ಮಾನವನ ಅಲೆಮಾರಿ ಜೀವನ ಕೊನೆಗೊಂಡು ಒಂದು ಕಡೆ ನೆಲೆನಿಲ್ಲುವುದರೊಂದಿಗೆ ‘ವಸತಿ’ಯ ಬದುಕು ಮೊದಲಾಗಿದೆ. ಗುಹೆಗಳಲ್ಲಿ ಮರದ ಪೊಡರೆಗಳಲ್ಲಿ ವಸತಿ ಸ್ಥಾಪಿಸಿಕೊಂಡಿದ್ದ ಮಾನವ ಅನಂತರ ತನ್ನದೇ ಆದ ನಿರ್ಮಾಣಕ್ಕೆ  ತೊಡಗಿ ಗುಡಿಸಲು-ಮನೆಯ ನಿರ್ಮಾಣ ಮಾಡಿಕೊಂಡ. ಹೀಗೆ ಒಂದು ಕಡೆ ಗಟ್ಟಿಯಾಗಿ ತಳವೂರಲು ಮಾನವ ತನ್ನ ಬದುಕಿನಲ್ಲಿ ವ್ಯವಸಾಯವನ್ನು ಅಳವಡಿಸಿಕೊಂಡದ್ದೆ ಕಾರಣ. ಅಂದಿನಿಂದ ಇಂದಿನವರೆಗೂ ರೈತಾಪಿ ಜನಗಳು ಒಂದು ಕಡೆ ನೆಲೆನಿಂತ ಬದುಕಿಗೆ ಆತುಕೊಳ್ಳುವುದನ್ನು ಮಾನ್ಯ ಮಾಡಿಕೊಂಡು ಅಲೆಮಾತಿತನವನ್ನು ತಾತ್ಸರವಾಗಿ ಕಂಡಿದ್ದಾರೆ. ಹೆಣ್ಣು ಕೊಡುವಾಗ ತರುವಾಗ ‘ಮನೆತನ’ ಹೇಗೆ? ಎಂಬ ಪ್ರಸ್ತಾಪದಲ್ಲಿ, ಚೆನ್ನಾಗಿ ಮಾಡಿ ಉಣ್ಣುವ ಮನೆತನವೆ? ಮನೆಯಲ್ಲಿ ದನಕರ ಇವೆಯೋ? ಒಕ್ಕಲುತನ ಉಂಟೋ? ಎಷ್ಟೆತ್ತಿನ ಒಕ್ಕಲುತನ ಮುಂತಾಗಿ- ನೆಲೆ ನಿಂತು ಬದುಕುವುದನ್ನೇ ಇಷ್ಟಪಡುತ್ತಾರೆ ಎಂಬುದನ್ನು ಕಾಣಬಹುದಾಗಿದೆ. ಅವನಿಗೇನು ಮನೇನಾ ಮಠಾನಾ, ಆ ಮನ್ಯಾಗ ಎಂದಾದರೂ ಬೂದಿ ಬಿದ್ದದ್ದನ್ನು ನೋಡಿದ್ದೀರಾ ಅಂತಾ ಪ್ರಶ್ನಿಸುವಲ್ಲಿ ಇರುವ ತಾತ್ಸರವೂ ಸ್ಪಷ್ಟ ‘ದಕ್ಷನ ಕಥೆ’ ಬಯಲಾಟದಲ್ಲಿ ದಕ್ಷ ಪಾರ್ವರಿಯನ್ನು ಯಾರಿಗೆ ಕೊಡುವುದು ಎಂಬ ಪ್ರಸ್ತಾಪ ಹೆಂಡತಿಯ ಹತ್ತಿರ ತೆಗೆಯುವುದೂ, ಆಕೆ ತವರು ಮನೆಯವರಿಗೆ ಕೊಡೊಣ ಎನ್ನುವುದೂ, ನಿಮ್ಮ ತವರು ಮನೆಯಲ್ಲಿ ಯಾರು ಮಾಡಿ ಎಂಬ ಗಂಡಸರಿದ್ದಾರೆ ಎನ್ನುವುದು ಕೊನೆಗೆ ದಕ್ಷ ಹೆಣ್ಣು ಕೊಟ್ಟರೆ ತನಗಿಂತ ಭಾಗ್ಯರ ಮನೆಗೆ ಕೊಡಬೇಕು. ತರುವುದಾದರೆ ತನಗಿಂತ ಬಡವರ ಮನೆಯಿಂದ ತರಬೇಕು ಎನ್ನುವಲ್ಲಿ ಮನೆತನವನ್ನೂ ನೋಡಿಕೊಂಡೇ ನೆಂಟಸ್ತನ ಬೆಳೆಸುವುದು ಸರಿ ಎಂಬ ಜನಪದರ ನಡಾವಳಿಯನ್ನು ಧ್ವನಿಸುತ್ತದೆ. ಮನೆಗೆ ಕಾಲಿಟ್ಟೋಳ ಕಾಲುಗುಣ ಚೆನ್ನಾಗಿರಬೇಕು ಎನ್ನುವಲ್ಲಿಯೂ ಮನೆ ಏಳುವುದಕ್ಕೂ ಬೀಳುವುದಕ್ಕೂ ಹೆಣ್ಣು ಕಾರಣಳು ಎಂಬುದು ಎಲ್ಲದಕ್ಕೂ ಅವಳನ್ನೇ ಗುರಿ ಮಾಡುವ ಪಾಕ್ಷಿಕ ಧೋರಣೆಗಿಂತಲೂ ಹೆಣ್ಣಿನ ಜವಾಬ್ದಾರಿ ದೊಡ್ಡದು ಎಂಬುದುದು ಇಲ್ಲಿನ ಆಶಯವಾಗಿದೆ. ಮನೆ-ಮನೆತನ ಮತ್ತು ಜನಪದರ ಮನಸ್ಸು ಇವುಗಳ ನಡುವೆ ಭಾವನಾತ್ಮಕವಾದ ಸಂಬಂಧವಿದ್ದು ಅವರು ಬಳಸುವ ಪ್ರತಿಯೊಂದು ವಸ್ತು ವಿಷಯಗಳಲ್ಲಿ ಅವರ ಭಾವನೆಗಳು ದಾಖಲು ಗೊಂಡಿರುವುದನ್ನು ಗುರುತಿಸಬಹುದಾಗಿದೆ. ಭೌತಿಕ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಆವಾಸಸ್ಥಾನ ಗುಡಿಸಲು ಮತ್ತು ಮನೆಗಳನ್ನು ವಸ್ತು ರೂಪಗಳಾಗಿ ಅಧ್ಯಯನ ಮಾಡುವುದರೊಂದಿಗೆ ಆ ವಸ್ತುಗಳ ಹಿಂದಿರುವ ಭಾವನೆಗಳನ್ನು ಪರಿಶೀಲಿಸುವ ಕೆಲಸವನ್ನೂ ಬೇರೆ ಬೇರೆ ಹಂತಗಳಲ್ಲಿ ಯೋಜಿಸಿಕೊಳ್ಳಲಾಗುತ್ತದೆ. ಮೊದಲಿಗೆ ಒಡ್ಡರ ಜೊತೆಯಲ್ಲಿ ಕೆಲಸವನ್ನೂ ಬೇರೆ ಬೇರೆ ಹಂತಗಳಲ್ಲಿ ಯೋಜಿಸಿಕೊಳ್ಳಲಾಗುತ್ತದೆ. ಮೊದಲಿಗೆ ಒಡ್ಡೆ ಈ ಬಗೆಗೆ ಮಾತುಕತೆ ಆಡಿ ಸಂಚಕಾರ ಕೊಟ್ಟು ವಿಳ್ಯದೊಂದಿಗೆ ಮಾತು ಮುಗಿಸುತ್ತಾರೆ. ಪ್ರತಿದಿನ ಕೂಲಿಯಂತೆಯೋ, ಗಜ ಲೆಖ್ಖ ಇಲ್ಲವೇ ಒಟ್ಟು ಮನೆ ಕಟ್ಟಲು ಉಂಡ ಗುತ್ತಿಗೆಯಂತೆ ಇಂತಿಷ್ಟು ಹಣಕ್ಕೆಂದು ಮಾತು ಮುಗಿಸುತ್ತಾರೆ.

