ಗುಲಬರ್ಗ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಬರುವ ಗ್ರಾಮವೆ ಇಂದು ಮಾಪುರ ತಾಯಿಗೆ ಪ್ರಸಿದ್ಧವಾದ ಚುಂಚನಸೂರು. ಈ ಗ್ರಾಮಕ್ಕೆ ಇಲ್ಲಿಯ ಜನ ಗ್ರಾಮ್ಯ ಭಾಷೆಯಲ್ಲಿ ಚುಂಚೂರು ಎನ್ನುವರು.

ಘಟ್ಟದ ಮಾಪುರಿ ಸಿಟ್ಯಾಕ ನನಮ್ಯಾಲ
ಕೊಟ್ಟ ಖಳುವೀದೆ ಏ ಹಿಡಿ ಉಪ್ಪೆ

ಎನ್ನುವಲ್ಲಿ ಘಟ್ಟದಿಂದ ಈ ಊರಿಗೆ ಈ ಹೆಸರು ಬಂದಿರಬಹುದೆಂದು

ಜಗದಂಬ ಉಡುವಾದು ಜಲತಾರಿ ಚುಂಚೂರು
ಪೂಪೂರುಡುವಾದು ಎಲಿಬೇವು

ಎನ್ನುವಲ್ಲಿ ಈ ಊರಿನ ಹೆಸರು ಬಳಕೆಯಾಗಿದೆ. ಈ ಚುಂಚನೂರಿನ ಸೀಮೆಯಲ್ಲಿ ಮಾಪುರ ತಾಯಿಯಿದ್ದುದರಿಂದ ಈ ದೇವತೆಗೆ ಚುಂಚೂರ ಮಾಪುರತಾಯಿ ಎಂದು ಕರೆಯುತ್ತಲಿದ್ದಾರೆ.

ಈ ಚುಂಚನಸೂರು ಗ್ರಾಮ ಗುಲಬರ್ಗದಿಂದ ಉತ್ತರಕ್ಕೆ ೩೦ ಮೈಲು ದೂರದಲ್ಲಿದೆ. ಪೂರ್ವಕ್ಕೆ ಬೀದರ ಜಿಲ್ಲೆಯ ಸೀಮೆ ಉತ್ತರಕ್ಕೆ ಮಹಾರಾಷ್ಟ್ರದ ಗಡಿ ಊರಿನ ಸೀಮೆಗಳು ಈ ಚಿಂಚನಸೂರಿಗೆ ತಾಕುವವು. ಅದಕ್ಕಾಗಿ ಬೀದರವನ್ನಾಳಿದ ಮುಸ್ಲೀಮರ, ಮಹಾರಾಷ್ಟ್ರವನ್ನಾಳಿದ ಮರಾಠರ  ಭಾಷಾ ಪ್ರಭಾವ ಇಲ್ಲಿಯ ಹಾಡುಗಳ ಮೇಲೆ ಆದದ್ದು ಕಾಣುತ್ತೇವೆ. ಅದರಲ್ಲೂ ತುಳಜಾಪುರ ಅಂಬಾಭವಾನಿಯ ಹೆಚ್ಚಿನ ಸಂಪ್ರದಾಯಗಳು ಇಲ್ಲಿಯ ರೀತಿ ನೀತಿ, ಆಚಾರ, ವಿಚಾರ, ಪೂಜಾ, ಉತ್ಸವಗಳ ಮೇಲೆ ದಟ್ಟ ಪ್ರಭಾವ ಮಾಡಿದ್ದು ತಿಳಿದುಬರುವುದು.

ಮೂಲತಃ ಈ ದೇವಿ ಎಲ್ಲಮ್ಮ ; ಸೀಮೆಯಲ್ಲಿರುವವಳು.

ಬನ್ನಿಗಿಡದ ಮಾಪುರಿ ಬೈಲೊಳು ನಿನ್ನ ಜಾತರಿ
ಊರುಬಿಟ್ಟು ಹರದಾರಿ

ಚುಂಚೂರಿನ ಪೂರ್ವದಿಕ್ಕಿನಲ್ಲಿ ಒಂದು ಹರದಾರಿ ಮೇಲೆ ಈ ದೇವಿಯ ಗುಡಿಯಿದೆ. ಈಕೆ ಎಲ್ಲೆಯ ಅಂದರೆ ಸೀಮೆಯ ದೇವತೆ. ಎಲ್ಲೆಗಳನ್ನು ಕಾಯುವ ದೇವತೆಯಾದ್ದರಿಂದ ಈಕೆಗೆ ಎಲ್ಲಮ್ಮನೆಂದು ಹೆಸರು ಬಂದದ್ದು. ಆದರೆ ಪೂಜಾರಿಗಳು ತಮ್ಮ ಹೊಟ್ಟೆ ಬಟ್ಟೆ ಭರ್ತಿಗಾಗಿ ಆದಾಯ ಹೆಚ್ಚಿಸಿಕೊಳ್ಳಲು, ಭಕ್ತರನ್ನು ಆಕರ್ಷಿಸಲು ಮಾಹಾರಾಷ್ಟ್ರದ ಮಾಪುರದಲ್ಲಿರುವ ದೇವಿ ಇಲ್ಲಿಗೆ ಬಂದು ನೆಲಸಿದಳೆಂಬ ಕಥೆ ಕಟ್ಟಿದಕ್ಕಾಗಿ ಕಾಲಾಂತರದಲ್ಲಿ ಜನ ಈಕೆಯನ್ನು ಎಲ್ಲಮ್ಮ  ತಾಯಿ ಎಂಬುದು ಮರೆತು ಚುಂಚುರ ಮಾಪುರ ತಾಯಿ ಎಂದೇ ಕರೆಯುತ್ತ ಬರುವ ರೂಢಿಯಾಯಿತು. ಆದರೆ ಈ ದೇವಿಗೆ ಭಕ್ತರು ನಡೆದುಕೊಳ್ಳುವ ರೀತಿ ನೀತಿ ಆಚಾರ ವಿಚಾರ ನೋಡಿದರೆ ಈಕೆ ಎಲ್ಲಮ್ಮ ತಾಯಿ ಎಂಬ ಮಾತು ವೇದ್ಯವಾಗುವುದು.

ಕ್ಯಾತನಹಳ್ಳಿ ರಾಮಣ್ಣನವರ ಬಿದರ ಜಿಲ್ಲೆಯ ಜನಪದ ಗೀತೆಗಳು ಕೃತಿಯ ಪ್ರಸ್ತಾವಣೆಯಲ್ಲಿ  ಭೂತೇರ ಅಂದರೆ ಈ ದೇವಿಗೆ ತಮ್ಮನ್ನ ಅರ್ಪಿಸಿಕೊಂಡು ಸೇವೆ ಸಲ್ಲಿಸುವುದರ ವೇಷಭೂಷಣಗಳನ್ನು ಕುರಿತು ವಿವರಿಸುವ ಮಾತಿನಲ್ಲಿ ; ಆ ಮಾತುಗಳಿಗೆ ಕೊಟ್ಟಿರುವ ಆದಿ ಟಿಪ್ಪಣಿಯಲ್ಲಿ ಈ ದೇವಿ ಎಲ್ಲಮ್ಮನೆಂಬುದು ಗೊತ್ತಾಗುವದು :

ಭೂತೇರ ವೇಷಭೂಷಣಗಳು ಹೀಗಿರುತ್ತವೆ. ಕುತ್ತಿಗೆಯಿಂದ ಕಾಲಿನವರೆಗೆ ಜಿಡ್ಡಿನಿಂದ ಕಪ್ಪುಕಪ್ಪಾದ ಫ್ರಾಕಿನಂಥ ಅಂಗಿ. ಇದಕ್ಕೆ ಇವರು ಝಗ ಎನ್ನುತ್ತಾರೆ. ಛಾತಾ ರತಿ ಛಾತಾಕ್ಕೆ ಸೇರಿದಂತೆ ನಾಲ್ಕಾರು ಒಂಟೆಳೆ ಕವಡೆಯ ಸರಗಳು ನಡುವಿನವರೆಗೆ ಇಳಿ ಬೀಳುತ್ತವೆ. ಎಡೆಹೆಗಲಿನಿಂದ ಇಳಿದಿದ್ದು ಬಲಸೊಂಟಗ ಭಾಗದಲ್ಲಿ ನೇತಾಡುವ ಪುಟ್ಟದೊಂದು ಚೀಲ ಭಂಡಾರದ ಚೀಲ. ಕೆನ್ನೆ ಸರಪಳಿಯಂತೆ ಹಾಕಿ ಕೊಳ್ಳುವ ಸರಪಳಿ ಅದರ ಒಳಗೆ ನೇತಾಡುವ ಝಮ್ಕಿ. ಕವಡೆಯ ಅಲಂಕಾದೊಡನೆ ಕೈಗೆ ಕೈಪಟ್ಟಿ, ಕಾಲಿಗೆ ಗೆಜ್ಜೆ, ಮೊಳದುದ್ದದ ತಮ್ಮ ತಲೆಗೂದಲನ್ನು ಹೆಣ್ಣು ಮಕ್ಕಳಂತೆ ಶೃಂಗರಿಸಿಕೊಳ್ಳುತ್ತಾರೆ.

[1]

ಈ ಮಾತುಗಳಿಗೆ ಹೀಗೆ ಆದಿಟಿಪ್ಪಣೆ ಕೊಟ್ಟಿದ್ದಾರೆ :

ಎಲ್ಲಮ್ಮನ ಮುಖವನ್ನಿಟ್ಟು ಪೂಜಿಸಿ ತಲೆಯ ಮೇಲಿಟ್ಟುಕೊಳ್ಳುವ ಬುಟ್ಟಿಗೂ ಹೀಗೆನ್ನುವದುಂಟು. ಜಗೆ, ಝಗೇವು ಪಡ್ಲಿಗೆ ಆದರೆ ಇವರು ಪಡ್ಲಿಗೆಗೆ ಪರದಿ ಎನ್ನುತ್ತಾರೆ. ಕವಡಿ ಪೋಣಿಸಿದ ಪಟ್ಟಿಗಳ ಎದೆಹಾರ ಎಕ್ಸ ಆಕಾರಕ್ಕೆ ಚಿಂಚುರು, ಮಾಪುರು, ಯುಝಾಪುರು, ಸವದತ್ತಿ ಈ ನಾಲ್ಕು ಊರಿನ ದೇವತೆಗಲ ಉಬ್ಬ ಚಿತ್ರಗಳನ್ನುಳ್ಳ ಮುರು ಬೆಟ್ಟನಗಲದ ತಗಡುಗಳ ಸರವನ್ನುಳ್ಳ ಕವಡೆಯ ಹಾರವೊಂದು ಕತ್ತಿನ ಸುತ್ತ ಅಂಟಿಕೊಂಡಿರುತ್ತದೆ. ಇದನ್ನು ರತಿ ಎನ್ನುತ್ತಾರೆ.

ಇಲ್ಲಿ ಉದ್ದರಿಸಿದ ಮಾತುಗಳಿಂದ ಚುಂಚೂರು ಮಾಪುರ ತಾಯಿ ಎಲ್ಲಮ್ಮ,  ಸವದತ್ತಿ ತುಳಜಾಪುರ ಅಂಬಾಭವಾನಿ ಮತ್ತು ಮಾಪುರ ಗ್ರಾಮದಲ್ಲಿರುವ ದೇವಿ ಸಂಪ್ರದಾಯಕ್ಕೆ ಸೇರಿದವಳೆಂದು, ಶಾಕ್ತಪೀಠದವಳೆಂದು ಗೊತ್ತಾಗುವದು.

ಸ್ಥಳ ಪುರಾಣ

ಒಂದು ಕಾಲಕ್ಕೆ ಎಲ್ಲಮ್ಮನೆಂದು ಪ್ರಸಿದ್ಧಳಾಗಿದ್ದಳು ಈಗ ಪೂಜಾರಿಯು ಜೋಡಿಸಿದ ಕಥೆಯಿಂದ ಚುಂಚೂರ ಮಾಪುರತಾಯಿಯಾಗಿ ಕುಳಿತಿದ್ದಾಳೆ. ಮಹಾರಾಷ್ಟ್ರದ ಮಾಪುರದಲ್ಲಿರುವ ದೇವಿಗೂ ಚುಂಚೂರದಲ್ಲಿರುವ ದೇವಿಗೂ ಬಹಳಷ್ಟು ಹೋಲಿಕೆಗಳಿರುವುದರಿಂದ ಅವರಿಬ್ಬರೂ ಒಂದೇ. ಆದರೆ ಹೆಸರಷ್ಟೆ ಬದಲಿ ಆಗುವದು. ಮಾಪುರತಾಯಿಯ ಕಥೆ ಬಂದು ಸೇರುವುದರಿಂದ ಚುಂಚೂರ ಎಲ್ಲಮ್ಮ ತಾಯಿ ಹೋಗಿ ಚುಂಚೂರ ಮಾಪುರ ತಾಯಿಯಾಗಿ ಕುಳಿತಿದ್ದ ದೇವಿಯ ಮಹಿಮೆಯನ್ನು ಜೀವಂತಗಗೊಳಿಸಲು ಭಕ್ತರನ್ನು ಹೆಚ್ಚಿಸಲು ಸೃಷ್ಟಿಸಿದ ಕಥೆಯಾಗಿದೆ.

ಕ್ಷೇತ್ರ ಕಾರ್ಯಕ್ಕಾಗಿ ಗುಲ್ಬರ್ಗದಿಂದ ಬಸ್ಸು ಹಿಡಿದು ಮಧ್ಯಾಹ್ನ ಚುಂಚನಸೂರು ತಲುಪಿದೆ. ಪೂರ್ವದಿಕ್ಕಿನಲ್ಲಿ ಊರುಬಿಟ್ಟು ಹರದಾರಿ ದೂರದಲ್ಲಿರುವ ಗುಡಿಗೆ ಬಂದೆ. ಆ ವಾರ ಪೂಜರಿಯು ವೃತ್ತಿ ತನಗೆ ಮಾಡಲು ಬಂದಿದ್ದ ಶಾಂತಮ್ಮ ನಾನು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದಳು ಅದರ ಸಾರ ಇಷ್ಟು :

ಈ ದೇವಿ ಇಲ್ಲಿಯವಳಲ್ಲ. ಮಹಾರಾಷ್ಟ್ರದ ಮಾಪುರ ಗ್ರಾಮದವಳು. ಮಾಪುರದಲ್ಲಿಯ ಗಂಡುಹುಡುಗರು ದೇವಿಯ ಗುಡಿ ಮುಂದೆ ಹರಟೆ ಹೊಡೆಯುತ್ತ ಇದ್ಯಾತರ ದೇವಿ ಎಂದು ಅಪಹಾಸ್ಯ ಮಾಡಿದಾಗ ಮುನಿದ ದೇವಿ  ಅಲ್ಲಿಂದ ಜಾಗ ಬಿಟ್ಟಳು. ಆಗ ಅಪಹಾಸ್ಯ ಮಾಡಿದ ಗಂಡು ಹುಡುಗರ ಗಂಡಸುತನ ಹೋಗಿ ಅವರೆಲ್ಲ ಷಂಡರಾದರು. ಅವರಿಗೆ ಬುದ್ಧಿ ಬಂದು ತಾವು ಮಾಡಿದ ತಪ್ಪನ್ನು ಕಳೆದುಕೊಳ್ಳಲು ಭೂತಗಳಾಗಿ ದೇವಿಯ ಸೇವೆ ಮಾಡುತ್ತ ಜೀವನ ನಡೆಸತೊಡಗಿದರು. ಅದಕ್ಕಾಗಿ ಷಂಡರಾದ ಗಂಡಸರೆಲ್ಲ ಚುಂಚೂರ ಮಾಪುರತಾಯಿಯಲ್ಲಿಯ ಭೂತಗಳಾಗಿ ಸೇವೆ ಸಲ್ಲಿಸುವದು ಇವತ್ತಿಗೂ ಕಾಣಬಹುದು.

ಮಹಾರಾಷ್ಟ್ರದ ಮಾಪುರದಿಂದ ಹೊರಟ ದೇವಿ ಚುಂಚನೂರಿಗೆ ಬಂದಳು. ಮನೆ ಮನೆ  ತಿರುಗಿದಳು. ಕುಡಿಯಲು ನೀರು, ಉಣ್ಣಲು, ಅಣ್ಣ ಕೇಳಿದಳು. ಒಬ್ಬರೂ ನೀಡಲಿಲ್ಲ. ಕೊನೆಗೆ ತಿರತಿರುಗಿ ಬೇಸರ ಬಂದು ಅಗಸಿ ಬಾಗಿಲದಲ್ಲಿ ಬಂದು ಕುಳಿತಳು. ಆ ಹೋಲಗೇರಿಯಿಂದ ಆ ಊರಿನ ಪಾಡೆವಾರ ಊರೊಳಗೆ ಬರುತ್ತಿದ್ದನು. ಅವನಿಗೆ ಈ ತಾಯಿ ತನ್ನ ಸ್ಥಿತಿಯನ್ನು ಹೇಳಿದಳು. ಹಣ್ಣು ಹಣ್ಣಾದ ಬೇನೆ ಶರೀರದಿಂದ ಕೂಡಿದ ಅವಳನ್ನು ಆ ಪಡೆವಾರ ಭುಜದ ಮೇಲೆ ಕೂಡಿಸಿಕೊಂಡು ತನ್ನ ಮನೆಗೆ ಒಯ್ದನು. ಜಳಕ ಮಾಡಿಸಿ ಊಟ ಮಾಡಿಸಿದನು. ಮನೆಯಲ್ಲಿ ಅವನಿಗೊಬ್ಬಳು ಮಗಳಿದ್ದಳು. ಆ ಮಗಳ ಜೊತೆ ಮನೆಯಲ್ಲಿ ಮಾಪುರ ತಾಯಿಗೆ ಇರಲಿಕ್ಕೆ ಹೇಳಿ  ಆ ಪಾಡೆವಾರ ಅಡವಿಗೆ ಹೋದನು. ಆಗ ಸುಗ್ಗಿಯ ಹೊತ್ತು. ಕಣದಲ್ಲಿ ಊರಿನ ರೈತರು ಅವನಿಗೆ ದವಸ ಧಾನ್ಯ ಕೊಡುತ್ತಿದ್ದುದರಿಂದ ಅವನು ಹೋದದ್ದು ಪಾಡೆವಾರ ಆ ಕಡೆಗೆ ಹೋಗುತ್ತಲೆ ಈ ಕಡೆ ಮನೆಯಲ್ಲಿ ಮಾಪುರತಾಯಿ ಕುಳ್ಳು ಹಿಡಿಯುವ ನೆವದಿಂದ ಮನೆಯಲ್ಲಿರುವ ಆ ಪಡೆವಾರನ ಮಗಳನ್ನು ಕರೆದುಕೊಂಡು ಕುಳ್ಳಬುಟ್ಟಿ ಬಗಲಲ್ಲಿ ಹಿಡಿದುಕೊಂಡು ಕೂಳ್ಳು ಹಿಡಿಯುತ್ತ ಹೊರಟಳು. ಊರು ಹೊರಗಡೆ ಒಣಗಿ ಬಿದ್ದಿದ್ದ ಕುಳ್ಳು ಹಿಡಿಯುತ್ತಾ ತಾನು ಹೋಗುವ ದಾರಿಯುದ್ದಕ್ಕೂ ಕುಳ್ಳು ಚೆಲ್ಲುತ್ತ ಹೊರಟಳು. ಈಗಿರುವ ಈ ಗುಡಿಯ ಬನ್ನಿಗಿಡದ ಕೆಳಗೆ ಕುಳ್ಳಿನ ಬುಟ್ಟಿ ಇಟ್ಟು ಆ ಪಡೆವಾರನ ಮಗಳನ್ನು ಕರೆದುಕೊಂಡು ಐಕ್ಯವಾದಳು.

