ಒಟ್ಟು ಭಾರತದ ಸಂಸ್ಕೃತಿ ಮತ್ತು ಇತಿಹಾಸವನ್ನು ಸಮೀಕ್ಷಿಸಿದಾಗ ಅದರಲ್ಲಿ ನಮ್ಮ ಕರ್ನಾಟಕದ ಸಾಧನೆವೈಶಿಷ್ಟ್ಯಪೂರ್ಣವಾಗಿದೆ. ಪುನಃ ಒಟ್ಟು ಕರ್ನಾಟಕದ ಸಂಸ್ಕೃತಿಯನ್ನು ಅವಲೋಕಿಸಿಲಾಗಿ ಕರ್ನಾಟಕದ ಉಳಿದೆಲ್ಲ ಭಾಗಗಿಂತ ಉತ್ತರ ಕರ್ನಾಟಕದ ಸಂಸ್ಕೃತಿ ಇನ್ನೂ ವಿಶೇಷವಾಗಿದೆ. ಈ ಮಾತು ನಮ್ಮ ಪೂರ್ವಜರಿಂದ ಬಂದಿರುವ ಊಟ, ಅಡುಗೆಗೂ ಅನ್ವಯಿಸುತ್ತದೆ. ಅಂದರೆ ಹಿಂದೆ ಆಗಲಿ ಇಂದೇ ಆಗಲಿ ನಮ್ಮಲ್ಲಿ ಊಟದಲ್ಲಿರುವಷ್ಟು ವೈವಿಧ್ಯತೆ ಕರ್ನಾಟಕದ ಉಳಿದ ಭಾಗಗಳಲ್ಲಿ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಬಹುಶಃ ಇಲ್ಲಿ ಬೆಳೆಯುವ ನೂರಾರು ನಮೂನೆಯ ದವಸ ಧಾನ್ಯಗಳ ಬೆಳೆಯೆ ಇದಕ್ಕೆ ಕಾರಣವಾಗಿರಬಹುದು. ಒಟ್ಟು ಕರ್ನಾಟಕದ ಭೂಮಿಯನ್ನು, ಕೃಷಿಯೊಗ್ಯ ಭೂಮಿ, ಕೃಷಿಯೋಗ್ಯವಲ್ಲದ ಭೂಮಿ ಮತ್ತು ಅರಣ್ಯಭೂಮಿ ಎಂಬ ವಿಂಗಡಣೆಯಿಂದ ನೋಡಿದಾಗ ಉತ್ತರ ಕರ್ನಾಟಕವು, ಕರ್ನಾಟಕದ ಉಳಿದ ಭಾಗಗಳಿಗಿಂತ ಕೃಷಿಯೋಗ್ಯ ಭೂಮಿಯನ್ನೇ ಹೆಚ್ಚು ಹೊಂದಿರುವುದು. ಇಲ್ಲಿ ಬೆಳೆಯುವ ತರಕಾರಿ ಕಾಳು – ಕಡಿಗೆ ಕಾರಣವಾಗಿರಬಹುದು. ಈಬೆಳೆಗೆ ಇಲ್ಲಿಯ ನೆಲದ ಬಲ ಮಳೆ ಗಾಳಿಯ ಗುಣವೂ ಕಾರಣವೆಂದು ಬೇರೆ ಹೇಳಬೇಕಾಗಿಲ್ಲ. ಉತ್ತರ ಕರ್ನಾಟಕದ ವೈರವಿಧ್ಯವಾದ ಅಡುಗೆಗೆ ಇಲ್ಲಿಯ ತಾಯಂದಿರ ಕೌಶಲ್ಯವೇ ಕಾರಣವಾಗಿದ್ದರೂ ಭೂಮಿತಾಯಿ ನೀಡುವ ದವಸ ಧಾನ್ಯಗಳೂ ಕಾರಣವಾಗಿದೆ. ಆದ್ದರಿಂದ ಅಡುಗೆಗೆ ಆಧಾರವಾಗಿರುವ ಇಲ್ಲಿ ಬೆಳೆಯುವ ಒಟ್ಟು ಬೆಳೆಗಳು ಯಾವವೆಂದರೆ, ಜೋಳ, ಗೋದಿ, ನವಣಿ, ಗೋಂಜೋಳ (ಗೋವಿನಜೋಳ) ಕೆಲವು ಕಡೆ ಇದಕ್ಕೆ ಮುಸುಕಿನ ಜೋಳವೆಂದಲೂ ಕರೆಯುವರು ಸಜ್ಜೆ, ಭತ್ತ, ಹತ್ತಿ,  ಕಡಲೆ, ಅಗಸಿ, ಗೆರೆಳ್ಳು, ಮರೆಳು, ಅಳವಿ, ಬರಗ, ಬಾರ್ಲಿ, ಹಾರಕ (ಶಾವಿಗೆ) ಸಾಸವಿ, ಅಜವಾನ, ಮೆಣಸು, ಹವೀಜ, ಜೀರಿಗಿಯಂತಹ ಮಸಾಲೆ ದಿನಸುಗಳು, ತಂಬಾಕು, ಮೆಣಸಿನಕಾಯಿ, ಉಳ್ಳಾಗಡ್ಡೆ, ಬಳ್ಳೊಳ್ಳಿ, ಅರಿಸಿಣ, ಶುಂಠಿ, ಔಡಲ, ರಾಜಗಿರಿ, ಮೆಂತೆ, ಮೂಲಂಗಿ ಮೊದಲಾದವುಗಳು. ಅಕ್ಕಡಿಗಳು, ಮಸಾಲೆ ದಿನಸು, ಗೆಡ್ಡೆಗೆಣಸುಗಳನ್ನು ಹಾಗೂ ಹಲವಾರು ತರಹದ ಹಣ್ಣು-ಹಂಪಲಗಳನ್ನು ಸಮೃದ್ಧಿಯಾಗಿ ಬೆಳೆಯುತ್ತಿದ್ದ ನೆಲ ಉತ್ತರ ಕರ್ನಾಟಕದ್ದಾಗಿದೆ. ಆದರೆ ಈಗ ನಮ್ಮ ಹಳ್ಳಿಯ ಹಳೆಯ ತಲೆಗಳು ಹೇಳುವಂತೆ, “ಕಲಿಗಾಲ ಬಂದು ಕಾಲ ಕೆಟ್ಟು ಕಾಲಕಾಲಕ್ಕೆ ಬೀಳು ಮಳೆ ಕಡಿಮೆಯಾಗಿ ಬೆಳೆ ಹುಸಿಹೋಗಾಕ ಹತ್ತ್ಯಾವ“ ಅಂದರೆ ಮೊದಲಿನಷ್ಟು ಹಲುಸಾದ ಬೆಳೆ ಈಗ ಇಲ್ಲವೆನ್ನಬಹುದು.ಇದರಂತೆ ಮೊದಲಿನ ಕೇವಲ ಶೆಗಣಿ ಗೊಬ್ಬರ ಮತ್ತು ಭೂಮಿಯ ಗುಣದಿಂದ ಮೊದಲಿನ ಧಾನ್ಯದ ರುಚಿ ಬಲು ರುಚಿಯಾಗಿತ್ತೆಂದು ಹೇಳುವ ಹಳೆಯ ಜನ, ಈಗಿನ ಸರಕಾರಿ ಗೊಳ್ಳ ಗೊಬ್ಬರ ಬಂದು ಹೈಬ್ರೀಡ್ ಕಾಳ ಬೆಳ್ಯಾಕ ಹತ್ತಿ ಊಟದ ರುಚಿ ಕೆಟ್ಟ ಹೋಗೆದ ಎಂದೂ ಹೇಳುತ್ತಾರೆ. ಇದೀಗ ಹೇಳಿದ ಇಲ್ಲಿ ಬೆಳೆಸುವ ಪ್ರತಿಯೊಂದು ಕಾಳು ಕಡಿಯಲ್ಲಿ ವಿಭಿನ್ನ ಪ್ರಕಾರಗಳುಂಟು. ಉದಾಹರಣೆಗಾಗಿ ಒಂದೆರಡು ಹೇಳುದಾದರೆ ಜೋಳದಲ್ಲಿ, ಬಿಳಿಜೋಳ, ಕೆಂಪುಜೋಳ, ಮುಂಗಾರಿ, ಅಳ್ಳಿನ ಜೋಳ, ಕಡಬಿನ ಜೋಳದಲ್ಲಿ ,ಪೋಸಿ ಜೋಳ, ಸಕ್ರಿಮುಕ್ರಿಜೋಳ, ಇತ್ಯಾದಿ. ಅವರೆಕಾಳಿನಲ್ಲಿ ಹೊಲದ ಅವರಿ, ಹೋಳಿ ಅವರಿ, ಬಿಳಿಅವರೆ ಇತ್ಯಾದಿ. ಸೇಂಗಾದಲ್ಲಿ ಹಬ್ಬುಸೇಂಗಾ, ಕೀಳಸೇಂಗಾ ಎಂದು. ಎಳ್ಳಿನಲ್ಲಿ ಬಿಳಿಎಳ್ಳು, ಕರಿಎಳ್ಳು ಎಂದು ಭಿನ್ನವಾಗದೆ. ಈ ಭಿನ್ನತೆಯು ಅಡುಗೆಯು ವೈವಿಧ್ಯತೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಹೇಳಬೆಕಾದ ಇನ್ನೊಂದು ವಿಷಯವೆಂದರೆ, ಪ್ರತಿಯೊಂದು ಧಾನ್ಯವನ್ನು ಸುಮಾರು  ನಾಲ್ಕೈದು ರೀತಿಯಲ್ಲಿ ಬಳಸಲಾಗುತ್ತದೆ. ೧) ಕಾಳನ್ನುಇಡಿಯಾಗಿ (ಅಂದರೆ ಪೂರ್ಣ ಕಾಳನ್ನು ಕುದಿಸಿ ಪಲ್ಲೆ ಮಾಡಬಹುದು, ಇಲ್ಲವೆ ಗುಗ್ಗರಿಯಂತೆ ತಿನ್ನಬಹುದು) ೨) ಇಡಿಗಾಳನ್ನು ನೀರಿನಲ್ಲಿ ನೆನೆಹಾಕಿ ಮೊಳಕೆ ಒಡಿಸಿ “ಉಸಳಿ” ಮಾಡಿ, ತಿನ್ನಬಹುದು ೩) ಕಾಳನ್ನು ಒಡೆದು ಬೇಳೆ ಮಾಡಿ ಉಪಯೋಗಿಸಬಹುದು ೪) ಧಾನ್ಯವನ್ನು ಒಡೆದು ನುಚ್ಚುಮಾಡಿ  (ಅಂದರೆ ರವಾ ಮಾಡಿಸಿ) ಉಪಯೊಗಿಸಬಹುದು ೫) ಬೀಸಿ ಹಿಟ್ಟು ಮಾಡಿ, ೬) ತವಡಿನ(ಗೊಳಲ) ರೂಪದಲ್ಲಿಯೂ ಉಪಯೋಗಿಸಬಹುದೆ. (ಈ ವಿವಿಧ ಪ್ರಕಾರಗಳ ಸಂಕ್ಷಿಪ್ತ ವಿವರಣೆಯನ್ನು ಮುಂದೆ ಕೊಡಲಾಗಿದೆ).

ಉತ್ತರ ಕರ್ನಾಟಕದಲ್ಲಿ ವಿವಿಧ ಜಾತಿ, ಮತಗಳ ಜನರಿದ್ದಾರೆ ಆದ್ದರಿಂದ ಸಸ್ಯಾಹಾರ, ಮಾಂಸಾಹಾರ ಎರಡೂ ಬಗೆಯ ಅಡುಗೆ ಇರುವುದಾದರೂ ಸಸ್ಯಾಹಾರಿಗಳೇ ಇಲ್ಲಿ ಹೆಚ್ಚು ಇರುವರು. ಮಾಂಸಹಾರಿ ಜನ ಸಹ ಸಾಕಷ್ಟು ಸಸ್ಯಾಹಾರವನ್ನು ತೆಗೆದುಕೊಳ್ಳತ್ತಾರೆ. ಆದರೆ ಸಸ್ಯಾಹಾರಿಗಳು ಮಾಂಸಹಾರ ತಿನ್ನುವುದು ತುಂಬ ವಿರಳ. ಮಾಂಸಹಾರದಲ್ಲಿ ಸಸ್ಯಾಹಾರದಷ್ಟು ವೈವಿಧ್ಯತೆಯೂ ಇಲ್ಲ. ಇಲ್ಲಿರುವ ವಿವಿಧ ಜಾತಿಯವರ ಅಡುಗೆಯನ್ನು ನೋಡಲಾಗಿ ಸ್ವಲ್ಪ ಸ್ವಲ್ಪ ಬದಲಾವಣೆ ಕಂಡು ಬರುತ್ತದೆ. ಹೊರತಾಗಿ ವಿಪರೀತ ವ್ಯತ್ಯಾಸ ಕಾಣುವುದಿಲ್ಲ. ಕೆಲಕೆಲವು ಅಡುಗೆಗಳು ವಿಭಿನ್ನ ಜಾತಿಯನ್ವಯ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತವೆ. (ಉದಾ: ಲಿಂಗಾಯತರು, ಹೋಳಿಗೆ ಮಾಡುವುದಕ್ಕೆ ಬ್ಯಾಳಿಗೆ ಹಾಕುವದು ಎಂದರೆ ,ಬ್ರಾಹ್ಮಣರು ಹಾಕುವುದು ಎನ್ನುತ್ತಾರೆ ಇದರಂತೆ ಜೋಳದ ರೊಟ್ಟಿಗೆ – ಭಕ್ರಿ ಎನ್ನುತ್ತಾರೆ) ಹಾಗೂ ಅಡುಗೆ ಮಾಡು‌ವ ವಿಧಾನ ಸಂದರ್ಭಗಳಲ್ಲಿಯೂ ಅಲ್ಪ ಬದಲಾವಣೆಯಿರುತ್ತದೆ ಅಷ್ಟೇ.

