ಅದಿಶಕ್ತಿಯ ಸಾತ್ವಿಕ, ರಾಜಸ, ತಾಮಸ ಗುಣಗಳಿಗೆ ತಕ್ಕಂತೆ ಆಕೆಯನ್ನು ಜನತೆ ಹಲವು ರೀತಿಯಲ್ಲಿ ಉಪಾಸಿಸಲು ಪ್ರಾರಂಭಿಸಿರಬಹುದು. ಸಾತ್ವಿಕ ಗುಣವುಳ್ಳರಿಗೆ ಅಭಯಹಸ್ತ ನೀಡುವ (ಬನ) ಶಂಕರಿಯಾಗಿಯೂ, ಕ್ಷಾತ್ರಗುಣವುಳ್ಳವರಿಗೆ ಶಕ್ತಿಸಂಹಾರಕಳಾದ ಚಾಮುಂಡಿಯಾಗಿಯೂ, ತಾಮಸ ಗುಣವುಳ್ಳವರಿಗೆ ಬಲಿ ಕೇಳುವ ಭೈರವಿಯಾಗಿಯೂ ಈಕೆ ಪರಿಣಮಿಸಿ ಪೂಜೆಗೊಂಡಿರುವ ಸಾಧ್ಯತೆಯಿದೆ. ತನಗೆ ಕಷ್ಟ ಬಂದಾಗ ಮನಿಷ್ಯನಿಗೆ ದೇವರ ನೆನಪಾಗುವದು ಸಹಜ. ತನ್ನ ಕಷ್ಟವನ್ನು ಪರಿಹಾರ ಮಾಡುತ್ತಾನೆಂಬ ನಂಬಿಗೆಯಿಂದ ಆತನು ದೇವರನ್ನು ಪೂಜಿಸುತ್ತಾನೆ. ಅಮೂರ್ತ ಸ್ವರೂಪ ಶಕ್ತಿಯನ್ನು ತನ್ನ ಇಷ್ಟಕ್ಕನುಸಾರವಾಗಿ ವಿವಿಧ ಆಕಾರಗಳಲ್ಲಿ ರೂಪಿಕರಿಸಿಕೊಂಡು ಭಯಭಕ್ತಿಯಿಂದ ಆರಾಧಿಸುತ್ತ ಬಂದಿದ್ದಾನೆ. ಪೂಜೆಗಾಗಿ ಗುಡಿಗುಂಡಾರಗಳು ಇರಲೇಬೇಕೆಂಬುದಿಲ್ಲ, ಇಂತಹ ಮೂರ್ತಿಯೇ ಆಗಿರಬೇಕು, ಇಂತಹ ಸ್ಥಳವೇ ಇರಬೇಕು ಎಂಬುದೂ ಇಲ್ಲ. ಗುಂಡಕಲ್ಲನ್ನು ತಂದು ಬಯಲಲ್ಲಿಟ್ಟು ದೇವರೆಂದು ಪೂಜಿಸಿದ ಉದಾಹರಣೆಗಳೂ ಸಾಕಷ್ಟಿವೆ. ಈ ಹೊತ್ತಿಗೂ ಕುರುಬರು ಬೀರಪ್ಪನ ಗುಡಿಗಳಲ್ಲಿ ಗುಂಡುಕಲ್ಲುಗಳನ್ನೇ ಪೂಜಿಸುವದು ರೂಢಿಯಲ್ಲಿದೆ. ಈ ಸ್ಥಳದಲ್ಲಿ ದೇವರಿದೆಯೆಂದು ಅನಿಸಿದರೆ ಪ್ರಾಣಪ್ರತಿಷ್ಠಾಪನೆಗೊಂಡು ದೇವತಾರಾಧನೆ ಪ್ರಾರಂಭವಾಗುತ್ತಿತ್ತು. ಊರಿಂದೂರಿಗೆ ಅಲೆದಾಡುವ ಅಲೆಮಾರಿಗಳು ತಾವು ಬಿಡಾರಬಿಟ್ಟಲೆಲ್ಲ ದೇವರೆ ಮೂರ್ತಿಸ್ಥಾಪಿಸಿ ಪೂಜಿಸುತ್ತ ಬಂದುದನ್ನು ನಾವು ಇಂದಿಗೂ ಕಾಣುತ್ತೇವೆ. ಲಂಬಾಣಿಗಳು, ಕಿಳ್ಳೇಕ್ಯಾತರು, ಕೊಚೀಕೊರರು ಮೊದಲಾದವರು ಬೀಡುಬಿಟ್ಟಿರುವ ಸ್ಥಳಗಳನ್ನು ನೋಡಿದರೆ ಇದರರ್ಥ ಸ್ಪಷ್ಟವಾಗುತ್ತದೆ. ಇತರ ದೇವತೆಗಳಿಗಿಂತ ಹೆಚ್ಚು ಭಯಭಕ್ತಿಗಳನ್ನು ನಮ್ಮ ಜನ ಗ್ರಾಮದೇವತೆಗಳಿಗೆ ಸಲ್ಲಿಸುತ್ತ ಬಂದುದನ್ನು ಕಾಣಬಹುದು.

ಮೂಲ

ದ್ಯಾಮವ್ವ – ದ್ರಾವಿಡ ಮೂಲವೆಂದು ಕಂಡುಬರುವದು. ಶಕ್ತಿಯ ಉಪಾಸಕರು ದ್ರಾವಿಡರೇ ಆದುದರಿಮದ ಇದು ದ್ರಾವಿಡ ದೇವತೆಯೆನಿಸುವದು. ಆರ್ಯ ಸಂಪ್ರದಾಯದೊಳಗೆ ಇಂಥ ದೇವತೆಗಳು ಕಾಣಸಿಗುವದು ಅಪರೂಪ. ಅಕ್ಷರಪಲ್ಲಟದಿಂದಾಗಿ “ದೇವಮ್ಮ” – “ದೇಮವ್ವ” (ದ್ಯಾಮವ್ವ) ಆಗಿರುವ ಸಾಧ್ಯತೆಯೂ ಇದೆ, “ಆಗಸ” – “ಅಸಗ” ಆದಂತೆ. ಮಹಿಷಾಸುರ ಮರ್ದಿನಿಯ, ಮಹಿಷಾಸುರ ರಾಕ್ಷಸನನ್ನು ಸಂಹಾರ ಮಾಡಿದ ಪ್ರಸಂಗ ಹಾಗೂ ದ್ಯಾಮವ್ವನು ರಾಣಿಗ್ಯಾನನ್ನು ಸಂಹಾರ ಮಾಡಿದ ಪ್ರಸಂಗಗಳನ್ನು ನೆನೆದಾಗ ಎಲ್ಲ ಜನಾಂಗಗಳಲ್ಲಿ ಶಿಷ್ಟರು ದುಷ್ಟರು ಇರುವುದರಿಂದ ಒಂದು ಜನಾಂಗವನ್ನೇ ಏಕೆ ಬಲಿತೆಗೆದುಕೊಂಡಳು ಎಂಬ ಈ ಪ್ರಶ್ನೆ ಹಾಗೆಯೆ ಉಳಿದುಬಿಡುತ್ತದೆ. ಮಹಿಷಾಸುರ ಮರ್ದಿನಿಯ ಪೂಜಕರು ವೈದಿಕರು, ದ್ಯಾಮವ್ವನ ಪೂಜಕರು ವಿಶ್ವ ಕರ್ಮರು.

ಬೆಳಗಾವಿ, ಸುಳೇಬಾವಿ, ಮಾರಿಹಾಳ, ಸಾಂಬರಾ, ಖಾನಾಪುರ, ಸಂಪಗಾವಿ, ಬೈಲಹೊಂಗಲ, ಅಂಕಲಿ, ಹುಕ್ಕೇರಿ, ಸವದತ್ತಿ, ಗುಡಗೇರಿ, ಅಮೀನಗಡ, ಮಣಗುತ್ತಿ, ಗೋಕಾಕ ಮುಂತಾದ ಊರುಗಳಲ್ಲಿ ದ್ಯಾಮವ್ವನ ಪೂಜೋತ್ಸವಗಳು ನಡೆಯುತ್ತವೆ. ಗೋಕಾಕ ದ್ಯಾಮವ್ವನ ಜಾತ್ರಿಯು ವೈಶಿಷ್ಟ್ಯ ಪೂರ್ಣವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆದುಬಂದಿದೆ. ಬಹುತರ ಎಲ್ಲ ಕಡೆ ದ್ಯಾಮವ್ವನ ಮುತಿ ಒಂದೇ ಇದ್ದು. ರಥವೂ ಕೂಡ ಒಂದೇ ಆಗಿರುವುದುಂಟು. ಆದರೆ ಗೋಕಾಕದಲ್ಲಿ ಜೋಡು ದ್ಯಾಮವ್ವ – ಜೋಡು ರಥಗಳಿರುವುದು ಒಂದು ವಿಶೇಷವೆಂದೇ ಹೇಳಬೇಕು.

ಮೆರಕನಟ್ಟಿಯಲ್ಲಿ ಗ್ರಾಮದೇವತೆ ದ್ಯಾಮವ್ವ ಪೂಜೆಗೊಳ್ಳುತ್ತಿದ್ದರೆಂದೂ, ಮುಂದೆ ಕಾಲಾಂತರದಲ್ಲಿ ಆ ಗ್ರಾಮ ಹಾಳಾದ ಮೇಲೆ ಆ ದೇವತೆಯನ್ನು ಗೋಕಾಕಕ್ಕೆ ತಂದು ಗ್ರಾಮದೇವತೆಯ ಗುಡಿಯಲ್ಲಿಯೇ ಇಟ್ಟು ಪೂಜೆ ಮಾಡಲಾರಂಭಿಸಿದರೆಂದೂ, ಅಂದಿನಿಂದ ಗೋಕಾಕದಲ್ಲಿ ಜೋಡುದ್ಯಾಮವ್ವಗಳು ಅಸ್ತಿತ್ವದಲ್ಲಿ ಬಂದವೆಂದೂ ಕೆಲವರು ಹೇಳುತ್ತಾರೆ. ಪ್ರಾಚೀನ ಕಾಲದಿಂದಲೂ ಜೋಡು ದ್ಯಾಮವ್ವಗಳು ಅಸ್ತಿತ್ವದಲ್ಲಿ ಇದ್ದವೆಂದೂ, ತಾವೇ ಪೂಜಿಸುತ್ತಿದ್ದುದಾಗಿಯೂ ಗೋಕಾಕ ದ್ಯಾಮವ್ವನ ಪೂಜಾರಿಗಳು ಹೇಳುತ್ತಾರೆ. ಗೋಕಾಕದಲ್ಲಿ ದ್ಯಾಮವ್ವನ ಪೂಜೆಯು ಸುಮಾರು ಆರೇಳುನೂರು ವರ್ಷಗಳಿಂದಲೂ ನಡೆದಿರುವುದಾಗಿ ತಿಳಿದು ಬರುವುದು.

