ಮಲೆನಾಡಿನ ಬಹುವಿಸ್ತಾರವೂ ಸಮೃದ್ಧವೂ ಆದಂತಹ ಕರ್ನಾಟಕದ ಒಂದು ಭಾಗ. ಬೆಳಗಾಂ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಮೈಸೂರು, ಧಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಕೆಲವು ತಾಲ್ಲೂಕುಗಳನ್ನು ಮಾತ್ರ ಸೇರಿಸಿ ಒಟ್ಟು ೫೮ ತಾಲ್ಲೂಕುಗಳು ಪ್ರಾಕೃತಿಕವಾಗಿ ಮಲೆನಾಡೆಂದು ಕರೆಯಿಸಿಕೊಂಡಿದ್ದರೂ ಆಹಾರ ಪದ್ಧತಿಗಳಲ್ಲಿ ರೀತಿ ನೀತಿಗಳಲ್ಲಿ ಸಂಪೂರ್ಣವಾಗಿ ಬಯಲು ಸೀಮೆಯನ್ನು ಪ್ರತಿನಿಧಿಸುತ್ತದೆ. ಒಟ್ಟು ಕರ್ನಾಟಕದ ಜನ ಸಂಖ್ಯೆ ೧/೩ ಭಾಗ ಮಲೆನಾಡಿನಲ್ಲಿ ವಾಸವಾಗಿರುವುದು ಕಂಡು ಬರುತ್ತದೆ. ಹೆಸರೇ ಹೇಳುವಂತೆ ಸಹ್ಯಾದ್ರಿ ಪರ್ವತ ಶ್ರೇಣಿಗಳಿಂದ, ಘಟ್ಟ ಪ್ರದೇಶಗಳಿಂದ, ಬೆಟ್ಟಗುಡ್ಡಗಳಿಂದ ಅಪೂರ್ವವಾದ ಸಸ್ಯ ಸಂಪತ್ತಿನಿಂದ, ತುಂಬಿ ಹರಿಯುವ ನದಿಗಳಿಂದ, ಜಲಪಾತಗಳಿಂದ ಹಸಿರೇ ಉಸಿರಾಗಿರುವ ನಾಡಿದು. ಕುವೆಂಪು ಅವರು ಹೇಳುವಂತೆ ಮಲೆನಾಡೆಂದರೆ ಅಲ್ಲೊಂದು ಮನೆ ಇಲ್ಲೊಂದು ಮನೆ. ಹಿಗಾಗಿ ಮನೆಯ ಸುತ್ತಲೂ ಅಡಿಕೆ, ತೆಂಗು, ಬಾಳೆ, ಮೆಣಸು, ಏಲಕ್ಕಿ, ಭತ್ತ, ಕಾಫಿ, ತರಕಾರಿಗಳನ್ನು ಬೆಳೆಯುತ್ತಿದ್ದರು. ಇಂತಹ ವಾಣಿಜ್ಯ ಬೆಳೆಗಳಿಂದಾಗಿ, ಮಳೆ, ಬೆಳೆಯಿಂದಾಗಿ ಸಂಪತ್ಭರಿತ ಸಮೃದ್ಧ ಜೀವನ ಅವರದಾಗಿತ್ತು. ಮನೆಯಲ್ಲಿ ಹಾಲು ಹೈನುಗಳ ಹೊಳೆಯೇ ಹರಿಯುತ್ತಿತ್ತು. ಇಲ್ಲಿಯ ಜನ ಅತಿಥಿ ಸತ್ಕಾರಕ್ಕೆ ಹೆಸರಾದವರು. ಮೇಗರವಳ್ಳಿಯ ನೂರು ಅಂಕಣದ ದೊಡ್ಡ ಮನೆಯ ಜನ ಅನಿರೀಕ್ಷಿತವಾಗಿ ಬಂದ ಹೈದರಾಲಿಯ ದಂಡಿಗೆ ಮಾಡಿದ ಅತಿಥಿ ಸತ್ಕಾರಕ್ಕೆ ಬೆರಗಾಗಿ ಸ್ಥಳದಲ್ಲಿಯೇ ನೂರ ಇಪ್ಪತ್ತು ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಂಡನಂತೆ. ಇದನ್ನು ಗಮನಿಸಿದಾಗ ನಾವು ಯಾವುದೇ ಸಮಾಜವಾಗಲಿ, ಜಾತಿಯಾಗಲಿ ಅವರು ಅನುಸರಿಸುವ ಆಹಾರ ಕ್ರಮಗಳಿಂದಾಗಿ ಅತಿಥಿ ಸತ್ಕಾರಗಳಿಂದಾಗಿ ಸಂಸ್ಕೃತಿಯ ಪುನಾರಚನೆ ಮಾಡುತ್ತವೆಂದು ಧಾರಳವಾಗಿ ಹೇಳಬಹುದು.

“ಹಸಿದು ಬಂದವರಿಗೆ ಮೊದಲು ದಣಿವಾರಿಸು” ಮಲೆನಾಡಿನಲ್ಲಿ ಇದೊಂದು ಗಾದೆ. ಇಲ್ಲಿಯ ಜನರು ಭಿಕ್ಷುಕರಿಗೂ ಬೊಗಸೆ ತುಂಬಿ ದಾನ ಮಾಡುವವರು. ಆದುದರಿಂದ ಅವರ ಅಡುಗೆಯಲ್ಲಿ, ತಿಂಡಿ, ತಿನಿಸುಗಳಲ್ಲಿ, ಪಾನೀಯಗಳಲ್ಲಿ ಆ ಸಂಸ್ಕೃತಿಯ ಗಟ್ಟಿತನ, ರಸಿಕತೆ, ವೈವಿಧ್ಯಗಳು ಇಂದಿಗೂ ಉಳಿದುಕೊಂಡು ಬಂದಿವೆ. ಸಮಯದ ಅಭಾವದಿಂದಾಗಿ ಒಂಬತ್ತು ಜಿಲ್ಲೆಗಳ ಐವತ್ತೆಂಟು ತಾಲ್ಲೂಕಗಳ ವೈವಿಧ್ಯವನ್ನು ಸಂಪೂರ್ಣವಾಗಿ ಹೇಳಲಾಗದಿದ್ದರೂ ಸಾಧ್ಯವಾದಷ್ಟು ವಿಷಯವನ್ನು ಸಂಗ್ರಹಿಸಲು ಪ್ರಯತ್ನಿಸಿದ್ದೇನೆ.

ಬಯಲು ಸೀಮೆ ಮತ್ತು ಮಲೆನಾಡುಗಳನ್ನು ತೌಲನಿಕವಾಗಿ ನೋಡಿದಾಗ, ಭೌಗೋಳಿಕವಾಗಿ ಬಹಳಷ್ಟು ವ್ಯತ್ಯಾಸ ಕಂಡು ಬರುತ್ತವೆ. ಪ್ರಕೃತಿ ಸಂಪತ್ತು ಹೇರಳವಾಗಿರುವ ಮಲೆನಾಡಿಗರು ಅದೃಷ್ಟವಂತರು, ಪ್ರಕೃತಿಯ ಮಕ್ಕಳು, ಬಯಲುಸೀಮೆಯವರು ಮಲಮಕ್ಕಳ ಹಾಗೆ ಕಷ್ಟಪಡುವವರು. ಮಲೆನಾಡಿನ ಹೆಂಗಸರಿಗಂತೂ ಮಳೆಗಾಲದಲ್ಲಿ ಛಳಿಗಾಲದಲ್ಲಿ ಹೋಗುವಂತಿಲ್ಲ, ಸಾಮಾನಗಳನ್ನು ತರುವಂತಿಲ್ಲ. ಹೀಗಾಗಿ ಸಮಯ ಕಳೆಯಲು ವೈವಿಧ್ಯಮಯ ತಿಂಡಿ, ತಿನಿಸುಗಳನ್ನು ಮಾಡಲು ಕಲಿತರು. ಅಷ್ಟೇ ಅಲ್ಲ ಮಾಡದವರಿಗೆ ಕೊಡಲು, ಅಲ್ಲದೆ ಮಳೆಗಾಲ ಬರುವ ಮೊದಲೇ ರಾಸಿ ಸಾಮಾನುಗಳನ್ನು ತರಿಸಿ ತಿಂಡಿಗಳನ್ನು ತಯಾರಿಸಿ ಹಂಚುವ ಪರಿಪಾಠ ಇಟ್ಟುಕೊಂಡರು.

ದಾಸರು “ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎನ್ನುತ್ತಾರೆ. ಮಾನವನ ಬದುಕಿಗೆ ಗಾಳಿ, ಆಹಾರ, ನೀರು ಅತ್ಯಂತ ಅವಶ್ಯಕವಾದುಗಳು, ಗಾಳಿ, ನೀರು ಪ್ರಾಕೃತಿಕವಾಗಿ ದೊರೆತರೆ ಆಹಾರವನ್ನು ಮಾತ್ರ ಆತ ತನ್ನ ನಾಲಿಗೆಯ ರುಚಿಗೆ ಅನುಗುಣವಾಗಿ ವೈವಿಧ್ಯಪೂರ್ಣವಾಗಿ ತಯಾರಿಸಿಕೊಳ್ಳಬೇಕಾಗುತ್ತದೆ. ಕ್ರಮಬದ್ಧವಾದ, ರುಚಿಕಟ್ಟಾದ ಆಹಾರವಿಲ್ಲದಿದ್ದರೆ, ಆರೋಗ್ಯ ಹೀನರಾಗಬೇಕಾಗುತ್ತದೆ. ಆಹಾರವೆಂದರೆ ಕೇವಲ ಎರಡು ಹೊತ್ತಿನ ಊಟ ಮಾತ್ರವಲ್ಲ. ನಾಲಿಗೆಯ ರುಚಿಗೆ ತಕ್ಕ ಹಾಗೆ ತಯಾರಿಸಿದ ತಿಂಡಿ, ತಿನಸುಗಳು, ದಾಹ ನೀಗುವ ಪಾನೀಯಗಳು ಒಳಗೊಳ್ಳುತ್ತವೆ. ಈ ತಿಂಡಿ ತಿನಸು ಮತ್ತು ಪಾನೀಯಗಳಲ್ಲಿನ ವೈವಿಧ್ಯಗಳು ಅಲ್ಲಿಯ ಭೌಗೋಳಿಕ, ಸಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಅವಲಂಬಿಸಿ ಪ್ರದೇಶದಿಂದ, ಪ್ರದೇಶಕ್ಕೆ ಜಾತಿಯಿಂದ ಜಾತಿಗೆ ಭಿನ್ನವಾಗಿ ಉಳಿದಿವೆ.

ಈ ಮೇಲಿನ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಂಡು ಹಾಸನದ ರುದ್ರಪಟ್ಟಣ, ಚನ್ನರಾಯಪಟ್ಟಣಗಲ ಸುತ್ತಮುತ್ತ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಆಗುಂಬೆ, ಹೊಸನಗರ, ಆನವಟ್ಟಿ ಸೊರಬಗಳ ಸುತ್ತಮುತ್ತ ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ದಾಂಡೇಲಿ ಚಿಕ್ಕಮಗಳೂರಿನ ಸಕಲೇಶಪುರದ ಮೂಡಿಗೆರೆಯ ಸುತ್ತಮುತ್ತ ಕೊಡಗು ಮತ್ತು ಕುಶಾಲನಗರದ ಸ್ನೇಹಿತುರುಗಳಿಂದ ಮೈಸೂರಿನ ಚಾಮರಾಜನಗರಗಳಲ್ಲಿ ಬಹುತೇಕ ಎಲ್ಲ ಜಾತಿಗಳ ಜನರಿಂದ ಮಾಹಿತಿ ಪಡೆಯಲಾಗಿದೆ. ಕರಾವಳಿ ಕರ್ನಾಟಕದ ತಿಂಡಿ, ತಿನಿಸುಗಳು ಮೇಲೆ ಪ್ರಬಂಧವಿರುವುದರಿಂದ ಈ ಜಿಲ್ಲೆಯ ಕ್ಷೇತ್ರಕಾರ್ಯವನ್ನು ಸೀಮಿತವಾಗಿ ಮಾಡಲಾಗಿದೆ.

ಈ ಎಲ್ಲಾ ಜಾತಿ ಧರ್ಮಗಳಲ್ಲಿರುವ ವೈಶಿಷ್ಟ್ಯಪೂರ್ಣ ತಿಂಡಿ, ತಿನಿಸುಗಳು ಮತ್ತು ಪಾನೀಯಗಳು ಈ ಪ್ರಬಂಧದ ಮಿತಿಯಲ್ಲಿವೆ.

ತಿಂಡಿ, ತಿನಿಸುಗಳು: ತಿನ್ ಎನ್ನುವ ಧಾತುವಿನಿಂದ ಸೃಷ್ಟಿಯಾದ ತಿಂಡಿ ಮತ್ತು ತಿನಿಸು ಎರಡೂ ಪದಗಳಿಗೂ ಕನ್ನಡ ನಿಘಂಟಿನಲ್ಲಿ ಆಹಾರ ಖಾದ್ಯ ಎನ್ನುವ ಅರ್ಥವಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ತಿಂಡಿಗೆ ತುರಿಕೆ ಎನ್ನುವ () ಅರ್ಥವಿದೆ. ಆದರೆ ದಿನಬಳಕೆಯಲ್ಲಿ ನಾವು ತಿನ್ನುವ ಮಾಡುವ ಆಹಾರವನ್ನು ಊಟ ಮತ್ತು ತಿಂಡಿ ತಿನಸುಗಳು ಎಂದು ವಿಭಾಗಿಸಿಕೊಳ್ಳುವುದರಿಂದ ಖಾದ್ಯ ಎನ್ನುವ ಅರ್ಥವನ್ನು ಮಾತ್ರ ಇಟ್ಟುಕೊಳ್ಳಬಹುದು. ಊಟವೆಂದರೆ, ಕೇವಲ ಮಧ್ಯಾಹ್ನ, ರಾತ್ರಿ ಅನ್ನ, ಮುದ್ದೆ, ಸಾಂಬಾರು ಒಳಗೊಂಡದ್ದು. ಈ ಎರಡು ಹೊತ್ತು ಬಿಟ್ಟರೆ ಬೆಳಿಗ್ಗೆ, ಸಂಜೆ ನಿನ್ನುವ ಸಾಮಾನ್ಯ ತಿಂಡಿಗಳು ಉಳಿದ ಯಾವುದೇ ಸಮಯದಲ್ಲಿ ತಿಂದರೂ ಅದು ತಿನಿಸಾಗುತ್ತದೆ. ಹೀಗಾಗಿ ಬಾಯಲ್ಲಿ ಬಾಯ್ತೆರದು ಕುಳಿತಿರುವ ರುಚಿ ಗ್ರಂಥಿಗಳಿಗೆ ತಕ್ಕ ಹಾಗೆ ಇದರಲ್ಲಿ ವೈವಿಧ್ಯವೂ ಹೆಚ್ಚು ರುಚಿಯೂ ಹೆಚ್ಚು. ಅನೇಕ ಜಾತಿ, ಧರ್ಮಗಳ ಜನ ಇಲ್ಲಿ ವಾಸಿಸುವುದರಿಂದ ಅವರು ಮಾಡುವ ತಿಂಡಿ, ತಿನಿಸುಗಳನ್ನು ಗಮನಿಸಿ ಸಾಮಾನ್ಯ ತಿಂಡಿಗಳು ವಿಶೇಷ ಸಂದರ್ಭಗಳ ತಿಂಡಿಗಳೆಂದು ವಿಭಾಗಿಸಬಹುದು.

