ಪ್ರಚಲಿತವಿರುವ ನಂಬಿಕೆಗಳು:

೧. ರೊಪ್ಪದ ಜಾಗವನ್ನು ಪ್ರತಿ ಬೇಸಿಗೆ ಮತ್ತು ಮಳೆಗಾಲಕ್ಕೆ ಬದಲಾಯಿಸಬೇಕು. ಬದಲಾಯಿಸದಿದ್ದರೆ ಕುರಿಗಳು ಸಾಯುತ್ತವೆ.

೨. ಕುರಿ ಮತ್ತು ಮೇಕೆಗಳು ಬೆಳಗಿನ ಹೊತ್ತು ಆಡುವುದನ್ನು ನೋಡಬಾರದು, ಕೇಡು.

೩. ಮುಂಜಾನೆ ಎದ್ದ ಕೂಡಲೆ ಕುರಿ ಕಾಣಿಸಿಕೊಂಡರೆ ಮಂಗಲ.

೪. ಮೇಕೆಗೆ ಕಟ್ಟಿದ ಹಗ್ಗ ದಾಟಿದರೆ ಶನಿಕಾಟ.

೫. ಮುಟ್ಟಾದ ಹೆಂಗಸರು ರೊಪ್ಪಕ್ಕೆ ಕಾಲಿಡಬಾರದು. ಕುರಿಗಳಿಗೆ ರೋಗ ಬರುತ್ತದೆ.

೬. ಕುರಿಗಳನ್ನು ಒದೆಯಬಾರದು. ಲಕ್ಷ್ಮೀದೇವತೆಯನ್ನು ಒದ್ದಂತೆ.

ಕೃಷಿಕರ ಸಾಕು ಪ್ರಾಣಿಗಳಿ ಸಾಲಿಗೆ ಕೋಳಿ, ಹಂದಿಗಳೂ ಸೇರುತ್ತವೆ. ಅವುಗಳನ್ನು ಸ್ವಂತ ಆಹಾರ್ಕಕಾಗಿ ಹಾಕುವಂತೆ ಲಾಭಕ್ಕಾಗಿಯೂ ಸಾಕಣೆ ಮಾಡುವುದುಂಟು. ಕೋಳಿ ಮತ್ತು ಹಂದಿಗಳಿಗಾಗ ನಿರ್ಮಿಸುವ ಗೂತುಗಳು ನಿರ್ಮಾಣ ತಂತ್ರದ ದೃಷ್ಟಿಯಿಂದ ಅತ್ಯಂತ ಸರಳ ಕೌಶಲದವು. ಅವು ಬಹು ಕಡಿಮೆ ವೆಚ್ಚದಿಂದ ನಿರ್ಮಿಸಲಾಗುವಂಥ ವಸತಿಗಳು.

ಗೂಡು ಎನ್ನುವುದು ಮನೆ ಎಂಬ ಅರ್ಥದಲ್ಲಿಯೇ ಬಳಕೆಯಲ್ಲುಂಟು. ಆಡು ಮಾತಿನಲ್ಲಿ ಒಂದು ಗೂಡು ಮಾಡಿಕೊಂಡರೆ ಸಾಕಾಗಿದೆ ಎನ್ನುವುದು ಸಾಮಾನ್ಯ. ಇಲ್ಲಿ ಮನೆ ಎಂಬ ಅರ್ಥವಿದೆ. ಈ ದೃಷ್ಟಿಯಿಂದ ಕೋಳಿಗೂಡು, ಹಂದಿಗೂಡು ಕ್ರಮವಾಗಿ ಕೋಳಿ ಮನೆ, ಹಂದಿಯ ಮನೆಗಳೇ ಆಗಿವೆ.

ಕೋಳಿ ಮತ್ತು ಹಂದಿಗಳನ್ನು ಸಾಕುವ ಪರಿಪಾಠ ಬಹುಹಿಂದಿನಿಂದಲೂ ಪ್ರಚಲಿತ ಇರುವುದನ್ನು ಈ ಕೆಳಗಿನ ತ್ರಿಪದಿ ದೃಢಪಡಿಸುತ್ತದೆ:

ಹಂದಿ ಕೋಳಿಗಳ ಅಂದಾಕೆ ಸಾಕಿದ್ಲು
ಹೊಂದೀ ಬಂದಾವೆ ಬಡುತಾನ- ಸಿಕ್ಕಣ್ಣ
ರಂಬೇ ಮಾಡಿದ ದೆಸಿಯಿಂದ
(ಕಾಡುಗೊಲ್ಲರ ಜನಪದ ಗೀತೆಗಳು ಪು. ೧೮೨)

