ್ದೆಡೆಗಳಲ್ಲಿ ಮರದ ಕಂಬಗಳಿಗೆ ಬದಲಾಗಿ ಕಲ್ಲು ಕಂಬಗಳನ್ನು ನೆಟ್ಟು ವಸತಿ ನಿರ್ಮಿಸುವುದು ಕ್ರಮೇಣ ಜನಪ್ರಿಯವಾಯಿತು. ಅಂತೆಯೇ ಮಳೆ ನೀರು, ಚಳಿಯಿಂದ ತನ್ನನ್ನೂ ತನ್ನ ಸಾಕುಪ್ರಾಣಿಗಳನ್ನೂ ರಕ್ಷಿಸಿಕೊಳ್ಳಲು ಆಳೆತ್ತರದ ತಡಿಕೆ ಬೇಲಿಗಳ ನಿರ್ಮಾಣ ತಂತ್ರ ಕೌಶಲಗಳು ಸರವಾಗಿದ್ದುದರಿಂದ ಬಹುಬೇಗ ಜನಪ್ರಿಯವಾದವು. ಜನತೆಯ ಬುದ್ಧಿ ಸಾಮರ್ಥ್ಯದ ಪ್ರತೀಕವಾದ ಈ ಶಿಲ್ಪಕ್ಕೆ ಬೆಲೆ ಬಂದಿತು.

ಪಶು ಪಾಲನೆ ಮತ್ತು ವ್ಯವಸಾಯವನ್ನು ವೃತ್ತಿಯಾಗಿಸಿಕೊಳ್ಳುವ ಮೊದಲು ಶಿಲಾಯುಗದ ಮಾನವ ಪ್ರಾಣಿಗಳಲ್ಲಿ ಕೆಲವು ನಿರುಪದ್ರವಿಗಳನ್ನು ನಿಧಾನವಾಗಿ ತನ್ನ ಅಂಕೆಗೆ ತಂದುಕೊಂಡು ಪಳಗಿಸಿಕೊಂಡ. ಅವುಗಳಲ್ಲಿ ಕೆಲವನ್ನು (ನಾಯಿ, ಆನೆ) ಬೇಟೆಗೆ ಬಳಸಲಾರಂಭಿಸಿದ ಮತ್ತೆ ಕೆಲವನ್ನು (ದನ, ಎತ್ತು, ಕುರಿ, ಆಡು, ಎಮ್ಮೆ, ಕೋಣ, ಕುದುರೆ, ಒಂಟೆ) ಕೃಷಿಗೆ ಬಳಸಿಕೊಂಡ. ಉಳುಮೆ ಮಾಡುವುದಕ್ಕೆ ಸರಕು ಸಾಗಿಸುವುದಕ್ಕೆ, ಹಾಲು ಹಯನಕ್ಕೆ, ಗೊಬ್ಬರಕ್ಕೆ, ಬಿತ್ತುವುದಕ್ಕೆ ಹೀಗೆ ನಾನಾ ಉದ್ದೇಶಗಳಿಗಾಗಿ ಪ್ರಾಣಿಗಳ ನೆರವನ್ನು ಪಡೆದ. ಕಳೆಗುದ್ದಲಿಯಿಂದ ವ್ಯವಸಾಯ ಮಾಡುತ್ತಿದ್ದ ಮಾನವ ನೇಗಿಲು ಬಳಸುವಂತಾದ. ಅದಕ್ಕೆ ಪ್ರಾಣಿಗಳೇ ಅವನಿಗೆ ಪ್ರೇರಣೆಯಾದವು.

ಬೇಟೆ, ಪಶುಪಾಲನೆ, ವ್ಯವಸಾಯ ಮತ್ತು ಅನಂತರದ ಎಲ್ಲ ಬಗೆಯ ಸಾಂಸ್ಕೃತಿಕ ಸೃಷ್ಟಿಯ ಸಂದರ್ಭದಲ್ಲಿ ಪ್ರಾಣಿಗಳ ಆವಶ್ಯಕತೆ ಅನಿವಾರ್ಯ ಎಂಬ ಸತ್ಯವನ್ನು ಮನಗಂಡ ಮೇಲೆ ಮನುಷ್ಯ ಪ್ರಾಣಿಗಳ ಸುರಕ್ಷಿತತೆಯ ಬಗೆಗೂ ಕಾಳಜಿವಹಿಸಿದ. ಮನುಷ್ಯ ಸಂಸ್ಕೃತಿ ನಿಷ್ಠಾವಂತನಾದಂತೆಲ್ಲ ಪ್ರಕೃತಿಯ ಅದಮ್ಯ ಶಕ್ತಿಯನ್ನು ಪ್ರಾಣಿಗಳಲ್ಲಿ ಕಂಡು ತಾನು ಸಾಮಾಜಿಕೀಕರಣಗೊಂಡನೆಂದು ತೋರುತ್ತದೆ. ಇದು ಮನುಷ್ಯ ಮೃಗೀಯ ಪ್ರವೃತ್ತಿಗಳಿಂದ ಮಾನವೀಯ ಭಾವನೆಗಳ ಶೋಧನೆಯ ಕಡೆಗೆ ನಡೆದ ದಾರಿ ಕೂಡ ಆಗಿದೆ.

ದಕ್ಷಿಣ ಕರ್ನಾಟಕದ ಜನ ಪ್ರಧಾನವಾಗಿ ಕೃಷಿಕರು. ಕೃಷಿ ಕೆಲಸ ಕಾರ್ಯಗಳಿಗೆ ಅವರಿಗೆ ಜನಶಕ್ತಿ ಉಪಯೋಗದೊಂದಿಗೆ ಪ್ರಾಣಿ ಶಕ್ತಿ ಬಳಕೆಗೂ ಅಗತ್ಯ ಎನಿಸಿದ್ದರಿಂದ ಪಶುಪಾಲನೆಗೂ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. /ನಾನಾ ವಿಧದಲ್ಲಿ ಜಾನುವಾರಗಳ ಬಳಕೆ ಮತ್ತು ಉಪಯೋಗ ರೂಢಿಯಾಗಿರುವುದರಿಂದ ಅವುಗಳ ಬಗೆಗೆ ದೈವ ಸಮಾನವಾದ ಭಾವನೆಯೂ ನೆಲೆಸಿದೆ. ಈ ಮಂದಿಗೆ ಮನೆಯವರು ಬೇರೆ ಜಾನುವಾರುಗಳು ಬೇರೆಯಲ್ಲ. ಹುಟ್ಟಿದ ಮಗುವಿಗೆ ಹೆಸರಿಟ್ಟು ಕರೆಯುವಂತೆ ದನಕರುಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದು ರೂಢಿ. ಆ ಹೆಸರುಗಳು ಸಾಮಾನ್ಯವಾಗಿ ಜಾನುವಾರುಗಳ ಬಣ್ಣ ಗುಣ ಸ್ವಭಾವಕ್ಕನುಗುಣವಾಗಿರುತ್ತವೆ. ಬೇರೆ ಬೇರೆ ಕಾರಣಗಳಿಗಾಗಿ ಅವು ಪೂಜಾರ್ಹವೂ ಆಗಿತುವುದರಿಂದ ಅವುಗಳ ಪಾಲನೆ ಪೋಷಣೆಗೆ ವಿಶೇಷ ಮಹತ್ವ ನೀಡುತ್ತಾರೆ. ಜಾನುವಾರಗಳ ಉಪಯೋಗ ಬಳಸುವಿಕೆಗನುಗುಣವಾಗಿ ಅವುಗಳ ಪಾಲನೆ ಪೋಷಣೆಯನ್ನು ನಿರ್ವಹಿಸುವುದು ಇಲ್ಲಿನ ವಿಶೇಷ. ಹಾಲು ಕರೆಸುವ ಆಕಳು, ಎಮ್ಮೆಗಳು, ಗೆಯ್ಮೆ ಮಾಡುವ ಎತ್ತುಗಳು, ಕೋಣಗಳು, ಉಳಿದ ದನಕರುಗಳು, ಕುರಿ, ಕೋಳಿ, ಹಂದಿ, ನಾಯಿ ಇತ್ಯಾದಿ- ಹೀಗೆ ಗುಂಪಾಗಿಸಿಕೊಂಡು ಅವುಗಳ ಸಾಕಣೆ ನಡೆಸುವುದು ವಾಡಿಕೆ. ಅಂತೆಯೇ ಈ ಒಂದೊಂದಕ್ಕೂ ಒಂದೊಂದು ಮಾದರಿಯ ವಸತಿ ನಿರ್ಮಾಣ ಪ್ರಚಲಿತ.

ಈ ವಸತಿ ಮಾದರಿಗಳ ಮೇಲೆ ಆರ್ಥಿಕ ಹಾಗೂ ಭೌಗೋಳಿಕ ಪ್ರಭಾವಗಳು ವ್ಯತ್ಯಾಸವನ್ನುಂಟು ಮಾಡುವುದರಿಂದ ಅವುಗಳ ಪರಿಶೀಲನೆ ಇಲ್ಲಿ ಪ್ರಸ್ತುತ. ಬೇಟೆಯನ್ನೇ ವೃತ್ತಿಯಾಗಿಸಿಕೊಂಡ ಜನರು ಒಂದೆಡೆ ಖಾಯಂ ಆಗಿ ನೆಲೆಸಿರಲು ಆಗುವುದಿಲ್ಲ. ಬೇಡೆಯ ಬೆನ್ನು ಹತ್ತಿ ಅಲೆಯಬೇಕಾಗುತ್ತದೆ. ಅಂತೆಯೇ ಪಶುಪಾಲನೆ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ ಮಾಡುವವರು ಸ್ಥಳದಿಂದ ಸ್ಥಳಕ್ಕೆ ಅಲೆಯಬೇಕಾಗುತ್ತದೆ. ಅವರು ತಾವು ಹೋದೆಡೆಯಲ್ಲೆಲ್ಲಾ ತಾತ್ಕಾಲಿಕ ಗುಡಿಸಲನ್ನು ಕೊಟ್ಟಿಕೊಂಡು ವಾಸಿಸಬೇಕಾಗುತ್ತದೆ. ಆದರೆ ಮೀನು ಬೇಟೆಗಾರರು ಒಂದು ಗೊತ್ತಾದ ಜಾಗವೊಂದರಲ್ಲಿ ಖಾಯಂ ಆಗಿ ವಸತಿ ನಿರ್ಮಿಸಿಕೊಂಡಿರಲು ಸಾಧ್ಯ. ಅನಿವಾರ್ಯವಾದಾಗ ಮಾತ್ರ ಅವರು ಬೇರೆ ಕಡೆಗೆ ಹೋಗಿ ತಾತ್ಕಾಲಿಕ ಗುಡಿಸಲಿನಲ್ಲಿ ವಾಸ ಮಾಡಬಹುದು ಅಷ್ಟೆ. ಒಕ್ಕಲುತನದ ಜೊತೆಯಲ್ಲಿ ಬೇಟೆಗಾರಿಕೆಯನ್ನು ಒಟ್ಟುಕೊಂಡ ಜನ ಹೀಗೆಯೇ ಮಾಡಬೇಕಾಗುತ್ತದೆ. ಉದಾಹರಣೆಗೆ ಬೇಸಿಗೆ ದಿನಗಳಲ್ಲಿ ಕುರಿ ಮತ್ತು ದನಕರುಗಳಿಗೆ ಮೇವು ನೀರಿಗೆ ಸಂಚಕಾರ ಒದಗಿದಾಗ ಕಾಡುಗೊಲ್ಲರು ಅವನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೊಡೆದುಕೊಂಡು ಹೋಗಿ ಅಲ್ಲಿ ತಾತ್ಕಾಲಿಕ ಗುಡಿಸಲುಗಳಲ್ಲಿ ಅಥವಾ ಬಯಲಿನಲ್ಲಿ ವಾಸ ಮಾಡಿಕೊಂಡಿದ್ದು ಮಳೆಗಾಲ ಆರಂಭವಾಗುವ ಹೊತ್ತಿಗೆ ತಮ್ಮ ಮೂಲ ಸ್ಥಳಗಳಿಗೆ ಹಿಂದಿರುಗುವುದನ್ನು ಕಾಣಬಹುದು.

