ಜನಪದ ಜೀವನದಲ್ಲಿ ಗ್ರಾದೇವತೆಗಳು ಹಾಸುಹೊಕ್ಕಾಗಿವೆ. ಪುರಾಣ ಮೂಲದ ದೇವತೆಗಳಿಂದ ಹಿಡಿದು ಸಾಮಾನ್ಯ ದೇವತೆಗಳವೆರೆಗೆ ನೂರಾರು ಬಗೆಯ ಅತಿಮಾನುಷ ಶಕ್ತಿಗಳನ್ನು ಜನ ಆರಾಧಿಸುತ್ತಾ ಬಂದಿದ್ದಾರೆ. ಇಂತಹ ದೈವಗಳಲ್ಲಿ ಕೆಲವು ಪ್ರಸಿದ್ಧಿಯನ್ನು ಪಡೆದುಕೊಂಡವು. ಮತ್ತೆ ಕೆಲವು ಅಲ್ಪಸ್ವಲ್ಪ ಹೆಸರು ಪಡೆದವು ಇದ್ದಾವೆ. ತಿರುಪತಿಯ ವೆಂಕಟರಮಣ, ಚುಂಚನಗಿರಿಯ ಭೈರವ ನಂಜನಗೂಡಿನ ನಂಜುಂಡೇಶ್ವರ, ಮಲೆಯ ಮಾದೇಶ್ವರ, ಸಿರಶಿಯ ಮಾರಿಕಾಂಬಾ, ಸವದತ್ತಿಯ ಎಲ್ಲಮ್ಮಾ, ಕೊಲ್ಲೂರು ಮೂಕಾಂಬಿಕಾ ಮುಂತಾದ ದೈವಗಳಿಗೆ ಸಿರಿವಂತರ ಮತ್ತು ಮಹಾರಾಜರ ಆಶ್ರಮ ದೊರೆತು ಬಹು ದೂರವರೆಗೂ ತಮ್ಮ ಭಕ್ತಾದಿಗಳ ಸಂಖ್ಯೆಯನ್ನು ಬೆಳೆಸಿಕೊಂಡವಲ್ಲದೆ, ತಮ್ಮ ಚಕ್ರಾಧಿಪತ್ಯವನ್ನು ಭದ್ರವಾಗಿ ಸ್ಥಾಪಿಸಿ ಕೊಂಡವು.

ಹಿಂದೆ ಭಕ್ತಾದಿಗಳು ಈ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವಾಗ ಇಂದಿನಂತೆ ವಾಹನ ಸೌಕರ್ಯವಿಲ್ಲದ್ದರಿಂದ ತಿಂಗಳಾನುಗಟ್ಟಲೆ ಕಾಲು ನಡೆಗೆಯಲ್ಲೇ ಪಯಣವನ್ನು ಕಳೆಯಬೇಕಾದ ಪ್ರಸಂಗವಿತ್ತು. ಅದಕ್ಕಾಗಿ ಅವರ ತಲೆಯ ಮೇಲೆ ಮುಡುಪನ್ನು ಕಟ್ಟಿಕೊಂಡು ಅಲ್ಲಲ್ಲೆ ಉಳು ಪಯಣ ಮಾಡುತ್ತಾ ಕಾಡು ಮೇಡುಗಳಲ್ಲಿ ದಾರಿ ಮಾಡಿಕೊಂಡು ಕಾಡು ಮೃಗಗಳ ಸಂರಕ್ಷಣೆಗಾಗಿ ತಮ್ಮಟೆ, ಕಹಳೆ, ನಗಾರಿ, ಕಂಸಾಳೆ ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಹಾಡುತ್ತಾ ಕುಣಿಯುತ್ತಾ ದೊಡ್ಡ ದೊಡ್ಡ ತಂಡಗಳಾಗಿ ಸಾಗುತ್ತಿದ್ದರು. ಜನಪದರ ಪಾಲಿಗೆ ದೇವರು ಒಂದೆರಡಲ್ಲ ; ಭೂತ ಪ್ರೇತಗಳು, ಮರಕಲ್ಲುಗಳು ಮತ್ತು ಬೆತ್ತಗಳು, ಹೀಗೆ ನಾನಾ ಬಗೆಯ ದೈವಗಳಿಗೆ ಶರಣು ಹೋಗುವುದುಂಟು. ಇಷ್ಟು ವೈವಿಧ್ಯಮಯವಾದ, ಸಂಕೀರ್ಣವಾದ ದೇವತೆಗಳ ಜಾಲ ಕಂಡುಬರುವುದು ಜನಪದ ಸಂಸ್ಕೃತಿಯಲ್ಲಿ ಮಾತ್ರ. ಅವರು ಬದುಕಿನ ಪ್ರೇರಣೆಯೇ ದೇವರು. ಯಾವುದಾದರೊಂದು ದೇವರು ಅವರಿಗೆ ಬೆನ್ನೆಲುಬಾಗಿಲ್ಲದಿದ್ದರೆ ಅವರಿಗೆ ನೆಮ್ಮದಿಯೇ ಇರುವುದಿಲ್ಲ. ಮನೆ ದೇವರು, ಕುಲದೇವರು, ಗ್ರಾಮದೇವರು, ಹೀಗೆ ಅವರ ಆರಾಧನೆ ಮುಂದುವರೆಯುತ್ತದೆ. ವರ್ಷಕ್ಕೊಂದು ಸಾರಿ ಗ್ರಾಮ ದೇವರಿಗೆ ಯಾತ್ರೆ ಹೋಗುವಾಗ ಅವರು ತುಂಬಾ ಭಕ್ತಿಭಾವಗಳನ್ನು ಮೆರೆಯುತ್ತಾರೆ.

ನಮ್ಮ ಸುಪ್ರಸಿದ್ಧ ಯಾತ್ರೆ ಸ್ಥಳಗಳಲ್ಲಿ ಕೊಲ್ಲೂರು ಕೂಡ ಬಹು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಸ್ಥಳವಾಗಿದೆ. ಐತಿಹಾಸಿಕ ಮಹತ್ವದ ದೃಷ್ಟಿಯಿಂದ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಅಧ್ಯಯನ ನಡೆಸಿದರೆ ಮಹತ್ತರವಾದ ವಿಷಯಗಳು ಗೋಚರಿಸುತ್ತವೆ. ಈಗಿನ ಕೊಲ್ಲೂರು ಕ್ಷೇತ್ರದ ಹತ್ತು ಮೈಲಿಗಳಷ್ಟು  ವಿಸ್ತೀರ್ಣದ ಪರಿಸರವು ಮಹಾರಣ್ಯಪುರವೆಂದು ಪ್ರಸಿದ್ಧವಾಗಿತ್ತು. ಕಾಲಕ್ರಮೇಣ ಪುರಾತನ ಕುರುಹುಗಳು ಸಂಪೂರ್ಣ ನಾಶವಾಗಿ ದೇವಸ್ಥಾನದ ಸುತ್ತಣ ಕೆಲವೇ ಗಜಗಳ ಪರಿಸರವೆ “ಕೊಲ್ಲೂರು” ಎಂದು ಉಳಿದುಕೊಳ್ಳುವ  ಪ್ರಸಂಗವಾಗಿದೆ. ಇಂದಿಗೂ ಕೊಲ್ಲೂರಿನಲ್ಲಿ ಪುರಾತನ ಕಾಲದ ಕುಸಿದ ಮನೆಗಳ ತಳಗಟ್ಟುಗಳು, ಕೋಟೆಯ ಕಲ್ಲುಕಟ್ಟಡಗಳು ಗೋಚರಿಸುತ್ತವೆ.

ಹಿಂದೆ ಮೂರನೇ ಮನ್ವಂತರದಲ್ಲಿ ಮಹಾತಪಸ್ವಿಯಾದ ಕೋಲಮಹರ್ಷಿಯು  ಒಂದು ಪರ್ಣಶಾಲೆಯನ್ನು ಸೌಪರ್ಣಿಕಾ ನದಿಯ ದಂಡೆಯಲ್ಲಿ ಕಟ್ಟಿ ತಪಸ್ಸನ್ನಾಚರಿಸುತ್ತಿದ್ದಾನಂತೆ. ಆಶ್ರಮದ ಹಸುವೊಂದು ನಿತ್ಯವೂ ಅಲ್ಲಿಯೇ ಅರಣ್ಯದ ಮಧ್ಯದಲ್ಲಿ ಉದ್ಭವವಾಗಿದ್ದ ಲಿಂಗದ ಕಲ್ಲಿಗೆ ಹಾಲೆರದು ಬರುತ್ತಿದ್ದುದ್ದನ್ನು ಕಂಡ ಮಹರ್ಷಿಗಳು ಅದನ್ನು ನಿತ್ಯ ನೇಮಗಳಿಂದ ಪೂಜಿಸತೊಡಗಿದರು. ತನ್ನ ತಪೋಬಲದಿಂದ ಶಿವನನ್ನು ಪ್ರತ್ಯಕ್ಷ ಮಾಡಿಕೊಂಡು ಈ ಸ್ಥಳವು ತನ್ನ ಹೆಸರಿನಲ್ಲೇ ಉಳಿಯಬೇಕೆಂದು ಪ್ರಾರ್ಥಿಸಿದರಂತೆ. ಅದರಿಂದಾಗಿ ಕೋಲಾಪುರವೆಂದು ನಾಮಕರಣವಾಯಿತೆನ್ನುತ್ತಾರೆ. ಅದೇ ವೇಳೆಯಲ್ಲಿ ಕಂಹಾಸುರನೆಂಬ ಅಸುರನೊಬ್ಬನೂ ಕೂಡ ಮಹಾಬಲಾಢ್ಯನಾಗಿ ಮಹರ್ಷಿಗಳನ್ನು ಪೀಡಿಸಲಾರಂಭಿಸಿದನಂತೆ. ಆಗ ದಿಕ್ಕೆಟ್ಟ ಕೋಲ ಋಷಿಯು ಮತ್ತು ಇತರ ಋಷಿವರೇಣ್ಯರು ತ್ರಿಮೂರ್ತಿಗಳನ್ನು ಮೊರೆ ಹೊಕ್ಕರಂತೆ. ಅವರು ತ್ರಿಪುರ ಭೈರವಿಯನ್ನು ಸೃಷ್ಟಿಸಿ ಅವರನ ವಧೆಗಾಗಿ ಕಳುಹಿಸಿದರು. ಕಾಲಭೈರವಿಯನ್ನು ಕಂಡ ಕಂಹಾಸುರ ಭಯದಿಂದ ಓಡಿಹೋಗಿ ಋಷ್ಯ ಮೂಕಾಚಲಕ್ಕೆ ಹೋಗಿ ತಪಸನ್ನಾಚರಿಸಿದ. ನಾಲ್ಕು ಮನ್ವಂತರಗಳು ದಾಟಿ ಕೃತಯುಗದ  ಅರವತ್ನಾಲ್ಕನೆಯ ಸಂವತ್ಸರದಲ್ಲಿ ಮಹಿಷಾಸುರನೆಂಬ ರಾಕ್ಷಸನು ಇಲ್ಲಿ ಬಂದು ನೆಲಸಿ ಉಪಟಳವನ್ನು ಕೊಡಲಾರಂಭಿಸಿದನಂತೆ. ಕೋಲ ಮಹರ್ಷಿಯು ಆದಿಶಕ್ತಿಯನ್ನು ಕುರಿತು ತಪ್ಪಸ್ಸನ್ನಾಚರಿಸಿ, ಅವನನ್ನು ಸಂಹಾರ ಮಾಡುವಂತೆ ಬೇಡಿಕೊಂಡ. ಭಕ್ತರ ಬೇಡಿಕೆಯಂತೆ ಮಹಿಷಾಸುರನನ್ನು ಸಂಹರಿಸಿದಳು. ಆ ತ್ರಿಮೂರ್ತಿಗಳು ಶ್ರೀ ಚಕ್ರವನ್ನು ಮತ್ತು ಭೂಲೋಕ ರಕ್ಷಣೆಗಾಗಿ ದೇವಿಯನ್ನು ಅವರಲ್ಲಿ ಪ್ರತಿಷ್ಠಾಪಿಸಿದರು.