ಕೋಳಿ ಗೂಡುಗಳು ಸಾಮಾನ್ಯವಾಗಿ ದುರ್ಬಲ ವರ್ಗದವರಲ್ಲಿ ಗುಡಿಸಲು ಅಥವಾ ಜೋಪಡಿಯ ಎದುರಿನಲ್ಲಿದ್ದರೆ ಮಧ್ಯಮ ವರ್ಗದವರಲ್ಲಿ ದನಿನ ಕೊಟ್ಟಿಗೆ ಅಥವಾ ಹಟ್ಟಿಯ ಒಂದು ಪಕ್ಕದಲ್ಲಿರುತ್ತದೆ. ಎರಡು ಅಡಿ ಅಗಲ ಮೂರು ಅಡಿ ಎತ್ತರದ ವಿನ್ಯಾಸ ವಿರುವ ಹಟ್ಟಿಯ ಒಂದು ಸಣ್ಣ ಕಟ್ಟಡ ಅದು. ಕಲ್ಲು ಮತ್ತು ಮಣ್ಣಿನ ತೆಳುವಾದ ಗೋಡೆ ನಿರ್ಮಿಸಿ ಗೂಡಿನ ಬಾಯಿಗೆ ಒಂದು ಚಪ್ಪಟೆಯಾದ ಕಲ್ಲಿನ ಬಾಗಿಲನ್ನು ಹೊದಿಸಿರುತ್ತಾರೆ. ಗೂಡಿನ ಛಾವಣಿಗೆ ಹಲಗೆ/ ದಬ್ಬಗಳನ್ನು ಹಾಸಿ ಅದರ ಮೇಲೆ ಭಾರವಾದ ಕಲ್ಲನ್ನು ಹೇರಿರುತ್ತಾರೆ. ಹಾವು, ಮುಂಗುಸಿಗಳು ಅದರೊಳಗೆ ಪ್ರವೇಶಿಸದಿರಲು ಈ ಕ್ರಮ.

ಮೈಸೂರು ಸುತ್ತಿನಲ್ಲಿ ಕೋಳಿಗೂಡು ಕೊಟ್ಟಿಗೆ ಮೂಲೆಯಲ್ಲಿದ್ದರೆ ಮನೆನಾಡು ಸುತ್ತಿನಲ್ಲಿ ವಾಸದ ಮನೆಗೆ ತುಸು ದೂರದಲ್ಲಿ ಬಚ್ಚಲು ಕೊಟ್ಟಿಗೆಯ ಒಂದು ಪಕ್ಕದಲ್ಲಿ (ಈ ಗೂಡನ್ನು) ನಿರ್ಮಿಸಲಾಗುವುದು. ಕೋಳಿ ಹೇನಿನ ಬಾಧೆಯನ್ನು ನಿವಾರಿಸಿಕೊಳ್ಳಲು ಈ ತಂತ್ರ. ಚನ್ನಪಟ್ಟಣದ ಕಡೆಗಳಲ್ಲಿ ಕೋಳಿಗೂಡು ಮನೆಯ ಅಂಗಳದಲ್ಲೇ ಇರುವುದುಂಟು. ಕಳ್ಳತನದ ಭಯದಿಂದಾಗಿ ಈಗೀಗ ಮನೆಯೊಳಗೇ ಪಂಜರ/ ಮಂಕರಿ/ ಜಲ್ಲೆ/ ಬಿದಿರ ಬುಟ್ಟಿ ದುಬ್ಬಾಗಿಕ್ಕಿ ಮುಚ್ಚಿಡುವುದೂ ಉಂಟು (ನೋಡಿ: ರೇಖಾ ಚಿತ್ರ:೭)

ಕೊಳ್ಳೆಗಾಲ ಸುತ್ತಿನಲ್ಲಿ ಕೋಳಿಗೂಡುಗಳನ್ನು ಹಟ್ಟಿಯೊಳಗೆ ಬಾಗಿಲು ಪಕ್ಕದಲ್ಲೇ ನಿರ್ಮಿಸಿಕೊಳ್ಳುವುದು ಕ್ರಮ. ಬಿದಿರಿನ ಕಟ್ಟಿಯಿಂದ ತಡಿಕೆ ನಿರ್ಮಿಸಿ ಅದಕ್ಕೆ ಮಣ್ಣು ಮೆಚ್ಚಿ ತೆಳುವಾದ ಗೋಡೆಯನ್ನು ನಿರ್ಮಿಸುವರು. ಅದರ ತಲೆ ಮೇಲೆ ಬಿದಿರಿನ ಕಡ್ಡಿಗಳನ್ನು ಅಡ್ಡಲಾಗಿ ಜೋಡಿಸಿಟ್ಟು ಭೂತಾಳೆ ಎಲೆ ಹಾಸಿ ಮಣ್ಣು ಮೆತ್ತುವರು. ಹೀಗಾಗಿ ಕೋಳಿಗೂಡು ಸಂಪೂರ್ಣ ಕತ್ತಲಗವಿಯಾಗಿರುತ್ತದೆ. ಗೂಡಿನ ನೆಲಕ್ಕೆ ಗಾರೆ ಅಚ್ಚು ಹಾಕುವುದು ವಿಶೇಷ (ರೇಖಾ ಚಿತ್ರ-೭)

