) ಹೆಣ್ಣು ಜೋಗಿಣಿಯರಾಗಿ ನಡೆದುಕೊಳ್ಳುವರು :

ಈ ಪದ್ಧತಿ ಬೆಳೆದುಕೊಂಡು ಬರಲು ಒಂದು ದೊಡ್ಡ ರಾಜಕೀಯವೆ ನಡೆದು ಹೋಗಿದೆ. ಮೇಲ್ವರ್ಗದ ಜನ ತಮ್ಮ ಹೆಣ್ಣು ಮಕ್ಕಳನ್ನು ಉಳಿಸಲು ಸಮಾಜದ ಕಾಮ ತೃಪ್ತಿಗಾಗಿ ದೇವಿಯ ಹೆಸರಿನಲ್ಲಿ ಈ ಪದ್ಧತಿಯೇ ಮುಂದೆ  ಬಸವಿ ಸೂಳೆ, ವೇಶ್ಯೆಯಾಗಿ ವಂಶ ಪರಂಪರೆಯಾಗಿ ಬರಲಿಕ್ಕೆ ಎಡೆ ಮಾಡಿಕೊಟ್ಟಿತು. ಕೆಳ ಜಾತಿಯವರಾದ ಶೂದ್ರರ, ಪಂಚಮರ ಹೆಣ್ಣು ಮಕ್ಕಳನ್ನು ದೀನಾನಾಥರನ್ನಾಗಿ ಮಾಡಿತು. ಈ ಪದ್ಧತಿ ಹೇಗೆ ಬಂತೆಂದೆಬುದನ್ನು ಬೀದರ ಜಿಲ್ಲೆಯ ಜನಪದ ಗೀತೆಗಳು ಕೃತಿಯಲ್ಲಿ ಚೆನ್ನಾಗಿ ಬಂದಿದೆ.

ಒಂದು ಕುಟುಂಬದಲ್ಲಿ ಯಾರಿಗಾದರೂ ಏನಾದರೂ ಬದುಕಲಾರದಷ್ಟು ಅನಾರೋಗ್ಯ ಉಂಟಾದರೆ ಸಾಧ್ಯವಾದಷ್ಟು ಔಷಧೋಪಚಾರ ನಡೆಸಲಾಗುತ್ತದೆ. ಬಹು ಮಟ್ಟಿಗೆ ಔಷಧಿಗಳ ಮೊರೆಹೋಗುವದು ವಿರಳ. ಹಾಗೂ ಗುಣವಾಗದಿದ್ದರೆ ಕಡೆಗೆ ಈ ಮಗುವನ್ನು “ನಿನಗೆ ಭೂ ತೇರು ಬಿಡುತ್ತೇನೆ.” ಎಂದು ಮನೆಯ ಹಿರಿಯರು ಸವದತ್ತಿ ಎಲ್ಲಮ್ಮನಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಅನಂತರ ಆ ದೇವತೆಯದೇ ಪ್ರಭಾವವೊ ಎಂಬಂತೆ ಮಗುವಿಗೆ ಗುಣವಾಗುತ್ತದೆ. ಅಲ್ಲಿಂದಾಚೆಗೆ ಆ ಮಗು ಎಲ್ಲಮ್ಮನ ಸೊತ್ತು. ಗಂಡು ಮಗುವಾದರೆ ಚಿಂತೆಯಿಲ್ಲ. ಜೀವನವಿಡೀ ಹಾಗೆ ಇದ್ದು ಬಿಡಬೇಕಾಗುತ್ತದೆ. ಇದ್ದು ಬಿಡುತ್ತಾನೆ. ಹೆಣ್ಣು ಮಗುವಾದರೆ ಭೂತೇರನ್ನಾಗಿ ದೇವಿಗೆ ಮೀಸಲು ಬಿಟ್ಟಿದ್ದರೂ ವಯಸ್ಸಿಗೆ ಬಂದಾಗ ಮದುವೆ ಮಾಡುವ ಅವಕಾಶವಿರುತ್ತದೆ. ಮೀಸಲು ಬಿಟ್ಟಿದ್ದರೂ ವಯಸ್ಸಿಗೆ ಬಂದಾಗ ಮದುವೆ ಮಾಡುವ ಅವಕಾಶ ವಿರುತ್ತದೆ. ಮೀಸಲು ಬಿಟ್ಟಿರುವ ವಿಷಯ ತಿಳಿದೂ ಯಾವನು ತಾನಾಗಿಯೇ ಮದುವೆಯಾಗಲು ಮುಂದೆ ಬರುತ್ತಾನೋ ಅವನಿಗೆ ಮದುವೆ ಮಾಡಿಕೊಡಬೇಕಾದ ಪದ್ಧತಿಯಿದೆ. ಅಂಥ ಸಮಯದಲ್ಲಿ, ಗಂಡು ಯೋಗ್ಯವೇ ಅಲ್ಲವೋ ಎಂದು ನಿರ್ಧರಿಸುವಾಗ ತಮಗೆ ಸರಿಕಾಣದಿದ್ದರೆ ಹೆತ್ತವರು ಗಂಡನನ್ನು ನಿರಾಕರಿಸುವ ಅವಕಾಶಗಳಿವೆ. ಹಾಗಾದಾಗ ದೇವಿಗೆ ತಪ್ಪು ಕಾಣಿಕೆಯನ್ನು ಅರ್ಪಿಸಿಬಿಟ್ಟರೆ ಅವರು ಯಶಸ್ವಿಯಾದಂತೆಯೆ ಗಂಡು ಒಪ್ಪಿಗೆಯಾಗಿ ಮದುವೆ ನಡೆದರೆ ಆ ಹೆಣ್ಣು ಮಗಳು ಅಲ್ಲಿಂದ ಮುಂದಕ್ಕೆ “ಭೂತೇರು” ಆಗಿ ಮುಂದುವರಿಯಲೇಬೇಕೆಂಬ ಅವಕಾಶಗಳಿವೆ”

