ಊರಲ್ಲಿ ಸಾಂಕ್ರಾಮಿಕ ರೋಗ ತಲೆದೋರಿದರೆ, ಅದು ಮಾರಿಕಾಂಬೆಯ ಪ್ರಕೋಪವೆಂದು ಬಗೆದು, ಅವಳ ಗಡಿ ಬಂಟರಿಗೆ ರಕ್ತ, ಸಮರ್ಪಣೆಯಾಗಬೇಕೆಂದು ಹಳ್ಳಿಗರು ಬಗೆಯುತ್ತಾರೆ. ಆದ್ದರಿಂದ ಮಾರಿಕಾಂಬೆಯನ್ನು ಸೀಮಾಗಡಿಗೆ ಕರೆದುಕೊಂಡು ಹೋಗಿ, ಬಲಿಸಮರ್ಪಣೆ ಮಾಡುತ್ತಾರೆ. ಇದಕ್ಕೆ ಗಡಿ ಶಾಂತಿ ಉತ್ಸವವೆಂದು ಕರೆಯುತ್ತಾರೆ.

ಮಾರಿಬೇನೆ ತಲೆದೋರಿದಾಗ, ಹಿಂದಕ್ಕೆ ಜನರೆಲ್ಲ ಊರನ್ನು ಬಿಟ್ಟು ಹೊರಗುಳಿಯುತ್ತಿದ್ದರಂತೆ. ಬೇನೆ ಕಾಲ್ದೆಗೆದ ಮೇಲೆ ಊರನ್ನು ಪ್ರವೇಶ ಮಾಡುವಾಗ, ಊರಿನ ಕಸಕಡ್ಡಿಯನ್ನೆಲ್ಲ ಉಡುಗಿ ಒಂದೆಡೆ ರಾಶಿ ಮಾಡಿ, ಹಿಡಿ

[1] ಮೊರ, ಮೊದಲಾದವುಗಳನ್ನು ಅದರಲ್ಲಿ ಸೇರಿಸಿ, ಮಾರಿಕಾಂಬೆಯ ಚಿಕ್ಕ ಮರದ ಗೊಂಬೆಗೆ ಮಣಿಸರಗಳನ್ನು ತೊಡಿಸಿ, ಊರ ಜನರೆಲ್ಲ ಸೇರಿ ಅದನ್ನು ಪೂಜಿಸಿ, ಮುಂದೆ ಎಲ್ಲವನ್ನೂ ಒಂದೆಡೆ ಸೇರಿಸಿ “ಮಾರಿಹೊರೆ”  ಕಟ್ಟಿ, ಇನ್ನೊಂದೂರಿನ ಗಡಿಗೆ ಮುಟ್ಟಿಸುತ್ತಾರೆ.[2] ಈ ಮಾರಿ ಹೊರೆ ಒಂದೂರಿನಿಂದ ಇನ್ನೊಂದೂರಿಗೆ ಬಂದು ಮುಟ್ಟಿದ ಸುದ್ದಿಯಾದ ಕೂಡಲೇ, ಆ ಊರಿನ ಜನರೆಲ್ಲರೂ ಸಹ ತಮ್ಮೂರಿನ ಕಸಕಡ್ಡಿಯನ್ನೆಲ್ಲಾ ಒಟ್ಟಿಗೆ ಸೇರಿಸಿ, ಆ ಹೊರೆಗೇ ಕೂಡಿಸಿ, ಮಾರಿಯಮ್ಮನ ಮೂರ್ತಿಯನ್ನು ಪೂಜಿಸಿ, ಇನ್ನೊಂದೂರಿನ ಗಡಿಗೆ ಮುಟ್ಟಿಸುತ್ತಾರೆ. ಹೀಗೆ ಒಟ್ಟಾಗುತ್ತ ನಡೆದ ಮಾರಿ ಹೊರೆ, ಸಮುದ್ರ ಸೇರುವವರೆಗೆ, ಒಂದೂರಿನಿಂದ ಇನ್ನೊಂದೂರಿಗೆ ರವಾನೆಯಾಗುತ್ತದೆ.

. ಮಾರಿಕಾಂಬೆ ಸಂತಾನ ರಕ್ಷಕಳು :

ಶ್ರೀ ಮಾರಿಕಾಂಬೆ ಸಂತಾನ ರಕ್ಷಕಳೆಂಬ ಭಾವನೆ ಅನೇಕರಲ್ಲಿದೆ. ತಮ್ಮ ಸತ್ ಸಂತಾನಕ್ಕೆ ಮಾರಿಕಾಂಬೆಯ ಹೆಸರಿಡದಿದ್ದಲ್ಲಿ ಅವಳು ತಮ್ಮನ್ನು ಚಿತ್ರ ಹಿಂಸೆಗೆ ಗುರಿ ಮಾಡುವಳೆಂದು ಅನೇಕರು ಬಗೆಯುತ್ತಾರೆ :

ಸಿರ್ಸಿ ಸೀವಮ್ಮ ಊರಿಗೇ ದೊಡ್ಡೋಳು
ಬಸ್ರೀರ್ಗೆ[3] ಬಂಗ[4] ಕೊಡುವಳು | ಏನೇಳಿ
ಸಿಸುಗೆ ನನ್ನೆಸ್ರು ಇಡ್ರೆಂದಿ |

ತಮ್ಮ ಮಕ್ಕಳಿಗೆ ಶ್ರೀ ದೇವಿಯ ಹೆಸರನ್ನಿಟ್ಟು ಅನೇಕರು ತಮ್ಮ ಭಕ್ತಿ ಭಾವುಕತೆಯನ್ನು ತೋರ್ಪಡಿಸುತ್ತಾರೆ; ಮತ್ತೆ ಕೆಲವರು ಗರ್ಭಿಣಿಯ ಗರ್ಭ ಸಂರಕ್ಷಣೆಗಾಗಿ ಗಬ್ಬದ ಕುರಿಯ ಹರಕೆ ಹೊತ್ತು ದೇವಿಯನ್ನು ತೃಪ್ತಿಪಡಿಸುತ್ತಾರೆ.

“ಮಾರಿ” ಯೆಂಬ ಪದ ಸಂಹಾರಕಳು, ಪೀಡೆಕೊಡುವವಳು ಎಂಬರ್ಥದಲ್ಲಿ ಬಳಕೆಯಲ್ಲಿದೆ. ಶ್ರೀ ದೇವಿಗೆ ಸರಿಯಾಗಿ ನಡಕೊಳ್ಳದಿದ್ದಲ್ಲಿ ಜನತೆಗೆ ಅವಳು ಮಾರಿಯಾಗಿತ್ತಾಳೆ. ಸಂಪ್ರೀತಿಯಿಂದ ನಡಕೊಂಡಲ್ಲಿ ಅಂಬೆ – ಅಮ್ಮನಾಗುತ್ತಾಳೆ. ಹೀಗೆ ಮಾರಿಕಾಂಬೆ ರುದ್ರಮುಖದ ರುದ್ರಮ್ಮನೂ ಹೌದು, ಶಿವ ಮುಖದ ಶಿವಮ್ಮನೂ ಹೌದು.

೧೦. ಶ್ರೀ ಮಾರಿಕಾಂಬೆಯನ್ನು ಕುರಿತ ಐತಿಹ್ಯಗಳು :

. ಮಹಾಸತಿ :