ಪಾದೆವಾರ ಸಂಜೆ ಹೊತ್ತು ಮನೆಗೆ ಬಂದ ನೋಡಿದ ಮಗಳೂ ಇಲ್ಲ. ಮಾಪುರ ತಾಯಿಯೂ ಇಲ್ಲ. ಇವರಿಬ್ಬರೂ ಕಾಣೆಯಾದುದಕ್ಕೆ ಪಾದೆವಾರ ಊರು ಕೇರಿ ಹುಡುಕಿ ಹುಡುಕಿ ಸಾಕಾಗಿ ಬಂದು ಅಳುತ್ತ ಮನೆ ಸೇರಿದನು. ಆದಿನ ರಾತ್ರಿ ಮಾಪುರ ತಾಯಿ ಆ ಊರ ಗೌಡನ ಕನಸಿನಲ್ಲಿ ಬಂದಳು. ತನ್ನ ಕಥೆಯೆಲ್ಲ ತಿಳಿಸಿದಳು. ನಾಳೆ ಮುಂಜಾನೆ ಎದ್ದ ಕೂಡಲೇ ಪೂರ್ವದಿಕ್ಕಿನ ಕಡೆಗೆ ಹೊರಟರೆ ದಾರಿಯುದ್ದಕ್ಕೂ ನಾನು ಚೆಲ್ಲಿದ ಕುಳ್ಳುಗಳೇ ಕವಡೆಗಳಾಗಿರುವವು. ಕವಡೆಗಳು ಎಲ್ಲಿ ಮುಗಿಯುವವೊ ಅಲ್ಲಿ ನಾನಿಟ್ಟಿರುವ ಕುಳ್ಳುಬಟ್ಟಿ ಹಡಗಿಲು ಆಗಿರುವದು. ಅಲ್ಲಿಯೆ ನಾನು ಪಾದೆವಾರನ ಮಗಳನ್ನು ತೆಗೆದುಕೊಂಡು ಐಕ್ಯವಾಗಿರುವೆನು.

ನಾನು ಬೆಂಕಿಯಂಥವಳು. ಗುಡಿ ಕಟ್ಟಿಸಿರಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪೂಜೆ ಮಾಡಿಸಿರಿ ಯಾರು ನನಗೆ ಅನ್ನನೀರು ನೀಡವಾದಾಗ ಮನೆಗೆ ಹೊತ್ತುಕೊಂಡು ಒಯ್ದು ಜಳಕ ಮಾಡಿಸಿ ಊಟ ಮಾಡಿಸಿದನೊ ಆ ಪಾದೆವಾರನ ಮನೆಯವರಿಗೆ ನನ್ನ ಪೂಜಾರಿಕೆ ಕೊಡಬೇಕು. ಪ್ರತಿವರುಷ ಆಗಿ ಹುಣ್ಣಿಮೆಯಿಂದ ಹಿಡಿದು ಕಾರಹುಣ್ಣಿಮೆಯ ವರೆಗೆ ಬರುವ ಶುಕ್ರವಾರದಲ್ಲಿ ನನ್ನ ಉತ್ಸವ ನಡೆಸಬೇಕು. ನನ್ನನ್ನು ನಡೆದುಕೊಳ್ಳುವವರೆಗೆ  ರೋಗ ರುಜನಗಳು ಗುಣವಾಗುವವು, ಮಕ್ಕಳು ಮರಿಗಳು ಆಗುವವು. ದನಕರು ಕುರಿಮರಿಯಿಂದ ಮಳೆ ಬೆಳೆಯಿಂದ ನನ್ನನ್ನು ನಡೆದುಕೊಳ್ಳುವವರ ಸಂಸಾರ ಸಮೃದ್ಧಿ ಯಾಗಿರುವದು. ನನ್ನ ಹೆಸರಿನ ಮೇಲೆ ನಡೆಯುವ ಹೆಣ್ಣುಮಕ್ಕಳು ಜವಾಬ್ದಾರಿ ನೀನು ವಹಿಸಬೇಕು ಎಂದಳು.

ಮರುದಿನ ಗೌಡ ಬಂದು ನೋಡಿದ ತಾಯಿ ಕನಸಿನಲ್ಲಿ ಹೇಳಿದಂತೆ ಕವಡಿ ಸರ ಚೆಲ್ಲಿದ ಗುರುತನ್ನು ಹಿಡಿದುಕೊಂಡು  ಹಡಗಿಲು ಇರುವಲ್ಲಿಗೆ ಬಂದ. ಊರು ಜನರಿಗೆ ಕರೆಸಿದ. ದೇವಿ ಕನಸಿನಲ್ಲಿ ಹೇಳಿದ್ದನ್ನು ಊರು ಜನರಿಗೆ  ಹೇಳಿ ಒಂದು ಸಣ್ಣ ಗುಡಿ ಕಟ್ಟಿಸಿದನು. ಪೂಜಾರಿಕೆಯನ್ನು  ಆ ಪಾದೆವಾರನ ಮನೆತನದವರಿಗೆ  ಕೊಟ್ಟನು. ಪ್ರತಿ ಮಂಗಳವಾರ , ಶುಕ್ರವಾರ ಪೂಜೆ ನಡೆಸಿದನು. ಆಗಿ ಹುಣ್ಣಿಮೆಯಿಂದ ಕಾರಹುಣ್ಣಿವೆವರೆಗ ಬರುವ ಶುಕ್ರವಾರದ ದಿವಸ ಉತ್ಸವ ಆರಂಭಿಸಿದನು. ಅಂದಿನಿಂದ ಇಂದಿನವರೆಗೆ ಆ ಪದ್ಧತಿ ಮಂದುವರೆದುಕೊಂಡು ಬರುತ್ತಿದೆ. ಹೀಗೆ ಪೂಜಾರಿ  ಶಾಂತಮ್ಮ ಹೇಳಿದಳು.

ಮಾಪುರ ತಾಯಿ ಮೂಲತಃ ಎಲ್ಲಮ್ಮ : ಸೀಮೆ ದೇವತೆ.

ಚುಂಚರ ಮಾಪುರ ತಾಯಿ ಮೂಲತಃ ಎಲ್ಲಮ್ಮನೆಂಬುದು ಅಲ್ಲಿರುವ ಗುಡಿ, ಮೂರ್ತಿಗಳನ್ನು ಕಂಡಾಗ ಪೂಜೆಯನ್ನು ನೋಡಿದಾಗ ಆಚಾರ ವಿಚಾರ ಉತ್ಸವ, ಹಾಡು, ಸಂಪ್ರದಾಯಗಳನ್ನು ತಿಳಿದಾಗ ಗೊತ್ತಾಗುವದು.

೧) ಈಕೆ ಸೀಮೆಯ ದೇವತೆ ಅನ್ನಲಿಕ್ಕೆ ಈ ದೇವಿಯು ಗುಡಿಯ ಸುತ್ತ ಸೇರಿರುವ ಕೆಳಗಿನ ಹಳ್ಳಿಗಳ ಸೀಮೆಯನ್ನು ನೋಡಬಹುದು. ಚುಂಚೂರ ಸೀಮೆ, ಕುಮ್ಸಿ ಸೀಮೆ, ಹಲಗರಗಿ ಸೀಮೆ, ಕೆರೆಮ್ಲಿಗಿ ಸೀಮೆ ಸಂಗೊಳ್ಗಿ ಸೀಮೆ, ಬಬಲಾದಿ ಸೀಮೆ.

೨) ಈ ದೇವತೆಯ ಉಳಿದ ಮೂರ್ತಿಗಳೆಲ್ಲ ಎಲ್ಲಮ್ಮನಲ್ಲಿರುವಂತೆ ಚಿಕ್ಕವು, ಒಂದು ದೊಡ್ಡ ಮೂರ್ತಿ ಇದ್ದು ಅದಕ್ಕೆ ಎಲ್ಲಮ್ಮನಿಗೆ ಉಡಿಸಿರುವಂತೆ ಬಿಳಿ ಪತ್ತಲ ಉಡಿಸಿರುವರು. ಉಳಿದವುಗಳಿಗೆ ಬರೀ ಜಾಜ ಹಚ್ಚಿ ಇಟ್ಟಿರುವರು. ಈ ದೇವತೆಯ ಮೂರ್ತಿಗಳಿರುವಲ್ಲಿ ಹುತ್ತೆ ಇರುವುದು. ಆದ್ದರಿಂದ ಮೊದಲು ಈಕೆ ಹುತ್ತಿನೆಲ್ಲಮ್ಮ ಆಗಿರಬೇಕು.

