. ಗ್ರಾಮದೇವತೆಗಳು :

ಗ್ರಾಮದೇವತೆ ಇಲ್ಲವೆ ಮಾತೃದೇವತೆಯ ಆರಾಧನೆಯ ಸಂಪ್ರದಾಯ, ಕನ್ನಡ ನಾಡಿಗಷ್ಟೇ ಸೀಮಿತವಾಗಿರದೆ, ವಿಶ್ವವ್ಯಾಪಿಯಾಗಿದೆ. ಭರತದಲ್ಲಿ ಹರಪ್ಪಾ, ಮೊಹೆಂಜೋದಾರೋ ಸಂಸ್ಕೃತಿಗಳಲ್ಲಿ ಮಾತೃದೇವತೆಯ ಉಪಾಸನೆಯಿದ್ದುದನ್ನು ಸಂಶೋಧಕರು ಗುರುತಿಸಿದ್ದಾರೆ. ಈ ಸಂಪ್ರದಾಯದ ಮೂಲ ಗುರುತಿಸುವುದು ಕಷ್ಟ ಸಾಧ್ಯ. ಬಹುಶಃ ಆರ್ಯೇತರ ಮಾತೃ ಪ್ರಧಾನ ವರ್ಗದವರಿಂದ ಈ ಪದ್ಧತಿ ಉಗಮ ಪಡೆದು, ಇತರರಲ್ಲಿ ಪ್ರಸಾರ ಪಡೆದಿರಬೇಕು. ವೇದದಲ್ಲಿ ಬರುವ ಅಂಬ ಪದವು “ಅಮ್ಮ” ದಿಂದ ನಿಷ್ಪನ್ನವಾಗಿದೆಯೆಂಬ ಅಭಿಪ್ರಾಯವಿದೆ.

[1] “ಋಗ್ವೇದದೊಳಗಿನ ಅದಿತಿಯು ಆರ್ಯ ಭಾಷಿಕರ ದೈವತವಲ್ಲ, ಭಾರತೀಯ  ದೈವತದೊಳಗಿಂದ ಸ್ವೀಕರಿಸಿದ ಮಹಾ ಮಾತೆಯಾಗಿದ್ದಾಳೆ”[2]  ಎಂದು ಡಾ. ಶಂ. ಭಾ. ಜೋಶಿಯವರು, ಅದಿತಿ ಹಾಗೂ ಗ್ರಾಮದೇವತೆಯಾದ “ಅಮ್ಮ” ಎರಡರಲ್ಲಿ ಅಭೇದ ಕಲ್ಪಿಸಿದ್ದಾರೆ. ಪಂಚಮರಾದಿಯಾಗಿ ಸಕಲರೂ, ವಿಶ್ವಕುಟುಂಬಿನಿ ಆದಿತಿಯ ಮಕ್ಕಳು. ಅದಿತಿ ಎಲ್ಲರ ಅಮ್ಮ. ನಮ್ಮಲ್ಲಿ ಎಲ್ಲಮ್ಮನೆಂದು ಕರೆದುದನ್ನು ನೆನೆಯಬಹುದು. ಗ್ರಾಮದೇವತೆ “ಅಮ್ಮ”ನನ್ನು ಕೇರಳದಲ್ಲಿ ಭಗವತಿ,[3]  ತಮಿಳು ನಾಡಿನಲ್ಲಿ ಮಾರಿಯಮ್ಮ, ಕಾಳಿಯಮ್ಮ, ದ್ರೌಪತಿಯಮ್ಮ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ರೇಣುಕೆ. ಬನಶಂಕರಿ, ಭುವನೇಶ್ವರಿ, ಚಾಮುಂಡಿ, ಮೂಕಾಂಬಿಕಾ, ಶಾರದೆ, ಮಾರಿಕಾಂಬೆ, ದ್ಯಾಮವ್ವ, ಮರಗವ್ವ ಮುಂತಾದ ಹೆಸರುಗಳಿಂದ ಗ್ರಾಮದೇವತೆಯನ್ನು ಆರಾಧಿಸುತ್ತಾರೆ.

. ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮದೇವತೆಯ ಉಪಾಸನೆ :