ಸಾಮಾನ್ಯ ತಿಂಡಿಗಳು

ಪ್ರತಿನಿತ್ಯ ಬೆಳಗಿನ ಉಪಹಾರಕ್ಕಾಗಿ ಬಡವರೂ, ಶ್ರೀಮಂತರೂ ಎನ್ನದೆ ಅಕ್ಕಿ ರೊಟ್ಟಿ, ಕೆಂಡದ ರೊಟ್ಟಿ, ಬಿಳಿತಾವರೆಯಂತಹ ಇಡ್ಲಿ, ದೋಸೆ, ಮೆಂತ್ಯದೋಸೆ, ಕೆಂಬಣ್ಣದ ಗರಿಗರಿಯಾದ ತಾಳಿಪಟ್ಟು, ಉಪ್ಪಿಟ್ಟು, ಕಡಬು, ಚಿತ್ರಾನ್ನ, ಒತ್ತುಶಾವಿಗೆ, ವಿವಿಧ ಬಗೆಯ ಅವಲಕ್ಕಿಗಳು, ಅರಿಶಿಣದ ಎಲೆ ಹಾಕಿದ ಅನ್ನದ ಗಂಜಿ, ತುಪ್ಪ, ಮೊಸರು ಮುಂತಾದ ತಿಂಡಿಗಳನ್ನು ಎಲ್ಲರೂ ಮಾಡುತ್ತಾರೆ. ಈ ತಿಂಡಿಗಳಿಗೆ ಅಂಗೈ ಅಗಲದಷ್ಟು ಅರಳು ಬೆಣ್ಣೆ ಅಥವಾ ತುಪ್ಪ, ಕೆನೆಮೊಸರು ಆಗಲೇಬೇಕು. ನೆಮ್ಜಿಕೊಳ್ಳುವುದಕ್ಕೆ ಕಳಲೆ, ಬಾಳೆದಿಂಡು, ಕಾಯಿ, ಕಾಳುಗಳು ಸೊಪ್ಪು ದಿವಿಹಲಿಸು ಹಿರೇಕಾಯಿ ಪಲ್ಯಗಳಲ್ಲದೆ, ತೆಂಗಿನಕಾಯಿ, ಮೆಂತ್ಯೆ ಹೀರೆಸಿಪ್ಪಿ, ಅಮಟೆಕಾಯಿ, ಗುಣಸೇಕಾಯಿ ಎಳೆಹಲಸಿನಕಾಯಿ ಬಾಳೆಮಾತೆಯ ಚಟ್ನಿಗಳ ಜೊತೆಗೆ ಪುಡಿ ಚಟ್ನಿಗಳು ಇರುತ್ತದೆ. ಅಪ್ಪೆಮಿಡಿ, ಉಪ್ಪಿನಕಾಯಿ, ಹೋಳುಮಾವಿನಕಾಯಿ, ನಿಂಬೆ, ಹಲಸಿನ ತೊಳೆ, ಮುಠಿನಕಾಯಿ ಮತು ಬೇರಿನಿಂದ ತಯಾರಿಸಿದ ಉಪ್ಪಿನಕಾಯಿಗಲನ್ನು ಹಾಕಿ ವರ್ಷವೆಲ್ಲವೂ ಕೆಡದಂತೆ ರಕ್ಷಿಸಿಟ್ಟು ಎಲ್ಲ ತಿಂಡಿಗಳಿಗೂ ನೆಂಜಿಕೊಳ್ಳುವುದಕ್ಕೆ ಬಳಸುತ್ತಾರೆ.

ತಿನಿಸುಗಳನ್ನು ಸಂಜೆಯ ಹೊತ್ತೆ ತಿನ್ನಲು, ಬೇಸರ ಕಳೆಯಲು ಕೆಲವು ವಿಶೇಷ ಸಂದರ್ಭಗಳಲ್ಲಿ ಬಳಸುತ್ತಾರೆ. ಮಳೆಗಾಲದಲ್ಲಿ ಇದರ ಬಳಕೆ ಹೆಚ್ಚು.

ಪಾನೀಯಗಳು

ಬಾಯಾರಿದವರಿಗೆ ಆಸರು, ಹುಷಾರಿಲ್ಲದವರಿಗೆ ಕಷಾಯ, ದಣಿದ, ಬೇಸರದ ನಿವಾರಣೆಗೆ ಕಳ್ಳು ಹಿಗೆ ವಿವಿಧ ಪಾನೀಯಗಳನ್ನು ಕುಡಿಯಲು ನೀವು ಮಲೆನಾಡಿಗೇ ಬರಬೇಕು. ನಿತ್ಯವೂ ಬಳಸುವಂತವು ಕೆಲವಾದರೆ ಋತುಮಾನಕ್ಕೆ ತಕ್ಕ ಹಾಗೆ ವಿಶೇಷ ಸಂದರ್ಭಗಲಲ್ಲಿ ಮತ್ತೆ ಕೆಲವನ್ನು ಬಳಸುತ್ತಾರೆ.

ನಿತ್ಯದ ಪಾನೀಯಗಳು: ಮಲೆನಾಡಿನ ಯಾವುದೇ ಭಾಗದಲ್ಲಿ ಯಾರ ಮನೆಗೆ ಹೋದರೂ ತಕ್ಷಣವೇ ’ಅಸರಿಗೇನು ಕೊಡಲಿ’ ಎಂದು ಕೇಳುತ್ತಾರೆ. ನೀವು ಬಾಅಯಿಬಿಡುವುದಕ್ಕೂ ಮೊದಲೇ ಕೋಲುಬೆಲ್ಲ, ಚೆಂಬಿನಲ್ಲಿ ತಣ್ಣನೆಯ ನೀರು ನಿಮ್ಮೆದುರಿಗಿರುತ್ತದೆ. ಮಲೆನಾಡಿನಲ್ಲಿ ಕಾಫಿ ಕುದಿದರೆ ಮೈಲಿಗೆ ಎಂಬ ಭಾವನೆ ಇದ್ದುದರಿಂದ ಕಾಫಿ, ಟೀಗಳ ಬಳಕೆ ಅಷ್ಟಾಗಿರಲಿಲ್ಲ. ಜನರಿಗೆ ಬೆಳಗಾಗುವುದೇ ಕೊತ್ತುಂಬರಿ ಕಾಫಿಯೊಂದಿಗೆ, ಮಕ್ಕಳಿಗಾದರೆ ಅದೇ ತಾನೆ ಕರೆದ ತಂಬಾಲು ಏಲಕ್ಕಿ ಪಚ್ಚಕರ್ಪೂರ, ಗಸಗಸೆ ಹಾಕಿದ ಆಕಳು ಹಾಲು, ಮಧ್ಯಾಹ್ನದ ಹೊತ್ತಾದರೆ ತೋಟದಲ್ಲಿ ಕಿತ್ತ ಸೀಯಾಳು, ಶುಂಠಿ, ಮೆಣಸು ಹಾಕಿದ ಮಜ್ಜಿಗೆ ನೀರು, ಅಕ್ಕಚ್ಚಿನ ನೀರು, ನಿಂಬೆ ಹಣ್ಣಿನ ಪಾನಕಗಳನ್ನು ಮಾಡಿ ಕುಡಿಯುತ್ತಾರೆ.

ಮಾಂಸಾಹಾರಿಗಳಾದರೆ ಕೋಳಿ ಅಥವಾ ಕುರಿಯ ಕಾಲು ಬೇಯಿಸಿದ ನೀರನ್ನು ಮೆಣಸು ಬೆಳ್ಳುಳ್ಳಿ ರಸದೊಂದಿಗೆ ಬೆರೆಸಿ ಕುಡಿಯುತ್ತಾರೆ. ಮಳೆಗಾಲದಲ್ಲಿ ಏಡಿ ಕಷಾಯ ಕುಡಿಯುತ್ತಾರೆ.

ಮಾದಕ ಪಾನೀಯಗಳು: ಕೆಲವು ವಿಶೇಷ ಸಂದರ್ಭಗಳಲ್ಲಿ ಮನಸ್ಸಿಗೆ ಉಲ್ಲಾಸವನ್ನು, ದೇಹಕ್ಕೆ ಉದ್ರೇಕವನ್ನು, ಸೊಂಪಾದ ನಿದ್ರೆಯನ್ನು ಉಂಟುಮಾಡುವ ಪಾನೀಯಗಳನ್ನು ಬದವ ಬಲ್ಲಿದರೆನ್ನದೆ ಎಲ್ಲರೂ ತಮ್ಮ ಮನೆಗಳಲ್ಲಿಯೇ ತಯಾರಿಸಿ ಕುಡಿಯುತ್ತಾರೆ.

ಮಲೆನಾಡಿನ ಒಕ್ಕಲಿಗರಲ್ಲಿ ನೆಂಟರು ಬಂದಾಗ ಮದುವೆಗಳಲ್ಲಿ ದೇವರ ಹರಕೆಗಲಲ್ಲಿ ಊಟಕ್ಕೆ ಮೊದಲು ಅಕ್ಕಿ ಹೆಂಡ, ಅಕ್ಕಿಭೋಜನ, ಅಕ್ಕಿತನು ಎಂಬ ಅನೇಕ ಹೆಸರಿನ ಪಾನೀಯವನ್ನು ಕುಡಿಯುತ್ತಾರೆ. ಬತ್ತವನ್ನು ಅನೇಕ ದಿನಗಳ ಕಾಲ ನೆನೆಹಾಕಿ ಮೊಳಕೆ ಬರಿಸಿ ಲಕ್ಕಿಸೊಪ್ಪಿನ ಮೇಲೆ ಒಣಗಿಸಿ, ಅಕ್ಕಿಹಿಟ್ಟು ಮಾಡಿ, ಬೇಯಿಸಿ ಮತ್ತೆ ಒಣಗಿಸಿ ಮಡಕೆಯಲ್ಲಿ ಇಟ್ಟು ಅನೇಕ ದಿನಗಳ ಕಾಲ ಹುಳಿ ಬರಿಸಿ ಮೇಲಿನ ತಿಳಿ ನೀರು ಕುಡಿಯುವದರಿಂದ ಉದ್ರೇಕ ಉಂಟಾಗುವದಲ್ಲದೆ ಆರೋಗ್ಯಕ್ಕೂ ಒಳ್ಳೆಯದೆಂದು ಕುಡಿಯುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ’ನೀರಾ’ ಎಂದು ಕರೆಸಿಕೊಳ್ಳುವ ಈಚಲು ಮರದ ರಸವನ್ನು ರಾತ್ರಿಯಲ್ಲಾ ಶೇಖರಿಸಿ ಸೂರ್ಯೋದಯಕ್ಕೆ ಮೊದಲು ಕುಡಿಯುತ್ತಾರೆ.

ಕೊಡಗಿನ ಕಡೆಗೆ ವಿದೇಶಿ ಸಂಸ್ಕೃತಿಯ ಪ್ರಭಾವ ಇರುವುದರಿಂದ ದ್ರಾಕ್ಷಿ ಹಣ್ಣಿನ ರಸವನ್ನು ಮನೆಯಲ್ಲೇ ತಯಾರಿಸಿ ಅದನ್ನು ಚೆನ್ನಾಗಿ ಹುಳಿ ಬರಿಸಿ, ಗೇರು ಬೀಜ, ಗೋಡಂಬಿ ಪುಡಿಗಳನ್ನು ಹಾಕಿ ಕೆಡದ ಹಾಗೆ ಇಟ್ಟು ವಿಶೇಷ ಸಂದರ್ಭಗಳು ಬಂದಾಗಲೆಲ್ಲಾ ಊಟದ ಜೊತೆಗೆ ದ್ರಾಕ್ಷಾ ರಸವೆಂತಲೂ, ವೈನ್ ಎಂತಲೂ ಕುಡಿಯುತ್ತಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಹವ್ಯಕರು ರಾಮರಸ, ಸೋಮರಸ ಅಥವಾ ಭಂಗೀ ಪಾನಕವನ್ನು ಕುಡಿಯುತ್ತಾರೆ. ಹಿಂದಿನ ಕಾಲದಲ್ಲಿ ವಿಶೇಷ ಸಂದರ್ಭಗಳಿಗೆಂದೇ ತಯಾರಾಗುತ್ತಿದ್ದ ಈ ಭಂಗೀ ಪಾನಕ ಈಗ ಮೋಜಿನ ಪಾನೀಯವಾಗಿದೆ. ಭಂಗೀ ಸೊಪ್ಪಿಗೆ ಉತ್ತುತ್ತಿ, ಗಸಗಸೆ, ಬಾದಾಮಿ, ಕಲ್ಲುಸಕ್ಕರೆ ಸೇರಿಸಿ ಅರೆದು ಪಾನಕ ತಯಾರಿಸುತ್ತಾರೆ. ಕುದಿದ ಮೇಲೆ ವಿಚಿತ್ರ ರೀತಿಯ ಮತ್ತು ಬಂದು ಹೆಣವೆಂದು ಕುಡಿದವರಲ್ಲೇ ಒಬ್ಬನನ್ನು ಗುಂಡಿ ತೋಡಿ ಹೊಳಲಿಕ್ಕೆ ಹೋದ ಪ್ರಸಂಗಗಳೂ ಉಂಟು.

