ಮೊದಲಿಗೆ ……………

ಉತ್ತರ ಕರ್ನಾಟಕದಲ್ಲಿಯೇ “ಸಿರಸಂಗಿ ಕಾಳಮ್ಮ” ನನ್ನು ಬಿಟ್ಟರೆ ಈ ಹೆಸರಿನ ಸುಪ್ರಸಿದ್ಧ ದೇವತೆ ಬೇರೆ ಈ ಭಾಗದಲ್ಲಿ ಇಲ್ಲವೆಂದೇ ಹೇಳಬೇಕು. ಅಲ್ಲಲ್ಲಿ ಕಾಳಮ್ಮನ ಸಣ್ಣ ಪುಟ್ಟ ಗುಡಿಗಳು ಇದ್ದರೂ ಇವುಗಳಿಗೆ ಮೂಲ ಸಿರಸಂಗಿ ಕಾಳಮ್ಮನೇ ಎಂದು ಅಲ್ಲಿಯವರು ಸ್ಪಷ್ಟಪಡಿಸುತ್ತಾರೆ. ಕಾಳಮ್ಮನ ಅಸ್ತಿತ್ವ ಇಲ್ಲವೆನ್ನುವಷ್ಟು ಕಡಿಮೆ ಎಂದು ಹೇಳಬಹುದು. ಆ ಕಾರಣದಿಂದಲೇ ಏನೋ ಕಾಳಮ್ಮನ ಕುರಿತು ಶಾಸ್ತ್ರೀಯ ಅಧ್ಯಯನ ಏನೂ ಆಗಿಲ್ಲ. ಅಲ್ಲೊಂದು ಇಲ್ಲೊಂದು ಪದ್ಯಗಳು ಕಾಳಮ್ಮನ ಕುರಿತು ಜಾನಪದ ಸಂಗ್ರಹಗಳಲ್ಲಿ ಹುಡುಕಿದರೆ ಸಿಗುತ್ತವೆ. ಆ ಪದ್ಯಗಳಲ್ಲಿಯೂ ಕೂಡ ಆಕೆಯ ವರ್ಣನೆ ಪೂಜೆಯ ವಿಷಯ ಇದೆಯೇ ಹೊರತು ಬೆಳಕು ಬೀರುವಂತ ವಿಷಯಗಳು ಕಡಿಮೆ. ಲೇಖನಗಳಂತೂ ಇಲ್ಲವೇ ಇಲ್ಲ.

ಸಿರಸಂಗಿಯ ಕಾಳಮ್ಮನಾದರೂ ಇಂದು ಬಹುಮಟ್ಟಿಗೆ ನಾಗರಿಕ ದೇವತೆಯಾಗಿದ್ದಾಳೆ. ಜಾನಪದದ ಯಾವ ವಸ್ತುನಿಷ್ಠ ಆಧಾರಗಳೂ ಆಕೆಗಿಲ್ಲ. ಏನೇ ಜಾನಪದವಿದ್ದರೂ ಅದು ಇತ್ತೀಚೆಗೆ ಹುಟ್ಟಿಕೊಂಡವು. ಆದುದರಿಂದ ಪ್ರಾರಂಭದಲ್ಲಿಯೇ  ಈ ಕುರಿತಾಗಿ ನನ್ನ ಅಸಹಾಯಕತೆಯನ್ನು ಸ್ಪಷ್ಟಗೊಳಿಸುತ್ತೇವೆ.

ಸಿರಸಂಗಿ ಕಾಳಮ್ಮನನ್ನು ನಾಲ್ಕು ದೃಷ್ಟಿಕೋನದಿಂದ  ನೋಡುವ ಪ್ರಯತ್ನ ಮಾಡಬಹುದು.

೧) ಪೌರಾಣಿಕ ಹಿನ್ನೆಲೆ  ೨) ಐತಿಹಾಸಿಕ ಹಿನ್ನೆಲೆ  ೩) ಜನಪದ ಹಿನ್ನೆಲೆ  ಮತ್ತು  ೪) ಸಾಮಾಜಿಕ ಹಿನ್ನೆಲೆ.

) ಪೌರಾಣಿಕ ಹಿನ್ನೆಲೆ : ಕಥೆ. ಮುಕ್ಕಣ್ಣನನ್ನು  ಕೆಣಕಿ ಸುಟ್ಟು ಭಸ್ಮವಾದ ಕಾಮ, ಪರಮಸಾಧ್ವಿ ರಿದೇವಿಯ ಪಾತಿವ್ರತ್ಯದ ಪ್ರಭಾವದಿಂದ  ಮನಸಿಜನಾಗಿ ಮರುಜನ್ಮ ತಳೆದ, ಚಿರಂಜೀವಿಯಾದ. ಈತನ ಪ್ರಭಾವಕ್ಕೆ ವಿಭಾಂಡಕನೆಂಬ ಮುನಿ ಸಿಕ್ಕ. ಮೈದುಂಬಿ ವೀರ್ಯ ಸ್ಖಲನವಾಯುತು. ಅನಂತರ ತನ್ನ ತಪ್ಪಿನ ಅರಿವಾಯಿತು. ತನ್ನ ವೀರ್ಯವನ್ನು ಕಮಲಪುಷ್ಪದಲ್ಲಿ ಹಾಕಿದ. ಸಾರಂಗ ಅದನ್ನು ಮುಸಿ ಗರ್ಭಿಣಿಯಾಯಿತು. ಮತ್ತೆ ವಿಭಾಂಡಕನೇ ಸಾರಂಗದ ಆರೈಕೆ ಕೈಗೊಂಡ. ಹುಟ್ಟಿದ್ದು ಸಾರಂಗವಲ್ಲ. ಸಾರಂಗದಂತೆ ಕೋಡುಗಳನ್ನು ಹೊಂದಿದ್ದ ಮನುಷ್ಯಾಕೃತಿಯ ಶಿಸು. ಇದು ತನ್ನ ಮಗುವೇ ಎಂದು ಖಚಿತ ಮಾಡಿಕೊಂಡ ನವಜಾತ ಶಿಶುವಿಗೆ ತನ್ನ ತಂದೆ – ತಾಯಿ ಎಲ್ಲವೂ ವಿಭಾಂಡಕನೇ ಎಂಬುವ ಭರವಸೆ.

ಕಥೆ. ತಲೆಯ ಮೇಲೆ ಕೋಡುಗಳಿದ್ದ ಋಷಿಪುತ್ರನಾದುದರಿಂದ ಋಷ್ಯಶೃಂಗ, ಶೃಂಗ ಋಷಿ, ಶಿರ ಶೃಂಗ ಮೊದಲಾದ ಹೆಸರುಗಳಿಂದ ಕರೆಯಿಕೊಳ್ಳುತ್ತಿದ್ದ. ವಿಭಾಂಡಕನ ಮಗ ಹದಿನಾರರ ಹರೆಯ ತುಂಬಿದವ. ಸದಾ ತಪೋನಿರತನಾದ, ವೇದಾಧ್ಯಯನದ ಅಭ್ಯಾಸ ಇವನ್ನು ಬಿಟ್ಟು ಬೇರೆ ಗೊತ್ತಿರದ ಈ ಶಿರ ಶೃಂಗನಿಗೆ “ಹೆಣ್ಣು” ಅಂದರೆ ಇದು ಏನು ಎನ್ನುವ ಪ್ರಶ್ನೆ. ಗೆಲುವು ಯಾವತ್ತೂ ನನ್ನದೇ ಎಂದು ಕುಳಿತಿರುವ ಮನಸಿಜ ಅವಕಾಶಕ್ಕಾಗಿ ಕಾದು ಕುಳಿತ. ಅಂತಹ ಒಂದು ಅವಕಾಶ ಅವನನ್ನೇ ಹುಡುಕಿಕೊಂಡು ಬಂದಿತು. ಜನಕರಾಜನ ರಾಜ್ಯದಲ್ಲಿ ಸಂಭವಿಸಿದ್ದ  ಭಾರೀ ಅನಾವೃಷ್ಟಿ ಹಾಗೂ ಬರಗಾಲವು ರಾಜಕುಮಾರಿ ಶಾಂತಾಳನ್ನು ಓರ್ವ ಅಖಂಡ ಬ್ರಹ್ಮಚಾರಿಗೆ ಕೊಡುವುದರಿಂದ ನಿವಾರಣೆಯಾಗುವುದೆಂದು ಆಸ್ಥಾನದ ಗುರುಗಳು ಸೂಚಿಸಿದ್ದರು. ಆಗೂ ಶಾಂತಾಳಿಗೆ ತಕ್ಕ ಗಂಡು ಶಿರಶೃಂಗವೇ ಎಂದು ಸಲಹೆ ನೀಡಿದರು. ಈ ಅವಕಾಶವನ್ನು ಸಂಪೂರ್ಣ ಉಪಯೋಗಿಸಿಕೊಂಡ ಮನಸಿಜ ಶಿರಶೃಂಗ ಸುತ್ತಲಿನ ಪರಿಸರದಲ್ಲಿ ವಸಂತವ್ಯೂಹ ರಚಿಸಿದ. ರಾಜಕುಮಾರಿ ಶಾಂತಾ ಜುಳು ಜುಳು ಹರಿಯುವ ನೀರಿನಲ್ಲಿ ಸ್ನಾನ ಮಾಡುತ್ತಿದ್ದಂತೆಯೇ ಅವಳ ಅರೆನಗ್ನ ಸುಂದರ ದೇಹವನ್ನು ನೋಡಿ ಶಿರಶೃಂಗ ಬೆರಗಾದ. ಇದು ಯಾವ ಪ್ರಾಣಿ ? ವಿಚಿತ್ರಗೊಂದಲಕ್ಕೊಳಗಾದ. ಶಾಂತಾಳಿಂದ ಪ್ರೇಮದ ಸಲ್ಲಾಪ ಕೇಳಿಸಿತು. ಶಿರ ಶೃಂಗನಿಗೆ ಆಶ್ಚರ್ಯ, ಭಯ ಎರಡೂ, ತಂದೆಯತ್ತ ಓಡಿದ. ಆ ವಿಚಿತ್ರ ಪ್ರಾಣಿಯನ್ನು ವರ್ಣಿಸಿ ಹೇಳಿದ. ಮತ್ತೆ ತಿರುಗಿ ಬಂದು ರಾಜಕುಮಾರಿಯನ್ನೇ ಬೆಂಬೆತ್ತಿದ. ಶಿರಶೃಂಗ ಜನಕಪುರಿ ಪ್ರವೇಶಿಸಿದಾಗ ಭಾರೀ ಮಳೆಯಾಗಿ ಬರಗಾಲ ಇಲ್ಲದಂತೆ ಆಯಿತು.

