III. ವಿಶಿಷ್ಟ ಕಾಲದ ತಿಂಡಿ ತಿನಿಸುಗಳು

ಹೊಲದಲ್ಲಿ ಜೋಳದ ಹಾಗೂ ಗೋದಿಯ ತೆನೆಗಳು ತುಂಬಿಕೊಂಡು ನಿಂತರೆ ರೈತರಿಗೆ ಎಲ್ಲಿಲ್ಲದ ಸಂತೋಷ. ಊರಿನ ಜನರು ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ಎಳೆಯದಾದ ಜೋಳದ ಹಾಗೂ ಗೋದಿಯ ಕಾಳುಗಳ ಹಾಲಿನಂಥ ಸಿಹಿರಸವನ್ನು ಸವಿಯಲು ಹೊಲಕ್ಕೆ ಹೋಗುತ್ತಾರೆ. ಇಂಥ ಕಾಳುಗಳುಳ್ಳ ತೆನೆಗಳನ್ನು ಬೆಂಕಿಯಲ್ಲಿ ಹದವಾಗಿ ಸುಟ್ಟು ಕಾಳು ಉದುರಿಸಿ ಸ್ವಚ್ಛಗೊಳಿಸಿ ಬೆಲ್ಲ ಅಥವಾ ಉಪ್ಪು ಖಾರಗಳೊಡನೆ ತಿನ್ನುತ್ತಾರೆ. ಜೋಳದ ಹಾಲುಗಾಳುಗಳಿಗೆ ಬೆಳಸಿ ಅಥವಾ ಸೀತ್ನಿ ಎಂತಲೂ, ಗೋದಿಯ ಹಾಲುಗಾಳುಗಳಿಗೆ ಉಮಗಿಯೆಂದೂ ಕರೆಯುತ್ತಾರೆ. ಇದೇ ರೀತಿ ಗೋವಿನ ಜೋಳದ ತೆನೆಗಳನ್ನು, ಶೇಂಗಾ ಕಡಲೆಗಳ ಗಿಡಗಳನ್ನು ಕಿತ್ತು ಕಿಚ್ಚದಲ್ಲಿ ಸುಡುತ್ತಾರೆ. ಈ ಕಾಳುಗಳನ್ನು ಸುಟ್ಟಾಗ ಇಲ್ಲವೇ ಕುದಿಸಿದಾಗ ವಿಶಿಷ್ಟ ರುಚಿ ಪಡೆಯುತ್ತವೆ. ಬೀದರ ಜಿಲ್ಲೆಯಲ್ಲಿ ಹನಿ ಕಡ್ಲಿಕಾಯಿ, ಹಸಿಅವರಿಕಾಯಿ ಕೆಳಗೆ ಇಟ್ಟು ಮೇಲೆ ಒಂದು ಗಡಿಗೆಯನ್ನು ಡಬ್ಬ ಹಾಕಿ ಸುತ್ತಲೂ ಉರಿಹಚ್ಚುವುದರಿಂದ ಆಶಾಖಕ್ಕೆ ಬೆಂದ ಕಾಳುಗಳು ವಿಶೇಷ ರುಚಿಯುಳ್ಳದ್ದಾಗಿರುತ್ತವೆ. ಬೆಳಗಾಂವ ಭಾಗದಲ್ಲಿ ಗೆಣಸುಗಳನ್ನು ಗಡಿಗೆಯಲ್ಲಿ ಇಟ್ಟು ನೀರು ತುಂಬಿದ ಪಾತ್ರೆಯ ಕೆಳಗಿಟ್ಟು ತಳದಲ್ಲಿ ಉರಿ ಹಚ್ಚುವರು. ಸುಡಲ್ಪಟ್ಟ ಇಂಥ ಗೆಣಸುಗಳಿಗೆ “ಡಬ್ಬಗಾಯಿ ಗೆಣಸು “ಎನ್ನುತ್ತಾರೆ.ಜೋಳದ ಬೆಳಸಿಯಿಂದ ಗಾರಿಗೆ, ಗೋವಿನ ಜೋಳದ ಹಾಲುಗಾಳುಗಳನ್ನು ದಿಂಡಿಗೆ ಹಚ್ಚಿ ಕೊಯ್ದು ಒಗ್ಗರಣೆ ಕೊಟ್ಟಾಗ ಅದು ಬೆಳಗಾಂವದವರಿಗೆ “ಪವೆ” ಆಗುತ್ತದೆ. ಗೊಂಜಾಳ ಹಾಲುಗಾಳುಗಳಿಂದ ಉಪ್ಪಿಟ್ಟನ್ನು ತಯಾರಿಸುತ್ತಾರೆ. ಈ ಹಾಲುಗಾಳಗಳಿಗೆ ಶೇಂಗಾ ಕಡಲೆ ಹಾಗೂ ಇತರ ಕಾಳುಗಳನ್ನು ಕುದಿಸಿ ಸೇರಿಸಿ ಮಾಡಿದ ತಿಂಡಿ ಗುಗ್ಗರಿ. ಒಣಕಾಳುಗಳನ್ನು ಮಳೆ, ತಂಗಾಳಿ, ಒಕ್ಕಲಿಗನಿಗೆ ಹೊಲದಲ್ಲಿ ಕೆಲಸ ಕಡಿಮೆ. ಸಂಜೆಯ ಹೊತ್ತಿಗೆ ಮನೆಯಲ್ಲಿ ಒಲೆಯ ಮುಂದೆ ಕುಳಿತು ಉರಿ ಕಾಯಿಸುತ್ತ ತಿನ್ನುವ ಬಿಸಿ ಬಿಸಿ ಗುಗ್ಗರಿ ಚಳಿಗೆ ಒಳ್ಳೆಯ ತಿಂಡಿಯಾಗಿದೆ.

IV. ಪಾನೀಯಗಳು

 

ಉತ್ತರ ಕರ್ನಾಟಕದ ತಿಂಡಿತಿನಿಸುಗಳಂತೆ ಪಾನೀಯಗಳಲ್ಲೂ ಹೆಚ್ಚಿನ ವೈವಿಧ್ಯತೆ ಕಾಣುವುದಿಲ್ಲ. ಪ್ರಮುಖ ಪಾನೀಯಗಳಲ್ಲಿ ನೀರು ಪಾನಕ ಹಾಲು ಮಜ್ಜಿಗೆ ಹೆಂಡ ಇತ್ಯಾದಿಗಳನ್ನು ಹೆಸರಿಸಬಹುದಾದರೆ ಇತರ ಕೆಲವು ಪಾನೀಯಗಳ ಸಾಮಾನ್ಯ ಬಳಕೆ ಈ ಭಾಗದಲ್ಲಿದೆ.     