ಜಾನಪದದಲ್ಲಿ  ಶ್ರೀ ಮಾರಿಕಾಂಬೆಯನ್ನು ಕುರಿತ ಐತಿಹ್ಯ ಇಂತಿದೆ : ಹೊಲೆಮಾದಿಗರಿಗೆ ವೈದಿಕ ವಾಙ್ಞಯ ಓದಲು ನಿಷೇಧವಿದ್ದಕಾಲಕ್ಕೆ, ಬಂಡಾಯ ಮನೋಭಾವನೆಯ ಮಾದಿಗ ಬಾಲಕನೊಬ್ಬನಿಗೆ ವೈದಿಕ ಸಾಹಿತ್ಯಾಧ್ಯಯನ ಮಾಡುವ ಬಯಕೆಯಾಯಿತು. ಅದನದನ್ನು ಹತ್ತಿಕ್ಕಲಾರದೇ, ಆತ ಬ್ರಾಹ್ಮಣನ ವೇಷಧರಿಸಿ, ಬ್ರಾಹ್ಮಣ ಪಂಡಿತನೊಬ್ಬನ ಮನೆಯಲ್ಲಿ ಅಧ್ಯಯನ ನಿರತನಾದ. ಪ್ರತಿಭೆಗೆ ಜಾತಿಯಿಲ್ಲವಲ್ಲ ? ಪ್ರತಿಭಾ ಸಂಪನ್ನನಾದ ಯುವಕನಿಗೆ, ಅಲ್ಪಾವಧಿಯಲ್ಲಿಯೇ, ಸಕಲ ವಿದ್ಯೆಗಳೂ ಸಿದ್ಧಿಸಿದವು. ಯುವಕನ ಪಾಂಡಿತ್ಯಕ್ಕೆ ಮೆಚ್ಚದ ಬ್ರಾಹ್ಮಣಗುರು, ರೂಪಸಿಯಾದ ತನ್ನ ಮಗಳನ್ನು ಧಾರೆಯೆರೆದ, ಆತನಿಗೆ ಒಂದೆರಡು ಮಕ್ಕಳೂ ಆದರು. ಯುವಕನಿಗೆ ಕ್ರಮೇಣ ಪೂರ್ವವಾಸನೆಯ ಬಲದಿಂದ ಮಾಂಸ ತಿನ್ನುವ ಬಯಕೆಯಾಗಿ, ಹೆಂಡತಿಯ ಕಣ್ಣು ತಪ್ಪಿಸಿ, ಮಾಂಸ ಸೇವನೆ ಮಾಡ ತೊಡಗಿದ. ಮಕ್ಕಳಿಗೂ ಅದರ ರುಚಿ ಹತ್ತಿಸಿದ. ಹೆಂಡತಿಗೆ ಗಂಡನ ಗುಟ್ಟು ರಟ್ಟಾಗಲು ಬಹುದಿನ ಹೋಗಲಿಲ್ಲ. ಗಂಡನನ್ನು ಗುಟ್ಟಾಗಿ ಹಿಂಬಾಲಿಸಿ, ಅವನ ಶ್ವಪಚತ್ವವನ್ನು ಗಮನಿಸಿದಳು ; ಕರಳಿ ಕೆಂಡವಾದಳು. ತಂದೆಯೆಡೆ ಹೋಗಿ, :ನಾಯಿ ಮುಟ್ಟಿದ ಗಡಿಗೆ ಏನು ಮಾಡಬೇಕು ? ಅದರ ಶುದ್ಧಿ ಹೇಗೆ ?” ಎಂದ. ತಂದೆಯ ಮಾತಿನಿಂದ ಪ್ರಭಾವಿತಳಾದ ನಾರಿ, ದೇಹಾರ್ಪಣೆಯೇ  ಶುದ್ಧಿ ಮಾರ್ಗವೆಂದು ತೀರ್ಮಾನಿಸಿದಳು. ತಾನು ತನ್ನ ಕುಲದ ಹಿಳ್ಳೆ, ಹೇಳ ಹೆಸರಿಲ್ಲದಾಗಬೇಕೆಂದೂ, ವಂಚಕ ಗಂಡನನ್ನು ಸಂಹರಿಸಿ, ಇಂತಹ ವಂಚನೆ ಮುಂದಾಗುವುದನ್ನು ತಡೆಯಬೇಕೆಂದೂ ನಿರ್ಣಯಿಸಿದಳು. ರಾತ್ರಿ ಗಂಡ, ಮಕ್ಕಳು ಮಲಗಿದಾಗ, ಮನೆಗೆ ಕಿಚ್ಚಿಟ್ಟಳು. ಬೆಂಕಿಯ ಜಳಕ್ಕೆ ಎಚ್ಚತ್ತ ಗಂಡ ಮತ್ತು ಮಕ್ಕಳು ಮನೆಯಿಂದ ಹೊರಬಿದ್ದು ಓಡಿದರು. ಅವಳು ಗಂಡನನ್ನು ತಡೆದು ಸೆಣಸಿದಳು. ಅವನು ತಾನು ಕಲಿತ ವಿದ್ಯೆಯ ಬಲದಿಂದ ಕೋಳಿ, ಕುರಿ, ಕೋಣ ಮುಂತಾದ ರೂಪಾಂತರ ಹೊಂದಿ, ಅವಳಿಂದ ತಪ್ಪಸಿಕೊಳ್ಳಲು ಯತ್ನಿಸಿದರೂ, ಎಲ್ಲ ರೂಪಗಳಲ್ಲಿಯೂ ಅವನನ್ನು ಸಂಹರಿಸಿ, ಬೆಂಕಿಯಲ್ಲಿ ಚೆಲ್ಲುತ್ತಾಳೆ. ತಾನೂ ಚಿತೆಗೇರಿ ಮಹಾಸತಿಯಾಗುತ್ತಾಳೆ. ಅವಳಿಂದ ತಪ್ಪಿಸಿಕೊಂಡ ಮಕ್ಕಳು, ಇಂದಿನ ಆಸಾದಿಗಳೆಂದು ಬಗೆಯಲಾಗುತ್ತದೆ.

ಮಾರಿಕಾಂಬೆಯನ್ನು ಕುರಿತು ಸ್ವಲ್ಪ ಹೆಚ್ಚು ಕಡಿಮೆ ಇದೇ ಬಗೆಯ ಕತೆ ಆಂಧ್ರ ಪ್ರದೇಶದಲ್ಲಿಯೂ ಬಳಕೆಯಲ್ಲಿದೆ.

) ರೇಣುಕೆ :

ಶಿರಸಿಯ ಮಾರಿಕಾಂಬೆಯನ್ನು ಎಲ್ಲಮ್ಮ, ರೇಣುಕೆಯೆಂದೂ ಅನೇಕರು ಬಗೆಯುತ್ತಾರೆ. ಕೇರಳದಲ್ಲಿಯೂ ಜಮದಗ್ನಿಯ ಹೆಂಡತಿ ರೇಣುಕೆಯ ಅಪರಾವತಾರವೇ ಮಾರಿಯೆಂದು ತಿಳಿಯುತ್ತಾರೆ. ಪರಶುರಾಮ ತಂದೆಯ ಆದೇಶದಂತೆ, ಅವನ ತಾಯಿಯ, ಬೇರ್ಪಟ್ಟ ರುಂಡ ಮುಂಡಗಳನ್ನು ಹೊಂದಿಸುವಾಗ ತಾಯಿಯ ರುಂಡಕ್ಕೆ ಬದಲಾಗಿ, ಬೇರೊಂದು ರುಂಡವನ್ನು ಜೋಡಿಸಿದ್ದರಿಂದ, ರೇಣುಕೆಗೆ ವಿಕಾರಗೊಂಡು ಮಾದರಿಯಾದಳೆಂದು ಬಗೆಯುತ್ತಾರೆ.

iii) ಮಹಿಷಾಸುರ ಮರ್ದಿನಿ :

ಶ್ರೀ ಮಾರಿಕಾಂಬೆಯನ್ನು ಕುರಿತಿರುವ, ಮಾದಿಗ ಯುವಕನ ಕತೆಯನ್ನನು ಲಕ್ಷಿಸಿ. ಕೆಲವು ಜನ  ಮಹಿಷಾಸುರ ಮರ್ದಿನಿಯ ಕತೆಯನ್ನು, ಮಾರಿಯಮ್ಮನ ಕತೆಗೆ ಜೋಡಿಸಿ, ಮಾರಿಕಾಂಬೆ – ಮಹಿಷಾಸುರ ಮರ್ದಿನಿಯರಿಗೆ ಅಭೇದ ಕಲ್ಪಿಸಿದ್ದಾರೆ. ಆದರೆ, ಸಕಲ ದೇವತೆಗಳಿಗೆ ಪೀಡಕನಾಗಿ, ಪ್ರಪಂಚವನ್ನೇ ನಡುಗಿಸಿ, ಕೊನೆಗೆ ದೇವಿಯಿಂದ ಹತನಾದ, ದೇವಿಯ ಪತಿಯಲ್ಲದ ಮಹಿಷಾಸುರನ ಕತೆಗೂ, ದೇವಿಯ ಪತಿಯಾಗಿ, ಅವಳಿಂದ ಹತನಾದ ಮಾದಿಗ ಯುವಕನ ಕತೆಗೂ, ಸಂಬಂಧ ಕಲ್ಪಿಸುವುದು ಆಭಾಸ. ಆದರೂ ನಮ್ಮ ಸುಂಸ್ಕೃತದ ತಲೆ ಹೇಗೋ ಸಂಬಂಧ ಕಲ್ಪಿಸುತ್ತದೆ. ಹೀಗೆ ಮಾರಿಕಾಂಬೆ ಮಹಿಷಾಸುರಮರ್ದಿನಿಯಾಗಿ ಪರಿವರ್ತಿತವಾದ ಕಾರಣದಿಂದ ಮಾರಿ ಗುಡಿಯಲ್ಲಿ ನವರಾತ್ರಿ ಉತ್ಸವಕ್ಕೆ ವಿಶೇಷ ಪ್ರಾಧಾನ್ಯ ಬಂತು.

ಶ್ರೀ ಮಾರಿಕಾಂಬೆಯನ್ನು ಕುರಿತ ಈ ಕತೆಗಳಲ್ಲಿ ಯಾವುದನ್ನು ನಂಬಬೇಕು? ಯಾವುದನ್ನು ಬಿಡಬೇಕು? ಶ್ರೀ ಮಾರಿಕಾಂಬೆಯ ಜಾತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಸತ್ಯ ಸಂಗತಿಯ ಸುಳಿವು ಹತ್ತುವುದೆಂದು ನನ್ನ ನಂಬಿಕೆ. ಆದ್ದರಿಂದ ಜಾತ್ರೆಯ ವಿವಿಧ ಚಡಂಗಗಳನ್ನು ತುಸು ವಿವರವಾಗಿಯೇ ಪರಿಶೀಲಿಸೋಣ :

೧೧. ಜಾತ್ರೆ:[5]

ಗ್ರಾಮೀಣರಿಗೆ ಶಿರಸಿಯ ಜಾತ್ರೆ ಬಹು ದೊಡ್ಡ ಉತ್ಸವ :
ಹಬ್ಬಂಬುದ ಹಾವೇರೆ ತೇರಂಬುದ ಬನವಸೆ
ಜಾತರಂಬುದ ಶಿರಸಿಯೇ | ದೊಡ್ಡಮ್ಮನ
ವಾಲೆ[6]  ಸಿಕ್ಕಿದರೆ ತರುಬಾರಾ | ದೊಡ್ಡಮ್ಮನಾ
ಬಂಡಾರಾ[7] ಸಿಕ್ದೋರು ಬಿಡುಬಾರಾ |

ಶಿರಸಿಯ ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಭಂಡಾರ ಸ್ವೀಕರಿಸುವಲ್ಲಿ ಮಾತ್ರ ಭಕ್ತ ಆಸಕ್ತ.