ಗ್ರಾಮ ದೇವತೆಗಳ ಉಪಾಸನಾ ವಿಧಿಯನ್ನನುಲಕ್ಷಿಸಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮದೇವತೆಗಳ ಮೂರು ಗುಂಪುಗಳನ್ನು ಮಾಡಬಹುದು:[4] (i) ಬ್ರಾಹ್ಮಣರು ಮಾತೃದೇವತೆಯನ್ನು ಮಹಾಮ್ಮಾಯಿ, ಶಾಂತಾದುರ್ಗಾ, ಆರ್ಯಾದುರ್ಗಾ, ಶ್ವೇತಾಂಬಿಕಾ ಮುಂತಾದ ಹೆಸರುಗಳಿಂದ ಆಗಮೋಕ್ತ ವಿಧಿ – ವಿಧಾನಗಳಿಂದ ಅರ್ಚಿಸುತ್ತಾರೆ. ವೈದಿಕ ಮಂತ್ರ, ತಂತ್ರ ಹೋಮ ಹವನಾದಿಗಳಿಗೆ ಪ್ರಾಧಾನ್ಯವಿಯುತ್ತಾರೆ. ಈ ದೇವತೆಗೆ ನವರಾತ್ರಿ ಪ್ರಮುಖ ಉತ್ಸವ. ದೇವತೆಯ ಅರ್ಚಕರು ಬ್ರಾಹ್ಮಣರು. (ii) ಬ್ರಾಹ್ಮಣೇತರರು ಗ್ರಾಮದೇವತೆಯನ್ನು ಅಮ್ಮ, ಭೂಮಿತಾಯಿ, ದೇವತೆ, ಮಾರಿಕಾಂಬೆ, ಮಾರಿಯಮ್ಮ, ಸಣ್ಣಮ್ಮ, ಬೆಳಿಯಮ್ಮ, ಕರಿಯಮ್ಮ, ಮಂಡದಮ್ಮ ಎಂಬ ವಿವಿಧ ಹೆಸರುಗಳಿಂದ ಆರಾಧಿಸುತ್ತಾರೆ. ಪೂಜಾರಿಗಳು ಬ್ರಾಹ್ಮಣೇತರರು; ಹೆಚ್ಚಾಗಿ ಕುಂಬಾರರು ಇಲ್ಲವೆ ಬಡಿಗರು. ಪೂಜೆಯ ವಿಧಿ ವಿಧಾನಗಳು  ಜಾನಪದ ಸಂಪ್ರದಾಯಕ್ಕನುಗುಣವಾಗಿ ನಡೆಯುತ್ತವೆ. ಪ್ರಮುಖ ಉತ್ಸವ ಬಂಡಿಹಬ್ಬ. ಮಾರಿಯಮ್ಮನಿಗೆ ಮಾತ್ರ ಮಾರಿಜಾತ್ರೆ.[5] (iii) ಹರಿಜನರು ಮಾತೃ ದೇವತೆಯನ್ನು ಕಾಡಿಯಮ್ಮ, ಮಾರಿಯಮ್ಮನೆಂದು ಪೂಜಿಸುವುದಿದೆ. ಇತರ ದೇವತೆಗಳಿಗೆ ಗುಡಿ ಗುಂಡಾರಗಳಿಲ್ಲದಿರುವುದೇ ಹೆಚ್ಚು. ಕೆಲವಕ್ಕೆ ಊರ ಹೊರಗಡೆ ತೀರ ಚಿಕ್ಕ ಚಿಕ್ಕ ಗುಡಿಸಲುಗಳಿರುತ್ತವೆ. ಹರಿಜನರು ಇದರ ಪೂಜಾರಿಗಳು. ಕೆಲವೆಡೆ ದೇವತೆಯ ಹೆಸರಿನಲ್ಲಿ, ನೀರು ತುಂಬಿದ ಕೊಡ ಇಲ್ಲವೆ, ಕಾಯಿ ಕವಡೆ ಸರ ಒಂದೆಡೆಯಿಟ್ಟು, ಹೂವು, ಕುಂಕುಮ, ಸೀರೆ, ಕಣಯಿಟ್ಟು, ಅಮ್ಮನೆಂದು ಪೂಜಿಸುವ ಸಂಪ್ರದಾಯವಿದೆ. ಪೂಜೆಯ ಕಾಲಕ್ಕೆ ವೈದಿಕ ಮಂತ್ರಗಳಲ್ಲಿಯೇ ಇಲ್ಲ. ಜನಪದ ಹಾಡು ಕುಣಿತಗಳು ಪೂಜೆಯ ಕಾಲಕ್ಕೆ ನಡೆಯುತ್ತವೆ. ದೇವತೆಗೆ ಬಲಿ ಸಮರ್ಪಣೆ ಮಾಡುವುದು ಮಾತ್ರ ಎಲ್ಲರಲ್ಲಿ ಸಾಮಾನ್ಯ.[6]

. ಶ್ರೀ ಮಾರಿಕಾಂಬೆಯ ಪ್ರತಿಷ್ಠಾಪನೆಯನ್ನು ಕುರಿತ ಐತಿಹ್ಯ :