ಬುನಾದಿ:

ಮನೆಗೆ ತಳಪಾಯ ಹಾಕುವುದರಲ್ಲಿ ಹೆಚ್ಚು ನಿಗಾ ವಹಿಸುತ್ತಾರೆ. ಬುನಾದಿ ಗಟ್ಟಿ ಇದ್ದಷ್ಟು ಮನೆ ತಾಳಿಕೆ ಬರುತ್ತದೆ ಎಂಬ ತಿಳುವಳಿಕೆ ಜನಪದರದು. ಮೇಲುಪದರಿನ ಮಣ್ಣು ಹೋಗಿ ಗಟ್ಟಿ ತಳ ಸಿಗುವವರೆಗೆ ಬುನಾದಿ ಅಗೆಯುತ್ತಾರೆ. ಇದು ೮’-೧೦’ ಅಡಿಗಳಷ್ಟು ಆಳವಾಗುತ್ತದೆ. ಬುನಾದಿಗೆ ಮೋಟುಕಲ್ಲು-ಬೋಲ್ಡರ್ಸ್ ತುಂಬುತ್ತಾರೆ. ಗೋಡೆ ಎರಡು ಅಡಿಯದಿದ್ದರೆ ಬುನಾದಿ ೩-೪ ಅಡಿಗಳಷ್ಟು ಅಗಲವಾಗಿರುತ್ತದೆ. ಯಾರಾದರೂ ನಡತೆ ತಪ್ಪಿದಾಗ ಅವನಿಗೆ ಮೊದಲಿಗೆ ಬುನಾದಿ ಸರೀಗೆ ಬಿದ್ದಿಲ್ಲ ಎಂಬ  ನುಡಿಗಟ್ಟು ಬಳಸುವುದುಂಟು. ವ್ಯಾಜ್ಯದಲ್ಲಿ ನಿನ್ನ ಮನೆ ಬುನಾದಿ ಥರ ಕಿತ್ತಿಸ್ತೀನಿ ಎಂಬುದು ಜನಪದರ ತಿಳುವಳಿಕೆಯಾಗಿದೆ.

ಗೋಡೆ:

