ಗ್ರಾಮ ದೇವತೆಗಳ ಕುರಿತಾಗಿ ಇಂದು ನಮ್ಮ ಜಿಜ್ಞಾಸೆ. ಆದರೆ ಈ ಗ್ರಾಮ ದೇವತೆ ಎಂಬ ಸಂಯುಕ್ತ ಸಮಸ್ತ ಪದದ ಉಭಯ ಪದಗಳೂ ಜನಪದವಲ್ಲ. ಆದಾಗ್ಯೂ ಇಲ್ಲಿ ಜನಪದವೇ ಅಭಿಪ್ರೇತ. ಅದು ಪ್ರೇತವೇ ಆಗಿರಲಿ, ಭೂತವೇ ಆಗಿರಲಿ, ಪ್ರಾಣಿ ವರ್ಗದ ದುಷ್ಟ ಶಕ್ತಿಯೇ ಆಗಿರಲಿ.

ಇದೇಕೆ ಹೀಗೆ? ಗ್ರಾಮ ಶಬ್ದವೇ ನಾಗರ ಸಂಸ್ಕೃತ? ಆದರೆ ಅದಕ್ಕೆ “ಹಳ್ಳಿ” “ಊರು” ಇತ್ಯಾದಿ ಕನ್ನಡ ಪರ್ಯಾಯಗಳಿವೆ. ಆದರೆ ದೇವತೆ? ಇದು ಶುದ್ದ ಸಂಸ್ಕೃತ ಶಬ್ದ. ಅದು ದೈವವಾಗಿ ಆಳಬಹುದು, ದೆವ್ವವಾಗಿ ಕಾಡಬಹುದು. ಆದರೂ ಅದು ನಮ್ಮದಲ್ಲ. ದೇವಿ, ದೇವತೆ, ದೈವತ ಇವೆಲ್ಲವೂ ದೇವರ ಪ್ರತಿರೂಪಗಳೇ. ಅಂದಾಗ ಒಂದು ಶಂಕೆ. ಕನ್ನಡ ಜನಪದಕ್ಕೆ ದೇವದ್ಯೋತಕವಾದ ತನ್ನದೇ ಆದ ಒಂದು ಶಬ್ದವಿಲ್ಲವೇ ? ಗ್ರಾಮ ದೇವತೆ ಎಂದದ್ದು, ಕನ್ನಡೀಕರಿಸುವುದು ಗ್ರಾಮ ದೇವರುಗಳೆಂತಲೇ. ಅಂದಾಗ ದೇವರ ಸಂಸರ್ಗ ನಮಗೂ ಬಿಟ್ಟಿದಲ್ಲ ! ಹಳೆಗನ್ನಡದಲ್ಲಿ ಈ ದೇವತ್ವವಾಚಿಯಾದ ಒಂದು ಶಬ್ದವಿದೆ. ನಮನಿಮಗೆ ಗೊತ್ತು ಅದು “ಕೊಯಿಲ್” ಅಥವಾ “ಕೊವಿಲ್”. ಈ ಅಚ್ಚಗನ್ನಡ ಶಬ್ದ ಹೇಗೊ ಏಕೋ ಕನ್ನಡದಿಂದ ಪೂರ್ತಿ ಮಾಯವಾಗಿದೆ! ಆದರೆ ಒಂದು ಸೋಜಿಗ – ಮರಾಠೀ ಭಾಷೆಯಲ್ಲಿ ಅದು “ಕೌಲ” ಎಂಬ ರೂಪದಲ್ಲಿ ಊರ್ಜಿತವಾಗಿದೆ. “ಕೌಲ” ಎಂದರೆ ದೇವರ “ಮುಡಿ ಪ್ರಸಾದ”

[“ದೇವಾಚಾ (ದೇವೀಚಾ) ಕೌಲ ವಿಚಾರಲಾ”] ದೇವರಿಂದ “ಅಪ್ಪಣೆ” ಪಡೆಯುವುದು. ಅಂದರೆ ಮಹಾರಾಷ್ಟ್ರದಲ್ಲಿ ಹೇಗೋ ದೇವತ್ವದೊಂದಿಗೆ ಈ  “ಕೊಯಿಲ್” ಸಂಬಂಧಗೊಂಡಿದೆ. ಆದರೆ ಅದೇಕೋ “ಕೋಯಷ್ಟಿ” ಅಂದರೆ ದೇವರ ಹಕ್ಕಿ ಧ್ವಜ ಎಂಬ ಅರ್ಥದಲ್ಲಿ ರೂಢಿಯಲ್ಲಿ ಅಲ್ಲದಿದ್ದರೂ ಹಳೆಯ ನಿಘಂಟುವಿನಲ್ಲಿ ಊಳಿದಿದೆ. ಇಲ್ಲಿಯ “ಕೋಯ್” particle  ದೇವತ್ವದ ಸಂಜ್ಞೆ. ಅದೇ ರೀತಿ ಕೋಲ – ಮುಖವಾಡ, ಭೂತಗಳ ಉತ್ಸವ ಎಂಬ ಅರ್ಥದಲ್ಲಿ. ಕೋಲ್ ಅಧಿಕಾರ ಎಂಬ ಅರ್ಥದಲ್ಲಿಯೂ ಇದ್ದದ್ದು ಕಂಡುಬರುತ್ತದೆ.

ತಾತ್ಪರ್ಯವೆಂದರೆ, ನಮ್ಮ ಜಾನಪದದ ಜಾಯಮಾನಕ್ಕೆ “ದೇವ” ಪದವೇ ಅಚ್ಚುಗನ್ನಡದ ಹಳೆಯ ಪದದ ಸ್ಥಾನವನ್ನು ಆಕ್ರಮಿಸಿ ಸ್ಥಿರ ಭದ್ರವಾಗಿ ಬಿಟ್ಟಿದೆ. ಇರಲಿ.

ಇನ್ನು ಗ್ರಾಮ ದೇವತೆಯೆಂದರೆ ಇಡಿಯ ಗ್ರಾಮವೇ ಒಪ್ಪಿಗೊಂಡ ಗ್ರಾಮಕ್ಕೆಲ್ಲ ಪ್ರಧಾನವಾದ ದೇವತೆಯೇ ? ಅಥವಾ ಆ ಗ್ರಾಮದೊಳಗಿನ ಹಲಕೆಲವು ಕುಲ ದೈವತಗಳೇ ? ಅನೇಕ ಕಡೆಗೆ ಒಂದು ಗ್ರಾಮದಲ್ಲಿ ಕುಲ ದೇವತೆಯಂತೆಯೇ ಹಲವು ಕುಲಗಳಿಗೆ ಕೂಡಿ [ಮೂಲತಃ ಅವೆಲ್ಲ ಒಂದೇ ಕುಲದ ಶಾಖೆ ಪ್ರವರಗಳಿರಬಹುದು] ಒಂದು ದೇವತೆ, ಕೇರಿಗೇ ಒಂದು ದೇವತೆ, ಇದ್ದು ಇಂಥ ದೇವತೆ ಕಾರಣಾಂತರದಿಂದ ಕಾಲಕ್ರಮೇಣ ಇಡಿಯ ಗ್ರಾಮಕ್ಕೇ ಅಧಿದೇವತೆಯಾದದ್ದುಂಟು. ತದ್ವಿರುದ್ಧವಾಗಿ ಪ್ರಾಕ್ಕಿನಿಂದಲೂ ಒಂದು ಗ್ರಾಮಕ್ಕೆ ದೇವತೆಯಾಗಿ ಮೆರೆದ ಕ್ರಮೇಣ ಸಾರ್ವಜನಿಕ ಪ್ರತಿಷ್ಠೆ ಕುಗ್ಗುತ್ತ ಅದರ ಸ್ಥಾನಮಾನಗಳನ್ನು ಇತರ ಪ್ರಭಾವೀ ದೇವತೆಗಳು ಆಕ್ರಮಿಸುತ್ತ ಅವುಗಳ ಪ್ರಸಿದ್ಧಿಯೆ ಕಡಿಮೆಯಾಗುವುದೂ ಉಂಟು. ಹೀಗೆ ಊರಿನ ವಿಕಾಸ ಹಾಗೂ ಇತಿಹಾಸ ಕ್ರಮದಲ್ಲಿ ಕೆಲವೊಂದು ಕುಲಗಳಿಗೆ ಹೇಗೋ ಹಾಗೆಯೇ ದೇಗುಲಗಳಿಗೂ ಹೀಗೆ ಏರು – ಪೇರುಗಳು ಒದಗಿಬರುವುದನ್ನು ನಾವು ಕಾಣುತ್ತೇವೆ. ಇದಕ್ಕೆ ಒಂದು ಬಲವಾದ ಸಾಮಾಜಿಕ ಕಾರಣವೆಂದರೆ, ಮೂಲತಃ ಆ ಗ್ರಾಮದೇವತೆಯನ್ನು ನಂಬಿ ನಡೆದುಕೊಳ್ಳುತ್ತಿದ್ದ ಅಲ್ಲಿಯ ಬಹುಸಂಖ್ಯ ಪ್ರಾಕೃತ ಜನವರ್ಗಗಳ ಅಂತಸ್ತು ಕಡಿಮೆಯಾಗಿ, ಆ ಊರು ಪಟ್ಟಣವಾಗಿ ಬೆಳೆದಂತೆ ಇತರ ಮುಂದರಿದ ಶಿಷ್ಟ – ಶ್ರೇಷ್ಠ ವರ್ಗಗಳ ದೈವತಗಳು ಸ್ವಾಭಾವಿಕವಾಗಿ ತಮ್ಮ ಭಜಕ ಜನರ ಮೇಲ್ಮೈ ಮಹತ್ವಗಳನ್ನು ತಮ್ಮ ಮಹಿಮೆಯಾಗಿ ಪ್ರತಿಫಲಿಸಿಕೊಂಡು ಮೆರೆಯುತ್ತ ಮುಂದೆ ಬರುವಂತಾಯಿತು. ಆದರೆ ಹೀಗೆ ಗ್ರಾಮದೇವತೆಗಳ ಏಳುಬೀಳುಗಳ ಮೂಲದ ಈ ಸಾಮಾಜಿಕ Metabolism  ವಿಷಯ ನನ್ನ ಇಂದಿನ ಪ್ರಸ್ತಾಪವಲ್ಲ. ಆದರೂ ಗ್ರಾಮದೇವತೆ ಯಾವುದು ? ಎಂಬುದನ್ನು ನಿರ್ದೀಷ್ಟವಾಗಿ ನಿರ್ಧರಿಸುವಲ್ಲಿ ಈ ಒಂದು ಆಲೋಚನೆಯೂ ತುಸು ತೊಡಕು ತಂದೊಡ್ಡುವದನ್ನು ಮಾತ್ರ ಇಲ್ಲಿ ಹೇಳದಿರಲಾರೆನು.

ನನಗೆ ಪ್ರಸ್ತುತವಾದ ವಿಷಯ ಗೋಕರ್ಣ ಮಂಡಳದ ಕೆಲವು ಹಿರಿಕಿರಿ ಜಾನಪದ ದೈವತಗಳು [Some Major and Minor Folk Dieties of Gokarn Mandala] ಇಷ್ಟೆ. ಗೋಕರ್ಣ ಮಂಡಳವೆಂದರೆ ಸ್ಥೂಲವಾಗಿ ಪರಂಪರಾಗತವಾಗಿ ಗಂಗಾವಳಿ ಮತ್ತು ಅಘನಾಶಿನಿ ಇವೆರಡು ಹೊಳೆಗಳ ನಡುವಿನ ಜನಪದ. ಈ ನದಿಗಳ ಹೆಸರೇ ಸೂಚಿಸುವಂತೆ ಈ ಸೀಮೆಯ ಸಾಂಸ್ಕೃತಿಕ ಬದುಕಿನ ಮೇಲೆ ಸಂಸ್ಕೃತೀಕರಣರ ಅಂದರೆ ಬ್ರಾಹ್ಮಣ [ವೈದಿಕ] ಭಾಷೆಯ ಮುದ್ರೆ ಸ್ಪಷ್ಟವಾಗಿ ಬಿದ್ದಿದೆ. ಮೂಲದ ಬೇಡ್ತಿ, ಗಂಗಾವಳಿ ಶಾಲ್ಮಲೀ ಆಗಿದೆ. ಅಗಚೆ ಹೊಲೆ ಅಘನಾಶಿನಿಯಾಗಿದೆ. ಅದೇ ರೀತಿ ಗೋಕರ್ಣ ಕ್ಷೇತ್ರದ ಹಿರಿಯ ಗ್ರಾಮದೇವತೆ ಮಂಕಾಳಮ್ಮ ಭದ್ರಕಾಳಿಯಾಗಿದ್ದಾಳೆ. ಇನ್ನೊಂದು ಹೆಣ್ಣು ದೈವತ ತಾಮ್ರ ಗೌರಿ. ಆದುದರಿಂದ ತುಸು ಅಂತರದಲ್ಲಿ ಮಸಣ ಕಾಳಮ್ಮ ಸ್ಮಶಾನ ಕಾಳಿಯಾಗಿದ್ದಾಳೆ.

ಭದ್ರಕಾಳಿ ಅಥವಾ ಮಂಕಾಳಮ್ಮ ಐತಿಹಾಸಿಕ ಗೋಕರ್ಣ ನಗರದ ಪ್ರವೇಶ ದ್ವಾರದಲ್ಲಿಯೇ ನಿಂತಿದ್ದಾಳೆ. ಸ್ಮಶಾನ ಕಾಳಿ ಅದರಿಂದ ತೀರ ದೂರಕ್ಕೆ ಪಶ್ಚಿಮಕ್ಕೆ ಸಮುದ್ರ ತೀರದಲ್ಲಿ ನಿಂತಿದ್ದಾಳೆ – ಈ ಮಂಕಾಳಿ ಮಹಾಕಾಳಿಗೆ ಸಹೋದರಿಗಳಂತೆ. ಹನೆಹಳ್ಳಿಯ ಅಮ್ಮ ಉತ್ತರಕ್ಕೆ, ನೀರಾಳದ ಅಮ್ಮ ಪೂರ್ವದ ತಪ್ಪಲಿನ ಸಣ್ಣ ಕೊಳ್ಳದಲ್ಲಿ, ಹಾಗೆಯೇ ವೈತರಣಿಯ ಅಮ್ಮ ಅಲ್ಲಿಯೇ ಹತ್ತಿರ ಇನ್ನೊಂದು ಇಳುಕಲಿನಲ್ಲಿ ದಕ್ಷಿಣಕ್ಕೆ ನಿಂತಿದ್ದಾಳೆ.

ಮೇಲೆ ಹೇಳಿದಂತ ಇವರೆಲ್ಲ ಸೋದರಿಯರಂತೆ. ಆದರೆ ಇವರಿಗೆ ಒಬ್ಬನೇ ಒಬ್ಬ ಸಹೋದರ. ಅವನೇ ಹನೇಹಳ್ಳಿಯ ಮುರ್ಕಂಡಿ, ಒಂದು ಕಾನಿನಲ್ಲಿ ಏಕಾಂತ ಸ್ಥಾನದಲ್ಲಿ ನಿಂತಿದ್ದಾನೆ. ಇವನು ಈ ದೇವತಾವರ್ಗದಲ್ಲಿ ಸೇನಾಪತಿ. [ಇವನ ಒಂದು “ಗುತ್ತ” ಮುಂದೆ ಕಡ್ಮೆ ಎಂಬ ಹಳ್ಳಿಯಲ್ಲಿಯೂ ಇದೆ.]

