ಮನೆಗಳು ಬಿಂಬಿಸುವ ಜನಪದ ಸಂಸ್ಕೃತಿ

ಕರಾವಳಿಯ ವಾಸದ ಮನೆಗಳನ್ನು ಮುಖ್ಯವಾಗಿ ಅಳಿಯಕಟ್ಟು ಸಂಪ್ರದಾಯ ಮನೆ ಮತ್ತು ಮಕ್ಕಳ ಕಟ್ಟು ಸಂಪ್ರದಾಯದ ಮನೆಗಳು ಎಂಬುದಾಗಿ ವರ್ಗೀಕರಿಸಬಹುದು.

ಅಳಿಯಕಟ್ಟು ಸಂಪ್ರದಾಯದ ಮನೆಗಳು: ಶೂದ್ರರ ಅಥವಾ ಒಕ್ಕಲಿನವರ ಮನೆಗಳು, ಅಸ್ಪೃಶ್ಯರ ಮನೆಗಳು, ಗುತ್ತಿನ ಮನೆಗಳು, ಜೈನರ ಬೀಡುಗಳು ಮತ್ತು ಅರಮನೆಗಳು.

ಮಕ್ಕಳಕಟ್ಟು ಸಂಪ್ರದಾಯದ ಮನೆಗಳು: ಬ್ರಾಹ್ಮಣರ ಮನೆಗಳು, ಸಾರಸ್ವತರ ಮನೆಗಳು, ಮುಸಲ್ಮಾನರ ಮನೆಗಳು, ಕ್ರಿಶ್ಚಿಯನ್ ಹಾಗೂ ಮಿಶನರಿಗಳ ಮನೆಗಳು.

ಬೀಡು, ಗುತ್ತು ಅರಮನೆಗಳು ತಮ್ಮ ಕುಟುಂಬದ ಅಳಿಯಂದಿರಿಗೆ ಮನೆಗಳನ್ನು ಕಟ್ಟಿಸಿಕೊಡುವ ಸಂಪ್ರದಾಯವಿತ್ತು. ಇದೊಂದು ಪ್ರತಿಷ್ಠೆ ಸ್ಥಾನಮಾನದ ಕಾರ್ಯ ಸಾಧನೆಯೂ ಆಗಿರುತ್ತಿತ್ತು. ಕೆಲವೆ ವರ್ಷಕ್ಕೆ ಮನೆಗಳನ್ನು ಕಟ್ಟಿಸಿಕೊಟ್ಟ ಲೆಕ್ಕದಲ್ಲಿ ೩೦೦೦ ಮುಡಿ ಅಕ್ಕಿ ಸಂದಿರುವ ದಾಖಲೆಗಳು ಇವೆ (ಕೃಷ್ಣಯ್ಯ ಎಸ್. ಎ. ೧೯೯೧). ಬಹುಶಃ ಈಗಿನ ವರದಕ್ಷಿಣೆ ಪದ್ಧತಿಯನ್ನೂ ಇದು ಸಮರ್ಥಿಸುತ್ತದೆ. ಅರಸುಮನೆತನಗಳಲ್ಲಿ ಅರಮನೆಗಳನ್ನು ಕಟ್ಟಿಸಿಕೊಳ್ಳುವುದು ಪ್ರತಿಷ್ಠೆ ಸ್ಪರ್ಧೆಯ ಸಂಗತಿಯಾಗಿತ್ತು. ಒಬ್ಬ ಹೆಗ್ಗಡೆಯ ಮನೆಯ ಸಮೀಪ ಇನ್ನೊಬ್ಬ ಹೆಗ್ಗಡೆ ಅರಮನೆ ನಿರ್ಮಿಸುವುದು, ಅಂತಹ ಸಂದರ್ಭದಲ್ಲಿ ಕುಲದೈವಗಳಿಂದ ಉಪದ್ರವ, ಅದ್ಕಕಾಗಿ ಅವನ್ನು ಒಲಿಸಿಕೊಳ್ಳಲು ಕೋಲು ನೇಮ ಕೊಡುತ್ತಿದ್ದುದು. ಇತ್ಯಾದಿ ಸಂಗತಿಗಳು ಇಲ್ಲಿನ ಕೈಪಿಯತ್ತುಗಳಲ್ಲಿ ದಾಖಲಾಗಿವೆ. (ನೋಡಿ : ಕುಶಾಲಗೌಡ, ಚಿನ್ನಪ್ಪಗೌಡ ೧೯೮೩, ೯). ಬಂಗ ಅಜಿಲ ಅರಸು ಮನೆತನಗಳ ಐತಿಹ್ಯದಂತೆ ಇವರ ಪೂರ್ವಜರು ಬೇರೆಡೆಯಿಂದಪಲಾಯನಗೈದು ಘಟ್ಟದ ಕೆಳಗೆ ಬಂದು ಪೂರ್ವ ಕಟ್ಟಿಕೊಂಡು ವಾಸಮಾಡಲು ತೊಡಗಿದ್ದರೆನ್ನಲಾಗಿದೆ.

ಅಳಿಯ ಕಟ್ಟು ಸಂಪ್ರದಾಯ ಪ್ರಕಾರ ಮನೆಗಳ ಒಡೆತನ ಕುಟುಂಬದ ಹೆಣ್ಣು ಮಕ್ಕಳಿಗೆ, ರಾಣಿಯರಿಗೆ ಹೋಗುತ್ತಿತ್ತು. ಹಾಗೆಂದು ಮನೆಯ ಯಜಮಾನ ಅವರ ಗಂಡಂದಿರೇ. ಆದರೆ ಯಜಮಾನನ ಮಕ್ಕಳಿಗೆ ಮುಂದೆ ಆ ಮನೆಯಲ್ಲಿ ಹಕ್ಕಿರುವುದಿಲ್ಲ. ತಂದೆ ಇರುವವರೆಗೆ ಆ ಮನೆಯಲ್ಲಿ ಅವರು ಉಂಡು ತಿಂದು ಇರಬಹುದು. ಈ ಒಂದು ಬಲವಾದ ಖಾರಣದಿಂದಲೇ ಇಲ್ಲಿನ ಗುತ್ತು, ಬೀಡುಗಳ ಅವನತಿಯಾಯಿತೆನ್ನಬೇಕು. ಮುಂದೆ ತನಗಿಲ್ಲ ಎಂಬ ಮೇಲೆ ಅದರ ರಕ್ಷಣೆಯ, ದುರಸ್ತಿಯ ಹೊಣೆಯನ್ನು ಅವರು ಹೊತ್ತುಕೊಳ್ಳುವುದಿಲ್ಲ. ಬದಲಾಗಿ ಮನೆಯಲ್ಲಿ ಇರುವ ವಸ್ತು ಒಡವೆಗಳನ್ನು ಮಾರಿ ತಿಂದರು. ಹಾಗಾಗಿ ಅಳಿಯಕಟ್ಟಿನಲ್ಲಿ ಅಳಿಯುವುದೇ ಹೆಚ್ಚು ಎನ್ನುವ ಮಾತು ಹುಟ್ಟಿಕೊಂಡಿದೆ. ಇದು ವಾಸ್ತವ ಕೂಡ. ಗುತ್ತಿನ ಮನೆ ಜರಿದು ಹೋದರೆ ಅದರ ಜೀರ್ಣೋದ್ಧಾರದ ಕೆಲಸ ಹಿಂದೆ ನಡೆಯುತ್ತಲೇ ಇರಲಿಲ್ಲ ಎನ್ನಬೇಕು.

ಇತ್ತೀಚೆಗಿನ ವರ್ಷಗಳಲ್ಲಿ ಮಕ್ಕಳ ಕಟ್ಟಿಗೆ ಪುಷ್ಟಿ ದೊರೆತಿದೆ. ಹಾಗಾಗಿ ಅಲ್ಲಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿರುವುದನ್ನು ಗಮನಿಸಬಹುದು. ಅಲ್ಲದೆ ಭೂಮಸೂದೆ ಬಂದಿರುವುದರಿಂದಲೂ ಪ್ರತಿ ಮನೆ ಹಗೂ ಅದರ ಆದಿ ಆಲಡೆ ನವ ನಿರ್ಮಾಣವಾಗುತ್ತಿವೆ. ಸ್ಥಾನಮಾನ ಇತ್ಯಾದಿ ಸಾರ್ವಜನಿಕ ಸಂಗತಿ. ದೂರದ ಊರಲ್ಲಿರುವ ಪ್ರತಿಷ್ಟಿತ ಊರಲ್ಲಿ ಐಷಾರಾಮದ ಮನೆ ಮಂದಿರಗಳನ್ನು ನಿರ್ಮಿಸಿ, ಉತ್ಸವಾದಿಗಳನ್ನು ನಡೆಸುವುದು ಕೀರ್ತಿ ಸಂಪಾದನೆಯ ಕೆಲಸವಾಗಿದೆ.

