ಮನುಷ್ಯ ತಾನಿರುವುದಕ್ಕೆ ಮಾಡಿಕೊಂಡ ಒಂದು ವ್ಯವಸ್ಥೆಯೇ ಅಥವಾ ಆಸರೆಯೇ ಮನೆ. ತನ್ನ ಮೂಲಭೂತ ಅಗತ್ಯಗಳಲ್ಲಿ ಮುಖ್ಯವೆನಿಸಿದ ಹಸಿವು, ನಿದ್ದೆ ಮತ್ತು ಕಾಮಗಳನ್ನು ತೀರಿಸಿಕೊಳ್ಳುವುದಕ್ಕೆ ಆತನಿಗೆ ಮನೆ ಸುರಕ್ಷಿತ ಜಾಗವೆನಿಸಿತು. ಹೊಟ್ಟೆ ತುಂಬಿದ ಬಳಿಕ ನಿದ್ದೆ ಅಥವಾ ಕಾಮ ಅವನಿಗೆ ಮುಖ್ಯವಾಗುತ್ತದೆ. ಮನುಷ್ಯನಿಗೆ ಎಂದಲ್ಲ, ಇವು ಪ್ರಾಣಿ ಸಹಜವಾದ ಪ್ರವೃತ್ತಿಗಳು. ಗೂಡುಗಳಲ್ಲಿ ಹಕ್ಕಿಗಳು, ಗುಹೆ ಗವಿಗಳಲ್ಲಿ ಪ್ರಾಣಿಗಳೂ ಇವನ್ನೇ ಮಾಡುವುದು. ಸೃಷ್ಟಿ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಮತ್ತು ಸಂತಾನ ಬೆಳೆಸುವ ಮೂಲ ಘಟಕಗಳಾದ ಗಂಡು ಹೆಣ್ಣನ್ನು ಮದುವೆಯ ಮೂಲಕ ಒಂದೆಡೆ ಹಾಕುವ ಜಾಗವೂ ಮನೆಯೇ. ಈ ಗಂಡು ಹೆಣ್ಣಿಗೆ ಉಂಡು ಮಲಗಲು ತಮ್ಮ ಮನೆಯಲ್ಲಿ ಉಣ್ಣುವ ಕೋಣೆ ಮತ್ತು ಮಲಗುವ ಕೋಣೆ ಇವು ಮುಖ್ಯವಾಗುತ್ತವೆ. ಹಾಗಾಗಿ ಗುಡಿಸಲು ಮನೆಗಳನ್ನು ನಿರ್ಮಿಸಿಕೊಳ್ಳವಾಗ ಈ ಎರಡು ಅಂಶಗಳಿಗೆ ಮಹತ್ವ ನೀಡುತ್ತಿರುವುದು ಕಂಡು ಬರುತ್ತದೆ. ಪ್ರಾರಂಭದಲ್ಲಿ ಇವೆರಡೂ ಒಂದೇ ಇದ್ದಿರಲೂ ಬಹುದು. ಅವೆರಡರ ಕಾರ್ಯ- ಸ್ವರೂಪಕ್ಕೆ ಸಂಬಂಧಿಸಿ ಹೇಳುವುದಾದರೆ ಒಂದು ಅಡುಗೆ ಕೋಣೆ ಇನ್ನೊಂದು ತೊಟ್ಟಿಲು ಕಟ್ಟುವ ಕೋಣೆ. ಈ ಎರಡು ಕೋಣೆಗಳ ಸುತ್ತವೇ ಅವರ ಒಟ್ಟು ಚಟುವಟಿಕೆಗಳು. ಅವರ ಮನೆ ಹಿತ್ತಲಿಗೆ (ತುಳು: ಇಲ್ಲ್‌ಬಿತ್ತ್‌ಲ್) ಅರ್ಥ ಸಿಗುವದೂ ಇದರಿಂದಲೇ.

ಅಡುಗೆ ಮತ್ತು ತೊಟ್ಟಿಲ ಕೋಣೆಗಳೇ ಮುಖ್ಯವಾಗಿರುವ ಮನೆಗೊಂದು ಸೂಕ್ತವಾದ, ಸುರಕ್ಷಿತವಾದ ಮತ್ತು ನೆಮ್ಮದಿಯ ಜಾಗಬೇಕಾಗುತ್ತದೆ. ಇಂತಜ ಜಾಗದಲ್ಲಿ ನಿರ್ಮಿಸಿಕೊಳ್ಳುವ ಮನೆಯೊಂದರ ಅಡಿಪಾಯ ಅಥವಾ ಪಂಚಾಂಗವನ್ನೇ ಒಂದು ನಿರ್ದಿಷ್ಟ ಆಯ

[1] ಎನ್ನುವುದು. ಮನೆಗೆ ಸಂಬಂಧಿಸಿ ಇಂತಹ ಅನೇಕ ವಿಧದ ಆಯಗಳಿವೆ. ಪ್ರತಿಯೊಂದು ಆಯವೂ ಬೆಳೆದು ಸಂಕೀರ್ಣಗೊಂಡರೂ ಅಡುಗೆ ಕೋಣೆ ಮತ್ತು ತೊಟ್ಟಿಲ ಕೋಣೆ ಆ ಆಯದ ಒಳಗೆಯೇ ಬರಬೇಕು. ಈ ಎರಡೂ ಕೋಣೆಗಳ ಮನೆಯೊಂದಕ್ಕೆ ಮುಂದೆ ಚಾವಡಿ (ಕೈಯಾಲೆ, ಅಂಬಲ), ಜಗಲಿ, ಅಂಗಳ, ದೇವರ ಕೋಣೆ, ಕತ್ತಲೆ ಕೋಣೆ, ಉಗ್ರಾಣ, ಮಾಳಿಗೆ ಮೊದಲಾದ ಘಟಕಗಳು ಸೇರಿ ಕೊಂಡವು. ಅದು ಕೊರಗರ ಕೊಟ್ಟ ಹೊಲೆಯರ ಕೊಪ್ಪ/ ಕೇಲ್ ಶೂದ್ರರ ಇಲ್ಲ್‌ (ಮನೆ), ಜೈನರ ಬೂಡು (ಬೀಡು), ಬಂಟರ ಗುತ್ತು, ಬ್ರಾಹ್ಮಣರ ಮನೆ, ಅರಸರ ಅರಮನೆಯೆನಿಸಿಕೊಂಡಿತು.

