ಬೇಟೆಯಾಡಿದ ಕಾಡುಪ್ರಾಣಿಗಳನ್ನೊ, ಸಿಕ್ಕಿದ ಗಡ್ಡೆಗೆಣಸುಗಳನ್ನೊ ತಿನ್ನುತ್ತಿದ್ದ ಕಾಡಾಡಿ ಮಾನವನಲ್ಲಿ ಹಸಿವೆಯ ಅನುಭವವಷ್ಟೇ ಇತ್ತು. ಅಡುಗೆಯ ಕಲ್ಪನೆ ಬೆಂಕಿಯ ಉಗಮದೊಂದಿಗೆ ಸಂಬಂಧವನ್ನು ಕಂಡುಕೊಳ್ಳುತ್ತದೆ. ಮನುಷ್ಯನಲ್ಲಿ ಕಲಾತ್ಮಕತೆ ಹುಟ್ಟಿಕೊಂಡಂತೆ ರುಚಿಗೆ ಮಹತ್ವ ಬಂದು ಪಾಕ ವೈವಿಧ್ಯ ಏರ್ಪಟ್ಟಿತು.

ಯಾವುದೇ ಒಂದು ಪ್ರದೇಶದ ಆಹಾರ ಪದ್ಧತಿ ಅಲ್ಲಿನ ನಿಸರ್ಗದೊಂದಿಗೆ ನೇರ ಸಂಬಂಧವನ್ನು ಹೊಂದಿರುತ್ತದೆ. ಮುಖ್ಯವಾಗಿ ಆಯಾ ಪರಿಸರದ ಭೌಗೋಳಿಕ ಸ್ವರೂಪ, ಪ್ರಾಣಿವರ್ಗ, ಸಸ್ಯವರ್ಗ ಹಾಗೂ ಹವಾಮಾನಗಳನ್ನು ಅವಲಂಬಿಸಿರುತ್ತದೆ. ಎರಡನೆಯಾದಾಗಿ ಜಾತಿ ವರ್ಗಗಳ ನೆಲೆಯಲ್ಲಿ ಈ ವೈವಿಧ್ಯತೆ ಕಂಡು ಬರುತ್ತದೆ. ಹೀಗಾಗಿ ಯಾವುದೇ ಒಂದು ಆಹಾರ ಕ್ರಮವನ್ನು ಪ್ರಾದೇಶಿಕ ನೆಲೆಯಲ್ಲಿ ಅಧ್ಯಯನ ನೆಡಸಬೇಕಾಗುತ್ತದೆ ಹೊರತು ಒಟ್ಟಾರೆಯಾಗಿ ಅನ್ವಯಿಸುವುದು ಸಾಧ್ಯವಾಗುವುದಿಲ್ಲ.

ಅಡುಗೆ ಅಥವಾ ಪಾಕಶಾಸ್ತ್ರವನ್ನು ೬೪ ವಿದ್ಯೆಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ದಾಖಲೆ ನಮಗೆ ದೊರೆಯುತ್ತದೆ. ಆದರೆ ಇಂದು ಅದನ್ನು ಒಂದು ವಿದ್ಯೆ ಅಥವಾ ಶಾಸ್ತ್ರವಾಗಿ ಕಾಣಲಾಗುತ್ತಿಲ್ಲ. ಮಾನವ ಸಂಸ್ಕೃತಿಯ ಒಂದು ಘಟ್ಟದಲ್ಲಿ ಗುಂಪಿನ ಕಲ್ಪನೆ ಒಡೆದು ಕುಟುಂಬದ ಪರಿಕಲ್ಪನೆ ಮೂಡಿದಾಗ ಗಂಡು ಬೇಟೆಗೆ ಹೊರಟರೆ, ಹೆಣ್ಣು ಬೇಸಾಯದ ಕೆಲಸಗಳೊಂದಿಗೆ ಮನೆಯಲ್ಲಿ ನಿಂತಳು. ಇದಕ್ಕೆ ಪೂರಕವಾಗಿ ಹೆಣ್ಣಿನ ಗರ್ಭಧಾರಣೆ, ಹೆರಿಗೆ ಹೆತ್ತ ಮಗುವಿಗೆ ಹಾಲೂಡುವ ಹಾಗೂ ಲಾಲಿಸುವ ಹೊಣೆಗಾರಿಕೆ ಅವಳ ಪಾಲಿಗೆ ಬಂದು ಅವಳ ಹೊರ ಜಗತ್ತಿನ ಸಂಬಂಧವನ್ನು ನಿರುತ್ಸಾಹಗೊಳಿಸಿದವು; ಮನೆಯಲ್ಲಿ ಉಳಿಯುವಂತೆ ಪ್ರೇರೇಪಿಸಿದುವು. .ಮನೆಯ ಹಾಗೂ ಕುಟುಂಬದೊಳಗಿನ ಅಡುಗೆ ಮಾಡುವುದು, ಗಂಡು ಮಕ್ಕಳನ್ನು ಲಾಲನೆ ಮಾಡುವುದು, ಬಡಿಸುವುದು, ಶುಚಿಗೊಳಿಸುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಇತ್ಯಾದಿ ಕೆಲಸಗಳು ಹೆಣ್ಣಿನ ಕೆಲಸಗಳಾದವು. ಹೆಣ್ಣು ಮಾಡುವ ಇಂಥ ಕೆಲಸಗಳು ಖಾಸಗಿ ಎನಿಸಿ ಅವು ಕಸುಬುಗಳೆನಿಸದೆ ಕರ್ತವ್ಯವೆನಿಸಿದವು. ಈ ಕರ್ತವ್ಯಗಳು ಯಾವುದೇ ಉತ್ಪಾದನಾ ಸಾಮರ್ಥ್ಯ ಅಥವಾ ಗೌರವ ಮತ್ತು ಮನ್ನಣೆ ಪಡೆಯಲಿಲ್ಲ ಮತ್ತು ಹೆಣ್ಣಿನ ಕೆಲಸಗಳು ಕ್ಷುಲ್ಲಕ ಅಥವಾ ಗೌಣವೆಂದು ಪರಿಗಣಿಸಲಾಯಿತು. ಅಡುಗೆ ಮಾಡುವುದು ದೈನಂದಿನ ಜೀವನದಲ್ಲಿ ಹೆಣ್ಣಿನ ಕರ್ತವ್ಯವಾಗಿ ತೀರಾ ‘ಸಾಮಾನ್ಯ ಕೆಲಸ’ವೆಂದು ತಿಳಿಯಲಾಯಿತು. ಆದರೆ ವಾಸ್ತವಿಕವಾಗಿ ಅಡುಗೆ ಕಲೆ ತುಂಬ ನಾಜೂಕಿನ ಮತ್ತು ಬಹಳಷ್ಟು ಶ್ರದ್ಧೆ ಹಾಗೂ ಏಕಾಗ್ರತೆಯನ್ನು ಅಪೇಕ್ಷಿಸುವಂತಹದು. ಮನುಷ್ಯನ ಎಲ್ಲ ಕ್ರಿಯಾತ್ಮಕತೆ ಹಾಗೂ ಜೀವಂತಿಕೆಯ ಹಿನ್ನೆಲೆಯಲ್ಲಿನ ಹಸಿವಿನ ಪೂರೈಕೆಯ ಆಹಾರ ಸೇವನೆಯಲ್ಲಿ ಅಡುಗೆಯದು ಪ್ರಧಾನ ಪಾತ್ರ.

ಜನಪದ ಅಡುಗೆ ಯಾವುದೆ ಬಗೆಯ  ಬರಹದ ಅಥವಾ ತರಬೇತಿಯಲ್ಲಿ ನಡೆದು ಬಂದುದಲ್ಲ. ಅವಿಭಕ್ತ ಕುಟುಂಬದೊಳಗಿನ ಹೆಂಗಸರು, ಹೆಣ್ಣುಮಕ್ಕಳು ಕೂಡಿಯೇ ಈ ಸಂಬಂಧದ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಹೀಗಾಗಿ ಹಿರಿಯರೊಂದಿಗೆ ಕೂಡಿಯೆ ಅಡುಗೆಯ ‘ಕೈ ಕೆಲಸ’ಗಳನ್ನು ಮಾಡುತ್ತಲೆ ಹೆಣ್ಣೊಬ್ಬಳು ಪಾಕ ಪ್ರವೀಣಿಯಾಗಿ ಬೆಳೆಯುತ್ತಿದ್ದಳು. ತರಕಾರಿ ಕತ್ತರಿಸುವ, ಕಾಯ ತುರಿಯುವ, ಮಸಾಲಿ ಕಡೆಯುವ, ಅಡುಗೆ ಮನೆ ಒಡಿದು ಒರೆಸುವ ರಂಗತಾಲೀಮಿನ ಮೂಲಕವೆ ಆಕೆ ಅಡುಗೆಯವಳಾಗುತ್ತಾಳೆ. ಜನಪದರು ಅಡುಗೆಗೆ ಯಾವುದೇ ತೂಕ, ಅಳತೆಮಾನಗಳನ್ನು ಬಳಸುವವರಲ್ಲ. ಕೈಅಳತೆ, ಕಣ್ಣಳತೆಯ ಪ್ರಮಾಣ ಅವರಿಗೆ. ಗಜ್ಜುಗದ ಗಾತ್ರ ಹೊನ್ನೆಕಾಯಿ ಗಾತ್ರ, ಮುಷ್ಟಿಗಾತ್ರ, ಚೂರು, ಚಟಾಕು ಪ್ರಮಾಣ ಅವರ ಬಳಕೆಯ ಪರಿಭಾಷೆ.