ಕಥೆ.

[1]

ಶಿರಶೃಂಗ – ಶಾಂತಾರ  ಜೋಡಿ ಆದರ್ಶವೆನಿಸಿತು. ರಾಷ್ಟ್ರದ ಯಾವುದೇ ಭಾಗದಲ್ಲಿಯ ಧಾರ್ಮಿಕ ಚಟುವಟಿಕೆ ಯಜ್ಞ ಯಾಗಾದಿಗಳಲ್ಲೂ ಈ ದಂಪತಿಗೆ ಅಗ್ರಸ್ಥಾನ. ಶಿರಶೃಂಗನ ಆಶ್ರಮ ಸಾಮ್ರಾಟರನ್ನು, ಸಂಸ್ಥಾನಿಕರನ್ನು, ಋಷಿಮುನಿಗಳನ್ನು, ಸಾಧು ಸಂತರನ್ನು ಆಕರ್ಷಿಸಿತು. ಶಿರಶೃಂಗಿ ಈಗಿನ ಸಿರಸಂಗಿ ಪುರವಾಗಿ ರೂಪುಗೊಳ್ಳಹತ್ತಿತು. ಶಿರಶೃಂಗ ಸುಖ ಸಮಾಧಾನಗಳಿಂದ ಅನೇಕ ವಿಷಯಗಳನ್ನು ಅನುಭವಿಸಿದ್ದ. ಆದರೂ ಮುನಿಸಹಜವಾದ ಆಧ್ಯಾತ್ಮ ಚಿಂತನೆಯತ್ತ ತಪಸ್ಸಿನತ್ತ ಆತನ ಒಲವು ಬಲವಾಗಿಯೇ ಇತ್ತು. ಚೈತ್ರ ಪ್ರತಿಪದೆ ಯುಗಾದಿಯಂದು ಒಂದು ಮಹಾಯಜ್ಞ ಹಾಗೂ ತಪಸ್ಸನ್ನೂ ನಡೆಸುವುದು ಆತನ ಯೋಜನೆಯಾಗಿತ್ತು. ಯಾವ ವಸಂತನ ಚಕ್ರವ್ಯೂಹಕ್ಕೆ ಸಿಕ್ಕು ಸಂಸಾರಿಯಾಗಿದ್ದನೋ ಅದೆ ವಸಂತ ಋತುವಿನಲ್ಲಿ ಪಾರಮಾರ್ಥಿಕದ ಪರಮೋಚ್ಯತೆ ತಲುಪುವುದು ಆತನ ಪ್ರಬಲಾಕಾಂಕ್ಷೆಯಾಗಿತ್ತು. ಆದರೆ ನೃಗುಂದ, ನಲುಂದ, ಚುಳಕ, ಕವಿಮೀರ ಎಂಬ ಲೋಕಕಂಟಕರಾದ ರಕ್ಕಸರಿಂದ ಇಲ್ಲಿ ಧಾರ್ಮಿಕ ಚಟುವಟಿಕೆ ಸಾಧ್ಯವಿರಲಿಲ್ಲ. ಋಷಿಧರ್ಮ ಅವರನ್ನು ಕೊಲ್ಲುವುದಕ್ಕೂ ಅಡ್ಡಿಯಾಗಿತ್ತು. ಶಿರಶೃಂಗ ಕಂಚಿಯ ಕಾಮಾಕ್ಷಿಯನ್ನು ಧ್ಯಾನಿಸಿದ, ಕಾಮಾಕ್ಷಿ ಶಿರಶೃಂಗನೆದುರು ಪ್ರತ್ಯಕ್ಷಳಾಗಿ ಶಿರಶೃಂಗನ ಅಪೇಕ್ಷೆಯಂತೆ ರುದ್ರ ಕಾಳಿಯಾಗಿ, ಕಾಳಿಕಾದೇವಿಯಾಗಿ ರಕ್ಕಸರ ಸಂಹಾರಕ್ಕೆ ತೊಡಗಿದಳು. ಯುಗಾದಿ ಪ್ರತಿಪದೆಯ ಹಿಂದಿನ ಅಮವಾಸ್ಯೆಯಂದು ಹೀಗೆ ಪ್ರಕಟವಾದ ಕಾಳಿಕಾದೇವಿ ಮುಂದೆ ಐದು ಪಂಚಮಿಗಳವರೆಗೆ ಅಂದರೆ ಜೇಷ್ಠ ಶುಕ್ಲ ಪಂಚಮಿಯ ತನಕ ರಕ್ಕಸರ ಸಂಹಾರ ಮಾಡಿ ಪುನಃ ಜೇಷ್ಠ ಶುಕ್ಲ ಪಂಚಮಿಯಂದು ದೇವಸ್ಥಾನಕ್ಕೆ ಬರುತ್ತಾಳೆಂದು ಶ್ರೀಕಾಳಿಕಾದೇವಿ ಕುಲದೈವತವಾಗಿರುವ ವಿಶ್ವಕರ್ಮ ಬ್ರಾಹ್ಮಣ ಸಮಾಜದ ಪರಂಪರೆ ಹೇಳುತ್ತದೆ. ಯುಗಾದಿ ಪ್ರತಿಪದೆಯ ಹಿಂದಿನ ದಿನ ಅಮವಾಸ್ಯೆಯಂದು ದೇವಿಯ ಪಲ್ಲಕ್ಕಿ ಉತ್ಸವ, ದೇವಿಯು ರಕ್ಕಸ ಸಂಹಾರಕ್ಕೆ ಹೊರಡುವುದರ ಪ್ರತೀಕವಾಗಿದೆ. ಈ ಕಥೆಗಳು ವಾಲ್ಮೀಕಿ ರಾಮಾಯಣ, ಸ್ಕಂದ ಪುರಾಣ, ಶಿವಪುರಾಣ ಹಾಗೂ  ದೇವಿಪುರಾಣಗಳಲ್ಲಿ ಉಲ್ಲೇಖಗಳಿವೆ.

) ಐತಿಹಾಸಿಕ ಹಿನ್ನೆಲೆ : ಕ್ರಿ. ಶ. ೧೧ ನೇ ಶತಮಾನದಲ್ಲಿ ಕಲ್ಯಾಣದ ಚಾಲುಕ್ಯ ತ್ರಿಭುವನಮಲ್ಲ ಸೋಮೇಶ್ವರನ ಮಾಂಡಲಿಕ ಹಬ್ಬೆ ನಾಯಕನೆಂಬುವನು ಸಿರಸಂಗಿಯನ್ನಾಳುತ್ತಿದ್ದನು. ಸಿರಸಂಗಿಯು ಆತನ ರಾಜಧಾನಿಯಾಗಿತ್ತು. ಹಬ್ಬೆ ನಾಯಕನೇ ಶ್ರೀ ಕಾಳಿಕಾದೇವಿಯ ಗುಡಿಕಟ್ಟಿಸಿ ತನ್ನ ಹೆಸರಿನ ಹಬ್ಬೇಶ್ವರನೆಂಬ ಶಿವದೇವಾಲಯವನ್ನು ಕಾಳಭೈರವನ ಗುಡಿಯನ್ನು  ಕಟ್ಟಿಸಿದನೆಂದು ಸಿರಸಂಗಿ ದೇವಸ್ಥಾನದಲ್ಲಿ ದೊರೆತ ಶಿಲಾಲೇಖ ತಿಳಿಸುತ್ತದೆ. ಈ ಶಿಲಾಲೇಖನದಲ್ಲಿಯೂ ಸಿರಸಂಗಿಯ ಪೌರಾಣಿಕ ಕಥೆ, ಶಿರಶೃಂಗನ ಕಥೆ ಬರೆಯಲಾಗಿದೆ. ಆ ಸಮಯದಲ್ಲಿ ಗುಡಿಯ ಆಚಾರ್ಯ “ವಾಮಶಕ್ತಿದೇವ” ಎಂದು ತಿಳಿಸಿದೆ. ಮೊದಲು ಇದು “ಪಿರಿಶೃಂಗ”ವೆಂತಲೂ ಕರೆಸಿಕೊಳ್ಳುತ್ತಿತ್ತು. ಶಕೆ ೧೧೦೮ ಪೌರ್ಣಿಮೆ ಸೋಮವಾರ ಉತ್ತರಾಯಣ ಸಂಕ್ರಮಣದಂದು ಅಲ್ಲಿ ಶಕ್ತಿದೇವತೆ ಕಾಲಮ್ಮ ಪ್ರತ್ಯಕ್ಷಳಾದಳು. ಇಷ್ಟು ಶಾಸನಗಳಲ್ಲಿ ಸಿಗುತ್ತದೆ.

