ಬೆಚ್ಚನೆಯ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ
ಇಚ್ಛೆಯನರಿತು ನಡೆವ ಸತಿಯಾಗಿ ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ||

ಹೆಣ್ಣು, ಹೊನ್ನು, ಮನೆ ಈ ಮೂರರಲ್ಲಿ ಸರ್ವಜ್ಞನ ದೃಷ್ಟಿಯಲ್ಲಿ ಮೊದಲ ಸ್ಥಾನ ದೊರೆತಿರುವುದು ಮನೆಗೆ. ಅಷ್ಟೇ ಅಲ್ಲ ನಮ್ಮ ಜನಪದರ ಆಶಯದ ಪ್ರಕಾರ ಮೊದಲ ಪ್ರಾಶಸ್ತ್ಯ ದೊರೆತಿರುವುದು ಮನೆಗೇ. ಹೊಟ್ಟೆ ಮೇಲೆ ತಣ್ಣೀರ್ ಬಟ್ಟೆ ಹಾಕ್ಕೊಂಡು ಮಲಗಿದ್ರೂ ಯಾರೂ ಕೇಳಲ್ಲ ನಮ್ದೂ ಅಂತ ಒಂದು ನೆರಳಿರಬೇಕು ಎನ್ನುವುದೂ ಮನೆಯನ್ನೇ ಕುರಿತದ್ದು.

ಮನೆ ಮಾನವನನ್ನು ಎಲ್ಲ ರೀತಿಯಿಂದಲೂ ರಕ್ಷಿಸುತ್ತ ಬಂದಿರುವ ಒಂದು ಆಸರೆ ಮಳೆ, ಗಾಳಿ, ಬಿಸಿಲಿನಿಂದ ಅಷ್ಟೇ ಅಲ್ಲದೆ; ದುಷ್ಟಜಂತುಗಳಿಂದ, ಕಳ್ಳಕಾಕರಿಂದ ಅವನನ್ನು ಪಾರು ಮಾಡುತ್ತ ಬಂದಿರುವ ಒಂದು ನೆಲೆ, ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಇದೂ ಒಂದು ಹಾಗೂ ಅತಿ ಮುಖ್ಯವಾದುದು.

ಮನೆಯ ಇತಿಹಾಸ, ಮಾನವನ ಇತಿಹಾಸದಷ್ಟೇ ಹಳೆಯದು. ಮಾನವನ ನಾಗರಿಕತೆಯ ಇತಿಹಾಸದ ವಿಕಾಸದೊಂದಿಗೇ ಮೆಯ ಇತಿಹಾಸದ ವಿಕಾಸವನ್ನೂ ಕಾಣಬಹುದಾಗಿದೆ. ಪೊಟರೆ, ಗುಹೆಗಳಿಂದ-ಗುಡಿಸಲು, ಗಗನ ಚುಂಬಿ ಗೃಹಗಳವರೆಗೆ ಅದರ ಇತಿಹಾಸ ದೊಡ್ಡದು. ತನ್ನ ಮತ್ತು ತನ್ನವರ ರಕ್ಷಣೆಯ ಕಲ್ಪನೆ ಹಾಗೂ ಹೊಣೆಗಾರಿಕೆ ಮಾನವನಲ್ಲಿ ಮೂಡಿದಾಗಲೇ ವಿವಿಧ ವಿನ್ಯಾಸಗಳ ಮನೆಗಳೂ ಅವತರಿಸತೊಡಗಿರಬೇಕು. ಅವ್ಯವಸ್ಥೆಯ, ಅಸ್ಥಿರ ಬದುಕಿನಿಂದ, ವ್ಯವಸ್ಥಿತ ಹಾಗೂ ಸ್ಥಿರ ಬದುಕು ರೂಪುಗೊಂಡಂತೆ ಇದರ ಅವಶ್ಯಕತೆಯೂ ಹೆಚ್ಚಾಗಿ ಕಂಡಿರಬೇಕು. ಮೊದಮೊದಲು ಹೇಗೋ ನೈಸರ್ಗಿಕ ನೆಲೆಯಲ್ಲಿ ಆಶ್ರಯ ಪಡೆಯುತ್ತಿದ್ದ ಅವನು, ಅನಂತರ ತನಗೆ ಅಗತ್ಯವಾದಷ್ಟನ್ನು, ಅಗತ್ಯವಾದೆಡೆಯಲ್ಲಿ ನಿರ್ಮಿಸಿಕೊಳ್ಳಲು ತೊಡಗಿದ, ಆದಿಮಾನವನ ಆಹಾರ ಪದ್ಧತಿ, ಉಡುಗೆ-ತೊಡುಗೆ, ಆಚಾರ-ವಿಚಾರಗಳಲ್ಲಿ ಸ್ಥಿತ್ಯಂತರಗಳು ತಲೆದೋರಿದಂತೆ ಕಾಲಕ್ರಮೇಣ ಇದರಲ್ಲೂ ಕಾಣಿಸಿಕೊಳ್ಳತೊಡಗಿತು. ಇಂತಹ ಒಂದು ಕಲ್ಪನೆ ಮಾನವನಿಗೆ ಮೂಡಿದ್ದೇ ಕ್ರಿ.ಪೂ. ೫೦೦೦ರ ಸುಮಾರಿಗೆ ಎನ್ನಲಾಗಿದೆ. ಅಲೆಮಾರಿ ಬದುಕಿನಲ್ಲಿ ವಾಸಸ್ಥಳದ ಅಗಗತ್ಯವನ್ನು ಅಷ್ಟು ತೀವ್ರವಾಗಿ ಪರಿಗಣಿಸಿದ ಅವನಿಗೆ ಸ್ಥಿರವಾಗಿ ನೆಲೆಗೊಂಡ ಮೇಲೆ ಅದು ಅನಿವಾರ್ಯವಾಯಿತು.

ಆದಿಮಾನವ ಅಲೆಮಾರಿ ಜೀವನದ ಅಂತ್ಯದೊಂದಿಗೇ, ಅವನ ಹೊಸ ಬದುಕಿನ ಶುಭಾರಂಭವೂ ಆಯಿತೆನ್ನಬಹುದು. ಇದು ಎಲ್ಲಾ ರೀತಿಯಿಂದಲೂ ಅವನನ್ನು ಹೊಸ ಲೋಕಕ್ಕೆ ಕೊಂಡೊಯ್ಯುವ ಮಾರ್ಗವಾಯಿತು. ತಾನು, ತನ್ನವರು, ತನ್ನದು ಎಂಬ ಭಾವನೆ ಅವನಲ್ಲಿ ಹೆಚ್ಚಾಗಿ ಬೆಳೆಯ ತೊಡಗಿದಂತೆಲ್ಲಾ ಈ ಮನೆಯ ವ್ಯವಸ್ಥೆ ಅದಕ್ಕನುಗುಣವಾಗಿ ರೂಪುಗೊಳ್ಳತೊಡಗಿತು. ಮಾನವ ಸ್ಥಿರವಾಗಿ ಒಂದು ಕಡೆ ನೆಲೆಗೊಳ್ಳಲು ನಿರ್ಧರಿದ ಮೇಲೆ ಕಾಣಿಸಿಕೊಂಡದ್ದು ಸಾಮುದಾಯಿಕ ಮಾನವ ವಸತಿ ಇರಬೇಕು. ಸ್ವಾರ್ಥ ಹೆಚ್ಚಿದಂತೆಲ್ಲಾ ಅಥವಾ ತಾನು-ತನ್ನವರು ಎಂಬ ಭಾವನೆ ಬೆಳೆದಂತೆಲ್ಲಾ ಅದು ಕೌಟುಂಬಿಕ ಮಾನವ ವಸತಿಗೆ ಎಡೆ ಮಾಡಿಕೊಟ್ಟಿರಬೇಕು. ಅದರ ಜೊತೆಯಲ್ಲಿಯೇ ಅವನ ಆರ್ಥಿಕ ಬದುಕು