ನೈಸರ್ಗಿಕ ಪಾನೀಯಗಳು :

i) ನೀರು: ಇದು ಪ್ರಕೃತಿದತ್ತವಾದ ಶ್ರೇಷ್ಠ ಪಾನೀಯ. ತತ್ರಾಣಿ ಹರವೆಯ ನೀರು ಜನಪದರಿಗೆ ಅಮೃತಸಮಾನ. ಮಂಗರಸನ ಸೂಪಶಾಸ್ತ್ರದಲ್ಲಿ (ಪಾನಕಧ್ಯಾಯ, ಪು-೪೩) ಬೆಳಗಿನ ಜಾವದಲ್ಲಿ ತಂದ ಹೊಸ ನೀರನ್ನು ಆಕೂಡಲೇ ಶೋಧಿಸಿ ಒಂದು ತಣ್ಣಗಿರುವ ಮಡಕೆಗೆ ತುಂಬಿ ಬಾಯಿಗೆ ದಪ್ಪ ಬಟ್ಟೆಯನ್ನು ಕಟ್ಟಿ ಅದನ್ನು ಉಳಿದ ನೀರಿನಲ್ಲಿ ಒಂದೆರಡು ಘಳಿಗೆಗಳ ಕಾಲ ಮುಳುಗಿಸಿಟ್ಟಿದ್ದು ತೆಗೆದು ಅದಕ್ಕೆ ಕರ್ಪೂರ ಕಸ್ತೂರಿ ಮೊದಲಾದ ಮಗಿಮಗಿಸುವ ಪರಿಮಳಗಳನ್ನು ಹಾಕುವುದು, ಇದರ ಹೆಸರು ನವೋದಕ. ಬಾಯಾರಿಕೆ ನೀಗುತ್ತದೆ, ಎಂದಿದೆ.

ii) ಹಾಲು : ಆಕಳು ಹಾಗೂ ಕುರಿಯ ಹಾಲು ಶ್ರೇಷ್ಠವೆಂಬ ಭಾವನೆ. ಅವು ಬೆಟ್ಟದಲ್ಲಿರುವ ವಿವಿಧ ಬಗೆಯ ಔಷಧಿ ವನಸ್ಪತಿಗಳನ್ನು ತಿನ್ನುತ್ತವೆಯಾದ್ದರಿಂದ ಆ ಹಾಲಿನಲ್ಲಿ ಔಷಧೀಯ ಗುಣವಿದೆ ಎಂಬ ತಿಳುವಳಿಕೆ ಇದೆ.

iii) ತೆಂಗಿನ  ಎಳನೀರು : ಈಭಾಗದಲ್ಲ ತೆಂಗಿನ ಬೆಳೆ ಕಡಿಮೆ. ಔಷಧೀಯಗುಣ ಹೊಂದಿದ ಎಳನೀರು  ಮೂತ್ರಪಿಂಡದ ರೋಗಿಗಳಿಗೆ, ಬಸಿರಿ ಬಾಣಂತಿಯರಿಗೆ ಉಪಯೋ‌ಗ.

iv) ಕಬ್ಬಿನ ಹಾಲು : ನೀರಿನ ಅನುಕೂಲವಿರುವಲ್ಲಿ ಕಬ್ಬನ್ನು ಬೆಳೆಯುತ್ತಾರೆ. ಜಮಖಂಡಿ, ಮುಧೋಳ, ಬಾಗಲಕೋಟೆ, ಬೀಳಗಿ ಮೊದಲಾದ ಕಡೆಗೆ ವರ್ಷದುದ್ದಕ್ಕೂ ಆಲಿಮನಿ, ಕಾಕಂಬಿ, ಕಬ್ಬಿನ ಹಾಲು ಬಂದು ಹೋಗುವವರಿಗೆಲ್ಲರಿಗೂ ಉಂಟು.

v) ನೀರಾ : ಸೂರ್ಯೋದಯಕ್ಕೆ ಮೊದಲು ಈಚಲ ಗಿಡದಿಂದ ತೆಗೆದ ರಸ ನೀರಾ, ಔಷಧೀಯ ಗುಣ ಹೊಂದಿದೆ. ಮಲೇರಿಯಾ ರೋಗ ನಿವಾರಣೆಯಲ್ಲಿ ಇದರ ಪಾತ್ರವಿದೆ. 

ಮಧುರ ಪಾನೀಯಗಳು :(ಆಹ್ಲಾದವನ್ನುಂಟು ಮಾಡುವ ಪಾನೀಯಗಳು)

i) ಲಿಂಬು ಪಾನಕ : ಬಾಯಾರಿಕೆ ನೀಗಿಸಲು, ಅತಿಥಿ ಸತ್ಕಾರಕ್ಕೆ ಅಲ್ಲದೆ ಪಿತ್ತಕ್ಕೆ ಇದು ಔಷಧಿಯೂ ಹೌದು. ಲಿಂಬೆರಸ ನೀರಿನಲ್ಲಿ ಬೆರೆಸಿ ಅದಕ್ಕೆ ಸ್ವಲ್ಪು ಏಲಕ್ಕಿ ಪುಡಿ, ಸಕ್ಕರೆ ಚಿಟಿಕೆ ಸೇರಿಸಿ ಇದನ್ನು ತಯಾರಿಸುತ್ತಾರೆ.

ii) ಮಾವಿನಕಾಯಿ ಪಾನಕ : ಮಾವಿನಕಾಯಿಯನ್ನು ಕುದಿಸಿ ಅದರ ರಸಹಿಂಡಿ  ಇಲ್ಲವೇ ಬೆಲ್ಲ ಸೇರಿಸಿದ ಈ ಪಾನೀಯವನ್ನು ರಾಮನವಮಿಯಂದು ಅರಿಶಿಣ ಕುಂಕುಮಕ್ಕೆ ಬಂದ ಸುಮಂಗಲೆಯರಿಗೆ ಕೋಸಂಬರಿಯೊಂದಿಗೆ ಕೊಡುತ್ತಾರೆ.

iii) ಹುಣಸೇಹಣ್ಣಿನ ರಸದ ಪಾನಕ : ಹುಣಸೇರಸ, ಬೆಲ್ಲ, ಜೀರಿಗೆ, ಯಾಲಕ್ಕಿ, ಈ ಎಲ್ಲವುಗಳ ಮಿಶ್ರಣ ಇದಾಗಿದೆ. ಹೊಲದಿಂದ ದಣಿದು ಬಂದ ಒಕ್ಕಲಿಗರು ದಣಿವಾರಿಸಿಕೊಳ್ಳಲು ತೆಗೆದುಕೊಳ್ಳುತ್ತಾರೆ. ಲಿಂಬಿಹಣ್ಣು ಇಲ್ಲದ ಸಂದರ್ಭದಲ್ಲಿ ಕೆಲವರು ಹುಣಸೇಹಣ್ಣು ಬಳಸುತ್ತಾರೆ. 