ಭಟ್ಟಿ ನೀರು ಅಥವಾ ಭಟ್ಟಿ ಸಾರಾಯಿಯನ್ನು ಕೆಲವರು ಜೋನಿಬೆಲ್ಲ ಕಬ್ಬಿನ ಕಡಾಯಿಯ ತುಕ್ಕು ಹಾಕಿ ತಯಾರಿಸಿದರೆ ಕೆಲವರು ಕೊಳೆತ ಹಣ್ಣು, ರಬ್ಬರು, ಜೋನಿಬೆಲ್ಲಗಲನ್ನು ಹಾಕಿ ತಿಂಗಳುಗಟ್ಟಲೆ ಕೊಳೆಸಿ ಮೆಲಿನ ತಿಳಿನೀರು ಬಳಸುತ್ತಾರೆ. ಮತ್ತೆ ಕೆಲವರು ಗೇರುಹಣ್ಣು, ಬಾಳೆಹಣ್ಣುಗಲನ್ನು ಕೊಳೆಸಿ ಹದಿನೈದು ದಿನಗಳ ಕಾಲ ಹುಳಿ ಬರಿಸಿ ಮಣ್ಣಿನ ಮಡಕೆಯಲ್ಲಿ ನೀರಿನೊಂದಿಗೆ ಹಾಕಿ ಚೆನ್ನಾಗಿ ಕಾಯಿಸಿ ಮೇಲೆ ಬಟ್ಟೆಕಟ್ಟಿ ಬರುವ ’ಆವಿ’ ಯನ್ನು ದ್ರವವನ್ನಾಗಿ ಪರಿವರ್ತಿಸಿ, ’ಭಟ್ಟಿ ಸಾರಾಯಿ’ ಎಂದು ಶೇಖರಿಸಿಟ್ಟುಕೊಳ್ಳುತ್ತಾರೆ. ಬಯನಿ ಮರದಿಂದ ಕಳ್ಳನ್ನೂ ಹೆಂಡವನ್ನು ತಯಾರಿಸುತ್ತಾರೆ.

ವಿಶೇಷ ತಿಂಡಿಗಳು ಮತ್ತು ಪಾನೀಯಗಳು:

ತಿಂಡಿ ತಿನಿಸು ಪಾನೀಯಗಳನ್ನು ಕೇವಲ ಉಪಹಾರಕಾಗಿ ನಿತ್ಯ ಕುಡಿಯುವದಕ್ಕಾಗಿ ಬಳಸದೆ ಅನೇಕ ವಿಶೇಷ ಸಂದರ್ಭಗಳಲ್ಲೂ ಮಾಡುತ್ತಾರೆ. ಹಾಗೆ ಮಾಡುವಾಗಿ ಅಲ್ಲಿಯ ಭೌಗೋಳಿಕ ಪರಿಸರ ಆಚರಣೆಗಳು ಸಾಮಾಜಿಕ ವ್ಯವಸ್ಥೆ ಆರ್ಥಿಕ ಸ್ಥಿತಿಗತಿಗಳು ಬದಲಾಗುತ್ತಿರುವ ಸಮಾಜದ ಹಿನ್ನೆಲೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಭೌಗೋಳಿಕ ಪರಿಸರ ಹಾಗೂ ತಿಂಡಿ, ತಿನಿಸು, ಪಾನೀಯಗಳು:

ಮಲೆನಾಡಿನ ಭೌಗೋಳಿಕ ಪರಿಸರ ಅಲ್ಲಿಯ ಋತುಮಾನಗಳು ಅವರ ಆಹಾರ ಪದ್ಧತಿಗಳ ಮೇಲೆ ಗಾಡ ಮುದ್ರೆಯನ್ನೊತ್ತಿಬಿಟ್ಟಿದೆ. ಮನೆಯ ಸುತ್ತಮುತ್ತಲ ಕಾಡುಗಳಲ್ಲಿ, ಸಸ್ಯಗಳಿಂದ ಚಟ್ನಿ, ಪಲ್ಯ, ಕಷಾಯಗಳೂ, ಬೇರುಗಡ್ಡೆ, ತೊಗಟೆಗಳಿಂದ ಕಷಾಯ ಪಲ್ಯಗಳೂ ಕೊನೆಗೆ ಬಾಳೆಗೊನೆ ತುದಿಯ ಮಾತೆಯಿಂದಲೂ ಪಲ್ಯ ಮಾಡುತ್ತಾರೆ. ಋತುಮಾನಕ್ಕೆ ತಕ್ಕ ಹಾಗೆ ಹಬ್ಬಗಳನ್ನಾಚರಿಸುತ್ತಾರೆ. ಭೂಮಿಯನ್ನು ಫಲ ಬಿಡುವ ಸಮಯದಲ್ಲಿ ಗರ್ಭವತಿ ಎಂದು ಭಾವಿಸಿ ಆಕೆಗೆ ಬಯಕೆಯ ತಿಂಡಿಗಳನ್ನು ಮಾಡುತ್ತಾರೆ. ಕದಿರು ತೆಗೆಯುವ ದಿನ ಹೊಸಕ್ಕಿ ಹುಗ್ಗಿ ಮಾದಿಕೊಡುತ್ತಾರೆ. ಹಲಸು, ಕಬ್ಬು, ತೆಂಗು, ಬಾಳೆಗಳಂತೂ ಮಾಡುವ ತಿಂಡಿ ತಿನಿಸುಗಳಲ್ಲಿ ಶೇಕಡ ೬೦ ಭಾಗವನ್ನು ಆಕ್ರಮಿಸಿವೆ. ಹಲಸಿನ ಎಲೆಯಿಂದ ಕೊಟ್ಟೆ ಕದುಬು, ತೊಗಟೆ ಎಲೆಗಳಿಂದ ಕಷಾಯ, ಕಾಯಿಯಿಂದ ಹಪ್ಪಳ, ಸಂಡಿಗೆಗಳೂ, ಹಣ್ಣಿನಿಂದ ಮಳಕ ದೋಸೆ, ಇಡ್ಲಿ ಕುರುಕಲುಗಳೂ, ಕಡುಬುಗಳೂ ತಯಾರಾಗುತ್ತವೆ. ದೀವೀ ಹಲಸು ಮಲೆನಾಡಿನಲ್ಲಿ ಮಾತ್ರ ಬೆಳೆಯುತ್ತದೆ. ಇದರ ಪಲ್ಯ ಬಹಳ ರುಚಿಕರ. ಕೆಸುವಿನ ಸೊಪ್ಪು, ಬಾಳೆಕಾಯಿ, ಹಣ್ಣು ಮಾತೆ ಗಡ್ಡೆ ಎಲ್ಲವೂ ಪ್ರಯೋಜನಕಾರಿ. ಬಿದಿರು, ಕಳಲೆ, ವಾಟೆಹುಳಿ, ಹುಳಿಕಾಯಿ ಪುಡಿಮಾಡಿ ಒಣಗಿಸಿಟ್ಟು, ಎಸೆನ್ಸ್ ಗಳಂತೆ ಉಪಯೋಗಿಸುತ್ತಾರೆ. ಮುರುಗನ ಎಣ್ಣೆ, ಹಿಪ್ಪೆ ಎಣ್ಣೆ ಮಾಡಿಟ್ಟುಕೊಂಡು ಅಡುಗೆಗೆ ಬಳಸುತ್ತಾರೆ. ಕಾಡಲ್ಲಿ ದೊರೆಯುವ ಅಲೇಹಣ್ಣು ಹುಲುಗಿ, ಚಿತ್ತಿ, ಬೆಮ್ಲಾರ, ಕವಳೆ ಪಾರೆ ಸುನಗಟ್ಲೆ ಅನಾನಸ್, ಈಚಲು ಹಣ್ಣುಗಳನ್ನು ತಿನ್ನುತ್ತಾರೆ. ಬಯನಿ ಮರದಿಂದ ಕಳ್ಳು, ನೀರ ಮಾಡಿಕೊಳ್ಳುತ್ತಾರೆ. ಕಾದಿನಲ್ಲಿ ಸಿಕ್ಕುವ ಪ್ರಾಣಿಗಳನ್ನು ಶಿಕಾರಿ ಮಾಡುತ್ತಾರೆ. ನೀರಿನಲ್ಲಿರುವ ಮೀನು, ಏಡಿ, ಹಾವು ಮೀನುಗಳಿಂದ ಪಾನೀಯಗಳನ್ನಲ್ಲದೆ ತರಾವರದ ತಿಂಡಿಗಳನ್ನು ಮಾಡಿಕೊಳ್ಳುತ್ತಾರೆ.

ಬೇಸಿಗೆಯಲ್ಲಿ ಹೆಸರುಕಾಳು ಪಾನಕ, ಕೆಂಪಕ್ಕಿ ಬೆಲ್ಲ ಹಾಕಿ ಮಾಡಿದ ತನು, ಬಣ್ಣದ ಸೌತೇಕಾಯಿಯ ಪಾನಕ, ಜೀರಿಗೆ ಕಷಾಯ, ತುಂಬಾಲಿಗೆ ಮೆಣಸಿನಪುಡಿ, ಬೆರೆಸಿದ ನೀರು ಮುರಿನ ಹುಳಿಯಪಾನಕ ಮಾವಿನ ಪಾನಕ, ವಾಟೆ ಹುಳಿ, ಉದ್ದು ಹೆಸರಿನ ಪಾನಕ, ಗಸಗಸೆ ರುಬ್ಬಿದ ಹಾಲು, ಹರಳು ಹಿಟ್ಟಿನ ಪಾನಕ, ಎಳ್ಳುತನಿ, ಅಕ್ಕಚ್ಚಿನ ತನು, ದಾರಕಾಯಿ ಪಾನಕ, ಮಾವಿನಹಣ್ಣಿನ ಸೀಕರಣೆ, ರಾಗಿ ಅಂಬಲಿ, ಮಜ್ಜಿಗೆ ಕುಡಿಯುವುದಲ್ಲದೆ ಅಲೆಮನೆ ಕಟ್ಟಿದಾಗ ಕಬ್ಬಿನ ಹಾಲಿಗೆ ಶುಂಠಿ, ಮೆಣಸು ನಿಂಬೆಹಣ್ಣು ಹಾಕಿಕೊಂಡು ಕುಡಿಯುತ್ತಾರೆ.

ಮಳೆಗಾಲದಲ್ಲಿ ಅಣಬೆಯ ಪಲ್ಯ ರೊಟ್ಟಿ ಮಾಡಿ ತಿನ್ನುತ್ತಾರೆ. ಕಬ್ಬಿನ ಹಾಲು ತೆಗೆದ ಮೇಲೆ ಅದರಿಂದ ಮಣಿ ಇಡ್ಲಿ ದೋಸೆ ಮಾಡುತ್ತಾರೆ. ಗೇರು ಬೀಜದ ಉಂಡೆ, ಕುರುಕಲು ಮಾಡಿ ತಿನ್ನುತ್ತಾರೆ. ಮಾವಿನಕಾಯಿಯಿಂದ ಪಾನಕ ಬಿಸಿ ನೀರು ಹಣ್ಣಿನಿಂದ ಪಾನಕ ಸೀಕರಣೆ ಹೋಳಿಗೆ ಮಾಡಲೇಬೇಕು. ಅನೇಕ ರೀತಿಯ ಹಪ್ಪಳಗಳು, ಚೆಕ್ಕುಲಿ, ಮುರುಕು ಕೋಡುಬಳೆ, ಹಲಸಿನಕಾಯಿ ಬಾಳೆಕಾಯಿಗಳ ಕುರುಕಲುಗಳನ್ನು ಮಾಡಿಟ್ಟುಕೊಂಡಿರುತ್ತಾರೆ.

ಮಲೆನಾಡಿನ ದಟ್ಟ ಕಾಡುಗಳಲ್ಲಿರುವ ಸಾರಸತ್ವವೆಲ್ಲವನ್ನೂ ತಮ್ಮ ತಿಂಡಿ, ತೀರ್ಥಗಳಲ್ಲಿ ಬಳಸಿಕೊಳ್ಳುವ ಮಲೆನಾಡಿಗರ ಜಾಣತನಕ್ಕೆ ಬದುಕುವ ಕಲೆಗಾರಿಕೆಗೆ ನಾವು ಮೆಚ್ಚಲೇಬೇಕಾಗುತ್ತದೆ. ಮಳೆಗಾಲದಲ್ಲಿ ಸೊದೆಗನ ಬೆರು ಕಾಯಿಸಿ ಮಜ್ಜಿಗೆಯನ್ನು ಕಾಯಿಸಿ ಕುಡಿಯುತ್ತಾರೆ. ಅಲ್ಲದೆ ಶುಂಠಿ ಸೊಪ್ಪು, ಬೆಳ್ಳುಳ್ಳಿ ಜೀರಿಗೆ ಮೆಣಸುಗಳನ್ನು ಮೊಸರಿಗೆ ಹಾಕಿದ ಪಾನೀಯ ಜೀರಿಗೆ ಬಿಸಿ ನೀರು, ಶುಂಠಿ ಬಿಸಿ ನೀರು, ಚಟ್ಟೆಸೊಪ್ಪಿನ ಸೀಯಾಂಬರ ಮೆಣಸಿನ ಬಿಸಿನೀರು ಕುಡಿಯುತ್ತಾರೆ. ಸಾಮಾನ್ಯವಾಗಿ ಚಳಿಗಾಲದಲ್ಲಿಯೂ ಇದೇ ಪಾನೀಯಗಳನ್ನು ಬಳಸುತ್ತಾರೆ. ಬೇಸಿಗೆಯಲ್ಲಿ ಹೆಸರುಕಾಳು, ಪಾನಕ ಕೆಂಪಕ್ಕಿ ಬೆಲ್ಲ ಹಾಕಿ ಮಾಡಿದ ’ತನು’ ಬಣ್ಣದ ಸೌತೇಕಾಯಿಯ ಪಾನಕ, ಜೀರಿಗೆ ಕಷಾಯ. ತಂಬಾಲಿಗೆ ಮೆಣಸಿನ ಪುಡಿ ಬೆರೆಸಿದ ನೀರು, ಮುರಿನ ಹುಳಿಯ ಪಾನಕ, ಮಾವಿನ ಪಾನಕ, ವಾಟೆಹುಳಿ, ಉದ್ದು ಹೆಸರಿನ ಪಾನಕ, ಗಸಗಸೆ ರುಬ್ಬಿದ ಹಾಲು, ಅರಳು ಹಿಟ್ಟಿನ ಪಾನಕ, ಎಳ್ಳು ತನಿ, ಅಕ್ಕಚ್ಚಿನ ತನು, ದಾರೆಕಾಯಿ ಪಾನಕ, ಮಾವಿನ ಹಣ್ಣಿನ ಸೀಕರಣೆ, ರಾಗಿ ಅಂಬಲಿ, ಮಜ್ಜಿಗೆ ಕುಡಿಯುವುದಲ್ಲದೆ ಅಲೆಮನೆಕಟ್ಟಿದಾಗ ಕಬ್ಬಿನ ಹಾಲಿಗೆ ಶುಂಠಿ ಮೆಣಸು, ನಿಂಬೆಹಣ್ಣು ಹಾಕಿಕೊಂಡು ಕುಡಿಯುತ್ತಾರೆ.