ವಸತಿ ಮಾದರಿಗಳು ಸಾಮಾನ್ಯವಾಗಿ ಬಳಸುವ ಸಾಧನ ಸಲಕರಣೆಗಳ ಹಿನ್ನೆಲೆಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿ ಕಾಣುತ್ತವೆ. ಇದರಲ್ಲಿ ಭೌಗೋಳಿಕ ಪ್ರಭಾವವನ್ನು ಗುರುತಿಸಬಹುದು. ಉದಾಹರಣೆಗೆ ಅತಿಯಾಗಿ  ಮಳೆಯಾಗುವ ಮಲೆನಾಡಿನಲ್ಲಿ ಮಾಳಿಗೆ ಮನೆಗಳಿಗಿಂತ ಹೆಂಚು ಮತ್ತು ಹುಲ್ಲಿನ ಮನೆಗಳು ಕಂಡು ಬರುತ್ತವೆ. ಏಕೆಂದರೆ ಅಲ್ಲಿ ಮಾಳಿಗೆ ಮನೆಗಳು ಭಾರಿ ಮಳೆಯಿಂದಾಗಿ ಸೋರುವುದು ಸಾಮಾನ್ಯ. ಇದು ಭೌಗೋಳಿಕ ಪ್ರಭಾವದಿಂದ ಉಂಟದ ವಸತಿ ವ್ಯತ್ಯಾಸ. ಜೌಗು ಮತ್ತು ಪ್ರವಾಹದ ಭಯವಿರುವ ಪ್ರದೇಶದಲ್ಲಿ ದಪ್ಪ ಮರದ ಕಂಬಗಳನ್ನು ನೆಟ್ಟು ಒಂದಾಳೆತ್ತರಕ್ಕೆ ಹಲಗೆಗಳನ್ನು ಹಾಸಿ ಅದರ ಮೇಲೆ ಗುಡಿಸಲು ಕಟ್ಟಿ ವಾಸ ಮಾಡುವುದುಂಟು. ಪ್ರವಾಹದ ನೀರು ಕೆಳಗೆ ಹರಿದು ಹೋದರೂ ಒಂದಾಳೆತ್ತರದ ಹಲಗೆಯ ಮೇಲೆ ವಾಸಿಸುವ ಅವರಿಗೆ ಯಾವ ಅಪಾಯವೂ ಬಾಧಿಸುವುದಿಲ್ಲ ಜೌಗಿನ ಶೀತವೂ ಅವರನ್ನು ತಾಕುವುದಿಲ್ಲ. ಈ ವಸತಿ ಮಾದರಿಯೂ ಭೌಗೋಳಿಕ ಕಾರಣದಿಂದ ರೂಪುಗೊಂಡುದು ಎಂಬುದು ವಿದಿತವಾಗುತ್ತದೆ.

ದಕ್ಷಿಣ ಕರ್ನಾಟಕದ ಪ್ರದೇಶದಲ್ಲಿ ಪ್ರಚಲಿತವಿರುವ ಪ್ರಾಣಿ ವಸತಿ ಮಾದರಿಗಳಲ್ಲಿ ದನಕರುಗಳು, ಕುರಿ, ಕೋಳಿ, ಹಂದಿ ವಸತಿಗಳು ಮುಖ್ಯವಾದವು. ಈ ಒಂದೊಂದು ಪ್ರಾಣಿ ವಸತಿಯ ನಿರ್ಮಾಣ ರೀತಿ ಕುತೂಹಲಕರವಾಗಿದ್ದು ಅಭ್ಯಾಸ ಯೋಗ್ಯವಾಗಿರುವುದರಿಂದ ಈ ವಸತಿ ಮಾದರಿಗಳು ರೂಢಗೊಂಡಿರುವ ಬಗೆಯನ್ನು ಪರಿಶೋಧಿಸುವುದು ಅಗತ್ಯ. ಯಾವುದೇ ಸಾಕು ಪ್ರಾಣಿಯ ವಸತಿಯ ವಿಸ್ತಾರವಾದ ಅಧ್ಯಯನ ಆ ವಸತಿ ಮಾದರಿಯ ವಿಶಿಷ್ಟತೆಯನ್ನು ಮಾನವನ ಸಂಸ್ಕೃತಿಕ ಇತಿಹಾಸವನ್ನು ಅರಿಯಲು ಸಹಾಯಕ.

ದಕ್ಷಿಣ ಕರ್ನಾಟಕದ ಪ್ರಾಣಿ ವಸತಿಗಳ್ಲಲಿ ಹಟ್ಟಿ ಪ್ರಧಾನವಾದುದು. ಇಲ್ಲಿ ‘ಹಟ್ಟಿ’ ಶಬ್ದಕ್ಕೆ ಮನೆ, ಗುಡಿಸಲು, ಕೊಟ್ಟಿಗೆ, ಅಂಗಳ ಎಂಬ ಅರ್ಥಗಳಿವೆ. ಮನೆ ಎಂಬ ಅರ್ಥದಲ್ಲಿ ಹಟ್ಟಿ ಪ್ರಯೋಗ ಜನಪ್ರಿಯವಾಗಿದೆ ಎನ್ನಲುಕ ಲವು ಬೈಗುಳಗಳು ದಾಗೆಗಳು ಮತ್ತು ತ್ರಿಪದಿಗಳು ಸಮರ್ಥನೆ ನೀಡುತ್ತವೆ.

ಬೈಗುಳಗಳು :

೧. ನಿನ್ನ ಹಟ್ಟಿ ಹಾಳಾಗಿ ಕೊಟ್ಟಿಗೆ ಬರದಾಗಿ ಹೋಗ

೨. ನಿಮ್ಮಟ್ಟೀಗೆ ಕಾಗೆ ನುಗ್ಗಲಿ

೩. ನಿಮ್ಮಟ್ಟಿ ತೊಡದೊಗಾ

೪. ಹೇಲವನಿಗೆ ಹಟ್ಟಿಯಾಗಿ, ನಡೆಯೋನಿಗೆ ದಾರಿಯಾಗಿ, ಉಚ್ಚೆ ಉಯ್ಯೋನಿಗೆ ಬಚ್ಚಲಾಗಲಿ

ಇಲ್ಲೆಲ್ಲಾ ‘ಹಟ್ಟಿ’ ಸಾಮಾನ್ಯವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವವರ ಮನೆಯನ್ನೇ ಉದ್ದೇಶಿಸಿ ಹೇಳಿದಂತಿದೆ. ಈ ಕಾರಣಕ್ಕಾಗಿ ಈ ‘ಹಟ್ಟಿ’ ಶಬ್ದ ‘ಗುಡಿಸಲು’ ಪ್ರಯೋಗಕ್ಕೆ ಹತ್ತಿರವಾಗುತ್ತದೆ.

ಗಾದೆಗಳು:

೧. ಹಟ್ಟಿ ಬಾಕಲಾಗೆ ಬಂದದ್ದು ಬಚ್ಚಲ ಬಾಯಗೆ ಹೋಯ್ತು

೨. ಕರ್ಬಹಟ್ಟಿ ಬರಹಟ್ಟಿ (ಕುರುಬನ ಮನೆ ಬದೀಮನೆ)

೩. ಹಟ್ಟೀಲಿ ಹಿಟ್ಟಿನ ಮಡಕೆ ಇಲ್ಲದಿದ್ರೂ ಕೇರಿ ಹರಬಿ ಕೊಳಗನೆಲ್ಲ ಎತ್ತಿ ಮಾತಾಡಿದಂಗೆ

ಇಲ್ಲಿಯೂ ‘ಮನೆ’ ಎಂಬ ಅರ್ಥವೇ ಇದೆ.

ಹಟ್ಟಿ ಶಬ್ದ ರೂಪಕ್ಕೆ ಮನೆ ಎಂಬ ಅರ್ಥವೇ ಇರುವುದನ್ನು ಕೆಲವು ತ್ರಿಪದಿಗಳೂ ದೃಢೀಕರಿಸುತ್ತವೆ.

ಸತ್ಯವ್ವ ಬಂದು ಹಟ್ಟಿ ಮುಂದೈದಾಳೆ
ಸಿತ್ತವಿಲ್ಲ ಹಟ್ಟಿ ಗೌಡರಿಗೆ-ಮುದಿಯಣ್ಣನ
ಕೊಂಬಿನ ತಗರ ತರಿಯಳಿರಿ
– (ಕಾಡುಗೊಲ್ಲರ ಜನಪದ ಗೀತೆಗಳು ಪು.೨೨೩)

ಹಟ್ಯಾಗ ಗಂಗಮ್ಮ ಕುಟ್ಟೂತೇನಂದಾಳು
ಅಪ್ಪಯ್ಯ ನನ ಕೊಡಬೇಕು –ಕೈಲಸದ
ಇಪ್ಪತ್ತೆ ಜಡಿಯ ಪ್ರಖಸೀಗೆ
– (ಕಾ.ಜ.ಗೀ. ಪು-೩೧೨)

ವಸತಿ ಸಮುಚ್ಛಯ, ಊರುಗಳನ್ನು ನಿರ್ದೇಶಿಸುವ ಅರ್ಥದಲ್ಲೂ ‘ಹಟ್ಟಿ’ ಶಬ್ದರೂಪ ಬಳಕೆಯಾಗುತ್ತದೆ.