ಮಾದಕ ಪಾನೀಯಗಳು :

ಪುರಾಣ ಗ್ರಂಥಗಳಲ್ಲಿ ದೇವಗಣಂಗಳು ಸೋಮರಸ ಪಾನಮಾಡಿದ ವಿಷಯ ಬರುತ್ತದೆ. ಮಧುಪಾನಕ್ಕೆ ಸಂಬಂಧಿಸಿದಂತೆ ಕಾವ್ಯಕೃತಿಗಳಲ್ಲಿ ಹಲವು ಉದಾಹರಣೆಗಳು ದೊರೆಯುತ್ತವೆ. ರಾಕ್ಷಸರು ಸುರಾಪಾನ ಮಾಡಿ ಉನ್ಮತ್ತರಾದ ಅಮಲಿನಲ್ಲಿ ಗೈದ ಕುಕೃತ್ಯಗಳು ಅನೇಕ.ಪಂಪನಲ್ಲಿ ಕುಡುಕರ ಜೀವನದ ಒಂದು ಭಾಗದಲ್ಲಿ ಅವರು ಕುಡಿಯುತ್ತಿದ್ದ ಮಧ್ಯಗಳು, ತಾವು ಕುಡಿಯುವ ಮುನ್ನ ಬಡವರಿಗೆ ಧರ್ಮಾರ್ಥವಾಗಿ ಹೊಯ್ಯಿಸುತ್ತಿದ್ದ ಹೆಂಡದ (ಧರ್ಮಗಳುಳ್ಳ) ಚಿತ್ರ ರಮ್ಯವಾಗಿದೆ. ಇಂದಿಗೂ ಮತ್ತು ಬರಿಸುವ ಪಾನೀಯಗಳ ಬಳಕೆ ವ್ಯಾಪಕವಾಗಿದೆ. ದಣಿವಾರಿಸಿಕೊಳ್ಳಲು, ಪ್ರತಿಷ್ಠೆಗಾಗಿ, ಚಿಂತೆ ಕಳೆಯಲು, ಚಟಕ್ಕಾಗಿ ಹೀಗಾಗಿ ಇದರ ಸೇವನೆಗೆ ಹಲವಾರು ಕಾರಣಗಳನ್ನೊಡ್ಡುತ್ತಾರೆ.

i) ಸಿಂಧಿ : ಈಚಲು ಮರದ ಗಿಣ್ಣುಗಳನ್ನು ಕೊಯ್ದು ರಾತ್ರಿ ಅದಕ್ಕೆ ಗಡಿಗೆ ಕಟ್ಟಿ ಬರುವರು. ಸೂರ್ಯೋದಯಕ್ಕೆ ನಂತರ ಈ ಮಡಕೆಯಲ್ಲಿ ಸಂಗ್ರಹವಾದ ರಸ ಸಿಂಧಿ. ಹೊಂಡಗಳ ದಂಡೆಯಲ್ಲಿ ಈ ಗಿಡಗಳು ಹೆಚ್ಚಾಗಿ ಬೆಳೆಯುತ್ತವೆ. ಬೆಳಗಾಂವ ಜಿಲ್ಲೆಯ ಅರಭಾವಿ, ಗೋಕಾಕ ತಾಲೂಕುಗಳಲ್ಲಿ ಹೆಚ್ಚು.

ii) ಸರಾಯಿ : ‘ಹೆಂಡ ತುಂಬಿದ ಗಡಿಗೆ ಅಥವಾ ಗಾಡಿ ಎದುರಿಗೆ ಬಂದರೆ ಶುಭ’ ಎಂಬ ನಂಬಿಕೆ ಇದೆ. ಬಿಜಾಪುರ ಜಿಲ್ಲೆಯ ಬಬಲಾದಿ ಮಠದಲ್ಲಿ ಇಂದಿಗೂ ನೈವೇದ್ಯಕ್ಕೆ ಹೆಂಡವನ್ನು ಬಳಸುತ್ತಾರೆ ನೀರು, ಬೆಲ್ಲ, ನವಸಾಗರ ಮಿಶ್ರಣವನ್ನು ಎಂಟು ದಿನ ನೆಲದಲ್ಲಿ ಗುಂಡಿ ತೋಡಿ ಹೂತಿಡುವರು. ಹಳೇ ಬೆಲ್ಲ, ಬಾಳೆ, ದ್ರಾಕ್ಷಿ, ಅನಾನಸು, ಕಬ್ಬಿನ ತೊಗಟೆ, ಕಿತ್ತಳೆ ಕೊಳೆಸಿ ಭಟ್ಟಿ ಇಳಿಸುತ್ತಾರೆ. ಈ ಸರಾಯಿ ಹಳೆಯದಾದಷ್ಟು ಒಳ್ಳೆಯದೆನ್ನಲಾಗುತ್ತದೆ. ಮಾಂಸದ ತುಣುಕುಗಳನ್ನು ಛತ್ರಿಯ ಕಡ್ಡಿಗೆ ಚುಚ್ಚಿಬೆಂಕಿಯಲ್ಲಿ ಸುಟ್ಟು ಇದರ ಜೊತೆಗೆ ತಿನ್ನುತ್ತಾರೆ.

iii) ರಾಮರಸ : ಕುಸ್ತಿ ಪಟುಗಳು ಆಯಾಸವಾದಾಗ ಇಲ್ಲವೆ ಖುಷಿಗಾಗಿ ಇದನ್ನು ಕುಡಿಯುತ್ತಾರೆ ಕೆಂಪು ಕಲ್ಲುಸಕ್ಕರೆ, ಬಾದಾಮಿ, ಕಸಕಸಿ ಗೋಡಂಬಿ ಅಲ್ಲದೇ ತಕ್ಕಷ್ಟು ಭಂಗಿಸೊಪ್ಪು, ಸೇಬು, ರಸಬಾಳೆ ಹಣ್ಣು ಎಲ್ಲ ರುಬ್ಬಿ ಕಾಯಿಸಿ ಸೋಸುವರು. ಇದೇ ರಾಮರಸ. 