ಸುಮಾರು ಮುನ್ನೂರು ವರ್ಷಗಳ ಹಿಂದೆ, ಶಿರಸಿಯ ರೈತ ಜನ ಮರ್ಕೆಮ್ಮೆ ಮತ್ತು ದುರ್ಗಮ್ಮನ ಗುಡಿ ತಮ್ಮಲ್ಲಿದ್ದರೂ, ಚಂದ್ರಗುತ್ತಿಯ ರೇಣುಕೆಯನ್ನೇ ತಮ್ಮ ಗ್ರಾಮದೇವತೆಯೆಂದು ಪೂಜಿಸುತ್ತಿದ್ದರು. ಒಮ್ಮೆ ಮರ್ಕೆಮ್ಮ, ದುರ್ಗಮ್ಮರ ಪಡಲಿಗೆಯನ್ನು ಹೊತ್ತ ಶಿರಸಿಯ ಬಸವನೆಂಬ ಅರ್ಚಕನು ರೈತರೆಡೆ ಹೋಗುವಾಗ, ಚಂದ್ರ ಗುತ್ತಿಯವರು ಅವನನ್ನು ತರುಬಿದರು. ಇದರಿಂದ ಕೆರಳಿದ ಶಿರಸಿಯ ಸೀಮೆಯವರು, ತಮ್ಮ ಸೀಮೆಗೇ ಪ್ರತ್ಯೇಕವಾದ, ಇನ್ನೊಂದು ಗ್ರಾಮದೇವತೆಯನ್ನು ಸ್ಥಾಪಿಸಲು, ಸ್ವಾದಿಯ ನಂದಿಕೇಶ್ವರ ಸ್ವಾಮಿಗಳ ಹಿರಿತನದಲ್ಲಿ, ಇಮ್ಮಡಿ ಸದಾಶಿವರಾನೆಡೆಗೆ ನಿಯೋಗ ಹೊರಟು ಮನವಿ ಸಲ್ಲಿಸಿ, ಅವನ ಅಪ್ಪಣೆಯ ಮೇರೆಗೆ ಮಾರಿಕಾಂಬೆಯನ್ನು ಪ್ರತಿಷ್ಠಾಪಿಸಿದರು. ಶ್ರೀದೇವಿಯ ವಿಗ್ರಹ ಪ್ರಾಪ್ತಿಯ ಕಥೆ ಇಂತಿದೆ : ಭಕ್ತನೊಬ್ಬನ ಕನಸಿನಲ್ಲಿ ಮಾರಿಕಾಂಗೆ ಕಾಣಿಸಿಕೊಂಡು, ತನ್ನ ಕುರುಹು ಊರ ಹೊರಗಿನ ಕೆರೆಯಲ್ಲಿರುವುದಾಗಿಯೂ ಅದನ್ನು ತಂದು ಪ್ರತಿಷ್ಠಾಪಿಸಿ ಪೂಜಿಸಿದಲ್ಲಿ, ಊರಿಗೆ ಹಿತವಾಗುವುದೆಂದು ತಿಳಿಸಿದಳಂತೆ. ದೇವಿಯ ಆದೇಶದಂತೆ ಕೆರೆ ಶೋಧಿಸಿದಾಗ, ಶ್ರೀ ಮಾರಿಕಾಂಬೆಯ ಅಂಗಾಂಗಗಳಿಂದ ತುಂಬಿದ ಪೆಟ್ಟಿಗೆ ಸಿಕ್ಕಿತಂತೆ.[7] ಹಾನಗಲ್ಲಿನ ಜಾತ್ರೆಯ ತರುವಾಯ, ಆಭರಣ ಹಾಗೂ ಶ್ರೀ ದೇವಿಯ ಅಂಗಾಂಗಗಳಿದ್ದ ಪೆಟ್ಟಿಗೆಯನ್ನು ದರೋಡೆಕೋರರು ಅಪಹರಿಸಿ ತಂದು, ಆಭರಣಗಳನ್ನು ದೋಚಿಕೊಂಡು, ದೇವಿಯ ಅಂಗಾಂಗಗಳಿರುವ ಪೆಟ್ಟಿಗೆಯನ್ನು ಕೆರೆಗೊಗೆದರಂತೆ. ಭಕ್ತರಿಗೆ ದೊರೆತ ಪೆಟ್ಟಿಗೆ ಅದೇ ಎಂದು ಹೇಳಲಾಗುತ್ತದೆ. ಆ ಪೆಟ್ಟಿಗೆಯಲ್ಲಿದ್ದ ಶ್ರೀ ದೇವಿಯ ಅಂಗಾಂಗಗಳನ್ನು ಕಂಡ ಭಕ್ತ ಜನ್ರ, ಶ್ರೀ ದೇವಿಯೇ ತಮ್ಮ ಮೇಲೆ ಕರುಣೆದೋರಿ ಪ್ರತ್ಯಕ್ಷಳಾದಳೆಂದು ಬಗೆದು, ಶಾಲಿವಾಹನ ಶಕೆ ೧೬೧೧ ಶೂಕ್ಲ ಸಂವತ್ಸರ, ವೈಶಾಖ ಶುದ್ಧ ಅಷ್ಟಮಿದಿನ ಶ್ರೀ ಮಾರಿಕಾಂಬೆಯ ಪ್ರತಿಷ್ಠಾಪನೆ ಮಾಡಿದರು. ಈ ಐತಿಹ್ಯದಂತೆ, ಇಂದು ಪೂಜೆಗೊಳ್ಳುವ ಮಾರಿಕಾಂಬೆ ಹಾನಗಲ್ಲಿನಿಂದ ಶಿರಸಿಗೆ ವಲಸೆ ಬಂದವಳು. ಇಂದಿಗೂ ಹಾನಗಲ್ಲಿನ ಹಾವಳಿ  ಹನುಮಂತ ದೇವರ ಗುಡಿಯ ಹತ್ತಿರ, ಶಿರಸಿಯಮ್ಮನ ಪಾದಗಟ್ಟಿಯಿದೆ. ಹಾನಗಲ್ಲಿನ ದ್ಯಾಮವ್ವನ ಜಾತ್ರೆಯಲ್ಲಿ ದ್ಯಾಮವ್ವನಿಗೆ ಬಲಿಕೊಟ್ಟ ಮೇಲೆ ಶಿರಸಿಯಮ್ಮನ ಪಾದ ಗಟ್ಟಿಗೆ ಬಲಿಕೊಡುವ ಸಂಪ್ರದಾಯವಿದೆ.[8] ಒಟ್ಟಿನಲ್ಲಿ ಶಿರಸಿಯ ಜನರು ತಾವು ನಡೆದುಕೊಳ್ಳುವ ಚಂದ್ರಗುತ್ತಿಯ ರೇಣುಕೆಗೆ ಬದಲಾಗಿ ಶಿರಸಿಯಲ್ಲಿ ಮಾರಿಕಾಂಬೆಯನ್ನು ಪ್ರತಿಷ್ಠಾಪಿಸಿಕೊಂಡರು, ಎನ್ನುವದು ಈ ಐತಿಹ್ಯದ ತಿರುಳು.

