ಮಾನವನ ಆಸ್ತಿಯ (Property) ಮೊದಲ ರೂಪವೇ ಆಹಾರ. ಹಸಿವು ನಿವಾರಣೆ ಮತ್ತು ಜೀವನ ನಿರ್ವಹಣೆಗಾಗಿ ಅದರ ಅನ್ವೇಷಣೆ, ಪೂರೈಕೆಗಳು ಒಟ್ಟುಗೂಡಿ ಆತನನ್ನು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿವೆ. ಆರಂಭದಲ್ಲಿ ಅಸ್ತಿತ್ವಕ್ಕಾಗಿ ನೈಸರ್ಗಿಕ ಉತ್ಪನ್ನಗಳಾದ ಹಣ್ಣು, ಗಡ್ಡೆ ಮತ್ತು ಹಸಿಮಾಂಸವನ್ನು ತಿನ್ನುತ್ತಿದ್ದು, ಕಾಲಕ್ರಮೇಣ ಆಹಾರದ ರೂಪಬದಲಾವಣೆ ಆಯಿತು. ಅದು ದೈಹಿಕ ಅವಶ್ಯಕತೆಯಷ್ಟೇ ಆಗದೆ, ಸಮಾಜದ ಆರ್ಥಿಕ ವ್ಯವಸ್ಥೆಯೊಳಗಿನ ಬಹುಮುಖ್ಯವಾದ ಅಂಶವೆನಿಸಿತು. ಬೆಂಕಿಯನ್ನು ಬಳಸುವ ಪ್ರಕ್ರಿಯೆಯೊಂದಿಗೆ ಅಡುಗೆ ಆರಂಭಗೊಂಡು, ಆಹಾರ ಸೇವನೆಯಲ್ಲಿ ರುಚಿಭಿನ್ನತೆಗಳು ಸೃಷ್ಟಿಯಾದವು. ಬೇಟೆಮೂಲದ ಮಾಂಸದೊಂದಿಗೆ ಕೃಷಿಮೂಲದ ಸಂಪತ್ತುಗಳು ಬೆರೆತವು. ಭೌಗೋಳಿಕ ಪರಿಸರ, ನೆಲದ ಸಾರ, ಮಳೆ, ಹವಾಮಾನ, ಋತುಮಾನಗಳಿಗೆ ಅನುಸಾರ ದೊರೆಯುವ ವಸ್ತುಗಳ ಬಳಕೆಯಿಂದಾಗಿ ಅಡುಗೆಯ ಸಿದ್ಧತೆಗೆ ಒಂದು ಕ್ರಮಬದ್ಧ ನೆಲೆ ಪ್ರಾಪ್ತವಾಯಿತು. ನಂಬಿಕೆ, ಆಚರಣೆ,  ಸಂಪ್ರದಾಯಗಳಿಗೆ ತಕ್ಕಂತೆ ಹೊಸ ಹೊಸ ಸಾಧ್ಯತೆ‌ಗಳುಂಟಾಗಿ, ಒಂದು ಸಾಂಸ್ಕೃತಿ ಚೌಕಟ್ಟಿನೊಳಗೆ ವೈವಿಧ್ಯತೆ ಕಂಡು ಬಂದಿತು.

ಜನಪದ ಮೂಲದ ಅಡುಗೆಗಳಿಗೆ ಪ್ರಾದೇಶಿಕ ಮಹತ್ವವುರುವುದು ನಿಜವಾದರೂ ಪರಸ್ಪರ ಹೋಲಿಕೆ ವ್ಯತ್ಯಾಸಗಳಿರುತ್ತವೆ. ಶಿವಮೊಗ್ಗ ಜಿಲ್ಲೆಯ ಮೂರು ತಾಲ್ಲೂಕುಗಳು (ಶಿವಮೊಗ್ಗ, ಭದ್ರಾವತಿ,  ಶಿಕಾರಿಪುರ) ಅರೆಮಲೆನಾಡಿನಲ್ಲಿದ್ದರೆ, ಹೊನ್ನಾಳಿ, ಚನ್ನಗಿರಿ ಮೈದಾನ ಪ್ರದೇಶದಲ್ಲಿವೆ. ತೀರ್ಥಹಳ್ಳಿ, ಹೊಸನಗರ, ಸಾಗರ,  ಸೊರಬ ತಾಲ್ಲೂಕುಗಳನ್ನು ಮಲೆನಾಡೆಂದು ಪರಿಗಣಿಸಲಾಗಿದೆ. ವಿಶಿಷ್ಟ ಭೌಗೋಳಿಕ ಹಿನ್ನೆಲೆಯನ್ನುಳ್ಳ ಈಪ್ರದೇಶಗಳ ಜೀವನ ವಿಧಾನ ಬೇರೆ ಬೇರೆಯಾಗಿದ್ದು ಬ್ರಾಹ್ಮಣ. ಮತ್ತು ಬ್ರಾಹ್ಮಣೇತರರ ಆಹಾರ ಪದ್ಧತಿ, ಅಡುಗೆಯ ಬಗೆಗಳನ್ನು ಗುರುತಿಸುವಾಗ ಪ್ರಧಾನವಾಗಿ ಸಸ್ಯಾಹಾರ, ಮಾಂಸಾಹಾರಗಳೆಂದು ವಿಭಾಗಿಸಕೊಳ್ಳಬೇಕಾಗುತ್ತದೆ. ಆದರೆ ದಿನನಿತ್ಯದ ಊಟದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಇದ್ದರೂ ಸೂಕ್ಷ್ಮ ದೈನಂದಿನ ಕೆಲಸಕಾರ್ಯಗಳಿಗೆ ಅಗತ್ಯವಾಗಿ ಬೇಕಿರುವ ಈ ಬಗೆಯ ಅಡುಗೆಗಳಿಗೆ ಕೆಲಸಕಾರ್ಯಗಳಿಗೆ ಅಗತ್ಯವಾಗಿ ಈಬಗೆಯ ಅಡುಗೆಗಳಿಗೆ ಒಂದು ನಿರ್ದಷ್ಟ ಉದ್ದೇಶವೇನೂ ಇರುವದಿಲ್ಲ. ಸಾಮಾನ್ಯ ಅಡುಗೆಗಳು ಆಯಾಯ ಭಾಗದ ಮುಖ್ಯ ಬೆಳೆಯನ್ನೇ ಅವಲಂಬಿಸಿರುತ್ತವೆ. ಜೊತೆಗೆ ಕಾಲಮಾನಕ್ಕೆ ಅನುಸಾರ ದೊರೆಯುವ ಸೊಪ್ಪು, ತರಕಾರಿ, ಧಾನ್ಯಗಳ ಬಳಕೆ ವಿಪುಲ. ಈ ಅಡುಗೆಗಳನ್ನು ತಯಾರಿಸುವುದು ಸುಲಭ, ಹಾಗೂ ಹೆಚ್ಚು ಪರಿಕರಗಳು ಬೇಕಿಲ್ಲ. ಮಲೆನಾಡಿನ ಮುಖ್ಯ ಬೆಳೆ ಭತ್ತ. (ವರ್ಷಕ್ಕೆ ಒಂದು ಬೆಳೆ, ನೀರಿನ ಸೌಕರ್ಯವಿರುವ ಕಡೆ ಎರಡು ಬೆಳೆ) ಅಕ್ಕಿ ಗಂಜಿ ಇಲ್ಲಿನ ದೈನಂದಿನ ಊಟ, ಅಕ್ಕಿ ಗಂಜಿಗೆ ರುಬ್ಬಿದ ತೆಂಗಿನಕಾಯಿ ಬೆಲ್ಲ ಸೇರಿಸಿ ಕುದಿಸಿ ಕಾಯಿಗಂಜಿ ಮಾಡುವುದುಂಟು. ಅನ್ನ, ರಾಗಿ, ಅಂಬ್ಲಿ, ಕಡಬು ಎಲ್ಲರೂ ತಯಾರಿಸುವ ಅಡುಗೆಗಳು.