ಹಟ್ಟಿ ತಿಪ್ಪಯ್ಯ ಬುತ್ತಿ ಉಂಡುತ್ತಾವ
ಬತ್ತೀದ ಬಾಳೆ ಫಲುವಾಗಿ-ನಾಯಕನ್ಹಟ್ಟಿ
ಹುಟ್ಟಿದ ಮಕ್ಕಳಿಗೆ ನೆರಳಾಗಿ
– (ಕಾ.ಜ.ಗೀ. ಪು-೨೮೨)

ಇಲ್ಲಿ ‘ನಾಯಕನ್ಹಟ್ಟಿ’ ಎಂಬಲ್ಲಿ ಸ್ಥಳದ ಹೆಸರನ್ನು ಸೂಚಿಸಲಾಗಿದೆ. ಊರಿನಿಂದ ಹೊರಗೆ ಹಟ್ಟಿ ಕಟ್ಟಿಕೊಂಡ ವಾಸ ಮಾಡುವ ಕಾಡು ಗೊಲ್ಲರನ್ನು ಹಟ್ಟಿ ಗೊಲ್ಲರೆಂದೇ ಕರೆಯುತ್ತಾರೆ. ವಸತಿ ಸಮುಚ್ಛಯ ಎನ್ನುವ ಅರ್ಥವಿರುವುದನ್ನು ಕೆಳಗಿನ ತ್ರಿಪದಿ ಸ್ಪಷ್ಟಪಡಿಸುತ್ತದೆ.

ಹಟ್ಟಿ ಗೊಲ್ಲರಿಗೆ ಅಪ್ಪಯ್ಯ ಒಲುದೇನು
ತಪ್ಪುಂಡ ಬಾಯ ತೋಳದುಂಬೊ-ಕೂಡಾಲ
ಹಟ್ಟೀಗೊಲ್ಲರಿಗೆ ಒಲುದಾನೆ
(ಕಾ.ಜ.ಗೀ. ಪು-೧೪೬)

ಆಯಗಾರರನ್ನು ಬರಮಾಡಿಕೊಳ್ಳಲು ಸೂಚಿಸುವ ಬರುವ ಕೆಳಗಿನ ತ್ರಿಪದಿಯಲ್ಲಿ ಊರು ಎಂಬ ಅರ್ಥದಲ್ಲೆ ‘ಹಟ್ಟಿ’ ಪ್ರಯೋಗಗೊಂಡಿದೆ.

ಹಟ್ಟಿ ಮಾದುಗನ ಗಕ್ಕಾನೆ ನೀ ಕರಸೋ
ಗಕ್ಕಾನೀ ಸರುಗಾ ಹೊರುವಾಕೆ-ಸರುಗದ ಮ್ಯಾಲೆ
ಹಟ್ಟಿ ನಾವೀಗ ಬಿಡುತೀವಿ
(ಕಾ.ಜ.ಗೀ. ಪು-೧೧೩)

ಹೀಗೆ ವಸತಿ ನಾಮ ನಿರ್ದೇಶನ ಮಾಡುವ ಅರ್ಥದಲ್ಲಿ ಪ್ರಮುಖ ವ್ಯಕ್ತಿನಾಮ ನಿರ್ದೇಶನ ಮಾಡುವ ಅರ್ಥದಲ್ಲಿ ಪ್ರಮುಖ ದೇವಾನುದೇವತೆಗಳ ಹೆಸರನ್ನು ಸೂಚಿಸುವ ಅರ್ಥದಲ್ಲಿ ‘ಹಟ್ಟಿ’ ಪ್ರಯೋಗವಾಗಿರುವುದನ್ನು ನೋಡುತ್ತೇವೆ. ವಾಸ್ತವವಾಗಿ ಹಟ್ಟಿ ಶಬ್ದಕ್ಕೆ ಮೂಲತಃ ಮನೆ ಎಂಬ ಅರ್ಥವಿದ್ದರೂ ಹಾಸನ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಅಂಗಳ (ಮನೆಯ ಮುಂಭಾಗದ ಜಾಗ) ಎಂಬ ಅರ್ಥವೂ ಪ್ರಚಲಿತವುಂಟು. ‘ನಿನ್ನ ಹಟ್ಟಿಗೆ ಇಡಿಯಾ’ ಎಂಬ ಬೈಗುಳ ಅದನ್ನು ಸಮರ್ಥಿಸುತ್ತದೆ.

ಅತಿ ಪರಿಚಯದಿಂದ ಅನೇಕ ವಸ್ತುಗಳು ಅರ್ಥ ಸ್ವಾರಸ್ಯ ಕಡಿಮೆಯಾಗುತ್ತದೆ ಎಂಬುದಕ್ಕೆ ಈ ಹಟ್ಟಿ ಪ್ರಯೋಗ ಒಂದು ಉತ್ತಮ ನಿರ್ದಶನ. ಎಷ್ಟೋ ವೇಳೆ ನಮ್ಮ ಸಂಗಡವೇ ಬದುಕು ನಡೆಸುತ್ತಿರುವ ದನಕರುಗಳ ಹಟ್ಟಿ ನಿರ್ಮಾಣ ಹೇಗೆ ಆರಂಭ ಗೊಂಡಿತೆಂಬುದನ್ನು ನಿರ್ಣಾಯಕವಾಗಿ ಹೇಳುವುದು ಕಷ್ಟವಾಗುತ್ತದೆ. ‘ತಲ ತಲಾಂತರದಿಂದ ನಡೆದು ಬಂದ ನಮ್ಮ ಉದಾಸೀನತೆಯೇ ಅದಕ್ಕೆ ಕಾರಣ’ (ಶಂ. ಬಾ. ಜೋಶಿ: ೧೯೯೧:೩೦)

‘ಹಟ್ಟಿ’ ಶಬ್ದಕ್ಕೆ ಸ್ಥಳವಾಚಕ ಅರ್ಥವನ್ನು ಆರೋಪಿಸಿರುವಂತೆಯೇ ದನಕರುಗಳು ಮಲಗಿ ವಿಶ್ರಮಿಸುವ ಜಾಗ ಎಂಬ ಅರ್ಥವೂ ಉಂಟು. ‘ಕೊಟ್ಟಿಗೆ’ ಎಂಬ ಅರ್ಥದಲ್ಲಿ  ಬಳಸುವಾಗ ‘ದನಿನಟ್ಟಿ’ (ಆಕಳು ಮತ್ತು ಎತ್ತು) ಎಂಬ ಶಬ್ದರೂಪ ಆಡುಮಾತಿನಲ್ಲಿ ಪ್ರಯೋಗಗೊಳ್ಳುವುದುಂಟು. ದನಕರುಗಳು ಒಂದು ಕಡೆ ಮಲಗಿ ವಿಶ್ರಮಿಸುವ ಜಾಗಗಳೇ ಮುಂದೆ ಮನುಷ್ಯರ ನೆಲೆಗಳಾಗಿ ಪರಿಣಮಿಸಿದವು. ಆದರೂ, ಇವು ಮೂಲತಃ ತಾತ್ಪೂರ್ತಿಕ ವಾಸಸ್ಥಾನಗಳಾಗಿದ್ದವು ಎಂಬುದನ್ನು ಮರೆಯಬಾರದು (ಕೆಮ್ತೂರು ರಘುಪತಿಭಟ್ಟ: ೧೯೭೯:೯೬-೮೮)

ಹಟ್ಟಿ ಪದದ ಉತ್ಪತ್ತಿ ಬಗೆಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಕೆಲವರು ಅದಕ್ಕೆ ಸ್ಥಳ, ಪ್ರದೇಶ ಇಂಥ ಮುಖ್ಯರ್ಥವನ್ನೇ ಆರೋಪಿಸಿದರೆ ಮತ್ತೆ ಕೆಲವರು ಪಶುಪಾಲಕರ ತಾತ್ಪೂರ್ತಿಕ ನೆಲೆ ಎಂದು ಅರ್ಥೈಸಿದ್ದಾರೆ. ದ್ರಾವಿಡ ಭಾಷಾ ಕೋವಿದರ ಪ್ರಕಾರ ‘ಪಟ್ಟಿ’ ಮತ್ತು ‘ಪಾಡಿ’ಗಳು ‘ಪಡು’ ಧಾತುವಿನ ಸಾಧಿತ ರೂಪಗಳಾಗಿವೆ (ಶಂ.ಭಾ ಜೋಶಿ: ೧೯೯೦:೩೦) ಶಂ. ಬಾ. ಜೋಶಿ, ಅವರ ಅಭಿಪ್ರಾಯದಲ್ಲಿ ಹಟ್ಟಿ ಒಂದು ದೇಶೀ ಶಬ್ದ. ಕನ್ನಡದ ಮೇಲೆ ಸಂಸ್ಕೃತದ ಮೂಲಗಾಮಿಯಾದ ಪ್ರಭಾವದ ಒಂದು ಪರಿಣಾಮವೆಂದರೆ ಪ್ರಕಾರವಿದ್ದುದ್ದು ಹಕಾರವಾದುದು. ಅದರಿಂದಾಗಿ ಪಾಲು- ಹಾಲು, ಪರ್ವ-ಹಬ್ಬ ಆದಂತೆ ಪಟ್ಟಿ- ಹಟ್ಟಿ, ಪಾಡಿ-ಹಾಡಿಯಂತಹ ಶಬ್ದಗಳು ಸಿದ್ಧವಾದವು. ಪಟ್ಟಿ (ಹಟ್ಟಿ) ಶಬ್ದ ಹಳಗನ್ನಡ ಮತ್ತು ತಮಿಳು ವರ್ಗದ ಎಲ್ಲ ಭಾಷೆಗಳಲ್ಲಿ ದೊರೆಯುವ ‘ಪಡು’ ಧಾತುವಿನಿಂದ ಹುಟ್ಟಿದ್ದು ಎಂದು ಹೇಳಬಹುದು (ಅಲ್ಲೇ.)

