ಗ್ರಾಮಗಳು ಪ್ರಾಚೀನತೆ : ಗ್ರಾಮಗಳು ನಾಗರಿಕತೆಯ ತೊಟ್ಟಿಲು ಎಂದು ಸಮಾಜ ವಿಜ್ಞಾನಿಗಳು ವರ್ಣಿಸಿದ್ದಾರೆ. ಇಂತಹ ಗ್ರಾಮಗಳು ರೂಪುಗೊಂಡಿದ್ದು ಮಾನವ ಬದುಕಿನ ಬೆಳವಣಿಗೆಯ ಹಂತದಲ್ಲಿ ಒಂದು ಮಹತ್ವದ ಘಟ್ಟ. ಅದು ಸಾಧ್ಯವಾದದ್ದು. ಅಲೆಮಾರಿಯಾದ ಆದಿಮಾನವನ ಒಂದೆಡೆ ನಿಲ್ಲುವಂತಾದಾಗ, ಅಂದರೆ ಅತ ಕೃಷಿಕನಾದಾಗ ಇದಾದದ್ದು ಕ್ರಿ.ಪೂ ೧೦ ಸಾವಿರದ ಸುಮಾರಿಗೆ, ಅಂದರೆ, ನವಶಿಲಾಯುಗದ ಘಟ್ಟದಲ್ಲಿ. ಗೆಂದು ಸಮಾಜವಿಜ್ಞಾನಿಗಳ ಊಹೆ ಏಕೆಂದರೆ ಅದರ ಬಗೆಗೆ ಖಚಿತ ಪುರಾವೆ ದೊರೆತಿಲ್ಲ. ಆದರೆ, ಖಚಿತವಾಗಿ ತಿಳಿದು ಬಂದಿರುವಂತೆ ಸು. ಕ್ರಿ. ಪೂ. ೬.೫೦೦ ರಲ್ಲಿ ಗ್ರಾಮಗಳು ಊದಿಸಿದವು. ಅದೂ ಇರಾಕಿನಲ್ಲಿ ಪ್ರಪಂಚದ ಅತಿ ಪ್ರಾಚೀನ ಗ್ರಾಮಗಳು ರೂಪುಗೊಂಡವು. ಭಾರತದಲ್ಲಿ ಅದೇ ಕಾಲಕ್ಕೆ ಊರುಗಳು ಹುಟ್ಟಿಕೊಂಡಿರಬಹುದು ಎಂಬ ಊಹೆ ಇದೆ. ಏಕೆಂದರೆ ವೇದಗಳಲ್ಲಿ ಅತೀ ಪ್ರಾಚೀನದ್ದಾದ ಋಗ್ವೇದದ ಕಾಲಕ್ಕಂತೂ ಭಾರತದಲ್ಲಿ ಗ್ರಾಮಗಳು ಪೂರ್ಣವಾಗಿ ವಿಕಸಿತಗೊಂಡದ್ದರ ಬಗೆಗೆ ಸೂಚನೆಗಳಿವೆ. ( ನಾಗೇಶ ೧೯೮೮ – ೪೯)

ಗ್ರಾಮದ ವ್ಯಾಖ್ಯ :

ಪುರಾಣ ಕರ್ತೃಗಳಿಂದ ಹಿಡಿದು ಆಧುನಿಕ ಸಮಾಜ ವಿಜ್ಞಾನಿಗಳವರೆಗೆ ಗ್ರಾಮ ಎಂದರೇನು ಎಂಬುದನ್ನು ವಿವರಿಸುವ ಪ್ರಯತ್ನಗಳು ನಡೆದಿವೆ. ಮಾದರಿಗಾಗಿ ಕೆಲವೇ ಕೆಲವನ್ನು ಇಲ್ಲಿ ಗಮನಿಸಬಹುದು.

ಮಹಾಭಾರತದ ಪ್ರಕಾರ ಸ್ಥಳೀಯ ಸಮೂಹಗಳ ರಕ್ಷಣೆಗಾಗಿ ಕೋಟೆಗಳನ್ನು ನಿರ್ಮಿಸಲಾಗಿತ್ತು. ಕೋಟೆಯ ಸುತ್ತಮುತ್ತಲು ವಾಸಿಸುತ್ತಿದ್ದ ಜನರ ಗುಂಪುಗಳನ್ನು ಹಳ್ಳಿ ಎಂದು ಕರೆಯಲಾಗುತ್ತಿತ್ತು. (ನಾರಾಯಣ, ವಿಶ್ವ ೧೯೮೬ : ೧೬೮). ಮಾರ್ಕಂಡೇಯ ಪುರಾಣದ ಪ್ರಕಾರ ಗ್ರಾಮ ಎಂಬುದ ಶೂದ್ರರು ಹೆಚ್ಚು ಸಂಖ್ಯೆಯಲ್ಲಿರುವ, ರೈತರು ಸಮೃದ್ಧವಾಗಿರುತ್ತವೆ. ಸಾಗುವಳಿ ಯೋಗ್ಯವಾದ ಭೂಮಿಯ ಮಧ್ಯದಲ್ಲಿರುವ ಜನವಸತಿ. ಆದರೆ ಕೌಟಿಲ್ಯನು ಗ್ರಾಮವನ್ನು ಸಂಖ್ಯಾ ವಿವರದೊಂದಿಗೆ, ವ್ಯಾಖ್ಯಾನಿಸುವ ಪ್ರಯತ್ನವನ್ನು ಅರ್ಥಶಾಸ್ತ್ರದಲ್ಲಿ ಮಾಡಿದ್ದಾನೆ. ಆ ಪ್ರಕಾರ.

ನೂರಕ್ಕೆ ಕಡಿಮೆ ಇಲ್ಲದಷ್ಟು ಆದರೆ, ಐದುನೂರಕ್ಕೆ ಮೀರದಷ್ಟು ಶೂದ್ರರಾದ ಕೃಷಿಕರ ಕುಟುಂಬಗಳಿರುವ, ಒಂದು ಕ್ರೋಶ ಅಳತೆಯ ದೂರದವರೆಗೆ ಹರಡಿರುವ, ಹಾಗೂ ನದಿ, ಪರ್ವತ, ಕಾಡು, ಹೂ ಬಿಡುವ ಮರಗಳಿಂದ ಕೂಡಿದ ಮೇರೆಗಳಿರುವ ಮತ್ತು ತಮ್ಮನ್ನು ತಾವೇ ಸುರಕ್ಷಿಸಿಕೊಳ್ಳಬಲ್ಲ ಜನವಸತಿಯೇ ಗ್ರಾಮ.

ಈ ರೀತಿಯ ವಿವರಣೆಗಳು ಇಂದು ಅಸ್ತಿತ್ವದಲ್ಲಿರುವ ಎಲ್ಲಾ ಹಳ್ಳಿಗಳಿಗೂ ಅನ್ವಯವಾಗಲಾರವು ಎಂಬುದು ಮೇಲ್ನೋಟಕ್ಕೆ ನಮ್ಮ ಅರಿವಿಗೆ ಬರುತ್ತದೆ. ಬಹುಶಃ ಆ ಕಾಲಕ್ಕೂ ಇವು ಪರಿಪೂರ್ಣ ವಿವರಣೆಗಳಾಗಿರಲಾರವು, ಅಂತೆಯೇ ಸಂದರ್ಭಕ್ಕೆ ತಕ್ಕಂತೆ ವಿವರಿಸಲು ಆಧುನಿಕ ಅಧ್ಯಯನಕಾರರು ಪ್ರಯತ್ನ ನಡೆಸಿದ್ದರೂ ಅದೂ ತೃಪ್ತಿಕರವಾಗಿ ಆಗಿಲ್ಲ. ಏಕೆಂದರೆ ಎಲ್ಲಾ ಹಳ್ಳಿಗಳು ಒಂದೇ ರೀತಿ, ಸ್ವಭಾವ, ಸ್ವರೂಪಗಳನ್ನು ಹೊಂದಿಲ್ಲದಿರುವುದೇ ಇದಕ್ಕೆ ಕಾರಣ. ಆದರೂ, ಕಂದಾಯ ಸಂಗ್ರಹ ಮತ್ತಿತರ ಆಡಳಿತಾತ್ಮಕ ಸೌಕರ್ಯಕ್ಕೆ ಸರ್ಕಾರ ಒಂದು ಚೌಕಟ್ಟು ಹಾಕಿಕೊಳ್ಳಬೇಕಾಗುತ್ತದೆ. ಅಂತೆಯೇ ೧೯೭೧ ರ ಜನಗಣತಿಯ ಪ್ರಕಾರ ಸರಕಾರ ಗ್ರಾಮವನ್ನು ಗುರುತಿಸಿಕೊಂಡ ಬಗೆ ಇದು.