ಮಲೆನಾಡಿನ ಸಾರುಗಳು

[1] ಸರಳವಾದವು. ಅನ್ನಕ್ಕೆ ವಿಶೇಷ ರುಚಿಯನ್ನು ತಂದುಕೊಡುವ ಹುಳಿಸಾರು, ಬೇಳೆಸಾರು, ನೀರಗೊಜ್ಜಿನ ಸಾರು, ಹುರುಳಿಕಟ್ಟು ಕಳಲೆ ಸಾಂಬಾರು ಇವುಗಳಲ್ಲಿ ಯಾವುದಾದರೂ ನಿತ್ಯದ ಊಟಕ್ಕೆ ಇರುತ್ತದೆ. ಬ್ರಾಹ್ಮಣರಲ್ಲಿ ಊಟದ ಜೊತೆ ಮೊಸರು, ಹೆಚ್ಚು ರಸವಿರುವ ವಸ್ತು ಅಥವಾ ತರಕಾರಿಗಳಿಂದ ಕೂಡಿದ ಮೇಲೊಗರಗಳುರುತ್ತವೆ. ಊಟದ ಮೊದಲಿಗೆ ಮೊಸರಿನಿಂದ ಮಾಡಿದ ಯಾವುದಾದರೂ ಒಂದು ಮೇಲೊಗರವನ್ನು[2] ಸೇವಿಸುತ್ತಾರೆ. ಏಕೆಂದರೆ, ಅದರಲ್ಲಿ ಸಾಮಾನ್ಯವಾಗಿ ಬೆಳಗಿನ ತಿಂಡಿಯಿರುವುದಿಲ್ಲ. ಹೀಗಾಗಿ, ಹಸಿದ ಹೊಟ್ಟೆಗೆ ಕಾರದ ಪದಾರ್ಥಗಳು ಒಳ್ಳೆಯದಲ್ಲ ಎಂಬ ಅಭಿಪ್ರಾಯವಿದೆ. ಸಣ್ಣ ಮಕ್ಕಳಿಗೆ ಗಂಜಿಯೂಟ ಇರುತ್ತದೆ. ಅಕ್ಕಿಗೆ ಹೆಚ್ಚು ನೀರು ಹಾಕಿ ಬೇಯಿಸಿ,  ಉಪ್ಪು ಮೊಸರು ಹಾಕಿಕೊಂಡು  ಉಪ್ಪಿನಕಾಯಿಯೊಂದಿಗೆ ಊಟ ಮಾಡುತ್ತಾರೆ. ಅಲ್ಲದೆ ಹಿಂದಿನ ದಿನದ ಅನ್ನಕ್ಕೆ ನೀರು ಹಾಕಿಟ್ಟು, ಆನೀರನ್ನು ಬಸಿದು ಮೊಸರು, ಅನ್ನಕ್ಕೆ ನೀರು ಹಾಕಿಟ್ಟು, ಬೆಳಿಗ್ಗೆ ಆ ನೀರನ್ನು ಬಸಿದು  ಮೊಸರು, ಹಾಕಿಕೊಂಡು ತಿನ್ನುತ್ತಾರೆ. (ತಂಪು/ಆರೋಗ್ಯಕರ ಎಂಬ ಭಾವನೆ) ಕಲ್ಲನ್ನ ಚಳಿಗಾದಲ್ಲಿ ಸಾಮಾನ್ಯ. ಶುದ್ಧವಾದ ಬೆಣಚುಕಲ್ಲನ್ನು ನೀರೊಲೆಯಲ್ಲಿ ಕೆಂಪಗೆ ಕಾಯಿಸಿ ಮೊಸರನ್ನದಲ್ಲಿರಿಸಿ ಸ್ವಲ್ಪ ಹೊತ್ತಿನ ಅನಂತರ ಹೊರೆತೆಗೆಯುತ್ತರೆ. ಅನ್ನ ಬಿಸಿಯಾಗಿ ಕಲ್ಲಿನ ಪರಿಮಳದೊಂದಿಗೆ ರುಚಿಯಾಗಿರುತ್ತದೆ. ಮಳೆಗಾಲದಲ್ಲಿ ತಂಬುಳಿ.[3] (ಹಸಿರಾಳಿ/ಆಮ್ರ ಎಂಬ ಹೆಸರೂ ಉಂಟು) ಮಲೆನಾಡು ಪ್ರಾಂತ್ಯದಲ್ಲಿ ಹೆಚ್ಚು ಪಲ್ಯ ಮತ್ತು ಇತರ ಸಾರುಗಳನ್ನು ಮಾಡಲು ಅಧಿಕ ಸಮಯ ಬೇಕಿರುವುದರಿಂದ ಬೇಗ ಸಿದ್ಧವಾಗುವ ಈ ಬಗೆಯ ಸಾರುಗಳನ್ನು ಮಾಡುತ್ತಾರೆ. ಇಲಿಕಿವಿಸೊಪ್ಪು ಮತ್ತು ಚಗಟಿ ಸೊಪ್ಪುಗಳನ್ನು ಚೆನ್ನಾಗಿ  ಈರುಳ್ಳಿ, ಬೆಳ್ಳುಳ್ಳಿ, ಒಣಮೆಣಸಿನಕಾಯಿ, ಕೊತ್ತಂಬರಿ, ತೆಂಗಿನಕಾಯಿಯನ್ನು ಸೇರಿಸಿ ರುಬ್ಬಿಕೊಂಡು, ಅನಂತರ ಕರಿಬೇವಿನ ಒಗ್ಗರಣೆ ಹಾಕಿ ಕುದಿಸಿ, ತಣ್ಣಗಾದ ಬಳಿಕ ಅದಕ್ಕೆ ಮಜ್ಜಿಗೆ ಸೇರಿಸುತ್ತಾರೆ. ಮಜ್ಜಿಗೆ ಹುಳಿ ಬ್ರಾಹ್ಮಣರಲ್ಲಿ ವಿಶೇಷವಾದುದು.ಹೆಚ್ಚು ಪೌಷ್ಟಿಕಾಂಶಗಳಿರುವ ಬೂದಗುಂಬಳ ಕಾಯಿ, ಸೌತೆ ಕಾಯಿ, ತೊಂಡೆ ಕಾಯಿ, ಕಳಲೆ, ಗೆಡ್ಡೆಗೆಣಸುಗಳನ್ನು ಬಳಸಿ ಇದನ್ನು ಮಾಡುತ್ತಾರೆ.

– ನೆಂಜಿಕೆಗೆ ಕಳಲೆ, ನಿಂಬೆ, ದೊಡ್ಲಿ, ಮಾವು, ಆಮಟೆ, ಶುಂಠಿಮೊಳಕೆ, ಕೌಳಿ ಉಪ್ಪಿನಕಾಯಿಗಳನ್ನು ಬಳಸುತ್ತಾರೆ. ಬದನೆ, ಹೀರೆ, ಬಾಳ ಮತ್ತು ಹಲಸಿನ ಬೀಜದಿಂದ ಮಾಡಿದ ಚಟ್ನಿ ಇರುತ್ತದೆ. ಕೆಸುವನಿನದಂಟು, ಮಾವಿನ ಹಣ್ಣು, ನೆಲ್ಲಿ, ಹುಣಸೆಹಣ್ಣು, ಹೇರಳೆ ಮತ್ತು ನಿಂಬೆಯ ಗೊಜ್ಜುಗಳೂ ಉಂಟು, ಪಲ್ಯಗಳಿಗೆ ಕಳಲೆ, ಚಗತೆ ಸೊಪ್ಪು, ಬೆರಕೆ ಸೊಪ್ಪು, ಹಲಸಿನಗುಜ್ಜೆ (ಮುಳ್ಳನ್ನು ತೆಗೆದು ಎಳೆಯ ದಂಟಿನಸಹಿತ ಹಾಕುವುದು) ಸಾಮಾನ್ಯ ವಸ್ತುಗಳು. ಹಳಸಿನ ಹಪ್ಪಳ ಮಲೆನಾಡಿನಲ್ಲಿ ಜನಪ್ರಿಯ. ಅಕ್ಕಿ ಹಪ್ಪಳವೂ ಉಂಟು.

– ಮಾಂಸಹಾರಿಗಳು ಅನ್ನ, ಅಂಬಲಿ ಜೊತೆಗೆ ಹತ್ತುಮೀನುಸಾರು, ಬೆಳ್ಳೇಡಿ ಸಾಂಬಾರು, ಬೆಳ್ಳೇಡಿ – ಒಣಮೀನು ಚಗಳಿ (ಕೆಂಪಿರುವೆ) ಚಟ್ನಿಗಳನ್ನು ಬಳಸುತ್ತಾರೆ.

– ವಿಶೇಷ ಅಡುಗೆಗಳು ನಿರ್ದಿಷ್ಟ ಸಂದರ್ಭಗಳಿಗೆ ಸಂಬಂಧಿಸಿದುವು (ಜನನ, ನಾಮಕರಣ, ಮರಣ,  ಪಕ್ಷ / ತಿಥಿ, ಬಸುರಿ-ಬಾಣಂತಿ-ಪುಷ್ಪವತಿ ಬಯಕೆಗಳು, ಹಬ್ಬ-ಮದುವೆ ಇತ್ಯಾದಿ). ಈ ಬಗೆಯ ಅಡುಗೆಗಳಿಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕ್ರತಿಕ ಮಹತ್ವಗಳಿರುತ್ತವೆ. ನಿತ್ಯದ ಅಡುಗೆಗಳಿಗಿಂತ ಹೆಚ್ಚು ಜೀವ ಸತ್ಯದ ಪ್ರಮಾಣಗಳನ್ನು ಇವು ಒಳಗೊಂಡಿರುತ್ತವೆ. (ಅಪರೂಪಕ್ಕೆ ಜಾಸ್ತಿ ಸೇರಿಸಿದರೆ ಆರೋಗ್ಯವೂ ಕೆಡಬಹುದು ).