‘ಪಡು’ ರೂಪಕ್ಕೆ ಕಿಟ್ಟೆಲ್‌ನ ಅರ್ಥ ಹೀಗಿದೆ: to lie down, to repose, ತಮಳು ಕೋಶದಲ್ಲಿ to spread out as bedding, to ay horizontally, to lie down, to sleep  ಎಂದು ಅನೇಕ ಅರ್ಥಗಳನ್ನು ಕೊಡಲಾಗಿದೆ. ತೆಲುವು ಮತ್ತು ಮಲಯಾಳಂಗಳಲ್ಲಿಯೂ ಇದೇ ಅರ್ಥವಿದೆ. ಕಿಟ್ಟೆಲ್ ‘ಪಡು’ ನಾಮಪದಕ್ಕೆ a place (hollow or hole) of refuge (for wild animals) between stones or rocks  ಎಂದು ಅರ್ಥ ಕೊಟ್ಟಿದ್ದಾರೆ. ‘ಪಡು’ ಧಾತುವಿನ ‘ಮಲಗು’ ಎಂಬ ಅರ್ಥದ ಅನುಸಂಧಾನದಲ್ಲಿ ‘ಹಟ್ಟಿ’ ಶಬ್ದದ ಔಚಿತ್ಯವನ್ನು ಚೆನ್ನಾಗಿ ತಿಳಿಯಬಹುದು. ಪಡುವ ಸ್ಥಳವೇ ಪಟ್ಟಿ (ಹಟ್ಟಿ-ವಸತಿ). ಇದೇ ಈ ಶಬ್ದದ ಮೂಲ ಅರ್ಥವಾಗಿದೆ. (ಶಂ ಬಾ ಜೋಶಿ: ೧೯೯೧:೩೧)

ಪಟ್ಟಿ ಶಬ್ದಕ್ಕೆ ಕಿಟ್ಟೆಲ್ ಈ ಮುಂದಿನ ಅರ್ಥಗಳನ್ನು ಕೊಟ್ಟಿದ್ದಾರೆ: A place lying down, a pen or fold, an abode, a hamle ತಮಿಳುಕೋಶದಲ್ಲಿ cowstall, sheepfold, a measure of land sufficient for a sheepfold, cattle pound, a hamlet, a village a place ಎಂಬ ಅರ್ಥಗಳಿವೆ. ಹಟ್ಟಿ ಎಂದರೆ ಗೋಸ್ಥಾವಕ. ದನಕರುಗಳನ್ನು ಕಟ್ಟುವ ಸ್ಥಳ ಎಂಬ ಅರ್ಥವನ್ನು ಕಿಟ್ಟೆಲ್ ಉಲ್ಲೇಖಿಸಿದ್ದಾರೆ. ಸದ್ಯ ಪ್ರಚಲಿತವಿರುವ ಕನ್ನಡದ ಆಡುಮಾತಿನಲ್ಲಿ ಹಟ್ಟ ಎಂದರೆ ಗುಡಿಸಲು, ಕೊಟ್ಟಿಗೆ ಮತ್ತು ಸಣ್ಣ ಹಳ್ಳಿ ಎಂಬ ಅರ್ಥವಿದೆ. ಪಡುವ ಸ್ಥಳವೆಂದರೆ (ಹಟ್ಟಿ) ಪಟ್ಟಿ. ಇದರ ಮೂಲ ಅರ್ಥವೆಂದರೆ ವಸತಿ ಸ್ಥಾನ. ಒಕ್ಕಲುತನದ ಅನುಕೂಲತೆಗಾಗಿ ಒಕ್ಕಲಿಗರ ತಮ್ಮ ಹಳ್ಳಿಯಿಂದ ಸ್ವಲ್ಪ ದೂರದಲ್ಲಿ ಆದರೆ ಹೊಲದ ಹತ್ತಿರ ನಿರ್ಮಿಸಿದ ಗುಡಿಸಲುಗಳ ಒಂದು ಸಮೂಹ. ಒಟ್ಟಿನಲ್ಲಿ ‘ಪಟ್ಟಿ’ ಪಶುಪಾಲನಾ ವೃತ್ತಿಯಿಂದ ಒಕ್ಕಲುತನದ ಜೀವನಕ್ರಮದವರೆಗಿನ ವಿಕಾಸಸ್ಥಿತಿಯ ಅರ್ಥ ಸೂಚನೆ ಇದೆ. (ಶಂಬಾ ಜೋಶಿ: ೧೯೯೧:ಪು.೪೦)

ಮೇಲೆ ನೀಡಿದ ವಿವಿಧ ಅರ್ಥ ಸಾಧ್ಯತೆಯನ್ನು ಗಮನಿಸಿದರೆ ‘ಹಟ್ಟಿ’ ಶಬ್ದ ಕೊಟ್ಟಿಗೆಯನ್ನೊಳಗೊಂಡ ಮನೆಯೂ ಹೌದು ಎಂದು ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲೇ ಪ್ರಕೃತಿ ಹಟ್ಟಿ ನಿರ್ಮಾಣ ಮಾದರಿಗಳನ್ನು ಪರಿಶೋಧಿಸುವುದು ಯುಕ್ತವೆಂದು ತೋರುತ್ತದೆ. ವ್ಯಕ್ತಿಗಳ ವರ್ತನೆಯನ್ನು ಛೇಡಿಸಲು ಬಳಸುವ ‘ತೊಟ್ಟಿ ಹಟ್ಟಿ ಒಳಗೆ ನೋಡಿದರೆ ಚೊಟ್ಟಿ ಅಂಬಲಿ’ ಎಂಬ ಗಾದೆ ಹಟ್ಟಿಯು ಗಾತ್ರದಲ್ಲಿ ವಿನ್ಯಾಸದಲ್ಲಿ ಮಹತ್ತಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ‘ದೊಡ್ಡಟ್ಟೀಲಿ ದೊಡ್ಡ ಗುಡಾಣ; ಬಗ್ಗಿ ನೋಡಿದರೆ ಬರೀ ಗುಡಾಣ’ ಎಂಬ ಇನ್ನೊಂದು ಗಾದೆಯೂ ಅದೇ ಅರ್ಥದಲ್ಲಿ ಬಳಸಿಕೊಂಡಿದ್ದರೂ ಹಟ್ಟಿಯಗಾತ್ರವನ್ನು ಕಟ್ಟಿಗೆ ಕಟ್ಟಿ ಕೊಡುತ್ತದೆ. ದನದ ಕೊಟ್ಟಿಗೆ, ಕುರಿರೊಪ್ಪ, ಕೋಳಿಗೂರು ಮತ್ತು ಮನೆ- ಹೀಗೆ ಎಲ್ಲವನ್ನೂ ಒಂದೇ ಎಡೆಯಲ್ಲಿ ತನ್ನ ಸಮಕ್ಷಮದಲ್ಲೇ ಇರಿಸಿಕೊಳ್ಳುವುದಕ್ಕಾಗಿ ಕೃಷಿಕ ಸಮಗ್ರವೂ ವಿಶಾಲವೂ ಆದ ಒಂದು ವಸತಿಯನ್ನು ನಿರ್ಮಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಹೀಗೆ ಎಲ್ಲವೂ ಒಟ್ಟಿಗೆ ಒಂದೇ ಕಟ್ಟಡದಲ್ಲಿ ಸಮಾವೇಶಗೊಂಡಿರುವ ವಸತಿಗಳನ್ನು ‘ತೊಟ್ಟಿ ಹಟ್ಟಿ’ ಎಂದೇ ಕರೆಯಲಾಗುತ್ತದೆ.

ಹಟ್ಟಿಯನ್ನು ನಿರ್ಮಿಸುವ ಮೊದಲು ಅದಕ್ಕೆ ಅನುಕೂಲವಾದ ಜಾಗ ಆರಿಸಿಕೊಳ್ಳುವುದು ಕ್ರಮ. ಇದಕ್ಕೆ ‘ಮನೆದಳ’ ಎನ್ನುತ್ತಾರೆ. ಸಾಮಾನ್ಯವಾಗಿ ಜೌಗು ಇಲ್ಲದ, ನೀರು ನುಗ್ಗದ, ತುಸು ಎತ್ತರವಾದ, ಗಾಳಿ ಬೆಳಕು ಸಮೃದ್ಧವಿರುವ ಕಡೆ ಆ ಜಾಗವನ್ನು ಆರಿಸಿಕೊಳ್ಳುತ್ತಾರೆ.

[1] ಜಾಗವನ್ನು ಆರಿಸಿದ ಮೇಲೆ ಹಟ್ಟಿಯನ್ನು ಯಾವ ಗಾತ್ರದಲ್ಲಿ ಕಟ್ಟಬೇಕೋ ಆ ಗಾತ್ರದ ಅಳತೆಗನುಗುಣವಾಗಿ ‘ದೇವಮೂಲೆ’ (ಈಶಾನ್ಯ ದಿಕ್ಕು) ರಚಿಸಿ ಅಲ್ಲಿ ಆಳೆತ್ತರದ ಗುಂಡಿ ತೆಗೆದು ಅಲ್ಲಿ ದೊರಕಬಹುದಾದ ಮಡಕೆಚೂರು, ಮೊಳೆಚೂರು ಮುಂತಾದುವನ್ನು ಶೋಧಿಸಿ ತೆಗೆದು, ‘ಪಾಯದ ಕಲ್ಲು’ಗಳನ್ನಿಟ್ಟು ‘ಕಟ್ಟುವ ಶಾಸ್ತ್ರ’[2] ಮಾಡುತ್ತಾರೆ. ಈ ಶಾಸ್ತ್ರ ಮಾಡುವುದರಿಂದ ಹಟ್ಟಿ ಕಟ್ಟುವಾಗ ಮತ್ತು ಅನಂತರ ಯಾವ ವಿಘ್ನವೂ ಆಗುವುದಿಲ್ಲ ಎಂದು ನಂಬಿಕೆ.