ಕರಾವಳಿಯ ಕಟ್ಟಡ ಮನೆಗಳ ವಾಸ್ತುಶಿಲ್ಪ ರಚನೆ ಇಲ್ಲಿನ ಹವಾಗುಣಕ್ಕೆ ಸರಿಯಾಗಿ ರೂಪಗೊಂಡಿವೆ: ಅಧಿಕ ಮಳೆ ಬೀಳುವ ಪ್ರದೇಶವಾಗಿರುವ ಕಾರಣ ಭದ್ರವಾದ ತಳಹದಿ ಗೋಡೆ ಮಾಡುಗಳ ರಚನೆಯಾಗಬೇಕಾಗುತ್ತದೆ. ಹೆಚ್ಚಾಗಿ ನಾಲ್ಕು ಮಾಡಿನ೨೮ ಇಳಿಸಿ ಕಟ್ಟಿದ ಮಾಡುಗಳಿಂದಲೂ ಗೋಡೆಗಳಿಗೆ ರಕ್ಷಣೆ ಸಿಗುತ್ತದೆ. ಏಕೆಂದರೆ ಇಲ್ಲಿನ ಮಳೆಯ ಹೊಡೆತ ೪೫ ಕೋನದಲ್ಲಿ ಗೋಡೆಗಳಿಗೆ ಹೊಡೆಯುತ್ತಿರುತ್ತದೆ. ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಇತ್ತೀಚೆಗಿನ ಹಲವು ವರ್ಷಗಳಿಂದ ಕಾಂಕ್ರೀಟಿನ ಸಮತಟ್ಟಾದ ಮೇಲ್ಛಾವಣಿ (ಆರ್‌.ಸಿ.ಸಿ) ಗಳನ್ನು ರಚಿಸಿಕೊಳ್ಳಲು ತೊಡಗಿದರೂ ಇದೀಗ ಮತ್ತೆ ಅವುಗಳನ್ನು ಎರಡು ಮಾಡಿನ ಮಾದರಿಯಲ್ಲ ಇಳಿಜಾರಾಗಿ ಕಟ್ಟಿಸಿಕೊಳ್ಳುತ್ತಿದ್ದಾರೆ. ಇದು ಹಳೆಯದು ಮತ್ತೆ ಫ್ಯಾಶನ್ ಆಗಿ ಬಂದಿದೆ ಎಂದು ಭಾವಿಸಿಕೊಳ್ಳಬಾರದು. ಹವಾಗುಣದ ಸರಿಯಾಗಿ ಎರಡು ಮಾಡುಗಳನ್ನು ಹೊಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಹಾಗೆಯೇ ಹಳೆಯ ಮರದ ಕಡ್ಚಿಲ್ ಕೆತ್ತನೆ ವಿನ್ಯಾಸಗಳು ಇದೀಗ ಸಿಮೆಂಟ್ ಕಡ್ಚಿಲ್‌ಗಳಾಗಿ ಬರುತ್ತಿವೆ. ಅದೇ ರೀತಿ ಮರದ ದಾರಂದಗಳ ಬದಲಿಗೆ ಕಾಂಕ್ರೀಟ್‌ ದಾರಂದಗಳ ಬಳಕೆಯಾಗುತ್ತಿದೆ. ಮುರಕಲ್ಲಿನ ಬದಲಿಗೆ ಹೊಲೋಬ್ಲಾಕ್ಸ್ ಉಪಯೋಗವಾಗುತ್ತಿವೆ. ಹೊಲೋಬ್ಲಾಕ್ ಬಳಕೆಯಿಂದ ಖರ್ಚು ಕಡಿಮೆಯಿಲ್ಲವಾದರೂ, ತಂಪು ಹೆಚ್ಚಿಸುವ ಕಾರಣ ಅದು ಜನಪ್ರಿಯವಾಗುತ್ತದೆ. ಈ ನಡುವೆ ಮನೆ ಕಿಟಕಿಗಳಿಗೆ ವಿವಿಧ ವಿನ್ಯಾಸಗಳ ಗ್ರಿಲ್ ಬಳಕೆ ಬಹಳಷ್ಟು ಜನಪ್ರಿಯವಾಗುತ್ತದೆ.

ಮನೆಯ ಹೆಬ್ಬಾಗಿಲ ವಿನ್ಯಾಸಕ್ಕೆ ಬಹಳಷ್ಟು ನಿಗಾ ವಹಿಸುತ್ತಿರುವುದು ಒಂದು ಪದ್ಧತಿ. ಮನೆಯ ಹೆಬ್ಬಾಗಿಲನ್ನು ನೋಡಿ ಆ ಮನೆಗೆ ಬೆಲೆ ಕಟ್ಟುಬಹುದಾಗಿದೆ. ದೇವಸ್ಥಾನಗಳ ಗೋಪುರದ ಹೆಬ್ಬಾಗಿಲನ್ನು ಹೋಲುವ ಮನೆಯ ಹೆಬ್ಬಾಗಿಲುಗಳೂ ವಿಎ. ಆದರೆ ದೇವಸ್ಥಾನಗಳ ಹೆಬ್ಬಾಗಿಲಾಗಲಿ ಮತ್ತೊಂದಾಗಲೀ ಅವುಗಳ ರಚನೆಗೆ ಮೂಲ ಕಲ್ಪನೆ ಮನೆಯೇ ಎನ್ನಬಹುದು. ಕಟ್ಟಡಗಳ ವಾಸ್ತುಶೈಲಿ ಬೇರೆ ಇರಬಹುದು. ನನಗನಿಸುವ ಹಾಗೆ ಈ ಪರಿಸರದ ದೈವ ದೇವಸ್ಥಾನಗಳ ವಾಸ್ತುರಚನೆ ನಡೆಸುವುದು ಅತ್ಯಗತ್ಯ. ಮೂಡಬಿದರೆಯ ಸಾವಿರಕಂಬದ ಬಸದಿಯ ಹೆಬ್ಬಾಗಿಲಲ್ಲಿರುವ ನವನಾರೀ ಕುಂಜರ ಮತ್ತು ಪಂಚತುರಗ ಶಿಲ್ಪಗಳಿಗೆ ಮೂಲ ಕಲ್ಪನೆ ದೊರೆತುದು ಅಲ್ಲಿ ಚೌಟರ ಅರಮನೆಯ ಚಾವಡಿಯಲ್ಲಿರುವ ಬೋದಿಗೆ ಕಂಬಗಳ ಇಂತಹ ಶಿಲ್ಪಗಳ ಎಂದರೆ ಆಶ್ಚರ್ಯವಾದೀತು.

ಹಳ್ಳಿಯ ಜನರ ನ್ಯಾಯ ತೀರ್ಮಾನ, ಅವರ ವಿಚಾರಣೆಗಳು ನಡೆಯುತ್ತಿದ್ದುದು ಭೂಮಾಲೀಕರ ಪಟೇಲ ಶ್ಯಾನುಬಾಗರ ಮನೆಗಳ ಹೆಬ್ಬಾಗಿಲ ಚಾವಡಿಗಳಲ್ಲೇ.

ತುಳಸಿಕಟ್ಟೆ ಇತ್ತೀಚೆಗೆ ಹೆಚ್ಚಿನ ಎಲ್ಲ ಅಂಗಳಗಳಲ್ಲಿ ಜಾಗ ಗಿಟ್ಟಿಸಿಕೊಂಡಿದೆಯಾದರೂ ಮೂಲತಃ ಇದು ಬ್ರಾಹ್ಮಣರ ಕೊಡುಗೆ. ಹಳೆಯ ತರವಾಡುಗಳ ಅಥವಾ ಗುತ್ತು ಮನೆಗಳಲ್ಲಿ ಅಂಗಳಗಳಲ್ಲಿ ತುಳಸಿಕಟ್ಟೆ ಕಾಣಿಸಿಕೊಳ್ಳುತ್ತಿಲ್ಲ.

ಮನೆಯ ಕೆಲಸಗಳಿಗೆ ಜೀತದಾಳುಗಳನ್ನು ನೇಮಿಸಿಕೊಳ್ಳುತ್ತಿದ್ದ ಸಂಸ್ಕೃತಿ ಗೋಚರವಾಗುತ್ತಿದೆ. ಅವರನ್ನು ಮೂಲದಾಳುಗಳು. ಮೂಲದ ಹೊಲೆಯರು ಎಂದೆಲ್ಲ ಕರೆಯುತ್ತಿದ್ದರು. ಇವರೆಲ್ಲ ಮನೆಯಂಗಳ ಮತ್ತು ಅಂಗಳದಿಂದಾಚೆಗಿನ ಹೊಲ ತೋಟಗಳಲ್ಲಿ ದುಡಿಯಬೇಕು. ಆದರೆ ಅವರನ್ನು ಮನೆಯ ಒಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವರೆಲ್ಲ ಕಾಡುಗುಡ್ಡ ಪ್ರದೇಶಗಳಲ್ಲಿ ಹೊಳೆಯ ತಡಿಗಳಲ್ಲಿ ಚಿಕ್ಕ ಚಿಕ್ಕ ಗುಡಿಸಲುಗಳಲ್ಲಿ ವಾಸವಾಗಿರಬೇಖು. ಅವರ ಗುಡಿಸಲುಗಳೂ ಅವರ ದರ್ಶನವೂ ಅಶುಭ ಎಂದೂ ಪರಿಗಣಿಸಲ್ಪಡುತ್ತಿತ್ತು ಎಂಬ ವಿಚಾರವನ್ನೂ ೧೫೧೬ ರಲ್ಲಿ ಬಂದಿದ್ದ ಬರ್ಬೋಸ ತನ್ನ ವರದಿಯಲ್ಲಿ ತಿಳಿಸಿದ್ದಾನೆ. ೧೬೫೬ ರಲ್ಲಿ ಬಂದಿದ್ದ ಕೆಥರಿನ್‌ನ ವರದಿ ಪ್ರಕಾರ ಕೊರಗ (ಬಾಡಕೊಡ) ಜನಾಂಗ ದೇವಸ್ಥಾನದ ಹಿಂಬದಿಯಲ್ಲಿರುವ ಜೊಳೆಯ ತಡಿಗಡ್ಡೆಗಳಲ್ಲಿ ಗುಡಿಕಟ್ಟಿ ಉತ್ಸವ ದಿನಗಳಲ್ಲಿ ತಮ್ಮ ಡೋಲು ಬಡಿದು ಇದೇ ತಾವು ಮಾಡುವ ದೇವಸೇವೆಯಂದು ತಿಳಿಯಬೇಕು ಎಂದಿದೆ (ವಸಂತ ಮಾಧವ ೧೯೮೧, ಪು. ೩೯)

ಹಾಗೆಯೇ ಅರಮನೆಯ ಕೆಲಸಗಳಿಗೆ ಉಗ್ರಾಣ, ಕೊತ್ವಾಳ, ಕೊಠ್ಠರಿಗಳನ್ನೂ ನೇಮಿಸಿಕೊಳ್ಳುತ್ತಿದ್ದರು.

ಅರಸು ಮನೆತನಗಳಿಗೆ ಸೋಮನಾಥ ಕುಲದೇವರು. ದೇವಸ್ಥಾನದಿಂದ ಪೂಜೆ ಆಗಿ ಪ್ರಸಾದ ಬರುವವರೆಗೆ ಮನೆಯ ಯಜಮಾನ / ಅರಸ ಆಹಾರ ಸೇವನೆ ಮಾಡುತ್ತಿರಲಿಲ್ಲ. ಮೂಡಬಿದ್ರೆಯ ಚೌಕಟರಮನೆಗೆ ನಿತ್ಯ ಪುತ್ತಿಗೆಯಿಂದ ಹೀಗೆ ಕುದುರೆ ಸವಾರ ಪ್ರಸಾದ ತಂದೊಪ್ಪಿಸುವುದು ಒಂದು ಪದ್ಧತಿಯಾಗಿತ್ತು. (ವೈಯಕ್ತಿಕ ಮಾಹಿತಿ: ಶ್ರೀಮತಿ ನಿರ್ಮಲ, ಮೂಡಬಿದರೆ ಅರಮನೆ).