ಹಾಲಕ್ಕಿ ಒಕ್ಕಲ ಒಂದು ಗುಮಟೆ ಪದ್ಯದಲ್ಲಿ ಈ ಸೋದರಿಯರ ಉಲ್ಲೇಖ ಬರುತ್ತದೆ. ಅಲ್ಲಿ ಅವರು ಒಟ್ಟು ೭ ಅಮ್ಮಂದಿರು. ಈ ಸಂಖ್ಯೆ ಪೂರ್ತಿ ಮಾಡಲು ಅವರು ಶಿರಸಿಯ ಸಿರಿಯಮ್ಮ, ಬಾಡದ ಸಣ್ಣಮ್ಮ ಮತ್ತು ಸೊಲ್ಲಾಪುರದ ಅಮ್ಮನನ್ನು ಸೇರಿಸಿಕೊಂಡಿದ್ದಾರೆ. ಈ ಏಳು ಮಂದಿ ಅಕ್ಕತಂಗಿಯರು ಏಳು ಬಂಡಿಗಳನ್ನು ಹತ್ತಿ ಘಟ್ಟ ಇಳಿದು ಬರುತ್ತಾರೆ. ಆದರೆ ಬರ್ಗಿ ಘಟ್ಟದಲ್ಲಿ ಅಲ್ಲಿಯ ಗಟ್ಟದ ಹೊನ್ನ ಬೀರ ಆ ಬಂಡಿಗಳನ್ನು ತಡೆಯುತ್ತಾನೆ. ಒಂದು ಮೆಟ್ಟು ಕೂಡಾ ಮುಂದೆ ಬರಲು ಬಿಡುವುದಿಲ್ಲ. ಮತ್ತು ಹಾಗೆಯೇ ಮಂಕಾಳಮ್ಮಗೆ ಇವರು ಬಂದ ಸುದ್ದಿ ಹೇಳಿ  ಕಳುಹುತ್ತಾನೆ. ಆಗ ಮಂಕಾಳಮ್ಮ [ಅವಳೇ ಈ ಅಕ್ಕತಂಗಿರಲ್ಲಿ ಹಿರಿಯಳು] ಚಿನ್ನದ ಸತ್ತಿಗೆ ನೆರಳಲ್ಲಿ ಬರ್ಗಿ ಘಟ್ಟಕ್ಕೆ ಬರುತ್ತಾಳೆ. ಮತ್ತೆ ಸೋದರಿಯರನ್ನು ಇದಿರಾಗಿ ಹನೆಹಳ್ಳಿಯ ಮುರ್ಕಂಡಿಗೆ ಹೇಳಿ ಕಳಿಸುತ್ತಾಳೆ. ಅತ್ತ ತನ್ನ ಚಿನ್ನದ ಸತ್ತಿಗೆ ನೆರಳಲ್ಲಿ  ೭ ಬಂಡಿಗಳನ್ನು ಮಂಕಾಳಮ್ಮ ತನ್ನ ಠಾವಿಗೆ ಗೋಕರ್ಣಕ್ಕೆ ತರುವಾಗ, ಇತ್ತ ಮುರ್ಕಂಡಿ “ಕದಂಬ ಕುದುರೆ” ಏರಿ ಕೈಯಲ್ಲಿ ಸೆಳೆ ಬೆತ್ತವನ್ನು ಹಿಡಿದು ಅಲ್ಲಿಗೇ ಬರುತ್ತಾನೆ. ಅವನು ಬಂದು ಮುಂದೆ ಆ ಏಳೂ ಬಂಡಿಗಳನ್ನು ಪಾರು ಮಾಡುತ್ತಾನೆ. ಈ ಹಳೇಯ ಪದದಲ್ಲಿ ಮಂಕಾಳಿ ಅಮ್ಮನ ಇತರ ಪರಿವಾರ ದೇವತೆಗಳ ಉಲ್ಲೇಖವಿಲ್ಲ.

ಆದರೆ ಗೋಕರ್ಣ ಮಂಡಳದ ಅಮ್ಮನವರಿಗೆ ಒಂದು ಪರಿವಾರವಿದೆ. ಅದು ಈ ಸೀಮೆಯ ಎಲ್ಲ ಅಮ್ಮನವರಿಗೂ ಇದೆ. ಈ ಪರಿವಾರದ ಕಿರಿದೇವರುಗಳು ಹೆಚ್ಚು ಕಡಿಮೆ ಗಂಗಾವಳಿಯಿಂದ ಮಿರ್ಜಾನಿನವರೆಗೂ ಒಂದೇ ಇಲ್ಲವೇ ಅದೇ ಮಾದರಿಯವು. ಅವು ಒಂದು ಕ್ರಮದಲ್ಲಿ ಇಂತಿವೆ – ಕಡಬ, ಹೊಸಬ, ಬೀರ, ಕರಿಯ, ದೇವಮ್ಮ, ಹೊಲೆಯೊಟ್ರ ಮತ್ತು ಗಟ್ಟದ ಹೊನ್ನ. ಇವುಗಳಲ್ಲಿ ಕೊನೆಯವೆರಡೂ ಹೆಚ್ಚಾಗಿ ಹಳ್ಳೇರ ಮುಕ್ರಿ ಹೊಲೆಯರೇ ಮುಂತಾದ ಅಂತ್ಯಜ ವರ್ಗದವರು ಆರಾಧಿಸುವ ದೇವತೆಗಳು. ಅಲ್ಲಿಯೂ ಹೊಲೆಯಟ್ರನಿಗೆ ಗಟ್ಟದ ಹೊನ್ನ ಉಪದೇವತೆ. ಇವರ ಹೊರತು ಹುಲಿದೇವರು ಮತ್ತು ದೇವತಮ್ಮ ಎಂಬ ಹೆಣ್ಣು ದೇವರು ಬೇರೆ, ಈ ದೇವತಮ್ಮ ಶೀತಲಾದೇವಿಯಂತೆ ಹೆಚ್ಚಾಗಿ ಮಕ್ಕಳ ಕಾಯಿಲೆ ಸಿಡುಬು, ಕಟ್ಟೆ, ಚಾಪೆ ಮುಂತಾದವುಗಳ ಪರಿಹಾರಕ್ಕೆ ಮೀಸಲು. ಇನ್ನು ಕೆಲವೊಂದು ಗ್ರಹಕ್ಕೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಉಪಗ್ರಹಗಳಿರುವಂತೆ ಕಡಬನಿಗೆ ಸಣ್ಣ ಕಡಬ ಹಾಗೆಯೇ ಹೊಸಬನಲ್ಲಿ ಹಿರಿಹೊಸಬ, ದೊಡ್ಡ, ಸಣ್ಣ ಹೊಸಬ ಹೀಗೆ ದೇವರುಗಳು ಇರುತ್ತವೆ.

ಕೆಲವು ಅಮ್ಮನವರ ಪರಿವಾರದಲ್ಲಿ ಒಂದೆರಡು ಬೇರೆ ದೇವರುಗಳು ಇರುತ್ತವೆ. ಉದಾ – ಬಬ್ರು, ರಾಕಾ, ಬೊಮ್ಮಯ್ಯ ಇತ್ಯಾದಿ. ಜೈನದೇವತಾ ವಿಶೇಷಗಳಲ್ಲಿ ಬ್ರಹ್ಮನಿಗೆ ಸ್ಥಾನವಿದೆ. ಅದೇ ಜನಪದ ದೈವೀ ಪ್ರಪಂಚದಲ್ಲಿ ಬೊಮ್ಮಯ್ಯನಾಗಿರಬೇಕು. ಕೆಲಸಲ ಬ್ರಹ್ಮ ಜಟ್ಗನೂ ಆಗಿದ್ದಾನೆ. (ಉದಾ . ಹಿರೇಗುತ್ತಿಯಲ್ಲಿ) “ಜಟ್ಗ” ನ ವಿಚಾರ ಮುಂದೆ ಬರಲಿದೆ.

ಅಮ್ಮನವರ ಈ ಪರಿವಾರ ದೇವತೆಗಳು ಒಟ್ಟು ೧೨. ಅಮ್ಮನವರ ವಾರ್ಷಿಕ ಬಂಡಿಹಬ್ಬ ನಡೆಯುವುದು ೧೨ ದಿನ.

ಈ ದೇವತೆಗಳನ್ನು ಬೇರೆಯಾಗಿ ಬಿಡಿಯಾಗಿ ಪರಿಚಯಿಸಿಕೊಳ್ಳುವ ಮುಂಚೆ ಅವುಗಳ ಬಗ್ಗೆ ಒಟ್ಟನಲ್ಲಿ ಒಂದೆರಡು ಮಾತು ಹೇಳಬೇಕಾಗಿದೆ. ಈ ಪರಿವಾರ ದೇವತೆಗಳಲ್ಲಿನ ನಮ್ಮ ಜನಪದ ಜೀವನದ ಜಾತೀಯ ಜಾಯಮಾನ ಕಂಡು ಬರುತ್ತದೆ. ಅಂದರೆ ಈ ದೇವರ ಭಯ- ಭಕ್ತಿ “ನೆರಳು” ಸಮಗ್ರ ಆದಿವಾಸಿ ಜನ ಜೀವನವನ್ನು ಆಳವಾಗಿಯೇ ಆಳುತ್ತಿದ್ದರೂ, ಅಲ್ಲಿಯೂ ಅಂತ್ಯಜರೆ ನಡೆದುಕೊಳ್ಳುವ ದೇವರು ಕೆಲವು, ಇತರ ಶೂದ್ರ ವರ್ಗಗಳು ಪೂಜಿಸುವ ದೇವರು ಹಲವು. ಹಿಂದೆ ಹೇಳಿದಂತೆ ಹೊಲೆಯಟ್ರ ಗಟ್ಟದ ಹೊನ್ನ (ಬೀರ?) ರಾಕಾ ಪ್ರಭೃತಿಗಳು ಹೊಲೆಯ, ಮುಕ್ರಿ ಮುಂತಾದ ಜನಗಳಿಗೆ ವಿಶೇಷ ಪೂಜ್ಯ. ಕರಿಯ ದೇವರು ವಿಶೇಷತಃ ಹಾಲಕ್ಕಿ ಒಕ್ಕಲಿಗೆ, ಅದೂ ಅವರ ಸುಗ್ಗಿಯ ಹಂಗಾಮಿನಲ್ಲಿ ನೈಮಿತ್ತಿಕ ನಡೆವಳಿಕೆಗೆ ಒಪ್ಪಿದ್ದು. ಹೋಳಿ ಹುಣ್ಣಿಮೆಯಿಂದ ಸುಗ್ಗಿ ಕಟ್ಟಿ ಕುಣಿದು ಮುಗಿಯುವ ತನಕದ ಅವಧಿಯ ಹಬ್ಬಕ್ಕೆ ಈ ಕರಿ ದೇವರೇ ಅಧ್ಯಕ್ಷ. ಜೈನ ಧರ್ಮದ ಪ್ರಭಾವದಿಂದ ಕೆಲವು ದೈವತಗಳು ಪೂರ್ತಿ ಶಾಖಾಹಾರಿಯಾಗಿ ಬಿಟ್ಟಿವೆ. ಆದರೆ ಕೆಲವು ಇಂದಿಗೂ ಕುರಿ – ಕೋಳಿಗಳ ಬಲಿಯನ್ನು ಬೇಡುತ್ತವೆ. ಸಕಾಲಕ್ಕೆ ಸಲ್ಲಿಸದಿದ್ದರೆ ಕಾಡುತ್ತವೆ. ವಿಶೇಷತಃ ಈ ಬಗೆಯ ಸಂಸ್ಕರಣ ಅಮ್ಮನವರಿಗೇ ಆದದ್ದೂ ನಾವು ಕಾಣುತ್ತೇವೆ. ಸಾರ್ವತ್ರಿಕವಾಗಿ ಅಮ್ಮನವರೇ ಗ್ರಾಮದ ಅಧಿದೇವತೆ ಮತ್ತು ಅವಳ ಪೂಜೆ ಸಾಮಾನ್ಯವಾಗಿ ಕುಂಬಾರರಿಗೆ ಅಥವಾ ಪಡಿಯಾರರಿಗೆ ಇನ್ನಿತರ ಬ್ರಾಹ್ಮಣೇತರ ನಿಮ್ನ ವರ್ಗದವರಿಗೆ ಸಂದದ್ದು. (ದ. ಕನ್ನಡದಲ್ಲಿ ಈಡಿಗರಿಗೇ “ಪೂಜಾರಿ” ಅನ್ನುವುದುಂಟು!) ಆದರೆ ನಮ್ಮ ಸೀಮೆಯಲ್ಲಿ ಮಂಕಾಳಮ್ಮನ ನಿತ್ಯ ಪೂಜೆ ಬ್ರಾಹ್ಮಣ (ಹವ್ಯಕ) ಕುಟುಂಬಕ್ಕೆ ಶತಮಾನದಾಚೆಯಿಂದಲೂ ಸೇರಿದೆ. ಅಂಕೋಲೆಯ ಭೂಮಿತಾಯಿಯ [ಶಾಂತಾದುರ್ಗಾ ದೇವತೆಯ] ಪೂಜೆಯು ಅಂತೆಯೇ. ಅದಾಗ್ಯೂ ಪೂರ್ಣ ಬ್ರಾಹ್ಮಣೀಕರಣ ಹೊಂದಿಲ್ಲ. ಈ ದೇವಿಯರ ಯೋಗಕ್ಷೇಮ ನಿತ್ಯ ಪೂಜೆ ಬ್ರಾಹ್ಮಣರ ಕೈಗೆ ಬಂದರೂ ನೈಮಿತ್ತಿಕ ವಿವಿಧ – ವಿಧಾನಗಳೆಲ್ಲ ಇನ್ನೂ ಕುಂಬಾರರ ಕೈಗೇ ಉಳಿದಿವೆ. ನಮ್ಮಲ್ಲಿ ಬಂಡಿ ಹಬ್ಬದಲ್ಲಿ ದೇವಿಯ ಕಲಶ ಹೊತ್ತು “ಅಯನ” ಗಳನ್ನು ನಡೆಸುವವನು ಆ ವರ್ಗದವನೇ. ಆಗ ದೇವಿಯ ಪರಿವಾರ ದೇವತೆಗಳ ಬೆಳ್ಳಿಯ ಕಟ್ಟಿಗೆ ಬೆತ್ತ ಹಿಡಿಯುವವರೂ ಶೂದ್ರವರ್ಗದವರೇ ಅಷ್ಟೇ ಅಲ್ಲ, ಅಮ್ಮನವರಲ್ಲಿ “ಬಾಗಿಲಕಟ್ಟಿ” “ಅಪ್ಪಣೆ” ಕೇಳಲಿಕ್ಕೂ ಈ ಕುಂಬಾರ “ಗುನಗ” ನೇ ಬೇಕು. ದಿನ ನಿತ್ಯವೂ ದೇವಿಯ ಪೂಜೆ ಬ್ರಾಹ್ಮಣರದಾಗಿದ್ದರೂ ಪರಿವಾರ ದೇವರುಗಳ ಪೂಜೆ, ಬಲಿ ಇತ್ಯಾದಿ ಈ ಕುಂಬಾರ ಪೂಜಾರಿಯೇ ನಡೆಸಿಕೊಡಬೇಕು. ಹನೇಹಳ್ಳಿಯ, ಅಗ್ರಗೋಣದ, ಹಿರೇಗುತ್ತಿಯ ಇನ್ನಿತರ ಕಡೆಯ ಅಮ್ಮನವರ ಪೂಜೆಯೆಲ್ಲ ನಿಮ್ನವೆಂದು ಪರಿಗಣಿಸಲಾದ ವರ್ಗದವರಿಗೇ ಒಪ್ಪಿದ್ದು. ಹಿರೇಗುತ್ತಿಯಿಂದ ಆಚೆ ಅಘನಾಶಿನಿ ನದಿಯ ದಂಡೆಯ ನುಸಿಕೋಟೆ ಗ್ರಾಮದ ದೇವಿ ಕೋಟೇಶ್ವರಿ. ಅವಳ ಪೂಜೆ ಅಸ್ಪೃಶ್ಯ – ಮುಕ್ರಿಗೆ ಸಂದಿದೆ.

ಗೋಕರ್ಣದಲ್ಲಿ ಶ್ರೀ ಮಹಾಬಲೇಶ್ವರ ದೇವರ ಪರಿವಾರದ ಅಮ್ಮ ತಾಮ್ರ ಗೌರಿ ಪೂರ್ತಿ ವೈದಿಕ ಸಂಸ್ಕರಣ ಹೊಂದಿದೆ ದೇವತೆ. ಅಲ್ಲಿ ಪೂಜೆ ಪುರಸ್ಕಾರಗಳೆಲ್ಲ ವೈದಿಕ ಸಂಪ್ರದಾಯದವು. ದೇವಿಗೆ ಪಶುಬಲಿ ಇಲ್ಲ. ಕುಮಟೆಯ ಉಳಿದ ಸ್ತ್ರೀ ದೇವತೆಗಳ ಪೂಜೆ ಬ್ರಾಹ್ಮಣರದಿದ್ದರೂ ಗ್ರಾಮ ದೇವತೆ ಅಮ್ಮನವರ ಪೂಜೆ ಇಂದಿಗೂ ಕುಂಬಾರಗುನಗನದೇ.