ವಿಜಾಪುರ ಆದಿಲ್ ಶಾಹಿಗಳು ತಾಳಿಕೋಟೆ ಕಾಳಗದಲ್ಲಿ ಪರಾಕ್ರಮ ತೋರಿಸಿದ್ದಕ್ಕಾಗಿ ಅವರಾದಿಯ ಶ್ರೀ ವಿಠ್ಠಪ್ಪಗೌಡ  ಎಂಬವರಿಗೆ ಸಿರಸಂಗಿಯ ದೇಸಗತಿ ನೀಡಿದರು. ತ್ಯಾಗವೀರ ಶ್ರೀ ಸಿರಸಂಗಿ ಲಿಂಗರಾಜ ಮನೆತನದ ಮೂಲ ಪುರುಷರೇ ಅವರು. ಇದೇ ಮನೆತನದ ಶ್ರೀ ಜಾಯಪ್ಪ ದೇಸಾಯಿ ಎಂಬುವವರು ಪೇಶ್ವೆಯವರ ದರಬಾರದಲ್ಲಿ ಮೂರು ಲಕ್ಷ ವರಹಗಳನ್ನು “ಮುಂಡೀಪಾಚ್ಚಾ” ಎಂಬ ಬಿರುದು ಪಡೆದವರಾಗಿದ್ದರು. ಹೈದರಾಲಿ ಹಾಗೂ ಟಿಪ್ಪು ದಾಳಿಯಾದಾಗ ಶ್ರೀ ಕಾಳಿಕಾ ದೇವಿ ಕೃಪೆ ಹಾಗೂ ಪೇಶ್ವೆಯವರ ಸಕಾಲಿಕ ನರವಿನಿಂದ ಸಿರಸಂಗಿ ದೇಸಾಯಿಯವರಿಗೆ ದೇವಸ್ಥಾನದ ಹಾಗೂ ಸಿರಸಂಗಿಯ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಯಿತು. ಸಿರಸಂಗಿಯ ದೇಸಾಯರ ಮನೆತನದವರು ಸಿದ್ದೇಶ್ವರನನ್ನು ಕುಲದೈವತವೆಂದು ಮನ್ನಿಸಿ ಗೌರವ ಸಲ್ಲಿಸುತ್ತಾರೆ. ಲಿಂಗರಾಜ ದೇಸಾಯಿಯವರು ಒಮ್ಮೆ ಭವಾನಿ ಕೆರೆ ಕಟ್ಟಿಸುವುದಕ್ಕಾಗಿ ತಾವೇ ಮೊದಲು ಕಾಳಿಕಾ ದೇವಿಯ ಗುಡಿಗೆ ಮಾಡಿಸಿದ ಮಾರ್ಗದ ಕಲ್ಲು ಪರಸಿಗಳನ್ನು ಕೆತ್ತಿ ಬಳಸಿದ್ದರಿಂದ ದೇವಿ ಪ್ರಕೋಪವುಂಟಾಗಿ ಕೆರೆ ಒಡೆದು ಹೋಯಿತೆಂದೂ ಹೇಳಲಾಗುತ್ತಿದೆ.

) ಜನಪದ ಹಿನ್ನೆಲೆ : ಸಿರಸಂಗಿ ಕಾಳಮ್ಮಗೆ ಪೌರಾಣಿಕ ಹಿನ್ನೆಲೆ, ಐತಿಹಾಸಿಕ ಹಿನ್ನೆಲೆ ಸಾಕಷ್ಟಿದೆ ಹೊರತು, ಜನಪದ ಹಿನ್ನೆಲೆ ವಿರಳ. ಸಿರಸಂಗಿಯ ಗ್ರಾಮ ದೇವತೆಯು ಕಾಳಮ್ಮ ಅಲ್ಲ; “ಉಡಚಮ್ಮನ” “ಉಡಚಮ್ಮನೆ”  ಕಾಳಮ್ಮನಿಗೆ ಅವಕಾಶ ಕೊಟ್ಟಳಂತೆ. ಇದಕ್ಕೊಂದು ಜನಪದ ಕಥೆ ಇದೆ. ಕಾಳಮ್ಮ ಈಗ ಇರುವ ಸ್ಥಳದಲ್ಲಿ ಇರಬೇಕೆಂದು ಮನಸ್ಸಾಯಿತು. ಆದರೆ ಆ ಸ್ಥಳವು ಉಡಚಮ್ಮ ದೇವಿಗೆ ಸೇರಿದ್ದು. ಸರಿ, ಉಡಚಮ್ಮಳನ್ನೇ ಕೇಳಿದಳು. ತನ್ನ ಹತ್ತಿರ ಇರಲು ಸ್ಥಾನ ಕೊಟ್ಟರೂ ಒಂದು ಶರತ್  ಹಾಕಿದಳಂತೆ. ಇಲ್ಲಿಗೆ ಬಂದ ಭಕ್ತರೆಲ್ಲ ಮೊದಲಿಗೆ ನನಗೆ ಭೇಟ್ಟಿಕೊಟ್ಟು ನಂತರ ನಿನ್ನ ಹತ್ತಿರ ಬರಲಿ ಅಂದಳಂತೆ. ಅದೇ ಪ್ರಕಾರ ಭಕ್ತರೆಲ್ಲ ಮೊದಲಿಗೆ ಉಡಚಮ್ಮನನ್ನು ಕಂಡು ನಂತರ ಕಾಳಮ್ಮನ ಹತ್ತಿರ ಹೋಗುವ ಪರಂಪರೆ ಬೆಳೆದು ಬಂದಿದ್ದಿತು. ಈಗ ಆ ಪರಂಪರೆ ಕಂಡು ಬರುವುದಿಲ್ಲ, ಉಡಚಮ್ಮನ ಜಾತ್ರೆ ಐದು – ಹತ್ತು ವರ್ಷಕ್ಕೊಮ್ಮೆ ಆಗುತ್ತಿದ್ದು, ಮೊದಲು ಪ್ರತ್ಯೇಕವಾಗಿ ವರ್ಷವೂ ಜಾತ್ರೆ ಮಾಡುತ್ತಿದ್ದರಂತೆ. ಈಗ ಅದು ಇಲ್ಲ. ಉಡಚಮ್ಮನ ಪೂಜಾರಿ ಬೇಡರವನು. ಆಕೆಗೆ ಮೊದಲು ಭೇಟಿ, ಬಲಿ ಕೊಡುತ್ತಿದ್ದರಂತೆ. ಈಗ ಈ ಪದ್ಧತಿ ಇಲ್ಲ. ಕಾಳಮ್ಮ ತುಂಬ ಪ್ರಸಿದ್ಧಿಯಾದಂತೆ ಉಡಚಮ್ಮ ಮೌನವಾಗಿದ್ದಾಳೆ.

ಕಾಳಮ್ಮನ ಬಗ್ಗೆ[2] ಜನಪದ ಕಥೆ, ತ್ರಿಪದಿಗಳು,ಹಾಡುಗಳು ಸಿಗುತ್ತವೆ.

ಕಥೆ. ಕಾಳಮ್ಮನಿಗೆ ಬದನೆಕಾಯಿ ತಿನ್ನಬೇಕೇಂಬ ಆಸೆ ತುಂಬಾ ಆಗಿತ್ತು. ಆದರೆ ಬದನೆಕಾಯಿ ತೊಟವನ್ನು ಕಾಯುವವರಿದ್ದಾರೆ. ೪ – ೫ ಸಲ ತೋಟಕ್ಕೆ ಬಂದು ನೋಡಿದಳು. ಕಾವಲುಗಾರ ಬಲವಾಗಿ ಕಾವಲು ನಡೆಸಿದ್ದಾನೆ. ಒಂದು ದಿನ ತೋಟ ಕಾಯುವವನು ಊಟಕ್ಕೆ ಕುಳಿತಾಗ ಇದೇ ಸಮಯವೆಂದು ಕಾಳಮ್ಮ  ಐದಾರು ಬದನೆಕಾಯಿಗಳನ್ನು ಹರಿದುಕೊಂಡು ಉಡಿಯಲ್ಲಿ ಹಾಕಿಕೊಂಡು ಹೊರಡುವಷ್ಟರಲ್ಲೇ ತೊಟ ಕಾಯುವವ ನೋಡಿಯೇ ಬಿಟ್ಟ. ಸರಿ, ಕಾಳಮ್ಮ ಓಡಲು ಪ್ರಾರಂಭ ಮಾಡಿದಳು. ತೋಟ ಕಾಯುವವನು ಆಕೆಯ ಬೆನ್ನು ಹತ್ತಿದ. ಕಾಳಮ್ಮನಿಗೆ ಗುಡ್ಡ ಏರಿ ಆಯಾಸವಾಗಿ ನೀರಡಕಡಯಾಯಿತು. ಗುಡ್ಡದಲ್ಲೇ ಒರತಿ. ತೆಗೆದು ನೀರು ಕುಡಿದಳು. ಈಗಲೂ ಗುಡ್ಡದಲ್ಲಿ ಒರತಿ ಇದೆ. ಅದಕ್ಕೆ “ಕಾಳಮ್ಮನ ಒರತಿ” ಎಂದು ಕರೆಯುತ್ತಾರೆ. ಆದರೆ ಆ ಒರತಿಯಲ್ಲಿ ಈಗ ನೀರು ಇಲ್ಲ. ಬಗ್ಗಿ ನೀರು ಕುಡಿಯುವಾಗ ಕಲ್ಲುಗಳ ಮೇಲೆ ಕಾಳಮ್ಮನ ಮೊಲೆ ಸಹಿತ ಮೂಡಿವೆ. ಅದನ್ನೂ ಅಲ್ಲಿ ತೋರಿಸುತ್ತಾರೆ. ನೀರು ಕುಡಿದು ದಣಿವಾರಿಸಿಕೊಂಡ ಕಾಳಮ್ಮ ಗುಡ್ಡದ ಮೇಲಿಂದ ಜಿಗಿದು ಗುಡಿ ಒಳಗೆ ಹೋದಳು.[3] ಜಿಗಿದಾಗ ಅವಳು ಪಾದಗಳು ಮೂಡಿವೆ. ಈಗಲೂ ಅವಕ್ಕೆ ಕಾಳಮ್ಮನ ಪಾದ ಅಥವಾ ಕಾಳಮ್ಮನ ಹೆಜ್ಜೆ ತೋರಿಸುತ್ತಾರೆ. ಓಡಿಬಂದ ಮಾರ್ಗಕ್ಕೆ “ಕಾಳಮ್ಮನ ದಾರಿ” ಎಂದು ಕರೆಯುತ್ತಾರೆ. ಈಗ ಮೂಗನೂರನಿಂದ ಮುಲ್ಲಾಪೂರದ ವರೆಗೆ ಇರುವ ದಾರಿಯನ್ನು “ಕಾಳಮ್ಮನ ದಾರಿ” ಎಂದೇ ಕರೆಯುತ್ತಾರೆ.