ಆಡಳಿತದ ದೃಷ್ಟಿಯಿಂದ ಮೇರೆಗಳನ್ನು ಗುರುತಿಸಿದ, ಹಾಗೂ ಜನವಸತಿ ಇರಲಿ, ಬಿಡಲಿ ಪ್ರತ್ಯೇಕವಾದ ಭೂ ದಾಖಲೆಗಳನ್ನುಳ್ಳ ಹಾಗೂ ಇರುವ ಜನಸಂಖ್ಯೆಯ ಒಂದು ಅಥವಾ ಎರಡು ಅಥವಾ ಹೆಚ್ಚು ಕೊಪ್ಪಲುಗಳಲ್ಲಿ (ಹ್ಯಾಪ್ಲುಟ್ಟಾಗಳು) ಹರಡಿ ಹರಡಿ ಹೋಗಿರುವ ಸಮುದಾಯ (ನಾಗೇಶ : ೧೮೮). ಇಲಿ ಜನವಸತಿ ಇಲ್ಲದಿದ್ದರೂ ಪ್ರತ್ಯೇಕ ದಾಖಲೆವುಳ್ಳ ಘಟಕವನ್ನು ಒಂದು ಗ್ರಾಮವೆಂಬತೆ ಪರಿಗಣಿಸುವದನ್ನು ನೋಡುತ್ತೇವೆ. ಜಾನಪದ ಅಧ್ಯಯನದಲ್ಲಿ ಇದು ಉಪಯೋಗಕ್ಕೆ ಬರಲಾರದು. ಏಕೆಂದರೆ, ಮನುಷ್ಯ ಇರದೆ ಗ್ರಾಮ ಇದ್ದೀತು. ಆದರೆ, ಮನುಷ್ಯ ಇರದೆ ಜಾನಪದ ಇರಲಾರದು. ಆದ್ದರಿಂದ, ನಾವು ತುಸು ಭಿನ್ನವಾದ ವ್ಯಾಖ್ಯೆಯನ್ನು ಹೀಗೆ ನೀಡಬೇಕಾಗುತ್ತದೆ.

ಒಂದು ಅಥವಾ ಒಂದಕ್ಕಿಂತ ಹೆಚ್ಚು ಮನೆಗಳಿರುವ, ವ್ಯವಸಾಯದಂತಹ ಒಂದು ಅಥವಾ ಹೆಚ್ಚು ವೃತ್ತಿ ಅವಲಂಬಿಸಿರುವ ಜನ ಅಥವಾ ಜನಸಮೂಹವನ್ನೊಳಗೊಂಡ, ತನ್ನದೆ ಭೂಮಿ, ಗಡಿಯನ್ನುಳ್ಳ ಹಾಗೂ ಆ ನಿವಾಸಿಗಳ ದಿನಿತ್ಯದ ಅಗತ್ಯಗಳನ್ನು ಈಡೇರಿಸುವ ನೀರಿನ ಸೌಲಭ್ಯವನ್ನುಳ್ಳ – ಒಂದು ಸ್ವತಂತ್ರ ಘಟಕವನ್ನು ಗ್ರಾಮವೆಂದು ಪರಿಗಣಿಸಬಹುದು. ( ಈ ಜನಸಮುದಾಯದ ಆಚಾರ, ಸಂಪ್ರದಾಯ ಮೊದಲಾದ ಜಾನಪದ ಅಂಶಗಳು ಇದರೊಳಗೇ ಅಂತರ್ಗತವಾಗಿರುತ್ತದೆ. ಎಂಬುದು ಇಲ್ಲಿ ಅಧ್ಯಾಹಾರ)

“ಮನೆ” ಯ ಹಾಗೆ ಗ್ರಾಮದ ನಿರ್ಮಾಣದಲ್ಲೂ ಹಲವು ಸಂಗತಿಗಳ ಸ್ವಭಾವ/ಒತ್ತಡ ಅಲ್ಲಿನವರ ಮೇಲೆ ಇರುತ್ತದೆ. ಒಂದು ಗ್ರಾಮದ ವಿನ್ಯಾಸ ಕುರಿತು ಚಿಂತಿಸುವಾಗ ಆ ಗ್ರಾಮ ನಿರ್ಮಾಣವಾಗಿರುವ ಸ್ಥಳದ ಹವಾಗುಣ ಭೂಗುಣ; ಅಲ್ಲಿನ ಪ್ರಾಕೃತಿಕ ಸಂಪತ್ತುಗಳ ವಿವರಗಳನ್ನೂ ಅಗತ್ಯವಾಗಿ ಗಮನಿಸಬೇಕಾಗುತ್ತದೆ. ಹಾಗೆಯೇ. ಅಲ್ಲಿನ ನಿವಾಸಿಗಳ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಹಾಗೂ ಆಡಳಿತಾತ್ಮಕ ಸ್ಥಿತಿಗಳನ್ನೂ ಗಮನಿಸಬೇಕಾಗುತ್ತದೆ. ಜೊತೆಗೆ ಅಲ್ಲಿನ ಸ್ಥಳಾವಕಾಶ ಹಾಗೂ ಕುಟುಂಬಗಳ ಸಂಖ್ಯೆ, ಜನಸಂಖ್ಯೆಯನ್ನೂ ಲಕ್ಷಿಸಬೇಕಾಗುತ್ತದೆ. ಈ ಎಲ್ಲಾ ಅಗತ್ಯಗಳಿಗೆ ಅಲ್ಲಿನ ಜನ ಪ್ರತಿಕ್ರಿಯಿಸಿದ ರೀತಿಯೇ ಆ ಊರು ಮನೆಯ ವಿನ್ಯಾಸ ಆಗಿರುತ್ತದೆ.

ದಕ್ಷಿಣ ಕರ್ನಾಟಕದಲ್ಲಿ “ಗ್ರಾಮಕ್ಕೆ” ಇರುವ ಕೆಲವು ಪರ್ಯಾಯ ನಾಮಗಳೆಂದರೆ ಹಳ್ಳಿ, ಊರು, ಪಾಳ್ಯ, ಅಗ್ರಹಾರ, ಕೊಪ್ಪಲು, ದೊಡ್ಡಿ, ಹಟ್ಟಿ ಮೊದಲಾದುವು. ಈ ಹೆಸರುಗಳೇ ಆ ಗ್ರಾಮಗಳ ಗಾತ್ರವನ್ನೂ, ಜನಪದ ವರ್ಗವನ್ನೂ ಅಲ್ಲಿನ ಗ್ರಾಮ/ಮನೆಯ ವಿನ್ಯಾಸವನ್ನೂ ಸೂಚಿಸುತ್ತಿರುತ್ತದೆ ಎಂದರೆ ಅತಿಶಯೋಕ್ತಿಯಾಗದು.

ಹಿಂದಿನವರು ಹಲವು ಕಾರಣಗಳಿಗಾಗಿ ಒಂದೆಡೆಯಿಂಧ ಇನ್ನೊಂದೆಡೆಗೆ ಹೋಗಿ ಮನೆ ಕಟ್ಟಿಕೊಳ್ಳುತ್ತಿದ್ದರು. ” ತರಗು ಗುಡಿಸಿ ಗುಡಿಸಲು ಕಟ್ಟು” ಎಂಬರ್ಥದ ನುಡಿಗಟ್ಟಿನಲ್ಲಿ ಸಂದಿನ ಆ ಚಿತ್ರ ಅಡಕವಾಗಿದೆ. ಅದು, ಕಾಡಿನ ಪರಿಸರದಲ್ಲಿ ಮನುಷ್ಯವಾಸಕ್ಕೆ ತೊಡಗುತ್ತಿದ್ದುದನ್ನು ಸೂಚಿಸುತ್ತದೆ. ಫಲವತ್ತಾದ ಜಮೀನನ್ನು ಆತ ಆರಿಸಿ ಹೋಗೊತ್ತಿದ್ದುದೇ ಇದಕ್ಕೆ ಕಾರಣವಿರಬಹುದು. ಆದರೆ, ಬರೀ ಫಲವತ್ತಾದ ಜಮೀನು ಇದ್ದಷ್ಟಕ್ಕೆ ಜೀವನ ಆಗುವುದಿಲ್ಲ. ದಿನ ನಿತ್ಯದ ಅಗತ್ಯಕ್ಕೆ ಜಲ ಸೌಲಭ್ಯವು ಇರಬೇಕು. ಆದ್ದರಿಂದ, ನೀರು ಪ್ರಾಕೃತಿಕವಾಗಿ ಯಥೇಚ್ಚವಾಗಿ ದೊರೆಯುವ ನದಿ, ಹೊಳೆಗಳ ದಡದಲ್ಲಿ ಊರುಗಳು ನಿರ್ಮಾಣ ಆಗುತ್ತಿದ್ದುದು ಸಹಜ. ಆದರೆ, ಮುಂದೆ ತಾನೇ ಬಾವಿ, ಕೆರೆ, ಕಟ್ಟೆಗಳ ನಿರ್ಮಾಣ ಮಾಡುವುದನ್ನು ಕಲಿತಾಗ ಬಯಲು ಪ್ರದೇಶದಲ್ಲಿ ಆತ ಮನೆ ಕಟ್ಟಿ ವಾಸಿಸುವದು ಸಾಧ್ಯವಾಯಿತು. ಜನಸಂಖ್ಯೆಯ ಹೆಚ್ಚಳ. ಕೃಷಿ ಯೋಗ್ಯ ಭೂಮಿಯ ಅಭಾವವೂ ಇದಕ್ಕೆ ಕಾರಣವಾಗಿರಬೇಕು.

