ಪ್ರಾಕೃತಿಕತೆಯಿಂದ ಸಾಂಸ್ಕೃತಿಯತ್ತ ಸಾಂಸ್ಕೃತಿಕತೆಯಿಂದ ನಾಗರಿಕತೆಯತ್ತ ಸಾಗುವುದು ಮಾನವ ಜೀವನ ವಿಕಾಸದ ಒಂದು ಕ್ರಮ. ಈ ಒಂದೊಂದು ಮಜಲುಗಳಲ್ಲೂ ಮಾನವನ ಗುಣ ಸ್ವಭಾವಗಳು, ಆಚಾರ ವಿಚಾರಗಳು, ನಂಬಿಕೆ ಸಂಪ್ರದಾಯಗಳು ಅಡುಗೆ, ಉಡುಗೆ ತೊಡುಗೆಗಳು ಸಹ ಸಾಕಷ್ಟು ಮಾರ್ಪಾಡುಗೊಳ್ಳುವುದು ಸ್ವಾಭಾವಿಕವಾದ ಪ್ರಕ್ರಿಯೆ. ಈ ಮಜಲುಗಳ ಜೀವನ ವಿಧಾನದ ಪರಿಪೂರ್ಣ ದಾಖಲಾತಿ ಮಾನವನಿಗಿನ್ನೂ ಸಾಧ್ಯವಾಗಿಲ್ಲ. ದಾಖಲಾದ ಇತಿಹಾಸಕೂಡ ಬಯಾಸ್ಡ ಎಂಬ ಕಾರಣದಿಂದ ಅಮೇರಿಕಾ ಮೊದಲಾದ ರಾಷ್ಟ್ರಗಳಲ್ಲಿ Oral History  ಅರ್ಥಾತ್ ಮೌಖಿಕ ಸಂಪ್ರದಾಯ ಮನ್ನಣೆಗೊಳ್ಳುತ್ತಿರುವುದು ಜೀವನದ ಹಿನ್ನೋಟಗಳ ಸಹಜ ಹೆಜ್ಜೆಗುರುತುಗಳಿಗೆ ಬೆಲೆಕಟ್ಟುವ ಗಟ್ಟಿ ವಿಧಾನವೆಂದೇ ಹೇಳಬೇಕು ಮಲಿನಗೊಂಡ ಪರಿಸರದಲ್ಲಿ ಉಸಿರುಗಟ್ಟಿದ ನಾಗರಿಕ ಸಾಂಸ್ಕೃತಿಕತೆಯನ್ನು ಜಿಗಿದು ಪ್ರಾಕೃತಿಕತೆಯತ್ತ ದಾಪುಗಾಲು ಹಾಕುತ್ತಿರುವುದು ಜೀವನದ ಹಿಮ್ಮರಳುವಿಕೆಗೊಂದು ದಿಕ್ಸೂಚಿಯೆಂದೇ ತೋರುತ್ತದೆ. ಕನ್ನಡಿಗರು ಮಾನವ ಕುಲದ ನಾಗರಿಕತೆಗೆ ಆಂಶಿಕ ಕಾರಣರಾದರೆಂಬ ಸಂಗತಿಯನ್ನು ಫಾದರ್ ಹೆರಾಸ್ ತಿಳಿಸುತ್ತಾರೆ.ಕನ್ನಡ ನಾಡಿನ ಮತ್ತು ಜನರ ಕಾಲವನ್ನು ಹರಪ್ಪಾ ಮತ್ತು ಮೊಹೆಂಜೊದಾರೊ ನಾಗರಿಕತೆಯ ಯುಗಕ್ಕೆ ತೆಗೆದುಕೊಂಡು ಹೋಗಿ ಪ್ರಸ್ತಾಪಿಸುತ್ತ

“The future excavations – will all prove a statement to be true, viz that the origin of the Kannadiga happens to be Karnataka itself and that the is partilly responsibele for the civilisation of mankind ”

ಪ್ರಸಕ್ತ ಸಮಾಜವನ್ನು ವಿವೇಚಿಸುವ ಯಾವನೇ ವ್ಯಕ್ತಿ ಅದು ನವನಾಗಕವಾದುದೆಂದು ಪರಿಭಾವಿಸದೆ, – ಅದು ತನ್ನಲ್ಲಿ ಪ್ರಾಕೃತಿಕತೆ, ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ತನ್ನಲ್ಲಿ ಗರ್ಭೀರಿಸಿಕೊಂಡಿರುತ್ತದೆಂಬುದನ್ನು ಅರಿಯಬೇಕಾಗುತ್ತದೆ. ಉಡುಗೆ, ತೊಡಿಗೆ, ಕಲೆ, ವೈದ್ಯ ಯಾವುದೇ ಸಂಗತಿ ಮಿಶ್ರ ಸಂಸ್ಕೃತಿಯಾಗಿ ತನ್ನನ್ನು ಅಭಿವ್ಯಕ್ತಗೊಳ್ಳುತ್ತಿರುವುದು ಅನಿವಾರ್ಯವಾಗಿದೆ. ಇದಕ್ಕೆ “ಕಾಲ” ಬಹುಮಟ್ಟಿಗೆ ಹೊಣೆಗಾರಿಕೆಯನ್ನು ಹೊತ್ತು ನಿಲ್ಲುತ್ತದೆ.

ಈ ಹಿನ್ನೆಲೆಯಲ್ಲೇ ನಾವು ಅಡುಗೆಯ ವಿಷಯವನ್ನು ವಿವೇಚಿಸಬೇಕಾಗುತ್ತದೆ. ಇಂದಿನ ಗೋಷ್ಠಿಗಳು ಪ್ರಾದೇಶಿಕ ಹಿನ್ನೆಲೆಗೆ ಒತ್ತುಗೊಟ್ಟು ನಡೆಯುವ ವೈಜ್ಞಾನ ವಿಧಾನದಿಂದ ಕೂಡಿವೆ.