ದೊಡ್ಡಮ್ಮನ ಜಾತ್ರೆಯನ್ನು ಎರಡು, ಮೂರು ಇಲ್ಲವೆ ಹನ್ನೆರಡು ವರ್ಷಗಳಿಗೊಮ್ಮೆ ಜನತೆಯಿಂದ ಮಾರಿ ಪಟ್ಟಿಯೆತ್ತಿ ಆಚರಿಸುವರು. ಜಾತ್ರೆಯು ಫಾಲ್ಗುಣ ಮಾಸದ ಹುಣ್ಣಿಮೆಯ ಮೊದಲು ಬರುವ ಮಂಗಳವಾರದಿಂದ, ಇನ್ನೊಂದು ಮಂಗಳವಾರ ಮುಗಿಯುವವರೆಗೆ ನಡೆಯುತ್ತದೆ. ಜಾತ್ರೆಯು ಅದಕ್ಕಾಗಿಯೇ ಮೀಸಲಿಟ್ಟ,  ಊರ ಮಧ್ಯದ ಬೀಡಕೀ ಬೈಲಿನಲ್ಲಿ ನಡೆಯುತ್ತದೆ. ಅಲಂಕಾರ ಭೂಷಿತಾಯಾದ ದೇವಿ, ಜಾತ್ರೆಗಾಗಿಯೇ ನಿರ್ಮಿತವಾದ, ರಥದಲ್ಲಿ ಕುಳಿತು, ಬೀಡಕೀ ಬೈಲಲ್ಲಿರುವ ಮಾರಿ ಗದ್ದುಗೆಗೆ ಬರುತ್ತಾಳೆ. ಮಾರಿ ಜಾತ್ರೆ ಎಂಟು ದಿನಗಳವರೆಗೆ ನಡೆಯುವುದು ಅಲ್ಲಿಯೇ. ಮಾರಿ ಜಾತ್ರೆಯನ್ನು ಜಾನಪದರು ಬಣ್ಣಿಸುವ ರೀತಿ ಸೊಗಸಾಗಿದೆ :

ದೇವರ ನೋಡಬೇಕೋ ಚಿರತೆಯ[8] ಅಮ್ಮನ ನೋಡಬೇಕೋ
ಅಮ್ಮನ ನೋಡಬೇಕೋ ಅಮ್ಮನ ಜಾತುರೆ ನೋಡಬೇಕೋ
ಜಾತುರೆ ನೋಡಬೇಕೋ ಜಾತುರೆ ತೇರನು ನೋಡಬೇಕೋ
ತೇರನು ನೋಡಬೇಕೋ ಪಟದಲ್ಲಿ ಕೊ-ಣನ್ನ ನೋಡಬೇಕೊ
ಕೊ -ಣನ್ನ ನೋಡಬೇಕೋ ತಲೆಮೆ-ನೆ ನಂಜಣದೀಪ ನೋಡಬೇಕೋ
ನಂಜಣ ದೀಪಾ ನೋಡಬೇಕೋ ಕೊ-ಣನ ಕಡುವರ ನೋಡಬೇಕೋ
ಕಡುವರ ನೋಡಬೇಕೋ ಪಾರಣಗತ್ತೀ ನೋಡಬೇಕೋ
ಕತ್ತೀ ನೋಡಬೇಕೋ ಕೊ-ಣನ ಕೊರಳಾ ಮಾಲೆ ನೋಡಬೇಕೋ
ಮಾಲೆ ನೋಡಬೇಕೋ ಅಮ್ಮನ ಚವ್‌ರ್ಯವ[9] ನೋಡಬೇಕೋ
ಚರ್ವ್‌ಯವ ನೋಡಬೇಕೋ ಅಮ್ಮನ ಮೂಗುತಿ ನೋಡಬೇಕೋ

ಮಾರಿ ಜಾತ್ರೆಯ ಸ್ಥೂಲ ಕಲ್ಪನೆಯನ್ನು ಮೇಲಿನ ಪದ್ಯ ಒದಗಿಸುತ್ತದೆ. ಮಾರಿ ಜಾತ್ರೆಯು ಮಾರಿಕಾಂಬೆಯನ್ನು ಕುರಿತಿರುವ ಮಾದಿಗ ಯುವಕ ಹಾಗೂ ಬ್ರಾಹ್ಮಣ ಕನ್ನೆಯ ವಿವಾಹ ಐತಿಹ್ಯದ ಪುನರಾವರ್ತನೆಯಂತೆ ನಡೆಯುತ್ತದೆ. ಜಾತ್ರೆಯ ಪ್ರಧಾನ ಚಡಂಗಗಳು ಇಂತಿವೆ :

. ಹೊರ ಬೀಡುಗಳು :

ಹೊರ ಬೀಡೆಂದರೆ ಹೊರವಸತಿ ಎಂದರ್ಥ. ಇಂತಹ ಐಯ್ದು ಹೊರ ಬೀಡುಗಳಿವೆ. ದೇವಸ್ಥಾನದ ಹೊರಗೆ ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಪೀಠಗಳಿವೆ. ಅಲ್ಲಿ ಎರಡು ಹೊರ ಬೀಡುಗಳು ನಡೆಯುತ್ತವೆ. ಇನ್ನೆರಡು ಹೊರ ಬೀಡುಗಳಲ್ಲಿ ಬಲಿ ಹಾಗೂ ರೈತರ ಊಟಗಳು ನಡೆಯುತ್ತವೆ. ಐಯ್ದನೆಯ ಹೊರಬೀಡು ಆದ ಮೇಲೆ ದೇವಿಯ  ವಿಸರ್ಜನೆಯಾಗುತ್ತದೆ. ಹೊರ ಬೀಡುಗಳ ರಹಸ್ಯಾರ್ಥವನ್ನು ಗ್ರಹಿಸುವುದು ಸುಲಭ ಸಾಧ್ಯವಿಲ್ಲ. ಪಿಡುಗಿನ ನಿಯಂತ್ರಕಳಾದ ಇವಳನ್ನು ಊರ ಗಡಿಗೊಯ್ದು ಪೂಜಿಸಿ ಬಲಿ ಸಮರ್ಪಿಸಿದಲ್ಲಿ ಭೂತಗಣಗಳ ಸಂತೃಪ್ತಿಯಾಗಿ “ಮಾರಿ ಕೋಟಲೆ” ನಿಲ್ಲಬಹುದೆಂದೋ, ಐತಿಹ್ಯದಲ್ಲಿ ನಿರೂಪಿತವಾದಂತೆ ಪತಿಯ ರಹಸ್ಯ ಭೇದನ ಸಂಕೇತವಾಗಿಯೋ, ಈ ಹೊರ ಬೀಡುಗಳು ಆಚರಣೆಯಲ್ಲಿ ಬಂದಿರಬೇಕು.

. ರಥ ತಯಾರಿಕೆ :

ಜಾತ್ರೆಗಾಗಿ ಪ್ರತಿಸಲವೂ ಹೊಸ ರಥವನ್ನು ತಯಾರಿಸುತ್ತಾರೆ. ರಥ ನಿರ್ಮಿತಿಗೆ ಬೇಕಾದ ಮರವನ್ನು ಪೂಜಿಸಿ, ಗಡಿ ಬಲಿಯನ್ನು ಸಮರ್ಪಿಸಿ, ಮರವನ್ನು ಕಡಿದು ತಂದು, ಒಂದು ವಾರದಲ್ಲಿ ರಥವನ್ನು ನಿರ್ಮಿಸುತ್ತಾರೆ.

. ಅಂಕೆ ಹಾಕುವುದು :

ಅಂಕೆ ಹಾಕುವುದು ಜಾತ್ರೆಯ ಪ್ರಮುಖ ಚಡಂಗಗಳಲ್ಲೊಂದು. ಅಂಕೆ ಹಾಕುವುದೆಂದರೆ ನಂಬುಗೆ ಸ್ವೀಕರಿಸುವುದು. ಮದುವೆಯ ಕೂಸು ನಿಶ್ಚಯಿಸಿ, ಕಂಕಣ ಕಟ್ಟಿ ವ್ರತಬದ್ಧನಾಗುವುದ. ಕಂಕಣ ಕಟ್ಟುವ ಪೂರ್ವದಲ್ಲಿ ಅಸಾದಿಗಳು ಒಂದು ಸಣ್ಣ ರಂಗ ನಿರ್ಮಿಸುತ್ತಾರೆ ಸಣ್ಣ ಸಣ್ಣ ಗಡಿಗೆಗಳಿಗೆ ದಾರ ಕಟ್ಟಿ ಪೋಣಿಸಿ, ಮಧ್ಯದಲ್ಲಿ ಹಣತೆಯ ದೀಪ ಹಚ್ಚುತ್ತಾರೆ. ಪಟದ ಕೋಣವನ್ನು ಮಾರಿಗದ್ದುಗೆಯ ಹತ್ತಿರ ತಂದು ಕೋಣನಿಗೆ ಕುಂಭಕ್ಕೆ, ನಾಡಿಗರಿಗೆ[10] ಊರ ಪ್ರತಿಷ್ಠಿತರಿಗೆ ಕಂಕಣ ಕಟ್ಟುತ್ತಾರೆ. ತಾವೂ ಕಂಕಣ ದೀಕ್ಷೆ ತೊಡುತ್ತಾರೆ.[11] ಈ ಅಂಕೆ ಹಾಕುವ ಕಾರ್ಯಕ್ರಮ ಮದುವೆಯ ವಾಗ್ದಾನ ಚಡಂಗವನ್ನು ಹೋಲುತ್ತದೆ.

