ಪುಟ : ೫೬೫೭

ಜಯ ಮಂಗಳೋ ನಿತ್ಯ ಸುಬ ಮಂಗಳೊ              || ಪ ||

ಎತ್ತಯೆತ್ತ ನೋಡಿದರೆ ಎಳ್ಳು ಜೀರಿಗೆ ಮಾಳss
ಸುತ್ತಾಲು ನೋಡಿದರೆ ಸಿರಿವೊನ್ನೇ ತೆಂಗಿನ ತೋಪು
ಚಿತ್ತೈಸಿ ನೋಡಿದರು ಕಾಳಮ್ಮಗೇss                          || ೧ ||

ಪಂಚಾಳ ಪ್ರಬಲೋಕ ಕಂಚಿನೊಲಗಿರುವಾ
ಎತ್ತಿದರೈವsರುs ಪಂಚದಾರುತಿಯಾss                     || ೨ ||

ಅರದನಿಗೆ ರೂಪನಿಗೆ ಅಧಿಕಾರಭೈರನಿಗೆ
ಮುದ್ದಿಸಿದರೈದೇರು ಮಾದೇವಿಗೇ                      || ೩ ||

ಎತ್ತಿದರಾರುತಿಯ ಪಂಚಕನ್ನೇರು
ಚನ್ನಪಟ್ಟಣದೊಳಗಿರುವ ಕ್ವಾಟೆ ಕಾಳಮ್ಮಗೇ           || ೪ ||

ಆವೀನ ಆಸೀಗೆ ಚೌಳಾನ ತಲೆದಿಂಬು
ನಾಗಸರ್ಪಾನ ಅರೆದೆಂಟು ಕಾಳಮ್ಮಗೇ                || ೫ ||

ಆಕಾಸ ಆಸೆಮಾಡಿ ಭೂಮೀಗೆ ಮಂತೂಡಿ
ಏಳು ತಲೆ ಸರ್ಪಾನ ಕಡೆಗಣ್ಣಲೊಪ್ಪಿರಲೂ              || ೬ ||

ಕಾಲಿಗುಂಗರದವಳೇ ಊರುತ ಜಾರುತ
ಬಂಗಾರ ನಡವೀಗೆ ಬಳಕೂತss
ಬಂಗಾರ ನಡವೀಗೆ ಬಳಕೂತ ತಳಕೂತ
ಬಂದು ನಿಂತವಳೆ ಕಾಳಮ್ಮ ಕಳಸಾಕೇss
ಬಂದು ನಿಂತವಳೆ ಕಾಳಮ್ಮ ಕಳಸಾಕೇ
ಎತ್ತಿದರೈವಾರು ಪಂಚುದಾರುತಿಯಾss                     || ೭ ||

ಅಣಿಯಲ್ಲಿ ಗಂದಾಯಿಕ್ಕಿ ಎದೆಯಲ್ಲಿ ಜನಿವಾರಧರಿಸಿ
ಅಂಗ ಅಂಗಾಕೆ ಪೂಜೇಯೂ ರಚಿಸೂವ
ರಂಗನಾಥಮ್ಮ ಕಾಳಮ್ಮಗೆ                             || ೮ ||

*          *          *

ಕಾಲಮ್ಮನ ಕರಗ

ಪುಟ . ೮೬

ವೋಗುವಾಗ ಚಿಬ್ಲಲ್ಲಿ ಬರುವಾಗ ಕರಗ್ದಲ್ಲಿ
ವೊರಟ್ಮೇಕ ವೋಳೆಯಲ್ಲಿ | ಕಾಳಮ್ನ
ಗುಡ್ಡಾರು ವೋಗಿ ಕರತನ್ನಿ                              || ೧ ||

ಗುಡ್ಡಾರು ನಿವೋಗಿ ಕರತನ್ನಿ
ಒಡ್ಡು ವಾಲಗದ ಗರತಿಯ | ಕಾಳಮ್ನ
ದೊಡ್ಡ ಬೀದೀಲಿ ಮರೆಯೋಳ                          || ೨ ||

ಕರಗ ಬಿತ್ತದಂತ ಕಾದಿದ್ದ ಬೀದೀಲಿ
ಕರಗ ಬಂದು ಗುಡುಗೋದೊ | ಕಾಳಮ್ಮ
ಕಾದಿದ್ದು ಆರತಿ ಬೆಲಗೀಳೊs                                   || ೩ ||