ಗೋಡೆಗೆ ಎರಡು ಬಗೆಯ ಕಲ್ಲುಗಳನ್ನು ಬಳಸುವುದುಂಟು. ಸುಟ್ಟಕಲ್ಲು ಮತ್ತು ಹಸಿಕಲ್ಲು. ಸುಟ್ಟಕಲ್ಲಿನಿಂದ ಕಟ್ಟಿದುದು ಹೆಚ್ಚು ತಾಳಿಕೆ ಬರುತ್ತದೆಂದೂ ಹೇಳುತ್ತಾರೆ. ಬುನಾದಿಯಿಂದ ಎರಡು ಅಡಿ ನೆಲದಿಂದ ಮೇಲೆತ್ತರಕ್ಕೆ ಬಂದಾಗ- ಬೇಸ್‌ಮಟ್ಟ ಮಾಡಿ ಒಳ ಅಸಲಿನಲ್ಲಿ ಮಣ್ಣು ತುಂಬುತ್ತಾರೆ. ನೆಲದಿಂದ ಮೇಲಂತಕ್ಕೆ ಹೀಗೆ ಮನೆಯ ತಳವನ್ನು ಎತ್ತರಿಸುವುದರಿಂದ ನೆಲದ ತಂಪು, ಮಳೆಯ ನೀರು ಮುಂತಾದುವುಗಳಿಂದ ಮನೆ ಸುರಕ್ಷಿತವಾಗಿರುತ್ತದೆ. ಬೇಸ್‌ಮಟ್ಟದ ಗೋಡೆಯ ಮೇಲೆ ತಲಬಾಗಿಲು ಆನಂತರ ಒಳಗಿನ ಬಾಗಿಲುಗಳನ್ನು ಕೂಡಿಸಲಾಗುತ್ತದೆ. ತಲಬಾಗಿಲಿಗೆ ಹೊಸ್ತಿಲು ಮೇಲಿನ ಅಡ್ಡಪಟ್ಟಿಯಲ್ಲಿ ಸೂರ್ಯಚಂದ್ರರನ್ನೂ ಕೆತ್ತಲಾಗುತ್ತದೆ. ಇಕ್ಕೆಲಗಳ ತೋಳುಗಳಿಗೆ ಬಗೆಬಗೆಯ ಚಿತ್ತಾರಗಳನ್ನೂ ಕೆತ್ತಿರುವುದೂ ಉಂಟು. ಪ್ರತಿಬಾಗಿಲಿನ ಕೆಳಗೆ ಮತ್ತು ಮೇಲೆ ಬಂಡೆಗಳನ್ನೂ ಹೊಂದಿಸುತ್ತಾರೆ. ಕೆಳಗೆ ಗೋಡೆಸಂದು ಬಾಗಿಲು ಬಾಗಬಾರದೆಂತಲೂ, ಮೇಲೆ ಗೋಡೆ (ಭಾರ) ಬಾಗಿಲಿಗೆ ಬೀಳಬಾರದೆಂತಲೂ ಈ ಕ್ರಮವಿದೆ. ಗೋಡೆಗಳಲ್ಲಿ ಸಾಮಾನುಗಳನ್ನಿಡಲು ಅನುವಾಗುವಂತೆ ಗುಣೇವು ಬಿಡಿಸುತ್ತಾರೆ. ೭೮ ಮೊಳ ಗೋಡೆ ಎತ್ತರವಾದಾಗ ಸ್ವಲ್ಪ ದಿನ ಆರು ಬಿಡುತ್ತಾರೆ. ಹಸಿಗೋಡೆಯ ಮೇಲೆ ಜಂತಿ ಏರುವುದಿಲ್ಲ. ಗೋಡೆ ಕಟ್ಟಲು ಕೆಮ್ಮಣ್ಣು ಇಲ್ಲವೇ ಎರೆಮಣ್ಣನ್ನು ಉಪಯೋಗಿಸುವುದುಂಟು. ಕೆಲವರು ಗಾರೆಯಿಂದ ಮಾಡಿದ ಗಚ್ಚನ್ನು ಬಳಸುತ್ತಾರೆ.

ಕಟ್ಟಿಗೆ ಮುಟ್ಟು:

ಮನೆ ಕಟ್ಟುವಲ್ಲಿ ಒಡ್ಡರದೇ ಮುಖ್ಯ ಪಾತ್ರವೆಂದರೂ ಅದರಲ್ಲಿ ಬಡಗಿಯ ಪಾತ್ರವೂ ಸರಿಸಮವಾಗಿಯೇ ಇದೆ. ಬಾಗಿಲು, ಜಂತಿ, ಕಂಭಗಳ ನಿರ್ಮಾಣ ಬಡಿಗಾರನಿಂದಲೇ ಆಗಬೇಕು. ಮನೆಗೆ ಅಂದ ಹೆಚ್ಚುವುದು ಬಡಿಗಾರನ ಕಲಾತ್ಮಕತೆಯಿಂದಲೇ ಮನೆಗೆ ಬಳಸುವ ಕಟ್ಟಿಗೆಯ ಮುಟ್ಟು ಗಟ್ಟಿಯುಳ್ಳದ್ದಾಗಿರಬೇಕೆಂದೂ, ಅದು ತಲೆತಲಾಂತರ ನಿಲ್ಲಬೇಕೆಂದು ಜನಪದರು ಆಶಿಸುತ್ತಾರೆ. ಕರಿಮಲೆ, ತೊರಗ ಮತ್ತಿ ಮತ್ತು ಬೇವಿನ ಮುಟ್ಟ ಬಾಗಿಲು, ಕಂಭ, ಜಂತಿಗಳಿಗೆ ಗಟ್ಟಿಮುಟ್ಟೆಂದು ಹೇಳುತ್ತಾರೆ.  ಮತ್ತಿ ದುಬಾರಿಯಾದ್ದರಿಂದ ಬೇವಿನ ಮುಟ್ಟನ್ನೇ ಹೆಚ್ಚು ಬಳಸುವುದುಂಟು ಇದಕ್ಕೆ. ಹುಳ ತಗುಲುವುದಿಲ್ಲ ಎಂಬ ನಂಬಿಕೆಯೂ ಇದೆ. ತಾಳೆ ಗಿಡಗಳು ಲಭ್ಯವಿರುವ ಕಡೆ ತೊಲೆ, ಜಂತಿಗಳಿಗೆ ಬಳಸುತ್ತಾರೆ. ಬಾಗಿಲು ಬೇವಿನದ್ದಾಗಿದ್ದರೆ ಹೊಸ್ತಿಲು ಮಾತ್ರ ಜಾಲಿಕಟ್ಟಿಗೆದಾಗಿರುತ್ತದೆ. ಇದಕ್ಕೆ ಕಾರಣ ಬೇವಿನ ಹೊಸ್ತಿಲನ್ನು ದಾಟಬಾರದೆಂಬ ನಂಬುಗೆ.

ಕಂಭ:

ಮನೆಗೆ ಕಂಭಗಳೇ ಆಧಾರಸ್ತಂಭ. ಕಂಭ ಇಲ್ಲದ ಮನೆ ಮನೇನೆ ಅಲ್ಲ ಎಂಬ ತಿಳುವಳಿಕೆ ಇದೆ. ಕಂಭ ಇದ್ದಮನೆ ಜೀವಕ್ಕೆ ಧಕ್ಕೆ ಇಲ್ಲ ಅಂತ ನಂಬುಗೆಯಿದೆ. ನಡುಗಂಭ, ಗೋಡೆಗಂಭ ಮತ್ತು ತೊಲೆಗಂಭವೆಂದೂ ಮೂರು ರೀತಿಯ ಕಂಭಗಳುಂಟು. ಕಂಭಗಳ ವಿನ್ಯಾಸವೂ ನಾನಾ ಬಗೆ. ದುಂಡು ಕಂಭ, ನಾಲ್ ಮೂತಿಕಂಭ, ಐಮೂತಿಗಂಭ, ಗಜರಿಗಂಭ, ಮುಂತಾಗಿ. ಮಸಿಯಲ್ಲಿ ಬಾಗಿಲಿಗೆ ಎದುರಾಗಿ ಶೂಲಗಂಭ ಇರಬಾರದು ಎಂಬ ನಿರ್ಭಂಧವಿದೆ.

