ದಿಬ್ಬಣಗಲ್ಲು : ಹನೇಹಳ್ಳಿಯ ಮುಖ್ಯಬೀದಿಯಲ್ಲಿ ಮುಂದೆ ಹೋದರೆ ಪೇಟೆಯ ಚೌಕ ಬರುತ್ತದೆ. ಅಲ್ಲಿ ಮೂರು ದಾರಿ ಕೂಡುತ್ತವೆ. ಅಲ್ಲಿಯೇ ಎಡಕ್ಕೆ ಹೊರಳುವಲ್ಲಿ ಕೆಲವು ಚಿಕ್ಕ – ದೊಡ್ಡ ಕಲ್ಲು ಬಿದ್ದಿವೆ – ನಾವು ಎಳೆಯರಿರುವಾಗಿನಿಂದಲೂ. ಇಲ್ಲಿ ಹಿಂದೆ ಎಂದೋ ” ಪರಾಕ್ರಮ ಜಟ್ಗ” ಇದ್ದನಂತೆ. ಆತನಿಗೆ ಪೂಜೆ ಮನ್ನಣೆ ಸಲ್ಲಿಸದಿದ್ದರೆ ಅಲ್ಲಿಯ ಗಡಿ ಹಾಯ್ದವರಿಗೆ ಅನಾಹುತವಿತ್ತಂತೆ. ಒಮ್ಮೆ ಒಂದು ಮದುವೆಯ ದಿಬ್ಬಣ ಅಲ್ಲಿಂದ ಹಾಯುವಾಗ ಈ ಅಚಾತುರ್ಯ ಘಟಿಸಿತು. ಆ ದಿಬ್ಬಣನವರೆಲ್ಲರೂ ಮಾಯವಾಗಿಬಿಟ್ಟರು. ಅವರ ಸ್ಮಾರಕಕ್ಕೆ ಈ ಕಲ್ಲುಗಳು ನಿಲ್ಲಿಸಲ್ಪಟ್ಟವು. ಈ “ಪರಾಕ್ರಮ ಜಟ್ಟಿಗ” ಎಂಬ ಹೆಸರು ಕೇಳಿದಾಗ ತದಡಿಯ ಹಾದಿಯಲ್ಲಿ ಮೂಡಂಗಿಯಲ್ಲಿಯ “ಕುಮಾರ ಜಟ್ಗ” ನ ನೆನಪಾಗುತ್ತದೆ. ಜಟ್ಗನಿಗೆ ಈ ಸಂಸ್ಕೃತ ವಿಶೇಷಣ ಇಲ್ಲವೆ ಬಿರುದು ಅದರ ಜೈನ ಸಂಸ್ಕಾರಕ್ಕೆ ಸಾಕ್ಷಿಯೇ ? ಈ ದಿಬ್ಬಣಗಲ್ಲಿನ ಮುಂದಿನಿಂದ ಹಳೆಗಾಲದಲ್ಲಿ ಪಶ್ಚಿಮಕ್ಕೆ ಹಾದಿಗುಂಟ ಅರ್ಧಫರ್ಲಾಂಗ ತನಕ ಸೂರ್ಯಾಸ್ತದ ನಂತರ ವಿಚಿತ್ರ ವಿಕಾರದ ಹಕ್ಕಿಗಳ ಭಯಾನಕ ವಾಹನಗಳನ್ನು ಅಂದಿನ ಆ ಪರಾಕ್ರಮ ಜಟ್ಗ ಓಡಾಡಿಸುತ್ತಿದ್ದನೆಂದು ಆ ತಲೆಮಾರಿನವರು ನಮ್ಮ ಚಿಕ್ಕಂದಿನ ನಿದ್ದೆಗೆಡಿಸುತ್ತಿದ್ದರು. ಈಗ ಇದು ಊರಿನ ಬಸ್ ನಿಲ್ದಾಣ ಚುನಾವಣಾ ಸಭೆಗಳ ಬಯಲು ಸಭಾಗೃಹ !
ಅತ್ತ ಉತ್ತರಕ್ಕೆ ಮೊಗಟ ಹಾಗು ಇತರ ಊರುಗಳಲ್ಲಿಯೂ ಇಂತಹದೇ ಒಂದು ದಿಬ್ಬಣಗಲ್ಲಿದೆಯಂತೆ. ಹಿಂದೆ ದಿಬ್ಬಣಗಳ ಇಬ್ಬಣಗಳಲ್ಲಿ ಏನಾದರೂ ದ್ವೇಷ – ತ್ವೇಷ ಉಲ್ಬಣಗೊಂಡು ಕದನವೆದ್ದು ಹಲವರು ಆಕಸ್ಮಿಕವಾಗಿ ಸಾವಿಗೆ ಬಲಿಯಾಗುತ್ತಿದ್ದ ದುರ್ಘಟನೆಗಳು ಹೆಚ್ಚಾಗಿದ್ದವು. ಅಂದು ದುರ್ಮರಣಗಳಿಗೆ ಸ್ಮಾರಕವಾಗಿ ಇಂಥ ಕಲ್ಲುಗಳು ಕಾಣಿಸಿಕೊಂಡಿರಬೇಕು.
ಕೊನೆಯದಾಗಿ. ಇಂಥ ದುರ್ಘಟನೆಗಳ ಪ್ರತೀಕದ ಇನ್ನೊಂದು ಸ್ಥಾನ ಸಪ್ಪರ್ತಿ – ಸುಪ್ಪರ್ತಿ ಅಥವಾ ಸಪುತಿ. ಇದೊಂದು ಆಯ ಆಕಾರವಿಲ್ಲದ ಕಲ್ಲು. ಬಂಕಿಕೊಡ್ಲದಿಂದ ಮುಂದೆ ಮಾದನಗೇರಿಗೆ (ಹಿತ್ತಲಮಕ್ಕಿಗೆ) ಹೋಗುವ ರಸ್ತೆಯಲ್ಲಿ ಬಳ್ಳದ ಗಟ್ಟವಿದೆ. ಅದರ ನೆತ್ತಿಗೆ ಈ ಕಲ್ಲು ಕಾಣಿಸುತ್ತದೆ. ಇದು ತಿರಸ್ಕಾರ ತಾತ್ಸಾರಗಳಿಗೆ ತುತ್ತು. ಇದರ ಪೂಜೆಯೆಂದರೆ ಅಲ್ಲಿಂದ ಬೆಟ್ಟಕ್ಕೆ ಸೊಪ್ಪು ಹೊತ್ತು ತರಲು ಹೋಗುವ ಹೆಣ್ಣು ಮಕ್ಕಳು ಹತ್ತಿರದ ಮರದ ಸೊಪ್ಪನ್ನು ಹರಿದು ಚೆಲ್ಲುವದು. ಅಥವಾ ತಮ್ಮ ತಲೆಯ ಹಳಸಿದ ಹೂವನ್ನು ಹಾಕುವದು. [“ಸಪ್ಪು ಹತಿರಿ” ಇದರಿಂದ “ಸಪ್ಪರ್ತಿ” ಶಬ್ದ ನಿಷ್ಪನ್ನವಾಗಿದೆ – ಎನ್ನುತ್ತಾರೆ ಡಾಟ ಎಲ್ . ಆರ್ . ಹೆಗಡೆ.]
ಪುಂಡ ಕಾಮಿಗಳ ಬಲಾತ್ಕಾರಕ್ಕೆ ಬಲಿಯಾಗಿಯೋ ಭಂಡ ವ್ಯಭಿಚಾರದಿಂದಲೋ ಮದುವೆಯಾಗದೆ ಬಸುರಿಯಾಗಿ ಸತ್ತ ಹೆಣ್ಣುಗಳ ಸ್ಮಾರಕದ ಕಲ್ಲುಗಳಿವು. ಇವರಿಗೆ ಆ ದುರ್ಮರಣದ ಕುಖ್ಯಾತಿಯಿಂದಾಗಿ ಮನೆಯವರು ಯಾವ ಶವಸಂಸ್ಕಾರವನ್ನೂ ಪ್ರೇತೋದ್ಧಾರವನ್ನೂ ಮಾಡದೆ ಅಲ್ಲಿ ಹೇಗೋ ಯಾರೋ ಹೂಳಿದ್ದು. ಇಂಥವರ ಪಾಪ ಸ್ಮರಣೆಯಾಗಿ ಹೀಗೆ ಕಲ್ಲು ತೂರುವುದು, ಮುಡಿ ಹೂವು, ಕಾಡು ಹೂವು ಕಿತ್ತು ಚೆಲ್ಲುವದು. ಚೌಡಿಗಿಂತ ಸುಪ್ಪರತಿಯ ಸ್ಥಾನಮಾನ ತೀರ ಕೀಳು.
