೧೯೮೦ರ ಭಾರತ ಅಭ್ಯುದಯ ಸೇವಾ ಸಂಸ್ಥೆಯು (ಐ ಡಿ ಎಸ್) ಮೇಡ್ಲೇರಿ ಹಳ್ಳಿಯನ್ನು ಮೂಲ ಸ್ಥಾನವನ್ನಾಗಿ ಮಾಡಿಕೊಂಡು ಅದರ ಮಂಡಲದ ೨೧ ಹಳ್ಳಿಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದಾಗ ಅದು ಕೇಂದ್ರೀಕರಿಸಿದ ಗುಂಪುಗಳಲ್ಲಿ ಒಂದಾದ ಕುರುಬರ ಗುಂಪಿನ ಸಂಪರ್ಕ ಬಂದಿತು. ಇದಲ್ಲದೆ ಲಂಬಾಣಿಗಳನ್ನೊಳಗೊಂಡ ಬಡ ಸ್ತ್ರೀಯರು ಹೈನುಗಾರಿಕೆಯಲ್ಲಿ ಆಸಕ್ತಿಯುಳ್ಳವರಾಗಿದ್ದು ಕಂಡುಬಂದಿತು. ಸಂಘಟನೆಯ ಕಾರ್ಯ (ಇದು ನಿಧಾನವಾಗಿ ನಡೆಯುವ ಕಾರ್ಯ) ಪ್ರಗತಿಯಲ್ಲಿದ್ದಾಗ “ಬರಡು” ಅಂತ ಹೇಳುವ ಭೂಮಿಯನ್ನು ಉತ್ಪನ್ನ ಕೊಡುವಂತೆ ಮಾಡುವ ಈ ಜನರ ಪ್ರಯತ್ನದ ಕೊರತೆಯಿಂದಾಗಿ ಬರಡು ಬೀಳಿಸಲಾಗಿತ್ತು ಎಂದು ತಿಳಿಯಿತು. ಮೇಡ್ಲೇರಿ ಮಂಡಲದ ಹಳ್ಳಿಗಳ ಸುತ್ತಮುತ್ತಲು “ಪಡ ಭೂಮಿ”ಅಂತ ಕರೆಯುವ ಅಂದಾಜು ೧೦ ಸಾವಿರ ಹೆಕ್ಟೇರದ ಈ ಭೂಮಿ ಹಿಂದೊಮ್ಮೆ ದಟ್ಟ ಅರಣ್ಯ ಭೂಮಿಯಾಗಿದ್ದು; ಒಳ್ಳೆಯ ಹುಲ್ಲಿನಿಂದ ಕೂಡಿತ್ತು ಎಂದು ಕೃಷಿ ವಿಶ್ವವಿದ್ಯಾನಿಲಯದಲ್ಲಿದ್ದ ಹುಲ್ಲಿನ ವಿಷಯದಲ್ಲಿ ತಜ್ಞರಾದ ಒಬ್ಬ ಪ್ರಾಧ್ಯಾಪಕರಿಂದ ನಂತರ ತಿಳಿದು ಬಂದಿತು. ಅವರು ಇಲ್ಲಿ ಇದ್ದ ಕೆಲವೊಂದು ಜಾತಿಯ ಹುಲ್ಲುಗಳು ಭಾರತದಲ್ಲಿಯೇ ಶ್ರೇಷ್ಠವಾದವುಗಳು ಎಂದು ಹೇಳಿದರು. ಈಗ ಈ ಭೂಮಿ ಹೆಚ್ಚಾಗಿ ಬರಡು ಭೂಮಿಯಿಂದ ಹಾಗೂ ಸಣ್ಣ ಸಣ್ಣ ಬರಡು ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು; ಭಾಗಶಃ ನೀಲಗಿರಿ ಗಿಡಗಳ ಮಧ್ಯ ಇರುವ ಹುಲ್ಲನ್ನು ಕುರಿ ಮೇಯಿಸಲು ಹಾಗೂ ನೀರನ್ನು ಕುಡಿಸಲು ಕುರುಬರ ಹಾಗೂ ಅರಣ್ಯಾಧಿಕಾರಿಗಳ ನಡುವೆ ಯಾವಾಗಲೂ ತಿಕ್ಕಾಟ ನದೆದೇ ಇದೆ. ಈ ತಿಕ್ಕಾಟ ಒಂದು ಕೊಲೆಗೂ ಕೂಡ ಕಾರಣವಾಗಿದೆ. ಅರಣ್ಯಾಧಿಕಾರಿಗಳು ತಮ್ಮ (ಸರಕಾರಿ) ಭೂಮಿಯಲ್ಲಿ ಕುರುಬರಿಂದ ಅತಿಕ್ರಮಣವಾಗುತ್ತಿದೆ ಎಂದು ತಿಳಿಯುತ್ತಾರೆ. ಇದಲ್ಲದೆ ಅತಿ ಮಧ್ಯವರ್ತಿ ಅರಣ್ಯದಲ್ಲಿರುವ ಹುಲ್ಲನ್ನು ತಿಂದು; ನೀರನ್ನು ಕುಡಿದು; ಕುರಿಗಳು ತಮ್ಮ ಜಿಂಕೆಗಳಿಗೆ ಹುಲ್ಲನ್ನು ಹಾಗೂ ನೀರನ್ನು ಇಲ್ಲದಂತೆ ಮಾಡುತ್ತವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಆದರೆ ಅದರ ವ್ಯತಿರಿಕ್ತವಾಗಿ ಕುರುಬರು ತಮ್ಮ “ಗ್ರಾಮೀಣ ಸಾಮಾಹಿಕ ಭೂಮಿಯನ್ನು” ಅರಣ್ಯಾಧಿಕಾರಿಗಳು ಅತಿಕ್ರಮಣ ಮಾಡಿದ್ದಾರೆಂದು ಅಪಾದಿಸಿದ್ದಲ್ಲದೇ ಈ ಭೂಮಿ ಸಾಕಷ್ಟು ಹುಲ್ಲನ್ನು ಹಾಗೂ ನೀರನ್ನು ಕಳೆದ ೫-೬ ದಶಕಗಳಿಂದ ಒದಗಿಸಿ ಕುರಿಗಳ ಜೀವನಕ್ಕೆ ಆಧಾರವಾಗಿತ್ತು ಎಂದು ಹೇಳುತ್ತಾರೆ. ಇಲ್ಲಿ ದೊರಕುವ ಸಂಪನ್ಮೂಲಗಳನ್ನು ಕಾದು ಜೀವಿಗಳೊಂದಿಗೆ (ಜಿಂಕೆ ಮತ್ತು ಇತರ ಪ್ರಾಣಿಗಳು) ಕುರಿಗಳು ಹಂಚಿಕೊಂಡು ಸಾಮರಸ್ಯವಾಗಿ ಬಾಳಿಕೊಂಡು ಬಂದಿರುವದೊಂದು ನಿದರ್ಶನ ಎಂದು ಹೇಳುತ್ತಾರೆ. ಜಿಂಕೆಗಳ ಹಾಗೂ ಕುರಿಗಳ ನಡುವೆ ನಡೆದ ಈ ತಿಕ್ಕಾಟಕ್ಕೆ ನೀಲಗಿರಿಯಂಥ ಪರಕೀಯ ತೋಟಗಳನ್ನು ನಿರ್ಮಿಸಿದ ಅರಣ್ಯಾಧಿಕಾರಿಗಳೇ ಕಾರಣ ಎನ್ನುತ್ತಾರೆ. ಯಾಕೆಂದರೆ ನೀಲಗಿರಿ ಗಿಡಗಳು ಹುಲ್ಲನ್ನು ಬೆಳೆಯಲು ಅವಕಾಶ ಮಾಡಿ ಕೊಡುವುದಿಲ್ಲ. ಇದಕ್ಕೂ ಕೆಟ್ಟದ್ದಾಗಿ ಜಿಂಕೆಗಳು ಅಭಯಾರಣ್ಯದ ನೆರೆಹೊರೆಯ ಸಣ್ಣ ಹಿಡುವಳಿದಾರರ ಹಾಗೂ ಇತರ ಕೃಷಿಕರ ಹೊಲಗಳಿಗೆ ರಾತ್ರಿಯಲ್ಲಿ ನುಗ್ಗಿ ಬೆಳೆಗಳನ್ನು ನಿರಾತಂಕವಾಗಿ ತಿಂದು ಹಾನಿ ಮಾದಿದರೂ ನಡೆಯುತ್ತದೆ, ಆದರೆ ಅಭ್ಯಾರಣ್ಯದಲ್ಲಿ ಕುರಿಗಳನ್ನು ತೆಗೆದುಕೊಂಡು ಹೋಗ್ದರೆ ಅರಣ್ಯಾಧಿಕಾರಿಗಳು ತಮ್ಮನ್ನು ಥಳಿಸಿ ಕಿರುಕುಳ ಕೊಡುತ್ತಾರೆಂದು ಕುರುಬರು ಅಪಾದಿಸುತ್ತಾರೆ. ಅಲ್ಲದೆ ಬೇಕಾಯ್ದೆಶೀರ ಮೇಯಿಸಿದ್ದೀರೆಂದು ಕುರಿಗಳನ್ನು ಜಪ್ತು ಮಾಡಿ ರಾಣೆಬೆನ್ನೂರು ನಗರಕ್ಕೆ ಕೊಂಡೊಯ್ಯುತ್ತಾರೆ ಎಂದು ತಕರಾರು ಹೇಳುತ್ತಾರೆ.