ಮಸಾಲೆ ಪಾನೀಯಗಳು :

i) ಹುರುಳಿ ಸಂಕಟಿ : ಹುರುಳಿ ಹುರಿದು ಪುಡಿಮಾಡಿ ಅದಕ್ಕೆ ಬೆಲ್ಲ, ಶುಂಠಿಪುಡಿ ಬೆರೆಸಿ ನೀರಿನಲ್ಲಿ ಕುದಿಸಿ ಮತ್ತೆ ಅದಕ್ಕೆ ಹಾಲು ಸೇರಿಸಿ ಕುಡಿಯುತ್ತಾರೆ, ನೆಗಡಿ ಹಾಗೂ ಚಳಿಗೆ ಒಳ್ಳೆಯ ಪಾನೀಯ.

ii) ಮಜ್ಜಿಗೆ ಆಮ್ರ : ಮಜ್ಜಿಗೆ, ಜೋಳದ ಹಿಟ್ಟು ಕೂಡಿಸಿ ಹಿಂದಿನ ದಿನ ಕಲಸಿಟ್ಟು ಮತ್ತೆ ನೀರು ಹಾಕಿ ಕುದಿಸಿ ಅದಕ್ಕೆ ಉಪ್ಪು ಉಳ್ಳೇಗಡ್ಡಿ, ಅಲ್ಲಾಹಾಕುತ್ತಾರೆ ಇದಕ್ಕೆ ಮಜ್ಜಿಗೆ ಅಂಬಲಿ ಎಂತಲೂ ಕರೆಯುತ್ತಾರೆ.

iii) ಕಟಂಬಲಿ : ಜೋಳದ ಹಿಟ್ಟನ್ನು ಕುದಿಸಿ ಮೊಸರು ಅಥವಾ ಮಜ್ಜಿಗೆ ಹಾಕಿ ಕಾಯಿಸುತ್ತಾರೆ  ಬಿಸಿಲಿನಿಂದ ಬಂದವರಿಗೆ ಇದು ಒಳ್ಳೆಯ ಪಾನೀಯ.

iv) ಹಂತೆಂಬಲಿ : ಜೋಳದ ಕಿಚಡಿ ಮಾಡುವಾಗ ಕಾಳಿನ ಸೊಪ್ಪಿಗೆ ಹುಳಿಹಾಕಿ ನೀರು ತೆಗೆದು ಉಪ್ಪು ಖಾರಾ ಬಳ್ಳೊಳ್ಳಿ ಶುಂಠಿ ಈ ಎಲ್ಲ ಸೇರಿಸಿ ಮಾಡಿದ ಅಂಬಲಿಯನ್ನು ಹಂತಿ ಸಂದರ್ಭದಲ್ಲಿ ಎಡೆ ಮಾಡುತ್ತಾರೆ. ನಂತರ ಎಲ್ಲರೂ ಕುಡಿಯುತ್ತಾರೆ.

v) ಗೋದಿ ಹಿಟ್ಟಿನ ಗಂಜಿ : ಇದಕ್ಕೆ ಬೀದರ ಭಾಗದಲ್ಲಿ “ಹರಿರಾ”ಎನ್ನುತ್ತಾರೆ. ಈ ಹಿಟ್ಟಿನ  ಗಂಜಿ ಬೆಲ್ಲ, ಸೋಂಪು ಪುಡಿ ಹಾಕುತ್ತಾರೆ. 

ಸಾದಾ ಪಾನೀಯಗಳು :

i)  ಮಜ್ಜಿಗೆ : ಇದು ಪಚನಕ್ಕೆ ಒಳ್ಳೆಯ ಪಾನೀಯವಾಗಿದ್ದು, ಸೀತ್ನಿ ತಿಂದು ಮಜ್ಜಿಗೆ ಕುಡಿದರೆ  ಟಿ.ಬಿ. ವಾಸಿಯಾಗುತ್ತದೆ. ಎನ್ನಲಾಗಿದೆ.

ii) ಅಕ್ಕಿಗಂಜಿ :  ಉಪ್ಪು ಬೇಕೆಂದರೆ ಸ್ವಲ್ಪು ಜೀರಿಗೆ ಪುಡಿಯನ್ನು ಬೆರೆಸಿ ಈ ಗಂಜಿಯನ್ನು ಹಸಿವೆಯಾದಾಗ ಎಲ್ಲರೂ, ಕಾಯಿಲೆಯಾದವರಿಗೆ ವಿಶೇಷವಾಗಿ ಇದನ್ನು ಕೊಡುತ್ತಾರೆ.

iii) ಅಳವಿ ಗಂಜಿ : ಬೆಲ್ಲ ಸೇರಿಸಿ ಈ ಗಂಜಿಯನ್ನು ಉಪವಾಸದ ಸಂದರ್ಭದಲ್ಲಿ ಕುಡಿಯುತ್ತಾರೆ (ಅಕ್ಕಿಗಂಜಿ, ಅಳವಿಗಂಜಿಯನ್ನು ಹಗುರ ಆಹಾರವೆಂದೂ ಪರಿಗಣಿಸುವರು)

ವಿಶೇಷ ಪಾನೀಯಗಳು :

i) ರಸಬೇವು: ಮಾವನ್ನು ಕುದಿಸಿ ಹಿಂಡಿ ರಸ ತೆಗೆದು ಸಕ್ಕರೆ ಅಥವಾ ಸೇರಿಸಿ, ಬೇವಿನ ಹೂವು, ದ್ರಾಕ್ಷಿ, ಏಲಕ್ಕಿ ಆ ಕಾಲದಲ್ಲಿ ದೊರೆಯುವ ಹಣ್ಣಿನ ತುಂಡುಗಳು, ಪುಠಾಣಿ ಇಲ್ಲವೇ ಬಳ್ಳಾರಿ ಕಡೆಗೆ ಪುಠಾಣಿ ಹಿಟ್ಟನ್ನು ಕೆಲವರು ಅಜ್ವಾನ, ಕಸಕಸಿ, ಉತ್ತತ್ತಿ ಎಲ್ಲವನ್ನು ಹರವೆಯ ನೀರಿನಲ್ಲಿ ಕಲಸಿಡುವರು. ಇದು ಒಳ್ಳೆಯ ಬೇಸಿಗೆ ಪಾನೀಯವಾಗಿದೆ. ಇದಕ್ಕೆ “ಬೇವು ಕಚ್ಚುವುದು ” ಎನ್ನುತ್ತಾರೆ.” ಬೇವಿನ ಎಚ್ಚು” ಎಂದರೆ  ಈ ಮೇಲಿನ ಮಿಶ್ರಣವಿರುವ ಪಾಕೀಡುಗಳು  ಬಿಜಾಪುರ, ರಾಯಚೂರ, ಬಳ್ಳಾರಿ ಮೊದಲಾದ ಕಡೆಗೆ ಪೇಟೇಯಲ್ಲಿ  ಮಾರಲು ಸಿಗುತ್ತವೆ.

ii) ಮೊಹರಂ ಹಬ್ಬದ ಶರಬತ್ತು : ನೀರಿನಲ್ಲಿ ಬಡೇಸೋಪು, ಏಲಕ್ಕಿ, ಬೆಲ್ಲ, ಪುಡಿಮಾಡಿ ಹಾಕುವುದು. ಬಣ್ಣ ಹಾಗೂ ಸ್ವಲ್ಪ ಕೊಬ್ಬರಿ ತುರಿದು ಹಾಕುವದು. ಧೂಪದ ಹೊಗೆಯಲ್ಲಿ ಗಡಿಗೆಯನ್ನು ಡಬ್ಬ ಹಾಕಿ ಮುಚ್ಚಿ ಅದರಲ್ಲಿ ಮೇಲಿನ ಮಿಶ್ರಣ ಹಾಕಿ ಶರಬತ್ತು ಹಾಕಿದಾಗ ಇದು ತಂಪು ಪಾನೀಯ ಎನಿಸುವುದು. 