. ಶ್ರೀ ಮಾರಿಕಾಂಬೆ :

ಶ್ರೀ ಮಾರಿಕಾಂಬೆಯದು ಶಿಲಾವಿಗ್ರಹವಲ್ಲ, ಕಟ್ಟಗೆಯದು.[9] ಮೂರ್ತಿಯಲ್ಲಿ ವೈದಿಕ ತಂತ್ರಾಗಮಗಳ ಪ್ರಭಾವ ಸ್ಫುಟವಾಗಿ ಗೋಚರಿಸುತ್ತದೆ. ಮೂರ್ತಿ ಪುರಾಣೋಕ್ತ ಮಹಿಷಾಸುರ ಮರ್ಧಿನಿಯಂತಿದೆ. ಸಿಂಹವಾಹಿನಿಯಾದ ಶ್ರೀ ದೇವಿಯ ಏಂಟು ಕೈಗಳಲ್ಲಿ ಶಂಕ, ಚಕ್ರ, ತ್ರಿಶೂಲ, ಡಮರು, ಖಡ್ಗ, ಪಾಶ, ಮತ್ತು ರುಂಡಗಳಿವೆ. ದೇವಿಯಿಂದ ಹತನಾದ ಕೋಣ (ಮಹಿಷಾಸುರ) ನನ್ನು ದೇವಿ ಕುಳಿತ ಸಿಂಹ ಮೆಟ್ಟಿದೆ. ಸುಮಾರು ಹನ್ನೊಂದು ಅಡಿಗಳಷ್ಟು ಎತ್ತರವಾದ ಈ ಭವ್ಯಮೂರ್ತಿ, ಒಂದು ರುದ್ರರಮ್ಯ ಕಲಾಕೃತಿಯಾಗಿದೆ. ಈ ಜಿಲ್ಲೆಯ ಗ್ರಾಮದೇವತೆಗಳ ವಿಗ್ರಹಗಳಲ್ಲಿಯೇ ಇದು ಅತ್ಯಂತ ಎತ್ತರವಾಗಿದೆ. ಆದ್ದರಿಂದ ಜಾನಪದರು ಇವಳನ್ನು ದೊಡ್ಡಮ್ಮನೆಂದು, ತಮ್ಮ ಭಕ್ತಿ ಗೌರವವನ್ನು ಸಮರ್ಪಿಸಿದ್ದಾರೆ :

ಸಿರಸಿ ಸೇವಮ್ಮ[10]  ಊರಿಗೇ ದೊಡ್ಡವ್ಳ
ಪಿಂಜರ ದೊ – ಲೀ[11]  ಕಿಮಿಯಲ್ಲೇ[12]  | ಇಟ್ಟೀಕಂಡೇ
ಕೆಂಡ್ರದ ರತವಾ ಎಳದಾಳ[13]

ಸಿರಸಿ ಸೇವಮ್ಮ ಕಾಂಬೂಕೇ[14]  ದೊಡ್ಡವ್ಳ
ರಜಗೆಂಪೀನೋಳ ರವಿಯೋಳ | ಕುಳ್ಳಲ್ಲೇ[15]
ನೇತ್ರದ ಮುತ್ತ ಹುಳುವಾದೇ[16] |

ಶ್ರೀ ಮಾರಿಕಾಂಬೆಯು ಶಿರಸಿಯ ಗ್ರಾಮ ದೇವತೆಯಾದರೂ, ಉತ್ತರ ಕನ್ನಡ ಜಿಲ್ಲೆ ತುಂಬ ಅದರ ಖ್ಯಾತಿ. ಈ ದೇವತೆಯನ್ನು ಮಾರಿಕಾಂಬೆ, ಮಾರಿಯಮ್ಮ, ಶಿವಮ್ಮ, ದೊಡ್ಡಮ್ಮ, ಅಮ್ಮ, ಭೂಮಿತಾಯಿ ಎಂದು ಭಕ್ತಜನ ವಿವಿಧ ಹೆಸರುಗಳಿಂದ ಕರೆಯುತ್ತಾರೆ. “ಮಹಾರಾಷ್ಟ್ರದ ಮರುಆಯಿ ಕನ್ನಾಡಿನವರ ಬಾಯಲ್ಲಿ “ಮಾರಿ” ಅಮ್ಮ ಆಗಿದ್ದಾಳೆ. ಮಾರಿದೇವಿ ಮೃತ್ಯುದೇವತೆಯಾದಳು.”[17] ಎನ್ನುತ್ತಾರೆ. ಡಾ. ಶಂ.ಬಾ. ಜೋಶಿಯವರು. ಹೀಗೆ ಮಾರಿಕಾಂಬೆಯ ಮೂಲಕ್ಕೆ ನಾವು ಮಹಾರಾಷ್ಟ್ರಕ್ಕೆ ಹೋಗುವದಕ್ಕಿಂತ ಇಲ್ಲಿಯೇ ಹುಡುಕೋಣ.

. ಮರ್ಕೆಯಮ್ಮ > ಮಾರಿಕಾಂಬೆವೃಕ್ಷಗೇವತೆ[18]:

ಮರ್ಕೆಮ್ಮ, ದುರ್ಗಮ್ಮ, ಎಂಬ ಜೋಡು ದೇವತೆಗಳು ಹಿಂದಕ್ಕೆ ಮಾರಿ ಗುಡಿಯ ಆವಾರದಲ್ಲಿದ್ದುವು. ಅವನ್ನೀಗ ಗುಡಿಯಿಂದ ಸ್ವಲ್ಪ ದೂರದಲ್ಲಿ ಪ್ರತಿಷ್ಠಾಪನೆಗೊಳಿಸಲಾಗಿದೆ. ಮರ್ಕೆಯಮ್ಮನ ಮರದ ವಿಗ್ರಹವನ್ನು ಮಾರಿಕಾಂಬೆಯ ಹೆಸರಿನಲ್ಲಿ ಆಸಾದಿಗಳು ಹೊತ್ತು, ಹಳ್ಳಿ ಹಳ್ಳಿ ತಿರುಗುವುದಿದೆ. ಮಾರಿಕಾಂಬೆಗೆ ಸಲ್ಲಿಸುವ ಹರಕೆಗಳನ್ನನೇಕರರು ಮರ್ಕೆಯಮ್ಮನಿಗೆ ಸಲ್ಲಿಸಿ, ಭಂಡಾರ ಪಡೆಯುತ್ತಾರೆ. ಈ ಮರ್ಕೆಯಮ್ಮನೆನ್ನುವ ಹೆಸರೇ ಸಂಸ್ಕೃತೀಕರಣಗೊಂಡು ಮಾರಿಕಾಂಬೆಯಾಗಿರಬೇಕು.

