ಹಸಿವು ಮನುಷ್ಯನ  ಮೂಲ ಪ್ರವೃತಿಗಳಲ್ಲಿ ಒಂದಾದುದರಿಂದ ಆಹಾರ ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು.ಸತ ಕ್ರಿಯಾಶೀಲನಾಗಲು ಹಸಿವು ನೀರಡಿಕೆಗಳನ್ನು ನೀಗಿಸಿಕೊಳ್ಳಬೇಕಾಗುತ್ತದೆ. ಆದರೆ ಅಷ್ಟರಲ್ಲಿಯೇ ಆತ ತನ್ನ ಉದ್ದೇಶವನ್ನು ಸೀಮಿತಗೊಳಿಸಿಕೊಳ್ಳದೆ, ಹೆಚ್ಚುತ್ತಿರುವ ಅವಶ್ಯಕತೆಗಳಿಗಾಗಿ, ನಿರ್ದಿಷ್ಟ ಪ್ರದೇಶವಾಸಿಯಾದ ಮಾನವ, ತನ್ನ ಪರಿಸರಕ್ಕೆ ತಕ್ಕಂತೆ ವೈವಿಧ್ಯಮಯವಾದ ಆಹಾರವನ್ನು ರೂಢಿಸಿಕೊಂಡ. ಆತನ ಈ ಬಯಕೆಗೆ ರುಚಿ – ಸಂವೇದನೆಗಳೇ ಕಾರಣವಾದವು. ಆದುದರಿಂದ ಆಯಾ ಕಾಲ, ದೇಶ. ಜನಾಂಗಗಳ ಅಭಿರುಚಿ ಅಗತ್ಯಗಳಿಗೆ ಅನುಗುಣವಾಗಿ ಆಹಾರ ಪಾನೀಯಗಳು ಭಿನ್ನವಾಗುತ್ತ ಸಾಗಿದವು. ಮನುಷ್ಯನ ಬದುಕಿನುದ್ದಕ್ಕೂ ಆತನಿಗೆ ಸಂಬಂಧಿಸಿರುವ ಈ ಆಹಾರ ಪದ್ಧತಿಗಳು ಸಂಸ್ಕೃತಿಯ ದ್ಯೋತಕವೆನಿಸಿದವು. ವೈವಿಧ್ಯಮಯವಾದ ಆಹಾರ ಪಾನೀಯಗಳು ಒಂದೊಂದು ಸಂಸ್ಕೃತಿಲ್ಲೂ ತಮ್ಮದೇ ಆದ ವೈಶಿಷ್ಟದಿಂದ ಕೂಡಿರುತ್ತವೆ.

ಅರವತ್ತು ನಾಲ್ಕು ಕಲೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುವ ಅಡಿಗೆ ಕಲೆ ಇಂದು ವೈಜ್ಞಾನಿಕ ಅಧ್ಯಯನದ ವಿಷಯವಾಗಿದೆ. ಆಧುನಿಕ ಜಗತ್ತು ಅಡುಗೆಯನ್ನು ಶ್ರೇಷ್ಠ ಕಲೆ ಎಂದು ಪರಿಗಣಸಿದ್ದು ಕರ್ನಾಟಕ ಅಡುಗೆ ಸಂಪ್ರದಾಯದಲ್ಲಿ. “ಉತ್ತರ ಕರ್ನಾಟಕ ತಿಂಡಿ – ತಿನಿಸು ಪಾನೀಯಗಳು” ಎಂಬ ವಿಷಯವೊಂದನ್ನು ದಾಖಲುಗೊಳಿಸುವ ಹಿನ್ನೆಲೆಯಲ್ಲಿ ಎರಡು ಅಂಶಗಳನ್ನು ಪರಿಶೀಲಿಸಬಹುದಾಗಿದೆ.

೧. ಕನ್ನಡ ಪ್ರಚೀನ ಕಾವ್ಯಕೃತಿಗಳಲ್ಲಿ ದೊರಕುವ ಮಾಹಿತಿಗಳು

೨. ಕ್ಷೇತ್ರಕಾರ್ಯವನ್ನು ಅವಲಂಬಿಸಿದ ಸಾಮಾಗ್ರಿ (ದತ್ತ -ಡಾಟಾ)

ಕರ್ನಾಟಕಕ್ಕೆ ಸಂಬಂಧಿಸಿದಂತೆ ಪಂಪ ಆದಿಯಾಗಿ ಎಲ್ಲ ಕವಿಕೃತಿಗಳಲ್ಲಿ ಆಹಾರ ಪದ್ಧತಿ ಉಲ್ಲೇಖ ಕಂಡುಬರುತ್ತದೆ. ಅನೇಕ ಕಾವ್ಯಗಳಲ್ಲಿ ನಾಯಕನ ಮದುವೆ, ಯಾಗ ಅಥವಾ ವಿಶೇಷ ಸಂದರ್ಭದಲ್ಲಿ ಅಂದು ಅಡಿಗೆಯ ವಿವರಗಳು ಕಂಡುಬರುತ್ತವೆ. ಸರ್ವಜ್ಞಕವಿ ಉದ್ದಿನವಡೆ, ಕುರುಕುರುಕಡಲೆ, ಹಾಲು, ಮಜ್ಜಿಗೆ ಮೊದಲಾದ ಉತ್ತರ ಕರ್ನಾಟಕದ ತಿಂಡಿ – ತಿನಿಸು ಪಾನೀಯಗಳನ್ನು ಹೆಸರಿಸುತ್ತಾನೆ. ಎರಡನೆಯ ಚಾವುಂಡರಾಯನ ಲೋಕೋಪಕಾರ ಅಡುಗೆಯನ್ನು ಗುರುತಿಸಿದ ಕನ್ನಡದ ಮೊದಲನೆಯ ಗ್ರಂಥ. ಕ್ಷೀರದುಂಡೆ, ಇಡ್ಡಲಿಗೆ, ಖಂಡ -ಲಡ್ಡುಗೆ ಮೊದಲಾದವುಗಳನ್ನು ಮಾಡುವ ಕ್ರಮ ಇಲ್ಲಿ ವಿವರಿಸಲ್ಪಟ್ಟಿದೆ. ವಾಸ್ತವವಾಗಿ ಮಂಗರಸನ ಸೂಪಶಾಸ್ತ್ರ ಕನ್ನಡದ ಒಂದು ಪರಿಪೂರ್ಣ ಪಾಕಶಾಸ್ತ್ರ ಗ್ರಂಥ.

ಜನಪದ ಸಾಹಿತ್ಯದಲ್ಲಿ ಉಲ್ಲೇಖಗೊಂಡು ತಿಂಡಿ-ತಿನಿಸು ಪಾನೀಯಗಳಲ್ಲಿ ಸುರುಳಿ ಹೋಳಿಗೆ, ಉಂಡಿ, ಗಾರಿಗೆ, ಎಳ್ಳುಂಡಿ, ತಂಬಿಟ್ಟು, ಕರಚೀಯಕಾಯಿ, ಸಜ್ಜುಕ, ವಡೆ ಮುಂತಾದವುಗಳು ಖಾರದ ತಿನಿಸುಗಳಾಗಿವೆ. ಗಂಜಿ, ಅಂಬಲಿ, ಹಲವು ಬಗೆಯ ಪೇಯಗಳು ಅಲ್ಲದೆ ವಿಶೇಷ ದಿನಗಳಲ್ಲಿ ತಯಾರಾಗುವ ತಿಂಡಿ-ತಿನಿಸು ಪಾನೀಯಗಳು ಬಗೆಬಗೆಯಾಗಿವೆ.

ದುಡಿಮೆಯೇ ಜೀವಾಳವಾದ ನಮ್ಮ ಜಾನಪದರ ಅಡುಗೆಗಳು ಪಂಚಭಕ್ಷ್ಯಗಳೇನಲ್ಲ. ಭಿನ್ನ ಆಸಕ್ತಿಗಳು, ಭಿನ್ನರುಚಿಗಳನ್ನು ಹೊಂದಿರುವ ಬೇರೆ ಬೇರೆ ಜನಾಂಗಗಳ ಆಹಾರ ರೂಢಿಗಳೂ ಬೇರೆ ಬೇರೆ. ಭೌಗೋಲಿಕ ಪರಿಸರ, ಹವಾಮಾನ, ನಂಬಿಕೆ, ಕಸಬುಗಳಿಗೆ ಅನುಗುಣವಾಗಿ ಬೇರೆ ಬೇರೆ ಪ್ರದೇಶದ ಅಡುಗೆಗಳು ವಿಧವಿಧವಾಗಿವೆ. ಮಾನವನ ಸುಖಸಂತೋಷದ ಬದುಕಿಗಾಗಿ ನಿಸರ್ಗ ಹಲವಾರು ಆಹಾರವಸ್ತುಗಳನ್ನು ಒದಗಿಸಿಕೊಟ್ಟಿದೆ. ಅಂಥ ಸಾಮಾಗ್ರಿಗಳನ್ನು ಸಾರ್ಥಕವಾಗಿ ಬಳಸಿಕೊಳ್ಳುವುದು  ಜನಪದರ ವಿಶಿಷ್ಟ ಗುಣವಾದುದರಿಂದ ಗುಡ್ಡಗಾಡುಗಳಲ್ಲಿ, ಸಮುದ್ರತೀರದಲ್ಲಿ ವಾಸಿಸುವ ಜನರು ಮಾಂಸಹಾರಿಗಳಾಗಿಸದ್ದರೆ, ಬಯಲುಸೀಮೆಯಲ್ಲಿಯ ಜನರು ಸಸ್ಯಾಹಾರಿಗಳಾಗಿದ್ದಾರೆ. ಸಿಹಿ, ಹುಳಿ, ಖಾರ, ಉಪ್ಪು ಗುಣಗಳ ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ಆರೋಗ್ಯ, ರುಚಿಶುಚಿಗಳೂ ಅಂದ ಹಾಗೂ ಪರಿಮಳವೂ ಜನಪದ ಅಡುಗೆಯ ವೈಶಿಷ್ಟ್ಯವಾಗಿದೆ. ಸರಳ ರೀತಿಯಲ್ಲೂ, ರುಚಿವೈವಿಧ್ಯವನ್ನು ಸಾಧಿಸಿರುವ ದೊಡ್ಡ ಕಲೆಗಾರಿಕೆ ಇವರದು. ಜನಪದರ ಜೀವನದಲ್ಲಿ ಕಂಡುಬರುವ ಊಟ, ತಿಂಡಿ – ತಿನಿಸು ಪಾನೀಯಗಳ ವೈವಿಧ್ಯ ಈಗಲೂ ತನ್ನ ನೈಜತೆಯನ್ನು ಉಳಿಸಿಕೊಂಡಿದೆ.