ಕರಾವಳಿ ಕರ್ನಾಟಕದ ಆಹಾರ ಕ್ರಮದ ಮೇಲೆ ಇಲ್ಲಿನ ಜಡಿಮಳೆ, ಉರಿಬಿಸಿಲು, ಉದ್ದಕ್ಕೆ ಮೈಚಾಚಿದ ಕಡಲು ಪ್ರಭಾವ ಬೀರಿದೆ. ಈ ಪ್ರಾಕೃತಿಕ ಸ್ವರೂಪಕ್ಕೆ ಪೂರಕವಾಗಿ ಇರುವ ಇಲ್ಲಿನ ಪ್ರಾಣಿಗಳು, ಸಸ್ಯಗಳು ಇಲ್ಲಿನದೇ ಆದ ಆಹಾರ ವೈವಿಧ್ಯಕ್ಕೆ ಕಾರಣವಾದಂತಹವುಗಳು. ಕರಾವಳಿಯ ಪ್ರಧಾನವದ ಬೆಳೆ ಭತ್ತ ಮತ್ತು ತೆಂಗು. ಈ ಜನ ಅಕ್ಕಿಯನ್ನು ಪೂರ್ಣ ಪ್ರಮಾಣದಲ್ಲಿ ಊಟಕ್ಕೆ ಬಳಸುತ್ತಾರೆ. ದಕ್ಷಿಣ ಕರ್ನಾಟಕದ ರಾಗಿ ಮುದ್ದೆಯ ಬಳೆಯಾಗಲಿ, ಉತ್ತರ ಕರ್ನಾಟಕದ ಜೋಳದ ಬಕ್ರಿ (ರೊಟ್ಟಿ) ಅಥವಾ ಚಪಾತಿಯಾಗಲಿ ಇಲ್ಲಿ ರೂಢಿಯಲ್ಲಿಲ್ಲ. ಅಂತೆಯೇ ಇವರ ತಿಂಡಿ ತಿನಿಸುಗಳಲ್ಲೂ ಅಕ್ಕಿಗೆ ಪ್ರಾಧಾನ್ಯ ದೊರೆತಿದೆ. ತೆಂಗು ಮತ್ತು ತೆಂಗಿನೆಣ್ಣೆಯ ಬಳಕೆ ಹೆಚ್ಚು. ಇಲ್ಲಿನ ಬ್ರಾಹ್ಮಣ, ಸಾರಸ್ವತ, ಗೌಡ ಸಾರಸ್ವತ, ವಿಶ್ವಕರ್ಮ ಹೊರತುಪಡಿಸಿ ಎಲ್ಲರೂ ಮಾಂಸಾಹಾರಿಗಳು. ಕಡಲ ಮೀನು ಇವರೆಲ್ಲರ ಮುಖ್ಯ ಆಹಾರ. ಕೋಳಿ ಪ್ರಿಯವಾದ ಆಹಾರ. ಆದರೆ ಮಾಂಸ ಅಥವಾ ಮೀನಿನಿಂದ ಜನಪದರು ಹೆಚ್ಚು ತಿಂಡಿ ತಿನಿಸುಗಳನ್ನು ಮಾಡುತ್ತಿಲ್ಲ.

ಪ್ರಸ್ತುತ ಪ್ರಬಂಧದಲ್ಲಿ ಕರಾವಳಿ ಕರ್ನಾಟಕದ ಜನಪದ ತಿಂಡಿ, ತಿನಿಸು, ಪಾನೀಯಗಳು ಪಡೆದುಕೊಂಡಿರುವ ವೈವಿಧ್ಯವನ್ನು ಗಮನಿಸುವುದರೊಂದಿಗೆ ಇದಕ್ಕೆ ಕಾರಣವಾಗಿರುವ ನೈಸರ್ಗಿಕ ಹಿನ್ನೆಲೆ , ಸ್ಥಳೀಯರ ಗ್ರಹಿಕೆಗಳನ್ನು ಪ್ರಸ್ತಾಪಿಸಲಾಗಿದೆ. ತಿನಿಸು ಅಥವಾ ಪಾನೀಯಗಳ ತಯಾರಿಯ ವಿಧಾನಗಳನ್ನು ವಿವರಿಸುವ ‘ಪಾಕಗ್ರಂಥ’ಗಳ ಕೆಲಸ ಮಾಡದೆ ಅವುಗಳನ್ನು ಹೆಸರಿಸಿ ಅವು ಬದುಕಿನೊಂದಿಗೆ ಪಡೆದಕೊಂಡಿರುವ ಸಂಬಂಧವನ್ನು ಇಲ್ಲಿ ಚರ್ಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನನ್ನ ಕ್ಷೇತ್ರಾಧ್ಯಯನವನ್ನು ಈ ಪ್ರಬಂಧ ರಚನೆಯಲ್ಲಿ ಮುಖ್ಯ ಆಕರ ಮಾಹಿತಿಯಾಗಿ ಬಳಸಿಕೊಂಡಿದ್ದೇನೆ.

. ವರ್ಗೀಕರಣ ವಿಧಾನ:

ಪ್ರಸ್ತುತ ಅಧ್ಯಯನದಲ್ಲಿ ಅಧ್ಯಯನದ ಅನುಕೂಲಕ್ಕಾಗಿ ಕರಾವಳಿ ಕರ್ನಾಟಕದ ಅಡುಗೆಯನ್ನು ಮಾಂಸಾಹಾರ ಮತ್ತು ಸಸ್ಯಾಹಾರವೆಂದು ಮುಖ್ಯವಾಗಿ ವಿಭಜಿಸಿಕೊಳ್ಳಲಾಗಿದೆ. ಈ ಎರಡೂ ವಿಭಜನೆಯಲ್ಲಿ ಮತ್ತೆ ದೈನಂದಿನ ಅಡುಗೆ-ವಿಶೇಷ ಅಡುಗೆ ಎಂದು ವರ್ಗೀಕರಣ ಸಾಧ್ಯ. ಸಾಮಾನ್ಯ ಅಡುಗೆಯಲ್ಲಿ ಬೆಳಿಗ್ಗೆ ಮತ್ತು ಸಂಜೆಯ ತಿನಿಸು ಪಾನೀಯಗಳೆಂದೂ, ವಿಶೇಷ ಅಡುಗೆಯಲ್ಲಿ ಜೀವನಾವರ್ತನದ ತಿಂಡಿ ತಿನಿಸುಗಳು, ವಾರ್ಷಿಕಾವರ್ತನದ ತಿಂಡಿ, ತಿನಿಸುಗಳು ಮತ್ತು ಧಾರ್ಮಿಕ ಹಬ್ಬಹರಿದಿನಗಳ ತಿಂಡಿ ತಿನಿಸುಗಳು, ವೈದ್ಯಕೀಯ ತಿಂಡಿ, ತಿನಿಸುಗಳು ಎಂದು ಸ್ಥೂಲವಾಗಿ ವರ್ಗೀಕರಿಸಲಾಗಿದೆ. ಜೀವನಾವರ್ತನದ ಅಡಿಯಲ್ಲಿ ಮತ್ತೆ ಹುಟ್ಟು, ಮೈನೆರೆಯುವುದು, ಮದುವೆ, ಬಸುರಿ, ಸಾವು, ವಾರ್ಷಿಕಾವರ್ತದ ಕೆಳಗೆ ವಾರ್ಷಿಕ ಕೃಷಿ ಆಚರಣೆಗಳಾದ ಅರೂಡು, ನಟ್ಟಿ ಯುಗಾದಿ, ಹೊಸ್ತು, ಹಟ್ಟಿಹಬ್ಬ, ಬಲೀಂದ್ರ ಇತ್ಯಾದಿಗಳು; ಧಾರ್ಮಿಕ ಹಬ್ಬ ಹರಿದಿನಗಳಲ್ಲಿ ನಾಗರ ಪಂಚಮಿ, ಕೃಷ್ಣಾಷ್ಟಮಿ, ಗೌರಿ ಹಬ್ಬ, ಚೌತಿ, ನವರಾತ್ರಿ, ನೂಲಹುಣ್ಣಿಮೆ, ರಾಮನವಮಿ, ಶಿವರಾತ್ರಿಯಾಗಿ ಒಳವಿಭಾಗಗಳನ್ನು ಮಾಡಿಕೊಳ್ಳಲಗಿದೆ. ಈ ಯಾವುದೇ ವರ್ಗೀಕರಣ ಕೂಡಾ ನಿರ್ದಿಷ್ಟವಾಗಿ ಗೆರೆ ಕೊರೆಯುವಂತಿಲ್ಲ ಎನ್ನುವ ಸತ್ಯವನ್ನು ಗಮನಿಸಿದ್ದು ಅಧ್ಯಯನದ ವೈಜ್ಞಾನಿಕ ಚೌಕಟ್ಟಿಗಾಗಿ ಮಾತ್ರ ಬಳಸಿಕೊಂಡಿದ್ದೇನೆ. ಎನ್ನುವುದನ್ನು ಹೇಳುತ್ತೇನೆ. ಈ ವಿಭಜನೆ ಹೀಗಿದೆ:

ದೈನಂದಿನ ತಿಂಡಿ, ತಿನಿಸುಗಳು, ಪಾನೀಯಗಳು:

ಬಿಸಿಲು ಮತ್ತು ಉಷ್ಣಹವೆ ಪ್ರದೇಶವಾದ ಕರಾವಳಿಯ ದೈನಂದಿನ ಬದುಕಿನಲ್ಲಿ ಸರಳವಾದ ಆಹಾರ ಪದ್ಧತಿ ಕಂಡು ಬರುತ್ತದೆ. ಬೆಳಿಗ್ಗೆ ಯಾವ ಜಾತಿಯವರಲ್ಲೂ ತಿಂಡಿ ಮಾಡುವ ಸಂಪ್ರದಾಯವಿಲ್ಲ. ಕುಚ್ಚಲು ಅಕ್ಕಿಯ ಗಂಜಿಯೂಟ ಹೊಟ್ಟೆ ತಣ್ಣಗಿಡುತ್ತದೆ ಎಂಬ ನಂಬಿಕೆ. ಬ್ರಾಹ್ಮಣ, ಹೌಡಸಾರಸ್ವತ, ಬಂಟ, ವಿಶ್ವಕರ್ಮರಲ್ಲಿ ಗಂಜಿಯೂಟ ರೂಢಿ. ಬ್ರಾಹ್ಮಣರಲ್ಲಿ ವೈದಿಕ ವೃತ್ತಿಯ ಗಂಡಸರು ಅವಲಕ್ಕಿ ಮೊಸರು ತಿಂದರೆ ವಿಧವೆಯರು ಉಪವಾಸ ಇರುತ್ತಾರೆ. ಶ್ರ್ಮಿಕ ವರ್ಗದವರಾದ ಖಾರ್ವಿ, ವಿಲ್ಲವ, ಮೊಗವೀರ, ದೇವಾಡಿಗ ಹಾಗೂ ಹರಿಜನರಲ್ಲಿ ತಂಗಳೂಟ (ರಾತ್ರಿ ಮಿಕ್ಕಿದ ಅನ್ನ) ಸಾಮಾನ್ಯ. ದುಡಿವ ವರ್ಗದ ಹೆಂಗಸರು ಬೆಳಿಗ್ಗೆ ತಂಗಳು ಉಂಡು ಇತರರ ಹೊಲಮನೆಗಳಲ್ಲಿ ಕೆಲಸಕ್ಕೆ, ಮೀನು ಮಾರಾಟಕ್ಕೆ ಹೋದರೆ ಮತ್ತೆ ಮರಳುವುದು ಸಂಜೆಗತ್ತಲೆಗೆ. ಹೀಗಾಗಿ ಇಂತಹ ಕುಟುಂಬಗಳಲ್ಲಿ ಸಂಜೆ ತಿಂಡಿಯ ಪರಿಪಾಠ ಇಲ್ಲ. ಮೇಲುವರ್ಗದವರ ಮನೆಗಳಲ್ಲಿ ಕರಿದು ಡಬ್ಬಗಳಲ್ಲಿ ತುಂಬಿಟ್ಟ ಕುರುಕಲು ತಿಂಡಿ, ಹಪ್ಪಳ, ಮಂಡಕ್ಕಿ ಅವಲಕ್ಕಿ, ಹೊದಳು- ಈ ಬಗೆಯ ಲಘುವಾದ ತಿನಿಸುಗಳನ್ನು ಮನೆಮಕ್ಕಳಿಗೆ ಕೊಡುವುದುಂಟು. ವರ್ಷದ ನಾಲ್ಕೈದು ತಿಂಗಳು ಸುರಿಯುವ ಮಳೆ ಇರುವುದರಿಂದ ಬೇಸಗೆಯಲ್ಲಿ ಮಾದಿ ಸಂಗ್ರಹಿಸಿಡುವ ದಾಸ್ತಾನು ತಿಂಡಿ-ತಿನಿಸುಗಳು ಇಲ್ಲಿ ಹೆಚ್ಚು. ಒಟ್ಟಿನಿಂದ ಬೆಳಗು – ಸಂಜೆಯ ನಿಯಮಬದ್ಧ ತಿಂಡಿತಿನಿಸುಗಳ ಏರ್ಪಾಟು ಇಲ್ಲಿಲ್ಲ. ಬಿಡುವು ಮತ್ತು ಸಾಮಾಗ್ರಿ ಇದ್ದಾಗಷ್ಟೆ ತಿಂಡಿತಿನಿಸು ಮಾಡಿ ತಿನ್ನುವ ಅಭ್ಯಾಸ ಕರಾವಳಿಯ ಜನರದು.

ಇಲ್ಲಿನ ಮಾಂಸಾಹಾರಿಗಳ ಆಹಾರಪದ್ಧತಿಯಲ್ಲಿ ಮೀನು ಮತ್ತು ಕೋಳಿಗೆ ವಿಶೇಷ ಮನ್ನಣೆ. ಜಗ್ಗ ಬಂಡ್ಗಿ, ಚಾಟಿ, ನಂಗ, ಕಂಡಿಗೆ, ಮಾಂಜಿ, ಮಗ್ಗಿನ ಮೀನು, ಚಟ್ಲಿ, ಅರ್ಕೋಳಿ ಮೀನನ್ನು ಹುರಿದು ತಿನ್ನುವುದು ಹೆಚ್ಚು ರೂಢಿಯ ತಿನಸು. ಕೋಳಿ ಅಥವಾ ಕುರಿ ಮಾಂಸದ ಕೀಮಕ್ಕೆ ಮೈದಾಹಿಟ್ಟು ಸೇರಿಸಿ ಉಂಡೆ ಮಾಡಿ ಮಸಾಲೆ ಬೆರೆಸಿ ಉಗಿಯಲ್ಲಿ ಬೇಯಿಸಿದ……….. ಬಳಕೆಯಲ್ಲಿದೆ. ಕ್ರಿಶ್ಚಿಯನ್ನರಿಗೆ ಅಕ್ಕಿ ಮತ್ತು ತೆಂಗಿನಕಾಯಿ ಕಡೆದು ಸಣ್ಣ ಉಂಡೆಯಾಗಿಸಿ ಹಬೆಯಲ್ಲಿ ಬೇಯಿಸಿ ಮಸಾಲೆಯಲ್ಲಿ ಮಳಿಯನ್ನು ಬೇಯಿಸಿ ಮಾಡುವ ಮಳಿಹಿಟ್ಟು ತುಂಬ ಪ್ರಿಯ.

ಬೇಸಗೆಯಲ್ಲಿ ಸೀಯಾಳ ಮತ್ತು ಹೆಸರು, ಏಳ್ಳು, ರಾಗಿ, ಅಕ್ಕಿಯನ್ನು ತೆಂಗಿನ ಕಾಯಿಯೊಂದಿಗೆ ಕಡೆದು ಮಾಡುವ ಪಾನೀಯ ಇಲ್ಲಿನ ಬಳಕೆಯ ಪಾನೀಯ. ದೇಹಕ್ಕೆ ತಂಪು ನೀಡುವ ಇವು ಹೊರಗಿನ ಉಷ್ಣ ಹವೆಯಿಂದ ಆರೋಗ್ಯವನ್ನು ಕಾಪಾಡುತ್ತದೆ ಎಂಬ ನಂಬಿಕೆಯಿದೆ. ಲಿಂಬೆ ಹಣ್ಣು, ಮುರಿನಹುಳಿ, ಮಾವಿನಹಣ್ಣಿನ ಪಾನಕಗಳು ತೀರಾ ಪರಿಚಿತ. ಉಪ್ಪು ಇಂಗು ಬೆರೆಸಿದ ಮಜ್ಜಿಗೆ ಬ್ರಾಹ್ಮಣರಲ್ಲಿ ವಿಶೇಷ ಬಳಕೆಯಲ್ಲಿರುವ ಪಾನೀಯ. ಮಳೆಗಾಲದಲ್ಲಿ ಹಾಲು ಬೆರೆಸಿದ ಕೊತ್ತಂಬರಿ, ಜೀರಿಗೆ ಕಷಾಯ, ಕಾಳುಮೆಣಸು ಕಷಾಯ ಮತ್ತು ಮೆಂತೆ ಮತ್ತು ಬೆಳ್ತಿಗೆ ಅಕ್ಕಿ ಹುರಿದು ಪುಡಿಮಾಡಿ ಹಾಲು ಬೆಲ್ಲ ಸೇರಿಸಿ ಮಾಡುವ ’ಮೆಂತೆ ಕಾಫಿ’ ಹೆಚ್ಚು ಬಳಕೆಯಲ್ಲಿದ್ದ ಪಾನೀಯ.

ವಿಶೇಷ ದಿನದ ತಿಂಡಿ, ತಿನಿಸುಗಳು:

ದೈನಂದಿನ ಬದುಕಿನಲ್ಲಿ ಸರಳವಾದ ಮತ್ತು ಸುಲಭವಾಗಿ ಆಹಾರ ಪದ್ಧತಿ ಕಂಡುಬಂದರೆ ವಿಶೇಷ ಸಂದರ್ಭಗಳನ್ನು ಬಹಳ ಸಂಭ್ರಮ ಮತ್ತು ವೈಭವದಿಂದ ಆಚರಿಸುವುದು ಕಾಣುತ್ತದೆ. ಮನೆಗೆ ನೆಂಟರು ಬಂದ ಸಂದರ್ಭಗಳಲ್ಲಿ, ಜೀವನಾವರ್ತನ ಹಾಗೂ ವಾರ್ಷಿಕಾವರ್ತನಗಳ ಆಚರಣೆಗಳಲ್ಲಿ, ಧಾರ್ಮಿಕ ಸ್ವರೂಪದ ಹಬ್ಬ ಹರಿದಿನಗಳಲ್ಲಿ ಬಗೆಬಗೆಯ ಅಡುಗೆ ಅಟ್ಟು ಉಣ್ಣುತ್ತಾರೆ.

ಜೀವನಾವರ್ತನ ಸಂದರ್ಭದಲ್ಲಿ ತಿಂಡಿ, ತಿನಿಸುಗಳು:

ಹಸಿವು-ಕಾಮ-ಅಕ್ಕಿಯ ನಡುವೆ ಸಂಬಂಧವನ್ನು ಕಾಣುವ ಕರಾವಳಿ ಸಂಸ್ಕೃತಿಯಲ್ಲಿ ಜೀವನಾವರ್ತನದ-ಹುಟ್ಟಿನಿಂದ ಸಾವಿನವರೆಗಿನ ಎಲ್ಲ ಆಚರಣೆಗಳಲ್ಲೂ ಅಕ್ಕಿಗೆ ವಿಶಿಷ್ಟ ಮಹತ್ವ ಸಂದಿದೆ. ಜೊತೆಗೆ ತೆಂಗಿನಕಾಯಿ ಈ ಎಲ್ಲ ಸಂದರ್ಭಗಳಲ್ಲೂ ಅಷ್ಟೇ ಪ್ರಾಧಾನ್ಯವನ್ನು ಪಡೆದುಕೊಂಡಿದೆ.