ದಕ್ಷಿಣ ಕರ್ನಾಟಕವು ಹಳೆಮೈಸೂರಿನ ಮಂಡ್ಯ, ಮೈಸೂರು ಬೆಂಗಳೂರು, ತುಮಕೂರು, ಹಾಸನ, ಶಿವಮೊಗ್ಗ ಮುಂತಾದ ಸಹ್ಯಾದ್ರಿ ಶ್ರೇಣಿಗಳನ್ನು ಹೊಂದಿರುವ ವಿಸ್ತಾರವಾದ ಪ್ರದೇಶ, ಘಟ್ಟ ಪ್ರದೇಶವನ್ನೊಳಗೊಂಡ ಅರಣ್ಯ ಸಂಪತ್ತಿನ ಸರಹದ್ದಿನಲ್ಲೇ ವಿಶಾಲವಾದ ಬಯಲುನಾಡು ಹಾಸಿಮಲಗಿದೆ. ಕಾವೇರಿ, ಭದ್ರೆ, ತುಂಗಭದ್ರೆ, ಹೇಮಾವತಿ , ಕಪಿಲಾ, ಶಿಂಕಾ,ಸುವರ್ಣಾ ವತಿ, ಲಕ್ಷಣತೀರ್ಥ ಮುಂತಾದ ನದಿಗಳು ವೈವಿಧ್ಯಮಯವಾದ  ಅಡುಗೆಗಳಿಗೆ ಹೆಸರುವಾಸಿಯಾಗಿದೆ. ಮಲೆನಾಡು ಮತ್ತು ಬಯಲುನಾಡುಗಳ ಸಂಗಮ ಸ್ಥಳವಾಗಿರುವ ಹಾಸನ  ಜಿಲ್ಲೆ ವಿಶಿಷ್ಟವಾದಂತಹ ಪ್ರಾಕೃತಿಕ ಪರಿಸರವನ್ನು ಹೊಂದಿದ್ದು ತನ್ನ ಉತ್ತಮ ಹವಾಮಾನದಿಂದಾಗಿ ಬಡವರ ಊಟಿ ಎಂದೇ ಹೆಸರಾಗಿದೆ. ಸಮುದ್ರಮಟ್ಟದಿಂದ ಮೂರು ಸಾವಿರ ಅಡಿ ಎತ್ತರವಿದ್ದ  ಘಟ್ಟವಾಗಿದ್ದು ಮೂಡು ಪಡುವಣಗಳೆರಡೂ ಕಡೆಗೂ ಇಳಿಯುತ್ತಾ ಸಾಗುತ್ತದೆ. ಈಗಲೂ ಸಹ ದಕ್ಷಿಣಕನ್ನಡ ಜಿಲ್ಲೆಯ ಕರಾವಳಿ ಜನ ಹಾಸನ ಮತ್ತು ಸರಹದ್ದಿನ ಪ್ರದೇಶದವರನ್ನು ಘಟ್ಟದ ಮೇಲಿನವರು ಎಂದೇ ಕರೆಯುವುದು ವಾಡಿಕೆಯಾಗಿದೆ. ಪರಿಸರದ ಪ್ರಭಾವದಿಂದ ರೂಪಿತವಾಗುವ ಅಡಿಗೆ ಸಂಪ್ರದಾಯಕ್ಕೆ ನಿದರ್ಶನವಾಗಿ ಇಲ್ಲಿನ “ಘಟ್ಟದ ರೊಟ್ಟಿ” ಅಥವಾ ಪಯಣದ ರೊಟ್ಟಿ ಪ್ರಸಿದ್ಧಿಯನ್ನು ಪಡೆದಿದೆ.

ಹಿಂದಿನ ದಿನಗಳಲ್ಲಿ ಹಾಸನದ ಮಂದಿ ಗಾಡಿ ಕಟ್ಟಿಕೊಂಡು ಉಪ್ಪಿನ ವ್ಯಾಪಾರಕ್ಕಾಗಿ ಘಟ್ಟದ ಕೆಳಕ್ಕೆ (ಮಂಗಳೂರಿಗೆ) ಪಯಣ ಹೋಗುವುದು ವಾಡಿಕೆ. ಈ ಸಂದರ್ಭದಲ್ಲಿ ಅನೇಕ ದಿನಗಳವರೆಗೆ ಅವರಿಗೆ ಆಹಾರ ಪೂರೈಕೆಯ ಅಗತ್ಯವಿರುತ್ಯವಿರುತ್ತಿತ್ತು. ಅದಕ್ಕಾಗಿ ಪಯಣದ ರೊಟ್ಟಿ ಅಥವಾ ಘಟ್ಟದ ರೊಟ್ಟಿ ತಯಾರಾಗುತ್ತಿತ್ತು. ನೀರಾವರಿ ಇಲ್ಲದ ಆದಿನಗಳಲ್ಲಿ ತಮ್ಮ ಪರಿಸರದ ಸಾಮಾನ್ಯ ಬೆಳೆಯಾದ ರಾಗಿಯ ಹಿಟ್ಟಿನಿಂದ ಇದನ್ನು ತಯಾರಿಸುತ್ತಿದ್ದರು. ಆದರೂ ಇದು ಸಾಮಾನ್ಯ ರಾಗಿರೊಟ್ಟಿಯಲ್ಲ. ರಾಗಿಹಿಟ್ಟಿಗೆ ಕುದಿಯುವ ಬಿಸಿನಾರು ಹೊಯ್ದ ಹದಕ್ಕೆ ಬರುವಂತೆ ಚೆನ್ನಾಗಿ ಕಲಿಸಿ ಮಿದ್ದು ಅದಕ್ಕೆ ಕೆಂಪುಮೆಣಸಿನ ಖಾರದಪುಡಿ, ಹುರಿದ ಹುರಳಿ ಹುಚ್ಚೆಳ್ಳು ಜೀರಿಗೆ, ಮೆಣಸು, ಬೆಳ್ಳುಳ್ಳಿ ಬೆರಸಿ ಅಳತೆಗೆ ತಕ್ಕಂತೆ ತಟ್ಟಿ ಸರಬಿಯ ಮೇಲೆ ಬೇಯಿಸಿ ಕೆಳಗಿಳಿಸಿ ಸೌದೆ ಒಲೆಯ ಉರಿಯಲ್ಲಿ ರೊಟ್ಟಿ ಅಕ್ಕ ಪಕ್ಕಗಳನ್ನು ಕಾಯಿಸುತ್ತಾರೆ. ಇದಾದ ಮೇಲೆ ರೊಟ್ಟಿಯನ್ನು ಇದೇ ದಿನ ಪ್ರಖರವಾದ ಬಿಸಿನಲ್ಲಿ ಒಣಗಿಸುತ್ತಾರೆ. ಪಯಣ ಮಾಡುವವರಿಂಗೆ ಬಳಕೆ ಆಗುವ ಈ ರೊಟ್ಟಿ ಮೂರುತಿಂಗಳವರೆಗೆ ಕೆಡದೆ ತನ್ನ ವಿಶಿಷ್ಟ ರುಚಿಯನ್ನು ಕಾಯ್ದಕೊಂಡಿರುತ್ತದೆ. ಈ ರೊಟ್ಟಿಯ ಮಧ್ಯೆ ಬೆರಳ ಅಳತೆಗೆ ತೂತಿದ್ದು ಆ ತೂತಿಗೆ ದಾರತೂರಿಸಿ ತಮಗೆ ಬೇಕಾದಷ್ಟು ರೊಟ್ಟಿಗಳನ್ನು ಒಟ್ಟಿಗೆ ಕಟ್ಟಿಕೊಳ್ಳುತ್ತಾರೆ