[1]

ಇಂಥ ಪದ್ಧತಿಯನ್ನು ನಾವು ಸವದತ್ತಿ ಎಲ್ಲಮ್ಮ, ಮುನಿರಾಬಾದ ಹುಲಿಗೆಮ್ಮ, ಅರೋಲಿ ಹುಲಿಗೆಮ್ಮ ಮತ್ತು ಚುಂಚೂರ ಮಾಪುರತಾಯಿಯಲ್ಲಿ ಕಾಣುತ್ತೇವೆ. ಇದೆಲ್ಲಕ್ಕೂ ಪೂಜಾರಿಯದೇ ಗತ್ತು. ಈ ಗತ್ತಿಗೆ ಊರನ್ನಾಳುವ ಗೌಡ, ಕುಲಕರ್ಣಿ, ಸಾವುಕಾರರ ದೈಹಿಕ ಆಶೆ ಈಡೇರಿತು. ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿ ಹೋಯಿತೆಂಬಂತೆ ದೇವಿಯ ಹೆಸರು ಹೇಳೀ ನೀರು ಹಾಕಿ, ಎನ್ನೇ ಭಂಡಾರ ಹಚ್ಚಿದಾಗ ಗುಣವಾದಕೂಡಲೇ ಇದು ದೇವಿಯೇ ಗುಣಮಾಡಿದಾಳೆಂದು ಪೂಜಾರಿ ಮುಗ್ಧ ಜನರ ಸುಲಿಗೆ ಆರಂಭಿದನು. ಒಮ್ಮೆ ಒಬ್ಬರಿಗೆ ಗುಣವಾದಾಗ ಮುಂದೆ ಮಕ್ಕಳಿಗೆ ಬೇನೆ ಬಂದಾಗೆಲ್ಲ ಗುಣವಾಗಲು ದೇವಿಗೆ ಬಿಡಲು ಆರಂಭಿಸಿದ್ದೆ ಇಂದು ಜೋಗಿಣಿಯ ಸಮಸ್ಯೆಯಾಗಿ ಉಳಕೊಂಡಿದೆ. ಇದೇ ಮುಂದೆ ಆರಂಭಿಸಿದ್ದೆ ಇಂದು ಜೋಗಿಣಿಯ ಸಮಸ್ಯೆಯಾಗಿ ಉಳಕೊಂಡಿದೆ. ಇದೇ ಮುಂದೆ ಬಸವಿಯಾಗಿ, ಸೂಳಿಯಾಗಿ, ವೇಶ್ಯೆಯರಾಗಿ ಗರತಿಯಾಗಿರಬೇಕಾದ ಹೆಣ್ಣು ಕೊಳು ಕೊಳೆತು ಸಾಯಲು ಕಾರಣವಾಯಿತು.

ಕೆಳವರ್ಗದ ಜನರಲ್ಲಿ ಮಕ್ಕಳಿಗೇನಾರೂ ಬೇನೆ ಬೇಸರಿಕೆ ಬಂದರೆ ದೇವಿಗೆ ಬಿಡುವಂತೆ ಮೇಲ್ವರ್ಗದಲ್ಲಿ ಬಿಡುವುದಿಲ್ಲ. ಅವರು ಆಸ್ಪತ್ರೆಗೆ ತೋರಿಸುವವರು. ಹಕೀಮನ ಹತ್ತಿರ  ಹೋಗುವರು. ಹೀಗಾಗಿ ಮೇಲ್ವರ್ಗದ ಜನರಿಗೆ ಬಿಡುವ ಪ್ರಸಂಗವೇ ಬರುವದಿಲ್ಲ.

ಜೋಗಿಣಿಯನ್ನಾಗಿ ಮಾಡುವ ದೀಕ್ಷಾ ಕ್ರಮ :

ಕುರುಡುಗಣ್ಣಿನಲ್ಲಿ ಮೆಳ್ಳಗಣ್ಣು  ಶ್ರೇಷ್ಠ ಎಂಬಂತೆ ಹಳ್ಳಿಯ ಜನರಲ್ಲಿ ಪೂಜಾರಿ ಅಲ್ಪಸ್ವಲ್ಪ ಓದು ಇಲ್ಲವೆ ವಿಚಾರ ತಿಳಿದುಕೊಂಡವನಾಗಿರುವನು. ಜೊತೆಗೆ ಮಂತ್ರಮಾಟ, ಔಷಧ ಬಲ್ಲವನೂ ಆದ್ದರಿಂದ ಅವನು ಹೇಳಿದ್ದೆ ಬಹುಸಂಖ್ಯಾತ ಕೆಳವರ್ಗದ ಜನಗಳಿಗೆ ವೇದವಾಕ್ಯ ಅವನು ಹೇಳಿದರ ಬಗ್ಗೆ ಆಲೋಚನೆ ಮಾಡುವ ಹಕ್ಕಿಲ್ಲ. ಪೂಜಾರಿಯ ಮಾತಿನ ಬಗ್ಗೆ ಸಂಶಯ ತಾಳಿದರೆ ದೇವರು ಶಿಕ್ಷಿಸುವನು. ಹೊಲದಲ್ಲಿ, ಮನೆಯಲ್ಲಿ, ದನಕರು ಕುರಿಮರಿಗಳಿಗೆ ಹಾನಿ  ಆಗುವದೆಂಬ ವಿಚಾರ ಪೂಜಾರಿಯೇ ತನ್ನ ಜನರಿಂದ  ಊರುತುಂಬ ಬಿತ್ತರಿಸುವನು. ಇಂಥ ಸ್ವಾರ್ಥ ಪೂಜಾರಿಗೆ ದವಸಧಾನ್ಯ ದುಡ್ಡಿನಿಂದ ಹಿಡಿದುಕೊಂಡು ಗೌಡಕುಲಕರ್ಣಿ ಸಾಹುಕಾರರು ತಮಗೆ ಸುಖ ಆಗುವಂತೆ ಧರ್ಮ ಸೂತ್ರಗಳನ್ನು ಮಾಡಿಕೊಳ್ಳುವರು. ದೇವರ ವ್ರತ ಆಚರಣೆಗಳನ್ನು ರೂಪಿಸಿಕೊಳ್ಳುವರು.