ಮಲೆನಾಡು ಪ್ರದೇಶದಲ್ಲಿ ದನಿನಕೊಟ್ಟಿಗೆಯ ಪಕ್ಕದಲ್ಲಿಯೇ ಅದಕ್ಕೆ ಚಾಚಿಕೊಂಡಂತೆ ಒಂದು ಪುಟ್ಟ ಮಾಡು ರಚಿಸಿ ಅಲ್ಲಿ ಕೋಳಿಗಳನ್ನು ಕೂಡಿ ಹಾಕಲು ಗೂಡು ನಿರ್ಮಿಸುವುದು ಪದ್ಧತಿ. ಈ ಗೂಡನ್ನು ಕೋಳಿ ಒಡ್ಡಿ ಎಂದು ಕರೆಯುವುದುಂಟು. ಮಂಡಿ ಎತ್ತರದ ಗೋಡೆ ಹಾಕಿ ಅದರ ಮೇಲೆ ಹಲಗೆ ಹೊದಿಸಿ ಭಾರವಾದ ಕಲ್ಲು ಮರಗಳನ್ನು ಹೇರಿಡುವುದು ಕ್ರಮ. ಗೂಡಿನ ಗೋಡೆಗೆ ಸುಣ್ಣ ಕೆಮ್ಮಣ್ಣು ಸಗಣಿಯನ್ನು ಬಳಿದಿರುವುದು ವಿಶೇಷ. (ರೇಖಾ ಚಿತ್ರ:೮)

ಪ್ರಚಲಿತವಿರುವ ಗಾದೆಗಳು:

೧. ಕೋಳಿ ಹೆಚ್ಚಿ ಕೊಠಾರ ಹಾಳಾತು

೨. ಇಲಾಸ ಬಂದು ಇಲ್ಲಿ ಹಾಸು

ಕೋಳಿ ಗೂಡಲ್ಲಿ ಕೊಡವಿ ಹಾಸು

ನಂಬಿಕೆಗಳು:

೧. ಮನೆಯ ಹೊಸ್ತಿಲ ಮೇಲೆ ನಿಂತು ಕೋಳಿ ಕೂಗಿದರೆ ನೆಂಟರು ಬರುತ್ತಾರೆ.

೨. ಕೋಳಿ ಮುಟ್ಟಿ ಹಂದಿಬಾಡು ತಿಂದರೆ ಒಳಮನೆಗೆ ಬರಬಾರದು.

೩. ಹೊಸ್ತಿಲ ಮೇಲೆ ನಿಂತು ಕೂಗಿದ ಕೋಳಿಯನ್ನು ತಕ್ಷಣ ಕೊಯ್ದು ಬಿಡಬೇಕು.

ಹಂದಿಗಳು ಕೃಷಿಕರ ಸಾಕುಪ್ರಾಣಿಗಳಾದರೂ ತಿನ್ನಲು ಹೊರತಾಗಿ ಅವು ಬೇರೆ ಯಾವ ಪ್ರಯೋಜನಾತ್ಮಕ ಕೆಲಸಗಳಿಗೂ ಬರುವುದಿಲ್ಲ. ಹೊಲಗದ್ದೆಗಳ ಫಲಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ನಂಬಿದ ದೈವಗಳನ್ನು ಸಂಪ್ರೀತಗೊಳಿಸುವುದು ಹಂದಿ ಬಲಿಕೊಡುವ ಸಂಪ್ರದಾಯವಿರುವುದರಿಂದ ಹಂದಿಗಳಿಗೆ ಅಪಾರ ಬೇಡಿಕೆ ಇರುತ್ತದೆ. ಆದುದರಿಂದಲೇ ಅವುಗಳ ಸುರಕ್ಷಿತತೆಗಾಗಿ ವಸತಿ ನಿರ್ಮಿಸುವುದು ಅನಿವಾರ್ಯವಾಯಿತೆಂದು ಕಾಣುತ್ತದೆ.