ಬ್ರಾಹ್ಮಣೇತರರಲ್ಲಿ ವಿಶೇಷ ಅಡುಗೆಗಳು, ಹಬ್ಬ – ಮದುವೆ – ಪಕ್ಷಗಳಲ್ಲಿ ಇದ್ದರೆ ಬ್ರಾಹ್ಮಣರ ಊಟದ ವೈಶಿಷ್ಟ್ಯವಿರುವುದೇ ತಿಥಿಯ ಸಂದರ್ಭದಲ್ಲಿ. ಮದುವೆಯ ಅಡುಗೆಗಳು ಜನಪದರಲ್ಲಿ ಸಾಮೂಹಿಕವಾಗಿರುತ್ತವೆ. ಅನ್ನ, ಸಾರು,  ಪಾಯಸ,  ಪಲ್ಯ,  ಹಪ್ಪಳ,  ಉಪ್ಪಿನಕಾಯಿ ಇತ್ಯಾದಿ ಸಾಮಾನ್ಯ. ನಿಶ್ಚಿತಾರ್ಥದ ಊಟಕ್ಕೆ ನಿತ್ಯದ ಅಡುಗೆಯೊಂದಿಗೆ ಮೇಲೆ ಸೂಚಿಸಿದ  ಊಟಗಳಿರುತ್ತವೆ. ಕೆಲವರು ಬಣ್ಣದ ಸೌತೆಕಾಯಿ ಸಾರು (ಈಡಿಗ), ಇಡೀ ತೊಂಡೆಕಾಯಿಪಲ್ಯ (ಆದಿಕರ್ನಾಟಕ), ಕಡ್ಲೆಕಾಳು, ಹೆಸರುಕಾಳಿನ ಪಲ್ಯ (ವೀರ ಶೈವ)ವನ್ನು ಮಾಡುತ್ತಾರೆ ಧಾರೆಯೂಟಕ್ಕೆ ಕೆಸುರಿನದಡಿ ಹುಳಿ,ಹಲಸಿನಕಾಯಿ ಪಲ್ಯ, ಗದ್ದೆಸೌತೆಕಾಯಿ ಸಾರು, ಇರಲೇಬೇಕು. ಮದುವೆಯ ದಿನಸ ಮಾಂಸದ ಅಡುಗೆ ಮಾಡುವ ಪದ್ಧತಿ ಮಲೆನಾಡಿನ ಮಾಂಸಹಾರಿಗಳಲ್ಲಿದೆ. (ಅದರಲ್ಲೂ ಒಕ್ಕಲಿಗರು) ಕೊಡಗು,  ಮತ್ತು ಬಯಲು ಸೀಮೆಯ ನಾಮಧಾರಿ ಒಕ್ಕಲಿಗರನ್ನು ಬಿಟ್ಟರೆ ಉಳಿದ ಕಡೆಯ ನಾಮಧಾರಿಗಳು ಅಪ್ಪಟ ಮಾಂಸಹಾರಿಗಳು.ಮಲೆನಾಡಿನಲ್ಲಿ ಉಳಿದವರಿಗಿಂತ ನಾಮಧಾರಿ ಒಕ್ಕಲಿಗರೆ ಹೆಚ್ಚು. “ಮಲೆನಾಡು ಮತ್ತು ಕೊಡವರಲ್ಲಿ ಮದುವೆಯ ದಿನ ಹಂದಿಮಾಂಸದ ಸಾರು ಮಾಡುವ ಪದ್ಧತಿಯಿದೆ. ಮಲೆನಾಡುಗರಲ್ಲಿ ಈಗೀಗ ಈಪದ್ಧತಿ ಹೋಗಿ ವೈದಿಕ ಪದ್ಧತಿಯೇ ಆಚರಣೆಗೆ ಬರುತ್ತಿದೆ.”[4] ಗಂಡನ್ನು ಹೆಣ್ಣಿನೊಡನೆ ಮನೆತುಂಬಿಸಿಕೊಳ್ಳುವ “ಹಿಡಿದಿಬ್ಬಣದೂಟಕ್ಕೆ” ಹಾಗೂ ಹೆಣ್ಣಿನ ಮನೆಯಲ್ಲಿ ಕೊಡುವ “ಧಾರೆದೀಪದೂಟಕ್ಕೆ” ಕಡಬು,  ಮಾಂಸದ ಅಡುಗೆ ಕಡ್ಡಾಯ. ದೀವರಲ್ಲಿ ಚಪ್ಪರದ ಊಟಕ್ಕೆ ಸ್ವಾರ್ಲುಮೀನಿನಸಾರು (ಅನುಕೂಲವಿದ್ದರೆ ಕೋಳಿ) ಕ್ರಿಶ್ಚಿಯನ್ನರಲ್ಲಿ ಮೀನು ಮತ್ತು ಕೋಳಿಯಲ್ಲದೆ ಬಿಳಿ ಹಂದಿಮಾಂಸದ ಸಾರು ವಿಶೇಷವಾಗಿರುತ್ತದೆ.

– ಸೀಮಂತರಲ್ಲಿ ಬಯಕೆಯ ಊಟೋಪಚಾರಗಳಿರುತ್ತವೆ. ಬುತ್ತಿ ಪಾಸೆ, (ಅನ್ನಕ್ಕೆ ಹಾಲು ಹಾಕಿ ಬೇಯಿಸಿ ಚೌಕಾಕಾರದಲ್ಲಿ ತುಂಡು ಕೊಯ್ದದ್ದು) ಹೋಳಿಗೆ, ಚಿತ್ರಾನ್ನ, ಕರಿಕಡುಬು, ಚಕ್ಕಲಿ, ಹುರಿಕಜ್ಜಾಯ.ಹೆಸರು ಉಂಡೆ, ಅತ್ತಿರಸ (ಅಕ್ಕಿ ಹಿಟ್ಟಿಗೆ ಕಾಯಿಕಡೆದು ಹಾಕಿ ಬೆಲ್ಲದಲ್ಲಿ ಬೇಯಿಸಿ ಬಿಲ್ಲೆ ಆಕೃತಿಮಾಡಿ ಎಣ್ಣೆಯಲ್ಲಿ ಕರಿಯುವುದು) ಕೊಡುವುದು ವಾಡಿಕೆ.