ಉತ್ತರ ಕರ್ನಾಟಕದ ಜನಪದರ ಆಹಾರ ಪದ್ಧತಿಯಲ್ಲಿ ತಿಂಡಿ-ತಿನಿಸು ಪಾನೀಯಗಳ ಬಳಕೆ ಕಡಿಮೆ. ಊಟದಲ್ಲಿರುವ ವೈವಿಧ್ಯತೆ ಇವುಗಳಲ್ಲಿಲ್ಲ.ಆದರೂ ಹಬ್ಬ ಹುಣ್ಣಿಮೆಗಳಲ್ಲಿ ಮದುವೆ ಜಾತ್ರೆಗಳಲ್ಲಿ ನೆಂಟರಿಷ್ಟರು ಮನೆಗೆ ಬಂದಾಗ ಹಲ-ಕೆಲವು ತಿಂಡಿ-ತಿನಿಸು ಪಾನೀಯಗಳ ಬಗೆಗಳು ಅವರಲ್ಲಿವೆ.

ಒಂದು ಪ್ರದೇಶದ ಆಹಾರ ರೂಢಿಗಳು ಆಯಾ ಪ್ರದೇಶದಲ್ಲಿ ಬೆಳೆಯುವ ಧಾನ್ಯಗಳನ್ನು ಅವಲಂಬಿಸಿರುತ್ತವೆ. ಬೆಳೆಯುವ ಧಾನ್ಯಗಳು ಆಯಾ ಪ್ರದೇಶದ ಭೌಗೋಳಿಕ ಪರಿಸರ, ಹವಾಮಾನ, ಮಳೆ, ಮಣ್ಣನ್ನು ಅವಲಂಬಿಸಿರುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಉತ್ತರ ಕರ್ನಾಟಕ, ಕರಾವಳಿ ಪ್ರದೇಶ, ದಕ್ಷಿಣ ಕರ್ನಾಟಕ ಭಾಗಗಳನ್ನಾಗಿ ವಿಂಗಡಿಸಿ ಅಭ್ಯಸಿಸಿದಾಗ, ಆಯಾ ಪ್ರದೇಶದ ಆಹಾರಪದ್ಧತಿಗಳು ಅಲ್ಲಿಯ ಪ್ರಧಾನ ಬೆಳೆಗಳಿಗನುಸಾರವಾಗಿ ರೂಢಿಗೊಂಡಿರುವುದಾದರೂ ಆ ಭಾಗಗಳ ಆಹಾರವನ್ನು ನಿಖರವಾಗಿ ಗೆರೆ ಎಳೆಯಲಾಗುವುದಿಲ್ಲ. ಆದರೆ ಜನಪದರ ಮೂಲ ಅಡುಗೆಯು ತನ್ನ ಪ್ರಾದೇಶಿಕ ಮಹತ್ವ ಹಾಗೂ ವೈಶಿಷ್ಟವನ್ನು ಉಳಿಸಿಕೊಂಡಿರುವುದು ಕಂಡುಬರುತ್ತದೆ.

ಉತ್ತರ ಕರ್ನಾಟಕದಲ್ಲಿ ಜೋಳಕ್ಕೆ ಪ್ರಥಮ ಸ್ಥಾನ. ಎರಡನೆಯ ಸ್ಥಾನ ಗೊದಿಯದು. ಬೇಳೆಕಾಳುಗಳನ್ನು, ಎಣ್ಣೆಕಾಳುಗಳನ್ನು ಎಲ್ಲ ಕಡೆಗೂ ಬೆಳೆಯುತ್ತಾರೆ. ಅಕ್ಕಿಯ ಬಳಕೆ ಕಡಿಮೆ. ಗ್ರಾಮೀಣ ಪ್ರದೇಶದ ಜನರು ಅಕ್ಕಿಯನ್ನು ಹಬ್ಬಗಳಲ್ಲಿ ಮಾತ್ರ ಉಪಯೋಗಿಸುತ್ತಾರೆ. ಅದು ಇಲ್ಲಿಯ ಶ್ರೀಮಂತರ ನಿತ್ಯದ ಆಹಾರಧಾನ್ಯ.ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸಜ್ಜಿ ಅಕ್ಕಿಗಳು ತಮ್ಮ ಸ್ಥಾನ ಸ್ಥಾಪಿಸುತ್ತಿವೆ. ನೀರಿನ ಅನುಕೂಲವಿರುವಲ್ಲಿ ಭತ್ತ ಕಬ್ಬು ಬೆಳೆಯುತ್ತಾರೆ. ಹೀಗಾಗಿ ಉತ್ತರ ಕರ್ನಾಟಕದ ಜನತೆ ಬಹುತೇಕ ಸಸ್ಯಾಹಾರಿಗಳಾಗಿದ್ದಾರೆ ಇಲ್ಲಿಯ ಸಿಹಿ-ತಿಂಡಿ-ತಿನಿಸುಗಳಿಗೆ ಸಾಮಾನ್ಯವಾಗಿ ಗೋದಿ, ಹೆಸರು, ಶೇಂಗಾ,ಎಳ್ಳು, ಪುಠಾಣಿ, ಬೆಲ್ಲ.ತುಪ್ಪ, ಏಲಕ್ಕಿ, ಗೋಡಂಬಿ, ದ್ರಾಕ್ಷಿ, ಗೇರುಬೀಜ, ಜಾಜಿಕಾಯಿ, ಒಣಕೊಬ್ಬರಿ, ಕಸಕಸಿ, ಒಣಶುಂಠಿ ಮೊದಲಾದವುಗಳು ಮೂಲ ಆಹಾರ ಸಾಮಾಗ್ರಿಗಳಾದರೆ, ಖಾರದ ತಿಂಡಿ-ತಿನಿಸುಗಳಿಗೆ ಜೋಳ, ಅಕ್ಕಿ, ಗೋದಿ, ಉದ್ದು, ಅಲಸಂದಿ, ಕಡಲೆ.ಒಣ ಇಲ್ಲವೇ ಹಸಿಖಾರ, ಉಪ್ಪು ಎಣ್ಣಿ, ಜೀರಿಗೆ, ಸಾಸಿವೆ, ಕರಿಬೇವು, ಕೊತ್ತಂಬರಿ, ಉಳ್ಳಾಗಡ್ಡಿ, ಮೊದಲಾದವುಗಳು ಮೂಲ ಆಹಾರ ಸಾಮಾಗ್ರಿಗಳಾಗಿವೆ. ಧಾನ್ಯಗಳನ್ನು ಸಾಮಾನ್ಯವಾಗಿ ಹಿಟ್ಟು ಇಲ್ಲವೆ ನುಚ್ಚಿನ ರೂಪದಲ್ಲಿ ಬಳಸಲಾಗುತ್ತದೆ.ಜೀರಿಗೆ ಸಾಸಿವೆಯಂತಹ ಧಾನ್ಯಗಳನ್ನು ಇಡಿಯಾಗಿಯೂ ಪುಡಿ ಮಾಡಿಯೂ ಉಪಯೋಗಿಸಲಾಗುವುದು. ತಿಂಡಿ – ತಿನಿಸು ಪಾನೀಯಗಳನ್ನು ತಯಾರಿಸುವಾಗ ಅನುಸರಿಸುವ ವಿಧಾನವನ್ನು ಗಮನಿಸಿದಾಗ ತಿಂಡಿ ತಯಾರಿಸುವಲ್ಲಿ ಕುದಿಸುವದು ಅಥವಾ ಬೇಯಿಸುವುದು ಸರ್ವೇಸಾಮಾನ್ಯ ವಿಧಾನ, ತಿನಿಸು ತಯಾರಿಸುವಾಗ ಕರಿಯುವುದು, ಹುರಿಯುವುದು ಸುಡುವುದು, ಇಲ್ಲವೇ ಕುಟ್ಟುವುದು, ಹಾಗೂ ಪಾನೀಯಗಳ ತಯಾರಿಕೆಯಲ್ಲಿ ಹಿಂಡುವುದು, ಕಡೆಯುವುದು, ಅಲ್ಲದೆ ಮೂಲರೂಪದಲ್ಲಿಯೇ ಕೆಲವೋಮ್ಮೆ ಕುದಿಸುವ ವಿಧಾನವೂ ಬಳಕೆಯಲ್ಲಿದೆ. ಈ ಆಹಾರ ಪದ್ಧತಿಯ ವೈವಿಧ್ಯತೆಗೆ ಕಾರಣಗಳು ಹಲವು. ಅಭಿರುಚಿ, ಹವಾಮಾನ, ಆರ್ಥಿಕ ಸ್ಥಿತಿ, ಕೆಲಸದ ಭಾರ, ಅನಾರೋಗ್ಯ, ಅನಿವಾರ್ಯತೆ, ದೈವೀಶ್ರದ್ಧೆ ಮೊದಲಾದವುಗಳು. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಸಿಹಿ ತಿಂಡಿಗಳಿಗೆ ಬೆಲ್ಲವನ್ನು ಉಪಯೋಗಿಸುತ್ತಾರೆ. ಸಕ್ಕರೆ ಬಳಕೆ ಕಡಿಮೆ. ಖಾರದ ತಿನಿಸುಗಳನ್ನು ಕರಿಯಲು ಹೆಚ್ಚಾಗಿ ಶೇಂಗಾ ಇಲ್ಲವೆ ಕುಸುಬಿ ಎಣ್ಣೆಯನ್ನೇ ಬಳಸುತ್ತಾರೆ. ತಪ್ಪು ಅಥವಾ ಇತರ ಎಣ್ಣೆಗಳ ಬಳಕೆ ಕಡಿಮೆ.