೩) ಎಲ್ಲಮ್ಮನಿಗೆ ನಡೆದುಕೊಳ್ಳುವಂತೆ ಭಕ್ತರು ಈ ದೇವಿಗೆ ನಡೆದುಕೊಳ್ಳುವರು. ಉಟ್ಟಗೆ ಉಡುವರು ಕುರಿ ಬಲಿ ಕೊಡುವರು.

೪) ಈ ದೇವಿಯ ಗುಡಿ ಬಾಗಿಲು ಎಲ್ಲಮ್ಮನಿಗಿರುವಂತೆ ಪೂರ್ವದಿಕ್ಕಿಗಿದೆ.

೫) ಎಲ್ಲಮ್ಮನಿಗೆ ಪೂಜಿಸುವಂತೆ ಪ್ರತಿ ಮಂಗಳವಾರ ಶುಕ್ರವಾರ ಈ ದೇವಿಗೂ ಪೂಜಿಸಿರುವರು.

೬) ಕೆಲ ಎಲ್ಲಮ್ಮರ ಹತ್ತಿರ ಹುತ್ತಿರುವಂತೆ ಇಲ್ಲಿಯೂ ಹುತ್ತವಿದೆ.

೭) ಎಲ್ಲಮ್ಮನಿಗೂ ಬಳಿಪತ್ತಲ ಉಡಿಸುವಂತೆ ಈ ದೇವಿಗೂ ಬಳಿ ಸುತ್ತಲ ಉಡಿಸುವರು.

ಜಗದಂಬೆಯೇ ಎಲ್ಲಮ್ಮನೆಂದು ಎಲ್ಲಮ್ಮನೇ ಮಾಪೂರಿ ಎಂದು ಇರುವ ಈ ಹಾಡು ಈ ಮಾತಿಗೆ ಸಾಕ್ಷಿ ನುಡಿಯುವದು :

ಹುಟ್ಟೀನ ತಳದಲ್ಲಿ ಪುಟ್ಟಿ ಬಂದಳ ಜಗದಂಬ ಎಲ್ಯಾಳ ಎಲ್ಯಾಳ
ಜಗದಂಬ ನಾ ನೋಡಿ ಬರುವೆ
ನಿಂತಾಳ ಗಚ್ಚಿನ ಗುಡಿಯಲ್ಲಿಸುತ್ತಮುತ್ತ ಸಮುದುರ
ನಟ್ಟ  ನಡುವೆ ಆದಲ್ಲೆ ತುಳಜಾಪುರ
ಸೀತಳ ಜಗದೆಂಬ ಗುಡಿಯ ತುಂಬ ಹುಡಿತಾಳ ಝಳಝಳ
ಹನ್ನೆರಡು ಕೈಯೊಳಗ ಹನ್ನೆರಡು ಹತಿಯಾರ
ದೈತ್ಯರ ಮ್ಯಾಲಿ ಸಂವಾರಿ ಜಗದಂಬ ಆಗ್ಯಾಳ ಮಹಮೂರ
ದೈತ್ಯರದೆ ಕಾವಲಿ ಕಾಸಿಭಾರ ಬೆಗಗೆಳಗು ಮಾಡ್ಯಾಳ ಹಾಂಕಾರ
ಎಲ್ಯಾಳ ಎಲ್ಯಾಳ ಎಲ್ಲಮ್ಮ ನಾನೋಡಿ ಬರುವೆ
ನಿಂತಾಳ ಗಚ್ಚಿನ ಗುಡಿಯಲ್ಲ

ಈ ಗಚ್ಚಿನ ಗುಡಿ ಪದ ತುಳಜಾಪುರಕ್ಕೂ ಅನ್ವಯಿಸುವಂತೆ ಚುಂಚೂರ ಮಾಪುರಿಗೂ ಅನ್ವಯಿಸುವದು.

ಗುಡಿಯ ಸ್ವರೂಪ :

ಈಗಿರುವ ಗುಡಿ ಊರಿನ ಪೂರ್ವದಿಕ್ಕಿನಲ್ಲಿ ಒಂದು ಹರದಾರಿ ದೂರದಲ್ಲಿದೆ. ಸುತ್ತ ಮುತ್ತ ಗಿಡಗಳಿವೆ. ಇದಕ್ಕೆ ಆಧಾರವಾಗಿ ಗರತಿಯ ಹಾಡು ಬಲು ಸೊಗಸಾದಿ ಬಂದಿದೆ :

ಹತ್ತ ರೂಪಾಯಿ ಸೀರಿ ಮುತ್ತೀನ ಉಡಿಯಕ್ಕಿ
ಹೊತ್ತೆಲ್ಲ ನಮಗ ಮುಳುದ್ಯಾವ | ಮಾಪುರ ತಾಯಿ
ಹತ್ತು ಸಾವಿರದ ಗಿಡದಾಗ

ಇದರಿಂದ ಈ ಹಿಂದೆ ಇಲ್ಲಿ ಬಹಳಷ್ಟು ಗಿಡಗಳಿದ್ದವೆಂದು ತಿಳಿಯಬಹುದು. ಆದರೆ ಇವತ್ತು ಈ ತ್ರಿಪದಿಯಲ್ಲಿ ಹೇಳಿದಷ್ಟು ಗಿಡಗಳ್ಳಿಲ್ಲ. ಮೊದಲು ಕಟ್ಟಿಸಿದ ಗುಡಿಯ ಬಾಗಿಲು ಪೂರ್ವದಿಕ್ಕಿನಲ್ಲಿದ್ದು ಅದರಲ್ಲಿ ಒಂದು ಬನ್ನಿಮರವಿದೆ. ಅದರ ಸುತ್ತ ಹುತ್ತ ಬೆಳೆದಿದೆ. ಆ ಹುತ್ತದ ಸುತ್ತ ದೇವಿಯ ಸಣ್ಣ ಸಣ್ಣ ಮಕ್ಕಳ ಮೂರ್ತಿಗಳಿವೆ. ಅವುಗಳ ಮಧ್ಯ ದೇವಿಯದೊಂದು ದೊಡ್ಡ ಮೂರ್ತಿಯಿದೆ. ಈಗ  ಆ ಸಣ್ಣ ಗುಡಿಯನ್ನೊಳಗೊಂಡು ಶಹಾಬಾದಿ ಕಲ್ಲಿನಿಂದ ಸಿಮೆಂಟಿನಲ್ಲಿ ಹೊಸಗುಡಿ ಕಟ್ಟಿಸಿದ್ದಾರೆ. ವಿದ್ಯುಚ್ಛಕ್ತಿ ತಂದಿದ್ದಾರೆ.. ಗುಡಿಯ ಪಕ್ಕದಲ್ಲಿ ಮೊದಲಿಂದಲೂ ಇದ್ದ ಒಂದು ಬಾವಿ ಇದೆ. ಬಹಳಷ್ಟು ಭಕ್ತರು ಬಂದಿಳಿಯಲು ಅಡಿಗೆ ನಾಡುಕೊಂಡು ಹುಣ್ಣಲು ಹೊರಂಗಳ ದೊಡ್ಡದಾಗಿ ಮಾಡಿದ್ದಾರೆ. ದೇವಿಯ ಒಳಂಗಳದಲ್ಲಿ ಜೋಗಿಣಿಯರು ಕುಳಿತು ದೇವಿಯ ಮಹಿಮಾ ಪದಗಳನ್ನು ಹಾಡುತ್ತ ಕುಳಿತಿರುವುದನ್ನು ಕಾಣಬಹುದು. ಮೊದಲಿದ್ದ ಗುಡಿ ಈಗ ಗರ್ಭಗುಡಿ ಆಗಿ ಹೋಗಿದೆ. ಗರ್ಭಗುಡಿ ಮೇಲ್ಗಡೆ ಏಳು ಅಂಕಣದ ಶಿಖರವಿದ್ದು ಮೇಲೆ ಕಳಸ ಇಟ್ಟಿದ್ದಾರೆ.

ಮೊದಲ ಗುಡಿ ಹನ್ನೆರಡಿ ಉದ್ದ ಹನ್ನೆರಡಿ ಅಗಲವಿದ್ದರೆ ಸದನ್ನೊಳಗೊಂಡು ಈಗ ಕಟ್ಟಿರುವ ಗುಡಿ ಮೂವತ್ತಾರು ಅಡಿ ಉದ್ದ ಮೂವತ್ತಾರು ಅಡಿ ಅಗಲವಿದೆ. ಇತ್ತೀಚಿಗೆ ಭಕ್ತ ಜನ ಮುಂಬಯಿ ಸೊಲ್ಲಾಪೂರ ಪುಣೆ, ಹೈದ್ರಾಬಾದ, ಸಿಕಂದರಾಬಾದ, ಬೆಂಗಳೂರು, ಹುಬ್ಬಳ್ಳಿ, ಧಾರವಾಡಗಳಿಂದ ಪ್ರವಾಹಬಂದಂತೆ ಬರುವುದು ಹೆಚ್ಚಾದಾಗ ಜೊತೆಗೆ ಗುಡಿಯ ಆದಾಯವು ಹೆಚ್ಚಾದಾಗ ಗುಡಿಗೆ ಸುಣ್ಣ ಬಣ್ಣ ಕೊಡಲಾಗಿದೆ. ವಿದ್ಯುತ್ ಬೆಳಕು ನೀಡಲಾಗಿದೆ ಗುಡಿಗೆ ಹಿರಿಯಂಗಳ ಮಾಡಿ ಸುತ್ತ ಇನ್ನೂರು ಗಜ ಕ್ಷೇತ್ರದ ಪೌಳಿ ಕಟ್ಟಿಸಲಾಗಿದೆ.