ಮೇಡ್ಲೇರಿ ಮಂಡಲದ ಹಳ್ಳಿಗಳಲ್ಲಿಯ ೪೦,೦೦೦ ಜನಸಂಖ್ಯೆಯ ಪ್ರಮುಖ ಜನಾಂಗ ಕುರುಬರ ಜನಾಂಗವಾಗಿದೆ. (ಶೇಕಡಾ ೩೫) ಇತರ ಗ್ರಾಮೀಣ ಬಡಜನಾಂಗಗಳಾದ ಲಂಬಾಣಿಯ ಹಾಗೂ ಇತರ ಜನಾಂಗದ ಸ್ತ್ರೀಯರು ಕೂಡ ಹೈನುಗಾರಿಕೆಯಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಈ ಅರೆ ಅಲೆಮಾರಿಗಳು ಊರಿನ ಹೊರಗೆ ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದು ತಮ್ಮ ದನಕರು ಹಾಗೂ ಕುರಿಗಳನ್ನು ಮೇಯಿಸಲು ಗ್ರಾಮೀಣ ಭೂಮಿಯ ಮೇಲೆ ಬಹಳ ಅವಲಂಬಿತರಾಗಿದ್ದಾರೆ. ಅಲ್ಲದೆ ಅವರ ಜೀವನೋಪಾಯಕ್ಕೆ ಬೇಕಾಗುವ ಸೌದೆಯು ಇದೇ ಅರಣ್ಯದಿಂದ ಲಭ್ಯವಾಗಿರುವುದರಿಂದ ಈ ಮೇಲಿನ ಪ್ರಸಂಗದಿಂದ ಹಾಗೂ ಸಾರ್ವಜನಿಕ ಭೂಮಿಯ ಕಾಡು ನಾಶವಾಗಿ ಬರಡಾಗಿರುವುದರಿಂದ ಒಂದು ತಲೆ ಹೊರೆಯನ್ನೂ ಕೂಡ ಅವರಿಗೆ ತರಲು ಅತಿ ಕಷ್ಟವಾಗುತ್ತಿದೆ. ತಮ್ಮ ಮನೆತನದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಬಡ ಸ್ತ್ರೀಯರು ಒಂದೆರಡು ಎಮ್ಮೆ, ಆಕಳು ಅಥವಾ ಕುರಿಗಳ ಸಾಕಾಣಿಕೆಯನ್ನು ಮಾಡುತ್ತಾರೆ. ಅಂಕಸಾಪುರ ತಾಂಡಾಕ್ಕೆ ಅಲ್ಲಿಯ ಜನರ ಸಮಸ್ಯೆಗಳನ್ನು ತಿಳಿಯಲು ನಾನು ಗ್ರಾಮೀಣ ಸಂಘಟಿಕರೊಂದಿಗೆ ಭೇಟಿ ಕೊಟ್ಟಾಗ ವಿಶೇಷವಾಗಿ ಮಹಿಳೆಯರು ಹೈನುಗಾರಿಕೆಯಲ್ಲಿ ಆಸಕ್ತಿ ತೋರಿಸಿದರಲ್ಲದೇ ಎಮ್ಮೆಗಳನ್ನು ಕೊಳ್ಳಲು ಬ್ಯಾಂಕಿನ ಸಾಲ ದೊರಕಿಸುವ ಸಮಸ್ಯೆ ಅವರಿಗಿದೆ ಎಂದು ತಿಳಿಯಿತು. ಮುಂದೆ ಚರ್ಚೆ ನಡೆದಾಗ ಮೇವನ್ನು ದೊರಕಿಸುವದು ಒಂದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಯುತಿ. ಅದರ ಸಂಗಡವೇ ದನಗಳ ಆರೋಗ್ಯದ ಸಮಸ್ಯೆ ಕೂಡ ಅವರನ್ನು ಕಾಡುತ್ತಿದೆ ಎಂದು ತಿಳಿಯಿತು. ಇಂತಹ ಚರ್ಚೆಗಳು ಎಲ್ಲೆಡೆಯಲ್ಲಿ ನಡೆದುದರ ಪರಿಣಾಮವಾಗಿ ಹೈನುಗಾರಿಕೆಯ ಉದ್ಯೋಗಕ್ಕಾಗಿ ಹೆಂಗಳೆಯರನ್ನು ಸಂಘಟಿಸಲು ದಾರಿಯಾಯಿತು.

ಸರಕಾರಿ ಅಧಿಕಾರಿಗಳ ಹಾಗೂ ಜನರ ನದುವೆ ಸಂಪರ್ಕ ಕಲ್ಪಿಸುವ ಯತ್ನಗಳು

ಅಧಿಕಾರಿಗಳನ್ನು ಹಾಗೂ ಜನರನ್ನು ಕೂಡಿಸಿ ಯಾವ ಯಾವ ಕ್ಷೇತ್ರಗಳಲ್ಲಿ ಕೂಡಿ ಕೆಲಸ ಮಾಡಲು ಸಂಭವಣಿಯ ಎಂಬುದರ ಬಗ್ಗೆ ಸಂವಾದ ನಡೆಸಲು ಭಾರತ ಅಭ್ಯುದಯ ಸೇವಾ ಸಂಸ್ಥೆಯ (ಐ ಡಿ ಎಸ್) ಪ್ರಮುಖ ಪ್ರಯತ್ನವಾಗಿತ್ತು. ಮೇಲೆ ಹೇಳಿದ ಸಮಸ್ಯೆಗಳಿಂದ ಚಿಂತಿತರಾಗಿರುವ ಬಡ ಗ್ರಾಮೀಣ ಜನರಿಗಾಗಿ ಸರ್ವಸಾಮಾನ್ಯವಾಗಿ ಇಂತಹ ಪ್ರಯತ್ನಗಳನ್ನು ಈ ಸಂಸ್ಥೆ ಮಾಡುತ್ತದೆ. ಕೆಲಮಟ್ಟಿಗೆ ಸಂಘಟನೆಯ ಹಾಗೂ ಸಾಮಾನ್ಯ ಕಾರ್ಯ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿವೆ.