ವಾಸ್ತುರಚನೆ ಸ್ಥಳದ ಆಯ್ಕೆ: ಸಾಮಾನ್ಯವಾಗಿ ಮನೆಗಳ ನಿರ್ಮಾಣಕ್ಕೆ ಗುಡ್ಡ ಮತ್ತು ಬಯಲು ಪ್ರದೇಶಗಳು ಸಂಧಿಸುವ ಸ್ಥಳಗಳನ್ನು ಆಯ್ಕೆಗೊಳಿಸುತ್ತಾರೆ. ಭೌಗೋಳಿಕವಾಗಿ ಕರಾವಳಿಯ ಪ್ರದೇಶ ಗುಡ್ಡ, ಬೆಟ್ಟ, ಬಯಲು, ಕಾಡು, ಹೊಳೆಗಳಿಂದ ಕೂಡಿರುತ್ತದೆ. ಇಲ್ಲಿನ ಜನರು ಮೂಲತಃ ಕೃಷಿಕರು. ಹಾಗಾಗಿ ಗುಡ್ಡ ಬಯಲುಗಳೆರಡೂ ಅವರಿಗೆ ಅಗತ್ಯವಾದುವುಗಳು. ಈ ಕಾರಣಕ್ಕಾಗಿಯೇ ಅವೆರಡರ ನಡುವೆ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಕಾಡುಗುಡ್ಡಗಳಿಂದ ಸೊಪ್ಪು ಸೌದೆಗಳನ್ನು ತರುವುದಕ್ಕೂ ಬಯಲು ಹೊಲಗಳಿಂದ ಪೈರು ಫಲಗಳನ್ನು ಸಾಗಿಸುವುದಕ್ಕೂ ಅವರಿಗೆ ಅನುಕೂಲವಾಗಬೇಕು. ಗೋವು ಮುಂದೆಗಳು ಮೇವಿಗೆ ಹೋಗಿ ಹಟ್ಟಿ ಕೊಟ್ಟಿಗೆ ಸೇರುವುದಕ್ಕೂ ಅನುಕೂಲವಿರಬೇಕು. ಕರಾವಳಿಯ ವಾಸದ ಮನೆಗಳನ್ನು ಗಮನಿಸಿದರೆ ಇದೊಂದು ಸಾಮಾನ್ಯವಾದ ಲಕ್ಷಣ. ಈ ಮನೆಗಳು ಹೆಚ್ಚಾಗಿ ಬಯಲಿಗೆ ಮುಖಮಾಡಿಕೊಂಡಿರುತ್ತವೆ. ಮನೆಯೊಂದರ ತೆಂಕು ದಿಕ್ಕಿನ ಪ್ರದೇಶ ಇತರೆ ದಿಕ್ಕುಗಳಿಗಿಂತ ಎತ್ತರದಲ್ಲಿರಬೇಕೆಂಬುದು ನಿಯಮ.

ಮನೆ ಕಟ್ಟಲು ತೊಡಗುವ ಮೊದಲು ಸ್ಥಳದಲ್ಲಿ ಮುಖ್ಯವಾಗಿ ಆಗಬೇಕಾದ ಕೆಲಸವೆಂದರೆ ಒಂದು ಬಾವಿ ತೋಡುವುದು. ಅಲ್ಲಿ ನೀರಿನ ಆಶ್ರಯ ಇದೆಯೇ ಎನ್ನುವುದನ್ನು ತಿಳಿದುಕೊಂಡ ಬಳಿಕವೇ ಮನೆಯ ಯೋಚನೆ. ಮನೆಯ ಆಯದ ಎಡಕ್ಕೆ ಐಮೂಲೆಗೆ ಸರಿಯಾಗಿ ಬಾವಿಯಿರಬೇಕು.

ವಾಸ್ತು ಪೂಜೆ: ಸ್ಥಳದ ಶಕ್ತಿದೇವತೆಗಳಿಗೆ, ದೈವಗಳಿಗೆ, ಬಲಿಕೊಡುವ ಪದ್ಧತಿಯಿದೆ. ಮನೆಯ ಆಯ ಮನೆಯ ಯಜಮಾನನ ಗಣಕ್ಕೆ ಕೂಡಿರಬೇಕೆಂದಿದೆ. ದೇವಗಣವೋ ಅಸುರ ಗಣವೋ ಎನ್ನುವುದನ್ನು ತಾಳೆ ನೋಡಬೇಕು. ಮನೆಯನ್ನು ಕಾಪಾಡುವ ದೇವತೆಯೇ ವಾಸ್ತು. ಮನೆಯನ್ನು ಕಟ್ಟುವ ಸ್ಥಳದ ಒಡೆಯ ಹಾಗಾಗಿ ವಾಸ್ತುದೇವತೆಗೆ ಪೂಜೆಯಾಗಬೇಕು.

ಕುಟ್ಟಿಕಲ್ಲು ಹಾಕುವುದು: ಆಯಕ್ಕೆ ಸರಿಯಾದ ಪಂಚಾಂಗ ಹಾಕಿದ ಬಳಿಕ ಐಮೂಲೆ ಹಿಡಿದು ಅಗ್ನಿಯಿಡುವ ಅಡುಗೆ ಮನೆಗೆ ಹಲಸಿನ ಮರದ ಕುಟ್ಟಿಹಾಕಿ ಅದಕ್ಕೆ ಹಾಲು ಎರೆಯಬೇಕು. ಈ ವಿಧಿಗೆ ಕುಟ್ಟಿಕಲ್ಲು ಹಾಕುವುದೆನ್ನುತ್ತಾರೆ. ಆಚಾರಿ, ಮೇಸ್ತ್ರಿ, ಪೂಜಾರಿ/ ಪಂಡಿತ (ಬಿಲ್ಲವ ಜನಾಂಗ), ಬಲ್ಯಾಯ ಇವರಲ್ಲಿ ಯಾರಾದರೊಬ್ಬರು ಈ ವಿಧಿಯನ್ನು ನೆರವೇರಿಸುತ್ತಾರೆ. ಮುಸ್ಲಿಂ ಜನಾಂಗದ ನುರಿತ ವ್ಯಕ್ತಿಯೂ ಈ ಕೆಲಸವನ್ನು ಮಾಡಿಕೊಡುವುದುಂಟು.

ಮನೆಯ ಮುಖ್ಯಾಯಗಳು:

ಧ್ವಜ, ಸಿಂಹ, ವೃಷಭ ಮತ್ತು ಗಜ ಆಯಗಳು. ಗೃಹ ದೇವಾಲಯಗಳನ್ನು ನಿರ್ಮಿಸುವುದಕ್ಕೆ ನಿರ್ದಿಷ್ಟವಾದ ಇಂತಹ ಆಯಗಳು ವಿವರಗಳನ್ನು ಪಂಚಾಂಗ ಕೈಪಿಡಿಗಳಲ್ಲಿ ನೀಡಲಾಗಿದೆ. ಕೋಲು ಅಳತೆಯ ಪ್ರಕಾರ ಕೆಲವು ಆಯಗಳು ಹೀಗಿವೆ.

೧) 7 ಕೋಲು 20 ಅಂಗಿಲ X 4 ಕೋಲು

೨) 10 ಕೋಲು 20 ಅಂಗಿಲ X 4 ಕೋಲು

೩) 13 ಕೋಲು 20 ಅಂಗಿಲ X 5 ಕೋಲು

ಈ ಆಯಗಳಲ್ಲಿ ಅಡುಗೆ ಕೋಣೆ, ತೊಟ್ಟಿಲು ಕೋಣೆ ಮತ್ತು ಚಾವಡಿ ಅಥವಾ ಕೈಸಾಲೆಗಳಷ್ಟೇ ಬರುವುದು. ಇತರ ಸ್ಥಳಗಳು ಬೇಕಾಗಿದ್ದಲ್ಲಿ ಇಳಿಸಿಕಟ್ಟಿ ಪಡೆಯಬಹುದು. ಆ ಸ್ಥಳಗಳು ಆಯದಿಂದ ಹೊರಗಿರುತ್ತದೆ. ಒಂದು ಆಯವನ್ನು ನಾಲ್ಕು ಬದಿಗಳಿಂದಲೂ ಹೆಚ್ಚಿಸಲು ಸಾಧ್ಯವಿದೆ. ಅಂದರೆ ಮಾಡು ಮಾಡುವಾಗ ಆಯವನ್ನು ಹೆಚ್ಚಿಸಬಹುದು. ಆಗ ಆ ಬದಿಗಳನ್ನು ಇಳಿಸಿ ಕಟ್ಟಬೇಕಾಗುತ್ತದೆ. ಹಾಗೆ ಇಳಿಸಿ ಕಟ್ಟಿದ ಭಾಗಗಳನ್ನು ಪಡುಬದಿ ಎನ್ನುತ್ತಾರೆ.