ಅಳಿಯಕಟ್ಟು ಪದ್ಧತಿಯಂತೆ ಸತ್ತುಹೋದ ತಮ್ಮ ಪೂರ್ವಜರನ್ನು ಅವರು ಬೇರೆಲ್ಲೂ ಕಳಿಸಿಕೊಡದೆ ತಮ್ಮ ಮನೆ ಮುಂದಿನ ಬಾಕ್ಯಾರು ಗದ್ದೆಗಳಲ್ಲಿಯೇ ಅವರಿಗೆ ಸ್ಮಾರಕಗಳನ್ನು ರಚಿಸಿ ಜಾಗಕೊಡುತ್ತಿದ್ದರು. ಬೀಡು ಗುತ್ತುಗಳ ಬಾಕ್ಯಾರು ಗದ್ದೆಗಳಲ್ಲಿ ಇಂತಹ ಗೋರಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಕೊಳ್ಳುತ್ತವೆ. ಅವರು ತಾವು ನಂಬುವ ದೈವಗಳಿಗೂ ಮನೆಯಲ್ಲೇ ಜಾಗ ಕೊಡುವವರು. ಮನೆಯ ಅಂಗಳದಲ್ಲಿ ದೈವದ ಗುಡಿ, ಚಾವಡಿಯಲ್ಲಿ ದೈವದ ಮಂಚ, ಮನೆಯ ಒಳಗೆ ದೈವದ ಭಂಡಾರ ಇರಿಸಿಕೊಳ್ಳುವವರು.ಮಕ್ಕಳ ಕಟ್ಟಿನ ಸಂಪ್ರದಾಯದಲ್ಲಿ ದೇವರುಗಳನ್ನು (ಮನೆದೇವರು) ಒಳಗಿರಿಸಿಕೊಂಡ ಸಂಸ್ಕೃತಿಯಿದೆ. ಹಾಗಾಗಿ ಬ್ರಾಹ್ಮಣರ ಮನೆಯಲ್ಲಿ ದೇವರ ಕೋಣೆಯೇ ಬಹುಮುಖ್ಯ.

ಕರಾವಳಿಯ ಮನೆಗಳ ಬಗೆಗೆ ಅವುಗಳ ವಾಸ್ತು ರಚನೆಗಳ ಬಗೆಗೆ ಮುಖ್ಯವಾದ ಮಾಹಿತಿಗಳು ದಾಖಲೆಯಾಗಿ ದೊರೆಯುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಕೃಫಿಯತ್ತುಗಳಲ್ಲಿ ದೇವಸ್ಥಾನ, ದೈವಸ್ಥಾನಗಳ ಬಗೆಗೆ ವಿವರಗಳು ಸಿಗುತ್ತದೆ. ಆದರೆ ಮನೆಗಳ ಬಗೆಗೆ ಸಿಗುತ್ತಿಲ್ಲ. ಹಾಗೆಂದು ತುಳುನಾಡಿನ ಜನಪದ ಸಾಹಿತ್ಯದಲ್ಲಿ ಮುಖ್ಯವಾಗಿ ಜನಪದ ಕಥೆಗಳಲ್ಲಿ ಪಾಡ್ಡನಗಳಲ್ಲಿ ಸಾಕಷ್ಟು ವಿವರಗಳು ದೊರೆಯತ್ತವೆ. ಸಿರಿಯ ಪಾಡ್ಡನದಲ್ಲಿ ಸತ್ಯನಾಪುರದ ಅರಮನೆಯ ಬಗೆಗೆ, ನಂದಳಿಕೆ ಚಾವಡಿಯ ಬಗೆಗೆ, ಅರಮನೆಯ ಏಳೆದೆ ಎಮಗಂಡ (ಕತ್ತಲೆ ಕೋಣೆ)ಗಳ ಬಗೆಗೂ, ಕೋಟಿ ಚೆನ್ನಯ ಪಾಡ್ಡನದಲ್ಲಿ ಬೇಕುಗಳ, ಬೀಡುಗಳ ಚಾವಡಿ, ಚಾವಡಿಯ ಬೋದಿಗೆಯ ಕಂಬ, ಚಿಕ್ಕ ಚಾವಡಿ ಸೂತ್ರ ಮಂಟಪ, ಏಳು ಮೆಟ್ಟಿಲು ಏರಿದರೆ ಅಂಗಣಸಿಗುತ್ತದೆ. ಇತ್ಯಾದಿ ವಿವರಗಳು ಬರುತ್ತವೆ.

ಪ್ರತಿಯೊಂದು ಮನೆಗೂ ದೇವರ ಕೋಣೆ, ಅಥವಾ ಸತ್ಯದ ಚಾವಡಿ ಇದ್ದ ಹಾಗೆ ಒಂದೊಂತೆ ಕತ್ತಲೆ ಕೋಣೆಗಳಿರುತ್ತಿತ್ತು. ಇದು ಮನೆಯ ಸದಸ್ಯನೊಬ್ಬ ಮುಖ್ಯವಾಗಿ ಯಜಮಾನ, ಅರಸು ಮಗ ಅರಸುಮಗಳು ಇವರು ತಮಗಾದ ದುಃಖವನ್ನು ಅಸಮಾಧಾನವನ್ನು ಕೂಡಲೇ ಬಹಿರಂಗಪಡಿಸದೆ, ಅಲ್ಲಿ ಹೋಗಿ ಏಕಾಂತವಾಸ ಕೈಕೊಳ್ಳುವ ಮೂಲಕ ಪ್ರಕಟಪಡಿಸಲು ಬಳಕೆಯಾಗುತ್ತಿತ್ತು.

ಕರಾವಳಿಯ ನಾಡಿನಲ್ಲಿ ಒಂದು ಕಾಲದಲ್ಲಿ ಪಾಳೆಯಗಾರರು ಅತ್ಯಂತ ಉನ್ನತಿ ಪಡೆದುದಿದೆ. ಸುಮಾರು ೧೩-೧೪ ನೆಯ ಶತಮಾನದ ಮೇಲೆ. ಅದೇ ಜೈನರ ಉನ್ನತಿಯ ಕಾಲವು ಕೂಡ. ಈ ಕಾಲದಲ್ಲೇ ಅತ್ಯಂತ ಹೆಚ್ಚಿನ ಸಂಖೆಯೆಯಲ್ಲಿ ದೇವಸ್ಥಾನ, ಬಸದಿಗಳೂ ನಿರ್ಮಾಣಗೊಂಡವು. ಇವುಗಳಿಗೂ ಹಿನ್ನೆಲೆಯಾಗಿ ಅರಮನೆಗಳೂ, ಬೀಡಿನ ಮನೆಗಳೂ ನಿರ್ಮಾಣಗೊಂಡಿವೆ. ಇಂದು ಸರ್ಕಾರದ ಐದು ಸೆಂಟ್ಸ, ಮೂರು ಸೆಂಟ್ಸ್ ಓಜನೆಗಳಿಂದಾಗಿ ಗುಡಿಸಲುಗಳು ತುಸುಮಟ್ಟಿಗೆ ಮಾಯವಾಗುತ್ತವೆ. ಅರಮನೆಗಳು ಈಗಾಗಲೇ ಪಾಳು ಬಿದ್ದಿವೆ. ಅಲ್ಲಲ್ಲಿ ಕೆಲವು ಅರಮನೆಗಳು ಸ್ಮಾರಕವಾಗಿ ಉಳಿದುಕೊಂಡಿವೆ. ಜೈನರ ಬೀಡುಗಳು ಗುತ್ತಿನ ಬಂಡರ ಮನೆಗಳಾಗಿ ಪರಿವರ್ತನೆಗೊಂಡವು. ದೇವರ ಬದಲಾಗಿ ಬೀಡಿಗೆ ಚಾವಡಿಗೆ ದೈವಗಳು ಬಂದವು. ವರ್ಷಕ್ಕೊಮ್ಮೆ ಈ ದೈವಗಳಿಗೆ ಉತ್ಸವ ಆರಾಧನೆ ನಡೆಯುವ ಸಂಸ್ಕೃತಿ ಉಳಿದು ಬಂದಿದೆ.

ಕರಾವಳಿಯ ಪರಿಸರದ ಅರಮನೆ, ಬೀಡು, ಗುತ್ತು ಮನೆಗಳು ಪ್ರತಿಬಿಂಬಿಸುವ ಜನಪಸ ಸಂಸ್ಕೃತಿಯ ಮುಖ ಒಂದು. ಅದು ಅಧಿಕಾರ ಸ್ಥಾನದ ದೌಲತ್ತಿನ ಬದುಕಿನ ಮುಖವೂ ಹೌದು. ಅವರ ರಸಿಕತೆ, ಸೌಂದರ್ಯ ಪ್ರಜ್ಞೆ ಕಲಾಪ್ರಿಯತೆಯನ್ನು ವಿವರಿಸುವುದರ ಜೊತೆಗೆ ಅಂತಹ ಅರಮನೆ- ಬೀಡುಗಳನ್ನು ನಿರ್ಮಿಸಿಕೊಳ್ಳುವ ಸಂದರ್ಭ ತಮ್ಮ ಒಕ್ಕಲು ಮನೆಯ ಜನರನ್ನು ಒಟ್ಟಿನಲ್ಲಿ ಜನಸಾಮಾನ್ಯರನ್ನು ಹೇಗೆ ನಡೆಸಿಕೊಂಡಿರಬಹುದು ಎಂಬುದನ್ನೂ ಊಹಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಶ್ರೀಮಂತರು, ಅಧಿಕಾರ ವರ್ಗದವರು ಜನಸಾಮಾನ್ಯರನ್ನು ಶೋಷಣೆ ನಡಸಿರುವುದನ್ನೂ ಈ ಮನೆಗಳು ಬಿಂಬಿಸುತ್ತವೆ. ಇದು ಇನ್ನೊಂದು ಮುಖ. ಹೆಚ್ಚು ಪ್ರಸ್ತುತ ಕೂಡ. ಏಕೆಂದರೆ ಇಂದಾದರೂ ಉಳ್ಳವರು, ದುಡ್ಡಿನವರು ಅನಿಸಿಕೊಂಡವರು ತಮ್ಮ ಷೋಕಿ ಮನೆಗಳಿಗೆ ಅಥವಾ ದೈವ ದೇವರುಗಳ ಅಷ್ಟಬಂಧ ಬ್ರಹ್ಮಕಲಶ, ಜೀರ್ಣೋದ್ಧಾರ, ನೂತನ ಮಂದಿರಗಳಿಗೆ ವೆಚ್ಚಮಾಡುವ ಹಾಗೆ ಸಾರ್ವಜನಿಕ ಕೆಲಸಗಳಿಗಾಗಿ ತಮ್ಮ ಸಂಪತ್ತನ್ನು ವಿನಿಯೋಗಿಸುತ್ತಿಲ್ಲ.