ಸ್ಥಳೀಯ ಬೆಳೆಗಳನ್ನವಲಂಬಿಸಿ ಆಹಾರ ರೂಪಗೊಳ್ಳುವುದು ಈಗಾಗಲೇ ಸ್ಪಷ್ಟವಾಗಿರುವ ಸಂಗತಿ. ಭಾರತದಲ್ಲಿ ಬೆಳೆಯುವ ಎಲ್ಲಾ ಬೆಳೆಗಳು ಹಾಸನ ಜಿಲ್ಲೆಯೊಂದರಲ್ಲೇ ಬೆಳೆಯುವುದು ಅಲ್ಲಿನ ವೈವಿಧ್ಯಮಯವಾದ ನೈಸರ್ಗಿಕ ಪರಿಸರದ ದ್ಯೋತಕ. ರಾಗಿ, ಜೋಳ, ಭತ್ತ,ನೆಲಗಡಲೆ, ಸಾಸಿವೆ, ಮೆಂತೆ ಮುಂತಾದ ಧಾನ್ಯ ಪದಾರ್ಥಗಳು, ಕಬ್ಬು ಆಲೂಗಡ್ಡೆ ಹೊಗೆಸೊಪ್ಪು, ರೇಷ್ಮೆ ಮುಂತಾದ ವಾಣಿಜ್ಯ ಬೆಳೆಗಳು, ತೆಂಗು, ಅಡಿಕೆ.ಮಾವು, ಹಲಸು, ನಿಂಬೆ, ಮಾದಳ, ಚಕೋತ, ಕಿತ್ತಳೆ, ಸಪೋಟ, ಪರಂಗಿ ಮುಂತಾದ ತೋಟದ ಬೆಳೆಗಳು, ಕಾಫೀ, ಟೀ, ಏಲಕ್ಕಿ.ರಬ್ಬರ್ ಕೊಕೋ, ಗೇರು ಮುಂತಾದವು ಮಲೆನಾಡಿನ ಬೆಳೆಗಳು ಇಲ್ಲಿ ಎಡೆಮಾಡಿವೆ. ದಕ್ಷಿಣ ಕರ್ನಾಟಕದಲ್ಲಿ ತೆಂಗು ಕಬ್ಬು ಮತ್ತು ಭತ್ತ ಇಲ್ಲಿನ ಸರ್ವ ಸಾಧಾರಣ ಬೆಳೆಗಳಾದ್ದರಿಂದ ಈ ಉತ್ಪನ್ನಗಳನ್ನಾಧರಿಸಿದ ಕಾಯ್ಗಿಣು ಒಂದು ಜನಪ್ರಿಯ ತಿನಿಸಾಗಿದೆ. ಇದನ್ನು ನಾಮಗಳಿಗೆ ಎಂದೂ ಕರೆಯುತ್ತಾರೆ. ಅಕ್ಕಿ, ತೆಂಗಿನಕಾಯಿ ಮತ್ತು ಬೆಲ್ಲವನ್ನು ಅಗತ್ಯಕ್ಕೆ ತಕ್ಕಂತೆ ಬೆರೆಸಿ ಚೆನ್ನಾಗಿ ತಿರುಗಿಸಿ ಏಲಕ್ಕಿಯನ್ನು ಸೇರಿಸಿ ತಟ್ಟೆಗಳಿಗೆ ಸುರಿದು ಮಡಕೆಯ ಒಳಗಡೆ ನೀರಿನ ಹಬೆಯಲ್ಲಿ ಬೇಯಿಸುತ್ತಾರೆ. ಈ ಮಿಶ್ರಪದಾರ್ಥ ಗಿಣ್ಣಿನರೂಪು ತಾಳಿದಾಗ ಇಳಿಸಿ ಆಕೃತಿಗೆ ತಕ್ಕಂತೆ ಕೊಯ್ದು ಬಳಸುತ್ತಾರೆ. ಸಿಹಿಸ್ವಾದದ ಈ ತಿನಿಸು ಬಡವರು ಶ್ರೀಮಂತರೆನ್ನದೆ ಎಲ್ಲರೂ ಬಳಸುವ ಜನಪ್ರಿಯ ತಿನಿಸು ಹೊತ್ತು ಗೊತ್ತಿಲ್ಲದೆ ಯಾವಾಗ ಬೇಕಾದರೂ, ಯಾರೂ ಬೇಕಾದರೂ ಬಳಸುವ ಈ ತಿನಿಸು ಜನಪ್ರಿಯವಾಗಿದೆ.

ರಾಗಿಮುದ್ದೆ, ಕೋಳಿಸಾರು, ಚಿಲಕವರೆಕಾಳುಸಾರು, ಮೆಣಸಾಳೆ, ಮಜ್ಜಿಗಂಬರ, ಹಂದಿಬಾರ್ಕಿಸಾರು, ಹುಳ್ಳಿಕಾಳು ಸಾರು, ಮಳೆಹುರಳಿಸಾರು, ಸೀಗೆಸೊಪ್ಪಿನ ಸಾರು, ಬಸ್ಸಾರು, ತೆಂಗಿನಕಾಬು ಪಜ್ಜಿ, ಮೊಟ್ಟೆಪಜ್ಜಿ, ಗಂಗಳದ ದೋಸೆ ತಾಳ್ದ ಅಕ್ಕಿ ಪಾಯಸ, ಒಡೆ, ಕಜ್ಜಾಯ ಒಬ್ಬಟ್ಟು, ಚಕ್ಕುಲಿ, ಕೋಡಬೊಳೆ, ರಾಗಿರೊಟ್ಟಿ, ಅಕ್ಕಿರೊಟ್ಟಿ, ಅನ್ನ, ಸಾರು ಇತ್ಯಾದಿ ಅಡುಗೆಗಳು ಈಪ್ರದೇಶದಲ್ಲಿ ಕಂಡುಬರುತ್ತವೆ.

ವೈದ್ಯಕೀಯ ಆಹಾರಗಳು :

