ಪ್ರಾಚೀನದಿಂದ ಅರ್ವಾಚೀನ ವರೆಗಿನ ಮಾನವ ಸಂಸ್ಕೃತಿಯ ಇತಿಹಾಸದಲ್ಲಿ ದೇವ – ದೇವತೆಗಳ ಕಲ್ಪನೆ ರೋಚಕವಾದುದು. ಭಾಷೆ ಇನ್ನೂ ರೂಪುಗೊಳ್ಳದ ಕೇವಲ ಕೂಗು, ಸನ್ನೆಗಳಿಂದಲೇ ಭಾವನೆಗಳನ್ನು ಅಭಿವ್ಯಕ್ತಗೊಳಿಸುವಂಥ ಕಾಲದಲ್ಲಿ ಸ್ವರ್ಗ – ನರಕ, ಪಾಪ – ಪುಣ್ಯ, ಇತ್ಯಾದಿ ಯಾವುದರ ಬಗ್ಗೆಯೂ ಪರಿಕಲ್ಪನೆ ಇಲ್ಲದ ಮುಗ್ಧ ಮನಸ್ಸಿನ ಆದಿಮಾನವನಿಗೆ ಪ್ರಕೃತಿಯೇ ಪರಮವಾಗಿತ್ತು. ಸೂರ್ಯೋದಯ, ಸೂರ್ಯಾಸ್ತ, ಚಂದ್ರ, ನಕ್ಷತ್ರ, ಮೋಡ, ಮುಗಿಲು, ಗುಡುಗು – ಸಿಡಿಲು ಇತ್ಯಾದಿ ನಿಸರ್ಗದ ಆಟಾಟೋಪ ರಹಸ್ಯಗಳಿಗೆ ನಿಬ್ಬರಗಾದ ಅವನಿಗೆ ಕಣ್ಣಿಗೆ ಕಾಣದ, ಬುದ್ಧಿಗೆ ನಿಲುಕದ ಅದೆಷ್ಟೋ ಅದ್ಭುತಗಳು ಭಯಮೂಲವಾದ ಅವನ ತರ್ಕ ವಿತರ್ಕಗಳಿಗೆ ಹೊಳಹುದೋರಿದವು. ಅಜ್ಞಾತವಾದುದರ ಬಗೆಗಿನ ಜಿಜ್ಞಾಸೆಯಲ್ಲಿಯೇ ದೇವರ ಕಲ್ಪನೆ ಅಥವಾ ಅದಮ್ಯ ಶಕ್ತಿಯ ಅರಿವು ಮೂಡಿತು. ತನ್ನ ನಿತ್ಯದ ಬದುಕಿನ ಸುಖ – ದುಃಖಕ್ಕೆ ಕಾರಣವಾಗುವ ಸೃಷ್ಟಿಯ ಪ್ರತಿಯೊಂದರ ಬಗೆಗೂ ಆತನಲ್ಲಿ ಭಯ, ಶ್ರದ್ಧೆ, ಭಕ್ತಿ ಬೆಳೆದು ನಿಂತವು. ಆಗ ಸೃಷ್ಟಿಯ ಗೋಚರಾಗೋಚರ ವಸ್ತುಗಳೆಲ್ಲವೂ ಅವರಿಗೆ ಉಪಾಸನಾಯೋಗ್ಯ ದೇವತೆಗಳೆನಿಸಿದವು. ಹೀಗಾಗಿ ದೇವ – ದೇವತೆಗಳ ಸಂಖ್ಯೆ ಬೆಳೆಯುತ್ತಾ ಹಿಂದೂ ಸಂಸ್ಕೃತಿಯಲ್ಲಿ ಸುಮಾರು ೩೩ ಕೋಟಿಗೂ ಮಿಕ್ಕಿ ದೇವ – ದೇವತೆಗಳು ಸೃಷ್ಟಿಯಾಗಿದ್ದರೆ, ಜಪಾನದಲ್ಲಿ ೮ ಕೋಟಿ ದೇವತೆಗಳು ಸೃಷ್ಟಿಯಾಗಿರುವುದು ಅಚ್ಚರಿಯನ್ನುಂಟು ಮಾಡುತ್ತದೆ.

ಸಾಮಾಜಿಕ ಶಾಸ್ತ್ರದ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ಸಂಸ್ಕೃತಿಗಳು “ಪಿತೃ ಪ್ರಧಾನ” ವಾಗಿದ್ದರೆ. ಇನ್ನೂ ಕೆಲವು ಮಾತೃಪ್ರಧಾನವಾಗಿವೆ. ಯಾವುದೇ ಕುಟುಂಬದಲ್ಲಾಗಲಿ ಆ ಮೂಲಕ ಸಮಾಜದಲ್ಲಾದಲಿ  ಹೆಣ್ಣು – ಗಂಡಿನ ಪ್ರಾಧಾನ್ಯತೆ, ಆಯಾ ದೇಶದ ಧರ್ಮತತ್ವದರ್ಶನಗಳ ಮೇಲೂ ಪ್ರಭಾವ ಬೀರುತ್ತವೆ. ಆ ಮೂಲಕ ಆ ದೇಶದ ಧರ್ಮತತ್ವದರ್ಶನಗಳ ಮೇಲೂ ಪ್ರಭಾವ ಬೀರುತ್ತದೆ. ಆ ಮೂಲಕ ಆ ದೇಶದ ಸಂಸ್ಕೃತಿಯೂ ರುಪಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಕೃತಿಯ ಧರ್ಮತತ್ವ ದರ್ಶನಗಳು ಒಂದೇ ಸಂಸ್ಕೃತಿಯ ಅಡಿಯಲ್ಲಿ ಗುರುತಿಸುವಲ್ಲಿ ಅನೇಕ ತೊಡಕುಗಳು ಎದುರಾಗುತ್ತವೆ. ಕಾರಣ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹಿಕ್ಕಾದ ದ್ರಾವಿಡ ಹಾಗೂ ಆರ್ಯ ಸಂಸ್ಕೃತಿಗಳ ಜಾಲವನ್ನು ಭೇದಿಸಿ ಇದೇ ಇದು ಎಂದು ಹೇಳುವುದು ದುಸ್ತರ. ಆದರೂ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ವಿಶಿಷ್ಟವಾದ ಈ ಭಾರತೀಯ ಸಂಸ್ಕೃತಿಯಲ್ಲಿ “ಮಾತೃದೇವತೆಯ ಕಲ್ಪನೆ” ಮೂಡಿ ಬೆಳೆದುಬಂದ ಬಗೆ ಹಾಗೂ ಮಾತೃದೇವತಾರಾಧನೆ ಆದಿಯಿಂದಲೂ ಪೂರಕವಾದ ಜಾನಪದ ಸಂಸ್ಕೃತಿಯ ಪರಿಕಲ್ಪನೆಯ ಸ್ಥೂಲ ವಿವೇಚನೆ ಕೊಡುವ ಪ್ರಯತ್ನ ಇದಾಗಿದೆ.