ಮನೆಯ ಮಾಡನ್ನು ಎತ್ತಿ ಹಿಡಿಯುವಲ್ಲಿ ಗೋಡೆ, ಕಂಭಗಳೇ ಆಧಾರ ಸ್ಥಂಭಗಳು ಕಂಭದಿಂದ ಗೋಡೆಗೆ ಅಡ್ಡಹಾಯುವ ಜಂತಿ ಬೇಕಷ್ಟೆ. ಈ ಜಂತಿಗಳು ಹೆಚ್ಚು ಉದ್ದವಾಗಿದ್ದರೆ ತಾಳಿಕೆ ಕಡಿಮೆ ಎಂದು ಗೋಡೆಯಿಂದ ಗೋಡೆಗೆ ನಡುವಿರುವ ಜಾಗವನ್ನು ಅಂಕಣಗಳಾಗಿ ವಿಭಾಗಿಸಿಕೊಂಡು ಒಂದೊಂದು ಅಂಕಣಕ್ಕೆ ತೊಲೆಕೂಡಿಸಿ, ತೊಲೆಗಳ ಭಾರವನ್ನು ಕಂಭಗಳಿಗೆ ಕೇಂದ್ರವಾಗಿಸಿ ಅಡ್ಡ ಜಂತಿ ಕೂಡಿಸುತ್ತಾರೆ. ಅಡ್ಡ ತೊಲೆ ಹೇರುವುದಿಲ್ಲ. ತೊಲೆಗಳ ಭಾರ-ಅವು ಜಂತಿಗಳನ್ನು ಆ ಮೂಲಕ ಮೇಲಿನ ಮಾಡನ್ನು ಹೊತ್ತಿರುತ್ತವೆ. ನೇರವಾಗಿ ಕಂಭಗಳ ಮೇಲೆ ಬಿದ್ದರೆ ಕಂಭಗಳು ಹೊರಲಾರವೆಂದೂ, ಮತ್ತು ಕಂಭಗಳ ಮಧ್ಯೆ ಬೋದಿಗೆಗಳನ್ನು ಕೂಡಿಸುತ್ತಾರೆ. ಬೋದಿಗೆ ಮತ್ತು ಕಂಭದ ಮಧ್ಯೆ ಕಳಸವೂ ಇರುತ್ತದೆ. ಕಂಭಗಳ ಕೆಳಗೆ ಅವುಗಳ ಅಳತೆಗನುಗುಣವಾಗಿ ಕಲ್ಲಿನ ಪೀಠಗಳನ್ನು ಇರಿಸುವುದೂ ಉಂಟು. ಕಂಭ ಮತ್ತು ಗೋಡೆಗಳಿಗೆ ಆತುಕೊಂಡಂತೆ ಬಿಗಿ ಕಟ್ಟಿಗೆ ಕೂಡಿಸಿರುತ್ತಾರೆ. ಕಂಭ ಮತ್ತು ತೊಲೆಗಳ ಮೇಲೆ ಜಂತಿ, ಜಂತಿಯ ಮೇಲೆ ಮಾಳವಂತ ದುಂಡಾದ ಚಿಕ್ಕ ಗಾತ್ರದ ಕಟ್ಟಿಗೆ-ಇಲ್ಲವೆ ಬಿದಿರು, ಅದರ ಮೇಲೆ ನೀರು ಹರಿದು ಹೋಗಲು ಅಗತ್ಯ ಕಂಡಷ್ಟು ಹರನಾಳಿಗೆ ಕೂಡಿಸುತ್ತಾರೆ. ಮೇಲು ಮುದ್ದೆಯ ಮೇಲೆ ೧/೨ ಅಡಿಯಷ್ಟು ಸವುಳು-ನೀರು ಹಿಡಿಲಾರದಂತಹದು-ಮಣ್ಣನ್ನು ಹಾಕುತ್ತಾರೆ. ಇದಿಷ್ಟು ಮುಚ್ಚಿ ಹೋಗುವಂತೆ ಇದರ ಮೇಲೆ ಗೋಡೆಯನ್ನು ೧.೧/೨-೩ ಅಡಿಯವರೆಗೆ ಎತ್ತರಿಸಿ ಕುಂಬೆ ಕಟ್ಟುತ್ತಾರೆ. ಕೆಳಗಿನ ಬುನಾದಿ ಮೇಲಿನ ಕುಂಬೆ ಎರಡೂ ಗಟ್ಟಿಯಾಗಿದ್ದರೆ ಮನೆ ತಾಳಿಕೆ ಬರುತ್ತದೆ.

