. ಗ್ರಾಮದೇವತಾ ಸಂಪ್ರದಾಯ, ಲಕ್ಷಣ ಮತ್ತು ಮಹತ್ವ

ಪ್ರಾಚೀನ ಭಾರತದಲ್ಲಿ ಪ್ರಾಯಶಃ ಪ್ರತಿಯೊಂದು ಗ್ರಾಮದಲ್ಲಿಯೂ ಒಂದು ಗ್ರಾಮದೇವತೆಯ ದೇವಾಲಯವಿರುತ್ತಿತ್ತು. ಗ್ರಾಮಗಳು ನೆಲೆಗೊಂಡಂದಿನಿಂದ, ಅಂದರೆ ವೇದಪೂರ್ವ ಕಾಲದಿಂದಲೂ, ಗ್ರಾಮದೇವತೆಯ ಸಂಪ್ರದಾಯ ಇದ್ದಿರಬಹುದೆಂದು ಹೇಳುತ್ತಾರೆ. ದಕ್ಷಿಣ ಭಾರತದಲ್ಲಂತೂ ಗ್ರಾಮ ದೇವತೆಯ ಪೂಜೆ ಉತ್ತರ ಭಾರತಕ್ಕಿಂತ ಹೆಚ್ಚು ಪ್ರಚಲಿತವಿದ್ದಂತೆ ಕಾಣುತ್ತದೆ. ಗ್ರಾಮಸ್ಥರಿಂದ ಪೂಜೆಗೊಳ್ಳುವ ದೈವವು ಕೆಲವೊಮ್ಮೆ ಪುರುಷರೂಪೀ ದೈವವಿರಬಹುದಾದರೂ ಹತ್ತರಲ್ಲಿ ಒಂಬತ್ತು ಪಾಲು ಅದು ಸ್ತ್ರೀರೂಪೀ ದೈವವಾಗಿರುತ್ತಿತ್ತು. ಈ ಪೂಜೆ ಇಂದು ಹಲವಾರು ಕಾರಣಗಳಿಂದ ತನ್ನ ಹಳೆಯ ವೈಭವ ಹಾಗೂ ಸಾರ್ವತ್ರೀಕತೆಯನ್ನು ಕಳೆದುಕೊಂಡಿದೆಯಾದರೂ ಮಾಯವಾಗಿಲ್ಲ.

ಗ್ರಾಮ ದೇವತೆ ಎಂದರೆ ಯಾರು ? ಆ ಹಸರೇ ಸೂಚಿಸುವಂತೆ ಗ್ರಾಮ ದೇವತೆಯು ಸಾಧಾರಣವಾಗಿ ಎಲ್ಲ ಗ್ರಾಮಸ್ಥರು ನಂಬಿ ಪೂಜಿಸುವ ಹಾಗೂ ಅವರಿಂದ ಸೃಷ್ಟಿಸಿ ಸ್ಥಾಪಿಸಲ್ಪಟ್ಟಿರುವ ದೇವತೆ. ಅವಳು ಹಲವು ಅರ್ಥಗಳಲ್ಲಿ ಗ್ರಾಮದ ರಕ್ಷಕಳು. ಅವಳನ್ನು ಮಾತೃದೇವೆಯೆಂದು ಪೂಜಿಸಲಾಗುತ್ತದೆ. ಗ್ರಾಮಸ್ಥರು ಅವಳನ್ನು ತಾಯಿ ಎಂಬರ್ಥದಲ್ಲಿ ಕರೆಯುವುದು ರೂಢಿ. ವಿವಿಧ ಪ್ರದೇಶಗಳಲ್ಲಿ ಅವಳ ಹೆಸರಿನ ಮುಂದೆ ಅಮ್ಮನವರು, ಅಮ್ಮ, ಅಂಬಾ, ಅವ್ವ, ಮಾತಾ, ಮಾ, ತಾಯಿ, ಆಯೀ ಮುಂತಾದ ಪದಗಳನ್ನು ಸೇರಿಸಿ ಅವಳನ್ನು ಅವಳನ್ನು ಸಂಭೋಧಿಸುತ್ತಾರೆ. ಗ್ರಾಮ ದೇವತೆಯ ದೇವಾಲಯಗಳನ್ನು ಅಮ್ಮನವರ ಗುಡಿ, ಅಮ್ಮನವರ ದೇವಸ್ಥಾನ ಎಂದೂ ಕರೆಯುವುದಿದೆ. ಹೀಗೆ ಗ್ರಾಮದೇವತಾ ಸಂಪ್ರದಾಯವು ಮಾತೃಪೂಜೆಯ ಸಂಪ್ರದಾಯವೂ ಹೌದು.

ಕರ್ನಾಟಕದಲ್ಲಿ ಗ್ರಾಮದೇವತೆಯಗಳ ನೂರಾರು ಹೆಸರುಗಳು ಸಿಗುತ್ತವೆ. ಅವುಗಳ ಪೈಕಿ ಕೆಲವು ಪ್ರಸಿದ್ಧ ಹೆಸರುಗಳಿಂದರೆ ದುರ್ಗಾ (ದುರ್ಗಿ, ದುರ್ಗಮ್ಮ),  ಕಾಳಿ (ಕಾಳಿಕಾ, ಕಾಳಮ್ಮ), ಎಲ್ಲಮ್ಮ, ಮಾರಿ (ಮಾರಿಕಾ, ಮಾರಿಕಾಂಬಾ, ಮಾರಿಯಮ್ಮ), ದೇವೀ , ಮೂಕಮ್ಮ (ಮೂಕಾಂಬಿಕಾ), ಚೌಡಿ (ಚೌಡಮ್ಮ), ಕನ್ನಿಕಾ ಪರಮೇಶ್ವರಿ, ಪೊಲೇರಮ್ಮ, ಹುಲಿಗೆಮ್ಮ, ತಿಪ್ಪವ್ವ ಕಲ್ಲವ್ವ, ಮಾತಂಗಿ, ಭದ್ರಕಾಳಿ, ಮುತ್ಯಾಲಮ್ಮ, ಅಂಕಾಲಮ್ಮ, ದ್ಯಾಮವ್ವ, ಗಂಗಮ್ಮ, ಶೀತಳಾದೇವಿ, ಭೈರವಿ, ರಾಜರಾಜೇಶ್ವರಿ, ಚಾಮುಂಡಿ, ಮಾಸ್ತ್ಯಮ್ಮ ಇತ್ಯಾದಿ (ನೋಡಿ : ಶಾಸ್ತ್ರೀ, ಪು. ೨೨೩ – ೨೨೪, ಭಟ್, ಪು. ೩೬೦). ಈ ದೇವತೆಗಳ ಗುಡಿಯು ಸಾಮಾನ್ಯವಾಗಿ ಊರಿನ ಗಡಿಯ ಹತ್ತಿರದಲ್ಲಿರುತ್ತದೆ. ಅನೇಕ ಸಂದರ್ಭಗಳಲ್ಲಿ ಈ ದೇವತೆಗಳೇ  ಗಡಿ ರಕ್ಷಕ ದೇವತೆಗಳೆನ್ನಿಸಿಕೊಳ್ಳುತ್ತಾರೆ. ಕೆಲವು ಗುಡಿಗಳು ಪಟ್ಟಣಗಳಲ್ಲಿರುವ ಶಿಷ್ಟ ದೇವರುಗಳ ಗುಡಿಗಳಂತೆ ಶಿಲ್ಪ ಸೌಂದರ್ಯದಿಂದ ಕೂಡಿದ್ದು ಓರಣವಾಗಿರಬಹುದಾದರೂ ಹೆಚ್ಚಿನ ಗುಡಿಗಳು ತೀರ ಚಿಕ್ಕವಾಗಿದ್ದು ಸರಳವಾಗಿವೆ. ಇಟ್ಟಂಗಿಯಿಂದ ಅಥವಾ ಕಲ್ಲುಮಣ್ಣುಗಳಿಂದ ಕಟ್ಟಿದ ಗೋಡೆಗಳು ಹಾಗೂ ಒಂದು ಮಾಡ ಅಥವಾ ಗೋಪುರ ಇವಿಷ್ಟೇ ಇರುವುದು ಸಾಮಾನ್ಯ. ಇವುಗಳಿಗೆ ಇತರ ದೇವಾಲಯಗಳಲ್ಲಿರುವಂತೆ ಪ್ರಾಕಾರ, ಪೌಳಿ, ಗರ್ಭಗುಡಿ ಎಂಬ ಯಾವ ಗೊಂದಲವೂ ಇಲ್ಲ. ದೇವತಾ ಮೂರ್ತಿಯೂ ಅತಿ ಸರಳ. ಸ್ತ್ರೀ ರೂಪದ ಆಕೃತಿಯಿರಬೇಕೇಂಬ ನಿಯಮವೂ ಇಲ್ಲ. ಅದೆಷ್ಟೋ ಗುಡಿಗಳಲ್ಲಿ ಯಾವ ಆಕೃತಿಯೂ ಇರದೇ ಒಂದು ಕರಿಗಲ್ಲು ಅಥವಾ ಒಂದರಮೇಲೊಂದು ಪೇರಿಸಿದ ಕೆಲವು ಗುಂಡುಕಲ್ಲುಗಳು ಮಾತ್ರ ಇರಬಹುದು. ಕೆಲವೊಮ್ಮೆ ನೆಲದ ಮೇಲೆ ನೆಟ್ಟ ಒಂದು ತ್ರಿಶೂಲ ಅಥವಾ ಈಟಿಯೇ ದೇವತೆಯೆನ್ನಿಸಿ ಕೊಳ್ಳುವುದು. ಕ್ವಚಿತ್ತಾಗಿ ಈ ದೇವತೆಯು ಒಂದು ಹುತ್ತ ಅಥವಾ ಮಣ್ಣಿನ ಗದ್ದುಗೆ ಅಥವಾ ಕಲ್ಲಿನ ಮಂಚದ ರೂಪದಲ್ಲಿರಬಹುದು. ಗ್ರಾಮದೇವತೆಗೆ ಗುಡಿ ಗೋಪುರಗಳಿರಬೇಕೆಂಬ ಕಟ್ಟಳೇಯೂ ಇಲ್ಲ. ಚೆನ್ನಾಗಿ ನೆರಳುಕೊಡುವ ಒಂದೆರಡು “ಪವಿತ್ರ” ವಾದ ಮರಗಳಡಿಯಲ್ಲಿ “ಅಮ್ಮ” ನವರ ಕಲ್ಲುಗಳು ಇರುವುದೂ ಇದೆ. ಕೆಲವೊಮ್ಮೆ ಗುಡಿಯನ್ನು ಸೂಚಿಸುವುದಕ್ಕೋಸ್ಕರ ಅಲ್ಲೇ ಹತ್ತಿರದಲ್ಲಿರುವ ಮರವೊಂದರ ಮೇಲೆ ಕೆಂಪು ಅಥವಾ ಕೇಸರಿ ಬಣ್ಣದ ಧ್ವಜ – ಪತಾಕೆಗಳನ್ನು ಕಟ್ಟಿರುತ್ತಾರೆ. (ನೋಡಿ : ಕ್ರೂಕ್, ಪು. V – ೧೨).