ಹಿರೇಗುತ್ತಿಯಲ್ಲಿ ಜೈನರ ಪ್ರಾಬಲ್ಯವಿತ್ತು. ಅಲ್ಲಿಯ ಅಮ್ಮನವರ ಸ್ಥಾನವನ್ನು ಬೊಮ್ಮಯ್ಯ (ಬ್ರಹ್ಮ) ಆಕ್ರಮಿಸಿ ಗ್ರಾಮ ದೇವತೆಯಾಗಿ ನಿಂತಿದ್ದಾನೆ. ಅಮ್ಮನವರ ಗುಡಿ ಪಕ್ಕದಲ್ಲಿಯೇ ಇದ್ದರೂ ಆಕೆ ಗ್ರಾಮ ದೇವತೆಯಲ್ಲ. ಆದರೆ ಬಳಲೆ (ಬಳಗ) ಅಮ್ಮ ಅಲ್ಲಿಯದೇ ಗ್ರಾಮ ದೇವತೆ. ಆದರೆ ಅಲ್ಲಿ ಕುರಿ – ಕೋಳಿಗಳ ಬಲಿ ಅವಳಿಗಿಂತ ಅವಳ ಪರಿವಾರದ ದಂಡೆಸಾಲ ಬಂಬ (ಜಟ್ಗ) ನಿಗೇ ಭಾರಿ ಹೆಚ್ಚು.

ಇಂಥ ದೇವತಾ ಸ್ಥಾನ – ಮಾನಗಳ ಸ್ಥಿತ್ಯಂತರ ಅನೇಕ ಆಗಂತುಕ ಕಾರಣಗಳಿಂದ ಆಗುತ್ತಿರುತ್ತದೆ. ನನ್ನ ಕಣ್ಣೆದುರಿಗೆ ಕಳೆದ ೮ – ೧೦ ವರ್ಷಗಳಲ್ಲಿ ಗೋಕರ್ಣದ ಸ್ಮಶಾನ ಕಾಳಿಯ ಕುಳಾವಿಗಳು [ಭಜಕ ವೃಂದವು] ಹೆಚ್ಚುತ್ತ ಹೋಗಿದೆ. ಗೋಕರ್ಣ ಮಂಡಲವನ್ನು ದಾಟಿ ಅಂಕೋಲಾ ಕಾರವಾರ ಕಡೆಯಿಂದಲೂ ಈ ಮಸಣ ಕಾಲಿಗೆ ಪೂಜೆ – ಹರಕೆ ಸಲ್ಲುತ್ತವೆ. ಹಿಂದೆ ಅಗ್ಗದ ದಿನಗಳಲ್ಲಿ ೩ – ೪ ಕುರಿಗಳ ಬಲಿಯಾಗುವಲ್ಲಿ ಇಂದು ತುಟ್ಟಿಯಲ್ಲಿಯೂ ೬ – ೮ ಕುರಿಗಳನ್ನು ಆ ದೇವಿ ಸ್ವೀಕರಿಸುತ್ತಾಳೆ.

ಅಘನಾಶಿನಿ ಹೊಳೆಯ ಆಚೆಗೆ ಹೆಗಡೆಯ ಗ್ರಾಮದೇವತೆ ದೇವಿಯೇ. ಅವಳ ರಥೋತ್ಸವ ಆ ಸೀಮೆಗೆ ದೊಡ್ಡ ಹಬ್ಬ. ಇಲ್ಲಿಯ ಒಂದು ವಿಶೇಷವೆಂದರೆ ರಥೋತ್ಸವದ ಸಮಯವೇ ಅಮ್ಮನವರ ಪರಿವಾರ ದೇವರುಗಳ ಕಲಶ ಹೊರಡುವದು. ಇದರ ಅರ್ಥವೇನು? ಹಿಂದೊಮ್ಮೆ ಈ ರಥೋತ್ಸವ ಪೂರ್ವದಲ್ಲಿಯೇ ಆ ಊರ ಅಮ್ಮನವರ ಬಂಡಿ ಕಲಶದ ಹಬ್ಬ ನಡೆಯುತ್ತಿತ್ತು. ಆದರೆ ಮುಂದೆ ಕಲಶದ ಹಬ್ಬದ “ಬಂಡಿ” ಯ ಸ್ಥಾನದಲ್ಲಿ ಆಗಮೋಕ್ತ ರಥೋತ್ಸವ ಆರಂಭವಾಯಿತು. ಆ ಜಾನಪದ ಹಬ್ಬದ ಬ್ರಾಹ್ಮಣೀಕರಣ ಆಗಿರಬಹುದೇ?

ಇಷ್ಟೊಂದು ನಿಜ, ಈ ಬ್ರಾಹ್ಮಣೀಕರಣಕ್ಕಿಂತ ಮುಂಚೆಯೇ ಈ ಹಳ್ಳಿಯ ಜನಗಳ ಈ ಪೂಜಾ ಸ್ಥಾನಗಳ ಮೇಲೆ ಜೈನ ದೇವತಾಕಾಂಡದ ಪ್ರಭಾವ ಸಾಕಷ್ಟು ಆಗಿ ಹೋಗಿದೆ.

ಈ ಅಮ್ಮನವರದೆಲ್ಲ ಒಂದು ಸ್ವಾರಸ್ಯ. ಆದಿ ಮಾನವನ ಪ್ರಾಣ ಚೇತನ ಪಾತಳಿ ಮತ್ತು ಆ ಮುಂದಿನ ಪ್ರಾಕೃತ ಮಾನವನ ಪ್ರಜ್ಞಾ ಪಾತಳಿಗಳ ನಡುವೆ ಜಾನಪದ ಅಂತರ್ಮನದಿಂದ ಆವಿರ್ಭವಿಸಿದ ಈ ದೈವತಗಳಲ್ಲಿ ಒಂದು ಬಾಂಧವ್ಯ – ಒಡಹುಟ್ಟಿನ ಸಂಬಂಧ- ಆತಮಾನಗಳಿಂದಲೂ ಕಲ್ಪಿಸಿಕೊಂಡು ನಂಬಿ ನಡೆದುಕೊಳ್ಳಲಾಗುತ್ತದೆ. ಉದಾಹರಣೆಗೆ ಈ ಅಮ್ಮನವರೆಲ್ಲ ಅಕ್ಕತಂಗಿಯರು. ನಮ್ಮ ಗೋಕರ್ಣದ ಮಹಾಕಾಳಿ – ಬಳಲೆ (ಬಳಗಾ) ಅಮ್ಮನಿಗೆ, ಮೊರ್ಬದ ಮುಡಿಬಂದಕ್ಕನಿಗೆ, ನುಸಿಕೋಟೆಯ ಕೋಟೇಶ್ವರಿಗೆ, ಹಾಗೆಯೇ ಶಿರಸಿಯ ಅಮ್ಮನಿಗೆ – ಎಲ್ಲರೂ ಅಕ್ಕ. ಆದರೆ ಶಿರಸಿಯ  ಮಾರೆಮ್ಮ ಈ ಕರಾವಳಿ ಅಮ್ಮನವರೆಲ್ಲ “ಭೂತಾಯಿ” ಯರು. ಶಿರಸಿಯ ಮಾರೆಮ್ಮ  ಆವಿರ್ಭಾವವೇ ಬೇರೆ ರೀತಿ. ಆ ಕುರಿತು ಈ ಪ್ರಬಂಧದಲ್ಲಿ ವಿವರಿಸುವುದು ಅಪ್ರಸ್ತುತ.

ಈ ಗ್ರಾಮ ದೇವತೆಗಳ ಕುರಿತು ನಾವು ಗಮನಿಸಬೇಕಾದ ಸಂಗತಿ ಇನ್ನೂ ಒಂದಿದೆ. ವೈದಿಕ (ಬ್ರಾಹ್ಮಣ) ಸಂಸ್ಕರಣ ಪ್ರಕ್ರಿಯೆ ಇಂದಿಗೂ ನಡೆಯುತ್ತಿದೆ. ಆದರಿಂದ ನಮ್ಮ ಜಾಯಮಾನದಲ್ಲಿಯೇ  ಕೆಲವು ದಶಕಗಳಲ್ಲಿಯೇ ಈ ಪ್ರಾಚೀನ ಜಾನಪದ ಭಾವಿಕತೆಯ ಸರಳ ಮುಗ್ಧ ಜಾಗೃತ ಪೂಜಾ ಕೇಂದ್ರಗಳು ತಮ್ಮ ಎಂದೆಂದಿನ ಸ್ವ – ರೂಪ (Identity) ಯನ್ನು ಕಳೆದುಕೊಳ್ಳುತ್ತವೆ. ನಮ್ಮ ನಡುವಿನ ಪರಧರ್ಮೀಯ ಜನ ಹಿಂದೂ  ಧರ್ಮಕ್ಕೆ ದೀಕ್ಷಾಂತರ ಮಾಡಿಕೊಳ್ಳಲಿ ಬಿಡಲಿ, ಈ ಹಳೆಯ ಹಳ್ಳಿಯ ದೇವರುಗಳು ಮೇಲ್ವರ್ಗದವರ ಸವರ್ಣದವರ ಆಢ್ಯತೆಯ ಬಲೆಗೆ ಬಲಿ ಬೀಳುತ್ತಿವೆ. ಒಂದೆರಡು ದಶಕಗಳ ಹಿಂದೆ ನಮ್ಮಲ್ಲಿಯ ನಾಡವರೂ, ನಾಮಧಾರಿಗಳೂ, ಹರಿಕಂತರೂ, ಕೋಮಾರಪಂತರೂ ತಮ್ಮ ತಮ್ಮ ಕುಲಾಚಾರ ಪದ್ಧತಿಯಂತೆಯೇ ತಮ್ಮಲ್ಲಿಯ ಮದುವೆಗಳನ್ನು ಜರುಗಿಸುತ್ತಿದ್ದರು. ಆದರೆ ಇಂದು  ಅವರು ಸುಶಿಕ್ಷಿತರಾಗಿ ಸುಧಾರಿಸಿದವರಾಗಿ ತಮ್ಮ ಕಂದಾಚಾರಗಳು ಸಾಲವೋ ಎಂಬಂತೆ ಬ್ರಾಹ್ಮಣ ಪುರೋಹಿತರಲ್ಲಿ ವೈದಿಕ ವಿವಾಹ ಪದ್ಧತಿಯಿಂದ ಲಗ್ನ ಕಾರ್ಯಗಳನ್ನು ನೆರವೇರಿಸಿಕೊಳ್ಳುವುದು ಕಂಡುಬರುತ್ತದೆ. ಇದೊಂದು ಅವ್ಯಾಪಾರ ಅಥವಾ ಅನುಚಿತ  ವ್ಯವಹಾರ ಎಂದು ನನ್ನ ಹೇಳಿಕೆಯಲ್ಲ. ನವನಾಗರೀಕರಣ ಆಧುನೀಕರಣದೊಂದಿಗೆ ಈ ಬ್ರಾಹ್ಮಣೀಕರಣದ ಹೊಸಪ್ರಜ್ಞೆ ಈ ಬ್ರಾಹ್ಮಣೇತರರೆಂಬ ಸಮಾಜಗಳಲ್ಲಿ ಉದಯಗೊಂಡಿದೆ; ಅದು ಉಳಿಯಲೂ ಬಂದಿದೆ. [It has come to stay] ಇದೇ ಬಗೆಯ ಪ್ರಕ್ರಿಯೆ [Process]  ಈ ಜಾನಪದ ದೈವತಗಳ ಪ್ರಪಂಚದಲ್ಲಿಯೂ ನಡೆದು ಬಂದಿದೆ.

ಈ ಪ್ರಾಚೀನ ಗುಡಿಗಳಲ್ಲಿ ಗುತ್ತಗಳಲ್ಲಿ ಬುನಾದಿಯಿಂದ ನಿಂತ ಈ ದೇವತಾ ಪ್ರತಿಮೆಗಳು ಜೀರ್ಣ ಶೀರ್ಣವಾದಾಗ ಅವುಗಳ ನವೀಕರಣ ಹಾಗೂ ಪ್ರತಿಷ್ಠಾಪನೆ ಆಗಲೇಬೇಕು. ಆಗ ಆ ಪ್ರತಿಷ್ಠಾ ವಿಧಾನದೊಂದಿಗೆ ಆ ದೇವತೆಗಳ ನಾಮರೂಪಗಳಲ್ಲಿಯೂ ಬದಲಾವಣೆ ಘಟಿಸುತ್ತದೆ. ಮೊದಲು ಇಂಥ ಅವೈದಿಕ ಕಾರ್ಯಕ್ಕಾಗಿಯೇ ಹೊಸ ಮಂತ್ರಗಳು ತಯಾರಾಗುತ್ತವೆ. ಆಯಾ ಗ್ರಾಮ ದೇವತೆಯ ಹೆಸರಿನ “ಕಲ್ಪ” ಗಳು ತಯಾರಾಗುತ್ತವೆ – ಜಟಕೇಶ್ವರ ಕಲ್ಪ, ಹಾಯಗೂಳಿ ಕಲ್ಪ, ಬಬ್ಬುರಿಗ ಕಲ್ಪ. ಈ ಇಂಥ ದೇವರ ವಿನಿಯೋಗಕ್ಕೆ ಹೊಸ ಗಾಯತ್ರಿ ಮಂತ್ರಗಳೂ ತಯಾರಾಗುತ್ತವೆ. ಉದಾ “ಬ್ರಹ್ಮಪುತ್ರಾಯ ವಿದ್ಮಹೆ | ಭೂತನಾಥಾಯ ಧೀಮಹೆ | ತನ್ನೊ ಜಟಿಕೇಶಃ ಪ್ರಚೋದಯಾತ್ ||” “ರಕ್ತ ನೇತ್ರಾಯ ವಿದ್ಮಹೇ | ವಿರೂಪಾಕ್ಷಾಯ ಧೀಮಹೇ | ತನ್ನೊ ಹಾಯ್ಗಳಿಃ ಪ್ರಚೋದಯಾತ್ ||”  “ಯಷ್ಟಿ ಹಸ್ತಾಯ ವಿದ್ಮಹೇ | ಭೂತ ನಾಥಾಯ ಧೀಮಹೇ || ತನ್ನೊ ಬಬ್ಬುರಿಗಃ ಪ್ರಚೋದಯಾತ್ ||”

ಇದನ್ನು ಒತ್ತಿ ಹೇಳುವುದೇಕೆಂದರೆ ಜಾನಪದ ಜಿಜ್ಞಾಸೆಗೆ ಹೊರಟ ನಮಗೆ ಈ ಬಗೆಯ ಭರದಿಂದ ಸಾಗುವ ಈ ದೇವತೆಗಳ Sophistication ತತ್ವಾನ್ವೇಷಣೆಗೂ ತಥ್ಯವಿಶ್ಲೇಷಣೆಗೂ ತುಂಬ ಕಷ್ಟಗಳನ್ನೂ ಒಡ್ಡುತ್ತದೆ. Priestine Purity ಎಂಬುದನ್ನು ಪ್ರತಿಷ್ಠಾಪಿಸುವ ಭರದಲ್ಲಿ ಈ Priest ರೇ ಈ ದೇವತೆಗಳ ಮೂಲ Purityಯನ್ನು ನಷ್ಟಗೊಳಿಸುತ್ತಾರೆ. ಕೆಲಸಲ ಮೂಲ ಪ್ರತಿಮೆಯ ಬದಲು ಸ್ಥಾಪಿತವಾದ ಹೊಸ ವಿಗ್ರಹದ ಮುದ್ರೆ ಭಂಗಿಗಳೇ ಬೇರೆಯಾಗುತ್ತವೆ. ಉದಾಹರಣೆಗೆ ಹಳೆಯ ಪ್ರತಿಮೆ ಉಬ್ಬು ಶಿಲ್ಪದ (Relief)  ದ ನಿಂತ ಆಕೃತಿಯ ಒಂದು ಶಿಲಾಫಲಕವಿದ್ದಲ್ಲಿ ಈ ಅಶ್ವಾ ರೂಢವಾದ ಕತ್ತಿ ಝಳಪಿಸುವ ಬಂಟನ  ಹೊಸ ವಿಗ್ರಹ ಸ್ಥಾಪಿತವಾಗುತ್ತದೆ. ಕೆಸಲ ನೆಲದಾಳದ ಗುಡಿಯಲ್ಲಿದ್ದ ದೇವರನ್ನು ನೆಲದ ಮೆಲೆ ಎದ್ದು ಕಾಣುವಂತೆ ಹೊಸ ಗೋಪುರದಲ್ಲಿ ನಿಲ್ಲಿಸಲಾಗುತ್ತದೆ. ಎಲ್ಲಮ್ಮ ರೇಣುಕೆಯಾಗುತ್ತಾಳೆ. ಜಟ್ಗ ಜಟಿಕೇಶ್ವರನಾಗುತ್ತಾನೆ, ಕಡಬ ಕದಂಬೇಶ್ವರನಾಗುತ್ತಾನೆ ಇತ್ಯಾದಿ, ಇತ್ಯಾದಿ.