– ಹೆರಿಗೆಯಾದ ದಿನದಿಂದ ಮೂರು ದಿವಸಗಳವರೆಗೆ ಕಾಳುಜೀರಿಗೆ – ಕುದಿಸಿದ ನೀರು, ಮೆಣಸಿನಕಾಳಿನ ಹುಡಿ, ಜೇನುತುಪ್ಪ, ಆಕಳತುಪ್ಪ, ಸಪ್ಪೆಕುಟ್ಟು, ಬೇಳೆಸಾರು ಕೊಡಬೇಕು. (ಅನ್ನದ ಜೊತೆ) ಅನಂತರ ಓಮಿನಕಾಳು (ವಾದಕ್ಕಿ). ಶುಂಠಿ – ಇವುಗಳ ಜೊತೆ ಸ್ವಲ್ಪ ಅನ್ನ ಒಂದು ತಿಂಗಳವರೆಗೆ ವಾಟಿ ಹುಳಿ, ಮೆಣಸಿನಕಾಳಿನ ಸಾರು ಕೊಡುವರು. ದೀವರಲ್ಲಿ ‘ಕಣಲಕ್ಕಿ ಅನ್ನ’ಕ್ಕೆ (ಅಕ್ಕಿಯನ್ನು ಸಾಣಸಿದಾಗ ದೊರೆಯುವ ಇಡಿ ಅಕ್ಕಿ ಕಾಳುಗಳು) ಬಿಸಿತುಪ್ಪ ಕಾಳುಮಣಸಿನ ಪುಡಿ ಮತ್ತು ಕಾರದ[5] ಸಾರು ಅಗತ್ಯವಾಗಿ ಇರಬೇಕು. “ಬಾಣಂತಿ ಒಂಬತ್ತು ದಿನಗಳವರೆಗೆ ನಿರಂತರವಾಗಿ ಬಗೆ ಬಗೆಯ ಕಾರಸೇವನೆ ಮಾಡಬೇಕಾಗುತ್ತದೆ ಮೊದಲ ಮೂರುದಿವಸ ಕರಿಕೊಡಸನಕಾರ, ನಂತರದ ಮೂರು ದಿವಸಗಳಲ್ಲಿ ಕೀಳ್ಗನ ಸೊಪ್ಪಿನ ಕಾರ, ಆನಂತರದ ಮೂರು ದಿವಸಗಳಲ್ಲಿ ಹೊಳೆಗಾರನ ತೊಗಟೆಯಕಾರ ಮತ್ತು ಹುಡಿ ಅನ್ನವನ್ನು ತಿಂದು ಜೀರ್ಣಿಸಿಕೊಳ್ಳಬೇಕು ಮರೆತೂ ಹಾಲು, ಕಾಫಿ ಇತ್ಯಾದಿ ಏನನ್ನೂ ಕುಡಿಯುವಂತಿಲ್ಲ. ಹಾಲು ಸೇರಿಸಿದರೆ “ಬಿಳೆಸೂತಕ” ಮೈಯಿಂದ ಹೋಗುವುದು ಎನ್ನುತ್ತಾರೆ) ಆರಂಭವಾಗಿ ಕ್ಷೀಣರಾಗಿತ್ತಾರೆಂಬ ಭಯ ಆವರಿಸಿದೆ. ಒಟ್ಟಿನಲ್ಲಿ ಆರೋಗ್ಯದೃಷ್ಟಿಯಿಂದ ಇವುಗಳನ್ನು ನಿಷೇಧಿಸಿರುವುದಾಗಿ ತಿಳಿಯುತ್ತದೆ”.[6] ಸೂತಕ ಕಳೆಯವವರೆಗೆ ನಿಷೇಧಿಸಿದ್ದ ಮಾಂಸಹಾರವನ್ನು ತಿನ್ನಬಹುದು ಕೊಬ್ಬರಿ, ಬೆಳ್ಳುಳ್ಳಿ,ಮೆಣಸಿನಕಾಳುಗಳನ್ನು ವಿಶೇಷಪ್ರಮಾಣದಲ್ಲಿ ಹಾಕಿ ಅಣಿಗೊಳಿಸಿದ ಮೀನು,ಮಾಂಸದಸಾರನ್ನು ಸ್ವಲ್ಪ ಸೇವಿಸಿದರೆ ಒಳ್ಳೆಯದು. ಹನ್ನೆರಡನೆಯ ದಿನದಂದು ಕೋಳಿ ಕೂಗುವುದಕ್ಕೆ ಮುಂಚೆಯೇ ಎದ್ದು ವಿಶೇಷವಾದ “ಶುಂಠಿಲಾಯ”ವನ್ನು ಸೇವಿಸಬೇಕು (ಉತ್ತುತ್ತೆ, ದ್ರಾಕ್ಷಿ, ಜಾಯಿಕಾಯಿ, ಶುಂಠಿ ಹೂವುಗಳನ್ನು ನುಣ್ಣಗೆ ಹಿಟ್ಟುಮಾಡಿ ತುಪ್ಪ, ಲವಂಗ ಏಲಕ್ಕಿ ಒಗ್ಗರಣೆಯಲ್ಲಿ ಪಾಕಗೊಳಿಸಿ ತಯಾರಿಸಿದ್ದು) ಸ್ನಾನಕ್ಕೆ ಮುಂಚೆ ಮೆಣಸಿನ ಹಿಟ್ಟನ್ನು ಬೆಲ್ಲದಲ್ಲಿ ಕಲಿಸಿಕೊಡುತ್ತಾರೆ ಬದನೆಕಾಯಿ, ಚೀನಿಕಾಯಿ, ತೊಗರಿಬೇಳೆ, ಸೌತೆಕಾಯಿ, ಗೆಣಸು ಹಾಗೂ ಬಂಗಡಿ. ಬೈಗೆಮೀನುಗಳು (ಸಮುದ್ರ ಮೀನುಗಳು) ಏಡಿ ಮೊದಲಾದ ನಂಜಿನ ಪದಾರ್ಥಗಳು ನಿಷೇಧ. ಪುಷ್ಪವತಿಗೆ ಗಟ್ಟಿ ಪದಾರ್ಥಗಳನ್ನು ಕೊಡುವುದಿಲ್ಲ. ಸೂತಕ ಮುಗಿಯುವ ಹನ್ನೊಂದು ದಿವಸ “ಹುಗ್ಗಿಯ ಅನ್ನವನ್ನೇ ಸೇವಿಸಬೇಕು (ಹುರಿದು ಪುಡಿಮಾಡಿದ ಮೆಂತ್ಯವನ್ನು ಅನ್ನದೊಂದಿಗೆ ಮಿಶ್ರ ಮಾಡಿ ತುಪ್ಪ ಬೆಲ್ಲ ಸೇರಿಸಿಹದಗೊಳಿಸಿದ್ದು) ಪರಮಾನ್ಯ (ಅಕ್ಕಿರವೆ, ಬೆಲ್ಲ, ಕಡ್ಲೆಬೇಳೆಯಿಂದ ತಯಾರಿಸಿದ್ದು) ಹಾಲುಪಸೆ ಕೊಡಬಹುದು. ಜನನ, ನಾಮಕರಣ, ದೀಕ್ಷಾವಿಧಿಗಳನ್ನು ಆಚರಿಸುವ ದಿನಗಳಲ್ಲಿ ವಿಶೇಷ ಔತಣಕೂಟಗಳನ್ನು ಏರ್ಪಡಿಸಿ ನೀರ್ಗಡಬು,  ಅರೆಗುಂಡಿನ ಕಡುಬು, ಕೋಳಿಮಾಂಸ (ಆದಿ ಕರ್ನಾಟಕ) ಎಲಿಯಪ್ಪ (ಕ್ರಿಶ್ಚಿಯನ್) ಮಾಡುತ್ತಾರೆ.