ಹೆಮ್ಮಲತಿ : ಈ ಪ್ರೇತಗಳಲ್ಲಿ ಒಂದು ಭಯಾನಕ ಹೆಣ್ಣು ಆಕೃತಿ. ನಮ್ಮ ಪರಿಸರದಲ್ಲಿ ಇವಳು ಹೆಮ್ಮಲತಿ. ಆದರೆ ಕಾಗಾಲು – ಬಾಡ ಕರ್ಕಿಗಳ ಕಡೆಗೆ ಇವಳನ್ನೇ ಒಮ್ಮೊಲತಿ (ಒಂದು ಮೊಲೆಯವಳು) ಎಂದೂ ಕರೆಯುತ್ತಾರೆ. [ಇವರು ಪ್ರಾಚೀನದಲ್ಲಿ Breast – cancer ಆಗಿ ಸತ್ತವರೇ ?] ಇದೊಂದು ದುಷ್ಟ ಚೌಡಿ. ಕತ್ತಲೆ ರಾತ್ರಿಯಲ್ಲಿ ಒಂಟಿ ಹಾದಿ ಹೋಕರನ್ನು ತಡೆದು ಎಲೆ ಅಡಿಕೆ ಸುಣ್ಣ ಏನಾದರೂ ಕೇಳುತ್ತಾಳೆ. ಅದನ್ನು ಕೊಟ್ಟಾಗ ನೆಲಕ್ಕೆ ಚೆಲ್ಲುತ್ತಾಳೆ. [ಕೆಲವರ ಹೇಳಿಕೆಯಂತೆ, ಅವಳ ಅಂಗೈಗೆ ತೂತು. ಅದರೊಳಗಿಂದ ಕೊಟ್ಟ ಅಡಿಕೆ , ವೀಳ್ಯ ಕೆಳಗೆ ನೆಲಕ್ಕೆ ಬೀಳುತ್ತದೆ !] ಅದನ್ನು ಹೆಕ್ಕಿಕೊಡಲು ಬಗ್ಗಿದ ಆ ದಾರಿಹೋಕನ ಬೆನ್ನಿಗೆ ಗುದ್ದಿ [ತನ್ನ ಒಂಟಿ ಮೊಲೆಯಿಂದ ಬಡಿದು!] ಕೆಡಹುತ್ತಾಳೆ. ಆತ ಹೆದರಿ ಹೌಹಾರಿಯೋ ಸಾಯುತ್ತಾನೆ. ಆ ಒಮ್ಮೊಲ್ತಿ ನಮ್ಮಲ್ಲಿ ಹೆಮ್ಮಲತಿ ಹೇಗಾದಳೋ !
ನಮ್ಮ ಅಮ್ಮನವರಿಗೆ ಬಂಡಿಯ ಕಲಶದ ಹಬ್ಬವೇ ಮುಖ್ಯ. ಅದರೊಂದಿಗೆ ವೈದಿಕ ಆಗಮೋಕ್ತ ಪುಣ್ಯಪರ್ವಗಳ ಪಲ್ಲಕ್ಕಿ ಉತ್ಸವ. ಆದರೆ ಕಲವೆಡೆಗೆ ವರ್ಷಕ್ಕೆ ಒಮ್ಮೆ ಅಥವಾ ಇನ್ನೂ ಅಪರೂಪಕ್ಕೆ ಅಮ್ಮನವರ ಪಲ್ಲಕ್ಕಿ ಹೊರಟು ದೂರ ದೂರದ ಜಟ್ಗ, ಬೀರ, ಮಾಸ್ತಿ, ಚೌಡಿಗಳ ಗುತ್ತಗಳವರೆಗೂ ಹೋಗಿ ಭೆಟ್ಟಿಕೊಟ್ಟು ಸುತ್ತಾಡಿ ಪೂಜೆ ಪುರಸ್ಕಾರ ಪಡೆದು ಬರುತ್ತದೆ. ಉದಾ : ಶರಾವತಿಯ ಹೊಳೆಯ ಸಾಲಿನ ಚಿನ್ನೋಡದ ಅಮ್ಮ ಹಾಗೆ ಸಿದ್ದಾಪುರದ ಕೊಡ್ಲಿ ಊರಿನ ಅಮ್ಮ ಇವರ ಪಲ್ಲಕ್ಕಿ ಉತ್ಸವ ಹೊರಟರೆ ಅದು ಸಾಮಾನ್ಯ ಉತ್ಸಾಹದ ಮೆರವಣಿಗೆ ಅಲ್ಲ. ಹನುಮಂತ ದೇವರ ಪಲ್ಲಕ್ಕಿಯಂತೆಯೇ ಈ ಪಲ್ಲಕ್ಕಿಗೆ ಭಾರವೇರುತ್ತದೆ. ಹೊತ್ತವರನ್ನು ಅದು ಅತ್ಯಂತ ರಭಸದಿಂದ, ರೊಚ್ಚಿನಿಂದ ಓಡಿಸಿಕೊಂಡೇ ಹೋಗುತ್ತದೆ. ನೇರವಾಗಿ ದೂರದ ಜಟ್ಗವಿದ್ದಲ್ಲಿ ಉಪೇಕ್ಷಿತ ಚೌಡಿಯ ಗುತ್ತವಿದ್ದಲ್ಲಿ ಒಯ್ಯುತ್ತದೆ. ಕೆಲಸಲ ಹಿಂದೆ ಮುಂದೆ ಅಡ್ಡಾ ತಿಡ್ಡ ಸರದಾಡಿ ಹೊತ್ತವರನ್ನು ಗಾಸಿಗೊಳಿಸುತ್ತದೆ. ನಡುವೆಯೇ ಯಾವುದೋ ಗುಡಿಯನ್ನೋ, ಮನೆಯನ್ನೋ ಹೊಕ್ಕುತ್ತದೆ. ಅಥವಾ ಅದರ ಮುಂದೆ ನಿಂತು ಗರಗರ ಸುತ್ತಾಡುತ್ತದೆ. ಹೊತ್ತವರ ಹೆಗಲೆಲ್ಲ ಹೊರೆಭಾರವಾಗಿ ನೋಯುತ್ತದೆ. ಯಾರಲ್ಲಿ ಆದರು ಕಾಯಿಲೆ ಬಿದ್ದವರಿದ್ದರೆ ಅಲ್ಲಿಗೆ ಹೋಗಿ ಸುತ್ತು ತಿರುಗಿ ಅಪ್ಪಣೆ ಕೊಡಿಸುತ್ತದೆ – ಇಂತಿಂಥ ಸೇವೆ ಉಪಚಾರ ಮಾಡೆಂದು. ಹಾಗೆಯೇ ಇಂಥಿಂಥ ಚೌಡಿಗೋ ಜಟ್ಗಕ್ಕೋ ಪೂಜೆ ಸಲ್ಲದೆ ಉಪೇಕ್ಷೆ ಆಗಿದೆ, ಅದನ್ನು ಪುನಃ ಪ್ರತಿಷ್ಠೆ ಪಡಿಸಿ ಪೂಜಿಸಬೇಕೆಂದು. ನಮ್ಮಲ್ಲಿಯ ಅಮ್ಮ ಇಂಥ ಉಪದ್ವೈಪ ಮಾಡುವುದಿಲ್ಲ. ಅವಳ ಆವೇಶವೇರುವುದು ಕಲಶ ಹೊತ್ತ, ಬಾಗಿಲ ಕಟ್ಟಿದ “ಗುನಗ” ನಲ್ಲಿ ಅಥವಾ “ಗಾಡಿಗ” ನಲ್ಲಿ.
