ಎಲ್ಲಮ್ಮದೇವಿ ತಾನಿರುವಲ್ಲಿ ಸಾವಿರ ಸಾವಿರ ಮರುಷಗಳ ಹಿಂದಿನ ತನ್ನ ಲೋಕವನ್ನು ಇನ್ನೂ ಭದ್ರವಾದ ಕಾವಲಿನಲ್ಲಿರಿಸಿಕೊಂಡವಳು. ವಿಜ್ಞಾನದ ಯಾವುದೇ ಬೆಳವಣಿಗೆಯ ಪ್ರಭಾವ ಆಕೆಯ ಲೋಕದ ಮೇಲೆ ಆದುದು ಅಷ್ಟಕಷ್ಟೆ ಇಂದಿಗೂ ಗುಡ್ಡದ ಜಾತ್ರೆಗೆ ಲೆಕ್ಕವಿಲ್ಲದಷ್ಟು ಜನ ದೂರ ದೂರದಿಂದ ನೆರೆಯುತ್ತಾರೆ. “ಎಲ್ಲಮ್ಮ ದೇವು ಉಧೋ ಉಧೋ” ಎಂದು ಒಕ್ಕೊರಲಿನಿಂದ ಉದ್ಘೋಷಿಸುತ್ತಾರೆ.

ಜನಪದ ಸಂಶೋಧಕರಿಗೆ, ಸಂಸ್ಕೃತಿಯ ಅಭ್ಯಾಸಿಗಳಿಗೆ ಇದೊಂದು ಬಗೆಯಲ್ಲಿ ಬಡಿಸಿಟ್ಟ ಅನ್ನದ ಹಾಗೇ. ಹಾಗೆಂದು ಒಮ್ಮೆಲೆ ತುತ್ತುಮಾಡಿ ಬಾಯಿಗೆ ಹಾಕಿ ಕೊಳ್ಳುವುದಿಲ್ಲ. ಎಲ್ಲಮ್ಮನ ಕತೆ ಅನೇಕ ಗೊಂದಲಗಳಿಂದ ಕೂಡಿದ್ದು ಹಲವಾರು ಉತ್ತರ ಕಾಣದ ಸಮಸ್ಯೆಗಳಿಗೆ ದೂಡುತ್ತದೆ. ಏನಿದ್ದರೂ ಹಸಿವೆಯಾದವರ ಹೊಟ್ಟೆ ಕೇಳಬೇಕಲ್ಲ. ಸಿಗುವಷ್ಟು ಸಾಮಗ್ರಿಯನ್ನು ಬಾಚಿಕೊಂಡು ಸಂಸ್ಕೃತಿಯ ಹಿಂದಿನ ಪುಟಗಳನ್ನು ತಿರುವ ತೊಡಗುವುದು. ಒಂದು ಮಾತು, ಈಗಾಗಲೇ ವಿದ್ವಾಂಸರು ಎಲ್ಲಮ್ಮನ ಕುರಿತಾಗಿ ಹಲವುತೆರದ ಅಧ್ಯಯನ ಕೈಕೊಂಡಿದ್ದು ಅವನ್ನೆಲ್ಲ ಇಟ್ಟುಕೊಂಡು ಇಲ್ಲಿ ವಿವೇಚನೆಗಿಳಿಯಲಾಗಿದೆ.

ಎಲ್ಲಮ್ಮನ ಕುರಿತಾಗಿ ವಿಶ್ಲೇಷಣೆಗಿಳಿಯುವಾಗ ಪ್ರಬಂಧದಲ್ಲಿ ಅನುಕೂಲಕ್ಕಾಗಿ ಮೂರು ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಒಂದು ಪುರಾಣದ ಕತೆ. ಜನಪದದಲ್ಲಿರುವ  ಕಲ್ಪನೆಗಳನ್ನೊಳಗೊಂಡರೆ, ಎರಡನೆಯದು ಐತಿಹಾಸಿಕ ದಾಖಲೆಗಳ ಮೇಲೆ ಹೆಣೆದುಕೊಂಡಿರಬಹುದಾದ ಸಂಗತಿಗಳನ್ನು ಹೇಳುತ್ತದೆ. ಮುಂದಿನದು ಇಂದು ವಾಸ್ತವವಾಗಿ ಉಳಿದುಕೊಂಡಿದ್ದನ್ನು ಚರ್ಚೆಗೆತ್ತಿಕೊಂಡುದು. ಕೊನೆಯಲ್ಲಿ ಜೋಗಿತಿಯರ ಸಾಹಿತ್ಯವನ್ನಷ್ಟು ಈಕ್ಷಿಸಲಾಗಿದೆ.

. ಪುರಾಣಗಳಲ್ಲಿ :

ಪುರಾಣಗಳಲ್ಲಿ ಅನೇಕ ಕಡೆಗೆ “ರೇಣುಕೆ” ಎಂಬ ಹೆಸರಿನಲ್ಲಿ ಎಲ್ಲಮ್ಮನ ಕತೆ ದೊರೆಯುತ್ತದೆ. ಅನೇಕ ಪಾಠಾಂತರಗಳನ್ನು ಹೊಂದಿರುವ ಈ ಕಥೆಯ ಒಂದು ಸಾಮಾನ್ಯ ಸ್ವರೂಪವನ್ನು ಇಲ್ಲಿ ನೋಡಬಹುದು. ರೇಣುಕೆ ಕಾಶ್ಮೀರದ ಅರಸನ ಮಗಳು. ಇವನ ಹೆಸರು ರೇಣುಕರಾಜ. ಈತ ಇಷ್ಟಾಕು ವಂಶದವ ಎಂದು ಮಹಾಭಾರತ ಹೇಳಿದರೆ, ಪ್ರಸೇನ ಜಿತನ ಮಗಳು ರೇಣುಕೆ ಎಂದು ಭಾಗವತ, ಈತ ಆಕೆಯ ಸಾಕು ತಂದೆ ಎಂದು ಹರಿವಂಶ ಹೇಳುತ್ತವೆ. ರೇಣುಕೆಯ ತಾಯಿ ಭೋಗಾವತಿ ಎಂಬುದು ಸಾಮಾನ್ಯವಾಗಿ ಕಂಡುಬರುತ್ತದೆ. ವಾಯು ಪುರಾಣದಲ್ಲಿ ರೇಣುಕೆಯು ಸುವೇಣನೆಂಬ ಮುನಿಯ ಮಗಳು, ಕಾಮಾಲಿ ಎಂಬ ಹೆಸರಿನವಳು ಎನ್ನುವುದಿದೆ.

[1] ಆಕೆ ಅರಸನ ಮಗಳೆಂಬುದೇ ಬಹಳಷ್ಟು ಪಾಠಗಳಲ್ಲಿ ದೊರೆಯುತ್ತಿರುವದರಿಂದ ಅದೇ ನಂಬಲರ್ಹವಾದುದೆನಿಸುತ್ತದೆ. ರೇಣುಕೆಯು ಅಯೋನಿಜಳಾಗಿ, ಯಜ್ಞಕುಂಡದಿಂದ ಬಂದಳೆಂದು ಹೇಳುವ ವಾಡಿಕೆಯೇ ಹೆಚ್ಚು. ಈಕೆಯ ಮದುವೆ ಬೃಗು ವಂಶದ ಜಮದಗ್ನಿಯೊಡನೆ ಆಯಿತು. ಇವರಿಗೆ ವಸು. ವಿಶ್ವಾವಸು, ಬೃಹದ್ಯಾನು, ಬೃಹತ್ಕಣ್ವ ಮತ್ತು ಪರಶುರಾಮ ಎಂಬ ಐದು ಮಕ್ಕಳು ಜನಿಸುತ್ತಾರೆ. ಜಮದಗ್ನಿ ಬಹಳ ಕೋಪಿಷ್ಠ, ಯಾವಾಗಲೂ ತಪದಲ್ಲಿ ನಿರತನಾಗಿರುವವ. ರೇಣುಕೆ ತನ್ನೆಲ್ಲ ವೈಭೋಗದ ಜೀವನವನ್ನು ಮರೆತು ಪತಿಪರಾಯಣಿಯಾಗಿ ಇವನ ಆಶ್ರಯದಲ್ಲಿ ಜೀವನ ಸಾಗಿಸಿದಳು. ದಿನವೂ ಪೂಜೆಗಾಗಿ ಶುದ್ಧಮನದಿಂದ ನದಿಯಿಂದ ಪೂಜೆಗಾಗಿ ನೀರುತರುವುದು ಆಕೆಯ ದಿನದ ಕೆಸಗಳಲ್ಲೊಂದು. ಹಾಗೆ ಹೋದಾಗ, ಒಂದು ಸಲ ಗಂಧರ್ವನೊಬ್ಬನು ತನ್ನ ಸ್ತ್ರೀಯರೊಂದಿಗೆ ವಿಹರಿಸುವುದನ್ನು ನೋಡಿ ಆಕೆಯ ಮನಸ್ಸು ಚಂಚಲವಾಯಿತು. ಆಕೆಯ ಮಳಲಿನ ಕೊಡ ಆಕೆಯ ಮನದ ಅಶುದ್ದತೆಯ ಪ್ರಭಾವದಿಂದ ಮಳಲಾಗಿ ಹೋಯಿತು. ಹಾಗೆಯೇ ಆಶ್ರಯಕ್ಕೆ ಬಂದಳು. ಜಮದಗ್ನಿ ಇದನ್ನರಿತು ಕೋಪದಿಂದ ಆಕೆಯನ್ನು ಆಶ್ರಯದಿಂದ ಹೊರಗೆ ಅಟ್ಟುತ್ತಾನೆ. ಆತನ ಕೋಪಾಗ್ನಿಯಿಂದ ಆಕೆಯ ಮಯಯ್ಗೆಲ್ಲ ಕುಷ್ಟರೋಗ ವ್ಯಾಪಿಸಿಕೊಳ್ಳುತ್ತದೆ. ಆಕೆ ವನವನ ತಿರುಗುತ್ತ ತನ್ನ ತಾಪದ ಪರಿಹಾರಕ್ಕಾಗಿ ಪರಿತಪಿಸುತ್ತ ನಡೆದಳು. ಏಕನಾಥ ಮತ್ತು  ಜೋಗಿನಾಥ ಎಂಬ ಸಿದ್ಧರ ಸ್ಥಾನದಲ್ಲಿಗೆ ಬಂದು ಬಳಲಿದವಳಾಗಿ ಗಿಡವೊಂದರ ಕೆಳಗೆವಿರಮಿಸುತ್ತಾಳೆ. ಅದೇ ಗಿಡದ ಮೇಲೆ ಆ ಸಿದ್ಧರು ತಮ್ಮ ಪಾದುಕೆಗಳನ್ನಿಟ್ಟು ಹೋಗಿದ್ದು. ಅವುಗಳಿಂದ ಹನಿಹನಿಯಾಗಿ ನೀರು ಬೀಳುತ್ತಿದ್ದು,  ಅದು ರೇಣುಕೆಯ ಮೇಲೆ ಬಿದ್ದು, ಆಕೆಯ ತಾಪ ಅಷ್ಟು ಕಡಿಮೆಯಾಯಿತಂತೆ. ಅದರಿಂದ ಆಶಾಭರಿತಳಾದ ಆಕೆ ಆ ಮುನಿಗಳನ್ನು ಕಂಡು, ತನ್ನ ಪಾಪದ ಪರಿಹಾರಕ್ಕಾಗಿ ಬೇಡಿಕೊಳ್ಳುತ್ತಾಳೆ. ಅವರು ತಮ್ಮ ತಪಸ್ಸಿನ ಪ್ರಭಾವದಿಂದ ಪರಿಹರಿಸುತ್ತಾರೆ. ಆಕೆ ರೋಗದಿಂದ ಮುಕ್ತಳಾಗಿ ಮತ್ತೆ ತನ್ನ ಪತಿಯ ಆಶ್ರಯಕ್ಕೆ ಬರುತ್ತಾಳೆ. ಇಷ್ಟಾದರೂ ಜಮದಗ್ನಿಯ ಕೋಪ ತಗ್ಗಲಿಲ್ಲ. ತನ್ನ ಮಕ್ಕಳು ನಾಲ್ವರನ್ನು ಕರೆದು ಆಕೆಯನ್ನು ವಧಿಸಲು ಆಜ್ಞಾಪಿಸುತ್ತಾನೆ. ಅವರು ತಾಯಿಯನ್ನು ವಧಿಸಲು ಒಪ್ಪದಾದಾಗ ಅವರನ್ನು ತನ್ನ ಕೋಪದಿಂದ ಸುಟ್ಟು ಭಸ್ಮಗೊಳಿಸುತ್ತಾನೆ. ನಂತರ ಪರಶುರಾಮನನ್ನು ಕರೆದು ಅವನಿಗೂ ಹೀಗೆಯೇ ಹೇಳಿದಾಗ ಅವನು ತಂದೆಯ ಆಜ್ಞೆಯನ್ನು ಮೀರಲಾರದೆ ತಾಯಿಯ ರುಂಡವನ್ನು ಛೇದಿಸುತ್ತಾನೆ. ಇದರಿಂದ ಸಂಪ್ರೀತನಾದ ಜಮದಗ್ನಿಯು ಬೇಡಿದ್ದು ಕೊಡುವೆನೆಂದು ಹೇಳುತ್ತಾನೆ. ಪರಶುರಾಮ ತನ್ನ ಸಹೋದರರನ್ನು, ತಾಯಿಯನ್ನು ಮರಳಿ ಪಡೆಯುತ್ತಾನೆ. ಇದಿಷ್ಟು ಕತೆಯ ಒಂದು ಭಾಗವೆನ್ನಬಹುದಾದ್ದು.

ಎರಡನೆಯ ಭಾಗದಲ್ಲಿ ಮಹಿಷ್ಪತಿ ನಗರದ ಅರಸು ಕಾರ್ತಿವೀರ್ಯಾರ್ಜುನನು ಜಮದಗ್ನಿಯ ಬಳಿಯಲ್ಲಿ, ಇಂದ್ರನಿಂದ ಪಡೆದ ಕಾಮಧೇನುವಿದೆಯೆಂದು ತಿಳಿದು, ಅದನ್ನು ಪಡೆಯುವ ಆಶೆಯಿಂದ ಬರುವ ಪ್ರಸಂಗವಿದೆ. ಜಮದಗ್ನಿಯು ಕೊಡದಾಗಲು, ಆತನನ್ನೇ ಹತಗೊಳಿಸುತ್ತಾನೆ. ಹೀಗೆ ರೇಣುಕೆಗೆ ವೈಢವ್ಯ ಪ್ರಾಪ್ತವಾಗುತ್ತದೆ. ಮುಂದೆ ರುಚಿಕ ಮುನಿಗಳು ಅಗಸ್ತ್ಯರು ತಂದೆ ಮಂತ್ರ ಸಂಜೀವಿನಿಯಿಂದ ಜಮದಗ್ನಿಯನ್ನು ಬದುಕಿಸುತ್ತಾರೆ. ರೇಣುಕೆಗೆ ಮರಳಿ ಮುತ್ತೈದಿತನ ಬರುತ್ತದೆ. ಪರಶುರಾಮ ಈ ಸುದ್ದಿಯಿಂದ ತಲ್ಲಣಗೊಂಡು ಕ್ಷತ್ರಿಯ ವಂಶವನ್ನೆಲ್ಲ ನಾಶ ಮಾಡುವುದಾಗಿ ಪಣತೊಟ್ಟು, ಕಾರ್ತಿವೀರ್ಯಾರ್ಜುನನ್ನು ಸಂಹರಿಸುತ್ತಾನೆ. ಇದಿಷ್ಟು ಕತೆ.