ಅರತಿ ಬೆಳಗಿ ಆರ್ಬೆರಳು ನೋಯ್ತಾವೆ
ಪಾದಕ್ಕೆ ಬಗ್ಗಿ ನಡುನೋಯ್ತು | ಕಾಳಮ್ಮ
ದೂಪsವ ಬೆಳಗಿ ಬುಜ ನೊಂದೊ                       || ೪ || 

ಕಾಳಮ್ಮನ ನೆಲೆ

ಬಳಗೇರಿ ವಳಗೆ ಗುಡುಗನಾಡುವಳಾರು
ಗುರುಗಂಜಿ ಸೀರೆ ನರಿಯೋಳು | ಕಾಳಮ್ಮ
ಗುಡುಗಾಡಿ ಗುಡಿಗೆ ವೊರಟಾಳು                        || ೫ ||

ಪುಟ : ೮೭

ಗಂಗೆ ತಡಿಯಲ್ಲಿ ಯಾಕ್ನಿಂತೆ ಕಾಳಮ್ಮ
ಸೀತಾಳಗಾನ ಸುಳಿಗಾನ | ಕಾಳಮ್ಮ
ತೋಪೊಳ್ಳೆದಂದು ನೆಲೆಗಂಡ                          || ೬ ||

ಅಳ್ಳಿ ತೋಪ್ನೋಳೆ ಬೆಳ್ಳಿ ಜಡೆಯೋಳೆ
ಅನ್ನೇಡಂಕಣದ ಗುಡಿಯೋಳೆ | ಕಾಳಮ್ಮ
ಚುನ್ನದ ಗೆಜ್ಜೇಲಿ ಬರಗವಳೆ                             || ೭ ||

ಕನಕ ಬಂದಾವೆ ಕಾಣನಲ್ಲೊ ಕಾಳಮ್ನ
ಕಾವಿ ದೋತುರ ಯುಡಿವೊನ್ನ | ಬಂದಾವೆ
ಕಾಣನಲ್ಲ ಕಾಲಮ್ನ ಗುಡಿಯಲ್ಲಿ || ೮ ||

ಅಲಂಕಾರ :

ಸುಂಗಾರವಾದಳೊ ನಡುಬೀದ್ಗೆ ಬಂದಾಳೊ
ಬಂಗ ಬರಸಾವಳೆ ಬಡವೇಯ | ಯಣ್ಮಗಳ
ಪತ್ತಿಗೆ ಎಣ್ಣೆಯ ತರಯೇಳಿ                              || ೯ ||

ಪಿಲ್ಲಿ ಕಾಲಿನವಳೆ ಪಿರಿಯಾ ಪಟ್ಟಣದವಳೆ
ಕಲ್ಮೇಲೆ ಪಾದ ತೊಳಿಯೋಳೆ | ಕಾಳಮ್ಮ
ಪಿಲ್ಲಿ ಸವರಿಗೆ ಬೆಲೆಯೇಳು                              || ೧೦ ||

ಆಲದ ಮರದಡಿಗೆ ಆಕವರೆ ಕುಲಿಮೆsಯ
ಆಲದ ಮರ ಬೆಂದು ಎಲೆಬೆಂದೊ | ಕಾಳಮ್ಮ
ಕಳಸಕ್ಕೆ ಬೆಳ್ಳಿ ಅದಬಂದೊ                             || ೧೧ ||

ಪುಟ : ೮೮

ಅತ್ತಿsಯ ಮರದಡಿಗೆ ಅತ್ತಿಸವರೆ ಕುಲಮೇಯ
ಅತ್ತಿsಯ ಮರ ಬೆಂದು ಎಲೆ ಬೆಂದೊ | ಕಾಳಮ್ಮ
ಲಿಂಗಕ್ಕೆ ಬೆಳ್ಳಿ ಅದ ಬಂದೊ                             || ೧೨ ||