. ಮೇಟಿ ದೀಪ :

ಅಂಕೆ ಹಾಕಿದ ದಿನ, ಶ್ರೀದೇವಿಯ ತಂದೆಯ ಮನೆಯವರೆಂದು ನಂಬಲಾದ, ನಾಡಿಗ ಮನೆತನದವರು ದೇವಿಗೆ ಮಾಡಿದ ಮಂಗಳಾರತಿಯಿಂದಲೇ ಮೇಟಿ ದೀಪವನ್ನು ಹಚ್ಚುತ್ತಾರೆ. ಶ್ರೀದೇವಿಯ “ಕಳೆ” ಯನ್ನು ಈ ದೀಪದಲ್ಲಿ ಆವಾಹನಗೊಳಿಸಲಾಗುವುದು. ಜಾತ್ರೆ ಕೊನೆಗೊಳ್ಳುವ ವರೆಗೆ ಈ ಮೇಟಿ (ನಾಯಕ, ಶ್ರೇಷ್ಠ) ದೀಪವನ್ನು ಜತನದಿಂದ ಕಾಪಾಡಲಾಗುವುದು. ಶ್ರೀ ದೇವಿಯು ಜ್ಯೋತಿಯಲ್ಲಿ ಆವಾಹನೆಗೊಂಡ ಮೇಲೆ, ದೇವಿಯ ವಿಸರ್ಜನೆಯಾದಂತೆ. ಆಗ ದೇವಿಯ ವಿಗ್ರಹವನ್ನು ಕಳಚಿ ಹೊಸದಾಗಿ ಬಣ್ಣ ಬಳಿಯಲು ಕೊಡುತ್ತಾರೆ.

. ಮದುವೆ :

ಶ್ರೀ ದೇವಿಯ ಮದುವೆಯಿಂದ ಜಾತ್ರೆಯ ಆರಂಭವಾಗುವುದು. ಮದುವೆಯ ಪ್ರಮುಖ ಚಡಂಗಗಳಾದ ಸುತ್ತುಂಗಲ ಹಾಕುವುದು, ಬಾಸಿಂಗ ಕಟ್ಟುವುದು, ತಾಳಿ ಕಟ್ಟುವುದು ಮುಂತಾದವೆಲ್ಲ ನಡೆಯುತ್ತವೆ. ಹಿಂದಕ್ಕೆ ಕೋಣನಿಗೇ ಬಾಸಿಂಗ ಕಟ್ಟುತ್ತಿದ್ದರಂತೆ. ಇದು ಬಾಸಿಂಗ ಕಟ್ಟುವುದು ಮಾರಿಕಾಂಬೆಯ ಪ್ರಭಾವಳಿಗೆ. ಶ್ರೀ ದೇವಿಯನ್ನು ಧಾರೆಯೆರೆದುಕೊಡುವ ಕಾರ್ಯವನ್ನು ಬ್ರಾಹ್ಮಣ ಮನೆತನದವರಾದ ನಾಡಿಗರು ನಿರ್ವಹಿಸುತ್ತಾರೆ.

. ರಥೋತ್ಸವ :

ಲಗ್ನವಾದ ಮೇಲೆ ಶ್ರೀ ದೇವಿಯು ರಥದಲ್ಲಿ ಹೊರಡುವ ಮುನ್ನ, ಆಸಾದಿಯ ಹೆಣ್ಣುಮಗಳು ದೇವಿಗೆ ಎಡೆ ತೋರಿಸಬೇಕು. ಅನಂತರವೇ ಶ್ರೀ ದೇವಿ ರಥದಲ್ಲಿ ಬೀಡಕೀ ಬೈಲಿಗೆ ಹರಡುವುದು. ಅಲ್ಲಿಯೂ ದೇವಿಯನ್ನು ಸ್ವಾಗತಿಸುವವರು ಆಸಾದಿಗಳೇ. ರಥೋತ್ಸವ ನಡೆಯುವ ಕಾಲಕ್ಕೂ, ಅಲ್ಲಲ್ಲಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಕೋಳಿ ಕುರಿಗಳ ಬಲಿಯಾಗುತ್ತದೆ. ಬಲಿಯಾಗದೇ ರಥ ಮುಂದುವರಿಯದೆಂಬ ಭಾವನೆ ಭಕ್ತರದು.

. ಬಲಿ :

ಹಿಂದಕ್ಕೆ ಕೋಣನ ಬಲಿಯಲ್ಲಿ ಹಿಂಸಾಚಾರದ ಬೃಹತ್ ದರ್ಶನವಾಗುತ್ತಿತ್ತು. ಜಾತ್ರೆಗೆ ಇನ್ನೂ ತಿಂಗಳಿರುಗಾಗಲೇ ಕೊಬ್ಬಿದ ಪಟ್ಟದ ಕೋಣವನ್ನು ಕಟುಕರಿಗೆ ಒಪ್ಪಿಲಾಗುತ್ತಿತ್ತು. ಅವರು ಕೋಣವನ್ನು ಊರ ಮೇಲೆಲ್ಲಾ ಮೆರೆಸಿ, ಶ್ರೀ ದೇವಿಯು ಪಟ್ಟಕ್ಕೆ ಕೂಡ್ರುವ ದಿನ ತರುವ ಪದ್ಧತಿ. ಅಂದು ಕೋಣವನ್ನು ಹೀನಾಯವಾಗಿ ಬಯ್ಯಲಾಗುತ್ತದೆ. ಅಶ್ಲೀಲ ನೀತಿಗಳ ಸುರಿಮಳೆಯಾಗುವುದು. ಆಗ ರಾಣಿಗ್ಯಾನು ಬಂದು, ಶ್ರೀ ದೇವಿಯ ಮುಂದೆ ನಿಂತ ಕೋಣನ ಮೈಮೇಲೆ ಭಂಡಾರವನ್ನು ಹಾಕಿ, ತನ್ನ ರಾಣಿಗೋಲಿನಿಂದ ಕೋಣನ ಕುತ್ತಿಗೆಗೆ ಮೂರು ಪೆಟ್ಟು ಹಾಕಿದ ಮೇಲೆ, ಕಟುಕ ಕೋಣವನ್ನು ವಧಿಸುತ್ತಾನೆ. ಬಲಿಯಾದ ಕೋಣನ ದೇಹದ ಮೇಲೆಯೇ, ಹಂದಿ, ಕುರಿ, ಕೋಳಿಗಳ ಬಲಿಯೂ ನಡೆದುಹೋಗುತ್ತದೆ. ಜಾತ್ರೆಯ ಬೇರೆ ಬೇರೆ ದಿನಗಳಲ್ಲಿ ಭಕ್ತಾಧಿಗಳು ಹರಕೆಹೊತ್ತ ನೂರಾರೂ ಕೋಣಗಳು, ಅಸಂಖ್ಯ ಕುರಿಗಳು ಕೋಳಿಗಳು ಬಲಿಯಾಗುತ್ತವೆ. ಈ ಲಕ್ಷಾಂತರ ಪ್ರಾಣಿ ಬಲಿಯ ಹಿನ್ನೆಲೆಯೇನಿರಬಹುದು? ಹಿಂದಕ್ಕೆ ಯುದ್ಧ ರಂಗದಲ್ಲಿ ಕಣ್ಣೆ ದುರಿನಲ್ಲಿಯೇ ಕಗ್ಗೊಲೆಯಾಗುತ್ತಿತ್ತು. ಜನತೆಯಲ್ಲಿ ಸಂಹಾರಕ ಮನೋಭಾವನೆಯನ್ನು ಜಾಗೃತಗೊಳಿಸುವ ಹೇತುವಿನಿಂದ, ಲಕ್ಷಾಂತರ ಪ್ರಾಣಿ ಬಲಿಯನ್ನು ನೀಡುವ ರೂಢಿ ಬೆಳೆದು ಬಂದಿರಬೇಕು. ಶ್ರೀ ಮಾರಿಕಾಂಬೆಯನ್ನು “ದಂಡಿನ ಮಾರಿ” ಎಂದು ಕರೆದುದನ್ನು ಈ ಸಂದಂರ್ಭದಲ್ಲಿ ನೆನೆಯಬಹುದು.[12]

ಮಾರಿ ಜಾತ್ರೆಯ ಪ್ರಾಣಿ ಬಲಿಯನ್ನು ಕಣ್ಣಾರೆ ಕಂಡ ಜಾನಪದ ಕವಿ ಬಣ್ಣಿಸುತ್ತಾನೆ :

ರತವಾ ಹತ್ತೆಲೇ ಅಮ್ಮ ಮಾರಿ ಬೆ-ಣಕೆ ಬರುವಾಳೋ
ಮಾರಿ ಬೆ-ಣಕೆ ಬಂದೆಲೇ ಅಮ್ಮ ಗದ್ದಗಿ ಕುಳುವಾಲೋ
ಗದ್ದಗಿ ಕುಳತೆಲೋ ಅಮ್ಮಗೆ ಮೂರೇ ಬಂಡಿಯೋ
ಹಿಂದನ ಬಂಡೀಗೇ ಅಮ್ಮಗೆ ಕೋಳಿ ಕೊಯ್ವಾರೋ
ನೆಡಗನ ಬಂಡೀಗೇ ಅಮ್ಮಗೆ ಕುರಿಯಾ ಹೊಡೆವಾರೋ
ಮುಂದನ ಬಂಡೀಗೇ ಅಮ್ಮಗೆ ಕೊ-ಣನ ಕಡಿವಾರೋ
ಕೊ-ಣನ ಕಡಿವಾಗೇ ಅಮ್ಮನ ಮೊಕವೇ ಬಾಡಿದವೋ
ಮೊಕವೇ ಬಾಡಿದವೋ ಅಮ್ಮನ ಮೂಗುತಿ ಶೆಡಿದಾವೋ[13]