ಕಥೆ. ಕಾಳಮ್ಮನಿಗೆ ಬೇಜಾರಾದಾಗಲೆಲ್ಲ ಅಮಾವಾಸ್ಯೆ ರಾತ್ರಿಯಂದು ಗುಡ್ಡದ ಮೇಲೆ ಹೋಗಿ ಜಾರುಬಂಡಿ ಆಡುತ್ತಿದ್ದಳಂತೆ. ಮೇಲಿನಿಂದ ಕೆಳಗೆ ಜಾರುವುದರಿಂದ ಆಕೆಗೆ ಬೇಜಾರು ಹೋಗುತ್ತಿತ್ತಂತೆ. ಈಗಲೂ ಸಿರಸಂಗಿಯಲ್ಲಿ ಕಾಳಮ್ಮನ ಜಾರುಗುಂಡಿ ನೋಡಲು ಸಿಗುತ್ತದೆ.

ಕಥೆ.[4] ಟೀಪುಸುಲ್ತಾನ ಸಿರಸಂಗಿಗೆ ದಾಳಿ ಮಾಡಿದ ಸಮಯ. ಎಲ್ಲ ಗುಡಿ ಗುಂಡಾರಗಳನ್ನು ನಾಶಮಾಡುತ್ತಾ ಬಂದ. ಆದರೆ ಕಾಳಮ್ಮ[5]ನ ಗುಡಿ ಎಲ್ಲರಿಗೆ ಕಂಡರೂ ಈ ಟೀಪುಸುಲ್ತಾನನಿಗೆ ಕಾಣಲಿಲ್ಲ. ಕೊನೆಗೆ ಕಾಳಮ್ಮನಿಗೆ ಕೈಮುಗಿದು ಗುಡಿಯನ್ನು ನಾಶ ಮಾಡುವುದಿಲ್ಲ ಎಂದು ನುಡಿಯಲು ಗುಡಿ ಗೋಚರಿಸಿತಂತೆ. ಆಗ ಟೀಪುಸುಲ್ತಾನ ಸಂತೋಷಗೊಂಡು ಭಕ್ತಿಯ ಕಾಣಿಕೆಯೆಂದು “ಬಂಗಾರಟೀಕೆ” ಮಾಡಿಸಿಕೊಟ್ಟನಂತೆ. ಈಗ ಬಂಗಾರದ ಟೀಕೆ ಸೌಂದತ್ತಿಯ ಟ್ರೆಜರಿಯಲ್ಲಿದೆ.

ಕಾಳಮ್ಮನ ಹೆಜ್ಜೆ, ಕಾಳಮ್ಮನ ದಾರಿ, ಕಾಳಮ್ಮನ ಒರತಿ, ಕಾಳಮ್ಮನ ಜಾರುಗುಂಡಿ, ಕಾಳಮ್ಮ ಬದನೆಕಾಯಿ ಕಳವು ಮಾಡಿದ್ದು – ಇದನ್ನೆಲ್ಲ ನೋಡಿದಾಗ ಜನಪದರು ಕಾಳಮ್ಮನನ್ನೂ ತಮ್ಮಂತೆ ನೋಡಿದ್ದು ವ್ಯಕ್ತವಾಗುತ್ತದೆ.

ವಿಶ್ವಕರ್ಮ ಬ್ರಾಹ್ಮಣರೂ, ಶಿರಸಂಗಿಯ ಊರಿನ ಜನರೂ ಯುಗಾದಿಯ ದಿನ ಕಾಳಮ್ಮನಿಗೆ ಹೊಸ ಗೋದಿಯನ್ನು ಕಾಣಿಕೆ ಸಲ್ಲಿಸಿ ಅಲ್ಲಿಂದ ಪ್ರಸಾದವಾಗಿ ಪಡೆದ ಗೋದಿಯನ್ನು ಮನೆಗೆ ತಂದು ಹೊಸ ಗೋದಿಯಲ್ಲಿ ಕೂಡಿಸುತ್ತಾರೆ. ಇದರಿಂದ ಗೋದಿ ಧಾನ್ಯ ಸಂಗ್ರಹ ಸಂಪತ್ತು ಹೆಚ್ಚುತ್ತದೆ ಎಂಬ ಜನಪದ ನಂಬಿಕೆಯಿದೆ. ಅಲ್ಲಿಂದಲೇ ಗೋದಿ ಸೇವಿಸುವ ಪರಂಪರೆ ಇದೆ.

“ಕಾಳಮ್ಮ”ನ ಗುಡಿಯಲ್ಲಿ ಸಂಸಾರ ನಡೆಸುವಂತಿಲ್ಲ. ಇದು ಒಂದು ಜನಪದ ನಂಬಿಕೆ. ಅಲ್ಲಿ ಪೂಜಾರಿಗಳು ಮನೆಯಲ್ಲಿ ಕುಟ್ಟುವಂತಿಲ್ಲ; ಬೀಸುವಂತಿಲ್ಲ; ಹೊರಸು ಹಾಕುವಂತಿಲ್ಲ. “ಯಾವುದೇ ಶಬ್ದ ಕಾಳಮ್ಮ ಕೇಳಬಾರದು” ಎಂಬುದೊಂದು ನಂಬಿಕೆ. ಈಗಲೂ ಈ ಪದ್ಧತಿ ನಡೆದುಕೊಂಡು ಬಂದಿದೆ.

“ಕಾಳಮ್ಮ”ನ ಮೂರ್ತಿಯ ಬಲಗಡೆಯಿಂದ ಹೂವು ಬಿದ್ದರೆ ಕೆಲಸ ಆಗುತ್ತದೆ; ಎಡಗಡೆಯಿಂದ ಬಿದ್ದರೆ ಆಗುವುದಿಲ್ಲ ಎಂಬುದು ಜನಪದ ನಂಬಿಕೆ. ಹೆಣ್ಣು ಮಗು ಹುಟ್ಟಿದರೆ ಕಾಳಮ್ಮ ಎಂದು ಹೆಸರಿಡುವುದು ಮತ್ತು ಗಂಡು ಮಗು ಹುಟ್ಟಿದರೆ ಕಾಳಪ್ಪ ಎಂದು ಹೆಸರಿಡುವ ಹರಕೆಯ ಪದ್ಧತಿ ಈಗಲೂ ಕಂಡುಬರುತ್ತದೆ.

ಕಾಳಮ್ಮನ ಗುಡಿಗೆ ಹೋಗುವಾಗ ಎಡಗಡೆಗೆ “ಬನ್ನಿ ಮಹಾಂಕಾಳಿ” ಎಂಬ ಒಂದು ಸಣ್ಣ ಗುಡಿ ಇದೆ. ಬನ್ನಿಗಿಡ, ಅದಕ್ಕೆ ಒಂದು ಕಟ್ಟೆ, ಕಟ್ಟೆಯ ಮೇಲೆ ಸಣ್ಣ ಗುಡಿ. ಅದರೊಳಗೆ ಒಂದು ದುಂಡು ಕರೆ ಕಲ್ಲು. ಅದಕ್ಕೆ ಬನ್ನಿ ಮಹಾಂಕಾಳಿ ಎಂದು ಕರೆಯುತ್ತಾರೆ. ಕಾಳಮ್ಮನ ಪಾದಕಟ್ಟೆಯಂತಲೂ ಕರೆಯುತ್ತಾರೆ. ಜಾತ್ರೆಯ ದಿನ ಪಲ್ಲಕ್ಕಿ ಅಲ್ಲಿಯವರೆಗೆ ಬಂದು ಮರಳಿ ಹೋಗುತ್ತದೆ. ಮೂಲತಃ ಕಾಳಮ್ಮನ ಗುಡಿ ಇದೇ ಆಗಿರಬೇಕು. ಅನಂತರ ಈಗಿರುವ ಗುಡಿಯನ್ನು ಕಟ್ಟಿಸಿರಬೇಕು, ಕಾಳಮ್ಮ, ಕಾಳಭೈರವ, ಭೈರೇಶ್ವರ ಈ ಮೂರ್ತಿಗಳನ್ನು ಪ್ರತಿಷ್ಠಾಪಿಸಿರಬೇಕು. ಕಾಳಮ್ಮನ ಮೂರ್ತಿ ಉದ್ಭವ ಮೂರ್ತಿ ಎಂದು ಜನಪದರ ನಂಬಿಕೆ. ಕಾಳಮ್ಮ ಸುಂದರವಾದ ಕಪ್ಪು ಶಿಲೆಯಲ್ಲಿ ರೂಪಿತವಾದವಳು. ಅಲ್ಲಿ ಶಿಲ್ಪಿಯ ಕೈಚಳಕವನ್ನು ಗುರುತಿಸಬಹುದು. ಕಟ್ಟಿಸಿದ ಅರಸನ ಹೆಸರಿದೆಯೇ ಹಪರತು, ಆ ಶಿಲ್ಪಿಯ ಹೆಸರಿಲ್ಲ.

