ಬಸವಿ ಬಿಡುವ ಸಂಪ್ರದಾಯ ಈ ಕೆಳಕಂಡ ಊರುಗಳಲ್ಲಿ ಇದೆ.

) ಸವದತ್ತಿ ಎಲ್ಲಮ್ಮನಲ್ಲಿ  :

ಈ ಬಸವಿ ಬಿಡುವ ಸಂಪ್ರದಾಯ ಸವದತ್ತಿ ಎಲ್ಲಮ್ಮನಲ್ಲಿ ಈ ದೇಶದಲ್ಲಿ ಇರಲಾರದಷ್ಟು ವಿಪರೀತವಾಗಿರುವುದು. ಪ್ರತಿವರುಷ ಇಲ್ಲಿ ಇನ್ನೂರರಿಂದ ಹಿಡಿದು ಮುನ್ನೂರರವರೆಗೆ ದೇವಿಯ ಹೆಸರಿನಲ್ಲಿ ಬಸವಿಯನ್ನು ಬಿಡುವರು. ಅವರಿಗೆ ಜೋಗಿಣಿಯ ದೀಕ್ಷಾ ಬೋಧೆ ಕೊಟ್ಟರೂ ಅವರೆಲ್ಲರೂ ದೇವಿಯ ಸೇವೆ ಬಿಟ್ಟು ಆ ಹೆಸರಿನಲ್ಲಿ ಬದುಕಲಿಕ್ಕೆ ಸೂಳೆಗಾರಿಕರ ಆರಂಭಿಸುವರು. ಕೆಲವೊಂದು ನಿಷ್ಠಾವಂತ ಜೋಗಿಣಿಯರು ಮಾತ್ರ ಈ ಕೆಲಸ ಮಾಡದೆ ತಲೆಯ ಮೇಲೆ ದೇವಿಯನ್ನು ಹೊತ್ತಿಕೊಂಡು ಚೌಡಿಕೆ ಬಾರಿಸುತ್ತ ಪದ ಹಾಡುತ್ತ ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತ ಬಂದೆ ದುಡ್ಡಿನಿಂದ ದವಸಧಾನ್ಯದಿಂದ ರೊಟ್ಟಿಚಟ್ಟನಿಯಿಂದ ತಮ್ಮ ಜೀವನ ಸಾಗಿಸುವರು.

) ಮುನಿರಾಬಾದ ಮತ್ತು ಆರೋಲಿ ಹುಲಿಗೆಮ್ಮನಲ್ಲಿ :

ಬಸವಿ ಬಿಡುವ ಪದ್ಧತಿ ಸವದತ್ತಿ ಎಲ್ಲಮ್ಮನಲ್ಲಿ ದಟ್ಟವಾಗಿರುವಂತೆ ಇಲ್ಲಿ ಇರದಿದ್ದರೂ ಈ ದೇವಿಯರೆ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿದ್ದದ್ದು ಕಾಣಬಹುದು.

ಮುನಿರಾಬಾದಿನ ಸಮೀಪದಲ್ಲಿರುವ ಹೊಸಕೋಟೆ ಗಂಗಾವತಿಗಳಲ್ಲಿ ಆರೋಲಿಗೆ ಸಮೀಪ ಇರುವ ಮಾನ್ವಿ, ದೇವಗುರ್ಗ, ರಾಯಚೂರುಗಳಲ್ಲಿ ಹುಲಿಗೆಮ್ಮನಿಗೆ ಬಿಟ್ಟ ಹೆಣ್ಣುಗಳು ಬಸವಿಯರಾಗಿದ್ದದ್ದು. ಆದರೆ ಇವರು ತಲೆ ಮೇಲೆ ದೇವಿಯನ್ನು ಹೊತ್ತು ತಿರುಗಾಡಿ ಬದುಕುವುದಿಲ್ಲ. ತಮ್ಮ ತಮ್ಮ ಮನೆಯಲ್ಲಿಯೇ ಈ ಉದ್ಯೋಗವನ್ನು ಮಾಡುತ್ತ ಇರುವರು. ಆದರೆ ಇವರು ಕೊರಳಲ್ಲಿ ದೇವಿಯ ಪಾದ ಕಟ್ಟಿಕೊಂಡಿರುವರು. ಪ್ರತಿ ಮಂಗಳವಾರ, ಶುಕ್ರವಾರ ದೇವಿಯ ವಾರಗಳೆಂದು ಉಪವಾಸ ಇರುವರು. ಆ ದಿವಸ ಈ ಉದ್ಯೋಗ ಮಾಡುವುದಿಲ್ಲ. ತಾವು ಮಲಗುವ ಮನೆಯಲ್ಲಿ ಇಲ್ಲವೆ ಜಗಲಿಯ ಮೇಲೆ ದೇವಿಯ ಫೋಟೂ ಇಟ್ಟು ಪೋಜಿಸುವರು. ಒಬ್ಬನು ತಮಗೆ ಸಂಪೂರ್ಣ ನಂಬಿದ್ದರೆ ಇನ್ನೊಬ್ಬನಿಗವರು ನೋಡುವುದಿಲ್ಲ. ಆದರೆ ಬಂದವನು ಒಮದು ದಿವಸದ ಮನುಷ್ಯನಾದರೆ ಮರುದಿನ ಮತ್ತೊಬ್ಬ ಬಂದರೆ ಪ್ರವೇಶ ಕೊಡುವರು. ಇವರು ಪಟ್ಟಣದ ವೇಶ್ಯೆಯರಂತೆ ದುಡ್ಡು ಹೀರುವ ಜಿಗಣೆಗಳಾಗುವದಿಲ್ಲ. ಪ್ರೀತಿಯಿಂದ ಕೊಡುವಷ್ಟನ್ನು ತೆಗೆದುಕೊಳ್ಳುವರು. ಈ ಜನ ಆಚರಿಸುವ ಹಬ್ಬ ಹುಣ್ಣಿಮೆ, ವ್ರತ, ನೇಮ, ಪೂಜಾ, ಆಚಾರ ನೋಡಿದರೆ ನಮ್ಮ ಸಂಸ್ಕೃತಿ ಏನಾದರೂ ಇದ್ದರೆ ಇವರಲ್ಲಿಯೇ ಇರಬೇಕೆನಿಸುವದು. ಅದಕ್ಕಾಗಿಯೇ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಸೂಳೆಯರ ಅಗ್ಗಳಿಕೆ ಬಂದದ್ದು. ಬ್ರಾಹ್ಮಣನು ತನ್ನ ಗಂಡನ ಮನೆಗೆ ಹೋಗುವ ಮಗಳನ್ನು ಮೊದಲು ಮುದಿಸೂಳೆಯ ಹತ್ತಿರ ಈ ರೀತಿ ಕಲಿಯಲು ಕಳಿಸುತ್ತಿದ್ದನು.