ಋಷ್ಯ ಮೂಕಾಚಲದಲ್ಲಿ ದೀರ್ಘ ತಪ್ಪಸ್ಸನ್ನಾಚರಿಸುತ್ತಿದ್ದ ಕಂಹಾಸುರನಿಗೆ ಪರಶಿವನು ಒಲಿಯುವ ಕಾಲ ಸನ್ನಿಹಿತವಾಗಿತ್ತು. ಇದನ್ನರಿತ ಋಷಿಗಳು ಕಂಗೆಟ್ಟು ಪರಾಶಕ್ತಿಯನ್ನು ಪ್ರಾರ್ಥಿಸಿ, ಶಿವನು ದರ್ಶನವೀಯುವ ಸಂದರ್ಭದಲ್ಲಿ ಅವನ ನಾಲಿಗೆಯಲ್ಲಿ ನೆಲೆಸಿ ಮೂಕನನ್ನಾಗಿ ಮಾಡಬೇಕೆಂದು ಪ್ರಾರ್ಥಿಸಿದರು. ಅದರಂತೆಯೇ ದೇವಿಯು ಆ ಅಸುರನನ್ನು ವರವನ್ನು ಕೇಳಲಾಗದಂತೆ ಮಾಡಿದಳಂತೆ. ಆದ್ದರಿಂದ ಇವಳಿಗೆ ಮೂಕಾಂಬಿಕೆ ಎಂದೂ ಹೆಸರಾಯಿತಂತೆ. ಋಷಿಗಳಿಂದಲೇ ತನಗೆ ಹೀಗಾಯಿತೆಂದು ತಿಳಿದ ಕಂಹಾಸುರ ಮತ್ತೆ ತೊಂದರೆ ಕೊಡಲಾಂಭಿಸಿದನಂತೆ. ಕೊನೆಗೆ ದೇವಿಯು ಬ್ರಾಹ್ಮೀ, ವೈಷ್ಣವೀ, ಶಾಂಭವೀ, ಕುಮಾರಿ, ಇಂದ್ರಾಣಿ, ವರಾಹಿ, ಎಲ್ಲರೊಡಗೂಡಿ ಒಂದೇ ದೇಹವನ್ನು ತಾಳಿ, ಮೂಕಾಸುರನನ್ನು ಸಂಹರಿಸಿದಳಂತೆ. ಋಷಿಗಳೆಲ್ಲರೂ ಕೂಡಿ ತಾವು ಇಲ್ಲಿಯೇ ನೆಲೆಸಬೇಕೆಂದರಂತೆ. ಅವರ ಬೇಡಿಕೆಯಂತೆ ದೇವಿ ಅಲ್ಲಿ ನೆಲೆಸಿದಳು. ದೇಶ ಪರ್ಯಟಣೆ ಮಾಡುತ್ತಾ. ಬಂದ ಶಂಕರಾಚಾರ್ಯರು ಕುಟಚಾದ್ರಿಯಲ್ಲಿ ಬಂದು ತಪಸ್ಸನ್ನಾಚರಿಸಿದ್ದರು.  ದೇವಿಯನ್ನು ಕೇರಳಕ್ಕೆ ಕರೆದೊಯ್ಯಬೇಕೆಂದು. ಮನಸ್ಸು ಮಾಡಿ, ಪ್ರತ್ಯಕ್ಷಳಾದ ದೇವಿಗೆ ತನ್ನ ಮನದಿಚ್ಛೆ ತಿಳಿಸಿದರು, ಆಯಿತು ಬರುತ್ತೇನೆ. ಆದರೆ ನಿನ್ನ ಹಿಂದೆ ಬರುತ್ತಿರುವ ನನ್ನನ್ನು ಯಾವ ಕಾರಣಕ್ಕೂ ಹಿಂದಿರುಗಿ ನೋಡಬಾರದೆಂದು ಆಜ್ಞೆ ಮಾಡಿದಳು. ಅದರಂತೆ ಶಂಕರಾಚಾರ್ಯರು ಮುಂದೆ ಮುಂದೆ ಹೋಗುತ್ತಿರುವಾಗ ಗೆಜ್ಜೆ ಸಪ್ಪಳವೇ ಕೇಳಿಸುವುದಿಲ್ಲವಲ್ಲಾ ಎಂದು ಅನುಮಾನ ಬಂದು ತಿರುಗಿ ನೋಡಿದರಂತೆ. ಆಗ ದೇವಿ ತಾನು ಇಲ್ಲಿಯೇ ನೆಲೆಸುವೆನು, ನೀನು ನನ್ನ ಮಾತಿನಂತೆ ನಡೆದುಕೊಳ್ಳಲಿಲ್ಲವೆಂದು ಹೇಳಿದಳಂತೆ. ಹೀಗೆ ದೇವಿಯ ನೆಲೆಸಿಕೆಗೆ ನಾನಾ ಐತಿಹ್ಯಗಳನ್ನು ಹೇಳುತ್ತಾರೆ. ಮಲೆಯಾಳಿಗಳು ಈ ದೇವತೆಗೆ ಹೆಚ್ಚು – ಸಂಖ್ಯೆಯಲ್ಲಿ ನಡೆದುಕೊಳ್ಳುತ್ತಿರುವುದಕ್ಕೆ ಇದೇ ಕಾರಣವೆಂದೂ ನಂಬಿದ್ದಾರೆ.

ಇಲ್ಲಿಯ ಆಚಾರನುಷ್ಠಾನ ಸಂಪ್ರದಾಯಗಳು ಆದಿಶಂಕರಾಚಾರ್ಯರಿಂದ ನೇಮಕ ಮಾಡಲ್ಪಟ್ಟವುಗಳೆಂದೂ ಹೇಳುವರು. ನಿತ್ಯ ಪೂಜಾದಿ ಕಾರ್ಯಗಳೂ ಕೂಡ ಇಲ್ಲಿ ಕೇರಳೀಯಾಚಾರಾನುಸಾರ ನಡೆದು ಬರುತ್ತಿವೆ. ಸ್ವಾಮಿಗಳು ತಮ್ಮ ಮಹಿಮೆಯಿಂದ ವಿಗ್ರಹ ಪ್ರತಿಷ್ಠಾಪಿಸಿದರೆಂದೂ ಇದಕ್ಕೆ ಮೊದಲು ಸ್ವಯಂಭು ಲಿಂಗ ಮಾತ್ರವಿತ್ತೆಂದೂ ಹೇಳುವರು. ಶಂಕರಾಚಾರ್ಯರು ಧ್ಯಾನ ಮಾಡಿದ ಸ್ಥಳವನ್ನು “ಶಂಕರಪೀಠ” ಎಂದು ಈಗಲೂ ಕರೆಯುತ್ತಾರೆ. ಉದ್ಭವಲಿಂಗ ಪೂರ್ವದಿಕ್ಕಿಗೆ ಮುಖವಾಗಿದ್ದು, ಅದರ ಎಡಭಾಗ ದೊಡ್ಡದಾಗಿಯೂ ಬಲಭಾಗ ಚಿಕ್ಕದಾಗಿಯೂ ಇದೆ. ಆದರಿಂದ ಇದನ್ನೂ ಸ್ತ್ರೀ ಪ್ರಾಧಾನ್ಯವಾದದ್ದೆನ್ನುವರು. ಈ ದೇವಿಗೆ ಮಂಗಳವಾರ, ಶುಕ್ರವಾರ ಬಹಳ ಜನ ಭಕ್ತಾಧಿಗಳು ಬಂದು ಪೂಜೆ ಸಲ್ಲಿಸಿ, ಪ್ರಾರ್ಥಸಿಕೊಳ್ಳುತ್ತಾರೆ.