ಹೀಗೆ ಕಟ್ಟುವ ಶಾಸ್ತ್ರವಾದ ಮೇಲೆ ಹಟ್ಟಿಯನ್ನು ಎಷ್ಟು ಗಾತ್ರದಲ್ಲಿ ನಿರ್ಮಿಸಬೇಕೆಂಬ ನಿರ್ಣಯದ ಮೇಲೆ ‘ಆಯ’ ಮಾಡಿಸುತ್ತಾರೆ. ಎಂದರೆ ಹದಿನಾರು ಕಂಬದ ಹಟ್ಟಿ, ಮೂವತ್ತೆರಡು ಕಂಬದ ಹಟ್ಟಿ, ಅರವತ್ತನಾಲ್ಕು ಕಂಬದ ಹಟ್ಟಿ ಇತ್ಯಾದಿ. ಹಟ್ಟಿಯ ಸುತ್ತಳತೆ ನೋಡಿಕೊಂಡು ‘ಆಯ’ ನಿರ್ಣಯಿಸುತ್ತಾರೆ. ಹಟ್ಟಿಯ ಆಯ ಪೂರ್ವ-ಪಶ್ಚಿಮ ಇಪ್ಪತ್ತು ಮೊಳ (=೩೦ ಅಡಿ) ದಕ್ಷಿಣ-ಉತ್ತರ ಇಪ್ಪತ್ತನಾಲ್ಕು ಮೊಳ (=೪೦ ಅಡಿ) ಇದ್ದರೆ ಅದು ನಾಲ್ಕು ಕಂಬದ ತೊಟ್ಟಿ ಹಟ್ಟಿಯಾಗುತ್ತದೆ. ಸಾಮಾನ್ಯವಾಗಿ ಹೆಚ್ಚು ಮಂದಿ ಕಟ್ಟುವುದು ಈ ಅಳತೆಯಲ್ಲೇ. ತೊಟ್ಟಿ ಹಟ್ಟಿ ಎಂದರೆ ಕೋಟೆಯಾಕಾರದ ನಾಲ್ಕು ದಿಕ್ಕಿಗೂ ಹಟ್ಟಿಯ ಗೋಡೆ ಬಂದಿದ್ದು ಒಳಭಾಗದ ನಾಲ್ಕು ದಿಕ್ಕಿಗೂ ಮಧ್ಯದ ತೊಟ್ಟಿಗೆ ಮುಖ ಮಾಡಿದಂತೆ ಮೂರು ಕೋಣೆಗಳಿರುತ್ತವೆ. ಅದರಲ್ಲಿ ಒಂದು ಭಾಗ ದನದ ಕೊಟ್ಟಿಗೆಯಾಗಿರುತ್ತದೆ. ಸಾಮಾನ್ಯವಾಗಿ ಉತ್ತರ ಮತ್ತು ಪೂರ್ವಕ್ಕೆ ದನದ ಕೊಟ್ಟಿಗೆ, ಆಗ್ನೇಯ ಮೂಲೆಯಲ್ಲಿ ಅಡುಗೆ ಕೋಣೆ, ನೈಋತ್ಯ ಮೂಲೆಯಲ್ಲಿ ದವಸ ಧಾನ್ಯಗಳನ್ನು ಶೇಖರಿಸಿಡುವ ‘ಕಿರುಹಟ್ಟಿ’ ಇರುತ್ತದೆ. ಅಡುಗೆಕೋಣೆ ಮತ್ತು ಕಿರುಹಟ್ಟಿ ಎರಡಕ್ಕೂ ‘ದ್ವಾರಂದ’ಗಳಿರುತ್ತವೆ. ಮಧ್ಯದ ಕೇಂದ್ರಕ್ಕೆ ಸರಿಯಾಗಿ ಚಪ್ಪಡಿಕಲ್ಲುಗಳನ್ನು ಹಾಸಿ (ಸ್ನಾನ ಮಾಡುವ ತಾಣ) ಅಲ್ಲಿಗೆ ನೇರವಾಗಿ ಸೂರ್ಯನ ಬೆಳಕು ಬೀಳುವಂತೆ ಜಾಗ ಬಿಟ್ಟಿರುತ್ತಾರೆ. ಸೂರ್ಯನ ಬೆಳಕು ಬರುವ ಈ ಜಾಗದ ಚೌಕಾಕಾರಕ್ಕೆ ನಾಲ್ಕು ಕಂಬಗಳನ್ನು ನೆಟ್ಟಿರುತ್ತಾರೆ. ಇವುಗಳ ಮೇಲಿನ ತೊಲೆಗೆ ಬರುವಂತೆ ಹಟ್ಟಿಯ ಹಿಂಬದಿಯ ನಾಲ್ಕು ಗೋಡೆಗಳಿಂದಲೂ[3] ಕಡಿಮಾಡು ನಿರ್ಮಿಸಿರುತ್ತಾರೆ. ಅದಕ್ಕೆ ಅಡಿಕೆ ಅಥವಾ ತೆಂಗಿನ ಸೋಗೆ ಇಲ್ಲವೆ ನಾಡಹೆಂಚನ್ನು ಹೊದಿಸಿರುತ್ತಾರೆ. ಇಂಥ ವಸತಿಗೆ ‘ತೊಟ್ಟಿ ಹಟ್ಟಿ’ ಎಂದು ಕರೆಯುವುದು ವಾಡಿಕೆ.

ಕಲ್ಲಿನ ಪಾಯ ನಿರ್ಮಿಸುವ ಮೊದಲು ಕಲ್ಲು ಮತ್ತು ಕೆಮ್ಮಣ್ಣು ಎರಡನ್ನು ಸಮಪ್ರಮಾಣದಲ್ಲಿ ಮಿಶ್ರಗೊಳಿಸುತ್ತಾರೆ. ಇದನ್ನೂ ಒಂದು ದಿನ ನೀರು ಹಾಕಿ ಕಲಸಿಟ್ಟರೆ ಕಲ್ಲಿನಂತೆ ಗಟ್ಟಿಯಾಗುತ್ತದೆ. ಅಂತೆಯೇ ಮರಳು ಮತ್ತು ಕೆಮ್ಮಣ್ಣನ್ನು ಒಟ್ಟಿಗೆ ಹಾಕಿಕೊಂಡು ನೀರಿನಿಂದ ಕಲಸಿ ಚೆನ್ನಾಗಿ ತುಳಿದು ತುಳಿದು ಅಂಟು ಬರುದ ರೀತಿ ಮಾಡಿರುತ್ತಾರೆ. ಸೊಂಟದೆತ್ತರಕ್ಕೆ ತೆಗೆದ ಪಾಯದ ಒಳಗಡೆ ಕಲ್ಲು ಮತ್ತು ಮಣ್ಣನ್ನು ಬೆರಸಿ ಅತಿ ಹೆಚ್ಚು ನೀರು ಹಾಕಿ ‘ಭರ್ತಿ’ ಮಾಡುತ್ತಾರೆ. ಆ ಮೇಲೆ ಒಂದೇ ಅಳತೆಯ ಕಲ್ಲುಗಳನ್ನು ಆಯ್ದು ಉದ್ದ ಮುಖ ಅಡ್ಡಮುಖ ವರಸೆಗಳನ್ನಿಟ್ಟು ಅದರ ಮೇಲೆ ಕಲಸಿದ ಮಣ್ಣು ಹಾಕಿ ಕಲ್ಲಿನ ಪಾಯ ನಿರ್ಮಿಸುತ್ತಾರೆ. ಈ ಕಲ್ಲಿನಪಾಯದ ಮೇಲೆ, ಹಟ್ಟಿಯೊಳಗಿನ ಮನೆಗೆ ಸೀಮಿತಗೊಳಿಸಿದಂತೆ, ಕಲಸುಮಣ್ಣಿನ ಗೋಡೆಯನ್ನು ಕಟ್ಟುತ್ತಾರೆ. ಗೋಡೆಗಳನ್ನು ಸಾಮಾನ್ಯವಾಗಿ[4] ಐದು ಪುಟದಿಂದ ಹತ್ತು ಪುಟದವರೆಗೂ ಕಟ್ಟುವುದುಂಟು.[5] ಅಡುಗೆಕೋಣೆ, ಕಿರುಹಟ್ಟಿ ಮತ್ತು ನಡುಮನೆಗಳ ಗೋಡೆಗಳಿಗೆ ಗಾರೆಯನ್ನು ಬಳಸುತ್ತಾರೆ. ಗಾರೆಯನ್ನು ಮರಳು ಮತ್ತು ಸುಣ್ಣವನ್ನು ಅರೆದು ತಯಾರಿಸಿರುತ್ತಾರೆ. ಹೊರಗೋಡೆಗೆ ತುಸು ಒರಟುಗಾರೆಯನ್ನು ಬಳಸಿದರೆ ಒಳಗೋಡೆಗೆ ನಯವಾದ ಗಾರೆಯನ್ನು ಹಾಕಿರುತ್ತಾರೆ.

ಹಟ್ಟಿಯ ಸುತ್ತಲಿನ ನಾಲ್ಕು ಗೋಡೆಗಳು ಮತ್ತು ಒಳಭಾಗದ ಮನೆಯ ಅಡ್ಡಗೋಡೆಗಳನ್ನು ಕಟ್ಟಿ ಮುಗಿಸಿದ ಮೇಲೆ ‘ಮಾಳಿಗೆ ಹಟ್ಟಿ’ ನಿರ್ಮಿಸುವಂತಿದ್ದರೆ ಪೂರ್ವ[6] ಅಥವಾ ಉತ್ತರ ದಿಕ್ಕಿಗೆ ಇರುವಂತೆ ‘ತಲೆಬಾಗಿಲು’ [7] ನಿಲ್ಲಿಸುವುದು ಕ್ರಮ. ಹೊರಗಡೆಯಿಂದ ಪ್ರವೇಶ ಮಾಡುವ ಮೊದಲ ದ್ವಾರಕ್ಕೆ ಈ ಹೆಸರು (ಈ ತಕೆಬಾಗಿಲಿನ ಎರಡೂ ಪಕ್ಕಕ್ಕೆ ಕಿಟಕಿಗಳಿರುತ್ತವೆ). ಪುರೋಹಿತರು ಶುಭ ಲಗ್ನ ತಿಥಿಯಲ್ಲಿ ಈ ಬಾಗಿಲನ್ನು ನಿಲ್ಲಿಸಿಕೊಡುತ್ತಾರೆ. ಈ ತಲೆಬಾಗಿಲನ್ನು ಇಡುವ ದಿನ ಒಂದು ಹೋತ ಅಥವಾ ಕೋಳಿಯನ್ನು ಬಲಿಕೊಟ್ಟು ರಕ್ತ ಶಾಂತಿ ಮಾಡಿ ಅದರ ತಲೆಯನ್ನು ಕೆಳಗೆ ಹೂಳಿ ಅನಂತರ ಅದರ ಮೇಲೆ ತಲೆಬಾಗಿನಲ್ಲಿ ನಿಲ್ಲಿಸುವುದು ಸಂಪ್ರದಾಯ. ಇದರ ಅಂಗವಾಗಿ ಅಂದು ಬಲಿಕೊಟ್ಟ ಪ್ರಾಣಿಯ ಮಾಂಸದ ಅಡುಗೆ ಅಣಿಗೊಂಡಿರುತ್ತದೆ. ಹಟ್ಟಿಗೆ ಯಾವ ಕೇಡೂ ಬರದಿರಲಿ ಎಂಬುದೇ ಈ ಆಚರಣೆಯ ಉದ್ದೇಶ.