ಉತ್ತರ ಕರ್ನಾಟಕದಲ್ಲಿ “ತಿಂಡಿ “ಎಂಬ ಪದದ ಬಳಕೆ ರೂಢಿಯಲ್ಲಿಲ್ಲ. (ಇಲ್ಲಿ ತಿಂಡಿ ಎಂದರೆ ತುರಿಕೆ ಅಥವಾ ಸೊಕ್ಕು ಎಂದಾಗುತ್ತದೆ.) “ತಿಂಡಿ” ಎಂಬುದನ್ನು ಇಲ್ಲಿ ನಾವು ಹೀಗೆ ಅರ್ಥೈಸಬಹುದು.

ತಿಂಡಿ -ಬಿಸಿ ಬಿಸಿಯಾದದ್ದು, ಆಗ ಅಥವಾ ಅಂದು ಮಾಡಿದ್ದು, ನೀರಿನಲ್ಲಿ ಕುದಿಸಿ ಮಾಡಿದ್ದು, ಬೇಯಿಸಿದ್ದು.

ತಿನಿಸು – ಇಟ್ಟು ತಿನ್ನಲು ಬರುವಂಥದ್ದು. ಕುಟ್ಟಿದ್ದು, ಕರಿದದ್ದು, ಹುರಿದದ್ದು, ಸುಟ್ಟದ್ದು (ಹಸಿಶೇಂಗಾ, ಹಸಿ ಕಡಲೆಯಂತಹ ಕಚ್ಚಾ ಸಾಮಾಗ್ರಿಯೂ ಆಗಬಹುದು).

ಉದಾ: ಉಪ್ಪಿಟ್ಟು ತಿಂಡಿಯಾದರೆ ಕರಚೀಕಾಯಿ ತಿನಿಸು, ದೋಸೆ ತಿಂಡಿಯಾದರೆ ಉಂಡಿ ತಿನಿಸು

ಈ ಭಾಗದಲ್ಲಿ ಬೆಳೆಯಲಾಗವ ಧಾನ್ಯಗಳಿಂದ ನಮ್ಮ ಜನಪದರು ಬಗೆ ಬಗೆಯ ತಿಂಡಿ – ತಿನಿಸು ತಯಾರಿಸುವಂತೆ  ಒಂದೇ ಬಗೆಯ ಧಾನ್ಯದಿಂದ ತಿಂಡಿ – ತಿನಿಸು ಪಾನೀಯಗಳನ್ನು ತಯಾರಿಸಬಲ್ಲ ಜಾಣ್ಮೆ ಕೌಶಲ ಅವರದು. ಜೋಳದಿಂದಲೇ ಅದರ ಹಿಟ್ಟಿನ ದೋಸೆಯನ್ನು ತಿಂಡಿಯಂತೆ.ಅದೇ ಹಿಟ್ಟಿನಿಂದ ವಡೆಗಳನ್ನು ತಯಾರಿಸಿ ತಿನಿಸಿನಂತೆಯೂ, ಹಿಟ್ಟಿನ ಗಂಜಿಯನ್ನು ಪಾನೀಯವಾಗಿ ತಯಾರಿಸಲಾಗುತ್ತದೆ. ಅದೇ ರೀತಿ ಗೋದಿಯ ನುಚ್ಚಿನ ಉಪ್ಪಿಟ್ಟು, ಹಿಟ್ಟಿನ ಉಂಡೆ ಅಲ್ಲದೆ  ಹಿಟ್ಟಿನ ಗಂಜಿಯನ್ನು ಮಾಡುತ್ತಾರೆ. ಇದರಂತೆ ಒಂದೇ ಧಾನ್ಯದಿಂದ   ವಿವಿಧ ಸಿಹಿ – ಖಾರ ತಿಂಡಿ – ತಿನಿಸು ಪಾನೀಯಗಳನ್ನು ತಯಾರಿಸಬಹುದು. ಈ ಭಾಗದಲ್ಲಿ ಜೋಳದ ಸಿಹಿ ತಿನಿಸುಗಳನ್ನು ಮಾಡುತ್ತಿದ್ದರೂ ಸಿಹಿ ತಿಂಡಿಗಳನ್ನು ಮಾಡುವಂತೆ ಕಾಣುವುದಿಲ್ಲ.

ಉತ್ತರ ಕರ್ನಾಟಕದಲ್ಲಿ ಅನೇಕ ತಿಂಡಿ – ತಿನಿಸುಗಳು ಊಟದಂತೆಯೂ ಪರಿಗಣಿಸಲ್ಪಟ್ಟಿವೆ ಹಬ್ಬದ ದಿನಗಳಲ್ಲಿ ಉಂಡಿ.ಕರಚೀಕಾಯಿ, ಸುರುಳಿಹೋಳಿಗೆ, ಭಜಿ, ವಡೆ ಮೊದಲಾದ ಸಿಹಿ – ಖಾರ ತಿಂಡಿ ತಿನಿಸುಗಳನ್ನು ಮೊದಲು ಸೇವಿಸಿ ಮೇಲೆ ಅನ್ನ ಊಟ ಮಾಡಿದರೆ ಅವು ಊಟದ ಪದಾರ್ಥಗಳೆಂದು ಪರಿಗಣಿಸಲ್ಪಡುತ್ತವೆ. ಎಳ್ಳು ಹೋಳಿಗೆ, ಹುರಕ್ಕಿ ಹೋಳಿಗೆಗಳನ್ನು, ಇತ್ತೀಚೆಗೆ ಶಿರಾ, ಜಿಲೇಬಿಗಳನ್ನು ಎರಡೂ ರೀತಿಯಲ್ಲಿ ಬಳಸುತ್ತಾರೆ. “ತಿಂಡಿ” ಎನ್ನುವ ಒಂದು ಪ್ರತ್ಯೇಕ ಕ್ರಮ ಈಚಿನದೆಂದು ತೋರುತ್ತದೆ. ಈ ಭಾಗದಲ್ಲಿ ಮೊದಲಿನಿಂದಲೂ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಗಳ ಸ್ಥಾನವನ್ನು ತುಂಬುವುದು ಜೋಳದ ರೊಟ್ಟಿಯೆ. ಒಕ್ಕಲು ಮಕ್ಕಳು ಬೆಳಗಾಗೆದ್ದು ಹೊಲದತ್ತ ಸಾಗಬೇಕು ಹೋಗುವ ಮುನ್ನ ರಾತ್ರಿಗೆ ಮಿಕ್ಕಿದ ರೊಟ್ಟಿಗಳನ್ನು ಅಗಸೆ, ಕಡಲೆ, ಶೇಂಗಾ.ಗುರೆಳ್ಳು ಯಾವುದಾದರೂ ಒಂದೆರಡು ಪುಡಿಹಿಂಡಿ ಜೊತೆಗೆ ಮೊಸರಿನೊಂದಿಗೆ ಇಲ್ಲವೇ ಬಳ್ಳೊಳ್ಳಿ ಪುಡಿಚೆಟ್ನಿ,  ಕಲ್ಲಾನಕಾರಾ ಅವರಿಗೆ ಇನ್ನೂ ಹೆಚ್ಚು ರುಚಿ ಕೊಡುತ್ತವೆ, ತಂಪೊತ್ತಿನಲ್ಲಿ ಹೊಲದಲ್ಲಿ ಮೈಮುರಿದು ದುಡಿಯುವವರ ಆಹಾರ ಸೇವನೆಯ ಆರಂಭ ಈ ಸಣ್ಣ ಊಟದಿಂದಲೇ ಮೊದಲಾಗುತ್ತದೆ. ಇದಕ್ಕೆ ನ್ಯಾರಿ.ನಾಷ್ಠಾ ಎನ್ನುತ್ತಾರೆ. ನಮ್ಮ ಗ್ರಾಮೀಣ ಹೆಣ್ಣುಮಕ್ಕಳು ರಾತ್ರಿ ರೊಟ್ಟಿ ಮಾಡುವಾಗಲೇ ನಾಲ್ಕು ಹೆಚ್ಚು ಮಾಡಿಟ್ಟಿರುತ್ತಾರೆ ಅನ್ನವನ್ನು ದೇವರೆಂದು ಭಾವಿಸುವ ನಮ್ಮ ಜನಪದರಿಗೆ ಆಹಾರ ಪದಾರ್ಥಗಳನ್ನು ಕೆಡಿಸುವದಾಗದು. ತಂಗಳ ರೊಟ್ಟಿಗಳನ್ನು ಸಾರಿನಲ್ಲಿ ಮುರಿದು ಹಾಕಿಕೊಂಡು, ಸಾರಿನಲ್ಲಿ ಕುದಿಸಿ ಇಲ್ಲವೆ ಒಗ್ಗರಣೆ ಕೊಟ್ಟು ಗೋದಿ ರೊಟ್ಟಿಗಳಿದ್ದರೆ ಬೆಲ್ಲದ ನೀರಿನಲ್ಲಿ ಕುದಿಸಿ, ರಾತ್ರಿ ಉಳಿದ ಅನ್ನಕ್ಕೆ ಒಗ್ಗರಣೆ ಕೊಟ್ಟು, “ನ್ಯಾರಿ” ಮಾಡುತ್ತಾರೆ. ಗುಲಬರ್ಗಾ ಭಾಗದಲ್ಲಿ ಕೋದರಿ ಅಕ್ಕಿ (ಒಂದು ಜಾತಿಯ ಹಕ್ಕಿ) ಕುಟ್ಟಿ ಮಾಡಿದ ರಾತ್ರಿಯ ಅನ್ನಕ್ಕೆ ಪಾಣಿ (ಒಗ್ಗರಣೆ) ಕೊಟ್ಟು, ಬಳ್ಳಾರಿಯ ಕೆಲವು ಭಾಗಗಳಲ್ಲಿ ರಾತ್ರಿ ಊಟವಾಗಿ ಉಳಿದ ಮುದ್ದೆಗೆ ಉಪ್ಪು ಖಾರ ಜೀರಿಗೆ ಪುಡಿ ಬೆರೆಸಿ “ನ್ಯಾರಿ” ಮಾಡುತ್ತಾರೆ ಇದನ್ನೆಲ್ಲ ಉಣ್ಣುವಾಗ ತಂಗಳು ಎಂಬ ಭಾವನೆಯೇ ಅವರಿಗೆ ಬಾರದು.ಹಳ್ಳಿಯ ಜನ ಬೆಳಗಾಗೆದ್ದು ತಮ್ಮ ತಮ್ಮ ಕೆಲಸಕ್ಕೆ ಹೊರಡುವ ಮುನ್ನ ಈ ತಂಗಳು ಆಹಾರವೇ ಅವರಿಗೆ ಬೆಳಗಿನ ತಿಂಡಿ ಅಂದರೆ ನ್ಯಾರಿ. ಹೀಗಾಗಿ ದಿನನಿತ್ಯ ಉತ್ತರ ಕರ್ನಾಟಕದಲ್ಲಿ ತಿಂಡಿ-ತಿನಿಸುಗಳ ಬಳಕೆ ಇಲ್ಲವೆಂದು ಹೇಳಬಹುದು.