ಒಳನೋಟ:

ಉತ್ತರ ಕರ್ನಾಟಕ ಮನೆಗಳು ಹೊರಗಿನ ಆಕೃತಿಯಲ್ಲಿ ಒಂದೇ ತೆರನಾಗಿ ಕಂಡರೂ ಒಳಗಿನ ಆಕಾರದಲ್ಲಿ ಭಿನ್ನಸ್ವರೂಪವನ್ನು ಹೊಂದಿವೆ. ಮೊದಲಿಗೆ ತಲಬಾಗಿಲು ಅದನ್ನೂ ದಾಟುತ್ತಿದ್ದಂತೆಯೇ ಇಲಲೆಕಗಳಲ್ಲಿ ದನದ ಅಂಕಣ. ದನಗಳು ನಿಲ್ಲುವ ಜಾಗದಲ್ಲಿಯೇ ಗೋದಲಿ, ಮೇಲುಗಡೆ ಅಟ್ಟ. ದನದ ಅಂಕಣ ಮತ್ತು ಮನೆಯ ಪಡಸಾಲೆಗೆ ಹೊಂದಿಕೊಂಡು ಕುಡುತೆ (ಇದರಲ್ಲಿ ದನಗಳಿಗೆ ಮುಸುರೆ ನೀರು ಕಾದಿರಿಸುತ್ತಾರೆ) ಇರುತ್ತದೆ. ಪಡಸಾಲೆ ದನದ ಅಂಕಣಕ್ಕಿಂತ ಒಂದು ಮೊಳ ಮೇಲಕ್ಕೆ ಇರುತ್ತದೆ. ಪಡಸಾಲೆಗೆ ಹೊಂದಿಕೊಂಡು ಬಲಭಾಗಕ್ಕೆ ಅಡುಗೆ ಮನೆ, ಬಚ್ಚಲು, ಪಕ್ಕದಲ್ಲಿ ದೇವರ ಮನೆ, ಕಾಳಿನ ಮನೆ ಹರುತ್ತದೆ. ಹೆಚ್ಚಿನ ಕಾಳು ಸಂಗ್ರಹಿಸಿಡಲು ನೆಲದಲ್ಲಿ ಕೊರೆದು ಮಾಡಿದ ಕಣಜ ಇಲ್ಲವೇ ಹಗೆವುಗಳಿರುತ್ತದೆ.

[1]

ಇಂಥದೇ ಮತ್ತೊಂದು ಬಗೆಯೆಂದರೆ ತಲಬಾಗಿಲ ಮುಂದೆ ‘ಬಂಕ’ ಇಎಉಚುಸು. ಇಕ್ಕೆಲಗಳಲ್ಲಿ ಮಾತ್ರ ಗೋಡೆ ಇದ್ದು ಮುಂಭಾಗ ತೆರದೇ ಇರುವ ಬಂಕದಲ್ಲಿ ಬಾಗಿಲಿನ ಎರಡೂ ಕಡೆ ದೊಡ್ಡ ದೊಡ್ಡ ಕಟ್ಟೆಗಳಿರುತ್ತವೆ. ಕಟ್ಟೆಗಳು ಒಳಗಡೆ ಟೊಳ್ಳಾಗಿದ್ದು ಕಟ್ಟಿಗೆ ಮತ್ತಿತರ ಸಾಮಾನುಗಳನ್ನೂ ಒಟ್ಟಲು ಬರುವಂತೆ ಕಟ್ಟಲಾಗಿರುತ್ತದೆ. ಮನೆಯ ಯಜಮಾನ ಬಂಕದಲ್ಲಿ ಕೂತಿದ್ದು ಸ್ನೇಹಿತರು, ಆಪ್ತರು ಬಂದರೆ ಅಲ್ಲಿ ಕೂಡಿಸಿ ಮಾತಾಡಿಸುತ್ತಾನೆ. ತೀರಾ ಬೇಕಾದವರು ನೆಂಟರು ಬಂದರೆ ಒಳಗೆ ಪಡಸಾಲೆಗೆ ಹೋಗುತ್ತಾರೆ.

ಬೀದರ್, ಗುಲ್ಬರ್ಗಾ ಮತ್ತು ಬಿಜಾಪೂರ ಜಿಲ್ಲೆಗಳಲ್ಲಿ ಇವುಗಳಿಗಿಂತ ಬೇರೆಯದಾದ ವಿನ್ಯಾಸವನ್ನು ಹೊಂದಿರುವ ಮನೆಗಳಿವೆ. ತಲಬಾಗಿಲು ದಾಟಿದರೆ ಅದಕ್ಕೆ ಹೊಂದಿಕೊಂಡು ಒಳಭಾಗದ ಇಕ್ಕೆಲಗಳಲ್ಲಿ ಒಂದೊಂದು ಕೋಣೆ ಇದ್ದು ಒಂದರಲ್ಲಿ ಮನೆಯ ಯಜಮಾನ ಇರುತ್ತಿದ್ದು ಮತ್ತೊಂದರಲ್ಲಿ ಆಪ್ತರು, ಸ್ನೇಹಿತರು ಬಂದಾಗ ಎದುರುಗೊಂಡು ಮಾತಾಡಿಸಲು ಮೀಸಲಿಡಲಾಗಿರುತ್ತದೆ. ಬಾಗಿಲು ಮತ್ತು ಪಡಸಾಲೆಯ ನಡುವೆ ಸುಮಾರು ೧೦x೧೫ ಅಡಿಯಷ್ಟು ಆವರಣವನ್ನು ತೆರದೇ ಇಡಲಾಗಿರುತ್ತದೆ. ಇದಕ್ಕೆ ಹೊಂದಿಕೊಂಡೇ ಪಡಸಾಲೆ, ಅಡುಗೆ ಕೋಣೆ, ದೇವರ ಕೋಣೆಗಳಿರುತ್ತವೆ. ತಲಬಾಗಿಲಿನ ಇಕ್ಕೆಲಗಿಂದ ಪಡಸಾಲೆವರೆಗೆ ೩-೪ ಅಡಿಗಳಷ್ಟು ಅಗಲವಿರುವ ಗಗ್ಗರಿಕಟ್ಟೆ ಇರುತ್ತದೆ. ಮನೆಯಲ್ಲಿ ಏನಾದರೂ ದೊಡ್ಡ ಕಾರ್ಯ ನಡೆದಾಗ ಪಂಕ್ತಿ ಊಟಕ್ಕೂ ಇದು ಅನುಕೂಲವಾಗುತ್ತದೆ.