ಬಂಡಿ ಸುಂಗಾರಾಗಿ ಬಂದಾವೆ ಬೀದೀಗೆ
ಕೊಂಬಿsಗೆ ಅನಸು ಕೊರಳೀಗೆ | ಕಿರುಗೆಜ್ಜೆ
ಬಂದಾವೆ ಕಾಳಮ್ಮನ ಗುಡಿ ಬಳಸಿ                     || ೧೩ ||

ಪೂಜೆ :

ಕಲ್‌ಬಾವಿ ಸುತ್ತ ನೆಲ್ಲಕ್ಕಿ ರಂಗೋಲೆ
ಅಲ್ಲಿ ಕಾಳಮ್ಮನಿಗೆ ಸಿವಪೂಜೆ | ಆಯ್ತವೆಂದು
ಬೆಳ್ಳಿಯ ಗಂಟೆ ಡಣಿರೆಂದೂ                             || ೧೪ ||

ಅಳ್ಳಕೊಳ್ಳದ ನೀರು ಬೆಳ್ಳಿಯ ಕೈ ಚಂಬು
ಅಲ್ಲಿ ಕಾಳಮ್ಮಗೆ ಸಿವ ಪೂಜೆ | ಆಯ್ತವೆಂದು
ಕಂಚಿನ ಕಾಳೆ ನುಡಿದಾವೊ                    || ೧೫ ||

ದೊಡ್ಡ ಬೀದಿಯೋಳೆ ಅಡ್ಡ ಚಂದ್ರದೋಳೆ
ದೊಡ್ಡ ಬೀದೀಲಿ ಬರುವೋಳೆ | ಕಾಳಮ್ಮ
ಅಡ್ಡ ಬೀಳೋರ್ಗೆ ಗಡುವಿಲ್ಲ                             || ೧೬ ||

ಸವಾರಿ :

ಏರಿಮ್ಯಾಲೆ ನಿಂತವ್ಳೆ ನೀರಾಳ ನೋಡ್ತವ್ಳೆ
ಏರಿಗು ನೀರಿಗು ಸಮನೆಂದು | ಕಾಳಮ್ಮ
ಏರವ್ಳೆ, ವೊನ್ನ ಕುದುರೇಯ                             || ೧೭ ||

ಪುಟ : ೮೯

ಅರಕೆರೆ ಬನ್ನೂರು ಅಡಕೆ ಇಲ್ಲ ತೆಂಗಿಲ್ಲ
ಮದರಂಗದ ಬಾಳೆ ಮೊದಲಿಲ್ಲ | ಕಾಳಮ್ಮ
ಅಂತು ನೋಡವ್ವ ನಡುತೋಟ                         || ೧೮ ||

ಅಂತು ನೋಡಿದಳು ನಡುತೋಟದೊಳಗಿರುವ
ವೊಂಬಾಳೆಯ ಆಗ ಜಡಿದಾಳೊ                       || ೧೯ ||

ಕೆಂಗುದುರೆ ಮ್ಯಾಲೆ ಬಂದವಳೆ ಕಾಳಮ್ಮ
ಕೆಂಜಾಣೆ ಬೆನ್ನ ಬಡರಿದ್ದ | ಕಾಳಮ್ಮ
ಕೆಂಬಾರ್ದಲ್ಲಿ ಕುದುರೆ ಇಳಿದಳೊ                        || ೨೦ ||

ಹೊಳಗೆ ಹೋಗಿ ಬರುವುದು :

ಪಟ್ಣ ಸೀರೆ ಉಟ್ಟವಳ ವೊಟ್ಟೇಲಿ ಜಿಗಣಿ ತಗದವಳೆ
ಪಟ್ಟಣದೊಳೆಗೋಗಿ ಬರುವಾಗ |  ಕಾಳಮ್ಮ
ಬಟ್ಟೆ ವೊಳುದಾವೊ ಬಿಸುಲೀಗೆ                         || ೨೧ ||

ಕಾವಿಯ ಜೋತರ ಕಾಲಿಗೆ ನೇತರ
ಕಾವೇರಿಗೋಗಿ ಬರುವೋಳೆ | ಕಾಳಮ್ಮ
ಕಾಯೊಡೆದು ಕೈಯ ಮುಗಿದಾರು                      || ೨೨ ||

ಭಕ್ತರ ಸೇವೆ :

