ಬಳ್ಳಾರಿಯ ಸುಪ್ರಸಿದ್ಧ ಮಾತೃದೇವತಾಯಾದ ದುರ್ಗಮ್ಮನಿಗೂ ಬಳ್ಳಾರಿ ಊರ ಹೆಸರಿಗೂ ಸಂಭಂಧ ಕಲ್ಪಿಸುವ ಪ್ರಯತ್ನಗಳು ನಡೆದಿವೆ. ಬಳ್ಳಾರಿ ಜಿಲ್ಲೆಯ ಗಡಝೆಟಿಯರ್‌ದಲ್ಲಿ ಬಳ್ಳಾರಿಯ ನಿಷ್ಪತ್ತಿ ಹೇಳುವಾಗ ” Another theory connects the name of Bellary with Goddes Durgamma, whose temple is in gandhinagar, Bellary. In Poet Janna’s Yashodhara Charite the Word Balari (ಬಳ್ಳಾರಿ) is used to mean a goddes and the town is said to have derived its name from this word because durgamma had manifestred herself in this town”

[1] ಎಂದು ಹೇಳಲಾಗಿದೆ. ಜನ್ನನ ಯಶೋಧರ ಚರಿತ್ರೆಯಲ್ಲಿ ಉಲ್ಲೇಖಿಸಲ್ಪಟ್ಟಿರುವ “ಬಳ್ಳಾರಿ”ಯು ಇಂದಿನ ಬಳ್ಳಾರಿ ದುರ್ಗಮ್ಮನೇ ಆಗಿರಬೇಕೆಂದು ಹೇಳುವುದು ಸಮಂಜಸವಲ್ಲ. ಬಳರಿ ಅಥವಾ ಬಳಾರಿಯ ಪ್ರಸ್ತಾಪ ಕೇವಲ ಜನ್ನನ ಯಶೋಧರ ಚರಿತೆಯಲ್ಲಿ ಮಾತ್ರ ಬಂದಿಲ್ಲ. ಚಂದ್ರರಾಜನ ಮದನ ತಿಲಕ, ಬ್ರಹ್ಮ ಶಿವನ ಸಮಯ ಪರೀಕ್ಷೆ, ಜೀವಸಂಭೋಧನೆ, ಭೀಮಕವಿಯ ಬಸವಪುರಾಣ, ಷಡಕ್ಷರಿಯ ರಾಜಶೇಖರ ವಿಳಾಸ, ಮುಂತಾದ ಕಾವ್ಯಗಳಲ್ಲಿ ಮತ್ತು ಅನೇಕ ಶಾಸನಗಳಲ್ಲಿ ಬಳರಿ / ಬಳಾರಿ ಪುನಃ ಪುನಃ ಉಲ್ಲೇಖಗೊಂಡಿದೆ.[2] ಬಳರಿ ಒಂದು ಉಗ್ರ ಗ್ರಾಮ ದೇವತೆ. ಅದಕ್ಕೆ ಇಂಥದೇ ಊರು. ನಾಡು ಎಂದು ನಿಶ್ಚಿತ ಸ್ಥಳವಿಲ್ಲ. ಇತರ ಗ್ರಾಮದೇವತೆಗಳಂತೆ ಅದೂ ಒಂದು. ಹಾಗೇ ದುರ್ಗಮ್ಮ ಕೂಡ ಒಬ್ಬ ಸಾರ್ವತ್ರಿಕ ದೇವತೆ ಅಂದಾಗ ಬಳರಿ ಮತ್ತು ಬಳ್ಳಾರಿ ದುರ್ಗಮ್ಮ ಇವರಿಬ್ಬರಿಗೆ ಸಂಬಂಧ ಕಲ್ಪಿಸುವುದು ಸರಿಕಾಣದು.

ಬಳ್ಳಾರಿ ನಿಷ್ಪತ್ತಿಯ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ “ಬಳರಿ” ಅಥವಾ “ಬಳಾರಿ” ಯ ಮೂಲಕ ಊರಿಗೆ ಈ ಹೆಸರು ಬಂದಿರಬಹುದೆಂದು ನಂಬಲಡ್ಡಿಯಿಲ್ಲ. ದೇವತೆಗಳ ಹೆಸರುಗಳು ಊರ ಹೆಸರುಗಳಾಗಿರುವ ಬಹಳಷ್ಟು ಉದಾಹರಣೆಗಳಿರುವ ಈ ನಾಡಿನಲ್ಲಿ ಇದೊಂದು ಅಪರೂಪದ ಸಂಗತಿಯೇನಲ್ಲ. ಬಳ್ಳಾರಿಯ ದುರ್ಗಮ್ಮ ಇತರ ಸಾಮಾನ್ಯ ದುರ್ಗಮ್ಮಗಳಂತೆ ಗ್ರಾಮದೇವತೆಯಾಗಿದ್ದವಳು ಕಾಲಾಂತರದಲ್ಲಿ ಹೆಚ್ಚಿನ ಪ್ರಭಾವ ಗಳಿಸಿಕೊಂಡಿದ್ದಾಳೆ ಅಷ್ಟೇ. ದುರ್ಗಮ್ಮನಿಗೆ ಸಂಬಂಧಿಸಿದ ಬಿರುದು, ಹಾಡು, ದಾಖಲೆಗಳಲ್ಲಿ ಅವಳನ್ನು “ಬಳ್ಳಾರಿ ಕನಕ ದುರ್ಗಮ್ಮ” ಎಂದು ಸಂಬೋಧಿಸಲಾಗಿದೆ. ಆದ್ದರಿಂದ ಈ ದುರ್ಗಮ್ಮ “ಬಳ್ಳಾರಿ” ದೇವತೆಯ ತದ್ಭವರೂಪವಾಗಲೀ ಮಾಪಾಡಾಗಲೀ ಅಲ್ಲ – ಸ್ವತಂತ್ರ ದೇವತೆ.