) ಸಾಮಾಜಿಕ ಹಿನ್ನೆಲೆ : ಬೆಳಗಾಂವ ಜಿಲ್ಲೆಯ ಸೌಂದತ್ತಿ ತಾಲೂಕಿನಲ್ಲಿ ಸಿರಸಂಗಿ ಒಂದು ಗ್ರಾಮ. ಸುತ್ತಲೂ ಗುಡ್ಡ, ನಡುವೆ ಊರು. ಊರು ಬಿಟ್ಟು ಒಂದು ಫರಲಾಂಗ ಅಂತರದಲ್ಲಿ ಕಾಳಮ್ಮನ ಗುಡಿ. ಸಿರಸಂಗಿಯಲ್ಲಿ ಒಟ್ಟು ಐದು ಸಾವಿರ ಜನಸಂಖ್ಯೆ ಇದೆ. ಸಿರಸಂಗಿಯಲ್ಲೇ ಮೂರು ಊರುಗಳೂ ಕೂಡಿವೆ. ೧) ಗೋವಿನಕೊಪ್ಪ, ೨) ಕಲ್ಲಾಪುರ, ೩) ಸಿರಸಂಗಿ. ಈ ಮೂರು ಗ್ರಾಮಗಳು ಕೂಡಿಯೇ ಸಿರಸಂಗಿ ಎಮದು ಕರೆಯುತ್ತಾರೆ. ಸಿರಸಂಗಿಯಲ್ಲಿ ಕಾಳಮ್ಮನ ಗುಡಿ ಬಿಟ್ಟು ಬೇರೆ ಗುಡಿಗಳು ನೋಡಲು ಸಿಗುತ್ತವೆ. ದುರುಗವ್ವ, ಹನುಮಪ್ಪ, ಮಾನಪ್ಪಯ್ಯನ ಗುಡಿ, ಭಾಸ್ಕರಾಚಾರ್ಯನ ಗುಡಿ, ಹಾಳೂರು ಹನುಮಂತಪ್ಪ, ವಿಠೋಬ ದೇವಸ್ಥಾನ, ಶಂಕರಲಿಂಗ ದೇವಸ್ಥಾನ, ಜೈನರ ಬಸದಿ, ಮುಸಲ್ಮಾನ ದರ್ಗಾ, ಮಲ್ಲಿಕಾರ್ಜುನ ಗುಡಿ, ಮತ್ತು ಎರಡು ಮಠಗಳಿವೆ: ಬಸಲಿಂಗಯ್ಯ ಮಠ, ಚಿತ್ರದುರ್ಗಸ್ವಾಮಿ ಮಠ. ಲಿಂಗಾಯತರು, ಕುರುಬರು, ಬೇಡರು, ಪಂಚಾಳರು (ಕಡಿಮೆ ಪ್ರಮಾಣ), ಹರಿಜನರು, ಬ್ರಾಹ್ಮಣರು (ನಾಲ್ಕು ಮನೆ), ಮುಸಲ್ಮಾನರು, ಜೈನರು, ಕ್ಷತ್ರಿಯರು, ಮರಾಠಿಗರು, ಸಿಂಪಿಗರು ಮುಂತಾದ ಎಲ್ಲ ವರ್ಗದವರೂ ಇದ್ದಾರೆ. ಇವರೆಲ್ಲರೂ ಒಮ್ಮನಸ್ಸಿನಿಂದ ಕಾಳಮ್ಮನಿಗೆ ನಡೆದುಕೊಳ್ಳುವದು ಗಮನಾರ್ಹ.

ಸಿರಸಂಗಿಯಲ್ಲಿ ವಿಶ್ವಕರ್ಮದವರು ಸ್ವಲ್ಪ ಪ್ರಮಾನದಲ್ಲಿದ್ದರೂ ಅವರ ಮನೆ ದೇವತೆಯಾದ ಕಾಳಮ್ಮ ತುಂಬ ಪ್ರಸಿದ್ದವಾದದ್ದು ಗಮನಾರ್ಹವಾದ ಅಂಶ. ಸಾಮಾಜಿಕವಾಗಿ ಮಿತವಾದ ವರ್ಗದವರಿಗೆ ಮಾತ್ರ ಪ್ರತಿನಿಧಿ ಎನಿಸಿದ್ದಾಳೆ, ಈ ಕಾಳಮ್ಮ.

ಸಿರಸಂಗಿ ಕಾಳಮ್ಮನ ಜಾತ್ರೆ :  ಕಾಳಮ್ಮನ ಪೂಜೆ ಮಾಡುವವರು ಪಂಚಾಳರು. ಇವರಿಗೆ ಇನಾಮ ಜಮೀನು ಹಾಕಿಕೊಟ್ಟಿದ್ದಾರೆ. ಪಂಚಾಳರಿಗೆಲ್ಲ ಈ ಗುಡಿಯ ಪೂಜಾರಿಯೇ “ಗುರು” ಎಂದು ತಿಳಿದಿದ್ದಾರೆ. ಪಂಚಾಳರಿಗೆಲ್ಲ ಈ ಗುಡಿಯ ಪೂಜಾರಿಯೇ “ಗುರು” ಎಂದು ತಿಳಿದಿದ್ದಾರೆ. ಅವರ ಎಲ್ಲ ಕಾಯ್ವಿಧಿಗಳನ್ನು ಈ ಗುರುಗಳೇ ಬಂದು ಪೂರೈಸುತ್ತಾರೆ. ಶುಕ್ರವಾರ ಕಾಳಮ್ಮನ ವಾರ. ಅಮವಾಸ್ಯೆಯಂದು ಕಾಳಮ್ಮನಿಗೆ ವಿಶೇಷ ಪೂಜೆ.