ಹಸಿವು ಮಾನವನ ಮೊದಲರೋಗ. ಹಸಿವಿನ ರೋಗಕ್ಕೆ ಆಹಾರವೇ ಔಷಧ. ಆದಿಮಾನವ ರೋಗಕ್ಕೆ ಪರಿಹಾರವನ್ನು ಆಹಾರದಲ್ಲೇ ಕಂಡುಕೊಂಡ, ರೋಗ ನಿಯಂತ್ರಣವನ್ನು ಸಹ ಆಹಾರದಿಂದಲೇ ಸಂಧಿಸಿದ. ಪ್ರಕೃತಿ ಚಿಕಿತ್ಸೆಯ ಪ್ರಮುಖ ಅಂಗವೇ ಇದು. “ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಗಾದೆ ಇದಕ್ಕೆ ಇನ್ನಷ್ಟು ಪುಷ್ಠಿನೀಡುತ್ತದೆ. ಸಹಜ ಭೇದಿಯನ್ನು ಅವನು ಕಾವಗಲ್ಲು ಅನ್ನದಿಂದ ವಾಸಿಮಾಡಿಕೊಳ್ಳುತ್ತಾನೆ. ಅನ್ನ ಮಾಡುವ ಸಂದರ್ಭದಲ್ಲಿ ಎಸರು ಕುದಿಯುವಾಗ ಮೂರು ಕಾದಕಲ್ಲುಗಳನ್ನು (ಬೆಂಕಿಯಲ್ಲಿ ಕೆಂಪಗೆ ಕಾಯಿಸಿದ ಕಲ್ಲುಗಳನ್ನು) ಅದರೊಳಗೆ ಸೌಟಿನ ಸಹಾಯದಿಂದ ಹಾಕುತ್ತಾರೆ. ಅನಂತರ ಸುಡುವ ಅನ್ನಕ್ಕೆ ಸಾಕಷ್ಟು ಹುಳಿಮೊಸರು ಹುಯ್ದು ಊಟ ಮಾಡುತ್ತಾನೆ. ಇದರಿಂದ ಭೇದಿ ನಿಯಂತ್ರಣಕ್ಕೆ ಬರುತ್ತದೆ. ಛಳಿಜ್ವರ (ಫ್ಲೂ) ಮುಂತಾದವುಗಳಿಗೆ ಸಸ್ಯಾಹಾರಿಗಳಾದ ಆಡಿನ ಬಾಡಿನ ಸಾರನ್ನು ಕುಡಿಸಿ ಕಂಬಳಿ ಹೊದಿಸಿ ಮಲಗಿಸುವ ಪದ್ಧತಿ ಜಾರಿಯಲ್ಲಿದೆ. ಬಾಯಿಬೊಸಳೆ (ನಾಲಿಗೆಹುಣ್ಣು)ಹುಣ್ಣುಗಳಿಂದ ಯಾತನೆಗೊಳ್ಳುತ್ತಿರುಚ ರೋಗಳಿಗೆ ಬಸಳೆ ಸೊಪ್ಪನ್ನು ಬೇಯಿಸಿ ತಿನ್ನಿಸಿ ವಾಸಿ ಮಾಡುವುದು ದಕ್ಷಿಣ ಕರ್ನಾಟಕದಲ್ಲಿ ರೂಢಿಯಲ್ಲಿದೆ ವಾತಪಿತ್ತ ಮತ್ತು ಕಫಗಳಿಂದ ರೋಗಬರುತ್ತದೆಂದು ಆಯುರ್ವೇದ ಹೇಳುತ್ತದೆ. ಆಯುರ್ವೇದ ಜಾನಪದ ವೈದ್ಯರ ಬೆಳೆದರೂಪ. ಪಿತ್ತ ಅರ್ಥಾತ್ ಉಷ್ಣಾಧಿಕದಿಂದ ದೇಹ ತತ್ತರಿಸಿದಾಗ ಬರುವ ರೋಗಗಳಲ್ಲಿ ನಾಲಿಗೆ ಹುಣ್ಣು ಸಹ ಒಂದು.  ಬಸಳೆ ಸೊಪ್ಪಿನ ಬಳಕೆಯಿಂದ ಶರೀರಕ್ಕೆ ತಂಪು ದೊರಕುತ್ತದಲ್ಲದೆ ಇದರಲ್ಲಿರುವ ಹೆಚ್ಚಿನ “ಎ” ಅನ್ನಾಂಗದಿಂದ ತ್ರಾಣದೊರೆಯುತ್ತದೆ. ಬಾಣಂತಿಯರಿಗೆ ಶೀತ ನಿವಾರಣೆಯ ಅಂಗವಾಗಿ ಹಬೆ ಆಡುವ ಬಿಸಿಯ ಅನ್ನಕ್ಕೆ ಮೆಣಸು ಬೆಳ್ಳುಳ್ಳಿ ಖಾರ (ಸರದಿಯಲ್ಲಿ ಮೆಣಸಿನಕಾಯಿಯನ್ನು ಕಾಯಿಸಿ ಅದಕ್ಕೆ ಬೆಳ್ಳುಳ್ಳಿ ಜೀರಿಗೆಯನ್ನು ಬೆರೆಸಿ ಕುಟ್ಟಿ ಪುಡಿಮಾಡಿದ ಖಾರ) ವನ್ನು ಹಾಕಿ ಕಾಯಿಸಿದ ತುಪ್ಪ ಬಿಟ್ಟು ಊಟ ಮಾಡಿಸಿ ಬೆವರುವ ಹಾಗೆ ಕಂಬಳಿ ಹೊದಿಸುತ್ತಾರೆ. ಬಾಣಂತಿಯ ಒಳಹೊರಗು ಶಾಖವಾಗಿರಲೆಂಬ ಉದ್ದೇಶದಿಂದ ಇದನ್ನು ಮಾಡುತ್ತಾರೆ.  ಪ್ರಾಚೀನ ಕಾಲದಿಂದ ಇದು ರೂಢಿಯಲ್ಲಿದೆ. ಮಾಂಸಹಾರಿ ಕುಟುಂಬದವರಾದರೆ ಇದರ ಜೊತೆಗೆ ಕೋಳಿಸಾರು ಆಡಿನ ಬಾಡಿನ ಸಾರನ್ನುಉಣಬಡಿಸುವುದಲ್ಲದೆ ಯಥೇಚ್ಛವಾಗಿ ನೆಲ್ಲಿಕರಿಯನ್ನು ತಿನ್ನಿಸುತ್ತಾರೆ. ನೆಲ್ಲಿಕರಿ ಎಂಬುದು ದಕ್ಷಿಣ ಕರ್ನಾಟಕದ ಹಾಸನ ಜಿಲ್ಲೆಯ ಬಯಲು ಪ್ರದೇಶದಲ್ಲಿರುವ ಒಂದು ವಿಶಿಷ್ಟವಾದ ಮಾಂಸದ ಅಡುಗೆ. ಆಹಾರ ವರ್ಗದಲ್ಲಿ ಇದು ನೆಂಜುಗೆಗಳ ವರ್ಗಕ್ಕೆ ಸೇರುವಂತಹದು. ಕೋಳಿಬಾಡಾಗಲಿ, ಕುರಿಬಾಡಾಗಲಿ ಅವುಗಳ ಈರಿ,ತೊಳ್ಳೆ, ಕರಳು ಮತ್ತು ಬೀಜಗಳನ್ನು ಪ್ರತ್ಯೇಕಿಸಿ ಅಗತ್ತ್ಯಕ್ಕನುಗುಣವಾಗಿ ಕತ್ತರಿಸಿಕೊಂಡು, ಬೇರೆ ಬಸಿದಿಟ್ಟುಕೊಂಡ ರಕ್ತವನ್ನು ಮಸಾಲೆಯಲ್ಲಿ ಬೆಂದ ಪದಾರ್ಥಕ್ಕೆ ಸುರಿದು ಬೇಯಿಸುತ್ತಾರೆ.ಸಾಮಾನ್ಯವಾಗಿ ಕಡ್ಲೆಕಾಳನ್ನು ಇವುಗಳ ಜೊತೆಗೆ ಬದನೆಗಾಗಿ ಬೆರಸುತ್ತಾರೆ ಹೆಚ್ಚಾಗಿ ತೆಂಗಿನ ಕಾಯಿಯ ತುಂಡುಗಳನ್ನಾಗಲು ತುರಿಯನ್ನಾಗಲಿ ಸೇರಿಸಿ ಕೊಂಚ ಬೇಯಿಸುತ್ತಾರೆ.ಇದರ ಮೂಲರೂಪ ನೆತ್ತರಲ್ಲಿ ಕರಿ ಎಂಬುದಾಗಿ ಗ್ರಾಮೀಣರ ಬಾಯಲ್ಲಿ “ತರ” ಲೋಪವಾಗಿ ನೆಲ್ಲಿಕರಿ ಎಂಬ ಸಂಗ್ರಹರೂಪ ಉಳಿದುಕೊಂಡಿದೆ.