ಭಾರತೀಯ ಸಂಸ್ಕೃತಿಯೆಂದರೆ ದ್ರಾವಿಡ ಹಾಗೂ ಆರ್ಯ ಸಂಸ್ಕೃತಿಗಳ ಕಲಸು ಮೇಲೋಗರ. ಸಾಮಾಜಿಕವಾಗಿ ಒಂದು ಮಾತೃಪ್ರಧಾನವಾದರೆ ಇನ್ನೊಂದು ಪಿತೃ ಪ್ರಧಾನವಾದುದು. ವೇದಪೂರ್ವದಲ್ಲಿಯೇ ಊರ್ಜಿತಾವಸ್ಥೆಯಲ್ಲಿದ್ದ ಮಾತೃಪ್ರಧಾನವಾದ ದ್ರಾವಿಡ ಸಂಸ್ಕೃತಿಯ ಧಾರ್ಮಿಕ ಶ್ರದ್ಧೆ, ಉಪಾಸನೆ ಹಾಗೂ ದೈವಿಕ ನಂಬಿಕೆಗಳು, “ಪಿತೃಪ್ರಧಾನ”ವಾದ ಆರ್ಯ ಸಂಸ್ಕೃತಿಯ ಸಂಕರದಿಂದಾಗಿ ಸಮನ್ವಯ ಸಾಧಿಸಿದ ಭಾರತೀಯ  ಸಂಸ್ಕೃತಿಯ ಸ್ಪಷ್ಟ ಕುರುಹುಗಳು ಕಾಣಿಸಿಕೊಂಡವು. ತಮ್ಮ ಉನ್ನತ ಕಲೆಗಳಿಂದ ದ್ರಾವಿಡರ ಮೇಲೆ ಸ್ವಾಮಿತ್ವವನ್ನು ಸಾಧಿಸ ಹೋರಟ ಆರ್ಯರಿಗೆ ಅದು ಸಾಧ್ಯವಾಗದೇ ಅವರೊಂದಿಗೆ ಧಾರ್ಮಿಕವಾಗಿ ಸಂಬಂಧವನದನೆರ್ಪಡಿಸಿಕೊಂಡರು. ನಾರಾಯಣ ಉಪಾಸಕರಾದ ಆರ್ಯರು ದಕ್ಷಪ್ರಜಾಪತಿಯ ಮಗಳಾದ ಸತಿಯನ್ನು, ಶಿವೋಪಾಸಕರಾದ ದ್ರಾವಿಡರ ಶಿವನಿಗೆ ಮದುವೆ ಮಾಡಿದರು. ಆ ಬಾಳುವೆಯೂ ಸರಿಯಾಗಿ ನಡೆಯಲಿಲ್ಲವೆಂಬುದು ಆರ್ಯ ದ್ರಾವಿಡರ ಮನೋಧರ್ಮದ ಅಂದಿನ ಜಟಿಲತೆಗೆ ಸಾಕ್ಷಿಯಾಗಿದೆ. ಆದರೂ ಕೊನೆಗೆ ವೈದಿಕ ಸಂಸ್ಕೃತಿಯೇ  ಭಾರತೀಯ ಸಂಸ್ಕೃತಿ ಎನ್ನುವಷ್ಟರ ಮಟ್ಟಿಗೆ ಅವರು ತಮ್ಮ ಪ್ರಾಬಲ್ಯವನ್ನು ಮೆರೆದರು. ಆದರೆ ವಸ್ತುಸ್ಥಿತಿಯೆಂದರೆ ವೈದಿಕ ಸಂಸ್ಕೃತಿಯಲ್ಲಿ ಸ್ಥಾನ ಪಡೆದಿದ್ದ ಮಾತೃದೇವತಾ ಪೂಜೆ ಹಾಗೂ ಶಿವ – ಶಕ್ತಿ ಆರಾಧನೆಗಳು ತತ್ವಶಃ ದ್ರಾವಿಡ ಸಂಸ್ಕೃತಿಯ ಮೂಲದಿಂದಲೇ ಬಂದವುಗಳೆಂದು, ಸಿಂಧೂ ಸಂಸ್ಕೃತಿಯಿಂದ ಸಿದ್ಧವಾದ ನಂತರ, ದ್ರಾವಿಡ ಸಂಸ್ಕೃತಿಯ ಮಹತ್ವ ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿ ನಿಂತಿತು. ಇಡೀ ಭಾರತೀಯ ಸಂಸ್ಕೃತಿಯೇ, ಮಾತೃಪ್ರಧಾನವಾದ ದ್ರಾವಿಡ ಸಂಸ್ಕೃತಿಯ ಪ್ರಭಾವಕ್ಕೆ ವೈಧಿಕ ಜೈನ ಬೌದ್ಧಗಳಲ್ಲೂ ಸ್ತ್ರೀಶಕ್ತಿಗೆ  ಸ್ಥಾನ ಲಭಿಸಿತು. ಪುರಾತತ್ವವನ್ನು ಸ್ತ್ರೀ ರೂಪದಲ್ಲಿ ಆರಾಧಿಸುವ “ದ್ರಾವಿಡ ಮೂಲದ ಮಾತೃ ದೇವತಾರಾಧನೆ ವ್ಯಾಪಕವಾಗಿ ಹಬ್ಬಿಕೊಂಡಿತು.”

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ ಸಾಕ್ಷಾತ್ ದೇವತೆಯೆನಿಸಿದ್ದಾಳೆ. ಯಾವುದೇ ಸಂಸ್ಕೃತಿಯಲ್ಲಿ ಹೆಣ್ಣನ್ನು ಸಂಪೂರ್ಣವಾಗಿ  ಉಪೇಕ್ಷಿಸಿದ್ದು ಕಂಡು ಬರುವುದಿಲ್ಲ. ವೇದ ಪೂರ್ವ ಆದಿ ದ್ರಾವಿಡ ಸಮಾಜದಲ್ಲಂತೂ ಹೆಣ್ಣಿಗೆ ಅತ್ಯಂತ ಗೌರವದ ಸ್ಥಾನವಿತ್ತು. ಗಂಡು ಬೇಟೆ, ವ್ಯವಸಾಯಗಳಲ್ಲಿ ತೊಡಗಿದರೆ, ಹೆಣ್ನಿಗೆ ಮನೆಗೆಲಸ ಹಾಗೂ ಮಕ್ಕಳ ಲಾಲನೆ – ಪಾಲನೆಯ ಜವಾಬ್ದಾರಿ ಇತ್ತು. ಇಡೀ ಸಂಸಾರದ ರಕ್ಷಣೆಯೇ ಅವಳ ಹೊಣೆಯಾಯಿತು. ಪುರುಷನ ಸರ್ವಸ್ವವೇ ಅವಳಾಗಿ ನಿಂತಳು. ಅವಳ ತಾಯ್ತನವೊಂದು ಗಂಡಿಗೆ ಆದಮ್ಯ ಶಕ್ತಿ ದ್ಯೋತಕವಾಗಿ ಕಂಡಿತು. ಪುರುಷನ ಸರ್ವಸ್ವವೇ ಅವಳಾಗಿ ನಿಂತಾಗ ಅಗಾಧ ಶಕ್ತಿಸ್ವರೂಪಿಣಿಯೆನಿಸಿದಳು. ಕಾಲಾಂತರದಲ್ಲಿ “ಸತಿ ಸಂತುಷ್ಟಳಾಗಿದ್ದರೆ ಕುಲ, ಶೀಲ, ಧರ್ಮ, ಚಾರಿತ್ಯ್ರ ಎಲ್ಲವೂ ಸುರಕ್ಷಿತ” ಹಾಗೂ “ಎಲ್ಲಿ ಸ್ತ್ರೀಯರು ಸಂತುಷ್ಟರಾಗಿರುವರೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ”