‘ಊರಿಗೆ ಹಂದಿ ಇರಬೇಕು ನೆರೆಗೆ ನಿಂದಕರಿರಬೇಕು’ ಎಂಬ ಗಾದೆ ಹಂದಿ ಸಾಕಣೆ ಬಹುತೇಕ ಎಲ್ಲ ಊರುಗಳಲ್ಲೂ ಸಾಮಾನ್ಯವಾಗಿ ಪ್ರಚಲಿತವಿರುವುದನ್ನು ಹೇಳುತ್ತದೆ. ವಸತಿ ಸಮುಚ್ಛಯಗಳಿಗೆ ಅನತಿ ದೂರದಲ್ಲಿ ಹೊಲಗದ್ದೆಗಳ ಸಮೀಪದಲ್ಲಿ ಗೂಡುಗಳನ್ನು ಕಟ್ಟುವುದು ಕ್ರಮ. ‘ಕಡಿಮಾಡು’ ಇಲ್ಲವೆ ಕಮಾನಿನಾಕಾರದ ಮಾಡು ರಚಿಸಿ ಅಲ್ಲಿ ಹಂದಿಗಳನ್ನು ಕೊಡುವುದು ಪದ್ಧತಿ. ಗೂಡಿಗೆ ಮಣ್ಣು ಅಥವಾ ಕಲ್ಲಿನ ಗೋಡೆ ಕಟ್ಟಿರುತ್ತಾರೆ. ಛಾವಣಿಗೆ ತೆಂಗಿನ /ಸೋಗೆ ಗರಿಯನ್ನು ಹೊದಿಸಿರುತ್ತಾರೆ. ಗೂಡಿಗೆ ತಡಿಕೆಯ ಕದವೂ ಇರುತ್ತದೆ. ಹಂದಿ ಚಿಕ್ಕರು, ಹಂದಿ ಜೋಗಿಗಳು, ಪರಿವಾರದವರು, ಹರಿಜನರು, ಈಡಿಗರು ಮತ್ತು ಒಕ್ಕಲಿಗರು ಹಂದಿ ಸಾಕಣೆಯಲ್ಲಿ ನಿಷ್ಣಾತರು.

[1]

ಹಂದಿ ಚಿಕ್ಕರು ಮತ್ತು ಹಂದಿ ಜೋಗಿಗಳು ಊರಿನಿಂದ ಹೊರಗೆ ಗುಡಿಸಲುಗಳನ್ನು ನಿರ್ಮಿಸಿಕೊಂಡು ಪ್ರತ್ಯೇಕವಾಗಿ ನೆಲೆಸಿರುವ ಜನರು. ಈ ಇಬ್ಬರಲ್ಲೂ ಹಂದಿಗೂಡುಗಳು ಗುಡಿಸಲುಗಳಿಗೆ ಹೊಂದಿಕೊಂಡಂತೆಯೇ ನಿರ್ಮಾಣಗೊಂಡಿರುತ್ತದೆ. ಸುಮಾರು ಮೂರುವರೆ ಅಡಿ ಎತ್ತರದ ಐದು ಅಡಿ ವಿನ್ಯಾಸದ ಕಟ್ಟಡಕ್ಕೆ ದಪ್ಪನೆಯ ಗೋಡೆ ನಿರ್ಮಿಸಿ ಅದರ ಮೇಲ್ಛಾವಣಿಗೆ ತೆಂಗಿನ ಗರಿ/ ನೆಲ್ಲುಲ್ಲು/ ಒಡಕೆ /ಚೇಣಿಹುಲ್ಲು/ ನೊದೆಯನ್ನು ಹೊದಿಸಿರುತ್ತಾರೆ. ಅದರ ಮೇಲೆ ಬಿದಿರಿನ ಅಂಜರವನ್ನು ಹಾಕಿರುತ್ತಾರೆ. ಗೂಡಿನ ಕದ ಬಿದಿರಿನ ತಡಿಕೆಯದಾಗಿರುತ್ತದೆ. ಗೋಡೆಯ ಮೇಲುತುದಿಯಲ್ಲಿ ಅರ್ಧಅಡಿ ವ್ಯಾಸವುಳ್ಳ ರಂಧ್ರಗಳಿರುತ್ತವೆ.

ಮಲೆನಾಡಿನಲ್ಲಿ ಹಂದಿಗೂಡುಗಳು ಕೆಲವು ಹಳ್ಳಿಗಳಲ್ಲಿ ಮಾತ್ರ ಪ್ರಚಲಿತ. ದೇವರಗುಡಿಗಳ ಮಧ್ಯೆದಲ್ಲಿಯೇ ಊರುಗಳಿರುವುದು ಅದಕ್ಕೆ ಕಾರಣ. ದೈವ ದೇವರುಗಳಿದ್ದಲ್ಲಿ ಹಂದಿ ಸಾಕಣೆ ನಿಷಿದ್ಧ. ಸಾಕಣೆ ಪ್ರಚಲಿತವಿರುವೆಡೆಗಳಲ್ಲಿ ದನಿನಕೊಟ್ಟಿಗೆಗೆ ಅವತಿದೂರದಲ್ಲಿ ಒಂದು ಗೂಡು ರಚಿಸಿ ಅದಕ್ಕೆ ಸುತ್ತಲೂ ಬಿದಿರಿನ ಗಳುಗಳು/ ಮರದಗಳುಗಳನ್ನು ನೆಟ್ಟು ತಡಿಕೆ ಕಟ್ಟಿ ಮೂರು ಅಡಿ ಎತ್ತರದ ಒಂದು ಹಲಗೆಯ ಬಾಗಿಲು ಇಟ್ಟಿರುತ್ತಾರೆ. ಈ ವಸತಿಗೆ ‘ಹಂದಿ ಒಡ್ಡಿ’ ಎಂದೂ ಕರೆಯುವುದುಂಟು. (ರೇಖಾ ಚಿತ್ರ-೯)