ಬಹುತೇಕ ಹಳ್ಳಿಯ ಮನೆಗಳನ್ನು ಕೂಟು ಹಾಕಿ ಕಟ್ಟುವುದು ರೂಢಿ. ಕೂಟು ಹಾಕುವುದೆಂದರೆ ಚಾವಡಿಗೆ ಎರಡು ಕಂಬಗಳನ್ನು ಹಾಕಿ ಅವುಗಳ ಮೇಲೆ ಸಿದರ ನಿಲ್ಲಿಸಿ ಮೇಲೆ ಜಂತಿಗಳನ್ನು ಹಾಕಿ ಅಟ್ಟ ಮಾಡಲಾಗುವುದು. ಕೂಟು ಹಾಕುವುದರಿಂದ ಗೋಡೆ ಎತ್ತರ ಬರುತ್ತದೆ.  ಏಕೆಂದರೆ ಚಾವಡಿಯ ಬಳಿಕ ಜಗಲಿಯಿದ್ದು ಅವುಗಳ ನಡುವೆ ಗೋಡೆ ಬರುವುದಿಲ್ಲ. ಜಗಲಿಯ ಗೋಡೆಗೆ ಮಾತ್ರ ಕಿಟಕಿಗಳನ್ನು ಜೋಡಿಸಿ ಕೊಳ್ಳಬಹುದು. ಕೂಟು ಕಂಬಗಳ ಬುಡದಲ್ಲಿ ಪೀಠವಿದ್ದು ಮೇಲೆ ಬನ್ನಾಟಿಗೆ ಯಿರುತ್ತದೆ. ಹೀಗೆ ಬನ್ನಾಟಿಗೆಯ ಅಥವಾ ಶಿಲ್ಪ/ ಕೆತ್ತನೆ ಕೆಲಸ ಮಾಡಿದ ಕಂಬವನ್ನು ಬೋದಿಗೆಯ೧೧ ಕಂಬ ಎನ್ನುತ್ತಾರೆ. ಬೋದಿಗೆಯ ಕಂಬವಿರುವ ಇಂತಹ ಕೂಟುಹಾಕಿದ ಮನೆಗಳು ಕರಾವಳಿಯಲ್ಲಿ ಬಹು ಜನಪ್ರಿಯವಾಗಿವೆ.

7 ಕೋಲು 20 ಅಂಗಿಲ X 4 ಕೋಲು ಆಯದ ಮನೆ ಬಹು ಜನಪ್ರಿಯವಾಗಿತ್ತು, ಕಾರಣ ಅದನ್ನು ಬೇಕಾದ ಹಾಗೆ ಇಳಿಸಿ ಕಟ್ಟಲು ಬರುತ್ತದೆ.

 ಈಗೀಗ 10 ಕೋಲು 20 ಅಂಗಿಲ X 4 ಕೋಲು ಆಯದ ಮನೆಗಳು ಹೆಚ್ಚು ಪ್ರಚಲಿತವಾಗಿತ್ತಿವೆ.

ಆಯಗಳಲ್ಲಿ ಮೂರು ಕೋಲಿನ ಆಯವೇ ಅತ್ಯಂತ ಚಿಕ್ಕದು. ಇದರಲ್ಲೂ ಉಳಿದ ಭಾಗಗಳನ್ನು ಸೇರಿಸಿಕೊಳ್ಳಬಹುದು. ಈ ಆಯದಲ್ಲಿ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ದೇವರ ಕೋಣೆಯೇ ಮುಖ್ಯವಾಗಿ ಬರುವುದಿಲ್ಲ. ಇಲ್ಲಿ ದೇವರ ಕೋಣೆ ಎಂದರೆ ನಡುಕೋಣೆ ಅಥವಾ ಚಾವಡಿಯೂ ಆಗಬಹುದು. ೧೦ ಕೋಲು ಆಯದಲ್ಲಿ ದೇವರ ಕೋಣೆ ಮತ್ತು ಅಡುಗೆ ಕೋಣೆ ಬರುತ್ತದೆ.

ಜೈನರ ಮನೆಯಲ್ಲಿ ಮುಖ್ಯವಾಗಿ ಚಾವಡಿ, ಕೈಸಾಲೆ ಮತ್ತು ಅಡುಗೆ ಕೋಣೆಗಳು ಸಾಮಾನ್ಯವಾಗಿವೆಯಾದರೂ ಅಡುಗೆಕೋಣೆ ಮತ್ತು ಕೈಸಾಲೆಗಳ ನಡುವೆ ಮಾಂಡಿಲ್ ಕೋಣೆಯೆಂದು ಪ್ರತ್ಯೇಕವಿರುವುದಿದೆ. ಇಲ್ಲವಾದಲ್ಲಿ ಕೈಸಾಲೆ ಮತ್ತು ಮಾಂದಿಲ್ ಕೋಣೆಯೆಂದು ಪ್ರತ್ಯೇಕವಿರುವುದಿದೆ. ಇಲ್ಲವಾದಲ್ಲಿ ಕೈಸಾಲೆ ಮತ್ತು ಮಾಂದಿಲ್ ಒಂದೇ ಕೋಣೆಯಲ್ಲಿರುತ್ತವೆ. ಮೂಲಭೂತವಾಗಿ ಆ ಮೂರು ಕೋಣೆಗಳೇ ಮುಖ್ಯ. ಚಾವಡಿಗೆ ಜಗಲಿ ಸೇರುವುದುಂಟು.