ಹುಟ್ಟು: ಬ್ರಾಹ್ಮಣರಲ್ಲಿ ಮಗು ಹುಟ್ಟಿದ ಏಳನೆ ರಾತ್ರಿ ನಡೆಸುವ ’ಏಳಿರುಳು’ ಶಾಸ್ತ್ರಕ್ಕೆ ತೆಂಗಿನಕಾಯಿ ಸುಕ್ರುಂಡೆ, ಕಡಲೆ ಉಸುಳಿ ಆಗಬೇಕು. ತೊಟ್ಟಿಲಿಗೆ ಹಾಕುವಾಗ ಅವಲಕ್ಕಿ ಅಥವಾ ಅರಳಿನ ಪಂಚಕಜ್ಜಾಯ ಮಾಡುವುದು ಸಂಪ್ರದಾಯ. ಬ್ರಾಹ್ಮಣೇತರರಲ್ಲಿ ಹುಟ್ಟಿಗೆ ಸಂಬಂಧಿಸಿದಂತೆ ಮೊದಲ ಆಚರಣೆ ಹನ್ನೊಂದನೆಯ ದಿನಕ್ಕೆ. ಆ ದಿನ ಮೆಂತೆ, ಅಕ್ಕಿ, ತೆಂಗಿನಕಾಯಿ, ಬೆಲ್ಲ ಕಡೆದು ಮೆಂತೆ ದೋಸೆ ಮಾಡುತ್ತಾರೆ. ಕ್ರಿಶ್ಚಿಯನ್ನರಲ್ಲಿ ಮಗುವನ್ನು ತೊಟ್ಟಿಲಿಗೆ ಹಾಕುವ ಸಂದರ್ಭದಲ್ಲಿ ಕೋಳಿ ಅಥವಾ ಕುರಿ ಮಾಂಸದ ಪಲಾವು ಅಥವಾ ಬಿರಿಯಾನಿ ಮಾಡಬೇಕು. ಬಂಟರಲ್ಲಿ ಹೆಣ್ಣೊಬ್ಬಳು ಹಡೆದು ತಾಯಿ ಮನೆಯಿಂದ ಗಂಡನ್ ಮನೆಗೆ ’ತೊಟ್ಟಿಲು’ ಬರುವ ಸಂದರ್ಭದಲ್ಲಿ ತಂಬಿಟ್ಟು ಉಂಡೆ, ಚಕ್ಕುಲಿ ಮತ್ತು ಅತ್ರಾಸ ಜೊತೆಯಲ್ಲಿ ತರಬೇಕು.

ಮೈನರೆಯುವುದು: ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಹೊರತು ಕರಾವಳಿಯ ಇನ್ನೆಲ್ಲ ಜಾತಿ ವರ್ಗದವರು ಮುಟ್ಟಿನ ಬಗೆಗೆ ಕಟ್ಟುನಿಟ್ಟಿನ ಮೈಲಿಗೆಯ ಕಲ್ಪನೆಯನ್ನು ಹೊಂದಿದ್ದಾರೆ. ಮೈನೆರೆದ ಹೆಣ್ಣನ್ನು ಕುಳ್ಳಿರಿಸುವ ಸಂಪ್ರದಾಯ ಹಿಂದೆ ಇದ್ದಿದ್ದು ಆಗ ಋತುಮತಿಯಾದ ಹೆಣ್ನಿಗೆ ಅಕ್ಕಿಬೆಲ್ಲ, ತೆಂಗಿನಕಾಯಿ ಅರೆದು ಮಾಡಿದ ತಂಬಿಟ್ಟಿನ ಉಂಡೆ ವಿಶೇಷ. ಬ್ರಾಹ್ಮಣರಲ್ಲಿ ಮೂರನೆಯ ದಿನ ಅಕ್ಕಿಸೇವಿಗೆ, ಓಲಿಕಡಬು, ಕಾಯಿಹಾಲು ರೂಢಿಯಲ್ಲಿದ್ದರೆ, ಬ್ರಾಹ್ಮಣೇತರರಲ್ಲಿ ಅಕ್ಕಿ, ಕಾಯಿ, ಬೆಲ್ಲ ಸೇರಿಸಿ ಹುಗ್ಗಿ ಮಾಡಿಕೊಡುವುದು ಸಂಪ್ರದಾಯ.

ಮದುವೆ: ಕರಾವಳಿಯಲ್ಲಿ ಮದುವೆಗೆ ನಿರ್ದಿಷ್ಟವಾದ ತಿಂಡಿತಿನಿಸುಗಳು, ಇರುವುದು ಕಂಡುಬರುವುದಿಲ್ಲ. ಆದರೆ ಇಲ್ಲಿಯೂ ಅಕ್ಕಿ ಮತ್ತು ತೆಂಗಿನಕಾಯಿಯಿಂದ ಮಾಡಿದ ಸಿಹಿತಿಂಡಿಗೆ ಪ್ರಾಧಾನ್ಯ ದೊರೆತಿದೆ. ಶೋಭನ ಪ್ರಸ್ತಕ್ಕೆ ಅಕ್ಕಿ, ಕಾಯಿ, ಬೆಲ್ಲದಿಂದ ಮಾಡಿದ ಅತ್ರಾಸ ಆಗಲೇಬೇಕೆಂಬ ನಿಯಮ ಬ್ರಾಹ್ಮಣರಲ್ಲಿದೆ. ಕ್ರಿಶ್ಚಿಯನ್ನರು ’ನಂಬಿಗೆ’ ಗೆ ಮತ್ತು ನಮ್ಮಾನದೂಟಕ್ಕೆ ಕುರಿ ಅಥವಾ ಕೋಳಿಯ ಪಲಾವು ಅಥವಾ ಬಿರ್ಯಾನಿ ಮಾಡುತ್ತಾರೆ. ಇತರ ಬ್ರಾಹ್ಮಣೇತರರಲ್ಲಿ ಮದುವೆಯ ಸಂದರ್ಭದಲ್ಲಿ ಮಾಂಸದ ಅಡುಗೆಗೆ ವಿಶೇಷ ಪ್ರಾಶಸ್ತವಿದೆ.

ಬಸುರಿ: ಹೆಣ್ಣಿನ ಬಸುರಿತನದ ಎಲ್ಲ ಆಚರಣೆಗಳಲ್ಲೂ ಅಕ್ಕಿಯ ತಿಂಡಿಗೆ ವಿಶೇಷ ಪ್ರಾಶಸ್ತ್ಯವಿರುವುದು ಸ್ಪಷ್ಟವಾಗಿ ಕಾಣುತ್ತದೆ. ಬ್ರಾಹ್ಮಣರಲ್ಲಿ ಐದನೆಯ ತಿಂಗಳಿಗೆ ಕೊಟ್ಟೆಕಡುಬು ಹುಳಿಯಪ್ಪ ಮಾಡಿ ಬಳಸುವುದು ಪದ್ಧತಿ. ಎಂಟನೆಯ ತಿಂಗಳಲ್ಲಿ ಬ್ರಾಹ್ಮಣರು ನಡೆಸುವ ಸೀಮಂತ, ಅಥವಾ ಬ್ರಾಹ್ಮಣೇತರರು ನಡೆಸುವ ’ಬಯಕೆ ಮದುವೆ’ ಯಲ್ಲಿ ಅಕ್ಕಿಯ ಪ್ರಾಧಾನ್ಯತೆ ನಿಚ್ಚಳವಾಗಿ ಕಾಣುತ್ತದೆ. ಬ್ರಾಹ್ಮಣರಲ್ಲಿ ಚಕ್ಕುಲಿ, ಪೆರಡಿ ಪಾಯಸ, ಬಂಟರಲ್ಲಿ ಚಕ್ಕುಲಿ, ಅತ್ರಾಸ, ಅಪ್ಪದ ಹಿಟ್ಟು, ಮಣಕಡುಬು(ಕಾಯಿ ಕಡುಬು) ಮೊಟ್ಟೆ ಆಗಲೇಬೆಕು. ಬಿಲ್ಲವ ಹಾಗೂ ಮೊಗವೀರರಲ್ಲಿ ಅವಲಕ್ಕಿ ಅಥವಾ ಮಂಡಕ್ಕಿಯ ಉಮ್ಡೆ ಮಾಡಿ ಅಕ್ಕಿಯ ಬಂದದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯುವ ಜೈನುಂಡಿ ಮತ್ತು ಚಕ್ಕುಲಿ ಆಗಲೇಬೇಕೆಂಬ ನಿಯಮವಿದೆ.

ಬಯಕೆ ಕಳೆದು ಬಸುರಿಯನ್ನು ತಾಯಿ ಮನೆಗೆ ಕಳುಗಿಸುವ ಸಂದರ್ಭದಲ್ಲಿ ಚಕ್ಕುಲಿ ಕಟ್ಟಿ ಕೊಡಬೇಕು.

ಸಾವು: ಭಾರತೀಯ ಸಂಸ್ಕೃತಿಯಲ್ಲಿ ಸಾವು ಮತ್ತೆ ಹುಟ್ಟುವ ಕ್ರಿಯೆಯ ಆರಂಭ. ಈ ನಮ್ಬಿಕೆಯಿಂದಾಗಿ ಅಪರಕರ್ಮಗಳಲ್ಲೂ ಅಕ್ಕಿಗೆ ಪ್ರಾಮುಖ್ಯತೆ ದೊರೆತಿದೆ. ಬ್ರಾಹ್ಮಣರಲ್ಲಿ ಉತ್ತರಕ್ರಿಯೆ ಮತ್ತು ಸತ್ತವರಿಗೆ ಮಾಡುವ ವಾರ್ಷಿಕ ಸ್ರಾದ್ಧಕ್ಕೆ ಉದ್ದಿನ ವಡೆ, ಅಪ್ಪ ಆಗಲೇಬೇಕು. ಬೌದ್ಧ ಧರ್ಮದ ಪ್ರಭಾವಿತವಾದ ಹಿನ್ನೆಲೆಯಲ್ಲಿ ಅಪರಕರ್ಮ ಮತ್ತು ಶ್ರಾದ್ಧದ ಸಂದರ್ಭದಲ್ಲಿ ಪಿತ್ರುಗಳಿಗೆ ನೀಡುತ್ತಿದ್ದ ಮಾಂಸದ ಮೀಸಲಿಗೆ ಉದ್ದು ಬದಲಿ ವ್ಯವಸ್ಥೆಯಾಗಿ ಬಳಕೆಯಾಯಿತು. ಬ್ರಾಹ್ಮಣೇತರರಲ್ಲಿ ಅಕ್ಕಿ ಪಾಯಸ, ಸಾವಿನ ಆಚರಣೆಗಳಲ್ಲಿ ಮಾತ್ರ ಮಾಡಲಾಗುತ್ತದೆ. ಗೌಡ ಸಾರಸ್ವತರಲ್ಲಿ ಬಿದಿರಿನ ಕಣಲೆ ಉದ್ದಿನ ವಡೆ, ಅಪ್ಪ, ಹಾಗಲಕಾಯಿ ಪೋಡಿ, ಪತ್ರೊಡೆ, ಹಲಸಿನ ಎಲೆ ಕಡುಬು ಆಗಬೇಕೆನ್ನುವುದು ಸಂಪ್ರದಾಯ. ಸತ್ತವರನ್ನು ಕರೆವ ಜಕಣಿಗೆ ಹಾಕುವುದಕ್ಕೆ ಹಲಸಿನ ಹಣ್ಣು, ಅಕ್ಕಿ, ಬೆಲ್ಲ, ಕಾಯಿಯಿಂದ ತಯಾರಿಸಿದ (ಕಡುಬು, ಅಪ್ಪ, ಮುಳ್ಕ(ಅಪ್ಪ)) ಸಿಹಿತಿಂಡಿ ಕಡ್ಡಾಯ. ಕ್ರಿಶ್ಚಿಯನ್ನರಲ್ಲಿ ಜೀವನಾವರ್ತನದ ಈ ಯಾವ ಸಂದರ್ಭಗಳಲ್ಲೂ ನಿರ್ಧಿಷ್ಟ ತಿನಿಸು ಮಾಡಬೇಕೆಂಬ ನಿಯಮವಿಲ್ಲ. ನಿತ್ಯ ಬದುಕಿನಲ್ಲಿ ಮಾಂಸಾಹಾರಿಗಳಾದವರಲ್ಲೂ ಮದುವೆಯ ಸಮ್ಮಾನದೂಟ ಮತ್ತು ಜಕಣಿ ಊಟದ ಸಂದರ್ಭ ಹೊರತುಪಡಿಸಿದಂತೆ ಜೀವನಾವರ್ತನದ ಆಚರಣೆಗಳಲ್ಲಿ ಮಾಂಸಾಹಾರಕ್ಕೆ ನಿಷೇಧಿಸಿದೆ.