ಆಹಾರವೇ ಔಷಧವಾಗುವ ನಿದರ್ಶನಗಳಲ್ಲಿ ಅಗಸೆ ಸೊಪ್ಪು ಪ್ರಮುಖವಾದುದು. ಹೊಟ್ಟೆಕಟ್ಟಿಕೊಂಡು ಭೇದಿ ಆಗದೆ ತೊಂದರೆಪಡುವವರಿಗೆ ಅಗಸೆ ಸೊಪ್ಪಿನ ಸಾರು ಕುಡಿಸಿದರೆ ಸಹಜವಾಗಿ ಮಲವಿಸರ್ಜನೆಯಾಗುತ್ತದೆ. ಆದ್ದರಿಂದ ಸಂಸ್ಕೃತದಲ್ಲಿ ಇದನ್ನು ವಿರೇಚಕದ ಬಳಕೆಯಿಂದ ಭೇದಿ ಹೆಚ್ಚಾದರೆ ಹಾಗೆ ನಿಲ್ಲುತ್ತದೆ. ಔಷಧೀಯ ಗುಣಗಳಲ್ಲಿ ಸಸ್ಯಕ್ಕೆ ಸಂಬಂಧಿಸಿದಂತೆ ಆಹಾರ ತತ್ವ Food  philosophy  ರೂಪಿತವಾಗುವ ಸಂದರ್ಭಗಳಲ್ಲಿ Food technology ಯನ್ನು ನೆರವಿಗೆ ತೆಗೆದುಕೊಳ್ಳಬೇಕಾಗುತ್ತದೆ. ಗ್ರಾಮೀಣರಿಗೆ ಯಾವುದೇ ತಾಂತ್ರಿಕತೆಯ ಅರಿವಿಲ್ಲದಿದ್ದರು ಅನುಭವ ತನಗೆ ತಾನೇ ಕೆಲಸಮಾಡಿಸುತ್ತದೆ.

ಈ ವರೆಗಿನ ಆಹಾರ ಪರಂಪರೆಯಲ್ಲಿ ನಡೆದಿರುವ ಸಸ್ಯಶೋಧನೆಯ ಕಾರ್ಯ ಮಹತ್ವಪೂರ್ಣದ್ದು. ಆದರೂ ಸಹ ಬಳಸಬಹುದಾದ ಬಳಸಬಾರದ ಸಸ್ಯಗಳ ವರ್ಗೀಕರಣ ಏನೇನೂ ಸಾಲದಾಗಿದೆ. ಎಕ್ಕ.ಧತ್ತೂರಿ ಗಿಡಗಳಂತೆಯೇ ವಿಷಪೂರಿತ ಸಸ್ಯಗಳ ಅರಿವು, ಆಲೆ, ಅಗಸೆ, ಅಡಿಗೆ ಸೀಗೆಯಂತೆಯೇ ಬಳಸಬಹುದಾದ ಸಸ್ಯಗಳ ಶೋಧ ಆಗಬೇಕಾಗಿದೆ. ಇತ್ತೀಚೆಗೆ ದಾಳಿಂಬೆ ಚಿಗುರು ಮತ್ತು ಕೋಣಬೇವಿನ ಎಲೆಯ ಚಿಗುರುಗಳನ್ನು ಬೆರೆಕೆ ಸೊಪ್ಪಿಗೆ ಸೇರಿಸುತ್ತಿರುವದನ್ನು ಗಮನಿಸಬಹುದು. ಬಳಕೆ ಸೊಪ್ಪಿನ ರಸಾಯನಶಾಸ್ತ್ರಜ್ಞರು (Botanist) ಮತ್ತು ರಸಾಯನಶಾಸ್ತ್ರಜ್ಞರು (Chemist) ಒಟ್ಟಿಗೆ ಕೆಲಸಮಾಡಬೇಕಾಗಿಸದೆ. ಈ ನಿಟ್ಟಿನಲ್ಲಿ ಏನೇನು ಕೆಲಸ ಆಗಿಲ್ಲವೆಂದೇ ಹೇಳಬೇಕು. ನಾಗರಿಕನಾದ ಜಾನಪದ ತಜ್ಞ (Folklorist) ಸಹ ಈ ವಿಷಯ ಕುರಿತ ತಾತ್ವಿಕ ಚಿಂತನೆ ನಡೆಯುತ್ತಾನಲ್ಲದೆ ಪ್ರಾಯೋಗಿಕ ಪ್ರಕ್ರಿಯೆಗೆ ತೊಡಗುವುದಿಲ್ಲ. ನೈಸರ್ಗಿಕವಾದ ಆಹಾರ ಬಳಕೆಯ ಶೋಧ ಪೂರ್ಣವಾಗಿ ಗ್ರಾಮೀಣ ಜನರ ಸಾಧನೆಯೆಂದೇ ಹೇಳಬೇಕು.

ಆರೋಗ್ಯ ಸಂವರ್ಧನೆಗೆ ಸತ್ವಪೂರ್ಣ ಆಹಾರವನ್ನು ಗುರುತಿಸುವಲ್ಲಿ ಸಹ ಈ ಅಜ್ಞಾತ ವಿಜ್ಞಾನಿಗಳ ಶಕ್ತಿ ದೊಡ್ಡದೆಂದೇ ಹೇಳಬೇಕು  ಹಳೆಯ ಮೈಸೂರಿನ ಪ್ರಾಂತ್ಯದಲ್ಲಿ ಹುಡುಗಿ ಋತುಮತಿಯಾದಾಗ ಸತತವಾಗಿ ಮೂರು ತಿಂಗಳ ಕಾಲ ಚಿಗಣಿ ಮತ್ತು ಕೊಬ್ಬರಿಯನ್ನು ತಿನ್ನಿಸುವ ಪರಿಪಾಠವಿದೆ. ಹುಡುಗಿ ಬೇಸತ್ತು ಬೇಡ ಎಂದರೂ ಬಿಡದೆ ತಿನ್ನಿಸುತ್ತಾರೆ. ಹಿಂದೆ ಹಳ್ಳಿಗಳಲ್ಲಿ ದೊಡ್ಡವಳಾದ ಹುಡುಗಿಯನ್ನು ಮನೆಯಲ್ಲಿಟ್ಟುಕೊಳ್ಳುವದು ಸಲ್ಲದೆಂಬ ನಂಬಿಕೆಯಿಂದ ಒಡನೆಯೇ ಮದುವೆ ಮಾಡುತ್ತಿದ್ದರು. ದೇಹದಲ್ಲಿ ಬೆಳವಣಿಗೆಯಾಗಿ ಪುರುಷ ಸ್ವೀಕಾರದ ಸಿದ್ಧತೆಯ ಶಕ್ತಿ ಸಂಚಯಕ್ಕಾಗಿ ಈ ಬಗೆಯ ಆಹಾರಗಳನ್ನು ಬಳಸುತ್ತಿದ್ದರೆಂಬ ಅಂಶ ಕ್ಷೇತ್ರಕಾರ್ಯದಿಂದ ವ್ಯಕ್ತವಾಯಿತು.