– ಹಬ್ಬಗಳಲ್ಲಿ ಇಂಥದೇ ಅಡುಗೆ ಮಾಡಬೇಕೆಂಬ ಕಡ್ಡಾಯ ಎಲ್ಲಾ ಸಂದರ್ಭಗಳಲ್ಲೂ ಇರುವುದಿಲ್ಲ. ಪ್ರಚಲಿತ ಹಬ್ಬಗಳಾದ ಗೌರಿ, ದೀಪಾವಳಿ ಯುಗಾದಿ, ಶಿವರಾತ್ರಿಯಲ್ಲಿ ಮಾಡುವ ಅಡುಗೆಗಳು ಒಂದೇ ರೀತಿಯವು, ಸಿಹಿ ಅಡುಗೆಗಳು ಸಾಮಾನ್ಯ. ವರ್ಷದ ಬಹುತೇಕ ದಿನಗಳಲ್ಲಿ ಮಾಂಸಹಾರವನ್ನು ಉಪಯೋಗಿಸುವವರು ಶ್ರಾವಣಮಾಸದಲ್ಲಿ ಸಸ್ಯಾಹಾರವನ್ನು ಸೇವಿಸುವುದು ರೂಢಿ. ಈ ಮಾಸದ ಶನಿವಾರ “ಒಪ್ಪತ್ತು” ಆಚರಿಸುವರು ಮನೆಯ ಹಿರಿಯನ ಕರ್ತವ್ಯವಾಗಿರುತ್ತದೆ. ಆರಿದ್ರಮಳೆ ಹಬ್ಬ, ಮಲೆನಾಡಿನಲ್ಲಿ ಪ್ರಸಿದ್ದವಾದದ್ದು. ನಿರ್ದಿಷ್ಟ ದಿನಗಳಲ್ಲಿ (ಮಂಗಳವಾರ ಅಥವಾ ಶುಕ್ರವಾರ) ಬೆಳಗಿನ ಉಪವಾಸ, ಸಂಜೆಯ ೪ ಗಂಟೆ ವೇಳೆಗೆ ಮನೆದೇವರ ಪೂಜೆಯ (ಜೇನುಕಲ್ಲಮ್ಮ – ದೀವರಿಗೆ) ಅನಂತರ ಪಾಸೆ, ಅನ್ನ. ದೋಸೆ, ಚಿತ್ರಾನ್ನ, ತರಕಾರಿ ಪಲ್ಯವನ್ನು ಊಟಕ್ಕೆ ಮಾಡುತ್ತಾರೆ. ಹಲಸಿನ ಹಣ್ಣಿನ ಕಡಬು ಕಡ್ಡಾಯ (ದೀವರು, ಆದಿಕರ್ನಾಟಕ) ಸ್ಯೋಣಜ್ಜಿ ಹಬ್ಬದಲ್ಲಿ ದೋಸೆಯ ಜೊತೆಗೆ ಕಾರೇಡಿಸಾರು (ದೊಡ್ಡ ಕಪ್ಪುವಡಿಗಳು) ಇರಲೇಬೇಕು. ಮಲೆನಾಡಿನ ಬಹಳ ಕಡೆ ಆಚರಣೆಯಲ್ಲಿರುವ ಭೂಮಿಹುಣ್ಣಿಮೆ, ಭೂಮಿತಾಯಿಯ ಬಯಕೆಯನ್ನು ತೀರಿಸುವ ಹಬ್ಬ. ಹಸಿರುಟ್ಟುನಿಂತ ಭೂಮಿತುಂಬಬಸುರಿ, ಆಕೆಗೆ ಬಯಕೆಯ ಊಟವನ್ನು ಅರ್ಪಿಸಿದರೆ ಫಸಲು ಸಮೃದ್ಧವಾಗುತ್ತದೆ ಎಂಬುದು ನಂಬಿಕೆ. ದೀಪಾವಳಿಗೆ ಹದಿನೈದು ದಿನ, ಮೊದಲು ಬರುವ ಹುಣ್ಣಿಮೆ ದಿನ ಆಚರಿಸುತ್ತಾರೆ “ಭೂಮಿ ಹುಣ್ಣಿಮೆ”ಯ ಹಿಂದಿನ ದಿವಸ ಸಾಯಂಕಾಲ ಮನೆಯ ಗರತಿಯೊಬ್ಬಳು ಸ್ನಾನಮಾಡಿಕೊಂಡು ಅಡುಗೆ ತಯಾರಿಸುತ್ತಾಳೆ. ಎಲ್ಲಾ ಜಾತಿಯ ಸೊಪ್ಪನ್ನು ಆರಿಸುವುದು ಈ ಹಬ್ಬದ ವಿಶೇಷ. (ಬೆರಸೊಪ್ಪು) “ನೂಲೆಗೆಣಸು” ಕೀಳುವುದೂ ಈ ಹಬ್ಬದ ಒಂದು ಸಂಪ್ರದಾಯ. ಅನುಭವಿಯೊಬ್ಬ ಹಿಂದಿನ ದಿನದ ಸಾಯಂಕಾಲವೇ ಕಾಡಿಗೆ ಹೋಗಿ ಗೆಣಸಿನ ಬಳ್ಳಿಯ ಬುಡವನ್ನು ಕೊಯ್ದು ಗುರುತು ಮಾಡಿ ಬಂದಿರುತ್ತಾನೆ.ಇದನ್ನು ಬೆರೆಕೆ ಸೊಪ್ಪಿನ ಪಲ್ಯ, ಬೇಯಿಸಿದ ನೊಲೆಗೆಣಸು, ಪಾಯಸ, ಅನ್ನ, ಹಾಲಿನ ಹಿಟ್ಟು, ಮಜ್ಜಿಗೆ ಹಿಟ್ಟು, ಉದ್ದು ಹಾಗೂ ಕೆಸುಲಿನ ದೆಂಟ”[7]ನಿಂದ ತಯಾರಿಸಿದ ಕಡುಬು ಅಡುಗೆಯ ವಿಶೇಷ. ಆ ದಿನ ರಾತ್ರಿ ಅಡುಗೆ ಮಾಡುವವರು ನಿದ್ದೆ ಮಾಡಬಾರದೆಂಬ ಕಟ್ಟುಪಾಡಿದೆ. ಕೊನೆಗೆ ತೂಕಡಿಸಿದರೂ ಸಹ ಆ ವರ್ಷದ ಪೈರುಕೆಡುತ್ತದೆಂಬ ಅಂಜಿಕೆ. ವ್ಯವಸಾಯಗಾರನಿಗೆ ಜೀವನಧಾರವಾದ ತಿಪ್ಪೆ ಪೂಜನೀಯ. ರಾಗಿ ಅಂಬಲಿಯನ್ನು ತಿಪ್ಪೇ ಹಬ್ಬದಲ್ಲಿ ತಯಾರಿಸುವುದರಿಂದ  “ಅಂಬಲಿಹಬ್ಬ” ಎಂಬ ಹೆಸರೂ ಇದೆ. ಊರಿಗೆ ಒಳಿತು ಬಯಸುವ ಸದುದ್ದೇಶದಿಂದ ಮಾಡುವ ಸಾರ್ವಜನಿಕ ಊಟ “ಪರಪುಅನ್ನ” ಧಾನ್ಯ ದೇವತೆಯನ್ನು ಬಲಿಯ ಮೂಲಕ ಸಂತೃಪ್ತಿಪಡಿಸಿ ಫಲಸಮೃದ್ಧಿ ಯಾಚಿಸುವ ಆಚರಣೆ “ಮಷ್ಟ” ಮತ್ತು “ಕಟ್ಟಿಅಜ್ಜಿ”. (ಕಟ್ಟಜ್ಜಿ) ನಾಟಿಯ ಕೆಲಸಮುಗಿದ ಅನಂತರ ಗ್ರಾಮಸ್ಥರೆಲ್ಲಾ ಸೇರಿ ಮಾಡುವ ಸಹಭೋಜನ. ಇದರಿಂದ ಪೈರಿಗೆ ಬೀಳುವ ಹುಳುಹುಪ್ಪಟಿ ಬಾಧೆಯನ್ನು ತಪ್ಪಿಸಿಕೊಳ್ಳಬಹುದೆಂದು ನಂಬುತ್ತಾರೆ. ನಸುಕಿನಲ್ಲೆದ್ದು ಮಕ್ಕಡ್ಕ ಮತ್ತು ಕಾಸುರ್ಕ ಎಂಬ ಜಾತಿಯ ಮರದ ಸೊಪ್ಪನ್ನು ಕಿತ್ತು ಅವುಗಳ ರಸತೆಗೆದು ಯಾರೂ ಕಾಣದಂತೆ ಬೆತ್ತಲೆಯಾಗಿ ಹೋಗಿ ಗದ್ದೆಗೆ ಚೆಲ್ಲಿ ಬರುತ್ತಾರೆ. ಇದು ಮಷ್ಟ ಮಾಡುವ ವಿಧಾನ. ಊರಿನವರು ಒಟ್ಟಿಗೂಡಿಕೊಂಡು ತಂದ ಹಂದಿಯೊಂದನ್ನು ಗ್ರಾಮದ ಎಲ್ಲಾ ಜಮೀನಿಗೂ ಸುತ್ತಿಸಿತ್ತಾರೆ. ಅನಂತರ ಪ್ರತಿ ಮನೆಯವರು ತಂದು ರಾಶಿಹಾಕಿದ ಚೆರುರಾಶಿಯ ಮೇಲೆ ಹಂದಿಯ ತಲೆಯನ್ನು ಕತ್ತಿರಿಸುತ್ತಾರೆ. ರಕ್ತವನ್ನು ಚೆರುರಾಶಿಗೆ ಸೇರಿಸಿ ಗದ್ದೆಗೆ ಚೆಲ್ಲುತ್ತಾರೆ. (ಮಗೆಮಳೆಯ ಅವಧಿಯಲ್ಲಿ ಫಸಲಿಗೆ ಮಾಡುವ ಒಂದು ಬಗೆಯ ಶಾಂತಿ – ಹಂದಿಬಲಿ) ಕೊಯ್ದಹಂದಿಯ ಮಾಂಸವನ್ನು ಪಾಲುಮಾಡಿಕೊಂಡು ಮನೆಗೆ ಹೋಗುತ್ತಾರೆ . ಹಲಸರು ಹಂದಿಯನ್ನು ತಿನ್ನುವುದಿಲ್ಲ. ಅವರಲ್ಲಿ ೨೧ ಉಗ್ಗರುಳ್ಳ ಪ್ರಾಣಿಮಾಂಸ ನಿಷೇಧ. ಅಕ್ಕಿಗಂಜಿ ರಾಗಿ ಗಂಜಿ ಅವರಿಗೆ ಹೆಚ್ಚು ಇಷ್ಟ.