ಹಟ್ಟಿಯ ಬಹು ಪ್ರಮುಖ ಭಾಗವೆನಿಸಿದ ಜಾಗಗಳಲ್ಲಿ ಅಡ್ಡೆ (ಬಲಗು) ಹಾಕಿರುವುದು ಸಾಮಾನ್ಯ. ಅದಕ್ಕೆ ಆಸರೆಯಾಗಿ ಮಧ್ಯಭಾಗದಲ್ಲಿ ಎರಡು ಕಂಬಗಳನ್ನು ನಿಲ್ಲಿಸಿರುತ್ತಾರೆ. (ಆ ಕಂಬಗಳ ಬುಡ ಅಗಲವಿದ್ದು ತಲೆ ಸಣ್ಣಗಿರುತ್ತವೆ. ಬುಡದಲ್ಲಿ ಅದರ ಸುತ್ತಳತೆ ನಾಲ್ಕು ಅಡಿಯಿದ್ದರೆ ತಲೆ ಎರಡು ಅಡಿ ಇರುತ್ತದೆ. ಕಂಬಗಳು ನುಣುಪಾಗಿ ಗುಂಡಗೆ ಇಲ್ಲವೆ ಏಣು ಏಣಾಗಿ ಇರುತ್ತವೆ. ಇವುಗಳ ಮೇಲೆ ಚಿತ್ತಾರಗಳಿರುತ್ತವೆ). ಕಂಬದ ಮೇಲೆ ಬಂಧಿಸಿದ ಅಡ್ಡೆಯ ಸುತ್ತಳತೆ ಮೂರರಿಂದ ಆರು ಅಡಿಗಳವರೆಗೂ ಇರಬಹುದು. ಕಂಬದ ಮೇಲೆ ಅಡ್ಡಬಲಗು ಸರಿಯಾಗಿ ಆತುಕುಳಿತುಕೊಳ್ಳಲು ‘ಬೋದಿಗೆ’ ಹಾಕಿರುತ್ತಾರೆ. (ಬೋದಿಗೆ ಎಂದರೆ ಪ್ಲಸ್‌(+) ಗುರುತಿನಲ್ಲಿ ಮಾಡಿದ ಚಿಕ್ಕ ಮರದ ತುಂಡು. ಇದರ ಮೇಲೆ ಅಡ್ಡೆ ಮತ್ತು ಜಂತೆಗಳು ನಾಲ್ಕು ಕಡೆಯಿಂದಲೂ ಬಂದು ಕುಳಿತಿರುತ್ತವೆ) ಈ ಬೋದಿಗೆ ತುಂಡುಗಳ ತೊಲೆ ಅಥವಾ ಅಡ್ಡ ಬಲಗಿನ ಕೆಳಗೆ ನಾಲ್ಕು ಕಡೆಗೆ ಒಂದೊಂದು ಅಡಿ ಚಾಚಿಕೊಂಡಿರುತ್ತವೆ. ಕೆಲವು ಕಡೆಗಳಲ್ಲಿ ಹಟ್ಟಿಯ ಕೇಂದ್ರ ಸ್ಥಾನದಲ್ಲಿ ನೆಡಲಾದ ಕಂಬಗಳ ತುದಿಯ ಮೇಲೆ ತೊಲೆಗಳನ್ನು ಬಂಧಿಸಿಟ್ಟು ಆ ತೊಲೆಯ ಮೇಲೆ ಕೊಮಾರ’ ಎನ್ನುವ ಒಂದು ಕಂಬವನ್ನು ಬಂಧಿಸಿರುವುದುಂಟು. ನಾಲ್ಕೂ ಮೂಲೆಯಲ್ಲಿ ಇಡೀ ಛಾವಣಿಯನ್ನು ತೊಲೆಯ ಮೇಲೆ ನಿಂತು ಹೊತ್ತುಕೊಂಡ ಮೂಲೆಗಂಬಗಳನ್ನು ಮಲ್ಲಗಂಬಗಳೆಂದು ಕರೆಯುವುದು ವಾಡಿಕೆ.

ಹೀಗೆ ಕಂಬಗಳನ್ನು ನೆಟ್ಟು ಅಡ್ಡಬಲಗನ್ನು ಹಾಕಿದ ಮೇಲೆ ಗೋಡೆಯಿಂದ ಈ ಅಡ್ಡೆ ಮೇಲೆ ಬರುವಂತೆ ಅಡ್ಡ ಬಲಗಗಿಂತ ಉದ್ದದಲ್ಲಿ ಮತ್ತು ದಪ್ಪದಲ್ಲಿ ಚಿಕ್ಕದಾದ ತೊಲೆಗಳನ್ನು ಹಾಕುತ್ತಾರೆ. ಇವು ಸಾಮಾನ್ಯವಾಗಿ ಎಂಟು ಹತ್ತು ಅಡಿಗಿಂತ ಹೆಚ್ಚು ಉದ್ದವಿರುವುದಿಲ್ಲ. ಇವು ಚೌಕಾಕಾರದಲ್ಲಿದ್ದು ಒಂದು ಅಥವಾ ಎರಡಡಿ ಸುತ್ತಳತೆಯಲ್ಲಿರುತ್ತವೆ. ಇವನ್ನೆಲ್ಲಾ ಸಮನಾಗಿ ಹಾಸಿದ ಮೇಲೆ ಇವುಗಳ ಮೇಲ್ಭಾಗದಲ್ಲಿ ಅಡ್ಡಡ್ಡಲಾಗಿ ಜಂತೆಗಳನ್ನು ಹಾಕುತ್ತಾರೆ. (ಜಂತೆಗಳೆಂದರೆ ಸಾಮಾನ್ಯವಾಗಿ ಐದು ಅಡಿ ಉತ್ತವಿರುವ ಒಂದು ಗೇಣು ಸುತ್ತಳತೆಯಿರುವ ನಾಲ್ಕು ಏಣ್ಣುಗಳುಳ್ಳ ಸಾಧನೆ. ಇವುಗಳನ್ನು ಒಂದು ಅಡಿ ಅಂತರದಲ್ಲಿ ತೊಲೆಗಳ ಮೇಲೆ ಹಾಸಿ ಅವುಗಳ ಮೇಲೆ ಸಣ್ಣನೆಯ ಉಂಡೆಕಟ್ಟಿಗಳನ್ನು ಒಂದರ ಪಕ್ಕದಲ್ಲೊಂದು ಒತ್ತೊತ್ತಾಗಿ ಹಾಕಿ ಮುಚ್ಚುತ್ತಾರೆ. ಆಮೇಲೆ ಒಂದು ‘ಶುಭದಿನ’ ಮೇಲುಮುದ್ದೆ ಹಾಕಿ ಸಿಹಿಯುಡುಗೆ ಉಣ್ಣುತ್ತಾರೆ.

ಮಾಳಿಗೆಹಟ್ಟಿ ನಿರ್ಮಾಣವಿಲ್ಲದಿದ್ದರೆ ಅಡ್ಡಬಲಗು ತೊಲೆಗಳ ಬಳಕೆ ಅಷ್ಟಾಗಿ ಇರುವುದಿಲ್ಲ. ಗೋಡೆಯನ್ನು ಮಧ್ಯಭಾಗದಲ್ಲಿ ಹತ್ತು ಅಡಿ ಎತ್ತರಕ್ಕೆ ಕಟ್ಟಿ ಅದರ ಹಿಂದಕ್ಕೂ ಮುಂದಕ್ಕೂ ಐದು ಅಡಿ ಎತ್ತರದ ಗೋಡೆಕಟ್ಟಿ ಅದರ ಮೇಲೆ ಬಿದಿರುಗಳನ್ನು ಹಾಸಿ ‘ಮಾಡು’ ರಚಿಸುತ್ತಾರೆ. ಹೀಗೆ ಗಳಗಳನ್ನು ಒಂದರ ಪಕ್ಕದಲ್ಲೊಂಡು ಹಾಕಿ ಅದರ ಮೇಲೆ ಗರಿಯನ್ನೋ ನಾಡ ಹೆಂಚನ್ನೋ ಹಾಸಿದರೆ ಅದಕ್ಕೆ ‘ಹಂಡೆಗಳ’ ಎಂದು ನಾಲ್ಕು ಅಂಗುಲ ಅಂತರದಲ್ಲಿ ಈ ಗಳಗಳನ್ನು ಹಾಕಿ ಹುರಿಬಿಗಿದು ಸೋಗೆಯನ್ನು ಹೆಂಚನ್ನೊ ಹೊದಿಸಿದರೆ ಅದಕ್ಕೆ ‘ಅಂಜನಗಳ’ ಎಂದೂ ಕರೆಯುತ್ತಾರೆ. ತೊಟ್ಟಿ ಹಟ್ಟಿಯಾದರೆ ತಲೆಬಾಗಿಲಿನಿಂದ ಮುಂದೆ ಸ್ವಲ್ಪ ಭಾಗಕ್ಕೆ ಕಡಿಮಾಡು ರಚಿಸಿ ತೆಂಗಿನಗಡಿಯನ್ನೊ ನಾಡಹೆಂಚನ್ನೋ ಹೊದಿಸಿರುತ್ತಾರೆ. ಈ ಮಾಡಿನ ತಳಭಾಗವನ್ನು ಹಜಾರ ಎಂದೇ ಕರೆಯುತ್ತಾರೆ. ಈ ಹಜಾರದ ಎರಡೂ ಬದಿಗೆ ಎರಡು ಕೋಣೆಗಳಿರುತ್ತವೆ. ಸುಣ್ಣ ಬಳಿದಿರುವುದನ್ನು ಬಿಟ್ಟರೆ ಬೇರೆಯಾವುದೇ ಅಲಂಕಾರವಿರದೆ ಸಾದಾ ಇರುತ್ತವೆ. ಅಡುಗೆಕೋಣೆಯ ಪಕ್ಕದ ನಡುಮನೆಯಲ್ಲಿ ಪೂರ್ವಾಭಿಮುಖವಾಗಿ ದೇವರ ಗೂಡು ಇರುತ್ತದೆ.