ಅನಾರೋಗ್ಯ ಪ್ರಸಂಗದಲ್ಲಿಯ ಪಾನೀಯಗಳು :

i) ಅರಿಷಿಣ ಕಾಡೆ: ನೀರು ಮತ್ತು ಅರಿಷಿಣ ಪುಡಿಯನ್ನು ಕುದಿಸಿ ಕುಡಿದರೆ ನೆಗಡಿ ವಾಸಿ ಆಗುತ್ತದೆ.

ii) ಶುಂಠಿ ಕಾಡೆ : ಶುಂಠಿ, ಕೊತಂಬರಿ ಕಾಳು, ಲವಂಗದ ಪುಡಿಯನ್ನು ನೀರಿನಲ್ಲಿಕುದಿಸಿ ಸ್ವಲ್ಪು ಬೆಲ್ಲ ಹಾಗೂ ಹಾಲನ್ನು ಸೇರಿಸಬಹುದು.ಇದನ್ನು ನೆಗಡಿಗೆ ಔಷಧಿಯಂತೆ ತೆಗೆದುಕೊಳ್ಳುತ್ತಾರೆ.

iii) ಜೀರಿಗೆ ಕಾಡೆ: ಜೀರಿಗೆ ಕೋತಂಬ್ರಿಕಾಳು, ಬಡೇಸೋಪ್ಪು, ಯಾಲಕ್ಕಿ ಬೇಕೆಂದರೆ ಲವಂಗವನ್ನು ಸೇರಿಸಿ ಕುದಿಸಿ ಮಾಡಬಹುದು.

 

ಇತರ ಪಾನೀಯಗಳು :

i) ಚಹ: ಚಹಸೋಪ್ಪು, ಲಿಂಬೆ ಎಲೆ, ನೀಲಗಿರಿ ಸೋಪ್ಪು ಹಾಕಿ ಚಹ ಮಾಡಬಹುದು. ಹಾಲಿಲ್ಲದ ಚಹಾಕ್ಕೆ ಕೆಲವರು ” ಡಿಕಾಸಿ”ಎನ್ನುವರು.

ii) ಕಾಫಿ : ಈ ಭಾಗದಲ್ಲಿ ಇದರ ಬಳಕೆ ಕಡಿಮೆ.

iii) ಸೋಡಾ: ಪಚನಕ್ರಿಯೆಗೆ ಸಹಾಯಕ.

. ವೈಶಿಷ್ಟ್ಯಗಳು :