ದೇವತೆಗಳಲ್ಲಿ “ದೇವಗಣ” ಹಾಗೂ “ರಾಕ್ಷಸಗಣ” ಎಂದು ಎರಡು ವಿಧಗಳು. ಪ್ರಾಣಿಬಲಿ, ಇತರ ಬಲಿಗಳಿಂದ ದೂರವಿರುವ ಶಿಷ್ಟ ದೇವತೆಗಳನ್ನು “ದೇವಗಣ” ವೆಂದೂ, ಪ್ರಾಣಿಬಲಿಯನ್ನು ಬಯಸುವ, ಮೈಲಿಬೇನೆಯಂಥ ಕಾಯಲೆಗಳನ್ನು ಹರಡುವ ಉಗ್ರ ದೇವತೆಗಳನ್ನು “ರಾಕ್ಷಸಗಣ” ವೆಂದೂ ಕರೆಯುವದು ವಾಡಿಕೆಯಾಗಿದೆ. ಉಮಾ, ಗೌರಿ, ಪಾರ್ವತಿ, ಶಂಕರಿ, ಭವಾನಿ, ಸೌಮ್ಯ ಸ್ವರೂಪದ ಹೆಸರುಳ್ಳ ಇಂಥ ದೇವತೆಗಳನ್ನು “ದೇವಗಣ” ಕ್ಕೂ ದುರ್ಗಾ, ಕಾಳಿ, ಚಂಡಿ, ಭೈರವಿ ಇತ್ಯಾದಿ ಉಗ್ರ ರೂಪದ ದೇವತೆಗಳನ್ನು ರಾಕ್ಷಸಗಣಕ್ಕೂ ಸೇರಿಸುವದುಂಟು. ಉಗ್ರರೂಪವನ್ನು ಹೊರತು ಪಡಿಸಿ ದ್ಯಾಮವ್ವನ ಜಾತ್ರೆಗಳಲ್ಲಿ ಕೋಣಕಡಿಯುವ ಪದ್ಧತಿ ಈ ಹಿಂದೆ ರೂಢಿಯಲ್ಲತ್ತು. ಅವಳು ದೇವಗಣಕ್ಕೆ ಸೇರಿದ್ದರೆ ಅವಳೇಕೆ ಈ ರೀತಿ ಬಲಿ ಕೇಳುತ್ತಿದ್ದಳು ಎಂಬ ಪ್ರಶ್ನೆ ಉದ್ಭವಿಸಬಹುದು. ಇದಕ್ಕೆ ಉತ್ತರವಿಷ್ಟೇ ! ದ್ಯಾಮವ್ವ ಬಲಿ ಬೇಡಿದ್ದಲ್ಲ, ಸಾತ್ವಿಕ ಶಕ್ತಿಯನ್ನು ಉಳಿಸುವ ಸಲುವಾಗಿ ರಾಣಿಗ್ಯಾನ ವಾಹನವಾದ ಕೋಣವನ್ನು ಕೊಂದಳು, ಅದರ ದ್ಯೋತಕವಾಗಿ ಈ ಜನ ಕೋಣವನ್ನು ದೇವಿಯ ಮುಂದೆ ಕಡಿಯುತ್ತಿದ್ದಿರಬಹುದೆಂದು ಕಾಣುತ್ತದೆ. ಉಗ್ರರೂಪಗಳಿಗೆಅ ಅಂಜಿ ಜನರು ಕೋಣ ಮುಂತಾದ ಪ್ರಾಣಿಗಳನ್ನು ಬಲಿಕೊಟ್ಟು ತೃಪ್ತಿಪಡಿಸಲು ತೊಡಗುವ ರೂಢಿ ಪ್ರಾಚೀನ ಭಾರತದಲ್ಲಿ ವಿಶೇಷವಾಗಿತ್ತೆಂದು ತಿಳಿದು ಬರುತ್ತದೆ.

“ದೇವಿ ಮಹಾತ್ಮೆ” ಯಲ್ಲಿ ಬರುವ ದೇವಿಯೇ ದ್ಯಾಮವ್ವ ದೇವಿಗೆ ಅಮ್ಮ ಪದ ಸೇರಿ ದ್ಯಾಮವ್ವನಾಗಿರಬಹುದೆಂದು ತೋರುತ್ತದೆ. ಮಹಿಷಾಸುರ ಮರ್ದಿನಿಯೇ ದ್ಯಾಮವ್ವನ ಇನ್ನೊಂದು ರೂಪವೆಂದು ಎರಡೂ ದೇವತೆಗಳ ನಡುವಿನ ಸಾಮ್ಯತೆಯಿಂದ ಅನಿಸುತ್ತದೆ.

ಗೋಕಾಕದಲ್ಲಿಯ ದ್ಯಾಮವ್ವನ ಮೂರ್ತಿಯನ್ನು ನೋಡಿದಾಗ “ದೇವಿ ಮಹಾತ್ಮೆ” ಯಲ್ಲಿ ಬರುವ ಜಗದಂಬೆಗೂ ದ್ಯಾಮವ್ವನಿಗೂ ಅನೇಕ ವಿಧಗಳಲ್ಲಿ ಸಾಮ್ಯತೆ ಕಂಡು ಬರುದವು. ಮೂರ್ತಿಯ ಸೂತ್ತಲೂ ಬ್ರಹ್ಮ, ವಿಷ್ಣು, ಮಹೇಶ, ಸೂರ್ಯ, ಚಂದ್ರ, ಅಗ್ನಿ, ಯನು ಮೊದಲಾದ ದೇವಾನುದೇವತೆಗಳ ಚಿತ್ರಗಳಿವೆ. ಇಲ್ಲಿಯ ದೇವತೆಗೆ ಎಂಟು ಭುಜಗಳಿವೆ. ಮಹಿಷಾಸುರ ಮರ್ದಿನಿಯು ಮಹಿಷಾಸುರನನ್ನು ಕೊಂದಂತೆ ದ್ಯಾಮವ್ವನು ರಾಣಿಗನನ್ನು ಕೊಂದಳೆಂದು ಇಲ್ಲಿ ಪ್ರತೀತಿಯಿದೆ. ಜಗದಂಬೆ, ರಾಜೇಶ್ವರಿ, ಚಾಮುಂಡಿ, ದ್ಯಾಮವ್ವ ಇವೆಲ್ಲ ಶಕ್ತಿಯ ಬೇರೆ ಬೇರೆ ರೂಪಗಳಾಗಿದ್ದು ಪ್ರದೇಶ ಭಿನ್ನತೆಯಿಂದಾಗಿ ಬೇರೆ ಬೇರೆ ಹೆಸರಿನಿಂದ ಪೂಜೆಗೊಳ್ಳುತ್ತಿದ್ದಿರಬಹುದೆಂದು ಅನಿಸುತ್ತದೆ. ಮಹಿಷಾಸುರ ಮರ್ದಿನಿಯಂತೆ ದ್ಯಾಮವ್ವನೂ ಪ್ರಾಚೀನ ದೇವತೆಯೆಂದು ಕಂಡು ಬರುವದು. ಒಂದು ಕಥೆ ಹೀಗಿದೆ :

ಮೆರಕನಟ್ಟಿ ಗ್ರಾಮದ ಬಳಿ ಹುತ್ತವೊಂದು ಇದ್ದಿತು. ನಿತ್ಯವೂ ಅಲ್ಲಿಗೆ ಹಸು ಹೋಗಿ ಹಾಲನ್ನು ಹಿಂಡಿ ಬರುತ್ತಿತ್ತು. ಈ ದೃಶ್ಯವನ್ನು ಕಂಡ ಕುರುಬರಿಗೆ ಅಲ್ಲಿ ದೇವಿಯೊಬ್ಬಳು ಪ್ರತ್ಯಕ್ಷವಾಗಿ ಈ ಸ್ಥಳದಲ್ಲಿ ತಾನು ಇರುವೆನೆಂದೂ ನಿತ್ಯವೂ ಪೂಜೆ ಮಾಡಿರೆಂದು ಅವರಿಗೆ ಹೇಳಿದಳು. ಅಂದಿನಿಂದ ಮೆರಕನಟ್ಟಿ ಕುರುಬರು ಈ ಸ್ಥಳವನ್ನು ಸಾರಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆಯನ್ನು ಪ್ರಾರಂಭಿಸಿದರು. ಹೀಗೆ ಅನೇಕ ವರ್ಷಗಳ ಕಾಲ ಪೂಜೆ ನಡೆಯಿತು. ಒಮ್ಮೆ ಅತಿವೃಷ್ಟಿಯಿಂದಾಗಿ ಘಟಪ್ರಭಾನದಿಗೆ ಮಹಾಪೂರ ಬಂದು ಮೆರಕನಟ್ಟಿ ಗ್ರಾಮವನ್ನು ಸುತ್ತುವರಿಯಿತು. ಆಗ ಧೇವಿ ತನ್ನ ಆರಾಧಕರಾದ ಕುರುಬರನ್ನು ಕರೆದು ಪಾರಾಗಲು ಮಾರ್ಗ ತೋರಿಸಿದಳು. ಈ ಪ್ರಕಾರ ಕುರುಬರು ಆ ಗ್ರಾಮವನ್ನು ಬಿಟ್ಟು ಕಬ್ಬೂರ ಹಾಗೂ ನಾಗರಮುನ್ನಿಳ್ಳಿ ಎಂಬ ಗ್ರಾಮದಲ್ಲಿ ಬಂದು ನೆಲೆಸಿದರು. ಅಂದಿನಿಂದ ದೇವಿಯ ಪೂಜೆ ಬೇಡ ಜನಾಂಗದವರಿಂದ ಆರಂಭವಾಯಿತೆಂದು ಹೇಳುವ ರೂಢಿಯಿದೆ. ಕಬ್ಬೂರ ಮತ್ತು ನಾಗರ ಮುನ್ನೊಳ್ಳಿ ಗ್ರಾಮಗಳಲ್ಲಿ ಈಗಲೂ ಆ ಕುರುಬರ ವಂಶಜರಿದ್ದು, ದ್ಯಾಮವ್ವನ ಜಾತ್ರೆಯ ಕಾಲಕ್ಕೆ ಈ ಎರಡೂ ಗ್ರಾಮಗಳಿಂದ ದೇವಿಯ ಪಾಲಕಿಗಳು ಬರುವ ನಿದರ್ಶನವಿದೆ. ಅಷ್ಟೇ ಅಲ್ಲ, ಈ ಗ್ರಾಮಗಳಿಂದ ಸಾವಿರಾರು ಜನರು ಬಂದು ಉತ್ಸವಗಳಲ್ಲಿ ಪಾಲ್ಗೊಳ್ಲುವದನ್ನು ಇಂದಿಗೂ ಕಾಣುತ್ತೇವೆ. ಆಗ ಡೊಳ್ಳಿನ ಮೇಳದವರು ಬಂದು ಉತ್ಸಾಹದಿಂದ ದೇವಿಯ ಮುಂದೆ ಡೊಳ್ಳು ಬಾರಿಸುತ್ತಾರೆ. ಅವರು ದೇವಿಗೆ ಲಕ್ಕವ್ವನೆಂದು ಕರೆದರು. ದ್ಯಾಮವ್ವನೇ ಲಕ್ಕವ್ವನೆಂದು ಕೆಲವರು ಹೇಳಿದರೆ, ಅವರಿಬ್ಬರೂ ಬೇರೆ ಬೇರೆ ಎಂದು ಕೆಲವರು ಹೇಳುತ್ತಾರೆ. ದ್ಯಾಮವ್ವ ಲಕ್ಕವ್ವ ಅಕ್ಕತಂಗಿಯರೆಂದು ಗಮನಿಸುವವರೂ ಇದ್ದಾರೆ. ಈ ಎರಡೂ ದೇವತೆಗಳ ಪೂಜಾರಿಗಳು ಬೇರೆ ಬೇರೆ ಜನಾಂಗಕ್ಕೆ ಸೇರಿದುದನ್ನು ಗಮನಿಸಿದಾಗ (ದ್ಯಾಮವ್ವನ ಪೂಜೆಯನ್ನು ವಿಶ್ವಕರ್ಮ ಜನಾಂಗದವರು, ಲಕ್ಕವ್ವನ ಪೂಜೆಯನ್ನು ಕುರುಬರ ಹಾಗೂ ಬೇಡರು ಮಾಡುತ್ತ ಬಂದಿದ್ದಾರೆ.) ಇವೆರಡೂ ಬೇರೆ ಬೇರೆ ದೇವತೆಗಳಿದ್ದಿರಬೇಕೇನೋ ಎನಿಸುತ್ತದೆ. ಪೂಜಾ ಪದ್ಧತಿ, ಜಾತ್ರೆ, ಉತ್ಸವಗಳನ್ನು ನೋಡಿದರೆ ದ್ಯಾಮವ್ವ – ಲಕ್ಕವ್ವ ಎರಡೂ ದೇವತೆಗಳನ್ನು ನಮ್ಮ ಜನಪದರು ಅಭಿನ್ನ ರೂಪವಾಗಿ ಆರಾಧಿಸುತ್ತ ಬಂದುದುಂಟು. ದ್ಯಾಮವ್ವ – ಲಕ್ಕವ್ವ ಯಾರು ? ಎಂದು ಯಾರನ್ನು ಕೇಳಿದರೂ ನಮಗೆ ಅಕ್ಕತಂಗಿ ಎಂಬ ಉತ್ತರ ತಟಕ್ಕನೆ ಬರುತ್ತದೆ, ಏಕೆಂದರೆ ಅಕ್ಕತಂಗಿ ಎಂಬ ನಂಬಿಕೆ, ಗಾಢವಾಗಿರುವದನ್ನು ನಮ್ಮ ಜನರಲ್ಲಿ ಇಂದಿಗೂ ಕಾಣಬಹುದಾಗಿದೆ. ದ್ಯಾಮವ್ವನೇ ಲಕ್ಕವ್ವನೆಂದು ಇನ್ನೂ ಹಲವರ ನಂಬಿಕೆಯಾಗಿದೆ. ಅದೇನೇ ಇದ್ದರೂ ಈ ಎರಡೂ ದೇವತೆಗಳು ನಮ್ಮ ಜನಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿವೆ.