ಪ್ರಚಲಿತವಿರುವ ಗಾದೆಗಳು:

೧. ಹಂಚಿ ಹೆಚ್ಚೆ ಕೊಠಾರ ಹಾಳಾಯ್ತು

೨. ನಂದಿ ನೋಡದೋರು ಹಂದಿಗಿಂತ ಕಡೆ

೩. ಹಂದಿ ಕೊಬ್ಬಿದಷ್ಟು ಹಂದಿ ಜೋಗಿಗೆ ಲಾಭ.

೪. ಕಾಡುಹಂದಿ ಹೊಲಮೇಯ್ತು ಊರಹಂದಿ ಕಿವಿ ಕುಯುದ್ರ

೫. ಊರಿಗೆ ನೂರು ಹಂದಿ ಇರಬೇಕು, ಕೇರಿಗೊಬ್ಬ ನಿಂದಕ ಇರಬೇಕು.

ನಂಬಿಕೆಗಳು:

೧. ಹಂದಿಯ ಗೂಡು ವಾಸದ ಮನೆಯ ಹೊರಗೆ ಇರಬೇಕು.

೨. ಹಂದಿ ನರಸಿಂಹ ದೇವರು. ಅದನ್ನು ಒದೆಯಬಾರದು.

ಈ ಎಲ್ಲಾ ಪ್ರಾಣಿ ವಸತಿ ಮಾದರಿಗಳೂ ವಿಶಿಷ್ಟವಾಗಿವೆ, ಸರಳವಾಗಿವೆ. ವಾಸ್ತವವಾಗಿ ಈ ಒಂದೊಂದನ್ನು ನಿರ್ಮಿಸಲು ಬಳಸುವ ಪರಿಕರಗಳು, ಅವನ್ನು ಹೊಂದಿಸುವ ಕೌಶಲ, ಕ್ರಮಬದ್ಧವಾಗಿ ಅವನ್ನು ಬಂಧಿಸಿ ‘ಮಾಡು’ ರಚಿಸುವ ತಂತ್ರ- ಈ ಜನರ ಬುದ್ಧಿ ಸಾಮರ್ಥ್ಯದ ಜೊ೦ತೆಗೆ ಪ್ರಾಣಿಗಳ ಬಗೆಗಿನ ಅವರ ಮನೋಧರ್ಮ, ಅವರ ಜೀವನ ಕ್ರಮ ಮತ್ತು ಸಂಸ್ಕೃತಿಯ ಎಳೆಗಳನ್ನು ಪರಿಚಯಿಸುತ್ತವೆ.

ಬೇರೆ ಬೇರೆ ಉದ್ದೇಶಗಳಿಗಾಗಿ ನಿರ್ಮಿಸಲಾಗುವ ಈ ಪ್ರಾಣಿ ವಸತಿ ಆದರಿಗಳಿಗೆ ಒಂದೇ ಬಗೆಯ ನಿರ್ಮಾಣ ತಂತ್ರ (Construction techniques) ಹಾಗೂ ಒಂದೇ ಬಗೆಯ ಸಾಮಗ್ರಿಗಳನ್ನು ಬಳಸಿದರೂ ಎಷ್ಟೋ ವೇಳೆ ಅವುಗಳ ನಿರ್ಮಾಣ ಮಾದರಿಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತವೆ. ಹಟ್ಟಿ ನಿರ್ಮಾಣ ಮತ್ತು ದನಿನ ಕೊಟ್ಟಿಗೆ ಮಾದರಿ ಹೆಚ್ಚು ಕಡಿಮೆ ಒಂದೇ ಎನಿಸಿದರೂ ಕುರಿ, ಕೋಳಿ, ಹಂದಿ ವಸತಿಗಳ ಮಾದರಿಗಳು ಅನನ್ಯತೆಯನ್ನು ಸ್ಥಾಪಿಸುವುದನ್ನು ನಿರಾಕರಿಸಲಾಗದು. ಪಾಯ ತೋಡುವುದು, ಕಂಬ ನೆಡುವುದು, ಮಾಡು ರಚಿಸುವುದು, ಛಾವಣಿ ಹೊದಿಸುವುದು, ಗೋಡೆ ನಿರ್ಮಿಸುವುದು, ನೆಲ ಮಾಡುವುದು- ಈ ಒಂದೊಂದು ಪ್ರಾಣಿ ವಸತಿಯಲ್ಲಿ ಬೇರೆಯಾಗಿರುವುದನ್ನು ಗುರುತಿಸಬಹುದು. ಇದು ಈ ಜನರ ಬುದ್ಧಿ ಸಾಮರ್ಥ್ಯ ಮತ್ತು ಅವರ ಮನೋಧರ್ಮವನ್ನು ಬಿಂಬಿಸುತ್ತದೆ. ಮರದ ತೊಲೆ, ಅಡ್ಡೆ, ಅಡ, ಬಲಗುಗಳು, ಜಂತೆ, ಮರ/ ಬಿದಿರುಗಳುಗಳನ್ನು ಅಣಿಗೊಳಿಸಿಕೊಳ್ಳುವಿಕೆಯಲ್ಲಿ ತೋರುವ ಕೌಶಲ, ಕಿಟಕಿ ಬಾಗಿಲುಗಳ ಹಲಗೆಗಳ ಮೇಲೆ ಶಂಖ, ಚಕ್ರ, ಸುರಳಿಬಳ್ಳಿ, ಸ್ವಸ್ತಿಕ, ಆನೆ ಮುಂತಾದ ಅಲಂಕಾರದ ಚಿತ್ತಾರಗಳನ್ನು ಕೆತ್ತುವ ರೀತಿ, ಕಂಬಗಳನ್ನು ನುಣುಪಾಗಿ ಗುಂಡಗೆ ಇಲ್ಲವೇ ಏಣು ಏಣಾಗಿ ಕೆತ್ತುವಲ್ಲಿ ತೋಡುವ ಕೈಚಳಕ ಇವರ ಕಲಾತ್ಮಕ ಪ್ರತಿಭೆಯನ್ನು ಪರಿಚಯಿಸುತ್ತವೆ. [2]