ಪೂಜಾ ಪದ್ಧತಿಯೂ ಬ್ರಾಹ್ಮಣ ಅರ್ಚಕರಿಂದ ಆಗಮಿಕ ರೀತಿಯಲ್ಲಿ ನಡೆಯುತ್ತದೆ. ದಿನಕ್ಕೆ ಮೂರು ಹೊತ್ತು ಪೂಜೆ, ಅಭಿಷೇಕ, ನೈವೇದ್ಯ ನಡೆಯುತ್ತದೆ. ಬೆಳಗಿನ ಪೂಜೆ ೭ ಗಂಟೆಗೆ ಆದ ತರುವಾಯ ಶ್ರೀ ಬಲಿಗೆ ಅಮ್ಮನವರ ವಿಗ್ರಹವನ್ನು ಎರಡೂ ಸುತ್ತು ಒಬ್ಬನು ಹೆಗಲಲ್ಲೇರಿಸಿಯೂ ಒಂದು ಸುತ್ತು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಿಂದ ಪ್ರದಕ್ಷಿಣಿ ಮಾಡುವರು. ಪುನಃ ಮಧ್ಯಾಹ್ನ ನೈವೇದ್ಯ, ಆರತಿ ನಡೆಯುವುದು. ಸಂಜೆ ಪೂಜೆಯಲ್ಲಿ ದೀಪಾರಾಧನೆಯ ನಂತರ ಪರಿವಾರಕ್ಕೆ ಎಂದರೆ ಸುತ್ತಲೂ ಇರುವ ದೈವಗಳಿಗೂ ದೀಪಾರಾಧನೆ ಮಾಡುವರು. ನೈವೇದ್ಯವು ಕಾಮಿ ಮತ್ತು ಅವಲಕ್ಕಿಯದಾಗಿರುತ್ತದೆ.ಉತ್ಸವದ ನಂತರ ಕಾಷಾಯ ಮತ್ತು ತೀರ್ಥವನ್ನು ಹಂಚುತ್ತಾರೆ. ಇದು ಶುಂಠಿ, ಮೆಣಸುಕಾಳು ಮತ್ತು ಬೆಲ್ಲ ಮೊದಲಾದವುಗಳೊಂದಿಗೆ ತಯಾರಿಸಿದ್ದು. ಇದು ಶೀತ, ಜ್ವರಗಳಿಂದ ನರಳುತ್ತಿರುವವರಿಗೆ ತುಂಬಾ ಒಳ್ಳೆಯದೆಂದೂ ಹೇಳುತ್ತಾರೆ. ಅಲ್ಲದದೆ, ಪ್ರತಿ ಶುಕ್ರವಾರ ಸಂಜೆ ೫ ಗಂಟೆಗೆ ಅಮ್ಮನವರನ್ನು ದೇವಸ್ಥಾನದಿಂದ ಅರ್ಧ ಪರಲಾಂಗ್ ಬಡಗು ಇರುವ ಸರಸ್ವತೀ ಮಂಟಪಕ್ಕೆ ಮೆರವಣಿಗೆಯಿಂದ ಸಾಗಿಸಿ ನೈವೇದ್ಯ ಮಹಾಮಂಗಳಾರುತಿ ಆಗುತ್ತದೆ. ಪ್ರತಿದಿನ ಮೂರು ಹೊತ್ತು ಪೂಜೆ ನಡೆಯುವಾಗಲೆಲ್ಲಾ ಶ್ರುತಿ, ಮೌರಿ, ಸಮೇಳ, ತಾಳ, ಡೋಲುಗಳಲ್ಲದೆ ಒಂದು ದೊಡ್ಡ ಭೇರಿ (ನಗಾರಿ) ಯನ್ನು ಬಾರಿಸುತ್ತಾರೆ. ವಾದ್ಯದವರಿಗೆ ವಂಶಪಾರಂಪರ್ಯವಾಗಿ ಈ ವೃತ್ತಿ ಬಂದಿದೆ. ಇವರು ದೇವಾಡಿಗರು ಜಾತಿಗೆ ಸೇರಿದವರು. ಎರಡು ದೊಡ್ಡ ಗಂಟೆಗಳನ್ನು ಮತ್ತು ಮಹಾದ್ವಾರದ ಗಂಟೆಗಳನ್ನು ಯಾರೂ ಹೊಡೆಯುವಂತಿಲ್ಲ. ಮಂಗಳಾರತಿ ಆಗುವಾಗ ಮತ್ತು ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಬಾರಿಸುತ್ತಾರೆ. ಪೂಜೆ ನಡೆಯುವಾಗ ಗಂಡಸರುಗಳು ದೇವಸ್ಥಾನದ ಒಳಗೆ ಹೋಗಲು ಮೈ ಮೇಲೆಯ ಬಟ್ಟೆಯನ್ನು ತೆಗೆಯಬೇಕು. ಹರಕೆಗಳು ಉತ್ತಮ, ಮಧ್ಯಮ ಮತ್ತು ಸಾಮಾನ್ಯ ಎಂಬ ಮೂರು ತೆರನಾಗಿ ವಿಂಗಡಿಸಲ್ಪಟ್ಟಿವೆ. ಇವೇ ಸಹಸ್ರಾರ್ಚನೆ ತ್ರಿಶತಿಯಾರ್ಚನೆ ಮತ್ತು ಅಷ್ಟೋತ್ತರಾರ್ಚನೆ, ಭಕ್ತಾದಿಗಳಿಗೆ ಪ್ರತಿದಿನ ಮಧ್ಯಾಹ್ನ ಅಲ್ಲಿಯೇ ಪ್ರಸಾದ ಕೊಡುತ್ತಾರೆ. ಎಲ್ಲ ಜಾತಿಯವರಿಗೂ ಇಲ್ಲಿ ಪ್ರವೇಶವುಂಟು.

ಗರ್ಭಗುಡಿಯಲ್ಲಿ ಎರಡು ಪ್ರಕಾರಗಳಿವೆ. ದೀಪಸ್ತಂಭ ಮತ್ತು ಧ್ವಜ ಸ್ತಂಭಗಳು ದೇವರ ಎದುರುದ್ವಾರದಲ್ಲೇ ಇವೆ. ವೀರಭದ್ರನು ಖತ್ತಿ ಹಿಡಿದು ನಿಂತಿರುವ ಕಂಚಿನ ಮೂರ್ತಿಯೆಂದೂ ಒಳ ಪ್ರಕಾರದಲ್ಲಿದೆ. ಸುಬ್ರಹ್ಮಣ್ಯ, ಪ್ರಾಣಲಿಂಗ, ಪಾರ್ಥೇಶ್ವರ, ಪಂಚಮುಖ ಗಣಪತಿ, ಚಂದ್ರಮೌಳೇಶ್ವರ, ನಂಜುಂಡೇಶ್ವರ, ಆಂಜನೇಯ, ಗೋಪಾಲಕೃಷ್ಣ ಮುಂತಾದ ದೇವರುಗಳು ಒಳ ಪ್ರಾಕಾರದಲ್ಲಿವೆ.

ಕಾರ್ತೀಕ ದೀಪವು ವೃಶ್ಚಿಕಾ ಮಾಸದ ಅಮವಾಸ್ಯೆಯ ದಿನ ನಡೆಸುತ್ತಾರೆ. ಅದರ ಮೊದಲ ದಿನ ಅಮ್ಮನವರನ್ನು ಸೌಪರ್ಣಿಕಾ ತೀರಕ್ಕೆ ಮೆರವಣಿಗೆಯಿಂದ ಒಯ್ದು ಪೂಜಾದಿಗಳನ್ನು ಮಾಡುತ್ತಾರೆ. ಅದನ್ನು ಓಡಬಲಿ ಎಂದು (ಭೂತಗಳನ್ನು ಓಡಿಸುವುದು) ಕರೆಯುವರು. ತೂತಾದ ಗಡಿಗೆ ಕೊಟ್ಟು ನೀರು ತರಲಿಕ್ಕೆ ಹೇಳುತ್ತಾರೆ; ತರುವುದಕ್ಕೆ ಆಗುವುದಿಲ್ಲ. ಅಷ್ಟರೊಳಗೆ ಪೂಜೆ ಮುಗಿಸುತ್ತಾರೆ. ಉತ್ಸವ ಮೂರ್ತಿ ಎದುರಿಗೆ ಯಾರೂ ಸಹಬಾರದು, ಸಿಕ್ಕಿದರೆ ರಕ್ತಕಾರಿ ಸಾಯುತ್ತಾರೆಂಬ ನಂಬಿಕೆ ಇದೆ. ಪ್ರಧಾನ ಅರ್ಚಕರು ಬಲಿ ಎಂದು ನುಗ್ಗೆ ಸೊಪ್ಪು ಬೂದುಗುಂಬಳ ಮತ್ತು ಅನ್ನವನ್ನು ಹಾಕುತ್ತಾ ಬರುತ್ತಾರೆ. ಇದೆಲ್ಲಾ ಮುಗಿದ ನಂತರ ಭಾಗವಹಿಸಿದ ಎಲ್ಲರಿಗೂ ಊಟ ಹಾಕುತ್ತಾರೆ.

ಪ್ರತಿ ತಿಂಗಳು ಹುಣ್ಣಿಮೆ ಮತ್ತು ಅಮವಾಸ್ಯೆಯೆಂದು ಬೀದಿ ಉತ್ಸವ ನಡೆಯುತ್ತದೆ. ಕಾರ್ತೀಕ ಮಾಸದಲ್ಲಿ ವನಭೋಜನವೆಂದು ನೆಲ್ಲಿಯ ಮರವಿರುವೆಡೆಯಲ್ಲಿಗೆ ಹೋಗಿ ವಿಶೇಷ ಪೂಜೆ, ಧಾತ್ರಿ, ಹೋಮ ನಡೆಸುತ್ತಾರೆ, ಪಾಯಸ, ಹುಳಿ, ಅನ್ನ ಸಾರು ಆದಿನದ ವಿಶೇಷ ಅಡುಗೆಯಾಗಿದ್ದು, ನೈವೇದ್ಯ ಮಾಡುತ್ತಾರೆ.

ಇದರ ಉತ್ಸವದ ಧ್ವಜಾರೋಹಣವು ಮೀನ ಮಾಸದ ಉತ್ತರಾ ನಕ್ಷತ್ರದಲ್ಲಿ ಮತ್ತು ಮೂಲಾ ನಕ್ಷತ್ರದ ದಿನ ರಥೋತ್ಸವವು ೮ ದಿನಗಳು ನಡೆಯುತ್ತದೆ. ೮ ನೆಯ ದಿವಸ ರಥವನ್ನೆಳೆದು ಪಡುಬಾಗಿಲಿನವರೆಗೆ ಸಾಗಿಸಿ ಪುನಃ ಮೂಡು ಬಾಗಿಲಲ್ಲೇ ತಂದಿರಿಸುವರು. ರಥೋತ್ಸವದ ವೇಳೆಯಲ್ಲಿ ರಥದ ಮೇಲ್ಗಡೆಗೆ ನಾಣ್ಯ, ಹಣ್ಣು, ಬೆಂಡು, ಬತ್ತಾಸುಗಳನ್ನು ಎಸೆಯುತ್ತಾರೆ. ದೇವಸ್ಥಾನದ ಒಳಗಡೆಯಲ್ಲಿ ಪೂಜೆಯಾಗಿ “ಭೂತಬಲಿ” ಎಂದು ಬಾಳೆದಿಂಡು, ಅನ್ನ, ನೇರಲೆಸೊಪ್ಪು, ಬೂದುಗುಂಬಳ, ತೆಂಗಿನ ಕಾಯಿ ಕೆಂಪು, ಕಪ್ಪು ಬಣ್ಣದ ಅನ್ನ ಮುಂತಾದವನ್ನು ಪ್ರತಿ ತೇರಿನ ಗಾಲಿಗೂ ಇಡುವರು.  ನವಗ್ರಹ ದಾನಕೊಟ್ಟು ಎಳೆಯುತ್ತಾರೆ. ಈ ಸಮಯದಲ್ಲಿ ಬೇರೆ ಯಾವುದೇ ವಿಧವಾದ ಜನಪದ ಕಲೆಗಳಿರುವುದಿಲ್ಲ. ಆ ದಿನ ವಿಶೇಷ ಭೋಜನ ಪಾಯಸ, ವಡೆ, ಕೋಸಂಬರಿ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಇದೇ ಸಮಯದಲ್ಲಿ ತಮ್ಮ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಇಲ್ಲಿ ಯಾವುದೇ ರೀತಿಯ ಕಠಿಣ ಹರಕೆಗಳಿರುವದಿಲ್ಲ. ಮೂಲ ಮೂರ್ತಿ ಪಂಚಲೋಕದ್ದೂ, ಉತ್ಸವ ಮೂರ್ತಿಯೂವುಂಟು. ಶಂಖ ಚಕ್ರ ವರಧಾ ಭಯ ಹಸ್ತಗಳಿಂದ ಕುಳಿತ ಭಂಗಿಯ ಮೂರ್ತಿ ಅಲಂಕಾರ ಪೂಜೆ ಮಾಡಿದಾಗ ಒಡವೆಗಳನ್ನೆಲ್ಲಾ ಹಾಕಿದಾಗ ಎಂದು ಬರುವಂತ್ತಿರುತ್ತದೆ. ಅಭಷೇಕ ಪೂಜೆ ಲಿಂಗಕ್ಕೆ ಮಾತ್ರ. ಇದೂ ಕೆಲವರಿಗೆ ಮನೆದೇವರೂ ಕುಲದೇವರೂ ಆಗಿದೆ. ಇದರ ಹರಕೆಗಳೆಂದರೆ, ತುಲಾಭಾರ ಮುಡಿಕೊಡುವುದು, ಉರುಳು ಸೇವೆ, ಹೆಜ್ಜೆ ನಮಸ್ಕಾರ ಇತ್ಯಾದಿ ಸರಳವಾಗಿರುತ್ತವೆ. ಪೂಜಾರಿಗೆ ಇಲ್ಲಿ ಉತ್ತಮ ಸ್ಥಾನಮಾನಗಳಿವೆ. ಅಪ್ಪಣೆ ಕೇಳುವುದಾಗಲೀ, ದೇವರು ಮೈದುಂಬುವುದಾಗಲೀ ಇಲ್ಲ. ಅವರವರ ಕರ್ಮಗಳಿಗೆ ಅವರವರ ಪ್ರಾರ್ಥನೆಯ ಮುಖಾಂತರವೇ ಫಲ ಸರಿ, ಬೆಸ ಪ್ರಸಾದದಿಂದ ಒಳ್ಳೆಯದು ಕೆಟ್ಟದು ಎಂಬ ಫಲ ತಿಳಿಯಬಹುದು.