ಕೋಳಿ, ಕುರಿ, ಕೋಣಗಳ ಬಲಿಯೆಂದರೆ ಮಾರಿಕಾಂಬೆಯ ಹೊಲೆಯ ಪತಿಯ ಹನನ. ಕೋಣವನ್ನು ಕಡಿಯುವ ಕಾಲಕ್ಕೆ ದೇವಿಯ ಮೂಗುತಿ ಸಿಡಿದು, ಅವಳಿಗೆ ವೈಧವ್ಯ ಪ್ರಾಪ್ತಿಯಾದುದನ್ನು ಜನಪದ ಕವಿ ತನ್ಮಯತೆಯಿಂದ ಬಣ್ಣಿಸುತ್ತಾನೆ. ಜಾತ್ರೆಯ ಕೊನೆಯ ದಿನ ಗಾಳಿ ಮಾರಿ ಶ್ರೀದೇವಿಗೆ ವೈಧವ್ಯ ಪ್ರಾಪ್ತಿಯ ಚಿನ್ನ ಕೊಡುವ ಚಡಂಗವನ್ನು ಇಲ್ಲಿ ನೆನೆಯಬೇಕು.

. ಗಡಿಯ ಬಲಿ :

ಬಲಿಪಶುಗಳ ರಕ್ತದಿಂದ ಕಲಸಿದ ಬಲಿ ಅನ್ನವನ್ನು ನೂರಿನ್ನೂರು ಹರಿಜನರು ಕೈಯಲ್ಲಿ ಬಡಿಗೆಯನ್ನು ತೆಗೆದುಕೊಂಡು, “ಹೋ ಹೋ” ಎಂದು ಒದರುತ್ತ, ಶಿರಸಿ ಊರಿನ ಗಡಿಯ ಭೂತಗಳಿಗೆ ಬಲಿ ಸಮರ್ಪಣೆ ಮಾಡಲು ಹೋಗುತ್ತಾರೆ. ಈ ಚಡಂಗವನ್ನು ಬಂಡಿಯ ಹಬ್ಬದಲ್ಲಿ “ಬಲಿಮಕ್ಕಳು” ಗಡಿಬಲಿ ಸಮರ್ಪಿಸುವ ಚಡಂಗದ ಜೊತೆಯಲ್ಲಿ ಹೋಲಿಸಬಹುದು. ಗಡಿಬಲಿಯ ಕಾಲಕ್ಕೆ ಭೂತನ ಕಲ್ಲು, ಜಟ್ಟಿಗನ ಕಲ್ಲು, ಚಂಪಾಷಷ್ಠಿಕಲ್ಲು ಮುಂತಾದ ಅನೇಕ ಗಡಿ ಭೂತಗಣಗಳಿಗೆ ಬಲಿ ಸಂದಾಯವಾಗುತ್ತದೆ. ಗಡಿಬಲಿ ಸಮರ್ಪಣೆಯ ಕಾರ್ಯದಲ್ಲಿ, ಮೇತ್ರಿ, ಸಮಗಾರ, ಮಚಗಾರರೆಂಬ ಜನರು ಭಾಗವಹಿಸುತ್ತಾರೆ. ಇವರ ಮುಖ್ಯಸ್ಥನಿಗೆ “ಬಾಬ್‌ದಾರ್‌” ಎನ್ನುತ್ತಾರೆ. ಬಲಿಯ ಅನ್ನವನ್ನು ತಯಾರಿಸುವವರು ಅಹಿಂಸಾವಾದಿಗಳಾದ ಲಿಂಗಾಯತ ಕುಂಬಾರರು; ಅನ್ನದಲ್ಲಿ ರಕ್ತ ಬೆರೆಸುವವರು, ಹಿಂಸಾ ರಭಸ ಮತಿಗಳಾದ ಮೇತ್ರಿಗಳು. ಸಾತ್ವಿಕ ತಾಮಸಗಳ ಸಂಯೋಜನೆಯಿಂದಲೇ ಬದುಕು ಗಟ್ಟಿಗೊಳ್ಳುವುದನ್ನು ಸಂಕೇತಿಸಲಿಕ್ಕಾಗಿ ಈ ಬಗೆಯ ಬಲಿಯಾಚರಣೆ ಬೆಳೆದು ಬಂದಿರಬೇಕು. ಈಗ ರಕ್ತ ಬಲಿಯನ್ನು ಮಾರಿಜಾತ್ರೆಯಲ್ಲಿ ನಿಷೇಧಿಸಿದ್ದರಿಂದ ಬಲಿ ಅನ್ನದಲ್ಲಿ ರಕ್ತಕ್ಕೆ ಬದಲಾಗಿ ಕುಂಕುಮವನ್ನು ಬೆರೆಸುತ್ತಾರೆ. ಬಲಿಪಶುಗಳಿಗೆ ಬದಲಾಗಿ ಕುಂಬಳಕಾಯಿ ಉಪಯೋಗಿಸುತ್ತಾರೆ.

. ಹುಲುಸು ಮತ್ತು ಗಾವ :

ದೇವಿಗದ್ದುಗೆಯಿಂದ ಏಳುವಾಗ ಮತ್ತೆ ಪ್ರಾಣಿ ಬಲಿಕೊಟ್ಟು, ಅದರ ರಕ್ತವನ್ನು ಗಡಿಬಲಿಯ ಶೇಷಾನ್ನದಲ್ಲಿ ಬೆರೆಸುವರು. ಇದಕ್ಕೆ ಹುಲುಸೆನ್ನುತ್ತಾರೆ. ಇದನ್ನು ರೈತರಿಗೆ ಹಂಚಲಾಗುವದು; ರೈತರು ಅದನ್ನು ಪ್ರಸಾದದಂತೆ ತೆಗೆದುಕೊಂಡು ಹೋಗಿ ತಮ್ಮ ಹೊಲಗಳಲ್ಲಿ ಹುಗಿದು ಬರುತ್ತಾರೆ. ಗಾವದ ಬಲಿ ತುಂಬಾ ಕ್ರೂರ ರೀತಿಯಲ್ಲಿ ನಡೆಯುತ್ತದೆ. ದೇವಿಯ ಎದುರಿನಲ್ಲಿ ಹೊಂಡವೊಂದನ್ನು ತೋಡಿ ರಂಗವಲ್ಲಿಯಿಂದ ಸಿಂಗರಿಸುತ್ತಾರೆ. ಹೊಂಡದಲ್ಲಿ ಕುರಿಯೊಂದನ್ನು ನಿಲ್ಲಿಸುತ್ತಾರೆ. ಆಗ ರಾಣಿಗ್ಯಾನು ಬಂದು, ಕುರಿಯ ಕುತ್ತಿಗೆಯನ್ನು ತನ್ನ ಹಲ್ಲಿನಿಂದ ಕಡಿದು, ಕುರಿಯನ್ನು ಅರೆ ಜೀವಮಾಡಿ, ಅದನ್ನು ಹೊಂಡದಲ್ಲಿ ಕೆಡವುತ್ತಾನೆ. ಆ ಮೇಲೆ ಬಲಿಕುರಿಯ ಮೇಲೆ ಕುಣಿದು, ಮತ್ತೆ ಮತ್ತೆ ಮಣ್ಣು ಹಾಕಿ ಕುಣಿದು, ಕುರಿಯನ್ನು ಹೊಂಡದಲ್ಲಿ ಪೂರ್ತಿ ಹುಗಿದು ಬಿಡುತ್ತಾನೆ. ಆ ಮೇಲೆ ದೇವಿಯನ್ನು ಹೊತ್ತವರು ಆ ಹೊಂಡದ ಮೇಲಿಂದ ನಡೆಯುತ್ತಾರೆ. ದೇವಿ ಹೋಗುವಾಗಲೂ ಮತ್ತೆ ಬಲಿಯಾಗುತ್ತದೆ. ಈ  ಚಡಂಗಕ್ಕೆ “ಗಾವ” ಎನ್ನುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾಂಸವನ್ನು “ಹುಲುಸು”, “ಗೌಲು” ಎಂದು ಕರೆಯುವ ಪರಿಪಾಠವಿದೆ. ಆದ್ದರಿಂದಲೇ ರಕ್ತದಿಂದ ಬೆರತ ಅನ್ನವು “ಹುಲುಸು” ಕಾಲ್ತುಳಿತಕ್ಕೆ ಸಿಕ್ಕು ಮಾಂಸದ ಮುದ್ದೆಯಾದ ಕುರಿ, ಗೌಲು>ಗಾವ. ದೇವಿಯ ಪ್ರಸಾದವಾದ ಈ “ಹುಲುಸು” “ಗಾವ” ಗಳು ಭೂಮಿಯಲ್ಲಿ ಸೇರಿದರೆ, ಬೆಳೆ ಹುಲುಸಾಗಿ ಬರುತ್ತದೆಯೆಂಬ ನಂಬಿಕೆ ಜಾನಪದರದು. ಬಲಿ ಪ್ರಾಣಿಗಳ ಚೈತನ್ಯವು ಭೂಮಿಯಲ್ಲಿ ಬೆರತು ಭೂಮಿತಾಯಿ ಸಸ್ಯಶ್ಯಾಮಲೆಯಾಗಿ, ಬಹುವಿಧ ಫಲರಸವುಣಿಸಿ, ನಮ್ಮ  ಆಯುರಾರೋಗ್ಯ ವೃದ್ಧಗೆ ಕಾರಣಳಾಗುತ್ತಾಳೆಂಬ ನಂಬಿಕೆ ಅನೇಕ ಆದಿವಾಸಿಗಳಲ್ಲದ್ದುದನ್ನು ನೆನೆಯಬೇಕು. ಪ್ರಾಣಿಬಲಿಯಿಂದ ನಿಶ್ಚೇಷ್ಟಿತವಾದ ಭೂತಗಳು ಸಂತುಷ್ಟಿಗೊಂಡು, ಪುನಃ ಚೈತನ್ಯಹೊಂದಿ, ಮಾನವ ಕಲ್ಯಾಣಕ್ಕೆ ಪೂರಕವಾಗಿ ನಿಲ್ಲುತ್ತವೆ; ಮತ್ತು ಬಲಿ ಪ್ರಾಣಿಗಳ ಚೈತನ್ಯ ಬಲಿ ಸಮರ್ಪಣೆ ಮಾಡಿದವನಲ್ಲಿ ತುಂಬಿ ಅವನ ಬದುಕು ಭದ್ರವಾಗುವುದು ಎಂಬ ನಂಬಿಕೆ ಪ್ರಾಣಿಬಲಿಯ ಹಿನ್ನೆಯಲ್ಲಿದ್ದುದನ್ನು ಗುರುತಿಸಲಾಗಿದೆ.