ಇಲ್ಲಿ ತುಸು ಅಪ್ರಸ್ತುತ ಎನಿಸಿದರೂ ಒಂದು ವಿಷಯವನ್ನು ವಿಶದಪಡಿಸಿಯೇ ಮುಂದುವರಿಯುತ್ತೇನೆ. ಗೋಕರ್ಣದಲ್ಲಿ ಹಿಂದೆ ಹೇಳಿದಂತೆ ತಾಮ್ರ ಗೌರಿ ಇದ್ದಾಳೆ. ಮಹಾಬಲೇಶ್ವರ ದೇವರ ಒಂದು ಪ್ರಧಾನ ಪರಿವಾರ ದೇವತೆಯಾಗಿ ಆ ದೇವಾಲಯದ ಬೆನ್ನಿಗೆ. ಈ ಗೌರಿದೇವಿಯ ಕೈಯಲ್ಲಿ ಒಂದು ತಕ್ಕಡಿ ಇದೆ ಎನ್ನಲಾಗುತ್ತದೆ. ಅದು ಗೋಕರ್ಣವನ್ನು ಮತ್ತು ಕಾಶಿಯನ್ನು ತುಗಿ ನೋಡಿ ಇಲ್ಲಿ ಸಮುದ್ರವಿದ್ದದ್ದರಿಂದ ಗೋಕರ್ಣವೇ ” ಅಧಿಕ ಫಲ” ವೆಂದು ಈ ದೇವಿ ಸಾರುತ್ತಾಳೆಂದು ಸ್ಥಳ ಪುರಾಣಕಾರರು ಕಥೆ ಕಟ್ಟಿ ತುಂಬ ಪ್ರಸಾರಪಡಿಸಿ ಶತಕಗಳಾದವು. ಆದರೆ ಈ ತಕ್ಕಡಿ ಹಿಡಿದ ದೇವಿಯು ನಮಗೆ ತುಳಜಾಪುರದ ಭವಾನಿಯನ್ನು ಜ್ಞಾಪಿಸಿಕೊಡುತ್ತಾಳೆ. ಛತ್ರಪತಿ ಶಿವಾಜಿಗೆ ಒಲಿದಳೆಂಬ ಆ ಭವಾನಿದೇವಿ ತುಳಜಾ ಅಥವಾ ತುಕಾಯಿ. ಅವಳು ಮೂಲತಃ ಕನ್ನಡ ದೇವಿಯೇ ಇದ್ದಿರಬೇಕು. ತೂಕ – ತುಲ ಇದರಿಂದ ತುಕಾಯಿ ತುಲಜಾ ಸಿದ್ಧವಾಗಿದೆ. [ತುಕಾರಾಂ – ತುಲಾರಾಮ ಇದೇ ಬಗೆಯ ಹೆಸರುಗಳು] ಈ ಕುರಿತು ನಾನು ಒಮ್ಮೆ ಡಾ. ಆವಳೀಕರರನ್ನು ಕೇಳಿದಾಗ ಅವರು ಈ ದೇವಿಯ ಈ ಕನ್ನಡ ಮೂಲವನ್ನು ಸಹಸಾ ಒಪ್ಪಲಿಲ್ಲ. ಅವರು ಅವಳ ಕುರಿತು ಒಂದು ಆಖ್ಯಾಯಿಕೆಯನ್ನು ಹೇಳಿದರು. ಶಿವಾಜಿಗೆ ಆ ಭವಾನಿಯು ಪ್ರತ್ಯಕ್ಷಳಾದಾಗ ಆತ ಅವಳನ್ನು ಗುರುತಿಸಲಿಕ್ಕೆ ಕೇಳಿದನಂತೆ “ತೂ ಕಾ ಆಯೀ ?” [“ನೀನೇಯೇ ಅಮ್ಮ?”] ಅದರಿಂದ ಅವಳ ಹೆಸರೇ “ತುಕಾಯಿ” ಆಯಿತಂತೆ. ಆದರೆ ಇದು ಯಾವ ದೃಷ್ಟಿಯಿಂದಲೂ fantastic  ಎಂದು ಬೇರೆ ಹೇಳಬೇಕಾಗಿಲ್ಲ!

ಹೀಗೆ ಐತಿಹಾಸಿಕ ಸಾಂಸ್ಕೃತಿಕ ಮುಂತಾದ ಹಲವಾರು ಕಾರಣಗಳಿಂದ ಗ್ರಾಮ ದೇವತೆಗಳ ಸ್ವರೂಪವನ್ನು ಯತಾರ್ಥವಾಗಿ ಅರಿತುಕೊಳ್ಳುವುದು ತೊಡಕಾಗುತ್ತದೆ.

ಅರ್ಥಾತ್ ಇವೆಲ್ಲ ಇತಿಮಿತಿಗಳನ್ನು ನೆನಪಿನಲ್ಲಿಟ್ಟುಕೊಂಡೇ ಈ ಗ್ರಾಮದೇವತೆಗಳ ಇತ್ಯರ್ಥಕ್ಕೆ ತೊಡಗಬೇಕಾಗುತ್ತದೆ. ಇನ್ನು ಇದೆಲ್ಲದಕ್ಕೂ ಹಿನ್ನೆಲೆಯಾಗಿ ನಾವು ಆ ದೇವತೆಗಳ ಮೂಲವನ್ನು ಕುರಿತು ಒಂದು ಮಹತ್ವದ ಅಂಶವನ್ನು ಇಲ್ಲಿ ಒತ್ತಿ ಹೇಳಬೇಕು ವಿಶೇಷತಃ ನಮ್ಮ ಗೋಕರ್ಣ ಮಂಡಳದ ಸಂದರ್ಭದಲ್ಲಿ. ಆ ಸಂದರ್ಭವನ್ನೇ ಮೊದಲಿಗೆ ನಿರ್ದೇಶಿಸಬೇಕು. ಗೋಕರ್ಣ ಮಂಡಳವೆಂಬ ಈ ಪ್ರದೇಶ ನಗರಖಂಡ. ಇಂದಿಗೂ ಇಲ್ಲಿಯ ಸಾಣೆಕಟ್ಟೆಯ ಉಪ್ಪು ಬೆಳೆಸುವ ಬೈಲಿಗೆ ನಾಗರ ಬೈಲೆಂದೇ ಹೆಸರು. ಗೋಕರ್ಣ ಶಬ್ದವೇ ಒಂದರ್ಥದಲ್ಲಿ ನಾಗವಾಚಕ “ಗೋ.” ಎಂದರೆ ಕಣ್ಣು [ಗೋಚರಿಸು] “ಕರ್ಣ” – ಕಿವಿ. ಕಣ್ಣೇ ಕಿವಿಯಾಗಿ ಉಳ್ಳ ಪ್ರಾಣಿ ಗೋಕರ್ಣ – ಅದೇ ಹಾವು. ಇದು ಹಿಂದಿನಿಂದಲೂ ನಾಗ ಜನಪದವೆಂಬುದಕ್ಕೆ ಒಂದು ಪ್ರಬಲವಾದ  ಪುರಾವೆ ಶ್ರೀ ಹರ್ಷನ “ನಾಗಾನಂದ” ನಾಟಕ. ಆ ನಾಟಕದ ಕಥಾನಕ ಘಟಿಸುವ ಸನ್ನಿವೇಷ ಗೋಕರ್ಣವೇ ಆಗಿದೆ. ಎಂದೋ ಹಿಂದೊಮ್ಮೆ “ನಾಗ” ಎಂಬ ಬುಡಕಟ್ಟಿನ ಜನಾಂಗ ನೆಲೆಸಿರಬಹುದಾದ ಈ ಸೀಮೆಯಲ್ಲಿ ಮುಂದೆ ನಾಗಪ್ರತಿಮೆ – ಪ್ರತೀಕಗಳಿಗೆ ಒಂದು ವಿಶೇಷ ಪೂಜ್ಯತೆ ಬಂದರೆ ಅದು ಸಹಜವೇ. ಇದನ್ನು ಒತ್ತಿ ಹೇಳುವ ಸಂದರ್ಭವೆಂದರೆ ಸಾಮಾನ್ಯವಾಗಿ ಹಾವಿನ ಹುತ್ತದ ಪೂಜೆಯಿಂದ ಮೊದಲಾಗುವ ಜಾನಪದ ದೈವ ಭಾವನೆಯ ವಾಸ್ತವತೆಗೆ ಈ ಮಂಡಳದಲ್ಲಿಯ ಅನೇಕ ಅಮ್ಮನವರ ಗುಡಿಗಳೇ ಸಾಕ್ಷಿ. ಈ ಹಿರಿಯ ಇಲ್ಲವೇ ಕಿರಿಯ ಅಮ್ಮನವರ ಗುಡಿಯಲ್ಲಿ, ಗರ್ಭಗುಡಿಯಲ್ಲಿ ದೇವಿಯ ವಿಗ್ರಹದ  ಬೆನ್ನಿಗೆ ಅಥವಾ ಗುಡಿಯ ಹೊರಗೆ ಆವಾರದಲ್ಲಿ ಒಂದು ಹುತ್ತ ಇದ್ದೇ ಇರುತ್ತದೆ. ನಾನು ನೋಡಿದ ೧೦ – ೧೪ ಅಮ್ಮನವರ ಗುಡಿಗಳಲ್ಲಿ ಹೀಗೆ ಇರುವುದನ್ನು ಗಮನಿಸಿದ್ದೇನೆ. ಈ ದೇವಿಯನ್ನು ಮುಂದೆ ಬ್ರಾಹ್ಮಣಿಕೆಯ ಮಂತ್ರ – ತಂತ್ರಗಳು (Priest craft) ಯಾವುದೇ ವೈದಿಕ ಪೌರಾಣಿಕ ಹೆಸರಿನಿಂದ ಕರೆಯಲ್ಲಿ ಅಲ್ಲಿಯ ಜನಪದ ಅಮ್ಮನನ್ನು “ಭೂಮಿತಾಯಿ” ಎಂತಲೇ ಗುರುತಿಸುತ್ತ ಬಂದಿದೆ. ಮತ್ತು ಈ ಹುತ್ತಗಳು ಆ ಭೂಮಿತಾಯಿಯ ಸ್ವಯಂಭೂ ಅಥವಾ ಉದ್ಭವ ಮೂರ್ತಿಗಳು.

ಅಲ್ಲದೆ ಅನಾದಿಯಿಂದಲೂ ಹುತ್ತ ಮತ್ತು ಹಾವು ಯೋನಿ ಮತ್ತು ಲಿಂಗಗಳ ಪ್ರತೀಕ. ಇತಿಹಾಸ ಪೂರ್ವಕಾಲದಿಂದಲೂ ಇವುಗಳ ಉಪಾಸನೆ ವಿವಿಧ ರೂಪಗಳಲ್ಲಿ ರೀತಿಗಳಲ್ಲಿ. ಗ್ರಾಮದೇವತೆಯ ದೈವಿಕತೆಗೆ ಈ ಒಂದು ಲಕ್ಷಣವೂ ಸೇರಿಕೊಂಡು ವಿಲಕ್ಷಣ ಶಕ್ತಿ ತುಂಬುತ್ತದೆ. ಅಮ್ಮನವರಿಲ್ಲದಿದ್ದರೆ ಊರಿಗೆ ಒಂದು  ಈಶ್ವರ ಗುಡಿ ಇರುತ್ತದೆ. ಅಲ್ಲಿ ಶಿವಲಿಂಗದ ಪ್ರತಿಷ್ಠಾಪನೆ ಆಗಿರುತ್ತದೆ. ಲಿಂಗದ ಮಾಣಿ ಪೀಠವೇ ಯೋನಿ. ಯೋನಿ – ಲಿಂಗಗಳ ಈ ನಿತ್ಯ ಸಂಯೋಗವನ್ನು ಆವರಿಸಿ ನಿಂತದ್ದು ” ಗರ್ಭ ಗುಡಿ”. ಅಂದರೆ ಈ ಗರ್ಭಗುಡಿಯು ಹೆಣ್ಣು – ಗಂಡುಗಳ  ನಿರಂತರ ಮೈಥುನದ ಪ್ರತೀಕವಾಗಿ ಬಂದಿದೆ. ಈ ರಹಸ್ಯವನ್ನು ನಾನು ಮೊದಲಿಗೆ ಕಂಡುಕೊಂಡದ್ದು ೫೦ ವರ್ಷಗಳ ಹಿಂದೆ – ಮಹಾ ದೇವ ವಿದ್ವಾನ್  ದಿ. ಪಂಡಿತ ಸಾತವಾಳೇಕರರ ಲೇಖನದಲ್ಲಿ. ಗರ್ಭ ಗುಡಿಯಲ್ಲಿ ನಿಂತ ಯಾವ ಪೀಠಸ್ಥ ಪ್ರತಿಮೆಯೂ ಈ ಯೋನಿ + ಲಿಂಗ ಸಮಯೋಗಕ್ಕೆ ಪರ್ಯಾಯವಾಗಿ ದೈವಿಕತೆಯ  ಆರಾಧನೆಗೆ ಅಂತರ್ಮನದ ಆಳದಿಂದಲೂ ಒಂದು ಸಂತೃಪ್ತಿಯನ್ನು ನೀಡುತ್ತ ಬಂದಿದೆ. ಅಮ್ಮನವರ ಸ್ಥಾನಗಳಲ್ಲಿ ಮಾತ್ರವಲ್ಲ. ನಾನು ಕಂಡ ಹಲವಾರು ಜಟ್ಗ ಮತ್ತು ಮಾಸ್ತಿಕಲ್ಲುಗಳ ಸ್ಥಳಗಳಲ್ಲಿಯೂ ಇಂಥ ದೊಡ್ಡ ಹುತ್ತಗಳಿವೆ. ಈ ಎಡೆಗಳಲ್ಲಿ ಏನಾದರೂ ಬ್ರಷ್ಟಾಚಾರಗಳು ನಡೆದರೆ, ಪೂಜೆ “ಉಪಾರ” ಒಪ್ಪಿಸಲು ತಪ್ಪಿದರೆ, ಅಲ್ಲಿ ಹಾವು ಹರಿದಾಡುತ್ತದೆ, ಹೆಡೆ ಯಾಡಿಸುತ್ತದೆ ಎಂದು ಎಂದು ಸ್ಥಳಿಕ ಹಳ್ಳಿಗರ ದೃಢವಾದ ನಂಬಿಗೆ.

ಇನ್ನು ನಮ್ಮ ಸೀಮೆಯ ಕೆಲವು ದೇವತೆಗಳನ್ನು ಪ್ರತ್ಯೇಕವಾಗಿ ಎತ್ತಿಕೊಳ್ಳುವ ಮುಂಚೆ ಈ ಗ್ರಾಮ  ದೇವತೆಗಳ ಒಂದು ಸ್ಥೂಲ ವರ್ಗೀಕರಣದ ಬಗೆಗೆ ನಾಲ್ಕು ಮಾತು ಇಲ್ಲಿ ಅಪ್ರಸ್ತುತವಾಗಲಾರದು.