ಈ ದೇವರ ಉಪಕ್ಷೇತ್ರಗಳು ಬೇರೆ ಬೇರೆಗಳು ಕಡೆಗಳಲ್ಲೂ ಕಂಡುಬರುತ್ತವೆ. ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮೂಕಾಂಬಿಕೆಯ ಎರಡು ಗುಡಿಗಳಿವೆ. ಅಲ್ಲಿ ಅಮ್ಮನವರು ಗಣಮಗನ ಮೈದುಂಬಿ ಮಾತನಾಡುವುದುಂಟು. ಶಿವಮೊಗ್ಗ ಜಿಲ್ಲೆಯ ಹೊನ್ನಾಳ್ಳಿ ತಾಲ್ಲೂಕಿನ ಜೀನಹಳ್ಳಿಯಲ್ಲಿರುವ ಈ ಅಮ್ಮನವರ ಬಗ್ಗೆ ಒಂದು ಕಥೆ ಹೇಳುತ್ತಾರೆ. ೧೯೩೦ ರ ಸುಮಾರಿನಲ್ಲಿ ಆ ಊರಿನ ಸುತ್ತಮುತ್ತ ಪ್ಲೇಗ, ಕಾಲರಾ, ಮಾರ್ಟ (ಮೈಲಿ) ಹರಡಿತ್ತಂತೆ. ಜನಗಳು ಊರಿಗೆ ಕಟ್ಟುಕಟ್ಟಳೆಗಳನ್ನು ಮಾಡಿಸುತ್ತಿದ್ದರಂತೆ. ಕೊಲ್ಲೂರಿನ ಮೂಕಾಂಬಿಕೆ ದೇಶ ಸಂಚಾರಿಯಾಗಿದ್ದವಳು ಈ ಊರಿಗೂ ಬಂದು  ಪ್ರವೇಶ ಮಾಡುವಾಗ ಅಲ್ಲಿದ್ದ ದೇವರುಗಳೆಲ್ಲಾ ತಡೆಯುಂಟು ಮಾಡಿದವಂತೆ. ಅಲ್ಲಿ ಇದರ ಅಕ್ಕನೆಂದು ಜನ ಕರೆಯುವ ಹಿರೇಕೆರೂರು ಚೌಡವ್ವನೂ ಒಪ್ಪಲ್ಲಿಲ್ಲವಂತೆ. ಬ್ರಹ್ಮದೇವರು ಮೂಕಾಂಬಿಕೆಯನ್ನು ಕುಂಟಿಯನ್ನಾಗಿ ಮಾಡಿದರಂತೆ. ಆಗ ಮೂಕಾಂಬಿಕೆಗೆ ಸಿಟ್ಟು ಬಂದು ಆ ದೇವರ ವಿಗ್ರಹಕ್ಕೇ ಬೆಂಕಿ ಹತ್ತಿ ಉರಿಯುವಂತೆ ಮಾಡಿದಳಂತೆ. ಅವಳ ಸತ್ಯಕ್ಕೆ ಸಾಹಸಕ್ಕೆ ಬೆರಗಾಗಿ ಎಲ್ಲಾ ದೇವರುಗಳು ಶರಣಾಗಿ ಅನುಮತಿ ನೀಡಿದರಂತೆ. ಮೂಕಾಂಬಿಕೆ ಕುಂಟುತ್ತಾ ನಡೆದಿದ್ದರ ಸಲುವಾಗಿ ಕುಂಟಮ್ಮಾನೆಂದು ಹೆಸರು ಬಂದಿದೆ. ಅಂದಿನಿಂದ ಇವಳ ಹೆಸರಿನಲ್ಲೇ ವರ್ಷ ವರ್ಷ ಜಾತ್ರೆ ಮಾಡುತ್ತಾರೆ. ಇವಳಿಗೆ ” ಬನಶಂಕರಿ” ಎಂದೂ ಕೂಡ (ಕಾಡಿನಲ್ಲಿ ನೆಲೆಸಿದ್ದರಿಂದ) ಕರೆಯುತ್ತಾರೆ. ಹಬ್ಬ ಮೂರು ದಿವಸಗಳು ನಡೆಯುತ್ತದೆ. ಆರಾಧನೆ, ಉತ್ಸವ, ಹರಕೆ ಸೇವೆಗಳು ಮತ್ತು ಆಯಾ ರಾತ್ರಿ ಜನಪದ ಕಲೆಗಳ ಕುಣಿತ ಮೆರೆತಗಳು ಇರುತ್ತವೆ. ಈ ದೇವಿಗೆ ಯಾವುದೇ ರಕ್ತಹಾರವಿರುವುದಿಲ್ಲ. ವಿಶೇಷ ಅಡಿಗೆ ಎಂದರೆ ಕರಿಗಡಬು. ಎಲ್ಲಾ ಜಾತಿಯ ಭಕ್ತಾದಿಗಳೂ ನಡೆದುಕೊಳ್ಳುತ್ತಾರೆ.

ಭೂತಗಳೂ ದೈವಗಳಾಗಿ ಆರಾಧಿಸಲ್ಪಡುತ್ತಿವೆ. ಇದಕ್ಕೆ ಕೋಲ, ಗೆಂಡೆ ಮುಂತಾದ ಸೇವೆಗಳನ್ನು, ಬಂಡಿನೇಮ, ನಡಾವಳಿ, ತಂಬಿಲು, ಆಗೆಲು ಎಂಬ ವಿಧದ ಸೇವೆಗಳನ್ನು ಸಲ್ಲಿಸುತ್ತಾರೆ. ಇದೇ ರೀತಿಯ ಮೂಕಾಂಬಿಕೆಯ ರಥೋತ್ಸವದಂದು ಕೆಲವು ಭೂತಗಳ ತೃಪ್ತಿಗಾಗಿ ಗೆಂಡ ಮತ್ತು ದಕ್ಕೆ ಬಲಿ ಸೇವೆಗಳನ್ನು ನಡೆಸುತ್ತಾರೆ. ದೆವ್ವ, ಭೂತಗಳ ಬಗ್ಗೆ ಖಚಿತವಾದ ಯಾವುದೇ ನಿರ್ಣಗಳಿಲ್ಲದಿದ್ದರೂ ಇವು ಪ್ರಕೃತಿಯ ಆರಾಧಕರಾದ, ಕ್ಷುದ್ರ ದೇವತೆಗಳ ಆರಾಧಕರಾದ ದ್ರಾವಿಡ ಸಂಸ್ಕೃತಿಯಿಂದ ಬಂದದ್ದೆನ್ನಬಹುದು. ಪಾಡ್ದನಗಳ ಪ್ರಕಾರ ದೆವ್ವಗಳೆಲ್ಲಾ ಘಟ್ಟದಿಂದಿಳಿದು, ಕಡಲತೀರದಲ್ಲಿ ನೆಲೆನಿಂತವೆಂದೂ ಇವೆಲ್ಲಾ ಈಶ್ವರನ ಗುಣಗಳೆಂದೂ ಹೇಳುವುದುಂಟು. ಇವುಗಳನ್ನು ಸರಿಯಾದ ರೀತಿಯಲ್ಲಿ  ತೃಪ್ತಿಪಡಿಸದಿದ್ದರೆ ಯಾವ ಕೆಲಸಗಳೂ ಆಗುವದಿಲ್ಲವೆಂದೂ ಮತ್ತು ಪ್ರತಿಯೊಂದು ಪ್ರಮುಖ ದೇವತೆಯ ಬಳಿಯಲ್ಲೂ ಈ ರೀತಿಯ ಭೂತಗಳೂ ಅದರ ಬಂಟರಾಗಿ ಕೆಲಸ ನಡೆಸುತ್ತವೆಂದೂ ಹೇಳುತ್ತಾರೆ.

ಗೆಂಡ ನಡೆಸುವವರು ಮಡಿಯಿಂದಿದೂ, ಎರಡೂ ಮೂರು ದಿವಸಗಳಿಂದಲೂ ಮಿತವಾದ ಆಹಾರವನ್ನು ಸೇವಿಸುತ್ತಿರುತ್ತಾರೆ. ಗೆಂಡದ ಸಂಜೆ, ಪಾತ್ರೆಗಳು ಎಣ್ಣೆ ಸ್ನಾನ ಮಾಡಿ ಕಾಸೆ ಪಂಚೆ ಉಟ್ಟು ಗೆಜ್ಜೆ ಕಟ್ಟಿ ದೇವರೆದುರಿಗೆ ನಿಂತಾಗ, ಪೂಜಾರಿ ಮಂಗಲಾರತಿ ಮಾಡಿ ತೀರ್ಥ ಪ್ರಸಾದ ಕೊಟ್ಟು ದೆವ್ವಕ್ಕೆ ಮುಡಿಸಿದ್ದ ಹೂವನ್ನು ಕೊಟ್ಟಾಗ ಇವನಿಗೆ ಆವೇಶ ಬಂದು ಕೆಂಡವನ್ನು ಹಿಡಿಯುತ್ತಾನೆ, ವಿವಿಧ ಭಂಗಿಗಳಿಂದ ಕುಣಿಯುತ್ತಾನೆ. ಭಕ್ತಾದಿಗಳ ಅಹವಾಲಿಗೆ ತಕ್ಕ ಉತ್ತರ ನೀಡುತ್ತಾನೆ. ಕೆಂಡದ ಗುಂಡಿಯಲ್ಲಿಳಿದು ಕುಣಿಯುತ್ತಾ ಕೇಕೆ ಹಾಕುತ್ತಾನೆ. ಉರಿಯುವ ದೊಂದಿಯನ್ನು ಎದೆಗೆ ತಿವಿದುಕೊಳ್ಳುತ್ತಾನೆ. ಇಂತಹ ಅನೇಕ ನೋಟಗಳು ಜನತೆಯಲ್ಲಿ ಭಯ ಭಕ್ತಿಯನ್ನುಂಟುಮಾಡಿ ಮೂಕ ವಿಸ್ಮಿತರನ್ನಾಗಿ  ಮಾಡುತ್ತವೆ.