. ಮಾತಂಗಿಯ ಚಪ್ಪರಕ್ಕೆ ಬೆಂಕಿಯಿಡುವುದು :

ವಧೆಯಾದ ಕೋಣನ ಮುಂಡವನ್ನು ಊರ ಹೊರಗೆ ಬೈಲಲ್ಲಿ ಒಗೆಯಲಾಗುತ್ತದೆ. ಆ ಮುಂಡವನ್ನು ಹುಗಿಯದೆ ಕೊಳೆತು ನಾರಲಿಕ್ಕೆ ಬಿಡಬೇಕಂತೆ. ಕೋಣನ ರುಂಡವನ್ನು ಮಾತಂಗಿ ಚಪ್ಪರದಲ್ಲಿಡುತ್ತಾರೆ. ಈ ಮಾತಂಗಿ ಚಪ್ಪರ ಶ್ರೀ ದೇವಿ ಮತ್ತು ಅವಳ ಹೊಲೆಯ ಪತಿ ವಾಸಿಸುತ್ತಿದ್ದ ಮನೆಯ ಸಂಕೇತವೆಂದು ನನಗನಿಸುತ್ತದೆ. ಹೊಲೆಯನ ಸಂಪರ್ಕದಿಂದ ಬ್ರಾಹ್ಮಣಿ ಮಾತಂಗಿಯಾಗಿದ್ದಾಳೆ. ಅವಳ ಮನೆ ಮಾತಂಗಿ ಚಪ್ಪರ ಶ್ರೀದೇವಿ ಮನೆಗೆ ಬೆಂಕಿಯಿತ್ತು ಗಂಡನನ್ನು ಅಲ್ಲಿ ಒಗೆದು, ಚಿತೆಯಲ್ಲಿ ಹಾರಿದ ಘಟನೆಯನ್ನು ಮಾತಂಗಿ ಚಪ್ಪರಕ್ಕೆ ಬೆಂಕಿಯಿಡುವ ಚಡಂಗವು ನೆನಪು ಮಾಡಿಕೊಡುತ್ತದೆ.[14] ಮಾತಂಗಿ ಚಪ್ಪರಕ್ಕೆ ಉರಿಯುತ್ತ ಮೇಲೆ, ಮಾರಿಕಾಂಬೆಯ ಮೂರ್ತಿಯನ್ನು ಎತ್ತಿಕೊಂಡು ಹೋಗುತ್ತಾರೆ. ಆಗ ಆಸಾದಿಗಳು ತಾಯಿಯನ್ನು ಕಳೆದುಕೊಂಡ ತಬ್ಬಲಿಗಳಂತೆ ಗೋಳಿಡುತ್ತಾರೆ.

. ಹೆಪ್ಪು ಕೊಡುವುದು :

ಶ್ರೀ ಮಾರಿಕಾಂಬೆಯ ವಿಸರ್ಜನೆ ಕಾಲಕ್ಕೆ ಹೆಪ್ಪುಕೊಡುವ ಚಡಂಗವೊಂದು ನಡೆಯುತ್ತದೆ. ತಾಯಿ ಸತ್ತ ಮಕ್ಕಳಾದ ಆಸಾದಿಗಳಿಗೆ, ಬೊಗಸೆಯಲ್ಲಿ ಮೊಸರು ಕುಡಿಯಲು ಕೊಡುತ್ತಾರೆ. ಮೊಸರು ಹೊಯ್ಯುವಾಗ, ಮೊಸರೆಲ್ಲ ಮೈ ಮೇಲೆ ಚೆಲ್ಲಿ ನೆಲಕ್ಕೆ ಧಾರೆಯಾಗಿ ಬೀಳುವಂತೆ ಹೊಯ್ಯುತ್ತಾರೆ. ಹೀಗೆ ಆಸಾದಿಗಳ ಮೈಮೇಲಿಂದ ಇಳಿದ ಹೆಪ್ಪಿನಿಂದ ಭೂದೇವಿ ಸಂತೃಪ್ತಳಾಗುತ್ತಾಳೆ. ಆಸಾದಿಗಳು ತಾಯಿಯ ಕರುಣೆಯಿಂದ ಲೋಕ ಕಲ್ಯಾಣವಾಗಲೆಂದು ಹರಸುತ್ತಾರೆ. ಅನಾಥರಾದ ಈ ಭೂಮಿ ತಾಯಿಯ ಮಕ್ಕಳನ್ನು ಸಂತೃಪ್ತಿಗೊಳಿಸಿ, ರಕ್ಷಿಸಿದಲ್ಲಿ, ಭೂದೇವಿ ಫಲಪ್ರದೆಯಾಗುವಳೆಂಬ ನಂಬಿಕೆಯ ಹಿನ್ನೆಲೆ ಈ ಚಡಂಗಕ್ಕಿದ್ದಂತಿದೆ.

ಭೂದೇವಿಗೆ ಹೆಪ್ಪು ಕೊಡುವ ಕಾರ್ಯಾಚರಣೆಯಾದ ಮೇಲೆ, ಶ್ರೀ ದೇವಿಯನ್ನು ಊರ ಹೊಗೆ ಕೊಂಡೊಯ್ದು ವಿಸರ್ಜಿಸುತ್ತಾರೆ. ಮುಂದೆ ಹನ್ನೆರಡು ದಿನ ಸೂತಕ ಕಳೆದ ಮೇಲೆ ಶ್ರೀದೇವಿಯನ್ನು ಮರು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಚಿತೆಗೇರಿದ ಶ್ರೀದೇವಿ ಪುನಃ ನಾಡಿಗರ ಮನೆಯಲ್ಲಿ ಕನ್ನೆಯಾಗಿ ಅವತರಿಸಿದಳೋ ಏನೋ ಎಂಬಂತೆ, ಶ್ರೀದೇವಿಯ ಪ್ರತಿಸ್ಠಾಪನೆಯ ವಿಧಿಯನ್ನು ನಾಡಿಗರೇ ನಿರ್ವಹಿಸುತ್ತಾರೆ.

೧೨. ಶ್ರೀ ಮಾರಿಕಾಂಬೆ ಸಮನ್ವಯ ಮೂರ್ತಿ :