ಮಂಡದಮ್ಮ : ನಮ್ಮ ಸೀಮೆಯಲ್ಲಿ ಹಲವೆಡೆಗೆ “ಮಂಡ” ಗಳಿರುತ್ತವೆ. ಅಲ್ಲಿಯ “ಗಾಡಿಗ” ನಿಗೆ ಭಾರವೇರುತ್ತದೆ. ಆತ ಒಂದು ಇಷ್ಟ ದೇವತೆಯನ್ನು ಪೂಜಿಸುತ್ತಿರುತ್ತಾನೆ. ಅವನ ಮೈಮೇಲೆ ದೇವಿ ಬಂದಾಗ ನೆರೆಕೆರೆಯ ಭಾವಿಕ ಮಂದಿ ಹಣ್ಣು ಕಾಯಿ ಅರ್ಪಿಸಿ “ಮಂಡಾಳಮ್ಮ” ನಿಂದ ತಮ್ಮ ಕಷ್ಟಪರಿಹಾರ ಇಷ್ಟಪ್ರಾಪ್ತಿಗಾಗಿ ಪ್ರಶ್ನೆ ಕೇಳಿ ಅಪ್ಪಣೆ ಪಡೆಯುತ್ತಾರೆ. ಇಂಥ ಅನೇಕ ಹಳೆಯ ಸ್ಥಾನ (ಮಂಡ) ಗಳು ಇದ್ದು , ಇಂದಿನ ಅತ್ಯಾಧುನಿಕ ಹಾಗು ನವನಾಗರಿಕತೆಯ ಪರಿಸರದಲ್ಲಿಯೂ ಹೊಸ ಹೊಸ ಮಂಡಗಳು ಉಂಟಾಗುತ್ತಿವೆ. ೨೦ – ೩೦ ವರ್ಷ ಕಲಶದ ಹಬ್ಬವಾಗದೆ ಗುನಗನಿಗೆ “ಭಾರ” ಬರದೆ ಇದ್ದ “ಸ್ಥಾನ” ಗಲ್ಲಿಯೂ ನಿಮ್ನ ವರ್ಗಗಳಲ್ಲಿಯ ನವಜಾಗೃತಿ ಹಾಗು ಸಾಂಪತ್ತಿಕ ಪ್ರಗತಿಯಿಂದಾಗಿ ಕಲಶವೇಳಿಸಲಾಗುತ್ತಿದೆ. ಭಾರ – ಅಪ್ಪಣೆ ದೊರಕಿಸಲಾಗುತ್ತಿದೆ. ಈ ರೀತಿ “ಭಗವತಿ ಏರುವ ತೆರ” ಭಾರ, ಅಪ್ಪಣೆಗಳೂ, ಚೌಡಿಯ [Poltergeist] ಉಪಟಳವೂ ಇಂಗಿತ ಹೇಳುವ ಕಾಲಜ್ಞಾನ – ಇತ್ಯಾದಿ ಇಂದು ಮನೋವಿಜ್ಞಾನದ ವಿಶಿಷ್ಟ ತಜ್ಞತೆಯ ವಿಚಿಕತ್ಸೆಗೂ ಸೇರಿದ ವಿಷಯವಾಗಿದೆ. ಪಾಶ್ಚಾತ್ಯರಲ್ಲಿಯೂ ಇದು ಆಳವಾಗಿ ಧಾರಾಳವಾಗಿ ಕಂಡುಬರುತ್ತದೆ. ಇದಕ್ಕೆ “Exorcist” ಎಂಬ ಅತ್ಯಂತ ಜನಪ್ರಿಯ ಕಾದಂಬರಿಯೇ (ಅದು ಚಲನಚಿತ್ರವೂ ಆಗಿದೆ) ಸಾಕ್ಷಿ.
ಶತಮಾನಗಳ ಹಿಂದೆ ಜಾನಪದ ಜನ ಇಂದಿಗಿಂತಲೂ ಹೆಚ್ಚು ದಟ್ಟವಾಗಿ ಅಂದಶ್ರದ್ಧೆ ಪ್ರಾಕೃತಿಕ ಉಗ್ರಶಕ್ತಿಗಳ ಗೂಢಶಕ್ತಿಗಳ ಜೀವಂತ ಹಾಗೂ ಅಸಂಸ್ಕೃತ, ಅಪರಿಷ್ಕೃತ ದುರ್ದಮ್ಯವಾದ ಕಾಮನೆ ವಾಸನೆಗಳ ಆಂತರಿಕ ತುಮುಲದ ಪ್ರವಾಹದಲ್ಲಿ ತೇಲಾಡುವ ಸರಳ ಜೀವಿಗಳಾಗಿದ್ದರು. ಅವರು ನಿಸರ್ಗದೊಂದಿಗೆ ಹೆಚ್ಚು ನಿಕಟವಾದ ಉತ್ಕಟವಾದ ಸಂಬಂಧವಿಟ್ಟುಕೊಂಡ ಜನವಾಗಿದ್ದರು. ಆಗ ಅವರು ತಮ್ಮ ಭೀತಿ – ಪ್ರೀತಿಗಳಿಗೆ ಭಾಜನವಾದ ಶಕ್ತಿಗಳ ನಿಗ್ರಹಾನುಗ್ರಹಗಳನ್ನು ಅರಿವಿನಾಳದಿಂದಲೂ ಅನುಭವಿಸುತ್ತಿದ್ದರು. ಅವರು ಅನೇಕ ತಲೆಮಾರುಗಳಲ್ಲಿ ಈ ಶ್ರದ್ದೆ ಈ ಸಾಂಪ್ರದಾಯಿಕ ಭಾವೋದ್ರೇಕದ ಪ್ರತಿಕ್ರಿಯೆ ಒಂದು ರೀತಿ ರಕ್ತಗತವಾಗಿ, ಅಲ್ಲಿ ನರಮಂಡಲದಲ್ಲಿ ಮಜ್ಜಾಗತವಾಗಿ ಬಂದಿತು – ಒಂದು ಬಗೆಯ ಸಾಂಕೇತಿಕ ಪ್ರತಿಕ್ಷಿಪ್ತ ಕ್ರಿಯೆ (Condtioned Reflex) ಆಗಿ.
ಇಂದಿಗೂ ಇಂಥ Psychic ಜನರಲ್ಲಿಯ ಆಧುನಿಕ ಶಿಕ್ಷಣ ಸಂಸ್ಕಾರ ಪಡೆದವರು ಉನ್ನತ ಸರಕಾರಿ ಅಧಿಕಾರದಲ್ಲಿ ಲೌಕಿಕವಾಗಿ ಯಶಸ್ಸಿನಿಂದ ಮೆರೆಯುವವರು ತಮ್ಮ ಕುಲದೇವತೆಯ – ಮೂಲದ ಗ್ರಾಮದೇವತೆಯ – ವಿಶೇಷ ಉತ್ಸವ ಆರಾಧನಾ ಪ್ರಸಂಗದಲ್ಲಿ ಹೋದವರು ಅಲ್ಲಿಯ ವಿಶಿಷ್ಟ ಗಂಟೆ – ಜಾಗಟೆ – ಚಂಡೆಗಳ ಸಮ್ಮಿಶ್ರ ಲಯಬದ್ದ ಸದ್ದಿಗೆ ಇದ್ದಕಿದ್ದಂತೆ ಪ್ರತಿಕ್ರಿಯಿಸಿ ಮೈಯಲ್ಲಿ ಆವೇಶ ತುಂಬಿ ಕುಣಿದಾಡುವುದೂ, ವಿವಿಧ ನ್ಯಾಸಗಳ ಅಂಗ ವಿಕ್ಷೇಪಗಳಲ್ಲಿ ತೊಡಗುವದೂ, ಗರ್ಭಗುಡಿಯ ಹೊಸ್ತಿಲಿಗೆ ಹಣೆಯನ್ನೂ ಕೈಯನ್ನೂ ಬಡಿದುಕೊಳ್ಳುವದೂ, ಭಾರವಿಳಿದಾಗ ಸೋತು ಸುಸ್ತಾಗಿ ಮೂರ್ಛಿತರಾಗುವುದೂ, ಆ ಮೇಲೆ ತನ್ನ ಈ ಅವತಾರಕ್ಕಾಗಿ ನಾಚಿಕೆ ಪಡುವುದೂ ಉಂಟು !
* * *
ಈ ಅಮ್ಮನವರಿಗೂ ಅವರ ಪರಿವಾರದ ಮೇಲೆ ಹೇಳಿದ ದೇವತೆಗಳಿಗೂ ಅವರದೇ ಆದ ಹಬ್ಬಗಳಿವೆ, ಪರ್ವಗಳೂ ಇವೆ. ಹಬ್ಬಗಳಲ್ಲಿ ಕಲಶದ (ಬಂಡಿ) ಹಬ್ಬವೇ ಮುಖ್ಯ. ಅದು ದೇವಿಗೆ ಮಾತ್ರವಲ್ಲ, ಅದನ್ನು ಭಜಿಸುವ ಗ್ರಾಮೀಣ ಸಮಾಜಗಳಿಗೆಲ್ಲ ಒಂದು ಮಹೋತ್ಸವ. ಅದೊಂದು ಸಂಕೀರ್ಣ ಹಬ್ಬ.