ಮಾಂದಿಲ್ ಕೋಣೆಯಲ್ಲಿ ಹೆಚ್ಚಾಗಿ ಹೆಂಗಸರು ಇರುತ್ತಾರೆ. ಕೈಸಾಲೆಯಲ್ಲಿ ಅತಿಥಿಗಳು ಬಂದಾಗ ಉಳಕೊಳ್ಳುವ ವ್ಯವಸ್ಥೆ ಇರುತ್ತದೆ. ಚಾವಡಿಯಲ್ಲಿ ದೇವರ ಕೋಣೆಯಿರುತ್ತದೆ. ಅಲ್ಲಿ ಹೆಚ್ಚಾಗಿ ಗಂಡಸರು ಕುಳಿತುಕೊಳ್ಳುತ್ತಿರುತ್ತಾರೆ. ಶುಭಕಾರ್ಯಗಳು ಅಲ್ಲಿ ನಡೆಯಬಹುದು. ಚಾವಡಿಕೆ ತಾಗಿಕೊಂಡು ತುಸು ತಗ್ಗಾಗಿ ಅಂತರ ಚಾವಡಿ ಅಥವಾ ಜಗಲಿಯಿರುತ್ತದೆ. ಜೈನದ ಮನೆಯ ಒಂದು ಮಾದರಿಯನ್ನು ಹೀಗೆ ಸೂಚಿಸಬಹುದು. ಮೊಗಂಟೆ (ಮೊಗಸಾಲೆ), ಗರಡಿ ಇವು ಆನೆ ಬಾಗಿಲಲ್ಲಿರುತ್ತವೆ. ಎಂದರೆ ಬಯಲು ಬಾಕಿ ಮಾರು ಗದ್ದೆಯಿಂದ ಮನೆ/ ಬೀಡಿಗೆ ಪ್ರವೇಶದ್ವಾರ. ಇದು ಪ್ರಧಾನವಾದ ಬಾಗಿಲು. ಅಲ್ಲಿಂದ ಒಳಗೆ ಬಂದರೆ ಅಂಗಳ. ಅಂಗಳದ್ವಾರ. ಅಂಗಳದಿಂದ ಜಗಲಿ ಅಥವಾ ಬಾಜಿರಕ್ಕೆ. ಬಾಜಿರದಿಂದ ಚಾವಡಿಗೆ. ಚಾವಡಿಯಿಂದ ಹೆಬ್ಬಾಗಿಲು, ಹೆಬ್ಬಾಗಿಲು ದಾಟಿದರೆ ಮುಂದಿಲ್ (ಒಳಮುಂಡಿಲ್), ಮುಂದಿಲ್‌ನ ಒಂದು ಬದಿಯಲ್ಲಿ ಅಡುಗೆ ಕೋಣೆಗೆ ಇದಿರು ಉಗ್ರಾಣ, ಊಟದ ಕೋಣೆಯ ಹಿಂಬದಿಯ ಭಾಗ ಪಡ್ಡಲ೧೨ ದಡ್ಡಲದಿಂದ ಕತ್ತಲೆಕೋಣೆ ಮತ್ತು ಮಾಳಿಗೆಗೆ ದಾರಿ. ಮಾಳಿಗೆಯಲ್ಲಿ ಮುಂಭಾಗಕ್ಕೆ ಕಡೆಕಟ್ಟ ಎನ್ನುತ್ತಾರೆ. ಮಾಳಿಗೆಯಲ್ಲಿ ಅಡುಗೆ ಮನೆಗೆ ಸರಿಯಾಗಿ ಮೇಲೆ ಕುತ್ತಟ್ಟ ಇರುತ್ತದೆ. ಕುತ್ತಟ್ಟದಲ್ಲಿ ಮುಖ್ಯವಾಗಿ ಅಕ್ಕಿ ಮುಡಿ ಧಾನ್ಯಗಳನ್ನು ಸಂಗ್ರಹಿಸಿರುತ್ತಾರೆ. ಆದುದರಿಂದಲೇ ಅದು ಅಡುಗೆ ಮನೆಯ ಮೇಲೆ ಇರುವುದು. ಹಾಗೆ ಇರುವುದರಿಂದ ಹೊಗೆ ಬಾಯಿಯಲ್ಲಿ ಅಕ್ಕಿ ಮುಡಿ, ಧಾನ್ಯ ಹಾಳಾಗದೆ ಸುರಕ್ಷಿತವಾಗಿರುತ್ತವೆ. ಕುತ್ತಟ್ಟಕ್ಕೆ ಮುಚ್ಚಿಗೆಯಿರುವುದಿಲ್ಲ. ಅಂತರ ಬಿಟ್ಟು ಅಂತರದಲ್ಲಿ ಸಲಾಕೆ / ಹಲಗೆಗಳನ್ನು ಜೋಡಿಸಿಡುತ್ತಾರೆ.

ಗರೊಡಿಯೊಳಗೆ ಒಂದು ಬದಿಯಲ್ಲಿ ಬತ್ತ ಕುಟ್ಟುವುದಕ್ಕೆ ಬರಕಲವಿರುತ್ತದೆ. ತೆಂಕು ದಿಕ್ಕಿನಲ್ಲಿ ದೈವದ ಗುಡಿ, ಬಡುಗು ದಿಕ್ಕಿನಲ್ಲಿ ಜಾನುವಾರ ಕೊಟ್ಟಿಗೆ (ಕಿದೆ) ಇರುವುದು. ಗರೊಡಿ ಅಂಗಳದಲ್ಲಿ ಇನ್ನೊಂದೆಡೆ ತುಪ್ಪೆ೧೩ ಕಟ್ಟುವುದಕ್ಕೆ ವೃತ್ತಾಕಾರದ ಎತ್ತರದ ದಿಣ್ಣೆಯಿರುತ್ತದೆ. ಚಾವಡಿಯಲ್ಲಿ ತೆಂಕು ಬದಿಗೆ ದೈವದ ಉಜ್ಜಾಲ್ (ಮಂಚ), ಇನ್ನೊಂದೆಡೆ ಕಳೆಂಬಿಯಿರುತ್ತದೆ. ಚಾವಡಿಯಲ್ಲಿ ಕೆತ್ತನೆ ಕೆಲಸದ ಬೋದಿಗೆಯ ಕಂಬಗಳಿರುತ್ತವೆ. ಹೆಬ್ಬಾಗಿಲಿನ ಅಕ್ಕಪಕ್ಕದಲ್ಲಿ ಗೋಡೆಗೆ ತಾಗಿಕೊಂಡ ಅರ್ಥ ಕಂಬ ಬೋದಿಗೆಗಳಿರುತ್ತವೆ. ಒಳಮುಂದಿಲ್‌ನ ಗೋಡೆಯಲ್ಲಿ ಹೆಬ್ಬಾಗಿಲಿಗೆ ಅಭಿಮುಖವಾಗಿ ಗಿಳಿಕಿಂಡಿಯಿರುವುದುಂಟು. ಈ ಗಿಳಿಕಿಂಡಿ೧೪ಗಳ ಮೂಲಕ ಒಳಮನೆಯಿಂದಲೇ ಹೆಂಗಸರು ಚಾವಡಿ ಅಥವಾ ಗರೋಡಿಯಲ್ಲಿ ನಡೆಯುವ ವ್ಯವಹಾರ ಸಂಗತಿಗಳನ್ನು ವೀಕ್ಷಿಸಬಹುದಾಗಿದೆ. ಚಾವಡಿಯ ಒಂದು ಬದಿಯಲ್ಲಿ ಎತ್ತರದಲ್ಲಿ ಉದ್ದಕ್ಕೆ ದಪ್ಪದ ಮರದ ಹಲಗೆಗಳನ್ನು ಹಾಸಿರುವ ಕುಳಿತುಕೊಳ್ಳುವ ಜಗಲಿ ಸ್ಥಳವಿರುತ್ತದೆ. ಮುಂಭಾಗದಲ್ಲಿ ಬಾಜಿರದ ಕಂಬಗಳಿರುತ್ತವೆ. ಅವುಗಳಲ್ಲಿ ಒಂದಕ್ಕೆ ಪಟ್ಟದ ಕಂಬವಿರುತ್ತದೆ. ಕೆಲವೆಡೆ ಬಾಜಿರದಲ್ಲಿ ಒರಗಿ ಕುಳಿತುಕೊಳ್ಳುವುದಕ್ಕೂ ಸಿಂಹಾಸನ ಮಾದರಿಯ ಮರದ ಬಿರಗು ಹಲಗೆಗಳಿರುತ್ತವೆ೧೫. ಹೆಚ್ಚಾಗಿ ಬಾಜಿರದಲ್ಲಿ ನಾಲ್ಕು ಕಂಬಗಳಿರುವುದುಂಟು. ಅವುಗಳಲ್ಲಿ ಘಟ್ಟದ ಕಂಬವನ್ನುಲಿದು ಉಳಿದವುಗಳಿಗೆ ಕೆತ್ತ ಕೆಲಸವಿರುತ್ತದೆ.ಚಾವಡಿಯಲ್ಲಿ ಬುಗುತಿ ಪೆಟ್ಟಿಗೆ೧೬, ಲಕ್ಷ್ಮಿ ತುಡರ್೧೭ ದೀಪ, ಪಟ್ಟದ ಮಂಚ ಮೊದಲಾದುವುಗಳಿರುತ್ತವೆ. ಮರದ ಕಮಾನ್ ಕಿಟಕಿ ಬಾಗಿಲುಗಳನ್ನು ಕೆಲವು ಬೀಡುಗಳಲ್ಲಿ ಗಮನಿಸಬಹುದು.