ಗ್ರಾಮದೇವತಾ ಸಂಪ್ರದಾಯದ ಮೂಲ ಯಾವುದು ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಆದಿಮಾನವರು ಶಕ್ತಿಯ ಆರಾಧಕರಾಗಿದ್ದರು. ಮುಂದೆ ಈ ಶಕ್ತಿಗಳೇ ಗ್ರಾಮದೇವತೆಗಳಾಗಿ ನೆಲೆನಿಂತರು ಎಂಬ ಅಭಿಪ್ರಾಯವಿದೆ. ಈ ದೇವತೆಗಳು ದ್ರಾವಿಡರ ಮಾತೃಪ್ರಧಾನ ಸಮಾಜದ ಸೃಷ್ಟಿಗಳಾಗಿರಬಹುದು ಎಂದು ನಂಬಲು ಬಲವಾದ ಕಾರಣಗಳಿವೆ (ನೋಡಿ : ಶಾಸ್ತ್ರೀ, ಪು. ೨೨೯). ಅನೇಕ ಗ್ರಾಮದೇವತೆಗಳು ಅತಿ ಪ್ರಾಚೀನವಾದ ಭೂಮಿಪೂಜೆ ಅಥವಾ  ಮಾತೃಪೂಜೆಯ ಕುರುಹುಗಳಲ್ಲದೆ ಬೇರೆಯಲ್ಲ. ಕೆಲವೊಮ್ಮೆ ಈ ದೇವತೆಗಳು ಫಲಶಕ್ತಿಯ ಸ್ಪಷ್ಟ ಪ್ರತೀಕಗಳಂತೆ ಕಾಣುತ್ತವೆ. ಶ್ರೀ ರಂಗಪಟ್ಟಣದಲ್ಲಿ ದಂಪತಿಸಹಿತಳಾಗಿ ಮೆರವಣಿಗೆ ಹೊರಡುವ ಬತ್ತಲೆ ತಿಪ್ಪಮ್ಮ ಅಥವಾ ಕರ್ನಾಟಕದ ಹಲವು ಗ್ರಾಮಗಳಲ್ಲಿ ಕಂಡುಬರುವ ಹುಲಿಗೆಮ್ಮ ಹಾಗೂ ನಗ್ನ ಕೊಟ್ಟವ್ವಿರಯರು ಫಲ ಶಕ್ತಿಯ ಹಾಗೂ ಲೈಂಗಿಕತೆಯ ಪ್ರತೀಕವೆಂದು ಹೇಳುತ್ತಾರೆ (ನೋಡಿ : ವಾಕರ್, ಪು. ೩೯೯). ಈ ದೇವತೆಗಳಲ್ಲದೆ ಬೇರೆ ಮೂಲಗಳಿಂದ ಬಂದವರೂ ಇರಬಹುದು. ಅರಣ್ಯವಾಸಿಗಳಾದ ಬುಡಕಟ್ಟು ಜನಾಂಗಗಳು ಪೂಜಿಸುವ ಪ್ರೇತಾತ್ಮಗಳು. ಗ್ರಾಮ ಸಮುದಾಯಗಳು ಬೆಳೆದ ಮೇಲೆ ಗ್ರಾಮದೇವತೆಗಳಾಗಿ ಮಾರ್ಪಾಟು ಹೊಂದಿರುವ ಸಾಧ್ಯತೆಯಿದೆ. ಅಥವಾ ಐತಿಹಾಸಿಕ ಕಾಲದಲ್ಲಿ ನಡೆದ ಕೆಲವು ಘಟನೆಗಳು ಹಾಗೂ ಆಕಸ್ಮಿಕಗಳು ಕೂಡಾ ಇಂಥ ದೇವತೆಗಳನ್ನು ಸೃಷ್ಟಿಸಿರಬಹುದು. ಉದಾಹರಣೆಗೆ, ಸಾಧ್ವಿಯಾದ ಹೆಂಡತಿಯನ್ನು ಗಂಡನು ಹೊಡೆದುಕೊಲ್ಲುತ್ತಾನೆ; ಅಕಳಂಕಳಾದ ತಂಗಿಯೊಬ್ಬಳನ್ನು ಸಂಶಯ ಪೀಡಿತರಾದ ಅಣ್ಣಂದಿರು ಜಾನುವಾರಗಳ ಕಾಲಡಿ ನೂಕುತ್ತಾರೆ (ನೋಡಿ : ಎಲ್ಮೋರ್, ಪು. ೬೯) : ಮದುವೆಯಾದ ಗಂಡನಿಂದಲೇ ಬಸಿರಾದ ಮಗಳನ್ನು ಅವಳ ತಂದೆ ತಾಯಿಗಳು ವಿನಾಕಾರಣ ಸಂಶಯ ತಾಳಿ ಮನೆಯಿಂದ ಹೊರದೂಡಿದಾಗ ದಾರಿಯಲ್ಲಿ ಅವಳನ್ನು ಮಾದಿಗರ ಜಾತಿಯ ಆಳುಮಗನು ಬಲಾತ್ಕಾರ ಮಾಡುತ್ತಾನೆ. ಆಗ ಆ ಹೆಣ್ಣು ಮಗಳು ಅವನನ್ನು ಕೊಂದು ಸೇಡು ತೀರಿಸಿಕೊಂಡು ನಂತರ ಸತ್ತು ಹೋಗುತ್ತಾಳೆ.(ನೋಡಿ : ಚಿದಾನಂದ ಮೂರ್ತಿ, ಪು. ೧೧೭). ಕೆಲವೊಮ್ಮೆ ಕಾಲುಜಾರಿ ಬಿದ್ದು ಅಥವಾ ಸಿಡಿಲು ಬಡಿದು ಅಥವಾ ಇತರ ಆಕಸ್ಮಿಕಗಳಿಗೆ ಸಿಕ್ಕು ಅಪಮೃತ್ಯುವಿಗೆ ತುತ್ತಾಗಬಹುದು. ಇನ್ನೂ ಹಲವಾರು ಬಗೆಗಳಲ್ಲಿ ನಿರಪರಾಧಿಗಳು ಸಾಯಬಹುದು. ಹೀಗೆ ಸತ್ತವರ ಪ್ರೇತಾತ್ಮಗಳು ಜನರಲ್ಲಿ ಭಯಭಕ್ತಿಗಳನ್ನು ಹುಟ್ಟಿಸಿ ಅವರಿಂದ ಪೂಜೆಯನ್ನು ಪಡೆಯಬಹುದು. ಮೇಲೆ ಹೇಳಿದ ಎಲ್ಲ ಪ್ರಕಾರಗಳೂ ಹೇರಳವಾದ ಉದಾಹರಣೆಗಳು ಸಿಗುತ್ತವೆ.

ಇನ್ನು ಈ ಸಂಪ್ರದಾಯದ ಕೆಲವು ವಿಶಿಷ್ಟ ಲಕ್ಷಣಗಳನ್ನೂ ಆಚರಣೆಗಳನ್ನೂ ನೆನಪಿಸಿಕೊಳ್ಳೋಣ. ಗ್ರಾಮದೇವತೆಗಳು ಸಂಕುಚಿತ ವ್ಯಾಪ್ತಿಯುಳ್ಳ ದೇವತೆಗಳು. ಅವರ ಪ್ರಭಾವವಿರುವುದು ಮುಖ್ಯವಾಗಿ ತಮ್ಮ ಗ್ರಾಮದ ಗಡಿಯೊಳಗೆ ಮಾತ್ರ. ಅವರಿಗೆ ಗ್ರಾಮದ ಹೊರಗೆ ಸಾರ್ವತ್ರಿಕ ಅಧಿಕಾರ ಹಾಗೂ ಮನ್ನಣೆಯಿಲ್ಲ. ಮೇಲಾಗಿ ಅವರು ವಿಶ್ವದ ಸುಖಸಮೃದ್ಧಿ ಹಾಗೂ ಧರ್ಮರಕ್ಷಣೆಗಾಗಿ ಇರುವ ಪರಾಶಕ್ತಿಗಳಲ್ಲ. ಗ್ರಾಮದೇವತೆಗಳಲ್ಲಿ ಕೆಲವರು ಶಾಸ್ತ್ರೋಕ್ತ ದೇವತೆಗಳ ಹೆಸರನ್ನು ಹೊತ್ತಿರಬಹುದು ಅಥವಾ ಪರಾಶಕ್ತಿಯ ಅವತಾರಗಳೆಂದು ಹೊಗಳಿಸಿಕೊಳ್ಳಬಹುದು. ಆದರೂ ಅವರು ಸ್ಥಳೀಯ ನೆಲೆಯುಳ್ಳವರು ಹಾಗೂ ಪರಿಮಿತ ಅಧಿಕಾರ ಹೊಂದಿರುವವರು. ಅವರು ಗ್ರಾಮದ ವ್ಯವಹಾರ ಜಗತ್ತಿಗೆ ಬೇಕಾದ ದೇವತೆಗಳು. ಭಕ್ತರ ವೈಯಕ್ತಿಕ ಲಾಭ, ಕುಟುಂಬ ಸೌಖ್ಯ ಹಾಗೂ ಸ್ಥಳೀಯ ಗಂಡಾಂತರ ನಿವಾರಣೆ ಮುಂತಾದ ಕೆಲಸಗಳನ್ನು ಮಾತ್ರ ಅವರು ನಿರ್ವಹಿಸಬಲ್ಲರು. ಅವರು ಗಡಿಗಳನ್ನು ಕಾಯಬಹುದು, ಬೆಳೆಗಳನ್ನು ಕಾಪಾಡಬಹುದು, ಮನೆಯ ಮಗುವಿನ ರೋಗ ನಿವಾರಣೆ ಮಾಡಬಹುದು ಅಥವಾ ಇಂಥ ಇನ್ನೂ ಹಲವು ಸೀಮಿತ ವ್ಯಾಪ್ತಿಯ ಕೆಲಸಗಳನ್ನು ಮಾಡಬಹುದು. ಅದೇನೇ ಇದ್ದರೂ ಅವರ ಅಧಿಕಾರ ಗ್ರಾಮದ ಗಡಿಗಳೊಳಗೆ ಮಾತ್ರ.