ಸಾಂಪ್ರದಾಯಿಕ ನಂಬಿಗೆಯ ಪ್ರಕಾರ ದುರ್ಗಮ್ಮ ಸ್ಥಾಪಿತ ದೇವತೆಯಲ್ಲ ಉದ್ಭವ ಮೂರ್ತಿ. ಈ ವಿಷಯವಾಗಿ ದುರ್ಗಮ್ಮನ ಅರ್ಚಕರು ಹೇಳುವ ಒಂದು ದಂತಕಥೆ ಸ್ವಾರಸ್ಯಪೂರ್ಣವಾಗಿದೆ. ಅರ್ಚಕರ ಮೂಲಪುರಿಷನಿಗೆ ದೇವಿ ಊರ ಹೊರಗಿನ ಬೆಟ್ಟದಲ್ಲಿ ಮೊದಲು ದರ್ಶನ ನೀಡಿದಳು. ಅಲ್ಲಿಂದ ಹಾರಿ ಜಿಗಿದು ಈಗಿರುವ ಗುಡಿಯ ಸ್ಥಳದಲ್ಲಿ ಒಮ್ಮೆಲೇ ಮಾಯವಾದಳು. ಕೆಲ ದಿಗಳ ನಂತರ ಹಣ್ಣು ಹಣ್ಣು ಮುದುಕಿಯಾಗಿ ಇದೇ ಜಾಗೆಯಲ್ಲಿ ಒಂದು ಗಿಡದ ಬುಡಕ್ಕೆ ಕುಳಿತಿದ್ದಳು. ಜನರೆಲ್ಲ ಅವಳನ್ನು ಯಿರಸ್ಕಾರದಿಂದ ಕಂಡರು. ಅರ್ಚಕರ ಮೂಲಪುರುಷನು ಸಮೀಪಕ್ಕೆ ಹೋಗಿ ಭಯಭಕ್ತಿಯಿಂದ ಮಾತಾಡಿಸಿದನು. ಅವನಿಗೆ ದೇವಿ “ನನ್ನ ತಲೆಯಲ್ಲಿ ಹೇನುಗಳಾಗಿವೆ. ತಗೆ” ಎಂದಳು. ತಲೆಗೆ ಕೈಹಚ್ಚಿ ಮುಡಿಕೆದರಿದರೆ ಹೇನಿನ  ಬದಲಾಗಿ ಮುತ್ತು ರತ್ನಗಳು ಕಂಡವು. ದಿಗಿಲುಗೊಂಡವನಿಗೆ ದೇವಿ ತನ್ನ ನಿಜ ವೃತ್ತಾಂತ ತಿಳಿಸಿ ಅದೇ ಜಾಗದಲ್ಲಿ ಗುಡಿಕಟ್ಟಿ ಪೂಜಾಮಾಡುವಂತೆ ತಿಳಿಸಿ ಅದೃಶ್ಯವಾದಳು.

ಈ ಕತೆ ಏನೇ ಇರಲಿ ಈಗಿರುವ ಅರ್ಚಕರು ವಂಶಾನುಗತವಾಗಿ ಧರ್ಮದರ್ಶಿಗಳೂ ಆಗಿರುವುದರಿಂದ ಇವರೇ ಈ ಗುಡಿಯ ಸಂಸ್ಥಾಪಕರೆಂದು ತಿಳಿದುಕೊಳ್ಳಲು ಅಭ್ಯಂತರವೇನೂ ಇಲ್ಲ. ಈಗಿರುವವರು ಏಳನೇ ತಲೆಮಾರಿನವರು. ಇವರ ವಂಶದ ಮೂಲಪುರುಷ ಪೆದ್ದದಾಸಪ್ಪನೆಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ಅಂದರೆ ಸುಮಾರು ಎರಡುನೂರು ವರ್ಷಗಳ ಹಿಂದೆ ಈ ಗುಡಿ ಸ್ಥಾಪನೆಯಾಗಿರಬೇಕು. ದುರ್ಗಮ್ಮನ ಗುಡಿಯ ಅಸ್ತಿತ್ವದ ಬಗ್ಗೆ ದೊರೆಯುವ ಅತ್ಯಂತ ಪ್ರಾಚೀನ ದಾಖಲೆಯೆಂದರೆ ಒಂದು ವ್ಯಾಜ್ಯದ ತೀರ್ಪು. ೧೮೧೭ ರಲ್ಲಿ ಈಗಿರುವ ಅರ್ಚಕರ ಮನೆತನದವರಿಗೂ ಮತ್ತು  ಬಡಿಗೇರ ಮನೆತನದವರಿಗೂ ಗುಡಿಯ ಪೂಜಾರಿಕೆಯ ಬಗ್ಗೆ ವ್ಯಾಜ್ಯ ನಡೆದು ಅರ್ಚಕೆ ಪರವಾಗಿ ನಿರ್ಣಯವಾದ ಸಂಗತಿ ತಿಳಿದು ಬರುತ್ತದೆ. ಸರಕಾರ ೧೯೬೮ ರಲ್ಲಿ ಗುಡಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು. ಇದನ್ನು ಪ್ರತಿಭಟಿಸಿ ಅರ್ಚಕರು ಬಳ್ಳಾರಿ ಜಿಲ್ಲಾ ಕೋರ್ಟನಲ್ಲಿ ವ್ಯಾಜ್ಯ ಹೂಡಿದರು. ೧೯೧೬ ರಲ್ಲಿ ವ್ಯಾಜ್ಯ ಅರ್ಚಕರ ಪರವಾಗಿ ನಿರ್ಣಯಿಸಲ್ಪಟ್ಟಿತು. ಈ ವ್ಯಾಜ್ಯದ ತೀರ್ಪು ಸುದೀರ್ಘವಾಗಿದೆ. ಅದರಲ್ಲಿಯೂ ಕೋಡ ಈ ಗುಡಿಯು ಸುಮಾರು ಇನ್ನೂರು ವರ್ಗಗಳಷ್ಟು ಹಳೆಯದೆಂದು ಹೇಳಿ ಮೇಲೆ ತಿಳಿಸಿರುವ ೧೮೧೭ ರ ತೀರ್ಪನ್ನು ಉಲ್ಲೇಖಿಸಲಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ದುರ್ಗಮ್ಮನ ಗುಡಿಯ ಪ್ರಾಚೀನತೆ ಇನ್ನೂರು ವರ್ಷಕ್ಕಿಂತ ಹಿಂದೆ ಸರಿಯಲಾರದು.