 

ಭಾಗ

ನಂಬಿಕೆ- ಸಂಪ್ರದಾಯ- ಆಚರಣೆಗಳು-ಗಾದೆ ಮತ್ತು ನುಡಿಗಟ್ಟುಗಳು:

ತಾವು ವಾಸಿಸುವ ಮನೆಗಳ ಬಗೆಗೆ ಜನಪದರಿಗೆ ಭಾವನಾತ್ಮಕವಾದ ಸಂಬಂಧ ಉಂಟು. ಭಾರೀ ಮನೆ ಕಟ್ಟಿಕೊಂಡಿದ್ದರೂ ಅದಕ್ಕೆ ಘನತೆ ಬರುವುದು ಅಡುಗೆ ಮನೆಯ ಧಾರಾಳತನದಿಂದಲೇ ಎಂಬುದನ್ನೂ ಮೇಲಿಂದ ಮೇಲೆ ನೆನೆಸುತ್ತಾರೆ. ಮನೆಯ ಪ್ರತಿಯೊಂದು ವಸ್ತುಗಳಲ್ಲಿ ಅವರ ಭಾವನೆಗಳನ್ನು ಕಾಣಬಹುದು. ‘ಮನೆ’ ದೇಹಕ್ಕೆ ಪ್ರತಿಮೆಯಾಗಿ ಆಧ್ಯಾತ್ಮದಲ್ಲೂ ಬಳಸಲ್ಪಟ್ಟಿದೆ.[2] ಮಾನವನ ಭಾವನಾ ವಿಕಾಸಕ್ಕೆ ಮನೆ ಪ್ರೇರಕವಾಗಿರುವುದರಿಂದಲೇ ಮನೆಯನ್ನು ಕುರಿತು ನಂಬುಗೆಗಳು, ಆಚರಣೆಗಳು ಹುಟ್ಟಿಕೊಂಡು ಬೆಳೆದು ಬಂದಿವೆ.

ನಂಬುಗೆಗಳು:

ತನಗೂ ತನ್ನ ಮುಂದಿನ ತಂತತಿಗೂ ಆಶ್ರಯ ಸ್ಥಾನವಾಗಿ ಇಡೀ ಕುಟುಂಬದ ನೆಮ್ಮದಿಗೆ ಕಾರಣವಾಗಿ ನಿಲ್ಲುವ ಮನೆ ಬಗೆಗೆ ಮಾನವ ಪ್ರಾಚೀನ ಕಾಲದಿಂದಲೂ ನಂಬುಗೆ ಶ್ರದ್ಧೆಗಳನ್ನು ಪಾಲಿಸಿಕೊಂಡು ಬಂದ. ಮನೆ ಬಗೆಗೆ ಭಯ, ಭಕ್ತಿಗಳು ಮೂಡಲು ಅವನ ಕುಟುಂಬದ ಜೀವ ಸುರಕ್ಷಿತವಾಗ ಉಳಿಯಬೇಕೆಂಬುದೇ ಮೂಲ. ಹೊಸ ಮನೆ ಪ್ರವೇಶಕ್ಕೆ ಮುನ್ನ ಮನೆಗೆ ‘ಕಟ್ಟು’ ಮಾಡಿಸುವುದುಂಟು. ಹೀಗೆ ಮಂತ್ರ ಹಾಕಿಸುವುದರಿಂದ ದೆವ್ವ ಪಿಶಾಚಿಗಳ ಕಾಟ ಇರುವುದಿಲ್ಲವೆಂದು ನಂಬುಗೆ. ‘ಸಿಂಹಾಯ’ದಲ್ಲಿ ಮನೆ ಕಟ್ಟಬಾರದೆಂತಲೂ, ಮಠ, ಕೋರ್ಟ್, ಕಚೇರಿಗಳಂತಹ ಕಟ್ಟಡಗಳು ಮಾತ್ರ ಆ ಆಯದಲ್ಲಿ ಕಟ್ಟಬಹುದೆಂತಲೂ, ನಂಬುಕೆಗಳಿವೆ. ಕೆಲವು ಪ್ರತಿಷ್ಥಿತ ಕುಟುಂಬಗಳು ಒಂದು ಕೋಣೆಯನ್ನೋ ಇಲ್ಲವೇ ಮುಂದಿನ ಬಂಗವನ್ನೋ ಸಿಂಹಾಯದಲ್ಲಿ ಕಟ್ಟಿಕೊಂಡಿರುವುದುಂಟು. ಆ ಬಂಕದಲ್ಲಿ ನ್ಯಾಯಕ್ಕೆ ಕೂತರೆ ಯಾರೂ ಆ ಮನೆಯ ಯಜಮಾನನ ವಿರುದ್ಧ ಧ್ವನಿ ಎತ್ತಲಾರರು ಎಂಬುದು ಇದರಿಂದಾಗಿ ಬಂದ ನಂಬುಕೆಯಾಗಿದೆ. ‘ತಲಬಾಗಿಲಿಗೆ ತಲೆಕೊಟ್ಟು ಸಾಯಬೇಕು’ ಎಂಬುದು ಜೀವನಪರ್ಯಂತ ಹುಟ್ಟಿ ಮನೆಯಲ್ಲಿ ಬದುಕಬೇಕು ಎಂಬುದನ್ನು ಸಾರುತ್ತದೆ. ಇಂತಹ ಇನ್ನೂ ಕೆಲವು ನಂಬುಗೆಗಳನ್ನು ಇಲ್ಲಿ ಸಂಗ್ರಹಿಸಿಟ್ಟಿದೆ.

೧. ಮಾಡಿದರೆ ಮನೆ ಮುಂದೆ ಲಗ್ನ ಮಾಡಬೇಕು.

೨. ಹೊಸ್ತಿಲ ಮೇಲೆ ಸೀನಬಾರದು

೩. ಹೊಸ್ತಿಲನ್ನು ತುಳಿಯಬಾರದು.

೪. ಮನೆ ಕುಂಬೆ ಬೇಲೆ ಗೂಗೆ ಕೂಗಿದರೆ ಅಪಶಕುನ

೫. ಮನೆ ಕುಂಬೆ ಮೇಲೆ ಕುಂತು ಕಾಗೆ ಅರಿಸಿದರೆ ಬೀಗರು ಬರುತ್ತಾರೆ.