ಮೂರ್ತಿ :

ಎಲ್ಲಾ ಊರಿನಲ್ಲಿ ಇರುವ ಎಲ್ಲಮ್ಮ ಮೂರ್ತಿಗಿಂತಲೂ ಇಲ್ಲಿಯ ಮೂರ್ತಿ ದೊಡ್ಡದಿದೆ. ಉಳಿದವುಗಳೆಲ್ಲ ಆಕೆಯ ಮಕ್ಕಳೆಂದು ಸಣ್ಣ ಸಣ್ಣ ಐವತ್ತು ಆರವತ್ತು ಸುತ್ತಮುತ್ತ ಇರುವವು. ರೋಗ ರುಜನದಿಂದ ಗುಣವಾದಳು, ಹರಕೆ ಹೊತ್ತವರು, ಮಳೆಬೆಳೆ ಚೆನ್ನಾಗಿ ಬರಲಿ ಎಂದು ಬೇಡಿಕೊಂಡವರು. ಮಕ್ಕಳು ಮರಿಗಳು ದನಕರು ಕುರಿಮರಿಯನ್ನು ಸುಖವಾಗಿ ಇಡಲಿ ಎಂದು ಬೇಡಿಕೊಂಡವರು ಒಂದೊಂದು ಸಣ್ಣ ಗೊಂಬೆ ಮಾಡಿ ತಂದಿಟ್ಟು ಪೂಜಿಸಿ ಹೋಗುವರು. ದೊಡ್ಡ ಗೊಂಬೆ ಮೂರು ಅಡಿ ಇದ್ದರೆ ಸಣ್ಣ ಗೊಂಬೆಗಳು ಒಂದೊಂದು ಅಡಿ ಉದ್ದವಿದೆ.

ದೇವಿಯ ಮೂರ್ತಿ ಬಳಸುವ ಕಟ್ಟಗೆಗಳು :

ಹೆಚ್ಚಾಗಿ ದೊಡ್ಡ ಗೊಂಬೆ ಮಾಡಲು ಶ್ರೀಗಂಧ ಕಟ್ಟಗೆಗಳನ್ನು ಬಳಸುವವರು. ಉಳಿದ ಸಣ್ಣ ಸಣ್ಣ ಮರಿಗೊಂಬೆಗಳನ್ನು ಮಾಡಲು ಆಲಗೌರಿ ಗಿಡದ ಕಟ್ಟಿಗೆಗಳನ್ನು ಬಳಸುವರು.

ದೇವಿಯ ಮೂರ್ತಿ ಮಾಡುವ ಬಡಿಗರ ವ್ರತಗಳು :

ಈ ದೇವಿಯ ಮೂರ್ತಿ ಮಾಡುವವರು ಬಡಿಗರು. ಇವರು ಈ ಮೂರ್ತಿಗಳನ್ನು ಮಂಗಳವಾರ ಇಲ್ಲವೆ ಶುಕ್ರವಾರ ಮಾತ್ರ ಮಾಡುವವರು. ಯಾಕೆಂದರೆ ಈ ಎರಡು ವಾರಗಳೇ ದೇವಿಯನ್ನು ಪೂಜಿಸುವ ಪವಿತ್ರ ದಿನಗಳೆಂದು ಭಾವಿಸುವರು. ಆ ದಿವಸ ಸಂಪೂರ್ಣ ಉಪವಾಸ ಇರುವರು. ಸ್ನಾನ ಪೂಜೆ ಮುಗಿಸಿ ಮಾತಾಡದಂತೆ ಅಡವಿಗೆ ಹೋಗಿ ಶ್ರೀಗಂಧ, ಆಲಗೌರಿಯ ಗಿಡಗಳನ್ನು ಕಳೆದುಕೊಂಡು ಬಂದು ಅದೇ ದಿವಸ ಸಂಜೆಯೊಳಗಾಗಿ ದೇವಿಯ ಮೂರ್ತಿಯನ್ನು ಮಾಡುವರು. ದೊಡ್ಡ ಮೂರ್ತಿ ಮಾಡಿ ಕೊಡಲು ಹೇಳಿದವರಿಂದ :

೨೧ ಶೇರು ಜೋಳ
೧೧ ರೂಪಾಯಿ

ಚ್ಯಾಜ ತೆಗೆದುಕೊಂಡರೆ ಸಣ್ಣ ಸಣ್ಣ ಮೂರ್ತಿ ಮಾಡಿಕೊಡಲು ಹೇಳಿದವರಿಂದ :

೩ ಸೇರು ಜೋಳ
೧ ರೂ. ೪ ಆಣೆ

ತ್ಯಾಜ ತೆಗೆದುಕೊಳ್ಳುವರು. ಸಣ್ಣ ಸಣ್ಣ ಮೂರ್ತಿಗಳನ್ನು ಮಾಡಿ ದಿನವೇ ಕೊಂಡುವರು. ಆದರೆ ದೊಡ್ಡ ಮೂರ್ತಿ ಮಾಡಿದಾಗ ಬಡಿಗೇರರು ಮೊದಲು ತಮ್ಮ ಆರಾಧ್ಯ ದೇವತೆಯಾದ ಕಾಳಿಕಾ ದೇವಿಯ ಗುಡಿಯಲ್ಲಿ ಇಡುವರು. ಕಾರಣ ಮೂರ್ತಿಗೆ ಮುಂದೇನೂ ಆಗದಿರಲಿ ಎಂದು ಅಥವಾ ಮುಂದೆ ತಾವು ಮಾಡುವ ಕಾರ್ಯಗಳೆಲ್ಲ ಸುಗಮವಾಗಿ ಸಾಗಲಿ ಎಂದು.

ದೊಡ್ಡ ಗೊಂಬೆಗೆ ಕೆಲವು ಕಡೆಗೆ ಕೈಕಾಲು ಮಾಡಿದರೆ ಇನ್ನೂ ಕೆಲವು ಕಡೆಗೆ ಮಾಡುವದಿಲ್ಲ. ಇಲ್ಲಿ ಮಾಡಿದ್ದಾರೆ. ಸಣ್ಣ ಕಿವಿ ಮೂಗು ತಲೆಯಷ್ಟೇ ಮೇಲ್ಭಾಗದಲ್ಲಿ ಚಿತ್ರಿಸುವರು.

ಅಲಂಕಾರ :

ಸಣ್ಣ ಮೂರ್ತಿಗಳಿಗೆ ಬರೀ ಜಾಜ ಬಚ್ಚುವುದಿಲ್ಲ. ಆದರೆ ಬಿಳಿಪತ್ತಲು ಉಡಿಸುವುದಿಲ್ಲ. ದೊಡ್ಡ ಮೂರ್ತಿಗೆ ಚ್ಯಾಜ ಮೂರ್ತಿಗೆ ಚ್ಯಾಜ ಹಚ್ಚುವರು.  ಬಿಳಿಪತ್ತಲು ಹಣೆಗೆ ಕುಂಕುಮ ಭಂಡಾರ ಹಚ್ಚುವರು. ಕೈಯಲ್ಲಿ ಬಳೆ ಹಾಕುವರು. ಇಲ್ಲವೆ ಸಾಕ್ಷಿಯಾಗಿ ಮೇಲ್ಗಡೆ ಬಳೆ ತೂಗಿ ಬಿಡುವರು. ಇಲ್ಲವೆ ಮೂಲೆಯಲ್ಲಿರುವ ಗೂಟಕ್ಕೆ ಬಳೆ ಹಾಕುವರು. ಉತ್ಸವದ ದಿವಸ ಟೊಂಕಕ್ಕೆ ಬೆಳ್ಳಿದಾಬ ಇಡುವರು. ಮೂಗಿಗೆ ಬಂಗಾರದ ಮೂಗುತಿ ಇಡುವರು. ಆ ದಿನ  ಮದುಮಗಳಂತೆ ಸಿಂಗರಿಸುವರು.

ಪೂಜಾರಿಗಳು

ಸ್ಥಳ  ಪುರಾಣದಲ್ಲಿ ಬಂದ ಪಾದೇವಾರನ ಮನೆತನದವರೇ ಇಂದಿಗೂ ವಂಶ ಪಾರಂಪರ್ಯವಾಗಿ ಪೂಜಾರಿಗಳಾಗಿ ಬಂದಿದ್ದಾರೆ. ಇಗ ಆ ಮನೆತನದಲ್ಲಿ ನಾಲ್ಕು ಮನೆತನಗಳಾಗಿವೆ. ಒಂದೊಂದು ಮನೆಯವರು ಒಂದೊಂದು ವಾರ ಪೂಜೆ ಕಾರ್ಯ ವಹಿಸಿಕೊಳ್ಳುವರು.