ಸಾಮೂಹಿಕ ಭೂಮಿಯ ಬಗೆಗೆ ಆಸಕ್ತಿ ತೋರಿಸಿದ ಕೆಲವು ಗುಂಪುಗಳಲ್ಲಿ ಎರಡು ಗುಂಪುಗಳೆಂದರೆ ಒಂದು ಹೈನುಗಾರಿಕೆಯನ್ನು ಕೈಗೆತ್ತಿಕೊಂಡ ಸ್ತ್ರೀಯರ ಗುಂಪು ಹಾಗೂ ಕುರುಬರ ಗುಂಪು ವಿಶೇಷವಾಗಿ ಹರಿಜನ ಸ್ತ್ರೀಯರನ್ನು ಸೂಬಾಬುಲ ಸಸಿಗಳನ್ನು ಹಾಗೂ ಮೇವಿಗೆ ಸಂಬಂಧಿಸಿದ ಸಸ್ಯಗಳನ್ನು ಸಣ್ಣ ಪ್ರಮಾಣದಲ್ಲಿ ತಮ್ಮ ಮನೆಯ ಸುತ್ತಲು ಇರುವ ಖಾಲಿ ಜಾಗದಲ್ಲಿ ಹೊಲದ ಒಡ್ಡಿನ ಗುಂಟ ಹಾಗೂ ಮೇವಿನ ಪ್ರಾಟುಗಳಲ್ಲಿ ಬೆಳೆಯಲು ಭಾರತ ಅಭ್ಯುದಯ ಸೇವಾಸಂಸ್ಥೆ ಪ್ರೋತ್ಸಾಹಿಸುತ್ತದೆ. ಈ ಕಾರ್ಯ ಚಟುವಟಿಕೆಗಳು ಪ್ರಾರಂಭದಲ್ಲಿ ಕಷ್ಟವೆನೆಸಿದರೂ ಕೆಲವರಿಗೆ ಇದನ್ನು ಸಾಧಿಸಲು ಶಕ್ಯವಾಯಿತು. ಕೆಲವು ಸರಕಾರಿ ಅಧಿಕಾರಿಗಳು, ವಿಶೇಷವಾಗಿ ಜಿಲ್ಲಾಧಿಕಾರಿ ಸ್ತ್ರೀ ಸಂಘಟನೆಗಳಿಗೆ ಸಹಾನುಭೂತಿ ಪರವಾಗಿದ್ದರು ಹಾಗೂ ಬ್ಯಾಂಕಿನ ಸಾಲ ಹಾಗೂ ಇತರೆ ಅನುಕೂಲತೆಗಳನ್ನು ಒದಗಿಸುವಲ್ಲಿ ಸಹಾಯ ಮಾಡಲು ಅವರು ಸರಕಾರಿ ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು.

೧೯೮೨ ರಲ್ಲಿ ಜಿಲ್ಲಾಧಿಕಾರಿಗಳು ಭೇಟಿ ಕೊಟ್ಟಾಗ ಮಹಿಳೆಯರ ಗುಂಪುಗಳೊಂದಿಗೆ ಒಳ್ಳೆಯ ಚರ್ಚೆ ನಡೆದು ಮೇವಿನ ಸಮಸ್ಯೆಯ ಪರಿಹಾರಕ್ಕೆ ಹಾಗೂ ತಡವಾಗಿ ಆಗುತ್ತಿರುವ ಸಾಲದ ಹಣ ಮರುಪಾವತಿಯ ಬಗೆಗೆ ಆಗುವ ತೊಂದರೆಗೆ ಭಾರತ ಅಭ್ಯುದಯ ಸೇವಾ ಸಂಸ್ಥೆಯ ಸಹಾಯದೊಂದಿಗೆ ೨೫ ಎಕರೆ ಭೂಮಿಯಲ್ಲಿ ಮೇವಿನ ಕೃಷಿ ಮಾಡಲು ಸಲಹೆ ಇತ್ತರು. ಇದು ಮಹಿಳೆಯರಿಗೂ ಕೂಡ ಒಪ್ಪಿಗೆಯಾಯಿತು.

ಅರೇ ಮಲ್ಲಾಪುರದಲ್ಲಿ ಸಾಮೂಹಿಕ ಒಡೆತನದ ಮೇವಿನ ತೋಟ

ಜಿಲ್ಲಾಧಿಕಾರಿಗಳೊಂದಿಗೆ ನಡೆದ ಈ ಚರ್ಚೆ ಮಹತ್ವದ ಹಾಗೂ ಆಸಕ್ತಿಯಿಂದ ಕೂಡಿದ ಒಂದು ಪ್ರಯೋಗಕ್ಕೆ ಹಾದಿಯಾಯಿತು. ಈ ಪ್ರಯೋಗದಲ್ಲಿ ಭೂಹೀನ ಸ್ತ್ರೀ ಪುರುಷರು (ಅಂದಾಜು ೧೨) ೨೫ ಎಕರೆ ಬೀಳು ಭೂಮಿಯನ್ನು ಅಭಿವೃದ್ಧಿಗೊಳಿಸಲು ಹಾಗೂ ವ್ಯವಸ್ಥಿತವಾಗಿಡಲು ತಮ್ಮನ್ನು ತೊಡಗಿಸಿಕೊಂಡರು. ಬರಡಾದ ಭೂಮಿಯನ್ನು ಮೇವಿನ ತೋಟವನ್ನಾಗಿ ಅಭಿವೃದ್ಧಿಪಡಿಸುವದು ಸರಿಯಾಗಿ ನೀರು ಹಾಗೂ ಮಣ್ಣಿನ ಸಂರಕ್ಷಣೆ ಮಾಡುವ ನಾನಾ ಜಾತಿಯ ಹುಲ್ಲನ್ನು ಬೆಳೆಸುವ ಇತ್ಯಾದಿ ಪ್ರಯೋಗಗಳಲ್ಲಿ ಹಾಗೂ ಒಂದು ಜೈವಿಕ (ತಾವೇ) ಬೇಲಿಯಾಗಿ ಬಡಜನರು ಪ್ರಮುಖ ಪಾತ್ರವಹಿಸಿದರು. ಹೆಚ್ಚಿನ ವಿವರಗಳನ್ನು ಭಾರತ ಅಭ್ಯುದಯ ಸೇವಾ ಸಂಸ್ಥೆಯ ನಾನಾ ಸುದ್ಧಿ ಪತ್ರಗಳಲ್ಲಿ ಅಗಾಗ್ಗೆ ಪ್ರಕಟಗೊಂಡ ಲೇಖನಗಳಲ್ಲಿ ಕಂಡುಕೊಳ್ಳಬಹುದು. (ಉದಾ:ಅಕ್ಟೋಬರ ೮೪ ರ ಪತ್ರಿಕೆಯಲ್ಲಿ ಪ್ರಕಟವಾದ “ಅರೇಮಲ್ಲಾಪುರದಲ್ಲಿ ಸಾಮೂಹಿಕ ಒಡೆತನದ ಮೇವಿನ ತೋಟ)” ಈ ತೋಟದಲ್ಲಿ ನಡೆದ ಅಭಿವೃದ್ಧಿ ಕೆಲಸಗಳು ಅಧಿಕಾರಿಗಳ ಹಾಗೂ ಜನರ ಪ್ರಶಂಸೆಗೆ ಪಾತ್ರವಾದವು. ಅನಾವೃಷ್ಟಿ ಕಾಲದಲ್ಲಿ ಈ ತೋಟವು ಒಂದು ಮಹತ್ವವಾದ “ಗೋ ಶಾಲೆ” ಯಾಗಿ ಪರಿಣಮಿಸಿತು. ಮತ್ತು ಹಳ್ಳಿಗಳ ಮೇಳೆ ನಿಯಂತ್ರಣ ಹೊಂದಿದ ಗ್ರಾಮೀಣ ಬಡಜನರ ಗುಂಪುಗಳಿಗೆ ಈ ಪ್ರಯೋಗಗಳಿಗೆ ಈ ಪ್ರಯೋಗಗಳಲ್ಲಿ ಎದುರಿಸಿದ ಕಠಿಣ ಸಮಸ್ಯೆಗಳ ಪರಿಸ್ಥಿತಿಗಳಿಂದ ಅವುಗಳಲ್ಲಿ ಏನಿದೆ ಎಂದು ಅವರ ‘ಕಣ್ಣು ತೆರೆಯುವಂತೆ’ ಮಾಡಿತು. ಇಂತಹ ಒಂದು ಅಭಿವೃದ್ಧಿ ಹೊಂದಿದ ತೋಟದ ಮೇಲೆ “ಸ್ವಾರ್ಥ ಸಾಧಕರು” ವಿಶೇಷವಾಗಿ ರಾಜಕಾರಣಿಗಳು, ಬಡಜನರು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಕೂಡಿ ಅಭಿವೃದ್ಧಿಪಡಿಸಿದ, ಈ ಸಾಮೂಹಿಕ ಭೂಮಿಯನ್ನು ಕಬಳಿಸಲು ಕಾಯ್ದೆ ಹಾಗೂ ಆಡಳಿತಾತ್ಮಕಗಳಂತಹ ಸಮಸ್ಯೆಗಳನ್ನು ತಂದೊಡ್ಡಲು ಪ್ರಯತ್ನಿಸಿದರು.