ಊರು ಎಂದರೆ ಅದರ ಎಲ್ಲಾ ಮನೆಗಳೂ ಎಕಕಾಲಕ್ಕೆ ಅಲ್ಲಿ ರೂಪುಗೊಂಡಿದ್ದು ತೀರಾ ಕಡಿಮೆ. ಮೊದಲು ಯಾರೋ ಒಬ್ಬ ಒಂದು ಸ್ಥಳದಲ್ಲಿ ಒಂದು ಮನೆ ಕಟ್ಟಿಕೊಂಡು ವಾಸಕ್ಕೆ ತೊಡಗಿದ ಮೇಲೆ ಅಲ್ಲಿನ ಸೌಲಭ್ಯಗಳನ್ನು ಗಮನಿಸಿ ಇತರ ಸ್ಥಳಗಳಿಂದ ಬೇರೆ ಬೇರೆಯವರು ಬಂದು ಅಲ್ಲಿ ತಾವೂ ಮನೆ ಕಟ್ಟಿ ವಾಸಕ್ಕೆ ತೊಡಗುವುದುಂಟು. ಹೇಗೆ ಕ್ರಮೇಣ ಊರು ಆಗುತ್ತದೆ. ಕೆಲವೊಮ್ಮೆ. ಈ ಮೊದಲು ಬಂದ ವ್ಯಕ್ತಿಯೇ ತನ್ನ ಸುರಕ್ಷಿತ ಹಾಗೂ ಅನುಕೂಲಕ್ಕಾಗಿ ತನ್ನ ಕುಲಸ್ಥರನ್ನೋ ಅಥವಾ ಕೃಷಿಯ ಸಹಾಯಕ್ಕಾಗಿ ಇತರ ಜಾತಿ ಕಸುಬಿನವರನ್ನೋ ಕರೆತಂದು ಇರಿಸಿಕೊಳ್ಳುತ್ತಿದ್ದುದೂ ಉಂಟು, ಹೀಗೆ ಊರು ಬೆಳೆಯುತ್ತಾ ಹೋಗುತ್ತದೆ. ಆದರೆ, ಜಾತಿ ಜಾತಿಯ ನಡುವಿನ ಭಿನ್ನ ನಂಬಿಕೆ, ಸಂಪ್ರದಾಯಗಳು ಅವರವರೆಗೆ ಪ್ರತ್ಯೇಕ ಕೇರಿಗಳನ್ನು ಮಾಡಿ, ಅದು ಗ್ರಾಮ ವಿನ್ಯಾಸದ ಮೇಲೆ ಇನ್ನೊಂದೇ ರೀತಿಯ ಪ್ರಭಾವವನ್ನು ಬೀರುತ್ತರುವದನ್ನೂ ನಾವಿಲ್ಲಿ ಗಮನಿಸಬಹುದು. ಹಾಗೆಯೇ, ಒಂದು ಕಾಲಕ್ಕೆ ಭವ್ಯವಾಗಿ ಬೆಳೆದಿದ್ದ ಗ್ರಾಮಗಳು ಪರಕೀಯರ ದಾಳಿಯೇ ಮೊದಲಾದ ಕಾರಣಕ್ಕಾಗಿ ನಿರ್ನಾಮವಾಗಿರಬಹುದು. ಅಥವಾ, ತಾತ್ಕಾಲಿಕವಾಗಿ ಆ ಊರಿನ ಹೊರಗೆ ಮನೆಕಟ್ಟಿಕೊಂಡವರು ಕ್ರಮೇಣ ಅಲ್ಲಿಯೇ ಖಾಯಂ ಆಗಿ ಉಳಿದು, ನಂತರ ಬಂದರೂ ಅಲ್ಲಿಯೇ ನೆಲೆಗೊಂಡು ಹೊಸ ಊರು ಆಗಿರುವದೂ ಉಂಟು. ಒಂದೇ ಊರಿಗೆ ಹಳೇ ಊರು. ಹೊಸ ಊರುಗಳಿರುವದು ಈ ಕಾರಣಕ್ಕೆ. ಅಷ್ಟಲ್ಲದೆ ಎಷ್ಟೋ ಜಾತಿ/ಕಸುಬಿನವರು ಹಲವು ಕಾರಣಕ್ಕೆ ತಕ್ಕವಿದ್ದ ಊರನ್ನೇ ಬಿಟ್ಟು ಬೇರೆಡೆ ವಲಸೆ ಹೋಗಿರುವದು ಉಂಟು. ಅದು ಆ ಊರಿನ, ಆ ಜಾತಿ ಕೇರಿಯ ಮೇಲೆ ಪ್ರಭಾವ ಬೀರಿ ಒಟ್ಟು ಗ್ರಾಮ ವಿನ್ಯಾಸದಲ್ಲೇ ಕಾಲಕಾಲಕ್ಕೆ ಬದಲಾವಣೆ ಆಗುವ ಸಾಧ್ಯತೆಗಳೂ ಇವೆ. ಒಂದು ಗ್ರಾಮಕ್ಕೆ ಹೊಸ ನಿವಾಸಿಗಳು ಬರುವದು, ಹೋಗುವದು ಇಂದಿಗೂ ಸಾಮಾನ್ಯ. ಈ ಪ್ರಕ್ರಿಯೆ ಮನುಷ್ಯ ಇರುವವರೆಗೂ ನಡೆಯುತ್ತಲೇ ಇರುತ್ತದೆ. ಅದು ಗ್ರಾಮ ವಿನ್ಯಾಸದ ಮೇಲೆ ತಕ್ಕ ಮಟ್ಟಿನ ಪ್ರಭಾವ ಬೀರುತ್ತಲೇ ಇರುತ್ತದೆ.

ಈ ಕಾರಣಕ್ಕಾಗಿಯೇ ನಾಗರಿಕ ಜಗತ್ತಿನ ಪ್ರಭಾವ ಗ್ರಾಮಗಳ ಮೇಲೆ ದಟ್ಟವಾಗಿ, ಆಗುತ್ತಿರುವ ಇಂದು, ಗ್ರಾಮೀಣದ ಆಂತರಿಕ ಬದುಕು ಬದಲಾಗದಂತೆ ಅವರ ಬಾಹ್ಯಬದುಕು ಆದ ಗ್ರಾಮ ವಿನ್ಯಾಸವೂ ಸಾಕಷ್ಟು ಬದಲಾಗಿದೆ. ಆದ್ದರಿಂದ, ಒಂದು ಗ್ರಾಮದ ಸಾಂಪ್ರದಾಯಿಕ ವಿನ್ಯಾಸ ಇದೇ – ಎಂದು ಖಚಿತವಾಗಿ ಗುರುತಿಸುವದು ಈಗ ಕಷ್ಟವಾಗಿದೆ. ಹಾಗಾಗಿ, ಗ್ರಾಮಗಳ ಕೆಲವು ಅಳಿದುಳಿದ ಸಾಕ್ಷ್ಯಗಳಿಂದ, ಹಿರಿಯರ ನೆನಪುಗಳಿಂದ ಹಾಗೂ ಸಾಹಿತ್ಯಿಕ ಬರಹಗಳಿಂದ ಸಾಂಪ್ರದಾಯಿಕ ಗ್ರಾಮ ಮಾದರಿಗಳನ್ನು ಪುನರ್ ರೂಪಿಸಿಕೊಳ್ಳಬೇಕಾಗುತ್ತದೆ. ಸಾಮಾಜಿಕ ಘಟಕವಾದ ಗ್ರಾಮಗಳಲ್ಲಿ ಇದರ ಕೊರತೆ ಹೆಚ್ಚು. ಆದರೆ, ಬುಡಕಟ್ಟಿನ ಘಟಕಗಳಾದ ಹಟ್ಟಿಪೋಡು ಮೊದಲಾದವುಗಳು ಬಹುಮಟ್ಟಿಗೆ ಇನ್ನೂ ತಮ್ಮ ಮೂಲ ರೂಪವನ್ನು ಉಳಿಸಿಕೊಂಡೇ ಸಾಗುವ ಪ್ರಯತ್ನದಲ್ಲಿರುವದರಿಂದ ಅವುಗಳ ಮಾದರಿಯನ್ನು ಸ್ವತಃ ಅಧ್ಯಯನಕಾರರು ಸುಲಭವಾಗಿ ವೀಕ್ಷಿಸಬಹುದಾದ ಅವಕಾಶವಿದೆ.