ಉತ್ತರ ಕರ್ನಾಟಕದ ಅಡುಗೆಯನ್ನು ಮುಖ್ಯವಾಗಿ ಎರಡು ಪ್ರಕಾರಗಳಲ್ಲಿ ಗುರುತಿಸಿವೆ. ಒಂದು ದಿನನಿತ್ಯದ ಸಾಮಾನ್ಯ ಅಡುಗೆ ಇನ್ನೊಂದು ಹಬ್ಬ ಹರಿದಿನಗಳಲ್ಲಿ ಮಾಡುವ ವಿಶೇಷ ಅಡುಗೆ. ಇವೆರಡು ಅಡುಗೆಯ ಬಗೆಯಲ್ಲಿ ಇನ್ನುಳಿದ ವಿವಿಧ ಕಾರ್ಯ,  ಪ್ರಸಂಗ ಸಂದರ್ಭದಲ್ಲಿ ಮಾಡುವ ಎಲ್ಲ ತರದ ಅಡುಗೆ ಒಳಗೊಳ್ಳುತ್ತದೆ ಇವೆರಡು ಅಡುಗೆಗೆ “ಸಣ್ಣ ಅಡುಗೆ ” ಮತ್ತು “ದೊಡ್ಡ ಅಡುಗೆ”ಎಂದು ಕರೆಯುವರು. ಅಂದರೆ ದಿನದ ಸಾಮಾನ್ಯ ಅಡುಗೆಗೆ “ಸಣ್ಣ ಅಡುಗೆ” ಎಂದು ಹಬ್ಬದ ವಿಶೇಷ ಅಡಿಗೆಗೆ “ದೊಡ್ಡ ಅಡುಗೆ ” ಎಂದು ಅನ್ನುವರು. ಅಡುಗೆಗಯ ವಿವರವನ್ನು ನೋಡುವ ಮುನ್ನ ಊಟದ ವ್ಯವಸ್ಥೆಯನ್ನು ಸಂಕ್ಷಿಪ್ತದಲ್ಲಿ ತಿಳಿಯುವುದಾದರೆ ನಮ್ಮಲ್ಲಿ ಮೊದಲಿನಿಂದಲೂ ಹೊಲ ಮನೆಗಳಲ್ಲಿ ದುಡಿಯುವ ಸ್ತ್ರೀ -ಪುರುಷರು ನಿತ್ಯವೂ ಮೂರು ಹೊತ್ತು ಊಟ ಮಾಡುವ ರೂಢಿ ಇಟ್ಟುಕೊಂಡಿದ್ದಾರೆಂಬುದನ್ನು ಅವರ ಮಾತಿನಲ್ಲಿಯೇ ನೋಡುವುದಾದರೆ. “ಹಾಲ ಕುಡಿಯುವ ತೊಟ್ಟಲಾನ ಹಸುಗುಸಿಗೆ ಒಂಬತ್ತೂಟ. ಅಂಗಳಾಗ ಆಡು ಮಕ್ಕಳಿಗೆ ಆರೂಟ, ಮನ್ಯಾನ ಹಸಿ ಬಾಣಂತಿಗೆ ನಾಕೂಟ, ಭೂಮ್ಯಾಗ ದುಡಿ ಗಂಡಸಿಗೆ ಮೂರುಟ. ಎನ್ನುವ ಅವರ ಮಾತಿನಿಂದ ತಿಳಿದು ಬರುತ್ತದೆ. ದುಡಿಯುವ ಗಂಡಸಿಗೆ ಮೂರೂಟ ಸಾಕು ಎಂದು ಹೇಳಿದ ಇವರ ಅನುಭವವಾಣಿಯೇ ಇನ್ನೊಂದು ಕಡೆಗೆ “ಒಪ್ಪತ್ತು ಉಂಡವನನ್ನು ಹೊತ್ತುಕೊಂಡು ಹೋಗಿ-(ಸ್ಮಶಾನಕ್ಕೆ) ಎಂದು ಹೇಳಿದ್ದಾರೆ. ಇರಲಿ ಎಲ್ಲದಕ್ಕೂ ನಾವು ಅಕ್ಷರಶಃ ಅರ್ಥಮಾಡಬಾರದಲ್ಲವೆ?

ಹೊಲಕ್ಕೆ ದುಡಿಯಲು ಹೋಗುವ ಗಂಡಸರು ಮುಂಜಾನೆದ್ದು ಹೊಲಕ್ಕೆ ಹೊರಡುವ ಮುಂಚೆ ಮನೆಯಲ್ಲಿ ತಡವೆಂದರೆ ೮ ಗಂಟೆಯೊಳಗಾಗಿ “ನ್ಯಾರಿ” (ಈಗಿನ ಬ್ರೆಕ್ ಫಾಸ್ಟ್) ಎಂದು ದಿನದ ಮೊದಲಿನ ಊಟವನ್ನು ಮಾಡುವರು. ಮಧ್ಯಾಹ್ನ ಹೊಲದಲ್ಲಿ ಅಥವಾ ಮನೆಯಲ್ಲಿ ಎರಡನೆಯ ಊಟವನ್ನು ನಂತರ ಹೊತ್ತು ಮುಳುಗಿ ಹೊಲದಿಂದ ಮನೆಗೆ ಬಂದ ಸ್ವಲ್ಪ ಹೊತ್ತಿನ ತರುವಾಯ ರಾತ್ರಿಯ ಮೂರನೆಯ ಊಟದೊಂದಿಗೆ ದಿನದ ಕೆಲಸಗಳನ್ನು ಮುಕ್ತಾಯಗೊಳಿಸುವರು. ಉತ್ತರ ಕರ್ನಾಟಕದ ಜನರ ದಿನದ ಅಡುಗೆ ಮತ್ತು ಹಬ್ಬದ ಅಡುಗೆಯಲ್ಲಿಯ ಮುಖ್ಯ ವ್ಯತ್ಯಾಸವೆಂದರೆ,ದಿನದ ಊಟದಲ್ಲಿ ಖಾರ ಪ್ರಧಾನವಾಗಿದ್ದರೆ, ಹಬ್ಬದೂಟದಲ್ಲಿ ಸಿಹಿ ಪ್ರಧಾನವಾಗಿರುತ್ತದೆ. ಹಾಗೆ ನೋಡಿದರೆ ಗ್ರಾಮೀಣ ಜನತೆ ಬೆಲ್ಲದೂಟದ ಪ್ರಿಯರು. ಬಹುಶಃ ಇದಕ್ಕೆ ಅವರು ಪ್ರತಿದಿನ ಉಣ್ಣುವ ಖಾರದೂಟದ ಬೇಸರವೇ ಕಾರಣವಿರಬಹುದು. ಇವರ ನಿತ್ಯದ ಊಟದ ಅಡುಗೆಯೆಂದರೆ, ರೊಟ್ಟಿ, ನುಚ್ಚು, ಅಂಬರ, ಅಂಬಲಿ, ಅಟ್ಟಖಾರ ಬಳ್ಳೊಳ್ಳಿಖಾರ, ಪಲ್ಲೆ, ಚಟ್ನಿ, ಉಪ್ಪಿನಕಾಯಿ ಇವುಗಳೊಂದಿಗೆ, ಮೊಸರು, ಮಜ್ಜಿಗೆ, ಹೈನವಂತೂ ಬೇಕೆಬೇಕು. (ಕೆಲವರು ಇತ್ತೀಚೆಗೆ ಅನ್ನವನ್ನು ಮಾಡುತ್ತಾರೆ). ಮೊದಲಿನ ಕಾಲದಲ್ಲಿ ಅನ್ನ ದಿನದ ಊಟ ಆಗಿರದೇ ಹಬ್ಬದೂಟ ಹಾಗೂ ಶ್ರೀಮಂತರ ಊಟವಾಗಿತ್ತು. ಇದಲ್ಲದೆ ದಿನದ ಊಟದಲ್ಲಿ ವಿಶೇಷವಾಗಿ ಹೊಲದಲ್ಲಿ ಉಣ್ಣುವ ಊಟಕ್ಕಂತೂ ಉಳ್ಳಾಗಡ್ಡಿ ಇಲ್ಲದೆ ನಡೆಯುವಂತಿಲ್ಲ. ಆದ್ದರಿಂದ ಅವರು “ಉಳ್ಳಾಗಡ್ಡಿ ಇದ್ದರೆ ಒಳ್ಳೇ ಊಟ, ಎಂದು ಉಳ್ಳಾಗಡ್ಡಿ” (ಈರುಳ್ಳಿ ನೀರುಳ್ಳಿ)ಯ ಅವಶ್ಯಕತೆಯನ್ನು ಎತ್ತಿತೋರಿಸಿರುವರು.

ಇನ್ನು ಹದಿನೈದು ದಿನಕ್ಕೊಮ್ಮೆ ಬರುವ ಅಮಾವಾಸ್ಯೆ, ಹುಣ್ಣಿಮೆ ಮತ್ತು ಆಗಾಗ ಆಗಮಿಸುವ ಹಬ್ಬಗಳು ಇವುಗಳಲ್ಲದೆ ಊರ ಜಾತ್ರೆ-ಉತ್ಸವ, ಮದುವೆ -ಮುಹೂರ್ತ, ಕುಬಸ-ಕುಂಚಿಗೆ ತಿಥಿ ದಿನಕರ್ಮ, ಜಡ್ಡಜಾಪತ್ರಿಯಾದಾಗ, ಅವಸರದ ಅತಿಥಿ, ಬೀಗರ ಬಿಜ್ಜರ ಆಗಮನ, ಮಕ್ಕಳಿಗೆ ಗೊಬ್ಬರ ಗಣಜಲ ಎದ್ದಾಗ ದುರಗವ್ವಾ, ದ್ಯಾಮವ್ವಾಗ ಕೊಡುವ ಎಡೆ, ಭಿನ್ನ ಭಿನ್ನ ದೇವತೆಗಳ ಮೀಸಲಡಿಗೆ, ಮದುವೆಯಲ್ಲಿ ಕೊಡುವ ಸುರಗಿ ಮೊದಲಾದ ಕಾರ್ಯ ಪ್ರಸಂಗಗಳಲ್ಲಿ ಅವರು ಮಾಡುವ ಊಟ ಅಡುಗೆಗಳು ಹೀಗಿವೆ-ಹೋಳಿಗಿ, ಹುಗ್ಗಿ, ಕಡಬು, ಪಾಯಸ, ಚಪಾತಿ, ತರಿಗೆ (ಪುರಿ), ಪಲ್ಲೆ, ಅನ್ನ, ಸಾರು, ಗುಗ್ಗರಿ, ಗುಳಂಬ, ಉಪ್ಪಿನಕಾಯಿ, ಕರಿಹಿಂಡಿ, ಹಪ್ಪಳ, ಸಂಡಿಗೆ, ಚಟ್ನಿ, ಕೋಸಂಬರಿ, (ಪಚ್ಚಡಿ) ಮೊಸರಗಾಯಿ, ಉಂಡಿ, ಕರಚಿಕಾಯಿ, ಸುರುಳಿಹೋಳಿಗೆ, ಚಕ್ಕಲಿ, ಕೋಡಬಳಿ, ವಡಿ, ಪಡ್ಡ, ಬುರಬುರಿ, ಗಾರಗಿ, ಹಲ್ವಾ, ಅನಾರಸ, ದೋಸೆ, ತಾಲಿಪಟ್ಟಿ, ನಿಪ್ಪಟ್ಟು (ಕಾರಹುಣ್ಣಿವೆ ಕರಿದಿನಾ ಜೋಳದ ಹಿಟ್ಟಿನ) ಭಜಿ, ಜೊಂಗೆ, ಮಂಡಿಗೆ, ಮೋದಕ, ಶ್ರೀಖಂಡ, ಬಾಸುಂದೆ ಖೀರ ಇತ್ಯಾದಿ.

ಇನ್ನು ಈ ಸಿಹಿ, ಖಾರದ, ಸಪ್ಪಗಿನ ಅರ್ಥಾತ್ ಸಣ್ಣ ಅಡಿಗೆ, ದೊಡ್ಡ ಅಡಿಗೆ ಒಟ್ಟಿನಲ್ಲಿ ಎಲ್ಲ ಅಡುಗೆಯ ಸಂಕ್ಷಿಪ್ತ ವಿವರಣೆ ಇಂತಿದೆ – ಮೊದಲು ಪ್ರತಿಯೊಂದು ಅಡಿಗೆಯಲ್ಲಿ ಎಷ್ಟು ವಿಧ ಎಂಬುದನ್ನು ನಂತರದಲ್ಲಿ ಅವುಗಳನ್ನು ಯಾವ ಯಾವ ದವಸ ಧಾನ್ಯಗಳಿಂದ ಮಾಡಲು ಸಾಧ್ಯ ಮತ್ತು ಅವನ್ನು ತಯಾರಿಸುವ ರೊಟ್ಟಿಗೆ “ಭಕ್ರಿ” ಎಂದೂ ಹೆಸರಿದೆ.(ಹೆಚ್ಚಾಗಿ ಬ್ರಾಹ್ಮಣರು ಈ ರೀತಿ ಕರೆಯುತ್ತಾರೆ) ರೊಟ್ಟಿಯಲ್ಲಿ ೧. ಬಡದರೊಟ್ಟಿ ೨. ಲಟ್ಟಿಸಿದರೊಟ್ಟಿ ೩. ಕೈರೊಟ್ಟಿ  ೪. ಕಬರೊಟ್ಟಿ ೫. ಖಾರದರೊಟ್ಟಿ ೬.ಎಳ್ಳಹಚ್ಚಿದರೊಟ್ಟಿ ಎಂದು ವಿಭಿನ್ನ ಬಗೆಯಲ್ಲಿ ಮಾಡುತ್ತಾರೆ. ಮತ್ತು ರೊಟ್ಟಿಯನ್ನು ಬೇಯಿಸು‌ವ ಅನ್ವಯ ಕಿಚ್ಚಿನ ಮೇಲೆ ಡಬ್ಬ ಹಾಕಿದ ರೊಟ್ಟಿ (ಅಂದರೆ ಮೆತ್ತಗೆ ಬೇಯಿಸಿದ) ಹಾಗೂ ಕಟಕ ರೊಟ್ಟಿ “(ಅಂದರೆ ತಂಗಳ ರೊಟ್ಟಿಯಲ್ಲ, ಬಿಸಿಯ ರೊಟ್ಟಿಯನ್ನೇ ನಿರಸಾಗಿ ಬೇಯಿಸಿದ್ದು, ಹೆಚ್ಚು ದಿನ ತಡೆಯುತ್ತದೆ) ಎಂದೂ ಕರೆಯುತ್ತಾರೆ. ರೊಟ್ಟಿಯಲ್ಲಿ ಜೋಳ, ಸಜ್ಜೆ, ಗೂಂಜೋಳ, ರಾಗಿ, ಅಕ್ಕಿ, ಮತ್ತು ಗೋದಿಯ ಹಿಟ್ಟಿನಿಂದ ಮಾಡುವರು. ಅವುಗಳಲ್ಲಿ ಅಂಗೈ ಹದಡದಿಂದ ಒತ್ತಿ ಒತ್ತಿ ಮಾಡುವಂತಹ ಕೈರೊಟ್ಟಿ (ರಡ್ಡಿ ಜನರ) ಸ್ವಲ್ಪ ಕಠಿಣವಾಗಿದೆ ಇದಕ್ಕೆ ರಟ್ಟೆಗಳು ಗಟ್ಟಿಯಾಗಿರಬೇಕಾಗುತ್ತವೆ. ಬಡದ ರೊಟ್ಟಿ ಮಾಡುವುದು ಕೈರೊಟ್ಟಿಗಿಂತ ಸುಲಭ ಲಟ್ಟಿಸಿದ ರೊಟ್ಟಿ ಇದಕ್ಕಿಂತಲೂ ಸುಲಭ. ಖಾರದ ರೊಟ್ಟಿ, ಕಬರದ ರೊಟ್ಟಿಗಳನ್ನು ಬಡದೇ ಮಾಡುವರು. ಹಾಗೂ ಪರ ಊರಿಗೆ ಹೋಗುವಾಗ, ಮತ್ತು ವಿಶೇಷ ಸಂದರ್ಭಗಳಲ್ಲಿ ಜೋಳದ ಮತ್ತು ಸಜ್ಜೆ ರೊಟ್ಟಿಗೆ ಎಳ್ಳು ಹಚ್ಚಿ ಮಾಡುವರು. ಒಟ್ಟಿನಲ್ಲಿ ಹಿಟ್ಟಿನಲ್ಲಿ ಹೊಯ್ದಾಡುವ ನೀರು ಹಾಕಿ, (ಇದಕ್ಕೆ ಜಿಗುಟು ಹಾಕುವುದು ಅಥವಾ ಕೊಟ್ರಾ ಹಾಕುವುದು ಎನ್ನುವರು) ಕಲ್ಲಿನ ಇಲ್ಲವೆ ಕಟ್ಟಿಗೆಯ ಕೊಣ್ಮಗಿಯಲ್ಲಿ ಭಾರ ಹಾಕಿ ಚರ ಚರ ನಾದಿ ಉಳ್ಳಾಗಡ್ಡಿಯಷ್ಟು ಉಳ್ಳಿ ಮಾಡಿಕೊಂಡು ರೊಟ್ಟಿ ಮಾಡುವ ಮಹಿಳೆ ಗಟ್ಟಿಗಳೇ ಆಗಿದ್ದಾಳೆ.