ಅಮ್ಮನವರು ಮತ್ತು ಅವರ ಪರಿವಾರ ಈ ಗುಂಪಿನ ಹೊರತಾಗಿ – ಹೊರಗಾಗಿಯೇ ಅಲ್ಲ – ಇರುವ ಒಂದೆರಡು ಮುಖ್ಯ ದೈವತ ಪ್ರಕಾರಗಳೆಂದರೆ ಜಟ್ಗ, ಮಾಸ್ತಿ ಮತ್ತು ಚೌಡಿ. ಇ೮ವಲ್ಲದೆ “ಕೀಳೆ” ಗಳೆಂಬ ಇನ್ನೂ ಒಂದು ಪ್ರಕಾರವಿದೆ.

ಜಟ್ಗ – ಜಟ್ಟಿಗ ಹಳ್ಳಿ ಹಳ್ಳಿಗೂ ಕಣ ಸಿಗುತ್ತದೆ. ಹೆಸರೇ ಸೂಚಿಸುವಂತೆ ಈತ ಯಾರೋ ಊರ ಧಾಂಡಿಗ, ಬಲಿಷ್ಟ ಆಸಾಮಿ. ಊರಿನ ದನ -ಕರುಗಳ ಮತ್ತು ಹೆಣ್ಣು ಮಕ್ಕಳ ಪ್ರಾಣರಕ್ಷಣೆಗೋ ಮಾನರಕ್ಷಣೆಗೋ ಕಾದಾಡಿ ದೇಹವಿಟ್ಟ. ಒಬ್ಬ ಅಜ್ಞಾತ ವೀರ. ಇದು ವಿವರಣೆ. ಇನ್ನೊಂದು ವಿವರಣೆ ಎಂದರೆ ಹಳೆಯ ಕಾಲದಲ್ಲಿ ಯಾರಾದರೂ ಧನವನ್ನು ಹೂಳಿಟ್ಟರೆ ಅಲ್ಲಿ ಒಂದು ನರಬಲಿಕೊಡುತ್ತಿದ್ದರು. ಆ ಬಲಿಯಾದ ಹುತಾತ್ಮನ ಸ್ಮಾರಕವೇ ಈ ಜಟ್ಟಿಗ ಇಲ್ಲವೇ ಜಟ್ಗ. ಇವೆರಡೂ ವಿವರಣೆಗಳು  ಸತ್ಯವಿರಬಹುದು. ಬಹುಶಃ ಪರೋಪಕಾರಾರ್ಥವಾಗಿ ಕಾದಾಡಿ ದೇಹವಿಟ್ಟವನ ಸ್ಮಾರಕವೇ ವೀರಗಲ್ಲು. ಅದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಗುಪ್ತಧನದ ರಕ್ಷಣಾರ್ಥವಾಗಿ ಮೂಢನಂಬಿಕೆಗೆ ಬಲಿಯಾಗಿ ಸತ್ತವನು ಜಟ್ಗ. ವೀರಗಳು ಹೆಚ್ಚಾಗಿ ಆ ಮೃತ ವೀರನ ದೇಹಾವಸಾನ ಸ್ವರ್ಗಾರೋಹಣಗಳ ಉಬ್ಬು ಶಿಲ್ಪ ಕೃತಿ ಫಲಕಗಳ ಕೆತ್ತನೆ ಕೆಲಸದಿಂದ ತುಂಬಿರುತ್ತದೆ. ಆದರೆ ಈ ಜಟ್ಗ ಉದ್ದನ್ನ ಕಲ್ಲು ಇಲ್ಲವೆ ಗಡಿಗಂಬ. ಅದರ ತಲೆ ಒಂದು ಮುಕುಟದಂತೆ. ಈ ಜಟ್ಗಗಳಲ್ಲಿ ಕೆಲವು ಉಗ್ರ ದೈವಗಳು ಕುರಿ – ಕೋಳಿ ಬಲಿ ಬೇಡುತ್ತವೆ. ಅಲ್ಲಯೂ ಒಂದು ನೇಮ. ಉದಾ. ಗೆ ನಮ್ಮೂರ ಸ್ಮಶಾನ ಕಾಳಿಯಿಂದ ಸ್ದಲ್ಪದೂರ ಗಡಿಗಂಬ ಜಟ್ಗನಿದ್ದಾನೆ. ಅವನಿಗೆ ಸಲ್ಲುವ ಪೂಜೆಯಲ್ಲಿ ೯ ರ ಸಂಖ್ಯೆಗೆ ಮಹತ್ವ. ೯ ಸೊಲಿಗೆ ಎಣ್ಣೆ, ೯ ಸಿದ್ದೆ ಅಕ್ಕಿ, ೯ ತೆಂಗಿನಕಾಯಿ, ೯ ವೀಳ್ಯದೆಲೆ, ೯ ದೂಪದ ಕಡ್ಡಿ ಇತ್ಯಾದಿ. ಈ ಜಟ್ಗನ ಪೂಜಾರಿ ಹಾಲಕ್ಕಿ ಜಾತಿ ಕೂಟದ “ಬುದ್ವಂತ” ಬಂಡಿಹಬ್ಬದ ದಿನಾಲು ಜಟ್ಗನಿಗೂ ಅವನಿಂದ ಈ “ಬುದ್ವಂತ” ನಿಗೂ ೩ ಕೋಳಿ ಸಲ್ಲುತ್ತವೆ. ಇವನ್ನು ಬೇರೆ ಬೇರೆ ಜಾತಿಯವರು ಹರಕೆಯಾಗಿ ಸಲ್ಲಿಸುತ್ತಾರೆ. ಇದು ಮೇ ತಿಂಗಳಲ್ಲಿ ನಡೆಯುತ್ತದೆ. ಜಟ್ಗನಿಗೆ ನಡೆದುಕೊಳ್ಳುವವರು ನಮ್ಮಲ್ಲಿ ಹೆಚ್ಚಾಗಿ ಹಳ್ಳೇರು, ಆಗೇರರು.

ಈ ಜಟ್ಗನ ಇನ್ನೊಂದು ವೈಶಿಷ್ಟವೆಂದರೆ ಬಂಡಿಕಲಶದ ಹಬ್ಬದ ದಿನಗಳಲ್ಲಿ “ಹೂವಿನ ಮಕ್ಕಳು” ಆಗಿ ಇವನಿಗೆ ಈ ಮುಕ್ರಿ ಹುಡುಗರು ಹರಕೆ ಸಲ್ಲಿಸುತ್ತಾರೆ. ಈ ಜಟ್ಗನೂ ಕೆಳಮಟ್ಟದ ಒಂದು “ಕೀಳೆ” ದಯವದ ಗುತ್ತದ ಮುಂದೆ ಅಬ್ಬಲಿಗೆ (ಕನ ಕಾಂಬರ) ಹೂವಿನ ಹಾರಗಳಿಂದ ಮುಡಿಯಿಂದ ಮೈತುಂಬ ಮುಚ್ಚಿಕೊಂಡ ಈ ವ್ರತಸ್ಥರು ದಿನಾಲು ಉಪವಾಸವಿದ್ದು ಹಬ್ಬದ ಕೊನೆಯ ದಿನ ಈ ಗಡಿಗಂಬ ಜಟ್ಗನ ಎದುರಿಗೆ  ಈ ಹೂವಿನ ಹಾರಗಳ ಊಡಿಗೆ ತೊಡಿಗೆ ವಿಸರ್ಜನ ಮಾಡುತ್ತಾರೆ. ಬಂಡಿಹಬ್ಬದಲ್ಲಿ ಈ “ಹೂವಿನ ಮಕ್ಕಳು” ಬೀದಿ ಪೇಟೆಯಲ್ಲಿ ಕಂಡ ಕಂಡ ಅಂಗಡಿ ಹೊಕ್ಕು ಕೈಗೆ ಸಿಕ್ಕ ಹಣ್ಣು – ಕಾಯಿ ಮಿಠಾಯಿ ದೋಚಿಕೊಳ್ಳುತ್ತ ಹೋಗುವರು. ಈ ವಿವರ ಇಷ್ಟೇ ಸಾಕು.

ಜಟ್ಗಗಳ ಒಂದು ಸಾಮಾನ್ಯ ವೈಶಿಷ್ಟವೆಂದರೆ ಇವು ಹಳ್ಳಿಗಾಡಿನಲ್ಲಿ ವಿಪುಲವಾಗಿದ್ದರೂ ಮೂಲತಃ ವಿವಿಕ್ತ ನಿರ್ಜನ ಸ್ಥಳಗಳ್ಲಿ ಹೆಚ್ಚಾಗಿ ಬಯಲಲ್ಲಿ ಮರಗಳ ಗುಂಪಿನಲ್ಲಿ ನಿಂತಿರುತ್ತವೆ. ಸಾಂಪ್ರದಾಯಿಕವಾಗಿ ಜಟ್ಗ ದೇವರಿಗೆ ಗುಡಿಗಳಿರುವುದಿಲ್ಲ, ಈಚೆಗೆ ಕೆಲವೆಡೆ ಸಿರಿವಂತ ಭಕ್ತರೂ ಅಭಿಮಾನಿಗಳೂ ಜಟ್ಗನನ್ನು ಜಟಗೇಶ್ವರನನ್ನಾಗಿ ಮಾಡಿ ಗುಡಿಗೋಪುರ ಕಟ್ಟಿ ಅದರೊಳಗೆ ಪುನಃ ಪ್ರತಿಷ್ಠೆಗೊಳಿಸಿದ್ದಾರೆ.

ಇಲ್ಲಿ ಒಂದು ವಿಶೇಷ. ನಮ್ಮ ನೆರೆಯ ಮಹಾರಾಷ್ಟ್ರದಲ್ಲಿಯೂ ಜಟ್ಗನಿದ್ದಾನೆ. ಊರುರಿಗೆ ಅವನ ಪ್ರಭಾವ, ಪ್ರತಿಷ್ಠೆ ಆದರೆ ಅಲ್ಲಿ ಅವನಿಗೆ ಹೆಸರು “ಭೈರೋಬಾ” – ಭೈರವ. ನಮ್ಮ ಊರಿನಲ್ಲಿ ಕೋಡಿತೀರ್ಥದ ಮಗ್ಗಲಲ್ಲಿ ನೈಋತ್ಯ ಮೂಲೆಗೆ “ಕಾಳ ಭೈರವ” ನಿದ್ದಾನೆ. ಈ ಕಾಳ ಭೈರವ ಮೂಲತಃ ಜಟ್ಗನೇ. ಗೋವಾ ಸಾವಂತವಾಡಿಯ ಕಡೆಯಿಂದ ನಮ್ಮ ಕನ್ನಡ ನಾಡಿನಲ್ಲಿ ನೆಲೆಸಿದ ಕೊಂಕಣಿ ನಾಪಿತ (ಸವಿತಾ) ಸಮಾಜವೆಲ್ಲ ಈ ಕಾಳಭೈರವನ ” ಕುಳಾವಿ” ಗಳು. ಇವನ “ಭೈರವ” ಹೆಸರಿನಿಂದ ಈ ದೇವತೆ ಮೂಲತಃ  ಜಟ್ಗನೆಂದೇ ಸಿದ್ದವಾಗುತ್ತದೆ. ನಮ್ಮಲ್ಲಿ ಕಡಲತೀರದಲ್ಲಿ ಒಂದು ಜಟ್ಗ ದೇವರಿದ್ದಾರೆ. ಅವರಿಗೂ ಈ ಕಾಳ ಭೈರವನಿಗೂ ಒಂದು ಸಾಮ್ಯವೆಂದರೆ ಇಬ್ಬರಿಗೂ ಪ್ರಾಣಿ ಬಲಿ ಇಲ್ಲ. ಮತ್ತು ಇಬ್ಬರಿಗೂ ಭಕ್ತರು ಕಾಯಿಲೆ ಕಾಸರೆಯ ನಿವಾರಣೆಗಾಗಿ “ವಡೆ” ಗಳ ಹಾರ ಅರ್ಪಿಸುತ್ತಾರೆ.

ಜಟ್ಗ ದೇವರಿಗೆ ಮೂರೂರು, ಕರ್ಕಿ ಕಡೆಗೆ ವಿಶೇಷ ನೈವೇದ್ಯ ಹಲಸಿನ ಹಣ್ಣು. ಅನೇಕ ಮನೆಗಳಲ್ಲಿ ಹಲಸು ಬೆಳೆದಾಗ ಮೊದಲು ಅವರು ನಡೆದುಕೊಳ್ಳುವ ಜಟ್ಗನಿಗೆ ನೈವೇದ್ಯ ಮಾಡಿದ ಹೊರತು ಮನೆ ಮಂದಿ ತಿನ್ನುವುದಿಲ್ಲ [ ಇಡಿಯ ಹಲಸನ್ನೇ ಬಿರಿದು ಕೊಡುತ್ತಾರೆ. ಕೆಲವೆಡೆ ಹಲಸಿನ ಕಡಬು ಮಾಡಿ ಅರ್ಪಿಸುತ್ತಾರೆ – ಗಣಪತಿಗೆ ಕೊಟ್ಟೆ (ಇಡ್ಲಿ) ಪೂಜೆ ಕೊಡುವಂತೆ].

ಆದರೆ ಜಟ್ಗನಿಗೆ ಹೀಗೆ ನಿರಾಮಿಷ ನೈವೇದ್ಯ ಸಾರ್ವತ್ರಿಕವಲ್ಲ. ನಮ್ಮಲ್ಲಿಯ ಹಿಂದೆ ಹೇಳಿದ ಗಡಿಗಂಬ ಜಟ್ಗ, ತದಡಿಯ ಅಬ್ಬ ಜಟ್ಗ ಮುಂತಾದ ಜಟ್ಗ ದೇವರುಗಳಿಗೆ ಅವರ ಸುತ್ತಲಿನ ಶೂದ್ರ ಸಮುದಾಯಗಳಿಂದ ಕೇವಲ ಕುರಿ – ಕೋಳಿಗಳ ಬಲಿಯೇ ಸಲ್ಲುತ್ತದೆ. ಹೀಗೆ ಹಣ್ಣು ಕಾಯಿಗಳ ನೈವೇದ್ಯ “ಉಪಾರ” (ಉಪಹಾರ) ಮತ್ತು ಕುರಿ ಕೋಳಿಗಳ ಬಲಿ “ಆವಾರಿ” ಎಂದು ಪ್ರಸಿದ್ಧ.