ದ್ಯಾಮವ್ವನ ಗುಡಿ ಊರ ಮಧ್ಯದಲ್ಲಿದೆ. ಗುಡಿ ಚಿಕ್ಕದಾದರೂ ಸುಂದರವಾಗಿದೆ. ಮೂರ್ತಿಗಳನ್ನು ಬಿಟ್ಟರೆ ಗುಡಿಯಲ್ಲಿ ಪ್ರಾಚೀನ ಕಲೆಯನ್ನೇನೋ ನಾಮ ಕಾಣುವದಿಲ್ಲ. ದೇವಸ್ಥಾನದ ಪ್ರವೇಶದ್ವಾರ ಪೂರ್ವದಿಕ್ಕಿಗಿದೆ. ಗರ್ಭಗುಡಿಯಲ್ಲಿರುವ ಜೋಡು ದ್ಯಾಮವ್ವನ ಕಾಳಿಯ ರೂಪದಲ್ಲಿದ್ದು ಎಂಟು ಕೈಗಳನ್ನು ಒಳಗೊಂಡಿದ್ದಾಳೆ. ಮಹಿಷಾಸು – ಮರ್ದಿನಿಯ ರೂಪ ಕಣ್ಣಿಗೆ ಕಟ್ಟುವಂತಿದೆ. ಒಂದು ಮೂರ್ತಿಯಲ್ಲಿ ಪ್ರಸನ್ನತೆ ಇದ್ದು ಮತ್ತೊಂದು ಮೂರ್ತಿಯಲ್ಲಿ ಉಗ್ರತೆ ಕಂಡುಬುವದು. ಎರಡೂ ಮೂರ್ತಿಗಳು ಪೂರ್ವಾಭಿಮುಖವಾಗಿದ್ದು ಸುತ್ತಲೂ ನಂದಿವಾಹನನಾದ ಶಿವ, ಗಣಪತಿಗಳಿವೆ. ಶಿರಸ್ಸಿನ ಮೇಲ್ಭಾಗದಲ್ಲಿ ನರಸಿಂಹನ ಚಿಕ್ಕ ಮೂರ್ತಿಗಳವೆ. ಮೂರ್ತಿಗಳ ಬಲಬದಿಯ ನಾಲ್ಕು ಕೈಗಳಲ್ಲಿ ಅನುಕ್ರಮವಾಗಿ ಕಮಲ, ತ್ರಿಶೂಲ, ಬರ್ಚಿ ಹಾಗೂ ರುಂಡ ಮತ್ತು ಖಡ್ಗಗಳಿವೆ. ಖಡ್ಗದ ತುದಿಗೆ  ಲಿಂಬಿಯ ಹಣ್ಣು ಸಿಕ್ಕಿಸಿರುವದು ಕಂಡುಬರುವದು. ಎಡಬದಿಯ ಕೈಗಳಲ್ಲಿ ಶಂಖ, ಸರ್ಪ, ಡಾಲು ಹಾಗೂ ಕುಂಕುಮದ ಕರಡಿಗಳಿವೆ. ದೇವಿಯು ಸಿಂಹಾರೂಢಳಾಗಿದ್ದಾಳೆ. ಮೂರ್ತಿಗಳಿಗೆ ಬಣ್ಣಕೊಡುವ ಜೀನಗಾರರು ಇವುಗಳಿಗೆ ಶಾರ್ದೂಲಗಳೆಂದು ಹೇಳುತ್ತಾರೆ.

ಪೂಜಾರಿಗಳು

ದ್ಯಾಮವ್ವನ ಪೂಜೆ ಮಾರುವವರು ವಿಶ್ವಕರ್ಮ ಜನಾಂಗದವರು, ಮೂರ್ತಿಯನ್ನು ತಯಾರುಮಾಡುವವರೂ ಅವರೇ, ದ್ಯಾಮವ್ವನ ಜೋಡುರಥ ಕಟ್ಟುವವರೂ ಅವರೇ ! ಯಾವುದೇ ಮೂರ್ತಿ ಮಾಡಬೇಕಾದರೆ ವಿಶ್ವಕರ್ಮ ಜನಾಂಗದವರೇ ಮಾಡಬೇಕೆಂದು ನಿಯಮವಿದ್ದಿರಬಹುದಾಗಿ ತೋರುತ್ತದೆ. ಅದು ಈಗ ಶಿಥಿಲವಾಗಿ ಹೋದುದನ್ನು ಕಾಣಬಹುದು. ಈ ಸಮಾಜಕ್ಕೆ ಶೇರಿದ ಬಡಿಗರು ದ್ಯಾಮವ್ವನ ಮೂರ್ತಿ ತಯಾರಿಸಿ ಪೂಜಿಸುವರು. ಪತ್ತಾರರು ಕಾಳಮ್ಮನ ಪೂಜೆ ಮಾಡುವರು. ಸಾಂಬರಾದಲ್ಲಿ ಮಾತ್ರ ದ್ಯಾಮವ್ವನ ಪೂಜೆಯು ಬೇಡ ಜನಾಂಗದವರಿಂದ ನಡೆದು ಬಂದಿದೆಯೆಂದು ಹೇಳುತ್ತಾರೆ. ಸುಮಾರು ಇನ್ನೂರು ವರ್ಷಗಳ ಹಿಂದೆ ದಿ. ವೆಂಕಪ್ಪ ಮಾಲದಿನ್ನಿಯವರು  ಗೋಕಾಕದ ದ್ಯಾಮವ್ವನ ಪೂಜೆ ಮಾಡುತ್ತಿದ್ದರು. ಈಗಲೂ ಅವರ ವಂಶಜರೇ ಪೂಜೆ ಮಾಡುತ್ತಾರೆ. ಸುಮಾರು ಏಳು ತಲೆಮಾರುಗಳಿಂದ ದ್ಯಾಮವ್ವನ ಪೂಜೆ ವೃತ್ತಿಯಿಂದ ಬಡಿಗರಾದ ಮಾಲದಿನ್ನಿ ಮನೆತನದವರಿಂದಲೇ ನಡೆದುಕೊಂಡು ಬರುವುದಾಗಿ ತಿಳಿದು ಬರುತ್ತದೆ. ಸಾಮಾನ್ಯವಾಗಿ ಅರ್ಚಕರಿಗೆ ಉಂಬಳಿ ಹಾಕಿಕೊಂಡುದುಂಟು. ಆದರೆ ಈ ಅರ್ಚಕರಿಗೆ ಉಂಬಳಿ ಹಾಕಿಕೊಟ್ಟ  ಬಗ್ಗೆ ಎಲ್ಲಿಯೂ ಉಲ್ಲೇಖಗಳಿಲ್ಲ. ಕಳೆದ ಏಳು ತಲೆಮಾರುಗಳಿಂದ ಮಾಲದಿನ್ನಿ ವಂಶಜರಿಗೆ ಒಬ್ಬೋಬ್ಬರೇ ಗಂಡು ಮಕ್ಕಳಿದ್ದು ಅವರು ಜೀವಿತದ ಪ್ರಾರಂಭದಲ್ಲಿಯೋ. ಮಧ್ಯಭಾಗದಲ್ಲಿಯೋ ಒಂದು ಕಣ್ಣು ಕಳೆದುಕೊಂಡಿದ್ದು ಗಮನಾರ್ಹ ಸಂಗತಿಯಾಗಿದೆ. ಈಚೆಗೆ ಆ ವಂಶದಲ್ಲಿ ನಾಲ್ಕು ಗಮಡು ಮಕ್ಕಳು ಹುಟ್ಟಿದ್ದು, ಅವರಲ್ಲಿ ಒಬ್ಬನು ಕುರುಡನಾಗಿದ್ದಾನೆ.

ಪೂಜೆ

ದೇವಿಯ ಪೂಜೆ ಶುಕ್ರವಾರ ಮತ್ತು ಮಂಗಳವಾರ ವಿಶೇಷ ರೀತಿಯಲ್ಲಿ ನಡೆಯುತ್ತದೆ. ಪೂಜಾರಿಯು ಸ್ನಾನ ಮಾಡಿ ಮಡಿಬಟ್ಟೆ ಧರಿಸಿ ದೇವಿಯನ್ನು ಮಡಿನೀರಿನಿಂದ ತೊಳೆದು ಮಡಿಬಟ್ಟೆ ಉಡಿಸಿ ಒಡವೆ ತೊಡಿಸಿ ಹೂಗಳಿಂದ ಅಲಂಕರಿಸುತ್ತಾರೆ. ಸಾವಿರಾರು ಜನ ಬಂದು ದೇವಿಯ  ದರ್ಶನ ಪಡೆದು ಕಾಯಿ ಕರ್ಪುರ ನೈವೇದ್ಯ ಮಾಡುತ್ತಾರೆ. ಕುಂಕುಮಾರ್ಚನೆಯೊಂದಿಗೆ ಬೆಲ್ಲ ಸಕ್ಕರೆ ನೈವೇದ್ಯ ಮಾಡಿ ಪ್ರಸಾದ ಹಂಚುತ್ತಾರೆ. ಮಂಗಳವಾರ ಮತ್ತು ಶುಕ್ರವಾರ “ದೇವಿಯವಾರ” ಎಂದು ನಡೆದುಕೊಳ್ಳುತ್ತಾರೆ. ಈ ದಿನಗಳನ್ನು ಬಿಟ್ಟು ಇತರೇ ದಿನಗಳಲ್ಲಿ ಸಾದಾ ರೀತಿಯಲ್ಲಿ ದಿನಕ್ಕೆ ಎರಡು ಬಾರಿ ಪೂಜೆ ಮಾಡುವ ವಾಡಿಕೆಯಿದೆ.

ಈ ದೇವತೆಗೆ ಸಂಬಂಧಿಸಿದ ಒಂದು ಕಥೆ

[1] ಹೀಗಿದೆ.

ಲಕುಮಿ ದೇವಿ ಬಲಶಾಲಿ ಶೂದ್ರನೊಬ್ಬನ ಪ್ರೀತಿಗೆ ಪಾತ್ರಳಾಗುವಳು. ಕೆಲವು ದಿವಸಗಳ ನಂತರ ಗಂಡನ ಅನೈತಿಕತೆಗೆ ರೋಸಿ ಅವನನ್ನು ಹತೋಟಿಗೆ ತರಲು ಪ್ರಯತ್ನ ಪಟ್ಟಳು. ತಾನು ದೇವಿಯಾದುದರಿಂದ ತನ್ನ ಮಾತನ್ನೇ ಪಾಲಿಸಿಬೇಕೆಂದು ಗಂಡನಿಗೆ ಹೇಳಿದಳು. ಗಂಡ, ತನ್ನ ಹತೋಟಿಯಲ್ಲಿ ಈಕೆಯನ್ನು ಹಿಡಿಯಲು ಬೇರೆ ಗಂಡಸರನ್ನು ಕರೆತಂದನು. ಇದು ತನಗೆ ಅವಮರ್ಯಾದೆ ಎಂದು ತಿಳಿದ ದೇವಿಯು ಬಂದ ಗಂಡಸರನ್ನೆಲ್ಲ ಬೆದರಿಸಿದಳು. ಆದರೆ ಅವರು ಸಿಕ್ಕಾಪಟ್ಟೆ ದೇವಿಯನ್ನು ನಿಂದಿಸಿದರು, ಬೈದರು.