ರೊಟ್ಟಿಯನ್ನು ಹೆಚ್ಚಾಗಿ ಜೋಳದಿಂದ ಮಾಡುವರು. ದಿನದ ಊಟದಲ್ಲಿ ಜೋಳದ ರೊಟ್ಟಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಈ ರೊಟ್ಟಿ ತಿಂದವರು ಗಟ್ಟಿಯಾಗುವರೆಂಬುದಕ್ಕೆ “ಜೋಳ ತಿಂದವ ತೋಳ, ಅಕ್ಕಿ ತಿಂದವ ಹಕ್ಕಿ, ರಾಗಿ ತಿಂದವ ನೀರೋಗಿ” ಎನ್ನುತ್ತಾರೆ.

ಸಜ್ಜೆ ರೊಟ್ಟಿ ಮಾಡುವ ಸಂದರ್ಭಗಳೆಂದರೆ, ಸಂಕ್ರಮಣ, ಎಳ್ಳು ಅಮವಾಸ್ಯೆ ಮುಂತಾದ ಹಬ್ಬಗಳಲ್ಲಿ ಹಾಗೂ ಮದುವೆ, ಜಾತ್ರೆ, ಉತ್ಸವಗಳಲ್ಲಿ ಅಲ್ಲದೆ ಪರ ಊರುಗಳಿಗೆ ಹೋಗುವಾಗ ಹಾಗೂ ಅಲ್ಲಿಂದ ಹಿಂದಿರುಗಿ ಬರುವಾಗ ಅಲ್ಲದೆ ಹೆರಿಗೆಯ ತರುವಾಯ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಮೊದಲಾದ ಪ್ರಸಂಗಗಳಲ್ಲಿ “ಬೀರುಬುತ್ತಿ”, “ಬೀಗ ಬುತ್ತರೊಟ್ಟಿ”, ಎಂದು ಊರ ತುಂಬ ಕಟ್ಟಿಕೊಂಡು ಬಂದ ಬುತ್ತಿಯನ್ನು ಅರ್ಥಾತ್ ಅಡುಗೆಯನ್ನು ಬೀರಲು ಎಳ್ಳು ಹಚ್ಚಿದ ರೊಟ್ಟಿ, ಸಜ್ಜಿ ರೊಟ್ಟಿಯನ್ನೇ ಮಾಡುತ್ತಾರೆ. ಕೆಲವರು ಹಿಟ್ಟಿನಲ್ಲಿ ಸ್ವಲ್ಪ ಅಕ್ಕಿಹಿಟ್ಟು, ಉದ್ದಿನಹಿಟ್ಟು ಕೂಡಿಸಿ ರೊಟ್ಟಿ ಮಾಡುತ್ತಾರೆ. ಇದು ರುಚಿಯಾಗಿರುತ್ತದೆ.

ಇನ್ನು ಜೋಳ ಕಡಿಮೆ ಬೆಳೆಯುವ ಕಡೆಗೆ (ಬೆಳಗಾಂವಿ, ಜಿಲ್ಲಾ ಮೂಡಲಗಿ ಗ್ರಾಮ) ಮತ್ತು ಪೂರ್ಣವಾಗಿ ಬೆಳೆಯದ ಕಡೆಗೆ ಗೋಂಜೋಳ ಬೆಳೆಯುವದರಿಂದ, ಅದರ ಹಿಟ್ಟಿನ ರೊಟ್ಟಿಯನ್ನೇ ಮಾಡುವರು. ಮತ್ತೆ ಕೆಲವರು ಚಪಾತಿ ಎಂದು ಕರೆಯುವರು. ಗೋದಿರೊಟ್ಟಿ ಮತ್ತು ಚಪಾತಿಗೆ ಇರುವ ವ್ಯತ್ಯಾಸವೆಂದರೆ, ರೊಟ್ಟಿಯನ್ನು ಜೋಳದ ಅಥವಾ ಅಕ್ಕಿಹಿಟ್ಟು ಹಚ್ಚಿ ಮಾಡಿ, ಎಣ್ಣೆ ಹಾಕದೇ ಬೇಯಿಸುವರು. ಚಪಾತಿಯನ್ನು ಉಗುರು ಕಣ್ಣಿನಲ್ಲಿ ಅತೀ ಸ್ವಲ್ಪ ಹಿಟ್ಟು ಹಚ್ಚಿ ಲಟ್ಟಿಸಿ ಮಾಡಿ ಎಣ್ಣೆ ಹಾಕಿ ಬೇಯಿಸುವರು.

ದಿನವೂ ಜೋಳದ ರೊಟ್ಟಿ ಇಲ್ಲವೇ ಗೊಂಜೋಳದ ರೊಟ್ಟಿಯನ್ನು ತಿಂದು ಬೇಸತ್ತ ಸಂದರ್ಭದಲ್ಲಿ ಅಥವಾ ಕಾಯಿಲೆಯಿಂದ ಬಳಲುವವರಿಗೆ ಪಚನಕ್ಕೆ ಹಗುರವಾಗುವುದೆಂದು ಹಾಗೂ ಕೆಲವೊಮ್ಮೆ ಮನೆಯಲ್ಲಿ ಜೋಳದ ಹಿಟ್ಟು ಗೊಂಜೋಳದ ಹಿಟ್ಟು ಇರದೇ ಹೋದ ಪ್ರಸಂ‌ಗದಲ್ಲಿ ಅಕ್ಕಿರೊಟ್ಟಿಗಳನ್ನು ಮಾಡುವರು. ರಾಗಿರೊಟ್ಟಿ ಪ್ರಕೃತಿಗೆ ಬಹಳ ಒಳ್ಳೆಯದು. ಇದರೊಂದಿಗೆ ರಾಜಗಿರಿ ಪಲ್ಯೆ ರಾಜ್ಯಕ ದೊಡ್ಡದು ಎಂದು ಹಾಡಿದ್ದಾರೆ.

ಈಎಲ್ಲ ನಮೂನೆಯ ರೊಟ್ಟಿಯನ್ನು ವಿವಿಧ ಪಲ್ಯೆ, ಅಂಬರ, ನುಚ್ಚು, ಮೊಸರು, ಮಜ್ಜಿಗೆ, ಖಾರ, ಚಟ್ನಿ, ಉಪ್ಪಿನಕಾಯಿ ಇದ್ದವರಿಗೂ ಹಾಲೂ-ತುಪ್ಪ ಬೆಲ್ಲದೊಂದಿಗೆ ಊಟ ಮಾಡುತ್ತಾರೆ. ಇದು ನಿತ್ಯದ ಮುಖ್ಯ ಊಟ.

ಇನ್ನು ರೊಟ್ಟಿಯ ನಂತರ ಬರುವಂತಹದು ನುಚ್ಚು. ಬಾಯಲ್ಲಿ ಹಲ್ಲು ಇಲ್ಲದ ಮುದುಕರಿಗೆ ನುಚ್ಚು ಪ್ರೀತಿಯ ಪಕ್ವಾನ್ನವಾದರೆ; ಹಲ್ಲು ಇದ್ದವರಿಗೂ ರುಚಿಕರವಾದ ಊಟವಾಗಿದೆ. ಇತ್ತೀಚೆಗೆ ಕ್ರಮೇಣವಾಗಿ ಈ ನುಚ್ಚಿನ ಸ್ಥಾನವನ್ನು ಅಕ್ಕಿಯ ಅನ್ನ ಅಕ್ರಮಿಸುತ್ತದೆ. ಹಳ್ಳಿಯಲ್ಲಿ ರೊಟ್ಟಿ ತಿಂದು ಮೇಲೆ ಉಣ್ಣುವ ನುಚ್ಚಿನ ಊಟಕ್ಕೆ “ಮೇಲೂಟ”ವೆಂದೇ ಕರೆಯುವರು. ಬಾನ, ಕಿಚಡಿ, ಅನ್ನ ಇವೆಲ್ಲ ಮೇಲೂಟದ ಪಂಕ್ತಿಗೇ ಸೇರಿವೆ. ಗೋಂಜೋಳ, ಗೋದಿ, ಅಕ್ಕಿಯ ನುಚ್ಚಿನಿಂದಲೂ ಈ “ನುಚ್ಚ”ನ್ನು ತಯಾರಿಸಬಹುದಾಗಿದೆಯಾದರೂ, ಮುಖ್ಯವಾಗಿ ಜೋಳದಿಂದ ತಯಾರಿಸಿದ ನುಚ್ಚಿಗೇ “ನುಚ್ಚು” ಎಂಬ ಹೆಸರು ಹೆಚ್ಚು ಅನ್ವಯಿಸುತ್ತದೆ. ಇದನ್ನು ೧) ಸಪ್ಪಾನುಚ್ಚು, ೨) ಹುಳ್ಳಾನುಚ್ಚು, ೩) ಹಾಲುಹುಳಿ ನುಚ್ಚು ಎಂದು ಮೂರು ವಿಧದಲ್ಲಿ ಅಡುಗೆ ಮಾಡುವರು ಇದಲ್ಲದೆ ಜೋಳದ ಬಾನ, ಕಿಚಡಿಯನ್ನು ಮಾಡುವರು. ನುಚ್ಚು ತಯಾರಿಸಲು ಜೋಳವನ್ನು ಮನೆಯಲ್ಲಿಯೇ ಬೀಸುಕಲ್ಲಿನಿಂದ ಒಡೆಯುವರು ಇದಕ್ಕೆ ನುಚ್ಚು ಒಡೆಯುವುದೆಂದೇ ಹೇಳುತ್ತಾರೆ. (ಈಗ ಗಿರಣಿಗೆ ಕೊಡುತ್ತಾರೆ) ಒಡೆದ ಜೋಳದ ನುಚ್ಚುನ್ನು ನೀರಿನಲ್ಲಿ ಕಲಿಸಿ ಒಲೆಯ ಮೇಲೆ ಗಡಿಗೆಯಲ್ಲಿ ಹೊಯ್ದಾಡುತ್ತಿರುವ ನೀರಿಗೆ ಅದನ್ನು ಸುರಿಯುವರು. ಕೆಲವರು ಅದನ್ನು ನೀರಿನಲ್ಲಿ ಕಲಿಸದೇ ಹಾಗೆ ಒಣ ನುಚ್ಚನ್ನು ಹೊಯ್ದಾಡುವ ನೀರಿಗೆ ಹಾಕಿ ಗಟ್ಟಿ ಕಟ್ಟಿಗೆಗೆ ಉರಿ ಹಚ್ಚಿ ಚೆನ್ನಾಗಿ ಕುದಿಸುವರು. ಇದಕ್ಕೆ ರುಚಿಯಾಗಿ ಸ್ವಲ್ಪ “ರುತಿ” ಯನ್ನು (ಉಪ್ಪು) ಹಾಕುತ್ತಾರೆ. ಇದು ಸಪ್ಪಗಿನ ನುಚ್ಚು. ಇದನ್ನು ಇದ್ದವರು, ತುಪ್ಪಾ ಹಾಲಿನ ಜೊತೆಗೆ ಇಲ್ಲದವರು ಮಜ್ಜಿಗೆಯೊಂದಿಗೆ, ಮನೆಯಲ್ಲಿ ಊಟ ಮಾಡುವರು. ಕೆಲವರು ಬೆಲ್ಲ ಕೂಡಿಸಿಯೂ ಉಣ್ಣುತ್ತಾರೆ. ಈ ಸಪ್ಪಗಿನ ನುಚ್ಚು ಒಂದು ದಿನ ತಡೆಯುವ ಅಡುಗೆಯಾಗಿದೆ.

“ಹುಳ್ಳಾನುಚ್ಚ”ವು ಹೆಸರೇ ಸೂಚಿಸುವಂತೆ ರುಚಿಯಲ್ಲಿ ಸ್ವಲ್ಪ ಹುಳಿಯಾಗಿದ್ದು ನಾಲ್ಕು-ಐದು ದಿನ ತಡೆಯುತ್ತದೆ. ಇದನ್ನು ಹೆಚ್ಚಾಗಿ ಹೊಲಕ್ಕೆ ಬುತ್ತಿ ಕಟ್ಟುವುದಕ್ಕಾಗಿ ಮಾಡುತ್ತಾರೆ. “ಹುಳ್ಳಾನುಚ್ಚ” ಅಡುಗೆಗೆ ಸಪ್ಪಗಿನ ನುಚ್ಚಿನಂತೆ ಕೇವಲ ನುಚ್ಚನ್ನೆ ಉಪಯೋಗಿಸದೇ ಇದಕ್ಕೆ ಅದರ ಹಿಟ್ಟೂ ಬೇಕಾಗುತ್ತದೆ. ಹಿಟ್ಟು ಮತ್ತು ನುಚ್ಚನ್ನು ಬೆಚ್ಚಗಿನ ನೀರಲ್ಲಿ ಸ್ವಲ್ಪ ಮಜ್ಜಗೆಯೊಂದಿಗೆ ಮುಂಜಾನೆ ಕಲಿಸಿಟ್ಟರೆ ಸಂಜೆಗೆ, ಸಂಜೆ ಕಲಿಸಿಟ್ಟರೆ ಮರುದಿನ ಮುಂಜಾನೆ ಮಾಡಲು ಬರುತ್ತದೆ. ಹೀಗೆ ಹುಳಿಹಾಕಿ ಕಲಿಸಿದ ಜೋಳದ ನುಚ್ಚು ಮತ್ತು ಹಿಟ್ಟನ್ನು ಹೊಯ್ದಾಡುವ ನೀರಿಗೆ ಸುರಿದು ಚೆನ್ನಾಗಿ ಕುದಿಸುವರು. ನಸುಕಿನಲ್ಲಿ ಹೊಲಕ್ಕೆ ಹೋಗುವವರಿಗೆ ಹಿಂದಿನ ದಿನದ ರಾತ್ರಿ ಮಾಡಿದ ಹುಳ್ಳಾನುಚ್ಚ, ಉಳ್ಳಾಗಡ್ಡಿ, ರೊಟ್ಟಿ, ಬಳ್ಳೊಳ್ಳಿ ಖಾರ, ಪಲ್ಲೆ  ಇಟ್ಟು ಬುತ್ತಿ ಕಟ್ಟುವರು. ಹುಳ್ಳಾನುಚ್ಚಿಗೆ ಹುಳಿಹಾಕಿ ಮಾಡಲು ಮಜ್ಜಿಗೆಯ ಅವಶ್ಯವಾಗಿ ಬೇಕು. ಆದರೆ ಮಜ್ಜಗೆ ಇರದವರು ಹುಳಿಗಾಗಿ ಯಾರ ಮನೆಯಲ್ಲಿ ಈಗಾಗಲೇ  ನುಚ್ಚಿಗೆ ಹುಳಿ ಹಾಕಿರುತ್ತಾರೋ ಅವರ ಮನೆಯ ಆ ಗಡಗೆಯಿಂದ ಹುಳಿ ಹಾಕುತ್ತಾರೆ. ಮೊಸರು ಮಾಡುವಾಗ ತಮ್ಮ ಮನೆಯಲ್ಲಿ ಹೆಪ್ಪು ಇರದಿದ್ದರೆ ಬೇರೆಯವರ ಮನೆಯಿಂದ ಹೆಪ್ಪು ತರುವಂತೆ ಹುಳ್ಳಾನುಚ್ಚು ಮಾಡುವಾಗ ಹುಳಿಯಾಗಿ ಬೇರೆಯವರ ಮನೆಯಿಂದ ಹುಳಿ ತರುವ ಈ ಕ್ರಿಯೆಗೆ “ಯಂಬಲ” ಎನ್ನುವರು.