ಬೆತ್ತಲ ಸೇವೆಯ ಸಂಪ್ರದಾಯಗಳು

) ಸವದತ್ತಿಯಲ್ಲಿ ಇಲ್ಲ :

ಬೆತ್ತಲೆ ಸೇವೆ ಸವದತ್ತಿಯಲ್ಲಿ ಇಲ್ಲ. ಇಲ್ಲಿ ಜೋಗಿಣಿಯರಾಗುವುದು, ಬಸವಿಯರಿಗೆ ಬಿಡುವುದು ವಿಪರೀತಾಗಿದ್ದರೂ ಬೆಳಗಾಂವಿ, ಬಿಜಾಪುರ, ಧಾರವಾಡ ಈ ಮೂರು ಜಿಲ್ಲೆಗಳಲ್ಲಿ ಈ  ಸಂಪ್ರದಾಯ ದಟ್ಟವಾಗಿ ಹರಡಿಕೊಂಡಿದ್ದರೂ ಬೆತ್ತಲ ಸೇವೆ ಇರಲಾರದ್ದು ತುಂಬ ಅಚ್ಚರಿಯನ್ನುಂಟು ಮಾಡುವುದು.

) ಹಿರಿಹುಲಿಗೆಮ್ಮನಲ್ಲಿ ಇಲ್ಲ :

ರಾಯಚೂರ ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಹುಲಿಗೆಮ್ಮನಲ್ಲಿ ಬೆತ್ತಲ ಸೇವೆ ಇದ್ದರೆ ಇದೇ ಜಿಲ್ಲೆಯ ಕೊಪ್ಪಳ ತಾಲೂಕಿನ ಮುನಿರಾಬಾದ ಹುಲಿಗೆಮ್ಮನಲ್ಲಿ ಇಲ್ಲ. ಒಂದೇ ಜಿಲ್ಲೆಯಲ್ಲಿ ಒಂದೇ ಹೆಸರಿರುವ ದೇವಿಯರಲ್ಲಿ ಒಂದು ಕಡೆ ಇರುವುದು, ಇನ್ನೊಂದು ಕಡೆ ಇರಲಾರದ್ದು ಅಭ್ಯಸಿಸುವ ಸಂಗತಿಯಾಗಿದೆ.

೧) ಇದು ಹೀನ ಸಂಪ್ರದಾಯವೆಂದು ಇಲ್ಲಿಯ ಜನ ಇದನ್ನು ಬಿಟ್ಟಿರಬಹುದೆ ?

೨) ಇಲ್ಲಿಯ ಪೂಜಾರಿಗಳು ಇಂಥ ಅಸಂಸ್ಕೃತ ಸೇವೆಗೆ ಪ್ರೋತ್ಸಾಹ ನೀಡಿರಲಿಕ್ಕಿಲ್ಲವೆ ?

೩) ಇಲ್ಲಿಯ ಭಕ್ತರಿಗೆ ಈ ಬಗೆಯಲ್ಲಿ  ಬೇಡಿಕೊಳ್ಳುವದು ಸರಿಕಾಣಿರಲಿಕ್ಕಿಲ್ಲವೆ ?

೪) ಇಲ್ಲಿಯ ಮೇಲ್ವರ್ಗದವರು ಬಹಳಷ್ಟು ದೌರ್ಜನ್ಯ ದಬ್ಬಾಳಿಕೆ ನಡೆಸಿದವರು ಆಗಿಲಿಕ್ಕಿಲ್ಲವೆ ?

೫) ಇಲ್ಲಿಯ ಕೆಳವರ್ಗದ ಜನ ಮುಗ್ಧರು, ಬಡವರು ಆಗಿರಲಿಕ್ಕಿಲ್ಲವೆ ?

ಹೀಗೆ ಬಹಳಷ್ಟು ಪ್ರಶ್ನೆಗಳು ಏಳುವವು. ಇದರ ಹಿಂದೆ ಬಹಳಷ್ಟು ರಾಜಕೀಯ ನಡೆದಂತೆ ಕಾಣುವುದು.