ಉಪ್ಪಿಟ್ಟು ಎಂದರೆ ಚಿಗಣಿ ಎಳ್ಳು ಬೆಲ್ಲ ಮತ್ತು ಬಲಿತ ಕಾಯಿ ಬೆರಸಿ ತಯಾರಿಸಿದ ಸಂಯುಕ್ತ ಆಹಾರ. ಜೊತೆಗೆ ಕೊಬ್ಬರಿ, ಎಲ್ಲವವು ಉಷ್ಣ ಪ್ರಧಾನ ಪದಾರ್ಥಗಳು. ಹೆಣ್ಣಿನ ದೇಹ ಪ್ರಕೃತಿಯಲ್ಲಿ ಕಾವನ್ನು ಕಾಯ್ದಿಡುವ ಅಂಶಗಳು.

ಜ್ವರ ನಿವಾರಣೆಗೆ ಆಹಾರವೊಂದನ್ನು ಔಷಧವಾ‌ಗಿ ಬಳಸುಚ ಪದ್ಧತಿ ಹಾಸನ ಜಿಲ್ಲೆಯಲ್ಲಿ ರೂಢಿಯಿದೆ. ಇದನ್ನು ಉಪ್ಪಿಟ್ಟು ಎಂದು ಕರೆಯುತ್ತಾರೆ. ಇದು ರವೆಯಿಂದ ತಯಾರಿಸಿದ ನಾಗರಿಕ ತಿನಿಸಲ್ಲ. ರಾಗಿ ಮುದ್ದೆಗೆ ಬೆಳ್ಳುಳ್ಳಿ ಮತ್ತು ಉಪ್ಪುಕಾರ ಸೇರಿ ಮಿದ್ದು ತಯಾರು ಮಾಡಿದ ಪದಾರ್ಥ. ಜೊತೆಗೆ ಈರುಳ್ಳಿ ಸೇರಿಸಿ ತಿನ್ನುತ್ತಾರೆ. ವ್ಯವಸಾಯ ಸಂಪ್ರದಾಯದಲ್ಲಿ (Agricultural tradition) ನಿರ್ದಿಷ್ಟವಾದ ಆಹಾರ ಪದಾರ್ಥಗಳ ಬಳಕೆ ದಕ್ಷಿಣ ಕರ್ನಾಟಕದಲ್ಲಿ ಬಳಕೆಯಲ್ಲಿದೆ. ಒಂದು ರೀತಿಯಲ್ಲಿ ಇದು ಋತುಮಾನ ಸಂಬಂಧ ಗಾಢವಾಗಿದ್ದು ಇಂದು ಅದು ಶಿಥಿಲವಾಗುತ್ತಿದೆ.

ಮುಖ್ಯವಾಗಿ ಸಂಕ್ರಾತಿ ಹಸಿ ಅವರೆಕಾಯಿಯ ಕಾಲ.ಆಗ ರೈತರು ರಾಗಿ ಮತ್ತು ಭತ್ತವನ್ನುಕೊಯ್ದು ಹುಲ್ಲು ಮೆದೆಗಳನ್ನು ಒಟ್ಟುತ್ತಾರೆ. ಆ ಮೆದೆಗಳು ಅವರಿಗೆ ದೈವ ಸ್ವರೂಪಿ. ಸಂಕ್ರಾತಿಯ ದಿನ ಅವುಗಳನ್ನು ಕಣದಲ್ಲಿ ಆರಾಧಿಸುತ್ತಾರೆ. ಅವರೆಕಾಯಿಯನ್ನು ಕುಸುಬಿ (ಬೇಯಿಸಿ) ತೆಗೆದುಕೊಂಡು ಹೋಗಿ ಗುಡ್ಡೆಗಳಿಗೆ ಸಿಕ್ಕಿಸುತ್ತಾರೆ.ಜೊತೆಯಲ್ಲಿ ಅನ್ನದ ಉಂಡೆಗಳನ್ನು ಮಾಡಿ ಗುಡ್ಡೆಗಳಿಗೆ ಸಿಕ್ಕಿಸುತ್ತಾರೆ. ಸ್ವಲ್ಪ ಹೊತ್ತು ಕಳೆದ ಮೇಲೆ ಕಣದಲ್ಲಿ ಕುಳಿತು ಬೇಯಿಸಿದ ಅವರೆಕಾಯಿಗಳನ್ನು ಸುಲಿದು ತಿಂದು ಊಟಮಾಡುತ್ತಾರೆ.

ಇದಕ್ಕೆ ಮುಂಚೆ ಹೊಲ ಕೊಯ್ಯುವಾಗ ಸಹ “ಹೆಚ್ಚು” ಮಾಡುವುದು ರೂಢಿಯಲ್ಲಿದೆ.ಹೆಚ್ಚು ಮಾಡಿ ಹೊಲಕೊಯ್ದರೆ ಧಾನ್ಯ ಹೆಚ್ಚುತ್ತದೆಂಬುದು ಇವರ ನಂಬಿಕೆ. ಹೊಸ ಚಟ್ಲೆ (ಚಿಕ್ಕಮಡಕೆ) ಯಲ್ಲಿ ಅಕ್ಕಿಹಾಕಿ ಅದಕ್ಕೆ ಬೆಲ್ಲ ಬೆರಸಿ ಅನ್ನಮಾಡುತ್ತಾರೆ. ಹೊಲ ಕೊಯ್ಯುವುದಕ್ಕೆ ಮುಂಚೆ ಮಸಕಲ್ಲಿನಲ್ಲಿ ಕುಡುಗೋಲಗಳನ್ನು ಮಸೆದು ಮೂರು ಅರಿಗಳನ್ನುಜೋಡಿಸಿ ಅದರ ಪಕ್ಕದಲ್ಲಿ ಹೆಚ್ಚನ್ನು ಬಾಳೆಯ ಎಲೆಯಲ್ಲಿಟ್ಟು “ಹೆಚ್ಚಲಿ ಹೆಚ್ಚಲಿ” ಎಂದು ಹೇಳಿ ಪೂಜೆ ಮಾಡುತ್ತಾರೆ. ಹಾಗೆ ಪೂಜೆ ಮಾಡಿದ ಅನ್ನವನ್ನು ದೇವರ ಪ್ರಸಾದವೆಂದು ಸ್ವೀಕರಿಸುತ್ತಾರೆ. ಅನಂತರ ಹೊಲ ಕೊಯ್ಯುತ್ತಾರೆ.