“ನೀವು ಗಂಡರೇ, ಭಂಡರು. ನಿಮ್ಮನ್ನು ಚಂಡಾಡುವೆ” ಎಂದು ಮೂಲೆಯಲ್ಲಿರುವ ಕೊಡ್ಲಿ ಕುಡಗೋಲುಗಳನ್ನು ಹಿಡಿದಳು. ಎದುರಿಗೆ ಬಂದವರನ್ನು ಸಂಹರಿಸಿದಿಳು. ಆವೇಶಗೊಂಡಳು. ಕೆಲವು ಭಂಡರು ಓಡುತ್ತಿರುವಾಗ ಚಂಡಾಡಿದಳು. ಒಬ್ಬ ಮಾತ್ರ ಅಂಜಿ ಕೋಣದ ಹೊಟ್ಟೆಯಲ್ಲಿ ಹೊಕ್ಕನು. ಕೋಣದ ರುಂಡ ಕಡಿದು ಅವನನ್ನೂ ಸಂಹರಿಸಿದಳು. ಈ ಸುದ್ದಿ ಕಾಳ್ಗಿಚ್ಛಿನಂತೆ ಗೋಕಾಕೆಯಲ್ಲಿ ಅಲ್ಲದೆ ಸುತ್ತಮುತ್ತಲೂ ಹಬ್ಬಿತು. ಜನತಂಡೋಪತಂಡವಾಗಿ ದೇವಿಯನ್ನು ನೋಡಲು ಬಂದರು, ಮೂರನೆಯ ದಿನ ಸಂಜೆ ವಿಪರೀತ ಮಳೆಯಾಗಿ ಜನ ಸುಖಪಟ್ಟರು. ಜನರು ದೈತ್ಯರ ಸಂಹಾರವಾಯಿತೆಂದು ನುಡಿದರು. ಅಂದಿನಿಂದ ದ್ಯಾಮವ್ವನ ಪ್ರಸಿದ್ಧಿ ಸುರುವಾಯ್ತು.

ಈ ಕಥೆಗೆ ಪುಷ್ಠಿ ದೊರೆಯುವ ಅನೇಕ ಜನಪದ ಹಾಡುಗಳೇ ಸಾಕ್ಷಿ. ದ್ಯಾಮವ್ವ ಕೊಡ್ಲಿ ಕುಡಗೋಲ ಹಿಡಿದ ಒಂದು ತ್ರಿಪದಿ ಹೀಗಿದೆ :

ಗೋಕಾವಿ ದ್ಯಾಮವ್ವ ಲೋಕದ ಪರಸಿದ್ಧಿ
ಕುಡಗೋಲ ಕೊಡ್ಲಿ ಹಿಡಿದಾಳೋ | ದ್ಯಾಮವ್ವ
ಕ್ವಾಣನ ಗೋಣ ಕಟಿದಾಳೋ ||

ಲಕುಮಿಯ ಬಳಿಕ ವೈರಾಗ್ಯ ಜೀವನದ ತಾಳಿ ಬಾಳಿ ಪೂಜ್ಯಳಾದಳಂತೆ ಆದರೆ “ರಾಣಿಗ್ಯಾ” ಎಂಬವನು ಭಂಡರ ಸಂಬಂಧಿಕನೊಬ್ಬನು ತನ್ನ ಜೀವಮಾನದಲ್ಲಿಯೇ ದ್ಯಾಮವ್ವನನ್ನು ಅಶ್ಲೀಲವಶಾಗಿ ನಿಮದಿಸುತ್ತಲೇ ಸತ್ತನಂತೆ.”

ಎಲ್ಲರ ದೇವಿ 

ದ್ಯಾಮವ್ವಗೆ ಜಾತಿಭೇಧವಿಲ್ಲ. ಅವಳಿಗೆ ಎಲ್ಲ ಜಾತಿಯವರೂ ಒಂದೇ. ಎಲ್ಲರನ್ನೂ ಸಮಾನಭಾವದಿಂದ ಅವಳು ಕಾಣುತ್ತಾಳೆ. ಗೊಬ್ಬರು, ಮೈಲಿಬೇನೆಯಂತಹ ರೋಗಗಳು ಕಾಣಿಸಿಕೊಂಡಾಗ ಎಲ್ಲ ಜಾತಿ ಧರ್ಮದವರು ಅಕ್ಕಿ, ಬಾಳೆಹಣ್ಣು ಮೊಸರನ್ನು ದೇವಿಗೆ ನೈವೇದ್ಯ ಕೊಡುವರು. ಈ ಪರಂಪರೆ ಇಂದಿಗೂ ನಡೆದು ಬಂದಿದೆ. ಭಕ್ತಿಯಿಂದ ಪೂಜೆ ಮಾಡುವವರಿಗೆ ಬೇಡಿದ್ದನ್ನು ಕೈಗೂಡಿಸಿಕೊಡುವಳು ಎಂಬ ನಂಬಿಗೆ ಭಕ್ತಾಧಿಗಳಲ್ಲಿದೆ. ದ್ಯಾಮವ್ವನ ಭಕ್ತರು ತಮ್ಮ ಕಷ್ಟನಿವಾರಣೆ ಗೋಸುಗ ಹರಕೆಗಳನ್ನು ಕೊರುತ್ತಾರೆ. “ಒಡವೆ ಮಾಡಿಸುತ್ತೇನೆ, ಸೀರೆ ತಮದು ಉಡಿಸುತ್ತೇನೆ, ಋಣ ಏರಿಸುತ್ತೇನೆ, ಇತ್ಯಾದಿಯಾಗಿ ಬೇಡಿಕೊಳ್ಳುತ್ತಾರೆ. ಬೇಡಿಕೊಂಡಂತಡ ತಪ್ಪದೆ ಮಾಡಿಸಿ ಹರಕೆ ತೀರಿಸುತ್ತಾರೆ.

ಜಾತ್ರೆಯಲ್ಲಿ ಕೋಣ ಕಡಿಯುವ ಪದ್ಧತಿ ರೂಢಿಯಲ್ಲಿದ್ದ ಬಗ್ಗೆ ಕೆಲವರು ಹೀಗೆ ಕಥೆ ಹೇಳುವದೂ ಉಂಟು.

“ದ್ಯಾಮವ್ವ ರೂಪವತಿಯಾಗಿದ್ದಳು. ಶೂದ್ರನೊಬ್ಬನು ಆಕೆಯನ್ನು ಮದುವೆಯಾದನು. ಅವಳ ಹೊಟ್ಟೆಯಿಂದ ಮಗ ಹುಟ್ಟಿದನು. ಇಂಗಳೊಬಾ ಎಂದು ಅವನಿಗೆ ಹೆಸರಿಟ್ಟರು. ಅವನು ಬೆಳೆದು ದೊಡ್ಡವನಾದ ತರುವಾಯದಲ್ಲಿ “ನನ್ನ ತಂದೆ ಯಾರು?” ಎಂದು ಕೇಳಿದಾಗ ದೇವಿ ಪರಿಚಯ ಹೇಳಿದಳಂತೆ. ನಂತರ ಇಂಗಳೋಬಾ ತಂದೆಯನ್ನು ಕಂಡು ಬಂದನಂತೆ. ಮಗನ ಕಿಸೆಯಲ್ಲಿ ಹಲವು ಚರ್ಮದ ಚೂರಿಗಳಿದ್ದುದನ್ನು ಕಂಡ ತಾಯಿ ಇವೆಲ್ಲಿಯವೂ ಎಂದು ಕೇಳಿದರಂತೆ. ಮಗನಿ ಎಲ್ಲ ವಿವರ ಹೇಳಿದನಂತೆ ತನ್ನನ್ನು ವಂಚಿಸಿ ಮದುವೆಯಾದನೆಂದು ಕೋಪಗೊಂಡ ದೇವಿಯು ಆ ಶೂದ್ರನನ್ನು ಕೊಲ್ಲಲು ಮುಂದಾದಾಗ ಅವನು ಕೋಣದ ದೇಹದಲ್ಲಿ ಪ್ರವೇಶ ಮಾಡಿದನಂತೆ – ದೇವಿ ಆಗ ಆ ಕೋಣವನ್ನೇ ಸಂಹಾರ ಮಾಡಿದಳಂತೆ ! ಅಂತೆಯೇ ದೇವಿಯ ಜಾತ್ರೆಯಲ್ಲಿ ಕೋಣ ಕಡಿಯುವ ಪದ್ಧತಿ ರೂಢಿಯಲ್ಲಿ ಬಂದಿತೆಂದು ಕಲವರ ಹೇಳಿಕೆಯಾಗಿದೆ. ಈ ಮಾತನ್ನು ಪುಷ್ಠೀಕರಿಸುವ – ದ್ಯಾಮವ್ವ – ಲಕ್ಕವ್ವ (ಲಗುಮವ್ವ) ರಲ್ಲಿ ಅಬೇಧ ಕಲ್ಪಿಸುವ ಒಂದು ಪದ್ಯ ಇಂತಿದೆ :

“ಆ ಲಗಮವ್ವ ಕುಲವಂತಿ ಹುಡುಗಿ
ಮೋಸ ಹೋಗ್ಯಾಳ ಸಮಗಾರಗ ಬೆಡಗಿ
ದಾಂಪತ್ಯ ನಡೆಸಾಳ ಭರಭರದಿ
ಸಂತಸ ಪಟ್ಟಾಳ, ಕಂದನ ಪಡದಾಳ
ಬಹು ಸಂತಸದಿ !
ಒಂದಿನ ಮಗ ಇಂಗಳೋಬ ಹೋದಾ
ಪ್ಯಾಟ್ಯಾಗ ಅಪ್ಪನ ಅಂಗಡಿ ಮುಂದಾ,
ಚರ್ಮದ ತುಂಡ ಹಾಕ್ಕಾನ ಕಸೆದಾಗಾ
ಸರಸರನೆ ನಡೆದಾನ ಮನೆಯೊಳಗಾ |
ಮಗ ಬಂದೆಂಬ ಹರುಷದಿ ಲಕುಮಿ
ಓಡೋಡಿ ಬಂದಾಳ
ಮಗನ ತಡವ್ಯಾಳ ಮಗನ ಅಪ್ಯಾಳ
ಹಾಕ್ಯಾಳ ಕೆಸೆದಾಗ ಕೈಯ |
ಮುಖ ಸಿಂಡರಿಸಿ ನೋಡ್ಯಾಳ ಚೂರಾ
ರಭಸದಿ ಹೊಡೆದಾಳ ಮಗನ ಜೋರಾ
ಭರದಿ ಕೇಳ್ಯಾಳ ಮಗನ ಕೆನ್ನಿ ಹಿಂಡ್ಯಾಳ
ಉತ್ತರ ಪಡದಾಳ ಸಿಡಿಲಿನಂತಾದಾಳ
ಸೆರಗ ಕಟ್ಯಾಳ ಕುಗೋಲು ಹಿಡಿದಾಳ
ಕಣ್ಣಗಲ ದೃಷ್ಠಿ ಬೀರ್ಯಾಳ
ಮಗ ಇಂಗಳೋಬಾ
ಹೆದರಿ ಓಡಿದಾ. ತಂದೆಗೆ ಸುದ್ದಿ ಮುಟ್ಟಿಸಿದಾ |
ಬೆನ್ನ ಹತ್ಯಾಳ ಕುಗೋಲು ಹಿಡಿದಾ
ಅತ್ತ ಇತ್ತ ಹುಡಕ್ಯಾಳ ಗಂಡನ ಜಾಡಾ |
ಓಡಾಕತ್ಯಾನ ಮೈಪರವಿ ಮರೆತಾ
ಕೊನೆಗೆ ಹೊಕ್ಕಾನ ಕೋಣನ ದೇಹದಾಗ |
…………………………………
ಕೋಣ ಕಡಿಯುವ ಸಂಕೇತ ಬಂತರಿ
ಜಾತ್ರಿಲಿ ಕೋಣ ಕಡಿತಾರರಿ |
…………………………………
ದ್ಯಾಮವ್ವ ಹರಸುತ ನಡದಾಳ
ತನ್ನಂತೆ ಮೋಸ ಹೋಗದಿರೆಂದಾಳ
ಬೇಡುವ ಭಕ್ತರಿಗೆ ವರದಹಸ್ತ ನೀಡ್ಯಾಳ
ಊರ ಜನಮನ ನಲಿಯಲಿ ಎಂದು ಹರಸ್ಯಾಳ |
ನಮೋ ದ್ಯಾಮವ್ವ ನಮೋ ಲಕುಮವ್ವ
ಕಂದರನೆಲ್ಲ ಕಾಪಾಡಿ ಹರಸವ್ವ
ಆಯುರಾರೋಗ್ಯ ಭಾಗ್ಯ ನೀಡವ್ವ ||
– ಸಂಗ್ರಹ ಕು. ಅನುಸೂಯಾ ಮಟ್ಟಿಕಲ್ಲಿ.