ದ್ರಾವಿಡ ಮೂಲದ ಗ್ರಾಮದೇವತೆಗಳ ಬಗೆಗೆ ಕೆಲವು ಲಕ್ಷಣಗಳನ್ನು ಗುರುತಿಸುತ್ತಾರೆ. ಮೊದಲನೆಯದಾಗಿ, ಈ  ದೇವತೆಗಳ ಒಂದು ಪ್ರಧಾನ ಲಕ್ಷಣವೆಂದರೆ ಅವರು ಸ್ಥಳೀಯ ಮೂಲದಿಂದ ಬಂದವರು. ಅಂದರೆ ಅವರು ತಮ್ಮ ಕಾರ್ಯಕ್ಷೇತ್ರದಲ್ಲೇ ಹುಟ್ಟಿದವರು ಹಾಗೂ ಅಲ್ಲೇ ಅಧಿಕಾರ ಚಲಾಯಿಸುತ್ತಾರೆ. ಎರಡನೆಯದಾಗಿ, ಅವರು ಮಾನವ ಮೂಲದಿಂದ ಬಂದವರು.ಅಂದರೆ ದೇವತೆಗಳಾಗುವ ಮುಂಚೆ ಮಾನವರೂಪದಲ್ಲಿದ್ದರು. ನಾಗಮ್ಮ, ವೊಡಿಲಮ್ಮ, ಮಾಸ್ತ್ಯಮ್ಮ, ಅಬ್ಬಕ್ಕ, ದಾರಕ್ಕ ಇವರೆಲ್ಲ ರಕ್ತಮಾಂಸದ ಹೆಣ್ಣುಗಳಾಗಿದ್ದರು (ನೋಡಿ : ಎಲ್ಮೋರ್, ಪು. ೬೯; ಚಿದಾನಂದ ಮೂರ್ತಿ, ಪು. ೧೧೭; ಭಟ್, ಪು . ೩೬೦). ಮೂರನೆಯದಾಗಿ, ಗ್ರಾಮದೇವತೆಗಳನ್ನು ಗ್ರಾಮದ ಸಮಸ್ತರು ಓಲೈಸಿದರೂ ಅವರು ಹೆಚ್ಚಾಗಿ ಬ್ರಾಹ್ಮಣೇತರರಾದ ಕೆಳಜಾತಿಯವರು ಆರಾಧಿಸುವ ದೈವಗಳು (ನೋಡಿ : ಮ್ಯಾರಿಯಟ್, ಪು. ೨೦೯). ನಾಲ್ಕನೆಯದಾಗಿ, ಇವರನ್ನು ಹೆಚ್ಚಾಗಿ ಬ್ರಾಹ್ಮಣೇತರ ಜಾತಿಗಳಿಗೆ ಸೇರಿದ ಪೂಜಾರಿಗಳೇ ಪೂಜಿಸುತ್ತಾರೆ. ಆದರೆ ಅನುಕೂಲಸ್ಥ ಗ್ರಾಮಗಳಲ್ಲಿರುವ ದೇವಾಲಯಗಳಲ್ಲಿ ಹಾಗೂ ಊರಹೊರಗೂ ಪ್ರಸಿದ್ಧವಾಗಿರುವ ದೇವಾಲಯಗಳಲ್ಲಿ ಕ್ವಚಿತ್ತಾಗಿ ಬ್ರಾಹ್ಮಣರೂ ಪೂಜೆಗಾಗಿ ಬರಬಹುದು. ಇಂಥ ಸಂದರ್ಭಗಳಲ್ಲಿ ಪ್ರಾಣಿಬಲಿ, ಮದ್ಯಮಾಂಸದ ಬಳಕೆ ಇತ್ಯಾದಿ ನಿಂತುಹೋಗಿ ಶಿಷ್ಟಸಂಪ್ರದಾಯಗಳನ್ನೇ ಅನುಸರಿಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಮದ್ಯಮಾಂಸ ಪ್ರಾಣಿಬಲಿಗಳನ್ನು ಕೊಡಬೇಕಾಗಿ ಬಂದಾಗ ಆ ಹೊತ್ತಿಮಟ್ಟಿಗೆ ಇತರ ಜಾತಿಯ ಪೂಜಾರಿಯು ಆ ಕೆಲಸಗಳನ್ನು ನಿರ್ವಹಿಸುತ್ತಾನೆ. ಗುಡಿಯ ಒಂದು ವಿಶಿಷ್ಡ ಭಾಗವನ್ನು ಮಾತ್ರ ಈ ಕೆಲಸಕ್ಕೆ ಉಪಯೋಗಿಸಲಾಗುತ್ತದೆ ಹಾಗೂ ಶುದ್ಧಿ ಕಾರ್ಯದ ನಂತರ ಬ್ರಾಹ್ಮಣನ ಪೂಜೆ ಪ್ರಾರಂಭವಾಗುತ್ತದೆ. ಐದನೆಯದಾಗಿ, ಗ್ರಾಮದೇವತೆಗಳಿಗೆ ದೇವಭಾಷೆಯಾದ ಸಂಸ್ಕೃತದ ಬಗ್ಗೆ ವಿಶೇಷವಾದ ಮಮತೆ ಇದ್ದ ಹಾಗೆ ಕಾಣುವುದಿಲ್ಲ. ಭಕ್ತರು ಮಾತನಾಡುವ ಭಾಷೆಯಲ್ಲೇ ಅಂದರೆ ಸ್ಥಳೀಯ ಭಾಷೆಯಲ್ಲೇ – ಅವರು ಮಾತನಾಡುತ್ತಾರೆ. ತಮಿಳು, ತೆಲುಗು. ಕನ್ನಡಗಳಂಥ ಭಾಷೆಗಳೇ ಇರಲಿ ಅಥವಾ ತುಳು, ಕೊಂಕಣಿ, ಗೊಂಡಿ, ತೊದವ ಮೊದಲಾದ ಆಡುಮಾತು ಅಥವಾ ಬುಡಕಟ್ಟು ಭಾಷೆಗಳಾದರೂ ಇರಲಿ. ಅವರು ಭಕ್ತರ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಆರನೆಯದಾಗಿ, ಗ್ರಾಮದೇವತೆಗಳ ಪೂಜಾವಿಧಾನ ತುಲನಾತ್ಮಕವಾಗಿ ನೋಡಿದರೆ ತುಂಬಾ ಸರಳ. ಆದರೆ ಈ ಮಾತು ವಾಮಮಾರ್ಗಿ ಅಥವಾ ತಾಂತ್ರಿಕ ವಿಧಿವಿಧಾನಗಳನ್ನು ಅನುಸರಿಸುವ ಹಲಕೆಲವು ಗ್ರಾಮದೇವತೆಗಳಿಗೆ ಅನ್ವಯಿಸುವುದಿಲ್ಲ.

ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿ ಗ್ರಾಮದೇವತೆಯ ಪೂಜೆ ಬೇರೆ ಬೇರೆ ರೀತಿಯಲ್ಲಿ ನಡೆಯಬಹುದು. ಅದೇ ರೀತಿಯಲ್ಲಿ ದೇಶದ ವಿವಿಧ ಪ್ರದೇಶಗಳಲ್ಲಿ ವಿವಿಧ ಆಚರಣೆಗಳಿರಬಹುದು. ಆದರೆ ಸ್ಥೂಲರೀತಿಯಿಂದ ನೋಡಿದರೆ ಕೆಲವು ವಿಶಿಷ್ಟವಾದ ಆಚರಣೆಗಳು ಸಮಾನ್ಯವಾಗಿ ಎಲ್ಲ ಕಡೆಗೂ ಕಂಡುಬರುತ್ತವೆ. ಉದಾಹರಣೆಗೆ, ಗ್ರಾಮದೇವತೆಗೆ ವಾರ್ಷಿಕವಾಗಿ ಊರ ಜಾತ್ರೆಯ ಸಂದರ್ಭದಲ್ಲಿ ಪ್ರಾಣಿಬಲಿ ಕೊಡುವುದು ಸಾಮಾನ್ಯವಾಗಿತ್ತು. ಕೆಲವು ಕಡೆ ಕೋಣಗಳನ್ನು ಕಡಿಯುವುದು,  ಮತ್ತೆ ಕೆಲವು ಕಡೆ ಕುರಿ, ಆಡು, ಕೋಳಿಗಳನ್ನು ಕೊಡುವುದು ರೂಢಿ. ಊರಿನಲ್ಲಿ ರೋಗ ರುಜಿನಗಳ ಉಪಟಳ ಉಂಟಾದಾಗ ಅಥವಾ ಮಳೆಯಾಗದೆ ಕೆರೆಬಾವಿಗಳು ಬತ್ತಿದಾಗ ಅಥವಾ ಬೇರೆ ವಿಶೇಷ ಸಂದರ್ಭಗಳಲ್ಲಿ ಕೂಡಾ ಇಂಥ ಪ್ರಾಣಿಬಲಿ ಸಲ್ಲಿಸುತ್ತಿದ್ದರು. ಈಗ ಕೆಲವು ಕಾಯಿದೆ ಬಾಹಿರವಾಗಿವೆ ಮಾತ್ರವಲ್ಲ, ಜನರ ಆಚರಣೆಯಿಂದಲೂ ಮಾಯವಾಗಿ ಹೋಗುತ್ತಿವೆ. (ನೋಡಿ :ಕೃಷ್ಣಮೂರ್ತಿ, ಅಗಷ್ಟ ೭೦ , ಪು. ೨೩-೦೨೫). ಗ್ರಾಮದೇವತೆಗಳಿಗೆ ಶಾಸ್ತ್ರೋಕ್ತ ದೇವತೆಗಳಿರುವಷ್ಟು ಮಡಿಮೈಲಿಗೆ ಇಲ್ಲ. ಕೆಲವು ದೇವತೆಗಳಗೆ ಮನುಷ್ಯ ಮಾಧ್ಯಮಗಳು ಇವೆ. ತಮ್ಮ ಮಾಧ್ಯಮಗಳ ಮೂಲಕ ಈ ಕಲ್ಲುದೇವತೆಗಳು ಗ್ರಾಮಸ್ಥರ ಪ್ರಶ್ನೆಗೆ ಉತ್ತರ ಕೊಡುತ್ತವೆ, ಸಂದೇಹ ನಿವಾರಿಸುತ್ತವೆ, ಪರಿಹಾರ ಸೂಚಿಸುತ್ತವೆ. ವಿಶೇಷವಾಗಿ ಏರ್ಪಾಟುಮಾಡಿದ ಕೋಲ, ನೇಮ, ದರ್ಶನಗಳೆಂಬ ಸಂದರ್ಭಗಳಲ್ಲಿಯೂ ಇಂಥ ಏರ್ಪಾಟು ಇದೆ (ನೋಡಿ : ಭಟ್, ಪು. ೩೫೯ – ೩೬೪). ಪೂಜೆಯ ಸಂದರ್ಭದಲ್ಲಿ ಈ ಮಾಧ್ಯಮಗಳಿಗೆ ದೇವರು “ಮೈಮೇಲೆ” ಬರುತಯ್ತದೆ. ಇದನ್ನು ದರ್ಶನ, ದೇವರು ಬರುವುದು, ಮೈಯಮೇಲೆ ಬರುವುದು ಎಂದು ಮುಂತಾಗಿ ವರ್ಣಿಸುತ್ತಾರೆ. ಹಾಗೆ ದೇವರನ್ನು ಆಹ್ವಾನಿಸಿಕೊಳ್ಳುವವನಿಗೆ ದೇವರ “ಪಾತ್ರಿ” ಎಂದು ಕರೆಯುತ್ತಾರೆ (ನೋಡಿ : ಕೃಷ್ಣಮೂರ್ತಿ, ಪು. ೧೯). ಮಲಬಾರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗ್ರಾಮದೇವತೆಯ ಜಾತ್ರೆಯ ಸಂದರ್ಭದಲ್ಲಿ ಭೂತನೃತ್ಯವೂ ಇರುವುದು ಸಾಮಾನ್ಯ.