[1] ಎಂಬ ತಿಳಿವಳಿಕೆಯಲ್ಲಿಸ್ತ್ರೀಗೆ ದೇವತ್ವವನ್ನು ಆರೋಪಿಸಲಾಯಿತು. ಎಲ್ಲವನ್ನೂ ರಕ್ಷಿಸಬಲ್ಲ ಸ್ತ್ರೀಯು ಮಾತೆಯಾದಳು. “ಮಾತೃ ದೇವೋಭವ” ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಅದಲ್ಲದೇ ಪ್ರಕೃತಿಯೇ ಜೀವನೋಪಾಯದ ಸಾಧನವಾದ ಆದಿಮಾನವನ ಅರಿವಿನಲ್ಲಿ  ಪ್ರಖರತಿಶಕ್ತಿ ಸ್ತ್ರೀಶಕ್ತಿಯಾಗಿಯೂ ಕಾಣಿಸಿಕೊಂಡಿತು. ಪ್ರಕೃತಿ ತತ್ವದರ್ಶನದಲ್ಲಿ ಸ್ತ್ರೀಗೆ, ದೇವತೆಯ ಮಟ್ಟ  ಲಭ್ಯಾವಾಯಿತು, ಅತ್ಯಂತ ಪ್ರಾಚೀನವಾದ ಕಪಿಲ ಮಹರ್ಷಿಯ ಸಾಂಖ್ಯಯೋಗ ದರ್ಶನವೂ ಪ್ರಕೃತಿಯ ಪ್ರಾಶಸ್ತ್ಯವನ್ನೇ ಸಾರಿತು. ಮೊದಲು ಪ್ರಕೃತಿ ಆಮೇಲೆ ಪುರುಷ ಪ್ರಕೃತಿಯಿಂದಲೇ ಜಗತ್ತು, ಪ್ರಕೃತಿಯ ಕಾರ್ಯಕಾರಣವೆಲ್ಲ ತಾನೇ ಆದವಳು. ಪುರುಷ  ಪ್ರಕೃತಿ ಸಂಯೋಗವೇ ಸೃಷ್ಟಿಕಾರ್ಯ. ಪ್ರಕೃತಿ ಜಡ, ಪುರುಷ ನಿಷ್ಕ್ರಿಯ. ಆದರೆ ಕ್ರಿಯೆಗೆ ಸಂಯೋಗ ಅವಶ್ಯ. ಹೀಗಾಗಿ ಹೆಣ್ಣು ಪ್ರಕೃತಿತತ್ವವಾಗಿ ಉಪಾಸನಾ ದೇವತೆಯಾದಳು. ಪ್ರಕೃತಿಯು ಮಾನವನ ಸರ್ವಸ್ವವೂ ಆದದ್ದರಿಂದ ಭೂಮಿ ಅವನಿಗೆ ತಾಯಿಯೆನಿಸಿದಳು. ಹೀಗೆ ಪ್ರಕೃತಿ ಪುರುಷ ಶಕ್ತಿಯ ಆವಿಷ್ಕಾರದಲ್ಲಿ ಮಾನವನು ತನ್ನ ಧರ್ಮಶ್ರದ್ಧೆ, ನಂಬಿಕೆ, ಉಪಾಸನೆಗಳಿಂದ  ಪರಮಶಕ್ತಿಯಾದ, ಆದಿಶಕ್ತಿಯೆನಿಸಿದ ಸ್ತ್ರೀದೇವತಾರಾಧನರಯಲ್ಲಿ ತನ್ನ ಪರಮ ಸೌಖ್ಯ ಕಂಡುಕೊಂಡ; ಸಾಂಖ್ಯಯೋಗ ದರ್ಶನದಂತೆ ಪುರುಷನ ಕೆಲಸವೆಂದರೆ ಪ್ರಕೃತಿಯ ಕರ್ಮವನ್ನು ಸಾಕ್ಷೀಭೂತವಾಗಿ ನೋಡುವುದಾಯಿತು.

ವೈದಿಕ ದೇವತೆಗಳೆಂದು ಹೆಸರಿಸಿಕೊಂಡ ಬ್ರಹ್ಮ , ವಿಷ್ಣು, ರುದ್ರ, (ಶಿವ) ರಿಗೂ ಶಕ್ತಿಯೇ ಮೂಲವೆಂದು ಗ್ರಹಿಸಲಾಯಿತು. ಆಯಾ ಆಯಾಶಕ್ತಿಯಿಂದಲೇ ಅವರು ಕರ್ಮನಿರತರಾಗುವಂತಾಯಿತು. ಹೀಗಾಗಿ ಉಪಾಸನೆಯಲ್ಲಿ ಬ್ರಹ್ಮನಿಗೆ ಬ್ರಹ್ಮಿಣಿಯು ಶಕ್ತಿ ದೇವತೆಯಾದಳು. ಹೀಗಾಗಿ ಉಪಾಸನೆಯಲ್ಲಿ ಬ್ರಹ್ಮಣಿಗೆ ಬ್ರಹ್ಮಣಿಯು ಶಕ್ತಿ ದೇವತೆಯಾದಳು. ವಿಷ್ಣುವಿಗೆ ಲಕ್ಷ್ಮೀಯು ಶಕ್ತಿ ದೇವತೆಯಾದಳು ಮತ್ತು ಶಿವನಿಗೆ ಪಾರ್ವತಿಯು ಶಕ್ತಿ ದೇವತೆಯೆನಿಸಿದಳು. ವೈದಿಕ ಹಾಗೂ ದ್ರಾವಿಡ ಸಂಸ್ಕೃತಿಯ ಸಮನ್ವಯದಲ್ಲಿ ದ್ರಾವಿಡರ ಶಿವನಿಗೆ ಆ ಮೂಲಕ ಅವನ ಸತಿಯಾದ ಪಾರ್ವತಿಗೆ ಅತ್ಯಂತ ಪ್ರಾಮುಖ್ಯತೆ ಲಭಿಸಿತು. ಅಲ್ಲದೆ ವೈದಿಕ ಪರಂಪರೆಯಲ್ಲಿ ಅತ್ಯಂತ ಪ್ರಸಿದ್ಧರಾದ “ಸಪ್ತ ಮಾತೃಕೆಗಳು” (Seven devine Mothers) ಅಂದರೆ ಬ್ರಹ್ಮಿ, ಮಹೇಶ್ವರಿ, ವಯಷ್ಣವಿ, ಕೌಮಾರಿ, ಇಂದ್ರಾಣಿ , ವರಾಹಿ ಮತ್ತು ಚಾಮುಂಡಿ ಎಂಬ ದೇವತೆಗಳು ಕೂಡ ಮೂಲತಃ ದ್ರಾವಿಡರಿಂದಲೇ ಸ್ವೀಕೃತವಾದವರು ಎಂದು ವಿದ್ವಾಂಸರು ಭಾವಿಸುತ್ತಾರೆ. ಆದರೆ ಇವರಲ್ಲಿ ಚಾಮುಂಡಿ ದೇವತೆ ಮಾತ್ರ ದ್ರಾವಿಡ ಸಂಸ್ಕೃತಿಯಲ್ಲಿ, ಪ್ರಧಾನ ಪಾತ್ರವಹಿಸಿದಂತೆ ತೋರುತ್ತದೆ. ಇಂದಿಗೂ ಪಾರ್ವತಿಯ ಉಗ್ರರೂಪದ ಒಂದು ಶಕ್ತಿಯಾಗಿಯೇ ಚಾಮುಂಡಿಯನ್ನು ವರ್ಣಿಸಲಾಗುತ್ತೆ.

ಒಟ್ಟಾರೆ ಭಾರತೀಯ ಸಂಸ್ಕೃತಿಯಲ್ಲಿ “ಶಕ್ತಿ” ದೇವತೆಗಳು ವಿವಿಧ ರೂಪುಗಳಲ್ಲಿ ಪೂಜಿಸಲ್ಪಡುತ್ತಾರೆ. ಪಾರ್ವತಿಯ ತಾಮಸ, ಹಾಗೂ ಸಾತ್ವಿಕಶಕ್ತಿ ಸ್ವರೂಪದಲ್ಲಿಯೇ ಅನೇಕ ದೇವತೆಗಳು ಸೃಷ್ಟಿಯಾಗುರುವುದು ಗಮನಾರ್ಹವಾಗಿದೆ. ಜಾನಪದ ಪರಂಪರೆಯಲ್ಲಂತೂ ಆದಿಶಕ್ತಿ ಸ್ವರೂಪಿಣಿಯೆಮದು ಕರೆಯಿಸಿಕೊಂಡ ಪಾರ್ವತಿಯ ತಾಮಸ ರೂಪಗಳಾಗಿ ನಿಂತ ದುರ್ಗೆ, ಕಾಳಿ, ದ್ಯಾಮವ್ವ. ದುರುಗವ್ವ, ಎಲ್ಲಮ್ಮ, ಚಾಮುಂಡಿ ಲೆಕ್ಕವ್ವ, ಕರಿಯವ್ವ, ಉಡಚವ್ವ, ಮುಂತಾದ ಉಗ್ರದೇವತೆಗಳನ್ನು ಗಮನಿಸಬಹುದಾಗಿದೆ. ಕೇವಲ ಪುರಾಣ, ಐತಿಹ್ಯ ಧಾರ್ಮಿಕ ವ್ಯಕ್ತಿಗಳಲ್ಲದೇ ಐತಿಹಾಸಿಕವಾಗಿ ಸುಪ್ರಸಿದ್ಧರಾದವರೂ ಕೂಡಾ ಜನಪದರಲ್ಲಿ ದೇವತೆಗಳ ಪಟ್ಟಕ್ಕೇರುವಷ್ಟು ಶಕ್ತಿ ಉಪಾಸನೆ ಭಾರತೀಯ ಸಂಸ್ಕೃತಿಯಲ್ಲಿ ತನ್ನ ಪ್ರಭಾವವನ್ನು ಬೀರಿದೆ.