ಆಚರಣೆ ಹಾಗೂ ತಿಂಡಿ, ತಿನಿಸು, ಪಾನೀಯಗಳು:

ಮಲೆನಾಡಿನಲ್ಲಿ ಆಚರಿಸುವ ಹರಿದಿನಗಳಿಗೆ ನಡೆಯುವ ಜಾತ್ರೆಗಳಿಗೆ ಲೆಕ್ಕವೆ ಇಲ್ಲ. ಎಲ್ಲ ಹಬ್ಬಗಲನ್ನು ತಪ್ಪದೆ ಆಚರಿಸುತ್ತಾರೆ. ಅಲ್ಲಿ ಮಾಡುವ ತಿಂಡಿಗಳ ಪಟ್ಟಿ ಬಹಳ ಉದ್ದವಾಗಿರುವುದರಿಂದ ಕಾಲದ ಮಿತಿಯಿಂದ ಎಲ್ಲವನ್ನು ಇಲ್ಲಿ ಹೇಳುವುದು ಕಷ್ಟಸಾಧ್ಯ. ಕೆಲವು ವಿಶೇಷಗಳಾದ ಕೊಟ್ಟೆ ಕಡುಬು, ಅತ್ತಿರಸ, ಅನಾರಸ, ಚಪ್ಪೆಅವಲಕ್ಕಿ, ಹೆಸರುಬೇಳೆ ಪಾಯಸ, ಮುಳುಕ ಸುಕ್ಕಿನುಂಡೆ ಮುಳ್ಳೂಹಣ್ಣೀನ ಹೋಳಿಗೆ, ಸಂಕ್ರಾಂತಿಯಂದು ಹುಳಿದೋಸೆ, ಕದಿರುತರೋ ಹಬ್ಬದ ದಿನ ಗೆಣಸಿನ ವಡೆ ಮುಂತಾದುವನ್ನು ಹೆಸರಿಸಬಹುದು. ಭೂಮಿ ಹುಣ್ಣಿಮೆ ಹಬ್ಬ ತೋಟ ಗದ್ದೆಗಳಿರುವ ಮಲೆನಾಡಿನ ಜನಕ್ಕೆ ಬಹಳ ವಿಶಿಷ್ಟವಾದುದು. ಅಂದು ಅರಿಶಿಣದೆಲೆಯ ಕೊಟ್ಟೆ ಕಡುಬು, ಮೂಲೆ ಗೆಣಸು ಹೀರೆಕಾಯಿಪಲ್ಯ, ರೊಟ್ಟಿ ಎಲ್ಲ ಮಾಡಿ ಶುದ್ಧವಾದ ಬುಟ್ಟಿಗಳಲ್ಲಿಟ್ಟು ಫಲ ಹೊತ್ತ ಗರ್ಭವತಿಯ ಬಯಕೆಯನ್ನು “ಹಾಲಂಬಲಿ ಅಚ್ಚಂಬಲಿ ಬೇಲಿ ಮೇಲಿನ ಹೀರೆಕಾಯಿ, ನೆಲದ ಮೇಲಿನ ನೂಲೇ ಬೇರು ಎಲ್ಲ ನಿನಗರ್ಪಿತ ತಾಯಿ” ಎಂದು ಹೇಳಿ ತಿಂಡಿಕಣಗಳನ್ನು ಇಟ್ಟು ಉಡಿ ತುಂಬಿಸುತ್ತಾರೆ. ಮುತ್ತೈದೆ ತಿಥಿಯಲ್ಲಿ ಕಡ್ಲೆಬೇಳೆ, ಅಂಬೊಡೆ ಮಾಡಲೇಬೇಕಲ್ಲದೆ ತಿಥಿಗಳಲ್ಲಿ ಬಾಳೆಕಾಯಿ, ಬದನೇಕಾಯಿ ಪಲ್ಯ ಮಾಡಲೇಬೆಕೆಂಬ ನಿಯಮವಿದೆ. ಕದಿರು ತರೋದಿನ ಹೊಸ ಅಕ್ಕಿಯ ಹುಗ್ಗಿ, ಮದುವೆಯಲ್ಲಿ ಅನೇಕ ತಿಂಡಿಗಳನ್ನು ಕಟ್ಟಿ ವಧುವಿಗೆ ಬಂಡಿ ಬಾಗಣ ಕೊಡುವುದು. ಇವೆಲ್ಲ ಇವತ್ತಿಗೂ ಆಚರಣೆಯಲ್ಲಿವೆ. ಮುಸ್ಲಿಮರಲ್ಲಿ ಹಬ್ಬಗಳಿಗೆ ಜೊಂಗಿ ಅರಿವೆಪ್ಪ, ಒಂಬತ್ತು ಕಾಳಿನ ಕಿಚಡಿ ಮುಂತಾದವು ಅಲ್ಲದೆ ಮದುವೆಯಲ್ಲಿ ಖಜೂರಾದ ಸಿಹಿ ತಿಂಡಿಗಳು ಬಾಳೆಹಣ್ಣಿನ ರೊಟ್ಟಿ, ಕುಂಬಳಕಾಯಿ ಹಲ್ವ ಮಾಡಲೇಬೇಕೆಂಬ ರೂಢಿಯಿದೆ. ಜಾತ್ರೆಗಳಲ್ಲಿ ಕರಿಗಡಿಬು ಮುಂತಾದ ಸಿಹಿತಿಂಡಿಗಳನ್ನು ಗಾಡಿಗಳಿಗೆ ಮೀಸಲೂ ಕಟ್ಟುವುದಲ್ಲದೆ ದೇವರಿಗೂ ಮೀಸಲು ಕೊಡುತ್ತಾರೆ. ಜಾತ್ರೆಗೆ ಹೋದವರು ಚೀಲ ತುಂಬಾ ಬೆಂಡು-ಬೆತ್ತಾಸು, ಮಂಡಕ್ಕಿ ಖಾರಗಳನ್ನು ತಂದು ಜನಕ್ಕೂ ಹಂಚಿ ತಾವು ತಿನ್ನುತ್ತಾರೆ. ಹಬ್ಬಗಳಲ್ಲಿ ಬೇಲದ ಹಣ್ಣಿನ ಪಾನಕ ಮುತ್ತೈದೆತನ ಕಾಪಾಡಿಕೊಳ್ಳಲು ಆಲದ ಮರದ ತೊಗಟೆ ಕಷಾಯ, ಬೆಲ್ಲ ಶುಂಠಿಯ ಪಾನಕ ಅಲ್ಲದೆ ಗಸಗಸೆ ಪಾಯಸ, ಅಕ್ಕಿ ಹುಗ್ಗಿ ಮೊದಲಾದ ಪಾಯಸಗಲನ್ನು ಮಾಡಲೇಬೇಕೆಂಬುದು ಪದ್ಧತಿ ಇದೆ. ಈ ಎಲ್ಲ ಆಚರಣೆಗಳಲ್ಲಿ ಅವರು ಮಾಡುವ ತಿಂಡಿ ತಿನಿಸುಗಳು ಮತ್ತು ಪಾನೀಯಗಳನ್ನು ಎಲ್ಲರಿಗೂ ಹಂಚುವುದರಿಂದ ಪರಸ್ಪರ ಸಹಕಾರ ಮನೋಭಾವವನ್ನು ಕಾಣಬಹುದು.

ಈ ಆಚರಣೆಗಳಿಗೆ ಸಂಬಂಧಿಸಿದಂತೆ ಕೆಲವು ನಂಬಿಕೆಗಳೂ ಇವೆ: ಭೂಮಿ ಹುಣ್ಣಿಮೆಯಲ್ಲಿ ಹಿಂದಿನ ದಿನ ತಯಾರಿಸುವ ತಿಂಡಿಗಾಗಿ ನೂರೊಂದು ಜಾತಿಯ ಸೊಪ್ಪು, ಹೆರಕಿ, ಅಕ್ಕಿ ಹಾಕಿ ಬೇಯಿಸುತ್ತಾರೆ. ಅದನ್ನು ಬೇಯಿಸುವವರು ಆ ದಿನ ರಾತ್ರಿ ಮಲಗುವಂತಿಲ್ಲ. ಮೈಲಿಗೆಯಾಗುತ್ತದೆಂಬ ನಂಬಿಕೆ. ಒಕ್ಕಲಿಗರಲ್ಲಿ ಆ ದಿನದ ಯಾವುದೇ ತಿಂಡಿಗಳಿಗೆ ಉಪ್ಪು ಹಾಕುವುದಿಲ್ಲ. ಗರ್ಭವತಿಯಾದ ಭೂಮಿಗೆ ದಾಹವಾಗುವುದರಿಂದ ಮಳೆ ಸುರಿದು ಬೆಳೆ ಹಾಳಾಗುತ್ತದೆಂದು ಹೀಗೆ ಮಾಡುತ್ತಾರೆ. ಮನೆ ಸೊಸೆಯಾದವಳು ತಿಂಡಿ ಇದ್ದ ಬುಟ್ಟಿ ಹೊರುವಂತಿಲ್ಲ. ಮಾಡಿದ ತಿಂಡಿ ತಿನ್ನುವಂತಿಲ್ಲ. ಮನೆಮಗಳೇ ಹೊತ್ತು ಪೂಜಿಸಿ ತಿನ್ನಬೇಕು. ಮನೆಸೊಸೆ ಹೋದರೆ ಗರ್ಭಕಟ್ಟಿದ ಭೂತಾಯಿ “ನನ್ ಬಾಕಿ ತಿನ್ನೋಕ್ ಬಂದ್ಯಾ” ಎಂದು ಬಯ್ಯುತ್ತಾಳಂತೆ. ನಂಬಿಕೆ ಹೇಗೇ ಇರಲಿ ಅದರ ಹಿಂದಿನ ಭಾವನಾತ್ಮಕ ಸಂಬಂಧ ಆಶ್ಚರ್ಯ ತರುತ್ತದೆ. ಅಂದು ಕಾಯಿ ಒಡೆಯುವಂತಿಲ್ಲ. ಇಡೀ ಕಾಯಿ ಸುಲಿದು ತಂದು ಹಬ್ಬದಲ್ಲಿ ಒಡೆದು ತಿನ್ನಬೇಕು. ಮಾಡಿಹಬ್ಬದಲ್ಲಿ ಮಾಡುವ ತಿಂಡಿಗಳನ್ನು ಮೀಸಲು ಕಟ್ಟಿ ದೇವರಿಗೆ ತಿನ್ನಿಸುವವರೆಗೆ ಏನೂ ತಿನ್ನುವಂತಿಲ್ಲ. ರಾವುಗಣ್ಣಿನವರು ನೋಡಿ ಅಂಗು ಪುಡಿಯಾಗುತ್ತದೆ ಎಂಬ ನಂಬಿಕೆಯಿಂದ ಅಂಗು ಮಾಡುವಾಗ ಯಾರನ್ನೂ ಹತ್ತಿರ ಸೇರಿಸುವುದಿಲ್ಲ. ನಾಗರ ಪಂಚಮಿಗೆ ಹಾವಿಗೆ ಕರಿದ ತಿಂಡಿಯಾದರೆ ಬಿಸಿಯಾಗುತ್ತದೆ ಎನ್ನುವ ಭಯದಿಂದ ಬೇಯಿಸಿದ ತಿಂಡಿಯನ್ನೇ ಮಾಡುತ್ತಾರೆ. ತಿಥಿ  ಸಮಯದಲ್ಲಿ ಬಾಳೆಕಾಯಿ ಪಲ್ಯ ಮಾಡುವದರಿಂದ ದುಃಖದ ಉದ್ವೇಗ ಕಡಿಮೆಯಾಗುತ್ತದೆ. ಎನ್ನುವ ನಂಬಿಕೆ. ಹದಿನಾರು ಸೋಮುವಾರದ ವ್ರತದಲ್ಲಿ ಉಪ್ಪಿಲ್ಲದ ತಿಂಡಿ, ಯುಗಾದಿಯಂದು ಬೇವಿನ ಹೂವಿಗೆ ಬೆಲ್ಲ ಹಾಕಿ ಸುಖ ದುಃಖದಲ್ಲಿ ಸಮಪಾಲನ್ನು ಹಂಚಿಕೊಳ್ಳುತ್ತಾರೆ. ಕೊಂಕಣಿಗರಲ್ಲಿ ತಿಥಿಯ ದಿನ ಕುಸುಬಲಕ್ಕಿಯಿಂದ ಯಾವ ತಿಂಡಿಯನ್ನೂ ಮಾಡುವಂತಿಲ್ಲ ಕ್ರಿಶ್ಚಿಯನ್ನರಲ್ಲಿ ಸತ್ತ ಒಂದು ವರ್ಷ ಪೂರ್ತಿ ಅಕ್ಕಿ ಹಿಟ್ಟಿನ ತಿಂಡಿ ಮಾಡುವಂತಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾರದೇ ಮನೆಯಲ್ಲಿ ತಿಂಡಿ ತಿಂದರೂ ಮದ್ದು ಹಾಕುತ್ತಾರೆಂಬ ಭಯದಿಂದ ತಿಂಡಿ ತಿನ್ನುವ ಮೊದಲು ಏಲಕ್ಕಿ ಜಗಿಯುತ್ತಾರೆ. ಮೆಣಸಿನಕಾಯಿ ಪರದೇಶದಿಂದ ಬಂದದ್ದು ಎನ್ನುವ ಕಾರಣಕ್ಕೆ ಅನೇಕ ತಿಂಡಿಗಳಿಗೆ ಮೆಣಸಿನಕಾಯಿ ಬದಲು ಕಾಳುಮೆಣಸನ್ನು ಉಪಯೋಗಿಸುತ್ತಾರೆ. ಭಟ್ಟಿ ಸಾರಾಯಿಯನ್ನು ಮಂಗಳವಾರ ಶುಕ್ರವಾರಗಳಂದು ಬೇರೆಯವರಿಗೆ ಕೊಡುವುದಿಲ್ಲ. ಹಾಸನ ಜಿಲ್ಲೆಯಲ್ಲಿ ದೀವರು ಈಚಲು ಮರವನ್ನು ಲಕ್ಷ್ಮಿ ಎಂದು ಪೂಜಿಸಿ ಹೆಂಡವನ್ನು ಕುಡಿಯುವುದಿಲ್ಲ. ಕಬ್ಬಿನ ಹಾಲಿನ ಮೊದಲ ಕುದಿಯನ್ನು ಭೂಮಿಗೆ ಮತ್ತು ದೈವಕ್ಕೆ ಕುಡಿಸುತ್ತಾರೆ.