ಹುಡುಗಿ ಮಗುವಿದ್ದಾಗ ಇಲ್ಲವೆ ಚಿಕ್ಕವಳಿದ್ದಾಗ ಬೇನೆಬಂದಾಗ ಗುಣಮುಖವಾಗಲು ಪೂಜಾರಿಯಲ್ಲಿಗೆ ಒಯ್ಯುವರು. ಅವನು ದೇವಿಯ ಭಂಡಾರ ಹಚ್ಚಿ “ಇವತ್ತಿನಿಂದ ಈಕೆ ದೇವಿಯ ಮಗಳು” ಎಂದು ಹೇಳುವನು, ಹೀಗೆ ಹೇಳಿಸುವುದೇ ಜೋಗಿಣಿಯನ್ನಾಗಿ ಮಾಡುವ ಮೊದಲ ದೀಕ್ಷಾಕ್ರಮವಾಗುವುದು. ಮುಂದೆ ಹುಡುಗಿ ಬೆಳೆದು ದೊಡ್ಡವಳಾದಳೆಂಬ (ಋತುಮತಿ) ಸುದ್ದಿ ಆದ ಮೇಲೆ ಬರುವ ದೇವಿಯ ಉತ್ಸವದಲ್ಲಿ ಅವಳನ್ನು ಸಂಪೂರ್ಣ ಜ್ಯೋಗಿಣಿಯನ್ನಾಗಿ ಮಾಡುವ ಎರಡನೆಯ ದೀಕ್ಷಾ ಕ್ರಮ ನಡೆಯುವದು.

ಉತ್ಸವದ ಮುಂಜಾನೆ : ಆಗುಹುಣ್ಣಿಮೆಯಿಂದ ಕಾರಹುಣ್ಣಿಮೆ ಮಧ್ಯ ಬರುವ ಮೂರನೆಯ ಶುಕ್ರವಾರ ದೇವಿಗೆ ಬಿಡುವ ಹೆಣ್ಣನ್ನು ಹಲಗೆ ಡೊಳ್ಳುಗಳ ಜೊತೆಗೆ ಮಾತಂಗಿಯರು ಜೋಗಿಣಿಯರು ಹಾಡುತ್ತ ದೇವಿಯ  ಗುಡಿಗೆ ಕರೆತರುವರು. ಅಲ್ಲಿ ಆಕೆಗೆ ಮೈ ತೊಳೆಯುವರು. ಮೈತುಂಬ ಅರಿಷಿಣ ಹಚ್ಚುವರು. ದೇವಿ ಎದುರು ಕಂಬಳಿ ಹಾಸಿ ಆಕೆಗೆ ಕೂಡಿಸುವರು. ಹಸಿರು ಬಳೆ, ಹಸಿರು ಕುಬಸ ತೊಡಿಸುವರು. ಬಗಲಲ್ಲಿ ಕಳಸ ಇಡುವರು. ಅದರಲ್ಲಿರುವ ತಂಬಿಗೆಗೆ ಪೂಜೆ ಮಾಡುವರು. ಮೂಗಿಗೆ ಏಳು ಹಳ್ಳಿರುವ ನೆತ್ತಿಡುವರು. ದೇವಿಯೇ ಗಂಡ ಈಕೆಯ ಹೆಂಡತಿ ಎಂದು ತಾಳಿಕಟ್ಟುವರು.

ಮೂಗಿನಲ್ಲಿ ಏಳು ಮುತ್ತಿರುವ ನತ್ತು ಇಡುವ ಉದ್ದೇಶ ಈಕೆ ಸಪ್ತ ಮಾತೃಕೆಯರ ಮಗಳು ಇಲ್ಲವೆ ಸೇವಕಳೆಂದು ಅರ್ಥ. ಆಕೆಯನ್ನು ಉಳಿದ ಜೋಗಿಣಿಯರು ಕೈಯಲ್ಲಿ ಹಡಗಿಲು ಕೊಟ್ಟು ಏಳೂರು ತಿರುಗಿಸಿ ಭಿಕ್ಷೆ ಬೇಡಿಸಿ ಈಕೆ ಜೋಗಿಣಿಯರ ಜೊತೆಗೂಡಿ ಊರೂರು ತಿರುಗುತ್ತ ದೇವಿಯ ಮಹಿಮಾ ಪದಗಳನ್ನು ಹಾಡುತ್ತ ಬದುಕು ಸಾಗಿಸುವಳು ಇಲ್ಲವೆ ಮದುವೆ ಮಾಡಿಕೊಂಡು ದೇವಿಯ ಸೇವೆ ಮಾಡಿಕೊಂಡು ಇರುವಳು.