ಬಂಟರ ಗುತ್ತುಮನೆಯೂ ಹೆಚ್ಚು ಕಡಿಮೆ ಬೀಡಿನ ವಿನ್ಯಾಸವನ್ನೇ ಹೋಲುತ್ತದೆ. ಗುತ್ತಿನ ಮನೆಯ ಒಂದು ವಾಸ್ತು ರಚನೆ ಹೀಗಿದೆ. ಹೆಚ್ಚಾಗಿ ಸುತ್ತ ಮಂದಿಲ್ ಮನೆ ಗುತ್ತಿಗೆ ಮನೆಯ ಪ್ರವೇಶ ಮೊಗಸಾಲೆಯ ಮೂಲಕವೇ. ಹೊರಗಿನಿಂದ ಬಂದು ತಂಗುವ ಜಾಗವಿದೆ. ಅಲ್ಲಿ ಹೆಬ್ಬಾಗಿಲಿರುತ್ತದೆ. ಅದನ್ನು ಆನೆ ಬಾಗಿಲು ಎನ್ನುವುದೂ ಇದೆ. ಹೆಬ್ಬಾಗಿಲು ದಾಟಿದರೆ ಗರಡಿ. ಗರಡಿ ಅಂಗಳದಲ್ಲಿ ಒಂದು ಬದಿಯಲ್ಲಿ ರಾಜನ್ ದೈವದ೧೮ ಸ್ಥಾನ.ಒಂದು ಬದಿಯಲ್ಲಿ ಹಟ್ಟಿಕೊಟ್ಟಿಗೆ ಹಾಗೆಯೇ ಬರಕಲ೧೯, ತುಪ್ಪೆ ಬಾವಿ. ಚಾವಡಿಯಲ್ಲಿರುವ ಒಂದು ಕೋಣೆಯಲ್ಲಿ ಬೆಣ್ಣಿ ಬಂಗಾರ ದೈವದ ಭಂಡಾರ ಇಡಲು ಒಂದು ಕಳೆಂಬಿ೨೦ ಇರುತ್ತದೆ. ಚಾವಡಿಯಿಂದ ಮಾಳಿಗೆಗೆ ದಾರಿ. ಮಾಳಿಗೆಯಲ್ಲಿ ಕುತ್ತಟ್ಟವಿಎ.ಗುತ್ತಿನ ಮನೆಗೆ ಆನೆ ಬಾಗಿಲಿಲ್ಲದೆ ಕಿರುಬಾಗಿಲು, ಹಟ್ಟಿ ಬಾಗಿಲುಗಳಿರುತ್ತವೆ. ಕಾಡು ಮೃಗಗಳನ್ನು ಬೇಟೆ ಯಾಡಲು ಗುತ್ತಿನ ಮನೆಗಳಲ್ಲಿ ಈಟಿ, ಬರ್ಚಿ, ಕೋವಿ ಮೊದಲಾದ ಆಯುಧಗಳನ್ನು ಬಳಸುತ್ತಿದ್ದರು. ಬ್ರಿಟಿಷ್ ಸರ್ಕಾರ ಬಂದ ಬಳಿಕ ಸರ್ಕಾರವು ರಕ್ಷಣೆಗಾಗಿ ಕೋವಿ ಬಂದೂಕುಗಳನ್ನು ಹೊಂದುವುದಕ್ಕೆ ಪರವಾನಿಗೆ ನೀಡುತ್ತಿತ್ತು. ಹುಲಿ ಓಡಿಸುವುದಕ್ಕಾಗಿಯೇ ಮರದಿಂದ ಮಾಡಲಾಗುತ್ತಿದ್ದ ಕರ್ಕಶ ಶಬ್ದ ಉಂಟು ಮಾಡುವ ಒಂದು ವಿಶಿಷ್ಟ ಉಪಕರಣವಿರುತ್ತಿತ್ತು. ಅದರ ಸದ್ದಿಗೆ ಹುಲಿ ಓಡಿ ಹೋಗುತ್ತಿತ್ತು. ಈ ಸಾಧನ ಬಜ್ಜೆ ಸಮೀಪದ ಬೈಲಮಠದಲ್ಲಿ ಇಂದಿಗೂ ಇದೆ.

ಅರಮನೆಯ ವಾಸ್ತು ರಚನೆ:

ವಿಸ್ತಾರವಾದ ಸರಹದ್ದು, ಸುತ್ತ ಕೋಟೆ ಕಂದಕಗಳಿಂದ ಅರಮನೆ ಆವರಿಸಿರುತ್ತದೆ. ಕೋಟೆ ಬಾಗಿಲು ಅತ್ಯಂತ ದೊಡ್ಡದಾಗಿರುತ್ತದೆ. ಇದನ್ನು ಆನೆ ಬಾಗಿಲು ಎನ್ನುತ್ತಾರೆ. ಆನೆ ಬಾಗಿಲು ದಾಟಿದರೆ ವಿಶಾಲವಾದ ಬೀದಿ. ಬೀದಿ ದಾಟಿದರೆ ಮುಖ್ಯ ದ್ವಾರ ಸಿಗುತತದೆ. ಇದನ್ನು ವಲಿಮುಖ ಚಾವಡಿ ಎನ್ನುತ್ತಾರೆ. ಇದು ಅರಮನೆಯ ಪ್ರವೇಶದ್ವಾರ. ಅಲ್ಲಿಂದ ಮುಂದೆ ಅಂಗಣ (ರಾಜಾಂಗಣ). ಅಂಗಣ ಕಳೆದರೆ ಜಗಲಿ. ಜಗಲಯಿಂದ ಮೇಲೆ ಹೆಬ್ಬಾಗಿಲಿನವರೆಗೂ ಎರಡು ಪಕ್ಕಗಳಲ್ಲಿ ಚಾವಡಿ ಅಥವಾ ಮುಖ ಮಂಟಪ. ಚಾವಡಿಯಲ್ಲಿ ಚಾವಡಿ ಕೋಣೆಗಳಿರುತ್ತವೆ. ಹೆಬ್ಬಾಗಿಲು ದಾಟಿದರೆ ಒಳಜಗಲಿ ಜಗಲಿಯಿಂದ ಕೆಳಗೆ ಚೌಕಾಕಾರದ ಒಳಾಂಗಣ. ಬಲಕ್ಕೆ ಪಟ್ಟದ ಚಾವಡ ಅಥವಾ ನ್ಯಾಯ ಚವಡಿ. ಚಾವಡಿಯ ಒಂದು ಪಕ್ಕದಲ್ಲಿ ಅಡ್ಡಕ್ಕೆ ಸೆರೆಮನೆ (೨೧) ಇನ್ನೊಂದು ಪಕ್ಕದಲ್ಲಿ ಮಾಳಿಗೆಗೆ ದಾರಿ. ಮೂಲಕ ಐನ್ ಮನೆ (ಐನ್ ಗುತ್ತು ಮಂದಿಲ್ ಇಲ್) ಅಥವಾ ಐದು ಸುತ್ತು ಕಟ್ಟಿನ ಮನೆಗಳಿಗೆ ದಾರಿ. (ಮುಖ್ಯ ಬಾಗಿಲುಗಳು) ಅಲ್ಲಲ್ಲಿ ಪಾಕಶಾಲೆ, ಅಂತಃಪುರ, ಕತ್ತಲೆ ಕೋಣೆ (ಏಕಾಂತ ಕೊಠಡಿ) ಉಗ್ರಾಣ ಬೊಕ್ಕಸ ಮೊದಲಾದವುಗಳಿರುತ್ತವೆ.