ಮರಕೆ + ಅಮ್ಮ= ಮರಕೆಯಮ್ಮ

ಮರಕೆಯಂಬ > ಮಾರಿಕಾಂಬೆ
ಮರ್ಕೆಯಮ್ಮ > ಮರ್ಕೆಮ್ಮ

ಎಂದರೆ ಮೂಲತಃ ಇದು ಮರದ ದೇವತೆ – ಮರದಮ್ಮ – ಮರಗಮ್ಮ. ಶ್ರೀ ಮಾರಿ ಕಾಂಬೆಯ ಜಾತ್ರೆಯ ಕಾಲಕ್ಕೆ ಶ್ರೀ ದೇವಿಗೆ ಬೇವಿನ ಸೊಪ್ಪಿನ ಸೇವೆ ಸಲ್ಲಿಸುವ ಪದ್ಧತಿ, ತೀರ ಹಿಂದುಳಿದವರಲ್ಲಿದೆ. ಸಾಂಕ್ರಾಮಿಕ ರೋಗ ಉಲ್ಬಣಿಸಿದಾಗ, ಶ್ರೀ ದೇವಿಗೆ ಈ ಸೇವೆಯ ಹರಕೆ ಹೊರುವ ಸಂಪ್ರದಾಯ. ಹರಕೆ ಹೊತ್ತವರು, ವಿವಸ್ತ್ರರಾಗಿ ಬೇವಿನ ಸೊಪ್ಪನ್ನು ದೇಹಕದಕ್ಕೆ ಕಟ್ಟಿಕೊಂಡು, ದೇವರಿಗೆ ಪ್ರದಕ್ಷಿಣೆಯನ್ನು ಹಾಕಿ, ಹರಕೆಯೊಪ್ಪಿಸುತ್ತಾರೆ. ಈ ಹರಕೆಗೆ ಕಾರಣವೆಂದರೆ, ಬೇವಿನ ಮರವು  ಶ್ರೀ ದೇವಿಯ ಸ್ಥಾನವೆಂಬ ತಿಳುವಳಿಕೆ.[19] ಅನೇಕರು ಬೇವಿನ ಮರವನ್ನೇ ದೇವಿಯೆಂದು ತಿಳಿದು ಪೂಜಿಸುವುದಿದೆ. ಬೇವಿನ ಸೊಪ್ಪು ಕಟ್ಟಿಕೊಳ್ಳುವದೆಂದರೆ, ಶ್ರೀ ದೇವಿಯನ್ನೇ ರಕ್ಷಾ ಕವಚವಾಗಿ ತೊಟ್ಟುಕೊಂಡಂತೆ, ಎಂಬ ಕಲ್ಪನೆ ಅವರದು. ಎಲ್ಲಮ್ಮನ ಪುಜೆಗೆ ಬೇವಿನ ಟೊಂಗೆ ಬೇಕಾಗುವುದನ್ನೂ ಈ ಸಂದರ್ಭದಲ್ಲಿ ನೆನೆಯಬಹುದು. ನಮ್ಮ ನಾಡಿನಲ್ಲಿ ವೃಕ್ಷದೇವತೆಯನ್ನು, ಮರೆವ್ವ, ಮರಗವ್ವ, ಬನಶಂಕರಿಯೆಂದು ಗ್ರಾಮ ದೇವತೆಯೊಡನೆ ಅಭೇದ ಕಲ್ಪಿಸಿ ಪೂಜಿಸುವುದಿದೆ. ಉತ್ತರ ಕನ್ನಡ ಜಿಲ್ಲೆಯ ಕಾಡಿಯಮ್ಮ (ಕಾಡಿನ + ಅಮ್ಮ) ನೂ, ಬನದೇವತೆಯೇ. ಮುಂದೆ ಅವಳು ಕಾಡುವ + ಅಮ್ಮನೂ ಆದಳು. ಹೀಗೆ ಕಾಡಿಯಮ್ಮ ಬನಶಂಕರಿಯೂ ಹೌದು, ಮಹಾಮಾರಿಯೂ ಹೌದು. ನಮ್ಮ ಮಾರಿಕಾಂಬೆ, ಮರ್ಕೆಯಮ್ಮನೂ ವೃಕ್ಷದೇವಿಯೇ, ಅದಕ್ಕಾಗಿಯೇ ಮಾರಿಕಾಂಬೆಯ ಮೂರ್ತಿಯನ್ನು ಮರದಿಂದ ತಯಾರಿಸುವ ಸಂಪ್ರದಾಯ ಬೆಳೆದು ಬಂದಿರಬೇಕು. ಕರ್ನಾಟಕದ ಹೊರಗೂ ವೃಕ್ಷಪೂಜೆಯ ಸಂಪ್ರದಾಯವಿದೆ. “ಗಂಗಾ ತೀರದ ಕುರುಬರು, ಮರದಮ್ಮನಿಗೆ ಭಯ ಭಕ್ತಿಯಿಂದ ತಲೆಬಾಗುತ್ತಾರೆ. ಅಲ್ಲಿಯ ಓರಾನರು ವೃಕ್ಷಗಳು ದೈವೀಶಕ್ತಿಯ ವಾಸಸ್ಥಾನವೆಂದು ನಂಬುತ್ತಾರೆ.[20]

ಗಾಳಿ ಬೇನೆಗೂ ವನಸ್ಪತಿಗೂ ಪರಸ್ಪರ ಸಂಬಂದವಿರುವುದನ್ನೂ ನಾವು ಮರೆಯಬಾರದು. ಗ್ರಾಮ್ಯರಲ್ಲಿ “ಗಾಳಿಗೆ” ಸಂಬಂಧಿಸಿದ “ಮದ್ದು” ತಯಾರಿಸುವುದೂ ವನಸ್ಪತಿಯಿಂದಲೇ.