ಕೊನೆ ಟಿಪ್ಪಣಿಗಳು

೧) ಆಯ: ಕಟ್ಟಡದ ನೆಲಗಟ್ಟಿನ ಉದ್ದಲದ ಪ್ರಮಾಣ. ಆಯ ನೋಡಿಯೋ ಮನೆಕಟ್ಟಬೇಕು. ಮನೆಗೆ ಆಯಬೇಕು ಗೋಡೆಗೆ ಪಾಯಬೇಕು. (ತುಳು: ಇಲ್ಲಿಗ್ ಆಯಾಬೋಡು, ಗೋಡೆಗ್‌ಪಾಯ ಬೋಡು) ಅಳತೆ ಪ್ರಕಾರ ಕಟ್ಟಿದ ಮನೆ ಆಯದ ಮನೆ. ಮನೆಯ ಮುಖ್ಯ ಭಾಗವೇ ನಡುಕೋಣೆ. ಇದನ್ನು ಆಯದ ಕೋಣೆ ಎನ್ನುವುದು. ಆಯ ನೋಡಿ ಪಾಯ (ಹೊಂಡ) ಅಗೆಯಬೇಕು. ಆಯದೋಷ ಬರದಂತೆ ನೋಡಿಕೊಳ್ಳಬೇಕು (ನೋಡಿ ಉಪಾಧ್ಯಾಯ ಯು. ಪಿ. ೧೯೮೮, ೨೫೩)

೨. ವಾಸ್ತು ಎನ್ನುವುದಕ್ಕೆ ಕಟ್ಟಡ ಎನ್ನುವ ಅರ್ಥವೂ ಇದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಾಸ್ತು ಎಂದರೆ ಮನೆಗಳು, ಆರಾಮ (ಉದ್ಯಾನಗಳು) ನೇತುಬಂಧ (ಆಣೆಕಟ್ಟು) ಕೊಳಗಳು ಇವೆಲ್ಲಕ್ಕೂ ಅನ್ವಯವಾಗುತ್ತವೆ. (ಹೆಚ್ಚಿನ ವಿವರಣೆಗೆ ನೋಡಿ: ರಾಮಚಂದ್ರರಾವ್ ಎಸ್. ಕೆ. ೧೯೭೫, ೨೯)

೩. ಮನೆಗೆ ಸಂಬಂಧಿಸಿದ ತೆಂಕು ದಿಕ್ಕು ಪ್ರಶಸ್ತವಲ್ಲ. ಮನೆಗೆ ಕಿಟಕಿಬಾಗಿಲಿಗಳನ್ನು ಕೂಡ ತೆಂಕು ದಿಕ್ಕಿನಲ್ಲಿ ಜೋಡಿಸುವುದಿಲ್ಲ. ತೆಂಕು ದಿಕ್ಕು ಸಾವನ್ನು ನೆನಪಿಸುವ ದಿಕ್ಕು, ಯಮನ ದಿಕಕ ಎನ್ನುವ ಪರಿಕಲ್ಪನೆಯೇ ಇದಕ್ಕೆ ಮುಖ್ಯ ಕಾರಣವೆಂದಿದ್ದರೂ ತೆಂಕಣಗಾಳಿಯ, ಮಳೆಯ ಬಿರುಸು ಹೊಡೆತ ತಪ್ಪಿಸಿಕೊಳ್ಳುವ ಕಾರಣಕ್ಕಾಗಿ ತೆಂಕ ಬದಿ ಎತ್ತರವೇ ಇರಬೇಕು ಹಾಗೂ ತೆಂದು ದಿಕ್ಕು ಯೋಗ್ಯವಲ್ಲ ಎನ್ನವು  ನಂಬಿಕೆಗೆ ಹಿನ್ನೆಲೆಯಿರಬೇಕು. ಇದು ಕರಾವಳಿಯ ಭೌಗೋಳಿಕ ಹವಾಮಾನದ ಮುಖ್ಯ ಲಕ್ಷಣ. ತೆಂಕಣ ಗಾಳಿಯಂತೂ ಬಿರುಸು ಹೌದು. ತೆಂಕಣ ಗಾಳಿಯ ಅಬ್ಬರದ ಬಗೆಗೆ ಇಲ್ಲಿನ ಕವಿಗಳೂ ಕಾವ್ಯ ರಚಿಸಿದ್ದುಂಟು. (ನೋಡಿ: ಪಂಜೆ ಮಂಗೇಶರಾವ್ ೧೯೧೪ (೧೯೭೩, ೫೩)

೪. ಐಮೂಲೆ: ಆಯ ಮೂಲೆ

೫. ಪಂಚಾಂಗ: ವಾರ, ತಿಥಿ, ನಕ್ಷತ್ರಕರಣಗಳನ್ನು ಹೇಳುವ ಗಣಿತ. ಇಂತಹ ಪಂಚಾಂಗ ಗಣಿತ ನಿತ್ಯ ಜೀವನದ ವ್ಯವಹಾರದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಆಯಾ ವಿವರಗಳೂ ಅದರಲ್ಲಿವೆ (ನೋಡಿ: ಉಡುಪಿ ಪಂಚಾಂಗ ೧೯೯೨, ೭೨) ಆಯಫಲಗಳಲ್ಲಿ ಬಾಲ್ಯ, ಕೌಮಾರ್ಯ, ಯೌವನ ಮತ್ತು ವೃದ್ಧಾಪ್ಯ ನರ್ಣಯಗಳಿವೆ. ಇದು ಆಯುಷ್ಯದ ಲೆಕ್ಕಾಚಾರವಾಗಿರುವುದರಿಂದ ದೀರ್ಘಬಾಳ್ವಿಕೆಗೆ ವೃದ್ಧಾಪ್ಯದ ಆಯವೇ ಬರಬೇಕಾಗುತ್ತದೆ.

೬. ಕೋಲು: ೩೧ ಅಂಗುಲ (ಇಂಚು) ಇದರಲ್ಲಿ ವ್ಯತ್ಯಾಸಗಳೂ ಇಲ್ಲದಿಲ್ಲ. ಕೆಲವೊಮ್ಮೆ ೨೯, ೩೦ ಅಂಗುಲಗಳ ಕೋಲನ್ನು ಬಳಸುವುದುಂಟು. ಮನೆಯ ಕಟ್ಟಡದ ಗೋಡೆ, ಬಾಗಿಲು ಮೊದಲಾದುವುಗಳ ಲೆಕ್ಕಾಚಾರವೂ ಕೋಲುಗಳಲ್ಲೇ ನಡೆಯತ್ತದೆ. ಮನೆಯ ಯಜಮಾನನ ಕೈ ಮೊಳದ ಅಳತೆಯಲ್ಲೇ ಆಯ ನಿರ್ಣಯಿಸಬೇಕೆನ್ನುವ ರೂಢಿಯೂ ಇದ್ದ ಹಾಗಿದೆ. ಮನೆಗೆ ಈ ಯಜಮಾನನೇ ಮುಖ್ಯ ಎನ್ನುವ ಅರ್ಥದಲ್ಲಿ ಇದು ಮಹತ್ವ ಪಡೆಯುತ್ತದೆ. ಒಂದು ಮೊಳಕ್ಕೆ ಎರಡು ಗೇಣು. ಮೊಳಕೈಯಿಂದ ಹಸ್ತದ ತುದಿಯ ಅಂತರವೇ ಮೊಳ.

೭. ಅಂಗಿಲ: ಅಂಗುಲ ಮತ್ತು ಅಂಗಿಲ ಅಳತೆಗಳಲ್ಲಿ ವ್ಯತ್ಯಾಸವಿದೆ. ತೋರುಬೆರಳು ಮತ್ತು ನಡುಬೆರಳುಗಳ ಅಗಲದಷ್ಟು ಅಳತೆ ಅಂಗಿಲ. ಇದು ಸುಮಾರು ಒಂದೂಕಾಲು ಇಂಚಿನಷ್ಟಿರುತ್ತದೆ. ಹಾಗಾಗಿ ೧ ಕೋಲು ಎಂದರೆ ೨೪ ಅಂಗಿಲಗಳು. ಆದರೆ ೩೧ ಅಂಗುಲಗಳು.

೮. ಸಿದರ : ಅಡ್ಡಮರ.

೯. ಜಂತಿ: ಪಕ್ಕಾಸು ಅಡ್ಡ ಹಾಯುವ  ಮರದ ನೀಳ ತುಂಡು.

೧೦. ಬನ್ನಾಟಿಗೆ: ಕಂಬ ಮತ್ತು ಸಿದರ ಸಂಧಿಸುವ ಜಾಗದಲ್ಲಿ ಜೋಡಿಸಲಾಗುವ ಕೆತ್ತನೆ ಲೆ;ಸವಿರುವ ಮರ. ಇದನ್ನೇ ಬೋದಿಗೆ ಎಂದೂ ಹೇಳುತ್ತಾರೆ.

೧೧. ಬೋದಿಗೆ: ಕಂಬಗಳ ಮೇಲೆ ಜಂತಿಗಳಿಗೆ ಆಧಾರವಾಗಿಸುವ ತುಂಡು ಸ್ತಂಬದ ಶಿಖರ.