೬. ಸರಿ ಸಂಖ್ಯೆಯಲ್ಲಿ ಮನೆಯ ಕಿಟಕಿ-ಬಾಗಿಲು-ತೊಲೆ ಕಂಭಗಳನ್ನಿಡಬೇಕು.

೭. ಮನೆಯ ಹಿರಿಯರು ಸತ್ತರೆ ಮೂರು ತಿಂಗಳು ಕಾಲ ಮನೆ ಬಿಡಬೇಕು.

ಸಂಪ್ರದಾಯಆಚರಣೆಗಳು:

ಮದುವೆಯ ಕಾಲಕ್ಕೆ ಹೆಣ್ಣಿನ ಮನೆಯವರು ಮಾತು ಕೊಡುವ ಮುಂಚೆ ಗಂಡಿನ ಮನೆ ನೋಡುವ ಸಂಪ್ರದಾಯವಿದೆ. ಗುಡಿಸಲು ಮನೆಯಿರಲಿ, ಗಚ್ಚಿನ ಮನೆಯಿರಲಿ ಆ ಮೂಲಕ ಗಂಡಿನ ಮನೆತನದ ಬಗೆಗೆ ಅಕ್ಕಾಪಕ್ಕಾ ವಿಚಾರಿಸಿ ಮಾತುಕೊಡುತ್ತಾರೆ. ಮನೆತನದ ಬಗೆಗೆ ಕೆಟ್ಟ ಮಾತು ಕೇಳಿ ಬಣದರೆ ಸಂಬಂಧ ಕುದುರುವುದು ಅಸಾಧ್ಯವಾದುದು. ಮದುವೆಯಾದ ನಂತರ ಹೆಣ್ಣು ಗಂಡನ ಮನೆಗೆ ಬಂದು ಸೇರಿಕೊಳ್ಳುವುದೂ ಮನೆ ತುಂಬಿಸಿಕೊಳ್ಳುವ ಸಂಪ್ರದಾಯವೇ ಆಗಿದೆ.

ಮುಡಿ ಚೆಟ್ಟು, ಮೈಲಿಗೆ ಆದಾಗ ಮನೆ ತೊಡೆದುಕೊಳ್ಳುವುದು, ದೊಡ್ಡವರು ಸತ್ತಾಗ ಮನೆ ಬಿಟ್ಟಿ ಬಾಗಿಲಿಗೆ ಬೇಲಿ ಬಡಿಯುವುದೂ ಆಚರಣೆಯ ಭಾಗಗಳು.

ಗಾದೆ ಮತ್ತು ನುಡಿಗಟ್ಟುಗಳು

ಜೀವನಾನುಭವದ ಪ್ರಮಾಣದೊಂದಿಗೆ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬರುವ ‘ಗಾದೆ’ ಮಾತುಗಳು ಜನಪದರ ಅಧಿಕೃತ ಶಾಸನಗಳೇ.[3] ಮನೆಯನ್ನು ಹೇಗೆ ಕಟ್ಟಬೇಕು ಎಂಬುದರಿಂದ ‘ಮನೆತನ’ ಹೇಗೆ ಬೆಳೆಯುತ್ತದೆ, ಮತ್ತು ಮನೆ ಏಕೆ ಬೇಕು- ಎಂಬೆಲ್ಲ ವಿಷಯಗಳ ಬಗೆಗೆ ಗಾದೆ ಮಾತುಗಳಿವೆ. ನುಡಿಗಟ್ಟುಗಳು ಗಾದೆಗಳಿಗಿಂತ ಭಿನ್ನ. ಒಂದೊಂದೇ ಪದದಲ್ಲಿನ ಹೆಚ್ಚಿನ ಅರ್ಥವನ್ನು ಅದು ಮಿಟ್ಟುಕೊಂಡಿರುವ ನುಡಿಗಟ್ಟುಗಳೂ ಕೂಡ ಜನಪದರ ಬದುಕಿನ ಅನುಭವಗಳ ಪಟ್ಟಿಗಳು. ಮನೆಗೆ ಸಂಬಂಧಿಸಿದಂತೆ ಕೆಲವು ಗಾದೆ-ನುಡಿಗಟ್ಟುಗಳನ್ನು ಕೆಳಗೆ ಕೊಟ್ಟಿದೆ.

ಗಾದೆ:

೧. ಮನೆಗೆದ್ದು ನಾರುಗೆಲ್ಲು

೨. ಮನೆ ತಿನ್ನುವವಗೆ ಕದ ಹಪ್ಪಳ ಸಂಡಿಗೆ

೩. ಪೋರನೆಚ್ಚಿ ಬ್ಯಾರೆ ಆಗಬಾರದು; ಹೋರಿ ನೆಚ್ಚಿ ಹೊಲ ಮಾಡಬಾರದು.

೪. ಹುತ್ತಿನ ಮನೆ ಸರ್ಪಕ್ಕೆ ಮೂಲ

೫. ಮನೆ ದೀಪವೆಂದು ಮುದ್ದಿಟ್ಟರೆ ಗಪ್ಪ ಮೀಸೆ ಸುಟ್ಟಿತು.

೬. ಮನೆಯೆಲ್ಲ ನಿಮ್ಮದೆ ತಂಬಿಗೆ ಮಾತ್ರ ಮುಟ್ಟಬೇಡಿ.

೭. ಎನಿತುಂ ಕಾಯ್ದ ಬೆನ್ನೀರ್ ಮನೆ ಸುಡದು (ಗ್ರಂಥಸ್ಥ ಗಾದೆ)

೮. ಮನೆಗೆ ಬೆಂಕಿ ಹತ್ತಿದಾಗ ಬಾವಿ ತೊಡಲಿಕ್ಕೆ ಹೋದರು.

೯. ಮನೆಗೆ ಒಂದು ಮುದುಕಿ ಒಲೆಗೆ ಒಂದು ಕುಂಟಿ.