ವಿಕೇಂದ್ರೀಕೃತ ಸಾಮಾಜಿಕ ಅರಣ್ಯ ಮತ್ತು ಸಸ್ಯಪಾಲನೆ

ವಿಶ್ವ ಬ್ಯಾಂಕಿನ ಸಹಾಯದಿಮ್ದ ಸಿದ್ಧಪಡಿಸಿದ ಸಾಮಾಜಿಕ ಅರಣ್ಯ ಯೋಜನೆಯನ್ನು ಹಾಗೂ ದಿಲ್ಲಿಯಲ್ಲಿರುವ ರಾಷ್ಟ್ರೀಯ ಬೀಳು ಭೂಮಿ ಅಭಿವೃದ್ಧಿ (ಎನ್.ಡಬ್ಲ್ಯೂ.ಡಿ.ಜಿ.) ಸಂಸ್ಥೆಯ ಬರಡು ಭೂಮಿ ಅಭಿವೃದ್ಧಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳನ್ನು ಹಾಗೂ ಗ್ರಾಮೀಣ ಜನರನ್ನು ಕೂಡಿಸುವಲ್ಲಿ ಭಾರತ ಅಭ್ಯುದಯ ಸೇವಾ ಸಂಸ್ಥೆ ಹಾಗೂ ಘೇವಾರ್ಡೆ-ಕೆ ಯಲ್ಲಿರುವ ಇತರ ಸೇವಾ ಸಂಸ್ಥೆಗಳ ಒಂದು ಮಹತ್ವದ ಪ್ರಯತ್ನವಾಗಿತ್ತು. ರಾಜ್ಯ ಹಂತದಲ್ಲಿ ಅರಣ್ಯಾಧಿಕಾರಿಗಳೊಂದಿಗೆ ನಡೆದ ಸಭೆಯಿಂದ ಹಾಗೂ ಕ್ಷೇತ್ರ ಭೇಟಿಯಿಂದ ವಿಕೇಂದ್ರೀಕೃತ ಸಸ್ಯಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಡವರಲ್ಲಿ ಉತ್ಸಾಹ ಮೂಡಿತು.

೧೯೮೪-೮೫ರ ಪ್ರಾರಂಭಿಕ ವರ್ಷದಲ್ಲಿ ಹೆಚ್ಚಾಗಿ ಸ್ತ್ರೀಯರು ಹಾಗೂ ಹರಿಜನರಿಂದೂಡಗೂಡಿದ ೨೦೦ ಕ್ಕೂ ಹೆಚ್ಚು ಬಡ ಕುಟುಂಬಗಳು ಅಂದಾಜು ನಾಲ್ಕು ಲಕ್ಷ ಸಸಿಗಳನ್ನು ತಯಾರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರತಿಯೊಂದು ಕುಟುಂಬ ಕೆಲವು ಸಾವಿರದಷ್ಟು ಸಸಿಗಳನ್ನು ತಯಾರಿಸಿದ್ದರು. ಇದೊಂದು ಅತ್ಯುತ್ತಮ ಪ್ರಯೋಗವಾಗಿತ್ತು. ಇದು ಎಲ್ಲಾ ಹಂತದ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಯಿತು. ಹಾಗೂ ಅದರಲ್ಲಿ ಕೆಲಸ ಮಾಡಿದ ಬಡವರಿಗೂ ಬಹಳ ಸಂತೋಷವಾಯಿತು. ನಿರುದ್ಯೋಗದ ಅತಿ ಕೆಟ್ಟ ಪರಿಸ್ಥಿತಿ ಕಾಲದಲ್ಲಿ (ಮಾರ್ಚ, ಏಪ್ರಿಲ್ ನಿಂದ ಜೂನದ ವರೆಗೆ) ಈ ಯೋಜನೆ ಅತಿ ಆರ್ಥಿಕ ಕಠಿಣ ಪರಿಸ್ಥಿತಿಯಲ್ಲಿರುವವರಿಗೆ ಸಹಾಯ ಒದಗಿಸಿದಂತಾಯಿತು. ಈ ಯೋಜನೆಯಲ್ಲಿ ಸ್ತ್ರೀಯರಲ್ಲದೆ ಚಿಕ್ಕಮಕ್ಕಳ ಪಾತ್ರ ಕೂಡ ವಿಶೇಷವಾಗಿ ಗಮನಿಸಬೇಕಾದಂತಹದು (ಜುಲೈ ೧೯೮೫ರ ಸುದ್ಧಿ ಪತ್ರಿಕೆಯಲ್ಲಿ “ಭಾರತ ಅಭ್ಯುದಯ ಸೇವಾ ಸಂಸ್ಥೆಯ ಕ್ಷೇತ್ರದಲ್ಲಿ ಸಾಮಾಜಿಕ ಅರಣ್ಯೀಕರಣ” ನೋಡಿರಿ).

ಆದರೆ ಈ ಒಂದು ಪ್ರಯೋಗದ ಪ್ರಯತ್ನ ಅಲ್ಪಕಾಲ ಬಾಳಿತು. ಯಾಕೆಂದರೆ ಸ್ಥಾನಿಕ ಅರಣ್ಯಾಧಿಕಾರಿಗಳು ಮುಂದಿನ ವರ್ಷ ದೊಡ್ಡ ಜಮೀನುದಾರರಿಗೆ ಎಲ್ಲ ಸಸಿಗಳನ್ನು ಒದಗಿಸಿದರು ಮತ್ತು ಸಸಿಗಳನ್ನು ಬೆಳೆಸುವುದಕ್ಕಾಗಿ ಬಡ ಕೂಲಿಕಾರರನ್ನು ಬಳಸಿಕೊಂಡರು. ಹೀಗೆ ಒದಗಿ ಬಂದ ಕಠಿಣ ಪರಿಸ್ಥಿತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಸರಿಯಾದ ತಿಳುವಳಿಕೆ ಮೂಡಿಸಿ ಸಮಸ್ಯೆಗಳನ್ನು ಬಗೆಹರಿಸಲು ಜನರನ್ನು ಹಾಗೂ ಅಧಿಕಾರಿಗಳನ್ನು ನೇರವಾಗಿ ಕೂಡಿಸುವ ಯತ್ನ ಮುಂತಾದವುಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮಾಡಿದ ಕಾರ್ಯ ಪರಿಣಾಮಕಾರಿಯಾಗಲಿಲ್ಲ. “ಸ್ವಾರ್ಥ ಸಾಧಕರು” ಹಾಗೂ ಅರಣ್ಯ ಅಧಿಕಾರಿಗಳು ಕೂಡಿ ಬಡ ಜನರು ಸಾಮೂಹಿಕ ಭೂಮಿಯ ಮೇಲೆ ನಿಯಂತ್ರಣ ಹೊಂದುವದನ್ನು ಹೇಗೆ ತದೆಯುತ್ತಾರೆ, ಕಾಯ್ದೆಯ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಕೊಟ್ಟು ತಮ್ಮ ನಿತ್ಯ ಜೀವನೋಪಾಯಕ್ಕೆ ಅವಶ್ಯವಿರುವ ಆಹಾರ, ಮೇವು ಕಟ್ಟಿಗೆ ಮುಂತಾದ ಸಾಮೂಹಿಕ ಭೂಮಿಯಲ್ಲಿ ಪುನರುತ್ಪತ್ತಿ ಮಾಡುವ ಅವರ ಸಾಹಸಕ್ಕೆ ಹೇಗೆ ಕಲ್ಲು ಹಾಕುತ್ತಾರೆಂಬುದಕ್ಕೆ ನಿದರ್ಶನಗಳನ್ನು ಅನುಭವಿಸಿ ಸಾಕಷ್ಟು ಪಾಠಗಳನ್ನು ಕಲಿತಂತಾಯಿತು. ಇದಲ್ಲದೆ ಗುಂಪುಗಳ ಒಳಜಗಳ (ಒಳಗಿನ ವೈಯುಕ್ತಿಕ ವೈರತ್ವ) ಕೂಡ ಹೇಗೆ ಕೆಡಿಸುತ್ತದೆ ಎಂಬುದನ್ನು ಕಂಡುಕೊಂಡಂತಾಯಿತು.