ಶಿವ ಮತ್ತು ಶಕ್ತಿಯ ಕಲ್ಪನೆ ಮೂಲತಃ ಶೈವಧರ್ಮಕ್ಕೆ ಸಂಬಂಧಿಸಿದೆ. ಸಿಂಧೂ ಸಂಸ್ಕೃತಿಗೆ ಪೂರಕವಾಗಿ ಪ್ರಮಾಣಗಳನ್ನೊದಗಿಸಿದ ಹರಪ್ಪಾ ಮೆಹೆಂಜೋದಾರೋ ಉತ್ಖನನದಿಂದ  ಯೋಗಿ ಇಲ್ಲವೆ ಪಶುಪತಿ ಹಾಗೂ ಕಿರೀಟಧಾರಿ ಹೆಣ್ಣಿನ ವಿಗ್ರಹಗಳು ದೊರೆತಿರುವುದು ಮತ್ತು ಶಿವಲಿಂಗದಲ್ಲಿ ಲಿಂಗ ಮತ್ತು ಯೋಗಿ ಸಂಕೇತಗಳಿರಿವುದು ಶೈವ ಶಾಕ್ತ ಕಲ್ಪನೆಗೆ ಆಧಾರವಾಗಿದೆ. ದೈವಿಕ ಕಲ್ಪನೆಯನ್ನು ಪುರುಷ ಮತ್ತು ಸ್ತ್ರೀ ಸಂಕೇತಗಳಲ್ಲಿ ಆರಾಧಿಸುವ ಪದ್ಧತಿ ಭಾರತದಲ್ಲಿದೆ. ಆಫ್ರಿಕಾ, ಇಜಿಪ್ತ, ಏಶಿಯಾ ಮೈನರ್; ಪುರಾತನ ಗ್ರೀಸ್ ಮುಂತಾದ ದೇಶಗಳಲ್ಲೂ ಪ್ರಚಲಿತವಿತ್ತೆಂದೂ ಹೇಳುತ್ತಾರೆ.[2] ಆರಂಭದ ವೇದಗಳಲ್ಲಿ ಶಿವ – ಶಕ್ತಿಯ ಕಲ್ಪನೆಯೇ ಇಲ್ಲ. “ಆದರೆ ಸಿಂಧೂ ಸಂಸ್ಕೃತಿಯಲ್ಲಿ ಶಿವ – ಶಕ್ತಿಯಂಥ ದೇವತೆಗಳ ಪಾತ್ರ ಹಿರಿದಾಗಿದೆ” ಎಂದು ಜಾನ್ ಮಾರ್ಷಲ್ ಅಭಿಪ್ರಾಯ ಪಡುತ್ತಾರೆ.[3]

ಋಗ್ವೇದದಲ್ಲಿ ಪುರುಷದೇವತೆಗಳು ಮುಖ್ಯರಾದರೂ ಸುಮಾರು ೪೦ ಕ್ಕೂ ಮಿಕ್ಕಿದ ದೇವತೆಗಳು ಅಲ್ಲಿ ಬರುತ್ತಾರೆ. ಅದರಲ್ಲಿ ಅದಿತಿ, ಪೃಥ್ವಿ, ಉಷನ್, ಸರಸ್ವತಿ, ಕಾಳಿ, ಲಕ್ಷ್ಮೀ ಮುಂತಾದವರು ಅತ್ಯಂತ ಪ್ರಮುಖರಾಗಿದ್ದಾರೆಂದು ವಿದ್ವಾಂಸರಾದ ಶ್ರೀ ಶರ್ಮಾ ತಿಳಿಸುತ್ತಾರೆ.[4]  ಇಲ್ಲಿ ಅದಿತಿಯೇ ಎಲ್ಲ ಇತರ ದೇವತೆಗಳಿಗೂ ಸರ್ವಸ್ವ ಎಂದು ಹೇಳಲಾಗಿದೆ. ಆದರೆ ಈ “ಅದಿತಿ” ಯು ಆರ್ಯ ದೇವತೆಯಾಗಿರದೇ, ಆರ್ಯೀಕರಣಗೊಂಡ ದೇವತೆಯಾಗಿದ್ದಾಳೆಂದು ಡಾ. ಶಂ.ಬಾ. ಜೋಶಿಯವರು ಅಭಿಪ್ರಾಯ ಪಡುತ್ತಾರೆ. ಇಲ್ಲಿ ಉಷನ್ ದೇವತೆಯು ಜೀವನದ ನಿರಂತರ ಸ್ಪೂರ್ತಿ ಚೈತನ್ಯ ತಾರುಣ್ಯಗಳಿಗೆ ಪ್ರತೀಕವಾದರೆ, ಸರಸ್ವತಿಯು ಪರಿಪಕ್ವತೆ, ಜ್ಞಾನ, ತುಷ್ಟಿ, ತೃಪ್ತಿಗೆ ಸಂಕೇತವಾಗಿದ್ದಾಳೆ, ಲಕ್ಷ್ಮೀ, ಸಂಪತ್ತು ಸಮೃದ್ಧಿಗಳಿಗೆ ಸಂಕೇತವಾದರೆ, ಕಾಳಿಯು ದುಷ್ಟಮರ್ಧನ ಮಾಡುವ ಉಗ್ರದೇವತೆಯೆನಿಸಿದ್ದಾಳೆ. ಮೇಲೆ ಹೇಳಿದ ವೈದಿಕ ಸಂಸ್ಕೃತಿಯ ದೇವತೆಗಳಲ್ಲಿ ಲಕ್ಷ್ಮೀ – ಸರಸ್ವತಿಯರು ಮಾತ್ರ ಇಂದಿಗೂ ಭಾರತೀಯ ಸಂಸ್ಕೃತಿಯಲ್ಲಿ ಪೂಜೆಗೊಳ್ಳುತ್ತಾರೆ. ಆದರೆ ಕಾಲಿ, ಮಾತ್ರ ಪಾರ್ವತಿಯ ಉಗ್ರ ರೂಪವೇ ಎಂದು ಭಾವಿಸಲಾಗಿದ್ದು, ಆದಿಶಕ್ತಿಯ ಆವಿರ್ಭಾವದ ಸಂಕೇತವೆಂದು ಮಾತೃ ದೇವತಾ ಆರಾಧನೆಯಲ್ಲಿ ಮಹತ್ವದ ಸ್ಥಾನ ಹೊಂದಿದ್ದಾಳೆ.