ದುರ್ಗಮ್ಮನ ಗುಡಿ ಬಳ್ಳಾರಿಯ ಗಾಂಧೀನಗರದಲ್ಲಿದೆ. ಮೊದಲು ಇದು ಊರ ಹೊಗೆ ಇದ್ದಂಥದು ಇತ್ತೀಚಿಗೆ ೩೦ -೪೦ ವರ್ಷಗಳಿಂದೀಚೆ ಸುತ್ತು ಮುತ್ತು ಊರು ಬೆಳೆದಿದೆ. ಸದ್ಯಕ್ಕಿರುವ ಗುಡಿ ಒಂದೇ ಕಾಲಕ್ಕೆ ನಿರ್ಮಾಣವಾದುದಲ್ಲ. ಗರ್ಭಗುಡಿ, ಮಂಟಪ, ಅಂಗಳದ ಚಪ್ಪರ ಹೀಗೆ ಮೂರು ಘಟ್ಟಗಳಲ್ಲಿ ಇದರ ರಚನೆಯಾಗಿದೆ. ಸಾಮಾನ್ಯ ಕಟ್ಟಡವಾಗಿರುವ ಗರ್ಭಗುಡಿ ತೀರ ಹಳೆಯದು. ಅದರ ಮುಂದಿನ ಎಂಟು ಕಂಬಗಳ ಮಂಟಪ ಆ ತರುವಾಯದ ನಿರ್ಮಾಣ. ಕಂಬಗಳ ಮತ್ತು ಮೂಲೆಗಳ ಮೇಲೆ ನರಸಿಂಹ, ಸೂರ್ಯ, ಅಗ್ನಿ, ವಿಷ್ಣು, ಗಣಪತಿ, ನಟರಾಜ, ಜ್ಯೋತಿರ್ಲಿಂಗ, ಸಮುದ್ರ ಮಥನ, ಆದಿಶೇಷ, ವರಾಹಾವತಾರ, ದಂಪತಿಗಳು ಮುಂತಾದವುಗಳನ್ನು ಕೆತ್ತಲಾಗಿದೆ. ಮಂಟಪದ ಕಂಬ ತೊಲೆಗಳಿಗೆ ದಟ್ಟ ಬಣ್ಣ ಲೇಪಿಸಿರುವುದರಿಂದ ಕೆಲವು ಮೂರ್ತಿಗಳ ಮೂಲ ಸ್ವರೂಪ ಮತ್ತು ಮಂಟಪದ ರಚನಾಕಾಲ ನಿರ್ಧರಿಸಲು ಕಷ್ಟವಾಗುತ್ತದೆ. ಮಂಟಪದ ಮುಂಭಾಗ ತೀರ ಇತ್ತೀಚಿಗೆ ೩೦ ವರ್ಷಗಳ ಹಿಂದೆ ರಚನಾಯಾದುದು. ಮೊದಲು ಜಾತ್ರೆಯ ಕಾಲಕ್ಕೆ ಈ ಸ್ಥಳದಲ್ಲಿ ಮೇದಾರರು ಚಪ್ಪರ ಹಾಕಿ ತಮ್ಮ ಸೇವೆ ಸಲ್ಲಿಸುತ್ತಿದ್ದರು. ಖಾಯಮ್ಮಾಗಿ ಚಪ್ಪರ ಇರುವ ಉದ್ದೇಶದಿಂದ ಭಕ್ತರು R.C.C  ಚಪ್ಪರ  ನಿರ್ಮಿಸಿದ್ದಾರೆ. ಈ ಚಪ್ಪರದ ಕೆಳಗೆ ಜೋಗತಿಯರು ಆಗಾಗ ಹಾಡಿ ಕುಣಿಯುವುದುಂಟು.

ಇತರ ಉಗ್ರ ದೇವತೆಗಳಂತೆ ಬಳ್ಳಾರಿ ದುರ್ಗಮ್ಮ ಮೂರ್ತಿಯ ರೂಪದಲ್ಲಿಲ್ಲ. ಸುಮಾರು ಆರು ಘೂಟು ಎತ್ತರದ ಕಮಾನಿನಾಕಾರದ ಹುತ್ತದ ವಿಶಿಷ್ಟ ರೂಪವೇ ದುರ್ಗಮ್ಮನ ಮೂಲರೂಪವಾಗಿದೆ. ಹುತ್ತವು ಮಧ್ಯಕ್ಕೆ ಉಬ್ಬಿದಂತಿದೆ. ಆ ಉಬ್ಬಿದ ಭಾಗಕ್ಕೆ ಬೆಳ್ಳಿಯ ಕಣ್ಣು, ಮೂಗು, ಮೀಸೆ ಸೇರಿಸಿ ಭವ್ಯ ಆಕಾರ ನೀಡಲಾಗಿದೆ. ಇದು ಉದ್ಭವ ಮೂರ್ತಿಯೆಂಬ ನಂಬಿಗೆಯಿದೆ.