ವಾರ್ಷಿಕಾವರ್ತನ ಸಂದರ್ಭದಲ್ಲಿನ ತಿಂಡಿ, ತಿನಿಸುಗಳು:

ಹಗ್ಗಿನಿಂದ ತೊಡಗಿ ಸುಗ್ಗಿಯವರೆಗಿನ ಕರಾವಳಿ ನೆಲದ ವಾರ್ಷಿಕಾವರ್ತನವನ್ನು ಅಕ್ಕಿ ಸಂಸ್ಕೃತಿಯ ನಿಯಂತ್ರಿಸುವುದು ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ನಡೆಸುವ ಅನೇಕ ಆಚರಣೆಗಳು ಆ ಸಂದರ್ಭಗಳಿಗೆ ವಿಶಿಷ್ಟವಾದ ತಿಂಡಿತಿನಿಸುಗಳು ಒಟ್ಟು ಕರಾವಳಿಯ ಆಹಾರ ಕ್ರಮದ ಪರಿಕಲ್ಪನೆಯನ್ನು ನಿರ್ದೇಶಿಸುತ್ತದೆ.

ಪಗ್ಗು ಹಗ್ಗು (ಏಪ್ರಿಲ್ಮೇ):

ಯುಗಾದಿ ಕರಾವಳಿಯ ಅಕ್ಕಿಸಂಸ್ಕೃತಿಯ ಕೃಷಿಕರಿಗೆ ಬಹಳ ಮಹತ್ವದ ದಿನ. ವರ್ಷದ ಮೊದಲ ಉಳುಮೆ ಆರೂಡು ಅಂದು ನಡೆಯಬೇಕು. ಪಾಯಸ, ಗೇರುಬೀಜದ ಉಸುಳಿ ಮತ್ತು ಹೊಸದಾಗಿ ಬಿಟ್ಟು ಹಣ್ಣು ಹಂಪಲಗಳು ವಿಶಿಷ್ಟ ತಿನಿಸುಗಳು. ಬ್ರಾಹ್ಮಣೇತರರು ಅವಡೆ ಪಾಯಸ ಮಾಡುವುದು ಸಂಪ್ರದಾಯ. ಕಾಲು ಮೆಣಸಿನ ಬೆಲ್ಲದ ಪಾನಕ ಯುಗಾದಿಯ ವಿಶೇಷ ಪಾನೀಯ.

ಬೇಸೆ(ಮೇಜೂನ್):

ಕಾರ್ತೆಲ್ ಕಾರ್(ಜೂನ್ಜುಲೈ):

ಬತ್ತದ ಸಸಿಗಳು ನಾಟಿ ನಡೆವುದು ಈ ಕಾಲಾವಧಿಯಲ್ಲಿ. ಮಹೂರ್ತ ನೋಡಿ ಶುಭದಿನದಂದು ಮಾಡುವ ಮೊದಲ ನಟ್ಟಿ – ಗಣಪತಿ ನೆಟ್ಟಿ’ಗೆ ಕಡಲೆ ಪಂಚಕಜ್ಜಾಯ ಮತ್ತು ಬೇಯಿಸಿದ ಅವಡೆಕಾಳನ್ನು ಗಣಪತಿಗೆ ಒಪ್ಪಿಸುತ್ತಾರೆ. ಕೊನೆಯ ನಟ್ಟಿ – ಹದನೆಟ್ಟಿಗೆ ಕಡುಬು, ಪಾಯಸ ಆಗಬೇಕು. ಕೃಷಿ ಕರ್ಮದಲ್ಲಿ ಪಾಲ್ಗೊಂಡವರೆಲ್ಲರಿಗೂ ಇದನ್ನು ಬಿಡಿಸುತ್ತಾರೆ.

ಆಟ, ಅಸಾಡಿ ( ಜುಲೈಅಗಸ್ಟ್):

ಗದ್ದೆಯ ಪೈರಿನ್ನೂ ಮನೆಗೆ ಬಂದಿರುವುದಿಲ್ಲ. ಕೂಡಿಟ್ಟ ಅಕ್ಕಿ ಮುಗಿದಿರುತ್ತದೆ. ರೈತನಿಗೆ ಬಡತನ ಕಾಲಾವಧಿ. ಹನಿಕಡಿಯದ ಬೀಸು ಮಳೆ ಸುರಿಯುವ ದಿನಗಳು. ಈ ತಿಂಗಳ ಸ್ಥಿತ್ಯಂತರದ ದಿನಗಳಾದ ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಮಾಡುವ ಅಸಾಡಿ ಹಬ್ಬದಲ್ಲಿ ಅಕ್ಕಿ ಇಡ್ಲಿ, ಪಾಯಸ ಮಾಡುತ್ತಾರೆ.

ತುಳುವರಲ್ಲಿ ಆಟಿ ಅಮಾವಾಸ್ಯೆಯ ದಿನ ಬೆಳಗ್ಗಿನ ತಿಂಡಿಗೆ ಸಜಂಕನ (ಚಗತೆ) ಎಲೆ ಮತ್ತು ಅಕ್ಕಿಯನ್ನು ಕಡೆದು ಮಾಡಿದ ದೋಸೆ ಮಾಡಿ ತಿನ್ನಬೇಕು. ಈ ರಾತ್ರಿ ಸುವರ್ಣಗಡ್ಡೆ ಪುಂಡಿ (ಕಡುಬು) ಮಾಡಿತಿನ್ನಬೇಕು. ಈ ಎರಡೂ ತಿಂಡಿಗಳನ್ನು ಬೇರೆ ಯಾವ ಸಂದರ್ಭದಲ್ಲೂ ಮಾಡುವುದಿಲ್ಲ.

ಸೋಣ ಸೋಣಿ (ಆಗಸ್ಟ್ ಸೆಪ್ಟೆಂಬರ್):

ಗದ್ದೆಯ ಪೈರು ತೆನೆಬಿಟ್ಟು ರೈತನಲ್ಲಿ ಹೊಸ ಉತ್ಸಾಹ ತುಂಬುವ ಕಾಲ. ಅವರೆಗೆ ಮನೆಯಲ್ಲಿ ತುಂಬಿದ್ದ ’ದರಿದ್ರಾ’ – ’ಅಜ್ಜಿ’ಯನ್ನು ಓಡಿಸುವ ವಿಶಿಷ್ಟ ಆಚರಣೆ ಈ ತಿಂಗಳಲ್ಲಿ ನಡೆಯುತ್ತದೆ. ಉದ್ದಿನ ದೋಸೆ, ಅಕ್ಕಿಯ ಉಂಡ್ಲಕ್ಕ ಹಾಗೂ ಮೀನನ್ನು ಹೊಸ್ತಿಲಲ್ಲಿ ಇಟ್ಟು ಪೂಜಿಸುತ್ತಾರೆ.

ಹೊಸಭತ್ತ – ಧಾನ್ಯಲಕ್ಷ್ಮಿ ಮನೆ ತುಂಬಿಸುವ ಕದ್ರ ಹಬ್ಬ-ಹೊಸ್ತು ಈ ತಿಂಗಳಲ್ಲಿ ನಡೆಯುವ ಒಂದು ಸಂಭ್ರಮದ ಹಬ್ಬ. ಹೊಸ್ತಿಗೆ ಅಕ್ಕಿಯ ಪಾಯಸ ಮತ್ತು ಉಂಡ್ಲಕಾಯಿ ಆಗಬೇಕು. ಕ್ರಿಶ್ಚಿಯನ್ನರಲ್ಲಿ ಹೊಸ ಅಕ್ಕಿಗೆ ತೆಂಗಿನಕಾಯಿ ಹಾಲು ಸೇರಿಸಿ ಮಾಡಿದ ಉಪ್ಪು ಗಂಜಿ ಅಥವಾ ಹೊಸ ಅಕ್ಕಿ ಮತ್ತು ಅರಳು ಸೇರಿಸಿ ಪಂಚಕಜ್ಜಾಯ ಮಾಡುವ ಸಂಪ್ರದಾಯವಿದೆ.

ನಿರ್ನಾಲ್ ಕನ್ನಿ (ಸೆಪ್ಟೆಂಬರ್ ಅಕ್ಟೋಬರ್):

ಭತ್ತದ ಕಟಾವಿನ ಕಾಲ. ರೈತರಿಗೆ ಬಿಡುವಿಲ್ಲದ ದುಡಿತದ ಕಾಲಾವಧಿ. ಕೊಯಿಲಿಗೆ ಸಂಬಂಧಿಸಿದಂತೆ ಯಾವುದೇ ಆಚರಣೆಯಾಗಲೀ, ವಿಶಿಷ್ಟ ತಿಂಡಿ ತಿನಿಸುಗಳಾಗಲಿ ಕಂಡು ಬರುವುದಿಲ್ಲ.