. ಗಂಡು ಜೋಗೇರು

ಚುಂಚೂರ ಮಾಪುರ ತಾಯಿಯ ಸುತ್ತಮುತ್ತಲಿರುವ ಹಳ್ಳಿಗಳಲ್ಲಿಯ ಗಂಡಸರಿಗೆ ನಪುಂಸಕತ್ವ ಕಂಡು ಬಂದರೆ ತಕ್ಷಣವೇ ಇದು ತಾಯಿಯ ಮಹಿಮೆ ಎಂದು ಅವರು ಪೂಜಾರಿಯಲ್ಲಿಗೆ ಬಂದು ತಾಯಿ ಸೇವೆ ಮಾಡುವ ದೀಕ್ಷೆ ತೆಗೆದುಕೊಳ್ಳುವರು. ಇವರಿಗೆ  ಯಾವುದೇ ಶುಕ್ರವಾರ ದಿವಸ ಪೂಜಾರಿ ಹಸಿರು ಸೀರೆ ಉಡಿಸಿ ಹಸಿರು ಕುಬುಸ ತೊಡಿಸಿ ಹಸಿರು ಬಳೆ ಹಾಕಿ ಕಾಲಲ್ಲಿ ಗೆಜ್ಜೆಕಟ್ಟಿ, ಕೊರಳಲ್ಲಿ ಕವಡಿ ಸರ ಹಾಕಿ, ಕೈಯಲ್ಲಿ  ಹಡಗಿಲು ಕೊಟ್ಟು, ಹಣೆಗೆ ಕುಂಕುಮ ಹಚ್ಚಿ, ತಾಯಿಯ ಚಿತ್ರವಿರುವ ಬೆಳ್ಳಿಯ ಪಾದ ಕೊರಳಲ್ಲಿ ಹಾಕಿ, ತಲೆಯ ಮೇಲೆ ತಾಮ್ರದ ಕೊಡದಲ್ಲಿ ತಾಯಿಯ ಮೂರ್ತಿ ಇಟ್ಟು ಉಳಿದ ಜೋಗತಿಯರ ಜೊತೆಗೆ ಸೇವೆ ಮಾಡಲು ಕಳಸುವನು. ಉಳಿದ ಜೋಗತಿಯರಂತೆ ಇವನು ಊರೂರು ಕೇರಿಕೇರಿ ತಿರುಗುತ್ತ ದೇವಿಯ ಮಹಿಮಾ ಪದಗಳನ್ನು ಹಾಡುತ್ತ ಅದರಿಂದ ಬಂದ ದವಸಧಾನ್ಯ ದುಡ್ಡುದುಗ್ಗಾಣಿ ಅನ್ನರೊಟ್ಟಿಗಳಿಂದ ಜೀವನ ಸಾಗಿಸುತ್ತ ಹೋಗುವನು.

ಮಾಪುರಿ ಜೋಗೇರೆ ಗಂಧದ ಗಮಣೀರೆ
ಹಿಂದುಟ್ಟಾರೇನೆ ಮಡಿಗೋಳೆ ಮಡಿಗೋಳೆ
ಕಲ್ಲನಾ ಕೇಳಿದಾಗ ಮೆಲ್ಲಗೆ ಬಾ ತಾಯಿ
ಕಾಲಾಗ ಗೆಜ್ಜಿ ಸಡಲ್ಯಾವೆ ಸಡಲ್ಯಾವೆ

ಜೋಗತಿಯರ ವಾದ್ಯ ಮತ್ತು ನೃತ್ಯ :

ಚೌಡಿಕೆಯೊಂದೆ ಜೋಗತಿಯರ ಎಲ್ಲ ಹಾಡುಗಳ ವಾದ್ಯವಾಗಿದೆ. ಹಾಡುಗಳಷ್ಟೆ ಇರಲಿ ಪ್ರತಿ ಹಾಡಿಗೆ ತಕ್ಕಂತೆ ವಿಧವಿಧವಾಗಿ ಬಾರಿಸುವದು ಹೀರಿ ಜೋಗತಿಗೆ ಬರುವುದು. ಹಿರಿ ಜೋಗಿತಿ ಚೌಡಿಕೆ ಬಾರಿಸುತ್ತ ಪದ ಹಾಡಿದರೆ ಕಿರಿಜೋಗತಿಯರು ತಲೆಯ ಮೇಲೆ ಎಲ್ಲಮ್ಮನ ಮೂರ್ತಿ ಇರುವ ತಾಮ್ರ ಕೊಡವನ್ನು ಸಿಂಬಿಯಿಲ್ಲದೆ ಹೊತ್ತುಕೊಂಡು ಎದುರುಬದುರಾಗಿ ಕುಣಿಯುವರು.

ಹಿಂದಕ್ಕೆ ಜೋಗಿತಿಯರ ಇಲ್ಲವೆ ಭೂತೇರ ನೃತ್ಯ ದೇವಿಯ ಪ್ರಿತ್ಯರ್ಥವಾಗಿದ್ದರೆ ಬರುಬರುತ್ತ ಅದು ಸ್ವಸಂತೋಷಕ್ಕಾಗಿ ಇದ್ದು ಈಗ ಮನೋರಂಜನೆಯ ವಸ್ತುವಾಗಿ ಕುಳಿತಿದೆ. ದುಡ್ಡು ಕೊಟ್ಟಂತೆಲ್ಲ ಈಗಿನ ಜೋಗಿತಿಯರು ಹಾಡುತ್ತ ಕುಣಿಯಲಾರಂಭಿಸುವರು.

ಹಿರಿಜೋಗಿತಿಯು ಕೈಯಲ್ಲಿ ಚೌಡಿಕೆ ಹಿಡಕೊಂಡು ಬಾರಿಸುತ್ತ ಹಾಡುತ್ತ ಇರುವದೊಂದು ಸೊಗಸಾದರೆ ಕಾಲದಲ್ಲಿ ಗೆಜ್ಜೆ ಕಟ್ಟಿಕೊಂಡು ತಲೆಯ ಮೇಲೆ ಸಿಂಬಿಯಿಲ್ಲದೆ ದೇವಿಯ ಮೂರ್ತಿ ಇರುವ ಕೊಡ ಹೊತ್ತು ಕೈಬಿಟ್ಟು ನವಿಲಂತೆ, ನಾಗರ ಹೆಡೆಯಂತೆ ಬನ – ಬನಿದು ಕುಣಿಯುವುದನ್ನು ನೋಡುವುದು ನಿಜಕ್ಕೂ ಕಣ್ಣಿಗೊಂದು ಹಬ್ಬ.