ಗ್ರಾಮ ಮಾದರಿಗಳು :

ಸಮಾಜ ವಿಜ್ಞಾನಿಗಳು ಪ್ರಪಂಚದಾದ್ಯಂತ ವಿವಿಧ ಮಾದರಿಯ ಗ್ರಾಮಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದುವು :

. ಕೇಂದ್ರೀಕೃತ ಗ್ರಾಮಗಳು : ಮನೆಗಳು ಹತ್ತಿರ ಹತ್ತಿರ ಇದ್ದು ಸುತ್ತಲೂ ಹೊಲ ಗದ್ದೆ ಮೊದಲಾದವುಗಳಿಂದ ಆವೃತವಾಗಿರುವದು.

. ಪ್ರತ್ಯೇಕಿತ ಹೊಲ ಮನೆಗಳ ಗ್ರಾಮ : ಪ್ರತಿಯೊಬ್ಬ ರೈತನೂ ತನ್ನ ಹೊಲ ಮನೆಗಳೊಡನೆ ಇನ್ನೊಬ್ಬ ರೈತನ ಆಸ್ತಿಯಿಂದ ಪ್ರತ್ಯೇಕ ಉಳಿಯುವದು.

. ಚದುರಿದ ಗುಂಪೆ ಗ್ರಾಮ : ನದಿಯ ಕವಲು ಅಥವಾ ಬೆಟ್ಟದ ತಪ್ಪಲಲ್ಲಿ ಒಂದೆಡೆ ನಾಲ್ಕಾರು ಮನೆಗಳಿದ್ದರೆ, ಆ ಎತ್ತರ ಜಾಗದ ಇನ್ನೊಂದು ಮಗ್ಗುಲಲ್ಲಿ ಅದೇ ಗ್ರಾಮಕ್ಕೆ ಸೇರಿದ ಇನ್ನೂ ನಾಲ್ಕಾರು ಮನೆಗಳು ಇರುವದು.

. ಸಾಲು ಮನೆ ಗ್ರಾಮ : ಬೀದಿಯ ಅಕ್ಕಪಕ್ಕ, ಉದ್ದಕ್ಕೂ ಒತ್ತಾಗಿ, ಸಾಲಾಗಿ ಮನೆಗಳಿರುವದು.

. ಚೌಕಾಕಾರದ ಗ್ರಾಮ : ಸಾಲು ಮನೆ ಗ್ರಾಮದ ಹಾಗೇ, ಆದರೆ, ಆ ಸಾಲುಗಳು ಒಂದಕ್ಕೊಂದು ಸಮಾಂತರವಾಗಿ ಅಥವಾ ಲಂಬವಾಗಿ ಒಟ್ಟಾರೆ ಚೌಕಾಕಾರವಾಗಿ ನಿರ್ಮಾಣವಾಗುವದು.

. ಚಕ್ರಾಕಾರದ ಗ್ರಾಮ : ಗ್ರಾಮದ ಮಧ್ಯೆ ಕೆರೆಯೋ ದೇವಸ್ಥಾನವೋ ಇದ್ದು ಅದರ ಸುತ್ತಲೂ ಮನೆ ಹಾಗೂ ಅದರ ಅಂಗಳಗಳು ಒತ್ತೊತ್ತಾಗಿ ಇದ್ದು ಒಟ್ಟಾರೆ ಒಂದು ದುಂಡಾಕಾರದ ಕಲ್ಪನೆ ಬರುವಂತೆ ಇರುವದು. (ವಿವರಗಳಿಗೆ ನೋಡಿ ನಾಗೇಶ : ೧೮೮೬-೯)

ಉತ್ತರ ಭಾರತದಲ್ಲಾಗಲೀ ದಕ್ಷಿಣ ಭಾರತದಲ್ಲಾಗಲೀ ಈ ಎಲ್ಲಾ ಮಾದರಿ ಗ್ರಾಮಗಳು, ಅಸ್ತಿತ್ವದಲ್ಲಿಲ್ಲ. ಇರುವ ಗ್ರಾಮಗಳನ್ನು ತುಸು ಸೂಕ್ಷ್ಮವಾಗಿ ಗಮನಿಸಿದಾಗ ಕನಿಷ್ಟ ಮೂರು – ನಾಲ್ಕು ಮಾದರಿಗಳು ಮಾತ್ರ ದೊರೆಯುತ್ತವೆ. ಅವುಗಳನ್ನು ಹೀಗೆ ವಿವರಿಸಬಹುದು.

ಕೇಂದ್ರೀಕೃತ ಹಳ್ಳಿಗಳು : (Nucleated Villages) ದಕ್ಷಿಣ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡುಬರುವ ಗ್ರಾಮಗಳು ಇವು. ವಾಸಸ್ಥಾನ ಒಂದೇ ಕಡೆ ಇದ್ದು, ಮನೆಗಳೆಲ್ಲ ಒಂದೇ ಕಡೆ ಕೇಂದ್ರೀಕೃತವಾಗಿರುತ್ತವೆ. ಇಂತಹ ಹಳ್ಳಿಗಳಲ್ಲಿ ಜನ ಸಾಂದ್ರತೆ ಹೆಚ್ಚು. ಹಾಗೇಯೇ, ಜಾತಿವಾರು ಕೇರಿಗಳು ಅದೂ ಶ್ರೇಣಿಗನುಗುಣವಾದ ವಾಸಸ್ಥಾನ ಇಲ್ಲಿ ಕಂಡು ಬರುತ್ತದೆ. ಆದರೂ, ಅವರವರ ನಡುವೆ ಪರಸ್ಪರ ಸಾಮೀಪ್ಯ ಹಾಗೂ ಸಹಬಾಳ್ವೆ ಇರುತ್ತದೆ. ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ಚಿತ್ರದುರ್ಗ ಮೊದಲಾದ ಬಯಲು ಸೀಮೆಯ ಜಿಲ್ಲೆಗಳಲ್ಲಿ ಈ ರೀತಿಯ ಗ್ರಾಮಗಳು ವಿಶೇಷವಾಗಿರುತ್ತವೆ.

ಚೌಕ ಅಥವಾ ಆಯತಾಕಾರದ ಗ್ರಾಮ : ಹಿಂದಿನ ಕಾಲದಲ್ಲಿ ಕಳ್ಳಕಾಕರು ಹಾಗೂ ದಾಳಿಕೋರರ ಹಾವಳಿಯಿಂದ ಗ್ರಾಮಸ್ಥರು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ಉದ್ದೇಶದಿಂದ ಒಂದು ವಿಶಿಷ್ಟ ವಿನ್ಯಾಸದಲ್ಲಿ, ಗ್ರಾಮ ನಿರ್ಮಾಣ ಮಾಡುತ್ತಿದ್ದರು. ಅದೆಂದರೆ – ಊರಿಗೆ ಒಂದು ಹೆಬ್ಬಾಗಿಲು ಇದ್ದು ಅದರ ಎರಡೂ ಪಕ್ಕ ಒತ್ತೊತ್ತಾಗಿ ಮನೆಗಳು ಇರುತ್ತಿದ್ದವು. ಅದರಿಂದ ಮುಂದಕ್ಕೆ – ಲಂಬವಾಗಿ – ಹಾಗೂ ಸಮಾಂತರವಾಗಿ ಮತ್ತೆ ಮನೆಗಳು ಇದ್ದು ಒಟ್ಟಾರೆ ಗ್ರಾಮಕ್ಕೆ ಒಂದು ಆಯಾಕಾರವನ್ನು ತರುತ್ತಿದ್ದವು. ಹೀಗಾಗಿ, ಆ ಮನೆಗಳೇ ಆ ಊರಿಗೆ ಕೋಟೆಯಂತೆ ರಕ್ಷಣೆ ನೀಡುತ್ತಿದ್ದವು. ಹೆಬ್ಬಾಗಿಲನ್ನು ಬಿಟ್ಟರೆ ಊರ ಒಳಗೆ ಹೋಗಲು, ಹೋರ ಬರಲು ಬೇರೆ ದಾರಿಯೇ ಇರುತ್ತಿರಲಿಲ್ಲ. ಅನೇಕ ಜನಪದ ಕತೆಗಳಲ್ಲಿ ಕಥಾನಾಯಕ ಆ ಊರಿಗೆ ಬರುವ ವೇಳೆಗೆ ಕತ್ತಲಾಗಿದ್ದು. ಊರು ಬಾಗಿಲು ಹಾಕಿದ್ದರಿಂದ ಮಾರನೇ ಬೆಳಗಿನ ವರೆಗೆ ಬಾಗಿಲಲ್ಲೇ ಉಳಿಯಬೇಕಾಗುತ್ತಿತ್ತು ಎಂಬಂತಹ ಸಂಗತಿಗಳು ಬರುವದು ಬಹುಶಃ ಇಂತಹ ಊರುಗಳನ್ನು ಕುರಿತು ಹೇಳುವದೇ ಆಗಿದೆ. ತುಮಕೂರು ಜಿಲ್ಲೆಯ ಕೆಲವು ಕಡೆ ಇಂತಹ ಊರುಗಳು, ಊರು ಬಾಗಿಲುಗಳು ಈಗಲೂ ಅಲ್ಲೊಂದು ಇಲ್ಲೊಂದು ಅಳಿದು – ಉಳಿದಿವೆ.