ಇಂಥ ಜಟ್ಗ ಹಳ್ಳಿಗಾಡಿನಲ್ಲಿ ಕತ್ತಲೆ ರಾತ್ರಿಯಲ್ಲಿ ಹಲವರಿಗೆ ಕಾಣಿಸಿಕೊಂಡುದುಂಟು. ಆಗ ಅವನು ಕುದುರೆ ಏರಿ ಕೈಯಲ್ಲಿ ಕತ್ತಿ ಹಿಡಿದು ಹೊರಟಂತೆ ಭಾಸ ! ಇದು ಜಟ್ಟಿಗನ ವೀರ ಭಂಗಿಗೆ ಸರಿ ಹೊಂದುತ್ತದೆ. ಇದೇ ಬಗೆಯ ಪೂಜೆ ಬಲಿಕೊಳ್ಳುವ ಇನ್ನೆರಡು ದೈವತಗಳಿವೆ. ಅವು “ಬಂಟ” ಮತ್ತು “ಬೀರ” ಆದರೆ ಒಂದು ಭೇದ. ಜಟ್ಗ ಮತ್ತು ಬಂಟ ಪರ್ಯಾಯ ನಾಮಗಳು ಮತ್ತು ರೂಪಗಳು. ಆದರೆ ಭೀರನ ರೂಪ ಬೇರೆ. ಬೀರನಿಗೆ ಬರೇ ಒಂದು ಗುತ್ತ ಅಥವಾ “ಕಲ್ಲಂಬ” ಸಂಕೇತವಲ್ಲ. ಅವನಿಗೆ ಒಂದು ವಿಗ್ರಹವಿರುತ್ತದೆ – ಶಿಲೆಯ ಹಲಿಗೆಯಲ್ಲಿ ಕೆತ್ತಿದ್ದು. ಅವನ ಕೈಯಲ್ಲಿ ಕತ್ತಿಯೋ ಬಿಲ್ಲು – ಬಾಣವೋ ಸೊಂಟಕ್ಕೆ ಖಡ್ಗವೋ ಇರುತ್ತದೆ. ಕೆಲವು “ಬೀರ” ರ ಹೆಗಲಿಗೆ ಜನಿವಾರವೂ ಇರುತ್ತದೆ ! ಇನ್ನೂ ಒಂದು ಭೇದವೆಂದರೆ ಬೀರ ಸಾಮಾನ್ಯವಾಗಿ ಹಿರಿಯ ಗ್ರಾಮದೇವತೆಯ ೯ ಅಮ್ಮನವರ) ಪರಿವಾರಕ್ಕೆ ಸೇರಿರುವದುಂಟು. ಜಟಗನು ಬಿಡಿಬಂಟ – ಏಕಾಂಗಿ. ಕೆಲವೆಡೆ ಅವನಿಗೆ ಒಬ್ಬ ಹಸ್ತಕನೂ ಇರುತ್ತಾನೆ. ಆತ ಹೆಚ್ಚಾಗಿ ಹೊಲೆಯಟ್ರ, ಗಟ್ಟದ ಹೊನ್ನ ಇತ್ಯಾದಿ ಹೆಸರಿನವ. ಹಾಗೂ ಹಳ್ಳೇರ. ಆಗೇರರು ಮುಕ್ರಿ ಸಮಾಜಗಳು ನಡೆದುಕೊಳ್ಳುವ ದೈವ.

ಈ ಜಟ್ಗಂದಿರು ಮೂಲತಃ ಹುತಾತ್ಮರು, ಕ್ಷೇತ್ರಪಾಲರು. ಈ ಭೂತನಾಥರು ಕ್ರಮೇಣ ಜನಾದರಣೆಯಲ್ಲಿ ಮೇಲಕ್ಕೇರುತ್ತ ದೈವತ್ವ ಪಡೆದವರು. ಬೀರ ವೀರಭದ್ರನಾದನು, ಭೈರವ ಕಾಳಭೈರವನಾದನು. ಶಿವಸ್ಥಾನಗಳಲ್ಲಿ ಉಗ್ರ ನಿಗ್ರಹಾನುಗ್ರಹ ಸಾಮರ್ಥ್ಯದ ವಿಶಿಷ್ಟ ದೈವತಗಳಾಗಿ ಶ್ರೀಮದೂರ್ಚಿತರಾಗಿ ಮೆರೆದರು. ಇದರ ಒಂದು ಸುಪ್ರಸಿದ್ಧ ಉದಾಹರಣೆ ಪಂಡರಪುರದ ವಿಠ್ಠಲ. ಅವನ ಸ್ವರೂಪದ ಬಗೆಗೆ ಮಹಾರಾಷ್ಟ್ರದ ಸಂಶೋಧಕರಲ್ಲಿ ದೊಡ್ಡವಾದವೇ ನಡೆದಿದೆ. ಮೂಲತಃ ವಿಠ್ಠಲ ಒಂದು “ವೀರಗಳ್” (ವೀರಗಲ್ಲು). ಅದಕ್ಕೇ ಮಹತ್ವ ಬಂದು ಮಹಾತ್ಮ್ಯಾ ಬೆಳೆದು ವಿಠ್ಠಲ ದೈವತವಾಯಿತು. ಆತ ಜಗಜೇಠಿ (ಜಗಜಟ್ಟಿ) ಈ ವಿಠ್ಠಲನ ಜನಪ್ರಿಯ ಹೆಸರು “ಪಾಂಡುರಂಗ” ಆದರೆ ಅನ್ವರ್ಥಕವಾಗಿ (ಪಾಂಡುರ + ಅಂಗ) ಇದು ಗೌರ ಕಾಯ ಶಿವನ ಹೆಸರು. ಪಂಢರಪುರದಲ್ಲಿ ವಿಠ್ಠಲಮಂದಿರದ ಆವಾರದಲ್ಲಿ ಈ ಈಶ್ವರಗುಡಿ ಇಂದಿಗೂ ಇದೆ. ಆದರೆ ಅಲ್ಲಿ ಈ ಜಗಜಟ್ಟಿಯ ಪ್ರತಾಪ ಪ್ರಸಿದ್ದಿಗಳೇ ಮೇಲಾಗಿ ಆ ದೇವರ ಹೆಸರು ಈ “ವೀರ ವಿಠ್ಠಲ” ಸೆಳೆದು ತನ್ನದಾಗಿಸಿಕೊಂಡ ! ಇರಲಿ.

ನಮ್ಮ ಸೀಮೆಯಲ್ಲಿ ಜಟಗನ ಕಲ್ಲುಗಳು ಹೇರಳ ಶರಾವತಿ ಹೊಳೆಯಾಚೆಯ ಹಳ್ಳಿಗಳಲ್ಲಿ ಅನೇಕ ಕಡೆಗೆ ಕಲ್ಲಿನ ಬದಲು ಮರದ ಜಟಗಗಳಿವೆ. ಷೆಟ್ಕೋನಾಕಾರದ ಮರದ ಸಣ್ಣ ಕಂಬಗಳು. ಅವುಗಳ  ತಲೆ ಕಿರೀಟದಂತೆ. ಅರ್ಥಾತ್ ಅವುಗಳನ್ನು ಕೆಲವು ವರ್ಷಗಳ ಮೇಲೆ ಬದಲಿಸಿ ಹೊಸ ಕಂಬಗಳನ್ನು ಸ್ಥಾಪಿಸಬೇಕಾಗುತ್ತದೆ. ರಾಮಕಾಲ ಜಟ್ಗ, ಜೈನಜಟ್ಗ ಇತ್ಯಾದಿ ಅವರ ಹೆಸರುಗಳು. ಇಲ್ಲಯೂ ಜೈನ ಹಾಗೂ ಬ್ರಾಹ್ಮಣ ಮನೆತನಗಳ ಹಾಗೂ ಮತ ಪ್ರಭಾವದ ವಲಯಕ್ಕೆ ಒಳಪಟ್ಟವುಗಳಿಗೆ ಪಶುಬಲಿ ಇರುವುದಿಲ್ಲ. ಈ ಜಟಿಕಗಳಿಗೆ ಶರಾವತಿಯ ಈಚೆಯ ಸೀಮೆಯ ಜಟಗಗಳಂತೆ ಹಲಸಿನ ನೈವೇದ್ಯ ಮುಖ್ಯವಲ್ಲ. ಈ ಜಟ್ಗಗಂಬಗಳಿಗೆ ವಾರ್ಷಿಕ ಪೂಜೆ ಹಳ್ಳಿಯ ಆಯಾ ಮನೆತನಗಳಿಂದ ಸಲ್ಲುತ್ತದೆ.

ಇಂಥ ಬಹುಶಃ ಎಲ್ಲ ಜಟ್ಗಗಳ ಎಡೆಗಳಲ್ಲಿಯೂ ಹುತ್ತವುರುತ್ತವೆ. ಅಲ್ಲಿ ನಾಗ ಪ್ರತಿಷ್ಠೆ, ನಾಗಪೂಜೆಯು ನಡೆಯುತ್ತದೆ. ಅಲ್ಲದೆ ಕೆಲವೆಡೆ ಜಟ್ಗವಿರುವ ಎಡೆಗೆ “ನಾಗಬಲ್ಲೆ” ಎನ್ನುತ್ತಾರೆ. ಅಂದರೆ ಜಟ್ಗ ಒಂದು ವಿಶಾಲವೂ ದಟ್ಟವೂ ಆದ ನೆಳಲು ಚೆಲ್ಲುವ ಪೊದೆಯ ಮರದ ಟಡಿಗೆ ನಿಂತಿರುತ್ತದೆ. ಈ ಹಸಿರು ಚಪ್ಪರಕ್ಕೇ “ನಾಗಬಲೆ” ಎನ್ನುತ್ತಾರೆ.

ಚೌಡಿ ಹೆಣ್ಣು Spirit. ಇದೊಂದು phantom ಆದರೆ of Delight. ಜಟ್ಗನಂತೆಯೇ ಇದು ಹಳ್ಳಿ ಹಳ್ಳಿಗೂ ತುಂಬ ಪ್ರಚಲಿತ. ಜಟ್ಗನಂತೆ ಈ ದೈವಕ್ಕೂ “ನಡೆ” ಇದೆ. ಒಮದೊಂದಕ್ಕೆ ಅದರದೇ zone ಇದ್ದಂತೆ. ಆದರೆ ಜಟ್ಗನಿಗಿಂತ ಚೌಂಡಿ ಇಲ್ಲವೆ ಚೌಡಿ ಬಹಳ ಕಡೆಗೆ ಬಹಳ ಮಂದಿಗೆ ಬಹಳ ಸಲ ಕಾಣಿಸಿಕೊಳ್ಳುತ್ತಾಳೆ. ಅವಳು ಕೆದರಿದ ಮಂಡೆಬಿಟ್ಟು ಬಿಳಿಸೀರೆ ತೊಟ್ಟು ಬೆಳದಿಂಗಳ ರಾತ್ರಿ ಅಲೆದಾಡುತ್ತಾಳೆ. ಕೆಲಸಲ ಎರಡೂ ಕೈಗಳಲ್ಲಿ ಕೊಳ್ಳಿ ಉರಿಯುತ್ತವೆ. ಹಣೆ ತುಂಬ ಕುಂಕುಮ, ಉಗ್ರ ಮುಖಚರ್ಯೆ ಊರಿಂದೂರಿಗೂ ಇದೇ ಆಕೃತಿ ಸಾಮ್ಯ.

ನಾನು ಹಲವಾರು ಚೌಡಿ ಕತೆಗಳನ್ನು ಕಲೆಹಾಕಿ ವಿಶ್ಲೇಷಿಸಿ ನೋಡಿದ್ದೇನೆ. ಅವುಗಳಿಂದ ಹೊರಡುವ ಅದರ ಚೇಷ್ಟೆ – ಚರ್ಯೆಗಳು ಒಂದೇ ರೀತಿ ಚೌಂಡಿ ಗೋಕರ್ಣ ಮಂಡಲದ್ದಿರಲಿ, ಹೊರ ಸೀಮೆಯದಿರಲಿ ಅವಳ ಚಟುವಟಿಕೆ ಹೆಚ್ಚಾಗಿ (ಹೆಣ್ಣು) ಮಕ್ಕಳನ್ನು ಎತ್ತಿಕೊಂಡು ಒಯ್ದು ಮರದ ಮೇಲೆ ಇಟ್ಟುಕೊಳ್ಳುವದು, ಮನೆಗಳ ಮೇಲೆ ತೂರುವುದು, ಅಡಿಗೆ ಪಾತ್ರೆಗಳಲ್ಲಿ ಹೊಲಸು ಚೆಲ್ಲುವುದು ಇತ್ಯಾದಿ. ಚೌಡಿ ತುಂಬ ತುಂಟಳು naughty and impish. ಇಲ್ಲಿ ಒಂದು ವಿಶೇಷ. ಎಷ್ಟೇ ಉಪದ್ರವ ಕೊಟ್ಟರೂ ಒಟ್ಟಿನಲ್ಲಿ ಚೌಡಿ ಪ್ರಾಣ ಘಾತಕವಲ್ಲ. ಕಂಗೆಡಿಸುತ್ತಾಳೆ. ಆದರೆ ಕೊಲ್ಲುವುದಿಲ್ಲ.

ಆದರೆ ಈ ನಿಯಮಕ್ಕೂ ನಿಯಮವಿಲ್ಲದಿಲ್ಲ. “ಒಮ್ಮೊಲ್ತಿ” ಎಂಬ ಒಂದೇ ಮೊಲೆಯ ಚೌಡಿ ಪ್ರಾಣತೆಗೆಯುತ್ತಾಳೆ. ಏಕಾಕಿ ಪುರುಷರನ್ನು ಸಂಧಿಸಿ ಅವರಿಂದ ಸಣ್ಣ ಅಡಿಕೆ ಬೇಡಿ ಅದನ್ನು ನೆಲಕ್ಕೆ ಬೀಳಿಸಿ ಅದನ್ನು ಹೆಕ್ಕಲು ಆತ ಬಗ್ಗಿದಾಗ ಬೆನ್ನಿಗೆ ಗುದ್ದಿ) ಕೆಲವು ಕತೆಗಳಲ್ಲಿ ಆ ಒಂದೇ ಮೊಲೆಯಿಂದಲೇ ಬಡಿದು !) ಕೊಲ್ಲುತ್ತಾಳೆ ! ಈ ಒಮ್ಮೊಲತಿ ನಮ್ಮ ಮಂಡಳದ ಹೊಸಕೇರಿ – ಮಳಲೆ ಭಾಗದಲ್ಲಿ ಇದ್ದಂತೆ ದುಗ್ಗೂರ – ಕರ್ಕಿಯ ಕಡೆಗೂ ಇದ್ದಾಳೆ. ಇತ್ತ ಬಾಡ, ಕಾಗಾಲ, ಅಘನಾಶಿನಿ ಕಡೆಗು  ಇದ್ದಾಳಂತೆ ! ಕೆಲವು ಕತೆಗಳಲ್ಲಿ ಅವಳ ಅಂಗೈಗೆ ತೂತು. ಅದರೊಳಗಿಂದ ಅಡಿಕೆ ಸುಣ್ಣ ಕೆಳಗೆ ಜಾರುತ್ತದೆ. ಈ ಒಂದು ಮೊಲೆಯ ಹೆಣ್ಣು ದೈವದ ಉಪಟಳ ಈ ರೀತಿ ಕರಾವಳಿ ಗುಂಟದ ಹಲವು ಹಳ್ಳಿಗಳಲ್ಲಿ ಕೇಳಿ ಬರುವುದೂ ಒಂದು ಸೋಜಿಗ. ಈ “ಒಮ್ಮೊಲ್ತಿ” ಯ ಹೆಸರು ಕೇಳಿದಾಗ ಪ್ರಸಿದ್ಧ ಮಧುರೆಯ ಮೀನಾಕ್ಷಿ ದೇವಿಯ ನೆನಪು ಬರುತ್ತದೆ ! ಆಕೆ ಪುರಾಣದ ಕತೆಯಂತೆ “ಮುಮ್ಮೊಲ್ತಿ” – ಮೂರು ಮೊಲೆಯುಳ್ಳವಳು. ಶಿವನನ್ನು ಇದುರಿಸಿದಾಗ ಒಂದು ಮೊಲೆ ಮಾಯವಾಯ್ತಂತೆ. ನಮ್ಮ ಹೊಸಕೇರಿ ಹಿತ್ತಲಮಕ್ಕಿ ರಸ್ತೆಯಲ್ಲಿ ಗಸ್ತು ಹಾಕುವ ಈ ಚೌಡಿಯನ್ನು ” ಹೆಮ್ಮೊಲ್ತಿ” ಎಂದು ಕರೆಯುತ್ತಾರೆ.