– ಮರಣದ ಸಂಬಂಧಿಯಾದ ಆಚರಣೆಗಳಿಗೆ ಸರ್ವಚೇತನ ಕಲ್ಪನೆ (Animistic Conception) ಆಧಾರ ಸತ್ತ ಬಳಿಕ ಆತ್ಮ ದೇಹವನ್ನು ತೊರೆದು ಅಸ್ಪಷ್ಟ ಇರುವಿಕೆಯಲ್ಲಿ ಸಂಚರಿಸಿತ್ತದೆ. ಅದು ಮೋಕ್ಷ ಹೊಂದಬೇಕಾದರೆ ಶವಸಂಸ್ಕಾರದ ಅನಂತರದಲ್ಲಿ ಕೆಲವು ಕರ್ಮಾಚರಣೆಗಳಾಗಬೇಕೆಂಬುದು ಸಾಮಾನ್ಯ ಅಭಿಪ್ರಾಯ. ಅದನ್ನೇ “ಕಟ್ಟಳೆಯೂಟ” ಎನ್ನಲಾಗಿದೆ  Solemn meals)  ಈ ಸಂದರ್ಭದಲ್ಲಿ ಮೃತನಿಗೆ ಪ್ರಿಯವಾಗಿದ್ದ ಊಟಗಳನ್ನು ಎಡೆಮಾಡಿದಾಗ ಆತ್ಮ ಭೂಮಿಗೆ ಹಿಂತಿರುಗಿ ಬರುತ್ತದೆ. ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಅಡುಗೆಗಳಿಗೆ ಒಂದು ವಿಶೇಷತೆಯಿದೆ. “ಸಾವಿನ ಬಗೆಗೆ ಮಲೆನಾಡ ನಾಮಧಾರಿಗಳು ತಾಳಿರುವ ನಂಬಿಕೆಗಳು ಮತ್ತು ಆ ಸಂಬಂದವಾಗಿ ಅನುಸರಿಸುವ ವಿಧಗಳು ವಿಚಿತ್ರವೂ ರೋಚಕವೂ ಗಂಭೀರವೂ ಆಗಿವೆ. ಮಾನವ ಸತ್ತನಂತರ ಪ್ರೇತರಾಗುಳಿಯುತ್ತಾನೆ ಅಥವಾ ಮತ್ತೆ ಹುಟ್ಟಿ ಬರುತ್ತಾನೆ ಇಲ್ಲವೆ ಸ್ವರ್ಗದಲ್ಲಿದ್ದುಕೊಂಡು ತಿರೆಯವರ ಯೋಗಕ್ಷೇಮಗಳನ್ನು ವಿಚಾರಿಸಿಕೊಳ್ಳುತ್ತಾನೆಂಬ ನಂಬಿಕೆ ಅನೇಕ ಮರಣೋತ್ತರ ಸಂಸ್ಕಾರಗಳಿಗೆ ಪ್ರೇರಕವಾಗಿದೆ. “[8] ಮರಣಾನಂತರ ಆತ್ಮಕ್ಕೆ ತೃಪ್ತಿ ದೊರೆಯಲೆಂದು ಆಶಿಸಿ ಔತಣಕೂಟಗಳನ್ನು ಏರ್ಪಡಿಸುವ ಪದ್ಧತಿ ಮಲೆನಾಡಿನಲ್ಲಿದೆ. ಸಾವು ಸಂಭವಿಸಿದ ದಿನ ಸಂಬಂಧಿಕರು ಬೇರೇನೂ ಸೇವಿಸುವಂತಿಲ್ಲ : ಸತ್ತವರ ಗಂಜಿಯನ್ನೇ ಕುಡಿಯಬೇಕು. ಸತ್ತು ಮೂರು ದಿವಸಗಳಾದ ಮೇಲೆ ‘ಮೂರುದಿನದ ಕಟ್ಟೆ’ ಎಂಬ ಮೊದಲನೆಯ ತಿಥಿಯನ್ನು ಒಕ್ಕಲಿಗರು ಆಚರಿಸುತ್ತಾರೆ. ಈ ಕಟ್ಟೆಗೆ ಶವಸಂಸ್ಕಾರದ ದಿನ ಬಂದ ಸಂಬಂಧಿಕರೆಲ್ಲರೂ ಮೃತನ ಆಪೇಕ್ಷೆಯ ತಿಂಡಿತಿನಿಸುಗಳನ್ನು ಮಾಡಿ ತಂದಿರುತ್ತಾರೆ. ಮೃತನಿಗೆ ಎಡೆಯಿಡುವ  ಅಡುಗೆಯನ್ನು ಮಾತ್ರ ಮೃತನ ಪತ್ನಿಯೇ ಮಾಡಬೇಕು. ಸಂಬಧಿಕರು ಮೃತನ ಋಣ ಬೇಡವೆಂದು ಅಕ್ಕಿ, ಕೋಳಿ, ಮೊಟ್ಟೆ, ಮೀನು, ಬಾಳೆಕಾಯಿ ಮುಂತಾದವನ್ನು ತಂದು ಕೊಟ್ಟಿರುತ್ತಾರೆ. ಆ ಪದಾರ್ಥಗಳನ್ನು ಬಳಸಿ ಅಡುಗೆಯನ್ನು ಅಣಿಗೊಳಿಸಲಾಗುತ್ತದೆ ಮೀಸಲಡಿಗೆ ತಯಾರಾದ ಅನಂತರ “ಗೂಳಿಗಿಡ”ಲು ಹೊರಡುತ್ತಾರೆ. ಒಂದು ಬಿದಿರಿನ ಬುಟ್ಟಿಯಲ್ಲಿ ಮೃತನ ಪತ್ನಿ ಅಣಿಗೊಳಿಸಿಟ್ಟ ಬೆಲ್ಲದ ಅನ್ನ.ಹುಗ್ಗಿ ಅನ್ನ ಹೋಳಿಗೆ, ಮೊಸರು, ತುಪ್ಪ.ಐದು ಬಗೆಯ ಪಲ್ಯ ಮುಂತಾದವುಗಳನ್ನು ಎಡೆಯಿಟ್ಟು ಪೂಜಿಸುತ್ತಾರೆ ಕಾಗೆ ಎಂಜಲು ಮಾಡಲಿ ಎಂದು ಒಂದು ಎಡೆಯನ್ನು ಬಯಲಲ್ಲಿಡುತ್ತಾರೆ. ಕಾಗೆ ಎಂಜಲು ಮಾಡಿದರೆ ಮೃತನಿಗೆ ಮೋಕ್ಷ ಲಭಿಸುವುದೆಂಬ ನಂಬಿಕೆ. ಸುಡಗಾಡಿನಿಂದ ಹಿಂತಿರುಗಿದ ಬಳಿಕ ಮನೆಯ ನಡುವೆ (ನಡುಮನೆ)ಕಳಶವಿಟ್ಟು ಎಡೆಮಾಡಿ, ಅದನ್ನು ಹಂಚಿ ತಿನ್ನುತ್ತಾರೆ ಅನಂತರ ಸಹಪಂಕ್ತಿಯಲ್ಲಿ ಕುಳಿತು ಬಾಳೆಕಾಯಿ ಹುಳಿ, ಅನ್ನ,ಸಾರು ಊಟಮಾಡುತ್ತಾರೆ ೧೧ನೆಯ ದಿವಸ “ಜಕ್ಕಣಿ”[9] ಕೂಡಿಸುವ ಶಾಸ್ತ್ರ ನಡೆಯುತ್ತದೆ. ಅಂದರೆ, ಅದುವರೆಗೆ ಹೊರೆಗೆ ಸಂಚರಿಸುತ್ತಿದ್ದ ಮೃತನ ಆತ್ಮರನ್ನೂ ಒಳಗೆ ಕರೆದುಕೊಳ್ಳುವುದು. ಈ ಆಚರಣೆಯೆ(ಸಮಾರಾಧನೆ) ಅಂತಿಮವಾದದ್ದು.ಅಂದಿನ ದಿವಸ ವಿಶೇಷವಾಗಿ ಮಾಂಸದೂಟವಿರುತ್ತದೆವಿರುತ್ತದೆ. ಇದನ್ನು “ಬಜ್ಜದ ಕಡಬು ತಿನ್ನುವುದು” ಎನ್ನತ್ತಾರೆ. ವೀರಶೈವರಲ್ಲಿ ಸತ್ತದ ದಿವಸ ಅನ್ನ, ತಂಬುಳಿಮಾಡುತ್ತಾರೆ. ೩ ನೆಯ ದಿನದ ಕರ್ಮದಲ್ಲಿ ಒಂದೇ ಬಾಳೆಮರದ ಎಲೆಯೂಟ, ಅದೇ ಮರದದಿಂಡಿನ ಪಚಡಿ, ಅದೇ ಮರದ ಕಾಯಿಯ ಪಲ್ಯ – ಇದರೊಂದಿಗೆ ಮುಳ್ಳುಗಾಯಿ ಸೇರಿಸುತ್ತಾರೆ (ಈ ಎರಡೂ ಸೇರಿದರೆ ಅಶುಭ ಸಂಕೇತ)

– ಪಿತೃಪೂಜೆಗೆ ಮಲೆನಾಡಿನ ಬದುಕಿನಲ್ಲಿ ವಿಶೇಷ ಮಹತ್ವವಿದೆ. (ಎಲ್ಲಾ ಕಡೆಯೂ ನಡೆಯುವಂತೆ) ಭಾದ್ರಪದ ಬಹುಳದಲ್ಲಿ ೧೫ ದಿನ ಮಾತ್ರ ಇದು ನಡೆಯುತ್ತದೆ. ಸಸ್ಯಾಹಾರಿಗಳಾದರೆ ವಡೆ, ಪಾಯಸ, ಸಿಹಿಭಕ್ಷ್ಯವನ್ನೂ ಮಾಂಸಹಾರಿಗಳಾದರೆ ಕಡುಬು ಮಾಂಸವನ್ನು ಮಾಡುತ್ತಾರೆ.

– ಬ್ರಾಹ್ಮಣರು ತಿಥಿಯಲ್ಲಿ ಹಾಗಲಕಾಯಿ, ಕಂಚಿಕಾಯಿ, ಬಾಳೆಕಾಯಿಯನ್ನು ಕಡ್ಡಾಯವಾಗಿ ಬಳಸುತ್ತಾರೆ. “ಕದಳೀಪಂಚಕಗಳು” ಎಂಬುದು ಕಡ್ಡಾಯ (ಬಾಳೆಕಾಯಿಪಲ್ಯ, ಬಾಳೆದಿಂಡು ಕೋಸಂಬರಿ, ಬಾಳೆಮೂತಿಚಟ್ನಿ, ಬಾಳೆಹಣ್ಣಿನ ರಸಾಯನ,  ಬಾಳೆಕಾಯಿ ಉಪ್ಪೇರಿ /ಸೊಂಡಿಗೆ) ಹೆಸರು ಬೇಳೆಯ ತೊವ್ವೆ, ತಿಳಿಸಾರು, ಮೆಣಸಿನಸಾರು ಆ ದಿನದಲ್ಲಿ ವಿಶೇಷ. ಯಾವುದಾದರೂ ಗೆಡ್ಡೆಗೆಣಸುಗಳಿಂದ “ಬೋಳುಹುಳಿ”[10] ಮಾಡುತ್ತಾರೆ ಆದಿನದ ಮುಖ್ಯ ಭಕ್ಷ್ಯ ಉದ್ದಿನವಡೆ,  ತರಿವಡೆ (ಸಾಗರದ ಕಡೆ ಕೆಲವರು ಕಡಬು ಮಾಡುತ್ತಾರೆ) ಸಾಮಾನ್ಯ ಸಹಿ ಎಂದರೆ ರವೆ ಪಾಯಸ,  ಅತ್ತಿರಸ,  ಕಾಯಿಹೋಳಿಗೆ, ಸಜ್ಜಪ್ಪ, ಸುಕ್ಕಿನ ಉಂಡೆ, ಬ್ರಾಹ್ಮಣಾರ್ಥಕ್ಕೆ ಕುಳಿತವರಿಗೆ (ಇವರಲ್ಲಿ ಒಬ್ಬ “ಪಾಪನಿವಾರಕ “(Sin-eater) ಇರುತ್ತಾನೆ) ಹೆಚ್ಚಾಗಿ ಚೆಲ್ಲವಷ್ಟು ಬಡಿಸಬೇಕು.ಆಗ ಮಾತ್ರ ಅವರಿಗೆ ಮತ್ತು ಪಿತೃಗಳಿಗೆ ತೃಪ್ತಿಯಾಗಿದೆ ಎಂದರ್ಥ.