ಈ ದೇವಿಗೆ ಬಹಳಷ್ಟು ಆದಾಯವಿದೆ. ದೇವಿ ನೆಲಸಿದ ಹೊಲ ಪೂಜಾರಿಗಳಿಗೆ ಬಿಟ್ಟು ಕೊಡಲಾಗಿದೆ. ದೂರದೂರಿನ ಊರುಗಳಲ್ಲಿರುವ ಭಕ್ತರು ಪ್ರತಿನಿತ್ಯ ಮನಿ ಆರ್ಡರ್ ಮೂಲಕ ದೇವಿಗೆ ಕಾಣಿಕೆಗಳನ್ನು ಕಳಿಸುವರು. ಪ್ರತಿ ಮಂಗಳವಾರ, ಶುಕ್ರವಾರ ದಿವಸ ಜನ ಪೂಜೆಗಾಗಿ ಬರುವರು. ಪ್ರತಿನಿತ್ಯ ಆದಾಯವಿದ್ದುದರಿಂದ ಯಾವಾಗ ತಮ್ಮ ಪೂಜಾ ವಾರ ಬರುವದೆಂದು ಉಳಿದ ಪೂಜಾರಿ ಅಣ್ಣ – ತಮ್ಮಂದಿರು ಹಾದಿ ಕಾಯುವರು. ಇಷ್ಟೊಂದು ಆದಾಯವಿದ್ದರೂ ಇಲ್ಲಿ ಪೂಜಾರಿಗಳಲ್ಲಿ ಜನರಲ್ಲಿ ಜಗಳಗಳಾಗಿಲ್ಲ. ಈ ಗುಡಿ ವಿಷಯದಲ್ಲಿ ತಂಟೆಗಳಾಗಿಲ್ಲ. ಕೋರ್ಟ ಕಚೇರಿಗೆ ಹೋಗಿಲ್ಲ. ಕಾರಣ ಈ ತಾಯಿ ಬೆಂಕಿಯಂಥವಳೆಂದು ಅವರ ಕಲ್ಪನೆ.

ಕಾಡಬ್ಯಾಡ ಕರಣಮಾಡ ಮಾದೇವಿ
ನಿನ್ನ ಕರಣಾದಿಂದ ನಮ್ಮ ಸರಣಿ ಮಾದೇವಿ

ಅದಕ್ಕಾಗಿ ಈ ಗುಡಿ ಸರಕಾರದ ವಶಕ್ಕೆ ಹೋಗಿಲ್ಲ. ಸರಕಾರಕ್ಕೆ ದರಕಾರ ಮಾಡದ ತಾಯಿ ಈ ದೇವಿ.

ಬರುವಾರು ಭಗತಾರು ಬಾಳ ಭವದೂರ
ನಿನಮುಂದ ಸರಕಾರಾರಿಲ್ಲ ದರಕಾರ

ಎಲ್ಲ ಜನ ಪಾಪಪುಣ್ಯಗಳಿಗೆ ಅಂಜಿಕೊಂಡು ತಮಗೆ ಒಪ್ಪಿಸಿದ ಕಾರ್ಯಗಳನ್ನು ತಪ್ಪದೆ ಮಾಡುವರು. ಈ ದೇವಿಗೆ ವಿರೋಧಿಸಲು ಬಂದವರ ವಿರೋಧಿಸಲು ಬಂದವರ ಸಂಸಾರ ಹಾಳಾದುದಕ್ಕೆ ಅವರ ಮನೆಯಲ್ಲಿ ಸತ್ತುದಕ್ಕೆ  ದೇವಿಯೇ ಕಾರಣಳೆಂದು ಇಲ್ಲಿಯ ಜನ ಗಲ್ಲಗಲ್ಲ ಬಡಿದುಕೊಂಡು ಅಲ್ಲಿ ನಡೆದವುಗಳನ್ನು ಹೇಳುವರು.

ದೇವಿಯ ವಾರಗಳು

ಉಳಿದ ವಾರಗಳಲ್ಲಿ ಈ ದೇವಿಯನ್ನು ಜನ ಪೂಜಿಸುತ್ತಿದ್ದರೂ ಮಂಗಳಾವಾರ ಮತ್ತು ಶುಕ್ರವಾರ ದಿವಸ ತಪ್ಪದೇ ಪೂಜಿಸುವರು. ಮಂಗಳವಾರ ರೋಗರುಜಿನ ಗುಣಪಡಿಸುವ ದಿನವಾದರೆ ಮಳೆ ಬೆಳೆ ಫಲ ಸಂತಾನ ನೀಡಿ ಸಮೃದ್ಧ ಪಡಿಸುವ ದಿನವೆಂದು ಇಲ್ಲಿಯ ಜನರ ನಂಬಿಗೆ.

ದೇವಿವಾರ ಶುಕ್ರವಾರ ಮಂಗಳವಾರ
ಕಾಯಿಕರ್ಪೂರ ತರುವಂತಾ ಭಗತಾರ

ಮಂಗಳವಾರಕ್ಕಿಂತ ಶ್ರೇಯಸ್ಸನ್ನುಂಟು ಮಾಡುವ ಶುಕ್ರವಾರ ದಿವಸವೇ ಬಹಳಷ್ಟು ಜನ ತಮ್ಮ ಪೂಜೆ ಸಲ್ಲಿರುವರು. ಆಗಿ ಹುಣ್ಣಿಮೆಯಿಂದ ಕಾರಹುಣ್ಣಿಮೆಯ ತನಕ ಬರುವ ಶುಕ್ರವಾರಗಳಲ್ಲಿಯೇ ಜನ ಉತ್ಸವವನ್ನು ಆಚರಿಸುವದು ನೋಡಿದರೆ ಶುಕ್ರವಾರವೇ ಈ ದೇವಿಯ ಪ್ರಮುಖ ವಾರವೆಂದು ಗೊತ್ತಾಗುವದು.

ನೈವೇದ್ಯ

ಎಲ್ಲಮ್ಮನಿಗೆ ಸಲ್ಲುವ ನೈವೇದ್ಯವೆಲ್ಲವೂ ಈ ದೇವಿಗೆ ಸಲ್ಲುವುದು.

೧) ಉಂಡಿ ಹಿಂಡಿ ಪಲ್ಲೆ ಹೋಳಿಗೆ. ೨) ಕುರಿಬಲಿ ಸರ್ವಸಾಮಾನ್ಯವಾಗಿ ಉಂಡಿ ಪಲ್ಲೆ ಹೋಳಿಗೆಯನ್ನು ಎಲ್ಲ ಜನ ಸಲ್ಲಿಸಿವರು. ಆದರೆ ಕೆಳವರ್ಗದವರು ಇದರ ಜೊತೆಗೆ ಕುರಿಬಲಿಯನ್ನು ನೀಡುವರು. ಮೇಲ್ಜಾತಿಯವರು ಕುರಿಬಲಿಯನ್ನು ಸಲ್ಲಿಸಿದರೂ ಅದನ್ನವರು ಉಣ್ಣುವದಿಲ್ಲ. ಈ ಕುರಿಬಲಿ ಸಲ್ಲಿಸುವ ಕೆಲಸ ೧) ರೋಗ ಗುಣವಾದಾಗ ೨) ಮಕ್ಕಳಾದಾಗ ೩) ಮದುವೆ ಮಾಡುವಾಗ ನಡೆಯುವದು. ತಮ್ಮ ಮನೆಯ ಜನ  ತನುವಿನಿಂದ ಅಂದರ ತಂಪಾಗಿ ಇರಲಿ ಎಂದು ತನುಂದಿಯನ್ನು, ಮೈಗಾದ ಹುಣ್ಣು ಉಪ್ಪಾಗಿ ಉದುರಲಿ ಎಂದು ಉಪ್ಪನ್ನು, ತಮಗಾದ ಹೈತಿಗೆ ಮೈಗೆ ಹುಣ್ಣು ತಿಂಡಿ ಉಂಟುಮಾಡದಿರಲಿ ಎಂದು ಉಳ್ಳಾಗಡ್ಡಿ, ಬದನಿಕಾಯಿ ನೀಡುವರು. ಎಣ್ಣಿ ಅರಿಶಿಣ ನೀಡುವರು. ಈಕೆ ಭಂಡಾರದ ದೇವತೆ ಎಂದು ತಿಳಿದ ಕಾರಣ ಇಲ್ಲಿಗೆ ನಮಸ್ಕರಿಸಲು ಬರುವ ಭಕ್ತರಿಗೆಲ್ಲ ಪೂಜಾರಿ ಹಣೆಗೆ ಆದಾರ (ಬೂದಿ) ಬದಲಿಗೆ ಭಂಡಾರ ಹಚ್ಚಿ ಕಳಿಸುವನು.

ಘಟ್ಟದ ಮಾಪುರಿ ಸಿಟ್ಯಾಕ ನನಮ್ಯಾಲ
ಕೊಟ್ಟ ಕಳುವೀದ ಏ ಹಿಡಿ ಉಪ್ಪೇ
ಕೊಟ್ಟಾನೆ ಕಳುವೀದ ಹಿಡಿ ಉಪ್ಪೇ ಮಾಪುರಿ
ತೊಟ್ಟಿಲಿ ಮಾಪುರಿ ನಾದರಸೀದ
……………………………………
ಕಾಯಿ ಕರಪೂರ ತರುವಂತಾ ಭಗತಾರ
ಹಾಲು ಹಣ್ಣು ನೀಡಂತಾ ಭಗುತಾರ.