ಯಾರಿಗೆ ಹೇಗೊ ಕಾಣಿಸಿಕೊಳ್ಳಲಿ, ಈ ಚೌಡಿಗೆ ಒಂದು ವಿಗ್ರಹವಿಲ್ಲ. ಅದೊಂದು ಛಾಯಾಕೃತಿ. ಎಲ್ಲೇ ಇರಲಿ, ಆಕೆ ಒಂದು ಮರದಲ್ಲಿ ಇರುತ್ತಾಳೆ. ಮರಕ್ಕೆ ಹತ್ತಿರವೇ ಒಂದು ಬಾವಿಯೋ ಕೆರೆಯೋ ಇರುತ್ತದೆ. ಚೌಡಿ ಅಲ್ಲಿ ಮಿಂದಾಗ ಅಥವಾ ಆ ಸ್ಥಾನ ಅಶುಚಿಯಾದಾಗ ಅಲ್ಲಿಯ ನೀರೆಲ್ಲ ರಾಡಿಯಾಗುತ್ತದೆ. ಚೌಡಿ ಆಶ್ರಯಿಸುವ ಮರ ಹರಚ್ಚಾಗಿ ಅರಳಿ (ಅಶ್ವತ್ಥ) ಮರ. ಆದರೆ ಕೆಲವೆಡೆ ಚೌಡಿ ಇದ್ದಲ್ಲಿ ಗೋವೆ ಸಂಪಿಗೆ ಮರ ಇರುತ್ತದೆ. ಅಥವಾ ನಡುತ್ತಾರೆ. ಅಥವಾ ಚೌಡಿಯ ಸ್ಥಾನ ಒಮದು “ಗುತ್ತ” ಅಲ್ಲಿಯೂ ಹತ್ತಿರದಲ್ಲಿ ಹುತ್ತವಿರುವ ವಾಡಿಕೆ. ಒಟ್ಟಾರೆ ಜಟ್ಗ ಮತ್ತು ಚೌಡಿಗೆ ಎಲ್ಲೂ ಗುಡಿ ಇರುವುದಿಲ್ಲ. ಅವು ಬಯಲು ಜಾನುಗಳಲ್ಲಿ ನಿಂತ ದೈವಗಳು.

ಚೌಡಿ ಆಶ್ರಯಿಸಿದ್ದ ಮರ ಕಡಿದರೆ, ಆಕೆ ಕೂಡ್ರುವ ಬಂಡೆ ಒಡೆದರೆ ಆಕೆಗೆ ಏನಾದರೂ ಅಪಚಾರ ಉಪದ್ರವ ಆದರೆ ಅವಳು ಅಕ್ರೋಶ ಉಪದ್ರವ ಮಾಡುತ್ತಾಳೆ. ರಾತ್ರಿಯೆಲ್ಲ ಅಳುತ್ತಿರುತ್ತಾಳೆ. ಒಂದು ಹೆಣ್ಣು ದನಿಯ ಅಳಲು ಆ ಚೌಡಿ ಇದ್ದ ಎಡೆಯಿಂದ ಕೇಳಿಬರುತ್ತದೆ – ಎಂಬುದು ಜಾಣಪದ ಜನಶ್ರುತಿ. ಚೌಡಿ ಒಂದು ಅಪಮೃತ್ಯುವಿಗೋ ಅಕಾಲ ಮೃತ್ಯುವಿಗೋ ಬಲಿಯಾದ ಅತೃಪ್ತವಾಸನಾ – ಬದ್ಧ ಎಳೆಯ ಹಣ್ಣು ಜೀವ. ಅದು ಹೀಗೆ ಪ್ರೇತಾವಸ್ಥೆಯಲ್ಲಿ ಅಂತರಾಳದಲ್ಲಿ ಅಲೆದಾಡುತ್ತಿರುತ್ತದೆಂದು ಗ್ರಾಮೀಣ ಮನಸ್ಸಿನಲ್ಲಿ ಆಳವಾಗಿ ಬೇರೂರಿದ ನಂಬಿಗೆ.

ದೇವಿಯ ಹಲವು ನಾಮಗಳಲ್ಲಿ “ಕಾತ್ಯಾಯನೀ” ಎಂಬುದೊಂದು ಹೆಸರು ಪ್ರಸಿದ್ದ. ಕಾತ್ಯಾಯನಿಯೇ ದುರ್ಗೆ, ಗೌರಿ. ಗೌರಿ ಅಂದರೆ ಇನ್ನೂ ಋತುಮತಿಯಾಗದ ಕಿಶೋರಿ (೮ – ೯ ವರ್ಷದ ಕನ್ಯೆ) ಎಂದು ಒಂದು ಅರ್ಥ. ನಮ್ಮಲ್ಲಿ ನವರಾತ್ರಿಯ “ನಕ್ತ” ಗಳಲ್ಲಿ “ದುರ್ಗಿ” ಯರನ್ನು ಕರೆದು ಊಟ ಹಾಕಿ ಹೂವು, ಅರಿಷಿಣ, ಕುಂಕುಮ ಕೊಡುತ್ತಾರೆ. ಈ ದುರ್ಗಿಗಳೂ ಇಂಥ ಬಾಲಿಕೆಯರೇ ಸರಿ. “ಕಾತ್ಯಾಯನೀ” ಶಬ್ದಕ್ಕೇ ಒಂದು ವಿಶಿಷ್ಟ ಅರ್ಥವೂ ಇದೆ – ನಡು ಹರೆಯದ ವಿಧವೆ, ಕೆಂಪು ಬಟ್ಟೆ ಉಡುವವಳು ! ಇಲ್ಲಿ ತರುಣ ಪ್ರೌಢ ವಿಧವೆ, ಅತೃಪ್ತಿ ಜೀವಿ ಎಂದು ಬೇರೆ ಹೇಳಬೇಕಾಗಿಲ್ಲ.

ಇನ್ನೂ ಸೂಕ್ಷ್ಮಕ್ಕೆ ಹೋದರೆ ಕಾತ್ಯಾಯನ – ನೀ ಈ ಶಬ್ದ ಒಂದು ಮೂಲ ಶಬ್ದವಲ್ಲ. ಅದು ಸಮಸ್ತಪದವೆಂದು ಗೊತ್ತಾಗುತ್ತದೆ. “ಕತಿ + ಅಯನ” “ಕತಿ” ಎಂದರೆ ಎಷ್ಟು ಅಥವಾ ಕೆಲವು. “ಅಯನ” ಎಂದರೆ ಸಂಚಾರ, ಅದರ ಮಾರ್ಗ, ಪಥ, “ನಡೆ” ಈ ಕೆಲವು ನಡೆಯುಳ್ಳವನು “ಕಾತ್ಯಾಯನ”, ಉಳ್ಳವನು “ಕಾತ್ಯಾಯನೀ” (“ಕಾತ್ಯಾಯನ” ಹೆಸರು ಅಪರೂಪದ್ದು. ಆದರೂ ಸಂಸ್ಕೃತಿದಲ್ಲಿ ಇದೆ. ಪಾಣಿನಿಯ ವ್ಯಾಕರಣಕ್ಕೆ ಭಾಷ್ಯ ಬರೆದ ವರ ಋಷಿಗೆ ಕಾತ್ಯಾಯನ ಎಂಬ ಹೆಸರಿತ್ತು.) ಅಂದಾಗ ಈ ಹೆಸರುಗಳು ನಮ್ಮ ಜಟ್ಗ – ಚೌಡಿಗಳ ಸಂಸ್ಕೃತೀಕರಣವೆನ್ನಬಹುದೇ? ಇನ್ನೂ ಒಂದು ನಿಲುಕು. “ಕತ” ಎಂದರೆ ಒಂದು ಬಗೆಯ ರಾಡಿನೀರು ಶುದ್ಧ ಮಾಡುವ ಕಾಯಿ. (ಕತಕ ವೃಕ್ಷದ ಆ ದೃಷ್ಟಾಂತ ಮನುಸ್ಮೃತಿಯಲ್ಲಿ ಬಂದಿದೆ.) ಈ “ಕತ” ವೆಂಬ ಮರವನ್ನು ಆಶ್ರಯಿಸಿದ ದೈವ ಕಾತ್ಯಾಯನಿಯೆ?

ಈ ಚೌಡಿಗಳ ಸಾಮಾನ್ಯ ಚೇಷ್ಟೆ ಚಟುವಟಿಕೆಗಳನ್ನು ಗಮನಿಸಿದಾಗ ಕೆಲವೊಂದು ಸಾಮ್ಯ ಲಕ್ಷಣಗಳು ಹೊರಡುತ್ತವೆ. ಸಾರ್ವತ್ರಿಕವಾಗಿ ಒಂದೊಂದು ಹಳ್ಳಿಗೂ ಹಲವಾರು ಚೌಡಿಗಳಿರುತ್ತವೆ. ಅವು ಹೆಣ್ಣು  ತೊಂದರೆಗೊಂಡರೆ ಮಕ್ಕಳಂತೆ ಮುಳುಮುಳು ಅಳುತ್ತವೆ. ಹೆಚ್ಚಾಗಿ ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗುತ್ತವೆ. ಒಲಿದರೆ ಮನೆಗೆಲಸ. ಹಿತ್ತಲಗೆಲಸಕ್ಕೆ ಅಣಿಯಾಗುತ್ತವೆ. ತೊಟ್ಟಿಲು ತೂಗುತ್ತವೆ. ಅರಳಿ ಇಲ್ಲವೆ ಬೊಕುಳಿ [ಬಕುಲ] ಮರದಲ್ಲಿ ಇರುತ್ತವೆ. ಮುನಿದರೆ ಹೆಚ್ಚು ಕಡಿಮೆ ಒಂದೇ ಮಾದರಿಯ ಪ್ರತಿಕ್ರಿಯೆ ತೋರುತ್ತವೆ. ಇವೆಲ್ಲ ಒಂದು ಪ್ರೌಢ ಬುದ್ಧಿಯ ಉಪಟಳವಲ್ಲ. ಇವೆಲ್ಲವನ್ನು ಚಿಂತಿಸಿದಾಗ ನನ್ನದೇ ಆದ ಒಂದು theory – ಉಪಪತ್ತಿ – ಈ ಚೌಡಿ ಎಂಬ ಸತ್ವದ ಬಗೆಗೆ ಇಲ್ಲಿ ಬಗೆಗೆ ಇಲ್ಲಿ ಮುಂದಿಡಲು ಬಯಸುತ್ತೇನೆ.

ಅದೆಂದರೆ ನಮ್ಮ ನಾಡಿನಲ್ಲಿ ಅನೇಕ ಕಡೆಗೆ ಪ್ರಾಚೀನ ಕಾಲದಿಂದ – ಇಲ್ಲವೇ ಮಧ್ಯಯುಗದಿಂದೀಚೆಗೆ ಅನ್ನಿ – ಹೆಣ್ಣು ಹುಟ್ಟಿದರೆ ಅದನ್ನು ಕೊಲ್ಲುವ ದುರ್ದೈವಿಯಾದ ಸಂಪ್ರದಾಯವಿತ್ತು. ಅದನ್ನು ಕಂಪನಿ ಸರಕಾರವು ೧೮೩೨ ರಲ್ಲಿ ಒಂದು ವಿಶೇಷ ಕಾನೂನು ಮಾಡಿ ಕಟ್ಟಿನಿಟ್ಟಾಗಿ ಪ್ರತಿಬಂಧಿಸಿತು. [ಮುಂದೆ “ಸತಿ” ಪದ್ಧತಿಯನ್ನು ೧೮೫೬ ರಲ್ಲಿ ವಿಲಿಯಂ ಬೆಂಟಿಂಕ್ ಕಾನೂನಿನಿಂದ ಪ್ರತಿಬಂಧಿಸಿದಂತೆ.] ಮುಂದೆ ಪ್ರಾಯಕ್ಕೆ ಬಂದ ಮೇಲೆ ಈ ಹೆಣ್ಣು ಮಕ್ಕಳ ರಕ್ಷಣೆ ತಾಯ್ತಂದೆಯರಿಗೆ ಅಂದಿನ ಗಂಡಾಂತರ ದಿನಮಾನಗಳಲ್ಲಿ ಒಂದು ದೊಡ್ಡ ತೊಡಕಾಗಿತ್ತು. ಅಂತೆಯೇ ಕೆಲವು ತೀರ ಬಡ ಹಾಗೂ ಕೆಳತರಗತಿಯ ಕುಲಗಳಲ್ಲಿ ಈ ದುಷ್ಟ ಸಂಪ್ರದಾಯ – “ಕನ್ಯಾಬಲಿ” – ವಾಡಿಕೆಯಾಗಿತ್ತು. [ಈ ಸಂಪ್ರದಾಯ ಮಹಮ್ಮದ ಪೈಗಂಬರನ ಮುಂಚೆ ಅರಬಸ್ತಾನದಲ್ಲಿಯೂ ಇತ್ತು.] ಹುಟ್ಟಿದೊಡನೆ ಅಥವಾ ಕಿರಿ ವಯಸ್ಸಿನಲ್ಲಿಯೇ ಈ ದುರ್ದೈವಿ ಹೆಣ್ಣುಗಳನ್ನು ಬಲಿಕೊಡಲಾಗುತ್ತಿತ್ತು. ಇಂಥ ಹುತಾತ್ಮ ಹೆಣ್ಣುಗಳ ವಾಸನಾ ಬದ್ಧ ಸಂತ್ರಸ್ತ ಅತೃಪ್ತ ಜೀವಿಗಳು ಅವರ ಮನೆಗಳ ಪರಿಸರದಲ್ಲಿಯೇ ಸುಳಿದಾಡುತ್ತ ಉಪದ್ರವ ಕೊಡುತ್ತ ಉಳಿಯುವವೆಂಬ ಒಂದು ನಂಬಿಗೆಯೂ ಕಂಗೆಡಿಸುವ ಹೆದರಿಕೆಯೂ ಜಾನಪದ ಹೃದಯದಾಳದಲ್ಲಿ ತಲೆಮಾರಿನಿಂದ ತಲೆಮಾರಿಗೆ ಊರ್ಜಿತವಾಗಿ ಜಾಗೃತವಾಗಿ ನಡೆದು ಬಂದರೆ ಅದೇನು ಆಶ್ಚರ್ಯವೂ ಅಲ್ಲ. ಅಸ್ವಾಭಾವಿಕವೂ ಅಲ್ಲ. ಇದೂ ಅಲ್ಲದೆ ಇಂದಿಗಿಂತ ಅಂದಿನ ಕಾಲದಲ್ಲಿ ಯೋಗ್ಯ ವೈದ್ಯಕೀಯ ಚಿಕಿತ್ಸೆ ಶುಶ್ರೂಷೆಗಳಿಲ್ಲದೆ ಈ ದೀನ ದಲಿತ ದರಿದ್ರ ಕುಲಗಳಲ್ಲಿ ಹೆಣ್ಣು ಸಂತತಿ ನಿರ್ಲಕ್ಷ್ಯದಿಂದಾಗಿ ಅಕಾಲ ಮೃತ್ಯುವಿಗೆ ತುತ್ತಾಗುವುದು ಹೆಚ್ಚಾಗಿತ್ತು. ಅಂಥ ಹೆಣ್ಣುಗಳೂ ಗ್ರಾಮೀಣ ಸಂಸ್ಕೃತಿಯಲ್ಲಿ ಸ್ಥಾಯಿಯಾದ ಸ್ಮೃತಿಯಲ್ಲಿ ಹೀಗೆ “ಪ್ರೇತ” ವೋ ಪಿಶಾಚಿಯೋ ಆಗಿ ಆಯಾ ಮನೆಗಳನ್ನೋ ಕೇರಿಗಳನ್ನೊ ಕಾಡುವದೆಂಬ ಭಾವನೆ ಸಾರ್ವತ್ರಿಕವಾಗಿತ್ತು. ನನ್ನ ಕಲ್ಪನೆಯಂತೆ ನಮ್ಮಲ್ಲಿಯ ಈ ವಿಪುಲವಾದ ಚೌಡಿಗಳ ಉತ್ತತ್ತಿಗೆ ಹಾಗೂ ಅಸ್ತಿತ್ವಕ್ಕೆ ಇದೇ ಒಂದು ಬಲವಾದ ಕಾರಣವೆಂದರೆ ಸುಳ್ಳಾದೀತೇ?