ಜನಪದರದಲ್ಲಿ ಬಳಕೆಯಿರುವ ಕಥೆಯು ಇದೇ ಆಗಿದೆ. ರೇಣುಕೆಯ ತಂದೆ ತಾಯಿಯರ ಹೆಸರುಗಳು ಉತ್ತರರಾಯಿ ಸಡಗರದೇವಿ, ರೇಣುಕರಾಜ – ಮಂಗಳದೇವಿ ಎಂದು ಹಲವಾರು ಬಗೆಯಾಗಿ ಮಾರ್ಪಾಟುಗೊಂಡಿವೆ. ಈ ಕತೆಯು ಒಂದಾವುದೋ ವಾಸ್ತವಿಕ ಘಟನೆಯನ್ನು ಬಲವಾಗಿ ಹೇಳುತ್ತದೆಯೆನಿಸುತ್ತದೆ. ಆ ಘಟನೆಯ ಸುತ್ತ ಅನೇಕ ಸಾಂಕೇತಿಕ ವಲಯಗಳು, ಕಲ್ಪನೆಯ ಬಗೆಗಳು ಸೇರಿಕೊಂಡಿರುವ ಸಂಭವವಿದೆ. ಕತೆಯನ್ನು ಅವಲೋಕಿಸಿದಾಗ ಕ್ಷತ್ರಿಯ ವೀರಧರ್ಮಕ್ಕೂ ಬ್ರಹಜ್ಮಿಜ್ಞಾಸುವಾದ ಮುನಿಧರ್ಮಕ್ಕೂ ಉಂಟಾಗಿದ್ದ ವೈಶಮ್ಯಗಳು, ಅವು ಊರ್ಜಿತವಾಗಿದ್ದಕಾಲ, ಒಂದಕ್ಕಿಂತ ಇನ್ನೊಂದರ ಪ್ರಭಾವ ಹೆಚ್ಚಾಗುತ್ತಿರುವದು ವ್ಯಕ್ತವಾಗುತ್ತದೆ. ರೇಣುಕೆ ಕ್ಷತ್ರಿಯಳೇ; ಆಕೆ ಮದುವೆಯಾದದ್ದು ಒಬ್ಬ ಮುನಿಯನ್ನು ಆಕೆ ರೋಗದಿಂದ ಬಳಲುವುದಾಗಲಿ, ಮಗನಿಂದಲೇ ಹತಳಾಗುವುದಾಗಲಿ ಈ ಬಗೆಯ ದ್ವಂದ್ವವನ್ನು ಪ್ರತಿನಿಧಿಸುತ್ತಿರುವ ಸಂಭವವಿಲ್ಲದೆ ಇಲ್ಲ. ಕಾರ್ತಿವೀರ್ಯಾರ್ಜುನ ಹುಟ್ಟಿನಕತೆಯೂ ಒಂದು ವಿಶೇಷ. ನಾರಾಯಣ ತನ್ನ ಅಂಕೆಯಲ್ಲಿಟ್ಟುಕೊಂಡಿರುವ, ಬೇಕಾದಾಗ ಬಳಸಿಕೊಳ್ಳುವ “ಚಕ್ರ” ಅವನು ಒಂದು ಸಲ ಲಕ್ಷ್ಮೀಯ ಮುಂದೆ ತನ್ನ ಪರಾಕ್ರಮವನ್ನು ಹೇಳಿಕೊಳ್ಳುವಾಗ, ಸಹಿಸಲಾರದೆ ನಾನಿಲ್ಲದಿದ್ದರೆ ನೀನೇನು ಮಾಡುತ್ತಿದ್ದೆ ಎಂದು ಎದುರಾಡಿದ. ಅದರಿಂದ ಅವರಲ್ಲಿ ವಾಗ್ವಾದಗಳಾಗಿ ಅವ ಭೂಮಿಗಿಳಿದು ಬಂದು, ಕಾರ್ತಿವೀರ್ಯನಾಗಿ ಹುಟ್ಟಿದನಂತೆ. ಇವನು ಹುಟ್ಟಿದಾಗ ಇವನಿಗೆ ಕೈಗಳೆ ಇರಲಿಲ್ಲ. ದತ್ತಾತ್ರೇಯ ಮುನಿಗಳ ಕಡೆಗೆ ವೈದಾಗ ಅವರು ಅವನಿಗೆ ಕೈಗಳನ್ನು ಕರುಣಿಸಿದರು. ಇಷ್ಟೆಲ್ಲ ಘಟಿಸಿದರು, ಕಾರ್ತಿವೀರ್ಯಾರ್ಜುನನು ಉಪಟಳಕೊಡುವ ಕ್ಷತ್ರಿಯನೇ ಆಗಿ ನಿರೂಪಿತನಾಗಿರುವುದು ಹೀಗೆ ಎರಡು ಬಣಗಳ ದ್ವಂದ್ವ ಕತೆಯಲ್ಲಿ ಸ್ಪಷ್ಟವಾಗಿದೆ. ಪರಶುರಾಮ ತಂದೆಯನ್ನು ಕೊಂದ ಕಾರ್ತಿವೀರ್ಯಾರ್ಜುನನನೊಬ್ಬನನ್ನೇ ಕೊಲ್ಲದೆ ಇಡೀ ಕ್ಷತ್ರಿಯ ವಂಶವನ್ನೇ ನಾಶಗೊಳಿಸುತ್ತೇನೆ ಎಂದು ಪಣತೊಡುವುದು ಈ ಎಲ್ಲ ಊಹೆಗಳನ್ನು ಹೆಚ್ಚು ಮೂರ್ತಗೋಳಿಸುತ್ತದೆ.

ರೇಣುಕೆಯು ಪತಿಪರಾಯಣಿಯಾದ ಸಾಧ್ವಿ. ಪತಿಯೇ ಪರದೈವವೆಂದು ನಂಬಿದ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯನ್ನು ಅದು ಹೇಳುವಂಥದು. ಆದರೆ ಯಾವುದೇ ಕ್ಷೇತ್ರವಾಗಲಿ ರೇಣುಕೆಯ ಹೆಸರಿನಿಂದ ಪ್ರಸಿದ್ಧವಾಗಿದೆಯೇ ಹೊರತು ಜಮದಗ್ನಿಯಿಂದಲ್ಲ. ಆಕೆಯಿಂದ ಜಮದಗ್ನಿ, ಪರಶುರಾಮರ ಜೀವನಕ್ಕೆ ಅಷ್ಟಿಷ್ಟು ಬೆಳಕು. ಇದಕ್ಕೆ ಹೆಚ್ಚು ವತ್ತು ಕೊಡುವ ಹಾಗೆ ಆದಿತಿದೇವಿಯಪ್ರಸಂಗ ಈ ಕತೆಗಳಲ್ಲಿ ಬಂದಿರುವುದು. ದೇವತೆಗಳನ್ನೆಲ್ಲ ಎದುರಿಸಿ ನಿಲ್ಲುವುದಾಗಿ, ಅವರನ್ನೆಲ್ಲ ನಾಶಗೊಳಿಸುವುದಾಗಿ ಉದ್ದೇಶಿಸಿದ ಕಾರ್ತಿವೀರ್ಯಾರ್ಜುನನಿಂದ ಭೀತರಾಗಿ ಇಂದ್ರಾದಿದೇವತೆಗಳೆಲ್ಲ ಬ್ರಹ್ಮವಿಷ್ಣುಗಳ ಅಣತಿಯಂತೆ ಆದಿತಿಯಲ್ಲಿಗೆ ಬರುತ್ತಾರೆ. ಆದಿತಿಯು ತಾನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಪರಶಿವನನ್ನು ಕುರಿತು ತಪಸ್ಸು ಮಾಡಿ ಸವನಿಂದ “ನೀನು ರೇಣುಕೆಯಾಗಿ ಜನಿಸು, ನಾನು ಜಮದಗ್ನಿಯಾಗಿ ಜನಿಸುವೆ” ಎಂಬ ವರವನ್ನು ಪಡೆಯುತ್ತಾಳೆ. ಋಗ್ವೇದದಲ್ಲಿ ಉಲ್ಲೇಖಿತವಾದ ಅದಿತಿ ಆರ್ಯಳಲ್ಲ ಅನಾರ್ಯಳಾದ ಅವರು ಮಾತೃ ಪ್ರಧಾನ ಕುಟುಂಬ ಪದ್ಧತಿಯಿಂದ ಮೂರ್ತಗೊಂಡಳು. ಜಗತ್ತಿನ ಸೃಷ್ಟಿಗೆಲ್ಲ ಕಾರಣಳು ಎಂಬ ಪ್ರತಿಷ್ಠ ಪಡೆದವಳು. “ಅದಿತಿ ಪಂಚಜನಾ” ಎಂಬ ವರ್ಣನೆ ಅಲ್ಲಿದ್ದು ಚಾತುರ್ವರ್ಣದ ಹೊರಗಿನ ಪಂಚಮರವಳು ಎನ್ನುವುದು ಸ್ಪಷ್ಟವಿದೆ. “ರುದ್ರಿಯರ ತಾಯಿ ಅದಿತಿ. ಇವಳು ವಸುಗಳ ಮಗಳು. ಆದಿತ್ಯರ ಸಹೋದರಿ. ಅಮೃತದ ನಾಭಿ ಅದಿತಿ – ಎನ್ನುವುದು ಅಲ್ಲಿದೆ.[2] ಇಂಥ ಅದಿತಿಯು ತಾನೇ ಸಮಸ್ಯೆಯ ಪರಿಹಾರಕ್ಕಿಯಿಯದೆ ಪರಶಿವನನ್ನು ಕುರಿತು ತಪಸ್ಸಿಗಿಳಿಯುವುದನ್ನು ನೋಡಿದಾಗ ಪುರುಷ ಪ್ರಧಾನ ವ್ಯವಸ್ಥೆ ಮಾತೃ ಪ್ರಧಾನವ್ಯವಸ್ಥೆಯನ್ನು ಕೆಳಗೆ ತಳ್ಳುತ್ತಿರುವುದು ವ್ಯಕ್ತವಾಗುತ್ತಿದೆ. ಶೈವರೇನು ಆರ್ಯರಲ್ಲವಾದರೂ ಪುರುಷಪ್ರಾಧಾನ್ಯತೆಗೆ ಅವಕಾಶವುಳ್ಳವರು ದೈವರಲ್ಲಿಯೂ ಶಾಕ್ತರಲ್ಲಿಯೂ ನಡೆದ ಹಲವಾರು ವಿರೋಧಗಳಿಗೆ ಈ ಬಗೆಯಲ್ಲಿ ಈ ಕತೆ ಕನ್ನಡಿ ಹಿಡಿಯುವಂತಿದೆ. ಶಿವ; ವಿಷ್ಣು ಇವರೊಂದಿಗೆ ಜಗಳವಾಡಿದ, ಹೊಂದಾಣಿಕೆ ಮಾಡಿಕೊಂಡ ದೇವಿಯ ಹಲವಾರು ಕತೆಗಳು ದೊರೆಯುತ್ತವೆ. ಉದಾಹರಣೆಗೆ ಒಂದು ಪಟ್ಟಣವನ್ನು ಏಳು ಜನ ಅರಸರು ಆಳುತ್ತ ಇದ್ದರು. ಅವರು ಶಿವಭಕ್ತರು. ಆ ಭೂಮಿಯ ಮೂಲದೈವತವಾದ ದೇವಿಯನ್ನು ಅಲಕ್ಷಿಸಿದರು. ಆಕೆ ಹಿರಿಯ ಅರಸನಲ್ಲಿಗೆ ಹೋಗಿ ತನಗೆ ತಕ್ಕ ಮಾನಮರ್ಯಾದೆಗಳು ಸಲ್ಲಬೇಕೆಂದು ಕೇಳಿಕೊಂಡಳು. ಆದರೆ ಅರಸು ಆಕೆಯನ್ನು ಗೌರವಿಸದೆ ಹೊರಗಟ್ಟಿದ. ಆಕೆ ಕುಪಿತಳಾಗಿ ತನ್ನ ಕಾರ್ಯ ಸಾಧನೆಗಾಗಿ ಉಪಾಯವೊಂದನ್ನು ಹುಡುಕಿದಳು. ಶಿವನ ಬಡ ಭಕ್ತಳಂತೆ ವೇಷತೊಟ್ಟು ಅರಸನಿಂದ ಬೇಡಿ ಭೂಮಿಯೊಂದನ್ನು ಪಡೆದಳು. ಆ ಭೂಮಿಯನ್ನು ಹದಗೊಳಿಸಿ ಬಗೆಬಗೆಯ ಹಾವಿನ ಗಿಡಗಳನ್ನು ಬೆಳೆಸಿದಳು. ದಿನವೂ ಶಿವನ ಪೂಜೆಗೆ ಹೋಗುವ ಅರಸನಿಗೆ, “ಈ ಹೂವುಗಳು ಶಿವನಿಗೆ ಪ್ರಿಯವಾದವು” ಎಂದು ಕೊಡತೊಡಗಿದಳು. ಹೀಗೆಯೇ ಕೆಲ ದಿವಸ ನಡೆದುಕೊಂಡು ವಿಶ್ವಾಸಗಳಿಸಿ, ಒಂದು ದಿನ “ನೀನೇ ಈ ಹೂವುಗಳನ್ನು ತೋಟದಿಂದ ವೈದರೆ ಶಿವ ಇನ್ನೂ ಮೆಚ್ಚುತ್ತಾನೆ” ಎಂದಳು. ಅದರಂತೆ ಅರಸು ತೋಟಕ್ಕೆ ಬಂದಾಗ , ತನ್ನ ಸಂಗಡಿಗರೊಂದಿಗೆ  ಅವನನ್ನು ಮುತ್ತಿಗೆ ಹಾಕಿ ಹಣ್ಣು ಗಾಯಿ ನೀರುಗಾಯಿ ಮಾಡಿದಳು. ಅಂದಿನಿಂದ ಅರಸು ಆಕೆಯನ್ನು ಪೂಜಿಸಲು ಒಪ್ಪಿಕೊಂಡ. ಇಂಥವೇ ಹಲವಾರು ಕಥೆಗಳು ದೊರೆಯುತ್ತವೆ. ಇನ್ನೊಂದು ಕತೆ ಹೀಗಿದೆ. ವೀರಕಲಿತರಾಜ ಎಂಬ ಬ್ರಾಹ್ಮಣನಿಗೆ ರುದ್ರನೆಂಬ ಮಗ ಹುಟ್ಟಿದ. ಈ ಬ್ರಾಹ್ಮಣನೊ ಪೋಲೇರಮ್ಮಳ ಪರಮ ಭಕ್ತ. ರುದ್ರನಾದರೊ  ಇನ್ನೂ ಗರ್ಭದಲ್ಲಿರುವಾಗಲೇ ಪೋಲೇರಮ್ಮಳನ್ನು ಪೂಜಿಸಕುಡದೆಂದು ವಚನ ತೆಗೆದುಕೊಂಡ. ಕೆಲವರ್ಷಗಳ ನಂತರ ಈ ರುದ್ರನೇ ಆ ನಾಡಿನ ದೊರೆಯಾದ. ಪೋಲೇರಮ್ಮನ ಪೂಜೆಯನ್ನು ನಿಷೇಧಿಸಿದ್ದಲ್ಲದೆ ಆಕೆಯ ಗುಡಿಯನ್ನೇ ಹಾಳುಮಾಡಿದ. ಈಗ ಪೋಲೇರಮ್ಮ ಪ್ರತಿಕಾರಕ್ಕೆ ಇಳಿದಳು. ಮಾತಮ್ಮ ಮತ್ತು ಆಕೆಯ ಸಹೋದರ ಪೋತರಾಜರ ಸಹಾಯದಿಂದ ಮೂರನೂರ ಆರವತ್ತು ರೋಗಗಳನ್ನು ಸೃಷ್ಟಿಸಿ ಬಿಟ್ಟಳು. ಅರಸ ರುದ್ರನೇ ರೋಗಕ್ಕೆ ತುತ್ತಾದ. ಅದರೂ ಆತನು ಪೋಲೇರಮ್ಮನಳನ್ನು  ಪೂಜಿಸಲು ಮುಂದಾಗಲಿಲ್ಲ. ಆದರೆ ಆತನ ತಾಯಿ ರಾತ್ರಿ ಗುಪ್ತಳಾಗಿ ದೇವಿಯ ಬಳಿಗೆ ಹೋಗಿ ಅವನನ್ನು ಊಳಿಸಲು ಬೇಡಿಕೊಂಡಳು.[3] ಅಷ್ಟಾದರೂ ಆಕೆ ಜಗ್ಗಲಿಲ್ಲ. ಕೊನೆಗೆ ಅರಸನು ಮಣಿಯಬೇಕಾಯಿತು. ಶಾಕ್ತರು; ಶೈವರಲ್ಲಿ ನಡೆದ ವೈರುಧ್ಯಗಳನ್ನು ಹೇಳುವ ಇಂಥ ಕಥೆಗಳು ಆರ್ಯರಿಗಿಂತ ಪೂರ್ವದಲ್ಲಿಯೇ  ಇಲ್ಲಿ ನಡೆದಿರಬಹುದಾದ ಅಸಾಧ್ಯಗೊಂದಲವನ್ನು ಹೇಳುತ್ತವೆ ಎನ್ನಬಹುದು. ಎಲ್ಲಮ್ಮನ ಕುರಿತಾಗಿ ಇರುವ ಕತೆಯೊಂದು ಹೀಗಿದೆ. ಎಲ್ಲಮ್ಮ ಏಳುಗುಡ್ಡದಲ್ಲಿ ಹುಡುಗಿಯಾಗಿ, ಮುದುಕಿಯಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಒಂದು ಸಲ ಡೂಗು ಬೆನ್ನಿನ ಮುದುಕಿಯಾಗಿ ಕುಳ್ಳು ಆರಿಸಿ ಬುಟ್ಟಿಯಲ್ಲಿ ತುಂಬಿಕೊಂಡು ಬರುವಾಗ, ದನಕಾಯುವ ಕೃಷ್ಣನನ್ನು ನೋಡಿ, ಅವನಿಗೆ ಪುಟ್ಟಿ ಹೋರಿಸಿ ಓಡಿಹೋಗಿ ಬಿಡುವಳು. ಅವನು ಅವಮಾನಿತನಾಗಿ, ಸಿಟ್ಟುಗೊಂಡು “ನಿನ್ನ ಹೊಟ್ಟೆಯಲ್ಲಿ ಹುಟ್ಟಿಕೊಳ್ಳುತ್ತೇನೆ” ಎಂದನಂತೆ. ರೇಣುಕೆಯ ಕತೆಯಲ್ಲಿ ನಡೆದದ್ದೇ ಒಂದು ಆಕೆಯ ಎಲ್ಲ ಕ್ಷೇತ್ರಗಳು ಎಲ್ಲಮ್ಮ ಎನ್ನುವ ಆಕೆಯ ಅಭಿದಾನದಿಂದಲೇ ನಡೆಯುತ್ತವೆ.ಜನರೆಲ್ಲ ಮಹತ್ವದ ನಡುವಳಿಕೆಗಳು ಆಕೆಗೆ ಸಲ್ಲುತ್ತವೆ. ಹೀಗಾಗಿ ರೇಣುಕೆಯ ಮೇಲಿನ ಕಥೆ ಎಲ್ಲಮ್ಮನ ಚರಿತೆಯಲ್ಲಿ ಸೇರಕೊಂಡುದು ವಾಸ್ತವವಾಗಿ ಎಷ್ಟು ಉಚಿತವಾದುದೊ? ಎಷ್ಟರ ಮಟ್ಟಿಗಿನ ಸತ್ಯವನ್ನು ಹೇಳುತ್ತದೆಯೋ? ರೇಣುಕೆಯ ಹೆಸರಿನ ವ್ಯಕ್ತಿಯ ಒಂದು ವಾಸ್ತವದ ಘಟನೆಯನ್ನು ಎಲ್ಲಮ್ಮನೊಂದಿಗೆ ಸೇರಿಸಿರಬಹುದು ಎಂದು ಕಾಣುತ್ತದೆ.