೧೨. ಪಡ್ಡಲ: ಪಡುಭಾಗದ ಕೋಣೆ ಪಡ್ಡಲವಾಗಿರಬಹುದು.

೧೩. ತುಪ್ಪೆ: ಬತ್ತ ಸಂಗ್ರಹಿಸಿಡುವ ಕಣಜ. ಇದನ್ನು ಅಂಗಳದಲ್ಲಿ ಬೆತ್ತದ ಚಾಪೆ, ಬೈಹುಲ್ಲು, ಬೈಹುಲ್ಲಿನ ಹಗ್ಗ ಅಥವಾ ಬಾಳೆ ಹಗ್ಗ ಮೊದಲಾದವುಗಳಿಂದ ವೃತ್ತಾಕಾರ ಮಾದರಿಯಲ್ಲಿ ಕಲಾತ್ಮಕವಾಗಿ ಕಟ್ಟುತ್ತಾರೆ.

೧೪. ಗಿಳಿಕಿಂಡಿ: ಗಿಳಿಯ ಚಿತ್ತಾರವಿರುವ ಮರದ ಕಿಟಕಿ. ಗಿಳು ಶುಭಸಂದೇಶ ತಿಳಿಸುವ ಸಂಕೇತ. ಅಂತಃಪುರದ ಸುಂದರಿಯರು ಕಿಟಕಿಗಳ ಮೂಲಕ ಹೊರಗಿನ ಸುದ್ಧಿಯನ್ನು ತಿಳಿದುಕೊಳ್ಳುತ್ತಾರೆ. ಅರಮನೆಯಲದಲಿ ಕಾಣಸಿಗುವ ಜಾಲಂದರ ಕಿಟಕಿಗಳೂ ಇದೇ ಕಾರ್ಯಸ್ವರೂಪದವುಗಳು. ಇವುಗಳ ಮೂಲಕ ನೋಡುತ್ತಿರುವಾಗ ಅವರಿಗೆ ಹೊರಗಿನವರು ಕಾಣುತ್ತಾರೆ. ಆದರೆ ಹೊರಗಿನವರಿಗೆ ಒಳಗಿನವರು ಕಾಣುವುದಿಲ್ಲ.

೧೫. ಒರಗುಹಲಗೆ: ಈಗಿನ ಒರಗು ಬೆಂಚು ಅಥವಾ ಸೋಫಾಗಳಿಗೆ ಇವು ಹಿನ್ನೆಲೆಯಂತಿವೆ.

೧೬. ಬುಗುತಿಪೆಟ್ಟಿಗೆ: ಭಸ್ಮ ತುಂಬಿಸಿಡುವ ಪೆಟ್ಟಿಗೆ. ಇದನ್ನು ತೂಗುಹಾಕುವುದಕ್ಕೆ ಮರದ ಗೊಣಸುಗಳಿಂದಲೇ ಕಲಾತ್ಮಕವಾಗಿ ಸಂಕಲೆ ಹೆಣೆದಿರುವುದನ್ನು ಗಮನಿಸಬೇಕು.

೧೭. ಲಕ್ಷ್ಮೀ ತುಡುರ್: ಲಕ್ಷ್ಮೀ ಸೊಡರು, ಇಂತಹ ದೀಪಗಳನ್ನು ಮನೆಗಳಲ್ಲಿ ತೂಗು ಹಾಕುವುದು ಪದ್ಧತಿ. ಅವುಗಳನ್ನು ಉರಿಸುತ್ತಿರುವ ಸಂದರ್ಭ ಕೆಳಬದಿ (ಅಡಿಭಾಗ)ಯಿಂದ ಎಣ್ಣೆ ಒಸರುವುದು ಅಥವಾ ಸೋರುವುದುಂಟು ಈ ಕ್ರಿಯೆಗೂ ತುಳುವರಲ್ಲಿ ಒಂದು ನಂಬಿಕೆ ಇದೆ. ಆ ಸೊಡರು ಹೆಣ್ಣಾಗಿರುವುದುಂಟು. ಈ ಕ್ರಿಯೆಗೂ ತುಳುವರಲ್ಲಿ ಒಂದು ನಂಬಿಕೆ ಇದೆ. ಆ ಸೊಡರು ಹೆಣ್ಣಾಗಿರುವ ಕಾರಣ ತಿಂಗಳಿಗೊಮ್ಮೆ ಅದು ಮುಟ್ಟಾಗುತ್ತದೆ. ಹೊರರಾಗುತ್ತದೆ (ಪಿದಯಾಪುಂಡು) ಅಥವಾ ಋತುಸ್ರಾವವಾಗುತ್ತದೆ.

೧೮. ರಾಜನ್ ದೈವ: ಅರಸು ಭೂತ ಶ್ರೇಷ್ಠ ವರ್ಣದ ದೈವ. ದೈವಗಳಲ್ಲಿ ಹೀಗೆ ಶ್ರೇಣೀಕೃತ ವ್ಯವಸ್ಥೆಯಿದೆ. ಇದು ಶ್ರೇಣೀಕೃತ ಸಮಾಜವನ್ನೇ ಪ್ರತಿಬಿಂಬಿಸುತ್ತದೆ. ಜುಮಾದಿ, ಉಳ್ಳಾಕುಲು ಇಂತಹ ರಾಜನ್ ದೈವಗಳಿಗೆ ಉದಾಹರಣೆಗಳು.

೧೯. ಬರಕಲ: ಬತ್ತಕುಟ್ಟುವದಕ್ಕೆ ಇರುವ ಸ್ಥಳ. ಇಲ್ಲಿ ಕಲ್ಲಿನ, ಅಥವಾ ಮಣ್ಣಿನ ಹೊಂಡಗಳನ್ನು ವ್ಯವಸ್ಥೆಗೊಳಿಸಿ ಒನಕೆಗಳ ಮೂಲಕ ಬತ್ತ ಕುಟ್ಟುತ್ತಾರೆ.

೨೦. ಕಳೆಂಬಿ: ಮರದ ದೊಡ್ಡ ಪೆಟ್ಟಿಗೆ. ಇದನ್ನು ಕುಳಿತುಕೊಳ್ಳಲು, ಹಾಗೂ ಮಲಗುವುದಕ್ಕಾಗಿ ಉಪಯೋಗಿಸುತ್ತಾರೆ.

೨೧. ಅರಮನೆಗಳಲ್ಲಿ ಸೆರೆಮನೆಯಿರುವುದು ವಿಶೇಷವಲ್ಲ. ತಪ್ಪು ಮಾಡಿದವರಿಗೆ ದಂಡನೆ ವಿಧಿಸುವುದಕ್ಕೆ ಇಂಥಹ ವ್ಯವಸ್ಥೆಗಳು ಅರಮನೆ ಬೀಡುಗಳಲ್ಲಿ ಇದ್ದುವೆನ್ನುತ್ತಾರೆ. ಪಾಡ್ಡನಗಳಲ್ಲಿ ಉಲ್ಲೇಖಗಳಿವೆ. ಅಪರಾಧಿಗಳು ಪಕ್ಕನೆ ಎದ್ದು ತಪ್ಪಿಸಿಕೊಂಡು. ಓಡದ ಹಾಗೆ ಅವರನ್ನು ತಗ್ಗು ಅಡ್ಡಗಳಿರುವ ಮುಂದುಮಾಳಿಗೆಯ ದಿಂಡು ಸಂಕಲೆಗಳಲ್ಲಿ ಬಂಧಿಸಿಡಲಾಗುತ್ತಿತ್ತು. ಕೋಟಿ ಚೆನ್ನಯ್ಯ ಪಾಡ್ಡನದಲ್ಲಿ ಕೇಮರ ಬಲ್ಲಾಳನ ಮಂತ್ರಿ ಚೆಂದುಗಿಡಿ ಕೋಟಿ ಚಿನ್ನಯ ವೀರರನ್ನು ಮೋಸದಿಂದ ಬಂಧಿಸಿ ಹೀಗೆ ಸೆರೆಮನೆಯಲ್ಲಿ, ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಎಂದಿದೆ. ಇದೀಗ ಪಂಜರದಲ್ಲಿ ದೊರೆಯವು ಐತಿಹ್ಯದಂತೆ ಅಲ್ಲಿ ಇತ್ತೆನ್ನಲಾದ ಅರಮನೆಯ ಪಕ್ಕದಲ್ಲಿ ಆ ಸೆರೆಮನೆಯಿದ್ದ ಕುರುಹುಗಳಿವೆ.

೨೨. ತುಳಸಿಕಟ್ಟೆ ಮನೆಯ ಬಾಗಿಲ ಮುಂದೆ ತುಸು ಎಡಕ್ಕೆ ಇರಬೇಕು. ಮನೆಯಿಂದ ಹೊರಟು ಹೋಗುವಾಗ ಅದಕ್ಕೆ ಪ್ರದಕ್ಷಿಣೆ ಬಂದು ಹೋಗುವ ಹಾಗಿರಬೇಕು. ಮನೆಗೆ ಬರುವಾಗ ನೇರಬರಬಹುದು. ಆ ಕಾರಣಕ್ಕಾಗಿ ಅದನ್ನೂ ಅಂತಹ ಸ್ಥಾನದಲ್ಲಿ ಕಟ್ಟುತ್ತಾರೆ. ಏನಿದ್ದರೂ ಮನೆಯಿಂದ ಹೊರಟು ಯಾವ ದಿಕ್ಕಿಗೆ ಹೋಗುತ್ತೇವೆ ಎನ್ನುವುದನ್ನು ಇದು ಅವಲಂಭಿಸಿದೆ.