ಉಪ್ಪಿಟ್ಟು ಸರ್ವೇಸಾಮಾನ್ಯವಾಗಿ ಉತ್ತರ ಕರ್ನಾಟಕದ ಎಲ್ಲ ಭಾಗದ ತಿಂಡಿಯಾ‌ಗಿದೆ. ಗೋವಿನ ಜೋಳದ ನುಚ್ಚು, ಗೋದಿ ನುಚ್ಚು, ನವಣಿ ಬೀದರ ಭಾಗದಲ್ಲಿ ಜೋಳದ ಹುಟ್ಟಿನಿಂದ. ಕೆಲವರು ಸೇವಿಗೆಯಿಂದ ಉಪ್ಪಿಟ್ಟನ್ನು ತಯಾರಿಸುತ್ತಾರೆ.

I.  ದೈನಂದಿನ ತಿಂಡಿತಿನಿಸುಗಳು  :

ಉಪ್ಪಿಟ್ಟು  ನಂತರದ ಸ್ಥಾನ ಸೂಸಲಕ್ಕೆ ಚುರುಮರಿ ಅಥವಾ ಮಂಡಕ್ಕಿ ತೊಯ್ಸಿ ಒಗ್ಗರಣೆ ಹಾಕಿದ್ದು. ಇದರಂತೆ ಅವಲಕ್ಕಿಯ ಒಗ್ಗರಣೆ ಮಾಡುತ್ತಾರೆ ಆದರೆ ಅವಲಕ್ಕಿಯ ಬಳಕೆ ರೈತಾಪಿ ಜನರಲ್ಲಿ ಕಡಿಮೆ. ಚುರಮರಿ, ಅವಲಕ್ಕಿಗಳ ಚೂಡಾ ಮಾಡುತ್ತಾರೆ. ಯಾರಾದರೂ ನೆಂಟರು, ಸ್ನೇಹಿತರು ಮನೆಗೆ ಬಂದಾಗ ಈ ತಿಂಡಿ – ತಿನಿಸುಗಳನ್ನು ಮಾಡಲಾಗುತ್ತದೆ. ಜೋಳದ ಹಿಟ್ಟಿನದೋಸೆ, ಅಕ್ಕಿ ಹಿಟ್ಟಿನ ದೋಸೆ, ಥಾಲಿಪಿಟ್ಟುಗಳು ವಾರದ ದಿನ, ಒಪ್ಪತ್ತು ದಿನ, ಅಮಾವಾಸ್ಯೆಗೆ ಊಟದ ಸ್ಥಾನವನ್ನು ತುಂಬುತ್ತವೆ. ಭಜಿ ಹಳ್ಳಿಯ ಜನರ ಅತ್ಯಂತ ಪ್ರಿಯವಾದ ತಿಂಡಿ. ಬೇಕೆನಿಸಿದಾಗ ರೊಟ್ಟಿಯ ಜೊತೆಗೂ ಇದನ್ನು ತಿನ್ನುತ್ತಾರೆ. ಉಳ್ಳೇಗಡ್ಡಿಯ ಬದಲಾಗಿ ಭಜಿಗೆ ಮೆಣಸಿನಕಾಯಿ, ಕಲ್ಲುಪಟ್ಲಕಾಯಿ. ಆಲೂಗಡ್ಡೆಗಳನ್ನೂ ಬಳಸುತ್ತಾರೆ. ಬೆಳಗಾಂವ ಜಿಲ್ಲೆಯಲ್ಲಿ ನೌಣಕ್ಕಿಯ ಉಪ್ಪಿಟ್ಟಿನ ಉಂಡೆ ಮಾಡಿ ಒಳಗಿಟ್ಟು ರಾಯಚೂರು, ಪ್ರದೇಶದಲ್ಲಿ ಇಡೀ ಬದನೆಕಾಯಿಗೆ ಒಳಗೆ ಮಸಾಲೆ ತುಂಬಿ ಇವುಗಳ ಮೇಲೆ ಕಲಸಿದ ಕಡಲೆಹಿಟ್ಟು ಹಚ್ಚಿ ಎಣ್ಣೆಯಲ್ಲಿ ಕರಿಯುತ್ತಾರೆ.

ಉತ್ತರ ಕರ್ನಾಟಕದಲ್ಲಿ ತಿಂಡಿ-ತಿನಿಸುಗಳನ್ನು ತಿನ್ನಲು ಕೇಳುವಾಗ “ತಿನ್ನಾಕ ಅಥವಾ ತಿನಲಾಕ ಇಲ್ಲವೇ ತಿನಿಸು ಕೊಡು” ಎಂದು ಹೇಳುವ ರೂಢಿಯುಂಟು.

i) ಮಕ್ಕಳ ತಿಂಡಿ ತಿನಿಸುಗಳು :

ಚಿಕ್ಕಮಕ್ಕಳು ಮುಂಜಾನೆ ಏಳುತ್ತಲೇ “ಎವ್ವಾಬೇ ಹೊಟ್ಟಿ ಹಸ್ತೈತಿ “ಎಂದು ಹಟ ಮಾಡುತ್ತವೆ. ಅದೇ ಆಗ ಹಂಚು (ತವಿ) ಇಟ್ಟ ಅವ್ವ ಅವಸರಕ್ಕೆ ಬಿಸಿರೊಟ್ಟಿಗೆ ಮನೆಯಲ್ಲಿದ್ದಿ ಬೆಣ್ಣೆ ತುಪ್ಪ ಇಲ್ಲವೆ ಸ್ವಲ್ಪ ಖಾರದ ಹಿಂಡಿಯನ್ನು ಸವರಿ ಕೈಯಲ್ಲಿ ಮುಟ್ಟಿಗೆ ಇಲ್ಲವೆ ಸುರಳಿ ಮಾಡಿ ಮಕ್ಕಳಿಗೆ ತಿನ್ನಲು ಕೊಡುತ್ತಾರೆ. ಇದು ಮಕ್ಕಳ ಬೆಳಗಿನ ತಿಂಡಿಯಾಗಿದೆ. ಮಕ್ಕಳು ಓಡಾಡುತ್ತಲೇ ಇವುಗಳನ್ನು ತಿಂದು ಮುಗಿಸುತ್ತವೆ. ಮಕ್ಕಳಿಗೆ ಸದಾ ಕಾಲ ತಿನ್ನಲು ಏನಾದರೂ ಬೇಕು ಹಸಿವಾದಾಗ, ಬಾಯಿ ರುಚಿಗಾಗಿ, ತಿನ್ನವ ಚಟಕ್ಕಾಗಿ ಇತ್ಯಾದಿ ಮಕ್ಕಳ ತಿನಿಸುಗಳಲ್ಲಿ ಇಲ್ಲಿ ವಿಶೇಷವಾಗಿ ಹುಣಸೆಹಣ್ಣಿನ ಚಿಗಳಿ, ಹುರಿದ ಹುಣಸೆಪಕ್ಕ (ಬೀಜ), ಹುರಿದ ಶೇಂಗಾ, ಪುಠಾಣಿ, ಅಂಗಡಿಗಳಲ್ಲಿ ಮಾರುವ ಚುರಮುರಿ ಉಂಡಿ, ಶೇಂಗಾ ಹಲ್ಪಿ, ಎಳ್ಳಿನ ಸಣ್ಣ ಸಣ್ಣ ಬೆಲ್ಲದ ಉಂಡೆಗಳನ್ನು ಹೆಸರಿಸಬಹುದು.

ii) ಪಥ್ಯದ ತಿಂಡಿತಿನಿಸುಗಳು :

ಬಾಣಂತಿಯರಿಗೆ ಅಂಟಿನ ಉಂಡಿಗಳನ್ನು, ಮೈನೆರೆದ ಹುಡುಗಿಗೆ ಕೊಬ್ರಿಖಾರವನ್ನು ಕೊಡುತ್ತಾರೆ. ಒಣಕೊಬ್ಬರಿಗೆ ಬೆಲ್ಲ ಸೇರಿಸಿ ಕುಟ್ಟಿದ್ದು ಕೊಬ್ರಿಖಾರ, ತುಪ್ಪದಲ್ಲಿ ಹುರಿದು ತಿನ್ನವ ಅಂಟು, ಉತ್ತತ್ತಿ, ಬೆಲ್ಲ, ಗೋಡಂಬಿ, ಬದಾಮಿ ಜಾಜಿಕಾಯಿ, ಗೇರು ಬೀಜ, ದ್ರಾಕ್ಷಿ ಮೊದಲಾದ ವಸ್ತುಗಳಿಂದ ಅಂಟಿನ ಉಂಡಿ ತಯಾರಿಸುತ್ತಾರೆ. ಹೆಚ್ಚಿನ ಪೌಷ್ಠಿಕಾಂಶಗಳ ಅಗತ್ಯವಿರುವ ಸಂದರ್ಭಗಳಲ್ಲಿ ಈ ತಿಂಡಿತಿನಿಸುಗಳನ್ನು ಕೊಡುವ ಅವಧಿ ಅವರವರ ಆರ್ಥಿಕಸ್ಥಿತಿಯನ್ನು ಅವಲಂಬಿಸಿದೆ.