ಜನಪದರಲ್ಲಿ, ಕಥೆಯು ಒಂದು ಮಗ್ಗುಲು ಹೆಚ್ಚು ಪ್ರಚಾರದಲ್ಲಿದೆ. ಎಲ್ಲಮ್ಮನು ಮದುವೆಯಾಗುವುದಕ್ಕೆ ಮುಂಚೆಯೇ ಪರಶುರಾಮನನ್ನು ಪಡೆದಳು ಎಂಬುದು ಪರಶುರಾಮನನ್ನು ಎಲ್ಲರೂ ಹೀಗಳೆಯುವವರೇ. ಆದ್ದರಿಂದ ಖಿನ್ನಮನದವಳಾದ ಅವನು ತಾಯಿಯನ್ನು ಪರಿಸರದಿಂದ ಗೋಳಾಡಿಸುತ್ತಾನೆ. ಆಕೆ ಏನು ಹೇಳುಬೇಕು. “ಬೆರಸಿ ನಾನವರ ನೆರದಿಲ್ಲ ರಾಮಣ್ಣ ಅರಸರ ಗುರತ ನನಗಿಲ್ಲ, ಗಂಧವ ಹಚ್ಚಿಲ್ಲ ಹೊಂದಿ ನಾ ಕುಂತಿಲ್ಲ ಮಂದಿ ಮಾನವರು ರೆದಿಲ್ಲ, ರಾಮಣ್ಣ, ಗಂಡನ ಗುರುತು ನನಗಿಲ್ಲ,” ಎಂದು “ಒಮ್ಮೆ ಹೇಳಿದರೆ ಹಳ್ಳಕ ಹೋಗಿದ್ದೆ ಹಳಮುಳ್ಳ ತುಳದಿದ್ದೆ ಹಳನೋಕಿ ನಿನ್ನ ಹಡದಿದ್ದೆ” ಎಂದು ಇನ್ನೊಮ್ಮೆ ಹೇಳುವರು. ” ಹಳದಾಗ ಇರುವಂತ ಅಗಸನ ತೋರವ್ವ ಅವನಿಗಪ್ಪಂತ ಕರದೇನ” ಎಂದು ಪರಶುರಾಮನ ಹಟ. “ಗುಟ್ಟಕ ಹೋಗಿದ್ದೆ ಗುಣಕಲ್ಲ ತುಳದಿದ್ದೆ ಗುಣನೋಕಿ ನಿನ್ನ ಹಡದೇನ” ಎಂದರೆ “ಗುಡದಾಗ ಇರುವಂತ ಒಟ್ಟಾನ ತೋರವ್ವ ಅವನಿಗಪ್ಪಂತ ಕರದೇನು” ಎನ್ನುವ.[4] ಒಂದು ಕಡೆಯಲ್ಲಿ ಬರುವಂತೆ ತಾಯಿಯನ್ನು ಜಡೆ ಹಿಡಿದು ಬೀದಿಯಲ್ಲಿ ದರದರ ಹಿಡಿದೆಳೆಯುತ್ತಾನೆ. ಅದರಿಂದ ಆತನಕಣ್ಣು ಹೋಗುತ್ತವೆ. ಮಗನ ಸ್ಥಿತಿಯನ್ನು ನೋಡಲಾರದೆ ತಾಯಿ ಶಿವನಮೊರೆ ಹೋಗುತ್ತಾಳೆ. ಶಿವ ಕಣ್ಣು ಕರುಣಿಸುತ್ತಾನೆ.[5] ಪುರುಷ ಪ್ರಧಾನದ ವ್ಯವಸ್ಥೆಯ ಇಂದಿನ ದಿನಗಳಲ್ಲಿ ನಿಂತು ನೋಡುವಾಗ ಒಂಡಾಗುವ ವೈಲಕ್ಷಣ್ಯಗಳನ್ನು ಇಂಥ ಕಥೆಗಳಲ್ಲಿ ಗುರುತಿಸಬಹುದು.

ಇದರೊಂದಿಗೆ ಹಾವಿನ ಸಂಬಂಧವೊಂದು ರೇಣುಕೆಯ ಕತೆಯಲ್ಲಿ ನುಸುಳಿ ಕೊಂಡಿದೆ. ಆಕೆ ಮಗುವಿದ್ದಾಗಲೇ ಆಕೆಯನ್ನು ಮುಗಿಸಿಬಿಡಲು ಅದು ಬರುವ ಘಟನೆ ನಡೆಯುತ್ತದೆ. ಭೋಗಾವತಿಯ ಸವತಿಯರು, ಭೋಗಾವತಿಯು ಪುತ್ರಿಯನ್ನು ಪಡೆದು ಪ್ರತಿಷ್ಠೆಗೊಂಡುದನ್ನು ಸಹಿಸಲಾರದೆ ಹಾಗೆ ಹಾವನ್ನು ಬಿಟ್ಟರೆಂಬ ಕಾರಣ ಹೇಳಲಾಗಿದೆ. ಮುಂದೆ ಜಮದಗ್ನಿಯ ಆಶ್ರಮದಲ್ಲಿರುವಾಗ ಹಾವಿನ ಶಿಂಬಿ ಮಾಡಿ ತಲೆಯ ಮೇಲೆ ಹೊರುತ್ತಾಳೆ ರೇಣುಕೆ. ಇದರಿಂದ ವ್ಯಕ್ತವಾಗುವುದು ಅಂದು ನಾಗ ಜನಾಂಗವು ತನ್ನೆಲ್ಲ ಪ್ರಭುತ್ವವನ್ನು ಕಳೆದುಕೊಂಡು ಶೈವ ಸಂಸ್ಕೃತಿಯೊಡನೆ ಒಂದಾಗಿ ಬದುಕಲೆಣಿಸಿರುವುದು. ಹಾವನ್ನು ಕೊರಳಿಗೆ ಸುತ್ತಿಕೊಂಡ ಶಿವನನ್ನೇ ಪ್ರತಿನಿಧಿಸುವ ಜಮದಗ್ನಿ ಗಂಧರ್ವರು ನದಿಯಲ್ಲಿ ವಿಹರಿಸುವುದನ್ನು ನೋಡಿ ಚಂಚಲಮನದವಳಾಗಿ ಮುನಿಧರ್ಮಕ್ಕೆ ವಿರುದ್ದವಾಗಿ ನಡೆದುಕೊಂಡಾಗ ಹಾವು ರೇಣುಕೆಯನ್ನು ಬಿಟ್ಟು ಹೋಗುವುದು ಸಂಕೇತಿಕವಾಗಿರುವ ಸಂಭವವಿಲ್ಲದೆ ಇಲ್ಲ. ಇದಕ್ಕೆಲ್ಲ ಉಪಷ್ಟಂಭಕವಾಗಿ ಅರ್ಜುನರು ಖಾಂಡವವನವನ್ನು ದಹಿಸಿದಾಗ ಅಲ್ಲಿರುವ ಸರ್ಪಗಳೆಲ್ಲ ರಾಮಶೃಂಗ ಪರ್ವತಕ್ಕೆ ಬರುವ ಜಮದಗ್ನಿಗೆ ಶರಣಾದುವು ಎನ್ನುವ ಕತೆಯೊಂದಿದೆ.

ಈ ಬಗೆಯ ಅನೇಕ ಸಂಕೀರ್ಣಗಳಿಂದ ತುಂಬಿದ ಈ ಕತೆ. ಭಾರತದಲ್ಲಿ ಪ್ರಬಲವಾಗುತ್ತ ಬಂದ ಶೈವ ಸಂಪ್ರದಾಯ, ಮಾತೃಪ್ರಧಾನ ವ್ಯವಸ್ಥೆಯ ಶಾಕ್ತಸಂಪ್ರದಾಯದ ಅಳಿವು, ಬ್ರಹ್ಮಜಿಜ್ಞಾಸು ಮುನಿಸಂಪ್ರದಾಯ ಮತ್ತು ಕ್ಷತ್ರಿಯ ಧರ್ಮದ ನಡುವಿನ ವೈರುಧ್ಯಗಳು, ಜಮದಗ್ನಿಯ ಇಂದ್ರನಿಂದ ಕಾಮಧೇನುವನ್ನು ಪಡೆದುದನ್ನು ನೋಡಿದರೆ ಭಾರತದಲ್ಲಿ ಆರ್ಯ ಅನಾರ್ಯರ ಬದುಕಿನ ಧರ್ಮಗಳಲ್ಲಿನ ಹೋರಾಟದ ಜೊತೆಗೆ ಇಲ್ಲಿನ ಮೊದಲಿನ ಜನಾಂಗಗಳಲ್ಲಿಯೇ ಇದ್ದ ಹಲವಾರು ವೈಶಮ್ಯಗಳು ಈ ಕತೆಯಲ್ಲಿ ಸೂಚಿತವಾಗುತ್ತವೆ.

. ಐತಿಹ್ಯಗಳು :

ರೇಣುಕೆಯ ಕ್ಷೇತ್ರಗಳು ಭಾರತದ ಉದ್ದಗಲಕ್ಕೂ ಕಂಡುಬರುತ್ತವೆ. ಹಿಮಾಚಲ ಪ್ರದೇಶದಲ್ಲಿ ರೇಣುಕೆಯ ಹೆಸರಿನಲ್ಲಿ ಅಲ್ಲೊಂದು ಸರೋವರವಿದ್ದು, ಅಲ್ಲಿನ ಕತೆಗಳು ಹೇಳುವಂತೆ ಆಕೆ ಜಲಸ್ವರೂಪಿಣಿಯಾದುದು ತಿಳಿಯುತ್ತದೆ. ಅದೇ ಭಾಗದ ಶ್ರೀಮಾವೂರು ಎಂಬಲ್ಲಿ ಪರಶುರಾಮನ ಗುಡಿಯೊಂದಿದೆ. ಮಹಾರಾಷ್ಟ್ರ ಭಾಗದಲ್ಲೂ ಮಾವೂರು ಎನ್ನುವ ಕ್ಷೇತ್ರವಿದ್ದು ಅಲ್ಲಿ ಪ್ರಾಚೀನ ಪ್ರಖ್ಯಾತ ದೇವೀಪೀಠವಿದೆ. ರೇಣುಕೆಯು ಸತೀ ಹೋದಳೆನ್ನುವ ಸ್ಥಳ ಪುರಾಣವಿದೆ. ಅಲ್ಲಿ ಕರ್ನಾಟಕದಲ್ಲಿಯೂ “ಮಾವೂರು” ಎನ್ನುವ ಹೆಸರಿನ ಊರೊಂದು ಧಾರವಾಡ ಜಿಲ್ಲೆಯ ಸವಣೂರು ತಾಲ್ಲೂಕಿನಲ್ಲಿದ್ದು ಅಲ್ಲಿಯೂ ರೇಣುಕೆಯ ಸ್ಥಾನವೊಂದನ್ನು ಮಾಡಲಾಗಿದೆ. ಅದು ಇತ್ತೀಚಿನದಾದರೂ ಒಂದು ಸಂಪ್ರದಾಯದ ಎಳೆಗಳನ್ನು ಜೋಡಿಸುವಲ್ಲಿ ಮಹತ್ವದ್ದಾಗುತ್ತದೆ.[6] “ಮಾವೂರು” ಎನ್ನುವುದು ಮಾತಾ – ದೇವಿಯ ಸಂಪ್ರದಾಯದ ಮೂಲವನ್ನು ಹೇಳುತ್ತಿದ್ದು ರೇಣುಕೆಯ ಕತೆಯನ್ನು ಆ ಸಂಪ್ರದಾಯದೊಂದಿಗೆ ಬಂಧಿಸುವುದಾಗಿದೆ. ದಕ್ಷಿಣದ ಕೋಲಾರವೂ ಪ್ರಸಿದ್ಧವಾದ ಎಲ್ಲಮ್ಮನ ಕ್ಷೇತ್ರ. ಹಾಗೆಯೇ ಉಚ್ಚಂಗಿ, ಕೊಕಟನೂರು, ಬೂದ್ಯಾಳ, ಗಣಿ ಮುಂತಾದೆಡೆಗಳಲ್ಲಿ ಈ ಕ್ಷೇತ್ರಗಳಿವೆ. ಸವದತ್ತಿಯ ಕ್ಷೇತ್ರವಂತೂ ಬಹಳ ಪ್ರಖ್ಯಾತವಾದುದು.