ಆದಿ ಮಾಯಿ ಸಗತಿ ಜಗದಂಬಾ
ಹಳ್ಳದಂಡ್ಯಾಗ ನೆಂದವ್ವ ಜಗದಂಬಾ

ಮೂರು ಮೂರು ಮೂರು ಮಾತ್ರೆಯ ಗತ್ತಿನೊಂದಿಗೆ ನಡೆಯುತ್ತ ಕೊನೆಗೆ ಆರು ಮಾತ್ರಯಕ್ಕೆ ಬಂದುನಿಲ್ಲುವ ನೃತ್ಯಭಂಗಿ ಇದು ಮಾಪುರತಾಯಿಯ ಹಾಡುಗಳು, ನೃತ್ಯಗಳು ಒಂದೇ ತರನಾಗಿರುವುದಿಲ್ಲ, ಭಾವಕ್ಕೆ ತಕ್ಕಂತೆ ಅವು ಏರುತ್ತ ಇಳಿಯುತ್ತ ಹೋಗುವವು. ಉತ್ಸವಗಳಲ್ಲಂತೂ ಜೋಗಿತಿಯರ ಹಾಡು ಮತ್ತು ನೃತ್ಯಗಳು ಮುಗಿಲು ಮುಟ್ಟುವವು. ಜನಪದ ಸಾಹಿತ್ಯ ಮನದ ದುಗುಡವನ್ನು ಕಳೆದು ಹೊಸ ಬೆಳಕನ್ನು ನೀಡುವುದೆನ್ನಲಿಕ್ಕೆ, ನೋಡಲಿಕ್ಕೆ, ಕೇಳಲಿಕ್ಕೆ ಇಲ್ಲಿಗೆ ಬರಬೇಕು. ಈ ದೇವಿಯ ಹೆಸರಿನಲ್ಲಿ ನಡೆದ ಅವ್ಯವಹಾರ ನಿಲ್ಲಿಸಿದರೆ ನಿಜಕ್ಕೂ ಈ ಗ್ರಾಮದೇವತೆ ಈ ಭಾಗದ ಜಾನಪದ ಸಾಹಿತ್ಯ ಸೃಷ್ಟಿಯ ಕೇಂದ್ರ ಸ್ಥಾನವಾಗುವಳು.

ಉತ್ಸವ

ಚುಂಚೂರು ಮಾಪುರ ತಾಯಿಯ ಉತ್ಸವ ಎರಡು ಸಲ ಆಚರಿಸುವರು.

೧) ಮಳೆಗಾಲದಲ್ಲಿ  ೨) ಬೇಸಿಗೆ ಕಾಲದಲ್ಲಿ

) ಮಳೆಗಾಲದಲ್ಲಿ :

ಈ ದೇವಿಯ ಫಲಗಳಲ್ಲಿ ಮಳೆ ಬೆಳೆ ಬಂದು, ಮಳೆ ಚೆನ್ನಾಗಿ ಬಂದು ಬೆಳೆ ಫಲವತ್ತಾಗಿ ಬರಲಿಕ್ಕೆ ಈ ದೇವಿಯ ಬಂಡಿ ಉತ್ಸವ ಮಾಡುವರು. ಇದು ದಸರೆಯ ಹಬ್ಬದ ದಿವಸ ನಡೆಯುವದು.

ವರುಸಕ ಬರುವಾದು ದೊಡ್ಡ ದಸರಿ ಹಬ್ಬ
ಬೀಸಿ ತುಂಬ್ಯಾಳ ಅರಿಸೀನ
ಬೀಸಿನೆ ತುಂಬ್ಯಾಳ ಅರಿಸೀನ ಜಗದಂಬ
ಆರೆತೀಲೇರ್ಯಾಳ ಜಗಲೀಗೆ
ಆರಿತೀಲೇರ್ಯಾಳ ಜಗಲೀಯ ಜಗದೆಂಬ
ಮಾನೆಂಬಿ ದಿನ ಮದುಮಗಳೆ
ಮಾನಂಬಿ ಎನದಿನ ಮದುಮಗಳು ನನತಾಯಿ
ನೆಗುತ ಜಗಲಿ ಇಳಿದಾಳ
ನಗುತಾನೆ ಜಗಲಿ ಇಳದಾಳ ಜಗದೆಂಬ
ಮಾದಾರಗೇರೀಗಿ ನಡೆದಾಳ

ಮಾಪುರತಾಯಿಯನ್ನು ಸಿಂಗರಿಸಿಕೊಂಡು ಬಂಡಿಯಲ್ಲಿ ಕೂಡಿಸಿಕೊಂಡು ಊರಿಗೆ ಕರೆದುಕೊಂಡು ಬರುವರು. ಮೊದಲು ಮಾದರಗೇರಿಗೆ ಕರೆದುಕೊಂಡು ಹೋಗುವರು.

ಮಾದರಗೇರೀಗಿ ಹೋಗ್ಯಾಳ ಜಗದಂಬ
ನಂದೀಯ ಬಲ್ಲ ನಿಂತಾಳ
ನಂದೀಯ ಬಲ್ಲ ನಿಂತಾಳ ಜಗದಂಬ
ಮಾತಂಗಿಗಾರ ಕರೆದಾಳ
ಮಾತಂಗಿಗಾರ ಕರದೇನು ಹೇಳ್ತಾಳ
ಬಿದರ ಬುಟ್ಟಿಯೊಳಗ
ಬಿದರ ಬುಟ್ಟಿಯೊಳಗ ಜೀವನ ಇಟಗೊಂಡು
ಊರೊಳಗ ನಡಿಯಬೇಕ

ಹೀಗೆ ಮಾದರಗೇರಿಯಿಂದ ಮಾತಂಗಿಯರಿಗೆ ಕರೆದುಕೊಂಡು ಬಿದಿರಬುಟ್ಟಿಯೊಳಗ ಬೇವು ಇಟಗೊಂಡು ಊರೊಳಗೆ ನಡಿಯುವಳು.