ದುಂಡಾಕಾರದ ಅಥವಾ ಚಕ್ರಾಕಾರದ ಗ್ರಾಮ : ಗೊಲ್ಲರ ಹಟ್ಟಿಗಳು ಇವುಗಳಿಗೆ ಉತ್ತಮ ಮಾದರಿಯೆನ್ನಬಹುದು. ಗೊಲ್ಲರು ತಮ್ಮ ವಿಶಿಷ್ಟ ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಕಂಡುಕೊಂಡ ಮಾದರಿ ಇವು ಎನ್ನಬಹುದು ಇದರ ವಿಶೇಷವೆಂದರೆ – ಅವರ ಹಟ್ಟಿಯ ಸುತ್ತಲೂ ಕಳ್ಳೆ ಅಂದರೆ ಒಂದು ರೀತಿಯ ಬೇಲಿ ಇರುತ್ತದೆ. ಅದನ್ನು ಭೇದಿಸಿ ಒಂದು ಜಂತುವೂ ಒಳ ಹೋಗಲು ಸಾಧ್ಯವಿಲ್ಲ. ಅಂತಹ ಮುಳ್ಳುಬೇಲಿ ಅದು.

ಆ ಹಟ್ಟಿಗೆ ಮುಂಭಾಗದಲ್ಲಿ ಒಂದೇ ಬಾಗಿಲು, ಅದರ ಮೂಲಕವೇ ಆ ಜನಗಳು ಅವರ ಸಾಕು ಪ್ರಾಣಿಗಳು ಓಡಾಡಬೇಕು ನಡುವೆ ಅಥವಾ ಪಕ್ಕಕ್ಕೆ ಅವರ ದೇವರ ಗುಬ್ಬೆದ್ದು ಅದರ ಅಕ್ಕಪಕ್ಕ ಹಾಗೂ ಸುತ್ತಲೂ ಜಾತಿಯವರ ಮನೆಗಳಿರುತ್ತವೆ.

ಸಾಲು ಮನೆ ಗ್ರಾಮ : ಇಂತಹ ಗ್ರಾಮಗಳು ಕರ್ನಾಟಕದಲ್ಲಿ ತೀರಾ ಕಡಿಮೆ, ಆದರೆ ಕನಕಪುರ ತಾಲ್ಲೂಕು ಅತ್ತಿಹಳ್ಳಿ ಈ ಮಾದರಿಗೆ ಒಂದು ನಿದರ್ಶನವೆಂದು ತಿಳಿದುಬಂದಿದೆ. ಊರು ಮಧ್ಯದ್ದು ಒಂದೇ ಬೀದಿ. ಅದರ ಎರಡೂ ಸಾಲಿನಲ್ಲಿ ಉದ್ದಕ್ಕೂ ಮನೆಗಳು, ಈಚೆಗೆ ಗ್ರಾಮ ಬೆಳೆಯುತ್ತಿರುವದರಿಂದ ಕ್ರಮೇಣ ಈ ಮಾದರಿಯೂ ತನ್ನ ಮೂಲ ರೂಪ ಕಳೆದುಕೊಳ್ಳಬಹುದು. (ಚದುರಿದ ಗ್ರಾಮಗಳು ವಿಶೇಷವಾಗಿ ಮಲೆನಾಡು, ಕರಾವಳಿಯಲ್ಲಿ ಕಂಡುಬರುತ್ತವೆ. ಆದರೆ, ಈಚೆಗೆ ಅವು ತಮ್ಮ ಮೂಲ ಸ್ವರೂಪ ಕಳೆದುಕೊಂಡು ಕೇಂದ್ರಿಕೃತ ಆಗುತ್ತಿವೆ.) ಈ ಮಾದರಿ ಗ್ರಾಮಗಳಲ್ಲಿ ಪರಸ್ಪರ ಕಂಡುಬರುವ ಇನ್ನೂ ಕೆಲವು ವಿಶೇಷಾಂಶಗಳನ್ನು ಇಲ್ಲಿ ಗುರುತಿಸಬಹುದು. ಅದೆಂದರೆ, ಕೇಂದ್ರೀಕೃತ ಗ್ರಾಮದ ಉಪ ಮಾದರಿಯ ಹಾಗೇ ಇತರ ಮಾದರಿಗಳೂ ಸ್ಥೂಲ ನೋಟಕ್ಕೆ ಕಂಡುಬರಬಹುದು. ಆದರೆ ಕೇಂದ್ರೀಕೃತ ಹಾಗೂ ಸಾಲುಮನೆ ಮಾದರಿಯ ಗ್ರಾಮಸ್ಥರಿಗೆ ಇರುವ ಕೆಲ ಸವಲತ್ತುಗಳು ಈ ಚೌಕಾಕಾರದ ಅಥವಾ ಚಕ್ರಾಕಾರದ ಗ್ರಾಮದವರಿಗೆ ಇರುವುದಿಲ್ಲ. ಉದಾ: ಗೆ ಕೇಂದ್ರೀಕೃತ ಮನೆಗಳವರಿಗೆ ಅಂಟಿಕೊಂಡು ಮನೆಯ ಹಿಂಭಾಗದಲ್ಲಿ ಹಿತ್ತಲು ತಿಪ್ಪೆ ಇತ್ಯಾದಿಗಳಿರಬಹುದು. ಆದರೆ ಚಕ್ರಾಕಾರದ ಗ್ರಾಮದವರು ತಿಪ್ಪೆ ಹಿತ್ತಲು, ಕಣ ಮೊದಲಾದವುಗಳನ್ನು ತಮ್ಮ ಹಟ್ಟಿಯ ಬೇಲಿಯ ಆಚೇಯೇ ನಿರ್ಮಿಸಿಕೊಳ್ಳಬೇಕಾಗುತ್ತದೆ. ಇದರಿಂದ, ತಮ್ಮ ಗ್ರಾಮ, ಮನೆ ಪರಿಸರವನ್ನು ಶುದ್ದವಾಗಿ ಇಟ್ಟುಕೊಳ್ಳಲು ಪರೋಕ್ಷವಾಗಿ ಕಾರಣವಾಗಿದ್ದು, ಇದು ಒಳ್ಳೆಯದೇ ಆಯಿತು ಎಂದು ಭಾವಿಸಬಹುದು. ಚದುರಿದ ಅಥವಾ ಪ್ರತ್ಯೇಕಿತ ಹೊಲ ಮನೆಗಳ ಗ್ರಾಮದ ನಿವಾಸಿಗಳಿಗಂತೂ ತಮ್ಮ ಮನೆಗೆ ಹೊಂದಿಯೇ ಹಿತ್ತಲು, ತಿಪ್ಪೆ, ಕಣ, ಕೊಟ್ಟಿಗೆ ಎಲ್ಲ ಇರುತ್ತದೆ. ಅಲ್ಲಿ ಒಂದೊಂದು ಗ್ರಾಮವು ಸ್ವತಂತ್ರ ಜೀವನವಿರುತ್ತದೆ. ಇತರ ಕೆಲ ಅನುಕೂಲವಿದ್ದ ಅನಾನುಕೂಲಗಳೂ ಉಂಟಾಗುತ್ತವೆ. ಮುಖ್ಯವಾಗಿ ಕೇಂದ್ರೀಕೃತ ಹಳ್ಳಿಗಳಲ್ಲಿ ಹೋರಗಿನ ಅಪಾಯ ಎದಿರಿಸಲು ಜನರು ಸುಲಭವಾಗಿ ಒಗ್ಗಟ್ಟಾಗಬಹುದು. ಅದಕ್ಕೆ ಕೋಟೆಯಂತಹ ರಕ್ಷಣೆಯು ಇರುವುದುಂಟು. ಇನ್ನೊಂದು ವ್ಯತ್ಯಾಸ ಅವರ ಸಾಮಾಜಿಕ – ಸಾಂಸ್ಕ್ರತಿಕ ಬದುಕಿಗೆ ಸಂಬಂಧಿಸಿದ್ದು. ಕರಾವಳಿಯ ಕೋಟೆದಂತಹ ಒಂದು ಗ್ರಾಮ ಜೀವನ ಬಯಲು ಸೀಮೆಯ ಒಂದು ಹಳ್ಳಿಯ ಬದುಕಿಗಿಂತ ಹೇಗೆ ಭಿನ್ನವಾಗಿರುತ್ತದೆ ಎಂಬುದಕ್ಕೆ ಈ ವಿವರಣೆ ನೋಡಬಹುದು.