ಇಷ್ಟು ಕ್ಷೇತ್ರಗಳಿರುವಾಗ ರೇಣುಕೆಯ ಕತೆ ವಾಸ್ತವವಾಗಿ ನಡೆದುದು ಎಲ್ಲಿ ಎಂಬುದು ಸಮಸ್ಯೆ. ರೇಣುಕೆಯ ತಂದೆ ಕಾಶ್ಮೀರದ ಅರಸು. ಅಲ್ಲದೆ ಪರಶುರಾಮನು ವಧಿಸಿದ ಕಾರ್ತಿವೀರ್ಯರ್ಜುನನ ಮಹಿಷ್ಪತಿನಗರ ಆಕಡೆಯದು. ಆದುದರಿಂದ ಈ ಕತೆ ನಡೆದದ್ದು ಉತ್ತರ ಭಾರತದಲ್ಲಿಯೇ ಎನ್ನುವ ವಿದ್ವಾಂಸರ ಅಭಿಪ್ರಾಯವಿದೆ. ರೇಣುಕೆಯ ಕತೆಗಳಲ್ಲಿ ಏಕನಾಥ ಜೋಗಿನಾಥರ ಪ್ರಸಂಗವಿದ್ದು ಅವರ ಸ್ಥಾನಗಳು ದಕ್ಷಿಣದ ನಾಡಿನಲ್ಲಿ ಎಂದು ಹೇಳಲಾಗುತ್ತದೆ. ಅವರ ಗದ್ದುಗೆಗಳು ಗೊಡಚಿಯ ಹತ್ತಿರ ಇನ್ನೂವರೆಗಾದರೂ ಇವೆ ಎಂದು ಹೇಳುತ್ತಾರೆ. ರೇಣುಕೆಯ ಕತೆ ಇಲ್ಲಿಯೇ ನಡೆದುದು ಎನ್ನುವುದನ್ನು  ಜನಪದ ಬಲವಾಗಿ ನಂಬಿದೆ. ಜಮದಗ್ನಿಯ ತಾಯಿ ಸತ್ಯವತಿ (ಸತ್ಯವ್ವ) ಯ ಸ್ಥಾನವನ್ನು ಗುಡ್ಡದ ಬಳಿಯಲ್ಲಿಯೇ ತೋರಿಸಲಾಗುತ್ತದೆ. ಅಲ್ಲದೆ ಗೊಡಚಿ, ಶಿರಸಂಗಿ, ಮುನವಳ್ಳಿ, ಸವದತ್ತಿ, ರಾಮದುರ್ಗ ಈ ಭಾಗದಲ್ಲಿ ಮುನಿಗಳ ದೊಡ್ಡ ಬಳಗವೇ ಇದ್ದುದಕ್ಕೆ ಕುರುಹುಗಳು ದೊರೆಯುತ್ತವಾದ್ದರಿಂದ ಕೆಲಮಟ್ಟಿಗೆ ಸಂಶಯ ತಳೆಯಬಹುದು. ಭರ್ಗವ ಪರಶುರಾಮನು ದಕ್ಷಿಣ ಕಡಲ ತಡೆಯವರೆಗೆ ಬಂದಿದ್ದನೆನ್ನುವ ಐತಿಹ್ಯಗಳಿವೆ.. ಪರಶುರಾಮನು ಕೊಂಕಣದಲ್ಲಿ ಬ್ರಾಹ್ಮಣರಿಗೆ ವಸತಿ ಕಲ್ಪಿಸಿ ಕೊಟ್ಟನೆಂಬುದಿದೆ.[7] ನಂಜನಗೂಡಿನಲ್ಲಿ, ತಾಯಿಯನ್ನು ಹತಗೊಳಿಸಿ ಪ್ರಾಯಶ್ಚಿತ್ತಕ್ಕಾಗಿ ಸಾಯಲು ಸಿದ್ಧರಾದಾಗ ಶಿವನ ಅನುಗ್ರಹವಾಗಿ, ಅಲ್ಲಿಯೇ ನೆಲೆಸಿದ ಕತೆಯಿದೆ. ನಾಥಪಂಥದ ಅವಧೂತರು ಹೇಳುವ ಹಾಗೆ ತ್ರೈಂಬಕೇಶ್ವರದಿಂದ ಪರಶುರಾಮನು ಮಂಗಳೂರಿನ ಕದ್ರಿಯವರೆಗೆ ಬಂದನಂತೆ. ಪುರಾಣದ ಆ ಮಾರ್ಗದಿಂದಲೇ ಈಗಲಾದರೂ ಅವರು ಪಯಣಿಸುವುದು.[8] ಇವಿಷ್ಟು ದೊರೆಯುವ ಆಧಾರಗಳು. ಆದರೆ ಇಲ್ಲೆಲ್ಲೂ ಕತೆ ಇಂಥಲ್ಲಿಯೇ ನಡೆದಿದೆ ಎಂಬುದಕ್ಕೆ ಸ್ಪಷ್ಟವಾದ ಆಧಾರಗಳಿಲ್ಲ.

. ಇಂದಿನ ವಾಸ್ತವದ ಸಂಗತಿಗಳು :

ಈ ಬಗೆಯ ಪುರಾಣದ ಕತೆಗಳು, ಅಲ್ಲಲ್ಲಿ ಪ್ರಾದೇಶಿಕವಾಗಿ ಹರಡಿಕೊಂಡಿರುವ ಐತಿಹ್ಯಗಳು ವಾಸ್ತವ ಸಂಗತಿಯ ಎಳೆಗಳನ್ನು ಹಿಡಿದುಕೊಂಡಿರುವ ಸಾಧ್ಯತೆಯಿರುವುದಾದರೂ, ಇಂದಿನ ಆಚರಣೆಗಳು, ಸಂಪ್ರದಾಯದ ಇಂದಿನ ಸ್ವರೂಪ ಹೆಚ್ಚು ವಾಸ್ತವವಾದುದನ್ನು ಹೇಳುವಂಥವು. ಮೇಲಿನ ಪುರಾಣ ಕತೆಯನ್ನನುಸರಿಸಿ ಮಾಡುವ ವಿಧಿ ಕ್ರಿಯೆಗಳಿವೆ. ಮಾರ್ಗಶೀರ್ಷ ಶುದ್ಧ ಹುಣ್ಣಿಮೆಯ ದಿನ ರೇಣುಕೆಯು ವಿಧವೆಯಾದಳೆಂದು “ರಂಡೆ ಹುಣ್ಣಿಮೆ” ಎಂದು ಕರೆಯುತ್ತಾರೆ. ಅಂದು ಜಮದಗ್ನಿಯ ಗುಡಿಗೆ ಪಾಲಿಕೆಯಲ್ಲಿ ದೇವಿಯನ್ನು ಒಯ್ದು ವಿಧವೆಯಾಗಿಸಲಾಗುತ್ತದೆ. ಜೋಗಿತಿಯರೆಲ್ಲ ಬಳೆವಡೆದುಕೊಳ್ಳುತ್ತಾರೆ. ಮುತ್ತೈದೆಯರು ಯಾರೂ ಆ ಸಮಯದಲ್ಲಿ ಅವರನ್ನು ನೋಡಕೂಡದು ಎಂಬ ನಿಯಮವಿದೆ. ಚೈತ್ರಶುದ್ಧ ಹುಣ್ಣಿಮೆಯಿಂದ ಆಕೆ ಮರಳಿ ಪತಿಯನ್ನು ಪಡೆದಳಾದ್ದರಿಂದ ಅದನ್ನು “ಮುತ್ತೈದೆ ಹುಣ್ಣಿಮೆ” ಎಂದು ಕರೆಯುತ್ತಾರೆ. ಅಂದು ಜೋಗಿತಿಯರು ಬಳೆತೊಟ್ಟುಕೊಳ್ಳುತ್ತಾರೆ. ಇವಳನ್ನುಳಿದು ಉಳಿದ ವಿಧಿಕ್ರಿಯೆಗಳೇ ಹೆಚ್ಚು ಮಹತ್ವದುವೆನಿಸುತ್ತದೆ – ಎಲ್ಲಮ್ಮನ ಕುರಿತಾಗಿ ತಿಳಿಯಲು.

ಎಲ್ಲಮ್ಮ ಮತ್ತು ಜಲಸಂಪ್ರದಾಯ :

ಸವದತ್ತಿಯ ಕ್ಷೇತ್ರದಲ್ಲಿ ಅರಿಷಿಣ ಹೊಂಡ, ಕುಂಕುಮ ಹೊಂಡ, ಎಣ್ಣೆ ಹೊಂಡಗಳಿವೆ. ಜೋಗುಳಬಾವಿಯಿದೆ. ಸವದತ್ತಿಯಲ್ಲಿರುವ ಇಂದಿನ ಮೂರ್ತಿಯು ಎಲ್ಲಮ್ಮನದೇ ಅಲ್ಲವೆ ಎಂಬ ಸಂಶಯಗಳಿವೆ. ಸವದತ್ತಿಯನ್ನು ಆಳಿದ ರಟ್ಟರು  ಜೈನಮತದವರಾದುದು , ಈಗಿರುವ ಎಲ್ಲಮ್ಮನ ಗುಡಿಯ ಶಿಲ್ಪದಲ್ಲಿ  ಜೈನ ತೀರ್ಥಂಕರರ ಮೂರ್ತಿಗಳ ಕೆತ್ತನೆಯಿರುವದು ಆ ದೇವಿಯು ಜೈನಳಾಗಿರಬೇಕು ಎಂದು ವಿದ್ವಾಂಸರು ಊಹಿಸಲು ಸಾಧ್ಯವಿದೆ. ಆದರೆ ಗುಡಿಯ ನಗಾರಖಾನೆಯಲ್ಲಿರುವ ಒಂದು ಲಿಪಿಯಿಂದ ವಿಜಯ ನಗರದ ಕೃಷ್ಣಮಹಾರಾಜನ ಆಳಿಕೆಯಲ್ಲಿ ಬಾಗಿ ಬೊಮ್ಮಪ್ಪನಾಯಕನೆಂಬುವನು ಕ್ರಿ. ಶ. ೧೪೩೬ ರಲ್ಲಿ ಆ ನಗಾರಖಾನೆಯನ್ನು ಕಟ್ಟಿಸಿದನೆಂಬ ಉಲ್ಲೇಖವಿದ್ದುದು, ಎಲ್ಲಮ್ಮನಿಗೆ “ಜತ್ತಕ ಮಹಾಮಾಯೆ” ಎಂದು ಕರೆದಿರುವದು ಕಂಡು ಬರುತ್ತದೆ.[9] “ಜತ್ತಕ” ಶಬ್ದದ ನಿಷ್ಪತ್ತಿ ಸರಿಯಾಗಿ ತಿಳಿಯದು. ” ಶಷ್ಟಿಕಾ” ಎನ್ನುವ ಹಣೆಬರಹ ಬರೆಯುವ ದೇವಿಯೊಬ್ಬಳು ಇರುವುದನ್ನು ಇಲ್ಲಿ ನೆನೆಯಬಹುದು. “ಶಷ್ಟಿಕಾ” ಶಬ್ದ “ಜತ್ತಕ” ವಾಗಿರುವ ಸಂಭವ ಕಾಣುತ್ತದೆ. “ಜಾತಕ” ಎನ್ನುವ ಇದೇ ಆಶಯದ ಅರ್ಥ ಹೇಳುವ ಶಬ್ದವೊಂದು ಇರುವುದನ್ನು ಇಲ್ಲಿ ನೆನೆಯಬಹುದು. ಶಟಕವ್ವನ ಸ್ಥಾನಗಳು ಉತ್ತರ ಕರ್ನಾಟಕದಲ್ಲಿ ಬಲವಾರು ಕಡೆಗಿವೆ.

ಈ ಗೊಂದಲವೇನೋ ಇದ್ದರೂ, ಏನೇ ಹೊಸ ಮಾರ್ಪಾಟುಗಳಾಗಿರುವ ಸಾಧ್ಯತೆ ಯಿದ್ದರೂ ಅಲ್ಲಿನ ಪ್ರದೇಶದ ಬಗೆ, ಸಂಪ್ರದಾಯಗಳು ಪ್ರಾಚೀನದ ನಡೆವಳಿಕೆಗಳನ್ನೇ ಹೇಳುತ್ತವೆ. ಉತ್ತರ ಭಾರತದ ತುದಿಯ ಕಾಶ್ಮೀರದಲ್ಲಿಯೂ ರೇಣುಕೆಯು ಜಲ ಸ್ವರೂಪಿಣಿಯಾಗಿಯೇ ಇದ್ದಾಳೆ. ಜೋಗಿತಿಯರು ಹೊರುವ ಎಲ್ಲಮ್ಮನ ಕೊಡ ನೀರಿನಿಂದ ಹೊಂಡಗಳಲ್ಲಿ ಸ್ನಾನಮಾಡಿಯೇ ಹೋಗಬೇಕೆ ಎನ್ನುವ ನಿಯಮವಿದೆ. ಇದಲ್ಲದೆ “ಎಲ್ಲಮ್ಮ” ಎನ್ನುವ ಹೆಸರು ಈ ಸಂಪ್ರದಾಯವನ್ನೇ ಹೇಳುವ ಹಾಗಿದೆ. “ಎಲ್ಲ” ಶಬ್ದದ ಮೂಲದಲ್ಲಿರಬಹುದಾದ “ಅಲ್ಲ” ಶಬ್ದವು “ಆಲೆಮನೆ”, “ಅಲ್ಲ (ಕಾರಗೆನಸು), ಆಲ (ಹಾಲುಳ್ಳ ವೃಷ), ಹಾಲು, ಆಲುಗಡ್ಡೆ (ಕೆಸರಿನಲ್ಲಿ ಬೆಳೆಯುವುದು) ಮುಂತಾಗಿ ಹಲವಾರು ಪ್ರಯೋಗಗಳಲ್ಲಿ ಕನ್ನಡದಲ್ಲಿಯೇ ದೊರೆಯುತ್ತಿದ್ದು, ಆರ್ಯೇತರ ಭಾಷಾ ವರ್ಗದ್ದಾಗಿದೆ. ಅದು ನೀರು , ರಸ, ಹಾಲು ಮುಂತಾದ ಅರ್ಥಗಳನ್ನು ಕೊಡುವಂಥ ಶಬ್ದವಾಗಿದೆ. ಕ್ರಿ. ಶ. ಆರು, ಏಳನೆಯ ಶತಮಾನದಲ್ಲಿಯೇ ಈ ಶಬ್ದದ ಬಳಕೆ ಕಣಾಟ, ಮಹಾರಾಷ್ಟ್ರ, ಲಾಟದೇಶದಲ್ಲಿ ಸರ್ವೇಸಾಮಾನ್ಯವಾಗಿದ್ದುದು ಕಂಡುಬರುತ್ತದೆ. ಕ್ರಿ.ಶ. ೬೮೫ ರ ಬಳ್ಳಿಗಾವೆಯ ಶಾಸನವೊಂದರಲ್ಲಿ “ಅಳ್ಳಮಗಾವುಂಡ” ನೆಂಬ ಹೆಸರು ದೊರೆತರೆ, ಕ್ರಿ. ಶ. ಜಿಜೂರಿಯ ಶಾಸನವೊಂದರಲ್ಲಿ “ಅಲ್ಲಶರ್ಮ” ನೆಂಬ ಬ್ರಾಹ್ಮಣನೊಬ್ಬನಿಗೆ ಗ್ರಾಮವೊಂದನ್ನು ಮಾನಮಾಡಿದ ಉಲ್ಲೇಖವಿದೆ. ಲಾಟ ದೇಶದಲ್ಲಿ ದೊರೆತಿರುವ ಏಳನೆಯ ಶತಮಾನದ ಚಾಲುಕ್ಯರ ಒಂದು ಶಾಸನ ಹೇಳುವಂತೆ ಗ್ರಾಮವೊಂದರ ಹೆಸರು “ಅಲ್ಲೂರಕ”. ೧೪ ನೆಯ ಶತಮಾನದವರೆಗೂ ಈ ಬಗೆಯ ಪದದ ಬಳಕೆಯು ಈ ಮೂರು ಕಡೆಗಳಲ್ಲಿ ಒಂದೇ ಬಗೆಯಾಗಿದ್ದುದು ಕಂಡುಬರುತ್ತದೆ. ನಂತರ ಕನ್ನಡದಲ್ಲಿಯೇ ವಿಶೇಷವಾಗಿ ಉಳಿದಿದ್ದು. ಗುಜರಾಥದಿಂದ ಬಂದು ಕನ್ನಡನಾಡಿನಲ್ಲಿ ನೆಲೆಸಿರುವ ಪಟಗಾರರು ಕುಲದೈವತವಾಗಿ ಹೊಂದಿರುವುದು “ಎಲ್ಲೂ ಆಯಿ” ಯನ್ನು ರೇಣುಕೆಯೆಂಬ ಬದಲಾವಣೆ ಕಂಡುಬಂದಿಲ್ಲ.[10]