ವಾರ್ಷಿಕ ಜಾತ್ರೆ ಅಥವಾ ಉತ್ಸವದ ಅಂಗವಾಗಿ ಆಚರಿಸುವ ಇನ್ನೂ ಕೆಲವು ಆಚರಣೆಗಳನ್ನು ಕಾಣಬಹುದು. ಅವುಗಳಲ್ಲಿ  ಕೆಲವು ಹೀಗಿವೆ :

೧. ಬೆಂಕಿಯ ಮೇಲೆ ನಡೆಯುವುದು (ಕೆಂಡ ತುಳಿಯುವುದು, ಕೆಂಡ, ಕೆಂಡದ ಹಬ್ಬ ಇ.)

೨. ಸಿಡಿ (ಸೀಡಿ, ಸಿಡಿಕಂಬದ ಮೇಲೆ ಬೆನ್ನಿನ ಚರ್ಮದ ಮೂಲಕ ಹಾದು ಹೋಗುವ ಕೊಕ್ಕೆಯೊಂದರಿಂದ ನೇತು ಬೀಳುವುದು).

೩. ಮೈಮೇಲೆ ಚಡಿ ಅಥವಾ ಚಾಟಿಯಿಂದ ಹೊಡೆಸಿಕೊಳ್ಳುವುದು.

೪. ನಾಲಗೆ ಅಥವಾ ಗಲ್ಲಗಳ ನಡುವೆ ತಾಮ್ರದ ಮುಳ್ಳು ಅಥವಾ ಸರಿಗೆ ಹಾಕಿಕೊಳ್ಳುವುದು.

೫. ಎದೆ ಅಥವಾ ಹಣೇಯ ಮೇಲೆ ಖಡ್ಗದಿಂದ ರಕ್ತ ಚಿಮ್ಮುವ ತನಕ  ಹೊಡೆದುಕೊಳ್ಳುವುದು.

೬. ಈಟಿಯೊಂದರಿಂದ ಹೊಟ್ಟೆಗೆ ಚುಚ್ಚಿಕೊಳ್ಳುವುದು.

೭. ತಲೆಯ ಮೇಲೆ ಉರಿಯುವ ಬೆಂಕಿಯ ಗಡಿಗೆಯ “ಕರಗ” ಹೊರುವುದು. ಇತ್ಯಾದಿ.

ಗ್ರಾಮದೇವತೆಗೆ ಆಗ ಅಷ್ಟು ಮಹತ್ವವೇಕೆ ಸಿಗುತ್ತಿತ್ತು ? ಗ್ರಾಮದೇವತೆಯ ಕೆಲಸವೇನು ? ಎಂಬ ಬಗ್ಗೆ ಸ್ಥೂಲವಾಗಿ ವಿವೇಚಿಸೋಣ. ನಾವು ಈಗಾಗಲೇ ಹೇಳಿದಂತೆ ಗ್ರಾಮದೇವತೆಯು ಗ್ರಾಮಸ್ಥರ ತಾಯಿ ಅಥವಾ ರಕ್ಷಕ ದೇವತೆಯನ್ನಿಸಿಕೊಳ್ಳುತ್ತಿದ್ದಳು. ಗ್ರಾಮಸ್ಥರ ಅಭಿಪ್ರಾಯದಂತೆ ಅವಳು ಗ್ರಾಮದ ಬೆಳೆಗಳನ್ನು ಕಾಪಾಡುತ್ತಾಳೆ. ಹೈನು ಹೆಚ್ಚಿಸುತ್ತಾಳೆ. ಸಕಾಲಕ್ಕೆ ಮಳೆಯನ್ನು ತರುತ್ತಾಳೆ. ಒಡ್ಡುಗಳನ್ನು ಸಂರಕ್ಷಿಸುತ್ತಾಳೆ, ಸಾಂಕ್ರಾಮಿಕ ರೋಗಗಳು ಊರೊಳಗೆಬಾರದಂತೆ ತಡೆಯುತ್ತಾಳೇ. ಭಕ್ತರ ರೋಗರುಜಿನಗಳನ್ನು ನಿವಾರಿಸುತ್ತಾಳೆ, ಸಂಕಷ್ಟಗಳನ್ನು ಪರಿಹರಿಸುತ್ತಾಳೆ, ಶಿಶುಮರಣವನ್ನು ನಿಲ್ಲಿಸುತ್ತಾಳೆ. ಜಗಳಗಳನ್ನು ಪರಿಹರಿಸುತ್ತಾಳೆ. ಹೊಲದ ಗಡಿಗಳನ್ನು ನಿರ್ಧರಿಸುತ್ತಾಳೆ, ಭೂತ – ಪ್ರೇತ- ಗಾಳಿಗಳನ್ನು ನಿವಾರಿಸಿ ಹುಚ್ಚು ಬಿಡುತ್ತಾಳೆ. ಬಂಜೆತನವನ್ನು ಹೋಗಲಾಡಿಸಿ ಸಂತಾನ ಕೊಡುತ್ತಾಳೆ. ಗ್ರಾಮಸ್ಥರು ನಂಬುವಂತೆ ಈ ತಾಯಿ ಇಂಥ ಇನ್ನೂ ಅನೇಕ ಕಾರ್ಯಗಳನ್ನು ನಿರ್ವಹಿಸಬಲ್ಲಳು ಅಥವಾ ನಿರ್ವಹಿಸುತ್ತಿದ್ದಳು.

. ಈಗೇಕೆ ಪೂಜೆಯಿಲ್ಲ ?

ಗ್ರಾಮ ದೇವತೆಗಳು ಈಗ ಹಿಂದಿನಂತೆ ಪೂಜೆ -ಸೇವೆಗಳನ್ನು ಪಡೆಯುವುದಿಲ್ಲ ಎಂಬ ಮಾತು ನಮ್ಮ ಗ್ರಾಮಗಳ ಪರಿಚಯವಿರುವ ಎಲ್ಲರಿಗೂ ತಿಳಿದಿದೆ. ಹಾಗೆಂದ ಮಾತ್ರಕ್ಕೆ ಗ್ರಾಮೀಣರು ನಾಸ್ತಿಕರಾಗುತ್ತಿದ್ದಾರೆ ಎಂಬ ನಿರ್ಣಯಕ್ಕೆ ಬರಬಾರದು (ನೋಡಿ : ಶ್ರೀನಿವಾಸ್, ಪು. ೩೨೩). ಅವರು ಧಾರ್ಮಿಕ ಶ್ರದ್ಧೆಯನ್ನು ಕಳೆದುಕೊಂಡಿದ್ದಾರೆಂಬುದನ್ನು ಸಾಬೀತು ಮಾಡುವುದು ಸಾಧ್ಯವಿಲ್ಲ. ಹಿಂದೆ ಗ್ರಾಮದೇವತೆಗಳಿದ್ದ ಜಾಗದಲ್ಲಿ ಈಗ ಹೊಸ ದೇವರುಗಳು ಬಂದಿರಬಹುದು. ಶಕ್ತಿಪೂಜೆ – ಮಾತೃ ಪೂಜೆಯ ಬದಲಿಗೆ ಬ್ರಾಹ್ಮಣ ಸಂಪ್ರದಾಯದ ಶಾಸ್ತ್ರೋಕ್ತ ದೇವರುಗಳ ಪೂಜೆ ಜನಪ್ರಿಯವಾಗುತ್ತಿರಬಹುದು. ಹೊಸ ಹೊಸ ಪಂಥಗಳು ಗ್ರಾಮದೊಳಕ್ಕೆ ಪ್ರವೇಶ ಮಾಡಿವೆ, ಉದಾಹರಣೆಗೆ, ಶಿರಡಿಯ ಸಾಯಿಬಾಬಾ, ಶಬರಿಮಲೆಯ ಅಯ್ಯಪ್ಪ, ಮಂತ್ರಾಲಯದ ರಾಘವೇಂದ್ರ, ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥ ಇವರುಗಳು ದೂರದೂರದ ಗ್ರಾಮಗಳನ್ನು ಪ್ರವೇಶಿಸಿ ಪೂಜೆಪಡೆಯುತ್ತಿದ್ದಾರೆ.

ಒಟ್ಟನಲ್ಲಿ ಗ್ರಾಮದೇವತೆಗಳಿಗೆ ಪೂಜೆ ತಪ್ಪಿದುದು ಗ್ರಾಮೀಣರು ನಾಸ್ತಿಕರಾಗುತ್ತಿದ್ದಾರೆ ಎಂಬ ಸರಳ ಕಾರಣಕ್ಕಾಗಿ ಅಲ್ಲ.

ಗ್ರಾಮೀಣರು ಇಂದಿನಂತೆ ಹಿಂದೆಯೂ ಅನೇಕ ದೇವರುಗಳನ್ನು ನಂಬುವುದಿತ್ತು. ಅವರ ಮನಸ್ಸಿನಲ್ಲಿ ವಿವಿಧ ದೇವತೆಗಳ ಪ್ರಭಾವ ಹಾಗೂ ಪ್ರಯೋಜನೆಗಳ ಬಗ್ಗೆ ಕೆಲವೊಮ್ಮೆ ಹೆಚ್ಚು ಸ್ಪಷ್ಟವಾದ, ಕೆಲವೊಮ್ಮೆ ಅಸ್ಪಷ್ಟವಾದ, ಲೆಕ್ಕೆಚಾರಗಳಿದ್ದವು. ತಮ್ಮ ಪ್ರಾಪಂಚಿಕ ಜೀವನದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಗ್ರಾಮದೇವತೆಗಳು ಮುಖ್ಯ ಪಾತ್ರ ವಹಿಸುತ್ತಾರೆ ಎಮದು ಅವರು ನಂಬಿದ್ದರು. ಗ್ರಾಮದ ಮುಖಂಡರು ಗ್ರಾಮ ದೇವತೆಗಳ ಸಹಾಯದಿಂದ ಗ್ರಾಮದ ಶಿಸ್ತು ಸಮಗ್ರತೆಯನ್ನು ಕಾಪಾಡಬಹುದೆಂಬ ಭರವಸೆ ಹೊಂದಿದ್ದರು. ಸಂತಾನ, ಆರೋಗ್ಯ, ಮಳೆಬೆಳೆ, ಗಡಿವಿವಾದ, ಮನಶ್ಯಾಂತಿ ಮೊದಲಾದ ವಿಷಯಗಳಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ಅವರು ಗ್ರಾಮ ದೇವತೆಗಳ ಮೊರೆಹೋಗುತ್ತಿದ್ದರು. ಈಗ ನಿಶ್ಚಯವಾಗಿಯೂ ದೇವತೆಗಳು ತಮ್ಮ ಹಿಂದಿನ ವೈಭವವನ್ನೂ ಮಹತ್ವವನ್ನೂ ಕಳೆದುಕೊಂಡಿದ್ದಾರೆ.. ಇದಕ್ಕೆ ಕಾರಣವೇನಿರಬಹುದು ? ಈ ಪ್ರಶ್ನೆಗೆ “ಇದು ಹೀಗೆ” ಎಂಬ ಒಂದೇ ಒಂದು ಖಚಿತವಾದ ಉತ್ತರವನ್ನು ಕೊಡುವುದು ಸಾಧ್ಯವಾಗಲಿಕಿಲ್ಲ. ಧರ್ಮ, ಧಾರ್ಮಿಕ ಶ್ರದ್ಧೆ, ದೇವರುಗಳನ್ನು ಸಮಾಜವಿಜ್ಞಾನಿಗಳು ಇತರ ಸಂಗತಿಗಳಂತೆ ಕಟ್ಟುನಿಟ್ಟಾಗಿ ಅಧ್ಯಯನ ಮಾಡುವುದು ಇನ್ನೂ ಸಾಧ್ಯವಿಲ್ಲ. ನಮ್ಮ ಗ್ರಾಮದೇವತೆಗಳನ್ನೂ ಕುರಿತು, ಆ ದೇವತೆಗಳು ಈಗ ಏಕೆ ಪೂಜೆ ಪಡೆಯುತ್ತಿಲ್ಲ ಎಂಬ ಕುರಿತು, ಸಮಾಜಶಾಸ್ತ್ರೀಯ ಅಧ್ಯಯನಗಳಂತೂ ಆಗಿಲ್ಲ. ನಾವು ಇಲ್ಲಿ ಅಂಥ ಅಪರೂಪದ ಒಂದು ಸಮಾಜ ಶಾಸ್ತ್ರೀಯ  ಅಧ್ಯಯನವನ್ನು ಕೊಟ್ಟಿದ್ದೇವೆ ಎಂಬ ಭ್ರಮೆ ನಮಗಿಲ್ಲ. ಆದರೆ ಈ ಸಂಪ್ರದಾಯದ ಮಹತ್ವವು ತಗ್ಗುತ್ತಿರುವುದಕ್ಕೆ ಕಾರಣವಾದ ಕೆಲವು ಕಾರಕಾಂಶಗಳ ಪಾತ್ರವನ್ನು ಇಲ್ಲಿ ಸಂಕ್ಷೀಪ್ತವಾಗಿ ವಿವೇಚಿಸಿದ್ದೇವೆ.