ಮೇವಿನ ಪ್ಲಾಟ್: ೮೦ ಎಕರೆ ಅರಣ್ಯಭೂಮಿ

ದನಕರು ಹಾಗೂ ಕುರಿಗಳಿಗೆ ಅಗತ್ಯವಿದ್ದ ಮೇವನ್ನು ಬೆಳೆಸಲಿಕ್ಕೆ ಹಾಗೂ ಗ್ರಾಮೀಣ ಜನರ ಇತರ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಅರಣ್ಯದ ೮೦ ಎಕರೆ ಭೂಮಿಯ ಅಭಿವೃದ್ಧಿಗಾಗಿ ಮತ್ತೆ ೧೯೮೪-೮೫ರಲ್ಲಿ ಅರಣ್ಯಾಧಿಕಾರಿಗಳ ಹಾಗೂ ಐರಣಿ ಗ್ರಾಮದ ಜನರ ನದುವೆ ಸಂಪರ್ಕ ಏರ್ಪಡಿಸುವ ಒಂದು ದೊಡ್ಡ ಪ್ರಯತ್ನ ಮಾಡಲಾಯಿರು. ಪ್ರಾರಂಭಿಕ ಕೆಲವೊಂದು ಅಡಚಣೆಗಳನ್ನು ನಿವಾರಿಸಿದ ಮೇಲೆ ಹಾಗೂ ಅಧಿಕಾರಿಗಳ ಹಾಗು ಹಳ್ಳಿಯ ಜನರ ನದುವೆ ಒಳ್ಳೆಯ ಒಂದು ತಿಳಿವಳಿಕೆ ಉಂಟಾದ ಮೇಲೆ ಆ ೮೦ ಎಕರೆ ಭೂಮಿಯಲ್ಲಿ ಉಪಯೋಗಿಸಲು ಯೋಗ್ಯವಾದ ಉತ್ತಮ ತಳಿಗಳ ಹುಲ್ಲು; ಹುಣಸೆ, ಅಂಜನ, ಸುಬಾಬುಲ್ ಅಂತಹ ಬಡಜನರಿಂದ ತಯಾರಿಸಿದ ಲಕ್ಷ ಲಕ್ಷ ಸಸಿಗಳನ್ನು ನೆಡಲಾಯಿತು. ಎಲ್ಲ ೮೦ ಎಕರೆ ಅರಣ್ಯ ಭೂಮಿ ಸುಂದರವಾಗಿ ಬೆಳೆಯಿತು. ಅದರಲ್ಲಿ ಅತ್ಯುತ್ತಮ ಮೇವಿನ ಹುಲ್ಲು ಹಾಗೂ ಗಿಡಗಳು ಬೆಳೆದಿದ್ದಲ್ಲದೇ ಕಾಡು ಜೀವಿಗಳು(ವೈಲ್ಡ್ ಲೈಫ್) ತಿರುಗಿ ಆ ಪ್ರದೇಶಕ್ಕೆ ಬಂದದ್ದು ಒಂದು ವಿಶೇಷ. ಮೊದಲೇ ಒಪ್ಪಿಕೊಂಡಂತೆ ಮೂರು ವರ್ಷಗಳ ವರೆಗೆ ಹಳ್ಳಿ ಜನರು ತಮ್ಮ ದನಕರುಗಳನ್ನು ಈ ಭೂಮಿಯಲ್ಲಿ ಮೇಯಿಸಲಿಲ್ಲ.

ಈ ಒಂದು ಪ್ರಯೋಗಒಳ್ಳೆಯದಾಗಿ ಪ್ರಾರಂಭವಾದರೂ ಮೂಲತಃ ವಿಶಾಲವಾಗಿ ಎಲ್ಲ ಕಡೆಗೆ ಇಂತಹ ಒಂದು ಪ್ರಯತ್ನ ನಡೆಯಲಿಲ್ಲ. ಮುಖ್ಯವಾಗಿ “ಹಣದ ಕೊರತೆ” ಹಾಗೂ ಸಾಮಾಜಿಕ ಅರಣ್ಯದಡಿಯಲ್ಲಿ “ಅರಣ್ಯ ಬೇಸಾಯಕ್ಕೆ” ಮಹತ್ವ ಕೊಟ್ಟಿದ್ದು ಮುಂದೆ ಇಂತಹ ಪ್ರಯತ್ನಗಳನ್ನು ಮಾಡಲಿಕ್ಕೆ ಆಸ್ಪದ ಸಿಗಲಿಲ್ಲ. ಅರಣ್ಯಾಧಿಕಾರಿಗಳ ಈ ಪ್ರವೃತ್ತಿ ಕೇವಲ ಶ್ರೀಮಂತರಿಗೆ ಹಾಗೂ ಜಮೀನುದಾರರಿಗೆ ಅನುಕೂಲವಾಯಿತೇ ಹೊರತು ಬಡ ಜರಿಗಾಗಲಿಲ್ಲ.