೧೦. ಮನೆಗೆ ಬಂದರೆ ಮಜ್ಜಿಗೆ ಕೊಡದಾಕೆ ಹೇಳಿ ಕಳಿಸಿದರೆ ಹಾಲು ಕೊಡುತ್ತೇನೆ ಅಂದ ಹಾಗೆ

೧೧. ಮನೆ ಮುಂದೆ ಹಳ್ಳ ಹರಿದರೂ ಕುಡಿಯುವುದಕ್ಕೆ ನೀರಿಲ್ಲ.

೧೨. ಮನೆ ಮುರಿದರೆ ಕಟ್ಟಬಹುದು ಮನ ಮುರಿದರೆ ಕಟ್ಟಲಾಸಲ್ಲ.

೧೩. ನಾಲ್ಕು ಮದುವೆ ಮಾಡಬಹುದು ಒಂದು ಮನೆ ಕಟ್ಟಲಾಸಲ್ಲ.

೧೪. ಅದವ್ಯಾಗ ಹೊಲ ಇಲ್ಲದಿದ್ರೂ ಊರಾಗ ಮನೆ ಇರಬೇಕು.

೧೫. ಹೊಡದರ ಹೊಲ ಮಾಡಿದರೆ ಮನಿ.

ನುಡಿಗಟ್ಟುಗಳು:

೧. ಮನೆತನ, ೨. ಮನೆತನಸ್ಥ (ಗೌರವಸ್ಥ), ೩. ಮನೆ ಮುರುಕ, ೪. ಹೊಗೆಯಾಡು, ೫. ಮನೆಯವ, ೬. ಮನೆಯಾಕೆ

ಬೈಗುಳಗಳು:

ಶಬ್ದ ಭಂಡಾರದ ನಿಗಿನಿಗಿ ಭಗವಾದ ಬೈಗುಳಗಳು ಜನಪದರ ಮಾನಸಿಕ ಸ್ವಾಸ್ಥ್ಯಕ್ಕೆ ಕುರುಹುಗಳು. ಸಮರ್ಥನೂ, ಹೇಡಿಯೂ ಕೂಡ ಬೈಗುಳ ಪ್ರಯೋಗಿಸಬಹುದು. ಬೈಗುಳಗಳ ಮೂಲ ಉದ್ದೇಶ ಮಾನಸಿಕವಾಗಿ ನೋವುಂಟು ಮಾಡುವುದೇ ಆಗಿರುತ್ತದೆ. ಬೈಗುಳಗಳು ಹತಾಶರ ಕೈಯಲ್ಲಿ ಶಾಪಗಳಾಗಿ ಪರಿವರ್ತಿತಗೊಳ್ಳಲೂ ಬಹುದು. ‘ನಿನ್ನಥರದ ಕಲ್ಲು ಕಿತ್ತಿಸ್ಸೇನು’- ಎಂಬುದು ಬೈಗುಳವಾದರೆ ‘ಥರದ ಕಲ್ಲು ಸಡಲಲಿ’ ಎಂಬುದು ಶಾಪವಾಗುತ್ತದೆ. ಕೆಲವು ಬೈಗುಳಗಳನ್ನು ಕೆಳಗೆ ಸಂಗ್ರಹಿಸಿ ಕೊಟ್ಟಿದೆ.

೧. ಮನೆ ಮುರುಕ . ೨. ಮನೆಹಾಳ, ೩. ದೇಗುಲಗೆಟ್ಟೊನೇಳ, ೪. ಮನೆಗೆ ಕಾರೆಬೇಲಿ ಬಾರೆ ಬೇಲಿ ಬಡಿಲಿ, ೫. ದೀಪಕ್ಕ ದಿಕ್ಕಲ್ಹಂಗ ಆಗಲಿ, ೬. ನಡುಮನೆ ಕಂಭ ಮುರದ ಬೀಳಲಿ.

ಚರಿತ್ರೆಯ ಅಧ್ಯಯನದಲ್ಲಿ ರಾಜ-ಮಜಾರಾಜರ ಬದುಕನ್ನಷ್ಟೇ ಗುರುತಿಸುವ ನಾವು ನಿಜವಾಗಿ ಚರಿತ್ರೆ ನಿರ್ಮಾಣ ಮಾಡಿದವರನ್ನು ಮರೆಯುತ್ತೇವೆ. ರಾಜ  ಕಟ್ಟಿಸಿದ ಅರಮನೆ, ನೀರಿನ ಹೊಂಡ, ದೇವಾಲಯಗಳು ವಾಸ್ತುಶಿಲ್ಪದ ಕುರುಗುಗಳೆಂದು ಶ್ಲಾಘಿಸುತ್ತೇವೆ. ಆದರೆ ಜನಪದರ ಭೌತಿಕ ಸಂಸ್ಕೃತಿಯ ಕುರುಹುಗಳಾದ ‘ಮನೆ’ಗಳನ್ನೂ ಈ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವುದು ತುಂಬಾ ಅಗತ್ಯವಾದುದು.

* * *

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)[1]      ಕಣಜಗಳು ಮನೆಯ ಒಳಗಡೆ ಇದ್ದು ಹಗೆವುಗಳು ಮನೆಯ ಅಂಗಳದಲ್ಲಿ ಇರುತ್ತವೆ. ಕಣಜಗಳಿಗಿಂತ ಹಗೆವು ದೊಡ್ಡದಿದ್ದು ಅದು ಹೇರಿ ಒಂದು ಚಕ್ಕಡಿ ತುಂಬುವಷ್ಟು-ಲೆಕ್ಕದ ಮೇಲೆ ಇರುತ್ತದೆ.

[2]      ಷರೀಫರ ‘ಸೋರುತಿಹುದು ಮನೆಯ ಮಾಳಿಗೆ’ ಎಂಬ ಗೀತೆಯನ್ನು ನೋಡಬಹುದು.

[3] ಎಂ. ಚಿದಾನಂದ ಮೂರ್ತಿಯವರು ‘ಗಾದೆ’ಗಳನ್ನು ಅನಧಿಕೃತ ಶಾಸನಗಳೆಂದು ಗುರುತಿಸುತ್ತಾರೆ.