ಹೊರಗಿನ ಜಗತ್ತಿನೊಡನೆ ಈ ಊರಿಗೆ ಕೋಟು ಅಧಿಕ ಸಂಪರ್ಕವಿದ್ದರೂ ಊರೊಳಗಣ ಸಂಪರ್ಕ ಮಾತ್ರ ಏನೇನೂ ಪ್ರಯೋಜನದ್ದಲ್ಲ. ಹೀಗೆ ಊರೊಳಗಣ ಸಂಪರ್ಕಕ್ಕೆ ತಡೆಯೊಡ್ಡುವ ಕಾರಣಗಳು ಮುಖ್ಯವಾಗಿ ಊರಿನ ಮನೆಗಳು ಹಂಚಿಹೋದ ರೀತಿ ಇಲ್ಲಿನ ಮನೆಗಳು ಹಳ್ಳಿಯ ಯಾವತ್ತು ಉದ್ದಗಲಕ್ಕೂ ಚದರಿಕೊಂಡಿವೆ. ಮನೆ ಮಠಗಳು ಒತ್ತಟ್ಟಿಗಿರುವ ಹಳ್ಳಿಗಳಲ್ಲಿ ನೆರೆಕೆರೆಯವರನ್ನು ಕರೆಯಬೇಕಾದರೆ ನಿಂತಲ್ಲಿಂದಲೇ ಬೊಬ್ಬೆ ಹೊಡೆದರೆ ಅಲ್ಲ, ನಿತ್ಯ ಕೆಲಸ ಮುಗಿದ ಮೇಲೆ ಊರಿನ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಬಹುದಾದ ಸ್ಥಳ ಊರ ಮಧ್ಯದಲ್ಲಿಲ್ಲ. ಊರಿನ ಮನೆಗಳು ಒಟ್ಟಿಗೆ ಇರುವ ಹಳ್ಳಿಗಳಲ್ಲಿ ಅದರ ನಡುವೆ ತೆರವಾದ ಸ್ಥಳವೂ ಇರುತ್ತದೆ. ಊರವರು ಕೆಲಸ ಮುಗಿಸಿದ ಬಳಿಕ ಅಲ್ಲಿ ಕುಳಿತು ಹರಟೆ ಹೊಡೆಯಬಹುದು. ಅಂಥ ಸ್ಥಳ ಕೂಟದಲ್ಲಿಲ್ಲ (ಅದಕ್ಕಾಗಿ ಅವರು ಸಂಜೆ ಪೇಟೆಗೆ ಹೋಗಬೇಕಾಗುತ್ತಿದೆ.) ಆದರೆ ಕತ್ತಲು ಮೇಲೆ ಮಳೆಗಾಲದಲ್ಲಿ ಅವರು ಪೇಟೆಗೆ ಹೋಗಿಬರುವ ಕೆಲಸ ಮಾತ್ರ ಸುಲಭದ್ದಲ್ಲ. (ಕಾರ್ಸ್ಟೆ ಯರ್ಸ ಆರ್ ಎಲ್ ಕಪುರ. ಅನು : ಕಾರಂತ : ೧೯೮೫ : ೩೩-೮) ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಗ್ರಾಮವೆಂದರೆ ಕೆಲ ವಿಶಿಷ್ಟ ಲಕ್ಷಣಗಳು ಅದಕ್ಕುಂಟು ಎಂಬ ಕಲ್ಪನೆ ಕೆಲವರಿಗಾದರೂ ಬಂದೀತು. ಆದರೆ ಈಗ ಅಂತಹ ಗ್ರಾಮಗಳು ಉಳಿದಿರುವದು ಕಡಿಮೆ. ಆದರೂ ಸ್ಥೂಲವಾಗಿ ಆಲಕ್ಷಣಗಳನ್ನು ಹೀಗೆ ಸಂಗ್ರಹಿಸಬಹುದು :

ಊರಿಗೊಂದು ಹೆಬ್ಬಾಗಿಲು. ಈ ಊರಬಾಗಿಲಿಂದ ಒಳ ಬಂದರೆ ಊರ ಮುಂಭಾಗದ ಅಕ್ಕ ಪಕ್ಕ ಕರವುಗಲ್ಲುಗಳು. ಅದರಿಂದ ತುಸು ಮುಂದಕ್ಕೆ ಗ್ರಾಮದೇವತೆ ಗುಡಿ. ಅದರ ಸನಿಹ ಊರ ಚಾವಡಿ : ಹಿಂದಿನ ಕಾಲದ ಕಾವಲು ಮಂಟಪ ಹಾಗೂ ನ್ಯಾಯ ಸ್ಥಾನ. ಅದರ ಎಡಬಲದಿಂದ ಪ್ರಾರಂಭಿಸಿ ವಿವಿಧ ಜಾತಿಯವರ ಮನೆಗಳು ಅಂದರೆ, ಕೇರಿಗಳು ಕೆಲವು ನಿಬಂಧನೆಗಳಿಗೆ ಒಳಪಟ್ಟು ಅಥವಾ ಪ್ರಧಾನ ಸ್ಥಾನದಲ್ಲಿ ಊರ ಗೌಡನ ಮನೆ. (ದೊಡ್ಡಬಳ್ಳಾಪುರ ತಾ : ಮಧುರೆ ಹೋಬಳಿಯ ಕಲ್ಲೋಡು ಗ್ರಾಮದಲ್ಲಿ ಪಟೇಲರ ಮನೆ ಊರ ಹಿಂಬದಿ ಅಂಚಿನ ಕಲ್ಲು, ಅದರ ಉಪ್ಪರಿಗೆಯೇರಿ ನಿಂತರೆ ಊರ ಎಲ್ಲಾ ಬೀದಿಗಳೂ ಕಾಣುತ್ತವೆ. ಊರ ಹೊರಗೆ ಹರಿಜನರ ಕೇರಿ. ಊರು ಮಧ್ಯ ಭಾಗದಲ್ಲಿ ಅಥವಾ ಆತ ಕಟ್ಟಿನ ಭಾಗದಲ್ಲಿ ವಿಶಾಲ ಸ್ಥಳಾವಕಾಶವಿದ್ದು ನಾಟಕಾದಿ ಕಾರ್ಯಗಳಿಗೆ ಅದರ ಬಳಿಕೆ. ಊರು ಮಧ್ಯ ಭಾಗದಲ್ಲಿ  ದೇವಸ್ಥಾನವಿದ್ದರೆ ಅದರ ಮುಂದೆ ದೊಡ್ಡದಾದ ತೇರು ಬೀದಿ. ಊರು ನಡುಭಾಗದಲ್ಲಿ ಅಥವಾ ಒಂದು ಅಂಚಿನಲ್ಲಿ ಹಾದುಹೋಗುವ ಮುಖ್ಯ ರಸ್ತೆ. ಅದರಿಂದ ಕವಲೊಡೆದು ಕೇರಿ ಕೇರಿಗಳ ನಡುವೆ ಹರಿದಾಡುವ ರಸ್ತೆಗಳು. ಕವೆಡೆ ಮನೆ – ಮನೆಗಳ ನಡುವೆ ಹರಿದಾಡುವ ಅತಿ ಸಣ್ಣ ಜಾಗ : ಸೊಂಪಲಗಳು. ಊರು ಒಂದು ಸುತ್ತ ಬಂದರೆ ಸೂಕ್ತ ಜಾಗದಲ್ಲಿ ಒಂದೋ ಎರಡೂ ಬಾವಿಗಳು. ಸಾಮಾನ್ಯವಾಗಿ ಅದು ಉಪ್ಪು ನೀರಿನ ಬಾವಿ ಸಿಹಿ ನೀರು ಬಾವಿ ಊರ ಹೊರಗೆ ತುಸು ದೂರದ ತಗ್ಗಿನಲ್ಲಿ. ಊರ ಅಂಚುಗಳಿಗೆ ಹೊಂದಿಕೊಂಡಂತೆ ಸಣ್ಣ ಸಣ್ಣ ನೀರಿನ ಹೊಂಡ ಕಟ್ಟೆಗಳು, ಅವುಗಳನ್ನು ಅನುಸರಿಸಿ ತಿಪ್ಪೆಗಳು : ಹಿತ್ತಲುಗಳು, ಅವುಗಳ ನಡುವಿನಿಂದ ಹೊರ ಊರಿಗೆ ಅಥವಾ ಹೊಲ, ದಿಣ್ಣೆಗಳಿಗೆ ಹೋಗಿಬರಲು ಸಣ್ಣ, ದೊಡ್ಡಕಾಲು ಹಾದಿಗಳು; ಓಣಿಗಳು, ಊರನ್ನು ಆವರಿಸಿಕೊಂಡತೆ ಸುತ್ತಲೂ ಹೊಲ ಇತ್ಯಾದಿ ಹಸಿರು ಬಯಲು. ದೂರದಿಂದ ನೋಡಿದರೆ ಹಸಿರು ಹೊಲ ಮರಗಳ ನಡುವೆ ಇಣುಕಿ ನೋಡುವ ಮನೆಗಳು! ಕೆಲಮೊಮ್ಮೆ ಊರಸುತ್ತಲೂ ಕೋಟೆ, (ಈಗ ಅದರ ಅವಶೇಷಗಳು) ಅದರಾಚೆ ಕಂದಕ. ಊರಿನಿಂದ ತುಸು ದೂರಕ್ಕೆ ಹೆಣದ ತೋಪು (ಸ್ಮಶಾನ) ಹಾಗೂ ಗುಂಡುತೋಪು, ಕೆರೆ, ಗೋಮಾಳ ಇತ್ಯಾದಿ.