ನಿತ್ಯ ಪೂಜೆ ಇಲ್ಲದೆ ತಿಂಗಳಿಗೆ ಎರಡು ಸಲ ವಿಶೇಷ ಪೂಜೆ ಮಾಡಲಾಗುವುದು. ಈ ಪೂಜಾ ವಿಶೇಷಕ್ಕೆ ಬಂಡಾರ ಪೂಜೆಯೆಂದು ಹೆಸರು. ಪೂಜಾರಿಗಳು ಅರಿಶಿಣ ಬೇರುಗಳನ್ನು ಮನೆಯಲ್ಲಿ ನೆನೆಸಿ ಕುಟ್ಟಿ ಸೋಸಿ ಬಂಡಾರ ತಯಾರಿಸುತ್ತಾರೆ. ಬಂಡಾರ ಪೂಜೆಯ ದಿನ ಈ ಬಂಡಾರ ಮತ್ತು ಕುಂಕುಮಗಳನ್ನು ಹಿರಿಯ ಅರ್ಚಕನು ಮಡಿಯಿಂದ ಗುಡಿಗೆ ತರುತ್ತಾನೆ. ಬೆಳ್ಳಿಯ ಆಭರಣಗಳನ್ನು ತೆಗೆದಿರಿಸಿ ಮೊದಲಿದ್ದ ಅರಿಷಿಣ ಕುಂಕುಮವನ್ನು ನಿಧಾನವಾಗಿ ಒರೆಸಿ ತೆಗೆದು ಸ್ವಚ್ಛಗೊಳಿಸಲಾಗುವದು. ಮೂರ್ತಿಯನ್ನು ಹಾಲಿನಿಂದ ತೊಳೆದು ಅಭಿಷೇಕ ಮಾಡಿ ಸಾಕಷ್ಟು ಎಣ್ಣಿ ಉಣಿಸಿ ಅರ್ಧಗಂಟೆ ಬಿಡುತ್ತಾರೆ. ಆಮೇಲೆ ಇಡೀ ಮೂರ್ತಿಗೆ ಕುಂಕುಮ ಲೇಪಿಸಿ ಮಧ್ಯಮಧ್ಯಕ್ಕೆ ಬಂಡಾರದ ದಪ್ಪಗೆರೆಗಳನ್ನು ಸೇರಿಸಿದಾಗ ಒಂದು ವಿಶಿಷ್ಟ ಆಕೃತಿ  ಮೂಡುತ್ತದೆ. ಬಹಳ ವರ್ಷಗಳಿಂದ ಹಾಲು, ಎಣ್ಣೆ ಉಂಡು ಉಂಡು ಹುತ್ತದ ಹೊರಮೈ ಕಲ್ಲಿನಂತೆ ಗಟ್ಟಿಯಾಗಿದೆ, ನುನುಪಾಗಿದೆ. ತೊಳೆದಾಗ ಕೆಸರಾಗುವ ಸಾಧ್ಯತೆಯೇ ಇಲ್ಲ. ಕುಂಕುಮ ಬಂಡಾರಗಳ ಲೇಪನ ಮುಗಿದ ಮೇಲೆ ಹಲವಾರು ಬೆಳ್ಳಿಯ ವಸ್ತುಗಳಿಂದ ಅಲಂಕರಿಸುತ್ತಾರೆ. ಐದು ಜತೆ ಹಸ್ತ, ಒಂದು ನಾಮ, ಒಂದು ಅಡ್ಡ ಪಟ್ಟಿ, ಮೂರು ಮೀಸೆಗಳು, (ದೊಡ್ಡ್ದು, ಅದರ ಮೇಲೆ ಸಣ್ಣದು, ಅದರ ಮೇಲೆ ಇನ್ನೂ ಸಣ್ಣದು ಹೀಗೆ ಒಂದರಮೇಲೊಂದರಂತೆ) ಹತ್ತು ಜತೆ ಕಣ್ಣು. ಸಾಲಾಗಿ ಮೂರು ಛತ್ರಿಗಳು ಇಷ್ಟನ್ನೂ ಕ್ರಮಬದ್ಧವಾಗಿ ಹೊಂದಿಸುತ್ತಾರೆ. ಉಳಿದ ಭಾಗಕ್ಕೆ ಒಮದು ಹಸ್ತದ ಪ್ರಮಾಣದಲ್ಲಿರುವ ಮೂವತ್ತು ಬೆಳ್ಳಿಯ ಚಿಕ್ಕ ಮಕಗಳನ್ನು (ದೇವಿಯ ಮುಖ) ಸೇರಿಸುತ್ತಾರೆ. ಕೆಳಭಾಗದಲ್ಲಿ ಚಾಮುಂಡಿಯ ಸಣ್ಣ ಮಕವೊಂದಿರುತ್ತದೆ.