ಹೀಗೆ ವಾಸಕ್ಕೆ ಅಗತ್ಯವಾದ ಹಟ್ಟಿಯನ್ನು ನಿರ್ಮಿಸಿಕೊಳ್ಳುವಾಗಲೇ ಲಭ್ಯವಿರುವ ಸ್ಥಳಾವಕಾಶದಲ್ಲೇ ಕೊಟ್ಟಿಗೆ, ರೊಪ್ಪ ಮತ್ತು ಗೂಡುಗಳನ್ನು ನಿರ್ಮಿಸಿಕೊಳ್ಳುವುದು ಕ್ರಮ. ಸಾಮಾನ್ಯವಾಗಿ ಹಟ್ಟಿಯ ಎಡಭಾಗ ಅಥವಾ ಬಲಭಾಗದಲ್ಲಿ ದನಗಳಿಗೆ ಪ್ರತ್ಯೇಕವಾಗಿ ಕೊಟ್ಟಿಗೆ ಕಟ್ಟರುತ್ತಾರೆ. ಇದಕ್ಕೆ ಹೊರಗಡೆಯಿಂದಲೂ ಒಂದು ಬಾಗಿಲು ಇಟ್ಟಿರುತ್ತಾರೆ. ಕೊಟ್ಟಿಗೆ ಗೋಡೆಗಳಿಗೆ ಸುಣ್ಣ ಇಲ್ಲವೆ ಸಗಣಿ ನೀರನ್ನು ಬಳಿದಿರುತ್ತಾರೆ. ಕೊಟ್ಟಿಗೆಯ ಮುಕ್ಕಾಲು ಭಾಗಬಿಟ್ಟು ಉಳಿದ ಭಾಗಕ್ಕೆ ಸೊಂಟದೆತ್ತರಕ್ಕೆ ಅಡ್ಡಗೋಡೆ ಕಟ್ಟಿ ಸಣ್ಣ ಓಣಿ ನಿರ್ಮಿಸಿರುತ್ತಾರೆ. ಇದಕ್ಕೆ ಹುಸಿ ಎಂದು ಹೆಸರು. ಇಲ್ಲಿ ದನಗಳ ಮೇವನ್ನು ಶೇಖರಿಸಿಟ್ಟಿರುತ್ತಾರೆ. ಇದಕ್ಕೆ ಹೊಂದಿಕೊಂಡಂತೆಯೇ ದನಗಳಿಗೆ ಹುಲ್ಲು ಮೇಯಲು ‘ಗ್ವಾದಣಿಗೆ’ ರಚಿಸಿರುತ್ತಾರೆ. ಮಧ್ಯೆ ಮುಸುರೆಬಾನಿ (ಕೂನಿ) ಇರುತ್ತದೆ. ಇದು ದನಗಳಿಗೆ ನೀರು ಕುಡಿಯಲು ಉಪಯೋಗವಾದರೆ ಹಟ್ಟಿಯವರಿಗೆ ಊಟ ಮಾಡಿದ ಎಂಜಲು ಚೆಲ್ಲಲು ಸಹಾಯಕ.

(ರೇಖಾ ಚಿತ್ರ-೧)

ತೊಟ್ಟಿಹಟ್ಟಿಗಳಲ್ಲಿ ಕೊಟ್ಟಿಗೆ ದ್ವಾರಂದ (ಪ್ರವೇಶ ದ್ವಾರದ) ಎಡ ಅಥವಾ ಬಲಕ್ಕೆ ಇರುತ್ತದೆ. ಒಂದು ಭಾಗ ಪೂರ್ತಿ ಕೊಟ್ಟಿಗೆಯಾದರೆ ಉಳಿದ ಮೂರು ಭಾಗ ಹಜಾರ ಆಗಿರುತ್ತದೆ. ಹುಸಿಯ ಅಡ್ಡಗೋಡೆಯ ಮೇಲೆ ಮಾಳಿಗೆಯ ಜಂತೆಗಳಿಗೆ ಆಸರೆಯಾಗಿ ಕಂಬಗಳನ್ನು ನೆಟ್ಟಿರುತ್ತಾರೆ. ಆ ಕಂಬಗಳ ಕವೆಯ ಮೇಲೆ ಅಡ್ಡ ಬಲಗುಗಳನ್ನು ಹಾಕಿ ಅದರ ಮೇಲೆ ಹಲಗೆ ಹಾಸಿ ಅಡ್ಡ ನಿರ್ಮಿಸಿರುತ್ತಾರೆ. ಇದರಲ್ಲಿ ದನಗಳ ಮೇವನ್ನು ತುಂಬಿಸಿಟ್ಟಿರುತ್ತಾರೆ.

ತೊಟ್ಟಿ ಹಟ್ಟಿಗಳಲ್ಲಿ ಪ್ರಾಣಿವಸತಿಯ ಜೊತೆಗೆ ಮಾನವ ವಸತಿಯೂ ಸಮಾವೇಶಗೊಂಡಿರುವುದರಿಂದ ನೂತನ ಹಟ್ಟಿ ಪ್ರವೇಶದ ಬಗೆಗೂ ಹೇಳಬೇಕಾಗುತ್ತದೆ. ಈ ಸಂದರ್ಭವನ್ನು ‘ಹೊಸಹಟ್ಟಿಗೆ ಹೋಗೋದು’. ‘ಹಟ್ಟಿಗೆ ಇಳಕೊಳ್ಳೋದು’ ಎಂದು ಕರೆಯುತ್ತಾರೆ. ಹಟ್ಟಿ ಪ್ರವೇಶದ ದಿನ ಪುರೋಹಿತರು, ಮಂತ್ರವಾದಿ-ಇಬರನ್ನೂ ಬರಮಾಡಿಕೊಳ್ಳುವುದು ಪದ್ಧತಿ. ಮಂತ್ರವಾದ ದಿಗ್ಭಂದನ ಮಾಡಿ ಯಾವ ದುಷ್ಟಶಕ್ತಿಗಳೂ ಹಟ್ಟಿಗೆ ಪ್ರವೇಶಿಸದಂತೆ ಮಾಡುತ್ತಾನೆ. ಅದಕ್ಕಾಗಿ ಮಂತ್ರಿಸಿದ ನಿಂಬೆಹಣ್ಣು, ತೆಂಗಿನಕಾಯಿಯನ್ನು ಹಟ್ಟಿಯ ಯಾವುದಾದರೂ ಮೂಲೆಯಲ್ಲಿ ಹೂಳುತ್ತಾರೆ. ಪುರೋಹಿತರುಕೂಡ ಸಿಪ್ಪೆ ತೆಗೆಯದ ಒಂದು ತೆಂಗಿನಕಾಯಿಯನ್ನು ಮಂತ್ರತಂತ್ರದಿಂದ ಬಹಳ ಕಟ್ಟುನಿಟ್ಟು ಮಾಡಿ ಅದಕ್ಕೆ ರಂಧ್ರ ಕೊರೆದು ಅದರಲ್ಲಿ ಕಡ್ಡಿ ತೂರಿಸಿ ಆ ಕಡ್ಡಿಯಿಂದ ಅದನ್ನು ತಲೆಬಾಗಿಲ ಮೇಲೆ ಒಳಗಡೆ ಇರುವಂತೆ ಜಂತೆಗೆ ನೇತು ಹಾಕುತ್ತಾರೆ. ಕುಂಬಳಕಾಯಿಗಳಿದ್ದರೆ ಒಂದನ್ನು ಹಟ್ಟಿ ಮುಂದೆ ಒಡೆದು ಶಾಂತಿ ಮಾಡಿ ಇನ್ನೊಂದನ್ನು ಮಂತ್ರಿಸಿ ತೆಂಗಿನ ಕಾಯಿ ನೇತು ಹಾಕಿದ ಜಾಗದಲ್ಲಿ ನೇತು ಹಾಕುತ್ತಾರೆ. ತಲೆ ಬಾಗಿಲು ಹೊಸ್ತಿಲಿಗೆ ಮತ್ತು ಹೊಸ್ತಿಲಿನಿಂದ ಒಳಗೆ ಸಣ್ಣ ಸಣ್ಣ ಮೊಳೆ ಹೊಡೆದಿರುತ್ತಾರೆ. ಕೊನೆಯಲ್ಲಿ ಬಲಿ ಅನ್ನ ಹಾಕುವುದು ಅರಿಶಿನ ಕುಂಕುಮದ ನೀರು ಮಾಡಿ ಎಂಟೂ ದಿಕ್ಕುಗಳಿಗೆ ಚೆಲ್ಲುವುದು ಸಂಪ್ರದಾಯ. ಇಲ್ಲೆಲ್ಲಾ ದಕ್ಷಿಣ ಕರ್ನಾಟಕ ಭಾಗದ ಸಂಸ್ಕೃತಿಯ ಎಳೆಗಳನ್ನು ಗುರುತಿಸಬಹುದು.

ತೊಟ್ಟಿಹಟ್ಟಿಯ ವೈಶಿಷ್ಟ್ಯವೆಂದರೆ ಅದು ಕೊಟ್ಟಿಗೆ, ರೊಪ್ಪ ಮತ್ತು ಗೂಡುಗಳ ಸಮುಚ್ಛಯವಾಗಿರುವುದು. ಹಟ್ಟಿ ಎಂದ ಮೇಲೆ ಅಲ್ಲಿ ಕೊಟ್ಟಿಗೆ ಇದ್ದೇ ತೀರಬೇಕು. ಕೊಟ್ಟಿಗೆಯಿಲ್ಲದ ಹಟ್ಟಿ ಹಟ್ಟಿಯೇ ಅಲ್ಲ ಎಂಬುದು ಈ ಪ್ರದೇಶದ ಒಕ್ಕಲಿಗರ ಅಭಿಪ್ರಾಯ. ಹಟ್ಟಿಯಲ್ಲಿರುವ ದನದ ಕೊಟ್ಟಿಗೆ ‘ಬಡಗುಬಾಗಿಲು ಹಟ್ಟಿಯಾಗಿರಬೇಕು’ ಎಂದು ಹೇಳುತ್ತಾರೆ. ಉತ್ತರ ದಿಕ್ಕಿನಲ್ಲಿದ್ದರೆ ಕೊಟ್ಟಿಗೆ ಅಭಿವೃದ್ಧಿಯಾಗುತ್ತದೆ ಎಂದು ನಂಬಿಕೆ. ದನಕರುಗಳು, ಆಡುಕುರಿಗಳು, ಮಂದಿ ಎಲ್ಲರೂ ಒಂದೇ ಬಾಗಿಲಿನಿಂದ ಪ್ರವೇಶ ಹೊಂದುವ ಕ್ರಮವಿರುವುದು ತೊಟ್ಟಿಹಟ್ಟಿಯ ಮತ್ತೊಂದು ವಿಶೇಷ. ಹೀಗೆ ರಾಸುಗಳು ಮತ್ತು ಮನೆಮಂದಿ ಒಂದೇ ಬಗಿಲಿನಲ್ಲಿ ಪ್ರವೇಶ ಹೊಂದಿದರೆ ಸಮೃದ್ಧವಾಗಿರುತ್ತದೆ ಎಂಬ ನಂಬಿಕೆ ಪ್ರಬಲವಾಗಿರುತ್ತದೆ. ಹಟ್ಟಿಯ ‘ದ್ವಾರಂದ’ ಬೀದಿಯ ಕಡೆಗಿದ್ದು ಇಡೀ ಹಟ್ಟಿಗೆ ಅದು ಏಕ ಮಾತ್ರ ದ್ವಾರವಾದ್ದರಿಂದ ಕಳ್ಳಕಾಕರ ಭಯವೂ ಇರುವುದಿಲ್ಲ. ಹಟ್ಟಿಯೊಳಗೆ ರಾಸು ಕಟ್ಟುವುದರಿಂದ ಮುಂಜಾನೆ ಎದ್ದಾಕ್ಷಣ ದನಕರುಗಳ ಮುಖ ನೋಡಬಹುದೆಂದೂ ಅದರಿಂದ ದಿನನಿತ್ಯದ ಕೆಲಸಗಳಿಗೆ ಶ್ರೇಯಸ್ಸಾಗುತ್ತದೆ ಎಂದೂ ನಂಬುತ್ತಾರೆ. ಆದರೆ ಈ ದನಕರುಗಳನ್ನು ಪೂರ್ವಕ್ಕೆ ಮುಖಮಾಡಿ ಕಟ್ಟಬೇಕೆಂಬ ನಿರ್ಬಂಧವಿದೆ. ದೈವಕ್ಕೆ ಬೆನ್ನೂ ಮಾಡಿ ನಿಲ್ಲಬಾರದೆಂಬ ನಂಬಿಕೆಯೇ ಅದಕ್ಕೆ ಕಾರಣ.