ಕೆಲವು ಭಕ್ತರು ದೇವಿಗೆ ಎತ್ತು ಆಕಳು ಬಿಡುವುದು ಉಂಟು ಎಂಬುದನ್ನು

ಎತ್ತು ಕಂಟಲೆ ಬಿಡುವೆ ಆಕಳಾ ಜನ್ನಿಗಿ ಬಿಡುವೆ
ಹಾಕೀದೆ ಹಗೆಯೆ ಏ ಮದಲಿಡುವೆ.
ಹಾಕೀದ ಎಲೆ ಹಗೆ ಮದಲಿಡುವೆ ಮಾಪುರಿ
ಹುಟ್ಟಿದ ಪುತ್ರನ ಏ ಜಾವಳಿಡುವೆ
ಹುಟ್ಟಿದ ಪುತ್ರನ ಜಾವಳಿಡುವೆ ಮಾಪುರಿ
ಕಂದಗೆ ಯಾಳ್ಯಾ ನೀ ತರುಬ್ಯಾಡ

ಗರತಿ ತನ್ನ ಕಂದನಿಗೆ ಯಾಳ್ಯಾ ಅಂದರೆ ಸಂಕಟ ತರಬಾರದೆಂದು ಬೇಡಿಕೊಳ್ಳುವ ರೀತಿ ಅಪೂರ್ವವಾಗಿದೆ.

“ಬಡವನ ಭಕ್ತಿ ಬಂಡಿಯುಂಬ” ಎಂಬ ಗಾದೆಮಾತಿನಂತೆ ಇಲ್ಲಿಯ ಭಕ್ತರಿರುವರು. ಕೆಲವರು ಕೇವಲ ಎಣ್ಣೆ ಬತ್ತಿ ಕೊಟ್ಟರೆ ಕೆಲವರು ಸಕ್ಕರೆ ಲೋಬಾನ, ಕಾಯಿ ಕರ್ಪೂರ ಕೊಡುವರು. ಇನ್ನು ಕೆಲವರು ಹೋಳಿಗೆ ಉಂಡಿ ಹಿಂಡಿಪಲ್ಲೆ ನೀಡುವರು. ದೇವಿಯನ್ನು ಸಂದರ್ಶಿಸಲು ಬರುವವರೆಲ್ಲರೂ ಮಂಗಳಾರುತಿ ಮಾಡಿಸುವರು. ಈ  ಮಂಗಳಾರುತಿ ಮಾಡಿಸುವ ಪದ್ಧತಿ ಇತ್ತೀಚಿನದು. ದುಡ್ಡಿಗಾಗಿ ಪೂಜಾರಿ ಇದನ್ನು ಸೇರಿಸಿದ್ದು. ಮಂಳಾರುತಿ ಮಾಡಿಸಿ ಊದಿನಕಡ್ಡಿ ಬೆಳಗಿ ಕರ್ಪೂರ ಹಚ್ಚುವರು. ಗುಡಿಯ ಒಳ ಮಂಟಪದಲ್ಲಿ ಕುಳಿತ ಜೋಗಿಣಿಯರಿಗೆ ದುಡ್ಡು ಕೊಟ್ಟು ದೇವಿಯ ಮಹಿಮಾ ಹಾಡುಗಳನ್ನು ಹೇಳಿಸುವರು.

ಆರಾಧಕರಲ್ಲಿ ಪ್ರಕಾರಗಳು

ಈ ಊರಲ್ಲಿ ಇತರ ದೇವತೆಗಳಿದ್ದರೂ ಸಾಮೂಹಿಕವಾಗಿ ಕುಲಭೇದ, ಸಿರಿತನ , ಬಡತನದ ಅಂತಸ್ತಿನ ವ್ಯತ್ಯಾಸವಿಲ್ಲದೆ ನಡೆದುಕೊಳ್ಳುವ ದೇವತೆಯೆಂದರೆ ಚುಂಚುರ ಮಾಪುರ ತಾಯಿಯೇ. ಅದಕ್ಕಾಗಿ ಈಕೆಯನ್ನು ಈ ಊರಿನ ಗ್ರಾಮದೇವತೆ ಎನ್ನುವರು. ಈ ಗ್ರಾಮದ ಸಕಲ ಆಗು ಹೋಗು, ಒಳಿತು ಕೆಡುಕು, ಮಳೆ ಬೆಳೆ, ರೋಗ ರುಜಿನದ ಭಾರ ಈ ದೇವಿಗೆ ಒಪ್ಪಿಸಿ ಇಲ್ಲಿಯ ಜನ ನಿಶ್ಚಿಂತರಾಗಿ ಇರುವರು.ಈ ದೇವಿ ಸ್ಥಳೀಯ ದೇವತೆ ಆಗಿರುವುದರ ಜೊತೆಗೆ ಲೋಕದೇವತೆಯೂ ಆಗಿದ್ದಾಳೆ.ಈ ದೇವಿಗೆ ಆಂಧ್ರ, ಕರ್ನಾಟಕ, ಮಹಾರಾಷ್ಟ್ರದ ಜನ ನಡೆದುಕೊಳ್ಳುವರು. ಇಲ್ಲಿಯ ಪೂಜಾರಿಯೆಂದರೆ ದೇವಿಯ ಪ್ರತಿನಿಧಿಯಿದ್ದಂತೆ. ಪೂಜಾರಿ ಹೇಳಿದುದೆಲ್ಲ ದೇವಿಯೇ ಹೇಳಿದುದೆಂದು ಇಲ್ಲಿಯ ಜನ ಚಾಚು ತಪ್ಪದೆ ನಡೆದುಕೊಳ್ಳುವುದನ್ನು ನೋಡಿದರೆ ಈ ದೇವಿಯ ಸುತ್ತ ಇಲ್ಲಿ ಜನ, ಇಲ್ಲಿಯ ಜನರ ಸುತ್ತ ಈ ದೇವಿ ಬೆಳೆದುಕೊಂಡು ಬಂದದ್ದು ಗೊತ್ತಾಗುವುದು.

ಈ ದೇವಿಯ ಆರಾಧಕರಲ್ಲಿ ಎರಡು ಪ್ರಕಾರ.೧) ಸೌಮ್ಯ ಭಕ್ತರು, ೨) ಉಗ್ರ ಭಕ್ತರು, ೧) ಸೌಮ್ಯ ಭಕ್ತರು: ಈ ಸೌಮ್ಯ ಭಕ್ತರಲ್ಲಿ ಎರಡು ಪ್ರಕಾರ ೧) ಇದ್ದೂರಿನವರು ೨) ಪರ ಊರಿನವರು.

) ಇದ್ದೂರಿನವರು:

ತಮ್ಮೂರಿನ ದೇವತೆಯಾದುದರಿಂದ ಇದ್ದೂರಿನವರು ತಪ್ಪದೇ ಪೂಜಿಸುವರು, ಒಮ್ಮೊಮ್ಮೆ ಇದ್ದೂರಿನವರು ಕಾಲಾಂತರದಲ್ಲಿ ವ್ಯಾಜ್ಯಕ್ಕಾಗಿ, ಉದ್ಯೋಗಕ್ಕಾಗಿ, ವ್ಯಾಪಾರಕ್ಕಾಗಿ ಹೀಗೆ ಒಂದೊಂದು ಕಾರಣಗಳಿಗಾಗಿ ಪರವೂರಿಗೆ ಹೋಗಿ ನೆಲೆಸಿದಾಗಲೂ ಅವರು ತಮ್ಮೂರಿನ ಗ್ರಾಮದೇವತೆಯೆಂದು ಪ್ರತಿ ವರುಷ ನಡೆದುಕೊಳ್ಳುವರು.

) ಪರ ಊರಿನವರು :

ಈಕೆ ಲೋಕದೇವತೆಯಾದುದರಿಂದ ಆಂಧ್ರ, ಮಹಾರಾಷ್ಟ್ರಗಳಿಂದಲೂ ತಂಡೋಪತಂಡಗಳಾಗಿ  ಜನ ಬಂದು ಪೂಜಿಸುವರು. . ಕುರಿ ಬಲಿ ಕೊಡುವರು. ಉಟ್ಟಿಗೆ ಉಡುವರು. ಬತ್ತಲೆ ಸೇವೆ ಸಲ್ಲಿಸುವರು. ಸುತ್ತ ಮುತ್ತ ಊರಿನವರೂ ಬಂದು ಬಂದು ನಡೆದುಕೊಳ್ಳುವರು.

ಈ ದೇವಿಯ ಭಕ್ತರು ಸಾಮಾನ್ಯವಾಗಿ ಬೇಡಿಕೊಂಡಿದ್ದರೆ ಉಂಡಿ ಹಿಂಡಿಪಲ್ಲೆ, ಹೋಳಿಗೆ, ಉಪ್ಪು, ಉಳ್ಳಾಗಡ್ಡಿ, ಬದನೆಕಾಯಿ, ಕಾಯಿ ಕರ್ಪೂರ ಎಣ್ಣೆ ಬಂಡಾರ ಕೊಡುವರು. ವಿಶೇಷವಾಗಿ ಬೇಡಿಕೊಂಡಿದ್ದರೆ ಕುರಿಬಲಿಕೊಡುವದು. ಮಕ್ಕಳ ಜಾವಳ ತೆಗೆಸುವರು. ಕನ್ನಡಿ , ಗಂಟೆ, ಛತ್ರಿಕೆ, ಏರಿಸುವರು. ಅಡಿಗಿಗೆ ಬೇಕಾಗುವ ಸಾಮಾನುಗಳನ್ನು ಕೊಡುವರು. ದೇವಿಗೆ ಸೀರೆ ಕುಪ್ಪಸ, ಬಳೆ, ಡಾಬ, ಮೂಗುತಿ ಮಾಡಿಸಿ ಕೊಡುವರು. ಗುಡಿಗೆ ಸುಣ್ಣಬಣ್ಣ ಕೊಡುವರು. ಕಳಸ ಏರಿಸುವರು. ಅಂಗಳಕೆ ಶಹಾಬಾದ ಕಲ್ಲು ಹಾಸುವರು. ಅದು ಅವರವರು ಬೇಡಿಕೊಂಡಂತೆ ಇರುವುದು. ಇದಕ್ಕೆ ಯಾರ ಒತ್ತಾಯವೂ ಇರುವುದಿಲ್ಲ.