ಪ್ರತಿದಿನ ಮುಂಜಾನೆ ಪೂಜೆ ನಡೆಯುತ್ತದೆ. ಭಕ್ತರು ಪ್ರತಿದಿನ ಬರುತ್ತಲೇ ಇರುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಹೆಚ್ಚಿನ ದಟ್ಟಣೆ ಇರುತ್ತದೆ. ಹುಣ್ಣಿಮೆ ಅಮವಾಸ್ಯೆ ದಿನ ಬೆಳತನಕ ಭಜನೆ ಮೇಳಗಳ ಸೇವೆ ನಡೆಯುತ್ತದೆ. ದುರ್ಗಮ್ಮನಿಗೆ ಇಡೀ ಬಳ್ಳಾರಿ ಜನ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರೂ ಕೌಲ ಬಜಾರದ ಗಣಿಗರು ಅವಳ ವಿಶೇಷ ಭಕ್ತರು. ದಸರೆಯ ದಿನ ಸಂಜೆ ಐದು ಗಂಟೆ ಸುಮಾರಿಗೆ ದುರ್ಗಮ್ಮನ ಪಾಲಿಕಿ ಹೊರಡುತ್ತದೆ. ಪಾಲಕಿಯಲ್ಲಿ ಉತ್ಸವ ಮೂರ್ತಿಯನ್ನು ಕೂಡ್ರಿಸಲಾಗಿರುತ್ತದೆ. ಪಾಲಕಿಯ ಮುಂದೆ ಡೊಳ್ಳು ಶಹನಾಯಿ ತಾಸೆ ಮುಂತಾದ ವಾದ್ಯಗಳಿರುತ್ತವೆ. ಪಾಲಕಿ ಕೌಲ ಬಜಾರದಲ್ಲಿ ಹೆಚ್ಚಿನ ವೇಳೆ ಕಳೆಯುತ್ತದೆ. ಭಕ್ತರ ಮನೆಗೇ ಬಂದು ದರ್ಶನ ಕೊಡುವುದಾಗಿ ದೇವಿ ಮಾತು ಕೊಟ್ಟಿದ್ದರಿಂದ ಇಂದಿನ ದಿನ ಹೀಗೆ ಸಂಚಾರ ಕೈಕೊಳ್ಳುತ್ತಾಳಂತೆ. ಮರುದಿನ ಸಂಜೆ ಐದು ಗಂಟೆಯ ಸುಮಾರಿಗೆ ಪಾಲಕಿ ಗುಡಿಗೆ ಬರುತ್ತದೆ. ಯುಗಾದಿಯ ದಿನ ಸಾಮಾನ್ಯವಾಗಿ ಎಲ್ಲ ಹಿಂದೂಗಳು ಗುಡಿಗೆ ಹೋಗಿ ನೈವೇದ್ಯ ಅರ್ಪಿಸುತ್ತಾರೆ. ಅಂದು ಗುಡಿಯಲ್ಲಿ ಜಾತ್ರೆಯ ವಾತಾವರಣ ಮೂಡಿರುತ್ತದೆ.

ಬಳ್ಳಾರಿ ದುರ್ಗಮ್ಮನಿಗೆ ಜಾತೆ, ಈ ನಾಡಿನಲ್ಲಿ ತುಂಬಾ ಹೆಸರಾದುದು. ಜಾತ್ರೆಗೆ ಇಡೀ ಬಳ್ಳಾರಿ ಜಿಲ್ಲೆಯಿಂದಲ್ಲದೆ ಸುತ್ತಮುತ್ತಿನ ಜಿಲ್ಲೆಗಳಿಂದಲೂ ಭಕ್ತರು ಬಂದು ಸೇರುತ್ತಾರೆ. ದುರ್ಗಮ್ಮನಿಗೆ ಸಂಬಂಧಿಸಿದ ಮಹತ್ವದ ಉತ್ಸವ – ಮತಾಚಾರಣೆ ಅಂದರೆ ಈ ಜಾತ್ರೆಯೇ. ಶಿವರಾತ್ರಿಯ ಅಮವಾಸ್ಯೆಯ ನಂತರ ಒಂಬತ್ತು ದಿನಗಳಲ್ಲಿ ಬರುವ ಮಂಗಳವಾರದಂದು ಜಾತ್ರೆ ಸೇರುತ್ತದೆ. ಕೌಲ ಬಜಾರದ ಗಾಣಿಗರು ಜಾತ್ರೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಒಂದು ವಾರ ಮೊದಲೇ ಸಿದ್ದತೆಗೆ ತೊಡಗುತ್ತಾರೆ. ಈ ಜಾತಿಯವರಿಗೆ ದುರ್ಗಮ್ಮನೇ ಆರಾಧ್ಯ ದೇವತೆ. ಇವರು ಕರ್ನಾಟಕದ ಲಿಂಗಾಯತ ಗಾಣಿಗರಲ್ಲ. ಆಂಧ್ರ ಮೂಲದ ವಿಶಿಷ್ಟ ಕುಲದವರು. ಮಾಂಸಾಹಾರಿಗಳು. ಸಿಡಿಬಂಡಿಯ ಎಲ್ಲಾ ಸಾಮಗ್ರಿಗಳು ಇವರಲ್ಲಿಯೇ ಇರುತ್ತವೆ. ಜಾತ್ರೆಯ ಹಿಂದಿನ ದಿನ ತಮ್ಮ ಮನೆಯಲ್ಲಿ ಅವಕ್ಕೆ ಪೂಜೆ ಸಲ್ಲಿಸಿ ದುರ್ಗಮ್ಮನ ಗುಡಿಗೆ ತಂದು ಇಡುತ್ತಾರೆ. ಸಿಡಿಬಂಡೆಯನ್ನು ರಥವೆಂದೂ ಕರೆಯುತ್ತಾರೆ.