) ಅರೋಲಿ ಹುಲಿಗೆಮ್ಮನಲ್ಲಿ ಇದೆ :

ಬತ್ತಲ ಸೇವೆ ಸಲ್ಲಿಸುವ ಸಂಪ್ರದಾಯ ಉತ್ತರ ಕನಾಟಕದಲ್ಲಿ ಚುಂಚೂರ ಮಾಪುರ ತಾಯಿಯಲ್ಲಿ ಇದ್ದಂತೆ ಅರೋಲಿ ಹುಲಿಗೆಮ್ಮನಿಗೆ. ಮೊದಲು ಈಕೆಯ ಉತ್ಸವವು ಆಗಿ ಹುಣ್ಣಿಮೆಯಿಂದ ಕಾರ ಹುಣ್ಣಿಮೆಯ ತನಕ ನಡೆಯುತ್ತಿತ್ತು. ಆದರೆ ಜನ ಕೇವಲ ಈಗ ಮೂರನೆಯ ಶುಕ್ರವಾರವಷ್ಟೆ ಆಚರಿಸುವರು. ಅರೋಲಿಯವರು ಚುಂಚೂರನವರಂತೆ ಮನೆಯಲ್ಲಿ ಜಳಕಮಾಡಿ ಬರಬೇಕಾಗಿಲ್ಲ ಕಾರಣ ಗುಡಿಯು ಹಿಂದೆ ಒಂದು ಕೆರೆ ಇದೆ. ಈಗ ಇದಕ್ಕೆ ಹುಲಿಗೆಮ್ಮನ ಕೆರೆ ಎಂದೆ ಕರೆಯುವರು.ಈ ಕೆರೆಯಲ್ಲಿ ಜನ ಪ್ರದಕ್ಷಿಣೆಗೆ ಮೊದಲು ಜಳಕ ಮಾಡಿ ಮೈಗೆ ಗಂಧ, ಭಂಡಾರ ಹಚ್ಚಿಕೊಂಡು ಬಾಯಿಯಲ್ಲಿ ಬೇವಿನ ತಪ್ಪಲು ಹಿಡಿದುಕೊಂಡು ತಲೆಯ ಮೇಲೆ ಚುಂಚೂರದಲ್ಲಿರುವಂತೆ ಗೋಧಿ ಕಣಕದಿಂದ  ಮಾಡಿದ ದೀಪ ತಾಬಂಡಿಯಲ್ಲಿ ಇಟ್ಟುಕೊಂಡು ಮಾತಾಡದೆ ಹೊರಡುವರು. ಚುಂಚೂರದಲ್ಲಿ ಇದು ಮಧ್ಯರಾತ್ರಿ  ನಡೆದರೆ ಇಲ್ಲಿ ಸೂರ್ಯಮುಳುಗಿ ಕತ್ತಲಾಗುತ್ತದೆ ಆರಂಭವಾಗುವುದು.

ಚುಂಚೂರದಲ್ಲಿ “ಉಧೋ ಉಧೋ ಮಾಪುರ ತಾಯಿಗೆ ಉಧೋ ಉಧೋ ಎಂದರೆ ಅರೋಲಿಯಲ್ಲಿ  “ಉಧೋ ಉಧೋ ಹುಲಿಗೆಮ್ಮ ತಾಯಿಗೆ ಉಧೋ ಉಧೋ” ಎನ್ನುವರು. ಚುಂಚೂರಿನವರಂತೆ ಇಲ್ಲಿಯವರು ಬೆತ್ತಲೆ ಸೇವೆ ಆಚರಿಸುವ ದಿನ ಉಪವಾಸ ಇರುವರು. ಗುಡಿ ಸುತ್ತಿ ಬಂದಮೇಲೆ ಇವರ ಬಂಧುಗಳು ಹೊಸಬಟ್ಟೆಯನ್ನು ಇಲ್ಲಿಯೂ ಉಡಿಸುವರು.

ರಾತ್ರಿಯಲ್ಲಿ ಬೆತ್ತಲೆ ಸೇವೆ ಆಚರಿಸಿ, ಹಗಲಿನಲ್ಲಿ ಉಟ್ಟಿಗೆ ಉಟ್ಟು, ಕೊಡಹುತ್ತು ಚುಂಚೂರಿನವರಂತೆ ಇಲ್ಲಿಯೂ ಕುರಿ ಬಲಿಕೊಡುವರು. ಉಂದಿ ಹಿಂಡಿಪಲ್ಲೆ, ತನೂಂದಿ, ಹೋಳಿಗೆ ಉಪ್ಪು, ಉಳ್ಳಾಗಡ್ಡಿ, ಬದನೆಕಾಯಿ ದೇವಿಗೆ ನೈವೇದ್ಯವಾಗಿ ನೀಡುವರು. ಹರಕೆ ಹೊತ್ತಿದ್ದರೆ ಎಂಥ ಬಡತನವಿದ್ದರೂ ಸಾಲಮಾಡಿ ದೇವರು ಮಾಡುವರು. ಚುಂಚೂರಿನವರಂತೆ ಇಲ್ಲಿಯೂ ಹರಕೆ ಹೊತ್ತವರು, ರೋಗ ಗುಣವಾದರು, ಮಕ್ಕಳಾದರು. ಲಗ್ನ ಮಾಡುವವರು, ಕುರಿಬಲಿ ಕೊಡುವರು. ಚುಂಚೂರಿನವರಂತೆ ಇಲ್ಲಿಯೂ ದೇವಿಗೆ ಬಿಟ್ಟ ಹುಡುಗಿಯರು ದೊಡ್ಡವರಾದರೆ ಇದೇ ದಿವಸ ಮುಂಜಾನೆ ಜೋಗಿಣಿಯ ದೀಕ್ಷಾ ಬೋಧೆ ಮಾಡುವರು. ಇವರು ಲಗ್ನ ಮಾಡಿಕೊಂಡು ಹೋಗಬಹುದು. ಇಲ್ಲವೆ ಈ ದೇವಿ ಸೇವೆ ಮಾಡುತ್ತ ಆಕೆಯ ಮುರ್ತಿ ಹೊತ್ತು ಪದ ಹಾಡುತ್ತ ಕುಣಿಯುತ್ತ ಊರುರೂ ತಿರುಗುತ್ತ ಬಂದಂಥ ದವಸ, ಧಾನ್ಯ, ದುಡ್ಡು ಪಡಿ ಪದಾರ್ಥಗಳಿಂದ ಜೀವನ ಸಾಗಿಸಬಹುದು. ಹೆಚ್ಚಾಗಿ ಚುಂಚೂರ ಮಾಫುರ ತಾಯಿಯಲ್ಲಿ ಇರುವಂಥ ಆಚಾರ ವಿಚಾರಗಳು ಅರೋಲಿ ಹುಲಿಗೆಮ್ಮನಲ್ಲಿ ಕಾಣುತ್ತೇವೆ.