. ಮಾರಿಕಾಂಬೆಗಾಳಿಮಾರಿ :

ಶ್ರೀದೇವಿ, ಗಾಳಿಯಮ್ಮ – ಗಾಳಿಮಾರಿಯೂ ಆಗಿದ್ದಾಳೆನ್ನುವುದನ್ನು ನಾವು ಮರೆಯುವಂತಿಲ್ಲ.

ಜನ ಸಮೃದ್ಧಿಯಿಂದ ಭೂಭಾರವಾದಾಗಲೆಲ್ಲ ಮಹಾಶೇಷನು ಗಂಗೆ[21], ಮಾರಿಕಾಂಬೆಯರಿಗೆ ಮೊರೆಯಿಡುವನೆಂದು ಜಾನಪದ ನಂಬಿಕೆ. ಭೂ – ಭಾರದಿಂದ ಕುಸಿದ ಆದಿಶೇಷನು ಗಂಗೆಯ ಹತ್ತಿರ ಹೋಗಿ ತನ್ನ ಭಾರ ಇಳಿಸಲು ಅಂಗಲಾಚುವನಂತೆ :

ಗುಡ್ಡೀ ಗುಡ್ಡೀ ತುಕ್ಕಿ[22] ಗುಡ್ಡೀ ಕಾಲನೆ ತುಕ್ಕಿ
ಏಳೊಳಿ[23]  ತುಕ್ಕಿ ನಾಬಂದೆ | ಮಾಸೇಸ
ಅರ್ಧಬಾರವ[24] ಇಳ್ಸೀದೆ | ಮಾಸೇಸ
ಸಿರ್ಸಿಯಲ್ಲೋಗು ಸೆರಗೊಡ್ಡು | ಮಾಸೇಸ
ಅರ್ದಭಾರಗಳ ಇಳಿಸೂದು[25] |

ಮಹಾಪೂರಾದಿ ಜಲಪ್ರಳಯದಿಂದ ಮಹಾಶೇಷನ ಅರ್ಧಭಾರಗಳನ್ನಿಳಿಸಿದ ಗಂಗೆ, ಅವನ ಉಳಿದ ಭಾರ ಕಡಿಮೆಮಾಡಿಕೊಳ್ಳಲು, ಶಿರಸಿಯ ಮಾರಿಕಾಂಬೆಯೆಡೆ ಹೋಗಲು ನಿರ್ದೇಶಿಸುತ್ತಾಳೆ.

ಹತ್ತು ಸಾವಿರ ಬಂಡಿ ಮೊದಲೆ ಕಳುಗಿದೆ ಮಾಸೇಸ
ಇನ್ನೂ ಸಾವಿರವ ಕಳಗೂವೆ | ಮಾಸೇಸ
ಆರುದ ಭಾರಗಳ ಇಳುಸೂವೆ |

ಪಿಡುಗಿನ ಅಧಿದೇವತೆಯಾದ ಮಾರಿಕಾಂಬೆ, ಊರಮೇಲೆ ಸಿಡುಬು, ಗೋಣಿ, ಮೈಲಿ, ಕಜ್ಜಿ, ಗಾಣಗುದಗಿ ಜ್ವರ ಮೊದಲಾದ ಸಾಂಕ್ರಾಮಿಕ ರೋಗಗಳನ್ನು ಹಬ್ಬಿಸಿ, ಲಯಕಾರಿಣಿಯಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನತೆಯನ್ನು ನಾಶಗೊಳಿಸುತ್ತಾಳೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಹಾರಕ್ಕೆ ಭರವಸೆಯೀಯುತ್ತಾಳೆ. ಮಾರಿಕಾಂಬೆಯಿಂದ ಹಬ್ಬಲಾದ ಸಾಂಕ್ರಾಮಿಕ ರೋಗದಿಂದ ಗ್ರಾಮಜೀವನ ತತ್ತರಿಸಿ, ಜನರಲ್ಲಿ ಭಯ ಭೀತಿಯ ವಾತಾವರಣ ಆವರಿಸುತ್ತದೆ :

ಹರ್ವ[26]  ಹಾವಿನಗಂಜೆ ಉರುವಾ[27] ಜೋತಿಗಂಜೆ
ಹುಲಿಗಂಜೆ ಹುಲಿಯಾ ಮರಿಗಂಜೆ | ದೊಡ್ಡಮ್ಮ
ನಿಮಗಂಜೆ ನಾನು ನಡೆವಳು |

ವೈದ್ಯಕೀಯ ಸವಲತ್ತಿಲ್ಲದ ಹಿಂದಿನ ಕಾಲದಲ್ಲಿ, ಈ ಗಾಳಿ ಮಾರಿಯನ್ನು ನಿಯಂತ್ರಿಸಲು ಮಾನವ ಮಾತ್ರರಿಂದ ಅಸಾಧ್ಯವೆಂದು ಬಗೆದ ಜನರು, ಶ್ರೀ ಮಾರಿಕಾಂಬೇಗೆ ಶರಣಾಗುತ್ತಾರೆ. ಊರಲ್ಲಿ ಮಾರಿಕಾಂಬೆಯ ಹಬ್ಬಿದ “ಮಾರಿ ಕೋಟಲೆ” ಯನ್ನು ಹೋಗಲಾಡಿಸಲು ಮಾರಿಯಮ್ಮನಿಗೆ ಅವಳ ಪರಿವಾರಕ್ಕೆ ಕೋಳಿ, ಕುರಿ, ಕೋಣಗಳ ಬಲಿಸಮರ್ಪಣೆಯ ಹರಕೆ ಹೊರುತ್ತಾರೆ :