ಜಾತ್ರೆಯ ದಿನ ಗುಡಿಯಲ್ಲಿ ಬೆಳಿಗ್ಗೆ ಪ್ರತಿದಿನದಂತೆ ಪೂಜೆ ನಡೆಯುತ್ತದೆ. ಗಾಣಿಗರು ಬಂದು ಸಿಡಿಬಂಡಿಯ ಬಿಡಿಸಾಮಗ್ರಿಗಳನ್ನು ಜೋಡಿಸಿ ಅಲಂಕಾರ ಮಾಡುವಷ್ಟೊತ್ತಿಗೆ ಸುಮಾರು ಹತ್ತು ಗಂಟೆಯಾಗುತ್ತದೆ. ಅಲ್ಲಿಂದ ಅವರೆಲ್ಲ ಉತ್ಸವದಲ್ಲಿ ಬ್ರೂಸ್ ಪೇಟೆಯಲ್ಲಿರುವ ಸಣ್ಣ ದುರ್ಗಮ್ಮನ ಗುಡಿಗೆ ಹೋಗುತ್ತಾರೆ. ಅಲ್ಲಿ ಕುಂಭಗಳನ್ನು ಪೂಜಿಸಿ ತೆಗೆದುಕೊಂಡು ಮೆರವಣಿಗೆಯಲ್ಲಿ ದುರ್ಗಮ್ಮನ ಗುಡಿಗೆ ಮರಳುತ್ತಾರೆ. ಈ ವೈಭವಪೂರ್ಣ ಉತ್ಸವ ಗುಡಿಗೆ ಬಂದು ತಲುಪಲು ಮೂರ್ನಾಲ್ಕು ಗಂಟೆ ಸಮಯಬೇಕು. ದಾರಿಯಲ್ಲಿ ಭಕ್ತರು ಕುಂಭಗಳಿಗೆ ಪೂಜೆ ಸಲ್ಲಿಸುವರು. ಮೆರವಣಿಗೆಯ ಮುಂದೆ ಅರ್ಚಕ ವರ್ಗದವರು ದೇವಿಯ ಬಿರುದಾವಳಿಗಳನ್ನು ಸ್ತುತಿ ಪಾಠಗಳನ್ನು ವೀರಾವೇಶದಿಂದ ಹೇಳುತ್ತಾರೆ. ಈ ಸ್ತುತಿ ಪಾಠಗಳಿಗೆ “ಖಡ್ಗ” “ದಂಡಕ” ಎಂದು ಹೆಸರು.ಇವನ್ನು ಹೇಳುವ ವಿಧಾನ ಪುರವಂತರು ಹೇಳುವ ವೀರಭದ್ರದೇವರ ಒಡಪುಗಳನ್ನು ಬಹಳಷ್ಟು ಹೋಲುತ್ತದೆ. ಒಂದು ಖಡ್ಗ ಮುಗಿದ ಕೂಡಲೇ ಒಂದು ತೆಂಗಿನ ಕಾಯಿ ಒಡೆಯುತ್ತಾರೆ. ಅರ್ಚಕರು ಮತ್ತು ಖಾಸಾ ಭಕ್ತರಾದ ಗಾಣಿಗರು ಆಂಧ್ರ ಮೂಲದವರಾದುದರಿಂದ ಈ ಖಡ್ಗಗಳು ತೆಲುಗಿನಲ್ಲಿವೆ. ಅಂಥ ಒಂದು ಖಡ್ಗ ಹೀಗೆದೆ. –

ಅಂಬಾ ಪರಾಕೇ ಪರಾಕೇ
ಬಹು ಪರಾಕೇ
ಮುಕ್ಕೋಟಿ ದೇವತಲಕು
ಮುಲ್ಲೋಕ ಮುಲಕು
ಮುಕ್ತಿನೊಸಗು ದೇವತವು
ಬ್ರಹ್ಮ ವಿಷ್ಣು ಮಹೇಶ್ವರಲುಕು
ಆದಿ ದೇವತವು ನೀವೆ ಕದ
ಡಬ್ಬೈಯ್ಯಾರು ದೇಶಮುಲಲೋ
ಅರವೈಯ್ಯಾರ ಪಾಳ್ಯಮುಲ ಲೋ
ಪರವಿದ್ಯಕು ಗುರು ವಿದ್ಯಕು
ಆದಿ ಮಾತಾವು ನೀವೆ ಕದ
ರಣಕ್ಷೇತ್ರಮುಲಲೋ
ಕನಬರಿಚಿತವೇ
ಮಹಾಶಕ್ತಿಯುತ್ತಲು ದುರ್ಗಾ ಚಾಮುಂಡೀ
ಉಪ್ಪಚಪ್ಪಡೇನ ಚರುಕು ಚೇದೈನ
ರವಿಚಂದ್ರ ಗತುಲು ಗತಿ ತಪ್ಪಿನನ್
ನೀವು ಮಾಕೊ ಸಂಗಿನ
ವರಮುಲು ತಪ್ಪವದ್ದಮ್ಮಾ
ಬಳ್ಳಾರಿ ಕನಕ ದುರ್ಗಾ
ನಮಸ್ತೇ ನಮಸ್ತೇ ನಮಃ

ಈ ಖಡ್ಗಗಳನ್ನು ವಿಶೇಷ ಉತ್ಸವಗಳಲ್ಲಿ. ಪೂಜಾ ಸಮಯದಲ್ಲಿ ಕೂಡ ಹೇಳಲಾಗುತ್ತದೆ.

ಮಧ್ಯಾಹ್ನ ಎರಡು ಗಂಟೆಗೆ ಕುಂಭೋತ್ಸವ ಗುಡಿಗೆ ತಲುಪುವುದು ಕುಂಭಗಳಿಗೆ ಪೂಜೆ ನಡೆಯುತ್ತದೆ. ಈ ಪೂಜೆ ಮುಗಿದ ಕೂಡಲೇ ಗುಡಿಯ ಎದುರು ನಿರ್ದಿಷ್ಟ ಸ್ಥಳದಲ್ಲಿ ಕೋಣದ ಬಲಿಕೊಟ್ಟು ಕತ್ತರಿಸಲ್ಪಟ್ಟ ಕೋಣನ ತಲೆಯ ಮೇಲೆ ದೀಪ ಉರಿಸುತ್ತಿದ್ದರಂತೆ. ಬಹಳ ವರ್ಷಗಳಿಂದ ಈ ಕೋಣನ ಬಲಿ ನಿಂತಿದೆ. ಪ್ರಾಣಿಯ ಬಲಿಯನ್ನು ನಿರ್ಭಂಧಿಸಲಾಗಿದ್ದರೂ ಈ ಸಂದರ್ಭಗಳಲ್ಲಿ ಗುಡಿಯ ಸಮೀಪ ಕೋಣಕ್ಕೆ ಬದಲಾಗಿ ಕುರಿಕೋಳಿಗಳನ್ನು ಬಲಿ ನೀಡುತ್ತಾರೆ.