ವಿಕಾಸಗೊಂಡಂತೆ, ಪ್ರಾಣಿ ವಸತಿ ಧಾರ್ಮಿಕ ಭಾವನೆ ಬೆಳೆದಂತೆ ದೈವ ವಸತಿಗಳೂ ತಲೆ ಎತ್ತಿಕೊಂಡವು. ಪ್ರಪಂಚದ ಮಾನವ ಇತಿಹಾಸವನ್ನು ಗಮನಿಸುವಾಗ, ಅವನ ನಾಗರಿಕತೆಯ ಬೆಳವಣಿಗೆಯ ಜೊತೆ ಜೊತೆಯಲ್ಲಿಯೇ ಅವನ ವಾಸಸ್ಥಾನದ ವಿಕಾಸವನ್ನು ಗುರುತಿಸಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಒಂದಂಶವನ್ನು ಪ್ರಮುಖವಾಗಿ ಗಮನಿಸಬೇಕಾಗುತ್ತದೆ. ಮೇಲೆ ಸೂಚಿಸಿದ ಯಾವುದೇ ಬಗೆಯ ವಸತಿಯಾದರೂ, ಅದರ ರೀತಿ-ನೀರಿ ಹಾಗೂ ವಿನ್ಯಾಸ ಆಯಾ ಪ್ರದೇಶದ ಭೌಗೋಳಿಕ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಕಟ್ಟುಪಾಡು ಇತ್ಯಾದಿಗಳನ್ನು ಬಹಳವಾಗಿ ಅವಲಂಭಿಸಿರುತ್ತದೆ ಎಂಬುದು ಸ್ಪಷ್ಟ.

ಪರಿಸರದ ಭೌತ ಸನ್ನಿವೇಶ ವಸತಿಯ ನಿರ್ಮಾಣದಲ್ಲಿ  ಪ್ರಮುಖ ಪಾತ್ರವಹಿಸುತ್ತದೆ. ಜವುಗು ಪ್ರದೇಶ, ಭೂಕಂಪ ಪೀಡಿತ ಪ್ರದೇಶ, ಹೆಚ್ಚು ಮಳೆಗಾಲ ಪೀಡಿತ ಪ್ರದೇಶ ಹಾಗೆಯೇ ಬಿಸಿಲು ಪೀಡಿತ ಪ್ರದೇಶ, ನೆರೆ ಹಾವಳಿಯ ಪ್ರದೇಶ ಹೀಗೆ, ಆಯಾ ಭೌಗೋಳಿಕ ಸನ್ನಿವೇಶಕ್ಕನುಗುಣವಾಗಿ ವಸತಿಯ ನಿರ್ಮಾಣಕಾರ್ಯ ನಡೆಯುತ್ತದೆ. ಮಾನವ ಹೀಗೆ ಭೌಗೋಳಿಕ ಸನ್ನಿವೇಶವನ್ನು ಸದುಪಯೋಗಗೊಳಿಸುತ್ತಾ ಬಂದದ್ದು ಅವನ ಭೌದ್ಧಿಕ ಕಸರತ್ತಿಗೆ ಒಂದು ಸಾಕ್ಷಿ. ಅನಿವಾರ್ಯತೆಯೇ ಹೊಸ ಹುಟ್ಟಿನ ತಾಯಿ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಜೊತೆಗೆ ಆಯಾ ಪ್ರದೇಶದಲ್ಲಿ ದೊರೆಯುವ ಸಾಮಗ್ರಿಯನ್ನು ಆತ ಸಮರ್ಪಕವಾಗಿ ಬಳಸಿಕೊಳ್ಳಲು ಉದ್ದೇಶಿಸಿದ್ದು ಗಮನಾರ್ಹ.