ಅಂಗಡಿಯಲ್ಲಿ ಗುಡಾರಗಳು

ಉತ್ಸವದ ದಿನಗಳು ಸಮೀಪಿಸುತ್ತಲೇ ಊರಲ್ಲಿ ಮತ್ತು ಗುಡಿ ಹತ್ತಿರ ಚಹಾ ಹೋಟೀಲು, ಅಂಗಡಿ ಗುಡಾರಗಳು ಬೀಳಲಾರಂಭಿಸುವವು. ಹೆಚ್ಚಿನ ಜನ ಮೂರನೆಯ ಶುಕ್ರವಾರಕ್ಕಷ್ಟೇ  ಗುಡಾರು ಅಂಗಡಿಗಳನ್ನು ಹಾಕಿದರೆ ಕೆಲವರು ಇಡೀ ತಿಂಗಳು ಇಡುವರು. ಈ ಅಂಗಡಿ, ಗುಡಾರಗಳಲ್ಲಿ ಜನ ಬದುಕಿಗೆ ಬೇಕಾಗುವ ಸಾಮಾನುಗಳನ್ನಿಡುವರು, ಇಲ್ಲಿ ಹಳ್ಳಿ ಜನ ಹೆಚ್ಚಾಗಿ ಸೇರುವುದರಿಂದ ಪಟ್ಟಣದ ಎಲ್ಲ ಸಾಮಾನುಗಳನ್ನು ಮಾರಾಟಕ್ಕಿಡುವರು. ಅಡಿಗೆಯ ಸಾಮಾನು, ಅಲಂಕಾರದ ಸಾಮಾನು, ಒಕ್ಕಲುತನ ಸಾಮಾನುಗಳಲ್ಲದೆ ತಿನ್ನುವ ಸಿಹಿ ಪದಾರ್ಥಗಳನ್ನು ಇಡುವರು.

ಮನೋರಂಜನೆ

ಹಳ್ಳಿಯ ಎಲ್ಲಾ ಜಾತ್ರೆ, ಉತ್ಸವಗಳಲ್ಲಿ ಹಳೇತಲೆನಾರಿನವರು ಆಡುವಂತೆ ಇಲ್ಲಯೂ ದೊಡ್ಡ್‌ಆಟ, ದಪ್ಪನಾಟ ಆಡುವರು. ಇತ್ತೀಚಿನ ಯುವಕರು ನಾಟಕ ಆಡುವರು. ಇವನ ಜೊತೆಗೆ ಹಾಡಕ್ಕೆ, ಕುಸ್ತಿಗಳು ನಡೆಯುವವು.

ಚುಂಚೂರಮಾಪುರ ತಾಯಿಯಿಂದ ಹುಟ್ಟಿದ ಸಾಹಿತ್ಯ

ಉತ್ತರ ಕರ್ನಾಟಕದಲ್ಲಿ ಬರುವ ಮುನಿರಾಬಾದ ಹುಲಿಗೆಮ್ಮ ಅರೋಲಿ ಹುಲಿಗೆಮ್ಮ, ಸವದತ್ತಿಯ ಎಲ್ಲಮ್ಮ ಮತ್ತು ಚುಂಚೂರ ಮಾಪುರ ತಾಯಿ ಇವರು ಎಲ್ಲಮ್ಮನ ಪರಂಪರೆಗೆ ಸೇರುವ ದೇವತೆಗಳಾದುದರಿಂದ ಇವರೆಲ್ಲರ ಹಾಡುಗಳು ಹೆಚ್ಚು ಕಡಿಮೆ ಒಂದೇ ಬಗೆಯಾಗಿವೆ. ಆ ಹಾಡುಗಳಲ್ಲಿ ಬರುವ ಹುಲಿಗೆಮ್ಮ, ಎಲ್ಲಮ್ಮ, ಮಾಪುರಿ ಎಂಬ ಪದಗಳಿಂದ ಈ ಹಾಡುಗಳು ಇಂಥ ದೇವತೆಗೆ ಸಂಬಂಧಿಸಿದವು ಎಂದು ತಿಳಿಯಬಹುದು. ಸ್ಥಾನಭೇದದಿಂದ ಈ ಹಾಡುಗಳಲ್ಲಿಯ ಭಾಷಾ ವ್ಯತ್ಯಾಸ ಗುರುತಿಸಿ ಈ ಹಾಡುಗಳು ಇದೇ ದೇವತೆಯವೆ ಎಂದು ನಿಚ್ಚಳವಾಗಿ ಹೇಳಬಹುದು. ಚುಂಚೂರ ಮಾಪುರ ತಾಯಿಯು ಮಾಹಾರಾಷ್ಟ್ರದ ಸೀಮೆಗೆ ಸಮೀಪದವಳಾದುದರಿಂದ, ಅಲ್ಲಿ ಮರಾಠಿ ಭಾಷೆಯ ಸಂಸ್ಕೃತಿಯ ಪ್ರಭಾವ, ಮುನಿರಾಬಾದ ಮತ್ತು ಅರೋಲಿ ಹುಲಿಗೆಮ್ಮರಿಗೆ ಆಂಧ್ರ ತೆಲಂಗಾಣ ಸೀಮೆಗಳು ಸಮೀಪವಾಗಿರುವುದರಿಂದ ಆ ದೇವತೆಯ ಮೇಲೆ ತೆಲುಗು ಭಾಷೆ ಮತ್ತು ಸಂಸ್ಕೃತಿಯ ಪ್ರಭಾವ ಆದುದರಿಂದ ಅಲ್ಲಿಯ ಹಾಡುಗಳಲ್ಲಿ ಶುದ್ಧ ಸಾಹಿತ್ಯಕವಾದ ಹಾಡುಗಳು ಹುಟ್ಟಿ ಕಲಾತ್ಮಕವಾಗಿ ಕಾಣಿಸಿಕೊಳ್ಳಲು ಕಾರಣವಾಗಿವೆ.