ನಾವು ಈ ಮೊದಲೇ ವಿವರಿಸಿರುವಂತೆ ಗ್ರಾಮದೇವತೆಗಳು ಪ್ರಧಾನವಾಗಿ ವ್ಯವಹಾರ ಜಗತ್ತಿಗೆ ಸಂಬಂಧಿಸಿದವರು. ಅವರು ಗ್ರಾಮೀಣ ಬದುಕಿನಲ್ಲಿ ಮಹತ್ವ ಪಡೆಯಲು ಒಂದು ಕಾರಣವೆಂದರೆ ಅವರಿಂದ ಗ್ರಾಮೀಣರಿಗೆ ಪ್ರಯೋಜನಗಳಿದ್ದವು. ಹಿಂದಿನ ಕಾಲದಲ್ಲಿ ಜನರು ಸಿಡುಬು, ಕಾಲರಾ, ಪ್ಲೇಗುಗಳು ಬಂದಾಗ ಪಟಪಟನೆ ಸಾಯುತ್ತಿದ್ದರು. ಆಗ ಮಾರಿ, ಶೀತಳಾ ಮೊದಲಾದ ದೇವತೆಗಳ ಮೊರೆಹೊಗುವುದನ್ನು ಬಿಟ್ಟರೆ ಮಾರ್ಗವಿರುತ್ತಿರಲಿಲ್ಲ. ಆದರೆ ಆ ರೋಗಗಳ ಕಾರಣ ಹಾಗೂ ನಿವಾರಣೆಯ ಬಗ್ಗೆ  ಜನರಿಗೆ ಹೆಚ್ಚು ಹೆಚ್ಚು ತಿಳಿಯದಂತೆ ದೈವಗಳ ಪ್ರಯೋಜನ ಕುಗ್ಗುತ್ತ ಹೋಯಿತು. ದೈವಗಳ ಬದಲು ವೈದ್ಯರಿಗೆ ಮೊರೆಹೋಗುವುದು ಲಾಭಕರ ಎಂಬ ವ್ಯವಹಾರ ಜ್ಞಾನ ಗ್ರಾಮೀಣರಿಗೆ ಬಂತು. ಎಲ್ಲ ಗ್ರಾಮೀಣರಿಗೂ ಇದು ಏಕ ಪ್ರಕಾರವಾಗಿ ಬಂತು ಎಂದು ಒಪ್ಪದಿದ್ದರೂ ವೈದ್ಯರ  ಔಷಧವನ್ನೂ ಮಾಡಿನೋಡೋಣ ಎಂಬ ಧೋರಣೆಯಂತೂ ನಿಶ್ಚಿತವಾಗಿ ಬಂತು. ಹಿಂದೆ ಬಸುರಿ – ಬಾಣಂತಿಯರು ಹಾಗೂ ಎಳೆಕೂಸುಗಳು ಬಹುಸಂಖ್ಯೆಯಲ್ಲಿ ಸಾಯುತ್ತಿದ್ದಾಗ ದೇವತೆಗಳ ರಕ್ಷಣೆ ಬೇಕಾಗುತ್ತಿತ್ತು. ಅದು ಈಗ ಬೇಡವೆಂದಲ್ಲ, ಬೇರೆ ತರಹದ ರಕ್ಷಣೆಗಳೂ ಇವೆ. ಬಂಜೆತನದ ಮಾತಾದರೂ ಅಷ್ಟೆ. ಆಗ ಎಷ್ಟೋ ನಿಸರ್ಗ ವ್ಯಾಪಾರಗಳು ಬಿಡಿಸಲಾರದ ರಹಸ್ಯಗಳಾಗಿದ್ದವು. ಅವುಗಳನ್ನೂ ತಿದ್ದುವುದೂ, ಅಡೆತಡೆಗಳನ್ನು ನಿವಾರಿಸಿವುದೂ ಸಾರ್ಧಯವಿರಲಿಲ್ಲ. ಅಂಥ ಸಂದರ್ಭಗಳಲ್ಲೆಲ್ಲ ದೇವತೆಗಳು ಉಪಯೋಗಕ್ಕೆ ಬರುತ್ತಿದ್ದರು. ಮಳೆ ಬಾರದಿದ್ದಾಗ, ಕೆರೆ – ಬಾವಿ ಬತ್ತಿ ಹೋದಾಗ, ನೆರೆಹಾವಳಿ ಬಂಗಾಗ, ದನಕರುಗಳು ಸಾಯುತ್ತಿದ್ದಾಗ ಇದೊಂದೇ ಸಂರಕ್ಷಣೆ ಲಭ್ಯವಿತ್ತು. ಊಳುವುದು ಯಾವಾಗ, ಬಿತ್ತುವುದು ಯಾವಾಗ, ಮನೆಕಟ್ಟುವುದು ಯಾವಾಗ, ಜಾತ್ರೆ ಸೇರಿಸುವುದು ಯಾವಾಗ ಎಂಬ ಸಂದೇಹಗಳನ್ನೂ ದೈವಗಳೇ ಪರಿಹರಿಸಬೇಕಾಗಿತ್ತು. ಈಗಾದರೆ ಈ ಎಲ್ಲ ಸಮಸ್ಯೆಗಳಿಗೆ ಮಾನವ ಬುದ್ಧಿಯು ಕೊಡುವ ಹಲವು ಪರಿಹಾರಗಳು ಲಭ್ಯವಾಗಿದೆ. ಹಿಂದೆ ಗ್ರಾಮದೇವತೆಗಳ ಮಧ್ಯಸ್ಥಿಕೆಯಿಂದ ಸಾಲವಸೂಲಿ, ಗಡಿನಿರ್ಣಯ, ಜಗಳಗಳ ಇತ್ಯರ್ಥ ಮುಂತಾದ ತೊಡಕಿನ ಕೆಲಸುಗಳು ನೆರವೇರುತ್ತಿದ್ದವು. ಇಂಥ ಕೆಲಸಗಳಿಗಾಗಿ ಈಗ ವಿವಿಧ ರಾಜಕೀಯ ಸಾಮಾಜಿಕ ವ್ಯವಸ್ಥೆಗಳು ಹುಟ್ಟಿಕೊಂಡಿವೆ. ಒಟ್ಟಿನಲ್ಲಿ ಈಗ ಗ್ರಾಮೀಣನು ಗ್ರಾಮದೇವತೆಗಳ ಮೇಲೆ ಪೂರ್ಣವಾಗಿ ಅವಲಂಭಿಸಿಕೊಳ್ಳಬೇಕಾಗಿಲ್ಲ. ಅದನ್ನು ನಿರ್ಲಕ್ಷಿಸಿಯೂ ಬಾಳಬಹುದು.

ಈ ಮಾತುಗಳು ಗ್ರಾಮದೇವತೆಗಳಿಗೆ ಮಾತ್ರವಲ್ಲ, ಸಕಲ ದೇವರುಗಳಿಗೂ ಅಥವಾ ಧರ್ಮವೆಂಬ ಸಮಷ್ಟಿ ಶಕ್ತಿಗೂ ಅನ್ವಯವಾಗುತ್ತದೆ ಎಂಬುದನ್ನು ಒಪ್ಪೋಣ ಹಾಗಾದರೆ ಇತರ ದೇವರುಗಳೂ ಸಂಪ್ರದಾಯಗಳೂ ಹೆಚ್ಚು ಭದ್ರವಾಗಿರುವಾಗ ಈ ಗ್ರಾಮದೇವತೆಗಳ ಅಧಿಕಾರಕ್ಕೆ ಮಾತ್ರ ಏಕೆ ಸಂಚಕಾರ ಬಂದಿರಬೇಕು? ಎಂಬ ಪ್ರಶ್ನೆ ಏಳುತ್ತದೆ. ಕಾರಣವಿಷ್ಟೆ: ನಮ್ಮ ಅತಿಲೌಕಿಕ ದೇವರುಗಳು – ವೇದೋಕ್ತ ಅಥವಾ ಪುರಾಣೋಕ್ತ ದೇವರುಗಳು ಅಥವಾ  ಬ್ರಾಹ್ಮಣರ ಶಿಷ್ಟ ದೇವರುಗಳು – ಜನರ ಸದ್ಯದ, ಪ್ರಾಪಂಚಿಕ ಸಮಸ್ಯೆಗಳನ್ನು ಬಗೆಹರಿಸಬೇಕಾಗಿಲ್ಲ. ಆ ಕೆಲಸ ಗ್ರಾಮ ದೇವತೆಗಳದ್ದು. ಮಹಾ ಶಕ್ತಿಗಳು ಇಡೀ ವಿಶ್ವದ ಆಗುಹೋಗುಗಳನ್ನು ನಿಯಂತ್ರಿಸುತ್ತವೆಯೇ ಹೊರತು ಗ್ರಾಮದ ಚಿಕ್ಕಪುಟ್ಟ ವ್ಯವಹಾರಗಳನ್ನಲ್ಲ. ಆದರೆ ಗ್ರಾಮ ದೇವತೆಗಳು ಹಳ್ಳಿಗರ ಸುಖ ದುಃಖಗಳನ್ನು ನೋಡಿಕೊಳ್ಳುವ ಹೊಣೆ ಹೊತ್ತವರು. ಗ್ರಾಮಸ್ಥರ ದೃಷ್ಟಯಲ್ಲಿ ಮಹಾಶಕ್ತಿಗಳಿಗೆ ಎಂದೂ ಸೋಲಿಲ್ಲ. ಆದರೆ ಗ್ರಾಮದೇವತೆಗಳು ಮಹಾಶಕ್ತಿಗಳಂತೆ ಸರ್ವಶಕ್ತರಲ್ಲ. ಅವರು ತಮ್ಮ ಕೆಲಸ ಮಾಡದಿದ್ದರೆ ತಮ್ಮ ಪ್ರಭಾವ ಕಳೆದುಕೊಳ್ಳುತ್ತಾರೆ. ಈಗ ಆಡುದು ಹಾಗೆಯೇ.