ನಮ್ಮ ಅಮ್ಮನವರ ೧೨ ಮಾದರಿಯ ಪರಿವಾರ ದೇವತೆಗಳ ಪ್ರತೀಕವಾಗಿ ಅವರಿಗೆ ಒಪ್ಪಿದ ೧೨ ಬೇರೆ ಬೇರೆ ಶೂದ್ರ ಮನೆತನಗಳ ಪ್ರತಿನಿಧಿಗಳು ಒಂದೊಂದು ಬೆಳ್ಳಿಯ ಕಟ್ಟಿನ “ಕಟ್ಟಿಗೆ” ಯನ್ನು ಆಯಾ ದೇವತೆಯ ಅಂತಸ್ತಿನಂತೆ ಕಲಶ ಹೊತ್ತ ಗುನಗನ ಎಡಬಲಕ್ಕೆ ಯೋಗ್ಯ ಕ್ರಮ ಸ್ಥಾನದಲ್ಲಿ ಹಿಡಿದು ಮೆರವಣಿಗೆಯಲ್ಲಿ ಸಾಗಬೇಕು. ಹಬ್ಬವೂ ೧೨ ದಿನ ನಡೆಯುತ್ತದೆ. ಕೊನೆಯ ದಿನ ಬಂಡಿ ಎಳೆಯುತ್ತಾರೆ. ಬಂಡಿಗೆ ಚಿಕ್ಕಗಾಲಿಗಳು ಮರದ ದೊಡ್ಡ ಚೌಕಟ್ಟು ಅದರ ಮೇಲೆ ಅಡ್ಡ ಹಾಯುವ ಉದ್ದ ಕಂಬ ಅದಕ್ಕೆ ಮೇಲೆ ತುದಿಗೆ ಹಣ್ಣು – ಕಾಯಿ ತೂಗಿಬಿಡುವ ಚೌಕ. ಈ ಕಂಬವನ್ನು ಅಲ್ಲಲ್ಲಿ ಬಂಡಿ ನಿಲ್ಲಿಸಿ ಹಗ್ಗ ಹಿಡಿದು ಸುತ್ತು ಆಡಿಸುತ್ತಾರೆ. (ಇದು ಬೈಲು ಸೀಮೆಯ ಗ್ರಾಮ ದೇವತೆಯ “ಸಿಡಿ” ಎಳೆದಂತೆ). ಹಿಂದೆ ಈ ಕಂಬದ ತುದಿಗೆ ಚೌಕದ ಕೊಂಡಿಗಳಿಂದ ಬೆನ್ನ ತೊಗಲಿಗೆ ಚುಚ್ಚಿಕೊಂಡು ತಮ್ಮನ್ನು ತೂಗು ಹಾಕಿಕೊಳ್ಳುವ ಅಮಾನುಷ ಹರಕೆ ಹೊರುತ್ತಿದ್ದರಂತೆ. ಈಗ ಬಾಳೆಕೊನೆ ತೂಗುತ್ತಾರೆ. ಹಾಗೆಯೇ “ಆಡೂಕಟ್ಟೆ” ಯ ಆಳೆತ್ತರದ ೧೨ ಮುಖವಾಡಗಳನ್ನು ಹೊತ್ತು ಆಡಿಸುವುದುಂಟು ಒಂದೊಂದು ಒಬ್ಬೊಬ್ಬ ಪರಿವಾರ ದೇವರೆ ಪ್ರೀತ್ಯರ್ಥ. ದಿನಕ್ಕೊಂದು ಮುಖವಾಡ, ಕೊನೆಯ ದಿನ ಹನ್ನೆರಡೂ ಮುಖಗಳು ಇದಕ್ಕೆ “ಐನ” ಗಳೆನ್ನುತ್ತಾರೆ. ಇದಲ್ಲದೆ ಕುರಿ, ಕೋಳಿ ಹರಕೆ ಸಲ್ಲಿಸುವ ಕಲಶದ ಪೂಜೆಯ “ಆವಾರಿ” “ಅವಲಹಬ್ಬ” ಬೇರೆ ಇವೆ. ಇವು ಸಣ್ಣ ಪರ್ವಗಳು.
ಹಾಗೆಯೇ ಹೆಚ್ಚಾಗಿ ಹಾಲಕ್ಕಿ ಸಮಾಜಕ್ಕೆ ಒಪ್ಪಿದ ಸುಗ್ಗಿಯ ಹಬ್ಬವಿದೆ. ಅದು ಕರಿಯ ದೇವರ ಹಬ್ಬ. ಬಂಡಿ ಹಬ್ಬದ “ಐನ” ಗಳು ಅಕ್ಷತ ತೃತೀಯೆಯಿಂದ ಆರಂಭವಾದರೆ ಸುಗ್ಗಿ ಹೋಳಿ ಹಬ್ಬದಿಂದ – ” ಕಾಮ ಸುಟ್ಟ ಮರುದಿನ ಧೂಮ ಸಾಲ್ಯೊ !” ಹಾಕುತ್ತ ಹಬ್ಬ ಬರುತ್ತದೆ. ತುಂಬ ಚಿತ್ರಮಯವಾದ ಹಬ್ಬ. ಕೊನೆಯ ರಾತ್ರಿಯ “ಹಗರಣ” ಅತ್ಯಂತ ನೇತ್ರ ದೀಪಕ Carnival ಇದ್ದಂತೆ.
ಸಿರಸಿ – ಸಿದ್ದಾಪುರ ಕಡೆಗೆ (ಘಟ್ಟದ ಹಳ್ಳಿಗಳಲ್ಲಿ) ಬೇರೆ ಬೇರೆ ಕುಲಗಳು ನಡೆದುಕೊಳ್ಳುವ ಈ ಜಟ್ಗ , ಚೌಡಿ, ಮಾಸ್ತಿ ಮುಂತಾದ ಗ್ರಾಮ ದೈವಗಳಿಗೆ ಆಯಾ ಮನೆಯ ಯಜಮಾನ ದೀಪಾವಳಿಯ ದಿನ (ಯಕ್ಷರಾತ್ರಿ ?) ದಿನವಿಡಿ ಉಪವಾಸ ಉಳಿದು ಆಯಾ ಗುತ್ತಕ್ಕೆ ನಿರ್ದಿಷ್ಟ ಲೆಕ್ಕದಲ್ಲಿ ಕಾಯಿ ಒಡೆಯಿಸಿ ಪೂಜೆ ಸಲ್ಲಿಸಿ ಬರುತ್ತಾರೆ.
೩೦ – ೪೦ ವರ್ಷಗಳಾಚೆಗೆ ನಮ್ಮ ಗ್ರಾಮದೇವತೆಗಳಿಗೆ ೧೦ ವರ್ಷಕ್ಕೊಮ್ಮೆ ದೊಡ್ಡ ಮಾರಿಯೂಟ ಹಾಕುತ್ತಿದ್ದರು. ೮ – ೧೦ ಖಂಡದ ಅಕ್ಕಿ ಅನ್ನ ಮಾಡಿ ಅದರಲ್ಲಿ ೪ – ೫ ಖಂಡಗ ೪ ದೊಡ್ಡ ಬುಟ್ಟಿಗಳಲ್ಲಿ ಕುರಿಯ ರಕ್ತ – ಮಾಂಸದಲ್ಲಿ ಕಲೆಸಿತುಂಬಿ ಊರ ನಾಲ್ಕು ನಿಟ್ಟಿನಲ್ಲಿ ಆ ಬುಟ್ಟಿ ಇಟ್ಟು ಬರುತ್ತಿದ್ದರು. ಉಳಿದ ಅನ್ನವನ್ನು ಅಮ್ಮನವರ ದೇವಸ್ಥಾನದ ಮುಂದಿನಿಂದ ಕಡಬಾ ಹೊಸಬ ದೇವರ ಗುಡಿಗಳ ಮುಂದೆ ರಸ್ತೆ ಯುದ್ದಕ್ಕೂ ಒಕ್ಕಲು ಮುಕ್ರಿ ಪ್ರಭೃತಿಗಳು ಪಂಕ್ತಗಟ್ಟಿ ಎಡೆ ಹಾಕಿ ಕೂತು ಪ್ರಸಾದವೆಂದು ಆ ರಾತ್ರಿ ಉಣ್ಣುತ್ತಿದ್ದರು. ಹನೇಹಳ್ಳಿ ಗಟ್ಟದ ಮೇಲೆ, ನೀರಾಳದ ಅಮ್ಮನವರ ಗುಡಿಯ ಹತ್ತಿರ, ಕುಟ್ಲೆ ಬೀರನ ಬಳಿಗೆ ಹಾಗು ಸಮುದ್ರ ತೀರದಲ್ಲಿ ಆ ನಾಲ್ಕು ಬುಟ್ಟಗಳನ್ನು “ದೆಸೆಬಲಿ” ಗಾಗಿ ಚೆಲ್ಲಿಟ್ಟು ಬರುತ್ತಿದ್ದರು. ಈ ಹೆಮ್ಮಾರಿಯೂಟಕ್ಕೆ ಎಲ್ಲ ಗ್ರಾಮಗಳಿಂದ ಅಕ್ಕಿ ಕಾಯಿ ಹಣ ಎತ್ತುವಳಿಯಾಗುತ್ತಿತ್ತು. ಈ ಸೀಮೆಗೆ ಯಾವುದೇ ಪಿಡುಗು ಬರದಂತೆ ಮಳೆ – ಬೆಳೆ ಚೆನ್ನಾಗಿ ಆಗುವಂತೆ ಗ್ರಾಮ ದೇವತೆಗಳನ್ನು ಸಂತೃಪ್ತಿ ಗೊಳಿಸಲು ಈ ದೇವತಾ ಸಂತರ್ಪಣೆ ನಡೆಯುತ್ತಿತ್ತು. ಆದರೆ ಅದೀಗ ನಿಂತು ೩ – ೪ ದಶಕಗಳಾದವು.