ಹೀಗೆ ದ್ಯಾಮವ್ವ ಎಲ್ಲರ ಪಾಲಿಗೆ ತಾಯವ್ವನಾದಳು ಎಂದು ನಮ್ಮ ಜನರ ನಂಬಿಕೆಯಾಗಿದೆ. ಜಾತಿಮತ ಪಂಥಗಳ ಬೇಧವಿಲ್ಲದೆ ಇಂದಿಗೂ ಎಲ್ಲರೂ ಆಕೆಯನ್ನು ತಾಯಿ – ತಾಯವ್ವನೆಂದೇ ತಿಳಿದು ಆರಾಧಿಸುತ್ತಿರುವದು ಈ ನಂಬಿಕೆಗೆ ಬಲವನ್ನು ತಂದುಕೊಡುತ್ತದೆ. ದ್ಯಾಮವ್ವ – ಲಗುಮವ್ವರ ಮಧ್ಯ ಅಭೇದ್ಯ ಕಲ್ಪಿಸಿ ಈ ಪದ್ಯದಲ್ಲಿ ಹೇಳಲಾಗಿದೆ.

ದ್ಯಾಮವ್ವನೇ ಲಕ್ಕವ್ವ (ಲಗುಮವ್ವ) ಎಂಬ ನಂಬಿಗೆ ನಮ್ಮ ಜನರಲ್ಲಿ ಬಲವಾಗಿದೆ. ದ್ಯಾಮವ್ವನ ಜಾತ್ರೆಯಲ್ಲಿ ನಡೆಯುವ ಆಚರಣೆಗಳನ್ನು (ದ್ಯಾಮವ್ವ ಹಾಗೂ ಲಕ್ಕವ್ವ ಅಭೇದ ಕಲ್ಪಿಸಿ ನಡೆಕೊಲ್ಳುವ ರೀತಿ) ನೋಡಿದರೆ ದ್ಯಾಮವ್ವನೇ ಲಕ್ಕವ್ವ (ಲಕ್ಷ್ಮೀ) ನಾಗಿರಬಹುದಾಗಿ ತೋರುತ್ತದೆ. ಜಾನಪದದ ಶೋಧನೆ ಸ್ಪಷ್ಟತೆ ಸಾಧಿಸದಿದ್ದರೂ ಸಿಗುವ ಅವಶೇಷ, ಆಚರಣೆ ಹಾಗೂ ನಂಬಿಕೆಗಳ ಮೇಲೆ ಸಂಭವನೀಯ ಸಾಧ್ಯಾ ಸಾಧ್ಯತೆಗಳನ್ನು ಹೇಳಲು ಯತ್ನಿಸಬಹುದು. ಇದು ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ಲಕ್ಕವ್ವ (ಲಕ್ಷ್ಷೀ) ಮತ್ತು ದ್ಯಾಮವ್ವ ಇಬ್ಬರೂ ಒಂದೇ ಎಂದು ಕೆಲವರು, ಭಿನ್ನ ಎಂದು  ಕೆಲವರು  ತಿಳಿದುಕೊಂಡುದೇ ಇದಕ್ಕೆ ಸಾಕ್ಷಿ. ಗೋಕಾಕದ ದ್ಯಾಮವ್ವನ ಜಾತ್ರೆಯನ್ನು ಲಕ್ಕವ್ವನ ಜಾತ್ರೆಯೆಂದು ಕರೆಯುವುದುಂಟು.

“ಹೂವನು ನೋಡ ಹೂವಿನ ಮಾಲೆಯ ನೋಡ
ಗೋಕಾವಿ ಲಕ್ಕವ್ವನ ಪೂಜೆಯ ನೋಡ
ತೇರವ ನೋಡ ತೇರಿನ ಗಾಲಿಯ ನೋಡ
ಗೋಕಾವಿ ಲಕ್ಕವ್ವನ ಪಾಲಕಿಯ ನೋಡ ||”

ಹೀಗೆ ದ್ಯಾಮವ್ವನನ್ನು ಲಕ್ಕವ್ವನೆಂದು ತಿಳಿದುಕೊಂಡು ನಮ್ಮ ಜನ ಬಂದಿದ್ದಾರೆ.

ಜಾತ್ರೆ

ಜಾತ್ರೆ ಜನಸಾಮಾನ್ಯರ ಧಾರ್ಮಿಕ ಪ್ರವೃತ್ತಿಯ ಅಭಿವ್ಯಕ್ತಿಯಾದಂತೆ ಕಲಾತ್ಮಕ ಅಭಿವ್ಯಕ್ತಿಯೂ ಆಗಿದೆಯೆಂಬ  ಅಭಿಪ್ರಾಯವನ್ನು[2] ಗಮನದಲ್ಲಿರಿಸಿಕೊಂಡು ನಾವು ಕರ್ನಾಟಕದಲ್ಲಿ ನೆಡಯುವ ಎಲ್ಲ ಗ್ರಾಮ ದೇವತೆಗಳ ಜಾತ್ರೆಗಳ ವಿವರಣಾತ್ಮಕ ಅಧ್ಯಯನವನ್ನು ಮಾಡಿದಾಗ ಜಾನಪದದ ಅನೇಕ ಅಂಶಗಳನ್ನು ಸುಲಭವಾಗಿ ಗ್ರಹಿಸಬಹುದಾಗಿದೆ. ಜಾತ್ರೆಯಲ್ಲಿ ನಡೆಯುವ ಸಂಗತಿಗಳನ್ನು ಗಮನಿಸಿದರೆ ಗ್ರಾಮದೇವತೆಗೆ ಸಂಬಂಧಪಟ್ಟ ಅನೇಕ ಅಂಶಗಳು ಬೆಳಕಿಗೆ ಬರುತ್ತವೆ.

ಜುಲೈ (ಜ್ಯೇಷ್ಠ, ಆಷಾಢ) ತಿಂಗಳಲ್ಲಿ ಗೋಕಾಕ ದ್ಯಾಮವ್ವನ ಜಾತ್ರೆ  ನಡೆಯುತ್ತದೆ. ನಾಲ್ಕಾರು ತಿಂಗಳ ಪೂರ್ವದಲ್ಲಿಯೇ ಊರ ದೈವಗಳು ಕೂಡಿಕೊಂಡು ಜಾತ್ರೆಯ ದಿನಗಳನ್ನು  ಗೊತ್ತು ಪಡಿಸುವರು. ಅಂದಿನಿಂದಲೇ ಊರಲ್ಲೆಲ್ಲ ಉತ್ಸಾಹ ಕಂಡುಬರುತ್ತದೆ. ಜಾತ್ರೆಗೆ ಪೂರ್ವದಲ್ಲಿಯೇ ಎಲ್ಲ ಮನೆಗಳು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತವೆ.  ಜಾತ್ರೆಯಾದ ನಂತರ ಒಂದು ವರ್ಷಕಾಲ ಸುಣ್ಣ ಬಣ್ಣ ಹಚ್ಚುವ ಪದ್ಧತಿ ಇರುವುದಿಲ್ಲವಾದ್ದರಿಂದ ಊರ ಜನರೆಲ್ಲರೂ ಕಡ್ಡಾಯವಾಗಿ ತಮ್ಮ ಮನೆಗಳನ್ನು ಸ್ವಚ್ಛಮಾಡಿ ಸುಣ್ಣ ಬಣ್ಣ ಬಳಿಯುತ್ತಾರೆ. ಬಟ್ಟೆ ಬರೆ ಮಡಿ ಮಾಡುತ್ತಾರೆ. ಜಾನಪದ ಆರಂಭಗೊಳ್ಳುವದಕ್ಕೆ ಸುಮಾರು ಒಂದೆರಡು  ತಿಂಗಳ ಮೊದಲು ದೇವಿಗೆ ಬಣ್ಣ ಕೊಡಲು ಮೂರ್ತಿಗಳನ್ನು ಜೀನಗಾರರ ಮನೆಗೆ ತರುತ್ತಾರೆ. ದ್ಯಾಮವ್ವ – ಲಕ್ಕವ್ವ ದೇವಿಯರ ಗುಡಿಗಳನ್ನು  ಬಣ್ಣ ಹಚ್ಚಿ ಅಲಂಕಾರಗೊಳಿಸುತ್ತಾರೆ. ಊರಲ್ಲಿ ದ್ಯಾಮವ್ವ ಪ್ರತಿಷ್ಠಾಪನೆ ಗೊಂಡಾಗಿನಿಂದಲೂ ದೇವಿಯ ಜಾತ್ರೆ ನಡೆದು ಬಂದಿದೆಯೆಂದು ಹೇಳುವ ಪ್ರತೀತಿಯಿದೆ. ಸುಮಾರು ೧೮೯೬ ರಿಂದ ೧೯೩೬ ರ ವರೆಗಿನ ಅವಧಿಯಲ್ಲಿ ಗೋಕಾಕವು ಕಾಲರಾ – ಪ್ಲೇಗುಗಳ ತವರು ಮನೆಯಾಗಿದ್ದಿತೆಂದು ಕಣ್ಣಾರೆ ಕಂಡ ಹಿರಿಯರು ಹೇಳುತ್ತಾರೆ. ೧೯೩೬ ರಿಂದ ಅದು ಕಡಿಮೆಯಾಗುತ್ತ ಬಂದು ಬರುಬರುತ್ತ  ಅದು ಪೂರ್ತಿ ನಿಂತು ಹೋದುದು ತಿಳಿಯಬರುತ್ತದೆ. ನಮ್ಮ ಜನ ದ್ಯಾಮವ್ವ ಜಾತ್ರೆಮಾಡಿ ರೋಗನಿವಾರಣೆ ಗೋಸುಗ ಆಗ ಪ್ರಾರ್ಥಿಸಿಕೊಂಡಿರಬೇಕು.