ಹೀಗೆ ಭಾರತದ ಬಹುಭಾಗವನ್ನು ವ್ಯಾಪಿಸಿಕೊಂಡಿದ್ದ ಒಂದು ಜನಾಂಗ ಜಲ ಸಂಪ್ರದಾಯವನ್ನು ಹೊಂದಿರುವುದು ಇಂದಿನ ಆಚರಣೆಗಳಿಂದಲೂ ಹೆಚ್ಚು ಸ್ಪಷ್ಟವಾಗುತ್ತದೆ. ಕನ್ನಡ ನಾಡಿನ ಕುರುಬರು “ಹಾಲುಮತ” ಎನ್ನುವ ಹೆಸರಿನಲ್ಲಿ ಆ ಸಂಪ್ರದಾಯವನ್ನು ಯಥಾವತ್ತಾಗಿ ಉಳಿಸಿಕೊಂಡಿದ್ದಾರೆ. ಇಂದಿಗೂ ಎಲ್ಲ ದೇವರುಗಳ ದೇವಾಲಯದ ಬದಿಯಲ್ಲಿ ಜಲಾಶಯಗಳು, ತೀರ್ಥಗಳು ಕಂಡುಬರುತ್ತವೆ. ಪತೃ ಪೂಜೆಯಾಗಿ ಜಲದೇವರನ್ನು ಪೂಜಿಸುವ ಸಂಪ್ರದಾಯ ಇನ್ನೂ ಉಳಿದುಕೊಂಡಿದೆ. ಜಕ್ಕಣಿ ಭಾವಿಗಳು ಇದನ್ನೇ ಹೇಳುವಂಥವು. ಇಂದಿಗೂ ಎಲ್ಲಮ್ಮನಿಗೆ ನಡೆದುಕೊಳ್ಳುವ ಮುಕ್ಕಾಲು ಪಾಲು ಜನ, ಈ ಸಂಸ್ಕೃತಿಯನ್ನು ಉಳಿಸಿಕೊಂಡ ಹಟ್ಟಿಕಾರರೇ. ಅಲ್ಲದೆ ಜೋಗಿತಿಯರು ಕಟ್ಟಿಕೊಳ್ಳುವ ಹಾಲುಮಣಿಗಳು ಸಾಂಕೇತಿಕವಾಗಿ ಈ ಸಂಪ್ರದಾಯವನ್ನೇ ಹೇಳುತ್ತವೆ. “ನಿರಾಗಿರುವ ಜಗಜೊಳಿತೆಮ್ಮ”, “ನದಿಗೊಮ್ಮೆ ಪಡ್ಡಲಗಿ ತುಂಬಿರಿ” ಮುಂತಾದ ಜೋಗಿತಿಯರ ಹಾಡುಗಳಲ್ಲಿನ ಉಲ್ಲೇಖಗಳನ್ನಿಲ್ಲಿ ನೋಡಬಹುದು.

ಎಲ್ಲಮ್ಮ ಮತ್ತು ಸ್ತ್ರೀ ಪ್ರಧಾನ ಸಮಾಜ ಪದ್ಧತಿ :

ಹೀಗೆ ಎಲ್ಲಮ್ಮ ಹಟ್ಟಿಕಾರರ ದೇವಿಯಾಗುವುದರೊಂದಿಗೆ ಅಲ್ಲಿ ಉದಯಿಸಿದ ಮಾತೃಪ್ರಧಾನ ಕುಟುಂಬ ಪದ್ಧತಿಯನ್ನು ಪ್ರತಿನಿಧಿಸುವವಳು ಎಂಬುದನ್ನು ಈ ಹಿಂದೆಯೇ ಹೇಳಲಾಗಿದೆ. ಇಂದಿಗೂ ಆರ್ಯೇತರ ವರ್ಗವಾದ ಪಂಚಮರಲ್ಲಿ ಹೆಣ್ಣು ಮಕ್ಕಳು ಮದುವೆಯಾಗದೆ ಮುತ್ತುಕಟ್ಟಿಸಿಕೊಂಡು ಮಾತಂಗಿಯರಾಗುವ ಸಂಪ್ರದಾಯ ಉಳಿದುಕೊಂಡಿದೆ. ಜನ ಮಾತಂಗಿಗೂ ಎಲ್ಲಮ್ಮನಿಗೂ ಭೇದವೆಣಿಸುವುದಿಲ್ಲ. ಚರ್ಮದಹನಕ್ಕೆ ಹಾಕಿದ ದೋಣಿಯ ಮುಂದೆ ಈ ಸಂಪ್ರದಾಯಕ್ಕೊಳಗಾಗುವಾಗ, ಉಳಿದ ಪೂಜೆಯ ಸಮಯಗಳಲ್ಲಿ ಹಾಡುವ ಹಾಡುಗಳೆಲ್ಲ ಎಲ್ಲಮ್ಮನ ಹಾಡುಗಳೇ. ಇಂದಿಗೂ ಸವದತ್ತಿಯ ಎಲ್ಲಮ್ಮನ ಗುಡ್ಡದಲ್ಲಿ ಮಾತಂಗಿಯ ಗುಡಿಯು ಮಹತ್ವದ ಸ್ಥಾನವನ್ನು ಹೊಂದಿದೆ. ಭಕ್ತರು ಮೊದಲು ಮಾತಂಗಿಗೆ ದರುಶನವಿತ್ತೇ ಎಲ್ಲಮ್ಮನಿಗೆ ಹೋಗುತ್ತಾರೆ. ಅಲ್ಲದೇ ಎಲ್ಲಮ್ಮನ ಗುಡಿಯೊಳಗೇ ಉಟಚಮ್ಮನೆಂಬ ಕೆಳವರ್ಗದ ದೇವತೆಯನ್ನು ಇಟ್ಟುಕೊಂಡಿರುವುದನ್ನು ನೋಡಬಹುದು. ಹೀಗೆ ಎಲ್ಲಮ್ಮನ ಮೂಲಗಳು ಹೆಚ್ಚು ಸ್ಪಷ್ಟವಾಗಿ ಇಂದು ಗೋಚರಿಸುತ್ತವೆ. ಮೂಲದಲ್ಲಿ ಚಾತುವರ್ಣ ಪದ್ಧತಿಯಿಂದ ಹೊರಗಿನವಳಾದ ಈ ಪಂಚಮರ ದೇವಿಯನ್ನು ಮೇಲ್ವರ್ದದವರು ಎತ್ತಿಕೊಂಡು ರೇಣುಕೆಯೆಂಬ ಪತಿಪರಾಯಣಿಯಾದ ಸ್ತ್ರೀಯಾಗಿ ಆಕೆಯನ್ನು ಪರಿವರ್ತಿಸಿದ್ದಾರೆ. ಗುಡ್ಡದ ಎಲ್ಲಮ್ಮನಿಗೆ ಇಂದು ಕೇವಲ ಶಾಖಾಹಾರ ನೈವೇದ್ಯವಷ್ಟೇ ನಿಯಮವಾಗಿದ್ದು. ಇದು ನಂತರ ನಾಗರಿಕ ಪ್ರಭಾವದಿಂದ ಉಂಟಾಗಿರಬೇಕು. ಕುರಿ, ಕೋಳಿ ಬಲಿಕೊಡುವ ಸಂಪ್ರದಾಯವು ಎಲ್ಲಮ್ಮನಿಗಿರುವದು ಕೆಲವು ಕಡೆಗಾದರೂ ಕಂಡು ಬಂದರೆ ಆಶ್ಚರ್ಯ ವ್ಯಕ್ತಪಡಿಸಬೇಕಿಲ್ಲ. ಸುರಪುರ ತಾಲೂಕಿನ ಹೊಂದೂರಿನಲ್ಲಿ ಇಂಥ ಎಲ್ಲಮ್ಮನಿದ್ದುದನ್ನು ನನ್ನ ಪರಿಚಯಸ್ತರು ಹೇಳಿದ್ದಾರೆ.

ಉತ್ತರ ಕರ್ನಾಟಕದ ದ್ಯಾಮವ್ವ ದುರಗವ್ವಗಳ ಕುರಿತು ಕತೆಯೊಂದು ಪ್ರಚಾರದಲ್ಲಿದೆ. ಶೂದ್ರನೊಬ್ಬ ದೇವಿಯ ಮೇಲೆ ಮನಸ್ಸು ಮಾಡುವುದು, ಆಕೆಗೆ ತನ್ನ ಕುಲವನ್ನು ತಿಳಿಸದೆ ಮದುವೆಯಾಗುವುದು, ಮಗನಿಂದ ಇದು ಪತ್ತೆಯಾಗುವುದು, ಶಾನುಭೋಗರ ಇಲ್ಲವೆ ಗೌಡರ ಮನೆತನದ ಹೆಣ್ಣು ಮಗಳಾದ ಇವಳು ಕತ್ತಿ ಹಿಡಿದು ಅವನನ್ನು ಬೆನ್ನಟ್ಟುವುದು, ಅವನು ಉಪಾಯಗಾಣದೆ ಕೋಣದ ಹೊಟ್ಟೆಯಲ್ಲೋ ಕುರಿಯ ಹೊಟ್ಟೆಯಲ್ಲೋ ಪ್ರವೇಶ ಮಾಡುವುದು, ಆಕೆ ಅದನ್ನು ಬಲಿತೆಗೆದುಕೊಳ್ಳುವುದು. ಹಾಗೆ ನೋಡಿದರೆ ಮೂಲತಃ ಪಂಚಮರದೇವಿಯಾದ ಇವಳು ಅದೇ ವರ್ಗದಿಂದ ಬಂದವನ ಮೇಲೆ ಸಿಟ್ಟುಗೊಳ್ಳಬಾರದು. ಆದರೆ ಆಕೆಯನ್ನು ಮೇಲ್ವರ್ಗದವರು ಎತ್ತಿಕೊಂಡಿದ್ದರಿಂದ ಈ ಬಗೆಯ ಕತೆಗಳು ಹುಟ್ಟಿರಲು ಸಾಕು. ದಕ್ಷಿಣದ ಕಡೆಯಲ್ಲಿಯೂ ಇಂಥವು ಕರಿಯವ್ವ ಮುಂತಾದ ದೇವತೆಗಳ ಸುತ್ತ ಕಂಡು ಬಂದಿವೆ.[11] ದೇವಿಗೆ ಬಲಿಕೊಡುವ ಸಂಪ್ರದಾಯವೊಂದು ಮೊದಲಿನಿಂದಲು ಇದ್ದು, ಅದನ್ನು ಬಳಸಿಕೊಂಡು ಈ ಬಗೆಯ ಕಲ್ಪನೆಯನ್ನು ಹೊಸೆಯಲಾಗಿದೆ. ಎಲ್ಲಮ್ಮ ದೇವಿಯ ಕುರಿತಾಗಿಯೂ ಇಂಥಕತೆ ಪ್ರಚಾರದಲ್ಲಿದೆ, ಹೀಗೆ ಎಲ್ಲಮ್ಮ ಬಲಿ ತೆಗೆದುಕೊಳ್ಳುವ ದೇವತೆಗಳ ಬಳಗದವಳೇ ಆಗಿದ್ದು ಅವರಂಥದೇ ಅವಸ್ಥೆಯನ್ನು ಹೊಂದಿದವಳು ಎನ್ನಬಹುದು. ಋಗ್ವೇದದಲ್ಲಿ ಬರುವ “ಅದಿತಿರ್ದೌ” ಎನ್ನುವ ಮಾತು “ಉಧೋ ಉಧೋ” ಎನ್ನುವ ಉಗ್ಘಡಣಿಯಾಗಿ ಇಂದಿಗೂ ಕೇಳಿಬರುತ್ತಿರುವುದು ಈ ದೇವತೆಯ ಮೂಲಕ್ಕೆ ಮತ್ತೊಂದು ಸಾಕ್ಷಿ;[12] ಹಾಗೆಯೇ ಎಲ್ಲಮ್ಮನ ಹೆಸರು “ಎಲ್ಲರ ಅಮ್ಮ” ಎಂಬುವ ಅರ್ಥವನ್ನು ಒಳಗೊಂಡ ಹಾಗಿದೆ. ಎಲ್ಲಮ್ಮನ ಭಕ್ತರು ಜೋಗಿತಿಯರೆಂದು ಕರೆಸಿಕೊಳ್ಳುವ ಸಂಪ್ರದಾಯ ನೋಡಿದರೆ, ಅವರು ಅನುಕರಿಸುವ ದೇವಿ “ಯೋಗಿಣಿ” ಯಾಗಿರುವವಳು ಎಂಬುದು ಸ್ಪಷ್ಟವಾಗುತ್ತದೆ. ಹೆಚ್ಚಾಗಿ ಪುರುಷರೇ ಯೋಗಿಗಳಾಗಿರುವ ಕಥೆಗಳನ್ನು ಹೇಳುವ ಇತಿಹಾಸದ ಮೊದಲ ಪುಟದಲ್ಲಿ ಹೆಂಗಳೆಯರೂ ಯೋಗಿಣಿಯರಾಗಿದ್ದು, ಪುರುಷರು ಸೇವಕರಾಗಿ ನಡೆದುಕೊಂಡಿರುವ ತಳ್ಳಲಾರದ ಸಾಧ್ಯತೆಯನ್ನು ನೋಡಬಹುದೆಂದು ಕಾಣುತ್ತದೆ. ಹೀಗೆ “ಎಲ್ಲಮ್ಮ” ಎಂಬುದು “ವಿಶ್ವಜನನಿ” ಯ ಕಲ್ಪನೆಯಾಗಿದ್ದು ಆಧ್ಯಾತ್ಮದ ಎತ್ತರದ ಮಟ್ಟವನ್ನು ಹೇಳುವ ಸಾಧ್ಯತೆಯಿದೆ. ಇದನ್ನೆಲ್ಲ ನೋಡುವಾಗ ಎಲ್ಲಮ್ಮ ರೇಣುಕೆಗಿಂತಲೂ ಹಳಬಳು ಎನ್ನುವುದು ಸ್ಪಷ್ಟವಾಗುತ್ತದೆ.