ಹೀಗಿದೆ ನಮ್ಮ ಗೋಕರ್ಣ ಮಂಡಳದ ಹಿರಿಕಿರಿ ಗ್ರಾಮ ದೇವತೆಗಳ ಕತೆ. ಈ ದೇವತೆಗಳ ಒಂದೊಂದು ಮಾದರಿಯ ರೂಪ, ರೀತಿ, ರಹಸ್ಯಗಳ ಸಂಶೋಧನೆಯೂ ಒಂದೊಂದು ಡಾಕ್ಟರೇಟಿಗೆ ಸಾಕಷ್ಟು ಸಂಕೀರ್ಣ ವಿಷಯವಾಗುವಂತಿದೆ. ಅಷ್ಟು ಸಂಕೀರ್ಣ ಸಮೃದ್ಧ ಹಾಗು ಇಂದು ಭರದಿಂದ ನಷ್ಟ ಭ್ರಷ್ಟವಾಗುತ್ತಿರುವ ಜಾನಪದ ಸಾಂಸ್ಕೃತಿಕ ಮಹತ್ವದ್ದಾಗಿದೆ.
ಪ್ರಾಥಮಿಕ ಅವಸ್ಥೆಯಲ್ಲಿ ಜನ ತಮ್ಮ ಪರಿಸರದ ಗಾಡಗೂಢ ಶಕ್ತಿಗಳೊಂದಿಗೆ ತಮ್ಮ ಮೂಢವಾದರೂ ಪ್ರಾಂಜಲ ನಂಬಿಕೆ ನಡವಳಿಕೆಗಳಿಂದ ಕಟ್ಟಿಕೊಂಡ ಸಂಬಂಧ ಇಟ್ಟುಕೊಂಡ ನಡಾವಳಿಗಳ ಅಮೂಲ್ಯ “ಪಳಿಯುಳಿಕೆ” ಗಳು ಈ ಗ್ರಾಮದೇವತೆಗಳು ಮತ್ತು ಅವರ ಆರಾಧನಾ ಕರ್ಮಕಾಂಡ (Rituals) ದ ವಿಧಿ ವಿಧಾನಗಳು. ನಾನು ಇಲ್ಲಿ ಕೇವಲ ಈ ದೇವತಾ ಪ್ರಪಂಚವನ್ನಷ್ಟೇ ಸ್ಥೂಲವಾಗಿ ಪರಿಚಯಿಸಲು ಯತ್ನಿಸಿದ್ದೇನೆ. ಈ ಕುರಿತು ಇನ್ನೂ ಆಳದ ಹಾಗು ಮೂಲದ ವಿಚಿಕಿತ್ಸೆ – ವಿವೇಚನೆಗೆ ಇದು ಪ್ರಚೋದಕವಾದರೆ ನನ್ನ ಉಪದ್ಯಾಪವು ಸಾರ್ಥಕವೆಂದು ತಿಳಿಯುತ್ತೇನೆ. ಇತ್ಯಲಂ.
ಈ ಪ್ರಬಂಧವನ್ನು ರಚಿಸುವಾಗ ವಿಷಯದ ವಿವರ ಸಂಗ್ರಹದಲ್ಲಿ ನನಗೆ ತುಂಬ ನೆರವಾದ ಈ ಕೆಳಗಿನ ಮಹನೀಯ ಮಿತ್ರರಿಗೆಲ್ಲ ನನ್ನ ಕೃತಜ್ಞತೆಯ ಧನ್ಯವಾದಗಳು.
೧) ಶ್ರೀ ಜಯರಾಮ ಭಟ್ಟ, ದೇವತೆ (ಮುಖ್ಯ ಅರ್ಚಕ ಶ್ರೀ ಭದ್ರಕಾಳಿ ದೇವಸ್ಥಾನ ಗೋಕರ್ಣ).
೨) ಆರ್ . ಜಿ . ಕಲ್ಲಪ್ಪ (ಮುಖ್ಯ ಅರ್ಚಕ ಶ್ರೀ ಕೇತಕೀ ವಿನಾಯಕ ದೇವಸ್ಥಾನ ಬಿಜ್ಜೂರ, ಗೋಕರ್ಣ).
೩) ಶ್ರೀ ಸುಬ್ರಹ್ಮಣ್ಯ ಶರ್ಮ ಬರವಣಿ (ನಿವೃತ್ತ ಕನ್ನಡ – ಸಂಸ್ಕೃತ ಅಧ್ಯಾಪಕರು, ಭದ್ರಕಾಳಿ ಜ್ಯೂನಿಯರ ಕಾಲೇಜ, ಗೋಕರ್ಣ).
೪) ಶ್ರೀ ಕೃಷ್ಣ ಭಟ್ಟ ಹಿರೇ (ಮುಖ್ಯ ಅರ್ಚಕ, ಶ್ರೀ ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ).
೫) ಶ್ರೀ ಶಿವರಾಮ ಅನಂತ ಕೊಡ್ಲೆಕೆರೆ (ನಿವೃತ್ತ ಮುಖ್ಯಾಧ್ಯಾಪಕ, ಹೆಣ್ಣು ಮಕ್ಕಳ ಪೂ. ಪ್ರಾ . ಶಾಲೆ, ಗೋಕರ್ಣ).
೬) ಶ್ರೀ ಎಂ. ಎ . ಭಟ್ಟ B. Sc., B.Ed. (ಮುಖ್ಯೋಪಾಧ್ಯಾಯಕ, ಮಾಧ್ಯಮಿಕ ಶಾಲೆ, ಹಿರೇಗುತ್ತಿ).
೭) ಶ್ರೀ ಎನ. ಎಚ್ . ಗೌಡ, B.A., B.Ed. (ಸಹಾಧ್ಯಾಪಕ, ಆನಂದಾಶ್ರಮ ಹೈಸ್ಕೂಲ, ಬಂಕಿಕೊಡ್ಲ).
೮) ಶ್ರೀ ಜಿ . ಪಿ. ನಾಯ್ಕ, B.Sc., B.Ed. (ಮುಖ್ಯೋಪಾಧ್ಯಾಯಕ, ಮಾಧ್ಯಮಿಕ ಶಾಲೆ, ಸಾಣಿಕಟ್ಟಾ).
೯) ಪ್ರೊ. ಜಿ .ವಿ . ಹೆಗಡೆ, M.A. (ಭದ್ರಕಾಳಿ ಕಾಂಪೋಝಿಟ್ ಜ್ಯೂನಿಯರ ಕಾಲೇಜ, ಗೋಕರ್ಣ) (ದುಗ್ಗೂರ).
೧೦) ಪ್ರೊ. ವಿ .ಎನ್ . ಹೆಗಡೆ, M.A. (ಭದ್ರಕಾಳಿ ಕಾಂಪೋಝಿಟ್ ಜ್ಯೂನಿಯರ ಕಾಲೇಜ, ಗೋಕರ್ಣ) ಹಳವಳ್ಳಿ, ಅಂಕೋಲಾ.