ಇನ್ನೊಂದು ಮಾತು; ಶಿಷ್ಟ ದೇವರುಗಳನ್ನು ನಾವು ಮೇಲಿಂದ ಮೇಲೆ ಪರೀಕ್ಷೆಗೆ ಒಡ್ಡುವುದಿಲ್ಲ. ಆ ದೇವರುಗಳು ವಿಶ್ವನಿಯಂತ್ರಕ ಶಕ್ತಿಗಳು.ಆ ಶಕ್ತಿಗಳ ಬಗ್ಗೆ  ನಮಗೆ ಎಂದೂ ವಿಶ್ವಾಸ ಉಂಟಾಗುವ ಪ್ರಮೇಯವಿಲ್ಲ. ಆದರೆ ಗ್ರಾಮದೇವತೆಗಳನ್ನು ಮಾನು ಮೇಲಿಂದ ಮೇಲೆ ಪರೀಕ್ಷೆಗೆ ಒಡ್ಡುತ್ತೇವೆ.ಅವರ ಬಗ್ಗೆ ಹಳ್ಳಿಗರಿಗೆ ಸಲಗೆಯೂ ಉಂಟು. ಅವರನ್ನು ಹಾಗೂ ಇತರ ಕ್ಷುದ್ರದೇವತೆಗಳನ್ನು ನಾವು ನಿಯಂತ್ರಿಸುವುದೂ ಸಾಧ್ಯ. ಈ ದೇವರುಗಳಿಂದ ನಾವು ನಿಯಮದಂತೆ ಪ್ರಯೋಜನಗಳನ್ನು ಪಡೆಯಬಹುದು. ಗ್ರಾಮದೇವತೆಗಳನ್ನು ಹಳ್ಳಿಗರು ಮೊರೆಹೊಹುವುದು ಸದ್ಯದ ಪ್ರಯೋಜನಕ್ಕಾಗಿ. ಆದುದರಿಂದ ಅವರು ಸದಾ ಗ್ರಾಮದ ಮೇಲೆ ನಿಗಾ ಇಟ್ಟಿರಬೇಕು. ಹಾಗೆ ಕಾಪಾಡಲಾರದ ದೇವತೆಗಳಿಂದ ನಮಗೇನು ಪ್ರಯೋಜನ ಎಂದು ಭಕ್ತರು ಸಹಜವಾಗಿ ಪ್ರಶ್ನಿಸಿಬಿಡುತ್ತಾರೆ. ಜನರು ಪೂಜೆ, ನೇಮ, ಹರಕೆ, ಸೇವೆಗಳ ಮೂಲಕ ಆ ದೇವತೆಗಳನ್ನು ಎರಡು. ಮೂರು, ನಾಲ್ಕು ಬಾರಿ ಒಲಿಸಲು ಪ್ರಯತ್ನಿಸುತ್ತಾರೆ; ಅಹವಾಲು ಸಲ್ಲಿಸುತ್ತಾರೆ. ಇಷ್ಟಾದರೂ ಅವರು ಪ್ರಾರ್ಥನೆಗಳನ್ನು ಈಡೇರಿಸದಿದ್ದರೆ ಬೇರೆ ಊರಿನ, ಬೇರೆ ಸಂಪ್ರದಾಯದ ಪ್ರಭಾವಶಾಲಿ ದೇವರುಗಳ ಕಡೆ ಹೋಗಿ ಬೇಡಿಕೊಳ್ಳುತ್ತಾರೆ. ಉದಾಹರಣೆಗೆ, ರಾಮಪುರ ಗ್ರಾಮದಲ್ಲಿ ಮಳೆ ಬೀಳಲಿಲ್ಲ. ಆ ಊರವರು ಮಳೆಬೀಳುವದೇ ಎಂದು “ಹೂ” ಕೇಳಿದರು. ಗ್ರಾಮದ ದೇವರು ಸುಮ್ಮನಿದ್ದಾಗ ಭಕ್ತರು “ಅಪ್ಪಣೆಯಾಗಲಿ, ಯಾಕೆ ಕಾಡಸ್ತೀಯಾ?” ಎಂದು ಒತ್ತಾಯಿಸಿದರು. ಆಗಲೂ ಏನೂ ಉತ್ತರ ಬಾರದಿದ್ದಾಗ “ನೀನೇನು ಕೇವಲ ಒಂದು ಕಲ್ಲುಗುಂಡೆ? ಯಾಕೆ ಮಾತಾಡುವುದಿಲ್ಲ?” ಎಂದು ಹಂಗಿಸಿದರು. ನೀನಲ್ಲದಿದ್ದರೆ ನೆರೆಯ ಮಹದೇಶ್ವರನು ಸನ್ನಿಧೀಗೆ ಹೋಗುತ್ತೇವೆ ಎಂದು ಹೆದರಿಸಿದರು. ಮಹದೇಶ್ವರನು ಫಲಕೊಟ್ಟ. ಮುಂದೆ ಕಾಲಕ್ರಮೇಣ ಹಳೆಯ ದೇವರ ಪ್ರಭಾವ ಕುಗ್ಗಿ ಹೊಸ ದೇವರ ಪ್ರಭಾವ ಹೆಚ್ಚಿತು (ನೋಡಿ : ಶ್ರೀನಿವಾಸ, ಪು. ೩೨೭). ಗೊರೂರು ಅವರು ಹೇಳುವಂತೆ ಹಳ್ಳಿಗಾಡಿನ ಮನುಷ್ಯನು ತನ್ನೂರ ಗ್ರಾಮದೇವತೆಗೆ ಮಾಡಿಕೊಂಡ ಹರಕೆ ಒಂದು ಸಲ ಎರಡು ಸಲ ವಿಫಲವಾದರೆ, ಆತ ದೇವತೆಯ ಮುಂದೆ ನಿಂತು, ಸಾರ್ವಜನಿಕ ಹೇಳಿಕೆಯನ್ನು ಕೊಡುವವನಂತೆ ಗಟ್ಟಿಯಾಗಿ, “ನಾನು ನಿನಗೆ ಇಂಥಿಂಥ ಹರಕೆಗಳನ್ನು ಮಾಡಿಕೊಂಡೆ ಯಾವುದೇ ಫಲಿಸಲಿಲ್ಲ. ಎಲ್ಲದರಲ್ಲಿಯೂ ನನಗೆ ಕೆಡುಕೇ ಉಂಟಾಯಿತು. ನನ್ನ ಹರಕೆಯನ್ನಲ್ಲ ನೀನು ತಿಂದು ನನ್ನ ಕೈಬಿಟ್ಟುಬಿಟ್ಟೆ ನಿನ್ನಲ್ಲಿ ಶಕ್ತಿಯೇ ಇಲ್ಲ. ನಾನು ಹರಕೆಯನ್ನೆಲ್ಲ ನೀನು ತಿಂದು ನನ್ನ ಕೈಬಿಟ್ಟುಬಿಟ್ಟೆ ನಿನ್ನಲ್ಲಿ ಶಕ್ತಿಯೇ ಇಲ್ಲ. ನಾನು ಬೇರೆ ಅಮ್ಮನಿಗೆ ಹೋಗುತ್ತೇನೆ. ಹಟ್ಟಿ ಕಲ್ಲಮ್ಮನಿಗೆ ಹೋಗುತ್ತೇನೆ. ಹೊನ್ನಾಲ್ದಮ್ಮ, ಬಾಚಳ್ಳಿ ಅಮ್ಮ. ಕಿಕ್ಕೇರಿ ಅಮ್ಮ – ಇವರಿಗೆ ಹೋಗುತ್ತೇನೆ. ನನ್ನ ಮೇಲೆ ತಪ್ಪಿಲ್ಲ ನೀನೇ ಒದ್ದು ನೂಕಿದೆ”  ಎಂದು ಸಾರಿ ಹೇಳಿ, ಬೇರೆ ಊರಿನ, ಅವನ ದೃಷ್ಟಿಯಲ್ಲಿ ಪ್ರಬಲವೆಂದು ತೋರಿದ ಮತ್ತೊಂದು ದೇವತೆಗೆ ಹರಕೆ ಹೊರುತ್ತಾನೆ (ನೋಡಿ : ಗೊರೂರು, ಪು. ೮೦೪). ಹೀಗೆ ಭಕ್ತರು ಗ್ರಾಮದೇವತೆಗಳನ್ನು ಸಲುಗೆಯಿಂದ ಅಥವಾ ಸಿಟ್ಟಿನಿಂದ ಕಾಡಿಸಿ ಪೀಡಿಸಿ ಫಲಕೇಳುತ್ತಾರೆ. ಕೊಡುವುದು ಆ ದೇವತೆಗಳ ಕರ್ತವ್ಯ. ಕೊಡದೇ ಇದ್ದರೆ ಮುಂದೆ  ಅವರಿಗೆ ಸಿಗುವ ಪೂಜೆ, ಸೇವೆ, ಮರ್ಯಾದೆ ಸಿಗದೇ ಹೋಗಬಹುದು. ಒಳ್ಳೇ ಹೊತ್ತಿನಲ್ಲಿ ಕೈಕೊಟ್ಟ ದೇವರಿಗೆ ಉದಾಸೀನ ತೋರಿಸಬೇಕು ಎಂದು ಗ್ರಾಮೀಣರು ಹೇಳುತ್ತಾರೆ. ಗ್ರಾಮಸ್ಥರ ಪ್ರಯೋಜನೈಕ ದೃಷ್ಟಿಯಲ್ಲಿ ಹೀಗೆ ಮಾಡುವುದರಲ್ಲಿ ಯಾವ ತಪ್ಪೊ ಇಲ್ಲ. ಅನೇಕ ಗ್ರಾಮದೇವತೆಗಳು ತಮ್ಮ ಸ್ಥಾನದಿಂದ ಪದಚ್ಯುತರಾದುದು ಹೀಗೆಯೇ ಎಂದರೆ ತಪ್ಪಿಲ್ಲ.