೧೯೧೪ ರಲ್ಲಿ ಜರುಗಿದ ನಾವೆಯ ದುರಂತವು ನಗರದ ಇತಿಹಾಸದಲ್ಲಿಯೇ ಕರಾಳ ಘಟನೆಯೆನಿಸಿದೆ. ಗ್ರಾಮ ದೇವತೆಯಾದ ದ್ಯಾಮವ್ವನ ಜಾತ್ರೆಯ ಪ್ರಸಂಗದಲ್ಲಿ ನೂರಾರು ಜನರನ್ನು ಹೊತ್ತುಕೊಂಡು ಘಟಪ್ರಬಾ ನದಿಯನ್ನು ದಾಟುತ್ತಿದ್ದ ದೊಡ್ಡ ನಾವೆಯೆಂದು ಆಕಸ್ಮಿಕವಾಗಿ ಮುಳುಗಿದಂತೆ. ಅಂಬಿಗರ  ಸಾಹಸದ ಫಲವಾಗಿ ಬಹಳಷ್ಟು ಜನರು ಪ್ರಾಣ ಉಳಿಸಿಕೊಂಡು ಪಾರಾದರು. ನಿಪನ್ಯಾಳದ ಲಕ್ಷ್ಮವ್ವನೆಂದು ಪ್ರಸಿದ್ಧಿಯಾದ ಗೋಕಾಕದ ಶ್ರೀಮತಿ ಲಕ್ಷ್ಮೀಬಾಯಿ ಕದಮ ಅವರು ಈ ನಾವೆಯ ದುರಂತವನ್ನು ಅನುಭವಿಸಿದವರಲ್ಲಿ ಒಬ್ಬರಾಗಿದ್ದಾರೆ. ಅವರು ತಾವು ಸಾಕಿದ ಮಕ್ಕಳನ್ನು ಬದುಕಿಸಿ ಸತತ ಎರಡು ದಿನಗಳವವರೆಗೆ ನದಿಯ ಮಧ್ಯದಲ್ಲಿದ್ದ  ಮರದಲ್ಲಿ ಕಷ್ಟದ ಗಳಿಗೆಗಳನ್ನು ಕಳೆದಳು. ಇದು ಇಲ್ಲಿಯ ಸ್ತ್ರೀಯರ ಸಾಹಸ ಪ್ರವೃತ್ತಿ ಹಾಗೂ ದೈವಭಕ್ತಿಗಳಿಗೆ ಪ್ರತ್ಯಕ್ಷ ನಿದರ್ಶನವಾಗಿದೆ. ಈ ಘಟನೆಯನ್ನು ಕುರಿತು ಬರೆದ ಲಾವಣಿ ಪದಗಳನ್ನು ಇಂದಿಗೂ ಸುಶ್ರಾವ್ಯವಾಗಿ ಹಾಡುವುದನ್ನು ಕೇಳುತ್ತೇವೆ. ೧೮೯೬ ರಲ್ಲಿ ಸಂಭವಿಸಿದ ರಾಗಿಯ ಬರವು ನಗರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದಾಗ ಜನರು ಗ್ರಾಮ ದೇವತೆಯನ್ನು ಪೂಜಿಸಿದರಂತೆ, ಉತ್ಸವಗಳನ್ನು ಮಾಡಿದರಂತೆ. ಈ ಎಲ್ಲ ಆಧಾರಗಳಿಂದ ಗೋಕಾಕ ಗ್ರಾಮದೇವತೆಯ ಜಾತ್ರೆಯು ತಪ್ಪದಲೆ ೧೮೯೬ ರಿಂದಲೂ ನಡೆದುಕೊಂಡು ಬಂದಿತೆಂದು ತಿಳಿಯುತ್ತದೆ.

ದ್ಯಾಮವ್ವನ ಜಾತ್ರೆ ಸಾಮಾನ್ಯವಾಗಿ ಎಲ್ಲ ಕಡೆಗೆ ೫, ೯, ೧೧ ವರ್ಷಗಳಿಗೊಮ್ಮೆ ನಡೆಯುವುದು ಕಂಡುಬರುವದು. ಆದರೆ ಸವದತ್ತಿಯ ದ್ಯಾಮವ್ವನ ಜಾತ್ರೆ ಮಾತ್ರ ಆರವತ್ತು ವರ್ಷದ ನಂತರ ನಡೆಯಿತೆಂದು ಒಬ್ಬ ವೃದ್ಧ ಮುದುಕಿ ಹೇಳಿದಳು.  ಗುಡುಗೇರಿ ದ್ಯಾಮವ್ವನ ಜಾತ್ರೆ ಸುಮಾರು ೩೫ ವರ್ಷಗಳಿಗೊಮ್ಮೆ ನಡೆಯುತ್ತದೆಂದು ದೇವೂರ ದ್ಯಾಮವ್ವನ ಜಾತ್ರೆಯನ್ನು  ಪ್ರತಿವರ್ಷ ಏಕೆ ಮಾಡುವುದಿಲ್ಲವೆಂದು ನಾನು ಓರ್ವ ಹಿರಿಯರನ್ನು ಕೇಳಿದಾಗ ಅವರು – ” ದ್ಯಾಮವ್ವ ಭಾರಿ ಉಗ್ರದೇವತೆ. ಅವಳ ಜಾತ್ರೆ ಮಾಡಲು ಜನ ಹೆದರುವರು, ಎಂದು ಹೇಳಿದರು. ಪ್ರತಿವರ್ಷ ದ್ಯಾಮವ್ವನ ಜಾತ್ರೆಗಳು ಬಹುಶಃ  ಯಾವ ಕಡೆಗೂ ನಡೆದುದು ಕಂಡು ಬರುವುದಿಲ್ಲ ! ೧೯೪೫ ರಿಂದ ಇಲ್ಲಿ ಐದು ವರ್ಷಗಳಿಗೊಮ್ಮೆ ಜಾತ್ರೆಯು ನೆಡದು ಬಂದಿದೆ. ಊರ ಹಿರಿಯರಾದ ವಿಠ್ಠಲಪ್ಪ ಸುಪಲಿ, ಆಪಮಪ್ಪ ಚವ್ಹಾಣ, ಪಾವಾಡೆಪ್ಪ ಹೆಗ್ಗಣ್ಣವರ, ಅಪ್ಪಣ್ಣಾ  ಹಳಗೋಡಿ, ಮೊಹಮ್ಮದ ಸುಲ್ತಾನ ಕೊತವಾಲ (ಪೋಲಿಸ್ ಪಾಟೀಲ್) ಧರ್ಮ ನಾಯ್ಕ ಪಾಟೀಲ, ಹನುಮಂತಪ್ಪ ಭೀಮಪ್ಪ ಗುಡ್ಡದಮನಿ, ಬನ್ನಿಶೆಟ್ಟಿ ದುಂಡಪ್ಪ ಮೊದಲಾದ ಅನೇಕರು ಮುಂದಾಗಿ ೧೯೪೫ ರಲ್ಲಿ ಉತ್ಸಾಹದಿಂದ ಜಾತ್ರೆಯನ್ನು ಮುಂದುವರಿಸಿದರು (೧೯೪೫ ರಕ್ಕಿಂತಲೂ ಮೊದಲು ೬ – ೭ ಜಾತ್ರೆಗಳು ಆಗಿವೆಯೆಂದು ಹೇಳುತ್ತಾರೆ. ೧೯೧೪ ರಲ್ಲಿ ನಾವೆಯ ದುರಂತ ಜರುಗಿದ್ದು ದ್ಯಾಮವ್ವನ ಜಾತ್ರೆಯ ಪ್ರಸಂಗದಲ್ಲಿಯೇ) ಕಳೆದ ೧೯೮೦ ರಲ್ಲಿ ನಡೆದ ಜಾತ್ರೆಯು ೮ ನೆಯದು. ಈ ಎಂಟು ಜಾತ್ರೆಗಳು ೫ ವರ್ಷಗಳಿಗೊಮ್ಮೆ ತಪ್ಪದೆ ನಡೆದು ಬಂದದ್ದು ಒಂದು ವಿಶೇಷ ದ್ಯಾಮವ್ವನ ಜಾತ್ರೆಗೆ ಬೇಕಾಗುವ ಹಣವನ್ನು ಜಾತ್ರಾ ಕಮೀಟಿಯು ಹಿರಿಯರು ಪ್ರತಿ ಮನೆ ಮನೆಗೂ ಅಡ್ಡಾಡಿ ಕೂಡಿಸುತ್ತಾರೆ. ಪ್ರತಿ ಮನೆ ಮನೆಗೂ ಅಡ್ಡಾಡಿ ಶೇಖರಿಸುವಾಗ ಉತ್ಸಾಹವೇ ಉತ್ಸಾಹ. ಡೊಳ್ಳು ಬಾರಿಸುವವರು ಮುಂದಿರುತ್ತಾರೆ. ಹಿಂದಿನಿಂದ ಹಿರಿಯರು ಗುಂಪಾಗಿ ನಡೆದು ಜಾತಿ -ಮತ – ಪಂಥಗಳ, ಮೇಲು – ಕೀಳುಗಳ. ಅಂತಸ್ತುಗಳ ಬೇಧಭಾವವಿಲ್ಲದೆ ಎಲ್ಲರ ಮನೆಗಳಿಗೂ ಹೋಗಿ ನಗುತ್ತ ಕೆಲೆಯುತ್ತ ಹಣ ಕೂಡಿಸುತ್ತಾರೆ. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮುಕ್ತ ಮನಸ್ಸಿನಿಂದ ಜನ ಹಣ ಕೊಡುತ್ತಾರೆ. ಇಷ್ಟೇ ಎಂದೇನೂ ನಿಯವಿಲ್ಲ. ಮೆತ್ರವೆಂಕಿ (ಲಕ್ಕವ್ವ), ಉದಗಟ್ಟಿ (ಉದ್ದವ್ವ), ಅಡಿಬಟ್ಟಿ (ಲಕ್ಕವ್ವ), ಬೆಣಚನಮರಡಿ (ಬೀರಪ್ಪ ಮತ್ತು ವಿಠ್ಠಲ), ಕಡಬಗಟ್ಟಿ (ತುರಮಂದೆವ್ವ – ದ್ಯಾಮವ್ವನ ತಂಗಿಯೆಂದು ಹೇಳುತ್ತಾರೆ), ಮಮದಾಪೂರ (ಬೀರಪ್ಪ), ಕಬ್ಬೂರ (ಸಿದರಾಯಿ), ನಾಗರಮುನವಳ್ಳಿ (ಸಿದರಾಯಿ), ಬಸಳಗುಂದಿ (ಕರೆವ್ವ) – ಹೀಗೆ ಒಂಬತ್ತು ಗ್ರಾಮಗಳ ಪಾಲಕಿಗಳು ಜಾತ್ರೆಯ ಕಾಲಕ್ಕೆ ತಪ್ಪದೆ ಬರುವವು. ಪ್ರತಿ  ಗ್ರಾಮದಿಂದ ಸುಮಾರು ೩೦೦ – ೪೦೦ ಜನ ಬರುವರು. ಅವರಿಗೆಲ್ಲ ಊಟ ಉಪಚಾರದ ವ್ಯವಸ್ಥೆಯನ್ನು ಸಮಿತಿಯವರೇ ನೋಡಿಕೊಳ್ಳುವರು. ಗೋಕಾಕದ ಲಕ್ಷ್ಮೀ ಪಲ್ಲಕ್ಕಿ ಸಹಿತವಾಗಿ ಈ ಒಂಬತ್ತು ಗ್ರಾಮಗಳ ಪಲ್ಲಕ್ಕಿಗಳು ಊರ ಪ್ರದಕ್ಷಿಣೆ ಹಾಕುವವು. ಅದೇ ಜಾತ್ರೆಯ ಪ್ರಾರಂಭಕ್ಕೆ ನಾಂದಿಯಾಗುವದು. ಎಲ್ಲ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ  ನಡೆಯುವದು ಗೋಕಾಕ ಗ್ರಾಮದೇವತೆಯ ಜಾತ್ರೆಯ ವೈಶಿಷ್ಟವಾಗಿದೆ. ಜಾತ್ರೆಗಿಂತಲೂ ಮೊದಲು ೫ ವಾರ ಊರಲ್ಲಿಯ ಎಲ್ಲ ದೇವಸ್ಥಾನಗಳಿಗೆ ದೈವದವರು ಕಾಯಿ ಕೊಟ್ಟು ಬರುವ ವಾಡಿಕೆಯಿದೆ.

ಉಡಿ ತುಂಬುವದು, ಹೊನ್ನಾಟ, ರಥೋತ್ಸವ, ಪಾಲಕಿ, ಸೇವೆ ಹೀಗೆ ಹಲವಾರು ಕಾರ್ಯಕ್ರಮಗಳು ಜರಗುವವು.