ಜೋಗತಿ ಸಂಪ್ರದಾಯ :

ಧರ್ಮದ ಮೊದಲ ಹಂತದಲ್ಲಿ ಕುಲದೈವತ (Totem) ವೆಂದು ಕಾಣುವ ದೇವತೆಯಂತೆ ತಾವೂ ಮಾರ್ಪಾಡಾಗುವ, ಆ ಬಗೆಯಲ್ಲಿ ಅದ್ವೈತ ಸಾಧಿಸಿಕೊಂಡು, ತಮ್ಮ ಬೇಕು ಬೇಡಗಳ ಪರಿಹಾರದಲ್ಲಿ ದೇವತೆಯ ಅನುಗ್ರಹವನ್ನು ಪಡೆಯುವುದು ಸರ್ವೆ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವಂಥದು. ಪ್ರಾಣಿಯೊಂದನ್ನು ದೈವತ, ಕುಲದ ಮೂಲವೆಂದು ಗ್ರಹಿಸಿದಾಗ ಆ ಪ್ರಾಣಿಯ ವೇಷತೊಡುವದು, ಹಾಗೆಯೇ ಬೇರೆ ಬೇರೆ  ದೇವತೆಗಳಂತೆ ತಾವೂ ವರ್ತಿಸುವುದು ಮನುಷ್ಯನ ಒಂದು ಮಟ್ಟದ ಬೆಳವಣಿಗೆ. ಮೈಲಾರದ ಗೊರವರು ಮೈಲಾರಲಿಂಗಯ್ಯನ ವೇಷಧರಿಸಿದರೆ, ಎಲ್ಲಮ್ಮನ ಭಕ್ತರು ಎಲ್ಲಮ್ಮರಾಗುತ್ತಾರೆ. ಗಂಡಸು, ಹೆಂಗಸು ಎಂಬ ತಾರತಮ್ಯವಿಲ್ಲ ಇಲ್ಲಿ. ಮೈಲಾರನ ಗೊರವಯ್ಯಗಳಲ್ಲಿ ಹೆಣ್ಣು ಮಕ್ಕಳು ಇರುವ ಹಾಗೆ ಎಲ್ಲಮ್ಮನ ಜೋಗಿತಿಯರಲ್ಲಿ ಗಂಡಸರು ಇದ್ದಾರೆ. ಜೋಗಿ ಶಬ್ದ “ಯೋಗಿ” ಶಬ್ದದ ತದ್ಭವವಾದದ್ದು ಸಿದ್ಧರ ಸಂಪ್ರದಾಯವನ್ನೆ ಹೇಳುವಂಥದು. ಯೋಗಿಣಿಯಾದ ಎಲ್ಲಮ್ಮನ ಅವತಾರ ಇವರು. ಹೀಗೆ ಜೋಗಿಯಾಗುವವರು ನಿಯಮ ನಿಯಮ ನಿಬಂಧನೆಗಳಿಂದ ಬದುಕನ್ನು ಸಾಗಿಸಬೇಕಾಗುತ್ತದೆ. ಭಿಕ್ಷೆ ಬೇಡಿ ಜೀವನ ಸಾಗಿಸಬೇಕು. ಎಲ್ಲೂ ಊಟಸಿಗದಿದ್ದರೂ ತಾನು ಹಸಿದಿದ್ದೇನೆ ಎಂದು ಯಾರ ಮುಂದು ಹೇಳಕೂಡದು, ಹಸಿದವರನ್ನು ಕಂಡರೆ ತನ್ನ ತುತ್ತಿನಲ್ಲಿ ಅವರಿಗೂ ಅಷ್ಟು ಕೊಡಬೇಕು. ಬಾಯಾರಿದವರಿಗೆ ನೀರೆರೆಯಬೇಕು. ಯಾರಾದರೂ ಗಂಡಹೆಂಡಿರು ಜೊತೆಯಲ್ಲಿ ಮಲಗಿರುವುದನ್ನು ಕಂಡರೆ ಅದನ್ನು ಬೇರೆಯವರಿಗೆ ಹೇಳಕೂಡದು. ಕಟ್ಟಿದ್ದ ಕರು ಕಿತ್ತುಕೊಂಡು ಹಸುವಿನ ಮೊಲೆಯುಣ್ಣುತ್ತಿದ್ದರೆ, ಅದನ್ನೂ ಕೂಡ ಯಾರ ಮುಂದೆ ಹೇಳಬಾರದು. ಸತ್ತ, ಕೆಟ್ಟವರ ಸುದ್ದಿ ತಿಳಿದರೆ ಸ್ನಾನಮಾಡಿ ದೇವಿಯನ್ನು ಪೂಜಿಸಿ ಊಟ ಮಾಡಬೇಕು. ಇಷ್ಟೆಲ್ಲ ನಿಯಮಗಳನ್ನು ಹೇಳಿ ವಚನತೆಗೆದುಕೊಂಡು ಯೋಗದೀಕ್ಷೆಯನ್ನು ಕೊಡಲಾಗುತ್ತದೆ.[13] ಹೀಗೆ ಶುದ್ಧ ಜೀವನ ನಡೆಸುವ, ಸಂಸಾರ ತ್ಯಾಜ್ಯವೆಂದು ಹೇಳುವ ಮುನಿಸಂಪ್ರದಾಯ ಜೋಗಿತಿಯರ ಹಿನ್ನೆಲೆಗಿದೆ. ಎಲ್ಲಮ್ಮ ಮೂಲದಲ್ಲಿ ಈ ಬಗೆಯ ಸಿದ್ಧಲಾಗಿರುವುದು ಇದರಿಂದ ಹೆಚ್ಚು ಸ್ಪಷ್ಟವಾಗುತ್ತದೆ.

ವೃಕ್ಷಸಂಬಂಧ :

ಮರಗಳ ಮರೆಯಲ್ಲಿ ವಾಸಿಸಿದ ಜನತೆಯಲ್ಲಿ ಮರಗಳೊಂದಿಗೆ ಹೊಂದಿದ ಭಾವಪೂರ್ಣ ಸಂಬಂಧವೂ ಇನ್ನೂವರೆಗೂ ಉಳಿದುಕೊಂಡೇ ಬಂದಿದೆ.  ಹಲವಾರು ದೈವತಗಳಂತೆ ಎಲ್ಲಮ್ಮನ ವಿಷಯದಲ್ಲಿಯೂ ಇದು ಕಂಡುಬರುತ್ತದೆ. ದ್ಯಾಮವ್ವ  ದುರಗವ್ವಗಳಿಗೆ ಬೇವಿನ ಟೊಂಗೆಗಳನ್ನು ಒಯ್ಯುವಂತೆ ಎಲ್ಲಮ್ಮನಿಗೂ ಒಯ್ಯಲಾಗುತ್ತದೆ. ಬೇವು ಉಡುವ ಸಂಪ್ರದಾಯವೇ ಇತರ ಕಾಡು ದೇವರುಗಳ ವಿಷಯದಲ್ಲಿಯಂತೆ ಎಲ್ಲಮ್ಮನ ಸುತ್ತ ಇನ್ನೂ ಉಳಿದುಕೊಂಡು ಬಂದಿದೆ. ಬೆತ್ತಲೆಯಾಗಿ ಬೇವಿನ ಎಲೆಗಳಿಂದ “ಉಟಿಗಿ” ಉಡುವ ಸಂಪ್ರದಾಯ ವೃಕ್ಷದೇವತೆಯ ಮೂಲವನ್ನಲ್ಲದೆ ಬೇರೆ ಹೇಳಲಾರದು. ಹೀಗೆ ಎಲ್ಲಮ್ಮನ ಒಂದು ಸ್ವರೂಪ ಮರದಮ್ಮನೂ ಅಹುದು. ಈಗಿರುವ ಎಲ್ಲಮ್ಮನ ಗುಡಿಯಲ್ಲಿ ಮೂರ್ತಿಯ ಹಿಂದುಗಡೆ ಕಾರಿಯ ಕಂಟಿ ಇದೆ ಎಂದು ಹೇಳುತ್ತಾರೆ.

ಭಂಡಾರದ ಬಳಕೆ :

ಭಂಡಾರದ ಬಳಕೆ ಎಲ್ಲಮ್ಮನ ವಿಷಯವಾಗಿ ವಿಶೇಷವಾಗಿದೆ. ಮದುವೆಯಂಥ ವಿಧಿ ಕ್ರಿಯೆಗಳಲ್ಲಿ ಇನ್ನೂ ಉಳಿದುಕೊಂಡಿರುವ ಹಳದಿ ವರ್ಣ ಮುತ್ತೈದೆತನದ ಸಂಕೇತವಾದ ಇದು ವೃಕ್ಷಜೀವನವನ್ನು ಮಾನವ ಜೀವನಕ್ಕೆ ಆರೋಪಿಸಿಕೊಂಡುದೇ ಆಗಿರಲು ಸಾಕು. ವೃಕ್ಷವು ಹುಟ್ಟಿದಾಗ ಹಸಿರಾಗಿದ್ದು, ಅಷ್ಟಿಷ್ಟು ಮೈತುಂಬಿಕೊಂಡಾಗ ಹಳದಿಗೆ ತಿರುಗಿಕೊಳ್ಳುತ್ತದೆ. ಹಸಿರು ವರ್ಣವನ್ನೇ ಬಳಸುವುದಿದೆ. ಬಸರಾದ ಹೆಂಗಳೆಯರಿಗೆ ಹಸಿರು ಸೀರೆ, ಬಳೇ ತೊಡಿಸುವುದನ್ನು ಎಲ್ಲರೂ ಬಲ್ಲರು. ಹಸಿರಿನ ಪರ್ಯಾಯದ ಬಳಕೆಯೇ ಭಂಡಾರವೆನ್ನಬಹುದು. ಹೀಗೆ ಬಂಡಾರವು ಯೌವ್ವನದ, ಪ್ರಜನನ ಶಕ್ತಿಯ ದ್ಯೋತಕವಾಗಿದೆ. ಮನುಷ್ಯನ ಬದುಕಿನ ಅತ್ಯಂತಿಕ ಬಯಕೆಯೇ ಇದು ಎನ್ನಬಹುದು. ಭಂಡಾರದ ಬಳಕೆ ಎಲ್ಲಮ್ಮನಿಗೆ ವಿಶೇಷವಾದುದಲ್ಲ. ಮೈಲಾರದ ಗೊರವರೂ ಬಳಸುತ್ತಾರೆ. ಹಾಗೆಯೇ ಜಗತ್ತನಲ್ಲೆಲ್ಲ ಇದರ ಬಳಕೆಯು ಕಂಡು ಬಂದಿದೆ.

ಗುಡ್ಡದ ದೇವಿ :

ಎಲ್ಲಮ್ಮನ ಸ್ಥಾನ ಗುಡ್ಡದ ಪ್ರದೇಶವೇ. ಗುಡ್ಡದ ಪ್ರದೇಶದಲ್ಲಿ ಮೊದಲು, ಜೀವನವನ್ನು ಕಂಡುಕೊಂಡ ಇಲ್ಲಿನ ಮೂಲಜನಾಂಗದ ಉಳಿಕೆಯೇ ಇದು. ಮೈಲಾರದ ದೈವತವೂ ಗುಡ್ಡದ ದೈವತವೇ. ಪರ್ವತಗಳೊಂದಿಗೆ ಹೊಂದಿದ ಭಾವ ಸಂಬಂಧ ಹೀಗೆ ಇನ್ನೂ ಶಕ್ತಿಯುತವಾಗಿಯೇ ಉಳಿದುಕೊಂಡು ಬಂದಿದೆ ಎನ್ನಬಹುದು. ಹೀಗೆ ಎಲ್ಲಮ್ಮ ಪಾರ್ವತಿಯೂ ಹೌದು.

ಎಲ್ಲಮ್ಮನ ಝಗ :

ಎಲ್ಲಮ್ಮನ ಕುರಿತಾಗಿ ಇರುವ ಝಗದ ಸಂಪ್ರದಾಯವೂ ಈಕೆಯ ಪ್ರಾಚೀನತೆಗೆ ಆಧಾರವೊದಗಿಸುವಂತದು. ಇಂದಿಗೂ ಎಲ್ಲವ್ವನನ್ನೂ ಹೊತ್ತ ಬುಟ್ಟಿಗೆ ಝಗದ ಹಾಗೆಯೇ ಬಟ್ಟೆಯ ವ್ಯವಸ್ಥೆ ಇದ್ದು “ಝಗ” ವೆಂದೇ ಕರೆಯುತ್ತಾರೆ. ಅಲ್ಲದೆ ಗುಡಿಯಲ್ಲಿ ದೇವಿಯನ್ನು ಆಲಂಕರಿಸುವ ಬಗೆಯಲ್ಲಿಯೂ ಸೀರೆಯನ್ನು ಬಳಸಿದರೂ ಕೂಡ ಝಗದ ಹಾಗೆಯೇ ಮಾಡುತ್ತಿದ್ದ ಅರ್ಧ ಚಂದ್ರಾಕೃತಿಯನ್ನು ಹೊಲುವ ಇದು ಹರಪ್ಪಾ ಮೊಹಂಜೋದಾರೊಗಳಲ್ಲಿ ದೊರೆತಿರುವ ಮಾತೃದೇವತೆಗಳಿಗೆಲ್ಲ ಇದೇ ಬಗೆಯ ಉಡುಪು ಇರುವುದನ್ನು ನೆನಪು ಮಾಡಿಕೊಡುತ್ತದೆ. ಹೀಗೆ ರೇಣುಕೆಯ ಕತೆ ಒಬ್ಬ ಸಾಧ್ವಿಯ ಸುತ್ತ ನಡೆದಿರುವ ಘಟನೆಯಿರಬಹುದು. ಆ ಘಟನೆಯನ್ನು ಬಳಸಿಕೊಂಡು ಪುರುಷಪ್ರಧಾನ ವ್ಯವಸ್ಥೆಯು ಮಾಡಿಕೊಂಡಿರುವ ಮಾರ್ಪಾಡುಗಳೆಲ್ಲ ವಾಸ್ತವದಲ್ಲಿ ಎಲ್ಲಮ್ಮನ ಸಂಪ್ರದಾಯದ ಹಿಂದೆ ಮರೆಮಾಚಿವೆ. ರೇಣುಕೆಯ ಪಾತ್ರ ಜೀವವಿಲ್ಲದ ಚಿತ್ರದಲ್ಲಿನ ಗೊಂಬೆಯಂತಿದೆ ಎಂದರೆ ತಪ್ಪಿಲ್ಲವೆಂದು ಕಾಣುತ್ತದೆ.