ಒಟ್ಟಿನಲ್ಲಿ ಜನಪದ ವಾಸ್ತುಶಿಲ್ಪ ವಿಶಿಷ್ಟವಾದುದು; ಸಹಜ ಸರಳ ಸುಂದರವಾದದು. ಅದರ ಬೇರುಗಳು ವಸತಿ ಮಾದರಿ ವಿನ್ಯಾಸಗಳಲ್ಲಿ ಹುದುಗಿಕೊಂಡಿರುವಂತೆಯೇ ಅದರ ಕೊಂಬೆಗಳು ಸಂಕೀರ್ಣ ಸ್ವರೂಪದ ಆಧುನಿಕ ಪ್ರಾಣಿ ವಸತಿ ಮಾದರಿಗಳಲ್ಲಿ ಲಯವಾಗಿವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಅದು ಪ್ರವೇಶಿಸದ ವಸತಿ ಮಾದರಿಗಳೇ ಇಲ್ಲವೆನ್ನಬಹುದು.

ಸ್ವಂತಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ ನಮ್ಮ ಜನಪದ ವಾಸ್ತುಶಿಲ್ಪದ ವೈಶಿಷ್ಟ್ಯವನ್ನು ಇನ್ನಾದರೂ ಮನಗಾಣಬೇಕಾಗಿದೆ. ಪಾಶ್ಚಾತ್ಯ ಪ್ರಭಾವದ ಪರಿಣಾಮವಾಗಿ ನಮ್ಮತನ ಬರಿದಾಗಿ ನಮ್ಮ ಜನ ವಿದೇಶಿಯರ ಬಾಲಂಗೋಚಿಗಳಂತೆ ಬದುಕು ನೂಕುವಂತಗಿದೆ. ರಾಜಕೀಯ ದಾಸ್ಯ ತೊಲಗಿದ್ದರೂ ನಮ್ಮಲ್ಲಿಯೂ ಬೌದ್ಧಿಕದಾಸ್ಯ ತೊಲಗಿಲ್ಲ. ನಡೆನುಡಿಗಳಲ್ಲಿ, ವೇಷಭೂಷಣಗಳಲ್ಲಂತೊ ವಸತಿ ಮಾದರಿಗಳಲ್ಲೂ ನಾವು ಅವರನ್ನು ಅನುಕರಿಸುತ್ತಿದ್ದೇವೆಯೇ ಹೊರತು ನಮ್ಮ ಮಾದರಿಗಳಿಗೆ ಪ್ರಚಾರ ಕೊಡುತ್ತಿಲ್ಲ.

ಎಲ್ಲಿಯವರೆಗೆ ಜನತೆ ಅನ್ಯರ ಸಂಸ್ಕೃತಿಯನ್ನು ಅನುಸರಿಸಿರುತ್ತಾರೋ ಅಲ್ಲಿಯವರೆಗೆ ತಮ್ಮದೆನ್ನುವ ಭಿನ್ನಾಭಿಪ್ರಾಯಗಳೂ ಹೊರಹೊಮ್ಮುವುದಿಲ್ಲ.