ಗ್ರಾಮದೇವತೆಗಳು ಮಹತ್ವ ಕಳೆದುಕೊಳ್ಳುತ್ತಿರುವುದರಲ್ಲಿ ಇನ್ನೊಂದು ಅಂಶ ಅಡಗಿದೆ. ಯಾವುದೇ ಗ್ರಾಮದೇವತೆ ಪ್ರಸಿದ್ಧಳಾದಳು ಎಂದಿಟ್ಟುಕೊಳ್ಳಿ. ಆಗ ಆ ದೇವತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಭಕ್ತರನ್ನು ಆಕರ್ಷಿಸುತ್ತಾಳೆ. ದೊಡ್ಡ ಜಾತ್ರೆ, ಉತ್ಸವ, ಪುರಾಣ, ಪುರೋಹಿತ ವರ್ಗ, ಕಟ್ಟಡಗಳ ನಿರ್ಮಾಣ ಇವೆಲ್ಲ ಪ್ರಾರಂಭವಾಗಿ ನಿಧಾನವಾಗಿ ಅವಳು ಶಿಷ್ಟ ದೇವತೆಗಳ ಸಾಲಿಗೆ ಸೇರುತ್ತಾಳೆ. ಇನ್ನು ಮುಂದೆ ಅವಳು ಕೇವಲ ಒಂದು ಗ್ರಾಮದ ದೇವತೆಯಾಗಿ ಉಳಿಯುವುದಿಲ್ಲ. ಮಹಾಶಕ್ತಿ ದೇವತೆಯೊಬ್ಬಳ ಅವತಾರ ಎನ್ನಿಸಿಕೊಳ್ಳುತ್ತಾಳೆ. (ನೋಡಿ : ಕ್ರೂಕ್, ಪು. V. ೧೨). ಹೀಗೆ ಗ್ರಾಮದೇವತೆಗಳು ಒಂದು ರೀತಿಯ “ಸಂಸ್ಕೃತೀಕರಣ” ಹೊಂದುವುದನ್ನು ಕಾಣುತ್ತೇವೆ. ಒಟ್ಟಿನಲ್ಲಿ, ಅವರು ಸೋತರೆ ಭಕ್ತರ ಪೂಜೆಯಿಲ್ಲದೆ ಮೂಲೆ ಗುಂಪಾಗುತ್ತಾರೆ;; ಗೆದ್ದು ಪ್ರಸಿದ್ಧವಾದರೆ ಯಾವುದೋ ಪ್ರಸಿದ್ಧ ದೇವತೆಗಳ ಅವತಾರವಾಗಿ ಬಿಡುತ್ತಾರೆ. ಗ್ರಾಮದೇವತಾ ಸಂಪ್ರದಾಯ ಬಲಗುಂದುತ್ತಾ ಬಂದುದಕ್ಕೆ ಇದೂ ಒಂದು ಮುಖ್ಯ ಕಾರಣ.

ಹಿಂದೆ ಹೊಸದಾಗಿ ಒಂದು ಗ್ರಾಮವನ್ನು ಸ್ಥಾಪಿಸಬೇಕಾದಾಗ ಅದಕ್ಕೊಂದು ದೇವತೆ ಬೇಕಾಗುತ್ತಿತ್ತು. ಬಹುಕಾಲದ ಹಿಂದಾದರೆ ಜನರು ತಮ್ಮ ಬುಡಕಟ್ಟುಗಳಿಂದ ಹಳೆಯ ದೇವರುಗಳನ್ನು ತಂದು ಹೊಸ ಗ್ರಾಮದಲ್ಲಿ  ಸ್ಥಾಪಿಸುತ್ತಿದ್ದರು. ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಸಿದ್ಧವಾದ ದೇವತೆಯನ್ನೇ ತಮ್ಮಲ್ಲಿ ತಂದುಕೊಳ್ಳುತ್ತಿದ್ದರು. ಮತ್ತೆ ಕೆಲವು ಕಡೆಗಳಲ್ಲಿ ಬಹುಸಂಖ್ಯಾತ ಜಾತಿಯ ಅಥವಾ ಪ್ರಬಲ ಕುಟುಂಬಗಳ ಆರಾಧ್ಯ ದೈವವನ್ನೇ ತಂದು ಸ್ಥಾಪಿಸುತ್ತಿದ್ದರು. ಕೊಂಕಣದ ಕಡೆ ಹೊಸಗ್ರಾಮದಲ್ಲಿ ನೆಲೆಸುವ ಜನರಲ್ಲಿ ಮೇಲ್ಜಾತಿಯ ಜನರೇ ಹೆಚ್ಚಿಗಿದ್ದರೆ ಮಾರುತಿ, ದುರ್ಗಾ, ಲಕ್ಷ್ಮೀ ಮುಂತಾದ ದೇವರುಗಳನ್ನೂ, ಕೆಳಜಾತಿಗಳವರೇ ಹೆಚ್ಚಿಗಿದ್ದರೆ ಮ್ಹಾಸೋಬಾ, ಚೆಡೋಬಾ, ಜಾಖಾಯಿಯಂಥ ದೇವರುಗಳನ್ನೂ ತರುತ್ತಿದ್ದರು (ನೋಡಿ : ಜಾಕ್ಸನ್ , ಪು . ೧೧). ಜಮೀನುದಾರಿಕೆಯ ದಿನಗಳಲ್ಲಿ ಜಮೀನುದಾರರ ಆರಾಧ್ಯ ದೈವವೇ ಹೊಸಗ್ರಾಮಗಳಿಗೆ ಬರುತ್ತಿತ್ತು, ಈಗಂತೂ ಹೊಸದಾಗಿ ಸ್ಥಾಪಿತವಾಗುವ ಗ್ರಾಮಗಳಿಗೆ ಯಲ್ಲಮ್ಮ, ಮಾರಿಯಮ್ಮ, ಹುಲಿಗೆಮ್ಮಗಳು ಬೇಡ; ಲಕ್ಷ್ಮೀ, ಪಾರ್ವತಿ, ಶಿವ, ಗಣಪತಿಯರು ಬೇಕು. ಕೆಲವೊಮ್ಮೆ ಯಾರೂ ಬೇಡ, ಶಾಲೆ, ಪಂಚಾಯತಿ ಆಫೀಸು, ಸಮಾಜ ಮಂದಿರಗಳೇ ಸಾಕು.

ನಾವು ಈ ಮೊದಲೇ ನೋಡಿದಂತೆ ಗ್ರಾಮದೇವತಾ ಸಂಪ್ರದಾಯವು ಬ್ರಾಹ್ಮಣರಿಗೆ ಹಾಗೂ ಅವರನ್ನು ಅನುಕರಿಸುತ್ತಿದ್ದ ಇತರ ಮೇಲ್ಜಾತಿಯವರಿಗೆ ಮೊದಲಿನಿಂದಲೂ ಸರಬೀಳುತ್ತಿರಲಿಲ್ಲ. ಹೇಗೆ ಹೇಗೆ ಜಾತಿತಾರತಮ್ಯದ ಏಣಿಶ್ರೇಣಿಯಲ್ಲಿ ಬ್ರಾಹ್ಮಣರ ಅಗ್ರಮಾನ್ಯತೆ ಸ್ಥಿರವಾಯಿತೋ ಹಾಗೆ ಹಾಗೆ ಅವರು ಅಬ್ರಾಹ್ಮಣ ಪೂಜೆ ನೇಮಗಳನ್ನು ತಿರಸ್ಕರಿಸುತ್ತ ಬಂದರು. ಮಡಿ – ಮೈಲಿಗೆ, ಬ್ರಾಹ್ಮಣ ಪೌರೋಹಿತ್ಯ ಇಲ್ಲದ ದೇವರುಗಳನ್ನು ಅವರು ಅಸಡ್ಡೆ ಮಾಡಿದರು. ಬರುಬರುತ್ತ ಗ್ರಾಮ ದೇವತೆಗಳು ಗ್ರಾಮದ ಕೆಳಜಾತಿಯ ಜನರ ದೇವತೆಗಳಾದರು. ಶಿಷ್ಡ ಮನ್ನಣೆಯಿಲ್ಲದೇ ಹೋದುದರಿಂದ ಗ್ರಾಮದೇವತಾ ಪೂಜೆಯು ಅನಾಗರಿಕತೆಯ ಲಕ್ಷಣವೆಂಬ  ಭಾವನೆ ಬೆಳೆದಿರಬಹುದು ನಂತರದ ಕಾಲದಲ್ಲಿ ಕೆಳಜಾತಿಯ ರಾಜಕೀಯ ಹಾಗೂ ಸಾಮಾಜಿಕವಾಗಿ ಏಳಿಗೆ ಹೊಂದುತ್ತಿದ್ದಾಗ ಸ್ವತಃ ಕೆಳಜಾತಿಯವರೇ ತಮ್ಮ ದೇವತೆಗಳ ಬಗ್ಗೆ ವಿಶೇಷ ಮಮತೆ ತೋರಿದಂತೆ ಕಾಣುವುದಿಲ್ಲ. ತಮ್ಮ ಸ್ಥಾನಮಾನ ಸುಧಾರಣೆ ಮಾಡಿಕೊಳ್ಳುವುಕ್ಕೋಸ್ಕರ ಅವರು ಮೇಲ್ಜಾತಿಗಳ ಸಾಮಾಜಿಕ ಧಾರ್ಮಿಕ ಆಚರಣೆಗಳನ್ನು ಅನುಕರಿಸತೊಡಗಿದರೇ ಹೊರತು ತಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಪುನರುಜ್ಜೀವಿಸಲಿಲ್ಲ. ಹೀಗೆ ಹಳೆಯ ಭಕ್ತರು ಕೂಡಾ ಕೈಬಿಟ್ಟರು ಎಂದರೆ ತಪ್ಪಾಗಲಿಕ್ಕಿಲ್ಲ.