ಕಣದಲ್ಲಿ ಹುಲ್ಲು ಬಡಿದು ರಾಗಿ, ಭತ್ತ ಅಥವಾ ಯಾವುದೇ ಧಾನ್ಯವನ್ನು ರಾಶಿಮಾಡಿ “ರಾಶಿ”ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಕಾಯಿಬೆಲ್ಲ ಹಂಚುವುದು ಪದ್ಧತಿ ಸಾಮಾನ್ಯವಾಗಿ ರೈತ ತನ್ನ ಪರಿಸರದ ವಸ್ತುಗಳನ್ನೇ ಆಹಾರವನ್ನಾಗಿ ಬಳಸುತ್ತಾನೆ.

ಹಬ್ಬಹರಿದಿನಗಳಲ್ಲಿ ನಿರ್ದಿಷ್ಟವಾದ ಆಹಾರಗಳನ್ನಾಗಿ ಬಳಸುವ ವಿಧಾನ ಮಾನವ ತನ್ನ ಆದಿಮಾನತ್ವವನ್ನು ಕಳೆದುಕೊಂಡಮೇಲೆ ರೂಢಿಸಿಕೊಂಡಿರುವ ಅಂಶ. ಯುಗಾದಿ ಬಂತೆಂದರೆ ಒಬ್ಬಟ್ಟು (ಹೋಳಿಗೆ) ಕಡ್ಡಾಯ. ಇದು ಜಾತಿ ಸೂಚಕವಾದ ಆಹಾರ ನಿಧಾನಗಳನ್ನು ಪಲ್ಲಟಗೊಳಿಸಿ ಸಾರ್ಥಕತೆಯನ್ನು ತಂದುಕೊಡುತ್ತದೆ. ಇಲ್ಲಿ ಒಂದು ಸಾಮಾನ್ಯ ಸಂಸ್ಕೃತಿ. (Common culture) ಬೆಳೆಯುತ್ತದೆ. ಶೂದ್ರರಾಗಲಿ, ಬ್ರಾಣ್ಮರಾಗಲಿ, ದಲಿತವರ್ಗದವರಾಗಲಿ ಎಲ್ಲರಮನೆಯಲ್ಲಿ ಒಬ್ಬಟ್ಟು ಸ್ಥಾಯಿ.ಗೌರಿ ಗಣೇಶನ ಹಬ್ಬದಲ್ಲಿ ಕಡುಬ ಅಥವಾ ಇಂದಿನ ನಾಗರಿಕ ತಿನಿಸಾದ ಇಡ್ಲಿ. ಲಕ್ಷ ಬಂತೆಂದರೆ ವಡೆ, ಉಂಡೆ, ಉಂಡೆ, ಖರ್ಜಿಕಾಯಿ, ಚಕ್ಕಲಿ ಕೊಡಬಳೆ ಸಾಲಕ್ಕೆ ಈಗ ತರಕಾರಿ ಪಲಾವ್.

ದೀಪಾವಳಿ ಹಬ್ಬವಾದರೆ ಗಂಗಳದ ದೋಸೆ ಮತ್ತು ತಾಳದಿ ಪಾಯಸ ತಾಳ್ದ ಎಂದರೆ ಯಾವುದೇ ಬಗೆಯ ಕಾಯಿಪಲ್ಯಕ್ಕೆ ಕಟ್ಟುಂಡಿ ಬೆರಸಿ ಮಾಡುವ ಪಲ್ಯ. ಆದ್ದರಿಂದ ಅದು ಬದನೆಕಾಯಿ ತಾಳ್ದ ಆಗಬಹುದು. ಆಲೂಗಡ್ಡೆ ತಾಳ್ದ ಆಗಬಹುದು. ಆದ್ದರಿಂದಲೇ ನಾನು ಒತ್ತಿ ಹೇಳಿದ್ದು ಇಂದಿನ ಆಹಾರ ಬಳಕೆಯಲ್ಲಿ ಮಾನವ ಆದಿಮಾನವತ್ವ, ಸಾಂಸ್ಕೃತಿಕತೆ ಮತ್ತು ನಾಗರಿಕತೆಯನ್ನು ರೂಢಿಸಿಕೊಂಡಿರುತ್ತಾನೆಂದು ಹೇಳಿದ್ದು. ಹೊಸವರ್ಷದಲ್ಲಿ ಸಾಂಕೇತಿಕವಾಗಿ ಎಲ್ಲ ತರಕಾರಿಗಳನ್ನು ಬೆರಸಿ ಬೇಯಿಸಿ ಸಾರುಮಾಡುವ ಪದ್ಧತಿ ರೂಢಿಯಲ್ಲಿದೆ.

ನಾಗರ ಪಂಚಮಿ ಮತ್ತು ಶಿವರಾತ್ರಿಗಳಲ್ಲಿ ತಮ್ಟ (ತಂಬಿಟ್ಟು) ಮಾಡಿ ಆರಾಧಿಸುವ ಪದ್ಧತಿ ಇದೆ.  ಹುತ್ತವನ್ನು ಹುಡುಕಿ ಆ ಹುತ್ತಕ್ಕೆ ಹಾಲೆರೆದು ಅಣೆ ಹೂಗಳನ್ನು ಮುಡಿಸಿ ತಂಬಿಟ್ಟು ಇಟ್ಟು ಪೂಜಿಸುತ್ತಾರೆ. ನಿಜದ ನಾಗರ ಬಂದರೆ ಕೊಲ್ಲೆಂಬರು ಕಲ್ಲನಾಗರ ಕಂಡರೆ ಹಾಲನೆರೆ ಎಂಬ ವಚನವನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಮಾರಿಹಬ್ಬದಲ್ಲಿ ಸಹ ತಂಬಿಟ್ಟು ಮಾಡಿ ಅವರೆಕಾಳ ಸಾರು ಮಾಡಿ ಪೂಜಿಸುತ್ತಾರೆ. ಮಕ್ಕಳು ಹರಳು ಕೋಲಿನ ಕಂಬದ ಮೇಲೆ ಬಲ್ಬಿಟ್ಟು ಪಂಜು ಹಿಡಿಯುತ್ತಾರೆ.