ಪ್ರತಿಯೊಂದು ಅರಮನೆಗೂ ನಗಾರಿ ಇರುತ್ತಿದ್ದು, ಅಪಾಯದ ಸಂದರ್ಭಗಳಲ್ಲಿ ಭೇರಿತಾಡನದ ಮೂಲಕ ಸುದ್ದಿ ಹರಡಿಸಲಾಗುತ್ತದೆ. “ಅರಮನೆಳ ಪಟ್ಟದ ಚಾವಡಿ ಸತ್ತದ ಚಾವಡಿ ಕೂಡ. ಹೆಚ್ಚಾಗಿ ಶಂಖಾಕಾರದ ಅಧೋಮುಖ ಕಲಶದಡಿ ಸತ್ಯವನ್ನು ನುಡಿಸುವ ಕ್ರಮ. ಅಧೋಮುಖ ಶೈಲಿಯ ಕಲಶ ಅದೊಂದು ಶಕ್ತಿ ರೇಖೆ (power line) ಅದನ್ನುಪೂರ್ವಕ್ಕೆ ಮುಖ ಮಾಡಿಸಿಡುತ್ತಾರೆ. ಇದನ್ನು ಪ್ರಮಾಣ ಮುಚ್ಚಳಿಕೆ ಎನ್ನುತ್ತಾರೆ. ಅರಮನೆಗೆ ಅದರದ್ದೇ ಆದ ಬುರುಜು (ಗೋಪುರ) ಇದ್ದು ಅದರ ಎಡಭಾಗದಲ್ಲಿ ನಗಾರಿಯಿರುತ್ತಿತ್ತು.” (ಕೃಷ್ಣಯ್ಯ ಎಸ್.ಎ. ೧೯೯೧)

ಚಾವಡಿಯ ಬಲಬದಿಯಲ್ಲಿ ಅರಸರು ಕುಳಿತುಕೊಳ್ಳುವ ಮಂಚ. ಪಕ್ಕದಲ್ಲಿ ದೀಪ ಹೊತ್ತಿಸುವ ಕಂಬ ಹಾಗೂ ಎದುರುಗಡೆ ದೀವಟಿಗೆ ಹೊತ್ತಿಸಿ ಇಡುವ ಕಂಬವೂ ಇದೆ. ಪ್ರತಿ ಅರಮನೆಗೂ ಒಂದೊಂದು ಉದ್ಯಾನ, ಈಜುಗೊಳ (ಸ್ನಾನದ ಕೆರೆ). ಹಾಗೆಯೇ ಮುಂದುಗಡೆ ಬಾಕ್ಯಾರ್ ಕಂಬಳ ಗದ್ದೆಗಳೂ ಇದ್ದವು. ಹೆಚ್ಚು ಕಡಿಮೆ ಒಂದು ಅರಮನೆಯ ನಿವೇಶನ ೧೦ ಎಕರೆಯಷ್ಟು ಒಳಗಿನಿಂದೊಳಗೆ ಮೂರು ಎಕರೆ. ಕರಾವಳಿ ಪ್ರದೇಶದಲ್ಲಿ ಸೂರಾ, ಮೂಡು ಬಿದರೆ, ಆಳದಂಗಡಿ, ಹೊಸಂಗಡಿ, ವಿಟ್ಲ್‌ಮೊದಲಾದೆಡೆಗಳಲ್ಲಿ ಅರಮನೆಗಳು ಇನ್ನೂ ಉಳಿದುಕೊಂಡಿವೆ. ಕೆಲವು ಪ್ರಾಚ್ಯ ಸಂಶೋಧನ ಇಲಾಖೆಯ ಅಧೀನದಲ್ಲಿವೆ. ವಿಟ್ಲ್‌ದ ಅರಮನೆ ಹೊತರು ಈ ಪ್ರದೇಶದಲ್ಲಿ ಇತರ ಎಲ್ಲವೂ ಜೈನ ಅರಮನೆಗಳು.

 

ಮನೆಯ ಬಲಬದಿಯಲ್ಲಿ ಗೋಶಾಲೆಯಿರುತ್ತದೆ. ಎದ್ದ ಕೂಡಲೇ ಗೋದರ್ಶನವಾಗಬೇಕು ಎನ್ನುವುದಕ್ಕಾಗಿ ಮನೆಗೆ ಇದಿರಾಗಿ ಗೋಶಾಲೆ ಕಟ್ಟಿಕೊಳ್ಳುತ್ತಾರೆ. ಮನೆಯ ಈಶಾನ್ಯಕ್ಕೆ ಬಾವಿಯಿರುತ್ತದೆ. ದೇವರ ಕೋಣೆಯ ಮುಖ, ತುಳಸಿಕಟ್ಟೆಯ೨೨ ಪೀಠ (ಮೆಟ್ಟಿಲು) ಪಡುಮುಖವಾಗಿದ್ದು ಮೂಡು ಮುಖಕ್ಕೆ ಅಭಿಮುಖವಾಗಿ ನಿಂತು ಪೂಜೆ ಮಾಡುವಂತಿರುವುದು. ಮನೆಯ ಅಂಗಳದ ಎಡಾಗದಲ್ಲಿ ಎಂದಡೆ ಪಡು ಅಥವಾ ವಾಯುವ್ಯದಲ್ಲಿ ದಾಸ್ತಾನು ಕೋಣೆ ಹಟ್ಟಿಕೊಟ್ಟಿಗೆ ಕಟ್ಟಿಕೊಳ್ಳುವುದು ಕಡಿಮೆ. ಆ ದಿಕ್ಕು ಖರ್ಚಿನ ದಿಕ್ಕು ಎನ್ನುವ ನಂಬಿಕೆ. ಆದರೆ ಸಾಕಷ್ಟು ಗಾಳಿ ಬರಬೇಕೆಂಬ ದೃಷ್ಟಿಯಿಂದ ಪಡುದಿಕ್ಕಿನಲ್ಲಿ ಏನೂ ಕಟ್ಟಿಕೊಳ್ಳದಿರುವುದಕ್ಕೆ ಒಂದು ಕಾರಣವೂ ಇರಬಹುದು. ಮನೆಯ ಮೂಡು ದಿಕ್ಕಿಗೆ ಒಲೆ, ತೆಂಕು ದಿಕ್ಕಿಗೆ ಕಿಟಕಿ ಬಾಗಿಲು ವರ್ಜ್ಯ.