೨೩. ಪೋರ್ಟಿಕೋ/ ಮುಖ ಮಂಟಪ ಪಾಶ್ಚಾತ್ಯ ಪ್ರಭಾವದಿಂದ ಬಂತು ಎನ್ನುತ್ತಾರೆ. ಆದರೆ ಗುತ್ತಿನ ಹಳೆಯ ಮನೆಗಳಲ್ಲಿರುವ ಬಾಜಿರವನ್ನು ಗಮನಿಸಿದರೆ ಅದೇ ಪೋರ್ಟಿಕೋದ ಕಲ್ಪನೆಗೆ ಮೂಲವೆನಿಸುತ್ತದೆ. ಪೋರ್ಚುಗೀಸರಾಲಿ ಬ್ರಿಟೀಷರಾಗಲೀ ಇದಕ್ಕೆ ಆ ಹೆಸರು ನೀಡಿರುವ ಸಾಧ್ಯತೆಯೂ ಇದೆ. ಏಕೆಂದರೆ ಮುಖಮಂಟಪ ಇಲ್ಲಿನ ಭೌಗೋಳಿಕ ಸನ್ನಿವೇಶಕ್ಕೆ ಆಗುವಂತಹದ್ದು. ಅದರ ಮೂರು ಬದಿಗಳಲ್ಲಿ ಕುಳಿತುಕೊಳ್ಳುವುದಕ್ಕೆ ಎತ್ತರವಾದ ಜಗಲಿಗಳಿರುತ್ತವೆ. ಗೋಡೆಗಳಿರುವುದಿಲ್ಲ. ಸೆಕೆಗಾಲದಲ್ಲಿ ಇದು ಬಹಳಷ್ಟು ಅನುಕೂಲ ಮಳೆಗಾಲದಲ್ಲಿ ಈ ಬದಿಗೆ ಹೆಣೆದ ಮಡಲಿನ, ಬೆತ್ತದ ತಟ್ಟಿಗಳನ್ನು (ಪರದೆ) ಕಟ್ಟಿಕೊಳ್ಳುತ್ತಾರೆ. ಮುಸ್ಲಿಂ ಮನೆಗಳಲ್ಲಿ ಇದನ್ನು ಇನ್ನೊಂದು ರೀತಿಯಲ್ಲಿ ರಚಿಸಿಕೊಳ್ಳುವುದುಂಟು. ಘೋಷಾಪದ್ಧತಿಯನ್ನು ಅನುಸರಿಸುವ ಅವರು ಮನೆಯ ಮುಂಭಾಗ (ಜಗಲಿ)ಕ್ಕೆ ಯಾವಾಗಲೂ ಬಿದಿರಿನ ತಟ್ಟಿಗಳನ್ನು ಜೋಡಿಸಿಕೊಳ್ಳುತ್ತಾರೆ. ಒಳಗಿದ್ದವರಿಗೆ ಹೊರಗಿನವರು ಕಾಣುವ ಹಾಗೂ ಹೊರಗಿತ್ತವರಿಗೆ ಒಳಗಿನವರು ಕಾಣದ ಹಾಗೆ ಇದು ಕೆಲಸ ಮಾಡುತ್ತದೆ.

೨೪. ಸಾರಣೆ: ಮನೆಯ ಒಳಹೊರಗೋಡೆಗಳಿಗೆ ಸುಣ್ಣದಿಂದ ಸಾರಣೆ ಮಾಡುವ ಪದ್ಧತಿ ಸಿಮೆಂಟು ಬರುವ ಮೊದಲೇ ಇತ್ತು. ಸುಣ್ಣ ಮರಳು ಇದಕ್ಕೆ ಬಳಕೆಯಾಗುತ್ತಿತ್ತು. ಆ ಬಳಿಕ ಸಿಮೆಂಟ್ ಸಾರಣೆ ಮಾಡಿ ಅದರ ಮೇಲೆ ಸುಣ್ಣ ಸಾರಣೆ (ವೈಟ್ ವಾಷ್) ಜನಪ್ರಿಯವಾಯಿತು. ಇತ್ತೀಚೆಗೆ ಡಿಸ್ಟೆಂಪರ್, ಆಯಿಲ್ ಪೇಯಿಂಟ್, ಸ್ನೋಸಮ್ ಸಾರಣೆಗಳು ಬಳಕೆಗೆ ಬಂದಿವೆ. ಇವು ನೀರನ್ನು ಹೀರಿಕೊಳ್ಳುವುದಿಲ್ಲ. ಮಳೆಯಿಂದ ಹಾನಿಗೊಳಗಾಗುವುದಿಲ್ಲ. ಗೋಡೆಯಲ್ಲಿ ಕೊಳೆಯಾದರೆ ತೊಳದರೆ ಹೋಗುತ್ತದೆ. ತುಸು ದುಬಾರಿಯಾದರೂ ಈ ಸಾರಣೆ ಅನುಕೂಲ. ಮನೆಯ ಗೋಡೆಗಳಿಗೆ ಬಿಳಿಯಲ್ಲದೆ ಬೇರೆ ಬೇರೆ ಬಣ್ಣಗಳಿಂದಲೂ ಸಾರಣೆ ಮಾಡುವುದಿಲ್ಲ. ಸುಣ್ಣಕ್ಕೆ ನೀಲಿ ಅಥವಾ ಇತರ ಬಣ್ಣಗಳನ್ನೂ ಬೆರೆಸುತ್ತಾರೆ/ ಈಗೀಗ ಬೇಕಾದ ಬಣ್ಣಗಳಲ್ಲೇ ಪೇಯಿಂಟ್ಸ್‌ಸಿಗುತ್ತದೆ. ನೆಲಕ್ಕೆ ಹಳ್ಳಿಗಳಲ್ಲಿ ಸೆಗಣಿ ಸಾರಣೆ ಬಹು ಹಿಂದಿನಿಂದಲೂ ಬಳಕೆಯಲ್ಲಿತ್ತು. ಸೆಗಣಿಯಿಂದ ನೆಲ ತಂಪಾಗುತ್ತದೆ. ಜತೆಗೆ ಅದು ಕ್ರಿಮಿನಾಶಕ ಗುಣವುಳ್ಳದ್ದೂ ಹೌದು. ಅಂಗಳಕ್ಕೂ ಸೆಗಣಿ ಸಾರಿಸುವುದು ವಾಡಿಕೆ. ಹಬ್ಬಗಳ ವ್ರತಗಳ ಸಂದರ್ಭದಲ್ಲಿ ಮನೆಗೆ ಸೆಗಣಿ ಸಾರಿಸಿದ ಬಳಿಕವೇ ಇತರ ಕೆಲಸಗಳು. ನೆಲಕ್ಕೆ ರೆಡಾಕ್ಸೈಡ್‌ಹಾಕುವ ಬಳಕೆ ಬಂದ ಮೇಲೆ ಸೆಗಣಿ ಸಂಪ್ರದಾಯ ನಿಂತುಹೋಗಿದೆ. ಈಗ ಮೊಸಾಯಿಕ್, ಮಾರ್ಬಲ್, ಮೊದಲಾದವು ಜನಪ್ರಿಯಗೊಂಡಿವೆ. ಮನೆಯ ಒಳಗಿನ ಹೊರಗಿನ ಗೋಡೆಯ ಬುಡಗಳೀಗೆ ಟಾರುಬಳಿಯುವುದಿದೆ. ಗೆದ್ದಲು ಹುಳುಗಳಿಂದ, ಜೊತೆಗೆ ಮಳೆನೀರಿನಿಂದ ರಕ್ಷಣೆಯೂ ಇದರಿಂದಾಗುತ್ತದೆ. ಪಕ್ಕಾಸುಗಳಿಗೂ, ವಾಲ್ ಪ್ಲೇಟುಗಳಿಗೂ ಜಂತಿಗಳಿಗೂ ಅವು ಗೋಡೆ, ಮಣ್ಣನ್ನು ಸಂಧಿಸುವಲ್ಲಿ ಟಾರು ಅಥವಾ ಮಡ್ಡಿ ಎಣ್ಣೆ ಬಳಿಯುವುದು ಸಾಮಾನ್ಯ. ಇದೂ ಗೆದ್ದಲು ಹಿಡಿಯುವುದನ್ನು ತಡೆಗಟ್ಟುವುದಕ್ಕಾಗಿಯೇ.

೨೫. ಗೋಡೆಗಳಿಗೆ ಇತ್ತೀಚೆಗೆ ಮುರಕಲ್ಲುಗಳ ಬಳಕೆ ಹೆಚ್ಚಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಅವು ಸಾಕಷ್ಟು ಸಿಗುತ್ತದೆ. ಅಂತಹ ಕಲ್ಲುಗಳನ್ನು ಕಡಿದು, ಕೆತ್ತಿ ಸಿದ್ಧ ಮಾಡುವ ವೃತ್ತಿಯೇ ಬೆಳೆದು ಬಂದಿದೆ. ಮನೆ ಪಂಚಾಗಕ್ಕೆ ಕಪ್ಪು ಕಲ್ಲು (ಕಗ್ಗಲ್ಲು) ಬಳಸುವುದು ಇದೆ. ಮನೆಯ ಹಿತ್ತಲು ದರೆ ಬಾವಿಕಟ್ಟೆಗಳಿಗೂ ಮುರಕಲ್ಲುಗಳೇ ಬಳಕೆಯಾಗುತ್ತಿವೆ. ಮುರಕಲ್ಲು ಕರಾವಳಿಯಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಿದ್ದಿರಬೇಕು. ಅಲ್ಲಲ್ಲಿ ಕಾಣಸಿಗುವ ಹಳೆಯ ಕಟ್ಟಡ, ಸ್ಮಾರಕಗಳಿಗೆ ಇಂತಹ ಕಲ್ಲುಗಳು ಬಳಕೆಯಾಗಿರುವುದು ಕಂಡುಬರುತ್ತಿದೆ.