ಇದೇ ರೀತಿ “ದಕ್ಕೆ ಬಲಿ” ಸೇವೆಯನ್ನು ವೈದ್ಯರೆಂಬ ವರ್ಗದವರು ನಡೆಸುತ್ತಾರೆ. ಇದು ಪ್ರಾಚೀನ ದೈವಾರಾಧನೆಯ ಮೇಲೆ ಆರ್ಯ ಸಂಸ್ಕೃತಿಯ ಪ್ರಭಾವವನ್ನು ಬೀರುವ ಒಂದು ವಿಶಿಷ್ಟ ನೃತ್ಯ. ಈ ಕುಣಿತ ಮಾಡುವವರನ್ನು ಪಂಬದ, ಪರವ, ವೈದ್ಯ, ಬೈದ್ಯ, ನಲ್ಕೆ, ಪಾಣಾರ ಮುಂತಾಗಿ ಕರೆಯುತ್ತಾರೆ. ಸುಮಾರು ಎಂಟು ಹತ್ತು ಅಡಿ ವಿಶಾಲವಾದ ಪವಿತ್ರ ಸ್ಥಳದಲ್ಲಿ  ವೈದ್ಯ ಪಂಗಡದವರು ೫ ಬಣ್ಣದ (ಕೆಂಪು, ಕಪ್ಪು,ಹಳದಿ,ಬಿಳಿ,ಪಚ್ಚೆ) ಪುಡಿಯಿಂದ ಸುಂದರವಾದ ಏಳು ಹೆಡೆಯ ದೊಡ್ಡ ಸರ್ಪದ ಚಿತ್ರವನ್ನು ಬಿಡಿಸುತ್ತಾರೆ. ಅದರ ಪಕ್ಕದಲ್ಲಿ ಚಿಕ್ಕ ನಾಗಗಳನ್ನು ನಾಗ, ಯಕ್ಷ, ಪಂಚಬ್ರಹ್ಮ, ಗಣಪತಿ ಹಾಗೂ ತ್ರಿಶೂಲಗಳನ್ನು ಬಿಡಿಸಿ ಅದ್ಭುತವಾದ ಕಲಾ ವೈಖರಿಯನ್ನು ಪ್ರದರ್ಶಿಸುತ್ತಾರೆ. ಆನಂತರ ಮಂಡಳದ ಅಷ್ಟದಿಕ್ಕುಗಳಲ್ಲಿಯೂ ಹಣ್ಣು, ಕಾಯಿ, ಅಕ್ಕಿ, ಸಿಂಗಾರಗಳನ್ನು ಗುಡ್ಡೆ ಗುಡ್ಡೆಯಾಗಿಟ್ಟು ದೀಪಗಳನ್ನು ಹಚ್ಚಿಟ್ಟಿರುತ್ತಾರೆ. ತದನಂತರ ಭಕ್ತಿಯಿಂದ ಪೂಜಿಸಿ ಪ್ರಸಾದ ಹಂಚುತ್ತಾರೆ. ಮಂಡಲದ ಮೇಲ್ಭಾಗದಲ್ಲಿ ಕಟ್ಟಿದ ಚಪ್ಪರಕ್ಕೆ ವನ ಎಂದು ತೆಂಗಿನ ಗೆರಿಗಳನ್ನು ಸಿಂಗಾರದ ಹೂಗಳನ್ನು ಅನೇಕ ರೀತಿಯ ಹಣ್ಣು ತರಕಾರಿಗಳನ್ನು ಕಟ್ಟಿರುತ್ತಾರೆ. ಪಾತ್ರಿ ಮಂಗಳಾರತಿ ಸ್ವೀಕರಿಸಿ, ಅರ್ಚಕರಿಂದ ಸಿಂಗಾರ ಹೂ, ನೀರು ತೆಗೆದುಕೊಂಡ ಕೂಡಲೇ ಆವೇಶ ಬರುತ್ತದೆ. ಮಂಡಲದಲ್ಲಿ ನುಗ್ಗಿ ಸಿಂಗಾರ ಹೂಗಳನ್ನೆಲ್ಲಾ ಮುಖಕ್ಕೆ ಉಜ್ಜಿಕೊಳ್ಳುತ್ತಾ ಕುಣಿಯ ತೊಡಗಿದಾಗ ವೈದ್ಯ, ಡಕ್ಕೆ ಇಲ್ಲವೇ ಡಮರನ್ನು ಹಿಡಿದು ನಾಗನ ಹಿರಿಮೆ, ಗರಿಮೆ ಮಹಿಮೆಗಳನ್ನು ಹೊಗಳುತ್ತಾ ದೂರುತ್ತಾ ಕುಣಿಯುತ್ತಾ ಮಂಡಳದ ಸುತ್ತ ನೃತ್ಯ ಮುಖನಾಗುತ್ತಾನೆ. ಪಾತ್ರಿಗೆ ರೇಷ್ಮೇದೋತರ , ಗುಂಡಿನಸರ, ಬಳೆ ಕೆದರಿದತಲೆ ಕೂದಲಷ್ಟೆ ಆಭರಣ. ಆದರೆ ವೈದ್ಯನಿಗೆ ಕೆಂಪು ಸೀರೆಯ ಕಸೆಕಟ್ಟಿ, ರವಿಕೆ ತೋಡಸಿ ಕಾಲಿಗೆ ಗೆಜ್ಜೆ, ಸೊಂಟಕ್ಕೆ ಪಟ್ಟಿ, ಕೈಗೆ ಬಳೆ, ತೆಲೆಗೆ ಜರಿ ಮುಂಡಾಸು ಧರಿಸಿ ಢಮರು ವಾದನದೊಂದಿಗೆ ನರ್ತಿಸುತ್ತಾನೆ. ಪಾತ್ರಿ ವೈದ್ಯನ ಹಾಡಿಗೆ ತಕ್ಕಂತೆ ರೋಷದಿಂದ ನೃತ್ಯ ಮಾಡುತ್ತಾನೆ. ಹಾಡಿನಲ್ಲಿ ಸೌಮ್ಯ ಮತ್ತು ರೌದ್ರ ರಸಗಳೆರಡು ಕೂಡಿರುತ್ತವೆ. ಆದ್ದರಿಂದ ಇವರ ನೃತ್ಯ, ರೌದ್ರ, ಬೀಭತ್ಸ, ಸೌಮ್ಯ, ಲಾಲಿತ್ಯ ರಸಗಳಿಂದ ಕೂಡಿ ಜನರಿಗೆ ರಂಜನೆಯನ್ನು ಭಾವವೇಶವನ್ನು ಉಂಟು ಮಾಡುತ್ತದೆ. ಸೂರ್ಯೋದಯದೊಳಗೆ ಈ ನೃತ್ಯ ಮುಕ್ತಾಯವಾಗುತ್ತದೆ. ಈ ಕುಣಿತ ಹಾಡು ಆರ್ಯ ಪೌರಾಣಿಕ ದೇವತೆಗಳಿಗೆ ಸಂಬಂಧಿಸಿದುದು. ಪೂಜೆ ಮಾತ್ರ ಅನಾರ್ಯ ದೇವತೆಗಳಿಗೆ. ಕಂಚಿನ ದಕ್ಕೆ ಹಿಡಿದವ ಅರ್ಧ ಸ್ತ್ರೀ ಮತ್ತು ಅರ್ಧ ಪುರುಷ ವೇಷಧಾರಿಯಾಗಿರುತ್ತಾನೆ. ಇದು ಅರ್ಧನಾರೇಶ್ವರನ ಕಲ್ಪನೆ ತಂದು ಕೊಡುತ್ತದೆ. ಪ್ರಕೃತಿ ಪುರುಷರ ಸಮ್ಮೇಳನವನ್ನು ತೋರಿಸುತ್ತದೆ. ಭಕ್ತಿಭಾವಗಳನ್ನು ಮುಡಿಸುವ ಈ ಕುಣಿತ ಭೂತಾರಾಧನೆ ವಿಶಿಷ್ಟ ಅಂಶ. ಮಳೆ ಬೆಳೆಯಿಲ್ಲದಿದ್ದಾಗ ದೆವ್ವ ಮುನಿದಿರುವನೆಂದೂ ಅದಕ್ಕಾಗಿ ಈ ಸೇವೆ ನಡೆಸಿದರೆ ಸಂತೃಪ್ತಿಗೊಂಡು ಕರುಣಿಸುತ್ತಾನೆಂದೂ ತಿಳಿದಿದ್ದಾರೆ. ತುಲಾಭಾರ, ಹಣ್ಣುಸೇವೆ, ಒಡುವೆಗಳ ಹರಕೆ ಸೇವೆ ನಡೆಯುತ್ತದೆ. ಮಾಂಸಹಾರಿ ದೈವಗಳಿಗೆ ಹಂದಿ, ಕುರಿ, ಕೋಳಿ, ಬಲಿ ಕೊಡುತ್ತಾರೆ. ಆದರೆ ಈ ಅಮ್ಮನ ಸಮ್ಮುಖದಲ್ಲಿ ಯಾವುದೇ ರಕ್ತ ಹಾರ ಬಲಿ ನಡೆಯುವುದಿಲ್ಲ.

ದಕ್ಕೆ ಬಲಿಯ ಆರಂಭದಲ್ಲಿ ನೂರಾರು ಭೂತಗಳ ಹೆಸರನ್ನು ನೂರಾರು ಊರುಗಳ ಹೆಸರನ್ನು ಒಂದೇ ಉಸಿರಿಗೆ ಹೇಳುತ್ತಾನೆ. ನಾಗನ ಹೊಗಳಿಕೆಯಲ್ಲದೆ ಭೂತಗಳ ಹೊಗಳಿಕೆಯೂ ಇರುತ್ತದೆ. ಇದು ಹೆಚ್ಚಾಗಿ ಪಾಡ್ದನಗಳ ಅನುವಾದವೇ ಆಗಿರುತ್ತದೆ. ಇದಕ್ಕೆ ಮಾಂಕಾಳ್ತಿ ಕಥೆಯನ್ನು ಉದಾಹರಣೆಯಾಗಿ ನೋಡಬಹುದು.