ಇದೆಲ್ಲ ಮುಗಿದ ಮೇಲೆ ಕೇವಲ ಗಾಣೀಗರಿಗಾಗಿಯೇ ವಿಶೇಷ ಪೂಜೆ ನಡೆಯುತ್ತದೆ. ಆಗ ಮಂಟಪದ ಬಾಗಿಲನ್ನು ಹಾಕಿ ಒಳಗೆ ಬೇರೆಯವರನ್ನು ಬಿಡುವುದಿಲ್ಲ. ಗಾಣಿಗರು ದೇವಿಗೆ ಮಾಂಸದ ನೈವೇದ್ಯ ಅರ್ಪಿಸುತ್ತಾರೆ. ಅವರು ತಂದ ಹೊಸ ಸೀರೆಗಳನ್ನು ಅರ್ಚಕರು ದೇವರಿಗೆ ಮುಟ್ಟಿಸಿಕೊಡುತ್ತಾರೆ. ನಂತರ ಇತರ ಭಕ್ತರು ನೈವೇದ್ಯ ಹರಕೆ ಅರ್ಪಿಸುತ್ತಾರೆ. ಇದು ಹಾಗೇ ನಡೆದಿರುತ್ತದೆ.

ಕಡೆಗೆ ಜಾತ್ರೆಯ ಮುಖ್ಯ ಅಂಗಾವಾದ “ಸಿಡಿ” ಪ್ರಾರಂಭವಾಗುತ್ತದೆ.  ಬಳ್ಳಾರಿ ದುರ್ಗಮ್ಮನ ಸಿಡಿ ಈ ಪ್ರದೇಶದಲ್ಲಿ ಬಹಳಷ್ಟು ಪ್ರಚಾರಗಳಿಸಿದೆ. ಸಿಡಿನೋಡಲು ಅಂದಾಜು ಒಂದು ಲಕ್ಷ ಜನ ಸೇರುತ್ತಾರೆ. ಸಿಡಿ ಬಂಡಿಯ ತುದಿಗೆ ಸುಮಾರು ನಾಲ್ಕು ಫೂಟು ಚೌರಸದ ಒಂದು ಚೌಕಟ್ಟನ್ನು ತೂಗು ಬಿಟ್ಟಿರುತ್ತಾರೆ. ಅದರ ಮಧ್ಯದಲ್ಲಿ ಒಂದು ಅಲಂಕೃತ ಪುರುಷ ಬೊಂಬೆ ಜೋತು ಬಿಡುವರು. ಮೊದಲು ಮನುಷ್ಯರೇ ಸಿಡಿಯಾಡುವ ಕಾಲವೊಂದಿತ್ತು. ಬಹಳ ಹಿಂದಿನಿಂದ ಈ ಕ್ರಮನಿಂತಿದೆ. ಈ ತಲೆಮಾರಿನವರಾರೂ ಇದನ್ನು ಕಂಡಿಲ್ಲ- ಕೇಳಿಲ್ಲ. ಈಗ ಮನುಷ್ಯನ ಜಾಗಾದಲ್ಲಿ ಬೊಂಬೆ ಕಟ್ಟುತ್ತಾರೆ. ಸಿಡಿಬಂಡಿ ಗುಡಿಗೆ ಮೂರು ಸುತ್ತ ಪ್ರದಕ್ಷಿಣೆ ಹಾಕುತ್ತದೆ. ಈ ಸಂದರ್ಭದಲ್ಲಿ ಬಂಡಿಗೆ ಎತ್ತುಗಳನ್ನು ಕಟ್ಟುತ್ತಾರೆ. ಇಂಥಿಂಥವರ ಮನೆಯ ಎತ್ತುಗಳನ್ನೇ ಕಟ್ಟಬೇಕೇಂದು ಸಾಂಪ್ರದಾಯಿಕ ಕಟ್ಟಳೆ ಇದೆ. ಬಲಿಷ್ಠ ಎತ್ತಿನ ಜೋಡಿಗಳನ್ನು ಒಂದು ವಾರದಿಂದಲೇ ಪೂಜೆವ್ರತಗಳಿಂದ ಪರಿಶುದ್ಧಗೊಳಿಸುತ್ತಾರೆ. ಒಂದು ಸುತ್ತಿಗೆ ಒಂದು ಜೊತೆಯನ್ನು ಬದಲಾಯಿಸುತ್ತಾರೆ.

ದುರ್ಗಮ್ಮನ ಗುಡಿಯ ಪೂಜಾರಿಗಳು ಆಂಧ್ರ ಮೂಲದವರು. ಇವರೇ ಈ ಗುಡಿಯ ಧರ್ಮದರ್ಶಿಗಳಾಗಿರುವದು ಗಮನಾರ್ಹ ಸಂಗತಿಯಾಗಿದೆ. ಈ ಧರ್ಮದರ್ಶಿತ್ವದ ಹಕ್ಕಿಗಾಗಿ ಅವರು ೧೮೧೭ ಮತ್ತು ೧೯೬೮ ಹೀಗೆ ಎರಡು ಸಲ ನ್ಯಾಯಾಲಯದಲ್ಲಿ ವಾದಿಸಿ ಜಯಪಡೆದಿದ್ದಾರೆ. ಗುಡಿಗೆ ಆಸ್ತಿ ದತ್ತಿ ಇಂಥವೇನೂ ಇಲ್ಲ. ಭಕ್ತರ ಕಾಣಿಕೆಯೇ ಇಲ್ಲಿಯ ವರಮಾನ. ಅರ್ಚಕರು ತಾವು ಯಾದವ ವಂಶದವರೆಂದು ಹೇಳಿಕೊಳ್ಳುತ್ತಾರೆ. ಇವರು ಏಕಲಿಗೊಲ್ಲ ಜಾತಿಯವರು. ಇವರಲ್ಲಿ ಜನ್ನೆ ಮತ್ತು ಬೀರೆ ಎಂಬ ಗೋತ್ರಗಳಿವೆ. ಆಶ್ಚರ್ಯವೆಂದರೆ ಅಸಂಖ್ಯಾತ ಕುಟುಂಬಗಳಿಗೆ ಬಳ್ಳಾರಿ ದುರ್ಗಮ್ಮ ಮನೆ ದೇವರಾಗಿರುವಾಗ ಅವಳ ಪೂಜಾರಿಗಳ ಮನೆದೇವರು ತಿರುಪತಿ ವೆಂಕಟರಮಣ. ಇವರುಹೆಚ್ಚಾಗಿ ವೈಷ್ಣವ ಸಂಪ್ರದಾಯಗಳನ್ನೂ ಅನುಸರಿಸುತ್ತಾರೆ. ಮದುವೆಯಲ್ಲಿ ಬ್ರಾಹ್ಮಣ ಪುರೋಹಿತರನ್ನು ಶ್ರಾದ್ಧ ಮುಂತಾದ ಕಾರ್ಯಗಳಿಗೆ ದಾಸಪ್ಪಗಳನ್ನು ಕರೆಯುತ್ತಾರೆ. ಮಾಂಸಾಹಾರದ ಬಳಕೆಯಿದೆ.