ಈಗ ಬಂದವರಾರು ನಿನ್ಪಾದ ತೊಳದವರಾರು
ಬಾಗಿಲಿಗೆ ನೀರು ಆರಿದಾವೆ | ಕಾಳಮ್ಮ
ಬಂದಂತ ಪೂಜೆ ಇಳಿದಾವೆ.                            || ೨೩ ||

ಪುಟ : ೯೦

ರುದ್ರ ಕ್ವಾಪದಿಂದ ಒದ್ದಳಲ್ಲೊ ನಿಲವ
ನುಗ್ಗು ನುರಿಯಾದೊ ವೊಸಕೀಲು | ಕಾಳಮ್ಮ
ಬಗ್ಗಿ ಪಾದಕ್ಕೆ ಸರಣನ್ನಿ

ಒಡೆಯನ ಕುದ್ರೆಗೆ ಒಡೆದವರೆ ತೆಂಗಿನಕಾಯಿ
ಒಡತಿ ಕಾಳಮ್ನ ಮರಿಗುದ್ರೆ | ಪಾದಕ್ಕೆ
ಒಡೆದವರೆ ತೆಂಗಿನ ಎಳಗಾಯಿ

ಬನ್ನಿ ತಾಳಲ್ಲಿರೋಳೆ ಕೊನ್ನಿ ಪಾದಕ್ನೀರ
ನಾನೊಲ್ಲೆ ಮಗಳೆ ಅಸಿವಿಲ್ಲ  | ಕಾಳಮ್ಮ
ಆಲುವೊಳೆಯಲ್ಲಿ ಅಗಲೂಟಿ

ಆಲುವೊಳೆಯಲ್ಲಿ ಅಗಲೂಟಿ ಮಾಡ್ವಾಗ
ಆಲಿsನ ಕೋಡಿ ಅರಿದಾವು

[1]

ಕೊನೆಗೆ …..

ಪೌರಾಣಿಕ ಹಿನ್ನೆಲೆಯಲ್ಲಿ ಬರುವ ಮೂರು ಕಥೆಗಳನ್ನು ನೋಡಲಾಗಿ ಕೆಲವೊಂದು ಸಂಶಯಗಳು ಹುಟ್ಟಿಕೊಳ್ಳುತ್ತವೆ.

ಮೊದಲನೆಯದಾಗಿ ಈ ಪೌರಾಣಿಕ ಕಥೆಗಳಿಂದ ಶೃಂಗಸಂಪ್ರದಾಯದ ಒಂದು ಜನಾಂಗ ಸಿರಸಂಗಿಯ ಸುತ್ತಮುತ್ತಲೂ ಬಾಳಿ ಹೋಗಿರಬೇಕೆಂದು ಊಹಿಸಬಹುದು. ಹರಪ್ಪ – ಮೋಹಂಜೊದಾರೊದಲ್ಲಿ ಶೃಂಗವನ್ನು ತಲೆಯ ಮೇಲೆ ಬಳಸಿದ ಚಿತ್ರಗಳು ದೊರೆತಿವೆ. ಅಂದರೆ ಇಂಥ ಒಂದು ಜನಾಂಗ ಆ ಕಾಲದಲ್ಲೇ ಇದ್ದ ಸಂಗತಿ ಸ್ಪಷ್ಟವಾಗುತ್ತದೆ. ನಮ್ಮ ನಾಡಿನಲ್ಲಿ ಶೃಂಗಿಗೋತ್ರ ಹೊಂದಿದವರೂ ಇದ್ದಾರೆ. ಈ ವಿವರಣೆಯನ್ನು ನೋಡಲಾಗಿ ಶಿರಶೃಂಗ ಎಂಬ ಒಂದು ಜನಾಂಗ ಸಿರಸಂಗಿಯಲ್ಲಿ ಬಾಳಿಹೋಗಿರಬಹುದು.

ಪೌರಾಣಿಕ ಕಥೆಗಳಲ್ಲಿಯ ಸಂಶಯಗಳು :

೧) ವಿಭಾಂಡಕ ಋಷಿಜನಾಂದವರು ಪಿತೃಪ್ರಧಾನತೆಯುಳ್ಳವರು. ಅಲ್ಲಿ ಮಾತೃಪ್ರಧಾನತೆಗೆ ಅವಕಾಶವೇ ಇಲ್ಲ. ಇಂಥ ಸ್ಥಿತಿಯಲ್ಲಿ ಶಿರಶೃಂಗ “ಶಕ್ತಿ” ದೇವತೆಯನ್ನು ಹೇಗೆ ಪೂಜೆ ಮಾಡಿದ ? ಯಾಕೆ?