ಸಣ್ಣೋವ್ರು ದೊಡ್ಡವ್ರು ನಿನಮ್ಯಾಲ ಒಂದತ್ತ
ಒಂದತ್ತನಿದ್ದು ದಾರಿ ನೋಡುತಾರಿ
ಒಂದತ್ತ ಎಲೆ ಇದ್ದು ದಾರೀನೆ ನೋಡತಾರ
ಹಾಸಾಕ ಹಾಸಿ ನಿನ ಕೂಡುಸ್ತಾರ
ಹಾಸಿಗಿ ಹಾಸಿ ನಿನ್ನನ್ನು ಕೂಡಿಸಿ
ಉಡಿ ಅಕ್ಕಿ ಹೊಯ್ದು ಕಾಲಾನೆ ಬೀಳತಾರ
ಉಡಿ ಅಕ್ಕಿ ಎಲಿ ಹುಯ್ದು ಕಾಲಾನೆ ಬೀಳುವಾಗ
ಬೇವ ಇಳಿಸಿ ಹೊರಗ ನೀ ಬರಬೇಕೆ.

ಈ ರೀತಿಯಾಗಿ ಊರಲ್ಲಿರುವ ಕೇರಿಕೇರಿಗೆ ಹೋಗಿ ಉಡಿಯಕ್ಕಿ ಸ್ವೀಕರಿಸಿಕೊಂಡು ಅವರಿಗೆಲ್ಲ ಬೇವಿನ ತಪ್ಪಲವನ್ನಿಟ್ಟು ಬರುವಳು. ಅಂದರೆ ಅವರಿಗೆ  ಯಾವುದೇ ಕೆಡಕುಂಟಾಗದಿರಲಿ, ಬೆಳೆ ಚೆನ್ನಾಗಿ ಬರಲಿ ಎಂದು. ಊರಿನ ಎಲ್ಲ ಜನ ಆ ಬೇವಿನ ತಪ್ಪಲನ್ನು ಒಯ್ದು ತಮ್ಮ ತಮ್ಮ ಹೊಲಗಳಲ್ಲಿ ಚೆಲ್ಲಿ ಬರುವರು. ಕಾರಣ ಬೆಳೆ ಹಾಳಾಗದೆ ಚೆನ್ನಾಗಿ ಬರಲಿ ಎಂದು.

) ಬೇಸಿಗೆಯಲ್ಲಿ :

ಆಗಿಹುಣ್ಣಿಮೆಯಿಂದ ಕಾರಹುಣ್ಣಿಮೆಯ ತನಕ ಬರುವ ಐದು ಶುಕ್ರವಾರಗಳಂದು ಚುಂಚೂರ ಮಾಪುರ ತಾಯಿಯ ವಿಶೇಷ ಪೂಜೆ ಉತ್ಸವ ನಡೆಯುವದು. ಅದರಲ್ಲೂ ಮೂರನೆಯ ಶುಕ್ರವಾರಕ್ಕೆ ವಿಶೇಷ ಮಹತ್ವ ನೀಡಿ ಆಚರಿಸುವರು.

ಬೆತ್ತಲ ಸೇವೆ

ಬೆತ್ತಲ ಸೇವೆ ಮಾಡುವವರಲ್ಲಿ ಎರಡು ವಿಧ : ೧) ರೋಗ ರುಜಿನಗಳಿಂದ ಗುಣವಾಗಲು ಬೇಡಿಕೊಂಡವರು, ಮಕ್ಕಳಾಗಲೂ ಬೇಡಿಕೊಂಡವರು ತಮ್ಮ ಇಷ್ಟಾರ್ಥ ಈಡೇರಿದಾಗ ಬೆತ್ತಲೆ ಸೇವೆ ಸಲ್ಲಿಸುವರು. ೨) ಸಂಪೂರ್ಣ ತಮ್ಮನ್ನು ಸೇವೆಗೆ ಅರ್ಪಿಸಿಕೊಂಡ ಜೋಗಿಣಿಯರು.

ಮೊದಲಿನ ಕಾಲದಲ್ಲಿ

ಮೊದಲಿನ ಕಾಲದಲ್ಲಿ ಜನಸಂಖ್ಯೆ ಕಡಿಮೆಯಿತ್ತು. ಅದಕ್ಕಾಗಿ ದೇವಿಯ ಗುಡಿ ಅಂಗಳದಲ್ಲಿರುವ ಬಾವಿಯ ಮೇಲೆ ಜಳಕ ಮಾಡಿ ಬೆತ್ತಲ ಪ್ರದಕ್ಷಿಣೆ ತಿರುಗುತ್ತಿದ್ದರು. ಇದು ದೇವಿಯನ್ನು ತಮ್ಮ ಕಾರ್ಯಕ್ಕಾಗಿ ಒಲಿಸಿಕೊಳ್ಳುವ ಉಗ್ರಭಕ್ತಿಯಾದ್ದರಿಂದ ಇದು ಗುಪ್ತವಾಗಿಯೇ ನಡೆಯುತ್ತಿತ್ತು.

ಈಗಿನ ಕಾಲದಲ್ಲಿ

ಈಗ ಜನಸಂಖ್ಯೆ ಮಿತಿಮೀರಿದೆ. ಬಾವಿಯ ಮೇಲೆ ಜಳಕ ಮಾಡುವಾಗ ಬಹಳಷ್ಟು ಗದ್ದಲ ಗಲಾಟೆ ಆದುವದೆಂದು ತಿಳಿದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿಯೇ ಜಳಕ ಮಾಡಿಕೊಂಡು ಹೊಡುವರು. ಆದರೆ ಈ ಹಿಂದೆ ಗುಪ್ತವಾಗಿ ಸೇವೆಸಲ್ಲಿಸುವ ಸುದ್ದಿ ಈಗ ಜಗಜ್ಜಾಹಿರವಾದ್ದರಿಂದ ಇದನ್ನು ನೋಡಲು ಈಗ ದೂರದೂರದ ಊರುಗಳಿಂದ ಜನ ನೋಡಲು ಬರುವರು.