ಕರ್ನಾಟಕದ ಪ್ರಾಚೀನ ಗ್ರಾಮಗಳ ಸಾಂಪ್ರದಾಯಿಕ ವಿನ್ಯಾಸಗಳ ಬಗ್ಗೆ ಕೆಲ ಶಾಸನಗಳೂ ಸ್ವಲ್ಪ ಮಟ್ಟಿಗಿನ ಮಾಹಿತಿ ಒಳಗೊಂಡಿರುವುದು ಪರಿಶೀಲನಾರ್ಹವಾಗಿದೆ. ಹಳ್ಳಿಗಳ ಗವಿಗಳನ್ನು ಗುರುತಿಸುವಾಗ ಆ ಗಡಿಗಳಲ್ಲಿರುತ್ತಿದ್ದ ಕೆರೆ, ಹಳ್ಳ, ದಿಣ್ಣೆ, ಮರಗಳು ಇತ್ಯಾದಿಗಳನ್ನೂ (ಶಾಸನಗಳಲ್ಲಿ) ಹೆಸರಿಸಿರುವುದನ್ನು ಅಧ್ಯಯನಕಾರರು ಪ್ರಸ್ತಾಪಿಸಿದ್ದಾರೆ. ದೇಗಾವೆಯೆಂಬ ಅಗ್ರಹಾರದ ಗಡಿಗಳನ್ನು ವಿವರವಾಗಿ ನಮೂದಿಸಿದ ಒಂದು ಶಾಸನದ ಪೂರ್ಣಪಾಠವನ್ನು ತಮ್ಮ ಅಧ್ಯಯನದಲ್ಲಿ ಉಲ್ಲೇಖಿಸಿರುವ ಡಾ. ಎಂ. ಚಿದಾನಂದಮೂರ್ತಿಯವರು ಅದರ ವಿವರಗಳನ್ನು ಆಧರಿಸಿ ಬರೆದಿರುವ ಒಂದು ವಿವರಣೆ ಹೀಗಿದೆ: ಊರಿನ ಗಡಿಗಳನ್ನು ದಾಟಿ, ಹೊಲಗಳನ್ನು ಹಾದು ಬಂದರೆ ಊರಿನ ವಸತಿಯ ಸುತ್ತು ದೊಡ್ಡ ಬೇಲಿಯನ್ನು ಕಾಣಬಹುದಾಗಿದ್ದಿತು. ಇದನ್ನೇ ( ಪೆರೋಪ್ಪೆ)  (ಒಪ್ಪೆ = ಬೇಲಿ) ಎಂದು ಕರೆದಿರುವದು. ಬಹುಶಃ ಈ ಬೇಲಿಯ ಒಳಗೆ, ಊರಿಗೆ ಅಂಟಿಕೊಂಡಂತೆ “ಹೋಲಗೇರಿ” ಯು ಇರುತ್ತಿದ್ದಿತು. ಊರ ಹೊರಗೆ ಹೊಲಗಳ ಪಕ್ಕದಲ್ಲಿ ಹೊಲಗೇರಿ ಇರುತ್ತಿದ್ದಿತು ಎಂಬುದು ಸ್ಪಷ್ಟವಾಗುತ್ತದೆ ಊರ ಹೊರಗಡೆ ಇದ್ದ ಸಾರ್ವಜನಿಕ ಉದ್ಯಾನವನಗಳಾಗಿದ್ದಿರಬಹುದೆಂಬ ಭಾವನೆ ಬರುತ್ತದೆ ( ೧೯೭೯ : ೨೫೩ – ೫೪)

ಪ್ರಸುತ್ತ ಸಂದರ್ಭದ ಗ್ರಾಮ : ಆದರೆ ಇಂತಹ ವ್ಯವಸ್ಥೆ ಎಲ್ಲಾ ಊರುಗಳಿಗೂ ಇರುವುದಿಲ್ಲ. ಎಷ್ಟೋ ಊರುಗಳಲ್ಲಿ ಮನೆ ಮುಂದೆ ಸಾಕಷ್ಟು ಸ್ಥಳಾವಕಾಶವಾಗಲಿ ಎತ್ತಿನ ಬಂಡಿ ಸುಸೂತ್ರವಾಗಿ ಓಡಾಡಲು ಬೇಕಾದ ಅಗಲವಾದ ಬೀದಿಗಳಾಗಲಿ ಇರುವುದಿಲ್ಲ. ಪರಸ್ಪರ ಅಂಟಿಕೊಂಡ ಮನೆಗಳು ಕಿಷ್ಕಿಂಧೆಯಂತಿರುತ್ತವೆ. ಇದಕ್ಕೆ ಕಾರಣ ನಮ್ಮ ಗ್ರಾಮಗಳು ಒಂದು ವ್ಯವಸ್ಥೆಯನ್ನು ಅನುಸರಿಸಿ ಏಕಕಾಲಕ್ಕೆ ನಿರ್ಮಾಣ ಆಗಿಲ್ಲದ್ದು. ಕಾಲಕಾಲಕ್ಕೆ ಬಂದವರು ತಮ್ಮ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಸಿಕ್ಕ ಸಿಕ್ಕ ಕಡೆ ಬೇಕಾದಂತೆ ಮನೆ ಕಟ್ಟಿಕೊಂಡರು. ಹೀಗಾಗಿ ಎಲ್ಲಾ ಅಸ್ತವ್ಯಸ್ತ, ರಾಜರುಗಳು ಕಟ್ಟಿಸಿಕೊಟ್ಟ ಅಗ್ರಹಾರಗಳೋ ಪಟ್ಟಣಗಳೋ ಯೋಜನಾಬದ್ದವಾಗಿರಬಹುದು. ತಿಪಟೂರು ಹತ್ತಿರದ ಹರಳಹಳ್ಳಿ ಈ ದೃಷ್ಟಿಯಿಂದ ಒಂದು ಮಾದರಿ ಗ್ರಾಮವಾಗಿದೆ ಎಂದು ತಿಳಿದು ಬಂದಿದೆ. ಜನಸಂಖ್ಯೆ ಹೆಚ್ಚಿದಂತೆ ಮನೆಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಗ್ರಾಮಗಳ ವಿನ್ಯಾಸದಲ್ಲಿ ತೀವ್ರ ವ್ಯತ್ಯಾಸ ಕಂಡು ಬರುತ್ತಿದೆ.

ಒಟ್ಟಾರೆ ಸ್ವಾತಂತ್ರ ಪೂರ್ವದ ಹಳ್ಳಿಗಳು ಹೆಚ್ಚು ಸಾಂಪ್ರದಾಯಿಕವಾಗಿದ್ದರೆ, ನಂತರದ ಕಾಲದಲ್ಲಿ ಹಳ್ಳಿಗಳು ತಮ್ಮ ಸಾಂಪ್ರದಾಯಿಕ ರೂಪವನ್ನು ಕಳೆದುಕೊಳ್ಳುತ್ತಿವೆ. ಹಾಗೆಯೇ ಒಂದು ಕಾಲಕ್ಕೆ ಸ್ವತಂತ್ರ ಗಣರಾಜ್ಯಗಳಂತಿದ್ದ ಗ್ರಾಮಗಳು ಈಗ ಗ್ರಾಮಕ್ರಾಂತಿಗೆ ಒಳಗಾಗುತ್ತಿವೆ. ತಮ್ಮ ಅನನ್ಯತೆಯನ್ನು ಕಳೆದುಕೊಳ್ಳುತ್ತಿವೆ. ಇಂತಹ ಸಂಕ್ರಮಣಾವಸ್ಥೆಯ ಸಂದರ್ಭದಲ್ಲಿ ನಮ್ಮ ಗ್ರಾಮಗಳ ವಿವಿಧ ನಿಟ್ಟಿನ ಅಧ್ಯಯನಗಳಿಗೆ ಮಹತ್ವ ಪ್ರಾಪ್ತವಾಗುತ್ತಿದೆ. ಹಾಗಿದ್ದೂ  ಕನ್ನಡದಲ್ಲಿ ಗ್ರಾಮಗಳ ಬಹುಮುಖ್ಯ ಅಧ್ಯಯನ ಸಾಕಷ್ಟು ಆಗಿಲ್ಲ.