iii) ಅನಾರೋಗ್ಯ ಸಂದರ್ಭದ ತಿಂಡಿ ತಿನಿಸುಗಳು :

ಮೆಣಸುಗಡಬು ಇಲ್ಲವೆ ಖಾರದ ಕಡಬುಗಳನ್ನು ವಿಶೇಷವಾಗಿ ನೆಗಡಿಗೆ ಔಷಧಿಯಂತೆ ಉಪಯೋಗಿಸಲಾಗುತ್ತದೆ. ಶುಂಠಿ.ಮೆಣಸು, ಬೆಲ್ಲಗಳನ್ನು ಬಜ್ಜಿ ಗೋದಿಯ ಕಣಕದಲ್ಲಿಟ್ಟು ನೀರಿನಲ್ಲಿ ಕುದಿಸುವ ಈ ತಿಂಡಿ ಶುದ್ಧ ವೈದ್ಯಕೀಯ ಹಿನ್ನೆಲೆಪಡೆದಿದೆ. ಕಾಯಿಲೆಯಿಂದ ಪಚನಶಕ್ತಿ ಕುಂಠಿತವಾದ ಸಂದರ್ಭದಲ್ಲಿ ರೋಗಿಗಳಿಗೆ ತಿಳು ಆಹಾರ ಕೊಡುವುದಲ್ಲದೆ, ಅರಳಿಟ್ಟು ಬಾಯಿಗೆ ರುಚಿ ಹಾಗೂ ಪಚನಕ್ಕೆ ಹಗುರವೆನಿಸುತ್ತದೆ

iv) ವಿಶೇಷ ತಿಂಡಿತಿನಿಸುಗಳು :

ಸಾಮಾನ್ಯವಾಗಿ ರೈತಾಪಿ ಮನೆಗಳಲ್ಲಿ ಹೈನಕ್ಕೆ ಕೊರತೆ ಇಲ್ಲ. ಆಕಳು ಅಥವಾ ಎಮ್ಮೆಯು ಈದ ಮೊದಲ ದಿನದ ಎಳಗಂದಿ ಹಾಲಿನಿಂದ ಗಿಣ್ಣದ ವಡೆಗಳನ್ನು ತಯಾರಿಸುತ್ತಾರೆ. ಹಾಲು, ಬೆಲ್ಲ, ಏಲಕ್ಕಿಪುಡಿ ಸೇರಿಸಿ ಕುದಿಸಿ ಗಟ್ಟಿಯಾದ ನಂತರ ತಾಟಿಗೆ ಹಾಕಿ ಕೊರೆಯುತ್ತಾರೆ. ಹಳ್ಳಿಗಳಲ್ಲಿ ಗಿಣ್ಣದ ಹಾಲನ್ನು ಮನೆ ಮನೆಗೆ ಕಳಿಸುವುದರಿಂದ ಅಲ್ಲಿಯ ಮನೆಗಳಲ್ಲಿ ಆಗಾಗ ವಿಶಿಷ್ಟ ತಿಂಡಿ ಇದಾಗಿದೆ.

v) ಗ್ರಾಮಗಳ ಚಹಾದಂಗಡಿ, ಸಂತೆಪೇಟೆಗಳಲ್ಲಿ ಮಾರುವ ತಿಂಡಿತಿನಿಸುಗಳು :

ಒಂದು ಕಾಲಕ್ಕೆ ಚಹಾ ಕುಡಿಯುವುದೇ ತಪ್ಪು ಎಂದು ಭಾವಿಸಿದ್ದ  ಇಲ್ಲಿಯ ಜನಪದರಿಗೆ ಇಂದು ಅದು ಅನಿವಾರ್ಯವೇನೋ ಎಂಬಂತಾಗಿದೆ. ಚಹಾದಂಗಡಿಗಳಲ್ಲಿ ಸರ್ವೇಸಾಮಾನ್ಯವಾಗಿ ಉಪ್ಪಿಟ್ಟು, ಸೂಸಲ, ಭಜಿ, ಚೂಡಾ, ಖಾರದಾಣಿ ಇತ್ಯಾದಿಗಳು ಅಲ್ಲದೆ ಜೋಳದ ಹಿಟ್ಟಿನ ದೋಸೆ, ಪುರಿಭಾಜಿ ಮಾಡುತ್ತಾರೆ ಭಾಜಿ ಆಲೂಗಡ್ಡೆಯದು ಇಲ್ಲವೆ ಬಿಜಾಪುರದ ಕೆಲವು ಭಾಗಗಳಲ್ಲಿ ಪಾಚಿ ಉಳ್ಳೇಗಡ್ಡಿ ಹುರಿದು ಅರಿಷಿಣ, ಜೋಳದ ಹಿಟ್ಟು ಹಚ್ಚಿ ಉಪ್ಪು ಖಾರ ಹಾಕಿ ಮಾಡಿದುದಕ್ಕೆ ಚಟ್ನಿ ಎನ್ನುತ್ತಾರೆ, ಹಳ್ಳಿಯ ಜನ ಅಂಗಡಿಗೆ ಬಂದು “ಮಸಾಲೆ ಕೊಡ್ತಿ” ಎಂದರೆ ಮಸಾಲೆ ದೋಸೆಯೆಂದೂ, “ಸಂಗೀತ ಕೊಡ್ತಿ” ಎಂದರೆ ಖಾರ – ಸೇವು, ಚಕ್ಕುಲಿ, ದಾಣಿ, ಚೂಡಾ, ಉಳ್ಳೇಗಡ್ಡಿ, ಕೋತ್ತಂಬರಿ, ಲಿಂಬಿಹುಳಿ ಮಿಶ್ರಣವೆಂದೂ ಅಲ್ಲಿಯ “ಮಾಣಿಗೆ” ಅರ್ಥವಾಗುತ್ತದೆ. ಧಾರವಾಡದ “ಗಿರಮಿಟ್ಟು” ಪ್ರಸಿದ್ಧವಾಗಿದೆ. ಚರುಮುರಿ ಸ್ವಲ್ಪ ಒದ್ದೆ ಮಾಡಿ ಉಳ್ಳೇಗಡ್ಡಿ ಮೆಣಸಿನಕಾಯಿ ಒಗ್ಗರಣೆ ಕೊಟ್ಟು ಪುಠಾಣಿಹಿಟ್ಟು ಹಚ್ಚಿ ಸೇವು ಉದರಿಸಿದ ಈ ತಿಂಡಿ ಬೆಳಗಾಂವ ಜಿಲ್ಲೆಯ ಗೋಂಜಾಳ ಅವಲಕ್ಕಿ ಚೂಡಕ್ಕಿಂತ ರುಚಿಯಾಗಿರುತ್ತದೆ. ಸಿಹಿ ಬಯಸುವವರಿಗೆ ಪುಠಾಣಿ ಹಿಟ್ಟಿನ ಕರದಂಟು, ಬೆಲ್ಲದ ದಾಣಿ ಉಂಡಿ ಸಿಗಬಹುದು, ಆದರೆ ಈಗೀಗ ಹಳ್ಳಿ ಹಳ್ಳಿಗಳಿಗೂ ದೊಡ್ಡ ಚಹದಂಗಡಿಗಳಾದ ಕಾರಣ ಇಡ್ಲಿ, ವಡೆ, ದೋಸೆ, ಬೇಸನ್ ಉಂಡಿ, ಬೂಂದಿ ಉಂಡಿ, ಜಿಲೇಬಿ, ಮೈಸೂರಪಾಕ, ಪೇಢೆ ಮೊದಲಾದವುಗಳನ್ನು ದುಡ್ಡಿದ್ದವರು ಕೊಂಡು ತಿನ್ನುತ್ತಾರೆ.ಇಂದಿಗೂ ಸಂತೆಪೇಟೆಗಳಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿತಿನಿಸುಗಳನ್ನು ಗಾಡಿಗಳಲ್ಲಿ ಮಾಡುತ್ತಾರೆ, ಮಾರುತ್ತಾರೆ.

ಪೇಟೆಯ ಸ್ಥಳಗಳಲ್ಲಿಯಂತೂ ಇತ್ತೀಚೆಗೆ ವಿಧವಿಧದ ತಿಂಡಿ – ತಿನಿಸುಗಳು ಮಾರಲು ಸಿಗುತ್ತವೆ, ಉತ್ತರ ಕರ್ನಾಟಕದ ಕೆಲವು ಭಾಗಗಳು ವಿಶೇಷ ತಿಂಡಿ – ತಿನಿಸುಗಳಿಗೆ ಹೆಸರಾಗಿವೆ.ಧಾರವಾಡದ ಪೇಡೆ, ಬೆಳಗಾಂವ ಕುಂದಾ, ಅಮೀನಗಡ ಹಾಗೂ ಗೋಕಾಕದ ಕರದಂಟು, ಸವಣೂರು ಚೂಡಾ, ಹೊಳೆಆಲೂರಿನ ವಡೆ, ಅಲ್ಲದೆ ಧಾರವಾಡ ಜಿಲ್ಲೆಯ ಕರ್ಜಗಿ ರೇಲ್ವೆ ಸ್ಟೇಶನ್ ಮಸಾಲಾ ವಡೆಗಳು ರೈಲು ಪ್ರವಾಸ ಮಾಡುವ ಗ್ರಾಮೀಣರನ್ನು ಪಟ್ಟಣಿಗರನ್ನು ತಣಿಸುತ್ತವೆ..