ಇನ್ನು ಹಾಲಹುಳಿ ನುಚ್ಚಿನ ರುಚಿ ಪೂರ್ಣ ಸಪ್ಪಗೂ ಅಲ್ಲ, ಪೂರ್ಣ ಹುಳಿಯೂ ಅಲ್ಲ ಅತೀ ಸ್ವಲ್ಪ ಹೌದೋ ಅಲ್ಲ ಅನ್ನುವಷ್ಟು ಹುಳಿಯಾಗಿರುತ್ತದೆ. ಅದರ ಅಡುಗೆಗೆ ಕೇವಲ ಜೋಳದ ಒಡಕಲಬೇಕು. ಹಿಟ್ಟು ಮಿಶ್ರಿತವಾಗಿರಬಾರದು. ಸ್ವಲ್ಪ ಹೊತ್ತು ಮಾತ್ರ ಮಜ್ಜಿಗೆಯಲ್ಲಿ ನೆನೆಹಾಕಿ ಮಾಡುವರು.

ಜೋಳದ ಬಾನ: ಇದಕ್ಕೆ “ಬುತ್ತಿ” ಎಂದು ಇನ್ನೋಂದು ಹೆಸರೂ ಇದೆ. ಪರ ಊರಿಗೆ ಬುತ್ತಿ ಕಟ್ಟುವಾಗ ಹಾಗೂ ಬೀಗರ ಸಜ್ಜೆ ರೊಟ್ಟಿಯೊಂದಿಗೆ ಬಳ್ಳೊಳ್ಳಿ, ಉಳ್ಳಾಗಡ್ಡಿ, ಕಲಿಸಿದ ಬಾನ ಬೇಕೆಬೇಕು. ಜೋಳ ತೊಳೆದು ಒಳ್ಳಿನಲ್ಲಿ ಒನಕೆಯಿಂದ ಕುಟ್ಟಿ ನಂತರ ಮರದಲ್ಲಿ ಹಾಕಿ ಕೇರಿ ಸಿಪ್ಪೆ ತೆಗೆದು ಸ್ವಚ್ಛ ಮಾಡುವರು ಇದರಲ್ಲಿ ಹೆಚ್ಚಾಗಿ ಇಡಿಗಾಳು ಹಾಗೇ ಇರುತ್ತದೆ. ಹೀಗೆ ತಯಾರಿಸಿದ ಜೋಳದ ಕಾಳಿಗೆ “ಅಕ್ಕಿ” ಎನ್ನುತ್ತಾರೆ. ಈ ಅಕ್ಕಿಯಿಂದ ನುಚ್ಚನ್ನು ತಯಾರಿಸುವ ರೀತಿಯಲ್ಲಿಯೇ “ಬಾನ”ವನ್ನು ಮಾಡುತ್ತಾರೆ. ಈಅಡುಗೆ ಮಾಡಿದ ನಂತರ ಅದು ಸರಿಯಾಗಿ ಅರಿದ ಮೇಲೆ ಅದರ ಮೇಲೆ ಬಳ್ಳೊಳ್ಳಿ, ಉಳ್ಳಾಗಡ್ಡಿ, ಕೆಲವರು ಹಸಿ ಅಲ್ಲ ಹೆಚ್ಚಿ ಅದಕ್ಕೆ ಕೂಡಿಸುತ್ತಾರೆ.

ಕಿಚಡಿಯು ನುಚ್ಚು ಮತ್ತು ಬಾನ ಎರಡದರ ವೈಶಿಷ್ಟವನ್ನು ಒಳಗೊಂಡಿದೆ. ಬಾನ ಮಾಡಲು ತಯಾರಿಸಿದ ಅಕ್ಕಿಯನ್ನೇ ಮತ್ತೆ ಬೀಸುವಕಲ್ಲಿನಲ್ಲಿ ನುಚ್ಚಿನಂತೆ, ಒಡೆದು ಸಪ್ಪಗಿನ ನುಚ್ಚನ್ನು ಮಾಡುವ ರೀತಿಯಲ್ಲಿಯೇ ಮಾಡುತ್ತಾರೆ. ಇದನ್ನು ಹೆಚ್ಚಾಗಿ ಮಕ್ಕಳಿಗೆ ಮತ್ತು ಅಶಕ್ತರಿಗೆ ಕೊಡುತ್ತಾರೆ.

ಅಂಬಲಿ : ಬೇಸಗೆಯ ದಿನಗಳಲ್ಲಿ ರೊಟ್ಟಿ ಮತ್ತು ನುಚ್ಚಿನ ಊಟದೊಂದಿಗೆ, ಅಂಬಲಿ ಅವಶ್ಯವಾಗಿ ಬೇಕು. ಮುಖ್ಯವಾಗಿ ಇದನ್ನು ರಾಗಿ ಹಿಟ್ಟಿನಿಂದಲೂ ಮಾಡುತ್ತಾರೆ. ಇದರಲ್ಲಿಯೂ ನುಚ್ಚಿನಂತೆ ಸಪ್ಪನ್ನಂಬಲಿ, ಹುಳಿಯಂಬಲಿ, ಹಾಲಹುಳಿಯಂಬಲಿ ಎಂದು ಮಾಡುತ್ತಾರೆ. ಮಾಡುವ ವಿಧಾನ ನುಚ್ಚಿನಂತೆ ಇದನ್ನು ರೊಟ್ಟಿಯೊಂದಿಗೆ ಮತ್ತು ನುಚ್ಚಾಂಬಲಿ ಎಂದು ನುಚ್ಚಿನೊಂದಿಗೂ ಊಟ ಮಾಡುತ್ತಾರೆ.

ಇವೆಲ್ಲವುಗಳೊಂದಿಗೆ ದಿನದ ಊಟದಲ್ಲಿ ವಿವಿಧ ಪಲ್ಲೆಯೊಂದಗೆ ಹಸಿ ಮತ್ತು ಒಣಮೆಣಸಿನಕಾಯಿಯ ಖಾರಕ್ಕೂ ಪ್ರಾಧಾನ್ಯತೆ ಇದೆ. ಪ್ರತಿದಿನ ಮುಂಜಾನೆ ಬಾರುಕಲ್ಲಲ್ಲಿ ಖಾರ ಅರೆಯುವುದು ಇಲ್ಲಿಯವರ ಅಡುಗೆಯ ಅವಿಭಾಜ್ಯ ಅಂಗವಾಗಿದೆ. ಹೆಚ್ಚಾಗಿ ಇದು ಮುದುಕಿಯರ ಕೆಲಸ. ಹಸಿ ಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಹುರಿದು, ಉಪ್ಪು, ಜೀರಿಗೆ, ಬಳ್ಳೊಳ್ಳಿ ಮೊದಲಾದ ಸಾಮಾನುಗಳನ್ನು ಸ್ವಲ್ಪ ಹೊತ್ತು ನೀರಲ್ಲಿ ನೆನೆಹಾಕಿ ಬಳ್ಳೊಳ್ಳಿ ಮತ್ತು ಇತರ  ಸಾಮಾನು ಹಾಕಿ ಅರೆದದ್ದು ಬಳ್ಳೊಳ್ಳಿ ಖಾರವೆಂದು ಆಗುತ್ತದೆ. ಇದರಂತೆ ಖಾರಮೆಣಸಿನಕಾಯಿಯ ಖಾರವನ್ನು ಅರೆಯುತ್ತಾರೆ. ಒಟ್ಟಿನಲ್ಲಿ ಖಾರದವಿಲ್ಲದೆ ಊಟ ರುಚಿಸದು.

ಇನ್ನು ದಿನದ ಊಟದ ಒಂದು ದಿನಸವಾದ ಪಲ್ಲೆ ಬಗ್ಗೆ ಹೇಳುವುದಾದರೆ, ಇವರು ತಮ್ಮ ತಮ್ಮ ಹೊಲ, ತೋಟ, ಹಿತ್ತಲಗಳಲ್ಲಿ ಬೆಳೆಯುವ ಮತ್ತು ಮನೆಯ ಮಾಳಗಿಯ ಮೇಲೆ ಏಳುವ ಸೊಪ್ಪು, ಕಾಯು ಮತ್ತು ಕಾಳಪಲ್ಲೆಗಳನ್ನು ಮಾಡುತ್ತಾರೆ. ಪಲ್ಲೆಗಳು ಹಬ್ಬ ಹರಿದಿನದ ಊಟಕ್ಕೂ ಬೇಕಾಗುವುದರಿಂದ, ಇದರ ವಿಷಯವನ್ನು ಮುಂದೆ ಹೇಳಲಾಗಿದೆ. ಒಟ್ಟಿನಲ್ಲಿ ಪಲ್ಲೆ, ಅಂಬರ, ಖಾರದ ಬಗ್ಗೆ ಇವರು ಹೇಳುವದೆನೆಂದರೆ “ಇಂಗಾ ಜೀರಿಗಿ ಹಾಕಿದರ ಮಂಗ್ಯಾನ ಮಸಡಿನೂ ಸಿಹಿ ಅಕ್ಕತಿ” ಎನ್ನುವುದಾಗಿದೆ.

ಇನ್ನು ಹಬ್ಬ ಹರಿದಿನಗಳ ಮತ್ತು ಇತರ ಪ್ರಸಂಗಗಳಲ್ಲಿ ಮಾಡುವ ವಿಶೇಷ ಅಡುಗೆ :

ಈ ಅಡುಗೆ ಪ್ರಕಾರದ ವಿಧಿ ವಿಧಾನ ನಮೂನೆಗಳು ನೂರಾರು ಬಗೆಯಾಗಿವೆ. ಆದರೆ ಅವೆಲ್ಲಗಳನ್ನು ವಿವರಿಸಲು ಇಲ್ಲಿ ಅವಕಾಶವಿಲ್ಲವಾದ್ದರಿಂದ ಕೆಲವು ಮುಖ್ಯ ಅಡುಗೆಗಳ ವಿಷಯವನ್ನು ಪ್ರಸ್ತಾಪಿಸುವೆನು. ಈ ಅಡುಗೆಯ ವಿಭಿನ್ನ ದಿನಸುಗಳನ್ನು ಈ ಹಿಂದೆ ಹೆಸರಿಸಲಾಗಿದೆ. ಕಾರಣ ಇಲ್ಲಿ ಆ ಒಂದೊಂದು ವಿಧದಲ್ಲಿ ಬರುವ ವಿಭಿನ್ನ ಅಡುಗೆಗಳಾವವು ಎಂಬುದನ್ನು ನೋಡೋಣ. ಮೊದಲನೆಯದಾಗಿ ಉತ್ತರ ಕರ್ನಾಟಕದ ಎಲ್ಲ ಜನರ ಪ್ರೀತಿಯ ಹಾಗೂ ಸಿಹಿ ಅಡುಗೆಗಳಲ್ಲಿಯೇ ಶ್ರೇಷ್ಠವೆಂದು ಅನಿಸಿಕೊಂಡುರುವ ಹೋಳಿಗೆಯ ಮಹತ್ವ “ಹೋಳಿಗಿ  ಇಲ್ಲದ ಹಬ್ಬಲ್ಲಾ ತೇರ ಇಲ್ಲದ ಜಾತ್ರಿ ಅಲ್ಲಾ” ಎನ್ನುವ ಮಾತಿನಿಂದ ಸ್ಪಷ್ಟವಾಗುತ್ತದೆ. ಇದರ  ಕಿರು ಪರಿಚಯ ಇಂತಿದೆ: ಹೋಳಿಗೆಯಲ್ಲಿ ೧) ಹೂರಣ ಹೋಳಿಗೆ, ೨) ಸಜ್ಜಕದ ಹೋಳಿಗೆ, ೩) ಹುರಕ್ಕಿ ಹೋಳಿಗೆ (ನವಣೆ ಹೋಳಿಗೆ), ೪) ಗೆಣಸಿನ ಹೋಳಿಗೆ, ೫) ಸುರುಳಿಹೋಳಿಗೆ, ೬) ಎಳ್ಳ ಹೋಳಿಗೆ, ೭) ಸೇಂಗಾ ಹೋಳಿಗೆ, ೮) ಪುಠಾಣಿ ಹೋಳಿಗೆ, ೯) ಖಜಿರ ಹೋಳಿಗೆ, ೧೦) ಹೆಸರಬ್ಯಾಳಿ ಹೋಳಿಗೆ, ೧೧) ತೊಗರಿ ಬ್ಯಾಳಿ ಹೋಳಿಗೆ, ೧೨) ಅಲಸಂದಿ ಬ್ಯಾಳಿ ಹೋಳಿಗೆ, ೧೩) ಕೊಬ್ಬರಿ ಹೋಳಿಗೆ, ೧೪) ಸಕ್ಕರೆ ಹೋಳಿಗೆ, ೧೫) ದಾಲ ಹೋಳಿಗೆ, ೧೬) ಖಾರದ ಹೋಳಿಗೆ ಎಂದು ಬೇರೆ ಬೇರೆಯಾಗಿವೆ. ಈ ಎಲ್ಲ ಹೋಳಿಗೆಗಳನ್ನು ಕೆಲಕೆಲವರು ಕೆಲ ಕೆಲ ಸಂದರ್ಭಕ್ಕನುಗುಣವಾಗಿ, ತುಪ್ಪ, ಬೆಲ್ಲದ ಹಾಲು, ಮಾವಿನ ಹಣ್ಣಿನ ಸಿಕರಣಿ, ಬಿಳಿ ಹಾಲು, ಪುಟ್ಟಿಹಣ್ಣಿನ ಸೀಕರಣಿ, ಕಟ್ಟಿನ ಸಾರು, ಸಕ್ಕರೆ, ಬೆಲ್ಲ, ಕುಸುಬಿ ಎಣ್ಣೆಯೊಂದಿಗೆ ಊಟ ಮಾಡುತ್ತಾರೆ. ಅಲ್ಲದೆ ಹೋಳಿಗೆಯನ್ನು ಸಿಹಿ ಹೋಳಿಗೆ, ಖಾರದ ಹೋಳಿಗೆ (ಗೆಣಸಿನ, ಕಡಲೆಹಿಟ್ಟಿನ ಹೋಳಿಗೆ) ಬೆಲ್ಲದ ಹೋಳಿಗೆ, ಸಕ್ಕರೆ ಹೋಳಿಗೆ, ಒಂದೆರಡು ದಿನ ಮಾತ್ರ ಇಡುವ ಹೋಳಿಗೆ, ಬಹಳ ದಿನ ತಡೆಯುವ ಹೋಳಿಗೆ, ಎಣ್ಣೆ ಹೋಳಿಗೆ  ಹಿಟ್ಟಿನ ಹೋಳಿಗೆ (ಜೋಳದ ಹಿಟ್ಟಿನ ಅಥವಾ ಅಕ್ಕಿ ಹಿಟ್ಟಿನ ಕೊಟ್ರಾ ಒಳಗೆ ಇಟ್ಟು) ಬೇಯಿಸಿದ ಹೋಳಿಗೆ, ಕರದ ಹೋಳಿಗೆ ಎಂದೂ ವಿಂಗಡಿಸಲಾಗುತ್ತದೆ. ಹೋಳಿಗೆಯನ್ನು ತೋಯಿಸಿದ ಗೋದಿ ಹಿಟ್ಟನ್ನು ಮಿದುವಾಗಿ ನಾದಿಕೊಂಡು ಆಯಾ ಹೋಳಿಗೆಗಳ ಹೆಸರೇ ಸೂಚಿಸುವಂತೆ ಕುದಿಸಿದ ಕಡ್ಲಿಬೇಳೆ, ಗೆಣಸು, ಸಜ್ಜಕ ಇಲ್ಲವೆ ಕೊಬ್ಬರಿ, ಸೇಂಗಾ ಮೊದಲಾದವುಗಳೊಂದಿಗೆ ಬೆಲ್ಲ, ಸಕ್ಕರೆ ಕೂಡಿಸಿ, ಅರೆದು ಹೂರಣ ತಯಾರಿಸಿಕೊಂಡು ನಾದಿದ ಕಣಕದೊಡನೆ ತುಂಬಿ ಲಟ್ಟಿಸಿ (ಎದ್ದಿ) ಬೇಯಿಸಬಹುದು.