ಅಂದು ಇನ್ನೂ ಒಂದು ಕೆಟ್ಟ ಪದ್ಧತಿ ಇತ್ತು. ಸಂಸಾರಕ್ಕೆ ಹೇಸಿ ರೋಸಿ ಬೇಗನೇ ಮೋಕ್ಷಕ್ಕೆ ಹೋಗಬೇಕೆಂದು ಅನೇಕ ಭಾವಿಕ ವಿಕೃತ ವ್ಯಕ್ತಿಗಳು ಪುಣ್ಯ ಕ್ಷೇತ್ರಗಳಲ್ಲಿಯೋ ಗಂಗೆಯಂಥ ಪವಿತ್ರ ನದಿಗಳಲ್ಲಿಯೋ ಬೆಟ್ಟದ ತುದಿಯಿಂದಲೋ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇದೊಂದು ಬಗೆಯ ಧಾರ್ಮಿಕ ಆತ್ಮ ಬಲಿ. [ಹಿರಿಯ ವಿರಕ್ತರು ಪ್ರಾಯೋಪವೇಶನವನ್ನೋ ಅನ್ನಕಾಷ್ಠ ಭಕ್ಷಣವನ್ನೋ ಮಾಡಿ ದೇಹವಿಡುವಂತೆ !] ಇಂಥವರೆಲ್ಲ ಸತ್ತರೂ ಸತ್ತಿಲ್ಲ. ಅವರ ಪ್ರೇತಾತ್ಮಗಳು ನಮ್ಮ ನಡುವೆ ಸುಳಿದಾಡುತ್ತಿವೆ – ಎಂಬ ಒಂದು ತೀವ್ರ ಭೀತಿ – ಭಾವನೆ ಮುಗ್ಧ ಗ್ರಾಮೀಣ ಜನರಲ್ಲಿ ದೃಢ ಬದ್ಧವಾಗಿ ಉಳಿಯುವುದೂ ಅಸಹಜವಲ್ಲ.

ತಾವು ನೋಡಿದ್ದೇವೆಂದು ನನಗೆ ಹೇಳಿದ ಕೆಲವು ಗೆಳೆಯರು ಅಂಥ ಚೌಡಿಯ ರೂಪವನ್ನು ವರ್ಣಿಸಿದಾಗ ಅವಳ ಮೋರೆ ತೀರ ಚಿಕ್ಕದೆಂದೂ ಒಬ್ಬ ಚೌಡಿ ಗದ್ದೆ ಕಾಯಲು ಬಂದ ಇಬ್ಬ ಆಳಿನೊಂದಿಗೆ ಆತನ ಮಾಳದಲ್ಲಿ ಮಲಗುತ್ತಿದ್ದಳು – ಎಂದೆಲ್ಲಾ ಹೇಳಿದ್ದಾರೆ. ಈ ವಿವರಗಳು ನನ್ನ ಊಹೆಗಳನ್ನು ಬಲಪಡಿಸುವಂತಿವೆ.

ಹಿಂದೆ ಹೇಳಿದಂತೆ ಜಟ್ಗ, ಬೀರ, ಬಂಟ ಇವರ ಪ್ರಭೇದಗಳಲ್ಲಿಯೂ ಒಂದು ಸಾಮ್ಯವಿರುವಂತೆ, ಚೌಡಿ ಮತ್ತು ಮಾಸ್ತಿಗಳಲ್ಲಿಯೂ ಅಂಥ ಸಾಮ್ಯವಿದೆ. ಆದರೂ ವಿಶೇಷ ವೈಶಿಷ್ಟ್ಯವೂ ಇದೆ.

ಮಾಸ್ತಿಯೂ  ಚೌಡಿಯಂತೆ ಒಂದು ಹೆಣ್ಣು ದೈವ. ಆದರೆ ಇದು ಹೆಚ್ಚು ಸಾತ್ವಿಕ, ಪ್ರತಿಷ್ಠಿತ ಮತ್ತು ಪೂಜ್ಯ. ಚೌಡಿಯ ಉಪಟಳದ ಕುಖ್ಯಾತಿ ಮಾಸ್ತಿಗಲ್ಲುಗಳಿಗೆ ಇಲ್ಲ. ಅಲ್ಲದೆ ಮಾಸ್ತಿಯು ಬರೆ ಗುತ್ತ ಅಥವಾ ಕಲ್ಲು ಅಲ್ಲ. ಅದೊಂದು ಶಿಲಾವಿಗ್ರಹ. ಶಿಲೆಯ ಹಲಗೆಯ ಮೇಲೆ ಉಬ್ಬು ಶಿಲ್ಪ ಕೆಲವೆಡೆ ವೀರಗಲ್ಲಿನಂತೆಯೇ ಸತಿ – ಸಹಗಮನದ ಎಲ್ಲ ಹಂತಗಳ ಫಲಕವನ್ನು ಕೆತ್ತಿ ಕಾಣಿಸಿದ ಶಿಲೆ. ಸಂಪ್ರದಾಯದಂತೆ ಒಂದು ಕಾಲದಲ್ಲಿ ಹಿಂದೆ ಸತ್ತು ಹೋದ ಸಾಧ್ವಿಯು ಹೀಗೆ “ಮಾಸ್ತಿ” ಎಂದು ತಲೆತಲಾಂತರಗಳಿಂದ ಪೂಜಿಸಲ್ಪಡುವಳು. ಜಟ್ಗನಂತೆ ಮಾಸ್ತಯೂ ಒಂದು “ಬಲೆ” (ಬಲ್ಲೆ ?) ಯಡಿಗೆ ಹುತ್ತದ ಹತ್ತಿರ ನಿಂತಿರುತ್ತಾಳೆ. ಸಹಗಮನ ಸಾಮಾನ್ಯವಾಗಿ ತ್ರೈವರ್ಣಿಕರಲ್ಲಿಯೇ ರೂಢವಾಗಿತ್ತು. ಆದ್ದರಿಂದ ಮಾಸ್ತಿ ದೈವ ಮನೆತನಸ್ಥ ಗೌರವಾನ್ವಿತ ಹಾಗೂ ಉಚ್ಚವರ್ಣದವರಿಗೇ – ಅಂದರೆ ಅವರಲ್ಲಿಯ ವಿವಿಧ ಜಾತಿ ಉಪಜಾತಿ ವರ್ಗಗಳಿಗೇ – ಆರಾಧ್ಯ. ಚೌಡಿಯ ಅಂತಸ್ತು ಮಾಸ್ತಿಗಿಂತ ಕೆಳಗೆ.

ಊರು ಕೇರಿಗಳಲ್ಲಿ ವಿವಿಕ್ತ ಸ್ಥಾನಗಳಲ್ಲಿ ಮಾಸ್ತಿಕಟ್ಟೆ ಇರುವಂತೆ ಕೆಲವೊಂದು ಮನೆತನಗಳಲ್ಲಿಯೂ ಅವರಿಗೆ ಸಂಬಂಧಪಟ್ಟ ಕಾಲಕ್ರಮದಲ್ಲಿ ವಿಶಿಷ್ಟ ಪೂಜೆ ಸಲ್ಲಿಸಿಕೊಂಡು ಬಂದ ಮಾಸ್ತಿಗಳಿರುತ್ತವೆ. ಉದಾಹರಣೆಗೆ ನನ್ನ ತಾಯಿಯ ತವರು ಮನೆಯ ಕುಲದ ಮೂಲಮನೆತನದ ದೇವರ ಮಂಟಪದಲ್ಲಿ ಇಂದಿಗೂ ಒಂದು ಬೆಳ್ಳಿಯ ಗುಂಡು ಮತ್ತು ಬೆತ್ತದ ಕಟ್ಟಿ ಪೂಜೆ ಪಡೆಯುತ್ತವೆ. ಹಿಂದೆ ಎಂದೋ ಒಮ್ಮೆ ಆ ಕುಲದಲ್ಲಿ ಒಬ್ಬ ಪತಿವ್ರತೆ ಸತಿ ಹೋಗಿದ್ದಳಂತೆ. ಅವಳು ಪತಿಯೊಡನೆ ಚಿತೆಯಲ್ಲಿ ಜೀವಂತ ಸುಟ್ಟು ಬೂದಿಯಾದರೂ ಅವಳ ಕೈಯಲ್ಲಿದ್ದ ನಿಂಬೆಯ ಹಣ್ಣು ಮತ್ತು ಬೆತ್ತದ ಕೋಲು ಅಚ್ಚಳಿಯದಂತೆ ಉಳಿದಿದ್ದವಂತೆ. ಅದನ್ನೇ ಮುಂದೆ ಬೆಳ್ಳಿಯ ಕಟ್ಟು ಹಾಕಿ ಮನೆದೇವರೊಂದಿಗೆ ಇಟ್ಟು ಪೂಜಿಸುತ್ತ ಬಂದರಂತೆ. ಅದನ್ನೇ ಮುಂದೆ ಬೆಳ್ಳಿಯ ಕಟ್ಟು ಹಾಕಿ ಮನೆದೇವರೊಂದಿಗೆ ಇಟ್ಟು ಪೂಜಿಸುತ್ತ ಬಂದರಂತೆ. ಮಾಸ್ತೀ ಪೂಜೆಯ ವಿವರಗಳು ಇಲ್ಲಿ ಅನಗತ್ಯ. ಪೂಜೆ ಸಲ್ಲದಿದ್ದರೆ, ಅಸಂಪ್ರದಾಯಕ್ಕೆ ಭಂಗ ಬಂದರೆ ಮಾಸ್ತಯೂ ಸಂಬಂಧಪಟ್ಟವರಿಗೆ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾಳೆ. ಇಂಥ ಮಾಸ್ತಿಗಳು ಇಂದು ಅನೇಕ ಊರುಗಳಲ್ಲಿ ಸಾರ್ವಜನಿಕ ಶ್ರದ್ಧೆಯ ಸ್ಥಾನಗಳೂ ಆಗಿಬಿಟ್ಟಿವೆ. ಆದರೂ ಇವು ಗ್ರಾಮದಲ್ಲಿ ಚೌಡಿಗಳಂತೆ ವಿಪುಲವಲ್ಲ. ಅಮ್ಮನವರ ನಂತರ ಮಾಸ್ತಿಗೇ ಹೆಚ್ಚಿನ ಮನ್ನಣೆ.

ಇಲ್ಲಿ ಒಂದು ಶಂಕೆ. ಪ್ರಾಚೀನ ಕಾಲದಲ್ಲಿ – ಬ್ರಿಟಿಷ ಸರಕಾರ ಅದನ್ನು ಪ್ರತಿ ಬಂಧಿಸುವಂತಹ – ನಾಡಿನಲ್ಲಿ ಸತಿ ಪದ್ಧತಿಯು ಬಹಳ ಪ್ರಚಲಿತವಿತ್ತು. ಆದರೆ ಆ ಪ್ರಮಾಣದಲ್ಲಿ ಊರು ಊರುಗಳಲ್ಲಿ ಮಾಸ್ತಿ ಗುತ್ತಗಳು ಹೇರಳವಾಗಿಲ್ಲ. ಅದೇಕೆ ಹಾಗೆ ? ಈ “ಸತಿ” ಹೋಗುವುದರಲ್ಲಿ ಎರಡು ರೀತಿ ಇತ್ತು. “ಸಹಗಮನ” ಮತ್ತು “ಅನುಗಮನ” – ಅಂದರೆ ಗಂಡನ ಚಿತೆಯಲ್ಲಿ ಸುಟ್ಟುಕೊಂಡು ಅವನ ಜೊತೆಗೇ ಸಾಯುವುದು, ಮತ್ತು ಗಂಡನು ಸತ್ತ ನಂತರ ಆ ವಾರ್ತೆ ಕೇಳಿ ಹಿಂದಿನಿಂದ ತನ್ನನ್ನು ಸುಟ್ಟುಕೊಳ್ಳುವುದು. ಇವೆರಡೂ ರೀತಿಗಳಿಂದಲೂ ಸತಿ ಹೋದವರ ಸಂಖ್ಯೆ ವಿಪುಲವಿರಬೇಕಿತ್ತು. ಮತ್ತು ಅಷ್ಟೊಂದು ವಿಪುಲವಿದ್ದು ಮನೆಮನೆಗೂ, ಪ್ರತಿ ಪೀಳಿಗೆಗೂ ಸತಿ ಹೋದವರಿದ್ದರೆ ಅವರಿಗಾಗಿ ಹೀಗೆ ಕೆಲವೇ ಮಾಸ್ತಿ ಗುತ್ತಗಳು ಉಂಟಾಗುತ್ತಿದ್ದಿಲ್ಲ.

ಆದರೆ ಈ “ಸಹಗಮನ” ದಲ್ಲಿ ಇನ್ನೂ ಒಂದು ಅಷ್ಟು ಸಾಮಾನ್ಯವಲ್ಲದ ಪ್ರಥೆಯೂ ಇತ್ತು. ಅದೊಂದು ಅಪರೂಪದ ಘಟನೆ. ಅದಾಗ್ಯೂ ಅದು ಒಮ್ಮೊಮ್ಮೆ ನಡೆಯುತ್ತಿತ್ತು. ಅದೆಂದರೆ, ಕೆಲವು ತಾಯಂದಿರು ತಮ್ಮ ಮುದ್ದಿನ ಮಗನೊಬ್ಬ ಸತ್ತಾಗ ಆ ಪುತ್ರವಿಯೋಗವು ಸಹನವಾಗದೆ ಮಗನೊಂದಿಗೆ ತಾನೂ ಅದೇ ಚಿತೆಯಲ್ಲಿ ಸುಟ್ಟು ಸಾಯುತ್ತಿದ್ದರು. [ಹಾಗೆಯೇ ಪ್ರೀತಿಯ ಅಕ್ಕ – ತಂಗಿಯರೂ ತಮ್ಮ ಸೋದರನೊಂದಿಗೆ ದಹನವಾಗುತ್ತಿದ್ದರು.] ಈ ಸಹಗಮನಗೊಂಡ ತಾಯಂದಿರನ್ನು ಉತ್ತರ ಭಾರತದಲ್ಲಿ “ಮಾ – ಸತಿ” ಎಂದು ಪೂಜಿಸುತ್ತಿದ್ದರು. ನನ್ನ ಅಭಿಪ್ರಾಯದಂತೆ ನಮ್ಮಲ್ಲಿಯೂ ಇಂಥ ತಾಯಂದಿರೇ “ಮಾಸ್ತಿ” ದೈವಗಳು. ಹೊರತು ಬಹುವಾಗಿ ಸಹಗಮನ ಮಾಡುತ್ತಿದ್ದ “ಸತಿ” ಯರಲ್ಲ.

“ಮಹಾಸತಿ”ಯೇ “ಮಾಸ್ತಿ” ಆಗಿದೆ, ತದ್ಭವಗೊಂಡಿದೆ ಎನ್ನಲಾಗುತ್ತದೆ. ಆದರೆ ವಸತಿ = ಬಸದಿ ಆಗುವಂತೆ ಇಲ್ಲಿ “ಮಾಸದಿ” ಆಗಬೇಕಿತ್ತು. [ಅಪಭ್ರಂಶದಲ್ಲಿ “ತ” ಕಾರಣವು ಯವಾಗಲೂ “ಕದ” ಕಾರ ವಾಗುತ್ತದೆ.] ಆಡುಮಾತಿನಲ್ಲಿ “ಬಸ್ತಿ” ಎಂದರೂ ಲಿಖಿತರೂಪದಲ್ಲಿ ಅದು  ಅದು “ಬಸದಿ” ಯೇ ಆಗಿದೆ ಆದರೆ “ಮಾಸದಿ” ಆಗದೆ “ಮಹಾಸತಿ” ಮಾಸ್ತಿ ಯಾದದ್ದು ಹೇಗೆ? ಮೇಲೆ ಹೇಳಿದ ” ಮಾ – ಸತಿ” (ಮಾತಾ ಸತಿ) ಯೇ ಜನಜನಿತವಾಗಿ “ಮಾಸ್ತಿ” ಎಂದು ರೂಢವಾಗಿರಬೇಕು. ಮಾತೆಯ ಈ ಆತ್ಮೋತ್ಸರ್ಗದ ಮಹಾತ್ಯಾಗವು ವಿಶೇಷವೂ  ಅಪರೂಪವು ಆಗಿದ್ದರಿಂದ ಪೂಜಾರ್ಹವಾಗಿ ಪರಿಣಮಿಸಿತು. ಊರ ಅಮ್ಮನವರೊಂದಿಗೇ ಆರಾಧನೆ ಪಡೆಯಹತ್ತಿಬೇಕು. ಕೇವಲ ನನ್ನದೇ ಹೊಣೆಗಾಹಾರಿಕೆಯ ಮೇಲೆ ನಾನು ಮಂಡಿಸಿದ  ಒಂದು hypothesis ಇದು ಸಂಶೋಧಕರ ವಿಮರ್ಶೆಗಾಗಿ.