ಉಪನಿಷತ್ತುಗಳಲ್ಲೂ ಶಕ್ತಿಯ ವಿಚಾರವಿದ್ದು, ಕೇನೋಪನಿಷತ್ತು “ಉಮೆಯು ಇಂದ್ರನಿಗೆ ಬ್ರಹ್ಮವನ್ನು ತೋರಿಸಿದಳೆಂದು ತಿಳಿಸುತ್ತದೆ.[5] ದಲ್ಲಿ “ಉ” ಎಂದರೆ ಶಿವ, “ಮಾ” ಎಂದರೆ ಮಾಪನ, ಎಂದರೆ ಉಮಾ ಎಂದರೆ ಶಿವನನ್ನು ಅಲೆಯುವ ಮಾಪೊನ ಶಕ್ತಿ ಎಂದು ವರ್ಣಿತವಾಗಿರುವುದು ಶಕ್ತಿಯ ಪ್ರಾಮುಖ್ಯತೆಯನ್ನೇ ಸ್ಪಷ್ಷಪಡಿಸುತ್ತದೆ. ಶಾಕ್ತ ಉಪನಿಷತ್ತುಗಳು ಶಕ್ತಿಗೆ – ಉಗ್ರ – ಸೌಖ್ಯ ಎಂಬ ಎರಡು ಮುಖಗಳನ್ನು ಕಲ್ಪಿಸಿವೆ, ಸೀತೋಮನಿಷತ್ತು ಶಕ್ತಿ ತತ್ವವನ್ನು ಶಕ್ತಿ ತತ್ವವನ್ನು ಸೀತೆಯಲ್ಲಿ ಅಳವಡಿಸಿರುವುದು ಗಮನಾರ್ಹ. ಸೀತೆ ಪ್ರಕೃತಿ ಕಾಮನನ್ನು ಸೃಷ್ಟಿಸಿದಳು ಅವಳೆ. ತಂತ್ರಗಳಲ್ಲೂ ಕೂಡಾ ಶಿವನ ಲೀಲೆಗೆ ಕಾರಣಳಾಗುವವಳೇ ಶಕ್ತಿಯೆಂದು ತಿಳಿಸಲಾಗಿದೆ. ಪಂಚಮ ವೇದಗಳೆಂದು ಪ್ರಸಿದ್ಧವಾದ ಪುರಾಣಗಳಲ್ಲೂ ಶಕ್ತಿಯ ಬಗೆಗೆ ಉಲ್ಲೇಖವಿರುವುದು ಗಮನಾರ್ಹವಾಗಿದೆ. ಶಾಕ್ತಪುರಾಣಗಳಾದ – ದೇವಿಪುರಾಣ, ದೇವಿ ಭಾಗವತ ಪುರಾಣ, ಮಾರ್ಕಂಡೇಯ ಪುರಾಣಗಳು ಶಕ್ತಿ ಉಪಾಸನಾ ತತ್ವವನ್ನು ಎತ್ತಿ ಹಿಡಿದಿವೆ. ಮಾರ್ಕಂಡೇಯ ಪುರಾಣದಲ್ಲಿ (೧೩ ನೇ ಪರಿಚ್ಛೇದ) ದೇವಿ ಮಹಾತ್ಮೆಯನ್ನು ತಿಳಿಸಲಾಗಿದೆ. ಚಂಡಿ ದುರ್ಗೆ, ದೇವಿ ಎಂಬ ಹೆಸರುಗಳಿಂದ ಶಕ್ತಿ ದೇವತೆಯನ್ನು ವರ್ಣಿಸಲಾಗಿದೆ. ಚಂಡಿ ದುರ್ಗೆ, ದೇವಿ ಎಂಬ ಹೆಸರುಗಳಿಂದ ಶಕ್ತಿ ದೇವತೆಯನ್ನು ವರ್ಣಿಸಲಾಗಿದೆ. ಇವು ಉಗ್ರದೇವತೆಗಳು. ಚಂಡಿಯೇ ಚಾಮುಂಡಿಯಾಗಿ, ದುರ್ಗೆಯೇ ದುರುಗವ್ವ, ದೇವಿಯೇ ದ್ಯಾನವ್ವ ಆಗಿ ಜನಪದ ಸಂಪ್ರದಾಯದ ಉಪಾಸನೆಯಲ್ಲಿ ಉಳಿದುಕೊಂಡು ಬಂದಿದೆ. ಹಾಗೆ ನೋಡಿದರೆ ದುರುಗವ್ವ ದ್ಯಾಮವ್ವ ಬೇರೆಯಲ್ಲ ದೇವಿ > ದೇಂವಿ > ದ್ಯಾಂವಿ > ದ್ಯಾಮಿ> ದ್ಯಾಮವ್ವ ಆಗಿರಬೇಕು. ಆದರೆ ಉಪಾಸಕರು ಮಾತ್ರ ಭಿನ್ನರಾಗಿರುವುದು ಕಂಡು ಬರುತ್ತದೆ. ದುರುಗವ್ವನನ್ನು ವಿಶೇಷವಾಗಿ ಕೆಳವರ್ಗದವರು ಪೂಜಿಸಿದರೆ, ದ್ಯಾಮವ್ವನನ್ನು ಪಂಚಾಳರು ಅದರಲ್ಲೂ ವಿಶೇಷವಾಗಿ ಬಡಿಗರು ಪೂಜಿಸುವುದನ್ನು ಅವಲೋಕಿಸಬಹುದು. ಉಗ್ರದೇವತೆಗಳು ಶೂದ್ರರ ಉಪಾಸನೆಗಾಗಿ ಸೃಷ್ಟಿಯಾದವುಗಳೆಂದು ಹೇಳುತ್ತಾರೆ. ದ್ರಾವಿಡರು, ಶೂದ್ರರು, ಆರ್ಯರು, ಬ್ರಾಹ್ಮಣರು ಎಂಬ ಮೇಲು – ಕೀಳು ಭಾವನೆ ಈವರೆಗೂ ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವುದನ್ನು ಕಾಣಬಹುದಾಗಿದೆ.

ಜೈನ ಹಾಗೂ ವಭದ್ಧರಲ್ಲೂ ಶಕ್ತಿ ಪೂಜೆ, ಕ್ರಮೇಣವಾಗಿ ಪಾದಾರ್ಪಣ ಮಾಡಿದೆ. ಭೌದ್ಧ ಧರ್ಮದ ನಿರೀಶ್ವರ ತತ್ವವು ಭರತೀಯ ಜನಪದ ಸಂಪ್ರದಾಯಕ್ಕೆ ಒಗ್ಗಲಿಲ್ಲ ಆದ್ದರಿಂದ ಬುದ್ಧನ ನಂತರ ೩ – ೪  ಶತಮಾನಗಳಲ್ಲಿ ಬೌದ್ಧಧರ್ಮ ಕವಲೊಡೆದು ಹೀನಯಾನ, ಮಹಾಯಾನ, ವಜ್ರಯಾನ ಇತ್ಯಾದಿಗಳಾದವು. ವಜ್ರಯಾನದಲ್ಲಿ ಸ್ತ್ರೀ ದೇವತಾ ಉಪಾಸನೆಗೆ ಪ್ರಾಮುಖ್ಯತೆ ದೊರೆಯಿತು. ಪಂಚಬುದ್ಧರಿಗೆ ಪಂಚಶಕ್ತಿಯಾದರು. (ವೈರೋಚನ ಬುದ್ಧನ ಶಕ್ತಿ ವಜ್ರಧಾತೀಶ್ವರಿ; ಅಮಿತಾಬ ಬುದ್ಧನಶಕ್ತಿ ಪಾಂಡರಾಜ ರತ್ನಸಂಭವ ಬುದ್ಧನ ಶಕ್ತಿ ಮಾಮಕೀ, ಅಮೋಘಸಿದ್ಧಿ ಮದ್ಧನಶಕ್ತಿ ತಾರಾ; ಅಘೋಭ್ಯಧ್ಯಾನಿ ಬುದ್ಧನ ಶಕ್ತಿ ಲೋಚನಾ) ಹಿಂದೂಗಳು ಪೂಜಿಸುವ ಕಾಳಿ, ಸರಸ್ವತಿಯರು ಮೂಲದಲ್ಲಿ ಬೌದ್ಧದೇವತೆಗಳೇ ಆಗಿದ್ದರೆಂದು ವಿದ್ವಾಂಸರು ಹೇಳುತ್ತಾರೆ.