– ಕೆಲಸಲದ ವೇಳೆಯಲ್ಲೇ ಬಿಡುವು ಮಾಡಿಕೊಂಡು ಬೇಟೆಯಾಡುವುದು (ಈಡಿಗ, ಒಕ್ಕಲಿಗ) ಮಲೆನಾಡಿಗರಿಗೆ ಹವ್ಯಾಸ. ಮಾಂಸಭಕ್ಷಣೆಯ ಏಕೈಕ ಕಾರಣಕ್ಕಿಂತ, ಪೈರು ರಕ್ಷಣೆಯನ್ನು ಮಾಡುವ ಉದ್ದೇಶವೂ ಇದೆ. ಬೇಟೆಯೂಟಗಳು ವಿರಾಮಕಾಲದಲ್ಲಿ ಹಾಗೂ ಕೆಲವು ಹಬ್ಬಗಳ ಸಂದರ್ಭದಲ್ಲಿರುತ್ತವೆ. (ಯುಗಾದಿ, ದೀಪಾವಳಿ. ಹುಣ್ಣಿಮೆ ಹಬ್ಬ). ಹಂದಿ, ಮೊಲ, ಬರ್ಕ, ಕುಣಿಬಿನ ಬೆಕ್ಕು, ಕಬ್ಬೆಕ್ಕು, ಕಾಡುಕೋಳಿ, ನವಿಲು, ಉಡ, ಕಾನ್ಕುರಿ, ಜಿಂಕೆ, ಮೀನು-ಮುಂತಾದವುಗಳನ್ನು ಬೇಟೆಯಾಡಿದಾಗ ಒಬ್ಬೊಬ್ಬರು ನಿರ್ವಹಿಸಿದ ಕೆಲಸಕ್ಕೆ ಅನುಸಾರ ಮಾಂಸವನ್ನು ಪಾಲು ಹಾಕಿಕೊಳ್ಳುತ್ತಾರೆ.

ಮಲೆನಾಡಿನಲ್ಲಿ ಮಾಂಸದ ಸಾರು[11] ಕಡೇಪಕ್ಷ ಕೆಡದಂತೆ ಮಾಡುತ್ತಾರೆ. ತೆಂಗಿನಕಾಯಿ ಬದಲಿಗೆ ಕೊಬ್ಬರಿಯನ್ನು ಬಳಸುವುದು ವಾಡಿಕೆ. ಈರುಳ್ಳಿಯನ್ನು ಬಳಸುವುದಿಲ್ಲ. ಸಾರನ್ನು ಉಪಯೋಗಿಸುವ ಹೊತ್ತಿನಲ್ಲಿ ಬೆಚ್ಚಗೆ ಮಾಡಿಕೊಂಡರೆ ಸಾಕು. ಬಹುತೇಕ ಮಾಂಸದ ಅಡುಗೆಯನ್ನು ಅಡುಗೆ ಮನೆಯಲ್ಲಿ ಮಾಡುವುದಿಲ್ಲ. ಕುರಿ ಮಾಂಸದ ಅಡುಗೆ ಮಲೆನಾಡಿನಲ್ಲಿ ಹೆಚ್ಚು. ದೀವರಲ್ಲಿ ಕೋಳಿಕಾಲು ಕಜ್ಜಾಯದ ಊಟ ಬಹಳ ಪ್ರಸಿದ್ಧವಾಗಿದೆ, (ಸಾಗರ, ಸೊರಬ) ಹಾಗೆಯೇ ಕರಮೀನುಸಾರು ಕೂಡ.

– ರೋಗನಿರೋಧಕ ಅಡುಗೆಗಳೂ ಮಲೆನಾಡಿನಲ್ಲಿ ಪ್ರಚಲಿತ. ಋತುಚಕ್ರದ ಸಂದರ್ಭದಲ್ಲಿ ಹೊಟ್ಟೆನೋವು ಬಂದರೆ ದಿಪ್ಪಚದೀವಳಿಗೆ ಸೊಪ್ಪನ್ನು ಅಕ್ಕಿಯೊಂದಿಗೆ ಕುಟ್ಟಿ ಕಡುಬು ಮಾಡಿಕೊಡುವುದು, ಮೈಕೈನೋವಿಗೆ ಕಾಳುಜೀರಿಗೆ, ಅರಿಷಿಣಪುಡಿ ಸೇರಿಸಿ ಕಷಾಯ ಮಾಡಿಕೊಡುವುದು,  ಹೆರಿಗೆನಂತರದ ಹೊಟ್ಟೆನೋವಿಗೆ ದುಂಡುಮಲ್ಲಿಗೆ ಸೊಪ್ಪನ್ನು ರುಬ್ಬಿ ಒಣಶುಂಠಿ ಸೇರಿಸಿ ಕೊಡುವುದು ಪದ್ಧತಿ ಪಾರ್ಶ್ವವಾಯುವಿಗೆ ಬಾವಲಿ ಸಾರು, ಕ್ವಾವೆರೋಗಕ್ಕೆ ಕೆಂಬೂತನಸಾರು,  ದಮ್ಮಿಗೆ ಚಗಳಿ (ಕೆಂಪಿರುವೆ ) ಸಾರು ಸೇವಿಸುತ್ತಾರೆ.

ಒಟ್ಟಾಗಿ ಅಡುಗೆಗೆ ಬಳಸುವ ವಸ್ತು ವಿಶೇಷಗಳನ್ನು ಗಮನಿಸಿದರೆ ಮಲೆನಾಡಿಗರಿಗೆ ಸ್ವಾದಕಲ್ಪನೆ ಹಾಗೂ ವೈಜ್ಞಾನಿಕ ತಿಳಿವಳಿಕೆ ಇರುವುದು ಸ್ಪಷ್ಟವಾಗುತ್ತದೆ. ಹಾಗೆಯೇ ನಿಸರ್ಗದತ್ತ ಉತ್ಪನ್ನಗಳ ಬಾಹುಳ್ಯದಿಂದಾಗಿ ಅಡುಗೆಗಳಲ್ಲಿ ಕೃತಕತೆ ಹೆಚ್ಚು ಕಾಣಿಸುವುದಿಲ್ಲ. 

ಪರಾಮರ್ಶೆ:

. ಎಚ್. ಜೆ.ಲಕ್ಕಪ್ಪಗೌಡ (ಸಂ), ಮಲೆನಾಡು ಜಾನಪದ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೮೩.

೨. ಅಂಬಳಿಕೆ ಹಿರಿಯಣ್ಣ, ಮಲೆನಾಡು ಜನಪದ ಸಂಪ್ರದಾಯಗಳು, ಪುಸ್ತಕ ಚಿಲುಮೆ, ಮೈಸೂರು, ೧೯೭೮.

೩. ಅಂಬಳಿಕೆ ಹಿರಿಯಣ್ಣ, ದಕ್ಷಿಣ ಕರ್ನಾಟಕದ ಜನಪದ ಅಡುಗೆಗಳು, ರಾಜ್ಯ ಸಂಪನ್ಮೂಲ ಕೇಂದ್ರ, ಮೈಸೂರು ೧೯೮೯.

೪. ಜೀ.ಶಿಂ.ಪರಶಿವಯ್ಯ, ಕರ್ನಾಟಕ ಜಾನಪದ ಸಮೀಕ್ಷೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

೫. ಡಾ. ಶ್ರೀಕಂಠ ಕೂಡಿಗೆ, ಭೂಮಿ ಹುಣ್ಣಿಮೆ, ೧೯೮೨.

೬. ಎಚ್.ಜೆ. ಲಕ್ಕಪ್ಪ ಗೌಡ (ಪ್ರಧಾನ ಸಂಪಾದಕರು) ಸಿಂಗಾರ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಸ್ಮರಣ ಸಂಚಿಕೆ, ೧೯೮೩.

೭. ಪ್ರಜಾವಾಣಿ (ದೀಪಾವಳಿ ವಿಶೇಷಾಂಕ) ೧೯೮೯. 

ಕೃತಜ್ಞತೆ 

–      ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ಮಿತ್ರರಾದ ಶ್ರೀ ವಿಶ್ವನಾಥ ಗುಪ್ತ ಮತ್ತು ಶ್ರೀಮತಿ ವನಜ ಅವರಿಗೆ,

–      ಕ್ಷೇತ್ರಕಾರ್ಯದಲ್ಲಿ ನೆರವಾದ ಶ್ರೀ ರಾಮಪ್ರಸಾದ್ (ಉಪನ್ಯಾಸಕ, ರಾಷ್ಟೀಯ ಕಿರಿಯ ಕಾಲೇಜು ಬಿ.ಆರ್. ಪ್ರಾಜೆಕ್ಟ್ ) ಮತ್ತು

–      ವಿದ್ಯಾರ್ಥಿನಿಯರಾದ ಅಂಜಲಿ,  ಉಷಾದೇವಿ,  ಪೋಷಿಣಿ ಅವರಿಗೆ.


[1]       ಹುಣಸೆಸಾರು : ಹುಣಸೆ ರಸಕ್ಕೆ ಉಪ್ಪು ಬೆಲ್ಲ ಹಾಕಿ ಕುದಿಸುವುದು

ಮೆಣಸಿನಸಾರು : ಮೆಣಸಿನ ಕಾಳಿನ ಪುಡಿ ಮತ್ತು ನಿಂಬಿಹಣ್ಣು ಸೇರಿಸುವುದು.

ಗಂಜಿ ಸಾರು : ಅನ್ನಬಸಿದ ಗಂಜಿಗೆ ಉಪ್ಪು  ಮೊಸರು,  ಬೆರೆಸಿ ಸಾಸಿವೆ -ಒಣಮೆಣಸಿನಕಾಯಿ ಹೆಚ್ಚಿಹಾಕಿ ಒಗ್ಗರಣೆ ಮಾಡುವುದು.