ಕಲ್ಲಿಗೆ ಅನ್ನ ಹಾಕುವುದು ಶೂದ್ರ ಜನಾಂಗದವರಲ್ಲಿ ಕಂಡು ಬರುವ ದ್ರಾವಿಡ ಆರಾಧನೆಯ ಪದ್ಧತಿ, ಸತ್ತ ಪಿತೃಗಳನ್ನು ಕಲ್ಲಿನಲ್ಲಿ ಕೆತ್ತಿಸಿ ತಮ್ಮ ಜಮೀನಿನಲ್ಲಾಗಲಿ ತೋಟದಲ್ಲಾಗಲಿ ನೆಟ್ಟಿರುತ್ತಾರೆ. ರಾತ್ರಿ ಏಳುಗಂಟೆಯಾದ ಮೇಲೆ ಕೋಳಿ ಅಥವಾ ಕುರಿಯ ಮಾಂಸದಲ್ಲಿ ಮಾಡಿದ ಅಡುಗೆಯನ್ನು ತೆಗೆದುಕೊಂಡು ಹೋಗಿ ಕಲ್ಲಿನ ಮುಂದಿಟ್ಟು ಆರಾಧಿಸುತ್ತಾರೆ, ಸತ್ತವರಿಗೆ ಪಂಜೆಯನ್ನಾಗಲಿ ಸೀರೆಯನ್ನಾಗಲಿ ಸಮರ್ಪಿಸುತ್ತಾರೆ, ಸ್ವಲ್ಪ ಹೊತ್ತು ಕಳೆದ ಮೇಲೆ ಅರ್ಪಿಸಿದ ಪದಾರ್ಥಗಳನ್ನು ತಾವೇ ಸ್ವೀಕರಿಸುತ್ತಾರೆ, ಒಂದು ರೀತಿಯಲ್ಲಿ ಇದು ಬಲಿ ಪ್ರಜ್ಞೆಯ ವ್ಯಾಪ್ತಿಯಲ್ಲಿ ಬರುತ್ತದೆ. ಮಾರಿಮಸಣೆಗಳಿಗೆ ಕೋಳಿ ಕುರಿ ಬಲಿಕೊಡುವಂತೆ ಇಲ್ಲಿ ಸತ್ತವರ ಪ್ರೀತ್ಯಾರ್ಥ ಪ್ರಾಣಿಗಲನ್ನು ಬಲಿಕೊಟ್ಟು ಅಡುಗೆ ಮಾಡಿ ಬಡಿಸುತ್ತಾರೆ.ಸತ್ತವರು ಗಂಡಸರಾದರೆ ಬೀಡಿಗಳನ್ನು, ಹೆಂಗಸರಾದರೆ ಅವರು ಎಲೆ ಅಡಿಕೆ ಹಾಕುತ್ತಿದ್ದರೆ ಅವುಗಳನ್ನು ಸಮರ್ಪಿಸುತ್ತಾರೆ. ಇದು ವರ್ಷಕ್ಕೊಂದು ದಿನ ನಡೆಯುತ್ತದೆ. ದ. ಕರ್ನಾಟಕದಲ್ಲಿ ಶೂದ್ರರ, ವಾರ್ಷಿಕ ತಿಥಿಯ conception ಇಲ್ಲ. ದಿನದ ತಿಥಿ, ವಾರದ ತಿಥಿ, ವರ್ಷದ ತಿಥಿ, ಬ್ರಾಹ್ಮಣರಲ್ಲಿ ಇರುವಂಥಹದು ಪಿತೃಪಕ್ಷ ಅಥವಾ ಮಾಳವದ ಹಬ್ಬಕೂಟ ಇಂತಹದೇ ಉದ್ದೇಶದಿಂದ ಜರುಗುತ್ತಿದ್ದರೂ ಈ ಹಬ್ಬಗಳಲ್ಲಿ ಕೆಲವರು ಮಾಂಸದ ಅಡುಗೆಯನ್ನು ನಿಷೇಧಸುತ್ತಾರೆ, ಅಲ್ಲದೆ ಈ ಹಬ್ಬಗಳು ಸಾಮೂಹಿಕ ಸ್ವೀಕೃತಿಯನ್ನು  ಪಡೆದಂಥವು. ಕಲ್ಲಿಗೆ ಅನ್ನ ಹಾಕುವುದು ವ್ಯಕ್ತಿಗತವಾಗಿದ್ದು ಒಂದು ಕುಟುಂಬದ ವ್ತಾಪ್ತಿಯಲ್ಲಿ ಬರುವಂಥಹದು. ಬದುಕಿರುವವರು ಸತ್ತವರ ಆತ್ಮಶಾಂತಿಗಾಗಿ ನಡೆಸುವ ಕರ್ತವ್ಯ ಪಾಲನೆಯೆಂಬ ನಂಬುಗೆಯ ಮೇಲೆ ನಿಂತಿರುವಂತಹದು. ಜಗತ್ತು ಅಂತರ್ ರಾಷ್ಟ್ರೀಯತೆಯ ಕಡೆಗೆ ಸಾಗುತ್ತಿದೆ. ತಿಳಿದೋ ತಿಳಿಯದೆಯೋ ಮಿಶ್ರ ಸಂಸ್ಕೃತಿ ರೂಪಗೊಳ್ಳುತ್ತಿದೆ. ಹೀಗಾಗಿ ಆಹಾರ ಪದಾರ್ಥಗಳಲ್ಲಿ ನಿರಂತರ ಪ್ರಭಾವ ಪ್ರಯೋಗಗಳು ನಡೆದು, ಮಾರ್ಪಾಟುಗಳಾಗಿ ವಿಭಿನ್ನವಾದ ಹೊಸ ರುಚಿಗಳು ಕಂಡು ಬರುತ್ತಿವೆ. ಉದಾಹರಣೆ ನಮ್ಮ ಹಳ್ಳಿಗಳಲ್ಲಿ ರೂಢಿಯಲ್ಲದ್ದ ಮಾಂಸದ ಅಡುಗೆಯ ಸಾಚಾತನ ಅಥವಾ ಮೂಲಸ್ವರೂಪ ಈಗ ಉಳಿದುಬಂದಿಲ್ಲ. ಮಾಂಸದ ಜೊತೆ ಆಲೂಗಡ್ಡೆ ಸೊಪ್ಪು ತರಕಾರಿಗಳನ್ನು  ವಿವಿಧ ಬಗೆಯ ಮಸಾಲೆಗಳನ್ನು ಬಳಸಿ ಬೇರೋಂದು ರುಚಿಗೆ ಮನುಷ್ಯ ಒಗ್ಗಿಕೊಳ್ಳುತ್ತಿದ್ದಾನೆ.

ಗೊಡ್ಡು ಗಾರ ಹೋಗಿ ಪುದಿನಬೆರೆತ ಚಟ್ನಿಗೆ ಹಳ್ಳಿಗರೂ ಸಹ ತಮ್ಮನ್ನು ಅಳವಡಿಕೆ ಮಾಡಿಕೊಳ್ಳುತ್ತಿದ್ದಾರೆ ನಂಟರು ಬಂದರೆ ಬರಿಯ ಬಾಡಿನ ಎಸರು ಮಾಡುತ್ತಿದ್ದರು ಈಗ ಬಿರಿಯಾನಿ ಮಾಡಲು ತೊಡಗಿದ್ದಾರೆ. ಜಜ್ಜಬಾಡಿನ ಸಾರಿಗೆ ಬದಲು ಕೈಮ ತನ್ನ ಹಿರಿಮೆಯನ್ನು ಮೆರೆಯುತ್ತಿದೆ.