೨. ಹುಗ್ಗಿ : ಹುಗ್ಗಿಯೆಂದೊಡನೆ, ಹಿಗ್ಗಿವುದು ಮನ. ಹುಗ್ಗಿಯಲ್ಲಿ ಮುಖ್ಯವಾಗಿ ಗೋದಿ ಹುಗ್ಗಿ, ಗುದಗನ ಹುಗ್ಗಿ, ಹರಕಲ ಹುಗ್ಗಿ, (ಚಕ್ಕೋತಿ ಎಂದೂ ಅನ್ನುವರು) ಕಡಲಿಬ್ಯಾಳಿ ಹುಗ್ಗಿ, ಹೆಸರಬ್ಯಾಳಿ ಹುಗ್ಗಿ, ತೊಗರಿ ಬ್ಯಾಳಿ ಹುಗ್ಗಿ ಅಕ್ಕಿ ಹುಗ್ಗಿ ಎಂಬ ಪ್ರಕಾರಗಳು. ಹುಗ್ಗಿಗೆ ಸಹ ಹೋಳಿಗೆಯಂತೆ, ಗೋದಿಗೆ ನೀರು ಹಚ್ಚಿ, ಒಳಕಲ್ಲಲ್ಲಿ ಕುಟ್ಟಿ ಗೋದಿಯ ಸಿಪ್ಪೆಯನ್ನು ತೆಗೆದು ಹೀಗೆ ಕುಟ್ಟಿ ತಯಾರಿಸಿದ ಗೋದಿಗೆ “ಅಕ್ಕಿ” ಎನ್ನುತ್ತಾರೆ. ನಂತರ ಈ ಅಕ್ಕಿಯನ್ನು ಹೊಯ್ದಾಡುವ ನೀರಿನಲ್ಲಿ ಹಾಕಿ ಗಟ್ಟಿ ಕಟ್ಟಿಗೆಯಿಂದ ಉರಿ ಹಚ್ಚಿ ತಳಪದ್ದವಿರುವ ತಪ್ಪೇಲಿಯಲ್ಲಿ ಕುದಿಸುತ್ತಾರೆ. ಆ ಮೇಲೆ ಬೆಲ್ಲ ಕೂಡಿಸಿ ಮುಗುಚಿ ಮತ್ತೆ ಕುದಿಸಿ ತೆಗೆಯುತ್ತಾರೆ. ಇದಕ್ಕೆ ಕೊಬ್ಬರಿ, ಕಸಕಸಿ ಯಾಲಕ್ಕಿ, ಶುಂಠಿಯನ್ನು ರುಚಿಯಾಗಿ ಹಾಕುತ್ತಾರೆ. ಇನ್ನುಳಿದ ಹುಗ್ಗಿಗಳ ವಿಧಾನವೂ ವಿಭಿನ್ನವಾಗಿದೆ.

೩. ಕಡಬ : ಕಡಬಿನಲ್ಲಿ ಒಂದು ಸಿಹಿಗಡಬು ಇನ್ನೊಂದು ಸಪ್ಪಗಿನ ಕಡಬ ಎಂದು ಮುಖ್ಯವಾಗಿ ಎರಡು ವಿಧ. ಸಿಹಿ ಕಡಬಿನಲ್ಲಿ ೧) ಕರಿಗಡಬು, (ಹೂರಣಗಡಬ) ೨) ಕೊಬ್ಬರಿ ಕಡಬ (ಸೋರಗಡಬ), ೩) ಹಾಲಗಡಬ (ಅಕ್ಕಿ ಕಡಬ), ೪) ಮಸಾಲೆಕಡಬ (ಗೋಡಂಬಿ, ಬಾದಾಮಿ, ಇವುಗಳನ್ನು ತುಪ್ಪದಲ್ಲಿ ಕರಿದು ಪುಡಿಮಾಡಿ), ೫) ಮೆಣಸಿನಗಡಬ (ಗುಂಡಗಡಬ, ಬೆಲ್ಲ ಇಟ್ಟ ಕಡಬ), ೬) ಕುಂಬಳ ಕಡಬ, ೭) ಕುಚ್ಚ ಗಡಬ, ೮) ಗಳಿಗಡಬ, ೯) ಎಲಿಗಡಬ, ೧೦) ಗಂಗಾಳ ಗಡಬ ಇವುಗಳನ್ನು ಗೋಲಯ ಕನಕದಲ್ಲಿ ಬೆಲ್ಲ ಕಡಲೆಬೇಳೆಯಿಂದ ತಯಾರಿಸಿದ ಹೂರಣ, ಕೊಬ್ಬರಿ, ಬೆಲ್ಲ, ಮೆಣಸು ಕೂಡಿಸಿದ ಮಿಶ್ರಣದೊಂದಿಗೆ, ಕರಿದು ಇಲ್ಲವೆ ಕುದಿಸಿ ಮಾಡುತ್ತಾರೆ ಇದಲ್ಲದೆ ಜೋಳ, ಸಜ್ಜೆ, ರಾಗಿಹಿಟ್ಟಿನಿಂದ ಮತ್ತು ತೊಗರೆಬೇಳೆಯ ತರಿಯಿಂದ ಕುದಿಸಿದ ಸಪ್ಪಗಿನ ಕಡಬನ್ನು ಕೆಲವೊಮ್ಮೆ ಇದರಲ್ಲಿ ಮೆಂತೆ, ಸಬ್ಬಸಗಿ ಮೊದಲಾದ ಸೊಪ್ಪನ್ನು ಕೂಡಿಸಿಯೂ ಮಾಡುತ್ತಾರೆ. ಸಿಹಿಗಡಬನ್ನು ತುಪ್ಪ ಸಾರದ ಜೊತೆ ಮತ್ತು ಸಪ್ಪಗಿನ ಕಡಬನ್ನು ಪುಂಡಿಪಲ್ಲೆ ಡೊಣ್ಣಗಾಯಪಲ್ಲೆ ಅಂಬರ ಇಲ್ಲವೆ ಮೊಸರು ಚಟ್ನಿಯೊಂದಿಗೆ ಊಟ ಮಾಡುತ್ತಾರೆ.

ಮಹಾನವಮಿ ಅಮವಾಸ್ಯೆ, ಪಂಚಮಿ ಅಮವಾಸ್ಯೆ, ಭರಮಹಬ್ಬ, ಗುಳ್ಳವ್ವನ ಹಬ್ಬ, ಗಣಪನ ಹಬ್ಬ ಮೊದಲಾದ ಸಂದರ್ಭಗಳಲ್ಲಿ ಕಡಬ ಮಾಡುವರು. ಬ್ರಾಹ್ಮಣರ ಮೋದಕ ಅಡುಗೆ ಸಿಹಿಗಡಬನ್ನು ಹೋಲುತ್ತದೆ.

೪. ಮಂಡಿಗೆ : (ಮಂಡಿಗೆ ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಿಗೆ ಬರುವ ಮಾತೆಂದರೆ ಮನಸಿನ್ಯಾಗ ಮಂಡಿಗೆ ಅಂದರ ಗೋದಿಲೆಕ್ಕ ಕೊಡವರ್ಯಾರು ಎಂಬುದು. ಆದರೆ ವಾಸ್ತವಿಕವಾಗಿ ಮಂಡಿಗೆ ಪರಿಚಯವಿರುವುದು ಅಪರೂಪವಾಗಿದೆ.)

ಇದು ಬ್ರಾಹ್ಮಣರು ಮದುವೆಯಲ್ಲಿ ಮಾಡುವ ವಿಶೇಷ ಅಡುಗೆ, ಮಾಡಲು ಶ್ಯಾವಿಗೆ ಹೋಳಿಗೆಯಂತೆ ಕಠಿಣವಾಗಿದೆ. ಗೋದಿ ಪಿಟ್ಟ ಹಿಟ್ಟನ್ನು ಮಿದಿವಾಗಿ ನಾದಿ ಎರಡ್ಮೂರು ತಾಸು ಇಡುವರು. ಸಕ್ಕರೆ ಹಿಟ್ಟನ್ನು ತುಪ್ಪದಲ್ಲಿ ಯಾಲಕ್ಕಿ ಪುಡಿ ಹಾಕಿ ಕಲಿಸಿ ನಾದಿದ ಕಣಕದೊಳಗೆ ಹಾಕಿ ಸ್ವಲ್ಪ ಲಟ್ಟಿಸಿ ನಂತರ ಕೈಯಲ್ಲಿ ತೆಗೆದುಕೊಂಡು ಕೈಬೆರಳಿಂದ ಹೆಚ್ಚು ಹೆಚ್ಚು ಅಗಲವಾಗಿ ಹಿಗ್ಗಿಸುವರು. ಸುಮಾರು ಪರಾತದಷ್ಟು ಪ್ರಮಾಣ ಮಾಡುತ್ತಾರೆ. ಮೇಲೆ ಅರ್ಧ ಒಡೆದು ತೆಗೆದು ಮಣ್ಣಿನ ಹರವಿಯನ್ನು ಒಲೆಯ ಮೇಲೆ ಡಬ್ಬ ಹಾಕಿ ಅದರ ಮೇಲೆ ಮಂಡಿಗೆ ಹಾಕಿ ಬೇಯಿಸುತ್ತಾರೆ. ಕೆಲವರು ದೊಡ್ಡ ಖಡಾವಿಯಲ್ಲಿಯೂ ಹಾಕಿ ಬೇಯಿಸುವರು. ಇದನ್ನು ಪುನಃ ಸಕ್ಕರೆ, ತುಪ್ಪ ಹಾಲಿನೊಂದಿಗೆ ಊಟ ಮಾಡುತ್ತಾರೆ. ಬ್ರಾಹ್ಮಣರು, ಮದುವೆಯ ಮುನ್ನಾದಿನ ವರ, ವರನ ತಾಯಿ, ತಂಗಿ ಮೊದಲಾದ ಐದು ಜನರನ್ನು ಕೂಡ್ರಿಸಿ, ರುಬ್ಬೋತ ಎಂಬ ಊಟ ಮಾಡಿಸುವ ಶಾಸ್ತ್ರವನ್ನು ನೆರವೇರಿಸುತ್ತಾರೆ. ಆಗ ಪ್ರತಿಯೊಬ್ಬರಿಗೆ ಒಂದೊಂದು ಬಾಳೆಲೆಯ ತುಂಬ ಮುರಿಯಲಾರದ ಇಡಿಯಾದ ಮಂಡಿಗೆಯನ್ನು ಊಟಕ್ಕೆ ನೀಡುತ್ತಾರೆ.

೫. ಜೊಂಗೆ : ಇದು ಉತ್ತರ ಕರ್ನಾಟಕದ ಕೋಮು ಸೌಹಾರ್ಧತೆಯ ಅಡುಗೆಯಾಗಿದೆ. ಅಂದರೆ ಮಹಮ್ಮದೀಯರ ಹಬ್ಬವಾದ ಮೋಹರಂ ದಿನ ಮುಸ್ಲಿಂ ಅಡುಗೆಯಾಗಿದೆ. ನಾದಿದ ಗೋದಿಯ ಹಿಟ್ಟನ್ನು ಚಂದದ ಚಿತ್ರವಿರುವ ಕಟ್ಟಿಗೆಯ ಗೋಲಾಕಾರದ ಸಣ್ಣಮಣೆಯ ಮೇಲೆ ದಪ್ಪಾಗಿ ಲಟ್ಟಿಸಿ ಬೇಯಿಸುವರು. ಅದರ ಮೇಲೆ ಸಕ್ಕರೆ ಅಥವಾ ಬೆಲ್ಲ, ಒಣ ಕೊಬ್ಬರಿ, ಕಸಕಸಿ, ಯಾಲಕ್ಕಿ ಮತ್ತು ಶುಂಠಿ ಪುಡಿ ಹಾಕಿ ಒಬ್ಬರಿಗೊಬ್ಬರು ಹಂಚಿಕೊಂಡು ತಿನ್ನುತ್ತಾರೆ.

ಇದರಂತೆ ಗೋದಿ ಹಿಟ್ಟು, ಕಡಲೆ ಬೇಳೆ, ಸಣ್ಣ ಸಜ್ಜಕ, ಅಕ್ಕಿ ಹಿಟ್ಟಿನಿಂದ ಮಾಡುವ ಹಿಂದೂ ಜನರ “ಮಾದಲಿ”ಯನ್ನು ಸಹ ಮುಸಲ್ಮಾನರೂ ವಿವಿಧ ಕಾರ್ಯ ಪ್ರಸಂಗಗಳಲ್ಲಿ ಮಾಡಿಕೊಂಡು ತಿನ್ನುತ್ತಾರೆ. ಸಪ್ಪಗೆ ಬೇಯಿಸಿದ ಚಪಾತಿಯನ್ನು ಬೆಲ್ಲದೊಂದಿಗೆ ಸೇರಿಸಿ ಒಳ್ಳಕಲ್ಲಲ್ಲಿ ಕುಟ್ಟಿ ಪುಡಿ ಮಾಡುವರು. ಇದಕ್ಕೆ ಕೊಬ್ಬರಿ, ಪುಠಾಣಿ, ಸೇಂಗಾ ಬೆರೆಸುವರು. ಈ ಮಾದಲಿಯನ್ನು ತುಪ್ಪ ಹಾಲು ಹಾಕಿಕೊಂಡು ಊಟ ಮಾಡುತ್ತಾರೆ. ಪ್ರವಾಸ ಕಾಲಕ್ಕೆ ಇದು ಅನುಕೂಲವಾಗಿದೆ.