ಈವರೆಗೆ ಸ್ಥೂಲವಾಗಿ ಪರಿಶೀಲಿಸಿದ್ದನ್ನೆಲ್ಲಾ ಸಂಕ್ಷೇಪವಾಗಿ ಹೀಗೆ ಸಂಗ್ರಹಿಸಬಹುದು:

೧. ಪ್ರಾಣಿ ವಸತಿ ಮಾದರಿಗಳ ಅಧ್ಯಯನ ಜನಪದ ವಾಸ್ತುಶಿಲ್ಪದ ಅಧ್ಯಯನವೇ ಆಗಿದೆ.

೨. ಪ್ರಾಣಿ ವಸತಿ ನಿರ್ಮಾಣ ಬಹು ಸರಳ.

೩. ಆಯಾ ಪ್ರದೇಶದಲ್ಲಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿಕೊಂಡು ವಸತಿ ನಿರ್ಮಿಸುವುದು ಸ್ವಾಭಾವಿಕ.

೪. ವಸತಿ ನಿರ್ಮಾಣ ತಂತ್ರ, ವಿನ್ಯಾಸ, ಕೌಶಲಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುವುದು ಮುಖ್ಯವಾಗಿ ಭೌಗೋಳಿ ಕಾರಣಕ್ಕಾಗಿ.

೫. ತನ್ನ ವಸತಿ ನಿರ್ಮಾಣಕ್ಕೆ ನೀಡುವಷ್ಟು ಮುತುವರ್ಜಿಯನ್ನು ಮನುಷ್ಯ ತನ್ನ ಸಾಕುಪ್ರಾಣಿಗಳ ವಸತಿ ನಿರ್ಮಾಣಕ್ಕೆ ತೊಡಗಿಸುವುದಿಲ್ಲ.

೬. ಜೋಪಡಿ, ಗುಡಿಸಲು, ಹಟ್ಟಿ- ಮುಂತಾದ ವಸತಿ ಮಾದರಿಗಳಂತೆ ಕೊಟ್ಟಿಗೆ, ರೊಪ್ಪ, ದೊಡ್ಡಿ, ಗೂಡು ಮಾದರಿಗಳಲ್ಲೂ ಜನತೆಯ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಗುರುತಿಸಬಹುದಾಗಿದೆ.

೭. ಪ್ರಾಣಿವಸತಿ ಮಾದರಿಗಳ ಅಧ್ಯಯನದಿಂದ ಮಾನವದ ಸಾಂಸ್ಕೃತಿಕ ಇತಿಹಾಸವನ್ನು ಪುನರ್‌ಚಿಸಬಹುದು.

ಪರಾಮರ್ಶನ ಗ್ರಂಥಗಳು

ಅರ್ಚಕ ಬಿ. ರಂಗಸ್ವಾಮಿ ೧೯೭೧ ಹುಟ್ಟಿದಳ್ಳಿ, ಕನ್ನಡ ಅಧ್ಯಯನ ಸಂಸ್ಥೆ,
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-೬
ಅಂಬಳಿಕೆ ಹಿರಿಯಣ್ಣ ೧೯೭೮ ಮಲೆನಾಡ ಜನಪದ ಸಂಪ್ರದಾಯಗಳು,

ಪುಸ್ತಕ ಚಿಲುಮೆ, ಮೈಸೂರು-೧

  ೧೯೭೮ ಅ. ಕೊಡುಗೊಲ್ಲರ ಜನಪದ ಗೀತೆಗಳು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು-೬
  ೧೯೮೨ ಮಲೆನಾಡ ಒಕ್ಕಲಿಗರು ಮತ್ತು ಅವರ ಜಾನಪದ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದ ಪಿಹೆಚ್‌.ಡಿ. ನಿಬಂಧ (ಅಪ್ರಕಟಿತ)

ಈಶ್ವರಪ್ಪ ಎಂ.ಜಿ. ೧೯೯೨ ವ್ಯವಸಾಯ ಜಾನಪದ-ಜಾನಪದ ಸಂಭಾವನೆ ಡಾಜೀಶಂಪ ಗೌರವಗ್ರಂಥ, ತವೆಂಸ್ಮಾರಕ ಗ್ರಂಥಮಾಲೆ, ಮೈಸೂರು-೪
ಜವರೇಗೌಡ. ದೇ ೧೯೬೭ ಮುನ್ನುಡಿ-ಜನಪದ ಸಾಹಿತ್ಯ ಸಮೀಕ್ಷೆ ಮೋಹನ ಪ್ರಕಾಶನ, ಮೈಸೂರು
  ೧೯೯೦ ಸ್ಥಳನಾಮ ವ್ಯಾಸಂಗ, ಸಹ್ಯಾದ್ರಿ ಪ್ರಕಾಶನ, ಮೈಸೂರು
ಜೋಶಿ ಶಂ.ಬಾ ೧೯೯೦ ಮರ್ಹಾಟೀ ಸಂಸ್ಕೃತಿ: ಕೆಲವು ಸಮಸ್ಯೆಗಳು,