ಸಾಮಾಜಿಕ ವ್ಯವಸ್ಥೆಯಲ್ಲಿ ತಿಂಡಿ, ತಿನಿಸು, ಪಾನೀಯಗಳು :

ಮಲೆನಾಡಿನಲ್ಲಿ ತೋಟಗಳು ಎಸ್ಟೇಟುಗಳು ಹೇರಳವಾಗಿರುವ ಹಿನ್ನೆಲೆಯಲ್ಲಿ ಬ್ರಾಹ್ಮಣರು ಒಕ್ಕಲಿಗರು ವೀರಶೈವ ಮರೇಗೌಡರು ದೀವರು ತೋಟಗಳಲ್ಲಿ ಕೆಲಸ ಮಡುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಇದ್ದಾರೆ. ಇವರೊಂದಿಗೆ ಮುಸಲ್ಮಾನರೂ ಅಲ್ಲದೆ ಹೆಚ್ಚು ಪರಿವರ್ತಿತ ಕ್ರಿಶ್ಚಿಯನ್ನರು ಇದ್ದಾರೆ. ಈ ಎಲ್ಲ ಜಾತಿಯ ಜನರು ಮಾಡುವ ತಿಂಡಿ, ತಿನಿಸುಗಳು ಅವರ ಸಾಮಾಜಿಕ ವ್ಯವಸ್ಥೆಯಲ್ಲಿ ವ್ಯತ್ಯಾಸವನ್ನು ಪಡೆಯುತ್ತವೆ.

ಮಲೆನಾಡಿನ ಬ್ರಾಹ್ಮಣರು ಮಾಡುವ ತಿಂಡಿ ತಿನಸುಗಳು ಹಾಗೂ ಪಾನೀಯಗಳು ಅವರಲ್ಲಿ ಅನಾದಿಕಾಲದಿಂದಲೂ ಬೆಳೆದು ಬಂದಿರು ನಾಗರಿಕತೆಗೆ  ಹಿಡಿದ ಕನ್ನಡಿಗಳಾಗಿವೆ. ಬಡವ ಶ್ರೀಮಂತರೆನ್ನದೆ ಹಬ್ಬ  ತಿಥಿ ವೈದಿಕಗಳನ್ನು ಆಚರಿಸಲೇ ಬೇಕಾಗುತ್ತದೆ. ಹಬ್ಬಗಳಲ್ಲಿ ಅರಳುಂಡೆ, ತಂಬಿಟ್ಟು, ಕಾಯಿಕಡುಬು, ಮೋದಕ, ಉಂಡಲಿಗೆ, ಅಷ್ಟ ದ್ರವ್ಯಗಳು, ಹೆಸರುಂಡೆ ಇವುಗಳನ್ನು ಮಾಡುತ್ತಾರೆ. ತಿಥಿ ವೈದಿಕಗಳನ್ನು  ಬ್ರಾಹ್ಮಣರಷ್ಟು ವ್ಯವಸ್ಥಿತವಾಗಿ ಮತ್ತಾರು ಆಚರಿಸಲಾರರು. ಅದಕ್ಕೆಂದೇ ಪ್ರತ್ಯೇಕ ತಿಂಡಿಗಳಾದ ವಡೆ, ಅಂಬೋಡೆ ಇತ್ಯಾದಿಗಳು ಇರಲೇಬೇಕು. ಮದುವೆ ಮುಂಜಿವೆಗಳಲ್ಲಿ ಅನೇಕ ರೀತಿಯ ತಿಂಡಿಗಳಲ್ಲದೆ ಬಳಗಡೆ ಗಿಲಕಿ ಕಾಯಿ ಅಥವಾ ಅಡಕೆಕಾಯಿ ಹಾಕಿ ಶಬ್ದ ಬರುವ ಹಾಗೆ ಉಂಡೆಗಳನ್ನು ಕಟ್ಟುತ್ತಾರೆ. ಮಾಡುವ ತಿಂಡಿಗಳಲ್ಲಿ ವಿಚಿತ್ರ ಚಿತ್ರಗಳನ್ನು ಇತ್ತೀಚೆಗೆ ವಧೂವರರ ಹೆಸರುಗಳನ್ನು ಅಲಂಕಾರಕ್ಕಾಗಿ ಬಿಡಿಸುತ್ತಾರೆ. ಬಾಣಂತಿ ಬಸರಿಯರಿಗೆ ಮೆಂತ್ಯ ಕಡುಬು, ಗೋದಿ ಕಡುಬು ಅನೇಕ ರೀತಿಯ ಖಾರಗಳನ್ನು ಮಾಡಿಕೊಡುತ್ತಾರೆ. ಶ್ರೀಮಂತರಲ್ಲಿ ಗರ್ಭಿಣಿಗೆ ಎಲ್ಲ ಒಂಬತ್ತು ರೀತಿಯ ತಿಂಡಿಗಳನ್ನು ಮಾಡುತ್ತಾರೆ. ರಾಮನವಮಿಯಂದು ಪಾನಕ, ಕೋಸುಂಬರಿ ಬ್ರಾಹ್ಮಣರ ವೈಶಿಷ್ಟ್ಯ. ಮಾತೆತ್ತಿದರೆ ಮಜ್ಜಿಗೆ ನೀರು, ಕಷಾಯಗಳು, ಪಾಯಸಗಳನ್ನು ದೊಡ್ಡವರು ಚಿಕ್ಕವರು ಎನ್ನದೆ ಮಾಡುತ್ತಿರುತ್ತಾರೆ.

ಮಲ್ಲೇಗೌಡರು, ಒಕ್ಕಲಿಗರು ದೀವರು ಹೆಚ್ಚಿರುವ ಬ್ರಾಹ್ಮಣರಲ್ಲಿ ಬ್ರಾಹ್ಮಣರ ಹಾಗೆ ವ್ಯವಸ್ಥಿತವಾದ ಪದ್ಧತಿಗಳಿಲ್ಲದಿದ್ದರೂ ಅವರದ್ದೇ ಆದಂತಹ ಭೂಮಿಗೆ ಪ್ರಕೃತಿಗೆ ಸಂಬಂಧಿಸಿದ ಕಾರಮಾಸೆ ಕೊಡಮಾಸೆ ಕದಿರು ತರುವ ದಿನ ಭೂಮಿ ಹುಣ್ಣಿಮೆ ಇತ್ಯಾದಿ ವೈಶಿಷ್ಟ್ಯಪೂರ್ಣ ಹಬ್ಬಗಳನ್ನು ಮಾಡುತ್ತಾರೆ. ಅದಕ್ಕೆಂದೇ ವಿಶೇಷ ತಿಂಡಿಗಳು ಇವೆ. ಕೊಡಮಾಸೆಗೆ ’ಎರಡು ಸಿದ್ದೆ ಅಕ್ಕಿದೋಸೆ ಎರಡು ಸಿದ್ದೆ ಅಕ್ಕಿ ಪಾಸೆ ಉಂಡೋಗ ಅಮಾಸೆ’ ಎಂದು ಹೇಳಿ ಎಡೆ ಹಾಕುತ್ತಾರೆ. ಭೂಮಿ ಹುಣ್ಣಿಮೆಗೆ ಮಜ್ಜಿಗೆ ಅಂಬಲಿ, ನಿಂಬೆ ಎಲೆ, ಬೆಂದು ಹೂಗಳ ಪಚಡಿ, ಬೇಯಿಸಿದ ನೂಲಗೆಣಸು ಮಾಡುತ್ತಾರೆ. ಬ್ರಾಹ್ಮಣರು ವೈದಿಕದಲ್ಲಿ ಮಾತ್ರ ಹಿರಿಯರಿಗೆ ಎಡೆ ಹಾಕಿದರೆ ಒಕ್ಕಲಿಗರು ಎಲ್ಲಾ ಹಬ್ಬಗಳಲ್ಲಿಯೂ ವಿಶೇಷ ತಿಂಡಿಗಳನ್ನು ಮಾಡಿದಾಗಲೆಲ್ಲ ಜಕ್ಕಿಣೆಗೆ ಎಡೆ ಹಾಕುತ್ತಾರೆ. ಪಿತೃಪಕ್ಷದಲ್ಲಿ ಮಾತ್ರ ಮಾಂಸದ ತಿಂಡಿಗಳನ್ನು ಮಾಡಿದರೂ ಕೊಟ್ಟೆಕಡುಬು ಕೋಸುಂಬರಿ, ಮೊಸರು ಹಾಕಿದ ಜೈನೆಡ್ ಪ್ರತ್ಯೇಕವಾಗಿರುತ್ತದೆ. ಹಿಂದೆ ಇದ್ದ ಜೈನ ಸನ್ಯಾಸಿಗಳಿಗೂ ಇದಕ್ಕೂ ಏನಾದರೂ ಸಂಬಂಧ ಇರಬಹುದು. ಅಂದಿನ ಸಮಾಜದ ವ್ಯವಸ್ಥೆಯಲ್ಲಿ ಮದುವೆಗಳಲ್ಲಿ ಅಂತಹ ವಿಶೇಷ ತಿಂಡಿಗಳಿಲ್ಲದಿದ್ದರೂ ಹುಡುಗಿ ದೊಡ್ಡವಳಾದಾಗ ಮಾತ್ರ ಹುಗ್ಗಿಯನ್ನು ಮಾಡಲೇಬೇಕು. ಮಲೇಗೌಡರ ಮದುವೆಗಳಲ್ಲಿ ದಿಬ್ಬಣ ಬಂದ ತಕ್ಷಣ ರೇಣುಕೀಕಾಳು ಹಾಕಿ ಬೆಲ್ಲ ನಿಂಬೆಹಣ್ಣಿನ ಪಾನಕ ಕೊಡುತ್ತಾರೆ. ಸಾಮಾನ್ಯವಾಗಿ ಜಿಗಟೆಕಾಳಿನ ಕಾಫಿ ಕುಡಿಯುವ ಪದ್ಧತಿ ಇತ್ತು. ಶ್ರೀಮಂತರ ಮದುವೆಗಳಲ್ಲಾದರೆ ಪಚ್ಚಕರ್ಪೂರ ಹಾಕಿದ ಹದವಾದ ಎಳೆನೀರು ಕೊಡುತ್ತಿದ್ದರು. ಗರ್ಭಿಣಿಯರಿಗೂ, ಮಕ್ಕಳಿಗೂ ಬಾಣಂತಿಯರಿಗೂ ಅನೇಕ ರೀತಿಯ ತಂಪು ಪಾನೀಯಗಳನ್ನು ಕೊಡುತ್ತಾರೆ. ಮೆಂತೆ ಅಣಿ, ಅಕ್ಕಿತನು, ಕೇಸರಿ ಎಲೆ ಹಾಲು, ಬೇವಿನ ಸೊಪ್ಪಿನ ರಸ ಇತ್ಯಾದಿಗಳು ಬಹುಮುಖ್ಯವಾಗಿವೆ.

ಮಲೇಗೌಡರಲ್ಲಿ ದೀವರಲ್ಲಿ ಬಹು ವಿಶಿಷ್ಟವಾದ ತಿಂಡಿ ಎಂದರೆ ಅಕ್ಕಿ ಬೆಲ್ಲದಿಂದ ಮಾಡಿದ ಔಂಗು. ಅದನ್ನು ತೊಡದಾಗ ಎಂತಲೂ ಕರೆಯುತ್ತಾರೆ. ವಿಶೇಷ ಹಬ್ಬದಲ್ಲಿ, ಬಸುರಿಯ ಬಯಕೆಗಲಲ್ಲಿ ಇದನ್ನು ಮಾಡಲೇಬೇಕು. ಹರಿಹರ, ರಾಘವಾಂಕ, ನಯಸೇನರು ತಮ್ಮ ಕಾವ್ಯಗಲಲ್ಲಿ ಇದರ ಬಗ್ಗೆ ಬಹಳಷ್ಟು ಹೇಳಿದ್ದಾರೆ.

ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಗಳ ಜನರಿಗೆಂದೇ ಪ್ರತ್ಯೇಕ ತಿಂಡಿ ತೀರ್ಥಗಳಿಲ್ಲ, ಏಕೆಂದರೆ ಹಿಂದೆಲ್ಲಾ ಒಡೆಯರ ಮನೆಗಳಲ್ಲಿ ಜೀತ ಮಾಡುತ್ತಿದ್ದ ಈ ಜನಕ್ಕೆ ತಮ್ಮದು ಎನ್ನುವ ಸ್ವಂತ ಪದ್ಧತಿಯೇ ಇರಲಿಲ್ಲ. ಆದರೆ, ಪಾನೀಯಗಳಲ್ಲಿ ಕಳ್ಳು ಬಹಳ ಜನಪ್ರಿಯವಾದಂತಹ ಪಾನೀಯ.

ಮುಸಲ್ಮಾನರ ಹಬ್ಬಗಳಲ್ಲಿ ಮಾಂಸದ ತಿಂಡಿಗಳ ಜೊತೆಗೆ ಕಾಯಿಹಾಲು, ಸೀಮೆಕ್ಕಿ ಪಾಯಸ, ಚೊಂಗಿ, ಮಾಲಿದ ಮಾಡುತ್ತಾರೆ. ಬಾಣಂತಿಗೆ ಬಡಾಗವ ಕೊಡುತ್ತಾಅರೆ. ಕ್ರಿಶ್ಚಿಯನ್ನರು ಹೆಚ್ಚು ಪರಿವರ್ತಿತರಾಗಿರುವುದರಿಂದ ಇತರರು ಮಾಡುವ ಎಲ್ಲ ತಿಂಡಿ, ತಿನಿಸುಗಲನ್ನು ಮಾಡುತ್ತಾರೆ.