ಬೆತ್ತಲ ಸೇವೆಯ ವಿಧಾನಗಳು

ಆಗಿಹುಣ್ಣಿಮೆಯಿಂದ ಕಾರಹುಣ್ಣಿಮೆಯ ತನಕ ಬರುವ ಐದು ಶುಕ್ರವಾರಗಳ ರಾತ್ರಿಯಲ್ಲಿ ಈ ಸೇವೆ ಸಲ್ಲಿಸುವರು. ಆದರೆ ಮೂರನೆಯ ಶುಕ್ರವಾರ ದಿನ ಬಹಳಷ್ಟು ಜನ ಸೇವೆ ಸಲ್ಲಿಸುವರು. ಈ ದಿನ ಸಲ್ಲಿಸಿದ ಸೇವೆಗೆ ತೀವ್ರ ಫಲ ಸಿಗುವದೆಂದು ಆ ಜನಗಳ ನಂಬಿಕೆ.

ಮಧ್ಯರಾತ್ರಿ ಆಗುತ್ತಲೆ ದೇವಿಗೆ ಬತ್ತಲೆ ಸೇವೆ ಸಲ್ಲಿಸುತ್ತೇವೆಂದು ಬೇಡಿಕೊಂಡ ಹೆಣ್ಣು ಗಂಡುಗಳೆಲ್ಲ ಮೀಸಲ ನೀರಿನಿಂದ ಜಳಕ ಮಾಡುವರು. ಆ ಇಡೀ ದಿವಸ ಉಪವಾಸ ಇರುವರು. ಆದರೆ ಮೈಗೆಲ್ಲ ಗಂಧ, ಭಂಡಾರ ಹಚ್ಚುವರು. ಗಂಡುಹೆಣ್ಣಿಗೆ ಸಮನಾಗಿ ಬಾಯಿಯಲ್ಲಿ ಬೇವಿನ ತಪ್ಪಲು ಕೊಟ್ಟು ತಲೆಯಮೇಲೆ ಗೋಧಿ ಹಿಟ್ಟಿನಿಂದ ಮಾಡಿದ ದೀಪವನ್ನು ಗಂಗಾಳದಲ್ಲಿ ಇಡುವರು.

ಈ ವ್ರತವನ್ನು ಮಾಡುವವರು ಎಲ್ಲರ ಮನೆಯಲ್ಲಿ ಸಿದ್ಧರಾದದ್ದು ತಿಳಿದ ಕೂಡಲೆ ಒಬ್ಬೊಬ್ಬರಾಗಿ ಸಾಕುಗಟ್ಟಿ ಮಾತಾಡದೆ ಹೊರಡುವರು. ದೇವಿಯ ಗುಡಿ ಬರುತ್ತಲೆ ಪ್ರತಿಯೊಬ್ಬರು ದೇವಿಗೆ ನಮಸ್ಕರಿಸಿ ಏಳುಸುತ್ತ ತಿರುಗಿ ನಂತರ ಅಂಗಳದಲ್ಲಿ ಸೇರುವರು.ತಮ್ಮ ತಮ್ಮ ಬಂಧುಬಳಗ, ಸಂಬಂಧಿಕರು ತಂದಿರುವ ಹೊಸ ಬಟ್ಟೆಗಳನ್ನು ಉಟ್ಟು ಕೊಂಡು ಮಾತಾಡದಂತೆ ಊರಿಗೆ ಬರುವರು. ಈ ಕಾರ್ಯ ಜನ ಏಳುವದರೊಳಗಾಗಿ ಸೂರ್ಯ ಬರುವುದರೊಳಗಾಗಿ ಮುಗಿಯುವದು.

ರಾತ್ರಿ ಹೊತ್ತು ದೇವಿಯ ಸೇವೆ ಈ ರೀತಿ ನಡೆದರೆ ಹಗಲೊಂದು ರೀತಿ ನಡೆಯುವದು. ಅದು ಬೇಡಿಕೊಳ್ಳುವದರ ಮನಸ್ಸನ್ನವಲಂಬಿಸಿದೆ. ಮಕ್ಕಳು ಮರಿಗಳಾದವರು, ರೋಗ ಗುಣವಾದವರು ಉಟ್ಟಿಗೆ ಉಟ್ಟು ಕುರಿಬಲಿ ಕೊಡುವದಾಗಿ ಬೇಡಿಕೊಂಡಿದ್ದರೆ ಅದು ಹಗಲಿನಲ್ಲಿ ನಡೆಯುವದು. ಇದು ಹಗಲಿನಲ್ಲಿ ನಡೆಯುವದರಿಂದ ರಾತ್ರಿಯಂತೆ ಬತ್ತಲೆಯಾಗುವ ಅಗತ್ಯವಿಲ್ಲ.

ಇದು ಮುಂಜಾನೆ ಹನ್ನೊಂದು ಗಂಟೆ ಇಲ್ಲವೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಆರಂಭವಾಗುವುದು. ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಜಳಕ ಮಾಡುವರು. ಆ ದಿವಸ ಉಪವಾಸ ಇರುವರು. ಬೇವಿನ ತಪ್ಪಲಿನಿಂದ ಮಾಡಿದ ಉಟ್ಟಿಗೆ ಹೆಣ್ಣಿಗೆ ಉಡಿಸುವರು. ಬಾಯಿಯಲ್ಲಿ ಬೇವಿನ ತಪ್ಪಲು ಕೊಡುವರು. ತಲೆಯ ಮೇಲೆ ಗೋಧಿ ಹಿಟ್ಟಿನಿಂದ ಮಾಡಿದ ದೀಪ ಇರುವ ಗಂಗಾಳವನ್ನು ಇಡುವರು. ಗಂಡಿಗೆ ಧೋತರೊಂದನ್ನ ಉಡಿಸುವರು. ಬಾಯಿಯಲ್ಲಿ ಬೇವಿನ ತಪ್ಪಲು ಹಿಡಿಯಲು ಕೊಡುವರು. ತಲೆಯ ಮೇಲೆ ಸಿಂಗರಿಸಿದ ಮಣ್ಣಿನ ಉದ್ದನೆಯ ಕೊಡ ಹೊರಿಸುವರು.