ಜಾನಪದರ ದೇವಿ ಎಲ್ಲಮ್ಮ :

ಎಲ್ಲಮ್ಮ ಸಿದ್ಧಳಾಗಿ, ಯೋಗಿನಿಯಾಗಿ ಬೆಳೆದ ದೇವತೆಯಾದರೂ ಹಳ್ಳಿಗರ ಮಧ್ಯದಲ್ಲಿ ಇಂದು ಆಕೆ ಜಾನಪದ ದೇವಿಯೇ. ಈಗ ಆಕೆಯ ಕುರಿತಾದ ಶ್ರದ್ಧೆ ಉಳಿದಿರುವುದೆಲ್ಲ ಜನಪದರದಲ್ಲಿಯೇ. ಅಂತೆಯೇ ಸವದತ್ತಿಯಲ್ಲಿರುವ ಗುಡ್ಡದ ದೇವಿ ಇಂದು ಸಂಪೂರ್ಣವಾಗಿಯೂ ಜನಪದ ದೇವಿಯೇ ಎಂದು ಕರೆಯಬೇಕಾದವಳು. ಇಂದಿಗೂ ಜೀವಾರೋಪ (Fetishism)  ಸ್ಥಳದ ಉಳಿಕೆಗಳು ಅಷ್ಟಿಷ್ಟು ಕಂಡುಬರುವಂತೆ, ಮಾನವ ಜೀವನದ ಆರೋಪಣೆಯಾಗಿಯೂ ಕೆಳಸ್ತರದ ದೇವತೆಯಾಗಿ ಕಾಣುವುದನ್ನು ಗುರುತಿಸಬಹುದು. ದೇವಿಯ ಹೆಸರಿನಲ್ಲಿ ಜೋಗಿತಿಯರು ಕೌಡಿಗಳನ್ನು ಧರಿಸುತ್ತಿದ್ದು ಅವು ದೃಷ್ಟಿಪರಿಹಾರಕ ಆಶಯವನ್ನೇ ಒಳಗೊಂಡ ಹಾಗಿದೆ. ಪರಶುರಾಮನು ಕಾರ್ತಿವೀರ್ಯಾರ್ಜುನನ್ನು ವಧಿಸಿ ಅವನ ಕಣ್ಣುಗಳನ್ನು ಹೀಗೆ ತಂದು ಹಾಕಿದನೆನ್ನುವ ವಾಡಿಕೆಯಿದೆ. ಎಲ್ಲಮ್ಮನನ್ನು ರೋಗ, ರುಜಿನಗಳ ದೇವತೆಯಾಗಿ ಕಾಣುವುದಿದೆ. ಎಲ್ಲಮ್ಮನ ಗುಡ್ಡದಲ್ಲಿಯೇ ಹುರಕೆಲ್ಲವ್ವನ ಸ್ಥಾನವೊಂದಿದೆ. ಅಲ್ಲಿ ಉಪ್ಪು ಹಾಕಿಬರುವುದನ್ನು ಇಂದಿಗೂ ನೋಡಬಹುದು. ಉಪ್ಪು ದೋಷ ಪರಿಹಾರಕವಾಗಿ ಪೀಡೆಯನ್ನು ಕಳೆಯುವುದಕ್ಕಿದ್ದು ಜಗತ್ತಿನಾದ್ಯಂತ ಬಳಕೆಗೊಂಡಿದೆ. ಹಾಗೆಯೇ ಸಂತತಿಗಾಗಿ ದೇವತೆಯನ್ನು ಕೇಳಿಕೊಳ್ಳುವುದು ಅದಕ್ಕಾಗಿ ಬೊಂಬೆಗಳನ್ನು ಮಲಗಿಸಿದ ತೊಟ್ಟಲುಗಳನ್ನು ದೇವಿಗೆ ಅರ್ಪಿಸುವುದು  ಸರ್ವೇಸಾಮಾನ್ಯವಾಗಿದೆ. ಇವು ಜನಪದ ಎಲ್ಲ ದೇವತೆಯ ವಿಷಯದಲ್ಲಿಯೂ ಸಲ್ಲುವಂಥವು ಈ ದೃಷ್ಟಿಯಿಂದ ತೀರ ಕೀಳುದೈವತಗಳಾದ ಬಂಡೆವ್ವ, ಕರೆವ್ವನಿಂದ, ಹಿಡಿದು ದ್ಯಾಮವ್ವ ದುರಗವ್ವನಂಥ ದೇವತೆವರೆಗಿನ ಎಲ್ಲ ಆಶಯಗಳನ್ನು ಒಳಗೊಂಡಿದ್ದು, ಬೇರೆಯಾಗಿ ಗಣಿಸುವಂಥವಳಲ್ಲ.ಇದಕ್ಕೆ ಒತ್ತುಕೊಡಲೆಂಬಂತೆ ಜನಪದರಲ್ಲಿ ಒಂದು ವಾಡಿಕೆಯಿದೆ. ಮೂಲೆ ಮೂಲೆಗಳಲ್ಲಿ ಕಲ್ಲುಗುಂಡುಗಳಾಗಿ ಕಾಣುವ ದೈವತೆಗಳೆಲ್ಲ ಎಲ್ಲಮ್ಮನ ರುಂಡಗಳೇ. ಪರಶುರಾಮನು ಕೊಡಲಿಯಿಂದ ಕಡಿದಾಗ ಆಕೆಯ ರುಂಡಗಳು ನಾಡಿನಲ್ಲೆಲ್ಲ ಚದುರಿಬಿದ್ದವಂತೆ. ಎಲ್ಲಮ್ಮನ ಗುಡ್ಡಕ್ಕೆ ಹೋಗುವಾಗ ದಾರಿಯ ಇಕ್ಕೆಲುಗಳಲ್ಲಿ ಕಲ್ಲಿನ ಮೇಲೆ ಕಲ್ಲು ಇಟ್ಟು ಮಾಡಿದ ಅಸಂಖ್ಯ ಗುಪ್ಪೆಗಳು, ಪುಟ್ಟ ಗೂಡುಗಳನ್ನು ನೋಡಬಹುದು. ದೇವಿಗೆ ಬರುವ ಭಕ್ತರು ತಮ್ಮ ಬೇಡಿಕೆಗಳು ಈಡೇರಲು ಹೀಗೆ ಮಾಡುತ್ತಾರೆ. ದೇವಿಗೊಮದು ಗೂಡು ಕಟ್ಟುವುದು, ತಾವು ಪರ್ಯಾಯವಾಗಿ ಮನೆಕಟ್ಟುವ ಸಾಮರ್ಥ್ಯವುಳ್ಳವರಾಗುತ್ತೇವೆ ಎಂಬ ನಂಬಿಕೆಯೊಂದು ಸಾರ್ವತ್ರೀಕವಾಗಿದೆ.

ಎಲ್ಲಮ್ಮ ಗ್ರಾಮದೇವತೆಯೇ ?

ಇಂದು ಕರ್ನಾಟಕದ ಮಟ್ಟಗೆ ಹೇಳುವುದಾದರೆ ಎಲ್ಲಮ್ಮ ಗ್ರಾಮದೇವತೆಯಲ್ಲ. ಆಕೆಯ ಗುಡಿಗಳು ಎಲ್ಲ ಗ್ರಾಮಗಳಲ್ಲಿಯೂ ಸಿಗುತ್ತವೆ ಎಂಬುದಿಲ್ಲ. ಆದರೆ ಜನಪದ ಸಂಸ್ಕೃತಿಯಲ್ಲಿ ಹೆಣ್ಣುದೇವತೆಯ ಇತಿಹಾಸ ನೋಡುವಾಗ ಗ್ರಾಮದೇವತೆಯದು ಒಂದು ಹಂತ. ಒಂದಿಷ್ಟು ನಿರ್ದಿಷ್ಟಗೊಂಡ ಆಶೆಯ ಪ್ರಪಂಚದ ಸ್ಥಳ. ಗ್ರಾಮದ ಎಲ್ಲ ದೈವತಗಳಿಗೆ ಪ್ರಮುಖವಾಗಿ ನಿಲ್ಲುವುದು, ಗ್ರಾಮದ ರಕ್ಷಣೆಯ ಭಾರ ಆಕೆಯದು ಮುಂತಾಗಿ ಹೇಳಬಹುದೆಂದು ಕಾಣುತ್ತದೆ. ಊರ ಗೌಡರನ್ನು ಕಠಿಣ ಪರಿಸ್ಥಿತಿಯಲ್ಲಿ ಕಾಪಾಡಿದಂಥ ಪ್ರಸಂಗಗಳನ್ನು ಹೇಳುವ ಕಥೆಗಳಿವೆ. ಸಾಮಾನ್ಯವಾಗಿ ದುರ್ಗವ್ವ  ದ್ಯಾಮವ್ವ ಎನ್ನುವ ಹೆಸರಿನಲ್ಲಿಯೇ ದೇವಿಯನ್ನು ಗ್ರಾಮದೈವತವಾಗಿ ಕಾಣುವುದು ವಾಡಿಕೆ. ಆದರೆ ದ್ಯಾಮವ್ವ ದುರ್ಗವ್ವಗಳ ದಂತ ಎಲ್ಲಮ್ಮನ ಬೆಳವಣಿಗೆಯಲ್ಲಿ ನಡುವಿನದೊಂದು ಎಂದು ಭಾವಿಸಿದಾಗ ಗ್ರಾಮದೈವತದ ಅವಸ್ಥೆಯನ್ನು ಎಲ್ಲಮ್ಮ ಒಳಗೊಂಡಂತೆ. ಆದರೆ ವಾಸ್ತವವಾಗಿ ಎಲ್ಲಮ್ಮನಲ್ಲಿ ವಿಶ್ವಜನನಿಯ, ಬೆಳೆದ ಎತ್ತರಮಟ್ಟದ ಸ್ಥಳವನ್ನೇ ಕಾಣಬೇಕಾಗುತ್ತದೆ. ಆ ದೃಷ್ಟಿಯಿಂದ ಅವಳು ಗ್ರಾಮದೇವತೆಯಾಗುವದಿಲ್ಲ. ಜಾನಪದರು ಆಧ್ಯಾತ್ಮಕ ಆ ಎತ್ತರಕ್ಕೆ ಬೆಳೆದವರಲ್ಲ. ಇಂದು ಶಾಕ್ತ ಸಂಪ್ರದಾಯ ಬಹಳಷ್ಟು ಮಟ್ಟಿಗೆ ಮರೆಯಾಗಿದ್ದು, ಎಲ್ಲಮ್ಮನಿಗೆ ನಡೆದುಕೊಳ್ಳುವವರೆಲ್ಲ ಜನಪದರೇ. ಆದರಿಂದ ಇಂದು ಗುಡ್ಡದಲ್ಲಿನ ಎಲ್ಲಮ್ಮ ತನ್ನ ಎತ್ತರ ಸ್ಥಿತಿಯನ್ನು ಬಿಟ್ಟು ಜನತೆಯ ಭಾವಲೋಕಕ್ಕೆ ತಕ್ಕ ಹಾಗೆ ಕೆಳಸ್ತರದಲ್ಲಿ ರೂಪುಗೊಂಡಿದ್ದಾಳೆ; ಎನ್ನಬೇಕು. ಈ ಸ್ಥಿತಿಯಲ್ಲಿ ಆಕೆ ಈಗಲೂ ಗ್ರಾಮದೇವತೆಗಳಾದ ದ್ಯಾಮವ್ವ ದುರುಗವ್ವಗಳಿಗೆ ತೀರ ಹತ್ತಿರಳಾದವಳೇ ?

ಜೋಗಿತಿಯರ ಹಾಡುಗಳಲ್ಲಿ ಮೂಡಿನಿಂತಿರುವ ಎಲ್ಲಮ್ಮ ಚಿತ್ರಣ

ಎಲ್ಲಮ್ಮ ಮೂಲತಃ ಒಬ್ಬ ಯೋಗಿನಿಯಾಗಿದ್ದರೂ ಜನಪದರ ಮನೋಭೂಮಿಕೆಯಲ್ಲಿ ಆಕೆಯ ಸ್ವರೂಪ ಚಿತ್ರಣಗೊಳ್ಳುವುದು ಅವರದೇ ಆದ ಬಗೆಗಳಿಗೆ ಹೊಂದಾಣಿಕೆ ಮಾಡಿಕೊಂಡು ಆಧ್ಯಾತ್ಮದ ಎತ್ತರದ ಹಂತವಾಗಿ ಪಡೆಯಬಹುದಾದ ಕಲ್ಪನೆಗಳು ಹಿಂದಕ್ಕೆ ಸರಿದು ಅವಕಾಶ ಪಡೆಯುವ ಕಲ್ಪನೆಗಳೇ ಬೇರೆ :

ಕೆಂಜಡೆಯನ್ನು ಬಿಟ್ಟು ಮುಂದಕ್ಕೆ ಸಾಗುತ
ಕೆಂಡದಂತೆ ಕಣ್ಣ ಕಿಡಿಕಿಡಿ ಸೂಸುತ
ಕರಕರ ಹಲ್ಲ ತಿಂದು ದೇವಿ ಬರತಾಳ
ಕರಿಯಲ್ಲ ಭೇಡಿದವರಿಗೆ ತಾ ನೀಡತಾಳ[14]

ಎನ್ನುವ ಕರಕರಿಸುವ, ಹೇಸಿಗೆ ಹುಟ್ಟಿಸುವ ಚಿತ್ರಣ ಒಂದೆಡೆ ಸಿಕ್ಕರೆ, ಇನ್ನೊಂದಡೆ”

ತಲಿಯಾಗಿನ ಪರಟ ತೆಗೆದು ಹಡ್ಲಿಗಿ ಮಾಡಿದೆಮ್ಮ
ನೀನೇ ಧರಿಸಿದೆಮ್ಮ
ಹಣೆಯ ಹುಬ್ಬ ತೆಗೆದು ಬತ್ತಿ ಮಾಡಿದೆಮ್ಮ
ಹಣೆಯೊಳಗ ಧರಿಸಿದೆಮ್ಮ
ಕಣ್ಣಾಗಿನ ಗುಳ್ಳಿತೆಗೆದು ರುದ್ರಾಕ್ಷಿ ಮಾಡಿದೆಮ್ಮ
ಕೊಳ್ಳಾಗ ಧರಿಸಿದೆಮ್ಮ
ಮೈಯ್ಯಾಗಿನ ತೊಗಲ ತೆಗೆದು ಗದ್ದಿಗಿ ಮಾಡಿದೆಮ್ಮ
ಸದರಾ ಹತ್ತಿದೆಮ್ಮಾ[15]