ಫಾಲ್ಗುಣ ಅಮಾವಾಸ್ಯೆ ಯುಗಾದಿ ಪ್ರತಿಪ್ರದೆ ಹಾಗೂ ದ್ವತೀಯೆಯಂದು ಪ್ರಮುಖ ಶಕ್ತಿ ಪೀಠವಾದ ಈ ಸಿರಸಂಗಿ ಕಾಳಮ್ಮನ ಉತ್ಸವ ಮತ್ತು ಜಾತ್ರೆ. ಅಂದಿನಿಂದ ಐದು ದಿವಸಗಳವರೆಗೆ ಜಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ರಥ ಎಳೆಯುವುದಿಲ್ಲ. (ಗೌರಿ ಹುಣ್ಣಿಮೆಯಂದು ರಥವನ್ನು ಎಳೆಯುತ್ತಾರೆ). ಕೇವಲ ಜಾತ್ರೆಯ ದಿನದಂದು ಪಲ್ಲಕ್ಕಿ ಉತ್ಸವ ನಡೆಯುತ್ತದೆ ಪಲ್ಲಕ್ಕಿಯಲ್ಲಿ ಕಾಳಮ್ಮನ ಉತ್ಸವ ಮೂರ್ತಿಯನ್ನು ಶೃಂಗಾರದಿಂದಲೂ, ವೈಭವದಿಂದಲೂ ಪೂಜೆ ಮಾಡಿ ಪ್ರತಿಷ್ಠಾಪಿಸುತ್ತಾರೆ. ದೇವಿಯ ಮುಂದೆ ರಂಗಮಂಟಪ ಮಧ್ಯದಲ್ಲಿ ನವಗ್ರಹ ಮಂಟಪ ಹಾಕಿ, ನವಗ್ರಹಗಳ ಆಹ್ವಾನ ಮಾಡಿ, ಸಕಲ ದೇವತೆಗಳನ್ನು ಪೂಜೆ ಮಾಡುತ್ತಾರೆ. ನವಗ್ರಹಗಳಿಗೆ ಅನ್ನದ ಉಂಡೆಯಲ್ಲಿ ಬಲಿ ಕೊಡುತ್ತಾರೆ. ಈ ಸಂಪ್ರದಾಯ ನೋಡಿದರೆ ಮೊದ ಮೊದಲು ನಡೆಯುತ್ತಿದ್ದ ಬಲಿಪದ್ಧತಿಯು ಸಂಕೇತವಾಗಿ ಉಳಿದುಕೊಂಡು ಬಂದಿದೆ. ಅನ್ನದಲ್ಲಿ ರಕ್ತದ ಸಂಕೇತವಾಗಿ  ಕುಂಕುಮವನ್ನು ಬೆರೆಸುವುದನ್ನು ಈಗಲೂ ನೋಡಬಹುದು. ಪಲ್ಲಕ್ಕಿಯು ಬನ್ನಿ ಮಹಾಂಕಾಳಿ ಕಟ್ಟಿಯವರೆಗೆ ಹೋಗಿ ಅಲ್ಲಿ ಅಭಿಷೇಕ ಪೂಜೆ, ಮಂಗಳಾರತಿ ಮುಗಿದ ಮೇಲೆ ಪುನಃ ಮರಳಿ ಕಾಳಮ್ಮನ ಗುಡಿಯ ಮಹಾದ್ವಾರಕ್ಕೆ ಬರುತ್ತದೆ. ಅಲ್ಲಿಗೆ ಪೂಜಾರಿಗಳು ಮಹಾದ್ವಾರವನ್ನು ಮುಚ್ಚುತ್ತಾರೆ. ದೇವಿಯ ಸ್ತೀತ್ರ ದಂಡಕವನ್ನು ಅನ್ನುತ್ತ ಹೊರಗೆ ನಿಂತು ಮಹಾದ್ವಾರದ ಕದವನ್ನು ತೆಗೆಯಿರೆಂದು ನುಡಿಯುತ್ತಾರೆ. ಆಕಾಲಕ್ಕೆ ಒಳಗಿನಿಂದ ಪೂಜಾರಿ ನೀನಾರು? ನಿನ್ನ ಹೆಸರೇನು? ಎಲ್ಲಿಗೆ ಹೋದೆ? ಹೋದ ಕಾರಣವೇನು? ಇಂಥ ಅಪರಾತ್ರಿಯಲ್ಲಿ ಏಕೆ ಬಂದೆ? ಹೀಗೆ ಎಲ್ಲಾ ರೀತಿಯಿಂದಲೂ ಸಂವಾದಗಳು ನಡೆಯುತ್ತವೆ. “ನಾನು ದೇವಿ ಕಾಲಮ್ಮ ಇದ್ದೇನೆ ಬಾಗಿಲನ್ನು ತೆರೆಯಿರಿ”, “ಪಂಚಬ್ರಹ್ಮರನ್ನೂ, ಮನುಮಯ, ತ್ವಷ್ಠ, ಶಿಲ್ಪಿ, ದೈವಜ್ಞಾನಿಗಳನ್ನೂ ಸಾಕ್ಷಿಭೂತರಾಗಿ ಮಹಾದ್ವಾರದ ಕದವನ್ನು ತೆಗೆಯಿರಿ” ಅನ್ನುತ್ತಾರೆ. ಬಾಗಿಲು ತೆಗೆದ ನಂತರ ಪುನಃ ಪಲ್ಲಕ್ಕಿ ಭೀಮರತಿ ಭಾವಿಗೆ ಹೋಗಿ ಗಂಗಾಪೂಜೆ ಮಂಗಲಾಚರಣೆಗಳನ್ನು ಮಾಡಿದ ಮೇಲೆ ಕಂಕಣ ವಿಸರ್ಜನೆ, ಕಳಸ ವಿಸರ್ಜನೆ ಮಾಡಿ ಗುಡಿಗೆ ಬರುವದು. ಈ ಎಲ್ಲ ಪದ್ಧತಿಗಳಿಗೆ  ಆಗಮಿಕ ಪದ್ಧತಿಗಳ ನಾಗರಿಕ ಹಿನ್ನೆಲೆ ಇದ್ದು, ಇಲ್ಲಿ ಜಾನಪದವನ್ನು ನೇರವಾಗಿ ಹೇಳದೆ ಪರ್ಯಾಯವಾಗಿ ಹೇಳಬಹುದಾಗಿದೆ. ಜಾತ್ರೆಯ ಮರುದಿನ ಊರಿನ ಎಲ್ಲ ಭಕ್ತರು ಏಕಾದಶಿ ಮಾಡುತ್ತಾರೆ. ದೇವಿಗೆ “ನಿಧಿ” ಅರ್ಪಿಸುತ್ತಾರೆ. ಎರಡು ದಿವಸದವರೆಗೆ ಜಾತ್ರೆಗೆ ಬಂದ ಭಕ್ತರಿಗೆಲ್ಲ  ಭೋಜನದ ಏರ್ಪಾಟು ನಡೆಯುತ್ತದೆ. ಗುಡಿಯಲ್ಲಿ ಎಲ್ಲ ಜನಾಂಗದವರಿಗೂ ಊಟ ಹಾಕಿಸುವದು ಒಂದು ವಿಶೇಷ ಸಂಗತಿ. ಜಾತ್ರೆಯ ದಿನಗಳಲ್ಲಿ ಮದುವೆ ಮಾಡಿಕೊಳ್ಳುವವರೂ, ಜವಳ ತೆಗೆಸುವವರೂ, ಹರಕೆ ಸಲ್ಲಿಸುವವರೂ ಮತ್ತು ನಿಧಿ ಅರ್ಪಿಸುವವರೂ ಕಾಣಸಿಗುತ್ತಾರೆ.

[6]ನವರಾತ್ರಿಯಲ್ಲಿ ದೇವಿಪುರಾಣ ಓದಿಸುತ್ತಾರೆ. ಒಂಭತ್ತು ದಿವಸ ಘಟ್ಟ ಹಾಕಿ ದೀಪೋತ್ಸವ ಮಾಡುತ್ತಾರೆ. ಕಾಳಮ್ಮನ ಗುಡಿಯಲ್ಲಿ “ದೀಪಮಾಲೆ” ಕಂಭ ಎತ್ತರವಾಗಿ ನಿಂತುಕೊಂಡಿದೆ.

ಪಕ್ಷಿನೋಟ : ದೈವತ್ವದ ಬೆಳವಣಿಗೆ ನೋಡಲಾಗಿ ಮೊದಲಿನ ಆಶಯ, ಎರಡನೆಯ ಆಶೆಯ ಕೊನೆಯ ಆಶಯ ಎಲ್ಲ ದೇವತೆಗಳಲ್ಲಿ ಒಂದೇ ಬಗೆಯಾಗಿ ತೋರುತ್ತವೆ. ಭಾರತಕ್ಕೆ ಅಷ್ಟೇ ಅಲ್ಲ ಇದು ಇಡೀ ಜಗತ್ತಿನ ಮಾತು.

೧) [7]“ಶಕ್ತಿ” ಪಂಥ ಉಳಿದೆಡೆಯಲ್ಲಿದ್ದರೂ, ಭಾರತದಲ್ಲಿ ವಿಶೇಷ ಮಾನ್ಯತೆ ಪಡೆಯಿತು. ಕಾಳಮ್ಮನು ಎಲ್ಲಮ್ಮ, ದುರುಗಮ್ಮ ಮುಂತಾದ ದೇವತೆಗಳಿಂದ  ಬೇರೆಯಲ್ಲ. ಆಶಯ ಪ್ರಪಂಚವೂ ಬೇರೆ ಅಲ್ಲ.

೨) ಪಂಚಾಳರು ಹಿಂದೂಧರ್ಮದ ಒಂದು ಸಮಸ್ಯೆ. ಅವರು ಇಂದು ಆರ್ಯವರ್ಗದ ಬ್ರಾಹ್ಮಣಿಕೆಯಲ್ಲಿ ಎಣಿಕೆಯಾಗುತ್ತಾರೆ. ಆದರೆ ಅವರು ಪಂಚಾಳರು “ಪಂಚಮರು!” ಶಕ್ತಿ ದೈವತ್ವವನ್ನು ಪ್ರಧಾನವಾಗಿ (ಆರ್ಯರು ಪುರುಷ ದೈವತ್ವದವರು) ಹೊಂದಿದ್ದು, ಈ ಆಶಯಗಳಿಂದ ಇವರಿಗೆ ಸ್ಪಷ್ಟವಾಗಿ ಆರ್ಯೆತರ ಪೂರ್ವ ಜನಾಂಗದ ಮೂಲವನ್ನು ಹೇಳಬಹುದು.

೩) ಬ್ರಾಹ್ಮಣರಿಂದ ಬೇರೆಯಾಗುವಲ್ಲಿ, ಇಲ್ಲವೆ ಚಾತುರ್ವರ್ಣದ ವ್ಯವಸ್ಥೆಯಲ್ಲಿ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವಲ್ಲಿ, “ಕಾಳಮ್ಮ”ನನ್ನು ಬಳಸಿಕೊಂಡರು. ಅದರಿಂದ ಕಾಳಮ್ಮನಿಗೆ ಮತ್ತು ಪಂಚಾಳರಿಗೆ ಒಂದು ಬಗೆಯಲ್ಲಿ ಅವಿನಾಭಾವವೇ ಹೊರತು ಕಾಳಮ್ಮ ಇತರ ಯಾವುದೇ ಸ್ತ್ರೀದೇವತೆಯ ಪ್ರಪಂಚದಿಂದ ಹೊರತಾದವಳಲ್ಲ.

೪) ಕಾಳಮ್ಮನನ್ನು ಈ ದೃಷ್ಟಿಯಿಂದ ಇತರ ಎಲ್ಲ ಹೆಣ್ಣು ದೇವತೆಗಳ ಮಧ್ಯೆ ಇಟ್ಟು ನೋಡಬೇಕು.

ಕಾಳಮ್ಮನ ಪದಗಳು

೧)        [8]ಕಾಳಮ್ಮನ ನಾನು ಏನು ಬೇಡುವಳಲ್ಲಾ
ಹೂವ ಬೇಡಿದೆ ತಲೆತುಂಬ | ಕಾಳಮ್ಮ
ಮಕ್ಕಳ ಬೇಡಿದೆ ಮನೆತುಂಬ.
ಕಾಳಮ್ಮ ನಾನು ಏನು ಬೇಡುವಳಲ್ಲಾ
ಹೂವ ಬೇಡೀದೆ ಜಡೆತುಂಬ | ಕಾಳಮ್ಮ
ಮುತ್ತು ಬೇಡೀದೆ ಕೈತುಂಬ.