ಬೊಂತೆಲ್ ದಿವಾಳಿ (ಅಕ್ಟೋಬರ್ ನವ್ಹೆಂಬರ್):

ಹಿಂದಿನ ತಿಂಗಳ ಸಂಭ್ರಮ ಈ ತಿಂಗಳೂ ಮುಂದುವರಿಯುತ್ತದೆ. ದೀಪಾವಳಿ ಹಬ್ಬಕ್ಕೆ ಉದ್ದು, ಅಕ್ಕಿ ದೋಸೆ ಮತ್ತು ಅವಲಕ್ಕಿ ಪಂಚಕಜ್ಜಾಯ ರೂಢಿ ಬ್ರಾಹ್ಮಣೇತರರಲ್ಲಿ ಇಡ್ಲಿ ಮತ್ತು ಪಂಚಕಜ್ಜಾಯ ಮಾಡುತ್ತಾರೆ. ಕೃಷಿ ದೇವತೆ ಬಲೀಂದ್ರನಿಗೆ ಹೊಸ ಅವಲಕ್ಕಿ ಮತ್ತು ಉಪ್ಪು ಹಾಕದ ಅರಸಿನ ಎಲೆ ಕಡುಬು ಅಥವಾ ಮುಳ್ಳುಸೌತೆ ಕಡುಬು ನೀಡುತ್ತಾರೆ. ಕೆಲವಡೆ ಬರಿ ಅಕ್ಕಿ ದೋಸೆ(ನೀರ್ ದೋಸೆ) ಮಾಡುವುದಿದೆ.

ಜಾರ್ದೆಕೊಡಿ (ನವೆಂಬರ್ ದಿಶಂಬರ್):

ಸುಗ್ಗಿ ಬೆಳೆಯ ಕೃಷಿಕರ್ಮ ಆರಂಭಗೊಳ್ಳುವ ತಿಂಗಳು. ರೈತ ಮತ್ತೆ ದುಡಿಮೆಗೆ ಬದ್ಧನಾಗುತ್ತಾನೆ. ಹೀಗಾಗಿ ಕೃಷಿಗೆ ಸಂಬಂಧಿಸಿದಂತೆ ಯಾವುದೇ ಆಚರಣೆ-ವಿಶಿಷ್ಟ ತಿಂಡಿತಿನಿಸುಗಳು ಇಲ್ಲ. ಕಣಜತಿರಿಕಟ್ಟುವ ದಿನ ಪಾಯಸದ ಊಟ ಮಾಡುತಾರೆ.

ಪೆರಾರ್ದೆ ಧನು (ಹಂಚಾಸಿ) (ಡಿಶಂಬರ್ ಜನವರಿ):

ಮನೆಯ ಛಾವಣಿ ಹೊದಿಸುವ ಕಾಲಾವಧಿ ಇದು. ಅಂದು ಪಾಯಸ ಆಗಲೇಬೇಕು. ನಿರಂತರ ದುಡಿತ ಹಾಗೂ ಈ ಕಾಲಾವಧಿಯಲ್ಲಿ ತೀವ್ರ ಉಷ್ಣ ಇವುಗಳಿಂದ ದೇಹವನ್ನು ರಕ್ಷಿಸಲು ಹೆಸರುಬೇಳೆ, ಅಕ್ಕಿ, ಬೆಲ್ಲ, ಕಾಳುಮೆಣಸು, ತುಪ್ಪ ಹಾಕಿದ ಹುಗ್ಗಿ ಮಾಡಿ ತಿನ್ನುವುದು ರೂಢಿ.

ಪೊನ್ನಿ ಮಕರ (ಬಾರ) (ಜನವರಿ ಫೆಬ್ರುವರಿ):

ಭೂಮಿಯನ್ನು ಹೆಣ್ಣೆಂದು ಪರಿಕಲ್ಪಿಸಿದ ಕರಾವಳಿಯ ತುಳು ಸಂಸ್ಕೃತಿಯಲ್ಲಿ ಆಕೆ ಋತುಮತಿಯಾಗುವಳೆಂದು ನಂಬುವ ಮೂರು ದಿನಗಳ ಕಾಲ-ಕಡ್ಡೆಸ ಆಚರಣೆಯ ದಿನಗಳಲ್ಲಿ ಯಾವುದೇ ಕೃಷಿ ಕರ್ಮಾಚರಣೆ ನಡೆಸುವುದಿಲ್ಲ. ಹುರಿದ ಹುರುಳಿ ಮತ್ತು ಒಣಕೊಬ್ಬರಿ ಈ ದಿನಗಳಲ್ಲಿ ತಿನ್ನಬೇಕೆಂಬ ನಂಬಿಕೆಯಿದೆ.

ಮಾಯಿ ಶಿವರಾತ್ರಿ ಕುಂಬು (ಫೆಬ್ರುವರಿ ಮಾರ್ಚ್):

ಸುಗ್ಗಿಯ ಕೊಯಿಲಿನ ಸಂಭ್ರಮದಲ್ಲಿರುವ ರೈತನಿಗೆ ಯಾವುದೇ ಕೃಷಿ ಹಬ್ಬಕ್ಕೆ ಅವಕಾಶವಿಲ್ಲ.

ಸುಗ್ಗಿ (ಮಾರ್ಚ್ ಎಪ್ರಿಲ್)

ಧಾರ್ಮಿಕ ಸ್ವರೂಪದ ಹರಿದಿನಗಳು:

ವಿಭಿನ್ನ ಜಾತಿ, ವರ್ಗ, ಭಾಷೆ, ಧರ್ಮ, ಸಂಸ್ಕೃತಿಯನ್ನು ಮೈಗೂದಿಸಿಕೊಂಡಿರುವ ಕರಾವಳಿ ಕರ್ನಾಟಕದಲ್ಲಿ ಹತ್ತು ಹಲವು ಹಬ್ಬಗಳು ಆಚರಣೆಯನ್ನು ಪಡೆದುಕೊಂಡಿವೆ. ಈ ಹಬ್ಬಗಳ ಕರ್ನಾಟದಕ ವ್ಯಾಪ್ತಿಯನ್ನು ಪಡೆದವುಗಳಾದರೂ ಇಲ್ಲಿ ಮಾಡುವ ತಿಂಡಿತಿನಿಸುಗಳ ನಿರ್ದಿಷ್ಟತೆ ಸ್ಥಳೀಯ ನೆಲೆಯುಳ್ಳದ್ದು.

ನಾಗರಪಂಚಮಿ: ಕರಾವಳಿಯಲ್ಲಿ ಎಲ್ಲ ಜಾತಿ ವರ್ಗದವರು – (ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಹೊರತು) ಬ್ರಾಹ್ಮಣರಿಂದ ಹರಿಜನರವರೆಗೆ ನಾಗಾರಾಧಕರು. ಈ ದಿನ ನಾಗನಿಗೆ ಅರಸಿನ ಪ್ರಾಧಾನ್ಯ ಪಡೆದಿರುವುದನ್ನು ಗಮನಿಸಬೇಕು. ತಂಬಿಟ್ಟು ಅಥವಾ ಹಾಲುಬಾಯಿ ಮಾಡುವ ಪದ್ಧತಿ ಕೆಲವು ಬ್ರಾಹ್ಮಣರಲ್ಲಿದೆ. ನಾಗರಪಂಚಮಿಗೆ ದೋಸೆ ಮಾಡಬಾರದೆಂಬ ನಿಷೇಧ ಎಲ್ಲರಲ್ಲದೆ. ದೋಸೆ ಹಂಚುಕಾದರೆ ನಾಗನಹೆಡೆ ಕರಟುತ್ತದೆ (ಸುಡುತ್ತದೆ) ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಈ ನಿಷೇಧ ಬಂದಿದೆ.

ಕೃಷ್ಣಾಷ್ಟಮಿ: ಮಾಧ್ವ ಸಂಪ್ರದಾಯದ ಬ್ರಾಹ್ಮಣ ಮತ್ತು ಗೌಡ ಸಾರಸತ್ವರಿಗೆ ಕೃಷ್ಣಾಷ್ಟಮಿ ವಿಶೇಷ ಹಬ್ಬ. ಬ್ರಾಹ್ಮಣರಲ್ಲಿ ಬಾಣಂತಿಗೆ ಕೊಡುವ ಒಣಶುಂಠಿ ಮತ್ತು ಕಾಳಮೆಣಸನ್ನು ಕುಟ್ಟಿ ಮಡಿದ ಶುಂಠಿ ಮೆಣಸಿನ ಉಂಡೆ, ರಾತ್ರಿ ಪೂಜೆ ಮಾಡಿ ಅರ್ಘ್ಯ ಬಿಟ್ಟೊಡನೆ ತಿನ್ನಬೇಕು. ಹೆಸರು, ಎಳ್ಳು, ಅಕ್ಕಿ ನೆಲಕಡಲೆ, ಹೊದಳು-ಹೀಗೆ ಐದು ಬಗೆಯ ಉಂಡೆ, ಚಕ್ಕುಲಿ, ಹೊದಳಿನ ಪಂಚಕಜ್ಜಾಯ ಮಾಡುತ್ತಾರೆ. ಗೌಡಸಾರಸ್ವತದಲ್ಲಿ ಕಡುಬು, ಹೊದಳು ಉಂಡೆಗೆ ಪ್ರಾಶಸ್ತ್ಯ. ಇತರ ಜಾತಿಯವರು ಸೇವಿಗೆ ಕಾಯಿ ಹಾಲು ಮತ್ತು ಹೊದಳು ಪಂಚಕಜ್ಜಾಯ ವಿಶೇಷವಾಗಿ ಮಾಡುತ್ತಾರೆ.

ಗೌರಿ, ಚೌತಿ: ಗೌರಿ ಹಬ್ಬದ ಆಚರಣೆ ಕರಾವಳಿಯಲ್ಲಿ ಸಾರಸ್ವತ ಮತ್ತು ಗೌಡ ಸಾರಸ್ವತರಲ್ಲಿ ಮಾತ್ರ ಕಂಡುಬರುತ್ತದೆ. ಗೌರಿ ಹಬ್ಬಕ್ಕೆ ಅರಿಸಿನ ಎಲೆ ಕಡುಬು ಮತ್ತು ಕಡ್ಲೆ ಪಂಚಕಜ್ಜಾಯ ವಿಶೇಷ. ಗಣೇಶನಿಗೆ ಮೋದಕ(ಕಯಿಕಡುಬು) ಅಷ್ಟ, ಚಕ್ಕುಲಿ, ಉಂಡೆ, ಕಡುಬು, ಹೊದಳು ಅಥವಾ ಕಡ್ಲೆ ಪಂಚಕಜ್ಜಾಯ ಆಗಬೇಕು. ಬಿಲ್ಲವ, ಬಂಟರಲ್ಲಿ ಕಡುಬು ಪಾಯಸ ರೂಢಿ.