ಎಲ್ಲ ಜಿಲ್ಲೆಗಳಲ್ಲಿಯೂ ಕೆಲವು ಸಂದರ್ಭಗಳಲ್ಲಿ ಮಾತ್ರ ತಿಂಡಿ, ತಿನಿಸುಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಉತ್ತರಕನ್ನಡ ಜಿಲ್ಲೆ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಕೊಂಕಣಿಗರದೇ ಸ್ವಲ್ಪ ವೈಶಿಷ್ಟ್ಯ. ಅವರು ಉಪ್ಕರಿ, ತಾಳ್ಲು ಸಂಡಿಗೆ, ಅಂಬಟ, ಬಟಾಟೆ ಸೋಂಗಾ, ಕೊದ್ದೆಲಾ, ಗಜಬಜೆ ಬಾತೆ, ಕಡ್ಲೆಕಾಳಿನ ಸುಕ್ಕ, ಬಟಾಟೆ ಉಮ್ಮಣ, ತೆಂಗಿನತುರಿ, ಸಾನ್ನಳ ಹೀಗೆ ವಿಚಿತ್ರವಾದ ಹೆಸರುಗಳಿರುವ ತಿಂಡಿಗಳನ್ನು ಮಾಡುತ್ತಾರೆ. ಅಲ್ಲಿಯ ಬಂಟರಿಗೆ ಗಣೇಶ ಚತುರ್ಥಿ ವೈಭವಯುತವಾದ ಹಬ್ಬ. ಮೂವತ್ತು ರೀತಿಯ ತಿಂಡಿಗಳನ್ನು ಮಾಡುತ್ತಾರಂತೆ. ಶುಭ ಸಮಾರಂಭಗಳಲ್ಲಿ ಇತರೆ ಜಾತಿಯವರು ಬಾಳೆಹಣ್ಣು ಸಕ್ಕರೆ ಬೆರೆಸಿಕೊಂಡು ತಿನ್ನುತ್ತಾರೆ ಹೊರತು ಬೇರೆ ತಿಂಡಿಗಳನ್ನು ತಿನ್ನುವುದಿಲ್ಲ.

ಲೇಹ್ಯಗಳು:

ಅನಾರೋಗ್ಯ ಪೀಡಿತರಿಗೆ, ಬಾಣಂತಿಯರಿಗೆ, ಮಕ್ಕಳಿಗೆ ಮನೆಯ ಹಿರಿಯರು ಮನೆಯಲ್ಲೇ ಸಿಗಬಹುದಾದ ವಸ್ತುಗಳನ್ನು ಉಪಯೋಗಿಸಿ ಜಿಗುಟಿನಂತಹ ಲೇಹ್ಯಗಳನ್ನು ಮಾಡಿಟ್ಟಿರುತ್ತಾರೆ. ಇವುಗಳನ್ನು ಅನೇಕ ತಿಂಗಳುಗಳ ಕಾಲ ಬೆಳಗಿನ ತಿಂಡಿಗೆ ರಾತ್ರಿ ಮಲಗುವಾಗ ಕೊಡುವ ಪದ್ಧತಿಯನ್ನು ಇಟ್ಟುಕೊಂಡಿದ್ದಾರೆ. ಕೂಶ್ಮಾಡ, ಮೆಣಸು, ಶುಂಠಿ, ಚಾಯಿಕಾಯಿ ಶುಂಠಿ, ಹೋಮ ಲವಂಗ ಶುಂಠಿ ಮಗುಚಿದ ಲೇಹ್ಯ ಮಾಡಿ ಇಟ್ಟಿರುತ್ತಾರೆ. ಬಾಣಮ್ತಿಯರಿಗಾದರೆ ತಿಂಗಳಿಗೊಂದೊಂದು ಖಾರ ಬೆರಸಿ ಲೇಹ್ಯ ಮಾಡಿ ಪ್ರತಿದಿನ ಒಂದೊಂದು ಚಮಚ ತಿನ್ನಿಸುತ್ತಾರೆ. ಮುಸ್ಲಿಮರಲ್ಲಿ ಬೆಳ್ಳೂಳ್ಳಿ ಲೇಹ್ಯ, ಒಣಶುಂಠಿ, ಈರುಳ್ಳಿ, ಕಾಯಿ ಹಾಲು, ಬೆಲ್ಲ ಹಾಕಿದ ಲೇಹ್ಯ ಕೊಡುತ್ತಾರೆ.

ಮಾಂಸದ ತಿಂಡಿ, ತಿನಿಸುಗಳು:

ಬ್ರಾಹ್ಮಣರು ಮಲ್ಲೇಗೌಡರು ಮತ್ತು ಕೆಲವರನ್ನು ಬಿಟ್ಟರೆ ಮಲೆನಾಡಿನ ಜನರಿಗೆ ಮಾಂಸದ, ಮೀನಿನಿಂದ ಚೆಟ್ನಿ, ಮೀನಿನ ಅವಡೆ, ಕರಿದ ಮೀನು, ಸಾರುಮೀನು ಸೀಗಡಿ, ಬಜ್ಜೀ ಬೊಂಡಾಗಳನ್ನು ಮಾಡುತ್ತಾರೆ. ಹಾಂದಿ ಬಾಡಿಗೆ ಹಿಂದಿಂದೆ ಹೋದರು ಎನ್ನುವ ಹಾಗೆ ಹಂದಿಗಸಿ ಪಲ್ಯತುಂಡು ಎಲ್ಲವೂ ಪ್ರಿಯವಾಗಿದೆ. ಏಕೆಂದರೆ ಹಂದಿ ಶಿಕಾರಿಗೆ ಸುಲಭದಲ್ಲಿ ಸಿಗುವುದಲ್ಲದೆ ವಿಪರೀತ ಕೊಬ್ಬಿರುವ ಪ್ರಾಣಿ. ಮೊಟ್ಟೆಯನ್ನು ಬೇಯಿಸಿ, ದೋಸೆ ಮಾಡಿ ತಿನ್ನುತ್ತಾರೆ. (ಗೆದ್ದಲು) ಹುತ್ತದ ಹುಳಗಳನ್ನು ತೆಗೆದು ತುಪ್ಪದಲ್ಲಿ ಹುರಿದು ಮಕ್ಕಳಿಗೆ ತಿನ್ನಿಸುತ್ತಾರೆ. ಚಿಗಳಿಕೊಟ್ಟೆ, ಇರುವೆಗಳ ಮೊಟ್ಟೆಗಳಿಂದ ಚಟ್ನಿ ಮಾಡಿ ರೊಟ್ಟಿಗೆ ನಂಜಿಕೊಳ್ಳುತ್ತಾರೆ. ಮುಸಿಯದ ಗಸಿಯನ್ನು ರೊಟ್ಟಿ ಕಡುಬೆಗೆ ನಂಜಿಕೊಂಡು ತಿನ್ನುತ್ತಾರೆ. ಬೇಸುಗೆಯಲ್ಲಿ ಜಿಂಕೆ, ಸಾರಂಗ, ಬೇಟೆಯಾಡಿ ಅವುಗಳ ಮಾಂಸದ ತುಂಡುಗಳನ್ನು ಉಪ್ಪು ನೀರಲ್ಲಿ ಹಾಕಿ ಒಣಗಿಸಿಟ್ಟು ಮಳೆ ಚಳಿಗಾಲದಲ್ಲಿ ಹುರಿದು ಪಲ್ಯ ಮಾಡಿ ತಿನ್ನುತ್ತಾರೆ. ಏಡಿಯ ಪಲ್ಯ, ಕೋಳಿ ಕಜ್ಜಾಯ ಮಾಡುವುದಲ್ಲದೆ ಬಾಡನ್ನು ಬೇಯಿಸಿದಾಗ ಬರುವ ಎಣ್ಣೆ ತೆಗೆದು ತುಪ್ಪದ ಹಾಗೆ ಬಳಸುತ್ತಾರೆ.

ಪ್ರಾಣಿಗಳ ತಿಂಡಿಗಳು:

ಸಂಕ್ರಾಂತಿ ದಿನ ದನಕರುಗಳಿಗೆ ತುರುಬೆ ರೊಟ್ಟಿ ಮಾಡಿ ಅವುಗಳ ಕೊರಳಿಗೆ ಕಟ್ಟುವುದಲ್ಲದೆ ಸಮೃದ್ಧವಾಗಿ ತಿನ್ನಿಸುತ್ತಾರೆ. ಕೊಟ್ಟೆಕಡುಬು ಕೊಡುತ್ತಾರೆ. ಮಲ್ಲೇಗೌಡರಲ್ಲಿ ದೋಸೆ ಹುಳಿ ಬಜ್ಜಿ ಮಾಡಿ ತಿನ್ನಿಸುತ್ತಾರೆ ಮೀಸಲು ತೆಗೆದ ಹಿಟ್ಟಿಗೆ ಪಚ್ಚತೆನೆ ಹಾಕಿ ಚಪ್ಪೆ ರೊಟ್ಟಿ ಮಾಡಿ ಕೊಡುವುದಲ್ಲಿದೆ ಬೇಯಿಸಿದ ಹುರುಳಿಕಾಳನ್ನು ಕೊಡುತ್ತಾರೆ. ಹೀಗೆ ಪ್ರಾಣಿಗಳಿಗೆ ತಿನ್ನಿಸುವ ತಿಂಡಿಗಳ ವಿಷಯದಲ್ಲಿಯೂ ಮಲೆನಾಡಿನ ಜನರ ವಿಶೇಷ ಆಸಕ್ತಿಯನ್ನು ಕಾಣಬಹುದು. ಹೀಗಾಗಿ ಅಂದಿನ ಸಮಾಜದ ವ್ಯವಸ್ಥೆಯಲ್ಲಿ ಜಾತಿಗಳದೇ ಪ್ರಧಾನತೆಯನ್ನು ಕಾಣಬಹುದು.

ಆರ್ಥಿಕ ಬೆಳವಣಿಗೆ ಹಾಗೂ ತಿಂಡಿ, ತಿನಿಸು, ಪಾನೀಯ:

ಯಾವುದೇ ಸ್ಸಮಾಜವಾಗಲಿ ಅವರು ಬದುಕುವ ರೀತಿಗೆ ಅನುಗುಣವಾಗಿ ಶ್ರೀಮಂತರು, ಬಡವರು ಎಂದು ಗುರುತಿಸುತ್ತೇವೆ. ಇದರ್ಲ್ಲಿ ಮೇಲುವರ್ಗ, ಮಧ್ಯಮವರ್ಗ, ಕೆಳವರ್ಗ ಎಂದು ಗುರುತಿಸಿಕೊಳ್ಳಬಹುದು. ಆದಾಯದ ಮೇಲೆ ಅವರ ಆರ್ಥಿಕ ಪರಿಸ್ಥಿತಿ ಹೊಂದಿಕೊಂಡಿರುವಾಗ ಎಲ್ಲರೂ ಸಮಾನವಾಗಿರುವುದಕ್ಕೆ ಸಾಧ್ಯ ಇಲ್ಲ. ಮಲೆನಾಡಿನಲ್ಲಿ ಬಹಳಷ್ಟು ಜನ ತೋಟ, ಎಸ್ಟೇಟ್ ಗಳನ್ನು ಇಟ್ಟುಕೊಂಡು ಆರ್ಥಿಕವಾಗಿ ಮುಂದುವರಿದಿದ್ದಾರೆ. ಈ ಜನ ಮಾಡುವ ತಿಂಡಿ, ತಿನಿಸುಗಳನ್ನು ಅತಿಥಿಗಳಲ್ಲಿದೆ, ಆಳು ಕಾಳುಗಳು ಕಂಟಪೂರ್ತಿ ತಿನ್ನಬೇಕಲ್ಲದೆ ತೆಗೆದುಕೊಂಡು ಹೋಗಬಹುದು. ಹಾಲು ತುಪ್ಪ ಮೊಸರಿನ ಹೊಳೆ ಹರಿದು ಹೋಗುತ್ತಿರುತ್ತದೆ. ತಿಂಡಿಗಳನ್ನು ಮರಿಗಟ್ಟಲೆ ಮಾಡುತ್ತಿರುತ್ತಾರೆ. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ತೋಟಗಳು, ಎಸ್ಟೇಟಗಳು, ನೂರು ಅಂಕಣದ ಮನೆಗಳು, ತುಂಬಿ ಹರಿಯುವ ನದಿಗಳು, ಕೈ ತುಂಬ ಹಣ ಹೀಗಾಗಿ ಧಾರಾಳತೆ ತನ್ನಿಂದತಾನೆ ಬಂದಿದೆ.