ಕಲಗಚ್ಚಿನ ಸಾರು : ಅಕ್ಕಿ ಯನ್ನು ತೊಳೆದ ನೀರಿಗೆ ಉಪ್ಪು ಬೆರೆಸಿ ಸಾಸಿವೆ -ಒಣಮೆಣಸು,ಕರಿಬೆವಿನ ಒಗ್ಗರಣೆ ಹಾಕಿ ಸಾರನ್ನು ಕುದಿಸಿ, ಆರಿದ ಮೇಲೆ ಸ್ವಲ್ಪ ಮಜ್ಜಿಗೆ ಬೆರೆಸುವುದು.

ಮುರುಗನ ಹುಳಿಸಾರು : ಮಲೆನಾಡಿನಲ್ಲಿ ದೊರೆಯುವ ಒಂದು ಹಣ್ಣಿನಿಂದ ತಯಾರಿಸುವದು.

ಹುರುಳಿಕಟ್ಟಿನ ಸಾರು : ಹುರುಳಿಕಾಳನ್ನು ಬೇಯಿಸಿ ಬಸಿದ ನೀರಿಗೆ ಉಪ್ಪುಬೆರೆಸಿ, ಹುಣಸೆರಸ ಸೇರಿಸಿ,  ಸಾಸಿವೆ-ಬೆಳ್ಳುಳ್ಳಿ ಒಣಮೆಣಸಿನಕಾಯಿ ಒಗ್ಗರಣೆ ಹಾಕಿ ಕುದಿಸುವುದು.

ವಾಟೆಹುಳಿಸಾರು : ಕಾಡಿನಲ್ಲಿ ಬೆಳೆಯುವ ವಾಟೆಮರದ ಕಾಯಿಯ ಹುಳಿಯಿಂದ ತಯಾರಿಸುವುದು

[2]      ತಂಬುಳಿಗೆ : ದೊಡ್ಡ ಪಾತ್ರೆ,  ಒಂದಲೆಗ,  ಗರುಗನಕುಡಿ,  ಹತ್ತಿಕುಡಿ, ದಾಳಿಂಬೆಕುಡಿ, ಜೀರಿಗೆ ಮೆಣಸಿನಕುಡಿ, ಸೂರ್ಲೆಕುಡಿ, ಬಸಲೆಸೊಪ್ಪು – ಇವುಗಳನ್ನು ಬಳಸುತ್ತಾರೆ.

[3]       ಮೇಲೋಗರಕ್ಕೆ : ದಾಸವಾಳ, ಗುಲಾಬಿದಳ,  ಸೀಗುಂಬಳ ಹೂವು,  ಹೋಳೆದಾಸವಾಳ ಹೂವನ್ನೂ ಬಳಸುತ್ತಾರೆ.

[4]       ಪರಮಶಿವಯ್ಯ. ಜೀ.ಶಂ.(ಸಂ) ಕರ್ನಾಟಕ ಜಾನಪದ ಸಮಿಕ್ಷೆ,  ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ,  ಬೆಂಗಳೂರು,

[5]       ಕಾರ = ಒಂದು ಬಗೆಯ ಲೇಹ ಕೊಬ್ಬರಿ, ಕಲ್ಲು ಸಕ್ಕರೆ, ಉತ್ತುತ್ತೆ, ಒಣದ್ರಾಕ್ಷಿ, ಬಾದಾಮಿ, ಚಕ್ಕೆ, ಲವಂಗ, ಬಜೆ,  ಜೇಷ್ಠಮದ,ದಿಂಡುದಂಟು, ಜಾಯಿಕಾಯಿ, ಗಂಧಮೆಣಸು, ಆಕಳಕರೆ, ಮರಾಟಮೊಗ್ಗು, ಒಣಶುಂಠಿ, ಸಣ್ಣಹಿಪ್ಪಲಿ ಏಲಕ್ಕಿ, ಕಾಳಮೆಣಸು, ಜೀರಿಗೆ -ಇತ್ಯಾದಿಗಳನ್ನು ಹುರಿದು ಕುಟ್ಟಿ ಪುಡಿ ಮಾಡಿ ಬೆಲ್ಲ ಮತ್ತು ತುಪ್ಪದಲ್ಲಿ ಬೇಯಿಸಿದ್ದು.ಇದಕ್ಕೂ ಕಾರದ ಸಾರಿಗೂ ಸಂಬಂಧವಿಲ್ಲ ಎರಡೂ ಬೇರೆ ಬೇರೆ.

[6]       ಅಂಬಳಿಕೆ ಹಿರಿಯಣ್ಣ, ಮಲೆನಾಡ ಜನಪದ ಸಂಪ್ರದಾಯಗಳು,  ಪುಸ್ತಕಚಿಲುಮೆ,  ಮೈಸೂರು ೧೯೭೮,ಪುಟ.೪೩

[7]       ಕೊಟ್ಟೆಕಡಬು : ಅಕ್ಕಿ ಉದ್ದು ಕೆಸುವನ್ನು ಹಾಕಿ ತಿರುವಿ ಬಾಳೆ ಎಲೆಯ ಕೊಟ್ಟಿಯಿಂದ ಬೇಯಿಸಿ ಮಾಡಿದ್ದು.

ವಿ.ಸೂ : ಊಟಕ್ಕೆ ಮಾಡುವ ಕಡುಬುಗಳು : ಸಿಹಿಗುಂಬಳಕಾಯಿ, ಬಣ್ಣದ ಸೌತೆಕಾಯಿ, ಹಲಸಿನ ಹಣ್ಣು,  ಅರಿಸಿನದೆಲೆ ಕಡುಬು, ಹಲಸಿನದೆಲೆ ಕಡುಬು.

[8]       ಜವರೇಗೌಡ. ದೇ. ಜಾನಪದ ಅಧ್ಯಯನ, ೧೯೭೬ ಪುಟ.೩೨೯.

[9]       ಜಕ್ಕಣಿ: ಒಂದು ಮಣೆಯ ಮೇಲೆ ಎರಡು ಉರಿಯುತ್ತಿರುವ ಹಣತೆಗಳನ್ನು ಒಂದರ ಪಕ್ಕದಲ್ಲೊಂದು ಒತ್ತೊತ್ತಾಗಿ ಇಡಲಾಡುತ್ತದೆ. ಬೇರೆ ಬೇರೆಯಾಗಿ ಉರಿಯುತ್ತಿದ್ದ ಎರಡೂ ಹಣತೆಗಳ ಕುಡಿ ಒಂದಾಗಿ ಉರಿದರೆ ಜಕ್ಕಳಿ ಕೂಡಿದೆ ಎಂದು ಭಾವಿಸುತ್ತಾರೆ. ದೀವರಲ್ಲಿ ಇದನ್ನು ’ಕೊಲೆಕೂಡದು’ (ದೀಪದೆರಡು ಸುಳಿ ಕೂಡುವುದು) ಎನ್ನುತ್ತಾರೆ.

[10]      ಬೇಳೆ ಬೆರೆಸದೆ ತರಕಾರಿಗಳಿಂದ ಮಾಡಿದ್ದು -ಬಳಸುವ ಗೆಡ್ಡೆಗಳು : ಕೆಸುರಿನಗಡ್ಡೆ, ಸುವರ್ಣಗಡ್ಡೆ, ಮರಗೆಣಸು, ಹೆಡಿಗೆ ಗೆಣಸು ಮತ್ತು ಬಾಳೆಕಾಯಿ,  ಬಣ್ಣದಸೌತೆ,  ಹಲಸಿನ ಕಾಯಿ.

[11]     ಮಾಂಸಾಹಾರದ ಸಾರು, ಚಟ್ನಿ: ಮೀನಿನಸಾರು, ಹುರಿದ ಮೀನಿನ ಸಾರು,  ನಳ್ಳಿಸಾರು,  ಬೆಳ್ಳೆ ಸಾರು,  ಕಾರೇಡಿಸಾರು, ಕೆಂಜಗನ ಸಾರು, ಕೋಳಿಸಾರು, ಕೋಳಿಪಲ್ಯದಸಾರು,  ಕರಿಮೀನುಸಾರು,  ಮೀನಿನಚಟ್ನಿ,  ಸ್ವೋರ್ಲುಮೀನಿನಚಟ್ನಿ,  ಸೀಗಡಿಚಟ್ನಿ, ಮೀನಿನ ಕುಟ್ಟುಚಟ್ನಿ.

ಕೋಳಿಕಾಲು ಕಜ್ಜಾಯ: ಅಕ್ಕಿಯನ್ನು ನುಣ್ಣಗೆ ಬೀಸಿ ಹಿಟ್ಟುಮಾಡಿ ಬೇಯಿಸಿ ಕಲಸಿಕೊಂಡು ಬಳೆ ಮಾಡುವರು ಅದನ್ನು ಒಳ್ಳೆಣ್ಣೆಯಲ್ಲಿ ಕರಿಯುವರು. ಹೀಗೆ ಕರಿದ ಕಜ್ಜಾಯ ಕೋಳಿಸಾರಿನೊಂದಿಗೆ ತಿನ್ನಲು ವಿಶಿಷ್ಟ ರುಚಿ.