೬. ಪಾಯಸ: ಪಾಯಸಕ್ಕೆ ಬಳಸುವ ವಿವಿಧ ದಿನಸುಗಳನ್ನು ಹಳ್ಳಿಯ ಮಹಿಳೆಯರು ಬೇಸಿಗೆಯ ಬಿಡುವಿನಲ್ಲಿ ಮಾಡಿ ಚೆನ್ನಾಗಿ ಒಣಗಿಸಿ, ದೇವರ ಮನೆಯ ಅಡಕಲಗಡಿಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಪಾಯಸವನ್ನು ೧) ಶ್ಯಾವಿಗೆ ಪಾಯಸ, ೨) ಸವತಿ ಬೀಜ, ೩) ಪರಡಿ, ೪) ಉಗರತ್ತ, ೫) ದಣಿಕಲ್ಲ, ೬) ಗುಳಿಗಿ, ೭) ಗೌವಲಿ ಮತ್ತು ೮) ಸಜ್ಜಕ, ೯) ಸಾಬುದಾನಿ, ೧೦) ಹೆಸರಬ್ಯಾಳಿ, ೧೧) ಕಡಲಿಬ್ಯಾಳಿ, ೧೨) ತೊಗರಿಬ್ಯಾಳಿಯದೂ ಮಾಡುತ್ತಾರೆ. ಪಾಯಸಕ್ಕೆ ಕೊಬ್ಬರಿ, ಕಸಕಸಿ, ಯಾಲಕ್ಕಿ ಪುಡಿಯನ್ನು ಕೂಡಿಸುತ್ತಾರೆ. ಪಾಯಸವನ್ನು ಸಣ್ಣ ಹಬ್ಬ ಹುಣ್ಣಿಮೆಗಳಲ್ಲಿ ಬಸಿರು – ಬಾಣಂತಿಯರಿಗೆ ಜಡ್ಡಿನವರಿಗೆ ಹಾಗೂ ಅವಸರದ ಅತಿಥಿ ಬೀಗರಿಗೆ ಮಾಡಿ ಊಟಕ್ಕೆ ಬಡಿಸುತ್ತಾರೆ. ಶ್ಯಾವಿಗೆ ಗೌಲಿ ಮೊದಲಾದವುಗಳನ್ನು ಗೋದಿಯ ಹಿಟ್ಟಿನಿಂದ ತಯಾರಿಸುತ್ತಾರೆ. ಶ್ಯಾವಿಗೆ ಹೊಸೆಯುವುದು, ಹೋಳಿಗೆ ಮಾಡುವಷ್ಟು ಕಷ್ಟವಾಗಿದೆ. ಇದನ್ನು ಎಲ್ಲರಿಗೂ ಮಾಡಲು ಬರುವುದಿಲ್ಲ..

೭. ಉಂಡಿ : ಈ ಮೊದಲು ಹೇಳಿದಂತೆ, ಉಂಡಿಯು ಮುಖ್ಯವಾಗಿ ತಿಂಡಿ ತಿನಸುಗಳಲ್ಲಿ ಬರುತ್ತದೆ. ಆದರೂ ಕೆಲವು ಸಂದರ್ಭಗಳಲ್ಲಿ ಊಟಕ್ಕೂ ಉಪಯೋಗಿಸುವರಾದ್ದರಿಂದ ಇಲ್ಲಿ ಕೇವಲ ಉಂಡಿಯ ಪ್ರಕಾರಗಳನ್ನು ಮಾತ್ರ ತಿಳಿಸುವೆನು. ಉಂಡಿಯನ್ನು ಸಕ್ಕರೆ, ಮತ್ತು ಬೆಲ್ಲ ಎರಡರಿಂದಲೂ ಮಾಡುವರು. ೧) ಗುಳ್ಳಡಕಿ ಉಂಡಿ (ಗುಳ್ಳಪಾಪಡಿ, ದ್ರಾಕ್ಷಿ ಉಂಡಿ), ೨) ದಳೆದುಂಡಿ, ೩) ಬೇಸನುಂಡಿ, ೪) ಬುಂದೆಉಂಡಿ, ೫) ಮೋತಿಚೂರ ಉಂಡಿ, ೬) ಸೇವಿನುಂಡಿ, ೭) ಹೆಸರಹಿಟ್ಟಿನ ಉಂಡಿ, ೮) ಗೋದಿ ಹಿಟ್ಟಿನ ಉಂಡಿ, ೯) ಗರೆದುಂಡಿ (ಗೋದಿ ಪಿಟ್ಟದ ಹಿಟ್ಟಿನ), ೧೦) ಲಡಕಿಉಂಡಿ, ೧೧) ಅಂಟಿನ ಉಂಡಿ, (ಕೊಬ್ಬರಿ ಉಂಡಿ) ೧೨) ಸೇಂಗಾದುಂಡಿ, ೧೩) ಪುಠಾಣಿ ಉಂಡಿ ೧೪) ಎಳ್ಳಂಡಿ, ೧೫) ನವಣಕ್ಕಿ ಹಿಟ್ಟಿನುಂಡಿ, ೧೬) ರವಾ ಉಂಡಿ, ೧೭) ಅಕ್ಕಿ ಉಂಡಿ, ೧೮) ಚುರಮರಿ ಉಂಡಿ, ೧೯) ಅಳ್ಳು ಉಂಡಿ ಇವುಗಳಲ್ಲದೆ ನವಣಿ ಹಿಟ್ಟಿನ ಜೋಳದ ತಂಬಿಟ್ಟು ಅಳ್ಳಿಟ್ಟುಗಳನ್ನು ಮತ್ತು ಸೇಂಗಾ ಪುಠಾಣಿ, ಕೊಬ್ಬರಿಯ ಸಿಹಿ ವಡಿಗಳನ್ನು ಮಾಡುತ್ತಾರೆ.

೮. ಚಪಾತಿ : ೧) ಗೋದಿ ಹಿಟ್ಟಿನಿಂದ ತಯಾರಿಸುವ ಚಪಾತಿಯು ಇತ್ತೀಚಿನ ನಗರವಾಸಿಗಳಿಗೆ ದಿನನಿತ್ಯದ ಊಟವಾಗಿದ್ದರೆ ಹಳ್ಳಿಯ ಜನತೆಗೆ ಅದೊಂದು ಆಗಾಗ ಮಾಡುವ ವಿಶೇಷ ಅಡುಗೆಯಾಗಿದೆ. ಜೋಳಕ್ಕಿಂತ ಗೋದಿ ಹೆಚ್ಚು ಬೆಲೆಯುಳ್ಳದ್ದಾಗಿರುವುದೂ ಇದಕ್ಕೆ ಕಾರಣ ಚಪಾತಿಯಲ್ಲಿ ಸಾದಾ ಚಪಾತಿ ೨) ಪದರಿನ ಚಪಾತಿ, ೩) ಉಗಿಮ್ಯಾಲಿನ ಚಪಾತಿ, ೪) ಬಾಳೆಹಣ್ಣಿನ ಚಪಾತಿ, ೫) ಸಕ್ಕರೆ ಚಪಾತಿ, ೬) ಖಾರದ ಚಪಾತಿ ೭) ದಶಮಿ, ೮) ಕೊಟ್ರಾ ಇಟ್ಟ ಚಪಾತಿ (ಇದಕ್ಕೆ ಕೆಲವು ಕಡೆ ಹಿಟ್ಟಿನ ಹೋಳಿಗೆಯೆಂದೂ ಅನ್ನುತ್ತಾರೆ) ಚಪಾತಿಯನ್ನು ಬೇರೆ ಬೇರೆ ಪಲ್ಲೆ, ಮೊಸರು, ಚಟ್ನಿ, ಸಕ್ಕರೆ, ಬೆಲ್ಲ, ತುಪ್ಪ, ಹಣ್ಣಿನ ಸೀಕರಣಿಯೊಂದಿಗೆ ಊಟ ಮಾಡುತ್ತಾರೆ.

೯. ಅನ್ನ : ಜನಪದರ ದೃಷ್ಟಿಯಲ್ಲಿ ಅನ್ನದ ಬಗ್ಗೆ ಹೇಳುವುದಾದರೆ ಅವರು “ಅನ್ನ”ಕ್ಕೆ ವಿಶಾಲವಾದ ಅರ್ಥವನ್ನು ಕೊಟ್ಟಿದ್ದಾರೆ. ಅರ್ಥಾತ್ ಹಳ್ಳಿಯ ಜನರು, ಊಟ ಮಾಡುವ ಎಲ್ಲ ಆಹಾರ ದಿನಸುಗಳಿಗೆ ಒಟ್ಟಾಗಿ, “ಅನ್ನ” ಎಂಬ ಶಬ್ದ ಬಳಸುವರೆಂಬುದು, “ಹಸಿದು ಬಂದವರಿಗೆ ಅನ್ನ ಹಾಕೊಕ್ಕಿಂತ ದೊಡ್ಡ ಪುಣ್ಯ ಮತ್ತೊಂದಿಲ್ಲ  ಎಂಬ ಮಾತಿನಿಂದ ಸ್ಪಷ್ಟವಾಗುತ್ತದೆ. ಆದರೆ ಈಗ ಕೇವಲ ಅಕ್ಕಿ ಅನ್ನಕ್ಕೆ ಮಾತ್ರ ಅನ್ನ ಎನ್ನುತ್ತಾರೆ. ಚಪಾತಿಯಂತೆ ಅನ್ನ ಈಗಿನವರಿಗೆ ನಿತ್ಯದೂಟವಾಗಿದ್ದರೆ, ಮೊದಲಿನವರಿಗೆ ಹಬ್ಬದೂಟವಾಗಿದೆ. ಅಲ್ಲದೆ ಅನ್ನದಲ್ಲಿ ಈಗ ಇರುವಷ್ಟು ವಿವಿಧ ಪ್ರಕಾರಗಳೂ ಆಗ ಇರಲಿಲ್ಲ. ಅವರು ಅನ್ನವನ್ನು ಹೆಚ್ಚಾಗಿ ಸಾರು, ಹಾಲು, ಮೊಸರಿನೊಂದಿಗೆ ಊಟ ಮಾಡುತ್ತಾರೆ. ಕೆಲವೊಮ್ಮೆ ಮಸಾಲೆ ಅನ್ನ ಮಾಡುತ್ತಾರೆ. ಅಲ್ಲದೆ ಇದ್ದವರು ಅನ್ನ ಒಲೆಯ ಮೇಲೆ ಕುದಿಯುವಾಗ ಬೆಣ್ಣೆ ಅರಿಷಿಣ ಎಲೆಗಳನ್ನೂ ಹಾಕುತ್ತಾರೆ. ಹಳ್ಳಿಗಳಲ್ಲಿ ಅಕ್ಕಿಅನ್ನವಲ್ಲದೆ ನವಣೆ ಅನ್ನ, ಗೋದಿ ಅನ್ನ ಮಾಡುವ ರೂಢಿಯೂ ಇದೆ

ಇನ್ನು ದಿನದ ಊಟಕ್ಕೆ ಹಾಗೂ ಹಬ್ಬ ಮತ್ತು ಇತರ ಪ್ರಸಂಗಗಳಲ್ಲಿಯ ಊಟಕ್ಕೆ ಬಳಸುವ ಪಲ್ಲೆ, ಸಾರು. ಚಟ್ನಿ, ಉಪ್ಪಿನಕಾಯಿ, ಕರಿಹಿಂಡಿ, ಬಾಳಕ ಹಪ್ಪಳ ಸಂಡಿಗೆ.

೧೦. ನಮ್ಮಲ್ಲಿಯ ಪಲ್ಲೆಗಳ ಪ್ರಕಾರಗಳನ್ನು ನೋಡಿದಾಗ, ನಿಜಕ್ಕೂ ಅಚ್ಚರಿಯಾಗುತ್ತದೆ. ಪಲ್ಲಗೆ ಕೆಲವರು “ವಣಿಗಿ” ಎಂದೂ ಅನ್ನುತ್ತಾರೆ. ಪಲ್ಲೆಗಳಲ್ಲಿ ಮುಖ್ಯವಾಗಿ ಐದು ಪ್ರಕಾರ. ಕಾಯಿಪಲ್ಲೆ, ಕಾಳಪಲ್ಲೆ, ತೊಪ್ಪಲಪಲ್ಲೆ, ಬಾಳಕದ ಪಲ್ಲೆ.

೧. ಕಾಯಿ ಪಲ್ಲೆ : ಎಲ್ಲ ಕಾಲದಲ್ಲಿ ಎಲ್ಲರಿಗೂ ಪ್ರಿಯವಾಗಿರುವ ಹಾಗೂ ಅವಸರದಲ್ಲಿ ಮಾಡಲು ಬರುವಂತಹ ೧) ಬದನೆಕಾಯಿ (ಕೆಲವರು ಇದಕ್ಕೆ ಮುಳ್ಳಗಾಯಿ ಎಂದೂ ಹೇಳುವರು) ನಂತರ, ೨) ಚವಳಿ ಕಾಯಿ ೩) ಹೀರಿಕಾಯಿ, ೪) ಬೆಂಡಿಕಾಯಿ ೫) ತುಪ್ಪಹೀರಿಕಾಯಿ (ಕೆಲವರು ತಿಪ್ಪಿ ಹೀರಿಕಾಯಿ ಎನ್ನುತ್ತಾರೆ), ೬) ತೊಂಡಿಕಾಯಿ, ೭) ತೊಟ್ಟಲಕಾಯಿ (ಅದನ್ನು ಕೆಲವರು ಏಕಾದಶಿ ದಿನ ಉಪಯೋಗಿಸುವರು), ೮) ತೊಂಡಿಲಹೀರಿ, ೯) ಸೌತಿಕಾಯಿ, ೧೦) ಮೆಕ್ಕೆಕಾಯಿ, ೧೧) ಹಾಗಲಕಾಯಿ, ೧೨) ಬಂಜಿ ಹಾಗಲಕಾಯಿ (ಅಡವಿ ಹಾಗಲಕಾಯಿ, ಮಡಿವಾಳಕಾಯಿ), ೧೩) ಮೂಲಂಗಿಕಾಯಿ, ೧೪) ಕುಂಬಳಕಾಯಿ, ೧೫) ದೊಣ್ಣಗಾಯಿ, ೧೬) ಹಸಿಮೆಣಸಿನಕಾಯಿ, (ಕಾಯಿರಸ), ೧೭) ಅವರೆಕಾಯಿ, ೧೮) ಅಲಸಂದಿಕಾಯಿ, ೧೯) ಟೊಮೆಟೊ (ಚಪ್ಪರ ಬದನೆಕಾಯಿ ಮತ್ತು ಹಣ್ಣಿನ ಪಲ್ಲೆ), ೨೦) ಕರಣಿಕಾಯಿ, ೨೧) ಕರಟಿಕಾಯಿ, ೨೨) ಬಿದರಕಳಲಿನ ಪಲ್ಲೆ, ೨೩) ಬಾಳೆದಿಂಡಿನ (ಎಲೆಯ) ಪಲ್ಲೆ, ೨೪) ಪಡುವಲಕಾಯಿ.

ಈ ಕಾಯಿಗಳಲ್ಲಿ  ಬದನೆಕಾಯಿ, ಡೊಣ್ಣಗಾಯಿ, ಸೌತಿಕಾಯಿ, ತೊಂಡಿಕಾಯಿ, ಬೆಂಡಿಕಾಯಿ, ಎಳೆಹೀರಿಕಾಯಿಗಳನ್ನು ಸಣ್ಣಗೆ ಹೆಚ್ಚಿ ಹೋಳು ಮಾಡಿ ಪಲ್ಲೆ ಮಾಡುವುದರೊಂದಿಗೆ ಇಡಿಗಾಯಿಗಳನ್ನೇ ಉದ್ದಕ್ಕೆ ನಾಲ್ಕು ಹೋಳುಗಳಲ್ಲಿ ಬಿಡಿಸಿ, (ಕೆಳಗೆ ಮಾತ್ರ ಕೂಡಿದ್ದು ಹಾಗೆ ಇರುತ್ತದೆ) ಕೊಬ್ಬರಿ, ಬಳ್ಳೊಳ್ಳಿ ಹುಳಿ, ಗುರಳ್ಳಪುಡಿ, ಮಾದಲಾದ ಮಾಸಾಲೆಯನ್ನು ಒಳಗೆ ತುಂಬಿಯೆ ಪಲ್ಲೆ ಮಾಡುತ್ತಾರೆ. ಇದಕ್ಕೆ ಎಣ್ಣೆಗಾಯಿ ಇಲ್ಲವೆ ತುಂಬಗಾಯಿ ಪಲ್ಲೆ ಎಂದು ಕರೆಯುತ್ತಾರೆ.