ಮಾಂಕಾಳ್ತಿಯೇ ನೀವೂ ನಿಜವೇನೆಂದೂ
ಒಳ್ಳೆ ಬ್ರಹ್ಮ ದೇವನ ಮಗಳೂ ನೀವೇನೆಂದೂ
ಬೇಕೇಂದಾ ಚಿನ್ನವಾ ನೀವ್ ಧರಿಸಿಕೊಂಡ್

ಮಾಂಕಾಳ್ತಿ ಹೆಣ್ಣು ಬ್ರಹ್ಮನ ಬಳಿ ಬಂದು ನನ್ನ ಹಣೆಯಲ್ಲಿ ಏನು ಬರೆದಿರುವೆ ತಿಳಿಸೆನ್ನುತ್ತಾಳೆ.

ಸಮಗಾರನೇ ಗಂಡ, ಮಗ ಮಿಂಡನೇ
ನಿನ್ನ ಹಣೆಯಲಿ, ನಾನು ಬರೆದೇ ಎಂದು ಹೇಳುತ್ತಾನೆ.

ಹಾಗೆ ಬ್ರಹ್ಮನಿಂದ ತನ್ನ ಹಣೆ ಬರಹ ತಿಳಿದ ಹೆಣ್ಣು, ಸಮಗಾರನ ಹುಡುಗನನ್ನೇ ಬ್ರಾಹ್ಮಣನೆಂದು ವರಿಸಿ ಮದುವಾಯಾಗುತ್ತಾಳೆ. ಕಾಲಾನಂತರದಲ್ಲಿ ಮಗುವೂ ಆಗುತ್ತದೆ. ತಂದೆಯು ಕಾಡಿಗೆ ಹೋಗಿ ಚಪ್ಪಲಿ ಹೊಲಿಯುತ್ತಿದ್ದುದನ್ನು ನೋಡಿದ ಈತನೂ ಅವನಂತೆ ಒಂದು ಹಲಸಿನ ಎಲೆಗೆ ದಾರ ಪೋಣಿಸುತ್ತಾ ಕುಳಿತಿದ್ದನ್ನು ಕಂಡು ಕೇಳುತ್ತಾಳೆ. ತಂದೆಯ ಉದ್ಯೋಗದಂತೆ  ಮಾಡುತ್ತಿರುವೆನೆನ್ನುತ್ತಾಳೆ. ಅದನ್ನು ಕೇಳಿದ ತಾಯಿಯು ಕೋಪದಿಂದ ಮಗನ ತಲೆಗೆ ಹೊಡೆಯುತ್ತಾಳೆ. ಅನಂತರ ತಪ್ಪಿಸಿಕೊಂಡು ಓಡಿಹೋಗಿ ಬೇರೆ ಕಡೆ ಹೂವನ್ನು ಮಾರಿ ಜೀವನ ಸಾಗಿಸುತ್ತಾನೆ. ಕೋಪಗೊಂಡ ಮಾಕಾಳಿ ಗಂಡನನ್ನು ಅಟ್ಟಿಸಿಕೊಂಡು ಹೋಗುವಾಗ, ಅವನು ಕೋಣನ ಹೊಟ್ಟಿಯೊಳಗೆ ಸೇರುತ್ತನೆ. ಆಗ ಅವಳು ಕೋಣನ ತಲೆ ಕಡಿಸುತ್ತಾಳೆ. ಅಲ್ಲಿಂದ ಅವಳು ಸೂಳೆಗೇರಿಗೆ ಸೇರಿ, ಅಲ್ಲಿ ದಿನ ನಿತ್ಯ ಹೂ ಮಾರುವ ಹುಡುಗನಿಂದ ಹೂಕೊಳ್ಳುತ್ತಾ ಪ್ರೀತಿ ಬೆಳೆಸುತ್ತಾಳೆ. ಒಂದು ದಿನ ಮನೆಯಲ್ಲೇ ಇವನು ತಂಗಿದ್ದಾಗ ಬೆಳಿಗ್ಗೆ ತಲೆಸ್ನಾನ ಮಾಡಿಸುವಾಗ ಅಲ್ಲಿದ್ದ ಗಾಯದ ಕಲೆಯನ್ನು ಕಂಡು ಇದೇನೆಂದು ಕೇಳುತ್ತಾಳೆ. ಆತ ಹಿಂದೆ ನಡೆದ ವಿಷಯವನ್ನು ಹೇಳುತ್ತಾನೆ. ಆಗ ಹಿಂದಿನದೆಲ್ಲಾ ನೆನಪಾಗಿ –

ಭೂಮಿಗಾದರೂ ಹರ್ದು ಬೀಳ್ವುಗ್ಳೀಕೇ
ಒಳ್ಳೆ ಆಲೋಚ್ನೆನೇ ತಾನ್ ಮಾಡಿದಾಳಲ್ಲಾ
ಸಮಗಾರನೇ ಗಂಡನಾದಾ ಮೇಲೆ
ಮಗನಾದರೆ ಮಿಂಡಾ ಆಗ್ವಾ ಗ್ಳೀಕೇ
ವಿಧಿದೇವ್ತೆಯಾ ವರಾ ನಿಜವೇನೆಂದಲಾ

ಅನಂತರ ಅವಳು ಕೆಂಡದ ಗುಂಡಿಯಲ್ಲಿ ಹಾರಿ ಪ್ರಾಣ ಬಿಟ್ಟು ದೈವವಾಗಿ ನೆಲೆಗೊಳ್ಳುತ್ತಾಳೆ. ಹೀಗೆ ವೈದ್ಯದವರು ಕಾಡಮ್ಮ, ಬೊಬ್ಬರ್ಯ, ಹಾಯ್ಗುಳಿ, ಕಾಲಮ್ಮ ಮುಂತಾದ ಭೂತಗಳ ಕಥೆಗಳನ್ನು ಹೇಳೂತ್ತಾರೆ.

ವೈದ್ಯರು ಮಾಡುವ ಈ ನಾಗ ಮಂಡಲ ಕುಣಿತ ಇಂತಹ ಭುತಗಳ ತೃಪ್ತಿಗಾಗಿಯೇ ವಿನಃ ಮೂಕಾಂಬಿಕೆಗಲ್ಲ. ಅವು ಸಮಾಧಾನಗೊಂಡ ನಂತರ ಇದರ ರಥೋತ್ಸವವು ಸುಗಮವಾಗಿ ನಡೆಯುತ್ತದೆಂದು ಇಲ್ಲವಾದರೆ ಅನೇಕ ಅಡ್ಡಿ ಆತಂಕಗಳು ಉಂಟಾಗುತ್ತವೆಂದು ನಂಬಿದ್ದಾರೆ. ಆದ್ದರಿಂದ ರಥೋತ್ಸವದ ವೇಳೆಯಲ್ಲಿ ವೈದ್ಯ ಪಂಗಡದವರು ಎಲ್ಲಿದ್ದರೂ ಕರೆಯಿಸಿ ಈ ನೇಮ ನಡೆಸುತ್ತಾರೆ.

ಮಾರಣ ಕಟ್ಟೆ ಕೊಲ್ಲೂರಿಗೆ ಅತಿ ಸಮೀಪದಲ್ಲಿರುವ ಊರು. ಪ್ರಸಿದ್ಧ ಕ್ಷೇತ್ರವಾದ ಬ್ರಹ್ಮಲಿಂಗೇಶ್ವರ ದೇವಾಲಯವಿರುವುದಿಲ್ಲಿಯೇ. ದೇವಾಲಯಕ್ಕೆ ಎಡಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಿರುವ ನದಿ ಒಮ್ಮೆಲೇ ಪೂರ್ವಾಭಿಮುಖವಾಗಿ ಹರಿದಿರುವ ನದಿಯೂ ಇಲ್ಲಿನ ಸೌಂದರ್ಯವನ್ನು ಇಮ್ಮಡಿಸಿದೆನ್ನಬಹುದು. ಹಿಂದೆ ಮೂಕಾಸುರನನ್ನು ವಧಿಸಿದ ಮೂಕಾಂಬಿಕೆ ಆತನ ಅನುಚರರ ಹರಣಕ್ಕಾಗಿ ಮಾರಣ ಹೋಮವನ್ನು ಇಲ್ಲೆ ಮಾಡಿದ್ದಳಂತೆ. ಆದುದರಿಂದಲೇ ಈ ಊರಿಗೆ ಮಾರಣ ಕಟ್ಟೆ ಎಂದು ಹೆಸರು ಬಂತೆಂದು ಹೇಳುತ್ತಾರೆ. ಬ್ರಹ್ಮ ಲಿಂಗೇಶ್ವರ ದೇವರ ಹುಟ್ಟಿಗೂ ಒಮದು ಕತೆ ಇದೆ. ಅದೇನೆಂದರೆ, ದೇವ ಲೋಕದಲ್ಲಿ ಯಕ್ಷನೊಬ್ಬ ದೇವೇಂದ್ರನ ಶಾಪಕ್ಕೆ ತುತ್ತಾಗಿ ಬ್ರಹ್ಮ ರಾಕ್ಷಸ ನಾದನಂತೆ. ಶಾಪ ವಿಮೋಚನೆಗೆ ಬೇಡಿಕೊಂಡಾಗ, ಶಿವನು ಅವತಾರವೆತ್ತಿ ಶಂಕರಾಚಾರ್ಯನಾಗಿ ಬರುತ್ತಾನೆ. ಆಗ ನಿನ್ನ ನಿಜರೂಪ ಬರುವುದೆಂದು ಹೇಳಿದರಂತೆ. ಮುಂದೆ ಶಂಕರಾಚಾರ್ಯರು ದೇಶ ಪರ್ಯಟನೆ ಮಾಡುತ್ತಾ ಬಂದಾಗ ಅಲ್ಲಿಯ ಶಾಂತಾವಾತಾವರಣಕ್ಕೆ ಮನ ಸೋತು ದಣಿವಾರಿಸಿಕೊಳ್ಳಲು ಕುಳಿತರಂತೆ. ಅವರ ಕಮಂಡಲದಲ್ಲಿನ ನೀರು ಆಪಗ್ರಸ್ಥ ಯಕ್ಷನಿಗೆ ಸೋಂಕಿ ಶಾಪ ವಿಮೋಚನೆಯಾಯಿತಂತೆ. ಆಗ ಶಂಕರಾಚಾರ್ಯರು ಆತನನ್ನು ಅಲ್ಲಿಯೇ ನೆಲೆಗೊಳಿಸಿ ಆತನ ಶಕ್ತಿಗಾಗಿ ಭುವನೇಶ್ವರಿ ಯಂತ್ರವನ್ನು ಅವರೇ ಸ್ಥಾಪಿಸಿದರಂತೆ, ಅಲ್ಲಿ ಪಾಲಕಿ ನಾಯಕರ ಗುಡಿಯೂ ಇದೆ. ಉಳ್ಳುದಿಂದ ಮೂಕಾಂಬಿಕೆಯನ್ನು ತಪಸ್ಸಿನಲ್ಲಿ ಮೆಚ್ಚಿಸಿ, ಆಕೆಯ ಆದೇಶದಂತೆ ನೆಲೆ ನಿಂತರೆನ್ನಲಾದ ದೊಟ್ಟಿ ಕಾಲು ಚಿಕ್ಕು, ಬಗ್ಗು ಚಿಕ್ಕು, ಬಾಲ ಚಿಕ್ಕು ಮತ್ತು ರಣದಂಗಕ್ಕೆ ಹೊರಟಂತಿರುವ  ಪಾಲಕಿ ನಾಯಕರುಗಳ ವಿಗ್ರಹಗಳೂ ಅಲ್ಲಿವೆ. ಮಕರ ಸಂಕ್ರಾಂತಿಯಂದು ಬಹುದೊಡ್ಡ ಜಾತ್ರೆ ನಡೆಯುತ್ತದೆ. ಇಲ್ಲಿಯ ಮತ್ತೊಂದು ವಿಶೇಷವೆಂದರೆ ನ್ಯಾಯ ತೀರ್ಮಾನ ಮಾಡುವುದು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ, (ಕಾಣಿಕೆ ಕಟ್ಟಿಸಿ) ನ್ಯಾಯವಂತನಿಗೆ ಸಲ್ಲಬೇಕಾದ ಹಕ್ಕನ್ನು ಕೊಡಿಸುವ ವಿಧಾನ, ಆ ದೇವರ ಮೇಲೇ ಅವಲಂಬಿಸಿದ್ದು, ಜನ ಅದಕ್ಕಾಗಿ ಹೆದರಿ ಅಂಜಿ ಅಳುಕಿ ನಡೆಯುತ್ತಾರೆ. ಇಲ್ಲಿ ಅನೇಕ ರೀತಿಯ ಹರಕೆ ಸೇವೆಗಳೂ ನಡೆದರೂ ಯಕ್ಷಗಾನ ಸೇವೆ ಈ ದೇವರಿಗೆ ಬಹು ಪ್ರಿಯವಂತೆ. ಹಾಗಾಗಿ ಕಡ್ಡಾಯವಾಗಿ ಇಲ್ಲಿ ವರ್ಷಂಪ್ರತಿ ಈ ಕಾರ್ಯಕ್ರಮ ಇದ್ದೇ ಇರುತ್ತದೆ.