ಜೈನಧರ್ಮದಲ್ಲೂ ಪದ್ಮಾವತಿ, ಜ್ವಾಲಾಮಾಲಿನಿ, ಯಕ್ಷಿಯರ ಪೂಜೆ ಹಿಂದಿನ ಕಾಲದಿಂದಲೂ ಪ್ರಸಿದ್ಧವಾಗಿದೆ. ಹೀಗೆ ಭಾರತದಲ್ಲಿ ಶಕ್ತಿ ಉಪಾಸನೆ ಅದ್ವಿತೀಯವಾಗಿ ಬೆಲೆದು ಬಂದಿದೆ. “ಸೃಷ್ಟಿತತ್ವಕ್ಕಾಗಿ ಆದಿ ಮಾತೆಯನ್ನು ಕಲ್ಪಿಸಿದ ಸಂಗತಿ ಅನ್ಯದೇಶಗಳಲ್ಲೂ ಇದೆ. ಆದರೆ ವಿಶ್ವಪ್ರಸೂತವಾದ ಈ ವಿಶ್ವಭಕ್ತಿಯನ್ನು ಭಾರತವು ತನ್ನ ಧಾರ್ಮಿಕ ಜೀವನದಲ್ಲಿ ಅಳವಡಿಸಿಕೊಂಡಂತೆ ಜಗತ್ತಿನ ಬೇರೆಡೆಯಲ್ಲಿ ಎಲ್ಲೂ ಕಾಣಸಿಗದು”[6] ಎಂದು ಡಾ. ಶಶಿಭೂಷಣ ದಾಸಗುಪ್ತಾ ಅವರು ನಿರ್ಣಯಿಸಿರುವುದು ಸೂಕ್ತವಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರನ್ನು ಕುರಿತ ಇನ್ನೊಂದು ಮುಖ “ಮಾಯೆ” ಎಂಬುದು. ಋಗ್ವೇದ, ಮೈತ್ಯಾಯಣಿ ಸಂಹಿತೆ, ತೈತ್ತರೀಯ ಸಂಹಿತೆ, ಶತಪಥ ಬ್ರಾಹ್ಮಣ ಹಾಗೂ ಜೈನ ಬೌದ್ಧ ಜಾತಕ ಕಥೆಗಳಲ್ಲಿ ಶಕ್ತಿ ಸ್ವರೂಪಿಣಿಯಾದ ಸ್ತ್ರೀಯನ್ನು “ಮಾಯೆ” ಎಂದು ಕಡೆಗಣಿಸಲಾಗಿದೆ. ಅಲ್ಲದೇ ಪುರುಷನ ಆಧಿಕ್ಯವನ್ನು ತಿಳಿಸುವುದರೊಂದಿಗೆ ಸ್ತ್ರೀಯು ಕನಿಷ್ಟಲಾದವಳೆಂದು ಹೇಳಿ ಸಾಮಾಜಿಕವಾದ ಅನೇಕ ದೃಷ್ಟಾಂತಗಳನ್ನು ಕೊಡುತ್ತವೆ. ಆದರೆ ಶ್ವೇತಾಂಬರ ಉಪನಿಷತ್ತು ಮಾತೃಶಕ್ತಿಗೆ “ಮಾಯಾ” ಎಂದು ಕರೆಯಿತು. ವಿಶ್ವ ಸೃಷ್ಟಿಯ ಮೂಲವೇ “ಮಾಯೆ”, ಮಾಯೆಯನ್ನು ಒಳಗೊಂಡವನೇ “ಮಾಯಾವಿ” ಎಂದು ಸಾರಿತು. ಹೀಗಾಗಿ ಮಾಯೆ ಎನ್ನುವದು ಶಕ್ತಿಯ ತಾಮಸ ರೂಪವಾಗಿ ಇಂದಿಗೂ ಭಾರತೀಯ ಸಂಸ್ಕೃತಿಯಲ್ಲಿ ಪರಿಗಣಿಸಲ್ಪಟ್ಟಿದೆ.

ಭಾರತದ ರಾಷ್ಟ್ರೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಗಳೂ ಕೂಡಾ  ಭಾರತೀಯ ಸಂಸ್ಕೃತಿಯ ಮೂಲ ಆಕರಗಳಾಗಿವೆ. ವೈದಿಕ ಮತ್ತು ಅವೈದಿಕ ಸಂಪ್ರದಾಯಗಳ ಸಮನ್ವಯ ಸಾಧಿಸಿದ್ದು ಅವುಗಳಲ್ಲಿ ಕಾಣಸಿಗುತ್ತದೆ. ಶಾಕ್ತೋಪಾಸನೆ ಇಲ್ಲಿ ಆರ್ಯೀಕರಣಗೊಂಡಿರುವದು ಗಮನಾರ್ಹ ಅಂಶವಾಗಿದೆ. ಇವೆರಡೂ ಮಹಾಕಾವ್ಯಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಬೇರೆ ಬೇರೆ ದೃಷ್ಟಿಯಿಂದ ದೇವತಾ ಮಟ್ಟಕ್ಕೆ ಏರಿ ನಿಂತಿದೆ. ದ್ರೌಪದಿ, ಕುಂತಿ, ಸೀತೆ ಈ ಪಾತ್ರಗಳ ಸುತ್ತ ಹೆಣೆದುನಿಂತ ಭಾವನೆಯನ್ನು ಗುರುತಿಸಬಹುದು. ಅದಲ್ಲದೆ ಲಕ್ಷ್ಮೀ, ಸರಸ್ವತಿ, ಕಾಳಿ, ಪಾರ್ವತಿ, ರುದ್ರಾಣಿ, ಗಿರಿಜೆ, ಗೌರಿ, ನಂದಾ, ಕೌಶಕೀ ಮುಂತಾದ ದೇವತೆಗಳು  ಇಲ್ಲಿ ಪೂಜೆಗೊಂಡಿದ್ದಾರೆ. ಅನಾರ್ಯರೆನಿಸಿದ ಶಬರಿ, ಪುಳಿಂದೆ, ಅಪರ್ಣಾ, ರಾಕ್ಷಸಿಯರು, ಕಾಮರೂಪಿನಿ ಮುಂತಾದವರೂ ಕೂಡಾ ಸ್ತ್ರೀ ದೇವತಾ ಸ್ಥಾನಕ್ಕೇರಿದ್ದಾರೆ. ಪಾಂಡವರು ವನವಾಸಕ್ಕೆ ತೆರಳುವ ಮುನ್ನ ಶಮಿ ವೃಕ್ಷದ ಬನ್ನಿ ಮಹಾಕಾಳಿ ಮೇಲೆ ತಮ್ಮ ಆಯುಧಗಳನ್ನಿಟ್ಟು ” ದುರ್ಗಾಸ್ತೋತ್ರ” ಮಾಡಿದರಂತೆ. ಮತ್ತು ಅಲ್ಲಿಯೇ ಕಾಳಿಕಾದೇವಿ ಗುಡಿ ಇರುವುದೂ ಗಮನಾರ್ಹ ಸಂಗತಿ. ಹಾಗೆಯೇ ರಾಮಾಯಣದಲ್ಲೂ ಕೂಡಾ “ರಾವಣನಿಗೆ” ಶಕ್ತಿಯುಕ್ತಿಗಳಿಗೆಲ್ಲ ಕಾರಣಳಾದವಳು ದೇವತೆಯೇ ಮತ್ತು ಲಂಕೆಯನ್ನು ಸಂರಕ್ಷಿಸುವ ಸಂಪೂರ್ಣ ಹೊಣೆ ಲಂಕಿಣಿ ಎಂಬ ದೇವತೆಯದಾಗಿದೆ.

ರಾಮಾಯಣ ಮಹಾಭಾರತಗಳಲ್ಲಿ ಅಲ್ಲದೆ ಮೃಚ್ಛಕಟಿಕದಲ್ಲಿ ಬರುವ ಕಳ್ಳನು, ಕಳ್ಳತನಕ್ಕೆ ಮುನ್ನ ಹೆಣ್ಣು ದೇವತೆಯನ್ನು ಸ್ತುತಿಸುತ್ತಾನೆ. ಅದಲ್ಲದೆ ಜಾನಪದ ಪರಂಪರೆಯಲ್ಲಿ ಗೊಂದಲಿಗರು, ಜೋಗಿಗಳು ಹೇಳುವ ರಾಜಕುಮಾರರ ಕತೆಗಳಲ್ಲಿ ರಾಜಕುಮಾರರು ಯುದ್ಧಕ್ಕೆ ಹೊರಟ ಪ್ರತಿ ದಾರಿಯಲ್ಲೂ ಕಾಳಿಕಾದೇವಿ ಗುಡಿಗಳೇ ಹತ್ತುವುದುಂಟು. ಇವೆಲ್ಲವುಗಳನ್ನು ಅವಲೋಕಿಸಿದಾಗ ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾದ “ಮಾತೃದೇವತಾರಾಧನೆಯ” ಗಾಢತೆ ಸ್ಪಷ್ಟವಾಗುತ್ತದೆ. ಅದಲ್ಲದೆ ಹಿಂದಿನ ಕಾಲದಲ್ಲಿ ಕೋಟೆಯ ರಕ್ಷಣೆಗಾಗಿ, ಊರಿನ ರಕ್ಷಣೆಗಾಗಿ, ಹೊಲಮನೆಗಳ ರಕ್ಷಣೆಗಾಗಿ, ಆಪತ್‌ ನಿವಾರಣೆಗಾಗಿ ಅನೇಕ ಉಗ್ರ ದೇವತೆಗಳನ್ನು ಜನಪದರು ಸೃಷ್ಟಿಸಿದ್ದಾರೆ. ಕಾಳಮ್ಮ, ಕರಿಯಮ್ಮ, ಮಾರೆಮ್ಮ, ಲಕ್ಕಮ್ಮ, ದುರ್ಗಮ್ಮ ಮುಂತಾದ ಶಕ್ತಿದೇವತೆಗಳನ್ನು ಕಟ್ಟಿಸಿದ್ದಾರೆ. ಉದಾಹರಣೆಗೆ ಮುನವಳ್ಳಿ ಕೋಟೆಯಲ್ಲಿ ಉಡುಚವ್ವನ ಹಳೇಯ ಗುಡಿ ಇರುವುದನ್ನು ಕಾಣಬಹುದು.