ಮನೆಯ ಮೂಲ ಉದ್ದೇಶ, ಮಾನವನ ಅವಶ್ಯಕತೆಗಳನ್ನು ಪೂರೈಸುವುದು. ಅಂದರೆ, ಚಳಿ, ಗಾಳಿ, ಮಳೆ, ಬಿಸಿಲು, ಮತ್ತಿತರ ಬಾಧೆಗಳಿಂದ ರಕ್ಷಿಸುವುದು. ಇವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯಾ ಪ್ರದೇಶದ ಮನೆಗಳು ರೂಪುಗೊಂಡಿರುತ್ತವೆ.

ಪರಿಸರದ ಭೌತಿಕ ಸನ್ನಿವೇಶದ ಜೊತೆಗೆ, ಆಯಾ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಗಳ ಸ್ಥಿತಿ-ಗತಿಯೂ ಮುಖ್ಯ ಕಾರಣವಾಗುತ್ತದೆ. ಮೊದಲನೆಯದಾಗಿ ಅವರ ಆರ್ಥಿಕ ಸ್ಥಿತಿ, ಇದರ ಜೊತೆಗೆ ಅವರ ಮನೋಭಾವ, ಆರ್ಥಿಕ ಸ್ಥಿತಿ ಮತ್ತು ಮಾನವನ ಮನಸ್ಥಿತಿ ಯಾವುದೇ ಪರಿಸರವನ್ನು ತನ್ನ ಮನೋಭಾವಕ್ಕನುಗುಣವಾಗಿ ಪರಿವರ್ತಿಸಿಕೊಳ್ಳಲು ಸಾಧ್ಯ. ಆದರೆ ಇಂತಹವುಗಳ ಸಂಖ್ಯೆ ಕಡಿಮೆ. ಏನೆಯಾದರೂ ಬಹುಮಟ್ಟಿಗೆ ಅದು ಪರಿಸರದ ಭೌಗೋಳಿಕ ಪರಿಸ್ಥಿತಿಯನ್ನು ಪೂರ್ಣ ಕಡೆಗಣಿಸಲು ಸಾಧ್ಯವಾಗುವುದಿಲ್ಲ.

ಇವುಗಳ ಜೊತೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂದರ್ಭಗಳೂ ಮನೆಯ ವಿನ್ಯಾಸದಲ್ಲಿ ಪ್ರಮುಖವಾಗಿಯೇ ಕಂಡು ಬರುತ್ತದೆ.

ಈ ಹಿನ್ನೆಲೆಯಲ್ಲಿ ಕೌಟುಂಬಿಕ ಮಾನವ ವಸತಿಗಳನ್ನು ಪ್ರಾದೇಶಿಕವಾಗಿ ಗಮನಿಸುವಾಗ ಹಲವು ವೈಶಿಷ್ಟ್ಯಗಳು ಗೋಚರಿಸುತ್ತವೆ. ಕಲೆ, ಭಾಷೆ, ಸಾಂಪ್ರದಾಯಗಳಂತೆಯೇ ಮಾನವ ವಸತಿಗಳ ವಿನ್ಯಾಸವೂ ಭಿನ್ನ ಭಿನ್ನವಾಗಿ ಕಂಡು ಬರುವುದು ಸಹಜವೆನಿಸುತ್ತದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಪ್ರದೇಶದ ಮನೆಗಳು ಆಯಾ ಪ್ರದೇಶದ ಭೌಗೋಳಿಕ ಪರಿಸ್ಥಿತಿಗನುಗುಣವಾಗಿ ರಚನೆ ಗೊಂಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಹಿಂದಿನ ಕಾಲದ ಮನೆಗಳ ವಿನ್ಯಾಸದಲ್ಲಿ ಅದರ ಉಪಯುಕ್ತತೆಯಷ್ಟೇ ಪ್ರಧಾನವಾಗಿರುತ್ತಿತ್ತು. ಅದರ ಜೊತೆಗೆ ಸ್ವಲ್ಪ ಮಟ್ಟಿಗೆ ಸಾಂಪ್ರದಾಯಿ ಅಂಶವೂ ಬೆರೆಸಿರುತ್ತಿತ್ತು. ಕ್ರಮೇಣ ಇವೆರಡರ ಜೊತೆಗೆ ಮನೆಯೊಡೆಯನ ಕಲಾದೃಷ್ಟಿ, ಸೌಂದರ್ಯ ಪ್ರಜ್ಞೆ, ಅವಕ್ಕೆ ಪೈ ಪೋಟಿಯಾಗಿ ನಿಂತುವು. ಮಾನವ ವಸತಿಯ ವಿನ್ಯಾಸ ಪೂರ್ಣ ಬದಲಾದದ್ದು ಇಲ್ಲಿಯೇ.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಬಾಳಿಕೆ ಮನೆಗಳು ಒಂದು ವಿಶೇಷವಾದರೆ; ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಇದರ ಜೊತೆಗೆ ಹೊಂದಿಸಿಕೊಂಡ-ತೊಟ್ಟಿಮನೆ, ಕಂಬಸಾಲು ಮನೆ, ಮಹಡಿ ಮನೆ ಮುಂತಾದುವೂ ಅಲ್ಲಿಯ ಅವಶ್ಯಕತೆಗಳನ್ನು ಪೂರೈಸುವ ಹಿನ್ನೆಲೆಯಲ್ಲಿ ಮಹತ್ವದ್ದಾಗಿಯೇ ಕಂಡುಬರುತ್ತದೆ. ಇವುಗಳಲ್ಲಿ-ಅಡುಗೆ ಮನೆ, ಉಗ್ರಾಣ, ದೇವರ ಮನೆ, ಬಚ್ಚಲು ಮನೆ, ಬಾಣಂತಿ ಮನೆ, ಬಿಡದಿ ಮನೆಗಳು ವಾಸದ ಮನೆಯ ಒಳಭಾಗಗಳಾಗಿ ಕಂಡು ಬರುವುದು ಸಾಮಾನ್ಯ. ದಕ್ಷಿಣ ಕರ್ನಾಟಕದ ವಾಸದ ಮನೆಗಳಲ್ಲಿ ಇವಿಷ್ಟು ಇದ್ದೇ ಇರುತ್ತವೆ. ಜೊತೆಗೆ ಉತ್ತರ ಕರ್ನಾಟಕದ ಭಾಗದಲ್ಲಿ ವಿಶೇಷವಾಗಿ ಕಾಣದ ಹೆಂಚಿನ ಮಹಡಿ ಮನೆಗಳು ದಕ್ಷಿಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಕಾರಣ ತೆಂಗನ್ನು ಬೆಳೆಯುವ ಪ್ರದೇಶಗಳು ಇದಾದ್ದರಿಂದ ತೆಂಗಿನ ಕಾರ್ಯವನ್ನು ಕೊಖರಿಗೆ ಹಾಕಲು ಗಾಳಿ, ಬೆಳಕು ಸ್ವಲ್ಪ ಮಟ್ಟಿಗೆ ಹಾದು ಹೋಗುವ ವಾತಾವರಣ ಬೇಕಾಗುತ್ತದೆ. ಇಂತಹ ಅನಿವಾರ್ಯತೆಗಳು ಮನೆಯ ವಿನ್ಯಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎನಿಸುತ್ತದೆ. ಮತ್ತೆ ಇವೆಲ್ಲ ಅವರವರ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಬದಲಾಗುವುದು ಅಷ್ಟೇ ಸಹಜ ಇಲ್ಲಿಯೂ ಗುಡುಸಲುಗಳೂ ಇರುವಂತೆಯೇ ಅದಕ್ಕೆ ತದ್ವಿರುದ್ದವಾದ ಶ್ರೀಮಂತಿಕೆಯ ಮನೆಗಳು ತಲೆ ಎತ್ತಿರುತ್ತವೆ.