ಉಗ್ರ ಭಕ್ತರು

ಈ ಉಗ್ರ ಭಕ್ತರಲ್ಲಿ ಮೂರು ಪ್ರಕಾರ :

೧) ಬೆತ್ತಲೆ ಸೇವೆ ಸಲ್ಲಿಸುವವರು ೨) ಹೆಣ್ಣು ಜೋಗಿಣಿಯರಾಗಿ ಸೇವೆ ಸಲ್ಲಿಸುವವರು ೩) ಗಂಡು ಜೋಗೇರಾಗಿ ಸೇವೆ ಸಲ್ಲಿಸುವರು.

) ಬೆತ್ತಲೆ ಸೇವೆ ಸಲ್ಲಿಸುವವರು :

ತಮ್ಮ ಮನಸ್ಸಿನ ಬಯಕೆಗಳು ಬೇಗ ಈಡೇರಲು ಈ ಹಿಂದೆ ಕಠೋರ ವ್ರತಗಳಿದ್ದವು. ದೇವರನ್ನೊಲಿಸಿಕೊಳ್ಳಲು, ಸಿದ್ಧಿ ಪಡೆಯಲು, ಶಾಕ್ತ ಪಂಥದವರು, ಹಟಯೋಗಿಗಳು ಕೆಲ ಕಠಿಣವಾದ ಆಚಾರಗಳನ್ನು ಆಚರಿಸುತ್ತಿದ್ದರು. ಅವುಗಳಲ್ಲಿ ಈ ಬೆತ್ತಲೆ ಸೇವೆ ಒಂದು. ಆದರೆ ಹಿಂದೆ  ಈ ವೃತ ಗುಪ್ತವಾಗಿರುತ್ತಿತ್ತು. ಅಮವಾಸ್ಯೆ ರಾತ್ರಿ ಹೊತ್ತು ಯಾರಿಗೂ ಗೊತ್ತಾಗದಂತೆ ದೇವಿಯ ಗುಡಿಯಲ್ಲಿ ಹೋಗಿ ಪೂಜೆ ಸಲ್ಲಿಸಿ ಬರುವದಾಗಿತ್ತು. ಆದರೆ ಮುಂದೆ ಅದು ಪೂಜಾರಿಗಳ ಹೊಟ್ಟೆ ತುಂಬಲು ಮೇಲ್ವರ್ಗದವರಾದ ಗೌಡ, ಕುಲಕರ್ಣಿ, ಸಾಹುಕಾರರಿಗೆ ಮನರಂಜನೀಯ ವಸ್ತುವಾಗಲು ಈ ಬತ್ತಲ ಸೇವೆಯನ್ನು ಸಾಮೂಹಿಕವಾಗಿ, ಬಹಿರಂಗವಾಗಿ ಆಚರಿಸುವ ವಿಧಾನ ತಂದರು.

ಉಟ್ಟೀಗಿ ಉಡಸೀದೆ ಬತ್ತಾಲೆ ನಡೆಸೀದೆ
ನಕ್ಕವರೆಲ್ಲ ಮುರಸೀದೆ ಮುರಸೀದೆ

ಎಂಬ ಧಾರ್ಮಿಕ ಕವಚ ತೊಡಗಿಸಿದರು.

ಈ ಬತ್ತಲ ಸೇವೆ ಮಾಡುವವರು ಹೆಚ್ಚಾಗಿ ಶೂದ್ರರು. ಅದರಲ್ಲಿ ಪಂಚಮರು ಬಂದಂಥೆ ರೋಗ ಗುಣವಾಗಲು, ಮಕ್ಕಳಾಗಲು ತಾಯಿಗೆ ಬತ್ತಲೆ ಸೇವೆ ಮಾಡುವೆನೆಂದು ಬೇಡಿಕೊಂಡರು. ರೋಗ ಗುಣವಾದಾಗ, ಮಕ್ಕಳಾದಾಗ ಜೀವನದುದ್ದಕ್ಕೂ ಈ ಸೇವೆ ಸಲ್ಲಿಸುವವರು. ಕೆಲವರು ಬೇಡಿಕೊಂಡ ಕೂಡಲೆ ಬೆತ್ತಲೆ ಸೇವೆ ಆರಂಭಿಸುವರು. ಓದು ಬರೆಯದ ನಿರಕ್ಷರಿ ಬಡವೆ, ಮುಗ್ದ ಜನ ವಿಚಾರ ಮಾಡದೆ ತಮ್ಮೆಲ್ಲ ಸಂಕಟಗಳಿಗೆ ದೇವಿಯೆ ಕೊನೆಯ ಮದ್ದೆಂದು, ಪೂಜಾರಿ ಹೇಳಿದ್ದೆ ವೇದವಾಕ್ಯವೆಂದು ನಡೆದುಕೊಂಡು ಬಂದುದಕ್ಕೆ ಶೋಷಣೆ ಹೀಗಾಗಬೇಕಾಯಿತು.

ಆದರೆ ೧೯೭೯ ರಿಂದ ದಲಿತ ಸಂಘರ್ಷ ಸಮಿತಿಯವರ ಪಟ್ಟ ಪ್ರಯತ್ನದಿಂದ ಮಾನವ ಸಂಸ್ಕೃತಿಗೆ ಕಳಂಕರೂಪವಾಗಿರುವ ಈ ಬೆತ್ತಲ ಸೇವೆ ನಿಂತುಕೊಂಡಿದೆ. “ತನ್ನ ಬೆಳೆದ ಮಕ್ಕಳು ಬೆತ್ತಲಾಗಿ ಬಟ್ಟೆಬಿಟ್ಟು ಬರುವುದು ಯಾವುದೇ ತಾಯ್ತಂದೆಗಳು  ಬಯಸುವುದಿಲ್ಲ. ಹಾಗೆಯೇ ದೇವರು ತನ್ನ ಬೆಳೆದ ಮಕ್ಕಳ ಮೈಯನ್ನು ಮಂದಿಗೆ ತೋರಿಸಿ ತಾನು ಸಂತೋಷ ಪಡುವ ವಿಟ ಅಥವಾ ಲಂಪಟಿಯಲ್ಲ. ದೇವರಿಗೆ ಬೇಕಾದದ್ದು ಶುದ್ಧ ಭಕ್ತಿ, ಗುಪ್ತ ಭಕ್ತಿ ಆದರೆ ಪ್ರದರ್ಶನವಲ್ಲ”  ಎಂದು ಅಲ್ಲಿ ಇರುವ, ಬರುವ ಜನಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗುಲ್ಬರ್ಗ ಘಟಕದವರು ಪ್ರತಿವರುಷ ತಿಳಿಹೇಳುತ್ತ ಹೊರಟ ಫಲದಿಂದ ಕ್ರಮೇಣ ಈ ಪದ್ಧತಿ ಕಡಿಮೆಯಾಗುತ್ತ ನಡೆದಿದೆ. ಈಗೆಲ್ಲ ಈ ಉತ್ಸವಗಳಲ್ಲಿ ಪೋಲಿಸರಿಗೆ ಅಂಜಿ ಕೆಲವರು, ಕರ್ನಾಟಕ ದಲಿತ ಸಂಘರ್ಷ ಸಮಿತಿಯವರ ಹೇಳಿಕೆಗೆ  ಕೆಲವರು ಬಟ್ಟೆ ಉಟ್ಟುಕೊಂಡು ದೇವಿಗೆ ಆ ಐದು ಶುಕ್ರವಾರ ರಾತ್ರಿಗಳು ಪ್ರದಕ್ಷಿಣೆ ಹಾಕಿ ಬರುವರು. ಆದರೂ ಕೆಲ ಮೂಢನಂಬಿಕೆಯ ಜನ ಉತ್ಸವದ ಮೊದಲೆ ಇಲ್ಲವೆ ಉತ್ಸವ ಮುಗಿದ ಬಳಿಕ ಎಲ್ಲ ದೇವಿ ತಮ್ಮ ಮೇಲೆ ಮುನಿದುಕೊಳ್ಳುವಳೊ ಎಂದು ತಿಳಿದು ಬತ್ತಲೆ ಸೇವೆ ಮಾಡುವರೆಂಬ ಸುದ್ದಿಯೂ ಇದೆ. ನೂರಾರೂ ವರುಷಗಳಿಂದ ಬಂದ ಈ ಸಂಪ್ರದಾಯ ಒಮ್ಮೆಲೆ ಹೋಗಲು ಸಾಧ್ಯವಿಲ್ಲ ಇದಕ್ಕೆ ಇನ್ನು ಕೆಲವರುಷಬೇಕು.


[1]     ಬೀದರ ಜಿಲ್ಲೆಯ ಜನಪದ ಗೀತೆಗಳು : ಸಂ. ಕ್ಯಾತನಹಳ್ಳಿ ರಾಮಣ್ಣ ಪು : ೮,೧೯೭೬.