ವಿಶಾಲ ತಳಹದಿಯ ಮೇಲೆ ಬರಡು ಭೂಮಿ ಅಭಿವೃದ್ಧಿ

ಮೇಲಿನ ಈ ಸಣ್ಣ ಪ್ರಯೋಗದಿಂದ ಸಾಮೂಹಿಕ ಭೂಮಿಯ ಸಮಸ್ಯೆಗಳು ಎಷ್ಟು ಕ್ಲಿಷ್ಟಕರ ಎಂದು ತಿಳಿಯಿತಲ್ಲದೆ ಇದನ್ನು ಒಂದು ಸುವ್ಯವಸ್ಥಿತವಾಗಿ ಮತ್ತು ವಿಶಾಲ ತಳಹದಿಯ ಮೇಲೆ ನಿರ್ವಹಿಸಬೇಕಾಗುತ್ತದೆ ಎಂದು ನಿಚ್ಚಳವಾಯಿತು. ಈ ದೃಷ್ಟಿಯನ್ನು ಇಟ್ಟುಕೊಂಡು ವಿಶಾಲವಾದ ವ್ಯವಸ್ಥೆಯಿಂದ ಕೂಡಿದ ಗ್ರಾಮೀನ ಅವಶ್ಯಕತೆಗಳಿಗನುಸಾರವಾಗಿ ಬರಡು ಭೂಮಿ ಅಭಿವೃದ್ಧಿಗಾಗಿ ಭಾರತ ಅಭ್ಯುದಯ ಸೇವಾ ಸಂಸ್ಥೆ, ಘೇವಾರ್ಡೆ-ಕೆ ಸಹಯೋಗದೊಂದಿಗೆ ರಾಜ್ಯದ ಅಧಿಕಾರಿಗಳನ್ನು ಹಾಗೂ ಎನ್.ಡಬ್ಲ್ಯೂ.ಡಿ.ಬಿ.ಯನ್ನು ಸಂಧಿಸಿತು. ಎನ್.ಡಬ್ಲ್ಯೂ.ಡಿ.ಬಿ. ಯು ತನ್ನ ಸಹಾಯಕ ಕಾರ್ಯದರ್ಶಿಯಾದ ಶ್ರೀ.ಎನ್.ಸಿ.ಸೆಕ್ಸೇನಾ ಅವರನ್ನು ಮೇಡ್ಲೇರಿ ಮಂಡಲದ ಹಳ್ಳಿಗಳಿಗೆ ಹಾಗೂ ಭಾರತ ಅಭ್ಯುದಯ ಸೇವಾ ಸಂಸ್ಥೆಯು ಕೆಲಸ ಮಾಡುವ ಧಾರವಾದ ತಾಲೂಕಿನ ಹಳ್ಳಿಗಳಿಗೆ ಭೇಟಿ ಮಾಡಲು ಕಳಿಸಿತು. ಎನ್.ಡಬ್ಲ್ಯೂ.ಡಿ.ಬಿ.ಯ ಈ ಹಿರಿಯ ಅಧಿಕಾರಿ ಹಾಗೂ ರಾಜ್ಯದ ಅತಿ ಮುಖ್ಯ ಸ್ಥಾನದಲ್ಲಿರುವ ಅಧಿಕಾರಿಗಳ ಮೂರು ದಿನಗಳ ಭೇಟಿ ಒಂದು ಒಳ್ಳೆಯ ಪ್ರಸಂಗವಾಯಿತಲ್ಲದೆ ಬಡಜನರು ಹಾಗೂ ಅಧಿಕಾರಿಗಳು ನೋಡುವ ದೃಷ್ಟಿಯಲ್ಲಿ ಸಮಸ್ಯೆಗಳ ರೀತಿಗಳು ಹೇಗಿರುತ್ತವೆ ಎಂಬುದಕ್ಕೆ ಅವರೊಂದಿಗಿದ್ದ ನಮ್ಮೆಲ್ಲ ಸಂಬಂಧಿಸಿದವರಿಗೆ ಒಂದು ರೀತಿಯ ತರಬೇತಿಯಾಯಿತು. ಇದು ಎನ್.ಡಬ್ಲ್ಯೂ.ಡಿ.ಬಿ. ಹಾಗೂ ರಾಜ್ಯ ಸರಕಾರಿ ಅಧಿಕಾರಿಗಳಿಗೆ ಮಲೆನಾಡು ಸೆರಗಿನಲ್ಲಿರುವ ಧಾರವಾಡ ತಾಲ್ಲೂಕಿನಲ್ಲಿಯ ಹಳ್ಳಿಗಳಿಗೆ ಭೇಟಿ ಕೊಡಲು ಅವಕಾಶವಾಯಿತು. ಮತ್ತು ಗ್ರಾಮೀಣ ಜನರ ಸಮಸ್ಯೆಗಳನ್ನು ಅರಿಯಲು ಹಾಗೂ ಸಾಮೂಹಿಕ ಭೂಮಿಯ ಮೇಲೆ ಅಲ್ಲದೆ ಅರಣ್ಯಗಳ ಮೇಲೆ ಈ ಬಡ ಹಳ್ಳಿಗರು ಎಷ್ಟು ಅವಲಂಬಿತರಾಗಿದ್ದಾರೆಂದು ತಿಳಿದುಕೊಳ್ಳಲು ಸಹಾಯಕವಾಯಿತು. ವ್ಯಕ್ತಿಗತ ಹಾಗೂ ಹಳ್ಳಿಗಳ ಅಧ್ಯಯನದ ಬಗೆಗೆ “ಅರಣ್ಯ ಅಧಾರಿತ ಹಳ್ಳಿಯ ಕೈಗಾರಿಕೆಗಳು ಮತ್ತು ಗ್ರಾಮೀಣ ಬಡವರು” ಎಂಬ ಲೇಖನದಲ್ಲಿ ಒಳ್ಳೆಯ ಮಾಹಿತಿ ಸಿಗುತ್ತದೆ. (ಜನವರಿ ೧೯೮೯ ರ ಭಾರತ ಅಭ್ಯುದಯ ಸೇವಾ ಸಂಸ್ಥೆಯ ಸುದ್ಧಿ ಪತ್ರಿಕೆ)

ಇತರ ಜನಾಂಗಗಳಿಂದ ಪ್ರತ್ಯೇಕವಲ್ಲದಿದ್ದರೂ ವಿಶೇಷವಾಗಿ ದನಕಾಯುವ ಅರೆ ಅಲೆಮಾರಿ ಜನಾಂಗದ ವಿಷಯವಾಗಿ ಒಂದು ನಿದರ್ಶನವನ್ನು ಕೊಡಬಹುದು. ಮೇವಿನ ಸಲುವಾಗಿ ಹೆಚ್ಚಾಗಿ ಅರಣ್ಯದ ಮೇಲೆ ಅವಲಂಬಿತವಾಗಿರುವ ಹೇಗೆ ಕಾಡು ನಾಶದಿಂದ ಹುಲ್ಲು ಕಡಿಮೆಯಾಗಿ ಹಾಗೂ ನೀರಿನ ಕೊರತೆಯಿಂದಾಗಿ ಈ ದನಗಾಹಿಗಳಿಗೆ ಎಷ್ಟು ಹೊಡೆತ ಬೀಳುತ್ತಿದೆ ಎಂದು ಕಂಡುಬರುತ್ತದೆ.

ಮೇಡ್ಲೇರಿ ಮಂಡಲದಲ್ಲಿ ಕೂಡ ಇಂತಹವೇ ಸಮಸ್ಯೆಗಳನ್ನು ಕುರುಬರು ಎದುರಿಸುತ್ತಿದ್ದಾರೆ. ೧೯೮೬ರಲ್ಲಿ ಕರ್ನಾಟಕ ಸರಕಾರ ಹಾಗೂ ಭಾರತ ಅಭ್ಯುದಯ ಸೇವಾ ಸಂಸ್ಥೆಗಳು ಕೂಡಿ ನಡೆಸಿದ ರಾಜ್ಯ ಮಟ್ಟದ ಕುರುಬರ ಸಮ್ಮೇಳನದಲ್ಲಿ ಕಾಡಿನ ಮೇವಿನ ಮೇಲೆ ಅವರು ಎಷ್ಟು ತೀಕ್ಷ್ಣವಾಗಿ ಅವಲಂಬಿಸಿದ್ದಾರೆ ಎಂಬುದನ್ನು ಚೆನ್ನಾಗಿ ಬಿಂಬಿಸಲಾಯಿತು. (ರಾಜ್ಯಮಟ್ಟದ ಕುರುಬರ ಸಮ್ಮೇಳನ ಲೇಖನ, ಜನವರಿ ೧೯೮೭ ರ ಭಾರತ ಅಭ್ಯುದಯ ಸೇವಾ ಸಂಸ್ಥೆಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸಿದೆ). ಕನಿಷ್ಠ ಎಂದರೆ ವರ್ಷದಲ್ಲಿ ೬ ತಿಂಗಳವರೆಗೆ ತಮ್ಮ ಕುರಿಗಳೊಂದಿಗೆ ಕುರುಬರು ಮೇವಿಗಾಗಿ ಹುಡುಕುತ್ತಾ ಮಲೆನಾಡ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಅರಣ್ಯ ನಾಶ ಮೇವಿನ ಕೊರತೆ ಹಾಗೂ ಸಾಮೂಹಿಕ ಭೂಮಿಗಳು ಕಡಿಮೆಯಾಗುತ್ತಿರುವುದರಿಂದ ಅವರು ಬಹಳ ಕಾಲದವರೆಗೆ ದೂರ ಹೋಗಬೇಕಾಗುತ್ತದೆ.