ಕೊಲ್ಲೂರಿನ ಪಕ್ಕದಲ್ಲಿ ದಟ್ಟ ಸೆರಗನ್ನು ಹೊದ್ದು ನಿಂತಿರುವ ಕುಟಚಾದ್ರಿ ೪೫೦೦ ಅಡಿ ಎತ್ತರವಿದ್ದು, ಸುಮಾರು ೧೭ ಮೈಲಿ ಉದ್ದವಿದೆ. ಹುಲ್ಲುಗಾವಲಿನಿಂದ ಕೂಡಿದ್ದು ಆಚಿನ ಬೆಟ್ಟಗಳು, ಈಚಿನ ಸರೋವರಗಳು ಬಹು ಸುಂದರವಾಗಿ ನಯನ ಮನೋಹರವಾಗಿ ಕಂಗೊಳಿಸುತ್ತವೆ. ಅಲ್ಲೊಂದು ಕಲ್ಲಿನ ಮಂಟಪವಿದೆ. ಅದನ್ನು ಶಂಕರಾಚಾರ್ಯರು ಕಟ್ಟಿಸಿದ್ದೆನ್ನುತ್ತಾರೆ, ಅದನ್ನು ಸರ್ವಜ್ಞ ಮಂಟಪವೆಂದು ಹೇಳುತ್ತಾರೆ. ಅಲ್ಲಿಂದ ನೆಟ್ಟಗೆ ಕೆಳಗಿಳಿದರೆ, ೫೦೦ ಅಡಿ ಆಳಕ್ಕೆ “ಚಿತ್ರಮೂಲ” ವೆಂಬ ಸುಂದರ ತಾಣ ಸಿಗುತ್ತದೆ. ಮತ್ತೆ ಮುಂದಕ್ಕೆ ಕೊಲ್ಲೂರಿನ ಸಮೀಪವೆ, ಲಕ್ಷ್ಮಣ ಜೂಲಾ ಮಾದರಿಯ, ಸಾಗುವಾನಿ ವನವನ್ನು ಪ್ರವೇಶಿಸಲಿಕ್ಕಾಗಿ ನಿರ್ಮಿಸಿದ ಫಾರೆಸ್ಟ ಖಾತೆಯವರ ತೂಗು ಸೇತುವೆಯೊಂದಿತ್ತು. ಇತ್ತೀಚಿಗೆ ಅದನ್ನು ತೆಗೆಯಲಾಗಿದೆ. ಆಧುನಿಕ ಕೊಲ್ಲೂರು ಪುಣ್ಯಕ್ಷೇತ್ರ ಮಾತ್ರವಾಗಿರದೆ, ಸುತ್ತಲೂ ಇರುವ ಸಹಜ ಪ್ರಕೃತಿಯ ಗಿರಿ ಕಂದರ – ಹಸಿರು ಬನಗಳ  ಸುಂದರತೆಯಿಂದಾಗಿ ಯಾತ್ರಿಕರಿಗೆ ಒಳ್ಳೆಯ ಪ್ರವಾಸ ಕೇಂದ್ರವೂ ಆಗಿದೆ. ದೇವಸ್ಥಾನದ ಮೂಡುದಾರಿಯಾಗಿ ಸೀದಾ ಉತ್ತರಕ್ಕೆ ಹರಿಯುವ ನದಿಯನ್ನು ಅಗ್ನಿತೀರ್ಥವೆಂದು ಕರೆಯುತ್ತಾರೆ. ಗೋವಿಂದ ತೀರ್ಥವೆಂಬುದು ಸುಮಾರು ೧೪ ಮೈಲು ದೂರದಲ್ಲಿದೆ. ಮೂಕಾಂಬಿಕಾ ದೇವಸ್ಥಾನದಿಂದ ನಾಲ್ಕು ಫರ್ಲಾಂಗ್ ಪಡುವಣ ದಿಕ್ಕಿನಲ್ಲಿ ನಡೆದರೆ ಶುಕ್ಲತೀರ್ಥ ಸಿಗುವುದು. ಈ ವನದ ಯಾವ ಭಾಗದಲ್ಲಿ  ನೋಡಿದರೂ ದೊಡ್ಡ ಬಾವಿಗಳೂ ಕಲ್ಲಿನ ಗೋಡೆಗಳೂ ಮೆಟ್ಟಲುಗಳು, ಗುಹೆ ಮೊದಲಾದವುಗಳ ಅವಶೇಷಗಳು ಕಂಡು ಬರುತ್ತವೆ.

ಕುಟಚಾದ್ರಿ ಬೆಟ್ಟದಲ್ಲಿ ಮೂಡಾಳಮ್ಮನ ದೇವಸ್ಥಾನವಿದೆ. ಇದು ಮೂಕಾಂಬಿಕೆಯ ಅಕ್ಕನೆಂದು ಹೇಳುವರು. ಇದರ ಜಾತ್ರೆಯು ಜನೇವರಿ ತಿಂಗಳಲ್ಲಿ ನಡೆಯುವುದು. ಇದಾದ ಎರಡು ತಿಂಗಳಿಗೆ ಕೊಲ್ಲೂರಿನಲ್ಲಿ ನಡೆಯುವುದು. ಅಕ್ಕ – ತಂದಿಯರಿಬ್ಬರು ಬೇರೆ ಬೇರೆ ಕಡೆ ನೆಲೆಸಿದ್ದಕ್ಕೆಂದು ಕಥೆ ಹೇಳುತ್ತಾರೆ. ಇಬ್ಬರೂ ಘಟ್ಟದ ಕಡೆಯಿಂದ ನಡೆದು ಬರುತ್ತಿದ್ದಾಗ ಅಕ್ಕನಿಗೆ ತುಂಬಾ ಹಸಿವಾಯಿತಂತೆ. ಬರು ದಾರಿಯಲ್ಲಿ ಹರಿಜನರು ಗೆಣಸು ಬೇಯಿಸುತ್ತಿದ್ದರಂತೆ. ಹೊಟ್ಟೆ ಹಸಿವು ತಾಳಲಾರದೆ ಅವರ ಹತ್ತಿರ ಹೋಗಿ “ಗೆಣಸು” ತಿಂದಳಂತೆ. ಹರಿಜನತ್ತಿರ ಕುಡಿ ಆಹಾರ ಸೇವಿಸಿದ್ದರಿಂದ ಅವಳು ಅಲ್ಲೇ ನೆಲೆಗೊಂಡಳಂತೆ. ಇದಕ್ಕೆ ರಕ್ತಬಲಿ ಉಂಟು. ಹರಿಜನರೇ ಪೂಜಿಸುವುದು. ಭೂತ ಪ್ರೇತಗಳ ತೃಪ್ತಿಗಾಗಿ ಆಗಾಗ್ಗೆ ಕುರಿ, ಕೋಳಿ ಬಲಿ ಕೊಡುತ್ತಾರೆ. ಹರಕೆ ಸೇವೆಗಳು ಕಠಿಣತರವಾದವಾಗಿರುತ್ತವೆ.

“ಕೆಳದಿ ಅರಸರಿಗೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ಬಗ್ಗೆ ವಿಶೇಷ ಭಕ್ತಿ ಶ್ರದ್ಧೆಗಳಿದ್ದವು. ಈ ದೊರೆಗಳು ಮೈಸೂರು ಸೀಮೆಯಲ್ಲಿ ಹನ್ನಾರು ಎಂಬ ಮಾಗಣೇಯನ್ನು ಮೂಕಾಂಬಿಕೆಗೆ ಉತ್ತರವಾಗಿ ಬಿಟ್ಟಿದ್ದರಂತೆ. ಇಂಗ್ಲೀಷರು ಬಂದನಂತರ ಈ ಮಾಗಣೆಯನ್ನು ತೆಗೆದುಕೊಂಡು ತಸದೀಕನ್ನೇ ಕೊಡಲು ಜಾರಿಗೆ ತಂದರು. ವೆಂಕಟಪ್ಪನಾಯಕನು ಕೊಲ್ಲೂರು ಮೂಕಾಂಬಿಕಾ ದೇವಾಲಯವನ್ನು ವಿಸ್ತಾರವಾಗಿ ಕಟ್ಟಿಸಿ ವಿಶೇಷ ಭೂಸ್ವಾಸ್ಥೆ ಬಿಡಿಸಿದನು. ಲಕ್ಷದೀಪಾರಾಧನೆ ರಥೋತ್ಸವಾದಿ ಕಟ್ಟಳೆಗಳು ಸರಾಗವಾಗಿ ನಡೆಯುವಂತೆ ನಿಯಮಿಸಿದನು.”