ಚಿರ್ಚೆಲೆ[28] ಚೀವಮ್ಮಗೇ[29] ಯಾತರ ಹರಕೆಯೋ
ಕೊಟ್ಟಲೆ[30] ಬಂದ್ ಕೋಳಿ ಹರಕೆಯೋ I ಚೀವಮ್ಮಗೇ
ಕುಂಬಲೇ[31] ಬಂದ್‌ಕುರಿ ಹರಕೆಯೋ I ಚೀವಮ್ಮಗೇ
ಗೊಂಡೆಬಾಲದ ಕೊ-ಣ[32] ಹರಕೆಯೋ I

. ಮಾರಿಕಾಂಬೆಯ ಪರಿವಾರ :

ಮಾರಿಕಾಂಬೆ ತನ್ನ ತಂಗಿಯರ ನೆರವಿನಿಂದ ಗಾಳಿಯ ಪಿಡುಗನ್ನು ನಿಯಂತ್ರಿಸುವಳಂತೆ. ಗ್ರಾಮದೇವತೆಯರಾದ, ದ್ಯಾಮವ್ವ, ದುರ್ಗವ್ವ, ಸಣ್ಣಮ್ಮ,, ಬೆಳಿಯಮ್ಮ, ಕರಿಯಮ್ಮ, ಕಾಡಿಯಮ್ಮ ಮುಂತಾದವರೆಲ್ಲ ಇವಳ ತಂಗಿಯರಂತೆ ಇವರು ಎಳು ಜನ. ಅಕ್ಕ ತಂಗಿಯರೆಂಬ ಹೇಳಿಕೆ ಕೆಲವರಲ್ಲಿದೆ. ಈ ಹೇಳಿಕೆಗೆ ಮೂಲ ಪ್ರೇರಣೆ ಸಪ್ತ ಮಾತೃಕೆಯರಿಂದ ಬಂದಿರಬೇಕು; ಅಥವಾ ಸಪ್ತ ಮಾತೃಕೆಯರ ಕಲ್ಪನೆ ಜಾನಪದ ಮೂಲದಿಂದ ಬೆಳೆದಿರಬೇಕು. ಈ ಏಳು ಜನ ಅಕ್ಕ ತಂಗಿಯರನ್ನು ಹೆಸರಿಸುವಲ್ಲಿ ಭಿನ್ನಾಭಿಪ್ರಾಯವಿದೆ. ಕೆಲವರು ಎಲ್ಲರಿಗಿಂತ ಹಿರಿಯಳು ಮಾರಿಕಾಂಬೆಯೆಂದರೆ, ಇನ್ನು ಕೆಲವರು ದ್ಯಾಮವ್ವ ಎನ್ನುತ್ತಾರೆ. ಆದರೆ ಯಲ್ಲಾಪುರದ ದ್ಯಾಮವ್ವನ ಜಾತ್ರೆಯಲ್ಲಿ ದ್ಯಾಮವ್ವನು ಶಿರಸಿಯ ಅಕ್ಕನ ಮನೆಗೆ ಹೋಗುತ್ತೇನೆಂದು ಹೊರಡುವ ಚಡಂಗವೊಂದಿದೆ. ಇನ್ನು ಬೇರೆ ಬೇರೆ ಗ್ರಾಮಗಳಲ್ಲಿ ಗ್ರಾಮದೇವತೆಗಳೆಂದು ವಿಭಿನ್ನ ಹೆಸರುಗಳಲ್ಲಿ ಪೂಜೆಗೊಳ್ಳುವ ನೂರಾರು ದೇವತೆಗಳು ಮಾರಿಕಾಂಬೆಯ ತಂಗಿಯರೆಂಬ ಕಲ್ಪನೆ ಅನೇಕರಲ್ಲಿದೆ. ಈ ತಂಗಿಯರು, ತಮ್ಮ ಬಂಟರ ಸಹಾಯದಿಂದ ಊರ ಮೇಲಿನ ಪಿಡುಗನ್ನು ನಿಯಂತ್ರಿಸುವ ಜವಾಬುದಾರಿಯನ್ನು ಹೊತ್ತಿರುತ್ತಾರೆ. ಈ ಕಾರ್ಯ ನಿರ್ವಹಿಸಿದ್ದಕ್ಕೆ ಭಕ್ತರು, ಪ್ರತಿವರ್ಷ ಬಂಡಿ ಹಬ್ಬವನ್ನು ಆಚರಿಸಿ, ಬಲಿ ಸಮರ್ಪಣೆ ಮಾಡಿ, ದೇವಿ ಹಾಗೂ ಅವಳ ಪರಿವಾರ ಬಂಟರಿಗೆ ರಕ್ತ ಬಲಿಯಿತ್ತು ಸಂತೃಪ್ತಿಪಡಿಸುತ್ತಾರೆ.[33] ಬಲಿ ಸಮರ್ಪಣೆಯಲ್ಲಿ ಹೆಚ್ಚು ಕಡಿಮೆಯಾದರೆ, ಶಿವಮ್ಮ, ಮಾರಿಯಮ್ಮನಾಗಿ, ತನಗೆ ಬೇಕಾದ ರಕ್ತ ಬಲಿಯನ್ನು ಮಾನವ ಸಂಹಾರದ ಮೂಲಕವಾಗಿ ಪಡೆಯುವಳಂತೆ. ಈ ಮಾನವ ಸಂಹಾರವನ್ನು ನಿಯಂತ್ರಿಸುವ ಬದಲಿ ವ್ಯವಸ್ಥೆ ಈ ಮೂಕ ಪ್ರಾಣಿ ಬಲಿ.