೨) ಹಬ್ಬೆನಾಯಕನೆ ಕಾಳಮ್ಮನ ಗುಡಿ, ಕಾಲಭೈರವನ ಗುಡಿ, ಹಬ್ಬೇಶ್ವರನ ಗುಡಿ, ಕಟ್ಟಿಸಿದನೆಂದ ಮೇಲೆ – ಶಿರಶೃಂಗನಿಗೂ ಈಗಿರುವ ಕಾಳಮ್ಮನಿಗೂ ಯಾವ ಸಂಬಂಧವೂ ಇಲ್ಲ. ಹೆಬ್ಬನಾಯಕನ ಕಾಲ ೧೧ ನೆಯ ಶತಮಾನ. ಇವನೇ ಕಟ್ಟಿಸಿರಬಹುದು ಎನ್ನುವುದಕ್ಕೆ  ಶಾಸನದ ಆಧಾರಗಳಿವೆ. ಈತನ ಹೆಂಡತಿಯ ಹೆಸರು ನಾಯಕಿತಿ ಕಾಳವ್ವೆ. ಹಬ್ಬನಾಯಕ ಈಶ್ವರ ಗುಡಿ ಕಟ್ಟಿಸಿ ಹಬ್ಬೇಶ್ವರನೆಂದು ತನ್ನ ಹೆಸರನ್ನು ಅದಕ್ಕೆ ಇಟ್ಟ. ನಾಯಕತಿ ಕಾಳವ್ವೆ. ಹಬ್ಬನಾಯಕ ಈಶ್ವರ ಗುಡಿ ಕಟ್ಟಸಿ ಹಬ್ಬೇಶ್ವರನೆಂದು ತನ್ನ ಹೆಸರನ್ನು ಅದಕ್ಕೆ ಇಟ್ಟ. ನಾಯಕತಿ ಕಾಳವ್ವೆ ಕೂಡ ಶಕ್ತಿ ಗುಡಿ ಕಟ್ಟಿಸಿ ತನ್ನ ಹೆಸರಾದ ಕಾಳವ್ವೆ, ಕಾಳಿಕಾದೇವಿ, ಎಂದು ಯಾಕೆ ಹೆಸರಿಟ್ಟಿರಬಾರದು? ಎಂದು ಊಹೆ ಮಾಡಬಹುದು. ನಾಯಕ ವಂಶದವರಲ್ಲಿ ಕಾಳವ್ವೆ ಎಂದು ಹೆಸರು ಬರಲು ಕಾರಣ ಅವರ ಪೂರ್ವಜನರು ಕಾಳಿಕಾ ದೇವಿಗೆ ನಡಕೊಳ್ಳುತ್ತಿರಬೇಕು.

೩) ಇದನ್ನೆಲ್ಲಾ ನೋಡಿದಾಗ ಕಾಳಮ್ಮನ ಮತ್ತು ಸ್ಥಾಪನೆ ಮತ್ತು ಶಿರಶೃಂಗನ ಕತೆ ಬೇರೆಯಾಗಿಯೇ ನಿಂತುಕೊಳ್ಳುತ್ತವೆ. ಹೀಗೆ ಸಿರಸಂಗಿ ಕಾಳಮ್ಮನ ಅಭ್ಯಾಸ ಅನೇಕ ಸಮಸ್ಯೆ – ಸಂದೇಹಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ವಿದ್ವಾಂಸರು ಈ ಬಗ್ಗೆ ವಿಶೇಷ ಗಮನ ಕೊಡುವುದು ಅವಶ್ಯವೆನಿಸುತ್ತದೆ.

* * *


[1]     ಕರ್ನಾಟಕ ಜನಪದ ಕಾವ್ಯಗಳು, ಸಂ. ಸಂ. ಡಿ. ಲಿಂಗಯ್ಯ, ದಿನಕರ ಪ್ರಕಾಶನ – ೧೯೭೬.