ಉತ್ತರ ಕರ್ನಾಟಕದಲ್ಲಿ ವಾಸಿಸುತ್ತಿರುವ ಜನರು ಬೇರೆ ಬೇರೆ ಮತ ಧರ್ಮಗಳಿಗೆ ಸಂಬಂಧಿಸಿದವರಾಗಿದ್ದರೂ ಬಹಳ ಕಾಲದಿಂದ ಅವರು ಸಹಜೀವನ ನಡೆಸುತ್ತಿದ್ದಾರೆ. ಸಾಮೂಹಿಕ ಹಬ್ಬಗಳನ್ನು ಎಲ್ಲರೂ ಒಟ್ಟಾಗಿ ಆಚರಿಸುತ್ತಾರೆ, ಮುಸಲ್ಮಾನ ಬಾಂಧವರು ಅಲೆಮಾರಿ ಜನಾಂಗದವರು, ಇನ್ನಿತರರು ತಿಂಡಿತಿನಿಸು ಪಾನೀಯಗಳು ವಿಷಯದಲ್ಲಿ ಪ್ರಾದೇಶಿಕತೆಯನ್ನು ಉಳಿಸಿಕೊಂಡಿದ್ದಾರೆ. ಹೆಚ್ಚೆಂದರೆ ಆಮ್ಲೆಟ, ಕುದಿಸಿದ ತತ್ತಿಗೆ ಉಪ್ಪು ಖಾರ ಹಚ್ಚುವುದು, ಮೀನಿನ ಭಜಿ, ಮಾಂಸದ ತುಣುಕಿನ ಭಜಿ, ತತ್ತಿಯ ಭಜಿ, ಮೀನನ್ನು ಎಣ್ಣೆಯಲ್ಲಿ ಕರಿದು ಅಥವಾ ಉರಿದು ಉಪ್ಪು ಖಾರ ಹಚ್ಚುವುದು.ಇವು ಅವರ ತಿಂಡಿತಿನಿಸುಗಳಾಗಿವೆ. ಅವರವರ ಹಬ್ಬಗಳಲ್ಲಿ ಮಾಂಸದ ಅಡುಗೆಗೆ ಹೆಚ್ಚಿನ ಪ್ರಾಧಾನ್ಯತೆ. ಅಣಬೆಯ ಗುಗ್ಗರಿ ಕೆಲವು ಮಾಂಸಹಾರಿಗಳ ತಿಂಡಿಯಾದರೆ ಲಂಬಾಣಿ ಹೆಣ್ಣುಮಕ್ಕಳು ಸಹಿತ ಭಟ್ಟಿಸೆರೆಯನ್ನು ಪಾನೀಯವಾಗಿ ರೂಢಿಸಿಕೊಂಡಿದ್ದಾರೆ. ಅವರವರ ಅಭಿರುಚಿ, ಆರ್ಥಿಕ ಸ್ಥಿತಿಗತಿ‌ಗಳನ್ನವಲಂಬಿಸಿ ಗ್ರಾಮೀಣ ಪ್ರದೇಶದ ಜನರ ಆಹಾರ ವಿಧಾನದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಖಾರದ ಅಂಶ ಕಡಿಮೆಯುಳ್ಳ ಆಹಾರಪದ್ಧತಿ ಬ್ರಾಹ್ಮಣರರಾದರೆ ಮಾಂಸಹಾರಿಗಳಲ್ಲಿ ಹಾಗೂ ಉಷ್ಣ  ಹವಾಮಾನ ಪ್ರದೇಶಗಳಾದ ಗುಲ್ಬರ್ಗಾ, ಬೀದರ, ಬಿಜಾಪುರ, ರಾಯಚೂರು ಮೊದಲಾದ ಕಡೆಗಳಲ್ಲಿ ವಾಸಿಸುವ ಜನರು ಖಾರವನ್ನು ಹೆಚ್ಚಾಗಿಯೇ ಉಪಯೋಗಿಸುತ್ತಾರೆ. ಮಾಡುವ ಒಂದೇ ಬಗೆಯ ತಿಂಡಿ – ತಿನಿಸು ಪಾನೀಯಗಳಿಗೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುವ ರೂಢಿ ಇದೆ. ರಾಯಚೂರು ಭಾಗದಲ್ಲಿ ಉಳ್ಳೇಗಡ್ಡಿಯ ಸಣ್ಣ ಭಜಿಗಳಿಗೆ “ಚೂರು ಪುಗ್ಗಿ” ಎಂದೂ ಕೆಲವು  ಭಾಗಗಳಲ್ಲಿ ಇದೇ ಭಜಿಗೆ “ಹತ್ತಿಕಾಯಿ” ಎನ್ನುತ್ತಾರೆ. ಧಾರವಾಡದಲ್ಲಿಯ ಮಿರ್ಚಿಗೆ ರಾಯಚೂರ ಕಡೆಗೆ ಮೆಣಸಿನಕಾಯಿ ಪುಗ್ಗಿ ಎನ್ನುವರು.ಚುರಮುರಿ ಚೂಡಾಕ್ಕೆ ಬಿಜಾಪುರ ಮುಸ್ಲೀಮರು “ಪಂಚರಂಗಿ” ಎಂದು “ನ್ಯಾರಿ”ಯ ಒಗ್ಗರಣೆ ರೊಟ್ಟಿಗೆ ಮುರಗಿ, ಹರಕು ಹುಗ್ಗಿ ಎಂತಲೂ, ಬಡಿಗೇರ ಜನ “ಪುತಳಿಪಾಯಸ” ಎಂದು ಕರೆಯುತ್ತಾರೆ. ಸೇವಿನ ಉಂಡಿಗೆ ಲಡಕಿ ಉಂಡಿ ಎಂದು, ಹಪ್ಪಳ ಸಂಡಿಗೆಯನ್ನು ಒಟ್ಟಿಗೆ “ಕುರಡಗಿ” ಎಂದೂ ಹೇಳುತ್ತಾರೆ. ಧಾರವಾಡ ಜಿಲ್ಲೆಯ ಥಾಲಿಪಿಟ್ಟು ಬೀದರ, ಗುಲ್ಬರ್ಗಾ ಬೆಳಗಾಂವದವರಿಗೆ “ದಪಾಟಿ”ಯಾಗಿದೆ.ಬೆರಕಿರೊಟ್ಟಿಯಾಗಿದೆ ಅದೇ ಬೆಳಗಾಂವದಲ್ಲಿ ಹುಣಸೆ ಚಿಗಳಿಗೆ “ಅಳ್ಳೊಳ್ಳಿ” ಎಂತಲೂ ಕಬ್ಬಿಗೆ “ಕಕ್ಕಿ” ಎಂತಲೂ ಕರೆಯುತ್ತಾರೆ. ಧಾರವಾಡದ ಮುಸಲ್ಮಾನರು ಕುಂಬಳಕಾಯಿಯ ಗಾರಿಗೆಗೆ “ಗುಲ್ ಗುಲಾ” ಎನ್ನುತ್ತಾರೆ. ಕರಚಿಕಾಯಿ “ಮುರುಗಣ”ವಾಗಿ ಬೆಲ್ಲದ ಕರದಂಟು “ಅಂಟಾಗಿ” ಚುರಮುರಿ ಚೂಡಾ “ಚುಚವಾ” ಆಗಿ ಒಗ್ಗರಣೆ ಒಗಾಣಿಯಾಗಿರುವ ರಾಯಚೂರು ಮೊದಲಾದ ಈ ಪ್ರಾದೇಶಿಕ ವೈಶಿಷ್ಟವು ಅಭ್ಯಾಸಕ್ಕೆ ಯೋಗ್ಯವಾ‌ಗಿದೆ. ಜೋಳದ ಸೀತ್ನಿಗೆ ಪುಡಿಸಕ್ಕರೆ ಒಣಕೊಬ್ಬರಿ ಹೆರೆದು ಹಾಕಿ ಸಿಹಿ ತಿನಿಸೆಂದೂ ಅದೇ ಬೆಳಸಿಗೆ ಉಪ್ಪು ಖಾರ ಹಾಕಿ ಖಾರದ ತಿನಿಸೆಂದೂ  ಒಟ್ಟು ಈಸಿಹಿ ಖಾರದ ತಿನಿಸಿಗೆ ಬೀದರ ಭಾಗದಲ್ಲಿ “ರಾಜಾರಾಣಿ” ಎನ್ನುತ್ತಾರೆ ಉತ್ತರ ಕರ್ನಾಟಕದ ಜನರ ಮೂಲಭೂತ ವರ್ತನೆಗಳಲ್ಲಿ ಸಾಮ್ಯತೆ ಕಂಡುಬಂದರೂ ಕೆಲವು ಸಂದರ್ಭದ ಈ ಭಿನ್ನತೆ -ವೈವಿಧ್ಯತೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಬಹುತೇಕವಾಗಿ ಗಡಿಭಾಗಗಳಲ್ಲಿ ಈ ಭಾಷೆಯ ಕೊಳುಕೊಡೆಯುಂಟಾಗುವ ಸಾಧ್ಯತೆ ಇದೆ.  ಜೊತೆಗೆ ಅಲ್ಲಿಯ ಆಹಾರ ಪದ್ಧತಿಗಳೂ ಪರಸ್ಪರ ಪ್ರಭಾವಿತಗೊಂಡಿರುವುದು ಸಹಜವಾಗಿದೆ.

ಕಲಾತ್ಮಕತೆ :