ತೊಟ್ಟಿಹಟ್ಟಿಯ ಸುತ್ತಲೂ ಕಲ್ಲಿನಿಂದ ಮಾಡಿಸಿದ ಕಲ್ಲುಬಾನಿ[8] ಇರುವುದು ಸಾಮಾನ್ಯ. ಕೆಲವೆಡೆ ಮಣ್ಣಿನಿಂದ ಮಾಡಿದ ಗುಡಾಣದ ರೀತಿಯ ಮಣ್ಣಿನ ಬಾನಿಯನ್ನು ಇಟ್ಟಿರುತ್ತಾರೆ. ಈ ಮಣ್ಣಿನ ಬಾನಿಯನ್ನು ಸಾಮಾನ್ಯವಾಗಿ ನೆಲದಲ್ಲಿ ಹೂಳಿರುತ್ತಾರೆ. ಅದರಲ್ಲಿ ಕಲಗಚ್ಚು ತುಂಬಿಸಿರುತ್ತಾರೆ. ತಾವು ತಿಂದು ಉಳಿದದ್ದೆಲ್ಲವನ್ನೂ ಅದಕ್ಕೆ ಹಾಕುವುದುಂಟು. ಅಳತೆಮೀರಿ ತಿನ್ನೂವವರನ್ನು ಕುರಿತು ಛೇಡಿಸುವ ಕಲಗಚ್ಚಿನ ಬಾನಿ ಇದ್ದ ಹಾಗೆ’ ಎಂಬ ಗಾದೆ ಅದರ ಸ್ವರೂಪವನ್ನು ತಿಳಿಸುತ್ತದೆ. ಹೊಟ್ಟಿಹಟ್ಟಿಯ ಒಂದು ಮೂಲೆಯಲ್ಲಿ ಗಂಜಲದ ಗುಂಡಿಯೂ ಇರುತ್ತದೆ. ದನಕರುಗಳ ಗಂಜಲ ಎಲ್ಲ ಕಡೆಯಿಂದಲೂ ಬಂದು ಅಲ್ಲಿ ಶೇಖರಗೊಳ್ಳುವಂತೆ ಮಾಡಿರುತ್ತಾರೆ. ಅಲ್ಲಿ ದೊಡ್ಡ ಮಡಕೆಯೊಂದನ್ನು ಹೂಳಿರುತ್ತಾರೆ. ಅದರಲ್ಲಿ ಮೂರಕ್ಕೂ ಹೆಚ್ಚು ಚರಿಗೆಯಷ್ಟು ಗಂಜಲ ಶೇಖರಗೊಂಡಿರುತ್ತದೆ. ಗಂಜಲಗುಂಡಿ ತುಂಬಿದಾಗ ಅದನ್ನು ಚೌರಿಗೆಯಲ್ಲಿ ತುಂಬಿ ತಿಪ್ಪೆಯ ಮೇಲೆ ಚೆಲ್ಲುತ್ತಾರೆ.[9]

ಹಟ್ಟಿಗೆ ತುಸು ದೂರದಲ್ಲಿ ಕಸದ ತಿಪ್ಪೆಗುಂಡಿಯನ್ನು ನಿರ್ಮಿಸಿರುತ್ತಾರೆ. ಆ ತಿಪ್ಪೆ ಹೊಲಗದ್ದೆಗಳಿಗೆ ಹತ್ತಿರವಾಗುವ ಒಂದು ಎಡೆಯಲ್ಲಿರುವ ಸಾಮಾನ್ಯ. ಕೆಲವೆಡೆ ಹುಲ್ಲಿನ ಹಿತ್ತಿಲಿನಲ್ಲಿ ತಿಪ್ಪೆ ಇರುವುದುಂಟು. ಎಲ್ಲ ವಿಧವಾದ ಕಸ-ಕಡ್ಡಿಗಳನ್ನು ಅದರಲ್ಲಿ ಗುಡ್ಡೆ ಹಾಕುವುದು ರೂಢಿ. ಆ ತಿಪ್ಪೆಯ ಮೇಲೆ ಆಗಾಗ ಗಂಜಲ ಸುರಿಯುವುದರಿಂದ ತಿಪ್ಪೆ ಚೆನ್ನಾಗಿ ಕೊಳೆತು ಗೊಬ್ಬರವಾಗುತ್ತದೆ.

ತೊಟ್ಟಿಹಟ್ಟಿಗಳಲ್ಲಿ ಆಕಳು ಎತ್ತುಗಳ ಜೊತೆಗೆ ಕುರಿ ಆಡುಗಳ ರೊಪ್ಪುವು ಇರುತ್ತದೆ. ಆದರೆ ಅವುಗಳಿಗೆ ಪ್ರತ್ಯೇಕ ‘ಗೊತ್ತು’ ಮಾಡಿ ಕೂಡಿರುತ್ತಾರೆ. ರಾತ್ರಿವೇಳೆಯಲ್ಲಿ ಆಕಳು ಎತ್ತುಗಳಂತಹ ದೊಡ್ಡ ರಾಸುಗಳು ಅವುಗಳನ್ನು ತುಳಿದು ಜೀವಕ್ಕೆ ಹಾನಿ ಮಾಡುತ್ತವೆ ಎಂಬ ಆತಂಕವೇ ಅದಕ್ಕೆ ಕಾರಣ. ದನದ ಕೊಟ್ಟಿಗೆಯಿಂದ ರೊಪ್ಪವನ್ನು ಪ್ರತ್ಯೇಕಗೊಳಿಸಲು ಉಣ್ಣೆಬರಲು ಅಥವಾ ಬಿದಿರು ತಡಿಕೆಗಳ ಬೇಲಿಯನ್ನು ನಿರ್ಮಿಸಿರುತ್ತಾರೆ.


[1] ಈ ಜಾಗ ತಂತಮ್ಮ ಜಮೀನಿನ ತಲೆದಿಸೆಯಲ್ಲಿರುವುದು ಸಾಮಾನ್ಯ.

[2]      ಇದನ್ನು ‘ಗುದ್ದಲಿ ಪೂಜೆ’ ಎಂದು ಕರೆಯುತ್ತಾರೆ. ಪುರೋಹಿತರು (ವಾಜಿಗಳು) ಪೂಜೆಯನ್ನು ನಿರ್ವಹಿಸುತ್ತಾರೆ.

[3]      ಇದನ್ನು ಕೊಳ್ಳೇಗಾಲದ ಸುತ್ತಿನಲ್ಲಿ ‘ಒಂಟಿ ವಸಾರು’ ಎನ್ನುತ್ತಾರೆ.

[4]      ಒಂದು ಪುಟ ಎಂದರೆ ಒಂದೂವರೆ ಮೊಳ ಇರುತ್ತದೆ.

[5]      ಸುಮಾರು ೧೦ ಅಡಿ ಎತ್ತರದ ಗೋಡೆಗಳನ್ನು ಕಟ್ಟುತ್ತಾರೆ.

[6]       ಜನಪದರ ಬದುಕಿನಲ್ಲಿ ಪೂರ್ವದಿಕ್ಕು ಬಹಳ ಪವಿತ್ರವಾದದ್ದು. ಏಕೆಂದರೆ ಇಡೀ ಜಗತ್ತಿಗೆ ಚೈತನ್ಯ ನೀಡುವ ಸೂರ್ಯ ಹುಟ್ಟುವುದು ಆ ದಿಕ್ಕಿನಲ್ಲಿ. ಉತ್ತರ ಚಿರಸ್ಥಾಯಿಯಾದ ಧ್ರುವನ ದಿಕ್ಕಾದ್ದರಿಂದ ಅದಕ್ಕೂ ಪವಿತ್ರ ಸ್ಥಾನ.

[7]       ಇದನ್ನು ದ್ವಾರಂದ ಎನ್ನುತ್ತಾರೆ.

[8]      ಹಟ್ಟಿಯಲ್ಲೇ ಕಲಗಚ್ಚಿನ ಬಾನಿ ಹೂಡುವುದರ ಅಗತ್ಯವನ್ನು ಒತ್ತಿ ಹೇಳುವ ಗಾದೆಯೊಂದು ಹೀಗಿದೆ:

ಎತ್ತು ಏಳಂದೂರಲ್ಲಿ
ಕಲಗಚ್ಚು ಕೆಂದೇಗಾಲದಲ್ಲಿ
ನಡುವೆ ನಿಂತು ಐವಲಗೋ ಅಂದ್ರೆ ಬತ್ತದ?

[9]  ತೊಟ್ಟಿ ಹಟ್ಟಿಯ ನಡುಮನೆಯಲ್ಲಿ ಕಟ್ಟುವ ಹೋರಿಗಳು ಅಥವಾ ಎತ್ತುಗಳು ಉಚ್ಚೆ ಮಾಡಿದಾಗ ಅದನ್ನು ಅಡಕೆ ಪಟ್ಟೆಯ ದೊನ್ನೆಯೊಳಗೆ ಶೇಖರಿಸಿಕೊಂಡು ಅನಂತರ ತಿಪ್ಪೆಯ ಮೇಲೆ ಚೆಲ್ಲುತ್ತಾರೆ.