೧೧) ಶ್ರೀ ಡಿ. ಎಸ್. ಚೌಡನಕರ, B.Sc., B.Ed. (ಸಹಾಧ್ಯಾಪಕ, ನಿತ್ಯಾನಂದ ಹೈಸ್ಕೂಲ, ಸಾಣಿಕಟ್ಟಾ).
೧೨) ಶ್ರೀ ವಿ. ಡಿ. ಶ್ಯಾನಭಾಗ, ಬಾಳೇರಿ (ಟ್ರೆಝರಿ ಆಫೀಸರ, ಗೋಕರ್ಣ, ಕೋಡಕಣಿ).
೧೩) ಶ್ರೀ ರಾಮದಾಸ. ವಿ. ನಾಯ್ಕ, M.A., B.Ed (ಸಹಾಧ್ಯಾಪಕ, ಆನಂದಾಶ್ರಮ ಹೈಸ್ಕೂಲ, ಬಂಕಿಕೊಡ್ಲ).
೧೪) ಶ್ರೀ ಸ. ರಾ ನಾಯ್ಕ (ನಿವೃತ್ತ ಶಿಕ್ಷಕ, ಪ್ರಾ. ಶಾಲೆ. ತೊರ್ಕೆ).
೧೫) ಶ್ರೀ ವೆಂಕಟರಮಣ ಮಾಂಜರೇಕರ (ತಾರಮಕ್ಕಿ).
೧೬) ಶ್ರೀ ಪ್ರಕಾಶ ಜಿ. ಅಡಪೇಕರ, B.A . ಗೋಕರ್ಣ.
೧೭) ಶ್ರೀ ಎಸ್ . ಎಸ್. ಸಾಮಕ (ನಿವೃತ್ತ ಬೇಸಾಯ ಇಲಾಖಾಧಿಕಾರಿ, ಗೋಕರ್ಣ).
೧೮) ಶ್ರೀ ಆರ್. ಎಸ್ . ನಾಯ್ಕ (ಸಹಾಧ್ಯಾಪಕ ಪೂ.ಪ್ರಾ.ಗಂ. ಶಾಲೆ, ಗೋಕರ್ಣ).
೧೯) ಶ್ರೀ ಮಹಾದೇವ ನಾಯ್ಕ (ನಿವೃತ್ತ K.S.R.T.C. ಡ್ರೈವರ, ಸಾಣಿಕಟ್ಟಾ).
೨೦) ಶ್ರೀ ಚಾಪನ್ ನಾಗಪ್ಪಗೌಡ (ಹಾಲಕ್ಕಿ ಗುಮಟೆ ಪಾಗಿನ ಮುಖ್ಯಸ್ಥ, ಬಿಜ್ಜೂರ).
೨೧) ಶ್ರೀ ಗೋಯ್ದು ಗೌಡ (ತಾರಮಕ್ಕಿ).
೨೨) ಶ್ರೀ ಜಿ. ಎಸ್. ಹೆಗಡೆ (ಕರ್ನಾಟಕ ಬ್ಯಾಂಕ್ , ಗೋಕರ್ಣ, ಗುಣವಂತೆ).
ಪರಿಶಿಷ್ಟ – ಕೆಲವು ಟಿಪ್ಪಣಿಗಳು
೧) ಹಡಳ – ನಮ್ಮಲ್ಲಿಯ ಚೌಂಡಿ (ಚೌಡಿ) ಗೆ ಪರ್ಯಾಯವಾಗಿ ಮಹಾರಾಷ್ಟ್ರದಲ್ಲಿ “ಹಡಳ” ಎಂಬ ಹೆಸರು ರೂಢಿಯಲ್ಲಿದೆ. ಆದರೆ ಈ ಹೆಸರೂ ಕನ್ನಡ ಮೂಲವೋ ಎಂದು ಅನಿಸುತ್ತದೆ. ಏಕೆಂದರೆ “ಹಡಿಲು” ಕನ್ನಡದಲ್ಲಿ “ಬಂಜರು” ಭೂಮಿ, ಏನೂ ಬೆಳೆಯದ ಪಡುಭೂಮಿ. ಅರ್ಥಾತ್ ಬಂಜೆಗೆ ಇದು ಸಮಾನಾರ್ಥಕ (ಹಡೆ – ಹಡಿಲ್ ಹಡೆಯುವುದು ಇಲ್ಲದ್ದು ಎಂದಾಗಿರಬೇಕು.) ಅಂಥ ಹೆಣ್ಣು ಸತ್ತು ಆದ ದೆವ್ವ ಅತೃಪ್ತ ಪ್ರೇತ ಜೀವ ಈ “ಹಡಳ” ಎಂದು ಜನಜನಿತವಾಗಿ ಬಂದಿರಬಹುದು.
೨) ಕನ್ನೆ – ಇದೊಂದು ವಿಶಿಷ್ಟ ಹೆಣ್ಣು ದೈವ ಅಥವಾ ಚೌಡಿಯದೇ ಪ್ರಕಾರ. ಹೆಸರೇ ಸೂಚಿಸುವಂತೆ ಅವಿವಾಹಿತವಾಗಿ ಮಡಿದ ಹರೆಯದ ಋತುಮತಿಯಾದ – ಹುಡುಗಿ, ಒಂದು ಅತೃಪ್ತ ಉದ್ರಿಕ್ತ ಜೀವ, ಅದು ಪಿಶಾಚಿಯಾಗಿ ಭಾವಿಸುವುದೆಂಬ ಭಯ ಆಯಾ ಸಂಬಂಧಪಟ್ಟ ಮನೆತನಗಳಲ್ಲಿ ತಲೆತಲಾಂತರದಿಂದ ಬೇರೂರಿ ಬಲಿತು ನಡೆದು ಬರುತ್ತದೆ.
ಈ ಕನ್ನೆಗೆ ಪೂಜೆ ಬಲಿ ಕೊಡುವುದುದುಂಟು. ಆಕೆ ತನ್ನಂಥ ಕುಮಾರಿಯರನ್ನೇ ಕಾಡುತ್ತಾಳೆಂಬ ನಂಬಿಗೆ. ಹಿರೇಗುತ್ತಿಯಲ್ಲಿ ಬೊಮ್ಮಯ್ಯ ದೇವರ ಗುಡಿಯ ಹಿಂದೆ ಇಂಥ ಒಂದು ಕನ್ನೆ ಇದೆ. ಅಲ್ಲಿ ಹಿಂದೊಮ್ಮೆ ಹೂವು ಕೊಯ್ಯಲು ಹೋದ ಹರೆಯದ ಹುಡುಗಿಯರ ಒಂದು ಗುಂಪೇ ಮಾಯವಾಗಿಬಿಟ್ಟಿತಂತೆ ! ಅಲ್ಲಯೇ ಸಮೀಪದಲ್ಲಿ “ಕನ್ನೆ ಸೊಡ್ಲೆ” ಎಂಬ ಮಸಣವಿದೆ (ನಮ್ಮಲ್ಲಿ ಹೆನ ಸುಡುವ ತಾಣಕ್ಕೆ “ಸೊಡ್ಲೆ” – ಸುಡು ಎಂಬ ಧಾತುವಿನಿಂದ ಸದ್ಧವಾದ ರೂಪ – ಎನ್ನುತ್ತಾರೆ). ಆ ಊರಿನ ಸುತ್ತ ಬಹುಕಾಲ ಮದುವೆಯಾಗದೆ ಉಳಿದ ಗಂಡಿಗೂ “ನಿಂಗೆ ಕನ್ನೆ ಸೊಡ್ಲೆಯೇ ಗತಿ !” ಎಂದು ಸಂಗಾಡಿಗಳು ಹಂಗಿಸುವುದುಂಟು.
೩) ದೆವ್ವದ ಹುಟ್ಟು – ಮನೆಯಲ್ಲಿ ಸತ್ತ ಹಿರಿಯರೂ ಕಿರಿಯರೂ ಸಹಜವಾಗಿಯೇ ದೆವ್ವವಾಗುತ್ತಾರೆ. ದೆವ್ವವಾಗಿ ತಮ್ಮ ಜತೆಯಲ್ಲಿಯೇ ಎಂದೆಂದಿಗೂ ಉಳಿಯುತ್ತಾರೆ ಎಂಬುದು ನಮ್ಮಲ್ಲಿಯ ಹಾಲಕ್ಕಿ ಹಳ್ಳೇರು ಮುಂತಾದ ಜನಪದ ಜಾತಿಗಳಲ್ಲಿ ಪಾರಂಪರ್ಯದಿಂದ ಬಂದ ದೃಢವಾದ ನಂಬಿಗೆ. ಇದಕ್ಕೆ ಈ ಒಂದು ಘಟನೆ ನಿದರ್ಶನ.