ಮನುಷ್ಯ ಉಪಯುಕ್ತತೆಯ ಜೊತೆ ಜೊತೆಗೆ ಕಲಾತ್ಮಕತೆಯನ್ನು ಮೇಳವಿಸಬಲ್ಲ ಜೀವಿಯಾಗಿದ್ದಾನೆ. ನಮ್ಮ ಹಿರಿಯರು ಎಲ್ಲದರಲ್ಲೂ ಚೆಂದವನ್ನು ಕಾಣುವ ಸೌಂದರ್ಯಪೂಜೆಯುಳ್ಳವರು.ತಾವು ದಿನನಿತ್ಯ ಉಪಯೋಗಿಸುವ ವಸ್ತುಗಳ ಮೇಲೆ ಚಿತ್ತಾರಗಳನ್ನು ಬಿಡಿಸಿ ಮೆರೆಯುತ್ತಿದ್ದರು. ವಿಶೇಷವಾಗಿ ಮದುವೆಯಲ್ಲಿ ಹೆಣ್ಣಿನ ತವರವರು ಮಗಳಿಗೆ ಕೊಡುವ ಮಸೂಟದ ತಿಂಡಿ – ತಿನಿದಸುಗಳಲ್ಲಿ ಅವರ ಈ ಕಲಾತ್ಮಕ ಮನೋಭಾವವನ್ನು ಗುರುತಿಸಬಹುದು. ಮೊಳವುದ್ದದ ಕರಚಿಕಾಯಿ, ಸುರಳಿ ಹೋಳಿಗೆಗಳು, ಕರಚಿಕಾಯಿಯ ಅಂಚಿನಲ್ಲಿಯ ಮುರಿಗೆಯ ವಿವಿಧ ವಿನ್ಯಾಸಗಳು ಬೊಗಸೆತುಂಬ ಹಿಡಿಯಬಹುದಾದ ದೊಡ್ಡ ದೊಡ್ಡ ಗುಳ್ಳಡಿಕೆ ಉಂಡಿಗಳು, ಇವುಗಳ ಮೇಲೆ ಬಣ್ಣಗಳಿಂದ ವಧುವರರ ಹೆಸರು ಬರೆಯುವ ಆಕೌಶಲ, ಗುಲಾಬಿ ಮೊದಲಾದ ಹೂವುಗಳಂತೆ ಅರಳಿದ ವಿವಿಧ ವರ್ಣಗಳ ಸಂಡಿಗೆಗಳು, ಸೌತಿಬೀಜ ಗೌಲಿ, ಪರಡಿಗಳಂತಹ ಹಲವು ವಿಶೇಷ ನಮೂನೆಗಳು ತುಂಬ ಆಕರ್ಷಣೀಯವಾದವುಗಳು. ಉಪ್ಪಿಟ್ಟಿಗೂ, ಪುರಿಯ ಜೊತೆಗಿನ ಖೀರಿಗೂ ಬಳಕೆಯಾಗುವ ಊಟ ಹಾಗೂ ತಿಂಡಿಗಳಲ್ಲಿ ಉಪಯೋಗಿಸುವ ಸೇವಿಗೆಯನ್ನು ಹೊಸೆದು ಮಾಡುವಾಗಿನ ಎಳೆಗಳ ನಯ – ನಾಜೂಕು ಎಂಥವರನ್ನೂ ಬೆರಗುಪಡಿಸುವಂಥದು.

ತಿಂಡಿ ತಿನಿಸುಗಳನ್ನು ತಿನ್ನುವ ರೀತಿ :

ದುಡುಮೆಯೇ ದೇವರೆಂದು ಭಾವಿಸಿದ ನಮ್ಮ ಹೆಣ್ಣುಮಕ್ಕಳಿಗೆ ಬೆಳಗಾಂವದ್ದು ನ್ಯಾರಿ ಮಾಡಲೂ ಪುರುಸೋತ್ತಿಲ್ಲ. ಎಡಗೈಯಲ್ಲಿ ರೊಟ್ಟಿ ಹಿಡಿದುಕೊಂಡು ದಾರಿಗುಂಟ ತಿನ್ನುತ್ತ ಅವಸರವಸರವಾಗಿ ಹೊಲದ ಕಡೆ ಹೆಜ್ಜೆ ಹಾಕುವ ಅವರಿಗೆ ಹಬ್ಬಗಳನ್ನು ಬಿಟ್ಟರೆ, ಮನೆಗಳಲ್ಲಿ ತಿಂಡಿತಿನಿಸುಗಳನ್ನು ಮಾಡಿಕೊಂಡು ತಿನ್ನುವುದು ಅಪರೂಪ. ಚಹದಂಗಡಿಗಳಲ್ಲಿ ಗಂಡಸರು ತಮ್ಮ ನಾಲಗಗರ ರುಚಿ ತೋರಿಸುತ್ತಾರೆ  ಆದರೆ ಹೆಂಗಸರಿಗೆ ಅಂಗಡಿಗೆ ಹೋಗಲು ಸಂಕೋಚ ನಾಚಿಕೆ. ವಾರಕೊಮ್ಮೆ ಸಂತೆಗೆ ಹೋದಾಗ ‌ದಾರಿಯ ಅಂಗಡಿಗಳಿಂದ ಭಜಿ, ಮಿರ್ಚಿ, ಖಾರದ ಮಂಡಕ್ಕಿ ಸೂಸಲ ಉಪ್ಪಿಟ್ಟುನ್ನು ತರಿಸಿಕೊಂಡು ಜೊತೆಯವರೊಂದಿಗೆ ಬಯಲಿನಲ್ಲಿಯೇ ಕುಳಿತು ತಿನ್ನುವುದು ಅವರ ಸಹಜ ರೀತಿಯಾಗಿದೆ. ಊರು ಹತ್ತಿರವಿದ್ದರೆ ಬೇಕಾದ ತಿಂಡಿ – ತಿನಿಸುಗಳನ್ನು ಉಡಿಯಲ್ಲಿ ಕಟ್ಟಿಕೊಂಡು ಇಷ್ಟಿಷ್ಷನ್ನು ಬಾಯಿಗೆ ಹಾಕಿಕೊಳ್ಳುತ್ತ ಗೆಳತಿಯರೋಂದಿಗೆ ನಡೆವಾಗ ದಾರಿ ನಡೆದದ್ದೇ ಅವರಿಗೆ ಗೊತ್ತಗುವದಿಲ್ಲ. ಕೆಲವರು ತಿಂಡಿತಿನಿಸುಗಳನ್ನು ಮನೆಗೇ ತಂದು ಒಲೆಯ ಮೇಲೆ ಚಾ ಕಾಸಲು ಇಟ್ಟು ಗಂಡ – ಮಕ್ಕಳೊಂದಿಗೆ ಸಂತೆಯ ಲೆಕ್ಕ ಹಾಕುತ್ತ ಒಟ್ಟಿಗೇ ಕುಳಿತು ತಿನ್ನುವರು. ಅವರು ಚಹಾ ಕುಡಿಯಲು, ತಿಂಡಿ ತಿನಿಸು ತಿನ್ನಲು ಹೆಚ್ಚಾಗಿ ಊಟ ಮಾಡುವ ಗಂಗಾಳನ್ನೇ ಉಪಯೋಗಿಸುತ್ತಾರೆ ಹಾಳೆಯಲ್ಲಿ ತಿಂಡಿ ತಿನಿಸು ತಿಂದು ಹಾಗೇ ಕೈ ಒರೆಸಿಕೊಂಡು ಒಗೆಯುವುದೂ ಉಂಟು. ಮಕ್ಕಳು ತಿನಿಸುಗಳನ್ನು ಕಿಸೇ (ಬಕ್ಕಣ) ಗಳಲ್ಲಿ ತುಂಬಿಸಿಕೊಂಡು ಆಡುತ್ತ ನಲಿಯುತ್ತ ತಿನ್ನುವರು. ಹಳ್ಳಿಗರು ಮನೆಗಳಲ್ಲಿ ಮಾಡಿದ ತಿಂಡಿ ತಿನಿಸುಗಳನ್ನು ಹೊಟ್ಟೆತುಂಬ ತಿನ್ನುವರು. ಬಂದವರಿಗೂ ಹೊಟ್ಟೆತುಂಬ ತಿನಿಸುವರು. ಉಪ್ಪಿಟ್ಟು ಸೂಸಲಗಳನ್ನು ಅವರು ಪಟ್ಟಣವಾಸಿಗಳಂತೆ ಚಮಚಯಿಂದ ನೇಮಕ್ಕೆ ಹಾಕದೇ ಕೈಹಿಡಿ ತುಂಬ ಒಮ್ಮೆಯಲ್ಲ, ಎರಡೂ -ಮೂರುಬಾರಿ, ಒತ್ತಾಯಮಾಡಿ ಇತರರಿಗೆ ತಿನಿಸುವ ಅವರ ಔದಾರ್ಯ ಪ್ರೀತಿ ಮೆಚ್ಚಬೇಕು.