ಎಲ್ಲಕ್ಕೂ ಮುಂದೆ ದೇವಿಗೆ ಕೊಯ್ಯುವ ಕುರಿ ಇರುವದು. ಅದರ ಹಿಂದೆ ಹಲಗೆ ಡೊಳ್ಳು ಬಾಜಿ ಬಾರಿಸುವವರು ಇರುವರು. ಅವರ ಹಿಂದೆ ಉಟ್ಟುಗೆ ಇಟ್ಟವರು ಕೊಡ ಹೊತ್ತವರು, ಅವರ ಹಿಂದೆ ಮನೆಯವರು, ಹಳೆಬಟ್ಟೆ ಬಿಡಿಸಲು ಬಂದ ಬಂಧುಗಳು ಊರವರು ಇರುವರು.

ದೇವರ ಗುಡಿಗೆ ಹೋಗುತ್ತಲೆ ಮೊದಲು ಉಟ್ಟಿಗೆ ಉಟ್ಟವರು. ಕೊಡ ಹೊತ್ತವರು, ಅವರ ಜೊತೆ ಬಂದವರೆಲ್ಲರೂ ಹಲಗೆ ಡೊಳ್ಳು ಬಾಜಿಯವರ ಜೊತೆಗೆ ದೇವಿಗೆ ಏಳುಸುತ್ತ ತಿರುಗುವರು. ಆಮೇಲೆ ಮಾತಂಗಿಯರು ಬರುವಳು. ದೇವಿಯೆದುರು ಅಂಗಳದಲ್ಲಿ ರಂಗ ಹೊಯ್ಯುವರು. ಕುರಿ ಮಲಗಿಸುವರು. ಅಲ್ಲಿಯೇ ಕುರು ಕೊಯ್ಯುವರು. ರಕ್ತ ಕುಡಿದ ದೇವಿ ಸಂಪೂರ್ಣ ಶಾಂತಳಾಗುವಳೆಂದು, ಇದರಿಂದ ತಮಗೆ ಒಳ್ಳೆಯದಾಗುವದೆಂದು ಕೆಲವರು ತಿಳಿದರೆ ಇನ್ನು ಕೆಲವರು ರಂಗದಲ್ಲಿ ಮಲಗಿಸಿದ ಕುರಿಯನ್ನು ಕೊಯ್ಯದೆ ಮನೆಗೆ ತಂದು ಮುಲ್ಲಾನಿಂದ ದೇವಿಯ  ಹೆಸರಿನಲ್ಲಿ ಚೂರಿ ಹಾಕಿಸುವರು. ರಂಗ ಹೊಯ್ದ ಕುರಿ ಮಲಗಿಸಿ ಕೊಯ್ಯುವ ಇಲ್ಲವೆ ಊರಿಗೆ ತರುವ ಕೆಲಸ ಮುಗಿದ ಕೂಡಲೇ ಬಂಧುಗಳು ತಂದ ಹೊಸ ಬಟ್ಟೆಯನ್ನು ಉಟ್ಟಿಗೆ ಉಟ್ಟವರಿಗೆ ಕೊಡ ಹೊತ್ತವರಿಗೆ ಉಡಿಸುವರು.

ಸಂಜೆ ಹೊತ್ತು ಅಡಿಗೆ ಆಗುತ್ತಲೆ ಮೊದಲು ದೇವಿಗೆ ತಂದು ಮುಟ್ಟಿಸುವರು. ಆಮೇಲೆ ಹಲಗಿ ಡೊಳ್ಳು ಬಾಜಿಯವರಿಗೆ, ಮಾತಂಗಿಯರಿಗೆ, ಕುರಿ ಕೊಯ್ದವರಿಗೆ ಉಟ್ಟಗೆ ಉಟ್ಟವರಿಗೆ, ಕೊಡ ಹೊತ್ತವರಿಗೆ, ಪಾದ ಕಟ್ಟಿದವರಿಗೆ ಮೊದಲು ಊಟ ಮಾಡಿಸುವರು. ನಂತರ ಉಳಿದ ಬೀಗರು, ಊರಲ್ಲಿಯ ಬೇಕಾದವರು, ಮನೆಯವರು ಉಣ್ಣುವರು.

ಉಳಿದ ದೇವತೆಗಳಲ್ಲಿ ಸಂಪ್ರದಾಯ

ಕೊಡ ಹೊರುವ. ಉಟ್ಟಿಗೆ ಉಡುವ, ಕುರಿಬಲಿ ಕೊಡುವ ಸಂಪ್ರದಾಯ ಪ್ರತಿ ಊರಲ್ಲಿರುವ ಎಲ್ಲಮ್ಮನಲ್ಲಿ ನಡೆಯುವದು. ಆದರೆ ಬಸವಿ ಬಿಡುವ, ಬತ್ತಲೆ ಸೇವೆ ಸಲ್ಲಿಸುವ ಸಂಪ್ರದಾಯ ಕೆಲವೇ ದೇವತೆಗಳಲ್ಲಿ ನಡೆಯುವದು.


[1]     ಬೀದರ ಜಿಲ್ಲೆಯ ಜನಪದ ಗೀತೆಗಳು : ಸಲ ಕ್ಯಾತನಹಳ್ಳಿ ರಾಮಣ್ಣ ಪ್ರಸ್ತಾವನೆ ” ಪುಟ ೪  ೧೯೭೬