II ನಂಬಿಕೆ ಆಚರಣೆ ಸಂಪ್ರದಾಯಗಳು

i) ದೇವರಿಗೆ ಸಂಬಂಧಿಸಿದಂತೆ :

ನಮ್ಮ ಅನೇಕ ಧಾರ್ಮಿಕ ಕ್ರಿಯೆಗಳು ವಿಧ – ನಿಷೇಧಗಳಿಂದ ಕೂಡಿವೆ. ಅಮವಾಸ್ಯೆ ಹಬ್ಬ ಹುಣ್ಣಿಮೆಗಳಲ್ಲಿ, ಕೃಷಿಕರ ವಾರವಾದ ಸೋಮವಾರ ರೊಟ್ಟಿ ಮಾಡಬಾರದೆಂಬ ನಂಬಿಕೆ ಇದೆ.ಬೇರೆ ಬೇರೆ ದೇವರುಗಳಿಗೆ ಇಂಥದೇ ಆಹಾರ ಪದಾರ್ಥಗಳು ಇಷ್ಟವಾದುವುಗಳೆಂಬ ನಂಬಿಕೆಯನ್ನಾಧರಿಸಿ ಅಂದು ಅಂಥ ಪದಾರ್ಥಗಳ ನೈವೇದ್ಯ. ಬೆಳಗಾಂವ ಜಿಲ್ಲೆಯಲ್ಲಿ ಒಂದು ದಿನ ದೋಸೆ ಮಾಡಿದರೆ ಮೂರು ದಿನ ತಪ್ಪದೇ ದೋಸೆ ಮಾಡಬೇಕು. ಇಲ್ಲವಾದರೆ ಮುಂದೆ ದೋಸೆಗಳು ಕೆಡುತ್ತವೆ ಎಂಬ ನಂಬಿಕೆಯಿದೆ. ಮಕ್ಕಳಿಗೆ ಗೊಬ್ಬರ, ಗಣಜಲಿ ಎದ್ದರೆ ಗ್ರಾಮದೇವತೆಗೆ ಕರಿದ ತಿಂಡಿಗಳ ಎಡೆ ಕೊಡುತ್ತಾರೆ.ಮನೆದೇವರ ಹೆಸರಿನಲ್ಲಿಹದಿನಾರು  ಸೋಮವ್ರತ, ಮಂಗಳ ಗೌರಿಪೂಜೆ, ವರಶಂಕರ  ಪೂಜೆಗಳಲ್ಲಿ ಗ್ರಾಮೀಣ ಹೆಣ್ಣು ಮಕ್ಕಳ ಒಪ್ಪತ್ತು, ಉಪವಾಸ. ದೀಪಾವಳಿಯ ಲಕ್ಷೀ ಪೂಜೆಯಲ್ಲಿ ಮುತ್ತೈದೆಯರ ಉಪವಾಸ. ನವರಾತ್ರಿಯ ಒಂಬತ್ತು ದಿನಗಳ ಪೂಜೆಯ ಉಪವಾಸ ಇವೆಲ್ಲವು ಅವರಲ್ಲಿರುವ ಧಾರ್ಮಿಕ ಮನೋಭಾವವನ್ನು ಎತ್ತಿ ತೋರಿಸುತ್ತವೆ. ಅಂಥ ಸಂದರ್ಭಗಳಲ್ಲಿ ಕೆಲವರು ಶೇಂಗಾ ಬೆಲ್ಲ, ಚುರಿಮುರಿ, ಪುಟಾಣಿಯ ಫರಾಳ ಮಾಡಿದರೆ, ಸಂಕಷ್ಟಿಗೆ ಸಾಬೂದಾಣಿ ಕಿಚಡಿ ವಿಶಿಷ್ಟ ತಿನಿಸು. ಶಿವರಾತ್ರಿಯ ಉಪವಾಸಕ್ಕೆ ಹೆಚ್ಚಾಗಿ ಪುಠಾಣಿ, ಶೇಂಗಾ. ಗೆಣಸು, ಹಣ್ಣುಗಳನ್ನು ಸೇವಿಸುತ್ತಾರೆ. ಬೆಳಗಾಂವ ಭಾಗದಲ್ಲಿ ಏಕಾದಶಿ ದ್ವಾದಶಿಯಂದು ರಾಜಗಿರಿ ಕಾಳಿನ ಉಂಡಿ ಇಲ್ಲವೆ ಅವಲಕ್ಕಿ ಅಥವಾ ಸಾಬೂದಾಣಿ ಉಪ್ಪಿಟ್ಟನ್ನು ತಿಂಡಿಯಂತೆ ಅಳವಿ ಕುದಿಸಿ ಬೆಲ್ಲ ಅಥವಾ ಸಕ್ಕರೆ ಹಾಕಿದ ಪಾನೀಯ ತೆಗೆದುಕೊಳ್ಳುತ್ತಾರೆ. ಹಳ್ಳಿಗಳಲ್ಲಿ ಕೆಲವರು ಉಪ್ಪಿಟ್ಟು, ಸೂಸಲ, ದೋಸೆ, ಥಾಲಿಪಿಟ್ಟುಗಳನ್ನು ಹೊಟ್ಟೆತುಂಬ ತಿಂದು ಅನ್ನ ರೊಟ್ಟಿ ಮಾತ್ರ ಊಟ ಮಾಡುವುದಿಲ್ಲ. ಅವರ ದೃಷ್ಟಿಯಲ್ಲಿ ಅದೇ ಒಪ್ಪತ್ತು ಇಲ್ಲವೇ ಉಪವಾಸ.

ಗ್ರಾಮೀಣ ಸಮಾಜ ವಿದ್ಯಾವಂತ ಸಮಾಜ -ಸಂಸ್ಕೃತಿಗಳಿಂದ ಹೊರಗುಳಿದುಕೊಂಡು ತನ್ನ ಜಾನಪದ ನಂಬಿಕೆ – ಆಚರಣೆ ಸಂಪ್ರದಾಯಗಳ ಪಾವಿತ್ರತೆಯನ್ನು ಕಾಪಾಡಿಕೊಳ್ಳುತ್ತದೆ. ಹಿರೀಕರು ಮಾಡಿದ್ದು ಎಂಬ ಶ್ರದ್ಧೆಯ ಜೊತೆಗೆ ಧಾರ್ಮಿಕ ಪ್ರಜ್ಞೆ ದೈವ ಭಯಗಳು ಇಲ್ಲಿ ಕೆಲಸ ಮಾಡುತ್ತವೆ. ಈ ಆಚರಣೆ ಸಂಪ್ರದಾಯಗಳು ಸಾಮಾಜಿಕ ಜೀವನದೊಡನೆ ಜೀವಂತವಾದ ಸಂಬಂಧವನ್ನು ಇಟ್ಟು ಕೊಂಡಿರುತ್ತವೆ.

ii) ಮನುಷ್ಯರಿಗೆ ಸಂಬಂಧಿಸಿದಂತೆ ;

ಹೆಣ್ಣಿನ ಬಾಳಿನ ವಿವಿಧ ಹಂತಗಳಲ್ಲಿಯೂ ಆಚರಣೆ ಸಂಪ್ರದಾಯಗಳಲ್ಲಿ ತಿಂಡಿ-ತಿನಿಸುಗಳ ಪಾತ್ರವೂ ಮಹತ್ವದ್ದಾಗಿದೆ. ಹುಡುಗಿ ಋತುಮತಿಯಾದಾಗ ನೆಂಟರಿಷ್ಟರು ಅಡಿಗೆ ಕೊಡುವ ಪದ್ಧತಿಇದೆ. ಆಗ ವಿವಿಧ ಬಗೆಯ ಊಟದ ಪದಾರ್ಥಗಳ ಜೊತೆ‌ಗೆ ಉತ್ತರ ಕರ್ನಾಟಕದ ತಿಂಡಿ ತಿನಿಸುಗಳೂ ಸೇರುತ್ತವೆ. ಹೆಣ್ಣು ಗೊತ್ತು ಮಾಡಿಕೊಂಡು ಹೋದ ಗಂಡಿನವರು ಪಂಚಮಿ ಹಬ್ಬಕ್ಕೆ “ಪಂಚಮಿಉಂಡಿ” ಕಳಿಸುವಲ್ಲಿ, ಮದುವೆಯ ೨-೩ ದಿನಗಳ ಹಿಂದಿನಿಂದಲೂ ಸಂಬಂಧಿಕರು ಬೇಕಾದವರು ವಧುವರರನ್ನು  ಮನೆಗೆ ಊಟಕ್ಕೆ ಕರೆಯುವ ಕೋರೂಟದಲ್ಲಿ ವಿಧವಿಧದ ಸಿಹಿ -ಖಾರ ತಿಂಡಿ ತಿನಿಸುಗಳು ಸೇರುತ್ತವೆ. ಮದುವೆಯ ಕಾಲಕ್ಕೆ ಹೆಣ್ಣಿನ ಮನೆಯವರು  ಕೊಡುವ ಮಸೂಟದ ಸಾಮಾನು (ಭೂಮ ಕೊಡುವುದು) ಗಳಲ್ಲಿ ಕರಚೀಕಾಯಿ, ಸುರಿಳೀ ಹೋಳಿಗೆ, ಗುಳ್ಳಾಡಿಕೆಯ ಉಂಡಿ, ಚಕ್ಕಲಿ, ಗಾರಿಗೆ ಮೊದಲಾದ ತಿನಿಸುಗಳನ್ನು ಅತ್ಯಂತ ಆಕರ್ಷಕವಾಗಿ ತಯಾರಿಸಿರುತ್ತಾರೆ ಮೊದಲ ಸಲ ಮಗಳು ಗಂಡನ ಮನೆಗೆ ಹೋಗುವಾಗ ಹಾ‌ಗೆಯೇ ತವರುಮನೆಗೆ ಬರುವಾಗ “ರೊಟ್ಟಿಬುತ್ತಿ” ಕಳಿಸುವ ಸಂಪ್ರದಾಯವಿದೆ  ಅಲ್ಲಿಯೂ ತಿಂಡಿ-ತಿನಿಸುಗಳ ಪಾತ್ರವಿದೆ. ಗರ್ಭಿಣಿಯಾದ ಹೆಣ್ಣುಮಗಳಿಗೆ ಮೂರು ತಿಂಗಳಿಗೆ ತವರಿನವರು ಕಳ್ಳ ಕುಬುಸ ಮಾಡುತ್ತಾರೆ. ಅನಂತರ ಬಂಧುಬಳಗದವರೆಲ್ಲ ಸೇರಿ ಏಳು – ಎಂಟು ತಿಂಗಳಿಗೆ ಸೀಮಂತಕಾರ್ಯ ಹಮ್ಮಿಕೊ‌ಳ್ಳುವರು. ಈಎರಡೂ ಸಂದರ್ಭಗಳಲ್ಲಿ ಗರ್ಭಿಣಬಯಸಿದ ಎಲ್ಲ ತಿಂಡಿ – ತಿನಿಸುಗಳನ್ನು ಮಾಡಿ ತಿನಿಸುತ್ತಾರೆ. ಮುಂದೆ ಮಗುವಿಗೆ ಹೆಸರಿಡುವಾಗ ಐದು ಕಾಳುಗಳನ್ನು ಕೂಡಿಸಿ ಕುದಿಸಿ ಮಾಡಿದ ಗುಗ್ಗರಿಯನ್ನು ತೊಟ್ಟಿಲಿನ ನಾಲ್ಕು ಕಾಲಿಗೆ ಕಟ್ಟುವರು, ಹೆಸರಿಡುವವರು ಅವುಗಳನ್ನು ಬಾಯಿಯಿಂದ ತೆಗೆದುಕೊಳ್ಳಬೇಕು. ಈಗುಗ್ಗರಿಯನ್ನು ಬಂದವರಿಗೆಲ್ಲರಿಗೂ ಹಂಚುತ್ತಾರೆ.