ಒಟ್ಟಾರೆ ದಕ್ಷಿಣ ಭಾರತದಲ್ಲಿ ಶಕ್ತಿ ಪೂಜೆ ಅತ್ಯಂತ ಪ್ರಚಲಿತವಾದುದು. ಕರ್ನಾಟಕದ ಸವದತ್ತಿ ಎಲ್ಲಮ್ಮ ಹಾಗೂ ಚಾಮುಂಡಿ, ತಮಿಳಿನ ಮಾರಮ್ಮ, ಆಂಧ್ರದ ಬತ್ತಮ್ಮಾ, ಮಹಾರಾಷ್ಟ್ರದ ಅಂಬಾಭವಾನಿ – ಆಯಾ ನಾಡಿನ ಪ್ರಮುಖ ದೇವತೆಯೆನಿಸಿದ್ದಾರೆ ಮತ್ತು ಭಾರತದ ತುಂಬ ಈ ದೇವತೆಗಳ ಖ್ಯಾತಿ ಇರುವುದು ಗಮನಾರ್ಹ. ಅದಲ್ಲದೆ ಕರ್ನಾಟಕದಲ್ಲಿ ಅಯ್ಯಾ ಹೊಳೆಯ ದುರ್ಗಿ, ಗುಡ್ಡಾಪುರ ದಾನಮ್ಮ, ಬಳ್ಳಾರಿ ದುರ್ಗವ್ವ, ಗೋಕಾಕದ ದ್ಯಾಮವ್ವ, ಚುಂಚನನೂರ ಮಾಪುರ ತಾಯಿ, ಚಿಂಚಲಿ ಮಾಯವ್ವ, ಸಿರಸಿ ಮಾರಿಕಾಂಬಾ, ಕೊಲ್ಲೂರು ಮೂಕಾಂಬಿಕಾ, ಸಿರಸಂಗಿ ಕಾಳಮ್ಮ ಮುಂತಾದವುಗಳು ಸುಪ್ರಸಿದ್ಧ ಶಕ್ತಿದೇವತೆಗಳೆನಿಸಿ ಪೂಜೆಗೊಳ್ಳುತ್ತಿದ್ದಾರೆ. ಆದಿ ಶಕ್ತಿಯ ಭಿನ್ನ ಭಿನ್ನ ರೂಪಧರಿಸಿದ ಇವರೆಲ್ಲ ದೇವತೆಗಳು ಅಮ್ಮ, ಅವ್ವ್, ಆಯಿ (ಬಾಯಿ) ಮುಂತಾದ ಸಂಬೋಧನೆಗಳಿಂದ ಜನಪದ ಸಂಪ್ರದಾಯದಲ್ಲಿ ಬೆರೆತು ಹೋಗಿದ್ದಾರೆ. ಒಂದು ವಿಶೇಷ ಸಂಗತಿಯೆಂದರೆ  ಊರು ಊರಿಗೆ ಹೊಂದಿ ಕೇರಿ ಇರುವುದುಂಟು. ಊರಿನಲ್ಲಿರುವ ದೇವತೆಗೆ “ಊರಮ್ಮ” ನೆಂದೂ ಕೆರಿಯಲ್ಲಿರುವ ದೇವತೆಗೆ “ತಳದವ್ವ” ವಿಶೇಷ ಅರ್ಥವನ್ನು ಪಡೆದುಕೊಳ್ಳುವುದುಂಟು. ಇಲ್ಲಿ ತಳದವ್ವಾ ಎಂದರೆ ಎಲ್ಲದಕ್ಕೂ ತಳಪಾಯವಾದವಳು ಆದಿಶಕ್ತಯೆಂದು ಆದಿಶಕ್ತಿಯೆಂದೂ, ಆ ಸ್ಥಳದ ಅವ್ವಾ ಎಂದೂ ಅರ್ಥ.

ಆದಿಶಕ್ತಿಗೆ ಉಗ್ರರೂಪವೂ ಇದೆ, ಸೌಮ್ಯ ರೂಪವೂ ಇದೆ. ಈ ಉಗ್ರ ಹಾಗೂ ಸೌಮ್ಯ ದೇವತೆಗಳನ್ನು ಉಪಾಸನೆ ಮಾಡುವ ಮಾರ್ಗಗಳೂ ಕೂಡಾ ಶಕ್ತಿ ಆಗಮಗಳಲ್ಲಿಯೇ ಬೇರೆ ಬೇರೆ ಯಾಗಿದ್ದುದು ಕಂಡು ಬರುತ್ತದೆ. ಸೌಮ್ಯದೇವತೆಗಳು ಸಸ್ಯಾಹಾರಿಗಳಾದರೆ ಉಗ್ರದೇವತೆಗಳು ಮಾಂಸಾಹಾರಿಗಳು. ಅಂದರೆ ಉಪಾಸನೆಗೆ ಸಲ್ಲಬೇಕಾದ ನೈವೇದ್ಯದಲ್ಲಿಯೇ ಭಿನ್ನತೆ ತಲೆದೋರಿದಾಗ ಮಾಂಸದ ನೈವೇದ್ಯ ಸಲ್ಲಿಸುವ ಆಚಾರಕ್ಕೆ ವಾಮಮಾರ್ಗ ಆಚಾರವೆಂದೂ, ಸಸ್ಯಾಹಾರ ನೈವೇದ್ಯ ಸಲ್ಲಿಸುವ  ಆಚಾರಕ್ಕೆ ದಕ್ಷಿಣ ಮಾರ್ಗ ಆಚಾರವೆಂದೂ ಜನಪದ ಸಂಪ್ರದಾಯದಲ್ಲಿ ಹೆಸರಿಸಿಕೊಂಡವು. ಮಾರೆಮ್ಮ, ದುರುಗಮ್ಮ, ಕಾಳಮ್ಮ, ಮುಂತಾದ ದೇವತೆಗಳು ಮಾಂಸಾಹಾರಗಳಿಂದ ಸಂತುಷ್ಟರಾಗಿದ್ದರಿಂದ ಅವರಿಗೆ ಕುರಿ, ಕೋಳಿ ಕೋಣಗಳನ್ನು ಬಲಿಕೊಡುವ ಪದ್ಧತಿ ಈಗಲೂ ನಡೆಯುತ್ತ ಬಂದಿದೆ. ಉದಾ : ಗೋಕಾಕದ ದ್ಯಾಮವ್ವನಿಗೆ ಪ್ರತಿವರ್ಷವೂ ಜಾತ್ರೆಯಲ್ಲಿ ಕೋಣವನ್ನು ಕಡಿಯುತ್ತಾರೆ.[7]  ಇಲ್ಲಿ ವಿಚಾರಾರ್ಹ    ಸಂಗತಿಯೆಂದರೆ  ಕೋಣವನ್ನು ಕಡಿಯುವ ಕೆಲಸ ಮಾತ್ರ ಶೂದ್ರರಿಗೆ ಸೇರಿದ್ದು. ಅದರ ಮಾಂಸ ಸೇವನೆಯೂ ಅವರಿಗೇ ಬಿಟ್ಟುಕೊಟ್ಟದ್ದು. ಇಂಥ ಬಲಿ ಕೊಡುವ ಕೆಲಸದಲ್ಲಿ ಮೇಲು ಜಾತಿಯವರಾರೂ ಭಾಗವಹಿಸುವುದಿಲ್ಲ. ಆದರೆ ಜಾತ್ರೆ ಉತ್ಸವ ಉಪಾಸನೆಯಲ್ಲಿ ಮಾತ್ರ ಪಾಲ್ಗೊಳ್ಳುತ್ತಾರೆ.