ಮಧ್ಯಮವರ್ಗದ ಜನ ಮಿತವಾದ ಆದಾಯ ಹೊಂದಿರುತ್ತಾರೆ. ಗದ್ದೆ ತೋಟಗಳಿಲ್ಲದೆ ಇತರ ಜೀವನಾವಶ್ಯಕ ಕಸುಬುಗಳನ್ನು ಮಾಡುವುದರಿಂದ ಆರ್ಥಿಕ ಪರಿಸ್ಥಿತಿಯು ಹಿತಮಿತವಾಗಿರುತ್ತದೆ. ಇವರು ತಿಂಡಿ, ತಿನಿಸುಗಳನ್ನು ಮಾಡುತ್ತಾರೆ. ಬಂದ ಅತಿಥಿಗಳು ಯಾರೇ ಆದರೂ ಅವರಿಗೆ ಆತ್ಮೀಯವಾಗಿ ಅವಲಕ್ಕಿಯ ಕುಚೇಲ ಅತಿಥ್ಯವನ್ನು ನೀಡಿಯಾರು. ಕೆಳವರ್ಗದ ಜನ ಹೆಚ್ಚಾಗಿ ಕೂಲಿ ಆಳುಗಳು ಅಥವಾ ಜೀತದವರು. ಅಲ್ಲದೆ ಕೆಳಜಾತಿಯ ಜನ ಇವರೆಲ್ಲರೂ ದುಡಿಮೆಗಾಗಿ ಶ್ರೀಮಂತರನ್ನು ಅವಲಂಬಿಸಿರುತ್ತಾರೆ. ಒಂದು ರೀತಿಯಲ್ಲಿ ತಮ್ಮದು ಎನ್ನುವ ಸ್ವಂತ ಜಮೀನು ಇಲ್ಲದೆ ಸ್ವಂತಿಕೆಯೂ ಇಲ್ಲದ ಪರಾವಲಂಬಿಗಳು. ಇವರ ಆಹಾರ ಕ್ರಮಗಳಲ್ಲಿ ವೈವಿಧ್ಯ ಇರುವುದಿಲ್ಲ. ಮಾಲೀಕರ ಅಥವಾ ಒಡೆಯರ ಮನೆಗಳಲ್ಲಿ ಮಾಡಿದ ತಿಂಡಿ ತಿನಿಸುಗಳಲ್ಲಿ ಮಜ್ಜಿಗೆಗಳಲ್ಲಿ ಇವರಿಗೆ ಪಾಲಿರುತ್ತದೆ. ಎಷ್ಟೋ ಬಾರಿ ಮಕ್ಕಳಿಗೂ ತಂದು ಕೊಡುತ್ತಾರೆ. ಕಳ್ಳು ಕುಡಿಯುವುದರಲ್ಲಿ ಕಳ್ಳು ಮಾಡುವುದರಲ್ಲಿ ಬೇರೆಲ್ಲಾ ಜನಕ್ಕಿಂತ ಇವರದೇ ಮೆಲುಗೈ. ಹಬ್ಬಗಳಲ್ಲಿ ಹೋಳಿಗೆ ಮಾಡಲು ಒಡೆಯರ ಮನೆಯಿಂದಲೇ ಅಕ್ಕಿ ಬೆಲ್ಲ ಎಣ್ಣೆ ಕೊಡುವ ಪದ್ಧತಿ ಇದೆ. ಶ್ರೀಮಂತರ ಮನೆಗಳಲ್ಲಿ ದಣಿದು ಬಂದವರಿಗೆ ಕಡೆದ ಮಜ್ಜಿಗೆ ಸೀಯಾಳಗಳ ಉಪಚಾರವಾದರೆ ಮಧ್ಯಮ ವರ್ಗದ ಜನ ಬೆಲ್ಲ ನಿಂಬೆ ಹಣ್ಣಿನ ಪಾನಕ, ಮಜ್ಜಿಗೆ ನೀರು ಕೊಡುತ್ತಾರೆ. ತುಪ್ಪ ಹಾಕುವುದರಲ್ಲಿ ಬಹಳ ಧಾರಾಳಿಗಳು. ಶ್ರೀಮಂತರ ಮನೆಗಳ ಅಡಿಗೆ ಮನೆಗಳು ಬಹಳ ದೊಡ್ಡವು. ಮಲೇಗೌಡರ ಮನೆಗಳಲ್ಲಿ ದೊಡ್ಡ ಊಟದ ಮನೆ ದೊಡ್ಡ ಮನೆಗಳೂ ಇಂದಿಗೂ ಇವೆ.

ತಿಂಡಿ ತೀರ್ಥಗಳಲ್ಲಿ ಈ ವರ್ಗ ವ್ಯವಸ್ಥೆ ಹೀಗೆ ಗೆರೆ ಕೊರೆದಂತೆ ಪ್ರತ್ಯೇಕವಾಗಿರಲು ಕಾರಣ ಮಲೆನಾಡಿನಲ್ಲಿ ಇಂದಿಗೂ ಜೀವಂತವಾಗಿರುವ ಜೀತ ಪದ್ಧತಿ. ಮಾಲೀಕರ ಶ್ರೀಮಂತಿಕೆಯ ದಾಹ ಮಧ್ಯಮ ವರ್ಗದವರ ತಟಸ್ಥ ಮನೋಭಾವನೆ ಎಂದು ಧಾರಾಳವಾಗಿ ಹೇಳಬಹುದು.

ಕೆಲವು ವೈಶಿಷ್ಟ್ಯಗಳು:

ಹೆಂಡ ಕುಡಿಯುವಾಗ ನೆಂಜಿಕೊಳ್ಳಲು ಕರಿಮೀನು ತುಂಡು, ಹುರಿ ಮೀನು, ಸೀಗಡಿ ಬಾಡಿನ ತುಂಡು ಮೊಟ್ಟೆ, ಹುರಿಗಾಳು, ವಡೆ, ಬಜ್ಜಿ ಮತ್ತು ಎಲ್ಲ ರೀತಿಯ ಹೆಂಡ ಕುಡಿಯುವಾಗ ಕರಿದ ತಿಂಡಿಗಳನ್ನು ಚಾಕಣಗಳೆಂದು ತಿನ್ನುತ್ತಾರೆ.

ಈ ತಿಂಡಿ, ತಿನಸು ಮತ್ತು ಪಾನೀಯಗಳನ್ನು ತಯಾರಿಸಲು ವಿಶಿಷ್ಟ ತಿಂಡಿಯಾದ ಅಂಗನ್ನು ಮಾಡಲು ತೂತಿರುವ ಮಡಿಕೆ ಮಾಡಿಸಿ ಉರಿಯುವ ಒಲೆಯ ಬೋರಲು ಹಾಕಿ ಹಿಟ್ಟಿಗದ್ದಿದ ಬಟ್ಟೆಯಿಂದ ಪಟ ಬರೆಯುತ್ತಿದ್ದರು. ಈ ಬಟ್ಟೆಯನ್ನು ಅಂಗಿನ ಬಟ್ಟೆಯಂತಲೂ ಮಡಕೆಯನ್ನು ಅಂಗಿನ ಮಡಕೆಯಂತಲೂ ರಕ್ಷಿಸಿಡುತ್ತಾರೆ. ಕೊಟ್ಟೆ ಕಡುಬಿಗಾದರೆ ಹಲಸಿನ ಎಲೆ, ಅರಿಶಿಣದೆಲೆಗಳ ಕೊಟ್ಟೆ ಕಟ್ಟಬೇಕು. ಕಡುಬಿಗೆ ಬಳಸುವ ಪಾತ್ರೆಯಲ್ಲಿ ತೂತುಗಳಿರುವ ಮುಚ್ಚಳ, ಅದರಲ್ಲಿ ಕಡುಬಿನ ಹಿಟ್ಟು ಹಾಕಿದ ಬಟ್ಟಲುಗಳು, ಇಡ್ಲಿಗೆ ಇಡ್ಲಿ ಪಾತ್ರೆ, ದೋಸೆ ಹಂಚು, ಪಡ್ಡಿನ ಹಂಚು, ನೀರು ದೋಸೆಯ ಹಂಚು, ನೀರು ದೋಸೆಯ ಹಂಚು ಪ್ರತ್ಯೇಕವಾಗಿರುತ್ತವೆ.

ವೈದ್ಯಕೀಯ ಮಹತ್ವ:

ಮಲೆನಾಡಿಗರು ತಿನ್ನುವ ಕುಡಿಯುವ ಬಹುತೇಕ ಪದಾರ್ಥಗಳಲ್ಲಿ ವೈದ್ಯಕೀಯ ಗುಣಗಳು ಸೇರಿಗೊಂಡಿವೆ. ಮಲೆನಾಡಿನಲ್ಲಿ ಮಳೆ ಕಾಡುಗಳಿಂದಾಗಿ ಸೊಳ್ಳೆ, ಇಂಬಳ ನೊಣಗಳಿಂದ ರೋಗಗಳು ಹರಡುತ್ತವೆ. ಔಷಧಿ ಕೊಡಲು ರಸ್ತೆಗಳು ಆಸ್ಪತ್ರೆಗಳು ಸರಿಯಾಗಿರುವುದಿಲ್ಲ ಅಲ್ಲದೆ ಅಲೋಪತಿ ವೈದ್ಯವನ್ನು ಮೈಲಿಗೆ ಎಂದು ಭಾವಿಸುತ್ತಿದ್ದರು. ಹೀಗಾಗಿ ಅಲ್ಲಿನ ಜನರು ತಾವು ತಿನ್ನುವ ಆಹಾರದಲ್ಲಿ ಕುಡಿಯುವ ಪಾನೀಯಗಳಲ್ಲಿ ವೈದ್ಯಕೀಯ ಅಂಶಗಳನ್ನು ಕಂಡುಕೊಂಡು ತಮ್ಮ ಆಹಾರದಲ್ಲಿ ಅವುಗಳನ್ನು ಬಳಸಿಕೊಂಡು ಗಟ್ಟಿಯಾದ ಆರೋಗ್ಯವನ್ನು ಉಳಿಸಿಕೊಂಡರು. ಋತುಮಾನಕ್ಕೆ ಅನುಕೂಲವಾಗುವ ತರಕಾರಿಗಳ ಜೊತೆಗೆ ಮನೆಯ ಸುತ್ತಮುತ್ತಲೂ ಸಿಗುವ ಪದಾರ್ಥಗಳೇ ಬಳಕೆಯಲ್ಲಿದ್ದವು. ಮಗುವಿನಲ್ಲಿ ಜ್ಞಾನವೃದ್ಧಿಗೆ ಒಂದೆಲಗದಸೊಪ್ಪು ತಲೆಗೆದರಿನ ಗಡ್ಡೆ, ಸಾವಿರ ಸಾಂಬಾರ ಸೊಪ್ಪುಗಳನ್ನು ರಸ ಮಾಡಿ ಕುಡಿಸುತ್ತಾರೆ. ಗರ್ಭಿಣಿಯರಿಗೆ ಬಾಣಂತಿಯರಿಗೆ ಕೊಡುವ ಪ್ರತಿ ತಿಂಡಿಗಳಲ್ಲಿಯೂ ಆರೋಗ್ಯದ ತುಂಬಾ ನಿಗಾ ಇರುವುದನ್ನು ಗಮನಿಸಬಹುದು. ಗರ್ಭಿಣಿಯರಿಗೆ ಉಷ್ಣವಾಗಿ ಗರ್ಭಪಾತವಾದೀತೆಂದು ಕಳಲೆ ಪಲ್ಯ ಕೊಡುವುದಿಲ್ಲ. ಬಾಣಂತಿಗೆ ತುಪ್ಪ, ಮೆಂತ್ಯ, ಕೊಬ್ಬರಿ ದ್ರಾಕ್ಷಿ ಗೋಡಂಬಿಗಳಿಂದ ಮಾಡಿದ ತಿಂಡಿಗಳಲ್ಲಿದೆ ಒಬ್ಬ ಬಾಣಂತಿಗೆ ಮೂರು ತಿಂಗಳಲ್ಲಿ ನಾಲ್ಕು ಸೇರು ಕಾಳುಮೆಣಸು ಕೂಡಲೇಬೇಕೆಂದು ಎಲ್ಲಾ ತಿಂಡಿ ಕಷಾಯಗಳಲ್ಲೂ ಬೆರಸುತ್ತಾರೆ. ಕಾಳುಮೆಣಸು ರಕ್ತಶುದ್ಧಿ ಮಾಡುವುದಲ್ಲದ ಶೀತ, ಕಫಗಳನ್ನು ತೊಡೆದುಹಾಡುತ್ತದೆ. ಅದಕ್ಕಾಗಿ ಮಲೆನಾಡಿನ ಹೆಣ್ಣು ಮಕ್ಕಳು ಬಾಣಂತನ ಮುಗಿಸಿ ಹೊರ ಬಂದರೆ ರಕ್ತ ಚಿಮ್ಮುವಂತಿದ್ದು ದಷ್ಟಪುಷ್ಟರಾಗಿ ದೃಷ್ಟಿಬಡೆಯುವಂತಿರುತ್ತಾರೆ. ಜೇನುತುಪ್ಪ ಸರ್ವರೋಗ ಪರಿಹಾರಿಯಾಗಿರುವುದರಿಂದ ಎಲ್ಲಾ ತಿಂಡಿಗಳಿಗೂ ಕಷಾಯಗಳಿಗೂ ಅದನ್ನು ಬಳಸುತ್ತಾರೆ. ಹೆಚ್ಚಿನ ಪೌಷ್ಠಿಕಾಂಶವಿರುವ ಕುಂಬಳಕಾಯಿ, ಸೌತೇಕಾಯಿ, ಹಲಸಿನಹಣ್ಣು, ಜನಪ್ರಿಯ ತರಕಾರಿಗಳು. ನಿರೋಗಿಯನ್ನಾಗಿ ಮಾಡುವ ‘ನೀರ’ ಬೆಳಗಿನ ಜಾವದ ಜನಪ್ರಿಯ ಪಾನೀಯ. “ಒಂದು ಲೋಟ ಮೊಸರು ಒಂದು ವರ್ಷ ಆಯಸ್ಸು” ಎನ್ನುವ ಗಾದೆಯಂತೆ ತಮ್ಮ ಊಟ, ತಿಂಡಿಗಳಲ್ಲಿ ಮೊಸರಿನ ಬಳಕೆ ಧಾರಾಳವಾಗಿದೆ. ಹೆಚ್ಚಿನ ವೈದ್ಯಕೀಯ ಗುಣವಿರುವ ಕರಿಬೇವಿನ ಸೊಪ್ಪು, ಇಂಗು, ಜೀರಿಗೆ, ಮೆಣಸುಗಳನ್ನು ಹೆಚ್ಚಾಗಿ ಬಳಸಿ ‘ಊಟಬಲ್ಲವನಿಗೆ ರೋಗವಿಲ್ಲ’ ಎನ್ನುವ ಗಾದೆಯನ್ನು ಜೀವಂತವಾಗಿಸಿದ್ದಾರೆ.

ಹೊಯ್‌ ಹಪ್ಪಳಕ್ಕಾಗಿ ಹಪ್ಪಳದ ಆಕಾರಕ್ಕೆ ಸರಿಯಾದ ತಟ್ಟೆ, ತಟ್ಟೆಗೆ ಹೊಂದುವ ಪಾತ್ರೆ ಮಾಡಿಸಿರುತ್ತಾರೆ. ರೊಟ್ಟಿ ಸುಡಲು ಕೊಣಬಿಗೆ ಅಥವಾ ಪರಾತ, ಉಪ್ಪಿನಕಾಯಿ ಹಾಕಿಡಲು ಜಾಡಿ ಇರುತ್ತದೆ. ಮುಸ್ಲಿಮರಲ್ಲಿ ಪುಟ್ಟು ಮಾಡಲು ಕೊಳವೆಯನ್ನು ಸೇರಿಸಿದ ಪ್ರತ್ಯೇಕ ಪಾತ್ರೆಯೇ ಇರುತ್ತದೆ. ಮಾಂಸಾಹಾರಗಳನ್ನು ಪ್ರತ್ಯೇಕ ಗಡಿಗೆಗಳಲ್ಲಿ ಮಾಡುತ್ತಾರೆ. ನೀರಾ ಹಾಗೂ ಕಳ್ಳಭಟ್ಟಿ ತೆಗೆಯಲು ಸಣ್ಣ ಪೀಪಾಯಿಗಳಿರುತ್ತದೆ.