ತಿಥಿ ಮೊದಲಾದ ಸೂತಕ ಸಂಬಂಧಿ ಕ್ರಿಯೆಗಳಲ್ಲಿ ಸಾಮಾನ್ಯವಾಗಿ ಮೃತರಾದವರು ಇಷ್ಟಪಡುತ್ತಿದ್ದ ತಿಂಡಿ – ತಿನಿಸುಗಳನ್ನು ಮಾಡುತ್ತಾರೆ ಅಂದು ಕರಿಕುಂಬಳಕಾಯಿ ಉಪಯೋಗಿಸುತ್ತಾರೆ.

ಮದುವೆಯಂತಹ ದೊಡ್ಡ ಸಮಾರಂಭಗಳಲ್ಲಿ ಊಟವೇ ಪ್ರಾಮುಖ್ಯತೆ ಪಡೆಯುತ್ತದೆ. ಈಗೀಗ ಮದುವೆಗಳಲ್ಲಿ ಉಂಡಿಗಳನ್ನು, ಮೈಸೂರಪಾಕ, ಜಿಲೇಬಿ, ಭಜಿಗಳನ್ನು ಮಾಡುತ್ತಾರೆ.

iii) ಹಬ್ಬಗಳು :

ದೈವದಲ್ಲಿ ಅಚಲವಾದ ಶೃದ್ಧಾಭಕ್ತಿಯುಳ್ಳ ನಮ್ಮ ಗ್ರಾಮೀಣರು ಋತುಮಾನಕ್ಕನುಗುಣವಾಗಿ ಆಚರಿಸುತ್ತ ಬಂದ ಒಂದೊಂದು ಹಬ್ಬದಲ್ಲಿಯೂ ಅವರ ಸಂಸ್ಕೃತಿ ಪರಂಪರೆಯ ಮಹೋನ್ನತಿ ಮೂರ್ತ ಸ್ವರೂಪದಲ್ಲಿ ಕಾಣಬರುತ್ತಿದೆ. ಬೇರೆ ಬೇರೆ ನಾಡು ಪಂಗಡಗಳಲ್ಲಿ ಧಾರ್ಮಿಕ ನಂಬಿಕೆ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಈ ಹಬ್ಬಗಳ ಆಚರಣೆ ವೈವಿಧ್ಯತೆ ಪಡೆದಿದೆ. ಹಬ್ಬಗಳ ಆಚರಣೇ ಒಂದು ದೃಷ್ಟಿಯಿಂದ ವೈಜ್ಞಾನಿಕವೂ ಶಾಸ್ತ್ರೋಕ್ತವೂ ಆಗಿದೆ.ಜನಪದರ ಆಹಾರ ಸಂಪ್ರದಾಯಗಳಲ್ಲಿ ಹಬ್ಬಹರಿದಿನಗಳು ಪ್ರಮುಖ ಪಾತ್ರವಹಿಸುತ್ತವೆ. ಅಂ‌ದಿನ ಅಡುಗೆ, ತಿಂಡಿ ತಿನಿಸುಗಳು ಅವರ ರುಚಿವೈವಿಧ್ಯತೆಗೆ ಸಾಕ್ಷಿಯಾಗಿವೆ.

ಚೈತ್ರಮಾಸದ ಚೇತನಾಶೀಲ ಹಬ್ಬ ಯುಗಾದಿಯ ಬೇವು-ಬೆಲ್ಲ ಸುಖ-ದುಃಖ ಸಮಾನತೆಯ ಸಂಕಲ್ಪದ ಸಂಕೇತ. ಈ ಹಬ್ಬದಲ್ಲ ಸವಿಯುವ ಧಾರವಾಡ ಬೆಳಗಾಂವ ಭಾಗದ  ಪುಡಿ-ಬೇವು ಬಿಜಾಪುರ, ಬಳ್ಳಾರಿ, ಗುಲಬರ್ಗಾ, ಬೀದರ, ರಾಯಚೂರು ಭಾಗದ ರಸಬೇವುಗಳಲ್ಲಿ ಪುಠಾಣಿ ಒಣಕೊಬ್ಬರಿ, ಬೇವಿನ ಹೂವು ಬೆಲ್ಲ, ಕಸಕಸಿ, ಏಲಕ್ಕಿ, ಶುಂಠಿ ಮೊದಲಾದವುಗಳು ಕೂಡಿರುತ್ತವೆ. ಇಲ್ಲಿಯ ಬೇವಿನ ಹೂವು ಔಷಧೀಯ ಗುಣಪಡೆದಿದೆ. ಶ್ರಾವಣಮಾಸದಲ್ಲಿ ಕ್ಷೇತ್ರಪಾಲಕ ನಾಗಪ್ಪನ ಹಬ್ಬವನ್ನು “ಉಂಡೇ ಹಬ್ಬ” “ಹೆಣ್ಣು ಮಕ್ಕಳ ಹಬ್ಬ.  ವೇಂದೇ ಕರೆಯಲಾಗುತ್ತದೆ. ಅಂದು ಮಾಡಲಾಗುವ ವಿವಿಧ ಬಗೆಯ ಬೆಲ್ಲದ ಹಾಗೂ ಸಕ್ಕರೆ ಉಂಡಿಗಳು ಮಳೆಗಾಲಕ್ಕೆ ದೇಹಕ್ಕೆ ಅಗತ್ಯವಿರುವ ಉಷ್ಣತೆಯನ್ನು ಒದಗಿಸುತ್ತವೆ. ಚಕ್ಕಲಿ ಚೂಡಾಗಳಂತಹ ಖಾರದ ತಿನಿಸುಗಳು ಈ ತಿನಿಸುಗಳು ಈ ಹಬ್ಬದಲ್ಲಿ ರುಚಿಗೆ ಮಾತ್ರ. ಹೆಚ್ಚಾಗಿ ಉಂಡಿಗಳ ತಯಾರಿಕೆಯಲ್ಲಿ ಬೆಲ್ಲದ ಆಣ ಮಾಡಿ ಕಂಪಿನ ವಸ್ತುಗಳಾದ ಏಲಕ್ಕಿ ಶುಂಠಿಗಳ ಪುಡಿ ಹಾಗೂ ಪುಠಾಣಿ ಹಿಟ್ಟನ್ನು ಬೆರೆಸುತ್ತಾರೆ. ಹಿಟ್ಟಿನಿಂದ ತಯಾರಿಸಲಾಗುವ ಉಂಡಿಗಳಲ್ಲಿ ಮೊದಲು ಹಿಟ್ಟನ್ನು ತುಪ್ಪದಲ್ಲಿ ಹುರಿಯುತ್ತಾರೆ.ಕಾರ್ತಿಕದಲ್ಲಿ ಬರುವ ಮೂರು ದಿನಗಳ ದೀಪಾವಳಿ ಹಬ್ಬಕ್ಕೆ ಉತ್ತರ   ಕರ್ನಾಟಕದಲ್ಲಿ ಹಟ್ಟೀ ಹಬ್ಬ ಎನ್ನುತ್ತಾರೆ. ಮೊದಲ ದಿನದ ಹಿರಿಯರ ಹಬ್ಬಕ್ಕೆ ಅವರ ಪ್ರೀತಿಯ ತಿಂಡಿತಿನಿಸುಗಳನ್ನು ಎಡೆಮಾಡುವರು. ಕರಚಿಕಾಯಿ ಚೂಡಾ ವಿಶೇಷವಾಗಿಯೂ, ಬೇಕೆಂದವರು ಇತರ ಸಿಹಿ-ಖಾರ ತಿಂಡಿತಿನಿಸುಗಳನ್ನು ಮಾಡಿಕೊಳ್ಳುತ್ತಾರೆ. ಕರಚೀಕಾಯಿಗಳಲ್ಲಿ ಬೇರೆ ಬೇರೆ ವಿಧಗಳಿವೆ. ಒಣಕೊಬ್ಬರಿ ತುರಿ ಅಥವಾ ಪುಠಾಣಿಹಿಟ್ಟಿನ ಜೊತೆಗೆ ಕೊಬ್ಬರಿ ಬೆರಸಿ, ಇಲ್ಲವೆ ಎಳ್ಳುಪುಡಿಗಳಿಗೆ ಬೆಲ್ಲ ಅಥವಾ ಮೇಲೆ ತಿಳಿಸಿದ ಪುಡಿಗಳನ್ನು ಸೇರಿಸಿ ಮೈದಾಹಿಟ್ಟಿನ ಕಣಕದ ಎಲೆಗಳನ್ನು ಲಟ್ಟಿಸಿಕೊಂಡು ಅದರಲ್ಲಿ ಮೇಲೆ ತಿಳಿಸಿದ ಪುಡಿಗಳನ್ನು ಹಾಕಿ ಮಡಿಚಿ ಎಣ್ಣೆಯಲ್ಲಿ ಕರಿಯುತ್ತಾರೆ. ಬೀದರದಲ್ಲಿ ವಿಶೇಷವಾಗಿ ರವೆ, ಒಣಕೊಬ್ಬರಿ, ಪುಠಾಣಿಹಿಟ್ಟು ಮೂರನ್ನು ಸೇರಿಸಿ ಕರಚೀಕಾಯಿಗಳನ್ನು ಮಾಡುತ್ತಾರೆ.ಬಿಜಾಪುರದಲ್ಲಿ “ತರಗಣ” ಎಂಬ ವಿಶೇಷ ತಿಂಡಿಯನ್ನು ಕಡ್ಲಿಹಿಟ್ಟಿ ಬೆಲ್ಲವನ್ನು ನೀರಿನಲ್ಲಿಅಥವಾ ಹಾಲಿನಲ್ಲಿ ಕಲಸಿ ಹಪ್ಪಳ ರೀತಿಯಲ್ಲಿ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಕರಿಯುತ್ತಾರೆ.