ಮನೆಯ ಮುಖ ಮುಖ್ಯವಾಗಿ ಮೂಡು ಅಥವಾ ಬಡಗು ದಿಕಕಿನಲ್ಲಿರಬೇಕೆಂಬ ನಿಯಮವಿದೆ. ಆದರೆ ಬೀದಿಗೆ ಮುಖವಿರಬೇಕೆಂಬುದೂ ಇರುವುದರಿಂದ ಬೀದಿಯಿರುವ ದಿಕ್ಕಿಗೆ ಮನೆ ಮುಖವಿರಿಸಿಕೊಳ್ಳುವುದೂ ಅನುಕೂಲ ಶಾಸ್ತ್ರವಾಗಿದೆ. ಕೆಲವೆಡೆ ಮನೆಯ ಮುಖ ಮೂಡು ಅಥವಾ ಬಡಗು ದಿಕ್ಕಿನಲ್ಲಿರಿಸಿಕೊಂಡರೂ ಅನುಕೂಲಕ್ಕಾಗಿ ಬೇಕಾದ ದಿಕ್ಕಿನಲ್ಲಿ ಪೊರ್ಟಿಕೊ೨೩ ಅಥವಾ ಮುಖ ಮಂಟಪ ರಚನೆ ಸಾಮಾನ್ಯವಾಗಿ ಶ್ರೀಮಂತರ ಮನೆಗಳಲ್ಲಿ ಕಾಣಿಸಿಕೊಳ್ಳುವುದುಂಟು. ಸಮಾನಾಂತರಗಳಲ್ಲಿರುವ ಕಂಬಸಾಲುಗಳ ಆಧಾರದ ಮೇಲೆ ಹೀಗೆ ಮಾಳಿಗೆಯನ್ನೂ ರಚಸಿಕೊಳ್ಳುವುದೂ ಸಾಧ್ಯವಾಗುತ್ತದೆ. ಈ ಮಾದರಿಯ ಮನೆಗಳುಪ್ರತಿಷ್ಠಿತರೆನಿಸಿಕೊಂಡವರಲ್ಲಿ ಸರ್ವ ಸಾಮಾನ್ಯ. ಕರಾವಳಿಯಲ್ಲಿ ಜೈನ, ಬಂಡ, ಬ್ರಾಹ್ಮಣರಲ್ಲದೆ ಮುಸ್ಲೀಂ, ಕ್ರಿಶ್ಚಯಿನ್ ಹಾಗೂ ಸಾಹುಕಾರರ ಮನೆಗಳು ಈ ಮಾದರಿಯವು. ಏನಿದ್ದರೂ ಮುಖ ಮಂಟಪ ಆಯದಿಂದ ಹೊರಭಾಗ.

ಆದರೆ ಮುಂದೆ ಮನೆಗೆ ಮುಖ ಮಂಟಪವೇ ಮುಖ್ಯವಾಗಿ ಅಂತಹ ಮಾದರಿಯ ಮನೆಗಳೇ ಬೆಳವಣಿಗೆಗೊಂಡದ್ದನ್ನು ಗಮಿಸಬೇಕು. ಇಲ್ಲಿ ದಿಕ್ಕಿನ ಪ್ರಶ್ನೆಯೇ ಬರುವುದಿಲ್ಲ.

ಮನೆ ಗೋಡೆ: ಮಣ್ಣು ಮಣ್ಣಿನ ಇಟ್ಟಿಗೆ, ಮುರಕಲ್ಲುಗಳಿಂದ ಗೋಡೆಗಳನ್ನು ರಚಿಸುತ್ತಾರೆ. ಜೇಡಿಮಣ್ಣು ಕಲ್ಲು ಮಣ್ಣು ಹೊರತುಪಡಿಸಿ ಗೋಡೆಗೆ ಮಣ್ಣನ್ನು ಆಯ್ಕೆ ಗೊಳಿಸಬೇಕು. ಚೆನ್ನಾಗಿ ನೀರಿನಲ್ಲಿ ಕಲಸಿ ಹದಗೊಳಿಸಿ ಕೆಲವು ದಿವಸ ಹಾಗೆಯೇ ಇಟ್ಟು ಚೆನ್ನಾಗಿ ಅಂಟುಕೊಂಡ ಬಳಿಕ ಉಪಯೋಗಕ್ಕೆ ಯೋಗ್ಯವಾಗುತ್ತದೆ. ಜನಸಾಮಾನ್ಯರು ಮಣ್ಣಿನ ಇಟ್ಟಿಗೆ ಅಥವಾ ಈ ರೀತಿ ಹದಗೊಳಿಸಿದ ಮಣ್ಣನ್ನು ಗೋಡೆಗಳಿಗೆ ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ ಆಧಾರಗೋಡೆಯ ಕೆಲವು ಭಾಗಗಳಿಗೆ ಕಲ್ಲುಗಳನ್ನು ಬಳಸಿಕೊಳ್ಳುವುದೂ ಇದೆ. ಸಾಮಾನ್ಯ ಜನರು ಗೋಡೆಗಳನ್ನು ಅಂಟುಗೊಳಿಸಿದ ಮಣ್ಣಿನ ಮೂಲಕವೇ ಅಥವಾ ತೋಡುಗಳಿಂದ ಮೆತ್ತನೆಯ ಕೆಲವು ಕಲ್ಲುಗಳನ್ನು ಸಂಗ್ರಹಿಸಿ ಚೆನ್ನಾಗಿ ಪುಡಿ ಮಾಡಿ ಅರೆದು ಅಂಟು ಮಾಡಿ ಅದರಿಂದ ಸಾರಣೆ ಮಾಡುತ್ತಾರೆ. ಈ ಸಾರಣೆಗೆ ಒಂದು ಹೊಸ ಮೆರುಗು ಇರುತ್ತದೆ. ಆ ಬಳಿಕ ಸಿಮೆಂಟು ಸುಣ್ಣ ಸಾರಣೆ೨೪ಗಳ ಬಳಕೆ ಜನಪ್ರಿಯವಾಯಿತು.

ಬೀಡು ಅರಮನೆಗಳ ಗೋಡೆಗಳು೨೫ ವಿಶೇಷವಾಗಿ (ನಾಲ್ಕರಿಂದ ಐದಡಿ) ದಪ್ಪವಿರುತ್ತದೆ. ಮುಳಿ ಹುಲ್ಲು ಮಣ್ಣು ಮಿಶ್ರಿತ ಕರಡದಿಂದ ಗೋಡೆಗಳ ರಚನೆ. ಇದು ಗಟ್ಟಿ ಹಾಗೂ ಸುಭದ್ರ.

ಮನೆಬಾಗಿಲು ದಾರಂದ: ಮನೆಯ ಬಾಗಿಲನ್ನು ಆಯದ ಬಾಗಿಲು೨೬ ಎನ್ನುವುದು ಸಾಗುವಾನಿ, ಹೆಬ್ಬಲಸು ಹಲಸುಮರಗಳಿಂದ ರಚನೆ. ಈ ಬಾಗಿಲಿಗೆ ಕೆತ್ತನೆ ಕೆಲಸವಿರುವುದುಂಟು. ಹೆಬ್ಬಾಗಿಲಿಗೆ ಎತ್ತರವಾದ ಹೊಸ್ತಿಲು ಇರುತ್ತದೆ. ಈ ಹೊಸ್ತಿಲು ಬಹುಮುಖ್ಯವಾದ ಸ್ಥಳ. ಭೂಮಾಲೀಕರ, ಸಾಹುಕಾರರ ಮನೆಯ ಬಾಗಿಲುಗಳೂ, ಗುತ್ತು, ಬೀಡು, ಅರಮನೆಗಳ ಹೆಬ್ಬಾಗಿಲುಗಳೂ ಬೆಲೆಬಾಳುವ ಶ್ರೇಷ್ಠ ದರ್ಜೆಯ ಮರಗಳಿಂದ ಸಿದ್ಧಗೊಳ್ಳುತ್ತಿದ್ದುವು. ಕೆಲವು ಅಂತರ, ಪದರುಗಳ ಚೌಕಟ್ಟುಗಳು, ಅವುಗಳ ಮೇಲೆ ನಾಜೂಕಾದ ಕೆತ್ತನೆ ಕೆಲಸಗಳೂ ಇರುತ್ತವೆ. ಶ್ರೀಮಂತ ವರ್ಗದ ಮನೆಗಳ ಅಥವಾ ಅರಮನೆಗಳ ಶ್ರೀಮಂತಿಕೆ ಪ್ರತಿಷ್ಟೆ ಅವರ ಹೆಬ್ಬಾಗಿಲುಗಳಲ್ಲಿ ವ್ಯಕ್ತವಾಗುತ್ತಿದ್ದವು.