ದಕ್ಷಿಣ ಮಾರ್ಗದ ಆಚಾರಗಳು ಸಾತ್ವಿವಾದವುಗಳು. ಸಸ್ಯಹಾರವನ್ನೇ ನೈವೇದ್ಯವನ್ನಾಗಿ ಅರ್ಪಿಸಿ ದೇವತೆಯ ಅನುಗ್ರಹಕ್ಕೆ ಪಾತ್ರರಾದೆವೆಂದು ಭಾವಿಸುತ್ತಾರೆ. ಉದಾ: ಬಾದಾಮಿಯ ಬನಶಂಕರಿ ದೇವತೆ; ಕೊಲ್ಲಾಪುರದ ಮಹಾಲಕ್ಷ್ಮೀ, ಅಂಕೋಲೆಯ ಭೂಮಿ ತಾಯಿ ಗುಡಿ, ಇತ್ಯಾದಿಗಳು ಸಿರ್ಸಿಯ ಮಾರಿಕಾಂಬಾ ಈಗೀಗ ಸಸ್ಯಾಹಾರಿ ಆದಂತೆ ತೋರುತ್ತದೆ. ಹಾಗೆಯೆ ಬಾಡಕಾಗಳ ಕಾಂಚಿಕಾಂಬಾ ಅಥವಾ ಬೆಟ್ಟದ ಗುಡಿ, ಹೆಗಡೆಯ ಕಾಂತಾಕಾಂಬಾ ಇತ್ಯಾದಿ; ದೇವತೆಗಳಿಗೆ ಮೊದಲು ಬಲಿ ಕೊಡುವ ಪದ್ಧತಿ ಇರಬೇಕು. ಯಾವುದೋ ಸಾಮಾಜಿಕ ಕಾರಣಗಳಿಂದಾಗಿ ಆ ಪದ್ಧತಿ ಇಗ ನಿಂತಿರುವಂತೆ ತೋರುತ್ತದೆ.

ಒಟ್ಟಾರೆ ವೇದೋಕ್ತವಾದ ವರ್ಣ ಪದ್ಧತಿಯಲ್ಲಿ ಶೂದ್ರ ವರ್ಗದವರಿಗಾಗಿ ನಯತವಾದ ದೇವತೆಗಳೇ ಮೂಲ ಆದಿಶಕ್ತಿಯ ಅವತಾರಗಳಾಗಿ ಜನಪದ ಪರಂಪರೆಯಲ್ಲಿ ಗ್ರಾಮದೇವತೆಗಳಾಗಿ ಉಪಾಸನೆಗೊಳ್ಳುತ್ತ ಬಂದಿರುವುದುಂಟು. ವೇದಪೂರ್ವದ ದ್ರಾವಿಡ ಸಂಸ್ಕೃತಿಯಲ್ಲಿಯೇ ಪ್ರಥಮತಃ ಮಾತೃದೇವತೆಯ ಕಲ್ಪನೆ ಸ್ಪಷ್ಟವಿರುವುದು ಗಮನಾರ್ಹವಾಗಿದೆ. ವೇದೋಕ್ತವಾದ ದೇವತೆಗಳನ್ನು ಸಮೀಕರಿಸಿಕೊಂಡೇ ಬೆಳೆದು ಬಂದ ದ್ರಾವಿಡರ ಶಕ್ತಿ ಉಪಾಸನೆ ಜಾನಪದ ಸಂಸ್ಕೃತಿಯ ಹಾಗೆಯೇ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ವೇದೋಕ್ತ ದೇವತೆಯಾದ “ಸರಸ್ವತಿ” ಗ್ರಾಮದೇವತೆಯ ಮಟ್ಟದಲ್ಲಿ ಎಲ್ಲರೂ ಪೂಜೆಗೊಳ್ಳುವುದಿಲ್ಲ. ಸರಸ್ವತಿಯೇ ಗ್ರಾಮೀಣರಲ್ಲಿ “ಮತಿಯಮ್ಮ” ನಾಗಿ ಅಂಕೋಲೆಯ ಹತ್ತಿರ ಪೂಜೆಗೊಳ್ಳುವುದನ್ನು ಕಾಣುತ್ತೇವೆ. ಶೃಂಗೇರಿ ಒಂದನ್ನು ಬಿಟ್ಟರೆ “ಸರಸ್ವತಿ” ಯ ಪೂಜೆ ಎಲ್ಲೂ ನಡೆದಂತೆ  ತೋರುವುದಿಲ್ಲ ಇದನ್ನು ಗಮನಿಸಿದಾಗ ಭಾರತೀಯ ಸಂಸ್ಕೃತಿಯಲ್ಲಿ ದ್ರಾವಿಡರ ಮಾತೃ ದೇವತಾರಾಧನೆಯ ಪ್ರಾಮುಖ್ಯತೆ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಸಾಮಾಜಿಕವಾಗಿ ಸಮಾಜದಲ್ಲಿ ಸ್ತ್ರೀಗೆ ಇದ್ದ ಗೌರವಾದರಗಳ ಏರಿತಗಳಾಗಿ ಅಂದಂದಿನ ಕಾಲದ ಮಾತೃದೇವತೆಗಳ ಕಲ್ಪನೆ ಉಪಾಸನೆಗಳ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಿವೆ. ಆರ್ಯ – ದ್ರಾವಿಡ ಸಂಪರ್ಕದಲ್ಲಿ ಸ್ತ್ರೀ – ಪುರುಷ ತತ್ವದ ಸಮಾವೇಶದಿಂದ ಅರ್ಧನಾರೀ ನಟೇಶ್ವರ ಪೂಜೆಯೂ ನಡೆಯುತ್ತಾ ಬಂದಿದೆ.

ಒಟ್ಟಾರೆ ಆರ್ಯ – ದ್ರಾವಿಡ ಸಂಸ್ಕೃತಿಗಳ ಹೊಂದಾಣಿಕೆಯಲ್ಲಿ ಶಕ್ತಿಯ ಉಪಾಸನೆ ಆ ಮೂಲಕ ಮಾತೃದೇವತಾ ಉಪಾಸನೆ ಇಂದಿಗೂ ಭಾರತೀಯ ಸಂಸ್ಕೃತಿಯಲ್ಲಿ ಸಾಗಿ ಬಂದಿದೆ. ಒಂದರ್ಥದಲ್ಲಿ ” ಈ ಶಕ್ತಿ ದೇವತೆ ಅಥವಾ ಮಾತೃದೇವತೆಯ ಉಪಾಸನೆಯು ಜಾನಪದ ಹಾಗೂ ಶಿಷ್ಟ ಸಂಸ್ಕೃತಿಯ ನಡುವಣ  ಸೇತುವೆ” ಎಂದಿರುವ ಶ್ರೀ ಜಿ. ಎಸ್‌. ಫುರ್ಯ ಅವರ  ಅನಿಸಿಕೆ ಸ್ವಾಗತಾರ್ಹವಾಗಿದೆ.[8] “ಬ್ರಾಹ್ಮಣ ಹಾಗೂ ದ್ರಾವಿಡ, ಇಂದಿನ ಕಾಲದ ಭಾಷೆಯಲ್ಲೇ ಹೇಳುವುದಾದರೆ ಬ್ರಾಹ್ಮಣ ಹಾಗೂ ಶೂದ್ರ ಸಂಸ್ಕಾರಗಳ ಸೊಗಸಾದ ಬೆಸುಗೆ” – ಮಾತೃದೇವತಾರಾಧನೆಯಲ್ಲಿ ಖಚಿತಗೊಂಡಿದೆ.

* * *


[1]      ಮನುಸ್ಮೃತಿ

[2]      Mother Right in India.(ORI – P-9)

[3]      Mother Right in India. P. 122

[4]      Shakti in Ancient India Pertanning to Puranas by P. S. Kumar.  P. 10

[5]      ಕೇನೋಪನಿಷತ್ತು ೩ ಖಂಡ ೧೧ – ೧೨ ಮಂತ್ರಗಳು, ೪ ಖಂಡ ೧ ನೆಯ ಮಂತ್ರ – ದೇವುಡು. ಪುಟ – ೧೪೭

[6]      ಉದ್ದೃತ : ಶ್ರೀ ರಾಧಾಕಾಶ್ರಮ ವಿಕಾಸ  – ೩

[7]     ಇಂದು ಈ ಪರಂಪರೆ ಸ್ಥಗಿತಗೊಂಡಂತೆ ಕಾಣುತ್ತದೆ

[8]     Gods & Men G. S. Sharma Devi bridges  P. 238