ಎಲ್ಲಮ್ಮ, ಹುಲಿಗೆಮ್ಮನ ಹಾಡುಗಳನ್ನು ಹಾಡುತ್ತ ದೇವಿಯ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಬರುವವರಿಗೆ ಜೋಗಿಣಿಯರು, ಜೋಗಿತಿಯರು, ಜೋಗಮ್ಮ ದೇವರು ಎಂದರೆ ಚುಂಚೂರ ಮಾಪುರ ತಾಯಿಯ ಮೂರ್ತಿ ಹೊತ್ತು ಹಾಡುಗಳನ್ನು ಹೇಳುತ್ತ ಬರುವವರಿಗೆ  ಈ ಕಡೆಗೆ ಭೂತೇರು ಎನ್ನುವರು. ದಕ್ಷಿಣ ಕನ್ನಡದಲ್ಲಿ  ಭೂತಾರಾಧನೆ ನಡೆಯುವದು. ಒಂದರ್ಥದಲ್ಲಿ ದೇವಿಯು ಸಹಿತ ಭೂತದಂತೆ ಕಾಡುವವಳೆ. ಇಂಥ ಭೂತದ ಆರಾಧನೆ ಮಾಡುವವರಿಗೆ ಭೂತೇರು ಎಂಬ ಅರ್ಥ ಬಂದಿರಬೇಕೆ ಎಂಬ ಕುರಿತು ಪದಗಳು ಎನ್ನುವರು.

ಈ ದೇವಿಯ ಮಹಿಮಾ ಪದಗಳನ್ನು ಕಟ್ಟುವವರು ಗರತಿಯ ಹಾಡುಗಳಿಗೆ ಮರುಳಾದಂತೆ ಕಾಣುವುದು. ಆದುದರಿಂದ ಭೂತೇರ ಹಾಡುಗಳಲ್ಲಿ ಆ ಪ್ರಭಾವ ಆದಂತೆ ಕಾಣುವುದು. ಗರತಿಯ ಬೀಸುವ ಕಲ್ಲಿನ ಹಾಡಿನ ಪ್ರಭಾವ ಆದರೂ ಭೂತೇರು ಬಳಸಿಕೊಂಡಿರುವ ರೀತಿ ಅನನ್ಯವಾದುದು. ಮಾಪುರಿ ಎಲ್ಲಿಂದ ಬಂದವಳು, ಆಕೆ ಎಂಥವಳೆಂಬುದನ್ನು ಕಲಾತ್ಮಕವಾಗಿ ಹೇಳಿದ್ದಾರೆ.

ಗಚ್ಚೀನ ಗುಡಿಯಾಕಿ ಗಜನ ಮಂಟಪದಾಕಿ
ಇದ್ದವರ ಮಗಳ ಏಸಾದನಿಂತೆ | ಜಗದಂಬಾ
ಅರೆನಾಡಾದಾಕಿ ಅಡ್ಡ ಕುಂಕುಮದಾಕಿ
ತುಳಜಾಪುರದಾಕಿ ಏತ್ತುಕ್ಕು ಬಾರೆ
ತುಳಜಾನೆ ಪುರದಾಕಿ ತುಕುಬಾಯಿ ಬರುವಾಗ
ದುಂದ ಮಲ್ಲಿಘೇನು ದುರದಯಾವೆ
ಹುಲ್ಲಿನಲ್ಲಿ ಹುದಗ್ಯಾಳ ಮಾಲಿನಲಿ ಮನಗ್ಯಾಳ
ದಗ್ಗಿನ ಗಾಡಿ ಏ ದಣುದಾಳೆ
ದಗ್ಗಿನ ಗಾಡಿ ಎಲಿದೂಡಿ ದಣದಾಳೆ ತುನಜಮ್ಮ
ಮಗ್ಗದ ಕಣ್ಣ ಏ ತೆರುದಾಳೆ

ಎಂಬ ಪದ ಈ ಕೆಳಗಿನ ಹಾಡಿಗಿಂತ ಭಿನ್ನವಾಗಿ ಹೇಳಿದ್ದನ್ನು ನಾವಿಲ್ಲಿ ಕಾಣಬಹುದು :

ಹೂವಿನಲಿಹುದೆಗ್ಯಾನ ಮಾಲಲಿ ಮಲಗ್ಯಾನ
ಮಗ್ಗೀಲಿ ಕಣ್ಣು ತೆರೆದಾನ | ಲಿಂಗಯ್ಯನ
ನೋದಟಿಗೆ ನಿದ್ದಿ ಬಯಲಾಗಿ

ಸವದತ್ತಿ ಎಲ್ಲಮ್ಮನೆ ತುಳಜಾಪುರದ ಜಗದಂಬನೆ ಚುಂಚೂರ ಮಾಪುರಿ ಎಂದು ಆಕೆಯ ಬರವನ್ನು ಭಕ್ತರು ಸ್ವಾಗತಿಸುವ ರೀತಿ ಇದನ್ನು ಹಾಡುಗಾರರು ಬಣ್ಣಿಸಿ ಹೇಳುವ ವಿಧಾನ ತುಂಬ ಕಲಾತ್ಮಕವಾಗಿದೆ. ಮೊದಲು ದೇವಿ ಉಡುವ ಸೀರೆ ವರ್ಣನೆ ಮಾಡುತ್ತ ಹಾಡು ಆರಂಭಿಸುವರು :

ಜಗದಂಬ ಉಡುವಾದು ಜಲತಾರಿ ಚುಂಚೂರು
ಮಾಪುರುಡುವಾಡು ಎಲಿಬೇವು
ಬನ್ನಿಯ ಮರದಾಕಿ ಬೆಳ್ಳಿಯ ಮಕದಾಕೆ
ಹೊನ್ನ ಮಾಪುರಿ ಹೊರಗೊಂಡೆ
ಹೊನ್ನನೆ ಮಾಪುರಿ ಹೊರಗೊಂಡೆ ಬರುವಾಗ
ಮುತ್ತೀನ ಪರಸಿ ಎದುರಾಗೆ
ಉದುರು ಮಲ್ಲಿಗಿ ಹೂವ ಬಿದರ ಬುಟ್ಟಿಯ ತುಂಬಿ
ಚೆದುರಿ ನಿನ್ನ ದಾರಿ ನೋಡತೇನಿ
ಚೆದುರೀಯ ನಿನದಾರಿ ನೋಡತೇನಿ ನನತಾಯಿ
ನನ ಮ್ಯಾಲ ದಯಮಾದೆ
ಅಚ್ಚಮಲ್ಲಿಗಿ ಹೂವ ಬಿಚ್ಚಿ ನಿಂತಾವ ಬಾರೆ
ಮೆಚ್ಚಿನ ತಾಯಿ ಸದಾನಂದೆ
ಹೆಚ್ಚಿನ ಎಲಿತಾಯಿ ಸದಾನಂದಿ ಬರುವಾಗ
ಬಿಟ್ಟ ಮಲ್ಲಿಗಿ ಉದುರ್ಯಾವ

ಎನ್ನುವಲ್ಲಿ ಗರತಿಯ ಬೀಸುವ ಕಲ್ಲಿನ ಪದಗಳ ಸಾಲುಗಳು ಬಂದರೂ ಉಪಯೋಗಿಸಿಕೊಂಡಿರುವ ಪ್ರಸಂಗದಿಂದ ಆ ಸಾಲುಗಳು ಪದಗಳ ಹೊಸ ಜೀವ ಪಡೆಯುವವು.

ಚುಂಚೂರ ಮಾಪುರ ತಾಯಿಯ ಸಾಮರ್ಥ್ಯ ಎಂಥದ್ದು ಎಂಬುದು ಈ ಕೆಳಗಿನ ಹಾಡು ಹೇಳುವುದು. ಈ  ಹಾಡಿನ ಮೂಲಕ ಹಾಡುಗಾರ್ತಿ ಏಕಕಾಲಕ್ಕೆ ಪಂಪಕವಿ ಹೇಳಿದಂತೆ ಧರ್ಮವನ್ನು ಕಾವ್ಯ ಧರ್ಮವನ್ನು ಮೇಳೈಸಿ ಹೇಳಿದ್ದು ಕಾಣಬಹುದು :

ಎಡಕೇಳು ಉಡಿಯಕಟ್ಟ ಬಲಕೇಲೂ ಉಡಿಯಕಟ್ಟಿ
ತಿರುಗುತಾಳ ಮಾಯಿ ತಿರುಗುತಾಳ
ಗುಡ್ಡದ ವಾರಿ ವಾರಿ ಅಂಬ ತಿರುಗುತಾಳ ಗುಡ್ಡದ ವಾರ ವಾರಿ
ದುಂಡ ದುಂಡ ಉಡಿಯದ ಕಟ್ಟಿ ಕಂಡ ಕಂಡ ತಪ್ಪಲ ಹೊರಿನೆ
ತುಂಬತಾಳ ಮಾಯಿ ತುಂಬತಾಳ
ತನ್ನ ಉಡಿ ದೇವಿ ತುಂಬತಾಳ ತನ್ನ ಉಡಿ
ಅಂಗೈಯ ಒಳ್ಳ ಮಾಡಿ ಮುಂಗೈಯ ಒಣಕಿ ಮಾಡಿ
ಕುಟ್ಟತಾಳ  ಮಾಯಿ ಕುಟ್ಟತಾಳ
ಭಂಗೀಯ ಪುಡಿ ದೇವಿ ಕುಟ್ಟುತಾಳ ಭಂಗೀಯ ಪುಡಿ
ಕಲ್ಲ ಕಡಬ ಮಾಡಿ ಮುಳ್ಳ ಸ್ಯಾವಿಗಿ ಮಾಡಿ
ಮಾಡ್ಯಾಳ ದೇವಿ ಮಾಡ್ಯಾಳ
ರೇವಣಸಿದ್ಧಗ ಎಡಿ ಅಂಬ ನೀಡ್ಯಾಳ ರೇವಣಸಿದ್ಧಗ ಎಡಿ
ನೌಕೋಟಿ ಸಿದ್ಧರಿಗೆಲ್ಲ ಭಂಗಿ ಕುಡಿಸಿ ಗುಂಗವ ಮಾಡಿ
ಕಿತ್ತುಕೊಂದಾಳ ಮಾಯಿ ಕಿತ್ತು ಕೊಂದಾಳ
ಅವರ ಜೆಡಿ ದೇವಿ ಕಿತ್ತತಾಳವರ ಜೆಡಿ
ನೌಕೋಟಿ ಸಿದ್ದರಿಗೆಲ್ಲ ಹಿಡಿದು ತಂದು ಗವಿಯಾಗ್ಹಾಕಿ
ಉಕ್ಕಿನ ಗುಂಡ ಅಂಬ ಮ್ಯಾಲ ನಿಂತು
ಉಕ್ಕಿನ ಗುಂಡಿ ಜೆಡಿ ದೇವಿ ಮ್ಯಾಲ ನಿಂತು ಉಕ್ಕಿನ ಗುಂಡು ಜಡಿ
ಮೂಗಂಡಗ್ಹಾಲು ಕುಡಿದು ನಾಗಂಡುಗಿಸವ  ಕುಡಿದು
ನಿಂತಾನ ಸಿದ್ಧನಿಂತಾನ
ಮಾಯಿ ಎದರ ಖಡಿ ಸಿದ್ಧ ನಿಂತಾನ ಮಾಯಿ ಎದರ ಖಡಿ