೨. ಕಾಳಪಲ್ಲೆ : ಕಡಲಿ, ಹೆಸರು, ಅಲಸಂದಿ, ಅವರೆ, ತೊಗರೆ, ಮಡಕಿ (ಮೂಕಣಿ) ಬಟಗಡ್ಲಿ, (ವಟಾಣಿ ), ಹುರುಳಿ ಇತ್ಯಾದಿ.

ಈ ಕಾಳುಗಳನ್ನು ಇಡಿಯಾಗಿ ಕುದಿಸಿಯೂ ಹಾಗೂ ಒಂದು ಹಗಲಿಡಿ ನೆನೆಹಾಕಿ ರಾತ್ರಿಯಿಡಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಒಡಿಸಿಯೂ “ಉಸುಳಿ”ಯೆಂದೂ ಪಲ್ಲೆ ಮಾಡುವರು ಅಲ್ಲದೆ ಒಡೆದು ಬೇಳೆ ಮಾಡಿ ಪಲ್ಲೆ ಸಹ ಮಾಡುತ್ತಾರೆ. ಇದಲ್ಲದೆ ಬೇಳೆಯನ್ನು ಬೇರೆ ಬೇರೆ ಕಾಯಿ ಮತ್ತು ಸೊಪ್ಪಿನ ಜೊತೆಗೆ ಕೂಡಿಸಿಯೂ ಪಲ್ಲೆ ಮಾಡುತ್ತಾರೆ.

ಪಂಚಮಿ, ಸೀಗಿಹುಣ್ಣಿಮೆ, ಸಂಕ್ರಮಣದಂತಹ ಸಂದರ್ಭಗಳಲ್ಲಿ ಐದು ತರದ ಕಾಳಿನ ಪಲ್ಲೆಯನ್ನು ಅವಶ್ಯವಾಗಿ ಮಾಡುತ್ತಾರೆ.

೩. ಹಿಟ್ಟಿನ ಪಲ್ಲೆ : ಹಿಟ್ಟಿನ ಪಲ್ಲೆಗೆ “ಜುಣುಕಾ” ಎಂದೂ ಹೆಸರಿದೆ. ಕಡಲೆ ಹಿಟ್ಟು ಹೆಸರಹಿಟ್ಟು ಜೋಳ ಮತ್ತು ಸಜ್ಜೆ ಹಿಟ್ಟಿನಿಂದ ಇದನ್ನು ತಯಾರಿಸುತ್ತಾರೆ. ಕೆಲವೊಮ್ಮೆ ಈ ಹಿಟ್ಟನ್ನು ಮಸಾಲೆ ಸಹಿತ ಕೇಸಿನ ಎಲೆ, ಅರಿಷಿಣ ಎಲೆಗಳಲ್ಲಿ ತುಂಬಿಯೂ ಉಗಿಯ ಮೇಲೆ ಬೇಯಿಸಿ ಆಮೇಲೆ ಒಗ್ಗರಣೆ ಹಾಕುತ್ತಾರೆ. ಹಿಟ್ಟಿನ ಮತ್ತು ಕಾಳುಪಲ್ಲೆಗಳನ್ನು ಬಹಳಷ್ಟು ಹುಳಿಖಾರ ಹಾಕಿ ಮಾಡಿ ಪ್ರವಾಸಕ್ಕೆ ಹೋಗುವಾಗ ಕಟ್ಟಿಕೊಂಡು ಹೋಗುತ್ತಾರೆ.

೪. ತೊಪ್ಪಲು ಅಥವಾ ಸೊಪ್ಪಿನ ಪಲ್ಲೆ : ೧) ಸಬ್ಬಸಗಿ, ೨) ಮೆಂತೆ, ೩) ಗೊರಜಿ, ೪) ಗೊಳಿ, ೫) ರಾಜಿಗಿರಿ, ೬) ಕಿರಕಸಾಲಿ, ೭) ಹುಣಸಿಕ, ೮) ಹೊನ್ನಿಕುಕ್ಕ, ೯) ಹನಿಗಾನಿ, ೧೦) ಹಾತರಕಿ, ೧೧) ಹಾಲಕುಡಿ, ೧೨) ಹರವಿ (ಹರಿ, ಬಿಳಿ, ಕೆಂಪು), ೧೩) ಪುಂಡಿ, ೧೪) ಕಡಲೆ, ೧೫) ಕುಸುಬಿ, ೧೬) ಕೋಲಾನಿ (ಕಲಘಟಗಿ, ಉದ್ದ ಎಲೆ ), ೧೭) ಉಳ್ಳಗಡ್ಡೆ, ೧೮) ಮೂಲಂಗಿ, ೧೯) ಪಾಲ್ಕನ್, ೨೦) ನುಗ್ಗಿ ಹೂ ಮತ್ತು ಮುಗುಳ, ೨೧) ಅಲಸಂದಿ ಮುಗಳ, ೨೨) ಅವರೆ ಮುಗುಳ, ೨೩) ಕುಂಬಳ ಮುಗುಳ.

ಹೆಚ್ಚು ಜೀವಸತ್ವ  ಹೊಂದಿರುವ ಈ ಸೊಪ್ಪನ ಪಲ್ಲೆಗಳು ಎಲ್ಲರ ಆರೋಗ್ಯಕ್ಕೆ ಹಿತವಾಗಿದ್ದರೂ ವಿಶೇಷವಾಗಿ ಕಾಯಿಲೆಯಿಂದ ಬಳಲುವವರಿಗೆ, ಮಕ್ಕಳಿಗೆ ಮತ್ತು ಬಾಣಂತಿಗೆ ಮಾಡಿಕೊಡುತ್ತಾರೆ.

೫. ಬಾಳಕದ ಪಲ್ಲೆ : ಬಾಳಕವೆಂದರೆ ಬಿಸಿಲಲ್ಲಿ ಒಣಗಿಸಿದ್ದು ಎಂದರ್ಥ. ( ಇದನ್ನು ನಾವು ಆಧುನಿಕ ಫ್ರೊಝನ್ ವ್ಹೆಜಿಟೇಬಲಕ್ಕೆ ಹೋಲಿಸಬಹುದೇನೋ) ಬದನೆಕಾಯಿ, ಬೆಂಡೆಕಾಯಿ, ಮಾವಿನ ಕಾಯಿ, ಸೋಸಿದ ಚವಳೆಕಾಯಿ ಹಾಗೂ ಪುಂಡಿಪಲ್ಲೆ, ಕಡಲಿಪಲ್ಲೆ, ಕುಸುಬಿಪಲ್ಲೆ, ಸಬ್ಬಸಗಿಗಳನ್ನೂ ಒಣಗಿಸಿಟ್ಟು ಕೊಂಡು ಈ ಪಲ್ಲೆಗಳು ಸಿಗಲಾರದ ದಿನಗಳಲ್ಲಿ ಅಥವಾ ಮನೆಯಲ್ಲಿ ಪಲ್ಲೆ ಮಾಡಲು ಏನೂ ಇರಲಾರದ ಪ್ರಸಂಗದಲ್ಲಿ ಈಬಾಳಕವನ್ನು ಬೇಳೆ ಕೂಡಿಸಿ ಮಾಡುತ್ತಾರೆ.

೬. ಸಾರು :  ಸಾರಿಗೆ ಹಳ್ಳಿಗಳಲ್ಲಿ “ಅಂಬರ” ಎಂದೂ ಸಾರು ಮಾಡುವುದಕ್ಕೆ “ಅಂಬರಾ ಕಾಸೂದು” ಎಂದು ಅನ್ನುತ್ತಾರೆ. “ಅಂಬರ”ವು ಪಲ್ಲೆಯಷ್ಟು ಪ್ರಾಶಸ್ತ ಪಡೆದಿಲ್ಲ. ಅಂದರೆ ಒಂದೊಂದು ದಿನ ಊಟಕ್ಕೆ ಇದು ಇರದಿದ್ದರೂ ನಡೆಯುತ್ತದೆ. ಆದರೆ “ದೊಡ್ಡ ಅಡಿಗೆಯ”ವಿಶೇಷ ಊಟದಲ್ಲಿ ಸಾರು ಅವಶ್ಯವಾಗಿ ಬೇಕು. ಸಾರಿನಲ್ಲಿ ಮುಖ್ಯವಾಗಿ. ೧) ಬೇಳೆ ಸಾರು ೨) ಕಟ್ಟಿನಸಾರು, (ಕಟ್ಟಾಂಬರ), ೩)ಮಜ್ಜಗಿ ಸಾರು, ೪) ಹುಳಿಸಾರು ಎಂದು ನಾಲ್ಕು ವಿಧ. ಇವುಗಳನ್ನು ಬೇರೆ ಬೇರೆ ಬೇಳೆ, ಕಾಯಿ ತಪ್ಪಲು ಹಣ್ಣು, ಹಿಟ್ಟು, ಕಾಳು ಕುದಿಸಿದ ಕಟ್ಟು (ಅಂದರೆ ಬಸಿದ ನೀರು)ಗಳಿಂದ ಮಾಡುವರು. ಅವು ಇಂತಿವೆ. ೧) ತೋಗರಿ ಬೇಳೆ, ೨) ಹೆಸರುಬೇಳೆ, ೩) ಕಡಲೆಬೇಳೆ ಸಾರು, ೪) ಹುಣಸೆ ಹಣ್ಣು (ತಂಬುಳಿ) ಅಮಸೋಲ,  ೬) ಟೋಮೆಟೋ ಹಣ್ಣಿನ ಸಾರು, ಮತ್ತು ೭) ನುಗ್ಗೆಕಾಯಿ, ೮) ಬೆಂಡಿಕಾಯಿ, ೯) ಅಮಟಿಕಾಯಿ ಸಾರು, ೧೦) ಕೊಬ್ಬರಿ ಸಾರು (ರುಬ್ಬಿಹಾಲು ತೆಗೆದು ಲಿಂಬಿ ಹುಳಿ ಹಿಂಡಿ, ತುಪ್ಪದ ಒಗ್ಗರಣಿ), ೧೧) ವಟಾಣಿಕಾಳಿನ ಸಾರು, ಅಲ್ಲದೆ ೧೨) ಕಡಲೆಹಿಟ್ಟು, ೧೩) ಹೆಸರಹಿಟ್ಟು, ೧೪) ಹಚ್ಚಿಯೂ ಮಾಡುತ್ತಾರೆ. ೧೫) ಮಜ್ಜಗಿಯನ್ನು ಹಿಟ್ಟು ಹಚ್ಚಿ ಅಥವಾ ಹಚ್ಚದೆಯೂ ಮಾಡುತ್ತಾರೆ, ೧೬) ವಿವಿಧ ಬೇಳೆ ಕಾಳನ್ನು, ಕುದಿಸಿದ ನೀರಿನಿಂದಲೂ “ಕಟ್ಟಿನ ಸಾರು” ಎಂದು ಮಾಡುವರಾದರೂ ವಿಶೇಷವಾಗಿ ಈ ಹೆಸರು ಹೋಳಿಗೆ, ಕಡಬು ಮಾಡಲು ಕಡಲೇ ಬೇಳೆಯ ಕಟ್ಟಿನ ಸಾರಿಗೆ ಅನ್ವಯಿಸುತ್ತದೆ. ಬೆಂಡಿಕಾಯಿಯ ದೊಡ್ಡ ಕುಟುಂಬದಲ್ಲಿ ಸ್ವಲ್ಪ ತೊಗರಿ ಬೇಳೆಗೆ ಹಿಟ್ಟುಹಚ್ಚಿ ಮಾಡಿದ ಅಂಬರಕ್ಕೆ “ಹುಳಪಲ್ಲೆ” ಎನ್ನುತ್ತಾರೆ. ಅವಿಭಕ್ತ ಕುಟುಂಬದಲ್ಲಿ ಇಂದಿಗೂ “ಹುಳಪಲ್ಲೆ ಗಡಿಗೆ” ಕಾಣುತ್ತದೆ. ಈ ಬುಟ್ಟಿಯಲ್ಲಿ ಪ್ರತ್ಯೇಕ ಸ್ಥಾನವೂ ಇದೆ. ಒಟ್ಟಿನಲ್ಲಿ ಬಿಸಿ ರೊಟ್ಟಿಗಿಂತ ತಂಗಳ ರೊಟ್ಟಿಗೆ ಹಾಗೂ ಹಲ್ಲು ಇಲ್ಲದ ಬಚ್ಚ ಬಾಯಿಯವರಿಗೆ ಈ ಅಂಬರದ ಅವಶ್ಯಕತೆಯಿದೆ.

ಇನ್ನು ಊಟದ ರುಚಿ, ಶುಚಿಯನ್ನು ಹೆಚ್ಚಿಸುವ ಕರಿಹಿಂಡಿ, ಹಪ್ಪಳ, ಸಂಡಿಗೆ, ಚಟ್ನಿಗಳ ವಿಚಾರ, ಚಟ್ನಿ, ಕರಿಹಿಂಡಿಯನ್ನು ಬಿಟ್ಟು ಉಳಿದವು ವರ್ಷವಿಡಿ ತಡೆಯುವಂತಹ ದಿನಸುಗಳು. ಹಪ್ಪಳ ಸೆಂಡಿಗೆಗಳನ್ನು ಶ್ಯಾವಿಗೆ ಸವತಿಬೀಜದಂತೆ ಬೇಸಗೆಯಲ್ಲಿ ಹಾಗೂ ಉಪ್ಪಿನಕಾಯಿಗಳನ್ನು ಅಯಾ ಕಾಯಿಗಳು ಸಿಗುವ ದಿನಗಳಲ್ಲಿ ತಯಾರಿಸಿ ಇಟ್ಟುಕೊಳ್ಳುತ್ತಾರೆ.

೭. ಉಪ್ಪಿನ ಕಾಯಿ : ವಿವಿಧ ಹುಳಿ, ಕಾಯಿ ಮತ್ತು ಬೇರು ಹಾಗೂ ಹೂಗಳಿಂದ ಉಪ್ಪಿನಕಾಯಿ ಹಾಕುತ್ತಾರೆ. ಇದರಲ್ಲಿ ೧) ಚಳ್ಳಕಾಯಿ ೨) ಕರಣೀಕಾಯಿ, ೩) ಅಮಟೆಕಾಯಿ, ೪) ಮಾಗನೀಬೇರು, ೫) ಪುಂಡಿ ಹೂ, ೬) ಕವಳಿಕಾಯಿ, ೭) ಮೆಕ್ಕಿಕಾಯಿ,  ೮) ಮಾವಿನಕಾಯಿ,  ೯) ಹಾಗಲ ಕಾಯಿ, ೧೦) ನೆಲ್ಲಿಕಾಯಿ, ೧೧) ಮೆಣಸಿನ ಕಾಯಿ, ೧೨) ಲಿಂಬಿಕಾಯಿ, ೧೩) ಕಂಚಿಕಾಯಿ, ೧೪) ಚವಳಿಕಾಯಿ, ೧೫) ಗಜ್ಜರಿ, ೧೬) ಸೌತಿಕಾಯಿ ಈ ಕೆಲವು ಉಪ್ಪಿನಕಾಯಿಗಳಲ್ಲಿ, ಪುನಃ ಒಳಭೇಧಗಳಿವೆ. (ಉದಾ: ಮಾವಿನ, ಲಿಂಬೆ, ಕಂಚಿನ)

ಇವುಗಳನ್ನು ಹೆಚ್ಚಿ ಉಪ್ಪು, ಖಾರ, ಅರಿಷಿಣ, ಸಾಸಿವೆ ಮೊದಲಾದ ಸಾಮಾನುಗಳೊಂದಿಗೆ ಕಲಿಸಿ ತಯಾರಿಸುತ್ತಾರೆ. ಪುಂಡಿ ಗಿಡಿದ ಎಳೆಯ ಕೆಂಪು ಹೂಗಳನ್ನು ಹೀಗೆ ಉಪ್ಪಿನಕಾಯಿ ಹಾಕುತ್ತಾರೆ ಪುಂಡಿ ಹೂವಿನ ಮತ್ತು ಮೆಕ್ಕಿಕಾಯಿ ಉಪ್ಪಿನಕಾಯಿಗಳನ್ನು ದಿನಗಳೆದಂತೆ, ಇಟ್ಟಲ್ಲಿಯೇ ಒಣಗುತ್ತ ಹೋದರೂ ಅವು ತಮ್ಮ ರುಚಿಯನ್ನು ಕಳೆದುಕೊಳ್ಳುವುದಿಲ್ಲ.