ಕಾಳಮ್ಮ ತಾಯಿ ತೋರಮ್ಮ ಪುರುಷಾರ
ಕೀರು ಗಂಧಾದ ಚೆಲುವಾರ – ಕಮ್ಮಟೇಶ್ವರ
ತೋರಮ್ಮ ತಾಯಿ ಮರೆಯಲ್ಲಿ.

ಕಾಳಮ್ಮ ಗುಡಿಗೆ ಸುಮ್ನೆ ಹೋಗುವದಲ್ಲ
ಆರು ನೂರಡಿಕೆ ಬಿಳಿಯಲಿ – | ಬೆಳ್ಳಿ ತಟ್ಟೆ
ಪಾದಾದ ಮುಂದಿರಿಸಿ ಶರಣೆಂಬೆ.

ಕಾಳಮ್ಮ ಇರುವುದು ಏಳುಸುತ್ತಿನ ಕೋಟೆ
ಮೇಲೆ ಎರಡಂಕಾಣ ಹುಲಿಮೊಕ | ಹೂವಿನ ತೇರು
ಕಾಳಮ್ಮ ಇರುವೋದು ಕೈಲಾಸ.
……………………………………..
ಪಂಚಾರಟ್ಟೀಲಿ ಮಿಂಚಾದು ಏನಮ್ಮ
ಹಂಚಿನ ನಗಾರಿ ದೂಳಾದ | ಏರಿಮೇಲೆ
ಮಿಂಚಿವೋ ಕಾಳಮ್ನ ಹೊಸತೇರು.

ಮಧ್ಯಾಹ್ನದ ಹೊತ್ತಿನಲ್ಲಿ ಸದ್ದೇನು ನಮ್ಮ ಹಟ್ಟಿಯಲ್ಲಿ
ಮುದ್ದು ಪಂಚಾಳರ ಹಡಗಲ್ಲು | ಸುತ್ತೀಗೆ
ಸದ್ದು ನಮ್ಮಟ್ಟಿಲ್ಲಿ ನಿಲುಬಾರ.
ಹಡಗಲ್ಲು  ಮುಂದೆ ಚಿಡಗ ಕೂತೇನೆಂದ
ವರವುಳ್ಳ ತಾಯಿಗತಿ ಎಂದು ಕಾಳಮ್ಮ
ಹಿಡಿದನು ಸುತ್ತಿಗೆ ಬಲಗೈಲಿ.

* * *

[9]೨)      ಎರಡ ಪೂಜಿವಳಗ ಏಳಿಯ ಸುರಿಸ್ಯಾನಂಗ
ಢಳ ಢಳ ಹೊಳಿಯುವ ನಮ್ಮ ಕಾಳಮ್ಮನು
ಅತೀ ಸೇವೆ ಮಾಡುತ್ತಾನು ಮುದೂಳ ಅಜ್ಜನು.

ಆರ ಪೂಜೆಯೊಳಗ ಅವರ ಹೂವಿನಂಗ ಅರಭಾಟ
ನಮ್ಮ ಕಾಳಮ್ಮನು ಅಕೀ ಸೇವೆ ಮಾಡುತ್ತಾನು
ಮುದೋಳ ಅಜ್ಜನು.

ಏಳು ಪೂಜಿಯೊಳಗ ಎಳ್ಳ ಹೂವಿನಾಂಗ ಒಳ್ಳಾಕಿ
ಬಹಳ ನಮ್ಮ ಕಾಳಮ್ಮನು ಅಕೀ ಸೇವೆ ಮಾಡುತಾನ
ಮುದೋಳ ಅಜ್ಜನು.

ಎಂಟು ಪೂಜಿಯೊಳಗ ಗಟ್ಟಿನಾದಿನಾಗ ಏಕಾಕೃನಾಗಳ
ನಮ್ಮ ಕಾಳಮ್ಮನು ಅಕೀ ಸೇವೆ ಮಾಡುತಾನು
ಮುದೋಳ ಅಜ್ಜನು.

ಒಂಭತ್ತು ಪೂಜಿಯೊಳಗ ಮುತ್ತೆರಿ ಜಡವೆತ್ತ
ಮುದ್ದಾಗಿ ಕೂತಾಸ ಕಾಳಮ್ಮನು ಅಕಿ ಸೇವೆ ಮಾಡುತ್ತಾನ
ಮುದೋಳ ಅಜ್ಜನು.

*          *          *

[10]೩)     ಲೈನ ಮಾರ್ಗದಂತ ಐದು ಅಕ್ಷರಕೊಡು
ಕೋಗಿಲ ಸ್ವರಕೊಡು ಕಾಳಮ್ಮನು
ಕೋಗಿಲೆ ಸ್ವರಕೊಟ್ಟು ಕೂಗ್ಯಾಡಿ ಹಾಡತೇವ
ಗಡಿಯಾಳ ಬಾರಿಸಿದಂಗ ಕಾಳಮ್ಮನು
ಗಡಿಯಾಳ ಬಾರಿಸಿದಾಂಗ ತಡವ ಮಾಡುವಂದಿಲ್ಲ
ಗುಡಿಗೆ ಬಂದೇವು ತಾಯಿ ಕಾಳಮ್ಮನು.
ಎಚ್ಚರಲಿ ನೀನು ಹಾಡು ಹುಚ್ಚನನ ಆಳಮಗನ
ಪಾದಕ ಬೀಳೆಂದಳು ಕಾಳಮ್ಮನು.
ಪಾದಕ ಬಿದ್ದಾಂವ ಪುರುಷನಾಗತಾನ
ಹಾದಿನಾಥ ಗುರು ಕಾಳಮ್ಮನು.
ಹಾದಿ ನಾಥ ಗುಜ್ಜಿ ಮಂಡಲೋ
ಹಿಂದಕ ಸರಿಸ್ಯಾಳೊ ಕಾಳಮ್ಮನು
ಹಿಂದಕ ಸರಿಸಿ ಬಂದೂಕ ಸುರಸರನ
ತರಬಿ ಕೇಳತಾಳ ಕಾಳಮ್ಮನು
ತರಬಿ ಕೇಳತಾಳ ಬಡದ ಚಲ್ಲಿದಂಗ
ಗಗನಕ್ಕೆ ಹಾರಿಸಿದಾಳ ಕಾಳಮ್ಮನು
ಗಗನಕ್ಕೆ ಹಾರಿಸಿ ಹೋಗಿನಿಂತ ಮಾತ್ಹೇಳಿ
ಸಿಗಲಾರದೇ ತಾ ಹೋದಳು ಕಾಳಮ್ಮನು
ಸಿಗಲಾರದ ತಾ ಹೋಗಿ ಶಿವಭಕ್ತರ ಮನೆಗೆ ಹೋಗಿ
ಜರದ ಮಡಿ ಬೇಡ್ಯಾಳ ಕಾಳಮ್ಮನು.
ಜರದ ಮಡಿಯ ಗರ್ದಿಲಿ ಉಟಕೊಂಡು
ಆರುಸಾವಿರ ಡೊಳ್ಳು ಕಾಳಮ್ಮನು
ಆರುಸಾವಿರದ ಮೂರು ಸಾವಿರದ ಡೊಳ್ಳು
ಮುನ್ನೂರದ ಚಿತ್ತರಗಿ ಕಾಳಮ್ಮನು.
ಮುನ್ನೂರ ಚಿತ್ತರಗಿ ಮುತ್ತಿನ ಪಲ್ಲಕ್ಕಿ
ಮುಂದು ಹಾಕಿಕೊಂಡಳು ಕಾಳಮ್ಮನು.
ಮುಂದು ಹಾಕಿಕೊಂಡಳು ಕುತನಗಾದಿಯಮೇಲೆ
ರತನದಂಥ ತಾಯಿಂಕಾಳಮ್ಮನು.
ರತನದಂಥ ತಾಯಿ ರಥವೇರಿ ಬರುವಾಗ
ಓಣ್ಯಾಗ ಐಶ್ವರಿ ಕಾಳಮ್ಮನು.
ಓಣ್ಯಾಗ ಐಶ್ವರಿ ಸಿಮ್ಯಾಗ ಐಸಿರಿ
ತುಂಬಿ ತುಳಕತಾಳ ಕಾಳಮ್ಮನು.
ತುಂಬಿ ತುಳಕತಾಳ ಕಾಳಮ್ಮನು
ಸಿರಸಂಗಿ ಎಂಬುವ ಗ್ರಾಮವನ್ನು
ಆಕಿಯ ನಾಮದ ಸ್ಮರಣೆ ಮಾಡುವೆನು.

*          *          *

[11]೪)    ಬಂದಾಕಾಳವ್ವ ನಿಂದಾರು ಊರ ಮುಂದೆ
ದೂಳತಾವಲ್ಲ ದೂಳು ಮರಿಯ ಕಾಳವ್ವ
ಒಡೆಯಲ್ಲ ಕಾಳವ್ವ ಗುಡಿಗೆ ಹೋಗಲ್ಲ.
ಹಂಚಿತಲಿಲ್ಲ ಮಿಂಚೀದು ಏನಯ್ಯ
ಕಂಚಿನ ಕುದುರೆ ಕಡಿವಾಣ ಕಾಳವ್ವ
ಮಿಂಚೀತ ನೀದಿ ಮರೆದಾಳೋ.
ಅಟ್ಟ ಮಡಿಕೆ ನೂರು ಸುಟ್ಟ ಮಡಿಕೆ ಮುನ್ನೂರು
ಸಂಬರದ ಮಡಿಕೆ ಎಂಬೈನೂರು – ಕಾಳವ್ವ
ಅವಂದಡೀಗ ದಾಳಿ ಹೊಡೆದಾಳು.