ಒಂದು ಗ್ರಾಮದ ವಿನ್ಯಾಸ ಕುರಿತು ವ್ಯವಸ್ಥಿತವಾಗಿ ಅಧ್ಯಯನ ಮಾಡಬಯಸುವವರು ಆ ಗ್ರಾಮದ ಒಟ್ಟು ಆವರಣದಲ್ಲಿ ಜನಸಾಂದ್ರತೆ ವಿವಿಧ ಪ್ರಮಾಣದಲ್ಲಿ ಹಂಚಿಹೋಗಿರುವದನ್ನೂ, ಅದಕ್ಕೆ ಕಾರಣಗಳನ್ನು ಗುರುತಿಸಬೇಕಾಗುತ್ತದೆ. ಹಾಗೆಯೇ. ಆ ಗ್ರಾಮದ ಸಾರ್ವಜನಿಕ ಸ್ಥಳ, ಧಾರ್ಮಿಕ ಸ್ಥಳಗಳು, ಅಂಗಡಿ ಮುಗ್ಗಟ್ಟುಗಳು ಚರಂಡಿ ವ್ಯವಸ್ಥೆ ಮನೆಗಳಿಗೆ ಗಾಳಿ – ಬೆಳಕಿನ ವ್ಯವಸ್ಥೆ ಮೊದಲಾದವು ಹಂಚಿಹೋಗಿರುವ ರೀತಿಯನ್ನು ನಕ್ಷೆಗಳ ಮೂಲಕವೂ ಗುರುತಿಸಬೇಕಾಗುತ್ತದೆ. ಅಂದರೆ ಆ ಗ್ರಾಮ ಎಷ್ಟರ ಮಟ್ಟಿಗೆ ಯೋಜನಾ ಬದ್ಧವಾಗಿದೆ ಅಥವಾ ಇಲ್ಲ ಎಂಬುದನ್ನು ಗುರುತಿಸಲು ಈ ಅಂಶಗಳು ಅಗತ್ಯವಾಗುತ್ತವೆ. (ಇಂತಹ ಒಂದು ಪ್ರಯತ್ನವನ್ನು ಹಾಸನದ ಎಂ. ಸಿ. ಇ ಕಾಲೇಜಿನ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ೧೯೯೦ ರಲ್ಲಿ ಮಾಡಿದ್ದಾರೆ: ನೋಡಿ : (Report on village Bendegunbali)

ಕೊನೆಯಲ್ಲಿ ನಮ್ಮ ಗ್ರಾಮಗಳ ಸಾಂಪ್ರದಾಯಿಕ ವಿನ್ಯಾಸವನ್ನು ಉಳಿಸಿಕೊಳ್ಳುವ ಅಗತ್ಯವಿದೆಯೋ ಎಂಬ ಪ್ರಶ್ನೆ ನಮ್ಮ ಎದುರಾಗುತ್ತದೆ. ಒಂದು ಗ್ರಾಮದ ವಿವಿಧ ಜಾತಿಗಳವರು ತಮ್ಮ ನಮ್ಮ ಎದುರಾಗುತ್ತದೆ. ಒಂದು ಗ್ರಾಮದ ವಿವಿಧ ಜಾತಿಗಳವರು ತಮ್ಮ ತಮ್ಮ ಕೇರಿಗಳಲ್ಲಿ ಪ್ರತ್ಯೇಕವಾಗಿ ವಾಸಿಸಲು ಧಾರ್ಮಿಕ ಹಾಗೂ ರಾಜಕೀಯ ಕಾರಣ ಮುಖ್ಯವಾಗಿರುತ್ತದೆ. ಹಾಗೆ ಇರುವುದರಿಂದ ತಮಗೊಂದು ಭದ್ರತೆ ದೊರೆಯುತ್ತದೆ. ಎಂಬ ಸುರಕ್ಷಾ ಮನೋಭಾವವು ಅವರ ಅಂತರಂಗದಲ್ಲಿರುವದು ಸುಳ್ಳೇನೂ ಅಲ್ಲ. ಒಂದು ಗ್ರಾಮ ವಿವಿಧ ಕೇರಿಗಳಾಗಿ ವಿಂಗಡನೆಯಾಗಿರುವದು, ಅವುಗಳ ನಡುವೆ ಸಣ್ಣ ದೊಡ್ಡ ಜೀವಿಗಳಿಸುವದು ಜನದ ದಿನನಿತ್ಯದ ಓಡಾಟದ ಸುಸೂತ್ರತೆ ಅಷ್ಟೇ ಅಲ್ಲದೆ, ಗಾಳಿ ಬೆಳಕಿನ ಸೂಕ್ತ ಬಳಕೆಯ ಉದ್ದೇಶವೂ ಅಲ್ಲಿ ಇರುತ್ತದೆ. cluster planning is a necessity in regions having not and dry climates, as it provides shaded air breeze and facilities cooling of the dwelling ##  ಎಂಬ ಅಭಿಪ್ರಾಯವು ಇದೆ (Report of village Bendegumbali, P- 11) ಇಷ್ಠದರೂ ಈ ಜಾತಿ ಕೇರಿಗಳು ಉಳಿಯುವದೆಂದರೆ ಮತ್ತೆ ಜಾತಿ ಶ್ರೇಣೀಯ ತಾರತಮ್ಯವನ್ನು ಹಾಗೇ ಜೀವಂತ ಉಳಿಸಿಕೊಂಡಂತೆಯೇ  ಆಗುತ್ತದೆ. ಅದು ಈ ಕಾಲಕ್ಕೆ ಆದರ್ಶವಲ್ಲ. ಈ ದೃಷ್ಟಿಯಿಂದ ಈಗ ರೂಪುಗೊಳ್ಳುತ್ತಿರುವ ಜನತಾ ಕಾಲೋನಿಗಳು ಹೊರನೋಟಕ್ಕೆ ಜಾತಿ ವ್ಯವಸ್ಥೆಯನ್ನು ಮೆಟ್ಟಿನಿಂತ ಆಕಾರಗಳಾಗಿವೆ. ಒಂದು ಕೊರತೆ ಎಂದರೆ ಇವು ಗೃಹಗಳಿಗೆ ಸಂಬಂಧಿಸಿದಂತೆ ನಮ್ಮ ಪ್ರಾಚೀನದಾಗಿದ್ದ ಕಲಾತ್ಮಕ ದೃಷ್ಟಿಕೋನದ ಕಿಂಚಿದಂಶವನ್ನೂ ಉಳಿಸಿಕೊಂಡಿಲ್ಲ. ಆ ಪ್ರವೃತ್ತಿ ಇನ್ನಾದರೂ ಕಾಣಬೇಕಿದೆ. ಆಗ ಗ್ರಾಮ ವಿನ್ಯಾಸದಲ್ಲಿ ಸ್ವಾಗತಾರ್ಹ ಹೊಸ ಮಾದರಿಗಳು ರೂಪುಗೊಳ್ಳುತ್ತವೆ. 

ಆಧಾರ ಗ್ರಂಥಗಳು

೧. ಕಾರ್ಸ್ಟೆಯರ್ಸ್, ಜ. ಎಂ. ಆರ್. ಎಲ್. ಕಪೂರ : ೧೯೮೫ : ಕೋಟಿ ಮಹಾಜಗತ್ತು : ಅನು : ಡಾ. ಶಿವರಾಮಕಾರಂತ: ಅಕ್ಷರ ಪ್ರಕಾಶನ, ಸಾಗರ

೨. ಡಾ. ಎಂ. ಚಿದಾನಂದ ಮೂರ್ತಿ, ೧೯೭೯ ಕನ್ನಡ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ : ಮೈವಿವಿ.

೩. ನಾರಾಯಣ ಎಂ. ವಿಶ್ವ : ೧೯೮೬ : ಭಾರತೀಯ ಸಮಾಜದ ಅಧ್ಯಯನ : ಆರ್. ಎಂ. ಪ್ರಕಾಶನ, ಮೈಸೂರು.

೪. ನಾಗೇಶ್ ಎಚ್. ವಿ. ೧೯೮೮ ಗ್ರಾಮಾಂತರ : ಸುಜಾತಾ ಪ್ರಕಾಶನ ಧಾರವಾಡ

ವೈಯುಕ್ತಿಕ ಮಾಹಿತಿಗಳು : ಶ್ರೀ ಕ್ಯಾತನಹಳ್ಳಿ ರಾಮಣ್ಣ ಮೈಸೂರು,. ಶ್ರೀ ಸಿದ್ಧಗಂಗಯ್ಯ ಬಿ. ಕಂಬಾಳು ತಿಪಟೂರು. ಶ್ರೀ ಸತ್ತರಾಜಪ್ಪ ಮೈರೂರು, ಹಾಗೂ ನನ್ನ ಕ್ಷೇತ್ರ ವೀಕ್ಷಣೆಗಳು.