ಸಗಡಗೇರಿ (ಗಂಗಾವಳಿ ಹೊಳೆ ಸಾಲಿನಲ್ಲಿ) ಹತ್ತಿರದ ಕಾಮಗಿ ಗ್ರಾಮದ ಒಂದು ಹಾಲಕ್ಕಿ ಒಕ್ಕಲ ಕುಟುಂಬದಲ್ಲಿ ಪಾಲಾಯಿತು. ಮನೆ ಪಾಲು ಮಾಡಿಕೊಡಲಿಕ್ಕೆ ಊರ ಪಂಚರು ಬಂದಿದ್ದರು. ಎಲ್ಲ ಆಸ್ತಿ ಸೊತ್ತು ಪಾತ್ರೆ – ಪೊಗಡಿ ದನ – ಕರು ಕೋಳಿ – ಕುನ್ನಿ ಎಲ್ಲ ಅಣ್ಣ – ತಮ್ಮ ಸಮಪಾಲಾಗಿ ಹಂಚಿಕೊಂಡರು. ಆ ಮೇಲೆ ಪಂಚರಿಗೆ ಅಣ್ಣ ಕೇಳಿದ “ನಮ್ಮ ಅಪ್ಪನ ದೆವ್ವ ? ಅದು ಯಾರ ಪಾಲು ? ಅದು ನಂದು. ನಾ ಹಿರಿಯ.” ಈ ಸವಾಲು ಪೇಚಿಗೆ ಬಂತು. ತಮ್ಮನೂ ಆ ದೆವ್ವಕ್ಕೆ ಹಕ್ಕುದಾರ. ಇಬ್ಬರೂ ಜಗಳಾಡ ಹತ್ತಿದರು. ದೆವ್ವ ಪಾಲುಮಾಡಿ ಕೊಡುವುದು ಹೇಗೆ ? ಆಗ ಪಂಚರಲ್ಲಿ ಒಬ್ಬರು ಬುದ್ಧಿವಂತರು ಎಂದರು – “ನೋಡು ಮಗಾ, ಅಪ್ಪನ ದೆವ್ವ ಒಂದೇ ಇದೆ. ಇನ್ನು ಕೆಲಕಾಲ ಕಳೆಯಲಿ. ಅಮ್ಮನೂ ಸಾಯ್ತಾಳೆ. ಆಗ ಅವಳ ದೆವ್ವ ಉಂಟಾಗುತ್ತದೆ. ಆಗ ನೀವಿಬ್ವರೂ ಎರಡೂ ದೆವ್ವಗಳನ್ನೂ ಹಂಚಿಕೊಳ್ಳಬಹುದು. ಇಲ್ಲವೆ, ಅಪ್ಪನ ದೆವ್ವ ಅಣ್ಣಂಗೆ ಇರಲಿ. ನಾಳೆ ಅಮ್ಮನ ದೆವ್ವ ತಮ್ಮನಿಗೆ ಹೋಗಲಿ.” ಇದಕ್ಕೆ ಆ ಭಾವಿಕ ಮುಗ್ಧ ಅಣ್ಣ ತಮ್ಮ ಒಪ್ಪಿಕೊಂಡರು.
ಮುಕ್ರಿಯರಲ್ಲಿ ತಾಯಿ ಸತ್ತರೆ ಆಕೆ ಮನೆಯಲ್ಲಿ ದೆವ್ವವಾಗಿದ್ದು ಮಕ್ಕಳನ್ನು ಕಾಯ್ತಾಳೆ. ಹೆಣ್ಣು ಮಕ್ಕಳು ಸತ್ತರೆ ಅವರೂ ತಾಯಿಯಂತೆಯೇ ದೆವ್ವಗಳಾಗಿ ಮನೆಯಲ್ಲಿ ಊಳಿದವರೊಂದಿಗೇ ಇರುತ್ತವೆ ಎಂಬುದು ಭಾವನೆ. ಹೀಗೆ ಇದ್ದವರೆಲ್ಲ “ಸತ್ತವರ ನೆರಳಿ” ನಲ್ಲಿಯೇ ಬದುಕುತ್ತಾರೆ ! ಪಿತೃದೇವೋ ಭವ ಎಂಬುದರ ಮರ್ಮ ಹೀಗೆ ಸತ್ಯವಾಗುತ್ತದೆ.
೪) ಸೊನೆ – ಮರ – ಪ್ರಬಂಧದಲ್ಲಿ ಚೌಡಿ ಜಟ್ಗರ ಸಂದರ್ಭದಲ್ಲಿ ಗೋವೆ ಸಂಪಿಗೆ ಮರದ ಉಲ್ಲೇಖ ಬಂದಿದೆ. ವಿಶೇಷತಃ ಚೌಡಿಯ ಗುತ್ತವಿದ್ದಲ್ಲಿ ಈ ಮರವಿರುತ್ತದೆ. ಅದು ಆ ಹೂವಿನ ಪರಿಮಳಕ್ಕಾಗಿಯೇ ? ಅಲ್ಲ ಆ ಮರಕ್ಕೆ “ಸೊನೆ” ಹೆಚ್ಚು. ಹೂವು, ಎಲೆ, ಟಿಸಿಲು ಮುರಿದಲ್ಲಿ ಬಿಳಿಯ ಜಿಗುಟು ಸೊನೆ ಒಸರುತ್ತದೆ. ಚೌಡಿಗೆ ಇಂಥ ಸೊನೆಯೊಸರುವ ಮರದ ಆಶ್ರಯ ಪ್ರಿಯವೆಂದು ಜಾನಪಸ ನಂಬಿಕೆ. ಗೋವೆ ಸಂಪಿಗೆಯಂತೆ ಕರವೀರ, ಬೋಕಳಿ (ಬಕುಲ) ಮರಗಳೂ ಚೌಡಿಗುತ್ತದ ಬದಿಗೆ ಇರುತ್ತವೆ. ಹಾಗೆಯೇ “ನಂಜಟ್ಲೆ” ಎಂಬ ಅಂಟಿನ ಕಾಯಿಗಳ ಮರ (ಸೊನೆ, ಅಂಟು ಇವೆಲ್ಲ ರೇತಸ್ಸಿಗೆ ಪ್ರತೀಕವಾಗಿ ಈ ಮರಗಳು ಪುಲ್ಲಿಂಗ ಸಂಕೇತವಾಗಿ ನಿಲ್ಲುತ್ತವೆ).
೫) ಗುಜರಾಥ – ರಾಜಸ್ತಾನಗಳ ಕಡೆಗೆ “ಮಾ – ಸತಿ” ಮಗನ ಚಿತೆಯಲ್ಲಿ ಸಹಗಮನ ಮಾಡಿದ ತಾಯಿಯ ಪ್ರತಿಮೆ ಎಂದು ಪ್ರಬಂಧದಲ್ಲಿ ಹೇಳಿದೆ. ಇಲ್ಲಿ ಒಂದು ಶಂಕೆ ಬರಬಹುದು – “ಮಾ” ತಾಯಿ ಎಂಬುದು ಹಿಂದಿಯ ಮಾತು. ಅದು ಕನ್ನಡಕ್ಕೆ ಹೆಗೆ ಒಗ್ಗಿಯು ? ಇದಕ್ಕೆ ಒಂದು ವಿವರಣೆ : ಇಲ್ಲಿ ಇಡಿಯ ಶಬ್ದವನ್ನೇ ಇದ್ದಕಿದ್ದಂತೆ ಇಂಥ ಮಾಸ್ತಿ ಅಮ್ಮನ ಪ್ರತಿಮೆಗೆ ಹೆಸರಾಗಿ ಒಪ್ಪಿಕೊಂಡಿರಬೇಕು. “ಮಾ” ಎಂದರೆ ಮಾತೆ ಎಂಬ ಅರಿವು ಇಲ್ಲಿ ಜಾಗೃತವಿದ್ದಿರಲಿಕ್ಕಿಲ್ಲ. ಅದು ಹಿಂದೀ ಮೂಲವೆಂದು ತಿಳಿದೇ ಇರಲಿಕ್ಕಿಲ್ಲ. ನಮ್ಮಲ್ಲಿ “ಪೇಟೆ” ಶಬ್ದವಿದೆ. ಅದು ಮೂಲ ಫ್ರೆಂಚ್ ಶಬ್ದದ ಅಪಭ್ರಂಶವೆಂದು ಎಷ್ಟು ಜನ ಬಲ್ಲರು? ಅದೇ ರೀತಿ.