*          *          *

[12]೫)    ಆದಿಶಕ್ತಿಯ ಮೇಲೆ ಭೇದ ಮಾಡಬೇಡ
ಪಾದ ಹಿಡಿದು ಮುಕ್ತಿಯ ಪಡೆ.
ಬೇಡಿಕೊಂಡು ನೀವು ಕೋಣನೆ ಕಡಿಯುತಿರಿ
ಊರಿಗೊಂದು ಮಾರಮ್ಮನ ಗುಡಿ.
ವಜ್ರಮಾಣಿಕ್ಯದ ದರ್ಜೆ ಮಾಡಿದರೆ
ಉಜ್ಜನಿಯ ಮಾಹಾಂಕಾಳಿ ಗುಡಿ
………………………………………
………………………………………
ದೇಶದೊಳಗೆ ಬಹು ಬೇಸಿ ಕಾಣುವುದು
ಕಾಳಿಪುರದ ಈಶ್ವರಿಯ ಗುಡಿ.
ಚೈತ್ರಮಾಸದಾಗೆ ಜಾತ್ರೆಯಾಗುವದು
ಶಿರಾಸಂಗಿ ಕಾಳವ್ವನ ಗುಡಿ.
ವರ್ಷಕ್ಕೊಂದು ದಿನ ಸಿಡಿಯುವುದು
ಮಜ್ಜೂರದಾಗ ದುರಗವ್ವನ ಗುಡಿ.

*          *          *


*      ಕಾಳಿ = ಕಪ್ಪಾಗಿರುವಳು ; ಕಾಳಿ = ಭಯಂಕರ ವೇಷ ತಾಳಿದ ಸ್ತ್ರೀ

ಕಾಳಿಕೆ = ಕಾಳಿಕಾದೇವಿ, ಕಪ್ಪುತನ, ಅಮವಾಸ್ಯೆಯ ರಾತ್ರಿ,

ಕಪ್ಪಾಗಿರುವ – ಅಮ್ಮ = ಕಾಳಮ್ಮ ; (ಜನಪದರು ಹೇಳುವ ಮಾತು – ಕಾಳಗವನ್ನು – ಮಾಡಿದ ಅಮ್ಮ = ಕಾಳಮ್ಮ.) (ಕಪ್ಪು ಬಣ್ಣ ಹೊಂದಿದವಳು ಕಾಳಮ್ಮ ಇದು ಸರಿ.)

[1]      ‘ಸಿರಸಂಗಿಯಲ್ಲಿ ವಸಂತ’ ಲೇ: ನಾರಾಯಣ ಘಳಗಿ, ಸಂಯುಕ್ತ ಕರ್ನಾಟಕ. ದಿ : ೧೫ – ೦೧- ೮೦. ಈ ಲೇಖನ ನನಗೆ ತುಂಬಾ  ಸಹಾಯ ಒದಗಿಸಿದೆ. ಅವರಿಗೆ ಚಿರ ಋಣಿ.

[2]     ಜನಪದ ಕಥೆಗಳಲ್ಲಿ “ಕಾಳಮ್ಮನ ಗುಡಿ” ಗಳು ಬರುವ ಸಂದರ್ಭಗಳು ಸಾಕಷ್ಟು ಸಿಗುತ್ತವೆ. (ಉದಾ : ನಾಯಕ ಹೊರಟ ಊರಹೊಗೆ ಕಾಳಮ್ಮನ ಗುಡಿ. ಆಕೆಯ ಪ್ರತ್ಯಕ್ಷಳಾಗಿ ಮೂರು ಮಂತ್ರದ ಹಳ್ಳ ಮಂತ್ರಿಸಿ ಕೊಟ್ಟು ಆಶೀರ್ವಾದ ಮಾಡಿದಳು. ಮುಂ.) ಈ ರೀತಿ ನೋಡಬಹುದು.

[3]     ಕಾಳಮ್ಮನ ಬಗ್ಗೆಯೇ ಒಂದು ಜನಪದ ಕಥೆ ಸಿಗುತ್ತದೆ. ಒಂದು ಮುದುಕಿ ಕಾಳಮ್ಮನ ಗುಡಿಗೆ ಹೋಗಿ ಊಟಕ್ಕೆ ಕುಳಿತಿದ್ದು. ಕಾಳಮ್ಮ ನನಗಷ್ಟು ಕೊಡು ಎಂದು ಕೇಳಿದ್ದು, ಮುದುಕಿ ಕೊಡಲಾರದ್ದು. ಮರುದಿನ ಪೂಜಾರಿ ಬಂದು ನೋಡ್ತಾನೆ ಕಾಳಮ್ಮ ಸೆಟಕೊಂಡು ಮುಖ ಆಚೆಗೆ ತಿರುವಿ ಕುಳಿತಿದ್ದು ಮುಂ. ಈ ರೀತಿ ಮುಂದುವರಿಯುತ್ತದೆ.

[4]     ಟೀಪುಸುಲ್ತಾನ ಕೊಟ್ಟ “ಬಂಗಾರದ ಟೀಕೆ” ಈಗ ನೋಡಲು ಸಿಗುತ್ತದೆ. ಅಂದಾಗ ಈ ಕಥೆ ಜನಪದ ಕಥೆ ಎನಿಸಲಾರದು. ಆದರೆ ಈ ಸಂದರ್ಭದ ಹಿಂದೆ ಕಟ್ಟಿರುವ ಕಥೆ ಮಾತ್ರ ಜನಪದರದು.

[5]     ಜನಪದ ಗಾದೆಗಳಲ್ಲೂ ಕಾಳಮ್ಮನನ್ನು ಗುರುತಿಸಬುಹುದು ಉದಾ : ೧)”ಕಾಳಕ್ಕ” ಅನ್ನುಕಿಂತ “ಚೆನ್ನಕ್ಕ” ಅನ್ನೋದು ಮೇಲು. ೨) ಕಾಳಿಗ್ಯಾಕೆ ಕಣ್ಣಪ್ಪ ಹೋಳಿಗ್ಯಾಕೆ ಹೆಣ್ಣುಂಟು. ೩) ಕಾಳಿದು ಕರಗೆ, ಬೋಳಿದು ಬೆಳ್ಳಗೆ.

[6]      ನವರಾತ್ರಿ – ವಿಜಯದಶಮಿಯ ದಿನಗಳಲ್ಲಿ ಶಕ್ತಿ ಸ್ವರೂಪಿಣಿಯರಾದ ಲಕ್ಷ್ಮೀ – ಸರಸ್ವತಿ, ಕಾಳಿಯರನ್ನು ಹಿಂದೂಗಳು ಉಪಾಸನೆ ಮಾಡುತ್ತಾರೆ. ಮಳೆ, ಬೆಳೆ, ಧನ, ಸಂತಾನ, ಶ್ರೇಯಸ್ಸು, ಮೊದಲಾದ ಪ್ರಾಪ್ತಿಯೆಲ್ಲ ದೇವಿಯ ಕೃಪೆಯಿಂದ ಎಂಬ ನಂಬಿಕೆ ಈಗಲೂ ಇದೆ. ಹಿಂದೆ ಇತ್ತು.

[7]     ಶಕ್ತಿ ಪೂಜೆ ಬಹು ಹಿಂದೆ ಕಾಣಬಹುದು. ವೇದದಲ್ಲಿನ ದೇವೀಸೂಕ್ತ, ಶ್ರೀ ಸೂಕ್ತ ಮತ್ತು ದುರ್ಗಾಸೂಕ್ತಗಳು ವೇದಗಳ ಕಾಲದ ಪ್ರಮಾಣ್ಯಕ್ಕೆ ಆಧಾರವಾಗಿವೆ. ಕೇನ, ತೈತ್ತರೀಯ, ಶ್ವೇತಾಶ್ವತರ ಉಪನಿಷತ್ತುಗಳಲ್ಲಿಯೂ ಶಕ್ತಿ ಪೂಜೆಯ ಸೂಕ್ತಗಳಿವೆ.

[8]      ‘ನಾನೆದ್ದು ನೆನೆವೇನು’-ಸಂ: ಸ.ಚ. ಮಹದೇವನಾಯಕ ಪ್ರ. ಕಾವ್ಯಾಲಯ, ಮೈಸೂರು. ೧೯೭೧, ಪು. ೬, ೭.

[9]     ಈ ಪದ್ಯವನ್ನು “ಸಿರಸಂಗಿ” ಗ್ರಾಮದಲ್ಲಿ ಸಂಗ್ರಹಿಸಿದ್ದು

[10]     ಈ ಪದ್ಯವನ್ನೂ “ಸಿರಸಂಗಿ” ಗ್ರಾಮದಲ್ಲಿ ಸಂಗ್ರಹಿಸಿದ್ದು.

[11]    ಜಾನಪದ ರಸಗಂಗೆ : ಸಂ: ಸ.ಚ. ಮಹದೇವನಾಯಕ, ಕಾವ್ಯಾಲಯ ಪ್ರಕಾಶಕರು, ಮೈಸೂರು – ೧೯೬೨. ಪು. ೧೫

[12]     ಡೊಳ್ಳಿನ ಹಾಡು : ಸಂ: ಎಸ್. ಬಸವರಾಜ, ಯಕ್ಷ ಪ್ರಕಾಶನ, ಮೈಸೂರು – ೯ ೧೯೭೮. ಪು. ೧೦೪ – ೧೦೫