ಭೂತೇರು, ದೇವಿಯ ಮಹಿಮೆಯನ್ನು ಕುರಿತಾದ ಹಾಡುಗಳನ್ನು ರಚಿಸುವಲ್ಲಿ ದೇವಿಯ ಪೂಜಾ, ಪಾರ್ಥನೆ, ಉತ್ಸವ, ಸಂಪ್ರದಾಯ, ರೀತಿ ನೀತಿಗಳ ವಿವರ ಕೊಡುವುದರ ಜೊತೆಗೆ ಆ ಊರಿನ, ಜನಾಂಗದ ಬದುಕನ್ನು ಕುರಿತಾದ ವಿವರ ಕೊಟ್ಟದ್ದು ನೋಡಿದರೆ ಈ ಹಾಡುಗಳು ಮಾನವಿಕ, ಸಾಮಾಜಿಕ, ಮಾನಸಿಕ ಶಾಸ್ತ್ರಗಳ ಅಧ್ಯಯನಕ್ಕೆ ಬಳಸಿಕೊಳ್ಳಲು ಬರುವುದು.

ಸುಕ್ರಾರ ಸವಭಾಗ್ಯ ಮಂಗ್ಳಾರ ನಿನಭೋಗಿ
ಅಂಗಳಕೆ ಬಾರೆ ಏ ಜಗದಂಬ
ಅಂಗಳಕೆ ಬಾರೆ ಜಗದಂಬ ಮಾಪುರಿ
ಮಂಗಳಾರುತಿ ನಾ ಬಾಳಗುವೆನೆ
ಘಟ್ಟದ ಮಾಪುರಿ ಸಿಟ್ಯಾಕ ನನಮ್ಯಾಲ
ಕೊಟ್ಟು ಕಳುವೀದ ಏ ಹಿಡಿ ಉಪ್ಪೆ
ಕೊಟ್ಟಾನೆ ಕಳುವೀದ ಹಿಡಿ ಉಪ್ಪೆ
ಕೊಟ್ಟಾನೆ ಕಳುಹೀದ ಹಿಡಿ ಉಪ್ಪೆ ಮಾಪುರಿ
ತೊಟ್ಟಿಲ ಮಾಪುರಿನಾದರಿಸಿದ

ಮಂಗಳವಾರ ಶುಕ್ರವಾರ ಆ ದೇವಿಯ ಪೂಜಾದಿನಗಳೆಂದು, ದೇವಿ ಸಿಟ್ಟಾದರೆ ಆಕೆಗೆ ಉಪ್ಪು ಕಳಸಿಕೊಡುವ ಪದ್ಧತಿ ಎಂದು ಈ ಹಾಡಿನ ಭಾಗ ತಿಳಿಸುವದು. ಮಕ್ಕಳಾಗದವರೂ ಈ ಧೆವಿಗೆ ಬೇಡಿಕೊಳ್ಳುವರು :

ಮಾಯಿ ಉಟ್ಟ ದೇವಿ ಕಟ್ಟ
ಬಂಜೇರ ಫಲವ ಬೇಡುವಾಗ

ಈ ದೇವಿ ಮಕ್ಕಳ  ಯೋಗಕ್ಷೇಮವನ್ನೂ ನೋಡಿಕೊಳ್ಳುವನು :

ಇಂದೂನೆ ಎಲ್ಲಮ್ಮ ನಡದಂಥ ಮನೆಯರಿಗೆ
ಕಂದಗ ಯಾಳ್ಯಾ ತಾ ಕಳವ್ಯಾಳೆ
ಕಂದಗ ಎಲೆಯಾಳ್ಯಾ ಕಳವ್ಯಾಳೆ ಜಗದಂಬ
ಹೇಸಕ ಮಾಡಿ ತಾ  ಕೆಡುವ್ಯಾಳೆ
ಹೇಸಕ ಎಲೆ ಮಾಡಿ ಕೆಡುವ್ಯಾಳೆ ಜಗದಂಬ
ಉದ ಉದನಂತೆ ತಾ ಓದಸ್ಯಾಳೆ

ಹೀಗೆ ಎಲ್ಲಮ್ಮ ಮಕ್ಕಳಿಗೆ ಗುಣ ಮಾಡಿದಾಗ ಅವರು ನೀಡುವ ಪ್ರತಿಫಲ ಅಥವಾ ಅವರು ದೇವಿಗೆ ನಡೆದುಕೊಳ್ಳುವ ರೀತಿ:

ಎತ್ತು ಕಂಟಲೆ ಬಿಡುವೆ ಆಕಳ ಜನ್ನಿಗಿ ಬಿಡುವೆ
ಹಾಕಿದ ಹಗಿಯ ಏ ಮದಲಿಡುವೆ
ಹಾಕಿದ ಹಗಿಯ ಮದಲಿಡುವೆ ಮಾಪುರಿ
ಹುಟ್ಟಿದ ಪುತ್ರನ ಜವಳಿಡುವೆ
ಹುಟ್ಟಿದ ಪುತ್ರನ ಜವಳಿಡುವೆ ಮಾಪುರಿ
ಕಂದಗ ಯಾಳ್ಯಾ ನೀ ತರಬ್ಯಾಡ

ಎಂದು ಬೇಡಿಕೊಂಡು ಆ ಜನ ಅದನ್ನು ಆಚರಿಸುವ ರೀತಿ :

ಮಂಗಳವಾರ ದಿನದಲ್ಲಿ ಮನಿಮಾರು ಸಾರಸ್ಯಾಳ

ಗಂಧದ ಸೀಗಿ ತಾ ಬರುದಾಳು
ಗಂಧದ ಎಲೆ ಸೀಗಿ ಕೊಟ್ಟಾಳ ಜಗದಂಬ
ಕೂಕಮ್ಮ ಛಳಿಯ ತಾ ಹೊಡುದಾಳ
ಕೂಕಮ್ಮ ಎಲೆ ಛಳಿಯ ಹೊಡೆದಾಳ ಜಗದಂಬ
ಝಳಕ ಶಿವಪೂಜೆ ತಾ ಮಾಡ್ಯಾಳ

ಹೀಗೆ ಆ ಹೆಣ್ಣು ಪೂಜೆ ಮಾಡಿಕೊಂಡು ಕೊನೆಗೆ :

ಹುಟ್ಟೀದ ಎಲೆಪುತ್ರನ ಜವಳಿಡುವೆ ನನತಾಯಿ
ಕಂದಗ ಯ್ಯಾಳ್ಯಾ ನೀ ತರುಬ್ಯಾಡ

ಎಂದು ಬೇಡಿಕೊಳ್ಳುವಲ್ಲಿ ಅಲ್ಲಿಯ ಜನಗಳು ಈ ದೇವಿಯನ್ನು ನಂಬಿಕೊಂಡು ಬದುಕನ್ನು ಆಚರಿಸಿಕೊಂಡು ಬರುತ್ತಿರುವ ವಿಧಾನ ಗೊತ್ತಾಗುವದು.

ದೇವಿಯ ನೈವೇದ್ಯದ ವಸ್ತುಗಳು ಎಂದರೆ :

ಕಾಯಿಕರಪುರ ತರುವಂತ ಭಗತಾರ
ಹಾಲುಹಣ್ಣು ನೀಹಂತಾ ಭಗುತಾರ

ಈ ದೇವಿಯ ವಾಹನಗಳೆಂದರೆ :

ಹೌದೆನ್ನ ದೇವಿ ಗರುಡನೇರ್ಯಾಳ ರಾಮನ ತಾಯಿ
ಆನಂದಮಾಯಿ ಕುದರಿಯೇರ್ಯಾಳ ರಾಮನ ತಾಯಿ

ಈಕೆಗಿಂತಲೂ ಈಕೆಯ ಭಂಡಾರವೇ ಕೆಟ್ಟದಂತೆ :

ಭಂಡಾರಂಬೋದು ಭೋ ಕೆಟ್ಟದಮ್ಮ
ಭಂಡಾರ ಬೇಕೆಂದೇನಮ್ಮ

ದೇವಿ ತನ್ನನ್ನು ನಂಬಿದವರ ಪ್ರಾಣ ಉಳಿಸುವವಳು ಅಪಹಾಸ್ಯ ಮಾಡಿದರೆ ಮರ್ಯಾದೆ ಕಳೆದು ಬಿಡುವವಳು. ಇಲ್ಲಿ ದೇವರೆಂದರೆ ಯಾವುದೋ ಸ್ವರ್ಗ ಲೋಕದವರೆಂಬ ಹಾಗೆ ಚಿತ್ರಿಸದೆ ಈಕೆಯೂ ನಮ್ಮವಳೇ. ನಮ್ಮಂಥ ಗುಣ ಉಳ್ಳವಳು ಎಂದು ಲೌಕಿಕವಾಗಿ ಚಿತ್ರಿಸಿದಕ್ಕಾಗಿಯೇ ಗ್ರಾಮದೇವತೆಗಳ ಬಗ್ಗೆ ಹೆಚ್ಚಿನ ಮೋಹ ಉಂಟಾಗಲೂ ಕಾರಣವಾಗಿದೆ.

ಉಟ್ಟೀಗಿ ಉಡಸೀದೆ ಬತ್ತಲೆ ನಡಸೀದೆ
ನಕ್ಕವರೆಲ್ಲ ಮುರಸೀದೆ ಮುರಸಿದೆ
ಗಂಡನ ಬಡಸಿದೆ ಗಂಡುಡಗಿ ಉಡಸೀದೆ
ಕಂಡಲ್ಲಿ ಕಾಲ ಕುಣಸೀದೆ ಕುಣಸಿದೆ
ಕಂಡಲ್ಲಿ ಎಲೆ ಕಾಲ ಕುಣಸೀದೆ ಮಾಪುರಿ
ಬಂಡ ಮಾಡಿದೆ ಜನದಾಗ ಜನದಾಗ

ಹೀಗೆ ಈ ಭಾಗದ ಜನ ತಮ್ಮ ಪ್ರತಿಯೊಂದು ಸಂಕಟಗಳಿಗೂ ಇದೇ ದೇವಿಗೆ ಮೊರೆ ಹೋಗುವುದು ನೋಡಿದರೆ ಈಕೆ ತುಂಬ ಸತ್ವಶಾಲಿಯಾದ ಗ್ರಾಮದೇವತೆ ಎಂಬುದು ಗೊತ್ತಾಗುವದು.