ಇದೇ ವೇಳೆಯಲ್ಲಿ ಘೇವಾರ್ಡೆ-ಕೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಲಹಾ ಸಮಿತಿಯ ಪ್ರಯತ್ನದ ಫಲವಾಗಿ (ಅಭಿವೃದ್ಧಿ ಕಮೀಶನರ ಇದರ ಚೇರಮನ್ ರಾಗಿದ್ದಾರೆ) ಕರ್ನಾಟಕ ಸರ್ಕಾರವು ಬರಡು ಭೂಮಿ ಅಭಿವೃದ್ಧಿ ಹಾಗೂ ಸಾಮಾಜಿಕ ಅರಣ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸರಕಾರಿ ಏಜನ್ಸಿಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನೊಳಗೊಂಡ ಜಿಲ್ಲಾ ಸಮಿತಿಯನ್ನು ರಚಿಸಲು ಸುತೋಲೆ ಹೊರಡಿಸಿತು. ರಾಣೇಬೆನ್ನೂರು ಹಾಗೂ ಧಾರವಾಡ ತಾಲ್ಲೂಕಿನ ನಿಶ್ಚಿತ ಮಂಡಲ ಪಂಚಾಯಿತಿಗಳಲ್ಲಿ ಜಲಾನಯನ ಅಭಿವೃದ್ಧಿಯ ಸಲುವಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸಿ ಧಾರವಾಡ ಜಿಲ್ಲಾ ಸಮಿತಿಯು ಚುರುಕಾಗಿ ಒಳ್ಳೆಯ ಕೆಲಸ ಮಾಡುತ್ತ ಬಂದಿದೆ. ಜನರ ಮೂಲಭೂತ ಅಗತ್ಯಗಳನ್ನು ಲಕ್ಷದಲ್ಲಿಟ್ಟುಕೊಂಡು ರಾಜ್ಯ ಸರಕಾರವು ಕ್ಲಂಪೆ (ಕ್ಲಂಪೆ-ಕಾಂಪ್ರೆಹನ್ ಸಿವೆ ಲ್ಯಾಂಡ್ ಯೂಜ ಮ್ಯಾನೇಜಮೆಂಟ ಪ್ರೊಜೆಕ್ಟ್) ಮಾರ್ಗದರ್ಶನದಲ್ಲಿ ಮಾಡುವ ಈ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಈ ಭೂಬಳಕೆಯ ನಿರ್ವಹಣೆಯ ಯೋಜನೆಗಳು ಒಳ್ಳೆಯ ವಿವೇಚನೆಯಿಂದ ತಯಾರಾದ ಯೋಜನೆಗಳಾಗಿವೆ.

ಇದಲ್ಲದೆ ಸಾಮಾಜಿಕ ಅರಣ್ಯೀಕರಣ ಹಾಗೂ ಬಂಜರು ಭೂಮಿ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಂಡ ಸ್ವಯಂ ಸೇವಾ ಸಂಸ್ಥೆಗಳು ವಿಶೇಷವಾಗಿ ಅರಣ್ಯೀಕರಣ ಯೋಜನೆಯ ಬಗೆಗೆ ಹಾಗೂ ಸಾಮಾನ್ಯವಾಗಿ ಸಾಮೂಹಿಕ ಭೂಮಿ ಮತ್ತು ಬಡ ಗ್ರಾಮೀಣ ಜನರ ವಿಷಯಗಳ ಬಗೆಗೆ ಮೂಲಭೂತ ಸಮಸ್ಯೆಗಳನ್ನು ಅರಿಯಲು ಹಾಗೂ ವಿಶ್ಲೇಷಿಸಲು ಯತ್ನಿಸಿದವು. ಘೇವಾರ್ಡೆ.ಕೆ ಹಾಗೂ ಇತರ ಅಂತಹ ಸಂಸ್ಥೆಗಳು ತಮ್ಮ ಕಾರ್ಯಗಳ ಫಲಿತಾಂಶದ ಅನುಭವದಿಂದ ಹಾಗೂ ತಿಳಿವಳಿಕೆ ಮಾಡಿಕೊಂಡ ವಿಷಯಗಳ ಮೇಲಿಂದ ಯೋಜನೆಯಲ್ಲಿ ಯಾವ ರೀತಿ ಬದಲಾವಣೆ ಮಾಡಬೇಕೆಂಬ ಸಲಹೆ ಸೂಚನೆಗಳನ್ನು ಕರ್ನಾಟಕ ಸರಕಾರದ ಮುಂದೆ ಹಾಗೂ ಧನಸಹಾಯ ಮಾಡುವ ಜಾಗತಿಕ ಬ್ಯಾಂಕಿನಂತಹ ಸಂಸ್ಥೆಗಳ ಮುಂದೆ ಮಂಡಿಸಲು ಪ್ರಯತ್ನ ಮಾಡಿದವು. ನಮ್ಮ ಸಹೋದ್ಯೋಗಿಗಳಲ್ಲಿ ಒಬ್ಬರು ಒವರಸೀಜ್ ಡೆವ್ ಲೆಪಮೆಂಟ ಏಜೆನ್ಸಿ (ಓ ಡಿ ಎ) ಯ ಪರಿಶೀಲನಾ ಸಮಿತಿಯ ಸದಸ್ಯರಾಗಿದ್ದಾರೆ ಈ ಏಜೆನ್ಸಿಯು ಕರ್ನಾಟಕ ಸಾಮಾಜಿಕ ಅರಣ್ಯೀಕರಣದ ಯೋಜನೆಯ ಸಲುವಾಗಿದ್ದು ಇಡೀ ರಾಜ್ಯದಲ್ಲಿ ಈ ಯೋಜನೆ ಹೇಗೆ ಕಾರ್ಯಗತಗೊಳ್ಳುತ್ತಿದೆ; ಸಾಮೂಹಿಕ ಭೂಮಿಯಲ್ಲಿ ಸಾಮಾಜಿಕ ಅರಣ್ಯೀಕರಣ ಹೇಗೆ ನಡೆಯುತ್ತಿದೆ ಮತ್ತು ಅರಣ್ಯ ಬೇಸಾಯದ ಅಂಶಗಳು ಯಾವುವು ಎಂಬ ಈ ಎಲ್ಲ ಸಮಸ್ಯೆಗಳ ಬಗ್ಗೆ ಪರೀಕ್ಷಿಸಲು ನಮ್ಮ ಸಹೋದ್ಯೋಗಿ ಅದರಲ್ಲಿ ಇರುವುದರಿಂದ ಒಂದು ಅವಕಾಶ ಒದಗಿ ಬಂದಿತು. ಕರ್ನಾಟಕದ ಮುಖ್ಯ ಮಂತ್ರಿಗಳಿಗೆ ಹಾಗೂ ಒ.ಡಿ.ಎ ಗೆ ಕೊಟ್ಟ ನಿವೇದನೆ ಪತ್ರದಲ್ಲಿ ಸಾಮಾಜಿಕ ಅರಣ್ಯೀಕರಣ ಯೋಜನೆಯ ಸುಧಾರಣೆಗಾಗಿ ಒಳ್ಳೆಯ ವಿವೇಚನೆಯಿಂದ ಮಾಡಿದ ಘೇವಾರ್ಡೆ ಕೆಯ ಸಲಹೆ ಸೂಚನೆಗಳ ಬಗೆಗೆ ಪ್ರಶಂಸೆ ಬಂದಿತಲ್ಲದೆ ಅವುಗಳನ್ನು ಜಾಗತಿಕ ಬ್ಯಾಂಕಿನ ಮತ್ತು ಒ.ಡಿ.ಎ. ಗಳ ಮಧ್ಯಂತರ ಈ ದಿಶೆಯಲ್ಲಿ ಬಡವರಿಗೆ ಸಹಾಯಕವಾಗುವ ಈ ಸಲಹೆಗಳನ್ನು ತಿರಸ್ಕರಿಸಿ ಮುಖ್ಯವಾಗಿ ಮೇಲಿನ ವರ್ಗದ ಜನರಿಗೆ ಅನುಕೂಲವಾಗುವ ಹಾಗೆ ತಮ್ಮ ಮನಬಂದಂತೆ ಯೋಜನೆಯನ್ನು ಜಾರಿಗೊಳಿಸುತ್ತಿದ್ದಾರೆ.