ಬದುಕು ಕೇವಲ ಹೊಟ್ಟೆ ಪಾಡಿನ ಪ್ರಶ್ನೆ ಅಷ್ಟೇ ಅಲ್ಲ ಎಂಬ ಮಾತಿದೆ. ಅಷ್ಟೇ ಆಗಿದ್ದಿದ್ದರೆ ಬದುಕಿನಲ್ಲಿ ಇಷ್ಟೆಲ್ಲಾ ಹೋರಾಟ ಇರುತ್ತಿರಲಿಲ್ಲ. ಮಾನವನದಲ್ಲಿಯ ಅತೀವವಾದ ಬಯಕೆಗಳು, ಆಸೆ ಆಕಾಂಕ್ಷೆಗಳು ಅವನನ್ನು ಸುಂದರ ಲೋಕಕ್ಕೆ ಕೊಂಡೊಯ್ಯಲು ಕಾರಣವಾದುವು. ಅವನಲ್ಲಿಯ ಚಾದ್ಮಿಕ ಪ್ರಜ್ಞೆ, ಸೌಂದರ್ಯ ಪ್ರಜ್ಞೆಗಳ ಕನಸಿನ ಲೋಕವೊಂದನ್ನು ಸೃಷ್ಟಿಸಲು ಕಾರಣವಾದುವು. ಅವನು ಕಟ್ಟಿದ ಮನೆ, ಬಳಸುವ ಸಾಧನ, ತೊಡುವ ಉಡುಗೆ-ತೊಡುಗೆ ಇತ್ಯಾದಿಗಳಲ್ಲಿ ಅಡಗಿದ್ದ ಅವನ ಸೂಪ್ತ ಬದುಕೆ ಬಿಚ್ಚಿ ಬಯಲಾಗಿರುವುದನ್ನು ಕಾಣಬಹುದು. ಮನೆಯ ಮುಂಬಾಗಿಲ ಕೆತ್ತನೆ, ಗೋಡೆಗಳ ಮೇಲಿನ ಚಿತ್ರಕಲೆ, ಹೊಸ್ತಿಲ ಕೆತ್ತನೆ, ಕಂಬಗಳ ಹಾಗೂ ಸಿಂಬೆಯ ಮೇಲಿನ ಚಿತ್ರಕಲೆ ಒಂದೊಂದು ಅವನ ಪ್ರತಿಭೆ ಹಾಗೂ ಸೌಂದರ್ಯ ‌ಪ್ರಜ್ಞೆಯ ಪ್ರತೀಕ. ಅವನು ಬಳಸುತ್ತಾ ಬಂದ ಒಂದೊಂದು ವಸ್ತುವಿನಲ್ಲಿಯೂ ಇಂತಹ ಕಲೆಗಾರಿಕೆಯನ್ನು ಕಾಣಬಹುದು. ಮಾನವ ಬಳಸುತ್ತ ಬಂದ ಅಥವಾ ಹೊಂದುತ್ತ ಬಂದ ವಸ್ತು ವಿಶೇಷಗಳಲ್ಲಿ ಅವುಗಳ ಪ್ರಯೋಜನದ ದೃಷ್ಟಿ ಒಂದಾದರೆ, ಮತ್ತೊಂದು ಅದರ ಕಲಾತ್ಮಕತ ದೃಷ್ಟಿಯೂ ಕಂಡು ಬರುತ್ತದೆ. ವಾಸಿಸುವ ಮನೆ ಅವಿಗೆ ಹೇಗಿದ್ದರೂ ನಡೆಯುತ್ತದೆ ಎಂಬುದಲ್ಲ. ಅದು ರಕ್ಷಣೆಯನ್ನು ನೀಡುವಂತೆಯೇ, ಅಂದ ಚೆಂದದಿಂದ ಕೂಡಿದ್ದು ಮನಸ್ಸಿಗೆ, ಕಣ್ಣಿಗೆ ಆನಂದವನ್ನು ಹರ್ಷವನ್ನು ನೀಡುವಂತಿರಬೇಕು, ಹೀಗಾಗಿ ಅವನ ಸೌಂದರ್ಯ ಪ್ರಜ್ಞೆಯ ಜೊತೆ ಜೊತೆಯಲ್ಲಿಯೇ ಕಲಾತ್ಮಕತೆಯೂ ಬೆಳೆದು ಬಂದಿತು. ಇದರಿಂದಾಗಿಯೇ ಇಂದು ಮನೆಗಳ ನಿರ್ಮಾಣದ ವೆಚ್ಚ ಗಗನಕ್ಕೇರಿ ಮನೆ ಕಟ್ಟಿಸುವುದೆಂದರೆ ಕೆಲವರಿಗೆ ಖುಚಿಯ ವಿಷಯವಾಗಿರುವಂತೆಯೇ ಮತ್ತೆ ಕೆಲವರಿಗೆ ಸಿಂಹ ಸ್ವಪ್ನವಾಗಿದೆ. ಮನೆ ಕಟ್ಟಿ ನೋಡಿ, ಮದುವೆ ಮಾಡಿ ನೋಡು ಎಂಬಂತಹ ಗಾದೆಗಳು ಈ ಕಾರಣಕ್ಕಾಗಿಯೇ ಹುಟ್ಟಿಕೊಂಡಿರುವುದನ್ನು ನೋಡಬಹುದು.

ಮನೆ, ಮಡದಿ, ಮಕ್ಕಳು ಇವುಗಳ ನಂಟು ಹೆಚ್ಚಿದಂತೆಲ್ಲ ಬದುಕನ್ನು ಪ್ರೀತಿಸುವ ಅದನ್ನು ಆಹ್ಲಾದಿಸುವ ಬಗೆಯೂ ಹೆಚ್ಚಾಗುತ್ತವೆ. ಒಂದೊಂದರ ಮೇಲೆ ಹರಿಯುವ ಗಮನ ಹಿರಿದಾಗುತ್ತದೆ. ಆ ಹಿನ್ನೆಲೆಯಲ್ಲಿ ಅವುಗಳ ಮೌಲ್ಯವೂ ಮಹತ್ವದ್ದೆನ್ನಿಸುತ್ತದೆ. ಮನೆಯೊಳಗೆ ನೆಯೊಡೆಯನಿದ್ದಾನೆಯೇ ಇಲ್ಲವೋ ಎಂಬ ವಚನದ ಸಾಲಾಗಲಿ, ‘ಅನ್ನ ಹಾಕಿದ ಮನೆ ಕೆಡಲ್ಲ, ಗೊಬ್ಬರ ಹಾಕಿದ ಹೊಲ ಕೆಡಲ್ಲ’ ಎಂಬಂತಹ ಗಾದೆಗಳಾಗಲಿ- ಮನೆ ಇರಬೇಕಾದ ರೀತಿ ನೀತಿಗಳ ಕಡೆ ಒತ್ತು ಕೊಡುವ ಅಭಿಪ್ರಾಯವನ್ನು ಹೊಂದಿದ ಮಾತುಗಳಾಗಿವೆ.