[1] ಇಕ್ಕೇರಿ ಸಂಸ್ಥಾನದವರೇ ಈಗ ದೇವಸ್ಥಾನದ ಬಾಗಿಲಲ್ಲಿರುವ ದ್ವಾರಪಾಲಕರಾದ ಜಯವಿಜಯರನ್ನು ಮಾಡಿಸಿ ಕೊಟ್ಟದ್ದೆಂದು ಹೇಳುವರು.

ಈ ಶಕ್ತಿ ಪೀಠಗಳ ದೇವಾಲಯಗಳೆಲ್ಲಾ ದ್ರಾವಿಡ ಶೈಲಿಯದ್ದಾಗಿದೆ. ಶಿಖರಗಳಲ್ಲಿ ಮೇಲಕ್ಕೆ ಹೋದಂತೆ, ಕ್ರಮೇಣ ಸಣ್ಣದಾಗುವ ಅಂತಸ್ತುಗಳಿರುತ್ತವೆ. ಪ್ರತಿಯೊಂದು ಅಂತಸ್ತು ಗರ್ಭಗೃಹದ ಪ್ರತಿರೂಪವಾಗಿರುತ್ತವೆ. ಅನುಕರಣಶೀಲ ಕೆತ್ತನೆಗಳಿದ್ದು ಶಿಖರದ ಅಂದ ಹೆಚ್ಚಿರುತ್ತದೆ. ಗರ್ಭಗೃಹದ ಸುತ್ತ ವಿಶಾಲವಾದ ಜಾಗವಿರುತ್ತದೆ. ಅಲ್ಲದೆ ಪ್ರಾಂಗಣದಲ್ಲಿ ಮುಖಮಂಟಪದ ಮುಂದೆ ಧ್ವಜಸ್ತಂಭ ಮತ್ತು ದೀಪಸ್ತಂಭಗಳಿದ್ದು, ಗರ್ಭಗುಡಿಯ  ಮೇಲೆ ಪಿರಿಮಿಡಾಕಾರದ ಶಿಖರವಿರುತ್ತದೆ. ಗರ್ಭಗುಡಿಯ ಬಾಗಿಲುವಾಡ ಅಲಂಕಾರ ರಹಿತವಾಗಿರುತ್ತದೆ. ಎರಡು ದ್ವಾರ ಪಾಲಕ ವಿಗ್ರಹಗಳು ಮಹಾದ್ವಾರದ ಮುಂಭಾಗದಲ್ಲಿರುತ್ತವೆ. ಒಳ ಪ್ರಾಕಾರದಲ್ಲಿ ಅಲ್ಲಲ್ಲಿ ಬೇರೆ ಬೇರೆ ದೇವರುಗಳ ವಿಗ್ರಹಗಳಿದ್ದು ಮೇಲೆ ಹೇಳಿದ ಎಲ್ಲಾ ರೀತಿಯ ವಿನ್ಯಾಸದಿಂದ ಕೂಡಿದ ಈ ದೇವಾಲಯ ಭಕ್ತಾದಿಗಳ ಕಣ್ಮನಗಳಿಗೆ ಆನಂದವನ್ನೀಯುತ್ತಿದೆ.

ಸಾಮಾನ್ಯವಾಗಿ, ಬಳಕೆಯಲ್ಲಿರುವ ಶಕ್ತಿ ಪೀಠಗಳು ಅಸ್ಸಾಮ ಪ್ರಾಂತ್ಯದಲ್ಲಿನ ಕಾಮಾಖ್ಯ, ಮಹಾರಾಷ್ಟ್ರದಲ್ಲಿ ಕೊಲ್ಲಾಪುರ (ಮಹಾಲಕ್ಷ್ಮಿ), ತುಲಜಾಪುರ (ಭವಾನಿ) ಮಾಹೂರು (ರೇಣುಕಾ ಮತ್ತು ಸಪ್ತಾಶೃಂಗಿ), ಕರ್ನಾಟಕದಲ್ಲಿ ಕೊಲ್ಲೂರು (ಮೂಕಾಂಬಿಕಾ) ಮತ್ತು ಶೃಂಗೇರಿ (ಶಾರದಾ), ತಮಿಳು ನಾಡಿನಲ್ಲಿ ಕಾಂಚೀಪುರ (ಕಾಮಾಕ್ಷಿ ಅಮ್ಮನ್) ಮತ್ತು ಮಧುರೈ (ಮೀನಾಕ್ಷಿ) ಕೇರಳದಲ್ಲಿ ಕುರುಂಧ ಭಗವತಿ ಮತ್ತು ಕಾಳಿ. ಇವುಗಳೆಲ್ಲದರ ಆರಾಧನೆ ಕೂಡ ಬೇರೆ ಬೇರೆಯಾಗಿ ಕಂಡುಬರುತ್ತದೆ. ಕರ್ನಾಟಕದಲ್ಲಿ, ಸೌಕೂರು, ಕೊಲ್ಲೂರು, ಕಮಲಶಿಲೆ ಈ ಮೂರು ದೇವಾಲಯಗಳಿಗೆ ಒಂದಕ್ಕೊಂದು ಸಂಬಂಧವಿದೆ. ಮಾಘ ಬಹುಳ ಮೂಲಾ ನಕ್ಷತ್ರದಲ್ಲಿ ಸೌಕೂರು ರಥ, ಪಾಲ್ಗುಣ ಬಹುಳ ಮೂಲಾ ನಕ್ಷತ್ರದಲ್ಲಿ ಕಮಲಶಿಲೆ ರಥ, ಹೀಗೆ ಮೂರು ಶಕ್ತಿ ಸ್ವರೂಪಿಣಿಯರ ರಥೋತ್ಸವಗಳೂ ಕೂಡ ಮೂಲಾ ನಕ್ಷತ್ರದಂತೇ ನಡೆಯುತ್ತವೆ. ಇದೇ ರಿತಿ ಪರಶುರಾಮ ಸೃಷ್ಟಿಯಲ್ಲಿ ಏಳು ಸ್ಥಳಗಳನ್ನು; ಉಡುಪಿ, ಸುಬ್ರಹ್ಮಣ್ಯ, ಕುಂಭರಾಶಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ ಮತ್ತು ಕೊಲ್ಲೂರು ಇವೇ ಮೊದಲಾದ ಪುಣ್ಯಕ್ಷೇತ್ರಗಳನ್ನು ಸಪ್ತ ಕ್ಷೇತ್ರಗಳೆಂದು ಕರೆಯುವರು. ಈ ಕ್ಷೇತ್ರಗಳೆಲ್ಲಾ ಹಿಂದಿನಿಂದಲೂ ಪ್ರಸಿದ್ಧಿಯನ್ನು ಪಡೆದು ಭಕ್ತಾದಿಗಳ ಯಾತ್ರಾ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ.

ಈ ಶಕ್ತಿ ದೇವತೆಗಳಲ್ಲಿ ಕೆಲವು ದೇವತೆಗಳ ಜಾತ್ರೆಗಳು ಎರಡು ವರ್ಷಕ್ಕೊಮ್ಮೆ ಮೂರು ವರ್ಷಕ್ಕೊಮ್ಮೆ ಹೀಗೆ ನಿಗದಿಯಾದ ವೇಳೆಗಳಲ್ಲಿ ನಡೆಸುವುದುಂಟು. ಆದರೆ ಕೊಲ್ಲೂರು ಮೂಕಾಂಬಿಕಾ ರಥೋತ್ಸವವು ಪ್ರತಿವರ್ಷವೂ ನಡೆಯುತ್ತದೆ.

ಪ್ರತಿಯೊಂದು ಗ್ರಾಮದೇವತೆಗಳ ಅಧ್ಯಯನವೂ ಕೂಡ ಸ್ಥಳ ಪುರಾಣ, ಐತಿಹ್ಯ, ನಂಬಿಕೆ ಮತ್ತು ಕಥೆ ಗೀತೆಗಳನ್ನು ಅವಲಂಬಿಸಿರುವುದಲ್ಲದೆ ಹಬ್ಬಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳನ್ನು ಹಬ್ಬ ಹುಣ್ಣಿಮೆಗಳನ್ನು ಸಂಪ್ರದಾಯದ ಕುಣಿತಗಳನ್ನು ಅವಲಂಬಿಸಿರುತ್ತದೆ. ಮಲೆಯ ಮಾದೇಶ್ವರ, ಸವದತ್ತಿಯ ಎಲ್ಲಮ್ಮ, ಮೈಲಾರಲಿಂಗ, ಮುಂತಾದ ದೇವರುಗಳಿಗೆ ಒಂದೊಂದು ವರ್ಗದ ಜನ ಮಹಿಮೆ ಪವಾಡಗಳನ್ನು ಹಾಡುತ್ತಾ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬರುತ್ತಾರೆ. ಆದರೆ ಕೊಲ್ಲೂರು ಮೂಕಾಂಬಿಕೆಗೆ, ಅಂತಹ ಗಾಯಕ ವರ್ಗದವರಾರು ಕಂಡುಬರದಿದ್ದರೂ ವಿಶಿಷ್ಟವಾದ ಆಚರಣೆಗಳು ಸಂಪ್ರದಾಯಗಳು ಪರಂಪರೆಯಿಂದ ಉಳಿದುಕೊಂಡು ಬಂದಿವೆ. ಇದನ್ನು ಪೂಜಿಸುವ ಅರ್ಚಕರು ಮುಂದುವರಿದ ಜನಾಂಗದವರಾದರೂ ಕೂಡ ರೂಢಿಗತ ಆಚರಣೆಗಳಲ್ಲಿ ಬದಲಾವಣೆಯೇನೂ ಕಂಡುಬರುವುದಿಲ್ಲ.

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವು ಇತರೆ ಪ್ರಸಿದ್ಧ ಯಾತ್ರಾ ಸ್ಥಳಗಳಂತೆ, ನಮ್ಮ  ಸಂಸ್ಕೃತಿ ಮತ್ತು ಪರಂಪರೆಯ ದ್ಯೋತಕವಾಗಿದ್ದ ಜನರ ಭಕ್ತಿ ಶ್ರದ್ಧೆಗಳನ್ನು ಉಳಿಸಿಕೊಂಡು ಅವರ ಬದುಕಿನ ನೆಮ್ಮದಿಗೆ ಶಾಂತಿಗೆ ಕಾರಣವಾಗಿದೆ.

* * *


[1]     ಕೆಳದಿ ಗುಂಡಾ ಜೋಯಿಸ್ , ಇಕ್ಕೇರಿಯ ಐತಿಹಾಸಿಕ ಹನ್ನೆಲೆ, ಪು.೭೫