ಪೂಜಾರಿಗಳ ಐದು ಕುಟುಂಬಗಳಿವೆ. ಒಬ್ಬೊಬ್ಬರ ಪೂಜಾರಿಕೆಯ ಅವಧಿ ಹತ್ತು ವಾರಗಳು. ಈ ಸರದಿ ಮಂಗಳವಾರದಂದು ಬದಲಾಗುತ್ತದೆ. ಪ್ರತಿಯೊಬ್ಬರ ಹತ್ತಿರ ಈ ಮೊದಲು ಹೇಳಿರುವ ಬೆಳ್ಳಿಯ ಸಾಮಗ್ರಿಗಳಿರುತ್ತವೆ. (ಕಣ್ಣು, ಮಕ, ಛತ್ರಿ ಇತ್ಯಾದಿ). ತಮ್ಮ ಸರದಿ ಬಂದಾಗ ತಮ್ಮಲ್ಲಿಯ ಸಾಮಾನುಗಳನ್ನು ತಣದು ಸೇರಿಸುತ್ತಾರೆ, ಸರದಿ ಇಲ್ಲದಾಗ ಅವನ್ನು ತಮ್ಮ ಮನೆಯ ದೇವರ ಜಗಲಿಯ ಮೇಲಿಟ್ಟು ಪೂಜಿಸುತ್ತಾರೆ, ಒಊಜಾರಿಗಳ ಪೂರ್ವಜರ ಸಮಾಧಿಗಳು ಗುಡಿಯ ಪಕ್ಕದಲ್ಲಿವೆ. ತಿಂಗಳಿಗೊಮ್ಮೆ ಅಂದರೆ ಪ್ರತಿ ನಾಲ್ಕನೇ ಬುಧವಾರ ಹಿರಿಯರ ಸಮಾಧಿಗಳ ಪೂಜೆಯದ ಮೇಲೆ ದುರ್ಗಮ್ಮನ ಮಂಗಳಾರತಿ ನಡೆಯುತ್ತದೆ.

ದುರ್ಗಮ್ಮನ ಬಗ್ಗೆ ಬೇರೆ ಹಾಡುಗಳಳಿಲ್ಲ, ಇಲ್ಲಿರುವ – ಬಂದು ಹೋಗುವ ಜೋಗತಿಯರು ಎಲ್ಲಮ್ಮ ಹುಲಗಮ್ಮರನ್ನು ಕುರಿತು ಮಾತ್ರ ಹಾಡುತ್ತಾರೆ. ಅರ್ಚಕರು ಹೇಳುವ ಬಹಳಷ್ಟು ಹಾಡುಗಳು ಒಟ್ಟಾರೆ ದೇವಿಸ್ತುತಿಯಾಗಿರುತ್ತವೆ. ದುರ್ಗಮ್ಮನನ್ನೆ ಕುರಿತು ಹಾಡುವ ಕೆಲವು ತೆಲುಗು ಹಾಡುಗಳಿವೆ. ಉದಾಹರಣೆಗೆ ಒಂದನ್ನಿಲ್ಲಿ ಗಮನಿಸಬಹುದು.

ಬಾವುಗವರಮಿಯವಮ್ಮ
ಬಳ್ಳಾರಿಕನಕದುರ್ಗಮ್ಮ ||
ದರಲೋ ಪುಲಮಿವವಮ್ಮ
ದಾರುದ್ರುಲೇ ವೆಲುದವಮ್ಮ         ||  ೧  ||

ಯಾಟ ಯಾಟ ಸಿಡಿ ಬಂಡ್ಲು
ಬಹು ಜೋಗುತ ಕುಂಕುಮ ಬಂಡ್ಲು  ||  ೨  ||

ಯಾಟುಲು ಕೋಕುಲು
ಲೋಕುಲು ಮೆಚ್ಚಿನ                  ||  ೩  ||
ಬೊಟ್ಟ ಬೋನಮುಲು ನೀಕು
ಪಾಟ್ಟು ಪೀತಾಂಬ್ರುಲು ನೀಕು[3]      ||  ೪  ||


[1]      Mysore Gazetteer, Bellary Dist ., 1972, P. 1,2.

[2]     ಹೆಚ್ಚಿನ ವಿವರಗಳಿಗೆ – “ಬಳರಿ (ಬಳ್ಳಾರಿ) – ಉಗ್ರ ಹೆಣ್ಣು ದೇವತೆ” – S.S. ಹಿರೇಮಠ – ಸಾಧನೆ ೭-೨

[3]     ಈ ಪ್ರಬಂಧ ಸಿದ್ಧ ಪಡಿಸಲು ಬಹಳಷ್ಟು ವಿಷಯ ತಿಳಿಸಿ ಉಪಕರಿಸಿದ ದುರ್ಗಮ್ಮನ ಅರ್ಚಕರ ಮನೆತನದವರಾದ ಶ್ರೀ ಪಿ. ಎಂ. ಗೋವಿಂದರಾಜು ಅವರಿಗೆ ಕೃತಜ್ಞನಾಗಿರುವೆ.