೨೬. ಆಯದ ಬಾಗಿಲು: ಇದನ್ನು ಜೋಡಿಸುವ ಸಂದರ್ಭದಲ್ಲಿ ಕೆಲವು ವಿಧಿ ಆಚರಣೆಗಳು ನಡೆಯುತ್ತವೆ. ಈ ಬಾಗಿಲನ್ನುರ ಚಿಸಿದ ಆಚಾರಿಯ ಸಮ್ಮುಖದಲ್ಲೇ ಇದರ ಜೋಡಣೆಯಾಗಬೇಕು. ಆಚಾರಿಗಳು ಅಥವಾ ಮೇಸ್ತ್ರಿಗಳ ಕೆಲಸ ಪೂರ್ಣ ಮುಗಿದ ಬಳಿಕವೇ ಅವರು ಮನೆಯನ್ನು ಬಿಟ್ಟು ಕೊಟ್ಟ ಬಳಿಕವೇ ಮನೆ ಒಕ್ಕಲು ಆವರಣೆ ಸಾಧ್ಯ. ಈ ಸಂದರ್ಭದಲ್ಲಿ ಮನೆ ಕಟ್ಟಿದವರಿಗೆ ಸಂಭಾವನೆ ಸಲ್ಲುವುದುಂಟು. ಆಚಾರಿ ಮೇಸ್ತ್ರಿಗಳಿಗೆ ಸರಿಯಾದ ಹಣ ಸಂದಾಯವಾಗದಿದ್ದಲ್ಲಿ. ಅಸಮಾಧಾನಗೊಂಡ ಆಚಾರಿ ಮನೆಯ ಬಾಗಿಲಿಗೋ ಮಾಡಿಗೋ ಅಡ್ಡ ಉಲಿ ಇಟ್ಟು ಹೋದನೆಂದರೆ ಆ ಮನೆಗೆ ಏಳಿಗೆಯಿಲ್ಲವೆನ್ನುವುದು ಒಂದು ಬಲವಾದ ನಂಬಿಕೆ.

೨೭. ಮನೆಯ ಗೋಡೆ, ಅಟ್ಟ, ಮಾಡು, ಕಿಟಕಿ, ಬಾಗಿಲು ಪೀಠೋಪಕರಣ ಮೊದಲಾದೆಡೆಗಳಲ್ಲಿ ಬಳಸುವ ಮರಗಳ ಆಯ್ಕೆ ಬಹುಮುಖ್ಯ. ಕೆಲವು ಮರಗಳು ಯೋಗ್ಯವಲ್ಲ. ಅಂಡಿಪುನಾರ್ ಮರಗಳನ್ನು ಬಳಸುವುದರಿಂದ ಆ ಮನೆಗೆ ಬೆಂಕಿ ಹಿಡಿಯುವುದು ಬೇಗ ಎನ್ನುವ ನಂಬಿಕೆ. ಆ ಮರ ಮೆತ್ತಗೆ ಹಾಗೂ ಬಾಳ್ವಿಕೆ ಕಡಿಮೆ ಎನ್ನುವುದು ವಾಸ್ತವ ಸಂಗತಿ. ಸಾಗುವಾನಿ (ತೇಗ), ಬೀಟೆ, ಹೆಬ್ಬಲಸು, ಹಲಸು ಇತ್ಯಾದಿ ಮರಗಳನ್ನು ಬಳಸುತ್ತಾರೆ. ಈ ಮರಗಳಲ್ಲಿ ಕೆತ್ತನೆ ಕೆಲಸ ಮಾಡುವುದೂ ಸಾಧ್ಯ. ಕೆಲವು ಹಳೆಯ ಮನೆಗಳನ್ನು ನೋಡಿದರೆ ಅಲ್ಲಿ ಬಳಕೆಯಾಗಿರುವ ಮರಗಳು ಎಷ್ಟು ಎನ್ನುವುದು ಆಶ್ಚರ್ಯ ಹುಟ್ಟಿಸುತ್ತದೆ. ಹತ್ತಾರು ಮನೆಗಳಿಗೆ ಸಾಕಾಗುವ ಮರ ಒಂದು ಮನೆಯಲ್ಲಿರುವಂತಿದೆ. ಹಿಂದೆ ಈ ಪ್ರದೇಶಗಳಲ್ಲಿ ಮರಗಳು ಧಾರಾಳ ದೊರೆಯುತ್ತಿದ್ದುದನ್ನು ಇದು ತಿಳಿಸುತ್ತದೆ. ಮನೆಯನ್ನು ಒಂದು ಕಲಾಕೃತಿಯನ್ನಾಗಲಿ ಪ್ರದರ್ಶಿಸುವ ಸೌಂದರ್ಯ ಪ್ರಜ್ಞೆಯನ್ನು ಜನರು ಬೆಳೆಸಿಕೊಂಡದ್ದನ್ನು ಇಲ್ಲಿ ಗಮನಿಸಬಹುದು. ಜತೆಗೆ ಪ್ರಸಾದನ ಕಲೆಯಲ್ಲಿ ಈ ಪ್ರದೇಶದ ಜನರ ಕೌಶಲ, ಚಮತ್ಕಾರವನ್ನೂ ಇದು ಹೇಳುತ್ತದೆ. ಉಡುಪಿಯ ಮಣಿಪಾಲದಲ್ಲಿ ಶ್ರೀ ವಿಜಯನಾಥ ಶೆಣೈ ಅವರು ಇತ್ತೀಚೆಗೆ ಕಟ್ಟಿಸಿದ ಹಸ್ತ ಶಿಲ್ಪ ಮನೆ ಬಹಳಷ್ಟು ಪ್ರಖ್ಯಾತಿಗಳಿಸಿದೆ. ಹಳೆಯ ಉತ್ಕೃಷ್ಟ ಕಲಾಕೃತಿಯ ವಸ್ತುಗಳನ್ನು ಸಾಮಗ್ರಿಗಳನ್ನು ಸಂಗ್ರಹಿಸಿ ಅವರು ಈ ಮನೆಯನ್ನು ಹಳೆಯ ಹಾಗೂ ಹೊಸ ಶೈಲಿಯಲ್ಲಿ ಬಹು ಆಕರ್ಷಕವಾಗಿ ಕಟ್ಟಿಸಿಕೊಂಡಿದ್ದಾರೆ. ಮನೆಯ ಬಗೆಗೆ ಅಧ್ಯಯನ ನಡೆಸುವವರಿಗೆ ಇವರ ಹಸ್ತ ಶಿಲ್ಪದಲ್ಲಿ ವುಫುಲ ಅವಕಾಶವಿದೆ.

೨೮. ಕರಾವಳಿಯ ನಾಲ್ಕು ಮಾಡಿನ ಮನೆಗಳೇ ಹೆಚ್ಚು ಆದರೂ ಆರ್ಥಿಕ ಅನುಕೂಲವಲ್ಲದವರು ಪ್ರಾರಂಭದಲ್ಲಿ ಎರಡು ಮಾಡಿನ ಮನೆಗಳನ್ನು ಕಟ್ಟಿಕೊಳ್ಳುವುದುಂಟು. ಈ ಮನೆಯ ಮಾಡಿನ ಕೆಲಸಕ್ಕೆ ಹೆಚ್ಚು ಖರ್ಚು ಇಲ್ಲ. ಹಂಚುಗಳೂ ಹೆಚ್ಚು ಬೇಕಾಗಿಲ್ಲ. ತುಳುವಿನಲ್ಲಿ ಇಂತಹ ಮನೆಯನ್ನು ಈಯ್ಯಪ್ಪುರೆ ಬುಡಾರ ಎನ್ನುವುದುಂಟು. (ಬುಡಾರ-ಬಿಡಾರ), ಗುಡಿಂಡಲ್ (ಗುಡಿಸಲು) ಎಂದು ಚಿಕ್ಕ ಗಾತ್ರದ ಮನೆಗೆ ಸೆರಿದೆ. ಬೈರರ ವಾಸದ ಮನೆಗಳನ್ನು ಬೈರೆರ ಗುಡಿ (ಬೈರರ ಗುಡಿ) ಎನ್ನುತ್ತಾರೆ. ಹಳ್ಳಿಯಲ್ಲಿ ಒತ್ತೊತ್ತಾಗಿ ಮನೆಗಳಿರುವ ಕಡೆಗೆ ಕೇರಿ ಎನ್ನುವ ಪದ ಬಳಕೆಯಲ್ಲಿದೆ. ಮನ್ಸೆರೆ ಕೇರಿ (ಹೊಲೆಯರ ಕೇರಿ) ಇತ್ಯಾದಿ.

೨೯. ಹೊಲ್ಲೊಬ್ಲಾಕ್ಸ್: ಕರಾವಳಿ ನಾಡಿನಲ್ಲಿ ಬೆಂದ ಇಟ್ಟಿಗೆಗಳ ಬಳಕೆ ತೀರಾ ಕಡಿಮೆ. ಕಾರಣ ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲು ಸಿಗುತ್ತದೆ. ಆದರೆ ಇತ್ತೀಚೆಗೆ ಇಟ್ಟಿಗೆಗಳ ಹೊಸ ಆವಿಷ್ಕಾರ ನಡೆದಿದೆ. ಕೊಳವೆ ಇಟ್ಟಿಗೆಗಳು (ಹೋಲ್ಲೊಬ್ಲಾಕ್ಸ್‌) ಕಡಿಮೆ ಖರ್ಚಿನಲ್ಲಿ ಮನೆ ಕಟ್ಟುವ ಗ್ರಾಮೀಣ ವಸತಿ ಯೋಜನೆಯಲ್ಲಿ ಇವುಇಂದು ಜನಪ್ರಿಯವಾಗುತ್ತಿವೆ. ಇಟ್ಟಿಗೆಗಳಲ್ಲಿ ರಂಧ್ರಗಳು ಇರುವುದರಿಂದಾಗಿ ಮನೆಯೊಳಗೆ ಹವೆ ತಣ್ಣಗಿರುತ್ತದೆ. ಉಳಿದುವುಗಳಿಗಿಂತ Cooling effect ಹೆಚ್ಚಿರುತ್ತದೆ.

೩೦. ಮನೆ ಕಿಟಕಿ, ಗೇಟ್, ಹೊರ ಚಗಲಿ ಮೊದಲಾದುವುಗಳಿಗೆ ವಿವಿಧ ವಿನ್ಯಾಸಗಳ ಕಬ್ಬಿಣದ ಗ್ರಿಲ್ ಬಳಕೆ ಇತ್ತೀಚೆಗೆ ಸಾಮಾನ್ಯವೆಂದಿದ್ದರೂ ಕರಾವಳಿಯ ಹವೆಗೆ ಅದು ಸರಿಹೊಂದುವುದಿಲ್ಲ. ಕಾರಣ ಸಮುದ್ರ ತೀರದಲ್ಲಿ ಅವು ಬೇಗನೆ ತುಕ್ಕು ಹಿಡಿದು ಹಳಾಗುತ್ತಿರುತ್ತವೆ. ಅವುಗಳಿಗೆ ಆಹಾಗ ಬಣ್ಣ ಹಚ್ಚಬೇಕಾಗುತ್ತದೆ. ಹಾಗಾಗಿ ಈಗೀಗ ಗೇಟ್ ಕಿಟಕಿ ಸರಳುಗಳನ್ನು ಹೊರತು ಉಳಿದೆಡೆಗಳಿಗೆ ಕಬ್ಬಿಣದ ಗ್ರಿಲ್ ಬಳಕೆ ಕಡಿಮೆಯಾಗುತ್ತಿದೆ. ಕಾಂಕ್ರೀಟ್ ಕಿಟಕಿಗಳು, ಕಾಂಕ್ರೀಟ್ ಕಡ್ಚಿಲ್‌(ಬೇರೆ ಬೇರೆ ವಿನ್ಯಾಸ, ಕುಸುರಿ ಕೆಲಸದ ಕಂಬಳು) ಅಧಿಕವಾಗಿ ಬಳಕೆಗೊಳ್ಳುತ್ತಿವೆ. ಹಿಮದೆ ಇವು ಹಳೆಯ ತಲೆಮಾರಿನ ಮನೆಗಳಲ್ಲಿ ಮರದಿಂದ ಮಾಡಲ್ಪಟ್ಟವುಗಳಾಗಿದ್ದು ಮನೆಯ ಸೌಂದರ್ಯ ಘನತೆಯನ್ನು ಹೆಚ್ಚಿಸುತ್ತಿದ್ದುವು. ಈಗ ಅವೇ ಮತ್ತೆ ಬೇರೊಂದು ರೀತಿಯಲ್ಲಿ ಉಪಯೋಗವಾಗುತ್ತವೆ.

೩೧. ಹೆಬ್ಬಾಗಿಲು: ಹೆಬ್ಬಾಗಿಲುಗಳ ದಾರಂದಗಳಲ್ಲಿ ವಿವಿಧ ಚಿತ್ರಗಳನ್ನು ಕೆತ್ತಲಾಗಿದೆ. ಮಾವಿನ ಹಣ್ಣಿನ ಚಿತ್ರ, ಬಳ್ಳಿಗಳ ಚಿತ್ರ ಹಾಗೆಯೇ ಎರಗಡೆ ದೇವರ (ಗೋಪಾಲಕೃಷ್ಣ) ಚಿತ್ರ, ಬಲಗಡೆ ಗಣಪತಿಯ ಚಿತ್ರ, ದಾರಂದರ ಮೇಲ್ಭಾಗದ ಮಧ್ಯದಲ್ಲಿ ಜಿನ್ ಮೂರ್ತಿಯ ಚಿತ್ರಗಳಿರುವುದುಂಟು. ಹೆಬ್ಬಾಗಿಲ ಮನಸೆಳೆವ ಕೆತ್ತನೆ ಕೆಲಸಗಳು ವೃತ್ತಾಕಾರದ ಹೂವಿನ ಚಿತ್ರಗಳು ಇತ್ಯಾದಿ ಈಗಿನ ಮನೆಯ ಮುಖ್ಯ ಬಾಗಿಲಲ್ಲಿ ಹೊಸ ರೂಪ ತಳೆದು ಕಾಣಿಸಿಕೊಳ್ಳುತ್ತಿವೆ. ಈಗ ಕಟ್ಟಿಕೊಳ್ಳುತ್ತಿರುವ ಹೊಸ ನಮೂನೆಯ ಆರ್. ಸಿ.ಸಿ. ಮನೆಯ ಮುಖ್ಯ ಬಾಗಿಲಿಗೆ ಕನಿಷ್ಠ ಒಂದು ಸಾವಿರದಿಂದ ತೊಡಗಿ ಹೆಚ್ಚು ಕಡಿಮೆ ೨೦ ಸಾವಿರದವರೆಗೆ ಖರ್ಚು ಮಾಡುತ್ತಾರೆ. ಈ ಬಾಗಿಲಲ್ಲಿ ಎರಡು ಅಂತರಗಳಲ್ಲಿ ಐದೈದರ ಹಾಗೆ ಹತ್ತು ವೃತ್ತಾಕಾರದ ಚಿತ್ರಗಳಿರುತ್ತವೆ. ಇವುಗಳನ್ನು ಕೆತ್ತಿರೂಪಿಸಲು ಬಹು ಸಮಯ ಹಿಡಿಯುತ್ತದೆ. ಆದರೆ ಈಗ ಇದೇ ಕೆಲಸವನ್ನು ಯಂತ್ರ ಮಾಡುತ್ತದೆ. ಮನೆಗಳಲ್ಲಿ ಜಗಲಿಗಿಂತ ಹೆಚ್ಚು ಪ್ರಾಮುಖ್ಯವಿದ್ದುದು ಹೆಬ್ಬಾಗಿಲಿಗೆ. ಅನೇಕಾನೇಕ ವ್ಯವಹಾರಗಳು ಹೆಬ್ಬಾಗಿಲಲ್ಲಿ ಪೂರೈಸಲ್ಪಡುತ್ತಿದ್ದುದು. ಊಳಿಗಮಾನ್ಯ ಪದ್ಧತಿಯ ಆರ್ಥಿಕತೆಯಲ್ಲಿ ಅಧಿಕಾರ ಹಾಗೂ ಪ್ರತಿಷ್ಠೆಯನ್ನು ಮೆರೆಯವು ಮುಖ್ಯ ತಾಣಗಳಾಗಿ ಈ ಹೆಬ್ಬಾಗಿಲುಗಳು ಕಾರ್ಯನಿರ್ವಹಿಸುತ್ತಿದ್ದುವು ಹೆಬ್ಬಾಗಿಲಿನ ಬಗೆಗೆ ಹೆಚ್ಚಿನ ವಿವರಗಳಿಗೆ ನೋಡಿ ಚಂದ್ರಶೇರ ದಾಮ್ಲೆ (೧೯೯೦)

೩೨. ಬಾಕ್ಯಾರು ಗದ್ದೆ: ಬಾಕಿ ಮಾರುಗದ್ದೆ, ವಿಶಾಲವಾದ ಗದ್ದೆ, ಅರಮನೆ ಬೀಡುಗಳ ಮುಂದುಗಡೆಯಿರುತ್ತಿದ್ದವು. ಇಲ್ಲಿ ನಡೆಯುವ ಕಂಬಳ, ಚೆಂಡಾಟ, ಜಟ್ಟಿಕಾಳಗ ಮೊದಲಾದ ವಿನೋದ ಪ್ರದರ್ಶನಗಳನ್ನು ಮನೆಯಲ್ಲೇ ಕುಳಿತು ನೋಡಬಹುದಾಗಿತ್ತು. ಅರಮನೆಯ ಹೆಣ್ಣುಗಳು ಹೆಚ್ಚಾಗಿ ಮಾಳಿಕೆಯಲ್ಲಿರುತ್ತಿದ್ದು ಅಲ್ಲಿಂದಲೇ ಗಿಳಿಕಿಂಡಿ, ಜಾಲಂದರ ಕಿಟಕಿಗಳ ಮೂಲಕ ಈ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದು ಪ್ರದರ್ಶನಗಳಲ್ಲಿ ಪಾಲುಗೊಳ್ಳುತ್ತಿದ್ದ ವೀರರ, ಯೋಧರ  ಸಾಜಸ, ಮೈಕಟ್ಟುಗಳಿಗೆ ಮರುಳಾಗಿ ಅವರನ್ನು ಮದುವೆಯಾಗಲು ಬಯಸುತ್ತಿದ್ದುದುಂಟು. ಜನಪದ ಕತೆ, ಪಾಡ್ದನಗಳಲ್ಲಿ ಇಂತಹ ಸನ್ನಿವೇಶಗಳು ಚಿತ್ರಣಗೊಂಡಿವೆ. (ನೋಡಿ: ನಂದಾವರ ೧೯೮೭)

೩೩. ಗೋರಿ: ಮನೆಯ ಮುಂದಿನ ಬಾಕಿ ಮಾರು ಗದ್ದೆಗಳಲ್ಲಿ ಹಿರಿಯರ ಸ್ಮಾರಕಗಳು ಕಂಡುಬರುವುದು ಸಾಮಾನ್ಯ. ತಮ್ಮ ತಂದೆ ಹಾಗೂ ತಾಯಿಯ ಗೋರಿಗಳನ್ನು ಅಕ್ಕಪಕ್ಕದಲ್ಲೇ ರಚಿಸಿಕೊಳ್ಳುವುದು ರೂಢಿ ಹಿರಿಯರ ಆರಾಧನೆಯ ಸಂಸ್ಕೃತಿಗೆ ಇದು ಒತ್ತು ಕೊಡುತ್ತಿದೆ. ಈ ಗೋರಿಗಳಿಗೆ (ಪ್ರಧಾನ ಸ್ಮಾರಕಕ್ಕೆ) ಕತ್ತಲಾದಾಗ ನಿತ್ಯ ದೀಪವಿಟ್ಟುಬರುವ ಸಂಪ್ರದಾಯವಿದೆ. ಸತ್ತ ಬಳಿಕವೂ ಆ ವ್ಯಕ್ತಿ ಬೇರೆಯಾಗದೆ ತಮ್ಮ ಕುಟುಂಬದ ಜನರ ಸದಸ್ಯನೇ ಎಂಬ ಹಾಗೆ ಅವರು ಕಲ್ಪಿಸಿಕೊಂಡಿರುತ್ತಾರೆ. ವರ್ಷಕ್ಕೊಮ್ಮೆ ಈ ಸತ್ತವರಿಗೆ ಮನೆಯ ಒಳಗೆ ಎಡೆಹಾಕಿ ಬಡಿಸುವ (ಅಗೆಲ್ ಬಡಿಸುವುದು) ಪದ್ಧತಿಯೂ ಇದೆ. ಆ ವರ್ಷದಲ್ಲಿ ವರ್ಷದಲ್ಲಿ ಸತ್ತು ಹೋಗಿರುವ ವ್ಯಕ್ತಿಯನ್ನು ಅಂದು ಒಳಗೆ ಕರೆದು (ಉಳಯಿ ಲೆಪ್ಪುನೆ) ಉಳಿದವರ ಜೊತೆ ಸೇರಿಸುವ (ಹದಿನಾರಕ್ಕೆ ಸೇರಿಸುವ) ಸಂಪ್ರದಾಯವಿದೆ.