ಹೀಗೆಯೇ ಸಾಗುವ ಈ ಬೀಭತ್ಸ ಕಲ್ಪನೆಗಳ ಮಾಲೆ ದೇವಿಯು ಎಂಥ ಭಯಾನಕಳು: ಪೈಶಾಚಿಗಳು ಎಂಬುದನ್ನು ಅರ್ಥವತ್ತಾಗಿ ಚಿತ್ರಿಸುತ್ತವೆ. ಆಧ್ಯಾತ್ಮ ರಂಗದಲ್ಲಿಯಾದರೂ ತಾಂತ್ರಿಕತೆ ಹೆಚ್ಚು ಹೆಚ್ಚು ಕಾಲಿಡತೊಡಗಿದಾಗ, ತೀರ ನೀಚವಾದ, ಅಸಹ್ಯವೆನಿಸುವ ಬೂದಿಯಲ್ಲಿ ಹೊರಳಾಡುವದು, ಮದ್ಯಮಾಂಸವನ್ನು ಸೇವಿಸುವವದು, ರಕ್ತ ಕುಡುಯುವುದು ಮುಂತಾದ ಹಲವಾರು ಆಚರಣೆಗಿಳಿದುದು ಕಂಡುಬರುತ್ತದೆ. ಶಂಕರ ದಾಸಿಮಯ್ಯನು ಉಜ್ಜಯನಿಗೆ ಬಂದಾಗ ಅವನಿಗೆ ಎದುರಾದ ಶಾಕ್ತೇಯರು “ಮಾತಂಗಿ” ಯ ಆರಾಧಕರೇ ಆಗಿದ್ದು ಅವರ ಪರಿಚಯ ಈ ದಿಶೆಯಲ್ಲಿ ಸ್ವಾರಸ್ಯಕರವಾಗಿದೆ. ಹೆಂಡತಿಯ ಪಾದಪೂಜೆ ಮಾಡಿ ಸ್ವೀಕರುಸುವವರು, ಮಲಕ್ಕೆ ಹೇಸಿಕೊಳ್ಳುವವರು, ಮೂತ್ರ ಪಾನವನ್ನು ಮಾಡುವವರು, ಸುರೆ ಮಾಂಸ  ಬೇರೆಯವರ ಎಂಜುಲುಗಳನ್ನು ತಿನ್ನುವವರು.  ಹೊಲತಿಯನ್ನು ಅರ್ಚಿಸುವುದು, ತಂಗಿ, ತಾಯಿ ಮಗಳು ಎಂಬ ಭೇಧವಿಲ್ಲದೆ ಮೋಹಿಸುವದು ಮುಂತಾದ ಆಚರಣೆಗಳು ಅವರವಾಗಿದ್ದವು.(ಸಂಶೋಧನ ತರಂಗ : ಡಾ. ಎಂ. ಚಿದಾನಂದಮೂರ್ತಿ. (ಪು. ೨೪೯)  ಇಂಥಲ್ಲಿ ಹುಟ್ಟಬಹುದಾದ ಶಕ್ತಿಯ ಕಲ್ಪನೆ ಎಂಥದಿರಬಹುದೆಂದು ಯಾರೂ ಊಹಿಸಬಹುದು. ಜೋಗತಿ ಹಾಡುಗಳಿಗೆ ಇ ಬಗೆಯ ಪ್ರಾಚೀನದ ಹಿನ್ನೆಲೆಯೂ ಇರಬಹುದಾದರೂ ಇಂದು ಜನಪದರಲ್ಲಯೇ ಸಹಜವಾಗಿರುವ ಭಾವಾವೇಶಿತ ಮನದ ಅಭಿವ್ಯಕ್ತಿಯಾಗಿಯೂ ಯಾವ ತೊಂದರೆಯಿಲ್ಲದೆ, ಇಂಥ ಚಿತ್ರಣಗಳನ್ನು ಒಪ್ಪಬಹುದು. ಎಲ್ಲಮ್ಮನಿಗೆ ಹೆಂಗಸೇನು, ಗಂಡಸೇನು. ತನಗೆ ವ್ಯತಿರಿಕ್ತವಾಗಿ ಹಡೆದವರನ್ನು  ಹಣ್ಣು ಗಾಯಿ ನೀರಿಗಾಯಿ ಮಾಡದೇ ಬಿಡಳು. ಅದರಲ್ಲೂ ಗಂಡಸರನ್ನೂ ಹೆಣ್ಣಾಗಿ ಕಾಣುವುದು, ಹೆಣ್ಣಾಗಿಯೇ ಮಾರ್ಪಡಿಸುವುದು ಆಕೆಯ ನಿರಂತರ ಕರ್ಮವೇ.

ವಾಸುಳ್ಳ ಹುಡುಗನ್ನ ಮಿಸಿಯ ತೆಗಿಸ್ಯಾಳ
ಕಾಸಿ ನಡಕಟ್ಟ ಬಿಡಿಸ್ಯಾಳ[16] ಕರಿಯೆಲ್ಲ
ರೇಶಿಮೆ ಸೀರಿ ಉಡಸ್ಯಾಳ !

ಎನ್ನುವ ಗಡಸಾದ ಅಭಿವ್ಯಕ್ತಿ ಇದನ್ನು ಮೂರ್ತಿವಂತವಾಗಿಸುತ್ತವೆ. ಆಕೆಯ ಬೀಭತ್ಸ ಸ್ವರೂಪದ ವಿಲಾಸ ವಿಭ್ರಮವನ್ನು ಜನಪದರ ಹಾಡುಗಳಲ್ಲಿಯೇ ಕೇಳಬೇಕು. ಒಂದೊಂದು ಚಿತ್ರಣವೂ ಮೈನವಿರೇಳಿಸುವ ಹಾಗೆ. ಕಪಟಿಯಾದ, ನೋಡಿದೊಡನೆಯೇ ದೃಷ್ಟಿಬಂಧನಗೊಳಿಸುವ, ವೇಗದಿಂದ ನಡೆದು ಹೋಗುವ, ಯಾರು ಸಿಗುತ್ತಾರೋ ಎಂದು ಗಣ ಗಣ ತಿರುಗುವ ಮುದುಕಿಯ ಚಿತ್ರ ತಟ್ಟನೆ ಕಣ್ಣುಮುಂದೆ ನಿಲ್ಲುತ್ತದೆ. ಇಂಥದೊಂದು ಕಲ್ಪನೆಯ ರಚನೆಯನ್ನು ನೋಡಿದಾಗ :

ಹಲ್ಲಬಿದ್ದ ಮುದುಕಿಯಂಗ
ಗಲ್ಲದ ತೊಗಲ ಜೋತಬಿದ್ದ
ಹೊಕ್ಕಳದೇವಿ ಕಾಲಮುಂದ ಮಾಡಿ ಮಾಡಿ
ನನ್ನವ ಹೊಕ್ಕಳದೇವಿ ಕಾಲ ಮುಂದ ಮಾಡಿ ಮಾಡಿ
ಹಿಂದ ಏಳ ಉಡಿಯಕೊಟ್ಟ
ಮುಂದ ಏಳಕೊಳ್ಳ ಕೊಟ್ಟ
ಸಿದ್ಧನಕೊಳ್ಳ ತಿರವತಾಳ ವಾರಿ ವಾರಿ
ನನ್ನವ ಸಿದ್ದನಕೊಳ್ಳ ತಿರವತಾಳ ವಾರಿ ವಾರಿ

ಕಂಡಾಟ ಕಾರಿ ತಪ್ಪಲ
ಬಂಡಾಟ ಬಣದುರಬಿ ತಪ್ಪಲ
ಹರದ ಹರದ ತುಂಬತಾಳ ಉಡಿ ಉಡಿ
ನನ್ನವ ತೆರೆದ ತೆರದ ತುಂಬತಾಳ ಉಡಿ ಉಡಿ

ಅಂಗೈ ವಳ್ಳಮಾಡಿ
ಮುಂಗೈ ಒನಕಿ ಮಾಡಿ
ಹಾರಿ ಹಾರಿ ಕುಟ್ಟತಾಳ ಗಾಂಜೀಪುಡಿ
ನನ್ನವ ನೋಡಿ ನೋಡಿ ಕುಟ್ಟತಾಳ ಗಾಂಜೀಪುಡಿ

ಇಂತಹರಭಾಟಿನ ಹಿಂಡು ಚಿತ್ರಣಗಳ ಮಧ್ಯೆ, ಮರಭೂಮಿಯಲ್ಲಿ ಓಯಾಸಿಸ್ ಸಿಕ್ಕ ಹಾಗೆ ಆಗಾಗ ಸಾತ್ತ್ವಿಕ ಭಾವದ ಅಭಿವ್ಯಕ್ತಿಗಳೂ ದೊರೆಯುತ್ತವೆ.

“ಕುಂತಲ್ಲೆ ನಿನದ್ಯಾನ
ನಿಂತಲ್ಲೆ ನಿದ್ಯಾನ
ಮಗ್ಗಲ್ಲಚ್ಚಿದರ ನಿನಗ್ಯಾನ”

“ಕಳಸ ನಮಗ ಕಂಡಂಗಾದಿತ
ತಾಯಿವ್ವ ನೀನು ಕನಸಿನೊಳಗ ಕಂಡಂಗಾದಿತ”

“ತಾಯಿಗಿ ನೆನೆದರ
ಸಾವಿಲ್ಲ ಕೇಡಿಲ್ಲ
ಬೆವ್ವ ಕುಡದರ ಇಸವಿಲ್ಲ”
“ಯಾವಾಗ ನೋಡಿದರ
ನಾಲಿಗಿ ಮ್ಯಾಲಿರುವಾಕಿ
ನಾಗಭೂಷಣದ ಮನದಾಕಿ”

ಎಲ್ಲಮ್ಮ ಈಗ ಏನಿದ್ದರೂ ಜನಪದರ ಸೊತ್ತು. ಆಕೆಯ ಮುಂದಿನ ಸ್ವರೂಪ, ಇಂದಿನ ವೈಜ್ಞಾನಿಕ ಬೆಳವಣಿಗೆ, ಸಾಮಾಜಿಕ ಬದುಕಿನ ಅರಿವು ಇವೆಲ್ಲವುಗಳನ್ನೊಳಗೊಂಡು ವಿವೇಚಿತ ಬದುಕಿನೆಡೆಗೆ ಕ್ರಮಿಸಲಿರುವ ಇಂದಿನ ಜನಪದರ ಭವಿಷ್ಯತ್ತಿನಲ್ಲಿ ಹೆಚ್ಚು ಹೆಚ್ಚು, ವಾಸ್ತವದ ಮಾನವೀಯ ಸ್ವರೂಪದಲ್ಲಿ ಪರ್ಯವಸಾನವಾದೀತು ಎಂದು ಕೊನೆಯ ಮಾತನ್ನು ಮುಗಿಸಬಹುದು.

ಗ್ರಂಥಋಣ

೧. ಶ್ರೀ ರೇಣುಕಾ ಎಲ್ಲಮ್ಮಾ ದೇವಿಯ ಮಹಾತ್ಮೆ
ವೇ.ಬ್ರ. ಶ್ರೀ ಸಿದ್ಧಾಂತಿ ಶಿವಬಸವಶಾಸ್ತ್ರಿಗಳು
ದಿ. ಬೋರ್ಡ ಆಫ್ ಟ್ರಸ್ಟೀಸ್, ರೇಣುಕಾ ಯಲ್ಲಮ್ಮಾ ದೇವಸ್ಥಾನ,
ಯಲ್ಲಮ್ಮನ ಗುಡ್ಡ ೧೯೮೦.

೨. ಹಾಲುಮತದರ್ಶನ : ಶಂ. ಬಾ. ಜೋಶಿ
ಪ್ರಕಾಶಕರು : ಬೆಳವಡಿ ಗವಿಸಿದ್ದಪ್ಪ, ಸವದತ್ತಿ. ಜಿಲ್ಲಾ : ಬೆಳಗಾಂವಿ
೧೯೬೦.

೩. ಸಂಶೋಧನ ತರಂಗ : ಡಾ. ಎಂ. ಚಿದಾನಂದಮೂರ್ತಿ,
ಸರಸ ಸಾಹಿತ್ಯ ಪ್ರಕಾಶನ, ಮೈಸೂರು ; ೧೯೬೬.

೪. ಜಾನಪದ ವಿಹಾರ : ಸಂ. ಬಸವರಾಜ ನೆಲ್ಲೀಸರ
ಯಕ್ಷ

೫. ಜೀವನ ಜೋಕಲಿ (ಜೋಗತಿ ಹಾಡು) : ಸಂ. ಡಾ. ಎಂ. ಎಸ್. ಸುಂಕಾಪುರ. ಕನ್ನಡ ಅಧ್ಯಯನ ಪೀಠ, ಕ. ವಿ. ವಿ. ಧಾರವಾಡ – ೩. ೧೯೭೭.

೬. An Essay on the origin of the south Indian Temple Venkataramanayya Methodist Publishing House 1930

7. ದೇವರ ಬಂದಾವ ಬನ್ನಿರೆ ; ಸಂ. ಶಿವಾನಂದ ಗುಬ್ಬಣ್ಣನವರ.

೮. ಬೆಳಗಾವಿಯ ಬಳುವಳಿ (ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ)
ಸಂ : ಮಿರ್ಜಿ ಅಣ್ಣಾರಾಯ, ಸಾಹಿತ್ಯ ಪರಿಷತ್ತಿನ ಸಮಿತಿ, ೧೯೭೧

೯. ಕನ್ನಡ ವಿಶ್ವಕೋಶ (ಸಂಪುಟ : ಎಂಟು), ೧೯೭೫.

* * *


[1]     ಜೀವನ ಜೋಕಾಲಿ (ಜೋಗತಿ ಹಾಡು) – ಸಂ :ಡಾ. ಎಂ. ಎಸ್. ಸುಂಕಾಪುರ. (ಪು. ೧೯)ಶ

[2]     ಹಾಲು ಮತದರ್ಶನ : ಶಂ. ಬಾ. ಜೋಶಿ. (ಪು. ೨೪೩)

[3]     An Essay on the origin of the south Indian Temple. ವೆಂಕಟರಮಣಯ್ಯ (ಪುಟ ೬೮, ೬೯)

[4]     ಜೀವನ ಜೋಕಾಲಿ, ಸಂ: ಡಾ. ಎಂ.ಎಸ್‌. ಸುಂಕಾಪುರ (ಪು. ೩೫)

[5]     ಜೀವನ ಜೋಕಾಲಿ, ಸಂ: ಡಾ. ಎಂ.ಎಸ್‌. ಸುಂಕಾಪುರ (ಪು. ೩೬)

[6]     ಹಾಲುಮತ ದರ್ಶನ : ಶಂ. ಬಾ. ಜೋಶಿ (ಪು. ೧೯೩, ೧೯೪)

[7]     ಹಾಲುಮತ ದರ್ಶನ : ಶಂ. ಬಾ. ಜೋಶಿ (ಪು. ೧೯೮)

[8]     “ನಾಥಪಂಥದ ಅವಧೂತರು ಕದಿರೆಯತ್ತ” – ನಾರಾಯಣ ಘಳಲಿ (ಸಂ. ಕರ್ನಾಟಕ) (ಪು.೧)

[9]     ಬೆಳಗಾವಿಯ ಬಳುವಳಿ : ಸಂ. ಮಿರ್ಜಿ ಅಣ್ಣಾರಾಯ (ಪು.೩೬)

[10]    ಹಾಲುಮತ ದರ್ಶನ : ಶಂ. ಬಾ. ಜೋಶಿ (ಪು. ೧೫೫, ೧೭೫)

[11]     ಜನಪದ ಸಂಕಲನ : ಬಸವರಾಜ ನೆಲ್ಲೀಸರ (ಪು.೬೯)

[12]     ಹಾಲುಮತ ದರ್ಶನ : ಶಂ. ಬಾ. ಜೋಶಿ (ಪು. ೨೪೨)

[13]    ಕನ್ನಡ ವಿಶ್ವಕೋಶ (ಸಂಪುಟ ಎಂಟು). (ಪುಟ ೩೭೭)

[14]    ಜೀವನ ಜೋಕಾಲಿ (ಜೋಗತಿ ಹಾಡು) : ಸಂ. ಡಾ. ಎಂ. ಎಸ್. ಸುಂಕಾಪುರ. (ಪು. ೮೭)

[15]     ಜೀವನ ಜೋಕಾಲಿ (ಜೋಗತಿ ಹಾಡು) : ಸಂ. ಡಾ. ಎಂ. ಎಸ್. ಸುಂಕಾಪುರ. (ಪು. ೫)

[16]     ಜೀನವ ಜೋಕಾಲಿ (ಜೋಗತಿ ಹಾಡು) : ಸಂ. ಡಾ. ಎಂ. ಎಸ್. ಸುಂಕಾಪುರ (ಪು.೭೨)