ಜಾತ್ರೆಯ ಮೊದಲ ದಿನ ಸಂಜೆ ೫ – ೬ ಗಂಟೆಗೆ ಚೀನಗಾರ ಮನೆಯಿಂದ (ಚೀನಗಾರರೇ ಪ್ರತಿ ಐದು ವರ್ಷಗಳಿಗೊಮ್ಮೆ ದೇವಿಗೆ ಬಣ್ಣಕೊಡುವುದು ಪರಂಪರೆಯಾಗಿ ಬಂದಿದೆ.) ಊದಿಸುತ್ತ ಬಾರಿಸುತ್ತ ದೇವರನ್ನು ಮುಚ್ಚಿಕೊಂಡು  ಊರಿನ ಪ್ರಮುಖ ಬೀದಿಗಳಲ್ಲಿ ಹಾಯ್ದು ಅಂಬಿಗೇರ ಓಣಿಯ ಹನುಮಂತ ದೇವರ ಗುಡಿಯ ಹತ್ತಿರದ ಕಟ್ಟೆಯ  ಸ್ಥಳದಲ್ಲಿ ಕೂಡ್ರಿಸುವರು. ಅದು ದೇವಿಯ ಮೂಲಸ್ಥಾನವೆಂದು ಹೇಳುವರು. ದೇವಿ ಆ ಸ್ಥಳಕ್ಕೆ ಬರಬೇಕಾದರೆ ರಾತ್ರಿಯಾಗುತ್ತದೆ. ರಾತ್ರಿಯಿಂದ ಬಾಳಗಿನತನಕ ಪೂಜಾರಿಗಳು ಮೂರ್ತಿಗಳನ್ನು ಜೋಡಿಸಿರುವರು. ಮುಂಜಾವಿನ ಸಮಯದಲ್ಲಿ ದೈವದವರು ಬಂದು ದೇವಿಯ ಉಡಿ ತುಂಬುವರು. ಅಲ್ಲಿಯ ತನಕ ಇನ್ನಿತರ ಯಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ. ದೈವದವರು ಉಡಿತುಂಬಿದ ನಂತರವೇ ಉಳಿದವರು ಉಡಿತುಂಬುವರು, ನೈವೇದ್ಯ ಕೊಡುವದು ಪ್ರಾರಂಭವಾಗುವದು. ದೇವಿಯ ತವರು ಮನೆಯವರು (ದೇಶಪಾಂಡೆಯವರು) ಹೋಗಿ ತಮ್ಮ ಮನೆಗೆ ಬರಲು ವೀಳ್ಯ ನೀಡುವರು.

ಅದೇ ದಿನ (ಎರಡನೆಯ ದಿನ) ರಾತ್ರಿ ಸುಮಾರು ೧೧ ಗಂಟೆಗೆ ಅಂಬಿಗೇರ ಓಣಿಯಿಂದ ದೇವಿಯ ಹೊನ್ನಾಟ ಪಾರಂಭವಾಗುವದು.

ಹೊನ್ನಾಟ

ಹೊನ್ನಾಟವಾಡುತ್ತ ಇಬ್ಬರೂ ದೇವಿಯರು (ಜೋಡು ದ್ಯಾಮವ್ವ) ನಗರದಲ್ಲಿ ಪ್ರವೇಶಿಸುವರು. ಒಬ್ಬ ದೇವಿಯನ್ನು ಎಂಟು ಜನರು, ಮತ್ತೊಬ್ಬ ದೇವಿಯನ್ನು ಎಂಟು ಜನರು – ಹೀಗೆ ಒಟ್ಟು ಹದಿನಾರು ಜನರು ಹೊತ್ತುಕೊಂಡು ಕುಣಿಯುತ್ತ ಆವೇಶಭರಿತವಾಗಿ ಓಡಾಡುವರು. ಅದೆಷ್ಟು ಓಡಾಡಿದರೂ ದೇವತೆಗಳು ಸ್ವಲ್ಪವೂ ವಾಲುವುದಿಲ್ಲ. ಬೆಳಗಿನವರೆಗೆ ಹೊನ್ನಾಟ ನಡೆಯುವದು. ರಾಣಿಗರ ಹೆಣ್ಣು ಮಗಳು ದೇವಿಯನ್ನು ಬಯ್ಯುತ್ತ ಆವೇಶಭರಿತವಾಗಿ ಅವಳೂ ಓಡಾಡುವಳು. ತನ್ನ ಮಗನನ್ನು (ರಾಣಿಗ್ಯಾ) ಕೊಂದ ಸಲುವಾಗಿ ರಾಣಿಗ್ಯಾನ ತಾಯಿಯು ಈ ರೀತಿ ದ್ಯಾಮವ್ವನನ್ನು ಬಯ್ಯುವಳೆಂದು ಹೇಳುವದು ವಾಡಿಕೆಯಾಗಿದೆ. (ಹೆಸರಹಳ್ಳಿಯ ಲಕ್ಕಮ್ಮನ ಜಾತ್ರೆಯಲ್ಲಿಯೂ ಲಕ್ಕಮ್ಮನನ್ನು ಗೊರವಯ್ಯಗಳು ಹೀನಾಮಾನವಾಗಿ ಬಯ್ಯುತ್ತಾರೆಂದು ತಿಳಿಯುತ್ತದೆ. ಹೀಗೆ ಬಯ್ಯುವದೇ ಆ ದೇವತೆಗೆ ಪ್ರಿಯವಾದುದೆಂದು ಹೇಳುತ್ತಾರೆ.) ಹೊನ್ನಾಟವು ಜಾತ್ರೆಯ ಒಂದು ಆಕರ್ಷಕ ಭಾಗವಾಗಿದ್ದು ಈ ವೈಭವವನ್ನು ನೋಡಲೆಂದೇ ಅಸಂಖ್ಯ ಜನರು ಅಂಬಿಗೇರ ಓಣಿಯಿಂದ ಮೊದಲು ಮಾಡಿಕೊಂಡು ದೇಶಪಾಂಡೆಯವರ ಮನೆಯವರೆಗಿನ ಬೀದಿಗಳಲ್ಲಿ ಉತ್ಸಾಹದಿಂದ ನೆರೆಯುವರು. ಜೋಡು ದೇವಿಯಯರು ಹೊನ್ನಾಟವಾಡುತ್ತ ದೇಶಪಾಂಡೆಯವರ ಮನೆಗೆ ಬರುವ ಹೊತ್ತಿಗೆ ಅರುಣೋದಯವಾಗುತ್ತಿರುತ್ತದೆ. ತವರು ಮನೆಯ ಉಡಿ ತುಂಬಿಸಿಕೊಂಡು ಪೂಜಾರಿಗಳ ಮನೆಗೆ ಬರುತ್ತಾಳೆ. ಪೂಜಾರಿಗಳು ಉಡಿ ತುಂಬಿದ ನಂತರವೇ ದೇವಿಯ ರಥಗಳಲ್ಲಿ ಕೂಡ್ರುವದು. ನಿಪ್ಪಾಣಿಯವರ ಮನೆ, ಪಾಟೀಲರ ಮನೆ ಹಾವನಾಳಿಯವರ ಮನೆ, ದೈವದವರೊಬ್ಬರ ಮನೆ – ಇವು ದೇವಿ ಉಡಿಯುಂಬಿಸಿಕೊಳ್ಳುವ ಇನ್ನಿತರ ಮನೆಗಳು.

ತವರು ಮನೆಯ ಉಡಿತುಂಬಿಸಿಕೊಳ್ಳುವದು

ಹಿಂದಿಕುರಬೇಟ ದೇಸಾಯರ ಮನೆತನ ಮತ್ತು ದೇಶಪಾಂಡೆ (ಬಾಬಾಸಾಹೇಬ) ಯವರ ಮನೆತನಗಳು ಇಲ್ಲಿಯ ದ್ಯಾಮವ್ವನ ತವರುಮನೆಗಳಿಂದ ಹೇಳುವರು. ದೇಸಾಯರ ದೇಸಗತಿ ಇದ್ರಕಾಲಕ್ಕೆ ಬಂದು ಮಾನ ಅವರಿಗೂ ಸಲ್ಲುತ್ತತ್ತೆಂದೂ ತಿಳಿದು ಬರುವದು. ಈ ಎರಡೂ ಮನೆತನದವರು ಜಾತ್ರೆಯ ಪ್ರಾರಂಭದ  ದಿನವೇ ದೇವಿ ಕೂತ ಸ್ಥಳ (ಅಂಬಿಗೇರ ಓಣಿಯಲ್ಲಿರುವ ಕಟ್ಟೆ) ಕ್ಕೆ ಹೋಗಿ ತಮ್ಮ ಮನೆಗೆ ಬರಲು ಆಮಂತ್ರಣ ನೀಡಿ ಬರುತ್ತಿದ್ದುದು ರೂಢಿ. ದೇಶವಾಯಿ ಕಾಲಕ್ಕೆ ದೇಶಪಾಂಡೆಯವರಿಗೆ ಸಾವಿರಾರು ಎಕರೆ ಭೂಮಿಯನ್ನು ಇನಾಮಾಗಿ ಕೊಟ್ಟಿದ್ದಾಗಿ ತಿಳಿದುಬರುತ್ತದೆ. ತಲೆತಲಾಂತರಗಳಿಂದ ಗ್ರಾಮದಲ್ಲಿ ಹಿರಿಯರಾಗಿದ್ದುಕೊಂಡು ಮಾರ್ಗದರ್ಶನ ಮಾಡುವವರ ಮುಖಂಡರ ಪ್ರಭಾವಿ ಭಕ್ತಿಗಳ ಮನೆತನಗಳೇ ಗ್ರಾಮದೇವತೆ ತವರು ಮನೆಗಳಾಗಿರುವ ಪರಿಪಾಠವಿದೆ. ಗ್ರಾಮೀಣ ಉತ್ಸವಗಳು ಅಂಥವರ ಮುಖಂಡತ್ವದಲ್ಲಿಯೇ ನೆರವೇರುತ್ತಿದ್ದವು. ಈ ಭಾಗದಲ್ಲಿ ಹಿಂದೆ ದೇಸಾಯರ, ದೇಶಪಾಂಡೆಯವರ ಪ್ರಭಾವವಿದ್ದ ಕಾರಣ ಅವರ ಮನೆಗಳೇ ಗ್ರಾಮದೇವತೆಯ ತವರುಮನೆಗಳೆಂದೂ ತಿಳಿಯುವ ಸಾಧ್ಯತೆಯಿದೆಯೆಂದು ನನಗನಿಸುವದು. ಹೊನ್ನಾಟವಾಡುತ್ತ ದೇವಿಯರು ಬಂದು ದೇಶಪಾಂಡೆಯವರ ಮನೆಯ ಉಡಿತುಂಬಿಸಿಕೊಂಡನಂತರವೇ ಇತರ ದೈವದವರು ಉಡಿತುಂಬುವದು. ೯ ನೆಯ ದಿನ ದೇವಿಯೆದುರು ಕೋಣ ಕಡಿಯುವ ಪದ್ಧತಿಯಿತ್ತೆಂದು ಗೊತ್ತಾಗುತ್ತದೆ. ಕೋಣದ ತಲೆಯನ್ನು ಹೊತ್ತು ದೇವಿಯ ಗುಡಿಗೆ ಪ್ರದಕ್ಷಿಣೆ ಹಾಕಿ ಊರಲ್ಲಿ ಅದನ್ನು ಮರೆಸುತ್ತಿದ್ದರಂತೆ. ಆದರೆ ಕಾಲಕ್ರಮೇಣ ಅದು ನಿಂತುಹೋದಂತಿದೆ !