ಉಪಸಂಹಾರ

ಬರಡು ಭೂಮಿ ಅಭಿವೃದ್ಧಿಯಲ್ಲಿ ಹಾಗೂ ಸಮಾಜಿಕ ಅರಣ್ಯೀಕರಣದಲ್ಲಿ ಎಷ್ಟೋ ಅತೀ ಮಹತ್ವದ ವಿಷಯಗಳು ಅಡಕವಾಗಿವೆ. ಭೂಮಿಯಲ್ಲಿ ಪ್ರವೇಶಾಧಿಕಾರ ಅದರ ಉತ್ಪನ್ನದಲ್ಲಿ ಪಾಲು ಹಾಗೂ ಅರಣ್ಯ ಇಲಾಖೆಯ ಪಾತ್ರ ಮುಂತಾದ ಬದವ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಮೂಲ ಕಾರಣಗಳ ಬಗೆಗೆ ವಿಶ್ಲೇಷಣೆಯ ಅಗತ್ಯವಿದೆ. (ಅರಣ್ಯ ಇಲಾಖೆ ಅಧಿಕಾರಿಯಾಗಿ ಜನರಿಗೆ ಸಹಯ ಅಮಾಡಿದ್ದೆಂದರೆ ಗಿಡಗಳನ್ನು ಹಾಗೂ ಹುಲ್ಲನ್ನು ಬೆಳೆಸುವ ಸ್ಥಾನದಲ್ಲಿ ನೀಲಗಿರಿ ಗಿಡಗಳನ್ನು ಹಾಗೂ ಇತರೇ ವಾಣಿಜ್ಯ ಬೆಳೆಗಳನ್ನು ಬೆಳೆಸಿ ಪ್ರಮುಖವಾಗಿ ಉದ್ಯಮವಾಗಿ ಲಾಭಕ್ಕಾಗಿ ಮಾಡಿದ್ದು).

ಬಡವರಿಗೆ ಸಹಾಯ ಮಾಡುವ ಹೆಸರಿನಲ್ಲಿ ಅಥವಾ ಉದ್ಯಮಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವ ನೆವದಲ್ಲಿ ಈ ಭೂಮಿಗಳನ್ನು ಖಾಸಗೀಕರಣ ಮಾಡುವ ಅತಿಶಯ ಒಲವು ಇರುವುದು ಕಂಡು ಬಂದಿದ್ದು ಇದೂ ಕೂಡ ಗಂಭೀರದ ವಿಷಯ. ಇಂತಹ ಪ್ರವೃತ್ತಿಯನ್ನು ತಡೆಗಟ್ಟುವ ಅಗತ್ಯವಿದ್ದು ಸಾಮೂಹಿಕ ಭೂಮಿಗಳನ್ನು ಸಾಮೂಹಿಕ ಭೂಮಿಗಳಾಗಿಯೇ ಉಳಿಸಿಕೊಳ್ಳಬೇಕಾಗಿದೆ. ಬರಡು ಭೂಮಿಯ ಅಭಿವೃದ್ಧಿ ಮತ್ತು ಸಾಮಾಜಿಕ ಅರಣ್ಯೀಕರಣ ಕಾರ್ಯಗಳಲ್ಲಿ ಜನರು ಪಾಲ್ಗೊಳ್ಳುವಂತಹ ಇಡೀ ಈ ವಿಷಯಗಳೇ ಕ್ಲಿಷ್ಟಕರವಾಗಿವೆ.

ನಿಜವಾದ ಅರ್ಥದಲ್ಲಿ ಜನರು ಪಾಲ್ಗೊಳ್ಳುವದನ್ನು ಸಾಧಿಸಬೇಕಾದರೆ ಕಾಯ್ದೆಯ ಮತ್ತು ಆಡಳಿತ ರಚನೆಯಲ್ಲಿ ಕೆಲವೊಂದು ಮೂಲ ಬದಲಾವಣೆಯೊಂದಿಗೆ ಇಂಡಿಯಾದ ಒಂದು ಸೂತ್ರದ ಅಗತ್ಯವಿದೆ. ಅರಣ್ಯ ಹಾಗೂ ಸಾಮೂಹಿಕ ಭೂಮಿಯ ನಿರ್ವಹಣೆಯಲ್ಲಿ ಅರ್ಥಪೂರ್ಣವಾಗಿ ಜನರು ಭಾಗವಹಿಸುವಂತೆ ಮಾಡುವ ದಿಶೆಯಲ್ಲಿ ಸರಿಯಾದ ಕ್ರಮವನ್ನು ಹುಡುಕುವುದಕ್ಕೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸಾಯಿನ್ಸ್ ನಲ್ಲಿರುವ ಸೆಂಟರ್ ಫಾರ್ ಇಕಾಲಜಿಕಲ್ ಸಾಯಿನ್ಸ್ (ಶಿ.ಇ.ಎಸ್) ಬೆಂಗಳೂರು, ಸಮಾಜ ಪರಿವರ್ತನೆ ಸಮುದಾಯ, ಧಾರವಾಡ ಹಾಗೂ ಘೇವಾರ್ಡ್-ಕೆ ಸಹಯೋಗದೊಂದಿಗೆ ಈ ವಿಷಯದಲ್ಲಿ ಕಳಕಳಿ ಇರುವ ಅದರ ಸದಸ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಕೂಡಿ ಅತೀ ನಿಕಟವಾಗಿ ಕೆಲಸ ಮಾಡುತ್ತಿವೆ. ಈ ನಾನಾ ಸಂಬಂಧಿಸಿದ ಪಕ್ಷಗಳಲ್ಲಿ ನಡೆದ ವಿಚಾರ ವಿನಿಮಯಗಳ ಪರಿಣಾಮದಿಂದಾಗಿ ಶಿ.ಇ.ಎಸ್.ವಿಶೇಷವಾಗಿ ಜನರ ಸಹಭಾಗಿತ್ವದ ಬಗೆಗೆ ವಿವರವಾದ ಮಾಹಿತಿ ಕೊಡೂವ ಒಂದು ಮಹತ್ವವಾದ ದಾಖಲೆಯನ್ನು ತಯಾರಿಸಿದೆ. ಸರಕಾರಿ ಅಧಿಕಾರಿಗಳ ಸ್ವಯಂ ಸೇವಾ ಸಂಸ್ಥೆಗಳ ಹಾಗೂ ವಿಜ್ಞಾನಿಗಳ ಮುಂದಿನ ಸಭೆಯಲ್ಲಿ ಈ ದಾಖಲೆಯನ್ನು ಅಂತಿಮವಾಗಿ ಅಂಗೀಕರಿಸಲಾಗುವುದು.

ಐ.ಡಿ.ಎಸ್. ನ ಏಪ್ರಿಲ್ ೧೯೮೩ ರ ಸುದ್ದಿ ಪತ್ರದ “ಸಾಮಾಜಿಕ ಅರಣ್ಯ ಮತ್ತು ಬರಡು ಭೂಮಿ ಅಭಿವೃದ್ಧಿ” ಈ ಲೇಖನದಲ್ಲಿ ಈ ವಿಷಯಗಳನ್ನು ಸಾದರಪಡಿಸಲಾಗಿದೆ.

ಐ.ಡಿ.ಎಸ್.ಬೇರೆ ಬೇರೆ ಸಂಸ್ಥೆಗಳು, ವಿಜ್ಞಾನಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ವಿಷಯವನ್ನು ಪಟ್ಟು ಹಿಡಿದು ಪ್ರಯತ್ನಿಸುತ್ತಿರುವುದು ಒಂದು ಸಣ್ಣ ಪ್ರಾರಂಭ ಎಂದು ಪರಿಗಣಿಸಬಹುದು. ಕ್ಲಿಷ್ಟಕರವಾದ ಈ ವಿಷಯಗಳಿಗೆ ನಿರಂತರ ಹಾಗೂ ಅರ್ಥ ಪೂರ್ಣ ಪರಿಹಾರ ಹುಡುಕುವುದಕ್ಕಾಗಿ ಇನ್ನೂ ಅತೀ ದೂರದ ದಾರಿಯನ್ನು ಕ್ರಮಿಸಬೇಕಾಗಿದೆ.

—-
ಇಂಗ್ಲಿಷ್‌ನಿಂದ ಕನ್ನಡದಲ್ಲಿ ಅನುವಾದಿಸಿದವರು ಡಾ. ಅ.ಸಂ. ಸಾಲಂಕಿ.