ಈ ಸಂದರ್ಭದಲ್ಲಿ ನಾವು ಒಂದು ಮಾತನ್ನು ನೆನೆಪಿಡಬೇಕು. ಅದೇನೆಂದರೆ ಯಾವುದೇ ಸಂಪ್ರದಾಯವು ಮುಂದುವರಿದುಕೊಂಡು ಹೋಗಬೇಕಾದರೆ ಆ ಸಂಪ್ರದಾಯದಿಂದ ಲಾಭಪಡೆಯುವ ಜನರ ವಿಶಿಷ್ಟ ಹಿತಾಶಕ್ತಿಗಳ ಸುತ್ತ ಸೂಕ್ತ ವ್ಯವಸ್ಥೆಗಳು ಬೆಳೆಯಬೇಕಾಗುತ್ತದೆ. ಶಿಷ್ಟ ದೇವತೆಗಳ ಮಠ, ಗುಡಿಗಳ ಸುತ್ತ ಇಂಥ ವ್ಯವಸ್ಥೆಗಳು ಬೆಳೆದು ಕೊಂಡಿವೆ. ಅಲ್ಲಿ ಅರ್ಚಕರಿದ್ದಾರೆ. ಮಠದ ಭೂಮಿ  ಆಸ್ತಿ ಪಾಸ್ತಿಗಳಿವೆ, ಆ ಭೂಮಿಯನ್ನು ಊಳುವ ರೈತರಿದ್ದಾರೆ. ದೇವಾಲಯಗಳ ಪರಿಚಾರಕ ವರ್ಗವಿದೆ, ಮಠದ ಕೃಪಾಕಟಾಕ್ಷಕ್ಕಾಗಿ ಹಾತೊರೆಯುವ ಕೆಲವು ಜನರಿದ್ದಾರೆ. ಇವರೆಲ್ಲರಿಗೂ ತಮ್ಮ ಮಠ ಹಾಗೂ ತಮ್ಮ ಸಂಪ್ರದಾಯ ಉಳಿಯುವುದು ಬೇಕು. ಆದರೆ ಗ್ರಾಮದೇವತಾ ಸಂಪ್ರದಾಯದ  ಒಂದು ದೊಡ್ಡ ಕೊರತೆಯೆಂದರೆ ಅದಕ್ಕೆ ಇಂಥ ವ್ಯವಸ್ಥೆಗಳಿಲ್ಲ. ಮೊದಲಿನಿಂದಲೂ ಅಲ್ಲಿ ಒಂದು ಪುರೋಹಿತಶಾಹಿ  ವರ್ಗ ಬೆಳೆಯಲಿಲ್ಲ. ಪೂಜೆ, ನೇಮ, ಕೋಲ, ಜಾತ್ರೆ, ದರ್ಶನ, ಹೂ ಕೇಳುವ ಸಂದರ್ಭದಲ್ಲಿ ಗ್ರಾಮದ ಸಂಪ್ರದಾಯದಂತೆ ಒಬ್ಬನೂ ಪೂಜಾರಿಯ ಕಾರ್ಯಗಳನ್ನು ನಿರ್ವಹಿಸುತ್ತದ್ದರೂ ಅವನಾಗಲೀ ಇತರರಾಗಲೀ ಆ ಗುಡಿ ಅಥವಾ ಪೂಜೆಯ ಮೇಲೆ ಪೂರ್ಣವಾಗಿ ಅವಲಂಬಿಸಿಕೊಂಡಿದ್ದಿಲ್ಲ. ಇದರಿಂದಾಗಿ ಆ ಸಂಪ್ರದಾಯಕ್ಕೆ ತನ್ನನ್ನು ತಾನೇ ಮುಂದುವರೆಸಿಕೊಂಡು ಹೋಗುವ ಒಂದು ಒಳ್ಳೆಯ ತಂತ್ರ ಲಭ್ಯಯವಾಗದೇ  ಹೋಯಿತು.

ಹೆಚ್ಚು ವ್ಯಾಪಕವಾದ ಕೆಲವು ಅಂಶಗಳೂ ಇಲ್ಲಿ ಸೇರಿವೆ. ಉದಾಹರಣೆಗೆ, ಆದಿಮಾನವರ ಅದೆಷ್ಟೋ ಆಚಾರವಿಚಾರಗಳು ನಾಗರಿಕತೆಯ ಬೆಳವಣಿಗೆಯೊಂದಿಗೆ ಮರೆಯಾಗುತ್ತವೆ. ಅಷ್ಟೇ ಅಲ್ಲ, ಅವುಗಳನ್ನು ಕೈ ಬಿಡುವುದೇ ನಾಗರಿಕತೆಯ ಲಕ್ಷಣ ಎಂಬ ಭಾವನೆಯು ಬರುತ್ತದೆ. ಗ್ರಾಮದೇವತಾ ಪೂಜೆಯ ವಿಷಯದಲ್ಲಿಯೂ ನಾವು ಅದನ್ನು ಗಮನಿಸಬಹುದು ಇಲ್ಲಿ ಬರುವ ಅನೇಕ ನೇಮ ಆಚರಣೆಗಳು ಮೂಢನಂಬಿಕೆ ಎಂಬ ಭಾವನೆ ಬಂದಿರುವುದರಿಂದ ಜನರು ಅವುಗಳನ್ನು ಬಿಟ್ಟು ಬಿಟ್ಟಿದ್ದಾರೆ. ಹಾಗೆಯೇ ಈ ಪೂಜೆಯ ಅಂಗಗಳಾಗಿದ್ದ ಪ್ರಾಣಿಬಲಿ, ಮದ್ಯ, ಬತ್ತಲೆನೃತ್ಯ, ತಾಂತ್ರಿಕ ವಾಮಾಚಾರಗಳು ಈಗ ನಿಷಿದ್ಧವೆನ್ನಿಸಿವೆ, ಒಟ್ಟಿನಲ್ಲಿ ನಾಗರಿಕತೆಯ ಬೆಳವಣಿಗೆಯೊಂದಿಗೆ ಗ್ರಾಮದೇವತಾರ್ಚನೆಯು ಶಿಷ್ಟ ಮನ್ನಣೆಯನ್ನು ಕಳೆದುಕೊಳ್ಳುತ್ತಿದೆ.

ಇನ್ನೊಂದು ವ್ಯಾಪಕ ಅಂಶದ ಬಗೆಗೂ ಇಲ್ಲಿ ಪ್ರಸ್ತಾಪಿಸಬಹುದು. ಹಿಂದೆ ಗ್ರಾಮಸ್ಥರು ತಮ್ಮ ನೆಲಕ್ಕೆ ಅಂಟಿಕೊಳ್ಳುತ್ತಿದ್ದರು. ಅವರು ಗ್ರಾಮದ ಗಡಿಗಾಳಾಚೆ ಹೋಗುವುದು  ಅಪರೂಪದ ಮಾತಾಗಿತ್ತು. ಕಾಶಿಗೆ ಹೋಗುವಾಗ ಶ್ರಾದ್ಧ ಮಾಡಿಸಿಕೊಂಡು ಹೋಗುತ್ತಿದ್ದಂತೆ. ನೆಲಕ್ಕೆ ಅಂಟಿಕೊಳ್ಳುತ್ತಿದ್ದ ಅಂಥ ದಿನಗಳಲ್ಲಿ ಆ ನೆಲದ ತಾಯಿಯ ರಕ್ಷಣೆ ಸಾಕಾಗುತ್ತಿತ್ತು. ಆದರೆ ಆಧುನಿಕ ಕಾಲದಲ್ಲಿ  ನಗರ ಮತ್ತು ನಗರ ಜೀವನ ಸಂಪರ್ಕ ಹೆಚ್ಚಿದಂತೆ, ಹೊಸ ಸಂಪರ್ಕ ಸಾಧನಗಳು ಹೆಚ್ಚಿದಂತೆ, ಗ್ರಾಮದೊಳಗೆ ಹೊಸ ದೇವರುಗಳೂ, ಪಂಥಗಳೂ, ಗುರುಗಳೂ ಬಂದಿದ್ದಾರೆ. ಈಗ ದೂರದಲ್ಲಿರುವ ತೀರ್ಥಕ್ಷೇತ್ರಗಳಿಗೆ “ನಡೆದುಕೊಳ್ಳುವುದು” ಸಾಧ್ಯವಾಗಿದೆ. ಅವುಗಳ ಪ್ರಚಾರವೂ ಹೆಚ್ಚಿದೆ. ಹೀಗೆ ಧಾರ್ಮಿಕವಾಗಿಯೂ ಗ್ರಾಮೀಣರು ತಮ್ಮ ಹಳ್ಳಿಗೆ ಅಂಟಿಕೊಳ್ಳಬೇಕಾಗಿಲ್ಲ ಇದೂ ಅಲ್ಲದೆ ಹಿಂದಿನ ಕಾಲದಲ್ಲಿ ಗ್ರಾಮದ ಗುಡಿಯು ಸಾಮಾಜಿಕ ಸಮಗ್ರತೆಯ ಸಂಕೇತವಾಗಿತ್ತು. ಗುಡಿಯಲ್ಲಿ ಜರುಗುವ ಜಾತ್ರೆ , ನೇಮ, ಕೋಲ, ದರ್ಶನ, ನ್ಯಾಯನಿರ್ಣಯಗಳು ಗ್ರಾಮಜೀವನದ ಕೊಂಡಿಗಳನ್ನು ಬೆಸೆಯುತ್ತಿದ್ದವು. ಇಂಥ ಸಂದರ್ಭಗಳಲ್ಲಿ ಗ್ರಾಮದ ಪ್ರಮುಖರು ಹಾಗೂ ಜಾತಿಗಲ ಹಿರಿಯರು ಅಲ್ಲಿ ಹಾಜರಿದ್ದು ಗುಡಿಯ ಸಾಮಾಜಿಕ ಮಹತ್ವವನ್ನು ಹೆಚ್ಚಿಸುತ್ತಿದ್ದರು. ಈಗ ಧಾರ್ಮಿಕ ದೃಷ್ಟಿಯಲ್ಲಿ ಮಾತ್ರವಲ್ಲ ಆರ್ಥಿಕ, ಸಾಮಾಜಿಕ, ರಾಜಕೀಯ ದೃಷ್ಟಿಗಳಲ್ಲೂ ಪ್ರಾಚೀನ ಗ್ರಾಮೀಣ ವ್ಯವಸ್ಥೆಗಳು ಶಿಥಿಲಗೊಂಡಿವೆ. ಹೀಗೆ ಗ್ರಾಮದ ಕಟ್ಟುಗಳು ಶಿಥಿಲವಾದಾಗ ಗ್ರಾಮವನ್ನು ಪ್ರತಿನಿಧಿಸುವ ಗ್ರಾಮದೇವತೆಗಳು ಪೂಜೆಗೊಳ್ಳದೇ ಇದ್ದರೆ ಆಶ್ಚರ್ಯವಿಲ್ಲ.

ಗ್ರಂಥಋಣ

Bhatt, P. Gururaja : Studies in Tuluva History and Culture (Manipal, 1975)

Grooke, W : ‘Dravidian God’s (in Encyclo – of Religion and Ethies, Vol V, Edinburgh, 1937)

Elmore, W. T : Dravidian Gods in Modern Hinduism (Madras , 1925)

Jackson, A.M.T : Folk Lore Notes, Vol . II – Konkan (Bombay, 1915)

Marriot, Mekim ” villagi India (Chicago, 1955)

Shastri, H. Krishna : South Indian Images of Gods and Goddesses (Delhi, 1974)

Srinivas, M.N : The Remembered Village (Delhi 1976)

Mwlker, Benjamin : Hindu World (London, 1968)

ಕೃಷ್ಣಮೂರ್ತಿ, ಬಿ.ವಿ : “ಸುಧಾ”, ೩ ಮೇ, ೧೯೭೦ ; ೨ ಅಗಷ್ಟ, ೧೯೭೦

ಗೊರೂರು, ರಾ. ಅಯ್ಯಂಗಾರ : “ಗ್ರಾಮ ದೇವತೆಗಳು” (ವಿಶ್ವಕೋಶ, ಸಂ. ೬, ಮೈಸೂರು, ೧೯೭೩)

ಚಿದಾನಂದಮೂರ್ತಿ, ಎಂ : ಗ್ರಾಮೀಣ (ಬೆಂಗಳೂರು, ೧೯೭೭)