ರಥೋತ್ಸವ

ಮೂರನೆಯ ದಿನದಿಂದ ಮೂರು ದಿನಗಳವರೆಗೆ ರಥೋತ್ಸವ ಜರುಗುತ್ತದೆ. ಜೋಡು ರಥಗಳು – ಒಂದು ರಥದಲ್ಲಿ ಒಬ್ಬ ದ್ಯಾಮವ್ವನನ್ನು ಮತ್ತೊಂದು ರಥದಲ್ಲಿ ಮತ್ತೊಂಬ ದೇವಿಯನ್ನು ಕೂಡ್ರಿಸುತ್ತಾರೆ. ರಥೋತ್ಸವ ನಡೆಯುವ ಈ ಮೂರು ದಿನಗಳಂತೂ ಜಾತ್ರೆ ತುಂಬಾ ರಂಗುರಂಗಿನಿಂದ ಕೂಡಿರುತ್ತದೆ. ಈ ಜಾತ್ರೆಯನ್ನು ನೋಡಲೆಂದು ದೂರ ದೂರದ ಸ್ಥಳಗಳಿಂದ ಜನ ಬರುತ್ತಾರೆ. ೧೯೭೫ ಹಾಗೂ ೧೯೮೦ ರಲ್ಲಿ ಜರುಗಿದ ಎರಡು ಜಾತ್ರೆಗಳಲ್ಲಂತೂ ಯಾರ ಮನೆಯಲ್ಲೂ ಕಾಲು ಇಡಲು ಸ್ಥಳವಿರಲಿಲ್ಲ. ಅಷ್ಟು ಜನ ! ೧೯೮೦ ರಲ್ಲಿ ಜರುಗಿದ ಜಾತ್ರೆಯಂತೂ ಎಲ್ಲ ಜಾತ್ರೆಗಳನ್ನು ಮೀರಿಸಿ ಬಹಳೇ ಸಡಗರದಿಂದ ನಡೆಯಿತು. ಎಲ್ಲಿ ನೋಡಿದಲ್ಲಿ ಜನಸಾಗರವೇ ಸಾಗರ ! ಎಲ್ಲರ ಪೋಷಾಕುಗಳು ಗುಲಾಲು ಹಾಗೂ ಭಂಡಾರಗಳಿಂದ ಶೋಭಿಸುತ್ತಿದ್ದವು. ಎಲ್ಲರೂ ರಂಗುರಾಯರೇ ! ಸಿಹಿತಿಂಡಿ ಸಾಮಾನುಗಳು, ಹಣ್ಣು ಹಂಪಲುಗಳು, ಬಣ್ಣ ಬಣ್ಣದ ಬಳೆಗಳು ಗೋಕಾಕದ ಆಟಿಗೆಯ  ಸಾಮಾನುಗಳು ಜಾತ್ರೆಯಲ್ಲಿ ನೂರಾರೂ ಮಾರಾಟವಾಗುತ್ತವೆ. ದೇಶಪಾಂಡೆ ಹಾಗೂ ಪಾಟೀಲ ಮನೆತನದವರು ರಥದಲ್ಲಿ ಕೂಡ್ರುವರು. ಅನಂತರವೇ ರಥವನ್ನು ದೈವದವರು ಎಳೆಯುವದು. ಮೊದಲ ದಿನ ಸೋಮವಾರ ಪೇಟೆಯಿಂದ ಎರಡೂ ರಥಗಳು ಪ್ರಾರಂಭವಾಗಿ ದ್ಯಾಮವ್ವನ ಗುಡಿಯ ಎದುರು ನಿಲ್ಲುತ್ತವೆ. ಎರಡನೆಯದಿನ ಚೌಧರಿ ಕೂಟ ತಲುಪಿ ಬಂದು, ರಥ ಪೂರ್ವಕ್ಕೆ ಮುಖಮಾಡಿ ನಿಲ್ಲುವದು. ಮೂರನೆಯ ದಿನ ಮಧ್ಯಾಹ್ನ ಮೆರಕನಟ್ಟಿ ಲಕ್ಷ್ಮೀಯ ಗುಡಿ ತಲುಪುವದು. ಅದನ್ನು ಎಳೆದು ಬಂದ ನಂತರ ಗುರುವಾರಪೇಟೆಯ ಲಕ್ಷ್ಮೀಯ ಗುಡಿಯತ್ತ ರಥ ಜಗ್ಗುವರು. ಹೀಗೆ ಮೂರು ದಿನಗಳ ಕಾಲ ರಥೋತ್ಸವ ಅದ್ದೂರಿಯಿಂದ ನಡೆಯುವದು. ನಂತರ ಮೂರು ದಿನಗಳ ಕಾಲ ಒಬ್ಬ ದ್ಯಾಮವ್ವ ಮೆರಕನಟ್ಟಿ ಗುಡಿಯಲ್ಲಿ ಕೂಡ್ರುವಳು. ಮತ್ತೊಬ್ಬಳು  ಗುರುವಾರ ಪೇಟೆಯ ಗುಡಿಯಲ್ಲಿ ಕೂಡ್ರುವಳು. ಭಕ್ತಾದಿಗಳಿಂದ ನೈವೇದ್ಯ ವಗೈರೆ ನಡೆಯುವದು. ೯ ನೆಯ ದಿನವೇ ಜಾತ್ರೆಯ ಕಡೆಯ ದಿನ. ಎರಡೂ ದ್ಯಾಮವ್ವನ ಮೂರ್ತಿಗಳನ್ನು  ದೇವಿಯ ಮಡಿಸೀರೆಗಳಿಂದ ಮುಚ್ಚಿಕೊಂಡು ಮಧ್ಯರಾತ್ರಿಯ ನಂತರ ಮೂಲಗುಡಿಗೆ ತಂದು ಮೂರು ದಿನಗಳ ಕಾಲ ಮುಚ್ಚಿ ಇಡುವರು. ಶಾಂತಿ ಮಾಡಿದ ನಂತರವೇ ಪೂಜಾಗಾಗಿ ಹೊರಗೆ ತೆಗೆಯುವದು.ಶಾಂತಿ ಮಾಡುವವರು ಪೂಜಾರಿಗಳು. ಅನ್ಯರು ಶಾಂತಿ ಮಾಡಲು ಬರುವುದಿಲ್ಲವೆಂದು ಅವರ ಹೇಳಿಕೆಯಾಗಿದೆ. ದೇವತೆಗಳು ಆಗ ತೀರ ಉಗ್ರಸ್ವರೂಪಧಾರಣ ಮಾಡುವದರಿಂದ ಮುಚ್ಚಿಡುವುದಾಗಿ ಅವರು  ಹೇಳುವರು. ಅಂದೇ ಇಂಗಳೋಬನನ್ನು ಗಡಿ (ಸೀಮೆ) ದಾಟಿಡುವ ಪದ್ಧತಿಯಿದ್ದು. ಊರಸ್ವಾಸ್ಥ್ಯ ಕಾಯ್ದುಕೊಳ್ಳುವ ನಿಮಿತ್ತ ಈ ರೀತಿ ಮಾಡುವುದಾಗಿ ಹೇಳಿಕೊಳ್ಳುವುದು ರೂಢಿಯಲ್ಲದೆ. ದ್ಯಾಮವ್ವ ಮೂಲಗುಡಿಗೆ ಹೋಗುವಾಗ ಯಾರೂ ನೋಡಬಾರದೆಂದು ಹೇಳುತ್ತಾರೆ. ಒಂದು ವೇಳೆ ನೋಡಿದರೆ ಅವರಿಗೆ ಕೆಡಕಾಗುವದೆಂಬ ನಂಬಿಕೆಯಿದೆ. ಅಂತೆಯೇ ಆ ದಿನ ರಾತ್ರಿ ಯಾರೂ ಮಧ್ಯರಾತ್ರಿಯ ನಂತರ ಮನೆಯಿಂದ ಹೊರಬೀಳುವದಿಲ್ಲ.

ಜಾತ್ರೆ ಪ್ರಾರಂಭಗೊಳ್ಳುವ ನಂತರ ಮೊದಲು ಸೀದಾ ಕೊಡುವ ಪದ್ಧತಿಯಿದೆ. (ಸೀದಾ – ಕಡ್ಲಿಬೆಳೆ, ಗೋದಿಹಿಟ್ಟು, ಅಕ್ಕಿ, ಬೆಲ್ಲ, ವೀಳ್ಯ). ನ್ಯಾಯಾಧೀಶರು, ತಹಶೀಲ್ದಾರರು. ಪೋಲೀಸ ಅಧಿಕಾರಿಗಳು – ಈ ಮೊದಲಾದ ಅಮಲದಾರರಿಗೆ ದೈವದವರು ಸೀದಾ ಕೊಟ್ಟು ಬರುತ್ತಾರೆ. ಒಂಭತ್ತು ದಿನಗಳ ಕಾಲ (ಜಾತ್ರೆ ಪ್ರಾರಂಭಗೊಂಡು ಮುಗಿಯುವ ಅವಧಿ) ಯಾರು ಕುಟ್ಟುವುದಿಲ್ಲ, ಬೀಸುವುದಿಲ್ಲ, ರೊಟ್ಟಿ ಮಾಡುವುದಿಲ್ಲ. ಬೀಸುವ ಕುಟ್ಟುವ ಗಿರಣಿಗಳು ಒಂಭತ್ತು ದಿನ ವಿಶ್ರಾಂತಿ ಪಡೆಯುತ್ತವೆ. ರೊಟ್ಟಿ ಬಡಿದು ಬೇಜಾರಗೊಂಡ ಲಲನೆಯರ ಕೈಗಳಿಗೂ ಈ ದಿನಗಳಲ್ಲಿ ವಿಶ್ರಾಂತಿ ದೊರೆಯುವದು.

ಹೀಗೆ ಪ್ರಾಚೀನ ಕಾಲದಿಂದಲೂ ದ್ಯಾಮವ್ವನ ಪೂಜೆ ಗೋಕಾಕದಲ್ಲಿ ನಡೆದು ಬಂದಿದೆ. ಗೋಕಾಕದ ಜನರು ಪರಂಪರೆಯ ಆಚಾರಗಳಲ್ಲಿ ಶ್ರದ್ಧೆಯುಳ್ಳವರಾಗಿದ್ದಾರೆ; ಭಾವುಕರಾಗಿದ್ದಾರೆ, ಉತ್ಸವಪ್ರಿಯರಾಗಿದ್ದಾರೆ, ತಲೆತಲಾಂತರಗಳಿಂದ ಗ್ರಾಮ ದೇವತೆಯನ್ನಾಗಿ ದ್ಯಾಮವ್ವನನ್ನು ಆರಾಧಿಸುತ್ತ ಬಂದಿದ್ದಾರೆಂದು ತೋರುತ್ತದೆ. ಇಲ್ಲಿ ವಿಪುಲವಾದ ಸಾಮಗ್ರಿಯನ್ನು ಸಂಗ್ರಹಿಸಿದ್ದರೂ ಈ ಗ್ರಾಮದೇವತೆಯ ಬಗ್ಗೆ ಇನ್ನೂ ಆಲೋಚಿಸಬೇಕಾದ ವಿಷಯಗಳಿವೆಯೆಂದು ಭಾವಿಸಿದ್ದೇನೆ. ಈ ದಿಸೆಯಲ್ಲಿ ಹೆಚ್ಚು ಅಭ್ಯಾಸ ನಡೆದಂತೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರಬಹುದಾಗಿದೆ. ಪ್ರತಿಯೊಂದು ಘಟನೆಯನ್ನು ಪರಿಶೀಲಿಸಿ ಅಂಶಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದಾಗ ಮಾತ್ರ ಗ್ರಾಮದೇವತೆಯ ಕುರಿತಾದ ಬರವಣಿಗೆಗೆ ಹೆಚ್ಚು ಬೆಲೆ ಪ್ರಾಪ್ತವಾಗುವದು.


[1]     ನಿಂಗಣ್ಣ ಸಣ್ಣಕ್ಕಿಯವರ “ಗೋಕಾವಿ ಜಾತ್ರೆಯಿಂದ” ಬರಹದಿಂದ

[2]     ಶ್ರೀ .ತೀ. ನಂ. ಶಂಕರನಾರಾಯಣ.