ಶ್ರೀ ಮಾರಿಕಾಂಬೆ ಹಾಗೂ ಮಾದಿಗ ಯುವಕನ ಸಂಬಂಧದ ಐತಿಹ್ಯ, ಮಾರಿ ಜಾತ್ರೆಯ ವಿಧಿ ವಿಧಾನಗಳು, ಹೊಲೆಯನೊಬ್ಬನ ವಂಚನೆಗೆ ತುತ್ತಾದ ಬ್ರಾಹ್ಮಣ ಸ್ತ್ರೀಯೊಬ್ಬಳು, ವರ್ಣ ಸಂಕರದ ವಿರುದ್ಧ ಹೋರಾಡಿ, ಆತ್ಮ ಬಲಿದಾನ ಮಾಡಿ, ಮಹಾಸತಿಯಾದ ಸಂಗತಿಯನ್ನು ತಿಳಿಸುತ್ತವೆ. ಒಂದು ಕಾಲಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಲೆಯರು ಪ್ರಬಲರಾಗಿದ್ದರೆಂದು ತಿಳಿದು ಬರುತ್ತದೆ.[15] ಅನಂತರದಲ್ಲಿ ಇಲ್ಲಿಗಾಗಮಿಸಿದ ಬ್ರಾಹ್ಮಣರು ತಮ್ಮ ಕುಲಶುಯದ್ಧಿನ್ನಿಟ್ಟುಕೊಳ್ಳಲು ಹೊಲೆಯರಿಗೆ ಮುಟ್ಟು ಗೋಲು ಹಾಕಿ, ತಮ್ಮ ವೇದ ವಿದ್ಯೆಯನು ಕಲಿಸಲಿಲ್ಲ. ಆದರೆ ಹೊಸದನ್ನು ಕಲಿಯಬೇಕೆಂಬ ತೀವ್ರಾಸಕ್ತಿ ಮಾನವ ಸಹಜವಾದದ್ದು. ಇದರಿಂದಾಗಿ ಇಂದಿನ ವಿಮರ್ಶಕರ ದೃಷ್ಟಿಯಲ್ಲಿ ಹೊಲೆಯ ಯುವಕ, ವಿದ್ಯಾವ್ಯಾಮೋಹಕದಿಂದ ಬ್ರಾಹ್ಮಣ ವೇಷ ಧರಿಸಿ, ವಿದ್ಯೆ ಪಡೆದದ್ದು, ಗುರು ಕೈಯಾರೆ ಧಾರೆಯೆರೆದ ಗುರು ಪುತ್ರಿಯನ್ನು ವರಿಸಿದ್ದು, ಮಹಾಪರಾಧವಾಗಲಾರದು. ಇಂತಹ ಸಣ್ಣ ಅಪರಾಧಕ್ಕೆ, ಆತನ ತಲೆ ದಂಡ ತೆಗೆದುಕೊಂಡದ್ದು ಅತಿಯಾಗಿ ಕಾಣಬಹುದು. ಆದರೆ ಕುಲಶುದ್ಧಿಗೆ ಹಿರಿಯ ಸ್ಥಾನ ಕೊಡುವ ಜಾನಪದರ ದೃಷ್ಟಿಯಲ್ಲಿ ಮಾದಿಗ ಮಾಡಿದ್ದು ಮಹಾಪರಾಧ. ಹೀಗಾಗಿ ಅವನ ಪಾಶವೀ ವೃತ್ತಿಯ ಹನನ ಸೂಚಕವಾಗಿ ಜಾತ್ರೆಯಲ್ಲಿ ಅವನನ್ನು ಕೋಳಿ, ಕುರಿ, ಹಂದಿ, ಕೋಣಗಳ ರೂಪದಲ್ಲಿ ಕೊಲ್ಲುವುದು ಅನೂಚಾನಾಗಿ ನಡೆದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ಗಂಡನನ್ನು ಕೊಂದವರು ಮಹಾಸತಿಯರೆ ? ಎಂಬ ಪ್ರಶ್ನೆ ಏಳಬಹುದು. ಆದರೆ ಶ್ರೀ ದೇವಿ ಗಂಡನನ್ನು ಕೊಂದದ್ದು, ಜಾನಪದರ ದೃಷ್ಟಿಯಲ್ಲಿ ಒಂದು ಘನ ಉದ್ದೇಶಕ್ಕಾಗಿ. ಕುಲಶುದ್ದಿಗೆ ಹೆಚ್ಚಿನ ಗಮನ ಕೊಡುವ ಜಾನಪದರು ವರ್ಣಸಂಕರವನ್ನು ಸಹಿಸರು. ಆದ್ದರಿಂದ ಅವರ ದೃಷ್ಟಿಯಲ್ಲಿ ಶ್ರೀದೇವಿ ಗಂಡನನ್ನು ಕೊಂದದ್ದೊಂದು ಮಹಾಕಾರ್ಯ. ವರ್ಣಸಂಕರವನ್ನು ಪ್ರತಿಭಟಿಸಿ ಗಂಡನನ್ನು ಕೊಂದು, ಅವನ ಜೊತೆಗೆ ಚಿತೆಗೇರಿದ್ದು ಅವರ ದೃಷ್ಟಿಯಲ್ಲಿ ಮರೆಯಲಾರದ, ಮರೆಯಬಾರದ ಕಾರ್ಯ.ಅದಕ್ಕಾಗಿಯೇ ಅವಳು ಮಹಾಸತಿಯಾಗಿ ಪೂಜೆಗೊಂಡದ್ದು. ಈ ವೀರ ಮಹಿಳೆಯ ಸ್ಮಾರಕ ಮಾರಿಕಾಂಬೆಯ ಮೂರ್ತಿ. ಮಾರಿ ಜಾತ್ರೆಯು ಅವಳ ಪುಣ್ಯದಿನಾಚರಣೆ.. ಹೀಗೆ ಮಹಾಸತಿಯರನ್ನು ಆರಾಧಿಸಿ, ಅವರ ಪುಣ್ಯದಿನಾಚರಣೆಯನ್ನಾಚರಿಸುವ ಸಂಪ್ರದಾಯ ಕರಾವಳಿಗೆ ವಿಶಿಷ್ಟವಾದುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಂಪ್ರದಾಯಕ್ಕೆ ಭೂತಾರಾಧನೆಯೆನ್ನುತ್ತಾರೆ. ಇಂದು ಮಾರಿಗುಡಿಯಲ್ಲಿರುವ ಸ್ಥಳ ಕೋಟೆಗೆ ಸಂಬಂಧಿಸಿದ ರುದ್ರ ಭೂಮಿಯೆಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ವೀರಗಲ್ಲು, ಮಹಾಸತಿ ಕಲ್ಲು ಹಾಗೂ ಸಾಧು ಸಂತರಿಗೆ ಸಂಬಂಧಿಸಿದ ಕಲ್ಲುಗಳಿವೆ. ಖಡ್ಗಪಾಣಿಯಾದ ವೀರಗಲ್ಲೊಂದು ಗರ್ಭಗುಡಿಯಲ್ಲಿ ನಾಗರ ಕಲ್ಲುಗಳೊಡನೆ ಪೂಜೆಗೊಳ್ಳುತ್ತದೆ. ಈ ಅಂಶಗಳೆಲ್ಲ ಮಾರಿಗುಡಿಯಿದ್ದ ಸ್ಥಳವೊಂದು “ವೀರಕಳ” ವಾಗಿತ್ತೆಂಬ ಅಂಶವನ್ನು ಸ್ಪಷ್ಟ ಪಡಿಸುತ್ತವೆ.

ಇಂದು ಗ್ರಾಮದೇವತೆಯರೆಂದು ಪೂಜೆಗೊಳ್ಳುವ ಅನೇಕ ದೇವಿಯರು, ಶ್ರೀ ಮಾರಿಕಾಂಬೆಯಂತೆ ಯಾವುದೋ ಹಿರಿಯ ಆದರ್ಶಕ್ಕೆ ಆತ್ಮ ಬಲಿದಾನ ಮಾಡಿದ ಮಹಾಸತಿಯರೆಂಬುದು, ಬಂಡಿ ಹಬ್ಬದ ಕಾರ್ಯ ವಿಧಾನವನ್ನು ಗಮನಿಸಿದಲ್ಲಿ ಸ್ಪಷ್ಟವಾಗುತ್ತದೆ.[16] ಈ ಗ್ರಾಮ ದೇವತೆಗಳ ಸುತ್ತು ಮುತ್ತಲೂ ಕೂಡ, ನಾಗರ ಹುತ್ತು, ವೀರರ ಹುತ್ತುಗಳಿರುವುದನ್ನು ನೋಡಬಹುದು.

ಶ್ರೀ ಮಾರಿಕಾಂಬೆಯನ್ನು ಕುರಿತು ಇಲ್ಲಿಯವರೆಗಿನ ಸಮೀಕ್ಷೆಯ ಆಧಾರದ ಮೇಲೆ ಹೇಳುವುದಾದರೆ, ಶ್ರೀ ಮಾರಿಕಾಂಬೆಯಲ್ಲಿ ಗ್ರಾಮದೇವತೆಯ ಆಧಾರದ ಮೇಲೆ ಹೇಳುವುದಾದರೆ, ಶ್ರೀ ಮಾರಿಕಾಂಬೆಯಲ್ಲಿ ಗ್ರಾಮದೇವತೆಯ ಹಲವು ಮುಖಗಳನ್ನು ಕಾಣಬಹುದು. ಶ್ರೀ ಮಾರಿಕಾಂಬೆಯ ಆರಾಧನೆಯ ಹಿನ್ನೆಲೆಯಲ್ಲಿ ವೃಕ್ಷಾರಾಧನೆ, ಭೂಮಿತಾಯಿಯ ಆರಾಧನೆ, ಭೂತಾರಾಧನೆ, ಶಕ್ತಿಯಾರಾಧನೆ, ವೀರ ಪೂಜೆ ಇವೆಲ್ಲವುಗಳ ಸಮನ್ವಯವಿದೆ.

ಮಾರಿಕಾಂಬೆಯ ಜಾತ್ರೆಯಲ್ಲಿ ಪ್ರಧಾನ ಪಾತ್ರಮಾಡುವ ಆಸಾದಿಗಳು ಶ್ರೀ ದೇವಿಯ ಮಕ್ಕಳೆಂದು ಹೇಳಿಕೊಳ್ಳುತ್ತಾರೆ. ಮಾತೃಪ್ರಧಾನ ಕುಟುಂಬಕ್ಕೆ ಸೇರಿದ ಈ ತಾಯ್‌ಮಕ್ಕಳಿಂದಲೇ ಶಿರಸಿಯ ಮರ್ಕೆಮ್ಮನ ಪ್ರತಿಷ್ಠಾಪನೆಯಾಗಿ, ಕ್ರಮೇಣ ಈ ಭಾಗದ ಇತರರ ಮೇಲೆಯೂ ಅವಳು ತನ್ನ ಪ್ರಭಾವವನ್ನು ಬೀರಿ, ಮಾರಿಕಾಂಬೆಯಾಗಿದ್ದಾಳೆ; ಆರ್ಯ – ದ್ರಾವಿಡ ಸಂಸ್ಕೃತಿ ಸಮನ್ವಯ ಸಂಕೇತವಾಗಿದ್ದಾಳೆ. ಇವಳ ಮಂದಿರದಲ್ಲಿಂದು ಹರಿಜನ, ಗಿರಿಜನ, ಹಿಂದೂ ಮುಸಲ್ಮಾನ ಕ್ರಿಸ್ತ, ಜೈನ, ಬೌದ್ಧಾದಿ ಭೇದವಿಲ್ಲದೆ ಎಲ್ಲರಿಗೆ ಮುಕ್ತದ್ವಾರವಿದೆ. ಇಂದು ಮಾರಿಕಾಂಬೆ ಜಾತಿಮತ ಭೇದವಿಲ್ಲದೆ ಎಲ್ಲರ ಅಮ್ಮನಾಗಿದ್ದಾಳೆ. ದೇವಿಗೆ ಅರ್ಪಿಸುವ ತಾಮಸ ಪೂಜೆಯೂ ನಿಂತು ಸಾತ್ವಿಕ ಆರಾಧನೆ ಮಾತ್ರ ಇಂದು ನಡೆಯುತ್ತದೆ.