ಕರ್ನಾಟಕ ಸಾಹಿತ್ಯ ಅಕಾಡೆಮಿ,

ಬೆಂಗಳೂರು-೨

ದಾಸೇಗೌಡ. ಜಿ.ವಿ. ೧೯೭೩ ನಮ್ಮ ಜನಪದ ನಂಬಿಕೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-೬
ರಘುಪತಿಭಟ್‌ಕೆಮ್ತೂರು ೧೯೭೯ ತುಳುನಾಡಿನ ಸ್ಥಳನಾಮಗಳು, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು-೧
ರಾಜೇಂದ್ರ ಡಿ.ಕೆ. ೧೯೭೩ ನಮ್ಮ ಸುತ್ತಿನ ನಂಬಿಕೆಗಳು, ಕನ್ನಡ ಅಧ್ಯಯನ ಸಂಸ್ಥೆ,

ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-೬

ರಾಮಚಂದ್ರ ಸಿ.ಎಸ್. ೧೯೯೧ ಸಂಕೇತಿ: ಜನಾಂಗ, ಸಂಸ್ಕೃತಿ ಮತ್ತು ಭಾಷೆ, ಚೈತ್ರ ಪಲ್ಲವಿ, ಮೈಸೂರು-೨೩
ರಾಮೇಗೌಡ ೧೯೭೨ ಜನಪದ ನಂಬಿಕೆಗಳು, ಪ್ರಬುದ್ಧ ಪ್ರಕಾಶನ ಮೈಸೂರು-೧೨
ರಂಗಾರೆಡ್ಡಿ ಕೋಡಿರಾಂಪುರ ೧೯೭೯ ಹಳ್ಳಿಮನೆಗಳ ನಿರ್ಮಾಣ- ಗ್ರಾಮ ಜ್ಯೋತಿ ಕೆ.ಆರ್. ಲಿಂಗಪ್ಪ ಅಭಿನಂದನ ಗ್ರಂಥ, ಬೆಂಗಳೂರು
ಸುಧಾಕರ ೧೯೭೩ ನಮ್ಮ ಸುತ್ತಿನ ಗಾದೆಗಳು, ಕಅಸಂ, ಮೈಸೂರು-೬
  ೧೯೭೩ ಬೆಡಗಿನ ವಚನಗಳು, ಕಅಸಂ, ಮೈಸೂರು-೬
ಶಂಕರನಾರಾಯಣ ತೀ.ನಂ. ೧೯೮೨ ಕಾಡುಗೊಲ್ಲರ ಸಂಪ್ರಾಯಗಳು ಮತ್ತು ನಂಬಿಕೆಗಳು ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-೬

* * *


[1]       ಹಂದಿಮಾಂಸ ಊಟ ಮಾಡಿದಾಗ ಕೈಬಾಯಿಗಳನ್ನು ಸಗಣಿಯಿಂದ ತೊಳೆದುಕೊಂಡು ಊಟ ಮಾಡಿದ ಸ್ಥಳಕ್ಕೆ ‘ಗೋಮಯ’ ಇಡುತ್ತಾರೆ. ಸಗಣಿ ಹಾಕಿ ಸಾರಿಸಿಕೊಂಡು ಬರುವುದು, ಶುದ್ಧಿ ಮಾಡುವುದು ಕ್ರಮ. ಪರಿಶುದ್ಧ ಎನ್ನುವ ಈ ನಂಬಿಕೆ ವೈದಿಕ ಅಥವಾ ಹಿಂದೂ ಸಂಸ್ಕೃತಿಯ ಭಾಗ. ‘ಅವನು ಕೂತ ಜಾಗಕ್ಕೆ ಸಗಣಿ ನೀರು ಹಾಕು’ ಎಂಬ ಮಾತಿನಲ್ಲಿ ಅಪವಿತ್ರ ಎನ್ನುವ ಅರ್ಥವಿದ್ದು ಅದನ್ನು ದುಷ್ಟ/ ವಂಚಕನನ್ನು ಉದ್ದೇಶಿಸಿ ಹೇಳುವಂತಿದೆ. ಇಲ್ಲಿ ಸಂಸ್ಕೃತಿಯ ಎಳೆಗಳನ್ನು ಗುರುತಿಸಬಹುದು.

[2]      ಮರಗೆಲದವರ ನೆರವಿಲ್ಲದೆ ಸ್ವಯಂ ಅರಳುವ ಪ್ರತಿಭೆ. ಜನಪದ ಸಮಾಜದ ಬಹುಪಾಲು ಮಂದಿ ಕರಕುಶಲಕರ್ಮಿಗಳೇ.