ಮನೆ ಮಾಡು, ಮುಚ್ಚಿಗೆ ಮೇಲ್ಛಾವಣೆ:  ಕೂಟು ಹಾಕಿದ ಮನೆಗಳ ಅಡ್ಟಗಳಿಗೆ ಮರದ ಮುಚ್ಚಿಗೆಗಳಿರುತ್ತವೆ. ಜಂತಿಗಳ ಮೇಲೆ ಮರದ ಹಲಗೆಗಳನ್ನು ಕೂರಿಸಿದಾಗ ಹೀಗೆ ಮುಚ್ಚಿಗೆಯ ಅಟ್ಟಗಳಾಗುತ್ತವೆ. ಮನೆಮಾಳಿಗೆಗಳ ಮೇಲುಪ್ಪರಿಗೆ ನೆಲಗಳನ್ನು ಮರದ ಮುಚ್ಚಿಗೆಗಳ ಮೇಲೆ ಮರಳು ಸುಣ್ಣ ಮಿಶ್ರಿತ ಮಣ್ಣು ಹಾಸಿ ಮಾಡುತ್ತಾರೆ. ಮರಕ್ಕೆ ಗೆದ್ದಲು ಹಿಡಿಯದಂತೆ ತೈಲ ಲೇಪನಮಾಡಲಾಗುತ್ತಿತ್ತು. ಮರದ ಹಲಗೆ ಹಾಗೂ ಮಣ್ಣು ಪದರುಗಳ ಮಧ್ಯೆ ಜಾರಿಗೆ ಮರದ ಎಲೆಗಳನ್ನು ಹಾಸುವ ಕ್ರಮವಿದೆ. ಈ ಎಲೆಗೆ ಗೆದ್ದಲು ಹತ್ತುವುದಿಲ್ಲವೆನ್ನುತ್ತಾರೆ.

ಮನೆಯ ಮಾಡಿಗೆ ಬಿದಿರು, ಸಲಾಕೆ, ಮರದ ಪಕ್ಕಾಸು, ರೀಪುಗಳನ್ನು ಬಳಸುತ್ತಾರೆ. ತೆಂಗಿನ ಮರದ, ತಾಳೆ ಮರದ ಜಂತಿ, ಪಕ್ಕಾಸುಗಳನ್ನು ಬಳಸುವುದು ಸಾಮಾನ್ಯ. ಶ್ರೀಮಂತ ವರ್ಗದವರು ಮರದ ಜಂತಿ, ಪಕ್ಕಾಸುಗಳನ್ನು ಬಳಸಿಕೊಳ್ಳುತ್ತಾರೆ.

ಮಾಡಿಗೆ ಮುಳಿಹುಲ್ಲು ಹೊದಿಸುವುದು ಸರ್ವಸಾಮಾನ್ಯ ಆದರೆ ತೀರ ಕರಾವಳಿ ಪ್ರದೇಶದಲ್ಲಿ ಮಳಿಹುಲ್ಲು ಸಿಗುತ್ತಿಲ್ಲವಾದ ಕಾರಣ ಬೈಲು ಹುಲ್ಲು (ಉಂಡ್ಯೆ) ಬಳಕೆಯಿದೆ. ಸಾಗುವಳಿದಾರರಿಗೆ ಗುಡ್ಡ ಮೈದಾನ ಪ್ರದೇಶವಿರುವ ಕಾರಣ ಮುಳಿಹುಲ್ಲು ಸಿಗುತ್ತದೆ. ಕಬ್ಬಿನ ತೋಟವಿರುವೆಡೆಗಳಲ್ಲಿ ಕಬ್ಬಿನ ಸೋಗೆಗಳನ್ನೂ ಅಡಕೆ ತೋಟಗಾರರು ಅಡಕೆ ಸೋಗೆಗಳನ್ನು ಬಳಸುತ್ತಾರೆ. ಮಾಡು ಕಟ್ಟಿದ ಬಳಿಕ ಹೆಣೆದ ತೆಂಗಿನ ಮಡಲು ಹೊದಿಸಿ ಆ ಮೇಲೆ ಹುಲ್ಲು ಹೊದಿಸುವುದು ರೂಢಿ.

ಹಿಂದಿನ ಮನೆಗಳಿಗೆ ಮಾತ್ರವಲ್ಲ ಅರಮನೆ, ದೈವಸ್ಥಾನ, ದೇವಸ್ಥಾನಗಳಿಗೂ ಹುಲ್ಲು ಹೊದಿಸಿಯೇ ಮಾಡು ಮಾಡಲಾಗುತ್ತಿತ್ತು. ಆದರೆ ಶ್ರೀಮಂತವರ್ಗದ ಮನೆಗಳಿಗೆ ಓಡರಿ (ಕುಂಬಾರ)ಗಳು ತಯಾರಿಸುತ್ತಿದ್ದ ಹಂಚು (ಓಡು) ಗಳನ್ನು ಉಪಯೋಗಿಸುತ್ತಿದ್ದರು. ಸುಮಾರು ನೂರು ನೂರವತ್ತು ವರ್ಷಕ್ಕೆ ಹಿಂದಿನ ಮನೆಗಳು ಈ ಮಾದರಿಯವು. ಆ ಬಳಿಕ ಕಂಪೆನಿಗಳ (ಕಾಮನ್‌ವೆಲ್ತ್‌) ಮನೆಗಳು ಶ್ರೀಮಂತರದ್ದಾಗಿದ್ದುವು. ಅವು ಬಡವರ ಒಕ್ಕಲು ಸಾಗುವಳಿದಾರರ ಕೈಗೆಟುಕುತ್ತಿರಲಿಲ್ಲ. ಇತ್ತೀಚೆಗೆ ಕೆಲವು ವರ್ಷಗಳಿಂದ ಹಳ್ಳಿಗಳಲ್ಲಿ ಹೊಸ ಮನೆ ಕಟ್ಟಿಕೊಳ್ಳುವವರು ಹಂಚಿನ ಮನೆಗಳನ್ನೇ ಸ್ವಾಗತಿಸುತ್ತಿದ್ದರು. ಹಾಗಾಗಿ ಹಳ್ಳಿಗಳಲ್ಲಿ ಹುಲ್ಲಿನ ಮನೆಗಳು ವಿರಳವಾಗುತ್ತಿವೆ. ಪೇಟೆ, ನರಗಳಲ್ಲಿ ಹಂಚಿನ ಮನೆಗಳನ್ನೇ ನೋಡಬಹುದು. ಆದರೆ ನಗರ ಪ್ರದೇಶಗಳಲ್ಲಿ ಹಾಗೂ ಹಳ್ಳಿಗಳ ಭೂಮಾಲೀಕರು, ರೈತರು, ವ್ಯಾಪಾರಸ್ಥರು ಹೊಸ ಮನೆಗಳನ್ನು ಕಟ್ಟಿಕೊಳ್ಳುವುದಿದ್ದರೆ ಈಗೀಗ ಕಾಂಕ್ರೀಟ್ (ಆರ್‌ಸಿಸಿ) ಮಹಡಿ ಮನೆಗಳನ್ನೇ ಹಾರೈಸುತ್ತಾರೆ.


[1]