೬) ಶರಾವತಿ ಹೊಳೆಯ ಆಚೆಗೆ ಹಲವು ಗ್ರಾಮಗಳಲ್ಲಿ ಜಟ್ಗನ ಕಂಬಗಳು ಕಲ್ಲಿನ ಬದಲು ಮರದ್ದಾಗಿರುತ್ತವೆಂದು ಹೇಳಿದ್ದೇನೆ. ಜಟ್ಗ ಮಾತ್ರವಲ್ಲ. ಕೆಲಸಲ ಗ್ರಾಮ ದೇವತೆಯ ವಿಗ್ರಹವೇ ಮರದ್ದಾಗಿರುವುದುಂಟು. ಸಿರಸಿಯ ಮಾರಮ್ಮನೇ ಮರದ ಮೂರ್ತಿ. ಹಿಂದಿನಿಂದಲೂ ಪ್ರತಿ ಮಾರಿ ಜಾತ್ರೆಯ ನಂತರ ಹಳೆಯ ಮೂರ್ತಿಯನ್ನು “ದೇವಿಕೆರೆ” ಯಲ್ಲಿ ವಿಸರ್ಜಿಸಿ ಹೊಸ ಮೂರ್ತಿಯನ್ನು ಅದರ ಸ್ಥಾನದಲ್ಲಿ ಗರ್ಭ ಗುಡಿಯಲ್ಲಿ ಸ್ಥಾಪಿಸಲಾಗುತ್ತಿತ್ತು. ಹಿಂದೆ ಮಾರಿಜಾತ್ರೆ ಕೆಲ ವರ್ಷಗಳ ಅವಧಿಯ ನಂತರ ನಡೆಯುತ್ತಿತ್ತು. ಪ್ರತಿಷ್ಠಾಪಿತ ವಿಗ್ರಹ ಬಹುಕಾಲ ಪೂಜೆ ಪುನಸ್ಕಾರ ಪಡೆಯುತ್ತಿತ್ತು. ಆದರೆ ಈಚೆಗೆ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಈ ಜಾತ್ರೆಯ ಜರುಗುತ್ತದೆ. ಇಷ್ಟು ಅಲ್ಪ ಅವಧಿಯಲ್ಲಿಯೇ ಹೊಸ ಯಾಕೆ ಸ್ಥಾಪಿಸುತ್ತಿರುವರೋ ಗೊತ್ತಿಲ್ಲ.
೭) ಕೀಚ – ಸವದತ್ತಿಯ ಯಲ್ಲಮ್ಮ ಮಹಾರಾಷ್ಟ್ರದಲ್ಲಿಯೂ ತುಂಬ ಪ್ರಸಿದ್ಧ ಹಾಗು ಪ್ರಚಲಿತ. ಆ ಅಮ್ಮನವರ ಇದಿರು ಕೆಂಡ ಹಾಯುವ ವಿಧಿ ನಡೆಯುತ್ತದೆ. ಅದಕ್ಕೆ ಮರಾಠಿಯಲ್ಲಿ “ಕೀಚ” ಅನ್ನುತ್ತಾರೆ – ವಿಶಿಷ್ಟ ಉದ್ದ – ಅಗಲ – ಆಳದ ತಗ್ಗು ತೋಡಿ ಅದನ್ನು ಕೆಂಡಗಳಿಂದ ತುಂಬುವದು. ಈ “ಕೀಚ” ಹೆಸರು ಕನ್ನಡ “ಕಿಚ್ಚು” ಶಬ್ದದಿಂದ ಬಂದದ್ದು.
೮) ಕೋಲ – “ಕೊಯಿಲ್” ಶಬ್ದದಿಂದ ಹುಟ್ಟರಬಹುದಾದ “ಕೋಲ” ಶಬ್ದ ದಕ್ಷಿಣ ಕನ್ನಡದಲ್ಲಿ ಭೂತಗಳ ಹಬ್ಬ ಅಥವಾ ವಿಶೇಷ ಪೂಜೆಯ ಹೆಸರಾಗಿ ಸರ್ವತ್ರ ಪ್ರಚಲಿತವಿದೆ. ಅದು ಮುಖವಾಡಗಳನ್ನು ತೊಟ್ಟು ಆಯಾ ಭುತದ “ಪಾತ್ರಿ” ಯೂ ಕುಣಿಯುವ ಪದ್ಧತಿಯ ಉತ್ಸವ. (ಈ ವೇಷದ ಭವ್ಯವೂ ಗೋಲಾಕಾರವೂ ಆದ ಶಿರೋಭೂಷಣವೇ ಯಕ್ಷಗಾನದ ಪೊಗಡೆಗೆ Prototype ಆಗಿರಬೇಕು).
೯) ಗಡಿಹಬ್ಬ – ಯಲ್ಲಾಪುರ – ಅಂಕೋಲಾ ತಾಲೂಕುಗಳ ಕೆಲವು ಹಳ್ಳಿಗಳಲ್ಲಿ ಬೇಸಾಯಕ್ಕೆ ಸಂಬಂಧಪಟ್ಟ ಗದ್ದೆಗಳಲ್ಲಿ ಸ್ಥಾನಿಕ ಜಟ್ಗನಿಗೆ “ಗಡಿ” ಯ ಹತ್ತಿರ ಪೂಜೆ ಸಲ್ಲುತ್ತದೆ. ಇಲ್ಲಿ “ಗಡಿ” ಅಂದರೆ ಬೇಸಾಯದ ಆರಂಭ ಮತ್ತು ಕೊನೆ. ಬಿತ್ತನೆಯ ವೇಳೆಗೂ ಹಾಗು ಬತ್ತದ ಕೊಯ್ಲಿನ ಸಮಯ ಈ ಜಟ್ಗನಿಗೆ ಈ ಪೂಜೆ. ಬಿತ್ತನೆಯ ಆರಂಭಕ್ಕೆ ಈ ಪೂಜೆ ವಿಶೇಷ. ಆಗ ಕೋಳಿಯ ಬಲಿಯನ್ನು ಕೊಡುತ್ತಾರೆ. ಹೊಸ ತೆನೆಯನ್ನು ಕೊಯ್ಯುವಾಗ ಕೋಳಿ ಕೊಡುವ ಪದ್ದತಿ ಇದ್ದಂತಿಲ್ಲ. ಸಾದಾ ನೈವೇದ್ಯ. ಎರಡೂ ಪೂಜೆಗಳಲ್ಲಿ ವಿಶೇಷವಾಗಿ ಬೆಳೆ ಹಬ್ಬದಲ್ಲಿ (ಕೊಯ್ಲಿನ ಹಬ್ಬ) ಗದ್ದೆಯಲ್ಲಿಯೇ ಎಲ್ಲರಿಗೂ ಸವಿಯೂಟ. ನೈವೇದ್ಯಕ್ಕಾಗಿ ಅಕ್ಕಿ ಬೀಸಿ ಅತಿದೊಡ್ಡ ದೋಸೆಯಂತೆ ಎಣ್ಣೆ ಬಂಡಿಯಲ್ಲಿ ಹುರಿದ “ಗಾರಿಗೆ” ತಯಾರಿಸಬೇಕು. ಇದಕ್ಕೆ “ಸುಟ್ಟವು” ಎಂಬ ಹೆಸರೂ ಇದೆ. ಬಿತ್ತನೆಯ ಸಮಯದ ಗಡಿ ಹಬ್ಬದಲ್ಲಿ ಬಕ್ಕೆ ಹಲಸಿನ ಹಣ್ಣಿನ ಸಿಹಿ ಖಜ್ಜಾಯವೂ ಇರುತ್ತದೆ. (ಎಣ್ಣೆ ಬಂಡಿಯಲ್ಲಿ ಮುಳುಗಿಸಿ ಬೇಯಿಸುವ ಈ ಖಜ್ಜಾಯಕ್ಕೆ “ಮುಳುಕ” ಎಂದು ಹೆಸರಿದೆ). ಈ ಖಜ್ಜಾಯಗಳನ್ನೇ ಜಟ್ಗನಿಗೆ ನೈವೇದ್ಯ ಮಾಡಿ ಎಲ್ಲರೂ ಹರಿದು ಹಂಚಿಕೊಂಡು ತಿನ್ನುವರು.
Leave A Comment