ನೂಲ ಹುಣ್ಣಿಮೆ: ಹಳೆಯ ಜನಿವಾರವನ್ನು ತೆಗೆದುಹಾಕಿ ನೂತನ ಯತೋಪವೀತ ಧಾರಣಿ ಮಾಡುವ ನೂಲ ಹುಣ್ಣಿಮೆಯಂದು ಅಕ್ಕಿಯ ಸೇವೆಗೆ ಆಗಲೇಬೇಕು. ಬ್ರಾಹ್ಮಣರಲ್ಲಿ ಸೇವಿಗೆ ಎಳೆ ಜನಿವಾರದ ನೂಲಿನೊಂದಿಗೆ ಸಾದೃಶ್ಯ ಸಂಬಂಧ ಪಡೆಯುವುದು ಇದಕ್ಕೆ ಕಾರಣವಾಗಿರಬೇಕು.

ನೋಂಪು: ನೋಂಪು ಅಥವಾ ಅನಂತನವ್ರತ ಬಾಹ್ಮಣ ಮತ್ತು ಗೌಡ ಸಾರಸ್ವತರಲ್ಲಷ್ಟೇ ಆಚರಣೆಯಲ್ಲಿದೆ. ಕಾಯಿವಡೆ, ಅಪ್ಪ, ಚಕ್ಕುಲಿ, ಹೊದಲು ಉಂಡಿಗೆ ಇಲ್ಲಿ ಪ್ರಾಶಸ್ತ್ಯ.

ಶಿವರಾತ್ರಿ: ಶಿವಭಕ್ತರಾದ ಸ್ಮಾರ್ತ ಸಂಪ್ರದಾಯದ ಬ್ರಾಹ್ಮಣರಿಗೆ, ಗೌಡ ಸಾರಸ್ವತರಿಗೆ ಶಿವರಾತ್ರಿ ವಿಶೇಷ ಉಪವಾಸಕ್ಕೆ ಹುಳಿ ಅವಲಕ್ಕಿ, ಹೆಸರುಗಂಜಿ ಮಾಡುತ್ತಾರೆ. ಹಬ್ಬಕ್ಕೆ ಕಡುಬು, ಪಾಯಸ ಮಾಡಿ ಉಣ್ಣುತ್ತಾರೆ.

ಪರಿಶಿಷ್ಟಜಾತಿ ವರ್ಗದವರಲ್ಲಿ ಯಾವುದೇ ನಿರ್ದಿಷ್ಟವಾದ ತಿಂಡಿತಿನಿಸು ಆಗಬೇಕೆಂಬ ಕಡ್ಡಾಯ ನಿಯಮವಿಲ್ಲ.

ವೈದ್ಯಕೀಯ ತಿಂಡಿ, ತಿನಿಸು, ಪಾನೀಯಗಳು:

ಮನುಷ್ಯನ ಆರೋಗ್ಯವು ನಿಸರ್ಗದಲ್ಲಿ ಉಂಟಾಗುವ ಪರಿವರ್ತನೆಗಳು ಹಾಗೂ ಸೇವಿಸುವ ಆಹಾರದ ಜೊತೆಗೆ ನೇರವಾದ ಸಂಬಂಧವನ್ನು ಹೊಂದಿರುತ್ತದೆ ಎನ್ನುವ ನಂಬಿಕೆ ಜನಪದರದು. ಬದುಕಿನ ಸ್ಥಿತ್ಯಂತರ ಕಾಲದಲ್ಲಿ ಮತ್ತು ಋತುಮಾನಗಳ ಸಂಕ್ರಮಣ ಕಾಲದಲ್ಲಿ ಮನುಷ್ಯದೇಹ ರೋಗ ಅಥವಾ ಪೀಡೆಗೆ ಸುಲಭವಾಗಿ ಒಳಗಾಗುತ್ತದೆ ಎನ್ನುವ ವಿಚಾರಗಳಿಗೆ ಬದ್ಧರಾಗಿ ಜನಪದರು ತಮ್ಮದೇ ಆದ ರೀತಿಯ ಆಚರಣೆಗಳನ್ನು ವೈದ್ಯಪದ್ಧತಿಯನ್ನು ಕಂಡುಕೊಂಡಿದ್ದಾರೆ. ಬಂದ ರೋಗಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಿಂತ ರೋಗ ಪ್ರತಿಬಂಧಕ ಶಕ್ತಿಯನ್ನು ತುಂಬುವ ಮೂಲಕ ಆರೋಗ್ಯದ ಸಂರಕ್ಷಣೆ ಮಾಡಿಕೊಳ್ಳುವಲ್ಲಿ ಜನಪದರು ಕೆಲವೊಂದು ಕಾಲಬದ್ಧ ಸಂದರ್ಭದಲ್ಲಿ ಔಷಧೀಯ ಆಹಾರವಾಗಿ ಸೇವಿಸುವುದು ಕಂಡುಬರುತ್ತದೆ.

ಕರಾವಳಿಯ ತುಳುವರ ಪರಿಕಲ್ಪನೆಯಲ್ಲಿ ಆಟಿ ತಿಂಗಳು ಹಲವು ರೋಗರುಜಿನಗಳು ಅನಿಷ್ಟದ ತಿಂಗಳು. ಆಟಿ ತಿಂಗಳ ಅಮಾವಾಸ್ಯೆಯ ದಿನ ಬೆಳಕು ಮೂಡುವ ಮೊದಲು ಬತ್ತಲೆಯಾಗಿ ಹಲ್ಲಿನಿಂದ ಅಥವಾ ಕಲ್ಲಿನಿಂದ ಪಾಲಿ(ಹಾಲಿ) ಮರದ ತೊಗಟೆ ಕೆತ್ತಿ ತಂದು ಕಡೆದು ರಸ ತೆಗೆಯುತ್ತಾರೆ. ಅದಕ್ಕೆ ಬೆಳ್ಳುಳ್ಳಿ, ಒಣಮೆಣಸು ಗುದ್ದಿ ಹಾಕುತ್ತಾರೆ ಮತ್ತು ಒಂದು ಬೆಣಚು ಕಲ್ಲನ್ನು ಬಿಸಿ ಮಾಡಿ ಹಾಕಿ ಬರಿಹೊಟ್ಟೆಗೆ ಮನೆಮಂದಿಯೆಲ್ಲ ಕುಡಿಯುತ್ತಾರೆ. ಆಟಿ ಅಮಾವಾಸ್ಯೆಯಂದು ಹಾಲೆಮರದ ರಸಕ್ಕೆ ವಿಶಿಷ್ಟವಾದ ರೋಗನಿರೋಧಕ ಶಕ್ತಿ ಇದೆ ಎಂದು ನಂಬಲಾಗುತ್ತದೆ.

ಆಟ ಅಥವಾ ಆಸಾಡಿ ತಿಂಗಳಲ್ಲಿ ಮರಕೆಸುವಿನ ತಿನಿಸನ್ನು ತಿನ್ನಲೇಬೇಕೆಂಬ ನಂಬಿಕೆ ಗಾಢವಾಗಿದೆ. ಹೊಟ್ಟೆಯ ಕರುಳಿನಲ್ಲಿ ಸಿಕ್ಕಿಕೊಂಡ ಕೂದಲು ಕೂಡ ಹೋಗುತ್ತದೆ ಎಂದು ತಿಳಿಯಲಾಗಿದೆ. ಮೈನೆರೆದ ಸಂದರ್ಭದಲ್ಲಿ ಕೊಡುವ ’ಎಳ್ಳುಚಿಗಳಿ’ ಬಸುರಿತನದಲ್ಲಿ ನೀಡುವ ಗಸೆಗಸೆ, ಹಾಲು, ತುಪ್ಪ ಕಲ್ಲುಸಕ್ಕರೆ, ದ್ರಾಕ್ಷಿ, ಉತ್ತತ್ತಿ ಸೇರಿಸಿ ಮಾಡುವ ಗಸೆಗಸೆ ಮದ್ದು, ಶುಂಠಿ ಮದ್ದು ತೆಂಗಿನಕೊಂಬಿನ ಮದ್ದು, ಕಾಳುಮೆಣಸು ಮತ್ತು ಜೀರಿಗೆ ಕಷಾಯಗಳನ್ನು ವೈದ್ಯಕೀಯ ತಿನಿಸು ಪಾನೀಯಗಳಾಗಿ ಹೆಸರಿಸಬಹುದು.

ಅಧ್ಯಯನದ ಶಿಸ್ತಿಗಾಗಿ ಮಾಡಿಕೊಂಡ ಈ ಎಲ್ಲ ವಿಭಾಗಗಳಿಗೆ ಮೀರಿದುದು ಬಿಡುವು ಮತ್ತು ಸಾಮಗ್ರಿಯೊಂದಿಗೆ ಜನಪದ ಆಹಾರಪದ್ಧತಿ ಅಂತರ್ ಸಂಬಂಧವನ್ನು ಪಡೆದುಕೊಂಡಿದೆ ಎನ್ನುವುದು ನನ್ನ ಅಧ್ಯಯನದಲ್ಲಿ ಕಂಡುಕೊಂಡ ಅಂಶ. ಎರಡನೆಯದು: ಕರಾವಳಿಯಲ್ಲಿ ಪ್ರಧಾನವಾಗಿ ಬೆಳೆಯುವ ಹಲಸು, ಮಾವು, ಕೆಸು, ಹೇರುಬೀಜ, ಅಣಬೆ, ಗೋಪೆಕೆಸು, ಗೆಣಸು, ನೇಂದ್ರಬಾಳೆ, ಹೆಸರು, ಹುರುಳಿ, ಅವಡೆ, ಅಕ್ಕಿ, ತೆಂಗಿನಕಾಯಿ ಇಲ್ಲಿನ ತಿಂಡಿ, ತಿನಿಸು, ಪಾನೀಯಗಳ ವೈವಿಧ್ಯಕ್ಕೆ ಕಾರಣವಾಗಿವೆ ಎನ್ನಬಹುದು.