ಹೆಂಡಕುಡಿಯಲು ಹೆಂಡದ ಬುರುಡೆ, ನೀರು ಕುಡಿಯಲು ತಂಬಿಗೆ ಲೋಟಗಳಲ್ಲದೆ ಮದುವೆಗಳಲ್ಲಿ ಅಡಕೆಪಟ್ಟಿಯ ಬಟ್ಟಲುಗಳು ಬಾಳೆಎಲೆ ಹಲಸಿನ ಎಲೆಯ ದೊನ್ನೆಗಳು, ವಾಟೆಗಳು, ಎಳೆನೀರು ಕುಡಿಯಲು ತಾವರೆದಂಟು ಬಳಸುತ್ತಾರೆ. ತಿಂಡಿತಿನ್ನಲು ಮುತ್ತುಗದ ಎಲೆ, ಕುಡಿಬಾಳೆ ಸಿಗತೆ, ಬಾಳೆಪಟ್ಟಿ, ಅಡಕೆಹಾಳೆ ಇವುಗಳನ್ನು ಬಳಸುತ್ತಾರೆ.

ಆಚರಣೆಗಳಿಗೆ ಸಂಬಂಧಿಸಿದಂತೆ ಕೆಲವು ನಂಬಿಕೆಗಳೂ ಇವೆ

ಒಕ್ಕಲಿಗರಲ್ಲಿ ಆ ದಿನದ ಯಾವುದೇ ತಿಂಡಿಗಳಿಗೆ ಆಗುಂಬೆ, ತೀರ್ಥಹಳ್ಳಿ ಮತ್ತು ಹೊಸನಗರ ಕೆಲವು ಭಾಗಗಳಲ್ಲಿ ಕೆಳಜಾತಿಯ ಜನರಿಗೆ ಈಗಲೂ ಚಿಪ್ಪುಗಳಲ್ಲಿ ಕಾಫಿ ನೀರು ಕೊಡುತ್ತಾರೆ. ಪಂಪನ ಭಾರತದಲ್ಲಿ “ಧರ್ಮಗಳ್ಳಂ ಕುಡಿಸಿದರ್” ಅಲ್ಲದೆ ಚಾಕಣ ಎನ್ನುವ ಪದಗಳ ಬಳಕೆ ಇದೆ. ಮಲೆನಾಡಿನಲ್ಲಿ ಬಡವರಿಗೆ ‘ಧರ್ಮಗಳ್ಳು’ ಎಂದರೆ ದುಡ್ಡು ತೆಗೆದುಕೊಳ್ಳದೆ ಪುಕ್ಕಟೆಯಾಗಿ ‘ಕಳ್ಳು’ ಕುಡಿಸುವುದು ಈಗಲೂ ಬಳಕೆಯಲ್ಲಿದೆ. ಚಕ್ಕಣ ಎಂದರೆ ಅದರೊಂದಿಗೆ ತಿನ್ನುವ ಕುರುಕಲು ತಿಂಡಿಗಳು.

ಸಮಕಾಲೀನ ವ್ಯವಸ್ಥೆಯಲ್ಲಿ ತಿಂಡಿ-ತೀರ್ಥಿಗಳು. ತಿಂಡಿ, ತಿನಿಸು, ಪಾನೀಯಗಳಲ್ಲಿ ವೈವಿಧ್ಯ, ವಿಶೇಷತೆ, ಮಹತ್ವಗಳಿದ್ದರೂ ಅವು ನಮ್ಮ ಸಮಾಜವನ್ನು ಪರಿವರ್ತಿಸುವುದರಲ್ಲೂ ಮಲೆನಾಡು ಹಿಂದಿ ಬಿದ್ದಿಲ್ಲ. ರಾಷ್ಟ್ರೀಯ ಭಾವೈಕ್ಯತೆಯನ್ನು ವಿಭಿನ್ನ ಸಂಸ್ಕೃತಿಗಳ ಬೆಸುಗೆಯನ್ನು ಬೆಸೆದಿದೆ. ಮುಸ್ಲಿಮ್‌ರಾಗಲಿ, ಧರ್ಮಿಯರಾಗಲೀ, ಹಿಂದುಗಳಾಗಲಿ, ತಿಂಡಿಗಳನ್ನು ಮಾಡುವುದರಲ್ಲಿ ಕೊಡುವುದರಲ್ಲಿ ತಿನ್ನುವುದರಲ್ಲಿ ಪರಸ್ಪರ ಸೌಹಾರ್ದತೆ ಇದೆ. ತಿಂಡಿಗಳನ್ನು ತಯಾರಿಸಿದಾಗ ಬಂಧುಬಾಂಧವರಿಗೆ ಕೊಡುವುದರಿಂದ, ಬಂದ ಅತಿಥಿಗಳಿಗೆ ಬಂದ ಕೂಡಲೇ ತಿಂಡಿ ತೀರ್ಥಗಳನ್ನು ಮಾಡಿಕೊಡುವ ಸಂಪ್ರದಾಯ ನಮ್ಮ ಸಂಸ್ಕೃತಿಗೆ ಹಿಡಿದ ಕನ್ನಡಿ. ಭೂಮಿ ಹುಣ್ಣಿಮೆಯಲ್ಲಿ ಜಾತಿಮತಗಳ ಭೇದವಿಲ್ಲದೆ ಎಲ್ಲರಿಗೂ ತಿಂಡಿಗಳನ್ನು ಹಂಚುತ್ತಾರೆ. ಶತ್ರುವೇ ಬಾಗಿಲಿಗೆ ಬಂದರೂ ಉಪಚಾರ ಮಾಡಿ ಆತ್ಮೀಯರನ್ನಾಗಿ ಮಾಡಿಕೊಳ್ಳುತ್ತಾರೆ. ಜೀತದಾಳುಗಳಾಗಿ ದುಡಿಯುತ್ತಿದ್ದ ಕೆಳಜಾತಿಯ ಜನರೂ ಕೂಡ ಊಳುವವನಿಗೆ ಭೂಮಿ ಎಂಬ ನಿಯಮ ಜಾರಿಗೆ ಬಂದಮೇಲೆ ತಮ್ಮ ಜೀವನ ಕ್ರಮಗಳನ್ನು ಸುಧಾರಿಸಿಕೊಂಡಿದ್ದಾರೆ. ಅವರ ಊಟ ತಿಂಡಿಗಳಲ್ಲಿ ಸುಧಾರಣೆ ಮಾಡಿಕೊಂಡಿರುವುದರಿಂದ ಸಮಾಜದಲ್ಲಿ ಅವರ ಸ್ಥಾನ ಮೇಲೆ ಹೋಗಿದೆ. ಕೇವಲ ಬ್ರಾಹ್ಮಣರಿಗೆ ಮೀಸಲಾಗಿದ್ದ ಅನೇಕ ಹಬ್ಬ ಹರಿದಿನಗಳನ್ನು ಶೂದ್ರರೂ ಆಚರಿಸುತ್ತಿದ್ದಾರೆ. ಹೀಗಾಗಿ ಮಾಲೀಕರ ಮನೆಗಳ ತಿಂಡಿಗಳಿಗೆ ಜೊಲ್ಲುಸುರಿಸುತ್ತಿದ್ದ ಜೀತದಾಳುಗಳು ಆರ್ಥಿಕವಾಗಿ ಮೇಲೇರುತ್ತಿದ್ದಂತೆ ಸುಧಾರಿಸಿದ ತಿಂಡಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಜಿಲೇಬಿ, ಚಿರೋಟಿ, ಕರ್ಚಿಕಾಯಿ, ಪೇಣಿ ಮುಂತಾದ ತಿಂಡಿಗಳು ನೋಡುವುದಕ್ಕೆ ಮಾತ್ರ ಸಿಗುತ್ತಿದ್ದವು. ಈಗ ಎಲ್ಲರೂ ಮನೆಯಲ್ಲಿಯೇ ಮಾಡಿ ತಿನ್ನುತ್ತಾರೆ. ಸಿಹಿತಿಂಡಿಗಳನ್ನು ಮಾಡುವಗ ಬೆಲ್ಲವೇ ಪ್ರಧಾನವಾಗಿತ್ತು. ಸಕ್ಕರೆಯ ಬಳಕೆ ಪ್ರಾರಂಭವಾದ ಮೇಲೆ ಬಡವ ಶ್ರೀಮಂತರೆನ್ನದೆ ಸಕ್ಕರೆಯನ್ನೇ ಬಳಸುತ್ತಿದ್ದಾರೆ. ಎಣ್ಣೆಗಳನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು ಈಗ ಸಂಸ್ಕರಿಸಿದ ಎಣ್ಣೆಗಳಿಂದಾಗಿ ತಿಂಡಿಗಳ ರುಚಿಯೇ ಬದಲಾಗಿದೆ.

ಆಧುನಿಕ ಪ್ರಭಾವ ವಿದೇಶಿಯರು ನಮ್ಮ ಭಾರತಕ್ಕೆ ಬಂದ ಮೇಲೆ ಹಲವಾರು ತಿಂಡಿ, ಪಾನೀಯಗಳು ನಮ್ಮ ಸಂಸ್ಕೃತಿಯಲ್ಲಿ ಬೆರೆತುಹೋಗಿವೆ. ಸಂಚಾರ ಸೌಲಭ್ಯ ವಿಸ್ತರಿಸಿದ ಮೇಲಂತೂ ಎಲ್ಲ ದೇಶಗಳ ಎಲ್ಲ ಸಂಸ್ಕೃತಿಯ ಪ್ರಭಾವವು ನಮ್ಮ ತಿಂಡಿ ತೀರ್ಥಗಳ ಮೇಲೂ ಆಗಿದೆ. ದೂರದರ್ಶನ, ರೇಡಿಯೋಗಳಲ್ಲಿ ತಿಂಡಿಯ ಪರಿಚಯ, ತರಾವರಿಯ ತಿಂಡಿಗಳನ್ನು ತಯಾರಿಸುವ ಉತ್ತರ ಭಾರತದ ಸಂಚಾರಿ ಗಾಡಿಗಳು, ಹೊಟೇಲುಗಳು, ಪಂಜಾಬಿ ದಾಬಾಗಳು, ಕೆಚಪ, ಸಾಸಿ, ಚಾಸ, ಬ್ರೆಡ್‌ ಮುಂತಾದ ಬೇಕರಿ ತಿಂಡಿಗಳೂ, ರಸ್ನಾ, ಲೆಹರಪೆಪ್ಸಿ, ಹಮ್ ದರ್ದ್‌ನಂತಹ ತಂಪುಪಾನೀಯಗಳೂ ಮತ್ತೇರಿಸುವ ರಮ್‌, ವಿಸ್ಕಿ, ಎಲ್ಲವೂ ಆಧುನಿಕವಾದರೂ ಜನಪ್ರಿಯವಾಗಿವೆ. ಹಳ್ಳಿಯಿಂದ ಪೇಟೆಗೆ ಹೋಗಿಬರುವ ಜನರಿಂದಾಗಿ ಪಟ್ಟಣದ ಆಧುನಿಕ ಹಳ್ಳಿಗಳಿಗೆ ತಕ್ಷಣವೇ ಬಂದು ಬಿಡುತ್ತಿದೆ.

ಕುಡಿಯುವ ಪಾನೀಯಗಳಂತೂ ಸಂಪೂರ್ಣವಾಗಿ ವಿದೇಶಿ ಪ್ರಭಾವಕ್ಕೆ ಒಳಗಾಗಿದೆ. ಹಿಟ್ಟನ್ನು ರುಬ್ಬಲು ಗ್ರೈಂಡರ್ ಗಳು, ಮಿಕ್ಸರ್ ಗಳು, ಪುಡಿಮಾಡುವ ಯಂತ್ರಗಳು, ತಿಂಡಿಗಳನ್ನು ಮಾಡುವ ಅಚ್ಚುಗಳು, ರೊಟ್ಟಿ ಪೂರಿ ಮಿಶನ್ನುಗಳು ಮುಂ. ಒಟ್ಟಿನಲ್ಲಿ ಅಡುಗೆ ಮನೆಯ ಎಲ್ಲ ತಯಾರಿಕೆಗಳಲ್ಲೂ ಆಧುನಿಕ ಪ್ರಭಾವ ಧಾರಾಳವಾಗಿರುವುದನ್ನು ಕಾಣಬಹುದು. ಸಂಸ್ಕೃತಿಯ ಪರಸ್ಪರ ಇಂತಹ ವಿನಿಮಯಗಳು, ಸಂಸ್ಕೃತಿಯನ್ನು ಜೀವಂತವಾಗಿಡುತ್ತದೆ. ಕಾಲಪ್ರವಾಹದಲ್ಲಿ ಸಂಸ್ಕೃತೀಕರಣ ಆದಾಗ ಕೆಲವು ಕೊಚ್ಚಿ ಹೋಗಿರಬಹುದು ಕೆಲವು ಬಂದು ಸೇರಿಕೊಂಡಿರಬಹುದು. ಪ್ರಕೃತಿಯ ಹಾಗೆ ನಮ್ಮ ತಿಂಡಿ-ತಿನಿಸು, ಪಾನೀಯಗಳು ನವನವೋನ್ಮೇಶ ಶಾಲಿನಿಗಳು ಎಂದು ಹೇಳಬಹುದು. “ಹೊಸಚಿಗುರು ಹಳೆ ಬೇರು ಕೂಡಿರಲು ಮರಸೊಗಸು” ಎನ್ನುವ ಡಿ.ವಿ.ಜಿ. ಅವರ ಮಾತಿನಂತಗೆ ಹಳೆಯ ಹೊಸ ತಿಂಡಿಗಳ ಮಿಶ್ರಣವೇ ಜೀವನದ ವೈವಿಧ್ಯವಾಗಿದೆ.