ಇದರಂತೆ ವರ್ಷವೀಡಿ ತಡೆಯುವಂತಹ ಹಸಿ ಹುಣಸಿಕಾಯಿಯ ಟೊಕ್ಕನ್ನೂ ಮಾಡುತ್ತಾರೆ.

೮. ಕರಿಹಿಂಡಿ : ಇದನ್ನು ಕಡ್ಡಕಾಯಿ ಅರ್ಥಾತ ಬಿರುಸಾಗಿರೊ ಹಸಿಕಾಯಿಗಳಿಂದ ಮಾಡುತ್ತಾರೆ. ೧) ಪಪ್ಪಾಯಿ ಕಾಯಿ, ೨) ಇಸಗಾಯಿ (ಕೆಕ್ಕರ ಕಾಯಿ, ಪುಟ್ಟಿಕಾಯಿ), ೩) ಹಸಿಮೆಣಸಿನಕಾಯಿ, ೪)ಸೌತಿಕಾಯಿ, ೫) ಚವಳಿಕಾಯಿ ಮತ್ತು ಗಜ್ಜರಿ ಕೂಡಿಸಿ ಮಾಡುತ್ತಾರೆ. ಕರಿಹಿಂಡಿಗೆ ವಿಶೇಷವಾಗಿ ಅಗಸೆ ಹಾಕಿ ಹುಳಿಯೊಡೆಯಲು ಬಿಸಿಲಲ್ಲಿ ಇಟ್ಟು ಒಣಗಿಸುವರು.

೯. ಹಪ್ಪಳ : ಉದ್ದು, ಅಲಸಂದಿ, ಹೆಸರು, ಮಡಕಿ, ಅಕ್ಕಿ, ಗೋದಿ, ಗೋಂಜೋಳ, ರಾಗಿ, ಸಾಬುದಾನಿಗಳಿಂದ ವಿಶೇಷ ಕ್ರಮದಿಂದ ಹಿಟ್ಟು ತಯಾರಿಸಿ, ಮಣೆಯ ಮೇಲೆ ಉದ್ದಿ ಬಿಸಿಲಲ್ಲಿ ಒಣಗಿಸಿ ಮತ್ತು ಗಂಗಾಳದಲ್ಲಿ ಹಾಕಿ ಉರಿಯ ಮೇಲೆಯೂ ಬೇಯಿಸುತ್ತಾರೆ. ಊಟ ಮಾಡುವಾಗ ಹಪ್ಪಳವನ್ನು ಕಿಚ್ಚಿನ ಮೇಲೆ ಸುಟ್ಟು ಇಲ್ಲವೆ ಎಣ್ಣೆಯಲ್ಲಿ ಕರಿದು ಉಪಯೋಗಿಸುವರು.

೧೦. ಸೆಂಡಗೆ : ಸೆಂಡಗೆಯನ್ನು ಹಪ್ಪಳ ತಯಾರಿಸುವ ಕಾಳಿನಿಂದಲ್ಲದೆ ಸೆಂಡಿಗುಂಬಳ ಕಾಯಿ ಮತ್ತು ಚವಳಿಕಾಯಿಯಿಂದಲೂ ತಯಾರಿಸುತ್ತಾರೆ. ಸಂಡಗೆಯನ್ನು ಸಂಡಿಗೆಯ ಮಣಿಯಿಂದಲೂ ಹಾಗೂ ಕೈಯಿಂದಲೂ (ಕುರುಡುಗಿ) ಹಾಕುತ್ತಾರೆ. ಬಿಸಿಲಲ್ಲಿ ಚೆನ್ನಾಗಿ ಒಣಗಿಸಿದ ಒವುಗಳನ್ನು ಎಣ್ಣೆಯಲ್ಲಿ ಕರಿದು ಸಿಹಿಯೂಟದೊಂದಿಗೆ ಬಳಸುವರು.

೧೧. ಚಟ್ನಿ : ಚಟ್ನಿಗೆ ಹಿಂಡಿಯೆಂದು ಹೇಳುತ್ತಾರೆ, ಇದರಲ್ಲಿ ಹಸಿ ಚಟ್ನಿ, ಒಣಚಟ್ನಿ ಎಂದು ಎರಡು ವಿಧ. ಹಸಿ ಚಟ್ನಿ ಒಂದೆರಡು ದಿನ ಹಾಗೂ ಒಣಚಟ್ನಿ ಹದಿನೈದು ದಿನ ತಿಂಗಳ ವರೆಗೆ ತಡೆಯುತ್ತದೆ. ಇವುಗಳನ್ನು ಬೇರೆ ಬೇರೆ ಕಾಳು. ಕಾಯಿ, ಗಡ್ಡೆ, ಉಳ್ಳಾಗಡ್ಡಿ, ಬಳ್ಳೊಳ್ಳಿ, ಗಜ್ಜರಿ ಮತ್ತು ಸೊಪ್ಪಿನಿಂದ ಮಾಡುವರು. ಮೊದಲು ಹಸಿ ಚಟ್ನಿ ಇದರಲ್ಲಿ ೧) ಕಡ್ಲಿಬೇಳೆ, ೨) ಮೆಂತೆ ಕಾಳು, ೩) ಉದ್ದಿನಬೇಳೆ, ೪) ಹಸಿಗುರಳ್ಳು, ೫) ಹಸಿ ಸೇಂಗಾ, ೬) ಹಸಿ ಟೊಮೆಟೊ, ೭) ಪುಂಡಿತೊಪ್ಪಲು, ೮) ಹೀರಿಕಾಯಿ, ೯)ಬೆಂಡಿಕಾಯಿ, ೧೦) ಮಾವಿನಕಾಯಿ ೧೧) ನೆಲ್ಲಿ ಕಾಯಿ, ೧೨) ಕವಳಿ ಕಾಯಿ, ೧೩) ಹಾಗಲ ಕಾಯಿ, ೧೪) ಡ್ವಾರ ಹುಣಸಿ ಕಾಯಿ, ೧೫) ಗಜ್ಜರಿ, ೧೬) ಕೊಬ್ಬರಿ, ೧೭) ತಂಬುಳೆ (ಹಣ್ಣ ಹುಣಸಿ), ೧೮) ಬಳ್ಳೊಳ್ಳಿ.

ಒಣಚಟ್ನಿಯಲ್ಲಿ ೧) ಅಗಸಿ, ೨) ಗುರೆಳ್ಳು, ೩) ಮರೆಳ್ಳು, ೪) ಸೇಂಗಾ, ೫) ಪುಠಾಣಿ, ೬) ಕೊಬ್ಬರಿ, ೭) ಮೆಂತೆದ ಹಿಟ್ಟು, ೮) ಕಡ್ಲಿ ಹಿಟ್ಟು, ೯) ಉದ್ದಿನ ಬೇಳೆ ಅಲ್ಲದೆ ಒಣಕೊಬ್ಬರಿ, ಸೆಂಗಾ, ಪುಠಾಣಿ, ಎಳ್ಳು ಕೂಡಿಸಿ ಮಿಶ್ರ ಚಟ್ನಿಯನ್ನು ಮಾಡುತ್ತಾರೆ.

ಉಪ್ಪು, ಖಾರ, ಕರಿಬೇವು ಜೀರಿಗೆ ಇತ್ಯಾದಿ ಹಾಕಿ ನುಣ್ಣಗೆ ಅರೆದು, ಕುಟ್ಟಿ ಮಾಡುವ ಈ ಹಸಿ ಮತ್ತು ಒಣಚಟ್ನಗಳು ಪಲ್ಲೆದ ಗೈರ ಹಾಜರಿಯನ್ನು ತುಂಬುತ್ತವೆ. ಮಕ್ಕಳಿಗಂತೂ ರೊಟ್ಟಿಯಲ್ಲಿ ಕೆನೆ ಮೊಸರಿನೊಂದಿಗೆ ಈ ಚಟ್ನಿಗಳು ಅಥವಾ ಪಲ್ಲೆಗೆ ಹಾಕುವ ಅಂಬರದುಪ್ಪ ಇದ್ದರೆ ಬಲು ಖುಷಿ. ಪ್ರವಾಸಕ್ಕೆ ಹೋಗುವಾಗ ಪಲ್ಲೆಗಿಂತಲೂ ಹೆಚ್ಚು ದಿನ ತಡೆಯುವ ಈ ಚಟ್ನಿಗಳ ಅವಶ್ಯಕತೆ ಹೆಚ್ಚು ಇದೆ.

ಕೊನೆಯದಾಗಿ ಕಾಯಿ ಎನಿಸಿಕೊಂಡೂ ಕಾಯಿಪಲ್ಲೆಯಲ್ಲಿ ಕೂಡದೆ ಹಾಗೂ ಕಲ್ಲಲ್ಲಿ ಅರೆಯಿಸಿಕೊಂಡರೂ, ಚಟ್ನಿಯೂ ಎಂದೆನಿಸಿಕೊಳ್ಳದೆ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಪಡೆದಿರುವ “ಬದನೆಕಾಯಿ ಬರ್ತ”, ಪಲ್ಲೆಗೆ ಬರದಂತಹ ಬಲಿತ ಇಲ್ಲವೆ ಹಣ್ಣಾದ ಬದನೆ ಕಾಯಿಯನ್ನು ಕಿಚ್ಚನಲ್ಲಿಟ್ಟು ಸುಟ್ಟು ಅದರ ಸಿಪ್ಪೆಯನ್ನು ತೆಗೆದು ಉಳ್ಳಾಗಡ್ಡಿ, ಬಳ್ಳೊಳ್ಳಿ ಜೀರಿಗೆ,  ಇಂಗ ಹಾಕಿ ಅರೆದು ಆ ಮೇಲೆ ಕೆಲವರು ಒಗ್ಗರಣಿಯನ್ನು ಕೊಟ್ಟು ಈ ಬರ್ತವನ್ನು ತಯಾರಿಸಿ ರೊಟ್ಟಿ, ಚಪಾತಿ,  ಅನ್ನದೊಂದಿಗೆ, ಇದನ್ನು ಊಟ ಮಾಡುತ್ತಾರೆ.ಇದು ಹಳ್ಳಿಯವರಿಗೆ ಬಲುಪ್ರಿಯವಾದ ದಿನಸು. ಬರ್ತದ ಬಂಬಾಟಕ್ಕೆ ಬೆರಗಾದ ಜನಪದ ರುಚಿಗಾರರು “ಬದನೆಕಾಯಿ ಬರ್ತಾ, ಮಾಡಕೊಂಡಾಕಿನ ಮರತಾ, ಇಟಗೊಂಡಾಕಿನ ಬೆರತಾ” ಎನ್ನುತ್ತಾರೆ.

ಇನ್ನು ಮಾಂಸಹಾರದ ಅಡಿಗೆಯ ಅಲ್ಪ ಪರಿಚಯ : ಈ ಅಡುಗೆಗೆ ಅವಶ್ಯವಾದ ದಿನಸುಗಳೆಂದರೆ, ತತ್ತಿ, ಕೋಳಿ, ಮೀನು, ಏಡಿ, ಮಾಂಸ ಮತ್ತು ಮಸಾಲೆ, ಕೆಲವೊಮ್ಮೆ ಮಾಂಸದಲ್ಲಿ ಮೊದಲ ಮಾಂಸ, ಕುರಿಮಾಂಸ, ಹಂದಿ ಮಾಂಸ ಮುಂತಾಗಿ ಇರುತ್ತವೆ. ಈ ತತ್ತಿ, ಕೋಳಿ, ಮೀನು ಮಾಂಸಗಳಿಂದ ಅಮ್ಲೈಟ್, ಕಟ್ಲೇಟ್, ಪಲ್ಲೆ, ಸಾರು, ರಸಂ,  ಬಿರ್ಯಾನಿ ಚಿಕನ, ಕಡಬು, ವಡೆ, ಬಜಿ, ಉಪ್ಪಿನಕಾಯಿ, ರೊಟ್ಟಿ, ಫಲಾವ್, ಕಿಚಡಿ, ಮೊದಲಾದ ಅಡುಗೆಗಳನ್ನು ಮಾಡುವರೆಂದು ಕೇಳಿರುವೆನು. ಮಾಂಸಾಹಾರಿಗಳು ಈ ಎಲ್ಲ ಅಡುಗೆಯನ್ನು ಕೆಲವೊಮ್ಮೆ ಸಸ್ಯಾಹಾರದೊಂದಿಗೂ ಊಟ ಮಾಡುತ್ತಾರೆ.

ಅಂತೂ ಉತ್ತರ ಕರ್ನಾಟಕದ ವೈವಿಧ್ಯಮಯ ಅಡುಗೆಗೆ ಇಲ್ಲಿಯ ಮಹಿಳೆಯರ ಶ್ರಮವೇ ಕಾರಣವಾಗಿದ್ದರೂ. “ಉಣ್ಣು ಗಂಡಸರು ಉಣ್ಣಾಕ ಶ್ಯಾನ್ಯಾರಿದ್ದರ ಅಡಿಗೆಮಾಡು ಹೆಂಗಸರು ಅಡಿಗ್ಯಾಗ ಶ್ಯಾನ್ಯಾರಾಗ್ತಾರ” ಎಂಬುದು ಜನಪದರ ಮಾತಾಗಿದೆ. ನಮ್ಮಪುರುಷರು, ಊಟದಲ್ಲಿ ತುಂಬಾ ಪಳಗಿದವರೆಂಬುದು ಈ ವರೆಗೆ ಸಂಕ್ಷಿಪ್ತದಲ್ಲಿ ನೋಡಿದ ಉತ್ತರ ಕರ್ನಾಟಕದ ಅಡುಗೆಯೇ ಸಾಕ್ಷಿಯಾಗಿದೆ. ಈ ಅಡುಗೆಯನ್ನು ನಾವು ಪ್ರತ್ಯಕ್ಷವಾಗಿ ಹಿಡಿದಿಡಲು ಸಾಧ್ಯವಿಲ್ಲ. ಕಾರಣ ಪುಸ್ತಕರೂಪದಲ್ಲಿಯಾದರೂ, ಸಂಪೂರ್ಣವಾಗಿ ಹಿಡಿದಿಡಲು ಪ್ರಯತ್ನಿಸೋಣ ಎಂದು ಬಯಸಿ ನನ್ನ ಈ ಪ್ರಬಂಧವನ್ನು ಮುಕ್ತಾಯಗೊಳಿಸಿವೆನು.

* * *