ಕರವಾಳಿಯಲ್ಲಿ ಎಲ್ಲ ಪಾಯಸಕ್ಕೂ ತೆಮ್ಗಿನಕಾಯಿ ಹಾಲು ಮತ್ತು ಬೆಲ್ಲವನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಹಲಸಿನ ಹಣ್ಣಿನ ಪಾಯಸ, ಗಟ್ಟಿ, ಅವ್ವ, ಅಪ್ಪ(ಮುಳ್ಕ) ಹಲ್ವ, ಬರಟಿ, ಮಾಂಬ್ಳಿಗಳು ಹಲ್ಸಿನ ಕಾಯಿಯಿಂದ ಹಪ್ಪಳ್, ಚಿಪ್ಸ್, ದೋಸೆ, ಉಂಡ್ಲಕ್ಕು ಜನಪ್ರಿಯ ತಿನಿಸುಗಳು. ಬಡವರು ಹಲಸಿನ ಬೀಜವನ್ನು ಬೇಯಿಸಿ ಅಥವಾ ಸುಟ್ಟು ತಿನ್ನುವುದಿದೆ. ಮಾವಿನ ಹಣ್ಣಿನ ರಸಾಯನ, ಹಲ್ವ, ಮಾಂಬಳ ಮಾಡುತ್ತಾರೆ. ಗೇರುಬೀಜದ ಉಸುಳಿ, ಬಜಿ, ಬೇಯಿಸಿದ ಹಸಿಗೇರುಬೀಜ ಇಲ್ಲಿನ ಪ್ರತಿಷ್ಠಿತ ತಿಂಡಿಗಳು, ಕೆಸುವಿನ ಪತ್ರೊಡೆ ಕರಾವಳಿ ಜನರ ಪ್ರಿಯವಾದ ತಿನಿಸು. ನೆಣಿ ಪತ್ರೊಡೆ, ಹುಡಿಪತ್ರೊಡೆ, ಹಸಿನೆಣಿ ಪತ್ರೊಡೆ, ಮರಕೆಸು ಪತ್ರೊಡೆ ಹೀಗೆ ನಾಲ್ಕಾರು ವೈವಿಧ್ಯಗಳು ಪತ್ರೊಡೆಯಲ್ಲಿಯೆ ಲಭ್ಯ. ಕೆಸುವಿನ ರೊಟ್ಟಿ ಜನಸಮಾನ್ಯರಲ್ಲಿ ಹೆಚ್ಚು ಪ್ರಚಲಿತ.

ಮಳೆಗಾಲದಲ್ಲಿ ಮಣ್ಣಿನೊಳಗೆ ಬೆಳೆಯುವ ಅಣಬೆಗೆ ಬಹಳ ಬೇಡಿಕೆ ಇದೆ. ಸಾರಸ್ವತ ಮತ್ತು ಗೌಡ ಸಾರಸ್ವತರು ಅಕ್ಕಿ, ಕೆಂಪು ಮೆಣಸು, ತೆಂಗಿನಕಾಯಿ ಕಡೆದು ಅಣಬೆಯ ಸಣ್ಣ ತುಂಡುಗಳಾಗಿ ಬೇಯಿಸಿ ಪೇರಿಸಿದ ಸನ್ನಾಪೋಳೆ(ದಪ್ಪರೊಟ್ಟಿ) ಮಾಡುತ್ತಾರೆ. ಬ್ರಾಹ್ಮಣರಿಗೆ ಅಣಬೆ ನಿಷಿದ್ಧ. ಇಲ್ಲಿನ ಸಾರಸ್ವತ, ಗೌಡ ಸಾರಸ್ವತರಿಗೆ ಬಲು ಇಷ್ಟವಾದ ತಿನಿಸು ಗೋವೆ ಕೆಸುವಿನ ಮೋಡಿ ಮತ್ತು ಚಿಪ್ಸ್. ದೀವಿಹಲಸಿನ ಕಾವಲಿಗೆ ಹಚ್ಚಿದ ಮೋಡಿ, ಕಡ್ಲೆಹಿಟ್ಟಿನಲ್ಲಿ ಅದ್ದಿ ಕರಿಯುವ ಮೋಡಿ. ದಕ್ಷಿಣ ಕರಾವಳಿ ಭಾಗದಲ್ಲಿ ನೇಂದ್ರ ಬಾಳೆ ಹೆಚ್ಚು ಬಳಕೆಯಲ್ಲಿದೆ. ನೇಂದ್ರಬಾಳೆಹಣ್ಣಿನ ಹಲ್ವ, ಪಾಯಸ, ಮೋಡಿ, ಕಾಯಿಯ ಚಿಪ್ಸ್ ಅತಿಥ್ಯದ ತಿನಿಸುಗಳಾಗಿ ಮಹತ್ವ ಪಡೆದಿವೆ.  ಗೆಣಸಿನ ಮೋಡಿ ಪಾಯಸ, ಉಪ್ಪಿನೊಂದಿಗೆ ಬೇಯಿಸಿದ ಗೆಣಸು ಸೇವಿಸುವುದು ಕಂಡು ಬರುತ್ತದೆ. ಪಿಕ್ ಹಲಿನಿಂದ ಮಾಡುವ ಗಿಣ್ಣು, ದ್ವಿದಳ ಧಾನ್ಯಗಳಾದ ಅವಡೆ, ಹುರುಳಿ, ಹೆಸರು ಕಾಳಿನ ಉಸುಳಿ ಸಾರಸ್ವತ, ಗೌಡ ಸಾರಸ್ವತರ ಅಚ್ಚುಮೆಚ್ಚಿನ ತಿನಿಸುಗಳಾಗಿವೆ. ಅಕ್ಕಿಯ ಸೇವಿಗೆ, ಮುಂಡುಗನ ಓಲೆಯ ಮತ್ತು ಹಲಸಿನ ಎಲೆಯ ಕೊಟ್ಟೆ ಕಡುಬು ಕಾಯಿ ಹಾಲು, ಕೆಸುವಿನ ಪತ್ರೊಡೆ ನೆಮ್ಟರ ಸಮ್ನಾದಲ್ಲಿ, ಅತಿಥಿಗಳ ಅತಿಥ್ಯದಲ್ಲಿ ಪ್ರಧಾನವಾಗಿರುವಂತಹ ತಿಂಡಿಗಳು. ಶ್ರೀಮಂತರ ಮನೆಗಳಲ್ಲಷ್ಟೆ ಅತಿಥಿ ಅಭ್ಯಾಗತರಿಗೆ ಹಾಲ್ಬಾಯಿ, ಹಯಗ್ರೀವ ಮಡ್ಡಿ, ಸುಕ್ರುಂಡೆ ಕಾಯಿಹೋಳಿಗೆಯಂಥ ಸಿಹಿತಿಂಡಿಗಳ ಉಪಚಾರ ಮಾಡಲಾಗುತ್ತದೆ.

ಹೊಸ ಒಲವು:

ಕೈಗಾರೀಕರಣದ ಫಲವಾಗಿ ಉಂಟಾದ ಸಾಮಾಜಿಕ ಸ್ಥಿತ್ಯಂತರದ ಪ್ರಭಾವ ಕರಾವಳಿ ಜನಪದ ಆಹಾರ ಪದ್ಧತಿಯ ಮೇಲೆ ದಟ್ಟವಾಗಿ ಆದಿದೆ. ಇದರ ಫಲವಾಗಿ ಉಂಟಾದ ವಿಭಕ್ತ ಕುಟುಂಬ ಪದ್ಧತಿ, ಮಹಿಳೆಯರು ಹೊರದುಡಿಮೆಗೆ ತೊಡಗಿಕೊಂಡುದು, ಆ ಮೂಲಕ ಪಡೆದುಕೊಂಡ ಆರ್ಥಿಕ ಚೈತನ್ಯದಿಂದಾಗಿ ಅಂಗಡಿಹೋಟೆಲುಗಳ ಸಿದ್ಧ ತಿನಿಸುಗಳಿಗೆ ಅವಲಂಬಿಸಿರುವುದು ಹೆಚ್ಚುತ್ತಿದೆ.

ಕರಾವಳಿಯ ಜನ ಪರಊರುಗಳಲ್ಲಿ ಹೋಟೆಲು ಉದ್ಯಮ ಕೈಗೊಂಡುದು ಹಾಗೂ ಅನ್ಯ ಸಂಸ್ಕೃತಿಗಳ ಸಂಪರ್ಕ ಸಿದ್ಧಿಸಿದುದು ಹೊಸ ತಿಂಡಿತಿನಿಸುಗಳನ್ನು ಈ ನೆಲಕ್ಕೆ ಪರಿಚಯಿಸಿದುವು.

ಈ ಎಲ್ಲ ಕಾರನಗಳಿಂದ ಹೊಸತಲೆಮಾರು ಜನಪದ ಅಡುಗೆಯತ್ತ ನಿರಾಸಕ್ತರಾಗಿದ್ದದು ಕಂಡುಬಂದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಜನಪದ ಅಡುಗೆ ತಿಂಡಿ, ತಿನಿಸು, ಪಾನೀಯಗಳತ್ತ ನಾಗರಿಕ ಜಗತ್ತಿನಲ್ಲಿ ಹೊಸ ಒಲವು ಕಾನಿಸುತ್ತಿದೆ. ಸಾಹಿತ್ಯ ಸಮ್ಮೇಳನ, ಸಭೆ ಸಮಾರಂಭಗಳ ಊಟಗಳಲ್ಲಿ, ರೋಟರಿ ಲಯನ್ಸ್‌ಗಳ ಭೋಜನಕೂಟಗಳಲ್ಲಿ, ಪ್ರತಿಷ್ಠಿತರ ’Gettogether’ಗಳಲ್ಲಿ ಜನಪದ ತಿಂಡಿ, ತಿನಿಸುಗಳು, ಪಾನೀಯಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ, ಒಂದು ಫ್ಯಾಷನ್ ಆಗಿ ಕಾಣಿಸಿಕೊಳ್ಳುತ್ತಿವೆ.

* * *