ತಿನ್ನುವ ಪದಾರ್ಥಗಳ ಸಂರಕ್ಷಣೆ:

ಯಾವುದೇ ಇಟ್ಟು ತಿನ್ನುವ ಪದಾರ್ಥಗಳನ್ನು ದೊಡ್ಡ ದೊಡ್ಡ ಮಣ್ಣಿನ ಹರವೆಗಳಲ್ಲಿ ಇಲ್ಲವೇ ಡಬ್ಬಿ ಇಲ್ಲವೇ ತಗಡಿನ ಅಥವಾ ಕಬ್ಬಿಣದ  ಸಂದೂಕಗಳಲ್ಲಿ ಇಟ್ಟು ಮೇಲೆ ತೆಳುವಾದ ಅರಿವೆಯಿಂದ ಮುಚ್ಚುವುದರಿಂದ ಪದಾರ್ಥಗಳನ್ನು ತಿಂಗಳುಗಟ್ಟಲೆ ಕೆಡದ ಹಾಗೆ ರಕ್ಷಿಸಿಡುವ ಕಲೆ ನಮ್ಮ ಗ್ರಾಮೀಣರಿಗೆ ಸಾಧಿಸಿದೆ. ಮೇಲಿನಿಂದ ಇಳಿಬಿಟ್ಟ ದೊಡ್ಡ ಸಣ್ಣ ನೆಲವುಗಳನ್ನು ಈ ಉದ್ದೇಶಕ್ಕೆ ಬಳಸುವುದನ್ನು ಈಗಲೂ ಕಾಣುತ್ತೇವೆ.

ಜನಪದರ ಜೀವನ-ವಿಧಾನದಲ್ಲಿ ನಾಗರಿಕತೆಯ ಪ್ರಭಾವದಿಂದಾಗಿ ಸಂಪೂರ್ಣ ಅಲ್ಲವಾದರೂ ಹಲವು ಬದಲಾವಣೆಗಳಾಗಿವೆ. ಆಹಾರ ಸಿದ್ಧಪಡಿಸುವ ಪದ್ಧತಿ, ಬಳಸುವ ಪಾತ್ರೆ, ಹೀಗೆ ಪ್ರತಿಯೊಂದರಲ್ಲಿ ನಮ್ಮ ಹಿರಿಯರು ಋತುಮಾನಕ್ಕೆ ತಕ್ಕಂತೆ ತಯಾರಿಸುವ ಆಹಾರ ಪದ್ಧತಿಗಳ ಹಿನ್ನೆಲೆಯಲ್ಲಿ ಕಾಣುವ ವೈಜ್ಞಾನಿಕ ದೃಷ್ಟಿ, ತಿನ್ನುಣ್ಣುವ ವಿಧಾನದಲ್ಲಿ ಕಾಣುವ ಪ್ರೀತಿ ವಿಶ್ವಾಸ ಔದಾರ್ಯ ಹೀಗೆ ಅಲ್ಲಿಯ ಅನೇಕ ಉತ್ತಮ ಅಂಶಗಳನ್ನು ಇಂದು ಪರಿಗಣಿಸಬೇಕಾಗಿದೆ. 

ಆಧಾರ ಗ್ರಂಥಗಳು

. ಡಾ.ಪದ್ಮಶೇಖರ ಕರ್ನಾಟಕ ಜನಪದ ಅಡುಗೆ ಸಂಪ್ರದಾಯಗಳು
ಕರ್ನಾಟಕ ಜಾನಪದ (ಸಂ.ಜೀ. ಶಂ. ಪ.ಡಾ.ಮಾಡ್ತಾ)
೨. ಹ.ಕ.ರಾಜೇಗೌಡ ಜನಪದ ಅಡುಗೆ ಸಂಪ್ರದಾಯಗಳು
ಕರ್ನಾಟಕ ಜಾನಪದ ಸಮೀಕ್ಷೆ (ಸಂ.ಜೀ.ಶಂ. ಪ)
೩. ದೇ.ಜವರೇಗೌಡ ಜಾನಪದ ಅಧ್ಯಯನ
೪. ಮಂಗರಸ ಸೂಪಶಾಸ್ತ್ರ
೫. ಚಾವುಂಡರಾಯ ಲೋಕೋಪಕಾರ
೬. ಜೀ.ಶಂ. ಪರಶಿವಯ್ಯ ಜನಪದ ಕಲಾವಿಹಾರ
೭. ಶಾಂತಿ ನಾಯಕ ಜನಪದ ವೈದ್ಯಕೀಯ ಅಡಿಗೆಗಳು
೮. ಸುಶೀಲಾದೇವಿ ಗದಗ ಮಧುರ ಪಾಕಶಾಸ್ತ್ರ
೯. ಬೆಟಗೇರಿ ಕೃಷ್ಣಶರ್ಮ ನಮ್ಮ ಸಂಸ್ಕೃತಿ -ಪರಂಪರೆ
೧೦. ಎಚ್.ವಿ.ನಾಗೇಶ ಗ್ರಾಮ ವ್ಯಾಸಂಗ
೧೧. ಡಾ. ನಂ.ತಪಸ್ವಿಕುಮಾರ ಸಂಸ್ಕೃತಿಯ ಅಧ್ಯಯನ
೧೨. ಡಾ.ಶಾಂತಾ ಇಮ್ರಾಪುರ ಉತ್ತರ ಕರ್ನಾಟಕದ ಅಡುಗೆಗಳು
೧೩. ಚಲುವೇಗೌಡ ಕೆಲವು ಜಾನಪದ  ಸಂಪ್ರದಾಯಗಳು
೧೪. ದಾಸೇ‌ಗೌಡ ನಮ್ಮ ಜನಪದ ನಂಬಿಕೆಗಳು
೧೫. ಶಾಂತಾದೇವಿ ಮಾಳವಾಡ ರಸಪಾಕ
೧೬. ಡಾ. ಎಲ್.ಆರ್.ಹೆಗಡೆ ಪಾಕ ರಸಾಯನ
೧೭. ಶಾಂತಿ ರಮೇಶ ಹೊಸ ರುಚಿ