[1]     ಶಂ. ಬಾ. ಜೋಶಿ : ಕರ್ನಾಟಕದ ಸಂಸ್ಕೃತಿಯ ಪೂರ್ವ ಪೀಠಿಕೆ ಭಾಗ ೧ ಪು. ೨೨.

[2]     ಶಂ. ಬಾ. ಜೋಶಿ : ನೋಡು ಆರಾಧನಾ – ೧೯೬೪ – ೧೯೬೫

[3]      ಭಗವತಿ ಎಂಬ ಉಲ್ಲೇಖ ಪಂಪನಲ್ಲಿ ಬರುತ್ತದೆ.

[4]     ಎನ್. ಆರ್. ನಾಯಕ : ಕಾರವಾರ ಜಿಲ್ಲೆಯ ಜಾನಪದ ಗೀತಗಳು (ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆg

[5]     ಮಾರಿ ಜಾತ್ರೆಯ ವಿಧಾನಗಳನ್ನು ಪರಿಶೀಲಿಸಿದರೆ, ಮೂಲತಃ ಮಾರಿ ಜಾತ್ರೆ ಹರಿಜನರಿಂದ ಉಗಮ ಪಡೆದು, ಬೇರೆಡೆ ಪ್ರಸಾರ ಪಡೆದಿರಬೇಕೆಂದು ನನಗನಿಸುತ್ತದೆ.

[6]     ಇತ್ತೀಚೆ ಬಲಿಸಮರ್ಪಣೆಯ ತಾಮಸ ಪೂಜೆ ಅನೇಕ ಕಡೆಯಲ್ಲಿ ನಿಂತಿದೆ.

[7]     ದೇವಿ ಕೆರೆಯಲ್ಲಿ ದೊರಕಿದ ವಿಗ್ರಹಕ್ಕೂ ಶ್ರೀ ಮಾರಿಕಾಂಬೆಯ ವಿಗ್ರಹಕ್ಕೂ ಸಂಬಂಧ ಕಲ್ಪಿಸಲು ಖಚಿತ ಆಧಾರಗಳಿಲ್ಲವೆನ್ನುತ್ತಾರೆ, ಶ್ರೀ ವಿನಾಯಕ ಮಾಡಗೇರಿಯವರು.

[8]     ಈ ಮಾಹಿತಿ ಒದಗಿಸಿದ ಶ್ರಿ ವೆಮ. ಶ್ರೀ ಕಲ್ಲಾಪುರ ಹಾನಗಲ್ಲು ಇವರಿಗೆ ಋಣಿ.

[9]     ದೇವಿಯ ಮೂಲ ಪೀಠವೆನಿಸಿದ ಗಾಳಿಮಾರಿ ಕಟ್ಟೆಯಲ್ಲಿ ಗಾಳಿಮಾರಿಯ ಶಿಲಾ ವಿಗ್ರಹವಿದೆ.

[10]    ಶಿವಮ್ಮ

[11]    ಬಂಗಾರದ ಓಲೆg

[12]    ಕಿವಿಯಲ್ಲಿ

[13]    ಇಳಿದಳು

[14]    ಕಾಣಲಿಕ್ಕೆ

[15]    ಕೊರಳಲ್ಲಿ

[16]    ಹೊಳೆಯುವದು

[17]    ಡಾ. ಶಂ. ಬಾ ಜೋಶಿ : ಕರ್ನಾಟಕದ ಸಂಸ್ಕೃತಿಯ ಪೂರ್ವ ಪೀಠಿಕೆ ಭಾಗ ೧ ಪುಟ ೧೨೮.

[18]    ಡಾ. ಎನ್. ಆರ್. ನಾಯಕ : ಕಾರವಾರ ಜಿಲ್ಲೆಯ ಜಾನಪದ ಗೀತಗಳು (ಕರ್ನಾಟಕದ ವಿಶ್ವವಿದ್ಯಾಲಯದ ಪ್ರಕಟಣೆ)

[19]    ಬೇವಿನ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿಯಿರುವುದನ್ನೂ ನೆನೆಯಬೇಕು.

[20]    ಡಾ. ಶಂ. ಬಾ. ಜೋಶಿ : ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ ಭಾಗ II  ಪು. ೨೨.

[21]     ಗಂಗೆಯನ್ನು ಗಂಗಮ್ಮನೆಂದು ಗ್ರಾಮದೇವತೆಯಾಗಿ ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿಯಲ್ಲಿ ಪೂಜಿಸುತ್ತಾರೆ.

[22]    ತುಳುಕಿ

[23]    ಏಳುಹೊಳೆ

[24]    ಅರ್ಧಭಾರವನ್ನು

[25]    ಇಳಿಸುವಳು

[26]    ಹರಿಯುವ

[27]    ಉರಿಯುವ

[28]    ಶಿರಸಿಯg

[29]    ಶಿವಮ್ಮನಿಗೆ

[30]    ಕೋಳಿ ಹುಂಜನ ಜುಟ್ಟ

[31]    ಕೊಂಬು

[32]    ಕೋಣ

[33]    ಬಂಡಿಹಬ್ಬದಲ್ಲಿ ಕೋಣನ ಬಲಿಯಾಗುವುದಿಲ್ಲ. ಕೋಳಿ ಕುರಿಗಳ ಬಲಿಮಾತ್ರ ನಡೆಯುತ್ತದೆ