೧೩. ಮಾರಿಅಂಬೆ :

ಮಾರಿಕಾಂಬೆಯೆದುರು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಭೀಕರ ಹಿಂಸೆ ಇಂದು ಕಣ್ಮರೆಯಾಗಿ, ಸಾತ್ವಿಕ ಆರಾಧನೆ ನಡೆಯುತ್ತಿರುವುದು, ಮಾರಿಕಾಂಬೆಯ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟ. ಸಾತ್ವಿಕ ಆರಾಧನೆಯನ್ನು ಪ್ರಚುರಪಡಿಸಲು, ಶತ ಶತಮಾನಗಳಿಂದ ದೇಶದ ಮೂಲೆ ಮೂಲೆಗಳಲ್ಲಿ ಪ್ರಯತ್ನಗಳು ನಡೆಯುತ್ತಿದ್ದರೂ, ಈ ದಿಶೆಯಲ್ಲಿ ಸಂಪೂರ್ಣ ಯಶಸ್ಸು ದೊರಕಿಲ್ಲ. ಕಾರಣ ಪ್ರಾಣಿ ಬಲಿಯಾದಷ್ಟು ಶ್ರೀ ದೇವಿಗೆ ಸಂತುಷ್ಟಿಯೆನ್ನುವ ನಂಬಿಕೆ. ಆದರೆ ಜನತೆಯಲ್ಲಿ ರೂಢಿಮೂಲವಾಗಿ ಬೆಳೆದ ಈ ನಂಬಿಕೆಯ ಭೇರನ್ನು ಕಿತ್ತು ತೆಗೆದ ಶ್ರೇಯಸ್ಸು ಶಿರಸಿಯ ಮಾರಿಮಾಂಬಾ ದೇವಸ್ಥಾನದ ವಿಶ್ವಸ್ತ ಮಂಡಳದವರಿಗೆ ಸಲ್ಲುತ್ತದೆ.

ಬ್ರಿಟಿಷರ ಅಡಳಿತೆಯ ಕಾಲಕ್ಕೆ ಮಾರಿಕಾಂಬೆಯ ಜಾತ್ರೆಯಲ್ಲಿ ನಡೆಯುತ್ತಿರುವ ಹಿಂಸಾಚಾರ ಅವರಿಗೆ ಹಿಡಿಸದಿದ್ದರೂ, ಜನತೆಯ ಧಾರ್ಮಿಕ ವಿಷಯದಲ್ಲಿ ಕೈಹಾಕಿ, ಕೈ ಸುಟ್ಟುಕೊಳ್ಳಲು ಅವರು ವಿಶೇಷ ಸಾಹಸ ಮಾಡಲಿಲ್ಲ. ಆದರೂ ದೇವಿಯ ಮುಂದೆ ನಡೆಯುವ ಹಿಂಸಾಚಾರವನ್ನು ತಡೆಗಟ್ಟುವುದರಲ್ಲಿ ಬ್ರಿಟಿಷರ ಪ್ರಯತ್ನವನ್ನು ನಾವು ಮರೆಯುವಂತಿಲ್ಲ. ಇವರ ಪ್ರಯತ್ನದ ಫಲವಾಗಿ, ಜಾತ್ರೆಯಲ್ಲಿ ನೂರಾರೂ ಕೋಣಗಳ ಬಲಿಯಾಗುವುದು ಕ್ರಮೇಣ ನಿಂತು. ಒಂದು ಕೋಣವನ್ನು ಕಡಿಯುವ ರೂಢಿಮಾತ್ರ ಉಳಿಯಿತು. ಆದರೆ ಮುಂದೆ ಈ ದಿಶೆಯಲ್ಲಿ ವಿಚಾರವಂತ ಹಿಂದೂಗಳು  ಮುಂದಾಗಿ, ಪ್ರಾಣಿ ಬಲಿಯನ್ನು ನಿಲ್ಲಿಸಲು ಹೆಣಗಿ, ಮೊದಲು ಕೋಣದ ಬಲಿ, ಅನಂತರ ಇತರ  ಪ್ರಾಣಿ ಬಲಿಯನ್ನು ತಡೆಯುವಲ್ಲಿ  ಹೆಚ್ಚಿನ ಯಶಸ್ಸು ಪಡೆದರು. ಆದರೂ ೧೯೬೦ ರ ವರೆಗೂ ಗುಪ್ತವಾಗಿ, ಒಂದಲ್ಲ ಒಂದು ಬಗೆಯಲ್ಲಿ  ಪ್ರಾಣಿ ಹಿಂಸೆ ನಡೆಯುತ್ತಿತ್ತು; ಆದರೆ ಅಲ್ಲಿಂದ ಮುಂದೆ ಮಾತ್ರ ಮಾರಿಕಾಂಬೆಯ ಮುಂದೆ ಪ್ರಾಣಿ ಬಲಿಯನ್ನು ನಿಷೇಧಿಸಲಾಯಿತು. ಅಂದಿನಿಂದ ಭೀಕರ ಮಾರಿದೇವತೆ, ಕರುಣಾಮಯಿ ಅಂಬೆ – ಅಮ್ಮನಾದಳು. ಶ್ರೀ ದೇವಿಯ ಭಕ್ತ ಸಮುದಾಯ, ಜೊತೆಗೆ ಅವಳ ಕಾಣಿಕೆಯ ಸಂಪತ್ತು ಹೆಚ್ಚಿತು. ಇಂದು ಶ್ರೀ ದೇವಿಯ ಕಾಣಿಕೆಯನ್ನು ದೇವಸ್ಥಾನದ ವಿಶ್ವಸ್ತ ಮಂಡಳದವರು, ಶಿಕ್ಷಣ, ಸಾಹಿತ್ಯ, ಕಲೆ ಮುಂತಾದ ಸಮಾಜ ಸಂಸ್ಕೃತಿ ವಿಕಾಸ ಕಾರ್ಯಕ್ರಮಗಳಿಗೆ ವಿನಿಯೋಗಿಸಿ, ನಾಡ ಸಂಸ್ಕೃತಿಯ ಉತ್ಥಾನ ಕಾರ್ಯದಲ್ಲಿ ಮುಂದಾದದ್ದು ಗಮನಾರ್ಹ.

* * *


[1]     ಕಸಬರಿಗೆ

[2]     ಗ್ರಾಮೀಣರು ಆರೋಗ್ಯ ನಿಯಮವನ್ನು ಗಮನದಲ್ಲಿಟ್ಟುಕೊಂಡು ಈ ಮಾರಿ ಹೊರೆಯ ಚಡಂಗವನ್ನು ಪ್ರಚಾರದಲ್ಲಿ ತಂದಂತಿದೆ

[3]     ಬಸುರಿಯರಿಗೆ

[4]      ಪೀಡೆ

[5]     ಜಾತ್ರೆಯ ವಿಶೇಷ ವಿವರಣೆಯನ್ನು ನೀಡಿದ ಶ್ರೀ ವಿನಾಯಕ ಮಾಡಗೇರಿ ಇವರಿಗೆ ಋಣಿ.

[6]     ಓಲೆ

[7]     ಪ್ರಸಾದ

[8]     ಶಿರಸಿಯ

[9]     ಶೌರ್ಯ

[10]    ಒಂದು ಬ್ರಾಹ್ಮಣ ಮನೆತನ

[11]    ಜಾತ್ರೆಯಲ್ಲಿ ಆಸಾದಿಗಳ ಪ್ರಮುಖನು ನಾಗವನ್ನು ಹೋಲುವ ರಾಣಿಗೋಲನ್ನು ಹಿಡಿದು ತಿರುಗುತ್ತಾನೆ. ಇವನಿಗೆ ರಾಣಿಗ್ಯಾ ಎಂದು ಕರೆಯುತ್ತಾರೆ

[12]    ಉತ್ತರ ಕನ್ನಡ ಜಿಲ್ಲೆಯಲ್ಲಿ “ದಂಡಿನ ದುರ್ಗಿ” ದೇವಾಲಯವೂ ಇದೆ.

[13]    ಹಾರಿತು

[14]    ಬಂಡಿ ಹಬ್ಬದ ಮಾಸ್ತಿಕೊಂಡಕ್ಕೆ ಬೀಳುವ ಚಡಂಗವನ್ನು ಈ ಚಡಂಗದ ಜೊತೆಗೆ ಹೋಲಿಸಿ ನೋಡಬೇಕು

[15]    Journey Through the Northern Part of Kanara By Dr. Francis Buchanan (Ed.by S. Silva) p. 38.

[16]    ಇದರ ವಿವರಣೆಯನ್ನು “ಕಾರವಾರ ಜಿಲ್ಲೆಯ ಜಾನಪದ ಗೀತಗಳು” ಎಂಬ ನನ್ನ ಅಪ್ರಕಟಿತ ಮಹಾಪ್ರಬಂಧದಲ್ಲಿ ನೋಡಬಹುದು.