“ಸಂಕ್ರಾತಿಗೆ ಚಳಿ ಶಂಖದಷ್ಟು ಬರುತ್ತದೆ “ಎಂಬ ಮಾತಿದೆ.ಎಳ್ಳುಬೆಲ್ಲದ ತಿಂಡಿ-ತಿನಿಸುಗಳು ಚಳಿಗೆ ಅಗತ್ಯವ ಆಹಾರ ವಸ್ತುಗಳು. ಎಳ್ಳುಲಡ್ಡುಗೆ ಮಾಡುವ ಕ್ರಮ ಮಂಗರಸನ ಸೂಪಶಾಸ್ತ್ರದಲ್ಲದೆ.

ಕಡು ಬಲಿದು ಮಾಡಿದೆಳ್ಳಂ ಹುರಿದು ಹಸನಾದ
ಗುಡಪಾಕದಲ್ಲಿ ಯಾಲಕ್ಕಿ ನವಕರ್ಪೂರ
ಮಿಡುತ ಲಡ್ಡುಗೆಗಳಂ ಕಟ್ಟಿ ಹಸನಂ
ಮಾಡಿ ಭೋಗಿ ಜನಕೊಲಿದೀವುದು (ಪಿಷ್ಟಪಾಕಾಧ್ಯಾಯ, ಪು.೫೭, ಪು. ೩೮)

ಮುಂಗಾರಿ ಬೆಳೆಯ ಪ್ರದೇಶಗಳಲ್ಲಿ ಶೀಗೀ ಹುಣ್ಣಿಮೆಯು, ಹಿಂಗಾರಿ ಬೆಳೆಯ ಪ್ರದೇಶಗಳಲ್ಲಿ ಎಳ್ಳ ಅಮವಾಸ್ಯೆಯು ಒಕ್ಕಲಿಗರಿಗೆ ಸಂಭ್ರಮದ ಹಬ್ಬಗಳು ಮೈತುಂಬಿಕೊಂಡು ನಿಂತ ಸೃಷ್ಟಿ ದೇವಿಗೆ ಅಂದು ಸೀಮಂತಕಾರ್ಯ, ಎಳ್ಳು ಹೋಳಿಗೆ, ಹುರಕ್ಕಿ ಹೋಳಿಗೆ, ಕರಚೀಕಾಯಿ, ಶೇಂಗಾಹೋಳಿಗೆ, ಕಡಲೆ ಹಿಟ್ಟಿನ ವಡೆಗಳು, ಕುಂಬಳ ಹೆರೆದು ಕುದಿಸಿ ಸೆಜ್ಜೆಹಿಟ್ಟು ಇಲ್ಲವೇ ಗೋದಿಹಿಟ್ಟು ಬೆಲ್ಲ ಹಾಕಿ ಕೂಡಿದ ಗಾರಿಗೆಗಳು ಮೊದಲಾದ ಹಲವಾರು ಬಗೆಯ ತಿಂಡಿತಿನಿಸುಗಳನ್ನು ಹೊಲಕ್ಕೆ ತೆಗೆದುಕೊಂಎಡು ಹೋಗಿ ಚರಗ ಚೆಲ್ಲಿ ಊಟ ಮಾಡುವರು. ಗೌರಿಹುಣ್ಣಿಮೆಯಂದು ಸಂಜೆ ಗೌರೀಪೂಜೆಗೆ ಪಕ್ಷಿ, ಪ್ರಾಣಿ, ಮನುಷ್ಯ ದೇವರುಗಳ ಪ್ರತಿರೂಪದ ಸಕ್ಕರೆ ಅಚ್ಚುಗಳನ್ನು ತಾಟಿನಲ್ಲಿಟ್ಟು ಗೌರಿಗೆ ಆರತಿ ಮಾಡುತ್ತಾರೆ ಅನಂತರ ಅವು ಮಕ್ಕಳಿಗೆ ತಿನಿಸುಗಳು, ರಾಮನವಮಿ, ಗೋಕಲಾಷ್ಟಮಿ, ಶ್ರೀಹರಿಯ ಉಪಾಸಕರಿಗೆ ಶ್ರೇಷ್ಠ ಹಬ್ಬ. ಅಂದು ಉಪವಾಸ. ಎರಡನೆಯ ದಿನ ನವಮಿ. ನೈವೇದ್ಯಕ್ಕಾಗಿ ಉಂಡಿ ಚಕ್ಕಲಿ ಮಾಡುತ್ತಾರೆ, ಚೈತ್ರಶುದ್ಧ ತೃತೀಯ ಗೌರಿ ತದಿಗೆ ಆ ಸಮಯದಲ್ಲಿ ಶುಕ್ರವಾರ, ಮಂಗಳವಾರ ಸುಮಂಗಲಿಯರಿಗೆ ಕೋಸಂಬರಿ, ಮಾವಿನಕಾಯಿ ಪಾನಕ ಕೊಡುತ್ತಾರೆ.

ಉತ್ತರ ಕರ್ನಾಟಕದಲ್ಲಿ ಹಿಂದೂ ಮುಸ್ಲೀಮರು ಸಹಜೀವನ ನಡೆಸುತ್ತಿರುವ ದ್ಯೋತಕವಾಗಿ ಮೊಹರಂ ಹಬ್ಬದ ಆಚರಣೆಯಲ್ಲಿ ಇಬ್ಬರೂ ಸೇರುತ್ತಾರೆ. ಹಿಂದೂ – ಮುಸ್ಲಿಂ ಬಾಂಧವರಿಬ್ಬರ ಮನೆಯಲ್ಲಿ ಅಂದು ವಿಶೇಷ ತಿನಿಸು ಚೊಂಗೆ. ಇದು ಹಿಂದೂ -ಮುಸ್ಲಿಂ ಭಾವೈಕ್ಯತೆಯ ನಿದರ್ಶನವಾಗಿದೆ.

ನಮ್ಮ ಈ ಆಹಾರಗಳಲ್ಲಿ  ಊಟ – ತಿಂಡಿ ತಿನಿಸುಗಳದ್ದೇ ಒಂದು ದೊಡ್ಡ ಪ್ರಕರಣ. ಆಹಾರ ಕೇವಲ ಹೊಟ್ಟೆಯ ಚೀಲ ತುಂಬಿಸುವ ಕ್ರಿಯೆಯಾಗದೆ ಅದು ಮನಸ್ಸು ಮೈಗಳಿಗೆ ಸಮಾನಪ್ರಿಯವಾಗಿರಬೇಕು.

iv) ಜಾತ್ರೆಗಳು :

ಗ್ರಾಮಗಳಲ್ಲಿ ಜಾತ್ರೆಯ ಸಂದರ್ಭದಲ್ಲಿ ಊರಿನವರಿಗೆಲ್ಲ ಸಡಗರ. ಮನೆಮನೆಗಳಲ್ಲಿ ಸಿಹಿ-ಖಾರ ತಿಂಡಿತಿನಿಸುಗಳನ್ನು ಮಾಡುತ್ತಾರೆ. ಬಂಧುಬಳಗ ಜಾತ್ರೆಯ ನೆಪದಲ್ಲಿ ಒಂದೆಡೆ ಸೇರುತ್ತಾರೆ. ನೆಂಟರಿಷ್ಟರು ಉಂಡು ತಿಂದು ನಲಿಯುತ್ತಾರೆ. ಜಾತ್ರೆಗೆ ಸಡಗರದಿಂದ ಹೊರಡುತ್ತಾರೆ. ದೇವರಿಗೆ ಹಣ್ಣುಕಾಯಿ ನೈವೇಧ್ಯ ದಕ್ಷಿಣೆ ಸಲ್ಲಿಸಿ ಹರಕೆ ತೀರಿಸಿ ಧನ್ಯರಾಗುತ್ತಾರೆ.ಅಂಗಡಿಗಳಲ್ಲಿ. ಬೆಂಡು, ಬತ್ತಾಸ, ಜಿಲೇಬಿ, ಚುರಿಮುರಿ, ಸೇವು, ಬರ್ಫಿ,ಪೇಢೆ, ಚಕ್ಕಲಿ, ಕೋಡಬಳೆ, ಭಜಿಗಳನ್ನು ಕೊಂಡುಕೊಳ್ಳುತ್ತಾರೆ. ಬಾಟಲಿಗಳಲ್ಲಿ ತುಂಬಿಟ್ಟ ಬಣ್ಣ ಬಣ್ಣದ ಶರಬತ್ತು (ಪಾನೀಯ) ಕುಡಿದು ಬಾಯಾರಿಕೆಯ ನೀಗಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ತಿನಿಸು ಚುರಮುರಿ ಅಥವಾ ಮಂಡಕ್ಕಿ, ಅಳುವ ಕೂಸಿಗೆ, ಆಡುವ ಮಕ್ಕಳಿಗೆ ಚುರಮುರಿ ಬೇಕು. ದುಡಿಯುವ ಜನಕ್ಕೆ ಚುರಮುರಿಯ ತಿಂಡಿ ತಿನಿಸಾಗಿ, ಒಪ್ಪತ್ತು ಉಪವಾಸದವರಿಗೆ ಫರಾಳವಾಗಿ, ಮದುವೆ ಮಂಗಲ ಕಾರ್ಯಗಳಲ್ಲಿ, ಪೂಜೆ ಪುನಸ್ಕಾರಗಳನ್ನು ಪಂಚಕಜ್ಜಾಯದಲ್ಲಿ ಸ್ಥಾನ ಪಡೆದ ಮಂಡಕ್ಕಿಯ ಮಹಿಮೆ ಅಪಾರ.