ಮನೆ ನಮ್ಮನ್ನು ನಮ್ಮ ಸಂಸ್ಕೃತಿಯನ್ನು ಹೊರಗೆಡುಹುವ ಅತಿ ಮುಖ್ಯ ಸಾಧನ. ಮುಖ ನೋಡಿದ್ರೆ ಗೊತ್ತಾಗೋಲ್ವೆ ಎಂಬ ಮಾತು ಈ ದೃಷ್ಟಿಯಿಂದ ಮುಖ್ಯವಾದುದೇ. ಮದುವೆಯ ಸಂಬಂಧವನ್ನು ಬೆಳೆಸುವಾಗ ಮನೆ ನೋಡುವ ಶಾಸ್ತ್ರವನ್ನು ಹೆಣ್ಣು-ಗಂಡಿನ ಕಡೆಯವರಿಬ್ಬರೂ ಇಟ್ಟುಕೊಳ್ಳುವುದು ಈ ಬಗೆಯ ಹಲವು ಕಾರಣಗಳಿಂದಾಗಿಯೇ ಎಂಬುದು ಗಮನಾರ್ಹ. ಮನೆ, ಮನುಷ್ಯನ ಅಂತರಂಗ- ಬಹಿರಂಗಗಳೆರನ್ನು ಹೊರಗೆಡಹುವ ಒಂದು ಸಾಧನವೂ ಹೌದು. ಅಂತರಂಗದ ಕಲಾತ್ಮಕ ದೃಷ್ಟಿ ಬಹಿರಂಗದ ಆರ್ಥಿಕ ಸ್ಥಿತಿಗತಿ ಇವೆರಡೂ ಅದರಲ್ಲಿ ಒಗ್ಗೂಡಿರುತ್ತವೆ. ಹಲವು ಸಂದರ್ಭಗಳಲ್ಲಿ ಇಂದು ಮನುಷ್ಯ ‘ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು’ ಎಂಬ ಅನುಭವದ ಮಾತನ್ನು ಕಡೆಗಣಿಸಿ ಮುಗ್ಗರಿಸುತ್ತಿರುವುದನ್ನು ಕಾಣುತ್ತೇವೆ. ಬಹುಶಃ ಇದಕ್ಕೆ ಮುಖ್ಯ ಕಾರಣವೆಂದರೆ, ಅವರಲ್ಲಿ ಸುಪ್ತವಾಗಿ ಅಡಗಿರುವ ಬಯಕೆಗಳಿಗೆ, ಕಲಾತ್ಮಕ ದೃಷ್ಟಿಗೆ ಅಭಿವ್ಯಕ್ತಿ ಕೊಡುವಲ್ಲಿ ಅವರ ಆರ್ಥಿಕ ಸ್ಥಿತಿ ಸಹಕರಿಸದಿರುವುದು. ಆದರೂ ದಮ್ಮು ಕಟ್ಟಲು ಹೋಗಿ ಒದ್ದಾಡುವುದನ್ನು ಕಂಡಾಗ ಮನೆಯ ಬಗೆಗೆ ಮಾನವನಿಗಿರುವ ಸಂಬಂಧ ಎಂತಹುದು ಎಬುವುದನ್ನು ಸೂಚಿಸುತ್ತದೆ.

ಮನೆ ಒಂದು ರೀತಿಯಲ್ಲಿ ಸಂಸ್ಕೃತಿಯ ಬೀಡು, ಶಾಖೆಯ ನೆಲೆ, ಶಿಕ್ಷಣ ಕೇಂದ್ರ. ಇದು ಮಾನವನ ಸರ್ವಸ್ವ. ಅಂತಹ ಮನೆ ಹೇಗಿರಬೇಕೆಂಬುದು ಆ ವ್ಯಕ್ತಿಗೇ ಬಿಟ್ಟುದ್ದು. ಇದು ಹಲವು ಸಂದರ್ಭಗಳಲ್ಲಿ ಭೌತಿಕ ಸನ್ನಿವೇಶದ ಪರಿಸ್ಥಿತಿಯನ್ನು ಮೀರಿ ನಿಲ್ಲುವುದು ಈ ಕಾರಣಕ್ಕಾಗಿಯೇ. ಈ ಹಿನ್ನೆಲೆಯಲ್ಲಿ ಮಾನವನ ಆಸೆ- ಆಕಾಂಕ್ಷೆಗಳ ಪೂರ್ವ ಅಭಿವ್ಯಕ್ತಿಯನ್ನು ಅಲ್ಲಿ ಕಾಣಬಹುದು.

* * *